Saturday, January 31, 2015

%

ಈ ವಾರ ಯಾವ ವಿಷಯದ ಬಗ್ಗೆ ಬರೆಯೋದಪ್ಪ ಅಂತ ಯೋಚ್ನೆ ಮಾಡ್ದಾಗೆಲ್ಲಾ ಐಡಿಯಾಗಳ ಚೌಚೌಭಾತ್ ಮನಸಲ್ಲಿ. ಅದೋ , ಇದೋ ಅಥವಾ ಮತ್ತೊಂದೋ ಅಂತ ಒಂದಿಷ್ಟು ಬಿಡಿಬಿಡಿ ಎಳೆಗಳು ಹೊಳೆದಿರುತ್ತೆ. ಈ ಸಲ ೧೦೦% ಇದ್ರ ಬಗ್ಗೆನೇ ಬರಿಬೇಕು ಅಂತ ಧೃಢ ನಿರ್ಧಾರ ಮೂಡೋವರೆಗೆ ಈ ಬಿಡಿ ಬಿಡಿ ಐಡಿಯಾಗಳು ಮನದ ಒಂದಿಷ್ಟು ಪ್ರತಿಶತ ಭಾಗ ಆಕ್ರಮಿಸಿಕೊಂಡಿರುತ್ತೆ. ಸ್ವಸ್ತಿಕ್ಕು, ಸೂಪರ್ರು, ಎ,ಐ,ಝೆಡ್ ಹೀಗೆ ಚಿಹ್ನೆಗಳು ಅಕ್ಷರಗಳೆಲ್ಲಾ ಸಿನಿಮಾ ಆಗೋದು ನೋಡಿದ್ವಿ, ಇದೇನಿದು ಪ್ರತಿಶತದ ಚಿಹ್ನೆ(%) ಅಂದ್ಕೊಂಡ್ರಾ ? ಇವತ್ತಿನ ಲೇಖನದ ಶೀರ್ಷಿಕೆ ಏನಪ್ಪ ಅಂತ ಕೇಳೋಕೆ ಹೊರಟ್ರಾ ?  ಎಲ್ಲಿ ಚೌಚೌ ಭಾತು, ಎಲ್ಲಿ ಸಿನಿಮಾ , ಏನಪ್ಪ ಇದು, ಎಲ್ಲಾ ಅರ್ಧಂಬರ್ದ ಅಂತಾ ಇದೀರಾ ? ಹೆ ಹೆ. ನಿಮ್ಮ ಪ್ರಶ್ನೆಯಲ್ಲೇ ಇದಕ್ಕೆ ಉತ್ರ ಇದೆ. ಅರ್ಧಂಬರ್ದ ಅಂದ್ರೆ ಐವತ್ತು ಪ್ರತಿಶತ ಅಂದ್ರೆ ೫೦% ಅನ್ನೋದು ಈ ಪ್ರತಿಶತದ ಮತ್ತೊಂದು ಬಳಕೆ ಅಷ್ಟೆ. ನಮ್ಮ ಜೀವನದಲ್ಲಿ ಈ ಪ್ರತಿಶತ ಅನ್ನೋದು ಅದೆಷ್ಟು ಹಾಸುಹೊಕ್ಕಾಗಿದೆ. ಅದ್ರ ಬಗ್ಗೆನೇ ಒಂದಿಷ್ಟು ಬರಿಬಾರದ್ಯಾಕೆ ಅನಿಸಿದ್ರ ಫಲವೇ ಈ ಲೇಖನ. ಇದ್ರಲ್ಲಿ ಬಂದಿರೋ ಪಾತ್ರಗಳಿಗೆ ** ಪ್ರತಿಶತ ಸ್ಪೂರ್ತಿಯಾದ ಎಲ್ಲಾ ನಾಯಕ, ನಾಯಕಿಯರೇ ಈ ಶೀರ್ಷಿಕೆಗೆ ಸ್ಪೂರ್ತಿ.

ಮಾಧ್ಯಮಿಕ ಶಾಲಾ ದಿನಗಳು. ಗಣಿತದಲ್ಲಿ ಅಂಕಗಣಿತ, ರೇಖಾ ಗಣಿತ, ಬೀಜಗಣಿತ ಅಂತ ಮೂರು ಭಾಗಗಳಿವೆ ಅಂತ ಮಾಡಿ ಅದರಲ್ಲಿ ಬೇರೆ ಬೇರೆ ವಿಷಯಗಳನ್ನು ಕಲಿಸೋಕೆ ಚೂರು ಮೊದಲು ಬಂದದ್ದು ಈ ಪ್ರತಿಶತದ ಕಲ್ಪನೆ. ಏ ನಂದು ತೊಂಭತ್ತು ಪರ್ಸೆಂಟು ಕಣೋ, ನಂದು ತೊಂಭತ್ತೆಂಟೋ ಅಂತೆಲ್ಲಾ ಹುಡುಗರ ಮಾತು ಕೇಳಿದ್ರೂ ಅಂಕಗಳಿಂದ ಪ್ರತಿಶತ ಪಡೆಯೋ ಪರಿ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರ್ಲಿಲ್ಲ. ಮೂರು ಬಾಳೆ ಹಣ್ಣುಗಳಿಂದ ಐದು ರೂಪಾಯಿ ಲಾಭ ಪಡೆಯೋ ರಾಮನಿಗೆ ಐದು ಬಾಳೆ ಹಣ್ಣುಗಳಿಂದ ಎಷ್ಟು ಪ್ರತಿಶತ ಲಾಭ ಅನ್ನುವ ಲೆಕ್ಕಗಳೆಲ್ಲಾ ಬಂದಿದ್ದು ಆಮೇಲೆ ಬಿಡಿ.

ನಾನೂರಕ್ಕೆ ಮುನ್ನೂರ ತೊಂಭತ್ತು ಅಂತ ಟೀಚರು ಬರೆದ ಮಾರ್ಕ್ ಕಾರ್ಡೇ, ಅದರಲ್ಲಿ ಎಲ್ಲಾದ್ರೂ ಇರ್ತಿದ್ದ ಪರ್ಸೆಂಟೇಜೇ ನಮ್ಮ ಪಾಲಿನ ಚರ್ಚೆಯ ವಿಷಯ. ಒಂದು ಮಾರ್ಕು ಹೆಚ್ಚಾದ್ರೆ ಎಷ್ಟು ಪ್ರತಿಶತ ತಲೆಕೆಡಿಸಿಕೊಳ್ಳದಿದ್ರೂ ಈ ಪ್ರತಿಶತ ಅನ್ನೋ  ಮಾತು ಬಹಳ ಕಡೆ ಕಿವಿಗೆ ಬಿದ್ದಿರ್ತಿತ್ತು. ತೊಂಭತ್ತೈದು ಪರ್ಸೆಂಟು ಅಂತ ಖುಷಿ ಪಟ್ಟರೂ ಇನ್ನೈದು ಪರ್ಸೆಂಟು ಮಾರ್ಕು ಎಲ್ಲೋಯ್ತು ? ಸಂಜೆ ಮನೆಗೆ ಬಂದ್ಕೂಡ್ಲೆ ಆಟಕ್ಕೆ ಹೋಗ್ಬೇಡ ಅಂದ್ರೆ ಅರ್ಥ ಆಗಲ್ವಾ ? ಇಡೀ ದಿನ ಆಡೋದು ಆಡೋದು. ಮುಂದಿನ ಸಲ ಹಂಡ್ರೆಡ್ ಪರ್ಸೆಂಟ್ ತೆಗಿಬೇಕು ಗೊತ್ತಾಯ್ತಾ ಅಂತ ಬಯ್ಯೋ ಪೋಷಕರು , ನೀನು ಒಂದೈವತ್ತು ಪರ್ಸೆಂಟ್ ತೆಗೆದ್ರೂ ಸಾಕು ಮಗ್ನೆ. ವಿದ್ಯೆ ಅನ್ನೋದು ಅರ್ಥ ಮಾಡ್ಕೊಳೋಕೆ, ಬದುಕ ಕಲಿಯೋಕೆ. ಬರೀ ಅಂಕಗಳೊಂದೇ ನಿನ್ನ ಗುರಿಯಾಗದಿರ್ಲಿ. ಒಳ್ಳೆ ಆರೋಗ್ಯದಿಂದ, ಲವಲವಿಕೆಯಿಂದ, ಸಮಾಕಕ್ಕೊಂದು ಸಂಪನ್ಮೂಲವಾಗೋ ತರ ನೀ ಬೆಳಿ ಅಂತ ಪ್ರತೀ ಹೆಜ್ಜೆಗೂ ಬೆನ್ನುತಟ್ಟುತ್ತಿದ್ದ ಪೋಷಕರು.. ಹೀಗೆ ಹಲವು ಕೋನಗಳ ನಡುವೆ ನಮ್ಮ ಬಾಲ್ಯದ ದಿನಗಳು ಸಾಗ್ತಾ ಇತ್ತು.
ಒಂದಿಷ್ಟು ಪ್ರತಿಶತ ಬುದ್ದಿ ಮತ್ತೊಂದಿಷ್ಟು ವರ್ಷ ವಯಸ್ಸು ಬೆಳವಣಿಗೆಯಾಗ್ತಾ ಬಂದಂತೆ ಈ ಪ್ರತಿಶತದ ಹಲವಾಯಾಮಗಳು ತಿಳಿತಾ ಬಂತು. ೯೧.೧೬% ಅಂತ ಇರೋದನ್ನ ತೊಂಭತ್ತೊಂದು ಪಾಯಿಂಟ್ ಒಂದು ಆರು ಅಂತ ಓದಬೇಕೇ ಹೊರತು ತೊಂಭತ್ತೊಂದು ಪಾಯಿಂಟು ಹದಿನಾರು ಅಂತ ಓದೋ ಹಾಗಿಲ್ಲ ಅಂತ ತಿಳೀತು.ಪಾಸಿಗೆ ೩೫% , ಫಸ್ಟ್ ಕ್ಲಾಸಿಗೆ ೬೦% ಬರ್ಬೇಕು ಅಂತ ತಿಳೀತು. ಒಂದು ಎಲ್.ಐಸಿ ಪಾಲಿಸಿ ಮಾಡಿಸಿದ್ರೆ ಅದ್ರಲ್ಲಿ ಇಷ್ಟು ಪರ್ಸೆಂಟ್ ವಿಮಾ ಏಜೆಂಟರಿಗೆ ಸಿಗುತ್ತೆ ಅಂತ ಕೇಳಿದಾಗ ಪರ್ಸೆಂಟೇಜನ್ನು ಹೀಗೂ ಉಪಯೋಗಿಸಬಹುದಾ ಅನ್ನಿಸ್ತು. ಅದಾದ ಮೇಲೆ ನೀವು ಕಟ್ಟೊ ಮೊದಲ ಪಾಲಿಸಿಯಲ್ಲಿ ಇಂತಿಷ್ಟು ಪರ್ಸೆಂಟು rebate ಕೊಡ್ತೀನಿ ಅನ್ನೋ ಅವರ ಮಾತುಗಳಲ್ಲಿ, ನಮ್ಮ ಬಸ್ಸಿಗೆ ಹತ್ತಿ ನಮ್ಮ ಬಸ್ಸಿಗೆ ಹತ್ತಿ ಅಂತ ಬಸ್ಟಾಂಡಲ್ಲಿ ದುಂಬಾಲು ಬೀಳ್ತಿದ್ದ ಜನಗಳಿಗೂ ಅವರಿಂದ ಜನ ಹತ್ತಿರ್ದೇನೇ ಇಷ್ಟ್ ಪರ್ಸೆಂಟ್ ಕಮಿಷನ್ನು, ಹೊಟ್ಟೆಪಾಡು ಅನ್ನೋ ಅಂಶಗಳು ಈ ಪ್ರತಿಶತದ ಬಗೆಗಿನ ಆಲೋಚನಾಲಹರಿಯನ್ನೇ ಬದಲಿಸಿದವು.

ಇನ್ನು ವಿಜ್ನಾನಕ್ಕೂ, ಅಂತರ್ಜಾಲಕ್ಕೂ ಈ ಪ್ರತಿಶತದ ಕೊಡುಗೆ ಕಮ್ಮಿಯೇನಲ್ಲ. ಯಾವುದೋ ಜಾಲತಾಣದಲ್ಲಿ ಖಾಲಿಜಾಗ ಬರೀಬೇಕು. ಆದ್ರೆ ಖಾಲಿಜಾಗವನ್ನು ತಗೊಳ್ಳದ html ಅದನ್ನ %20 ಅಂತ ಬರೆದಿರುತ್ತೆ. ಹೊಂದಿಕೆಯಾಗದ ಬ್ರೌಸರ್ಗಳಲ್ಲಿ ಪರಭಾಷೆಯ ಲೇಖನಗಳು %[ ಗಳ ರೂಪದಲ್ಲಿ ಕಾಣೋದ ನೋಡಿರಬಹುದು. ಇವೆಲ್ಲಕ್ಕಿಂತ ಹೆಚ್ಚು ತಲೆತಿನ್ನೋದು ಮೊಬೈಲು ಮತ್ತು ಲ್ಯಾಪ್ಟಾಪ್ ಬ್ಯಾಟರಿ %. ಬ್ಯಾಟ್ರಿ ಪರ್ಸಂಟೇಜ್ ಹದಿನೈದಾಗುತ್ತಿದ್ದಂತೆಯೇ ಕೂಗಲು ಶುರು ಮಾಡೋ ಮೊಬೈಲು ನಂತರ ಮೊಬೈಲು ಮಖಾಡೆ ಮಲಗೋವರೆಗೂ ಕೂಗುತ್ಲೇ ಇರುತ್ತೆ. ಅಯ್ಯೋ. ಬೆಳಗ್ಗೆ ಅಷ್ಟೆ ೧೦೦% ಆಗೋ ತರ ಚಾರ್ಚು ಮಾಡಿದ್ದೆ. ಈಗ ನೋಡಿದ್ರೆ ೫೦%. ಇನ್ನು ಇಡೀ ದಿನ ಹೆಂಗೆ ಕಳೆಯೋದಪ್ಪ ಅನ್ನೋ ಚಿಂತೆ ಕೆಲವರದ್ದಾದ್ರೆ ಲ್ಯಾಪ್ಟಾಪ್ ಬ್ಯಾಟ್ರಿ ಆಗ್ಲೇ ಏ ಪ್ರತಿಶತಕ್ಕೆ ಬಂದು ಕೆಂಪಾಗಿದೆ. ಅದಿನ್ನು ಮಲಗೋದ್ರೊಳಗೆ ಬ್ಯಾಟ್ರಿ ಎಲ್ಲಪ್ಪ ಹುಡುಕ್ಲಿ ಅನ್ನೋದು ಇನ್ನುಳಿದವರರದ್ದು. ೧೦% ಬ್ಯಾಟ್ರಿ ಇತ್ತು ಈಗೊಂದು ಗಂಟೆ ಹಿಂದೆ. ಇನ್ನೂ ಒಂಭತ್ತು ಪರ್ಸೆಂಟ್. ಎಷ್ಟೊತ್ತು ಬರುತ್ತೆ ನೋಡು ನನ್ನ ಬ್ಯಾಟ್ರಿ ಅನ್ನೋ ಹೊಟ್ಟೆಯುರಿಸೋ ಮಾತುಗಳ ನಡುವೆಯೂ ಪುಕು ಪುಕು ಹೇಳಿದವನಿಗೆ. ಟ್ರಿಪ್ಪಿಗೆ ಅಂತ ಹೋದಾಗ ೪೦ ಪರ್ಸೆಂಟಿದ್ದ ಫೋನು ಇದ್ದಕ್ಕಿದ್ದಂಗೆ ಮೂವತ್ತೈದಾಗಿ, ಇಪ್ಪತ್ತಾಗಿ ಪರ್ಸೆಂಟೇಜ್ ಲೆಕ್ಕಾಚಾರನೇ ತಲೆಕೆಳಗೆ ಮಾಡಿ ಯಾವಾಗಾದ್ರೂ ಮಖಾಡೆ ಮಲಗಬಹುದು ಅನ್ನೋದು ಅವ್ನ ಹಿಂದಿನ ಅನುಭವಗಳಿಂದ ಕಲಿತ ಪಾಟ. ಆ ಕಂಪೆನಿಯಲ್ಲಿ ೫೧% ಶೇರು ಆ ಮನುಷ್ಯಂದೆ. ಅವನೀಗ ರಿಟೈರಾಗ್ತಾ ಇದಾನಲ್ಲ. ಮುಂದೆ ಹೆಂಗೇನಪ್ಪ ಅನ್ನೋ ಚಿಂತೆ ಹೂಡಿಕೆದಾರರದ್ದಾದ್ರೆ , ಈ ಬ್ಯಾಂಕಿನವ್ರು ಕಾರ್ ಸಾಲದ ಬಡ್ಡಿದರ ಒಂದೆರಡು ಪರ್ಸೆಂಟ್ ಆದ್ರೂ ಇಳಿಸಿದ್ರೆ ಒಂದು ಕಾರು ತಗೊಂಡು ಒಂದಿಷ್ಟು ಪ್ರತಿಶತ ಟ್ಯಾಕ್ಸ್ ಉಳಿಸ್ಬೋದಿತ್ತು ಅನ್ನೋ ಚಿಂತನೆ ವೇತನದಾರರದ್ದು. ಎಕ್ಸಾಮಿಗೆ ಎಷ್ಟು ಓದಿದ್ಯೋ ಅಂದ್ರೆ ಒಂದು ಅರವತ್ತು ಪರ್ಸೆಂಟಾಗಿದೆ ಮಗ ಅಂತ್ಲೋ. ಎಷ್ಟು ಓದಿದ್ರೂ ಇನ್ನೂ ಮೂವತ್ತು ಪರ್ಸೆಂಟೂ ಆಗಿಲ್ಲ ಲೋ, ಇನ್ನು ಓದ್ಬೇಕು. ನಿಂದೆಷ್ಟಾಯ್ತು ಅನ್ನೋ ತರದ ಉತ್ತರಗಳು ಕಾಮನ್ನು ಹುಡುಗ್ರ ಬಾಯಲ್ಲಿ.

ಇನ್ನು ಗಾಳಿಯಲ್ಲಿ ಆಮ್ಲಜನಕದ ಪರ್ಸೆಂಟೇಜ್ ಎಷ್ಟು , ಭೂಮಿಯಲ್ಲಿನ ನೀರಿನ ಪರ್ಸೆಂಟೇಜಲ್ಲಿ ಎಷ್ಟು ಪ್ರತಿಶತ ಹಿಮಗಡ್ಡೆಗಳಲ್ಲಿ ಅಡಗಿದೆ ಅನ್ನೋ ತರದ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಕಾಮನ್ನಾಗಿರ್ತಿತ್ತು ಮುಂಚೆ. ಆದರೀಗ ನೀವು ಕುಡಿಯೋ ಕೋಕ್, ಪೆಪ್ಸಿಗಳಲ್ಲಿರೋ ವಿಷದ ಪರ್ಸಂಟೇಜ್ ಎಷ್ಟು ಗೊತ್ತಾ ಆಂತ ಕೇಳೋ ಪರಿಸ್ಥಿತಿ ಬಂದಿರೋದು ಪರಿಸ್ಥಿತಿಯ ದುರಂತ. ಭಾರತದಲ್ಲಿರೋ  ಮಹಿಳೆಯರಲ್ಲಿ ಇಷ್ಟು ಪ್ರತಿಶತ ಮಹಿಳೆಯರು ಇಂತಿಷ್ಟು ವರ್ಷ ದಾಟೋ ಹೊತ್ತಿಗೆ ಇಷ್ಟು ಶೋಷಣೆಗಳಿಗೆ ಒಳಗಾಗಿರುತ್ತಾರೆ ಅಂತಲೋ, ಇಲ್ಲಿ ಹೊಟ್ಟೋ ಮಕ್ಕಳಲ್ಲಿ ಇಷ್ಟು ಪ್ರತಿಶತ ಕುಪೋಷಣೆಗೆ ಒಳಗಾಗಿರುತ್ತಾರೆ ಅಂತ್ಲೋ ದಿನಪತ್ರಿಕೆಗಳಲ್ಲಿ ಓದೋ ಅಂಕಿ ಅಂಶಗಳು ಯಾಕೋ ಮನಕಲಕಿಬಿಡುತ್ತೆ. ಇನ್ನು ಈ ಪ್ರತಿಶತ ಅನ್ನೋದು ಬರೀ ಭೂಮಿಯ ವಿಚಾರವಲ್ಲ. ಇದ್ರ ವ್ಯಾಪ್ತಿ ವಿಶ್ವಮಯ. ಅಂತರಿಕ್ಷಕ್ಕೆ ತನ್ನ ಇಂತಿಷ್ಟನೇ ಉಪಗ್ರಹ ಉಡಾವಣೆಗೆ ತಯಾರಾಗ್ತಿರೋ ಇಸ್ರೋದ ಯಶಸ್ವೀ ಉಡ್ಡಯನದ ಸಾಧ್ಯತೆ ಇಂತಿಷ್ಟು ಪ್ರತಿಶತ ಅಂತ ಓದುತ್ತಿರುವಾಗಲೇ, ಮಂಗಳನ ಅಂಗಳದಲ್ಲಿ ಇಂತಿಷ್ಟು ಪ್ರತಿಶತ ಇಂಗಾಲವಿದೆಯಂತೆ ಅನ್ನೋ ಸುದ್ಧಿ ಬಂದಿರುತ್ತೆ. ಮುಂದಿನ ವರ್ಷ ಭೂಮಿಯ ಕಕ್ಷೆಗೆ ಹತ್ತಿರ ಬರಲಿರೋ ಉಲ್ಕೆ ಭೂಮಿಗೆ ಹೊಡೆಯೋ ಪ್ರತಿಶತ ಸಾಧ್ಯತೆ ತುಂಬಾ ಕಡಿಮೆ ಅಂದ್ರೂ ಆ ಸಾಧ್ಯತೆ ಇದ್ದೇ ಇದೆ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿರುತ್ತೆ ಇನ್ನೆಲ್ಲೋ.  ಇನ್ನೊಂದು ಮಜಾದ ಸಂಗತಿಯೆಂದ್ರೆ ಒಂದು ಕಡತದ ಹೆಸರಲ್ಲಿ % ಅನ್ನು ಬಳಸಬಹುದು. ಇದೂ ಒಂದು ವಿಶೇಷ ಚಿಹ್ನೆ(special character) ಏ ಆಗಿದ್ರೂ ಇದಕ್ಕೆ, #,! ಮತ್ತೆ ಕೆಲವೇ ಕೆಲವಕ್ಕೆ ಈ ವಿನಾಯಿತಿ ಇದೆ ! ಅದೇನು ಮಹಾ ಅಂದಿರಾ ? * ಅಥವಾ / ಅಥವಾ \ ಅಥವಾ ? ಗಳಲ್ಲಿ ಯಾವುದನ್ನಾದ್ರೂ ಫೈಲ್ ಹೆಸ್ರಲ್ಲಿ ಹಾಕಿ ನೋಡೋಣ :-) ಈಗಷ್ಟೇ ಅಂದಂತೆ ಈ % ಅನ್ನೋದು ವಿಶ್ವಮಯ. ಅದ್ರ ಮಹಿಮೆಗಳಲ್ಲಿ ಒಂದಿಷ್ಟು % ಆದ್ರೂ ಇಲ್ಲಿ ಸ್ಮರಣೆ ಮಾಡಲಾಗಿದ್ರ, ಇದರಿಂದ ನಿಮ್ಮ ಮನದಲ್ಲೂ ಒಂದಿಷ್ಟು % ವಿಚಾರದ ಎಳೆಗಳು ಮೂಡಿದ್ರೆ ಲೇಖನದ ಶ್ರಮ ಸಾರ್ಥಕ. ಮುಂದಿನ ಬಾರಿ ಸಿಗೋವರ್ಗೆ ಒಂದಿಷ್ಟು % ಪ್ರಣಾಮಗಳು ಮತ್ತೊಂದಿಷ್ಟು % ಧನ್ಯವಾದಗಳು.

Thursday, January 22, 2015

ಮುನ್ನೂರರ ಪುಳಕದಲ್ಲೊಂದು ಹಾಯ್ಕದ ನೆನಪು:

ಇದರೊಂದಿಗೆ ಬ್ಲಾಗಿಗೆ ಮುನ್ನೂರು ಪೋಸ್ಟುಗಳು ತುಂಬ್ತಿರುವಂತಹ ಸಂಭ್ರಮ.  ಇದೇ ಸಂದರ್ಭದಲ್ಲಿ ಬ್ಲಾಗಿಗೆ ೩೦,೦೦೦ ಭೇಟಿಗಳು ದಕ್ಕಿದ್ದೂ ಒಂದು ಕಾಕತಾಳೀಯವೇ ಅನಿಸುತ್ತೆ. ಬ್ಲಾಗಲ್ಲಿ ಬರೆಯೋಕೆ ಶುರು ಮಾಡಿದ ನಾಲ್ಕು ಚಿಲ್ರೆ ವರ್ಷಗಳಲ್ಲಿ ಮುನ್ನೂರರ ಗಡಿಯಲ್ಲಿ ಬಂದು ನಿಂತಿರುವ ಹಿಂದೆ ಅನೇಕರ ಬೆನ್ನು ತಟ್ಟುವಿಕೆ ಇದೆ. ಪ್ರತೀ ಬರಹವನ್ನೂ ಮೆಚ್ಚೋ, ಸರಿಯಿಲ್ಲದಿದ್ದಾಗ ಮೆಸೇಜ್ ಮಾಡೋ, ಸಿಕ್ಕಾಗ್ಲೋ ಎಚ್ಚರಿಸೋ ಬ್ಲಾಗ್ ಲೋಕದ ಗೆಳೆಯರು ಒಂದೆಡೆಯಾದ್ರೆ ಸುಮ್ಮನೆ ಓದಿಕೊಂಡು ಹೋಗೋ ಅನಾಮಧೇಯ ಗೆಳೆಯರು ಎಷ್ಟೋ. ಶಿವಮೊಗ್ಗೆಯ ಜೂನಿಯರ್ ಒಬ್ಬರ ಮನೆಗೆ ಹೋಗಿದ್ದಾಗ ಅಲ್ಲಿ ಅವರಮ್ಮ ನನ್ನ ಬ್ಲಾಗಿನಲ್ಲಿದ್ದ ಕನ್ನಡ ಲಿಪಿಯಲ್ಲಿ ಬರೆಯೋ ಕಿಂಡಿಯ ಬಗ್ಗೆ, ಪೋಸ್ಟುಗಳ ಬಗ್ಗೆ ಮಾತಾಡಿದಾಗ ಒಮ್ಮೆ ಸಖತ್ ಆಶ್ಚರ್ಯ ಆಗಿತ್ತು. ಆ ಜೂನಿಯರ್ ಯಾವತ್ತೂ ಬ್ಲಾಗಲ್ಲಿ ಬಂದು ಕಾಮೆಂಟ್ ಹಾಕಿದವರಲ್ಲ. ಯಾರೂ ಓದ್ತಿಲ್ಲ ಅಂತ ಏನೇನೂ ಬರೆಯಲಾಗೋಲ್ಲ. ಗಮನಿಸ್ತಾ ಇರೋ ಇಂತಾ ಅದೆಷ್ಟೋ ಕಣ್ಣುಗಳಿರತ್ವೆ ಅನ್ನೋ ಮನವರಿಕೆಯಾಗಿತ್ತವತ್ತು. ಮೊನ್ನೆ ಫೇಸ್ಬುಕ್ಕಿನಲ್ಲಿ ಮಾತಿಗೆ ಸಿಕ್ಕ ಗೆಳೆಯನ ಮಾತುಗಳಲ್ಲಿ ಪೋಸ್ಟುಗಳ ಪ್ರಸ್ತಾಪ ಆದಾಗ್ಲೂ ಇಂತದೇ ಅನುಭವ. ಹೆಚ್ಚಾಗಿ ಸೊಂಬೇರಿತನದಿಂದ, ಚೆನ್ನಾಗಿದೆ ಅಂತ ಅಂದುಕೊಂಡ ಪೋಸ್ಟುಗಳಿಗೆ ಒಂದೂ ಕಾಮೆಂಟ್ ಸಿಕ್ಕಿಲ್ಲವೆಂಬ ಬೇಸರದಲ್ಲಿ ಇನ್ನು ಬರೆಯುವುದೇ ಇಲ್ಲವೆಂಬ ನಿರಾಸೆಯಲ್ಲಿದ್ದ ಶುರುವಿನ ದಿನಗಳಲ್ಲಿ ಬೆನ್ನುತಟ್ಟಿದ ಅನಿರೀಕ್ಷಿತವಾಗಿ ಬ್ಲಾಗಿಗೆ ಭೇಟಿಕೊಟ್ಟು ಅಥವಾ ಹೀಗೆಲ್ಲೋ ಭೇಟಿಯಾಗಿ ಆಡೋ ಅವರ ಮಾತುಗಳೇ ಮತ್ತೆ ಮತ್ತೆ ಬರೆಯುತ್ತಿರಲು ಸ್ಪೂರ್ತಿ. ಆ ಪಂಥ, ಈ ಪಂಥಗಳೆಂಬ ಬೇಧವಿಲ್ಲದೇ,  ಕಾವ್ಯ, ಗದ್ಯಗಳಲ್ಲಿ ಇದನ್ನೇ ಬರೆಯಬೇಕೆಂಬ ಪೂರ್ವಾಗ್ರಹಗಳಿಲ್ಲದೆ ತೋಚಿದ್ದ ಗೀಚುತ್ತಾ ಹೋಗಿದ್ದೇನೆ. ಅನಿಸಿದ್ದಕ್ಕೆ ಪದಗಳ ರೂಪ ಕೊಡುತ್ತಾ ಹೋಗಿದ್ದೇನೆ. ಅದ್ರೂ ಕೆಲ ಚಿಂತನೆಗಳು ಬರಹವಾಗದೆ ಕನಸಾಗೇ ಉಳಿದುಬಿಡುತ್ತೆ. ಆ ತರ ಬರೆಯೋ ಮುಂಚೆ ಇನ್ನೊಂದಿಷ್ಟು ಅಧ್ಯಯನ ಬೇಕಿತ್ತು, ಇನ್ನೂ ಗಟ್ಟಿಗೊಳ್ಳಬೇಕಿತ್ತು ಬರಹ, ಅದನ್ನ ಬರಿ, ಇದನ್ನ ಬರಿ, ಅದನ್ಯಾಕೆ ಬರೆದಿಲ್ಲ ಅಂತ ಎಚ್ಚರಿಸುತ್ತಾ , ಬೆನ್ನುತಟ್ಟುತ್ತಾ ಬಂದಿರೋ ಓದುಗ ಮಿತ್ರರಿಗೆಲ್ಲಾ ಮತ್ತೊಮ್ಮೆ ವಂದಿಸುತ್ತಾ  ಹಿಂದಿನ ವರ್ಷ ಬರೀ ಕನಸಾಗಿದ್ದ ಚಿಂತನೆಯೊಂದಕ್ಕೆ ಬರಹದ ರೂಪ ಕೊಡೋ ಪ್ರಯತ್ನವೇ ಇದು.

ಈ ಸಲದ ನವೆಂಬರ್ ಒಂಥರಾ ನೆನಪಿನಲ್ಲಿಟ್ಟುಕೊಳ್ಳುವಂತಹ ತಿಂಗ್ಳಾಗಿತ್ತು. ಕಂಪೆನಿಯ ಕನ್ನಡ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸೋಕೆ ಹೋದ ನನಗೆ ಕನ್ನಡ ಹಬ್ಬದ ಸಭಾ ಕಾರ್ಯಕ್ರಮದ  ನಿರೂಪಕನಾಗೋ ಗೌರವ ಸಿಕ್ತು. ನನ್ನ ಮತ್ತು ನಮ್ಮ ತಂಡಗಳಿಗೆ ಅಂತ ಮೂರ್ಮೂರು ಬಹುಮಾನಗಳು ಅರಸಿ ಬಂದ್ವು. ಹುಟ್ಟಿದಬ್ಬದ ಖುಷಿಯ ಜೊತೆ ೩k ಅವ್ರು ನಡೆಸಿದ್ದ ಕಥಾ ಸ್ಪರ್ಧೆಯಲ್ಲೂ ದ್ವಿತೀಯ ಬಹುಮಾನ ಬಂತು. ೩೦ನೇ ತಾರೀಖು ನಡೆದ ಆ ಬನ್ನಿ ಕಲಿಯೋಣ ಕಮ್ಮಟದ ಬಗ್ಗೆ ಬರಿಬೇಕು ಅಂತ ತುಂಬಾ ಅಂದ್ಕೊಂಡ್ರೂ ಬೇರ್ಬೇರೆ ಕೆಲಸಗಳ ನಡುವೆ ಅದ್ನ ಮರ್ತೇ ಹೋಗಿದ್ದ ನನಗೆ ಅದ್ನ ನೆನಪಿಸಿದ್ದು ಜಯಪ್ರಕಾಶ್ ಅಥವಾ ಜೇಪಿಯಣ್ಣ. ನಿನ್ನೆ ಅವ್ರತ್ರ ಸೋಬೇರಿ ಸುಬ್ಬಪ್ಪ ಅಂತ ಬಿರುದಾಂಕಿತನಾಗದಿದ್ರೆ ಬಹುಷಃ ಈ ಬರಹ ತಮ್ಮ ಓದಿಗೆ ಖಂಡಿತಾ ಸಿಗ್ತಿರಲಿಲ್ಲವೇನೋ. ಅಂದು ಜೊತೆಯಾದ ಮೋಹನ್ ಕೊಳ್ಳೇಗಾಲ, ಸತೀಶ,ಮಲ್ಲೇಶ್, ಬೋರ್ಜಗಿ ಅವ್ರು,ಬದ್ರಿ ಭಾಯ್, ರವಿ ಸಾರ್, ಬಾಲಣ್ಣ, ಚಿನ್ಮಯ, ರೂಪಕ್ಕ, ನಂದಿನಿ, ಅನುಪಮಾ ಹೆಗಡೆ, ಪ್ರದೀಪ್ ರಾವ್, ಪ್ರಮೋದ್, ಮಹೇಶ್ ಮೂರ್ತಿ, ಅರುಣ್ ಶೃಂಗೇರಿ, ನೂತನ್ ಮುಂತಾದ ಹಿರಿ ಕಿರಿಯ ಗೆಳೆಯರನ್ನೆಲ್ಲಾ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಅಂದಿನ ನೆನಪುಗಳಿಗೆ ಮತ್ತೊಮ್ಮೆ ದನಿಯಾಗೋಕೆ ಪ್ರಯತ್ನಿಸುತ್ತಿದ್ದೇನೆ. ಅಂದಿದ್ದಿದು ಎರಡು ಘೋಷ್ಠಿಗಳು. ಮೊದಲನೆಯದು ಶ್ರೀ ರಾಘವೇಂದ್ರ ಜೋಷಿಯವರ ಹಾಯ್ಕಗಳ ಬಗ್ಗೆಯಾದ್ರೆ ಎರಡನೆಯದು ಮಂಜುನಾಥ ಕೊಳ್ಳೇಗಾಲ ಅವರ ಪದ್ಯ,ಗದ್ಯ ಮತ್ತು ಓದುವಿಕೆಯ ಬಗೆಗಿನ ಘೋಷ್ಠಿ. ಅದರಲ್ಲಿ ಮೊದಲ ವಿಷಯದ ಬಗ್ಗೆ ಇಲ್ಲಿ ಹೆಚ್ಚು ಬರೆಯೋಕೆ ಪ್ರಯತ್ನಿಸ್ತೇನೆ.

ಹಾಯ್ಕ ಅಂದರೇನು ?
ಅಪರಿಚಿತ ಉಚ್ಚಾರಣೆ or Pronounciation.
ಜಪಾನೀಸ್ ಕಾವ್ಯ ಪ್ರಕಾರವಾದ ಇದು ಮೂರು ಸಾಲಿನ ಪದ್ಯ. ೫,೭,೫ ಎಂಬುದು ಇದರ ಸಾಮಾನ್ಯ ನಿಯಮ.
ಅಂದ್ರೆ ಮೊದಲ ಸಾಲಲ್ಲಿ ಐದು ಅಕ್ಷರ. ಎರಡನೆಯದರಲ್ಲಿ ಏಳು ಮತ್ತು ಮೂರನೇಯದರಲ್ಲಿ ಮತ್ತೆ ಐದು ಅಕ್ಷರಗಳಿರಬೇಕು.

 ಸರಿಗಮಪ -   ೫
ಸರಿಗಮಪದನಿ -೭
 ಸರಿಗಮಪ -   ೫


ಉದಾ:
೧) ನಿನ್ನ ನಗೆಹೂ
ಮೊ(ಮಾ?)ಲೆಯ ಚೆಲ್ಲಿಬಿಡು
ಹೂಮರವೇಕೆ ?

೨)ಹಾಯ್ಕ ಗೊತ್ತಿಲ್ಲ
ಆದ್ರೂ ಬರಿತೇನೆ
ಉಳೀಬೇಕಲ್ಲ ?

ಇದರಲ್ಲಿ ಮೊದಲೆರಡರಲ್ಲಿ ನಿಯಮಗಳಿವೆ. ಆದ್ರೂ ಅವು ಹಾಯ್ಕಗಳಲ್ಲ. ಯಾಕೆಂದ್ರೆ ಹಾಯ್ಕ ಅನ್ನೋದು
ಲೌಕಿಕ ಗಣಿತದ ಲೆಕ್ಕಾಚಾರ ಮತ್ತು ದೈವಿಕ ಮೋಹ
ಮತ್ತೆ ೫,೭,೫ ಅನ್ನೋದು ಅಕ್ಷರಗಳಲ್ಲ. ಅದು syllable ಅಥವಾ ಉಚ್ಚಾರಣೆ

ಉದಾ:
Love-->ಇಲ್ಲ್ಲಿ ನಾಲ್ಕು ಅಕ್ಷರ. ಆದ್ರೆ ಲವ್ ಅನ್ನೋದ್ರೆ ೨ ಉಚ್ಚಾರಣೆ ಇದೆ. "ಕಣ್" ಎನ್ನೋದು ಒಂದು ಉಚ್ಚಾರಣೆ. ವ್ಯಂಜನವಿದ್ರೆ ಎರಡು ಉಚ್ಚಾರಣೆ ಅಂತ ಸಾಮಾನ್ಯವಾಗಿ ಹೇಳಬಹುದು.
ಬಂಪರ್ --> ೨ syllable. ಬಂಪರು-->3 syllable
1 syllable= ಒಂದು ಉಚ್ಚಾರಣೆಗೆ ತೆಗೆದುಕೊಳ್ಳೋ ಸಮಯ
ಅನುಸ್ವಾರ, ಚಿಹ್ನೆ(ಒತ್ತಕ್ಷರ), ದೀರ್ಘ ಚಿಹ್ನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳೋದಿಲ್ಲ.
ನಿನ್ನ = 2 syllable

ಇಲ್ಲಿಯವರೆಗೆ ಹಾಯ್ಕಗಳ ಲಕ್ಷಣಗಳನ್ನು ಮತ್ತು ಯಾವುದು ಹಾಯ್ಕ, ಯಾವುದಲ್ಲ ಅಂತ ನೋಡಿದ್ವಿ. ಈಗ ಹಾಯ್ಕ ರಚನೆಗೆ ಇರುವ ನಿಯಮಗಳನ್ನು ನೋಡೋಣ

ನಿಯಮ ೧:
ನಿಸರ್ಗ/ಪ್ರಕೃತಿಯಲ್ಲಿ ನಡೆಯೋ ಘಟನೆಗಳನ್ನು ಮೋಹಕ ಬೆರಗಿನಿಂದ ದಾಖಲಿಸುವುದು
(ಅದರಲ್ಲಿ ನಮ್ಮ ಪಾತ್ರ ಏನಿಲ್ಲ)
ತಾನು ಆ ಘಟನೆಯಲ್ಲಿ ಭಾಗಿಯಾಗೋಲ್ಲ. ದೂರ ನಿಂತು ನೋಡೋದಷ್ಟೆ
ಉದಾ:
೩)ಬೇಸಿಗೆಯ ಒಂದು ರಾತ್ರಿ
ಬಾಯಾರಿದ ನಕ್ಷತ್ರಗಳು
ಬಾವಿಗಿಳಿದಿವೆ

೪)ಹತ್ತಿಯ ಹೊಲದಲ್ಲಿ ನಿಂತಾಗ
ಮನಸು ಹೇಳಿತು
ಬಿತ್ತಿದರೆ
ಚಂದಿರನನ್ನೇ ಬಿತ್ತಬೇಕು

(ಇವೆರಡದಲ್ಲೂ ೫,೭,೫ ರ ನಿಯಮ ಪಾಲನೆಯಾಗಿಲ್ಲ. ಆದ್ರೆ ನೈಸರ್ಗಿಕ ಪ್ರಕ್ರಿಯೆಯನ್ನು ದಾಖಲಿಸೋ ಅವಕಾಶವಿದೆ)

ನಿಯಮ ೨: Experience the moment, Freeze it, get mesmarized yourself, extend it. but don't explain
ಹಾಯ್ಕವೆನ್ನೋದು ಬರೀ ಕವಿತೆಯಲ್ಲ. ಅದೊಂದು ಸ್ತಬ್ದ ಚಿತ್ರ.

ಉದಾ: ಅಪ್ಪ ಮಗುವನ್ನು ಗಾಳಿಯಲ್ಲಿ ಹಾರಿಸಿ ಹಿಡಿಯುತ್ತಿದ್ದಾನೆ. ಮಗುವಿಗೆ ಕೆಲ ಹಾರುವಿಕೆಗಳ ನಂತರ ಅಪ್ಪ ತನ್ನ ಹಿಡಿಯುತ್ತಾನೆ ಎಂಬ ಅರಿವಾಗಿದೆ. ಮಗು ಅದನ್ನು ಆನಂದಿಸುತ್ತಾ ಕೇಕೆ ಹಾಕುತ್ತಿದೆ. ಗಾಳಿಯಲ್ಲಿನ ಮಗುವಿನ ನಗುವಿನ ಒಂದು ಕ್ಷಣವನ್ನು ಫೋಟೋ ತೆಗೆದ್ರೆ ಇರುವಂತಹ ಸನ್ನಿವೇಶ ಹಾಯ್ಕ !

೫)ಚಂದಿರನನ್ನೇ
ಛೇದಿಸುವ ಕಲೆ
ಈ ಕಪ್ಪೆಗೆ
ಯಾರು ಕಲಿಸಿದರಪ್ಪಾ ?

( ಕೊಳದಲ್ಲಿದ್ದ ಚಂದ್ರನ ಪ್ರತಿಬಿಂಬದ ಮೇಲೆ ಜಿಗಿದ ಕಪ್ಪೆಯ ಬಗ್ಗೆ ಬರೆದ ಒಂದು ಜಪಾನೀ ಹಾಯ್ಕು)

೬)ಸುರಂಗದಲ್ಲಿ
ಹರಿದುಹೋದ
ರೈಲಿನ ರಭಸಕ್ಕೆ
ಎಳೆಗರಿಯೊಂದು
ಚಿತ್ತಭ್ರಮಣೆಗೊಳಗಾಗಿದೆ


೭)ನೀರಿಗೆಂದು ಬಂದ ನಾರಿಯರು
ಚಂದಿರನಿಗೆ ಮೋಹಿತರು
ಇಲ್ಲೀಗೆ ನೂರು ಕೊಡಗಳಲ್ಲಿ
ನೂರು ಚಂದಿರ


ನಿಯಮ ೩:ನೋಟ/ಕಾಣ್ಕೆ : ಒಂದು ಬೆಳವಣಿಗೆಯನ್ನು ಇನ್ನೊಂದರ ಜೊತೆಗೆ ಸಂಪರ್ಕಿಸುವುದು
ಪ್ರತೀ ನೋಟಕ್ಕೂ ಒಂದು ಕಾಣ್ಕೆಯಿರುತ್ತೆ. ದೈವಿಕ ಸ್ಪರ್ಷವಿರುತ್ತೆ. ಇದ್ದರೆ ಅದು ಹಾಯ್ಕ
ರೂಪಕಗಳ ಮೂಲಕ ಹೇಳೋದು.  ಇಲ್ಲಿ ೨ ಭಾಗವಿರುತ್ತೆ. ಒಂದನ್ನು ಮತ್ತೊಂದಕ್ಕೆ connect ಮಾಡೋದು
ಉದಾ:
೮)ಪ್ರಾರ್ಥನೆಗೆಂದು
ಬಂದ ಸಂತನ ಕೈ
ಹಿಂಜರಿದಿದೆ;
ದೇಗುಲದ
ಘಂಟೆ ಮೇಲೆ
ಚಿಟ್ಟೆಯೊಂದು 
ನಿದ್ದೆ ಹೋಗಿದೆ


೯)ಆಹ್ ಎಂಥಾ
ಸಂಜೆಯಿದು
ಮಂದಿರದ ಘಂಟೆಗಳೆಲ್ಲಾ
ಸ್ಥಬ್ಧವಾಗುತ್ತಿದ್ದಂತೆಯೇ
ತೋಟದ ಹೂಗಳ ಪರಿಮಳಕ್ಕೆ
ನವಚೇತನ ಬಂದಂತಿದೆ


ನಿಮಯಗಳನ್ನು ಪಾಲಿಸಿ ರಚಿಸೋದಾದ್ರೆ:
೧೦) ಕತ್ತಲ ಹಾದಿ - ೫
ಪೋರನಿಗೆ ಹಾಡೊಂದೆ-೭
ಆಪದ್ಬಾಂಧವ -೫

(ಇಲ್ಲಿ ಬೆಳಕಹಾದಿ ಅಂತನೂ ಮಾಡಬಹುದು ಮೂರನೆಯ ಸಾಲನ್ನ. ಆದ್ರೆ ಅಲ್ಲಿ punch ಇರಲ್ಲ ಅನ್ನೋದು ಬಿಟ್ರೆ ನಿಯಮಗಳ ಪ್ರಕಾರ ಅಲ್ಲಿ ತಪ್ಪೇನಿಲ್ಲ)

ಇದಲ್ಲದೇ ಇನೊಂದಿಷ್ಟು ಹೆಚ್ಚುವರಿ ನಿಮಯಗಳಿವೆ:
* ಸರಳವಾಗಿರಿ, ಸಹಜವಾಗಿರಿ, ಗುಣವಾಚಕಗಳನ್ನು ಬಳಸದಿರಿ
* ಋತುಮಾನಕ್ಕೆ ತಕ್ಕಂತಿರಲಿ
* ಕುತೂಹಲವಿರಲಿ, ನಿರ್ಮಲವಾದ ಮನಸ್ಥಿತಿಯಿರಲಿ(ಆದ್ರೆ ಅದನ್ನೇ ಜೀವಮಾನವಿಡೀ ಬಳಸ್ತೀನಿ ಅಂದ್ರೆ ಸಂತನಾಗಿಬಿಡುವ ಅಪಾಯವೂ ಇದೆ)
*ಪ್ರೀತಿಯಿರಲಿ. ದ್ವೇಷಾಸೂಯೆ, ಋಣಾತ್ಮಕ ಭಾವಗಳಿದ್ದಾಗ ಅದು ಹಾಯ್ಕವಲ್ಲ.

ಇಲ್ಲಿ ಬಂದ ಸಾಲುಗಳೆಲ್ಲಾ ಶ್ರೀ ರಾಘವೇಂದ್ರ ಜೋಷಿಯವರದು ಕಿವಿಯಾದ ನಾನು ಈಗ ಪದಗಳ ಮೂಲಕ ಅವಕ್ಕೆ ಮತ್ತೊಂದು ರೂಪ ಕೊಡುತ್ತಿದ್ದೇನಷ್ಟೆ. ಇದರ ನಂತರ ಮೂಡಿಬಂದ ಶ್ರೀ ಮಂಜುನಾಥ ಕೊಳ್ಳೇಗಾಲರವರ ಕವನ ಸೃಷ್ಠಿಯ ಬಗ್ಗೆ, ಓದಿಕೊಳ್ಳೋದು ಮತ್ತು ಓದುವುದರ ವ್ಯತ್ಯಾಸಗಳ ಬಗ್ಗೆ, ವಿವಿಧ ಕವನ ಪ್ರಕಾರಗಳ, ಗದ್ಯಗಳ ಪರಿಚಯಾತ್ಮಕ ಗೋಷ್ಟಿ ಓದುವಿಕೆಗೆ ನಮ್ಮನ್ನ ಮತ್ತೆ ಮತ್ತೆ ಸೆಳೆಯುವಂತಿತ್ತು.ಕಾರ್ಯಕ್ರಮ ಮುಗಿದು ಒಂದು ತಿಂಗಳ ಮೇಲಾದ್ರೂ ಅದು ನಿನ್ನೆ ಮೊನ್ನೆ ನಡೆದಂತಹ ಭಾವ. ಒಂದು ಸುಂದರ ದಿನಕ್ಕೆ ಕಾರಣವಾದ 3k ಗೊಂದು ವಂದನೆಯೆನ್ನುತ್ತಾ, ಇಲ್ಲಿ ಬಿಟ್ಟು ಹೋಗಿರುವ ಹೆಸರುಗಳಿಗಾಗಿ ಆ ಸ್ನೇಹಿತರ ಕ್ಷಮೆಯಾಚಿಸುತ್ತಾ ವಿರಮಿಸುತ್ತಿದ್ದೇನೆ.

ಇಂತಿ,
ನಿಮ್ಮೊಲುಮೆಯ ಪ್ರಶಸ್ತಿ

Monday, January 19, 2015

ಧ್ವನಿ ಕೇಳೋ ಆಸೆಯೂ, ರೆಕಾರ್ಡಿಂಗ್ ನೆನಪೋಲೆಯು

ಶಾಲಾ ದಿನಗಳಲ್ಲಿ ಆಕಾಶವಾಣಿಯಲ್ಲಿ ಶನಿವಾರ ಬರ್ತಿದ್ದ ಗಾಂಧಿ ಸ್ಮೃತಿ, ಭಾನುವಾರದ ರೇಡಿಯೋ ಸಿನಿಮಾ(ಧ್ವನಿಯಲ್ಲೇ ಸಿನಿಮಾದ ಕಲ್ಪನೆಗಳ ಕಟ್ಟೋ ಅದ್ಬುತ ಅನುಭವ ಕೇಳೇ ಸವಿಬೇಕು), ಪ್ರತಿದಿನ ಸಂಸ್ಕೃತ ವಾರ್ತೆಯ ಬಲದೇವಾನಂದ ಶರ್ಮ,  ಏಳೂ ಮೂವತ್ತೈದರ ವಾರ್ತೆ, ಎಂಟರ ಹಿಂದಿ, ಇಂಗ್ಲೀಷ್ ವಾರ್ತೆಗಳು, ನಂತರದ ರೇಡಿಯೋ ಡಾಕ್ಟರಗಳನ್ನು ಕೇಳೇ ದೊಡ್ಡವರಾದ ನಮಗೆ  ರಾತ್ರಿ ಎಂಟು ಘಂಟೆಗೆ ಬರೋ "ಯುವವಾಣಿ" ಅಚ್ಚುಮೆಚ್ಚಾಗಿತ್ತು. ಅದರಲ್ಲಿ ಬರ್ತಿದ್ದ ಕಾಲೇಜು, ಶಾಲಾ ವಿದ್ಯಾರ್ಥಿಗಳು ಮತ್ತು ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಕೇಳುತ್ತಿದ್ದ ನನಗೆ ನಾನೂ ಒಮ್ಮೆ ರೇಡಿಯೋದಲ್ಲಿ ಬರಬೇಕು ಅನ್ನೋ ಆಸೆ ಮೂಡಿಬಿಟ್ಟಿತ್ತು.

ಪ್ರಥಮ ಪಿಯುವಿನಲ್ಲಿನ ಸಂದರ್ಭ ಅದು. ಆಕಾಶವಾಣಿಯಲ್ಲಿ ಒಂದು ಕಾರ್ಯಕ್ರಮ ಕೊಡೋಣ ಅಂತ ಇದೆ. ಬರ್ತೀರಾ ಅಂತ ಹಿಂಗೇ ಒಂದಿನ ಅನಿರೀಕ್ಷಿತವಾಗಿ ನಮ್ಮ ಉಮೇಶ್ ಮಾಸ್ಟ್ರು ಕೇಳಿದಾಗ ರೊಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದ ಭಾವ ನನಗೆ. ನಮ್ಮ ಕಾಲೇಜಿನಿಂದ ಹಾಡು, ತಬಲ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳು ಸೇರಿ ಒಟ್ಟು ಇಪ್ಪತ್ತೈದು ನಿಮಿಷದ ಕಾರ್ಯಕ್ರಮ ಕೊಡಬೇಕಾಗಿತ್ತು. ಅದರಲ್ಲಿ "ನಮ್ಮ ಸಂಸ್ಕೃತಿಯ ಮೇಲೆ ವೈಜ್ನಾನಿಕ ಆವಿಷ್ಕಾರಗಳ ಪ್ರಭಾವ" ಅನ್ನೋ ವಿಷಯದ ಮೇಲೆ ನನ್ನದೊಂದು ನಾಲ್ಕೈದು ನಿಮಿಷದ ಕಿರು ಭಾಷಣವೂ ಇತ್ತು. ಆಕಾಶವಾಣಿಯಾದ್ದರಿಂದ ಅದನ್ನು ಭಾಷಣವೆನ್ನದೆ ವಿಷಯ ಮಂಡನೆಯೆಂದ್ರೆ ತಪ್ಪಾಗಲಾರದೇನೋ. ಅಲ್ಲಿ ಮುಂಚೆಯೇ ನಮ್ಮ ಸ್ಕ್ರಿಪ್ಟ್ ಕಳಿಸಿ, ಅದನ್ನು ಅವರು ಒಪ್ಪಿ, ಏನಾದ್ರೂ ತಿದ್ದುಪಡಿ ತಿಳಿಸಿ, ಅವರ ಮುಂದೆ ಒಮ್ಮೆ ಸೂಚನೆಗಳನ್ನು ಪಡೆದು,  ರಿಹರ್ಸಲ್ ಮಾಡಿ ಆಮೇಲೆ ನಿಜವಾದ ರೆಕಾರ್ಡಿಂಗ್ ಶುರುವಾಗಬೇಕಾಗಿತ್ತು. ತುಂಬಾ ವೇಗವಾಗಿ ಅಥವಾ ನಿಧಾನವಾಗಿ ಮಾತಾಡಬೇಡಿ. ನಿಮ್ಮ ಸಹಜ ಲಯ ಇರಲಿ. ವಾಕ್ಯಗಳಾದ ನಂತರ ಒಂದೆರಡು ಸೆಕೆಂಡ್ ಗ್ಯಾಪ್ ಕೊಡಿ. ಒಂದು ಪುಟದ ಮಾತಾದ ಮೇಲೆ ಮತ್ತೊಂದು ಪುಟಕ್ಕಾಗಿ ಅದನ್ನು ತಿರುಗಿಸುವ ಮುನ್ನ ಮತ್ತು ತಿರುಗಿಸಿದ ನಂತರ ಒಂದೆರಡು ಸೆಕೆಂಡ್ ಗ್ಯಾಪ್ ಕೊಡಿ ಅಂತೆಲ್ಲಾ ತಿಳಿಸಿದರು. ಆಕಾಶವಾಣಿಗೆ ಮೊದಲ ಬಾರಿ ಕಾಲಿಟ್ಟಿದ್ದ ನನಗೆ ಕೊನೆಯ ವಾಕ್ಯದ ಹಿಂದಿರಬಹುದಾರ ಉದ್ದೇಶ ತಿಳಿದು ಅವರ ಸಮಯಪ್ರಜ್ನೆ ಅದ್ಭುತ ಅನಿಸಿಬಿಟ್ತು ಒಂದ್ಸಲ. ಅಲ್ಲಿರೋ ಸೂಕ್ಷ್ಮ ಧ್ವನಿಗ್ರಾಹಕಗಳಲ್ಲಿ ನಾವು ಪ್ಯಾಂಟ್ ಮೇಲೆ ಕೈಯಾಡಿಸಿದ್ರೆ ಆಗೋ ಸದ್ದು, ಪೇಪರಿನ ಪುಟ ತಿರುಗಿಸಿದ್ರೆ ಆಗೋ ಸದ್ದೂ ರೆಕಾರ್ಡಾಗುತ್ತಿತ್ತು. ಒಂದು ಪುಟದ ನಂತರ ಗ್ಯಾಪು, ಪೇಪರು ತಿರುಗಿಸುವಿಕೆ ಮತ್ತು ಮತ್ತೆ ಗ್ಯಾಪು ಆ ಪೇಪರ್ ಸದ್ದನ್ನು ಕತ್ತರಿಸೋಕೆ ಸುಲಭವಾಗಿಸ್ತಿತ್ತು ಅವರಿಗೆ. 

ಅದೇ ವರ್ಷ ಮತ್ತೊಂದು ತಂಡದೊಂದಿಗೆ ಭದ್ರಾವತಿಗೆ ಹೋಗೋ ಭಾಗ್ಯ ಸಿಕ್ತು ನಂಗೆ. ಎರಡನೇ ಬಾರಿ "ನಮ್ಮ ಮಕ್ಕಳು ಡಾಕ್ಟರ್ ಇಂಜಿನಿಯರುಗಳೇ ಆಗಬೇಕೇ" ಅನ್ನೋ ವಿಷಯದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಲು ಹೋಗಿದ್ದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಇದ್ದಿದ್ದರಿಂದ , ಏನೇನು ಮಾತಾಡಬೇಕೆಂಬ ಸ್ಕ್ರಿಪ್ಟನ್ನು ಮಾಡಿ ಅದರಲ್ಲಿನ ಭಾಗಗಳನ್ನು ಮುಂಚೆಯೇ ಹಂಚಿಕೊಂಡಿದ್ದರಿಂದ ಅಲ್ಲಿ ಚರ್ಚಾಸ್ಪರ್ಧೆಯಂತಹ ಮೇಜು ಕುಟ್ಟುವ ವಾತಾವರಣವಿಲ್ಲದಿದ್ದರೂ ಒಂದು ಆರೋಗ್ಯದಾಯಕ ಚರ್ಚೆಯಾಗಬಹುದಾದ ಎಲ್ಲಾ ಲವಲವಿಕೆಯೂ ಇತ್ತು. ಹಿಂದಿನ ಸಲದ ರೆಕಾರ್ಡಿಂಗ್ ಅನುಭವ ಏನ್ಮಾಡಬೇಕು, ಏನ್ಮಾಡಬಾರದು ಎಂದು ಹೊಸ ಸ್ನೇಹಿತರಿಗೆ ಹೇಳುವಷ್ಟರ ಮಟ್ಟಿಗೆ ಸಹಾಯ ಮಾಡಿತ್ತು ! ಹೇಳಿದ್ದು ಏನ್ಮಹ ಇಲ್ಲ. ಮಾತಾಡುವಾಗ ಪ್ಯಾಂಟಿನ ಮೇಲೆ ಕೈಯುಜ್ಜಬೇಡ, ಪೇಪರುಗಳನ್ನ ಆಡಿಸಬೇಡ, ಪೇಪರ್ರನ್ನ ತಿರುಗಿಸೋ ಪ್ರಸಂಗ ಬಂದರೆ ಎರಡು ಮೂರು ಸೆಕೆಂಡು ಸಮಯ ಕೊಡು, ಪೇಪರು ತಿರುಗಿಸಾದ ಮೇಲೆ ಮತ್ತೆ ಸಮಯ ಕೊಡು ಅನ್ನೋ ಹಿಂದಿನ ಬಾರಿ ನಾ ಪಡೆದ ಕಿವಿಮಾತುಗಳೇ . ಅಂತೂ ನಮ್ಮ ರೆಕಾರ್ಡಿಂಗುಗಳು ಓಕೆಯಾಗಿ ನಿಮ್ಮ ಕಾರ್ಯಕ್ರಮ ರೇಡಿಯೋದಲ್ಲಿ ಬರುತ್ತೆ ಅಂದಾಗ ಸ್ವರ್ಗವೇ ಕೈಗೆಟುಕಿದಷ್ಟು ಖುಷಿ. ಯಾವತ್ತು ಬರುತ್ತೆ ? ಗ್ಯಾರಂಟಿ ಬರುತ್ತಲ್ವಾ ಅಂತ ಕೇಳಿದ್ದೇ ಕೇಳಿದ್ದು. ಈ ಎರಡು ರೆಕಾರ್ಡಿಂಗುಗಳಲ್ಲಿ ನನ್ನ ಸ್ವಂತದ ಕಾರ್ಯಕ್ರಮಗಳಿದ್ರೂ ಕಾಲೇಜಿಂದ ಹೊರಡುವಾಗ ನಿರ್ಧಾರಿತವಾಗಿರದ ಕಾರ್ಯಕ್ರಮವೂ ಒಂದು ಮೂಡಿಬಂದಿದ್ದು ವಿಶೇಷ. 

ನಮ್ಮ ಗೆಳೆಯನೊಬ್ಬ ಚೆಸ್ಸಿನಲ್ಲಿ ಪ್ರತಿಭಾನ್ವಿತನಿದ್ದ. ಮಾತು ಮಾತಿನಲ್ಲಿ ಅವನ ಸಂದರ್ಶನ ಮಾಡುವ ತರದ ಕಾರ್ಯಕ್ರಮ. ಮಾತು ಮಾತಿನಲ್ಲೇ ಆ ದಿನದ ಉಳಿದ ವಿಷಯಗಳು ಬರುವ ಹಾಗೆ ಪ್ಲಾನ್ ಮಾಡಿದ್ದಾಗಿತ್ತು ಅನ್ನೋದು ಬೇರೆ ವಿಷಯ. ರೆಕಾರ್ಡಿಂಗಿಗಿಂತ ಮುಂಚೆ ಅವನನ್ನು ರೇಡಿಯೋ ನಿರೂಪಕಿಯವ್ರು ಮಾತಾಡಿಸ್ತಾ ಇದ್ದಾಗ ಚೆಸ್ಸಿನ ವಿಷಯ ಬಂತು. ನೀನು ಎಷ್ಟು ವರ್ಷದಿಂದ ಆಡ್ತಾ ಇದೀಯ ? ಆಸಕ್ತಿ ಮೂಡಿದ್ದು ಹೇಗೆ ಅಂತೆಲ್ಲಾ. ಮಾತಿನ ನಡುವೆ ಇದು ಎಲ್ಲಿಯದು ಅನ್ನೋ ವಿಷಯ ಬಂದಾಗ ನಾನು ಇದು ಭಾರತದ್ದೇ ಆಟ , ರಾಜರ ಕಾಲದಲ್ಲೇ ಚದುರಂಗ ಅನ್ನೋ ಹೆಸರಿನಲ್ಲಿತ್ತು ಅಂತ ಹೇಳಿದೆ. ತಟ್ಟನೆ ನನ್ನತ್ತ ತಿರುಗಿದ ನಿರೂಪಕಿ ನಿನಗೆ ಚೆಸ್ಸಿನ ಬಗ್ಗೆ ಏನೇನು ಗೊತ್ತು ಅಂತ ಕೇಳಿದ್ರು. ಹೈಸ್ಕೂಲು ದಿನಗಳಲ್ಲಿ ಚೆಸ್ ಪ್ರಿಯನಾಗಿದ್ದ ನಾನು ಸಹಜವಾಗೇ ಓದಿಕೊಂಡಿದ್ದ ಅಂದಿನ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಬಗ್ಗೆ, ರಷ್ಯಾದ ಆಟಗಾರರ ಬಗ್ಗೆ ಹೇಳಿದ ನೆನಪು. ಸುಮ್ಮನೇ ಕುತೂಹಲಕ್ಕೆ ಇದ್ನೆಲ್ಲಾ ಕೇಳ್ತಿದ್ದಾರೆ ಅಂದ್ಕೊಂಡ ನನಗೆ ಅವ್ರು ಇದನ್ನು ರೆಕಾರ್ಡಿಂಗಿನಲ್ಲಿ ಹೇಳ್ತೀಯ ? ವಿಷಯಕ್ಕೆ ಪೂರಕ ಮಾಹಿತಿ ಚೆನ್ನಾಗಿದೆ ಅಂದಾಗ ಆಶ್ಚರ್ಯ. ಮಾವಿನ ಹಣ್ಣು ತಗೊಳ್ಳೋಕೆ ಹೋದವನಿಗೆ ಮಾವಿನಹಣ್ಣಿನ ಜೊತೆಗೆ ಹಲಸಿನಹಣ್ಣು ಫ್ರೀ ಕೊಟ್ಟಂಗಾಗಿತ್ತು ಅವತ್ತು. ಒಂದು ಕಾರ್ಯಕ್ರಮಕ್ಕೆ ಅಂತ ಬಂದವನಿಗೆ ಎರಡೆರಡು ಸಲ ಮಾತಾಡೋ ಸೌಭಾಗ್ಯ. ಅದಾದ ಮೇಲಂತೂ ನಮ್ಮ ಧ್ವನಿ ಯಾವಾಗ ಬರುತ್ತೋ ಆಕಾಶವಾಣಿಲಿ ಅಂತ ಕಾದಿದ್ದೇ ಕಾದಿದ್ದು. 

ನೆಂಟರಿಷ್ಟರಿಗೆಲ್ಲಾ ನಮ್ಮ ಕಾರ್ಯಕ್ರಮ ಬರುತ್ತೆ ಕೇಳಿ ಅಂತ ಹೇಳಿಕೊಂಡು ಸಾಗಿದ್ದ ನನಗೆ ಮೊತ್ತಮೊದಲ ಬಾರಿಗೆ ನನ್ನ ಧ್ವನಿಯನ್ನು ರೇಡಿಯೋದಲ್ಲಿ ಕೇಳಿದಾಗ ಸಂತೋಷದ ಬದ್ಲು ಗಾಬ್ರಿಯಾಗಿತ್ತು. ಎಲ್ಲರ ಧ್ವನಿಯೂ ಸರಿ ಬಂದಿದೆ. ಆದ್ರೆ ನನ್ನ ಧ್ವನಿ ಮಾತ್ರ ಯಾಕಿಷ್ಟು ಕರ್ಕಶವಾಗಿ ಬಂದಿದೆ ಅಂತ !! ಎರಡನೇ ಸಲ ನನ್ನ ಧ್ವನಿ ಯಾಕೋ ರೆಕಾರ್ಡಿಂಗಿನಲ್ಲಿ ಸರಿ ಬರಲ್ಲ. ಇದ್ದ ಧ್ವನಿ ಇದ್ದಾಗೆ ಬರೋಕೆ(ಫೋಟೋಜೆನಿಕ್ ಮುಖ ಅಂತ ಇರೋ ಹಾಗೆ) ಪುಣ್ಯ ಮಾಡಿರ್ಬೇಕು ಅಂತ ಸಮಾಧಾನ ಮಾಡಿಕೊಂಡಿದ್ದೆ. ಅದಾಗಿ ಎಷ್ಟೊ ವರ್ಷಗಳಾಯ್ತು . ನನ್ನ ಕಾಲೇಜು ಕಾರ್ಯಕ್ರಮದ ವಿಡಿಯೊ ನೋಡಿದ್ದೆ, ನಿರೂಪಕನಾಗಿದ್ದ ಫೋಟೋ ನೊಡಿದ್ದೆ. ಎಲ್ಲೂ ನಾನಿದ್ದ ಹಾಗೆ ಬಂದಿಲ್ಲ ಅನಿಸಿರಲಿಲ್ಲವಾದ್ದರಿಂದ ಧ್ವನಿಗೂ, ರೆಕಾರ್ಡಿಂಗಿನ ಧ್ವನಿಯ ವ್ಯತ್ಯಾಸದ ವಿಷಯವೇ ಮರೆತುಹೋಗಿತ್ತು. ಅದು ಮತ್ತೆ ಧುತ್ತೆಂದು ನೆನಪಾಗಿದ್ದು ವಾಟ್ಸಾಪಿನಿಂದ. ಯಾವುದೋ ಗುಂಗಿನಲ್ಲಿ ಗುಂಪೊಂದರಲ್ಲಿ ನನ್ನ ಧ್ವನಿಯಲ್ಲೇ ಹಾಡಿನ ಟ್ಯೂನೊಂದ ರೆಕಾರ್ಡ್ ಮಾಡಿ ಕಳಿಸಿದ್ದಿ. ಅದು ಹೇಗೆ ಬಂದಿರಬಹುದು ಅಂತ ನಾನೇ ಕೇಳಿಕೊಂಡ್ರೆ ಮತ್ತೆ ಮೊದಲು ಕಾಡಿದಂತದೇ ಗಾಬರಿ ! ಏನಾಗಿದೆ ನನ್ನ ದನಿಗೆ ಅಂತ. ನನ್ನದು ಕೋಗಿಲೆ ಕಂಠವೆಂಬ ಭ್ರಮೆಯಿರದಿದ್ದರೂ ಇಷ್ಟು ಕರ್ಕಶವಾಗಿದೆಯಾ ನನ್ನ ದನಿ ಅನಿಸಿಬಿಟ್ಟಿತ್ತು. ಕೊನೆಗೆ ಇದು ಸರಿಯಾಗಿ ರೆಕಾರ್ಡು ಮಾಡೋಕೆ ಬಾರದ ನನ್ನ ಮೊಬೈಲ್ ಸಮಸ್ಯೆಯಾ ಅನಿಸಿಬಿಟ್ಟಿತ್ತು. ಆದ್ರೆ ಇದು ರೆಕಾರ್ಡಿಂಗ್ ಸಮಸ್ಯೆಯಲ್ಲದಿರಬಹುದು. ಇದರ ಹಿಂದೆ ಬೇರೇನೂ ವಿಜ್ನಾನವಿರಬಹುದು ಅನ್ನೋ ಜಿಜ್ನಾಸೆ ಕಾಡತೊಡಗಿತು. ಒಂದಿಷ್ಟು ತಡಕಾಡಿದಾಗ ದಕ್ಕಿದ ಮಾಹಿತಿಗಳು ನನಗಲ್ಲ ನಿಮಗೂ ಅಚ್ಚರಿ ಮೂಡಿಸಬಹುದೇನೋ ಎಂಬ ಉದ್ದೇಶದಿಂದ ಅವನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. 

ನಾವು ಮಾತಾಡಿದಾಗ ನಮ್ಮ ಧ್ವನಿಪೆಟ್ಟಿಗೆಯಿಂದ ಹೊರಡೋ ಧ್ವನಿತರಂಗಗಳು ಗಾಳಿಯ ಮೂಲಕ ಪ್ರಸರಿತವಾಗಿ ಕೇಳುಗನ ಹೊರಕಿವಿಗೆ ಅಪ್ಪಳಿಸುತ್ತವೆ. ಕಿವಿ ತಮಟೆ, ನಡುಗಿವಿಯನ್ನು ದಾಟಿದ ಇವು ಕಾಕ್ಲಿಯ ಅನ್ನೋ ಭಾಗವನ್ನು ತಾಕುತ್ತವೆ. ಇಲ್ಲಿ ಇದು ಧ್ವನಿತರಂಗಗಳನ್ನು ವಿದ್ಯುತ್ ಸಂದೇಶಗಳನ್ನಾಗಿ ಮಾರ್ಪಡಿಸಿದಾಗ ಕೇಳಿದವನಿಗೆ ಶಬ್ದದ ಅನುಭೂತಿಯಾಗುತ್ತದೆ. ಆದ್ರೆ ನಮ್ಮ ದನಿ ನಮಗೇ ಕೇಳುವ ಪರಿ ಇಷ್ಟೇ ಅಲ್ಲ. ನಮ್ಮ ಮಾತು ನಮ್ಮ ಕಿವಿಯ ಮೂಲಕ ಕಾಕ್ಲಿಯ ತಲುಪೋ ಜೊತೆಗೆ ಅದಕ್ಕೆ ಮತ್ತೊಂದು ದಾರಿಯೂ ಇದೆ. ನಮ್ಮ ತಲೆಯಲ್ಲಿರುವ ಮಜ್ಜೆ, ಮಾಂಸಗಳು ಧ್ವನಿತರಂಗಗಳನ್ನು ನೇರವಾಗಿ ಕಾಕ್ಲಿಯಕ್ಕೆ ತಲುಪಿಸುತ್ತವೆ. ಇವುಗಳ ಸಂವಹನ ಗಾಳಿಯಲ್ಲಿನ ಸಂವಹನಕ್ಕಿಂತ ಎಷ್ಟೋ ಪಟ್ಟು ಉತ್ತಮವಿರೋದ್ರಿಂದ ನಮ್ಮ ಧ್ವನಿ ಬೇರೆಯವರಿಗೆ ಕೇಳಿಸುವಕ್ಕಿಂತ ನಮಗೆ ಚೆನ್ನಾಗಿ ಕೇಳುತ್ತೆ ! ಕಿವಿಯ ಮೂಲಕ ಮತ್ತು ನೇರವಾಗಿ .. ಅಂತ ಢಬಲ್ ಧಮಾಕ ಬೇರೆ ಆಗೋದ್ರಿಂದ ಇನ್ನೂ ಹೆಚ್ಚು ಎಫೆಕ್ಟು ! ಆದ್ರೆ ರೆಕಾರ್ಡಿಂಗಿನಲ್ಲಿ ಎರಡನೆಯ ಆವೃತ್ತಿ ಇರಲ್ಲ. ಹಾಗಾಗಿ ನಮ್ಮ ಧ್ವನಿ ಬೇರೆಯವರಿಗೆ ಹೇಗೆ ಕೇಳುತ್ತೋ ಅದೇ ತರ ನಮಗೂ ಕೇಳುತ್ತೆ ಅಷ್ಟೆ. ಅದೇ ಕಾರಣ ನಮ್ಮ ಧ್ವನಿಯನ್ನು ದಿನಾ ಕೇಳೋ ಬೇರೆಯವರಿಗೆ ರೆಕಾರ್ಡಾದ ನಮ್ಮ ಧ್ವನಿಯ ಕೇಳಿದ್ರೆ ಏನೂ ವ್ಯತ್ಯಾಸವೆನಿಸದಿದ್ರೂ ನಮಗೆ ವ್ಯತ್ಯಾಸ ಅನಿಸೋದಕ್ಕೆ.  ಅಂತೂ ನನ್ನ ಮನಸ್ಸಲ್ಲಿ ಎಷ್ಟೊ ಕಾಲದಿಂದ ಕೊರೆಯುತ್ತಿದ್ದ ಪ್ರಶ್ನೆಗೊಂದು ಉತ್ತರ ಸಿಕ್ಕಿದ ಖುಷಿಯೊಂದಿಗೆ ವಿರಮಿಸುತ್ತಿದ್ದೇನೆ. ಧ್ವನಿ ಭಿನ್ನವಾಗಿ ಧ್ವನಿಸೋದೇಗೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಕೆಲವರಿಗಾದ್ರೂ ಕಾಡಿದ್ರೆ ಅದಕ್ಕೊಂದಿಷ್ಟು ಸಮಾಧಾನ ದೊರೆತೀತೆಂಬ ನಿರೀಕ್ಷೆಯಲ್ಲಿ.. 

Friday, January 16, 2015

ಕಾಣೆಯಾದ ಕತೆಯ ಹಿಂದೆ

ರೈಟ್ ಕ್ಲಿಕ್ ಮಾಡಲೂ ಸಾಧ್ಯವಿಲ್ಲದಂತೆ ತುಂಬಿಹೋಗಿತ್ತು ಡೆಸ್ಕಟಾಪು. ಡೆಸ್ಕಟಾಪಿನ ಮೇಲೆ, ಸಿ ಡ್ರೈವಲ್ಲಿ ಜಾಸ್ತಿ ಏನು ಇಡಬೇಡಿ, ಕಂಪ್ಯೂಟ್ರು ನಿಧಾನವಾಗತ್ತೆ ಅಂತಿದ್ದವ್ನೇ ಈ ತರ ಕಸ ತುಂಬಿಸ್ಕೊಂಡಿರೋದಾ ಅನಿಸ್ಬಿಡ್ತು ಒಮ್ಮೆ. ಕಸ ಅನ್ನೋಕೆ ಮನಸ್ಸು ಬಾರದ ಕಸ ಅದು. ಬೆಳಕ ಕಂಡು ವಾರವಾಗಬೇಕಿದ್ದ ಕನಸುಗಳು ನೋಟಪ್ಯಾಡಿನ ಗೀಚುಗಳೇ ಆಗುಳಿದು ಪರದೆಯ ತುಂಬೆಲ್ಲಾ ಮಲಗಿಬಿಟ್ಟಿದ್ವು. ದಿನದೆಂಟು ಘಂಟೆಗಳು ಹೊಟ್ಟೆಪಾಡಿಗೆ , ಅದಾದ ನಂತರ ಎಂಟು ಘಂಟೆ ನಿದ್ರೆ ಅಂದ್ರೂ ಇನ್ನೆಂಟು ಘಂಟೆ ಏನ್ಮಾಡ್ತೀಯೋ ? ಒಂದೆಂರಡು ಘಂಟೆ ನನ್ನ ಪಾಲಿಗೂ ಕೊಡೋ ಅಧಿಕಾರಿ ಅಂತಿದ್ದ ಅವಳ ಕಿಲಕಿಲ ನಗು ನೆನಪಾಗಿ ತೂಕಡಿಕೆ ಓಡಿಹೋಗಿ ಮತ್ತೆ ಎಂದಿನ ಸಂಕಟ ಶುರುವಾಗಿತ್ತು. ಹುಡುಗಾಟದ ಹುಡುಗನಾಗಿದ್ದ ನನ್ನ ಐಪಿಎಸ್ ಓದಿ ಧಕ್ಷ ಅಧಿಕಾರಿಯಾಗುವಂತೆ ಪ್ರೇರೇಪಿಸಿದ್ದು ಅವಳ ಪ್ರೀತಿ. ನೀನು ಅಧಿಕಾರಿಯಾಗೋದನ್ನ ನೋಡಿ ಖುಷಿಪಡಬೇಕು ನಾನು ಅನ್ನುತ್ತಿದ್ದ ಅವಳು ನಾನು ಅಧಿಕಾರಿಯಾದ ಕೆಲವೇ ತಿಂಗಳಲ್ಲಿ ಮಾಯವಾಗಿದ್ದಳು. ಮೂರು ದಿನದಿಂದ ಯಾಕಿವಳ ಫೋನಿಲ್ಲ, ಸುದ್ದಿಯಿಲ್ಲ ಅನ್ನೋ ಆಲೋಚನೆಯಲ್ಲಿದ್ದವನನ್ನ ಗಾಬರಿಗೆ ತಳ್ಳಿದ್ದು ಅವಳ ತಂದೆ ತಂದ ಮಗಳು ಕಾಣೆಯಾಗಿದ್ದಾಳೆ ಅನ್ನೋ ಕಂಪ್ಲೇಂಟು. ಕಾಣೆಯಾದ ಸ್ನೇಹಿತೆಯ ಹುಡುಕೋ ಹೊಣೆ ನನಗೇ ಬಿದ್ದಿತ್ತು. ಆದ್ರೆ ಸ್ನೇಹಿತನಾಗಲ್ಲ, ಒಬ್ಬ ಅಧಿಕಾರಿಯಾಗಿ. ನಂದಿ ಬೆಟ್ಟಕ್ಕೆ ಹೋಗಿ ಬರ್ತೀನಿ ಅಂತ ಹೋದ ಮಗಳು ಎರಡು ದಿನವಾದ್ರೂ ಇನ್ನೂ ಮರಳಿಲ್ಲ ಅನ್ನೋ ಅವಳ ಪೋಷಕರ ಕಂಪ್ಲೇಂಟಿನ ಹಿಂದೆ ಬಿದ್ದಿದ್ದ ನನಗೆ ಒಂದು ವಾರ ಕಳೆದರೂ ಅವಳ ಸುಳಿವು ದಕ್ಕಿರಲಿಲ್ಲ. ನಂದಿ ಬೆಟ್ಟದ ಸುತ್ತಮುತ್ತ ಹುಡುಕದ ಜಾಗವಿಲ್ಲ. ವಿಚಾರಿಸದ ಸ್ನೇಹಿತರಿಲ್ಲ. ಯಾರಿಗೆ ಕೇಳಿದ್ರೂ ಅವ್ಳು ನಮ್ಮ ಮನೆಗೆ ಬಂದಿಲ್ಲ ಅನ್ನೋ ಉತ್ತರವೇ. ಸ್ವಿಚ್ಚಾಫಾದ  ಅವಳ ಫೋನಿನ ಕಂಪ್ನಿಯವರಿಂದ ಪಡೆದ ಮಾಹಿತಿಯ ಪ್ರಕಾರ ಅವಳ ಸಿಮ್ಮು ಬಳಸಲ್ಪಟ್ಟಿದ್ದು ಬನಶಂಕರಿಯ ಬಳಿ ಎರಡು ದಿನದ ಹಿಂದೆ. ಅದಾದ ಮೇಲೆ ಸ್ವಿಚ್ಚಾಫಾದ ಅದರಿಂದ ಇಲ್ಲಿಯವರೆಗೆ ಒಂದು ಸಿಗ್ನಲ್ಲೂ ದೊರಕದೇ ಮೊಬೈಲ್ ಸಿಗ್ನಲ್ ಮೂಲಕ ಅವಳ ಹುಡುಕೋ ಆಸೆಯೂ ಡೆಡ್ ಎಂಡ್ ಮುಟ್ಟಿಬಿಟ್ಟಿತ್ತು. ಎಲ್ಲಾದ್ರೂ ಒಂದು ಹೆಣ್ಣ ಶವ ಸಿಕ್ಕಿದೆಯಂದ್ರೆ ಇವಳೆದ್ದೇನಾ ಅನ್ನೋ ಭಯ . ನಿದ್ದೆಯಿಲ್ಲದ ಒಂದು ವಾರದ ನಂತರ ಮೆಚ್ಚಿನ ಡೆಸ್ಕಟಾಪಿನಲ್ಲಿ ಏನೋ ಮಾಹಿತಿ ತಾಳೆ ಹಾಕುತ್ತಾ ಕೂತವನಿಗೆ ಜೊಂಪು ಹತ್ತಿತ್ತು.

ಕಾಲಚಕ್ರ ಹಿಂದೆ ತಿರುಗುತ್ತಿದೆಯೋ ಅನ್ನಿಸುವಂತೆ ನೆನಪುಗಳ ಸುರುಳಿಯಲ್ಲಿ ಹಿಂದೆ ಹಿಂದೆ ಸಾಗುತ್ತಿದ್ದ ನನಗೆ ಪರಿಚಯವಿದ್ದ ಮುಖವೊಂದು ಕಂಡಂತಾಯಿತು. ಹಾ. ಅದು ಅವಳೇ. ನನ್ನನ್ನೇನೋ ಸಮಾಧಾನ ಮಾಡುತ್ತಿದ್ದಾಳೆ. ನೆನಪಾಗುತ್ತಿದೆ. ಅವಳ ನೆನಪಲ್ಲಿ ಬರೆದ ಕವನಗಳನ್ನೊಂದು ಬುಕ್ಕು ಮಾಡಬೇಕಂತ ಹೊರಟಿದ್ದ ನಾನು ಹಿರಿಯರೊಬ್ಬರ ಮಾರ್ಗದರ್ಶನಕ್ಕೆ ಹೋಗಿ ಬಂದ ದಿನ.  ನೀ ಇಲ್ಲಿಯವರೆಗೆ ಬರೆದದ್ದು ಕವನವೇ ಅಲ್ಲ. ಅದನ್ನೋದು, ಇದನ್ನೋದು ಅಂತ ಒಂದಿಷ್ಟು ಬುಕ್ಕುಗಳ ಲಿಸ್ಟು ಕೊಟ್ಟು ಕಳಿಸಿದ ದಿನವದು. ಮಾರ್ಗದರ್ಶನಕ್ಕೆ ಅಂತ, ನನ್ನದೊಂದು ಪುಸ್ತಕ ಮಾಡ್ಬೇಕು ಅಂತಿದ್ದೀನಿ ಸಹಾಯ ಮಾಡ್ತೀರಾ ಅಂತ ಅನೇಕರ ಕಾಲು ಹಿಡಿದು ಅವರೆಲ್ಲಾ ಪರಿಚಯವಾದಷ್ಟೇ ಚುರುಕಾಗಿ ಮಾಯವಾದ ನಂತರ ಈ ಹಿರಿಯರು ಸಿಕ್ಕಿದ್ರು. ಅವರೂ ಹೀಗಂದ ಬೇಸರಲ್ಲಿ ಕೂತಿದ್ದ ದಿನವದು. ಅಂದು ನಾನು ಬಾಯ್ಬಿಟ್ಟು ಹೇಳದಿದ್ರೂ ಅವಳೇ ನಿಧಾನವಾಗಿ ಕಾರಣ ಅರಿತು ಸಮಾಧಾನ ಮಾಡಿದ್ಲು. ದೇವರಿಚ್ಛೆಯೇ ಬೇರೆಯಿದ್ರೆ ನೀನೇನು ಮಾಡೋಕೂ ಆಗಲ್ಲ ಅಂದ್ಕೊ. ನೀನು ನನ್ನ ಮೆಚ್ಚಿನ ಅಧಿಕಾರಿಯಾಗ್ಬೇಕು ಅನ್ನೋದೇ ಆ ದೇವರಿಚ್ಚೆ ಆಗಿರ್ಬೋದು ಕಣೋ. ಬೇಜಾರ್ಮಾಡ್ಕೋಬೇಡ. ಓದೋದ್ರ ಕಡೆ ಗಮನ ಕೊಡು. ಬೇಜಾರಾದಾಗ್ಲೆಲ್ಲ ಬರೀತಾ ಇರು. ನಿನ್ನ ಭಾವಗಳ್ನ, ನಿನ್ನ ನೋವುಗಳ್ನ. ನಿನ್ನೊಳಗಿನ ಕವಿ ಮಾಗಿದ ಸಮಯದಲ್ಲಿ ಅದನ್ನ ಪ್ರಕಟಿಸೊ ಪ್ರಕಾಶಕ ಒಬ್ಬ ಸಿಕ್ಕೇ ಸಿಗ್ತಾನೆ ಅಂತ ಸಮಾಧಾನಿಸಿದ್ಲು. ಅದಾಗಿ ತಿಂಗಳುರುಳಿತ್ತು. ನಾ ಚೆನ್ನಾಗಿ ಓದಿ ಅವಳಿಚ್ಛೆಯ ಅಧಿಕಾರಿಯಾಗಿಯೂ ಆಗಿತ್ತು. ಅವಳಂದಂತೆ ಹೊಸ ಪ್ರಕಾಶಕರೊಬ್ಬರು ಪರಿಚಯವಾಗಿ ನನ್ನ ಕವನಗಳ ಪ್ರಕಟಿಸೊ ಉತ್ಸುಕತೆಯನ್ನೂ ತೋರಿದ್ರು. ಆದ್ರೆ ಇವಳಿಗೆ ಹೇಳೇ ಪ್ರಕಾಶನಕ್ಕೆ ಕಳುಹಿಸಬೇಕು ಅಂತಿದ್ದ ನನಗೆ ಎರಡು ಮೂರು ದಿನದಿಂದ ಸರಿ ಮಾತಿಗೆ ಸಿಕ್ಕಿರಲಿಲ್ಲ. ಪ್ರತಿ ಸಲ ಫೋನ್ ಮಾಡಿದಾಗ್ಲೂ ಏನೋ ಗಡಿಬಿಡಿಯಲ್ಲಿದ್ದಂತೆ ಇರ್ತಿದ್ಲು. ಚಾಮರಾಜನಗರದ ಸುತ್ತಮುತ್ತ ಯಾವ್ಯಾವ ಪ್ರೇಕ್ಷಣೀಯ ಸ್ಥಳಗಳಿವೆ ಅಂತ ವಿಚಾರಿಸಿದ್ದೇ ಕೊನೆ. ಅದಾದ ಮೇಲೆ ಮೂರು ದಿನದಿಂದ ಫೋನೇ ಇರ್ಲಿಲ್ಲ. ಒಂದೋ ಸ್ವಿಚ್ ಆಫ್ ಅಂತ್ಲೋ ಇಲ್ಲ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಅಂತ್ಲೋ ಬರ್ತಿತ್ತು. ಎಲ್ಲಿ ಹೋದ್ಲು ಇವ್ಳು ? ಅನ್ನೋ ಆಲೋಚನೆಗಳು ಕಾಡ್ತಿರುವಾಗ್ಲೇ ಏನೋ ಮಿಂಚು ಹೊಳೆದಂತಾಯ್ತು.

ಅವ್ಳತ್ರ ಇದ್ದಿದ್ದು ಎರಡು ಸಿಮ್ಮು ! ಆಪ್ತ ಸ್ನೇಹಿತರಿಗೆ ಬಿಟ್ರೆ ಅವಳ ಎರಡನೆಯ ಸಿಮ್ಮಿನ ವಿಚಾರ ಉಳಿದವರಿಗೆ ಗೊತ್ತಿದ್ದುದು ಡೌಟೇ ! ಸಿಟಿಯಲ್ಲಿ ನೆಟ್ವರ್ಕೇ ಇರದ ಈ ಸಿಮ್ಮಿಟ್ಕಂಡು ಏನ್ಮಾಡ್ತೀಯ, ಬಿಸಾಡು ಅಂದವರಿಗೆಲ್ಲಾ ಏ ಇದು ಹಳ್ಳಿ ಕಡೆ ಉಪಯೋಗಕ್ಕೆ ಬರತ್ತೆ. ಅಲ್ಲಿ ಯಾವ ನೆಟ್ವರ್ಕು ಇರದಿದ್ರೂ ಎಲ್ಲಾದ್ರೂ ಗುಡ್ಡ ಹತ್ತಿದ್ರೆ ಇದ್ರ ನೆಟ್ವರ್ಕು ಸಿಗತ್ತೆ ಅಂತಿದ್ದ ಅವಳ ಮಾತು ನೆನಪಾಗಿ ಒಂದು ಆಶಾಕಿರಣ ಮೂಡಿತು. ಅವಳ ಮೊದಲ ಸಿಮ್ಮು ನಿಜವಾಗ್ಲೂ ಕಳೆದು ಹೋಗಿ ಆಮೇಲೆ ಎರಡನೆಯ ಸಿಮ್ಮನ್ನೇನಾದ್ರೂ ಬಳಸಿರಬಹುದಾ ಅಂತ . ನನ್ನ ಕಾಲಿಗೆ ಸಿಗದಿದ್ರೂ ಅವಳು ಆ ತರ ಏನಾದ್ರೂ ಬಳಸಿದ್ದೇ ಆಗಿದ್ರೆ ಅವಳ ಆ ಮೂಲಕ ಹುಡುಕಬಹುದು ಎಂಬ ಆಸೆ. ಆದ್ರೆ ಇಲ್ಲೂ ಒಂದು ಅಂಶ ಮಿಸ್ಸಿಂಗು. ನಾನು ಫೋನ್ ಮಾಡ್ತಿದ್ದಿದ್ದು ಎರಡನೆಯ ಸಿಮ್ಮಿಗೆ. ಅದರಲ್ಲಿ ನನಗೆ ಫೋನಿಗೆ ಸಿಗದೆ ಮೂರು ದಿನಗಳಾಗಿತ್ತು ಅವಳು ಕಳೆದು ಹೋಗಿದ್ದಾಳೆ ಅಂತ ಕಂಪ್ಲೇಟ್ ಬಂದಾಗ. ಆದ್ರೆ ಇವ್ರಪ್ಪ ನೋಡಿದ್ರೆ ಮಿಸ್ಸಾಗಿ ಎರಡು ದಿನವಾಗಿದೆ ಅಂತ ಕಂಪ್ಲೇಂಟ್ ಕೊಟ್ಟಿದ್ರು.  ಟೆಲಿಫೋನ್ ಕಂಪ್ನಿಯವ್ರು  ಎರಡು ದಿನದ ಹಿಂದೆ ಬನಶಂಕ್ರಿಯ ಹತ್ರ ಸಿಗ್ನಲ್ ಇತ್ತು ಅಂದಿದ್ದು ಅವಳ ಮೊದಲ ಸಿಮ್ಮಿಗೆ . ಆದ್ರೆ ಅದು ಮೊದಲ ಸಿಮ್ಮು. ಎರಡನೆಯದು ? ಏನಾದ್ರಾಗಲಿ ಅಂತ ಎರಡನೇ ಸಿಮ್ಮಿನ ಕಂಪೆನಿಯವ್ರನ್ನ ಸಂಪರ್ಕಿಸಿದಾಗ ವಿಚಾರಣೆ ದಿಕ್ಕೇ ಬದಲಾಯ್ತು.

ಅವಳು ಮಿಸ್ಸಾಗಿ ಒಂದು ದಿನ ಆದ ಮೇಲೆ ಅಂದ್ರೆ ನನ್ನ ಫೋನಿಗೆ ಸಿಕ್ಕದ ಎರಡನೆಯ ದಿನ ಅವಳ ಎರಡನೆಯ ಸಿಮ್ಮು ಕೊಳ್ಳೆಗಾಲದಲ್ಲಿ ಬಳಸಲ್ಪಟ್ಟಿತ್ತು. ಈ ನಂದಿ ಬೆಟ್ಟ ಎಲ್ಲಿ ? ಕೊಳ್ಳೆಗಾಲ ಎಲ್ಲಿ ? ಅಂದ್ರೆ ಏನೋ ಮಿಸ್ಸಿಂಗು.  ಚಾಮರಾಜನಗರದ ಬಗ್ಗೆ ಕೇಳ್ತಿದ್ದ ಅವಳು ಅಲ್ಲಿಗೇನಾದ್ರೂ ಹೋಗಿರ್ಬೋದಾ ? ಆದ್ರೆ ಅಲ್ಲಿ ಅವಳಿಷ್ಟ ಆಗಬಹುದಾದ  ಸುಮಾರಷ್ಟು ಜಾಗಗಳಿವೆ. ಎಲ್ಲಿ ಅಂತ ಹುಡುಕೋದು ? ಮಲೆ ಮಹದೇಶ್ವರ ಬೆಟ್ಟ ಇದೆ. ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ನೂರು ಕಿ.ಮಿ ಆಸು ಪಾಸಲ್ಲಿದೆ. ಹೊಯ್ಸಳ ದೇವಸ್ಥಾನ ಅಂತ ನೋಡಿದ್ರೆ ಅದೂ ಇದೆ. ಬೆಳಬೆಳಗ್ಗೆ ಮನೆಯಿಂದ ಹೊರಟಿದ್ದಾಳೆ, ಅವಳ ಕೊನೆಯ ಸಿಗ್ನಲ್ಲು ಬನಶಂಕರಿ ಹತ್ರ ಇದೆ ಅಂದ್ರೆ ಅವ್ಳು ಈ ಕಡೆಯೇ ಹೊರಟಿರ್ಬೇಕು ಅನ್ನೋ ಸಂಶಯ ಬಲವಾಯ್ತು.
ಮಲೆಮಹದೇಶ್ವರಕ್ಕೆ ಬೆಂಗ್ಳೂರಿಂದ ೨೧೦ ಕಿ.ಮಿ. ಮದ್ದೂರು ಅಥವಾ ಕೊಳ್ಳೇಗಾಲದ ಮೇಲೆ ಹೋಗೋ ಬದ್ಲು ಕೃಷ್ಣಗಿರಿಯ ಮೇಲೆ ಹೋದ್ರೂ ಇನ್ನೂರೈವತ್ತರ ಹಾದಿ.  ಬೆಳಗ್ಗೆ ಮುಂಚೆ ಮನೆಯಿಂದ ಹೊರಟವ್ರು ಮಲೆ ಮಹದೇಶ್ವರ ತಲುಪೋ ಹೊತ್ತಿಗೆ ಮಧ್ಯಾಹ್ನ ಆಗಿರುತ್ತೆ. ಅಲ್ಲಿಂದ ನಾಗಮಲೆಗೆ ಹೋದ್ರೆ ಬರೋದೇ ಸಂಜೆ ಆಗುತ್ತೆ. ಅದಲ್ದೇ ಅಲ್ಲಿ ಗುಂಜುಮಲೆ, ಶಂಕಮಲೆ, ಕೊಂಬುಡಿಕ್ಕಿ,  ಜೇನು ಮಲೆ ಅಂತ ಏನೇನೋ ಸ್ಥಳಗಳಿವೆ. ಅದನ್ನೆಲ್ಲಾ ನೋಡ್ತಾ ಹೋದ್ರೆ ಮಲೆ ಮಹದೇಶ್ವರದಲ್ಲೇ ಮೂರು ದಿನ ಆಗತ್ತೆ ಅಂತ ಪ್ಲಾಷಾಯ್ತು. ಶಾಂತಿ, ಪ್ರಕೃತಿ ಅಂತ ಆಸೆ ಪಡೋ ಇವ್ಳು ಎಲ್ಲಾದ್ರೂ ಒಂದು ವಾರ ತಣ್ಣಗಿದ್ದುಬಿಡೋಣ ಅಂತ ನೆಟ್ವರ್ಕಿಲ್ಲದ ಜಾಗದಲ್ಲಿ ಕೂತಿರಬಹುದಾ ಅನ್ನಿಸ್ತೊಮ್ಮೆ. ಏನಾದ್ರಾಗ್ಲಿ ಒಮ್ಮೆ ಅಲ್ಲೂ ಹುಡುಕೇ ಬಿಡೋಣ ಅಂತ ಗಾಡಿ ತಿರುಗ್ಸಿದೆ ಮಲೆ ಮಹದೇಶ್ವರದತ್ತ.  ನಾನು ಅಲ್ಲಿಯ ಪೋಲಿಸರಿಗೆ ಮಾಹಿತಿ ಕೊಟ್ಟು ಅವರು ಹುಡುಕೋದು ಪ್ರಾರಂಭಿಸೋದ್ರೊಳಗೆ ನಾಳೆ ಬೆಳಗ್ಗೆಯೇ ಆಗಿರುತ್ತೆ. ಅದ್ರ ಬದ್ಲು ನಾನೇ ಹೊರಟ್ರೆ ನಾಳೆ ಬೆಳಗಾಗೋದ್ರಲ್ಲಿ ಮಲೆ ಮಹದೇಶ್ವರ ತಲುಪಬಹುದು ಅನ್ನೋ ಆಸೆಯಲ್ಲಿ ಮಧ್ಯರಾತ್ರಿ ಹನ್ನೆರಡಾಗಿರೋದನ್ನೂ ಲೆಕ್ಕಿಸದೇ ಹೊರಟುಬಿಟ್ಟಿದ್ದೆ.

ಮಲೆ ಮಹದೇಶ್ವರದ ಜೀಪಿನವರನ್ನು ಅವಳ ಫೋಟೋ ತೋರಿಸಿ ವಿಚಾರಿಸಿದಾಗ ಒಬ್ಬ ಜೀಪಿನವನ ಹತ್ರ ಮಹತ್ವದ ಸುಳಿವು ಸಿಕ್ಕಿತ್ತು.  ಓ ಈ ಮೇಡಮ್ಮಾ ನಾಲ್ಕು ದಿನದ ಹಿಂದೆ ಇದ್ರು ಇಲ್ಲಿ ಅಂದ ಅವ. ಅದೇಗೆ ಹೇಳ್ತೀಯಪ್ಪ ಇದು ಇವ್ರೇ ಅಂತ ಅಂದಾಗ. ಅದೆಂಗೆ ಮರೆಯಕ್ಕಾಗ್ತದೆ ಬುದ್ದಿ, ನಾಗಮಲೆಗೆ ನಮ್ಮ ಜೀಪಲ್ಲೇ ಬಂದ ಇವ್ರು ಎರಡು ದಿನ ಇಲ್ಲೇ ಉಳಿದು ಕೊಂಬು ಡಿಕ್ಕಿ, ಒಂಭತ್ತು ಮರ, ಗುಂಜು ಮಲೆ, ಶಂಕ ಮಲೆ ಎಲ್ಲಾ ನೋಡಿದ್ರು. ಇವ್ರ ತರ ಇನ್ನೂ ನಾಲ್ಕು ಜನರಿದ್ರು . ಫಾರಿನ್ನರ ತರ ಇದ್ದ ಅವ್ರಿಗೆಲ್ಲಾ ಕಾಡು ತಿರುಗ್ಸಿದ್ದು ನಾನೇ ಅಂದ ಅವ. ಜೊತೆಗೆ ನಾಲ್ಕು ಜನ ಇದ್ರು ಅನ್ನೋದು ಮಹತ್ವದ ಸುಳಿವು ಅನಿಸಿದ್ರೂ ಅವರ್ಯಾರು ಅನ್ನೋದು ಗೊತ್ತಿಲ್ಲವಲ್ಲ. ಅವಳ ಗೆಳೆಯರ ಮನೆಯಲ್ಲಿ ವಿಚಾರಿಸೋಕೆ ಹೋದಾಗ ಅವರೆಲ್ಲಾ ಅಲ್ಲೇ ಇದ್ರಲ್ಲ. ಇಲ್ಲೇ ಸಿಕ್ಕ ಬೇರೆ ಯಾರಾದ್ರೂ ಆಗಿರಬಹುದಾ ಅನಿಸ್ತೊಮ್ಮೆ.  ಅವ್ರ ಜೊತೆಗಿದ್ದೋರು ಮೇಡಮ್ಮಿನ ಫ್ರೆಂಡ್ಸೇನಾ ? ಅವ್ರ ಹೆಸ್ರೇನಾದ್ರೂ ಮಾತಾಡಿಕೊಂಡಿದ್ದು ಕೇಳಿದ್ದು ನೆನಪಿದ್ಯಾ ಅಂದೆ. ಹೆಸ್ರು ಅಂತೇನು ಗೊತ್ತಿಲ್ಲ. ಮೇಡಮ್ಮಿನ ಜೊತೆಗೆ ಈ ಜೀಪಲ್ಲಿ ಬಂದ್ರೂ ಅವ್ರಿಗೆ ಮೇಡಮ್ಮಿನ ಪರಿಚಯ ಇತ್ತೋ ಇಲ್ವೋ ಗೊತ್ತಿಲ್ಲ. ಇವ್ರ ತರವೇ ಅವ್ರೂ ಜಾಗ ಜಾಗ ತಿರುಗ್ತಿದ್ದಿದ್ರಿಂದ ಫ್ರೆಂಡ್ಸಿರಬಹುದು ಅಂದ್ಕೊಂಡೆ ಅಷ್ಟೆ ಸಾ. ಹೆಸ್ರು ಗೊತ್ತಿಲ್ಲ. ಆದ್ರೆ  ಅವರೆಲ್ಲಾ ಇಂಗ್ಲೀಷಿನಲ್ಲಿ ಮಾತಾಡ್ಕೋತಾ ಇದ್ರು. ಮೇಡಮ್ಮೊಬ್ರೇ ನನ್ನತ್ರ ಕನ್ನಡದಲ್ಲಿ ಮಾತಾಡ್ತಾ ಇದ್ರು ಅಂದ ಅವ. ಸಮಸ್ಯೆ ಬಗೆಹರಿಯಿತು ಅನ್ನೋ ಸಮಯಕ್ಕೆ ಮತ್ತೆ ಗೋಜಲಾಗ್ತಾ ಇದ್ಯಲ್ಲ ಅನ್ನೋ ಬೇಸರ ಕಾಡೋಕೆ ಶುರುವಾಯ್ತು. ಇಲ್ಲಿಂದ ಎಲ್ಲಿಗೆ ಹೋಗ್ತೀನಿ ಅಂತೇನಾದ್ರೂ ಹೇಳಿದ್ರಾ ಅಂದೆ. ಸರಿ ನೆನ್ಪಿಲ್ಲ ಬುದ್ದಿ. ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಹೆಂಗಿದೆ ಅಂತ ಕೇಳ್ತಾ ಇದ್ರು ಅಮ್ಮ. ಎಲ್ಲಿಗೆ ಅಂತ ಸರಿಯಾಗಿ ಹೇಳ್ಲಿಲ್ಲ ಅಂದ ಅವ. ಬಿಳಿಗಿರಿ ರಂಗನ ಬೆಟ್ಟ ಅಂದ್ರೆ ಅಲ್ಲಿ ಗುಂಜಳ್ಳಿ ಚೆಕ್ ಪೋಸ್ಟಿದೆ. ಒಳಹೋಗೋ ಮೊದ್ಲು ಅಲ್ಲಿ ಹೆಸ್ರು , ಫೋನ್ ನಂಬರ್ರು, ಅಡ್ರೆಸ್ ಫ್ರೂಪ್ ಕೊಡ್ಲೇ ಬೇಕು. ಅಲ್ಲೇನಾದ್ರೂ ಮಾಹಿತಿ ಸಿಗಬಹುದು ಅನ್ನೋ ಆಸೆಯಿಂದ ಅತ್ತ ತೆರಳೋ ಮನಸ್ಸಾಯ್ತು. ಅವಳ ಜೊತೆಗಿದ್ದರೆಂದು ಹೇಳಲಾದ ನಾಲ್ಕು ಜನರ ರೇಖಾ ಚಿತ್ರ ಸಂಗ್ರಹಿಸಲು ಜೊತೆಗಿದ್ದ ಸಿಬ್ಬಂದಿಗೆ ಹೇಳಿ ಬಿಳಿಗಿರಿ ರಂಗನಬೆಟ್ಟದತ್ತ ತೆರಳಿದೆ.

ಚೆಕ್ ಪೋಸ್ಟ್ ಸಿಬ್ಬಂದಿಯ ಬಳಿ ಮೂರು ಫಾರಿನ್ನರು ಮತ್ತು ಒಬ್ಬ ಭಾರತೀಯ ಮಹಿಳೆ ಈ ಕಡೆ ಒಂದು ವಾರದಲ್ಲಿ ಬಂದಿರಬಹುದಾ ಅಂತ ಕೇಳಿ ಸ್ನೇಹಿತೆ ಮಿಸ್ಸಾಗಿರೋ ಸಂಬಂಧದ ಪ್ರಕರಣದ ವಿಚಾರಣೆಗೆ ಸಹಕಾರ ಕೋರಿದೆ. ಅವ್ರು ಫಾರಿನ್ನರ್ರು ಅಂದ್ರೆ ಇಲ್ಲಿಯವರ ಅಡ್ರೆಸ್ಸು ಅಂದ್ರೆ ಈಗ ನೀವು ಹುಡುಕುತ್ತಿರುವವರ ಅಡ್ರೆಸ್ಸೇ ಕೊಟ್ಟಿರಬಹುದು ನೋಡೋಣ ಅಂತ ಒಂದು ವಾರದ ದಾಖಲೆ ನೋಡಿದಾಗ ಆಶ್ಚರ್ಯ ಕಾದಿತ್ತು. ಮೂರು ದಿನಗಳ ಹಿಂದಿನ ದಾಖಲೆಯದು. ಅಡ್ರೆಸ್ಸು, ಫೋನ್ ನಂಬರ್ರು ಅಷ್ಟೇ ಅಲ್ಲ. ಕೈಬರಹವೂ ಅವಳದೇ. ಬೆಳಗ್ಗೆ ಒಂಭತ್ತಕ್ಕೆ ಹೋದ ದಾಖಲೆಯಿದೆ. ಆದ್ರೆ ಬಂದ ದಾಖಲೆಯೆಲ್ಲಿ ಅಂದೆ ? ಇಲ್ಲಿಗೆ ಬಂದವ್ರ ದಾಖಲೆ ಮಾತ್ರ ಇಡ್ತೀವಿ ಸಾರ್. ಸಂಜೆ ನಾಲ್ಕರ ನಂತರ ಯಾರಿಗೂ ಒಳಬಿಡಲ್ಲ. ಸಂಜೆ ಐದೂವರೆ ಒಳಗೆ ವಾಪಾಸ್ ಬರಬೇಕು ಅಂತ್ಲೂ ಹೇಳಿರ್ತೀವಿ. ಸಾಮಾನ್ಯವಾಗಿ ಎಲ್ರೂ ಬಂದು ಬಿಡ್ತಾರೆ. ಅವ್ರೂ ಬಂದುಬಿಟ್ಟಿರ್ಬೇಕು ಅಂದ್ರು. ಇಲ್ಲಿ ಇದು ಬಿಟ್ರೆ ಇನ್ನೇನು ಇದೆ ಅಂದೆ. ಚಾ.ಗುಡಿ ಅಂತ ರೆಸಾರ್ಟು ಇದೆ ಬಿಳಿಗಿರಿ ರಂಗನ ಬೆಟ್ಟದಿಂದ ಸುಮಾರು ಮೂವತ್ತು ಕಿ.ಮೀ ಮುಂದೆ ಅಂದ. ಅಲ್ಲಿಗೇನಾದ್ರೂ ಹೋಗಿರ್ಬೋದಾ ಅನಿಸ್ತು. ತಗೋ. ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿಚಾರಣೆ ಮುಂದುವರೆಯಿತು. ಇಲ್ಲಿ ಮೂರು ಫಾರಿನ್ನರು ಮತ್ತು ಒಂದು ಹುಡುಗಿಯನ್ನು ನೋಡಿದ್ದೀರಾ ಅಂತ ಸುಮಾರು ಅಂಗಡಿಯವರನ್ನ , ಅಲ್ಲಿನ ವೀಕ್ಷಣಾ ಸ್ಥಳದಲ್ಲಿ ಒಂದು ನಿಮಿಷಕ್ಕೆ ಪ್ರಿಂಟ್ ಕೊಡೋ ಫೋಟೋ ತೆಗೆಯುತ್ತಿದ್ದವರನ್ನ ವಿಚಾರಿಸಿದಾಗ ಮತ್ತೊಂದು ಮಹತ್ವದ ಸುಳಿವು ಸಿಕ್ಕಿತ್ತು. ಇವ್ರು ಮೂರು ದಿನದ ಹಿಂದೆ ಇಲ್ಲಿಗೆ ಬಂದಿದ್ರು ಸಾರ್ ಅಂದ ಒಬ್ಬ ಫೋಟೋಗ್ರಾಫರ್ರು. ಅದೆಂಗೆ ಹೇಳ್ತೀಯಪ್ಪ ಅಂದಾಗ ಇಲ್ಲಿ ಬರೋ ಜನರೆಲ್ಲಾ ನಮ್ಮತ್ರ ಫೋಟೋ ತೆಗೆಸಿಕೊಳ್ತಾರೆ ಆದ್ರೆ ಅವ್ರು ತಮ್ಮದೇ ಕ್ಯಾಮೆರಾ ಕೊಟ್ಟು ಇದ್ರಲ್ಲಿ ತೆಗಿ ಅಂದಿದ್ರು. ಏನೋ ಕೇಳ್ತಿದಾರಲ್ಲ ಅಂತ ಫೋಟೋ ಪುಕ್ಕಟೆಯಾಗೇ ತೆಗೆದುಕೊಡೋಕೆ ಹೋಗಿದ್ದ ನನ್ನನ್ನೊಪ್ಪದೇ ಅವ್ರು ಐವತ್ತು ರೂ ಕೊಟ್ಟು ಹೋಗಿದ್ರು ಸಾ.  ಇಂತಾ ಕಾಲದಲ್ಲಿ ಅಷ್ಟು ಒಳ್ಳೆಯವರೆಲ್ಲಿ ಸಾ ಅಂದಿದ್ದ ಅವ. ಇಲ್ಲಿಗೆ ಬಂದಿದ್ದು ಹೌದಾದ್ರೂ ಮುಂದೆಲ್ಲಿ ಹೋದ್ರು ಅನ್ನೋದು ಕಗ್ಗಂಟಾಗೇ ಉಳಿಯಿತು. ಯಾವುದಕ್ಕೂ ಇರ್ಲಿ ಅಂತ ಚಾ.ಗುಡಿಗೆ ಹೋಗೋ ಮನಸ್ಸಾಯ್ತು. ಅಲ್ಲಿಗೆ ಹೋದ್ರೆ ಅಲ್ಲಿ ಮತ್ತೊಂದು ಸುಳಿವು ಕಾಯ್ತಾ ಇತ್ತು. ಅಲ್ಲಿಗೆ ಮೂರು ದಿನಗಳ ಹಿಂದೆ ಬಂದು ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ತಂಡದಲ್ಲಿ ಇವಳೂ ಇದ್ದಳು !
ಇಲ್ಲಿ ಒಂದು ದಿನದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಅವರು ಎರಡು ದಿನಗಳ ಹಿಂದಷ್ಟೇ ಹೊರಟ್ರು ಅನ್ನೋ ಮಾಹಿತಿ ಸಿಕ್ತು. ಇಲ್ಲಿಗೆ ಒಂದಿಷ್ಟು ಕೊಂಡಿಗಳು ಜೋಡಿಯಾಗ್ತಾ ಬಂದ್ವು. ಮಲೆಮಹದೇಶ್ವರಕ್ಕೆ ಬಂದು ಎರಡು ದಿನ ಇದ್ದವ್ಳು ಮೂರನೇ ದಿನ ಹೊರಟಿದ್ದಾಳೆ ಅಲ್ಲಿಂದ. ಕೊಳ್ಳೇಗಾಲದ ಮೂಲಕ ಬಿಳಿಗಿರಿರಂಗನಬೆಟ್ಟಕ್ಕೆ ಬಂದಿರಬಹುದು. ಆಗ ಎಲ್ಲೋ ನೆಟ್ವರ್ಕು ಸಿಕ್ಕಿದೆ ಎರಡನೆಯ ಸಿಮ್ಮಿಗೆ. ಅಲ್ಲಿಂದ ಬೆಟ್ಟ ಮತ್ತೆ ಚಾ,ಗುಡಿಯಲ್ಲಿ ಒಂದು ದಿನ. ಎರಡು ದಿನದ ಹಿಂದಿನ ಸಂಜೆ ಅಂದ್ರೆ ಮೊನ್ನೆ ಸಂಜೆ ಇಲ್ಲಿಂದ ಹೊರಟವಳು ಎಲ್ಲಿಗೆ ಹೋಗಿರ್ಬೋದು ಅನ್ನೋ ಪ್ರಶ್ನೆಗೆ  ನೆನಪಾಗಿದ್ದು ಮೊಬೈಲ್ ಕಂಪೆನಿಯವ್ರು ಕೊಟ್ಟ ಮಾಹಿತಿ. ಕಾಣೆಯಾದ ಎರಡು ದಿನಗಳ ನಂತರ ಕೊಳ್ಳೆಗಾಲದಲ್ಲಿ ಸಿಗ್ನಲ್ ಪತ್ತೆ. ಅದಾಗಿ ಒಂದು ದಿನ ಮತ್ತೆ ಇಲ್ಲ. ಅದಾದ ಮೇಲೆ ಎರಡನೆಯ ದಿನದ ರಾತ್ರೆ ಮತ್ತೆ ಕೊಳ್ಳೇಗಾಲದ ಸುತ್ತಮುತ್ತ ಸಿಗ್ನಲ್ಲು . ಅದಾದ ಮೇಲೆ ಮತ್ತೆ ಮಿಸ್ಸು ಅನ್ನೋ ಮಾಹಿತಿ ನೆನಪಾಯ್ತು. ಅಂದ್ರೆ ಮೊನ್ನೆ ರಾತ್ರೆ ಚಾ.ಗುಡಿಯಿಂದ ಕೊಳ್ಳೆಗಾಲಕ್ಕೆ ಬಂದಿರಬಹುದು ಅನ್ನೋವಲ್ಲಿಗೆ ಸಿಕ್ಕ ವಿಚಾರಣೆಯ ಮಾಹಿತಿಗೂ ಮೊಬೈಲ್ ಸಿಗ್ನಲ್ ಮಾಹಿತಿಗೂ ತಾಳೆಯಾಯ್ತು. ಇನ್ನು ಮುಂದಿನ ವಿಚಾರಣೆಗೆ ಕೊಳ್ಳೆಗಾಲದಲ್ಲೇನಾದ್ರೂ ಮಾಹಿತಿ ಸಿಗಬಹುದು ಅಂತ ಆರನೆಯ ಇಂದ್ರಿಯ ಹೇಳತೊಡಗಿತು. ಆದ್ರೆ ಅಲ್ಲಿ ಏನು ಎತ್ತ ಅಂತೇನೂ ಗೊತ್ತಿಲ್ಲ. ಏನಾದ್ರಾಗಲಿ ಅಂತ ಕೊಳ್ಳೆಗಾಲಕ್ಕೆ ಹೊರಟುಬಿಟ್ಟೆ.

ಕೊಳ್ಳೆಗಾಲಕ್ಕೆ ಬರೋ ಹೊತ್ತಿಗೆ ಹೊಟ್ಟೆ ಚುರುಗುಟ್ಟತೊಡಗಿತ್ತು. ಬೆಳಗಿಂದ ವಿಚಾರಣೆಯ ಗುಂಗಲ್ಲಿ ಏನನ್ನೂ ಸರಿಯಾಗಿ ತಿನ್ನದ ಪ್ರಭಾವ ಮತ್ತು ಹಿಂದಿನ ದಿನದಿಂದ ಗಾಡಿಯೋಡಿಸಿದ್ರ ಪ್ರಭಾವದ ನಿದ್ದೆ ಎರಡೂ ಒಟ್ಟೊಟ್ಟಿಗೆ ಆವರಿಸತೊಡಗಿತ್ತು. ಎಲ್ಲಾದ್ರೂ ಒಂದು ಹೋಟೇಲ್ ಹಿಡ್ದು ಮಲ್ಗಿ ನಾಳೆ ಮುಂದುವರಿಸೋಣ ಅಂತನಿಸ್ತು. ಪೋಲೀಸ್ ಅತಿಥಿಗೃಹ ಅಂತ ಹೋಗೋ ಬದ್ಲು ಸಿವಿಲ್ ಡ್ರೆಸ್ಸಲ್ಲಿ ಇವರ್ಗಳ ಬಗ್ಗೆ ಹೋಟೇಲ್ಗಳಲ್ಲಿ ವಿಚಾರಿಸಿದ್ರೆ ಮಾಹಿತಿ ಸಿಗಬಹುದಾ  ಅಂತೊಂದು ಐಡಿಯಾ ಹೊಳೆಯಿತು. ಫಾರಿನ್ನರುಗಳು ಯಾರು ಅಂತ ಗೊತ್ತಿಲ್ದೇ ಇದ್ರೂ, ಅವರ ಜೊತೆ ಇವಳು ಇರೋದೊಂತೂ ಹೌದು ಅನ್ನೋದೊಂದು ಅಂಶ ಇಲ್ಲಿ ಸಹಾಯಕವಾಗ್ಬೋದು. ಫಾರಿನ್ನರು ಅಂದ್ರೆ ತೀರಾ ಸಾಮಾನ್ಯ ಹೋಟೇಲಲ್ಲೇನು ಇರೋಲ್ಲ . ಇಲ್ಲಿ ಚೆನ್ನಾಗಿರೋ ಹೋಟೆಲ್ಗಳು ಯಾವುದು ಅಂತ ಕೇಳಿದಾಗ ಪ್ರಮುಖ ಮೂರು ಹೋಟೇಲ್ಗಳ ಹೆಸ್ರು ಕೇಳಿಬಂತು ಅಲ್ಲಿನ ಜನರ ಬಾಯಲ್ಲಿ. ತಗೋ ನೊಡೇಬಿಡೋಣ ಅಂತ ಅವುಗಳಲ್ಲಿ ಅವಳ ಫೋಟೋ ತೋರ್ಸಿ ವಿಚಾರಿಸಲಾಗಿ ಅವ್ರು ಎರಡು ದಿನದ ಹಿಂದೆ ಅಲ್ಲಿ ಉಳಿದಿದ್ದು ಹೌದೆಂಬ ಮಾಹಿತಿ ಸಿಕ್ತು. ಮುಂದೆ ಎಲ್ಲಿ ಹೋಗ್ಬೇಕಂತ ಹೇಳ್ತಿದ್ರಾ ಅಂದಿದ್ದಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮತ್ತು ಅದರ ಸುತ್ತ ಮುತ್ತ ಇರೋ ಪ್ರದೇಶಗಳಿಗೆ ದಾರಿ ಕೇಳ್ತಾ ಇದ್ರು ಅನ್ನೋ ಮಾಹಿತಿ ಸಿಕ್ತು. ಆದ್ರೇನು ಮಾಡೋದು. ಬೆಟ್ಟಕ್ಕೆ ಬೆಳಗಿನವರೆಗೂ ಪ್ರವೇಶವಿಲ್ಲ. ಫುಲ್ ಟೆನ್ಷನ್ನಿನಲ್ಲಿರಬಹುದಾದ ರೇಖಾಳ ಮನೆಯವ್ರಿಗೆ, ಆಫೀಸಿಗೆ ಇಷ್ಟು ತಿಳ್ಸಿ ಅವಳು ಇನ್ನೇನು ಸ್ವಲ್ಪ ಹೊತ್ತಿಗೆ ಮನೆಗೆ ಮರಳಬಹುದೆನ್ನುವ ಆಶಾಕಿರಣವನ್ನಾದ್ರೂ ಬೆಳಗೋಣ ಅನ್ನಿಸಿ ಇಲ್ಲಿಯವರೆಗಿನ ಮಾಹಿತಿಯನ್ನು ಅವರಿಗೆ ಹೇಳಿದಾಗ ಅವರ ಖುಷಿ ಹೇಳತೀರದು. ನಿಮ್ಮ ಮಗಳೇನಾದ್ರೂ ಮನೆಗೆ ಮರಳಿದ್ರೆ ನಂಗೆ ಫೋನ್ ಮಾಡಿ. ಇಲ್ಲಾ ಅಂದ್ರೆ ನನ್ನ ಹುಡುಕಾಟವನ್ನು ಮುಂದುವರೆಸುತ್ತೇನೆ. ಇಲ್ಲೇ ಎಲ್ಲೋ ಇದ್ದಾಳೆ ಅಂತ ನನ್ನ ಮನಸ್ಸು ಹೇಳ್ತಾ ಇದೆ ಅಂತ ಭರವಸೆ ತುಂಬಿ ಫೋನಿಟ್ಟೆ. ಕೈಕಾಲುಗಳು ಬರಪೂರ ಮಾತಾಡ್ತಾ ಇದ್ವು. ಕೊಳ್ಳೇಗಾಲದಲ್ಲೇ ಅಂದು ರಾತ್ರಿ ಮಲಗಿ ಬಿಟ್ಟೆ. ಬೆಳಗ್ಗಿನ ಜಾವ ಫೋನ್ ಫುಲ್ ಹೊಡ್ಕೊಳ್ಳೋಕೆ ಹಿಡಿದ ಮೇಲೇ ಎಚ್ರಾಗಿದ್ದು. ನೋಡಿದ್ರೆ ಹತ್ತು ಹದಿನೈದು ಮಿಸ್ ಕಾಲು. ನಾಲ್ಕೈದು ಆಫೀಸಿಂದಾದ್ರೆ ಉಳಿದಿದ್ದೆಲ್ಲಾ ರೇಖಾಳ ಮನೆಯಿಂದ ! ಎರಡು ಕಾಲು ರೇಖಾಳ ಎರಡನೆಯ ಸಿಮ್ಮಿಂದ. ಮನೆಯಲ್ಲಿ ಹೇಳದೇ ಒಂದು ವಾರ ಟ್ರಿಪ್ಪು ಹೊಡೆಯೋಕೆ ಬಂದು ನಿನ್ನೆ ರಾತ್ರೆಯೇನಾದ್ರೂ ವಾಪಾಸ್ಸಾಗಿರ್ಬಹುದಾ ಅನ್ನೋ ಸಣ್ಣ ಅನುಮಾನ ಕಾಡಿ ವಾಪಾಸ್ ಫೋನ್ ಮಾಡಿದ್ರೆ ಫೋನೆತ್ತಿದ್ದು ರೇಖಾ !! ಮಲೆ ಮಹದೇಶ್ವರ, ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಟ್ರಿಪ್ಪು ಹೆಂಗಿತ್ತು ಅಂದೆ ? ಅದ್ರು ಜೊತೆಗೆ ಚಾಮರಾಜನಗರದ ಸರಸ್ವತಿ ದೇವಸ್ಥಾನ, ತೆರಕಾಣಂಬಿ ವಿಷ್ಣು ದೇವಸ್ಥಾನ, ನುಗ್ಗೇಹಳ್ಳಿ ವೈಷ್ಣವ ದೇವಸ್ಥಾನನೂ ನೋಡಿದ್ವಿ. ಆದ್ರೆ ಅದೆಲ್ಲಾ ನಿಂಗೆ ಹೇಗೆ ಗೊತ್ತಾಯ್ತು ಅಂದ್ಲು ಆಶ್ಚರ್ಯದಿಂದ. ಕೊನೆಯ ಮೂರು ನಂಗೆ ಗೊತ್ತಿರದಿದ್ರೂ ಅದೊಂದು ದೊಡ್ಡ ಕತೆ , ನಾನು ಊರಿಗೆ ಬಂದ ಮೇಲೆ ಹೇಳ್ತಿನಿ, ನಿಮ್ಮಪ್ಪಂಗೆ ಫೋನ್ ಕೊಡು ಅಂದೆ. ಇವ್ಳು ಅದ್ಯಾವ್ದೋ ಎನ್ಜೀವೋ ಜೊತೆ ಒಂದು ವಾರದಿಂದ ಬೆಟ್ಟ ಗುಡ್ಡ ತಿರುಗ್ತಿದ್ದಿದ್ಲಂತೆ. ನಿನ್ನೆ ಮಧ್ಯರಾತ್ರೆ  ಮನೆಗೆ ಬಂದಿದಾಳೆ ನೋಡಪ್ಪ. ಅದನ್ನ ಹೇಳೋಕೆ ಅಂತ ಇವತ್ತು ಬೆಳಗ್ಗಿನಿಂದ ಫೋನ್ ಮಾಡ್ತಿದ್ವಿ. ಈಗ ಸಿಗ್ತು ನೋಡಪ್ಪ ಅಂದ್ರು . ಒಂದು ವಾರದಿಂದ ತುಂಬಾ ತೊಂದ್ರೆ ಕೊಟ್ಟಂಗಾಯ್ತು ಇವ್ಳಿಂದ ಸಾರಿ ಅಂದ್ರು. ಹೇ, ಹಾಗೇನಿಲ್ಲ ಅಂಕಲ್. ಪರ್ವಾಗಿಲ್ಲ ಬಿಡಿ. ಮುಂಚೆ ನೋಡಿದ್ದ ಕ್ಷೇತ್ರಗಳ ಮತ್ತೆ ನೋಡೋ ಪುಣ್ಯ ಸಿಕ್ತು ನಂಗೆ. ಆಗೋದೆಲ್ಲಾ ಒಳ್ಳೇದಕ್ಕೆ ಬಿಡಿ. ವಾಪಾಸ್ಸಾಗ್ತಿದೀನಿ ಊರಿಗೆ. ಬಂದ ಮೇಲೆ ಆರಾಮಾಗಿ ಮಾತಾಡೋಣ ಬಿಡಿ ಅಂದೆ. ಅವ್ರು ಹೂಂ ಅನ್ನೋದ್ರೊಂದಿಗೆ ಕಳೆದು ಹೋದ ಅಧ್ಯಾಯಕ್ಕೊಂದು ತೆರೆ ಬಿತ್ತು. ಬೈಂಡಾಗೋ ಕನಸುಗಳಿಗೆ ಮತ್ತೆ ರೆಕ್ಕೆ ಬಂತು.


ಈ ಕತೆ "ಪಂಜು"ವಿನಲ್ಲಿ ಪ್ರಕಟವಾಗಿದೆ
http://www.panjumagazine.com/?p=9906

Saturday, January 10, 2015

ಧರ್ಮ, ಧರ್ಮಾಂಧತೆ ಮತ್ತು ಊಟ

ಟೈಟಲ್ ನೋಡಿ ಇದೇನಪ್ಪಾ ? ಕ್ಯಾಲೆಂಡರ್ ಹೊಸವರ್ಷ ಅಂತ ಯದ್ವಾತದ್ವಾ ಏರ್ಸಿದ್ದು ಇನ್ನೂ ಇಳಿದಿಲ್ವಾ ಅಂತ ಅಂದ್ಕಂಡ್ರಾ ? ಹಂಗೇನಿಲ್ಲ. ಹೊಸವರ್ಷ ಅಂದ್ರೆ ಯುಗಾದಿ ಅನ್ನೋ, ಎಣ್ಣೆಯನ್ನೋದ್ನ ತಲೆಗೆ ಹಾಕಿದ್ರೂ ತಲೆಗೇರಿಸಿಕೊಳ್ಳದ ಒಂದಿಷ್ಟು ಜನರ ಮಧ್ಯದಿಂದ ಬಂದಂತ ಮಾತುಗಳ ಸಂಗ್ರಹವಿದು. ಧರ್ಮವನ್ನೋದು ಅಫೀಮು, ಮೂಢನಂಬಿಕೆಗಳ ಸಂಗ್ರಹವನ್ನೋ ಬುದ್ಧಿಜೀವಿಗಳ, ಅವರಿಗೆ ಬುದ್ಧಿ ಬಿಟ್ಟು ಬೇರೆಲ್ಲಾ ಇದೆಯೆಂದು ಲೇವಡಿ ಮಾಡೋ ಬಣ್ಣಗಳ ನಡುವೆ ನಿಂತು ನೋಡಿದ ನೋಟಗಳಿವು. ಅಂತದ್ದೇನಿದೆ ಇದ್ರಲ್ಲಿ ಅಂದ್ರಾ ? ಲೇಖನದ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸುಮ್ಮನೇ ದಾರಿಯಲ್ಲಿ ಕಂಡ ಬೋರ್ಡೊಂದ ಓದುವಂತೆ ಓದ್ತಾ ಹೋಗಿ. ನಿಮ್ಮದೇ ಕೆಲ ಭಾವಗಳು ಇಲ್ಲಿ ಇಣುಕಿದ್ರೆ ಅದು ಕಾಪಿಯಲ್ಲ, ಇಬ್ಬರಲ್ಲೂ ಸಮಾನಭಾವಗಳು ಮೂಡಿದ್ದಕ್ಕೆ ಬರಹವೊಂದರ ಧನ್ಯತೆಯಷ್ಟೆ. 

ಓ ಮೈ ಗಾಡ್, ವಿಶ್ವರೂಪಂ ಮತ್ತು ಪಿ.ಕೆ ಇತ್ತೀಚೆಗೆ ತಮ್ಮದೇ ಕಾರಣಗಳಿಂದ ಸುದ್ದಿಯಾದ ಚಿತ್ರಗಳು. ದೇವಮಾನವರ ಉಪಟಳ ತಡೆಯೋಕೆ ದೇವರೇ ಮನುಷ್ಯನ ರೂಪದಲ್ಲಿ ಬಂದು ಮತ್ತೊಬ್ಬನ ಮೂಲಕ ಪಾಠ ಕಲಿಸೋ ಕತೆ ಓ ಮೈ ಗಾಡಿನದಾದ್ರೆ, ಅನ್ಯಗ್ರಹವಾಸಿಯೊಬ್ಬ ಭೂಮಿಗೆ ಬಂದು ತನ್ನ ಸಮಸ್ಯೆಗಳನ್ನು ಪರಿಹರಿಸಬಲ್ಲ ಏಕಮಾತ್ರ ದೇವರಿಗೆ ಹುಡುಕೋ ಕತೆ ಪಿ.ಕೆ. ಭಯೋತ್ಪಾದನೆಯ ಬಗೆಗಿನ ಕತೆ ವಿಶ್ವರೂಪಂದಾದ್ರೂ ಅದರಲ್ಲಿ ಬಂದ ಧರ್ಮದ ವಿಷಯವಾಗಿ ಸಖತ್ ಗಲಾಟೆಯಾಗಿತ್ತದು. ಒಂದು ಧರ್ಮದ ಎಲ್ಲರೂ ಭಯೋತ್ಪಾದಕರು ಅಂತೇನು ಬಿಂಬಿಸದಿದ್ದರೂ ವಿಶ್ವರೂಪಂನ ಕತೆಗಾಗಿ, ಮತ್ತು ಅದರಲ್ಲಿನ ಅಭಿನಯಕ್ಕಾಗಿ ಕಮಲ್ ವಿಶ್ವದ ಕ್ಷಮೆ ಕೇಳುವ ಪರಿಸ್ಥಿತಿ ಬಂದಿತ್ತು ! ಅದೆಷ್ಟೋ ರಾಜ್ಯಗಳಲ್ಲಿ ಚಿತ್ರದ ಪ್ರದರ್ಶನವೇ ನಿಷೇಧ ಕಾಣುವ ಪರಿಸ್ಥಿತಿಯಾಗಿ ಕಮಲ್ ದೇಶವನ್ನೇ ಬಿಟ್ಟು ಹೋಗಬೇಕಾದ ಪರಿಸ್ಥಿತಿಯೂ ಬಂದಿತ್ತು ! ಆಮೇಲೆ ಅದೆಲ್ಲಾ ತಣ್ಣಗಾಗಿದ್ದು ಬೇರೆ ವಿಷ್ಯ ಬಿಡಿ. ದೇವಮಾನವರ ಬಗೆಗಿನ ವಿಢಂಬನೆಗಾಗಿ, ದೇವರು ಮಿಸ್ಸಿಂಗು ಅಂತ ಎಲ್ಲೆಡೆ ಪೋಸ್ಟರ್ ಅಂಟಿಸುತ್ತಾ ಹೋಗೋ ದೃಶ್ಯಗಳಿಂದ ಪಿ.ಕೆ ಹಲವರ ಸಿಟ್ಟಿಗೆ ಕಾರಣವಾಗಿತ್ತು. ನನಗೆ ಹಾಲೆರೆವ ಬದಲು ಹತ್ತಾರು ಕೋಟಿ ಹಸಿದ ಮಕ್ಕಳಿಗೆ ಹಾಲೆರೆ ಅಂತಿದ್ದನೇನೋ ದೇವ್ರು ಅಂತ ಫಿಲ್ಮಲ್ಲಿ ಡೈಲಾಗ್ ಹೊಡಿಯೋ ಅಮೀರ್ ಅದೆಷ್ಟು ಮಕ್ಕಳಿಗೆ ಹಾಲು ಕೊಟ್ಟಿದ್ದಾರೆ ? ೨೬೪ ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿರುವ ಸಿನಿಮಾದಿಂದ ೨ ಕೋಟಿಯಾದ್ರೂ ಬಡಜನರ ಉದ್ದಾರಕ್ಕಾಗಿ ಸಿಕ್ಕಿದೆಯಾ ? ಎಲ್ಲಾ ಹಿಪೋಕ್ರೇಟುಗಳು ಅಂತನ್ನೋ ಜನರ ಗುಂಪೊಂದು ಸೃಷ್ಟಿಯಾಯಿತು ! ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದ್ರೆ ರಾಜಕೀಯ ನೇತಾರರು. ಹಿಂದಿನ ಪ್ರಸಂಗದಲ್ಲಿ ಕಮಲ್ರ ನೆರವಿಗೆ ನಿಂತಿದ್ದು ಕೆಲವೇ ಕೆಲವರಾದ್ರೂ ಇಲ್ಲಿನ ಅಮೀರರ ಚಿತ್ರಕ್ಕೆ ಅಪಾರ ಬೆಂಬಲಿಗ್ರು ಸೃಷ್ಟಿಯಾದ್ರು. ಎರಡು  ರಾಜ್ಯದ ಮುಖ್ಯಮಂತ್ರಿಗಳೇ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸೋಕೆ ಮುಂದೆ ಬಂದು ಒಂದು ಸಮೂಹಕ್ಕೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ವಿವಾದಗಳಿಂದಲೇ ಚಿತ್ರಕ್ಕೆ ಪ್ರಚಾರ ಗಿಟ್ಟಿಸೋ ನಿರ್ಮಾಪಕರ ತಂತ್ರ, ಧರ್ಮಗಳ ಹೆಸರಿನಲ್ಲಿ ಜನರ ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳೋ ರಾಜಕಾರಣಿಗಳ ತಂತ್ರ ಇದರ ಹಿಂದೆ ಅಡಗಿದಂತೆ ಕಂಡು ವಿಪರೀತ ಸಿಟ್ಟು ಬಂದ್ರೂ ಇವುಗಳ ಆಚೆ ಸಮಾನ ಮನಸ್ಥಿತಿಯಿಂದ ಗಮನಿಸೋ ಅಂಶವೊಂದಿದೆ. 

ಕೊಟ್ಟಕೊನೆಗೆ ಸಿನಿಮಾ ಅನ್ನೋದು ಅಭಿವ್ಯಕ್ತಿಯ ಒಂದು ಮಾಧ್ಯಮವಷ್ಟೆ. ಅದ್ರಲ್ಲಿ ಪಾತ್ರವೊಂದು ಕೊಟ್ಟ ರಂಜನೆ ಮುಖ್ಯವಾಗುತ್ತದೆ. ಸಂದೇಶಾತ್ಮಕ ಚಿತ್ರವಾಗಿದ್ದರೆ ಅದರಲ್ಲಿದ್ದ ಸಂದೇಶವೂ ಮುಖ್ಯವಾಗಬಹುದು. ಆದ್ರೆ ಅದರಲ್ಲಿ ನಟಿಸಿದ್ದ ನಟನ ನಿಜಜೀವನಕ್ಕೂ ಆತ ಚಿತ್ರದಲ್ಲಿ ಮಾಡಿದ ಪಾತ್ರಕ್ಕೂ ನಂಟು ಹಾಕಿ ನೋಡುವ ಪೂರ್ವಾಗ್ರಹ ಅದೆಷ್ಟು ಅನಾಹುತಗಳಿಗೆ ಕಾರಣವಾಗಬಹುದು ಅನ್ನೋದಕ್ಕೆ ಈ ಮೂರು ಚಿತ್ರಗಳು ಒಳ್ಳೆಯ ಉದಾಹರಣೆಯೆನ್ನಬಹುದೇನೋ. ವಿಶ್ವರೂಪಂನಲ್ಲಿ ಕಮಲ್ ಹಿಂದೂ ಆಗಿದ್ದ ಅನ್ನೋ ಕಾರಣಕ್ಕೆ ಅವರು ಮಾಡಿದ ಮುಸ್ಲಿಂ ಪಾತ್ರ, ಭಯೋತ್ಪಾದಕತೆಯ ಮುಖಗಳ ಪರಿಚಯವೆಲ್ಲಾ ತಮ್ಮ ಧರ್ಮದ ಮೇಲಿನ ಧಾಳಿಯಂತೆ ಕಂಡು ಹೋಯ್ತು ಅನೇಕರಿಗೆ. ಪಿ.ಕೆಯಲ್ಲಿ ಅಮೀರ್ ಮುಸ್ಲಿಂ ಅನ್ನೋ ಕಾರಣಕ್ಕೆ ಅವರು ಮಾಡಿದ ಹಿಂದೂ ಡಾಂಭಿಕರ ವಿಢಂಬನೆ ದೊಡ್ಡ ಅಪರಾಧದಂತೆ ಕಂಡಿತು ಕೆಲವರಿಗೆ. ಓ ಮೈ ಗಾಡಿನಲ್ಲಿ ಹಿಂದೂವೆ ಆದ ಅಕ್ಷಯ್ ಕುಮಾರ್ ಹಿಂದೂ ದೇವರ ಪಾತ್ರ ಮಾಡಿದ್ದಕ್ಕೆ ಅದರಲ್ಲಿ ಅವರು ಪಿ.ಕೆ ಗಿಂತ ಹೆಚ್ಚು ಸಂಖ್ಯೆಯ ದೇವಮಾನವರನ್ನು ಲೇವಡಿ ಮಾಡಿದ್ದರೂ ಅದು ದೊಡ್ಡ ಅಪರಾಧವಲ್ಲ.ಸತ್ಯದರ್ಶನವೆನ್ನಿಸಿತ್ತು ಕೆಲವರಿಗೆ ! ಸತ್ಯವೆಂಬುದು ಸಾರ್ವಕಾಲಿಕ, ವಿಶ್ವದಲ್ಲೆಲ್ಲಾ ಒಂದೇ ಇಲ್ಲದಿರಬಹುದು. ನನಗೆ ಸತ್ಯವೆನ್ನಿಸಿದ್ದು ನಿಮಗೆ ಸತ್ಯವೆನ್ನಿಸದೇ ನಿಮಗೆ ಸತ್ಯವೆನ್ನಿಸಿದ್ದು ನನಗೆ ಸತ್ಯವೆನ್ನಿಸದೇ ಇರದಿರುವ ಎಲ್ಲಾ ಸಾಧ್ಯತೆಯೂ ಇರುವ ಸಮಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಜನರ ಮೇಲೆ ಹೇರೋ ಅನಿವಾರ್ಯತೆಯೇನಿದೆ ? ಹಿಮಾಲಯದ ತಪ್ಪಲುಗಳಲ್ಲಿ, ಹಳ್ಳಿಗಳ ಮೂಲೆಗಳಲ್ಲಿ ಪಾಠಶಾಲೆ, ಗುರುಕುಲಗಳು ಅಂತ ತೆರೆದು ಬಡ ವಿದ್ಯಾರ್ಥಿಗಳಿಗೆ ಬೆಳಕ ಹಂಚುತ್ತಿರುವ , ನ್ಯಾಯದಾನ ಮಾಡುತ್ತಿರುವ ಸಂತರಿದ್ದಾರೆ. ಅವರ ಹೆಸರಿಗೆ ಮಸಿಬಳೆಯುವಂತಹ ಇಂತಾ ಢೋಂಗಿ ಬಾಬಾಗಳಿಗೆ ನಾನು ನಮಸ್ಕರಿಸೋಲ್ಲ ಅಂತ್ಲೋ, ಧರ್ಮದ ಹೆಸರಲ್ಲಿ ಮುಗ್ದ ಮಕ್ಕಳ ಕೊಂದ ಭಯೋತ್ಪಾದಕರಿಗೆ ನಾನು ನಯಾಪೈಸೆ ಸಹಾನುಭೂತಿ ತೋರಿಸೋಲ್ಲ ಅಂತ್ಲೋ ತೀರ್ಮಾನ ತಗೊಳ್ಳೋ ಬದ್ಲು ತಣ್ಣಗಿದ್ದ ಸಮಾಜದ ಶಾಂತಿ ಕದಡೋ ಪ್ರಯತ್ನಗಳು ಬೇಕಾ ಅಂದ್ರೆ ಉತ್ತರವಿಲ್ಲ ಇವ್ರ ಬಳಿ.  ಸುಪ್ರೀಂ ಕೋರ್ಟಿನಲ್ಲಿ ಪಿ.ಕೆ ಚಿತ್ರದ ತಡೆ ಕೋರಿ ಅರ್ಜಿ ಹಾಕಿದವರಿಗೆ ಛೀಮಾರಿ ಹಾಕಿದ ಕೋರ್ಟು ನಿಮಗೆ ಇಷ್ಟವಿಲ್ಲದಿದ್ದರೆ ಚಿತ್ರ ನೋಡಬೇಡಿ. ಇಂತಹ ವಿಷಯಗಳನ್ನೆಲ್ಲಾ ತಂದು ಕೋರ್ಟಿನ ಸಮಯ ಹಾಳುಮಾಡಬೇಡಿ. ಚಿತ್ರ ಇಂಟರ್ನೆಟ್ಟಲ್ಲಿ ಎಲ್ಲೆಡೆ ದಕ್ಕುತ್ತಿರುವಾಗ ಅದಕ್ಕೆ ನಿಷೇಧ ಹಾಕೋದ್ರಲ್ಲಿ ಅರ್ಥವಿಲ್ಲ ಅಂದಿದ್ದು ಗಮನಾರ್ಹ. ಇಂತದ್ದೇ ಛೀಮಾರಿ ವಿಶ್ವರೂಪಂನ ನಿಷೇಧ ಬೇಡಿಕೆಗಳ ಸಮಯದಲ್ಲೂ ದಕ್ಕಿದ್ರೆ ಅವಾಗ ಸಮಾನತೆಗೊಂದು ಅರ್ಥವಿರುತ್ತಿತ್ತು. ಆದ್ರೆ ಅವಾಗಾಗದ ನ್ಯಾಯ ಈಗ ಸಿಕ್ಕಿದೆ ಅಂತ ಅದಕ್ಕೊಂದು ವಿಪರೀತ ಅರ್ಥ ಕಲ್ಪಿಸೋ ಅವಶ್ಯಕತೆಯಿಲ್ಲ. ನಂಬಿಕೆ-ಮೂಡನಂಬಿಕೆಗಳಾಚೆ, ಧರ್ಮಾಧರ್ಮಗಳ ಪೂರ್ವಾಗ್ರಹಗಳ ಕಳಚಿ ಇಂತಹ ಚಿತ್ರಗಳನ್ನು ಬರೀ ಚಿತ್ರವಾಗಿ ನೋಡಬೇಕಷ್ಟೆ. ಅದರಲ್ಲಿನ ಸಂದೇಶಗಳನ್ನು, ಸಮಾಜದಲ್ಲಿನ ಓರೆಕೋರೆಗಳನ್ನು ಎತ್ತಿ ತೋರಿಸೋ ಪ್ರಯತ್ನಗಳನ್ನು ಮೆಚ್ಚಿ ಅದರಿಂದ ನಮ್ಮನ್ನು ತಿದ್ದಿಕೊಳ್ಳಬೇಕಷ್ಟೆ. 
ಕಿತ್ತು ತಿನ್ನೋ ಬಡತನ, ದೇಶೋದ್ದಾರದ ಅನಿವಾರ್ಯತೆ ಹೀಗೆ ಹತ್ತು ಹಲವು ವಿಷಯಗಳಿರುವಾಗ ಅದೆಲ್ಲಾ ಬಿಟ್ಟು ಚಿತ್ರವೊಂದರ ವಿಷಯದಲ್ಲಿ ಟೈರಿಗೆ ಬೆಂಕಿ ಹಚ್ಚೋ ಕೆಲಸವಿಲ್ಲದ ಜನಗಳಿಗೆ ಬಯ್ಯುತ್ತಿದ್ದಾಗಲೇ ಬೀದಿಯಲ್ಲಿ ಬಿದ್ದಿದ್ದ ಕವರೊಂದು ಕಣ್ಣಿಗೆ ಬಿತ್ತು. ಎರಡು ನಾಯಿಗಳು ಆ ಕವರಿಗೆ ಕಚ್ಚಾಡುತ್ತಿದ್ದವು. ಪಕ್ಕದಲ್ಲಿದ್ದ ಕಸದ ತೊಟ್ಟಿಯಿಂದ ಈಚೆಗೆ ಬಿದ್ದಿದ್ದ ಕವರಿನ ಒಳಗಿದ್ದ ಅನ್ನ, ಸಾಂಬಾರು ನಾಯಿಗಳ ಕಚ್ಚಾಟಕ್ಕೆ ರಸ್ತೆಗೆ ಬಿದ್ದಿತ್ತು. ಅನ್ನ ಸಾಂಬಾರ ಕಂಡ ಎಳೆ ಬಾಲಕಿಯೊಬ್ಬಳು ಅದರತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಳು. ತೇಪೆ ಹಾಕಿದ ಬಟ್ಟೆಗಳು, ಕೆದರಿದ, ಕೊಳೆಯಾದ ಕೂದಲು. ಆದ್ರೆ ತೊಟ್ಟಿಯಲ್ಲಿ ಬಿದ್ದ ಅನ್ನ ತಿನ್ನಲಾಗದ ಸ್ವಾಭಿಮಾನವೋ, ಬೀದಿ ನಾಯಿಗಳಿಂದ ಅನ್ನ ಕಸಿಯಲಾಗದ ಅಸಹಾಯಕತೆಯೋ ಗೊತ್ತಿಲ್ಲ ಆಕೆಯ ಮುಖವನ್ನು ಬಾಡಿಸಿಬಿಟ್ಟಿದ್ದವು . ಎಷ್ಟು ಹೊತ್ತಿಂದ ಅಲ್ಲೇ ಕೂತಿದ್ಲೋ ಗೊತ್ತಿಲ್ಲ. ಅಷ್ಟರಲ್ಲಿ ಆ ಫ್ಲಾಟಿನ ವಾಚ್ ಮೆನ್ ಬಂದು ಅವಳನ್ನು ಬೇರೆಡೆ ಓಡಿಸೋ ಪ್ರಯತ್ನ ಮಾಡಹತ್ತಿದ. ಅವಳ ದೃಷ್ಟಿ ಎತ್ತಲೋ ನೆಟ್ಟಿದೆಯಲ್ಲಾ ಅಂತ ಅತ್ತ ಗಮನಹರಿಸೋದ್ರಲ್ಲಿ ಒಬ್ಬ ಮಹಿಳೆ ಬಂದ್ರು ಪ್ಲಾಟೊಳಗಿಂದ. ಕೈಯಲ್ಲೊಂದು ಕವರು. ಈ ಬಾಲಕಿ ವಾಚಮೆನ್ನಿನ ಕಣ್ಣು ತಪ್ಪಿಸಿ ಅತ್ತ ಓಡುವಷ್ಟರಲ್ಲೇ ಅವರು ಅದನ್ನು ಕಸದ ತೊಟ್ಟಿಗೆ ಎಸೆದು ಬಿಟ್ರು . ಬೀದಿನಾಯಿಗಳು ತಮ್ಮ ಮುಂಚಿನ ಕವರ್ ಬಿಟ್ಟು ಹೊಸ ಕವರಲ್ಲೇನಿದೆ ಅನ್ನೋದ್ರ ಹುಡುಕಿ ಅದನ್ನು ತಿನ್ನಲು ಕಚ್ಚಾಡತೊಡಗಿದ್ವು !

ಮೇಲಿನ ಘಟನೆಯನ್ನು ಸತ್ಯದರ್ಶನವೆನ್ನಿ, ವಾಸ್ತವದ ವಿಢಂಬನೆಯೆನ್ನಿ. ಸನ್ನಿವೇಶವಂತೂ ಬದಲಾಗೋದಿಲ್ಲ. ನಿಮ್ಮ ದೃಷ್ಟಿಯಂತೆ ಸೃಷ್ಠಿಯಷ್ಟೆ. ಧರ್ಮ ಕೆಲ ಹೊಟ್ಟೆತುಂಬಿದ ಜನರ ಪಾಲಿನ ಮೂಢನಂಬಿಕೆಯಾದ್ರೆ ಕೆಲವರ ಪಾಲಿಗೆ ಅದು ಮೂರು ಹೊತ್ತಿನ ಊಟ. ಧರ್ಮದ ಹೆಸರಿನಲ್ಲಿ ತಾನು ಬೆವರು ಹರಿಸಿ ದುಡಿದಿದ್ದನ್ನು ಅನ್ನದಾನ ಅಂತ ಮಾಡುವವನಿರಬಹುದು. ಯಾರದೋ ದುಡ್ಡನ್ನು ಆ ಶಾಂತಿ ಈ ಶಾಂತಿ ಅಂತ ನೂರೆಂಟು ಹೆಸರು ಹೇಳಿ ಕಿತ್ತು ತಿನ್ನುವವನ ಕಾಯಕವಾಗಿರಬಹುದು. ಊಟ ಊಟವೇ ! ಪ್ರತೀ ಅಗುಳಿಗೂ ಒಂದು ಬೆಲೆಯಿದೆ. ಅನವಶ್ಯಕವಾಗಿ ಬಡಿಸಿಕೊಂಡು ಅನ್ನ ಚೆಲ್ಲಬೇಡಿ ಎಂಬ ಕೋರಿಕೆಯಷ್ಟೇ ! ಜರ್ಮನಿಗೆ ಹೋದ ಗೆಳೆಯರ ಬರಹವೊಂದು ನೆನಪಾಗುತ್ತಿದೆ. ಅಲ್ಲಿ ಹೋಟೆಲೊಂದಕ್ಕೆ ಹೋಗಿ ಆರ್ಡರ್ ಮಾಡಿದ ಅರ್ಧ ಊಟವನ್ನು ಮಾಡದೇ ವ್ಯರ್ಥ ಮಾಡಲು ಹೋಗಿದ್ದ ಜನರಿಗೆ ಅಲ್ಲಿನ ಜನ ಚೆನ್ನಾಗಿ ಛೀಮಾರಿ ಹಾಕಿದ್ರಂತೆ. ನನ್ನ ದುಡ್ಡು ನಾನೇನಾದ್ರೂ ಮಾಡ್ತೀನಿ ಅಂದದ್ದಕ್ಕೆ ಅಲ್ಲಿಗೆ ಬಂದ ಪೋಲೀಸು ದುಡ್ಡು ನಿಮ್ಮದಾದ್ರೂ ನೀವು ಚೆಲ್ಲುತ್ತಿರುವ ಊಟ ದೇಶದ ಸಂಪತ್ತು. ಅದನ್ನು ಪೋಲು ಮಾಡುವ ಅಧಿಕಾರ ನಿಮಗಿಲ್ಲ ಅಂತ ಮಾವನ ಮನೆಗೆ ಕಳಿಸಲು ಮುಂದಾಗಿದ್ರಂತೆ ಇವರನ್ನು. ಅದೇ ತರದ ಅಸಡ್ಡೆ ಭಾವ ಇಲ್ಲೂ ಇದ್ರೂ ಅಲ್ಲಿಯ ತರ ಒಳಗಾಕೋ ವ್ಯವಸ್ಥೆಯಿಲ್ಲ ಇಲ್ಲಿ. ಅದೇ ದೊಡ್ಡ ತಪ್ಪೆನ್ನುವಂತೆ ಯದ್ವಾ ತದ್ವಾ ಅನ್ನ ಚೆಲ್ಲುವವರಿದ್ದಾರೆ ಇಲ್ಲಿ. ದೊಡ್ಡ ತಟ್ಟೆಗೆ ಆರ್ಡರ್ ಮಾಡಿ ಅದರಲ್ಲಿ ಗುಬ್ಬಚ್ಚಿಯಂತೆ ತಿಂದು ಉಳಿದ ೯೦% ವ್ಯರ್ಥ ಮಾಡೋದು ಫ್ಯಾಷನ್ನಾಗಿಬಿಟ್ಟಿದೆ ! ಕೇಳಿದ್ರೆ ನಂಗೆ ಪಲ್ಯ ಸೇರೋಲ್ಲ. ಬದನೇಕಾಯಿ ಸೇರೋಲ್ಲ. ಅನ್ನ ತಿನ್ನೋಕಾಗಲ್ಲ ಅನ್ನೋ ನೂರಾರು ಸಬೂಬು. ಸೇರೋಲ್ಲವೆಂದ್ರೆ ಹಾಕಿಸ್ಕೊಳ್ಳೋಕೆ ಯಾರಪ್ಪ ಹೇಳಿದ್ದು. ನಿಂಗೆ ಬೇಡ ಅಂದ್ರೂ ಒತ್ತಾಯ ಮಾಡಿ ಹಾಕ್ತಾನಾ ಹೋಟೇಲಿನವ್ನು , ಬೇಡ ಅಂದ್ರೆ ವಾಪಾಸ್ ತಗೋಳ್ತಾನೆ ಅದನ್ನ . ವ್ಯರ್ಥ ಯಾಕೆ ಮಾಡ್ತೀಯ ಅಂದ್ರೆ ಉತ್ತರವಿಲ್ಲ. flipcart ನಲ್ಲಿ ಬಂದ ಶೂನ ಸೈಜು ಸರಿಯಾಗಿಲ್ಲ ಅಂತ ವಾಪಾಸ್ ಮಾಡೋ ನಾವು ಹೋಟೆಲ್ಲಿನಲ್ಲಿ ಅನಗತ್ಯ ವಸ್ತುಗಳನ್ನು ಹಿಂದಿರುಗಿಸೋ ಪ್ರಯತ್ನ ಯಾಕೆ ಮಾಡೋಲ್ಲ. ಹಸಿವಿರಲಿಲ್ಲ ಅಂದ್ರೆ ತಟ್ಟೆ ಮುಂದೆ ಯಾಕೆ ಬಂದು ಕೂತ್ಕಂಡೆ ಮಾರಾಯ. ಇನ್ನರ್ಧ ಘಂಟೆ ಬಿಟ್ಟು ಬಂದಿದ್ರೆ ಏನಾಗ್ತಿತ್ತು ಅಂದ್ರೆ ಉತ್ತರವಿಲ್ಲ. ಸಂಜೆ ತಿಂದ ಪಾನಿಪೂರಿಯ ಹೆಸರಿನಲ್ಲಿ ರಾತ್ರೆಯ ಎರಡು ರೊಟ್ಟಿಗಳನ್ನ ಕಸದ ಬುಟ್ಟಿಗೆ ಚೆಲ್ಲಿದ್ರೇನೆ ತೃಪ್ತಿ ಇವ್ರಿಗೆ ! ಹೊಟ್ಟೆಗಿಲ್ಲದ ಬಾಲಕಿ ತನಗಾದ್ರೂ ಕೊಟ್ಟಿದ್ರೆ ಅಂತ ಇವರತ್ತ ನೋಡ್ತಾನೆ ಇದ್ದಾಳೆ. ಆದ್ರೆ ಅನ್ನೋ ಪರಬ್ರಹ್ಮ ಅನ್ನೋ ಜನರ ಮಧ್ಯೆ ಈ ಮಾಡರ್ನ್ ಜನರ ಅರ್ಧ ತಿಂದ ಬರ್ಗರು, ಪಿಜ್ಜಾ, ರೊಟ್ಟಿಗಳು ಕಸದ ತೊಟ್ಟಿಗಳ ಪಾಲಾಗುತ್ತಲೇ ಇವೆ. ಬದಲಾಗಬೇಕಾದ್ದು ಇನ್ಯಾರೋ ಅಲ್ಲ. ನಮ್ಮೊಳಗಿನ ನಾವೇ .!

Saturday, January 3, 2015

ನಾ ನೋಡಿದ ಸಿನಿಮಾ : ಶಿವಂ.


ಹನ್ನೊಂದನೆ ಶತಮಾನದ ಒಂದು ಶಿವಾಲಯ. ಅದರ ದಾಳಿಗೆ ಅಂತ ಬಂದ ದಾಳಿಕೋರರನ್ನ ಎದುರಿಸೋಕೆ ಮುಂದಾಗೋದು ಆ ದೇಗುಲದ ಅರ್ಚಕ ಬಸವಣ್ಣ. ನೂರು ಜನರನ್ನು ಎದುರಿಸಿ ದೇಗುಲವನ್ನು ರಕ್ಷಿಸಿದ ಅವನನ್ನು ನಂತರ ಬಂದ ಅರಸ ಗೌರವಿಸಿ ದೇವಸ್ಥಾನವನ್ನು ಮತ್ತು ಅದರ ಸುತ್ತಲ ಜಮೀನನ್ನು ಅವನ ವಂಶಸ್ಥರಿಗೆ ಬರೆದು ಕೊಡುತ್ತಾನೆ. ಇದೇನಪ್ಪ ಉಪೇಂದ್ರನ ಸಿನಿಮಾ ಕತೆ ಹೇಳ್ತಾನೆ ಅಂದ್ಕೊಂಡ್ರೆ ಹನ್ನೊಂದ್ನೇ ಶತಮಾನಕ್ಕೆ ಕರ್ಕೊಂಡು ಹೋಗ್ತಿದಾನೆ ಅಂದ್ಕೊಂಡ್ರಾ ? ನಾ ಹೇಳ್ತಿರೋದು ಉಪೇಂದ್ರ ಅವ್ರ ಇತ್ತೀಚೆಗಿನ ಸಿನಿಮಾ ಬಗ್ಗೆಯೇ. ಬ್ರಾಹ್ಮಣ ಆಗಿ, ಬಸವಣ್ಣ ಆಗಿ, ಕೊನೆಗೆ ಹೆಸ್ರೇ ಇಲ್ಲದ ಬರಿಯ ಮೂರು ನಾಮವಾಗಿ, ನಾಮ ಅಂತಾಗಿ, ಕೊನೆಗೂ ಶಿವಂ ಅನ್ನೋ ಹೆಸ್ರಿಂದ ತೆರೆಕಂಡ ಚಿತ್ರದ ಕತೆಯ ಬಗ್ಗೆಯೇ ನಾ ಹೇಳಹೊರಟಿರೋದು.

ಸಿಂಪಲ್ಲಾಗಿ ಹೇಳಬೇಕಂದ್ರೆ ಒಂದು ಸಿಂಪಲ್ ಕತೆ. ದಂಡುಪಾಳ್ಯದ ನಿರ್ದೇಶಕ ಶ್ರೀನಿವಾಸರಾಜು ಅವ್ರು ಈ ಸಿನಿಮಾ ಮಾಡ್ತಾ ಇದಾರೆ ಅನ್ನೋ ಸುದ್ದಿ ೨೦೧೩ರಿಂದ್ಲೇ ಚಾಲ್ತಿಯಲ್ಲಿತ್ತು.ಹೆಸರ ಹೆಸ್ರಿಂದ್ಲೇ ಹಲವು ವಿವಾದಗಳಿಗೊಳಗಾದ ಈ ಸಿನಿಮಾದಲ್ಲಿ ಬಸವಣ್ಣನ ಕೈಯಲ್ಲಿ ಕತ್ತಿ ಹಿಡಿಸಿದ್ದಾರೆ ಅನ್ನೋ ಪುಕಾರೆದ್ದಿತ್ತು. ಪೋಸ್ಟರಿನಲ್ಲಿರುವಂತಹ ಕತ್ತಿಯ ದೃಶ್ಯ ಪ್ರಸಕ್ತ ಸಿನಿಮಾದಲ್ಲಿ ಎಲ್ಲೂ ಬರದಿದ್ದರೂ ಚಿತ್ರದಲ್ಲಿ ಹಿಂಸೆಯೇ ಇಲ್ಲವೆಂದಿಲ್ಲ. ದ್ವಿತೀಯಾರ್ಧದಲ್ಲಿ ಬರುವ ಹಿಂಸೆಗೆ ಸೂಕ್ತ ಕಾರಣಗಳನ್ನೂ ಕೊಡುತ್ತಾ ಹೋಗುವ ನಿರ್ದೇಶಕರು ಕೊನೆಯ ಹತ್ತು ನಿಮಿಷದ ಸನ್ನಿವೇಶ ಇಡದಿದ್ದರೆ ಸಿನಿಮಾ ಒಂದು ರೀತಿಯಲ್ಲಿ ಯಾರ ಭಾವಗಳಿಗೂ ಘಾಸಿಗೊಳಿಸದ ಸಿನಿಮಾವಾಗುತ್ತಿತ್ತಾ ಅಂತ ಸಿನಿಮಾ ನೋಡಿ ಹೊರಬರುತ್ತಿದ್ದವರ ಮಾತಷ್ಟೆ. ಅಭಿಪ್ರಾಯಭಿನ್ನತೆಗಳೇನೇ ಇರ್ಲಿ. ಒಮ್ಮೆ ನೋಡಲೇನಡ್ಡಿಯಿಲ್ಲದ ಸಿನಿಮಾ.

ಒಂದ್ಸಲವಾದ್ರೂ ನೋಡೋಕೆ ಏನಿದೆ ಸಿನಿಮಾದಲ್ಲಿ ಅಂದ್ರಾ ? ಸ್ಪೈಡರ್ ಮ್ಯಾನ್ ತರಹ ಬಸ್ಸಿನ ಮೇಲೆ ಅಡ್ಡಡ್ಡ ನಿಂತು ಶೂಟ್ ಮಾಡೋ ಉಪೇಂದ್ರ ಮತ್ತವನ ಇದೇ ತರಹದ ಕೆಲವು ಫೈಟಿಂಗುಗಳು, ಸ್ನೇಕ್ ಅವತಾರದ ರಾಗಿಣಿ, ಅಗ್ರಹಾರದ ನಾರಿಯಾಗಿ ಸಲೋನಿ, ಸಂಗೀತದ ಕಾಮಿಡಿಯಾಗಿ ಬುಲೆಟ್ ಪ್ರಕಾಶರ ಕಾಮಿಡಿಯನ್ನು ನೋಡಬಹುದು ಮೊದಲಾರ್ಧದಲ್ಲಿ. ಶ್ರೀನಿವಾಸ ಮೂರ್ತಿ ಮತ್ತು ಭವ್ಯಾ,ಶಿವರಾಮಣ್ಣ, ಶರತ್ ಲೋಹಿತಾಶ್ವ, ರವಿಶಂಕರ್ ,ಸಿಹಿ ಕಹಿ ಚಂದ್ರು, ದೊಡ್ಡಣ್ಣನಂತಹ ಪಾತ್ರಗಳ ಅಭಿನಯಕ್ಕೆ ಸೈಯನ್ನದೇ ಇರಲು ಮನಸ್ಸಾಗೋದಿಲ್ಲ. ಮೊದಲು ಕೆಲವು ಡೈಲಾಗ್ಗಳಲ್ಲಿ ಬಯ್ಗುಳಗಳ ರೂಪದಲ್ಲಿ ಒಂದು ಸಮುದಾಯದ ಮನನೋಯಿಸೋ ಪ್ರಯತ್ನವಾಗಿದ್ಯಾ ಅನ್ನೋ ಬೇಸರದಲ್ಲಿರುವಾಗ್ಲೇ ದ್ವಿತೀಯಾರ್ಧದ ಮೊದಲ ದೃಶ್ಯದಲ್ಲಿ ನಾಯಕನಿಂದ ವಿಭೂತಿಯನ್ನು ಯಾಕೆ ಲಲಾಟದ ಮೇಲೆ ಅಡ್ಡಡ್ಡವಾಗಿ ಧರಿಸಬೇಕು ಅನ್ನೋದ್ರಿಂದ, ಬಸವಣ್ಣ, ನಿಗಮ, ಆಗಮ, ಅನುಷ್ಟಾನಗಳ ಬಗ್ಗೆ, ಭಗವದ್ಗೀತೆಯ ಬಗ್ಗೆ ಬರುವ ಹತ್ತು ನಿಮಿಷದ ಪುಂಖಾನುಪುಂಕದ ಡೈಲಾಗುಗಳು ಮೊದಲ ಬೇಸರಕ್ಕೆ ತೇಪೆ ಹಚ್ಚುತ್ತವೆ. ಬರೀ ಹೊಡೆಪಡೆ ಸಿನಿಮಾ ಮಾಡದೇ ಒಂದಿಷ್ಟು ಮಾಹಿತಿಯನ್ನೂ ಕಲೆಹಾಕಿದ ನಿರ್ದೇಶಕರ ಪ್ರಯತ್ನಕ್ಕೆ ಸೈ ಅನ್ನಬೇಕಿನಿಸುತ್ತದೆ.

ಇನ್ನು ಚಿತ್ರದಲ್ಲಿ ಉಪೇಂದ್ರ ಮತ್ತು ರಾಗಿಣಿಯವರದ್ದು ದ್ವಿಪಾತ್ರ ಅಂತ ಓದೇ ಇರುತ್ತೀರಿ. ಒಂದು ಅಲೆಕ್ಸಾಂಡರ್ ಅಲಿಯಾಸ್ ಅಲೆಕ್ಸ್ ಆದ್ರೆ ಮತ್ತೊಂದು ಬಸವಣ್ಣ. ಒಂದು ಸ್ನೇಕ್ ಆದ್ರೆ ಮತ್ತೊಂದು ಮಂದಾರ. ಅವೆರಡರ ಸಂಬಂಧ ಏನೇನು ಅಂದ್ರಾ ? ಅದನ್ನು ನೀವು ಸಿನಿಮಾ ನೋಡೇ ತಿಳಿಬೇಕು. ಇನ್ನು ನಮ್ಮ ಬಿಗ್ ಬಾಸ್ ಖ್ಯಾತಿಯ ವಿನಾಯಕ್ ಜೋಷಿ, ಜೈ ಜಗದೀಶ್,  ಗೀತಾ, ಪಾಪ ಪಾಂಡುವಿನ ಚಿದಾನಂದ್,ದೃಶ್ಯದಲ್ಲಿ ರವಿಚಂದ್ರನ್ ಅವ್ರ ಅಸಿಸ್ಟಂಟ್ ಪಾತ್ರದಲ್ಲಿ, ಗಜಕೇಸರಿಯಲ್ಲಿ ಯಶ್ ಹೋದ ಹಾಡಿಯಲ್ಲಿ ಅಮೂಲ್ಯಳಿಂದ ಒದೆತ ತಿನ್ನೋ ಕಾಮಿಡಿ ದೃಶ್ಯದಲ್ಲಿ ಭಾಗವಹಿಸಿದ ಹಾಸ್ಯ ನಟ(ಅವ್ರೆಸ್ರು ಶಿವಾಜಿ ಪ್ರಭುವಾ ಅಂತ?)... ಹೀಗೆ ಅನೇಕ ಕಿರುತೆರೆ ನಟನಟಿಯರಿಗೆ ವೇದಿಕೆಯಾಗಿದೆ ಚಿತ್ರ. ಕೆಲವು ದೃಶ್ಯಗಳಲ್ಲೆಂತೂ ನಾಯಕನ ಸಹಚರನಾದ ವಿನಾಯಕ್ ಜೋಷಿಯೇ ನಾಯಕನ ರೇಂಜಿಗೆ ಫೈಟ್ ಮಾಡುವಷ್ಟು ಪ್ರೋತ್ಸಾಹವನ್ನು ನಾಯಕನನ್ನು ಬಿಟ್ಟು ಉಳಿದ ಪಾತ್ರಗಳ ಬೆಳವಣಿಗೆಗೂ ಕೊಟ್ಟಿರುವುದು ಅಚ್ಚರಿಮಿಶ್ರಿತ ಮೆಚ್ಚುಗೆಯನ್ನೂ ತರುತ್ತದೆ ಕೆಲ ಸಲ.  ಢಂ ಢಂ ಢಮರುಗ ಅನ್ನೋ ಕಲ್ಯಾಣ್ ಅವ್ರ ಹಾಡು ನೆನಪಲ್ಲುಳಿಯುತ್ತೆ. ವಿದೇಶೀ ನೆಲದ ದೃಶ್ಯಗಳು ಓಕೆ. ಅದಕ್ಕಿಂತ್ಲೂ ನಮ್ಮ ಮೇಲುಕೋಟೆ, ಮೈಸೂರ ಸುತ್ತಮುತ್ತಲ ದೃಶ್ಯಗಳು ಹೆಚ್ಚು ಖುಷಿ ಕೊಡುತ್ವೆ. ಅಲ್ಲಿಲ್ಲಿ ಒಂದಿಷ್ಟು ಐಟಂ ಸಾಂಗುಗಳು,  ಮಡಿಯುಟ್ಟ ನಾಯಕನ ಕೈಯಲ್ಲಿ ಗನ್ನು ಇವೆಲ್ಲಾ ಬೇಕಿತ್ತಾ ಫಿಲ್ಮಿಗೆ ಕೊಂಚ ಜಾಸ್ತಿಯೇ ಓವರ್ರಾಗಿಲ್ವಾ ಅಂತ್ಲೂ ಅನಿಸಿದ್ದು ಸುಳ್ಳಲ್ಲ ದ್ವಿತೀಯಾರ್ಧದಲ್ಲಿ. ಫೈಟಿಂಗೇ ಮಾಡಿಸ್ಬೇಕು ಅಂದ್ರೆ ಮೊದಲಾರ್ಧದಲ್ಲಿದ್ದಂತೆ ಇಟ್ಟಿದ್ರೆ ಆಗ್ತಿರ್ಲಿಲ್ವಾ ಅನಿಸ್ತು.end of the day ಅದು ನಿರ್ದೇಶಕರ ಸಿನಿಮಾ ಮತ್ತು ಅವರ ಕತೆ. ಅವರ ಶೈಲಿಗೆ ಸೈ ಅನ್ನಲೇ ಬೇಕು. ಅಲ್ಲಲ್ಲಿ ಬೇಸರವಾದ್ರೂ ಇದನ್ನೇ ಇಡ್ಕೊಂಡು ಗಲಾಟೆ ಮಾಡುವಷ್ಟು ರೇಂಜಿಗೆ ಸಿನಿಮಾ ಖರಾಬಾಗಿಲ್ಲ ಸಿನಿಮಾ. ಬೇರೆಲ್ಲಾ ವಿಶಯಗಳು ಹೋಗ್ಲಿ... ಕನ್ನಡ ಕತೆಗಳಿಗೆ ಬರಗಾಲ ಬಂದಿದೆಯಾ ಅನ್ನುವಷ್ಟು ರಿಮೇಕ್ ಸಿನಿಮಾಗಳನ್ನು ಮಾಡ್ತಿರೋ ಸಮಯದಲ್ಲಿ ಸ್ವಮೇಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ ಅನ್ನೋ ಒಂದೇ ಕಾರಣಕ್ಕಾದ್ರೂ ಇದನ್ನು ಥಿಯೇಟ್ರಿಗೆ ಹೋಗಿ ನೋಡ್ಲೇ ಬೇಕು. 

Thursday, January 1, 2015

ಹೊಸವರ್ಷ


ಹಳೆ ಕಹಿಗಳ ಗೋರಿಯಾಚೆ ಹೊಸ ಕನಸಿನ ಬೆಳಕಿದೆ
ಉದಯರವಿಯ ಕಿರಣಗಳಲಿ ನೋವ ಮಂಜು ಕರಗಿದೆ
ಜೀವದಾಸರೆಯೇ ಕೊಚ್ಚಿ ಉಕ್ಕಿ ಹರಿದ ಕಾಲವು 
ಇಳಿಯೆ ಮತ್ತೆ ದಂಡೆಗಳಲಿ ಬದುಕಿನಾಸೆ ಚಿಗುರಿದೆ

ಪಾತಾಳದ ನೋವ ನರಕ ಸಾಕಾಗಿದೆ ಏಳಿರಿ
ನಿನ್ನೆ ನೆನಪ ನೀರಾಗಿಸಿ, ಬೇರಾಗಿಸಿ ಬೆಳೆಯಿರಿ
ಜಗಳಕಲ್ಲ ಗಗನಕಿರಲಿ ಬೆಳೆವ ದೃಷ್ಟಿ ನಮ್ಮದು
ನಗುವಳುವಿನ ಮಳೆಬಿಸಿಲಿಗೆ ಜೀವವೃಕ್ಷ ಬೆಳೆಯಲಿ

ಮಲಗಿದಲ್ಲೆ ನಮ್ಮ ನಿದ್ದೆ ಎಚ್ಚರಿಸುವ ಗೋರಿಯು
ಕಚ್ಚಾಡಲು ಸಮಯವಿಲ್ಲ ಚುರುಕು ಎಂಬ ಕಾಲವು
ಕೂಡಿ ನಡೆಯೆ ಸೊಬಗು ನೋಡ ಎಂದ ನಗುವ ಕಂಬಕೆ
ದೂರ ದೇಹಗಳನು ಬೆಸೆವ ಭಾವ ತಂತಿ ಸಾಥಿಯು

ಹಳೆ ಅಹಮಿಕೆ, ಸ್ವಾರ್ಥ, ಕ್ರೋಧ, ದ್ವೇಷದಮಲು ಇಳಿಯಲಿ
ಗುರಿಯ ಹಕ್ಕಿ ರೆಕ್ಕೆ ಪಡೆದು ಗಮ್ಯದತ್ತ ಹಾರಲಿ
ಅಜ್ಞಾನದ ಬಲೆಯ ಕಿತ್ತು ವಿಷದ ಕೊಳೆಯ ತೊಳೆಯುವ
ನವನವೀನ ವಿಷಯಕೆಮ್ಮ ಗೂಡ ತೆರೆದುಕೊಳ್ಳುವ

ಗೆಳೆಯರಿಗೆಲ್ಲಾ ಕ್ಯಾಲೆಂಡರ್ ಹೊಸವರ್ಷದ ಶುಭಾಶಯಗಳು :-)