ಮೊನ್ನೆ ಗೆಳೆಯರೊಬ್ಬರು ಫೇಸ್ಬುಕ್ ಮತ್ತು ಗೂಗಲ್ಲು ನಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತಿದೆ ಅಂತ ಹೇಳ್ತಾ ಇದ್ದರು. ನಿಮಗೂ ಇದರ ಅನುಭವವಾಗಿರಬಹುದು. ಉದಾಹರಣೆಗೆ ನೀವು ಬ್ಯಾಂಕಲ್ಲಿ ಎಫ್.ಡಿ ಇಡೋಕೆ ಬಡ್ಡಿ ಎಷ್ಟು ಅಂತ ಗೂಗಲ್ಲಲ್ಲಿ ಹುಡುಕಿದ್ದೀರ ಅಂತಂದುಕೊಂಡರೆ ನಿಮ್ಮ ಜಿಮೇಲ್ ಖಾತೆಗೆ ವಿವಿಧ ಬ್ಯಾಂಕುಗಳ ಜಾಹೀರಾತುಗಳು ಬರುತ್ತೆ. ನೀವು ಅಮೇಜಾನಿನಲ್ಲಿ ಯಾವುದೋ ಒಂದು ಕಂಪೆನಿಯ ಬಟ್ಟೆಯನ್ನೋ ಮೊಬೈಲನ್ನೋ ಹುಡುಕಿದ್ದೀರ ಅಂದರೆ ನಿಮ್ಮ ಫೇಸ್ಬುಕ್ಕಿನಲ್ಲಿ ಆ ಕಂಪೆನಿಯ ಜಾಹೀರಾತುಗಳು ಬರುತ್ತಿರುತ್ತೆ ! ನಾನು ಏನಾರೂ ಹುಡುಕಿಕೊಳ್ಳಲಿ , ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರ. ಅದನ್ನು ಈ ಫೇಸ್ಬುಕ್ಕು, ಜೀಮೇಲು, ಗೂಗಲ್ಲಿನವರು ಜಾಹೀರಾತು ಕಂಪೆನಿಗಳಿಗೆ ಮಾರೋದ್ಯಾಕೆ ? ಅವರು ನಮಗೆ ಈ ಸಂಬಂಧದ ಜಾಹೀರಾತು ಕಳುಹಿಸೋದ್ಯಾಕೆ ಅಂತ ನಿಮ್ಮಲ್ಲಿ ಸುಮಾರು ಜನ ಗೊಣಗಿಕೊಂಡೂ ಇರ್ತೀರ. ಆದರೆ ಅದಕ್ಕೆಲ್ಲಾ ನೀವೇ ಕಾರಣರು ಮತ್ತು ನಿಮ್ಮ ಕಂಪ್ಯೂಟರ್/ಮೊಬೈಲ್ ಅಂದರೆ ನಂಬ್ತೀರಾ ? ಹೌದು. ಅದಕ್ಕೆಲ್ಲಾ ಕಾರಣ ನೀವೆ. ಅದೇಗೆ ಅಂತ ನೋಡೋಣ.
Welcome to Prashantavanam
Monday, March 21, 2022
ನಿಮ್ಮ ಮಾಹಿತಿ ಹರಾಜಿಗಿದೆ!
Friday, December 17, 2021
ಕಂಪ್ಯೂಟರ್ ಸಾಕ್ಷರತಾ ದಿನ
ಇತ್ತೀಚೆಗೆ ನನ್ನ ಗೆಳೆಯರೊಬ್ಬರಿಂದ "Is it you in the Video?" ಅಂತ ಫೇಸ್ಬುಕ್ ಮೆಸೆಂಜರಿನಲ್ಲಿ ಮೆಸೇಜ್ ಬಂದಿತ್ತು. ನಾನ್ಯಾವ ವೀಡೀಯೋನೂ ಹಾಕಿಲ್ಲ ಅನ್ನೋದು ನನಗೆ ಗೊತ್ತಿದ್ದರಿಂದ ಆ ಮೆಸೇಜನ್ನು ತೆರೆಯಲಿಲ್ಲ. ಎರಡ್ಮೂರು ದಿನದ ನಂತರ ಅವರು ಫೋನ್ ಮಾಡಿ ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ, ಅದರಿಂದ ಯಾವ ಮೆಸೇಜ್ ಬಂದರೂ ಉತ್ತರಿಸಬೇಡಿ ಅಂತಂದ್ರು. ಅವರಿಗೂ ಇದೇ ತರದ ಮೆಸೇಜ್ ಬಂದು ಅದನ್ನ ಓಪನ್ ಮಾಡಿದ್ರಂತೆ. ಅದಾಗಿ ಕೆಲವೇ ದಿನಗಳಲ್ಲಿ ಮತ್ತೆ ಎರಡ್ಮೂರು ಗೆಳೆಯರಿಂದ ಇದೇ ತರದ ಮೆಸೇಜ್! ಕೆಲದಿನಗಳಲ್ಲೇ ಅವರೂ ತಮ್ಮ ಅಕೌಂಟ್ ಹ್ಯಾಕಾಗಿದೆ ಅಂತ ಫೇಸ್ಬುಕ್ಕಲ್ಲೇ ಹಾಕಿದ್ರು. ಇದ್ಯಾಕೆ ಹೀಗಾಗತ್ತೆ ಅಂತೀರಾ ? ನಾವು ಅಂತರ್ಜಾಲದಲ್ಲಿರೋ ಎಲ್ಲದನ್ನೂ ಕಣ್ಣು ಮುಚ್ಚಿಕೊಂಡು ನಂಬೋದು ಅಥವಾ ಕಂಪ್ಯೂಟರ್/ಡಿಜಿಟಲ್ ಅನಕ್ಷರಸ್ಥರಾಗಿರೋದು ! ಏನಿದು ಕಂಪ್ಯೂಟರ್/ಡಿಜಿಟಲ್ ಅನಕ್ಷರತೆ ಅಂತೀರಾ ? ಅಂದ ಹಾಗೆ ಕಂಪ್ಯೂಟರ್ ಅನಕ್ಷರತೆಗೂ ಡಿಜಿಟಲ್ ಅನಕ್ಷರತೆಗೂ ಸುಮಾರು ವ್ಯತ್ಯಾಸಗಳಿವೆ. ಈ ಕಂಪ್ಯೂಟರ್ ಅನಕ್ಷರತೆ ಅಂದರೆ ಏನೆಂಬುದನ್ನು ನೋಡೋಣ
Monday, July 13, 2020
ನಾನೋದಿದ ಪುಸ್ತಕ ಹಿರಿಯೂರಿನ ಸರಹದ್ದು, ಸ್ವರೂಪ ಮತ್ತು ನಿಗೂಢ ಮನುಷ್ಯರು
| Huliyoorina sarahaddu |
ತೇಜಸ್ವಿಯವರ ಬರಹಗಳು ಕಾಡೋದು ಅವರ ಬರಹಗಳಲ್ಲಿ ಮೇಳವಿಸಿರೋ ಮಲೆನಾಡ ಚಿತ್ರಣದಿಂದಿರಬಹುದೇನೋ. ಬೆಂಗಳೂರಿನಲ್ಲಿ ಕೆಲವು ಘಂಟೆಗಳ ಕಾಲ ಮಳೆಯಾದರೇ ರಸ್ತೆಗಳೆಲ್ಲಾ ಉಕ್ಕಿ ಹರಿದು ಮಿನಿ ಪ್ರವಾಹದ ಪರಿಸ್ಥಿತಿ. ಅಂತಹ ಸ್ಥಿತಿಯಿಂದ ಬಂದವರಿಗೆ ಮಳೆಕಾಡಲ್ಲಿ ಎರಡ್ಮೂರು ದಿನ ಬಿಡದೇ ಮಳೆ ಹೊಡೆಯುತ್ತೆ ಎಂಬುದನ್ನು ಊಹಿಸಲೂ ಸಾಧ್ಯವಾಗದೇನೋ. ಹೊಟ್ಟೆಪಾಡಿಗಾಗಿ ಅಂತದ್ದೇ ಬೆಂದಕಾಳೂರಲ್ಲಿದ್ದ ಜನರೀಗ ಕರೋನಾಕ್ಕೆ ಹೆದರಿ ಮತ್ತೆ ಊರುಗಳತ್ತ ಸಾಗಿದ್ದಾರಾ ಅನಿಸುವ ಹೊತ್ತಿಗೆ ಮಲೆನಾಡಲ್ಲಿ ಮಳೆಯ ಆರ್ಭಟ ಶುರು. ಮಳೆಗಾಲವಾದರೂ ಶುರುವಾಗದ ಮಳೆ, ತುಂಬದ ಬಾವಿಗಳೆಲ್ಲಾ ತುಳುಕಾಡುವಷ್ಟು ಮಳೆ ಮೂರ್ನಾಲ್ಕು ದಿನಗಳಿಂದ ಹೊಡೀತಾ ಇತ್ತು. ಭಾರೀ ಮಳೆಯ ನಂತರ ಸ್ವಲ್ಪ ಜುಮುರು, ಅದರ ನಂತರ ಇಬ್ಬನಿಯಂತೆ ಮಳೆ. ಮತ್ತೆ ಇದರದೇ ಆವರ್ತನವಿತ್ತೇ ಹೊರತು ಬಿಸಿಲಿರಲಿಲ್ಲ! ಮೋಡಗಳ ಮರೆಯಲ್ಲೇ ಲಾಕಾಗಿದ್ದ ಸೂರ್ಯನ ದರ್ಶನವಿಲ್ಲದೇ, ಬಟ್ಟೆಗಳೊಣಗದೇ ದಿನ ಮೂರಾಗಿತ್ತು.ಇಂತದೇ ಮಳೆಕಾಡ ನಮ್ಮೂರ ಸಮೀಪದ ಊರು ಚಂದ್ರಗುತ್ತಿ. ಅದು ತೇಜಸ್ವಿಯವರ ನಿಗೂಢ ಮನುಷ್ಯರು ಕಾದಂಬರಿಯ ಎಳೆ ಶುರುವೂ ಹೌದು.
ಚಂದ್ರಗುತ್ತಿಯ ಸಮೀಪದ ನುಗುಬೀಡುವಿನಿಂದ ದುಗ್ಗು ಮಾರ್ಗವಾಗಿ ನವಿಲುಗುಂದಕ್ಕೆ ಹೊರಟಿರೋ ೭೦ರ ದಶಕದ ಕಾರೊಡೆಯ ಜಗನ್ನಾಥ. ಅವನ ಜೊತೆಗೂಡೂ ರೆವಿನ್ಯೂ ಇನ್ಸಪೆಕ್ಟರ್ ರಂಗಪ್ಪನಿಗೆ ಪರಿಚಯವಾಗೋದು ಸಿಐಡಿ ಗೋಪಾಲಯ್ಯ. ಅನುಭವಗಳ ಅರಸಿ ಹೊರಡೋ ಇವರಿಗೆ ಸಿಗೋ ಕ್ರಾಂಪ, ಮರಸರ, ಉಕ್ಕಿ ಹರಿಯ ಎಣ್ಣೆಹೊಳೆ, ಉರುಳೋ ಗಿರಿ , ಏಲಕ್ಕಿ ತೋಟ, ಶಾರಿ ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಕಥೆ, ವಿಚಿತ್ರ ವ್ಯಥೆ . ಪ್ರತೀ ಪಾತ್ರದ ಮಾತು ಕೇಳ್ತಿದ್ದರೆ ಆ ಪಾತ್ರವೇ ನಾವೇನೋ ಎನ್ನುವಂತಹ ಚಿತ್ರಣ. ಕೊಪ್ಪ, ಜಯಪುರ ಸಮೀಪದ ಕಾಫಿ ತೋಟಗಳಲ್ಲಿ ಅಲೆದಿದ್ದರೆ, ಮೇರಿತಿ ಬೆಟ್ಟದಂತಹ ಸ್ಥಳಗಳಿಗೆ ಕಿಲೋಮೀಟರುಗಟ್ಟಲೇ ಎಸ್ಟೇಟುಗಳ ಮಧ್ಯೆ ಸಾಗಿದ್ದರೆ ಇಲ್ಲಿ ಬರೋ ಹಾದಿಯ, ಸಿಕ್ಕಿ ಹಾಕಿಕೊಳ್ಳೋ ಪರಿಸ್ಥಿತಿಗಳ, ಏಲಕ್ಕಿ ತೋಟಗಳ ಕಲ್ಪನೆ ದಕ್ಕಬಹುದೇನೋ. ಇದೇ ಹಾದಿಯ ಕೊನೆ ಎನ್ನುವಂತ ಸ್ಥಳದತ್ತ ಸಾಗುತ್ತಿದ್ದೀರಿ ಎಂದುಕೊಳ್ಳಿ. ನೀವು ಒಂದು ಸ್ಥಳವನ್ನು ದಾಟಿದ ನಂತರ ಮರಳಿ ಬರಲಾರದಂತೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಅಲ್ಲಿ ಉಳಿಯಲು ಆಗುತ್ತಿಲ್ಲ. ಹಿಂಬರಲು ಆಗುತ್ತಿಲ್ಲ. ಹೇಗಾದರೂ ಮುಂದೆ ಸಾಗೋಣವೆಂದು ಅದೆಷ್ಟೋ ದಿನಗಳ ಪ್ರಯತ್ನದ ನಂತರ ಹೊರಟರೆ ಅತ್ತಲಿಂದಲೂ ಇತ್ತ ಬರುತ್ತಿರೋ ಜನ ! ಒಂದೆಡೆ ಪ್ರಪಾತ, ಇನ್ನೊಂದೆಡೆ ನುಂಗಲು ಬರುತ್ತಿರುವ ಹೆಬ್ಬಾವು, ಇವೆರಡರ ನಡುವೆ ಸಿಲುಕಿದಂತಹ ಪರಿಸ್ಥಿತಿ. ಗೊತ್ತು ಗುರಿಯಿಲ್ಲದ ಊರಲ್ಲಿ ನಂಬೋದ್ಯಾರನ್ನ, ಬಿಡೋದ್ಯಾರನ್ನ ? ಎದುರಿಗಿದ್ದವ ಹೇಳಿದ್ದರಲ್ಲಿ ಸತ್ಯವೆಷ್ಟು, ಸುಳ್ಳೆಷ್ಟು ? ಕೊನೆಗಾಣದ ಹಾದಿಯಲ್ಲಿ ಗೊತ್ತಿಲ್ಲದ ಜೀವದೊಂದಿಗೆ ಸಾಗಿದರೆ ಜೀವ ಉಳಿಯುತ್ತಾ ಎಂಬ ಅಸಂಖ್ಯ ಪ್ರಶ್ನೆಗಳನ್ನು, ಕುತೂಹಲವನ್ನು ಆಗಾಗ ಕೆರಳಿಸೋ ಈ ಕಾದಂಬರಿ, ಕೌತುಕ, ಭಯದ ನಡುವೆಯೇ ಒಂದು ಕಾಲದ ಮಳೆಕಾಡ ಚಿತ್ರಣವನ್ನು ಕಟ್ಟಿಕೊಡುತ್ತದೆ. ಎಕ್ಸ್ ಪ್ಲೋರಿಂಗ್ ದ ವೈಲ್ಡ್, ಶರಾವತಿ ಎಕ್ಸ್ ಪ್ಲೋರೆಷನ್ ಅಂತೆಲ್ಲಾ ಹೆಸರಿಟ್ಟು ಕಾಡು ಕಡಿದು ಹೋಂ ಸ್ಟೇ ಮಾಡಿದೋರು, ಕಾಡಲ್ಲಿ ನಾವು ಮಾಡಿದ್ದ ಕೇಳೋರು ಯಾರೂ ಇಲ್ಲ ಎಂದು ಬಾಟಲಿ ಒಡೆಯೋರು, ಕಸ ಹರಡೋರು, ಕಾಡ ಮಧ್ಯ ಟೆಂಟ್ ಹಾಕಿ, ಜಲಪಾತಗಳಲ್ಲಿ ಮಿಂದೇಳೋ ದಿನಗಳನ್ನೇ ಪ್ರಕೃತಿಯೊಡನೆಯ ಜೀವನ ಎನ್ನುವವರು ನಿಜವಾದ ಅರಣ್ಯವಾಸ ಎಷ್ಟು ರೋಚಕ ಮತ್ತು ಭಯಾನಕ ಎಂಬ ಕಲ್ಪನೆಯಾದರೂ ಹೊಂದಲು ಓದಬೇಕಾದ ಪುಸ್ತಕವಿದು.
Sunday, March 29, 2020
ಓಟಿಟಿ ಮತ್ತು ಮಾಲ್ಗುಡಿ ಡೇಸ್
ತಗೋಳಿ
ಅರೇ, ಇದೇನಿದು ? ನಾ ಕೇಳಿದ್ದು ಮೈಸೂರ್ ಪಾಕು
ಹೂಂ. ಇದೇ ಮೈಸೂರ್ ಪಾಕು
ಅರೆ, ಇದು ಪಾನಿಪೂರಿ ರೀ, ಮೈಸೂರ್ ಪಾಕ್ ಕೇಳಿದ್ರೆ ಪಾನಿಪೂರಿ ಕೊಡ್ತೀರಲ್ರೀ?
ಇದು ಮೈಸೂರು, ನಾ ಇದ್ನೇ ಮೈಸೂರ್ ಪಾಕ್ ಅಂತ ಕರೆಯೋದು !!
ಏನಪ್ಪಾ ಇದು ಅಂತ ಶಾಕಾದ್ರಾ ? ಮಾಲ್ಗುಡಿ ಡೇಸ್ ಅಂತ ಹೆಸರು ನೋಡಿ ಮೊದಲು ಶಂಕರ್ ನಾಗ್ ಅವ್ರ ಚಿತ್ರ ನೋಡಿ ಆ ಆರ್. ಕೆ. ನಾರಾಯಣನ್ ಅವ್ರ ಕತೆಯಾದಾರಿತ ಚಿತ್ರವನ್ನೇ ಮತ್ತೆ ಹೊಸದಾಗಿ ಸೃಷ್ಠಿಸುತ್ತಿದ್ದಾರ ಅಂತ ನಿರೀಕ್ಷೆಯಿಟ್ಟುಕೊಂಡು ನೋಡಿದ ನನಗೂ ಆದ ಅನುಭವ ಇದೇ ತರದ್ದು !
ಮುಂಚೇನೆ ಬರೆದ ಹಾಗೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೇ ಒದ್ದಾಡುತ್ತಿದ್ದ ಕಾಲದಲ್ಲಿ ವರದಂತೆ ಕಂಡಿದ್ದು ಓ.ಟಿ.ಟಿ(ಓವರ್ ದ ಟಾಪ್) ತಾಣಗಳು. ಅಂದರೆ ಈ ವಿಪರೀತ ರೇಟು ಕೇಳೋ ಕೇಬಲ್ಲು, ಚಿತ್ರಕ್ಕಿಂತ ಅಡ್ಬಟೈಸ್ಮೆಂಟುಗಳನ್ನೇ ಜಾಸ್ತಿ ತೋರಿಸೋ ಟೀವಿ ಚಾನೆಲ್ಲುಗಳು, ಅವುಗಳನ್ನು ಬಿತ್ತರಿಸೋ ಉಪಗ್ರಹಗಳ ಗೊಡವೆಯೇ ಬೇಡ ಎಂದು ಅಂತರ್ಜಾಲದ ಮೂಲಕ ನೇರ ವೀಕ್ಷಕರ ಮನೆ ಬಾಗಿಲಿಗೆ ಚಿತ್ರಗಳನ್ನು ತಲುಪಿಸುತ್ತಿರೋ ಅಮೇಜಾನ್ ಪ್ರೈಂ, ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ , ವೂಟ್ ನಂತಹ ವಾಹಿನಿಗಳೇ ಓ.ಟಿ.ಟಿ ವಾಹಿನಿಗಳು. ಈಗ ಫೇಸ್ಬುಕ್ಕಲ್ಲೂ ಸುಮಾರಷ್ಟು ಧಾರಾವಾಹಿಗಳ ಪೂರ್ಣ ಎಪಿಸೋಡುಗಳನ್ನ ಆ ವಾಹಿನಿಗಳೇ ಹರಿಬಿಡುತ್ತಿರೋದ್ರಿಂದ ಅದೂ ಒಂತರ ಓ.ಟಿ.ಟಿ ಆಗ್ತಾ ಇದ್ಯಾ ಅನಿಸುತ್ತೆ. ಕರೋನಾ ಕರಾಮತ್ತಿಗೆ ಚಿತ್ರಮಂದಿರಗಳನ್ನ ಬಾಗಿಲು ಹಾಕಬೇಕಾಗಿ ಬಂದು, ಚಿತ್ರಗಳ ಧಾರಾವಾಹಿಗಳ ಚಿತ್ರೀಕರಣ ಅನಿರ್ದಿಷ್ಟಾವಧಿಯವರೆಗೆ ನಿಲ್ಲಿಸಿರೋದ್ರಿಂದ ಇನ್ನು ೧೦-೧೨ ದಿನಕ್ಕಾಗುವಷ್ಟು ಸರಕು ಮಾತ್ರ ನಮ್ಮ ಬಳಿ ಇದೆ ಎಂದು ಪ್ರಮುಖ ಧಾರಾವಾಹಿಗಳ ನಿರ್ದೇಶಕರು ಮಾರ್ಚ್ ೨೩ರಂದು ಹೇಳಿಕೆ ಕೊಟ್ಟಿದ್ದರು. ಈ ಧಾರಾವಾಹಿಗಳು ಇರಲಿ ಬಿಡಲಿ, ಒಳ್ಳೆಯ ಚಿತ್ರಗಳಿಗೆಂತೂ ಎಂದೂ ಇರುವ ನೋಡುಗ ಬಳಗಕ್ಕೆ ಈ ಕರೋನಾದ ಲಾಕ್ಡೌನು, ವರ್ಕ್ ಫ್ರಂ ಹೋಮು, ಮಧ್ಯ ಮಧ್ಯ ಬರೋ ರಜಾ ದಿನಗಳು ಹೇಳಿ ಮಾಡಿಸಿದಂತಿವೆ. ಹೊರಗೆಂತೂ ಹೋಗೋ ಹಾಗಿಲ್ಲ. ಇನ್ನೇನು ಮಾಡೋದು, ಚಿತ್ರ ನೊಡೋದು ಅಷ್ಟೆ! .
ಮತ್ತೆ ಕತೆಗೆ ಬರೋದಾದ್ರೆ ಇದು ಮಾಲ್ಗುಡಿ ಅನ್ನೋ ಕಾಲ್ಪನಿಕ ಪಟ್ಟಣದ ಸುತ್ತ ನಡೆಯೋ ಕತೆ. ಕಥಾನಾಯಕ ಲಕ್ಶ್ಮೀನಾರಾಯಣ ಮತ್ತವನ ಪ್ರಿಯತಮೆ ಲಿನೇಟಾರ ಪ್ರೇಮಕತೆ ಶುರುವಾಗೋದು ಎಸ್ಸೆಸ್ಸೆಲ್ಸಿಯಲ್ಲಾದರೂ ಮುಗಿಯೋದು ಇಬ್ಬರ ವೃದ್ಧಾಪ್ಯದಲ್ಲಿ. ಅಂದರೆ ಇವರು ಲವ್ ಮಾಡಿ ಮದುವೆಯಾದರಾ ? ಅಂದ್ರೆ ಇಲ್ಲ. ಮದುವೆಯಾಗದೇ ಉಳಿದರಾ ಅಂದರೆ ಅದೂ ಇಲ್ಲ ! ಹೆಸರಾಂತ ಕತೆಗಾರನಾಗೋ ಲಕ್ಶ್ಮೀನಾರಾಯಣ ಮಾಲ್ಗುಡಿ ತನ್ನ ಕತೆಗಳು ಇಂದಿನ ಪೀಳಿಗೆಗೆ ರುಚಿಸುತ್ತಿಲ್ಲ ಎಂದರಿತು ಬರೆಯುವುದನ್ನೇ ನಿಲ್ಲಿಸುವ ತೀರ್ಮಾನದಲ್ಲಿರುವ ಅವರ ಜೀವನದಲ್ಲಿ ಹಲವು ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅವೇ ಬೆಂದಕಾಳೂರಲ್ಲಿ ಬೇಯುತ್ತಿರೋ ಅವರನ್ನು ಮತ್ತೆ ಮಾಲ್ಗುಡಿಯತ್ತ ಕರೆತರುತ್ತದೆ. ಕತೆ ಇಷ್ಟೇ ಆದರೂ ಅದಕ್ಕೊಂದಿಷ್ಟು ಸವಿಯಿತ್ತಿದ್ದು ಅಂದರೆ ಬಾಲ್ಯದ ಲಕ್ಷ್ಮಿ, ವಿಮಲ, ಭಟ್ಟ , ಸಂತು ಮತ್ತು ಸರಸ್ವತಿ ಟೀಚರ್ರಿನ ಶಾಲಾ ದೃಶ್ಯಗಳು ಮತ್ತು ಮಲೆನಾಡ ಮಳೆ. ನಮ್ಮ ಬೆಂಗಳೂರಿನ ಲಾಲ್ ಬಾಗೇನಾ ಇದು, ಇದು ನಮ್ಮ ಮಲೆನಾಡ ತೀರ್ಥಹಳ್ಳಿ, ಹೊಸನಗರಗಳೇನಾ ಇವು ಅನ್ನುವಷ್ಟು ಅದ್ಭುತವಾಗಿ ತೋರಿಸಿರೋ ಸಿನಿಮಾಟೋಗ್ರಫಿ ಮೊದಲಾರ್ಧವನ್ನು ಆಪ್ತವೆನಿಸುತ್ತೆ. ಪಾಂಡಿಚೇರಿಯ ಪ್ರೇಮ ಪ್ರಸಂಗ, ಆಫೀಸಿನ ಬಾಸ ದೌರ್ಜನ್ಯ, ತಾಯಿಯ ಸಂಸ್ಕಾರಕ್ಕೂ ಬರಲಾಗದ ಮಗಳ ಪರಿಸ್ಥಿತಿ, ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಅಂತ ಊರಿಗೇ ಬೆಂಕಿಯಿಡೋ ಗಿರಿರಾಜ ಮತ್ತು ಮಗಳಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿ ನಂತರ ಪರಿತಪಿಸೋ ತಂದೆ, ತಾಯಿಗೆ ಮದುವೆ ಮಾಡಲಿಷ್ಟವಿದ್ದರೂ ತನಗೇ ಇಷ್ಟವಿರದಿದ್ದ ಮಗಳು ಹೀಗೆ ಹಲವು ಭಾವಗಳ, ಪರಿಸ್ಥಿತಿಗಳ ಛಾಯೆ ಪಾತ್ರಗಳಲ್ಲಿ ಹಾಸು ಹೋಗುತ್ತದೆ. ಇನ್ನು ಚಿತ್ರದುದ್ದಕ್ಕೂ ಕಾಡೋ ರಘು ದೀಕ್ಷಿತ್ ಸಂಗೀತ ಚಿತ್ರ ಮುಗಿದರೂ ನಮ್ಮನ್ನ ಕಾಡುತ್ತಿರುತ್ತೆ. ಮನೆಯಿದ್ದರೆ ಹೀಗಿರಬೇಕು ಎಂಬಂತೆ ತಯಾರಿ ಮಾಡಿರೋ ಪ್ರಕೃತಿಯ ಮನೆ, ವಿಜಯ್ ಪಾತ್ರಕ್ಕಾಗಿ ಹೊಸದಾಗಿ ಎಂಟ್ರಿ ಕೊಟ್ಟಿರೋ ತುಳುನಾಡ ಹುಡುಗ ಅರ್ಜುನ್ ಕಾಪಿಕಾಡ್ ಅವರ ನಟನೆ, ನೃತ್ಯ ಕೂಡ ಮುದ ನೀಡುತ್ತೆ.
ಇಷ್ಟೆಲ್ಲಾ ಇದ್ದರೂ ಮೈಸೂರು ಪಾಕು, ಪಾನಿಪೂರಿಯ ಹೋಲಿಕೆ ಯಾಕೆ ಅಂತ ಅಂದ್ಕೊಂಡ್ರಾ ? ಚಿತ್ರದಲ್ಲಿರೋ ಸುಮಾರು ಅಸಂಬದ್ಧಗಳೇ ಅದಕ್ಕೆ ಕಾರಣ. ಮೊದಲಿಗೆ ಮಾಲ್ಗುಡಿ ಡೇಸ್ ಅಂತ ಹೆಸರಿಟ್ಟುಕೊಂಡು ಮೂಲ ಕತೆಯಲ್ಲಿ ಬರೋ ಸ್ವಾಮಿ ಮತ್ತವನ ಗ್ಯಾಂಗಿಗೆ ಸಂಬಂಧಪಡದ ಚಿತ್ರ ಮಾಡಿದ್ದು. ಎರಡನೆಯದು ಮಾಲ್ಗುಡಿ ಡೇಸಿಗೆ ಯಾವ ಸಂಬಂಧವೂ ಇರದ ಬೆಂಗಳೂರ, ಕೊಯಂಬತ್ತೂರಿನ ಚಿತ್ರಗಳ ಸೇರಿಸಿದ್ದು.. ಹೀಗೆ. ಮಲೆನಾಡ ತೋರಿಸಬೇಕು ಅಂತ, ನಗರ, ಆಗುಂಬೆ, ಶೃಂಗೇರಿ ಹೀಗೆ ಎಲ್ಲಾ ಪ್ರಮುಖ ಪೋಲೀಸ್ ಠಾಣೆಗಳನ್ನೂ ತೋರಿಸಿದ್ದು ! ದ್ವಿತೀಯಾರ್ಧದಲ್ಲಿ ಅಗತ್ಯವಿಲ್ಲದಿದ್ದರೂ ಎಳೆದು ತರುವ ಪ್ರಕೃತಿಯ ಅಮ್ಮನ ಮನೆಯಲ್ಲಿನ ಪೂಜೆ, ವಿಮಲನ ಮಗಳು, ಮಾಲ್ಗುಡಿ ಶಾಲೆಯಲ್ಲಿನ ಯೂನಿಯನ್ ಡೇ, ಪೋಲೀಸಪ್ಪನಾಗಿ ಬ್ಯಾಂಕ್ ಜನಾರ್ಧನ್ ಅವರ ನಗು ಬರದ ಕಾಮಿಡಿಗಳು,ಕೆಲವೆಡೆ ಕಳಚಿಬಿದ್ದಂತೆ ಕಾಣುವ ವಿಜಯ್ ರಾಘವೇಂದ್ರ ಅವರ ವಯಸ್ಸಾದ ಮೇಕಪ್ಪು, ಮನೆಯಲ್ಲಿ ಯಾರಿಲ್ಲದೇ ಗೋಡೆಗಳೇ ಬೀಳುವ ಹಾಗಿದ್ದರೂ ಹುಡುಗನೊಬ್ಬ ಸಣ್ಣಕ್ಕಿದ್ದಾಗ ಬರೆದ "ಅಮ್ಮ" ಅನ್ನೋ ಪದ ಅವ ಮುದುಕನಾದರೂ ಮಾಸದಂತಿರುವುದು ಇತ್ಯಾದಿ ಅಧ್ವಾನಗಳು ರಸಭಂಗವನ್ನುಂಟು ಮಾಡುತ್ತೆ. ಈ ಪ್ರಕೃತಿ, ವಿಜಯ್ ಯಾರು, ಲಕ್ಷ್ಮೀನಾರಾಯಣ, ಲಿನೇಟಾರ ಪ್ರೇಮಕತೆಯೇನಾಗುತ್ತೆ, ಮಾಲ್ಗುಡಿಯವ ಬೆಂಗಳೂರಿಗೇಕೆ ಹೋದ, ಶೃಂಗೇರಿಗೂ ಕೊಯಂಬತ್ತೂರಿಗೂ ಏನು ಸಂಬಂಧ ಅಂತೆಲ್ಲಾ ಆಲೋಚಿಸುತ್ತಿದ್ದೀರ ? ಅವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದ್ರೆ ನೀವು ಈ ಚಿತ್ರವನ್ನು ನೋಡಬೇಕು. ಮೊದಲಾರ್ಧಕ್ಕಾದರೂ ಮನೆಮಂದಿಯೊಂದಿಗೆ ಕೂತ ನೋಡಬೇಕಾದ ಚಿತ್ರ "ಮಾಲ್ಗುಡಿ ಡೇಸ್"
Saturday, March 14, 2020
ಕರೊನಾ ಕೋಲಾಹಲವೂ, ದಿಯಾ ಮತ್ತು ಲವ್ ಮಾಕ್ಟೈಲ್ಗಳು
ಕರುನಾಡ ಕಲಬುರ್ಗಿಯಲ್ಲಿ ಸೌದಿಯಿಂದ ಬಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಬೆಂಗಳೂರಲ್ಲಿ ಇಬ್ಬರು ಕರೋನಾ ಸೋಂಕಿತರು ಪತ್ತೆಯಾಗಿದ್ದಾಗ ಸೃಷ್ಠಿಯಾದ ಆತಂಕ ಟಿ.ವಿಯವರ ಅಬ್ಬರದಿಂದ "ಕರೋನಾ ರಣಕೇಕೆ", "ಕರೋನಾ ಅಬ್ಬರ", "ಕರೋನಾ ಕೋಲಾಹಲ"ವಾಗಿ ಮಾರ್ಪಟ್ಟಿದೆ. ಬೆಂಗಳೂರಿಗೆ ಬಂದು ಮೂವತ್ತಾರು ಮಂದಿಗೆ ಕರೋನಾ ಹಬ್ಬಿಸಿದ್ದಾರೆ ಎನ್ನಲಾಗಿದ್ದ ತೆಲಂಗಾಣದ ಟೆಕ್ಕಿಯನ್ನೇ ಈಗ ಅಲ್ಲಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರೂ ಇಲ್ಲಿನ ಎಚ್ಚರಿಗೆ ಮುಂದುವರೀತಿದೆ. ರಾಜ್ಯವನ್ನೇ ಏಳು ದಿನಗಳ ಕಾಲ ಬಂದ್ ಮಾಡೋ ಮಾನ್ಯ ಮುಖ್ಯಮಂತ್ರಿಗಳವರ ನಿರ್ಧಾರದಿಂದ ಕೆಲವರಿಗೆ ಸಖತ್ ಖುಷಿಯಾಗಿದ್ರೆ ಕೆಲವರ ಬದುಕೇ ದಿಕ್ಕಾಪಾಲಾದಂತೆ ಕಾಣ್ತಿದೆ. ಏನು ಮುಟ್ಟಿದ್ರೂ ಹ್ಯಾಂಡ್ ಸ್ಯಾನಿಟರೈಸ್ ಹಾಕಿ ತೊಕ್ಕೊಳಿ ಅಂತ ವಾಟ್ಸಾಪಿನ ಫಾರ್ವಾಡುಗಳು ಓಡಾಡಿದ್ದೇ ಓಡಾಡಿದ್ದು. ಈಗೆಲ್ಲಿ ನೋಡಿದ್ರೂ ಸ್ಟಾಕೇ ಇಲ್ಲ ಅದರದ್ದು. ಮಾಸ್ಕ್ ಹಾಕ್ಕೊಳ್ರಪ್ಪ ಅಂತಂದಿದ್ದೇ ಸಾಕು ಮುನ್ನೂರೈವತ್ತರ ಮಾಸ್ಕುಗಳು ಮಾರ್ಕೇಟಿಂದ್ಲೇ ಮಂಗಮಾಯ ! ಐನೂರೈವತ್ತು ಕೊಟ್ಟರೆ ಕೊಡ್ತೀವಿ ಸಾರ್ ಅಂತಾನೆ ಅಂಗಡಿಯವ ಬ್ಲಾಕಲ್ಲಿ ಮಾರೋ ಸ್ಕೆಚ್ ಹಾಕಿ ! ಇಂದಿನ ಪೇಪರಲ್ಲಿ ಅಂತಹ ಕ್ರಮಗಳನ್ನ ಕೈಗೊಳ್ಳೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಮುಖ್ಯಮಂತ್ರಿಗಳೇ ಎಚ್ಚರಿಸಿದ್ರೂ ಆ ಪರಿಸ್ಥಿತಿ ಬದಲಾಗುತ್ತೋ ಇಲ್ವೋ ಗೊತ್ತಿಲ್ಲ. ಮಾಲು, ಸಿನಿಮಾ ಥಿಯೇಟರ್ಗಳೆಲ್ಲ ಬಂದಾಗಿರೋದ್ರಿಂದ ಬೆಂಗ್ಳೂರೇ ಒಂಥರಾ ಥಂಡಾ ಹೊಡಿದ ಫೀಲು. ಐ.ಟಿ , ಬಿ.ಟಿಗಳಿಗೆಲ್ಲಾ ಮನೆಯಿಂದ ಕೆಲಸ ಮಾಡೋಕೆ ಹೇಳಿ ಅಂತ ಮುಖ್ಯಮಂತ್ರಿಗಳೇ ಹೇಳಿದ್ರೂ ಅದ್ನ ಹೇಳ್ಭೇಕೋ ಬೇಡ್ವೋ ಅಂತ ಮೀನ ಮೇಷ ಎಣಿಸ್ತಿರೋ ಕಂಪೆನಿಗಳ ನಡುವೆ ಉದ್ಯೋಗಿಗಳೇ ಮನೆಗಳೊಳಗೆ ಫೆವಿಕಾಲ್ ಹಚ್ಕೊಂಡು ಕುತ್ಕೊಂಡಿರೋದ್ರಿಂದ ಬಿ.ಎಂ.ಟಿ.ಸಿ, ಮೆಟ್ರೋಗಳಿಗೂ ಹೆವಿ ಲಾಸಂತೆ. ಥಿಯೇಟ್ರುಗಳು ಬಾಗಿಲು ಹಾಕೋದ್ರಿಂದ ಕನ್ನಡ ಚಿತ್ರೋದ್ಯಮಕ್ಕೂ ಲಾಸ್ ವರ್ಗಾವಣೆಯಾಗ್ಬೋದೇನೋ ಅನಿಸೋ ಹೊತ್ತಿಗೆ ಕಂಡ ಆಶಾ ಕಿರಣ ಅಮೇಜಾನ್ ಪ್ರೈಮ್ !

ಅಮೇಜಾನ್ ಕಿಂಡಲ್ಲಲ್ಲಿ ಕನ್ನಡ ಕೊಡ್ರಪ್ಪ ಅಂತ ಕೇಳಿ ಕೇಳಿ ಸಾಕಾದ್ರೂ ಇವರಿಗೆ ಕಾಣದ ಕನ್ನಡದ ಗ್ರಾಹಕರು ಈಗ ಕಂಡಿದ್ದು ಆಸ್ಛರ್ಯವೇ ಸರಿ ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಎಂಬ ಎರಡು ಒಳ್ಳೇ ಚಿತ್ರಗಳು ಬಂದ್ ಕಾರಣದಿಂದ ಬಂದಾಗಿ ಹೋಗೋ ಆತಂಕನ ದೂರ ಮಾಡಿದ ಶ್ರೇಯಸ್ಸು ಅಮೇಜಾನವ್ರಿಗೇ ಸಲ್ಲಬೇಕು ಅಂದ್ರೆ ತಪ್ಪಲ್ಲವೇನೋ. "ಲವ್ ಮಾಕ್ ಟೈಲ್" ಥಿಯೇಟರ್ಗಳಲ್ಲೂ ಓಡ್ತಿತ್ತು. ನಾಲ್ಕು ವಾರದ ಮೇಲೆ ಆಗಿತ್ತು ಅಂತ ಅಂದ್ರೂ ಇವೆರಡೂ ಮೂವಿಗಳನ್ನ ಈಗೊಂದೆರೆಡು ದಿನಗಳಲ್ಲೇ ನನ್ನ ಸ್ನೇಹಿತರು ನೋಡಿರೋ ಕಾರಣ ಕರೋನಾ ಮತ್ತು ಅಮೇಜಾನ್ ಪ್ರೈಮ್ !
ಎಲ್ಲಾ ಬಂದಾದ್ರೆ , ಮನೇಲೇ ಕೂತು ಎಷ್ಟೂಂತ ಕೆಲ್ಸ ಮಾಡೋದು ಸಿವಾ ? ಬೇಸರಕ್ಕೆ ಅಂತ ಮೊಬೈಲೋ, ಟೀವಿನೋ ಹೊಕ್ಕಾಗ ಇದೇ ಕಣ್ಣಿಗೆ ಬೇಳಬೇಕೇ ಸಿವಾ ? "ಲೂಸಿಯಾ" ಸಿನಿಮಾ ಬಂದಾಗ್ಲೂ ಅಂತರ್ಜಾಲದಲ್ಲಿ ನಡೀತಿದ್ದ ಅದರ ಚರ್ಚೆಗಳಿಂದ್ಲೇ ಅದು ಸುಮಾರು ದಿನ ಓಡಿತು ಅನ್ನೋ ಮಾತುಗಳಿದ್ರೂ ಇವೆರಡೂ ಚಿತ್ರಗಳಲ್ಲಿ ಅಂತರ್ಜಾಲದ ಹೊರಬಂದೂ ಓಡೋ ತಾಕತ್ತಿದೆ ಅನ್ಸತ್ತೆ. ಸಿನಿಮಾ ಅಂದ್ರೆ ನಾಲ್ಕು ಫೈಟು, ವಿಲನ್ನುಗಳು ಬಂದು ಹೀರೋಯಿನ್ನನ್ನ ಕಿಡ್ನಾಪ್ ಮಾಡ್ಬೇಕು, ನಾಲ್ಕು ಮರಸುತ್ತೋ ಸೀನುಗಳು, ಐಟಂ ಸಾಂಗುಗಳಿರ್ಬೇಕು, ಹೀರೋಗೊಂದು ಹೀರೋಯಿನ್ನಿಗೊಂದು ಬಿಲ್ಡಪ್ ಕೊಡೋ ಸಾಂಗೋ ಡೈಲಾಗುಗಳೋ ಇರ್ಬೇಕು , ಕಾರು ಬೈಕುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳೋ ಹೊಡೆದಾಟಗಳಿರ್ಬೇಕು ಅನ್ನೋ ಸಿದ್ಧ ಸೂತ್ರಗಳಿಂದೆಲ್ಲಾ ಹೊರಬಂದು ಏನೋ ಟ್ವಿಸ್ಟ್ ಕೊಟ್ಟು ಕೊನೆಯವರೆಗೂ ಕುತೂಹಲಕರವಾಗಿ ನೋಡಿಸಿಕೊಂಡು ಹೋಗೋ ಅಂತಹ ಚಿತ್ರ ಮಾಡ್ಬೇಕು ಅನ್ನೋ ನಿರ್ದೇಶಕರ ಶ್ರಮ ಎರಡೂ ಚಿತ್ರಗಳಲ್ಲಿ ಕಾಣುತ್ತೆ. ಟ್ವಿಸ್ಟ್ ಕೊಡಬೇಕು ಅನ್ನೋ ಧಾವಂತದಲ್ಲೇ ಎರಡೂ ಚಿತ್ರಗಳ ಕೊನೆಯ ಹತ್ತು-ಹದಿನೈದು ನಿಮಿಷಗಳನ್ನು ಅದ್ವಾನಗೊಳಿಸಿದಂತೆ ಕಾಣುತ್ತಾದ್ರೂ ಪ್ರತಿಯೊಂದು ದೃಶ್ಯಕ್ಕೂ ಅವರು ಹಾಕಿದ ಶ್ರಮ ಕಂಡು ಖುಷಿಯಾಗುತ್ತೆ. ಸಿಂಪಲ್ ಉದಾಹರಣೆಯೆಂದ್ರೆ "ಲವ್ ಮಾಕ್ ಟೈಲ್" ನಲ್ಲಿನ ನಿಧಿಮಾ ಮತ್ತು ಆದಿಯ ನಡುವಿನ ಮನೆಯ ಒಂದು ದೃಶ್ಯ. ಅದರಲ್ಲಿ ಅವ ಕುತ್ತಿಗೆಗೆ ಹಾಕ್ಕೊಂಡ ದಿಂಬು, ನಾಯಕಿಯ ಡ್ರೆಸ್ಸು, ಹಿಂದಿನ ಕರ್ಟನ್ನಿನ್ನ ಪರದೆ ಎಲ್ಲವೂ ನೀಲಿಮಯ, ದೃಶ್ಯವೂ ಪ್ರೇಮಮಯ ! "ದಿಯಾ"ದಲ್ಲಿ ಬರೋ ಎರಡನೇ ನಾಯಕ ಮತ್ತು ಆತನ ತಾಯಿಯ ಪಾತ್ರ ಲಕ್ಕಿಯಂತೂ ನಮ್ಮ ನಡುವೆ ಈ ತರದ ವ್ಯಕ್ತಿಗಳೂ ಇರೋಕೆ ಸಾಧ್ಯವಾ ಅಂತ ಅಚ್ಚರಿ ಮೂಡಿಸುವಂತದ್ದು. ಕೆಲವೊಂದು ಬೋರ್ ಹೊಡಿಸೋ ಸನ್ನಿವೇಶಗಳನ್ನ ಬಿಟ್ರೆ, ಕೆಲವೆಡೆ ಪ್ರೀತಿಯ ಓವರ್ಡೋಸ್ ಅನಿಸಿದರೂ ಆಪ್ತವೆನಿಸೋ ಇವೆರಡೂ ಚಿತ್ರಗಳಿಂದ ವಾರಾಂತ್ಯಕ್ಕೊಂದು ಕಳೆ ಸಿಕ್ಕಿದ್ದು ಸುಳ್ಳಲ್ಲ.
ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಂಗಳಲ್ಲಿ ಕನ್ನಡದ ಚಿತ್ರಗಳು ಹೆಚ್ಚಿಲ್ಲ. ಇದ್ದರೂ ಹೊಸದಿಲ್ಲ ಅನ್ನೋ ಗ್ರಾಹಕರ ಕೊರಗು ಸದ್ಯದಲ್ಲೇ ನೀಗಬಹುದೇನೋ ಅನ್ನೋ ನಿರೀಕ್ಷೆಯನ್ನು ಹುಟ್ಟಿಸಿರೋ ಈ ಚಿತ್ರಗಳಿಗೆ ಒಂದು ಅಭಿನಂದನೆ. ಕನ್ನಡ ಚಿತ್ರಗಳಿದ್ರೂ ಇರೋ ಐದಾರು ಸ್ಕ್ರ್ರೀನುಗಳಲ್ಲಿ ನಾಲ್ಕೈದು ಶೋಗಳಲ್ಲಿ ಒಂದು ಶೋ ಕೊಡೋಕೆ ಅಳ್ತಿರೋ ಮಲ್ಟಿಪ್ಲೆಕ್ಸುಗಳು, ಕನ್ನಡ ಸಿನಿಮಾಗಳಿಗೆ ಥಿಯೇಟರುಗಳು ಸಿಗದೇ ತಾವೇ ವಿತರಕರಾಗಿರೋ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ಥಿಯೇಟರ್ ಸಿಗುವಂತೆ ನೋಡ್ಕೊಳ್ಳುತ್ತಿರೋ ನಮ್ಮಲ್ಲೇ ಇರೋ ದೊಡ್ಡ ಮನುಷ್ಯರ ನಡುವೆ ಕನ್ನಡಿಗರಿಗೆ ಕನ್ನಡದಲ್ಲೇ ಇರೋ ಉತ್ತಮ ಚಿತ್ರಗಳು ಸಿಗದಂತಾಗುತ್ತಿವೆ. ವಾರಾಂತ್ಯದಲ್ಲಾದ್ರೂ ಚಿತ್ರ ನೋಡೋಣ ಅಂತಂದ್ರೆ ಬೇರೆ ದಿನ ನೂರೈವತ್ತರ ಸುಮಾರಿರೋ ಟಿಕೇಟಿಗೆ ವಾರಾಂತ್ಯದಲ್ಲಿ ಎರಡೂವರೆ ಮೂರು ಪಟ್ಟು ಕೊಟ್ಟು ನೋಡಬೇಕಾದ ಅನಿವಾರ್ಯತೆ ಬೆಂಗಳೂರಂತ ಮಹಾನಗರಗಳಲ್ಲಿ ! ಯಾರ ಹೊಟ್ಟೆಯ ಮೇಲೂ ಹೊಡೆಯುವಂತಹ ಮಾತಾಡಬಾರದು ಅಂತನ್ನೋದು ನಿಜವಾದರೂ ಈ ಥರ ಮಾಡುತ್ತಿದ್ದ ಮಲ್ಟಿಪ್ಲೆಕ್ಸುಗಳಿಗೂ ಇಷ್ಟಕ್ಕಿಂತ ಜಾಸ್ತಿ ಟಿಕೇಟ್ ದರ ವಿಧಿಸೋ ಹಾಗಿಲ್ಲ ಅಂತ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೋ ಅಂತ ಎಷ್ಟೋ ಸಲ ಅನಿಸಿದ್ದಿದೆ . ಅಷ್ಟೆಲ್ಲಾ ಕೊಡೋಕೆ ಸಿದ್ದವಾದ್ರೂ ಹೇಳ್ದೇ ಕೇಳ್ದೇ ಚೆನ್ನಾಗಿ ಓಡ್ತಿರೋ ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡಿ ಯಾವುದೋ ತೆಲುಗು, ತಮಿಳು ಚಿತ್ರಗಳಿಗೆ ಮಣೆ ಹಾಕ್ತಿದ್ದ ಅವರನ್ನು ನೋಡಿ ಎಷ್ಟು ಉರ್ಕಂಡ್ರೂ ಏನೂ ಮಾಡೋಕಾಗದೇ ಇರುವಂತ ಕನ್ನಡಿಗರಿಗೆ ಆಶಾ ಕಿರಣಗಳಂತೆ ಕಾಣ್ತಿರೋದು ಇದೇ ಹಾಟ್ ಸ್ಟಾರು, ನೆಟ್ ಫ್ಲಿಕ್ಸು ಮತ್ತು ಅಮೇಜಾನುಗಳು ! "ದಿಯಾ" ಮತ್ತು "ಲವ್ ಮಾಕ್ ಟೈಲ್" ಚಿತ್ರಗಳಿಗೆ ಸಿಗೋ ವೀಕ್ಷಣೆ , ಮೆಚ್ಚುಗೆ ಈ ಅಮೇಜಾನಿಂದ ಆಚೆ ದಾಟಿ ಅದಕ್ಕೆ ದುಡ್ಡು ಸುರಿದ ನಿರ್ಮಾಪಕರ ಜೇಬು ತುಂಬಲಿ, ಈ ತರದ್ದೇ ಹಲವು ಹೊಸ ಕನ್ನಡ ಪ್ರಯತ್ನಗಳಿಗೆ ನಾಂದಿಯಾಗಲಿ ಅನ್ನೋದು ಸದ್ಯದ ಆಶಯ. ಕನ್ನಡದ ಜನತೆಯ ಸಿನಿಮಾ ಪ್ರೇಮದ ಅಗಾಧತೆಯನ್ನು ಈ ಆನ್ ಲೈನ್ ಕಂಪೆನಿಗಳೂ ಅರ್ಥ ಮಾಡಿಕೊಂಡು ಇನ್ನೂ ಹೆಚ್ಚೆಚ್ಚು ಕನ್ನಡ ಚಿತ್ರಗಳನ್ನ ತಮ್ಮ ವೇದಿಕೆಗಳ ಮೂಲಕ ಹೊರತರುವಂತಾಗಲಿ ಅನ್ನೋ ಹಾರೈಕೆಯೊಂದಿಗೆ ಸದ್ಯಕ್ಕೊಂದು ವಿರಾಮ.
Wednesday, March 6, 2019
ಹಾಲುಮುದ್ದೆ ಪುರಾಣ
![]() |
| Haalu mudde ಹಾಲುಮುದ್ದೆ |
ಬೇಕಾದ ಸಾಮಗ್ರಿಗಳು:
ರವೆ-೨ ಕಪ್ಪು
ಸಕ್ಕರೆ/ಬೆಲ್ಲ- ೨ ಕಪ್ಪು
ತುಪ್ಪ-೧ ಕಪ್ಪು
ಹಾಲು- ೪ ಕಪ್ಪು
ಏಲಕ್ಕಿ- ೧
ಲವಂಗ- ೪
ದ್ರಾಕ್ಷಿ- ಸ್ವಲ್ಪ
ಮಾಡೋ ವಿಧಾನ:
ರವೆಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಹುರಿದುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿಕೊಂಡು ಅದಕ್ಕೆ ಹುರಿದ ರವೆಯನ್ನು ಹಾಕಿ. ರವೆಯನ್ನು ಹಾಕಿದ ತಕ್ಷಣ ನಿಧಾನವಾಗಿ ತೊಳೆಸುತ್ತಾ ಸಕ್ಕರೆ/ಬೆಲ್ಲ, ಸ್ವಲ್ಪ ತುಪ್ಪ ಮತ್ತು ಪುಡಿ ಮಾಡಿದ ಏಲಕ್ಕಿ, ಲವಂಗಗಳನ್ನು ಹಾಕಬೇಕು. ಗಟ್ಟಿಯಾಗುವ ತನಕ ತಳಹಿಡಿಯದಂತೆ ತೊಳೆಸುತ್ತಾ ಇರಬೇಕು. ಸುಮಾರು ಹತ್ತು-ಹದಿನೈದು ನಿಮಿಷಗಳ ನಂತರ ಈ ಮಿಶ್ರಣ ಉಂಡೆ ಕಟ್ಟುವಷ್ಟು ಗಟ್ಟಿಯಾಗುತ್ತೆ. ಆಗ ದ್ರಾಕ್ಷಿ ಹಾಕಿ ಉಂಡೆಕಟ್ಟಿದ್ರೆ ಹಾಲುಮುದ್ದೆ ಸವಿಯಲು ಸಿದ್ದ. ಇದನ್ನು ತುಪ್ಪದೊಂದಿಗೆ ಅಥವಾ ಚಟ್ನಿಪುಡಿಯೊಂದಿಗೆ ತಿನ್ನಬಹುದು.
ರೆಸಿಪಿ ಕ್ರೆಡಿಟ್ಸ್: ಅಕ್ಷತಾನ ಅಜ್ಜಿ
ಮಾಡಿದ್ದು: ನಮ್ಮನೆ ಅಕ್ಷತಾ
ಅಂದ ಹಾಗೆ ಇದನ್ನು ಶ್ರಂಗೇರಿ ಕಡೆ ಜಾಸ್ತಿ ಮಾಡ್ತಾರಂತೆ ಅಂತ ನಮ್ಮನೆಯವ್ರು ಹೇಳ್ತಾ ಇದ್ರು. ಇನ್ನೂ ಹೆಚ್ಚಿನ ಮಾಹಿತಿ ಗೊತ್ತಿರೋರು ಹಂಚ್ಕೊಂಡ್ರೆ ಇನ್ನೊಂದಿಷ್ಟು ತಿಳ್ಕೋಬೋದು
Monday, February 4, 2019
ಗುಡ್ ಬೈ ಗೂಗಲ್ ಪ್ಲಸ್
Saturday, December 22, 2018
ನಾ ನೋಡಿದ ಸಿನೆಮಾ ಕೆ.ಜಿ.ಎಫ್
ಕಳೆದ ಕೆಲವು ವರ್ಷಗಳ ಹಿಂದೆ ಮೊಬೈಲುಗಳಲ್ಲಿ ಬಂದ ಸ್ಲೋ ಮೋಷನ್ ಫೋಟೋ ಅನ್ನೋ ಮೋಡ್ ಸಖತ್ ಖುಷಿ ಕೊಟ್ಟಿತ್ತು. ಜಲಪಾತವೊಂದರ ಕೆಳಗೆ ನಿಂತು ತೆಗೆದಾಗ ಅದರ ಪ್ರತಿ ಹನಿಯೂ ನಿಧಾನವಾಗಿ ಬೀಳುವಂತೆ ತೆಗೆಯೋದು, ನೀರಿಗೆ ಕಲ್ಲೆಸೆದಾಗ ಅದರಲ್ಲಿ ಮೂಡೋ ತರಂಗಗಳ ತೆಗೆಯೋದು, ಮರಳ ಮೇಲೆ ಬೈಕ ಚಕ್ರಗಳನ್ನು ಸಡನ್ನಾಗಿ ತಿರುಗಿಸಿದಾಗ ಹಾರೋ ಮರಳ ಪ್ರತೀ ಕಣಗಳ ಚಲನೆಯನ್ನು ತೆಗೆಯೋದು ಅದ್ಭುತ ಅನಿಸುತ್ತಿತ್ತು. ಆದರೆ ಈ ತರಹದ್ದೇ ಅದ್ಭುತ ಅನುಭವಗಳ ಚಲನಚಿತ್ರವೊಂದು ಕಟ್ಟಿಕೊಟ್ಟರೆ ? ಇಂಗ್ಲೀಷಿನ ಫ್ಲ್ಯಾಷ್ ಅನ್ನೋ ಧಾರಾವಾಹಿಯನ್ನೋ ಅಥವಾ ಜಸ್ಟೀಸ್ ಲೀಗ್ ಅನ್ನೋ ಚಲನಚಿತ್ರವನ್ನೋ ನೋಡಿದ್ದಿದ್ರೆ ಅದರಲ್ಲಿ ಸಖತ್ ವೇಗವಾಗಿ ಓಡೋದನ್ನ ಸ್ಲೋ ಮೋಷನ್ನಲ್ಲಿ ತೋರಿಸಿದ್ರೆ ಹೇಗಿರುತ್ತೆ ಅನ್ನೋದನ್ನ ಕಟ್ಟಿ ಕೊಡೋ ಪ್ರಯತ್ನವಿದೆ. ಬಾಹುಬಲಿಯಂತ ಚಿತ್ರಗಳಲ್ಲಿ ಕೂಡ ಈ ತರದ ಪ್ರಯತ್ನಗಳ ಮಾಡಿದ್ದರೂ ಕೂಡ ಅದು ವಿಎಫೆಕ್ಸ್ ಎಫೆಕ್ಟುಗಳು ಅಂತ ಆರಾಮಾಗಿ ಗೊತ್ತಾಗಿಬಿಡುತ್ತೆ. ಅತ್ಯಂತ ಸಹಜವಾಗಿ ಕಾಣುವಂತಹ ನಾಯಕ ನೆಲಕ್ಕೆ ತುಳಿದಾಗ ಏಳೋ ಧೂಳ ಕಣಗಳು, ನೀರಿನಿಂದ ಎದ್ದಾಗ ಚಿಮ್ಮೋ ನೀರ ರಾಶಿ, ರಾಕಿ ಗರುಡನನ್ನು ಕೊಲ್ಲೋಕೆ ಅಂತ ನೀರಿನಿಂದ ತೆಗೆಯೋ ಆಯುಧದ ಸಂಚಾರ ... ಉಫ್ ಹೇಳಹೋದ್ರೆ ಚಿತ್ರದ ತುಂಬೆಲ್ಲಾ ರಾರಾಜಿಸೋ ಸ್ಲೋ ಮೋಷನ್ ದೃಶ್ಯಗಳೇ ನೋಡಿಸಿಕೊಂಡು ಹೋಗುತ್ತೆ ನಿನ್ನೆ ತೆರೆಕಂಡ ಕೆ.ಜಿ.ಎಫ್ ಸಿನೆಮಾವನ್ನು.
೧೯೫೫, ೭೦ರ ದಶಕ, ೮೧ರ ದೃಶ್ಯಗಳನ್ನ ತೆಗೆಯುವಾಗ ತುಂಬಾ ಜಾಗರೂಕತೆಯಿಂದ ತೆಗೆದಿದ್ದಾರೆ ಅಂತ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಓದಿದ್ದೆ. ದೃಶ್ಯವೊಂದರಲ್ಲಿ ಬರೋ ಬೆಂಕಿಪೊಟ್ಟಣ ಕೂಡ ಆ ಕಾಲದ್ದೇ ಬೇಕು ಅಂತ ಗಮನವಹಿಸಿದ್ರು ಅಂತಲೂ ಓದಿದ್ದೆ. ಆಗಿನ ಕಾಲದಲ್ಲಿರುತ್ತಿದ್ದಂತಹ ಪ್ಯಾಂಟುಗಳು, ನಾಯಕಿ ಹಣೆಗೆ ಹಾಕಿಕೊಳ್ಳೋ ಪಟ್ಟಿ, ಆಗಿನ ಕಾಲದಲ್ಲಿರುವಂತಹ ಕ್ಯಾಬರೆಗಳು ಚಿತ್ರ ನಿರ್ಮಾಣದಲ್ಲಿನ ಶ್ರದ್ಧೆಯನ್ನು ತೋರಿಸುತ್ತೆ. ಆದರೆ ಇಷ್ಟೆಲ್ಲಾ ಗಮನವಹಿಸಿದ್ರೂ ಇಷ್ಟು ಸಣ್ಣ
ವಿಷಯ ಹೆಂಗೆ ಮಿಸ್ಸಾಯ್ತು ಅಂತಲೂ ಕೆಲವು ಕಡೆ ಅನಿಸುತ್ತೆ. ಉದಾಹರಣೆಗೆ: ಕೋಲಾರದ ಒಂದು ಗಣಿ. ಅಲ್ಲಿರೋ ಜನರ ಮೈಯೆಲ್ಲಾ ಧೂಳೇ ಧೂಳಾಗಿದೆ. ಎಲ್ಲಿ ನೋಡಿದ್ರೂ ಧೂಳು ಹಾರ್ತಾ ಇದೆ. ಅವರನ್ನು ಕಾಯೋಕೆ ಅಂತ ಕ್ರೂರವಾಗಿ ಕಾಣಿಸೋ ಕಾವಲುಗಾರರಿದ್ದಾರೆ. ಅವರಲ್ಲಿ ಕೆಲವರು ಧೂಳ ಮಧ್ಯೆ ಅಂಗಿ ಬಿಚ್ಚಿಕೊಂಡೂ ಇದ್ದಾರೆ.ಆದರೆ ಈ ಕಾವಲುಗಾರರ ಮೈಮೇಲೆ ಒಂಚೂರೂ ಧೂಳಿಲ್ಲ !
ಕಲಾತ್ಮಕ ಸಿನಿಮಾಟೋಗ್ರಾಫರ್ ಒಬ್ಬರಿಗೆ ಆಕ್ಟನ್ ಚಿತ್ರವನ್ನು ಚಿತ್ರಿಸೋಕೆ ಕೊಟ್ಟರೆ ಹೇಗಿರುತ್ತೋ ಹಾಗಿದೆ ಕೆ.ಜಿ.ಎಫ್. ನಾಯಕ ಗರುಡನ ಜನರೊಂದಿಗೆ ಹೋರಾಡುತ್ತಿರ್ತಾನೆ. ಆಗ ಹಿಮ್ಮೇಳದಲ್ಲಿ ಸೂರ್ಯಾಸ್ತದ ದೃಶ್ಯ ! ಕತ್ತಲ ಗುಹೆಗಳಲ್ಲಿ ಪಂಜು, ಕಾದ ರಾಡುಗಳಿಂದ ನಡೆಯುವ ಹೊಡೆದಾಟದಲ್ಲಿ ನಂದಿಹೋಗೋ ಬೆಳಕುಗಳ ನಡುವಿನ ಸ್ಲೋಮೋಷನ್ ಚಿತ್ರಣ, ಗಣಿಗಳಲ್ಲಿನ ಬೈಕ್ ರೇಸು , ಮಾರಿಕಾಂಬಾ ಜಾತ್ರೆಯಲ್ಲಿನ ದೀಪಗಳ ಚಿತ್ರಣ, ದೀಪ, ಪಂಜು ಹೊತ್ತು ನಡೆಯುತ್ತಿರೋ ಜನರನ್ನು ಮೇಲಿಂದ ತೆಗೆವ ಬಂಗಾರದ ಎಳೆಯಂತಹ ಚಿತ್ರಣ ಇವೆಲ್ಲಾ ನೋಡಿಸಿಕೊಂಡು ಹೋಗುತ್ತೆ. ಚಿತ್ರದ ಕ್ಲೈಮಾಕ್ಸಿನಲ್ಲಿ ಬರೋ ಮಾರಿ ಜಾತ್ರೆಯ ಚಿತ್ರಣ ಅನೇಕ ರೀತಿಯಲ್ಲಿ ಮುಖ್ಯವೆನಿಸೋದ್ರಿಂದ ಅದನ್ನು ಸಾಕಷ್ಟು ಅದ್ಧೂರಿಯಾಗೇ ತೋರಿಸಲಾಗಿದೆ.
ಯಾರೋ ಹತ್ತು ಜನನ್ನು ಹೊಡೆದು ಡಾನ್ ಆನ್ನಿಸ್ಕೊಂಡಂಗಲ್ಲ ಅನ್ನೋ ಟಾಂಟಿಗೆ, ನಾನು ಯಾರೋ ಹತ್ತು ಜನನ್ನ ಹೊಡೆದಿದ್ದಲ್ಲ ಕಣೋ, ಹೊಡೆದ ಹತ್ತು ಜನಾನೂ ಡಾನ್ಗಳೇ ಅನ್ನೋ ಉತ್ತರ; ನಿನ್ನ ಹಿಂದೆ ಸಾವಿರ ಜನ ಇದ್ದಾರೆ ಅಂತ ನಿನಗೆ ಧೈರ್ಯ ಇದ್ದರೆ ಒಂದು ಯುದ್ಢ ಗೆಲ್ಲಬಹುದು. ಆದರೆ ನೀ ಮುಂದೆ ಇದೀಯ ಅಂತ ಸಾವಿರ ಜನಕ್ಕೆ ನಿನ್ನ ಹಿಂದೆ ನಿಲ್ಲೋಕೆ ಧೈರ್ಯ ಬಂದರೆ ಪ್ರಪಂಚಾನೇ ಗೆಲ್ಲಬಹುದು ಎನ್ನೋ ಡೈಲಾಗುಗಳು, ಅಲ್ಲಲ್ಲಿ ಒಳಸುಳಿವ ಭಾವನೆಗಳು, ಆಗಾಗ ಬರೋ ಹಾಡ ಎಳೆಗಳೂ ಭರ್ಜರಿಯಾಗೇ ಇದೆ. ಕಾಫಿ ತರೋನ ಕಾಮಿಡಿ ಮಧ್ಯ ಮಧ್ಯ ಸ್ವಲ್ಪ ಬಿಡುವು ಕೊಟ್ರೂ ಚಿತ್ರದ ರೌದ್ರ ರಸಾನುಭವಕ್ಕೆ ಎಲ್ಲೂ ಅಡ್ಡಿಯಾಗೋಲ್ಲ.
ಇವೆಲ್ಲಾ ಬೇಡಪ್ಪ, ಸುಮ್ಮನೇ ಟೈಂಪಾಸಿಗೆ ಹೋಗ್ತೀನಿ ಚಿತ್ರ ನೋಡೋಕೆ. ಹೋಗ್ಬೋದಾ ಅಂದ್ರೆ ಧಾರಾಳವಾಗಿ ! ಫೈಟಿಂಗ್ ಅಂದ ಮಾತ್ರಕ್ಕೆ ವಿಕೃತ ಹಿಂಸೆಯನ್ನೋ, ಲಾಜಿಕ್ಕಿಲ್ಲದ ತೆಲುಗು ಚಿತ್ರಗಳಲ್ಲಿರುವಂತಹ ನಾಯಕ ಒದ್ದರೆ ಜೀಪು ತಿರುಗಿ ನಿಲ್ಲುವಂತಹ ಅಸಂಬದ್ಧಗಳನ್ನೋ ತೋರಿಸಬೇಕು ಅನ್ನೋ ಅನೇಕ ಕನ್ನಡ ನಿರ್ದೇಶಕರ ಭ್ರಮೆಗೆ ಇವರು ಒಳಗಾಗದೇ ಇರೋದು ಕನ್ನಡಿಗರ ಪುಣ್ಯ ಎಂದುಕೊಳ್ಳಬೇಕೇನೋ. ಉದಾಹರಣೆಗೆ ಸುತ್ತಿಗೆ ತೆಗೆದು ಹೊಡೆಯೋ ದೃಶ್ಯವೊಂದು ಬರುತ್ತೆ. ಆದರೆ ಆ ಸುತ್ತಿಗೆ ಎತ್ತಿದ್ದು ಬರುತ್ತೆಯೇ ಹೊರತು ಅದು ತಲೆಗೆ ಬಿದ್ದ ದೃಶ್ಯ ಬರೋಲ್ಲ ! ಹಾಗಾಗಿ ಕುಟುಂಬದವರೊಂದಿಗೂ ಆರಾಮಾಗಿ ನೋಡಬಹುದಾದ ಚಿತ್ರ ಇದು ಅನ್ನಬಹುದೇನೋ. ಯಶ್, ತಮನ್ನಾ, ಶ್ರೀನಿಧಿ ಶೆಟ್ಟಿ, ಅನಂತನಾಗ್, ಮಾಳವಿಕಾ ಅವಿನಾಶ್ ಮುಂತಾದ ತಾರಾಗಣವಿರುವ ಇದರಲ್ಲಿ ನಾಯಕನ ಹೀರೋಯಿಸಂ ತೋರಿಸೋಕೆ ಅಂತ ಅನೇಕ ಕಡೆಗಳಲ್ಲಿ ಎಲ್ಲಾ ಚಿತ್ರಗಳಲ್ಲಿ ಇರುವಂತಹ ಪ್ರಯತ್ನಗಳಿದ್ದರೂ ಚಿತ್ರಕಥೆಯ ಓಘದಿಂದ ಮತ್ತು ಛಾಯಾಗ್ರಾಹಣದ ವೈಭವದಿಂದ ಚಿತ್ರ ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತೆ.
Friday, October 26, 2018
Marriage , Reception and Book Release Invitation , ಮದುವೆ, ಆರತಕ್ಷತೆ ಮತ್ತು ಪುಸ್ತಕ ಬಿಡುಗಡೆಯ ಕರೆಯೋಲೆ
Nov 3rd is a special day for me as well as i would be releasing my first book in Kannada by the name "Prashantavana" which is a collection of short stories and followed by the reception in the same venue. Location details are above. Front page of the book is given below. We would also like to invite you for the auspicious day with a small video
ಮಾರನೆಯ ದಿನ ಅಂದರೆ ನವೆಂಬರ್ ಮೂರರಂದು ನನ್ನ ಕಥಾಸಂಕಲನ "ಪ್ರಶಾಂತವನ" ದ ಲೋಕಾರ್ಪಣೆಯೂ ನಡೆಯಲಿದೆ. ತಾವುಗಳು ಎರಡೂ ಕಾರ್ಯಕ್ರಮಗಳಿಗೆ ಆಗಮಿಸಿ ಅವುಗಳನ್ನು ಚೆಂದಗಾಣಿಸಿಕೊಡಬೇಕಾಗಿ ವಿನಂತಿ .. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಪುಸ್ತಕ ಬಿಡುಗಡೆಗೆ ಬರಲಾಗದಿದ್ದು, ಪ್ರತಿಗಳ ಕೊಳ್ಳುವ ಆಸೆಯಿದ್ದಲ್ಲಿ ಕೆಳಗಿನ ಮಿಂಚೆಗೆ ನಿಮ್ಮ ವಿಳಾಸವನ್ನು ಕಳುಹಿಸಿ. ಪುಸ್ತಕದ ಮುಖಪುಟ ಕೆಳಗಿದೆ ಮತ್ತು ಕರೆಯೋಲೆಯ ವೀಡಿಯೋ ಕೊಂಡಿ ಇಲ್ಲಿದೆ
prashasti.p@gmail.com
ಇಂತಿ,
ತಮ್ಮ ವಿಶ್ವಾಸಿ/ Regards
ಪ್ರಶಸ್ತಿ/Prashasti
Saturday, December 2, 2017
ದೇಶದ ಪ್ರಗತಿಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ
Saturday, November 18, 2017
ಮೆಕ್ಸಿಕೋ ಮಳೆ ಮತ್ತೆ ಮೊಬೈಲು
Thursday, November 16, 2017
ಮೆಕ್ಸಿಕೋ ಮಳೆಗಾಲ
Monday, March 27, 2017
ನಾನೋದಿದ ಪುಸ್ತಕ - ಅಷ್ಟಾವಕ್ರ ೧,೨
ಪಾತ್ರಗಳ ವೈವಿಧ್ಯತೆಯಲ್ಲಿ, ಅವುಗಳ ಪೋಷಣೆ ಮತ್ತು ಸಂಬಂಧಗಳ ಸೃಷ್ಠಿಯಲ್ಲಿ ಮೊದಲೆರಡು ಕಾದಂಬರಿಗಳಿಗಿಂತಲೂ ಚೆನ್ನಾಗಿರುವ ಇದನ್ನು ಮೊದಲೆರೆಡು ಕಾದಂಬರಿಗಳಿಗೆ ಸಂಬಂಧವಿಲ್ಲದ ಒಂದು ಕಾದಂಬರಿಯಂತೆಯೇ ಓದಿದರೆ ಇದರ ರಸಾಸ್ವಾದನೆ ಮಾಡಬಹುದು.
ಈ ಕಾದಂಬರಿಯಲ್ಲಿ ಚೈನೀಸ್, ಜಪಾನೀಸ್ ಬ್ರೈನ್ ವಾಷಿಂಗ್, ಅಗ್ರಿಕಲ್ಚರಲ್ ಬಿ.ಎಸ್ಸಿ, ಜೀನುಗಳ ಬಗ್ಗೆ ಹೇಳುವ ಜೆನೆಟಿಕ್ಸ್, ರೋಗಗಳ ಬಗೆಗಿನ ಪೆಥಾಲಜಿ, ವಿಕಿರಣ ಬಗ್ಗೆ ಹೇಳೋ ರೆಂಟ್ಜನ್ , ಥರ್ಮೋ ನ್ಯೂಕ್ಲಿಯರ್ ಬಾಂಬ್ಗಳು, ಭ್ರಮಾಸ್ತಿತಿಯಲ್ಲಿನ ಜನರ ಮನೋಸ್ಥಿತಿ,ಹಳ್ಳಿಗರಲ್ಲಿನ ಮೂಢ ನಂಬಿಕೆಗಳು ಮತ್ತದನ್ನು ದುರುಪಯೋಗ ಮಾಡಿಕೊಳ್ಳೋ ಜನರು, ಕೃತಕ ಗರ್ಭಧಾರಣೆಯ ಐ.ವಿ.ಎಚ್ ಮತ್ತು ಐ.ವಿ.ಡಿ ತಂತ್ರಜ್ಞಾನಗಳು, ಯಕ್ಷಿಣಿ, ಕ್ಷುದ್ರದೇವತೋಪಾಸನೆ,ಕಮ್ಯುನಿಸಂ, ರಹಸ್ಯವಾಗಿ ಕಾರ್ಯನಿರ್ವಹಿಸೋ ದೇಶವೊಂದರ ಪ್ರಧಾನಿಯನ್ನೋ ಕೊಲ್ಲಲು ಮುಂದಾಗೋ ಎಸ್ಸೋಕ್ ಎಂಬ ಸಂಘಟನೆ, ಅಂಗವೈಕಲ್ಯತೆಯಿರುವ ಜನರಲ್ಲಿರುವ ಕೀಳರಿಮೆ ಮುಂತಾದ ಹಲವಾರು ವಿಷಯಗಳನ್ನು ತರಲಾಗಿದೆ.ಯಕ್ಷಿಣೆಯ ರೂಪಕವಾಗಿ ರಂಜಿತಾ, ವೈಟ್ ಶಾಡೋ/ರವಿ, ಫ್ರೊಫೆಸರ್ ರವಿ ಬಂದರೆ , ತಮ್ಮ ಮನೋವೈಕಲ್ಯಗಳಿಂದ ಜಗತ್ತಿಗೇ ಕಂಟಕರಾಗ ಹೊರಟ ಮಹಾದ್ರಷ್ರ/ಡಾ| ಹರಹರಿರಾವ್ , ಅವತಾರ್ ಬಾಬಾ/ಡಾ| ವಂಶೀಕೃಷ್ಣ ,ರಾಕೇಶ್ ಕಾಣಸಿಗುತ್ತಾರೆ. ಅರ್ಧಂಬದ್ರ ಕಮುನಿಷ್ಟರಾಗಿ ಶಂಕರಶಾಸ್ತ್ರಿ/ಭವಾನಿಶಂಕರ್, ಡಾ| ವಿಲಿಯಮ್ಸ್ ಕಂಡರೆ , ತಮ್ಮ ರೂಪ, ಅಂಗವೈಕಲ್ಯತೆಯ ಮೆಟ್ಟಿನಿಂತು ಯಾವ ಪರಿಸ್ಥಿತಿಗೂ ಎದೆಗುಂದದ ಹೋರಾಟಗಾರರಾಗಿ ಸಿದ್ದಾರ್ಥ ಮತ್ತು ಕೇದಾರಗೌರಿ ಕಾಣುತ್ತಾರೆ. ಸ್ಪರ್ಮ್ ಸೆಲ್ಲಿಂಗ್ ಏಜೆನ್ಸಿಯ ಮತ್ತು ಪರಿಸ್ಥಿತಿಯ ಕೈಗೊಂಬೆಗಳಂತೆ ಆಗುವ ಶೇಟ್ ದಂಪತಿ, ಕಾದಂಬರಿಗೆ ಹೊಸ ತಿರುವು ಕೊಡೋ ಡಾ| ನಿವೇದಿತಾ. ಕ್ಲೈಮಾಕ್ಸಿನಲ್ಲಿ ಬರೋ ಸೂಫಿಯಲ್ಲಿನ ಅತ್ಯುನ್ನತ ಸಂತೆ ಮುರ್ಷಿದಾ , ಅಲ್ಲಲ್ಲಿ ಬರೋ ಬ್ಲೂ/ಬ್ಲಾಕ್/ವೈಟ್/ಯೆಲ್ಲೋ/ರೆಡ್ ಸ್ಕೆಲಿಟನ್ಗಳು ಪ್ರತೀ ಪುಟವನ್ನು ಕುತೂಹಲಕಾರಿಯಾಗಿಟ್ಟಿದ್ದಾರೆ. ಕಾದಂಬರಿಯಲ್ಲಿ ಬರೋ ಮತ್ತೊಂದು ಮುಖ್ಯ ಪಾತ್ರ ಡಾ| ರಂಗಪ್ರಸಾದ್. ಕೃತಕ ಗರ್ಭದಾರಣೆಯ ಪರವಿರೋಧಗಳ ಬಗ್ಗೆ ನಡೆಯೋ ವಿಚಾರವಿನಿಮಯಗಳು ಕಾದಂಬರಿ ಸೃಷ್ಠಿಯಾದಕಾಲವನ್ನು ಗಮನಿಸಿದಾಗ ಅಚ್ಚರಿಮೂಡಿಸದೇ ಇರವು. ಇದರಲ್ಲಿ ಮೂಡಿದ ಅನೇಕ ಚರ್ಚೆಗಳು ಇಂದಿಗೂ ಪ್ರಸ್ತುತ ಅನ್ನೋದೇ ಇಲ್ಲಿನ ಸ್ವಾರಸ್ಯ.
ಇಷ್ಟೆಲ್ಲಾ ಪಾತ್ರಗಳು ಬಂದಿದೆಯಲ್ಲಾ ಅವರೆಲ್ಲಾ ಯಾರು ಅಂದ್ರಾ ? ಕಾದಂಬರಿ ಮುಗಿಯೊ ಹೊತ್ತಿಗೆ ಅವರೆಲ್ಲಾ ಒಂದೇ ಎಳೆಯಲ್ಲಿ ಒಗ್ಗೂಡುತ್ತಾರೆ.ಈ ಸ್ಕೆಲಿಟನ್ನು, ಮುರ್ಷಿದಾ ಯಾರೆನ್ನೋ ಕುತೂಹಲಕ್ಕೆ ಕಾದಂಬರಿಯನ್ನೇ ಓದಬೇಕು. ಅದೆಲ್ಲಾ ಸರಿ, ಕಾದಂಬರಿಗೆ ಅಷ್ಟಾವಕ್ರ ಅಂತಲೇ ಹೆಸರಿಟ್ಟಿದ್ದೇಕೆ? ಅವನೇನು ವಿಲನ್ನಾ ? ಹೀರೋವಾ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳಲಾರೆ. ಯಾಕೆಂದರೆ ಅಷ್ಟಾವಕ್ರನ ಜನನ ಮೇಲೆ ಬಂದ ಎಲ್ಲಾ ಪಾತ್ರಗಳಿಗೂ ಸಂಬಂಧಿಸಿದೇ ಆಗಿದೆ ! ಇನ್ನು ಕುಟ್ಟಿಸೈತಾನ್ ಮತ್ತು ಕಾಷ್ಮೋರಾ . ಮೊದಲೆರಡು ಕಾದಂಬರಿಗಳಲ್ಲಿ ಬಂದಷ್ಟು ಅಧಿಕವಾಗಿ ಇದರ ಬಗ್ಗೆ ಮಾಹಿತಿಯಿಲ್ಲದಿದ್ದರೂ ಅದನ್ನು ಇಂದಿನ ದಿನಕ್ಕೆ ಪ್ರಸ್ತುತವಾಗಿಸಿದ ಇಲ್ಲಿನ ರೀತಿ ಮೊದಲೆರಡಕ್ಕಿಂತ ಭಿನ್ನ. ಮೊದಲೆರಡರಲ್ಲಿ ಕ್ಷುದ್ರ ದೇವತೋಪಾಸನೆಯನ್ನು ಮನೋಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಹಿಪ್ನಾಟಿಸಂಗಳೊಂದಿಗೆ ತಳುಕು ಹಾಕಿದ್ದರೆ ಇಲ್ಲದನ್ನು ಭ್ರಾಂತಿ, ಜೀನ್ ಮ್ಯುಟೇಷನ್, ಬ್ರೈನ್ ವಾಷಿಂಗ್ ಮುಂತಾದ ಅಂಶಗಳೊಂದಿಗೆ ಹೋಲಿಸಲಾಗಿದೆ. ಮೊದಲೆರಡರಲ್ಲಿ ವಿಜಯ ಯಾವುದರದ್ದು ಎಂದು ತೀರ್ಮಾನಿಸೋ ಆಯ್ಕೆಯನ್ನು ನಮಗೇ ಕೊಟ್ಟರೆ ಇಲ್ಲಿ ಬರೋ ಡಾ| ವಂಶೀಕೃಷ್ಣರ ಮಾತುಗಳುದೊಂದಿಗೆ ಒಂದು ಸಾಧ್ಯತೆಯನ್ನು ಲೇಖಕರೇ ಕೊಂದು ಹಾಕುತ್ತಾರೆ. ಆದರೂ ಹಿಡಿದ ಪುಸ್ತಕ ಕೆಳಗಿಳಲು ಬಿಡದಂತೆ ಓದಿಸಿಕೊಂಡ ಪುಸ್ತಕಗಳಿವು. ಒಮ್ಮೆ ಓದೋಎ ಯಾವ ಅಡ್ಡಿಯೂ ಇಲ್ಲ.
Sunday, November 27, 2016
3k ರಾಜ್ಯೋತ್ಸವ ಸಂಭ್ರಮ
ಕವಿ ಗೋಷ್ಠಿ:
ನಮ್ಮದ್ರುಷ್ಟಕ್ಕೆ ಅವತ್ತಿನ ಕಾರ್ಯಕ್ರಮವೂ ಲೇಟಾಗಿ ಮೊದಲ ಮೂವರ ಕಾವ್ಯವಾಚನ ಮುಗಿದು ನಾಲ್ಕನೇಯವರ ನೀಳ್ಗವನ ವಾಚನ ನಡೆಯುತ್ತಿತ್ತು . ಹೋಗಿ ಮಹೇಶ್ ಗೌಡ, ಗೋರವಿ ಮುಂತಾದವರ ಜೊತೆ ಹಾಯೆನ್ನೋ ಹೊತ್ತಿಗೆ, ಇವರು ಈಗ ಕವನ ಓದ್ತಾ ಇದ್ದಾರೆ ಅಂತ ನನ್ನೆಸರೇ ಕರೆದು ಬಿಡಬೇಕಾ ? ! ಇದೇನಪ್ಪಾ ಅಂದ್ಕೊಳ್ಳೋ ಹೊತ್ತಿಗೆ ಐದನೇಯವ ನಾನೇ ಅಲ್ವಾ ಅಂತ ನೆನಪಾಯ್ತು ! ಸರಿ ಅಂತ ಮೊಬೈಲಲ್ಲಿದ್ದ ಕವನ ಮೇಲೆ ತಂದು ಕೊಳ್ತಾ ವೇದಿಕೆಯತ್ತ ಹೆಜ್ಜೆ ಹಾಕೋ ಹೊತ್ತಿಗೆ ಸತೀಶ ಬಂದು ಹಾರ್ಡ್ ಕಾಪಿ ಕೊಡ್ತಾರೆ ತಡಿ ಅಂದ. ವೇದಿಕೆಯ ಬಳಿಯೇ ಇದ್ದ ರೂಪಕ್ಕ ಇದೇ ಅಲ್ವಾ ನಿಮ್ಮ ಕವನ ಅಂತ ತಮ್ಮತ್ರ ಇದ್ದ ಪ್ರಿಂಟೌಟ್ ಕೊಟ್ಟಿದ್ದು ಐನೂರು ರೂಪಾಯಿ ನೋಟವನಿಗೆ ಚೇಂಜ್ ಕೊಟ್ಟಂಗಾಗಿತ್ತು :-) ಪ್ರಶಸ್ತಿ ಅವರು ಬರ್ತಾರೆ ಅಂದಾಗ ಇದೇನು ಕಾವ್ಯ ನಾಮನಾ , ಉಪಮೆನಾ ಅಂತ ಗೊಂದಲದಲ್ಲಿ ಕೂತಿದ್ದ ಹಲವು ಮುಖಗಳು ನನ್ನತ್ತನೇ ನೋಡ್ತಿದ್ದವು. ವೇದಿಕೆಯ ಮೇಲಿದ್ದ ಶ್ರೀ ಮಣಿಕಾಂತ್ , ಶ್ರೀ ಮಂಜುನಾಥ್ ಕೊಳ್ಳೇಗಾಲ ಅವರು ಮತ್ತು ಶ್ರೀ ಅಶೋಕ್ ಅವರು ಕೂತಿರುವಾಗ ನಾನೇನಪ್ಪ ಓದೋದು ಅನ್ನೋ ಅಳುಕು ಬೇರೆ. ಬ್ಲಾಗಲ್ಲಿ, ಫೇಸ್ಬುಕ್ಕಲ್ಲಿ ಬರೆಯೋದು ಬೇರೆ, ಮೈಕ್ ಕೊಟ್ಟು ಕವನ ಓದು ಅನ್ನೋದು ಬೇರೆ. ಮಾತಾಡು ಅಂದ್ರೆ ಏನಾದ್ರೂ ಒಂದು ಮಾತಾಡ್ಬಹುದು. ಬರೆದಿರೋ ಕತೆಯನ್ನೋ, ಕವನವನ್ನೋ ಓದು ಅಂದ್ರೆ ಅದೆಷ್ಟು ಕಷ್ಟ ಅಂತ ಮೈಕ್ ಹಿಡಿದಾಗ್ಲೇ ಗೊತ್ತಾಗಿದ್ದು. ವೇದಿಕೆ ಅಂತ ಹತ್ತಿ ಕತೆಯನ್ನೋ ಕವನವನ್ನೋ ಓದದೇ ವರ್ಷಗಳಾಗಿದ್ದರೂ ಎಲ್ರಿಗೂ ಒಮ್ಮೆ ನಮಸ್ಕರಿಸಿ, ನನ್ನೆಸ್ರೇ ಪ್ರಶ್ರಸ್ತಿ ಅಂದಾಗ ಎಲ್ಲೆಡೆ ಒಮ್ಮೆ ನಗೆಯ ಅಲೆ. ಆಗ ವಾತಾವರಣವೂ ಸ್ವಲ್ಪ ಲೈಟಾದ ಭಾವವುಂಟಾಗಿ ನನ್ನ ಕವನ "ಸಲಿಲಕ್ಕೊಂದು ಸಾಲು" ಓದೋಕೆ ಪ್ರಾರಂಭಿಸಿದೆ. ಬರೆದಿದ್ದ ಕವನದ ಏಳು ಪ್ಯಾರಾಗಳನ್ನ ಇನ್ನೊಂದಿಷ್ಟು ಚೆನ್ನಾಗಿ ಬರೆಯಬಹುದಿತ್ತು ಅಂತ ಬೆಳಗ್ಗೆ ಅನಿಸಿದ್ರೂ ಕವನಕ್ಕೆ ಆಮೇಲೆ ಸಿಕ್ಕ ಚಪ್ಪಾಳೆಗಳಿಂದ, ಜಯಪ್ರಕಾಸ್ ಸರ್ ಮುಂತಾದವರ ಮೆಚ್ಚುಗೆಗಳಿಂದ ನನ್ನ ಖುಷಿಗೆ ಮೇರೆಯೇ ಇರಲಿಲ್ಲ.
ನಂತರದ ಕವನ ವಾಚನ ಶ್ರೀಕಾಂತಣ್ಣ ಅವರದ್ದಾಗಿತ್ತು. ನನ್ನ ಜೊತೆಗೇ ಬಂದರೂ ಅವರು ಗಾಡಿ ನಿಲ್ಲಿಸೋಕೆ ಹೋಗಿದ್ರಿಂದ ನನ್ನ ಕವನ ಮುಗಿಯೋ ಹೊತ್ತಿಗೆ ಬಂದಿದ್ರು. ಅವರು ಬರ್ತಿದ್ದ ಹಾಗೆಯೇ ಅವರ ಹೆಸರೂ ಬರಬೇಕೇ ? ಏ, ನಾನು ಆಮೇಲೆ ಓದ್ತೀನಿ ಅಂತ ಮುಂದಿನ ಕವಿಯನ್ನು ಕರೆಯೋಕೆ ಹೇಳಿದ್ರು. ಆದ್ರೆ ಅವರು ಬಾರದಿದ್ದ ಕಾರಣ 3kಯ ನೂತನ್ ಅವರು ಅವರ ಪರವಾಗಿ ಓದಿದ್ರು. ನಂತರ ಮತ್ತೆ ತಪ್ಪಿಸಿಕೊಳ್ಳಲಾಗದ ಶ್ರೀಕಾಂತಣ್ಣ ವೇದಿಕೆಗೆ ಬರಲೇಬೇಕಾಯಿತು :-) ಎದುರಿಗೇ ಕೂತ ಮಡದಿ, ಮಕ್ಕಳ ಮುಂದೆ ಕವಿಗೋಷ್ಠಿಯಲ್ಲಿ ಕವನವೋದುವ ಭಾಗ್ಯ ಶ್ರೀಕಾಂತಣ್ಣನಿಗೆ :-) ಅವರ ಮಹಾಭಾರತದ ಕಾವ್ಯ ಅವರ ಅನುಭವದ ಮಾತುಗಳಿಗೂ ಸಾಕ್ಷಿಯಾಗಿ ಗದ್ಯ-ಪದ್ಯಗಳ ಸಮ್ಮಿಶ್ರಣವಾಗಿ ಒಂತರಾ ಭಿನ್ನ ಭಾವವನ್ನಿತ್ತಿತು. ನಂತರ ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಲೇಖಕಿ, ಕವಯಿತ್ರಿ ಶ್ರೀಮತಿ ಜಯಲಕ್ಷ್ಮೀ ಪಾಟೀಲ್ ಅವರ ಕವನವಾಚನ. ನಂತರ ಅಂದಿನ ಅತಿಥಿಗಳಾಗಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಅಂದಿನ ಕವನವಾಚನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿದರು.
ಕರ್ನಾಟಕ ನಾಟಕ ಪಿತಾಮಹ ಟಿ.ಪಿ ಕೈಲಾಸಂ:
ಎರಡು ವರ್ಷದ ಹಿಂದೆ ಹೀಗೇ 3k ಯ ಕಾರ್ಯಕ್ರಮದಲ್ಲಿ ಮೊದಲು ಕಂಡಿದ್ದು ಶ್ರೀ ಮಂಜುನಾಥ ಕೊಳ್ಳೇಗಾಲ ಅವರನ್ನು. ಅಂದು ಓದಿನ ಮಹತ್ವ ಏನು ಎಂಬುದರ ಬಗ್ಗೆ ಹೇಳುತ್ತಾ ಕುಮಾರ ವ್ಯಾಸ ಭಾರತ, ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಮುಂತಾದ ಕೃತಿಗಳ ಸಾರವನ್ನು ಉಣಬಡಿಸಿದ್ದ ಮಂಜುನಾಥ್ ಸರ್ ಅವರ ಪರಿಚಯವನ್ನು ಅಂದು ಮಾಡಿಕೊಟ್ಟಿದ್ದು ಸತೀಶ್ ನಾಯಕ್ ಭದ್ರಾವತಿ. ಇಂದೂ ಅವರೇ :-) ಟಿ.ಪಿ ಕೈಲಾಸಂ ಅವರ ನಾಟಕಗಳ ಬಗ್ಗೆ ಕೇಳಿದ್ದ ನಮಗೆ ಅವರ ವ್ಯಕ್ತಿತ್ವದ ಪರಿಚಯವಾಗಿದ್ದು ಇಂದೇ.
ತಮಿಳು ಮೂಲದ ಜಸ್ಟೀಸ್ ಪರಮಶಿವಯ್ಯ ಮತ್ತು ಕಮಲಮ್ಮ ದಂಪತಿಗಳ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದ್ದ ಕೈಲಾಸಂ ಅವರು ಭೂವಿಜ್ಞಾನ ಶಾಸ್ತ್ರದಲ್ಲಿ ಬಿ.ಎ, ಎಂ.ಎ ಪಡೆದು ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸೈನ್ಸಿನಲ್ಲಿ ಏಳು ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಅಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳಿಂದ ಅಪಾರ ಪ್ರಭಾವ ಹೊಂದಿದ್ದ ಅವರು ನಂತರ ಕರ್ನಾಟಕ ನಾಟಕ ರಂಗದತ್ತ ಹೊರಳಿದರು. ಉನ್ನತ ದರ್ಜೆಯ ಕುಟುಂಬದಿಂದ ಬಂದ ಕೈಲಾಸಂ ಅವರು ಕನ್ನಡ ಸಾಹಿತ್ಯಕ್ಕಾಗಿ ಒದ್ದಾಡುವುದು ಅವರ ತಂದೆಗೆ ಸುತರಾಂ ಇಷ್ಟವಿರಲಿಲ್ಲ. ಆ ಅಪ್ಪ, ಮಗನ ನಡುವೆ ನಡೆಯೋ ಮನಸ್ತಾಪಗಳನ್ನೂ ಹಾಸ್ಯವಾಗಿ ಪರಿವರ್ತಿಸಿದ ಸನ್ನಿವೇಶಗಳನ್ನು ಕೈಲಾಸಂ ಅವರ ಕೃತಿಗಳಲ್ಲೇ ಓದಬೇಕು. ಆದರೂ ಕೆಲವು ಪ್ರಸಂಗಗಳನ್ನು ನಿನ್ನೆ ಕೇಳಿದ ನೆನಪಿನಲ್ಲಿ ತೆಗೆದುಕೊಳ್ಳುವುದಾದರೆ..
ಪ್ರಸಂಗ ೧: ಕೈಲಾಸಂ ಅವರು ತುಂಬಾ ಕೊಳೆಯಾಗಿದ್ದ ರೂಂ ಒಂದರಲ್ಲಿ ಇರುತ್ತಾರೆ. ಅದಕ್ಕೆ nook(ಮೂಲೆ) ಅಂತ ಕರೆಯುತ್ತಿದ್ದರು.ಅಲ್ಲಿಗೆ ಬಂದ ಅವರ ಹಿತೈಷಿಯೊಬ್ಬರು. ಏನಪ್ಪಾ ಕೈಲಾಸಂ, ನಿನ್ನ ರೂಂ ಇಷ್ಟೊಂದು ಕಸದಿಂದ ತುಂಬಿದೆ ಅಂದ್ರೆ ಕೈಲಾಸಂ ಅವರು, ಸ್ವಾಮಿ ಕಸ ಅಂದರೆ ಏನು ? ಯಾವುದು ಎಲ್ಲಿರಬಾರದು ಅಲ್ಲಿದ್ದರೆ ಕಸ. ಉದಾಹರಣೆಗೆ ನೀವು ಇಲ್ಲಿರಬಾರದು, ನೀವು ಇಲ್ಲಿಗೆ ಬಂದರೆ ಅದು..!!!
ಪ್ರಸಂಗ ೨:ಕೈಲಾಸಂ ಅವರ ತಂದೆಯವರಿಗೆ ತುಂಬಾ ಅನಾರೋಗ್ಯವುಂಟಾಗಿದೆಯೆಂಬುದನ್ನು ತಿಳಿದು ಅವರು ತಮ್ಮ ತಂದೆಯನ್ನು ನೋಡಲು ಬರುತ್ತಾರೆ. ತಂದೆಗೆ ಕೊನೆಗೂ ತಮ್ಮ ಮಗ ತಮ್ಮನ್ನು ನೋಡಲು ಬಂದನಲ್ಲಾ ಅನ್ನೋ ಸಂತೋಷಕ್ಕಿಂತ ಆತ ಹೇಗಿದ್ದಾನೋ ಏನೋ ಎಂಬ ಆತಂಕ. Are you having money to have one square meal per day ಅಂತ ಕೇಳುತ್ತಾರೆ. ಅದಕ್ಕೆ ಕೈಲಾಸಂ ಅವರು ಏನೂ ಉತ್ತರಿಸದಿರುವುದನ್ನ ಕಂಡ ಅವರು what do you need . tell me ಅಂತ ಕೇಳುತ್ತಾರೆ. ಅದಕ್ಕೂ ಸಮರ್ಪಕ ಉತ್ತರ ಸಿಗದಿದ್ದನ್ನ ಕಂಡ ಅವರ ತಂದೆ Are you serious ಎನ್ನುತ್ತಾರೆ . ಅದಕ್ಕೆ ಕೈಲಾಸಂ ಅವರು. I am not serious. you are serious . Take care of your health ಅಂತ ಹೇಳಿ ಅಲ್ಲಿಂದ ತೆರಳುತ್ತಾರೆ !
ಪ್ರಸಂಗ ೩: ಕೈಲಾಸಂ ಅವರು ಕೊನೆಗೂ ತಮ್ಮ ತಂದೆಯವರಿದ್ದ ಭವ್ಯ ಬಂಗಲೆ whitehouse ಗೆ ಬಂದು ನೆಲಸಬೇಕಾಗುತ್ತದೆ. ಆದರೆ ಅಲ್ಲಿ ಇರುವುದು ಇಷ್ಟವಿಲ್ಲದ ಅವರು ಅದರ ಹೊರಭಾಗದಲ್ಲಿರುವ ಕೊಠಡಿಯೊಂದರಲ್ಲಿ ನೆಲೆಸುತ್ತಾರೆ. ಅದನ್ನು ನೋಡಿದ ಒಬ್ಬರು ಇವರಿಗೆ ಪ್ರಶ್ನಿಸುತ್ತಾರೆ. Finally you are in whitehouse ? ಕೈ:No I am in outhouse !
ಪ್ರಸಂಗ ೪: whitehouse ನಲ್ಲಿ ಕೈಲಾಸಂ ಅವರು ನೆಲೆಸಿದ್ದನ್ನು ತಿಳಿದ ಒಬ್ಬರು ಇವರನ್ನು ಪ್ರಶ್ನಿಸುತ್ತಾರೆ. everything is good in whitehouse ? ಕೈ:yes. I am the only blackspot in it !. ಕೈಲಾಸಂ ಅವರಿಗೆ ಉತ್ತಮ ಕುಟುಂಬದಿಂದ ಬಂದತಹ ತಾವು ಕೆಳಮಟ್ಟದ ಜೀವನ ನಡೆಸುತ್ತಿರುವುದನ್ನ ಸಮಾಜದಲ್ಲಿ ಕೆಲವರು ಹಾಸ್ಯದ ಸರಕಾಗಿಸಿದ್ದಾರೆ ಅನ್ನೋದು ಗೊತ್ತಿತ್ತು. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಅವರು ಅದನ್ನೇ ಹಾಸ್ಯದ ಸರಕಾಗಿಸಿದ್ದರು ಅನ್ನೋದು ಮೇಲಿನ ಪ್ರಸಂಗಗಳಿಂದ ತಿಳಿದುಬರುತ್ತೆ.
ಮೈಸೂರು ಮಹಾರಾಜರ ಧಡೂತಿತನದ ಬಗ್ಗೆಯೂ ಕೈಲಾಸಂ ಅವರು ಹಾಸ್ಯವಾಗಿ ಬರೆದಿದ್ದನ್ನ ಮಂಜುನಾಥ್ ಅವರು ವಿವರಿಸುತ್ತಾ ಹೋಗುತ್ತಾರೆ.
ಪ್ರಸಂಗ ೫: ಕೈಲಾಸಂ:ನೀನು ಮೈಸೂರು ದಸರಾಕ್ಕೆ ಹೋಗ್ತಿದೀಯಲ್ಲ ರಾಜ. ಅಲ್ಲಿನ ಅಂಬಾರಿಯಲ್ಲಿ ಕೆಳಗಿರೋದು ಆನೆ ನೆನಪಿರ್ಲಿ !
ರಾಜ ಅನ್ನೋ ಅವರ ಗೆಳೆಯ/ಪಾತ್ರಧಾರಿ: ಹೂಂ. ಅದು ಗೊತ್ತೇ ಇದ್ಯಲ್ಲ ಸಾರ್,
ಕೈಲಾಸಂ: ಗೊತ್ತಿದ್ರೂ, ಜ್ಞಾಪಕ ಇರ್ಲಿ ಅಂತ ಹೇಳ್ದೆ
ಪ್ರಸಂಗ ೬: ರಾಜರು ಬರುವಾಗ ಆಗ ೩ ಸಲ ತುಪಾಕಿ ಹಾರಿಸ್ತಿದ್ರಂತೆ. ಅದನ್ನ 3 cheers to his highness ಅಂತ ಕರೀತಿದ್ರಂತೆ. ಅದನ್ನು ಕೈಲಾಸಂ ಅವರು 3 cheers to his anus ಅಂತ ಹಾಸ್ಯ ಹೇಳ್ತಿದ್ರಂತೆ. Ruler of mysore ಬದಲು road roler of mysore ಅಂತಿದ್ರು. ಅವರ sharp wit ಅನ್ನೋದು ಹಾಗಿತ್ತು ಅನ್ನೋದಕ್ಕೆ ಇವು ಕೆಲವು ಉದಾಹರಣೆಗಳಷ್ಟೆ.
ಕೈಲಾಸಂ ಅವರ ಗೆಳೆಯ ವೆಂಕಣ್ಣಯ್ಯನವರು ಅಂತ ಒಬ್ಬರಿದ್ರಂತೆ. ಅವರು ಆರೂಕಾಲಡಿಯ ಆಜಾನುಬಾಹುವಾದ್ರೆ ಕೈಲಾಸಂ ಐದೂಕಾಲಡಿಯವರು.ಅವರ ಜೊತೆ ಹೋಗ್ತಾ ನಡೆದ ಸುಮಾರು ಹಾಸ್ಯ ಪ್ರಸಂಗಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ
ಪ್ರಸಂಗ ೭:ಹಿಂಗೇ ಒಮ್ಮೆ ನಡೆದು ಹೋಗ್ತಾ .ಸ್ವಾಮಿ ವೆಂಕಣ್ಣಯ್ಯನವರೇ ಹೇಗಿದ್ರೂ ನಿಂತೇ ಇದ್ದೀರಿ. ಹಾಗೇ ಸ್ವಲ್ಪ ಮೇಲೆ ನೋಡಿ. ನಮ್ಮ ಹಿರಿಯರು ಯಾರಾದ್ರೂ ಕಾಣಬಹುದೇನೋ. ಎಲ್ಲಾ ಆರಾಮಿದ್ದಾರಾ ಕೇಳಿ ಹೇಳಿ.
ಪ್ರಸಂಗ ೮:ವೆಂಕಣ್ಣಯ್ಯ ಅವರು ಮತ್ತು ಕೈಲಾಸಂ ಅವರು ಒಮ್ಮೆ ಮಾರ್ಕೇಟಿಗೆ ಹೋಗಿರ್ತಾರೆ
ವೆಂಕಣ್ಣಯ್ಯ: ಏನಮ್ಮಾ, ನಿಂಬೆಹಣ್ಣಿಗೆ ಎಷ್ಟು ?
ಸ್ವಾಮಿ: ಅದು ನಿಂಬೆಹಣ್ಣಲ್ಲ. ಸ್ವಲ್ಪ ಬಗ್ಗಿ ನೋಡಿ, ಅದು ಮೋಸಂಬಿ !!
ಹೀಗೇ ಕೈಲಾಸಂ ಅವರ ಹಾಸ್ಯ ಗಳನ್ನು ತೆರೆದಿಟ್ಟ ಮಂಜುನಾಥ್ ಅವರು ನಂತರ ಕೈಲಾಸಂ ಅವರ ನಾಟಕಗಳ ಪರಿಚಯದತ್ತ ತಿರುಗಿದರು. ಇಂದಿನ ಶೈಕ್ಷಣಿಕ ವ್ಯವಸ್ಥೆಯ ಅಣಕಾಗಿರುವ ಪೋಲಿ ಕಿಟ್ಟಿ, ಟೊಳ್ಳುಗಟ್ಟಿ ನಾಟಕಗಳ ಪರಿಚಯ ಮಾಡಿಕೊಟ್ಟ ಶ್ರೀ ಮಂಜುನಾಥ ಕೊಳ್ಳೇಗಾಲ ಅವರ ಮಾತುಗಳ ಬಗ್ಗೆ ಹೆಚ್ಚು ಬರೆಯೋ ಬದಲು ಅವರ ಮಾತುಗಳನ್ನ ಮತ್ತೊಮ್ಮೆ ಕೇಳೋದೇ ಮೇಲು ಅನಿಸುತ್ತೆ ! ಅವರ ನಾಟಕಗಳಲ್ಲಿ ಬರುವ ಮೋನೋಲಾಗಿನಲ್ಲಿನ ಗುಂಡೂ ಮತ್ತು ಸುಬ್ಬುವಿನ ಬಗ್ಗೆಯಾಗಲಿ, ಐದು ಸಖಿಯರು ಒಂದು ಉದ್ಯಾನವನದ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಹಾಡೋದನ್ನಾಗಲಿ ಬರೆಯೋ ಬದಲು ಅದನ್ನು ಕೇಳಿದ್ರೇ ಮಜ. ಆ ರೆಕಾರ್ಡಿಂಗುಗಳು ಆಸಕ್ತ ಕೇಳುಗರಿಗಾಗಿ..
ಮಣಿಕಾಂತ್ ಸರ್ ಅವರಿಗೆ ರಾಜ್ಯೋತ್ಸವ ಸನ್ಮಾನ
ನಂತರ ಆದಿನದ ಮುಖ್ಯ ಕಾರ್ಯಕ್ರಮವಾಗಿದ್ದ ಶ್ರೀ ಮಣಿಕಾಂತ್ ಸರ್ ಅವರ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಅದನ್ನು ನಡೆಸಿಕೊಟ್ಟವರು ಸೂರತ್ಕಲ್ಲಿನ ಮಹೇಶ್ ಮೂರ್ತಿ ಅವರು. ಮಣಿಕಾಂತ್ ಸರ್ ಅವರಿಗೆ ನೀಡಲಾದ ಪುರಸ್ಕಾರ ಪತ್ರವನ್ನು ಓದಿ, ಆಲನಹಳ್ಳಿ ಆರ್ ಮಣಿಕಾಂತ್ ಸರ್ ಅವರ ಸಾಧನೆಗಳ ಬಗ್ಗೆ ನೆರೆದ ಸಭಿಕರಿಗೆ ಮತ್ತೆ ನೆನಪಿಸಿಕೊಟ್ಟಿದ್ದು ೩k ಯ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಸತೀಶ್ ಅವರು. ಪತ್ನಿ ನಾಗರತ್ನ, ಪುತ್ರಿ ನೀಲಿಯವರ ಸಂಸಾರ ಹೊಂದಿದ ಮಣಿಕಾಂತ್ ಅವರ ನೀಲಿಮ ಪ್ರಕಾಶನದ ಬಗ್ಗೆ ಅವರ ಅಮ್ಮ ಹೇಳಿದ ಎಂಟು ಸುಳ್ಳು ಪುಸ್ತಕದ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರತಿಗಳು ಖರ್ಚಾದ ಬಗ್ಗೆ ಮುಂತಾದ ಸಾಧನೆಗಳ ಬಗ್ಗೆ ಕೇಳಿದ ನಮಗೆ ಮೈ ಜುಮ್ಮೆಂದಿದ್ದು ಸುಳ್ಳಲ್ಲ.ಸನ್ಮಾನದ ನಂತರ ಮಣಿಕಾಂತ್ ಸರ್ ಅವರು ಇದು ನಮ್ಮ ಮನೆಯ ಕಾರ್ಯಕ್ರಮವೇ ಅನಿಸುವಷ್ಟು ಚೆನ್ನಾಗಿ ಮೂಡಿಬರುತ್ತಿದೆ. ಖುಷಿ ಕೊಡುತ್ತಿದೆ ಅಂತಲೂ, ೨೦೦೮ರಲ್ಲಿ ಶುರುವಾದ ೩k ಮತ್ತದರ ಕಾರ್ಯಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ನಂತರದಲ್ಲಿ ಸಭಿಕರ ಕೋರಿಕೆಗೆ ಕೊಂಚ ಆಶ್ಚರ್ಯದಿಂದಲೇ ಸ್ಪಂದಿಸಿದ ಮಣಿಕಾಂತ್ ಅವರ ಪತ್ನಿ ಶ್ರೀಮತಿ ನಾಗರತ್ನ ಮಣಿಕಾಂತ್ ಅವರು ನಿಸಾರ್ ಅಹಮದ್ ಅವರ ಭಾವಗೀತೆಯೊಂದನ್ನು ಹಾಡಿ ನಾವೆಲ್ಲಾ ಭಾವಲೋಕದಲ್ಲಿ ವಿಹರಿಸುವಂತೆ ಮಾಡಿದರು.
ಎದ್ದೇಳು ಕನ್ನಡಿಗ:
ನಂತರ ಶ್ರೀ ಸತೀಶ್ ಎಸ್ ಅವರು ಬರೆದು, ಶ್ರೀ ವಿಶಾಲ್ ನಾಯಕ್ ಅವರು ಸಂಗೀತ ನಿರ್ದೇಶಿಸಿರುವ , ಶ್ರೀ ರವಿಕಿರಣ್ ಅವರು ಹಾಡಿರುವ ಎದ್ದೇಳು ಕನ್ನಡಿಗ ಹಾಡನ್ನು ಪ್ರಸ್ತುತ ಪಡಿಸಲಾಯಿತು. ಪರರಿಗೆ ಉಪಕಾರಿಯಾಗಲು ಮುಂದಾಗಿ ಮನೆಗೇ ಮಾರಿಯಾಗುತ್ತಿರುವ ಕನ್ನಡಿಗ ತನ್ನ ನಾಡ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿ ಅದನ್ನು ಉಳಿಸಿಕೊಳ್ಳಲು ಮುಂದಾಗದಿದ್ದರೆ ಅಪಾಯ ತಪ್ಪಿದ್ದಲ್ಲ, ಅದನ್ನು ತಪ್ಪಿಸಲು ಎದ್ದೇಳು ಕನ್ನಡಿಗ ಎಂಬ ಅವರ ಗೀತೆ ಸಭಿಕರ ಗಮನ ಸೆಳೆಯಿತು. ಕಾರ್ಯಕ್ರಮ ಮಿಸ್ ಮಾಡಿಕೊಂಡವರಿಗಾಗಿ ಅವರ ಈ ಹಾಡಿನ ಯೂಟ್ಯೂಬ್ ಕೊಂಡಿ https://www.youtube.com/shared?ci=0mboQXUr1Hs
ಹಾಸ್ಯ ಲಾಸ್ಯ:
ಶ್ರೀ ಶಶಿ ಗೋಪಿನಾಥ್ ಅವರಿಂದ ಹಾಸ್ಯ ಲಾಸ್ಯ ಕಾರ್ಯಕ್ರಮ ನಡೆಯಿತು. ಹಾಸ್ಯ, ಕನ್ನಡದ ನಟರು ಬಂದು 3k ಕಾರ್ಯಕ್ರಮ ನೋಡಿದ್ದರೆ ಹೇಗಿರುತ್ತಿತ್ತು ಎಂಬ ಮಿಮಿಕ್ರಿ ನಡೆಸಿಕೊಟ್ಟ ಅವರು ತಮ್ಮ ಮುಂದಿನ ಕಾರ್ಯಕ್ರಮವಾದ ನೃತ್ಯಕ್ಕೆ ಪೆನ್ ಡ್ರೈವ್ ತರಲು ಮುಂದಾದರೆ ಆ ಗ್ಯಾಪಲ್ಲೇ ಮಿಮಿಕ್ರಿ ನಡೆಸಿಕೊಟ್ಟ ನಿರೂಪಕ ಅರುಣ್ ಶೃಂಗೇರಿ ಅವರ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಸಭಿಕರ ಶಿಳ್ಳೆ, ಕರತಾಡನಗಳಿಗೆ ಸಾಕ್ಷಿಯಾಯಿತು
ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ.
3kಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ಕುಮಾರಿ ಮಾನಸ ಭಟ್ ಅವರ ಪರವಾಗಿ ಅವರಣ್ಣ ನಾಗರಾಜ ಹೆಗಡೆ ಅವರು, ಗುಬ್ಬಚ್ಚಿ ಸತೀಶ್ ಅವರು, ಮೌನಯಾನ ಬ್ಲಾಗಿನ(http://vinayakabhatmb.blogspot.in/2016/10/blog-post_25.html) ಮತ್ತು ಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ವಿನಾಯಕ ಭಟ್ ಅವರು ಮತ್ತು ಗುರುನಾಥ್ ಬೋರಗಿಯವರು ಬಹುಮಾನಗಳನ್ನು ಸ್ವೀಕರಿಸಿದರು. ಬಹುಮಾನ ವಿಜೇತರಾಗದಿದ್ದರೂ ಟಾಪ್ ೧೦ನಲ್ಲಿ ಆಯ್ಕೆಯಾಗಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೂ ಅಭಿನಂದನಾ ಪತ್ರ, ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.
ಅಧ್ಯಕ್ಷೀಯ ನುಡಿ:
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಅಶೋಕ್ ಶೆಟ್ಟಿಯವರು ತಮ್ಮ ಹಾಸ್ಯಭರಿತ ಮಾತುಗಳಿಂದಲೇ ನೆರೆದವರ ಮನಗೆದ್ದರು.
ವಂದನಾರ್ಪಣೆ:
ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿಕೊಟ್ಟವರು 3k ಯ ಗೋಪಿನಾಥ್ ಅವರು. ಬಂದ ಅಧ್ಯಕ್ಷ, ಅತಿಥಿ, ತೀರ್ಪುಗಾರ , ಸಭಿಕರಿಗೆ ವಂದನಾರ್ಪಣೆಗಳನ್ನು ತಿಳಿಸುವುದು ಸಾಮಾನ್ಯ ಶಿಷ್ಟಾಚಾರ. ಆದರೆ ಗೋಪಿನಾಥ್ ಅವರು ಆ ಕಾರ್ಯಕ್ರಮಕ್ಕೆ ಎಳನೀರು ಕೊಚ್ಚಿ ಕೊಟ್ಟವರಿಗೆ, ಸಮೋಸ ಮುಂತಾದ ತಿನಿಸುಗಳನ್ನು ತಂದು ಕೊಟ್ಟವರಿಗೂ ಬಿಡದಂತೆ ವಂದನೆ ತಿಳಿಸೋ ಜೋಷಲ್ಲಿದ್ದಿದ್ದು ಕೊನೆಯ ಬೆಂಚಿನ ಹುಡುಗರಿಗೆ ಭರಪೂರ ಮನೋರಂಜನೆ ತಂದುಕೊಟ್ಟಿತ್ತು. ಅವತ್ತಿನ ವಿಷಯವೇ ಹಾಸ್ಯ ಅಂದ ಮೇಲೆ ಕೇಳಬೇಕೆ ? ವಂದನಾರ್ಪಣೆ ವೇಳೆ ಗೋಪಿನಾಥ್ ಅವರಿಗೆ ಮೊಬೈಲು ಬ್ಯಾಟ್ರಿಯ ಮೂಲಕ ನೆರವಾಗೋಕೆ ಬಂದ ನೂತನ್ ಅವರ ನಡೆ ಸಭಿಕರ ನಗೆಗಡಲಲ್ಲಿ ಮಿಂದೇಳುವಂತೆ ಮಾಡಿತು.
ಕೊನೆಗೊಂದಿಷ್ಟು ತಿಸಿಸು, ಕೊನೆಯಿಲ್ಲದಷ್ಟು ನಗು:
3k ಯ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬರದಿದ್ದರೂ ತೆರೆಮರೆಯಲ್ಲೇ ಕೆಲಸ ಮಾಡುತ್ತಿದ್ದ ಮಲ್ಲೇಶ್, ಪ್ರಮೋದ್ ಮುಂತಾದವರು ಮಾತಿಗೆ ಸಿಕ್ಕಿದ್ದು, ಫೋಟೋಗಳಲ್ಲಿ ಬಂಧಿಯಾಗಿದ್ದು ಕಾರ್ಯಕ್ರಮ ಮುಗಿದು ತಿಂಡಿಗೆ ವೇದಿಕೆಯಾದಾಗ್ಲೇ. ಎದ್ದೇಳು ಕನ್ನಡಿಗ ಗೀತೆ ಬರೆದ ಸತೀಶ್ ಅವರೊಂದಿಗೂ, ಸಂಗೀತ ಸಂಯೋಜನೆಗಾರ ವಿಶಾಲ್ ಮತ್ತು ಗಾಯಕ ರವಿಕಿರಣ್ ಅವರೊಂದಿಗೂ ನಡೆಸಿದ ಮಾತುಕತೆ ಖುಷಿ ಕೊಟ್ಟಿತು. ಜೇಪಿ, ಗುರುನಾಥ್ ಬೋರಗಿ, ಶ್ರೀಕಾಂತಣ್ಣ, DOM ಮಹೇಶ್ ಗೌಡ, ಸತೀಶ ನಾಯ್ಕ್ ಭದ್ರಾವತಿ ಅವರಿದ್ದಲ್ಲಿ ನಗೆಯಿಲ್ಲದಿರುತ್ಯೆ ? ಇನ್ನೊಂದಿಷ್ಟು ಕಾಲೆಳೆತ, ನಗೆಯ ಅಲೆ. ಕಪ್ಪು-ಹಣ, ಬಿಳಿ-ಹಣ ಮುಂತಾದ ವಿಷಯಗಳ ಚರ್ಚೆಗೂ ನಾಂದಿಯಾದ ತಿಂಡಿ ಕಾರ್ಯಕ್ರಮ ಒಂದಿಷ್ಟು ಫೋಟೋ ಸೆಷನ್ನುಗಳಿಗೂ ಸಾಕ್ಷಿಯಾಯಿತು. ಘಂಟೆ ಏಳೂ ಕಾಲಾಗ್ತಾ ಬಂದಿದ್ರಿಂದ ಹಗೂರಕ್ಕೆ ಒಬ್ಬೊಬ್ಬರೇ ಖಾಲಿಯಾಗುತ್ತಾ ಬಂದಿದ್ರೂ ಬ್ಲಾಸಂ ಶಾಲೆಯಲ್ಲಿನ ನಗೆಯಲೆಗಳು ನಿಂತಿರ್ಲಿಲ್ಲ. ಇನ್ನೂ ಎರಡೂವರೆ ತಾಸಿನ ಬಸ್ ಪ್ರಯಾಣ ಬಾಕಿಯುಳಿದಿದ್ದ ಕಾರಣ ಅಲ್ಲಿಂದ
ಹೊರಡಲೇ ಬೇಕಾದ ಬಾರದ ಮನಸ್ಸು ನನ್ನದಾದರೂ ಅದೆಷ್ಟೋ ಬ್ಲಾಗಿಗ, ಮುಖ ಹೊತ್ತುಗೆಯ ಗೆಳೆಯರನ್ನು ಮುಖತಃ ಕಂಡ, ಕೈಲಾಸಂ ಅವರ ಸಾಹಿತ್ಯಕ್ಕೆ, ಅವರ ಜೀವನದ ಅನುಭವಗಳಿಗೆ ಕಿವಿಯಾದ ಖುಷಿಯೊಂದಿಗೆ,,ಬರಲಿರೋ ಹುಟ್ಟಿದಬ್ಬಕ್ಕೆ ಮುಂಚೆಯೇ ಒಂದು ಬರ್ತಡೇ ಗಿಫ್ಟ್ ಪಡೆದ ಸಂಭ್ರಮದಲ್ಲಿ..
ಹೀಗೊಂದು ಕಾರ್ಯಕ್ರಮ ವರದಿ,..
ಕೊನೆಯ ಬೆಂಚಿನ ಹುಡುಗರಿಂದ..
















