Monday, March 28, 2016

ಜಾಲ

ಆಗಾಗ ಒಳಸೇರೋ ಶುದ್ಧ ನೀರು ಖುಷಿ ಕೊಡುತ್ತೆ, ಆರೋಗ್ಯವನ್ನೂ. ಆದ್ರೆ ಆ ನೀರೊಳಗೇ ನಾವು ಸೇರಿದ್ರೆ ? ಕಚ್ಚೋ ಸೊಳ್ಳೆಯ ಸಾವಾಗೋ ಚಪ್ಪಾಳೆ ಹಿತವೀಯುತ್ತೆ. ಆದ್ರೆ ಸಾವೇ ಚಪ್ಪಾಳೆ ಹೊಡೆದು ನಮ್ಮ ಕರೆದ್ರೆ ? ಓದೋ ಕಥೆಯೊಂದು ಖುಷಿ ಕೊಡುತ್ತೆ. ಆದ್ರೆ ಅದೇ ಜಾಲವಾಗಿ ನಮ್ಮ ಸೆಳೆದ್ರೆ ?

ಊರಲ್ಲೊಂದು ಹೊಸ ಅಂಗಡಿ. ಹೆಸರು ಊರಾಗಿದ್ರೂ ಅದು ಹಳ್ಳಿಯೇನಲ್ಲ.ಹಂಗಂತ ಮಹಾನಗರಿಯೂ ಅಲ್ಲ. ಸಾವಿರದ ಸುಮಾರಿಗೆ ಜನರಿದ್ದ ಜಾಗವದು. ಅಲ್ಲಿನ ಜನಕ್ಕೆ ಅಂಗಡಿಗಳು ಹೊಸದಲ್ಲದಿದ್ದರೂ ತಮ್ಮೂರಿಗೆ ಪುಸ್ತಕದಂಗಡಿಯೊಂದು ಬಂದಿದ್ದು ಅಚ್ಚರಿ ಮೂಡಿಸಿತ್ತು. ಪುಸ್ತಕ ಅಂದ್ರೆ ಮಕ್ಕಳ ಪಠ್ಯಪುಸ್ತಕ, ದಿನಚರಿ ಪುಸ್ತಕ,ನೋಟ್ ಬುಕ್ ಬಿಟ್ರೆ ಕಥೆ ಪುಸ್ತಕವೆಂಬುದು ಊರ ಗ್ರಂಥಾಲಯದಲ್ಲೊಂದೇ ಸಿಗೋದು ಎಂಬ ಭಾವವಿರೋ ಜನಕ್ಕೆ ಈ ತರದ್ದೊಂದು ಅಂಗಡಿಯಿರಬಹುದಾ ಎಂಬ ಕಲ್ಪನೆಯೂ ಇರಲಿಲ್ಲ. ಹೊಸದೆಂಬುದ್ರ ಜೊತೆಗೆ ಆ ಅಂಗಡಿ ಕೆಲ ದಿನಗಳಲ್ಲೇ ಮತ್ತೊಂದು ಕಾರಣಕ್ಕೆ ಹೆಸರು ಮಾಡತೊಡಗಿತ್ತು. ಅದೇನಪ್ಪ ಅಂದ್ರೆ ಆ ಅಂಗಡಿಯಲ್ಲಿ ಏನಿದೆ ಅಂತ ನೋಡೋಕೆ ಹೋದ ನಾಲ್ಕೈದು ಹುಡುಗರು ಕೆಲದಿನಗಳಲ್ಲಿ ಮಾಯವಾಗಿದ್ರು !

ಈ ಅಂಗಡಿಯಲ್ಲೇ ಮಾಯವಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿರದಿದ್ರೂ ಇದಕ್ಕೂ ಅವರು ಮಾಯವಾಗಿದ್ದಕ್ಕೂ ಸಂಬಂಧವಿದೆ ಅನ್ನೋದು ಊರವರ ನಂಬಿಕೆ. ಸಾಮಾನ್ಯ ಅಂಗಡಿಗಳು ಬೆಳಗ್ಗೆ ಬಾಗಿಲು ತೆಗೆದ್ರೆ ಇದು ಸಂಜೆ ತೆಗೆಯುತ್ತಿತ್ತು. ಯಾವಾಗ ಮುಚ್ಚುತ್ತಿತ್ತೋ ಯಾರಿಗೂ ಗೊತ್ತಿಲ್ಲ. ಪೇಟೆಯಲ್ಲೆಲ್ಲಾ ಹತ್ತಕ್ಕೆ ಅಂಗಡಿ ಮುಚ್ಚಬೇಕೆಂಬ ನಿಯಮವಿದ್ರೂ ಇಲ್ಲಿನ ಅಂಗಡಿಗಳೆಲ್ಲಾ ಒಂಭತ್ತಕ್ಕೇ ಬಾಗಿಲು ಹಾಕುತ್ತಿದ್ದರಿಂದ ರಾತ್ರಿ ಪಾಳಿಯ ಪೋಲೀಸಪ್ಪ ಅಂಗಡಿ ಮುಚ್ಚಿಸೋ ಸುದ್ದಿಗೆ ಹೋಗುತ್ತಿರಲಿಲ್ಲ. ಹಾಗಾಗಿ ಈ ಅಂಗಡಿ ಯಾವಾಗ ಮುಚ್ಚತ್ತೋ ಎನ್ನುವ ಬಗ್ಗೆ ಅವನಿಗೂ ಊರವರಿಗಿಂತ ಹೆಚ್ಚು ಗೊತ್ತಿರಲಿಲ್ಲ  ! ಒಂದೆರಡು ದಿನ ಗಸ್ತಿಗೆ ಹೋದಾಗಲೂ ಅಂಗಡಿಯ ಬಳಿ ಕಂಡ ಬೆಳಕು ಏನೋ ದಿಗಿಲು ಹುಟ್ಟಿಸಿ ಹಾಗೇ ವಾಪಾಸ್ಸಾಗಿದ್ದ ! ಆ ಅಂಗಡಿಯವನಿಗೆ ಹಗಲುನಿದ್ದೆಯ ರೋಗವಂತೆ. ಹಾಗಾಗಿ ಹಗಲೆಲ್ಲಾ ಅಂಗಡಿಯಲ್ಲೇ ಮಲಗಿರೋ ಅವನು ಸಂಜೆಯ ಮೇಲೇ ತನ್ನೆಲ್ಲಾ ಕೆಲಸಗಳನ್ನು ಮಾಡೋದಂತೆ ಎಂದು ಕೆಲವರೆಂದರೆ ಆ ಅಂಗಡಿ ಮಧ್ಯರಾತ್ರಿಯವರೆಗೂ ತೆಗೆದಿರುತ್ತಂತೆ. ರಾತ್ರೆಯೆಲ್ಲಾ ಎದ್ದಿರೋ ಅವ ಏನೋ ಮಾಟ ಮಂತ್ರಗಳನ್ನು ಮಾಡ್ತಿರಬೇಕು. ಅದಕ್ಕೇ ನಮ್ಮ ಹುಡುಗರು ಮಾಯವಾಗಿದ್ದಾರೆ ಎಂಬ ಊಹಾಪೋಹಗಳು ಕಂತೆ ಕಂತೆಯಾಗಿ ಊರಲ್ಲೆಲ್ಲಾ ಹಬ್ಬಲು ಹೆಚ್ಚು ದಿನ ಬೇಕಾಗಿರಲಿಲ್ಲ.

ಅಂಗಡಿ ಬಗ್ಗೆ ದಿನಕ್ಕೊಂದು ಕಥೆ ಬೆಳೀತಿದ್ರೆ ಆ ಊರ ಹಿರಿಯರು ಅನಿಸಿಕೊಂಡವರಿಗೆ ಅದನ್ನು ಕೇಳಿಕೊಂಡು ಸುಮ್ಮನೇ ಕೂರಲು ಆಗಲಿಲ್ಲ. ಹುಡುಗರು ಕಾಣೆಯಾಗಿ  ಮೂರ್ನಾಲ್ಕು ದಿನಗಳಾದ್ರೂ ಅವರ ಸುಳಿವಿರಲಿಲ್ಲ. ಪುಸ್ತಕದ ಅಂಗಡಿ ಅಂತ ಬೋರ್ಡ್ ಹಾಕ್ಕಂಡಿರೋ ಆ ಅಂಗಡಿಯಲ್ಲಿ ಏನೇನಿದೆ, ಇದಕ್ಕೂ ನಮ್ಮ ಹುಡುಗರ ಕಣ್ಮರೆಗೂ ಏನಾದ್ರೂ ಸಂಬಂಧವಿದೆಯಾ ನೋಡೇ ಬಿಡೋಣ ಅಂತ ನಾಲ್ಕೈದು ಜನ ಸೇರಿಕೊಂಡು ಹೊರಟ್ರು ಅಂಗಡಿ ಕಡೆಗೆ. ಅವರ ಎಣಿಕೆಯಂತೆ ಅಂಗಡಿ ತೆರೆದಿತ್ತು. ಅಂಗಡಿಯಾತನೂ ನಗುನಗುತ್ತಾ ಒಳಗೆ ಕರೆದ್ರೆ ಇವರಿಗೇನೋ ಭಯ. ಒಳಗೆ ಕರೆದು ಏನಾದ್ರೂ ಮಾಡಿದ್ರೆ ಅಂತ. ಹೇಗಿದ್ರೂ ಐವರಿದ್ದೀವಲ್ಲ ಅನ್ನೋ ಧೈರ್ಯದಲ್ಲಿ, ನೆನಪಾದ ದೇವರನ್ನೆಲ್ಲಾ ಬೇಡುತ್ತಾ ಅಂಗಡಿಯ ಒಳಗಡಿಯಿಟ್ರು. ನೋಡ್ತಾರೆ ಅಲ್ಲಿ ಪುಸ್ತಕಭಂಡಾರವೇ ಇದೆ. ರಾಮಾಯಣ, ಮಹಾಭಾರತ, ಪುರಾಣನಾಮ ಚೂಡಾಮಣಿ, ಶಂಕರ ವಿಜಯ..ಹೀಗೆ ಇಲ್ಲಿಯವರೆಗೆ ಹೆಸರು ಕೇಳಿದ್ದೆಲ್ಲಾ ಇದೆಯಲ್ಲಿ. ಇಂತಹ ಒಳ್ಳೆಯ ಸಂಗ್ರಹವಿರೋ ಅಂಗಡಿಯ ಬಗ್ಗೆ ಅನಗತ್ಯವಾಗಿ ಅಪಪ್ರಚಾರವಾಗ್ತಾ ಇದೆಯಲ್ಲ. ಎಲ್ಲಿ ಹೋಗಿದ್ದಾರೋ ನಮ್ಮ ಹುಡುಗರು ಇಂದೋ ನಾಳೆಯೋ ಬರುತ್ತಾರೆ ಬಿಡು ಎಂದುಕೊಂಡು ಮರಳಬೇಕನ್ನೋ ಹೊತ್ತಿಗೆ ಅಂಗಡಿಯವನೇ ಇವರಿಗೆ ಅಡ್ಡಬಂದ.

ನಮ್ಮ ಅಂಗಡಿಗೆ ಬಂದು ಹಾಗೇ ಹೋಗುವುದು ಅಂದರೇನು ? ಒಂದಾದರೂ ಪುಸ್ತಕ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಿದ. ಬರುವಾಗೇನೋ ಭಂಡ ಧೈರ್ಯ ಮಾಡಿ ಬಂದಿದ್ದರು. ಆದರೆ ಅಲ್ಲಿ ಪುಸ್ತಕ ತೆಗೆದುಕೊಳ್ಳಬೇಕಾಗಬಹುದು ಅಂತ ಅವರ್ಯಾರೂ ಎಣಿಸಿರಲಿಲ್ಲ. ಹಾಗೆ ಅಷ್ಟು ದುಡ್ಡೂ ತಂದಿರಲಿಲ್ಲ. ಬೆ ಬೆ ಬೆ ಎನ್ನುತ್ತಾ,ಒಬ್ಬರ ಮುಖವನ್ನೊಬ್ಬರು ನೋಡೋಕೆ ಶುರು ಮಾಡಿದ್ರು. ಈಗ ದುಡ್ಡಿಲ್ಲದಿದ್ದರೆ ಪರವಾಗಿಲ್ಲ. ನಾಳೆಯೋ ನಾಡಿದ್ದೋ ಕೊಡಿ ಅಂತ ಅವರಿಗೊಂದಿಷ್ಟು ಪುಸ್ತಕ ಕೊಟ್ಟು ಕಳಿಸಿದ್ದ. ಅವರೆಲ್ಲಾ ಆಸೆಗಣ್ಣುಗಳಿಂದ ಯಾವ ಪುಸ್ತಕಗಳನ್ನು ಗಮನಿಸುತ್ತಿದ್ದರೂ ಎಂಬುದನ್ನು ಅವನ ಚುರುಕು ಕಣ್ಣುಗಳು ಗುರುತಿಸಿಯಾಗಿತ್ತು !

ಇನ್ನೆರಡು ದಿನಗಳಲ್ಲಿ ಊರಲ್ಲಿ ಹೊಸ ಸುದ್ದಿ. ಕಳೆದು ಹೋದ ಹುಡುಗರನ್ನು ಹುಡುಕಹೋದ ಊರ ಪಂಚರು ನಾಪತ್ತೆಯಾಗಿದ್ದಾರೆ. ಅವರ ಕುಟುಂಬಗಳೂ ಕಾಣದೆ ಅವರ ಮನೆಗೆ ಬೀಗ ಬಿದ್ದಿದೆ ಅನ್ನೋದೇ ಆ ಸುದ್ದಿ !  ಪಂಚರನ್ನು ಪತ್ತೆ ಮಾಡೋಕೆ ಅಂತ ಹೋದ ಯುವಕರ ದಂಡೂ ಮಾಯವಾಗಿದೆ ಅನ್ನೋ ಸುದ್ದಿ ಇನ್ನೂ ಬೇಗ ಹರಡತೊಡಗಿತ್ತು. ಪೇಪರನ್ನು ಓದುತ್ತಿದ್ದ ಅಪ್ಪನಿಗೆ ಶಾಲೆಗೆ ಹೋದ ತನ್ನ ಮಗ ಇನ್ನೂ ಮನೆಗೆ ಬಾರದಿರುವ ಬಗ್ಗೆ, ಪತ್ನಿಗೆ ಕೆಲಸಕ್ಕೆ ಹೋದ ತನ್ನ ಪತಿ ಇನ್ನೂ ಮರಳದಿರುವ ಬಗ್ಗೆ , ದೇವಸ್ಥಾನಕ್ಕೆ ಹೋದ ಅತ್ತೆ ಇನ್ನೂ ಮರಳದಿರುವ ಬಗ್ಗೆ ಮಾವನಿಗೆ, ತನ್ನ ನಾದಿನಿ ಕಾಣೆಯಾಗಿರುವ ಬಗ್ಗೆ ಸೊಸೆಗೆ.. ಹೀಗೆ ಊರವರಿಗೆಲ್ಲಾ ಒಬ್ಬರಲ್ಲಾ ಒಬ್ಬರು ಕಾಣೆಯಾಗಿರುವ ಚಿಂತೆ ಕಾಡತೊಡಗಿತು. ಎಲ್ಲರ ಬೊಟ್ಟೂ ಪುಸ್ತಕದಂಗಡಿಯ ಕಡೆಗೆ. ಆ ಪೋಲೀಸಪ್ಪ ಮತ್ತವನ ಸಂಗಡಿಗರು ಏನು ಮಾಡ್ತಾ ಇದ್ದಾರೆ. ನಮ್ಮವರನ್ನ ಹುಡುಕಿಕೊಡಿ ಅಂತ ಕೇಳೋದೇ ಸರಿ ಇವತ್ತು ಅಂತದುಕೊಂಡು ಒಂದಿಷ್ಟು ಜನ ಗುಂಪಾಗಿ ಪೋಲೀಸ್ ಕಛೇರಿಗೆ ಹೊರಡೋಕೆ ಶುರು ಮಾಡಿದ್ರು. ಪುಸ್ತಕದಂಗಡಿ ಯಥಾಪ್ರಕಾರ ಬಾಗಿಲು ಹಾಕಿತ್ತು. ಅದು ತೆಗೆಯುವವರೆಗೆ ತಾಳ್ಮೆಯಿಲ್ಲ. ಅದರ ಅಂಗಡಿಯಾತನನ್ನು ಹುಡುಕೋಣವೆಂದ್ರೆ ಅವ ಎಲ್ಲಿರುತ್ತಾನೆ ಎಂದು ಪೋಲೀಸರಿಗೂ ಗೊತ್ತಿಲ್ಲವಲ್ಲ. ತಮ್ಮವರನ್ನು ಕಳೆದುಕೊಂಡ ನೋವಿಗೆ ಆ ಅಂಗಡಿಯ ಮೇಲೊಂದಿಷ್ಟು ಕಲ್ಲುಗಳು ಬಿತ್ತು. ಪೋಲೀಸರಿಗೊಂದಿಷ್ಟು ಧಿಕ್ಕಾರಗಳು ಬೀಳಲು ಶುರುವಾಯ್ತು.  ಹೊತ್ತೇರುತ್ತಿದ್ದಂತೆ ಧಿಕ್ಕಾರಗಳ ದನಿ ಏಳುತ್ತಲೇ ಹೋಯಿತು. ಆ ದನಿ ಕೇಳಿಸಿಕೊಂಡ ಇನ್ನೊಂದಿಷ್ಟು ಜನ  ಮನೆಗೆ ಬೀಗವನ್ನೂ ಹಾಕದೇ ಮಾಡುತ್ತಿದ್ದ ಕೆಲಸಗಳ ಹಾಗಾಗೇ ಬಿಟ್ಟು ಪೋಲೀಸ್ ಇಲಾಖೆಯತ್ತ ತೆರಳತೊಡಗಿದ್ರು.
ಧಿಕ್ಕಾರಗಳ ಮೇಲೆ ಧಿಕ್ಕಾರದ ಕೂಗು ಹೊತ್ತೇರಿದಂತೆ ಹೆಚ್ಚುತ್ತಲೇ ಸಾಗಿತು !

ಇದ್ದಕ್ಕಿದ್ದಂತೆ ಕತ್ತಲು ! ಸುತ್ತಲಿದ್ದ ದೀಪಗಳೆಲ್ಲಾ ಆರಿದಂತೆ. ಕತ್ತಲೆಗೆ ಕಣ್ಣುಗಳನ್ನ ಹೊಂದಿಸಿಕೊಳ್ಳೋ ಹೊತ್ತಿಗೆ ಪೋಲೀಸ್ ವಾಹನದ ಸದ್ದು. ಕಿರ್ರೆನ್ನೋ ಧ್ವನಿವರ್ಧಕ ಸರಿಯಾದ ನಂತರವೊಂದು ಪ್ರಕಟಣೆ. ಸಾಗರದ ಜನತೆಗೆ ಆರಕ್ಷಕ ಇಲಾಖೆಯ ಪ್ರಕಟಣೆ. ದಿನಪತ್ರಿಕೆ, ವಾರಪತ್ರಿಕೆ, ಮೊಬೈಲುಗಳಲ್ಲಿ ಕಥೆಯೊಂದನ್ನು ಪ್ರಕಟಿಸಿ ಅದನ್ನು ಓದೋ ಎಲ್ಲರನ್ನೂ ಮರಳು ಮಾಡಿ ನಂತರ ಅವರ ಮನೆಯನ್ನು ದೋಚುವ ಕಳ್ಳರ ಜಾಲವನ್ನು ಪತ್ತೆಹಚ್ಚಿದ್ದೇವೆ. ಕಥೆಯೊಳಗೆ ಇರೋರೆಲ್ಲ ವಾಸ್ತವಕ್ಕೆ ಬನ್ನಿ. ನೀವಿದ್ದಿದು ನವಿಲೂರ ಕಥೆಯ ಗುಂಗಲ್ಲಿ. ನೀವು ಓದುತ್ತಿದ್ದ ಕಥೆಯಿಂದ ನಿಮ್ಮನ್ನು ಹೊರತರಲೆಂದೇ ಸದ್ಯಕ್ಕೆ ಕರೆಂಟ್ ತೆಗೆಯಲಾಗಿದೆ.  ನಿಮ್ಮ ಮಕ್ಕಳೆಲ್ಲಾ ಮನೆಯಲ್ಲೇ ಇದ್ದಾರೆ ನೋಡಿ. ಅವರೂ ನಿಮ್ಮ ತರಹ ಕಥೆಯ ಜಾಲದೊಳಗಿರಬಹುದು !..ಎದ್ದೇಳಿ. ಅವರನ್ನೂ ಅದರಿಂದ ಹೊರತನ್ನಿ.. ಸಾಗರದ ಜನತೆಗೆ..ಪ್ರಕಟಣೆ. ಅವರ ಪ್ರಕಟಣೆಯ ಅರಗಿಸಿಕೊಳ್ಳಲು ಪ್ರಯತ್ನಿಸಿದ ಜನ ಸುತ್ತ ನೋಡಿದರೆ ಹೌದು. ಪುಸ್ತಕದಂಗಡಿಯೂ ಇಲ್ಲ, ಅದರ ಯಜಮಾನನೂ ಇಲ್ಲ. ತಮ್ಮ ಕೈಯಲ್ಲಿ ಹಿಡಿದಿದ್ದ ಪೇಪರ್, ಪಕ್ಕದಲ್ಲಿದ್ದ ಮೊಬೈಲ್ ನಗುತ್ತಿತ್ತು.

ಈ ಕಥೆ "ಪಂಜು"ವಿನಲ್ಲಿ ಪ್ರಕಟವಾಗಿದೆ

No comments:

Post a Comment