Monday, August 31, 2020

ಕವಲೇದುರ್ಗ / ಭುವನಗಿರಿ ದುರ್ಗ ಚಾರಣ

Kavaledurga Trek
At the beginning of Kavaledurga Trek

 ಯಾವ ಟಿವಿ ನ್ಯೂಸ್ ಹಾಕಿದ್ರೂ ಕರೋನಾದ್ದೆ ಸುದ್ದಿ ನೋಡಿ ನೋಡಿ ಬೇಸರ ಮೂಡಿ ಫೇಸ್ಬುಕ್ಕಿಗೆ ಬಂದ್ರೆ ಇಲ್ಲಿ ಎಡಬಲದ ಜಗಳಗಳು, ಅವೆಷ್ಟು ಕೊಟ್ರು, ಇವ್ರೆಷ್ಟು ಕೊಟ್ರು ಅನ್ನೋ ವಾಗ್ವಾದಗಳು. ಪತ್ರಿಕೆಗಳಲ್ಲೂ ಇವರ ಟ್ವಿಟರ್ ಅಕೌಂಟಿನಲ್ಲಿ ಹಿಂಗದ್ರಂತೆ, ಅವ್ರ ಇನ್ಟಾದಲ್ಲಿ ಹಂಗಂದ್ರಂತೆ ಅನ್ನೋದೇ ಸುದ್ದಿ ! ಕರೋನಾ ಅಂತ ತಣ್ಣಗೆ ಮನೇಲೆ ಕೂತು ಐದು ತಿಂಗಳಾಯ್ತು ಯಾರಾದ್ರ ಮನೆಗೆ ಹೋದ್ರೂ ಇದೇ ಸುದ್ದಿ ! ಏಕತಾನತೆಯಿಂದ ಹೊರಬರಲು, ಮಲೆನಾಡಲ್ಲಿದ್ರೂ ಈ ವರ್ಷ ಹೋಗಲಾಗದಿದ್ದ ತಾಣಗಳ ಸುತ್ತಾಡಲು ಮನಸು ಕಾತೊರೆಯುತ್ತಿತ್ತು. ಆ ಸಮಯದಲ್ಲಿ ಕಣ್ಣಿಗೆ ಬಿದ್ದಿದ್ದು ಗಿರೀಶ್ ಸರ್ ಹಾಕಿದ್ದ ಕವಲೇದುರ್ಗದ ವೀಡಿಯೋ ಮತ್ತು ಅನಿಲ್ ಹಾಕಿದ್ದ ಹುಲಿಕಲ್ ಫಾಲ್ಸ್ ಫೋಟೋ. ಹೆಂಗಿದ್ರು ಮಾಸ್ಕ್ ಹಾಕ್ಕೊಂಡು , ಸಾಮಾಜಿಕ ಅಂತರ ಕಾಪಾಡ್ಕೊಂಡು ಇಲ್ಲಿಗೆ ಹೋಗ್ಬರಬಹುದಂತೆ, ಸರೀನಾ ಅನ್ನೋ ಹೊತ್ತಿಗೇ ರೆಡಿಯಾಗಿದ್ದು ನಮ್ಮನೆಯವ್ರು. ಕವಲೇದುರ್ಗದವರೆಗೆ ಹೋಗಿ ಲಾಕ್ಡೌನಲ್ಲಿ ಲಾಕಾಗಿದ್ದ ಅದನ್ನ ನೋಡಿ ವಾಪಾಸ್ ಬಂದಿದ್ದ ಕೃಷ್ಣನೂ ಪ್ಲಾನ್ ಹೇಳ್ತಿದ್ದಂಗೆನೇ ಸರಿಯೆಂದಿದ್ದ. 


ಕವಲೇದುರ್ಗದ ಇತಿಹಾಸ :

೯ನೇ ಶತಮಾನದಲ್ಲಿ ಕಟ್ಟಿದ ಕವಲೇದುರ್ಗ ಕೋಟೆಯನ್ನು ೧೪ನೇ ಶತಮಾನದಲ್ಲಿ ಬೆಳಗುತ್ತಿಯ ರಾಜ ಚೆಲುವರಂಗಪ್ಪನೂ ೧೬ನೇ ಶತಮಾನದಲ್ಲಿ ಕೆಳದಿಯರಸ ಹಿರಿಯ ವೆಂಕಟಪ್ಪನಾಯಕ (1586–1629) ಅಭಿವೃದ್ಧಿಪಡಿಸಿದರು ಎನ್ನುತ್ತದೆ ಇತಿಹಾಸ. ವೆಂಕಟಪ್ಪನಾಯಕನಿಗಿಂತಲೂ ಮುಂಚೆ ಇದು ತೋಲಾಯ್ತಮ ರಾಜ ಮತ್ತು ಮುಂಡಿಗೆ ರಾಜ ಎಂಬ ರಾಜ ಸಹೋದರರ ಅಧೀನದಲ್ಲಿತ್ತಂತೆ. ಕೌಲಿ ಎಂಬ ಊರಿಗೆ ಹತ್ತಿರವಿದ್ದರಿಂದ ಇದಕ್ಕೆ ಕವಲೇದುರ್ಗವೆಂದು ಹೆಸರಿತ್ತರೆನ್ನುತ್ತೆ ಒಂದು ಎಳೆ.  ಕವಲೇದುರ್ಗಕ್ಕೆ ಅಂದು ಭುವನಗಿರಿಯೆಂಬ ಹೆಸರನ್ನಿತ್ತಿದ್ದೂ  ಹಿರಿಯ ವೆಂಕಟಪ್ಪನಾಯಕ . 

<script async src="https://pagead2.googlesyndication.com/pagead/js/adsbygoogle.js"></script>
<ins class="adsbygoogle"
     style="display:block"
     data-ad-format="fluid"
     data-ad-layout-key="-gq-2e-1k-1g+qa"
     data-ad-client="ca-pub-5071889101438500"
     data-ad-slot="7647446493"></ins>
<script>
     (adsbygoogle = window.adsbygoogle || []).push({});
</script>

ಈ ಇತಿಹಾಸ ಅನ್ನೋದೊಂದು ಸ್ವಾರಸ್ಯಕರ ಕಥಾಹಂದರ. ಒಂದು ಎಳೆಯನ್ನು ಹುಡುಕಿ ಹೊರಟರೆ ಮತ್ತೇನೋ ಕಾಲಿಗೆ ತೊಡರಿಕೊಳ್ಳುತ್ತೆ. ಅದೇನಂತಹ ನೋಡಹೊರಟಲ್ಲಿ ಮತ್ತೆಲ್ಲೋ ತಿರುಗಿ ಹೊರಳಿ ಮೊದಲಿದ್ದ ಎಳೆ ಮತ್ತೆ ಪ್ರತ್ಯಕ್ಷವಾಗುತ್ತೆ ! ಕೆಳದಿಯ ಬಳಿಯ ಪಳ್ಳಿಬೈಲು(ಈಗಿನ ಹಳ್ಳಿಬೈಲು) ವಿನಲ್ಲಿದ್ದ ಚೌಡಪ್ಪನಾಯಕ (1499–1530) ಮಲೆನಾಡಿನ ಭಾಗದ, ಈಗಿನ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸ್ಥಾನವನ್ನು ಸ್ಥಾಪಿಸಿದ್ದ. ಆಗ ಉಚ್ಛ್ರಾಯಸ್ಥಿತಿಯಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಸಾಮಂತರೆಂದು ಘೋಷಿಸಿಕೊಂಡರಿವರು. ೨೩ ಜನವರಿ ೧೫೬೫ರಲ್ಲಿ ತಾಳೀಕೋಟೆಯಲ್ಲಿ  ರಕ್ಕಸತಂಗಡಿ ಯುದ್ದದಲ್ಲಿ ಪಂಚ ಸುಲ್ತಾನರು(ಬಿಜಾಪುರ, ಬೀದರ್, ಬೇರರ್, ಅಹಮದಾನಗರ್, ಗೋಲ್ಕಂಡ) ಮತ್ತು ವಿಜಾಪುರದ ಅಳಿಯ ರಾಮ ರಾಯನ ನಡುವೆ ನಡೆಯುತ್ತೆ.  ಇಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದ ವಿಜಯನಗರ ಸೇನೆ ವಿಜಯನಗರ ಸೇನೆಯಲ್ಲಿದ್ದ ಗಿಲಾನಿ ಸಹೋದರರೆಂಬ ದಳಪತಿಗಳ ವಿಶ್ವಾಸಘಾತುಕತನದಿಂದ ಸೋತಿತೆಂಬ ಉಲ್ಲೇಖಗಳಿವೆ. ತದನಂತರ ಅದ್ಭುತ ಹಂಪೆ ಹಾಳುಹಂಪೆಯಾದದ್ದು ಇತಿಹಾಸ. ರಾಬರ್ಟ್ ಸೆಹೆಲ್ಲಿನ  ಫರ್ಘಾಟನ್ ಎಂಪೈರ್ ನೋಡಬಹುದು. ಕನ್ನಡವೇ ಪ್ರಧಾನ ಭಾಷೆಯಾಗಿದ್ದಾಗ ತೆಲುಗಿನ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಟ್ಟಿದ್ದು ವಿಜಯನಗರದ ಶ್ರೀಕೃಷ್ಣದೇವರಾಯ. ತಾಳಿಕೋಟೆಯ ಸೋಲು ಮತ್ತು ಹಂಪೆಯ ನಾಶದ ನಂತರ ರಾಮರಾಯನ ನಂತರದ ವಿಜಯನಗರದ ಅರಸರು ಆಂದ್ರದ ಅನಂತಪುರಂನಲ್ಲಿನ ಪೆನುಕೊಂಡವನ್ನು ತಮ್ಮ ರಾಜಧಾನಿಯಾಗಿಸಿಕೊಂಡರು !


ಕೆಳದಿಯವರು ವಿಜಯನಗರದ ಸಾಮಂತರಾಗಿದ್ದರು ಸರಿ. ವಿಜಯನಗರವನ್ನು ಸೋಲಿಸಿದವರಲ್ಲಿ ಬಿಜಾಪುರದ ರಾಜರಿದ್ದರು ಅದೂ ಸರಿ. ಅದಕ್ಕೂ ಇಂದಿನ ಕವಲೇದುರ್ಗಕ್ಕೂ ಏನು ಸಂಬಂಧ ಅನ್ನುತ್ತೀರಾ ? ಬಂದೆ ಅಲ್ಲಿಗೆ. ಕೆಳದಿಯ ನಾಲ್ಕನೆಯ ಅರಸ ಚಿಕ್ಕ ಸಂಕಪ್ಪ ನಾಯಕ(1570–1580) ತಾಳಿಕೋಟೆಯ ಯುದ್ದದ ನಂತರ ಉತ್ತರಕನ್ನಡದ ಕೆಲ ಪ್ರದೇಶಗಳನ್ನು ಗೆದ್ದು ಕೆಳದಿ ಸಂಸ್ಥಾನಕ್ಕೆ ಸೇರಿಸಿಕೊಂಡರು. ೧೫೮೬ರಿಂದ ರಾಜ್ಯವಾಳಿದ ಕೆಳದಿ ಸಂಸ್ಥಾನದ ಆರನೇ ರಾಜರೇ ಹಿರಿಯ ವೆಂಕಟಪ್ಪ ನಾಯಕ ! ಪೆನುಕೊಂಡದಲ್ಲಿ ವಿಜಯನಗರ ಅರಸರಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ವೆಂಕಟಪ್ಪನಾಯಕ ಕೆಳದಿ ಸಂಸ್ಥಾನವನ್ನು ಮಲೆನಾಡು ದಾಟಿ ಕರಾವಳಿಯವರೆಗೂ ವಿಸ್ತರಿಸೋಕೆ ಕಾರಣವಾದರು. ಬಿಜಾಪುರದ ಆದಿಲ್ ಶಾಹಿಗಳನ್ನೂ ಸೋಲಿಸಿ ಕರಾವಳಿಯಲ್ಲಿ ಪೋರ್ಚುಗೀಸರನ್ನೂ ಸೋಲಿಸಿದ(೧೬೧೮-೧೯) ಸೋಲಿಸಿ ಸಾಮ್ರಾಜ್ಯ ವಿಸ್ತರಿಸಿದ ಕೀರ್ತಿ ಇವರದು.  

Trek in Kavaledurga Fort 

ಗೆಳೆಯ ಕೃಷ್ಣ ಕಾಸರಗೋಡಿನ ಬೇಕಲ್ ಕೋಟೆಯಲ್ಲೂ ಕೆಳದಿಯ ೮ನೇ ಅರಸ ಶಿವಪ್ಪನಾಯಕನ(1645–1660) ಹೆಸರಿದೆ ಎಂದು ನೆನಪು ಮಾಡುತ್ತಿದ್ದ. ಕಾಸರಗೋಡಿನ ಕರಾವಳಿಯಲ್ಲಿನ ಬೇಕಲ್ ಪ್ರಾಂತ್ಯದಲ್ಲಿನ ರಕ್ಷಣೆ ಮತ್ತು ಆ ಮೂಲಕ ವಿದೇಶಿಗರು ತಮ್ಮ ಸಂಸ್ಥಾನದೊಳಗೆ ನುಗ್ಗೋದನ್ನು ತಡೆಯೋಕೆ ಕೋಟೆಯ ನಿರ್ಮಾಣ ಶುರುಮಾಡಿದ್ದು ಹಿರಿಯ ವೆಂಕಟಪ್ಪನಾಯಕ. ಅದನ್ನು ಮುಗಿಸಿದ್ದು ಶಿವಪ್ಪನಾಯಕ ! ಈ ಶಿಪಪ್ಪನಾಯಕ ಬಿಜಾಪುರದ ಸುಲ್ತಾನರು, ಮೈಸೂರರಸರು, ಪೋರ್ಚುಗೀಸರನ್ನು ಸೋಲಿಸಿ ಪಶ್ಚಿಮಘಟ್ಟಗಳ ಮತ್ತು ಈಗಿನ ಕರ್ನಾಟಕದ ಬಹುಭಾಗವನ್ನು ಕೆಳದಿ ಸಂಸ್ಥಾನದ ಭಾಗವನ್ನಾಗಿಸಿದ್ದ. ಸುಮಾರು ೪೦ ಎಕರೆಗಳಷ್ಟು ವಿಸ್ತಾರ ಹೊಂದಿದ ಬೇಕಲ್ ಕೋಟೆ ಕೇರಳದ ಅತೀ ದೊಡ್ಡ ಕೋಟೆ !

ಇತಿಹಾಸ ಅಂದ ಮೇಲೆ ಯುದ್ದಗಳು, ಮೇಲು ಬೀಳುಗಳು ಸಾಮಾನ್ಯ. ಕೆಳದಿಯ ಕೊನೆಯ ರಾಣಿ ವೀರಮ್ಮಾಜಿ(1757–1763)ಯನ್ನು ಹೈದರಾಲಿ ಸೋಲಿಸಿದ ನಂತರ ಕೆಳದಿ ಸಂಸ್ಥಾನ ಮೈಸೂರು ಸಂಸ್ಥಾನದ ಭಾಗವಾಯ್ತು. ಈ ಮೂಲಕ ಕೆಳದಿ ಸಂಸ್ಥಾನದ ಭಾಗಗಳಾಗಿದ್ದ ಬೇಕಲ್ ಕೋಟೆ ಮತ್ತು ಕವಲೇದುರ್ಗ ಕೋಟೆಗಳ ೧೭೬೩ರಲ್ಲಿ ಮೈಸೂರು ಸಂಸ್ಥಾನದ ಭಾಗವಾಯ್ತು ! ಹೈದರಾಲಿ ಮರಳುವಾಗ ಇಲ್ಲಿ ಕೆಲವು ಕಾವಲುಗಾರರನ್ನು ಬಿಟ್ಟಿದ್ದನಂತೆ. ಇದಕ್ಕೇ ಕಾವಲುಗಾರರ ದುರ್ಗವೆಂದೂ, ತದನಂತರದಲ್ಲಿ ಕವಲೇ ದುರ್ಗವೆಂದೂ ಹೆಸರಾಯಿತು ಎನ್ನುತ್ತೆ ಇತಿಹಾಸದ ಮತ್ತೊಂದು ಎಳೆ. 

ಕವಲೇದುರ್ಗದ ಇತಿಹಾಸದ ಬಗ್ಗೆಯೇ ಇನ್ನೂ ಹಿಂದೆ ಹೋಗಬೇಕೆಂದರೆ ಕೃತಯುಗದಲ್ಲಿ ಇದು ಪರಶುರಾಮ ಕ್ಷೇತ್ರವಾಗಿತ್ತೆಂದೂ, ತ್ರೇತಾಯುಗದಲ್ಲಿ ಅಗಸ್ತ್ಯ , ಗೌತಮರು ಇಲ್ಲಿಗೆ ಬಂದಿದ್ದರೆಂದೂ, ದ್ವಾಪರದಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರೆಂದೂ ದಂತಕತೆಗಳಿವೆ. ಪಾಂಡವರ ಕಾಲದಲ್ಲಿ ಇದಕ್ಕೆ ಕಾವ್ಯವನ, ಕಪಿಲವನಗಳೆಂಬ ಹೆಸರೂ ಇತ್ತಂತೆ. ಇಲ್ಲಿಗೆ ಬಂದಾಗ ದ್ರೌಪದಿಗೆ ನೀರಡಿಕೆಯಾಗಲು ಭೀಮ ತನ್ನ ಗದೆಯಿಂದ ಗುದ್ದಿ ನೀರ ಕೊಳವೊಂದನ್ನು ನಿರ್ಮಿಸಿದನೆಂದೂ ಅದೇ ಇಲ್ಲಿನ ಗದಾತೀರ್ಥವೆಂದೂ ಹೇಳುತ್ತಾರೆ. ಕತೆಗಳು, ಸತ್ಯಾಸತ್ಯಗಳು ಏನೇ ಇದ್ದರೂ ಇಲ್ಲೊಂದು ಗುಹೆಯಂತಹ ರಚನೆಯೂ, ಬಂಡೆಯ ಮಧ್ಯೆ ಅಚ್ಚರಿಯೆನ್ನಿಸುವಂತೆ ನೀರ ಚಿಲುಮೆಯಿರುವುದೆಂತೂ ಸತ್ಯ !


ಈ ರೀತಿ ಅಧಿಕಾರದ ಕೇಂದ್ರವಾಗಿದ್ದ ಈ ಕೋಟೆ ಮತ್ತು ಊರು ೧೮೮೨ರ ತನಕ ತಾಲ್ಲೂಕು ಕೇಂದ್ರವಾಗಿತ್ತಂತೆ. ನಂತರ ತೀರ್ಥರಾಜಪುರ(ಈಗಿನ ತೀರ್ಥಹಳ್ಳಿ) ತಾಲ್ಲೂಕು ಕೇಂದ್ರವಾಯಿತು ಎನ್ನುತ್ತಾರೆ. ವಿಪರ್ಯಾಸವೆಂದರೆ ರಾಜರ, ಬ್ರಿಟಿಷರ ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿರಬಹುದಾದ ಸ್ಥಳದಲ್ಲಿರುವಂತಹ ಅಗಲವಾದ ರಸ್ತೆಗಳು, ಕಟ್ಟಡಗಳು ಮುಂತಾದ ಯಾವ ಗತವೈಭವಗಳೂ ಇಲ್ಲೀಗ ಉಳಿದಿಲ್ಲ ! ಖುಷಿಯ ಸಂಗತಿಯೆಂದರೆ ಕೆಲ ವರ್ಷಗಳ ಹಿಂದೆ ನಮ್ಮೊಳಗೊಬ್ಬ ಬಾಲು ಸರ್ ಅವರೊಂದಿಗೆ ಕವಲೇದುರ್ಗಕ್ಕೆ ಹೋದಾಗಿದ್ದ ಮೂರು ಕಿ.ಮೀ ಜಲ್ಲಿ ರಸ್ತೆ ಈಗ ಟಾರ ರಸ್ತೆಯಾಗಿದೆ ಮತ್ತು, ಪುರಾತತ್ವ ಇಲಾಖೆಯ ರಕ್ಷಣೆ ಸಿಕ್ಕಿದೆ ಕವಲೇದುರ್ಗ ಕೋಟೆಗೆ. 


ಕೋಟೆಯಲ್ಲಿ ನೋಡಲೇನೇನಿದೆ ? 

Kashi Vishwanatha temple

ಮೂರು ಸುತ್ತಿನ ಈ ಕೋಟೆ ಸಿಗೋದು ಕವಲೇದುರ್ಗವೆಂಬ ಈಗಿನ ಊರು ದಾಟಿದ ನಂತರ. ಊರ ಬಸ್ ಸ್ಟಾಪು, ಪುರಾತತ್ವ ಇಲಾಖೆಯ ಬೋರ್ಡು, ಗದ್ದೆಬಯಲುಗಳ ದಾಟಿದರೆ ಕವಲೇದುರ್ಗದ ಕೋಟೆಗೆ ಹತ್ತುವ ಮೆಟ್ಟಿಲುಗಳು ಸಿಗುತ್ತೆ. ಇಲ್ಲಿರೋ ಇತಿಹಾಸ ಫಲಕದ ಪ್ರಕಾರ ಆನೆ ಕುದುರೆಗಳೆಲ್ಲಾ ಕೋಟೆಯ ಮೇಲೆ ಆನೆ ಕುದುರೆಗಳ ಲಾಯಗಳಿತ್ತಂತೆ. ಕೋಟೆಗೆ ಹತ್ತೋ ದಾರಿಯೂ ಆನೆ, ಕುದುರೆಗಳು ಹತ್ತುವಷ್ಟೇ ವಿಶಾಲವಾಗಿದೆ ! ಪ್ರತೀ ಸುತ್ತಿನ ದ್ವಾರದ ಬಳಿಯೂ ಕಾವಲುಗಾರರಿಗೆ ತಂಗಲನುವಾಗುವಂತೆ ಕೊಠಡಿಗಳಂತಹ ರಚನೆಗಳಿವೆ. ಎರಡು ಸುತ್ತಿನ ಕೋಟೆಗಳನ್ನು ದಾಟಿದ ನಂತರ ಮೊದಲು ಸಿಗೋದು ಕಾಶಿ ವಿಶ್ವನಾಥ ದೇಗುಲ. ಶೃಂಗೇರಿ ಶಂಕರ ಮಠವೆಂದೂ ಕರೆಯಲ್ಪಡೋ ಈ ದೇಗುಲದ ಎದುರಿಗಿರೋ ಎರಡು ಕಂಬಗಳು ಬೆಟ್ಟದ ಮೇಲಿನಿಂದಲೂ ಕಣ್ಣಿಗೆ ಬಿದ್ದು ಈ ದೇಗುಲಕ್ಕೊಂದು ಸೌಂದರ್ಯವನ್ನು ಕೊಡುತ್ತದೆ. ಈ ದೇಗುಲದ ಎದುರು ಭಾಗದಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯ ಕೆತ್ತನೆಗಳಿವೆ. ಕೆಲವರ ಪ್ರಕಾರ ಈ ಕೆತ್ತನೆಗಳನ್ನು ಹೈದರಾಲಿಯ ದಾಳಿಯ ನಂತರ ಮೂಡಿಸಿದ್ದು . ಇನ್ನು ಕೆಲವರ ಪ್ರಕಾರ ಇದೇ ಸಮಯದಲ್ಲಿ ಕೆಳದಿಯರಸರು ನಿರ್ಮಿಸಿದ ಇಕ್ಕೇರಿ ದೇಗುಲದ ನಂದಿ ಮಂಟಪವೂ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿದ್ದು ಆ ಸಮಯದ ಕಲಾ ಸಂಗಮವೂ ಆಗಿರಬಹುದು.   

Kashi Vishwanatha Temple

ಕಾಶೀ ವಿಶ್ವನಾಥ ದೇಗುಲದ ಪಕ್ಕದಲ್ಲೊಂದು ಕಲ್ಯಾಣಿಯಿದೆ. ಅದರ ಎದುರಿಗಿರೋ ದೊಡ್ಡ ಕಲ್ಲುಗುಡ್ಡದ ಮೇಲೆ ಶ್ರೀ ಲಕ್ಷ್ಮೀ ನಾರಾಯಣ ದೇಗುಲವಿದೆ.  ಕುದುರೆ ದಾರಿ, ನಡೆದು ಹೋಗುವ ಹಾದಿ ಹೀಗೆ ಕಲ್ಲಲ್ಲೇ ಕಟ್ಟಿದ ಹಲವು ದಾರಿಗಳು ಇಲ್ಲಿರೋದು ವಿಶೇಷ. ಈ ದೇಗುಲಕ್ಕೆ ಹತ್ತೋ ಹಾದಿಯಲ್ಲಿ ಧಾನ್ಯ ಸಂಗ್ರಹಾರವನ್ನೂ ನೋಡಬಹುದು. ಶ್ರೀ ಲಕ್ಷ್ಮೀ ನಾರಾಯಣ ದೇಗುಲಕ್ಕೆ ಹತ್ತೋ ಜಾಗದಲ್ಲೋ ಇರೋ ಬುರುಜಿಂದ ಸುತ್ತಲ ಸ್ಥಳಗಳ ವಿಹಂಗಮ ದೃಶ್ಯವನ್ನೂ ಸವಿಯಬಹುದು. ಇಲ್ಲಿ ತುಪಾಕಿಗಳನ್ನು, ಪಿರಂಗಿಗಳನ್ನು ಇಡಬಹುದಾದ ಜಾಗವೂ ಇದ್ದು, ಇದಕ್ಕೆ ತುಪಾಕಿ ಬುರುಜೂ ಎನ್ನುತ್ತಾರಂತೆ. 

Lakshmi Narayana Temple

ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಸಾಗುವ ಹಾದಿಯಲ್ಲಿ ಮುಂದೆ ಸಾಗಿದರೆ ಅರಮನೆಯ ಪಳೆಯುಳಿಕೆಗಳು ಕಾಣುತ್ತದೆ. ಆಗಿನ ರಾಣಿಯರ ಸ್ನಾನದ ಕೋಣೆಗಳು, ದರ್ಬಾರ್ ಹಾಲ್, ಕೊಳ , ಕಲ್ಲಿನ ನೀರ ಬಾನಿಗಳು, ಅರಮನೆಯ ಕೋಣೆಗಳು ಕಾಣುತ್ತದೆ. ಈ ಕಲ್ಲು ಗುಡ್ಡದ ಮೇಲೆ ಬಾವಿ ಕೊರೆದದ್ದು ಆಶ್ಚರ್ಯವೇ ಸರಿ. ಅದಕ್ಕೆ ಕಲ್ಲುಗಳನ್ನು ಮರೆ ಮಾಡಿ ಜನ ಬೀಳದಂತೆ ನೋಡಿಕೊಂಡಿರೋ ಸ್ಥಳೀಯರ ಕಾಳಜಿಯೂ ಪ್ರಶಂಸನೀಯ. 

Neera Baani


ಅರಮನೆಯ ಪಳೆಯುಳಿಕೆಗಳ ಪಕ್ಕದಲ್ಲಿ ಕೋಟೆಯ ಮೇಲಕ್ಕೆ ಹತ್ತುವ ಮೆಟ್ಟಿಲುಗಳು ಕಾಣುತ್ತದೆ. ಆ ಮೆಟ್ಟಿಲುಗಳು ಮುಂದೆ ಮುಚ್ಚಿ ಹೋಗಿದ್ದರೂ ಅರಮನೆಯ ಬಲ ಪಕ್ಕದಲ್ಲಿ ಮೇಲೆ ಹತ್ತುವ ದಾರಿ ಕಾಣುತ್ತದೆ. ಅಲ್ಲೇ ಸ್ವಲ್ಪ ನಡೆಯುವ ಹೊತ್ತಿಗೆ ಮತ್ತೆ ಮೆಟ್ಟಿಲುಗಳು ಕಾಣುತ್ತವೆ. ಅಲ್ಲೇ ಮೇಲೆ ಹತ್ತುವ ಹೊತ್ತಿಗೆ ಮೂರನೆಯ ಸುತ್ತಿನ ಕೋಟೆಯ ಬಾಗಿಲು ಕಾಣುತ್ತದೆ. ಅದನ್ನು ದಾಟಿ ಒಳ ಸಾಗಿದರೆ ಕೋಟೆಯ ಮೇಲ್ಭಾಗದತ್ತ ಸಾಗುತ್ತೇವೆ. 

ಇಲ್ಲಿಂದ ಕಾಣುವ ವಾರಾಹಿ ಮತ್ತು ಚಕ್ರಾನದಿಗಳ ಹಿನ್ನೀರಿನ ದೃಶ್ಯ ನಯನಮನೋಹರ. ಮಳೆಗಾಲದಲ್ಲಿ ಇಲ್ಲಿನ ಕೋಟೆಗೋಡೆಗಳ ಹಸಿರು ಮತ್ತು ಇಲ್ಲಿ ಕಾಣಸಿಗೋ ಹಲವು ಹಕ್ಕಿಗಳು ಫೋಟೋಗ್ರಾಫಿ ಪ್ರಿಯರಿಗೂ ಹೇಳಿ ಮಾಡಿಸಿದಂತಿವೆ.

ಕೋಟೆಯ ತುತ್ತತುದಿಗೆ ಸಾಗುತ್ತಿದ್ದಂತೆ  ಅಲ್ಲಿರೋ ದೊಡ್ಡ ಬಂಡೆಯೊಂದರ ಮೇಲೆ ಶಿಖರೇಶ್ವರ ಅಥವಾ ಮೈಲಾರೇಶ್ವರ  ಅಥವಾ ಶ್ರೀಕಂಠೇಶ್ವರ ದೇಗುಲವಿದೆ. ಇಲ್ಲಿಂದಲೂ ಪಕ್ಕ ಸಾಗಿದರೆ ಮುಂಚೆ ಹೇಳಿದ ಗದಾ ತೀರ್ಥದ ಬಳಿ ಸಾಗಬಹುದು.

Srikanteshwara Temple


ಮತ್ತದೇ ಬೇಸರ:

ಇಲ್ಲಿನ ಚಾರಣಕ್ಕೂ ಮೊದಲು ಪುರಾತತ್ವ ಇಲಾಖೆಯವರು ಬ್ಯಾಗಿದ್ಯಾ ಎಂದು ಔಪಚಾರಿಕವಾಗಿ ಕೇಳುತ್ತಾರಷ್ಟೆ. ಅವರು ಎಷ್ಟೇ ಚೆಕ್ ಮಾಡಿದರೂ, ತಿಳಿ ಹೇಳಿದರೂ ಇಲ್ಲಿಗೆ ಬರೋ ಅವಿವೇಕಿ ಪ್ರವಾಸಿಗರು ಶಿಖರೇಶ್ವರ ದೇಗುಲದ ಬಂಡೆಯ ಕೆಳಗೆ, ಕೆಲವು ಕೆರೆ, ಬಾವಿಗಳ ಒಳಗೆ ಪ್ಲಾಸ್ಟಿಕ್ ಕವರುಗಳನ್ನ, ಬಾಟಲಿಗಳನ್ನು ಎಸೆದಿರುವುದು ದುರಂತ ! ಕೇರಳದ ವಯನಾಡ್ ಮುಂತಾದ ಪ್ರದೇಶಗಳಲ್ಲಿ ಮಾಡಿದಂತ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿರ್ಬಂಧದ ನಿಯಮಗಳನ್ನು ಇಲ್ಲೂ ತರಬೇಕಾಗಿದೆ. ನಾವು ಹೋದ ದಿನ ಸುಮಾರು ಕಾರುಗಳನ್ನ ನೋಡಿ ದಂಗಾಗಿದ್ವಿ. ಮೇಲೆಲ್ಲಾ ಮಾಸ್ಕ್ ಬಳಸಬೇಕು ಅಂತ ಪುರಾತತ್ವ ಇಲಾಖೆಯವರು ಹೇಳಿದ್ದನ್ನು ನಾವೇನೋ ಪಾಲಿಸಿದ್ವಿ. ಆದರೆ ನಮಗೆ ದಾರಿಯಲ್ಲಿ ಸಿಕ್ಕ ಜನರಲ್ಲಿ ಮುಕ್ಕಾಲು ಭಾಗ ಜನರ ಬಳಿ ಮಾಸ್ಕಿದ್ದರೂ  ಹಾಕ್ಕೊಂಡಿರಲಿಲ್ಲ, ಗುಂಪುಗೂಡಿ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿರಲಿಲ್ಲ! ಅಂದ ಹಾಗೆ ನಾವು ಹೋಗಿದ್ದ ದಿನ ಅಲ್ಲಿ ಸೇರಿದ್ದವರು ೯೦೦ಕ್ಕೂ ಹೆಚ್ಚು. ಹಿಂದಿನ ವಾರ ಅದು ಸಾವಿರ ಮೀರಿತ್ತಂತೆ ! ವಾರಾಂತ್ಯ ಬಿಡಿ, ವಾರದ ದಿನವೂ ನೂರೈವತ್ತರ ಮೇಲೆ ಜನ ಸೇರುತ್ತಾರಂತೆ ಇಲ್ಲಿ ! ಹಿಂದಿನ ವಾರ ಜೋಗಕ್ಕೆ ಹೋದಾಗಲೂ ಅಲ್ಲಿನ ಸೀತಾಕಟ್ಟೆ ಸರ್ಕಲ್ಲಿನವರೆಗೂ ಕ್ಯೂ ಇತ್ತು. ಅಂದು ಸಂಗ್ರಹವಾದ ಪ್ರವಾಸಿಗರ ಪ್ರವೇಶ ಶುಲ್ಕವೇ ೪ ಲಕ್ಷ ! ಇದನ್ನೆಲ್ಲಾ ನೋಡಿದಾಗ ಈ ಕರೋನಾ ಅನ್ನೋದು ಟೀವಿ, ಪತ್ರಿಕೆಗಳಲ್ಲಿ ಮಾತ್ರವೇ ಇರೋದಾ ಅನಿಸುತ್ತೆ !


Monday, July 13, 2020

ನಾನೋದಿದ ಪುಸ್ತಕ ಹಿರಿಯೂರಿನ ಸರಹದ್ದು, ಸ್ವರೂಪ ಮತ್ತು ನಿಗೂಢ ಮನುಷ್ಯರು

Huliyoorina sarahaddu
ಮಲೆನಾಡು ಹೆಸರಿಗೆ ಮಾತ್ರ ಮಲೆನಾಡಾಗಿದೆಯೀಗ, ಮಳೆಯಿಲ್ಲ ಎಂತದೂ ಇಲ್ಲ, ಊರಲ್ಲಿ ಬೆಚ್ಚಗಿನ ಕಾಫಿ, ಕಂಬಳಿ, ಪಗಡೆಯಾಟಗಳೆಲ್ಲ ಭೂತದ ಕನಸಷ್ಟೆ ಎನಿಸುತ್ತಿತ್ತು. ಊರೆಲ್ಲಾ ಮಕ್ಕಳಿಲ್ಲದೇ ವೃದ್ದಾಶ್ರಮಗಳಾಗಿದೆ ಎಂಬ ಮಲೆನಾಡು, ಕಟ್ಟಿದ ಭವ್ಯ ಬಂಗಲೆಗಳು ಬೀಗ ಕಂಡು ಕಸ ಕುಡಿಸುವವರೂ ಇಲ್ಲವೆಂಬ ಕೇರಳದ ನಿಟ್ಟುಸಿರಿಗೆ ಉತ್ತರವೆಂದೋ ಎನಿಸುತ್ತಿತ್ತು. ದಟ್ಟ ಕಾನನದ ಮಧ್ಯೆ ನೆಲೆ ನಿಂತ ಜೀವಗಳು ಅದೆಷ್ಟೋ ದಶಕಗಳ ಒಂಟಿತನಕ್ಕೆ ಸಾಕ್ಷಿಯಾಗಿ, ಬೀಳುತ್ತೇನೆಂದರೂ ಬಾರದ ಮಳೆಗೆ ಮರುಗುತ್ತಾ ಕುಳಿತ ಮಣ್ಣು ಗೋಡೆಗಳಂತಾಗಿವೆಯಾ ಎಂದೂ ಎನಿಸುತ್ತಿತ್ತು. ಇವೆಲ್ಲಾ ಪ್ರಶ್ಯೆಗಳಿಗೆ ಉತ್ತರವೆಂಬಂತೆ ಬಂದ ಕರೋನಾ ಪಟ್ಟಣಗಳಿಂದ ಮತ್ತೀ ಹಳ್ಳಿಗಳಿಗೆ ಜನರ ಮರಳಿಸುತ್ತಿದೆಯಾ, ಕಾರಂತರ ಮರಳಿ ಮಣ್ಣಿಗೆ ಎನ್ನುವಂತೆ ಎಂದೂ ಅನಿಸುತ್ತಿತ್ತು. ಆ ಸಮಯದಲ್ಲಿ ಕೈಗೆ ಸಿಕ್ಕಿದ್ದು ತೇಜಸ್ವಿಯವರ ಹಿರಿಯೂರಿನ ಸರಹದ್ದು ಎಂಬ ಆರು ಕತೆಗಳ ಸಂಗ್ರಹ ಮತ್ತು ಸ್ವರೂಪ, ನಿಗೂಢ ಮನುಷ್ಯರು ಎಂಬ ಕಿರು ಕಾದಂಬರಿಗಳು.

ತೇಜಸ್ವಿಯವರ ಬರಹಗಳು ಕಾಡೋದು ಅವರ ಬರಹಗಳಲ್ಲಿ ಮೇಳವಿಸಿರೋ ಮಲೆನಾಡ ಚಿತ್ರಣದಿಂದಿರಬಹುದೇನೋ. ಬೆಂಗಳೂರಿನಲ್ಲಿ ಕೆಲವು ಘಂಟೆಗಳ ಕಾಲ ಮಳೆಯಾದರೇ ರಸ್ತೆಗಳೆಲ್ಲಾ ಉಕ್ಕಿ ಹರಿದು ಮಿನಿ ಪ್ರವಾಹದ ಪರಿಸ್ಥಿತಿ. ಅಂತಹ ಸ್ಥಿತಿಯಿಂದ ಬಂದವರಿಗೆ ಮಳೆಕಾಡಲ್ಲಿ ಎರಡ್ಮೂರು ದಿನ ಬಿಡದೇ ಮಳೆ ಹೊಡೆಯುತ್ತೆ ಎಂಬುದನ್ನು  ಊಹಿಸಲೂ ಸಾಧ್ಯವಾಗದೇನೋ. ಹೊಟ್ಟೆಪಾಡಿಗಾಗಿ ಅಂತದ್ದೇ ಬೆಂದಕಾಳೂರಲ್ಲಿದ್ದ ಜನರೀಗ ಕರೋನಾಕ್ಕೆ ಹೆದರಿ ಮತ್ತೆ ಊರುಗಳತ್ತ ಸಾಗಿದ್ದಾರಾ ಅನಿಸುವ ಹೊತ್ತಿಗೆ ಮಲೆನಾಡಲ್ಲಿ ಮಳೆಯ ಆರ್ಭಟ ಶುರು. ಮಳೆಗಾಲವಾದರೂ ಶುರುವಾಗದ ಮಳೆ, ತುಂಬದ ಬಾವಿಗಳೆಲ್ಲಾ ತುಳುಕಾಡುವಷ್ಟು ಮಳೆ ಮೂರ್ನಾಲ್ಕು ದಿನಗಳಿಂದ ಹೊಡೀತಾ ಇತ್ತು. ಭಾರೀ ಮಳೆಯ ನಂತರ ಸ್ವಲ್ಪ ಜುಮುರು, ಅದರ ನಂತರ ಇಬ್ಬನಿಯಂತೆ ಮಳೆ. ಮತ್ತೆ ಇದರದೇ ಆವರ್ತನವಿತ್ತೇ ಹೊರತು ಬಿಸಿಲಿರಲಿಲ್ಲ! ಮೋಡಗಳ ಮರೆಯಲ್ಲೇ ಲಾಕಾಗಿದ್ದ ಸೂರ್ಯನ ದರ್ಶನವಿಲ್ಲದೇ, ಬಟ್ಟೆಗಳೊಣಗದೇ ದಿನ ಮೂರಾಗಿತ್ತು.ಇಂತದೇ ಮಳೆಕಾಡ ನಮ್ಮೂರ ಸಮೀಪದ ಊರು ಚಂದ್ರಗುತ್ತಿ. ಅದು ತೇಜಸ್ವಿಯವರ ನಿಗೂಢ ಮನುಷ್ಯರು ಕಾದಂಬರಿಯ ಎಳೆ ಶುರುವೂ ಹೌದು.

ಚಂದ್ರಗುತ್ತಿಯ ಸಮೀಪದ ನುಗುಬೀಡುವಿನಿಂದ ದುಗ್ಗು ಮಾರ್ಗವಾಗಿ ನವಿಲುಗುಂದಕ್ಕೆ ಹೊರಟಿರೋ ೭೦ರ ದಶಕದ ಕಾರೊಡೆಯ ಜಗನ್ನಾಥ. ಅವನ ಜೊತೆಗೂಡೂ ರೆವಿನ್ಯೂ ಇನ್ಸಪೆಕ್ಟರ್ ರಂಗಪ್ಪನಿಗೆ ಪರಿಚಯವಾಗೋದು ಸಿಐಡಿ ಗೋಪಾಲಯ್ಯ. ಅನುಭವಗಳ ಅರಸಿ ಹೊರಡೋ ಇವರಿಗೆ ಸಿಗೋ ಕ್ರಾಂಪ, ಮರಸರ, ಉಕ್ಕಿ ಹರಿಯ ಎಣ್ಣೆಹೊಳೆ, ಉರುಳೋ ಗಿರಿ , ಏಲಕ್ಕಿ ತೋಟ, ಶಾರಿ ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಕಥೆ, ವಿಚಿತ್ರ ವ್ಯಥೆ . ಪ್ರತೀ ಪಾತ್ರದ ಮಾತು ಕೇಳ್ತಿದ್ದರೆ ಆ ಪಾತ್ರವೇ ನಾವೇನೋ ಎನ್ನುವಂತಹ ಚಿತ್ರಣ. ಕೊಪ್ಪ, ಜಯಪುರ ಸಮೀಪದ ಕಾಫಿ ತೋಟಗಳಲ್ಲಿ ಅಲೆದಿದ್ದರೆ, ಮೇರಿತಿ ಬೆಟ್ಟದಂತಹ ಸ್ಥಳಗಳಿಗೆ ಕಿಲೋಮೀಟರುಗಟ್ಟಲೇ ಎಸ್ಟೇಟುಗಳ ಮಧ್ಯೆ ಸಾಗಿದ್ದರೆ ಇಲ್ಲಿ ಬರೋ ಹಾದಿಯ, ಸಿಕ್ಕಿ ಹಾಕಿಕೊಳ್ಳೋ ಪರಿಸ್ಥಿತಿಗಳ, ಏಲಕ್ಕಿ ತೋಟಗಳ ಕಲ್ಪನೆ ದಕ್ಕಬಹುದೇನೋ.  ಇದೇ ಹಾದಿಯ ಕೊನೆ ಎನ್ನುವಂತ ಸ್ಥಳದತ್ತ ಸಾಗುತ್ತಿದ್ದೀರಿ ಎಂದುಕೊಳ್ಳಿ. ನೀವು ಒಂದು ಸ್ಥಳವನ್ನು ದಾಟಿದ ನಂತರ ಮರಳಿ ಬರಲಾರದಂತೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಅಲ್ಲಿ ಉಳಿಯಲು ಆಗುತ್ತಿಲ್ಲ. ಹಿಂಬರಲು ಆಗುತ್ತಿಲ್ಲ. ಹೇಗಾದರೂ ಮುಂದೆ ಸಾಗೋಣವೆಂದು ಅದೆಷ್ಟೋ ದಿನಗಳ ಪ್ರಯತ್ನದ ನಂತರ ಹೊರಟರೆ ಅತ್ತಲಿಂದಲೂ ಇತ್ತ ಬರುತ್ತಿರೋ ಜನ ! ಒಂದೆಡೆ ಪ್ರಪಾತ, ಇನ್ನೊಂದೆಡೆ ನುಂಗಲು ಬರುತ್ತಿರುವ ಹೆಬ್ಬಾವು, ಇವೆರಡರ ನಡುವೆ ಸಿಲುಕಿದಂತಹ ಪರಿಸ್ಥಿತಿ. ಗೊತ್ತು ಗುರಿಯಿಲ್ಲದ ಊರಲ್ಲಿ ನಂಬೋದ್ಯಾರನ್ನ, ಬಿಡೋದ್ಯಾರನ್ನ ? ಎದುರಿಗಿದ್ದವ ಹೇಳಿದ್ದರಲ್ಲಿ ಸತ್ಯವೆಷ್ಟು, ಸುಳ್ಳೆಷ್ಟು ? ಕೊನೆಗಾಣದ ಹಾದಿಯಲ್ಲಿ ಗೊತ್ತಿಲ್ಲದ ಜೀವದೊಂದಿಗೆ ಸಾಗಿದರೆ ಜೀವ ಉಳಿಯುತ್ತಾ ಎಂಬ ಅಸಂಖ್ಯ ಪ್ರಶ್ನೆಗಳನ್ನು, ಕುತೂಹಲವನ್ನು ಆಗಾಗ ಕೆರಳಿಸೋ ಈ ಕಾದಂಬರಿ, ಕೌತುಕ, ಭಯದ ನಡುವೆಯೇ ಒಂದು ಕಾಲದ ಮಳೆಕಾಡ ಚಿತ್ರಣವನ್ನು ಕಟ್ಟಿಕೊಡುತ್ತದೆ. ಎಕ್ಸ್ ಪ್ಲೋರಿಂಗ್ ದ ವೈಲ್ಡ್, ಶರಾವತಿ ಎಕ್ಸ್ ಪ್ಲೋರೆಷನ್ ಅಂತೆಲ್ಲಾ ಹೆಸರಿಟ್ಟು ಕಾಡು ಕಡಿದು ಹೋಂ ಸ್ಟೇ ಮಾಡಿದೋರು, ಕಾಡಲ್ಲಿ ನಾವು ಮಾಡಿದ್ದ ಕೇಳೋರು ಯಾರೂ ಇಲ್ಲ ಎಂದು ಬಾಟಲಿ ಒಡೆಯೋರು, ಕಸ ಹರಡೋರು, ಕಾಡ ಮಧ್ಯ ಟೆಂಟ್ ಹಾಕಿ, ಜಲಪಾತಗಳಲ್ಲಿ ಮಿಂದೇಳೋ ದಿನಗಳನ್ನೇ ಪ್ರಕೃತಿಯೊಡನೆಯ ಜೀವನ ಎನ್ನುವವರು ನಿಜವಾದ ಅರಣ್ಯವಾಸ ಎಷ್ಟು ರೋಚಕ ಮತ್ತು ಭಯಾನಕ ಎಂಬ ಕಲ್ಪನೆಯಾದರೂ ಹೊಂದಲು ಓದಬೇಕಾದ ಪುಸ್ತಕವಿದು.

Tuesday, April 14, 2020

ಏಪ್ರಿಲ್ ೧೪ ರಂದು ಕರೋನಾ ವಿರುದ್ಧ ಹೋರಾಡಲು ದೇಶದ ಜನತೆಗೆ ಕರೆಕೊಟ್ಟ ಪ್ರಧಾನಿಯವರ ಭಾಷಣದಲ್ಲಿನ ಸಪ್ತ ಸೂತ್ರಗಳು

೧. ನಿಮ್ಮ ಮನೆಯಲ್ಲಿರೋ ಹಿರಿಯ ಜೀವಗಳನ್ನು ಜಾಗೃತೆಯಿಂದ ನೋಡಿಕೊಳ್ಳಿ. ಅವರಿಗೆ ಈಗಾಗಲೇ ಯಾವುದಾದರೂ ರೋಗಗಳಿದ್ದರೆ ಅವರಿಗೆ ಕೊರೋನಾ ಸೋಂಕು ತಗುಲದಂತೆ ಇನ್ನೂ ಹೆಚ್ಚಿನ ಎಚ್ಚರಿಕೆಯಿಂದ ನೋಡಿಕೊಳ್ಳಿ.
೨. ಲಾಕ್ ಡೌನ್ ಮತ್ತು ಸೋಷಿಯಲ್ ಡಿಸ್ಟೆಂಸಿಂಗ್ ಗಳನ್ನು ಪಾಲಿಸಿ. ಮನೆಯಲ್ಲೇ ಮಾಡಿದ ಫೇಸ್ ಕವರ್, ಮಾಸ್ಕ್ ಗಳನ್ನು ಬಳಸಿ
೩. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುಷ್ /ಆರೋಗ್ಯ ಇಲಾಖೆಯವರು ಹೇಳಿದ ಸೂಚನೆಗಳನ್ನು ಪಾಲಿಸಿ. ಬಿಸಿನೀರು ಕುಡಿಯೋದು ಇತ್ಯಾದಿ
೪. ಕರೋನಾ ಸಂಕ್ರಮಣದ ಹರಡುವಿಕೆಯನ್ನು ತಡೆಯಲು "ಆರೋಗ್ಯಸೇತು" ಮೊಬೈಲ್ ಆಪನ್ನು ಡೌನ್ ಲೋಡ್ ಮಾಡಿ ಮತ್ತು ಇತರರಿಗೂ ಅದನ್ನು ಡೌನ್ ಲೋಡ್ ಮಾಡಲು ಹೇಳಿ.
೫. ಎಷ್ಟಾಗತ್ತೋ ಅಷ್ಟು ಬಡ ಕುಟುಂಬಗಳಿಗೆ, ಅವರ ದೈನಂದಿನ ಊಟಕ್ಕೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.
೬. ನಿಮ್ಮ ವ್ಯಾಪಾರ, ಉದ್ದಿಮೆಗಳಲ್ಲಿ ಸ್ವಲ್ಪ ಮಾನವೀಯತೆಯನ್ನು ತೋರಿ. ಯಾರನ್ನೂ ಕೆಲಸದಿಂದ ತೆಗೆಯಬೇಡಿ.
೭. ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಪೋಲೀಸ್, ಡಾಕ್ಟರುಗಳು, ನರ್ಸುಗಳನ್ನು ಗೌರವಿಸಿ.

ಕೊರೋನಾ ವಿರುದ್ಧ ಹೋರಾಡೋಕೆ ಈ ಸಪ್ತಪದಿಯನ್ನು ೩ ಮೇನ ವರೆಗೆ ಪಾಲಿಸಿದರೆ ಕೊರೋನಾ ವಿರುದ್ಧ ನಮ್ಮ ಹೋರಾಟದಲ್ಲಿ ಜಯ ಸಾಧ್ಯ. ಎಲ್ಲಿದ್ದೀರೋ, ಅಲ್ಲೇ ಇರಿ. ಸುರಕ್ಷಿತವಾಗಿರಿ.

Sunday, March 29, 2020

ನಾನೋದಿದ ಪುಸ್ತಕ "ಚಿತಾದಂತ"

ಪ್ರಪಂಚದ ಗೊಡವೆಯೇ ಬೇಡವೆಂದು ಹೊರಟು ನಿಂತ ಬುದ್ಧ ತನ್ನದೇ ಧರ್ಮವೊಂದನ್ನು ಸ್ಥಾಪಿಸಿ ಅದನ್ನು ಜನರಿಗೆ ಉಪದೇಶಿಸತೊಡಗುತ್ತಾನೆ. ಅವನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅವರಿಗಾಗಿ ವಿಹಾರಗಳನ್ನು ಕಟ್ಟಿಸುತ್ತಾ ಸಾಗುತ್ತಾನೆ ! ಆತನ ಅನುಯಾಯಿಗಳು ಈ ಹೊಸ ಧರ್ಮ ಪ್ರಚಾರಕ್ಕೆ ಎಷ್ಟು ಉತ್ಸುಕರಾಗುತ್ತಾರೆಂದರೆ ಒಂದು ಹಂತದಲ್ಲಿ ಭಾರತವನ್ನೂ ದಾಟಿ ಮೇಲಿನ ನೇಪಾಳ ಕೆಳಗಿನ ಶ್ರೀಲಂಕಾಗಳಿಗೆ ಸಾಗುತ್ತಾರೆ. ಭಾರತದಲ್ಲಿ ಬದಲಾಗುತ್ತಿದ್ದ ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿ ಬೌದ್ಢ ಧರ್ಮವೂ ಬದಲಾಗುತ್ತಿದ್ದರೂ ಶ್ರೀಲಂಕಾ, ನೇಪಾಳಗಳ ಮುಟ್ಟಿದ ಬೌದ್ಢ ಧರ್ಮ ತನ್ನ ಅಸ್ಮಿತೆಯನ್ನು ಹಾಗೇ ಉಳಿಸಿಕೊಂಡಿರುತ್ತದೆ. ತಮಿಳುನಾಡಿನ ರಾಜರು ಶ್ರೀಲಂಕಾಕ್ಕೆ ಆಗಾಗ ಬೌದ್ಢ ಧರ್ಮ ಪ್ರಚಾರಕ್ಕೆಂದು ಜನರನ್ನು ಕಳುಹಿಸುತ್ತಿರುತ್ತಾರೆ. ಆದರೆ ಅಲ್ಲಿನ ಹಳೆಯ ಬೌದ್ಢ ಧರ್ಮವನ್ನೇ ನಿಜವಾದ್ದು, ಶ್ರೇಷ್ಟವಾದ್ದು ಎಂದು ಭಾವಿಸೋ ಮುನಿಗಳು, ಅವರಿಂದ ಪ್ರಭಾವಿತರಾದ ರಾಜರು ಇದಕ್ಕೆ ಅವಕಾಶ ಕೊಡುತ್ತಿರುವುದಿಲ್ಲ. ಕೊನೆಗೂ ಒಂದು ದಿನ ಭಾರತದಿಂದ ಬಂದ ಹೊಸ ಬೌದ್ಧ ಧರ್ಮದಿಂದ ಪ್ರಭಾವಿತನಾಗಿದ್ದ ಮುನಿಯೊಬ್ಬ ಯುವರಾಜನೊಬ್ಬನ ಗುರುವಾಗಿ ಉಳಿಯೋ ಅವಕಾಶ ಪಡೆಯುತ್ತಾನೆ.  ಅದನ್ನೇ ಮುಂದೆ ದುರುಪಯೋಗ ಪಡಿಸಿಕೊಳ್ಳೋ ಆತ ಅಲ್ಲಿನ ಮೂಲ ಸತ್ವದ ಅನುಯಾಯಿಗಳನ್ನೆಲ್ಲಾ ಕೊಲ್ಲಲು ಆದೇಶಿಸುತ್ತಾನೆ ! ಆಗ ತಮ್ಮ ಮತ್ತು ಮೂಲ ಬೌದ್ಢ ಧರ್ಮದ ಆಶಯಗಳ ಜೀವ ಉಳಿಸಲೆಂದು ಜೀವ ತಾಳಿದ ಗುಂಪೇ "ತೇರವಾದಿಗಳು". ಮೂಲತಃ ಶಾಂತಿವಾದಿಗಳಾಗಿದ್ದ ಅವರು ತಮ್ಮ ಉದ್ದೇಶಗಳ ಸಾಧನೆಗೆ ಹಿಂಸಾ ಮಾರ್ಗವನ್ನು ಹಿಡಿಯುತ್ತಾರೆ.

ಪ್ರಪಂಚವನ್ನೇ ತನ್ನ ಸಾಮಾಜ್ಯವನ್ನಾಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಹಾದಿಯಲ್ಲಿ ಸಿಕ್ಕ ರಾಜ್ಯಗಳನ್ನೆಲ್ಲಾ ಗೆಲ್ಲುತ್ತಾ, ಸಿಕ್ಕಸಿಕ್ಕಿದ್ದೆಲ್ಲವನ್ನೂ ಲೂಟಿ ಮಾಡುತ್ತಾ ಸಾಗಿದ ಗ್ರೀಕ್ ರಾಜ ಅಲೆಕ್ಸಾಂಡರ್ ಭಾರತದತ್ತ ಬರುತ್ತಾನೆ. ಪಾಕಿಸ್ತಾನದ ಪೇಶಾವರದ ಬಳಿ ಲೂಟಿಯನ್ನು ಹೊತ್ತೊಯ್ದು ಮುಂದೆ ಸಾಗೋದೇ ಅಸಾಧ್ಯವೆನಿಸಿದಾಗ ಅವುಗಳನ್ನು ಅಲ್ಲೇ ಒಂದೆಡೆ ಸುಟ್ಟಂತೆ ಮಾಡಿ ಅದನ್ನೂ ರಹಸ್ಯವಾಗಿ ಸಂಗ್ರಹಿಸುತ್ತಾನೆ. ಅಲ್ಲಿಂದ ಮುಂದೆಯೂ ಅಪಾರವಾದ ಲೂಟಿ ಸಿಗುತ್ತದೆ. ಆದರೆ ಕೊನೆಗೊಂದು ದಿನ ಸಿಂಧೂ ನದಿಯಾಚೆಗಿರೋ ನಂದರ ಅಪಾರ ಸೇನಾಬಲವನ್ನು ಕಂಡು ದಿಗ್ಭ್ರಮೆಗೊಳಗಾಗುತ್ತಾನೆ. ತಾನು ಅಲ್ಲಿಯವರೆಗೆ ಲೂಟಿ ಹೊಡೆದ ಸಂಪತ್ತನ್ನೆಲ್ಲಾ ತನ್ನೂರಿಗೆ ಸಾಗಿಸಿ ತಾನೂ ವಾಪಾಸ್ಸಾಗಬೇಕು, ಈ ನಂದರ ಕೈಲಿ ಗೆಲ್ಲೋದು ಅಸಂಭವವೆಂದು ತನ್ನ ದಿಗ್ವಿಜಯದ ಕನಸನ್ನು ಕೈಬಿಡುತ್ತಾನೆ. ಆದರೆ ಸಂಪತ್ತನ್ನು ಸಾಗಿಸೋದು ಹೇಗೆ ಎಂದಾಗ ಆತನು ದಾರಿಯಲ್ಲಿ ಕಂಡ ಪ್ರಚಂಡ ಮೇಧಾವಿಗಳಾದ ಬೌದ್ಢ ಭಿಕ್ಷುಗಳು ನೆನಪಾಗುತ್ತಾರೆ. ಅವರಲ್ಲೊಬ್ಬನೇ ಅಶ್ವಘೋಷ. ಆತ ಅರ್ಧ ಸಂಪತ್ತನ್ನಷ್ಟೇ ನೀನು ಕೊಂಡೊಯ್ಯು. ಉಳಿದದ್ದನ್ನು ಇಲ್ಲೇ ರಹಸ್ಯವಾಗಿಡು. ನಂತರ ಅದನ್ನು ತೆಗೆದುಕೊಂಡು ಹೋಗಬಹುದು ಎಂದು ರಹಸ್ಯವಾಗಿಡಲು ಯೋಜನೆಯನ್ನು ತಯಾರಿಸಿ ಕೊಡುತ್ತಾನೆ. ಈ ಯೋಜನೆ ತಿಳಿದ ಅಶ್ವಘೋಷನನ್ನು ಇಲ್ಲೇ ಬಿಟ್ಟರೆ ಕಷ್ಟ. ಅವನನ್ನೂ ತನ್ನೊಡನೆ ಕೊಂಡೊಯ್ದು ಸಾಯಿಸಬೇಕು ಎಂದು ಅಲೆಕ್ಸಾಂಡರ್ ಆಲೋಚಿಸಿರುತ್ತಾನೆ. ಅದನ್ನು ತಿಳಿಯದಷ್ಟು ದಡ್ಡನೇ ಅಶ್ವಘೋಷ ? ತಾನು ನನ್ನ ಹಲ್ಲುಗಳಲ್ಲೇ ನಿಧಿಯ ರಹಸ್ಯವಡಗಿದೆ ಎಂಬ ರಹಸ್ಯ ಮಾಹಿತಿಯನ್ನು ಸಾಮಾನ್ಯ ಪತ್ರವೊಂದರೊಳಗೆ ಅಡಕವಾಗಿಟ್ಟು ತನ್ನ ನಿಷ್ಟ ಅಮಾತ್ಯರಾಕ್ಷಸನಿಗೆ ಕಳುಹಿಸುತ್ತಾನೆ. ಅಮಾತ್ಯ ಪತ್ರದ ರಹಸ್ಯವನ್ನು ಕೊನೆಗೂ ಬೇಢಿಸುವಷ್ಟರಲ್ಲಿ ಅಶ್ವಘೋಷ ಚಿತೆಗೆ ಹಾರಿ ಸತ್ತು ಹೋದ. ಇದು ಅವನ ಚಿತಾಭಸ್ಮ. ತಮಗೆ ತಲುಪಿಸಲೆಂದೇ ನೀಡಿದ್ದಾರೆ ಎಂದು ಅಲೆಕ್ಶಾಂಡರಿನ ಸೈನಿಕರು ಒಂದು ಭಸ್ಮದ ಭರಣಿಯನ್ನು ಕೊಡುತ್ತಾರೆ. ಅದರ ಕೆಳಗೆ ಆಧಾರವಾಗಿರುವಂತೆ ಮೂರು ಹಲ್ಲುಗಳನ್ನು ಅಂಟಿಸಲಾಗಿರುತ್ತದೆ !!!

ಇನ್ನು ಬುದ್ಢ ಸತ್ತಾಗ ಅವನ ಸಂಸ್ಕಾರಕ್ಕೆ ಹೋದವನೊಬ್ಬ ನಾಲ್ಕು ಹಲ್ಲುಗಳನ್ನು ತಂದಿರುತ್ತಾನೆ. ಅದು ರಾಜರಿಂದ ರಾಜರ ಕೈ ಬದಲಾಗುತ್ತಿರುತ್ತೆ. ಆ ಹಲ್ಲುಗಳನ್ನು ಇಟ್ಟುಕೊಂಡವರನ್ನು ಯಾರೂ ಸೋಲಿಸೋದು ಸಾಧ್ಯವಿಲ್ಲವೆಂಬ ದಂತಕತೆಯಿರುತ್ತೆ. ಕೈಯಿಂದ ಕೈ ಬದಲಾಗುವಾಗ ಆ ಹಲ್ಲು ಎಲ್ಲಿ ಹೋಯ್ತು ಎನ್ನೋದರ ಬಗ್ಗೆ ಎಲ್ಲೆಡೆ ಊಹಾ ಪೋಹಗಳೆದ್ದಿರುತ್ತೆ. ಶ್ರೀಲಂಕಾ, ನೇಪಾಳ, ಚೀನಾ, ಇಂಡೋನೇಷ್ಯಾದವರು ಬುದ್ಧನ ಅಸಲಿ ಹಲ್ಲು ತಮ್ಮ ಬಳಿಯೇ ಇದೆ ಎಂದೆನ್ನುತ್ತಾ ಇರುತ್ತಾರೆ !

ವಿಭಜನೆಯಾಗದ ಭಾರತದ ಕಾಲಕ್ಕೆ ಸೇರಿದ ಪಂಜಾಬಿ ಪ್ರಾಚ್ಯ ವಸ್ತು ಶಾಸ್ತ್ರಜ್ಞನೊಬ್ಬ ಹೀಗೇ ಬೌದ್ಢ ಧರ್ಮದ ಪಳೆಯುಳಿಕೆಗಳ ಬಗ್ಗೆ ಹುಡುಕುತ್ತಾ ಅಲೆಕ್ಸಾಂಡರಿನ ನಿಧಿಯನ್ನು ತಡಕುತ್ತಾನೆ ! ಹಾಗೇ ಇತಿಹಾಸದ ಕೊಂಡಿಗಳ ಬಿಡಿಸುತ್ತಾ , ಅಶ್ವಘೋಷ, ಅಮಾತ್ಯ, ಅದೇ ಕಾಲದಲ್ಲಿದ್ದ ಚಾಣಾಕ್ಯರ ಚಾಣಾಕ್ಷತನಗಳ ಅರಿಯುತ್ತಾನೆ.   ತನ್ನ ಸಂಶೋಧನೆಗಳನ್ನೆಲ್ಲಾ ಒಂದು ಡೈರಿಯಲ್ಲಿ ಬರೆದು ತನ್ನ ಕುಟುಂಬಸ್ಥರಿಗೆಂದು ಭದ್ರವಾಗಿಡುತ್ತಾನೆ !

ಹೆಚ್ಚುತ್ತಿರೋ ಬೌದ್ಢ ಧರ್ಮದ ಪ್ರಭಾವವನ್ನು ಸಹಿಸದ ಒಂದಿಷ್ಟು ಶಕ್ತಿಗಳು ಈ ಹಲ್ಲನ್ನು ಹುಡುಕಿ ಅದನ್ನು ನಾಶ ಮಾಡಬೇಕು ಎಂದು ಒಂದೆಡೆ. ಅಲೆಕ್ಸಾಂಡರಿನ ಸೇನೆಯೊಂದಿಗೇ ಬಂದು ಪಾಕಿಸ್ತಾನದ ಪೇಶಾವರದ ಬಳಿಯುಳಿದ ಕಲಾಶರು ತಮ್ಮ ಹಳೆಯ ನಿಧಿ ತಮಗೇ ಸೇರಬೇಕು ಎಂದು ಮತ್ತೊಂಡೆಡೆ. ಆ ಬುದ್ಧನ ಹಲ್ಲಿಗಿರೋ ಕೋಟ್ಯಾಂತರ ಬೆಲೆಗೆ ಹೇಗಾದರೂ ಮಾಡಿ ಅದನ್ನು ಲಪಟಾಯಿಸಬೇಕು ಎಂಬ ಭೂಗತ ಜಗತ್ತು ಇನ್ನೊಂದೆಡೆ. ಅಶ್ವಘೋಷನ ಹಲ್ಲುಗಳನ್ನು ಸಂಪಾದಿಸಿ ಅದರ ಮೂಲಕ ಪುರಾತನ ನಿಧಿಯ ರಹಸ್ಯಗಳನ್ನು ತಿಳಿದು ಅದನ್ನು ದೋಚಬೇಕು ಎಂಬ ಪಾಕಿಸ್ತಾನದ ಉಗ್ರಗಾಮಿಗಳ ಗ್ಯಾಂಗು ಮತ್ತೊಂದೆಡೆ ! ಇವೆಲ್ಲದರ ನಡುವೆ ತಮ್ಮ ರಹಸ್ಯಗಳನ್ನು ರಹಸ್ಯವಾಗೇ ಇಡಬೇಕು ಎಂಬ ಉದ್ದೇಶದ ತೇರವಾದಿಗಳು ಮತ್ತು ಇತಿಹಾಸದ ಬಗೆಗಿನ ಅದಮ್ಯ ಕುತೂಹಲದಿಂದ ಅದನ್ನು ಕೆದಕುತ್ತಾ ಮೇಲಿನೆಲ್ಲಾ ಗುಂಪುಗಳ ಕಣ್ಣಿಗೆ ಬೀಳೋ ಇತಿಹಾಸ ತಜ್ಞರು. ಇವರೆಲ್ಲರ ನಡುವಿನ ಸಮರ ಹೇಗೆ ಸಾಗುತ್ತೆ , ರಾಜ ಅಶೋಕನಿಂದ ಸಾಗಿ ಚಾಚಾ ನೆಹರೂವರೆಗೆ ಸಾಗೋ ಹಲವು ಶತಮಾನಗಳ ಹಲವು ಮಜಲಿನ ಕಾದಂಬರಿಯೇ ಚಿತಾದಂತ! ೫೬ಕ್ಕೂ ಹೆಚ್ಚು ಐತಿಹಾಸಿಕ ಗ್ರಂಧಗಳ ಉಲ್ಲೇಖಗಳು, ಚಿತ್ರಗಳು ಲೇಖಕರ ಅಪಾರವಾದ ಪೂರ್ವ ತಯಾರಿಯನ್ನು ಸೂಚಿಸುತ್ತೆ. ಇತಿಹಾಸ, ಕಲ್ಪನೆಗಳ ಉತ್ತಮ ಮಿಶ್ರಣದಲ್ಲಿ ಕೊನೆಗೆ ಯಾರು ಗೆದ್ದರು ಯಾರು ಸೋತರು ಅನ್ನೋದಕ್ಕಿಂತಲೂ ಮುಂದೇನಾಗುತ್ತೆ ಅನ್ನೋ ಕುತೂಹಲವೇ ಕೊನೆಯವರೆಗೂ ಗೆಲ್ಲುತ್ತೆ. ಎಲ್ಲಾ ಕತೆಯನ್ನು ನಾನೇ ಹೇಳಿಬಿಟ್ಟೆ. ಪುಸ್ತಕದಲ್ಲಿ ಇನ್ನೇನುಳೀತು ಅಂದ್ರಾ ? ನಾ ಹೇಳಿದ್ದು ಪುಸ್ತಕದಲ್ಲಿರೋ ಅಂಶಗಳಲ್ಲಿ ಒಂದಂಶವೂ ಅಲ್ಲ. ಅಭಿಪ್ರಾಯವೇ ಹೀಗಿದೆ ಅಂದ್ರೆ ಪುಸ್ತಕ ಹೇಗಿದೆ ಅಂದ್ರಾ ? ಓದಿ ನೋಡಿ, ನಿಮಗೇ ಗೊತ್ತಾಗುತ್ತೆ. ಪುಸ್ತಕ ಓದುವ ಸಂಸ್ಕೃತಿಗೆ ಶುಭವಾಗಲಿ :-)

ಓಟಿಟಿ ಮತ್ತು ಮಾಲ್ಗುಡಿ ಡೇಸ್

ಒಂದು ಮೈಸೂರ್ ಪಾಕ್ ಕೊಡಿ.
ತಗೋಳಿ
ಅರೇ, ಇದೇನಿದು ? ನಾ ಕೇಳಿದ್ದು ಮೈಸೂರ್ ಪಾಕು
ಹೂಂ. ಇದೇ ಮೈಸೂರ್ ಪಾಕು
ಅರೆ, ಇದು ಪಾನಿಪೂರಿ ರೀ, ಮೈಸೂರ್ ಪಾಕ್ ಕೇಳಿದ್ರೆ ಪಾನಿಪೂರಿ ಕೊಡ್ತೀರಲ್ರೀ?
ಇದು ಮೈಸೂರು, ನಾ ಇದ್ನೇ ಮೈಸೂರ್ ಪಾಕ್ ಅಂತ ಕರೆಯೋದು !!
ಏನಪ್ಪಾ ಇದು ಅಂತ ಶಾಕಾದ್ರಾ ? ಮಾಲ್ಗುಡಿ ಡೇಸ್ ಅಂತ ಹೆಸರು ನೋಡಿ ಮೊದಲು ಶಂಕರ್ ನಾಗ್ ಅವ್ರ ಚಿತ್ರ ನೋಡಿ ಆ ಆರ್. ಕೆ. ನಾರಾಯಣನ್ ಅವ್ರ ಕತೆಯಾದಾರಿತ ಚಿತ್ರವನ್ನೇ ಮತ್ತೆ ಹೊಸದಾಗಿ ಸೃಷ್ಠಿಸುತ್ತಿದ್ದಾರ ಅಂತ ನಿರೀಕ್ಷೆಯಿಟ್ಟುಕೊಂಡು ನೋಡಿದ ನನಗೂ ಆದ ಅನುಭವ ಇದೇ ತರದ್ದು !

ಮುಂಚೇನೆ ಬರೆದ ಹಾಗೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೇ ಒದ್ದಾಡುತ್ತಿದ್ದ ಕಾಲದಲ್ಲಿ ವರದಂತೆ ಕಂಡಿದ್ದು ಓ.ಟಿ.ಟಿ(ಓವರ್ ದ ಟಾಪ್) ತಾಣಗಳು. ಅಂದರೆ ಈ ವಿಪರೀತ ರೇಟು ಕೇಳೋ ಕೇಬಲ್ಲು, ಚಿತ್ರಕ್ಕಿಂತ ಅಡ್ಬಟೈಸ್ಮೆಂಟುಗಳನ್ನೇ ಜಾಸ್ತಿ ತೋರಿಸೋ ಟೀವಿ ಚಾನೆಲ್ಲುಗಳು, ಅವುಗಳನ್ನು ಬಿತ್ತರಿಸೋ ಉಪಗ್ರಹಗಳ ಗೊಡವೆಯೇ ಬೇಡ ಎಂದು ಅಂತರ್ಜಾಲದ ಮೂಲಕ ನೇರ ವೀಕ್ಷಕರ ಮನೆ ಬಾಗಿಲಿಗೆ ಚಿತ್ರಗಳನ್ನು ತಲುಪಿಸುತ್ತಿರೋ ಅಮೇಜಾನ್ ಪ್ರೈಂ, ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ , ವೂಟ್ ನಂತಹ ವಾಹಿನಿಗಳೇ ಓ.ಟಿ.ಟಿ ವಾಹಿನಿಗಳು. ಈಗ ಫೇಸ್ಬುಕ್ಕಲ್ಲೂ ಸುಮಾರಷ್ಟು ಧಾರಾವಾಹಿಗಳ ಪೂರ್ಣ ಎಪಿಸೋಡುಗಳನ್ನ ಆ ವಾಹಿನಿಗಳೇ ಹರಿಬಿಡುತ್ತಿರೋದ್ರಿಂದ ಅದೂ ಒಂತರ ಓ.ಟಿ.ಟಿ ಆಗ್ತಾ ಇದ್ಯಾ ಅನಿಸುತ್ತೆ. ಕರೋನಾ ಕರಾಮತ್ತಿಗೆ ಚಿತ್ರಮಂದಿರಗಳನ್ನ ಬಾಗಿಲು ಹಾಕಬೇಕಾಗಿ ಬಂದು, ಚಿತ್ರಗಳ ಧಾರಾವಾಹಿಗಳ ಚಿತ್ರೀಕರಣ ಅನಿರ್ದಿಷ್ಟಾವಧಿಯವರೆಗೆ ನಿಲ್ಲಿಸಿರೋದ್ರಿಂದ ಇನ್ನು ೧೦-೧೨ ದಿನಕ್ಕಾಗುವಷ್ಟು ಸರಕು ಮಾತ್ರ ನಮ್ಮ ಬಳಿ ಇದೆ ಎಂದು ಪ್ರಮುಖ ಧಾರಾವಾಹಿಗಳ ನಿರ್ದೇಶಕರು ಮಾರ್ಚ್ ೨೩ರಂದು ಹೇಳಿಕೆ ಕೊಟ್ಟಿದ್ದರು. ಈ ಧಾರಾವಾಹಿಗಳು ಇರಲಿ ಬಿಡಲಿ, ಒಳ್ಳೆಯ ಚಿತ್ರಗಳಿಗೆಂತೂ ಎಂದೂ ಇರುವ ನೋಡುಗ ಬಳಗಕ್ಕೆ ಈ ಕರೋನಾದ ಲಾಕ್ಡೌನು, ವರ್ಕ್ ಫ್ರಂ ಹೋಮು, ಮಧ್ಯ ಮಧ್ಯ ಬರೋ ರಜಾ ದಿನಗಳು ಹೇಳಿ ಮಾಡಿಸಿದಂತಿವೆ. ಹೊರಗೆಂತೂ ಹೋಗೋ ಹಾಗಿಲ್ಲ. ಇನ್ನೇನು ಮಾಡೋದು, ಚಿತ್ರ ನೊಡೋದು ಅಷ್ಟೆ! .

ಮತ್ತೆ ಕತೆಗೆ ಬರೋದಾದ್ರೆ ಇದು ಮಾಲ್ಗುಡಿ ಅನ್ನೋ ಕಾಲ್ಪನಿಕ ಪಟ್ಟಣದ ಸುತ್ತ ನಡೆಯೋ ಕತೆ. ಕಥಾನಾಯಕ ಲಕ್ಶ್ಮೀನಾರಾಯಣ ಮತ್ತವನ ಪ್ರಿಯತಮೆ ಲಿನೇಟಾರ ಪ್ರೇಮಕತೆ ಶುರುವಾಗೋದು ಎಸ್ಸೆಸ್ಸೆಲ್ಸಿಯಲ್ಲಾದರೂ ಮುಗಿಯೋದು ಇಬ್ಬರ ವೃದ್ಧಾಪ್ಯದಲ್ಲಿ. ಅಂದರೆ ಇವರು ಲವ್ ಮಾಡಿ ಮದುವೆಯಾದರಾ ? ಅಂದ್ರೆ ಇಲ್ಲ. ಮದುವೆಯಾಗದೇ ಉಳಿದರಾ ಅಂದರೆ ಅದೂ ಇಲ್ಲ ! ಹೆಸರಾಂತ ಕತೆಗಾರನಾಗೋ ಲಕ್ಶ್ಮೀನಾರಾಯಣ ಮಾಲ್ಗುಡಿ ತನ್ನ ಕತೆಗಳು ಇಂದಿನ ಪೀಳಿಗೆಗೆ ರುಚಿಸುತ್ತಿಲ್ಲ ಎಂದರಿತು ಬರೆಯುವುದನ್ನೇ ನಿಲ್ಲಿಸುವ ತೀರ್ಮಾನದಲ್ಲಿರುವ ಅವರ ಜೀವನದಲ್ಲಿ ಹಲವು ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅವೇ ಬೆಂದಕಾಳೂರಲ್ಲಿ ಬೇಯುತ್ತಿರೋ ಅವರನ್ನು ಮತ್ತೆ ಮಾಲ್ಗುಡಿಯತ್ತ ಕರೆತರುತ್ತದೆ. ಕತೆ ಇಷ್ಟೇ ಆದರೂ ಅದಕ್ಕೊಂದಿಷ್ಟು ಸವಿಯಿತ್ತಿದ್ದು ಅಂದರೆ ಬಾಲ್ಯದ ಲಕ್ಷ್ಮಿ, ವಿಮಲ, ಭಟ್ಟ , ಸಂತು ಮತ್ತು ಸರಸ್ವತಿ ಟೀಚರ್ರಿನ ಶಾಲಾ ದೃಶ್ಯಗಳು ಮತ್ತು ಮಲೆನಾಡ ಮಳೆ. ನಮ್ಮ ಬೆಂಗಳೂರಿನ ಲಾಲ್ ಬಾಗೇನಾ ಇದು, ಇದು ನಮ್ಮ ಮಲೆನಾಡ ತೀರ್ಥಹಳ್ಳಿ, ಹೊಸನಗರಗಳೇನಾ ಇವು ಅನ್ನುವಷ್ಟು ಅದ್ಭುತವಾಗಿ ತೋರಿಸಿರೋ ಸಿನಿಮಾಟೋಗ್ರಫಿ ಮೊದಲಾರ್ಧವನ್ನು ಆಪ್ತವೆನಿಸುತ್ತೆ.  ಪಾಂಡಿಚೇರಿಯ ಪ್ರೇಮ ಪ್ರಸಂಗ, ಆಫೀಸಿನ ಬಾಸ ದೌರ್ಜನ್ಯ, ತಾಯಿಯ ಸಂಸ್ಕಾರಕ್ಕೂ ಬರಲಾಗದ ಮಗಳ ಪರಿಸ್ಥಿತಿ, ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಅಂತ ಊರಿಗೇ ಬೆಂಕಿಯಿಡೋ ಗಿರಿರಾಜ ಮತ್ತು ಮಗಳಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿ ನಂತರ ಪರಿತಪಿಸೋ ತಂದೆ, ತಾಯಿಗೆ ಮದುವೆ ಮಾಡಲಿಷ್ಟವಿದ್ದರೂ ತನಗೇ ಇಷ್ಟವಿರದಿದ್ದ ಮಗಳು ಹೀಗೆ ಹಲವು ಭಾವಗಳ, ಪರಿಸ್ಥಿತಿಗಳ ಛಾಯೆ ಪಾತ್ರಗಳಲ್ಲಿ ಹಾಸು ಹೋಗುತ್ತದೆ. ಇನ್ನು ಚಿತ್ರದುದ್ದಕ್ಕೂ ಕಾಡೋ ರಘು ದೀಕ್ಷಿತ್ ಸಂಗೀತ ಚಿತ್ರ ಮುಗಿದರೂ ನಮ್ಮನ್ನ ಕಾಡುತ್ತಿರುತ್ತೆ. ಮನೆಯಿದ್ದರೆ ಹೀಗಿರಬೇಕು ಎಂಬಂತೆ ತಯಾರಿ ಮಾಡಿರೋ ಪ್ರಕೃತಿಯ ಮನೆ, ವಿಜಯ್ ಪಾತ್ರಕ್ಕಾಗಿ ಹೊಸದಾಗಿ ಎಂಟ್ರಿ ಕೊಟ್ಟಿರೋ ತುಳುನಾಡ ಹುಡುಗ ಅರ್ಜುನ್ ಕಾಪಿಕಾಡ್ ಅವರ ನಟನೆ, ನೃತ್ಯ ಕೂಡ ಮುದ ನೀಡುತ್ತೆ.

ಇಷ್ಟೆಲ್ಲಾ ಇದ್ದರೂ ಮೈಸೂರು ಪಾಕು, ಪಾನಿಪೂರಿಯ ಹೋಲಿಕೆ ಯಾಕೆ ಅಂತ ಅಂದ್ಕೊಂಡ್ರಾ ? ಚಿತ್ರದಲ್ಲಿರೋ ಸುಮಾರು ಅಸಂಬದ್ಧಗಳೇ ಅದಕ್ಕೆ ಕಾರಣ. ಮೊದಲಿಗೆ ಮಾಲ್ಗುಡಿ ಡೇಸ್ ಅಂತ ಹೆಸರಿಟ್ಟುಕೊಂಡು ಮೂಲ ಕತೆಯಲ್ಲಿ ಬರೋ ಸ್ವಾಮಿ ಮತ್ತವನ ಗ್ಯಾಂಗಿಗೆ ಸಂಬಂಧಪಡದ ಚಿತ್ರ ಮಾಡಿದ್ದು. ಎರಡನೆಯದು ಮಾಲ್ಗುಡಿ ಡೇಸಿಗೆ ಯಾವ ಸಂಬಂಧವೂ ಇರದ ಬೆಂಗಳೂರ, ಕೊಯಂಬತ್ತೂರಿನ ಚಿತ್ರಗಳ ಸೇರಿಸಿದ್ದು.. ಹೀಗೆ. ಮಲೆನಾಡ ತೋರಿಸಬೇಕು ಅಂತ, ನಗರ, ಆಗುಂಬೆ, ಶೃಂಗೇರಿ ಹೀಗೆ ಎಲ್ಲಾ ಪ್ರಮುಖ ಪೋಲೀಸ್ ಠಾಣೆಗಳನ್ನೂ ತೋರಿಸಿದ್ದು ! ದ್ವಿತೀಯಾರ್ಧದಲ್ಲಿ ಅಗತ್ಯವಿಲ್ಲದಿದ್ದರೂ ಎಳೆದು ತರುವ ಪ್ರಕೃತಿಯ ಅಮ್ಮನ ಮನೆಯಲ್ಲಿನ ಪೂಜೆ, ವಿಮಲನ ಮಗಳು, ಮಾಲ್ಗುಡಿ ಶಾಲೆಯಲ್ಲಿನ ಯೂನಿಯನ್ ಡೇ, ಪೋಲೀಸಪ್ಪನಾಗಿ ಬ್ಯಾಂಕ್ ಜನಾರ್ಧನ್ ಅವರ ನಗು ಬರದ ಕಾಮಿಡಿಗಳು,ಕೆಲವೆಡೆ ಕಳಚಿಬಿದ್ದಂತೆ ಕಾಣುವ ವಿಜಯ್ ರಾಘವೇಂದ್ರ ಅವರ ವಯಸ್ಸಾದ ಮೇಕಪ್ಪು, ಮನೆಯಲ್ಲಿ ಯಾರಿಲ್ಲದೇ ಗೋಡೆಗಳೇ ಬೀಳುವ ಹಾಗಿದ್ದರೂ ಹುಡುಗನೊಬ್ಬ ಸಣ್ಣಕ್ಕಿದ್ದಾಗ ಬರೆದ "ಅಮ್ಮ" ಅನ್ನೋ ಪದ ಅವ ಮುದುಕನಾದರೂ ಮಾಸದಂತಿರುವುದು ಇತ್ಯಾದಿ ಅಧ್ವಾನಗಳು ರಸಭಂಗವನ್ನುಂಟು ಮಾಡುತ್ತೆ.  ಈ ಪ್ರಕೃತಿ, ವಿಜಯ್ ಯಾರು, ಲಕ್ಷ್ಮೀನಾರಾಯಣ, ಲಿನೇಟಾರ ಪ್ರೇಮಕತೆಯೇನಾಗುತ್ತೆ, ಮಾಲ್ಗುಡಿಯವ ಬೆಂಗಳೂರಿಗೇಕೆ ಹೋದ, ಶೃಂಗೇರಿಗೂ ಕೊಯಂಬತ್ತೂರಿಗೂ ಏನು ಸಂಬಂಧ ಅಂತೆಲ್ಲಾ ಆಲೋಚಿಸುತ್ತಿದ್ದೀರ ? ಅವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದ್ರೆ ನೀವು ಈ ಚಿತ್ರವನ್ನು ನೋಡಬೇಕು. ಮೊದಲಾರ್ಧಕ್ಕಾದರೂ ಮನೆಮಂದಿಯೊಂದಿಗೆ ಕೂತ ನೋಡಬೇಕಾದ ಚಿತ್ರ "ಮಾಲ್ಗುಡಿ ಡೇಸ್"

Sunday, March 22, 2020

ಕರೋನಾ ಕಮಂಗಿಗಳು

"ವೈದ್ಯೋ ನಾರಾಯಣೋ ಹರಿಃ" ಎಂಬ ಮಾತಂತೆ ಕರೋನಾವೆಂಬ ಮಹಾ ಮಾರಿಯ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ನಮ್ಮ ಜೀವವ ರಕ್ಷಿಸುತ್ತಿರೋ ವೈದ್ಯರಿಗೆ, ಪೋಲೀಸರಿಗೆ, ನಮ್ಮ ನಗರವನ್ನು ಸ್ವಚ್ಛವಾಗಿಡೋಕೆ ಸಹಕರಿಸುತ್ತಿರೋ ಪಉರಕಾರ್ಮಿಕರಿಗೆ ನನ್ನ ಮೊದಲ ನಮನ. ಇಂದು ಸಂಜೆ ಐದಕ್ಕೆ ಘಂಟೆ, ಚಪ್ಪಾಳೆ, ಪ್ಲೇಟು, ಡ್ರಮ್ಮು , ಶಂಖ, ಜಾಗಟೆ, ಪೀಪಿ ಹೀಗೆ ಅನೇಕ ಶಬ್ದಗಳಿಂದ ಕೋಟ್ಯಾಂತರ ಜನ ಸಲ್ಲಿಸಿದ ನಮನವೂ ನಿಮಗೇನೇ. ನಿಮ್ಮ ಸೇವೆಯ ಬಗ್ಗೆ ಎಷ್ಟು ಕೊಂಡಾಡಿದರೂ ಕಮ್ಮಿಯೇ ಎಂದುಕೊಂಡರೂ ಒಂದಿಷ್ಟು ಸುದ್ದಿಗಳು ನನ್ನ ಮನಕಲಕಿದ್ದು ಸುಳ್ಳಲ್ಲ. 

ಸುದ್ದಿ-೧: "ಜನತಾ ಕರ್ಫ್ಯೂ" ದಿನ ಖಾಲಿಯಿದ್ದ ರಸ್ತೆಯಲ್ಲಿ ಡ್ರ್ಯಾಗ್ ರೇಸಿಂಗ್ ಮಾಡೋಕೆ ಹೋಗಿ ಬೈಕ್ ಸವಾರನ ಸಾವು !
ಸುದ್ದಿ-೨: ದುಬೈಯಿಂದ ಬಂದವ ಏರ್ಪೋರ್ಟಿಂದ ಮಡಿಕೇರಿಯವರೆಗೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಓಡಾಡಿದ್ದು ಅವ ಎಲ್ಲೆಲ್ಲಿ ಹೋದ, ಯಾರ್ಯಾರನ್ನು ಭೇಟಿ ಮಾಡಿದ ಅಂತ ಪತ್ತೆ ಮಾಡೋಕೆ ಪೋಲೀಸರ ಹರಸಾಹಸ ! , ಚೆನ್ನೈಗೆ ಹೋಗಬೇಕಾದವ ಬೆಂಗಳೂರಲ್ಲಿ ಬಂದಿಳಿದು ಇಲ್ಲಿ ಲಾಡ್ಜಿಗೆ ಅಂತ ಮೆಜೆಸ್ಟಿಕಿನ ಸುತ್ತೆಲ್ಲಾ ಅಲೆದು ಕೊನೆಗೆ ಪೋಲೀಸರ ಕೈ ಸೇರಿದ್ದು !
ಸುದ್ದಿ-೩: ಹೊರ ರಾಜ್ಯದಿಂದ ಬರೋ ಕರೋನಾ ಸೊಂಕಿನ ತಡೆಗೆ ಹೊರ ರಾಜ್ಯಕ್ಕೆ ಹೋಗಿ ಬರೋ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಸಂಚಾರ ರದ್ದು. ಅಂತರ್ಜಿಲ್ಲಾ ಬಸ್ಸುಗಳ ಸಂಖ್ಯೆಯೂ ರದ್ದು. ಭಾರತದಾದ್ಯಂತ ಸಂಚರಿಸುತ್ತಿದ್ದ ಎಲ್ಲಾ ೧೩,೦೦೦ ರೈಲುಗಳನ್ನು ಮಾರ್ಚ್ ೩೧ರ ವರೆಗೆ ರದ್ದುಗೊಳಿಸಲಾಗಿದೆ. ಮೆಟ್ರೋ, ಬಸ್ಸುಗಳ ಸಂಚಾರಕ್ಕೂ ಅಡ್ಡಿ.
ಸುದ್ದಿ-೪: ಮಾರ್ಚ್ ಮೂವತ್ತೊಂದರ ತನಕ ಮುಂದುವರೆದ ವರ್ಕ್ ಫ್ರಂ ಹೋಂ. ವರ್ಕ್ ಫ್ರಂ ಹೋಂ ಸಿಕ್ಕಿತು ಅಂತ ರಜೆ ಸಿಕ್ಕಿತೆಂಬಂತೆ ಬೆಂಗಳೂರಿಂದ ನಿಮ್ಮ ನಿಮ್ಮೂರಿಗೆ ಹೊರಟು ಬಿಡಬೇಡಿ. ಆ ಪ್ರಯಾಣದ ಸಂದರ್ಭದಲ್ಲಿ ನಿಮ್ಮೊಂದಿಗೆ ಕರೋನಾ ತಗೊಂಡು ಊರ ಕಡೆ ಹೋಗ್ಬೇಡಿ . ಊರುಗಳಲ್ಲಿ ಪೇಟೆಗಳಷ್ಟು ಆಸ್ಪತ್ರೆಗಳಿಲ್ಲ, ಸೌಲಭ್ಯಗಳಿಲ್ಲ. ಸ್ವಲ್ಪ ದಿನ ಬೆಂಗಳೂರಲ್ಲೇ ಇದ್ದು ಬಿಡಿ ಎಂದು ಹಳ್ಳಿಗರ ಕೋರಿಕೆ
ಸುದ್ದಿ-೫: ಪಟ್ಟಣಗಳಿಂದ ಹಳ್ಳಿಗಳ ಕಡೆಗೆ ಕರೋನಾ ಹರಡುವುದನ್ನು ತಡೆಯೋಕೆ ಪಟ್ಟಣಗಳಿಂದ ಹಳ್ಳಿಗಳ ಕಡೆಗೆ ಮಾರ್ಚ್ ಮೂವತ್ತೊಂದರ ತನಕ ಹೋಗದಿರಿ ಎಂದು ಸಿ.ಎಂ ಯಡಿಯೂರಪ್ಪ ಕರೆ
ಸುದ್ದಿ-೬: ಬೆಂಗಳೂರ ಪೀಜಿಗಳಲ್ಲಿ ಬೇಜಾರೆಂದು ತಮ್ಮೂರಿಗೆ ಖಾಸಗಿ ಬಸ್ಸುಗಳಲ್ಲಿ ಹೊರಟ ಹುಡುಗ ಹುಡುಗಿಯರು ! ಬಸ್ಸಿಲ್ಲದಿದ್ದರೆ ಏನಾಯ್ತೆಂದು ತಮ್ಮ ಕಾರು ಬೈಕುಗಳಲ್ಲಿ ಬೆಂಗಳೂರಿಂದ ತಮ್ಮೂರ ಕಡೆಗೆ ಹೊರಟವರು !
ಸುದ್ದಿ-೭: "ಜನತಾ ಕರ್ಫ್ಯೂ" ಪ್ರಭಾವಕ್ಕೆ ಹಿಂದಿನ ದಿನಗಳ ಹೋಲಿಕೆಯಲ್ಲಿ ನಿಧಾನವಾದ ಕರೋನಾ ಸೋಂಕಿತರ ಸಂಖ್ಯೆಯಲ್ಲಿನ ಏರಿಕೆ. ಕರ್ಫ್ಯೂ ದಿನ ರಾತ್ರೆ ೯ರ ವರೆಗೆ ಮನೆಯಲ್ಲಿರಿ ಅಂದರೆ ಸಂಜೆ ಐದಕ್ಕೆ ಚಪ್ಪಾಳೆ ಹೊಡೆದು ನಂತರ ಗುಂಪುಗೂಡಿ ಸಂಭ್ರಮಿಸಿದ ಜನರು !
ಸುದ್ದಿ-೮: ಕರೋನಾಗೆ ಹೆಲಿಕ್ಯಾಪ್ಟರುಗಳ ಮೂಲಕ ಔಷಧ ಸಿಂಪಡಿಸುತ್ತಾರಂತೆ ಎಂಬ ಸುದ್ದಿ ವಾಟ್ಸಾಪಿನ ತುಂಬೆಲ್ಲಾ ಹರಡಿ ಅದಕ್ಕಾಗಿ ಬಾಯಿ ಕಳೆದುಕೊಂಡು ಕಾದ ಜನರು !

ಈ ಸುದ್ದಿಗಳನ್ನು ಓದ್ತಾ ಇದ್ರೆ ಜನಕ್ಕೆ ಏನಾಗಿದೆ ಅಂತ ಅರ್ಥ ಆಗ್ತಿಲ್ಲ. ಊರಿಗೆ ಹೋಗ್ಬೇಡ್ರಪ್ಪ ಅಂತ ಬಸ್ಸು, ರೈಲು ಕ್ಯಾನ್ಸಲ್ ಮಾಡಿದ್ರೆ ಪೀಜಿ ಊಟ ಸರಿಯಾಗ್ತಿಲ್ಲ, ಬೋರಾಗ್ತಿದೆ ಅಂತ ಊರಿಗೆ ಹೋಗ್ತೀನಿ ಅಂತೀರಲ್ಲ. ಏನೇನ್ಬೇಕು ನಿಮಗೆ ? ಒಂದು ವಾರವೂ ಮನೆಯಲ್ಲಿರದ ನಾನೇ ಈಗ ಮೂರು ವಾರಗಳಿಂದ ಮನೇಲಿದೀನಿ. ನಿಮಗೆ ಒಂದಿಷ್ಟು ದಿನ ಬೆಂಗಳೂರಲ್ಲೇ ಇರೋಕೆ ಏನಪ್ಪ ಕಷ್ಟ ಅಂದ್ರೆ ನನ್ನತ್ರ ಸ್ಯಾನಿಟೈಸರ್ ಇದೆ, ಮಾಸ್ಕ್ ಇದೆ, ಹ್ಯಾಂಡ್ ರಬ್ ಇದೆ ಅಂತಾರಲ್ಲ ಜನ ಏನೇನ್ನೋಣ. ನಿಮಗೆ ಕರೋನಾ ಇರದೇ ಇರಬಹುದು. ಆದರೆ ಆ ಬಸ್ಸಲ್ಲಿ ಬರೋ ಯಾರಿಗೂ ಕರೋನಾ ಇರಲ್ಲ ಅಂತ ಏನು ಗ್ಯಾರಂಟಿ ? ಅವರು ಬಳಸಿದ ಅದೇ ಹಾಸಿಗೆ, ಬಸ್ಸಿನ ಸಿಟು, ಹ್ಯಾಂಡಲ್ಲುಗಳನ್ನು ಬಳಸಿಯೇ ತಾನೇ ನೀವು ಹೋಗಬೇಕು. ಆಗ ನಿಮಗೆ ಕರೋನಾ ಸೋಂಕು ತಗುಲೋಲ್ಲ ಅಂತ ಏನು ಗ್ಯಾರಂಟಿ ಅಂದ್ರೆ ಇವ್ರ ಬಳಿ ಉತ್ತರವಿಲ್ಲ. ಅಲ್ಲಪ್ಪಾ, ಮಡಿಕೇರಿಯಿಂದ ಮೂರ್ನಾಡಿಗೆ ಕರೋನಾ ಸೋಂಕಿತನ ಜತೆಗೆ ಹೋದ ಆಟೋ ಡ್ರೈವರಿಗೇ ಕರೋನಾ ಸೋಂಕಿರೋ ಶಂಕೆಯಿದೆಯಂತೆ ಇನ್ನು ನೀವು ಊರಿಗೆ ಹೋಗಿ ಅದಿನ್ನೆಷ್ಟು ಜನರಿಗೆ ಕರೋನಾ ಹಬ್ಬಿಸುತ್ತೀರಾ ಅಂದ್ರೆ ನಾವೊಬ್ರು ಹೋದ್ರೆ ಏನಾಗುತ್ತೆ ಅಂತಾರಲ್ಲ ಇವರು ? ! ಬಸ್ಸು, ರೈಲು ನಿಲ್ಲಿಸಿದ್ದು ಸೂಚ್ಯಕ ಅಷ್ಟೆ. ಸರ್ಕಾರದ ಕೈಲಿ ಎಲ್ಲವನ್ನೂ ನಿಲ್ಲಿಸೋಕೆ ಆಗದೇ ಇರಬಹುದು. ಒಂದಷ್ಟು ಹೇಳಿದರೆ ಉಳಿದಿಷ್ಟನ್ನು ನೀವೇ ಅರ್ಥ ಮಾಡಿಕೊಳ್ಳಿ ಅಂತ ಅರ್ಥ ತಾನೇ ? ಬೆಂದಕಾಳೂರೆಂಬ ಮಹಾನಗರಿಯಲ್ಲಿರೋ ವಿದ್ಯಾವಂತ ಜನರೇ ಈ ರೀತಿ ಅವಿವೇಕಿಗಳಾಗಿ ವರ್ತಿಸಿದರೆ ಉಳಿದವರ ಕತೆಯೇನು ?

ಇನ್ನು ಕರ್ಫ್ಯೂ ದಿನ ಖಾಲಿ ರೋಡ್ ಸಿಕ್ತು ಅಂತ ಜೀವ ಕಳೆದುಕೊಳ್ಳೋರು, ಮನೆಯಲ್ಲೇ ನಿಂತು ಚಪ್ಪಾಳೆ ತಟ್ಟಿ ಅಂದ್ರೆ ಗುಂಪುಗೂಡಿ ಪಟಾಕಿ ಹೊಡೆಯೋರು ಇವ್ರಿಗೆಲ್ಲಾ ಏನನ್ನೋಣ. ಗುರುವೇ , ಏನು ಹೇಳಿದ್ದಾರೆ, ಅದನ್ನ ಯಾಕೆ ಹೇಳಿದ್ದಾರೆ ಅಂತ ಯಾಕೆ ಯೋಚನೆ ಮಾಡೋಲ್ಲ ನೀವು ? ಜನ ಮರುಳೋ, ಜಾತ್ರೆ ಮರುಳೋ ಅಂತ ಕುಣಿಯೋ ಬದಲು, ಗುಲಾಮರು-ಭಕ್ತರು ಅಂತ ಕಾದಾಡೋ ಬದಲು ಒಂದಿಷ್ಟು ದಿನ ತಣ್ಣಗೆ ಮನೇಲಿರಿ. ನಿಮ್ಮ ಈ ಜಾತಿ ಕಲಹ, ಎಡ-ಬಲ ಕಚ್ಚಾಟಗಳನ್ನ ಮತ್ತೆ ಯಾವಾಗಲಾದರೂ ಶುರು ಹಚ್ಚಿಕೊಳ್ಳುವಿರಂತೆ. ಈ ಕಚ್ಚಾಟಗಳಿಗಿಂತಾ ನೀವೆಲ್ಲಾ ತಣ್ಣಗೆ ಮನೆಯೊಳಗೆ ಇದ್ದು ವೈದ್ಯರಿಗೆ ಪೋಲೀಸರಿಗೆ ಅವರವರ ಕೆಲಸ ಮಾಡೋಕೆ ಬಿಡಿ. ವಾಟ್ಸಾಪಲ್ಲಿ ಬಂತು ಅಂತ ಕಣ್ಮುಚ್ಚಿಕೊಂಡು ಫಾರ್ವಾರ್ಡ್ ಮಾಡೋ ಬದಲು ಆ ಮಾಹಿತಿ ಕಳಿಸಿದವರ ಬಳಿ ಆ ಸಂದೇಶದ ಮೂಲದ ಬಗ್ಗೆ ವಿಚಾರಿಸಿ. ಬಂದ ಸಂದೇಶ, ವೀಡಿಯೋ ನಿಜವೋ ಸುಳ್ಳೋ ಪರೀಕ್ಷಿಸಿ. ನಂತರವಷ್ಟೇ ಅದನ್ನ ಬೇರೆಯವರ ಜೊತೆ ಶೇರ್ ಮಾಡಿ. ಈಗ ನಾನೊಬ್ಬ ಮನೆಯಲ್ಲೇ ಇದ್ದರೆ ಏನಾಗುತ್ತೆ ಅಂತೀರಾ ? ಸರ್ಕಾರದ ಅಧಿಕೃತ ಮಾಹಿತಿ ಆಕರಗಳಿಂದ ಮಾಹಿತಿ ಸಂಗ್ರಹಿಸೋ ಕೋವಿಡ್.ಔಟ್ ಎಂಬ ತಾಣವನ್ನೊಮ್ಮೆ ನೋಡಿ. ೨೦ನೇ ತಾರೀಖು ೨೫೩ ಇದ್ದ ಕರೋನಾ ಸೋಂಕಿತರ ಸಂಖ್ಯೆ ೨೧ಕ್ಕೆ ೩೨೮ಕ್ಕೆ ಏರಿತ್ತು. ಅಂದರೆ ೭೫ ಹೊಸ ಪ್ರಕರಣ. ಇವತ್ತು ಅಂದರೆ ೨೨ನೇ ತಾರೀಖು ಆ ಸೋಂಕಿರತ ಸಂಖ್ಯೆ ೩೬೫ಕ್ಕೆ ಏರಿದೆ. ಅಂದರೆ ೩೭ ಹೊಸ ಪ್ರಕರಣ. ದಿನೇ ದಿನೇ ಏರುತ್ತಲೇ ಸಾಗಿದ್ದ ಕರೋನಾದ ಏರುಗತಿ ಕಮ್ಮಿಯಾಗಿದೆ ಅಂದರೆ ದಿನವಿಡೀ ಮನೆಯೊಳಗೇ ಇದ್ದ ಜನರ ಸಹಕಾರವೇ ಕಾರಣ ಅದಕ್ಕೆ. ಇದೇ ತರಹ ಇನ್ನೊಂದಿಷ್ಟು ದಿನ ಮನೆಯೊಳಗೇ ಇದ್ದರೆ ಏನಾಗುತ್ತೆ ? ವರ್ಕ್ ಫ್ರಂ ಹೋಂ ಅಂತಿರೋ ಜನರು ಅತೀ ಅಗತ್ಯಗಳಾದ ದಿನಸಿ, ತರಕಾರಿಗಳಿಗೆ ಹೊರ ಹೋಗೋದು ಬಿಟ್ಟು ಬೇರೆ ಕೆಲಸಕ್ಕೆ, ಸುತ್ತೋಕೆ ಹೋಗದಿದ್ದರೆ ಏನಾಗುತ್ತೆ ? ಈ ಕರೋನಾ ಹತೋಟಿಗೆ ಬಾರಲಾರದೇ ? ಆಸ್ಪತ್ರೆಗೆ ದಾಖಲಾದವರಲ್ಲಿ ೨೦ ಜನರು ಕರೋನಾ ಸೋಂಕಿಂದ ಹೊರಬಂದಿದ್ದಾರೆ ಎಂಬ ಆಶಾದಾಯಕ ಮಾಹಿತಿಯನ್ನು ಮೇಲಿನ ಜಾಲತಾಣವೇ ನೀಡುತ್ತಿದೆ. ಹಾಗಾಗಿ ನನ್ನ ಗೆಳೆಯರ ಬಳಗದಲ್ಲಿರೋ ಗೆಳೆಯರಿಗೆಲ್ಲಾ ನೀವು ಬೆಂಗಳೂರಲ್ಲಿದ್ದರೆ , ವರ್ಕ್ ಫ್ಹ್ರಂ ಹೋಂ ನಂತಹ ಅವಕಾಶಗಳು ಸಿಕ್ಕಿದ್ದರೆ ದಯಮಾಡಿ ಮನೆಯಿಂದ ಹೊರಬಂದು ಊರು ತಿರುಗೋ ಸಾಹಸಕ್ಕೆ ಕೈ ಹಾಕಬೇಡಿ, ಸಿಕ್ಕ ಸಿಕ್ಕ ಸಂದೇಶಗಳ ಎಲ್ಲೆಡೆ ಹರಡಿಸಬೇಡಿ, ಇದ್ದಲ್ಲೇ ಇದ್ದು ಒಂದಿಷ್ಟು ದಿನ ಸಮಾಜಕ್ಕೆ ಈ ಕರೋನಾ ಸೋಂಕಿಂದ ಹೊರಬರೋಕೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕೋರುತ್ತೇನೆ. 

Saturday, March 14, 2020

ಕರೊನಾ ಕೋಲಾಹಲವೂ, ದಿಯಾ ಮತ್ತು ಲವ್ ಮಾಕ್ಟೈಲ್ಗಳು



ಕರುನಾಡ ಕಲಬುರ್ಗಿಯಲ್ಲಿ ಸೌದಿಯಿಂದ ಬಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಬೆಂಗಳೂರಲ್ಲಿ ಇಬ್ಬರು ಕರೋನಾ ಸೋಂಕಿತರು ಪತ್ತೆಯಾಗಿದ್ದಾಗ ಸೃಷ್ಠಿಯಾದ ಆತಂಕ ಟಿ.ವಿಯವರ ಅಬ್ಬರದಿಂದ "ಕರೋನಾ ರಣಕೇಕೆ", "ಕರೋನಾ ಅಬ್ಬರ", "ಕರೋನಾ ಕೋಲಾಹಲ"ವಾಗಿ ಮಾರ್ಪಟ್ಟಿದೆ. ಬೆಂಗಳೂರಿಗೆ ಬಂದು ಮೂವತ್ತಾರು ಮಂದಿಗೆ ಕರೋನಾ ಹಬ್ಬಿಸಿದ್ದಾರೆ ಎನ್ನಲಾಗಿದ್ದ ತೆಲಂಗಾಣದ ಟೆಕ್ಕಿಯನ್ನೇ ಈಗ ಅಲ್ಲಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರೂ ಇಲ್ಲಿನ ಎಚ್ಚರಿಗೆ ಮುಂದುವರೀತಿದೆ. ರಾಜ್ಯವನ್ನೇ ಏಳು ದಿನಗಳ ಕಾಲ ಬಂದ್ ಮಾಡೋ ಮಾನ್ಯ ಮುಖ್ಯಮಂತ್ರಿಗಳವರ ನಿರ್ಧಾರದಿಂದ ಕೆಲವರಿಗೆ ಸಖತ್ ಖುಷಿಯಾಗಿದ್ರೆ ಕೆಲವರ ಬದುಕೇ ದಿಕ್ಕಾಪಾಲಾದಂತೆ ಕಾಣ್ತಿದೆ. ಏನು ಮುಟ್ಟಿದ್ರೂ ಹ್ಯಾಂಡ್ ಸ್ಯಾನಿಟರೈಸ್ ಹಾಕಿ ತೊಕ್ಕೊಳಿ ಅಂತ ವಾಟ್ಸಾಪಿನ ಫಾರ್ವಾಡುಗಳು ಓಡಾಡಿದ್ದೇ ಓಡಾಡಿದ್ದು. ಈಗೆಲ್ಲಿ ನೋಡಿದ್ರೂ ಸ್ಟಾಕೇ ಇಲ್ಲ ಅದರದ್ದು. ಮಾಸ್ಕ್ ಹಾಕ್ಕೊಳ್ರಪ್ಪ ಅಂತಂದಿದ್ದೇ ಸಾಕು ಮುನ್ನೂರೈವತ್ತರ ಮಾಸ್ಕುಗಳು ಮಾರ್ಕೇಟಿಂದ್ಲೇ ಮಂಗಮಾಯ ! ಐನೂರೈವತ್ತು ಕೊಟ್ಟರೆ ಕೊಡ್ತೀವಿ ಸಾರ್ ಅಂತಾನೆ ಅಂಗಡಿಯವ ಬ್ಲಾಕಲ್ಲಿ ಮಾರೋ ಸ್ಕೆಚ್ ಹಾಕಿ ! ಇಂದಿನ ಪೇಪರಲ್ಲಿ ಅಂತಹ ಕ್ರಮಗಳನ್ನ ಕೈಗೊಳ್ಳೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಮುಖ್ಯಮಂತ್ರಿಗಳೇ ಎಚ್ಚರಿಸಿದ್ರೂ ಆ ಪರಿಸ್ಥಿತಿ ಬದಲಾಗುತ್ತೋ ಇಲ್ವೋ ಗೊತ್ತಿಲ್ಲ. ಮಾಲು, ಸಿನಿಮಾ ಥಿಯೇಟರ್ಗಳೆಲ್ಲ ಬಂದಾಗಿರೋದ್ರಿಂದ ಬೆಂಗ್ಳೂರೇ ಒಂಥರಾ ಥಂಡಾ ಹೊಡಿದ ಫೀಲು. ಐ.ಟಿ , ಬಿ.ಟಿಗಳಿಗೆಲ್ಲಾ ಮನೆಯಿಂದ ಕೆಲಸ ಮಾಡೋಕೆ ಹೇಳಿ ಅಂತ ಮುಖ್ಯಮಂತ್ರಿಗಳೇ ಹೇಳಿದ್ರೂ ಅದ್ನ ಹೇಳ್ಭೇಕೋ ಬೇಡ್ವೋ ಅಂತ ಮೀನ ಮೇಷ ಎಣಿಸ್ತಿರೋ ಕಂಪೆನಿಗಳ ನಡುವೆ ಉದ್ಯೋಗಿಗಳೇ ಮನೆಗಳೊಳಗೆ ಫೆವಿಕಾಲ್ ಹಚ್ಕೊಂಡು ಕುತ್ಕೊಂಡಿರೋದ್ರಿಂದ ಬಿ.ಎಂ.ಟಿ.ಸಿ, ಮೆಟ್ರೋಗಳಿಗೂ ಹೆವಿ ಲಾಸಂತೆ. ಥಿಯೇಟ್ರುಗಳು ಬಾಗಿಲು ಹಾಕೋದ್ರಿಂದ ಕನ್ನಡ ಚಿತ್ರೋದ್ಯಮಕ್ಕೂ ಲಾಸ್ ವರ್ಗಾವಣೆಯಾಗ್ಬೋದೇನೋ ಅನಿಸೋ ಹೊತ್ತಿಗೆ ಕಂಡ ಆಶಾ ಕಿರಣ ಅಮೇಜಾನ್ ಪ್ರೈಮ್ !

ಅಮೇಜಾನ್ ಕಿಂಡಲ್ಲಲ್ಲಿ ಕನ್ನಡ ಕೊಡ್ರಪ್ಪ ಅಂತ ಕೇಳಿ ಕೇಳಿ ಸಾಕಾದ್ರೂ ಇವರಿಗೆ ಕಾಣದ ಕನ್ನಡದ ಗ್ರಾಹಕರು ಈಗ ಕಂಡಿದ್ದು ಆಸ್ಛರ್ಯವೇ ಸರಿ ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಎಂಬ ಎರಡು ಒಳ್ಳೇ ಚಿತ್ರಗಳು ಬಂದ್ ಕಾರಣದಿಂದ ಬಂದಾಗಿ ಹೋಗೋ ಆತಂಕನ ದೂರ ಮಾಡಿದ ಶ್ರೇಯಸ್ಸು ಅಮೇಜಾನವ್ರಿಗೇ ಸಲ್ಲಬೇಕು ಅಂದ್ರೆ ತಪ್ಪಲ್ಲವೇನೋ. "ಲವ್ ಮಾಕ್ ಟೈಲ್" ಥಿಯೇಟರ್ಗಳಲ್ಲೂ ಓಡ್ತಿತ್ತು. ನಾಲ್ಕು ವಾರದ ಮೇಲೆ ಆಗಿತ್ತು ಅಂತ ಅಂದ್ರೂ ಇವೆರಡೂ ಮೂವಿಗಳನ್ನ ಈಗೊಂದೆರೆಡು ದಿನಗಳಲ್ಲೇ ನನ್ನ ಸ್ನೇಹಿತರು ನೋಡಿರೋ ಕಾರಣ ಕರೋನಾ ಮತ್ತು ಅಮೇಜಾನ್ ಪ್ರೈಮ್ !

ಎಲ್ಲಾ ಬಂದಾದ್ರೆ , ಮನೇಲೇ ಕೂತು ಎಷ್ಟೂಂತ ಕೆಲ್ಸ ಮಾಡೋದು ಸಿವಾ ? ಬೇಸರಕ್ಕೆ ಅಂತ ಮೊಬೈಲೋ, ಟೀವಿನೋ ಹೊಕ್ಕಾಗ ಇದೇ ಕಣ್ಣಿಗೆ ಬೇಳಬೇಕೇ ಸಿವಾ ? "ಲೂಸಿಯಾ" ಸಿನಿಮಾ ಬಂದಾಗ್ಲೂ ಅಂತರ್ಜಾಲದಲ್ಲಿ ನಡೀತಿದ್ದ ಅದರ ಚರ್ಚೆಗಳಿಂದ್ಲೇ ಅದು ಸುಮಾರು ದಿನ ಓಡಿತು ಅನ್ನೋ ಮಾತುಗಳಿದ್ರೂ ಇವೆರಡೂ ಚಿತ್ರಗಳಲ್ಲಿ ಅಂತರ್ಜಾಲದ ಹೊರಬಂದೂ ಓಡೋ ತಾಕತ್ತಿದೆ ಅನ್ಸತ್ತೆ. ಸಿನಿಮಾ ಅಂದ್ರೆ ನಾಲ್ಕು ಫೈಟು, ವಿಲನ್ನುಗಳು ಬಂದು ಹೀರೋಯಿನ್ನನ್ನ ಕಿಡ್ನಾಪ್ ಮಾಡ್ಬೇಕು, ನಾಲ್ಕು ಮರಸುತ್ತೋ ಸೀನುಗಳು, ಐಟಂ ಸಾಂಗುಗಳಿರ್ಬೇಕು, ಹೀರೋಗೊಂದು ಹೀರೋಯಿನ್ನಿಗೊಂದು ಬಿಲ್ಡಪ್ ಕೊಡೋ ಸಾಂಗೋ ಡೈಲಾಗುಗಳೋ ಇರ್ಬೇಕು , ಕಾರು ಬೈಕುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳೋ ಹೊಡೆದಾಟಗಳಿರ್ಬೇಕು ಅನ್ನೋ ಸಿದ್ಧ ಸೂತ್ರಗಳಿಂದೆಲ್ಲಾ ಹೊರಬಂದು ಏನೋ ಟ್ವಿಸ್ಟ್ ಕೊಟ್ಟು ಕೊನೆಯವರೆಗೂ ಕುತೂಹಲಕರವಾಗಿ ನೋಡಿಸಿಕೊಂಡು ಹೋಗೋ ಅಂತಹ ಚಿತ್ರ ಮಾಡ್ಬೇಕು ಅನ್ನೋ ನಿರ್ದೇಶಕರ ಶ್ರಮ ಎರಡೂ ಚಿತ್ರಗಳಲ್ಲಿ ಕಾಣುತ್ತೆ. ಟ್ವಿಸ್ಟ್ ಕೊಡಬೇಕು ಅನ್ನೋ ಧಾವಂತದಲ್ಲೇ ಎರಡೂ ಚಿತ್ರಗಳ ಕೊನೆಯ ಹತ್ತು-ಹದಿನೈದು ನಿಮಿಷಗಳನ್ನು ಅದ್ವಾನಗೊಳಿಸಿದಂತೆ ಕಾಣುತ್ತಾದ್ರೂ ಪ್ರತಿಯೊಂದು ದೃಶ್ಯಕ್ಕೂ ಅವರು ಹಾಕಿದ ಶ್ರಮ ಕಂಡು ಖುಷಿಯಾಗುತ್ತೆ. ಸಿಂಪಲ್ ಉದಾಹರಣೆಯೆಂದ್ರೆ "ಲವ್ ಮಾಕ್ ಟೈಲ್" ನಲ್ಲಿನ ನಿಧಿಮಾ ಮತ್ತು ಆದಿಯ ನಡುವಿನ ಮನೆಯ ಒಂದು ದೃಶ್ಯ. ಅದರಲ್ಲಿ ಅವ ಕುತ್ತಿಗೆಗೆ ಹಾಕ್ಕೊಂಡ ದಿಂಬು, ನಾಯಕಿಯ ಡ್ರೆಸ್ಸು, ಹಿಂದಿನ ಕರ್ಟನ್ನಿನ್ನ ಪರದೆ ಎಲ್ಲವೂ ನೀಲಿಮಯ, ದೃಶ್ಯವೂ ಪ್ರೇಮಮಯ ! "ದಿಯಾ"ದಲ್ಲಿ ಬರೋ ಎರಡನೇ ನಾಯಕ ಮತ್ತು ಆತನ ತಾಯಿಯ ಪಾತ್ರ ಲಕ್ಕಿಯಂತೂ ನಮ್ಮ ನಡುವೆ ಈ ತರದ ವ್ಯಕ್ತಿಗಳೂ ಇರೋಕೆ ಸಾಧ್ಯವಾ ಅಂತ ಅಚ್ಚರಿ ಮೂಡಿಸುವಂತದ್ದು. ಕೆಲವೊಂದು ಬೋರ್ ಹೊಡಿಸೋ ಸನ್ನಿವೇಶಗಳನ್ನ ಬಿಟ್ರೆ, ಕೆಲವೆಡೆ ಪ್ರೀತಿಯ ಓವರ್ಡೋಸ್ ಅನಿಸಿದರೂ ಆಪ್ತವೆನಿಸೋ ಇವೆರಡೂ ಚಿತ್ರಗಳಿಂದ ವಾರಾಂತ್ಯಕ್ಕೊಂದು ಕಳೆ ಸಿಕ್ಕಿದ್ದು ಸುಳ್ಳಲ್ಲ. 


ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಂಗಳಲ್ಲಿ ಕನ್ನಡದ ಚಿತ್ರಗಳು ಹೆಚ್ಚಿಲ್ಲ. ಇದ್ದರೂ ಹೊಸದಿಲ್ಲ ಅನ್ನೋ ಗ್ರಾಹಕರ ಕೊರಗು ಸದ್ಯದಲ್ಲೇ ನೀಗಬಹುದೇನೋ ಅನ್ನೋ ನಿರೀಕ್ಷೆಯನ್ನು ಹುಟ್ಟಿಸಿರೋ ಈ ಚಿತ್ರಗಳಿಗೆ ಒಂದು ಅಭಿನಂದನೆ. ಕನ್ನಡ ಚಿತ್ರಗಳಿದ್ರೂ ಇರೋ ಐದಾರು ಸ್ಕ್ರ್ರೀನುಗಳಲ್ಲಿ ನಾಲ್ಕೈದು ಶೋಗಳಲ್ಲಿ ಒಂದು ಶೋ ಕೊಡೋಕೆ ಅಳ್ತಿರೋ ಮಲ್ಟಿಪ್ಲೆಕ್ಸುಗಳು, ಕನ್ನಡ  ಸಿನಿಮಾಗಳಿಗೆ ಥಿಯೇಟರುಗಳು ಸಿಗದೇ ತಾವೇ ವಿತರಕರಾಗಿರೋ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ಥಿಯೇಟರ್ ಸಿಗುವಂತೆ  ನೋಡ್ಕೊಳ್ಳುತ್ತಿರೋ ನಮ್ಮಲ್ಲೇ ಇರೋ ದೊಡ್ಡ ಮನುಷ್ಯರ ನಡುವೆ ಕನ್ನಡಿಗರಿಗೆ ಕನ್ನಡದಲ್ಲೇ ಇರೋ ಉತ್ತಮ ಚಿತ್ರಗಳು ಸಿಗದಂತಾಗುತ್ತಿವೆ. ವಾರಾಂತ್ಯದಲ್ಲಾದ್ರೂ ಚಿತ್ರ ನೋಡೋಣ ಅಂತಂದ್ರೆ ಬೇರೆ ದಿನ ನೂರೈವತ್ತರ ಸುಮಾರಿರೋ ಟಿಕೇಟಿಗೆ ವಾರಾಂತ್ಯದಲ್ಲಿ ಎರಡೂವರೆ ಮೂರು ಪಟ್ಟು ಕೊಟ್ಟು ನೋಡಬೇಕಾದ ಅನಿವಾರ್ಯತೆ ಬೆಂಗಳೂರಂತ ಮಹಾನಗರಗಳಲ್ಲಿ ! ಯಾರ ಹೊಟ್ಟೆಯ ಮೇಲೂ ಹೊಡೆಯುವಂತಹ ಮಾತಾಡಬಾರದು ಅಂತನ್ನೋದು ನಿಜವಾದರೂ ಈ ಥರ ಮಾಡುತ್ತಿದ್ದ  ಮಲ್ಟಿಪ್ಲೆಕ್ಸುಗಳಿಗೂ ಇಷ್ಟಕ್ಕಿಂತ ಜಾಸ್ತಿ ಟಿಕೇಟ್ ದರ ವಿಧಿಸೋ ಹಾಗಿಲ್ಲ ಅಂತ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೋ ಅಂತ ಎಷ್ಟೋ ಸಲ ಅನಿಸಿದ್ದಿದೆ . ಅಷ್ಟೆಲ್ಲಾ ಕೊಡೋಕೆ ಸಿದ್ದವಾದ್ರೂ ಹೇಳ್ದೇ ಕೇಳ್ದೇ ಚೆನ್ನಾಗಿ ಓಡ್ತಿರೋ ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡಿ ಯಾವುದೋ ತೆಲುಗು, ತಮಿಳು ಚಿತ್ರಗಳಿಗೆ ಮಣೆ ಹಾಕ್ತಿದ್ದ ಅವರನ್ನು ನೋಡಿ ಎಷ್ಟು ಉರ್ಕಂಡ್ರೂ ಏನೂ ಮಾಡೋಕಾಗದೇ ಇರುವಂತ ಕನ್ನಡಿಗರಿಗೆ ಆಶಾ ಕಿರಣಗಳಂತೆ ಕಾಣ್ತಿರೋದು ಇದೇ ಹಾಟ್ ಸ್ಟಾರು, ನೆಟ್ ಫ್ಲಿಕ್ಸು ಮತ್ತು ಅಮೇಜಾನುಗಳು ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಚಿತ್ರಗಳಿಗೆ ಸಿಗೋ ವೀಕ್ಷಣೆ , ಮೆಚ್ಚುಗೆ ಈ ಅಮೇಜಾನಿಂದ ಆಚೆ ದಾಟಿ ಅದಕ್ಕೆ ದುಡ್ಡು ಸುರಿದ ನಿರ್ಮಾಪಕರ ಜೇಬು ತುಂಬಲಿ, ಈ ತರದ್ದೇ ಹಲವು ಹೊಸ ಕನ್ನಡ ಪ್ರಯತ್ನಗಳಿಗೆ ನಾಂದಿಯಾಗಲಿ ಅನ್ನೋದು ಸದ್ಯದ ಆಶಯ. ಕನ್ನಡದ ಜನತೆಯ ಸಿನಿಮಾ ಪ್ರೇಮದ ಅಗಾಧತೆಯನ್ನು ಈ ಆನ್ ಲೈನ್ ಕಂಪೆನಿಗಳೂ ಅರ್ಥ ಮಾಡಿಕೊಂಡು ಇನ್ನೂ ಹೆಚ್ಚೆಚ್ಚು ಕನ್ನಡ ಚಿತ್ರಗಳನ್ನ ತಮ್ಮ ವೇದಿಕೆಗಳ ಮೂಲಕ ಹೊರತರುವಂತಾಗಲಿ ಅನ್ನೋ ಹಾರೈಕೆಯೊಂದಿಗೆ ಸದ್ಯಕ್ಕೊಂದು ವಿರಾಮ.