Tuesday, May 4, 2021

ಸೊಳ್ಳೆ ಪುರಾಣ

ಬಾಲ್ಯದ ಕೆಲವು ದಿನಗಳಲ್ಲಿ ಸಂಜೆಯಾಯ್ತು ಅಂದ್ರೆ ಗುಯ್  ಅಂತ ಮನೆಗೊಂದಿಷ್ಟು ನೆಂಟರ ಎಂಟ್ರಿ. ಬಂದಿದ್ದು ನೆಂಟರಾದ್ರೂ ಕಜ್ಜಾಯ ಸಿಗ್ತಿದ್ದಿದ್ದು ನಮಗೆ ! ಕಿಟಕಿ ಹಾಕು ಅಂದ್ರು ಹಾಕಿಲ್ಲ, ಈಗ ನೋಡು ಸೊಳ್ಳೆ ಬಂತು ಅಂತ ಶುರುವಾಗೋ ಬೈಗುಳಗಳಿಗೆ ಆ ಸೊಳ್ಳೆಗಳನ್ನು ಹುಡುಕಿ ಕೊಲ್ಲೋವರೆಗೆ ಮಂಗಳವಿಲ್ಲ. ಸೊಳ್ಳೆಗಳು ಅಮ್ಮನ ಬೈಗುಳಕ್ಕೆ ಹೆದರಿ ನಮ್ಮ ಕೈಗೆ ಸಿಗ್ತಿದ್ವಾ ಅಥವಾ ನಾವೇ ಸೊಳ್ಳೆಗಳಿಗಿಂತ ಪ್ರಚಂಡ ಹಾರಾಟ ನಡಿಸ್ತಿದ್ವಾ ಗೊತ್ತಿಲ್ಲ. ಕೆಲ ನಿಮಿಷಗಳಲ್ಲೇ ಸೊಳ್ಳೆಗಳ ಗುಯ್ಗಾಟಕ್ಕೂ ಮನೆಯ ಬೈದಾಟಕ್ಕೂ ಕೊನೆ ಕಾಣುತ್ತಿತ್ತು. ನಮ್ಮ ಕೊಟ್ಟಿಗೆಗಳಲ್ಲಿ ನೊರಜು ಮತ್ತೆ ಸೊಳ್ಳೆ ಕಾಟ ಜಾಸ್ತಿ ಆಯ್ತು ಅಂದ್ರೆ ಸಂಜೆ ಹೊತ್ತಿಗೆ ಲೋಬಾನ ಅಥವಾ ಹೊಗೆ ಹಾಕ್ತಿದ್ರು. ಸೊಳ್ಳೆ ಕಾಯಿಲ್ ಹಾಕಿದ್ರೆ ಎತ್ತಿಗೆ ಕಾಲು ನೋವು ಅಂತ ಹೊಗೆಯಿಂದ್ಲೇ ಸೊಳ್ಳೆಗಳಿಗೆ ಹೊಗೆ ಹಾಕ್ತಿದ್ರು ! 


ಈಗ ಬಿಡಿ, ಕತೆನೇ ಉಲ್ಟಾ ಹೊಡೆದಿದೆ. ಈಗಿನ ಸೊಳ್ಳೆಗಳೇ ನಮ್ಮನೆಯಲ್ಲಿ ನಮಗಿಂತಾ ಜಾಸ್ತಿ ಇರ್ತವೆ ! ಒಂದು ತಗೊಂಡ್ರೆ ಒಂದು ಫ್ರೀ ಅನ್ನೋ ಜಾಹೀರಾತುಗಳಂತೆ ಒಂದು ಬಂದ ಕೂಡ್ಲೆ ಸುಮಾರಷ್ಟು ಎಂಟ್ರಿ ಕೊಡ್ತವೆ. ಮುಂಚೆಯೆಲ್ಲಾ ಕೈಯಲ್ಲೇ ಸಿಗ್ತಿದ್ದವು ಈಗ ಸೊಳ್ಳೆ ಬ್ಯಾಟ ಕಂಡರೆ  ಮನೆಯ ಎಲ್ಲಾ ಮೂಲೆ ತೋರುಸ್ತವೆ ! ಸೊಳ್ಳೆ ಬ್ಯಾಟ ಹಿಡಿದು ಓಡಿದಷ್ಟು ಶಟಲ್ ಬ್ಯಾಟ್ ಹಿಡಿದಾದ್ರೂ ಓಡಿದ್ರೆ ಚಾಂಪಿಯನ್ ಆಗ್ತಿದ್ನೇನೋ ಅನಿಸಿಬಿಡುತ್ತೆ . ಆಫೀಸಿನ ಕೆಲಸ ಮಾಡುವಾಗ ಲ್ಯಾಪ್ಟಾಪು ಪರದೆಯ ಮೇಲೇ ಬಂದು ಕೂರುತ್ವೆ.ಕಾಲಲ್ಲಿರುವಾಗ ಇಯರ್ ಫೋನ್ ಪಕ್ಕನೇ ಬಂದು ಕಚ್ಚುತ್ವೆ. ಕೆಳಗಿಟ್ಟ ಪಾದವನ್ನು ಹುಡುಕುತ್ವೆ. ಆಫೀಸು ಲ್ಯಾಪ್ಟಾಪು, ಇಯರ್ ಫೋನು ಮತ್ತು ಮೀಟಿಂಗ್. ಹೆಂಗಿದ್ರೂ ಹೊಡೆಯಂಗಿಲ್ಲ, ಅಟ್ಟಾಡಿಸಿಕೊಂಡು ಬರಂಗಿಲ್ಲ ಅಂತ ಗೊತ್ತಾಗೇ ಕಿರಿಕಿರಿ ಮಾಡುವಷ್ಟು ಚಾಲೂ ಇವು . ಕೆಲಸ ಮಾಡೋವಾಗ ಬಿಡಿ, ಟಾಯ್ಲೇಟಿಗೆ ಹೋದ್ರೂ ಬಿಡಲ್ಲ ಅಂತಾವೆ.  ಮನೆ ನಿಮ್ಮದು , ಪಾರ್ಟಿ ನಮ್ಮದು ಅಂತಾವಲ್ಲ ಇವು , ಎಷ್ಟು ಧೈರ್ಯ ಇರಬಹುದು ? ಮನೆಯ ಕಿಟಕಿಗಳಿಗೆಲ್ಲಾ ಮೆಷ್ ಹಾಕ್ಸಿ, ಸೊಳ್ಳೆ ಪರದೆಯಲ್ಲೇ ಮಲಗಿ ಅಲ್ಲೇ ಎದ್ದು, ಅಲ್ಲೇ ವರ್ಕ್ ಫ್ರಂ ಹೋಂ ಮಾಡಿಬಿಡಾನಾ ಅಂತ ಅಂದ್ಕೊಂಡ್ರು ಆ ಸೊಳ್ಳೆ ಪರದೆಯ ಹೊರಗಿನಿಂದನೇ ಕಚ್ಚೋಕೆಂತ ಹೊಂಚು ಹಾಕಿ ಕಾಯ್ತಾ ಕೂರೋ, ನಿದ್ದೆಗಣ್ಣಲ್ಲಿ ಸೊಳ್ಳೆ ಪರದೆ ಅಂಚಿಗೆ ಬರೋ ಕೈಯೋ ಕಾಲಿನ ಸ್ಪರ್ಷ ಸುಖಕ್ಕೆ ರಾತ್ರಿಯಿಡೀ ನಿದ್ದೆಗೆಡ್ತಾವಲ್ಲ ಇವು, ಇವುಗಳ ಚಾಲಾಕಿತನಕ್ಕೆ ಭೇಷ್ ಅನ್ಸಿಬಿಡುತ್ತೆ.   

ಈ ಕೊರೋನಾ ಅನ್ನುವಂತದ್ದು ಇದೆಯಲ್ಲಾ, ಅದು ಈ ಸೊಳ್ಳೆಗಳಿಂದನೇ ಹರಡೋದು, ಅದಕ್ಕೆ ಭಾರತದ ಎಲ್ಲರೂ ದಿನಕ್ಕೆ ಹತ್ತು ಸೊಳ್ಳೆಗಳನ್ನು ಹಿಡಿದು ಕೊಂದ್ರೆ ಒಂದು ತಿಂಗಳಲ್ಲಿ ಭಾರತದಿಂದ ಕೊರೋನಾ ನಿರ್ಮೂಲನೆಯಾಗುತ್ತೆ ಅಂತ ಯಾವ ಪುಣ್ಯಾತ್ಮನೂ ವಾಟ್ಸಾಪ್ ಸಂದೇಶ ಮಾಡಲಿಲ್ಲ. ಅದನ್ನು ಯಾರೂ ಹಂಚಲಿಲ್ಲವಾದ್ದರಿಂದ ಸೊಳ್ಳೆಗಳ ಸಂಖ್ಯೆ ಕೊರೋನಾ ಮುಂಚೆ ಹೇಗಿತ್ತೋ ಈಗಲೂ ಹಾಗೇ ಇದೆ ಅನಿಸುತ್ತೆ . ಸೊಳ್ಳೆಗಳ ಕೊಲ್ಲೋಕೆ ಅಂತಲೇ ತರತರದ ಪರಿಮಳದ ಲಿಕ್ವಿಡುಗಳು ಬಂದ್ರೂ ಅವು ಸೊಳ್ಳೆಗಳನ್ನು ನಿಜವಾಗ್ಲೂ ಕೊಲ್ಲುತ್ತೋ ಅಥವಾ ಸ್ವಲ್ಪ ಹೊತ್ತಿನ ಮಟ್ಟಿಗೆ ಪ್ರಜ್ಞೆ ತಪ್ಪಿಸುತ್ತಾ ಅನ್ನೋ ಸಂದೇಹ ನನ್ನಂತೆ ನಿಮಗೂ ಕಾಡ್ತಿರಬಹುದು. ಟೀವಿಯಲ್ಲಿ ಹಾರಾರಿ ಸೊಳ್ಳೆ ಹಿಡಿಯೋ ಕಾಯಿಲ್ಲುಗಳ ಜಾಹೀರಾತು ನೋಡಿ ಮರುಳಾದ ನಾನೂ ಒಂದು ಸೊಳ್ಳೆ ಲಿಕ್ವಿಡ್ ತಂದಿದ್ದೆ.  ಸೊಳ್ಳೆ ಕಾಯಿಲ್ ಹಾಕಿ , ಅದ್ರಲ್ಲಿ ನಾರ್ಮಲ್ ಮೋಡು, ಅಡ್ವಾನ್ಸು ಮೋಡು ಅಂತ ತಿರುಗ್ಸಿದ್ದು, ಲಿಕ್ವಿಡನ್ನ ವಾರಗಳಲ್ಲೇ ಖಾಲಿ ಮಾಡಿದ್ದೊಂದೇ ಬಂತು. ರಾತ್ರೆ ಕೆಳಗೆ ಬಿದ್ದ ಸೊಳ್ಳೆಗಳು ಬೆಳಗಾಗೋ ವರೆಗೆ ಕೆಳಗಿರ್ತಿರ್ಲಿಲ್ಲ. ಮಾರನೇ ದಿನ ಬಂದು ಕಚ್ಚೋದು ತಪ್ತಿರ್ಲಿಲ್ಲ !

ದೇಹಕ್ಕೆ ವ್ಯಾಯಾಮನೂ ಆಯ್ತು, ಸೊಳ್ಳೆ ಕಾಯಿಲ್, ಲಿಕ್ವಿಡುಗಳಲ್ಲಿನ ರಾಸಾಯನಿಕಗಳನ್ನು ಕುಡಿಯದಂತೆನೂ ಆಯ್ತು ಅಂತ ಸೊಳ್ಳೆ ಬ್ಯಾಟಿಗೆ ಮೊರೆ ಹೋಗಾಗಿದೆ. ಹಾಗಾಗಿ ದಿನ ಬೆಳಗಾದ ತಕ್ಷಣ ಯಾವ ಕರ್ಟನ್ನಿನ ಹಿಂದೆಷ್ಟಿದೆ, ದೇವರ ಮನೆಯ ಮೂಲೆಯಲ್ಲೆಷ್ಟಿದೆ, ಮಂಚದ ಕೆಳಗೆಷ್ಟಿದೆ ಅಂತ ಹುಡುಕುಡುಕಿ ಕೊಲ್ಲೋ ಕೆಲಸ ದಿನವೂ. ಸಿಕ್ಕಿದಲ್ಲಿ ರಕ್ತ ಹೀರೋ ಈ ಸೊಳ್ಳೆಗಳನ್ನು ಕೊಲ್ಲೋದು ಒಂದು ಖುಷಿ ಅಂತೇನಾದ್ರೂ ಅಪ್ಪಿ ತಪ್ಪಿಯೂ ಹೇಳಂಗಿಲ್ಲ. ಈ ಸೊಳ್ಳೆ ದಯಾ ಸಂಘದವರು ಬಂದು ಅದಕ್ಕೊಂದು ಕೇಸ್ ಜಡಿಯಬಹುದು. ಆಮೇಲೆ ಅದರ ವಿರುದ್ದ ಹೋರಾಡುತ್ತಾ ಎಲ್ಲೆಲ್ಲೋ ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ಕೂರಬೇಕಾಗಬಹುದು ! 

ಈ ಮನುಷ್ಯರ ರಕ್ತ ಕುಡಿಕುಡಿದು ಈ ಸೊಳ್ಳೆಗಳು ಮನುಷ್ಯರಂತೆಯೇ ಚುರುಕಾಗಿ ಬಿಟ್ಟಿದಾವಾ ಅನ್ನೋ ಮಾತು ನನ್ನ ಅರ್ಧಾಂಗಿದು. ಅರ್ಧಾಂಗಿ ಅಂದ ಮೇಲೆ ಆ ಮಾತು ತಳ್ಳಿ ಹಾಕುಕ್ಕಾಗುತ್ಯೆ ? ನಾ ಸೊಳ್ಳೆ ಬ್ಯಾಟು ಹಿಡಿದು ಹೋದ್ರೆ ಅಜ್ಜಿ ಬ್ಯಾಗು, ಅತ್ತೆ ಕೋಟಲ್ಲೆಲ್ಲಾ ಅವಿತು ಕಣ್ಣಾ ಮುಚ್ಚಾಲೆಯಾಡೋ ಸೊಳ್ಳೆಗಳು ಮನದಾಕೆ ಬಂದಾಗ ಅದೇಗೆ ಆಚೆ ಬರುತ್ತೆ ಅನ್ನೋದೊಂದು ವಿಸ್ಮಯ. ಅವಳು ಸೊಳ್ಳೆ ಹೊಡಿತಿದಾಳೋ ಸರ ಪಟಾಕಿ ಹಚ್ತಿದಾಳೋ ಅನ್ನುವಷ್ಟು ಶಬ್ದ. ಸೊಳ್ಳೆಗಳಿಗೂ ಗೊತ್ತಾಗಿರ್ಬೇಕು, ಇವರೇ ಹೋಂ ಮಿನಿಸ್ಟರ್ ಅಂತ !   

ಇನ್ನೇನು ಮಳೆಗಾಲ ಬರ್ದಿದ್ರೂ ಮಳೆ ಬರೋಕೆ ಶುರುವಾಗಿದೆ. ನೀವು ಖಾಲಿ ಸೈಟಲ್ಲಿ ಬಿಸಾಕಿರೋ ತೆಂಗಿನ ಚಿಪ್ಪು, ಟೈರು, ಬಾಟಲ್ಲಿಗಳಲ್ಲಿ ನೀರು ನಿಂತು ಸೊಳ್ಳೆಗಳಿಗೆ ಮನೆ ಕಟ್ಟೋ ಮುಹೂರ್ತ ಸಿಕ್ಕಾಗಿದೆ. ನಮ್ಮನೆಗೆಂತೂ ಮೆಷ್ಷಿದೆ, ಗಾಳಿ ಈಕಡೆ ಬೀಸಲ್ಲ. ಸೊಳ್ಳೆ ಆ ಕಡೆ ಹೋಗಿ ಆಚೆ ಮನೆಯವ್ರಿಗೆ ಕಚ್ಲಿ ಅಂತ ಕೂರಂಗಿಲ್ಲ. ಮನೆ ಕಟ್ಟೋಕೆ ನೆರವಾದ ನಿಮ್ಮ ಉಪಕಾರ ಸ್ಮರಣೆ ಆ ಸೊಳ್ಳೆಗಳಿಗಿರೋಲ್ವಾ ? ಖಂಡಿತಾ ನಿಮ್ಮನೆಗೂ ಅವು ಬರ್ತವೆ. ಹೇಗಿದ್ರೂ ಇವು ಫೋನ್ಮಾಡಿ, ಬೆಲ್ಮಾಡಿ ಬರೋ ನೆಂಟ್ರಲ್ಲ. ಬಂದ್ಮೇಲೆ ನಿಮ್ಮ ರಕ್ತ ಹೀರದೆ ಸುಮ್ಮನೂ ಕೂರಲ್ಲ. ಹಾಗಾಗಿ ಮನೆ ಸುತ್ತ ಆದಷ್ಟು ಚೊಕ್ಕವಿಡಿ, ಚೊಕ್ಕವಿಡುವಷ್ಟು ನೆರೆಯವರನ್ನೂ ಪ್ರೋತ್ಸಾಹಿಸಿ ಅನ್ನುತ್ತಾ ಸದ್ಯಕ್ಕೊಂದು ವಿರಾಮ. ಇದನ್ನು ಬರೆಯೋಕೂ ಬಿಡದೇ ಒಂದೇ ಸಮ ಕಚ್ಚೋಕೆ ಬರ್ತಿರೋ ಸೊಳ್ಳೆಗಳನ್ನು ಸ್ವಲ್ಪ ವಿಚಾರಿಸ್ಕೊಂಡು ಬರ್ತೀನಿ

Monday, August 31, 2020

ಕವಲೇದುರ್ಗ / ಭುವನಗಿರಿ ದುರ್ಗ ಚಾರಣ

Kavaledurga Trek
At the beginning of Kavaledurga Trek

 ಯಾವ ಟಿವಿ ನ್ಯೂಸ್ ಹಾಕಿದ್ರೂ ಕರೋನಾದ್ದೆ ಸುದ್ದಿ ನೋಡಿ ನೋಡಿ ಬೇಸರ ಮೂಡಿ ಫೇಸ್ಬುಕ್ಕಿಗೆ ಬಂದ್ರೆ ಇಲ್ಲಿ ಎಡಬಲದ ಜಗಳಗಳು, ಅವೆಷ್ಟು ಕೊಟ್ರು, ಇವ್ರೆಷ್ಟು ಕೊಟ್ರು ಅನ್ನೋ ವಾಗ್ವಾದಗಳು. ಪತ್ರಿಕೆಗಳಲ್ಲೂ ಇವರ ಟ್ವಿಟರ್ ಅಕೌಂಟಿನಲ್ಲಿ ಹಿಂಗದ್ರಂತೆ, ಅವ್ರ ಇನ್ಟಾದಲ್ಲಿ ಹಂಗಂದ್ರಂತೆ ಅನ್ನೋದೇ ಸುದ್ದಿ ! ಕರೋನಾ ಅಂತ ತಣ್ಣಗೆ ಮನೇಲೆ ಕೂತು ಐದು ತಿಂಗಳಾಯ್ತು ಯಾರಾದ್ರ ಮನೆಗೆ ಹೋದ್ರೂ ಇದೇ ಸುದ್ದಿ ! ಏಕತಾನತೆಯಿಂದ ಹೊರಬರಲು, ಮಲೆನಾಡಲ್ಲಿದ್ರೂ ಈ ವರ್ಷ ಹೋಗಲಾಗದಿದ್ದ ತಾಣಗಳ ಸುತ್ತಾಡಲು ಮನಸು ಕಾತೊರೆಯುತ್ತಿತ್ತು. ಆ ಸಮಯದಲ್ಲಿ ಕಣ್ಣಿಗೆ ಬಿದ್ದಿದ್ದು ಗಿರೀಶ್ ಸರ್ ಹಾಕಿದ್ದ ಕವಲೇದುರ್ಗದ ವೀಡಿಯೋ ಮತ್ತು ಅನಿಲ್ ಹಾಕಿದ್ದ ಹುಲಿಕಲ್ ಫಾಲ್ಸ್ ಫೋಟೋ. ಹೆಂಗಿದ್ರು ಮಾಸ್ಕ್ ಹಾಕ್ಕೊಂಡು , ಸಾಮಾಜಿಕ ಅಂತರ ಕಾಪಾಡ್ಕೊಂಡು ಇಲ್ಲಿಗೆ ಹೋಗ್ಬರಬಹುದಂತೆ, ಸರೀನಾ ಅನ್ನೋ ಹೊತ್ತಿಗೇ ರೆಡಿಯಾಗಿದ್ದು ನಮ್ಮನೆಯವ್ರು. ಕವಲೇದುರ್ಗದವರೆಗೆ ಹೋಗಿ ಲಾಕ್ಡೌನಲ್ಲಿ ಲಾಕಾಗಿದ್ದ ಅದನ್ನ ನೋಡಿ ವಾಪಾಸ್ ಬಂದಿದ್ದ ಕೃಷ್ಣನೂ ಪ್ಲಾನ್ ಹೇಳ್ತಿದ್ದಂಗೆನೇ ಸರಿಯೆಂದಿದ್ದ. 


ಕವಲೇದುರ್ಗದ ಇತಿಹಾಸ :

೯ನೇ ಶತಮಾನದಲ್ಲಿ ಕಟ್ಟಿದ ಕವಲೇದುರ್ಗ ಕೋಟೆಯನ್ನು ೧೪ನೇ ಶತಮಾನದಲ್ಲಿ ಬೆಳಗುತ್ತಿಯ ರಾಜ ಚೆಲುವರಂಗಪ್ಪನೂ ೧೬ನೇ ಶತಮಾನದಲ್ಲಿ ಕೆಳದಿಯರಸ ಹಿರಿಯ ವೆಂಕಟಪ್ಪನಾಯಕ (1586–1629) ಅಭಿವೃದ್ಧಿಪಡಿಸಿದರು ಎನ್ನುತ್ತದೆ ಇತಿಹಾಸ. ವೆಂಕಟಪ್ಪನಾಯಕನಿಗಿಂತಲೂ ಮುಂಚೆ ಇದು ತೋಲಾಯ್ತಮ ರಾಜ ಮತ್ತು ಮುಂಡಿಗೆ ರಾಜ ಎಂಬ ರಾಜ ಸಹೋದರರ ಅಧೀನದಲ್ಲಿತ್ತಂತೆ. ಕೌಲಿ ಎಂಬ ಊರಿಗೆ ಹತ್ತಿರವಿದ್ದರಿಂದ ಇದಕ್ಕೆ ಕವಲೇದುರ್ಗವೆಂದು ಹೆಸರಿತ್ತರೆನ್ನುತ್ತೆ ಒಂದು ಎಳೆ.  ಕವಲೇದುರ್ಗಕ್ಕೆ ಅಂದು ಭುವನಗಿರಿಯೆಂಬ ಹೆಸರನ್ನಿತ್ತಿದ್ದೂ  ಹಿರಿಯ ವೆಂಕಟಪ್ಪನಾಯಕ . 

ಈ ಇತಿಹಾಸ ಅನ್ನೋದೊಂದು ಸ್ವಾರಸ್ಯಕರ ಕಥಾಹಂದರ. ಒಂದು ಎಳೆಯನ್ನು ಹುಡುಕಿ ಹೊರಟರೆ ಮತ್ತೇನೋ ಕಾಲಿಗೆ ತೊಡರಿಕೊಳ್ಳುತ್ತೆ. ಅದೇನಂತಹ ನೋಡಹೊರಟಲ್ಲಿ ಮತ್ತೆಲ್ಲೋ ತಿರುಗಿ ಹೊರಳಿ ಮೊದಲಿದ್ದ ಎಳೆ ಮತ್ತೆ ಪ್ರತ್ಯಕ್ಷವಾಗುತ್ತೆ ! ಕೆಳದಿಯ ಬಳಿಯ ಪಳ್ಳಿಬೈಲು(ಈಗಿನ ಹಳ್ಳಿಬೈಲು) ವಿನಲ್ಲಿದ್ದ ಚೌಡಪ್ಪನಾಯಕ (1499–1530) ಮಲೆನಾಡಿನ ಭಾಗದ, ಈಗಿನ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸ್ಥಾನವನ್ನು ಸ್ಥಾಪಿಸಿದ್ದ. ಆಗ ಉಚ್ಛ್ರಾಯಸ್ಥಿತಿಯಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಸಾಮಂತರೆಂದು ಘೋಷಿಸಿಕೊಂಡರಿವರು. ೨೩ ಜನವರಿ ೧೫೬೫ರಲ್ಲಿ ತಾಳೀಕೋಟೆಯಲ್ಲಿ  ರಕ್ಕಸತಂಗಡಿ ಯುದ್ದದಲ್ಲಿ ಪಂಚ ಸುಲ್ತಾನರು(ಬಿಜಾಪುರ, ಬೀದರ್, ಬೇರರ್, ಅಹಮದಾನಗರ್, ಗೋಲ್ಕಂಡ) ಮತ್ತು ವಿಜಾಪುರದ ಅಳಿಯ ರಾಮ ರಾಯನ ನಡುವೆ ನಡೆಯುತ್ತೆ.  ಇಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದ ವಿಜಯನಗರ ಸೇನೆ ವಿಜಯನಗರ ಸೇನೆಯಲ್ಲಿದ್ದ ಗಿಲಾನಿ ಸಹೋದರರೆಂಬ ದಳಪತಿಗಳ ವಿಶ್ವಾಸಘಾತುಕತನದಿಂದ ಸೋತಿತೆಂಬ ಉಲ್ಲೇಖಗಳಿವೆ. ತದನಂತರ ಅದ್ಭುತ ಹಂಪೆ ಹಾಳುಹಂಪೆಯಾದದ್ದು ಇತಿಹಾಸ. ರಾಬರ್ಟ್ ಸೆಹೆಲ್ಲಿನ  ಫರ್ಘಾಟನ್ ಎಂಪೈರ್ ನೋಡಬಹುದು. ಕನ್ನಡವೇ ಪ್ರಧಾನ ಭಾಷೆಯಾಗಿದ್ದಾಗ ತೆಲುಗಿನ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಟ್ಟಿದ್ದು ವಿಜಯನಗರದ ಶ್ರೀಕೃಷ್ಣದೇವರಾಯ. ತಾಳಿಕೋಟೆಯ ಸೋಲು ಮತ್ತು ಹಂಪೆಯ ನಾಶದ ನಂತರ ರಾಮರಾಯನ ನಂತರದ ವಿಜಯನಗರದ ಅರಸರು ಆಂದ್ರದ ಅನಂತಪುರಂನಲ್ಲಿನ ಪೆನುಕೊಂಡವನ್ನು ತಮ್ಮ ರಾಜಧಾನಿಯಾಗಿಸಿಕೊಂಡರು !


ಕೆಳದಿಯವರು ವಿಜಯನಗರದ ಸಾಮಂತರಾಗಿದ್ದರು ಸರಿ. ವಿಜಯನಗರವನ್ನು ಸೋಲಿಸಿದವರಲ್ಲಿ ಬಿಜಾಪುರದ ರಾಜರಿದ್ದರು ಅದೂ ಸರಿ. ಅದಕ್ಕೂ ಇಂದಿನ ಕವಲೇದುರ್ಗಕ್ಕೂ ಏನು ಸಂಬಂಧ ಅನ್ನುತ್ತೀರಾ ? ಬಂದೆ ಅಲ್ಲಿಗೆ. ಕೆಳದಿಯ ನಾಲ್ಕನೆಯ ಅರಸ ಚಿಕ್ಕ ಸಂಕಪ್ಪ ನಾಯಕ(1570–1580) ತಾಳಿಕೋಟೆಯ ಯುದ್ದದ ನಂತರ ಉತ್ತರಕನ್ನಡದ ಕೆಲ ಪ್ರದೇಶಗಳನ್ನು ಗೆದ್ದು ಕೆಳದಿ ಸಂಸ್ಥಾನಕ್ಕೆ ಸೇರಿಸಿಕೊಂಡರು. ೧೫೮೬ರಿಂದ ರಾಜ್ಯವಾಳಿದ ಕೆಳದಿ ಸಂಸ್ಥಾನದ ಆರನೇ ರಾಜರೇ ಹಿರಿಯ ವೆಂಕಟಪ್ಪ ನಾಯಕ ! ಪೆನುಕೊಂಡದಲ್ಲಿ ವಿಜಯನಗರ ಅರಸರಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ವೆಂಕಟಪ್ಪನಾಯಕ ಕೆಳದಿ ಸಂಸ್ಥಾನವನ್ನು ಮಲೆನಾಡು ದಾಟಿ ಕರಾವಳಿಯವರೆಗೂ ವಿಸ್ತರಿಸೋಕೆ ಕಾರಣವಾದರು. ಬಿಜಾಪುರದ ಆದಿಲ್ ಶಾಹಿಗಳನ್ನೂ ಸೋಲಿಸಿ ಕರಾವಳಿಯಲ್ಲಿ ಪೋರ್ಚುಗೀಸರನ್ನೂ ಸೋಲಿಸಿದ(೧೬೧೮-೧೯) ಸೋಲಿಸಿ ಸಾಮ್ರಾಜ್ಯ ವಿಸ್ತರಿಸಿದ ಕೀರ್ತಿ ಇವರದು.  

Trek in Kavaledurga Fort 

ಗೆಳೆಯ ಕೃಷ್ಣ ಕಾಸರಗೋಡಿನ ಬೇಕಲ್ ಕೋಟೆಯಲ್ಲೂ ಕೆಳದಿಯ ೮ನೇ ಅರಸ ಶಿವಪ್ಪನಾಯಕನ(1645–1660) ಹೆಸರಿದೆ ಎಂದು ನೆನಪು ಮಾಡುತ್ತಿದ್ದ. ಕಾಸರಗೋಡಿನ ಕರಾವಳಿಯಲ್ಲಿನ ಬೇಕಲ್ ಪ್ರಾಂತ್ಯದಲ್ಲಿನ ರಕ್ಷಣೆ ಮತ್ತು ಆ ಮೂಲಕ ವಿದೇಶಿಗರು ತಮ್ಮ ಸಂಸ್ಥಾನದೊಳಗೆ ನುಗ್ಗೋದನ್ನು ತಡೆಯೋಕೆ ಕೋಟೆಯ ನಿರ್ಮಾಣ ಶುರುಮಾಡಿದ್ದು ಹಿರಿಯ ವೆಂಕಟಪ್ಪನಾಯಕ. ಅದನ್ನು ಮುಗಿಸಿದ್ದು ಶಿವಪ್ಪನಾಯಕ ! ಈ ಶಿಪಪ್ಪನಾಯಕ ಬಿಜಾಪುರದ ಸುಲ್ತಾನರು, ಮೈಸೂರರಸರು, ಪೋರ್ಚುಗೀಸರನ್ನು ಸೋಲಿಸಿ ಪಶ್ಚಿಮಘಟ್ಟಗಳ ಮತ್ತು ಈಗಿನ ಕರ್ನಾಟಕದ ಬಹುಭಾಗವನ್ನು ಕೆಳದಿ ಸಂಸ್ಥಾನದ ಭಾಗವನ್ನಾಗಿಸಿದ್ದ. ಸುಮಾರು ೪೦ ಎಕರೆಗಳಷ್ಟು ವಿಸ್ತಾರ ಹೊಂದಿದ ಬೇಕಲ್ ಕೋಟೆ ಕೇರಳದ ಅತೀ ದೊಡ್ಡ ಕೋಟೆ !

ಇತಿಹಾಸ ಅಂದ ಮೇಲೆ ಯುದ್ದಗಳು, ಮೇಲು ಬೀಳುಗಳು ಸಾಮಾನ್ಯ. ಕೆಳದಿಯ ಕೊನೆಯ ರಾಣಿ ವೀರಮ್ಮಾಜಿ(1757–1763)ಯನ್ನು ಹೈದರಾಲಿ ಸೋಲಿಸಿದ ನಂತರ ಕೆಳದಿ ಸಂಸ್ಥಾನ ಮೈಸೂರು ಸಂಸ್ಥಾನದ ಭಾಗವಾಯ್ತು. ಈ ಮೂಲಕ ಕೆಳದಿ ಸಂಸ್ಥಾನದ ಭಾಗಗಳಾಗಿದ್ದ ಬೇಕಲ್ ಕೋಟೆ ಮತ್ತು ಕವಲೇದುರ್ಗ ಕೋಟೆಗಳ ೧೭೬೩ರಲ್ಲಿ ಮೈಸೂರು ಸಂಸ್ಥಾನದ ಭಾಗವಾಯ್ತು ! ಹೈದರಾಲಿ ಮರಳುವಾಗ ಇಲ್ಲಿ ಕೆಲವು ಕಾವಲುಗಾರರನ್ನು ಬಿಟ್ಟಿದ್ದನಂತೆ. ಇದಕ್ಕೇ ಕಾವಲುಗಾರರ ದುರ್ಗವೆಂದೂ, ತದನಂತರದಲ್ಲಿ ಕವಲೇ ದುರ್ಗವೆಂದೂ ಹೆಸರಾಯಿತು ಎನ್ನುತ್ತೆ ಇತಿಹಾಸದ ಮತ್ತೊಂದು ಎಳೆ. 

ಕವಲೇದುರ್ಗದ ಇತಿಹಾಸದ ಬಗ್ಗೆಯೇ ಇನ್ನೂ ಹಿಂದೆ ಹೋಗಬೇಕೆಂದರೆ ಕೃತಯುಗದಲ್ಲಿ ಇದು ಪರಶುರಾಮ ಕ್ಷೇತ್ರವಾಗಿತ್ತೆಂದೂ, ತ್ರೇತಾಯುಗದಲ್ಲಿ ಅಗಸ್ತ್ಯ , ಗೌತಮರು ಇಲ್ಲಿಗೆ ಬಂದಿದ್ದರೆಂದೂ, ದ್ವಾಪರದಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರೆಂದೂ ದಂತಕತೆಗಳಿವೆ. ಪಾಂಡವರ ಕಾಲದಲ್ಲಿ ಇದಕ್ಕೆ ಕಾವ್ಯವನ, ಕಪಿಲವನಗಳೆಂಬ ಹೆಸರೂ ಇತ್ತಂತೆ. ಇಲ್ಲಿಗೆ ಬಂದಾಗ ದ್ರೌಪದಿಗೆ ನೀರಡಿಕೆಯಾಗಲು ಭೀಮ ತನ್ನ ಗದೆಯಿಂದ ಗುದ್ದಿ ನೀರ ಕೊಳವೊಂದನ್ನು ನಿರ್ಮಿಸಿದನೆಂದೂ ಅದೇ ಇಲ್ಲಿನ ಗದಾತೀರ್ಥವೆಂದೂ ಹೇಳುತ್ತಾರೆ. ಕತೆಗಳು, ಸತ್ಯಾಸತ್ಯಗಳು ಏನೇ ಇದ್ದರೂ ಇಲ್ಲೊಂದು ಗುಹೆಯಂತಹ ರಚನೆಯೂ, ಬಂಡೆಯ ಮಧ್ಯೆ ಅಚ್ಚರಿಯೆನ್ನಿಸುವಂತೆ ನೀರ ಚಿಲುಮೆಯಿರುವುದೆಂತೂ ಸತ್ಯ !


ಈ ರೀತಿ ಅಧಿಕಾರದ ಕೇಂದ್ರವಾಗಿದ್ದ ಈ ಕೋಟೆ ಮತ್ತು ಊರು ೧೮೮೨ರ ತನಕ ತಾಲ್ಲೂಕು ಕೇಂದ್ರವಾಗಿತ್ತಂತೆ. ನಂತರ ತೀರ್ಥರಾಜಪುರ(ಈಗಿನ ತೀರ್ಥಹಳ್ಳಿ) ತಾಲ್ಲೂಕು ಕೇಂದ್ರವಾಯಿತು ಎನ್ನುತ್ತಾರೆ. ವಿಪರ್ಯಾಸವೆಂದರೆ ರಾಜರ, ಬ್ರಿಟಿಷರ ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿರಬಹುದಾದ ಸ್ಥಳದಲ್ಲಿರುವಂತಹ ಅಗಲವಾದ ರಸ್ತೆಗಳು, ಕಟ್ಟಡಗಳು ಮುಂತಾದ ಯಾವ ಗತವೈಭವಗಳೂ ಇಲ್ಲೀಗ ಉಳಿದಿಲ್ಲ ! ಖುಷಿಯ ಸಂಗತಿಯೆಂದರೆ ಕೆಲ ವರ್ಷಗಳ ಹಿಂದೆ ನಮ್ಮೊಳಗೊಬ್ಬ ಬಾಲು ಸರ್ ಅವರೊಂದಿಗೆ ಕವಲೇದುರ್ಗಕ್ಕೆ ಹೋದಾಗಿದ್ದ ಮೂರು ಕಿ.ಮೀ ಜಲ್ಲಿ ರಸ್ತೆ ಈಗ ಟಾರ ರಸ್ತೆಯಾಗಿದೆ ಮತ್ತು, ಪುರಾತತ್ವ ಇಲಾಖೆಯ ರಕ್ಷಣೆ ಸಿಕ್ಕಿದೆ ಕವಲೇದುರ್ಗ ಕೋಟೆಗೆ. 


ಕೋಟೆಯಲ್ಲಿ ನೋಡಲೇನೇನಿದೆ ? 

Kashi Vishwanatha temple

ಮೂರು ಸುತ್ತಿನ ಈ ಕೋಟೆ ಸಿಗೋದು ಕವಲೇದುರ್ಗವೆಂಬ ಈಗಿನ ಊರು ದಾಟಿದ ನಂತರ. ಊರ ಬಸ್ ಸ್ಟಾಪು, ಪುರಾತತ್ವ ಇಲಾಖೆಯ ಬೋರ್ಡು, ಗದ್ದೆಬಯಲುಗಳ ದಾಟಿದರೆ ಕವಲೇದುರ್ಗದ ಕೋಟೆಗೆ ಹತ್ತುವ ಮೆಟ್ಟಿಲುಗಳು ಸಿಗುತ್ತೆ. ಇಲ್ಲಿರೋ ಇತಿಹಾಸ ಫಲಕದ ಪ್ರಕಾರ ಆನೆ ಕುದುರೆಗಳೆಲ್ಲಾ ಕೋಟೆಯ ಮೇಲೆ ಆನೆ ಕುದುರೆಗಳ ಲಾಯಗಳಿತ್ತಂತೆ. ಕೋಟೆಗೆ ಹತ್ತೋ ದಾರಿಯೂ ಆನೆ, ಕುದುರೆಗಳು ಹತ್ತುವಷ್ಟೇ ವಿಶಾಲವಾಗಿದೆ ! ಪ್ರತೀ ಸುತ್ತಿನ ದ್ವಾರದ ಬಳಿಯೂ ಕಾವಲುಗಾರರಿಗೆ ತಂಗಲನುವಾಗುವಂತೆ ಕೊಠಡಿಗಳಂತಹ ರಚನೆಗಳಿವೆ. ಎರಡು ಸುತ್ತಿನ ಕೋಟೆಗಳನ್ನು ದಾಟಿದ ನಂತರ ಮೊದಲು ಸಿಗೋದು ಕಾಶಿ ವಿಶ್ವನಾಥ ದೇಗುಲ. ಶೃಂಗೇರಿ ಶಂಕರ ಮಠವೆಂದೂ ಕರೆಯಲ್ಪಡೋ ಈ ದೇಗುಲದ ಎದುರಿಗಿರೋ ಎರಡು ಕಂಬಗಳು ಬೆಟ್ಟದ ಮೇಲಿನಿಂದಲೂ ಕಣ್ಣಿಗೆ ಬಿದ್ದು ಈ ದೇಗುಲಕ್ಕೊಂದು ಸೌಂದರ್ಯವನ್ನು ಕೊಡುತ್ತದೆ. ಈ ದೇಗುಲದ ಎದುರು ಭಾಗದಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯ ಕೆತ್ತನೆಗಳಿವೆ. ಕೆಲವರ ಪ್ರಕಾರ ಈ ಕೆತ್ತನೆಗಳನ್ನು ಹೈದರಾಲಿಯ ದಾಳಿಯ ನಂತರ ಮೂಡಿಸಿದ್ದು . ಇನ್ನು ಕೆಲವರ ಪ್ರಕಾರ ಇದೇ ಸಮಯದಲ್ಲಿ ಕೆಳದಿಯರಸರು ನಿರ್ಮಿಸಿದ ಇಕ್ಕೇರಿ ದೇಗುಲದ ನಂದಿ ಮಂಟಪವೂ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿದ್ದು ಆ ಸಮಯದ ಕಲಾ ಸಂಗಮವೂ ಆಗಿರಬಹುದು.   

Kashi Vishwanatha Temple

ಕಾಶೀ ವಿಶ್ವನಾಥ ದೇಗುಲದ ಪಕ್ಕದಲ್ಲೊಂದು ಕಲ್ಯಾಣಿಯಿದೆ. ಅದರ ಎದುರಿಗಿರೋ ದೊಡ್ಡ ಕಲ್ಲುಗುಡ್ಡದ ಮೇಲೆ ಶ್ರೀ ಲಕ್ಷ್ಮೀ ನಾರಾಯಣ ದೇಗುಲವಿದೆ.  ಕುದುರೆ ದಾರಿ, ನಡೆದು ಹೋಗುವ ಹಾದಿ ಹೀಗೆ ಕಲ್ಲಲ್ಲೇ ಕಟ್ಟಿದ ಹಲವು ದಾರಿಗಳು ಇಲ್ಲಿರೋದು ವಿಶೇಷ. ಈ ದೇಗುಲಕ್ಕೆ ಹತ್ತೋ ಹಾದಿಯಲ್ಲಿ ಧಾನ್ಯ ಸಂಗ್ರಹಾರವನ್ನೂ ನೋಡಬಹುದು. ಶ್ರೀ ಲಕ್ಷ್ಮೀ ನಾರಾಯಣ ದೇಗುಲಕ್ಕೆ ಹತ್ತೋ ಜಾಗದಲ್ಲೋ ಇರೋ ಬುರುಜಿಂದ ಸುತ್ತಲ ಸ್ಥಳಗಳ ವಿಹಂಗಮ ದೃಶ್ಯವನ್ನೂ ಸವಿಯಬಹುದು. ಇಲ್ಲಿ ತುಪಾಕಿಗಳನ್ನು, ಪಿರಂಗಿಗಳನ್ನು ಇಡಬಹುದಾದ ಜಾಗವೂ ಇದ್ದು, ಇದಕ್ಕೆ ತುಪಾಕಿ ಬುರುಜೂ ಎನ್ನುತ್ತಾರಂತೆ. 

Lakshmi Narayana Temple

ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಸಾಗುವ ಹಾದಿಯಲ್ಲಿ ಮುಂದೆ ಸಾಗಿದರೆ ಅರಮನೆಯ ಪಳೆಯುಳಿಕೆಗಳು ಕಾಣುತ್ತದೆ. ಆಗಿನ ರಾಣಿಯರ ಸ್ನಾನದ ಕೋಣೆಗಳು, ದರ್ಬಾರ್ ಹಾಲ್, ಕೊಳ , ಕಲ್ಲಿನ ನೀರ ಬಾನಿಗಳು, ಅರಮನೆಯ ಕೋಣೆಗಳು ಕಾಣುತ್ತದೆ. ಈ ಕಲ್ಲು ಗುಡ್ಡದ ಮೇಲೆ ಬಾವಿ ಕೊರೆದದ್ದು ಆಶ್ಚರ್ಯವೇ ಸರಿ. ಅದಕ್ಕೆ ಕಲ್ಲುಗಳನ್ನು ಮರೆ ಮಾಡಿ ಜನ ಬೀಳದಂತೆ ನೋಡಿಕೊಂಡಿರೋ ಸ್ಥಳೀಯರ ಕಾಳಜಿಯೂ ಪ್ರಶಂಸನೀಯ. 

Neera Baani


ಅರಮನೆಯ ಪಳೆಯುಳಿಕೆಗಳ ಪಕ್ಕದಲ್ಲಿ ಕೋಟೆಯ ಮೇಲಕ್ಕೆ ಹತ್ತುವ ಮೆಟ್ಟಿಲುಗಳು ಕಾಣುತ್ತದೆ. ಆ ಮೆಟ್ಟಿಲುಗಳು ಮುಂದೆ ಮುಚ್ಚಿ ಹೋಗಿದ್ದರೂ ಅರಮನೆಯ ಬಲ ಪಕ್ಕದಲ್ಲಿ ಮೇಲೆ ಹತ್ತುವ ದಾರಿ ಕಾಣುತ್ತದೆ. ಅಲ್ಲೇ ಸ್ವಲ್ಪ ನಡೆಯುವ ಹೊತ್ತಿಗೆ ಮತ್ತೆ ಮೆಟ್ಟಿಲುಗಳು ಕಾಣುತ್ತವೆ. ಅಲ್ಲೇ ಮೇಲೆ ಹತ್ತುವ ಹೊತ್ತಿಗೆ ಮೂರನೆಯ ಸುತ್ತಿನ ಕೋಟೆಯ ಬಾಗಿಲು ಕಾಣುತ್ತದೆ. ಅದನ್ನು ದಾಟಿ ಒಳ ಸಾಗಿದರೆ ಕೋಟೆಯ ಮೇಲ್ಭಾಗದತ್ತ ಸಾಗುತ್ತೇವೆ. 

ಇಲ್ಲಿಂದ ಕಾಣುವ ವಾರಾಹಿ ಮತ್ತು ಚಕ್ರಾನದಿಗಳ ಹಿನ್ನೀರಿನ ದೃಶ್ಯ ನಯನಮನೋಹರ. ಮಳೆಗಾಲದಲ್ಲಿ ಇಲ್ಲಿನ ಕೋಟೆಗೋಡೆಗಳ ಹಸಿರು ಮತ್ತು ಇಲ್ಲಿ ಕಾಣಸಿಗೋ ಹಲವು ಹಕ್ಕಿಗಳು ಫೋಟೋಗ್ರಾಫಿ ಪ್ರಿಯರಿಗೂ ಹೇಳಿ ಮಾಡಿಸಿದಂತಿವೆ.

ಕೋಟೆಯ ತುತ್ತತುದಿಗೆ ಸಾಗುತ್ತಿದ್ದಂತೆ  ಅಲ್ಲಿರೋ ದೊಡ್ಡ ಬಂಡೆಯೊಂದರ ಮೇಲೆ ಶಿಖರೇಶ್ವರ ಅಥವಾ ಮೈಲಾರೇಶ್ವರ  ಅಥವಾ ಶ್ರೀಕಂಠೇಶ್ವರ ದೇಗುಲವಿದೆ. ಇಲ್ಲಿಂದಲೂ ಪಕ್ಕ ಸಾಗಿದರೆ ಮುಂಚೆ ಹೇಳಿದ ಗದಾ ತೀರ್ಥದ ಬಳಿ ಸಾಗಬಹುದು.

Srikanteshwara Temple


ಮತ್ತದೇ ಬೇಸರ:

ಇಲ್ಲಿನ ಚಾರಣಕ್ಕೂ ಮೊದಲು ಪುರಾತತ್ವ ಇಲಾಖೆಯವರು ಬ್ಯಾಗಿದ್ಯಾ ಎಂದು ಔಪಚಾರಿಕವಾಗಿ ಕೇಳುತ್ತಾರಷ್ಟೆ. ಅವರು ಎಷ್ಟೇ ಚೆಕ್ ಮಾಡಿದರೂ, ತಿಳಿ ಹೇಳಿದರೂ ಇಲ್ಲಿಗೆ ಬರೋ ಅವಿವೇಕಿ ಪ್ರವಾಸಿಗರು ಶಿಖರೇಶ್ವರ ದೇಗುಲದ ಬಂಡೆಯ ಕೆಳಗೆ, ಕೆಲವು ಕೆರೆ, ಬಾವಿಗಳ ಒಳಗೆ ಪ್ಲಾಸ್ಟಿಕ್ ಕವರುಗಳನ್ನ, ಬಾಟಲಿಗಳನ್ನು ಎಸೆದಿರುವುದು ದುರಂತ ! ಕೇರಳದ ವಯನಾಡ್ ಮುಂತಾದ ಪ್ರದೇಶಗಳಲ್ಲಿ ಮಾಡಿದಂತ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿರ್ಬಂಧದ ನಿಯಮಗಳನ್ನು ಇಲ್ಲೂ ತರಬೇಕಾಗಿದೆ. ನಾವು ಹೋದ ದಿನ ಸುಮಾರು ಕಾರುಗಳನ್ನ ನೋಡಿ ದಂಗಾಗಿದ್ವಿ. ಮೇಲೆಲ್ಲಾ ಮಾಸ್ಕ್ ಬಳಸಬೇಕು ಅಂತ ಪುರಾತತ್ವ ಇಲಾಖೆಯವರು ಹೇಳಿದ್ದನ್ನು ನಾವೇನೋ ಪಾಲಿಸಿದ್ವಿ. ಆದರೆ ನಮಗೆ ದಾರಿಯಲ್ಲಿ ಸಿಕ್ಕ ಜನರಲ್ಲಿ ಮುಕ್ಕಾಲು ಭಾಗ ಜನರ ಬಳಿ ಮಾಸ್ಕಿದ್ದರೂ  ಹಾಕ್ಕೊಂಡಿರಲಿಲ್ಲ, ಗುಂಪುಗೂಡಿ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿರಲಿಲ್ಲ! ಅಂದ ಹಾಗೆ ನಾವು ಹೋಗಿದ್ದ ದಿನ ಅಲ್ಲಿ ಸೇರಿದ್ದವರು ೯೦೦ಕ್ಕೂ ಹೆಚ್ಚು. ಹಿಂದಿನ ವಾರ ಅದು ಸಾವಿರ ಮೀರಿತ್ತಂತೆ ! ವಾರಾಂತ್ಯ ಬಿಡಿ, ವಾರದ ದಿನವೂ ನೂರೈವತ್ತರ ಮೇಲೆ ಜನ ಸೇರುತ್ತಾರಂತೆ ಇಲ್ಲಿ ! ಹಿಂದಿನ ವಾರ ಜೋಗಕ್ಕೆ ಹೋದಾಗಲೂ ಅಲ್ಲಿನ ಸೀತಾಕಟ್ಟೆ ಸರ್ಕಲ್ಲಿನವರೆಗೂ ಕ್ಯೂ ಇತ್ತು. ಅಂದು ಸಂಗ್ರಹವಾದ ಪ್ರವಾಸಿಗರ ಪ್ರವೇಶ ಶುಲ್ಕವೇ ೪ ಲಕ್ಷ ! ಇದನ್ನೆಲ್ಲಾ ನೋಡಿದಾಗ ಈ ಕರೋನಾ ಅನ್ನೋದು ಟೀವಿ, ಪತ್ರಿಕೆಗಳಲ್ಲಿ ಮಾತ್ರವೇ ಇರೋದಾ ಅನಿಸುತ್ತೆ !