Showing posts with label Kumara Parvata Trecking. Show all posts
Showing posts with label Kumara Parvata Trecking. Show all posts

Friday, January 18, 2019

ಕುಮಾರ ಪರ್ವತ ಚಾರಣ-೧


Our Group on the way to KP Trek 
ನಾವೂ ನಮ್ಮ ಟ್ರೆಕ್ಕಿಂಗು:
ಮದ್ವೆಯಾದ ಮೇಲೆ ಹೊರಟ ಟ್ರಿಪ್ಪುಗಳಲ್ಲಿ ಕೆಲವಾದರೂ ದೇವಸ್ಥಾನದ ಫೋಟೋಗಳಿರ್ತಿದ್ದನ್ನ ನೋಡಿದ ಗೆಳೆಯರು ನಮಗೆ ತೀರ್ಥಯಾತ್ರೆ ಅಂತ ಅಣಕಿಸ್ತಿದ್ರು. ಚಂಪಕಧಾಮ, ಮೇರಿತಿ ಬೆಟ್ಟ, ಸಾವನದುರ್ಗ, ಶಿವಗಂಗೆಗಳಿಗೆ ಟ್ರೆಕ್ಕಿಂಗಿಗೆ ಹೋಗಿದ್ರೂ ಅಲ್ಲಲ್ಲಿ ಕಂಡ ನಂದಿಯೋ, ಧ್ವಜವೋ, ಕಲ್ಲಮಂಟಪವೋ ಕಂಡ ಗೆಳೆಯರು ಅದೂ ತೀರ್ಥಯಾತ್ರೆ ಅಂತ ಅಂದ್ಕೋತಿದ್ರು ! ಯಾರೋ ಏನೋ ಅಂದ್ಕೋತಾರೆ ಅನ್ನೋದಕ್ಕಿಂತಲೂ ನಡೆಯೋಕೆ ಎಂದೂ ಬೇಸರಿಸದ ಅರ್ಧಾಂಗಿಯನ್ನ ಇನ್ನೂ ಉತ್ತಮ ಜಾಗಗಳಿಗೆ ಕರ್ಕೊಂಡು ಹೋಗ್ಬೇಕು, ಸುಮ್ನೆ ಮೂರ್ನಾಲ್ಕು ಕಿ.ಮೀಗಳ ಚಾರಣಕ್ಕೆ ಟ್ರೆಕ್ಕಿಂಗು ಅನ್ನದೇ ಸರಿಯಾದ ಟ್ರೆಕ್ಕಿಂಗುಗಳಿಗೆ ಕರ್ಕೊಂಡೋಗ್ಬೇಕು ಈ ಹೊಸ ವರ್ಷದಲ್ಲಾದರೂ  ಅನ್ನೋ ಆಸೆ ಉದಯಿಸ್ತಿತ್ತು. ಅದಕ್ಕೆ ನೆರವಾಗಿದ್ದು ೩ಕೆ ಬಳಗದಿಂದ ಪರಿಚಯವಾದ ಪ್ರಮೋದ್ ಶ್ರೀನಿವಾಸ್.   ಬಂಡಾಜೆ, ಅರ್ಬಿ ಜಲಪಾತದ ಚಾರಣಕ್ಕೆ ಬರ್ತೀಯ ಅಂತ ಮೊದಲ ಬಾರಿ ಚಾರಣವೊಂದಕ್ಕೆ ಅವರು ಕರೆದಾಗ ಹೋಗಲಾಗದೇ ಇದ್ರೂ ಈ ಸಲ ಕರೆದಾಗ ಹೆಚ್ಚೇನೂ ಯೋಚಿಸದೇ  ಹೂಂ ಅಂದಿದ್ದೆ. ಆಮೇಲೆ ಹೋಗಕ್ಕಾಗತ್ತೆ, ಆಗಲ್ಲ ಅಂತ ಹಲವು ಪರಿಸ್ಥಿತಿಗಳು ನನ್ನ ನಿರ್ಧಾರವನ್ನು ತೂಗುಯ್ಯಾಲೆಯಲ್ಲಿಟ್ರೂ ಅವರು ಕರೆದ ಕುಮಾರ ಪರ್ವತ ಚಾರಣಕ್ಕೆ ಹೋಗಿ ಬರೋಕಾಗಿದ್ದು ನನ್ನ ಪುಣ್ಯ ಅನಿಸುತ್ತೆ. 

ಏನಿದು ಕುಮಾರ ಪರ್ವತ, ಎಲ್ಲಿದೆ ಇದು ಅಂದ್ರಾ ? 
ದಕ್ಷಿಣ ಕನ್ನಡದ ಸುಳ್ಯದಲ್ಲಿರೋ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗಿನ ಸೋಮವಾರಪೇಟೆಗಳ ನಡುವೆ ಹಾಸಿಹೋಗಿರೋ ಬೆಟ್ಟವೇ ಕುಮಾರ ಪರ್ವತ.  ಕರ್ನಾಟಕದಲ್ಲಿನ ಕಷ್ಟದ ಟ್ರೆಕ್ಕಿಂಗುಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಡೋ ಈ ಕುಮಾರ ಪರ್ವತ ಅಥವಾ KP ಯ ಎತ್ತರ, ನಡೆಯಬೇಕಾದ ದೂರಗಳ ಬಗ್ಗೆ ಹಲವು ಊಹಾ ಪೋಹಗಳಿವೆ. ಕೊಡಗಿನ ಸೋಮವಾರಪೇಟೆಯ ಕಡೆಯಿಂದ ಹತ್ತಿ ಪರ್ವತದ ತುದಿ ತಲುಪಿ ಗಿರಿಗದ್ದೆ ಭಟ್ಟರ ಮನೆ ಕಡೆಯಿಂದ ಇಳಿಯೋದು ಒಂದು ಮಾರ್ಗ. ಕುಕ್ಕೆ ಸುಬ್ರಹ್ಮಣ್ಯದಿಂದ ಶುರು ಮಾಡಿ, ಗಿರಿ ಗದ್ದೆ ಭಟ್ಟರ ಮನೆ/ಕ್ಯಾಂಪಿನ ಮೂಲಕ ಸಾಗಿ ಮಂಟಪ, ಶೇಷ ಪರ್ವತಗಳ ಮೂಲಕ ಸಾಗಿ ಬೆಟ್ಟದ ಮೇಲಕ್ಕೆ ಹತ್ತಿ ಅದೇ ದಾರಿಯಲ್ಲಿ ಇಳಿಯೋದು ಮತ್ತೊಂದು ಹಾದಿ. ನಾವು ಐದಾರು ವರ್ಷಗಳ ಹಿಂದೆ ಹೋದಾಗ ಮೊದಲ ಮಾರ್ಗದಲ್ಲಿ ಮಲ್ಲಳ್ಳಿ ಫಾಲ್ಸಿಗೆ ಹೋಗಿ, ಅಲ್ಲಿಂದ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನ, ಚೆಕ್ ಪೋಸ್ಟ್ ದಾಟಿ ಮೇಲೆ ಹತ್ತಿ ಬೆಟ್ಟದ ಮೇಲಿರುವ ಶಾಂತಮಲ್ಲಿಕಾರ್ಜುನ ದೇಗುಲದ ಹತ್ತಿರ (ಈಗಿರೋ ಧ್ವಜ ಸ್ತಂಭ ಆಗಿರಲಿಲ್ಲ) ಟಂಟ್ ಹಾಕಿ ರಾತ್ರಿ ತಂಗಿದ್ವಿ. ಈಗ ಬೆಟ್ಟದ ಮೇಲೆ ಟೆಂಟ್ ಹಾಕಲು ಬಿಡದ ಕಾರಣ ಭಟ್ಟರ ಮನೆ ಬಳಿಯಿರುವ ಅರಣ್ಯ ಇಲಾಖೆಯ ಕಛೇರಿ ಬಳಿ ತಂಗಬೇಕಷ್ಟೆ. ಇಲ್ಲಿಗೆ ಟ್ರೆಕ್ಕಿಂಗಿಗೆ ಮತ್ತು ಕ್ಯಾಂಪಿಂಗಿಗೆ ಬರೋ ಹೆಚ್ಚಿನ ಜನರು ಅರಣ್ಯ ಇಲಾಖೆಯ ಬಳಿಯಿರುವ ಸಣ್ಣ ಕೆರೆಯ ಬಳಿ ಟೆಂಟ್ ಹಾಕಿ ತಮ್ಮ ಬ್ಯಾಗುಗಳನ್ನು ಅಲ್ಲೇ ಇಟ್ಟು ಬೆಟ್ಟ ಹತ್ತುತ್ತಾರೆ. ವಾಪಾಸ್ ಬರುವಾಗ ತಮ್ಮ ಟೆಂಟಲ್ಲಿರೋ ಬ್ಯಾಗುಗಳನ್ನು ತೆಗೆದುಕೊಂಡು ವಾಪಾಸ್ ಹೋಗುತ್ತಾರೆ. ಬೆಳಗ್ಗೆ ಮುಂಚೆ ಶುರು ಮಾರಿ ಬೆಟ್ಟ ಹತ್ತಿ ಅದೇ ದಿನ ಸಂಜೆಯ ಹೊತ್ತಿಗೆ ವಾಪಾಸ್ ಹೋಗುವವರೂ ಉಂಟು. ಕುಕ್ಕೆಯ ಕಡೆಯಿಂದ ಶುರು ಮಾಡೋದಾದರೆ ಸಾಗರ ಮಟ್ಟದಿಂದ ೭೭ ಮೀಟರ್ ಎತ್ತರಕ್ಕೆ ಶುರುವಾಗೋ ನಮ್ಮ ಚಾರಣ ತುದಿ ಮುಟ್ಟುವ ಹೊತ್ತಿಗೆ ೧೭೫೦ ಮೀಟರ್ ಮುಟ್ಟಿರುತ್ತದೆ ! ಸುಮಾರು ಹನ್ನೊಂದು ಕಿ.ಮೀ ಇರುವ ಈ ಹಾದಿಯಲ್ಲಿ ಮೊದಲೈದು ಕಿ.ಮೀ ಸಾಗಿದರೆ ಸಿಗೋದು ಭಟ್ಟರ ಮನೆ. ಅಲ್ಲಿಂದ ಐನೂರು ಮೀಟರಿಗೆ ಫಾರೆಸ್ಟ್ ಚೆಕ್ಪೋಸ್ಟು. ಭಟ್ಟರ ಮನೆಯಿಂದ ಸುಮಾರು ಆರು ಕಿ.ಮೀ ದೂರಕ್ಕೆ ಸಿಗೋದೇ ಬೆಟ್ಟದ ತುದಿಯ ವೀಕ್ಷಣಾ ತಾಣಗಳು. ಸೋಮವಾರ ಪೇಟೆಯ ಕಡೆಯಿಂದ ಹೋಗೋದಾದ್ರೆ ಸುಮಾರು ೮.೫ , ಒಂಭತ್ತು ಕಿ.ಮೀಗಳಿಗೆ ಬೆಟ್ಟದ ತುದಿ ತಲುಪಬಹುದು. ಆದರೆ ಆ ದಾರಿ ಸ್ವಲ್ಪ ಕಡಿದಾಗಿದೆ. ನಾವು ಹಿಂದಿನ ಸಲ ಆ ದಾರಿಯಲ್ಲಿ ಬಂದ ಕಥೆಯನ್ನ ನನ್ನ ಹಳೆಯ ಪೋಸ್ಟಲ್ಲಿ ನೋಡಬಹುದು
Our Group Infront of Kukke Subramanya Temple before the start of Trek

ಹೋಗಿದ್ದೇಗೆ?
ಟ್ರಿಪ್ಪಿನ ದಿನ ನಾವು ಮೆಜೆಸ್ಟಿಕ್ಕಿಗೆ ಬಸ್ ಹತ್ತೋಕೆ ಬರೋವರೆಗೂ ಹದಿನಾರು ಜನರ ನಮ್ಮ ಗುಂಪಲ್ಲಿ ನಂಗೆ ಪರಿಚಯವಿದ್ದ ಮೂರನೆಯ ವ್ಯಕ್ತಿ ಅಂದ್ರೆ ಪ್ರಮೋದ್ ಅಷ್ಟೆ. ನಂತರ ಪರಿಚಯದ ವಿನಯ್ ಬೆಳೆಯೂರು ಸಿಕ್ಕಿದ್ರು. ನೀವೇನಾ ಟ್ರಿಪ್ಪಿಗೆ ಬರ್ತೀರೋ ವಿನಯ್ ಅನ್ನೋ ಹೊತ್ತಿಗೆ ಅದು ನಾನಲ್ಲ, ಬೇರೆ ವಿನಯ್ ಅಂತ ಅವರು ವಿನಯ್ ರಾವ್ ಅವರನ್ನು, ಮತ್ತೊಬ್ಬ ವಿನಯ್ ಅನ್ನೂ ಪರಿಚಯಿಸಿದ್ರು. ಅಷ್ಟರಲ್ಲೇ ತೇಜಸ್ವಿ, ಲೋಹಿತ್,  ರವಿಶಂಕರ್, ಸುಧೀರ್ ಸಾಗರ್,  ಸುಧಾಕ್ಕ ಎಂಟ್ರಿ ಕೊಟ್ರು. ದೆಹಲಿಯ ಆರತಿ ಮತ್ತು ವಿಜಯಲಕ್ಷ್ಮಿ ಅವರನ್ನು ಕಂಡಾಗ ಅಕ್ಷತಾಗೆ ಸ್ವಲ್ಪ ಖುಷಿ ಆಯ್ತು . ನಂತರ ಪರಿಚಯವಾಗಿದ್ದು ಸುಧಾಮ ಮತ್ತು ಮನಮೋಹನ್, ವಿನಯ್. ಸುಮಾರು ಟ್ರೆಕ್ಕುಗಳಿಗೆ ಹೋದ ಪ್ರಮೋದಣ್ಣನ ಗ್ಯಾಂಗಿನ ಕತೆ ಕೇಳ್ತಾ ನಾವು ಒಂಭತ್ತೂಮುಕ್ಕಾಲಿಗೆ ಬರಬೇಕಾದ ನಮ್ಮ ಬಸ್ಸಿಗೆ ಪ್ಲಾಟ್ ಫಾರಂ ೨ ಎ/ ೩ರಲ್ಲಿ ಕಾಯ್ತಾ ಇದ್ವಿ. ಕೂರೋಕೂ ಜಾಗವಿಲ್ಲದ ಬಸ್ಟಾಂಡಲ್ಲಿ ಬಸ್ಸು ಎಷ್ಟೊತ್ತಿಗೆ ಬರತ್ತೆ ಅನ್ನೋ ನಿರೀಕ್ಷೆಯೂ ಇಲ್ಲದೇ ಕಾಯ್ತಾ ಇದ್ರೆ ನಮಗೆ ಪುಕ್ಸಟ್ಟೆ ಮನೋರಂಜನೆ ಒದಗಿಸೋಕೆ ಉತ್ತರದ ಕಾಲೇಜು ಗ್ಯಾಂಗೊಂದು ರೆಡಿಯಾದಂಗಿತ್ತು ! ನಾವು ನಿಂತು ನೋಡುವಾಗಲೇ ಒಬ್ಬಳು ಹುಡುಗಿಯನ್ನ ನಾಲ್ಕೈದು ಜನ ಹುಡುಗ್ರು ಕರ್ಕೊಂಡು ಬಂದು ಕೂರಿಸಿದ್ರು. ಜೊತೆಗೆ ಅಯ್ಯೋ ಅನ್ನೋ ಮತ್ತೊಬ್ಬ ಹುಡುಗಿ. ಏನೋ ಆಗಿರ್ಬೇಕು ಅಂತ ಪಕ್ಕದ ಬೆಂಚ ಮೇಲಿದ್ದ ಜನ ಜಾಗ ಬಿಟ್ರು. ಬಸ್ಟಾಂಡಿಗೆ ಬರುವಾಗ ಎಲ್ಲೋ ಬಿದ್ದಿದ್ಲಂತೆ. ಬಿದ್ದ ರಭಸಕ್ಕೆ ಕಾಲು ಸ್ವಲ್ಪ ತರಚಿತ್ತಷ್ಟೆ. ಆ ತರಚಿಗೆ ಉಪಚರಿಸ್ತಿದ್ದ ಜನರನ್ನ ನೋಡಿ ಏನಪ್ಪಾ ಇದು ಅನ್ನಿಸ್ತು ಒಮ್ಮೆ. ಗಾಯವನ್ನು ಹತ್ತಿಯಿಂದ ಒರೆಸುವವ ಒಬ್ಬ, ಬ್ಯಾಗಲ್ಲಿ ಟಿಂಚರ್ರೋ ಇನ್ನೇನೋ ಇದ್ಯಾ ಅಂತ ಕೇಳ್ತಾ ಹುಡುಕುವವ ಮತ್ತೊಬ್ಬ,ಗಾಯಕ್ಕೆ ಬ್ಯಾಂಡೇಡ್ ಅಂಟಿಸುವವ ಮಗದೊಬ್ಬ, ಏನೂ ಆಗಿಲ್ಲ ಅಂತ ಸಮಾಧಾನ ಮಾಡುವವ ಇನ್ನೊಬ್ಬ. ಇವ್ರಿಷ್ಟು ಜನ ಸಾಲೋಲ್ಲ ಅಂತ ಇವಳ ಜೊತೆಗೆ ಮುಂಚೆ ಇದ್ದು, ಈಗೆಲ್ಲೋ ಮರೆಯಾಗಿದ್ದ ಹುಡುಗಿ ಮತ್ತೊಂದಿಷ್ಟು ಜನರನ್ನ ಕರ್ಕೊಂಡು ಬಂದ್ಳು. ಅವ್ರು ಏನಾಯ್ತು ಅಂತ ಕೇಳೋದ ನೋಡಿದ ಬಸ್ಸು ಕಾಯ್ತಿದ್ದ ಎಲ್ಲರೂ ಇವರನ್ನೇ ನೋಡೋಕೆ ಹತ್ತಿದ್ರು. ಏನು ರಾಜಮರ್ಯಾದೆಯಪ್ಪಾ ಇವ್ಳಿಗೆ , ಇಂಥಾ ಗೆಳೆಯರು ಸಿಕ್ಕೋಕೆ ಪುಣ್ಯ ಮಾಡಿರ್ಬೇಕು ಅಂತ ಒಂದ್ಕಡೆ ಅನ್ನಿಸ್ತಿದ್ರೆ ಆ ಹುಡುಗರು ಆಡೋ ರೀತಿ ನೋಡಿ ನಗು ಬರ್ತಿತ್ತು. ಆದ್ರೆ ಒಂದು ಲೀಟರ್ ನೀರನ್ನ ಬರೀ ಕೈ ತೊಳೆಯೋಕೆ ಅಂತ ಉಪಯೋಗಿಸ್ಕೊಂಡು ಉಳಿದ ನೀರನ್ನು, ಬಾಟಲಿಯನ್ನು ಅಲ್ಲೇ ಇದ್ದ ಡಸ್ಟ್ ಬಿನ್ನಿನ ಬಳಿ ಎಸೆದು ಹೋದ ಅವರ ಧೋರಣೆ ಕಂಡು ಉರಿದೂ ಹೋಯ್ತು  !   ಬರಬೇಕಾದ ಬಸ್ಸು ಮತ್ತಷ್ಟು ಸತಾಯಿಸಿ ಒಂದು ತಾಸಿಗಿಂತಲೂ ಹೆಚ್ಚು ಲೇಟಾಗಿ ಬಂದಿದ್ರಿಂದ ನಮ್ಮಗಳ ಪರಸ್ಪರ ಪರಿಚಯಕ್ಕೆ ಅನುಕೂಲವಾಗಿತ್ತು. ಹೊರಟ ಬಸ್ಸಿನಲ್ಲಿ ವಾಣಿ ಮತ್ತು  ಲಕ್ಷ್ಮಿಯವರನ್ನು ಹತ್ತಿಸಿಕೊಂಡು ಬೆಂಗಳೂರು ದಾಟೋ ಹೊತ್ತಿಗೆ ರಾತ್ರಿ ಕಳೆದಿತ್ತು. 


ಕುಕ್ಕೆಯಲ್ಲೊಂದು ಬೆಳಗು: 
View of Adi Kukke Temple from the Lodge

ಬೆಂಗಳೂರ ಚುಮು ಚುಮು ಬೆಳಗಿಂದ ದೂರ ಸಾಗಿದ್ದ ನಮ್ಮನ್ನ ಸ್ವಾಗತಿಸಿದ್ದು ಕುಕ್ಕೆಯ ಬೆಚ್ಚಗಿನ  ಹವೆ. ಬೆಳಗ್ಗೆ ಆರರ ಹೊತ್ತಿಗೆ ಬಸ್ಟಾಂಡು ತಲುಪಿದ್ದ ನಾವು ನಮ್ಮ ಟ್ರೆಕ್ಕಿಂಗು ಬ್ಯಾಗುಗಳ ಹೊತ್ತು ಕುಕ್ಕೆಯ ಟಾರ ಬೀದಿಗಳಲ್ಲಿ ಸಾಗುತ್ತಿದ್ರೆ ನಿದ್ರಾ ದೇವಿ ಕೈ ಬೀಸಿ ಕರೆಯುತ್ತಿದ್ದಳು. ಆಟೋ ಬೇಕಾ ಸಾರ್ ಆಟೋ ಎಂದು ಮೈಮೇಲೆ ಬೀಳುವ ಜನರಿಲ್ಲ, ಟ್ಯಾಕ್ಸಿ ಟ್ಯಾಕ್ಸಿ ಅಂತ ನಮ್ಮ ಬ್ಯಾಗುಗಳ ಸೆಳೆದೊಯ್ಯೋ ಧಾವಂತವಿಲ್ಲ, ಪೂಜೆ ಮಾಡುಸ್ತೀರಾ ಸಾರ್ ಅಂತ ತಲೆತಿನ್ನೋ ಏಜೆಂಟರೂ ಇಲ್ಲವಿಲ್ಲಿ. ಪ್ಲಾಸ್ಟಿಕ್ ಬ್ಯಾಗುಗಳ ಎಲ್ಲೆಂದರಲ್ಲಿ ಕಚ್ಚೆಳೆಯೋ ನಾಯಿಗಳೂ, ಕಸದ ರಾಶಿಯಲ್ಲಿ ಬಿದ್ದೊರಳೋ ಹಂದಿಗಳೂ ಇಲ್ಲದ ಪ್ರಶಾಂತ ಬೆಳಗಲ್ಲಿ ಸೂರ್ಯ ತನ್ನ ಪಾಡಿಗೆ ತಾನುದಯಿಸುತ್ತಿದ್ದರೆ ಸೂರ್ಯನೊಂದಿಗೆ ಸೆಲ್ಪಿ ತೆಗೆದುಕೊಳ್ಳೋ ಉಮೇದಿನಲ್ಲೂ ಜನರಿರಲಿಲ್ಲ. ಸಾವಧಾನದ ಜಗತ್ತಿನಲ್ಲಿ, ಗಡಿಬಿಡಿ, ಗಿಜಿಗಿಜಿಯಿಲ್ಲದ ಬೀದಿಗಳಲ್ಲಿ  ಆಗ ತಾನೇ ತೆಗೆಯುತ್ತಿದ್ದ ಪೂಜೆಯ ಸಾಮಾನುಗಳ ಮಾರೋ ಅಂಗಡಿಗಳು, ಸಣ್ಣ ಸಣ್ಣ ಹೋಟೇಲ್ಲುಗಳ ನಡುವೆ ನಮ್ಮ ಪಯಣ ಸಾಗುತ್ತಿದ್ದರೆ ಬೆಳಗಾಗೆದ್ದು ತಣ್ಣೀರಲ್ಲಿ ಸ್ನಾನಗೈದು ನಡುಗುತ್ತಾ ಬರುತ್ತಿದ್ದ ಶಬರಿ ಮಲೆ ಭಕ್ತರು ಎದುರಾದರು. ಆದಿ ಶೇಷ ದೇಗುಲದಲ್ಲಿ ಮುಡಿ ಕೊಡೋಕೆ ಬರೋರು, ಸರ್ಪ ಸಂಸ್ಕಾರ ಮಾಡಿಸೋಕೆ ಬರೋರು , ಕುಕ್ಕೆ ಸುಬ್ರಹ್ಮಣ್ಯನ ಬೆಳಗಿನ ದರ್ಶನಕ್ಕೆ ಹೊರಟೋರೂ ಸಿಕ್ಕಿದ್ರು . ಶಬರಿಮಲೆಯ ಕಪ್ಪು, ಕೇಸರಿ, ನೀಲಿ ಮಡಿಗಳ ನಡುವೆ, ದೇಗುಲಕ್ಕೆ ಬರೋ ಹಲ ಭಕ್ತರ ಬಿಳಿ ಪಂಚೆಗಳ ನಡುವೆ ಜೀನ್ಸು, ಚೆಡ್ಡಿಗಳ ನಮ್ಮ ಪಯಣ ಬರಿಗಾಲು, ಚಪ್ಪಲಿಗಳ ನಡುವಿನ ನಮ್ಮ ಶೂಗಳ ಓಡಾಟ ಹೊಸ ಹಳೆಯ ಆಚಾರಗಳ ಸಂಗಮದಂತೆ ಒಂಥರಾ ವಿಭಿನ್ನವೆನಿಸುತ್ತಿತ್ತು. ಸ್ವಲ್ಪ ದೂರ ಬರೋ ಹೊತ್ತಿಗೆ ಆಚೆಗಿನ ಹಸಿರು ಮಲೆಗಳ ದರ್ಶನವಾಯ್ತು. ಅವುಗಳ ಮೇಲಿನ ಆಗಸಕ್ಕೆಲ್ಲಾ ಕೆಂಪ ಬಣ್ಣವ ಬಳಿದ ಕಲೆಗಾರನ ನೋಡುತ್ತಾ ನಾವು ರೆಡಿಯಾಗಬೇಕಿದ್ದ ಅಭಯ ವಸತಿಗೃಹವನ್ನು ತಲುಪಿದ್ವಿ. ಅಲ್ಲಿ ರೆಡಿಯಾಗಿ ದೇಗುಲದ ಬಳಿಯಿರೋ ಕುಮಾರ ಕೃಪದಲ್ಲಿ ತಿಂಡಿ ತಿಂದ ನಮ್ಮ ತಂಡ ಕುಕ್ಕೆಯತ್ತ ಪಯಣ ಬೆಳೆಸೋ ಹೊತ್ತಿಗೆ ಘಂಟೆ ಒಂಭತ್ತೂವರೆ ದಾಟಿತ್ತು
Time for breakfast

ಚಾಮುಂಡಿಗೆ ನಮಸ್ಕರಿಸಿ ಗಿರಿಗದ್ದೆಯತ್ತಲ ಪಯಣ :
ಔಷಧೀಯ ಸಸ್ಯ ಸಂರಕ್ಷಣಾ ಪ್ರದೇಶ, ಸುಬ್ರಹ್ಮಣ್ಯ ಎಂಬ ಬೋರ್ಡನ್ನು ದಾಟಿ ಕುಕ್ಕೆ ಪಟ್ಟಣದಿಂದ ಸುಮಾರು ಮುಕ್ಕಾಲು ಕಿ.ಮೀ ಮುಂದೆ ಬರೋ ನಮಗೆ ಸಣ್ಣ ಚಾಮುಂಡಿ ಗುಡಿಯೊಂದು ಸಿಗುತ್ತದೆ. ಅದರ ಪಕ್ಕದಲ್ಲಿರೋ ದಾರಿಯಲ್ಲೇ ಕುಕ್ಕೆಗೆ ಒಳಕ್ಕೆ ಸಾಗಬೇಕು. ಇಲ್ಲಿ ನಮ್ಮನ್ನೆಲ್ಲಾ ಒಟ್ಟುಗೂಡಿಸಿದ ಆಯೋಜಕರಾದ ಸುಧೀರ್ ಸಾಗರ್ ಅವರು ಟ್ರಿಪ್ಪಲ್ಲಿ ಹೇಗಿರಬೇಕು, ಹೇಗಿರಬಾರದು, ಏನೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದೆಲ್ಲಾ ವಿವರಿಸಿದ್ರು. ನಂತರ ಒಬ್ಬೊಬ್ಬರಾಗಿ ಕಾಡೊಳಗೆ ಹೊರಟ್ವಿ. 
Entering int other Kukke Trek

ಕಾಡಂದ್ರೆ ಒಂದೆಡೆಯೂ ಸೂರ್ಯರಶ್ಮಿ ಬೀಳಲಾಗದಂತಹ ಗಾಢ ಕಾಡಲ್ಲವದು. ಆದರೂ ಬಿಸಿಲಿಂದ ಮೈಕೈ ಸುಡದಷ್ಟು ಮರಗಳ ಹೊದಿಕೆಯಿರೋ ಪ್ರದೇಶ. ಸುಮಾರು ಮೂರು ತಾಸು ನಡೆದ ಮೇಲೆ ಭಟ್ಟರ ಮನೆ ಸಿಗುತ್ತೆ ಅಂತ ಹೇಳಿದ್ರಿಂದ ಆರಾಮಾಗಿ ನಡೀತ ಇದ್ವಿ.  
During our Trek
ಹತ್ತಿದ್ದು, ಹತಿದ್ದು, ಸುಸ್ತಾದಾಗ ಸ್ವಲ್ಪವೇ ನೀರು ಕುಡಿದಿದ್ದು , ಒಂದಿಷ್ಟು ಫೋಟೋ ತೆಗೆದಿದ್ದು ಬಿಟ್ಟರೆ ಮತ್ತೆ ಹತ್ತಿದ್ದೇ ಹತ್ತಿದ್ದು ಇಲ್ಲಿ ! ಮರದ ಪೊಟರೆಗಳು, ಬೀಳಲುಗಳ ವಿಚಿತ್ರ ಆಕಾರಗಳು ಇಷ್ಟು ದೂರದ ಟ್ರೆಕ್ಕಿಂಗಿಗೆ ಮೊದಲ ಬಾರಿ ಬಂದಿದ್ದ ಅಕ್ಷತಾಳ ಮನ ಸೆಳೆಯುತ್ತಿತ್ತು. 

ನಮ್ಮ ಜೊತೆಗೇ ಇದ್ದ ವಿನಯ್, ಲೋಹಿತ್, ಸುಧಾಕ್ಕ ಮುಂದೆ ಸಾಗಿದ್ರೆ ನಿಧಾನವಾಗಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ನಾವುಗಳು ಸ್ವಲ್ಪ ಹಿಂದೆ ಬಿದ್ವಿ. ಹಾಗೇ ಮುಂದೆ ಬರುತ್ತಿದ್ದ ಹಾಗೆ ಒಂದು ದೊಡ್ಡ ಬಂಡೆಯೊಂದು ಕಾಣಿಸ್ತು. ಅಲ್ಲೊಂದಿಷ್ಟು ಜನ ವಿಶ್ರಾಂತಿ ತೆಗೆದುಕೊಳ್ತಿದ್ರು. ಹಾಗೇ ಮುಂದೆ ಸಾಗಿದ್ವಿ. ಒಂದಿಷ್ಟು ಕಡೆ ಸ್ವಲ್ಪ ಚಿಟ್ಟೆಗಳು ಕಂಡ್ರೂ ಫೋಟೋ ತೆಗೆಯೋಕೆ ಸಿಗದ ಅವುಗಳ ಕಂಡು , ದೂರದಲ್ಲೆಲ್ಲೋ ಕೂತಿರುವವ ಕಂಡು ನನ್ನ ಡಿಎಸೆಲ್ಲಾರ್ ತಂದಿದ್ರೆ ಚೆನ್ನಾಗಿರ್ತಿತ್ತಲ್ವಾ ಅನಿಸ್ತು ಒಮ್ಮೆ. ಆದ್ರೆ ಈಗಿರೋ ವಜೆಯ ಜೊತೆ ಅದು ಬೇರೆ ! ತರ್ದಿದ್ದಿದ್ದು ಒಳ್ಳೇದೇ ಆಯ್ತು ಅಂತ ಸಮಾಧಾನವೂ ಆಯ್ತು. ನನ್ನ ಬಟ್ಟೆಗಳ ಜೊತೆಗೆ, ಅಕ್ಷತಾನ ಸ್ಲೀಪಿಂಗ್ ಬ್ಯಾಗು, ಮಾರನೇ ದಿನ ತಿನ್ನೋಕೆ ಬೇಕಾಗುತ್ತೆ ಅಂತ ತಂದ ಚುಡುವ, ಮಾರನೇ ದಿನಕ್ಕೆ ಅಂತ ಗ್ರೂಪವ್ರು ಕೊಟ್ಟ ಹಣ್ಣು, ಬಿಸ್ಕತ್ತುಗಳ ಎರಡು ಪೊಟ್ಟಣಗಳು ಸೇರಿ ಬ್ಯಾಗ ಭಾರವೇ ಇತ್ತು.  ಮಧ್ಯ ಎಲ್ಲೋ ನೀರು ಸಿಗುತ್ತೆ ಅಂತ ಸುಧೀರಣ್ಣ ಹೇಳಿದ ನೆನಪಿತ್ತಾದ್ರೂ ಆ ನೀರು ಎಲ್ಲೂ ಸಿಗಲಿಲ್ಲ. ಆದ್ರೆ ಚೂರು ಚೂರೇ ನೀರು ಕುಡಿದಿದ್ದ ಕಾರಣ ನಮಗೆ ಅದರ ಅಗತ್ಯವೂ ಕಾಣಲಿಲ್ಲ. ಸುಮಾರು ನಾಲ್ಕು ಕಿ.ಮೀ ಸಾಗಿದ ಮೇಲೆ ಕಾಡಿಂದ ಹೊರಬಂದು ಒಂದು ಹುಲ್ಲುಗಾವಲನ್ನು ಹೊಕ್ಕಿದ್ವಿ.  ಅಷ್ಟರಲ್ಲೇ ಭಟ್ಟರ ಮನೆಗೆ ಹಾಲು ತಂದು ಕೊಡುವ ಹುಡುಗನೊಬ್ಬ ಸಿಕ್ಕಿದ. ಇನ್ನೊಂದು ಸ್ವಲ್ಪ ದೂರದಲ್ಲಿ ಭಟ್ಟರ ಮನೆ ಅಂತ ಅವ ಹೇಳೋ ಹೊತ್ತಿಗೆ ಸೂರ್ಯ ಸುಡೋಕೆ ಶುರುವಾಗಿದ್ದ. 

 


ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ: 
ಬೆಳಗ್ಗೆ ಟಾರ ದಾರಿಯಲ್ಲಿ ನಡೆದಿದ್ದು ಬಿಟ್ಟರೆ ನಂತರ ಸಿಕ್ಕ ದಾರಿಯಲ್ಲೆಲ್ಲಾ ಹತ್ತುತ್ತಲೇ ಸಾಗಿದ್ದ ಮನೆಯವಳಿಗೆ ಇನ್ನೊಂದು ಸ್ವಲ್ಪ ದಾರಿ ಆದ್ಮೇಲೆ ಚಪ್ಪಟೆ ಹಾದಿ ಸಿಗುತ್ತೆ ಅಂತ ಸಮಾಧಾನ ಮಾಡುತ್ಲೇ ಸಾಗಿದ್ದೆ. ಎಷ್ಟೇ ಫ್ಲಾಟ್ ಅಂದ್ರೂ ಏರೇ ಇರುತ್ತಿದ್ದ ಹಾದಿಯಲ್ಲಿ ಬರುತ್ತಿದ್ದ ನಮಗೆ ಈ ಹುಲ್ಲುಗಾವಲು ಸಿಕ್ಕಾಗ ಸ್ವಲ್ಪ ಸಮಾಧಾನವಾಯ್ತು.


ಎದುರಿಗೆ ಬೆಟ್ಟಗಳು ಕಾಣೋಕೆ ಶುರುವಾದಾಗ ನಮ್ಮ ಗಮ್ಯವ ಕಂಡು ಅವಳಿಗೂ ಮತ್ತೆ ಉತ್ಸಾಹ ಬಂತು. ಬೆಟ್ಟಗಳು ಗುಂಡುಗುಂಡಗೆ ಕಂಡ್ರು ಏರೋ ಹಾದಿ ಮಾತ್ರ ಕಠಿಣ ಅಂತ ಒದ್ದಾಡುತ್ತಿದ್ದ, ಸುಧಾರಿಸಿಕೊಳ್ಳುತ್ತಿದ್ದ ಬೇರೆ ಗ್ರೂಪವ್ರನ್ನ ನೋಡಿ ನಾವೇ ಪರ್ವಾಗಿಲ್ಲ ಅಂತ ಖುಷಿಯೂ ಆಗುತ್ತಿತ್ತು. ದಾರಿಯಲ್ಲಿ ಸಿಕ್ಕ ಕಾಡ ಕೆಂಪೆಲೆಗಳು, ಬಣ್ಣ ಬಣ್ಣದ ಬಳ್ಳಿಗಳು, ಹಸಿರ ಹುಲ್ಲ ಹಾಸು ಒಂದೇ ಬಣ್ಣದ ಕಡುಗಪ್ಪು ಕಾಡಲ್ಲಿ ನಡೆದು ಬೇಸರಿಸಿದ್ದ ನಮಗೆ ಉಲ್ಲಾಸವೀಯುವಂತಿತ್ತು. 

ಹಾಗೇ ಮುಂದೆ ಸಾಗುತ್ತಿದ್ದಾಗ ಕುಮಾರ ಪರ್ವತ ೭ ಕಿ.ಮೀ ಎಂಬ ಅರಣ್ಯ ಇಲಾಖೆಯ ಬೋರ್ಡೂ ಮತ್ತು ಗಡಿಕಲ್ಲುಗಳೂ ಸಿಕ್ಕಿದವು. 

ಅಲ್ಲೊಂದಿಷ್ಟು ಸುಧಾರಿಸಿಕೊಂಡು ಭಟ್ಟರ ಮನೆಯತ್ತ ಸಾಗಿದೆವು.ಹಾಗೇ ಸಾಗಿದ ನಾವು ೧೨:೧೦ರ ಹೊತ್ತಿಗೆ ಗಿರಿಗದ್ದೆ ಭಟ್ಟರ ಮನೆ ತಲುಪಿದ್ವಿ.


ಗಿರಿಗದ್ದೆ ಕ್ಯಾಂಪು ಮತ್ತು ಮಹಾಲಿಂಗೇಶ್ವರ ಭಟ್ಟರ ಮನೆ:
ಕುಮಾರ ಪರ್ವತಕ್ಕೆ ಸಾಗೋ ಹಾದಿಯಲ್ಲಿ ಸಡನ್ನಾಗಿ ಒಂದೆಡೆ ಅಡಿಕೆ ತೋಟವೊಂದು ಕಾಣುತ್ತೆ. ಅಲ್ಲಿ ಕಾಡ ಮಧ್ಯೆದಲ್ಲಿ ಇರೋ ಮಣ್ಣಿನ ಮನೆಯೇ ಮಹಾಲಿಂಗೇಶ್ವರ ಭಟ್ಟರ ಮನೆ. ೧೯೭೦ರ ಸುಮಾರಿಗೆ ಇಲ್ಲಿಗೆ ಬಂದ ಭಟ್ಟರ ಜೊತೆ ಈಗ ಅವರ ತಮ್ಮಂದಿರಾದ ಗಣೇಶ್ ಭಟ್ ಮತ್ತು ವಿಷ್ಣು ಭಟ್ ಅವರು ವಾಸವಿದ್ದಾರೆ. ಬೆಟ್ಟಕ್ಕೆ ಬರೋ ಚಾರಣಿಗರಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯೂಟಗಳ ಒದಗಿಸೋ ಭಟ್ಟರ ಮನೆಯೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ನಾವು ತಲುಪೋ ಹೊತ್ತಿಗೆ ಮಧ್ಯಾಹ್ನದೂಟದ ಮಜ್ಜಿಗೆ, ಅನ್ನ, ಸಾಂಬಾರು, ಚಿತ್ರಾನ್ನಗಳು ರೆಡಿಯಾಗಿದ್ದವು ! ಐದು ಕಿಲೋ ಬೆಟ್ಟದ ಮೇಲಿರುವ ಇಲ್ಲಿಗೆ ಬೇಕಾದ ಎಲ್ಲಾ ಸಾಮಾನುಗಳನ್ನೂ ಕೆಳಗಿನ ಸುಬ್ರಹ್ಮಣ್ಯದಿಂದ ತಲೆಯ ಮೇಲೆ ಹೊತ್ತೇ ಸಾಗಿಸಬೇಕಾದಾದರೂ ಇಲ್ಲಿನ ಊಟವೊಂದಕ್ಕೆ ೧೨೦ ರೂ, ಟೆಂಟಲ್ಲಿ ಒಬ್ಬರಿಗೆ ೨೦೦ ರೂ ಚಾರ್ಜು ಮಾಡೋದು ವಿಶೇಷವೆನಿಸುತ್ತೆ. ವಾರಾಂತ್ಯದ ಸಮಯದಲ್ಲೆಂತೂ ಇಲ್ಲಿ ಜನಜಾತ್ರೆ ! ಮೊದಲೇ ಸಾಗಿದ್ದ ಲೋಹಿತ್, ವಿನಯ್, ಸುಧಾಕ್ಕ ಎಲ್ಲೂ ಕಾಣದಿದ್ದ ಕಾರಣ ನಾನು, ಅಕ್ಷತಾ ಕೈಕಾಲು ತೊಳೆದು, ಮನೆಯೊಳಗಿನ ಚಾರ್ಚರ್ ಬಳಿ ಮೊಬೈಲ್ ಚಾರ್ಜಿಗೆ ಹಾಕಿ ಕಾಯುತ್ತಾ ಕೂತ್ವಿ. 
We Infront of the Girigadde Bhattara Mane

ಕಾಯೋದ್ರಲ್ಲಿರೋ ಕಷ್ಟ: 
ಹನ್ನೆರಡೂವರೆಯಾದ್ರೂ ಅವರ ಸುಳಿವಿಲ್ಲದೇ ಹೋಗಿದ್ರಿಂದ ಅವ್ರು ಎಲ್ಲೋದ್ರಪ ಅಂತ ಒಮ್ಮೆ. ನಾವೇ ದಾರಿ ತಪ್ಪಸ್ಕೊಂಡಿದೀವೇನೋ ಅನ್ನೋಕೆ ಭಟ್ಟರ ಮನೆಗೆ ಸರಿಯಾಗೇ ತಲುಪಿದ್ದೀವಿ. ಬೇರೆ ಭಟ್ಟರ ಮನೆಗೆ ಹೋಗಿದೀವೇನೋ ಅನ್ನೋಕೆ ಇಲ್ಲಿರೋದು ಒಂದೇ ಮನೆ ! ಕೆಳಗೆಲ್ಲಾದ್ರೂ ಇರಬಹುದೇನೋ ಅಂತ ಕೆಳಗೆ ಹೋಗಿ ನೋಡಿದ್ರೆ ಅವ್ರೆಲ್ಲಾ ಮನೆಯ ಕೆಳಗಿರೋ ಮರದ ನೆರಳಲ್ಲಿ ಕೂತಿದ್ರು. ವಿನಯ್ ಹನ್ನೊಂದು ಮುಕ್ಕಾಲಿಗೇ ಬಂದಿದ್ರಂತೆ. ಉಳಿದವ್ರೂ ಹನ್ನೆರಡರ ಸುಮಾರಿಗೆ ಬಂದ್ವಿ ಅಂದ್ರು. ಉಳಿದವ್ರೆಲ್ಲಾ ಬರ್ಲಿ, ಊಟ ಮಾಡೋಣ ಅಂದ್ರು ಅವ್ರು. ಸರಿ, ಅಂತ ವಾಪಾಸ್ ಬಂದೆ. ಮತ್ತೆ ಕಾಲು ಘಂಟೆಗೆ ಹೊಟ್ಟೆ ತಾಳ ಹಾಕತೊಡಗಿತ್ತು. ವಾಪಾಸ್ ಹೋದೆ , ಊಟ ಮಾಡೋಣ್ವಾ ಅಂತ ಕೇಳೋಕೆ. ಅಷ್ಟೊತ್ತಿಗೆ ವಾಣಿಶ್ರೀ, ಲಕ್ಶ್ಮೀ, ಆರ್ತಿ, ವಿಜಯಲಕ್ಶ್ಮೀ ಅವರೂ ಬಂದಾಗಿತ್ತು. ಆದ್ರೆ ಅವ್ರಿಗೂ ಉಳಿದವರು ಬರೋವರೆಗೆ ಕಾಯೋಣ ಅಂತ. ಸರಿ ಅಂತ ಮತ್ತೆ ಕಾದ್ವಿ. ಎಲ್ಲ ಬಂದು ಊಟ ಮಾಡ್ಕೊಂಡು ಹೋಗ್ತಾ ಇದ್ರು. ಅಲ್ಲಿನ ಸಾಂಬಾರಿನ ಘಮ ನಮ್ಮ ಹೊಟ್ಟೆಯನ್ನು ಕೆಣಕ್ತಾ ಇತ್ತು ! ಒಂದಾಯ್ತು, ಒಂದೂಕಾಲಾಯ್ತು. ಯಾರ ಸುಳಿವೂ ಇಲ್ಲ. ಸಖತ್ ಹಸಿವಾಗ್ತಿದ್ದ ನಮಗೆ ಅಲ್ಲಿದ್ದ ಹದ ಮಜ್ಜಿಗೆಯನ್ನ ಕಂಡು ತಡ್ಯೋಕಾಗ್ಲಿಲ್ಲ. ಸರಿ ಅಂತ ಒಂದು ನಾಲ್ಕು ಲೋಟ ಮಜ್ಜಿಗೆ ಇಳ್ಸಿದ ಮೇಲೆ ಸ್ವಲ್ಪ ಸಮಾಧಾನವಾಯ್ತು. ಇನ್ನು ಉಳಿದವ್ರು ಎಷ್ಟೊತ್ತಿಗಾದ್ರೂ ಬರ್ಲಿ, ಕಾಯೋಣ ಅಂತ ಮತ್ತೆ ಕಾಯೋಕೆ ಶುರು ಮಾಡಿದ್ವಿ 

ಭರ್ಜರಿ ಭೊಜನ: 
ಘಂಟೆ ಎರಡಾಯ್ತು. ಯಾರ ಸುಳಿವೂ ಇಲ್ಲ ! ನಮ್ಮ ಹಾಗೇ ಹೊಟ್ಟೆ ಹಸಿವು ತಾಳಲಾರದ ಉಳಿದವ್ರೂ ಈಗ ಭಟ್ಟರ ಮನೆಯತ್ರ ಬಂದ್ರು. ನಾವು ಊಟ ಮಾಡೋಣ. ಅವ್ರು ನಿಧಾನ ಬರ್ಲಿ ಅಂತ ತೀರ್ಮಾನವಾಯ್ತು. ಸರಿ ಅಂತ ಊಟ ಮಾಡೋಕೆ ಶುರು ಮಾಡೋ ಹೊತ್ತಿಗೆ ಒಬ್ಬೊಬ್ಬರಾಗಿ ಉಳಿದವ್ರು ಬರೋಕೆ ಶುರು ಮಾಡಿದ್ರು. ನಾವು ಮಿಸ್ ಮಾಡ್ಕೊಂಡಿದ್ದ ನೀರ ತಾಣದ ಬಳಿ ಒಂದಿಷ್ಟು ಹೊತ್ತು ಕಳೆದ ಅವರು ಬರೋ ಹೊತ್ತಿಗೆ ಇಷ್ಟೊತ್ತಾಗಿತ್ತು ! ಹೋದ ಜಾಗದ ಬಗ್ಗೆ ಬೇಸರವಿಲ್ಲ, ವಾಪಾಸ್ ಹೋಗ್ತಾ ನೋಡಿದ್ರಾಯ್ತು ಅಂತ ಸಮಾಧಾನ ಮಾಡ್ಕೊಂಡ ನಾವು ಊಟವಾದ ನಂತರ  ಅಲ್ಲೇ ಜಾಗ ಮಾಡಿಕೊಟ್ಟ ಭಟ್ಟರಿಗೆ ಧನ್ಯವಾದ ಹೇಳುತ್ತಾ ನಮ್ಮ ಬ್ಯಾಗುಗಳನ್ನೆಲ್ಲಾ ಅಲ್ಲೇ ಇಟ್ಟು ಸ್ವಲ್ಪ ವಿಶ್ರಾಂತಿಗೆ ಅಂತ ಮಲಗಿದ್ವಿ. ನಿದ್ದೆ ಬರ್ತಿಲ್ಲ ಅಂತ ಅಂದ್ಕೊಂಡ್ರೂ ಯಾವ ಮಾಯದಲ್ಲಿ ನಿದ್ರಾದೇವಿ ನಮ್ಮನ್ನ ಆವರಿಸಿದ್ಲೋ ಗೊತ್ತಿಲ್ಲ. ಸುತ್ತಲೂ ಕತ್ತಲಾಗುತ್ತಿತ್ತು. ಗಡಿಯಾರ ನೋಡಿದ್ರೆ ನಾಲ್ಕೂಮುಕ್ಕಾಲು !

ಒಂದಿಷ್ಟು ಕನ್ ಫ್ಯೂಷನ್ನು: 
ಮಲಗೆದ್ದ ಮೇಲೆ ನೋಡಿದ್ರೆ ನಮ್ಮ ಎದುರಿಗೆ ಮಲಗಿದ್ದ ಪ್ರಮೋದಣ್ಣ ಇಲ್ಲ ! ಬದಲಿಗೆ ವಿನಯ್ ಮಲ್ಗಿದಾರೆ ! ಐದರ ಸುಮಾರಿಗೆ ಹೊರಗೆ ಸೂರ್ಯಾಸ್ತ ನೋಡೋಣ ಅಂತ ಹೇಳಿದವ್ರು ನಮ್ಮನ್ನ ಬಿಟ್ಟು ಹೋಗ್ಬಿಟ್ಟಿದ್ದಾರಾ ಅಂತ ಸಂದೇಹ ಶುರುವಾಯ್ತು. ಅವಾಗ ಯಾರೋ ಬಂದಿದ್ರು. ಪ್ರಮೋದಣ್ಣನ್ನ ಎಬ್ಸಿ ಕರ್ಕೊಂಡೋದ್ರು ಅಂತ ಒಬ್ರು , ಮೇಲೆ ಸೂರ್ಯಾಸ್ತ ನೋಡೋ ಪಾಯಿಂಟ್ ಒಂದಿದೆ. ಆದ್ರೆ ಅಲ್ಲಿಂದ ಎಲ್ಲೋಗಿದ್ದಾರೆ ಗೊತ್ತಿಲ್ಲ ಅಂತ ಮತ್ತೊಬ್ರೂ ಹೇಳೋಕೆ ಶುರು ಮಾಡಿದ್ರು ! ಏನಾದ್ರಾಗ್ಲಿ, ನಮ್ಮ ಪಾಡಿಗೆ ನಾವು ನೋಡೋಣ ಸೂರ್ಯಾಸ್ತ ಅಂತ ಮಾತುಕತೆ ನಡೀತಿದ್ದಾಗ ಎಚ್ಚರವಾದ ಉಳಿದವ್ರೂ ರೆಡಿಯಾಗಿ ಸೂರ್ಯಾಸ್ತ ನೋಡೋಕೆ ಹೊರಟು ನಿಂತ್ರು ! ಕಣ್ಣುಜ್ಜಿಕೊಳ್ತಿದ್ದವರು ರೆಡಿಯಾಗಿ ಹೊರಟು, ಭಟ್ಟರ ಮನೆ ದಾಟಿ ಸೂರ್ಯಾಸ್ತದ ಪಾಯಿಂಟ್ ತಲುಪಿದ್ರೂ ಉಳಿದವರ ಸುಳಿವಿಲ್ಲ ! ಎಲ್ಲೋದ್ರಪ್ಪ ಇವ್ರು ನಮ್ಮನ್ನ ಬಿಟ್ಟು ಅಂತ ಬೇಸರ. ಇನ್ನೂ ಐದೂಕಾಲಾಗಿದ್ದರಿಂದ ಅಲ್ಲಿನ ಸುತ್ತಮುತ್ತಲ ಹೂಗಳು, ಹಾಳಾದ ಟೆಲಿಫೋನ್ ಟವರ್ ಮುಂತಾದ ಜಾಗಗಳಲ್ಲೆಲ್ಲಾ ಫೋಟೋ ಶೂಟ್ ಮಾಡೋ ಹೊತ್ತಿಗೆ ಎದುರಿಗಿನ ಬೆಟ್ಟದ ಮೇಲೊಂದು ಕಲ್ಲುಗಳ ರಾಶಿಯಿಟ್ಟಿರೋದು, ಅಲ್ಲೊಂದಿಷ್ಟು ಜನ ನಿಂತಿರೋದು ಕಾಣಿಸ್ತು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಭಟ್ಟರ ಮನೆಯವ್ರನ್ನ ಕೇಳಿದ್ರೆ ಸೂರ್ಯಾಸ್ತದ ಪಾಯಿಂಟ್ ಇದೇ. ಅಲ್ಲಿಂದ ಸುಬ್ರಹ್ಮಣ್ಯ ಕಾಣ್ಸುತ್ತೆ ಅಷ್ಟೆ ಅಂದ್ರು . ಬೆಂಚುಗಳ ಮೇಲೆ ಕೂತು ಇಲ್ಲಿ ಸೂರ್ಯಾಸ್ತ ನೋಡೋದಕ್ಕಿಂತ ಎದುರಿಗಿನ ಬೆಟ್ಟದ ಮೇಲಣ ಸೂರ್ಯಾಸ್ತ ಇನ್ನೂ ಚೆನ್ನಾಗಿರ್ಬೋದಾ ಅನ್ನಿಸ್ತು. ಎದ್ರಿಗೆ ಕಾಣಿಸ್ತಿರೋರು ನಮ್ಮವ್ರಾ ಅಂತಲೂ ಅನ್ನಿಸ್ತು. ಅತ್ತಲೇ ಸಾಗಿದ್ವಿ. ಯಾರಿಗೆ ಫೋನ್ ಮಾಡಿದ್ರೂ ಅವ್ರ ಫೋನ್ ಸ್ವಿಚ್ಛಾಫ್ ಬರ್ತಿದ್ರಿಂದ ಕಾಯೋದೋ, ಗೆಸ್ ಮಾಡೋದು ಬಿಟ್ಟು ಬೇರೆ ದಾರಿಯಿರಲಿಲ್ಲ ! 

At the Backdrop of KP near Sunset View point 


ಸುಂದರ ಸೂರ್ಯಾಸ್ತ: 
ಬಾಂದ್ ಕಲ್ಲು ಅಥವಾ ಗಡಿಕಲ್ಲು ಅಂತ ಕರೆಯೋ ಕಲ್ಲಿತ್ತು ಇಲ್ಲಿ. ಊರುಗಳ, ತಾಲ್ಲೂಕುಗಳ, ಜಿಲ್ಲೆಗಳ ಗಡಿಯನ್ನು ಗುರುತಿಸೋಕೆ ನೆರವಾಗೋ ಈ ಕಲ್ಲುಗಳು ಇಲ್ಲಿ ಸೂರ್ಯಾಸ್ತದ ಜಾಗವನ್ನೂ ತೋರಿಸುತ್ತಿದ್ದವು ! ಪ್ರಿಯಕರನ ಕಾಯಿಸಿ ಕಾಯಿಸಿ ಕೊನೆಗೂ ಬೇಸತ್ತು ಎದುರಾಗೋ ಪ್ರಿಯೆಯಂತೆ ಸುಮಾರು ಹೊತ್ತಿಂದ ನಮ್ಮನ್ನು ಕಾಯಿಸುತ್ತಿದ್ದ ಸೂರ್ಯ ಕೊನೆಗೂ ಮುಳುಗತೊಡಗಿದ. ಬೆಟ್ಟ ಹತ್ತಿ ಬಂದ ನಮಗೆ ಭಟ್ಟರ ಮನೆಯಲ್ಲಿ ಸ್ವಲ್ಪ ದಣಿವಾರಿದ್ದರೂ ಜಗವೆಲ್ಲಾ ಸುತ್ತಿದ್ದ ದಿನಕರನಿಗೆ ದಿನದ ಜಂಜಡಗಳಿಂದ ಸುಸ್ತಾಗಿತ್ತೇನೋ. ಒಂದಿಷ್ಟು ಫೋಟೋಗಳಿಗೆ ಪೋಸ್ ಕೊಟ್ಟ ಆತ ಕೊನೆಗೆ ಮನೆಗೆ ಹೊರಡೋ ಗಡಿಬಿಡಿಯಲ್ಲಿದ್ದಂತೆ ಕಂಡಿತು. ಕೆಲವೇ ನಿಮಿಷಗಳ ಹಿಂದೆ ಮೇಲಿದ್ದ ಸೂರ್ಯ ನೋಡನೋಡುತ್ತಿದ್ದಂತೆಯೇ ಬೆಟ್ಟಗಳ ಮರೆಯಲ್ಲಿ ಅಡಗತೊಡಗಿದ. ಫೋಟೋಗಳ ಮರೆತು , ಕಣ್ಣುಗಳಲ್ಲೇ ಸೂರ್ಯನ ಸೊಬಗನ್ನು ಸವಿಯೋಣ ಎಂದೆನಿಸಿ ಕಣ್ಣ ಮುಚ್ಚಿದರೆ ಮೊಗ, ಮನದಲ್ಲೆಲ್ಲಾ ಸೂರ್ಯನ ಬಂಗಾರದ ಬಣ್ಣವೇ ತುಂಬಿಕೊಂಡ ಭಾವ. ಸೂರ್ಯರಶ್ಮಿಯ ಕೊನೆಯ ಕಿರಣುಗಳು ಮೈಸೋಕುವ, ನಿಧಾನಕ್ಕೆ ಶುರುವಾಗೋ ಚಳಿ ನಮ್ಮನ್ನು ಸುತ್ತಿಕೊಳ್ಳುವ ಕ್ಷಣದ ಆಹ್ಲಾದಕತೆಯೇ ಅದ್ಭುತ. ಎದುರಿಗೆ ಕಾಣುತ್ತಿದ್ದ ಶೇಷ ಪರ್ವತ, ಬೆಳಗ್ಗೆ ನಮ್ಮನ್ನು ಸ್ವಾಗತಿಸಿದ್ದ ಸುಬ್ರಹ್ಮಣ್ಯಗಳ ನಡುವೆ ಅರ್ಧ ದಾರಿ ಕ್ರಮಿಸಿ ನಿಂತಿದ್ದ ನಮ್ಮ ಮನಸ್ಸು ಮುಂಬರುವ ಸವಾಲುಗಳಿಗೆ, ಖುಷಿಗಳಿಗೆ ಸಿದ್ಧವಾಗುತ್ತಿರುವಾಗಲೇ ಹೊತ್ತು ಕಂದಿತ್ತು. ಫೋನಿಗೆ ಸಿಕ್ಕವರು ಎದುರಿನ ಸನ್ ಸೆಟ್ ಪಾಯಿಂಟ್ ಬಳಿ ಇದ್ದಾರೆ ಎಂದು ಗೊತ್ತಾದ ಖುಷಿಯಲ್ಲಿ  ಭಟ್ಟರ ಮನೆಯತ್ತ ಹೆಜ್ಜೆ ಹಾಕಿದೆವು .

((ಮುಂದುವರೆಯಲಿದೆ...)

Saturday, January 19, 2013

ಕುಮಾರ ಪರ್ವತ ಚಾರಣ-೩

ಕತ್ತಲಾಗ್ತಾ ಬಂದಿತ್ತು..ಹಾಗಾಗಿ ಎಲ್ಲೂ ನಿಲ್ಲದಂತೆ ನಡೆಯಬೇಕಾದಂತ ಅನಿವಾರ್ಯತೆ. ತೀರಾ ಸುಸ್ತು ಅಂತ ಯಾರಾದರೂ ಉಸ್ಸಪ್ಪಾ ಅಂದರೆ ಅಲ್ಲಿ ಒಂದು ೩-೪ ನಿಮಿಷ ನಿಲ್ಲೋದು, ಮತ್ತೆ ನಡೆಯೋದು. ಪುಷ್ಪಗಿರಿ ಚೆಕ್ ಪೋಸ್ಟಿನಿಂದ ಬೆಟ್ಟದ ತುದಿಗೆ ೮ ಕಿ.ಮೀ. ಅದರಲ್ಲಿ ಸುಮಾರು ೫.೫ ಕಿ.ಮೀ ಕಾಡಿನ ದಾರಿ ಅಂತ ಕೇಳಿದ್ದೆವು. ಹಾಗಾಗಿ ರಾತ್ರಿಯಾಗೋದ್ರೊಳಗೆ   ಹೇಗಾದರೂ ಮಾಡಿ ಈ ಕಾಡನ್ನ ದಾಟಲೇಬೇಕಾಗಿತ್ತು. ಕಾಡಿನೊಳಗೇ ಸಿಕ್ಕಿಹಾಕಿಕೊಂಡೆವೆಂದರೆ ನಮ್ಮ ಸ್ಥಿತಿ ಆ ದೇವರಿಗೇ ಪ್ರೀತಿ. ಕಾಡಿನೊಳಗಿನ ಚಳಿಯ ಜೊತೆಗೆ ರಾತ್ರೆ ಕಳೆಯುವುದೂ ದೊಡ್ಡ ಸಮಸ್ಯೆ. ಅಲ್ಲಿನ ಮರಗಳ ನಡುವೆ ಟೆಂಟುಗಳನ್ನು ಹಾಕುವುದು ಒಂದು ಸಮಸ್ಯೆಯಾದರೆ ರಾತ್ರಿಯ ವೇಳೆ ಯಾವ ಪ್ರಾಣಿ ಯಾವಾಗ ಟೆಂಟಿನೊಳಗೆ ನುಗ್ಗೊತ್ತೋ ಹೇಳಲೂ ಸಾಧ್ಯವಿಲ್ಲ ! .. ಅಂತೂ ೩ ಕಿ.ಮೀ ನ ಹಾದಿ ಸ್ವಲ್ಪ ಚುರುಕಾಗಿ ಸಾಗಿತು. ಇದೇ ವೇಗದಲ್ಲಿ ಸಾಗಿದರೆ ನಾವು ಬೇಗ ಬೆಟ್ಟದ ತುದಿ ತಲುಪುತ್ತೇವೆಂಬ ಖುಷಿ ಮೂಡವಾಗಲೇ ಸೂರ್ಯನ ಬೆಳಕು ಮಸುಕಾಗುತ್ತಾ ಬಂದು ಬ್ಯಾಟರಿ ಬೆಳಕಲ್ಲೇ ಮುಂದೆ ಸಾಗುವ ಅನಿವಾರ್ಯತೆ ಮೂಡಿತು. ರಾತ್ರಿ ಚಾರಣ ಯಾಕೆ ಅಪಾಯಕರ ಅನ್ನೋ ಭಾವ ನಮಗೆ ಅರಿವಾಗತೊಡಗಿದ್ದು ಅವಾಗಲೇ.(ನೀವೇನಾದರೂ ಇದನ್ನು ಓದಿ ಕುಮಾರಪರ್ವತ ಚಾರಣಕ್ಕೆ ಹೊರಡುವಿರಾದರೆ ದಯವಿಟ್ಟು ೩:೩೦,೪ ಘಂಟೆ ಒಳಗೇ ಚೆಕ್ ಪೋಸ್ಟಿನಿಂದ ಮೇಲೆ ಹತ್ತುವಂತೆ ಪ್ಲಾನ್ ಮಾಡಿ).
Unexpected pic at night at kumara parvata


ಮುಂದಿದ್ದವರಿಗೆ, ಹಿಂದಿದ್ದವರಿಗೆ ಬ್ಯಾಟರಿ ಹೊಡೆಯುತ್ತಾ ಕಾಡಿನ ಮಧ್ಯೆ ಸಾಗುವಾಗ ಸಹಜವಾಗೇ ವೇಗ ಕುಂಠಿತವಾಗುತ್ತೆ. ಎಷ್ಟು ಹೊತ್ತು ನಡೆದರೂ ದಾರಿ ಸಾಗುತ್ತಲೇ ಇರಲಿಲ್ಲ. ಎಲ್ಲಾದರೂ ಬೋರ್ಡ್ ಸಿಕ್ಕಿತು ಅಂತ ನೋಡಿದರೆ ಬರೀ ೨೫೦ ಮೀಟರ್ ಅಷ್ಟೇ ಮುಂದೆ ಬಂದಿರುತ್ತಿದ್ದೆವು! ಪ್ರತೀ ೨೫೦ ಮೀಟರ್ ಗೂ ಫಲಕ ಬರೆದ ಅರಣ್ಯ ಇಲಾಖೆಯವರ ಶ್ರಮ ನಿಜಕ್ಕೂ ಶ್ಲಾಘನೀಯ. ಸೋಮವಾರ ಪೇಟೆಯ ಕಡೆಯಿಂದ ಹತ್ತುವವರಿಗೆ ಕಾಡಿನ ಮಧ್ಯೆ ಹತ್ತುವುದರಿಂದ ಕುಮಾರಪರ್ವತದ ತುದಿ ಎಲ್ಲಿದೆ ಎಂದು ಕಾಣುವುದಿಲ್ಲ. ಹಾಗಾಗಿ ಈ ಫಲಕಗಳಿಲ್ಲದಿದ್ದರೆ ದಾರಿ ತಪ್ಪುವ ಸಾಧ್ಯತೆ ತುಂಬಾ ಹೆಚ್ಚು. ದಾರಿಯ ಎಡಮಗ್ಗುಲಲ್ಲೇ ಸಾಗಬೇಕು. ಕೆಲವು ಕಡೆ ಬಲಬಾಗದಲ್ಲಿ ಸ್ವಲ್ಪ ಆಯತಪ್ಪಿದರೆ ಪ್ರಪಾತ !.

ತಂತ್ರಜ್ನಾನ ಅನ್ನೋದು ಎಲ್ಲಿ ಉಪಯೋಗ ಆಗುತ್ತೆ ಅನ್ನೋಕೆ ಇಲ್ಲೊಂದು ಸಣ್ಣ ಉದಾಹರಣೆ. ನಮ್ಮ ಜೊತೆಗೆ ಬಂದಿದ್ದ ಗುಂಪಿನವರೊಬ್ಬರು ಐಪಾಡ್ ತಂದಿದ್ದರು. ಅದರಲ್ಲಿದ್ದ ಗೂಗಲ್ ಮ್ಯಾಪಿನಿಂದ ನಾವು ಹೋಗ್ತಾ ಇರೋ ದಾರಿ ಸರಿ ಇದೆಯಾ, ಬೆಟ್ಟದ ತುದಿಯತ್ತಲೇ ಸಾಗ್ತಾ ಇದ್ದೇವಾ ಅಂತ ವಿಶ್ರಾಂತಿಗೆ ಕೂತಲ್ಲೆಲ್ಲಾ ಪರೀಕ್ಷಿಸುತ್ತಿದ್ದರು ! ಆ ಕಾಡಿನ ಮಧ್ಯೆಯೂ ಅಲ್ಲಲ್ಲಿ ಸಿಗುತ್ತಿದ್ದ ಬಿಎಸ್ಎನ್ನೆಲ್ ನೆಟ್ವರ್ಕಿಗೂ, ಆ ಐಪ್ಯಾಡಿಗೂ, ಗೂಗಲ್ಲಿಗೂ ಒಂದು ಧನ್ಯವಾದ ! ಅಂತೂ ಅಲ್ಲಲ್ಲಿ ಕೂತು, ನಡೆದು ನಡೆಯುತ್ತಲೇ ಕಾಡಿನ ದಾರಿ ಯಾವಾಗ ಮುಗಿಯುತ್ತಪ್ಪಾ ಅಂತ ಬೇಡುವ ಪರಿಸ್ಥಿತಿ ಎದುರಾಯಿತು. ಅದೇ ದಿನ ಬೆಳಗ್ಗೆ ಬಿಸಿಲಲ್ಲಿ ಬೇಯುವ ಹೊತ್ತಿಗೆ ಕಾಡಿನ ದಾರಿ ಸಿಕ್ಕರೆ ಸಾಕಪ್ಪಾ ಅಂತ ಬೇಡಿದ್ದು ನೆನಪಾಗಿ ನಗು ಬಂತು. ಅಂತೂ ಕಾಡಿನ ದಾರಿ ಕ್ರಮಿಸೋ ಹೊತ್ತಿಗೆ ಮತ್ತೆ ಬೆಟ್ಟ ಎದುರಾಯಿತು. ಬೆಟ್ಟ ಅಂದ್ರೆ ಕಲ್ಲು ಬಂಡೆಗಳಷ್ಟೇ. ಬಂಡೆಗಳನ್ನು ಏರುತ್ತಾ ಹತ್ತುತ್ತಾ ಹೋಗಬೇಕು.

Random pic during kumara parvata trecking- Day 1


ಅಲ್ಲಿ ಹತ್ತುವಾಗ ಹಿಡಿದು ಕೊಳ್ಳಲು ಮರಗಿಡಗಳೂ ಇಲ್ಲ, ಏನೂ ಇಲ್ಲ ! ಕೆಳಗೆ ನೋಡಿದರೆ ಅಥವಾ ಮೇಲೆ ಎಷ್ಟು ಹತ್ತಲಿಕ್ಕಿದೆ ಅಂತ ನೋಡಿದರೆ ಭಯ ಆಗ್ತಿತ್ತೇನೋ. ಆದರೆ ಕತ್ತಲಾದ ಕಾರಣ ನಮಗೆ ಏನೂ ಸರಿಯಾಗಿ ಕಾಣ್ತಿಲ್ಲ. ದಾರಿಯ ಪ್ರಕಾರ ಆ ಬೆಟ್ಟ ಹತ್ತಬೇಕು, ಹತ್ತುತ್ತಿದ್ದೇವೆ ಅಷ್ಟೇ. ಆ ಬೆಟ್ಟ ಹತ್ತಿದ್ದು ನೆನೆಸಿಕೊಂಡರೆ ಬೆಂಗಳೂರಿನ ಮಾಗಡಿಯ ಬಳಿಯ ಸಾವನದುರ್ಗದ ಚಾರಣ ನೆನಪಾಯಿತು. ಅಷ್ಟರಲ್ಲೇ ನಮ್ಮ ಗುಂಪಿನಲ್ಲಿದ್ದ ದಪ್ಪನೆಯ ಗೆಳೆಯ ಕಿರಣ್ ಗೆ ಕೈಕಾಲು ನಡುಗೋಕೆ ಶುರು ಆಯ್ತು. ನಾನು ಕೆಳಗೆ ಬೀಳ್ತೀನಿ ಅನ್ನೋ ಭಯ ಶುರು ಆಯ್ತು ಅವನಿಗೆ. ನಾನು ಬರೋಲ್ಲ, ಇಲ್ಲೇ ಇರ್ತೀನಿ ಅನ್ನೋ ಹಟ ಅವನದ್ದು. ಆ ಘೋರ ಕಾಡಿನ ಮಧ್ಯೆ ಅವನನ್ನು ಹೇಗೆ ಬಿಡೋದು ? ಹಾಗಂತ ನಾವೆಲ್ಲಾ ಅಲ್ಲೇ ಉಳಿಯೋದೂ ಸಾಧ್ಯವಿರಲಿಲ್ಲ. ಅವನ ಬ್ಯಾಗನ್ನು ನಾವೇ ಹೊತ್ತು, ಅವನಿಗೆ ಧೈರ್ಯ ತುಂಬುತ್ತಾ ಒಂದೊಂದೇ ಹೆಜ್ಜೆ ಮೇಲೆ ಹತ್ತಿಸುತ್ತಾ ಸಾಗೋ ಹೊತ್ತಿಗೆ ಮೊದಲೇ ನಿಧಾನವಾಗಿದ್ದ ನಮ್ಮ ಹತ್ತುವಿಕೆ ಇನ್ನೂ ನಿಧಾನವಾಯಿತು.
Climbing one of the rocky hill on the way to kumara parvata..


 ಈ ತರದ ಕಲ್ಲುಬೆಟ್ಟ ಒಂದಲ್ಲಾ, ಮಧ್ಯೆ ಮಧ್ಯೆ ಹಲಬಾರಿ ಸಿಗುತ್ತೆ. ಅದರಲ್ಲೆಲ್ಲಾ ಹೀಗೇ ಆಗಿ, ಕೆಲವೆಡೆ ಕೆಲವರು ಮುಂದೆ ನಡೆಯೋದು ಅಸಾಧ್ಯ ಅಂತ ಕೂತು.. ಅವರಿಗೆಲ್ಲಾ ಗ್ಲೋಕೋಸು, ಹಣ್ಣುಗಳ ಸಪ್ಲೆ ಮಾಡಿ, ನಾವೂ ತಿಂದು ಮತ್ತೆ ಮುಂದೆ ಸಾಗುವಂತ ಪರಿಸ್ಥಿತಿ ಬಂತು . ಕೂತಲ್ಲೆಲ್ಲಾ ಮೇಲೆ ನೋಡಿದ್ರೆ ಬರೀ ಮಂಜು. ನೀಲಾಕಾಶದಲ್ಲಿನ ನಕ್ಷತ್ರಗಳೂ ಕಾಣ್ತಿರಲಿಲ್ಲ. ಕಣ್ಣು ಹಾಯಿಸದತ್ತೆಲ್ಲಾ ಮಂಜು. ಆ ಮಂಜಲ್ಲಿ ಮೇಲಕ್ಕೆ ಬ್ಯಾಟರಿ ಬಿಟ್ಟರೆ ಆ ಬೆಳಕಿನ ಆಟ, ಲೇಸರ್ ಶೋ ನೋಡಿದಂತೆ ಆಗುತ್ತಿತ್ತು. ಇದೇ ಬ್ಯಾಟರಿ ಆಟ ಆಡಿಕೊಂಡು ಕೂರೋಕೂ ಟೈಮಿಲ್ಲ. ಬ್ಯಾಟರಿಗಳೆಲ್ಲಾ ಖಾಲಿ ಆಗೋದ್ರೊಳಗೆ ಮೇಲೆ ಹತ್ತಬೇಕು ! ಹೀಗೆ ಸುಸ್ತಾಗಿ ಕೂತ ಸಮಯದಲ್ಲೆಲ್ಲಾ ತಂದಿದ್ದ ಕಾಲು ನೋವಿನ ವೋಲಿನಿ ಸ್ಪ್ರೇ, ಹೊತ್ತು ತಂದಿದ್ದ ಹೆಚ್ಚುವರಿ ನೀರಿನ ಬಾಟಲಿಗಳು ಕೆಲವರ ನೆರವಿಗೆ ಬಂತು !

ಅಂತೂ ಬೆಟ್ಟದ ತುದಿ ತಲುಪಿದ್ವಿ. ಅಲ್ಲಿ  ಅಲ್ಲಲ್ಲಿ ಟೆಂಟುಗಳು. ಏನಿಲ್ಲ ಆಂದರೂ ೨೫- ೩೦ ಟೆಂಟುಗಳ್ನ ತುತ್ತತುದಿ ತಲುಪೋವರೆಗೆ ಕಂಡಿರಬಹುದು. ಟೆಂಟು, ಸ್ಲೀಪಿಂಗ್ ಬ್ಯಾಗುಗಳೆಲ್ಲಾ ಸುಮ್ಮನೇ ವಜೆ. ಎರಡೂ ಸೇರಿ ೭-೮ ಕೇಜಿ ಆಗತ್ತಂತೆ. ಅದನ್ನು ಹೊತ್ತು ಬೆಟ್ಟ ಹತ್ತೋಕೆ ಆಗೋದೆ ಇಲ್ಲ ಅಂತ ಜಗಳ ಮಾಡಿದೋರಿಗೆಲ್ಲಾ ಅಲ್ಲಿನ ಮೈಕೊರೆಯುವ ಚಳಿಗೆ ಟೆಂಟು ಏಕೆ ಅನಿವಾರ್ಯ ಅನ್ನೋದು ಅರಿವಾಗತೊಡಗಿತು. ಹೇಗಿದ್ದರೂ ಟೆಂಟು, ಸ್ಲೀಪಿಂಗ್ ಬ್ಯಾಗ್ ಇರುತ್ತಲ್ಲಾ ಅಂತ ಸ್ವೆಟರನ್ನೂ ತರದಿದ್ದ ನನಗೆ ಯಾವಾಗ ಟೆಂಟು ಹುಗಿದು ಅದರ ಒಳಸೇರುತ್ತೇನೋ ಅನಿಸೋಕೆ ಶುರು ಆಯ್ತು ! ನಮಗೆ ಅಂತ ಎರಡು ಟೆಂಟುಗಳಿಗಾಗೋ ಅಷ್ಟು ಜಾಗ ಹುಡುಕಿದ್ವಿ. ಅಲ್ಲಿ ಟೆಂಟು ಹುಗಿಬೇಕಲ್ಲ.. ಆದರೆ ನಮ್ಮ ಗುಂಪಿನ ಯಾರಿಗೂ ಟೆಂಟು ಹುಗಿಯೋದು ಗೊತ್ತಿಲ್ವೇ !  ಪಕ್ಕದ ಗುಂಪಿನೋರಿಗೆ ಕೇಳಿದ್ರೂ ಅವರು ತಮ್ಮ ಟೆಂಟು ಹುಗಿಯೋದ್ರಲ್ಲಿ ಬ್ಯುಸಿ ! ಟೆಂಟು ಹೇಗೋ ಆಗತ್ತೆ, ಆದರೆ ಚಳಿ ಹೊಡೆಯೋಕೆ ರಾತ್ರಿಗೆ ಬೆಂಕಿಯೂ ಬೇಕಲ್ವೇ.. ಎಲ್ಲಾ ಟೆಂಟಿನ ಬಗ್ಗೆ ತಲೆ ಕೆಡಿಸಿಕೊಂಡರೆ  ಬೆಂಕಿ ಹಾಕೋಕೆ ಬೇಕಾದ ಕಾಡಿನ ದರಗೆಲೆ, ಪುಳ್ಳೆಗಳನ್ನ ಆರಿಸೋದು ಯಾರು ? ಹಾಗಾಗಿ ಸ್ವಲ್ಪ ಜನ ಆ ಕೆಲಸ , ಸ್ವಲ್ಪ ಜನ ಈ ಕೆಲಸ ಅಂತ ಭಾಗ ಮಾಡಿಕೊಂಡೆವು. ನಾನು ಟೆಂಟು ಹಾಕೋ ಕೆಲಸದ ಗುಂಪಲ್ಲಿ ಸೇರ್ಕೋಂಡೆ. ಅಂತೂ ಪಕ್ಕದ ಗುಂಪಿನಲ್ಲಿದ್ದ ಒಬ್ಬರು ಬಂದು ಟೆಂಟಿನ ಮಧ್ಯಭಾಗದಲ್ಲಿರೋ ಎಕ್ಸ್ ನ್ನು ಗುರಿಯಾಗಿಸಿ ಟೆಂಟಿನ ಕೋಲುಗಳನ್ನ ಹೇಗೆ ಕೊಕ್ಕೆಗಳಲ್ಲಿ ತೂರಿಸೋದು ಅಂತ ಆ ಟೆಂಟಿನಲ್ಲೇ ಇದ್ದ ಮ್ಯಾನುಯೆಲ್ ನೋಡಿ ತೋರಿಸಿದರು. ಕಲಿಯೋವರೆಗೆ ಬ್ರಹ್ಮವಿದ್ಯೆ, ಕಲಿತ ಮೇಲೆ ಕೋತಿವಿದ್ಯೆ ಅಂತಾರಲ್ಲ ಹಾಗೆ ಒಂದು ಕೋಲು ತೂರಿಸಿದ್ದೇ ತಡ ಉಳಿದದ್ದನ್ನ ನಾವೇ ಮುಂದುವರಿಸಿದೆವು, ಸ್ಚಲ್ಪ ಹೊತ್ತಿನಲ್ಲೇ ಎರಡು ಟೆಂಟುಗಳು ಮೇಲೆದ್ದವು.

Near our tents in kumara parvata @ night


ಅಷ್ಟರಲ್ಲೇ ತರಗೆಲೆ ಆರಿಸೋಕೆ ಹೋಗಿದ್ದ ಆದಿ, ನಿರೂಪ್ ಕೂಡ ಒಣಗಿದ್ದ ಸುಮಾರಷ್ಟು ಕೊಂಬೆಗಳೊಂದಿಗೆ ಬಂದ್ರು. ವರುಣ್, ನಿಕೇತ ತಾವು ತಂದಿದ್ದ ರೊಟ್ಟಿ, ಚಟ್ನಿಪುಡಿಗಳನ್ನು, ರಾಜೇಶ್ ತಾನು ತಂದಿದ್ದ ಹೋಳಿಗೇನ ಹೊರಗೆ ತೆಗೆಯೋ ಅಷ್ಟೊತ್ತಿಗೆ ನಾವು ಬೆಂಕಿಯ ಮುಂದೆ ಊಟಕ್ಕೆ ರೆಡಿ ಆದೆವು. ೨ ರೊಟ್ಟಿ,೧ ಹೋಳಿಗೆಗೆ ಹೊಟ್ಟೆ ತುಂಬಿತು. ಎಲ್ಲಾ ನಮ್ಮ ನಮ್ಮ ಟೆಂಟಿನೊಳಗೆ ಸೇರಿದೆವು. ಟೆಂಟಲ್ಲಿ ಎರಡು ಪದರ ಇರುತ್ತೆ. ಮೇಲ್ಗಡೆ ಇರುವ ದಪ್ಪನೆಯ ಟಾರ್ಪಲ್ ತರದ ನೀಲಿ ಪದರ ಒಂದಾದರೆ ಕೆಳಗೆ ಮಲಗೋಕೆ ಮತ್ತೆ ಮೇಲೆ ಮುಚ್ಚೋ ಬಿಳಿ ಪದರ ಇನ್ನೊಂದು. ಇದರ ಒಳಹೊಕ್ಕು ಅದರ ಜಿಪ್ ಎಳೆದುಕೊಂಡರೆ ಹೊರಗಿನ ಗಾಳಿ ಒಳನುಗ್ಗದೇ ಕ್ರಮೇಣ ಬೆಚ್ಚಗಾಗುತ್ತಾ ಹೋಗುತ್ತೆ. ಹಾಗಾಗಿ ಹೊರಗೆ ಎಷ್ಟೇ ಚಳಿ ಇದ್ದರೂ ಟೆಂಟೊಳಗೆ ಇರೋರಿಗೆ ಗೊತ್ತಾಗಲ್ಲ. ದಪ್ಪ ಮತ್ತು ಉದ್ದಗಿದ್ದ ಕಿರಣ್ ಇದ್ದ ಕಾರಣ ನಮ್ಮ ಟೆಂಟಲ್ಲಿ ೪ ಮತ್ತು ಮತ್ತೊಂದು ಟೆಂಟಲ್ಲಿ ೫ ಜನ ಅಂತ ಅಲ್ಲೇ ಒಪ್ಪಿ ಟೆಂಟೊಳಗೆ ಸೇರಿ ಮಲಗೋಕೆ ಅಣಿ ಆದ್ವಿ. ಅಲ್ಲಿ ಬೀಳ್ತಿದ್ದ ಸಿಕ್ಕಾಪಟ್ಟೆ ಮಂಜಿನ ಕಾರಣದಿಂದ ನಮ್ಮ ಬ್ಯಾಗು, ಶೂ ಯಾವುದನ್ನೂ ಹೊರಗಿಡೋಕೆ ಸಾಧ್ಯ ಇರಲಿಲ್ಲ. ಹಾಗಾಗಿ ಅವನ್ನೂ ಟೆಂಟಿನ ಬಿಳಿ ಪದರದ ಹೊರಗೆ, ನೀಲಿ ಪದರ ಮರೆಯಾಗುವಂತೆ ಇಟ್ವಿ. ಟೆಂಟಿನೊಳಗೆ ಸ್ಲೀಪಿಂಗ್ ಬ್ಯಾಗೊಳಗೆ ಸೇರಿದಾಗ ನಿಜಕ್ಕೂ ಸ್ವರ್ಗ ಸುಖ. ನಡೆದಿದ್ದ ಆಯಾಸವೆಲ್ಲಾ ಸ್ವಲ್ಪ ಸ್ವಲ್ಪವೇ ಮಾಯವಾದ ಅನುಭವ. ಹಾಗೇ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದೆವು.

ಮಧ್ಯ ಮಧ್ಯ ಟೆಂಟಿನ ಮೇಲೆ ಪರ ಪರ ಏನೋ ಹರಿದಂತೆ ಶಬ್ದ ಆಗಿ ಎಚ್ಚರಾಗ್ತಾ ಇತ್ತು. ಬಹುಶ ಬೆಟ್ಟದ ಮೇಲಿನ ಗಾಳಿಗೆ ಹಾಗೆ ಅನ್ನಿಸಿರಬಹುದು. ಅದು ನಿಜವಾಗಲೂ ಏನು ಅಂತ ಎದ್ದು ನೋಡೋಕೆ ಯಾರಿಗೂ ಮನಸ್ಸಿಲ್ಲದೇ ಇದ್ದದ್ದರಿಂದ ಮತ್ತು ನಾಳೆ ಬೆಳಗ್ಗೆ ಎದ್ದ ಮೇಲೆ ಮತ್ತೆ ನಡೆಯಬೇಕಾದ ಪ್ರಮೇಯ ಇದ್ದಿದ್ರಿಂದ ಮತ್ತೆ ಹಾಗೇ ಮಲಗಾ ಇದ್ದೆವು. ಸ್ವಲ್ಪ ಹೊತ್ತಿನಲ್ಲೇ ಗಾಡ ನಿದ್ರೆ. ಬೆಳಿಗ್ಗೆ ೬ ಘಂಟೆ ಹೊತ್ತಿಗೆ ಎಚ್ಚರ ಆಯ್ತು. ಅಷ್ಟು ಕಷ್ಟಪಟ್ಟು ಬೆಟ್ಟ ಹತ್ತಿದ ಮೇಲೆ ಸೂರ್ಯೋದಯ ನೋಡದಿದ್ರೆ ಹೇಗೆ. ಸರಿ, ಟೆಂಟಿನ ಹೊರಗೆ ಕಾಲಿಟ್ರೆ ಮತ್ತೆ ಮೈಕೊರೆಯೋ ಅಷ್ಟು ಚಳಿ.



 ಸ್ವೆಟರು, ಜರ್ಕೀನು ತರದಿದ್ದ ನಾನು ನನ್ನ ಮರೆಗುಳಿತನಕ್ಕೆ ಶಪಿಸೋ ಹೊತ್ತಿಗೆ ತಂದಿದ್ದ ಸ್ಲೀಪಿಂಗ್ ಬ್ಯಾಗ್ ನೆನಪಾಯ್ತು. ಅದನ್ನೇ ಅರ್ಧ ಜಿಪ್ ತೆರೆದು ಕಂಬಳಿ ಕೊಪ್ಪೆಯಂತೆ ಹೊದ್ದಾಗ ಹೊರಗೆ ಕಾಲಿಡಲು ಸಾಧ್ಯವಾಯಿತು. ಅಲ್ಲಿ ಕಲ್ಲು, ಹುಲ್ಲಿನ ಮೇಲೆ ಬರಿಗಾಲಿಟ್ಟರೆ ಅದು ಐಸಿನ ಮೇಲೆ ಇಟ್ಟಂತೆ ಅನುಭವವಾಗುತ್ತಿತ್ತು. ಆ ಚಳಿಗೆ ಏಳಲು ಸೂರ್ಯನಿಗೂ ಬೇಸರ ಬಂದಿರಬೇಕು. ಬರಲೊಲ್ಲೆ ಅನ್ನುತ್ತಿದ್ದ ಬಾಲಸೂರ್ಯನಿಗೆ  ಕೊರೆಯೋ ಚಳಿಯಲ್ಲಿ ಕಾಯೋ ಬದಲು ನಿದ್ರಾ ದೇವಿಗೆ ಶರಣೆನ್ನುವುದೇ ಸರಿಯೆನ್ನಿಸಿ ಮತ್ತೆ ಟೆಂಟ್ ಗೆ ಹೊಕ್ಕೆ.
Morning at Kumara Parvata (Me in Blue Sleeping bag to cover myself from shivering cold :-) )


ಆದರೆ ಒಮ್ಮೆ ಎಚ್ಚರಾದ ಮೇಲೆ ನಿದ್ರೆ ಬರಬೇಕಲ್ಲ.. ಹಂಗೂ ಹಿಂಗೂ ಸ್ವಲ್ಪ ಹೊತ್ತು ಮಲಗೋ ಹೊತ್ತಿಗೆ ಸೂರ್ಯೋದಯ ಆಗಿರಬಹುದಾ ಅಂತ ಮತ್ತೆ ಕುತೂಹಲ ಮೂಡಿ ಹೊರಬಂದೆ. ಮಂಜನ್ನು ಕೊರೆಯುತ್ತಾ ಮೂಡಲಾರಂಬಿಸಿದ ಕಿತ್ತಳೆ ಕಿರಣಗಳು ಕುಮಾರ ಪರ್ವತ ಹತ್ತಿದ ಎಲ್ಲರಿಗೂ ಶುಭಕೋರಲೆಂದೇ ಮೂಡುತ್ತಿದೆ ಅನ್ನಿಸಿತು.

Photo session @ kumara parvata


                   ಮೂಡುತ್ತಿದ್ದ ಆ ಸೂರ್ಯನ ಜೊತೆ ಗೆಳೆಯರ ಫೋಟೋ ಸೆಷನ್ನು !

Sunrise at Kumara Parvata


ಅಂತೂ ಹೀಗೇ ಏಳೂವರೆ ಆಗುತ್ತಿದ್ದಂಗೆ ಅಲ್ಲಿದ ಎಲ್ಲಾ ಟೆಂಟ್ ಕಿತ್ತು ಹೊರಡಲನುವಾದೆವು. ಅಷ್ಟರಲ್ಲೇ ಒಬ್ಬ ಬಂದು ನಮ್ಮ ಬಳಿ ಅದೆಂತದೊ ಮಾದಕ ಪದಾರ್ಥ ಇದೆಯಾ ಅಂದ. ಅದಿಲ್ಲ ಅಂದೆವು. ಹೋಗಲಿ ಹುಕ್ಕಾ, ತಂಬಾಕು, ಗುಟ್ಕಾ ಇದೆಯಾ ಅಂದ. ಅದೂ ಇಲ್ಲ ಅಂದೆವು. ಇದ್ಯಾವ್ದೂ ಇಲ್ಲದೇ ಈ ಬೆಟ್ಟ ಹತ್ತಿ ಅದೇನು ಮಜಾ ಮಾಡೋಕೆ ಬಂದರೂ ಇವರು ಅನ್ನೋ ತರದ ವಿಚಿತ್ರ ಮೋರೆ ಮಾಡಿ ಅವನು ವಾಪಾಸ್ ಹೋದ !
Poses by friends


ಬೆಳಿಗ್ಗೆ ಎದ್ದಾಗ ಅಲ್ಲಿದ್ದ ಸಗಣಿ ನೋಡಿದೆ. ಹಿಂದಿನ ದಿನ ರಾತ್ರಿಯೇ ನೋಡಿದ್ದೆವು ಅದನ್ನ. ಅಷ್ಟು ಎತ್ತರ ಆನೆ ಬರುವುದು ಸಾಧ್ಯ ಇಲ್ಲ. ಹಾಗಾಗಿ ಕಾಡೆಮ್ಮೆ/ಕಾಡುಕೋಣದ್ದಾಗಿರಬಹುದೆಂದು ಊಹಿಸಿದೆವು. ತೀರಾ ಆಲೋಚಿಸಿದರೆ ಹಿಂದಿನ ರಾತ್ರಿ ಅಲ್ಲೇ ಮಲಗಿದ ನಮ್ಮ ಮೈ ಜುಂ ಅನಿಸುತ್ತಿತ್ತೇನೋ !ಫೋಟೋ ಸೆಷನ್ ಮುಗಿಸಲೊಲ್ಲದ ಗೆಳೆಯರನ್ನೆಲ್ಲಾ ಮಣಿಸಿ ಟೆಂಟು ಕೀಳೋ ಹೊತ್ತಿಗೆ ಘಂಟೆ ಎಂಟಾಗ್ತಾ ಬಂತು. ಇಳಿಯೋಕೆ ಶುರು ಮಾಡಿದ ಆ ದಾರಿಯ ದಾರಿಯ ಕೊನೆ ಕುಕ್ಕೆ ಸುಬ್ರಮಣ್ಯದಲ್ಲಿ.

Our group starting downhill journey from Kumara Parvata


ಈಗ ಇಳಿಯೋ ಹೊತ್ತಿಗೆ ಮತ್ತೊಂದು ಕಲ್ಲಿನ ಬೆಟ್ಟ ಇಳಿಯಬೇಕು. ಇಲ್ಲಿ ಕಿರಣ್ ನನ್ನು ನೀಟಾಗಿ ಉತ್ಸಾಹ ತುಂಬುತ್ತಾ ಕೆಳಗಿಳಿಸಿದೆವು. ಇದರಿಂದ ಅವನಿಗೆ ಎಷ್ಟು ಸ್ಪೂರ್ತಿ ಬಂತೆಂದರೆ ಇಲ್ಲಿಂದ ಮಧ್ಯ ಬರುವ ಭಟ್ಟರ ಮನೆಯ ತನಕ ಆತನೇ ಎಲ್ಲರಿಗಿಂತ ಮುಂದೆ ಸಾಗುತ್ತಿದ್ದ!



Starting downhill journey from kumara parvata

ನಾವು ಇಳಿಯುವಾಗ ಹಿಂದಿನ ದಿನ ಬಂದು ಟೆಂಟು ಹಾಕಿದ, ಕುಕ್ಕೆಯ ಕಡೆಯಿಂದ ಹತ್ತುತ್ತಿದ್ದ ಜನ ಸಿಗಲಾರಂಭಿಸಿದರು
ಅಲ್ಲಿ ನಮಗೆ ಗುಂಪಿನ ಜೊತೆಗೆ ಬಂದಿದ್ದ ಇಬ್ಬರು ಯುವತಿಯರು ಕಂಡರು! ಈ ದುರ್ಗಮ ಚಾರಣದಲ್ಲಿ, ಎರಡು ದಿನ ಸ್ನಾನವಿಲ್ಲದೇ ಇರುವಂತಹ, ಕಂಡಲ್ಲಿ ಬಿಡಾರ ಹೂಡುವಂತಹ ಪರಿಸ್ಥಿತಿಗೆ ಯುವತಿಯರೂ ಬಂದಿದ್ದು ಸ್ವಲ್ಪ ಆಶ್ಚರ್ಯವೇ ಅನಿಸಿತು. ಕುಕ್ಕೆಯ ಕಡೆಯಿಂದ ಬಂದವರಿಗೆ ದಾರಿಯಲ್ಲೇ ಭಟ್ಟರ ಮನೆಯೊಂದು ಸಿಗುವ ಬಗ್ಗೆ,ಅಲ್ಲೇ ಊಟದ, ವಾಸ್ಥವ್ಯದ ವ್ಯವಸ್ಥೆ ಇರುವ ಬಗ್ಗೆ ನಂತರ ತಿಳಿಯಿತು.
Near Naga Parvata

ನಂತರ ನಾವು ಹತ್ತಿದ್ದ ಸೋಮವಾರಪೇಟೆಯ ದಾರಿಯಲ್ಲಿ ಬರೀ ಕಾಡಾದರೆ, ಇಳಿಯುತ್ತಿದ್ದ ಕುಕ್ಕೆಯ ದಾರಿಯಲ್ಲಿ ಹುಲ್ಲುಗಾವಲು. ಕಣ್ಣೆತ್ತಿ ನೋಡಿದತ್ತೆಲ್ಲಾ ಹಸಿರು ಹುಲ್ಲುಗಾವಲು. ಅದರ ಮಧ್ಯೆ ಜನರ ಸಂಚಾರದಿಂದ , ನೀರಿನ ಹರಿತದಿಂದ ಸವೆದಿದ್ದ ಒಂದೇ ದಾರಿ. ದೂರದಲ್ಲೆಲ್ಲೋ ಸಾಗುತ್ತಿದ್ದ ಚಾರಣಿಗರು ಇರುವೆಗಳಂತೆ, ಹಸಿರು ಹುಲ್ಲ ಮಧ್ಯದ ಸವೆದ ದಾರಿ ಬೈತಲೆ ತೆಗೆದ ಹೆಣ್ಣಿನ ತಲೆಯಂತೆ ಕಾಣುತ್ತಿತ್ತು.

View Downhill ..

 ಕುಮಾರ ಪರ್ವತ ಇಳಿಯುತ್ತಿದ್ದಂತೆಯೇ ನಾಗಪರ್ವತ ಅಂತ ಸಿಗುತ್ತೆ. ಕುಮಾರ ಪರ್ವತದಿಂದ ಸ್ವಲ್ಪ ಇಳಿಯುತ್ತಾ , ಸಣ್ಣ ಪುಟ್ಟ ಬೆಟ್ಟಗಳನ್ನ ಹತ್ತಿ ಇಳಿತಾ ಇಲ್ಲಿಗೆ ತಲುಪುತ್ತೇವೆ. ಅಲ್ಲಿ ದಾರಿ ಮಧ್ಯೆ ಕುಮಾರ ಪರ್ವತದತ್ತ ಕಣ್ಣು ಹಾಯಿಸಿದರೆ ಮುಂಜಾನೆಯ ಆ ದೃಶ್ಯ ಅದ್ಭುತ. ಹಾಗೇ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ನಾಗಪರ್ವತಕ್ಕೆ ತಲುಪಿದೆವು. ಈ ಬೆಟ್ಟವನ್ನು ದೂರದಿಂದ ನೋಡಿದರೆ ಹಾವಿನ ಹೆಡೆಯಂತೆ ಕಾಣುವುದರಿಂದ ಅದಕ್ಕೆ ಹಾಗೆ ಹೆಸರಂತೆ. ಅಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ಸಿಗ್ನಲ್ ಗಳೂ ಸಿಗುತ್ತೆ ! ಮನೆಗೆ ಹಿಂದಿನ ದಿನವೆಲ್ಲಾ ಫೋನ್ ಮಾಡದ ಬಗ್ಗೆ ಮಂಗಲಾರತಿ ಆಯ್ತು ಬೆಳಬೆಳಗ್ಗೆಯೇ ! ನಾವೆಲ್ಲಾ ಜೋಪಾನವಾಗಿ, ಆರಾಮಾಗಿ ಇದ್ದೇವೆ. ಇನ್ನೇನು ಬೆಟ್ಟ ಹತ್ತಿದ ಕಷ್ಟಗಳೆಲ್ಲಾ ಮುಗಿಯುತು, ಇಳೀತಾ ಇದ್ದೇವೆ ಅಂತ ಮನೆಯವರಿಗೆಲ್ಲಾ ಸಮಾಧಾನ ಮಾಡಿ ಅಲ್ಲಿಂದ ಮತ್ತೆ ಕೆಳಗೆ ಇಳಿಯೋಕೆ ಶುರು ಮಾಡಿದ್ವಿ.



Grasslands route ..downhill Kumara parvata

  ಹಿಂದಿನ ದಿನದ ನಮ್ಮ ಪ್ರಾರ್ಥನೆಗೆ ಓಗೊಟ್ಟೋ ಏನೋ ಇವತ್ತು ಸೂರ್ಯ ಸ್ವಲ್ಪ ಜೋರಾಗೇ ತನ್ನ ಕಿರಣಗಳನ್ನು ಬೀರುತ್ತಿದ್ದ. ಬೆಳಗಿನ ಕಿರಣಗಳಿಗೇ ನಮ್ಮ ಮುಖ ಸುಡೋಕೆ ಶುರು ಆಯ್ತು. ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ಮರದ ಕಾಡುಗಳು ಮರುಭೂಮಿಯಲ್ಲಿನ ಓಯಸಿಸ್ಗಳ ತರ ಅನಿಸೋಕೆ ಶುರು ಆಯ್ತು. ಸ್ವಲ್ಪ ನೆರಳಿದ್ದಲ್ಲಿ ಕೂತು ಏನಾದರೂ ತಿನ್ನುತ್ತಾ ಮತ್ತೆ ಬೆಟ್ಟ ಇಳಿಯೋಕೆ ಶುರು ಮಾಡಿದ್ವಿ. ರಂಜನ್ನಿನ ಮಂಡಕ್ಕಿ, ನನ್ನ, ಗೌತಮಿನ ಬ್ರೆಡ್ಡು, ರಾಜೇಶ್ ನ ಕೇಕುಗಳು ಬೆಳಗ್ಗಿನ ತಿಂಡಿಯಂತೆ ಖಾಲಿ ಆದವು. ಮಧ್ಯಾಹ್ನದವರೆಗಿನ ಆ ಇಳಿತದ ಬಗ್ಗೆ ಬರೆದರೆ ಬರೀ ಪ್ರಕೃತಿ ಸೌಂದರ್ಯದ ಬಗ್ಗೆ ಬರೆಯಬೇಕು. ಇಳಿಯುತ್ತಾ ಅಷ್ಟು ಸುಸ್ತೇನೂ ಅನಿಸುತ್ತಿರಲಿಲ್ಲ. 

Downhill Kumara Parvata


ಒಂದು ೩.೫ ಕಿ.ಮೀ ಇಳಿದ ಮೇಲೆ ಮಂಟಪವೊಂದು ಸಿಗುತ್ತೆ. ಅಲ್ಲಿ ನೀರಿನ ವ್ಯವಸ್ಥೆ ಇದೆ. ವ್ಯವಸ್ಥೆ ಅಂದರೆ ಬೆಟ್ಟದೊಳಗೇ ಹರಿಯುತ್ತಾ ಸಾಗೋ ನೀರು ಇಲ್ಲಿ ಸಣ್ಣ ಧಾರೆಯಂತೆ ಹೊರಬರುತ್ತೆ. ಖಾಲಿಯಾಗಿದ್ದ ನಮ್ಮ ಬಾಟಲಿಗಳನ್ನ ಅದರಲ್ಲೇ ತುಂಬಿಸಿಕೊಂಡು ಸ್ವಲ್ಪ ಹೊತ್ತು ಕೂತು ಅಲ್ಲಿಂದ ಮುಂದೆ ಸಾಗಿದ್ವಿ. ಮಧ್ಯ ಒಂದು ಸಣ್ಣ ಬೆಟ್ಟ.ಅದನ್ನು ಯಾರು ಬೇಗ ಹತ್ತುತ್ತಾರೆ ಅನ್ನೋ ಪಂದ್ಯದಂತೆ ಓಡುತ್ತಾ ಹತ್ತಿದೆವು. ಅಲ್ಲಿಂದ ಕುಮಾರ ಪರ್ವತ ಇದೇ ಅಂತ ಗುರುತು ಹಿಡಿಯೋದು ಕಷ್ಟ. ನಾವು ಬಂದ ದಾರಿ ದೂರದ ಬೆಟ್ಟವೊಂದರ ಹಿಂದೆ ಮರೆಯಾಗೋದೊಂದೇ ನೋಡೋಕೆ ಸಿಗೋದು!
ಕುಕ್ಕೆ ದಾರಿಯಲ್ಲಿ ಬಂದರೆ ಇದೇ ಕುಮಾರ ಪರ್ವತ ಅನ್ನೋ ಭ್ರಮೆಯಲ್ಲಿ ಹತ್ತಿ ಕೊನೆಗೆ ಓ, ಇದಲ್ಲಾ , ಕುಮಾರಪರ್ವತ ಇನ್ನೂ ಮುಂದಿದೆ ಅಂತ ಹಲವಾರು ಭಾರಿ ಭ್ರಮನಿರಸನ ಆಗೋ ಸಾಧ್ಯತೆ ತುಂಬಾ ಇದೆ. ಆದರೂ ಹುಡುಗಿಯರಿಗೆ, ಯುವದಂಪತಿಗಳಿಗೆ, ಸ್ವಲ್ಪ ಸೇಫಾದ ದಾರಿ ಬೇಕು ಅನ್ನೋರಿಗೆ ಕುಕ್ಕೆಯ ಕಡೆಯ ದಾರಿಯೇ ಲೇಸು.
Our Group near one of the view point in kumara parvata

ಅಂತೂ ಮಧ್ಯಾಹ್ನದ ಹೊತ್ತಿಗೆ ಕೆಳಗಿನ ಚೆಕ್ ಪೋಸ್ಟ್ ಬಳಿ ತಲುಪಿದೆವು. ಅಲ್ಲೇ ಸ್ವಲ್ಪ ಹೊತ್ತು ಕೂತಿದ್ದ ನಮಗೆ ಚೆಕ್ ಪೋಸ್ಟಿನ ಸಿಬ್ಬಂದಿ ಇಲ್ಲೇ ಕೂರಬೇಡಿ, ಸಂಜೆ ಆಗೋ ಅಷ್ಟರ ಹೊತ್ತಿಗೆ ಕುಕ್ಕೆ ಸೇರಬೇಕು ನೀವೆಲ್ಲ.. ಊಟ ಆಗಿಲ್ಲ ಅಂದರೆ ಇಲ್ಲೇ ಭಟ್ಟರ ಮನೆ ಸಿಗುತ್ತೆ ಅಲ್ಲಿ ಊಟ ಮಾಡಿ ಬೇಗ ಮುಂದೆ ಸಾಗಿ ಅಂದ್ರು.ರಘು ಭಟ್ಟರ ಮನೆ ( 9448647947,9480257056) ಬೆಟ್ಟದ ಬುಡದಲ್ಲಿ ಇದೆ. ಸುಮಾರು ೭೦ ವರ್ಷದ ಹಿಂದೆ ರಘು ಭಟ್ಟರ ತಂದೆ ಕಾಸರಗೋಡಿನಿಂದ ಇಲ್ಲಿ ಬಂದು ನೆಲೆಸಿದ್ದಾರಂತೆ. ಅಲ್ಲಿಂದ ಭಟ್ಟರು ಕುಟುಂಬದೊಂದಿಗೆ ಇಲ್ಲೇ ಇದ್ದಾರಂತೆ. ಇಲ್ಲೊಂದು ಮನೆ ಇರುವುದು ಈ ಮಾರ್ಗದಲ್ಲಿ ಬರೋ ಚಾರಣಿಗರಿಗೆ ನಿಜಕ್ಕೂ ಅನುಕೂಲಕರ. ಇಲ್ಲಿಂದ ಕುಕ್ಕೆ ತಲುಪಲು ೪-೫ ಕಿ.ಮೀ ನಡೆಯಬೇಕಾದರೂ ಇಲ್ಲಿಗೆ ತಲುಪಿದಿರೆಂದರೆ ಹೋದ ಜೀವ ಬಂದಂಗೆ ಆಗತ್ತೆ. ಹಿಂದಿನ ದಿನ ಸಂಜೆಯೇ ಬಂದು ಸುಮಾರು ಜನ ಇಲ್ಲೇ ಉಳಿಯುತ್ತಾರಂತೆ. ಬೆಳಿಗ್ಗೆ ಎದ್ದು ಬೆಟ್ಟ ಹತ್ತಿ, ಸಂಜೆಯ ವೇಳೆಗೆ ಇಳಿದು ರಾತ್ರಿಗೆ ಕುಕ್ಕೆ ತಲುಪಿ ಮತ್ತೆ ತಮ್ಮೂರಿಗೆ ವಾಪಾಸಾಗುತ್ತಾರಂತೆ. ಕುಕ್ಕೆಯ ಕಡೆಯಿಂದ ಬರೋ ಸುಮಾರು ಜನ, ಇಲ್ಲಿಗೆ ಬಂದು ಮಂಟಪದವರೆಗೆ ಬಂದು ಸೂರ್ಯಾಸ್ತ ನೋಡಿ ರಾತ್ರೆಗೆ ಭಟ್ಟರ ಮನೆಗೆ ವಾಪಾಸಾಗಿ ಮಲಗುತ್ತಾರಂತೆ. ಮತ್ತೆ ಬೆಳಗ್ಗೆ ೫ ಘಂಟೆ ಸುಮಾರಿಗೆ ಎದ್ದು ಬೆಟ್ಟದ ಚಾರಣಕ್ಕೆ ಹೊರಡುತ್ತಾರಂತೆ. ಹಾಗಾಗಿ ಮುಂಚೆಯೇ ಹೇಳಿದಂತೆ ಕುಕ್ಕೆಯ ಕಡೆಯ ಮಾರ್ಗ ಸ್ವಲ್ಪ ಉದ್ದವಾದರೂ ಚಾರಣಿಗರಿಗೆ ಸೇಫ್ !ಇಲ್ಲಿ ಸೂರ್ಯಾಸ್ತ, ಸೂರ್ಯೋದಯ ನೋಡಲು ಅರಣ್ಯ ಇಲಾಖೆಯವರು ಕಟ್ಟಿದ ೨ view point ಗಳೂ ಇದೆ. ಅಂತದ್ದೆ ಒಂದು ಸ್ಥಳದಲ್ಲಿ ನಮ್ಮ ಗುಂಪು ಕೂತು ತೆಗೆಸಿದ ಚಿತ್ರ ಮೇಲಿನದ್ದು.ಈ ಸ್ಥಳದಲ್ಲಿ ಗಾಳಿಯೂ ಚೆನ್ನಾಗಿ ಬೀಸುವುದರಿಂದ ಇಲ್ಲಿ ಸ್ವಲ್ಪ ಹೊತ್ತು ಕೂತು ವಿಶ್ರಾಂತಿ ಪಡೆಯಬಹುದು.


One of the view point


ಇಂತದ್ದೆಲ್ಲಾ ಬರೆಯೋದು ಸಾಧುವೋ ಗೊತ್ತಿಲ್ಲ. ಆದರೆ ಒಂದೂವರೆ ದಿನದ ನಂತರ ಅಲ್ಲಿ ಕಂಡ ಲ್ಯಾಟ್ರೀನು ನಮ್ಮ ನೈಸರ್ಗಿಕ ಕರೆಗೆ ಓಗೊಡೋಕೆ ತುಂಬಾ ಸಹಾಯಕ ಆಯ್ತು. ಈ ಭಟ್ಟರ ಮನೆಯೂ ಇಲ್ಲದಿದ್ದರೆ ನೀರಿಲ್ಲದ ಬೆಟ್ಟದಲ್ಲಿನ ೨ ದಿನ ಸ್ವಲ್ಪ ಕಷ್ಟ ಇತ್ತು. ತೀರಾ ಅನಿವಾರ್ಯ ಆದರೆ ಪೇಪರೇ ಗತಿ ಅಂತ ಅಂದುಕೊಂಡಿದ್ವಿ. ಹಾಗೇನೂ ಆಗಲಿಲ್ಲ ! ಭಟ್ಟರ ಮನೆಯಲ್ಲಿ ಊಟಕ್ಕೆ 70 ರೂ. ಅಲ್ಲೇ ಸ್ಚಲ್ಪ ತಯಾರಾದ ನಾವು ಊಟ ಮಾಡಿ ೧ ಘಂಟೆ ಮಲಗಿದ್ವಿ. ೩ ಘಂಟೆ ಹೊತ್ತಿಗೆ ಭಟ್ಟರ ಮನೆ ಪೂರ್ತಿ ಖಾಲಿ. ನಾವು ಬಂದ ಹನ್ನೆರಡೂವರೆ ಹೊತ್ತಿಗೆ ಗಿಜಿ ಗಿಜಿಗುಡುತ್ತಿದ್ದ ಭಟ್ಟರ ಮನೆಯಲ್ಲಿದ್ದ ಚಾರಣಿಗರ ತಂಡಗಳು ಪೂರ್ತಿ ಖಾಲಿ ಆಗಿದ್ದವು. ನಾವೂ ಭಟ್ಟರ ಜೊತೆಗೆ ಫೋಟೋ ತೆಗೆಸಿಕೊಂಡು ಅಲ್ಲಿಂದ ಕುಕ್ಕೆಯತ್ತ ಸಾಗಿದೆವು.
Bhattara Mane..

ಈ ದಾರಿಯ ಬಗ್ಗೆ ಬರೆಯಲೇ ಬೇಕು. ನಡೆದಷ್ಟೂ ಮುಗಿಯದ ದಾರಿ. ದಕ್ಷಿಣ ಕನ್ನಡದ ಸೆಖೆ, ನೆತ್ತಿಯ ಮೇಲೆ ಸುಡೋ ಸೂರ್ಯ.. ಹೀಗೆ ಈ ದಾರಿ ಎಂದೂ ಮುಗಿಯದ ಪಯಣವೋ ಎಂದು ಕೆಲ ಬಾರಿ ಅನಿಸಿದ್ದುಂಟು. ಬಾಟಲಿಯಲ್ಲಿ ನೀರು, ಹಿಂದಿನ ದಿನದ ಬ್ರೆಡ್ಡು, ಬಿಸ್ಕೆಟ್ಟುಗಳು ಉಳಿದಿದ್ದರಿಂದ ಅಲ್ಲಲ್ಲಿ ಕೂತು ವಿಶ್ರಾಂತಿ ಪಡೆಯುತ್ತಾ ಮುಂದೆ ಸಾಗಿದೆವು.

Forest Pit Stop .. as rightly said by Goutham :-)
Never Ending journey


ಸಂಜೆ ಏದೂವರೆ, ಆರರ ಸುಮಾರಿಗೆ ಕುಕ್ಕೆ ತಲುಪಿದೆವು.
Finally reached Kukke..



ನಮ್ಮ ಬಸ್ಸಿದ್ದಿದ್ದು ರಾತ್ರೆ ೧೦:೩೦ ಕ್ಕೆ. ಎಂದೋ ಕುಕ್ಕೆಯ ದೇವರ ದರ್ಶನ ಮಾಡಬೇಕು ಅಂದುಕೊಂಡಿದ್ದ ನಮ್ಮ ಆಸೆ ಈ ಬಾರಿ ಅನಿರೀಕ್ಷಿತವಾಗಿ ನೆರವೇರಲಿದೆ. ಆದರೆ ಸ್ನಾನ ಆಗದೇ ದೇವರ ದರ್ಶನ ಹೇಗೆ ? ಅಲ್ಲಿದ್ದ ಲಾಡ್ಜ್ ಗಳನ್ನು ಹುಡುಕಿ ಒಂದನ್ನು ಬುಕ್ ಮಾಡುವಷ್ಟರಲ್ಲೇ ೭ ಘಂಟೆ. ಅಂತೂ ಒಂದು ಲಾಡ್ಜಿನಲ್ಲಿ ನಮಗೆ ರೆಡಿಯಾಗಿ , ದೇವರ ದರ್ಶನ ಪಡೆದು , ವಾಪಾಸಾಗುವಷ್ಟರ ಸಮಯಕ್ಕೆ ಲಾಡ್ಜ್ ಕೊಡಲು ಒಪ್ಪಿದರು. ಅಲ್ಲಿ ೯ ಜನರಿಂದ ೪೦೦ ಕೊಟ್ಟು  ಎಲ್ಲಾ ರೆಡಿ ಆಗಿ ಕುಕ್ಕೆ ದೇವರ ಸನ್ನಿಧಿಗೆ ಬರುವ ಹೊತ್ತಿಗೆ ೮ ಘಂಟೆ. ಕುಕ್ಕೆಯಲ್ಲಿರೋ ಸುಬ್ರಹ್ಮಣ್ಯ ಮತ್ತು ಪರಿವಾರ ದೇವತೆಗಳ ದರ್ಶನ ಪಡೆದು ಎರಡು ದಿನದ ಚಾರಣ ಸುಖಾಂತ್ಯವಾದದ್ದಕ್ಕೆ ವಂದಿಸಿ, ದೇವದರ್ಶನದ ಸಾರ್ಥಕತೆ ಪಡೆದೆವು. ಅಲ್ಲಿನ ಪ್ರಸಾದ ಭೋಜನಕ್ಕೆ ಅಂದು ತುಂಬಾ ಜನ ಸರತಿಯಲ್ಲಿದ್ದರು. ಅಲ್ಲಿ ಕಾದರೆ ಬಸ್ಸು ತಪ್ಪೋ ಭಯದಿಂದ ಅಲ್ಲೇ ಹೊರಗಿದ್ದ ಹೋಟೇಲ್ ಒಂದರಲ್ಲಿ ಊಟ ಮಾಡಿದೆವು. ನಡೆದೂ ನಡೆದೂ ಹೊಟ್ಟೆ ಚೆನ್ನಾಗಿ ಹಸಿದಿತ್ತು.(ಕುಮಾರ ಪರ್ವತದಿಂದ ಕುಕ್ಕೆಗೆ ೧೩ ಕಿ.ಮೀ). ಬಸ್ಸಿನ ಹತ್ತಿರ ತಲುಪುತ್ತಿದ್ದಂತೆಯೇ ನಮ್ಮೆಲ್ಲರ ಬ್ಯಾಗು ಸೇರಿದ್ದ ಸ್ಲೀಪಿಂಗ್ ಬ್ಯಾಗುಗಳನ್ನ ತೆಗೆದು, ಜೊತೆಗೆ ಸುತ್ತಿ ಹಿಡಿದಿದ್ದ ಎರಡು ಟೆಂಟುಗಳನ್ನೂ ತಂದಿದ್ದ ಸಿಮೆಂಟ್ ಚೀಲವೊಂದರಲ್ಲಿ ತುಂಬಿ ಬಸ್ಸಿನ ಡಿಕ್ಕಿಗೆ ಹಾಕಿದೆವು. ಊಟವಾದ ನಂತರ ಬಸ್ಸಲ್ಲಿ ಹೋಗಿ ಕೂತ ನಮಗೇ ತಿಳಿಯದಂತೆ ನಿದ್ರಾ ದೇವಿ ಆವರಿಸಿದ್ದಳು. ಬೆಳಗಾಗೋ ಹೊತ್ತಿಗೆ ಮತ್ತೆ ಬೆಂಗಳೂರು. ನಾಲ್ಕೂಕಾಲಿಗೆ ಬೆಂಗಳೂರಿಗೆ ಬಂದ ನಮ್ಮಲ್ಲಿ ಟೆಂಟು ವಾಪಾಸ್ ಕೊಡೋ ಕೆಲಸ ರಂಜನ್ನೇ ತಗೊಂಡ ಕಾರಣ ನಾವೆಲ್ಲಾ ಶುಭವಿದಾಯ ಹೇಳಿ ಬೀಳ್ಕೊಟ್ಟೆವು.

ಅಂದು ನನಗೆ ಬೆಳಿಗ್ಗೆ ಆರಕ್ಕೇ ಆಫೀಸು! ಸರಿ ಅಂತ ಹೋದ ನನ್ನ ಸುಟ್ಟ ಮುಖದ ಮೇಲೇ ಎಲ್ಲರ ಕಣ್ಣು ! ಬಿಸಿಲಿಗೆ ಸುಟ್ಟ ಮುಖ ನಿಧಾನವಾಗಿ ಪೊರೆ ಕಳಚಿ ತನ್ನ ಸಹಜ ಬಣ್ಣಕ್ಕೆ ಬರಲು ೧ ವಾರ ಬೇಕಾಯ್ತು. ಅಲ್ಲಿವರೆಗೂ ಕೇಳಿದವರಿಗೆಲ್ಲಾ ದಿನಾ ಕುಮಾರ ಪರ್ವತದ ಕತೆ ! 

ನೀವು ಇದನ್ನೆಲ್ಲಾ ಓದಿ ಮುಗಿಸಿದ್ದೀರೆಂದರೆ ನಿಮ್ಮ ಸಹನೆಗೆ , ಪ್ರೋತ್ಸಾಹಕ್ಕೆ ಮೊದಲ ಧನ್ಯವಾದ . ಇದನ್ನು ಓದಿದ ಮೇಲೆ ನಿಮಗೂ ಅಲ್ಲಿಗೆ ಹೋಗಬೇಕೆಂದು ಅನಿಸಿದರೆ ನನ್ನ ಬರಹ ಧನ್ಯವಾದ ಅನುಭವ ನನಗೆ. ಹಾಗೇನೂ ಅನಿಸದೇ  ಈ ರೀತಿ ೨ ದಿನದ ಚಾರಣದಲ್ಲಿ ಭಾಗಿಯಾದ, ಟೆಂಟು ಸ್ಲೀಪಿಂಗ್ ಬ್ಯಾಗ್ ಗಳಲ್ಲಿ ಮಲಗಿದ, ದಿನಗಟ್ಟಲೇ ನಡೆದ ನನ್ನ ಮೊದಲ ಮಧುರ ಅನುಭವದ ಕೆಲವು ತುಣುಕುಗಳಾದರೂ ಪದಗಳಾಗಿ ಮೂಡಿ ನಿಮ್ಮ ಕಲ್ಪನೆಗಳಲ್ಲಿ ಮತ್ತೆ ಜೀವ ತಳೆದರೆ ಮತ್ತೊಮ್ಮೆ ಧನ್ಯತೆಯ ಅನುಭಾವ. ಇದನ್ನು ಬರೆಯುವಾಗ ಮತ್ತೊಮ್ಮೆ ಕುಮಾರ ಪರ್ವತಕ್ಕೆ ಹತ್ತಿ ಬಂದಂತೆ ನೆನಪುಗಳೆಲ್ಲಾ ಹಸಿರಾಗಿ ನಾನು ಸಂತೋಷಿಸಿದ್ದೆಂತೂ ನಿಜ. ಮತ್ತೊಮ್ಮೆ ವಂದಿಸುತ್ತಾ ಮುಂದಿನ ಬರಹದವರೆಗೆ ವಿರಾಮ

Tuesday, January 8, 2013

ಕುಮಾರ ಪರ್ವತ ಚಾರಣ-೨


on the way to Mallalli Falls
ಮಲ್ಲಳ್ಳಿ ಫಾಲ್ಸನಿಂದ ಹತ್ತಿದ ಬಳಿಕ ನಡೆದಿದ್ದೇ ಕತೆ. ಮಲ್ಲಳ್ಳಿ ಫಾಲ್ಸನಿಂದ ಮುಂಚೆ ಒಂದು ಚೆಕ್ ಪೋಸ್ಟ್ ಸಿಗುತ್ತದೆ ಅಂತ ಮುಂಚೇನೇ ಹೇಳಿದ್ದೆನಲ್ಲಾ, ನಮ್ಮ ಟ್ರೆಕ್ಕಿಂಗ್ ಟೆಂಟುಗಳ್ನ ಅಲ್ಲೇ ಬಿಟ್ಟು ಫಾಲ್ಸಿಗೆ ಬಂದಿದ್ವಿ. ಅದು ನಾವು ಮಾಡಿದ ಮೊದಲ್ನೇ ತಪ್ಪು :-( ಮಲ್ಲಳ್ಳಿ ಜಲಪಾತದಿಂದ ಚೆಕಪೋಸ್ಟವರೆಗೆ ವಾಪಾಸ್ ಬರುವ ಅಗತ್ಯವೇ ಇಲ್ಲ. ಫಾಲ್ಸಿನ ಮೆಟ್ಟಿಲು ಹತ್ತುತ್ತಿದ್ದಂತೆಯೇ ಸ್ವಲ್ಪ ಮುಂದೆ ಬಲಕ್ಕೆ ಒಂದು ದಾರಿ ಸಿಗುತ್ತೆ. ಆ ದಾರಿಯಲ್ಲಿ ಸಾಗಿದರೆ ಅದು ಸೀದಾ ಬೀದಳ್ಳಿಯ ಶಾಲೆಯ ಹತ್ತಿರ ಹೋಗಿ ಸೇರುತ್ತೆ ಆ ದಾರಿ. ಅಲ್ಲೇ ದನ ಕಾಯ್ತಾ ಇದ್ದ ಒಬ್ಬರು ನಮಗೆ ಆ ದಾರಿ ತೋರಿಸಿದರು. ಆದರೆ ಏನು ಮಾಡೋದು. ನಮ್ಮ ಟೆಂಟುಗಳ್ನ ಚೆಕ್ ಪೋಸ್ಟಲ್ಲೇ ಇಟ್ಟಾಗಿತ್ತು. ಹಾಗಾಗಿ ಪುನ: ವಾಪಾಸ್ ೩ ಕಿಮೀ ವಾಪಾಸ್ ಬಂದು ಮತ್ತೆ ಬೀದಳ್ಳಿವರೆಗೆ ೩ ಕಿ.ಮೀ ನಡೆಯಬೇಕಾದ ಪ್ರಮೇಯ ಬಂತು.
At the top of mallalli falls



ಫಾಲ್ಸಿನಿಂದ ಮಲ್ಲಳ್ಳಿಯವರೆಗೆ ಬರೋ ಹೊತ್ತಿಗೆ ೧೨:೩೦. ಆಗಲೇ ಕೆಲವರಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಏನಾದರಾಗಲಿ, ಬೀದಳ್ಳಿವರೆಗೆ ನಡೆದುಬಿಡೋಣ. ಅಲ್ಲಿ ಊಟದ ಕತೆ ನೋಡೋಣ ಅಂತ ನಡೆಯೋಕೆ ಪ್ರಾರಂಭಿಸಿದ್ವಿ. ಮಧ್ಯಾಹ್ನದ ರಣ ಬಿಸಿಲು. ದಕ್ಷಿಣ ಕನ್ನಡದ ಧಗೆಯ ಅರಿವಾಗ್ತಾ ಹೋದಂಗೆ ಅಂತೂ ೩ ಕಿ.ಮೀ ನಡೆದ್ವಿ. ಆಗ ೧:೧೫. ಬೀದಳ್ಳಿ ಅಂದ್ರೆ ದೊಡ್ಡ ಊರು ಅಂತ ಕಲ್ಪನೆಯಲ್ಲಿದ್ದೋರಿಗೆಲ್ಲಾ ಒಂದ್ಸಲ ಬೇಜಾರಾಯ್ತು. ಅಲ್ಲೊಂದು ಸಂಚಾರಿ ದವಾಖಾನೆ, ಶಾಲೆಮನೆ , ಸ್ಚಲ್ಪ ಮನೆಗಳ್ನ ಬಿಟ್ರೆ ಬೇರೇನೂ ಇರ್ಲಿಲ್ಲ. ನಮ್ಮ ಗುಂಪಲ್ಲಿ ಸಸ್ಯಾಹಾರಿಗಳೇ ಹೆಚ್ಚಿದ್ದ ಕಾರಣ ಮೂಲೆಯ ಚಿಕನ್ ಕ್ಯಾಂಟೀನ್ಗಳನ್ನು ಹುಡುಕೋ ಗೋಜಿಗೆ ಹೋಗಲಿಲ್ಲ. ಹೆಗಡೇಮನೆಗೆ ಇಲ್ಲಿಂದ ೨.೫ ಕಿ.ಮೀ ದಾರಿ ಅಷ್ಟೇ. ಅಲ್ಲಿಂದ ಪುಷ್ಪಗಿರಿಗೆ ೪.೫ ಕಿ.ಮೀ ಅಷ್ಟೆ(ಮಲ್ಲಳ್ಳಿಯಲ್ಲಿದ್ದ ಬೋರ್ಡ್ ಪ್ರಕಾರ!) ಹಾಗಾಗಿ ಅಲ್ಲಾದರೂ ಏನಾದರೂ ತಿನ್ನೋಕೆ ಸಿಗಬಹುದು ಅಂತ ಮತ್ತೆ ನಡೆಯೋಕೆ ಶುರು ಮಾಡಿದ್ವಿ. ಈಗ ಶುರು ಆಗಿದ್ದು ನೋಡಿ ಬಿಸಿಲಿನ ಪ್ರತಾಪ. ಮಲ್ಲಳ್ಳಿಯಲ್ಲಿ ಸ್ವಲ್ಪ ಮರಗಳಾದರೂ ಇತ್ತು. ಇಲ್ಲಿ, ತಲೆ ಮೇಲೆ ಬಂದಿದ್ದ ಸೂರ್ಯನಿಗೆ ಅಡ್ಡವಾಗೋ ಯಾವ ಮರಗಳೂ ಇರಲಿಲ್ಲ. ಟೆಂಟು, ಒಂದು ದಿನದ ಹೆಚ್ಚಿಗೆ ಬಟ್ಟೆ, ಊಟ ತಿಂಡಿಯ ವಸ್ತು, ನೀರು ಹೀಗೆ ಎಲ್ಲಾ ಸರಂಜಾಮು ಹೊತ್ತಿದ್ದ ಮಣಬಾರದ ಬ್ಯಾಗ್ ಗಳನ್ನ ಹೊತ್ತು ಏರುಗಳನ್ನ ಏರುವಾಗ ಕುಡಿದ ನೀರೆಲ್ಲಾ ಬೆವರಾಗಿ ಮೈಮೇಲೆ ಹರಿದಂತ ಅನುಭವ. ಇದಕ್ಕೇ ಅಂತ ಕುಕ್ಕರನ್ನೂ ಹೊತ್ತು ತಂದಿದ್ದ ಫ್ರೆಂಡೊಬ್ಬನ ಕತೆಯೆಂತೂ ಇನ್ನೂ ಕಷ್ಟ.. ಅವಾಗಾವಾಗ ಗ್ಲೂಕೋಸ್, ಹೊತ್ತು ತಂದಿದ್ದ ಕಿತ್ತಳೆ ಹಣ್ಣುಗಳನ್ನು ಸಪ್ಲೆ ಮಾಡ್ತಾ ಮಧ್ಯಾಹ್ನದ ಬಿಸಿಲ, ಏರು ದಾರಿ ಸವೆಸಿದ್ವಿ.
walking in road from mallalli to hegdemane


ಮೈಸುಡೋ ಬಿಸಿಲಿಗೆ ಅಂತ ಕ್ಯಾಪನ್ನೂ ತರದ ಬಗ್ಗೆ ಶಾಪ ಹಾಕಿ ಏನು ಪ್ರಯೋಜನ ? ತಲೆ ಬಗ್ಗಿಸಿ, ಮುಂದೆ ಬಾಗಿ ನಡೆದರೆ ಏರು ರಸ್ತೆ ಹತ್ತೋಕೂ ಸುಲಭ, ಬಿಸಿಲಿನಿಂದ ಆಗೋ ಸುಸ್ತೂ ಕಡಿಮೆ ಆಗತ್ತೆ ಅನ್ನೋ ಸತ್ಯ ಗೋಚರಿಸಿದ್ದು ಅವಾಗ್ಲೆ ! ಅಂತೂ ೨:೨೦ರ ಹೊತ್ತಿಗೆ ಹೆಗಡೇಮನೆ ತಲುಪಿದ್ವಿ. ಅಲ್ಲೂ ಮತ್ತೆ ನಿರಾಸೆ. ಕೊನೆಗೆ ಅಲ್ಲೇ ಒಂದು ಮನೆಯಲ್ಲಿ ಕೇಳಿದ್ವಿ. ಇಲ್ಲಿಂದ ಪುಷ್ಪಗಿರಿಗೆ ಹೋಗೋದೆಂಗೆ, ಹತ್ರ ಏನಾದ್ರೂ ತಿನ್ನಕ್ಕೆ ಸಿಗತ್ತಾ ಅಂತ. ಅಲ್ಲೂ ಏನೂ ಸಿಗಲ್ವಂತೆ. ಯಾವದಾದ್ರೂ ಮನೆಯಲ್ಲಿ ಕೇಳಿದ್ರೆ ಅಡುಗೆ ಮಾಡಿ ಕೊಡ್ತಾರಂತೆ. ಸರಿ, ನಿಮ್ಮನೇಲೇ ಅಡ್ಗೆ ಮಾಡಿ ಕೊಡ್ತೀರ ಅಂತ ಕೇಳಿದ್ವಿ. ಆಯ್ತು, ಅರ್ಧ ಘಂಟೆ ಆಗತ್ತೆ, ಚಿಕನ್ ಎಲ್ಲಾ ಆಗಲ್ಲ, ಅನ್ನ-ಸಾಂಬಾರು ಮಾಡ್ತೀವಿ ಅಂದ್ರು. ಬೆಳಗ್ಗಿಂದ ನಡೆನಡೆದು ಸುಸ್ತಾಗಿದ್ದ ನಮಗೆ ಅದೇ ಮಿನಿ ಸ್ವರ್ಗ ಅನಿಸಿ ಸರಿ ಅಂದ್ವಿ. ಸುಸ್ತಾದವ್ರಿಗೆ ನೆಲ ಕಂಡ್ರೆ ಸಾಕಾಗಿರತ್ತೆ. ಅದು ಎಲ್ಲಿ, ಹೇಗೆ ಅನ್ನೋದ್ರ ವಿವೇಚನೇನೂ ಇಲ್ದೇ ಮಲಗೋ ಹಾಗಾಗಿರತ್ತೆ.  ಅಲ್ಲೇ ರಸ್ತೆ ಪಕ್ಕ ಮಲಗಿದ್ವಿ.
Time pass at hegde mane


 ಎಲ್ಲೋ ಅಪರೂಪಕ್ಕೊಮ್ಮೆ ಅಲ್ಲಿನ ಶಾಂತ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದಿದ್ದ ಬೈಕುಗಳು ವಾಪಾಸ್ ಹೋಗಿದ್ದು ಬಿಟ್ರೆ ಆ ರಸ್ತೆಯಲ್ಲಿ ಬೇರಾವ ವಾಹನ ಸಂಚಾರವೂ ಇರ್ಲಿಲ್ಲ. (ಹಾಗಾಗಿ ರಸ್ತೆ ಮೇಲೇ ಮಲಗಿದ್ರೂ ಏನೂ ಆಗ್ತಿರ್ಲಿಲ್ಲವೇನೋ ! ) ಅಲ್ಲೇ ಆಡುತ್ತಿದ್ದ ಕೋಳಿ, ಹುಂಜಗಳ್ನ ನೋಡ್ತಾ ಊಟ ಯಾವಾಗ ಬರುತ್ತೆ ಅಂತ ಕಾಯ್ತಾ ಕೂತ್ವಿ, ಅಲ್ಲಲ್ಲ ಮಲಗಿದ್ವಿ. ಮೂರಾಯ್ತು, ಮೂರೂಕಾಲಾದ್ರೂ ಊಟದ ಸುಳಿವಿಲ್ಲ. ಇಲ್ಲೇ ತೀರಾ ಲೇಟಾದ್ರೆ ಬೆಟ್ಟ ಹತ್ತೋಕೆ ಆಗೋಲ್ವೇನೋ ಅನ್ನೋ ಹೆದರಿಕೆ ಶುರು ಆಯ್ತು.

ಅಷ್ಟರಲ್ಲೇ ಊಟಕ್ಕಾಯ್ತು ಅಂತ ಆ ಮನೆಯ ಅಮ್ಮ(ಪೇಟೆಯಲ್ಲಾಗಿದೆ ಆಂಟಿ) ಕರದ್ರು. ಮನೆಯ ಹೊರಗಡೆ ಚಾಪೆಯ ಮೇಲೆ ನಮ್ಮ ಊಟದ ಸಮಾರಂಭ ! ಸಾಂಬಾರ್, ಕೋಸು ಪಲ್ಯ, ಮಜ್ಜಿಗೆ ಇದ್ದ ಹೊಟ್ಟೆ ತುಂಬ ಊಟದ ನಂತರ ಬಾಳೆಹಣ್ಣು. ಸಾಮಾನ್ಯವಾಗಿ ಇಂತ ಸಮಯದಲ್ಲಿ ಪ್ರವಾಸಿಗರ ಹತ್ತಿರ ಸುಲಿಯುವವರೇ ಹೆಚ್ಚು. ಅಂದು ನಾವು ಊಟಕ್ಕೆ ಕೊಟ್ಟಿದ್ದು ತಲಾ ೩೦ ರೂ ಅಷ್ಟೆ. ಆ ತಾಯಿಯ ಹೆಸರು ಎಮ್ ಎಚ್ ಲೀಲಾ ಅಂತೆ. 080276201165. ನೀವೇನಾದರೂ ಈ ದಾರಿಯಲ್ಲಿ ಹೋಗೋದಾದ್ರೆ ಅಲ್ಲಿಗೆ ಮುಂಚೆಯೇ ಫೋನ್ ಮಾಡಿ ಊಟಕ್ಕೆ ಹೇಳಬಹುದು!

Lunch at Hegdemane


ಅಲ್ಲಿಂದ ಮತ್ತೆ ೧ ಕಿ.ಮೀ ನಡೆದು ಶಾಂತ ಮಲ್ಲಿಕಾರ್ಜುನ ದೇವಸ್ಥಾನ ತಲುಪಿದ್ವಿ. ಆ ಪ್ರದೇಶಕ್ಕೆ ಕುಮಾರಳ್ಳಿ ಅಂತಲೂ ಹೆಸರಿದೆ. ಕುಮಾರಳ್ಳಿ, ಕುಮಾರಪರ್ವತ, ನಾಗಪರ್ವತ, ಮಲ್ಲಳ್ಳಿ, ಮಲ್ಲಿಕಾರ್ಜುನ.. ಹೀಗೆ ಕುಕ್ಕೆಯ ಹತ್ತಿರವಿರೋ ಆ ಸುತ್ತಮುತ್ತಲ ಪ್ರದೇಶಗಳೆಲ್ಲಾ ಹೆಸರಲ್ಲೂ ಶ್ರೀ ಸುಬ್ರಮಣ್ಯನ ಪ್ರಭಾವಕ್ಕೊಳಗಾದಂತಿದೆ. ಬೆಟ್ಟದ ತಪ್ಪಲಲ್ಲಿರೋ ಸುಂದರ ದೇವಸ್ಥಾನ. ಅಲ್ಲಿನ ದೇವರಿಗೆ ಮಂತ್ರದ ಬದಲು ಹಾಡಲ್ಲಿ ಪ್ರಾರ್ಥಿಸುತ್ತಿದ್ದ ಅರ್ಚಕರ ಶೈಲಿ ಅಪರೂಪವಾದ್ದು. ಬೆಟ್ಟದಲ್ಲಿ ಆನೆಗಳಿರುತ್ತೆ. ಇಲ್ಲೇ ಉಳಿದು ನಾಳೆ ಹೋಗಿ ಅಂದ್ರು ಅಲ್ಲಿದ್ದ ಅಜ್ಜಿಯೊಬ್ಬರು. ಅಲ್ಲೇ ಉಳಿಯೋ ಮನಸ್ಥಿತಿಯಲ್ಲಿ ನಾವ್ಯಾರೂ ಇರಲಿಲ್ಲ. ಹಾಗೇ ಮುಂದೆ ಸಾಗಿದ್ವಿ.
Real Kumara parvata Trecking starting from Shanta Mallikarjuna temple


 ಅಲ್ಲೇ ಪಕ್ಕದಲ್ಲಿ ಮತ್ತೊಂದು ಚೆಕ್ ಪೋಸ್ಟ. ಅವರೂ ನಮಗೆ ಮೇಲೆ ಹತ್ತೋದು ಬೇಡ, ಕತ್ತಲಾಗುತ್ತಾ ಬರ್ತಾ ಇದೆ ಅಂದ್ರು. ನಾವು ಟೆಂಟು, ಬ್ಯಾಟರಿ ಎಲ್ಲಾ ಇದೆ, ಏನೂ ಅಪಾಯ ಇಲ್ಲ ಅಂತ ಹೇಳಿದ ಮೇಲೆ, ಸರಿ, ಆರೂವರೆ ಒಳಗೆ ಕೆಳಗಿಳಿಯಬೇಕು ಅಂತ ಶರತ್ತು ಹಾಕಿದ್ರು. ಬೋರ್ಡಿನ ಪ್ರಕಾರ ಇನ್ನು ನಾಲ್ಕು ಕಿಮೀ ಇರಬಹುದು ಅಷ್ಟೇ ಅಂತ ಲೆಕ್ಕ ಹಾಕಿದ ನಾವೂ ಹೂಂ ಅಂದೆವು!

ಹತ್ತೋಕೆ ಶುರು ಮಾಡಿದ ಮೇಲೇ ಗೊತ್ತಾಗಿದ್ದು ಕುಮಾರ ಪರ್ವತ ಚಾರಣ ಅಂದ್ರೆ ಏನು ಅಂತ. ಸುತ್ತ ಹಸಿರ ಹುಲ್ಲುಗಾವಲು.. ಮಧ್ಯ ಸಾಗುತ್ತನೇ ಇರೋ, ಮುಗಿಯಲೊಲ್ಲದ ದಾರಿ. ಈ ಚೆಕ್ ಪೋಸ್ಟಿಂದ ಸುಮಾರು ಎರಡೂವರೆ ಕಿ.ಮೀ ನಡೆದ ಮೇಲೆ ಮತ್ತೊಂದು ಚೆಕ್ ಪೋಸ್ಟ್! ಅದೇ ಪುಷ್ಪಗಿರಿ ಚೆಕ್ ಪೋಸ್ಟ್. ಅಲ್ಲಿ ತಲಾ ೨೦೦ ರೂ ಕೊಟ್ಟ ಮೇಲೇ ಪುಷ್ಪಗಿರಿ ಬೆಟ್ಟದ ಚಾರಣಕ್ಕೆ ಅವಕಾಶ. ಅದೂ ಸಂಜೆ ೪:೩೦ ರ ಮೇಲೆ ಹತ್ತೋಕೆ ಬಿಡಲ್ವಂತೆ. ನೀವೇನಾದ್ರೂ ಈ ದಾರೀಲಿ ಹೋಗೋದಾದ್ರೆ ೩:೩೦ ಅತವಾ ೩ ರ ಒಳಗೇ ಈ ಚೆಕ್ ಪೋಸ್ಟಿನ ಬಳಿ ಇರೋದು ಕ್ಷೇಮ. ಯಾಕಂದ್ರೆ ಮುಂದಿನ ದಾರಿ ಇನ್ನೂ ಕಷ್ಟಕರವಾಗಿದೆ.ಅಲ್ಲಿ ಹುಲಿ, ಆನೆ, ಹೆಬ್ಬಾವು, ಕರಡಿ ಹೀಗೆ ಹಲವಾರು ಕ್ರೂರ ಪ್ರಾಣಿಗಳಿವೆ ಅಂತ ಬೋರ್ಡೋ ಹಾಕಿದ್ರು. ನಾವು ಏನು ಮಾಡಿದ್ರೂ ನಮ್ಮನ್ನ ಮುಂದೆ ಬಿಡ್ಲಿಲ್ಲ. ನೀವು ಇಲ್ಲೇ ಇರಿ, ಏನು ಬೇಕಾದ್ರೂ ಪಾರ್ಟಿ ಮಾಡಿ, ನಮ್ಮದೇನೂ ಅಭ್ಯಂತರ ಇಲ್ಲ ಅನ್ನೋ ಅಲ್ಲಿನ ಇಬ್ಬರು ಗಾರ್ಡುಗಳು..ಚಾರಣಕ್ಕೆ ಅಂತ ಜನ ಬರೋದು ಪ್ರಕೃತಿ ಸೌಂದರ್ಯ ಆನಂದಿಸೋಕಾ ಅತ್ವಾ ಎಣ್ಣೆ ಹೊಡೆದು ಮಜಾ ಮಾಡೋಕಾ ಅಂತ ಅರ್ಥ ಆಗ್ಲಿಲ್ಲ :-( ನಾವು ಅಂತಹವರಲ್ಲ ಅಂತ ಎಷ್ಟು ಹೇಳಿದ್ರೂ ಅವರು ಕೇಳದೇ ಅವರ ರೂಲ್ಸ್ ಅಂತ ಕೂತಿದ್ರು. ಮೇಲಧಿಕಾರಿಗಳ ಜೊತೆಗೆ ಮಾತಾಡಿದ್ರೂ ಪ್ರಯೋಜನವಾಗಲಿಲ್ಲ. ಬೇಗ ನಡೆಯಿರಿ ಅಂದ್ರೂ ಕೇಳದೇ ಹೆಜ್ಜೆ ಮೇಲೆ ಹೆಜ್ಜೆ ಹಾಕಿದ(?) ಗೆಳೆಯರಿಗೆ ಬಯ್ಯುತ್ತಾ ಅಲ್ಲೇ ಕೂತಿರೋವಾಗ ಬೆಂಗಳೂರಿನ ಹತ್ತು ಜನ ಚಾರಣಿಗರ ಮತ್ತೊಂದು ತಂಡ ಬಂತು!ಅಂತೂ ಹತ್ತೊಂಬತ್ತು ಜನರಾದ ಕಾರಣ ನಮ್ಮನ್ನು ಮುಂದೆ ಬಿಟ್ಟರು!

ಕತ್ತಲಾಗ್ತಾ ಬಂದಿದೆ, ಬೇಗ ಬೇಗ ಸಾಗಬೇಕಾದಂತ(ಓಡಬೇಕಾದಂತ) ಪರಿಸ್ಥಿತಿ. ಎದ್ದೆನೋ, ಬಿದ್ದೆನೋ ಅಂತ ಜೋರಾಗಿ ಹೆಜ್ಜೆ ಹಾಕಲಾರಂಭಿಸಿದ್ವಿ. ಅವತ್ತು ಚೆನ್ನಾಗಿ ದಾರಿ ತಿಳಿದಿದ್ದ ಆ ಹತ್ತು ಜನರ ತಂಡ ಸಿಗದಿದ್ರೆ ನಾವು ಖಂಡಿತಾ ಅಂದು ಆ ಬೆಟ್ಟ ಹತ್ತುತ್ತಿರಲಿಲ್ಲ. ಮಧ್ಯ ಮಧ್ಯ ಮರಗಳಿಗೆ ಫಲಕಗಳನ್ನು  ಹೊಡೆದು ಈ ನಿಟ್ಟಿನಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ ಅರಣ್ಯ ಅಧಿಕಾರಿಗಳು. ಕತ್ತಲಾಗುತ್ತಾ ಬಂತು. ಇದ್ದ ಎಲ್ಲಾ ಬ್ಯಾಟರಿಗಳು, ಮೊಬೈಲ್ ಬ್ಯಾಟರಿಗಳು ಹೊರಬಂದವು. ....
 ****************************************************************

Monday, December 3, 2012

ಕುಮಾರಪರ್ವತ ಚಾರಣ -೧


ಮಸ್ತ್ ಮಲ್ಲಳ್ಳಿ ಜಲಪಾತ, ನೆನಪಿಡಬೇಕಾದಂತ ನಡೆತ, ಮಂಜು ಮುಚ್ಚಿದ ಬೆಟ್ಟದ ಸಂಜೆಯ ಆರೋಹಣ, ಮೈಕೊರೆಯೋ ಚಳಿಯಲ್ಲಿ ಸ್ವೆಟರಿಲ್ಲದ ರಾತ್ರಿ, ಬೆಂಕಿ- ಟೆಂಟು- ಸ್ಲೀಪಿಂಗ್ ಬ್ಯಾಗುಗಳ ಬೆಚ್ಚನೆಯ ಅಪ್ಪುಗೆ, ದಿನಾ ನೋಡುತ್ತಿದ್ದರೂ ವಿಶೇಷ ಅನಿಸಿದ ಸೂರ್ಯ,  ಮುಂಜಾನೆಯೇ ಮುಖ ಸುಡೋ ಬಿಸಿಲಲ್ಲಿ ಮತ್ತೆ ಸಂಜೆಯವರೆಗೆ ಅವರೋಹಣ, ಮಧ್ಯ ಮಧ್ಯೆ ಸಾರ್ಥಕತೆ ನೀಡಿದ ಪರಿಸರ ಪ್ರೇಮ.. ಕುಮಾರಪರ್ವತ.. ನಿನ್ನ ಸಖತ್ ಮಸ್ತ್ ನೆನಪುಗಳಿಗೊಂದು ಸಲಾಂ..

ಕುಮಾರಪರ್ವತಕ್ಕೆ ದಕ್ಷಿಣ ಕನ್ನಡದ ಕುಕ್ಕೆ ಕಡೆಯಿಂದ ಅಥವಾ ಕೊಡಗಿನ ಸೋಮವಾರಪೇಟೆಯ ಕಡೆಯಿಂದ ಹತ್ತಬಹುದು .ನಾವು ಈ ಸಲ ಹತ್ತಿದ್ದು ಸೋಮವಾರಪೇಟೆಯ ಕಡೆಯಿಂದ.

ಬೆಂಗಳೂರಿಂದ ಸೋಮವಾರಪೇಟೆಗೆ ೬ ಘಂಟೆ ಪಯಣ. ರಾತ್ರೆ ೧೧ ಘಂಟೆಗೆ ಬೆಂಗಳೂರಿಂದ ಕೆ.ಎಸ್ಸಾರ್‍ಟಿಸಿ ಬಸ್ ಹತ್ತಿದ ನಾವು ಸೋಮವಾರಪೇಟೆ ತಲುಪಿದ್ದು ಮಾರನೇ ದಿನ ಬೆಳಗ್ಗೆ ೪:೩೦ ಹೊತ್ತಿಗೆ.ಚುಮು ಚುಮು ಚಳಿ. ಬೆಚ್ಚಗಿರೋ ಬೆಂಗಳೂರಿಗರ ಪಾಲಿಗೆ ಅದು ಭಯಂಕರ ಚಳಿಯೇ. ನನ್ನ ಗೆಳೆಯರು ಸ್ವೆಟರು, ಜರ್ಕೀನು, ಟೋಪಿ ಅಂತ ಫುಲ್ ಪ್ಯಾಕ್ ಆಗಿದ್ರು. ಸ್ವೆಟರ್ ತರದೇ ಚಳಿ ನಾಡು ಕೊಡಗಿಗೆ ಬಂದ ನಾನು ಒಂತರಾ ವಿಚಿತ್ರ ಪ್ರಾಣಿ ಅವರ ಪಾಲಿಗೆ !. ಆದರೆ ನಮ್ಮೂರು ಸಾಗರದ ಚಳಿಗಾಲದ ಚಳಿಗೆ ಹೊಂದಿಕೊಂಡಿದ್ದ ನನಗೆ ಅದು ಅಂತಾ ಭಯಂಕರ ಚಳಿ ಅನಿಸಿರಲಿಲ್ಲ.
೨ ವಾರದ ಹಿಂದೆ ನಾನು ಕೊಡಗಿಗೆ ಬಂದಾಗಲೂ ಹೆಚ್ಚಿನ ಚಳಿ ಇರಲಿಲ್ಲ. ೨ ದಿನದ ಟ್ರೆಕಿಂಗ್ ಆದ ಕಾರಣ ಹೊರೋ ಸ್ಲೀಪಿಂಗ್ ಬ್ಯಾಗು,ಬಟ್ಟೆ, ಟೆಂಟು, ಆಹಾರದ ಜೊತೆಗೆ ಜರ್ಕೀನು ಸುಮ್ಮನೇ ಭಾರ ಅಂತ ನನ್ನ ಲೆಕ್ಕಾಚಾರ !!



ಬೆಳಿಗ್ಗೆ ಆಗ್ತಿದ್ದ ಹಾಗೆ ನೈಸರ್ಗಿಕ ಕರೆಗಳ ನೆನಪಾಗೋದು ಸಹಜ! ಹಾಗಾಗಿ ಅಲ್ಲೇ ಬಸ್ಟಾಂಡಲ್ಲಿದ್ದ ಸುಲಭ್ ಹುಡುಕಾಯ್ತು :-) ಹಾಗೇ ಎಲ್ಲ ರೆಡಿ ಆಗಿ ಅಲ್ಲೇ ಇದ್ದ ಕ್ಯಾಂಟೀನೊಂದ್ರಲ್ಲಿ ತಿಂಡಿ ಮುಗಿಸೋ ಹೊತ್ತಿಗೆ ಬೆಳಿಗ್ಗೆ ೬:೪೫. ಸೋಮವಾರಪೇಟೆಯಿಂದ ಬೀದಳ್ಳಿ ಎಂಬಲ್ಲಿಗೆ ಹೋಗಬೇಕು. ಅಲ್ಲಿಂದ ಟ್ರೆಕ್ಕಿಂಗ್ ಪ್ರಾರಂಭ. ಅಲ್ಲಿಗೆ ಹೋಗೋ ಮೊದಲ ಬಸ್ ಇದ್ದಿದ್ದು ಬೆಳಿಗ್ಗೆ ೭:೧೫ ಕ್ಕೆ. ಅದನ್ನ ಬಿಟ್ರೆ ಮುಂದಿನ ಬಸ್ಸ್ ಇರೋದು ಸಂಜೆಯೇ ಅಂತೆ !. ನಾವು ಬ್ಯಾಗು, ಸ್ಲೀಪಿಂಗ್ ಬ್ಯಾಗನ್ನೇನೋ ತಗಂಡಿದ್ವಿ. ಆದ್ರೆ ಅವೆರಡನ್ನೂ ಸೇರಿಸಿ ಒಂದೇ ಕಡೆ ಬಿಗಿದು ಹೊರಲು ಸುಲಭ ಆಗೋ ತರ ಕಟ್ಟಕ್ಕೆ ಸೊಣಬಿ ದಾರ(ಸೆಣಬಿನ ದಾರ/ಗೋಣಿ ದಾರ) ತಗೊಂಡಿರಲಿಲ್ಲ. ಅದನ್ನೂ ಸೋಮವಾರಪೇಟೆಯಲ್ಲೇ ತಗಂಡು ಬಸ್ಸಿಗೆ ಹತ್ತಿದ್ವಿ.

ಸೋಮವಾರಪೇಟೆಯಿಂದ ಬೀದಳ್ಳಿಗೆ ೨೫-ಕಿಮೀ. ಬಸ್ಚಾರ್ಜು ೨೫ ರೂ. ಮುದ್ದಾದ ಪ್ರಕೃತಿಯ ನಡುವೆ ಹಾವಂತೆ ಸಾಗೋ ದಾರಿಯಲ್ಲಿ, ವಾಹನಗಳಿಲ್ಲದ ರಸ್ತೆಯಲ್ಲಿ, ಮುಂಜಾನೆ ಮಂಜಲ್ಲಿ , ಮನಮೋಹಕ ದೃಶ್ಯಗಳನ್ನ ಕಟ್ಟಿಕೊಡ್ತಾ ಸಾಗ್ತಾ ಇದ್ದ ಬಸ್ಸಿನ ೧ ಘಂಟೆಯ ಪಯಣ ಒಂದು ಮನೋಹರ ಅನುಭವ.ಬೀದಳ್ಳಿಗಿಂತ ೩ ಕಿಮೀ ಮೊದಲು(ಅಂದರೆ ಬೀದಳ್ಳಿಯ ಹಿಂದಿನ ಸ್ಟಾಪ್) ಸಿಗೋದು ಮಲ್ಲಳ್ಳಿ ಜಲಪಾತ. ರಸ್ತೆಯಿಂದ ೩-ಕಿ.ಮೀ ಇಳಿದು ನಡೆದರೆ ಮಲ್ಲಳ್ಳಿ ಜಲಪಾತ ಸಿಗುತ್ತದೆ.

ಹೀಗೆ ಬಸ್ಟಾಪಿಂದ ಇಳಿದು ಸ್ವಲ್ಪ ಮುಂದೆ ನಡೆದರೆ ಅಲ್ಲೊಂದು  ಚೆಕ್ ಪೋಸ್ಟ್. ಪ್ರವೇಶ ಶುಲ್ಕ ತಲಾ ೫ ರೂ. ವಾಹನಗಳಿಗೆ ೧೦೦ ರೂ.  ಅಲ್ಲೇ ಮನೆಯಲ್ಲಿ ಮಾಡಿದ ಮಧು ಮತ್ತು ಮಧ್ಯ( homemade honey and wine) ಸಿಗತ್ತೆ ಅಂತ ಬೋರ್ಡೂ ಇತ್ತು! ದೇವ್ರೆ, ಜನ ಇಲ್ಲಿಗೆ ಬರೋದು ಪ್ರಕೃತಿಯನ್ನ ಸವಿಯಕ್ಕಾ ಅತ್ವಾ ಇನ್ನೊಂದಿಷ್ಟು ಹಾಳು ಮಾಡಕ್ಕಾ ಅಂತ ಡೌಟ್ ಬಂತು :-( ( ಇಲ್ಲಿ ನಕ್ಸಲೈಟ್ಸ್ ಇದಾರೆ, ಅವ್ರಿಗೆ ಪ್ರವಾಸಿಗ್ರು ಈ ತರ ಪ್ರಕೃತೀನ ಹಾಳು ಮಾಡೋದು ಸುತರಾಂ ಇಷ್ಟ ಇಲ್ಲ ಅಂತ ಆಮೇಲೆ ಒಬ್ರು ಹೇಳಿದ ಮಾತು ಇಲ್ಲೂ ಪ್ರಸ್ತುತ ಅನ್ಸುತ್ತೆ. ಸೋಮವಾರ ಪೇಟೆ ಬಸ್ಟಾಂಡಲ್ಲೇ OSRO,People Front Of India ದ ಗೋಡೆ ಪತ್ರಗಳನ್ನೂ ನೋಡಿದ್ವಿ !.. ಇದ್ರ ಬಗ್ಗೇನೆ ಊಹಾಪೋಹದ, ವಾದವಿವಾದದ ಲೋಕದಲ್ಲಿ ಮುಳುಗೋ ಮೊದ್ಲು ಮತ್ತೆ ವಾಸ್ತವಕ್ಕೆ, ಚಾರಣದ ಸುಮಧುರ ನೆನಪಿನಂಗಳಕ್ಕೆ.. ) 

ಮಲ್ಲಳ್ಳಿ ಜಲಪಾತದ ಸ್ವಲ್ಪ ಹತ್ತಿರದವರೆಗೂ ವಾಹನಗಳು ಹೋಗುತ್ತದೆ. ಆದರೆ ನಮ್ಮದು ನಟರಾಜ  ಸರ್ವೀಸ್ :-). ಲೀಚಸ್(ಉಂಬುಳ/ಇಂಬಳ) ಇರುತ್ತೆ ಕಣ್ರೋ ಹಾಗಾಗಿ ಟೈಟ್ ಜೀನ್ಸ ಪ್ಯಾಂಟ್ ಹಾಕ್ಕೊಂಡು ಬನ್ನಿ ಅಂದಿದ್ದ ಪ್ರೆಂಡೊಬ್ಬ. ಹಾಗಾಗಿ ಉಂಬುಳ ಅಂದ್ರೇನು ಅಂತ ನೋಡದೇ ಹೋದ್ರೂ ಕಾಲಿಗೆ ಏನೋ ಕಚ್ಚಿದಂಗೆ ಆಗ್ತಿದೆ ತಡೀರೋ ಅಂತ ಮಧ್ಯೆ ಮಧ್ಯೆ ನಿಂತು ನೋಡ್ತಿದ್ರು ಕೆಲೋ ಗೆಳೆಯರು. ಕೊನೆಗೆ ಉಂಬುಳ ನೀರಿದ್ದಲ್ಲಿ ಇಲ್ಲಾ ಒದ್ದೆ ಮಣ್ಣಲ್ಲಿ, ಮಳೆಗಾಲದಲ್ಲಿ ಮಾತ್ರ ಇರುತ್ತೆ. ಇಂತಾ ಒಣ ದಾರೀಲಿ, ಚಳಿಗಾಲದಲ್ಲಿ ಇರೋಲ್ಲ ಅಂತ ಸಮಾಧಾನ ಮಾಡ್ಬೇಕಾಯ್ತು. ಬರೀ ಟಾರು ರಸ್ತೆಯನ್ನೇ ನೋಡಿದ್ದ ಕೆಲವರಿಗೆ ಊರಿನ ಮಣ್ಣು ರಸ್ತೆ ಇಳೀಬೇಕಾದ್ರೆ ಎಲ್ಲಿ ಜಾರುತ್ತೋ ಅನ್ನೋ ಭಯ. ಹೊಸದಾಗಿ ಸೀರೆ ಉಟ್ಟವ್ರು ಎಲ್ಲಿ ಕಾಲಿಗೆ ಸಿಗುತ್ತೋ ಅಂತ ನಡ್ಯೋ ಹಾಗೆ ಮೆಲ್ಲಗೆ ಹೆಜ್ಜೆ ಹಾಕ್ತಿದ್ರು. ಅವ್ರಿಗೂ ಏನೂ ಆಗಲ್ಲ ಅಂತ ಧೈರ್ಯ ತುಂಬ್ತಾ ಇಳಿತಾ ಬಂದ್ವಿ ಆ ದಾರೀಲಿ. ವಾಹನಗಳು ಹೋಗೋ ಜಾಗದಿಂದ ಸ್ವಲ್ಪ ಮುಂದೆ ಬಂದರೆ ಜಲಪಾತಕ್ಕೆ ಇಳಿಯೋ ಮೆಟ್ಟಿಲುಗಳು ಸಿಗುತ್ತೆ. ಜಲಪಾತಕ್ಕೆ ಇಳಿಯೋ ಅರ್ಧ ದಾರಿಯ ತನಕ ಈಗ ಮೆಟ್ಟಿಲುಗಳು ಆಗಿವೆ. ಹಾಗಾಗಿ ಸ್ವಲ್ಪ ಮಳೆ ಇದ್ರೂ ಇಲ್ಲಿ ಬರಲು ತೊಂದ್ರೆ ಇಲ್ಲ. ಮೆಟ್ಟಿಲು ಮುಗ್ದಾದ ಮೇಲೆ ಮರಗಳ ಮಧ್ಯದ, ಹುಲ್ಲುಗಾವಲ ಮಧ್ಯದ ಕಾಡದಾರಿ.ದೂರದಲ್ಲಿ ಕಾಣೋ ಜಲಪಾತದ ದೃಶ್ಯ ಬೇಗ ಇಳಿಯುವಂತೆ ಪ್ರೇರೇಪಿಸಿದ್ರೆ ಕಾಲು ಜಾರಿದ್ರೆ ಗೋವಿಂದ ಅನ್ನೋ ಭಾವ ನಿಧಾನಿಸತ್ತೆ.
Mallalli Falls

ಇಲ್ಲಿರೋ ಜಲಪಾತದಲ್ಲಿ ಮೊಸಳೆಗಳಿವೆ, ಇಳಿದು ಈಜಕ್ಕೆ ಹೋಗಿ ಹಿಂದಿನ ತಿಂಗಳಷ್ಟೇ ಹುಣಸೂರಿನ ಪೋಲೀಸ್ ಒಬ್ರು, ಹಿಂದಿನ ವರ್ಷ ಸಾಗರ ಕಡೆಯ ಅಶ್ವಥ್ ಹೆಗಡೆ ಅನ್ನುವವರೊಬ್ರು  ಟೆಕ್ಕಿ ಸತ್ತಿದ್ದಾರೆ ಅಂತ ಚೆಕ್ ಪೋಸ್ಟಲ್ಲಿ ಎಚ್ಚರಿಸಿದ್ರು. ಸುಮ್ನೆ ನೋಡ್ಕಂಡು ಬರ್ತೀವಿ ಅಂತ ಹುಷಾರಾಗೇ ಕೆಳಗಿಳಿದ್ವಿ. ಜಲಪಾತದ ನೀರ ಹನಿಗಳು ಅದರಿಂದ ಸುಮಾರು ೧೦೦ ಅಡಿ ದೂರದವರೆಗೂ ಸಿಡಿತಾ ಇತ್ತು. ಹಾಗಾಗಿ ಹತ್ತತ್ರ ಹೋಗ್ತಿದ್ದ ಹಾಗೇ ಅಲ್ಲಿ ಮಂಜಲ್ಲಿ ನಿಂತಂತ ಅನುಭವ.  ಜಲಪಾತದಲ್ಲಿ ಒಳ್ಳೇ ನೀರಿತ್ತು. ಹಂತ ಹಂತವಾಗಿ ಧುಮುಕೋ ಜಲಪಾತದಲ್ಲಿ ಕೆಲೋ ಕಡೆ ನೀರು ಬಿದ್ದ ರಭಸಕ್ಕೆ  ಆಳದ ಗುಂಡಿಗಳಾಗಿರೋದು ಸುಳ್ಳೇನಲ್ಲ. ಮೊದ್ಲೇ ಎಚ್ಚರಿಕೆ ಸಿಕ್ಕಿದ್ರಿಂದ ನಾವು ಜಲಪಾತದ ಕೆಳಗೇ ಹೋಗಿ ತಲೆ ಕೊಡ್ತೀವಿ , ಎಷ್ಟು ಆಳ ಇದ್ರೂ ಈಜೇ ಬಿಡ್ತೀವಿ ಅಂತ ಸಾಹಸ ಮಾಡಕ್ಕೆ ಹೋಗ್ಲಿಲ್ಲ. ಅಲ್ಲೇ ಶುರುವಿನಲ್ಲಿ ನೀರು ಕಡಿಮೆ ಇದ್ದ, ನೆಲ ಕಾಣ್ತಾ ಇದ್ದ ಕಡೆ ಇಳಿದು ಸ್ವಲ್ಪ ಹೊತ್ತು ಆಡಿ, ಸ್ನಾನ ಮಾಡಿದ್ವಿ. ಅಲ್ಲೊಂದಿಷ್ಟು ಫೋಟೋ ಸೆಷನ್ನು ಜೊತೆಗೆ ಎರಡ್ನೇ ಇನ್ನಿಂಗ್ಸು ತಿಂಡಿ. 


ನಾವು ಹೋದಲ್ಲಿ ಯಾವದೇ ಪ್ಲಾಸ್ಟಿಕ್ ಕವರ್ ಬಿಸಾಕ್ಬಾದ್ರು ಅಂತ ಮುಂಚೇನೆ ಮಾತಾಡಿದ್ವಿ. ಅದನ್ನೇ ಅಲ್ಲಿ ಮತ್ತೊಂದ್ಸಲ ನೆನಪಿಸಿ ಅಲ್ಲಿ ಯಾವುದೇ ಕವರ್ ಎಸಿಯದೇ ಮತ್ತೊಂದು ಬ್ಯಾಗಲ್ಲೇ ತುಂಬ್ಕೊಂಡು ಮೇಲೆ ಹತ್ತೋಕೆ ಶುರು ಮಾಡಿದ್ವಿ. ಎಂಟೂವರೆಗೆ ಮಲ್ಲಳ್ಳಿಗೆ ಮುಟ್ಟಿದ ನಾವು ಜಲಪಾತಕ್ಕೆ ಇಳ್ಯೋ ಹೊತ್ತಿಗೆ ೯:೩೦. ವಾಪಾಸ್ ಹತ್ತೋ ಹೊತ್ತಿಗೆ ಸುಮಾರು ೧೧:೩೦. 


ವೈನ್ ಬಾಟ್ಲು ಹಿಡ್ದು ಹೀರ್ತಾ ಪ್ರಕೃತಿಯನ್ನು ಆನಂದಿಸಲು ಹೊರಟಿದ್ದ(?) ಟ್ರೆಕರ್ಸ್ ಸಿಕ್ಕಿದ್ರು! ಜಲಪಾತದ ನೀರು ಸಿಡಿಯೋ ಜಾಗದಿಂದ ಸ್ವಲ್ಪ ದೂರ ಬರ್ತಿದ್ದ ಹಾಗೆಯೇ . ಹೆಂಗಿದೆ ಜಲಪಾತ ಅಂದ್ರು.
ಸಖತ್ತಾಗಿದೆ ಆದ್ರೆ ಸ್ವಲ್ಪ ಅಪಾಯ ಇದೆ. ಹೀಗೀಗೆ ಜನ ಸತ್ತಿದ್ದಾರೆ. ಸಾಹಸ ಮಾಡಕ್ಕೆ ಹೋಗ್ಬೇಡಿ ಅಂತ ಹೇಳಿ ಮುಂದೆ ಬಂದ್ವಿ. ದಾರೀಲಿ ಆ ಜಾಗನಾ ಕಾಯ್ತೀನಿ ಅಂತ ಅಲ್ಲಿ ಸತ್ತ ಜನರ ಕತೆ ಹೇಳಿದ ವೇಣು ಅನ್ನೋರೊಬ್ರು ಸಿಕ್ಕಿದ್ರು.ಅಶ್ವಥ್ ಹೆಗ್ಡೆ ಅವ್ರ ಕತೆ ಹೇಳಿದ್ದೂ ಇವ್ರೆ. ಅವ್ರು ಹೇಳಿದ ಕತೆ ಪ್ರಕಾರ ಸಂಪೆ ಷಷ್ಟಿ ದಿನ ೩೦-೪೦ ಸಿಸ್ರಿ ಬದಿಯ ಹವ್ಯಕರು ಅಲ್ಲಿಗೆ ಟ್ರೆಕ್ಕಿಂಗ್ ಬಂದಿದ್ರಂತೆ. ಪ್ರತೀ ವರ್ಷ ಅವರು ಹೀಗೇ ಅಲ್ಲಿಗೆ ಬರ್ತಾರಂತೆ. ಈ ಜಲಪಾತಕ್ಕೆ ಸುಮಾರಷ್ಟು ಜನ ದಿನಾ ಬರೋದು ಹೌದಾದ್ರೂ ಷಷ್ಟಿ ಹಬ್ಬಕ್ಕೂ ಮಲ್ಲಳ್ಳಿ ಜಲಪಾತಕ್ಕೂ ಯಾವ ಸೀಮೆ ಸಂಬಂಧ ಅಂತ ನಂಗೆಂತೂ ಅರ್ಥ ಆಗ್ಲಿಲ್ಲ. ಅವ್ರು ಯಾರೂ ಅಂತ ಆ ವೇಣಣ್ಣನೇ ಹೇಳೋವರ್ಗೂ, ಸಿರ್ಸೀಲಿರೋ ಸಾವಿರಾರು ಜನ್ರಲ್ಲಿ ಅಲ್ಲಿಗೆ ಬಂದವರ್ಯಾರಾದ್ರೂ ಇದನ್ನ ಓದೋವರ್ಗೂ ಇದೊಂದು ನಿಗೂಢ ರಹಸ್ಯವೇ ಸರಿ !!

*********
ಇವತ್ತು ಬೆಳಿಗ್ಗೆ ಅಷ್ಟೆ ಅಲ್ಲಿಂದ ಬಂದಿದ್ದು. ಆಮೇಲೆ ಆಫೀಸಿಗೂ ಹೋಗಿದ್ರಿಂದ ಈಗ ಮಾತಾಡ್ತಿರೋ ಕಾಲುಗಳ ಜೊತೆ, ಎಳೀತಿರೋ ಕಣ್ಣುಗಳು.. ಹಾಗಾಗಿ ಮುಂದೆ ಬರ್ಯೋಕೆ ಇನ್ನೊಮ್ಮೆ ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೆ ಶುಭದಿನ :-)
Way to Kumara Parvata Trecking

***********************************************


ಈ ಲೇಖನ "ಈ ಕನಸು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ :-)
http://www.ekanasu.com/2013/01/blog-post_21.html