ನಿಮ್ಗೆಲ್ಲಾ ದೀಪಾವಳಿ ಶುಭಾಶಯಗಳು ಅಜ್ಜಿ.
ಆರೋಗ್ಯ ಚೆನ್ನಾಗಿ ನೊಡ್ಕೋಳಿ. ಹೋಗ್ಬರ್ತೀವಿ. ಹೂಂ ಕಣಪ್ಪ. ಥ್ಯಾಂಕ್ಸು.ನಿಮ್ಗೂ
ಶುಭಾಶಯಗಳು. ಸರಿ ಅಜ್ಜಿ ಬರ್ತೀವಿ. ನಮಸ್ಕಾರ ಮಾಡ್ತೀವಿ ತಡೀರಿ ಅಂತ ಕಾಲು ಮುಟ್ಟಿ
ನಮಸ್ಕಾರ ಮಾಡಿದ್ರೆ ನೂರ್ಕಾಲ ಚೆನ್ನಾಗಿ ಬಾಳಿ ಅಂದ್ರು ಎಂಭತ್ನಾಲ್ಕರ ಹೊಸ್ತಿಲಲ್ಲಿದ್ದ
ಅಜ್ಜಿ. ತಡಿ ಮೊಮ್ಮಗನೆ ಅಂತ ಸುಗುಣಜ್ಜಿ ಹತ್ತಿರ ಬಂದಾಗ ಏನು ಹೇಳ್ಬೋದಪ್ಪಾ ಅನ್ನೋ
ಕುತೂಹಲ ನನಗೆ. ಬಾಚಿ ತಪ್ಪಿದ ಅಜ್ಜಿ ಕೆನ್ನೆಗೊಂದು ಸಿಹಿಮುತ್ತಿನ
ಮುದ್ರೆಯೊತ್ತಿಬಿಡೋದೇ ? ! ಅಲ್ಲಿದ್ದಿದ್ದು ಅವ್ರಿಬ್ರೇ ಅಲ್ಲ. ಸಲೋನಿ ಅಜ್ಜಿ.
ಆನೇಕಲ್ಲಿನಜ್ಜಿ, ಜೇಪಿ ನಗರದಜ್ಜಿ ಹೀಗೆ ೨೭ ಜನ ಅಜ್ಜಿಯರು ಅಲ್ಲಿ. ನೀವು ಊಹಿಸ್ತಾ
ಇರೋದು ಸರಿ. ನಾವು ಹೋಗಿದ್ದು ಬೆಂದಕಾಳೂರಿನ ವೈಟ್ ಫೀಲ್ಡನಲ್ಲಿನ ಚೆಶೈರ್ ಓಲ್ಡೇಜ್
ಹೋಮ್ ಅನ್ನೋ ಒಂದು ವೃದ್ದಾಶ್ರಮಕ್ಕೆ.
ನೂರ್ಕಾಲ ಬಾಳು ಎಂದು ಎಲ್ಲಾ ಹಿರಿಯರೂ ಆಶೀರ್ವಾದ ಮಾಡೋದು ಪದ್ದತಿ. ಆದ್ರೆ ನಮ್ಗೆ
ಮಕ್ಕಳಾಗಿ, ಮೊಮ್ಮಕ್ಕಳಾಗಿ , ಮರಿಮೊಮ್ಮಕ್ಕಳೂ ಆಗಿ ಅವರನ್ನು ನೋಡುತ್ತಾ ಇಂದಿನದೇ
ಲವಲವಿಕೆಯಿಂದ ಇರುವಂತಹ ತೊಂಭತ್ತು ವರ್ಷದಲ್ಲೂ ಇರುವ ನಿರೋಗಿ ಸುಖಜೀವನ ಎಲ್ಲರ
ನಸೀಬಲ್ಲೂ ಬರೆದಿರೋಲ್ಲ. ನಲವತ್ತಕ್ಕೇ ಚಾಳೀಸು ಬಂದು , ಅರವತ್ತರ ಹೊತ್ತಿಗೆ ಮೈ ಚರ್ಮ
ಸುಕ್ಕುಗಟ್ಟೋಕೆ, ದೇಹದ ಶಕ್ತಿ ಕುಂದೋಕೆ ಶುರುವಾಗೋ ಹೊತ್ತಿಗೆ, ಗಂಡಸರಾದರೆ ರಿಟೈರ್
ಮೆಂಟು ಎಂಬ ವಯಸ್ಸಿಗೆ ತಲುಪೋ ಹೊತ್ತಿಗೆ ಅವರ ಮನೆ ಮನಗಳಲ್ಲಿ ಎಷ್ಟೋ ಬದಲಾವಣೆ. ದುಡಿದು
ತಂದು ಹಾಕಬೇಕಾದ ಜವಾಬ್ದಾರಿ ಮಗ, ಸೊಸೆಯಂದಿರಿಗೆ ಹಸ್ತಾಂತರಿಸಿ ಸುಖೀ ನಿವೃತ್ತ ಜೀವನ
ಸಾಗಿಸೋ ಕನಸು ಎಲ್ಲರದೂ. ಆದ್ರೆ ಗೃಹಿಣಿಯ ಕತೆ ? ತಾನಾಗೇ ಸೌಟನ್ನು ಸೊಸೆಗೆ
ಹಸ್ತಾಂತರಿಸೋವರೆಗೂ ಮನೆಯೊಡತಿಗೆ ನಿವೃತ್ತಿಯೇ ಇಲ್ಲ ! ಕೊನೆಗೂ ಸಿಕ್ಕ ಈ ನಿವೃತ್ತಿ
ಜೀವನದಲ್ಲೊಂದಿಷ್ಟು ಸುಖೀ ಕನಸುಗಳ ಅವಳೂ ಕಟ್ಟಿಕೊಂಡಿರೋದು ಸಹಜವೇ. ಆದರೆ ವಿಧಿಯಾಟ
ಬಲ್ಲವರ್ಯಾರು ? ಮದುವೆಯಲ್ಲಿ ಮನೆಗೆ ಬಂದ ಹೊಸ ಜೀವದ ಮುಂದೆ ಹಳೆ ಜೀವಗಳ ಪ್ರಾಮುಖ್ಯತೆ
ಕ್ರಮೇಣ ಕ್ಷಣಿಸಿ ಅವುಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗೋ ನಿದರ್ಶನಗಳು ಎಷ್ಟೋ.
ಹೆತ್ತವರು ತಲೆನೋವುಗಳಾಗಿ ಕಂಡ ಮಕ್ಕಳಿಗೆ ಹೇಗಾದರೂ ಬೇರೆಡೆ ಸಾಗಹಾಕೋಕೆ ನೆರವಾಗೋ
ಮನೆಯೇ ಈ ವೃದ್ದಾಶ್ರಮವೇ ಅಂತ ಇಲ್ಲಿನ ಕೆಲ ಕತೆ ಕೇಳುವಾಗ ಅನಿಸಿದ್ದು ಸುಳ್ಳಲ್ಲ !
ನಮಸ್ಕಾರ ಮೇಡಂ. ನಮಸಾರ ಬನ್ನಿ ಸಾರ್. ಥ್ಯಾಂಕ್ಯು. ಇವರು ನಮ್ಮ ಪಕ್ಕದ ಮನೆಯವರು. ಇವರ
ಮಕ್ಕಳು , ಸಂಬಂಧಿಗಳು ಅಂತ ಯಾರೂ ಇಲ್ಲ. ತುಂಬಾ ದಿನಗಳಿಂದ ಒಂಟಿಯಾಗಿ
ಕಷ್ಟಪಡುತ್ತಿದ್ದಾರೆ. ಇವರ ಕಷ್ಟ ನೋಡಲಾರದೇ ಇಲ್ಲಿ ತಂದು ಸೇರಿಸೋ ಪ್ರಯತ್ನ ನಮ್ಮದು.
ಇವರನ್ನು ಇಲ್ಲಿ ಸೇರಿಸ್ಕೋತೀರಾ ಪ್ಲೀಸ್ ? ಸರಿ, ಇವರ ವಯಸ್ಸೆಷ್ಟು ? ನಾವು ಅರವತ್ತು
ವರ್ಷದ ಮೇಲ್ಪಟ್ಟವರನ್ನ ಮಾತ್ರ ಸೇರಿಸ್ಕೊಳ್ಳೋದು. ಇವರ ವಯಸ್ಸು ಅರವತ್ಮೂರು ಮೇಡಂ.
ಸರಿ, ನೀನು ಇಲ್ಲಿರ್ತೀಯೇನಮ್ಮ. ಉತ್ತರವಿಲ್ಲ ಅಜ್ಜಿಯಿಂದ. ಇವರ ಜೊತೆ ವಾಪಾಸ್ ಹೋಗ್ತೀಯ
? ಇದಕ್ಕೆ ಮಾತ್ರ ಅಜ್ಜಿ ಅತ್ತಿತ್ತ ತಲೆಯಾಡಿಸೋ ಮೂಲಕ ನಕಾರವನ್ನು ಸೂಚಿಸಿದ್ರು.
ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದ್ರೆ ಅಜ್ಜಿಯ ಕಣ್ಣುಗಳಲ್ಲಿ ಅದೆಷ್ಟೋ ಸಮಯದಿಂದ
ಹೆಪ್ಪುಗಟ್ಟಿದ್ದ ದುಃಖ ಕಣ್ಣೀರಾಗಿ ಹರಿಯಲು ಹಾತೊರೆಯುತ್ತಿದ್ದುದು ಕಾಣುತ್ತಿತ್ತೇನೋ.
ಅಲ್ಲಿನ ವ್ಯವಸ್ಥೆಗಳೇನು , ವೃದ್ದರನ್ನು ನೋಡಲು ಯಾವಾಗ ಬರಬಹುದು, ಯಾವಾಗ ಫೋನ್
ಮಾಡಬಹುದು ಅಂತೆಲ್ಲಾ ಅಲ್ಲಿನ ಮುಖ್ಯಸ್ಥೆ ಹೇಳಿದ್ದು ಬಿಡಲು ಬಂದವರ ಮನ ಹೊಕ್ಕಿದ್ದು
ಸುಳ್ಳೆಂದು ಅವರ ಮುಖಭಾವವೇ ಹೇಳುತ್ತಿತ್ತಾ ಅಂತ ಕೆಲಕಾಲದ ನಂತರ ಆ ಮುಖ್ಯಸ್ಥೆಗೂ
ಅನಿಸಿರಬಹುದು.
ಅಲ್ಲಿದ್ದ ಮಹಿಳೆಯರಲ್ಲಿ ಒಂದಾದ ನನಗೆ ಬೆಳಗ್ಗೆ ಆರೂವರೆಗೆ ಟೀ. ಆಮೇಲೆ ಏಳೂವರೆವರೆಗೆ
ಯೋಗ, ಧ್ಯಾನ, ನಂತರ ಎಂಟರ ಹೊತ್ತಿಗೆ ತಿಂಡಿ, ಸ್ನಾನ. ಹೊಲಿಗೆ ಮಾಡೋದು, ಪೇಪರ್ ಬುಟ್ಟಿ
ಮಾಡೋದು, ಕಸೂತಿ ಹೀಗೆ ತಮ್ಮ ಕೈಲಾದ ಒಂದಿಷ್ಟು ಕೆಲಸ, ಒಂಭತ್ತೂವರೆಗೆ ಮತ್ತೊಂದು ಟೀ.
ಹನ್ನೆರಡೂವರೆಗೆ ಊಟ.ಅದಾದ ನಂತರ ಮೂರೂವರೆವರೆಗೆ ನಿದ್ದೆ. ಮೂರೂವರೆಗೊಂದು ಟೀ ಮತ್ತು
ಐದರವರೆಗೆ ಕೆಲಸ. ಐದರಿಂದ ಸೀರಿಯಲ್ ಸಮಯ. ಬೆಂಗಳೂರು, ಆಂದ್ರ, ಕೇರಳ ಹೀಗೆ ಎಲ್ಲಾ
ಪ್ರದೇಶದವರಿದ್ರೂ ಹೆಚ್ಚಿನವರು ತಮಿಳು ಬಲ್ಲ ಬೆಂಗಳೂರಿಗರೇ ಇಲ್ಲಿ. ಹಂಗಾಗಿ ಇಲ್ಲಿ
ತಮಿಳು, ತೆಲುಗು ಹೀಗೆ ಎಲ್ಲಾ ಸೀರಿಯಲ್ಲುಗಳಿಗೂ ಪ್ರಾಶಸ್ತ್ಯ. ಆರೂವರೆಗೆ ಊಟ. ಸೀರಿಯಲ್
ಮಿಸ್ಸಾಗಿ ಬಿಡುತ್ತೆ ಅಂತ ಗಡಿಬಿಡೀಲಿ ನುಂಗೋ ಅಕ್ಕಂದಿರನ್ನ ನೋಡಿದ್ರೆ ನಗು
ಬರ್ತಿತ್ತು ಶುರುವಿನಲ್ಲಿ ನಂಗೆ. ಆದ್ರೆ ಕ್ರಮೇಣ ಅದೇ ಅಭ್ಯಾಸವಾದ ನಂಗೂ ಈ ಊಟದ
ಸಮಯದಲ್ಲಿ ಧಾರಾವಾಹಿಗಳ ಮುಖ್ಯ ಸನ್ನಿವೇಶಗಳು ಮಿಸ್ಸಾಗಿ ಬಿಡುತ್ತಾ ಅನ್ನೋ ಆತಂಕ
ಕಾಡತೊಡಗ್ತಿತ್ತು. ಕೆಲೋ ಸಲವೆಂತೂ ಈ ಧಾರಾವಾಹಿಗಳ ಮಧ್ಯೆ ಬರೋ ನೂರೆಂಟು ಬ್ರೇಕುಗಳ
ಸೇರಿಸಿ ಈ ಊಟ ಮಾಡೋ ಹೊತ್ತಿಗೆ ಒಮ್ಮೆಗೇ ಕೊಟ್ಟು ಬಿಡಬಾರದಾ ಅಂತ್ಲೂ ಅನ್ನಿಸ್ತಿತ್ತು.
ಗುರುವಾರ, ಭಾನುವಾರ ಚಿಕನ್ನು. ಉಳಿದ ದಿನ ಸಸ್ಯಾಹಾರಿ ಊಟ. ದೇವರು ,ದಿಂಡ್ರು ಹೀಗೆ ಯಾವ
ಹೇರಿಕೆಯೂ ಇಲ್ಲ. ಭಾನುವಾರ ಕೆಲವರು ಕ್ಯಾಥೋಲಿಕ್ ಚರ್ಚಿಗೆ ಹೋದ್ರೆ, ಕೆಲವರು
ಪ್ರೊಟೆಸ್ಟೆಂಟ್ ಚರ್ಚಿಗೆ ಹೋಗ್ತಿದ್ರು. ನಾನು ಮತ್ತಿಂದಿಬ್ರು ಅಕ್ಕಂದಿರು ಅಲ್ಲೇ
ಪಕ್ಕದಲ್ಲಿದ್ದ ಗಣೇಶನ ಗುಡಿ ಹುಡುಕ್ಕಂಡಿದ್ವಿ. ಮನೆಯಲ್ಲಿದ್ದ ಪಾಡುಗಳ ನೆನಸ್ಕೊಂಡ್ರೆ
ಇದು ನನಗಂತ್ಲೇ ಭಗವಂತ ಮಾಡಿದ ಸ್ವರ್ಗವಾ ಅನಿಸ್ತಿತ್ತು ಎಷ್ಟೋ ಸಲ.
ಪ್ರತಿದಿನ ನನಗೊಂದು ಅಚ್ಚರಿ. ಒಂದು ದಿನ ಶ್ರೀ ರವಿಶಂಕರರ ಶಿಷ್ಯರು ಬಂದು ಅದೇನೋ ಯೋಗ
ಅಂತ ಕಲಿಸಿ ಹೋದ್ರು. ಮತ್ತೊಂದು ದಿನ ವೈಟ್ ಫೀಲ್ಡಿನ ಯಾವುದೋ ಆಸ್ಪತ್ರೆಯ ಡಾಕ್ಟ್ರಮ್ಮ
ಬಂದು ಒಂದಿಷ್ಟು ವ್ಯಾಯಾಮ ಕಲಿಸಿ ಹೋದ್ಲು. ಈಗ ನಾವು ಅವೆರಡನ್ನೂ ಕಲಸಿ ದಿನಾ
ಅಷ್ಟಿಷ್ಟು ನಮಗೆ ಅನುಕೂಲವಾಗೋ ತರ ಮಾಡ್ತಿದೀವಿ ಅನ್ನೋದು ಬೇರೆ ವಿಷ್ಯವಾದ್ರೂ ಅವ್ರಿಂದ
ನಮ್ಮ ಬೆಳಗಿನ ಪರಿಯೇ ಬದಲಾಗಿದ್ದು ಹೌದು. ಕೆಲವು ದಿನ ಯಾರೋ ಹುಟ್ಟಿದ ಹಬ್ಬ ಅಂತ
ಬರೋರು. ನಮ್ಮ ಮನೇಲಿ ನಾವೊಬ್ರೇ ಹುಟ್ಟಿದ ಹಬ್ಬ ಅಂತ ಹಾಡಿ ಕುಣಿದು ಸಂಭ್ರಮಿಸಿದ್ರೆ
ಏನು ಖುಷಿ ? ಅದನ್ನ ಇಂತಹಾ ಜಾಗಗಳಲ್ಲಿ ಮಾಡಿ ನಗುವೇ ಕಾಣದಿದ್ದ ಜೀವಗಳ ಕಣ್ಣಲ್ಲಿ ನಗು
ಕಂಡ್ರೆ ಅದೇ ನಿಜವಾದ ಖುಷಿ ಅನ್ನೋದು ಈ ಜನಗಳ ಭಾವ ಅಂತೆ. ಹುಟ್ಟಿದ ಹಬ್ಬದವರು
ಬರ್ತಿದ್ರು. ಕೆಲಸಕ್ಕೆ ಸೇರಿದ ಮೊದಲ ಸಂಬಳದಲ್ಲಿ ಏನಾದ್ರೂ ಒಳ್ಳೆಯ ಕೆಲಸ ಮಾಡ್ಬೇಕು
ಅಂತ ಬರೋರು. ಇವತ್ತು ನಮ್ಮ ಅಪ್ಪ/ಅಮ್ಮನ ಹುಟ್ಟಿದ ದಿನ. ಅವರಂತೂ ಈಗ ನಮ್ಮೊಂದಿಗಿಲ್ಲ.
ಅವರ ನೆನಪಲ್ಲಿ ಏನಾದರೂ ಮಾಡ್ಬೇಕು ಅಂತ ಬರ್ತಿದ್ದ ಜನ, ಐಟಿ ಕಂಪನಿಯ ಜನ.. ಹೀಗೆ
ಸುಮಾರಷ್ಟು ತರಹದ ಜನ ಬರ್ತಿದ್ರು ಪ್ರತಿದಿನ ಅಲ್ದೇ ಇದ್ರೂ ವಾರಕ್ಕೊಂದೆರಡು ಬಾರಿ
ಆದ್ರೂ. ಕೆಲವರು ಸಾವಿರದೈನೂರು ಕೊಡ್ತೀನಿ. ಒಂದು ಹೊತ್ತಿನ ಊಟ ಪ್ರಾಯೋಜಿಸಿ ಅನ್ನೋರು,
ಮೂರು ಸಾವಿರ ಕೊಡ್ತೀನಿ. ಇಡೀ ದಿನದ ಊಟ ಪ್ರಾಯೋಜಿಸಿ ಅನ್ನೋರು. ಹೀಗೆ ಹಲ ತರದೋರು.
೨೫,೫೦ ಹೀಗೆ ಅಕ್ಕಿಮೂಟೆ, ಬೇಳೆ , ಕಾಫಿಪುಡಿ, ಟೀ ಪುಡಿ ತಂದುಕೊಡೋರೂ ಇದ್ರು. ಮಧ್ಯ
ಮಧ್ಯ ಯಾವ್ದಾದ್ರೂ ಶಾಲೆ ಮಕ್ಕಳು ಬರ್ತಿದ್ರು. ಅವ್ರು ಈ ಟೂಥ್ ಪೇಸ್ಟು, ಬ್ರಷ್ಶುಗಳನ್ನ
ತಂದುಕೊಡ್ತಿದ್ರು. ಫಾರ್ಮಾದವ್ರು ಔಷಧಿ ತಂದುಕೊಡ್ತಿದ್ರು. ಹೀಗೆ ವೃದ್ಧಾಶ್ರಮದವ್ರು
ನನ್ನತ್ತ ನಯಾಪೈಸೆ ಸಂಗ್ರಹಿಸದಿದ್ರೂ ಹೇಗೋ ಜೀವನ ಚೆನ್ನಾಗೇ ಸಾಗ್ತಿತ್ತು. ನಾ ಮಾಡಿದ
ಪೇಪರ್ ಬುಟ್ಟಿಗಳ್ನ ತಗೋತಿದ್ರು ನೋಡೋಕೆ ಬಂದ ಜನ. ಇದ್ರಿಂದ ನನ್ನ ಕೈ ಖರ್ಚಿಗೆ
ಒಂದಿಷ್ಟು ದುಡ್ಡೂ ಆಗಿತ್ತು. ಖರ್ಚು ? ! ಇಲ್ಲಿರೋವರೆಗೆ ಏನೂ ಖರ್ಚಿಲ್ಲ. ಒಂದು ಜೊತೆ
ಬಟ್ಟೆಯಲ್ಲಿ ಇಲ್ಲಿ ಬಂದ ನನಗೆ ಬಟ್ಟೆಗಳನ್ನು ಸಹಿತ ಇವ್ರೇ ಕೊಟ್ಟಿದ್ದಾರೆ. ಚಳಿಗಾಲ
ಬಂತಂದ್ರೆ ಬರೋ ಜನರೇ ಶಾಲುಗಳನ್ನ ತಂದುಕೊಡ್ತಾರೆ..ಆದ್ರೂ ವಾರಕ್ಕೊಮ್ಮೆ ಹೊರಗೆ ಹೋದಾಗ
ಬೇಕಾಗಬಹುದು ಅನ್ನೋ ಭಾವ.. ಮೊಮ್ಮಕ್ಕಳಿದ್ದಿದ್ರೆ ಅಜ್ಜಿ ಅಜ್ಜಿ, ಚಾಕ್ಲೇಟ್ ಕೊಡ್ಸು
ಅಂತ ದುಂಬಾಲು ಬೀಳ್ತಿದ್ರೇನೋ . ಆದ್ರೆ . ಹೂಂ ಬಿಟ್ಟಾಕು. ಒಬ್ಬ ಮೊಮ್ಮಗ
ಇಲ್ಲದಿದ್ದರೇನಂತೆ ನಂಗೆ ಇಲ್ಲಿ ವಾರಕ್ಕೆ ಎಷ್ಟೋ ಜನ ನೋಡೋಕೆ ಬರ್ತಾರೆ. ಅದರಲ್ಲಿ
ಎಷ್ಟು ಜನ ಮಗ, ಸೊಸೆಯಂತೆ ಕಂಡಿಲ್ಲ ? ಎಷ್ಟು ಜನ ಮುದ್ದಾಗಿ ಅಜ್ಜೀ ಅಂತ ಕರೆದಿಲ್ಲ.
ಇವರೇ ನನ್ನ ಮೊಮ್ಮಕ್ಕಳು. ಇವರಿಗಿಂತಾ ಬೇರೆ ಬೇಕೇ ? ಹೂಂ..
ಆರು ತಿಂಗಳ ನಂತರ:
ಆಶ್ರಮದೆದುರು ಯಾವುದೋ ಒಂದು ಕಾರು ಬಂದು ನಿಂತಿತ್ತು. ಇಲ್ಲಿಗೆ ಕಾರು ಬರೋದು
ಹೊಸದೇನಲ್ಲ. ಬಂದವರೇ ಸೀದಾ ಅಲ್ಲಿನ ಮುಖ್ಯಸ್ಥರ ಹತ್ರ ಮಾತಾಡೋಕೆ ತೆರಳಿದ್ರು. ನಮ್ಮ
ತಾಯಿ ಹೆಂಗಿದಾರೆ ? ತಾಯಿ ? ನಿಮ್ಮ ತಾಯಿ ? ಯಾರು ನಿಮ್ಮ ತಾಯಿ ? ಅದೇ .. ಅಂತ. ಆರು
ತಿಂಗಳ ಹಿಂದೆ ನಾವು ಬಂದಿದ್ವಿ ಇಲ್ಲಿಗೆ ಅನ್ನುತ್ತಿದ್ದಂತೆ ಮುಖ್ಯಸ್ಥೆಗೆ ಆರು ತಿಂಗಳ
ಹಿಂದೆ ನಡೆದ ಮಾತುಕತೆ ನೆನಪಾಗಿ ಅವರು ಕೆಂಡಾಮಂಡಲವಾಗತೊಡಗಿದ್ರು. ಹೆತ್ತ ತಾಯಿಯನ್ನು
ಹೆತ್ತ ತಾಯಿ ಅಂತ ಒಪ್ಪಿಕೊಳ್ಳಲಾಗದೇ ಪಕ್ಕದ ಮನೆಯವರು ಅಂತ ತಂದು ಸೇರಿಸಿದ್ದ ಜನರಿಗೆ
ಇದ್ದಕ್ಕಿದ್ದಂಗೆ ತಾಯಿಯ ನೆನಪಾಗಿದ್ದ ಪರಿ ವಿಪರೀತ ಬೇಸರವನ್ನು, ಸಿಟ್ಟನ್ನು ಒಟ್ಟಿಗೇ
ತಂದಿತ್ತು. ಆದ್ರೂ ಹೆತ್ತ ಕರುಳ ಕಾಣ ಬಂದ ಮಗನಿಗೆ ತಾಯ ಕಾಣಗೊಡದ ಪಾಪಿ
ತಾನ್ಯಾಕಾಗಬೇಕೆಂದು ಭಾವನೆಗಳ ಹತೋಟಿಗೆ ತಂದುಕೊಂಡು ಭೇಟಿಗೆ ಅನುವು ಮಾಡಿಕೊಟ್ಟರು
ಮುಖ್ಯಸ್ಥೆ. ಮಾತುಕತೆ ಏನು ನಡೆಯಿತೋ ಗೊತ್ತಿಲ್ಲ. ಕೆಲ ಹೊತ್ತಿನಲ್ಲೇ ಸಪ್ಪೆ ಮೋರೆ
ಹಾಕಿಕೊಂಡ ದಂಪತಿ ಆಶ್ರಮದಿಂದ ತೆರಳಿದ್ರು .
ಇಲ್ಲಿನ ಜನರನ್ನ ನೋಡೋಕೆ ಅವ್ರ ಮನೆಯವ್ರು ಬರ್ತಾರಾ ? ಫೋನ್ ಮಾಡ್ತಾರಾ ಅನ್ನೋ ನಮ್ಮ
ಕುತೂಹಲದ ಪ್ರಶ್ನೆಗೆ ಅಲ್ಲಿನ ಮುಖ್ಯಸ್ಥೆಯ ನೆನಪುಗಳ ಬುತ್ತಿ ಹೀಗೆ ಬಿಚ್ಚಿಕೊಂಡಿತ್ತು.
ಶನಿವಾರ, ಭಾನುವಾರ ಇಲ್ಲಿಗೆ ಬರಬಹುದಂತೆ ಅಲ್ಲಿರುವವರ ಸಂಬಂಧಿಗಳು. ಫೋನ್ ಯಾವಾಗಾದ್ರೂ
ಮಾಡ್ಬೋದಂತೆ. ಯಾವಾಗ ಫೋನ್ ಮಾಡಿದ್ರೂ ನಾನು ಕಟ್ ಮಾಡೋಲ್ಲ. ಅವರಿಗೇ ಕೊಡುತ್ತೇನೆ.
ಯಾಕಂದ್ರೆ ಇಲ್ಲಿಗೆ ಬರುವ ಸಂಬಂಧಿಗಳೇ ಕಮ್ಮಿ. ಫೋನ್ ಮಾಡುವವರು ಇನ್ನೂ ಕಮ್ಮಿ ಅಂತ
ನಿರ್ಭಾವುಕರಾಗಿ ಮುಖ್ಯಸ್ಥೆ ಹೇಳ್ತಿದ್ರೆ ನಮಗೆ ಕರುಳು ಹಿಂಡಿದಂತಹ ಭಾವ. ಇಲ್ಲಿಗೆ
ಬಂದ್ರೆ ನಾನೂ ಮನೆಗೆ ಬರ್ತೀನಿ ಅಂತ ಹಠ ಹಿಡೀಬೋದು. ಮನೆಗೆ ಹೋದವರು ಮತ್ತೆ ಮರಳಲು
ಒಪ್ಪದಿರಬಹುದು ಅನ್ನೋ ಭಯವಂತೆ ಅನೇಕ ಸಂಬಂಧಿಗಳಿಗೆ !!
ಬೆಳಗ್ಗೆ ಹತ್ತಕ್ಕೆ ಅಲ್ಲಿಗೆ ಕಾಲಿಟ್ಟಿದ್ದ ನಮಗೆ ಸಾಧ್ಯವಾದಷ್ಟೂ ಹೊತ್ತು ಅಲ್ಲಿನ
ಹಿರಿಯರ ಜೊತೆ ಕಳೆಯಬೇಕೆಂಬ ಹಂಬಲ. ವೀಲ್ ಚೇರ್ ಹಿಡಿದಿದ್ದ ಅನೇಕರು, ಒಂದು ಕೈ ಪೋಲಿಯೋ
ಪೀಡಿತವಾಗಿದ್ದೋರು, ಕಣ್ಣೇ ಕಾಣದವರು ತಮ್ಮ ಬಾಳ ಯಾವ ನೋವುಗಳ ತೋರಗೊಡ್ದೆ ನಮ್ಮನ್ನೇ
ಎದುರುನೋಡುತ್ತಾ ಕುಳಿತಿದ್ರೆ ಮನಸ್ಸಲ್ಲೆಲ್ಲೋ ವಿಷಾದದ ಛಾಯೆ. ಹಿರೋಶಿಮಾ, ನಾಗಸಾಕಿಯ
ಮೇಲೆ ಬಾಂಬ್ ಹಾಕಿದ ವೈಮಾನಿಕ ತಂಡದಲ್ಲಿದ್ದ ಕ್ಯಾಪ್ಟನ್ ಲಿಯೋನಾರ್ಡ್ ಚೆಶೈರ್ ನಂತರ
ಚೆಶೈರ್ ಹೋಮ್ ಅನ್ನು ಸ್ಥಾಪಿಸಿದ ಕತೆ, ಅದು ನಂತರ ವಿಶ್ವಾದ್ಯಂತ ಪಸರಿಸಿದ ಕತೆ,
ಆಶ್ರಮದ ದಿನಚರಿಗಳ ಬಗ್ಗೆ ತಿಳಿದೆವು. ಅದಾದ ಮೇಲೆ ಈ ಮುಸ್ಸಂಜೆಯ ಹೊಸ್ತಿಲಲ್ಲಿರೋ
ಜೀವಗಳ ಮೊಗದಲ್ಲಿ ಹೇಗಾದ್ರೂ ಒಂದಿಷ್ಟು ನಗು ತರಿಸಬೇಕಲ್ವಾ ? ಅದಕ್ಕೆಂದೇ ಸಂಖ್ಯೆಗಳ ಆಟ
ತಂಬೋಲ ಆಡಿಸಿದ್ವಿ. ಪಾಸಿಂಗ್ ದ ಬಾಲ್ ತರ ಪಾಸಿಂಗ್ ದ ದಿಂಬು ಆಡಿಸಿದ್ವಿ ! ಚಿಕ್ಕ
ಚಿಕ್ಕ ಖುಷಿಯ ಕ್ಷಣಗಳನ್ನೂ ಅವರು ಸಂಭ್ರಮಿಸುತ್ತಿದ್ರೆ ನಮ್ಮ ಮುಖದಲ್ಲೂ ಒಂದು
ಸಂತೃಪ್ತಿಯ ಭಾವ. ಕೆಲ ಅಜ್ಜಿಯಂದ್ರು ಆಗಿನ ಕಾಲದ, ಈಗಿನ ಕಾಲದ್ದೂ ಕೆಲ ಹಾಳು
ಹೇಳಿದ್ರು. ಒಬ್ಬರಂತೂ ಕುಣಿದೇ ಬಿಡ್ಬೇಕೇ ! ಇಳಿವಯಸ್ಸಲ್ಲೂ ಅವರ ಜೀವನೋತ್ಸಾಹ ಕಂಡು
ನಿಜಕ್ಕೂ ಹೆಮ್ಮೆಯಾಗದೇ ಇರಲಿಲ್ಲ.
ಕೊನೆಗೆ ಒಂದು ಕೇಕ್ ಕಟ್ ಮಾಡಿಸೋ ಹೊತ್ತಿಗೆ ಅಲ್ಲಿಂದ ಹೊರಡೋ ಸಮಯ ಬಂದು
ಬಿಟ್ಟಿತ್ತು. ಬರೋ ದೀಪಾವಳಿ ಆಚರಿಸಿ ಅಂತ ನಾವು ಕೊಟ್ಟ ದೀಪಗಳ ಉಡುಗೊರೆಯನ್ನು ನೆನಪಿಸಿ
ಹೊರಡಲು ಅಣಿಯಾದ್ವಿ. ಗಾಲಿ ಖುರ್ಚಿಗಳಲ್ಲಿ ಬಯಲಿಗೆ ತಂದಿದ್ದ ಅಜ್ಜಿಯಂದಿರನ್ನ ನಿಮ್ಮ
ರೂಮುಗಳಿಗೆ ಬಿಡ್ತೀವಿ ಅಂದ್ವಿ. ಸರಿ ಅಂತ ಅಜ್ಜಿ ರೂಮಿನ ಬಾಗಿಲ ಬಳಿ ಹೋಗುವ ಹೊತ್ತಿಗೆ
ತಡಿ.ಇಲ್ಲೇ ನಿಲ್ಲಿಸಪ್ಪ ಅಂದ್ರು. ಯಾಕೆ ಅಂದ್ರೆ ನೀವು ಹೋಗುವ ವರ್ಗೂ ಇಲ್ಲೇ ಇರ್ತೀನಿ.
ನೀವು ಹೋಗೋವರ್ಗೂ ನೋಡ್ತೀನಿ ಅನ್ಬೇಕೇ ? ಮತ್ತೊಬ್ಬ ಅಜ್ಜಿಯದೂ ಅದೇ ಮಾತು. ಒಟ್ನಲ್ಲಿ
ಯಾರೂ ಒಳಗೆ ಹೋಗೋಕೆ ರೆಡಿ ಇಲ್ಲ ! ನಮ್ಮಲ್ಲಿ ಮೊಮ್ಮಕ್ಕಳನ್ನೇ ಕಂಡಂತೆ ಅವರು ಖುಷಿ
ಖುಷಿಯಾಗಿದ್ದರೂ ವಾಸ್ತವವ ನೆನೆದು ನಮ್ಮ ಕಣ್ಣಂಚೆಲ್ಲಾ ತೇವ ..ಕೊನೆಗೂ ಗಟ್ಟಿ ಮನಸ್ಸು
ಮಾಡಿ ಹೊರಡಲನುವಾದಾಗ ಸಿಕ್ಕಿದ್ದೇ ಮೊದಲು ಹೇಳಿದ ಮುತ್ತು. ಮುತ್ತೆಂದರೆ ಸಾಮಾನ್ಯ
ಮುತ್ತಲ್ಲವದು. ಮುತ್ತಿನ ಮುತ್ತು. ಆ ಮುತ್ತಿನ ಬಗ್ಗೆಯೇ ಇಂದು ಬರೆದ ಕತೆ. ಒಂದು
ಮುತ್ತಿನ ಕತೆ.
ಸೂಚನೆ: ಪ್ಯಾರಾ ಮೂರರಲ್ಲಿದ್ದ ಸ್ವಲ್ಪ ಭಾಗ ಕಾಲ್ಪನಿಕವಾದ್ರೂ ಅದರಲ್ಲಿ ಬಂದ ಮಕ್ಕಳೇ
ಪಕ್ಕದ ಮನೆಯವ್ರು ಅಂತ ಸುಳ್ಳು ಹೇಳಿ ವೃದ್ದಾಶ್ರಮಕ್ಕೆ ಬಂದ ಘಟನೆಯೆಂತೂ ಸುಳ್ಳಲ್ಲ.
ಯಾವ ವ್ಯಕ್ತಿತ್ವಕ್ಕೂ ಮಸಿ ಬಳಿಯೋ ಉದ್ದೇಶವಿಲ್ಲದ್ದರಿಂದ ಉದ್ದೇಶಪೂರ್ವಕವಾಗಿ ಹೆಸರುಗಳ
ನೀಡಿಲ್ಲ. ಪಾತ್ರವಾಗಿ ಹೇಳಿದ ಇಲ್ಲಿನ ಕೆಲಸ, ವೇಳಾಪಟ್ಟಿಗಳ ಮಾಹಿತಿಯೂ ಸತ್ಯವೇ.
ಅಂದಂಗೆ ಓದುಗ ಮಿತ್ರರಿಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಶಯಗಳು. ಈ ಸಲ ಪಟಾಕಿಗಳಿಲ್ಲದ ಪ್ರಕೃತಿ ಸ್ನೇಹಿ ದೀಪಾವಳಿ ಆಚರಿಸ್ತಾ ಇದ್ದೀನಿ ನಾನು.. ನೀವು ?
ಈ ಲೇಖನ "ಪಂಜು" ಪತ್ರಿಕೆಯಲ್ಲಿ ಪ್ರಕಟವಾಗಿದೆ
ಯಾಕೋ ಈ ವೃದ್ಧಾಶ್ರಮಗಳ ಬಗ್ಗೆ ಓದುತ್ತಿದ್ದರೆ, ನನ್ನ ಗಮ್ಯವೂ ಕಡೆಗೆ ಇಂತಹದೊಂದು ತಾಣವೇನೋ ಅನಿಸುತ್ತದೆ!
ReplyDeleteಕಾಲವನ್ನು ಅರಿತೋರು ಯಾರಿದ್ದಾರೆ ಸರ್ಜಿ.. ನಾಳೆ ನೀವೋ, ನಾಡಿದ್ದು ನಾವೋ ಒಂದೂ ಗೊತ್ತಿಲ್ಲ. ಇದ್ದಷ್ಟು ದಿನ ಜನರನ್ನ ನಗುನಗಿಸುತ್ತಾ ಖುಷಿಯಿಂದ ಇದ್ದು ಬಿಡೋಣ. ಆದ್ರೆ ನಾಲ್ಕು ಜನಕ್ಕೆ ಆದಷ್ಟು ಸಹಾಯ ಮಾಡೋಣ. ಇಲ್ಲದಿದ್ದರೆ ಅನಾನುಕೂಲವನ್ನಾದ್ರೂ ಮಾಡದೇ ತೆಪ್ಪಗೆ ಇದ್ದು ಬಿಡೋಣ.. ಎಲ್ಲೋ ಕಾಣದ ನೆಂಟರ ನೆನೆಯೋ ಬದ್ಲು ಎದ್ರುರಿರೋನೇ ನೆಂಟ ಅಂದ್ಕೊಳ್ಳೋದು ಸೂಕ್ತ ಅಲ್ವೇ ಭಾಯಿ..
Delete