on the way to Mallalli Falls |
At the top of mallalli falls |
ಫಾಲ್ಸಿನಿಂದ ಮಲ್ಲಳ್ಳಿಯವರೆಗೆ ಬರೋ ಹೊತ್ತಿಗೆ ೧೨:೩೦. ಆಗಲೇ ಕೆಲವರಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು. ಏನಾದರಾಗಲಿ, ಬೀದಳ್ಳಿವರೆಗೆ ನಡೆದುಬಿಡೋಣ. ಅಲ್ಲಿ ಊಟದ ಕತೆ ನೋಡೋಣ ಅಂತ ನಡೆಯೋಕೆ ಪ್ರಾರಂಭಿಸಿದ್ವಿ. ಮಧ್ಯಾಹ್ನದ ರಣ ಬಿಸಿಲು. ದಕ್ಷಿಣ ಕನ್ನಡದ ಧಗೆಯ ಅರಿವಾಗ್ತಾ ಹೋದಂಗೆ ಅಂತೂ ೩ ಕಿ.ಮೀ ನಡೆದ್ವಿ. ಆಗ ೧:೧೫. ಬೀದಳ್ಳಿ ಅಂದ್ರೆ ದೊಡ್ಡ ಊರು ಅಂತ ಕಲ್ಪನೆಯಲ್ಲಿದ್ದೋರಿಗೆಲ್ಲಾ ಒಂದ್ಸಲ ಬೇಜಾರಾಯ್ತು. ಅಲ್ಲೊಂದು ಸಂಚಾರಿ ದವಾಖಾನೆ, ಶಾಲೆಮನೆ , ಸ್ಚಲ್ಪ ಮನೆಗಳ್ನ ಬಿಟ್ರೆ ಬೇರೇನೂ ಇರ್ಲಿಲ್ಲ. ನಮ್ಮ ಗುಂಪಲ್ಲಿ ಸಸ್ಯಾಹಾರಿಗಳೇ ಹೆಚ್ಚಿದ್ದ ಕಾರಣ ಮೂಲೆಯ ಚಿಕನ್ ಕ್ಯಾಂಟೀನ್ಗಳನ್ನು ಹುಡುಕೋ ಗೋಜಿಗೆ ಹೋಗಲಿಲ್ಲ. ಹೆಗಡೇಮನೆಗೆ ಇಲ್ಲಿಂದ ೨.೫ ಕಿ.ಮೀ ದಾರಿ ಅಷ್ಟೇ. ಅಲ್ಲಿಂದ ಪುಷ್ಪಗಿರಿಗೆ ೪.೫ ಕಿ.ಮೀ ಅಷ್ಟೆ(ಮಲ್ಲಳ್ಳಿಯಲ್ಲಿದ್ದ ಬೋರ್ಡ್ ಪ್ರಕಾರ!) ಹಾಗಾಗಿ ಅಲ್ಲಾದರೂ ಏನಾದರೂ ತಿನ್ನೋಕೆ ಸಿಗಬಹುದು ಅಂತ ಮತ್ತೆ ನಡೆಯೋಕೆ ಶುರು ಮಾಡಿದ್ವಿ. ಈಗ ಶುರು ಆಗಿದ್ದು ನೋಡಿ ಬಿಸಿಲಿನ ಪ್ರತಾಪ. ಮಲ್ಲಳ್ಳಿಯಲ್ಲಿ ಸ್ವಲ್ಪ ಮರಗಳಾದರೂ ಇತ್ತು. ಇಲ್ಲಿ, ತಲೆ ಮೇಲೆ ಬಂದಿದ್ದ ಸೂರ್ಯನಿಗೆ ಅಡ್ಡವಾಗೋ ಯಾವ ಮರಗಳೂ ಇರಲಿಲ್ಲ. ಟೆಂಟು, ಒಂದು ದಿನದ ಹೆಚ್ಚಿಗೆ ಬಟ್ಟೆ, ಊಟ ತಿಂಡಿಯ ವಸ್ತು, ನೀರು ಹೀಗೆ ಎಲ್ಲಾ ಸರಂಜಾಮು ಹೊತ್ತಿದ್ದ ಮಣಬಾರದ ಬ್ಯಾಗ್ ಗಳನ್ನ ಹೊತ್ತು ಏರುಗಳನ್ನ ಏರುವಾಗ ಕುಡಿದ ನೀರೆಲ್ಲಾ ಬೆವರಾಗಿ ಮೈಮೇಲೆ ಹರಿದಂತ ಅನುಭವ. ಇದಕ್ಕೇ ಅಂತ ಕುಕ್ಕರನ್ನೂ ಹೊತ್ತು ತಂದಿದ್ದ ಫ್ರೆಂಡೊಬ್ಬನ ಕತೆಯೆಂತೂ ಇನ್ನೂ ಕಷ್ಟ.. ಅವಾಗಾವಾಗ ಗ್ಲೂಕೋಸ್, ಹೊತ್ತು ತಂದಿದ್ದ ಕಿತ್ತಳೆ ಹಣ್ಣುಗಳನ್ನು ಸಪ್ಲೆ ಮಾಡ್ತಾ ಮಧ್ಯಾಹ್ನದ ಬಿಸಿಲ, ಏರು ದಾರಿ ಸವೆಸಿದ್ವಿ.
walking in road from mallalli to hegdemane |
ಮೈಸುಡೋ ಬಿಸಿಲಿಗೆ ಅಂತ ಕ್ಯಾಪನ್ನೂ ತರದ ಬಗ್ಗೆ ಶಾಪ ಹಾಕಿ ಏನು ಪ್ರಯೋಜನ ? ತಲೆ ಬಗ್ಗಿಸಿ, ಮುಂದೆ ಬಾಗಿ ನಡೆದರೆ ಏರು ರಸ್ತೆ ಹತ್ತೋಕೂ ಸುಲಭ, ಬಿಸಿಲಿನಿಂದ ಆಗೋ ಸುಸ್ತೂ ಕಡಿಮೆ ಆಗತ್ತೆ ಅನ್ನೋ ಸತ್ಯ ಗೋಚರಿಸಿದ್ದು ಅವಾಗ್ಲೆ ! ಅಂತೂ ೨:೨೦ರ ಹೊತ್ತಿಗೆ ಹೆಗಡೇಮನೆ ತಲುಪಿದ್ವಿ. ಅಲ್ಲೂ ಮತ್ತೆ ನಿರಾಸೆ. ಕೊನೆಗೆ ಅಲ್ಲೇ ಒಂದು ಮನೆಯಲ್ಲಿ ಕೇಳಿದ್ವಿ. ಇಲ್ಲಿಂದ ಪುಷ್ಪಗಿರಿಗೆ ಹೋಗೋದೆಂಗೆ, ಹತ್ರ ಏನಾದ್ರೂ ತಿನ್ನಕ್ಕೆ ಸಿಗತ್ತಾ ಅಂತ. ಅಲ್ಲೂ ಏನೂ ಸಿಗಲ್ವಂತೆ. ಯಾವದಾದ್ರೂ ಮನೆಯಲ್ಲಿ ಕೇಳಿದ್ರೆ ಅಡುಗೆ ಮಾಡಿ ಕೊಡ್ತಾರಂತೆ. ಸರಿ, ನಿಮ್ಮನೇಲೇ ಅಡ್ಗೆ ಮಾಡಿ ಕೊಡ್ತೀರ ಅಂತ ಕೇಳಿದ್ವಿ. ಆಯ್ತು, ಅರ್ಧ ಘಂಟೆ ಆಗತ್ತೆ, ಚಿಕನ್ ಎಲ್ಲಾ ಆಗಲ್ಲ, ಅನ್ನ-ಸಾಂಬಾರು ಮಾಡ್ತೀವಿ ಅಂದ್ರು. ಬೆಳಗ್ಗಿಂದ ನಡೆನಡೆದು ಸುಸ್ತಾಗಿದ್ದ ನಮಗೆ ಅದೇ ಮಿನಿ ಸ್ವರ್ಗ ಅನಿಸಿ ಸರಿ ಅಂದ್ವಿ. ಸುಸ್ತಾದವ್ರಿಗೆ ನೆಲ ಕಂಡ್ರೆ ಸಾಕಾಗಿರತ್ತೆ. ಅದು ಎಲ್ಲಿ, ಹೇಗೆ ಅನ್ನೋದ್ರ ವಿವೇಚನೇನೂ ಇಲ್ದೇ ಮಲಗೋ ಹಾಗಾಗಿರತ್ತೆ. ಅಲ್ಲೇ ರಸ್ತೆ ಪಕ್ಕ ಮಲಗಿದ್ವಿ.
Time pass at hegde mane |
ಎಲ್ಲೋ ಅಪರೂಪಕ್ಕೊಮ್ಮೆ ಅಲ್ಲಿನ ಶಾಂತ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದಿದ್ದ ಬೈಕುಗಳು ವಾಪಾಸ್ ಹೋಗಿದ್ದು ಬಿಟ್ರೆ ಆ ರಸ್ತೆಯಲ್ಲಿ ಬೇರಾವ ವಾಹನ ಸಂಚಾರವೂ ಇರ್ಲಿಲ್ಲ. (ಹಾಗಾಗಿ ರಸ್ತೆ ಮೇಲೇ ಮಲಗಿದ್ರೂ ಏನೂ ಆಗ್ತಿರ್ಲಿಲ್ಲವೇನೋ ! ) ಅಲ್ಲೇ ಆಡುತ್ತಿದ್ದ ಕೋಳಿ, ಹುಂಜಗಳ್ನ ನೋಡ್ತಾ ಊಟ ಯಾವಾಗ ಬರುತ್ತೆ ಅಂತ ಕಾಯ್ತಾ ಕೂತ್ವಿ, ಅಲ್ಲಲ್ಲ ಮಲಗಿದ್ವಿ. ಮೂರಾಯ್ತು, ಮೂರೂಕಾಲಾದ್ರೂ ಊಟದ ಸುಳಿವಿಲ್ಲ. ಇಲ್ಲೇ ತೀರಾ ಲೇಟಾದ್ರೆ ಬೆಟ್ಟ ಹತ್ತೋಕೆ ಆಗೋಲ್ವೇನೋ ಅನ್ನೋ ಹೆದರಿಕೆ ಶುರು ಆಯ್ತು.
ಅಷ್ಟರಲ್ಲೇ ಊಟಕ್ಕಾಯ್ತು ಅಂತ ಆ ಮನೆಯ ಅಮ್ಮ(ಪೇಟೆಯಲ್ಲಾಗಿದೆ ಆಂಟಿ) ಕರದ್ರು. ಮನೆಯ ಹೊರಗಡೆ ಚಾಪೆಯ ಮೇಲೆ ನಮ್ಮ ಊಟದ ಸಮಾರಂಭ ! ಸಾಂಬಾರ್, ಕೋಸು ಪಲ್ಯ, ಮಜ್ಜಿಗೆ ಇದ್ದ ಹೊಟ್ಟೆ ತುಂಬ ಊಟದ ನಂತರ ಬಾಳೆಹಣ್ಣು. ಸಾಮಾನ್ಯವಾಗಿ ಇಂತ ಸಮಯದಲ್ಲಿ ಪ್ರವಾಸಿಗರ ಹತ್ತಿರ ಸುಲಿಯುವವರೇ ಹೆಚ್ಚು. ಅಂದು ನಾವು ಊಟಕ್ಕೆ ಕೊಟ್ಟಿದ್ದು ತಲಾ ೩೦ ರೂ ಅಷ್ಟೆ. ಆ ತಾಯಿಯ ಹೆಸರು ಎಮ್ ಎಚ್ ಲೀಲಾ ಅಂತೆ. 080276201165. ನೀವೇನಾದರೂ ಈ ದಾರಿಯಲ್ಲಿ ಹೋಗೋದಾದ್ರೆ ಅಲ್ಲಿಗೆ ಮುಂಚೆಯೇ ಫೋನ್ ಮಾಡಿ ಊಟಕ್ಕೆ ಹೇಳಬಹುದು!
Lunch at Hegdemane |
ಅಲ್ಲಿಂದ ಮತ್ತೆ ೧ ಕಿ.ಮೀ ನಡೆದು ಶಾಂತ ಮಲ್ಲಿಕಾರ್ಜುನ ದೇವಸ್ಥಾನ ತಲುಪಿದ್ವಿ. ಆ ಪ್ರದೇಶಕ್ಕೆ ಕುಮಾರಳ್ಳಿ ಅಂತಲೂ ಹೆಸರಿದೆ. ಕುಮಾರಳ್ಳಿ, ಕುಮಾರಪರ್ವತ, ನಾಗಪರ್ವತ, ಮಲ್ಲಳ್ಳಿ, ಮಲ್ಲಿಕಾರ್ಜುನ.. ಹೀಗೆ ಕುಕ್ಕೆಯ ಹತ್ತಿರವಿರೋ ಆ ಸುತ್ತಮುತ್ತಲ ಪ್ರದೇಶಗಳೆಲ್ಲಾ ಹೆಸರಲ್ಲೂ ಶ್ರೀ ಸುಬ್ರಮಣ್ಯನ ಪ್ರಭಾವಕ್ಕೊಳಗಾದಂತಿದೆ. ಬೆಟ್ಟದ ತಪ್ಪಲಲ್ಲಿರೋ ಸುಂದರ ದೇವಸ್ಥಾನ. ಅಲ್ಲಿನ ದೇವರಿಗೆ ಮಂತ್ರದ ಬದಲು ಹಾಡಲ್ಲಿ ಪ್ರಾರ್ಥಿಸುತ್ತಿದ್ದ ಅರ್ಚಕರ ಶೈಲಿ ಅಪರೂಪವಾದ್ದು. ಬೆಟ್ಟದಲ್ಲಿ ಆನೆಗಳಿರುತ್ತೆ. ಇಲ್ಲೇ ಉಳಿದು ನಾಳೆ ಹೋಗಿ ಅಂದ್ರು ಅಲ್ಲಿದ್ದ ಅಜ್ಜಿಯೊಬ್ಬರು. ಅಲ್ಲೇ ಉಳಿಯೋ ಮನಸ್ಥಿತಿಯಲ್ಲಿ ನಾವ್ಯಾರೂ ಇರಲಿಲ್ಲ. ಹಾಗೇ ಮುಂದೆ ಸಾಗಿದ್ವಿ.
Real Kumara parvata Trecking starting from Shanta Mallikarjuna temple |
ಅಲ್ಲೇ ಪಕ್ಕದಲ್ಲಿ ಮತ್ತೊಂದು ಚೆಕ್ ಪೋಸ್ಟ. ಅವರೂ ನಮಗೆ ಮೇಲೆ ಹತ್ತೋದು ಬೇಡ, ಕತ್ತಲಾಗುತ್ತಾ ಬರ್ತಾ ಇದೆ ಅಂದ್ರು. ನಾವು ಟೆಂಟು, ಬ್ಯಾಟರಿ ಎಲ್ಲಾ ಇದೆ, ಏನೂ ಅಪಾಯ ಇಲ್ಲ ಅಂತ ಹೇಳಿದ ಮೇಲೆ, ಸರಿ, ಆರೂವರೆ ಒಳಗೆ ಕೆಳಗಿಳಿಯಬೇಕು ಅಂತ ಶರತ್ತು ಹಾಕಿದ್ರು. ಬೋರ್ಡಿನ ಪ್ರಕಾರ ಇನ್ನು ನಾಲ್ಕು ಕಿಮೀ ಇರಬಹುದು ಅಷ್ಟೇ ಅಂತ ಲೆಕ್ಕ ಹಾಕಿದ ನಾವೂ ಹೂಂ ಅಂದೆವು!
ಹತ್ತೋಕೆ ಶುರು ಮಾಡಿದ ಮೇಲೇ ಗೊತ್ತಾಗಿದ್ದು ಕುಮಾರ ಪರ್ವತ ಚಾರಣ ಅಂದ್ರೆ ಏನು ಅಂತ. ಸುತ್ತ ಹಸಿರ ಹುಲ್ಲುಗಾವಲು.. ಮಧ್ಯ ಸಾಗುತ್ತನೇ ಇರೋ, ಮುಗಿಯಲೊಲ್ಲದ ದಾರಿ. ಈ ಚೆಕ್ ಪೋಸ್ಟಿಂದ ಸುಮಾರು ಎರಡೂವರೆ ಕಿ.ಮೀ ನಡೆದ ಮೇಲೆ ಮತ್ತೊಂದು ಚೆಕ್ ಪೋಸ್ಟ್! ಅದೇ ಪುಷ್ಪಗಿರಿ ಚೆಕ್ ಪೋಸ್ಟ್. ಅಲ್ಲಿ ತಲಾ ೨೦೦ ರೂ ಕೊಟ್ಟ ಮೇಲೇ ಪುಷ್ಪಗಿರಿ ಬೆಟ್ಟದ ಚಾರಣಕ್ಕೆ ಅವಕಾಶ. ಅದೂ ಸಂಜೆ ೪:೩೦ ರ ಮೇಲೆ ಹತ್ತೋಕೆ ಬಿಡಲ್ವಂತೆ. ನೀವೇನಾದ್ರೂ ಈ ದಾರೀಲಿ ಹೋಗೋದಾದ್ರೆ ೩:೩೦ ಅತವಾ ೩ ರ ಒಳಗೇ ಈ ಚೆಕ್ ಪೋಸ್ಟಿನ ಬಳಿ ಇರೋದು ಕ್ಷೇಮ. ಯಾಕಂದ್ರೆ ಮುಂದಿನ ದಾರಿ ಇನ್ನೂ ಕಷ್ಟಕರವಾಗಿದೆ.ಅಲ್ಲಿ ಹುಲಿ, ಆನೆ, ಹೆಬ್ಬಾವು, ಕರಡಿ ಹೀಗೆ ಹಲವಾರು ಕ್ರೂರ ಪ್ರಾಣಿಗಳಿವೆ ಅಂತ ಬೋರ್ಡೋ ಹಾಕಿದ್ರು. ನಾವು ಏನು ಮಾಡಿದ್ರೂ ನಮ್ಮನ್ನ ಮುಂದೆ ಬಿಡ್ಲಿಲ್ಲ. ನೀವು ಇಲ್ಲೇ ಇರಿ, ಏನು ಬೇಕಾದ್ರೂ ಪಾರ್ಟಿ ಮಾಡಿ, ನಮ್ಮದೇನೂ ಅಭ್ಯಂತರ ಇಲ್ಲ ಅನ್ನೋ ಅಲ್ಲಿನ ಇಬ್ಬರು ಗಾರ್ಡುಗಳು..ಚಾರಣಕ್ಕೆ ಅಂತ ಜನ ಬರೋದು ಪ್ರಕೃತಿ ಸೌಂದರ್ಯ ಆನಂದಿಸೋಕಾ ಅತ್ವಾ ಎಣ್ಣೆ ಹೊಡೆದು ಮಜಾ ಮಾಡೋಕಾ ಅಂತ ಅರ್ಥ ಆಗ್ಲಿಲ್ಲ :-( ನಾವು ಅಂತಹವರಲ್ಲ ಅಂತ ಎಷ್ಟು ಹೇಳಿದ್ರೂ ಅವರು ಕೇಳದೇ ಅವರ ರೂಲ್ಸ್ ಅಂತ ಕೂತಿದ್ರು. ಮೇಲಧಿಕಾರಿಗಳ ಜೊತೆಗೆ ಮಾತಾಡಿದ್ರೂ ಪ್ರಯೋಜನವಾಗಲಿಲ್ಲ. ಬೇಗ ನಡೆಯಿರಿ ಅಂದ್ರೂ ಕೇಳದೇ ಹೆಜ್ಜೆ ಮೇಲೆ ಹೆಜ್ಜೆ ಹಾಕಿದ(?) ಗೆಳೆಯರಿಗೆ ಬಯ್ಯುತ್ತಾ ಅಲ್ಲೇ ಕೂತಿರೋವಾಗ ಬೆಂಗಳೂರಿನ ಹತ್ತು ಜನ ಚಾರಣಿಗರ ಮತ್ತೊಂದು ತಂಡ ಬಂತು!ಅಂತೂ ಹತ್ತೊಂಬತ್ತು ಜನರಾದ ಕಾರಣ ನಮ್ಮನ್ನು ಮುಂದೆ ಬಿಟ್ಟರು!
ಕತ್ತಲಾಗ್ತಾ ಬಂದಿದೆ, ಬೇಗ ಬೇಗ ಸಾಗಬೇಕಾದಂತ(ಓಡಬೇಕಾದಂತ) ಪರಿಸ್ಥಿತಿ. ಎದ್ದೆನೋ, ಬಿದ್ದೆನೋ ಅಂತ ಜೋರಾಗಿ ಹೆಜ್ಜೆ ಹಾಕಲಾರಂಭಿಸಿದ್ವಿ. ಅವತ್ತು ಚೆನ್ನಾಗಿ ದಾರಿ ತಿಳಿದಿದ್ದ ಆ ಹತ್ತು ಜನರ ತಂಡ ಸಿಗದಿದ್ರೆ ನಾವು ಖಂಡಿತಾ ಅಂದು ಆ ಬೆಟ್ಟ ಹತ್ತುತ್ತಿರಲಿಲ್ಲ. ಮಧ್ಯ ಮಧ್ಯ ಮರಗಳಿಗೆ ಫಲಕಗಳನ್ನು ಹೊಡೆದು ಈ ನಿಟ್ಟಿನಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ ಅರಣ್ಯ ಅಧಿಕಾರಿಗಳು. ಕತ್ತಲಾಗುತ್ತಾ ಬಂತು. ಇದ್ದ ಎಲ್ಲಾ ಬ್ಯಾಟರಿಗಳು, ಮೊಬೈಲ್ ಬ್ಯಾಟರಿಗಳು ಹೊರಬಂದವು. ....
****************************************************************
ಕುಮಾರ ಪರ್ವತದ ಮುಂದಿನ ಭಾಗವೂ ರೋಚಕವಾಗಿದೆ, ಮುಂದುವರೆಸಿರಿ...
ReplyDeleteನಿಮ್ಮ ಮೆಚ್ಚುಗೆ ಮತ್ತು ಪ್ರೊತ್ಸಾಹಗಳಿಗೆ ಧನ್ಯವಾದಗಳು ಬದ್ರಿ ಸರ್ :-)
Deleteಕುಮಾರ ಪರ್ವತ ಯಾವತ್ತಿಗೂ ಉತ್ಸಾಹದ ಚಿಲುಮೆ ಉಕ್ಕಿಸುತ್ತದೆ...ನಿಮ್ಮ ಅನುಭವಗಳು ಗುಡ್ಡೆ ಯಾಗುತ್ತ ಬರುತ್ತಿದೆ..ಇನ್ನಷ್ಟು ರಾಶಿಯಾಗಲಿ..ಸುಂದರವಾದ ನಿಮ್ಮ ಬರಹದ ಶೈಲಿ ಇಷ್ಟವಾಗುತ್ತದೆ.ಮುಂದುವರೆಯಲಿ ಕಥಾನಕ. ಚಿತ್ರಗಳು ಬಹಳ ಸೊಗಸಾಗಿದೆ...
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಶ್ರೀಕಾಂತ್ ಜೀ.
Deleteಬ್ಲಾಗಿಗೆ ಸ್ವಾಗತ.
ನೀವೆಂದಂತೆ ಬರೆಯಲು ಪ್ರಯತ್ನಿಸುತ್ತೇನೆ :-)
ತುಂಬಾ ಸೊಗಸಾಗಿದೆ ನಿಮ್ಮ ಚಾರಣ ಕಥನ
ReplyDeleteನಿಮ್ಮ ಮೆಚ್ಚುಗೆಗೆ ಮತ್ತು ಬ್ಲಾಗ್ ಭೇಟಿಗೆ ಧನ್ಯವಾದಗಳು ಮೋಹನ್ :-)
Deleteಬರ್ತಾ ಇರಿ :-)