ಬದಲಾಗದ ಬಿಸಿಗಾಳಿ, ಫ್ಯಾನ ಕಿವಿ ಹಿಂಡಿದ್ದಷ್ಟೇ ಬಂತು
ಬಳಿಬಾರದ ತಂಪ ನಗು,ಘಳಿಗೆಗಳ ಗಣಿತ ಮರೆತದ್ದೊಂದೇ ಬಂತು
ತಾತ್ಕಾಲಿಕ ಸಾಂತ್ವನಕ್ಕೂ ಬಾರದ ಪ್ರೀತಿ ಮಳೆಗೆ ಹಾಕಿದ್ದೆಷ್ಟೋ ಶಾಪ
ನೀರೆರೆಯದೇ ಹೋದ ಮೋಡಕ್ಕೆ ಮರುಗಿದ್ದೊಂದೇ ಬಂತು |೧
ಎದುರ ದೇಗುಲದಲ್ಲಿ ಕಂಡಂತೆ ಹೆತ್ತಾಕೆ
ಅತಿಮಧುರ ನೆನಪುಗಳ, ಸಂತೋಷ ಕೊಟ್ಟಾಕೆ
ದೂರದೆಲ್ಲೋ ನನ್ನ ನೆನೆಯುವಂತೆ
ಕಾಡೋ ಕಣ್ಣೀರೆಲ್ಲ ಫೋನಾಚೆ ಮರೆತಾಕೆ
ನೋವ ದೀಪದ ಬುಡದ ಕತ್ತಲಂತೆ |೨
ಹುಟ್ಟೂರ ಕರೆಘಂಟೆ ಹುಡುಕೆನ್ನ ಬಂದಿಹುದೆ
ದೇಗುಲದ ಚಾವಣಿಯ ಘಂಟೆಯಂತೆ ?
ಅರ್ಚನೆಯು ನೆಮ್ಮದಿಯ ತಂದಿಲ್ಲವಿಂದೆನಗೆ
ಕಾಡುತಿರೆ ಹೆತ್ತಾಕೆ ಬಗೆಯ ಚಿಂತೆ |೩
ದೂರವಾಗಿಹುದಿಲ್ಲಿ ನಾಡಲ್ಲ ಮನಸುಗಳು
ಹೊಟ್ಟೆಪಾಡಿನ ನೆವದಿ ಬೆಳೆದು ಸ್ವಾರ್ಥ
ಬೇರೆಯಾಗಲು ಹೊರಟ ಮಕ್ಕಳಿಗೆ ಮನೆಯಲ್ಲ
ಬೇಡವಾಗಿದ್ದಿಲ್ಲಿ ಸಲಹೊ ತರ್ಕ |೪
ನನ್ನ ಓದಿಸಲೆಂದೆ ಹೊತ್ತೂಟ ಬಿಟ್ಟವರ
ನೆನಪು ಮರುಕಳಿಸುತಿದೆ ಅನ್ನದಗುಳೂ
ತಂದೆ ತಾಯಿಯ ನಿದ್ದೆ ಕಸಿದ ದಿನಗಳು ಎಷ್ಟೊ
ಎಂಬ ಕೊರಗೇ ಇಂದು ಸುಡುವ ಬಿಸಿಲು|೫
ಹೆತ್ತ ತಾಯಿಯ ಬಳಿಯ ಬೀಸಣಿಕೆ ಸಾಕೆನಗೆ
ದೂರದೂರಿನ ಕೊಲ್ಲೊ ಏಸಿಗಿಂತ
ಅನಿಸಿದೊಡನೇ ಹೊರಟ ಕೆಲಸಕ್ಕೆ ರಜೆ ಜಡಿದು
ವೃದ್ಧ ತಂದೆಯ ನೆರವು ವಾಸಿಯಂತ|೬
"ದೂರವಾಗಿಹುದಿಲ್ಲಿ ನಾಡಲ್ಲ ಮನಸುಗಳು"
ReplyDeleteವಾಹ್...
ಸುಂದರ, ಅರ್ಥಪೂರ್ಣ ಕವನ.
Thanks again :-)
Delete