ಕರುನಾಡ ಕಲಬುರ್ಗಿಯಲ್ಲಿ ಸೌದಿಯಿಂದ ಬಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಬೆಂಗಳೂರಲ್ಲಿ ಇಬ್ಬರು ಕರೋನಾ ಸೋಂಕಿತರು ಪತ್ತೆಯಾಗಿದ್ದಾಗ ಸೃಷ್ಠಿಯಾದ ಆತಂಕ ಟಿ.ವಿಯವರ ಅಬ್ಬರದಿಂದ "ಕರೋನಾ ರಣಕೇಕೆ", "ಕರೋನಾ ಅಬ್ಬರ", "ಕರೋನಾ ಕೋಲಾಹಲ"ವಾಗಿ ಮಾರ್ಪಟ್ಟಿದೆ. ಬೆಂಗಳೂರಿಗೆ ಬಂದು ಮೂವತ್ತಾರು ಮಂದಿಗೆ ಕರೋನಾ ಹಬ್ಬಿಸಿದ್ದಾರೆ ಎನ್ನಲಾಗಿದ್ದ ತೆಲಂಗಾಣದ ಟೆಕ್ಕಿಯನ್ನೇ ಈಗ ಅಲ್ಲಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರೂ ಇಲ್ಲಿನ ಎಚ್ಚರಿಗೆ ಮುಂದುವರೀತಿದೆ. ರಾಜ್ಯವನ್ನೇ ಏಳು ದಿನಗಳ ಕಾಲ ಬಂದ್ ಮಾಡೋ ಮಾನ್ಯ ಮುಖ್ಯಮಂತ್ರಿಗಳವರ ನಿರ್ಧಾರದಿಂದ ಕೆಲವರಿಗೆ ಸಖತ್ ಖುಷಿಯಾಗಿದ್ರೆ ಕೆಲವರ ಬದುಕೇ ದಿಕ್ಕಾಪಾಲಾದಂತೆ ಕಾಣ್ತಿದೆ. ಏನು ಮುಟ್ಟಿದ್ರೂ ಹ್ಯಾಂಡ್ ಸ್ಯಾನಿಟರೈಸ್ ಹಾಕಿ ತೊಕ್ಕೊಳಿ ಅಂತ ವಾಟ್ಸಾಪಿನ ಫಾರ್ವಾಡುಗಳು ಓಡಾಡಿದ್ದೇ ಓಡಾಡಿದ್ದು. ಈಗೆಲ್ಲಿ ನೋಡಿದ್ರೂ ಸ್ಟಾಕೇ ಇಲ್ಲ ಅದರದ್ದು. ಮಾಸ್ಕ್ ಹಾಕ್ಕೊಳ್ರಪ್ಪ ಅಂತಂದಿದ್ದೇ ಸಾಕು ಮುನ್ನೂರೈವತ್ತರ ಮಾಸ್ಕುಗಳು ಮಾರ್ಕೇಟಿಂದ್ಲೇ ಮಂಗಮಾಯ ! ಐನೂರೈವತ್ತು ಕೊಟ್ಟರೆ ಕೊಡ್ತೀವಿ ಸಾರ್ ಅಂತಾನೆ ಅಂಗಡಿಯವ ಬ್ಲಾಕಲ್ಲಿ ಮಾರೋ ಸ್ಕೆಚ್ ಹಾಕಿ ! ಇಂದಿನ ಪೇಪರಲ್ಲಿ ಅಂತಹ ಕ್ರಮಗಳನ್ನ ಕೈಗೊಳ್ಳೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಮುಖ್ಯಮಂತ್ರಿಗಳೇ ಎಚ್ಚರಿಸಿದ್ರೂ ಆ ಪರಿಸ್ಥಿತಿ ಬದಲಾಗುತ್ತೋ ಇಲ್ವೋ ಗೊತ್ತಿಲ್ಲ. ಮಾಲು, ಸಿನಿಮಾ ಥಿಯೇಟರ್ಗಳೆಲ್ಲ ಬಂದಾಗಿರೋದ್ರಿಂದ ಬೆಂಗ್ಳೂರೇ ಒಂಥರಾ ಥಂಡಾ ಹೊಡಿದ ಫೀಲು. ಐ.ಟಿ , ಬಿ.ಟಿಗಳಿಗೆಲ್ಲಾ ಮನೆಯಿಂದ ಕೆಲಸ ಮಾಡೋಕೆ ಹೇಳಿ ಅಂತ ಮುಖ್ಯಮಂತ್ರಿಗಳೇ ಹೇಳಿದ್ರೂ ಅದ್ನ ಹೇಳ್ಭೇಕೋ ಬೇಡ್ವೋ ಅಂತ ಮೀನ ಮೇಷ ಎಣಿಸ್ತಿರೋ ಕಂಪೆನಿಗಳ ನಡುವೆ ಉದ್ಯೋಗಿಗಳೇ ಮನೆಗಳೊಳಗೆ ಫೆವಿಕಾಲ್ ಹಚ್ಕೊಂಡು ಕುತ್ಕೊಂಡಿರೋದ್ರಿಂದ ಬಿ.ಎಂ.ಟಿ.ಸಿ, ಮೆಟ್ರೋಗಳಿಗೂ ಹೆವಿ ಲಾಸಂತೆ. ಥಿಯೇಟ್ರುಗಳು ಬಾಗಿಲು ಹಾಕೋದ್ರಿಂದ ಕನ್ನಡ ಚಿತ್ರೋದ್ಯಮಕ್ಕೂ ಲಾಸ್ ವರ್ಗಾವಣೆಯಾಗ್ಬೋದೇನೋ ಅನಿಸೋ ಹೊತ್ತಿಗೆ ಕಂಡ ಆಶಾ ಕಿರಣ ಅಮೇಜಾನ್ ಪ್ರೈಮ್ !
ಅಮೇಜಾನ್ ಕಿಂಡಲ್ಲಲ್ಲಿ ಕನ್ನಡ ಕೊಡ್ರಪ್ಪ ಅಂತ ಕೇಳಿ ಕೇಳಿ ಸಾಕಾದ್ರೂ ಇವರಿಗೆ ಕಾಣದ ಕನ್ನಡದ ಗ್ರಾಹಕರು ಈಗ ಕಂಡಿದ್ದು ಆಸ್ಛರ್ಯವೇ ಸರಿ ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಎಂಬ ಎರಡು ಒಳ್ಳೇ ಚಿತ್ರಗಳು ಬಂದ್ ಕಾರಣದಿಂದ ಬಂದಾಗಿ ಹೋಗೋ ಆತಂಕನ ದೂರ ಮಾಡಿದ ಶ್ರೇಯಸ್ಸು ಅಮೇಜಾನವ್ರಿಗೇ ಸಲ್ಲಬೇಕು ಅಂದ್ರೆ ತಪ್ಪಲ್ಲವೇನೋ. "ಲವ್ ಮಾಕ್ ಟೈಲ್" ಥಿಯೇಟರ್ಗಳಲ್ಲೂ ಓಡ್ತಿತ್ತು. ನಾಲ್ಕು ವಾರದ ಮೇಲೆ ಆಗಿತ್ತು ಅಂತ ಅಂದ್ರೂ ಇವೆರಡೂ ಮೂವಿಗಳನ್ನ ಈಗೊಂದೆರೆಡು ದಿನಗಳಲ್ಲೇ ನನ್ನ ಸ್ನೇಹಿತರು ನೋಡಿರೋ ಕಾರಣ ಕರೋನಾ ಮತ್ತು ಅಮೇಜಾನ್ ಪ್ರೈಮ್ !
ಎಲ್ಲಾ ಬಂದಾದ್ರೆ , ಮನೇಲೇ ಕೂತು ಎಷ್ಟೂಂತ ಕೆಲ್ಸ ಮಾಡೋದು ಸಿವಾ ? ಬೇಸರಕ್ಕೆ ಅಂತ ಮೊಬೈಲೋ, ಟೀವಿನೋ ಹೊಕ್ಕಾಗ ಇದೇ ಕಣ್ಣಿಗೆ ಬೇಳಬೇಕೇ ಸಿವಾ ? "ಲೂಸಿಯಾ" ಸಿನಿಮಾ ಬಂದಾಗ್ಲೂ ಅಂತರ್ಜಾಲದಲ್ಲಿ ನಡೀತಿದ್ದ ಅದರ ಚರ್ಚೆಗಳಿಂದ್ಲೇ ಅದು ಸುಮಾರು ದಿನ ಓಡಿತು ಅನ್ನೋ ಮಾತುಗಳಿದ್ರೂ ಇವೆರಡೂ ಚಿತ್ರಗಳಲ್ಲಿ ಅಂತರ್ಜಾಲದ ಹೊರಬಂದೂ ಓಡೋ ತಾಕತ್ತಿದೆ ಅನ್ಸತ್ತೆ. ಸಿನಿಮಾ ಅಂದ್ರೆ ನಾಲ್ಕು ಫೈಟು, ವಿಲನ್ನುಗಳು ಬಂದು ಹೀರೋಯಿನ್ನನ್ನ ಕಿಡ್ನಾಪ್ ಮಾಡ್ಬೇಕು, ನಾಲ್ಕು ಮರಸುತ್ತೋ ಸೀನುಗಳು, ಐಟಂ ಸಾಂಗುಗಳಿರ್ಬೇಕು, ಹೀರೋಗೊಂದು ಹೀರೋಯಿನ್ನಿಗೊಂದು ಬಿಲ್ಡಪ್ ಕೊಡೋ ಸಾಂಗೋ ಡೈಲಾಗುಗಳೋ ಇರ್ಬೇಕು , ಕಾರು ಬೈಕುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳೋ ಹೊಡೆದಾಟಗಳಿರ್ಬೇಕು ಅನ್ನೋ ಸಿದ್ಧ ಸೂತ್ರಗಳಿಂದೆಲ್ಲಾ ಹೊರಬಂದು ಏನೋ ಟ್ವಿಸ್ಟ್ ಕೊಟ್ಟು ಕೊನೆಯವರೆಗೂ ಕುತೂಹಲಕರವಾಗಿ ನೋಡಿಸಿಕೊಂಡು ಹೋಗೋ ಅಂತಹ ಚಿತ್ರ ಮಾಡ್ಬೇಕು ಅನ್ನೋ ನಿರ್ದೇಶಕರ ಶ್ರಮ ಎರಡೂ ಚಿತ್ರಗಳಲ್ಲಿ ಕಾಣುತ್ತೆ. ಟ್ವಿಸ್ಟ್ ಕೊಡಬೇಕು ಅನ್ನೋ ಧಾವಂತದಲ್ಲೇ ಎರಡೂ ಚಿತ್ರಗಳ ಕೊನೆಯ ಹತ್ತು-ಹದಿನೈದು ನಿಮಿಷಗಳನ್ನು ಅದ್ವಾನಗೊಳಿಸಿದಂತೆ ಕಾಣುತ್ತಾದ್ರೂ ಪ್ರತಿಯೊಂದು ದೃಶ್ಯಕ್ಕೂ ಅವರು ಹಾಕಿದ ಶ್ರಮ ಕಂಡು ಖುಷಿಯಾಗುತ್ತೆ. ಸಿಂಪಲ್ ಉದಾಹರಣೆಯೆಂದ್ರೆ "ಲವ್ ಮಾಕ್ ಟೈಲ್" ನಲ್ಲಿನ ನಿಧಿಮಾ ಮತ್ತು ಆದಿಯ ನಡುವಿನ ಮನೆಯ ಒಂದು ದೃಶ್ಯ. ಅದರಲ್ಲಿ ಅವ ಕುತ್ತಿಗೆಗೆ ಹಾಕ್ಕೊಂಡ ದಿಂಬು, ನಾಯಕಿಯ ಡ್ರೆಸ್ಸು, ಹಿಂದಿನ ಕರ್ಟನ್ನಿನ್ನ ಪರದೆ ಎಲ್ಲವೂ ನೀಲಿಮಯ, ದೃಶ್ಯವೂ ಪ್ರೇಮಮಯ ! "ದಿಯಾ"ದಲ್ಲಿ ಬರೋ ಎರಡನೇ ನಾಯಕ ಮತ್ತು ಆತನ ತಾಯಿಯ ಪಾತ್ರ ಲಕ್ಕಿಯಂತೂ ನಮ್ಮ ನಡುವೆ ಈ ತರದ ವ್ಯಕ್ತಿಗಳೂ ಇರೋಕೆ ಸಾಧ್ಯವಾ ಅಂತ ಅಚ್ಚರಿ ಮೂಡಿಸುವಂತದ್ದು. ಕೆಲವೊಂದು ಬೋರ್ ಹೊಡಿಸೋ ಸನ್ನಿವೇಶಗಳನ್ನ ಬಿಟ್ರೆ, ಕೆಲವೆಡೆ ಪ್ರೀತಿಯ ಓವರ್ಡೋಸ್ ಅನಿಸಿದರೂ ಆಪ್ತವೆನಿಸೋ ಇವೆರಡೂ ಚಿತ್ರಗಳಿಂದ ವಾರಾಂತ್ಯಕ್ಕೊಂದು ಕಳೆ ಸಿಕ್ಕಿದ್ದು ಸುಳ್ಳಲ್ಲ.
ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಂಗಳಲ್ಲಿ ಕನ್ನಡದ ಚಿತ್ರಗಳು ಹೆಚ್ಚಿಲ್ಲ. ಇದ್ದರೂ ಹೊಸದಿಲ್ಲ ಅನ್ನೋ ಗ್ರಾಹಕರ ಕೊರಗು ಸದ್ಯದಲ್ಲೇ ನೀಗಬಹುದೇನೋ ಅನ್ನೋ ನಿರೀಕ್ಷೆಯನ್ನು ಹುಟ್ಟಿಸಿರೋ ಈ ಚಿತ್ರಗಳಿಗೆ ಒಂದು ಅಭಿನಂದನೆ. ಕನ್ನಡ ಚಿತ್ರಗಳಿದ್ರೂ ಇರೋ ಐದಾರು ಸ್ಕ್ರ್ರೀನುಗಳಲ್ಲಿ ನಾಲ್ಕೈದು ಶೋಗಳಲ್ಲಿ ಒಂದು ಶೋ ಕೊಡೋಕೆ ಅಳ್ತಿರೋ ಮಲ್ಟಿಪ್ಲೆಕ್ಸುಗಳು, ಕನ್ನಡ ಸಿನಿಮಾಗಳಿಗೆ ಥಿಯೇಟರುಗಳು ಸಿಗದೇ ತಾವೇ ವಿತರಕರಾಗಿರೋ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ಥಿಯೇಟರ್ ಸಿಗುವಂತೆ ನೋಡ್ಕೊಳ್ಳುತ್ತಿರೋ ನಮ್ಮಲ್ಲೇ ಇರೋ ದೊಡ್ಡ ಮನುಷ್ಯರ ನಡುವೆ ಕನ್ನಡಿಗರಿಗೆ ಕನ್ನಡದಲ್ಲೇ ಇರೋ ಉತ್ತಮ ಚಿತ್ರಗಳು ಸಿಗದಂತಾಗುತ್ತಿವೆ. ವಾರಾಂತ್ಯದಲ್ಲಾದ್ರೂ ಚಿತ್ರ ನೋಡೋಣ ಅಂತಂದ್ರೆ ಬೇರೆ ದಿನ ನೂರೈವತ್ತರ ಸುಮಾರಿರೋ ಟಿಕೇಟಿಗೆ ವಾರಾಂತ್ಯದಲ್ಲಿ ಎರಡೂವರೆ ಮೂರು ಪಟ್ಟು ಕೊಟ್ಟು ನೋಡಬೇಕಾದ ಅನಿವಾರ್ಯತೆ ಬೆಂಗಳೂರಂತ ಮಹಾನಗರಗಳಲ್ಲಿ ! ಯಾರ ಹೊಟ್ಟೆಯ ಮೇಲೂ ಹೊಡೆಯುವಂತಹ ಮಾತಾಡಬಾರದು ಅಂತನ್ನೋದು ನಿಜವಾದರೂ ಈ ಥರ ಮಾಡುತ್ತಿದ್ದ ಮಲ್ಟಿಪ್ಲೆಕ್ಸುಗಳಿಗೂ ಇಷ್ಟಕ್ಕಿಂತ ಜಾಸ್ತಿ ಟಿಕೇಟ್ ದರ ವಿಧಿಸೋ ಹಾಗಿಲ್ಲ ಅಂತ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೋ ಅಂತ ಎಷ್ಟೋ ಸಲ ಅನಿಸಿದ್ದಿದೆ . ಅಷ್ಟೆಲ್ಲಾ ಕೊಡೋಕೆ ಸಿದ್ದವಾದ್ರೂ ಹೇಳ್ದೇ ಕೇಳ್ದೇ ಚೆನ್ನಾಗಿ ಓಡ್ತಿರೋ ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡಿ ಯಾವುದೋ ತೆಲುಗು, ತಮಿಳು ಚಿತ್ರಗಳಿಗೆ ಮಣೆ ಹಾಕ್ತಿದ್ದ ಅವರನ್ನು ನೋಡಿ ಎಷ್ಟು ಉರ್ಕಂಡ್ರೂ ಏನೂ ಮಾಡೋಕಾಗದೇ ಇರುವಂತ ಕನ್ನಡಿಗರಿಗೆ ಆಶಾ ಕಿರಣಗಳಂತೆ ಕಾಣ್ತಿರೋದು ಇದೇ ಹಾಟ್ ಸ್ಟಾರು, ನೆಟ್ ಫ್ಲಿಕ್ಸು ಮತ್ತು ಅಮೇಜಾನುಗಳು ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಚಿತ್ರಗಳಿಗೆ ಸಿಗೋ ವೀಕ್ಷಣೆ , ಮೆಚ್ಚುಗೆ ಈ ಅಮೇಜಾನಿಂದ ಆಚೆ ದಾಟಿ ಅದಕ್ಕೆ ದುಡ್ಡು ಸುರಿದ ನಿರ್ಮಾಪಕರ ಜೇಬು ತುಂಬಲಿ, ಈ ತರದ್ದೇ ಹಲವು ಹೊಸ ಕನ್ನಡ ಪ್ರಯತ್ನಗಳಿಗೆ ನಾಂದಿಯಾಗಲಿ ಅನ್ನೋದು ಸದ್ಯದ ಆಶಯ. ಕನ್ನಡದ ಜನತೆಯ ಸಿನಿಮಾ ಪ್ರೇಮದ ಅಗಾಧತೆಯನ್ನು ಈ ಆನ್ ಲೈನ್ ಕಂಪೆನಿಗಳೂ ಅರ್ಥ ಮಾಡಿಕೊಂಡು ಇನ್ನೂ ಹೆಚ್ಚೆಚ್ಚು ಕನ್ನಡ ಚಿತ್ರಗಳನ್ನ ತಮ್ಮ ವೇದಿಕೆಗಳ ಮೂಲಕ ಹೊರತರುವಂತಾಗಲಿ ಅನ್ನೋ ಹಾರೈಕೆಯೊಂದಿಗೆ ಸದ್ಯಕ್ಕೊಂದು ವಿರಾಮ.
No comments:
Post a Comment