ಇಂಥಾ ಗಂಭೀರ ಪ್ರಶ್ನೆಯ ಬಗ್ಗೆ ಒಂದು ಲೇಖನ ಬೇಕಿತ್ತಾ ಅಂತ ಯೋಚಿಸ್ತಾ ಇದ್ದೀರಾ ? ನೀವಷ್ಟೇ ಅಲ್ಲ. ನಾನೂ ಹಾಗೇ ಯೋಚಿಸಿದ್ದು. ನಾನೇ ಕೆಲ ಘಟನೆಗಳ ನೋಡಿ ಬೇಸತ್ತು, ರೋಸತ್ತು ಇದರ ಬಗ್ಗೆ ಬರೆಯಹೊರಟೆ ಅನ್ನುವುದರ ಬದಲು ಇತ್ತೀಚಿಗಿನ ಕೆಲ ವಿದ್ಯಮಾನಗಳು ಬೇರೆ ವಿಷಯಗಳಿಗಿಂತ ಇದಕ್ಕೇ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಇದರ ಬಗ್ಗೆಯೇ ಈ ವಾರ ಬರೆಯುವಂತೆ ನನ್ನ ಪ್ರೇರೇಪಿಸಿದವು ಅಂದ್ರೆ ತಪ್ಪಾಗಲಾರದೇನೋ. ಅನಂತಮೂರ್ತಿಗಳ ನಿಧನದ ವೇಳೆ ಚರ್ಚೆಯಾದ ಕೃತಿಗಳಿರಬಹುದು. ಭೈರಪ್ಪನವರ ಯಾನದ ಬಗೆಗಿನ ಪರ-ವಿರೋಧ ಲಹರಿಗಳಿರಬಹುದು. ನೀವು ಮೆಚ್ಚಿದ ಹತ್ತು ಪುಸ್ತಕಗಳ ಲಿಸ್ಟು ಅಂತ ಫೇಸ್ಬುಕ್ಕಲ್ಲಿ ಶುರುವಾದ ಕೊಂಡಿಯಿರಬಹುದು, ತೇಜಸ್ವಿಯವರ ನೆನಪಲ್ಲಿ ನಡೆಯುತ್ತಿರುವ ಕೀಟಗಳ ಚಿತ್ರ ಪ್ರದರ್ಶನ, ನಾಟಕಗಳ ಬಗೆಗಿನ ಮಾತುಕತೆಗಳಿರಬಹುದು, ಕುಪ್ಪಳ್ಳಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಕಥಾ ಕಮ್ಮಟದ ಬಗೆಗಿನ ಮಾತುಕತೆಯಿರಬಹುದು..ಹೀಗೆ… ಸುಮಾರು ಕಾಲದ ನಂತರ ಎಲ್ಲೆಡೆ ಪುಸ್ತಕಗಳ ಬಗ್ಗೆ ಹಲತರದ ಚರ್ಚೆ. ನಾನು ಅದನ್ನು ಓದಿದೆ, ನಾನು ಇದನ್ನು ಓದಿದೆ. ನೀನು ಓದದ ಆ ಅದನ್ನು ನಾನೋದಿದೆ. ನಾನೋದಿದ ಈ ಇದನು ನೀನೋದಿಲ್ಲ ಅನ್ನೋ ಮಾತುಕತೆಗಳಲ್ಲಿ, ಕಾಲೆಳೆತಗಳಲ್ಲಿ ಅಹಂ ಅನ್ನೋಕಿಂತ ಸ್ವಲ್ಪ ಬೇರೆಯೇ ಆದ ಭಾವ ಕಾಣಸಿಗುತ್ತಿತ್ತು. ನಾನೂ ಬರೀತೀನಿ. ಓದಿದೀಯ ನಾ ಬರೆದಿದ್ದ ಅನ್ನೋ ತಿರಸ್ಕಾರವಾಗಲಿ, ನಾ ಬರೆದಿದ್ದ ಓದೋ ಪ್ಲೀಸ್ ಅನ್ನೋ ಗೋಗರೆತವಾಗಲಿ ಇಲ್ಲದ ಏ ಇದನ್ನು ಓದೋ, ಚೆನ್ನಾಗಿದೆ ಅನ್ನೋ ಮಾತುಗಳಿದೆಯಿಲ್ಲ. ಯಾರೋ ಬರೆದಿದ್ದನ್ನ ಮೆಚ್ಚಿ ಇನ್ನೊಬ್ಬರಿಗೆ ಹೇಳೋ ವಿಷಯವಿದ್ಯಲ್ಲ. ಅದ್ರಲ್ಲಿ ಬೇರೆಯೇ ಖುಷಿ ಇದೆ.
ಹೌದು. ಬರಹವೆನ್ನೋದು ಭಾವಗಳ ಪ್ರತಿಫಲನಕ್ಕೊಂದು ವೇದಿಕೆ. ನಮ್ಮ ನಿಮ್ಮಗಳ ನಡುವಿನ ವ್ಯವಹಾರಕ್ಕೊಂದು ಸೇತುವೆ. ಸೇತುವೆಯೆಂದರೆ ಒಂದೇ ದಿಕ್ಕಿನ ಸಂಚಾರವಿದ್ದರೆ ಎಷ್ಟು ಚೆನ್ನ . ನಾನು ನಿನ್ನದೋದುತ್ತೀನಿ. ನೀನೂ ನಂದೋದೋ ಅನ್ನೋ ಕೊಡುಕೊಳ್ಳುವಿಕೆಗಳು, ಅವರು ನಾ ಬರೆದಿದ್ದ ಓದೋಲ್ಲ. ತಮ್ಮ ಗುಂಪಿನದನ್ನೇ ಓದ್ತಾರೆ. ಹಾಗಾಗಿ ನಾನ್ಯಾಕೆ ಅವರದ್ದೋದಲಿ. ಚೆನ್ನಾಗಿದ್ರೂ ಯಾಕೆ ಮೆಚ್ಚಲಿ . ಬರೆಯೋದು ಅವರಿಗೆ ಮಾತ್ರ ಬರೋದಾ.. ? ಅನ್ನೋ ಭಾವಗಳೆಲ್ಲ ಒಂದಲ್ಲಾ ಒಂದು ಘಳಿಗೆಯಲ್ಲಿ ಯಾರಿಗಾದರೂ ತಟ್ಟಬಹುದಾದ ಭಾವಗಳೇ. ಆದ್ರೆ ಆ ಭಾವವೇ ನಮ್ಮ ಕಣ್ಣಿಗೊಂದು ಪೊರೆಯಾಗಿ, ಒಂದಿಷ್ಟು ದಿಕ್ಕುಗಳ ಬಿಟ್ಟು ಬೇರೆಲ್ಲಾ ಸುತ್ತುವರೆದ ಬಟ್ಟೆಯಾಗಿ, ಅದೇ ದಟ್ಟವಾಗಿ ಗೋಡೆಯಾಗಿ. ಆ ಗೋಡೆಗಳೇ ಉಸಿರುಗಟ್ಟಿಸಿ ನಮ್ಮ ಕೊಲ್ಲೋ ಮೊದಲು ಇವುಗಳಿಂದ ಹೊರಬರಬೇಕಾದ ಅನಿವಾರ್ಯತೆಯಿದೆ. ಜಗತ್ತಿನಲ್ಲೆಷ್ಟು ಸೊಬಗ ಸೃಷ್ಟಿಯಿದೆ. ಅದೆಷ್ಟೋ ಕಾಲದ ಘಟ್ಟಗಳೇ ಪದಗಳಲ್ಲಿ ಸೆರೆಯಾಗಿ ಮಹಾ ಕಾವ್ಯಗಳೆಂದು ರೂಪುಗೊಂಡಿದೆಯೇನೋ ಎಂಬ ಭಾವ ಹೊರಹೊಮ್ಮಿಸೋ ಅದೆಷ್ಟೋ ಸಂಖ್ಯೆಯ ಕೃತಿಗಳು ಬಂದಿವೆ. ನಮ್ಮ ಅಲ್ಪತನದ ಬಾವಿಯಿಂದ ಹೊರಬರಬೇಕಾದರೆ ಅವುಗಳಲ್ಲಿ ಎಲ್ಲವನ್ನಲ್ಲದಿದ್ದರೂ ಕೆಲವನ್ನಾದರೂ ಓದೋ ಅನಿವಾರ್ಯತೆ ಇದ್ದೇ ಇದೆ. ಜೀವನದ ಅತ್ಯಲ್ಪ ಸಮಯದಲ್ಲಿ ನಮ್ಮ ನಿಲುವಿಗೆ ಸಿಲುಕಿದ್ದಷ್ಟೇ ಪರಮಸತ್ಯವೆಂಬ ಭ್ರಮೆಯಲ್ಲಿ ಬದುಕೋ ನಮಗೆ ಅದರಿಂದ ಹೊರಬರಬೇಕಾದರೆ ಹೊರಗೆ ಕೂಡಾ ಒಂದು ಜಗತ್ತಿದೆ. ಅದರಲ್ಲೂ ಸತ್ಯ ಅಥವಾ ಸತ್ಯಗಳು ಇರಬಹುದು ಅನ್ನೋ ಸ್ವೀಕಾರ ಮನೋಭಾವ ಇರಬೇಕು. ಈ ತರದ ಮನೋಭಾವಕ್ಕೆ ಇಂಬುಕೊಡೋದು, ನಮ್ಮ ಜ್ಞಾನದ ಪರಿವೆಯನ್ನು ವಿಸ್ತರಿಸೋದೇ ಓದು. ಉದಾಹರಣೆಗೆ ಹಾಲೆಂದರೆ ಅಮೃತ ಅಂತ ವಾದ ಮಾಡೋ ವ್ಯಕ್ತಿ ಅದೇ ಹಾಲನ್ನು ವಿಷವಾಗಿಸೋ ಸಾಲ್ಮೊನೆಲ್ಲ ಅನ್ನೋ ವೈರಾಣುವಿನ ಬಗ್ಗೆ ಓದಿದ ಅಂದುಕೊಳ್ಳಿ. ಮೊದಲ ಬಾರಿಗೆ ಅದನ್ನೊಪ್ಪದೇ ಇರಬಹುದು. ಆದರೆ ಅವನೊಳಗಿನ ವೈಚಾರಿಕ ಪ್ರಜ್ಞೆ, ಹೆಚ್ಚೆಚ್ಚು ಮಾಹಿತಿ ಕಲೆಹಾಕೋ ತುಡಿತ, ಓದು ಅವನ ಅರಿವಿನ ಪರಿಯನ್ನು ಕ್ರಮೇಣ ವಿಸ್ತರಿಸೀತು. ಹಾಲೆಂಬ ಒಂದು ವಿಷಯದ ಬಗ್ಗೆಯೇ ಅವನ ಜ್ಞಾನಭಂಡಾರವನ್ನ ವಿಸ್ತರಿಸೀತು.
ಜಗದಲ್ಲೆಷ್ಟೋ ಕಾವ್ಯವಿದೆ. ಕಥಾಸಾಗರವಿದೆ. ನಾಟಕವಿದೆ. ಬರೀ ಅದನ್ನೋದುತ್ತಾ ಇದ್ದುಬಿಡೋದಾ ಹಾಗಾದ್ರೆ ? ನನ್ನೊಳಗೆ ಮೂಡೋ ಭಾವಗಳನ್ನೆಲ್ಲಾ ನಾನು ಯಾವ ಮೋಹನ ಮುರುಳಿ ಕರೆಯಿತೋ ಅಂತಲೋ.. ಎಲ್ಲಿ ಜಾರಿತೋ ಮನವು ಅಂತಲೋ.. ಏನೇ ಆಗಲಿ, ಮುಂದೆ ಸಾಗು ನೀ. .. ಅಂತಲೋ ಸಾಗೋ ಪಥಗಳತ್ತಲೇ ತಿರುಗಿಸಬೇಕಾ ? ಈ ಯಾವ ಗುಂಪಿಗೂ ಸೇರದ ಅವುಗಳ ವಿಕಾರ ಮಾಡಿ, ಇವುಗಳಲ್ಲೇ ಒಂದರ ಸ್ವರೂಪ ಕೊಟ್ಟು .. ಆಹಾ ನನ್ನ ಭಾವಕ್ಕೆ ಈ ಕವಿತೆ ಎಷ್ಟು ಚೆಂದ ಹೊಂದುತ್ತೆ ಅಂತ ಆನಂದಪಡಬೇಕಾ ? ಅಂದರೆ ಖಂಡಿತಾ ಇಲ್ಲ. ನನ್ನ ಭಾವ ನನ್ನದು. ಕಾಡೋ ಆಲೋಚನೆಗಳಿಗೊಂದು ಮೂರ್ತ ರೂಪ ಕೊಡೋ ಕೆಲಸ ನನ್ನದಾದರೂ ಸೃಷ್ಟಿಯಾದ ಅದನ್ನು ಎಲ್ಲಾ ಮೆಚ್ಚಲಿ ಅನ್ನೋ ದುರಾಸೆಯಿರಬಾರದೆಂದು ನನ್ನನಿಸಿಕೆ. ಬರೆದೆ. ಒಂದಿಷ್ಟು ಜನಕ್ಕೆ ಕಾಣುವಂತೆ ಒಂದೆಡೆ ಇಡಬೇಕನಿಸಿತು. ಇಟ್ಟೆ. ಮುಗಿಯಿತಲ್ಲಿಗೆ. ಯಾರಾದ್ರೂ ಮೆಚ್ಚಿದ್ರಾ ಖುಷಿ. ಇಲ್ಲವಾ ಅದೂ ಖುಷಿ. ಕೊಟ್ಟ ಪರ-ವಿರೋಧ ಅಭಿಪ್ರಾಯಗಳೆಲ್ಲವೂ ನಮ್ಮ ಬೆಳವಣಿಗೆಗೇ ಅಂತ ತೆಗೆದುಕೊಂಡು ಸುಮ್ಮನಾಗೋ ದಿವ್ಯ ನಿರ್ಲಕ್ಷ್ಯದ ಪರಿಯಿದೆಯೆಲ್ಲ. ಅದನ್ನ ದಕ್ಕಿಸಿಕೊಳ್ಳೋದು ಹೇಳುವಷ್ಟು ಸುಲಭವಲ್ಲ. ನನ್ನ ನೀನೂ .. ನಿನ್ನ ನಾನೂ.. ಅಂತ ಪರಸ್ಪರ ಹೊಗಳುಭಟ್ಟಂಗಿತನ ಮಾಡೋ ಸಮಯದಲ್ಲಿ ಅದೆಷ್ಟೋ ಒಳ್ಳೆಯ ಸಾಹಿತ್ಯ ನಮ್ಮ ಕಣ್ಣಿಗೆ ಕಾಣದೇ ಮರೆಯಾಗಿಹೋಗುತ್ತಲ್ಲವೇ ಅಂತ ಅನಿಸಿದಾಗ ಅದೆಷ್ಟೋ ಸಲ ಚುರುಕ್ಕನ್ನುತ್ತೆ.
ಒಂದು ಕವಿತೆ ಬರೆದೆ. ಚೆನ್ನಾಗೇ ಇತ್ತು. ಆದ್ರೆ ಅದನ್ಯಾರೂ ಓದಲಿಲ್ಲವೆಂಬ ಚಿಂತೆಯಾಕೆ ನಿನಗೆ. ನಿನ್ನ ಮನದಾಳದಲ್ಲಿ ಕಾಡುತ್ತಿದ್ದ ಭಾವಕ್ಕೊಂದು ಅಭಿವ್ಯಕ್ತಿ ಬೇಕಿತ್ತು. ರೂಪದ ಅವಶ್ಯಕತೆಯಿತ್ತು. ಹದವಾದ ಮಣ್ಣಿಗೊಂದು ಆಕಾರ ತಾಳುವ ಆಸೆಯಿತ್ತು. ಅದ ಕೊಟ್ಟಿದ್ದೀಯ ನೀನು. ನೀ ಮಾಡಹೊರಟಿದ್ದ ಗಣಪ ಗಣಪನೇ ಆಗಿದ್ದನ್ನ ನೋಡೋದಕ್ಕಿಂತ ಹೆಚ್ಚು ಖುಷಿ ಬೇಕೇ ನಿನಗೆ ? ಅದನ್ನ ಜಗತ್ತಿನಲ್ಲೇ ಸುಂದರ ಗಣಪನೆಂದು ಜನರೆಲ್ಲಾ ಹೊಗಳೋ ಅನಿವಾರ್ಯತೆಯಿದಯೇ ನಿನಗೇ.. ಅಂತನಿಸುತ್ತೆ ಈ ಸಂದರ್ಭದಲ್ಲಿ.
ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಮಾತೊಂದು ನೆನಪಿಗೆ ಬರುತ್ತೆ. ನಾ ಗಾಂಧೀಜಿಯವರ ಮಹಾನ್ ಅಭಿಮಾನಿಯೆಂದಲ್ಲ. ಸಣ್ಣವನಿದ್ದಾಗ ಚಂದನ ಟೀವಿಯಲ್ಲಿ ಸಂಜೆ ಹೊತ್ತು ಬರುತ್ತಿದ್ದ ನುಡಿಗಳಲ್ಲಿ ಇನ್ನೂ ಮರೆಯದಂತೆ ನನ್ನ ಮನಸ್ಸಲ್ಲಿ ಅಚ್ಚಾದ ನುಡಿ ಇದಷ್ಟೇ. ಅದೆಂದರೆ ಪುಸ್ತಕ ಓದೋ ಹವ್ಯಾಸವಿರುವವನು ಎಲ್ಲಿ ಹೋದರೂ ಖುಷಿಯಾಗಿರಬಲ್ಲ ಅಂತ. ನನ್ನ ಸ್ವಂತ ಅಭಿಪ್ರಾಯವನ್ನೇ ಇದರ ಬಗ್ಗೆ ಬರೆಯಹೊರಟರೆ ಒಂದಿಷ್ಟು ಬರೆಯಬಹುದೇನೋ. ಆದರೆ ಅದನ್ನು ಬರೆಯೋದಕ್ಕಿಂತ ಬೇರೆನಾದರೂ ಒಂದಿಷ್ಟು ಓದೋ ಬಯಕೆಯಾಗುತ್ತಿದೆ. ಇಂಗ್ಲೀಷಿನ millenium trilogy ಆಗಿರಬಹುದು. ಕನ್ನಡದ ತುಂಬಾ ಸಮಯದಿಂದ ಓದಬೇಕೆಂದುಕೊಂಡಿದ್ದ ಪುಸ್ತಕಗಳಿರಬಹುದು ಅವುಗಳನ್ನೋದೋ ಆಸೆಯಾಗುತ್ತಿದೆ. ಸರಿ. ಮತ್ತೆ ಸಿಗುವ. ಮತ್ತೊಂದಿಷ್ಟು ಓದಿನೊಂದಿಗೆ. ಅಲ್ಲಿಯವರೆಗೆ ಶುಭದಿನ.
ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ
ಅಂತರ್ಜಾಲದ ಮಟ್ಟಿಗೆ ಹೇಳುತ್ತೇನೆ ಗೆಳೆಯ. ಇಲ್ಲಿ ಪರಸ್ಪರ ಓದು ಪ್ರವೃತ್ತಿ ನಶಿಸಿ ಹೋಗುತ್ತಿದೆ.
ReplyDeleteಬರೀ ಬರೆಯುವವರೇ ತುಂಬಿ ಹೋಗಿದ್ದಾರೆ ಬ್ಲಾಗು ಓದು ಪಟ್ಟಿಯಲ್ಲಿ ಅವರದೇ ಮೇಲುಗೈ!