Wednesday, July 30, 2014

An effort to request more normal buses on the ITPL road

People staying in the stretch from Marathalli to ITPL often say that the road is flooded with Volves and we rarely see any normal buses. Apart from always complaining the government, have we thought of something to change it ? Here is a man who is trying something to change it. Mr Naveen Kumar who hails from IT field observed that not only IT geeks but also lot of common people and plenty of poor need to travel in this way for the hospitals like Saibaba hospital. AC buses are not affordable to them. So, first he tried to get in touch with MD of BMTC to request more normal buses in this way. As he could not meet the MD, he started writing post cards daily, which is on since last 30 days. He also filed RTI to gain info of how BMTC is planning number of vovlos and normal buses for a particular way. He says there is no scientific survey or study which has been done behind this. Finally he got a reply to one of his letters that It is based on public demand. Hence he has started the signature collection campaign for this. So he wants to gather the public interest and meet the transport minister itself if the efforts to meet BMTC MD does not succeed. But how ?  This guy daily boards any normal bus from BEML layout to his Mercedez Benz office in ITPL and interacts with people about his efforts and requests them to support by signing the form. As of today morning he has collected over 944 signatures and he aims to collect as many signatures as possible before he meets the transport ministers.

He has already consulted one lawyer and RTI activist who is supporting in these endeavors and hoping to see a better tomorrow. Although i could not get his contact number and other details of how to reach him, can definitely say that you have good chances of meeting this guy if you are travelling in a normal bus which crosses the Graphite India signal around 8:30 Am in the morning. Anyhow have given his photo, name and other details. So, the interested people can definitely come forward. People want to get publicity for numerous reasons. But here is a guy who is silently working without expecting least means of publicity. Hope he gets more and more signatures in the days to come and succeed in his efforts. All the Best Naveen.

Sunday, July 27, 2014

ಮಳೆ ಮಾತುಗಳಲ್ಲಿ

ಬೇಸಿಗೆಯ ಬೇಗೆಯಲ್ಲಿ ಬೆಂದ ನಗರದ ಜನಗಳಿಗೀಗ ಮಳೆಯ ತಂಪು. ಭೋರ್ಗರೆವ ಮಳೆಗೆ ಎಂಥಾ ಮಳೆಗಾಲವಪ್ಪಾ ಅನಿಸಿಬಿಡುವಂತ ಮಲೆನಾಡಿಗರಿಗೂ ಈ ಸಲ ತಡವಾದ ಮಳೆ ಕೊಂಚ ತಲೆಬಿಸಿ ತಂದಿದ್ದುಂಟು. ಮೊದಲ ಮಳೆಗೆ ಖುಷಿಯಾಗಿ ನಾಟಿಗೆ ಅಣಿಮಾಡಿದವರು, ಗಾಬರಿಯಾಗಿ ಕೊಳೆ ಔಷಧಿ ಹೊಡೆಸಿದವರು ಮತ್ತೆ ಒಂದು ವಾರವಾದರೂ ಮಳೆಯ ಸುಳಿವಿಲ್ಲದಿದ್ದಾಗ ಗಾಬರಿಯಾಗಿದ್ದು ಸಹಜವೇ. ನಾಟಿಗೆಂದು ಉತ್ತ ನೆಲವೆಲ್ಲಾ ಮತ್ತೆ ಬಿಸಿಲಿಗೆ ಒಣಗೋಕೆ ಶುರುವಾಗಿತ್ತು. ಬಿಸಿಲ ಝಳಕ್ಕೆ ಕೊಳೆಯೌಷಧಿ ಹೊಡೆಸಿಕೊಂಡ ಮರದ ತಲೆಯೆಲ್ಲಾ ಸುಡತೊಡಗಿದ್ವು. ಒಂತರಾ ಬಿಸಿಲಲ್ಲಿ ಬೆಂಕಿ ಹಾಕಿದಂಗೆ ಮರಗಳಿಗೀಗ. ಅಂತೂ ಒಂದು ವಾರ ಕಣ್ಣಾಮುಚ್ಚಾಲೆಯಾಡಿದ ಮಳೆ ಮತ್ತೆ ತನ್ನ ಮುನಿಸು ತೊರೆದು ಸುರಿಯಹತ್ತಿದೆ. ಎಲ್ಲೆಲ್ಲೂ ಹಸಿರ ಹೊದಿಕೆ ಹರಡತೊಡಗಿದೆ. ವರ್ಷವರ್ಷವೂ ತಡವಾಗುತ್ತಿರುವ, ಕೃಷವಾಗುತ್ತಿರುವ ಮಳೆ ಮಳೆಕೊಯ್ಲನ್ನು ಇನ್ನಾದರೂ ಗಂಭೀರವಾಗಿ ತೆಗೆದುಕೊಳ್ಳಿರೆಂದು ಹೇಳೋ ಪ್ರಯತ್ನದಲ್ಲಿದೆಯಾ ? ಗೊತ್ತಿಲ್ಲ. ಪಂಚಭೂತಗಳಲ್ಲೊಂದಾದ ನೀರೇ ನಮ್ಮ ಶರೀರದ ಹಲಭಾಗವೆಂಬುದು ನಮಗೆ ಗೊತ್ತಿದ್ದಿದ್ದೇ. ಆದ್ರೆ ನಮ್ಮ ಜೀವ, ಕಾಯ ಎಲ್ಲಾ ಆದ ಈ ನೀರೇ ಒಂದು ದನಿಯಾಗಿ ನಮ್ಮೆದ್ರು ಬಂದ್ರೆ ಹೇಗಿರುತ್ತೆ ? ಹಾಗೆ ಮಾತಾಡೋ ಪ್ರಯತ್ನದಲ್ಲಿರೋ ನೀರಿನ ಮಾತುಗಳೇ ಇಂದು ನಿಮ್ಮ ಮುಂದೆ.

ನಾನು ನೀರು. ನೀವು ನೀರೆನ್ನಿ. ಪಾನಿ ಅನ್ನಿ, H20 ಅನ್ನಿ. ಅದು ನಾನೇ.ಜಲಲ ಜಲಲ ಜಲ ಧಾರೆಯೆಂಬ ಹಾಡಿನಿಂದ, ಉಪೇಂದ್ರನ ಚಿತ್ರದವರೆಗೆ, ಬೆಂಗಳೂರಿನ ಮೋರಿಯಿಂದ , ಬರಾಕನ ನಗರಿಯ ನಯಾಗರೆಯ ಭೋರ್ಗರೆತವರೆಗೆ ಕಪ್ಪು, ಹಳದಿ, ಬಿಳಿ ಬಣ್ಣಗಳಲ್ಲಿ ಜುಳುಜುಳು ನಿನಾದವ ನಿರ್ಮಿಸುತ್ತಿರುವವನು/ವವಳು  ನಾನೇ, ಸರಸ್ವತೀ ಎಂದು ಹರಿದತ್ತೆಲ್ಲ ನಾಗರೀಕತೆಯ ಕಟ್ಟಿ ಕೊನೆಗೆ ನಿಮ್ಮ ಕಣ್ಣೆದುರೇ ಬತ್ತಿ ಹೋದವಳೂ ನಾನೇ. ಸಿಂಧೂ , ಗಂಗಾ ಎಂದು, ಯಮುನ, ಕಾವೇರಿ ಎಂದೂ ನಿಮ್ಮ ಬದುಕು ಕೊಟ್ಟ ದೇವಿಯಾಗಿ, ಮನೆ ಕೊಚ್ಚಿದ ಮಾರಿಯಾಗಿ ಹಲವು ಕಾಲಕ್ಕೆ ಹಲವು ರೂಪದಲಿ ಕಂಡು ಕಂಗೊಳಿಸಿದವಳು ನಾನೇ. ಭೀಮ, ಕಾಳಿ, ಥೇಮ್ಸು, ಮಿಸಿಸಿಪ್ಪಿ ಹೀಗೆ ಹಲದೇಶಗಳಲ್ಲಿ ಹಲಹೆಸರಿಟ್ಟು ಹರಿದತ್ತೆಲ್ಲಾ ಹೊನ್ನ ಹರಿಸಿದವನು ನಾನೇ. ಉತ್ತರದ ಶೀತಲ ಧೃವದಲ್ಲಿ ಹಿಮವಾಗಿ ನಡುವಲ್ಲಿ ಸಾಗರವಾಗಿ ಅಸಂಖ್ಯ ಜೀವಗಳಿಗೆ ಆಸರೆಯಾಗಿರುವುದು ನಾನೇ. ಇಷ್ಟೆಲ್ಲಾ ಕೂಟ್ಟ ನಾನು ಪೂರೈಸಹೊರಟಿದ್ದು ನಿಮ್ಮ ಆಸೆಗಳನ್ನೇ ಹೊರತು ದುರಾಸೆಗಳನ್ನಲ್ಲ. ಬದುಕಿನ ಅಗತ್ಯಗಳನ್ನೇ ಹೊರತು ಎಲ್ಲರ ಕೊಂದು ತಾನುಳಿವ  ಸ್ವಾರ್ಥದ ಚಿಂತನೆಗಳನ್ನಲ್ಲ. ನಾಗರೀಕತೆಯ ಹೆಸರಲ್ಲಿ ನಾ ಹರಿವ ದಾರಿಯನ್ನೇ ಅಡ್ಡಗಟ್ಟಿ ಅದರಿಂದ ಕಳೆದ ಜೀವಗಳ ರಕ್ತವ ನನ್ನ ಹೆಸರಿಗೆ ಅಂಟಿಸಿದಿರಿ. ನಿಮ್ಮ ರಾಜಕೀಯಗಳ, ಸ್ವಾರ್ಥದ ಹೊಡೆದಾಟಗಳ ರಾಜ್ಯ. ದೇಶಗಳ ನಡುವೆ ತಂದಿಟ್ಟು ಆ ಕಳಂಕವ, ಮಸಿಯ ನನಗೆ ಬಳಿದಿರಿ. ಆದರೂ ಸುಮ್ಮನಿದ್ದ ನನಗಾಗಿ  ಭೂತಾಯಿಯ ಭೋರುವೆಲ್ಲುಗಳಿಂದ ಬಗೆದಿರಿ. ಅಲ್ಲೂ ಕಾಲಕ್ಕೊಂದು ಸವಾಲು ಹಾಕುವ, ಪ್ರಕೃತಿಗೆ ಸೆಡ್ಡು ಹೊಡೆಯೋ ಪ್ರಯತ್ನ ಮಾಡಿದಿರಿ. ಊಹೂಂ ಆದರೂ ಸಮಾಧಾನವಿಲ್ಲ ನಿಮಗೆ. ನೂರಾರು ಜೀವಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ , ಹಲವು ತಲೆಮಾರುಗಳಿಗೆ ನೀರ ನೆಲೆಯಾಗಿದ್ದ ಕೆರೆಗಳಿದ್ದ ವಿಶಾಲ ಜಾಗ ಕಣ್ಣಿಗೆ ಬಿತ್ತು. ಸುಂದರ ಕೆರೆಗಳಿದ್ದ ಜಾಗವೆಲ್ಲಾ ಉಪಯೋಗಕ್ಕಿಲ್ಲದ ಜಾಗವೆನಿಸಿ ಅಲ್ಲೊಂದು ಸ್ಟೇಡಿಯಮ್ಮು, ಅಪಾರ್ಟುಮೆಂಟನೆಬ್ಬಿಸಿಬಿಟ್ರಿ. ಮನೆಯೊಳಗೆ ನೀರು ನುಗ್ಗಿತು, ಬಡಾವಣೆ ಜಲಾವೃತವಾಯ್ತು ಅಂತ ನನಗೆ ಹಿಗ್ಗಾಮುಗ್ಗಾ ಬಯ್ಯುವ ನಿಮಗೆ ಅದು ನನ್ನದೇ ಜಾಗವಾಗಿತ್ತು ಮುಂಚೆ, ನನ್ನದನ್ನು ಅತಿಕ್ರಮಿಸಿದ ಧುರಾಳರು ನೀವೇ ಎಂದು ಒಮ್ಮೆಯಾದರೂ ಅನಿಸಿತ್ತೇ ? ನನ್ನ ಮಕ್ಕಳಲ್ಲವೇ ಎಷ್ಟೆಂದರೂ ಎಂದು ಇಷ್ಟು ದಿನ ಸುಮ್ಮನಿದ್ದುದೇ ತಪ್ಪಾಯ್ತು. ನಿಮ್ಮ ಅಟ್ಟಹಾಸ ಮುಗಿಲು ಮುಟ್ಟುತ್ತಿದೆ. ತಾಯಿಯೆಂದು ನಿಮ್ಮ ಪೂರ್ವಜರು ಪೂಜಿಸುತ್ತಿದ್ದ ಗಂಗೆ ನಿಮ್ಮ ನಿರ್ಲಕ್ಷ್ಯದಿಂದ ತನ್ನನ್ನು ನೋಡಿಕೊಳ್ಳಲೇ ನಾಚಿಕೊಳ್ಳುವಷ್ಟು, ಭಾರತದೇಶದ ಪವಿತ್ರ ನದಿಯಾಗಿದ್ದೆ ತಾನು, ಒಂದಾನೊಂದು ಕಾಲದಲ್ಲಿ ಎನ್ನಲು ನಿರ್ಲಜ್ಜಳಾಗುವಷ್ಟು ಪರಿಸ್ಥಿತಿಗೆ ತಂದಿದ್ದೀರಿ. ಮಲಿನ ನೀರ ಸ್ವಚ್ಛ ಮಾಡೋ ಎಲ್ಲಾ ತಂತ್ರಜ್ನಾನ ಕಂಡುಹಿಡಿದುಕೊಂಡಿದ್ದರೂ ಅದನ್ನು ಉಪಯೋಗಿಸಲಾಗದ ಸೋಂಬೇರಿತನ ನಿಮಗೆ. ಪ್ಲಾಸ್ಟಿಕ್ ಉಪಯೋಗಿಸು, ಎಸಿ ಎಲ್ಲಾದ್ರು ಅದನ್ನ. ಅದಕ್ಕೆಂದೇ ಇಟ್ಟಿರೋ ತೊಟ್ಟಿಯೆಡೆ ಗಮನವಿಲ್ಲ. ಕಸ ಎಸೆಯಲು ಸೂಕ್ತ, ಚೀಪಾದ ಜಾಗ ಯಾವ್ದು ?ನದೀತೀರ !! ಹೇಗಿದ್ರೂ ಹೇಳೋರು ಕೇಳೋರು ಯಾರೂ ಇಲ್ಲವಲ್ಲ ಅಲ್ಲಿ ಎಂಬ ಭಾವದ ಜನ ಬೇರೆ!!  ಮಳೆ ಬಂದಾಗ, ದಿನದ ನಿಮ್ಮ ಸೋಂಬೇರಿತನದ ಫಲಗಳೆಲ್ಲಾ ಕೊನೆಗೆ ಸೇರೋದು ನನ್ನ ಮಡಿಲೇ . ನಲ್ಲಿಯಲ್ಲಿ ನೀರು ಹರಿದು ಹೋಗುತ್ತಿದ್ದರೆ ಅದರತ್ತ ಗಮನವಿಲ್ಲ. ನಿಮ್ಮ ರಕ್ತ ಹಾಗೇ ಹರಿದುಹೋಗುತ್ತಿದ್ರೆ ಹಾಗೇ ಸುಮ್ಮನಿರುತ್ತಿದ್ರಾ ? ಯಾರೋ ನಿಮ್ಮ ಮೇಲೇ ಕಸ ತಂದು ಎಸೆಯುತ್ತಿದ್ರೆ ಸುಮ್ಮನಿರುತ್ತಿದ್ರಾ ? ಇಲ್ಲವಲ್ಲ. ಅಷ್ಟೆಲ್ಲಾ ತಲೆ ಯಾಕೆ ಕೆಡಿಸ್ಕೋಬೇಕು ? ನೀನು ಬಿಟ್ಟಿ ನೀರು ತಾನೇ ಅಂದ್ರಾ ? ಹೂಂ. ನಿಮ್ಮ ದೇಹದ ಬಹುಭಾಗ ತುಂಬಿರೋ ನಿಮ್ಮ ತಾಯಿ ನೀರು ನಿಮಗೆ ಬಿಟ್ಟಿ.  ನಿಮ್ಮ ಬೇಕಾಬಿಟ್ಟಿ ತಪ್ಪುಗಳನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿದ ನಾನು ನಿಮಗೆ ಬಿಟ್ಟಿ. ನನ್ನ ಮಹಿಮೆ ಗೊತ್ತಿಲ್ಲವಲ್ಲ ನಿಮಗೆ. ಸರಿ, ನಾನು ನಿಮ್ಮ ವಿರುದ್ದ ಮುಷ್ಕರ ಹೂಡುತ್ತಿದ್ದೇನೆ. ನನ್ನ ಇಹದರಿವು , ಮಹತ್ವ ಗೊತ್ತಾಗೋವರೆಗೆ ಹರಿವ ನಿಲ್ಲಿಸುತ್ತೇನೆ.

ವರ್ಷ ವರ್ಷವೂ ಮಳೆ ಬರುತ್ತಿದ್ದ ಸಮಯವಾದರೂ ಮಳೆಯ ಸುಳಿವಿಲ್ಲ. ಬಾವಿಗಳೆಲ್ಲಾ ಬತ್ತಿ, ಕೆರೆಯ ತಳದ ನೀರೇ ಗತಿ. ಟ್ಯಾಂಕರುಗಳಲ್ಲಿ ಮೊದಮೊದಲು ನೀರು ಹೊಡೆದ್ರೂ ಕೊನೆಗೆ ಟ್ಯಾಂಕರುಗಳಿಗೇ ನೀರಿಗೆ ಬರದ ಪರಿಸ್ಥಿತಿ. ಕೊರೆದ ಬೋರುಗಳಲ್ಲಿ ಸಾವಿರ ಅಡಿ ಮುಟ್ಟಿದ್ರೂ ನೀರಿಲ್ಲ. ಇರೋ ಬೋರುಗಳಲ್ಲೂ ನೀರು ಕಮ್ಮಿಯಾಗುತ್ತಿರೋ ಆತಂಕ. ಬೋರ ನಂಬಿ ಭತ್ತ ರಾಗಿ ಗದ್ದೆಗಳನ್ನೆಲ್ಲಾ ಅಡಿಕೆ ತೋಟ ಮಾಡಿದವರು, ಬೋರ ನಂಬೇ ವರ್ಷವಿಡೀ ಕೃಷಿ ಮಾಡೋ ಕನಸ ಕಟ್ಟಿದವರ ಕನಸುಗಳೆಲ್ಲಾ ಕಣ್ಣೆದುರೇ ಕಮರಿಹೋಗುತ್ತಿದೆ. ಬಿರುಬಿಸಲಿಗೆ ಸುಟ್ಟು ಹೋಗುತ್ತಿದೆ. ಹೊಸ ಮನೆ ಕಟ್ಟಬೇಕಾದ್ರೆ ಮಳೆಕೊಯ್ಲಿನ ತಂತ್ರಜ್ನಾನ ಅಳವಡಿಸಿಕೊಳ್ಳಿ ಅಂತ ಸರ್ಕಾರ ಬೊಬ್ಬೆ ಹೊಡೆದ್ರೂ ಕಿವಿಗೆ ಹಾಕಿಕೊಳ್ಳದ ಜನ , ದುಡ್ಡಿದ್ರೆ ಏನು ಬೇಕಾದ್ರೂ ಸಿಗತ್ತೆ ಅಂತದ್ರಲ್ಲಿ ಈ ನೀರೇನು ಮಹಾ ಅಂದ ಜನರ ಮನೆಯಲ್ಲೆಲ್ಲಾ ಈಗ ನೀರಿಗಾಗಿ ಹಾಹಾಕಾರ. ದಿನಕ್ಕೆರೆಡು ಬಾರಿ ಬರುತ್ತಿದ್ದ ಪುರಸಭೆ, ನಗರಸಭೆ ನೀರು ಈಗ ಎರಡು ದಿನಕ್ಕೊಮ್ಮೆ. ಲಕ್ಷ ಲಕ್ಷ ಖರ್ಚು ಮಾಡಿಸಿ ಮನೆಯೆದುರು ತೋಡಿಸಿದ ಬೋರಲ್ಲಿ ಬಂದಿದ್ದು ಅರ್ಧ ಇಂಚು ನೀರಷ್ಟೇ. ನೀರೇ ಇಲ್ಲದ ಅನಿವಾರ್ಯತೆಗಿರಲಿ ಎಂದುಕೊಂಡಿರೋ ಅದನ್ನು ಬಳಸೋ ಮನಸ್ಸು ಬರ್ತಾ ಇಲ್ಲ ಈಗಲೇ. ಅಷ್ಟಕ್ಕೂ ತುಂಗೆಯ, ಕಾವೇರಿಯ ನೀರು ಕುಡಿದ ಜನಕ್ಕೆ ಈ ಬೋರ ಸವಳು ನೀರು ಇದೂ ಒಂದು ನೀರೇ ಅನಿಸಿದ್ದು ಸುಳ್ಳಲ್ಲ. ಕುಡಿಯೋ ನೀರಿಗೇ ಹಾಹಾಕಾರವೆದ್ದಿರುವಾಗ ಇನ್ನು ಗಾರ್ಡನ್ನು ಅಂತ ಮಾಡಿಕೊಂಡಿರುವುದಕ್ಕೆ ಸುರಿಯೋದೇನು ? ಕಣ್ಣೆದುರೇ ನೆಟ್ಟ ಗುಲಾಬಿ, ಲಿಲಿ, ಕಲ್ತುಂಬೆ ಗಿಡಗಳು ಒಣಗಿ ಸಾಯ್ತಾ ಇದ್ರೂ ಏನೂ ಮಾಡಲಾಗದ ಅಸಹಾಯಕತೆ. ಅವಾಗನಿಸಿದ ಮಾತು ಛೇ. ಹಿಂದಿನ ಸಲ ನೀರಿಂಗಿಸಿ ಅನ್ನೋ ಮಾತು ಕೇಳಿಬಿಡಬೇಕಿತ್ತು. ಗಾರ್ಡನ್ನಿನಲ್ಲೊಂದಿಷ್ಟು ಇಂಗು ಗುಂಡಿ ತೋಡಿಬಿಡಬೇಕಿತ್ತು. ಟಾರಸಿ ನೀರು ಸುಮ್ಮನೇ ಹರಿದುಹೋಗೋಕೆ ಬಿಡದೇ ಮಳೆಕೊಯ್ಲು ಮಾಡಿದ್ರೆ ಈ ಹೊತ್ತಿಗೆ ಹಿತ್ತಲೂ ತಂಪಿರುತ್ತಿತ್ತು. ನಮ್ಮ ನಿತ್ಯ ಬಳಕೆಯ ನೀರಿನ ಹಾಹಾಕಾರವೂ ತಪ್ಪುತ್ತಿತ್ತು ಅಂತ. ಬೀದಿಯ ನಲ್ಲಿ ಒಡೆದು ಒಂದು ವಾರವಾದ್ರೂ ಅದನ್ನು ಸರಿಮಾಡೋಕೆ ಕಂಪ್ಲೇಂಟು ಮಾಡದೇ ಇದ್ದಿದ್ದು ಎಷ್ಟು ದೊಡ್ಡ ತಪ್ಪಾಯ್ತು ಅಂತ ಅರ್ಥ ಆಗ್ತಾ ಇತ್ತು.

ಹೌದು. ನೀರೆಂಬುದು ಬರೀ ಪಂಚಭೂತಗಳಲ್ಲೊಂದಲ್ಲ. ಬಿಸ್ಲೇರಿ ಬಾಟ್ಲುಗಳಲ್ಲಿ, ಪುರಸಭೆ ನಲ್ಲಿಗಳಲ್ಲಿ, ಮನೆಯ ಟ್ಯಾಂಕುಗಳಲ್ಲಿ ಬಂಧಿಯಾಗಿ ಬೇಕೆಂದಾಗ ಸಿಗುವ ಸ್ವತ್ತಲ್ಲ. ನಿತ್ಯ ಆವಿಯಾಗಿ ಗಗನ ಸೇರಿದರೂ ಮತ್ತೆ ಧರೆಗಿಳಿಯಲೇಬೇಕಾದ ಮಳೆಯಲ್ಲ. ಮಳೆಯಾಗಿ ಧರೆಗಿಳಿಯೋದು ಅವಳ ಧರ್ಮ. ಆದ್ರೆ ಅವಳನ್ನು ಓಡಿ ಸಮುದ್ರ ಸೇರದಂತೆ ತಡೆದು, ಸಮಾಧಾನ ಹೇಳಿ ಸಾಧ್ಯವಾದಷ್ಟು  ಕಾಲ ನಮ್ಮ ಬಳಿ ಇಟ್ಟುಕೊಳ್ಳೋದು ನಮ್ಮ ಅನಿವಾರ್ಯ ಕರ್ಮ. ಅದಕ್ಕಿರೋ ಕ್ರಮವೇ ಮಳೆಕೊಯ್ಲು. ಮಳೆಕೊಯ್ಲು ಅಂದಾಕ್ಷಣ ಭೈರಪ್ಪನವರ ಪುಸ್ತಕ, ಎಂ. ಎಸ್ ಶಿರಟ್ಟಿ,ಸಿ.ಬಿ. ಮೇಟಿಯವರ ಪುಸ್ತಕಗಳ ಬಗ್ಗೆ ನೆನಪಾಯ್ತೇ ? ನಾ ಹೇಳಹೊರಟಿರೋದು ಅದರ ಬಗ್ಗೆಯಲ್ಲ. ಓಡೋ ನೀರ ನಡೆಯುವಂತೆ ಮಾಡಿ, ನಡೆಯೋ ನೀರನ್ನ ತೆವಳುವಂತೆ ಮಾಡಿ, ತೆವಳೋ ನೀರನ್ನ ನಿಮ್ಮಲ್ಲೇ ಉಳಿಸಿ, ಇಂಗಿಸಿಕೊಳ್ಳಿ ಅನ್ನೋ ಮಾತುಗಳ ಬಗ್ಗೆ.  ಟಾರಸಿ , ಹಂಚಿನ ಮನೆಗಳ ಮೇಲೆ ಹರಿಯೋ ಮಳೆನೀರನ್ನ ಸಂಗ್ರಹಿಸೋಕೆ ಒಂದು ಪೈಪು ಜೋಡಿಸಿ ಆ ಪೈಪಿನ ಮೂಲಕ ಸಂಗ್ರಹವಾಗೋ ನೀರನ್ನ ಒಂದು ಶೋಧಕದ ಮೂಲಕ ಒಂದು ಟ್ಯಾಂಕಿಗೆ ಹರಿಸೋದು, ಆ ಟ್ಯಾಂಕಿಯಲ್ಲಿ ಕೆಲ ಹಂತದ ಸಂಸ್ಕರಣೆ ಮೂಲಕ ಆ ನೀರನ್ನ ವರ್ಷವಿಡೀ ಕೆಡದಂತೆ ಉಳಿಸಿಕೊಳ್ಳೋ ಮಳೆನೀರು ಸಂಗ್ರಹಣೆ ಕ್ರಮಗಳ ಬಗ್ಗೆ ನೀವು ಓದೇ ಓದಿರುತ್ತಿರ. ಮಾರುಕಟ್ಟೆಗೆ ಬರುತ್ತಿರೋ ಹೊಸ ಹೊಸ ತಂತ್ರಗಳ ಬಗ್ಗೆ ಓದೇ ಓದಿರುತ್ತಿರ. ವರ್ಷವಿಡೀ ಅಲ್ಲದಿದ್ರೂ ಕೆಲವು ತಿಂಗಳು , ಹೋಗ್ಲಿ ಮಳೆಗಾಲ ಮುಗಿದ ಮೇಲಿನ ಒಂದು ತಿಂಗಳು, ಅದೂ ಹೋಗ್ಲಿ ಮಳೆಗಾಲವಿದ್ದ ಸಮಯದಲ್ಲಾದ್ರೂ ಈ ತಂತ್ರಜ್ನಾನ ಬಳಸಿ ಮಳೆನೀರ ಸಮರ್ಪಕ ಬಳಕೆ ಬಗ್ಗೆ ಯಾಕೆ ಗಮನಹರಿಸ್ಬಾರ್ದು ? ರಾಜಸ್ಥಾನದ ಮರುಭೂಮಿಯಂತಾ ಜಾಗಗಳಲ್ಲಿ ಟಂಕಾಗಳು ಅಂತ ರಚಿಸಿ ವರ್ಷವಿಡೀ ಮಳೆನೀರು ಬಳಸೋ ದೇಸೀ ತಂತ್ರಜ್ನಾನ ರೂಪಿಸಿಕೊಂಡಿರುವಾಗ ನಾವ್ಯಾಕೆ ಇನ್ನೂ ಹಿಂದಿದ್ದೇವೆ ಈ ವಿಷಯದಲ್ಲಿ ? ಇಲ್ಲೂ ಬರಗಾಲ ಬಂದ ಮೇಲೇ ಅಂತಹ ತಿಳುವಳಿಕೆ ಮೂಡಬೇಕಾ ?

ಏಳೆಂಟು ಎಕರೆಯ ಒಂದು ದೊಡ್ಡ ಬೋಳು ಗುಡ್ಡ. ಆ ಜಮೀನು ತಗೊಂಡವನಿಗೆ ತಕ್ಷಣಕ್ಕೆ ಅಲ್ಲಿ ಏನು ಹಾಕ್ಬೇಕು ಅಂತ ಗೊತ್ತಾಗಲಿಲ್ಲ. ಅಷ್ಟರಲ್ಲೇ ಮಳೆಗಾಲ ಹತ್ತಿರ  ಬರ್ತಾ ಇತ್ತು. ಗುಡ್ಡದ ತುಂಬಾ ಸಾಲಾಗಿ ಮೂರು ಸಾಲು ಅಗಳ ತೋಡಿ ಇಟ್ಟ. ನೋಡಿದ ಊರ ಜನ ಇವನಿಗೆ ಹುಚ್ಚಾ ಅಂದುಕೊಂಡ್ರು. ದುಡ್ಡು ಹೆಚ್ಚಾಗಿರ್ಬೇಕು ಅಂದುಕೊಂಡ್ರು. ಆದ್ರೆ ಅದರ ಹಿಂದಿದ್ದುದು ಗುಡ್ಡದ ಮೇಲೆ ಬೀಳ್ತಿದ್ದ ಅಗಾಧ ಜಲರಾಶಿಯನ್ನ ಅಲ್ಲೇ ಇಂಗಿಸೋ ಕನಸು. ಆ ಅಗಳಗಳಲ್ಲಿ ಇಡೀ ಮಳೆಗಾಲದ ನೀರು ನಿಂತು ಇಂಗಿದ ಪರಿಣಾಮ ಒಂದು ಮಳೆಗಾಲ ಮುಗಿಯೋದರೊಳಗೆ ಗುಡ್ಡದ ಚಿತ್ರಣವೇ ಬಯಲಾಗಿದೆ. ಸುಮ್ಮನೇ ಹರಿದುಹೋಗುತ್ತಿದ್ದ ನೀರು ಹೊಸ ಚಹರೆಯನ್ನೇ ಸೃಷ್ಟಿಸಿದೆ. ಒಂದು ಕಾಲದಲ್ಲಿ ನೀರ ತವರೆನಿಸಿದ್ದ ಹಳ್ಳಿಗಳಲ್ಲೂ ಕ್ರಮೇಣ ಬರದ ತಾಪ ತಟ್ಟಿ ಮಳೆಕೊಯ್ಲ ಅಗತ್ಯತೆ ಮನಗಾಣುತ್ತಿದ್ದಾರೆ ಅವರೀಗ.ಹರಿದುಹೋಗೋ ನೀರನ್ನ ಹಳೆಯ ಹುತ್ತಗಳಿಗೆ, ತೆಂಗಿನ ಮರಗಳ ಬುಡಗಳಿಗೆ, ಹಳೆಯ ಬೋರುವೆಲ್ಲುಗಳಿಗೆ ಬಿಡುವ ಹಲವು ಕ್ರಮಗಳು ಹಳ್ಳಿಗಳ ಕಡೆ ತೀರಾ ಸಾಮಾನ್ಯವೆಂಬಂತೆ  ಕಂಡುಬರುತ್ತಿವೆ ಈಗ. ಉದಕ, ಇಂಗು ಗುಂಡಿ, ಇಂಗು ಬದು ಹೀಗೆ ಹಲವು ಅಂತರ್ಜಲ ಮರುಪೂರಣ ಕ್ರಮಗಳು ಪ್ರತೀ ಮಳೆಗಾಲದಲ್ಲೂ ಹೊಸ ರೂಪ ಪಡೆಯುತ್ತಾ, ಸುಧಾರಣೆಗೊಳ್ಳುತ್ತಾ ಸಾಗುತ್ತಿವೆ. ಆದರೆ ಇವೆಲ್ಲಾ ಆಗುತ್ತಿರೋದು ಸಿಕ್ಕಾಪಟ್ಟೆ ಓದಿದ, ಸುಧಾರಣೆ , ಉದ್ದಾರ, ಸರ್ಕಾರ ಅಂತೆಲ್ಲಾ ಮಾತನಾಡೋ ಬುದ್ದಿಜೀವಿಗಳ ಮನೆಗಳಲ್ಲೆಲ್ಲಾ. ಒಂದಿಂಚು ಮಳೆನೀರನ್ನೂ ಭೂಮಿಗೆ ಇಂಗಗೊಂಡದ ಕಾಂಕ್ರೀಟು ಕಾಡು ಸೃಷ್ಟಿಸೋ ನಗರಿಗರ ಗಾರ್ಡನ್ನು, ಪಾರ್ಕುಗಳಲ್ಲಲ್ಲ . ಇವಾಗುತ್ತಿರುವುದು ಓದಿಲ್ಲದವರು, ಮೂಡನಂಬಿಕೆ, ಅಜ್ನಾನದ ಗೂಡು ಎಂದು ಬಿರುದುಪಡೆದುಕೊಂಡಿರೋ ಹಳ್ಳಿಗರ ಸಾಮಾನ್ಯ ಮನೆಗಳಲ್ಲಿ. ಕಾಲೇಜು, ಯೂನಿವರ್ಸಿಟಿಗಳ ಮೆಟ್ಟಿಲನ್ನು ಈ ಹಳ್ಳಿಗರು ಹತ್ತಿರದೇ ಇರಬಹುದು. ಆದರೆ ಪ್ರಕೃತಿಯ ಪಾಠವನ್ನು, ಆಕೆಯ ಮಾತುಗಳನ್ನು ಹತ್ತಿರದಿಂದ ಕೇಳಿಸಿಕೊಂಡವರಿವರು. ಆ ಮಾತುಗಳಲ್ಲಿನ ಮಳೆಕೊಯ್ಲನ್ನು ಕಾರ್ಯರೂಪಕ್ಕಿಳಿಸಿದವರಿವರು. ಅದರ ಫಲವೇ ನಮ್ಮನೆ ಬಾವಿಯಲ್ಲಿ ಕೈಲೇ ನೀರು ಸಿಗ್ತಾ ಇದೆ ಅಂತ ಪ್ರತೀ ವರ್ಶ ಸಂಭ್ರಮ ಪಡೋರು, ಬೇಸಿಗೆಯಲ್ಲೂ ಬೋರು ಕೊರೆಸದೇ  ತೋಟದ ಒರತೇ ಹೊಂಡದ ನೀರನ್ನೇ ನೆಚ್ಚಿಕೊಳ್ಳುವವರಿವರು. ಇವರ ಜೀವನವನ್ನೇ ಜಗವೆಲ್ಲಾ ಅನುಕರಿಸಲಿ ಎಂದಲ್ಲ. ಆದರೆ ಇರೋ ನೀರು ಹೇಗೆ ಬಳಸಬೇಕು ? ಅಂತರ್ಜಲ ಮರುಪೂರಣ, ಮಳೆಕೊಯ್ಲಂತ ಇವರ ಮನದ ನೀರ ಕಾಳಜಿಗಳು ಎಲ್ಲರಲ್ಲೂ ಅನುರಣಿಸಲೆಂಬ ಆಶಯವಷ್ಟೇ.

Tuesday, July 15, 2014

ಕಾಡೋ ಸಾಲುಗಳು..

ಎನ್ನ ಜೀವವ ಕಾಡಲೆಂದೇ
ನಿನ್ನ ಭಾವಗಳ ಕೊಂಡಿಯೇ ?
ಕಾಲಮಾರುತಕೆ ನೆನಪ ಬೂದಿಯೊಳು
ಜೀವ ತಳೆದಿಂದು ನಿಂತವೇ ?

ಮಸುಕು ನೆನಪುಗಳು ನಿನ್ನೆ ಮುಸುಕಿಂದ
ಎದ್ದು ಬರಲೇನು ಕಾರಣ ?
ಕಳೆದ ಕಂದರದಿ ಹೊಳೆವ ರವಿ ಹುಡುಕಿ
ಏಕೆ ಶುರುವಾಯ್ತೊ ಚಾರಣ ?

ನನ್ನ ನೋವುಗಳ ಕಸಿದು ನಿಂತೆ ನೀ
ನಿನ್ನ ನಗೆ ಮರೆತು ತ್ವರಿತದಿ
ದಿನದ ಪೆಟ್ಟುಗಳ , ನೋವ ಮುಚ್ಚಿಟ್ಟೆ
ನನ್ನ ಕ್ಷಣ ನಗೆಯ ತುಡಿತದಿ

ಇಂದು ನಿನ್ನೆಗಳ ನೆನಪು, ವಾಸ್ತವವು
ನಾಳೆ ಕನಸೊಂದ ಕಟ್ಟಿರೆ
ಭಾವತೀರ್ವತೆಯ ಪಾಯವಿಟ್ಟವಿಗೆ
ಸುಖದ ಸೌಧವನೆ ಕಟ್ಟಿರೆ

ಕಾಲದೊಂದಿಗೇ ಕರಗಿಹೋಯಿತೆ ನಿನ್ನ ಜೀವ, ಛಾಯೆ
ಕುರುಹನುಳಿಸದೇ ಕಳೆದುಹೋಯಿತೇ ನಿನ್ನ ನೆನಪ ನಾವೆ
ನೆನೆದ ಪ್ರತಿಕ್ಷಣ ಸ್ಪೂರ್ತಿಯಂಕುರ ನಿನ್ನ  ಬದುಕು, ನಿಲುವು
ಜೊತೆಗೆ ಇಲ್ಲದಿಹ ನಿಜವು ಹೊಳೆದೊಡೆ ಕಣ್ಣೆ ನೀರ ಮಡುವು
ಅಲೆವ ಗಾಳಿಯೊಡೆ ತೇಲಿಬಂದಂತೆ ಮತ್ತೆ ನಿನ್ನ ನೆನಪು
ಉಳಿಸಿದಾ ಕನಸಾ ನಿಜವಗಯ್ಯಲೇ ಮತ್ತೆ ಹೆಚ್ಚಿ ಹುರುಪು

ದಿನವು ತಲೆಯೆತ್ತೆ ಹೊಳೆದು ಕಾಣಲು ನೀನು ತಾರೆಯಲ್ಲ
ಆದರುದಯಿಸಿಹ ಜ್ಞಾನಜ್ಯೋತಿಗಳ ಬೆಳಕು ಕಮ್ಮಿಯಲ್ಲ
ನೋವ ಜೊತೆಗೊಂದು ಸ್ಪೂರ್ತಿ ಸಿಂಚನ ಕನಸ ಬೆಳೆಸಲೆಂದು
ನೋವ ಕಂದಕದಿ ಕಳೆದು ಕೂರದಿರು ಬರುವ ನಲಿವೆಗೆಂದು

Monday, July 14, 2014

ಈ ಅಮೃತಧಾರೆ.. ಮನವ ಕಾಡೋ ಮಳೆ ಮಾತೆ..

ಬೆಂಗ್ಳೂರ ಮಳೆ:

ಬೆಂಗ್ಳೂರಲ್ಲಿ ಭಾರೀ ಮಳೆ ಅಂತ ಟೀವಿನಲ್ಲಿ ಬೆಳಗ್ಗಿಂದ ತೋರಿಸ್ತಿದ್ದದ್ನ ನೋಡಿ ಅಮ್ಮ ಗಾಬ್ರಿಯಾಗಿ ಫೋನ್ ಮಾಡಿದ್ರು. ಅಯ್ಯೋ ಅಮ್ಮಾ , ನಿಂಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ಲ. ಯಾವ್ದೋ ಏರಿಯಾದಲ್ಲಿ ಮಳೆ ಬಂತು ಅಂದ್ರೆ ಇಡೀ ಬೆಂಗ್ಳೂರೇ ಮುಳುಗಿ ಹೋಯ್ತು ಅಂತ ತೋರಿಸ್ತಾರೆ ಈ ಟೀವಿಯವ್ರು. ಅವ್ರಿಗೆ ಒಂದೋ ತೋರ್ಸಕ್ಕೆ ಬೇರೆ ಸುದ್ದಿ ಇಲ್ಲ. ಮಾಡಕ್ಕೆ ಬೇರೆ ಕೆಲ್ಸ ಇಲ್ಲ ಅಂದ ಮಗ. ಮಗನ ಮಾತು ಕೇಳಿ ತಾಯಿಗೆ ಎಷ್ಟೋ ಸಮಾಧಾನವಾದ್ರೂ ಸೊಂಟ ಮಟ್ಟ ನೀರಲ್ಲಿ ನಿಂತ ಕಾರುಗಳ ಟೀವಿಯಲ್ಲಿ ಕಂಡವಳಿಗೆ  ಏನೋ ಒಂದು ಕಳವಳ. ಯಾಕೋ ಆತಂಕ. ಊರಲ್ಲಿ ಮಳೆಯಿಲ್ಲದೇ ಕಂಗಾಲಾಗಿದ್ರೂ ಕರುಣೆ ತೋರದ ವರುಣ ಪೇಟೆಯಲ್ಯಾಕೆ ಈ ಪರಿ ಸುರಿತಾನೆ ? ಅಷ್ಟಕ್ಕೂ ಇಲ್ಲಿ ಕಪ್ಪೆ ಮದುವೆ, ಕತ್ತೆ ಮದುವೆ, ಮಂಗನ ಮದುವೆ, ಬೊಂಬೆ ಮದುವೆ ಮಾಡಿ ಕರೆದ್ರೂ ಬಾರದ ವರುಣ , ಕರೆಯದ ಅತಿಥಿಯಾಗಿ ಪೇಟೆಗೆ ಹೋಗಿ ಕಾಟ ಕೊಡೋದ್ಯಾಕೆ ಅನ್ನೋದು ತಾಯಿಗೆ ಎಂದಿಗೂ ಸೋಜಿಗ. ಅದನ್ನೇ ಮಗನತ್ರ ಹೇಳಿದ್ರೆ ಈ ಮದುವೆ ಮಾಡಿದ್ರೆ ಮಳೆ ಬರುತ್ತೆ ಅನ್ನೋದೆಲ್ಲಾ ನಿಮ್ಮ ಮೂಡನಂಬಿಕೆ ಅಷ್ಟೇ. ಚಲಿಸೋ ಮಳೆ ಮೋಡಗಳನ್ನ ಪರ್ವತಗಳು ತಡೆದಲ್ಲೆಲ್ಲಾ ಮಳೆ ಬರುತ್ತಷ್ಟೇ ಅಂತಿದ್ದ. ಇದ್ದ ಹಸಿರನ್ನೆಲ್ಲಾ ನುಂಗಿ ಹಾಕಿ ಕಾಂಕ್ರೀಟ್ ಸೌಧಗಳನ್ನೆಬ್ಬಿಸಿರೋ ಪೇಟೆಗಳಲ್ಲಿ ಪರ್ವತಗಳೆಲ್ಲಿಂದ ಬರ್ಬೇಕು ಅನ್ನೋ ಸಂದೇಹ ಬಂದ್ರೂ ಈ ಹತ್ತರಿಂದ , ನೂರರವರೆಗೆ ಮಹಡಿಗಳಿರೋ ಬೃಹತ್ ಕಟ್ಟಡಗಳೇ ಮೋಡಗಳನ್ನ ಅಡ್ಡಹಾಕಬಹುದೇನೋ ? ಎತ್ತರದಲ್ಲಿ ಅದು ನಮ್ಮೂರಿನ ಜೇನಿನ ಗುಡ್ಡಕ್ಕಿಂತ ಕಮ್ಮಿ ಇದ್ಯಾ ಅಂತ ಸಮಾಧಾನ ಮಾಡ್ಕೋತಿದ್ರು ಅಮ್ಮ. ಅಷ್ಟಕ್ಕೂ ನನ್ನ ಮಗನೇನೋ ಸಾಮಾನ್ಯ ಬುದ್ದಿವಂತನಾ ? ದಿನಕ್ಕೊಂದು ರೂಪಾಯಿಗೆ ಪರಿತಪಿಸಿ  ಹೆಚ್ಚಿನ ಓದೆಂಬುದು ಮರೀಚಿಕೆಯೆ ಆಗುಳಿದ ನಾವೆಲ್ಲಿ ? ತಿಂಗಳಿಗೆ ಐದಂಕಿ ಎಣೆಸ್ತಿರೋ ಮಗನೆಲ್ಲಿ ? ಅವನು ಹೇಳ್ತಿದಾನೆ ಅಂದ್ರೆ ಅದು ಸತ್ಯವೇ ಇರಬೇಕೆಂಬುದು ಇವರ ಸಮಾಧಾನ. ಮಗನ ಮೇಲಿಟ್ಟ ಭರವಸೆಯ ತೀರ್ಮಾನ.

"ವಾವ್. ಇವತ್ತು ಬೆಂಗ್ಳೂರಲ್ಲಿ ಮೊದಲ ಬಾರಿಗೆ ಬಟ್ಟೆಯೆಲ್ಲಾ ನೆನೆಯುವಂತ ಮಳೇಲಿ ಸಿಕ್ಕಾಕೊಂಡೆ". ತಗಾ ಒಂದು ಫೇಸ್ಬುಕ್ ಸ್ಟೇಟಸ್ಸು. ಅದಕ್ಕೊಂದಿಷ್ಟು ಲೈಕು , ಕಮೆಂಟುಗಳ ಸುರಿಮಳೆ. ಅಂದ ಮಾತ್ರಕ್ಕೆ ಅವ ಬೆಂಗ್ಳೂರಿಗೆ ಇತ್ತೀಚೆಗಷ್ಟೇ ಕಾಲಿಟ್ಟವನಲ್ಲ. ಇಟ್ಟಾಗಲೇ ಎರಡು ವರ್ಷವಾಗುತ್ತಾ ಬಂದಿದ್ರೂ ಅವನಿಗೆ ಮಳೆಗಾಲ ಅಂತ ಎದುರು ಸಿಕ್ಕಿದ್ದೆಲ್ಲಾ ಜಿಮುರುಗಳೇ. ಮೊದಲ ಮಳೆಯೆಂದ್ರೆ ಮೂಗರಿಳುಸುತ್ತಿದ್ದ ಊರ ಮಣ್ಣಿನ ವಾಸನೆಯನ್ನೆಣೆಸಿದ್ದವನಿಗೆ ಮೊದಲ ಮಳೆ ಕಂಡಿದ್ದು ಆಫೀಸಿನ ಕಿಟಕಿಯಿಂದ.  ಆರಂತಸ್ತಿನ ಕಟ್ಟಡದ ಕೊನೆಯ ಮಹಡಿಯಲ್ಲಿ ನಿಂತಿದ್ದವನಿಗೆ ಮಣ್ಣಿನ ವಾಸನೆಯೆಲ್ಲಿ ಬರಬೇಕು ? ಗಾಜಿನಾಚೆಯ ಮಳೆಹನಿಗಳು ಊರ ನೀರ ಭಾವವನ್ನೆಲ್ಲಿ ತರಬೇಕು ? ಅದಾದ ಮೇಲಿನ ಮಳೆಗಳಲ್ಲೆಷ್ಟೋ ಆಫೀಸಿನ ಏಸಿಯ ಭೋರ್ಗರೆತದಲ್ಲಿ, ಕತ್ತಲ ಕೋಣೆಯ ಟ್ಯೂಬಲೈಟ್ ಮೀಟಿಂಗುಗಳಲ್ಲಿ ಮುಳುಗಿಹೋಗಿದ್ದವನಿಗೆ ಗೊತ್ತೇ ಆಗಿರಲಿಲ್ಲ. ಬೆಳಗೆದ್ದು ಆಫೀಸಿಗೆ ಬರುವಾಗ ಕಾಣ್ತಿದ್ದ ಒದ್ದೆ ರಸ್ತೆಯಿಂದಲೋ, ಮನೆಗೆ ಮರಳುವಾಗ ರಸ್ತೆಯ ಮೇಲೆಲ್ಲಾ ಹರಡಿರುತ್ತಿದ್ದ ಎಲೆಗಳ, ಮಣ್ಣ ರಾಶಿಯಿಂದಲೋ ಓ, ಒಂದೊಳ್ಳೆ ಮಳೆ ಬಂದು ಹೋಯ್ತು ಅಂತ ಗೊತ್ತಾಗಿದ್ದು. ಒಮ್ಮೆ ಆಫೀಸಿನ ಕ್ಯಾಂಟೀನಲ್ಲಿರುವಾಗಲೇ ಹೊರಗೆ ಆಲೀಕಲ್ಲು ಮಳೆ ಶುರುವಾಗಿತ್ತು. ಶೀಟ್ ಮೇಲಿನ ಧಡಬಡ ಸದ್ದು ಕೇಳಿ ಸುಮಾರಷ್ಟು ಜನ ಗಾರ್ಬಿಯಾಗಿದ್ರೂ ಇವ ತನ್ನ ಬಾಲ್ಯದ ದಿನಗಳನ್ನು ನೆನೆಸಿ ಖುಷಿಯಾಗಿದ್ದ. ಶಾಲಾ ದಿನಗಳವು. ಮನೆಗೆ ಬರೋ ದಾರಿಯಲ್ಲಿ ಸಿಗೋ ಮಳೆಗಳೆಲ್ಲಾ ಆಲಿಕಲ್ಲು ಮಳೆ ಆಗ್ಲಪ್ಪಾ ಅಂತ ಬೇಡ್ತಿದ್ದ ಎಲೆ ಜೀವಗಳವು. ಎಲ್ಲೋ ವಾರಕ್ಕೊಮ್ಮೆ ಇವರ ಬೇಡಿಕೆಗೆ ವರುಣ ತಥಾಸ್ತು ಅಂದಾಗ ಅದೇ ಸ್ವರ್ಗಸಮಾನ ಖುಷಿ. ಎಲ್ಲೆಲ್ಲೋ ಬೀಳುತ್ತಿದ್ದ ಆ ಬಿಳಿ ಬಿಳಿ ಆಲಿಕಲ್ಲು ಆರಿಸೋದೇನು ? ಒಂದೋ ಎರಡೋ ಆರಿಸಿ ಬಾಯಿಗೆ ಹಾಕ್ಕಂಡ್ರೆ ಸಾಕಾಗದೇ , ಆಮೇಲೆ ತಿನ್ನೋಕೂ ಇರ್ಲಿ ಅಂತ ತಿಂಡಿಯ ಬಾಕ್ಸಲ್ಲೂ ಒಂದೆರಡು ಹಾಕಿಟ್ಕೊಳ್ಳೋದೇನು ? ಅವನಿಗೆ ದೊಡ್ಡ ಆಲಿಕಲ್ಲು ಸಿಕ್ತು. ನಂಗೆ ಅದ್ಕಿಂತ ದೊಡ್ಡದು ಸಿಗ್ಲಪ್ಪ ದೇವ್ರೆ ಅಂತ ಬೇಡೋದೇನು .. ಓಹ್,, ಈ ಜೋರು ಮಳೆಯಲ್ಲಿ, ಆಲಿಕಲ್ಲಿಗಾಗಿನ ಓಡಾಟದಲ್ಲಿ ಕೊಡೆಯಿದ್ರೂ ಮೈಯೆಲ್ಲಾ ಒದ್ದೆ. ಒಂದಿಷ್ಟು ನಿಮಿಷ ಹೊಯ್ದ ಆಲೀಕಲ್ಲು ಮಳೆ ಕೊನೆಗೆ ಸಾಮಾನ್ಯ ಮಳೆಯಾಗಿ ಬದಲಾಗೋ ಹೊತ್ತಿಗೆ, ಅಯ್ಯೋ ಮನೆಗೆ ಹೋಗೋದು ಲೇಟಾಯ್ತಲ್ಲ ಅನ್ನೋ ನೆನಪಾಗೋದು. ಲೇಟಾದ್ರೆ ಬಯ್ಯೋ ಅಮ್ಮನ ನೆನೆಸಿ, ಪಚಕ್ ಪಚಕ್ ಅಂತ ರಸ್ತೆಯೆಲ್ಲಾ ತುಂಬಿದ್ದ ನೀರಲ್ಲಿ ಆಡೋ ಬಯಕೆಗೊಂದು ಕಡಿವಾಣ ಹಾಕಿ ಮನೆ ಕಡೆಗೆ ಓಡ್ತಿದ್ವಿ. ಆದ್ರೂ ಕೆಲೋ ಕಡೆ ರಸ್ತೆಯ ಬಲದಿಂದ ಎಡಕ್ಕೆ ಉಲ್ಟಾ ಬೈತಲೆ ತೆಗೆದಂತೆ ಹರಿಯುತ್ತಿದ್ದ ನೀರಲ್ಲಿ ಪಚಕ್ ಪಚಕ್ ಆಗೇ ಬಿಡುತ್ತಿತ್ತು. ಹೆಚ್ಚು ಕಮ್ಮಿ ಅದೇ ಸಮಯಕ್ಕೆ ಮನೆಗೆ ಬಂದ್ರೂ ಅಮ್ಮ ಬಾಗ್ಲಲ್ಲೇ ಕಾಯ್ತಾ ನಿಂತಿರ್ತಿದ್ರು. ಇವತ್ತೂ ಪೂರಾ ನೆನಕಂಡು ಬಂದ್ಯಾ ? ಸೀದಾ ಬಚ್ಚಲಿಗೆ ನಡಿ. ಬಿಸಿ ಬಿಸಿ ನೀರಲ್ಲೊಂದು ಸ್ನಾನ ಮಾಡು. ನಿನ್ನೀ ವದ್ದೆ ಬಟ್ಟೆಗಳನ್ನೆಲ್ಲಾ ಬಿಚ್ಚಾಕು, ಈ ಆಲೀಕಲ್ಲು ಮಳೆ ಬಂತು ಅಂದ್ರೆ ಸಾಕು, ನೋಡು ಹೆಂಗೆ ಕೆಸ್ರು ಮಾಡ್ಕೊಂಡು ಬಂದಿದೀಯ ಬಟ್ಟೆಗಳನ್ನ ಅಂತ ಬಯ್ಯಲು ಶುರು ಮಾಡುತ್ತಿದ್ದ ಅಮ್ಮನಿಗೆ , ಅಮ್ಮ ಅದು ಅಂತ ತನ್ನ ತಿಂಡಿ ಬಾಕ್ಸು ತೆಗೆದು ಏನೋ ಕೊಡೋಕೆ ಹೋಗ್ತಿದ್ದ. ಆದ್ರೆ ಮನೆಗೆ ಬರುವಷ್ಟರಲ್ಲಿ ಆ ಆಲೀಕಲ್ಲೆಲ್ಲಾ ನೀರಾಗಿ ಇವನ ಮುಖ ಸಣ್ಣ ಆಗೋದು. ಶಾಲೆಯತ್ರ ಬರ್ತಿದ್ದ  ಐಸ್ ಕ್ಯಾಂಡಿ ಅನ್ನೋ ಸೌಭಾಗ್ಯವನ್ನು ಅಮ್ಮ ಜೀವಮಾನದಲ್ಲಿ ತಿಂದಿರೋಕೆ ಸಾಧ್ಯವಿಲ್ಲ. ಅಷ್ಟೇ ತಂಪು ಕೊಡೋ ಬಡವರ ಐಸು ಆಲಿಕಲ್ಲಾನಾದ್ರೂ ಅಮ್ಮನಿಗೆ ತಂದು ತೋರ್ಸಿ ಅದ್ರ ರುಚಿ ಬಗ್ಗೆ ಹೇಳ್ಬೇಕು ಅಂದ್ಕೊಂಡಿದ್ದ ಮಗರಾಯ. ತನ್ನ ವಯಸ್ಸನ್ನೇ ದಾಟಿ ಬಂದ ಅಮ್ಮ ತನ್ನಂತೆ ಆಡ್ತಿದ್ರಾ ?  ಆಲಿಕಲ್ಲು ತಿಂತಿದ್ರಾ  ಅನ್ನೋ ಸಣ್ಣ ಅನುಮಾನವನ್ನು ಆಲೀಕಲ್ಲು ಮಳೆಯಲ್ಲಿ ನೆಂದು ಬಂದಾಗೆಲ್ಲಾ ಬಯ್ತಿದ್ದ ಅವರ ಬಯ್ಗುಳಗಳು ಮೆಟ್ಟಿ ಹಾಕಿದ್ದವು. ಅಮ್ಮನೆಂದ್ರೆ ಅವನ ಪಾಲಿಗೆ ಮನೆಯ ನಾಲ್ಕು ಗೋಡೆಗಳ ಯಾವ ಕಾರಣಕ್ಕೂ ದಾಟದ, ಮನೆಯಲ್ಲಿ ತನ್ನ ಬರವನ್ನೇ ಕಾಯ್ತಾ , ತನಗಾಗೇ ತನ್ನ ಜೀವನವ ಮುಡಿಪಿಟ್ಟ ಜೀವ ಅವನ ದೃಷ್ಟಿಯಲ್ಲಿ. ಪ್ರತೀ ಮಳೆಯಲ್ಲಿ ನೆನೆದ್ರೂ ತನಗೆಂದು ಆಲೀಕಲ್ಲು ಬಾಕ್ಸಲ್ಲಿ ಕೂಡಿಡುವ, ಆದ್ರೆ ತನಗೆ ಹೇಳಲಾಗದೇ ಹೋದ ಮಗನ ಬಗ್ಗೆ ತಾಯಿಗೆ ಪ್ರತೀ ಬಾರಿಯೂ ಆತನ ಶೀತಲ ತಿಂಡಿ ಬಾಕ್ಸ ತೊಳೆದಿಡುವಾಗ ಗೊತ್ತಾಗ್ತಿತ್ತು. ಕಣ್ಣಂಚಲ್ಲೊಮ್ಮೆ ನೀರು ಜಿನುಗ್ತಿತ್ತು.

ಎಂತಾ ದರಿದ್ರ ಮಳೆಯಪ್ಪಾ ಇದು.ಇವತ್ತಾದ್ರೂ ಬೇಗ ಮನೆಗೆ ಹೋಗೋಣ ಅಂತ ಅಂದ್ಕೊಂಡಿದ್ದೆ. ಈ ಮಳೆಯಿಲ್ಲ ಟ್ರಾಫಿಕ್ಕೆಲ್ಲಾ ಜಾಮಾಗಿ ಮನೆ ಮುಟ್ಟೋದು ಮಿನಿಮಮ್ ಮುಕ್ಕಾಲು ಘಂಟೆ ಲೇಟಾಗುತ್ತೆ. ಥೋ ಅಂತ ಗೊಣಗ್ತಿದ್ದ ಸಹೋದ್ಯೋಗಿಯ ಗೊಣಗಾಟದಿಂದ ವಾಸ್ತವಕ್ಕೆ ಬಂದಿದ್ದ ಇವ. ಎದುರು ಬೀಳುತ್ತಿದ್ದ ಆಲೀಕಲ್ಲುಗಳನ್ನ ಕಂಡು ಓಡಿ ಹೋಗಿ ಆರಿಸೋಣವಾ ಅನಿಸಿದ್ರೂ ಇವನ ಟೈ, ಬೆಲ್ಟುಗಳ ಫಾರ್ಮಲ್ಲು ಇವನನ್ನು ನಿಂತ ಜಾಗಕ್ಕೇ ಕಟ್ಟಿ ಹಾಕಿದ್ವು.ಅಲ್ಲೇ ಐದು ನಿಮಿಷ ಮಳೆ ನೋಡುತ್ತಾ ಮೈಮರೆತಿದ್ದವನಿಗೆ ಮೂರು ಮಿಸ್ ಕಾಲುಗಳು ಬಂದಿದ್ದೂ ಗೊತ್ತಾಗಿರಲಿಲ್ಲ.

ಬೆಳಗಾದರೆ ಆಫೀಸಿನ ಏಸಿ, ರಾತ್ರೆಯಾದ್ರೆ ರೂಮಿನ ಫ್ಯಾನ ಸದ್ದು, ಟೀವಿಯ ಸದ್ದುಗಳಲ್ಲಿ, ಹಗಲನ್ನೇ ರಾತ್ರಿಯಾಗಿಸುವಂತಿದ್ದ ಕಿಟಕಿಯ ಕರ್ಟನ್ನುಗಳ ಕತ್ತಲಲ್ಲಿ ಮಳೆಯ ಸದ್ದಾಗಲಿ, ದೃಶ್ಯಗಳಾಗ್ಲಿ ಕಾಣೋದಾದ್ರೂ ಹೇಗೆ ? ಎಲ್ಲೋ ಜೋರಾಗಿ ಗುಡುಗಿದಾಗ ಕೆಲವೊಮ್ಮೆ ಓ, ಮಳೆ ಬರ್ತಿದ್ಯಾ ಅನ್ನೋ ಭಾವ ಎದ್ದು ಮತ್ತೆ ಮಲಗಿದ್ದು ಬಿಟ್ರೆ ಮಳೆಯೆಂಬುದು ಬಾಲ್ಯದ ಕನಸುಗಳಿಗೆ ಮಾತ್ರ ಸೀಮಿತವಾಗಿತ್ತು. ಬೆಳಗ್ಗೆ ಆಫೀಸು ಬಸ್ಸು, ಸಂಜೆಗೆ ಬಸ್ಸು, ತೀರಾ ಲೇಟಾದ್ರೆ ಕ್ಯಾಬು ಅಂತ ಮನೆ ಬಳಿಯೇ ಸಕಲ ಸೌಲಭ್ಯಗಳು ಸಿಕ್ಕಿದಾಗ , ಅದರಲ್ಲೂ ಇಯರ್ ಫೋನ್ ಸಾಥಿಯಾದಾಗ ರಸ್ತೆಯಲ್ಲಿ ಎದುರಾಗುತ್ತಿದ್ದ ಮಳೆಯೂ ಟೀವಿಯಲ್ಲಿ ನೋಡಿದ ಮಳೆಯ ಸನ್ನಿವೇಶದಷ್ಟೇ ನೀರಸವೆನಿಸುತ್ತಿತ್ತು. ತಿಂಗಳಿಗೊಮ್ಮೆ ಊರಿಗೆ ಬಂದಾಗ ಅಡ್ಡಗಟ್ಟಿ ತನ್ನ ಪ್ರೀತಿಯನ್ನೋ, ರೋಷವನ್ನೋ ತೀರಿಸಿಕೊಳ್ಳುವಂತೆ ಛತ್ರಿಯಿದ್ದರೂ ಅರ್ಧ ಮೈ ತೋಯಿಸಿಬಿಡುತ್ತಿದ್ದ ಮಳೆಯೇ ಆತನ ಪಾಲಿಗೆ ಮಳೆ. ಬೆಂಗ್ಳೂರನ್ನೋದು ಒಂಥರಾ ಹೊಟ್ಟೆಪಾಡಿನ ತಾತ್ಕಾಲಿಕ ತಂಗುದಾಣವಷ್ಟೇ. ಅಷ್ಟಕ್ಕೂ ಬಸ್ಟಾಂಡಲ್ಲಿ ಬಸ್ಸಿಗೆಂದು ಕೂತಾಗ ಅದು ಸುರಿಯತೊಡಗಿದ್ರೆ ಅದು ಎಂದಾದ್ರೂ ಖುಷಿ ಕೊಟ್ಟೀತೆ ? ಹಾಗೇ ಬೆಂಗ್ಳೂರಿನ ಮಳೆ ಒಮ್ಮೊಮ್ಮೆ ಎದುರಾದ್ರೂ ಅದರೊಂದಿಗೆ ಎದುರಾಗುತ್ತಿದ್ದ ಕೊಚ್ಚೆ ನೀರು, ಜಾಮಾಗುತ್ತಿದ್ದ ಟ್ರಾಫಿಕ್ಕು ಯಾಕೋ ಬೇಸರ ತರಿಸಿದ್ವು.

ಹಿಂದಿನ ದಿನ ಸಂಜೆ ಫ್ರೆಂಡು ಮನೆಯಲ್ಲಿ ಪಾರ್ಟಿಯಿದೆ ಬಾರೋ ಎಂದು ಎಷ್ಟು ಕರೆದ್ರೂ ಹೋಗಿರಲಿಲ್ಲ ಇವ. ಬೈಕಲ್ಲಿ ಅಷ್ಟು ದೂರ ಯಾರು ಹೋಗ್ತಾರೆ ಅನ್ನೋ ಉದಾಸೀನ. ಬೆಂಗ್ಳೂರೆಲ್ಲಾ ಬೈಕೋಡಿಸಿದವನಿಗೆ ಅವತ್ಯಾಕೋ ಮನಸ್ಸಿಲ್ಲ. ಏನೋ ಕಾರಣ ಹೇಳಿ ತಪ್ಪಿಸಿಕೊಂಡವ ರಾತ್ರಿಯೆಲ್ಲಾ ಏನೋ ಮಾಡುತ್ತಾ ತಡವಾಗಿ ಮಲಗಿದ್ದ. ಬೆಳಗ್ಗೆ ಎದ್ದು ಲೇಟಾಗಿ ಆಫೀಸಿಗೆ ಹೊರಟವನಿಗೆ ರಸ್ತೆಯ ಮೇಲೆಲ್ಲಾ ಬಿದ್ದಿದ್ದ ಮಣ್ಣರಾಶಿಯಿಂದ ಸಖತ್ ಮಳೆ ಬಂದಿರಬೇಕು ನಿನ್ನೆ ರಾತ್ರಿ. ಆದ್ರೂ ಗೊತ್ತೇ ಆಗ್ಲಿಲ್ಲವಲ್ಲ ನಂಗೆ. ಛೇ ಅಂದ್ಕೊಂಡ.  ಸಂಜೆ ಮನೆಗೆ ಮರಳ್ತಾ ಶುರುವಾಯ್ತು ನೋಡಿ ಮಳೆ. ಆಫೀಸು ಬಸ್ಸು ತಪ್ಪಿಸಿಕೊಂಡು ಸಾಮಾನ್ಯ ಬಸ್ಸಲ್ಲಿ ಹೊರಟಿದ್ದವನಿಗೆ ತನ್ನೂರ ಹಳೆ ಮಳೆ ನೆನಪಿಸಿಬಿಡ್ತು ಅದು. ಬಸ್ಸಿಳಿದು ತನ್ನ ರೂಮಿಗೆ ಐದು ನಿಮಿಷದ ನಡಿಗೆಯಷ್ಟೇ. ಆದ್ರೆ ಆ ಐದು ನಿಮಿಷದ ಬದ್ಲು ಓಡಿ ಎರಡೇ ನಿಮಿಷಕ್ಕೆ ಬಂದಿದ್ರೂ ಬರುವಷ್ಟರಲ್ಲಿ ಪೂರಾ ತೋದು ಹೋಗಿದ್ದ ಮಳೆಯಲ್ಲಿ. ಭೋರ್ಗರೆಯುತ್ತಿದ್ದ ಮಳೆಯಲ್ಲಿ , ರಸ್ತೆಯ ಮೇಲೆ ಹರಿಯುತ್ತಿದ್ದ ನೀರಲ್ಲಿ ಬೀಳದಂತೆ ಸಾವರಿಸಿಕೊಂಡು ಒಂದೇ ಉಸಿರಲ್ಲಿ ಓಡಿ ಮನೆ ತಲುಪಿದ್ರೂ ಪೂರಾ ನೆಂದುಹೋಗಿದ್ದ ಈತ. ಹಾಕಿದ್ದ ಗೀಸರ್ ಲೈಟ್ ಯಾಕೆ ಅರ್ಧಕ್ಕೆ ಹೋಯ್ತು ಅಂತ ನೊಡಿದವನಿಗೆ ಕರೆಂಟ್ ಹೋಗಿದ್ದು ಗಮನಕ್ಕೆ ಬಂದಿತ್ತು. ಗೀಸರಿನ ಅರ್ಧ ಕಾದಿದ್ದ ನೀರಲ್ಲಿ ಸ್ನಾನ ಮಾಡ್ತಿದ್ರೆ ಅವನಿಗೆ ಊರ ಆಲಿಕಲ್ಲಿನ ನೆನಪುಗಳೇ. . ಯಾವಾಗ ಊರಿಗೆ ಹೋಗ್ತೀನೋ. ಮತ್ತೆ ಆಲಿಕಲ್ಲ ಮಳೇಲಿ ಆಡ್ತೀನೋ ಅನಿಸಿಬಿಟ್ಟಿತ್ತು, ಈ ಬೆಂಗ್ಳೂರ ಮಳೆಯಲ್ಲಿ ಎರಡು ನಿಮಿಷ ತೋದ ಭಾವ. ಕರೆಂಟ ಕಾದು ಬೇಸತ್ತು ಫೇಸ್ಬುಕ್ಕು ಹೊಕ್ಕವ ಅಲ್ಲೊಂದು ಮಳೆಯ ಖುಷಿಯ ಬಗ್ಗೆ ಸ್ಟೇಟಸ್ ಹರಿಬಿಟ್ಟಿದ್ದ. ಅಲ್ಲೂ ಟೈಂ ಪಾಸಾಗದೇ ಅಮ್ಮನಿಗೊಂದು ಕಾಲ್ ಹಚ್ಚಿದ್ದ. ಇವತ್ತು ತನಗೆ ಸಿಕ್ಕಿದ ಬೆಂಗಳೂರು ಮಳೆ ಬಗ್ಗೆ , ಅದ್ರಲ್ಲಿ ಎರಡು ನಿಮಿಷದಲ್ಲೇ ತೋದ ಬಗ್ಗೆ, ಇನ್ನೂ ಭೋರ್ಗರೆತಿರೋ ಗುಡುಗು ಸಮೇತ ಮಳೆ ಬಗ್ಗೆ ಖುಷಿಯಿಂದ, ಇರದ ಕರೆಂಟ್ ಬಗ್ಗೆ ಬೇಸರದಿಂದ ಹೇಳ್ತಿದ್ರೆ ಇಲ್ಲಿ ಬೆಳಗ್ಗಿಂದ ಕರೆಂಟಿಲ್ಲ ಅಂತ ಹೇಳೇಕೆ ಹೋದ ಅಮ್ಮ ಸುಮ್ಮನಾಗಿದ್ರೂ. ಕೊನೆಗೆ ಹಿಂದಿನ ರಾತ್ರಿ ಟೀವಿಯಲ್ಲಿ ನೋಡಿದ್ದು ನೆನಪಾಗಿ ಅಂದ್ರು ಅಮ್ಮ.  ಅದ್ಯಾವ್ದೋ ಶ್ಯಾಮ ನಗರವೋ , ಭಾಮ ನಗರದಲ್ಲೋ ಭರ್ಜರಿ ಮಳೆಯಾಗಿದ್ಯಂತಲ್ಲೋ, ಅದು ಬೆಂಗಳೂರಲ್ಲಿ ಎಲ್ಲಿ ಬರುತ್ತೆ ಅಂದ್ರು ಅಮ್ಮ. ಶ್ಯಾಮ ನಗರ ಅಂದ್ರೆ, ನಿನ್ನೆ ಸಂಜೆ ನಾನು ಹೋಗ್ಬೇಕಾಗಿದ್ದ ಏರಿಯಾವೇ .. ಮಗನ ಕಿವಿ ನೆಟ್ಟಗಾಯ್ತು.ಭರ್ಜರಿ ಮಳೆಯಾ ? ಇನ್ನೇನು ತೋರಿಸಿದ್ರು ಅಂದ ಇವ. ಅದ್ಯಾವ್ದೋ ಏರಿಯಾದಲ್ಲಿ ನಿಲ್ಲಿಸಿದ್ದ ಬೈಕುಗಳು ಕೊಚ್ಚಿ ಹೋಗಿ, ಕಾರುಗಳೆಲ್ಲಾ ಅದೆಷ್ಟೋ ದೂರ ತೇಲಿ ಹೋಗಿದೆ ಅಂತ ಹೇಳ್ತಿದ್ರು. ಮನೆಯೊಳಗೆಲ್ಲಾ ಸೊಂಟದಷ್ಟು ನೀರು ನಿಂತಿತ್ತು ಅಂದದ್ದು ಕೇಳಿ ಗಾಬರಿಯಾಗಿದ್ದ. ಅಮ್ಮನ ಕಾಲಿಟ್ಟ ನಂತರವೇ ತನ್ನ ಗೆಳೆಯನಿಗೆ ಫೋನಾಯಿಸಿದ್ರೆ ಸ್ವಿಚ್ಚಾಫು. ಆ ಏರಿಯಾದಲ್ಲಿದ್ದ ಇನ್ನಿಬ್ಬರಿಗೆ ಫೋನಾಯಿಸಿದ್ರೆ ಅವೂ ಸ್ವಿಚ್ಚಾಫು. ಗಾಬರಿಯಾಗಿ ಮತ್ತೊಬ್ಬ ಗೆಳೆಯನಿಗೆ ಫೋನಾಯಿಸಿದ್ರೆ ಅವ ಬೇಸರದಿಂದ್ಲೇ ಉತ್ತರಿಸಿದ್ದ. ಬೆಳಗ್ಗಿನಿಂದ ಟೀವಿಯಲ್ಲಿ ತೋರಿಸ್ತಿದ್ದಾರಲ್ಲೋ. ಶ್ಯಾಮನ ಮನೆಯಲ್ಲಿ ಮೊಣಕಾಲುದ್ದ ನೀರು ನಿಂತಿರೋದು, ತಮ್ಮ ಏರಿಯಾದ ಗಾಡಿಗಳೆಲ್ಲಾ ಕೊಚ್ಚಿ ಹೋಗಿರೋದನ್ನ ಆ ಏರಿಯಾದವ್ರು ಗೋಳಾಡ್ತಿದ್ದಿದ್ನ ನೋಡಿಲ್ವಾ ನೀನು ? ಹತ್ತಿರದ ಏರಿಯಾದ ನಾವೆಲ್ಲಾ ಆಫೀಸಿಗೆ ರಜೆ ಹಾಕಿ ಶ್ಯಾಮನಿಗೆ ಸಮಾಧಾನ ಮಾಡೋಕೆ ಅಂತ ಹೋಗಿದ್ವಿ. ಅವ್ನ ಕ್ಲೋಸ್ ಫ್ರೆಂಡು ಅಂತಿರೋ ನೀನು ನೋಡಿದ್ರೆ.. ಏನೋ ನೀನು ಅಂತ ಬೈದು ಫೋನ್ ಕುಕ್ಕಿದ. ಧಾರಾಕಾರ ಮಳೆಗೆ ಸಿಕ್ಕಿ ಕೊಚ್ಚಿಹೋದ ನತದೃಷ್ಟ ಬೈಕು ತನ್ನದಾಗದ ಬಗ್ಗೆ ವಿಧಿಗೆ ಧನ್ಯವಾದ ಹೇಳ್ಬೇಕೋ, ಜೀವದ ಗೆಳೆಯನ ಕಷ್ಟದಲ್ಲೂ ಜೊತೆಗಿರಲಾಗದ ದುರ್ವಿಧಿಗೆ ಬಯ್ಯಬೇಕೋ ಗೊತ್ತಾಗುತ್ತಿರಲಿಲ್ಲ. ಅದೇ ಸಮಯದಲ್ಲಿ ಬೆಂಗ್ಳೂರಲ್ಲಿ ಭಾರೀ ಮಳೆಯೆಂಬ ಸುದ್ದಿ ಫುಲ್ಲು ಬಿಸಿಲಿದ್ದ ಅದೇ ನಗರದ ಇನ್ಯಾವುದೋ ಭಾಗದ ಜನಕ್ಕೆ ಕಾಮಿಡಿ ಅನಿಸುತ್ತಿತ್ತು. ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳಿಗೆ  ಬಯ್ಗುಳಗಳು ಮುಂದುವರೆದಿತ್ತು.