Monday, March 21, 2022

ನಿಮ್ಮ ಮಾಹಿತಿ ಹರಾಜಿಗಿದೆ!

ಮೊನ್ನೆ ಗೆಳೆಯರೊಬ್ಬರು ಫೇಸ್ಬುಕ್ ಮತ್ತು ಗೂಗಲ್ಲು ನಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತಿದೆ ಅಂತ ಹೇಳ್ತಾ ಇದ್ದರು. ನಿಮಗೂ ಇದರ ಅನುಭವವಾಗಿರಬಹುದು. ಉದಾಹರಣೆಗೆ ನೀವು ಬ್ಯಾಂಕಲ್ಲಿ ಎಫ್.ಡಿ ಇಡೋಕೆ ಬಡ್ಡಿ ಎಷ್ಟು ಅಂತ ಗೂಗಲ್ಲಲ್ಲಿ ಹುಡುಕಿದ್ದೀರ ಅಂತಂದುಕೊಂಡರೆ ನಿಮ್ಮ ಜಿಮೇಲ್ ಖಾತೆಗೆ ವಿವಿಧ ಬ್ಯಾಂಕುಗಳ ಜಾಹೀರಾತುಗಳು ಬರುತ್ತೆ. ನೀವು ಅಮೇಜಾನಿನಲ್ಲಿ ಯಾವುದೋ ಒಂದು ಕಂಪೆನಿಯ ಬಟ್ಟೆಯನ್ನೋ ಮೊಬೈಲನ್ನೋ ಹುಡುಕಿದ್ದೀರ ಅಂದರೆ ನಿಮ್ಮ ಫೇಸ್ಬುಕ್ಕಿನಲ್ಲಿ ಆ ಕಂಪೆನಿಯ ಜಾಹೀರಾತುಗಳು ಬರುತ್ತಿರುತ್ತೆ ! ನಾನು ಏನಾರೂ ಹುಡುಕಿಕೊಳ್ಳಲಿ , ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರ. ಅದನ್ನು ಈ ಫೇಸ್ಬುಕ್ಕು, ಜೀಮೇಲು, ಗೂಗಲ್ಲಿನವರು ಜಾಹೀರಾತು ಕಂಪೆನಿಗಳಿಗೆ ಮಾರೋದ್ಯಾಕೆ ? ಅವರು ನಮಗೆ ಈ ಸಂಬಂಧದ ಜಾಹೀರಾತು ಕಳುಹಿಸೋದ್ಯಾಕೆ ಅಂತ ನಿಮ್ಮಲ್ಲಿ ಸುಮಾರು ಜನ ಗೊಣಗಿಕೊಂಡೂ ಇರ್ತೀರ. ಆದರೆ ಅದಕ್ಕೆಲ್ಲಾ ನೀವೇ ಕಾರಣರು ಮತ್ತು ನಿಮ್ಮ ಕಂಪ್ಯೂಟರ್/ಮೊಬೈಲ್ ಅಂದರೆ ನಂಬ್ತೀರಾ ? ಹೌದು. ಅದಕ್ಕೆಲ್ಲಾ ಕಾರಣ ನೀವೆ. ಅದೇಗೆ ಅಂತ ನೋಡೋಣ. 


ಗೂಗಲ್ಲು ಮತ್ತು ಗೌಪ್ಯತೆ: 
ಗೂಗಲ್ಲನ್ನು ಮೊದಲು ಬಳಸೋ ಮೊದಲು ಕೆಳಗಿನ ಚಿತ್ರದಲ್ಲಿ ಇರೋ ತರ ನಿಮ್ಮ ಗೂಗಲ್ ಬಳಕೆಯ ಬಗೆಗಿನ ಒಪ್ಪಂದ ತೋರಿಸಿರುತ್ತೆ. 
ಅದರಲ್ಲಿ ನೀವು ಗೂಗಲ್ಲಿನ ಗೂಗಲ್ ಅನಾಲಿಟಿಕ್ಸ್ ಮತ್ತು ಗೂಗಲ್ಲಿನ ಕುಕೀಸನ್ನು ಬಳಸೋಕೆ ಅನುಮತಿಯನ್ನೂ ನೀಡಿರುತ್ತೀರಿ.  ಅದರಲ್ಲಿ ಕಣ್ಮುಚ್ಚಿಕೊಂಡು ಸರಿ ಎಂದರೆ ನೀವು ಗೂಗಲ್ಲಿನ ಉತ್ಪನ್ನಗಳಾದ ಗೂಗಲ್ ಕ್ರೋಮ್, ಗೂಗಲ್ ಸರ್ಚ್, ಜೀಮೇಲ್ಗಳನ್ನು ಬಳಸಿ ಏನೇ ಮಾಡಿದರೂ ಈ ಕುಕೀಸಿನ ಮೂಲಕ ಈ ಮಾಹಿತಿ ಗೂಗಲ್ಲಿನ ಮಡಿಲು ಸೇರುತ್ತೆ. ಉದಾಹರಣೆಗೆ ನೀವು ಗೂಗಲ್ ಕ್ರೋಮ್ ಬ್ರೌಸರ್ ಬಳಸಿ ಫೇಸ್ಬುಕ್ ತೆರೆದು ಅಲ್ಲೇನಾದರೂ ಹುಡುಕಿದರೂ , ಅದೇ ಬ್ರೌಸರಿನಲ್ಲಿ ಅಮೇಜಾನ್ ತೆರೆದು ಹುಡುಕಿದರೂ , ಗೂಗಲ್ ಸರ್ಚ್ ಮಾಡಿದರೂ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲಿನ ಇಂಟರ್ನೆಟ್ ಅಡ್ರೆಸ್ ಮೂಲಕ ಇದನ್ನು ಹುಡುಕಿದ್ದು ನೀವೇ ಎಂಬ ಮಾಹಿತಿ ಗೂಗಲ್ಲಿನ ಕುಕೀಸ್ ಮೂಲಕ ಅದು ಗೂಗಲ್ ಮಡಿಲು ಸೇರುತ್ತೆ. ಗೂಗಲ್ ಅನಾಲಿಟಿಕ್ಸ್ ಯಾವ್ಯಾವ ವ್ಯಕ್ತಿ ಯಾವ್ಯಾವ ರೀತಿಯ ಮಾಹಿತಿ/ಉತ್ಪನ್ನಗಳಲ್ಲಿ ಆಸಕ್ತಿ ಹೊಂದಿದ್ದಾನೆ ಅನ್ನೋ ಮಾಹಿತಿಯನ್ನು ಕಲೆಹಾಕಿ ಅವರಿಗೆ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು 
ಕಳುಹಿಸಬಹುದು ಎಂದು ನಿರ್ಧರಿಸುತ್ತೆ. ತಮ್ಮ ಕಂಪೆನಿಯ ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು  ಆ ಉತ್ಪನ್ನಗಳ ಬಗ್ಗೆ ಆಸಕ್ತಿವಹಿಸಿರೋ ವ್ಯಕ್ತಿಗಳಿಗೇ ಕಳುಹಿಸಬೇಕು ಎಂದು ಕಾಯುತ್ತಿರುತ್ತೆ. ಯಾರ್ಯಾರಿಗೋ ಕಳುಹಿಸಿದರೆ ಸುಮ್ಮನೇ ವ್ಯರ್ಥ ಖರ್ಚಲ್ಲವೇ ಎಂದು ಅವುಗಳ ಲೆಕ್ಕ. ಈ ತರದ ಕಂಪೆನಿಗಳು ಗೂಗಲ್ ಮೊರೆ ಹೋಗುತ್ತೆ. ಗೂಗಲ್ಲು ತನ್ನಲ್ಲಿ ಆಗಲೇ ಇರುವ ಅನಾಲಿಟಿಕ್ಸಿನ ಮಾಹಿತಿಯ ಮೇರೆಗೆ ಇಂತಹವರಿಗೆ ಕಳುಹಿಸಬಹುದು ಎಂದು ಆ ಕಂಪೆನಿಗಳಿಂದ ಒಂದಿಷ್ಟು ದುಡ್ಡು ಪಡೆಯುತ್ತೆ !  ನೀವು ಅದೇ ಬ್ರೌಸರಿನಲ್ಲಿ ನಿಮ್ಮ ಜಿಮೇಲಿಗೆ ಲಾಗಿನ್ ಆಗಿದ್ದರಂತೂ ಮುಗಿದೇ ಹೋಯ್ತು. ಅವೆಲ್ಲಾ ಮಾಹಿತಿಗೆ ಸಂಬಂಧಪಟ್ಟ ಜಾಹಿರಾತುಗಳು ನಿಮ್ಮ ಜಿಮೇಲ್ ಖಾತೆಗೆ ಬರುತ್ತೆ ! 

ಗೂಗಲ್ಲಿನಲ್ಲಿ ಗೌಪ್ಯತೆಯನ್ನು ಹೇಗೆ ಕಾಪಾಡಿಕೊಳ್ಳೋದು? 
ಚಿತ್ರ ಒಂದರಲ್ಲಿ ಸೀದಾ ಒಪ್ಪಿಕೊಳ್ಳೋ ಬದಲು ಕಸ್ಟಮೈಸ್ ಅನ್ನೋ ಆಯ್ಕೆಯನ್ನು ಒತ್ತಿದರೆ ಗೂಗಲ್ಲು ಯಾವ್ಯಾವ ಮಾಹಿತಿಯನ್ನು ಕಲೆಹಾಕಬಹುದು ಅನ್ನೋದನ್ನು ಆರಿಸಬಹುದು.  


ಸರ್ಚ್ ಕಸ್ಟಮೈಸೇಷನ್: 
ಇದರಲ್ಲಿ ಮೇಲಿನ ಚಿತ್ರದಲ್ಲಿ ಇರುವಂತೆ ನೀವು ಈಗಾಗಲೇ ಹುಡುಕಿರುವ ಮಾಹಿತಿಗೆ ಸಂಬಂಧಿಸಿದಂತಹ ಮಾಹಿತಿ ಮತ್ತು ಸರ್ಚ್ ಫಲಿತಾಂಶಗಳನ್ನು ತೋರಿಸಬಹುದಾ ಎಂದು ಆಯ್ಕೆ ಮಾಡಬಹುದು. ಉದಾಹರಣೆಗೆ ನೀವು ಕಾರಿನ ಎಂಜಿನ್ ಆಯಿಲ್ ಬಗ್ಗೆ ಗೂಗಲ್ಲಿನಲ್ಲಿ ಸರ್ಚ್ ಮಾಡಿದ್ದರೆ ಮುಂದಿನ ಸಲ ನೀವು ನಿಮ್ಮ ಪ್ರಶ್ನೆಯನ್ನು ಪೂರ್ತಿ ಟೈಪ್ ಮಾಡೋ ಮೊದಲೇ (ಉದಾಹರಣೆಗೆ how to ಎಂದು ಟೈಪ್ ಮಾಡೋ ಹೊತ್ತಿಗೇ) ಇಂಜಿನ್ ಆಯಿಲ್ಲಿಗೆ ಸಂಬಂಧಿಸಿದ ಮಾಹಿತಿ ಬರುತ್ತೆ. ಇದೊಂತರ ನಿಮ್ಮ ಖಾಸಗಿತನದ ಉಲ್ಲಂಘನೆ. ಇದನ್ನು ಆಫ್ ಮಾಡಬಹುದು. 

ಯೂಟ್ಯೂಬ್ ಇತಿಹಾಸ: 
ನೀವು ಯೂಟ್ಯೂಬಿನಲ್ಲೀ ಯಾವುದಾದರೂ ಒಂದು ವೀಡಿಯೋ ನೋಡಿದರೆ ಮುಂದೆ ಪ್ರತೀ ಬಾರಿ ಯೂಟ್ಯೂಬ್ ತೆರೆದಾಗಲೂ ಅದಕ್ಕೆ ಸಂಬಂಧಿಸಿದ ವೀಡಿಯೋಗಳೇ ತೆರೆದುಕೊಳ್ಳುತ್ತೆ !. ಇದನ್ನೂ ಆಫ್ ಮಾಡಬಹುದು. 

ಆಡ್ ಪರ್ಸನಲೈಸೇಷನ್ : 
ಇದರಲ್ಲಿ ನೀವು ಗೂಗಲ್ ಮತ್ತು ಯೂಟ್ಯೂಬಲ್ಲಿ ಹುಡುಕಿದ ಮಾಹಿತಿಯ ಮೇಲೆ ನಿಮಗೆ ಜಾಹೀರಾತುಗಳನ್ನು ಕಳುಹಿಸಬಹುದಾ ಎಂದು ಆಯ್ಕೆ ಮಾಡಬಹುದು. ನೀವು ಚಿತ್ರ ಒಂದರಲ್ಲೇ ಓಕೆ ಅಂದರೆ ಮೇಲಿನ ಎಲ್ಲದಕ್ಕೂ ನೀವು ಒಪ್ಪಿಕೊಂಡಂತೆಯೇ. ಆಮೇಲೆ ನಾನು ಯೂಟ್ಯೂಬಲ್ಲಿ ಹುಡುಕಿದ್ದು, ಗೂಗಲ್ಲಲ್ಲಿ ಹುಡುಕಿದ್ದಕ್ಕೆ ಸಂಬಂಧಿಸಿದ ಜಾಹೀರಾತು ನನಗೆ ಬಂತು ಎಂದು ಗೊಣಗುವಂತಿಲ್ಲ !





ಏನಿದು ಕುಕೀಸ್?   
ಲೇಖನದಲ್ಲಿ ಆಗಾಗ ಕುಕೀಸ್ ಅಂತ ಬಳಸಿದ್ದನ್ನು ಓದಿದಿರಿ. ಏನಿದು ಕುಕೀಸ್ ಅಂತ ಅಂದ್ಕೋತಾ ಇದ್ದೀರಾ ? ನೀವು ಯಾವುದೇ ವೆಬ್ ಸೈಟಿಗೆ ಭೇಟಿ ಕೊಡುತ್ತೀರ ಎಂದುಕೊಳ್ಳಿ. ಅಲ್ಲಿಗೆ ಯಾರು ಬಂದರು , ಏನು ಹುಡುಕಿದರು, ಏನು ತಗೊಂಡರು, ತಗೊಂಡವರು ಮಾಹಿತಿಗಳೇನು ಎಂಬುದನ್ನೆಲ್ಲಾ ಸಂಗ್ರಹಿಸಲು ಆ ವೆಬ್ಸೈಟುಗಳು ಕುಕೀಸ್ ಅನ್ನು ಬಳಸುತ್ತಾರೆ. ನೀವು ಗೂಗಲ್ ಕ್ರೋಮ್ ಬಳಸೋದಾದರೆ ಅದರ ಸೆಟ್ಟಿಂಗ್ > ಪ್ರೈವಸಿ ಮತ್ತು ಸೆಕ್ಯುರಿಟಿ ಎಂಬ ಆಯ್ಕೆಯಲ್ಲಿ ಯಾವುದಾದರೂ ವೆಬ್ ಸೈಟು ಕುಕೀಸನ್ನು ಬಳಸಬಹುದಾ ಅಥವಾ ಇಲ್ಲವಾ ಎಂದು ನಿರ್ಧರಿಸಬಹುದು. ಇದೇ ರೀತಿ ಬೇರೆ ಬೇರೆ ಬ್ರೌಸರುಗಳಲ್ಲಿ ಬೇರೆ ಬೇರೆ ಆಯ್ಕೆಗಳೂ ಇರುತ್ತೆ. 

ಇನ್ಕಾಗ್ನಿಟೋ ಆಯ್ಕೆ: 
ಸುಮಾರಷ್ಟು ಬ್ರೌಸರುಗಳಲ್ಲಿ ಮತ್ತು ಯೂಟ್ಯೂಬಿನಲ್ಲಿ ಇನ್ಕಾಗ್ನಿಟೋ ಮೋಡ್ ಅಥವಾ ಪ್ರೈವೇಟ್ ಮೋಡ್ ಎಂಬ ಆಯ್ಕೆ ಇರುತ್ತೆ. ಅಂದರೆ ಈ ಮೋಡಲ್ಲಿ ಸರ್ಚ್ ಮಾಡಿದರೆ ಆ ಮಾಹಿತಿ ಕುಕೀಸ್ಗಳಲ್ಲಿ ಶೇಖರವಾಗೋದಿಲ್ಲ. ಆಗಾಗ ನಿಮ್ಮ ಗೂಗಲ್ ಸರ್ಚ್ ಇತಿಹಾಸವನ್ನೂ ಅಳಿಸಬಹುದು. ಇದರಿಂದ ನಿಮ್ಮ ಖಾಸಗಿತನದ ಸಂರಕ್ಷಣೆ ಮಾಡಿಕೊಳ್ಳಬಹುದು.  

2 comments:

  1. ಕಣ್ಣು ತೆರೆಸುವ ಲೇಖನ.
    ನಮ್ಮ ಮಾಹಿತಿ ಕಾಪಿಡುವುದೇ ದೊಡ್ಡ ಕೆಲಸವಾಗಿದೆ!

    ReplyDelete
    Replies
    1. ಬ್ಲಾಗ್ ಭೇಟಿಗೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು ಬದ್ರಿ ಭಾಯ್

      Delete