Showing posts with label ಕಥೆ. Show all posts
Showing posts with label ಕಥೆ. Show all posts

Tuesday, May 4, 2021

ಸೊಳ್ಳೆ ಪುರಾಣ

ಬಾಲ್ಯದ ಕೆಲವು ದಿನಗಳಲ್ಲಿ ಸಂಜೆಯಾಯ್ತು ಅಂದ್ರೆ ಗುಯ್  ಅಂತ ಮನೆಗೊಂದಿಷ್ಟು ನೆಂಟರ ಎಂಟ್ರಿ. ಬಂದಿದ್ದು ನೆಂಟರಾದ್ರೂ ಕಜ್ಜಾಯ ಸಿಗ್ತಿದ್ದಿದ್ದು ನಮಗೆ ! ಕಿಟಕಿ ಹಾಕು ಅಂದ್ರು ಹಾಕಿಲ್ಲ, ಈಗ ನೋಡು ಸೊಳ್ಳೆ ಬಂತು ಅಂತ ಶುರುವಾಗೋ ಬೈಗುಳಗಳಿಗೆ ಆ ಸೊಳ್ಳೆಗಳನ್ನು ಹುಡುಕಿ ಕೊಲ್ಲೋವರೆಗೆ ಮಂಗಳವಿಲ್ಲ. ಸೊಳ್ಳೆಗಳು ಅಮ್ಮನ ಬೈಗುಳಕ್ಕೆ ಹೆದರಿ ನಮ್ಮ ಕೈಗೆ ಸಿಗ್ತಿದ್ವಾ ಅಥವಾ ನಾವೇ ಸೊಳ್ಳೆಗಳಿಗಿಂತ ಪ್ರಚಂಡ ಹಾರಾಟ ನಡಿಸ್ತಿದ್ವಾ ಗೊತ್ತಿಲ್ಲ. ಕೆಲ ನಿಮಿಷಗಳಲ್ಲೇ ಸೊಳ್ಳೆಗಳ ಗುಯ್ಗಾಟಕ್ಕೂ ಮನೆಯ ಬೈದಾಟಕ್ಕೂ ಕೊನೆ ಕಾಣುತ್ತಿತ್ತು. ನಮ್ಮ ಕೊಟ್ಟಿಗೆಗಳಲ್ಲಿ ನೊರಜು ಮತ್ತೆ ಸೊಳ್ಳೆ ಕಾಟ ಜಾಸ್ತಿ ಆಯ್ತು ಅಂದ್ರೆ ಸಂಜೆ ಹೊತ್ತಿಗೆ ಲೋಬಾನ ಅಥವಾ ಹೊಗೆ ಹಾಕ್ತಿದ್ರು. ಸೊಳ್ಳೆ ಕಾಯಿಲ್ ಹಾಕಿದ್ರೆ ಎತ್ತಿಗೆ ಕಾಲು ನೋವು ಅಂತ ಹೊಗೆಯಿಂದ್ಲೇ ಸೊಳ್ಳೆಗಳಿಗೆ ಹೊಗೆ ಹಾಕ್ತಿದ್ರು ! 


ಈಗ ಬಿಡಿ, ಕತೆನೇ ಉಲ್ಟಾ ಹೊಡೆದಿದೆ. ಈಗಿನ ಸೊಳ್ಳೆಗಳೇ ನಮ್ಮನೆಯಲ್ಲಿ ನಮಗಿಂತಾ ಜಾಸ್ತಿ ಇರ್ತವೆ ! ಒಂದು ತಗೊಂಡ್ರೆ ಒಂದು ಫ್ರೀ ಅನ್ನೋ ಜಾಹೀರಾತುಗಳಂತೆ ಒಂದು ಬಂದ ಕೂಡ್ಲೆ ಸುಮಾರಷ್ಟು ಎಂಟ್ರಿ ಕೊಡ್ತವೆ. ಮುಂಚೆಯೆಲ್ಲಾ ಕೈಯಲ್ಲೇ ಸಿಗ್ತಿದ್ದವು ಈಗ ಸೊಳ್ಳೆ ಬ್ಯಾಟ ಕಂಡರೆ  ಮನೆಯ ಎಲ್ಲಾ ಮೂಲೆ ತೋರುಸ್ತವೆ ! ಸೊಳ್ಳೆ ಬ್ಯಾಟ ಹಿಡಿದು ಓಡಿದಷ್ಟು ಶಟಲ್ ಬ್ಯಾಟ್ ಹಿಡಿದಾದ್ರೂ ಓಡಿದ್ರೆ ಚಾಂಪಿಯನ್ ಆಗ್ತಿದ್ನೇನೋ ಅನಿಸಿಬಿಡುತ್ತೆ . ಆಫೀಸಿನ ಕೆಲಸ ಮಾಡುವಾಗ ಲ್ಯಾಪ್ಟಾಪು ಪರದೆಯ ಮೇಲೇ ಬಂದು ಕೂರುತ್ವೆ.ಕಾಲಲ್ಲಿರುವಾಗ ಇಯರ್ ಫೋನ್ ಪಕ್ಕನೇ ಬಂದು ಕಚ್ಚುತ್ವೆ. ಕೆಳಗಿಟ್ಟ ಪಾದವನ್ನು ಹುಡುಕುತ್ವೆ. ಆಫೀಸು ಲ್ಯಾಪ್ಟಾಪು, ಇಯರ್ ಫೋನು ಮತ್ತು ಮೀಟಿಂಗ್. ಹೆಂಗಿದ್ರೂ ಹೊಡೆಯಂಗಿಲ್ಲ, ಅಟ್ಟಾಡಿಸಿಕೊಂಡು ಬರಂಗಿಲ್ಲ ಅಂತ ಗೊತ್ತಾಗೇ ಕಿರಿಕಿರಿ ಮಾಡುವಷ್ಟು ಚಾಲೂ ಇವು . ಕೆಲಸ ಮಾಡೋವಾಗ ಬಿಡಿ, ಟಾಯ್ಲೇಟಿಗೆ ಹೋದ್ರೂ ಬಿಡಲ್ಲ ಅಂತಾವೆ.  ಮನೆ ನಿಮ್ಮದು , ಪಾರ್ಟಿ ನಮ್ಮದು ಅಂತಾವಲ್ಲ ಇವು , ಎಷ್ಟು ಧೈರ್ಯ ಇರಬಹುದು ? ಮನೆಯ ಕಿಟಕಿಗಳಿಗೆಲ್ಲಾ ಮೆಷ್ ಹಾಕ್ಸಿ, ಸೊಳ್ಳೆ ಪರದೆಯಲ್ಲೇ ಮಲಗಿ ಅಲ್ಲೇ ಎದ್ದು, ಅಲ್ಲೇ ವರ್ಕ್ ಫ್ರಂ ಹೋಂ ಮಾಡಿಬಿಡಾನಾ ಅಂತ ಅಂದ್ಕೊಂಡ್ರು ಆ ಸೊಳ್ಳೆ ಪರದೆಯ ಹೊರಗಿನಿಂದನೇ ಕಚ್ಚೋಕೆಂತ ಹೊಂಚು ಹಾಕಿ ಕಾಯ್ತಾ ಕೂರೋ, ನಿದ್ದೆಗಣ್ಣಲ್ಲಿ ಸೊಳ್ಳೆ ಪರದೆ ಅಂಚಿಗೆ ಬರೋ ಕೈಯೋ ಕಾಲಿನ ಸ್ಪರ್ಷ ಸುಖಕ್ಕೆ ರಾತ್ರಿಯಿಡೀ ನಿದ್ದೆಗೆಡ್ತಾವಲ್ಲ ಇವು, ಇವುಗಳ ಚಾಲಾಕಿತನಕ್ಕೆ ಭೇಷ್ ಅನ್ಸಿಬಿಡುತ್ತೆ.   

ಈ ಕೊರೋನಾ ಅನ್ನುವಂತದ್ದು ಇದೆಯಲ್ಲಾ, ಅದು ಈ ಸೊಳ್ಳೆಗಳಿಂದನೇ ಹರಡೋದು, ಅದಕ್ಕೆ ಭಾರತದ ಎಲ್ಲರೂ ದಿನಕ್ಕೆ ಹತ್ತು ಸೊಳ್ಳೆಗಳನ್ನು ಹಿಡಿದು ಕೊಂದ್ರೆ ಒಂದು ತಿಂಗಳಲ್ಲಿ ಭಾರತದಿಂದ ಕೊರೋನಾ ನಿರ್ಮೂಲನೆಯಾಗುತ್ತೆ ಅಂತ ಯಾವ ಪುಣ್ಯಾತ್ಮನೂ ವಾಟ್ಸಾಪ್ ಸಂದೇಶ ಮಾಡಲಿಲ್ಲ. ಅದನ್ನು ಯಾರೂ ಹಂಚಲಿಲ್ಲವಾದ್ದರಿಂದ ಸೊಳ್ಳೆಗಳ ಸಂಖ್ಯೆ ಕೊರೋನಾ ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ ಅನಿಸುತ್ತೆ . ಸೊಳ್ಳೆಗಳ ಕೊಲ್ಲೋಕೆ ಅಂತಲೇ ತರತರದ ಪರಿಮಳದ ಲಿಕ್ವಿಡುಗಳು ಬಂದ್ರೂ ಅವು ಸೊಳ್ಳೆಗಳನ್ನು ನಿಜವಾಗ್ಲೂ ಕೊಲ್ಲುತ್ತೋ ಅಥವಾ ಸ್ವಲ್ಪ ಹೊತ್ತಿನ ಮಟ್ಟಿಗೆ ಪ್ರಜ್ಞೆ ತಪ್ಪಿಸುತ್ತಾ ಅನ್ನೋ ಸಂದೇಹ ನನ್ನಂತೆ ನಿಮಗೂ ಕಾಡ್ತಿರಬಹುದು. ಟೀವಿಯಲ್ಲಿ ಹಾರಾರಿ ಸೊಳ್ಳೆ ಹಿಡಿಯೋ ಕಾಯಿಲ್ಲುಗಳ ಜಾಹೀರಾತು ನೋಡಿ ಮರುಳಾದ ನಾನೂ ಒಂದು ಸೊಳ್ಳೆ ಲಿಕ್ವಿಡ್ ತಂದಿದ್ದೆ.  ಸೊಳ್ಳೆ ಕಾಯಿಲ್ ಹಾಕಿ , ಅದ್ರಲ್ಲಿ ನಾರ್ಮಲ್ ಮೋಡು, ಅಡ್ವಾನ್ಸು ಮೋಡು ಅಂತ ತಿರುಗ್ಸಿದ್ದು, ಲಿಕ್ವಿಡನ್ನ ವಾರಗಳಲ್ಲೇ ಖಾಲಿ ಮಾಡಿದ್ದೊಂದೇ ಬಂತು. ರಾತ್ರೆ ಕೆಳಗೆ ಬಿದ್ದ ಸೊಳ್ಳೆಗಳು ಬೆಳಗಾಗೋ ವರೆಗೆ ಕೆಳಗಿರ್ತಿರ್ಲಿಲ್ಲ. ಮಾರನೇ ದಿನ ಬಂದು ಕಚ್ಚೋದು ತಪ್ತಿರ್ಲಿಲ್ಲ !

ದೇಹಕ್ಕೆ ವ್ಯಾಯಾಮನೂ ಆಯ್ತು, ಸೊಳ್ಳೆ ಕಾಯಿಲ್, ಲಿಕ್ವಿಡುಗಳಲ್ಲಿನ ರಾಸಾಯನಿಕಗಳನ್ನು ಕುಡಿಯದಂತೆನೂ ಆಯ್ತು ಅಂತ ಸೊಳ್ಳೆ ಬ್ಯಾಟಿಗೆ ಮೊರೆ ಹೋಗಾಗಿದೆ. ಹಾಗಾಗಿ ದಿನ ಬೆಳಗಾದ ತಕ್ಷಣ ಯಾವ ಕರ್ಟನ್ನಿನ ಹಿಂದೆಷ್ಟಿದೆ, ದೇವರ ಮನೆಯ ಮೂಲೆಯಲ್ಲೆಷ್ಟಿದೆ, ಮಂಚದ ಕೆಳಗೆಷ್ಟಿದೆ ಅಂತ ಹುಡುಕುಡುಕಿ ಕೊಲ್ಲೋ ಕೆಲಸ ದಿನವೂ. ಸಿಕ್ಕಿದಲ್ಲಿ ರಕ್ತ ಹೀರೋ ಈ ಸೊಳ್ಳೆಗಳನ್ನು ಕೊಲ್ಲೋದು ಒಂದು ಖುಷಿ ಅಂತೇನಾದ್ರೂ ಅಪ್ಪಿ ತಪ್ಪಿಯೂ ಹೇಳಂಗಿಲ್ಲ. ಈ ಸೊಳ್ಳೆ ದಯಾ ಸಂಘದವರು ಬಂದು ಅದಕ್ಕೊಂದು ಕೇಸ್ ಜಡಿಯಬಹುದು. ಆಮೇಲೆ ಅದರ ವಿರುದ್ದ ಹೋರಾಡುತ್ತಾ ಎಲ್ಲೆಲ್ಲೋ ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ಕೂರಬೇಕಾಗಬಹುದು ! 

ಈ ಮನುಷ್ಯರ ರಕ್ತ ಕುಡಿಕುಡಿದು ಈ ಸೊಳ್ಳೆಗಳು ಮನುಷ್ಯರಂತೆಯೇ ಚುರುಕಾಗಿ ಬಿಟ್ಟಿದಾವಾ ಅನ್ನೋ ಮಾತು ನನ್ನ ಅರ್ಧಾಂಗಿದು. ಅರ್ಧಾಂಗಿ ಅಂದ ಮೇಲೆ ಆ ಮಾತು ತಳ್ಳಿ ಹಾಕುಕ್ಕಾಗುತ್ಯೆ ? ನಾ ಸೊಳ್ಳೆ ಬ್ಯಾಟು ಹಿಡಿದು ಹೋದ್ರೆ ಅಜ್ಜಿ ಬ್ಯಾಗು, ಅತ್ತೆ ಕೋಟಲ್ಲೆಲ್ಲಾ ಅವಿತು ಕಣ್ಣಾ ಮುಚ್ಚಾಲೆಯಾಡೋ ಸೊಳ್ಳೆಗಳು ಮನದಾಕೆ ಬಂದಾಗ ಅದೇಗೆ ಆಚೆ ಬರುತ್ತೆ ಅನ್ನೋದೊಂದು ವಿಸ್ಮಯ. ಅವಳು ಸೊಳ್ಳೆ ಹೊಡಿತಿದಾಳೋ ಸರ ಪಟಾಕಿ ಹಚ್ತಿದಾಳೋ ಅನ್ನುವಷ್ಟು ಶಬ್ದ. ಸೊಳ್ಳೆಗಳಿಗೂ ಗೊತ್ತಾಗಿರ್ಬೇಕು, ಇವರೇ ಹೋಂ ಮಿನಿಸ್ಟರ್ ಅಂತ !   

ಇನ್ನೇನು ಮಳೆಗಾಲ ಬರ್ದಿದ್ರೂ ಮಳೆ ಬರೋಕೆ ಶುರುವಾಗಿದೆ. ನೀವು ಖಾಲಿ ಸೈಟಲ್ಲಿ ಬಿಸಾಕಿರೋ ತೆಂಗಿನ ಚಿಪ್ಪು, ಟೈರು, ಬಾಟಲ್ಲಿಗಳಲ್ಲಿ ನೀರು ನಿಂತು ಸೊಳ್ಳೆಗಳಿಗೆ ಮನೆ ಕಟ್ಟೋ ಮುಹೂರ್ತ ಸಿಕ್ಕಾಗಿದೆ. ನಮ್ಮನೆಗೆಂತೂ ಮೆಷ್ಷಿದೆ, ಗಾಳಿ ಈಕಡೆ ಬೀಸಲ್ಲ. ಸೊಳ್ಳೆ ಆ ಕಡೆ ಹೋಗಿ ಆಚೆ ಮನೆಯವ್ರಿಗೆ ಕಚ್ಲಿ ಅಂತ ಕೂರಂಗಿಲ್ಲ. ಮನೆ ಕಟ್ಟೋಕೆ ನೆರವಾದ ನಿಮ್ಮ ಉಪಕಾರ ಸ್ಮರಣೆ ಆ ಸೊಳ್ಳೆಗಳಿಗಿರೋಲ್ವಾ ? ಖಂಡಿತಾ ನಿಮ್ಮನೆಗೂ ಅವು ಬರ್ತವೆ. ಹೇಗಿದ್ರೂ ಇವು ಫೋನ್ಮಾಡಿ, ಬೆಲ್ಮಾಡಿ ಬರೋ ನೆಂಟ್ರಲ್ಲ. ಬಂದ್ಮೇಲೆ ನಿಮ್ಮ ರಕ್ತ ಹೀರದೆ ಸುಮ್ಮನೂ ಕೂರಲ್ಲ. ಹಾಗಾಗಿ ಮನೆ ಸುತ್ತ ಆದಷ್ಟು ಚೊಕ್ಕವಿಡಿ, ಚೊಕ್ಕವಿಡುವಷ್ಟು ನೆರೆಯವರನ್ನೂ ಪ್ರೋತ್ಸಾಹಿಸಿ ಅನ್ನುತ್ತಾ ಸದ್ಯಕ್ಕೊಂದು ವಿರಾಮ. ಇದನ್ನು ಬರೆಯೋಕೂ ಬಿಡದೇ ಒಂದೇ ಸಮ ಕಚ್ಚೋಕೆ ಬರ್ತಿರೋ ಸೊಳ್ಳೆಗಳನ್ನು ಸ್ವಲ್ಪ ವಿಚಾರಿಸ್ಕೊಂಡು ಬರ್ತೀನಿ

Sunday, December 1, 2019

ಹೋಳಿ

ಕಾಮನ ಹುಣ್ಣಿಮೆಗೆ ಒಂದು ವಾರ ಮುಂಚೆಯೇ ರಸ್ತೆಯಲ್ಲಿ ಬರೋ ವಾಹನಗಳನ್ನ ಅಡ್ಡ ಹಾಕಿ "ಕಾಮಣ್ಣನ ಸುಂಕ ಕೊಡಲೇ ಬೇಕುಭೀಮಣ್ಣ ಬೀಡಿ ಸೇದಲೇ ಬೇಕು" ಅಂತ ಕೂಗೋ ಒಂದೂರ ಮಕ್ಕಳ ಗ್ಯಾಂಗಿನ ನಾಯಕ ನಮ್ಮೀ ಮನೋಜ. ಒಂದಿಷ್ಟು ಜನ ಗಾಡಿ ಅಡ್ಡ ಹಾಕಿದ್ದಕ್ಕೆ ಬೈದ್ರೂ ಇನ್ನೊಂದಿಷ್ಟು ಜನ ಒಂದ್ರುಪಾಯೋಐದ್ರೂಪಾಯೋ ಕೊಡ್ತಿದ್ರಲ್ಲ ಅದೇ ಥ್ರಿಲ್ಲು,ಮುಂದಿನ ಕೂಗಿಗೆ ಸ್ಪೂರ್ತಿ! ಪ್ರತೀ ಊರಲ್ಲೂ ಹಿಂಗೆ ವಾಹನಗಳ ಅಡ್ಡಾಕಿಅಡ್ಡಾಕಿದ ಎಲ್ಲ ಕಡೆ ವಾಹನದವ್ರು ದುಡ್ಕೊಡದಿದ್ರೂ  ಇವರ ಕಲೆಕ್ಷನ್ನು ಬೆಳೆಯೋದೊಂದು ವಿಸ್ಮಯ ! ಹುಣ್ಣಿಮೆ ತನಕ ಇದೇ ತರ ಸಂಗ್ರಹವಾಗೋ ದುಡ್ಡನ್ನ ಕೂಡಾಕಿ ಒಂದಿಷ್ಟು ಸಿಹಿ, ಬಣ್ಣ ತರೋರು. ಹಳೇ ಪ್ಯಾಂಟುಶರ್ಟುಗಳ ಒಂದು ಕೋಲಿಗೆ ಮನುಷ್ಯನಿಗೆ ತೊಡಿಸಿದಂತೆ ತೊಡಿಸಿಅದಕ್ಕೆ ಹುಲ್ಲು ತೂರಿಸಿಅದ್ರಲ್ಲೊಂದು ಬೆರ್ಚಪ್ಪನ್ನ ಮಾಡಿ,ಮಡಿಕೆಯ ತಲೆ ಮಾಡಿ ಬಿಟ್ರೆ ಅಂದಿನ ರಾತ್ರಿಗೆ ಸುಡೋ ಕಾಮಣ್ಣ ರೆಡಿ ! ಅವನ ಮುಖಕ್ಕೊಂದು ಆಕಾರ ಮಾಡೋದುಸುಡೋ ಸಮಯಕ್ಕೆ ಬೇಕಾದ ಪಟಾಕಿ ತರೋದೆಲ್ಲಾ ಸಂಜೆಯ ಇನ್ನಿತರ ಸಂಭ್ರಮಗಳಾಗಿತ್ತು.  ರಾತ್ರಿಯಾದ್ಮೇಲೆ ಕಾಮಣ್ಣನ ಸುಡೋದು ನೋಡೋಕೆ ಊರೋರೆಲ್ಲಾ ಸೇರೋರು. ಅಲ್ಲಿ ಕಾಮಣ್ಣಂಗೆ ಬೆಂಕಿ ಕೊಡೋದು ಯಾರಾದ್ರೂ ದೊಡ್ಡೋರಾದ್ರೂ ಈ ಸಲ ಕಾಮಣ್ಣನ ಚೆನ್ನಾಗಿ ಮಾಡಿದೀರಲ್ರೋ ಅಂದ್ರೆ ಮನೋಜ ಮತ್ತು ಗ್ಯಾಂಗಿಗೆ ಪ್ರಸಾದ ಅಂತ ಹಂಚ್ತಿದ್ದ ಸಿಹಿ ಇನ್ನೂ ಸಿಹಿಯಾದಂಗೆ ಅನ್ನಿಸ್ತಿತ್ತುಪ್ರಪಂಚವನ್ನೇ ಗೆದ್ದಂಗನಿಸ್ತಿತ್ತು.

ಹಿಂಗಿಪ್ಪ ಸಂಭ್ರಮದ ಹುಣ್ಣಿಮೆ ಕಳೆದು ಹೋಳಿ ಬಂದಿತ್ತು. ಬೆಳಗ್ಗೆಯೇ ಎದ್ದು ಬಣ್ಣಗಳ ಪ್ಯಾಕೇಟೆತ್ತಿ ಹೋಳಿಯಾಡಲು ಓಡಿದ್ದ ಮನೋಜ. ತಿಂಡಿ ತಿಂದ್ಕಂಡು ಹೋಗೋ ಅನ್ನೋ ಅಮ್ಮನ ಮಾತನ್ನು ಕೇಳದೇ ಹ್ಯಾಪಿ ಹೋಳಿ ಅಮ್ಮ ಅಂತ ಬಣ್ಣ ಹಚ್ಚಿದ್ದ. ಹೋಳಿಯಾಡೋಕೆ ಹೋದ್ರೆ ಬರೋದು ಮಧ್ಯಾಹ್ನವಾಗುತ್ತೋ. ಏನಾರು ತಿಂದ್ಕೊಂಡೋಗೋ ಅನ್ನೋಕೆ ಬಂದ ಅಪ್ಪನ ಮುಖಕ್ಕೂ ಬಣ್ಣ ಹಚ್ಚಿ ಅವ್ರು ಮುಸಿ ನಗೋ ಹೊತ್ತಿಗೆ ಗೇಟು ದಾಟಿದ್ದ ! ಮನೆಯಿಂದ ಮುಂದೋಡೋ ಹೊತ್ತಿಗೆ ಕಣ್ಣು ಹುಷಾರಿ ಅಂತ ಅಪ್ಪ ಅಂದಂಗಾಯ್ತು. ಆದ್ರೆ ಅಪ್ಪ ಏನು ಹೇಳ್ತಿದಾರೆ  ಅಂತ ಕೇಳೋ ವ್ಯವಧಾನವಿಲ್ಲದ ಮನೋಜ ಮುಂದೋಡಾಗಿತ್ತು.

ಗೆಳೆಯರನ್ನೆಲ್ಲಾ ಮನೆಯಿಂದ ಕರೆದು ಬಣ್ಣ ಹಾಕಾಯ್ತು. ಬರೋಲ್ಲ ಅಂದವರನ್ನೂ ಪುಸಲಾಯಿಸಿ ಕರೆದು ಬಣ್ಣ ಹಚ್ಚಾಯ್ತು. ನೀರಿಗಿಳಿದ ಮೇಲೇ ಚಳಿ ಬಿಡೋದು ಅಂದಂಗೆ ಒಂದ್ಸಲ ಬಣ್ಣ ಹಚ್ಚಿಸಿಕೊಂಡೋರು ನಾಚಿಕೆ ಬಿಟ್ಟುಖುಷಿ ಪಟ್ಟು ಬೇರೆಯವ್ರಿಗೆ ಬಣ್ಣ ಹಚ್ಚೋಕೆ ಬರೋರು. ಬಣ್ಣ ಖಾಲಿ ಆಗ್ತಾ ಬಂತು ಅನ್ನೋ ಹೊತ್ತಿಗೆ ಯಾರೋ ಹಿರಿಯರುಬಣ್ಣ ಖಾಲಿ ಆಯ್ತೇನ್ರೋ ಹುಡುಗ್ರಾತಗಳ್ರಿ ಬಣ್ಣನ ಅಂತೆ ತಮ್ಮ ಮನೇಲಿ ಇವ್ರಿಗೆ ಅಂತನೇ ತಂದಿಟ್ಟಿದ್ದ ಬಣ್ಣ ಕೊಡೋರು. ಪ್ರತೀ ವರ್ಷ ಈ ಹುಡುಗರು ಬಂದು ಹ್ಯಾಪಿ ಹೋಳಿ ಅಣ್ಣಾ/ಮಾವ/ಅಜ್ಜ ಅಂತ ಹಚ್ಚಿ ಹೋಗೋದು ಅವ್ರಿಗೆ ಹೆಂಗಿದ್ರೂ ಪರಿಚಯವಾಗಿತ್ತಲ್ಲ. ಬಣ್ಣವಾಡೋ ಹುಡುಗರು ಇನ್ನೂ ಬರ್ಲಿಲ್ಲ ಅಂದ್ರೇನೆ ಏನೋ ಚಡಪಡಿಕೆ ಕೆಲ ಹಿರೀಕರಿಗೆ. ಬಣ್ಣ ಕೊಡೋ ಹಿರೀಕರೆಲ್ಲಾ ಕಣ್ಣು ಹುಷಾರಿ ಅನ್ನೋರು. ಆದ್ರೆ ಮನೋಜ ಮತ್ತವನ ಪಟಾಲಮ್ಮಿಗೆ ಅದ್ರ ಮೇಲೆ ಗಮನವಿದ್ರೆ ತಾನೇ ?

ಹಿಂಗೇ ಬಣ್ಣವಾಡುತ್ತಾ ಹೊತ್ತು ಹೋಗಿದ್ದೇ ತಿಳೀಲಿಲ್ಲ. ಮಧ್ಯಾಹ್ನವಾಗುತ್ತಾ ಬಂದಿತ್ತು. ಹೊಟ್ಟೆ ಬೇರೆ ಹಸಿಯುತ್ತಿತ್ತು. ಆಟವಾಡ್ತಾ ಆಡ್ತಾ ಮನೆಯಿಂದ ಸುಮಾರು ದೂರ ಬಂದಾಗಿದೆ. ಇನ್ನು ಮನೆಗೆ ವಾಪಾಸು ಹೋಗೋ ಬದ್ಲು ಇಲ್ಲೇ ನಡೀತಿರೋ ಜವರಯ್ಯನ ಜಾತ್ರೆಗೆ ಹೋಗಿ ಏನಾದ್ರೂ ತಿಂದ್ಕೊಂಡು ಆಮೇಲೆ ಮನೆಗೆ ಹೋಗೋಣ್ವಾ ಅಂದ ಮನೋಜ. ಹಿಂದಿನ ದಿನ ಕಾಮಣ್ಣನ ಕಲೆಕ್ಷನ್ನಲ್ಲಿ ಸ್ವಲ್ಪ ದುಡ್ಡನ್ನ ಜಾತ್ರೆಗೆ ಅಂತ್ಲೇ ಉಳಿಸಿ ಇವತ್ತು ತಂದ ಮನೋಜನ ಬುದ್ದಿವಂತಿಕೆಗೆ ಮೆಚ್ಚುತ್ತಾ ಎಲ್ರೂ ಜಾತ್ರೆಯತ್ತ ಹೆಜ್ಜೆ ಹಾಕಿದ್ರು. ಅಲ್ಲೂ ಬಣ್ಣಗಳದ್ದೇ ಜಾತ್ರೆಯವತ್ತ್ಯು. ಜಾತ್ರೆಯ ದಾರಿಯಲ್ಲಿ ಯಾರೋ ಬಣ್ಣಗಳ ಪ್ಯಾಕೆಟ್ಟನ್ನ ಬೀಳಿಸಿಕೊಂಡಿದ್ರು ಅನ್ಸುತ್ತೆ. ಜಾತ್ರೆಗೆ ತಿನ್ನೋಕೆ ಅಂತ ಬಂದಿದ್ರೂ ಬಣ್ಣಗಳ ನೋಡಿದ ಮೇಲೆ ಹುಡುಗರಿಗೆ ಬಂದ ಕೆಲಸವೇ ಮರ್ತೋಯ್ತು. ಬಣ್ಣವಾಡೋ ಹುಚ್ಚಲ್ಲಿ ಅಲ್ಲಿ ಸಿಕ್ಕಿದ ದನನಾಯಿಮಂಗಗಳ ಮೇಲೂ ಬಣ್ಣವೆರಚೋಕೆ ಶುರು ಮಾಡಿದ್ರು. ಆ ಗಲಾಟೇಲಿ ಸುಮಾರಷ್ಟು ಪ್ರಾಣಿಗಳ ಕಣ್ಣುಮೂಗುಗಳಲ್ಲೆಲ್ಲಾ ಬಣ್ಣ ಹೋಗಿ ಅವು ಒದ್ದಾಡೋಕೆ ಶುರು ಮಾಡಿದ್ರೆ ಈ ಹುಡುಗರಿಗೆ ಏನೋ ಒಂತರ ಖುಷಿ ! ಈ ಖುಷಿಯ ಮಧ್ಯೆಯೇ ಏ ಮನೋಜಹುಷಾರು ಅಂತ ಯಾರೋ ಕೂಗಿದಂಗಾತ್ಯು. ಏನು ಅಂತ ತಿರುಗೋ ಹೊತ್ತಿಗೆ ಮಂಗವೊಂದು ಮನೋಜನ ಮೇಲೆ ನೆಗೆಯುತ್ತಿತ್ತು. ನನ್ನ ಕಣ್ಣಿಗೆ ಬಣ್ಣ ಹಾಕಿದೆಯಲ್ಲಾನೀನೂ ಅನುಭವಿಸು ಅಂತ ಮಂಗವೊಂದು ಬಯ್ಯುತ್ತಾ ಇವನಿಗೆ ಹೊಡೆಯೋಕೆ ಬಂದಾಗಾಯ್ತು. ಅದ್ರ ನೆಗೆತದಿಂದ ತಪ್ಪಿಸಿಕೊಳ್ಳೋಕೆ ಅಂತ ಹಿಂದೆ ಬಗ್ಗಿದ್ದೊಂದೇ ಗೊತ್ತು. ಆಯ ತಪ್ಪಿಹಿಂದೆ ಬಿದ್ದಂತೆತಲೆ ಯಾವುದಕ್ಕೋ ಹೊಡೆದಂತೆ !

ಮನೋಜ ಕಣ್ಣು ಬಿಟ್ಟು ನೋಡಿದರೆ ಬಣ್ಣದ ಬಟ್ಟೆಗಳಲ್ಲಿ ಓಡಾಡೋ ಜನರ ಜಾತ್ರೆಯಲ್ಲಿದ್ದಾನೆ. ಆದರೆ ಅವನ ಸಾಥಿಗಳ್ಯಾರೂ ಕಾಣ್ತಿಲ್ಲ ! ಹಸಿಯುತ್ತಿರೋ ಹೊಟ್ಟೆಗೆ ಏನಾದ್ರೂ ತಿನ್ನೋಣ ಅಂತ ನೋಡಿದ್ರೆ ಚೆಡ್ಡಿಯಲ್ಲಿ ದುಡ್ಡಿಲ್ಲ. ಅರೇಚೆಡ್ಡಿಯೇ ಇಲ್ಲ! ಮೈತುಂಬಾ ಕೂದಲು.  ಹಿಂದೊಂದು ಬಾಲಕೈ ಕಾಲು ಮೇಲೆಲ್ಲಾ ರೋಮ ಮಂಗನಂತೆ. ಕಣ್ಣೇನೋ ಉರಿಯುತ್ತಿದೆಯಲ್ಲಾ ಅಂತ ನೊಡಿದ್ರೆ ಮುಖದ ಮೇಲೆ ಯಾರೋ ಸೋಕಿರೋ ಬಣ್ಣ! ಬಣ್ಣವಾಡ್ತಿದ್ದ ತನಗೇನಾಯ್ತು ?  ಮನೋಜ ಮಂಗನೇಗಾದೆ?  ಮನೆಗೆ ಹೋಗೋದೇಗೆ?  ಮೊದಲಿನಂತೆ ಆಗೋದೇಗೆ ಅನ್ನೋ ಹಲವು ಚಿಂತೆಗಳಲ್ಲಿ ಮುಳುಗಿರೋ ಮನೋಜನಿಂದು ದುಃಖಾಕ್ರಾಂತನಾಗಿದ್ದಾನೆ, ಹಸಿದು ಬಳಲಿದ್ದಾನೆ. ಜಾತ್ರೆಲಿ ಸಿಗೋ ಯಾರಾದ್ರೂ ತನಗೆ ಸಹಾಯ ಮಾಡ್ಬೋದೇನೋ ಎನ್ನೋ ನಿರೀಕ್ಷೆಯಲ್ಲಿ ಎಲ್ಲರ ಮುಖಗಳನ್ನು ನೋಡ್ತಾ ಇದ್ದಾನೆ.

Thursday, August 22, 2019

ಅನಿತಾ, ವನಿತಾ ಮತ್ತು ಚೆಂಗು ಮರಿ

ಒಂದು ಕಾಡಲ್ಲಿ ಅನಿತಾ ಅನ್ನೋ ಆನೆ ಮತ್ತು ಮತ್ತು ವನಿತಾ ಅನ್ನೋ ಹುಲಿ ಇದ್ವಂತೆ. ಆ ಕಾಡಲ್ಲಿದ್ದ ನವನೀತ ಅನ್ನೋ ಸಿಂಹ ಕಾಡು ಬಿಟ್ಟೋದ್ರೆ ಕಾಡಿನ ರಾಜ ತಾವೇ ಆಗ್ಬೇಕು ಅಂತ ಅವೆರಡಕ್ಕೂ ಆಸೆ ಇತ್ತಂತೆ. ಮುಂದಿನ ರಾಜ/ರಾಣಿ ತಾವೇ ಆಗ್ಬೇಕು ಅನ್ನೋ ಆಸೇಲಿ ಅವ್ರು ಮತ್ತೊಬ್ರನ್ನ ಕೆಳಗೆ ತಳ್ಳೋದು ಹೇಗೆ ಅಂತ್ಲೇ ಯೋಚ್ನೆ ಮಾಡ್ತಿದ್ರಂತೆ. ಈ ಕಾಡಲ್ಲೇ ಅಲ್ಲ, ಪ್ರಪಂಚದಲ್ಲೇ ತಮ್ಮಷ್ಟು ಕೆಲ್ಸ ಮಾಡೋರು ಬೇರ್ಯಾರೂ ಇಲ್ಲ ಅನ್ನೋ ಭಾವ ಇಬ್ಬರಿಗೂ. ಜಗದ ಬೆಳಕಾಗೋದೇ ತಮ್ಮಿಂದ ಅನ್ನೋ ಭಾವವೂ ಇಬ್ರಿಗೂ. ಎಲ್ಲರಿಗೂ ಉಪಕಾರ ಮಾಡುವರಂತೆ ನಟಿಸುತ್ತಿದ್ದರೂ ಇವರು ಯಾವಾಗ ಮೈಮೇಲೆ ಬೀಳ್ತಾರೋ ಗೊತ್ತಿಲ್ಲದ ಉಳಿದವರು ಇವರು ಬಂದಾಗ ಇವರ ಪರಮ ಸ್ನೇಹಿತಂತೆಯೂ, ಎದುರಿಗಿಲ್ಲದಿದ್ದಾಗ ಇವರ ದುರ್ಗುಣಗಳ ದೂರುತ್ತಲೂ ಇದ್ದರು. ಇಂತಿಪ್ಪ ಕತರ್ನಾಕ್ ಕಾಡಿಗೆ ಚೆಂಗು ಮರಿ ಎಂಬ ಜಿಂಕೆಯ ಆಗಮನವಾಯ್ತು.

ಜಿಂಕೆಯೋ ಮಹಾ ಚುರುಕು. ಮೃಗಾಲಯದ ಅದೇ ಏಕತಾನತೆಯಿಂದ ತಪ್ಪಿಸಿಕೊಂಡು ಕಾಡಿಗೆ ಬಂದಿದ್ದ ಚೆಂಗುಮರಿಗೆ ಕಾಡಿನ ಸ್ವಾತಂತ್ರ್ಯ ಹೊಸತು. ಅದಕ್ಕೆ ಕೂತಲ್ಲಿ ಕೂರಲಾಗದ ಕುತೂಹಲ. ಅದಕ್ಕೆ ಜೊತೆ ಸಿಕ್ಕಿದ್ದು ಕೊಂಗೂಸ್ ಎಂಬ ಕರಡಿ. ಅದು ಜೂವಿನಿಂದ ಬರದೇ ಇದ್ರು ಆಹಾರ ಹುಡುಕಿಕೊಂಡು ಬೇರೆ ಕಾಡಿಂದ ಕತರ್ನಾಕ್ ಕಾಡಿಗೆ ಬಂದಿತ್ತು. ಕಾಡಲ್ಲಿ ಆರಾಮವಾಗಿ ಅಲೆಯುತ್ತಿದ್ದ ಇವುಗಳ ಕಣ್ಣಿಗೆ ಬಿದ್ದಿದ್ದು ಅಮಿತ ಎಂಬ ಕೋತಿ. ಆ ಕೋತಿಗೋ ಹೆಸರಿಗೆ ತಕ್ಕಂತೆ ಎಷ್ಟಿದ್ದರೂ ಸಮಾಧಾನವಿಲ್ಲದ ಭಾವ. ಈ ಚೆಂಗು, ಕೊಂಗೂಸ್ಗಳು ತನ್ನ ಹಣ್ಣಿಗೆ ಕೈ ಹಾಕದಿದ್ದರೂ ಅದಕ್ಕೆ ಏನೋ ಆತಂತ. ಅದೇ ತರ ಕಾಡಲ್ಲಿದ್ದ ಭೈರ ಅನ್ನೋ ಜಿರಾಫೆಯೂ ಈ ಹೊಸ ಮೃಗಗಳ ಆಗಮನವನ್ನು ಗಮನಿಸಿತ್ತು. ಈ ಕಾಡಿಗೆ ಹೊಸಬರು ಬರೋದೇನು ಹೊಸತಾ ? ಬಂದ್ರೆ ಎಷ್ಟು ದಿನ ಇರ್ತಾರೆ ಇಲ್ಲಿ, ಈ ಅನಿತಾ , ವನಿತಾನ ಸುದ್ದಿ ಇವಕ್ಕೆ ಇನ್ನೂ ಗೊತ್ತಿಲ್ಲ , ಅಲ್ಲಿವರೆಗೆ ಆರಾಮಾಗಿರ್ಲಿ ಅಂತ ಅಂದ್ಕೋತಿತ್ತು.

ಕಾಡಿಗೆ ಬಂದ ಹೊಸತರಲ್ಲಿ ಕೊಂಗೂಸನ್ನ ಕಂಡರೆ ಗಾಬರಿಪಡುತ್ತಿದ್ದ ಚೆಂಗುಮರಿಗೆ ಕ್ರಮೇಣ ಅದರೊಂದಿಗೆ ಸ್ನೇಹ ಬೆಳೆಯಿತು. ಚುರುಕಾಗಿ ಓಡೋ ಅದು ಎಲ್ಲಾದ್ರೂ ಹಣ್ಣು ಸಿಕ್ರೆ ಕೊಂಗೂಸಿಗೆ ತೋರುಸ್ತಿತ್ತು. ಮರ ಹತ್ತಿ ಜೇನು ಕೀಳೋ ಕೊಂಗೂಸ್ ಚೆಂಗು ಮರಿಗೂ ಸ್ವಲ್ಪ ಕೊಡ್ತಿತ್ತು. ಕಾಡೇ ತಮ್ಮದೆಂಬಂತೆ ಸ್ವೇಚ್ಛೆಯಿಂದಿದ್ದ ಚೆಂಗು ಮರಿಯನ್ನು ಕಂಡು ಅಮಿತನಿಗ್ಯಾಕೋ ಹೊಟ್ಟೆಯುರಿ ಶುರುವಾಯ್ತು. ಅವ ತನಗೆ ಚೆನ್ಣಾಗಿದ್ದ ಅನಿತಾ, ವನಿತಾರೊಂದಿಗೆ ಚೆಂಗುಮರಿ ಬಗ್ಗೆ ಸುಳ್ಳೇ ಪಳ್ಳೇ ಕತೆ ಕಟ್ಟಿದ !

ತಮ್ಮ ರಾಜ್ಯಕ್ಕೆ ಬೇರ್ಯಾರೋ ಬರೋದು ಅಂದ್ರೆ ಏನು ? ಬಂದ್ರೂ ತಮ್ಮಪ್ಪಣೆ ಇಲ್ದೇ ಹುಲ್ಲು ತಿನ್ನೋದು ಅಂದ್ರೆ ಏನು ಅಂತ ಇಬ್ಬರಿಗೂ ಉರಿದೋಯ್ತು. ಇಬ್ರೂ ಹೋಗಿ ಕಾಡಿನ ರಾಜ ನವನೀತನಿಗೆ ದೂರು ಕೊಟ್ವು. ನವನೀತನೋ ಹೆಸರಿಗೆ ತಕ್ಕಂತೆ ಸ್ವಲ್ಪ ಬಿಸಿಗೆ ಕರಗೋನು, ಗಾಳಿ ಹಾಕಿದ್ರೆ ಬೇಕಾದ ಆಕಾರಕ್ಕೆ ತಿರುಗೋನು. ಸ್ವಂತ ಬುದ್ಧಿಗಿಂತ ಸಿಟ್ಟಿಗೇ ಜಾಸ್ತಿ ಬೆಲೆ ಕೊಡೋನು. ತಾನೊಮ್ಮೆ ಘರ್ಜಿಸಿದ್ರೆ ಕಾಡೇ ಗಡ ಗಡ ಅನ್ನಬೇಕು ಅಂತ ಬಯಸೋನು. ತನ್ನ ಕಾಡಿಗೆ ಬಂದ ಯಾರೋ ಸ್ವಚ್ಛಂದವಾಗಿ ತಿರುಗೋದು ಅಂದ್ರೆ ಏನು? ಅದ್ರಲ್ಲೂ ಈ ಕಾಡಲ್ಲಿ ಇಷ್ಟು ವರ್ಷಗಳಿಂದ ಇರೋ ಅನಿತಾ , ವನಿತಾರು ಸುಳ್ಲೇಳಕ್ಕೆ ಆಗುತ್ತಾ ಅನಿಸ್ತು. ಚೆಂಗುಮರಿಯನ್ನ ಕರೆದು , ಕಾಡಿಂದ ಹೊರಗಾಕೋದು ಹೆಂಗೆ ಅಂತ ಯೋಚನೆ ಮಾಡೋಕೆ ಶುರು ಮಾಡಿದ.

ತಾವು ಆ ಕಾಡಿಗೆ ಬೇರೆ ಕಡೆಯಿಂದಲೇ ಬಂದಿದ್ವಿ ಅನ್ನೋದು ಅನಿತಾ, ವನಿತಾರಿಗೂ ನೆನಪಿರ್ಲಿಲ್ಲ. ನವನೀತನಿಗೂ ನೆನಪಾಗ್ಲಿಲ್ಲ. ಕೊಂಗೂಸ್, ಚೆಂಗು ಮರಿ ನಿಂತಿದ್ದು ತಪ್ಪು, ಕುಂತಿದ್ದು ತಪ್ಪು, ಹೋಗಿದ್ದು ತಪ್ಪು ಅಂತ ಅನಿತಾ, ವನಿತಾ, ಅಮಿತರು ಎಗರಾಡ್ತಿದ್ರು. ಈ ಕಾಡಿಂದ ಹೊರಗಾಗ್ಬೇಕು ಅಂತ ನವನೀತನಿಗೆ ಹೇಳ್ತಿದ್ರು. ನಾವು ಯಾಕೆ ಬಂದ್ವೋ ಇಲ್ಲಿಗೆ ಅಂತ ಚೆಂಗುಮರಿ ಮತ್ತು ಕೊಂಗೂಸ್ ಪ್ರತೀ ದಿನ ಕೊರಗ್ತಿದ್ರು ಇವ್ರ ಕಾಟಕ್ಕೆ. ಕೊನೆಗೊಂದು ದಿನ ಇವರ ಕಾಟ ತಡೆಯಲಾದರೆ ಕೊಂಗೂಸ್ ಪಕ್ಕದ ಕಾಡಿಗೆ ಹೋಗೋದ್ರೊಂದಿಗೆ ಚೆಂಗುಮರಿಗಿದ್ದ ಏಕೈಕ ಖುಷಿಯೂ ನಿಂತೋಯ್ತು..

ಪ್ರತೀದಿನದ ದುಃಖ, ಅವಮಾನ, ಅಸಹಾಯಕತೆಗಳನ್ನ ಚೆಂಗು ಮರಿ ತಡಕೊಳ್ತಿದ್ಳು. ಕಣ್ಣಂಚಿಗೆ ಬಂದ ನೀರ ಸಾಗರವನ್ನ ಛಲವೆಂಬ ಬೆಂಕಿ ಬತ್ತಿಸಿಬಿಡ್ತಿತ್ತು. ಸ್ವಾಭಿಮಾನಕ್ಕೆ ಧಕ್ಕೆಯಾಗೋ ಈ ಕಾಡಲ್ಲಿ ಯಾಕಿರ್ಲಿ ಅಂತ ಅದೆಷ್ಟು ಸಲ ಚೆಂಗು ಮರಿ ಯೋಚಿಸಿದ್ಲೋ ಗೊತ್ತಿಲ್ಲ. ಆದ್ರೆ ಇವರಿಗೆ ತಾನೇನು ಅಂತ ತೋರಿಸಿಯೇ ಮುಂದೆ ಹೋಗ್ಬೇಕು ಅನ್ನೋ ಛಲದಲ್ಲಿ ಅಲ್ಲೇ ಉಳ್ಕೊಂಡ್ಲು. ಕಾಲಚಕ್ರ ನಿಧಾನಕ್ಕೆ ತಿರುಗ್ತಾ ಇತ್ತು. ಕಾಡಿಂದ ಹೊರಗಾಗ್ಬೇಕು ಅನ್ನೋ ನಿರ್ಣಯಕ್ಕೆ ವಿರುದ್ಧವಾಗಿ ಕಾಡಲ್ಲಿದ್ದ ಶಿವಮ್ಮ ಅನ್ನೋ ಹಸು ಮತ್ತು ಭೈರಪ್ಪ ಜಿರಾಫೆ ಅಡ್ಡ ನಿಂತ್ರು. ಏನೇ ಮಾಡ್ಕೊಂಡ್ರೂ ತನ್ನ ಸುದ್ದಿಗೇನು ಬರ್ತಿಲ್ವಲ್ಲ ಅಂತ ವನಿತಾಳೂ ಸುಮ್ಮನಾಳ್ದು. ಅನಿತಾಗೆ ಏನಾದ್ರೂ ಮಾಡಿ ಇವಳನ್ನು ಹೊರಹಾಕ್ಬೇಕು ಅಂತ ಅನಿಸ್ತಿದ್ರೂ ಸೂಕ್ತ ಬೆಂಬಲವಿಲ್ದೇ , ಸೂಕ್ತ ಅವಕಾಶಕ್ಕಾಗಿ ಹೊಂಚು ಹಾಕ್ತಿದ್ದಳು. ಸಿಕ್ಕ ಸಣ್ಣ ಸಣ್ಣ ಅವಕಾಶಗಳಲ್ಲೂ ಮೈಮೇಲೆರಗಿ ಮುಗಿಸಿ ಬಿಡೋ ಪ್ರಯತ್ನ ಮಾಡ್ತಿದ್ದಳು. ಆದರೆ ಚೆಂಗುಮರಿಯ ಜೀವ ಗಟ್ಟಿಯಿತ್ತು. ಬದುಕಿದಳು ಪ್ರತೀ ಬಾರಿ.

ಕಾಲ ಚಕ್ರ ಮತ್ತೆ ಉರುಳುತ್ತಿತ್ತು. ಕಾಡಿನ ಬೇಟೆಗಾರರು ಹಾಕಿದ ಬಲೆಗೆ ಸಿಕ್ಕು ನವನೀತ ತಾನೇ ಹೊರಸಾಗಿದ್ದ. ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಯಾರನ್ನೋ ಹೊರಹಾಕಲು ಹೋಗಿದ್ದ ಆತನನ್ನೇ ವಿಧಿ ಕಾಡಿಂದ ಹೊರಹಾಕಿತ್ತು ! ಜಗಳ ಕಾಯೋಕೆ ಸದಾ ಕಾಯ್ತಿದ್ದ ಅನಿತಾ ವನಿತಾರಿಗೆ ಚೆಂಗುಮರಿಯ ಜೊತೆಯ ಜಗಳ ಬೇಸರ ತರಿಸಿತ್ತು. ಇವರಿಗೆ ಜಗಳವಾಡಲು ವಿಷಯ ಕೊಟ್ಟರೆ ತಾನೇ ಚೆಂಗು ಮರಿ ! ತನ್ನ ಪಾಡಿಗೆ ತಾನಿರುತ್ತಾ, ಕಾಡಿನ ನಿಯಮಗಳ ಚೆನ್ನಾಗಿ ಪಾಲಿಸುತ್ತಿದ್ದ ಅವಳ ಮೇಲೆ ಹರಿಹಾಯಲು ಇವರಿಗೆ ವಿಷಯಗಳೂ ಸಿಗ್ತಿರಲಿಲ್ಲ. ಆದ್ರೆ ಜಗಳದ ಚಪಲ ತಾಳಬೇಕೇ ? ಎಷ್ಟೋ ದಿನಗಳಿಂದ ಬಚ್ಚಿಟ್ಟಿದ್ದ ಪರಸ್ಪರ ಧ್ವೇಷ, ಅಸಹನೆಗಳು ಭುಗಿಲೇಳತೊಡಗಿದವು. ಚೆಂಗುಮರಿಯ ಮೇಲೆ ಬೀಳ್ತಿದ್ದ ಇವರು ಈಗ ಪರಸ್ಪರ ಕಚ್ಚಾಡತೊಡಗಿದರು. ನವನೀತನ ನಿರ್ಗಮನದಿಂದ ತೆರವಾಗಿದ್ದ ಕಾಡಿನ ರಾಜನ ಸ್ಥಾನವನ್ನು ಆಕ್ರಮಿಸುವ ಚಪಲ, ಅದಕ್ಕಾಗೇ ನಡೆಸಿದ ವರ್ಷಗಳ ತಂತ್ರಗಾರಿಕೆ ಕೊನೆಗೂ ಕೈಗೂಡೋ ಕ್ಷಣದಲ್ಲಿ ಯಾವ ಪ್ರಯತ್ನವನ್ನೂ ಬಿಡಬಾರದು ಅಂತ ಶಕ್ರಿಮೀರಿ ಕಚ್ಚಾಡತೊಡಗಿದರು.
ಅನಿತಾ, ವನಿತಾರು ಈ ರೀತಿ ಕಚ್ಚಾಡುತ್ತಿದ್ದರೆ ಅವರ ಮಧ್ಯೆ ತಂದಿಟ್ಟಿದ್ದ ಅಮಿತ ದೂರದಿಂದಲೇ ನೋಡಿ ಖುಷಿ ಪಡುತ್ತಿದ್ದ. ಅವನಿಗೂ ಕಾಡಿನ ರಾಜನಾಗುವ ಉಮೇದಿತ್ತೆಂದು ಹೇಳಬೇಕಾಗಿಲ್ಲ ತಾನೇ ? ಯಾರಿಗೋ ಒಳ್ಳೆಯದು ಮಾಡಿದ್ರೆ ನಮಗೆ ತಕ್ಷಣಕ್ಕೆ ಒಳ್ಳೆಯದಾಗದೇ ಇರಬಹುದಂತೆ. ಆದರೆ ಯಾರಿಗಾದರೂ ಕೆಟ್ಟದ್ದನ್ನು ಬಯಸಿದರೆ ಸದ್ಯದಲ್ಲೇ ಅದು ಬಡ್ಡಿ ಸಮೇತ ವಾಪಾಸ್ ಬರುತ್ತಂತೆ ! ಎಲ್ಲರಿಗೂ ಒಳ್ಳೆಯದು ಬಯಸಿದ ಚೆಂಗುಮರಿ ತನ್ನ ಪಾಡಿಗೆ ಕಾಡಿನ ಮೂಲೆಯೊಂದರಲ್ಲಿ ಮೇಯುತ್ತಿತ್ತು. ಅದರ ವಿರುದ್ಧ ಕತ್ತಿ ಮಸೆದವರೆಲ್ಲರೂ ತಾವೇ ಪರಸ್ಪರ ಕಚ್ಚಾಡುತ್ತಾ ತಮ್ಮ ನಾಶದಲ್ಲಿ ತೊಡಗಿದ್ದರು.

ಬರೆಯೋ ಸೋಂಬೇರಿತನದಲ್ಲೂ ಹಿಂದೆ ಬಿದ್ದು ಇಷ್ಟುದ್ದ ಬರೆಯೋಕೆ ಸ್ಪೂರ್ತಿ ನೀಡಿದ ಅರ್ಧಾಂಗಿಗೆ ಒಂದು ಧನ್ಯವಾದ

Wednesday, July 10, 2019

ಕಳೆದು ಹೋದ ಕತೆ

ಮನೆಯ ಹಿತ್ತಲ ಹಳ್ಳದಲ್ಲಿ ನೀರುಕ್ಕಿದೆ ಪ್ರಭು ಅಂತ ಅಮ್ಮ ಹೇಳ್ತಾ ಇದ್ರೆ ಬೆಂಗಳೂರಲ್ಲಿರೋ ಮಗನ ಕಣ್ಣಲ್ಲಿ ಏನೋ ಪುಳಕ. ಪಕ್ಕದ ಮನೆಯವ ಬೋರು ತೆಗೆಸಿದ ದಿನದಿಂದಲೇ ಬತ್ತಿ ಹೋಗಿದ್ದ ಅಕ್ಕಿಹೊಳೆ ಜೋರು ಮಳೆಗಾಲದಲ್ಲೆಲ್ಲಾದರೂ ಒಮ್ಮೊಮ್ಮೆ ತನ್ನ ಇರುವಿಕೆಯನ್ನು ಸಾರುತ್ತಿತ್ತು. ಒಂದಾನೊಂದು ಕಾಲದಲ್ಲಿ ನದಿಯಿತ್ತು ಎಂಬ ಕುರುಹನ್ನೇ ಬಿಡದಂತೆ ನದೀಪಾತ್ರವನ್ನು ಒತ್ತುವರಿ ಮಾಡಿ ಬೆಳೆಸಿದ ಗದ್ದೆಗಳ ಮೇಲೆ ಹರಿದು, ಸ್ವಲ್ಪ ಹೊತ್ತು ನಿಂತಿದ್ದು ನಂತರ ಹರಿಯುವಿಕೆಯನ್ನು ಮುಂದುವರಿಸುತ್ತಿದ್ದಳು ಅಕ್ಕಿಹೊಳೆ. ಮುಂಚೆಯೆಲ್ಲಾ ಮಳೆಗಾಲದ ಹಲವು ದಿನ ದೂರದೂರದ ಗದ್ದೆಗಳ ಮೇಲೂ ಅಕ್ಕಿಹೊಳೆ ನಿಂತಿರುತ್ತಿದ್ದಳಂತೆ. ಆಕೆಯ ರಭಸಕ್ಕೆ ಊರ ಸಂಪರ್ಕಿಸೋ ಸೇತುವೆ ಮುಳುಗಿ , ಗದ್ದೆಯೇರುಗಳೆಲ್ಲಾ ಕೊಚ್ಚಿ ಹೋಗುತ್ತಿದ್ದವಂತೆ. ಅಕ್ಕಿಹೊಳೆ ತುಂಬಿದಳು ಅಂದರೆ ಸಂಪರ್ಕಸೇತುವೇ ಮುಳುಗೋದ್ರಿಂದ ಮಕ್ಕಳಿಗೆಲ್ಲಾ ಖುಷಿಯೋ ಖುಷಿ. ಶಾಲೆಯ ಪಾಠಿ ಚೀಲಗಳನ್ನು ಬದಿಗೆಸೆದು,ಕಂಬಳಿ ಕೊಪ್ಪೆಗಳ ಜಗುಲಿಗಿಟ್ಟು ಇಡೀ ದಿನ ಅಜ್ಜಿ ಜೊತೆ ಆಡುತ್ತಿದ್ದ ಪಗಡೆಯೇನು, ಅಮ್ಮನ ಹಿಂದೆ ಬಿದ್ದು ತಿನ್ನುತ್ತಿದ್ದ ಹಪ್ಪಳ, ಚಿಪ್ಸುಗಳೇನು .. ಆಹಾ ? ಅದೇ ಸ್ವರ್ಗ . ಬಿಟ್ಟರೆ ಹೊರಗೆ ಮಳೆಯಲ್ಲೇ ಆಡಿಬಿಡುತ್ತಿದ್ದರೇನೋ . ಮಳೆ ಸ್ವಲ್ಪ ನಿಂತ ಮೇಲೆ ಮರಗಳಿಂದ ತೊಟ್ಟಿಕ್ಕೋ ಹನಿಗಳ ಜೊತೆ ಆಡೋದೋ ? ಅಪ್ಪನ ಇಂಗುಗುಂಡಿಗಳು ತುಂಬ್ತಾ ಇಲ್ವಾ ನೋಡೋದು ? ಚಿಗುರ್ತಿರೋ ಹುಲ್ಲುಗಳ ನಡುವೆ ರೇಷ್ಮೆ ಹುಳವೇನಾದ್ರೂ ಸಿಗಬಹುದಾ ಎಂಬ ಹಲವು ಆಸೆಗಳ ನಡುವೆ ಬೆಚ್ಚಗೆ ಕಂಬಳಿ ಕೊಪ್ಪೆ ಹೊದೆದು ತುಂಬಿ ಹರಿಯೋ ಅಕ್ಕಿಹೊಳೆಯ ಸೌಂದರ್ಯ ನೋಡೋ ಆಸೆ ಬೇರೆ. ಆದರೇನು ಮಾಡೋದು ? ಅಪ್ಪನ ಕಣ್ಣು ತಪ್ಪಿಸಿ ಹೊರ ಹೊರಟರೂ ಎದುರಿಗೆ ಯಾರಾದ್ರೂ ಸಿಕ್ಕು ಬಯ್ಯಬೇಕೇ ? ಮಾತುಗಳು ಏಟಾಗೋ ಮುಂಚೆ ಒಳಸೇರೋದು ಬುದ್ದಿವಂತಿಕೆ ಅಂತ ಹಿಂದಿನ ಅನುಭವಗಳು ಹೇಳ್ತಿದ್ವು.

ನಿಧಾನವಾಗಿ ಬಾಲ್ಯ ಕರಗಿ ಓದು, ಹೊಟ್ಟೆಪಾಡಿಗಂತ ಮಕ್ಕಳೆಲ್ಲಾ ಪಟ್ಟಣ ಸೇರೋ ಹೊತ್ತಿಗೆ ಅಕ್ಕಿಹೊಳೆಯೂ ಕರಗಿ ಹೋಗಿದ್ದಳು. ಇಂದು ದಿನಗಟ್ಟಲೇ ಗದ್ದೆಗಳ ಮೇಲೆ ತುಂಬಿ ಹರಿಯೋದು, ಸೇತುವೆ ಮುಳುಗೋದು, ಅದಕ್ಕಾಗಿ ಶಾಲೆಗೆ ರಜಾ ಕೊಡೋದು ಎಲ್ಲಾ ನೆನಪು ಪಾತ್ರ. ಎತ್ತಿನ ಹೊಳೆ ಯೋಜನೆ ಎಂದ ಸರ್ಕಾರ, ಶರಾವತಿಯ ಬುಡಕ್ಕೂ ಕೈ ಹಾಕೋಕೆ ಹೋಗಿತ್ತು. ಎಲ್ಲೋ  ಶರಾವತಿಗೆ ಸೇರೋ ಅಕ್ಕಿಹೊಳೆಗೆ ಶರಾವತಿಯೇ ಇಲ್ಲದಿದ್ದರೆ ಏನಾದೀತು ? ಶರಾವತಿಯಂತ ನದಿಗಳಿಂದ ಹಸಿರ ಸಿರಿಗೆ ಮತ್ತು ವಾತಾವರಣಕ್ಕೆ ಸಿಕ್ಕ ನೀರಿನಂಶನಿಂದ ಕೆಲದಿನಗಳಾದರೂ ಜೀವಂತವಿರೋ ಅಕ್ಕಿಹೊಳೆಯಂತ ತೊರೆಗಳ ಕತೆ ಈ ಮಂಗಾಟಗಳಿಂದ ಏನಾಗಬಹುದು ಎಂಬ ಚಿಂತೆ ಪ್ರಭುವಿಗೆ ದಿನೇ ದಿನೇ ಕಾಡುತ್ತಿತ್ತು.  ಹೆಚ್ಚುತ್ತಿರೋ ಭೂತಾಪ ಮತ್ತು ಜನರ ದುರಾಸೆಗಳಿಂದ ವರ್ಷದ ಕೆಲ ದಿನಗಳಲ್ಲಿ ಮಾತ್ರ ಬದುಕಿರೋ ಅಕ್ಕಿಹೊಳೆಯಂತಹ ಜೀವ ತೊರೆಗಳು ಮುಂದೆ ಶಾಶ್ವತವಾಗಿ ಬತ್ತಿ ಹೋಗಬಹುದೇನೋ ಎಂಬ ದಿಗಿಲೂ ಶುರುವಾಯ್ತು.

ಆಫೀಸು, ಟ್ರಾಫಿಕ್ಕು, ಡೆಡ್ಲೈನುಗಳೆಂಬ ಚಿಂತೆಗಳಲ್ಲೇ ರಾತ್ರಿಯಾಗಿ , ಬೆಳಗಾದರೆ ಕ್ಲೈಂಟು, ಬಾಸು ಯಾವ ವಿಷಯಕ್ಕೆ ಬೈತಾರೋ ಎಂಬ ಭಯಗಳಲ್ಲೇ ಬೆಳಗಾಗುತ್ತಿತ್ತು ಪ್ರಭುವಿಗೆ. ಬೆಳಗಾದರೆ ಶುರುವಾಗೋ ಕೆಲಸಗಳ ಲೆಕ್ಕ ವಾರಾಂತ್ಯ ಬಂದರೂ ಚುಕ್ತವಾಗುತ್ತಿರಲಿಲ್ಲ. ಇಂತಹದರಲ್ಲಿ ಬಂದ ಅಮ್ಮನ ಕರೆ ಪ್ರಭುವನ್ನ ಬಡಿದೆಬ್ಬಿಸಿತ್ತು. ಇಲ್ಲಿರೋದು ಸುಮ್ಮನೇ, ಅಲ್ಲಿರೋದು ನಮ್ಮನೆ ಅಂತ ಬಂದ ವಾರಾಂತ್ಯದಲ್ಲಿ ಮನೆಗೆ ಹೋಗೋ ಕನಸು ಕಾಣಹತ್ತಿದ.

ಮನೆಗೆ ಹೋಗೋಕೆ ರೈಲು ಬುಕಿಂಗ್ ಸಿಕ್ಕೋಲ್ಲ. ತತ್ಕಾಲಲ್ಲಿ ಬುಕ್ ಮಾಡ್ಕೋಳ್ಳೋಕೆ ಅದೇ ಸಮಯದಲ್ಲಿ ದಿನಾ ಮೀಟಿಂಗ್ ಇರುತ್ತೆ. ಪ್ರೈವೇಟ್ ಬಸ್ಸಿಗೆ ಹೋಗೋಣ ಅಂದ್ಕೊಂಡ್ರೆ ಅವ್ರು ಹೇಳಿದ ಸಮಯಕ್ಕೆ ಹೊರಡೋಲ್ಲ, ಕಾಯಿಸಿ ಕಾಯಿಸಿ ಜೀವ ತಿಂತಾರೆ. ಸರ್ಕಾರಿ ಬಸ್ಸಿಗೆ ಹೋಗೋಣ ಅಂದ್ಕೊಂಡ್ರೆ ಮೆಜೆಸ್ಟಿಕ್ವರೆಗೆ ಹೋಗೋದೇ ಸಮಸ್ಸೆ. ಬೈಕಲ್ಲಾದರೂ ಹೋಗೋಣ ಅಂದ್ರೆ ಅಷ್ಟು ದೂರ ಯಾರಾದ್ರೂ ಹೋಗ್ತಾರೆ ಅನಿಸುತ್ತೆ. ಸರಿ ರೈಲಿಗೆ ಹೋಗೋಣ ಆರಾಮಾಗಿ ಅಂದರೆ... ಅಂತ ಎಂದೂ ಮುಗಿಯದ ಗೊಂದಲ ವರ್ತುಲಕ್ಕೆ ಬೀಳ್ತಿದ್ದ ಮನಸ್ಸಿಗೆ ಹೆಂಗೋ ಸಮಾಧಾನ ಮಾಡಿ ಸಿಕ್ಕಿದ ಬಸ್ಸಿಗೆ ಹೆಂಗೋ ಹೊರಟರಾಯ್ತು ಅಂತ ಮೆಜೆಸ್ಟಿಕ್ಕಿಗೆ ಹೊರಟಿದ್ದ. ಅಲ್ಲಿಗೆ ಬರೋ ಹೊತ್ತಿಗೆ ಊರ ಕೆಂಪ ಬಸ್ಸೇ ಸಿಗಬೇಕೇ ? ಹೊರಡೋದು ೨೦ ನಿಮಿಷ ಆಗುತ್ತೆ ಅಂದರೂ ಪರವಾಗಿಲ್ಲವೆಂದು ಹತ್ತಿ ಟಿಕೇಟು ಮಾಡಿಸಿದವಗೆ ಸೀಟಲ್ಲಿ ಒರಗಿದ್ದೊಂದೇ ಗೊತ್ತು.

ಅದೆಷ್ಟು ಹೊತ್ತು ಹಾಗೇ ಮಲಗಿದ್ದನೋ ಗೊತ್ತಿಲ್ಲ. ಯಾಕೋ ಕಾಲು, ಮೈಯೆಲ್ಲಾ ಒದ್ದೆಯಾದಂತೆನಿಸಿ ಕಣ್ಣು ಬಿಟ್ಟರೆ ಎಲ್ಲೋ ಗಟ್ಟಿ ವಸ್ತುವೊಂದರ ಮೇಲೆ ಮಲಗಿದ್ದ ಪ್ರಭು! ಕೈಕಾಲುಗಳಿಗೆ ತಾಕುತ್ತಾ ಹರಿಯುತ್ತಿದೆ ನೀರು !  ಹಿಂದಿನ ರಾತ್ರಿ ಬಸ್ಸು ಹತ್ತಿದ್ದೆನಲ್ಲಾ , ಈಗ ಇಲ್ಲಿಗೆ ಹೇಗೆ ಬಂದೆ ಅಂತ ಒಮ್ಮೆ ಯೋಚಿಸಿದನಾದರೂ ಏನೂ ನೆನಪಾಗುತ್ತಿಲ್ಲ. ತಾನು ಎಲ್ಲಿದ್ದೇನೆ,ಎಂತ ಕತೆ ಎಂದು ನೋಡೋಣವೆಂದರೆ ಸುತ್ತಲು ಕತ್ತಲಷ್ಟೆ. ಅತ್ತಲಿತ್ತ , ಎಲ್ಲೆಡೆಗೂ ನೀರೇ ನೀರು. ಮೇಲ್ಗಡೆ ಕಣ್ಣು ಹಾಯಿಸಿದರೆ ಸಗಣಿ ಹಾಕಿ ಸಾರಿಸಿದ ಕರಿಯಂಗಳದ ಮೇಲೆ ರಂಗೋಲಿಗೆ ಚುಕ್ಕಿಯಿಟ್ಟಂತೆ ತಾರೆಗಳು.ಮಧ್ಯದಲ್ಲೆಲ್ಲೋ ರಂಗೋಲಿ ಬಟ್ಟಲಿಟ್ಟಂತೆ ಚಂದ್ರ. ಆಗಾಗ ವಟರುಗುಟ್ಟೋ ಕಪ್ಪೆ ಮತ್ತು ಜೀಂಕರಿಸೋ ಜೀರುಂಡೆಗಳ ಸದ್ದು, ಹರಿಯೋ ನೀರಿನ ಸದ್ದು ಬಿಟ್ಟರೆ ಬೇರೇನೋ ಕೇಳದ ನೀರವ ರಾತ್ರಿ. ಅತ್ತ ಇತ್ತ ದಿಟ್ಟಿಸುತ್ತಿದ್ದ ಪ್ರಭುವಿಗೆ ಆ ಇರುಳ ಚಂದ್ರನ ಬೆಳಕಲ್ಲಿ ತಾನು ಮಲಗಿರೋದು ನೀರ ಮಧ್ಯದ ಬಂಡೆಯ ಮೇಲೆ ಅಂತ ತಿಳಿಯಹತ್ತಿತು. ಆದರೆ ಅಲ್ಲಿಂದ ದಡಕ್ಕೆ ಹೋಗೋಣ ಎಂದರೆ  ರಾತ್ರಿಯ ಮಂಜಲ್ಲಿ, ಮಸುಕು ಬೆಳಕಲ್ಲಿ ಹತ್ತಿರದಲ್ಲೇನೂ ದಡ ಕಾಣಿಸುತ್ತಿಲ್ಲ. ಕೈಕಾಲುಗಳನ್ನ ನೀರಿಂದ ಸ್ವಲ್ಪ ಕೆಳಗೆ ಹಾಕಿ ನೋಡಿದರೂ ಯಾವ ನೆಲವೂ ಸಿಗುತ್ತಿಲ್ಲ ! ಅಲ್ಪ ಸ್ವಲ್ಪ ಈಜು ಬಂದರೂ ಎತ್ತಲಂತ ಈಜೋದು ಗೊತ್ತು ಗುರಿಯಿಲ್ಲದೇ ? ಕೈಕಾಲುಗಳಷ್ಟೇ ಅಲ್ಲ, ತಲೆ, ಮೈಯೂ ಒದ್ದೆಯಾಗಿದೆ ಅಂತ ಗೊತ್ತಾದರೂ ಏನೂ ಮಾಡಲಾಗದ ಪರಿಸ್ಥಿತಿ. ಒಂದೆಡೆ ಮಂಜ ತಂಪು. ಮತ್ತೊಂದೆಡೆ ಹರಿವ ನೀರು ನೆನೆಸಿದ ತಂಪು. ಎರಡೂ ಸಾಲದೆಂಬಂತೆ ಇನ್ನಷ್ಟು ಚಳಿ ಹುಟ್ಟಿಸುವಂತಿರುವ ಬಂಡೆ ಬೇರೆ ! ಆದರೆ ಆ ಬಂಡೆ ಬಿಟ್ಟಿಳಿದರೂ ಎಲ್ಲಿಳಿಯೋದು ? ಹೋದರೂ ಎಲ್ಲಿಗೆ ಹೋಗೋದು ? ಬೆಳಕಾಗೋವರೆಗೆ ಕಾಯೋಣವೆಂದರೂ ಇನ್ನೆಷ್ಟು ಹೊತ್ತು ಕಾಯೋದು ? ಒಮ್ಮೆ ಟೈಟಾನಿಕ್ ಸಿನಿಮಾ ನೆನಪಿಗೆ ಬಂತು ಪ್ರಭುಗೆ. ಹಿಮಬಂಡೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿ ನಾಯಕ ನಾಯಕಿಗೋಸ್ಕರ ಚಳಿಯ ನೀರಿನಲ್ಲೇ ರಾತ್ರಿಯವರೆಗೂ ಕಳೆಯುತ್ತಾ ಸಾಯೋದು ನೆನಸಿ ತನಗೂ ಅದೇ ಕತೆ ಬರುತ್ತಾ ಅಂತನಿಸ್ತು. ಆ ಆಲೋಚನೆಯೇ ಗಾಬರಿ ಹುಟ್ಟಿಸಿದ್ರೂ ಮರು ಕ್ಷಣದಲ್ಲೇ ನನಗೆಲ್ಲಿಯ ಹುಡುಗಿ, ನಾ ನೀರ ಕೆಳಗೆಲ್ಲಿದ್ದೇನೆ? ಇರೋದು ಬಂಡೆಯ ಮೇಲಲ್ವಾ ? ಬೆಳಗೊರಿಗೆ ಕಾದರೆ ನನ್ನ ಕೈಕಾಲು ಮರಗಟ್ಟಿದ್ರೂ ಸಾವೇನೂ ಬರೋಲ್ಲ ಅನ್ನೋ ಭರವಸೆ ಮೂಡಿತು !  ಆದ್ರೂ ಕೈಕಾಲು ಮರಗಟ್ಟೋದು ಅಂದ್ರೆ .. ? ಮೇರು ಅನ್ನೋ ಡಾಕ್ಯುಮೆಂಟರಿ ಚಿತ್ರ ನೋಡುತ್ತಾ ಅದರಲ್ಲಿ ಹಿಮಾಲಯದ ಮೇರು ಅನ್ನೋ ದುರ್ಗಮ ಪರ್ವತ ಏರೋಕೆ ಹೋಗಿ ಹಿಮಪಾತಕ್ಕೆ ಸಿಲುಕಿ ಕೈಕಾಳು ಮರಗಟ್ಟೋ ಸ್ಥಿತಿಯಲ್ಲಿ ಸ್ನೇಹಿತರು ಸಿಕ್ಕಿ ಹಾಕಿಕೊಳ್ಳೋದು, ನಂತರ ದೈವ ದಯದಿಂದ ಬೇರೊಂದು ಚಾರಣಿಗರ ಸಹಾಯದಿಂದ ಅವರು ಬದುಕಿ ಬರೋದು ನೆನಪಾಗುತ್ತೆ ! ತನಗೂ ಅಂತಹ ಸ್ಥಿತಿ .. ? ಛೆ. ಛೆ. ಹಾಗೇನೂ ಆಗಲಾರದು ಎಂಬ ಸಮಾಧಾನ ಮರುಕ್ಷಣ.. ತುಸು ಹೊತ್ತಿಗೆ ಅಲ್ಲಿ ಹಾರಿಹೋಗೋ ಬಾವಲಿಗಳ ಹಿಂಡು ಕಂಡು ಮತ್ತೇನೋ ಆಲೋಚನೆ.. ಅಲ್ಲಿದ್ದ ಪರಿಸ್ಥಿತಿಗಳಿಗಿಂತ ತನ್ನ ಆಲೋಚನಾಲಹರಿಯೇ ತನ್ನ ಜಾಸ್ತಿ ಕಾಡುತ್ತಾ ಇದೆಯಾ ಅನ್ನೋ ಅನುಮಾನ ಶುರುವಾಯ್ತು ಪ್ರಭುವಿಗೆ.

ಯಾವುದೋ ಚಾರಣಕ್ಕೆ ಬಂದ ಸಂದರ್ಭದಲ್ಲಾದರೆ ಈ ತರಹ ಸಿಕ್ಕ ಜಾಗವನ್ನ ಆಸ್ವಾದಿಸುತ್ತಾ ರಾತ್ರಿಯೆಲ್ಲಾ ಅಲ್ಲಿಯೇ ಕಳೆದು ಬಿಡುತ್ತಿದ್ದನೇನೋ  ಪ್ರಭು. ಆದರೆ ಈಗ ತಾನೆಲ್ಲಿದ್ದೇನೆ , ಹೇಗೆ ಬಂದೆ ಎಂಬುದೇನೂ ಅರಿಯದ ಗೊಂದಲದಲ್ಲಿ ಅವ್ಯಕ್ತ ಭಯ ಕಾಡೋಕೆ ಶುರುವಾಗಿತ್ತು ಪ್ರಭುವಿಗೆ. ಮೊದಲು ಚೆಂದವೆನಿಸಿದ್ದ ಶಶಿಯ ಬಳಗವೇ ಈಗ ಬೇಸರವೆನಿಸಿತ್ತು. ಈ ತಾರೆಯೇಕೆ ಇಷ್ಟು ಮಿನುಗುತ್ತೆ ? ಈ ಚಂದ್ರನೇಕೆ ಮೋಡದ ಮರೆಗೆ ಹೋಗಿ ನನಗೆ ಮಲಗೋಕೆ ಬಿಡೋಲ್ಲ. ಇನ್ನೇನು ನಿದ್ರೆ ಹತ್ತಿತು ಅನ್ನೋ ಹೊತ್ತಿಗೆ ಈ ಉಲ್ಕೆಯೇಕೆ ಮೈಮೇಲೇ ಬೀಳುವಂತೆ ಬಂದು ಬೀಳುತ್ತೆ ? ಈ ಬಾವಲಿ ಹಿಂಡು ಈಗಲೇ ಹಾರಬೇಕಾ ಅನಿಸತೊಡಗಿತ್ತು. ಆದರೆ ಈ ಪ್ರಶ್ನೋತ್ತರಗಳ ನಡುವೆ ತನ್ನೂರ ಅಕ್ಕಿಹೊಳೆ ನೆನಪಾಗಿ ಕೊಂಚ ಹಿತವೆನಿಸತೊಡಗಿತು. ಅಕ್ಕಿಹೊಳೆಯಲ್ಲಿ ನೀರಿಳಿಯುತ್ತಿದ್ದ ಬೇಸಿಗೆಯಲ್ಲಿ ಅದರಲ್ಲಿ ಈಜುತ್ತಿದ್ದುದು , ನೀರು ಕಮ್ಮಿ ಅಂದುಕೊಂಡು ಕಾಲಿಟ್ಟಲ್ಲಿ ಕಾಲು ಹುಗಿದು ಮುಳುಗೋಗಾಕಿ ಈಜಿದ್ದು, ನೀರು ಹೆಚ್ಚಿರಬಹುದು ಅಂತ ಈಜೋಕೆ ಹೋಗಿ ಕೈಯನ್ನು ಬಂಡೆಗೆ ಹೊಡೆಸಿಕೊಂಡಿದ್ದು ನೆನಪಾಗಿ ನಗು ಬರುತ್ತಿತ್ತು. ಅಕ್ಕಿಹೊಳೆಯಲ್ಲಿ ಈಗ ಸ್ವಚ್ಛ ಬಿಳಿ ನೀರಿರಬಹುದೇ ಅಥವಾ ಮೊದಲ ಮಳೆಯ ಕೆಂಪಿರಬಹುದೇ ಅನ್ನೋ ಕುತೂಹಲ. ಅದನ್ನೆಲ್ಲಾ ಕೇಳಲೇ ಇಲ್ಲವಲ್ಲ ಅಮ್ಮನ ಹತ್ತಿರ ಛೇ ಅನ್ನಿಸ್ತು! ನಗರದಲ್ಲಿ ಪ್ರತಿಭಟನೆ ಮಾಡಿದ್ರಂತೆ, ಶಿವಮೊಗ್ಗ ಬಂದಂತೆ ನಾಳೆ ಶರಾವತಿಯ ಪ್ರತಿಭಟನೆಗೆ ಅಂತ ನೆನಪಿಗೆ ಬಂತು. ಇಲ್ಲೆಲ್ಲೋ ನೀರ ಮಧ್ಯ ಮಲಗಿಕೊಂಡ್ರೂ ಅಕ್ಕಿಹೊಳೆ ನೆನಪಾಗ್ತಿದೆಯಲ್ಲೋ ನಿನಗೆ ಹುಚ್ಚಪ್ಪಾ ಅಂತ ಒಂದು ಮನಸ್ಸು ಲೇವಡಿಯಾಡಿದ್ರೂ ಸದ್ಯದ ಪರಿಸ್ಥಿತಿಯ ತೊಂದರೆಗಳ ಬಗೆಗಿನ ಯೋಚನೆಗಳಿಗಿಂತ ಅಕ್ಕಿಹೊಳೆಯ ನೆನಪುಗಳೇ ಮಧುರ ಅನ್ನಿಸಿ ಮನಸ್ಸನ್ನು ಮತ್ತೆ ಅತ್ತಲೇ ಹೊರಳಿಸಿದ ಪ್ರಭು. ಮತ್ತೆ ನಿದ್ದೆ ಹತ್ತಿತು ಅಂತ ಕಾಣಿಸುತ್ತೆ.

ಅದೆಷ್ಟೋ ಹೊತ್ತಾದ ನಂತರ ಎಲ್ಲೋ ಸ್ವಲ್ಪ ಬೆಳಕು ಕಂಡಂತೆ ಆಯ್ತು. ಅಂತೂ ಬೆಳಕಾಯ್ತಾ ಅಂತ ಕಣ್ಣು ಬಿಡೋ ಪ್ರಯತ್ನದಲ್ಲಿರುವಾಗ ಅಂಬಿಗನೊಬ್ಬ ತನ್ನ ತೆಪ್ಪದಲ್ಲಿ ನಿಂತು ತನ್ನತ್ತ ಕೈ ಮಾಡಿ ತನಗೆ ಏನೋ ಹೇಳುತ್ತಿರುವಂತೆ ಭಾಸವಾಯ್ತು. ಕ್ರಮೇಣ ಆ ಅಂಬಿಗನ ಆಕೃತಿ ಹತ್ತಿರವಾಗ್ತಾ ಬಂದ್ರೂ ಆತ ಏನು ಹೇಳ್ತಿದ್ದಾನೆ ಅನ್ನೋದು ಸ್ವಷ್ಟವಾಗ್ತಿರಲಿಲ್ಲ. ಅಂತೂ ನನ್ನ ಸಹಾಯಕ್ಕೆ ಬಂದ್ರಾ ಥ್ಯಾಂಕ್ಸ್ ಅಂತ ತಾನೇ ಮೊದಲು ಮಾತಿಗೆ ಶುರು ಮಾಡಿದ ಪ್ರಭು, ಥ್ಯಾಂಕ್ಸಾ ಅಂದ ಅಂಬಿಗ. ಏನಪ್ಪಾ ಅಂತ ಮತ್ತೆ ಕಣ್ಣು ಮಿಟಿಕಿಸೋವಷ್ಟರಲ್ಲಿ  ಥ್ಯಾಂಕ್ಸ್ ಏನು ಸಾರ್ ? ಇದೇ ಕೊನೆ ಸ್ಟಾಪು ಏಳಿ. ಬಸ್ಸಲ್ಲಿರೋರೆಲ್ಲಾ ಇಳ್ದಾಯ್ತು. ನಿಮ್ಮನ್ನಿಳಿಸಿ , ಬಸ್ಸನ್ನ ಡಿಪೋಗೆ ಹಾಕಿ ನಾವೂ ಮಲ್ಕೋಬೇಕು , ಏಳೇಳಿ ಬೇಗ ಅಂದ ಎದುರಿದ್ದವ. ಡಿಪೋನ ಅನ್ನೋ ಹೊತ್ತಿಗೆ ಕಣ್ಣ ಮುಂದಿದ್ದ ಅಂಬಿಗನ ಚಿತ್ರಣ ಬದಲಾಗುತ್ತಾ ಆತ ಖಾಕಿ ಬಣ್ಣ ಧರಿಸಿದ್ದ ಹಿಂದಿನ ರಾತ್ರಿ ಟಿಕೇಟ್ ಕೊಟ್ಟ ಕಂಡೆಕ್ಟರ್ ಆಗಬೇಕೇ ? ! ಎಲ್ಲಿ ಅಂಬಿಗ, ಎಲ್ಲಿ ಕಂಡೆಕ್ಟರ್ ಅಂತ ಅಂದ್ಕೊಳ್ಳೋ ಹೊತ್ತಿಗೆ, ಸಾರ್, ಏಳಿ ಬೇಗ ಅಂತ ಕೈಹಿಡಿದು ಎಬ್ಬಿಸೋಕೆ ಬಂದನವ. ಬಂದವನೇ ಒದ್ದೆಯಾಗಿದ್ದ ಸೀಟು, ಸ್ವಲ್ಪ ಒದ್ದೆಯಾಗಿದ್ದ ಬಲತೋಳು ನೋಡಿ, ಸಾರ್ ನಿಮಗೆ ಇನ್ನೂ ನಿದ್ದೆಗಣ್ಣು ಅನಿಸುತ್ತೆ. ನಿದ್ದೆ ಭರದಲ್ಲಿ  ನಿನ್ನೆಯ ಮಳೆಗೆ ಕಿಟಕಿ ಸ್ವಲ್ಪ ತೆರೆದು ಒಳಗೆ ನೀರು ನುಗ್ಗಿದ್ದೂ ಗೊತ್ತಿಲ್ಲ, ನಿಮ್ಮ ಮೈ ತೋಳು ಒದ್ದೆಯಾಗಿದ್ದೂ ಗೊತ್ತಿಲ್ಲ. ಒಳ್ಳೆ ನಿದ್ದೆ ನಿಮ್ಮದು ಅಂತಿದ್ರೆ ಡ್ರೈವರು ಹಿಂದೆ ತಿರುಗಿ ಹೆ ಹೆ ಹೆ ಅಂತಿದ್ದ. ಹೌದಾ ಅಂತ ಸುತ್ತ ತಿರುಗಿದ್ರೆ ಪಕ್ಕದಲ್ಲಿದ್ದ ನೀರೂ ಇಲ್ಲ, ಕೆಳಗೆ ಬಂಡೆಯೂ ಇಲ್ಲ. ತಾನಿದ್ದಿದ್ದು ಬಸ್ಸ ಸೀಟ ಮೇಲೇ ಅಂತ ಪ್ರಭುವಿಗೆ ಅರಿವಾಗ್ತಿತ್ತು. ಮೇಲೆ ನೋಡಿದ್ರೆ ಆಕಾಶದ ಬದಲು ಬಸ್ಸ ಟಾಪು ! ಹಂಗಾದ್ರೆ ಇಷ್ಟರವರೆಗೆ ತನಗಾದದ್ದು  ? !! ಮೇಲೆ ಕಣ್ಣು ಹಾಯಿಸುವ ಹೊತ್ತಿಗೆ ಕೈಗೆ ಸಿಕ್ಕ ತನ್ನ ಬ್ಯಾಗು ತೆಗೆದುಕೊಂಡು ಕೆಳಗಿಳಿದ ಪ್ರಭು. ಕೆಂಪಿ ಬಸ್ಸು ಮಂಜ ಸೀಳುತ್ತಾ ಮುನ್ನಡೆದರೂ ಬೆಳಕಾಗದ ಪ್ರಭುವಿನ ಮನಸ್ಸಿನಲ್ಲಿ ಪ್ರಶ್ನೋತ್ತರಗಳ ದೊಂಬರಾಟ ಮುಂದುವರೆದಿತ್ತು ! 
x

Friday, October 26, 2018

Marriage , Reception and Book Release Invitation , ಮದುವೆ, ಆರತಕ್ಷತೆ ಮತ್ತು ಪುಸ್ತಕ ಬಿಡುಗಡೆಯ ಕರೆಯೋಲೆ

Dear Friends, 

As you might be already aware, I am getting married with Akshata on Nov 2nd and here is the wedding invite if you did not get it already . Please consider this as my personal invitation and bless us on the occasion. 

ಆತ್ಮೀಯ ಗೆಳೆಯರೇ, 
ಮುಂಬರುವ ನವೆಂಬರ್ ಎರಡರಂದು ನಾನು ಮತ್ತು ಅಕ್ಷತಾ ಹೊಸ ಬಾಳ ಹಾದಿಯಲ್ಲಿ ಜೊತೆಯಾಗಲಿದ್ದೇವೆ. ಅಂದು ತಾವೆಲ್ಲರೂ ಆಗಮಿಸಿ ನಮ್ಮನ್ನು ಆಶೀರ್ವದಿಸಬೇಕಾಗಿ ಈ ಆತ್ಮೀಯ ಕರೆಯೋಲೆ.. 

Nov 3rd is a special day for me as well as i would be releasing my first book in Kannada by the name "Prashantavana" which is a collection of short stories and followed by the reception in the same venue. Location details are above. Front page of the book is given below. We would also like to invite you for the auspicious day  with a small video


ಮಾರನೆಯ ದಿನ ಅಂದರೆ ನವೆಂಬರ್ ಮೂರರಂದು ನನ್ನ ಕಥಾಸಂಕಲನ "ಪ್ರಶಾಂತವನ" ದ ಲೋಕಾರ್ಪಣೆಯೂ ನಡೆಯಲಿದೆ. ತಾವುಗಳು ಎರಡೂ ಕಾರ್ಯಕ್ರಮಗಳಿಗೆ ಆಗಮಿಸಿ ಅವುಗಳನ್ನು ಚೆಂದಗಾಣಿಸಿಕೊಡಬೇಕಾಗಿ ವಿನಂತಿ .. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಪುಸ್ತಕ ಬಿಡುಗಡೆಗೆ ಬರಲಾಗದಿದ್ದು, ಪ್ರತಿಗಳ ಕೊಳ್ಳುವ ಆಸೆಯಿದ್ದಲ್ಲಿ  ಕೆಳಗಿನ ಮಿಂಚೆಗೆ ನಿಮ್ಮ ವಿಳಾಸವನ್ನು ಕಳುಹಿಸಿ. ಪುಸ್ತಕದ ಮುಖಪುಟ ಕೆಳಗಿದೆ ಮತ್ತು ಕರೆಯೋಲೆಯ ವೀಡಿಯೋ ಕೊಂಡಿ ಇಲ್ಲಿದೆ
prashasti.p@gmail.com 

ಇಂತಿ,
ತಮ್ಮ ವಿಶ್ವಾಸಿ/ Regards
ಪ್ರಶಸ್ತಿ/Prashasti

Saturday, January 7, 2017

ನೂರ್ನಳ್ಳೀಲಿ ಅವ-೬

(ಹಿಂದಿನ ಭಾಗ:)
ಅಲ್ಪಚಂದ್ರನನ್ನು ಮುಚ್ಚೋಕೆ ಹೊರಟಿದ್ದ ಮೋಡಗಳೂ ಉಳಿದ ಹಳ್ಳಿಗರಂತೆ ತಮ್ಮ ಕೆಲಸ ಮರೆತು ಮೇಷ್ಟ್ರ ಮಾತನ್ನು ಕೇಳ್ತಾ ಕೂತಿದ್ದರಿಂದ ನೂರ್ನಳ್ಳಿಯ ಭವಿಷ್ಯದ ಮೇಲಿದ್ದ ಕಾರ್ಮೋಡ ಕೊನೆಗೂ ಸರಿಯೋಕೆ ಶುರುವಾಯ್ತಾ ಅನ್ನುವಂತೆ ಕೃಷ್ಣಪಕ್ಷದ ಕಗ್ಗತ್ತಲ ರಾತ್ರಿಯಲ್ಲೂ ಒಂಚೂರು ಬೆಳದಿಂಗಳಿತ್ತು. ಎಲ್ಲೋ ಒಂದೆರಡು ಬಾವಲಿಗಳು ಅತ್ತಿಂದಿತ್ತ ಹಾರಾಡ್ತಿದ್ದಿದ್ದು ಬಿಟ್ರೆ ಊರಲ್ಯಾರ ಸಂಚಾರವೂ ಇಲ್ಲ. ಬಂದಿದ್ರೂ ಹೋಗಿದ್ರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳೋ ಮೂಡಲ್ಲೂ ಯಾರೂ ಇಲ್ಲ. ಎಲ್ಲರ ಗಮನವೀಗ ಚಂದ್ರೇ ಮೇಷ್ಟರ ಮಾತಿನ ಮೇಲೇ.

ಗೌಡ್ರೆ , ನಾನೆಷ್ಟೇ ಬೇಡ ಅಂದ್ಕೊಂಡ್ರೂ ಒಂದು ಸತ್ಯನ ಹೇಳಲೇಬೇಕಾಗಿದೆ. ದಯವಿಟ್ಟು ತಡೀಬೇಡಿ ನನ್ನನ್ನಿಂದು ಅಂತ ಹೇಳ್ತಾ ಇದ್ರೆ ಗೌಡ್ರಿನ್ನ ಸೇರಿಸಿ ಊರವರೆಲ್ಲರ ಕಣ್ಣುಗಳು ಇನ್ನೂ ಆಶ್ಚರ್ಯ, ಗಾಬರಿಗಳಿಂದ ಮೇಷ್ಟರತ್ತ ನೋಡ್ತಿದ್ವು. ಮೇಷ್ಟರೇ, ನೀವು ಈ ಊರಿಗೆ ಬಂದಾಗಿಂದ ಯಾವತ್ತೂ ಈ ರೀತಿ ಬೇಡಿಕೊಂಡಿದ್ದು ನೋಡಿಲ್ಲ. ಆದರೂ ಈ ರೀತಿ ಕೇಳ್ತಿದ್ದೀರ ಅಂದ್ರೆ ಆ ವಿಷಯ ಏನೋ ಮಹತ್ವದ್ದೇ ಆಗಿರಬೇಕು. ಅದೇನೇ ಇರ್ಲಿ, ಯಾವುದೇ ಭಯವಿಲ್ಲದೇ ಹೇಳಿ ಮೇಷ್ಟರೇ. ಅದು ಈಗಿನ ಸಂದರ್ಭಕ್ಕೆ, ಊರಿಗೆ ಸಂಬಂಧಿಸಿದ್ದಾದರೆ ಅದಕ್ಕೆ ನನ್ನ ಅಭಿಪ್ರಾಯ ಕೇಳೋ ಯಾವ ಅವಶ್ಯಕತೆಯೂ ಇಲ್ಲ. ದಯವಿಟ್ಟು ಮುಂದುವರೆಸಿ ಅಂದ್ರು ಗೌಡ್ರು. ಆದರೆ ಅದು ನಂಬೋ ಶಿಖರದ ವಿಷಯ, ನಂಬೋ ಶಂಕರ, ಸತ್ಯನಾರಾಯಣ ಪೂಜಾರಿ ಮತ್ತು ದೇವಿಯ ವಿಷಯ, ಶಂಖರ, ಅಂಬಿಕಜ್ಜಿಯ ವಿಷಯ.. ಅನ್ನುತ್ತಿದ್ದಂತೆ ಗೌಡರ ಮುಖದಲ್ಲಿದ್ದ ನಗು ನಿಧಾನವಾಗಿ ಮಾಯವಾಗೋಕೆ ಶುರುವಾಯ್ತು.  ಗೌಡ್ರು ತಮ್ಮ ಕೈ ಮೇಲೆತ್ತೋಕೂ ಮೇಷ್ಟರು ಮಾತು ನಿಲ್ಲಿಸೋಕೂ , ಪಂಚಾಯ್ತೀಲಿ ಕೂತವರೊಬ್ಬರ ಮೊಬೈಲು ರಿಂಗಾಗೋಕೂ ಸರಿಯಾಯ್ತು!

*****
ಯಾರೂ ಇಲ್ಲದೆ ಒಂಟಿಯಾಗಿ ಬಾಳೋ ಬದಲು ಸಾವಾದ್ರೂ ನನ್ನ ಕರೆಸಿಕೊಳ್ಳಬಾರದೇ ಅಂತ ಊರ ಮೂಲೆಯಲ್ಲಿರೋ ಅಂಬಿಕಜ್ಜಿ ಕೊರಗ್ತಿದ್ದ ಮಳೆಗಾಲದ ದಿನವೊಂದರಲ್ಲಿ ಅಚಾನಕ್ಕಾಗಿ ಬಂದಿದ್ದವ ಶಂಖರ. ಮಗಳು ದೇವಿ ಬಾರದೇ ಯಾವ ಕಾಲವಾಗಿದ್ರೂ ಅಳಿಯ ಸತ್ಯನಾರಾಯಣ ಅವಾಗವಾಗ ಬರ್ತಿದ್ದ ಊರಿಗೆ. ಅದೆಂತದೋ ಗಣಿಗಾರಿಕೆಯಂತೆ. ಅದಕ್ಕೆ ಊರ ಗೌಡ್ರು, ತನ್ನ ತಂದೆ ಪೂಜಾರಿಗಳು ಮಸಲತ್ತು ಮಾಡ್ತಿರೋದು, ಅದ್ರಿಂದ ಊರಿಗೆ, ಬಾವಿಹೊಳೆಗೆ ಎಷ್ಟು ಅಪಾಯವಾಗತ್ತೆ ಅಂತ ನಾನು, ದೇವಿ ಎಷ್ಟು ಹೇಳಿದ್ರೂ ಕೇಳದೇ ಇರೋದು ಮುಂತಾದ ವಿಷಯಗಳ ಬಗ್ಗೆ ಮಾತಾಡ್ತಿದ್ದ. ಈ ಬಗ್ಗೆ ಒಮ್ಮೆ ಊರ ಪಂಚಾಯ್ತಿಯಲ್ಲೂ ಮಾತಾಡಿ ಅಲ್ಲಿ ಊರವರೆಲ್ಲರ ಎದ್ರಿಗೆ ಗೌಡರು, ಪೂಜಾರಿಗಳು ಅವಮಾನ ಮಾಡಿದ ಮೇಲೆ ಊರು ಏನು ಹಾಳಾದ್ರೂ ನಾನು ಈ ಕಡೆ ತಲೆ ಹಾಕಲ್ಲ ಅಂತ ಬೇಜಾರು ಮಾಡ್ಕೊಂಡ ದೇವಿ ಇಲ್ಲೀವರೆಗೂ ಊರಿಗೆ ಕಾಲಿಟ್ಟಿಲ್ಲ. ಸಣ್ಣಕ್ಕಿದ್ದಾಗ ಅಪ್ಪನ ಜೊತೆ ಬರ್ತಿದ್ದ ಶಂಖರ ಇಲ್ಲಿದ್ದಷ್ಟು ದಿನಗಳಾದ್ರೂ ಖುಷಿಯಿರ್ತಿತ್ತು. ಅವ್ನಿಗೆ ಮುಂದಿನ ರಜ ಯಾವಾಗ ಸಿಗತ್ತೆ ಅಂತ ಕಾಯ್ತಿರುವ ಹಾಗಾಗ್ತಿತ್ತು. ಆದ್ರೆ ಇದ್ದಕ್ಕಿದ್ದ ಹಾಗೆ ಅಳಿಯ, ಮೊಮ್ಮಗ ಬರೋದೂ ನಿಂತು ಹೋಗಿತ್ತು. ಆಮೇಲೆ ಒಂದೆರಡು ಸಲ ಅಳಿಯನಾದ್ರೂ ಬಂದಿರಬಹುದೇನೋ. ಆದ್ರೆ ಮೊಮ್ಮಗನ ಸುದ್ದಿಯಿಲ್ಲ. ಅವನಿಗೂ ಈ ಅಂಬಿಕಜ್ಜಿ ಬೇಡವಾದಳೇ ಅಂದ್ಕೊಳೊ ಹೊತ್ತಿಗೆ ಶಂಖರನೇ ಪ್ರತ್ಯಕ್ಷನಾಗಿದ್ದ. ಎರಡೇ ರಾತ್ರಿ ಮನೆಗೆ ಬಂದಿದ್ರೂ ಅವನ ಜೊತೆ ಮಾತಾಡಿದ್ದು ಎಷ್ಟು ಖುಷಿ ಕೊಟ್ಟಿತ್ತು. ಅವನೂ ಈ ಗಣಿಗಾರಿಕೆ ಬಗ್ಗೆನೇ ಮಾತಾಡ್ತಿದ್ನಪ. ಅಂದಂಗೆ ನಿನ್ನೆ ರಾತ್ರೆ ಇಂದ ಹೇಳದೇ ಕೇಳದೇ ಎಲ್ಲಿ ಹೋದ ಇವ ಅಂತ ? ಊರ ಕಡೆ ಹೋದ್ರಾದ್ರೂ ಯಾರಿಗಾದ್ರೂ ಕೇಳ್ಬೋದೇನೋ. ಹಂಗೇ ಮಾಡನ. ಇವತ್ತು ಸೋಮವಾರ ಬೇರೆ. ಊರ ದೇವಸ್ಥಾನಕ್ಕಾದ್ರೂ ಹೋಗ್ಬರನ ಅಂತ ಸಂಜೆ ಹೊತ್ತಿಗೆ ಅಂಬಿಕಜ್ಜಿ ಊರ ಗುಡಿಯತ್ರ ಹೊರಟ್ರು.

****

ಬಸಣ್ಣ ಆರಾಮಾಗಿದ್ದಾನಂತೆ. ಗಣಿಗಾರಿಕೆಯ ಕ್ವಾರಿ ಹತ್ರ ಹೋಗ್ತಿದ್ದಾಗ ಅಲ್ಲಿಂದ ಸಿಡಿದ ಕಲ್ಲೊಂದು  ತಲೆಗೆ ಬಿದ್ದಿತ್ತಂತೆ. ಪ್ರಜ್ಞೆ ತಪ್ತಾ ಇದ್ದ ಅವನನ್ನ ನಮ್ಮೂರಿಗೆ ಬಂದ ಹೊಸಬ ಈ ಕಡೆ ಎಳೀಲಿಲ್ಲ ಅಂದಿಂದ್ರೆ ಮೇಲಿಂದ ಬೀಳ್ತಿದ್ದ ಇನ್ನೊಂದಿಷ್ಟು ಕಲ್ಲುಗಳು ಬಿದ್ದು ಜೀವಕ್ಕೇ ಅಪಾಯ ಆಗ್ತಿತ್ತಂತೆ . ದೇವರ ದಯ, ಹೆಚ್ಗೆ ಏನೂ ಅಪಾಯ ಆಗಿಲ್ವಂತೆ ಅಂತ ಬಸಣ್ಣನ ಅಮ್ಮ  ಫೋನ್ ಮಾಡಿದ್ರು ಅಂದ ಆಗಷ್ಟೇ ಫೋನ್ ಬಂದ ಬಸಣ್ಣನ ಪಕ್ಕದ ಮನೆಯವ. ಈ ಗಣಿಗಾರಿಕೆ ತುಂಬಾ ಅಪಾಯನಪ್ಪ.  ಮೊನ್ನೆಯಷ್ಟೇ ಊರ ರಸ್ತೆ ಪಕ್ಕ ಒಂದಿಷ್ಟು ಕಲ್ಲು ಜರಿದು ಬಿದ್ದಿತ್ತು. ಬಾವಿಹೊಳೆ ನೀರು ನೋಡಿದ್ರೆ ರಕ್ತ ನೋಡ್ದಂಗಾಗ್ತದೆ  ಅಂತ ನಮ್ಮ ಮನೆ ಹೆಂಗಸ್ರು ಹೇಳ್ತಿದ್ರು ಅಂದ ಒಬ್ಬ. ಇದು ಸರಿ ಇಲ್ಲ ಅಂತ ನಮ್ಮೂರ ದೇವಿ ಮತ್ತು ಸತ್ಯ ಪೂಜಾರಿಗಳು ಎಷ್ಟು ಹೇಳಿದ್ರು. ಯಾರೂ ಕೇಳಿಲ್ಲ. ಅದ್ಯಾರೋ ಸ್ಟೇ ತಂದಿದ್ರಂತೆ. ಅದಕ್ಕೂ ಕಲ್ಲು ಹಾಕಿದ್ರು ಈ ಗೌಡ್ರು ಮತ್ತು ಪೂಜಾರಿಗಳು. ಈಗ ನೋಡಿ. ಈ ನರ ಮನುಷ್ಯರ ಕೈಲಿ ಏನೂ ಆಗಲ್ಲ ಅಂತ ಊರ ಮಾರಮ್ಮ ದೇವಿನೇ ರೊಚ್ಚಿಗೆದ್ದು ಒಬ್ಬೊಬ್ರನ್ನೇ ಬಲಿ ತೆಗೆದುಕೊಳ್ತಿರ್ಬೇಕು ಅಂದ ಮತ್ತೊಬ್ಬ. ದೇವಮ್ಮನ ಊರ ಪಂಚಾಯ್ತಿ ಮುಂದೆ ಅವಮಾನ ಮಾಡಿ, ಕಣ್ಣೀರು ಹಾಕ್ಸಿ ಅವ್ರು ಊರ್ಕಡೆಗೇ ತಲೆ ಹಾಕಕ್ಕಿಲ್ಲ ಅನ್ನಂಗೆ ಮಾಡಿದ್ರಿ. ಆ ಹೆಣ್ಮಗು ಶಾಪ ತಟ್ದೇ ಬಿಡ್ತದಾ ಅಂದ್ರು ಊರ ಹೆಂಗಸೊಬ್ಬರು. ಅದ್ಕೇ ಊರ ಜಾಫರ್ರು, ಪೂಜಾರಿಗಳು ಮಾಯ ಆಗಿರ್ಬೇಕು. ಅದ್ರಲ್ಲಿರೋ ಉಳಿದೋರು ಅಂದ್ರೆ ಗೌಡ್ರೆ. ಮುಂದೈತೆ ಮಾರಿಹಬ್ಬ ಅಂದ. ಹೇ. ತಡೀರಪ್ಪ. ಬಸಣ್ಣನ ನೋಡೋಕೆ ಅಂತ ಪೂಜಾರಿಗಳು, ಜಾಫರ್ ಸಾಹೇಬ್ರೂ ಬಂದಿದ್ರಂತೆ. ಅವ್ರೆಲ್ಲ ಆ ಹೊಸಬನ ಜೊತೆಗೆ ಊರಿಗೆ ಬರ್ತಿದಾರಂತೆ ಅಂದ. ಓ ಹೌದಾ ? ಅವ್ರೆಲ್ಲ ಸತ್ತೋದ್ರು , ಅದ್ಕೆಲ್ಲ ಆ ಹೊಸಬನೇ ಕಾರಣ ಅಂತ ಸುದ್ದಿ ಹರಡಿಸಿದ್ರಲ್ಲಪ್ಪ ಯಾರೋ. ಅವ್ರು ಬದ್ಕಿದಾರಾ ? ಹೇಳ್ದೇ ಕೇಳ್ದೇ ಮಾಯ ಆಗಿದ್ಯಾಕಂತೆ ಅವ್ರು ಅಂದ ಮಗದೊಬ್ಬ. ಅದ್ನೆಲ್ಲ ಫೋನಲ್ಲಿ ಕೇಳಕ್ಕಾಗಿಲ್ಲ. ನಾಳೆ ಬೆಳಗ್ಗೆ ಅವ್ರೆಲ್ಲ ಊರಿಗೆ ಬರ್ತಾರಂತೆ. ಅವಾಗ್ಲೇ ಮಾತಾಡೋಣ ಅಂದ್ಲು ಅವಳು ಅಂದ ಮೊದಲಿನವ. ಹೂಂ , ಮೇಷ್ಟ್ರು ಆ ಹೊಸಬನ ಬಗ್ಗೆ ಏನೋ ಹೇಳೋಕೆ ಹೊರಟಿದ್ರು. ಅದ್ಕೂ ಬಿಡ್ಲಿಲ್ಲ ಗೌಡ್ರು. ತಾವು ಮಾಡಿದ ಕೆಲಸನೆಲ್ಲ ಅವನ ಮೇಲೆ ಹಾಕಿ, ಊರಿಗೆ ಏನೋ ಒಳ್ಳೇದನ್ನ ಮಾಡೋಕೆ ಬಂದಿರೋನ ಬಗ್ಗೆ ಏನೋನೋ ಸುಳ್ಳು ಸುದ್ದಿ ಹಬ್ಸಿ ಅವ್ನಿಗೆ ಕೆಟ್ಟ ಹೆಸ್ರು ತರೋಕೆ ಹೊರಟಿದ್ದಾರೆ. ಇದಕ್ಕೆಲ್ಲ ನಾವು ಬಿಡಕ್ಕಿಲ್ಲ. ಮೇಷ್ಟ್ರೆ , ಅವ್ನು ಯಾರು, ಇಲ್ಲಿಗೆ ಬಂದಿದ್ಯಾಕೆ ಅಂತ ನೀವು ಹೇಳ್ಲೇ ಬೇಕು ಅಂತಂದ ಒಬ್ಬ. ಹೌದು, ಹೇಳ್ಲೇ ಬೇಕು, ಹೇಳ್ಲೇ ಬೇಕು ಅಂತ ಜನ ಒತ್ತಾಯ ಕೂಗೋಕೆ ಶುರು ಮಾಡಿದ್ರು.

ಸದ್ದು ಸದ್ದು ಅಂತ ಗೌಡ್ರು ಮತ್ತು ಮೇಷ್ಟ್ರು ಎಲ್ರನ್ನೂ ಸಮಾಧಾನ ಮಾಡೋ ಹೊತ್ತಿಗೆ ಮತ್ತೊಂದಿಷ್ಟು ಸಮಯ ಆಯ್ತು. ಸದ್ದು ಕಮ್ಮಿ ಆದ್ಮೇಲೆ ಗೌಡ್ರೇ ಮಾತಿಗೆ ಶುರು ಮಾಡಿದ್ರು. ನೋಡ್ರಪ್ಪ, ಇದ್ರ ಬಗ್ಗೆ ಮಾತಾಡದೇ ನಾನು ನಿಮ್ಮೆಲ್ಲರ ದೃಷ್ಟೀಲಿ ಅಪರಾಧಿ ಆಗ್ತಾ ಇದ್ದೀನಿ. ಆಗೋದೇನು. ನಾನು ಅಪರಾಧಿನೇ ಅಂದ್ರು ಗೌಡ್ರು. ಗೌಡರಿಂದ ಈ ತರದ ಮಾತುಗಳನ್ನ ಯಾವತ್ತೂ ಕೇಳದ ಜನ ಆಶ್ಚರ್ಯದಿಂದ ಅವರ ಮಾತುಗಳನ್ನು ಕೇಳೋಕೆ ಶುರು ಮಾಡಿದ್ರು. ನಿಶ್ಯಬ್ದ ಇನ್ನೂ ಜಾಸ್ತಿ ಆಯ್ತು.  ಇನ್ನು ನಿಮ್ಮಿಂದ ಸತ್ಯ ಮುಚ್ಚಿಟ್ಟು ಯಾವ ಪ್ರಯೋಜನವೂ ಇಲ್ಲ. ನಾ ಹೇಳ್ಬೇಕು ಅಂತಿದ್ದನ್ನ ನನ್ಜೊತೆನೇ ಇಟ್ಕೊಂಡು ಸಾಯಕ್ಕಿಂತ ನಿಮ್ಮುಂದೆ ಹೇಳೋದೇ ಮೇಲು ಅನಿಸುತ್ತೆ.ಸತ್ಯ ಯಾವತ್ತಿದ್ರೂ ನಿಮ್ಮುಂದೆ ಬಂದೇ ಬರತ್ತೆ. ಆದ್ರೆ ಊರ ಗೌಡನಾಗಿ ನಾ ಇವತ್ತೂ ನಿಮ್ಮುಂದೆ ಇದ್ರ ಬಗ್ಗೆ ಹೇಳ್ಲಿಲ್ಲ ಅಂದ್ರೆ ನೀವು ನನ್ನ ಮೇಲಿಟ್ಟ ಗೌರವಕ್ಕೆ ದ್ರೋಹ ಮಾಡಿದಂಗಾತ್ತೆ. ನಾ ಹೇಳೋದ್ನೆಲ್ಲ ಹೇಳಿ ಬಿಡ್ತೀನಿ. ಆಮೇಲೆ ಅದಕ್ಕೆ ಯಾವ ಶಿಕ್ಷೆ ಕೊಡ್ಬೇಕು ಅಂತ ನೀವೆಲ್ಲಾ ನಿರ್ಧರಿಸ್ತೀರೋ ಅದನ್ನ ಸ್ವೀಕರಿಸೋಕೆ ನಾನು ಸಿದ್ದ ಅಂದ್ರು ಗೌಡ್ರು. ಜನ ಕೇಳ್ತಾ ಇದ್ರು..ಗಣಿಗಾರಿಕೆ ಅವ್ರು ಏನೋ ಒಂದಿಷ್ಟು ದುಡ್ಡು ಕೊಡ್ತಾರೆ ಅಂತ ಇಲ್ಲಿವರೆಗೆ ಮಣ್ಣು ತಿನ್ನೋ ಕೆಲ್ಸ ಮಾಡ್ತಿದ್ವಿ. ಇದ್ರಿಂದ ನಮ್ಮ ನಂಬೋಶಿಖರದ ಮೇಲೆ, ಬಾವಿಹೊಳೆ ಮೇಲೆ , ಊರಿಗೆ ಊರಿನ ಮೇಲೆ ಕೆಡುಕಾಗತ್ತೆ ಅಂತ ದೇವಿ, ಸತ್ಯ ಪೂಜಾರಿಗಳು ಗಿಳಿಗೆ ಹೇಳ್ದಂಗೆ ಹೇಳಿದ್ರೂ ಕೇಳ್ಲಿಲ್ಲ. ಗಣಿಗಾರಿಕೆಗೆ ಸಹಾಯ ಆಗ್ಲಿ ಅಂತ ಪೂಜಾರಿಗಳ ಜೊತೆ ಸೇರಿ ಮಾರಮ್ಮನ ದೇವಸ್ಥಾನನೇ ಸ್ಥಳಾಂತರ ಮಾಡಿದ್ವಿ. ಅದ್ಯಾರೋ ಶಂಕರ ಅನ್ನೋರು ಇದಕ್ಕೆ ಸ್ಟೇ ತರೋಕೆ ಪ್ರಯತ್ನ ಮಾಡಿದ್ರಂತೆ ಅನ್ನೋ ಹೊತ್ತಿಗೆ "ಅದ್ಯಾರೋ ಶಂಕರ ಅಲ್ಲ. ನನ್ನ ಮೊಮ್ಮಗ ಶಂಕರ" ಅನ್ನೋ ಧ್ವನಿ ಹಿಂದಿಂದ ಕೇಳಿ ಬಂತು. ತಿರುಗಿ ನೋಡಿದ್ರೆ ಅಂಬಿಕಜ್ಜಿ ! ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ದೇವಸ್ಥಾನಕ್ಕೆ ಅಂತ ಬಂದೋರು ಇಲ್ಲಿ ನಡೀತಿದ್ದ ಸಭೆ ನೋಡಿ ಇಲ್ಲಿಗೆ ಬಂದಿದ್ರು. ಹೂಂ. ನನ್ನ ಮೊಮ್ಮಗ ಶಂಕರನೇ ಅನಿಸುತ್ತೆ ಹಿಂದಿನ ಸಲ ಸ್ಟೇ ತರೋಕೆ ಪ್ರಯತ್ನ ಮಾಡಿದ್ದು. ಊರ ಜನರಿಗೆ ಮಸಲತ್ತು ಮಾಡಿ, ಊರಿಗೆ ಗಣಿಗಾರಿಕೆಯಿಂದ ಯಾವ ನಷ್ಟವೂ ಇಲ್ಲ. ಅದಕ್ಕೆ ನಮ್ಮ ಒಪ್ಪಿಗೆ ಇದೆ ಅಂತ ಸಹಿ ಹಾಕಿಸಿದ್ರಲ್ಲ ಗೌಡ್ರೆ ಅಂದ್ರು ಅಂಬಿಕಜ್ಜಿ. ನಾವು ಆ ತರದ ಪತ್ರಕ್ಕೆ ಸಹಿ ಹಾಕಿಲ್ವಲ್ಲ ಅಂದ್ರು ಕೆಲೋರು. ಗೌಡ್ರು ಕೊಟ್ಟ ಪತ್ರ ಅಂತ ಕಣ್ಣು ಮುಚ್ಕೊಂಡು ಸಹಿ ಹಾಕಿದ್ರಲ್ಲಪ್ಪ. ಅದ್ರಲ್ಲೇನಿದೆ ಅಂತ ಓದಿ ಓದಿ ಅಂತ ಎಷ್ಟು ಬಡ್ಕೊಂಡ್ವಿ. ನಾವೆಂತೂ ಹೆಬ್ಬೆಟ್ಟು. ನೀವೆಲ್ಲಾ ಓದಿದ್ರೂ ಹೆಬ್ಬೆಟ್ಟುಗಳಾದ್ರಲ್ಲೋ ಅಂದ್ರು ಅಲ್ಲೇ ಕೂತಿದ್ದ ಹೆಂಗಸೊಬ್ಬರು. ಗೌಡರ ಮೋಸಗಳು ಒಂದೊಂದೇ ಹೊರಗೆ ಬರ್ತಿದ್ದ ಹಾಗೆ ಜನರಿಗೆ ಗೌಡರ ಮೇಲಿನ ಗೌರವಗಳು ಇಳಿದು ಹೋಗಿ ಯದ್ವಾತದ್ವಾ ಸಿಟ್ಟು ಬರತೊಡಗಿತು. ತಲೆಗೊಂದೊಂದು ಧಿಕ್ಕಾರದ ಘೋಷಣೆಗಳನ್ನ ಕೂಗತೊಡಗಿದರು.

ಈಗ ಜನರನ್ನ ಸಮಾಧಾನ ಪಡಿಸೋ ಸರದಿ ಮೇಷ್ಟ್ರುದ್ದಾಗಿತ್ತು. ಗೌಡರು ಏನೂ ಹೇಳಲಾಗದೇ ಅಪರಾಧಿ ಪ್ರಜ್ಞೆಯಿಂದ ತಲೆ ತಗ್ಗಿಸಿ ಕುಳಿತಿದ್ರು. ಅವ್ರು ಹೇಳ್ತಿದ್ದನ್ನ ಮುಗಿಸೋಕೆ ಬಿಡ್ರಪ್ಪ. ಆಮೇಲೆ ಏನು ಮಾಡ್ಬೇಕು ಅನ್ನೋದನ್ನ ಆಮೇಲೆ ನೋಡಣ ಅಂದ್ರು ಮೇಷ್ಟು. ಸರಿ ಮೇಷ್ಟ್ರೆ. ನೀವು ಹೇಳ್ತಿದೀರಿ ಅಂತ ಬೆಲೆ ಕೊಟ್ಟು ಇಲ್ಲಿಗೆ ಸುಮ್ನಾಗ್ತಿದ್ದೀವಿ. ಇಲ್ಲಾಂದ್ರೆ ಇವ್ರನ್ನ ಇಲ್ಲೇ ಒಂದು ಕೈ ನೋಡ್ಕೋತಿದ್ವಿ ಅಂತ ಜನ ಸುಮ್ಮನಾದ್ರು. ಗೌಡ್ರು ಮಾತು ಮುಂದುವರೆಸಿದ್ರು. ನಮ್ಮ ಶಂಕರ, ಅದೇ ಸತ್ಯನಾರಾಯಣ ಪೂಜಾರಿ ಮತ್ತು ದೇವಮ್ಮನ ಮಗ, ಅದೇ ನಮ್ಮ ಅಂಬಿಕಜ್ಜಿಯ ಮೊಮ್ಮಗ ಶಂಕರನಿಗೆ ನಮ್ಮೂರ ಬಗ್ಗೆ ಅದೆಷ್ಟು ಪ್ರೀತಿ. ತಾಯಿಗೆ ಅವಮಾನ ಮಾಡಿದ್ರೂ, ತಂದೆಯ ಮಾತಿಗೆ ಬೆಲೆ ಕೊಡದಿದ್ರೂ ಈ ಊರನ್ನ ಗಣಿಗಾರಿಕೆಯಿಂದ ರಕ್ಷಿಸೋಕೆ ಅಂತ ಪಾಪ ಅದೆಷ್ಟು ಓಡಾಡ್ತಿದ್ದಾನೆ. ಅವನೇ ಸ್ಟೇ ತಂದಿರ್ಬೇಕು ಅಂತ ನನಗೀಗ ಗೊತ್ತಾಯ್ತು. ಗಣಿಗಾರಿಕೆಯವ್ರು ಅವನನ್ನ ಕೊಲೆನೇ ಮಾಡ್ತೀವಿ ಅಂತ ಹೆದರಿಸಿದ್ರೂ ಆತ ಹೆದರ್ಲಿಲ್ವಂತೆ ಅನ್ನೋ ಹೊತ್ತಿಗೆ. ಕೊಲೆನಾ ಅಯ್ಯೋ ದೇವ್ರೆ ಅಂತ ಅಂಬಿಕಜ್ಜಿ ಗಾಬರಿ ಬಿದ್ರು. ಅವ್ರ ಪಕ್ಕ ಕೂತಿದ್ದ ಹೆಂಗಸ್ರು , ಹಂಗೇನಾಗಲ್ಲ ಅಜ್ಜಿ, ನಾವಿಲ್ವಾ ಅಂತ ಅವ್ರನ್ನ ಸಮಾಧಾನ ಪಡಿಸೋಕೆ ಶುರು ಮಾಡಿದ್ರು. ಹೂಂ. ನಂಬೋಶಿಖರದತ್ರ ಡೈನಮೈಟ್ ಇಡ್ಬೇಡಿ ಅಂತ ಅವ ಹೇಳಿದ್ದಕ್ಕೆ ಅವ್ರು ಕೇಳದೇ ಇದ್ದಿದ್ದು, ಅವನ್ನ ಹೆದ್ರಿಸೋಕೆ ಅಂತ ಅವ್ರು ಗುಂಡು ಹಾರ್ಸಿದ್ದು ಎಲ್ಲಾ ಆಯ್ತು ಅಂತ ಅವ್ರು ನಿನ್ನೆ ಹೇಳ್ತಾ ಇದ್ರು. ಯಾರೋ ಹೊಸಬ ಬಂದು ತೊಂದ್ರೆ ಕೊಡ್ತಿದ್ದಾನೆ ಅವ್ನ ಹೆಂಗಾದ್ರೂ ಮಾಡಿ ಓಡ್ಸಿ ಊರಿಂದ ಅಂತ ಕೇಳ್ತಾ ಇದ್ರು ಅವ್ರು. ದುಡ್ಡಿನ ಪ್ರಶ್ನೆ. ಬಂದವ ನಮ್ಮವನೇ ಅನ್ನೋದ್ನೂ ವಿಚಾರ ಮಾಡ್ದೇ ಅವನ ಬಗ್ಗೆ ಅಪಪ್ರಚಾರ ಮಾಡ್ಸಿದೆ . ನನ್ನ ಕ್ಷಮಿಸಿ ಬಿಡ್ರಪ್ಪ. ಆದ್ರೆ ಈಗ ಆಗಿರೋ ತಪ್ಪಿನ ಅರಿವಾಗಿದೆ. ಗಣಿಗಾರಿಕೆಗೆ ಮತ್ತೆ ಸ್ಟೇ ತರಿಸಿ, ಆಗಿರೋ ತಪ್ಪನ್ನ ಸರಿ ಮಾಡ್ಕೊಳ್ಳೋಕೆ ಒಂದು ಅವಕಾಶ ಕೊಡ್ರಪ್ಪ ಅಂತ ಗೌಡ್ರು ಕೈ ಮುಗಿದು ಮಾತು ನಿಲ್ಸಿದ್ರು. ಊರವರಿಗೆ ನೋಡಿ ಸಾಮಾನ್ಯವಾಗಿದ್ದ ಕೆಂಡವುಗುಳೋ ಕಣ್ಣಂಚಲ್ಲಿ ಇಂದು ನೀರು ತುಂಬಿತ್ತು.

ನೀವೇನೋ ಮಾಡಿರೋ ತಪ್ಪನ್ನ ಒಪ್ಕೊಂಡ್ರಿ ಕೊನೆಗೂ. ಮೊಮ್ಮಗನ ಮೇಲಿನ ಮಮಕಾರಕ್ಕೋ, ದೇವರ ಮೇಲಿನ ಪಾಪಪ್ರಜ್ಞೆಗೋ ಪೂಜಾರಿಗಳೂ ತಪ್ಪು ಒಪ್ಕೊಬೋದು. ಆದ್ರೆ ಇದಕ್ಕೂ ಜಾಫರ್ ಸಾಹೇಬ್ರಿಗೂ ಏನು ಸಂಬಂಧ ಅಂದ ಒಬ್ರು. ಇದೆ ಸಂಬಂಧ ಇದೆ. ಊರ ರಸ್ತೇಲೇ ಇರೋ ಅಂಗಡಿಯ ಜಾಫರ್ ಸಾಹೇಬ್ರಿಗೆ ಈ ಊರಿಗೆ ಯಾರು ಬರ್ತಾರೆ, ಹೋಗ್ತಾರೆ ಅನ್ನೋದನ್ನ ನೋಡೋದು ಕಷ್ಟದ ಕೆಲಸವೇನಲ್ಲ. ಅವ್ರೂ ಈ ಗಣಿಗಾರಿಕೆ ಮೇಲೆ ಕಣ್ಣಿಟ್ಟಿದ್ರು ಅನ್ಸತ್ತೆ. ಈ ಗಣಿಗಾರಿಕೆ ಅವ್ರು ಯಾವುದಕ್ಕೋ ಪರ್ಮಿಟ್ ತಗೊಂಡು ಇನ್ನೇನೋ ಮಾಡ್ತಿದ್ರಾ ಅಥವಾ ಈ ತರದ್ದು ಇನ್ನೇನೋ ಮಾಡ್ತಿದ್ರಾ ಅಂತ ಅವ್ರಂಗಡಿಗೆ ಚಾ ಕುಡಿಯೋಕೆ ಬಂದ ಗಣಿಗಾರಿಕೆ ಕೆಲಸದವ್ರಿಂದನೋ, ಲಾರಿಯವ್ರಿಂದನೋ ಗೊತ್ತಾಗಿರ್ಬೇಕು. ಅವ್ರು ಒಬ್ಬೊಬ್ರೆ ಗಣಿಗಾರಿಕೆ ಕಡೆ ಹೋಗಿದ್ದನ್ನೂ ನೋಡಿದ್ದೀನಿ. ಯಾಕೆ ಅಂದಾಗ ಸದ್ಯಕ್ಕೇನೋ ಕೇಳ್ಬೇಡಿ ಗೌಡ್ರೆ. ಇದ್ರಿಂದ ನಮಗಿಬ್ರಿಗೂ ಅಪಾಯ ಅಂತಿದ್ರು ಜಾಫರ್ ಸಾಹೇಬ್ರು ಅಂತ ಮೇಷ್ಟ್ರು ಹೇಳೋ ಹೊತ್ತಿಗೆ ಅವ್ರತ್ರ ಏನಾದ್ರೂ ಸಾಕ್ಷ್ಯ ಇರಬಹುದು ಅಂತ ಗೌಡ್ರೇ ಅವ್ರನ್ನ ಮಾಯ ಮಾಡೋಕೆ ಪ್ರಯತ್ನ ಮಾಡಿರ್ಬೇಕು ಅಂದ ಒಬ್ಬ.  ಅಥವಾ ಗೌಡ್ರು ಏನಾದ್ರೂ ಮಾಡೋ ಮೊದಲೇ ಅವರನ್ನ ಉಳಿಸ್ಕೊಳ್ಳೋಣ ಅಂತ ನಮ್ಮ ಶಂಕರ ಅವ್ರನ್ನ ಪಟ್ಟಣಕ್ಕೆ ಕಳ್ಸಿರ್ಬೇಕು ಅಂದ ಮತ್ತೊಬ್ಬ.  ಹೂಂ. ಹಂಗಾಗಿರ್ಬೋದು , ಹಿಂಗಾಗಿರ್ಬೋದು ಅಂತ ಊಹಿಸೋದೇ ಆಗೋಯ್ತಲ್ಲಪ್ಪ. ನಾಳೆ ಬೆಳಿಗ್ಗೆ ಹೆಂಗಿದ್ರೂ ಅವ್ರೆಲ್ಲಾ ಬರ್ತಿದ್ದಾರೆ. ಏನಾಯ್ತು ಅಂತ ಅವ್ರನ್ನೇ ಕೇಳೋಣ ಬಿಡಿ ಅಂದ್ರು ಮೇಷ್ಟ್ರು. ಹೂಂ. ಹೂಂ. ಅಂದ್ರು ಜನರೆಲ್ಲಾ. ಹಾಗೇ ನಾಳೆ ಬೆಳಿಗ್ಗೆ ಅವ್ರೆಲ್ಲಾ ಬಂದಾಗ ಮತ್ತೊಂದು ಸಲ ಸಭೆ ಸೇರೋಣ. ಈ ಗಣಿಗಾರಿಕೆನ ನಿಲ್ಸೋದು ಹೇಗೆ ಅಂತ ಶಂಕರನತ್ರ ಮಾತಾಡಿ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳೋಣ ಏನಂತೀರಪ್ಪಾ ಅಂದ್ರು ಮೇಷ್ಟ್ರು. ಹೂಂ. ತಪ್ಪು ಮಾಡಿದ ಗೌಡ್ರಿಗೆ, ಪೂಜಾರಿಗಳಿಗೆ ಏನು ಶಿಕ್ಷೆ ಕೊಡ್ಬೇಕು ಅಂತಾನು ನೋಡ್ಬೇಕು ಅಂದ ಒಬ್ಬ. ಸತ್ಯಪ್ಪ, ದೇವಮ್ಮ, ಶಂಕ್ರನ್ನ ಕರೆಸಿ ಅವ್ರನ್ನ ಇಷ್ಟು ದಿನಾನು ಸರಿಯಾಗಿ ನಡೆಸಿಕೊಳ್ದೇ ಇರೋದಕ್ಕೆ ಕ್ಷಮೇನೂ ಕೇಳ್ಬೇಕು ಅಂದ್ರು ಇನ್ನೊಬ್ರು. ಹೂಂ. ಸರಿ ಸರಿ. ಅದ್ನೆಲ್ಲ ನಾಳೆ ನೋಡೋಣ. ಹೊತ್ತು ಸುಮಾರಾಯ್ತೀಗ . ಸಂಜೆ ಕಳೆದು ಮಧ್ಯರಾತ್ರಿ ಆಗ್ತಾ ಬಂತು. ಬೆಳಗ್ಗೆ ಹತ್ತರೊತ್ತಿಗೆ ಎಲ್ರೂ ಇಲ್ಲೇ ಸಿಗನ ಬಿಡ್ರಪ್ಪ. ಸರಿನಾ ಅಂದ್ರು. ಸರಿ ಮೇಷ್ಟೇ ಅಂತ ಊರವರೆಲ್ಲಾ ಮನೆಗಳ ಕಡೆಗೆ ಹೊರಡೋಕೆ ದೊಂದಿ, ಬ್ಯಾಟರಿಗಳನ್ನ ಸಿದ್ಧ ಮಾಡತೊಡಗಿದರು..

****
ನೂರ್ನಳ್ಳಿಗೇನೋ ಬಂದ ಶಂಕರ
ಗಣಿಗಾರಿಕೆ ತಡ್ಯೋಕೆ, ಕಾಡನ್ನ ಉಳ್ಸೋಕೆ
ಸಾಯ್ತಿರೋ ಬಾವಿಹೊಳೆ, ಕರಗ್ತಿರೋ ನಂಬೋಶಿಖರ
ಸದ್ದಿಲ್ಲದೆ ಮಾಯವಾಗ್ತಿದ್ದ ಅದೆಷ್ಟೋ ಜೀವಿಗಳ ಕಾಯೋಕೆ

ಸಾಯಹೊರಟಿದ್ದು ಕಾಡಲ್ಲವಿಲ್ಲಿ , ನಾಡ ಜನರ ನಂಬಿಕೆ, ಸ್ವಂತಿಕೆ
ಅಂಧವಿಶ್ವಾಸಕ್ಕೆ, ಕುರುಡು ಕಾಂಚಾಣಕ್ಕೆ, ಗಾಳಿಮಾತನ ನಂಬೋ
ನೂರ್ನಳ್ಳಿಯ ಜನರ ಮೌಢ್ಯತೆ
ಬಂದ ಶಂಕರನಿಲ್ಲಿ , ಬರಲಾರನೆಲ್ಲೆಡೆಗು
ಮುಗ್ಧ ಮನಗಳ ಬದಲಿಸೋಕೆ

ಸತ್ಯ, ದೇವಿಯ ತಾಣ, ಶಂಕರನ ಅಂಗಣವು
ಬಸವ ವಾಹನನಾಗೆ, ಚಂದ್ರ ತಲೆಗೆ
ಸುಡುವ ಬಿಸಿ ಜಾಫರನು , ಸಾವಿರದ ಗಣಗಳಲಿ
ನಿಂತಿಹರು ಲಯಕರ್ತನಂಕಣದಲಿ

ನೀ ಬದುಕೆ ಕೊಲ್ಲದಿರು ಕಾಡನ್ನು ಓ ಮನುಜ
ಸಹಬಾಳ್ವೆಯೇ ಜೀವ , ಅರಿತು ಬಾಳು
ಬಾಳೊಂದು ಬೆಳಕಾಗೆ,ನೂರೊಂದು ಮನಗಳಿಗೆ
ಪ್ರಕೃತಿಯ ದೀಪ ಬೇಕೆನುತ  ಬಾಳು

*** ಸಮಾಪ್ತಿ **
ಸೂ: ಜಾಫರ್ ಅನ್ನೋ ಪದಕ್ಕೆ ಏಪ್ರಿಲ್, ಮೇ, ಜೂನ್ಗಳನ್ನು ಒಳಗೊಳ್ಳೋ spring , ಧೃಡಕಾಯ ಅನ್ನೋ ಅರ್ಥಗಳೂ ಇವೆ.

Wednesday, December 14, 2016

ನೂರ್ನಳ್ಳೀಲಿ ಅವ-೫

(ಹಿಂದಿನ ಭಾಗ: ನೂರ್ನಳ್ಳಿಲಿ ಅವ -೪)
ಮೊನ್ನೆ ಬಸ್ಸಲ್ಲೊಬ್ಬ ಅಪರಿಚಿತ ಸಿಕ್ಕು ತನ್ನ ಹೆಸರಿಡಿದು ಕರೆದಾಗಿಂದ, ಅದ್ರಲ್ಲೂ ತನ್ನ ತಾಯಿ ತಿಮ್ಮವ್ವನ ಬಗ್ಗೆ ಕೇಳಿದಾಗಿನಿಂದ್ಲೂ ಡ್ರೈವರ್ ಬಸಣ್ಣನ  ಮನಸ್ಸಲ್ಲಿ ಏನೋ ಒಂತರ ಕಸಿವಿಸಿ. ಅವ ಯಾರು ? ಎಲ್ಲಿಂದ ಬಂದ ? ಇಷ್ಟು ದಿನ ಬರದೇ ಇದ್ದೋನು ಈಗ್ಲೇ ಯಾಕೆ ಬಂದ ? ಮೊನ್ನೆ ರಾತ್ರಿಯಿಂದ ಅಂಗಡಿ ಜಾಫರ್ ಸಾಹೇಬ್ರು ಕಾಣೆಯಾಗಿದ್ದಕ್ಕೂ, ನಿನ್ನೆ ಸಂಜೆಯಿಂದ ದೇವಸ್ಥಾನದ ಭಟ್ರು ಕಾಣೆಯಾಗಿದ್ದಾರೆ ಅಂತ ಊರಲ್ಲೆಲ್ಲಾ ಹೇಳ್ತಾ ಇರೋದಕ್ಕೂ ಇವನಿಗೂ ಏನಾದ್ರೂ ಸಂಬಂಧ ಇದೆಯಾ ? ಇಲ್ಲವಾ ? ಏನೂ ಗೊತ್ತಾಗ್ತಿಲ್ವಪ್ಪಾ ಅಂದ್ಕೊಳ್ಳೋ ಹೊತ್ತಿಗೇ ಭಾರೀ ಸದ್ದು. ಎದುರಿಂದ ಅವ ಓಡಿ ಬಂದಂತೆ, ನನ್ನ ಬದಿಗೆ ತಳ್ಳುತ್ತಿರುವಂತೆ..ಅದು ಅವನೇನಾ ? ..ಹೌದೇ ಹೌದು..ಆದರೆ ಯಾರೋ ಜಗ್ಗಿ ಕೆಳಕ್ಕೆಳೆದಂತೆ ತಲೆ ಭಾರವಾಗುತ್ತಿದೆ..ಕಣ್ಣೆದುರ ದೃಶ್ಯಗಳೆಲ್ಲಾ ಒಂದು ಅಗೋಚರ ಶೂನ್ಯದೊಳಗೆ  ಮರೆಯಾಗುತ್ತಿವೆ.
***

ಹಿಂದಿನೆರೆಡು ದಿನಗಳಿಂದ ಊರವರು ಹೇಳೋ ಹೊಸ ಹೊಸ ಕತೆಗಳನ್ನ ಕೇಳಿ ಹೈರಾಣಾಗಿದ್ದ ತಿಮ್ಮವ್ವನಿಗೆ ಯಾವುದನ್ನು ನಂಬಬೇಕೋ ಯಾವುದನ್ನು ಬಿಡಬೇಕೋ ಗೊತ್ತಾಗುತ್ತಿರಲಿಲ್ಲ. ಹೊಳೆ ಹತ್ರ ಹುಲಿ ಇದೆ ಅಂದ್ರೂ ಹೆದರ್ತಿರಲಿಲ್ಲವೇನೋ ಅವಳು. ಆದರೆ ಆ ಹೊಸಬನೇನಾದ್ರೂ ಹೊಳೆ ಹತ್ರ ಎದುರಾಗಿ ಬಿಟ್ರೆ ಏನು ಮಾಡ್ತೀಯ ತಿಮ್ಮವ್ವ. ಒಬ್ಬೊಬ್ಳೆ ಬಟ್ಟೆ ತೊಳ್ಯೋಕೆ ಹೋಗ್ಬೇಡ ಅಂತಿದ್ದವರ ಮಾತುಗಳು ಅವಳಿಗೆ ಒಂಚೂರು ಹೆದರಿಕೆ ಹುಟ್ಟಿಸಿದ್ದವು.ಆದ್ರೆ ಮದುವೆಯಾಗಿ ಬಂದಾಗಿಂದನೂ ಜೀವನದ ಅರ್ಧವನ್ನೇ ಕಳೆದ ಹಳ್ಳಿಯಿದು. ಇಲ್ಲೇ ನನ್ನ ಸಾವು ಬರೆದಿದ್ರೆ ಯಾರೇನು ಮಾಡೋಕಾಗಲ್ಲ ಬಿಡಿ ಅಂದ್ಕೋತಾ ತನಗೆ ತಾನೇ ಧೈರ್ಯ ತಂದ್ಕೋತಾ ಬಾವಿಹೊಳೆಯತ್ತ ಹೊರಟಿದ್ದಳು ತಿಮ್ಮವ್ವ.ಯಾರೋ ಏನೋ ಹೇಳಿದ್ದರೆ ಏನೂ ಅನ್ನಿಸುತ್ತಿರಲಿಲ್ಲವೇನೋ. ಸ್ವಂತ ಮಗ, ಪಕ್ಕದ ಮನೆ ಮರಿಯಣ್ಣಂದಿರು ಹೇಳಿದ ಮಾತು ಸ್ವಲ್ಪ ಆಶ್ಚರ್ಯವನ್ನೂ ಗಾಬರಿಯನ್ನೂ ಹುಟ್ಟಿಸಿತ್ತು. ಅದ್ಯಾರೋ ಹೊಸಬನಂತೆ. ಅವನನ್ನು ಊರಲ್ಲಿ ನೋಡೇ ಇಲ್ಲವಂತೆ. ಆದರೂ ಅವನಿಗೆ ಮರಿಯಣ್ಣ ಗೊತ್ತು,ನನ್ಮಗ ಬಸಣ್ಣ ಗೊತ್ತು, ಚಂದ್ರೇ ಮೇಷ್ಟ್ರೂ ಗೊತ್ತು. ಇಷ್ಟೆಲ್ಲಾ ಪರಿಚಯ ಇರೋನು ಯಾರಿರಬಹುದು ಅಂತ ಯೋಚ್ನೆ ಮಾಡ್ತಿರಬೇಕಾದ್ರೆ ಅವನಿಗೆ ಪೂಜಾರಿಗಳು, ಅಂಗಡಿ ಜಾಫರ್ ಗೊತ್ತಿದ್ರೂ ಇರ್ಬೋದೇನೋ ಅನಿಸ್ತು. ಆದ್ರೆ ಗೊತ್ತಿದ್ದ ಮಾತ್ರಕ್ಕೆ ಊರವರೆಲ್ಲಾ ಹೇಳ್ತಿರೋ ತರ ಅವ ಅವರಿಗೆ ಕೆಡುಕು ಬಯಸ್ತಾನೆ ಅಂತ ಯಾಕೆ ಅಂದ್ಕೋಬೇಕು ? ಕೆಡುಕು ಅಂದ ತಕ್ಷಣ ನೆನಪಾಯ್ತು. ಊರಿಗೆ ಯಾರ್ಯಾರೋ ಬರ್ತಿದ್ದಾರೆ ಈಗ. ಮೊನ್ನೆಯಷ್ಟೇ ಲಾರಿ ಮೇಲೆ ಅದೆಂತದೋ ಯಂತ್ರಾನ ಊರ ಹಿಂದಿನ ಗುಡ್ಡದತ್ತ ತಗೊಂಡು ಹೋಗೋದ್ನ ನೋಡಿದ್ದೆ.ಮಗನ ಬಸ್ಸಿಗೂ ಅಡ್ಡ ಬಂದ ಯಾರೋ ಲಾರಿ ಡ್ರೈವರನಿಗೂ ಮಗಂಗೂ ಮಾತಿಗೆ ಮಾತು ಬೆಳೆದಿತ್ತಂತೆ. ಆತ ನೂರ್ನಳ್ಳಿಯವನಲ್ವಾ ? ನೊಡ್ಕೋತೀನಿ ಅಂತ ಬೇರೆ ಅಂದಿದ್ನಂತೆ . ನಾ ನೋಡಿದ ಲಾರಿಯವನಾ ಮಗನಿಗೆ ಸಿಕ್ಕ ಲಾರಿಯವನು ? ಮಗನತ್ರ ಗುಡ್ಡದ ವಿಷ್ಯ ಮಾತಾಡ್ಬೇಕು ಅಂತ ಅದೆಷ್ಟು ಸಲ ಅಂದ್ಕೊಂಡ್ರೂ ಮರ್ತೇ ಹೋಗತ್ತೆ. ಅದಕ್ಕೂ ಈ ಹೊಸ ಮನುಷ್ಯಂಗೂ ಏನಾದ್ರೂ ಸಂಬಂಧ ಇದ್ಯಾ ? ಅವ ಭೇಟಿ ಮಾಡಿದವರೆಲ್ಲಾ ಮಾಯ ಆಗ್ತಾ ಇದ್ದಾರೆ ಅಂದ್ರೆ ನನ್ನ ಮಗನಿಗೂ ಏನಾದ್ರೂ ಅಪಾಯ... ಛೇ ಛೇ. ಹಂಗೆಲ್ಲಾ ಏನೂ ಆಗೋಲ್ವೇನೋ. ವಯಸ್ಸಾದ ಮನಸ್ಸು ಯಾವಾಗ್ಲೂ ಬೇಡದ್ದೇ ಯೋಚಿಸ್ತಿರತ್ತೆ. ಏನೇ ಆಗ್ಲಿ ನನ್ನ ಮಗನಿಗೆ ಇದ್ರ ಬಗ್ಗೆ ಆದಷ್ಟು ಬಗ್ಗೆ ಎಚ್ಚರಿಸಬೇಕು ಅಂತ ತಂದ ಬಟ್ಟೆಗಳನ್ನೆಲ್ಲ ಗಡಿಬಿಡೀಲಿ ತೊಳೆದು ಮನೆಯತ್ತ ದಾಪುಗಾಲಿಕ್ಕಿದಳು.
***

ನೀರ್ನಳ್ಳಿ, ನೂರ್ನಳ್ಳಿಗಳ ಮಧ್ಯೆ ಹರಿಯೋ ಬಾವಿಹೊಳೆ ಎರಡೂ ಹಳ್ಳಿಗಳ ಜೀವನಾಡಿ. ನೂರ್ನಳ್ಳಿಯ ಹಸಿರಸಿರಿಗೆ ಮುಕುಟಪ್ರಾಯವಾಗಿದ್ದ ನೂರ್ಮನೆಗುಡ್ಡದ ನಂಬೋಶಿಖರವೇ ಬಾವಿಹೊಳೆಯ ಉಗಮಸ್ಥಾನ. ಪರಶಿವನ ಜಟೆಗಳಿಂದ ಧುಮುಕೋ ಗಂಗೆ ಭುವಿಗೆ ಹರಿದು ಸಗರರಿಗೆ ಮೋಕ್ಷವಿತ್ತಂತೆ ನಂಬೋಶಿಖರದಿಂದ ನೂರ್ನಳ್ಳಿ, ನೀರ್ನಳ್ಳಿಗಳಂತಹ ನೂರಾರು ಹಳ್ಳಿಗಳ ಉದ್ದಾರಕ್ಕಾಗೇ ಬಾವಿಹೊಳೆಯಾಗಿ ದೇವಿಯೊಬ್ಬಳು ಅವತರಿಸಿದ್ದಾಳೆ ಎಂಬುದು ಇಲ್ಲಿನ ಜನರ ನಂಬಿಕೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರೆಯಿರಬಹುದು, ಉಕ್ಕಿ ಹರಿದಾಗ ಪಡೆಯೋ ಬಾಗಿನಗಳಿರಬಹುದು. ಮದುವೆ ಮುಂಜಿಗಳ ಸಂತಸದಿಂದ ಸತ್ತವರ ತರ್ಪಣದವರೆಗೆ ಎಲ್ಲರಿಗೂ ಬೇಕಾಗೋ ಬಾವಿಹೊಳೆಯಿಲ್ಲದ ಬದುಕಿಲ್ಲವಿಲ್ಲಿ. ಹೊಳೆ ಹರಿದ ಕಣಿವೆಗಳಾಚೆಯೇ ಬೆಳೆದ ಅಡಿಕೆ ತೋಟಗಳಾಗಿರಬಹುದು, ನದಿಯನ್ನೇ ನಂಬಿರೋ ಭತ್ತ, ಕಬ್ಬುಗಳಾಗಿರಬಹುದು. ಬೇಸಿಗೆಯಲ್ಲೂ ಬತ್ತದ ಬಾವಿಹೊಳೆಯ ನಂಬಿ ಬದುಕು ಕಟ್ಟಿಕೊಂಡ ಜೀವಗಳೆಷ್ಟೋ.ಅಕಸ್ಮಾತ್ ಆಗಿ ಬಾವಿಹೊಳೆಗೇನಾದರೂ ಆಗಿ ಅದು ಬತ್ತಿತೆಂದರೆ ? .. ಶಾಂತಂ ಪಾಪಂ.. ಊರವರು ಕನಸಿನಲ್ಲೂ ಆಲೋಚಿಸೋಕಾಗದ ಘಟನೆಯದು. ಅಕಸ್ಮಾತ್ ಹಾಗೇನಾದ್ರೂ ಆಯ್ತು ಅಂದ್ರೆ ಏನ್ಮಾಡೋದು ಅನ್ನೋ ಆಲೋಚನೆ ಊರೊಳಿಗನವರಿಗೆ ಬಾರದಿದ್ದರೂ ನದಿಯ ದಂಡೆಯಲ್ಲೇ ಕೂತು ಆಲೋಚಿಸುತ್ತಿದ್ದ ಅವನ ಮುಖಭಾವದಲ್ಲಿ ವ್ಯಕ್ತವಾಗುತ್ತಿತ್ತು. ದೇವಸ್ಥಾನದ ಅಭಿಶೇಷಕ್ಕೆ, ಪಂಚಾಯ್ತಿ ಅನುದಾನಕ್ಕೆ ಅಂತ ಊರಲ್ಲೊಂದೆರೆಡು ಬಾವಿಗಳಿದ್ದರೂ ಊರ ಜೀವನಾಡಿ ಬಾವಿಹೊಳೆಯೇ. ಅಂತಿಪ್ಪ ಬಾವಿಹೊಳೆ ಬತ್ತಿದರೆ ಬಿದ್ದು ಸಾಯೋಕೆ ಅಂದರೂ ಊರಲ್ಯಾವುದೂ ಕೆರೆಯಿಲ್ಲ. ಬಾವಿಗೂ ಪಕ್ಕದೂರಿಗೆ ಹೋಗಬೇಕಾಗುತ್ತೆ ಅನ್ನೋ ಆಲೋಚನೆ ಸುಳಿದು ಅವನ ಮುಖದ ಚಿಂತೆಯಲ್ಲೂ ಒಮ್ಮೆ ನಗುವರಳಿತು. ಭೂಗರ್ಭವಗೆಯೋ ಜೇಸಿಬಿ, ಲಾರಿಗಳು ಪಟ್ಟಣದ ಎಂತೆಂತಾ ಕೆರೆಗಳನ್ನೇ ಬಸ್ಟಾಂಡೋ, ಕ್ರೀಡಾಂಗಣವನ್ನೋ ಆಗಿಸಿರುವಾಗ ಈ ಊರ ಬಾವಿಹೊಳೆಯೋ, ನಂಬೋಶಿಖರವೋ ಯಾವ ಲೆಕ್ಕ. ಏನೋ ಒಂದಿಷ್ಟು ಅದಿರು ಸಿಗುತ್ತೆ ಅಂದ್ರೆ ಸಿಕ್ಕವರಿಗೆಲ್ಲಾ ಒಂದಿಷ್ಟು ಗಿರ್ಮಿಟ್ ತಿನ್ಸಿ ಪರ್ಮಿಟ್ ಗಿಟ್ಸಿ ಹಸಿರಕಾಡನ್ನ ಬರಗಾಡನ್ನಾಗಿ ಮಾಡೋದು ದೊಡ್ಡ ವಿಷ್ಯವಲ್ಲ ಕೆಲೋರಿಗೆ. ಅಂತವರ ಕಣ್ಣು ನೂರ್ನಳ್ಳಿಯ ಮೇಲೆ ಬಿದ್ದಿದ್ದು ಎಲ್ಲೋ ಇದ್ದ ಇವನನ್ನ ಇತ್ತ ಹೊರಳಿಸಿತ್ತು. ಆಲೋಚನಾ ಲಹರಿಯಲ್ಲಿ ಇವ ಕಳೆದುಹೋಗಿದ್ದಾಗಲೇ ಪಡುವಣದತ್ತ ಹೊರಡುತ್ತಿದ್ದ ರವಿಯಿಂದ ಆಗಸವೆಲ್ಲಾ ಕೆಂಪಾಗುತ್ತಿದ್ದಂತೆ ಬಾವಿಹೊಳೆಯ ಬಣ್ಣವೂ ಬದಲಾಗುತ್ತಿತ್ತು. ಕೊನೆಗೂ ಎದ್ದು ತನ್ನ ಮುಂದಿನ ಕಾರ್ಯಗಳ ಬಗ್ಗೆ ಆಲೋಚಿಸುತ್ತಾ ಹೊರಟಿದ್ದವನಿಗೆ ಬಸಣ್ಣ ಅನಿರೀಕ್ಷಿತವಾಗಿ ಎದುರಾಗಿದ್ದ.
***

ಊರದೇವಸ್ಥಾನದ ಎದುರಿನ ಅರಳಿ ಕಟ್ಟೆಗೆ ಎಷ್ಟೋ ದಿನಗಳಾದ ಮೇಲೆ ಇವತ್ತು ಕಳೆ ಬಂದಿತ್ತು. ಊರ ಪಂಚರಾದ ಗೌಡ್ರು, ಚಂದ್ರೇ ಮೇಷ್ಟು ಡ್ರೈವರ್ ಬಸಣ್ಣನ ಬರುವಿಕೆಯನ್ನ ಕಾಯ್ತಾ ಅತ್ತಿಂದಿತ್ತ ತಿರುಗ್ತಾ ಇದ್ರೆ ಎದುರಿಗೆ ಕೂತಿದ್ದ ಎಲ್ಲಾ ಜನಗಳ ನೋಟ ಇವರ ಮೇಲಿತ್ತು. ಪಂಚರಲ್ಲಿ ಇಬ್ಬರಾದ ಅಂಗಡಿ ಜಾಫರ್ ಸಾಹೇಬ್ರು, ದೇವಸ್ಥಾನದ ಪೂಜಾರಿಗಳು ಕಾಣೆಯಾಗಿದ್ರು. ಊರಿನ ಪ್ರಮುಖರೆಲ್ಲಾ ಕಾಣೆಯಾಗ್ತಿದ್ದಾರೆ ಅನ್ನೋ ಸುದ್ದಿ ಬರ್ತಿರುವಾಗ ಈಗ ಬಸಣ್ಣನೂ ಮಾಯವಾಗಿದ್ದಾನೆ. ಅವ್ನಿಗೆ ಏನಾಯ್ತೋ ಏನೋ ? ಮುಂದಿನ ಸರದಿ ನಮ್ಮದೇ ಮೇಷ್ಟೇ ಅಂತ ಗೌಡ್ರು ಗಾಬರಿಯಿಂದ ಹೇಳ್ತಾ ಇದ್ರೆ ಅವರನ್ನು ಸಮಾಧಾನಿಸೋ ಸರದಿ ವಯೋವೃದ್ಧರಾದ ಚಂದ್ರೇ ಮೇಷ್ಟ್ರದ್ದು. ಹಂಗೆಲ್ಲ ಏನಿಲ್ಲ ಗೌಡ್ರೆ. ಬಂದಿರೋನು ಯಾರೋ ಏನೋ ಗೊತ್ತಿಲ್ಲ. ಜಾಫರ್ ಸಾಹೇಬ್ರು, ಅರ್ಚಕರು ಬೇರೆ ಬೇರೆ ಕೆಲಸಗಳಿಗಾಗಿ ಎಲ್ಲೋ ಹೋಗಿರಬಹುದು. ಇವತ್ತು ನಾಳೆ ಹಂಗೆ ಬರ್ಬೋದು. ಆ ವಿಷ್ಯ ಚರ್ಚಿಸೋಕೆ ಅಂತಲೇ ಇವತ್ತು ಸಭೆ ಸೇರಿದ್ದೀವಲ್ಲ.  ಮಾತಾಡಿದ್ರಾಯ್ತು ಬಿಡಿ. ಗಾಬರಿಯಾಗ್ಬೇಡಿ ಅಂದ್ರು . ಆದ್ರೆ ಈ ಬಸಣ್ಣ .. ಅಂತಿರುವಾಗ , ಬಸಣ್ಣ ಯಾವತ್ತೂ ಸಭೆಗೆ ಲೇಟಾಗಿ ಬಂದವನಲ್ಲ. ಇವತ್ತು ಯಾಕಿನ್ನೂ ಬಂದಿಲ್ಲ ಅಂತ ಅವನ ಮನೆಗೆ ಒಬ್ಬನ್ನ ಕಳಿಸಿದೀವಲ್ಲ. ಅವ್ನೂ ಬರೋ ಹೊತ್ತಾಯ್ತಲ್ಲ. ತಡೀರಿ ಅನ್ನೋ ಹೊತ್ತಿಗೆ ಒಬ್ಬ ಓಡೋಡ್ತಾ ಬಂದ.. ಬಸಣ್ಣ ಮನೇಲಿಲ್ಲ ಅಂತ ಏದುಸಿರು ಬಿಡ್ತಾ ಹೇಳ್ತಿರುವಾಗ ತಿಮ್ಮವ್ವ ? ಅಂದ್ರು ಗುಂಪಲ್ಲಿದ್ದ ಕೆಲೋ ಹೆಂಗಸ್ರು ಗಾಬರಿಯಿಂದ. ತಡೀರಿ ಹೇಳ್ತೀನಿ ಅನ್ನುವಂತೆ ಸಂಜ್ಞೆ ಮಾಡುತ್ತಾ ಅವಳೂ ಇಲ್ಲ ಮನೇಲಿ. ಮನೆಗೆ ಬೀಗ ಹಾಕಿದೆ ಅಂತ ಅವ ಹೇಳ್ತಿರುವಂತೆ ಅಲ್ಲಿದ್ದೋರ ಕಣ್ಣು ಬಾಯಿಗಳೆಲ್ಲಾ ಅಚ್ಚರಿ, ಗಾಬರಿಗಳಿಂದ ತೆರೆದುಕೊಂಡವು. ಎಲ್ಲಿಂದ್ಲೋ ಬಂದವನೊಬ್ಬ ನಮ್ಮೂರಲ್ಲಿರೋರ್ನೆಲ್ಲಾ ನುಂಗಕ್ಕತ್ಯಾನ್ರೋ ಅಂದ ಒಬ್ಬ. ಇಷ್ಟು ದಿನ ಊರ ಪಂಚರನ್ನ ನುಂಗ್ತಿದ್ದ. ಇವತ್ತು ತಿಮ್ಮವ್ವನ್ನೂ ನುಂಗಿದಾನೆ. ಏನ್ಮಾಡಿದ್ಲವ್ವ ತಿಮ್ಮವ್ವ. ಯಾರಿಗೂ ಒಂದ್ಮಾತು ಬಯ್ಯೋಳಲ್ಲ ಅವಳು. ಅಂತಾ ತಿಮ್ಮವ್ವನ್ನ .. ಅಂತ ಒಬ್ಬರು ಕಣ್ಣಂಚಲ್ಲಿ ಜಾರುತ್ತಿದ್ದ ಕಣ್ಣೀರೊರೆಸಿಕೊಳ್ಳುತ್ತಾ ಹೇಳೋ ಹೊತ್ತಿಗೆ ಗುಂಪಲ್ಲಿದ್ದವರಿಂದ ತಲೆಗೊಂದು ಮಾತುಗಳು ಕೇಳಿಬರತೊಡಗಿದವು. ಗೊತ್ತಿಲ್ಲದೇ ಇರೋನ್ಯಾರೋ ಇದ್ನೆಲ್ಲಾ ಮಾಡ್ತಿದ್ದಾನೆ ಅಂತ ಹೆಂಗೆಳ್ತೀರ ? ಏನಾದ್ರೂ ಮಾಡೋದೆ ಆಗಿದ್ರೆ ಅವ್ರ ಮನೆಗೆ ಬೀಗ ಹಾಕಿಸಿ ಅವ್ರನ್ನ ನಾಪತ್ತೆ ಮಾಡಿಸ್ತಿದ್ನ . ಬೇರೇನೋ ಇದೆ ವಿಷ್ಯ ಇಲ್ಲಿ ಅಂದ ಒಬ್ಬ. ಪಂಚರು ನಮಗೆ ಗೊತ್ತಿಲ್ಲದಂಗೆ ಏನೋ ಮಾಡ್ತಿರಬೇಕು. ಅದಕ್ಕೇ ಅವರೆಲ್ಲಾ ಮಾಯವಾಗ್ತಿದ್ದಾರೆ ಅಂದ ಇನ್ನೊಬ್ಬ.ಅದಕ್ಕೆ ಉತ್ತರ ಕೊಡೋಕೆ ಅಂತ ಮಗದೊಬ್ಬ ಎದ್ದ. ಬಂದವನ ಪರ ವಿರೋಧಗಳಿಗೆ, ತಟಸ್ಥವಾಗಿ ಅಂತ ಗುಂಪೊಳಗೇ ಮತ್ತೊಂದಿಷ್ಟು ಗುಂಪುಗಳು ಶುರುವಾಗಿ ಗುಂಪುಗಲಾಟೆಗಳು ನಡೆಯೋ ಪರಿಸ್ಥಿತಿ ಬಂದಾಗ ಅವ್ರನ್ನೆಲ್ಲಾ ಸುಮ್ಮನಾಗಿಸೋಕೆ ಗೌಡ್ರಿಗೆ ಮತ್ತು ಮೇಷ್ಟ್ರಿಗೆ ಸಾಕಾಗಿ ಹೋಯ್ತು. ಮೇಷ್ಟ್ರು ಮಾತಾಡೋಕೆ ಶುರು ಮಾಡಿದ್ರು. ನೋಡ್ರಪ್ಪಾ . ಹಿಂಗೆಲ್ಲಾ ಗಲಾಟೆ ಮಾಡಿ ಪ್ರಯೋಜನ ಇಲ್ಲ. ಈಗ ಊರಿಗೆ ಹೊಸದಾಗಿ ಬಂದವನೇ ಈಗ ಊರಲ್ಲಿರೋರು ಒಬ್ಬಬ್ಬರಾಗಿ ಕಾಣೆಯಾಗೋಕೆ ಕಾರಣ ಅನ್ನೋದು ನಿಮ್ಮಲ್ಲಿ ಕೆಲವರ ಗುಮಾನಿ ತಾನೆ ಅಂದ್ರು ? ಕೆಲವರು ಹೂಂ ಅಂದ್ರು ಕೆಲವರು ಇಲ್ಲಾ ಅಂದ್ರು. ಇನ್ನುಳಿದವರು ಮೇಷ್ಟ್ರು ಮುಂದೆ ಏನು ಹೇಳಬಹುದು ಅಂತ ತೆಪ್ಪಗೆ ಕೇಳ್ತಾ ಇದ್ರು. ಬಂದವ ಯಾರು , ಏನು , ಎತ್ತ ಅನ್ನೋದ್ರ ಬಗ್ಗೆ ನಾನೂ ಬೆಳಗ್ಗಿಂದ ಮಾಹಿತಿ ಸಂಗ್ರಹಿಸೋಕೆ ಪ್ರಯತ್ನ ಮಾಡ್ತಾ ಇದ್ದೀನಿ. ಅವ ಕೊಲೆಗಾರನೇ ಆಗಿದ್ರೆ ಆತ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಬಲಿ ತೆಗೆದುಕೊಳ್ಳೋಕೆ ಮೊದಲು ಊರವರೇ ಒಟ್ಟಾಗಿ ಆತ ಎಲ್ಲಿರುತ್ತಾನೆ, ಏನು ಮಾಡುತ್ತಾನೆ, ಆತ ಊರಿಗೆ ಬಂದ ಉದ್ದೇಶವೇನು ಎಂಬುದನ್ನ ಪತ್ತೆ ಹಚ್ಚಬೇಕು.  ಆತ ಒಳ್ಳೆ ಉದ್ದೇಶಕ್ಕಾಗಿ ಬಂದಿದ್ರೂ ಆತ ಈಗ ಎಲ್ಲಿದ್ದಾನೆ ಅನ್ನೋದು ಕಂಡು ಹಿಡಿದು ಆತನನ್ನ ಊರೆದುರು ಮಾತಿಗೆ ಕರೆಯೋ ತನಕ ಆತನ ಉದ್ದೇಶ ಗೊತ್ತಾಗೊಲ್ಲ. ಹಾಗಾಗಿ ಅವನನ್ನು ಹುಡುಕೋದೇ ನಮ್ಮ ಮುಂದಿನ ಗುರಿ ಸರೀನಾ ಎಂದ್ರು ? ಸಭೆ ಒಕ್ಕೊರಲಿನಿಂದ ಮೇಷ್ಟ್ರ ಮಾತಿಗೆ ಒಪ್ಪಿಗೆ ಸೂಚಿಸಿತು..ಮೇಷ್ಟ್ರು ಮಾತು ಮುಂದುವರಿಸಿದ್ರು..


***
ಅಂತೂ ಬಸಣ್ಣನಿಗೆ ಎಚ್ಚರಾದಾಗ ತಲೆಯೆಲ್ಲಾ ಭಾರವಾದ ಅನುಭವ. ಕಷ್ಟಪಟ್ಟು ಕಣ್ಣು ತೆರೆದ್ರೆ ಎದುರಿಗೆ ತಾಯಿ ತಿಮ್ಮವ್ವ ಅಳುತ್ತಾ ಕುಳಿತಿರೋ ತರ. ತಲೆ ಮುಟ್ಟಿ ನೋಡಿಕೊಂಡ್ರೆ ಏನೋ ಬ್ಯಾಂಡೇಜು ಸುತ್ತಿರುವಂತಿದೆ. ಅರೇ ನಾನೆಲ್ಲಿದ್ದೀನಿ ಅಂತ ಸುತ್ತಮುತ್ತ ನೋಡ್ತಾ ಏಳೋಕೆ ಪ್ರಯತ್ನ ಮಾಡ್ತಿರುವಾಗ "ಏ ಬಸ್ಭಾಯಿ ಕೋ ಹೋಷ್ ಆಗಯ" ಅನ್ನೋ ಧ್ವನಿ ಕೇಳಿಸ್ತು. ಇದು ಜಾಫರ್ ಸಾಹೇಬ್ರ ದ್ವನಿಯಲ್ವಾ ಅಂತ ತಿರುಗೋ ಹೊತ್ತಿಗೆ "ಏ ಬಸಣ್ಣ. ಹಾಗೇ ಮಲ್ಕೊ ಸ್ವಲ್ಪ ಹೊತ್ತು. ಏಳೋ ಪ್ರಯತ್ನವೆಲ್ಲಾ ಮಾಡ್ಬೇಡ" ಅಂತ ಹೇಳ್ತಾ ಊರ ಪೂಜಾರಿಗಳು ಎದ್ರಿಗೇ ಬಂದ್ರು
(ಮುಂದುವರೆಯುತ್ತದೆ)

Wednesday, June 29, 2016

ಜಸ್ಟ್ ಮಿಸ್ಸು

ಟ್ರಿಪ್ಪೊಂದರಲ್ಲಿ ಕಂಡ ಸುಮ್ನೇ ಇಷ್ಟವಾಗಿದ್ದ ಹುಡುಗಿ ಆಫೀಸ್ ಬಸ್ಸಲ್ಲಿ ಸಡನ್ನಾಗಿ ಪ್ರತ್ಯಕ್ಷಳಾಗಿದ್ದಷ್ಟೇ ಅಲ್ದೇ ಪಕ್ಕದ ಸೀಟಲ್ಲಿ ಬಂದು ಕೂತ್ರೆ ? ಗುಂಡಣ್ಣನ ಎಂದಿನ ನಗು ಮಾಯವಾಗಿತ್ತು ! ಮನದಲ್ಲೊಂದು ಮೊಹಬ್ಬತ್ತ ಸೌಧಕ್ಕೆ ಅಡಿಪಾಯ ಬಿದ್ದಿತ್ತು.
ತಿಂಡಿನಾದ್ರೂ ಮಿಸ್ ಮಾಡ್ಕೊಳ್ತಿದ್ದ ಗುಂಡಣ್ಣ ಅವ್ಳು ಬರೋ ಬಸ್ಸನ್ನ ಮಾತ್ರ ಮಿಸ್ ಮಾಡ್ಕೊಳ್ತಿರಲಿಲ್ಲ. ಮುಂಚೆನೇ ಹತ್ತಿದ್ದ  ಅವಳೂ ಪಕ್ಕದಲ್ಲಿ ಯಾರನ್ನೂ ಕೂರಗೊಡದೆ ಗುಂಡಣ್ಣನ ಬರುವಿಕೆಯನ್ನೇ ಕಾಯುವಂತಿರುತ್ತಿದ್ದಳು. ಏನೋ ಹೇಳ್ಬೇಕು ಅಂತ ಅವನು. ಇವ ಹೇಳಲಿ ಅಂತ ಅವಳು . ನಾಳೆ ಫೆಬ್ರವರಿ ಹದಿನಾಲ್ಕು ಅನ್ನೋ ಹೊತ್ತಿಗೆ ಗುಂಡಣ್ಣನ ಟೀಂ ಚೇಂಜಾಗೋ ಸಮಯ ಬಂದಿತ್ತು.  ಮಾರನೇ ದಿನದಿಂದ್ಲೇ ಬೇರೆ ಬಿಲ್ಡಿಂಗಲ್ಲಿ ಕೆಲ್ಸ. ಇವತ್ತು ಏನಾದ್ರೂ ಮಾಡಿ ಅವ್ಳತ್ರ ಮಾತಾಡ್ಲೇ ಬೇಕು ಅಂದ್ಕೊಂಡ್ರೂ, ಏನು ಮಾತಾಡೋದು ಅಂತ ಯೋಚ್ನೆ ಮಾಡ್ತಾ ಬರೋ ಹೊತ್ತಿಗೆ ಬಸ್ ಬಂದಾಗಿತ್ತು. ಅವ್ಳೇನೋ ಬಸ್ಸಲ್ಲಿದ್ಲು. ಆದ್ರೆ ಕೈಯಲ್ಲಿದ್ದ ಮೊಬೈಲಲ್ಲಿ ಯಾರ ಜೊತೆಗೋ ಮಾತು.ಅವ್ಳ ಮಾತು ಮುಗಿಯೋ ಹೊತ್ತಿಗೆ ಆಫೀಸ್ ಬಂದಿತ್ತು. ಗುಂಡಣ್ಣ ಏನೋ ಹೇಳೋಕೆ ಪರದಾಡ್ತಿದ್ದನ್ನ ನೋಡಿದ್ದ ಅವಳು ಅದೇನಿರಬಹುದೆಂದು ಊಹಿಸಿದ್ರೂ ಏನು ಅಂತ ಅನೇಕ ಸಾರಿ ಸಂಜ್ಝೆ ಮಾಡಿದ್ಲು. ಅವ ಹೇಳೋಕೆ ಪ್ರಯತ್ನ ಮಾಡಿದಾಗೆಲ್ಲಾ ಧೈರ್ಯ ಸಾಕಾಗ್ತಿರಲಿಲ್ಲ. ಈ ಸರ್ಕಸ್ಸಲ್ಲಿದ್ದಾಗ ಆಫೀಸ್ ಬಂದಿತ್ತು. ಕೊನೆಗೂ ಧೈರ್ಯ ಮಾಡಿ ನಿಮ್ಮ ನಂಬರ್ ಕೊಡ್ತೀರಾ ಅಂದ. ಹೂಂ. ಸೇವ್ ಮಾಡ್ಕೊಳ್ಳಿ ಅಂತಂದ್ರೆ ಮೊಬೈಲಿಗೆ ಕಿಸೆಗೆ ಕೈ ಹಾಕಿದ್ರೆ ಮೊಬೈಲಿಲ್ಲ. ಅವ್ಳತ್ರ ಅಂದ್ಕೊಂಡಿದ್ದು ಹೇಳೇ ಬಿಡೋ ಉಮ್ಮೇದಿನ ಗಡಿಬಿಡಿಯಲ್ಲಿ ಮೊಬೈಲು ಮನೇಲೇ ಮರೆತು ಬಿಟ್ಟಿದ್ದ. ಇವ ತಡಕಾಡುತ್ತಿದ್ದನ್ನ ನೋಡಿದ ಅವಳು ಹೋಗ್ಲಿ ನಾನೇ ಮಿಸ್ ಕಾಲ್ ಕೊಡ್ತೀನಿ ಬಿಡಿ. ಹೇಳಿ ನಿಂ ನಂಬರ್ರು ಅಂತ ಬಸ್ಸಿಳಿದು ಮುಂದೆ ಹೊರಟ್ಳು. ಅವ್ಳು ಅದ್ನ ಟೈಪ್ ಮಾಡಿ ಇನ್ನೇನು ಕಾಲ್ ಒತ್ಬೇಕು. ಅಷ್ಟರಲ್ಲಿ ಅವ್ಳ ಮೊಬೈಲು ಸ್ವಿಚ್ಛಾಫ್ ! ದರಿದ್ರ ಬ್ಯಾಟ್ರಿ ಆಗ್ಲೇ ಡೌನಾಗ್ಬೇಕೆ ? ಅದ್ಯಾವ್ದೋ ಎಸ್ಕಲೇಷನ್ ಆಗಿದ್ಯಂತೆ ಕಣೆ ಅಂತ ಒಡ್ತಿದ್ದ ಪಕ್ಕದ ಸಹೋದ್ಯೋಗಿ ಜೊತೆಗೆ ಇವ್ಳೂ ಓಡ್ಬೇಕಾಗಿ ಬಂದಿತ್ತು. ಗುಂಡಣ್ಣನ ಆಸೆಗಳು ಜಸ್ಟ್ ಮಿಸ್ಸಾಗಿತ್ತು !

ಮನೇಲಿ ಮರ್ತು ಬಂದಿದ್ದ ತನ್ನ ಮೊಬೈಲಿಗೆ ಬಯ್ಯಲಾ, ಬ್ಯಾಟ್ರಿ ಡೌನಾದ ಅವ್ಳ ಮೊಬೈಲಿಗೆ ಬಯ್ಯಲಾ ಅನ್ನೋ ಆಲೋಚನೆಯಲ್ಲೇ ತಿಂಗಳೊಂದು ಕಳೆದೋಗಿತ್ತು ! ಮಿಸ್ಸಾದವ್ಳಿಗೆ ತಲೆ ಕೆಡಿಸಿಕೊಳ್ಳೋದು ಬೇಡ ಅಂತ್ಕೊಳ್ಳೋ ಸಂದರ್ಭದಲ್ಲೇ ಫೇಸ್ಬುಕ್ಕಿನ ಫ್ರೆಂಡ್ ಸಜೆಷನ್ನಲ್ಲಿ ಅವ್ಳ ಹೆಸ್ರು ಬಂದಿತ್ತು !! ಇನ್ನೇನು Add Friend ಕೊಡ್ಬೇಕು. ಅಷ್ಟರಲ್ಲಿ ನೆಟ್ ಢಮಾರ್ ! ಹೊತ್ತಲ್ಲದ ಹೊತ್ತಲ್ಲಿ ಕರೆಂಟ್ ತೆಗ್ಯೊ ಕೆಇಬಿಯವ್ರಿಂದ ಮತ್ತೊಂದು ಜಸ್ಟ್ ಮಿಸ್ಸು !

ಕರೆಂಟ್ ಬಂದ ಮೇಲೆ ಹುಡ್ಕೇ ಹುಡ್ಕಿದ. ಸಿಗ್ಲಿಲ್ಲ ಅವ್ಳು. ಅವ್ಳ ಫೋಟೋ ಕಂಡ ಖುಷಿಯಲ್ಲಿ ಫೇಸ್ಬುಕಲ್ಲಿ ಅವ್ಳ ಮೊದಲ ಹೆಸ್ರು, ಕೊನೆ ಹೆಸ್ರು ಏನಿದೆ ಅಂತ ನೋಡ್ಕೊಳ್ಳೋದೇ ಮರೆತಿದ್ದ. ಅದ್ಕೆ ಬಯ್ಕೊಳ್ಳೋದ್ರಲ್ಲಿ ಮತ್ತೆ ಹದಿನೈದು ದಿನ ಕಳೆದೋಗಿತ್ತು ! ಅವಳ ಹೆಸರ ಅಂದಾಜಿನ ಮೇಲೆ ಆಫೀಸಿನ ಐಡಿಗಳಲ್ಲಿ ಹುಡುಕುತ್ತಾ ಕೊನೆಗೂ ಅವಳಿರಬಹುದೆಂಬ ಐಡಿ ಹುಡುಕಿದ್ದ. ಇದ್ರಲ್ಲಾದ್ರೂ ಹುಡ್ಕೋಣ ಅಂತ ಪಿಂಗ್ ಮಾಡಿದ.
ಇವ: ಹಾಯ್
ಅವಳು: ಹಾಯ್
ಇವ: ನೀವು ರೂಟ್ ನಂ ೧೪೦ರ ಇವರಲ್ವಾ ?
ಅವಳು:ಹೌದು. ನೀವು ?
ಇವ: ನಾನು ಇವ. ಟ್ರಿಪ್ಪಲ್ಲಿ ಸಿಕ್ಕವ. .. ಬರ್ದೇ ಬರದ. ಇನ್ನೇನು ಎಂಟರ್ ಒತ್ಬೇಕು ಅನ್ನೋ ಅಷ್ಟು ಹೊತ್ತಿಗೆ ಲ್ಯಾಪ್ತಾಪ್ ರೀಬೂಟ್ !!! ನಿಮ್ಮ ಲ್ಯಾಪ್ಟಾಪ್ ೧೫ ನಿಮಿಷದಲ್ಲಿ ರೀಬೂಟ್ ಆಗತ್ತೆ ಅಂತ ಬಂದ ಸಂದೇಶದಲ್ಲಿನ ನಿಮಿಷಗಳು ಕಡಿಮೆ ಆಗ್ತಿದ್ದನ್ನ ಗಮನಿಸೇ ಇರ್ಲಿಲ್ಲ. ಐಡಿ ಸಿಕ್ಕಿದ್ದೇನೋ ಹೌದು. ಆದ್ರೆ ಸೇವ್ ಮಾಡ್ಕೊಂಡಿಲ್ವೆ ? ತಾನ್ಯಾರು ಅಂತ ಹೇಳಿದ್ರೆ ಆ ಕಡೆ ಅವ್ರಾದ್ರೂ ಸೇವ್ ಮಾಡ್ಕೊಳ್ತಿದ್ರೇನೋ ? ಆದ್ರೆ ಅದೂ ಜಸ್ಟ್ ಮಿಸ್ ! ರಿಬೂಟಾದ ಲ್ಯಾಪ್ಟಾಪ್ ಆನೇ ಆಗ್ಬಾರ್ದೇ ? ತಾಂತ್ರಿಕ ದೋಷವಿದೆ , ಐಟಿಯವ್ರನ್ನ ಸಂಪರ್ಕಿಸಿ ಅಂತ ಸಂದೇಶ ಕೊಡ್ತಾ ಇದ್ರೆ ಮತ್ತೊಂದು ಜಸ್ಟ್ ಮಿಸ್ಸಿಂದ ಬೇಸತ್ತ ಗುಂಡಣ್ಣ ಆ ಲ್ಯಾಪ್ಟಾಪನ್ನ ಮರೆತು ಹೋದ ಮೊಬೈಲ ಸಮೇತ ನೆಲಕ್ಕೆ ಕುಕ್ಕುವಷ್ಟು ಸಿಟ್ಟಾಗಿದ್ದ !

ಇನ್ನೂ ಒಂದಿಷ್ಟು ದಿನ ಹೋಯ್ತು.ಅವಳಿದ್ದ ಬಿಲ್ಡಿಂಗಿಗೇ ತನ್ನ ಪ್ರಾಜೆಕ್ಟ್ ಬದಲಾದಾಗ ಗುಂಡಣ್ಣನ ಖುಷಿಗೆ ಸಾಟಿಯಿಲ್ಲ. ಬ್ಯಾಟ್ರಿ ಫುಲ್ಲಾಗಿರೋ ಮೊಬೈಲು, ಲ್ಯಾಪ್ಟಾಪೊಂದಿಗೆ, ಅವಳು ಬರೋ ಸಮಯದ ಬಸ್ಸಿಗೆ ಸರಿಯಾಗಿ. ಮತ್ತೊಂದಿಷ್ಟು ಜಸ್ಟ್ ಮಿಸ್ಸುಗಳಿಗೆ ರೆಡಿಯಾಗಿ :-) 

Monday, March 28, 2016

ಜಾಲ

ಆಗಾಗ ಒಳಸೇರೋ ಶುದ್ಧ ನೀರು ಖುಷಿ ಕೊಡುತ್ತೆ, ಆರೋಗ್ಯವನ್ನೂ. ಆದ್ರೆ ಆ ನೀರೊಳಗೇ ನಾವು ಸೇರಿದ್ರೆ ? ಕಚ್ಚೋ ಸೊಳ್ಳೆಯ ಸಾವಾಗೋ ಚಪ್ಪಾಳೆ ಹಿತವೀಯುತ್ತೆ. ಆದ್ರೆ ಸಾವೇ ಚಪ್ಪಾಳೆ ಹೊಡೆದು ನಮ್ಮ ಕರೆದ್ರೆ ? ಓದೋ ಕಥೆಯೊಂದು ಖುಷಿ ಕೊಡುತ್ತೆ. ಆದ್ರೆ ಅದೇ ಜಾಲವಾಗಿ ನಮ್ಮ ಸೆಳೆದ್ರೆ ?

ಊರಲ್ಲೊಂದು ಹೊಸ ಅಂಗಡಿ. ಹೆಸರು ಊರಾಗಿದ್ರೂ ಅದು ಹಳ್ಳಿಯೇನಲ್ಲ.ಹಂಗಂತ ಮಹಾನಗರಿಯೂ ಅಲ್ಲ. ಸಾವಿರದ ಸುಮಾರಿಗೆ ಜನರಿದ್ದ ಜಾಗವದು. ಅಲ್ಲಿನ ಜನಕ್ಕೆ ಅಂಗಡಿಗಳು ಹೊಸದಲ್ಲದಿದ್ದರೂ ತಮ್ಮೂರಿಗೆ ಪುಸ್ತಕದಂಗಡಿಯೊಂದು ಬಂದಿದ್ದು ಅಚ್ಚರಿ ಮೂಡಿಸಿತ್ತು. ಪುಸ್ತಕ ಅಂದ್ರೆ ಮಕ್ಕಳ ಪಠ್ಯಪುಸ್ತಕ, ದಿನಚರಿ ಪುಸ್ತಕ,ನೋಟ್ ಬುಕ್ ಬಿಟ್ರೆ ಕಥೆ ಪುಸ್ತಕವೆಂಬುದು ಊರ ಗ್ರಂಥಾಲಯದಲ್ಲೊಂದೇ ಸಿಗೋದು ಎಂಬ ಭಾವವಿರೋ ಜನಕ್ಕೆ ಈ ತರದ್ದೊಂದು ಅಂಗಡಿಯಿರಬಹುದಾ ಎಂಬ ಕಲ್ಪನೆಯೂ ಇರಲಿಲ್ಲ. ಹೊಸದೆಂಬುದ್ರ ಜೊತೆಗೆ ಆ ಅಂಗಡಿ ಕೆಲ ದಿನಗಳಲ್ಲೇ ಮತ್ತೊಂದು ಕಾರಣಕ್ಕೆ ಹೆಸರು ಮಾಡತೊಡಗಿತ್ತು. ಅದೇನಪ್ಪ ಅಂದ್ರೆ ಆ ಅಂಗಡಿಯಲ್ಲಿ ಏನಿದೆ ಅಂತ ನೋಡೋಕೆ ಹೋದ ನಾಲ್ಕೈದು ಹುಡುಗರು ಕೆಲದಿನಗಳಲ್ಲಿ ಮಾಯವಾಗಿದ್ರು !

ಈ ಅಂಗಡಿಯಲ್ಲೇ ಮಾಯವಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿರದಿದ್ರೂ ಇದಕ್ಕೂ ಅವರು ಮಾಯವಾಗಿದ್ದಕ್ಕೂ ಸಂಬಂಧವಿದೆ ಅನ್ನೋದು ಊರವರ ನಂಬಿಕೆ. ಸಾಮಾನ್ಯ ಅಂಗಡಿಗಳು ಬೆಳಗ್ಗೆ ಬಾಗಿಲು ತೆಗೆದ್ರೆ ಇದು ಸಂಜೆ ತೆಗೆಯುತ್ತಿತ್ತು. ಯಾವಾಗ ಮುಚ್ಚುತ್ತಿತ್ತೋ ಯಾರಿಗೂ ಗೊತ್ತಿಲ್ಲ. ಪೇಟೆಯಲ್ಲೆಲ್ಲಾ ಹತ್ತಕ್ಕೆ ಅಂಗಡಿ ಮುಚ್ಚಬೇಕೆಂಬ ನಿಯಮವಿದ್ರೂ ಇಲ್ಲಿನ ಅಂಗಡಿಗಳೆಲ್ಲಾ ಒಂಭತ್ತಕ್ಕೇ ಬಾಗಿಲು ಹಾಕುತ್ತಿದ್ದರಿಂದ ರಾತ್ರಿ ಪಾಳಿಯ ಪೋಲೀಸಪ್ಪ ಅಂಗಡಿ ಮುಚ್ಚಿಸೋ ಸುದ್ದಿಗೆ ಹೋಗುತ್ತಿರಲಿಲ್ಲ. ಹಾಗಾಗಿ ಈ ಅಂಗಡಿ ಯಾವಾಗ ಮುಚ್ಚತ್ತೋ ಎನ್ನುವ ಬಗ್ಗೆ ಅವನಿಗೂ ಊರವರಿಗಿಂತ ಹೆಚ್ಚು ಗೊತ್ತಿರಲಿಲ್ಲ  ! ಒಂದೆರಡು ದಿನ ಗಸ್ತಿಗೆ ಹೋದಾಗಲೂ ಅಂಗಡಿಯ ಬಳಿ ಕಂಡ ಬೆಳಕು ಏನೋ ದಿಗಿಲು ಹುಟ್ಟಿಸಿ ಹಾಗೇ ವಾಪಾಸ್ಸಾಗಿದ್ದ ! ಆ ಅಂಗಡಿಯವನಿಗೆ ಹಗಲುನಿದ್ದೆಯ ರೋಗವಂತೆ. ಹಾಗಾಗಿ ಹಗಲೆಲ್ಲಾ ಅಂಗಡಿಯಲ್ಲೇ ಮಲಗಿರೋ ಅವನು ಸಂಜೆಯ ಮೇಲೇ ತನ್ನೆಲ್ಲಾ ಕೆಲಸಗಳನ್ನು ಮಾಡೋದಂತೆ ಎಂದು ಕೆಲವರೆಂದರೆ ಆ ಅಂಗಡಿ ಮಧ್ಯರಾತ್ರಿಯವರೆಗೂ ತೆಗೆದಿರುತ್ತಂತೆ. ರಾತ್ರೆಯೆಲ್ಲಾ ಎದ್ದಿರೋ ಅವ ಏನೋ ಮಾಟ ಮಂತ್ರಗಳನ್ನು ಮಾಡ್ತಿರಬೇಕು. ಅದಕ್ಕೇ ನಮ್ಮ ಹುಡುಗರು ಮಾಯವಾಗಿದ್ದಾರೆ ಎಂಬ ಊಹಾಪೋಹಗಳು ಕಂತೆ ಕಂತೆಯಾಗಿ ಊರಲ್ಲೆಲ್ಲಾ ಹಬ್ಬಲು ಹೆಚ್ಚು ದಿನ ಬೇಕಾಗಿರಲಿಲ್ಲ.

ಅಂಗಡಿ ಬಗ್ಗೆ ದಿನಕ್ಕೊಂದು ಕಥೆ ಬೆಳೀತಿದ್ರೆ ಆ ಊರ ಹಿರಿಯರು ಅನಿಸಿಕೊಂಡವರಿಗೆ ಅದನ್ನು ಕೇಳಿಕೊಂಡು ಸುಮ್ಮನೇ ಕೂರಲು ಆಗಲಿಲ್ಲ. ಹುಡುಗರು ಕಾಣೆಯಾಗಿ  ಮೂರ್ನಾಲ್ಕು ದಿನಗಳಾದ್ರೂ ಅವರ ಸುಳಿವಿರಲಿಲ್ಲ. ಪುಸ್ತಕದ ಅಂಗಡಿ ಅಂತ ಬೋರ್ಡ್ ಹಾಕ್ಕಂಡಿರೋ ಆ ಅಂಗಡಿಯಲ್ಲಿ ಏನೇನಿದೆ, ಇದಕ್ಕೂ ನಮ್ಮ ಹುಡುಗರ ಕಣ್ಮರೆಗೂ ಏನಾದ್ರೂ ಸಂಬಂಧವಿದೆಯಾ ನೋಡೇ ಬಿಡೋಣ ಅಂತ ನಾಲ್ಕೈದು ಜನ ಸೇರಿಕೊಂಡು ಹೊರಟ್ರು ಅಂಗಡಿ ಕಡೆಗೆ. ಅವರ ಎಣಿಕೆಯಂತೆ ಅಂಗಡಿ ತೆರೆದಿತ್ತು. ಅಂಗಡಿಯಾತನೂ ನಗುನಗುತ್ತಾ ಒಳಗೆ ಕರೆದ್ರೆ ಇವರಿಗೇನೋ ಭಯ. ಒಳಗೆ ಕರೆದು ಏನಾದ್ರೂ ಮಾಡಿದ್ರೆ ಅಂತ. ಹೇಗಿದ್ರೂ ಐವರಿದ್ದೀವಲ್ಲ ಅನ್ನೋ ಧೈರ್ಯದಲ್ಲಿ, ನೆನಪಾದ ದೇವರನ್ನೆಲ್ಲಾ ಬೇಡುತ್ತಾ ಅಂಗಡಿಯ ಒಳಗಡಿಯಿಟ್ರು. ನೋಡ್ತಾರೆ ಅಲ್ಲಿ ಪುಸ್ತಕಭಂಡಾರವೇ ಇದೆ. ರಾಮಾಯಣ, ಮಹಾಭಾರತ, ಪುರಾಣನಾಮ ಚೂಡಾಮಣಿ, ಶಂಕರ ವಿಜಯ..ಹೀಗೆ ಇಲ್ಲಿಯವರೆಗೆ ಹೆಸರು ಕೇಳಿದ್ದೆಲ್ಲಾ ಇದೆಯಲ್ಲಿ. ಇಂತಹ ಒಳ್ಳೆಯ ಸಂಗ್ರಹವಿರೋ ಅಂಗಡಿಯ ಬಗ್ಗೆ ಅನಗತ್ಯವಾಗಿ ಅಪಪ್ರಚಾರವಾಗ್ತಾ ಇದೆಯಲ್ಲ. ಎಲ್ಲಿ ಹೋಗಿದ್ದಾರೋ ನಮ್ಮ ಹುಡುಗರು ಇಂದೋ ನಾಳೆಯೋ ಬರುತ್ತಾರೆ ಬಿಡು ಎಂದುಕೊಂಡು ಮರಳಬೇಕನ್ನೋ ಹೊತ್ತಿಗೆ ಅಂಗಡಿಯವನೇ ಇವರಿಗೆ ಅಡ್ಡಬಂದ.

ನಮ್ಮ ಅಂಗಡಿಗೆ ಬಂದು ಹಾಗೇ ಹೋಗುವುದು ಅಂದರೇನು ? ಒಂದಾದರೂ ಪುಸ್ತಕ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಿದ. ಬರುವಾಗೇನೋ ಭಂಡ ಧೈರ್ಯ ಮಾಡಿ ಬಂದಿದ್ದರು. ಆದರೆ ಅಲ್ಲಿ ಪುಸ್ತಕ ತೆಗೆದುಕೊಳ್ಳಬೇಕಾಗಬಹುದು ಅಂತ ಅವರ್ಯಾರೂ ಎಣಿಸಿರಲಿಲ್ಲ. ಹಾಗೆ ಅಷ್ಟು ದುಡ್ಡೂ ತಂದಿರಲಿಲ್ಲ. ಬೆ ಬೆ ಬೆ ಎನ್ನುತ್ತಾ,ಒಬ್ಬರ ಮುಖವನ್ನೊಬ್ಬರು ನೋಡೋಕೆ ಶುರು ಮಾಡಿದ್ರು. ಈಗ ದುಡ್ಡಿಲ್ಲದಿದ್ದರೆ ಪರವಾಗಿಲ್ಲ. ನಾಳೆಯೋ ನಾಡಿದ್ದೋ ಕೊಡಿ ಅಂತ ಅವರಿಗೊಂದಿಷ್ಟು ಪುಸ್ತಕ ಕೊಟ್ಟು ಕಳಿಸಿದ್ದ. ಅವರೆಲ್ಲಾ ಆಸೆಗಣ್ಣುಗಳಿಂದ ಯಾವ ಪುಸ್ತಕಗಳನ್ನು ಗಮನಿಸುತ್ತಿದ್ದರೂ ಎಂಬುದನ್ನು ಅವನ ಚುರುಕು ಕಣ್ಣುಗಳು ಗುರುತಿಸಿಯಾಗಿತ್ತು !

ಇನ್ನೆರಡು ದಿನಗಳಲ್ಲಿ ಊರಲ್ಲಿ ಹೊಸ ಸುದ್ದಿ. ಕಳೆದು ಹೋದ ಹುಡುಗರನ್ನು ಹುಡುಕಹೋದ ಊರ ಪಂಚರು ನಾಪತ್ತೆಯಾಗಿದ್ದಾರೆ. ಅವರ ಕುಟುಂಬಗಳೂ ಕಾಣದೆ ಅವರ ಮನೆಗೆ ಬೀಗ ಬಿದ್ದಿದೆ ಅನ್ನೋದೇ ಆ ಸುದ್ದಿ !  ಪಂಚರನ್ನು ಪತ್ತೆ ಮಾಡೋಕೆ ಅಂತ ಹೋದ ಯುವಕರ ದಂಡೂ ಮಾಯವಾಗಿದೆ ಅನ್ನೋ ಸುದ್ದಿ ಇನ್ನೂ ಬೇಗ ಹರಡತೊಡಗಿತ್ತು. ಪೇಪರನ್ನು ಓದುತ್ತಿದ್ದ ಅಪ್ಪನಿಗೆ ಶಾಲೆಗೆ ಹೋದ ತನ್ನ ಮಗ ಇನ್ನೂ ಮನೆಗೆ ಬಾರದಿರುವ ಬಗ್ಗೆ, ಪತ್ನಿಗೆ ಕೆಲಸಕ್ಕೆ ಹೋದ ತನ್ನ ಪತಿ ಇನ್ನೂ ಮರಳದಿರುವ ಬಗ್ಗೆ , ದೇವಸ್ಥಾನಕ್ಕೆ ಹೋದ ಅತ್ತೆ ಇನ್ನೂ ಮರಳದಿರುವ ಬಗ್ಗೆ ಮಾವನಿಗೆ, ತನ್ನ ನಾದಿನಿ ಕಾಣೆಯಾಗಿರುವ ಬಗ್ಗೆ ಸೊಸೆಗೆ.. ಹೀಗೆ ಊರವರಿಗೆಲ್ಲಾ ಒಬ್ಬರಲ್ಲಾ ಒಬ್ಬರು ಕಾಣೆಯಾಗಿರುವ ಚಿಂತೆ ಕಾಡತೊಡಗಿತು. ಎಲ್ಲರ ಬೊಟ್ಟೂ ಪುಸ್ತಕದಂಗಡಿಯ ಕಡೆಗೆ. ಆ ಪೋಲೀಸಪ್ಪ ಮತ್ತವನ ಸಂಗಡಿಗರು ಏನು ಮಾಡ್ತಾ ಇದ್ದಾರೆ. ನಮ್ಮವರನ್ನ ಹುಡುಕಿಕೊಡಿ ಅಂತ ಕೇಳೋದೇ ಸರಿ ಇವತ್ತು ಅಂತದುಕೊಂಡು ಒಂದಿಷ್ಟು ಜನ ಗುಂಪಾಗಿ ಪೋಲೀಸ್ ಕಛೇರಿಗೆ ಹೊರಡೋಕೆ ಶುರು ಮಾಡಿದ್ರು. ಪುಸ್ತಕದಂಗಡಿ ಯಥಾಪ್ರಕಾರ ಬಾಗಿಲು ಹಾಕಿತ್ತು. ಅದು ತೆಗೆಯುವವರೆಗೆ ತಾಳ್ಮೆಯಿಲ್ಲ. ಅದರ ಅಂಗಡಿಯಾತನನ್ನು ಹುಡುಕೋಣವೆಂದ್ರೆ ಅವ ಎಲ್ಲಿರುತ್ತಾನೆ ಎಂದು ಪೋಲೀಸರಿಗೂ ಗೊತ್ತಿಲ್ಲವಲ್ಲ. ತಮ್ಮವರನ್ನು ಕಳೆದುಕೊಂಡ ನೋವಿಗೆ ಆ ಅಂಗಡಿಯ ಮೇಲೊಂದಿಷ್ಟು ಕಲ್ಲುಗಳು ಬಿತ್ತು. ಪೋಲೀಸರಿಗೊಂದಿಷ್ಟು ಧಿಕ್ಕಾರಗಳು ಬೀಳಲು ಶುರುವಾಯ್ತು.  ಹೊತ್ತೇರುತ್ತಿದ್ದಂತೆ ಧಿಕ್ಕಾರಗಳ ದನಿ ಏಳುತ್ತಲೇ ಹೋಯಿತು. ಆ ದನಿ ಕೇಳಿಸಿಕೊಂಡ ಇನ್ನೊಂದಿಷ್ಟು ಜನ  ಮನೆಗೆ ಬೀಗವನ್ನೂ ಹಾಕದೇ ಮಾಡುತ್ತಿದ್ದ ಕೆಲಸಗಳ ಹಾಗಾಗೇ ಬಿಟ್ಟು ಪೋಲೀಸ್ ಇಲಾಖೆಯತ್ತ ತೆರಳತೊಡಗಿದ್ರು.
ಧಿಕ್ಕಾರಗಳ ಮೇಲೆ ಧಿಕ್ಕಾರದ ಕೂಗು ಹೊತ್ತೇರಿದಂತೆ ಹೆಚ್ಚುತ್ತಲೇ ಸಾಗಿತು !

ಇದ್ದಕ್ಕಿದ್ದಂತೆ ಕತ್ತಲು ! ಸುತ್ತಲಿದ್ದ ದೀಪಗಳೆಲ್ಲಾ ಆರಿದಂತೆ. ಕತ್ತಲೆಗೆ ಕಣ್ಣುಗಳನ್ನ ಹೊಂದಿಸಿಕೊಳ್ಳೋ ಹೊತ್ತಿಗೆ ಪೋಲೀಸ್ ವಾಹನದ ಸದ್ದು. ಕಿರ್ರೆನ್ನೋ ಧ್ವನಿವರ್ಧಕ ಸರಿಯಾದ ನಂತರವೊಂದು ಪ್ರಕಟಣೆ. ಸಾಗರದ ಜನತೆಗೆ ಆರಕ್ಷಕ ಇಲಾಖೆಯ ಪ್ರಕಟಣೆ. ದಿನಪತ್ರಿಕೆ, ವಾರಪತ್ರಿಕೆ, ಮೊಬೈಲುಗಳಲ್ಲಿ ಕಥೆಯೊಂದನ್ನು ಪ್ರಕಟಿಸಿ ಅದನ್ನು ಓದೋ ಎಲ್ಲರನ್ನೂ ಮರಳು ಮಾಡಿ ನಂತರ ಅವರ ಮನೆಯನ್ನು ದೋಚುವ ಕಳ್ಳರ ಜಾಲವನ್ನು ಪತ್ತೆಹಚ್ಚಿದ್ದೇವೆ. ಕಥೆಯೊಳಗೆ ಇರೋರೆಲ್ಲ ವಾಸ್ತವಕ್ಕೆ ಬನ್ನಿ. ನೀವಿದ್ದಿದು ನವಿಲೂರ ಕಥೆಯ ಗುಂಗಲ್ಲಿ. ನೀವು ಓದುತ್ತಿದ್ದ ಕಥೆಯಿಂದ ನಿಮ್ಮನ್ನು ಹೊರತರಲೆಂದೇ ಸದ್ಯಕ್ಕೆ ಕರೆಂಟ್ ತೆಗೆಯಲಾಗಿದೆ.  ನಿಮ್ಮ ಮಕ್ಕಳೆಲ್ಲಾ ಮನೆಯಲ್ಲೇ ಇದ್ದಾರೆ ನೋಡಿ. ಅವರೂ ನಿಮ್ಮ ತರಹ ಕಥೆಯ ಜಾಲದೊಳಗಿರಬಹುದು !..ಎದ್ದೇಳಿ. ಅವರನ್ನೂ ಅದರಿಂದ ಹೊರತನ್ನಿ.. ಸಾಗರದ ಜನತೆಗೆ..ಪ್ರಕಟಣೆ. ಅವರ ಪ್ರಕಟಣೆಯ ಅರಗಿಸಿಕೊಳ್ಳಲು ಪ್ರಯತ್ನಿಸಿದ ಜನ ಸುತ್ತ ನೋಡಿದರೆ ಹೌದು. ಪುಸ್ತಕದಂಗಡಿಯೂ ಇಲ್ಲ, ಅದರ ಯಜಮಾನನೂ ಇಲ್ಲ. ತಮ್ಮ ಕೈಯಲ್ಲಿ ಹಿಡಿದಿದ್ದ ಪೇಪರ್, ಪಕ್ಕದಲ್ಲಿದ್ದ ಮೊಬೈಲ್ ನಗುತ್ತಿತ್ತು.

ಈ ಕಥೆ "ಪಂಜು"ವಿನಲ್ಲಿ ಪ್ರಕಟವಾಗಿದೆ

Friday, March 25, 2016

ಹೋಳಿ

ಹ್ಯಾಪಿ ಹೋಲಿ,ಹ್ಯಾಪಿ ಹೋಳಿ ಅಂತ ಕೂಗಾಡ್ತಿದ್ದ ಹುಡುಗ್ರು ಕೇರಿಲೆಲ್ಲಾ ಓಡಾಡ್ತಿದ್ರೆ ಅಂಗಳಗಳಲ್ಲಿನ ರಂಗೋಲಿಗಳು ಬಣ್ಣ ತುಂಬಿಕೊಳ್ತಿದ್ದವು. ಹೋಳಿ ಅಂದ್ಕೊಂಡು ಯಾರ್ಯಾರು ಬಂದು ನನ್ನ ಬಿಳಿಸೀರಿಗೆ ಬಣ್ಣ ಹಾಕ್ತಾರೋ ಅಂತ ಹೆದರ್ಕೊಂಡು ಮನೆಯೊಳಗೇ ಕೂತ ರಂಗಜ್ಜಿ, ಮಕ್ಕಳ ಜೊತೆಗೆ ತಾವೂ ಮಕ್ಕಳಾಗಿ ಮೈಯೆಲ್ಲಾ ಬಣ್ಣವಾಗಿದ್ದ ಸಾಕಜ್ಜ, ಹೋಳಿಯ ಬಣ್ಣಗಳಿಗಿಂತ ತನ್ನೊಂದಿಗೆ ಆಡೋಕೆ ಬರ್ತಿದ್ದ ಮಕ್ಕಳನ್ನು ಖುಷಿಯಿಂದ ನೋಡ್ತಿದ್ದ ಬೀದಿನಾಯಿ ಗುಂಡಣ್ಣ, ಬೀದಿಯ ಹುಡುಗರೆಲ್ಲಾ ಹೋಳಿ ಆಡ್ತಾ ಇದ್ರೆ ತಾನೂ ಅವರ ಜೊತೆ ಸೇರಿಕೊಳ್ಳಲಾ ಬೇಡವ ಎಂಬ ಗೊಂದಲದಲ್ಲೇ ತಮ್ಮ ಅಪಾರ್ಟ್ ಮೆಂಟಿನ ಕಿಟಕಿಯಿಂದ ನೋಡ್ತಿದ್ದ ರಾಹುಲ್..ಹೀಗೆ ಬೀದಿಯಲ್ಲೊಂದು ಬಣ್ಣಗಳ, ಭಾವಗಳ ಹೋಳಿ
ಹ್ಯಾಪಿ ಹೋಳಿ,ಹ್ಯಾಪಿ ಹೋಳಿ ಅಂತ ದಾರೀಲಿ ಬರ್ತಿದ್ದ ಮಕ್ಕಳಿಗೆಲ್ಲಾ ಅವಳು ಬಣ್ಣ ಎರಚ್ತಾ ಇದ್ರೆ ಹಾಕಿಸಿಕೊಂಡ ಮಕ್ಕಳೂ ಹೋಳಿ ಹೋಳಿ ಅಂದ್ಕೊಂಡು ಅವ್ಳ ಕೈಯಲ್ಲಿದ್ದ ಬಣ್ಣ ತಗೊಂಡು ಅವ್ಳಿಗೇ ಒರಸ್ತಿದ್ರು. ಹಾಕಿಸಿಕೊಳ್ಳೋಕೆ ಒಪ್ಪದ ಮಕ್ಕಳನ್ನ ಒಂದಿಷ್ಟು ದೂರ ಅಟ್ಟಿಸಿಕೊಂಡಾದ್ರೂ ಹೋಗೋಳು. ಅವಳಿಗೆ ಹಾಕೋಕೆ ಆಗ್ದೇ ಇದ್ರು ಓಡ್ತಿದ್ದ ಮಕ್ಕಳ ಎದುರಿಗೆ ಬರೋ ಇನ್ಯಾರಾದ್ರೂ ಬಣ್ಣ ಹಾಕಿ ಬಿಡೋರು. ಹೆ ಹೆ, ಹೋ ಎಂಬ ಕೂಗಾಟವಲ್ಲಿ. ಭಾರತದ ಕ್ರಿಕೆಟ್ ಮ್ಯಾಚಲ್ಲಿ ಫೋರೋ, ಸಿಕ್ಸೋ ಹೊಡೆದಾಗ ಅಥವಾ ನಮ್ಮ ಬೌಲರ್ಗಳಿಗೆ ವಿಕೆಟ್ ಸಿಕ್ಕಾಗ ಜನ ಚೀರೋ ತರ. ಯಾರಾದ್ರೂ ಬಣ್ಣ ಹಾಕ್ಲಿ ಅಂತ್ಲೇ ಬಿಳಿ ಬಟ್ಟೆ ಹಾಕ್ಕೊಂಡು ಆ ರಸ್ತೆಯಲ್ಲಿ ಓಡಾಡ್ತಿದ್ದ ಜನರಿಗೂ ಅವಳ ಬಣ್ಣದ ರೇಚನವಾಗಿತ್ತು. ಯಾರಾದ್ರೇನು ಖುಷಿ ಹಂಚ್ಕೊಳ್ಳೋಕೆ ? ಹೋಳಿಗೆ ಬಣ್ಣ ಹಾಕೋಕೆ ?! ಹೋಗ್ತಿದ್ದ ಬಸ್ಸುಗಳಿಗೇ ಬಣ್ಣ ಎರಚ್ತಾರಂತೆ , ಇನ್ನು ತಮ್ಮದೇ ಬೀದೀಲಿ ನಡ್ಕೊಂಡು ಹೋಗೋರ್ನ ಬಿಡ್ತಾರಾ ? ಬಣ್ಣಗಳಲ್ಲಿ ಮಿಂದೆದ್ದ ಖುಷಿಯ ಬಗ್ಗೆ ವಿಧಿಗೂ ಅಸೂಯೆಯಾಗಿತ್ತು ಅನ್ಸತ್ತೆ. ಯಾರ್ರೋ ಅದು ಆ ಹುಚ್ಚಿ ಜತೆ ಬಣ್ಣ ಆಡೋರು ಎಂಬ ದನಿಯಾಗಿ ಹೊರಬಿದ್ದಿತ್ತದು. ಹುಡುಗರ ಮುಗ್ದತೆಯಲ್ಲಿನ ಖುಷಿ ಅಪರಾಧಿ ಪ್ರಜ್ಞೆಯೊಂದಿಗೆ ಸ್ಥಬ್ದವಾಗಿತ್ತು !

ಶಾಲೆಗೆ ಹೋಗೋ ಸಮಯದಲ್ಲಿ ತನ್ನದೇ ವಯಸ್ಸಿನ ಮಕ್ಕಳು ಗೋಲಿ, ಬುಗುರಿ ಆಡೋದನ್ನ ಕಂಡ್ರೆ ರಾಹುಲ್ಲಿನ ಮನಸ್ಸಲ್ಲೂ ಆಸೆ. ತಾನೂ ಅವರ ಜೊತೆ ಸೇರ್ಕೋಬೇಕು ಅಂತ. ಆದ್ರೆ ಮನೇಲಿ ಬಿಟ್ರೆ ತಾನೆ. ಇವನಿಗೂ ಅವರಿಗೂ ಇವನ ಅಪಾರ್ಟ್ಮೆಂಟಿಗೂ ಗ್ರೌಂಡ್ ಫ್ಲೋರಿಗೂ ಇದ್ದಷ್ಟೇ ಅಂತರ ಇರಬೇಕು ಅನ್ನೋದು ಅವನ ಅಪ್ಪ-ಅಮ್ಮನ ನಿಲುವು. ಆದ್ರೂ ಒಮ್ಮೆ ಮನಸ್ಸು ತಡೀದೆ ಅವ್ರ ಜೊತೆಗೆ ಕ್ರಿಕೆಟ್ ಆಡೋಕೆ ಹೋಗಿ ಬಿದ್ದು ಗಾಯ ಮಾಡ್ಕೊಂಡ ದಿನ ಮನೆಯಲ್ಲೂ ಚೆನ್ನಾಗಿ ಏಟು ಬಿದ್ದಿತ್ತವನಿಗೆ. ನಾವೆಷ್ಟು ಕಷ್ಟ ಪಟ್ಟು ಸಾವಿರ ಸಾವಿರ ಕಟ್ಟಿ ನಿನ್ನನೊಂದು ಒಳ್ಳೆ ಸ್ಕೂಲಿಗೆ ಸೇರಿಸಿದ್ದು ಆ ಬೀದಿಮಕ್ಕಳ ಜೊತೆಗೆಲ್ಲಾ ಸೇರಿ ಹಾಳಾಗ್ಲಿ ಅಂತಾನಾ ? ಮನೆಯೊಳಗೇ ಇದ್ದು ಏನಾದ್ರೂ ಮಾಡ್ಕೊ. ಹೊರಗೇನಾದ್ರೂ ಕಾಲಿಟ್ಯೋ ? ನೋಡು ಅಂತ ಅವನಪ್ಪ-ಅಮ್ಮ ಬಯ್ತಾ ಇದ್ರೆ ಶಾಲೆಯಲ್ಲಿ ದಿನಾ ಪಾಟ ಪಾಟ ಅಂತನ್ನೋದು ಬಿಟ್ರೆ ಆಟ ಅನ್ನೋದು ಸಿಲೆಬಸ್ಸಲ್ಲಿ ಮಾತ್ರ ಇದೆ ಅಂತ, ಶಾಲೆಯ ಸುತ್ತ ಇರೋ ಗ್ರೌಂಡು ಶಾಲಾ ವಾಹನಗಳ ಪಾರ್ಕಿಂಗಿಗೆ ಮಾತ್ರ ಅಂತ ಹೇಗಾದ್ರೂ ಹೇಳ್ತಾನವ.

ಗುಂಡಣ್ಣಂಗವತ್ತು ಸಖತ್ ಖುಷಿ. ತನ್ನ ಪಾಡಿಗೆ ಮಲಗಿದವನನ್ನ ಯಾರಪ್ಪಾ ನೀರಾಕಿ ಎಬ್ಬಿಸಿದವರು ಅಂತ ಬೈಯ್ಕೊಳ್ತಾ ಕಣ್ಣು ಬಿಟ್ರೆ ಕಣ್ಣೆದುರು ಒಂದಿಷ್ಟು ಮಕ್ಕಳು. ಅವ್ರ ಕೈಯಲ್ಲೆಲ್ಲಾ ಬಣ್ಣ. ಎಲ್ಲಾ ತನ್ನ ತಲೆಗೆ, ಮುಖಕ್ಕೆ ಮೆತ್ತೋಕೆ ಬರ್ತಾ ಇದ್ರೆ ಒಮ್ಮೆ ಬೌ ಬೌ ಅಂದು ಅವ್ರನ್ನೆಲ್ಲಾ ಹೆದರಿಸಿಬಿಡ್ಲಾ ಅನ್ನಿಸ್ತು. ಆದ್ರೂ ಆ ಮಕ್ಕಳ ಖುಷಿಯ ಮುಖದಲ್ಲಿ ಗಾಬರಿ ತರೋಕೆ ಇಷ್ಟ ಆಗದೇ ಸುಮ್ಮನಿದ್ದ ಅವ. ಕಣ್ಣಿಗೊಂದು ಬಿಟ್ಟು ಎಲ್ಲಾದ್ರೂ ಬಣ್ಣ ಹಾಕ್ಕೊಳ್ರಪ್ಪ ಅಂತ ಮುಖ ಒಡ್ಡಿ. ನಾಯಿ ಮುದ್ದುಮಾಡಿಸ್ಕೊಳ್ತಿದೆ ಅಂದ್ಕೊಂಡು ಅದ್ರ ಮುಖಕ್ಕೂ ಹಚ್ಚಿದ್ರೂ, ಬಾಲಕ್ಕೂ ಮೆತ್ತಿದ್ರು. ಏ ಆ ನಾಯಿ ಬಿಡ್ರೋ ಅಂತ ಬಿಡಿಸೋಕೆ ಬಂದ ಸಾಕಜ್ಜನಿಗೂ ಮೆತ್ತಿದ್ರು. ಎಲಾ ಮಕ್ಕಳ್ರಾ ನನ್ನ ಬಟ್ಟೆ ಎಲ್ಲಾ ಹಾಳು ಮಾಡಿದ್ರಲ್ರೋ ಅಂತ ಹುಸಿ ಕೋಪ ತೋರ್ಸಿದ ಅಜ್ಜ ಸುಮ್ಮನೇ ಅವ್ರನ್ನ ಓಡಿಸಿಕೊಂಡು ಹೋದ ಹಾಗೆ ಮಾಡಿ ಕೊನೆಗೆ ಅವ್ರ ಗುಂಪಲ್ಲೇ ಒಂದಾದ್ರು, ಎದುರಿಗೆ ಸಿಕ್ಕ ಮತ್ತೊಂದು ನಾಯಿಗೆ ಬಣ್ಣ ಹಚ್ಚೋಕೆ !

ನಾಯಿಯ ಬಾಲಕ್ಕೆ ಪಟಾಕಿ ಸರ ಹಚ್ಚಿ ತಮಾಷೆ ನೋಡಿದ ಮಕ್ಕಳಿಗೆ ಅದೇ ನಾಯಿಯ ಮೇಲೆ ಪ್ರೀತಿಯುಕ್ಕಿದೆ ಹೋಳಿಯ ಬಣ್ಣಗಳೊಂದಿಗೆ. ಹುಚ್ಚಿ ಹುಚ್ಚಿ ಅಂತ ಜನರಿಂದೆಲ್ಲಾ ತಾತ್ಸಾರಗೊಂಡು ಎಲ್ಲೋ ಮೂಲೆಯಲ್ಲಿ ಕೂತಿರುತ್ತಿದ್ದ ಅವಳಲ್ಲೊಂದಿಷ್ಟು ಚೈತನ್ಯ ಬಂದಿದೆ ಯಾರೋ ಎರಚಿದ ಬಣ್ಣದಿಂದ. ಏನೋ ಮಾಡಲು ಹೋಗಿ ಅನಿರೀಕ್ಷಿತವಾಗಿ ಬಿದ್ದ ಬಣ್ಣದಿಂದ ಸಾಕಜ್ಜನ ಬಾಲ್ಯ ಮರಳಿದೆ. ಮಗನ ಕಿಟಕಿಯಾಚೆಗಿನ ದೃಷ್ಠಿಯನ್ನು ಅರ್ಥ ಮಾಡ್ಕೊಂಡು ಅವನನ್ನೂ ಕರ್ಕೊಂಡು ಚಡ್ಡಿಯಲ್ಲಿ ಹೊರಬಂದ ಅಪ್ಪ ಬೀದಿಯ ಜನರೊಂದಿಗೆ ಒಂದಾಗಿ ಹೋಳಿ ಆಡ್ತಾ ಇದ್ರೆ ರಾಹುಲನಿಗೆ ಅನಿರೀಕ್ಷಿತ ಆಶ್ಚರ್ಯ. ಹೋಳಿಯೆನ್ನೋದು ಬರಿ ಬಣ್ಣಗಳ ಭಾವವಲ್ಲ. ಭಾವಗಳ ಬಣ್ಣ ಮೇಳವಿಸೋ, ಮನಸ್ಸುಗಳ ಬಣ್ಣ ಬಯಲಾಗೋ ಹಬ್ಬ. ಇಲ್ಲಿನ ಹುಚ್ಚಿ, ರಾಹುಲ್, ಗುಂಡಣ್ಣ, ಸಾಕಜ್ಜಿ, ರಂಗಮ್ಮ ಬೇರ್ಯಾರೂ ಅಲ್ಲ. ನಮ್ಮೊಳಗಿನ, ಸುತ್ತಲೂ ಇರೋ ಭಾವಗಳೇ ಇವು. ಮೇಲುಕೀಳು, ಸಂಪತ್ತು, ಅಂತಸ್ತು, ಜಾತಿ, ಬೀದಿಗಳೆಂದು ನಾವೇ ಸೃಷ್ಠಿಸಿಕೊಂಡ ಮೇಲರಿಮೆ, ಕೀಳರಿಮೆಗಳಲ್ಲೇ ಮಕ್ಕಳ ಬಾಲ್ಯ , ಯುವಕರ ಯೌವನ, ವಯಸ್ಕರ ಮುಪ್ಪೂ ಕೊಚ್ಚಿಹೋಗಿ ಸಂತೋಷ ಮರೆಯಾಗೋ ಸಮಯದಲ್ಲಿ ನಮ್ಮತನ ನೆನಪಿಸೋಕೆ ಬರೋ ಹಬ್ಬಗಳಲ್ಲೊಂದು ಹೋಳಿ. ಬಣ್ಣಗಳ ಖುಷಿಯಾಗೋ ನೀರಿಗ್ಯಾವ ಅಂತಸ್ತು, ಜಾತಿ ? ಹಿಡಿದವನ ಭಾವ, ನೀಡಿದ ಬಣ್ಣವಷ್ಟೇ ಅದಕ್ಕೆ. ವರ್ಷಕ್ಕೊಂದು ದಿನ ಹಣೆಗೆ ಬಣ್ಣ ಮೆತ್ತಿ, ಉಳಿದ ದಿನವೆಲ್ಲಾ ಅಸಲಿಯತ್ತನ್ನು ಮರೆ ಮಾಚೋ ಆತ್ಮವಂಚನೆಗಿಂತ ನಮ್ಮಲ್ಲಿನ ಅಹಮಿಕೆಗಳ ಕೊಳೆ ಕೊಚ್ಚಿ, ಮುಗ್ದತೆಗೊಂದು ಮೆರಗು ಸಿಕ್ಕ ದಿನವೇ ನಿಜವಾದ ಹೋಳಿ

Monday, March 21, 2016

ಕಾಪಿ

ಮಾಡಿದ್ದೇ ಕೆಲಸವನ್ನು ಸದಾ ಮಾಡ್ತಾ ಇರು ಅಂದ್ರೆ ಏನೂ ಮಾಡದೇ ಆದ್ರೂ ಇರ್ತೀನಿ,ಆದ್ರೆ ಅದನ್ನ ಮಾಡೋಲ್ಲ ಅಂತಿದ್ದವನು ಅವ. ಹೊಸತನಕ್ಕೆ ತುಡಿದು ಇರೋದನ್ನ ಕಳೆದುಕೊಳ್ಳುವುದಕ್ಕಿಂತ ಇದ್ದುದರಲ್ಲೇ ಖುಷಿಯಾಗಿರೋದು ಮೇಲು ಅನ್ನುವವಳು ಅವಳು. ಭಾರತ-ಪಾಕಿಸ್ತಾನಗಳಂತಹ ಭಿನ್ನ ವಿಚಾರಧಾರೆಯಿದ್ರೂ ಇವರ ಮಧ್ಯೆ ಅದೆಂತದೋ ಒಂದು ಲವ್ವಿರೋದು ಹೆಂಗೆ ಅನ್ನೋದು ಬೇರೆ ಅವ್ರಿಗೆ ಹೋಗ್ಲಿ ಸ್ವತಃ ಅವ್ರಿಗೇ ಅಚ್ಚರಿಯ ವಿಷಯವಾಗಿತ್ತು. ಎಡಪಂಥ ಬಲಪಂಥ ಅಂತ ಪ್ರತಿದಿನಾ ಕಚ್ಚಾಡೋರು ಹೆಗಲ ಮೇಲೆ ಕೈಹಾಕಿಕೊಂಡ್ರು ಓಡಾಡ್ತಿದ್ರೆ ಹೆಂಗೆ ಅಚ್ಚರಿಯಾಗುತ್ತೋ ಆ ತರಹದ ಆಶ್ಚರ್ಯ ಇವ್ರನ್ನ ಕಂಡವರದ್ದೆಲ್ಲಾ ಆಗಿರ್ತಿತ್ತು. ಅಫ್ಜಲ್ ಗುರುವಿಗೆ ಜೈಕಾರ ಹಾಕದ, ಅಸಹಿಷ್ಣುತೆಯ ಬಗ್ಗೆ ಹೂಂಕರಿಸಿದ, ಮೋದಿ ಸ್ತುತಿ ಮಾಡದ ಇವರಂಗೆ ಬದುಕೋಕು ಸಾಧ್ಯವಾ ಅಂತ ಎರಡೂ ಪಂಥಗಳ ಜನ ಎಷ್ಟೋ ಸಲ ಯೋಚಿಸಿದ್ದಿದೆ. ಇಂಡಿಯ ಅನ್ನೋದು ಪ್ರಗತಿಪರ ಚಿಂತನೆ, ಭಾರತ, ಹಿಂದೂಸ್ತಾನ ಅನ್ನೋದರ ಹಿಂದೆ ಮನುವಾದ ಅಡಗಿದೆ ಎಂಬ ಬುದ್ದಿಜೀವಿಗಳಿಗೂ , ಅಮೇರಿಕಾದಲ್ಲಿ ತಯಾರಾದ ರಾಕೆಟ್ಟು, ವಿಮಾನ, ಕಂಪ್ಯೂಟರ್ ತಂತ್ರಜ್ಞಾನಗಳೆಲ್ಲಾ ಭಾರತದಿಂದ್ಲೇ ಕದ್ಕೊಂಡು ಹೋಗಿದ್ದು, ಜೀನ್ಸ್ ಪ್ಯಾಂಟ್ ಹಾಕ್ತಿರೋದ್ರಿಂದ್ಲೇ ನಮ್ಮ ಸಂಸ್ಕೃತಿ ಹಾಳಾಗ್ತಿರೋದು ಎನ್ನೋ ಸಂಸ್ಕೃತಿವಾದಿಗಳ ಮಧ್ಯೆ ಯಾರ ಗುಂಪೂ ಸೇರದ ಇವರ ನಿಲುವು ಅನೇಕರಿಗೆ ನಿಗೂಢವೆನಿಸುತ್ತಿತ್ತು ! ಅಭಿವೃದ್ಧಿ, ರಾಷ್ಟ್ರೀಯತೆ, ದೇಶಪ್ರೇಮವೆಲ್ಲಾ ತಮ್ಮ ಪಕ್ಷದೇ ಸ್ವತ್ತು ಎಂಬಂತೆ ಬಿಂಬಿಸೋ ರಾಜಕಾರಣಿಗಳೆಂದರೆ ಇವರಿಗೆ ದಿವ್ಯ ನಿರ್ಲಕ್ಷ್ಯ. ನಾವು ಯಾರದ್ದೋ ಕಾಪಿ ಯಾಕಾಗಬೇಕು, ನಾವು ನಾವೇ ಎಂಬ ಇವರ ಲಕ್ಶ್ಯವೇನಿದ್ದರೂ ವಾಸ್ತವ, ಭವಿಷ್ಯಗಳತ್ತ ಮಾತ್ರ. ಸಂತಸ-ಸಂಕಷ್ಟಗಳೇನೇ ಇದ್ದರೂ ವಾಸ್ತವದಲ್ಲೇ ಖುಷಿಯಾಗಿರೋ ಪ್ರಕೃತಿಯಂತೆ ಅವಳಾದರೆ, ಇಂದಿಗೆ ತೃಪ್ತಿಯಾಗದೇ ಹೊಸ ನಾಳೆಗೆ ಹಂಬಲಿಸುವ ಪುರುಷನಂತೆ ಅವನು. 

ಕಾಲೇಜಲ್ಲೊಂದು ಕಥಾ ಸ್ಪರ್ಧೆ. ಬಣ್ಣ ಬಣ್ಣದ ಕಥೆಗಳು ಬಂದಿದ್ದವಲ್ಲಿ. ಹುಟ್ಟಾ ಕಥೆಗಾರರ ಕಥೆ, ಕುವೆಂಪು, ತೇಜಸ್ವಿ, ಭೈರಪ್ಪ,ಅನಂತಮೂರ್ತಿಯವರ ಕೃತಿಗಳಿಂದ ಸ್ಪೂರ್ತಿ ಪಡೆದ ಕತೆ, ಬಹುಮಾನಕ್ಕೆಂತಲೇ ನಿದ್ದೆಗೆಟ್ಟು, ತಿದ್ದಿ ತೀಡಿ ಕಳಿಸಿದ ಕಥೆ, ತಮ್ಮದೇ ಜೀವನದ ಸೋಲು-ಗೆಲುವುಗಳ ಪಾತ್ರಗಳನ್ನಾಗಿಸಿದ ಕಥೆ, ಕ್ರಾಂತಿಯಾಗ್ಬೇಕು, ಬೆಂಕಿ ಹಚ್ಬೇಕು ಅನ್ನೋ ಕತೆ,ಘೋರ ಕಾಡ ಮಧ್ಯದ ಮಧ್ಯರಾತ್ರಿಯ ಅನುಭವದ ಕತೆ, ಭೂತದ ಕತೆ, ರಾಜಕೀಯದ ಕತೆ.. ಹೀಗೆ ದೇಶದೆಲ್ಲಾ ವಿಚಾರಗಳೂ ಕತೆಯಾಗಿದ್ದವಲ್ಲಿ. ಅಲ್ಲಿವನ ನವಿಲುಗರಿಯ ಕತೆಗೆ ಮೊದಲ ಬಹುಮಾನ ಬಂದದ್ದು ಮೆಚ್ಚುಗೆಗಳಿಗಿಂತಲೂ ಹೆಚ್ಚು ಹೊಟ್ಟೆಕಿಚ್ಚುಗಳನ್ನು ಗಳಿಸಿತ್ತು ! ಕಾಡೊಂದರಲ್ಲಿ ಜಿಂಕೆಮರಿಗೆ ಆಕಸ್ಮಿಕವಾಗಿ ಸಿಗೋ ನವಿಲುಗರಿಯ ಸುತ್ತ ಓಡೋ ಆ ಕತೆಯನ್ನೋದಿ ಸಖತ್ ಖುಷಿಯಾದ ಅವಳು ಮುಂದಿನ ತಿಂಗಳು ನಡೆಯಲಿದ್ದ ಅಂತರಕಾಲೇಜು ಕಥಾಸ್ಪರ್ಧೆಗೆ ಅದನ್ನೇ ಕಳಿಸುವಂತೆ ಹೇಳಿದ್ದಳು. ಆದರೆ ಬರೆದದ್ದನ್ನೇ ಬರೆಯುವುದೆಂದರೆ , ಮಾಡುವುದನ್ನೇ ಮಾಡುವುದು ಅವನಿಗೆ ದಿನಾ ಕಹಿಬೇವಿನ ಕಷಾಯ ಕುಡಿಯುವಷ್ಟೇ ಕಷ್ಟ. ಎಕ್ಸಾಮಲ್ಲಿ ಕಾಪಿ ಮಾಡು ಅಂತ ಹೇಳ್ತಿಲ್ಲ ನಿಂಗೆ, ಇದು ಸ್ಪರ್ಧೆ. ಇಲ್ಲಿ ಗೆಲ್ಲುವಂತದ್ದೇ ಗೆಲ್ಲೋದು,ಹುಚ್ಚು ಹೊಸ ಪ್ರಯತ್ನಗಳಲ್ಲ ಅಂದ್ರೆ ಅವ ಒಪ್ಪಲೊಲ್ಲ.ಅದೇ ಕಥೆಯನ್ನ ಒಂಚೂರು ಬದಲಾಯಿಸಿ ಜಿಂಕೆ ಮರಿಯ ಕತೆಯೆಂತಲೂ , ನವಿಲಾರಣ್ಯ ಎಂತಲೋ ಬರಿಯೆಂದರೆ ಅದಕ್ಕೂ ಒಪ್ಪಿರಲಿಲ್ಲ ಅವ.  ಅಂತರಿಕ್ಷಯಾನದ ಬಗ್ಗೆಗೊಂದು ಬರೆದಿದ್ದ. ಆ ಕತೆಗೆ ಮೊದಲ ಬಹುಮಾನವಿರಲಿ ಸಮಾಧಾನಕರ ಬಹುಮಾನವೂ ಬಂದಿರಲಿಲ್ಲವೆಂಬುದು ಅವಳಿಗೆ ಎಷ್ಟು ಬೇಸರವಾಗಿತ್ತೋ ಅಷ್ಟೇ ಖುಷಿಯನ್ನು ಅವನ ಹಿಂದೆ ಬಿಟ್ಟು ನಗುವವರಿಗೂ ತಂದುಕೊಟ್ಟಿತ್ತು !  ಅರಳು ಹುರಿದಂತೆ ಮಾತನಾಡುವ ಅವನಿಗೆ ಪ್ರತೀ ವರ್ಷದ ಚರ್ಚಾ ಸ್ಪರ್ಧೆಯಲ್ಲೂ ಒಂದು ಬಹುಮಾನ ಇದ್ದಿದ್ದೇ. ನೀನು ಯಾವುದಾದ್ರೂ ಬಾನುಲಿಯ ಉದ್ಘೋಷಕನಾಗೋ, ನಿನ್ನಿಷ್ಟದ ಕೆಲಸ ಮಾಡ್ಕೊಂಡು ಆರಾಮಾಗಿರಬಹುದು ಅಂದಿದ್ಳು ಅವಳು. ಇವನೇ ಮನಸ್ಸು ಮಾಡಿರಲಿಲ್ಲ.

ಡಿಗ್ರಿ ಮುಗಿಸೋ ಹೊತ್ತಿಗೆ ಎಲ್ಲರಂತೆ ಇವರಿಗೂ ಓದಿಗೆ ತಕ್ಕ ಕೆಲಸದ ಅವಕಾಶ ಸಿಕ್ಕಿತ್ತು. ಒಳ್ಳೆಯ ಕೆಲಸ ಸಿಕ್ಕಿದೆ , ಇನ್ನೇನು ಲೈಫು ಸೆಟಲ್ ಆಯ್ತಲ್ಲ ಅಂತ ಅವಳು ಅನ್ನುತಿದ್ರೆ ಇವನಿಗೆ ಇನ್ನೂ ಓದಬೇಕೆಂಬ ಹಂಬಲ. ನಾನು ಮಾಡು ಅಂದಿದ್ದನ್ನು ಹೆಂಗಿದ್ರೂ ಮಾಡಲ್ಲ ನೀನು , ನಿನ್ನಿಷ್ಟದ ಹಾಗಿರು ಅಂತ ಬೇಸತ್ತಿದ್ದ ಅವಳು ಸಿಕ್ಕ ಕೆಲಸ ಸೇರಿ ದೂರ ಹೊರಟಿದ್ದಳು. ಓದಿದ, ಮತ್ತೂ ಓದಿದ. ಸಂಶೋಧನೆ ಮಾಡಬೇಕು ಅಂತಲೂ ಮುಂತಾದ. ತಾ ತಗೊಂಡ ಹೊಸ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಸೋಲು ಎದುರಾದಾಗೆಲ್ಲಾ, ಇದು ಸುಲಭದಲ್ಲಿ ಆಗೋ ವಿಷಯವಲ್ಲ ಬಿಡಪ್ಪ, ಸುಲಭದ್ದೇನಾದ್ರೂ, ಸಿದ್ದ ಮಾದರಿಯ ತರಹದ್ದೇನಾದ್ರೂ ತಗೋಬಾರ್ದಿತ್ತ ಅಂತ ಗೈಡೇ ಹೇಳಿದ್ರೂ ಕೂಡ ಅವನಿಗೆ ತಾ ನಡೆದ ಹಾದಿಯ ಬಗ್ಗೆ ಬೇಸರವಿಲ್ಲ. ಹೊಸತನದ ತುಡಿತದ ಬಗ್ಗೆ ತಿರಸ್ಕಾರವಿಲ್ಲ. ಹೊಸ ಹೊಸದೆನ್ನುತ್ತಾ ಬರೆದ ಕತೆಗಳ ಬಂಡಲ ಧೂಳು ಕೊಡಹುವಾಗೆಲ್ಲಾ ಮತ್ತೆ ಅವಳೇ ನೆನಪಾಗುತ್ತಾಳೆ. ನಿಮ್ಮ ಕತೆಗಳನ್ನ ಅದೇಗ್ರಿ ಸಂಕಲನ ಮಾಡೋದು ? ಒಂದಿದ್ದಂಗೆ ಒಂದಿಲ್ವಲ್ರಿ . ಈಗ ಬಿಕರಿಯಾಗ್ತಿರೋ ಯಾವ ತತ್ವಗಳೂ ಇಲ್ವಲ್ರಿ ಇದ್ರಲ್ಲಿ. ಜನಪ್ರಿಯವಾಗಿರೋ ಅಂತದ್ದು,ರೋಚಕವಾಗಿರುವಂತದ್ದೇನಾದ್
ರೂ ಬರೆದು ಕೊಡಿ, ಬೇಕಾದ್ರೆ ಪ್ರಕಟಿಸೋಣ ಅಂತ ಫೋನಿಟ್ಟ ಪ್ರಕಾಶಕರೆಲ್ಲರ ಹಿಂದೆ ಅವಳ ನುಡಿ ನೆನಪಾದದ್ದಿದೆ.  ಹೊಸದೇನೋ ಮಾಡೋಕೋಗ್ಬೇಡ್ವೋ, ನಿನ್ನತನ ಕಳೆದೋಗುತ್ತೆ ಅನ್ನೋ ಅವಳ ಮಾತುಗಳು ಪ್ರತೀ ಸೋಲಲ್ಲೂ ನೆನಪಾಗುತ್ತಿತ್ತವನಿಗೆ. ಆದ್ರೆ ಪ್ರತೀ ಸಲ ಸೋಲು ಮಕಾಡೆ ಬೀಳಿಸಿದಾಗಲೂ ಧೂಳು ಕೊಡವಿ ಮೇಲೆಳುವಂತೆ ಮಾಡ್ತಿದ್ದಿದ್ದು ಆ ಮಾತೇ. 

ಎಂದೋ ಬರೆದಿಟ್ಟಿದ್ದ ಅಂತರಿಕ್ಷದ ಕತೆಯನ್ನು ನೋಡಿದ ತನ್ನ ಗೆಳೆಯ ತನಗೇ ತಿಳಿಯದಂತೆ ಪತ್ರಿಕೆಗೆ ಕಳಿಸಿದ್ದು, ಅದರಲ್ಲಿ ಪ್ರಕಟವಾಗಿದ್ದ ಕಥೆಯನ್ನು ನೋಡಿ ಬೆಳಗಿನಿಂದ ಬರುತ್ತಿರೋ ಅಭಿನಂದನಾ ಕರೆಗಳ ನಡುವೆ ಅವನಿಗೆ ಆಕೆಯ ನೆನಪು ಕಾಡ್ತಾ ಇದೆ. ಅದರ ಬೆನ್ನಲ್ಲೇ ನಿಮ್ಮ ಕತೆಗಳನ್ನ ಸಂಕಲನ ಮಾಡ್ಬೇಕು ಅಂತಿದೀವಿ ಕೊಡ್ತೀರಾ ಅಂತ ಮುಂಚೆ ತಿರಸ್ಕರಿಸಿದ್ದ ಪ್ರಕಾಶಕರೇ ಫೋನ್ ಮಾಡಿದಾಗ ಏನು ಹೇಳಬೇಕೆಂದು ತಿಳಿಯದ ಗೊಂದಲದಿಂದ ಮೂಕನಾಗಿದ್ದ. ಸದ್ಯಕ್ಕೆ ಆ ಆಸೆಯಿಲ್ಲ. ಪಕ್ವವಾಗಬೇಕಿದೆ ನಾನಿನ್ನೂ. ಪ್ರಕಟಿಸಬೇಕೆಂಬ ಬಯಕೆಯಾದ್ರೆ ಖಂಡಿತಾ ತಿಳಿಸುತ್ತೇನೆಂಬ ಮಾತೊಂದಿಗೆ ಫೋನಿಟ್ಟಿದ್ದ.ಹೊಸತನಕ್ಕೆ ತಕ್ಷಣದ ಸೋಲಾದ್ರೂ ಅದು ಹೊಸತನದ ಸಾವಲ್ಲ, ತಾತ್ಕಾಲಿಕ ಹಿನ್ನಡೆಯಷ್ಟೇ ಎಂದು ತಾನೆಂದೂ ನಂಬುತ್ತಿದ್ದುದರ ಬಗ್ಗೆ ಅವಳ ಜೊತೆ ಮತ್ತೆ ಮಾತನಾಡಬೇಕೆಂಬ ಬಯಕೆಯಾಗುತ್ತಿದೆ. ಆದ್ರೆ ಅವಳ ಪತ್ತೆಯಿಲ್ಲ. ತನ್ನ ರಿಸರ್ಚ್ ಪೇಪರ್ ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ಬಂದ ಖುಷಿಯನ್ನು, ಸಂಶೋಧನೆಯನ್ನು ಗುರುತಿಸಿದ ಸರ್ಕಾರ ಕೆಲಸವೊಂದನ್ನು ನೀಡುತ್ತಿರೋ ಬಗ್ಗೆ ತಿಳಿಸುವ ಕನವರಿಕೆಯಾಗುತ್ತಿದೆ. ಆದ್ರೆ ಪ್ರತಿ ಸೋಲನ್ನೂ ಸವಾಲಾಗಿ ಸ್ವೀಕರಿಸುವಂತೆ ಮಾಡಿದ ನುಡಿಗಳ ಒಡತಿ ಅವಳೆಲ್ಲಿದ್ದಾಳೆಂಬ ಸುಳಿವಿಲ್ಲ. ಆಕೆಯಿರೋ ಊರಿಗೇ ಹೊರಟಿದ್ದೇನೆ, ಮರುದಿನವೇ ಆಕೆ ಸಿಗುವಳೆಂಬ ಕಲ್ಪನೆಯೂ ಇಲ್ಲದ ಆತ ಹೊರಟಿದ್ದಾನೆ, ಆಕೆಯದೆಂದು ತಿಳಿದಿರದ ಹೊಸ ಊರ, ಹೊಸ ಕೆಲಸದ, ಹೊಸತನದ ತುಡಿತದೊಂದಿಗೆ. ನೋವುಗಳ ನಿನ್ನೆಯಾಚೆ, ಸಮಭಾವದ ಇಂದಿನಾಚೆ ಹೊಸತನದ ನಾಳೆಯಿದ್ದೇ ಇದೆಯೆಂಬ ಭರವಸೆಯೊಂದಿಗೆ

ಈ ಕಥೆ "ಪಂಜು"ವಿನಲ್ಲಿ ಪ್ರಕಟವಾಗಿದೆ

Sunday, February 7, 2016

ದೀಪಾವಳಿ

ಪೀಠಿಕೆ:
ಮುಂಚೆಯೆಲ್ಲಾ ದೀಪಾವಳಿ,ದಸರಾಗಳೆಂದರೆ ಮನೆ ತುಂಬಾ ಜನ. ಎಲ್ಲೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಹಬ್ಬದ ಸಂದರ್ಭ ಮಕ್ಕಳೆಲ್ಲಾ ತಮ್ಮ ಮೂಲಮನೆಗೆ ಹೋಗೋದು ಪದ್ದತಿ. ಎಲ್ಲಾ ಸೇರಿ ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದ ಖುಷಿಯೇ ಬೇರೆ. ಅವಿಭಕ್ತ ಕುಟುಂಬಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ, ಜನರಲ್ಲಿ ಸ್ವಾರ್ಥ, ಅಸೂಯೆಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆಯೇ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಮುಂದುವರೆದಂತೆಯೇ ಈ ಖುಷಿ, ನಗು ಕಮ್ಮಿಯಾಗುತ್ತಾ ಬರುತ್ತಿದೆ. ಎಂದೂ ಮುಗಿಯದ ಮಕ್ಕಳ ಎಕ್ಸಾಮಿನ ಟೆನ್ಷನ್ನು, ಅವರು ಏನೂ ಮಾಡಿರದಿದ್ದರೂ ಅವರನ್ನು ಯಾಕೆ ಕರೆಯಬೇಕೆಂಬ ಹಳ್ಳಿಯವರ ಬೇಸರವೂ, ನಮಗೆ ಸರಿಯಾದ ಆತಿಥ್ಯ ಮಾಡಿಲ್ಲವೆಂಬ ದೊಡ್ಡ ಪಟ್ಟಣದವರ ಸಣ್ಣತನವೂ ಮೇಳೈಸಿ ಸಂಬಂಧಗಳು ಸಾಯುತ್ತಿವೆ. ಹಬ್ಬಗಳ ಸೊಬಗು ಸಣ್ಣದಾಗುತ್ತಿದೆ. ಅದರ ಬಗ್ಗೆಯೇ ಒಂದು ಕತೆ.. ದೀಪಾವಳಿ.

ಕತೆಗೆ ಬರೋದಾದ್ರೆ..:
ಊರ ಸಾಹುಕಾರನ ಮನೆ. ಈಗಿರೋ ಸಾಹುಕಾರ ಹೆಸರಲ್ಲಿ ಸಾಹುಕಾರನಾದ್ರೂ ಮಕ್ಕಳು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟುವಷ್ಟು ಸಾಹುಕಾರನೇನಾಗಿರಲಿಲ್ಲ. ಭೂಸುಧಾರಣೆಯ ಹೊತ್ತಲ್ಲಿ ಈಗಿರೋ ಸಾಹುಕಾರ ಅಮಿತನ ತಂದೆ ಅನಂತಪತಿಯವರು ತಮ್ಮೂರಲ್ಲಿದ್ದ  ಜಮೀನನ್ನೆಲ್ಲಾ ಹಂಚಿ  ಈ ಊರಿನಲ್ಲಿದ್ದ ಸಣ್ಣ ಜಮೀನಲ್ಲಿ ಬಂದು ನೆಲೆಸಿದ್ದರಂತೆ. ಯಾರು ಏನು ಕಷ್ಟವೆಂದರೂ ನೆರವಾಗುತ್ತಿದ್ದ, ದೇಹಿ ಎಂದು ಬಂದವರಿಗೆ ಎಂದೂ ನಾಸ್ತಿಯೆನ್ನದ ಜನರು ಎಂಬ ಗುಣ ಶ್ರೀಮಂತರೆಂಬ ಕಾರಣಕ್ಕೆ ಇಂದೂ ಸಾಹುಕಾರ್ರು ಎಂಬ ಹೆಸರು ಆ ಮನೆತನಕ್ಕೆ ಮುಂದುವರೆದಿತ್ತು. ಅಮಿತನಂತೆಯೇ ಆತನ ಪತ್ನಿ ವಿಶಾಲೆಯದೂ ಹೆಸರಿಗೆ ತಕ್ಕಂತ ವಿಶಾಲ ಮನೋಭಾವ. ಮನೆಗೆ ಮಧ್ಯರಾತ್ರಿ ಬಂದು ನೆಂಟರು ಬಾಗಿಲು ತಟ್ಟಿದರೂ ಬೇಸರಿಸದೆ ಅವರಿಗೆ ಏನಾದರೂ ತಯಾರಿಸಿ ಉಣಬಡಿಸೋ  ಅನ್ನಪೂರ್ಣೇಶ್ವರಿಯವಳು.ಇವರಿಗೆ  ಒಬ್ಬ ಮಗ ಗುಣ ಮತ್ತು ಮಗಳು ಸುಗುಣ. . ಅಗರ್ಭ ಶ್ರೀಮಂತಿಕೆಯಿಲ್ಲದಿದ್ದರೂ ಇದ್ದುದರಲ್ಲೇ ಸಂತೃಪ್ತ ಸುಖಸಂಸಾರ. ದೊಡ್ಡ ಸಾಹುಕಾರನ ದೊಡ್ಡ ಮಕ್ಕಳೆಲ್ಲರೂ ಊರಲ್ಲಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಕಾರಣವೊಡ್ಡಿ ಪಟ್ಟಣ ಸೇರಿದ್ದರು. ಅಲ್ಲಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದರೂ ಊರಿಗೆ ಬಂದು ಪ್ರತೀ ಬಾರಿಯೂ ತಂದೆಯ ಹತ್ತಿರವಿದ್ದ ಅಳಿದುಳಿದ ಹಣಕ್ಕೆ ಪೀಡಿಸುತ್ತಲೂ, ಜಮೀನಲ್ಲಿ ಬಂದ ಪಸಲಲ್ಲಿ ತಮಗೆ ಸರಿಯಾದ ಪಾಲಿತ್ತಿಲ್ಲವೆಂಬ ಕಾರಣಕ್ಕೆ ಜಗಳವನ್ನೂ ಆಡುತ್ತಿದ್ದರು. ತಮ್ಮ ಮಕ್ಕಳ ಈ ದುರ್ಬುದ್ದಿಗೆ ಆ ತಂದೆ ಕೊರಗುತ್ತಾ ತನ್ನ ಕೊನೆಯ ದಿನಗಳನ್ನು ದೂಡುತ್ತಿರುವಾಗಲೇ ವರ್ಷದ ದೀಪಾವಳಿ ಹಬ್ಬ ಬಂದಿತ್ತು.

ದೀಪಾವಳಿಯೆಂದರೆ ದೊಡ್ಡ ಹಬ್ಬವೆಂದೇ ಪ್ರತೀತಿಯಲ್ಲಿ. ಸಾಹುಕಾರನ ಪಟ್ಟಣದಲ್ಲಿರೋ ಮಕ್ಕಳು , ತಮ್ಮ ಹೆಂಡತಿ ಮಕ್ಕಳೊಂದಿಗೆ,ಹೆಣ್ಣು ಮಕ್ಕಳು ಅಳಿಯಂದಿರೊಂದಿಗೆ  ಊರಿಗೆ ದಾಂಗುಡಿಯಿಡುತ್ತಿದ್ದ ಸಂದರ್ಭ. ಮನೆಯೆಲ್ಲಾ ಗಿಜಿ ಗಿಜಿ. ಪಟ್ಟಣದ ಮಕ್ಕಳು ಹೊಸ ಬಟ್ಟೆ ತೊಟ್ಟು ಜಗುಲಿಯಲ್ಲಿ ಇಸ್ಪೀಟಿಗೆ ಕೂತುಬಿಟ್ಟರೆ ಮುಗಿದೋಯ್ತು. ಹೊರಜಗತ್ತಿನ ಅರಿವೇ ಇರುತ್ತಿರಲಿಲ್ಲ. ಹಬ್ಬದ ತಯಾರಿಯಿಂದ , ದನ ಕರುಗಳನ್ನು ತಯಾರು ಮಾಡೋವರೆಗೆ, ಆಯುಧಗಳನ್ನು ತೊಳೆಯೋದರಿಂದ ಮನೆ ಕೆಲಸಕ್ಕೆ ಬಂದ ಕೆಲಸದವರ ಊಟ, ತಿಂಡಿ, ಕಾಪಿಗಳು ಸರಿಯಾಗಿ ಆಯ್ತೇ ಎಂದು ವಿಚಾರಿಸುವುದರವರೆಗೆ ಎಲ್ಲಾ ಕೆಲಸಗಳೂ ಅಮಿತನ ಮೇಲೆಯೇ ಬೀಳುತ್ತಿದ್ದವು. ಅತ್ತಿಗೆಯಂದಿರೂ ಒಂದು ಕಾಸಿನ ಕಡ್ಡಿ ಕೆಲಸ ಮಾಡದೇ, ಕುಡಿದ ಕಾಪಿ ಲೋಟ ತೊಳೆಯದೇ ಊರು ಸುತ್ತೋಕೆ ಹೊರಡುತ್ತಿದ್ದರೂ ಬೇಸರಿಸದ ವಿಶಾಲೆಗೆ ಹರಿದ ತನ್ನ ಹಳೆಯ ಸೀರೆಗಿಂತಲೂ ಹಬ್ಬದ ಸಂದರ್ಭದಲ್ಲೂ ಹಳೆಯ ಬಟ್ಟೆ ಹಾಕಬೇಕಾದಂತಹ ತನ್ನ ಗಂಡನ ಮಗ್ಗೆ, ಹಬ್ಬಕ್ಕೆ ಹಾಕಲೂ ಹೊಸ ಬಟ್ಟೆ ಸಿಗದ ತನ್ನ ಮಕ್ಕಳನ್ನು ನೆನೆದು ಮರುಕವಾಗುತ್ತಿತ್ತು.  ಅಡಿಕೆಗೆ ಕೊಳೆ ರೋಗ ಬಂದು ಸಿಕ್ಕ ಅಲ್ಪ ಪಸಲಿನಲ್ಲಿ ತಮ್ಮ ವರ್ಷವಿಡೀ ಹೇಗೆ ಜೀವನ ನಡೆಸಬೇಕು ಎಂಬ ಅಲ್ಪ ಅರಿವೂ ಇಲ್ಲದೇ ಆ ದುಡ್ಡಲ್ಲೂ ಪಾಲು ಕೇಳಲು ಬಂದಿರೋ, ದೀಪಾವಳಿಯನ್ನು ನಿಲ್ಲಿಸಬಾರದೆಂದು ತಮ್ಮಅದಕ್ಕಾಗೇ ಎಷ್ಟು ಸಾಲ ಮಾಡಿರಬಹುದು ಎಂದು ಒಂದಿನಿತೂ ಯೋಚಿಸದೇ ಇಲ್ಲಿ ಬಂದು ಆರಾಮಗಿರೋವಂತಹ ಭಾವಂದಿರಿಗಿಂತಲೂ ತಂದೆಯ ಕೊನೆಗಾಲ ಸಮೀಪಿಸುತ್ತಿರುವುದನ್ನು ಅರಿಯದೇ ಅವರನ್ನು ಕಾಡುತ್ತಿರೋ ಪರಿಯ ಬಗ್ಗೆ ಸಿಟ್ಟೂ , ಮಾವನವರ ಬಗ್ಗೆ ಅನುಕಂಪವೂ ಮೂಡುತ್ತಿತ್ತು. 

ನೀರು ತುಂಬೋ ಭೂರಿ ಹುಣ್ಣಿಮೆ ಬಂತು. ಹಂಡೆ, ಭಾವಿಯನ್ನೆಲ್ಲಾ ರಂಗೋಲಿಯೆಳೆದು , ಕಾಡಲ್ಲಿ ಸಿಗುತ್ತಿದ್ದ ಅಂಡೆಕಾಯಿ ಬಳ್ಳಿಯಿಂದ ಸುತ್ತುವರೆದು ಸಿಂಗರಿಸಿದ ಬಳಿಕ ಮನೆಯವರಿಗೆಲ್ಲಾ ಎಣ್ಣೆ ಸ್ನಾನ.
ಭರ್ಜರಿ ಸ್ನಾನವಾಗಿ ಭೂರಿ ಭೋಜನವೂ ಆಗಿ ಎಲೆಯಡಿಕೆ ಮೆಲ್ಲುತ್ತಾ  ಕುಳಿತಿದ್ದ ಅನಂತ ಪತಿಯ ದೊಡ್ಡ ಮಗ  ತಂದೆಯನ್ನು ಮಾತಿಗೆಳೆದ. ಅಪ್ಪಾ, ಇನ್ನೆಷ್ಟು ವರ್ಷ ಅಂತ ನಾವು ಇಲ್ಲಿ ಬಂದು ಜಮೀನಿನ ಫಸಲಿನ ಪಾಲು ಕೇಳೋದು. ಪ್ರತೀ ಸಲ ಕೇಳೋಕೆ ನಮಗೂ ಒಂತರ ಬೇಜಾರಾಗುತ್ತೆ. ನಮ್ಮ ನಮ್ಮ ಪಾಲು ಎಷ್ಟೂಂತ ಹಿಸೆ ಮಾಡಿ ಕೊಡು. ಅದನ್ನ ಮಾರಿ, ಬಂದ ಹಣ ತಗೊಂಡು ಹೋಗಿ ಬಿಡ್ತೇವೆ. ಪ್ರತೀ ಸಲ ಕೇಳೋದು ಇರಲ್ಲ ಅಂದ. ಅಲ್ರೋ, ನಿಮ್ಮನ್ನೆಲ್ಲಾ ದೊಡ್ಡ ದೊಡ್ಡ ಓದಿಗೆ , ಬಿಸಿನೆಸ್ಸಿಗೆ ಅಂತ ಅಷ್ಟೆಲ್ಲಾ ಖರ್ಚು ಮಾಡಿದೀನಿ. ಕಿರಿಯ ಮಗನಿಗೆ ಅಂತ ಏನೂ ಕೊಟ್ಟಿಲ್ಲ. ಇರೋ ಒಂದೂವರೆ ಎಕರೆ ತೋಟಕ್ಕೂ ಪ್ರತೀ ವರ್ಷ ಕೊಳೆ ಬರ್ತಾ ಇದೆ. ಆದ್ರೂ ಅದರಲ್ಲಿ ಪಾಲು ಕೇಳೋ ಪಾಪಿಗಳಿಗೆ ಒಂದು ಮಾತೂ ಆಡದ ಆ ಪುಣ್ಯಾತ್ಮ ಬಂದಿದ್ದರಲ್ಲೇ ಪಾಲು ಕೊಡ್ತಾ ಇದ್ದಾನೆ. ಅವನ ಹರುಕು ಬಟ್ಟೆ, ಸ್ಥಿತಿ ನೋಡಿದ ಮೇಲೆ ಸಹಾಯ ಮಾಡೋಕೆ ಬರೋ ಬದ್ಲು ತೋಟದಲ್ಲಿ ಹಿಸೆ ಕೇಳ್ತಾ ಇದ್ದೀರಲ್ಲೋ, ಏನೋ ಕಮ್ಮಿಯಾಗಿದೆ ನಿಮ್ಗೆ ಅಂದ ಅನಂತ ಪತಿ. ಅಪ್ಪಾ, ಅವನ ಕರ್ಮ ನಮಗೆ ಗೊತ್ತಿಲ್ಲ. ನೀನು ಪಾಲು ಕೊಡ್ಲೇ ಬೇಕು. ಕೊಡ್ತೀಯೋ ಇಲ್ವೋ ? ಇಲ್ಲ ಅಂದ್ರೆ ಹೇಳ್ಬಿಡು. ಅದು ಹೇಗೆ ತಗೋಬೇಕು ಅಂತ ಗೊತ್ತಿದೆ ನಮ್ಗೆ ಅಂದಿದ್ದ ಮಧ್ಯದ ಮಗ.
ಹಬ್ಬ ಕಳೀಲಿ ನೋಡೋಣ ಅಂದಿದ್ದ ಅಪ್ಪ. 

ದೊಡ್ಡಬ್ಬ ಬಂದೇ ಬಿಡ್ತು. ಗೋಪೂಜೆ, ಲಕ್ಷ್ಮಿಪೂಜೆ, ಆಯುಧ ಪೂಜೆ ಅಂತ ಇಬ್ರು ಅಣ್ಣಂದಿರೂ ಮಡಿಯುಟ್ಟುಕುಂಡು ಕೂತೇ ಬಿಟ್ರು. ದನಕರುಗಳಿಗೆ ಬಣ್ಣ ಹಚ್ಚೋದ್ರಿಂದ, ಆಯುಧ ತೊಳೆದು ಜೇಡಿ ಕೆಮ್ಮಣ್ಣು ಹಚ್ಚೋದು, ಹೊರಗೆ ಅಣ್ಣಂದಿರು ಒಡೆಯಲು ಬೇಕಾದ ಕಾಯಿ ಸುಲಿದುಕೊಡೋದು ಹೀಗೆ ಹೊರಗಿನ ಕೆಲಸಗಳೆಲ್ಲಾ ತಮ್ಮನ ಮೇಲೇ ಬಿತ್ತು. ಅದೆಲ್ಲಾ ಮುಗಿಸಿ ಆತನ ಸ್ನಾನ ಆಗೋದ್ರೊಳಗೆ ಪೂಜೆ ಮುಗಿಯುತ್ತಾ ಬಂದಿತ್ತು. ಹಬ್ಬದ ದಿನವೂ ಮಧ್ಯಾಹ್ನ ಸ್ನಾನ ಮಾಡ್ತೀಯಲ್ಲೋ ಕೊಳೆಯ ಅಂತ ಬೈಸ್ಕೊಳ್ಳಬೇಕಾಗೂ ಬಂತು ಪ್ರತೀ ವರ್ಷದಂತೆಯೇ ! ನನಗೆ ಮಂತ್ರ , ತಂತ್ರಗಳೇನೂ ಗೊತ್ತಿಲ್ಲ ದೇವರೇ. ನನ್ನ ಅಣ್ಣಂದಿರು ಚೆನ್ನಾಗೇ ಪೂಜೆ ಸಲ್ಲಿಸಿದ್ದಾರೆ ಅಂದುಕೊಳ್ಳುತ್ತೀನಿ. ಕಾಯಕವೇ ಕೈಲಾಸ ಎಂದು ತೋಟ, ಗದ್ದೆ ಕೆಲಸಗಳಲ್ಲೇ ಮುಳುಗಿ  ನಿನ್ನ ಪೂಜಿಸೋ ವಿಧಿಯನ್ನರಿಯದೇ ನಾನೆಸಗಿದ ತಪ್ಪುಗಳನ್ನೆಲ್ಲಾ ಮನ್ನಿಸಿ ನಮ್ಮ ಪೂಜೆಯನ್ನು ಸ್ವೀಕರಿಸಿ ನಮ್ಮನ್ನು ಎಂದಿನಂತೇ ಕಾಪಾಡೋ ಪ್ರಭುವೆ ಎಂದು ಬೇಡಿಕೊಂಡ. ಹಬ್ಬದ ಊಟವಾಗುತ್ತಿದ್ದಂತೆಯೇ ಒಬ್ಬೊಬ್ಬರೇ ಖಾಲಿಯಾದರು. ರಾತ್ರಿ ತನಕ ಉಳಿದರೆ ತಮ್ಮ ಮಕ್ಕಳು ಪಟಾಕಿ ಪಟಾಕಿ ಅನ್ನುತ್ತಾರೆ. ಅವರಿಗೆ ಅಂತ ಮಾತ್ರವೇ ತರೋಕ್ಕಾಗದೇ ಎಲ್ಲರಿಗೂ ಪಟಾಕಿ ತರಬೇಕಾದ ಖರ್ಚು ಎಂಬ ದೂರಾಲೋಚನೆ !!

ಮುಂದಿನ ಬಾರಿ ದೀಪಾವಳಿ ಬಂದಿತ್ತು. ಇತ್ತೀಚೆಗೆ ಹಲವು ವರ್ಷಗಳಿಂದ ಕೊಳೆ ಬರುತ್ತಿದ್ದ ಮರಗಳಿಗೆ ಈ ವರ್ಷ ಕೊಳೆ ಬಾರದ್ದರ ಜೊತೆಗೆ ಹೊಸದಾಗಿ ಶುರು ಮಾಡಿದ್ದ ಎರೆಗೊಬ್ಬರದಿಂದಲೂ ಅಲ್ಪ ಲಾಭ ಬರೋಕೆ ಶುರುವಾಗಿದ್ದರಿಂದ ಸಹಜವಾಗೇ ಖುಷಿಯಲ್ಲಿದ್ದ ಅಮಿತ. ಹಿಂದಿನ ವರ್ಷದ ಹಬ್ಬವಾದ ಮೇಲೆ ಅಪ್ಪನ ಆರೋಗ್ಯ ಹದಗೆಡುತ್ತಿದ್ದರೂ ತಿಂಗಳಿಗೊಮ್ಮೆಯೂ ಫೋನ್ ಮಾಡದ ಅಣ್ಣಂದಿರೆಗೆಲ್ಲಾ ಮತ್ತೆ ಮತ್ತೆ ಫೋನ್ ಮಾಡಿ ಹಬ್ಬ ಹತ್ತಿರ ಬರೋದನ್ನ ನೆನಪಿಸಿ ಕರೆಯುತ್ತಿದ್ದರೂ ಅವರು ಬರ್ತೀನಿ ಅಂತಲೂ ಅನ್ನದೇ, ಬರೋಲ್ಲ ಅಂತಲೂ ಅನ್ನದೆ, ಮುಂಚಿನಂತೆ ಚೆನ್ನಾಗಿ ಮಾತನ್ನೂ ಆಡದೇ ಫೋನಿಡುತ್ತಿದ್ದರು. ನಾನೇ ಹೋಗಿ ಅವರನ್ನು ಹಬ್ಬಕ್ಕೆ ಕರೆದುಬರುತ್ತೇನೆ. ಅಕ್ಕಂದಿರನ್ನು ದೀಪಾವಳಿಗೆ ಕರೆಯದಿರೋದು ಚೆನ್ನಾಗಿರೋಲ್ಲ ಅಂತ ಅಮಿತ. ಬೇಡ ಕಣೋ ಮಗನೇ,ಸುಮ್ಮನೇ ಅಲ್ಲಿಗೆ ಹೋಗಿ ಯಾಕೆ ಅವಮಾನ ಅನುಭವಿಸ್ತೀಯ ಅಂದ ಅನಂತಪತಿ. ಹೌದು ಕಣ್ರಿ, ನಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡ್ತಿಲ್ಲ ಅಂತಲ್ಲ. ನಮ್ಮ ಬಡತನದ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಕೊಂಕು ಮಾತಾಡ್ತಾರೆ ಅಂತಲೂ ಅಲ್ಲ  ಆದರೆ ನಿಮ್ಮ ಬಗ್ಗೆ, ಮಾವನವರ ಬಗ್ಗೆಯೂ ಅವರು ಚುಚ್ಚೋದು ನಂಗೆ ಇಷ್ಟ ಆಗೋಲ್ಲ ಕಣ್ರಿ.  ಅವರಿಗೆ ಇಷ್ಟ ಇಲ್ಲ ಅಂದ್ರೆ ನೀವ್ಯಾಕೆ ಒತ್ತಾಯ ಮಾಡ್ತೀರಿ . ಬೇಡ ಬಿಡಿ ಅಂದ್ಲು ವಿಶಾಲು. ಅಮಿತ ಅರೆಕ್ಷಣ ಮೌನವಾಗಿದ್ದ. ಆತ ಏನು ಹೇಳಬಹುದೆಂಬ ಕುತೂಹಲ ಎಲ್ಲರಿಗೂ ಇತ್ತು. ನೀ ಹೇಳೋ ಮಾತು ನನಗೂ ಅರ್ಥವಾಗುತ್ತೆ ವಿಶಾಲು. ನೀ ಹೇಳೋದು ಸರಿನೇ ಆದ್ರೂನು ಮೂಲ ಮನೆಯಲ್ಲಿರೋ ತಮ್ಮನಾಗಿ ಬೇರೆ ಕಡೆ ಇರೋ ಅಣ್ಣ-ಅಕ್ಕಂದಿರನ್ನು ಹಬ್ಬಕ್ಕೆ ಕರೀದೆ ಇರೋದು ಸರಿ ಇರಲ್ಲ. ಕರೆದು ಬರ್ತೀನಿ ಅಂತ ಅವರ ಉತ್ತರಕ್ಕೂ ಕಾಯದೇ ಪಟ್ಟಣದ ಬಸ್ಸು ಹತ್ತಿದ ಅಮಿತ.


ಹಬ್ಬಕ್ಕೆ ಕರೆಯೋಕೆ ಬಂದ ಇವನಿಗೆ ಅಲ್ಲಿ ಸಿಕ್ಕ ಸತ್ಕಾರಗಳನ್ನು ಮರೆಯುವಂತೆಯೇ ಇಲ್ಲ!  ನಿಮ್ಮ ತಮ್ಮ ಇವತ್ತೇನಾದ್ರೂ ಇಲ್ಲೇ ಝಾಂಡಾ ಹೂಡಿದ್ರೆ ಏನು ಕತೆ ? ನೋಡಿದ್ರೆ ಹಾಗೇ ಅನ್ಸುತ್ತೆ. ಈಗ್ಲೇ ಹೇಳಿ ಬಿಡ್ತೇನೆ. ನಾನೆಂತೂ ಅಡಿಗೆ ಬೇಯಿಸಿ ಹಾಕೋದಿಲ್ಲ , ಮನೆಗೆ ಬಂದ ಅಬ್ಬೆಪಾರಿಗಳಿಗೆಲ್ಲಾ ಅಡಿಗೆ ಬೇಯಿಸಿ ಹಾಕೋಕೆ ಇದೇನು ಛತ್ರವೇ ಎಂದು ಗಂಡನನ್ನು ಅಡಿಗೆ ಮನೆಗೆ ಕರೆದೊಯ್ದು ಜಗಳಕ್ಕಿಳಿದಿದ್ದ ಮೊದಲ ಅತ್ತಿಗೆಯ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಬೇರೇನೂ ತುರ್ತು ಕೆಲಸವಿದೆಯೆಂದು ಅವರ ಮನೆಯಲ್ಲಿ ನೀರೂ ಕುಡಿಯದಂತೆ ಹೊರಟುಬಿಟ್ಟಿದ್ದ.   ನಂತರ ಹೋಗಿದ್ದು ಹಿರಿಯ ಅಕ್ಕನ ಮನೆಗೆ. ಎದುರಿಗೆ ಬಂದು ಸ್ವಾಗತಿಸಿದ ಭಾವ ನಸುನಕ್ಕು ಸ್ವಾಗತಿಸಿದರೂ ಅವರು ಒಳಗೆ ಅಕ್ಕನನ್ನು ಕರೆಯಲು ಹೋದಾಗ ಒಳಮನೆಯಲ್ಲಿ ಅವಳು ಭಾವನೊಂದಿಗೆ ಆಡುತ್ತಿದ್ದ ಮಾತುಗಳು ಕೇಳಿ ಅಮಿತನಿಗೆ ಬೇಸರವಾಯ್ತು. ಸುಮ್ಮನೇ ಅಲ್ಲಿಯವರೆಗೆ ಯಾಕೆ ಹೋಗಬೇಕುರಿ ? ಸುಮ್ಮನೇ ದುಡ್ಡು ದಂಡ. ಹಿರಿಯ ಮಗಳಿಗೆ ಕಾಲು ಭಾಗ ಆಸ್ತಿಯನ್ನೂ ಬರೆದುಕೊಡದ ಆ ತಂದೆಯ ಮುಖ ನೋಡಲೂ ಇಷ್ಟವಿಲ್ಲ. ಇನ್ನು ಆ ಅಮಿತನ ಸಂಸಾರವೋ.. ಭಿಕ್ಷುಕರ ಬಿಡಾರದಂತಿದೆ. ನನ್ನ ಮಕ್ಕಳ ಒಳ್ಳೆ ಬಟ್ಟೆಗಳನ್ನು, ನನ್ನ ರೇಷ್ಮೆ ಸೀರೆಯನ್ನು  ಆ ವಿಶಾಲೆ ಮತ್ತವಳ ಮಕ್ಕಳು ಜೊಲ್ಲು ಸುರಿಸುತ್ತಾ ನೋಡೋದನ್ನ ನೆನೆಸಿಕೊಂಡ್ರೆ ನಂಗೆ ಅಸಹ್ಯವಾಗುತ್ತೆ. ನಾನಂತೂ ಬರೋಲ್ಲ ಅನ್ನುತ್ತಿದ್ದಳು ಅಕ್ಕ. ಅಬ್ಬಾ, ಇವಳು ನನ್ನ ಸ್ವಂತ ಅಕ್ಕನೇ ಅನಿಸಿಬಿಟ್ಟಿತ್ತು ಅಮಿತನಿಗೆ. ಅಲ್ಲೇ, ನಿನ್ನ ಮದುವೆಯ ಹೊತ್ತಿಗೆ, ತಮ್ಮ ಯಾವುದೋ ಮನೆ ಮಾರಿ ನಾನೊಂದು ಬಿಸಿನೆಸ್ ತೆಗೆಯೋಕೆ ಸಹಾಯ ಮಾಡಿದ್ದ, ನಾನು ಲಾಸಿನಲ್ಲಿದ್ದಾಗ ಎಷ್ಟೋ ಸಲ ಸಹಾಯ ಮಾಡಿದ್ದ ನಿಮ್ಮ ಅಪ್ಪ, ತಮ್ಮನ ಬಗ್ಗೆ ಹೀಗೆಲ್ಲಾ ಮಾತನಾಡ್ತೀಯಲ್ಲ ನೀನು, ಈಗೋನೋ ಮೂರ್ನಾಲ್ಕು ವರ್ಷದಿಂದ ಅಡಿಕೆಗೆ ಕೊಳೆಬಂದು ಅನ್ನುತ್ತಿದ್ದ ಭಾವನ ಮಾತನ್ನ ಅರ್ಧಕ್ಕೇ ತಡೆದ ಅಕ್ಕ, ಹೂಂ ಕಣ್ರೀ, ನಾನಿರೋದೇ ಹೀಗೆ. ನಿಮಗೆ ಸಹಾಯ ಮಾಡೋದು  ಅವರ ಕರ್ತವ್ಯವಾಗಿತ್ತು ಮಾಡಿದಾರೆ. ಅದರಲ್ಲೇನಿದೆ ? ನನಗೆ ಆಸ್ತಿ ಕೊಡೋವರೆಗೋ ನಾನು ಆ ಕಡೆ ತಲೆನೂ ಹಾಕಲ್ಲ, ನೀವೂ ಆ ಕಡೆ ಹೋಗೋ ಹಾಗಿಲ್ಲ ಅಂದಿದ್ದಳು.

ಅಲ್ಲಿಂದಲೂ ಅನಿವಾರ್ಯ ಕಾರಣ ಹೇಳಿ ಎರಡನೇ ಅಣ್ಣನ ಮನೆಗೆ ಹೋಗಿದ್ದ ಅಮಿತನಿಗೆ ಬಾಗಿಲ ಬೀಗ ಸ್ವಾಗತ ಮಾಡಿತ್ತು. ಪಕ್ಕದಲ್ಲೇ ಇದ್ದ ಅಂಗಡಿಯಿಂದ ಫೋನ್ ಮಾಡಿದರೆ ಅಯ್ಯೋ, ನೀನು ಫೋನ್ ಮಾಡಿ ಬರೋದಲ್ಲವೇನೋ, ನನಗೆ ಆಫೀಸಲ್ಲಿ ಅರ್ಜೆಂಟ್ ಕೆಲಸವಿದೆ. ಬರೋದು ರಾತ್ರಿಯಾಗುತ್ತೆ ಅಂದ ಅಣ್ಣ. ಸರಿ, ಅತ್ತಿಗೆ, ಮಕ್ಕಳು ? ಅವರು ಇಲ್ಲೇ ಮಾರ್ಕೇಟಿಗೆ ಹೋಗಿರ್ಬೇಕು. ಸರಿ ಬಿಡು ಅಣ್ಣ. ಅವರು ಬರೋವರಿಗೆ ಇಲ್ಲೇ ಕಾಯ್ತೀನಿ.. ಅಯ್ಯಯ್ಯೋ ಬೇಡಪ್ಪ, ಅವಳು ಅವಳಪ್ಪನ ಮನೆಗೆ ಹೋಗಬೇಕುಂತಿದಾಳೆ ಮಾರ್ಕೆಟ್ಟಿಂದ ಬಂದ ಅವಳಿಗೆ ನಿನ್ನ ಜೊತೆ ಮಾತಾಡ್ತಾ ಕೂತ್ರೆ ಅಪ್ಪನ ಮನೆಗೆ ಹೋಗೋಕೆ ಲೇಟಾಗುತ್ತೇಂತ ಬೈಕೋತಾಳೆ. ಇನ್ನೊಂದ್ಸಲ ಬರೋದಾದ್ರೆ ಫೋನ್ ಮಾಡ್ಕೊಂಡು ಬಾರೋ.. ಹಲೋ ಹಲೋ..ಕೇಳ್ತಾ ಇದಿಯಾ.. ಹಲೋ. ಹಲೋ.. ಎಂದು ಫೋನ್ ಕುಕ್ಕಿದ್ದ. ಅನಪೇಕ್ಷಿತ ಅತಿಥಿಯಾಗಿರಲು ಇಷ್ಟವಿಲ್ಲದೇ ಎರಡನೇ ಅಕ್ಕನಿಗೆ ಅಲ್ಲಿಂದಲೇ ಫೋನ್ ಮಾಡಿದ್ದ. ಪಟ್ಟಣಕ್ಕೆ ಬಂದಿದ್ದೇನೆಂದು ಹೇಳಿದರೂ ಅವಳು ಮನೆಗೆ ಕರೆದಿರಲಿಲ್ಲ. ಬರುತ್ತೇನೆ ಎಂದು ಇವನೂ ಹೇಳಲಿಲ್ಲ. ಎರಡು ದಿನ ಇದ್ದು ಎಲ್ಲರನ್ನೂ ಕರೆದುಬರುತ್ತೇನೆ ಎಂದಿದ್ದವನಿಗೆ ಮಧ್ಯಾಹ್ನದ ಒಳಗೇ ಎಲ್ಲರನ್ನೂ ಕರೆದು ಮುಗಿದಿದ್ದರಿಂದ ತಕ್ಷಣವೇ ಊರು ಬಸ್ಸು ಹತ್ತಿ ರಾತ್ರಿಗೆ ಮನೆಗೆ ಮುಟ್ಟಿದ್ದ.

ಭೂರಿ ಹುಣ್ಣಿಮೆ ಬಂದೇ ಬಿಟ್ಟಿತು. ಹದಿನೈದು ಜನರ ಬದಲು ಐದು ಜನರೇ ಇದ್ದರೂ ಈ ಸಲದ ದೀಪಾವಳಿಯಲ್ಲಿ ಏನೂ ಖುಷಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಹಿಂದಿನ ಹಬ್ಬಗಳಲ್ಲಿರುತ್ತಿದ್ದ, ಗಲಾಟೆ, ನಗುಗಳ ಕಳೆ ಇಲ್ಲದಿದ್ದರೂ ಮನೆ ತುಂಬಾ ಓಡಾಡುತ್ತಿದ್ದ ಗುಣ, ಸುಗುಣರ ಓಟ, ಆಟಗಳೇ ಒಂದು ಚಲುವನ್ನು ಮೂಡಿಸಿದ್ದವು. ಸುಗುಣನಿಗೇ ಒಂದು ಅಡ್ಡಮಡಿಯುಡಿಸಿ ಕೂರಿಸಿದ್ದ ದೀಪಾವಳಿಯ ದಿನವಂತೂ ಆ ಭಗವಂತನೇ ಹುಡುಗನ ರೂಪದಲ್ಲಿ ಮನೆಗೆ ಬಂದಿದ್ದಾನೇನೋ ಅನಿಸುತ್ತಿತ್ತು. ಲಂಗಧಾವಣಿಯುಟ್ಟು , ಆರತಿ ದೀಪಗಳ ಬಟ್ಟಲು ಹಿಡಿದು ಗುಣನ ಜೊತೆಗೇ ತಿರುಗುತ್ತಿದ್ದ ಸುಗುಣಳನ್ನು ನೋಡೋದೇ ಒಂದು ಸೊಬಗಾಗಿತ್ತು. ಪಟಾಕಿಗಳ ಆರ್ಭಟವಿಲ್ಲದಿದ್ದರೂ ಮನೆಯ ಸುತ್ತಲಿಟ್ಟ ದೀಪಗಳ ಚೆಲುವು, ಗಂಟೆ, ಜಾಗಟೆಗಳ ನಾದದಲ್ಲಿ ಈ ಬಾರಿಯ ಹಬ್ಬದ ರಾತ್ರಿ ಎಲ್ಲಿಗೋ ಕರೆದೊಯ್ದಿತ್ತು. ರಾತ್ರೆ ಬಂದ ಹಬ್ಬ ಆಡೋರು(ಅಂಟಿಗೆ-ಪಿಂಟಿಗೆ) ಯವರಲ್ಲೂ ಏನೋ ಚೆಲುವು ಕಾಣುತ್ತಿತ್ತು. ಕೊಳೆಯಿರದ ಮರ, ಕೈ ಹಿಡಿಯುತ್ತಿರುವ ಗೊಬ್ಬರ, ಸರಿಯಾಗುತ್ತಿರುವ ಅಪ್ಪನ ಆರೋಗ್ಯ.. ಹೀಗೆ ಎಲ್ಲವೂ ಅಮಿತನ ಶುದ್ದ ಮನಸ್ಸಿನ ಪ್ರಾರ್ಥನೆಗೆ ಒಲಿದಂತಿತ್ತು..

೧೦/೧೧/೨೦೧೩ ರಲ್ಲಿ ಬರೆದ ಈ ಕಥೆ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ

Tuesday, December 1, 2015

ಕಾಲದಾಚೆಯ ಕಥೆ

ತಿರುಗುರೆಕ್ಕೆಯ ಕೆಳಗೆ ಕುಳಿತು ಬೆವೆತಿಹ ಜೀವ
ತಾಯ ಸೆರಗಿನ ಗಾಳಿ ನೆನೆಯುತಿತ್ತು
ದುಡಿತಕೊಡೆದಿಹ ಕೈಯ ಬಾಯಿ ತಲುಪದ ತುತ್ತು
ಕಂದ ಹಸಿದಿಹನೇನೊ ಎನುತಲಿತ್ತು..
ತೋ..ನಾನಾ. ತಾ..ನಾನ..ನಾನ..

ಧಗ್ಗನೆ ಎದ್ದು ಕುಳಿತ ಅವ. ಎಷ್ಟು ಸಲ ಕನಸಲ್ಲಿ ಬಂದಿತ್ತೋ ಆ ರಾಗ. ಪ್ರತೀ ಬಾರಿ ಕೇಳಿದಾಗಲೂ ಏನೋ ಒಂದು ಸಂಕಟ. ಕೆಟ್ಟ ಕನಸು ಬಿತ್ತಾ ಮಗು ಎಂಬ ಹೆತ್ತಾಕೆಯ ದನಿ ಕೇಳಿದಂತಾಯ್ತೊಮ್ಮೆ ಅಲ್ಲೇ ಎಲ್ಲೋ .ಹಿಂದೆಲ್ಲಾ ಯಕ್ಷಗಾನದ ಮಹಿಷಾಸುರನೋ, ಭೂತಕೋಲದ ದಯ್ಯವೋ ಕನಸಲ್ಲಿ ಬಂದು ಹಿಂಗೆ ಹೆದರಿ ಎದ್ದಾಗಲೆಲ್ಲಾ ತನ್ನ ತೊಡೆಯ ಮೇಲೇ ತಲೆಯಿಟ್ಟುಕೊಂಡು ತಟ್ಟಿ ಮಲಗಿಸುತ್ತಿದ್ದ ಅಬ್ಬೆ ನೆನಪಾದಳು.  ಸುತ್ತ ಕಣ್ಣು ಹಾಯಿಸಿದರೆ ಯಾರೂ ಇಲ್ಲ. ಕಣ್ಣ ಪರದೆಯಾಚೆಯ ತಾಯ ನೆನಪುಗಳು ಕಣ್ಣೀರಾಗಿ ಎದುರು ಬಂದು ಎಷ್ಟೋ ಹೊತ್ತಿನ ತನಕ ಹರಿಯುತ್ತಿದ್ದವು. ಮತ್ತೆ ಜೊತೆಯಾದ ನಿದ್ದೆಯಿಂದ ಕಣ್ಣೀರಿನ ಹರಿವು ನಿಂತಿತಾ ಅಥವಾ ಕಣ್ಣೀರಕೋಡಿಯ ಕಂಡು ತಾನೇ ಕಣ್ಣೀರಾದ ನಿದ್ರೆಯೇ ಅವನನ್ನು ಆಕ್ರಮಿಸಿತಾ ಎಂಬ ಸಂಗತಿಯನ್ನು ಕಾಲದ ರೋಧನಕ್ಕೆ ಸಾಕ್ಷಿಯಾದ ತಲೆದಿಂಬೇ ಹೇಳಬೇಕಿತ್ತು.

ಕಾಡ ಮಧ್ಯದಲ್ಲೊಂದಿಷ್ಟು ಮನೆಗಳು. ಇತ್ತೀಚೆಗೆ ಆ ಕಾಡಿಗೆ ಚಾರಣಕ್ಕೆ ಅಂತ ಬರೋರು ಶುರು ಮಾಡೋ ತನಕ ಗೌರಮ್ಮ, ಗೌರಕ್ಕ ಅಥವಾ ಗೋಲಿ ಹುಡುಗರ ಪಾಲಿನ ಗೌರಜ್ಜಿಗೆ ಪೇಟೆಯಲ್ಲಿಹ ಮಗ ತನ್ನ ನೆನೆದು ತನ್ನ ನೋಡಲು ಒಮ್ಮೆಯಾದರೂ ಬರುತ್ತಾನೇನೋ ಎಂಬ ಆಸೆಯೇ ಸೂರ್ಯೋದಯ, ಬರದಿದ್ದರೆ ಫೋನಾದ್ರೂ ಮಾಡಬಹುದಾ ಈ ವಾರದಲ್ಲಿ ಎಂಬ ನಿರೀಕ್ಷೆಯೇ ಸೂರ್ಯಾಸ್ತ.  ಅಂಟಾದ ಸೀರೆ ಸೆರಗಲ್ಲಿದ್ದ ಸಿಹಿಯನ್ನು ತೆಗೆದು ಹೊರಗೆ ಆಡುತ್ತಿದ್ದ ಹುಡುಗರಿಗೆ ಹಂಚುವಾಗ ಗೌರಮ್ಮನಿಗೆ ತನ್ನ ಮಗನ ನೆನಪು ಮತ್ತೆ ಹಸಿಯಾಗುತ್ತೆ. ಮದುವೆ ಮನೆಗೆ ಹೋಗಲಿ, ಉಪನಯನಕ್ಕೆ ಹೋಗಲಿ ತನ್ನ ಬಾಳೆಗೆ ಹಾಕಿದ ಸ್ವೀಟನ್ನೂ ತನ್ನ ಮಗನಿಗಾಯ್ತು ಅಂತ ಕಟ್ಟಿ ಮನೆಗೆ ತರುತ್ತಿದ್ದ ಗೌರಮ್ಮನಿಗೆ ಈಗೀಗ ಮನೆಗೆ ಬಂದ ಮೇಲೇ ತನ್ನ ಮಗ ತನ್ನ ಬಳಿಯಲ್ಲಿಲ್ಲ ಅನ್ನೋದು ನೆನಪಾಗುತ್ತೆ. ಕಣ್ಣಾಲಿಗಳು ನೀರಿಂದ ತುಂಬಿಹೋಗುತ್ತೆ ಎಷ್ಟೇ ಬೇಡ ಅಂದುಕೊಂಡ್ರೂ.

ಕಣ್ಣು ಹಾಯಿಸಿದತ್ತೆಲ್ಲಾ ಬೇರೆ ಬಣ್ಣವೇ ಇಲ್ಲವೇನೋ ಎಂಬಂತೆ ಆವರಿಸಿರೋ ಮರಳು. ಆ ಮರಳಗಾಡಿನಲ್ಲಿ ಇದ್ದಕ್ಕಿದ್ದಂತೆ ಒಂದಿಷ್ಟು ಆಕೃತಿಗಳು. ತನ್ನೆದುರು ಕಂಡಂತಾಗಿ ಮತ್ತೆ ಮಾಯವಾದದ್ದು ನಿಜವಾಗಿಯೂ ಆಕೃತಿಗಳಾ ಅಥವಾ ಮರೀಚಿಕೆಯಾ ? ತನ್ನ ಕಣ್ಣುಗಳೂ ತನಗೆ ಮೋಸ ಮಾಡೋಕೆ ಶುರು ಮಾಡ್ತಾ ಅಂತ ಬೇಸರವಾಯ್ತವನಿಗೆ. ಮರೀಚಿಕೆಯಾ ಅಥವಾ ನಿಜವಾಗಿಯೂ ಅಲ್ಲೇನಾದ್ರೂ ಬರ್ತಾ ಇದೆಯಾ ? ಬಂದರೂ ಇಷ್ಟು ದೂರದಲ್ಲಿರೋ ತಾನು ಅವರ ಕಣ್ಣಿಗೆ ಬಿದ್ದೇನಾ ಎಂಬ ಸಂಶಯದಿಂದ ಅವರು ದೂರವಾಗೋ ಮೊದಲು ನಾನೇ ಅತ್ತ ಸಾಗಿಬಿಟ್ಟೇನೆಂಬ ಹುಮ್ಮಸ್ಸಿನಲ್ಲಿ ಅತ್ತ ಹೆಜ್ಜೆ ಹಾಕಿದ, ಕೂಗಲೆತ್ನಿಸಿದ. ನಾಲ್ಕೇ ಹೆಜ್ಜೆ. ದೇಹ ಕುಸಿದು ಹೋಯ್ತು,ಸ್ವರ ಹೊರ ಹೊರಡಲಿಲ್ಲ.  ಊಟವಿಲ್ಲದ ಎರಡು ದಿನದ ಸುಸ್ತಿಗೆ. ಹೀಗೇ ಕಂಡು ಕಂಗೆಟ್ಟ ಅದೆಷ್ಟೋ ಮರೀಚಿಕೆಗಳ ಕಾಟಕೆ. ಕಣ್ಣೆದುರೇ ಮುಂದೆ ಸಾಗುತ್ತಾ ಮರೆಯಾಗುತ್ತಿದ್ದ ಒಂಟೆಗಳ ಸಾಲುಗಳನ್ನು ನೋಡೂ ಏನೂ ಮಾಡಲಾಗದ ನೋವು ಅವನ ಕಣ್ಣುಗಳಲ್ಲಿ ಧಾರೆಯಾಗಿ ಇಳಿಯುತ್ತಿತ್ತು.

ಅದೆಂತದೋ ಎನ್.ಜಿ.ಓ ಅಂತ ಕೆಲಸ ಮಾಡುತ್ತಿದ್ದ ಹುಡುಗ ಕಾಡ ಮಧ್ಯದಲ್ಲಿದ್ದ ತನ್ನೂರಿಗೆ ಬಂದು ಅಲ್ಲಿನ ಮನೆಮಾತೇ ಆಗಿ ಕೊನೆಗೊಂದು ದಿವಸ ತನ್ನನ್ನೇ ಮದುವೆಯಾಗುತ್ತಾನೆಂದು ಆಕೆ ಕನಸಿನಲ್ಲೂ ಎಣಿಸಿರಲಿಲ್ಲ. ಮದುವೆಯಾದ ಮೊದಲೆರೆಡು ವರ್ಷಗಳು ಸ್ವರ್ಗವೇ ಧರೆಗಿಳಿದ ಭಾವವಲ್ಲಿ. ಆಗಾಗ ಕೆಲಸಕ್ಕೆಂದು ಗಂಡ ಹೊರಹೋಗುತ್ತಿದ್ದರೂ ತನ್ನ ಎಳೆಗೂಸಿನ ನಗುವ ಹಿಂದೆ ಬೇರೆಲ್ಲಾ ನಿಶ್ಯಬ್ದಗಳೂ ಗೌಣವೆನಿಸಿಬಿಡುತ್ತಿದ್ದವು. ಆದ್ರೆ ಯಾರ ಕಣ್ಣು ಬಿತ್ತೋ ಇವರ ಮೇಲೆ. ರಾಜಸ್ಥಾನಕ್ಕೆ ತನ್ನ ಸಹಚರರೊಂದಿಗೆ ಕೆಲಸಕ್ಕೆಂದು ತೆರಳಿದ ಗಂಡ ಮರಳಲೇ ಇಲ್ಲ. ಯಾರ ಜೊತೆ ಹೋಗ್ತಾ ಇದ್ದೀಯ ? ಎಲ್ಲಿರ್ತೀಯ, ನಿನ್ನನ್ನು ಸಂಪರ್ಕಿಸೋಕೆ ಫೋನ್ ನಂಬರೇನಾದ್ರೂ ಕೊಡು ಅಂತ ಕೇಳಿದ್ರೆ ಅವನಿಗೇನಾಯ್ತು ಅಂತ ತಿಳೀಬಹುದಿತ್ತೇನೋ. ಆದ್ರೆ ಕೇಳಿರಲಿಲ್ಲವಲ್ಲಾ ಆಕೆ . ಹಿಂದೆ ಕೇಳಿದ್ದರೆ ತಾನೆ ಈಗ ಕೇಳೋಕೆ ! ಇಂದು ಬರಬಹುದು, ನಾಳೆ ಬರಬಹುದೆಂಬ ನಿರೀಕ್ಷೆಯಲ್ಲೇ ದಿನಗಳುರುಳಿದ್ವು. ತಂದೆಯೆಂಬೋ ಕಾಣದ ದೈವ ಎಂದೋ ಬರುವನೆಂಬ ನಿರೀಕ್ಷೆಯಲ್ಲೇ ಮಗು ಬೆಳೆದು ದೊಡ್ಡದಾಯ್ತು. ವಿದ್ಯೆ ಪಡೆದ ಮಗುವಿಗೀಗ ಹಳ್ಳಿಯ ಓದು ಸಾಲದಾಗಿದೆ. ಹೊಟ್ಟೆಪಾಡಿಗಾಗಿ ಪೇಟೆಯ ಹಾದಿ ಹಿಡಿಯಲೇಬೇಕಾಗಿದೆ.

ಅಂತೂ ಬೆಳಗಾಯಿತು ಏಳಪ್ಪಾ ದೊರೆ ಎನ್ನುವಂತೆ ಕಿಟಕಿಯ ಪಕ್ಕದಲ್ಲಿದ್ದ ಪಾರಿವಾಳಗಳು ಪಟ ಪಟ ರೆಕ್ಕೆ ಬಡಿಯುತ್ತಿದ್ದವು. ಯಾಕೋ ಕಣ್ಣುಬಿಡುಲಾಗುತ್ತಿಲ್ಲ ಎಂದುಕೊಂಡರೂ ತನಗಾಗಿ ಕಾಯುತ್ತಿದ್ದವರು  ನೆನಪಾಗಿ ಎದ್ದನವ. ಇವತ್ತು ಹುಷಾರಿಲ್ಲ ಎಂದು ಬಿಡಲಾ ಅಂದುಕೊಂಡ್ರೂ ನಿಜವಾಗಿಯೂ ಹುಷಾರಿಲ್ಲದೇ ತನ್ನ ಹಾದಿ ಕಾಯ್ತಾ ಇರೋ ಅದೆಷ್ಟೋ ರೋಗಿಗಳ ನೆನಪಾಗಿ ಬಚ್ಚಲಿನತ್ತ ಹೆಜ್ಜೆಯಿಟ್ಟ. ಕಷ್ಟಪಟ್ಟು ತೆರೆಸಿದ ಕಣ್ಣುಗಳಲ್ಲಿ ಉಪ್ಪು ಇದೆಯಾ, ಮಸಾಲೆಯಿದ್ಯಾ , ಚಿತ್ರಾನ್ನ ಇದ್ಯಾ ಅಂತೆಲ್ಲಾ ಜಾಹೀರಾತು ನೀಡಿ ಜನರನ್ನ ಮಂಗ ಮಾಡೋ ಪೇಸ್ಟುಗಳಿಗಿಷ್ಟು ಬೈದುಕೊಳ್ಳುತ್ತಾ ಕನ್ನಡಿಯೆದುರು ನಿಂತ. ಹೆರೆಯಹೊರಟ ಗಡ್ಡವನ್ನೇ ಮತ್ತೊಮ್ಮೆ ನೋಡಿದವನಿಗೆ ತನ್ನೂರ ಸೋಮನಗುಡ್ಡ ನೆನಪಾಯ್ತು. ಕೆದರಿದ ಕೂದಲಲ್ಲಿ ಶಾಲೆಗೆ ಹೋಗೋ ಹೊತ್ತಿಗೂ ತನ್ನೊಡನೆ ಆಟವಾಡೋಕೆ ಬರ್ತಿದ್ದ ಹಸುವಿನ ಕರು ನೆನಪಾಯ್ತು. ನಿದ್ದೆಯಿಲ್ಲದೆ ಕೆಂಪಾದ ಕಂಗಳಲ್ಲಿ ತನ್ನೂರ ಕೌಳಿ ಮಟ್ಟಿ, ಗೇರು ಹಣ್ಣುಗಳು ನೆನಪಾದ್ವು. ಛೇ, ಎಷ್ಟು ವರ್ಷಗಳಾಗಿ ಬಿಟ್ವಲ್ಲಾ ಊರುಕಡೆ ಹೋಗಿ ? ಏನು ದರಿದ್ರ ಮಳೆಯಪ್ಪಾ ಇದು ಅಂತ ಬಯ್ಯೋ ಮಳೆಯೇ ಎಷ್ಟು ಖುಷಿಕೊಡುತ್ತಿತ್ತಲ್ವಾ ಆಗ ಅನಿಸೋಕೆ ಶುರುವಾಯ್ತು. ಹಳ್ಳಿಯ, ತಾಯಿಯ ನೆನಪುಗಳು ಇವತ್ತೇ ಯಾಕಿಷ್ಟು ಹೆಚ್ಚಾಗಿ ಕಾಡ್ತಾ ಇದೆ ಅನ್ನೋ ಅವನ ಪ್ರಶ್ನೆಗೆ ಮುಂಬರುವ ಕಾಲವೇ ಉತ್ತರಿಸಬೇಕಿತ್ತು.

ತೋ...ನಾನ...ತಾ..ನಾನಾ..ನಾನ..ನೀ ಯಾರೋ, ನಾ ಯಾರೋ ಕಾಲ.. ತನ್ನ ಕೋಣೆಗೆ ಹೋಗ್ತಿದ್ದವನಿಗೆ ಈ ದನಿ ಅಲ್ಲೇ ಎಲ್ಲೋ ಕೇಳಿದಂತಾಗಿ ಒಮ್ಮೆ ಬೆಚ್ಚಿ ಬಿದ್ದ. ಸಂಶಯವೇ ಇಲ್ಲ. ಅದೇ ರಾಗ ಇದು. ತನ್ನ ಕನಸಿನಲ್ಲಿ ಬಂದು ಕಾಡುತ್ತಿದ್ದ ತಾನು ಎಂದೂ ಕೇಳದ ರಾಗಕ್ಕೆ ಸಾಹಿತ್ಯ ಬೇರೆ. ಅದನ್ನ ಯಾರೋ ಗುನುಗುತ್ತಿದ್ದಾರೆ , ಯಾರದು ಅದು ನೋಡಲೇಬೇಕೆನ್ನೋ ಕುತೂಹಲದಲ್ಲಿ ದನಿ ಬಂದ ಕೋಣೆಯತ್ತ ತಿರುಗಿದ. ನೋಡಿದ್ರೆ ರಾಜಸ್ಥಾನಿಗಳಂತೆ ಪೇಟ ಸುತ್ತಿದ್ದ ಇಬ್ಬರು. ಒಬ್ಬ ಮೈತುಂಬಾ ಬ್ಯಾಂಡೇಜ್ ಸುತ್ತಿಕೊಂಡು ಮಲಗಿದ್ರೆ ಮತ್ತೊಬ್ಬ ಒಂದು ರಾಗವ ಗುನುಗುತ್ತಿದ್ದ.ಆತನನ್ನು ನೋಡಿದ್ದೇನಾ ಎಲ್ಲಾದ್ರೂ ? ಗೊತ್ತಿಲ್ಲ. ಗುರುತಿರುವ ಮುಖದಂತೇ ಕಂಡರೂ ಎಲ್ಲೂ ನೋಡಿದ ನೆನಪಾಗುತ್ತಿಲ್ಲ. ಆದರೆ ಆ ರಾಗ ಮಾತ್ರ ನೆನಪಾಗುತ್ತೆ ಆಗಾಗ, ನೆನಪಾಗಿ ತಾಯ ನೆನಪ ತರಿಸುತ್ತೆ.. ಯಾಕೆ ? ಗೊತ್ತಿಲ್ಲ.ಯಾರಪ್ಪಾ ನೀನು ? ಈ ರಾಗ ಎಲ್ಲಿಂದ ಕಲಿತೆ ಎಂದ್ರೆ ಅವ ಇವನನ್ನೇ ದುರುಗುಟ್ಟಿ ನೋಡಿದನೊಮ್ಮೆ. ನನಗೆ ಜ್ಞಾಪಕ ಇರೋ ಸಮಯದಿಂದ ಜೊತೆಗೇ ಇರುವವ ಈತ. ಈ ಊರನ್ನು ತೋರಿಸ್ತೀನಿ , ಅದೇನೋ ಹೇಳ್ಬೇಕು ರಾಜಸ್ಥಾನದಿಂದ ಕರೆತಂದವನಿಗೆ ಇಲ್ಲೇ ಅಪಘಾತ ಆಗ್ಬೇಕೇ ? ಅವ ಬೇಗ ಹುಷಾರಾಗ್ಲಿ ಅಂತ ಅವನಿಷ್ಟದ ರಾಗ ಹಾಡ್ತಿದೀನಿ ಅಂದನವ. ಎಲ್ಲಿಯ ರಾಜಸ್ಥಾನದ ಬಾಲ್ಯದ ದೋಸ್ತಿ ಮತ್ತು ಎಲ್ಲಿಯ ಕನ್ನಡ ರಾಗ ಎಂದನಿವ ಆಶ್ಚರ್ಯದಿಂದ. ನಾ ರಾಜಸ್ಥಾನದ ಮರುಭೂಮಿಯಲ್ಲಿ ಪ್ರಜ್ಞೆಯಿಲ್ಲದೇ ಬಿದ್ದಿದ್ದೆನಂತೆ. ಎಷ್ಟು ಕಾಲವೋ ಹಾಗೇ ಬಿದ್ದಿದ್ದ ನನ್ನ ಜೀವವುಳಿಸಿದ ಪುಣ್ಯಾತ್ಮನೀತ.  ಎಚ್ಚರವಾದಾಗ ಯಾವುದೋ ಊರಿನ ಹೆಸರು, ಮುಂಚೆ ಹೇಳಿದ ರಾಗ ಬಿಟ್ರೆ ಬೇರೇನೂ ಹೇಳುತ್ತಿರಲಿಲ್ಲವಂತೆ ಕೆಲ ದಿನಗಳ ನಂತರ. ಆಮೇಲೆ ನಿಧಾನವಾಗಿ ಸುಧಾರಿಸಿಕೊಂಡೆ ಅಂತ ಹೇಳ್ತಿದ್ದ ಅವ. ಅವನನ್ನು ಕಂಡಿದ್ದೇ ನನ್ನ ನೆನಪಿನಾಳದಲ್ಲಿರೋದು. ಅದಕ್ಕಿಂತ ಮುಂಚೆಯ ನಾನ್ಯಾರು, ಎಲ್ಲಿಂದ ಬಂದೆ ಅನ್ನೋದೊಂದೂ ಗೊತ್ತಿಲ್ಲ. ಅದ್ರ ಬಗ್ಗೆ ಹೆಚ್ಚಿನದ್ದೇನಾದ್ರೂ ಹೇಳಬಹುದಾದ ವ್ಯಕ್ತಿ ಇವನೊಬ್ಬನೇ . ಈ ಊರಿಂದ ಆ ಊರಿಗೆ ಹೇಗೆ ಹೋಗೋದು ಅಂತ್ಲೂ ಗೊತ್ತಿಲ್ಲ ನನಗೆ. ಇವನನ್ನು ಉಳಿಸಿಕೊಟ್ರೆ ಮಾತ್ರ ನಾನಲ್ಲಿಗೆ ಹೋಗೋಕೆ ಸಾಧ್ಯ ಡಾಕ್ಟರ್ ಅಂತ ಅಂಗಲಾಚಿದವನ ಕಣ್ಣಂಚಲ್ಲಿ ಅವನಿಗರಿಯದಂತೆ ದುಃಖ ಹೆಪ್ಪುಗಟ್ಟಿತ್ತು.

ತಾನೊಬ್ಬ ವೈದ್ಯನಷ್ಟೇ ದೇವರಲ್ಲವೆಂದು ತಿಳಿಹೇಳಿದ್ರೂ ತನ್ನಿಂದ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಸ್ನೇಹಿತನ ಕಂಡವನ ಪಾಲಿಗಿವ ದೇವರೇ ಆಗಿದ್ದ. ಇವನಿಗೆ ಅವನ ಕಂಡರೆ ಯಾರೋ ಸಂಬಂಧಿಯನ್ನು ಕಂಡ ಭಾವ, ಅವನಿಗೂ ಏನಪ್ಪಾ ಹೇಗಿದೀಯ ಎನ್ನುವ ಇವನ ಕಂಡರೆ ಏನೋ ಆತ್ಮೀಯತೆ. ಅವನಿಗೆ ಇವ ರಾಮ, ಇವನಿಗೆ ಅವ ರಾಮ.. ಎಂಬ ವಾಣಿ ನೆನಪಾಯಿತೊಮ್ಮೆ ಇವನಿಗೆ. ಇವರಿಬ್ಬರನ್ನು ಹತ್ತಿರ ಸೆಳೆದಿದ್ದ ರಾಗದ ನೆನಪಾದೊಡನೆಯೇ ಕಾಡಲ್ಲಿದ್ದ ತಾಯ ನೆನಪೂ ಆಯಿತಿವನಿಗೆ. ಅದೆಷ್ಟು ಹಾಡುಗಳನ್ನು ಹಾಡುತ್ತಿದ್ದಳವಳು ತನ್ನ ಬಾಲ್ಯದಲ್ಲಿ. ಈ ಹಾಡ ಬಗ್ಗೆ ಅವಳಿಗೆ ಏನಾದ್ರೂ ಗೊತ್ತಿರಬಹುದಾ ಎಂಬ ಆಲೋಚನೆ ಹೊಳೆಯಿತೊಮ್ಮೆ. ಇತ್ತೀಚೆಗೆ ಸಿಕ್ಕ ಇವನ ಬಾಯಲ್ಲಿ ಅಷ್ಟಿಷ್ಟು ಸಾಹಿತ್ಯ ಕೇಳಿದ್ದರೂ ತನ್ನ ಕನಸಲ್ಲಿ ಅದಕ್ಕಿಂತ ಮುಂಚಿನಿಂದಲೂ ಕಾಡುತ್ತಿದ್ದ ಅದೇ ರಾಗಕ್ಕೂ ಏನಾದ್ರೂ ಸಂಬಂಧವಿರಬಹುದಾ ಎಂಬ ಪ್ರಶ್ನೆಯನ್ನು ತನ್ನ ತಾಯೇ ಉತ್ತರಿಸಬಹುದೆಂಬ ವಿಶ್ವಾಸ ಮೂಡತೊಡಗಿತು. ಅದಕ್ಕೆ ಉತ್ತರಿಸಲಿ ಇಲ್ಲ ಉತ್ತರಿಸದೇ ಇರಲಿ, ತಾ ಸುಖವಾಗಿದ್ದು ತನ್ನ ತಾಯ ಮರೆತಂತೇ ಇರುವ ತನ್ನ ಚುಚ್ಚಿ ಕೊಲ್ಲುತ್ತಿರುವ ಆತ್ಮಸಾಕ್ಷಿಯ ಸಮಾಧಾನಕ್ಕಾದರೂ ತಾನು ಊರಿಗೆ ಹೋಗಿ ಆಕೆಯನ್ನು ನೋಡಬೇಕೆಂಬ ಕಾತುರ ಕಾಡತೊಡಗಿತವನಿಗೆ. ಎದುರಿಗೆ ಬಂದ ಪ್ರತೀ ವೃದ್ಧೆಯಲ್ಲೂ ತನ್ನ ತಾಯಿಯ ಸಂಕಟಗಳೇ ಕಂಡು ಹೊರಟೇಬಿಟ್ಟ ಊರಿನತ್ತ.

ಜೀವನದ ತಲ್ಲಣಗಳೇ ಹಾಗೆ. ಹಳ್ಳಿಯಲ್ಲಿದ್ದವನಿಗೆ ಪಟ್ಟಣದ ಥಳುಕು ಬಳುಕಿಲ್ಲ. ಅದನ್ನರಸಿ ಹೊರಟವನ ಬೆನ್ನಿಗೆ ತನ್ನ ತಂದೆ ತಾಯಿಗಳಿಲ್ಲ. ಬೆಳಕನರಸಿ ಹೊರಟ ಚಿಟ್ಟೆಗಳಿಂದ ಹಳ್ಳಿಗಳೆಲ್ಲಾ ವೃದ್ದಾಶ್ರಮಗಳಾಗಿಬಿಟ್ಟಿದೆಯಲ್ಲ ಗೌರಮ್ಮ ಅಂತಿದ್ದ ಚಾರಣಿಗನ ಬಳಿ ನೀನು ರಾಜಸ್ಥಾನಕ್ಕೇನಾದ್ರೂ ಹೋಗಿದ್ದೆಯೇನಪ್ಪಾ ಎಂದು ಕೇಳುವ ಮನಸ್ಸಾದರೂ ಸುಮ್ಮನಾದಳು. ಹೌದಂದರೆ ಏನನ್ನು ಕೇಳಿಯಾಳು ? ತನ್ನ ಗಂಡನನ್ನು ನೋಡಿದ್ದೀರಾ ಎಂದೇ ? ಆತ ಹೋಗಿ ಎಷ್ಟು ವರ್ಷವಾಯ್ತು ? ಎಲ್ಲಿದ್ದಾನೋ ? ಹೇಗಿದ್ದಾನೋ ? ಅಷ್ಟಕ್ಕೂ ರಾಜಸ್ಥಾನವನ್ನೋದೇನು ನಮ್ಮ ಸೋಮನ ಬೆಟ್ಟವೇ ? ಹುಡುಕಿದ ತಕ್ಷಣ ಸಿಗೋಕೆ ? ನಮ್ಮ ರಾಜ್ಯದಲ್ಲೇ ಇರೋ ಮಗನೇ ನನ್ನ ಕಾಣೋಕೆ ಬರದೇ ವರ್ಷವಾಗಿದೆ. ಇನ್ನು ಎಂದೋ ಹೋದ ಗಂಡ ಬರುತ್ತಾನೆಯೇ ? ಇಲ್ಲಿ ಬರೋ ಯುವಕರಿಗೆ ಮಾಡಿಕೊಡೋ ರೊಟ್ಟಿಯನ್ನ ತನ್ನ ಮಗನಿಗೇ ತಟ್ಟಿ ಕೊಡುತ್ತಾ ಇದ್ದೀನಿ ಅಂದ್ಕೋಬೇಕು. ಮುಂಚಿನಂತೆ ದುಡಿಯೋಕೆ ಆಗದೇ ಇರೋ ಈ ದಿನಗಳಲ್ಲಿ ಅವರು ಕೊಡೋ ಅಷ್ಟೋ ಇಷ್ಟೋ ದುಡ್ಡಲ್ಲೇ ಬದುಕಬೇಕು ಅಂದ್ಕೋತಲೇ ಒಂದಿಷ್ಟು ಗೋಲಿಯಾಡುವವರು ಗೌರಜ್ಜಿ ಅಂತ ಇತ್ತಲೇ ಓಡಿಬಂದರು. ಇವತ್ತು ಎಲ್ಲೂ ಹೋಗಿಲ್ಲ ಮಕ್ಳಾ , ಸಿಹಿ ಇಲ್ಲ ಅಂದ್ರೂ ಆ ಮಕ್ಕಳು ಅಲ್ಲಿ ಬಂದು ಒಂದುಷ್ಟು ಆಟವಾಡಿ, ಕೂಗಾಡಿ ಮತ್ತೆಲ್ಲೋ ಹೋದ್ರು. ಆ ಮಕ್ಕಳ ನೊಡುತ್ತಾ ಗೌರಮ್ಮನಿಗೆ ತಾನು ತನ್ನ ಮಗನನ್ನು ಮಲಗಿಸುವಾಗ ಹಾಡುತ್ತಿದ್ದ ಜೋಗುಳ ನೆನಪಾಯ್ತು
ತೋ..ನಾನಾ. ತಾ..ನಾನ..ನಾನ..
ನಾ ಯಾರೋ, ನೀ ಯಾರೋ ಕಾಲ
ಒಂದ್ ಮಾಡಿ ತಳ್ತೀಯಲ್ಲೋ ದೂರ
ಅರಿಯೆ ನಾ ಮೋಸ, ತಿರುಗಿಲ್ಲ ದೇಶ
ಕೂಸಿನ ನಗು ಕಾಪಿಡುವುದೆ ಕೆಲಸ
ಬೇಡುವೆನು ಕಾಪಾಡೋ ಈಶ..

ಇಂದಿನ ಪ್ರಸಂಗವು ನೆನಪಾಗಿ ಅವಳಿಗೇ ಅರಿವಿಲ್ಲದಂತೊಂದಿಷ್ಟು ಸಾಲುಗಳು ಅವಳ ಬಾಯಿಂದ ಹೊರಹೊಮ್ಮಿದ್ದವು.
ಬಂದೆ ಬರುವನು ತಿರುಗಿ ತೊರೆದೆನ್ನ ಪತಿರಾಯ
ತಡೆಯಾದ ಗೋಡೆಗಳ ಏಣಿ ಹುಡುಕಿ
ಕಾಂಚಾಣದಾಚೆಗೂ ಕಾಡಲೆನ್ನಯ ಪ್ರೀತಿ
ಬರುವ ಸಾಧ್ಯತೆಯುಂಟು ಮಗನು ಮರಳಿ
ಬೇಸರಿಸದಿರು ಮನವೆ ಈಶನಿಹ ನಿನಗೆಂದೆ
ಮರುಭೂಮಿಯಲು ಇರುವ ನೀರಿನಂತೆ
ಬಾಳಪಂಜರದಲ್ಲಿ ಕೊನೆಯಿಲ್ಲದಂತಲೆದು
ಸಾಯೊ ಜೀವಕೆ ಸಿಗುವ ಕೀಲಿಯಂತೆ..
ತೋ ನಾನಾ.. ತಾ.. ನಾನ.. ನಾನ..

ಆಗಷ್ಟೇ ಅಲ್ಲಿಗೆ ಬಂದ ಡಾಕ್ಟರು ಮತ್ತು ಅವನ ಜೊತೆಗೆ ಬಂದ ರಾಜಸ್ಥಾನದ ಅತಿಥಿಗಳು ಇದಕ್ಕೆ ಮೂಕ ಕೇಳುಗರಾಗಿದ್ರು. ಆ ಹಾಡು ಕೇಳುತ್ತಾ ಕೇಳುತ್ತಾ ಅದರ ಹಿಂದಿನ ಅರ್ಥ ಮತ್ತು ತಮ್ಮ ನಡುವಿನ ಸಂಬಂಧಗಳ ಯೋಚಿಸುವಷ್ಟರಲ್ಲೇ ಇವರು ಬಂದ ಅರಿವಾದ ಗೌರಮ್ಮ ಅಚ್ಚರಿಯಿಂದ ತನ್ನ ಹಾಡು ನಿಲ್ಲಿಸಿದ್ದಳು. ಆ ಹೊತ್ತಿನ ಸಂತೋಷ ಅಲ್ಲಿನ ಕಣ್ಣುಗಳಲ್ಲಿನ ಅಶ್ರುಧಾರೆಯಾಗಿ ಹರಿದಿತ್ತು.
 ಸೂಚನೆ: ಈ ಕಥೆ ವಿಜಯನೆಕ್ಟಿನ ಜನವರಿ ೨೩ ರ ಸಂಚಿಕೆ, ಪುಟ ೩೦ರಲ್ಲಿ ಪ್ರಕಟವಾಗಿದೆ

Sunday, April 26, 2015

ಭವ

ಮಧ್ಯಾಹ್ನದಿಂದಲೂ ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಕಾಮನಬಿಲ್ಲಿನ ಚಿತ್ತಾರಗಳ ಬಿಡಿಸಿ ಸುಸ್ತಾದ ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೋ ಎಂಬಂತೆ ಕವಿದಿದ್ದ  ಮಬ್ಬುಗತ್ತಲು. ಇಲ್ಲಾಡಿ ಬೇಸರಗೊಂಡ ಮೋಡಗಳು ಇನ್ನೆಲ್ಲೋ ಹಾರಿದಂತೆ ಸೂರ್ಯ ಆಗಸವನ್ನೇ ಪಟವನ್ನಾಗಿಸಿ ಬಿಡುವು ಕಳೆಯುತ್ತಿದ್ದ . ಹಳದಿ ಕೇಸರಿಗಳ ಚಿತ್ತಾರ ಬಿಡಿಸುತ್ತಿದ್ದ ರವಿ, ಹೊಗೆಯುಗುಳುತ್ತಿದ್ದ ಬಸ್ಸುಗಳು, ದಿನವಿಡೀ ಸುರಿದ ಮಳೆಯಿಂದ ತಂಪಾದ ದಾರಿಪಕ್ಕದ ಮರಗಳು, ಕೊಚ್ಚೆಯಿಂದ ಕಾಲಿಡಲೂ ಆಗದಂತಹ ರಸ್ತೆಯ ಇಕ್ಕೆಲಗಳು..ಬದುಕೂ ಹೀಗೆ ಅಲ್ಲವೇ ? ಚಂದವೆಂದುಕೊಂಡ್ರೆ ಚಂದ ಚಂದ. ಗೋಳೆಂದುಕೊಂಡ್ರೆ ಗೋಳೇ ಗೋಳು ! ಪ್ರಕೃತಿಗೆ ನೂರೆಂಟು ಬಣ್ಣಗಳಂತೆ. ಅದರಲ್ಲಿ ನೀ ನೋಡಬಯಸಿದ್ದೇ ಕಾಣೋದು ನಿಂಗೆ ಅಂತ ಯಾರೋ ಹೇಳಿದ ಮಾತ ನೆನಪಿಸಿ ಗೋಣಾಡಿಸುತ್ತಾ ತನ್ನ ಗಮ್ಯದತ್ತ ಸಾಗಿದನಾತ. ತನ್ನ ಪಾಡಿಗೆ ತಲೆಯಾಡಿಸಿಕೊಳ್ತಾ ಮುಂದೆ ಹೋಗೋ ಇವ ಹಾಡು ಕೇಳ್ತಾ ಇದಾನಾ ಅಂದ್ರೆ ಕಿವಿಗೊಂದು ಕರಿಬಳ್ಳಿಯಿಲ್ಲ . ಹುಚ್ಚ, ಭಿಕಾರಿಯಾ ಅನ್ನೋಕೆ ಗರಿಗರಿಯಾದ ಬಟ್ಟೆ ಬೇರೆ ಹಾಕಿದ್ದಾನೆ. ಮಾನಸಿಕ ? ಛೇ ಛೇ. ಇಲ್ಲದಿರಬಹುದು. ಯಾರಂತ ನೋಡೇ ಬಿಡೋಣ ಅನ್ನೋ ಕುತೂಹಲದಲ್ಲಿ ಸೂರ್ಯನೂ ಈಚೆ ಬರುವ ಹವಣಿಕೆಯಲ್ಲಿದ್ದಾನಾ ಎಂಬಂತೆ ಅಲ್ಲಲ್ಲಿ ಬಂಗಾರದ ಎಳೆಗಳು ಕಾಣುತ್ತಿದ್ದವು.

ಸಂಜೆ ಆರು ಆರೂಕಾಲಾಗಿದ್ದಿರಬಹುದು. ಆರೂವರೆಯೂ ಆದೀತೇನೋ. ಮುಳುಗುತ್ತಿರುವ, ಇನ್ನೂ ಮುಳುಗಿಲ್ಲದ ಸೂರ್ಯನ ಕಂಡರೆ ಏಳರ ಒಳಗೆ ಎಂದೂ ತಳ್ಳೋ ತಿಂಡಿಗಾಡಿಗಳ ಪಕ್ಕದಲ್ಲಿ ಸಮವಸ್ತ್ರದಲ್ಲಿ ನಿಂತಿದ್ದ ಜನರನ್ನು ನೋಡಿ ಐದರ ಆಫೀಸುಗಳು ಬಿಟ್ಟಾದ ಮೇಲಿನ ಸಮಯವೆಂದೂ ಯಾರಾದರೂ ಹೇಳಬಹುದಿತ್ತು. ದಪ್ಪ ದಪ್ಪ ಬ್ಯಾಗುಗಳ, ಮುಂಬಾಗಿದ ಹೊಟ್ಟೆಗಳ ಹೊತ್ತು ಕನ್ನಡಕಗಳ ಆಚೆಯಿಂದ ತಮಗಾಗಿ ತಯಾರಾಗುತ್ತಿರೋ ತಿಂಡಿಗಳನ್ನೇ ನೊಡುತ್ತಿರೋ ಯುವಕರು , ಸಂಜೆಯಾದರೂ ಮುಖ ಬಾಡದ ಸುಂದರಿಯರು, ತಿಂಡಿಗಳ ನೋಡಿ ಬಾಯಿ ಸೆಳೆದರೂ ತಮ್ಮ ದೇಹದ ನೆನಪಾಗಿ ಮುಂದೆ ಸಾಗುತ್ತಿರೋ ಲಲನೆಯರು, ನಗುಮೂಡದ ಆಂಟಿಯರು, ನಾಯಿಯೊಂದಿಗೆ ಒಂದು ಬುಕ್ಕನ್ನೂ ಹಿಡಿದು ವಾಕಿಂಗ್ ಹೊರಟ ಅಂಕಲ್ಗಳು ಆ ತಿಂಡಿಬೀದಿಯನ್ನು ಕಳೆಗಟ್ಟಿಸಿದ್ದರು. ಮಸಾಲೆಪುರಿ, ಗೋಬಿ, ನ್ಯೂಡಲ್ಸು, ದೋಸೆ, ಮಂಡಕ್ಕಿ, ಪಾವ್ಬಾಜಿಗಳ ಹಲವಿಧ ಕಾಂಬಿನೇಷನ್ನುಗಳು ದಿನಾ ತಿಂದರೂ ಮುಂದಿನ ದಿನಕ್ಕೆ ಮತ್ತೇನೋ ಇದೆಯೆಂಬ ಸವಿಯ ಸೆಳೆತದಲ್ಲಿ ಜನರನ್ನು ಹಿಡಿದಿಟ್ಟಿದ್ದವು. ಉಚ್ವಾಸ ನಿಚ್ವಾಸಗಳಂತೆ ಒಂದೆಡೆಯಿಂದ ಜನರನ್ನು ಹತ್ತಿಸಿಕೊಂಡು ಹೋಗುತ್ತಿದ್ದ ಬಸ್ಸುಗಳಾದರೆ ಮತ್ತೊಂದೆಡೆಯಿಂದ ಜನರನ್ನು ತಂದು ತಿಂಡಿ ಬೀದಿಯ ಬಳಿ ಹಾಕೋ ಬಸ್ಸುಗಳು. ಎಲ್ಲೋ ಹುಟ್ಟಿ, ಎಲ್ಲೋ ಸಾಗಿ ಮತ್ತೆಲ್ಲೋ ಅವಸಾನಗೊಳ್ಳೋ ಬಾಳ ಪಯಣದಂತೆ ಎಲ್ಲೆಲ್ಲಿಂದಲೋ ತಿಂಡಿ ಬೀದಿಗೆ ಬರುತ್ತಿದ್ದ ಜನರು ಮತ್ತಿನ್ಯಾವುದೋ ಸಂದುಗೊಂದಲಗಳಲ್ಲಿ ಮಾಯವಾಗುತ್ತಿದ್ದರೆ. ಮೂರು ಘಳಿಗೆಯ ಬಾಳಪಯಣದಲ್ಲಿ ತಿಂಡಿಬೀದಿಯೆಂಬೊಂದೊಂದು ತಂಗುದಾಣವಷ್ಟೆ. ಬರಿಯ ನಿಲ್ದಾಣವಲ್ಲವಿದು. ಆಕರ್ಷಕ ತಂಗುದಾಣ. ದೇಹಮನಗಳ ಸುಸ್ತುಮರೆಸಿ ಆಹ್ಲಾದವೀಯೋ ತಾಣ.. ಆ ತಂಗುದಾಣಕ್ಕೊಬ್ಬ ಹೊಸ ಪಯಣಿಗ ಹೊಕ್ಕುವವನಿದ್ದ ಇಂದು.

ಹತ್ತಾರು ಜನರ ಮಧ್ಯೆ ಹನ್ನೊಂದನೆಯವನೆಂಬಂತೆ ಹೊಕ್ಕವನ ಬಟ್ಟೆಯ ಬಗ್ಗೆಯಾಗಲಿ, ಬ್ಯಾಗ ಬಗ್ಗೆಯಾಗಲೀ, ಬ್ಯಾಗೊಳಗಿದ್ದಿರಬಹುದಾದ ವಸ್ತುಗಳ ಬಗ್ಗೆಯಾಗಲಿ ಅಲ್ಲಿದ್ದ ಯಾರಿಗೂ ಗಮನವಿದ್ದಿರಲಿಲ್ಲ. ತಯಾರಿಸೋ ಅಂಗಡಿಯವನಿಂದ ಖಾಲಿಯಾಗಿಸೋ ಹೊಟ್ಟೆಯವನವರೆಗೆ ಎಲ್ಲರಿಗೂ ತಮ್ಮ ಹೊಟ್ಟೆಯ ಚಿಂತೆಯಷ್ಟೆ. ಸಂಜೆಯ ಹೊತ್ತಿಗೆ ತಮ್ಮ ಪಕ್ಕದಲ್ಲೇ ತಿಂಡಿ ಬೀದಿಯಲ್ಲಿ ನಡೆದುಹೋಗುತ್ತಿರುವವನೊಬ್ಬ ಕಾಲೇಜು ವಿದ್ಯಾರ್ಥಿಯಾ, ಆಫೀಸಿನಿಂದ ಬಂದವನಾ ? ಕೆಲಸಕ್ಕೋಸ್ಕರ ದಿನಾ ಹುಡುಕುತ್ತಿರುವವನ ಎಂಬ ಪ್ರಶ್ನೆ ಅಲ್ಲಿದ್ದವರಿಗೆ ಕಾಡಿರೋ ಸಾಧ್ಯತೆ ಕಮ್ಮಿಯೇ. ನಿಯಮಿತವಾಗಿ ಬರೋ ಒಂದಿಷ್ಟು ಮುಖಗಳ ಪರಿಚಯವಿದ್ದಿರಬಹುದಾದರೂ ಎಂದೋ ಬರುವ ನೂರಾರು ಜನರನ್ನು, ಮೊದಲ ಬಾರಿಗೆ ಬರೋ ಗ್ರಾಹಕರನ್ನು, ಗ್ರಾಹಕರ ತರದಲ್ಲೇ ಬಂದಿರೋ ಭಯೋತ್ಪದಕನನ್ನು ಯಾವ ಅಂಗಡಿಯವನಾದರೂ ಹೇಗೆ ಗ್ರಹಿಸಿಯಾನು ? ಆಫೀಸವ್ನೇ ಆಗಿದ್ದನೆಂದರೂ ಆರರ ಹೊತ್ತಿಗೆ ಬಂದನೆಂದರೆ ಆಫೀಸಿಂದ ಬಂದನೋ, ಅಥವಾ ಆಫೀಸಿಗೆ ದಿನವಿಡೀ ರಜೆ ಹಾಕಿ ಬೇರೇನೋ ಮಾಡಿ ಈಗ ಮತ್ತಿಲ್ಲಿಗೆ ಬಂದನೋ ಎಂಬ ಸಂದೇಹಗಳು ಯಾರಿಗೆ ತಾನೆ ಸುಳಿದೀತು ಹೇಳಿ. ಅತನ ಬೆನ್ನಿನಲ್ಲಿದ್ದ ಬ್ಯಾಗೊಳಗೆ ಬಾಂಬೇನಾದ್ರೂ ಇದ್ದಿರಬಹುದೆಂದ ಊಹೆಯಂತೂ  ಖಂಡಿತಾ ಮೂಡಲು ಸಾಧ್ಯವಿರಲಿಲ್ಲ.

ಸ್ವರ್ಗದ ಆಸೆಯಿತ್ತಿದ್ದು ಹೌದು.ಸತ್ತರೆ ಕುಟುಂಬಕ್ಕೊಂದು ಆಸರೆಯೀವ ಭರವಸೆಯಿತ್ತಿದ್ದೂ ಹೌದು. ಬಾಂಬಿಡುವಷ್ಟು ದಿನವೂ ಕೈತುಂಬಾ ಕಾಸು, ಮನಸ್ಸಿಗೆ ಬಂದ ಜೀವನ ಎಂಬ ಕನಸ ಕಟ್ಟಿಸಿದ್ದ ಗೆಳೆಯನ ಮಾತುಗಳು ಒಮ್ಮೆ ಹೌದೆನ್ನಿಸಿದ್ದು ಸುಳ್ಳಲ್ಲ.  ಆದರೆ ಈ ನೆಲದಲ್ಲಿ ಬಾಂಬಿತ್ತರೆ ತನಗೆ ದಕ್ಕುವುದೇನು ? ತನ್ನ ಹುಟ್ಟಿದ ನೆಲವಲ್ಲವೇ ಇದು ? ಹುಟ್ಟಿದ ನೆಲ ! ? ಎಲ್ಲ ಬಣ್ಣಗಳ ಅಳಿಸಿ ಒಂದೇ ಬಣ್ಣ ಮಾಡಬೇಕೆನ್ನುವವ ಹೇಳುವುದು ನನ್ನ ಮೂಲ ನೆಲವಲ್ಲವೇ ? ಜೀವವೆಲ್ಲವೂ ದೇವನ ವರದಾನವೆಂಬೋ ಮಾತುಗಳ ನಂಬಲೇ ? ತಂದೆತಾಯಿಯರ ಕೋಶಗಳ ಸಮ್ಮಿಲನವೆಂಬೋ ವಿಜ್ನಾನವ ನಂಬಲೇ ? ಯಾವುದನ್ನು ನಂಬಿದರೂ ತನ್ನ ಮೂಲ ನೆಲವೆಂಬುದೆಲ್ಲಿ ? ತನ್ನನ್ನು ತಂದವರು ಇಳಿಸಿದ್ದೇ ನೆಲ. ಕಲಿಸಿದ್ದೇ ಭಾಷೆ. ಇತ್ತಿದ್ದೇ ತುತ್ತು. ಕೇಸರಿ, ಹಸಿರು, ಬಿಳಿಗಳ ಕಚ್ಚಾಟಗಳಲ್ಲಿ ಸ್ವರ್ಗದ ಪರಿಕಲ್ಪನೆಗಿಂತ ತೊಳೆಯದ ಟೋಪಿಗಳ ವಾಸನೆಯೇ ಹೊಡೆಯುತ್ತಿದೆಯಲ್ಲ ಇತ್ತೀಚೆಗೆ ? ಕಚ್ಚಾಟ ತಂದಿಕ್ಕೋ ಬಾಂಬುಗಳು ಕೊಡೋ ಬೆಚ್ಚನೆಯ ಇಂದಿಗಿಂತ ಅದೆಷ್ಟೇ ಅವ್ಯವಸ್ಥೆಗಳ ತವರೆಂಬ ದೇಶದಲ್ಲೂ ಇರಬಹುದಾದ ಬೆಳಕ ಕಿರಣ ಹುಡುಕಿ ಹೊರಡುವುದೇ ಮೇಲಾ ? ತಿಂಡಿ ಬೀದಿಯಲ್ಲಿ ಹೊಟ್ಟೆ ತುಂಬಾ ಸಿಗಬಹುದಾಗಿದ್ದ  ,ತನ್ಮೂಲಕ ತನ್ನ ದಾಸ್ಯಕ್ಕೆ ತಳ್ಳಬಹುದಾಗಿದ್ದ ಗೋಬಿ ನ್ಯೂಡಲ್ಸನ್ನ ಧಿಕ್ಕರಿಸಿ ಮುಂದೆ ನಡೆದಿದ್ದವನಿಗೆ ಈಗ ತಿಂಗಳೆರಡಾದರೂ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದ ಪರಿಸ್ಥಿತಿ. ಪ್ರತಿ ದಿನಾ ಇಸ್ತ್ರಿಯಾದ ಬಟ್ಟೆಯ ಕಾಣುವವರಿಗೆ ಹೊಸ ಊರ ಹೆಂಗೋ ಹೊಕ್ಕವನ ಬಳಿಯಿರೋ ಮೂರೇ ಜೊತೆ ಬಟ್ಟೆಗಳೇ ಮತ್ತೆ ಮತ್ತೆ ಗರಿಯಾಗುತ್ತಾ ದಿನಗಳೆಯುತ್ತಿರೋದು, ಹೊಟ್ಟೆಪಾಡಿಗೊಂದು ಕೆಲಸವರೆಸುತ್ತಾ ಕಾಲ ತಳ್ಳುತ್ತಿವೆಯೆಂಬ ಸತ್ಯ ಎಲ್ಲಿ ಗೋಚರಿಸಬೇಕು. ಎಲ್ಲೋ ಬಾಂಬ್ ಮೊಳಗಿದ ಸದ್ದಾದಾಗೆಲ್ಲಾ , ತಿಂಡಿ ಬೀದಿಯ ಬಳಿ ಹಸಿದ ಹೊಟ್ಟೆಯಲ್ಲಿ ಸಾಗಿದಾಗೆಲ್ಲಾ ತಿಂಗಳೆರಡರ ಹಿಂದೆ ನಡೆದ ಮಾತುಕತೆ ನೆನಪಾಗುತ್ತೆ. ಸಿಗದ ಉತ್ತರಗಳನರಸುತ್ತಾ ಹಿಡಿದ ಹಾದಿಯಲ್ಲಿ ಇಂದಲ್ಲಾ ನಾಳೆಯೊಂದು ಆಶಾಕಿರಣ ಕಾಣೋ ಭರವಸೆ ಮೂಡಿಸಿಕೊಳ್ಳುತ್ತಾ ಹೆಜ್ಜೆಗಳು ಮುಂದೆ ಸಾಗುತ್ತೆ.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

Friday, January 16, 2015

ಕಾಣೆಯಾದ ಕತೆಯ ಹಿಂದೆ

ರೈಟ್ ಕ್ಲಿಕ್ ಮಾಡಲೂ ಸಾಧ್ಯವಿಲ್ಲದಂತೆ ತುಂಬಿಹೋಗಿತ್ತು ಡೆಸ್ಕಟಾಪು. ಡೆಸ್ಕಟಾಪಿನ ಮೇಲೆ, ಸಿ ಡ್ರೈವಲ್ಲಿ ಜಾಸ್ತಿ ಏನು ಇಡಬೇಡಿ, ಕಂಪ್ಯೂಟ್ರು ನಿಧಾನವಾಗತ್ತೆ ಅಂತಿದ್ದವ್ನೇ ಈ ತರ ಕಸ ತುಂಬಿಸ್ಕೊಂಡಿರೋದಾ ಅನಿಸ್ಬಿಡ್ತು ಒಮ್ಮೆ. ಕಸ ಅನ್ನೋಕೆ ಮನಸ್ಸು ಬಾರದ ಕಸ ಅದು. ಬೆಳಕ ಕಂಡು ವಾರವಾಗಬೇಕಿದ್ದ ಕನಸುಗಳು ನೋಟಪ್ಯಾಡಿನ ಗೀಚುಗಳೇ ಆಗುಳಿದು ಪರದೆಯ ತುಂಬೆಲ್ಲಾ ಮಲಗಿಬಿಟ್ಟಿದ್ವು. ದಿನದೆಂಟು ಘಂಟೆಗಳು ಹೊಟ್ಟೆಪಾಡಿಗೆ , ಅದಾದ ನಂತರ ಎಂಟು ಘಂಟೆ ನಿದ್ರೆ ಅಂದ್ರೂ ಇನ್ನೆಂಟು ಘಂಟೆ ಏನ್ಮಾಡ್ತೀಯೋ ? ಒಂದೆಂರಡು ಘಂಟೆ ನನ್ನ ಪಾಲಿಗೂ ಕೊಡೋ ಅಧಿಕಾರಿ ಅಂತಿದ್ದ ಅವಳ ಕಿಲಕಿಲ ನಗು ನೆನಪಾಗಿ ತೂಕಡಿಕೆ ಓಡಿಹೋಗಿ ಮತ್ತೆ ಎಂದಿನ ಸಂಕಟ ಶುರುವಾಗಿತ್ತು. ಹುಡುಗಾಟದ ಹುಡುಗನಾಗಿದ್ದ ನನ್ನ ಐಪಿಎಸ್ ಓದಿ ಧಕ್ಷ ಅಧಿಕಾರಿಯಾಗುವಂತೆ ಪ್ರೇರೇಪಿಸಿದ್ದು ಅವಳ ಪ್ರೀತಿ. ನೀನು ಅಧಿಕಾರಿಯಾಗೋದನ್ನ ನೋಡಿ ಖುಷಿಪಡಬೇಕು ನಾನು ಅನ್ನುತ್ತಿದ್ದ ಅವಳು ನಾನು ಅಧಿಕಾರಿಯಾದ ಕೆಲವೇ ತಿಂಗಳಲ್ಲಿ ಮಾಯವಾಗಿದ್ದಳು. ಮೂರು ದಿನದಿಂದ ಯಾಕಿವಳ ಫೋನಿಲ್ಲ, ಸುದ್ದಿಯಿಲ್ಲ ಅನ್ನೋ ಆಲೋಚನೆಯಲ್ಲಿದ್ದವನನ್ನ ಗಾಬರಿಗೆ ತಳ್ಳಿದ್ದು ಅವಳ ತಂದೆ ತಂದ ಮಗಳು ಕಾಣೆಯಾಗಿದ್ದಾಳೆ ಅನ್ನೋ ಕಂಪ್ಲೇಂಟು. ಕಾಣೆಯಾದ ಸ್ನೇಹಿತೆಯ ಹುಡುಕೋ ಹೊಣೆ ನನಗೇ ಬಿದ್ದಿತ್ತು. ಆದ್ರೆ ಸ್ನೇಹಿತನಾಗಲ್ಲ, ಒಬ್ಬ ಅಧಿಕಾರಿಯಾಗಿ. ನಂದಿ ಬೆಟ್ಟಕ್ಕೆ ಹೋಗಿ ಬರ್ತೀನಿ ಅಂತ ಹೋದ ಮಗಳು ಎರಡು ದಿನವಾದ್ರೂ ಇನ್ನೂ ಮರಳಿಲ್ಲ ಅನ್ನೋ ಅವಳ ಪೋಷಕರ ಕಂಪ್ಲೇಂಟಿನ ಹಿಂದೆ ಬಿದ್ದಿದ್ದ ನನಗೆ ಒಂದು ವಾರ ಕಳೆದರೂ ಅವಳ ಸುಳಿವು ದಕ್ಕಿರಲಿಲ್ಲ. ನಂದಿ ಬೆಟ್ಟದ ಸುತ್ತಮುತ್ತ ಹುಡುಕದ ಜಾಗವಿಲ್ಲ. ವಿಚಾರಿಸದ ಸ್ನೇಹಿತರಿಲ್ಲ. ಯಾರಿಗೆ ಕೇಳಿದ್ರೂ ಅವ್ಳು ನಮ್ಮ ಮನೆಗೆ ಬಂದಿಲ್ಲ ಅನ್ನೋ ಉತ್ತರವೇ. ಸ್ವಿಚ್ಚಾಫಾದ  ಅವಳ ಫೋನಿನ ಕಂಪ್ನಿಯವರಿಂದ ಪಡೆದ ಮಾಹಿತಿಯ ಪ್ರಕಾರ ಅವಳ ಸಿಮ್ಮು ಬಳಸಲ್ಪಟ್ಟಿದ್ದು ಬನಶಂಕರಿಯ ಬಳಿ ಎರಡು ದಿನದ ಹಿಂದೆ. ಅದಾದ ಮೇಲೆ ಸ್ವಿಚ್ಚಾಫಾದ ಅದರಿಂದ ಇಲ್ಲಿಯವರೆಗೆ ಒಂದು ಸಿಗ್ನಲ್ಲೂ ದೊರಕದೇ ಮೊಬೈಲ್ ಸಿಗ್ನಲ್ ಮೂಲಕ ಅವಳ ಹುಡುಕೋ ಆಸೆಯೂ ಡೆಡ್ ಎಂಡ್ ಮುಟ್ಟಿಬಿಟ್ಟಿತ್ತು. ಎಲ್ಲಾದ್ರೂ ಒಂದು ಹೆಣ್ಣ ಶವ ಸಿಕ್ಕಿದೆಯಂದ್ರೆ ಇವಳೆದ್ದೇನಾ ಅನ್ನೋ ಭಯ . ನಿದ್ದೆಯಿಲ್ಲದ ಒಂದು ವಾರದ ನಂತರ ಮೆಚ್ಚಿನ ಡೆಸ್ಕಟಾಪಿನಲ್ಲಿ ಏನೋ ಮಾಹಿತಿ ತಾಳೆ ಹಾಕುತ್ತಾ ಕೂತವನಿಗೆ ಜೊಂಪು ಹತ್ತಿತ್ತು.

ಕಾಲಚಕ್ರ ಹಿಂದೆ ತಿರುಗುತ್ತಿದೆಯೋ ಅನ್ನಿಸುವಂತೆ ನೆನಪುಗಳ ಸುರುಳಿಯಲ್ಲಿ ಹಿಂದೆ ಹಿಂದೆ ಸಾಗುತ್ತಿದ್ದ ನನಗೆ ಪರಿಚಯವಿದ್ದ ಮುಖವೊಂದು ಕಂಡಂತಾಯಿತು. ಹಾ. ಅದು ಅವಳೇ. ನನ್ನನ್ನೇನೋ ಸಮಾಧಾನ ಮಾಡುತ್ತಿದ್ದಾಳೆ. ನೆನಪಾಗುತ್ತಿದೆ. ಅವಳ ನೆನಪಲ್ಲಿ ಬರೆದ ಕವನಗಳನ್ನೊಂದು ಬುಕ್ಕು ಮಾಡಬೇಕಂತ ಹೊರಟಿದ್ದ ನಾನು ಹಿರಿಯರೊಬ್ಬರ ಮಾರ್ಗದರ್ಶನಕ್ಕೆ ಹೋಗಿ ಬಂದ ದಿನ.  ನೀ ಇಲ್ಲಿಯವರೆಗೆ ಬರೆದದ್ದು ಕವನವೇ ಅಲ್ಲ. ಅದನ್ನೋದು, ಇದನ್ನೋದು ಅಂತ ಒಂದಿಷ್ಟು ಬುಕ್ಕುಗಳ ಲಿಸ್ಟು ಕೊಟ್ಟು ಕಳಿಸಿದ ದಿನವದು. ಮಾರ್ಗದರ್ಶನಕ್ಕೆ ಅಂತ, ನನ್ನದೊಂದು ಪುಸ್ತಕ ಮಾಡ್ಬೇಕು ಅಂತಿದ್ದೀನಿ ಸಹಾಯ ಮಾಡ್ತೀರಾ ಅಂತ ಅನೇಕರ ಕಾಲು ಹಿಡಿದು ಅವರೆಲ್ಲಾ ಪರಿಚಯವಾದಷ್ಟೇ ಚುರುಕಾಗಿ ಮಾಯವಾದ ನಂತರ ಈ ಹಿರಿಯರು ಸಿಕ್ಕಿದ್ರು. ಅವರೂ ಹೀಗಂದ ಬೇಸರಲ್ಲಿ ಕೂತಿದ್ದ ದಿನವದು. ಅಂದು ನಾನು ಬಾಯ್ಬಿಟ್ಟು ಹೇಳದಿದ್ರೂ ಅವಳೇ ನಿಧಾನವಾಗಿ ಕಾರಣ ಅರಿತು ಸಮಾಧಾನ ಮಾಡಿದ್ಲು. ದೇವರಿಚ್ಛೆಯೇ ಬೇರೆಯಿದ್ರೆ ನೀನೇನು ಮಾಡೋಕೂ ಆಗಲ್ಲ ಅಂದ್ಕೊ. ನೀನು ನನ್ನ ಮೆಚ್ಚಿನ ಅಧಿಕಾರಿಯಾಗ್ಬೇಕು ಅನ್ನೋದೇ ಆ ದೇವರಿಚ್ಚೆ ಆಗಿರ್ಬೋದು ಕಣೋ. ಬೇಜಾರ್ಮಾಡ್ಕೋಬೇಡ. ಓದೋದ್ರ ಕಡೆ ಗಮನ ಕೊಡು. ಬೇಜಾರಾದಾಗ್ಲೆಲ್ಲ ಬರೀತಾ ಇರು. ನಿನ್ನ ಭಾವಗಳ್ನ, ನಿನ್ನ ನೋವುಗಳ್ನ. ನಿನ್ನೊಳಗಿನ ಕವಿ ಮಾಗಿದ ಸಮಯದಲ್ಲಿ ಅದನ್ನ ಪ್ರಕಟಿಸೊ ಪ್ರಕಾಶಕ ಒಬ್ಬ ಸಿಕ್ಕೇ ಸಿಗ್ತಾನೆ ಅಂತ ಸಮಾಧಾನಿಸಿದ್ಲು. ಅದಾಗಿ ತಿಂಗಳುರುಳಿತ್ತು. ನಾ ಚೆನ್ನಾಗಿ ಓದಿ ಅವಳಿಚ್ಛೆಯ ಅಧಿಕಾರಿಯಾಗಿಯೂ ಆಗಿತ್ತು. ಅವಳಂದಂತೆ ಹೊಸ ಪ್ರಕಾಶಕರೊಬ್ಬರು ಪರಿಚಯವಾಗಿ ನನ್ನ ಕವನಗಳ ಪ್ರಕಟಿಸೊ ಉತ್ಸುಕತೆಯನ್ನೂ ತೋರಿದ್ರು. ಆದ್ರೆ ಇವಳಿಗೆ ಹೇಳೇ ಪ್ರಕಾಶನಕ್ಕೆ ಕಳುಹಿಸಬೇಕು ಅಂತಿದ್ದ ನನಗೆ ಎರಡು ಮೂರು ದಿನದಿಂದ ಸರಿ ಮಾತಿಗೆ ಸಿಕ್ಕಿರಲಿಲ್ಲ. ಪ್ರತಿ ಸಲ ಫೋನ್ ಮಾಡಿದಾಗ್ಲೂ ಏನೋ ಗಡಿಬಿಡಿಯಲ್ಲಿದ್ದಂತೆ ಇರ್ತಿದ್ಲು. ಚಾಮರಾಜನಗರದ ಸುತ್ತಮುತ್ತ ಯಾವ್ಯಾವ ಪ್ರೇಕ್ಷಣೀಯ ಸ್ಥಳಗಳಿವೆ ಅಂತ ವಿಚಾರಿಸಿದ್ದೇ ಕೊನೆ. ಅದಾದ ಮೇಲೆ ಮೂರು ದಿನದಿಂದ ಫೋನೇ ಇರ್ಲಿಲ್ಲ. ಒಂದೋ ಸ್ವಿಚ್ ಆಫ್ ಅಂತ್ಲೋ ಇಲ್ಲ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಅಂತ್ಲೋ ಬರ್ತಿತ್ತು. ಎಲ್ಲಿ ಹೋದ್ಲು ಇವ್ಳು ? ಅನ್ನೋ ಆಲೋಚನೆಗಳು ಕಾಡ್ತಿರುವಾಗ್ಲೇ ಏನೋ ಮಿಂಚು ಹೊಳೆದಂತಾಯ್ತು.

ಅವ್ಳತ್ರ ಇದ್ದಿದ್ದು ಎರಡು ಸಿಮ್ಮು ! ಆಪ್ತ ಸ್ನೇಹಿತರಿಗೆ ಬಿಟ್ರೆ ಅವಳ ಎರಡನೆಯ ಸಿಮ್ಮಿನ ವಿಚಾರ ಉಳಿದವರಿಗೆ ಗೊತ್ತಿದ್ದುದು ಡೌಟೇ ! ಸಿಟಿಯಲ್ಲಿ ನೆಟ್ವರ್ಕೇ ಇರದ ಈ ಸಿಮ್ಮಿಟ್ಕಂಡು ಏನ್ಮಾಡ್ತೀಯ, ಬಿಸಾಡು ಅಂದವರಿಗೆಲ್ಲಾ ಏ ಇದು ಹಳ್ಳಿ ಕಡೆ ಉಪಯೋಗಕ್ಕೆ ಬರತ್ತೆ. ಅಲ್ಲಿ ಯಾವ ನೆಟ್ವರ್ಕು ಇರದಿದ್ರೂ ಎಲ್ಲಾದ್ರೂ ಗುಡ್ಡ ಹತ್ತಿದ್ರೆ ಇದ್ರ ನೆಟ್ವರ್ಕು ಸಿಗತ್ತೆ ಅಂತಿದ್ದ ಅವಳ ಮಾತು ನೆನಪಾಗಿ ಒಂದು ಆಶಾಕಿರಣ ಮೂಡಿತು. ಅವಳ ಮೊದಲ ಸಿಮ್ಮು ನಿಜವಾಗ್ಲೂ ಕಳೆದು ಹೋಗಿ ಆಮೇಲೆ ಎರಡನೆಯ ಸಿಮ್ಮನ್ನೇನಾದ್ರೂ ಬಳಸಿರಬಹುದಾ ಅಂತ . ನನ್ನ ಕಾಲಿಗೆ ಸಿಗದಿದ್ರೂ ಅವಳು ಆ ತರ ಏನಾದ್ರೂ ಬಳಸಿದ್ದೇ ಆಗಿದ್ರೆ ಅವಳ ಆ ಮೂಲಕ ಹುಡುಕಬಹುದು ಎಂಬ ಆಸೆ. ಆದ್ರೆ ಇಲ್ಲೂ ಒಂದು ಅಂಶ ಮಿಸ್ಸಿಂಗು. ನಾನು ಫೋನ್ ಮಾಡ್ತಿದ್ದಿದ್ದು ಎರಡನೆಯ ಸಿಮ್ಮಿಗೆ. ಅದರಲ್ಲಿ ನನಗೆ ಫೋನಿಗೆ ಸಿಗದೆ ಮೂರು ದಿನಗಳಾಗಿತ್ತು ಅವಳು ಕಳೆದು ಹೋಗಿದ್ದಾಳೆ ಅಂತ ಕಂಪ್ಲೇಟ್ ಬಂದಾಗ. ಆದ್ರೆ ಇವ್ರಪ್ಪ ನೋಡಿದ್ರೆ ಮಿಸ್ಸಾಗಿ ಎರಡು ದಿನವಾಗಿದೆ ಅಂತ ಕಂಪ್ಲೇಂಟ್ ಕೊಟ್ಟಿದ್ರು.  ಟೆಲಿಫೋನ್ ಕಂಪ್ನಿಯವ್ರು  ಎರಡು ದಿನದ ಹಿಂದೆ ಬನಶಂಕ್ರಿಯ ಹತ್ರ ಸಿಗ್ನಲ್ ಇತ್ತು ಅಂದಿದ್ದು ಅವಳ ಮೊದಲ ಸಿಮ್ಮಿಗೆ . ಆದ್ರೆ ಅದು ಮೊದಲ ಸಿಮ್ಮು. ಎರಡನೆಯದು ? ಏನಾದ್ರಾಗಲಿ ಅಂತ ಎರಡನೇ ಸಿಮ್ಮಿನ ಕಂಪೆನಿಯವ್ರನ್ನ ಸಂಪರ್ಕಿಸಿದಾಗ ವಿಚಾರಣೆ ದಿಕ್ಕೇ ಬದಲಾಯ್ತು.

ಅವಳು ಮಿಸ್ಸಾಗಿ ಒಂದು ದಿನ ಆದ ಮೇಲೆ ಅಂದ್ರೆ ನನ್ನ ಫೋನಿಗೆ ಸಿಕ್ಕದ ಎರಡನೆಯ ದಿನ ಅವಳ ಎರಡನೆಯ ಸಿಮ್ಮು ಕೊಳ್ಳೆಗಾಲದಲ್ಲಿ ಬಳಸಲ್ಪಟ್ಟಿತ್ತು. ಈ ನಂದಿ ಬೆಟ್ಟ ಎಲ್ಲಿ ? ಕೊಳ್ಳೆಗಾಲ ಎಲ್ಲಿ ? ಅಂದ್ರೆ ಏನೋ ಮಿಸ್ಸಿಂಗು.  ಚಾಮರಾಜನಗರದ ಬಗ್ಗೆ ಕೇಳ್ತಿದ್ದ ಅವಳು ಅಲ್ಲಿಗೇನಾದ್ರೂ ಹೋಗಿರ್ಬೋದಾ ? ಆದ್ರೆ ಅಲ್ಲಿ ಅವಳಿಷ್ಟ ಆಗಬಹುದಾದ  ಸುಮಾರಷ್ಟು ಜಾಗಗಳಿವೆ. ಎಲ್ಲಿ ಅಂತ ಹುಡುಕೋದು ? ಮಲೆ ಮಹದೇಶ್ವರ ಬೆಟ್ಟ ಇದೆ. ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ನೂರು ಕಿ.ಮಿ ಆಸು ಪಾಸಲ್ಲಿದೆ. ಹೊಯ್ಸಳ ದೇವಸ್ಥಾನ ಅಂತ ನೋಡಿದ್ರೆ ಅದೂ ಇದೆ. ಬೆಳಬೆಳಗ್ಗೆ ಮನೆಯಿಂದ ಹೊರಟಿದ್ದಾಳೆ, ಅವಳ ಕೊನೆಯ ಸಿಗ್ನಲ್ಲು ಬನಶಂಕರಿ ಹತ್ರ ಇದೆ ಅಂದ್ರೆ ಅವ್ಳು ಈ ಕಡೆಯೇ ಹೊರಟಿರ್ಬೇಕು ಅನ್ನೋ ಸಂಶಯ ಬಲವಾಯ್ತು.
ಮಲೆಮಹದೇಶ್ವರಕ್ಕೆ ಬೆಂಗ್ಳೂರಿಂದ ೨೧೦ ಕಿ.ಮಿ. ಮದ್ದೂರು ಅಥವಾ ಕೊಳ್ಳೇಗಾಲದ ಮೇಲೆ ಹೋಗೋ ಬದ್ಲು ಕೃಷ್ಣಗಿರಿಯ ಮೇಲೆ ಹೋದ್ರೂ ಇನ್ನೂರೈವತ್ತರ ಹಾದಿ.  ಬೆಳಗ್ಗೆ ಮುಂಚೆ ಮನೆಯಿಂದ ಹೊರಟವ್ರು ಮಲೆ ಮಹದೇಶ್ವರ ತಲುಪೋ ಹೊತ್ತಿಗೆ ಮಧ್ಯಾಹ್ನ ಆಗಿರುತ್ತೆ. ಅಲ್ಲಿಂದ ನಾಗಮಲೆಗೆ ಹೋದ್ರೆ ಬರೋದೇ ಸಂಜೆ ಆಗುತ್ತೆ. ಅದಲ್ದೇ ಅಲ್ಲಿ ಗುಂಜುಮಲೆ, ಶಂಕಮಲೆ, ಕೊಂಬುಡಿಕ್ಕಿ,  ಜೇನು ಮಲೆ ಅಂತ ಏನೇನೋ ಸ್ಥಳಗಳಿವೆ. ಅದನ್ನೆಲ್ಲಾ ನೋಡ್ತಾ ಹೋದ್ರೆ ಮಲೆ ಮಹದೇಶ್ವರದಲ್ಲೇ ಮೂರು ದಿನ ಆಗತ್ತೆ ಅಂತ ಪ್ಲಾಷಾಯ್ತು. ಶಾಂತಿ, ಪ್ರಕೃತಿ ಅಂತ ಆಸೆ ಪಡೋ ಇವ್ಳು ಎಲ್ಲಾದ್ರೂ ಒಂದು ವಾರ ತಣ್ಣಗಿದ್ದುಬಿಡೋಣ ಅಂತ ನೆಟ್ವರ್ಕಿಲ್ಲದ ಜಾಗದಲ್ಲಿ ಕೂತಿರಬಹುದಾ ಅನ್ನಿಸ್ತೊಮ್ಮೆ. ಏನಾದ್ರಾಗ್ಲಿ ಒಮ್ಮೆ ಅಲ್ಲೂ ಹುಡುಕೇ ಬಿಡೋಣ ಅಂತ ಗಾಡಿ ತಿರುಗ್ಸಿದೆ ಮಲೆ ಮಹದೇಶ್ವರದತ್ತ.  ನಾನು ಅಲ್ಲಿಯ ಪೋಲಿಸರಿಗೆ ಮಾಹಿತಿ ಕೊಟ್ಟು ಅವರು ಹುಡುಕೋದು ಪ್ರಾರಂಭಿಸೋದ್ರೊಳಗೆ ನಾಳೆ ಬೆಳಗ್ಗೆಯೇ ಆಗಿರುತ್ತೆ. ಅದ್ರ ಬದ್ಲು ನಾನೇ ಹೊರಟ್ರೆ ನಾಳೆ ಬೆಳಗಾಗೋದ್ರಲ್ಲಿ ಮಲೆ ಮಹದೇಶ್ವರ ತಲುಪಬಹುದು ಅನ್ನೋ ಆಸೆಯಲ್ಲಿ ಮಧ್ಯರಾತ್ರಿ ಹನ್ನೆರಡಾಗಿರೋದನ್ನೂ ಲೆಕ್ಕಿಸದೇ ಹೊರಟುಬಿಟ್ಟಿದ್ದೆ.

ಮಲೆ ಮಹದೇಶ್ವರದ ಜೀಪಿನವರನ್ನು ಅವಳ ಫೋಟೋ ತೋರಿಸಿ ವಿಚಾರಿಸಿದಾಗ ಒಬ್ಬ ಜೀಪಿನವನ ಹತ್ರ ಮಹತ್ವದ ಸುಳಿವು ಸಿಕ್ಕಿತ್ತು.  ಓ ಈ ಮೇಡಮ್ಮಾ ನಾಲ್ಕು ದಿನದ ಹಿಂದೆ ಇದ್ರು ಇಲ್ಲಿ ಅಂದ ಅವ. ಅದೇಗೆ ಹೇಳ್ತೀಯಪ್ಪ ಇದು ಇವ್ರೇ ಅಂತ ಅಂದಾಗ. ಅದೆಂಗೆ ಮರೆಯಕ್ಕಾಗ್ತದೆ ಬುದ್ದಿ, ನಾಗಮಲೆಗೆ ನಮ್ಮ ಜೀಪಲ್ಲೇ ಬಂದ ಇವ್ರು ಎರಡು ದಿನ ಇಲ್ಲೇ ಉಳಿದು ಕೊಂಬು ಡಿಕ್ಕಿ, ಒಂಭತ್ತು ಮರ, ಗುಂಜು ಮಲೆ, ಶಂಕ ಮಲೆ ಎಲ್ಲಾ ನೋಡಿದ್ರು. ಇವ್ರ ತರ ಇನ್ನೂ ನಾಲ್ಕು ಜನರಿದ್ರು . ಫಾರಿನ್ನರ ತರ ಇದ್ದ ಅವ್ರಿಗೆಲ್ಲಾ ಕಾಡು ತಿರುಗ್ಸಿದ್ದು ನಾನೇ ಅಂದ ಅವ. ಜೊತೆಗೆ ನಾಲ್ಕು ಜನ ಇದ್ರು ಅನ್ನೋದು ಮಹತ್ವದ ಸುಳಿವು ಅನಿಸಿದ್ರೂ ಅವರ್ಯಾರು ಅನ್ನೋದು ಗೊತ್ತಿಲ್ಲವಲ್ಲ. ಅವಳ ಗೆಳೆಯರ ಮನೆಯಲ್ಲಿ ವಿಚಾರಿಸೋಕೆ ಹೋದಾಗ ಅವರೆಲ್ಲಾ ಅಲ್ಲೇ ಇದ್ರಲ್ಲ. ಇಲ್ಲೇ ಸಿಕ್ಕ ಬೇರೆ ಯಾರಾದ್ರೂ ಆಗಿರಬಹುದಾ ಅನಿಸ್ತೊಮ್ಮೆ.  ಅವ್ರ ಜೊತೆಗಿದ್ದೋರು ಮೇಡಮ್ಮಿನ ಫ್ರೆಂಡ್ಸೇನಾ ? ಅವ್ರ ಹೆಸ್ರೇನಾದ್ರೂ ಮಾತಾಡಿಕೊಂಡಿದ್ದು ಕೇಳಿದ್ದು ನೆನಪಿದ್ಯಾ ಅಂದೆ. ಹೆಸ್ರು ಅಂತೇನು ಗೊತ್ತಿಲ್ಲ. ಮೇಡಮ್ಮಿನ ಜೊತೆಗೆ ಈ ಜೀಪಲ್ಲಿ ಬಂದ್ರೂ ಅವ್ರಿಗೆ ಮೇಡಮ್ಮಿನ ಪರಿಚಯ ಇತ್ತೋ ಇಲ್ವೋ ಗೊತ್ತಿಲ್ಲ. ಇವ್ರ ತರವೇ ಅವ್ರೂ ಜಾಗ ಜಾಗ ತಿರುಗ್ತಿದ್ದಿದ್ರಿಂದ ಫ್ರೆಂಡ್ಸಿರಬಹುದು ಅಂದ್ಕೊಂಡೆ ಅಷ್ಟೆ ಸಾ. ಹೆಸ್ರು ಗೊತ್ತಿಲ್ಲ. ಆದ್ರೆ  ಅವರೆಲ್ಲಾ ಇಂಗ್ಲೀಷಿನಲ್ಲಿ ಮಾತಾಡ್ಕೋತಾ ಇದ್ರು. ಮೇಡಮ್ಮೊಬ್ರೇ ನನ್ನತ್ರ ಕನ್ನಡದಲ್ಲಿ ಮಾತಾಡ್ತಾ ಇದ್ರು ಅಂದ ಅವ. ಸಮಸ್ಯೆ ಬಗೆಹರಿಯಿತು ಅನ್ನೋ ಸಮಯಕ್ಕೆ ಮತ್ತೆ ಗೋಜಲಾಗ್ತಾ ಇದ್ಯಲ್ಲ ಅನ್ನೋ ಬೇಸರ ಕಾಡೋಕೆ ಶುರುವಾಯ್ತು. ಇಲ್ಲಿಂದ ಎಲ್ಲಿಗೆ ಹೋಗ್ತೀನಿ ಅಂತೇನಾದ್ರೂ ಹೇಳಿದ್ರಾ ಅಂದೆ. ಸರಿ ನೆನ್ಪಿಲ್ಲ ಬುದ್ದಿ. ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಹೆಂಗಿದೆ ಅಂತ ಕೇಳ್ತಾ ಇದ್ರು ಅಮ್ಮ. ಎಲ್ಲಿಗೆ ಅಂತ ಸರಿಯಾಗಿ ಹೇಳ್ಲಿಲ್ಲ ಅಂದ ಅವ. ಬಿಳಿಗಿರಿ ರಂಗನ ಬೆಟ್ಟ ಅಂದ್ರೆ ಅಲ್ಲಿ ಗುಂಜಳ್ಳಿ ಚೆಕ್ ಪೋಸ್ಟಿದೆ. ಒಳಹೋಗೋ ಮೊದ್ಲು ಅಲ್ಲಿ ಹೆಸ್ರು , ಫೋನ್ ನಂಬರ್ರು, ಅಡ್ರೆಸ್ ಫ್ರೂಪ್ ಕೊಡ್ಲೇ ಬೇಕು. ಅಲ್ಲೇನಾದ್ರೂ ಮಾಹಿತಿ ಸಿಗಬಹುದು ಅನ್ನೋ ಆಸೆಯಿಂದ ಅತ್ತ ತೆರಳೋ ಮನಸ್ಸಾಯ್ತು. ಅವಳ ಜೊತೆಗಿದ್ದರೆಂದು ಹೇಳಲಾದ ನಾಲ್ಕು ಜನರ ರೇಖಾ ಚಿತ್ರ ಸಂಗ್ರಹಿಸಲು ಜೊತೆಗಿದ್ದ ಸಿಬ್ಬಂದಿಗೆ ಹೇಳಿ ಬಿಳಿಗಿರಿ ರಂಗನಬೆಟ್ಟದತ್ತ ತೆರಳಿದೆ.

ಚೆಕ್ ಪೋಸ್ಟ್ ಸಿಬ್ಬಂದಿಯ ಬಳಿ ಮೂರು ಫಾರಿನ್ನರು ಮತ್ತು ಒಬ್ಬ ಭಾರತೀಯ ಮಹಿಳೆ ಈ ಕಡೆ ಒಂದು ವಾರದಲ್ಲಿ ಬಂದಿರಬಹುದಾ ಅಂತ ಕೇಳಿ ಸ್ನೇಹಿತೆ ಮಿಸ್ಸಾಗಿರೋ ಸಂಬಂಧದ ಪ್ರಕರಣದ ವಿಚಾರಣೆಗೆ ಸಹಕಾರ ಕೋರಿದೆ. ಅವ್ರು ಫಾರಿನ್ನರ್ರು ಅಂದ್ರೆ ಇಲ್ಲಿಯವರ ಅಡ್ರೆಸ್ಸು ಅಂದ್ರೆ ಈಗ ನೀವು ಹುಡುಕುತ್ತಿರುವವರ ಅಡ್ರೆಸ್ಸೇ ಕೊಟ್ಟಿರಬಹುದು ನೋಡೋಣ ಅಂತ ಒಂದು ವಾರದ ದಾಖಲೆ ನೋಡಿದಾಗ ಆಶ್ಚರ್ಯ ಕಾದಿತ್ತು. ಮೂರು ದಿನಗಳ ಹಿಂದಿನ ದಾಖಲೆಯದು. ಅಡ್ರೆಸ್ಸು, ಫೋನ್ ನಂಬರ್ರು ಅಷ್ಟೇ ಅಲ್ಲ. ಕೈಬರಹವೂ ಅವಳದೇ. ಬೆಳಗ್ಗೆ ಒಂಭತ್ತಕ್ಕೆ ಹೋದ ದಾಖಲೆಯಿದೆ. ಆದ್ರೆ ಬಂದ ದಾಖಲೆಯೆಲ್ಲಿ ಅಂದೆ ? ಇಲ್ಲಿಗೆ ಬಂದವ್ರ ದಾಖಲೆ ಮಾತ್ರ ಇಡ್ತೀವಿ ಸಾರ್. ಸಂಜೆ ನಾಲ್ಕರ ನಂತರ ಯಾರಿಗೂ ಒಳಬಿಡಲ್ಲ. ಸಂಜೆ ಐದೂವರೆ ಒಳಗೆ ವಾಪಾಸ್ ಬರಬೇಕು ಅಂತ್ಲೂ ಹೇಳಿರ್ತೀವಿ. ಸಾಮಾನ್ಯವಾಗಿ ಎಲ್ರೂ ಬಂದು ಬಿಡ್ತಾರೆ. ಅವ್ರೂ ಬಂದುಬಿಟ್ಟಿರ್ಬೇಕು ಅಂದ್ರು. ಇಲ್ಲಿ ಇದು ಬಿಟ್ರೆ ಇನ್ನೇನು ಇದೆ ಅಂದೆ. ಚಾ.ಗುಡಿ ಅಂತ ರೆಸಾರ್ಟು ಇದೆ ಬಿಳಿಗಿರಿ ರಂಗನ ಬೆಟ್ಟದಿಂದ ಸುಮಾರು ಮೂವತ್ತು ಕಿ.ಮೀ ಮುಂದೆ ಅಂದ. ಅಲ್ಲಿಗೇನಾದ್ರೂ ಹೋಗಿರ್ಬೋದಾ ಅನಿಸ್ತು. ತಗೋ. ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿಚಾರಣೆ ಮುಂದುವರೆಯಿತು. ಇಲ್ಲಿ ಮೂರು ಫಾರಿನ್ನರು ಮತ್ತು ಒಂದು ಹುಡುಗಿಯನ್ನು ನೋಡಿದ್ದೀರಾ ಅಂತ ಸುಮಾರು ಅಂಗಡಿಯವರನ್ನ , ಅಲ್ಲಿನ ವೀಕ್ಷಣಾ ಸ್ಥಳದಲ್ಲಿ ಒಂದು ನಿಮಿಷಕ್ಕೆ ಪ್ರಿಂಟ್ ಕೊಡೋ ಫೋಟೋ ತೆಗೆಯುತ್ತಿದ್ದವರನ್ನ ವಿಚಾರಿಸಿದಾಗ ಮತ್ತೊಂದು ಮಹತ್ವದ ಸುಳಿವು ಸಿಕ್ಕಿತ್ತು. ಇವ್ರು ಮೂರು ದಿನದ ಹಿಂದೆ ಇಲ್ಲಿಗೆ ಬಂದಿದ್ರು ಸಾರ್ ಅಂದ ಒಬ್ಬ ಫೋಟೋಗ್ರಾಫರ್ರು. ಅದೆಂಗೆ ಹೇಳ್ತೀಯಪ್ಪ ಅಂದಾಗ ಇಲ್ಲಿ ಬರೋ ಜನರೆಲ್ಲಾ ನಮ್ಮತ್ರ ಫೋಟೋ ತೆಗೆಸಿಕೊಳ್ತಾರೆ ಆದ್ರೆ ಅವ್ರು ತಮ್ಮದೇ ಕ್ಯಾಮೆರಾ ಕೊಟ್ಟು ಇದ್ರಲ್ಲಿ ತೆಗಿ ಅಂದಿದ್ರು. ಏನೋ ಕೇಳ್ತಿದಾರಲ್ಲ ಅಂತ ಫೋಟೋ ಪುಕ್ಕಟೆಯಾಗೇ ತೆಗೆದುಕೊಡೋಕೆ ಹೋಗಿದ್ದ ನನ್ನನ್ನೊಪ್ಪದೇ ಅವ್ರು ಐವತ್ತು ರೂ ಕೊಟ್ಟು ಹೋಗಿದ್ರು ಸಾ.  ಇಂತಾ ಕಾಲದಲ್ಲಿ ಅಷ್ಟು ಒಳ್ಳೆಯವರೆಲ್ಲಿ ಸಾ ಅಂದಿದ್ದ ಅವ. ಇಲ್ಲಿಗೆ ಬಂದಿದ್ದು ಹೌದಾದ್ರೂ ಮುಂದೆಲ್ಲಿ ಹೋದ್ರು ಅನ್ನೋದು ಕಗ್ಗಂಟಾಗೇ ಉಳಿಯಿತು. ಯಾವುದಕ್ಕೂ ಇರ್ಲಿ ಅಂತ ಚಾ.ಗುಡಿಗೆ ಹೋಗೋ ಮನಸ್ಸಾಯ್ತು. ಅಲ್ಲಿಗೆ ಹೋದ್ರೆ ಅಲ್ಲಿ ಮತ್ತೊಂದು ಸುಳಿವು ಕಾಯ್ತಾ ಇತ್ತು. ಅಲ್ಲಿಗೆ ಮೂರು ದಿನಗಳ ಹಿಂದೆ ಬಂದು ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ತಂಡದಲ್ಲಿ ಇವಳೂ ಇದ್ದಳು !
ಇಲ್ಲಿ ಒಂದು ದಿನದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಅವರು ಎರಡು ದಿನಗಳ ಹಿಂದಷ್ಟೇ ಹೊರಟ್ರು ಅನ್ನೋ ಮಾಹಿತಿ ಸಿಕ್ತು. ಇಲ್ಲಿಗೆ ಒಂದಿಷ್ಟು ಕೊಂಡಿಗಳು ಜೋಡಿಯಾಗ್ತಾ ಬಂದ್ವು. ಮಲೆಮಹದೇಶ್ವರಕ್ಕೆ ಬಂದು ಎರಡು ದಿನ ಇದ್ದವ್ಳು ಮೂರನೇ ದಿನ ಹೊರಟಿದ್ದಾಳೆ ಅಲ್ಲಿಂದ. ಕೊಳ್ಳೇಗಾಲದ ಮೂಲಕ ಬಿಳಿಗಿರಿರಂಗನಬೆಟ್ಟಕ್ಕೆ ಬಂದಿರಬಹುದು. ಆಗ ಎಲ್ಲೋ ನೆಟ್ವರ್ಕು ಸಿಕ್ಕಿದೆ ಎರಡನೆಯ ಸಿಮ್ಮಿಗೆ. ಅಲ್ಲಿಂದ ಬೆಟ್ಟ ಮತ್ತೆ ಚಾ,ಗುಡಿಯಲ್ಲಿ ಒಂದು ದಿನ. ಎರಡು ದಿನದ ಹಿಂದಿನ ಸಂಜೆ ಅಂದ್ರೆ ಮೊನ್ನೆ ಸಂಜೆ ಇಲ್ಲಿಂದ ಹೊರಟವಳು ಎಲ್ಲಿಗೆ ಹೋಗಿರ್ಬೋದು ಅನ್ನೋ ಪ್ರಶ್ನೆಗೆ  ನೆನಪಾಗಿದ್ದು ಮೊಬೈಲ್ ಕಂಪೆನಿಯವ್ರು ಕೊಟ್ಟ ಮಾಹಿತಿ. ಕಾಣೆಯಾದ ಎರಡು ದಿನಗಳ ನಂತರ ಕೊಳ್ಳೆಗಾಲದಲ್ಲಿ ಸಿಗ್ನಲ್ ಪತ್ತೆ. ಅದಾಗಿ ಒಂದು ದಿನ ಮತ್ತೆ ಇಲ್ಲ. ಅದಾದ ಮೇಲೆ ಎರಡನೆಯ ದಿನದ ರಾತ್ರೆ ಮತ್ತೆ ಕೊಳ್ಳೇಗಾಲದ ಸುತ್ತಮುತ್ತ ಸಿಗ್ನಲ್ಲು . ಅದಾದ ಮೇಲೆ ಮತ್ತೆ ಮಿಸ್ಸು ಅನ್ನೋ ಮಾಹಿತಿ ನೆನಪಾಯ್ತು. ಅಂದ್ರೆ ಮೊನ್ನೆ ರಾತ್ರೆ ಚಾ.ಗುಡಿಯಿಂದ ಕೊಳ್ಳೆಗಾಲಕ್ಕೆ ಬಂದಿರಬಹುದು ಅನ್ನೋವಲ್ಲಿಗೆ ಸಿಕ್ಕ ವಿಚಾರಣೆಯ ಮಾಹಿತಿಗೂ ಮೊಬೈಲ್ ಸಿಗ್ನಲ್ ಮಾಹಿತಿಗೂ ತಾಳೆಯಾಯ್ತು. ಇನ್ನು ಮುಂದಿನ ವಿಚಾರಣೆಗೆ ಕೊಳ್ಳೆಗಾಲದಲ್ಲೇನಾದ್ರೂ ಮಾಹಿತಿ ಸಿಗಬಹುದು ಅಂತ ಆರನೆಯ ಇಂದ್ರಿಯ ಹೇಳತೊಡಗಿತು. ಆದ್ರೆ ಅಲ್ಲಿ ಏನು ಎತ್ತ ಅಂತೇನೂ ಗೊತ್ತಿಲ್ಲ. ಏನಾದ್ರಾಗಲಿ ಅಂತ ಕೊಳ್ಳೆಗಾಲಕ್ಕೆ ಹೊರಟುಬಿಟ್ಟೆ.

ಕೊಳ್ಳೆಗಾಲಕ್ಕೆ ಬರೋ ಹೊತ್ತಿಗೆ ಹೊಟ್ಟೆ ಚುರುಗುಟ್ಟತೊಡಗಿತ್ತು. ಬೆಳಗಿಂದ ವಿಚಾರಣೆಯ ಗುಂಗಲ್ಲಿ ಏನನ್ನೂ ಸರಿಯಾಗಿ ತಿನ್ನದ ಪ್ರಭಾವ ಮತ್ತು ಹಿಂದಿನ ದಿನದಿಂದ ಗಾಡಿಯೋಡಿಸಿದ್ರ ಪ್ರಭಾವದ ನಿದ್ದೆ ಎರಡೂ ಒಟ್ಟೊಟ್ಟಿಗೆ ಆವರಿಸತೊಡಗಿತ್ತು. ಎಲ್ಲಾದ್ರೂ ಒಂದು ಹೋಟೇಲ್ ಹಿಡ್ದು ಮಲ್ಗಿ ನಾಳೆ ಮುಂದುವರಿಸೋಣ ಅಂತನಿಸ್ತು. ಪೋಲೀಸ್ ಅತಿಥಿಗೃಹ ಅಂತ ಹೋಗೋ ಬದ್ಲು ಸಿವಿಲ್ ಡ್ರೆಸ್ಸಲ್ಲಿ ಇವರ್ಗಳ ಬಗ್ಗೆ ಹೋಟೇಲ್ಗಳಲ್ಲಿ ವಿಚಾರಿಸಿದ್ರೆ ಮಾಹಿತಿ ಸಿಗಬಹುದಾ  ಅಂತೊಂದು ಐಡಿಯಾ ಹೊಳೆಯಿತು. ಫಾರಿನ್ನರುಗಳು ಯಾರು ಅಂತ ಗೊತ್ತಿಲ್ದೇ ಇದ್ರೂ, ಅವರ ಜೊತೆ ಇವಳು ಇರೋದೊಂತೂ ಹೌದು ಅನ್ನೋದೊಂದು ಅಂಶ ಇಲ್ಲಿ ಸಹಾಯಕವಾಗ್ಬೋದು. ಫಾರಿನ್ನರು ಅಂದ್ರೆ ತೀರಾ ಸಾಮಾನ್ಯ ಹೋಟೇಲಲ್ಲೇನು ಇರೋಲ್ಲ . ಇಲ್ಲಿ ಚೆನ್ನಾಗಿರೋ ಹೋಟೆಲ್ಗಳು ಯಾವುದು ಅಂತ ಕೇಳಿದಾಗ ಪ್ರಮುಖ ಮೂರು ಹೋಟೇಲ್ಗಳ ಹೆಸ್ರು ಕೇಳಿಬಂತು ಅಲ್ಲಿನ ಜನರ ಬಾಯಲ್ಲಿ. ತಗೋ ನೊಡೇಬಿಡೋಣ ಅಂತ ಅವುಗಳಲ್ಲಿ ಅವಳ ಫೋಟೋ ತೋರ್ಸಿ ವಿಚಾರಿಸಲಾಗಿ ಅವ್ರು ಎರಡು ದಿನದ ಹಿಂದೆ ಅಲ್ಲಿ ಉಳಿದಿದ್ದು ಹೌದೆಂಬ ಮಾಹಿತಿ ಸಿಕ್ತು. ಮುಂದೆ ಎಲ್ಲಿ ಹೋಗ್ಬೇಕಂತ ಹೇಳ್ತಿದ್ರಾ ಅಂದಿದ್ದಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮತ್ತು ಅದರ ಸುತ್ತ ಮುತ್ತ ಇರೋ ಪ್ರದೇಶಗಳಿಗೆ ದಾರಿ ಕೇಳ್ತಾ ಇದ್ರು ಅನ್ನೋ ಮಾಹಿತಿ ಸಿಕ್ತು. ಆದ್ರೇನು ಮಾಡೋದು. ಬೆಟ್ಟಕ್ಕೆ ಬೆಳಗಿನವರೆಗೂ ಪ್ರವೇಶವಿಲ್ಲ. ಫುಲ್ ಟೆನ್ಷನ್ನಿನಲ್ಲಿರಬಹುದಾದ ರೇಖಾಳ ಮನೆಯವ್ರಿಗೆ, ಆಫೀಸಿಗೆ ಇಷ್ಟು ತಿಳ್ಸಿ ಅವಳು ಇನ್ನೇನು ಸ್ವಲ್ಪ ಹೊತ್ತಿಗೆ ಮನೆಗೆ ಮರಳಬಹುದೆನ್ನುವ ಆಶಾಕಿರಣವನ್ನಾದ್ರೂ ಬೆಳಗೋಣ ಅನ್ನಿಸಿ ಇಲ್ಲಿಯವರೆಗಿನ ಮಾಹಿತಿಯನ್ನು ಅವರಿಗೆ ಹೇಳಿದಾಗ ಅವರ ಖುಷಿ ಹೇಳತೀರದು. ನಿಮ್ಮ ಮಗಳೇನಾದ್ರೂ ಮನೆಗೆ ಮರಳಿದ್ರೆ ನಂಗೆ ಫೋನ್ ಮಾಡಿ. ಇಲ್ಲಾ ಅಂದ್ರೆ ನನ್ನ ಹುಡುಕಾಟವನ್ನು ಮುಂದುವರೆಸುತ್ತೇನೆ. ಇಲ್ಲೇ ಎಲ್ಲೋ ಇದ್ದಾಳೆ ಅಂತ ನನ್ನ ಮನಸ್ಸು ಹೇಳ್ತಾ ಇದೆ ಅಂತ ಭರವಸೆ ತುಂಬಿ ಫೋನಿಟ್ಟೆ. ಕೈಕಾಲುಗಳು ಬರಪೂರ ಮಾತಾಡ್ತಾ ಇದ್ವು. ಕೊಳ್ಳೇಗಾಲದಲ್ಲೇ ಅಂದು ರಾತ್ರಿ ಮಲಗಿ ಬಿಟ್ಟೆ. ಬೆಳಗ್ಗಿನ ಜಾವ ಫೋನ್ ಫುಲ್ ಹೊಡ್ಕೊಳ್ಳೋಕೆ ಹಿಡಿದ ಮೇಲೇ ಎಚ್ರಾಗಿದ್ದು. ನೋಡಿದ್ರೆ ಹತ್ತು ಹದಿನೈದು ಮಿಸ್ ಕಾಲು. ನಾಲ್ಕೈದು ಆಫೀಸಿಂದಾದ್ರೆ ಉಳಿದಿದ್ದೆಲ್ಲಾ ರೇಖಾಳ ಮನೆಯಿಂದ ! ಎರಡು ಕಾಲು ರೇಖಾಳ ಎರಡನೆಯ ಸಿಮ್ಮಿಂದ. ಮನೆಯಲ್ಲಿ ಹೇಳದೇ ಒಂದು ವಾರ ಟ್ರಿಪ್ಪು ಹೊಡೆಯೋಕೆ ಬಂದು ನಿನ್ನೆ ರಾತ್ರೆಯೇನಾದ್ರೂ ವಾಪಾಸ್ಸಾಗಿರ್ಬಹುದಾ ಅನ್ನೋ ಸಣ್ಣ ಅನುಮಾನ ಕಾಡಿ ವಾಪಾಸ್ ಫೋನ್ ಮಾಡಿದ್ರೆ ಫೋನೆತ್ತಿದ್ದು ರೇಖಾ !! ಮಲೆ ಮಹದೇಶ್ವರ, ಬಿಳಿಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಟ್ರಿಪ್ಪು ಹೆಂಗಿತ್ತು ಅಂದೆ ? ಅದ್ರು ಜೊತೆಗೆ ಚಾಮರಾಜನಗರದ ಸರಸ್ವತಿ ದೇವಸ್ಥಾನ, ತೆರಕಾಣಂಬಿ ವಿಷ್ಣು ದೇವಸ್ಥಾನ, ನುಗ್ಗೇಹಳ್ಳಿ ವೈಷ್ಣವ ದೇವಸ್ಥಾನನೂ ನೋಡಿದ್ವಿ. ಆದ್ರೆ ಅದೆಲ್ಲಾ ನಿಂಗೆ ಹೇಗೆ ಗೊತ್ತಾಯ್ತು ಅಂದ್ಲು ಆಶ್ಚರ್ಯದಿಂದ. ಕೊನೆಯ ಮೂರು ನಂಗೆ ಗೊತ್ತಿರದಿದ್ರೂ ಅದೊಂದು ದೊಡ್ಡ ಕತೆ , ನಾನು ಊರಿಗೆ ಬಂದ ಮೇಲೆ ಹೇಳ್ತಿನಿ, ನಿಮ್ಮಪ್ಪಂಗೆ ಫೋನ್ ಕೊಡು ಅಂದೆ. ಇವ್ಳು ಅದ್ಯಾವ್ದೋ ಎನ್ಜೀವೋ ಜೊತೆ ಒಂದು ವಾರದಿಂದ ಬೆಟ್ಟ ಗುಡ್ಡ ತಿರುಗ್ತಿದ್ದಿದ್ಲಂತೆ. ನಿನ್ನೆ ಮಧ್ಯರಾತ್ರೆ  ಮನೆಗೆ ಬಂದಿದಾಳೆ ನೋಡಪ್ಪ. ಅದನ್ನ ಹೇಳೋಕೆ ಅಂತ ಇವತ್ತು ಬೆಳಗ್ಗಿನಿಂದ ಫೋನ್ ಮಾಡ್ತಿದ್ವಿ. ಈಗ ಸಿಗ್ತು ನೋಡಪ್ಪ ಅಂದ್ರು . ಒಂದು ವಾರದಿಂದ ತುಂಬಾ ತೊಂದ್ರೆ ಕೊಟ್ಟಂಗಾಯ್ತು ಇವ್ಳಿಂದ ಸಾರಿ ಅಂದ್ರು. ಹೇ, ಹಾಗೇನಿಲ್ಲ ಅಂಕಲ್. ಪರ್ವಾಗಿಲ್ಲ ಬಿಡಿ. ಮುಂಚೆ ನೋಡಿದ್ದ ಕ್ಷೇತ್ರಗಳ ಮತ್ತೆ ನೋಡೋ ಪುಣ್ಯ ಸಿಕ್ತು ನಂಗೆ. ಆಗೋದೆಲ್ಲಾ ಒಳ್ಳೇದಕ್ಕೆ ಬಿಡಿ. ವಾಪಾಸ್ಸಾಗ್ತಿದೀನಿ ಊರಿಗೆ. ಬಂದ ಮೇಲೆ ಆರಾಮಾಗಿ ಮಾತಾಡೋಣ ಬಿಡಿ ಅಂದೆ. ಅವ್ರು ಹೂಂ ಅನ್ನೋದ್ರೊಂದಿಗೆ ಕಳೆದು ಹೋದ ಅಧ್ಯಾಯಕ್ಕೊಂದು ತೆರೆ ಬಿತ್ತು. ಬೈಂಡಾಗೋ ಕನಸುಗಳಿಗೆ ಮತ್ತೆ ರೆಕ್ಕೆ ಬಂತು.


ಈ ಕತೆ "ಪಂಜು"ವಿನಲ್ಲಿ ಪ್ರಕಟವಾಗಿದೆ
http://www.panjumagazine.com/?p=9906