Wednesday, October 29, 2014

ಕರ್ನಾಟಕದ ಹೊಯ್ಸಳ ದೇಗುಲಗಳು: -೧ : ಬೆಳವಾಡಿ ವೀರನಾರಾಯಣ ದೇವಸ್ಥಾನ

ಪ್ರಾರಂಭಿಸೋ ಮುನ್ನ:
ಚಿಕ್ಕಮಗಳೂರಿನ ದೇವೀರಮ್ಮನ ಬೆಟ್ಟ ನೋಡಿದ ನಂತರ ಅಲ್ಲೇ ಹತ್ತಿರದ ಬೆಳವಾಡಿಗೆ ಹೋಗಬಹುದಾ ಅನ್ನೋ ಐಡಿಯಾ ಹೊಳೆದಿದ್ದು ಹಿಂದಿನ ದಿನವಷ್ಟೇ ಬೆಳವಾಡಿ ಮತ್ತು ಜಾವಗಲ್ಲಿನ ಬಗ್ಗೆ ಗೆಳೆಯ ಸುಮುಖ ಜಾವಗಲ್ ಕಳಿಸಿದ ಫೋಟೋಗಳಿಂದ. ಅಲ್ಲಿಗೆ ಹೋಗ್ಬಾರೋ ಅಂದಿದ್ದ ಅವನಿಗೆ ಮಾರನೇ ದಿನವೇ ನಾನಲ್ಲಿಗೆ ಹೋಗಬಹುದೆಂಬ ಐಡಿಯಾ ಗ್ಯಾರಂಟಿ ಇದ್ದಂಗಿರಲಿಲ್ಲ. ಕರ್ನಾಟಕದಲ್ಲಿ ಗುರುತಿಸಲ್ಪಟ್ಟಂತವೇ ೯೨ ಹೊಯ್ಸಳ ದೇಗುಲಗಳಿವೆ ಅನ್ನೋ ಹಳೇಬೀಡಿನ ಗೆಳೆಯ ಗಿರೀಶಣ್ಣಂಗೂ ಅವತ್ತು ನನ್ನೊಂದಿಗೆ ದೇಗುಲಯಾತ್ರೆ ಕೈಗೊಳ್ಳೋ ಐಡಿಯಾ ಹಿಂದಿನ ದಿನದವರೆಗೂ ಇದ್ದಂತಿರಲಿಲ್ಲ. ಬೆಟ್ಟದ ಚಾರಣದ ಸಂದರ್ಭ ಸಡನ್ನಾಗಿ ಹೊಳೆದ ಐಡಿಯಾದಿಂದ ಒಂದಿಷ್ಟು ದೇಗುಲ ದರ್ಶನದ ಭಾಗ್ಯ ಸಿಕ್ತು..ಆಗಾಗ ಅಲ್ಲಲ್ಲಿ ಹೊಯ್ಸಳ ದೇಗುಲಗಳ ದರ್ಶಿಸಿದ್ದ ನಾನು ಹಂಗೇ ಬಸ್ಸ ಪ್ರಯಾಣದಲ್ಲಿದ್ದಾಗ ಹೀಗೊಂದು ಸರಣಿ ಬರೆಯಬಾರದೇಕೆಂಬ ಕಲ್ಪನೆ ಹುಟ್ಟಿದ್ದು. ಇಂಗ್ಲೀಷಲ್ಲಿ ಈ ತರಹದ ಸರಣಿಗಳು ಬಂದಿವೆಯಂತೆ ಹೊಯ್ಸಳ ದೇಗುಲಗಳ ಬಗ್ಗೆ. ಆದ್ರೆ ಕನ್ನಡದಲ್ಲಿ ಇಲ್ಲ ಕಣೋ. ಪ್ರಯತ್ನ ಮಾಡೊಮ್ಮೆ ಅಂತ ಪ್ರೋತ್ಸಾಹಿಸಿದ ಗಿರೀಶಣ್ಣನಿಗೊಂದು ನಮನವೆನ್ನುತ್ತಾ ಪ್ರಾರಂಭಿಸುತ್ತಿದ್ದೇನೆ. ಎಷ್ಟು ಬರೆಯುತ್ತೇನೋ ಈ ಬಗ್ಗೆ ಗೊತ್ತಿಲ್ಲ. ಬರೆಯಬೇಕೆಂಬ ನಿಲುವಿಂದಾದರೂ ಮತ್ತೊಂದಿಷ್ಟು ಹೆಚ್ಚು ಸುತ್ತೋ ಆಸೆಯಿಂದ...

ಬೆಳವಾಡಿ:
ಬೆಳವಾಡಿ ಅಂದಾಕ್ಷಣ ನೆನಪಿಗೆ ಬರೋದು ಬೆಳವಡಿ ಮಲ್ಲಮ್ಮ.ಆದ್ರೆ ಕಿತ್ತೂರು ಚೆನ್ನಮ್ಮನಂತೆಯೇ ಪ್ರಸಿದ್ದಳಾದ ಬೆಳವಾಡಿ ಮಲ್ಲಮ್ಮನ ಊರು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬೆಳವಡಿಯ ಬಗ್ಗೆ ನಾವು ಮಾತಾಡ್ತಾ ಇರೋದಲ್ಲ ಇವತ್ತು. ಬದಲಿಗೆ  ಹೊಯ್ಸಳರ ಕಾಲದ ಅತೀ ದೊಡ್ಡ ದೇವಸ್ಥಾನ ಅಂತ ಪ್ರತೀತಿಯಿರೋ ಚಿಕ್ಕಮಗಳೂರಿನ ವೀರನಾರಾಯಣ ದೇಗುಲವಿರೋ ಬೆಳವಾಡಿ  ಬಗ್ಗೆ ಮಾತಾಡ್ತಿರೋದು ಇವತ್ತು.  ಚಿಕ್ಕಮಗಳೂರಿನಿಂದ ೨೯ ಕಿ.ಮೀ ದೂರದಲ್ಲಿರೋ ಬೆಳವಾಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಲ್ಲಿ ೨೮ ರೂ ದರ. ಚಿಕ್ಕಮಗಳೂರಿನ ಮುಖ್ಯ ಬಸ್ ನಿಲ್ದಾಣದಿಂದ ಹಗಲಿನ ಪ್ರತೀ ಅರ್ಧಘಂಟೆಗೂ ಇರೋ ಚಿಕ್ಕಮಗಳೂರು-ಜಾವಗಲ್ ಬಸ್ಸು ಬೆಳವಡಿಯ ಮೇಲೇ ಹೋಗೋದ್ರಿಂದ ಅದರಲ್ಲಿ ಬೆಳವಾಡಿಗೆ ತಲುಪಬಹುದು. ಸ್ವಂತ ವಾಹನವಿದ್ದರೆ ಅದೇ ದಾರಿಯಲ್ಲಿ ಸಿಗುವ ಹಿರೇಮಗಳೂರಿನ ಕಣ್ಣನ್ನರನ್ನು ಭೇಟಿಯಾಗಿ , ಕೋದಂಡರಾಮ ದೇಗುಲವನ್ನು ದರ್ಶಿಸಿಯೂ ಬೆಳವಾಡಿಗೆ ಸಾಗಬಹುದು.


ಬೆಳವಡಿಯ ವೀರನಾರಾಯಣ ದೇವಸ್ಥಾನ:

ಬೆಳವಡಿಯಲ್ಲಿ ಮುಖ್ಯವಾಗಿ ವೀರನಾರಾಯನ ದೇವಸ್ಥಾನ ಮತ್ತು ಉದ್ಭವ ಗಣಪತಿ ದೇವಸ್ಥಾನ ನೋಡಬಹುದು. ಹೊಯ್ಸಳರಸ ಇಮ್ಮಡಿ ವೀರಬಲ್ಲಾಳನಿಂದ ಕಟ್ಟಿಸಲ್ಪಟ್ಟ ವೀರನಾರಾಯಣ ದೇವಸ್ಥಾನ ಇತಿಹಾಸ ಪ್ರಿಯರಿಗೆ ಮತ್ತು ಸೌಂದರ್ಯ ಪ್ರಿಯರಿಗೆ ಒಳ್ಳೆಯ ಮುದನೀಡಬಲ್ಲಂತ ದೇವಸ್ಥಾನ.

ದೇಗುಲದ ಸೌಂದರ್ಯ, ಶಿಲ್ಪಕಲೆಯ ಬಗ್ಗೆ ಹೆಚ್ಚು ಹೇಳುವುದಕ್ಕಿಂತ ಅಲ್ಲಿ ತೆಗೆದ ಚಿತ್ರಗಳನ್ನು ಹಾಕೋದೇ ಮೇಲು ಅಂದುಕೊಳ್ಳುತ್ತೇನೆ. ಚಿತ್ರ ತೆಗೆಯಲಾಗದ ಸ್ಥಳಗಳ ಬಗ್ಗೆ, ಪೂರಕ ಮಾಹಿತಿಯೆನಿಸಿದ ಕಡೆಗಳಲ್ಲಿ ಕೊಂಚ ಟಿಪ್ಪಣಿ ಕೊಡೋ ಪ್ರಯತ್ನ ಮಾಡುತ್ತೇನೆ. ಇದರ ಬಗ್ಗೆ ಓದುಗರಾದ ತಮಗೆ ಹೆಚ್ಚಿನ ಮಾಹಿತಿಯಿದ್ದಲ್ಲಿ ಕೆಳಗಿನ ಕಮೆಂಟಾಗಿ ಹಂಚಿಕೊಳ್ಳಿ. ಮುಂಬರುವ ಓದುಗರಿಗೆ ಅದು ಇನ್ನೂ ಹೆಚ್ಚಿನ ಮಾಹಿತಿಯೊದಗಿಸೀತು ಎಂಬ ಸವಿನಯ ಪ್ರಾರ್ಥನೆಯೊಂದಿಗೆ.



















Front Portion of the Entrance of Veeranaarayana temple . Real temple is far bigger. This is just the front entrance !
ಮೊದಲು ಸಿಗೋ ಸ್ವಾಗತದ್ವಾರದ ಇಕ್ಕೆಲಗಳಲ್ಲಿ ಎರಡು ಆನೆಗಳು ಬರಮಾಡಿಕೊಳ್ಳುತ್ತವೆ. ಸ್ವಾಗತ ದ್ವಾರದಲ್ಲಿ ಆನೆಗಳಿರುವುದನ್ನ ಕೆಳದಿ ಅರಸರ ಕಾಲದ ಕೆಳದಿ,ಇಕ್ಕೇರಿ, ಕಲಸೆ ದೇಗುಲಗಳಲ್ಲಾಗಿರಬಹುದು,ಅವಕ್ಕಿಂತ ತುಂಬಾ ಹಿಂದಿನ  ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲೋ ಕಂಡಿರುತ್ತೀರ. ಸ್ವಲ್ಪ ಗಮನವಿಟ್ಟು ನೋಡಿದರೆ, ಮಧುಕೇಶ್ವರ ದೇಗುಲದ ಆನೆಗೂ ಇದಕ್ಕೂ ಭಿನ್ನತೆಯನ್ನು, ಸಾಮ್ಯತೆಯನ್ನು ಗುರುತಿಸಬಹುದು.

Elephants at the front entrance of Veeranarayana temple

ಸ್ವಾಗತದ್ವಾರದ ಹೊಸ್ತಿಲು. ದೇಗುಲದ ಏಳು ಬಾಗಿಲುಗಳಲ್ಲಿ ಒಳಸಾಗೋ ಮೊದಲ ಮತ್ತು ಹೊರಬರೋಕೆ ಏಳನೆಯ ಬಾಗಿಲು


ಮೊದಲ ಮಂಟಪದಲ್ಲಿ ಕೊಳಲನೂದುವ ಕೃಷ್ಣ,ನಂದಿ, ಜಯವಿಜಯರೊಂದಿಗೆ ವಿಷ್ಣು ಹೀಗೆ ಹಲವು ಮೂರ್ತಿಗಳನ್ನ ಕಾಣಬಹುದು. ಸುತ್ತಮುತ್ತಲ ಉತ್ಖನನದ ಸಮಯದಲ್ಲಿ ಸಿಕ್ಕ ಮೂರ್ತಿಗಳನ್ನು ಇಲ್ಲಿ ತಂದು ಇಟ್ಟಿದ್ದಾರಾ ಅನ್ನೋ ಸಂದೇಹ

ಕಾಳಿಂಗ ಮರ್ಧನ.
ಕಾಳಿಂಗ ಮರ್ಧನದ ಹಲವು ಆಕಾರದ ಶಿಲ್ಪಗಳು ಬೆಳವಡಿ ಮತ್ತು ಮುಂದೆ ಸಂದರ್ಶಿಸುವ ಜಾವಗಲ್ಲಿನಲ್ಲಿ ಸುಮಾರಷ್ಟು ಕಾಣಸಿಗುತ್ತವೆ. ಇಲ್ಲಿ ಸಿಗುವ ಹೆಚ್ಚಿನ ಸಂಖ್ಯೆಯ ಲಕ್ಷ್ಮೀ ನರಸಿಂಹ ಮತ್ತು ಕಾಳಿಂಗ ಮರ್ಧನ ಶಿಲ್ಪಗಳ ಹಿಂದೆ ಏನೋ ಸ್ವಾರಸ್ಯಪೂರ್ಣ ಹಿನ್ನೆಲೆಯಿದೆ ಅನಿಸ್ತು ಹಲವು ಸಾರಿ. ಮೊದಲ ಪ್ರಯತ್ನಕ್ಕೆ ಮಾಹಿತಿ ದಕ್ಕದಿದ್ದರೂ ಮುಂದೆಂದಾದರೂ ತಿಳಿದಾಗ ಹಾಕುವೆ. ತಿಳಿದ ಇತಿಹಾಸಜ್ಞರು ಈ ಬಗ್ಗೆ ತಿಳಿಸಬಹುದು.

ಹೊಯ್ಸಳರ ಒಂದು ಶಿಲಾ ಶಾಸನ

ತ್ರಿಕೂಟಾಚಲ
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಒಂದು ಶಿಖರವಿರತ್ತೆ. ಅದೇ ತರಹ ಎರಡು ಮುಕುಟವಿಟ್ಟಂತಿರೋ ಹಳೇಬೀಡನ್ನ ದ್ವಿಕೂಟವೆಂದೂ, ಮೂರು ಕೂಟವಿರುವ ಬೆಳವಡಿಯನ್ನು ತ್ರಿಕೂಟಾಚಲವೆಂದೂ ಕರೆಯುತ್ತಾರೆ ಅಂತ ಗೆಳೆಯ ಗಿರಿ ತಿಳಿಸಿದ್ರು. ಅಂದ ಹಾಗೆ ಬೇಲೂರಿನದು ಉಳಿದ ದೇಗುಲಗಳಂತೆ ಏಕಕೂಟವಂತೆ.

ಇಲ್ಲಿರೋ ಎರಡು ಮಂಟಪಗಳಲ್ಲಿ ಹೊರಮಂಟಪ


ದೇಗುಲದ ಗೋಡೆಗಳಲ್ಲಿ ಕೆತ್ತನೆಗಳಿರೋದು, ಕಂಬಗಳಲ್ಲಿ ಕೆತ್ತನೆಗಳಿರೋದು, ಹೊರಗಡೆ, ಗೋಪುರಗಳಲ್ಲಿ, ಮೇಲ್ಚಾವಣಿಗಳಲ್ಲಿ ಇರುವುದನ್ನು ಕಂದಿರುತ್ತೀವಿ. ಇಲ್ಲಿರೋ ಹಾಸುಗಳ ಮೇಲೆ ಕೂತುಕೊಂಡಾಗ ಕಾಲು ನೀಡಿಕೊಳ್ಳುವ ಸ್ಥಳಗಳಲ್ಲಿರುವ ಆನೆಯ ಕೆತ್ತನೆಗಳು ! ಇಲ್ಲೇನಾದರೂ ಬೇರೆ ದೇಗುಲಗಳಂತೆ ಕೂರಲು ಹೋದ್ರೆ ಕಾಲು ಯಾವುದಾದ್ರೂ ಆನೆಗೆ ತಾಗಿ ಪಾದಸ್ಪರ್ಶಂ ಕ್ಷಮಸ್ವಮೇ ಅಂತ ಹೇಳಲೇಬಾಕಾದೀತು !


ಮೇಲ್ಛಾವಣಿಯಲ್ಲಿ ಕಾಳಿಂಗ ಮರ್ಧನದ ಕೆತ್ತನೆ. ಮೇಲ್ನೋಟಕ್ಕೆ ನಾಗಮಂಡಲದಂತೆ ಕಾಣುವ ಇದರಲ್ಲಿ ಕಾಳಿಂಗ ಮರ್ಧನ ಕಾಣಬೇಕೆಂದರೆ ಸ್ವಲ್ಪ ಹುಡುಕಬೇಕಾಗಬಹುದು :-)


ಅದರ ಪಕ್ಕದಲ್ಲೇ ಇರುವ ಮೇಲ್ಛಾವಣಿಯಲ್ಲಿ ವೇಣುಗೋಪಾಲ

ಹೊರಮಗ್ಗುಲಿನ ದೃಶ್ಯ

ಜೈನ ಧರ್ಮೀಯನಾಗಿದ್ದ ಹೊಯ್ಸಳ ವಿಷ್ಣುವರ್ಧನ ರಾಜ ಶ್ರೀರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದನೆಂದು ಇತಿಹಾಸ. ಹಾಗಾಗಿಯೇ ಇಲ್ಲಿನ ಕೆತ್ತನೆಗಳಲ್ಲಿ ವಿಷ್ಣು ಮತ್ತವನ ಅವತಾರಗಳನ್ನು ಹೆಚ್ಚಾಗಿ ಕಾಣಬಹುದು ಎನ್ನುತ್ತಾರೆ.

Infront of Narasimha @Veeranarayana temple

ಉಗ್ರನರಸಿಂಹ ವಿಗ್ರಹಗಳೆದುರು ನಾನು ಮತ್ತು ಗಿರೀಶಣ್ಣ. ಇಲ್ಲಿ ಉಗ್ರನರಸಿಂಹ, ಲಕ್ಷ್ಮೀ ನರಸಿಂಹರನ್ನು ಕಂಡರೆ ಜಾವಗಲ್ಲಿನಲ್ಲಿ ಸ್ವಲ್ಪ ವಿಶಿಷ್ಟವಾದ ನಿಂತ ಭಂಗಿಯಲ್ಲಿರೋ ನರಸಿಂಹನನ್ನೂ ಕಾಣಬಹುದು



ಶ್ರೀ ವಿಷ್ಣು

ಮೊದಲು ಸಿಕ್ಕ ಸ್ವಾಗತದ್ವಾರದ ಮತ್ತೊಂದು ಮಗ್ಗುಲ ನೋಟ. ಇದರ ಗೋಪುರದಲ್ಲಿ ಬನವಾಸಿಯ ದೇಗುಲದ ಹೋಲಿಕೆ ಕಾಣಬಹುದು



ಸಮುದ್ರದಲ್ಲಿ ಭೂದೇವಿಯನ್ನು ಅಡಗಿಸಿಟ್ಟಿದ್ದ ಅಸುರರನ್ನು ಸಂಹರಿಸಿ ಆಕೆಯನ್ನು ರಕ್ಷಿಸಿದ ವರಾಹಮೂರ್ತಿ

ಮತ್ತೊಮ್ಮೆ ಕಾಳಿಂಗ ಮರ್ಧನ. ಕೃಷ್ಣನ ನೃತ್ಯಕ್ಕೆ ಸಾಥ್ ಕೊಡಲೋ ಎಂಬಂತೆ ನಿಂತಿರುವ ವಾದ್ಯವೃಂದ !




ಇಲ್ಲಿನ ಮೊದಲ ಮಂಟಪ ಮತ್ತು ಅರವತ್ನಾಲ್ಕು ಕಂಬಗಳಿರೋ ಎರಡನೆಯ ಮಂಟಪ ದಾಟಿದರೆ ಸಿಗುವುದು ವೀರನಾರಾಯಣನ ಮೂರ್ತಿ. ಅದಕ್ಕಿಂತ ಮುಂಚೆ ನಮ್ಮ ಎಡಭಾಗದಲ್ಲಿ ವೇಣುಗೋಪಾಲ ಮತ್ತು ಬಲಭಾಗದಲ್ಲಿ ಯೋಗನರಸಿಂಹನ ಮೂರ್ತಿಗಳನ್ನು ಕಾಣಬಹುದು. ಇಲ್ಲಿನ ವೇಣುಗೋಪಾಲ ಮೂರ್ತಿಯನ್ನು ಭಾರತದಲ್ಲೇ ಅತ್ಯಂತ ಸುಂದರ ವೇಣುಗೋಪಾಲ ಅಂತ ಪುರಾತತ್ವ ಇಲಾಖೆಯ ಅಧಿಕಾರಿಗೆಳು ಪ್ರಮಾಣೀಕರಿಸಿದ್ದಾರೆ ಅಂತ ಇಲ್ಲಿನ ಅರ್ಚಕರು ತಿಳಿಸಿದ್ದಾರೆ. ಗರ್ಭಗುಡಿಯ ಫೋಟೋಗಳನ್ನ ತೆಗೆಯೋದು ನಿಷಿದ್ದವೆಂಬ ಭಾವದಿಂದ ಅವನ್ನು ತೆಗೆದಿಲ್ಲ. ಸನಕ, ಸನಾತನ, ಸದಾನಂದ, ಸನತ್ಕುಮಾರ ಎಂಬ ನಾಲ್ಕು ಋಷಿಗಳು, ಗೋವುಗಳು , ಗೋಪಾಲಕರ ಮಧ್ಯೆ, ಕಲ್ಪವೃಕ್ಷದ ಕೆಳಗೆ ನಿಂತಿರೋ ವೇಣುಗೋಪಾಲನ ಸೌಂದರ್ಯವನ್ನು ಪದಗಳಲ್ಲಿ ಎಷ್ಟು ವರ್ಣಿಸಿದರೂ ಸಾಲದು. ಅದನ್ನು ಅಲ್ಲೇ ಹೋಗಿ ಕಣ್ತುಂಬಿಕೊಳ್ಳಬೇಕು.

ಇಲ್ಲಿನ ಏಳು ಬಾಗಿಲುಗಳದ್ದೂ ಒಂದು ವೈಶಿಷ್ಟ್ಯವಿದೆ.ಪೂರ್ವಕ್ಕೆ ಸರಿಯಾಗಿ ೯೦ಡಿಗ್ರಿಗಳಷ್ಟು ಮುಖ ಮಾಡಿದೆಯಂತೆ ದೇಗುಲ. ವೀರನಾರಾಯಣದ ಪಕ್ಕ ನಿಂತು ನೋಡಿದರೆ ಕೊನೆಯ ಬಾಗಿಲಿನ ಹೊರಗಿರುವ ಆಕಾಶ ಕಾಣುತ್ತೆ !! ಇಷ್ಟು ದೊಡ್ಡ ದೇಗುಲವಿದ್ದರೂ ಈ ರೀತಿ ಕರಾರುವಕ್ಕಾದ ರಚನೆ ಮೆಚ್ಚಲೇಬೇಕು. ಈ ರಚನೆಗೆ ಭೇಷ್ ಹೇಳಲೆನ್ನುವಂತೆ ಪ್ರತೀವರ್ಷದ ಮಾರ್ಚ್ ೨೩(ಸಂಕ್ರಮಣದ ದಿನ) ಸೂರ್ಯನ ಬಿಸಿಲು ಸಪ್ತದ್ವಾರಗಳ ದಾಟಿ ದೇವರ ಮೇಲೆ ಬೀಳುತ್ತದೆಯಂತೆ ! ಸೂಪರ್ ಅಲ್ವಾ ನಮ್ಮ ಪೂರ್ವಜರು. 



ವೇಣುಗೋಪಾಲ ಸ್ವಾಮಿಯ ಎದುರಿಗಿರುವ ಒಳಮಂಟಪದ ಒಂದು ಕಂಬ. ಇದರಲ್ಲಿ convex, concave(ನಿಮ್ನ ದರ್ಪಣೀಯ ಗುಣದ) ಭಾಗಗಳಿವೆ. ಮೇಲ್ಮುಖದಲ್ಲಿ ನಮ್ಮ ಪ್ರತಿಬಿಂಬ ಸೀದಾ ಮತ್ತು ಕೆಳಭಾಗದಲ್ಲಿ ತಲೆಕೆಳಗಾಗಿ ಕಾಣುತ್ತಿರುವುದನ್ನ ಕಾಣಬಹುದು !

ಗೋವರ್ಧನ ಗಿರಿಧಾರಿ ಕೃಷ್ಣ


ತೀರಾ ಸಾಮಾನ್ಯ ಅನಿಸೋ ಸಿಂಹ ಮತ್ತು ಗೋಪುರಗಳಲ್ಲಿ ಒಂದು ಜೊತೆಯಿದ್ದಂತೆ ಮತ್ತೊಂದಿಲ್ಲ. ಅಲ್ಲಗಳೆಯೋ ಮುನ್ನ ಸೂಕ್ಷ್ಮವಾಗಿ ಗಮನಿಸಿ !
ವೈನತೇಯನ ಪಕ್ಕ ಇರುವ ಹೆಸರು ತಿಳಿಯದ ದೇವತೆ ಮತ್ತು ಮೆಕ್ಕೆಜೋಳದ ಸುಂದರಿ ! ಹೆಸರು ತಿಳಿದವರು ತಿಳಿಸಬಹುದು


ಹಿಂದೂ ದೇವತೆಗಳ ಮಧ್ಯೆ ಜೈನ ತೀರ್ಥಂಕರನ ಹೋಲುವ ಶಿಲ್ಪ. ಜೈನಮುನಿಯೇ ಯಾಕಾಗಬೇಕು ? ಸಂನ್ಯಾಸಿಯಾಗಿರಬಾರದೇ ಅಂದಿರಾ ? ಸಂನ್ಯಾಸಿಯಾಗಿದ್ದರೆ ಇರುತ್ತಿದ್ದ ಜಟೆ, ಕಮಂಡಲ, ಕಾಷಾಯ ವಸ್ತ್ರಗಳನ್ನು, ಇಲ್ಲಿರುವ ವೇಷವನ್ನು ಗಮನಿಸಿ !  ಇವೆರಡೂ ಅಲ್ಲದೇ ಬೇರೆ ಏನಾದರೂ ಆಗಿದ್ದೀತಾ ಅನ್ನೋ ಊಹೆ ಮೂಡಿದ್ದೂ ಹೌದು ಆಗ. ಆದ್ರೆ ಸೂಕ್ತ ಉತ್ತರ ಸಿಕ್ಕಿರಲಿಲ್ಲ. ಇತಿಹಾಸಜ್ಞರು ಇತ್ತ ಬೆಳಕುಚೆಲ್ಲಬಹುದು
ಮತ್ತೊಂದು ಮುನಿಯ ಶಿಲ್ಪ !



ಮತ್ತೊಂದು ಕಾಳಿಂಗ ಮರ್ಧನ. ಪಕ್ಕದಲ್ಲಿ ಗರುಡ ಮತ್ತಿತರೇ ವಿಷ್ಣುವಿನ ಪರಿವಾರ


ಗೋವರ್ಧನ ಗಿರಿಧಾರಿ

ಮತ್ತೊಂದು ವರಾಹಾವತಾರ. ಸೂಕ್ಷ್ಮವಾಗಿ ಗಮನಿಸಿದರೆ ದೇಗುಲದ ಮತ್ತೊಂದು ಪಾರ್ಶ್ವದಲ್ಲಿರೋ ಚೆನ್ನಾಗಿರೋ ವರಾಹಕ್ಕೆ ಹೋಲಿಸಿದರೆ ಇದು ಗುರುತು ಮಾಸುವಷ್ಟು ಹಾಳಾಗಿದೆ. ಒಂದೇ ದೇಗುಲವಾಗಿದ್ದರೂ ಇವೆರಡನ್ನೂ ಕೆತ್ತಿರೋ ಕಾಲಘಟ್ಟ ಬೇರೆಯಾಗಿರಬಹುದಾ ? ಅಥವಾ ನತದೃಷ್ಟವಾದ ಈ ಶಿಲ್ಪ ಮತ್ತೊಂದರ ಬದಲಾಗಿ ಕಿಡಿಗೇಡಿಗಳ/ದಾಳಿಕೋರರ ಹಾವಳಿಗೆ ಹೆಚ್ಚು ನಲುಗಿರಬಹುದಾ ಅನ್ನೋ ಅನುಮಾನ

ಕಣ್ಣು ಹಾಯಿಸಿದತ್ತೆಲ್ಲಾ ಕಲೆಯ ಬಲೆ

ಅನತಿದೂರದಲ್ಲೇ ಇರುವ ಉದ್ಭವ ಗಣಪತಿ ದೇವಸ್ಥಾನ


ಮುಂದಿನ ಭಾಗದಲ್ಲಿ: ಜಾವಗಲ್ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ

13 comments:

  1. ಧನ್ಯವಾದನೋ ಕಿಣ್ಣ. ಸುಮಾರು ದಿನ ಆದ್ಮೇಲಿನ ಭೇಟಿ ಖುಷಿ ಕೊಡ್ತು :-)

    ReplyDelete
  2. ಚೆನ್ನಾಗಿದೆ. ಸರಣಿ ಮುಂದುವರೆಯಲಿ.... ಸಾಧ್ಯವಾದರೆ ಮಾಹಿತಿಯನ್ನು ಕನ್ನಡ ವಿಕಿಪಿಡಿಯಾದಲ್ಲೂ ವ್ಯವಸ್ಥಿತವಾಗಿ ತುಂಬಿಸಿ.

    ReplyDelete
    Replies
    1. ಧನ್ಯವಾದಗಳು. ಪ್ರಯತ್ನಿಸ್ತೀನಿ

      Delete
  3. ಅಯ್ಯೋ ಮಾರಾಯ .. ಫೋಟೊ ನೊಡಿರೆ ಅಲ್ಲಿಗೆ ಹೋಗಿ ಬರನ ಕಾಂತು .. ಬರಹ ಓದಿರೆ ಹಿಸ್ಟ್ರಿ ಮತ್ತೊಂದು ಸಲಾ ಓದಲೇ ಬೇಕು ಅನಿಸ್ತಿದ್ದು... ಈ ಫೋಟೊ ಬರಹದ ಕಾಂಬಿನೇಷನ್ ಒಳ್ಳೆ ಪಾನಿಪುರಿ ತಿಂದ ಮೇಲೆ ಎರಡೆರಡು ಸೂಖಾ ಪೂರಿ ತಿಂದಂಗೆ ...:)

    ReplyDelete
    Replies
    1. ಹೂಂ ಸಂದ್ಯಕ್ಕ. ಹೋಗ್ಬನ್ನಿ ಒಂದ್ಸಲ. ಧನ್ಯವಾದ :-)

      Delete
  4. ಮಾಹಿತಿಪೂರ್ಣ ಹೊಸ ಧಾರವಾಹಿ ಸಂಗ್ರಹ ಯೋಗ್ಯ. ಚಿತ್ರಗಳೂ ಒಪ್ಪುವಂತಿವೆ.

    ReplyDelete
    Replies
    1. ಧನ್ಯವಾದ ಬದ್ರಿ ಭಾಯ್. ಮಧ್ಯಕ್ಕೆ ನಿಂತೋಗಿದೆ ಧಾರಾವಾಹಿ. ಮತ್ತೆ ಮುಂದುವರೆಸ್ಬೇಕು :-)

      Delete
  5. ಇಲ್ಲಿನ ವೇಣುಗೋಪಾಲ ಮತ್ತು ನರಸಿಂಹರು ನಾನು ನೋಡಿದ ಅತಿ ಸುಂದರ ಹೊಯ್ಸಳ ಮೂರ್ತಿಗಳು. ನನಗೆ ತುಂಬ ಇಷ್ಟವಾದ ದೇವಸ್ಥಾನವಿದು.

    ReplyDelete
    Replies
    1. ಹೂಂ. ಧ.ವಾ ಸಚಿನಣ್ಣ :-)

      Delete
  6. ತುಂಬ ಅಚ್ಚುಕಟ್ಟಾಗಿ ಮಾಹಿತಿಯಿಂದ ಕೂಡಿದ ಲೇಖನವನ್ನು ಬರೆದಿದ್ದೀರಿ(ಮುಖ್ಯವಾಗಿ ಕನ್ನಡದಲ್ಲಿ ) ಇದರಿಂದ ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಉಪಯುಕ್ತ ಮಾಹಿತಿ ದೊರೆಯುತ್ತದೆ.ಧನ್ಯವಾದಗಳು
    ಪ್ರಶಾಂತ್ ಭರದ್ವಾಜ
    ಅರ್ಚಕ
    ಶ್ರೀ ವೀರನಾರಾಯಣ ಸ್ವಾಮಿ ದೇವಾಲಯ
    ಬೆಳವಾಡಿ
    9035041518

    ReplyDelete
    Replies
    1. ಪ್ರಶಾಂತವನದ ಭೇಟಿಗೆ ಮತ್ತು ನಿಮ್ಮ ಮೆಚ್ಚುಗೆಗೆ ವಂದನೆಗಳು. ನಿಮ್ಮ ಮಾತುಗಳನ್ನು ಓದುತ್ತಿದ್ರೆ ನಾ ಬರೆದ ಶ್ರಮ ಸಾರ್ಥಕವಾದ ಭಾವ :-) ಬರುತ್ತಿರಿ

      Delete
  7. ಸುಂದರ ವರ್ಣನೆ ಮತ್ತು ನಿರೂಪಣೆ. ಬರೆಯುತ್ತಿರಿ....

    ReplyDelete