Wednesday, November 5, 2014

ಸ್ವಚ್ಛ ಭಾರತ ಮತ್ತು ನಾವು :


Swach Bharat @ITPL ROad

ಎರಡು ವಾರದ ಹಿಂದೆ. ಆಫೀಸಿಂದ ಮನೆಗೆ ನಡ್ಕೊಂಡು ಬರ್ತಾ ಇದ್ದೆ. ಐಟಿಪಿಎಲ್ಲಿನ್ ಗ್ರಾಫೈಟ್ ಸಿಗ್ನಲ್ಲಿಂದ ಕುಂದಲಹಳ್ಳಿ ಗೇಟಿಗೆ ಬರೋ ರಸ್ತೆ. ಎಡಭಾಗದ ಫುಟ್ಪಾತಲ್ಲಿ ಬರ್ತಿದ್ದೋನಿಗೆ ಏನೋ ಚಿತ್ತಾರ ಬರೆದ ಹಾಗೆ ಕಾಣ್ತು ಗೋಡೆ ಮೇಲೆ. ಹೌದು. ಸಖತ್ತಾದ ಚಿತ್ರ(ಚಿತ್ರ ೧). ಅಕ್ಟೋಬರ್ ಎರಡನೇ ತಾರೀಖಿಂದ ಶುರುವಾದ ಸ್ವಚ್ಛ ಭಾರತ ಅಭಿಯಾನದ ಪ್ರಭಾವವಾ ಇದು ಅನಿಸ್ತು. ಹ್. ಒಂದೆರಡು ದಿನ ಚೆನ್ನಾಗಿ ಇಟ್ಟಿರ್ತಾರೆ. ಒಂದ್ನಾಲ್ಕು ದಿನ ಆಗ್ಲಿ.ಮತ್ತೆ ಇದೇ ತರ ಆಗಿರತ್ತೆ. ಬದಲಾಗಬೇಕಿದ್ದುದು ಜನರ ಮನೋಭಾವ. ಒಬ್ರಿಬ್ರು ಹಿಂಗೆ ಪೇಂಟ್ ಮಾಡೋದ್ರಿಂದಲ್ಲ. ಭಾರತದಲ್ಲಿರೋ ಅಸಂಖ್ಯ ಕೊಳಕು ಗಲ್ಲಿಗಳನ್ನೆಲ್ಲಾ ಹಿಂಗೆ ಹೋಗಿ ಪೇಂಟ್ ಮಾಡೋಕಾಗುತ್ತಾ ಅನ್ನೋ ಸಿನಿಕತನದಿಂದ ಮುಂದೆ ಸಾಗ್ಬೋದಾಗಿತ್ತೇನೋ. ಆದ್ರೂ ಒಮ್ಮೆ ನಿಂತು ನೋಡಿದೆ ಏನೇನಿದೆ ಅಲ್ಲಿ ಅಂತ. ಚಿತ್ತಾರದ ಜೊತೆಗೆ ಈ ಕಡೆ ಒಂದಿಷ್ಟು ಹೀಗಿಡಗಳ ನೆಟ್ಟಿದ್ರು. ಒಂದಿಷ್ಟು ಪಾಟುಗಳನ್ನ ಇಟ್ಟಿದ್ರು.ಅದಾಗಲೇ ಅರ್ಧ ತುಂಬಿದ್ದ ಒಂದು ಕಸದ ಬುಟ್ಟಿ. ಅದೇ ರಸ್ತೆಯಲ್ಲಿ ಹೋಗೋ ಕಸದ ವ್ಯಾನಿನವ್ರಿಗೆ ಇಡೀ ರಸ್ತೆ ಗುಡಿಸೋ ಬದ್ಲು ಒಂದು ಕಸದ ಬುಟ್ಟಿಯಲ್ಲಿ ಹಾಕಿರೋ ಕಸ ತಗೊಂಡೋಗೋದು ದೊಡ್ಡ ವಿಷ್ಯವೇನಲ್ಲ ಅನಿಸ್ತು. ಖುಷಿಯಾಗಿ ಮುಂದೆ ಹೊರಟೆ. ಇನ್ನೊಂದು ನೂರು ಮೀಟರ್ ಹೋಗೋ ಹೊತ್ತಿಗೆ ಮತ್ತೊಂದು ಚಿತ್ತಾರ. ಇದ್ರಲ್ಲಿ ಒಂದಿಷ್ಟು ತಂತಿಗಳನ್ನ ಎಳೆದು ಒಳಗೆ ಹೋಗದಂತೆ ಕಟ್ಟಿದ್ರು. ಸ್ವಲ್ಪ ಗಿಡದ ಮರೆಯಿದ್ದ ಅದು ಪ್ರಾಯಶಃ ರಾತ್ರಿ ವೇಳೆ ಎಲ್ಲಾ ಬಹಿರ್ದೆಸೆಗೆ ಹೋಗೋ ಕಾಯಂ ಜಾಗವಾಗಿತ್ತಾ ಅನಿಸ್ತು. ಅದೇ ದಾರಿಯಲ್ಲಿ ಹಿಂದಿನ ಸಲ ಓಡಾಡಿದಾಗ ಕೆಲವೆಡೆ ಮೂಗುಮುಚ್ಚಿಕೊಂಡು ಓಡಾಡೋ ಪರಿಸ್ಥಿತಿ ನೆನಪಾಗಿ ಹೆಮ್ಮೆಯೆನಿಸ್ತು



ನಿನ್ನೆ ಮತ್ತದೇ ದಾರಿಯಲ್ಲಿ ನಡೆದು ಬಂದೆ. ಆದ್ರೆ ಈ ಬಾರಿ ಜೊತೆಯಲ್ಲಿ ಇಬ್ಬರು ಮಹಿಳಾ ಸಹೋದ್ಯೋಗಿಗಳು ಸಿಕ್ಕಿದ್ರು ಆಕಸ್ಮಿಕವಾಗಿ . ಮೊದಲು ಸಿಕ್ಕ ಚಿತ್ತಾರ ಹಾಗೇ ಇತ್ತು. ಫುಟ್ ಪಾತಲ್ಲೆಲ್ಲೂ ಇಲ್ಲದ ಕಸ ಅದೇ ಕಸದ ಬುಟ್ಟಿಗೆ ತುಂಬಿತ್ತು. ಸುಮ್ಮನಿರದ ನಾನು ಈ ಚಿತ್ತಾರ ಗಮನಿಸಿದ್ದಿರಾ ಅಂದೆ. ಅದೇ ದಾರಿಯಲ್ಲಿ ಕೆಲವು ಸಲ ಓಡಾಡಿದ್ದ ಇಲ್ಲಿ ಏನೋ change ಆಗಿದೆ ಅನುಸ್ತು . ಆದ್ರೆ ಏನು ಅಂತ ಗಮನಿಸಿರಲಿಲ್ಲ. ಏನದು ಅಂದ್ರು. ಸ್ವಚ್ಛ ಭಾರತ ಅಭಿಯಾನದ ಬಗ್ಗೆ, ಆ ಆಭಿಯಾನಕ್ಕೂ ವರ್ಷಗಳ ಮುಂಚೆಯೇ ಭಾರತವನ್ನು ಸ್ವಚ್ಛವಾಗಿಡೋಣ ಅಂತ ಹೊರಟಿರೋ ugly india ಮುಂತಾದ ಸಂಘಟನೆಗಳ ಬಗ್ಗೆ ಒಂದು ಲೈಟಾಗಿ ಭಾಷಣ ಹೊಡ್ದು ಮುಂದೆ ಸಿಕ್ಕಿದ ಪಾಟುಗಳನ್ನ, ಎಳೆದ ತಂತಿಯನ್ನ ತೋರಿಸ್ದೆ.  ಒಂದ್ಕಡೆ ಪಾನಿನ ಕಲೆ ಇದ್ರೆ ಮುಂದೆ ಬರೋನು ಇಲ್ಲೇ ಪಾನು ಉಗುಳೋದು ಅಂತ ಉಗುಳ್ತಾನೆ. ಹಿಂಗೇ ಜನ ಉಗುಳುಗುಳಿ ಗೋಡೆಯೇ ಕೆಂಪಾಗಿ ಹೋಗತ್ತೆ. ಅದೇ ತರ ಗಲೀಜು. ಆದ್ರೆ ಕ್ಲೀನಿರೋ ಜಾಗ ಅಂದ್ರೆ ಯಾರೂ ಏನೂ ಮಾಡಕ್ಕೆ ಹೋಗಲ್ಲ. ಈ ಗೋಡೆಗೂ ಢಾಳ ಕೆಂಪಿನ ಬಣ್ಣ ಬಳಿದಿದ್ದಾರೆ ನೋಡಿ. ಪಾನು ಉಗುಳೋಕೆ ಅಂತ್ಲೇ ಪಾಟ್ಗಳನ್ನಿಟ್ಟಿದ್ದಾರೆ ನೋಡಿ ಅಂತ ನೆಟ್ಟಲ್ಲಿ ಓದಿದ್ದ, ನೋಡಿದ್ದ, ಕೇಳಿದ್ದ ಮಾಹಿತಿಗಳನ್ನು ವಾಸ್ತವಕ್ಕೆ ತಳಕು ಹಾಕಿ ಹೇಳಿದೆ. ವಾವ್ ಅಂದ್ರು.

ಯಾರೋ ಮಾಡಿದ ಕೆಲ್ಸ ಹೇಳಿ ಹುಡ್ಗೀರೆದ್ರು ಪುಕ್ಸಟ್ಟೆ ಹೀರೋ ಆದೆ ಅಂದ್ಕಂಡ್ರಾ ? ಹೆ ಹೆ . ಹಾಗೇನಿಲ್ಲ. ಆ ಕ್ಷಣಕ್ಕೆ ಮನ್ಸಿಗನ್ಸಿದ್ದು ಹೇಳಿದ್ದಷ್ಟೇ. ಈಗ ಅಮೀರ್ ಖಾನ್, ಸಚಿನ್ , ಶಶಿ ತರೂರ್ ಅಂತ ಘಟಾನುಗಟಿಗಳೆಲ್ಲಾ ಸ್ವಚ್ಛತೆಗೆ ಮುಂದಾಗಿ ಅಭಿಯಾನಕ್ಕೊಂದು ದೊಡ್ಡ ಹವಾ ಸಿಕ್ಕಿದ್ರೂ ಇದಕ್ಕಿಂತ ಮುಂಚೆಯೇ ಈ ನಿಟ್ಟಿನ ಪ್ರಯತ್ನಗಳ ಸಣ್ಣ ಮಟ್ಟದಲ್ಲಿ ನಡೆದಿದ್ದ ತಳ್ಳಿಹಾಕುವಂತಿಲ್ಲ. ಗೋಡೆಗಳ ಮೇಲೆ ಲಕ್ಷ್ಮಿ, ಸರಸ್ವತಿ, ಅಲ್ಲಾ, ಜೀಸಸ್ ಹೀಗೆ ದೇವ ದೇವತೆಗಳ ಫೋಟೋ ಅಂಟಿಸಿದ್ದ ಕಂಡಿದ್ದೆ ಕೆಲವು ಕಡೆ. ಬೇರೆ ಕಡೆಗಳಲ್ಲಿ ಕಾಣುತ್ತಿದ್ದ ಪಾನಲೇಪ ಮತ್ತು ಮೂತ್ರದ ವಾಸನೆಯಿಂದ ಮೂಗು ಮುಚ್ಚುವ ಪರಿಸ್ಥಿತಿ ಅಲ್ಲಿ ಕಾಣದೇ ಇದ್ದುದು ಯಾಕೆ ಅನ್ನೋದು ಅರ್ಥವಾಗಿದ್ದು ಆಮೇಲೆ ಬಿಡಿ. ಬೆಂಗಳೂರಲ್ಲಿ ಎಲ್ಲಿ ಹೋದ್ರೂ ನಿರ್ಮಲ ಶೌಚಾಲಯ ಅಂತ ಸಿಗುತ್ತೆ ಕಣೋ ಅಂತ ಕೆಲವು ವರ್ಷಗಳ ಹಿಂದೆ ಗೆಳೆಯನ ಬಾಯಲ್ಲಿ ಕೇಳಿದ್ದ ನನಗೆ ಬೆಂಗಳೂರಿಗೆ ಕಾಲೇಜಿನ ಅವಧಿಯಲ್ಲಿ ಬಂದಾಗ ಅವನು ಅಂದಂತೇ ಕಂಡು ಆಶ್ಚರ್ಯವೂ ಆಗಿತ್ತು. ಈಗ ಅವುಗಳಲ್ಲಿ ಅದೆಷ್ಟೋ ಬಾಗಿಲು ಹಾಕಿ, ಇದ್ದೂ ಸತ್ತಂತಾಗಿರುವುದು ದುರಂತ ಬಿಡಿ :-(


ಬಿಳಿಕಲ್ಲು ರಂಗನ ಬೆಟ್ಟ ಅಂತ ಪ್ರವಾಸಕ್ಕೆ ಹೋಗಿದ್ವಿ ಕನಕಪುರದ ಹತ್ರ. ಹೇ, ಇಲ್ಲಿ ಸ್ವಚ್ಛ ಭಾರತ ಅಭಿಯಾನ ಮಾಡೋಣ್ವಾ ಅಂದಿದ್ದ ಹರೀಶಣ್ಣ. ಸರಿ. ಆದ್ರೆ ಕಸ ಎಲ್ಲಾ ತೆಗ್ದು ಎಲ್ಲಿ ಹಾಕೋದು ಅಂದಿದ್ವಿ. ಅದ್ಕೇ ಅಂತ್ಲೆ ಒಂದಿಷ್ಟು ಕವರುಗಳಿದೆ. ಕವರಲ್ಲಿ ಕಸ ತಂದು ಕೆಳಗೆ ಎಲ್ಲಾದ್ರೂ ಇದ್ರೋ ಕಸದ ಗುಂಡಿಗೆ ಹಾಕೋಣ. ಇಲ್ಲಾ ಕನಕಪುರ ಪೇಟೆಯಲ್ಲಿರೋ ಯಾವ್ದಾದ್ರೂ ಮುನ್ಸಿಪಾಲಿಟಿ ಡಬ್ಬಿಗೆ ಹಾಕಿದ್ರಾಯ್ತು ಅಂದಿದ್ದ. ಇದಕ್ಕೆ ಸಿಗೋ ಕವರುಗಳು ಯಾವ ತರ ಇರತ್ತೆ ಅನ್ನೋ ಕಲ್ಪನೆಯೂ ಇರದ ನಾನು ಸರಿಯೆಂದಿದ್ದೆ. ದೇಗುಲ ನೋಡಿದ ನಾವು ಅಲ್ಲೇ ಇದ್ದ ಒಂದು viewpoint ನೋಡಿ ಬರೋದ್ರೊಳಗೆ ಹರೀಶಣ್ಣ, ಶ್ರೀಕಾಂತಣ್ಣ, ಮತ್ತು ರೋಭ ಸ್ವಚ್ಛ ಭಾರತದಲ್ಲಿ ತೊಡಗಿಕೊಂಡಿದ್ರು. ಪ್ಲಾಸ್ಟಿಕ್ ಬಾಟಲ್ಗಳು, ಲೋಟಗಳು, ರ್ಯಾಪರ್ಗಳು.. ಹೀಗೆ ಹಿಂದೆ ಬಂದ ಪ್ರವಾಸಿಗಳು ಎಲ್ಲೆಂದರಲ್ಲಿ ಎಸೆದು ಹೋಗಿದ್ದ ಕಸ ಎಲ್ಲಾ ಆರಿಸಿ ತುಂಬೋದ್ರಲ್ಲಿ ಹನ್ನೆರಡು ಕಸದ ಚೀಲಗಳು ! ಅಲ್ಲ. ಆರಿಸಿದ್ರೆ ಇನ್ನೂ ಸಿಕ್ತಿತ್ತೇನೋ. ಆದ್ರೆ ಹೊತ್ತೇರಿ ಮಧ್ಯಾಹ್ನವಾಗಿ ಹಸಿವೆಯಾಗೋಕೆ ಪ್ರಾರಂಭವಾಗಿದ್ರಿಂದ ಇವತ್ತಿಗೆ ಸಾಕು ಅಂತ ವಾಪಾಸ್ ಹೊರಟ್ವಿ. ಅಲ್ಲಾ . ನಾವಿವತ್ತು ಇಷ್ಟು ಕ್ಲೀನ್ ಮಾಡಿ ಹೋಗ್ತಾ ಇದೀವಿ ಈ ಜಾಗನ. ಇದು ಹಿಂಗೇ ಕ್ಲೀನಾಗಿರತ್ತ , ಜನ  ಮತ್ತೆ ಬಂದು ಕೊಳಕು ಮಾಡಲ್ವಾ ಅಂದ ರೋಹಿತಣ್ಣ. ಸರಿಯಾದ ಪ್ರಶ್ನೆಯೇ. ಜನ ಕಸ ಇದ್ದಲ್ಲೇ ಇನ್ನೊಂದಿಷ್ಟು ಕಸ ಹಾಕೋದು. ಪೂರ್ಣ ಸ್ವಚ್ಛವಾಗಿದ್ದೆಡೆ ಕಸ ಹಾಕೋ ಮನಸ್ಥಿತಿ ಯಾರಿಗೂ ಇರಲ್ಲ. ನಾವು ಕ್ಲೀನ್ ಮಾಡಿರೋ ಜಾಗಗಳಾದ್ರೂ ಮುಂದೆ ಕ್ಲೀನಾಗಿರತ್ತೆ ಅಂದ್ಕೊಳ್ಳೋಣ . ನಾವಿವತ್ತು ನೂರು ಪ್ರತಿಶತ ಸ್ವಚ್ಛ ಮಾಡೋಕೆ ಆಗಿಲ್ದೇ ಇರಬಹುದು. ಆದ್ರೆ ಒಂದು ಎಪ್ಪತ್ತು ಪ್ರತಿಶತ ಮಾಡಿದ್ರೂನೂ ಇದ್ರ ಫೋಟೋಗಳ್ನ ತಗಂಡು ಹೋಗಿ FB ಲಿ ಹಾಕೋಣ. ಒಂದಿಷ್ಟು ಜನ ನೊಡಿ,ಅದ್ರಲ್ಲಿ ಕೆಲವ್ರಿಗಾದ್ರೂ ನಮ್ಮ ಕಳಕಳಿ ಅರ್ಥವಾಗುತ್ತೆ. ಹೋದಲ್ಲೆಲ್ಲಾ ಜನ ಕಸ ತೆಗಿಲಿ ಅಂತ ಅರ್ಥ ಆಗೋಲ್ಲ. ಉಳ್ದವರ ಸುದ್ದಿ ನಂಗೆ ಗೊತ್ತಿಲ್ಲ. ನಾನೆಂತೂ ಇಲ್ಲಿ ಕಸ ಹಾಕೋಲ್ಲಪ್ಪ ಅನ್ನೋ ಮನೋಭಾವ ಕೆಲವ್ರಿಗಾದ್ರೂ ಬಂದ್ರೆ ಅಷ್ಟೇ ಸಾಕು. ನಮ್ಮ ಶ್ರಮ ಸಾರ್ಥಕ ಅಂತ ಮಾತಾಡ್ಕಂಡ್ವಿ.  ಹಂಗೇ ಆಳಿಗೆರಡು ಕಸದ  ಚೀಲ ಹಿಡ್ದು ಕೆಳಗಿಳಿತಿದ್ದಾಗ ಎದುರಾದ ಊರವರು ಕೇಳ್ತಿದ್ರು ಏನಪ್ಪ ಇದು. ಅಲ್ಲಿರೋ ಕಸನೆಲ್ಲಾ ತೆಗ್ದು ತುಂಬಿ ತರ್ತಿದೀವಣ್ಣ. ಕೆಳಗೆಲ್ಲಾದ್ರೂ ತೊಟ್ಟಿಯಿದೆಯಾ ಎಸಿಯೋಕೆ ಅಂತ ಕೇಳ್ತಿದ್ವಿ. ಪೇಟೆಯವ್ರು ಬಂದು ಪ್ರೇಕ್ಷಣೀಯ ಸ್ಥಳಗಳ ಹಾಳು ಮಾಡೋದನ್ನ ಮಾತ್ರ ನೋಡಿರಬಹುದಾಗಿದ್ದ ಆ ಹಳ್ಳಿಗರ ಪಾಲಿಗಂದು ಹೊಸ ಚಿತ್ರ.ಮುಂದೆ ಸಾಗಿದ ನಮಗೆ ಏ ಪರ್ವಾಗಿಲ್ಲ ಈ ಹುಡುಗ್ರು ಅಂತ ಅವ್ರವ್ರೇ ಮಾತಾಡಿಕೊಳ್ತಿದ್ದು ಕಿವಿಗೆ ಬಿದ್ದು ಒಂಥರಾ ಹೆಮ್ಮೆಯಾಯ್ತು. ಕಿವಿಯಿಂದ ಕಿವಿಗೆ ಸಾಗೋ ಆ ಮಾತುಗಳು ಆ ಪರಿಸರದ ಸ್ವಚ್ಛತೆಗೆ ಇನ್ನಷ್ಟು ಸಹಕರಿಸಬಹುದು ಅನ್ನೋ ಒಂದು ಆಸೆ ಮೂಡಿ ಖುಷಿ ಆಯ್ತು

ಏನೋ ದೊಡ್ಡ ಸಾಧನೆ ಮಾಡಿದ್ದೇನೆ, ನೊಡಿದ್ದೇನೆಂದು ಕೊಚ್ಚಿಕೊಳ್ಳೋ ಉದ್ದೇಶದಿಂದ ಬರೆದಿದ್ದಲ್ಲ ಇದನ್ನ. ಮನದಾಳದಲ್ಲಿ ಮೂಡಿ ಅದೆಷ್ಟೊ ದಿನಗಳಿಂದ ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ದೃಷ್ಟಿಯಿಂದ ಇದನ್ನು ಹಂಚಿಕೊಂಡಿದ್ದಷ್ಟೇ ಇಲ್ಲಿ. ಈ ಸ್ವಚ್ಛತೆ ಅನ್ನೋದು ಯಾವ್ದೋ ಒಂದು ಅಭಿಯಾನಕ್ಕೆ, ಯಾರದೋ ಕರೆಗೆ ಮತ್ಯಾವುದೋ ಗಲ್ಲಿಗೆ , ವರ್ಷಕ್ಕೊಂದು ದಿನಕ್ಕೆ ಮಾತ್ರ ಸೀಮಿತವಾಗಬೇಕೆ ? ನಮ್ಮ ಮನೆಯನ್ನ, ಆಫೀಸನ್ನ ಸ್ವಚ್ಛವಾಗಿಟ್ಟುಕೊಳ್ಳೋ ನಮಗೆ ಬೀದಿಯನ್ನು ಸ್ವಚ್ಛವಿಡೋಕೆ ಯಾಕೆ ಸಾಧ್ಯವಾಗೋಲ್ಲ ? ದಿನಾ ಒಂದು ಹಿಡಿ ಹಿಡಿದು ಬೀದಿ ಗುಡಿಸಿ ಅಂತಲ್ಲ. ಆಫೀಸ ರಸ್ತೆಯಲ್ಲೇ ರಾಜಾರೋಷವಾಗಿ ಒಂದು ಗೋಡೆ ಹುಡುಕಿ ಮೂತ್ರವಿಸರ್ಜಿಸೋನಿಗೆ ಒಂದು ಕಿವಿಮಾತು ಹೇಳೋಕೆ ಯಾಕಾಗೋಲ್ಲ ? ಒಬ್ಬಿಬ್ಬರಿಗೆ ಹೇಳೊದ್ರಿಂದ ಆ ರಸ್ತೆ ಚೊಕ್ಕಾಗತ್ತಾ, ನಾನು ಹೋದ್ಮೇಲೆ ಮತ್ತೊಬ್ಬ ಬಂದು ಅದೇ ಕೆಲ್ಸ ಮಾಡ್ಬಾರ್ದಾ ಅಂದ್ರಾ ? ಅಥವಾ ನನ್ನೊಬ್ಬನಿಂದ ಏನಾಗತ್ತೆ ಅಂದ್ರಾ ? ಅದೇ ನಿಮ್ಮನೆಯ ಗೋಡೆಗೆ ಯಾರೋ ಒಬ್ಬ ಬಂದು ಮೂತ್ರ ವಿಸರ್ಜಿಸ್ತಾ ಇದ್ದಿದ್ದನ್ನು ದೂರದಿಂದ ನೋಡಿದ್ರೆ ಸುಮ್ಮನಿರ್ತಿದ್ರಾ ? ! ಪಾನ್ ಹಾಕ್ಕಂಡೋನಿಗೆ ಉಗಿಬೇಕು ಅನ್ಸತ್ತಪ್ಪ. ಅರ್ಜೆಂಟಾದೋನಿಗೆ ಯಾವ್ದಾದ್ರೂ ಜಾಗ ಬೇಕಾಗಿರತ್ತಪ್ಪ. ಅದ್ರಲ್ಲಿ ತಪ್ಪೇನಿದೆ ಅಂತೀರಾ ? ನಿಮ್ಮ ಅರ್ಜೆಂಟಿಗೆ ಉಳಿದವ್ರು ಮೂಗು ಮುಚ್ಚಿಕೊಂಡು, ಅಸಹ್ಯಿಸಿಕೊಂಡು ಓಡಾಡಬೇಕಾದ ಅನಿವಾರ್ಯತೆಯೇನಿದೆ ? ಟ್ರಾಫಿಕ್ ಜ್ಯಾಮಲ್ಲಿ ಸಿಕ್ಕಾಕೊಂಡಿರೋ ಬಸ್ಸಲ್ಲಿ ಅರ್ಜೆಂಟಾದ್ರೆ ಮನೆಗೋ, ಆಫೀಸಿಗೂ . ಕೊನೆ ಪಕ್ಷ ಮುಂದಿನ ನಿಲ್ದಾಣ ತಲುಪೋ ತಂಕ ತಡ್ಕೋತೀರಾ ತಾನೆ ? ಮತ್ತೆ ರಸ್ತೆಯಲ್ಲಿ ನಡ್ಕೊಂಡು ಹೋಗೋವಾಗ ಗೋಡೆಗಳು ನೆನಪಾಗೋದೇಕೆ ? ಅಲ್ಲೂ ತಡ್ಕೊಬೋದಲ್ವ ? ! ಈ ರಸ್ತೆ ಬದಿ ಅಸಹ್ಯಿಸೋರು ಅನಕ್ಷರಸ್ಥರು , ತಿಳುವಳಿಕೆಯಿಲ್ಲದವರು ಅನ್ನೋ ವಾದವೆಲ್ಲಾ ಶುದ್ದ ಸುಳ್ಳು ಅನಿಸತ್ತೆ. ಐಟಿಪಿಎಲ್ ರೋಡಿನ ಮುಂಚೆ ಹೇಳಿದ ಚಿತ್ತಾರಗಳ ಜಾಗದಲ್ಲಿ ಗಲೀಜೆಬ್ಬಿಸ್ತಿದ್ದೋರಲ್ಲಿ ಅದೆಷ್ಟೋ ಟ್ಯಾಗ್ ವಾಲಾಗಳನ್ನ ಕಂಡಿದ್ದಿದೆ. ಎಲ್ಲಾ ದೊಡ್ಡ ದೊಡ್ಡ ಕಂಪೆನಿಯವ್ರೇ. ಇವ್ರದ್ದೆಲ್ಲಾ ಫೋಟೋ ತೆಗ್ದು ಫೇಸ್ಬುಕ್ಕಲ್ಲಿ ಹಾಕ್ಬೇಕು ಅಂತಿದ್ದ ಗೆಳೆಯನ ಮಾತು ಕೇಳಿ ಗಾಬ್ರಿಯಾದ್ರೂ ಒಮ್ಮೆ ಇದ್ರಿಂದೇನಾದ್ರೂ ಉಪಯೋಗವಾಗ್ಬೋದಾ ಅಂತನಿಸಿದ್ದೂ ಸುಳ್ಳಲ್ಲ ! ಪಟ್ಟಿ ಮಾಡೋಕೆ ಹೋದ್ರೆ ಇಂತಹ ಸಾವಿರ ಸಿಗ್ಬೋದು ರೀ. ಜಾಸ್ತಿ ಹೇಳೋ ಬದ್ಲು ಹೇಳೊಕಿಷ್ಟ ಪಡೋ ಮಾತು ಒಂದೆ. ಇದು ನಮ್ಮ ಭಾರತ ಕಣ್ರಿ. ದೇಶ ನಂಗೇನು ಕೊಟ್ಟಿದೆ ? ಇಲ್ಲಿರೋದೇನು ? ಬರಿ ಕಸದ ರಾಶಿ, ಗಬ್ಬು ವಾಸನೆ, ದಾರಿದ್ರ್ಯ ಅನ್ನೋ ಬದ್ಲು ಆ ಕಸಕ್ಕೆ ನಾವೆಷ್ಟು ರೀತಿ ಕಾರಣೀಕರ್ತರು ?ನಮ್ಮ ಸಮಯದಲ್ಲಿ ಒಂದು ಪ್ರತಿಶತವಾದ್ರೂ ಈ ಸಮಸ್ಯೆ ಪರಿಹರಿಸೋ ನಿಟ್ಟಿನಲ್ಲಿ ಪ್ರಯತ್ನಿಸೋಣ್ವ ಅಂತ ಯೋಚಿಸೋಣ್ವಾ ? ಕಸ ಸ್ವಚ್ಛ ಮಾಡೋ ಕೆಲ್ಸಕ್ಕೆ ಕೈ ಹಾಕೋಕೆ ಜನಕ್ಕೆ ಟೈಮಿಲ್ಲ ಆದ್ರೆ ತಿಂಗಳಿಗೊಂದೆರ್ಡು ಟ್ರಿಪ್ಪು ಹೋಗೋಕೆ, ಗುಂಡು ಹಾಕೋಕೆ, ದೇಶವ ತೆಗಳ್ತಾ ಗಂಟೆಗಟ್ಲೆ ಕಳ್ಯೋಕೆ ಟೈಮಿದೆ . ಗೊತ್ತು. ಸ್ವಚ್ಛ ಮಾಡೋಕಲ್ಲದಿದ್ರೂ ಇನ್ನಷ್ಟು ಕೊಳಕಂತೂ ಮಾಡೋಲ್ಲ ಅಂತ ದೇಶದ ಪ್ರತಿಯೊಬ್ಬ ನಾಗರೀಕನೂ ಪಣ ತೊಟ್ರೆ ನಮ್ಮ ಭಾರತ ಸ್ವಚ್ಛ ಭಾರತ, ಭವ್ಯ ಭಾರತವಾಗೋದ್ರಲ್ಲಿ ಯಾವ ಸಂದೇಹವೂ ಇಲ್ಲ. ಏನಂತೀರಿ ? 

2 comments:

  1. ದೂಷಣೆ ಮಾಡೋಕೆ ಸರ್ಕಾರನ ಚೆನ್ನಾಗೆ ನೆನಪಿಸ್ಕೊಲ್ತಿವಿ, ನಮ್ಮ ಜವಾಬ್ದಾರಿ ಕೂಡ ಇದೆ ಅಂತ ಅರಿವು ಬೇಕು. ನಮ್ಮ ನಾಡು ಅನ್ನೋ ಭಾವನೆ ಬರಬೇಕು ಅಷ್ಟೇ....

    ReplyDelete
  2. ಹೂಂ ಕಣೋ. ನಾವು ಮಾಡ್ಬೇಕಾಗಿದ್ದ ಕೆಲ್ಸ ಮಾಡ್ತಾ ಹೋದ್ರೆ ಬೇರ್ಯಾರೋ ಬಂದು ಚೊಕ್ಕ ಮಾಡೋ ಯಾವ ಅಗತ್ಯವೂ ಇರಲ್ಲ ಅನ್ಸತ್ತೆ

    ReplyDelete