Showing posts with label ಗುರು. Show all posts
Showing posts with label ಗುರು. Show all posts

Wednesday, November 30, 2011

ನವಮಾಸದ ಐದನೆ ದಿನ

ನವಮಾಸದ ಐದನೆ ದಿನ ಸಂಭ್ರಮ
ಪೊರೆದ ಗುರುವ ನೆನೆವ ನಲಿವೆ ಅನುಪಮ
ಅವರ ಬಗೆಯೆ ನುಡಿಯು, ಚಿತ್ರ
ಬೋರ್ಡ ಮೇಲೆ ಗೋಡೆ ಮೇಲೆ
ನಗುನಗುತಾ ಒಳಬರಲು ಅವರ ಕರೆಯಲು
ಇಷ್ಟ ದಿನದ ಕಾಟಕೊಮ್ಮೆ ಕ್ಷಮೆಯ ಕೇಳಲು|೧|

ವಂದಿಸುವೆವು ಗುರುವರ್ಯ,ಸ್ವೀಕರಿಸೋ ಆಸನ
ಶಿಷ್ಯವೃಂದ ನೀಡುತಿರುವ ಅಲ್ಪ ಕಾಣಿಕೆ
ಖಾದ್ಯ, ಪೇಯ ಇಷ್ಟೆ ಗುರುವೆ ಕೊಡುವೆವಿಂದಿಗೆ
ಅಡ್ಡ ದಾರಿ ಮೆಟ್ಟಿ ಗುರುವೆ ಬೆನ್ನ ತಟ್ಟಿ ಗೆಲುವಿನಲ್ಲಿ
ನಮ್ಮ ಪೊರೆದ ಗುರುವೆ ಮತ್ತೆ ಕ್ಷಮಿಸೋ ತಪ್ಪನು
ನಿನ್ನ ಮಾತು ಕೇಳದಿದ್ದ, ಬಯ್ಯುವಂತೆ ಮಾಡುತಿದ್ದ
ಶಾಪ ಹಾಕುವಂತೆ ನಡೆದ ನಮ್ಮ ನಡೆಯನು
ಸರಿದಾರಿಗೆ ತಂದ ತಂದೆ ನುಡಿಯೊ ಹಿತವನು|೨|

ಗುರುವಿಗೆಂದು ಕ್ಷಣದಿ ಭಾವ
ನಮನ ಪೋಣಿಸಿಟ್ಟು ಗೆಳತಿ
ಅದನು ನಿನಗೆ ಹೇಳಲಾರೆನೆಂದು ನಾಚಿಸಿ
ಗೆಳೆಯನೊಬ್ಬ ಮುಂದೆ ಬಂದು ಅದನೆ ವಾಚಿಸಿ
ವಾಣಿ ಕೃಪೆಯ ಪಡೆದನಲ್ಲೋ ಅವನಿಗರಿಯದೆ
ಎಂದು ಬರೆಯದಾತ ಬರೆದ ಹಿಂದೆ ನೋಡದೆ
ನಿನ್ನ ಮಹಿಮೆ ಹೊಗಳಲೆನಗೆ ಪದವೆ ಸಾಲದೆ|೩|

ಇಷ್ಟು ಒಳ್ಳೆಯವರ ನಾವು
ಎಂದೇ ಆಶ್ಚರ್ಯ ನಮಗೆ
ಗುರುಗಳೇ, ಅಂದಿನ ನಿಮ್ಮ ಮಾತ ಕೇಳಿ
ನಿಮ್ಮ ಗುಣವ ಅರಿತೆವಂದೆ
ಕಣ್ಣ ಪೊರೆಯು ಹರಿಯಿತಂದೆ
ಕ್ಷಮಿಸಿ ನನ್ನ ಅಂದೆಯಲ್ಲೋ ಒದ್ದೆಯಾಯಿತು
ಕಣ್ಣಾಲೆಯು, ಕರವಸ್ತ್ರವು ಮುದ್ದೆಯಾಯಿತು
ಬರದ ನೀರು ಭಾವದಂತೆ ಉಕ್ಕಿಹೋಯಿತು|೪|

ಮರೆಯಲಾರೆ ಗುರುವೆ ನಿನ್ನ
ಎದುರಿಗಿರದೆ ಹೋದರೂ
ಮಿಂಚಿಸಾದ್ರೂ ತಲುಪಿಸುವೆನು
ಫಲಭೂಮಿಗೆ ಹಾರೈಕೆ
ಮಳೆರೂಪದಿ ಜೀವಕೆ|೫|

Tuesday, June 14, 2011

ಗುರುವಿನ ಗುಂಗಿನಲಿ

ಗುರುವೇ ಎಲ್ಲಿರುವೆ ನೀನು?
ಸಂಕಷ್ಟದಲಿ, ಇಕ್ಕಟ್ಟಿನಲಿ
ಉಸಿರುಗಟ್ಟಿಸೋ ಗುಂಪಿನಲಿ
ಕಾಲೆಳೆತದ, ತುಳಿತದ ಹೊತ್ತಿನಲಿ
ನಿನ್ನೇ ನೆನೆಯುವೆ ನಾನು

ನಿನ್ನೇ ಮರೆತ ಪಾಪಿಯ ನಾ?
ಏರಿದ ಏಣಿಯ ಒದ್ದವನಾ?
ಹೆಸರೆಂಬ ಕೆಸರಿನಲಿ ಬಿದ್ದವನಾ?
ಹಸಿದವರ ನೋಡಿಯೂ ನಕ್ಕವನಾ?
ಜ್ನಾನವ ಹಂಚದೆ ಹೂತವನಾ ?

ನಮಗಾಗಿ ನೀನೆಲ್ಲ ಮರೆತೆ
ಹಗಲಿರುಳು ಚಿಂತೆ ನಮ್ಕುರಿತೇ
ನಿನ್ನ ಶಿಷ್ಯರ್ಯಾರೆಂಬುದು ಚರಿತೆ
ಕೊನೆಗೇನೂ ಕೋರದೆ ಹೊರ‍ಟೆ

ಇಂದು ನೀನಿಲ್ಲ ನಮ್ಮೊಡನೆ
ಕಷ್ಟ ಕಳೆದೊಡನೆ
ನೀನಿಷ್ಟವಾದೊಡನೆ
ಕೆಸರಿಂದೆತ್ತಿದ, ಹೆಸರನ್ನಿತ್ತಿಹ
ಓ ಸದ್ಗುರುವೇ,
ನಿನ್ನ ದಿನಾ ನೆನೆವೆ