ನಮ್ಮ ಉಪಗ್ರಹ ಮಂಗಳನ ಮೇಲಿಳಿದಂದು ಮೂಡಿದ ಖುಷಿ ಮುಖಹೊತ್ತಿಗೆಯಲ್ಲಿನ್ನೂ ಇಳಿದಂತಿಲ್ಲ. ಮತ್ತೆ ಮತ್ತೆ ಮಂಗಳನದೇ ಸುದ್ದಿ, ಚರ್ಚೆಗಳಿಲ್ಲಿ. ಮಂಗಳನ ಮೇಲೆ ಮೊದಲ ಪ್ರಯತ್ನದಲ್ಲೇ ಕಾಲಿಟ್ಟ ಮೊದಲ ದೇಶ ನಮ್ಮದು ಎಂಬ ಹೆಮ್ಮೆ ಪಟ್ಟ ಜನರೆಷ್ಟೋ , ಮೂಲಭೂತ ಉದ್ದೇಶಗಳ ಸಾಕಾರವೇ ಸಂದೇಹವಿರೋ ಯೋಜನೆಗೆ ನಾನೂರೈವತ್ತು ಕೋಟಿ ಸುರಿದದ್ದು ಹುಚ್ಚಾಟದ ಪರಮಾವಧಿಯೆಂದು ಗೋಳಿಟ್ಟ ಜನರೂ ಅಷ್ಟೇ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಭಕ್ಕೆ ನೆಗೆವ ರಾಕೆಟ್ಟುಗಳ ನಿರ್ಮಾಣಕ್ಕೆ ನೂರಾರು ಕೋಟಿ ಸುರಿಸುವ ವಿಜ್ಞಾನಿಗಳ ವಿಚಾರಹೀನತೆಯ ಬಗ್ಗೆ ಹಿಗ್ಗಾಮುಗ್ಗಾ ಖಂಡಿಸಿದ ಬುದ್ದಿಜೀವಿಗಳು, ಆ ದುಡ್ಡಿನಲ್ಲಿ ಅದೆಷ್ಟೋ ಉದ್ದಾರದ ಯೋಜನೆಗಳನ್ನು ಮಾಡಬಹುದಿತ್ತೆನ್ನೋ ದೇಶೋದ್ದಾರಕರು(?), ವಿಜ್ಞಾನ-ತಂತ್ರಜ್ಞಾನಗಳು ಬೇಡ, ಅದರಿಂದಾಗ ಪ್ರಯೋಜನ ಮಾತ್ರ ಬೇಕು, ವಾಹನಗಳಿಂದ ವಿಪರೀತ ಮಾಲಿನ್ಯ. ಹಾಗಾಗಿ ಎತ್ತಿನಗಾಡಿಯೇ ಇರಲಿ. ಉಪಗ್ರಹ ಉಡಾವಣೆ ಶುದ್ದ ದುಂದು, ಆದ್ರೆ ಅವುಗಳನ್ನು ಬಳಸೋ ಉನ್ನತ ತಾಂತ್ರಿಕತೆಯ ಮೊಬೈಲು ಮಾತ್ರ ಇರಲಿ! ಅನ್ನೋ ಇಬ್ಬಂದಿಯ ವಿಚಿತ್ರವಾದಿಗಳನ್ನು ನೋಡಿದಾಗೆಲ್ಲಾ ಮೂಡೋದು ಒಂದೇ ಆಲೋಚನೆ . ಮೇರಾ ಭಾರತ್ ಮಹಾನ್ !!. ಮೇರಾ ಭಾರತ್ ಮಹಾನ್ !!
ನಾನು ಹತ್ತನೇ ತರಗತಿಯಲ್ಲಿದ್ದ ಸಮಯ ಅನಿಸತ್ತೆ. ನಮ್ಮ ಸಂಸ್ಕೃತಿಯ ಮೇಲೆ ವೈಜ್ಞಾನಿಕ ಆವಿಷ್ಕಾರಗಳ ಪ್ರಭಾವ ಅನ್ನೋ ಒಂದು ವಿಷಯದ ಮೇಲೆ ಒಂದು ವಲಯಮಟ್ಟದ ಚರ್ಚಾಸ್ಪರ್ಧೆ. ಸ್ಪರ್ಧೆಗಾಗಿ ಹೇಳಿದ ಎಲ್ಲಾ ಅಂಶಗಳೂ ನಮ್ಮ ವೈಯುಕ್ತಿಕ ಅಭಿಪ್ರಾಯಗಳೇ ಆಗಿದ್ದು, ನಮ್ಮ ಜೀವನದಲ್ಲಿ ಹಾಗೇ ಬಾಳಿ ಬದುಕಬೇಕೆಂಬ ನಿಲುವು ನನ್ನದಾಗಿರದಿದ್ದರೂ, ಪರ ಅಥವಾ ವಿರೋಧ ಇವುಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳೋ ಸ್ವಾತಂತ್ರ್ಯವಿದ್ದರೂ ಒಂದು ರೀತಿಯ ಗೊಂದಲ ಮೂಡಿತ್ತು ನನ್ನಲ್ಲಾಗ. ಈ ಟೀವಿಯೆಂಬ ಟೀವಿ ಬಂದು ನಮ್ಮ ಯಕ್ಷಗಾನನ ತೆಂಕು ಬಡಗುಗಳಲ್ಲಿ, ದೊಡ್ಡಾಟ, ಬಯಲಾಟಗಳಲ್ಲಿ, ಭರತನಾಟ್ಯ, ನಾಟಕ, ಶ್ರೀ ಕೃಷ್ಣ ಪಾರಿಜಾತ, ಕರಡಿ ಮಜಲುಗಳಲ್ಲಿ ಖುಷಿ ಕಂಡುಕೊಳ್ಳುತ್ತಿದ್ದ ಜನರ ಮನೋಭಾವ ಟೀವಿಯೇ ಸರ್ವಸ್ವವೆಂಬಂತೆ ಬದಲಾಗಿ ನಮ್ಮಲ್ಲಿನ ಅನೇಕ ಕಲೆಗಳೇ ನಾಶದ ಹಂತ ತಲುಪುತ್ತಿರುವುದರ ಬಗೆ ಹೇಳಲೋ ಅಂತ ಒಂದೆಡೆ. ಎಫ್. ಎಮ್ ಅಂತೆಲ್ಲಾ ಚಾನಲ್ಲುಗಳ ಮೂಲಕ ಪಾಶ್ಚಾತ್ಯದ ಹೇರಿಕೆಯಂತೆ ಕಂಡರೂ ದೂರದರ್ಶನದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನೇಕ ಕಲೆಗಳಿಗೊಂದು ದೊಡ್ಡ ವೇದಿಕೆ, ಗ್ಯಾನ್ ದರ್ಶನಿನಂತಹ ಸರಣಿಗಳ ಮೂಲಕ ಜ್ಞಾನಪ್ರಸಾರದಂತಹ ಒಳ್ಳೆಯ ಕೆಲಸಗಳು ನಡೆಯುತ್ತಿರೋದ್ರ ಬಗ್ಗೆ ಕೂಡ ಮನ ತುಡಿಯುತ್ತಿತ್ತು. ಕ್ಷಣಮಾತ್ರದಲ್ಲಿ ಕೂತಲ್ಲಿಂದಲೇ ಯಾರನ್ನಾದರೂ ಸಂಪರ್ಕಿಸಬಹುದಾದ ಇಂಟರ್ನೆಟ್ಟು,ಮೊಬೈಲ್ ಬಗ್ಗೆ ಹೇಳಲೇ ಅಥವಾ ಇವುಗಳಿಂದ ಆಗುತ್ತಿರುವ ದುಷ್ಪರಿಣಾಮಗಳ, ಹಾಳಾಗುತ್ತಿರುವ ನೈತಿಕತೆಯ ಬಗ್ಗೆ ಹೇಳಲೇ ಅನ್ನೋ ದ್ವಂದ್ವ. ಕೊನೆಗೆ ಯಾವ ವಿಷಯದ ಪರ ಮಾತನಾಡಿದೆ ಅನ್ನೋದು ಬೇರೆ ವಿಷಯವಾಗಿದ್ರೂ ವಿಷಯದ ಎರಡೂ ಮಗ್ಗುಲಗಳ ಬಗ್ಗೆ ಯೋಚಿಸುವ ಇಬ್ಬಣಗಳಲ್ಲು ಇರೋ ಸತ್ಯಾಸತ್ಯತೆಯನ್ನು ಸಮಾನವಾಗಿ ಸ್ವೀಕರಿಸೋ ಭಾವವನ್ನು ಆ ಸ್ಪರ್ಧೆ ಮೂಡಿಸಿದ್ದಂತೂ ಹೌದು.
ಇನ್ನು ವಿಷಯಕ್ಕೆ ಮರಳಿ ವಿಜ್ಞಾನದ ಬಗೆಗಿನ ಮಂಗಳನ ಬಗೆಗಿನ ಮಾತುಕತೆಗೆ ಬರೋಣ . ವಿಜ್ಞಾನ ಅಂದರೆ ವಿಶೇಷವಾದ ಜ್ಞಾನ ಎಂದರ್ಥ. ಒಂದು ವಿಷಯದ ಒಳಹೊರಗಿನ ಬಗೆಗಿನ, ಅದರ ಕಣಕಣದ ಬಗೆಗಿನ, ಅಣುವಣುವಿನ ನಡುವಿನ ಹೊಂದಾಣಿಕೆಯ ಬಗೆಗಿನ, ಕಣಕಣದ ವ್ಯೂಹಗಳ ಪರಿಕ್ರಮದಲ್ಲಿ ಆಗೋ ಪ್ರಭಾವ, ದುಷ್ರಭಾವಗಳ ಬಗೆಗಿನ ಆಳದ ಅಧ್ಯಯನವೇ ವಿಜ್ಞಾನ. ಮನದಾಳದ ಭಾವಗಳನ್ನು ಮನಮುಟ್ಟುವಂತೆ ನಿರೂಪಿಸುವ ಸಾಹಿತಿಯನ್ನು ಮಹಾನ್ ಅನ್ನೋದಾದರೆ ವಿಜ್ಞಾನದ ಸೂತ್ರಗಳನ್ನು , ತತ್ವಗಳನ್ನು ಅರ್ಥ ಮಾಡಿಕೊಂಡು ಅದರಿಂದ ಲೋಕೋದ್ದಾರಕ್ಕನುವಾಗುವಂತಹ ಸಾಧನವನ್ನು ರೂಪಿಸೋ ವಿಜ್ಞಾನಿಯನ್ನು ಮಹಾನ್ ಅನ್ನೋದರಲ್ಲಿ ತಪ್ಪೇನಿದೆ ? ತಿಂಗಳುಗಳ ಕಾಲ ಮಾಹಿತಿ ಕಲೆ ಹಾಕಿ ತಮ್ಮನ್ನು ಆ ವಿಷಯದಲ್ಲೇ ತೊಡಗಿಸಿಕೊಂಡು ಒಂದು ಕಾದಂಬರಿ(ಉತ್ತಮ ಅಥವಾ ಕೆಟ್ಟ ಅನ್ನೋದು ನನ್ನನ್ನು ಒಂದು ಪಂಕ್ತಿಯ ಕಡೆ ವಾಲಿಸಿಕೊಂಡತಾದೀತೆಂದು ಆ ಯಾವ ಭಾವಗಳಿಲ್ಲದೇ ಮುಂದೆ ಸಾಗುತ್ತಿದ್ದೇನೆ)ರಚಿಸೋ ಭೈರಪ್ಪನವರನ್ನಾಗಲಿ, ಡಾನ್ ಬ್ರೌನನ್ನಾಗಲೀ ಗೌರವಿಸೋ ಮನೋಭಾವವಿರೋ ನಮ್ಮಲ್ಲಿ ಒಂದಿಡೀ ವರ್ಷ ಒಂದು ಉಪಗ್ರಹದ ಉಡಾವಣೆಯ ಬಗ್ಗೆ ತಲೆಕೆಡಿಸಿಕೊಂಡ , ಅದಕ್ಕಿಂತ ಮುಂಚಿನ ವರ್ಷವರ್ಷಗಳ ಕಾಲ ಶ್ರಮಪಟ್ಟ ವಿಜ್ಞಾನಿಗಳ ಶ್ರಮದ ಬಗ್ಗೆ ಕೇವಲವಾಗಿ ಮಾತನಾಡೋ ಯಕಶ್ಚಿತ್ ಭಾವ ಮೂಡೋ ಬಗ್ಗೆ ಬೇಸರವೆನಿಸುತ್ತೆ. ಅಮೇರಿಕಾದವ್ರು ಆಗಲೇ ಯೋಜನೆ ಕೈಗೊಂಡಿದ್ರು. ಈಗ ನಮಗೆ ಸಿಗಬಹುದಾದ ಮಾಹಿತಿಗಳೆಲ್ಲಾ ಆಗಲೇ ಅವರ ಬಳಿ ಇದೆ ಎಂದು ಮಾತಾಡೋದು ಸುಲಭ, ಆದ್ರೆ ಅದ್ರಲ್ಲಿ ಒಂದು ಪ್ರತಿಶತವನ್ನಾದ್ರೂ ನಮಗೆ ಹಂಚುತ್ತಾರಾ ಅವ್ರು ಅಂತ ಯೋಚಿಸಿದಾಗ ಈ ಮಂಗಳಯಾನದ ಮಹತ್ವ ಅರ್ಥವಾಗುತ್ತೆ ! ಸ್ನೇಹದ ಮಾತಾಡುತ್ತಲೇ ರಷ್ಯಾ ಕೊಟ್ಟ ಗನ್ನು, ವಿಮಾನಗಳಿರಬಹುದು, ರೋಗಗಳ ವಿರುದ್ದ ಹೋರಾಟ ಅಂತ ಅಮೇರಿಕಾ ತಂದು ಸುರಿದ ರಾಸಾಯನಿಕಗಳಿರಬಹುದು. ಯಾವುದೂ ಪುಕ್ಕಟೆಯಲ್ಲ. ಅಲ್ಲಿ ಉಪಯೋಗವಿಲ್ಲ ಅಂತ ಎಲ್ಲಾದರೂ ತಂದು ಸುರಿಯಲು ಬೇಕಾಗಿದ್ದ ಗೊಬ್ಬರಗುಂಡಿಗಳಂತೆ ಭಾರತ ಅದೆಷ್ಟೋ ಸಲ ಭಾಸವಾಗಿರಬಹುದು ಪರದೇಶಗಳಿಗೆ. ಇಲ್ಲಿಗೆ ಬಂದ ಡಿ.ಡಿ.ಟಿಯಂತಹ ಕೆಮಿಕಲ್ಲುಗಳು ಅದೆಷ್ಟೋ ದೇಶಗಳಲ್ಲಿ ಟಾಯ್ಲೆಟ್ಟು, ರಸ್ತೆ ತೊಳೆಯೋ ಪೆಪ್ಸಿ, ಕೋಕುಗಳನ್ನ ಇಲ್ಲಿನ ಜನಮನದ ಪೇಯಗಳಂತೆ ತಲೆಗೆ ಕಟ್ಟಲು ಪ್ರಯತ್ನಿಸುತ್ತಿರೋ ಹುನ್ನಾರಗಳನ್ನ ನೋಡಿದಾಗ್ಲೂ ನಮ್ಮದೇ ಆದ , ಸ್ವಂತಿಕೆಯ ತಂತ್ರಜ್ನಾನದ ಬೆಳವಣಿಗೆ ಬೇಕು ಅನಿಸೋಲ್ವಾ ? ಇದ್ದದ್ದನ್ನು ಸರ್ವನಾಶ ಮಾಡಿ ಹೊಸದನ್ನು ತರೋದು ತಂತ್ರಜ್ನಾನ ಅಂತಲ್ಲ. ಇದ್ದುದರ ಬೆಳವಣಿಗೆ ಸಹಾಯವಾಗೋ ಉದ್ದಾರಕ್ಕೆ ಸಹಾಯವಾಗೋ ತಂತ್ರಜ್ನಾನದ ಬಗ್ಗೆ ಮಾತಾಡುತ್ತಿರೋದು ಇಲ್ಲಿ.
ದಿನದ ಐದೋ ಆರೋ ಘಂಟೆ ಮಾತ್ರ ಕರೆಂಟಿರೋ ಹಳ್ಳಿಗಳು.. ಈ ಮಾತು ತಮಾಷೆಯಲ್ಲ ಸ್ವಾಮಿ. ಇಂಥವು ಬೇರೆ ಎಲ್ಲೋ ಅಲ್ಲ. ನಮ್ಮ ಕರ್ನಾಟಕದಲ್ಲೇ ಇವೆ. ಮಳೆಗಾಲ ಬಂದಾಗ ಯಾವುದೋ ಮರಬಿದ್ದು ಹೋದ ಕರೆಂಟು ಯಾವಾಗ ಬರುತ್ತೆ ಅಂತಹ ಯಾರಿಗೂ ಗೊತ್ತಿಲ್ಲದ ಹಳ್ಳಿಗಳು ಅದೆಷ್ಟೋ ನಮ್ಮಲ್ಲಿ. ಅಂಥಹ ಹಳ್ಳಿಗಳ ಮೂಲೆ ಮೂಲೆಗಳಲ್ಲೂ ಮನೆಗೊಂದು ಮೊಬೈಲು, ಎಲ್ಲ ಮನೆಗಳಲ್ಲಿ ಅಲ್ಲದಿದ್ದರೂ ಬೀದಿಗೊಂದಂತಾದರೂ ಮನೆಗಳ ತಲೆ ಮೇಲೊಂದು ಡಿಶ್ ಟೀವಿಯ ಆಂಟೆನಾ ಕೊಡೆಗಳು ಕಾಣಸಿಗುತ್ತೆ ಈಗ. ಒಂದು ಹದಿನೈದು ನಿಮಿಷ ಕರೆಂಟು ಹೋದರೂ "ವಾಟ್ ಅ … ಮ್ಯಾನ್" ಅಂತ ಉದ್ಗರಿಸೋ ಬೆಂಗಳೂರೋ, ಮೈಸೂರೂ ಅಥವಾ ಮತ್ತಿನ್ಯಾವುದೋ ಮಹಾನಗರದಲ್ಲಿ ಕೂತು ಈ ಉಪಗ್ರಹ ತಂತ್ರಜ್ನಾನ ದುಡ್ಡಿನ ಪೋಲು ಅಂತ ಮಾತನಾಡೋ ಮಹಾಜನಗಳೇ , ಇದರ ಬದಲು ಹಳ್ಳಿಗಳ ಉದ್ದಾರ ಮಾಡಬಹುದಿತ್ತೆಂದು ಭಾಷಣ ಬಿಗಿಯೋ ಪುಣ್ಯ ಪ್ರಜೆಗಳೇ ಒಮ್ಮೆ ನಿಜವಾದ ಹಳ್ಳಿಗಳತ್ತ ಬಂದು ನೋಡಿ ಅಂತ ಕರೆಯಬೇಕನ್ನಿಸುತ್ತೆ. ಮಾತಲ್ಲಿನ ವಿಡಂಬನೆ ಜಾಸ್ತಿಯೆನಿಸಿದರೂ ಅದರಲ್ಲಿ ಸತ್ಯವಿಲ್ಲದೇ ಇಲ್ಲ. ಆಣೆಕಟ್ಟೆಯ ಬಾಗಿಲು ತೆರಿತಾ ಇದ್ದಾರೆ ಕೆಳಗಿರೋ ಜನರೆಲ್ಲಾ ನೀರ ಸಮೀಪ ತೆರಳಬೇಡಿ, ಎತ್ತರದ ಜಾಗಕ್ಕೆ ತೆರಳಿ ಅಂತ ಟೀವಿ, ರೇಡಿಯೋ ಮೂಲಕ ಎಚ್ಚರಿಸೋ ಟೀವಿ, ಸಮುದ್ರದಲ್ಲಿ ಉಬ್ಬರ ಹೆಚ್ಚಾಗಿದೆ ಅಂತ ಉಪಗ್ರಹಗಳಿಂದ ಮಾಹಿತಿ ಬಂದಿದೆ ಇಂದು ಮೀನುಗಾರಿಕೆಗೆ ತೆರಳಬೇಡಿ ಅಂತ ಎಚ್ಚರಿಸೋ ರೇಡಿಯೋ ಜೀವರಕ್ಷಕ ಈ ಜನರಿಗೆ. ಎಲ್ಲಾ ಹಾಳಾಗುತ್ತಿರೋದು ನಮ್ಮಿಂದಲೇ ಅಂತ ಅದೆಷ್ಟೋ ವಾದಿಸಿದರೂ ಹಿಂದಿನ ಅದೆಷ್ಟೋ ಪ್ರಕೃತಿ ವಿಕೋಪಗಳಲ್ಲಿ, ಕಾಶ್ಮೀರದ ಇತ್ತೀಚಿಗಿನ ಪ್ರವಾಹದಲ್ಲಿ ಲಕ್ಷಾಂತರ ಜನರ ಜೀವ ರಕ್ಷಣೆಗೆ ಸಹಾಯಕವಾಗಿದ್ದು ಉನ್ನತ ತಂತ್ರಜ್ನಾನದ ಬೋಟುಗಳು, ಹೆಲಿಕಾಪ್ಟರುಗಳು, ಹಸಿವಿಂಗಿಸಿದ್ದು ಅದೆಷ್ಟೋ ದಿನ ಕೆಡದಂತೆ ತಯಾರಿಸಿದ ಆಹಾರ ಅನ್ನುವುದನ್ನು ಮರೆಯೋ ಹಾಗಿಲ್ಲ.
ನಮ್ಮ ದೇಶೀ ತಾಂತ್ರಿಕತೆ ಸ್ವಂತಂತ್ರವಾಗಿ ಹಲವು ಮಜಲುಗಳಲ್ಲಿ ಎದ್ದು ನಿಲ್ಲೋ ಪ್ರಯತ್ನದಲ್ಲಿದೆ. ಅಂತಹ ಒಂದು ಪ್ರಯತ್ನವೇ ಮಂಗಳಯಾನ. ಅಲ್ಲಿ ತಾಮ್ರವಿರಬಹುದು, ನೀರಿರಬಹುದು, ಪ್ಲಾಟಿನಂ ಇರಬಹುದು. ಮನುಕುಲಕ್ಕೆ ಸದ್ಯದಲ್ಲಿ ತಿಳಿಯದಿದ್ದರೂ ಭವಿಷ್ಯತ್ತಿನಲ್ಲಿ ಉಪಯೋಗಕ್ಕೆ ಬರಬಹುದಾದಂತಹ ಅದೆಷ್ಟೂ ಖನಿಜಗಳಿರಬಹುದು. ಅದರ ಬಗೆಗಿನ ಮಾಹಿತಿ ಕಲೆಹಾಕೋಕೆ ನಡೆಯುತ್ತಿರುವ ಪ್ರಯತ್ನ ಶುದ್ದ ವೇಸ್ಟು ಅಂತ ಯಾವುದೋ ಪೂರ್ವಾಧ್ಯಯನವಿಲ್ಲದೇ ಒಂದು ಸಾಧಾರಣ ಕಟ್ಟೆ ಪಂಚಾಯ್ತಿಯಲ್ಲಿ ನಿರ್ಧರಿಸೋದು ಎಷ್ಟು ಸುಲಭ ಅಲ್ವಾ ? ! ನಮ್ಮಲ್ಲಿನ ಪ್ರತಿಭೆಗಳೆಲ್ಲಾ ಅಮೇರಿಕಾಕ್ಕೋ ಇಂಗ್ಲೆಂಡಿಗೋ ಪಲಾಯನವಾಗುತ್ತಿದೆ ಅಂತ ಬೊಬ್ಬೆಹಾಕೋ ಮಹಾಜನಗಳೇ ಅದಕ್ಕೆ ಕಾರಣಗಳೇನಿರಬಹುದು ಅಂತ ಒಮ್ಮೆಯಾದರೂ ಯೋಚಿಸಿದ್ದೀರಾ ? ಪರವಿರೋಧಗಳ ಚರ್ಚೆಯಿರಬೇಕು ನಿಜ. ಅದಿದ್ದಾಗಲೇ ವಸ್ತುವಿನ ನಿಜಗುಣ ಹೊರಬರುತ್ತೆನ್ನೋದು ನಿಜ. ಆದ್ರೆ ಚರ್ಚೆಯಾಗಬೇಕೆಂಬ ಒಂದೇ ಕಾರಣಕ್ಕೆ ಕಂಡಿದ್ದೆಲ್ಲವನ್ನೂ ವಿರೋಧಿಸುವುದು ಯಾವ ಸಿದ್ದಾಂತ !! ? ಕಂಡ ಯೋಜನೆಗಳಲ್ಲೆಲ್ಲಾ ತಪ್ಪು ಹುಡುಕೋ ನೀವು ಈ ತಪ್ಪು ಹುಡುಕೋ ಗುಣದಲ್ಲೇ ಏನಾದರೂ ತಪ್ಪು ಹುಡುಕೋ ಪ್ರಯತ್ನವನ್ನು ಎಂದಾದರೂ ನಡೆಸಿದ್ದೀರಾ ? ದಿನಾ ಏಳೂವರೆಗೆ ಬರುತ್ತಿದ್ದ ಪೇಪರ್ರು ಇವತ್ತು ಏಳೂ ಮೂವತ್ತೊಂದಕ್ಕೆ ಬಂತು ಅನ್ನೋದ್ರಿಂದ, ದಿನ ಬೆಳಗ್ಗೆ ಎದ್ದು ಪೇಪರ್ ಹಾಕುವಂತೆ ಒಬ್ಬನನ್ನು ಒತ್ತಾಯಿಸುವುದು ಮಾನವತೆಯ ಮೇಲಿನ ದಬ್ಬಾಳಿಕೆ ಅಂತ ಅದರ ವಿರುದ್ದವೂ ಪ್ರತಿಭಟನೆಗೆ ಮುಂದಾಗಲು ತೊಡಗೋ ಮನೋಭಾವವಿರೋರ ಬಗ್ಗೆ ಯಾವ ಸನ್ನಿರೀಕ್ಷೆಗಳನ್ನಿಟ್ಟುಕೊಳ್ಳೋದೂ ತಪ್ಪೇ ಅನಿಸೋಕೆ ಶುರುವಾಗಿಬಿಡುತ್ತೆ ಒಮ್ಮೊಮ್ಮೆ.
ಮುಗಿಸೋ ಮುನ್ನ:
ಲೇಖನದ ಶೀರ್ಷಿಕೆ ನೋಡಿದಾಗ ಇದು ಮಂಗಳಯಾನದ ಬಗ್ಗೆಯೇ ಅನ್ನೋ ನಿರೀಕ್ಷೆ ಮೂಡಿರಬಹುದು ಕೆಲವರಲ್ಲಾದರೂ. ಆದರೆ ಮೂಲ ಉದ್ದೇಶವದಲ್ಲ. ಈ ಮಂಗಳಯಾನ ಅನ್ನೋದು ನಮ್ಮ ಭಾರತೀಯ ತಂತ್ರಜ್ನಾನ ಎತ್ತರೆತ್ತರಕ್ಕೆ ಸಾಗುತ್ತಿರೋ ಒಂದು ದ್ಯೋತಕವಷ್ಟೇ. ಈ ತಂತ್ರಜ್ನಾನ ಬೆಳವಣಿಗೆಯ ಬಗೆಗಿನ, ಅದರ ಅಗತ್ಯತೆಗಳ ಬಗೆಗಿನ , ಅದರಿಂದ ಎಲ್ಲರಿಗೂ ಮಂಗಳವೇ ಆಗಲಿ ಎಂಬ ಒಂದು ಮಗ್ಗುಲಿನ ವಿಚಾರವನ್ನು ಪ್ರಸ್ತುತಪಡಿಸೋ ಪ್ರಯತ್ನವಷ್ಟೇ ಇದು. ಓದಿದ್ದಕ್ಕೆ ವಂದನೆಯೆನ್ನುತ್ತಾ ಸದ್ಯಕ್ಕೊಂದು ವಿರಾಮ.
ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ
No comments:
Post a Comment