Sunday, March 29, 2020

ನಾನೋದಿದ ಪುಸ್ತಕ "ಚಿತಾದಂತ"

ಪ್ರಪಂಚದ ಗೊಡವೆಯೇ ಬೇಡವೆಂದು ಹೊರಟು ನಿಂತ ಬುದ್ಧ ತನ್ನದೇ ಧರ್ಮವೊಂದನ್ನು ಸ್ಥಾಪಿಸಿ ಅದನ್ನು ಜನರಿಗೆ ಉಪದೇಶಿಸತೊಡಗುತ್ತಾನೆ. ಅವನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅವರಿಗಾಗಿ ವಿಹಾರಗಳನ್ನು ಕಟ್ಟಿಸುತ್ತಾ ಸಾಗುತ್ತಾನೆ ! ಆತನ ಅನುಯಾಯಿಗಳು ಈ ಹೊಸ ಧರ್ಮ ಪ್ರಚಾರಕ್ಕೆ ಎಷ್ಟು ಉತ್ಸುಕರಾಗುತ್ತಾರೆಂದರೆ ಒಂದು ಹಂತದಲ್ಲಿ ಭಾರತವನ್ನೂ ದಾಟಿ ಮೇಲಿನ ನೇಪಾಳ ಕೆಳಗಿನ ಶ್ರೀಲಂಕಾಗಳಿಗೆ ಸಾಗುತ್ತಾರೆ. ಭಾರತದಲ್ಲಿ ಬದಲಾಗುತ್ತಿದ್ದ ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿ ಬೌದ್ಢ ಧರ್ಮವೂ ಬದಲಾಗುತ್ತಿದ್ದರೂ ಶ್ರೀಲಂಕಾ, ನೇಪಾಳಗಳ ಮುಟ್ಟಿದ ಬೌದ್ಢ ಧರ್ಮ ತನ್ನ ಅಸ್ಮಿತೆಯನ್ನು ಹಾಗೇ ಉಳಿಸಿಕೊಂಡಿರುತ್ತದೆ. ತಮಿಳುನಾಡಿನ ರಾಜರು ಶ್ರೀಲಂಕಾಕ್ಕೆ ಆಗಾಗ ಬೌದ್ಢ ಧರ್ಮ ಪ್ರಚಾರಕ್ಕೆಂದು ಜನರನ್ನು ಕಳುಹಿಸುತ್ತಿರುತ್ತಾರೆ. ಆದರೆ ಅಲ್ಲಿನ ಹಳೆಯ ಬೌದ್ಢ ಧರ್ಮವನ್ನೇ ನಿಜವಾದ್ದು, ಶ್ರೇಷ್ಟವಾದ್ದು ಎಂದು ಭಾವಿಸೋ ಮುನಿಗಳು, ಅವರಿಂದ ಪ್ರಭಾವಿತರಾದ ರಾಜರು ಇದಕ್ಕೆ ಅವಕಾಶ ಕೊಡುತ್ತಿರುವುದಿಲ್ಲ. ಕೊನೆಗೂ ಒಂದು ದಿನ ಭಾರತದಿಂದ ಬಂದ ಹೊಸ ಬೌದ್ಧ ಧರ್ಮದಿಂದ ಪ್ರಭಾವಿತನಾಗಿದ್ದ ಮುನಿಯೊಬ್ಬ ಯುವರಾಜನೊಬ್ಬನ ಗುರುವಾಗಿ ಉಳಿಯೋ ಅವಕಾಶ ಪಡೆಯುತ್ತಾನೆ.  ಅದನ್ನೇ ಮುಂದೆ ದುರುಪಯೋಗ ಪಡಿಸಿಕೊಳ್ಳೋ ಆತ ಅಲ್ಲಿನ ಮೂಲ ಸತ್ವದ ಅನುಯಾಯಿಗಳನ್ನೆಲ್ಲಾ ಕೊಲ್ಲಲು ಆದೇಶಿಸುತ್ತಾನೆ ! ಆಗ ತಮ್ಮ ಮತ್ತು ಮೂಲ ಬೌದ್ಢ ಧರ್ಮದ ಆಶಯಗಳ ಜೀವ ಉಳಿಸಲೆಂದು ಜೀವ ತಾಳಿದ ಗುಂಪೇ "ತೇರವಾದಿಗಳು". ಮೂಲತಃ ಶಾಂತಿವಾದಿಗಳಾಗಿದ್ದ ಅವರು ತಮ್ಮ ಉದ್ದೇಶಗಳ ಸಾಧನೆಗೆ ಹಿಂಸಾ ಮಾರ್ಗವನ್ನು ಹಿಡಿಯುತ್ತಾರೆ.

ಪ್ರಪಂಚವನ್ನೇ ತನ್ನ ಸಾಮಾಜ್ಯವನ್ನಾಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಹಾದಿಯಲ್ಲಿ ಸಿಕ್ಕ ರಾಜ್ಯಗಳನ್ನೆಲ್ಲಾ ಗೆಲ್ಲುತ್ತಾ, ಸಿಕ್ಕಸಿಕ್ಕಿದ್ದೆಲ್ಲವನ್ನೂ ಲೂಟಿ ಮಾಡುತ್ತಾ ಸಾಗಿದ ಗ್ರೀಕ್ ರಾಜ ಅಲೆಕ್ಸಾಂಡರ್ ಭಾರತದತ್ತ ಬರುತ್ತಾನೆ. ಪಾಕಿಸ್ತಾನದ ಪೇಶಾವರದ ಬಳಿ ಲೂಟಿಯನ್ನು ಹೊತ್ತೊಯ್ದು ಮುಂದೆ ಸಾಗೋದೇ ಅಸಾಧ್ಯವೆನಿಸಿದಾಗ ಅವುಗಳನ್ನು ಅಲ್ಲೇ ಒಂದೆಡೆ ಸುಟ್ಟಂತೆ ಮಾಡಿ ಅದನ್ನೂ ರಹಸ್ಯವಾಗಿ ಸಂಗ್ರಹಿಸುತ್ತಾನೆ. ಅಲ್ಲಿಂದ ಮುಂದೆಯೂ ಅಪಾರವಾದ ಲೂಟಿ ಸಿಗುತ್ತದೆ. ಆದರೆ ಕೊನೆಗೊಂದು ದಿನ ಸಿಂಧೂ ನದಿಯಾಚೆಗಿರೋ ನಂದರ ಅಪಾರ ಸೇನಾಬಲವನ್ನು ಕಂಡು ದಿಗ್ಭ್ರಮೆಗೊಳಗಾಗುತ್ತಾನೆ. ತಾನು ಅಲ್ಲಿಯವರೆಗೆ ಲೂಟಿ ಹೊಡೆದ ಸಂಪತ್ತನ್ನೆಲ್ಲಾ ತನ್ನೂರಿಗೆ ಸಾಗಿಸಿ ತಾನೂ ವಾಪಾಸ್ಸಾಗಬೇಕು, ಈ ನಂದರ ಕೈಲಿ ಗೆಲ್ಲೋದು ಅಸಂಭವವೆಂದು ತನ್ನ ದಿಗ್ವಿಜಯದ ಕನಸನ್ನು ಕೈಬಿಡುತ್ತಾನೆ. ಆದರೆ ಸಂಪತ್ತನ್ನು ಸಾಗಿಸೋದು ಹೇಗೆ ಎಂದಾಗ ಆತನು ದಾರಿಯಲ್ಲಿ ಕಂಡ ಪ್ರಚಂಡ ಮೇಧಾವಿಗಳಾದ ಬೌದ್ಢ ಭಿಕ್ಷುಗಳು ನೆನಪಾಗುತ್ತಾರೆ. ಅವರಲ್ಲೊಬ್ಬನೇ ಅಶ್ವಘೋಷ. ಆತ ಅರ್ಧ ಸಂಪತ್ತನ್ನಷ್ಟೇ ನೀನು ಕೊಂಡೊಯ್ಯು. ಉಳಿದದ್ದನ್ನು ಇಲ್ಲೇ ರಹಸ್ಯವಾಗಿಡು. ನಂತರ ಅದನ್ನು ತೆಗೆದುಕೊಂಡು ಹೋಗಬಹುದು ಎಂದು ರಹಸ್ಯವಾಗಿಡಲು ಯೋಜನೆಯನ್ನು ತಯಾರಿಸಿ ಕೊಡುತ್ತಾನೆ. ಈ ಯೋಜನೆ ತಿಳಿದ ಅಶ್ವಘೋಷನನ್ನು ಇಲ್ಲೇ ಬಿಟ್ಟರೆ ಕಷ್ಟ. ಅವನನ್ನೂ ತನ್ನೊಡನೆ ಕೊಂಡೊಯ್ದು ಸಾಯಿಸಬೇಕು ಎಂದು ಅಲೆಕ್ಸಾಂಡರ್ ಆಲೋಚಿಸಿರುತ್ತಾನೆ. ಅದನ್ನು ತಿಳಿಯದಷ್ಟು ದಡ್ಡನೇ ಅಶ್ವಘೋಷ ? ತಾನು ನನ್ನ ಹಲ್ಲುಗಳಲ್ಲೇ ನಿಧಿಯ ರಹಸ್ಯವಡಗಿದೆ ಎಂಬ ರಹಸ್ಯ ಮಾಹಿತಿಯನ್ನು ಸಾಮಾನ್ಯ ಪತ್ರವೊಂದರೊಳಗೆ ಅಡಕವಾಗಿಟ್ಟು ತನ್ನ ನಿಷ್ಟ ಅಮಾತ್ಯರಾಕ್ಷಸನಿಗೆ ಕಳುಹಿಸುತ್ತಾನೆ. ಅಮಾತ್ಯ ಪತ್ರದ ರಹಸ್ಯವನ್ನು ಕೊನೆಗೂ ಬೇಢಿಸುವಷ್ಟರಲ್ಲಿ ಅಶ್ವಘೋಷ ಚಿತೆಗೆ ಹಾರಿ ಸತ್ತು ಹೋದ. ಇದು ಅವನ ಚಿತಾಭಸ್ಮ. ತಮಗೆ ತಲುಪಿಸಲೆಂದೇ ನೀಡಿದ್ದಾರೆ ಎಂದು ಅಲೆಕ್ಶಾಂಡರಿನ ಸೈನಿಕರು ಒಂದು ಭಸ್ಮದ ಭರಣಿಯನ್ನು ಕೊಡುತ್ತಾರೆ. ಅದರ ಕೆಳಗೆ ಆಧಾರವಾಗಿರುವಂತೆ ಮೂರು ಹಲ್ಲುಗಳನ್ನು ಅಂಟಿಸಲಾಗಿರುತ್ತದೆ !!!

ಇನ್ನು ಬುದ್ಢ ಸತ್ತಾಗ ಅವನ ಸಂಸ್ಕಾರಕ್ಕೆ ಹೋದವನೊಬ್ಬ ನಾಲ್ಕು ಹಲ್ಲುಗಳನ್ನು ತಂದಿರುತ್ತಾನೆ. ಅದು ರಾಜರಿಂದ ರಾಜರ ಕೈ ಬದಲಾಗುತ್ತಿರುತ್ತೆ. ಆ ಹಲ್ಲುಗಳನ್ನು ಇಟ್ಟುಕೊಂಡವರನ್ನು ಯಾರೂ ಸೋಲಿಸೋದು ಸಾಧ್ಯವಿಲ್ಲವೆಂಬ ದಂತಕತೆಯಿರುತ್ತೆ. ಕೈಯಿಂದ ಕೈ ಬದಲಾಗುವಾಗ ಆ ಹಲ್ಲು ಎಲ್ಲಿ ಹೋಯ್ತು ಎನ್ನೋದರ ಬಗ್ಗೆ ಎಲ್ಲೆಡೆ ಊಹಾ ಪೋಹಗಳೆದ್ದಿರುತ್ತೆ. ಶ್ರೀಲಂಕಾ, ನೇಪಾಳ, ಚೀನಾ, ಇಂಡೋನೇಷ್ಯಾದವರು ಬುದ್ಧನ ಅಸಲಿ ಹಲ್ಲು ತಮ್ಮ ಬಳಿಯೇ ಇದೆ ಎಂದೆನ್ನುತ್ತಾ ಇರುತ್ತಾರೆ !

ವಿಭಜನೆಯಾಗದ ಭಾರತದ ಕಾಲಕ್ಕೆ ಸೇರಿದ ಪಂಜಾಬಿ ಪ್ರಾಚ್ಯ ವಸ್ತು ಶಾಸ್ತ್ರಜ್ಞನೊಬ್ಬ ಹೀಗೇ ಬೌದ್ಢ ಧರ್ಮದ ಪಳೆಯುಳಿಕೆಗಳ ಬಗ್ಗೆ ಹುಡುಕುತ್ತಾ ಅಲೆಕ್ಸಾಂಡರಿನ ನಿಧಿಯನ್ನು ತಡಕುತ್ತಾನೆ ! ಹಾಗೇ ಇತಿಹಾಸದ ಕೊಂಡಿಗಳ ಬಿಡಿಸುತ್ತಾ , ಅಶ್ವಘೋಷ, ಅಮಾತ್ಯ, ಅದೇ ಕಾಲದಲ್ಲಿದ್ದ ಚಾಣಾಕ್ಯರ ಚಾಣಾಕ್ಷತನಗಳ ಅರಿಯುತ್ತಾನೆ.   ತನ್ನ ಸಂಶೋಧನೆಗಳನ್ನೆಲ್ಲಾ ಒಂದು ಡೈರಿಯಲ್ಲಿ ಬರೆದು ತನ್ನ ಕುಟುಂಬಸ್ಥರಿಗೆಂದು ಭದ್ರವಾಗಿಡುತ್ತಾನೆ !

ಹೆಚ್ಚುತ್ತಿರೋ ಬೌದ್ಢ ಧರ್ಮದ ಪ್ರಭಾವವನ್ನು ಸಹಿಸದ ಒಂದಿಷ್ಟು ಶಕ್ತಿಗಳು ಈ ಹಲ್ಲನ್ನು ಹುಡುಕಿ ಅದನ್ನು ನಾಶ ಮಾಡಬೇಕು ಎಂದು ಒಂದೆಡೆ. ಅಲೆಕ್ಸಾಂಡರಿನ ಸೇನೆಯೊಂದಿಗೇ ಬಂದು ಪಾಕಿಸ್ತಾನದ ಪೇಶಾವರದ ಬಳಿಯುಳಿದ ಕಲಾಶರು ತಮ್ಮ ಹಳೆಯ ನಿಧಿ ತಮಗೇ ಸೇರಬೇಕು ಎಂದು ಮತ್ತೊಂಡೆಡೆ. ಆ ಬುದ್ಧನ ಹಲ್ಲಿಗಿರೋ ಕೋಟ್ಯಾಂತರ ಬೆಲೆಗೆ ಹೇಗಾದರೂ ಮಾಡಿ ಅದನ್ನು ಲಪಟಾಯಿಸಬೇಕು ಎಂಬ ಭೂಗತ ಜಗತ್ತು ಇನ್ನೊಂದೆಡೆ. ಅಶ್ವಘೋಷನ ಹಲ್ಲುಗಳನ್ನು ಸಂಪಾದಿಸಿ ಅದರ ಮೂಲಕ ಪುರಾತನ ನಿಧಿಯ ರಹಸ್ಯಗಳನ್ನು ತಿಳಿದು ಅದನ್ನು ದೋಚಬೇಕು ಎಂಬ ಪಾಕಿಸ್ತಾನದ ಉಗ್ರಗಾಮಿಗಳ ಗ್ಯಾಂಗು ಮತ್ತೊಂದೆಡೆ ! ಇವೆಲ್ಲದರ ನಡುವೆ ತಮ್ಮ ರಹಸ್ಯಗಳನ್ನು ರಹಸ್ಯವಾಗೇ ಇಡಬೇಕು ಎಂಬ ಉದ್ದೇಶದ ತೇರವಾದಿಗಳು ಮತ್ತು ಇತಿಹಾಸದ ಬಗೆಗಿನ ಅದಮ್ಯ ಕುತೂಹಲದಿಂದ ಅದನ್ನು ಕೆದಕುತ್ತಾ ಮೇಲಿನೆಲ್ಲಾ ಗುಂಪುಗಳ ಕಣ್ಣಿಗೆ ಬೀಳೋ ಇತಿಹಾಸ ತಜ್ಞರು. ಇವರೆಲ್ಲರ ನಡುವಿನ ಸಮರ ಹೇಗೆ ಸಾಗುತ್ತೆ , ರಾಜ ಅಶೋಕನಿಂದ ಸಾಗಿ ಚಾಚಾ ನೆಹರೂವರೆಗೆ ಸಾಗೋ ಹಲವು ಶತಮಾನಗಳ ಹಲವು ಮಜಲಿನ ಕಾದಂಬರಿಯೇ ಚಿತಾದಂತ! ೫೬ಕ್ಕೂ ಹೆಚ್ಚು ಐತಿಹಾಸಿಕ ಗ್ರಂಧಗಳ ಉಲ್ಲೇಖಗಳು, ಚಿತ್ರಗಳು ಲೇಖಕರ ಅಪಾರವಾದ ಪೂರ್ವ ತಯಾರಿಯನ್ನು ಸೂಚಿಸುತ್ತೆ. ಇತಿಹಾಸ, ಕಲ್ಪನೆಗಳ ಉತ್ತಮ ಮಿಶ್ರಣದಲ್ಲಿ ಕೊನೆಗೆ ಯಾರು ಗೆದ್ದರು ಯಾರು ಸೋತರು ಅನ್ನೋದಕ್ಕಿಂತಲೂ ಮುಂದೇನಾಗುತ್ತೆ ಅನ್ನೋ ಕುತೂಹಲವೇ ಕೊನೆಯವರೆಗೂ ಗೆಲ್ಲುತ್ತೆ. ಎಲ್ಲಾ ಕತೆಯನ್ನು ನಾನೇ ಹೇಳಿಬಿಟ್ಟೆ. ಪುಸ್ತಕದಲ್ಲಿ ಇನ್ನೇನುಳೀತು ಅಂದ್ರಾ ? ನಾ ಹೇಳಿದ್ದು ಪುಸ್ತಕದಲ್ಲಿರೋ ಅಂಶಗಳಲ್ಲಿ ಒಂದಂಶವೂ ಅಲ್ಲ. ಅಭಿಪ್ರಾಯವೇ ಹೀಗಿದೆ ಅಂದ್ರೆ ಪುಸ್ತಕ ಹೇಗಿದೆ ಅಂದ್ರಾ ? ಓದಿ ನೋಡಿ, ನಿಮಗೇ ಗೊತ್ತಾಗುತ್ತೆ. ಪುಸ್ತಕ ಓದುವ ಸಂಸ್ಕೃತಿಗೆ ಶುಭವಾಗಲಿ :-)

ಓಟಿಟಿ ಮತ್ತು ಮಾಲ್ಗುಡಿ ಡೇಸ್

ಒಂದು ಮೈಸೂರ್ ಪಾಕ್ ಕೊಡಿ.
ತಗೋಳಿ
ಅರೇ, ಇದೇನಿದು ? ನಾ ಕೇಳಿದ್ದು ಮೈಸೂರ್ ಪಾಕು
ಹೂಂ. ಇದೇ ಮೈಸೂರ್ ಪಾಕು
ಅರೆ, ಇದು ಪಾನಿಪೂರಿ ರೀ, ಮೈಸೂರ್ ಪಾಕ್ ಕೇಳಿದ್ರೆ ಪಾನಿಪೂರಿ ಕೊಡ್ತೀರಲ್ರೀ?
ಇದು ಮೈಸೂರು, ನಾ ಇದ್ನೇ ಮೈಸೂರ್ ಪಾಕ್ ಅಂತ ಕರೆಯೋದು !!
ಏನಪ್ಪಾ ಇದು ಅಂತ ಶಾಕಾದ್ರಾ ? ಮಾಲ್ಗುಡಿ ಡೇಸ್ ಅಂತ ಹೆಸರು ನೋಡಿ ಮೊದಲು ಶಂಕರ್ ನಾಗ್ ಅವ್ರ ಚಿತ್ರ ನೋಡಿ ಆ ಆರ್. ಕೆ. ನಾರಾಯಣನ್ ಅವ್ರ ಕತೆಯಾದಾರಿತ ಚಿತ್ರವನ್ನೇ ಮತ್ತೆ ಹೊಸದಾಗಿ ಸೃಷ್ಠಿಸುತ್ತಿದ್ದಾರ ಅಂತ ನಿರೀಕ್ಷೆಯಿಟ್ಟುಕೊಂಡು ನೋಡಿದ ನನಗೂ ಆದ ಅನುಭವ ಇದೇ ತರದ್ದು !

ಮುಂಚೇನೆ ಬರೆದ ಹಾಗೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೇ ಒದ್ದಾಡುತ್ತಿದ್ದ ಕಾಲದಲ್ಲಿ ವರದಂತೆ ಕಂಡಿದ್ದು ಓ.ಟಿ.ಟಿ(ಓವರ್ ದ ಟಾಪ್) ತಾಣಗಳು. ಅಂದರೆ ಈ ವಿಪರೀತ ರೇಟು ಕೇಳೋ ಕೇಬಲ್ಲು, ಚಿತ್ರಕ್ಕಿಂತ ಅಡ್ಬಟೈಸ್ಮೆಂಟುಗಳನ್ನೇ ಜಾಸ್ತಿ ತೋರಿಸೋ ಟೀವಿ ಚಾನೆಲ್ಲುಗಳು, ಅವುಗಳನ್ನು ಬಿತ್ತರಿಸೋ ಉಪಗ್ರಹಗಳ ಗೊಡವೆಯೇ ಬೇಡ ಎಂದು ಅಂತರ್ಜಾಲದ ಮೂಲಕ ನೇರ ವೀಕ್ಷಕರ ಮನೆ ಬಾಗಿಲಿಗೆ ಚಿತ್ರಗಳನ್ನು ತಲುಪಿಸುತ್ತಿರೋ ಅಮೇಜಾನ್ ಪ್ರೈಂ, ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ , ವೂಟ್ ನಂತಹ ವಾಹಿನಿಗಳೇ ಓ.ಟಿ.ಟಿ ವಾಹಿನಿಗಳು. ಈಗ ಫೇಸ್ಬುಕ್ಕಲ್ಲೂ ಸುಮಾರಷ್ಟು ಧಾರಾವಾಹಿಗಳ ಪೂರ್ಣ ಎಪಿಸೋಡುಗಳನ್ನ ಆ ವಾಹಿನಿಗಳೇ ಹರಿಬಿಡುತ್ತಿರೋದ್ರಿಂದ ಅದೂ ಒಂತರ ಓ.ಟಿ.ಟಿ ಆಗ್ತಾ ಇದ್ಯಾ ಅನಿಸುತ್ತೆ. ಕರೋನಾ ಕರಾಮತ್ತಿಗೆ ಚಿತ್ರಮಂದಿರಗಳನ್ನ ಬಾಗಿಲು ಹಾಕಬೇಕಾಗಿ ಬಂದು, ಚಿತ್ರಗಳ ಧಾರಾವಾಹಿಗಳ ಚಿತ್ರೀಕರಣ ಅನಿರ್ದಿಷ್ಟಾವಧಿಯವರೆಗೆ ನಿಲ್ಲಿಸಿರೋದ್ರಿಂದ ಇನ್ನು ೧೦-೧೨ ದಿನಕ್ಕಾಗುವಷ್ಟು ಸರಕು ಮಾತ್ರ ನಮ್ಮ ಬಳಿ ಇದೆ ಎಂದು ಪ್ರಮುಖ ಧಾರಾವಾಹಿಗಳ ನಿರ್ದೇಶಕರು ಮಾರ್ಚ್ ೨೩ರಂದು ಹೇಳಿಕೆ ಕೊಟ್ಟಿದ್ದರು. ಈ ಧಾರಾವಾಹಿಗಳು ಇರಲಿ ಬಿಡಲಿ, ಒಳ್ಳೆಯ ಚಿತ್ರಗಳಿಗೆಂತೂ ಎಂದೂ ಇರುವ ನೋಡುಗ ಬಳಗಕ್ಕೆ ಈ ಕರೋನಾದ ಲಾಕ್ಡೌನು, ವರ್ಕ್ ಫ್ರಂ ಹೋಮು, ಮಧ್ಯ ಮಧ್ಯ ಬರೋ ರಜಾ ದಿನಗಳು ಹೇಳಿ ಮಾಡಿಸಿದಂತಿವೆ. ಹೊರಗೆಂತೂ ಹೋಗೋ ಹಾಗಿಲ್ಲ. ಇನ್ನೇನು ಮಾಡೋದು, ಚಿತ್ರ ನೊಡೋದು ಅಷ್ಟೆ! .

ಮತ್ತೆ ಕತೆಗೆ ಬರೋದಾದ್ರೆ ಇದು ಮಾಲ್ಗುಡಿ ಅನ್ನೋ ಕಾಲ್ಪನಿಕ ಪಟ್ಟಣದ ಸುತ್ತ ನಡೆಯೋ ಕತೆ. ಕಥಾನಾಯಕ ಲಕ್ಶ್ಮೀನಾರಾಯಣ ಮತ್ತವನ ಪ್ರಿಯತಮೆ ಲಿನೇಟಾರ ಪ್ರೇಮಕತೆ ಶುರುವಾಗೋದು ಎಸ್ಸೆಸ್ಸೆಲ್ಸಿಯಲ್ಲಾದರೂ ಮುಗಿಯೋದು ಇಬ್ಬರ ವೃದ್ಧಾಪ್ಯದಲ್ಲಿ. ಅಂದರೆ ಇವರು ಲವ್ ಮಾಡಿ ಮದುವೆಯಾದರಾ ? ಅಂದ್ರೆ ಇಲ್ಲ. ಮದುವೆಯಾಗದೇ ಉಳಿದರಾ ಅಂದರೆ ಅದೂ ಇಲ್ಲ ! ಹೆಸರಾಂತ ಕತೆಗಾರನಾಗೋ ಲಕ್ಶ್ಮೀನಾರಾಯಣ ಮಾಲ್ಗುಡಿ ತನ್ನ ಕತೆಗಳು ಇಂದಿನ ಪೀಳಿಗೆಗೆ ರುಚಿಸುತ್ತಿಲ್ಲ ಎಂದರಿತು ಬರೆಯುವುದನ್ನೇ ನಿಲ್ಲಿಸುವ ತೀರ್ಮಾನದಲ್ಲಿರುವ ಅವರ ಜೀವನದಲ್ಲಿ ಹಲವು ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅವೇ ಬೆಂದಕಾಳೂರಲ್ಲಿ ಬೇಯುತ್ತಿರೋ ಅವರನ್ನು ಮತ್ತೆ ಮಾಲ್ಗುಡಿಯತ್ತ ಕರೆತರುತ್ತದೆ. ಕತೆ ಇಷ್ಟೇ ಆದರೂ ಅದಕ್ಕೊಂದಿಷ್ಟು ಸವಿಯಿತ್ತಿದ್ದು ಅಂದರೆ ಬಾಲ್ಯದ ಲಕ್ಷ್ಮಿ, ವಿಮಲ, ಭಟ್ಟ , ಸಂತು ಮತ್ತು ಸರಸ್ವತಿ ಟೀಚರ್ರಿನ ಶಾಲಾ ದೃಶ್ಯಗಳು ಮತ್ತು ಮಲೆನಾಡ ಮಳೆ. ನಮ್ಮ ಬೆಂಗಳೂರಿನ ಲಾಲ್ ಬಾಗೇನಾ ಇದು, ಇದು ನಮ್ಮ ಮಲೆನಾಡ ತೀರ್ಥಹಳ್ಳಿ, ಹೊಸನಗರಗಳೇನಾ ಇವು ಅನ್ನುವಷ್ಟು ಅದ್ಭುತವಾಗಿ ತೋರಿಸಿರೋ ಸಿನಿಮಾಟೋಗ್ರಫಿ ಮೊದಲಾರ್ಧವನ್ನು ಆಪ್ತವೆನಿಸುತ್ತೆ.  ಪಾಂಡಿಚೇರಿಯ ಪ್ರೇಮ ಪ್ರಸಂಗ, ಆಫೀಸಿನ ಬಾಸ ದೌರ್ಜನ್ಯ, ತಾಯಿಯ ಸಂಸ್ಕಾರಕ್ಕೂ ಬರಲಾಗದ ಮಗಳ ಪರಿಸ್ಥಿತಿ, ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಅಂತ ಊರಿಗೇ ಬೆಂಕಿಯಿಡೋ ಗಿರಿರಾಜ ಮತ್ತು ಮಗಳಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿ ನಂತರ ಪರಿತಪಿಸೋ ತಂದೆ, ತಾಯಿಗೆ ಮದುವೆ ಮಾಡಲಿಷ್ಟವಿದ್ದರೂ ತನಗೇ ಇಷ್ಟವಿರದಿದ್ದ ಮಗಳು ಹೀಗೆ ಹಲವು ಭಾವಗಳ, ಪರಿಸ್ಥಿತಿಗಳ ಛಾಯೆ ಪಾತ್ರಗಳಲ್ಲಿ ಹಾಸು ಹೋಗುತ್ತದೆ. ಇನ್ನು ಚಿತ್ರದುದ್ದಕ್ಕೂ ಕಾಡೋ ರಘು ದೀಕ್ಷಿತ್ ಸಂಗೀತ ಚಿತ್ರ ಮುಗಿದರೂ ನಮ್ಮನ್ನ ಕಾಡುತ್ತಿರುತ್ತೆ. ಮನೆಯಿದ್ದರೆ ಹೀಗಿರಬೇಕು ಎಂಬಂತೆ ತಯಾರಿ ಮಾಡಿರೋ ಪ್ರಕೃತಿಯ ಮನೆ, ವಿಜಯ್ ಪಾತ್ರಕ್ಕಾಗಿ ಹೊಸದಾಗಿ ಎಂಟ್ರಿ ಕೊಟ್ಟಿರೋ ತುಳುನಾಡ ಹುಡುಗ ಅರ್ಜುನ್ ಕಾಪಿಕಾಡ್ ಅವರ ನಟನೆ, ನೃತ್ಯ ಕೂಡ ಮುದ ನೀಡುತ್ತೆ.

ಇಷ್ಟೆಲ್ಲಾ ಇದ್ದರೂ ಮೈಸೂರು ಪಾಕು, ಪಾನಿಪೂರಿಯ ಹೋಲಿಕೆ ಯಾಕೆ ಅಂತ ಅಂದ್ಕೊಂಡ್ರಾ ? ಚಿತ್ರದಲ್ಲಿರೋ ಸುಮಾರು ಅಸಂಬದ್ಧಗಳೇ ಅದಕ್ಕೆ ಕಾರಣ. ಮೊದಲಿಗೆ ಮಾಲ್ಗುಡಿ ಡೇಸ್ ಅಂತ ಹೆಸರಿಟ್ಟುಕೊಂಡು ಮೂಲ ಕತೆಯಲ್ಲಿ ಬರೋ ಸ್ವಾಮಿ ಮತ್ತವನ ಗ್ಯಾಂಗಿಗೆ ಸಂಬಂಧಪಡದ ಚಿತ್ರ ಮಾಡಿದ್ದು. ಎರಡನೆಯದು ಮಾಲ್ಗುಡಿ ಡೇಸಿಗೆ ಯಾವ ಸಂಬಂಧವೂ ಇರದ ಬೆಂಗಳೂರ, ಕೊಯಂಬತ್ತೂರಿನ ಚಿತ್ರಗಳ ಸೇರಿಸಿದ್ದು.. ಹೀಗೆ. ಮಲೆನಾಡ ತೋರಿಸಬೇಕು ಅಂತ, ನಗರ, ಆಗುಂಬೆ, ಶೃಂಗೇರಿ ಹೀಗೆ ಎಲ್ಲಾ ಪ್ರಮುಖ ಪೋಲೀಸ್ ಠಾಣೆಗಳನ್ನೂ ತೋರಿಸಿದ್ದು ! ದ್ವಿತೀಯಾರ್ಧದಲ್ಲಿ ಅಗತ್ಯವಿಲ್ಲದಿದ್ದರೂ ಎಳೆದು ತರುವ ಪ್ರಕೃತಿಯ ಅಮ್ಮನ ಮನೆಯಲ್ಲಿನ ಪೂಜೆ, ವಿಮಲನ ಮಗಳು, ಮಾಲ್ಗುಡಿ ಶಾಲೆಯಲ್ಲಿನ ಯೂನಿಯನ್ ಡೇ, ಪೋಲೀಸಪ್ಪನಾಗಿ ಬ್ಯಾಂಕ್ ಜನಾರ್ಧನ್ ಅವರ ನಗು ಬರದ ಕಾಮಿಡಿಗಳು,ಕೆಲವೆಡೆ ಕಳಚಿಬಿದ್ದಂತೆ ಕಾಣುವ ವಿಜಯ್ ರಾಘವೇಂದ್ರ ಅವರ ವಯಸ್ಸಾದ ಮೇಕಪ್ಪು, ಮನೆಯಲ್ಲಿ ಯಾರಿಲ್ಲದೇ ಗೋಡೆಗಳೇ ಬೀಳುವ ಹಾಗಿದ್ದರೂ ಹುಡುಗನೊಬ್ಬ ಸಣ್ಣಕ್ಕಿದ್ದಾಗ ಬರೆದ "ಅಮ್ಮ" ಅನ್ನೋ ಪದ ಅವ ಮುದುಕನಾದರೂ ಮಾಸದಂತಿರುವುದು ಇತ್ಯಾದಿ ಅಧ್ವಾನಗಳು ರಸಭಂಗವನ್ನುಂಟು ಮಾಡುತ್ತೆ.  ಈ ಪ್ರಕೃತಿ, ವಿಜಯ್ ಯಾರು, ಲಕ್ಷ್ಮೀನಾರಾಯಣ, ಲಿನೇಟಾರ ಪ್ರೇಮಕತೆಯೇನಾಗುತ್ತೆ, ಮಾಲ್ಗುಡಿಯವ ಬೆಂಗಳೂರಿಗೇಕೆ ಹೋದ, ಶೃಂಗೇರಿಗೂ ಕೊಯಂಬತ್ತೂರಿಗೂ ಏನು ಸಂಬಂಧ ಅಂತೆಲ್ಲಾ ಆಲೋಚಿಸುತ್ತಿದ್ದೀರ ? ಅವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದ್ರೆ ನೀವು ಈ ಚಿತ್ರವನ್ನು ನೋಡಬೇಕು. ಮೊದಲಾರ್ಧಕ್ಕಾದರೂ ಮನೆಮಂದಿಯೊಂದಿಗೆ ಕೂತ ನೋಡಬೇಕಾದ ಚಿತ್ರ "ಮಾಲ್ಗುಡಿ ಡೇಸ್"

Sunday, March 22, 2020

ಕರೋನಾ ಕಮಂಗಿಗಳು

"ವೈದ್ಯೋ ನಾರಾಯಣೋ ಹರಿಃ" ಎಂಬ ಮಾತಂತೆ ಕರೋನಾವೆಂಬ ಮಹಾ ಮಾರಿಯ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ನಮ್ಮ ಜೀವವ ರಕ್ಷಿಸುತ್ತಿರೋ ವೈದ್ಯರಿಗೆ, ಪೋಲೀಸರಿಗೆ, ನಮ್ಮ ನಗರವನ್ನು ಸ್ವಚ್ಛವಾಗಿಡೋಕೆ ಸಹಕರಿಸುತ್ತಿರೋ ಪಉರಕಾರ್ಮಿಕರಿಗೆ ನನ್ನ ಮೊದಲ ನಮನ. ಇಂದು ಸಂಜೆ ಐದಕ್ಕೆ ಘಂಟೆ, ಚಪ್ಪಾಳೆ, ಪ್ಲೇಟು, ಡ್ರಮ್ಮು , ಶಂಖ, ಜಾಗಟೆ, ಪೀಪಿ ಹೀಗೆ ಅನೇಕ ಶಬ್ದಗಳಿಂದ ಕೋಟ್ಯಾಂತರ ಜನ ಸಲ್ಲಿಸಿದ ನಮನವೂ ನಿಮಗೇನೇ. ನಿಮ್ಮ ಸೇವೆಯ ಬಗ್ಗೆ ಎಷ್ಟು ಕೊಂಡಾಡಿದರೂ ಕಮ್ಮಿಯೇ ಎಂದುಕೊಂಡರೂ ಒಂದಿಷ್ಟು ಸುದ್ದಿಗಳು ನನ್ನ ಮನಕಲಕಿದ್ದು ಸುಳ್ಳಲ್ಲ. 

ಸುದ್ದಿ-೧: "ಜನತಾ ಕರ್ಫ್ಯೂ" ದಿನ ಖಾಲಿಯಿದ್ದ ರಸ್ತೆಯಲ್ಲಿ ಡ್ರ್ಯಾಗ್ ರೇಸಿಂಗ್ ಮಾಡೋಕೆ ಹೋಗಿ ಬೈಕ್ ಸವಾರನ ಸಾವು !
ಸುದ್ದಿ-೨: ದುಬೈಯಿಂದ ಬಂದವ ಏರ್ಪೋರ್ಟಿಂದ ಮಡಿಕೇರಿಯವರೆಗೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಓಡಾಡಿದ್ದು ಅವ ಎಲ್ಲೆಲ್ಲಿ ಹೋದ, ಯಾರ್ಯಾರನ್ನು ಭೇಟಿ ಮಾಡಿದ ಅಂತ ಪತ್ತೆ ಮಾಡೋಕೆ ಪೋಲೀಸರ ಹರಸಾಹಸ ! , ಚೆನ್ನೈಗೆ ಹೋಗಬೇಕಾದವ ಬೆಂಗಳೂರಲ್ಲಿ ಬಂದಿಳಿದು ಇಲ್ಲಿ ಲಾಡ್ಜಿಗೆ ಅಂತ ಮೆಜೆಸ್ಟಿಕಿನ ಸುತ್ತೆಲ್ಲಾ ಅಲೆದು ಕೊನೆಗೆ ಪೋಲೀಸರ ಕೈ ಸೇರಿದ್ದು !
ಸುದ್ದಿ-೩: ಹೊರ ರಾಜ್ಯದಿಂದ ಬರೋ ಕರೋನಾ ಸೊಂಕಿನ ತಡೆಗೆ ಹೊರ ರಾಜ್ಯಕ್ಕೆ ಹೋಗಿ ಬರೋ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಸಂಚಾರ ರದ್ದು. ಅಂತರ್ಜಿಲ್ಲಾ ಬಸ್ಸುಗಳ ಸಂಖ್ಯೆಯೂ ರದ್ದು. ಭಾರತದಾದ್ಯಂತ ಸಂಚರಿಸುತ್ತಿದ್ದ ಎಲ್ಲಾ ೧೩,೦೦೦ ರೈಲುಗಳನ್ನು ಮಾರ್ಚ್ ೩೧ರ ವರೆಗೆ ರದ್ದುಗೊಳಿಸಲಾಗಿದೆ. ಮೆಟ್ರೋ, ಬಸ್ಸುಗಳ ಸಂಚಾರಕ್ಕೂ ಅಡ್ಡಿ.
ಸುದ್ದಿ-೪: ಮಾರ್ಚ್ ಮೂವತ್ತೊಂದರ ತನಕ ಮುಂದುವರೆದ ವರ್ಕ್ ಫ್ರಂ ಹೋಂ. ವರ್ಕ್ ಫ್ರಂ ಹೋಂ ಸಿಕ್ಕಿತು ಅಂತ ರಜೆ ಸಿಕ್ಕಿತೆಂಬಂತೆ ಬೆಂಗಳೂರಿಂದ ನಿಮ್ಮ ನಿಮ್ಮೂರಿಗೆ ಹೊರಟು ಬಿಡಬೇಡಿ. ಆ ಪ್ರಯಾಣದ ಸಂದರ್ಭದಲ್ಲಿ ನಿಮ್ಮೊಂದಿಗೆ ಕರೋನಾ ತಗೊಂಡು ಊರ ಕಡೆ ಹೋಗ್ಬೇಡಿ . ಊರುಗಳಲ್ಲಿ ಪೇಟೆಗಳಷ್ಟು ಆಸ್ಪತ್ರೆಗಳಿಲ್ಲ, ಸೌಲಭ್ಯಗಳಿಲ್ಲ. ಸ್ವಲ್ಪ ದಿನ ಬೆಂಗಳೂರಲ್ಲೇ ಇದ್ದು ಬಿಡಿ ಎಂದು ಹಳ್ಳಿಗರ ಕೋರಿಕೆ
ಸುದ್ದಿ-೫: ಪಟ್ಟಣಗಳಿಂದ ಹಳ್ಳಿಗಳ ಕಡೆಗೆ ಕರೋನಾ ಹರಡುವುದನ್ನು ತಡೆಯೋಕೆ ಪಟ್ಟಣಗಳಿಂದ ಹಳ್ಳಿಗಳ ಕಡೆಗೆ ಮಾರ್ಚ್ ಮೂವತ್ತೊಂದರ ತನಕ ಹೋಗದಿರಿ ಎಂದು ಸಿ.ಎಂ ಯಡಿಯೂರಪ್ಪ ಕರೆ
ಸುದ್ದಿ-೬: ಬೆಂಗಳೂರ ಪೀಜಿಗಳಲ್ಲಿ ಬೇಜಾರೆಂದು ತಮ್ಮೂರಿಗೆ ಖಾಸಗಿ ಬಸ್ಸುಗಳಲ್ಲಿ ಹೊರಟ ಹುಡುಗ ಹುಡುಗಿಯರು ! ಬಸ್ಸಿಲ್ಲದಿದ್ದರೆ ಏನಾಯ್ತೆಂದು ತಮ್ಮ ಕಾರು ಬೈಕುಗಳಲ್ಲಿ ಬೆಂಗಳೂರಿಂದ ತಮ್ಮೂರ ಕಡೆಗೆ ಹೊರಟವರು !
ಸುದ್ದಿ-೭: "ಜನತಾ ಕರ್ಫ್ಯೂ" ಪ್ರಭಾವಕ್ಕೆ ಹಿಂದಿನ ದಿನಗಳ ಹೋಲಿಕೆಯಲ್ಲಿ ನಿಧಾನವಾದ ಕರೋನಾ ಸೋಂಕಿತರ ಸಂಖ್ಯೆಯಲ್ಲಿನ ಏರಿಕೆ. ಕರ್ಫ್ಯೂ ದಿನ ರಾತ್ರೆ ೯ರ ವರೆಗೆ ಮನೆಯಲ್ಲಿರಿ ಅಂದರೆ ಸಂಜೆ ಐದಕ್ಕೆ ಚಪ್ಪಾಳೆ ಹೊಡೆದು ನಂತರ ಗುಂಪುಗೂಡಿ ಸಂಭ್ರಮಿಸಿದ ಜನರು !
ಸುದ್ದಿ-೮: ಕರೋನಾಗೆ ಹೆಲಿಕ್ಯಾಪ್ಟರುಗಳ ಮೂಲಕ ಔಷಧ ಸಿಂಪಡಿಸುತ್ತಾರಂತೆ ಎಂಬ ಸುದ್ದಿ ವಾಟ್ಸಾಪಿನ ತುಂಬೆಲ್ಲಾ ಹರಡಿ ಅದಕ್ಕಾಗಿ ಬಾಯಿ ಕಳೆದುಕೊಂಡು ಕಾದ ಜನರು !

ಈ ಸುದ್ದಿಗಳನ್ನು ಓದ್ತಾ ಇದ್ರೆ ಜನಕ್ಕೆ ಏನಾಗಿದೆ ಅಂತ ಅರ್ಥ ಆಗ್ತಿಲ್ಲ. ಊರಿಗೆ ಹೋಗ್ಬೇಡ್ರಪ್ಪ ಅಂತ ಬಸ್ಸು, ರೈಲು ಕ್ಯಾನ್ಸಲ್ ಮಾಡಿದ್ರೆ ಪೀಜಿ ಊಟ ಸರಿಯಾಗ್ತಿಲ್ಲ, ಬೋರಾಗ್ತಿದೆ ಅಂತ ಊರಿಗೆ ಹೋಗ್ತೀನಿ ಅಂತೀರಲ್ಲ. ಏನೇನ್ಬೇಕು ನಿಮಗೆ ? ಒಂದು ವಾರವೂ ಮನೆಯಲ್ಲಿರದ ನಾನೇ ಈಗ ಮೂರು ವಾರಗಳಿಂದ ಮನೇಲಿದೀನಿ. ನಿಮಗೆ ಒಂದಿಷ್ಟು ದಿನ ಬೆಂಗಳೂರಲ್ಲೇ ಇರೋಕೆ ಏನಪ್ಪ ಕಷ್ಟ ಅಂದ್ರೆ ನನ್ನತ್ರ ಸ್ಯಾನಿಟೈಸರ್ ಇದೆ, ಮಾಸ್ಕ್ ಇದೆ, ಹ್ಯಾಂಡ್ ರಬ್ ಇದೆ ಅಂತಾರಲ್ಲ ಜನ ಏನೇನ್ನೋಣ. ನಿಮಗೆ ಕರೋನಾ ಇರದೇ ಇರಬಹುದು. ಆದರೆ ಆ ಬಸ್ಸಲ್ಲಿ ಬರೋ ಯಾರಿಗೂ ಕರೋನಾ ಇರಲ್ಲ ಅಂತ ಏನು ಗ್ಯಾರಂಟಿ ? ಅವರು ಬಳಸಿದ ಅದೇ ಹಾಸಿಗೆ, ಬಸ್ಸಿನ ಸಿಟು, ಹ್ಯಾಂಡಲ್ಲುಗಳನ್ನು ಬಳಸಿಯೇ ತಾನೇ ನೀವು ಹೋಗಬೇಕು. ಆಗ ನಿಮಗೆ ಕರೋನಾ ಸೋಂಕು ತಗುಲೋಲ್ಲ ಅಂತ ಏನು ಗ್ಯಾರಂಟಿ ಅಂದ್ರೆ ಇವ್ರ ಬಳಿ ಉತ್ತರವಿಲ್ಲ. ಅಲ್ಲಪ್ಪಾ, ಮಡಿಕೇರಿಯಿಂದ ಮೂರ್ನಾಡಿಗೆ ಕರೋನಾ ಸೋಂಕಿತನ ಜತೆಗೆ ಹೋದ ಆಟೋ ಡ್ರೈವರಿಗೇ ಕರೋನಾ ಸೋಂಕಿರೋ ಶಂಕೆಯಿದೆಯಂತೆ ಇನ್ನು ನೀವು ಊರಿಗೆ ಹೋಗಿ ಅದಿನ್ನೆಷ್ಟು ಜನರಿಗೆ ಕರೋನಾ ಹಬ್ಬಿಸುತ್ತೀರಾ ಅಂದ್ರೆ ನಾವೊಬ್ರು ಹೋದ್ರೆ ಏನಾಗುತ್ತೆ ಅಂತಾರಲ್ಲ ಇವರು ? ! ಬಸ್ಸು, ರೈಲು ನಿಲ್ಲಿಸಿದ್ದು ಸೂಚ್ಯಕ ಅಷ್ಟೆ. ಸರ್ಕಾರದ ಕೈಲಿ ಎಲ್ಲವನ್ನೂ ನಿಲ್ಲಿಸೋಕೆ ಆಗದೇ ಇರಬಹುದು. ಒಂದಷ್ಟು ಹೇಳಿದರೆ ಉಳಿದಿಷ್ಟನ್ನು ನೀವೇ ಅರ್ಥ ಮಾಡಿಕೊಳ್ಳಿ ಅಂತ ಅರ್ಥ ತಾನೇ ? ಬೆಂದಕಾಳೂರೆಂಬ ಮಹಾನಗರಿಯಲ್ಲಿರೋ ವಿದ್ಯಾವಂತ ಜನರೇ ಈ ರೀತಿ ಅವಿವೇಕಿಗಳಾಗಿ ವರ್ತಿಸಿದರೆ ಉಳಿದವರ ಕತೆಯೇನು ?

ಇನ್ನು ಕರ್ಫ್ಯೂ ದಿನ ಖಾಲಿ ರೋಡ್ ಸಿಕ್ತು ಅಂತ ಜೀವ ಕಳೆದುಕೊಳ್ಳೋರು, ಮನೆಯಲ್ಲೇ ನಿಂತು ಚಪ್ಪಾಳೆ ತಟ್ಟಿ ಅಂದ್ರೆ ಗುಂಪುಗೂಡಿ ಪಟಾಕಿ ಹೊಡೆಯೋರು ಇವ್ರಿಗೆಲ್ಲಾ ಏನನ್ನೋಣ. ಗುರುವೇ , ಏನು ಹೇಳಿದ್ದಾರೆ, ಅದನ್ನ ಯಾಕೆ ಹೇಳಿದ್ದಾರೆ ಅಂತ ಯಾಕೆ ಯೋಚನೆ ಮಾಡೋಲ್ಲ ನೀವು ? ಜನ ಮರುಳೋ, ಜಾತ್ರೆ ಮರುಳೋ ಅಂತ ಕುಣಿಯೋ ಬದಲು, ಗುಲಾಮರು-ಭಕ್ತರು ಅಂತ ಕಾದಾಡೋ ಬದಲು ಒಂದಿಷ್ಟು ದಿನ ತಣ್ಣಗೆ ಮನೇಲಿರಿ. ನಿಮ್ಮ ಈ ಜಾತಿ ಕಲಹ, ಎಡ-ಬಲ ಕಚ್ಚಾಟಗಳನ್ನ ಮತ್ತೆ ಯಾವಾಗಲಾದರೂ ಶುರು ಹಚ್ಚಿಕೊಳ್ಳುವಿರಂತೆ. ಈ ಕಚ್ಚಾಟಗಳಿಗಿಂತಾ ನೀವೆಲ್ಲಾ ತಣ್ಣಗೆ ಮನೆಯೊಳಗೆ ಇದ್ದು ವೈದ್ಯರಿಗೆ ಪೋಲೀಸರಿಗೆ ಅವರವರ ಕೆಲಸ ಮಾಡೋಕೆ ಬಿಡಿ. ವಾಟ್ಸಾಪಲ್ಲಿ ಬಂತು ಅಂತ ಕಣ್ಮುಚ್ಚಿಕೊಂಡು ಫಾರ್ವಾರ್ಡ್ ಮಾಡೋ ಬದಲು ಆ ಮಾಹಿತಿ ಕಳಿಸಿದವರ ಬಳಿ ಆ ಸಂದೇಶದ ಮೂಲದ ಬಗ್ಗೆ ವಿಚಾರಿಸಿ. ಬಂದ ಸಂದೇಶ, ವೀಡಿಯೋ ನಿಜವೋ ಸುಳ್ಳೋ ಪರೀಕ್ಷಿಸಿ. ನಂತರವಷ್ಟೇ ಅದನ್ನ ಬೇರೆಯವರ ಜೊತೆ ಶೇರ್ ಮಾಡಿ. ಈಗ ನಾನೊಬ್ಬ ಮನೆಯಲ್ಲೇ ಇದ್ದರೆ ಏನಾಗುತ್ತೆ ಅಂತೀರಾ ? ಸರ್ಕಾರದ ಅಧಿಕೃತ ಮಾಹಿತಿ ಆಕರಗಳಿಂದ ಮಾಹಿತಿ ಸಂಗ್ರಹಿಸೋ ಕೋವಿಡ್.ಔಟ್ ಎಂಬ ತಾಣವನ್ನೊಮ್ಮೆ ನೋಡಿ. ೨೦ನೇ ತಾರೀಖು ೨೫೩ ಇದ್ದ ಕರೋನಾ ಸೋಂಕಿತರ ಸಂಖ್ಯೆ ೨೧ಕ್ಕೆ ೩೨೮ಕ್ಕೆ ಏರಿತ್ತು. ಅಂದರೆ ೭೫ ಹೊಸ ಪ್ರಕರಣ. ಇವತ್ತು ಅಂದರೆ ೨೨ನೇ ತಾರೀಖು ಆ ಸೋಂಕಿರತ ಸಂಖ್ಯೆ ೩೬೫ಕ್ಕೆ ಏರಿದೆ. ಅಂದರೆ ೩೭ ಹೊಸ ಪ್ರಕರಣ. ದಿನೇ ದಿನೇ ಏರುತ್ತಲೇ ಸಾಗಿದ್ದ ಕರೋನಾದ ಏರುಗತಿ ಕಮ್ಮಿಯಾಗಿದೆ ಅಂದರೆ ದಿನವಿಡೀ ಮನೆಯೊಳಗೇ ಇದ್ದ ಜನರ ಸಹಕಾರವೇ ಕಾರಣ ಅದಕ್ಕೆ. ಇದೇ ತರಹ ಇನ್ನೊಂದಿಷ್ಟು ದಿನ ಮನೆಯೊಳಗೇ ಇದ್ದರೆ ಏನಾಗುತ್ತೆ ? ವರ್ಕ್ ಫ್ರಂ ಹೋಂ ಅಂತಿರೋ ಜನರು ಅತೀ ಅಗತ್ಯಗಳಾದ ದಿನಸಿ, ತರಕಾರಿಗಳಿಗೆ ಹೊರ ಹೋಗೋದು ಬಿಟ್ಟು ಬೇರೆ ಕೆಲಸಕ್ಕೆ, ಸುತ್ತೋಕೆ ಹೋಗದಿದ್ದರೆ ಏನಾಗುತ್ತೆ ? ಈ ಕರೋನಾ ಹತೋಟಿಗೆ ಬಾರಲಾರದೇ ? ಆಸ್ಪತ್ರೆಗೆ ದಾಖಲಾದವರಲ್ಲಿ ೨೦ ಜನರು ಕರೋನಾ ಸೋಂಕಿಂದ ಹೊರಬಂದಿದ್ದಾರೆ ಎಂಬ ಆಶಾದಾಯಕ ಮಾಹಿತಿಯನ್ನು ಮೇಲಿನ ಜಾಲತಾಣವೇ ನೀಡುತ್ತಿದೆ. ಹಾಗಾಗಿ ನನ್ನ ಗೆಳೆಯರ ಬಳಗದಲ್ಲಿರೋ ಗೆಳೆಯರಿಗೆಲ್ಲಾ ನೀವು ಬೆಂಗಳೂರಲ್ಲಿದ್ದರೆ , ವರ್ಕ್ ಫ್ಹ್ರಂ ಹೋಂ ನಂತಹ ಅವಕಾಶಗಳು ಸಿಕ್ಕಿದ್ದರೆ ದಯಮಾಡಿ ಮನೆಯಿಂದ ಹೊರಬಂದು ಊರು ತಿರುಗೋ ಸಾಹಸಕ್ಕೆ ಕೈ ಹಾಕಬೇಡಿ, ಸಿಕ್ಕ ಸಿಕ್ಕ ಸಂದೇಶಗಳ ಎಲ್ಲೆಡೆ ಹರಡಿಸಬೇಡಿ, ಇದ್ದಲ್ಲೇ ಇದ್ದು ಒಂದಿಷ್ಟು ದಿನ ಸಮಾಜಕ್ಕೆ ಈ ಕರೋನಾ ಸೋಂಕಿಂದ ಹೊರಬರೋಕೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕೋರುತ್ತೇನೆ. 

Saturday, March 14, 2020

ಕರೊನಾ ಕೋಲಾಹಲವೂ, ದಿಯಾ ಮತ್ತು ಲವ್ ಮಾಕ್ಟೈಲ್ಗಳು



ಕರುನಾಡ ಕಲಬುರ್ಗಿಯಲ್ಲಿ ಸೌದಿಯಿಂದ ಬಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಬೆಂಗಳೂರಲ್ಲಿ ಇಬ್ಬರು ಕರೋನಾ ಸೋಂಕಿತರು ಪತ್ತೆಯಾಗಿದ್ದಾಗ ಸೃಷ್ಠಿಯಾದ ಆತಂಕ ಟಿ.ವಿಯವರ ಅಬ್ಬರದಿಂದ "ಕರೋನಾ ರಣಕೇಕೆ", "ಕರೋನಾ ಅಬ್ಬರ", "ಕರೋನಾ ಕೋಲಾಹಲ"ವಾಗಿ ಮಾರ್ಪಟ್ಟಿದೆ. ಬೆಂಗಳೂರಿಗೆ ಬಂದು ಮೂವತ್ತಾರು ಮಂದಿಗೆ ಕರೋನಾ ಹಬ್ಬಿಸಿದ್ದಾರೆ ಎನ್ನಲಾಗಿದ್ದ ತೆಲಂಗಾಣದ ಟೆಕ್ಕಿಯನ್ನೇ ಈಗ ಅಲ್ಲಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರೂ ಇಲ್ಲಿನ ಎಚ್ಚರಿಗೆ ಮುಂದುವರೀತಿದೆ. ರಾಜ್ಯವನ್ನೇ ಏಳು ದಿನಗಳ ಕಾಲ ಬಂದ್ ಮಾಡೋ ಮಾನ್ಯ ಮುಖ್ಯಮಂತ್ರಿಗಳವರ ನಿರ್ಧಾರದಿಂದ ಕೆಲವರಿಗೆ ಸಖತ್ ಖುಷಿಯಾಗಿದ್ರೆ ಕೆಲವರ ಬದುಕೇ ದಿಕ್ಕಾಪಾಲಾದಂತೆ ಕಾಣ್ತಿದೆ. ಏನು ಮುಟ್ಟಿದ್ರೂ ಹ್ಯಾಂಡ್ ಸ್ಯಾನಿಟರೈಸ್ ಹಾಕಿ ತೊಕ್ಕೊಳಿ ಅಂತ ವಾಟ್ಸಾಪಿನ ಫಾರ್ವಾಡುಗಳು ಓಡಾಡಿದ್ದೇ ಓಡಾಡಿದ್ದು. ಈಗೆಲ್ಲಿ ನೋಡಿದ್ರೂ ಸ್ಟಾಕೇ ಇಲ್ಲ ಅದರದ್ದು. ಮಾಸ್ಕ್ ಹಾಕ್ಕೊಳ್ರಪ್ಪ ಅಂತಂದಿದ್ದೇ ಸಾಕು ಮುನ್ನೂರೈವತ್ತರ ಮಾಸ್ಕುಗಳು ಮಾರ್ಕೇಟಿಂದ್ಲೇ ಮಂಗಮಾಯ ! ಐನೂರೈವತ್ತು ಕೊಟ್ಟರೆ ಕೊಡ್ತೀವಿ ಸಾರ್ ಅಂತಾನೆ ಅಂಗಡಿಯವ ಬ್ಲಾಕಲ್ಲಿ ಮಾರೋ ಸ್ಕೆಚ್ ಹಾಕಿ ! ಇಂದಿನ ಪೇಪರಲ್ಲಿ ಅಂತಹ ಕ್ರಮಗಳನ್ನ ಕೈಗೊಳ್ಳೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಮುಖ್ಯಮಂತ್ರಿಗಳೇ ಎಚ್ಚರಿಸಿದ್ರೂ ಆ ಪರಿಸ್ಥಿತಿ ಬದಲಾಗುತ್ತೋ ಇಲ್ವೋ ಗೊತ್ತಿಲ್ಲ. ಮಾಲು, ಸಿನಿಮಾ ಥಿಯೇಟರ್ಗಳೆಲ್ಲ ಬಂದಾಗಿರೋದ್ರಿಂದ ಬೆಂಗ್ಳೂರೇ ಒಂಥರಾ ಥಂಡಾ ಹೊಡಿದ ಫೀಲು. ಐ.ಟಿ , ಬಿ.ಟಿಗಳಿಗೆಲ್ಲಾ ಮನೆಯಿಂದ ಕೆಲಸ ಮಾಡೋಕೆ ಹೇಳಿ ಅಂತ ಮುಖ್ಯಮಂತ್ರಿಗಳೇ ಹೇಳಿದ್ರೂ ಅದ್ನ ಹೇಳ್ಭೇಕೋ ಬೇಡ್ವೋ ಅಂತ ಮೀನ ಮೇಷ ಎಣಿಸ್ತಿರೋ ಕಂಪೆನಿಗಳ ನಡುವೆ ಉದ್ಯೋಗಿಗಳೇ ಮನೆಗಳೊಳಗೆ ಫೆವಿಕಾಲ್ ಹಚ್ಕೊಂಡು ಕುತ್ಕೊಂಡಿರೋದ್ರಿಂದ ಬಿ.ಎಂ.ಟಿ.ಸಿ, ಮೆಟ್ರೋಗಳಿಗೂ ಹೆವಿ ಲಾಸಂತೆ. ಥಿಯೇಟ್ರುಗಳು ಬಾಗಿಲು ಹಾಕೋದ್ರಿಂದ ಕನ್ನಡ ಚಿತ್ರೋದ್ಯಮಕ್ಕೂ ಲಾಸ್ ವರ್ಗಾವಣೆಯಾಗ್ಬೋದೇನೋ ಅನಿಸೋ ಹೊತ್ತಿಗೆ ಕಂಡ ಆಶಾ ಕಿರಣ ಅಮೇಜಾನ್ ಪ್ರೈಮ್ !

ಅಮೇಜಾನ್ ಕಿಂಡಲ್ಲಲ್ಲಿ ಕನ್ನಡ ಕೊಡ್ರಪ್ಪ ಅಂತ ಕೇಳಿ ಕೇಳಿ ಸಾಕಾದ್ರೂ ಇವರಿಗೆ ಕಾಣದ ಕನ್ನಡದ ಗ್ರಾಹಕರು ಈಗ ಕಂಡಿದ್ದು ಆಸ್ಛರ್ಯವೇ ಸರಿ ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಎಂಬ ಎರಡು ಒಳ್ಳೇ ಚಿತ್ರಗಳು ಬಂದ್ ಕಾರಣದಿಂದ ಬಂದಾಗಿ ಹೋಗೋ ಆತಂಕನ ದೂರ ಮಾಡಿದ ಶ್ರೇಯಸ್ಸು ಅಮೇಜಾನವ್ರಿಗೇ ಸಲ್ಲಬೇಕು ಅಂದ್ರೆ ತಪ್ಪಲ್ಲವೇನೋ. "ಲವ್ ಮಾಕ್ ಟೈಲ್" ಥಿಯೇಟರ್ಗಳಲ್ಲೂ ಓಡ್ತಿತ್ತು. ನಾಲ್ಕು ವಾರದ ಮೇಲೆ ಆಗಿತ್ತು ಅಂತ ಅಂದ್ರೂ ಇವೆರಡೂ ಮೂವಿಗಳನ್ನ ಈಗೊಂದೆರೆಡು ದಿನಗಳಲ್ಲೇ ನನ್ನ ಸ್ನೇಹಿತರು ನೋಡಿರೋ ಕಾರಣ ಕರೋನಾ ಮತ್ತು ಅಮೇಜಾನ್ ಪ್ರೈಮ್ !

ಎಲ್ಲಾ ಬಂದಾದ್ರೆ , ಮನೇಲೇ ಕೂತು ಎಷ್ಟೂಂತ ಕೆಲ್ಸ ಮಾಡೋದು ಸಿವಾ ? ಬೇಸರಕ್ಕೆ ಅಂತ ಮೊಬೈಲೋ, ಟೀವಿನೋ ಹೊಕ್ಕಾಗ ಇದೇ ಕಣ್ಣಿಗೆ ಬೇಳಬೇಕೇ ಸಿವಾ ? "ಲೂಸಿಯಾ" ಸಿನಿಮಾ ಬಂದಾಗ್ಲೂ ಅಂತರ್ಜಾಲದಲ್ಲಿ ನಡೀತಿದ್ದ ಅದರ ಚರ್ಚೆಗಳಿಂದ್ಲೇ ಅದು ಸುಮಾರು ದಿನ ಓಡಿತು ಅನ್ನೋ ಮಾತುಗಳಿದ್ರೂ ಇವೆರಡೂ ಚಿತ್ರಗಳಲ್ಲಿ ಅಂತರ್ಜಾಲದ ಹೊರಬಂದೂ ಓಡೋ ತಾಕತ್ತಿದೆ ಅನ್ಸತ್ತೆ. ಸಿನಿಮಾ ಅಂದ್ರೆ ನಾಲ್ಕು ಫೈಟು, ವಿಲನ್ನುಗಳು ಬಂದು ಹೀರೋಯಿನ್ನನ್ನ ಕಿಡ್ನಾಪ್ ಮಾಡ್ಬೇಕು, ನಾಲ್ಕು ಮರಸುತ್ತೋ ಸೀನುಗಳು, ಐಟಂ ಸಾಂಗುಗಳಿರ್ಬೇಕು, ಹೀರೋಗೊಂದು ಹೀರೋಯಿನ್ನಿಗೊಂದು ಬಿಲ್ಡಪ್ ಕೊಡೋ ಸಾಂಗೋ ಡೈಲಾಗುಗಳೋ ಇರ್ಬೇಕು , ಕಾರು ಬೈಕುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳೋ ಹೊಡೆದಾಟಗಳಿರ್ಬೇಕು ಅನ್ನೋ ಸಿದ್ಧ ಸೂತ್ರಗಳಿಂದೆಲ್ಲಾ ಹೊರಬಂದು ಏನೋ ಟ್ವಿಸ್ಟ್ ಕೊಟ್ಟು ಕೊನೆಯವರೆಗೂ ಕುತೂಹಲಕರವಾಗಿ ನೋಡಿಸಿಕೊಂಡು ಹೋಗೋ ಅಂತಹ ಚಿತ್ರ ಮಾಡ್ಬೇಕು ಅನ್ನೋ ನಿರ್ದೇಶಕರ ಶ್ರಮ ಎರಡೂ ಚಿತ್ರಗಳಲ್ಲಿ ಕಾಣುತ್ತೆ. ಟ್ವಿಸ್ಟ್ ಕೊಡಬೇಕು ಅನ್ನೋ ಧಾವಂತದಲ್ಲೇ ಎರಡೂ ಚಿತ್ರಗಳ ಕೊನೆಯ ಹತ್ತು-ಹದಿನೈದು ನಿಮಿಷಗಳನ್ನು ಅದ್ವಾನಗೊಳಿಸಿದಂತೆ ಕಾಣುತ್ತಾದ್ರೂ ಪ್ರತಿಯೊಂದು ದೃಶ್ಯಕ್ಕೂ ಅವರು ಹಾಕಿದ ಶ್ರಮ ಕಂಡು ಖುಷಿಯಾಗುತ್ತೆ. ಸಿಂಪಲ್ ಉದಾಹರಣೆಯೆಂದ್ರೆ "ಲವ್ ಮಾಕ್ ಟೈಲ್" ನಲ್ಲಿನ ನಿಧಿಮಾ ಮತ್ತು ಆದಿಯ ನಡುವಿನ ಮನೆಯ ಒಂದು ದೃಶ್ಯ. ಅದರಲ್ಲಿ ಅವ ಕುತ್ತಿಗೆಗೆ ಹಾಕ್ಕೊಂಡ ದಿಂಬು, ನಾಯಕಿಯ ಡ್ರೆಸ್ಸು, ಹಿಂದಿನ ಕರ್ಟನ್ನಿನ್ನ ಪರದೆ ಎಲ್ಲವೂ ನೀಲಿಮಯ, ದೃಶ್ಯವೂ ಪ್ರೇಮಮಯ ! "ದಿಯಾ"ದಲ್ಲಿ ಬರೋ ಎರಡನೇ ನಾಯಕ ಮತ್ತು ಆತನ ತಾಯಿಯ ಪಾತ್ರ ಲಕ್ಕಿಯಂತೂ ನಮ್ಮ ನಡುವೆ ಈ ತರದ ವ್ಯಕ್ತಿಗಳೂ ಇರೋಕೆ ಸಾಧ್ಯವಾ ಅಂತ ಅಚ್ಚರಿ ಮೂಡಿಸುವಂತದ್ದು. ಕೆಲವೊಂದು ಬೋರ್ ಹೊಡಿಸೋ ಸನ್ನಿವೇಶಗಳನ್ನ ಬಿಟ್ರೆ, ಕೆಲವೆಡೆ ಪ್ರೀತಿಯ ಓವರ್ಡೋಸ್ ಅನಿಸಿದರೂ ಆಪ್ತವೆನಿಸೋ ಇವೆರಡೂ ಚಿತ್ರಗಳಿಂದ ವಾರಾಂತ್ಯಕ್ಕೊಂದು ಕಳೆ ಸಿಕ್ಕಿದ್ದು ಸುಳ್ಳಲ್ಲ. 


ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಂಗಳಲ್ಲಿ ಕನ್ನಡದ ಚಿತ್ರಗಳು ಹೆಚ್ಚಿಲ್ಲ. ಇದ್ದರೂ ಹೊಸದಿಲ್ಲ ಅನ್ನೋ ಗ್ರಾಹಕರ ಕೊರಗು ಸದ್ಯದಲ್ಲೇ ನೀಗಬಹುದೇನೋ ಅನ್ನೋ ನಿರೀಕ್ಷೆಯನ್ನು ಹುಟ್ಟಿಸಿರೋ ಈ ಚಿತ್ರಗಳಿಗೆ ಒಂದು ಅಭಿನಂದನೆ. ಕನ್ನಡ ಚಿತ್ರಗಳಿದ್ರೂ ಇರೋ ಐದಾರು ಸ್ಕ್ರ್ರೀನುಗಳಲ್ಲಿ ನಾಲ್ಕೈದು ಶೋಗಳಲ್ಲಿ ಒಂದು ಶೋ ಕೊಡೋಕೆ ಅಳ್ತಿರೋ ಮಲ್ಟಿಪ್ಲೆಕ್ಸುಗಳು, ಕನ್ನಡ  ಸಿನಿಮಾಗಳಿಗೆ ಥಿಯೇಟರುಗಳು ಸಿಗದೇ ತಾವೇ ವಿತರಕರಾಗಿರೋ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ಥಿಯೇಟರ್ ಸಿಗುವಂತೆ  ನೋಡ್ಕೊಳ್ಳುತ್ತಿರೋ ನಮ್ಮಲ್ಲೇ ಇರೋ ದೊಡ್ಡ ಮನುಷ್ಯರ ನಡುವೆ ಕನ್ನಡಿಗರಿಗೆ ಕನ್ನಡದಲ್ಲೇ ಇರೋ ಉತ್ತಮ ಚಿತ್ರಗಳು ಸಿಗದಂತಾಗುತ್ತಿವೆ. ವಾರಾಂತ್ಯದಲ್ಲಾದ್ರೂ ಚಿತ್ರ ನೋಡೋಣ ಅಂತಂದ್ರೆ ಬೇರೆ ದಿನ ನೂರೈವತ್ತರ ಸುಮಾರಿರೋ ಟಿಕೇಟಿಗೆ ವಾರಾಂತ್ಯದಲ್ಲಿ ಎರಡೂವರೆ ಮೂರು ಪಟ್ಟು ಕೊಟ್ಟು ನೋಡಬೇಕಾದ ಅನಿವಾರ್ಯತೆ ಬೆಂಗಳೂರಂತ ಮಹಾನಗರಗಳಲ್ಲಿ ! ಯಾರ ಹೊಟ್ಟೆಯ ಮೇಲೂ ಹೊಡೆಯುವಂತಹ ಮಾತಾಡಬಾರದು ಅಂತನ್ನೋದು ನಿಜವಾದರೂ ಈ ಥರ ಮಾಡುತ್ತಿದ್ದ  ಮಲ್ಟಿಪ್ಲೆಕ್ಸುಗಳಿಗೂ ಇಷ್ಟಕ್ಕಿಂತ ಜಾಸ್ತಿ ಟಿಕೇಟ್ ದರ ವಿಧಿಸೋ ಹಾಗಿಲ್ಲ ಅಂತ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೋ ಅಂತ ಎಷ್ಟೋ ಸಲ ಅನಿಸಿದ್ದಿದೆ . ಅಷ್ಟೆಲ್ಲಾ ಕೊಡೋಕೆ ಸಿದ್ದವಾದ್ರೂ ಹೇಳ್ದೇ ಕೇಳ್ದೇ ಚೆನ್ನಾಗಿ ಓಡ್ತಿರೋ ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡಿ ಯಾವುದೋ ತೆಲುಗು, ತಮಿಳು ಚಿತ್ರಗಳಿಗೆ ಮಣೆ ಹಾಕ್ತಿದ್ದ ಅವರನ್ನು ನೋಡಿ ಎಷ್ಟು ಉರ್ಕಂಡ್ರೂ ಏನೂ ಮಾಡೋಕಾಗದೇ ಇರುವಂತ ಕನ್ನಡಿಗರಿಗೆ ಆಶಾ ಕಿರಣಗಳಂತೆ ಕಾಣ್ತಿರೋದು ಇದೇ ಹಾಟ್ ಸ್ಟಾರು, ನೆಟ್ ಫ್ಲಿಕ್ಸು ಮತ್ತು ಅಮೇಜಾನುಗಳು ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಚಿತ್ರಗಳಿಗೆ ಸಿಗೋ ವೀಕ್ಷಣೆ , ಮೆಚ್ಚುಗೆ ಈ ಅಮೇಜಾನಿಂದ ಆಚೆ ದಾಟಿ ಅದಕ್ಕೆ ದುಡ್ಡು ಸುರಿದ ನಿರ್ಮಾಪಕರ ಜೇಬು ತುಂಬಲಿ, ಈ ತರದ್ದೇ ಹಲವು ಹೊಸ ಕನ್ನಡ ಪ್ರಯತ್ನಗಳಿಗೆ ನಾಂದಿಯಾಗಲಿ ಅನ್ನೋದು ಸದ್ಯದ ಆಶಯ. ಕನ್ನಡದ ಜನತೆಯ ಸಿನಿಮಾ ಪ್ರೇಮದ ಅಗಾಧತೆಯನ್ನು ಈ ಆನ್ ಲೈನ್ ಕಂಪೆನಿಗಳೂ ಅರ್ಥ ಮಾಡಿಕೊಂಡು ಇನ್ನೂ ಹೆಚ್ಚೆಚ್ಚು ಕನ್ನಡ ಚಿತ್ರಗಳನ್ನ ತಮ್ಮ ವೇದಿಕೆಗಳ ಮೂಲಕ ಹೊರತರುವಂತಾಗಲಿ ಅನ್ನೋ ಹಾರೈಕೆಯೊಂದಿಗೆ ಸದ್ಯಕ್ಕೊಂದು ವಿರಾಮ.