Friday, October 31, 2014

ಕರ್ನಾಟಕದ ಹೊಯ್ಸಳ ದೇಗುಲಗಳು:-೨ : ಜಾವಗಲ್ ಲಕ್ಷ್ಮೀನರಸಿಂಹ ದೇವಸ್ಥಾನ

ಹೋದ ಬಗೆ:
ಚಿಕ್ಕಮಗಳೂರಿಂದ ೪೧ ಕಿ.ಮೀ ಇರೋ ಜಾವಗಲ್ಲಿಗೆ ಚಿಕ್ಕಮಗಳೂರಿಂದ ಪ್ರತೀ ಅರ್ಧರ್ಧ ಘಂಟೆಗೆ ಬಸ್ಸುಗಳಿವೆ ಅಂತ ಬೆಳವಾಡಿ ಲೇಖನದ ವೇಳೆ ಹೇಳಿದ್ದೆ. ಬೆಳವಾಡಿ ವೀರನಾರಾಯಣನ ನೋಡಿದ ನಾವು ಅಲ್ಲಿಂದ ಜಾವಗಲ್ಲಿನ ಬಸ್ಸಿಗೆ ಕಾಯಹತ್ತಿದೆವು. ಅಲ್ಲಿಂದ ಜಾವಗಲ್ ಕಡೆ ಹೋಗೋ ಜೀಪು ಬಂದು ಅದ್ನ ಹತ್ತೋಕೂ ಹಿಂದಿನಿಂದ್ಲೇ ರಾಜ್ಯ ರಸ್ತೆ ಸಾರಿಗೆ ಬಸ್ಸು ಬರೋಕೂ ಸರಿ ಆಯ್ತು ! ಸ್ವಲ್ಪ ದೂರ ಹೋಗ್ತಿದ್ದಂತೆಯೇ ಒಂದು ಕ್ರಾಸು. ಆ ಕ್ರಾಸಲ್ಲಿ ಬಲಕ್ಕೆ ಹೋದ್ರೆ ಎಂಟು ಕಿ.ಮೀಯಲ್ಲಿ ಹಳೇಬೀಡಂತೆ. ಸೀದಾ ಹೋದ್ರೆ ಜಾವಗಲ್ ! ಹದಿನೈದಿಪತ್ತು ನಿಮಿಷದ ಆ ದಾರಿಗೆ ಜೀಪಲ್ಲಿ ತಲಾ ಹತ್ತು ರೂ ಚಾರ್ಚು. ಬಸ್ಸಲ್ಲೂ ಹೆಚ್ಚು ಕಮ್ಮಿ ಅಷ್ಟೇ ಇರಬಹುದು.
Back view of LakshmiNarasimha temple, Javagal


 ಬೆಳವಾಡಿಗೆ ಹೋಲಿಸಿದರೆ ಈ ದೇಗುಲ ಅಷ್ಟು ದೊಡ್ಡದಲ್ಲದೇ ಇದ್ದರೂ, ಅಷ್ಟು ಒಳ್ಳೆಯ ನಿರ್ವಹಣೆಯಲ್ಲಿ ಇಲ್ಲದಿದ್ದರೂ ಶಿಲ್ಪಗಳಲ್ಲಿರುವ ವೈವಿಧ್ಯತೆಯೇ ಇಲ್ಲಿನ ವೈಶಿಷ್ಟ್ಯ. ಆ ದೇಗುಲ ಪುರಾತತ್ವ ಇಲಾಖೆ(ಕೇಂದ್ರ ಸರ್ಕಾರ)ದ ವ್ಯಾಪ್ತಿಗೆ ಬಂದರೆ ಇದು ಇನ್ನೂ ಮುಜರಾಯಿ ಇಲಾಖೆ(ರಾಜ್ಯ ಸರ್ಕಾರ)ದ ವ್ಯಾಪ್ತಿಗೆ ಬರೋದೇ ಇಲ್ಲಿನ ಸ್ಥಿತಿಗೆ ಕಾರಣವಾ ಅನಿಸುತ್ತೆ.ಅದೇನಂತ  ಮುಂದೆ ನೊಡೋಣ. ಸದ್ಯಕ್ಕೆ ನಾವು ದೇಗುಲ ಹೊಕ್ಕ ಕಾಲದ ಚಿತ್ರಗಳಿಗೆ ವಾಪಾಸ್ಸು. ಚಿತ್ರಗಳೇ ಕಥೆ ಹೇಳುವಂತಿವೆ. ಎಲ್ಲಾದರೂ ಮಿಸ್ಸಾಗಿರೋ ಅಂಶಗಳನ್ನು ಬಿಟ್ಟ ಸ್ಥಳ ತುಂಬುವಂತೆ ಹಂಚಿಕೊಳ್ಳುವ ಪ್ರಯತ್ನ ಮಾಡುವೆ.






ದೇಗುಲದ ಬಾಗಿಲು ಏಳಡಿ ಎಂಟಡಿ ಇರುವುದು ಸಾಮಾನ್ಯ. ಆದ್ರೆ ಇಲ್ನೋಡಿ ಇದ್ರ ಎತ್ತರ !

ಸ್ವಾಗತದ್ವಾರದಲ್ಲಿರೋ ಆನೆಗಳು. ಇದಕ್ಕೂ ಬೆಳವಾಡಿಯ ಆನೆಗಳಿಗೂ ಇರುವ ಭಿನ್ನತೆ/ಸಾಮ್ಯತೆಯನ್ನು ಗಮನಿಸಿ

ಇದನ್ನು ನೋಡಿದರೆ ಇಂದು ಬರುತ್ತಿರುವ ನಗುತ್ತಿರೋ ಚೈನೀ ಟೊಣಪನ ಆಕೃತಿ ನೆನಪಾಗೋಲ್ಲವೇ ? ದ್ವಾರ ಬಾಗಿಲ ಪಕ್ಕದಲ್ಲಿರೋ ಕೆತ್ತನೆ

ದೇಗುಲದ ಎದುರಿಗೆ ನಮಗಿಂತ ಕೊಂಚವಷ್ಟೇ ಹೆಚ್ಚು ಎತ್ತರವಿರುವ ಗರುಡಧ್ವಜ ! ಸಾಮಾನ್ಯ ಹದಿನೈದಿಪ್ಪತ್ತು ಅಡಿಗಳಾದರೂ ಎತ್ತರವಿರೋದು ಸಾಮಾನ್ಯ ಈ ಧ್ವಜ. ದೇಗುಲಕ್ಕಿಂತ ಸ್ವಲ್ಪ ಬಲದಲ್ಲಿ ಧ್ವಜಸ್ಥಂಭವಿದ್ದರೂ ಶಿವದೇಗುಲಗಳಲ್ಲಿ ನಂದಿ, ವಿಷ್ಣುದೇಗುಲಗಳಲ್ಲಿ ಎತ್ತರದ ಗರುಡಗಂಭ ಇರೋದು ಸಾಮಾನ್ಯ.

ಆಶ್ಚರ್ಯ ಮೂಡಿಸಿದ ಗರುಡಗಂಭ !

Front view of the temple

ಪ್ರವೇಶದ್ವಾರದಲ್ಲಿರುವ ಜಯ ವಿಜಯರ ಮೂರ್ತಿಗಳಲ್ಲಿ ಎಡಭಾಗದಲ್ಲಿರುವ ಜಯ
ಬಲಭಾಗದಲ್ಲಿ ವಿಜಯ. ವೈಷ್ಣವ ಅನುಯಾಯಿಯಾಗಿದ್ದ ರಾಜನ ಪ್ರಭಾವ ಜಯ-ವಿಜಯರ ನಾಮದಲ್ಲಿ ಕಾಣಬಹುದು!
ಹೊರಭಾಗದಲ್ಲಿರುವ ಲಕ್ಷ್ಮೀನರಸಿಂಹನ ವಿಗ್ರಹ. ನರಸಿಂಹ, ಉಗ್ರನರಸಿಂಹನ ಪ್ರತಿಮೆಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಲಕ್ಷ್ಮೀನರಸಿಂಹ ಅಪರೂಪ ಅನ್ನುತ್ತಾರೆ.ಇಲ್ಲಿನ ಪ್ರಧಾನದೇವರು ಲಕ್ಷ್ಮೀ ನರಸಿಂಹ. ಒಳಗಡೆ ಅದಲ್ಲದೇ ಗಣೇಶ,ಚಾಮುಂಡೇಶ್ವರಿ,ಕೃಷ್ಣ, ನಾರಾಯಣನ ವಿಗ್ರಹಗಳನ್ನು ಕಾಣಬಹುದು

ಭೂದೇವಿಯವನ್ನು ರಕ್ಷಿಸಿದ ವರಾಹಮೂರ್ತಿ(?). ಬೆಳವಾಡಿಯ ವರಾಹನಿಗೂ ಇಲ್ಲಿಯ ವರಾಹನ ಕೆತ್ತನೆಯಲ್ಲೂ ಇರುವ ಭಿನ್ನತೆ ಗಮನಿಸಿ !

ಕಾಳಿಂಗ ಮರ್ಧನ ಕೃಷ್ಣ. ಇಲ್ಲಿರುವ ಎಲ್ಲಾ ಶಿಲ್ಪಗಳಲ್ಲೂ ತಲೆಯ ಮೇಲೆ ಪ್ರಭಾವಳಿಯಂತಿರುವ ಕೆತ್ತನೆ ಗಮನಿಸಬಹುದು!

ಭೂದೇವಿಯವನ್ನು ರಕ್ಷಿಸಿದ ವರಾಹಮೂರ್ತಿ

ದೇಗುಲದ ಹೊರಭಾಗದಲ್ಲಿರೋ ಸಾಲುಕೆತ್ತನೆಗಳು.ಇದರಲ್ಲಿ ಆನೆ, ಅಶ್ವ, ಪುಷ್ಪ, ಸಿಂಹದ ಸಾಲುಗಳು ಎಲ್ಲೆಡೆ ಕಂಡುಬರುತ್ತೆ. ಕೆಲ ದೇಗುಲಗಳಲ್ಲಿ ಇವುಗಳ ಜೊತೆ ನವಿಲೋ, ರಾಮಾಯಣ ಮಹಾಭಾರತದ ಕಥೆಯ ಸಾಲೋ ಕಂಡುಬರುತ್ತೆ. ರಾಜನಾದವನಿಗೆ ಆನೆಯ ಬಲ, ಸಿಂಹದ ಧೈರ್ಯ, ಅಶ್ವದ ವೇಗ, ಪ್ರಜೆಗಳ ಮನಸ್ಸನ್ನರಿಯೋ ಹೂವಿನಂತಹ ಹೃದಯ ಇರಬೇಕು ಅನ್ನೋದು ಇದರ ಹಿಂದಿನ ತತ್ವ ಅನ್ನೋದು ಗೆಳೆಯ ಗಿರೀಶರ ಅಂಬೋಣ . ಇದರಲ್ಲಿ ಸಮುದ್ರಮಥನದ ದೃಶ್ಯಾವಳಿಯನ್ನೂ ಕಾಣಬಹುದು

ಕಂಬಗಳ ಕೆತ್ತನೆಗಳು

ದೇಗುಲದ ಪ್ರಧಾನಬಾಗಿಲ ಅಕ್ಕಪಕ್ಕ. ಕುಸುರಿಕೆಲಸದ ಸೂಕ್ಷ್ಮತೆಯನ್ನು ಗಮನಿಸಿ

ಹೊಸ್ತಿಲಿನಲ್ಲಿ ಮತ್ತೊಮ್ಮೆ ಕಾಳಿಂಗ ಮರ್ಧನ

ಹೊಯ್ಸಳರ ಲಾಂಛನ

ಮೂಲೆಗಳಲ್ಲಿ ಪ್ರಾಣಿ ಪಕ್ಷಿಗಳ ಕೆತ್ತನೆಯಿರುವ ಮೇಲ್ಛಾವಣಿ

ಹಳೆಗನ್ನಡ ಬರಹ. ಓದೋ ಪ್ರಯತ್ನ ಪಡುವಷ್ಟು ಸುಸ್ಪಷ್ಟವಾಗಿದೆ. ಇತ್ತೀಚೆಗೆ ನಡೆದ ಜೀರ್ಣೋದ್ದಾರದ ಕುರುಹುಗಳು ಈ D1, D2 ಮಾರ್ಕುಗಳು. ಪ್ರಧಾನ ಬಾಗಿಲಿನಿಂದ ದೇಗುಲದವರೆಗೂ ಒಂದೇ ಪ್ರಾಂಗಣ ಅನ್ನುವಂತೆ ಸಾಲು ಕಂಬಗಳಿತ್ತಂತೆ ಮುಂಚೆ. ಜೀರ್ಣೋದ್ದಾರದ ಸಮಯದಲ್ಲಿ ಆ ಕಂಬಗಳನ್ನು ಕಿತ್ತು ಪಕ್ಕದಲ್ಲಿ ಒಂದು ಕಲ್ಲ ಮಂಟಪ ಮಾಡಿದ್ದಾರೆ !! ಕಟ್ಟಡದ ಸಹಜ ಸೌಂದರ್ಯ ಹಾಳು ಮಾಡುವ ಇಂತಹ ಬುದ್ದಿವಂತಿಕೆಗಳು ಬೇಕೇ ? !

ಪ್ರವೇಶದ್ವಾರದ ಎಡಭಾಗದಲ್ಲಿ

ಮಹಾದಾನಿ ಬಲಿ ವಾಮನನಿಗೆ ದಾನವೀಯುತ್ತಿರುವುದು
ಮೂರ್ಲೋಕ ಅಳೆಯುತ್ತಿರುವ ತ್ರಿವಿಕ್ರಮ

ಲಕ್ಷ್ಮೀ ವಿಷ್ಣು, ಗೋವರ್ಧನ ಗಿರಿಧಾರಿ, ಮೂರ್ಲೋಕ ಅಳೆಯುತ್ತಿರುವ ತ್ರಿವಿಕ್ರಮ.. ಹೀಗೆ ವಿಷ್ಣುವಿನ ಅವತಾರಗಳನ್ನು ಕಾಣಬಹುದು

ದೇಗುಲದ ಪಾರ್ಶ್ವ ನೋಟ



ಲಕ್ಷ್ಮೀ ವಿಷ್ಣು

ಪರಿಚಾರಿಕೆ ಕೊಟ್ಟ ಕುಂಕುಮವನ್ನು ಧರಿಸುತ್ತಿರುವ ದರ್ಪಣಸುಂದರಿ

ಚತುರ್ಭುಜ ಸರಸ್ವತಿಯನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಇಲ್ಲಿ ಷಡ್ಭುಜ ಸರಸ್ವತಿ !. ಈ ಅಪರೂಪದ ಷಡ್ಭುಜ ಸರಸ್ವತಿಯನ್ನು ಅರಳಗುಪ್ಪೆಯ ಹೊಯ್ಸಳ ದೇವಸ್ಥಾನಗಳಲ್ಲೂ ಕಾಣಬಹುದು


ಐರಾವತವನ್ನೇರಿ ಹೊರಟ ದೇವೇಂದ್ರ. ಓಡುವ ಭಂದಿಯಲ್ಲಿರುವ ಆನೆಯಲ್ಲಿ ಇಂದ್ರನ ಪಕ್ಕ ಇಂದ್ರಾಣಿ(?)

ಮಹಾವಿಷ್ಣು ಮತ್ತು ಲಕ್ಷ್ಮಿಯನ್ನು ಹೊತ್ತಿರುವ ಗರುಡ

ಹಿರಣ್ಯಕಶಿಪುವನ್ನು ಕೊಲ್ಲುತ್ತಿರುವ ಉಗ್ರನರಸಿಂಹ


ಶೇಷಶಯನ ವಿಷ್ಣುವನ್ನು ನೋಡಿರುತ್ತೀವಿ. ಆದ್ರೆ ಹಾವಿನ ಮೇಲೆ ಕೂತಿರುವ ವಿಷ್ಣುವನ್ನು ಕಂಡಿದ್ದೀರಾ ಎಲ್ಲಾದ್ರೂ ? !



ರಾಮ ಲಕ್ಷ್ಮಣರು

ಪಾರ್ವತೀದೇವಿ. ದೇವಿಯ ಕಾಲ ಬಲಭಾಗದಲ್ಲಿ ಗಣೇಶ ಮತ್ತು ಎಡಭಾಗದಲ್ಲಿ ಕಾರ್ತೀಕೇಯನನ್ನೂ ಗಮನಿಸಬಹುದು !

ನವದುರ್ಗೆಯರಲ್ಲಿ ಒಬ್ಬ ದೇವಿಯಂತಿರುವ ದೇವಿಯ ಹೆಸರು ತಿಳಿಯುತ್ತಿಲ್ಲ

ಆಗಿನ ಕಾಲದ ಯಾವುದೋ ಒಂದು ವೃತ್ತಿ ! ಮುಂದೆ ಬಂದ ಬ್ರಿಟಿಷರ ಉಡುಪಿನಂತೆ ಕಾಣುತ್ತಿಲ್ಲವೇ ಇದು ? !

ಮಹಿಷಾಸುರ ಮರ್ಧಿನಿ. ಅರ್ಧಕೋಣದ ಮೇಲೆ ಅರ್ಧ ರಕ್ಕಸನ ಶರೀರವನ್ನು ಚಿತ್ರಿಸಿ ಇವ ಮಹಿಷಾಸುರ ಎಂಬ ರೂಪಕವ ಕಟ್ಟಿಕೊಡೋ ಶಿಲ್ಪಿಯ ಪ್ರಯತ್ನವಾಗಿರಬಹುದೇ ಇದು ?

ಮೆಕ್ಕೆಜೋಳದ ಸುಂದರಿ

ಮತ್ತೊಮ್ಮೆ ವೇಣುಗೋಪಾಲ


ಬಲಮುರಿ ಗಣಪತಿ. ಎಡಮುರಿ ಗಣಪತಿ ಸಾಮಾನ್ಯವಾಗಿ ಕಾಣಸಿಗುತ್ತೆ. ಬಲಮುರಿ ಅಪರೂಪವಂತೆ. ಈ ಬಲಮುರಿ ಗಣಪನಿಗೆ ಮೂರು ಹೊತ್ತಿನ ಪೂಜೆಯಂತೆ








ಪ್ರಜಾಪಿತ ಬ್ರಹ್ಮ. ಪುಷ್ಕರದಂತಹ ದೇಗುಲ ಬಿಟ್ರೆ ಬ್ರಹ್ಮನ ದೇಗುಲದ ಬಗ್ಗೆಯಾಗಲಿ, ವಿಗ್ರಹಗಳ ಬಗ್ಗೆಯಾಗಲೀ ಉಲ್ಲೇಖವಿಲ್ಲ. ಹೊಯ್ಸಳ ದೇಗುಲಗಳಲ್ಲಿ ಬ್ರಹ್ಮನ ಮೂರ್ತಿಯ ಕಂಡದ್ದೂ ಇಲ್ಲೇ ಮೊದಲು !


ನಿಂತ ಭಂಗಿಯಲ್ಲಿರುವ ನರಸಿಂಹ. ತುಂಬಾ ಅಪರೂಪದ ಶಿಲ್ಪ. ಇಲ್ಲೇ ಮೊದಲ ಬಾರಿಗೆ ನೋಡಿದ್ದು ಇದನ್ನು

ಮಧ್ಯದಲ್ಲಿರುವುದು ಮಹಾವಿಷ್ಣುವಿನ ಮತ್ತೊಂದು ಭಂಗಿಯೇ ? ಬಲಭಾಗದಲ್ಲಿ ವೈನತೇಯ

ಜಾವಗಲ್ಲಿನ ದುಸ್ಥಿತಿ: ಇಲ್ಲಿನ ಜವಾನನಿಗೆ ತಿಂಗಳಿಗೆ ನೂರಾ ಐವತ್ತು. ಅರ್ಚಕರಿಗೆ ಏಳು ನೂರಾ ಐವತ್ತು ರೂಗಳ ಸರ್ಕಾರೀ ಸಂಬಳ ಅಂತ ಹೇಳ್ತಾ ಇದ್ರೆ ನಾವಿನ್ನೂ ಯಾವ ಜಮಾನಾದಲ್ಲಿದ್ದೀವಿ ಅಂತ ಅನ್ನಿಸುತ್ತಿತ್ತು. ಇತಿಹಾಸ ಪ್ರಸಿದ್ದ ದೇಗುಲವೊಂದರಲ್ಲಿ ಹೆಮ್ಮೆಯಿಂದ ಇರುವ ಬದಲು  ಯಾರಾದ್ರೂ ಭಕ್ತರು ಬಂದು ಇಲ್ಲಿ ಪುಳಿಯೋಗರೆ ಸೇವೆ, ಪಾನಕ ಸೇವೆ, ಅರ್ಚನೆ ಅಂತ ಮಾಡಿಸಿ ನೀಡಿದ ದಕ್ಷಿಣೆಯಿಂದಲೇ ಬದುಕೋ ಪರಿಸ್ಥಿತಿ ಅರ್ಚಕರದ್ದು ! ಹೊರಗಡೆ ಕಪ್ಪುಗಟ್ಟಿದ ಮೇಲ್ಛಾವಣಿಗೆ ಜೇಡರ ಬಲೆ ಕಟ್ಟಿತ್ತು ! ಇದಕ್ಕೆ ಕೆಮಿಕಲ್ ವಾಷ್ ಮಾಡಿದ್ರೆ ಇವು ತಮ್ಮ ಮುಂಚಿನ ಹೊಳಪು ಮತ್ತೆ ಪಡೆದುಕೊಳ್ಳುತ್ತೆ ಅಂತ ಅರ್ಚಕರು ಹೇಳ್ತಿದ್ರೆ ಮನಸ್ಸಲ್ಲೊಂತರಾ ಕಸಿವಿಸಿ. ಎಲ್ಲೆಲ್ಲೋ ಭಾಗ್ಯದ ಯೋಜನೆ ಮಾಡೋ ಸರ್ಕಾರದ ಕಿರುದೃಷ್ಟಿಯಾದರೂ ಇಂತಹಾ ಮಹತ್ವದ ಸ್ಥಳಗಳ ಮೇಲೆ ಬಿದ್ದು ಅವುಗಳ ಅಭಿವೃದ್ಧಿಯಾಗದಿದ್ದರೂ ಯಥಾಸ್ಥಿತಿಯಾದರೂ ಕಾಪಾಡಿಕೊಳ್ಳುವಂತಾಗಲಪ್ಪ ಅಂತ ಬೇಡಿಕೊಳ್ಳೋ ಮನಸ್ಸಾಗ್ತಿತ್ತು..


ಇಲ್ಲಿಂದ ಅರ್ಧಗಂಟೆ ದೂರದಲ್ಲಿರುವ ಬಾಣಾವರಕ್ಕೆ ೨೨ ರೂ ಬಸ್ಚಾರ್ಜಿತ್ತು ಅಲ್ಲಿಂದ ಶಿವಮೊಗ್ಗೆಗೆ ೯೫ ರೂ ನೀಡಿ, ಅಲ್ಲಿಂದ ಸಂಜೆ ಊರಿಗೆ ವಾಪಾಸ್ಸಾದೆ. ಹಬ್ಬಕ್ಕೊಂದು ದೇವದರ್ಶನ ಈ ಪರಿ ಗುರಿ ಮುಟ್ತು


ಮುಂದಿನ ಭಾಗ: ಅರಳಗುಪ್ಪೆ ಚನ್ನಕೇಶವ ದೇವಸ್ಥಾನ

2 comments:

  1. Nice Post and well captured pics. I have a thought prashasti, as you posted some of the sculptures which are deviated from usual pose, I strongly feel that it might be the creative thinking of the designer!! since each temple will have one or more such structures.
    Thanks. :)

    ReplyDelete
  2. Might be. Can't deny that fact. Thanks for the visit Srinidhi :-)

    ReplyDelete