Showing posts with label ಸಾಗರದ ಸುತ್ತ. Show all posts
Showing posts with label ಸಾಗರದ ಸುತ್ತ. Show all posts

Monday, August 31, 2020

ಕವಲೇದುರ್ಗ / ಭುವನಗಿರಿ ದುರ್ಗ ಚಾರಣ

Kavaledurga Trek
At the beginning of Kavaledurga Trek

 ಯಾವ ಟಿವಿ ನ್ಯೂಸ್ ಹಾಕಿದ್ರೂ ಕರೋನಾದ್ದೆ ಸುದ್ದಿ ನೋಡಿ ನೋಡಿ ಬೇಸರ ಮೂಡಿ ಫೇಸ್ಬುಕ್ಕಿಗೆ ಬಂದ್ರೆ ಇಲ್ಲಿ ಎಡಬಲದ ಜಗಳಗಳು, ಅವೆಷ್ಟು ಕೊಟ್ರು, ಇವ್ರೆಷ್ಟು ಕೊಟ್ರು ಅನ್ನೋ ವಾಗ್ವಾದಗಳು. ಪತ್ರಿಕೆಗಳಲ್ಲೂ ಇವರ ಟ್ವಿಟರ್ ಅಕೌಂಟಿನಲ್ಲಿ ಹಿಂಗದ್ರಂತೆ, ಅವ್ರ ಇನ್ಟಾದಲ್ಲಿ ಹಂಗಂದ್ರಂತೆ ಅನ್ನೋದೇ ಸುದ್ದಿ ! ಕರೋನಾ ಅಂತ ತಣ್ಣಗೆ ಮನೇಲೆ ಕೂತು ಐದು ತಿಂಗಳಾಯ್ತು ಯಾರಾದ್ರ ಮನೆಗೆ ಹೋದ್ರೂ ಇದೇ ಸುದ್ದಿ ! ಏಕತಾನತೆಯಿಂದ ಹೊರಬರಲು, ಮಲೆನಾಡಲ್ಲಿದ್ರೂ ಈ ವರ್ಷ ಹೋಗಲಾಗದಿದ್ದ ತಾಣಗಳ ಸುತ್ತಾಡಲು ಮನಸು ಕಾತೊರೆಯುತ್ತಿತ್ತು. ಆ ಸಮಯದಲ್ಲಿ ಕಣ್ಣಿಗೆ ಬಿದ್ದಿದ್ದು ಗಿರೀಶ್ ಸರ್ ಹಾಕಿದ್ದ ಕವಲೇದುರ್ಗದ ವೀಡಿಯೋ ಮತ್ತು ಅನಿಲ್ ಹಾಕಿದ್ದ ಹುಲಿಕಲ್ ಫಾಲ್ಸ್ ಫೋಟೋ. ಹೆಂಗಿದ್ರು ಮಾಸ್ಕ್ ಹಾಕ್ಕೊಂಡು , ಸಾಮಾಜಿಕ ಅಂತರ ಕಾಪಾಡ್ಕೊಂಡು ಇಲ್ಲಿಗೆ ಹೋಗ್ಬರಬಹುದಂತೆ, ಸರೀನಾ ಅನ್ನೋ ಹೊತ್ತಿಗೇ ರೆಡಿಯಾಗಿದ್ದು ನಮ್ಮನೆಯವ್ರು. ಕವಲೇದುರ್ಗದವರೆಗೆ ಹೋಗಿ ಲಾಕ್ಡೌನಲ್ಲಿ ಲಾಕಾಗಿದ್ದ ಅದನ್ನ ನೋಡಿ ವಾಪಾಸ್ ಬಂದಿದ್ದ ಕೃಷ್ಣನೂ ಪ್ಲಾನ್ ಹೇಳ್ತಿದ್ದಂಗೆನೇ ಸರಿಯೆಂದಿದ್ದ. 


ಕವಲೇದುರ್ಗದ ಇತಿಹಾಸ :

೯ನೇ ಶತಮಾನದಲ್ಲಿ ಕಟ್ಟಿದ ಕವಲೇದುರ್ಗ ಕೋಟೆಯನ್ನು ೧೪ನೇ ಶತಮಾನದಲ್ಲಿ ಬೆಳಗುತ್ತಿಯ ರಾಜ ಚೆಲುವರಂಗಪ್ಪನೂ ೧೬ನೇ ಶತಮಾನದಲ್ಲಿ ಕೆಳದಿಯರಸ ಹಿರಿಯ ವೆಂಕಟಪ್ಪನಾಯಕ (1586–1629) ಅಭಿವೃದ್ಧಿಪಡಿಸಿದರು ಎನ್ನುತ್ತದೆ ಇತಿಹಾಸ. ವೆಂಕಟಪ್ಪನಾಯಕನಿಗಿಂತಲೂ ಮುಂಚೆ ಇದು ತೋಲಾಯ್ತಮ ರಾಜ ಮತ್ತು ಮುಂಡಿಗೆ ರಾಜ ಎಂಬ ರಾಜ ಸಹೋದರರ ಅಧೀನದಲ್ಲಿತ್ತಂತೆ. ಕೌಲಿ ಎಂಬ ಊರಿಗೆ ಹತ್ತಿರವಿದ್ದರಿಂದ ಇದಕ್ಕೆ ಕವಲೇದುರ್ಗವೆಂದು ಹೆಸರಿತ್ತರೆನ್ನುತ್ತೆ ಒಂದು ಎಳೆ.  ಕವಲೇದುರ್ಗಕ್ಕೆ ಅಂದು ಭುವನಗಿರಿಯೆಂಬ ಹೆಸರನ್ನಿತ್ತಿದ್ದೂ  ಹಿರಿಯ ವೆಂಕಟಪ್ಪನಾಯಕ . 

<script async src="https://pagead2.googlesyndication.com/pagead/js/adsbygoogle.js"></script>
<ins class="adsbygoogle"
     style="display:block"
     data-ad-format="fluid"
     data-ad-layout-key="-gq-2e-1k-1g+qa"
     data-ad-client="ca-pub-5071889101438500"
     data-ad-slot="7647446493"></ins>
<script>
     (adsbygoogle = window.adsbygoogle || []).push({});
</script>

ಈ ಇತಿಹಾಸ ಅನ್ನೋದೊಂದು ಸ್ವಾರಸ್ಯಕರ ಕಥಾಹಂದರ. ಒಂದು ಎಳೆಯನ್ನು ಹುಡುಕಿ ಹೊರಟರೆ ಮತ್ತೇನೋ ಕಾಲಿಗೆ ತೊಡರಿಕೊಳ್ಳುತ್ತೆ. ಅದೇನಂತಹ ನೋಡಹೊರಟಲ್ಲಿ ಮತ್ತೆಲ್ಲೋ ತಿರುಗಿ ಹೊರಳಿ ಮೊದಲಿದ್ದ ಎಳೆ ಮತ್ತೆ ಪ್ರತ್ಯಕ್ಷವಾಗುತ್ತೆ ! ಕೆಳದಿಯ ಬಳಿಯ ಪಳ್ಳಿಬೈಲು(ಈಗಿನ ಹಳ್ಳಿಬೈಲು) ವಿನಲ್ಲಿದ್ದ ಚೌಡಪ್ಪನಾಯಕ (1499–1530) ಮಲೆನಾಡಿನ ಭಾಗದ, ಈಗಿನ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸ್ಥಾನವನ್ನು ಸ್ಥಾಪಿಸಿದ್ದ. ಆಗ ಉಚ್ಛ್ರಾಯಸ್ಥಿತಿಯಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಸಾಮಂತರೆಂದು ಘೋಷಿಸಿಕೊಂಡರಿವರು. ೨೩ ಜನವರಿ ೧೫೬೫ರಲ್ಲಿ ತಾಳೀಕೋಟೆಯಲ್ಲಿ  ರಕ್ಕಸತಂಗಡಿ ಯುದ್ದದಲ್ಲಿ ಪಂಚ ಸುಲ್ತಾನರು(ಬಿಜಾಪುರ, ಬೀದರ್, ಬೇರರ್, ಅಹಮದಾನಗರ್, ಗೋಲ್ಕಂಡ) ಮತ್ತು ವಿಜಾಪುರದ ಅಳಿಯ ರಾಮ ರಾಯನ ನಡುವೆ ನಡೆಯುತ್ತೆ.  ಇಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದ ವಿಜಯನಗರ ಸೇನೆ ವಿಜಯನಗರ ಸೇನೆಯಲ್ಲಿದ್ದ ಗಿಲಾನಿ ಸಹೋದರರೆಂಬ ದಳಪತಿಗಳ ವಿಶ್ವಾಸಘಾತುಕತನದಿಂದ ಸೋತಿತೆಂಬ ಉಲ್ಲೇಖಗಳಿವೆ. ತದನಂತರ ಅದ್ಭುತ ಹಂಪೆ ಹಾಳುಹಂಪೆಯಾದದ್ದು ಇತಿಹಾಸ. ರಾಬರ್ಟ್ ಸೆಹೆಲ್ಲಿನ  ಫರ್ಘಾಟನ್ ಎಂಪೈರ್ ನೋಡಬಹುದು. ಕನ್ನಡವೇ ಪ್ರಧಾನ ಭಾಷೆಯಾಗಿದ್ದಾಗ ತೆಲುಗಿನ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಟ್ಟಿದ್ದು ವಿಜಯನಗರದ ಶ್ರೀಕೃಷ್ಣದೇವರಾಯ. ತಾಳಿಕೋಟೆಯ ಸೋಲು ಮತ್ತು ಹಂಪೆಯ ನಾಶದ ನಂತರ ರಾಮರಾಯನ ನಂತರದ ವಿಜಯನಗರದ ಅರಸರು ಆಂದ್ರದ ಅನಂತಪುರಂನಲ್ಲಿನ ಪೆನುಕೊಂಡವನ್ನು ತಮ್ಮ ರಾಜಧಾನಿಯಾಗಿಸಿಕೊಂಡರು !


ಕೆಳದಿಯವರು ವಿಜಯನಗರದ ಸಾಮಂತರಾಗಿದ್ದರು ಸರಿ. ವಿಜಯನಗರವನ್ನು ಸೋಲಿಸಿದವರಲ್ಲಿ ಬಿಜಾಪುರದ ರಾಜರಿದ್ದರು ಅದೂ ಸರಿ. ಅದಕ್ಕೂ ಇಂದಿನ ಕವಲೇದುರ್ಗಕ್ಕೂ ಏನು ಸಂಬಂಧ ಅನ್ನುತ್ತೀರಾ ? ಬಂದೆ ಅಲ್ಲಿಗೆ. ಕೆಳದಿಯ ನಾಲ್ಕನೆಯ ಅರಸ ಚಿಕ್ಕ ಸಂಕಪ್ಪ ನಾಯಕ(1570–1580) ತಾಳಿಕೋಟೆಯ ಯುದ್ದದ ನಂತರ ಉತ್ತರಕನ್ನಡದ ಕೆಲ ಪ್ರದೇಶಗಳನ್ನು ಗೆದ್ದು ಕೆಳದಿ ಸಂಸ್ಥಾನಕ್ಕೆ ಸೇರಿಸಿಕೊಂಡರು. ೧೫೮೬ರಿಂದ ರಾಜ್ಯವಾಳಿದ ಕೆಳದಿ ಸಂಸ್ಥಾನದ ಆರನೇ ರಾಜರೇ ಹಿರಿಯ ವೆಂಕಟಪ್ಪ ನಾಯಕ ! ಪೆನುಕೊಂಡದಲ್ಲಿ ವಿಜಯನಗರ ಅರಸರಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ವೆಂಕಟಪ್ಪನಾಯಕ ಕೆಳದಿ ಸಂಸ್ಥಾನವನ್ನು ಮಲೆನಾಡು ದಾಟಿ ಕರಾವಳಿಯವರೆಗೂ ವಿಸ್ತರಿಸೋಕೆ ಕಾರಣವಾದರು. ಬಿಜಾಪುರದ ಆದಿಲ್ ಶಾಹಿಗಳನ್ನೂ ಸೋಲಿಸಿ ಕರಾವಳಿಯಲ್ಲಿ ಪೋರ್ಚುಗೀಸರನ್ನೂ ಸೋಲಿಸಿದ(೧೬೧೮-೧೯) ಸೋಲಿಸಿ ಸಾಮ್ರಾಜ್ಯ ವಿಸ್ತರಿಸಿದ ಕೀರ್ತಿ ಇವರದು.  

Trek in Kavaledurga Fort 

ಗೆಳೆಯ ಕೃಷ್ಣ ಕಾಸರಗೋಡಿನ ಬೇಕಲ್ ಕೋಟೆಯಲ್ಲೂ ಕೆಳದಿಯ ೮ನೇ ಅರಸ ಶಿವಪ್ಪನಾಯಕನ(1645–1660) ಹೆಸರಿದೆ ಎಂದು ನೆನಪು ಮಾಡುತ್ತಿದ್ದ. ಕಾಸರಗೋಡಿನ ಕರಾವಳಿಯಲ್ಲಿನ ಬೇಕಲ್ ಪ್ರಾಂತ್ಯದಲ್ಲಿನ ರಕ್ಷಣೆ ಮತ್ತು ಆ ಮೂಲಕ ವಿದೇಶಿಗರು ತಮ್ಮ ಸಂಸ್ಥಾನದೊಳಗೆ ನುಗ್ಗೋದನ್ನು ತಡೆಯೋಕೆ ಕೋಟೆಯ ನಿರ್ಮಾಣ ಶುರುಮಾಡಿದ್ದು ಹಿರಿಯ ವೆಂಕಟಪ್ಪನಾಯಕ. ಅದನ್ನು ಮುಗಿಸಿದ್ದು ಶಿವಪ್ಪನಾಯಕ ! ಈ ಶಿಪಪ್ಪನಾಯಕ ಬಿಜಾಪುರದ ಸುಲ್ತಾನರು, ಮೈಸೂರರಸರು, ಪೋರ್ಚುಗೀಸರನ್ನು ಸೋಲಿಸಿ ಪಶ್ಚಿಮಘಟ್ಟಗಳ ಮತ್ತು ಈಗಿನ ಕರ್ನಾಟಕದ ಬಹುಭಾಗವನ್ನು ಕೆಳದಿ ಸಂಸ್ಥಾನದ ಭಾಗವನ್ನಾಗಿಸಿದ್ದ. ಸುಮಾರು ೪೦ ಎಕರೆಗಳಷ್ಟು ವಿಸ್ತಾರ ಹೊಂದಿದ ಬೇಕಲ್ ಕೋಟೆ ಕೇರಳದ ಅತೀ ದೊಡ್ಡ ಕೋಟೆ !

ಇತಿಹಾಸ ಅಂದ ಮೇಲೆ ಯುದ್ದಗಳು, ಮೇಲು ಬೀಳುಗಳು ಸಾಮಾನ್ಯ. ಕೆಳದಿಯ ಕೊನೆಯ ರಾಣಿ ವೀರಮ್ಮಾಜಿ(1757–1763)ಯನ್ನು ಹೈದರಾಲಿ ಸೋಲಿಸಿದ ನಂತರ ಕೆಳದಿ ಸಂಸ್ಥಾನ ಮೈಸೂರು ಸಂಸ್ಥಾನದ ಭಾಗವಾಯ್ತು. ಈ ಮೂಲಕ ಕೆಳದಿ ಸಂಸ್ಥಾನದ ಭಾಗಗಳಾಗಿದ್ದ ಬೇಕಲ್ ಕೋಟೆ ಮತ್ತು ಕವಲೇದುರ್ಗ ಕೋಟೆಗಳ ೧೭೬೩ರಲ್ಲಿ ಮೈಸೂರು ಸಂಸ್ಥಾನದ ಭಾಗವಾಯ್ತು ! ಹೈದರಾಲಿ ಮರಳುವಾಗ ಇಲ್ಲಿ ಕೆಲವು ಕಾವಲುಗಾರರನ್ನು ಬಿಟ್ಟಿದ್ದನಂತೆ. ಇದಕ್ಕೇ ಕಾವಲುಗಾರರ ದುರ್ಗವೆಂದೂ, ತದನಂತರದಲ್ಲಿ ಕವಲೇ ದುರ್ಗವೆಂದೂ ಹೆಸರಾಯಿತು ಎನ್ನುತ್ತೆ ಇತಿಹಾಸದ ಮತ್ತೊಂದು ಎಳೆ. 

ಕವಲೇದುರ್ಗದ ಇತಿಹಾಸದ ಬಗ್ಗೆಯೇ ಇನ್ನೂ ಹಿಂದೆ ಹೋಗಬೇಕೆಂದರೆ ಕೃತಯುಗದಲ್ಲಿ ಇದು ಪರಶುರಾಮ ಕ್ಷೇತ್ರವಾಗಿತ್ತೆಂದೂ, ತ್ರೇತಾಯುಗದಲ್ಲಿ ಅಗಸ್ತ್ಯ , ಗೌತಮರು ಇಲ್ಲಿಗೆ ಬಂದಿದ್ದರೆಂದೂ, ದ್ವಾಪರದಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರೆಂದೂ ದಂತಕತೆಗಳಿವೆ. ಪಾಂಡವರ ಕಾಲದಲ್ಲಿ ಇದಕ್ಕೆ ಕಾವ್ಯವನ, ಕಪಿಲವನಗಳೆಂಬ ಹೆಸರೂ ಇತ್ತಂತೆ. ಇಲ್ಲಿಗೆ ಬಂದಾಗ ದ್ರೌಪದಿಗೆ ನೀರಡಿಕೆಯಾಗಲು ಭೀಮ ತನ್ನ ಗದೆಯಿಂದ ಗುದ್ದಿ ನೀರ ಕೊಳವೊಂದನ್ನು ನಿರ್ಮಿಸಿದನೆಂದೂ ಅದೇ ಇಲ್ಲಿನ ಗದಾತೀರ್ಥವೆಂದೂ ಹೇಳುತ್ತಾರೆ. ಕತೆಗಳು, ಸತ್ಯಾಸತ್ಯಗಳು ಏನೇ ಇದ್ದರೂ ಇಲ್ಲೊಂದು ಗುಹೆಯಂತಹ ರಚನೆಯೂ, ಬಂಡೆಯ ಮಧ್ಯೆ ಅಚ್ಚರಿಯೆನ್ನಿಸುವಂತೆ ನೀರ ಚಿಲುಮೆಯಿರುವುದೆಂತೂ ಸತ್ಯ !


ಈ ರೀತಿ ಅಧಿಕಾರದ ಕೇಂದ್ರವಾಗಿದ್ದ ಈ ಕೋಟೆ ಮತ್ತು ಊರು ೧೮೮೨ರ ತನಕ ತಾಲ್ಲೂಕು ಕೇಂದ್ರವಾಗಿತ್ತಂತೆ. ನಂತರ ತೀರ್ಥರಾಜಪುರ(ಈಗಿನ ತೀರ್ಥಹಳ್ಳಿ) ತಾಲ್ಲೂಕು ಕೇಂದ್ರವಾಯಿತು ಎನ್ನುತ್ತಾರೆ. ವಿಪರ್ಯಾಸವೆಂದರೆ ರಾಜರ, ಬ್ರಿಟಿಷರ ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿರಬಹುದಾದ ಸ್ಥಳದಲ್ಲಿರುವಂತಹ ಅಗಲವಾದ ರಸ್ತೆಗಳು, ಕಟ್ಟಡಗಳು ಮುಂತಾದ ಯಾವ ಗತವೈಭವಗಳೂ ಇಲ್ಲೀಗ ಉಳಿದಿಲ್ಲ ! ಖುಷಿಯ ಸಂಗತಿಯೆಂದರೆ ಕೆಲ ವರ್ಷಗಳ ಹಿಂದೆ ನಮ್ಮೊಳಗೊಬ್ಬ ಬಾಲು ಸರ್ ಅವರೊಂದಿಗೆ ಕವಲೇದುರ್ಗಕ್ಕೆ ಹೋದಾಗಿದ್ದ ಮೂರು ಕಿ.ಮೀ ಜಲ್ಲಿ ರಸ್ತೆ ಈಗ ಟಾರ ರಸ್ತೆಯಾಗಿದೆ ಮತ್ತು, ಪುರಾತತ್ವ ಇಲಾಖೆಯ ರಕ್ಷಣೆ ಸಿಕ್ಕಿದೆ ಕವಲೇದುರ್ಗ ಕೋಟೆಗೆ. 


ಕೋಟೆಯಲ್ಲಿ ನೋಡಲೇನೇನಿದೆ ? 

Kashi Vishwanatha temple

ಮೂರು ಸುತ್ತಿನ ಈ ಕೋಟೆ ಸಿಗೋದು ಕವಲೇದುರ್ಗವೆಂಬ ಈಗಿನ ಊರು ದಾಟಿದ ನಂತರ. ಊರ ಬಸ್ ಸ್ಟಾಪು, ಪುರಾತತ್ವ ಇಲಾಖೆಯ ಬೋರ್ಡು, ಗದ್ದೆಬಯಲುಗಳ ದಾಟಿದರೆ ಕವಲೇದುರ್ಗದ ಕೋಟೆಗೆ ಹತ್ತುವ ಮೆಟ್ಟಿಲುಗಳು ಸಿಗುತ್ತೆ. ಇಲ್ಲಿರೋ ಇತಿಹಾಸ ಫಲಕದ ಪ್ರಕಾರ ಆನೆ ಕುದುರೆಗಳೆಲ್ಲಾ ಕೋಟೆಯ ಮೇಲೆ ಆನೆ ಕುದುರೆಗಳ ಲಾಯಗಳಿತ್ತಂತೆ. ಕೋಟೆಗೆ ಹತ್ತೋ ದಾರಿಯೂ ಆನೆ, ಕುದುರೆಗಳು ಹತ್ತುವಷ್ಟೇ ವಿಶಾಲವಾಗಿದೆ ! ಪ್ರತೀ ಸುತ್ತಿನ ದ್ವಾರದ ಬಳಿಯೂ ಕಾವಲುಗಾರರಿಗೆ ತಂಗಲನುವಾಗುವಂತೆ ಕೊಠಡಿಗಳಂತಹ ರಚನೆಗಳಿವೆ. ಎರಡು ಸುತ್ತಿನ ಕೋಟೆಗಳನ್ನು ದಾಟಿದ ನಂತರ ಮೊದಲು ಸಿಗೋದು ಕಾಶಿ ವಿಶ್ವನಾಥ ದೇಗುಲ. ಶೃಂಗೇರಿ ಶಂಕರ ಮಠವೆಂದೂ ಕರೆಯಲ್ಪಡೋ ಈ ದೇಗುಲದ ಎದುರಿಗಿರೋ ಎರಡು ಕಂಬಗಳು ಬೆಟ್ಟದ ಮೇಲಿನಿಂದಲೂ ಕಣ್ಣಿಗೆ ಬಿದ್ದು ಈ ದೇಗುಲಕ್ಕೊಂದು ಸೌಂದರ್ಯವನ್ನು ಕೊಡುತ್ತದೆ. ಈ ದೇಗುಲದ ಎದುರು ಭಾಗದಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯ ಕೆತ್ತನೆಗಳಿವೆ. ಕೆಲವರ ಪ್ರಕಾರ ಈ ಕೆತ್ತನೆಗಳನ್ನು ಹೈದರಾಲಿಯ ದಾಳಿಯ ನಂತರ ಮೂಡಿಸಿದ್ದು . ಇನ್ನು ಕೆಲವರ ಪ್ರಕಾರ ಇದೇ ಸಮಯದಲ್ಲಿ ಕೆಳದಿಯರಸರು ನಿರ್ಮಿಸಿದ ಇಕ್ಕೇರಿ ದೇಗುಲದ ನಂದಿ ಮಂಟಪವೂ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿದ್ದು ಆ ಸಮಯದ ಕಲಾ ಸಂಗಮವೂ ಆಗಿರಬಹುದು.   

Kashi Vishwanatha Temple

ಕಾಶೀ ವಿಶ್ವನಾಥ ದೇಗುಲದ ಪಕ್ಕದಲ್ಲೊಂದು ಕಲ್ಯಾಣಿಯಿದೆ. ಅದರ ಎದುರಿಗಿರೋ ದೊಡ್ಡ ಕಲ್ಲುಗುಡ್ಡದ ಮೇಲೆ ಶ್ರೀ ಲಕ್ಷ್ಮೀ ನಾರಾಯಣ ದೇಗುಲವಿದೆ.  ಕುದುರೆ ದಾರಿ, ನಡೆದು ಹೋಗುವ ಹಾದಿ ಹೀಗೆ ಕಲ್ಲಲ್ಲೇ ಕಟ್ಟಿದ ಹಲವು ದಾರಿಗಳು ಇಲ್ಲಿರೋದು ವಿಶೇಷ. ಈ ದೇಗುಲಕ್ಕೆ ಹತ್ತೋ ಹಾದಿಯಲ್ಲಿ ಧಾನ್ಯ ಸಂಗ್ರಹಾರವನ್ನೂ ನೋಡಬಹುದು. ಶ್ರೀ ಲಕ್ಷ್ಮೀ ನಾರಾಯಣ ದೇಗುಲಕ್ಕೆ ಹತ್ತೋ ಜಾಗದಲ್ಲೋ ಇರೋ ಬುರುಜಿಂದ ಸುತ್ತಲ ಸ್ಥಳಗಳ ವಿಹಂಗಮ ದೃಶ್ಯವನ್ನೂ ಸವಿಯಬಹುದು. ಇಲ್ಲಿ ತುಪಾಕಿಗಳನ್ನು, ಪಿರಂಗಿಗಳನ್ನು ಇಡಬಹುದಾದ ಜಾಗವೂ ಇದ್ದು, ಇದಕ್ಕೆ ತುಪಾಕಿ ಬುರುಜೂ ಎನ್ನುತ್ತಾರಂತೆ. 

Lakshmi Narayana Temple

ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಸಾಗುವ ಹಾದಿಯಲ್ಲಿ ಮುಂದೆ ಸಾಗಿದರೆ ಅರಮನೆಯ ಪಳೆಯುಳಿಕೆಗಳು ಕಾಣುತ್ತದೆ. ಆಗಿನ ರಾಣಿಯರ ಸ್ನಾನದ ಕೋಣೆಗಳು, ದರ್ಬಾರ್ ಹಾಲ್, ಕೊಳ , ಕಲ್ಲಿನ ನೀರ ಬಾನಿಗಳು, ಅರಮನೆಯ ಕೋಣೆಗಳು ಕಾಣುತ್ತದೆ. ಈ ಕಲ್ಲು ಗುಡ್ಡದ ಮೇಲೆ ಬಾವಿ ಕೊರೆದದ್ದು ಆಶ್ಚರ್ಯವೇ ಸರಿ. ಅದಕ್ಕೆ ಕಲ್ಲುಗಳನ್ನು ಮರೆ ಮಾಡಿ ಜನ ಬೀಳದಂತೆ ನೋಡಿಕೊಂಡಿರೋ ಸ್ಥಳೀಯರ ಕಾಳಜಿಯೂ ಪ್ರಶಂಸನೀಯ. 

Neera Baani


ಅರಮನೆಯ ಪಳೆಯುಳಿಕೆಗಳ ಪಕ್ಕದಲ್ಲಿ ಕೋಟೆಯ ಮೇಲಕ್ಕೆ ಹತ್ತುವ ಮೆಟ್ಟಿಲುಗಳು ಕಾಣುತ್ತದೆ. ಆ ಮೆಟ್ಟಿಲುಗಳು ಮುಂದೆ ಮುಚ್ಚಿ ಹೋಗಿದ್ದರೂ ಅರಮನೆಯ ಬಲ ಪಕ್ಕದಲ್ಲಿ ಮೇಲೆ ಹತ್ತುವ ದಾರಿ ಕಾಣುತ್ತದೆ. ಅಲ್ಲೇ ಸ್ವಲ್ಪ ನಡೆಯುವ ಹೊತ್ತಿಗೆ ಮತ್ತೆ ಮೆಟ್ಟಿಲುಗಳು ಕಾಣುತ್ತವೆ. ಅಲ್ಲೇ ಮೇಲೆ ಹತ್ತುವ ಹೊತ್ತಿಗೆ ಮೂರನೆಯ ಸುತ್ತಿನ ಕೋಟೆಯ ಬಾಗಿಲು ಕಾಣುತ್ತದೆ. ಅದನ್ನು ದಾಟಿ ಒಳ ಸಾಗಿದರೆ ಕೋಟೆಯ ಮೇಲ್ಭಾಗದತ್ತ ಸಾಗುತ್ತೇವೆ. 

ಇಲ್ಲಿಂದ ಕಾಣುವ ವಾರಾಹಿ ಮತ್ತು ಚಕ್ರಾನದಿಗಳ ಹಿನ್ನೀರಿನ ದೃಶ್ಯ ನಯನಮನೋಹರ. ಮಳೆಗಾಲದಲ್ಲಿ ಇಲ್ಲಿನ ಕೋಟೆಗೋಡೆಗಳ ಹಸಿರು ಮತ್ತು ಇಲ್ಲಿ ಕಾಣಸಿಗೋ ಹಲವು ಹಕ್ಕಿಗಳು ಫೋಟೋಗ್ರಾಫಿ ಪ್ರಿಯರಿಗೂ ಹೇಳಿ ಮಾಡಿಸಿದಂತಿವೆ.

ಕೋಟೆಯ ತುತ್ತತುದಿಗೆ ಸಾಗುತ್ತಿದ್ದಂತೆ  ಅಲ್ಲಿರೋ ದೊಡ್ಡ ಬಂಡೆಯೊಂದರ ಮೇಲೆ ಶಿಖರೇಶ್ವರ ಅಥವಾ ಮೈಲಾರೇಶ್ವರ  ಅಥವಾ ಶ್ರೀಕಂಠೇಶ್ವರ ದೇಗುಲವಿದೆ. ಇಲ್ಲಿಂದಲೂ ಪಕ್ಕ ಸಾಗಿದರೆ ಮುಂಚೆ ಹೇಳಿದ ಗದಾ ತೀರ್ಥದ ಬಳಿ ಸಾಗಬಹುದು.

Srikanteshwara Temple


ಮತ್ತದೇ ಬೇಸರ:

ಇಲ್ಲಿನ ಚಾರಣಕ್ಕೂ ಮೊದಲು ಪುರಾತತ್ವ ಇಲಾಖೆಯವರು ಬ್ಯಾಗಿದ್ಯಾ ಎಂದು ಔಪಚಾರಿಕವಾಗಿ ಕೇಳುತ್ತಾರಷ್ಟೆ. ಅವರು ಎಷ್ಟೇ ಚೆಕ್ ಮಾಡಿದರೂ, ತಿಳಿ ಹೇಳಿದರೂ ಇಲ್ಲಿಗೆ ಬರೋ ಅವಿವೇಕಿ ಪ್ರವಾಸಿಗರು ಶಿಖರೇಶ್ವರ ದೇಗುಲದ ಬಂಡೆಯ ಕೆಳಗೆ, ಕೆಲವು ಕೆರೆ, ಬಾವಿಗಳ ಒಳಗೆ ಪ್ಲಾಸ್ಟಿಕ್ ಕವರುಗಳನ್ನ, ಬಾಟಲಿಗಳನ್ನು ಎಸೆದಿರುವುದು ದುರಂತ ! ಕೇರಳದ ವಯನಾಡ್ ಮುಂತಾದ ಪ್ರದೇಶಗಳಲ್ಲಿ ಮಾಡಿದಂತ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿರ್ಬಂಧದ ನಿಯಮಗಳನ್ನು ಇಲ್ಲೂ ತರಬೇಕಾಗಿದೆ. ನಾವು ಹೋದ ದಿನ ಸುಮಾರು ಕಾರುಗಳನ್ನ ನೋಡಿ ದಂಗಾಗಿದ್ವಿ. ಮೇಲೆಲ್ಲಾ ಮಾಸ್ಕ್ ಬಳಸಬೇಕು ಅಂತ ಪುರಾತತ್ವ ಇಲಾಖೆಯವರು ಹೇಳಿದ್ದನ್ನು ನಾವೇನೋ ಪಾಲಿಸಿದ್ವಿ. ಆದರೆ ನಮಗೆ ದಾರಿಯಲ್ಲಿ ಸಿಕ್ಕ ಜನರಲ್ಲಿ ಮುಕ್ಕಾಲು ಭಾಗ ಜನರ ಬಳಿ ಮಾಸ್ಕಿದ್ದರೂ  ಹಾಕ್ಕೊಂಡಿರಲಿಲ್ಲ, ಗುಂಪುಗೂಡಿ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿರಲಿಲ್ಲ! ಅಂದ ಹಾಗೆ ನಾವು ಹೋಗಿದ್ದ ದಿನ ಅಲ್ಲಿ ಸೇರಿದ್ದವರು ೯೦೦ಕ್ಕೂ ಹೆಚ್ಚು. ಹಿಂದಿನ ವಾರ ಅದು ಸಾವಿರ ಮೀರಿತ್ತಂತೆ ! ವಾರಾಂತ್ಯ ಬಿಡಿ, ವಾರದ ದಿನವೂ ನೂರೈವತ್ತರ ಮೇಲೆ ಜನ ಸೇರುತ್ತಾರಂತೆ ಇಲ್ಲಿ ! ಹಿಂದಿನ ವಾರ ಜೋಗಕ್ಕೆ ಹೋದಾಗಲೂ ಅಲ್ಲಿನ ಸೀತಾಕಟ್ಟೆ ಸರ್ಕಲ್ಲಿನವರೆಗೂ ಕ್ಯೂ ಇತ್ತು. ಅಂದು ಸಂಗ್ರಹವಾದ ಪ್ರವಾಸಿಗರ ಪ್ರವೇಶ ಶುಲ್ಕವೇ ೪ ಲಕ್ಷ ! ಇದನ್ನೆಲ್ಲಾ ನೋಡಿದಾಗ ಈ ಕರೋನಾ ಅನ್ನೋದು ಟೀವಿ, ಪತ್ರಿಕೆಗಳಲ್ಲಿ ಮಾತ್ರವೇ ಇರೋದಾ ಅನಿಸುತ್ತೆ !


Tuesday, December 18, 2018

ಬರಸೆಳೆವ ಭೀಮೇಶ್ವರ

ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಬರೋ ಜನರಿಗೆ ಅದರ ಬಳಿ ಇರೋ ಇತರೇ ಸ್ಥಳಗಳಾದ ನಿಪ್ಲಿ ಜಲಪಾತ, ಶರಾವತಿ ಪ್ರಕೃತಿ ಶಿಬಿರ, ಮುಪ್ಪಾನೆ ಪ್ರಕೃತಿ ಶಿಬಿರ, ಕಾನೂರು ಕೋಟೆ, ದಬ್ಬೆ ಜಲಪಾತ, ಭೀಮೇಶ್ವರ ಜಲಪಾತ-ದೇವಸ್ಥಾನ ಮುಂತಾದ ಸ್ಥಳಗಳ ಬಗ್ಗೆ ಗೊತ್ತಿರೋದಿಲ್ಲ. ಉದಾಹರಣೆಗೆ ನೀವು ಗಣೇಶ್ ಅಭಿನಯದ ಮುಂಗಾರು ಮಳೆ-೨ ಚಿತ್ರ ನೋಡಿದೀರಾ ? ನೋಡಿದ್ರೆ  ಅದರ "ಕನಸಲೂ ನೂರು ಬಾರಿ.." ಅಂತ ಶುರುವಾಗೋ ಹಾಡನ್ನೂ ನೋಡಿರ್ತೀರ. https://www.youtube.com/watch?v=S6DTN6u6ysc. ಅದರಲ್ಲಿ ಬರೋ ಅದ್ಭುತ ಜಲಪಾತ ಮತ್ತು ಲೊಕೇಶನ್ ಯಾವುದು ಅಂತ ಅಂದ್ಕೋತಾ ಇದ್ರಾ ? ಅದೇ ಭೀಮೇಶ್ವರ !  
Bheemeshwara
ಜೋಗದವರೆಗೂ ಹೋಗಿ ಅದಕ್ಕೆ ಹತ್ತಿರದಲ್ಲೇ ಇರೋ ಈ ತರದ  ಯಾವುದನ್ನೂ ನೋಡದೇ ಬರೋದಂದ್ರೆ ಮದುವೆ ಮನೆ ಊಟಕ್ಕೆ ಹೋಗಿ ಸ್ವೀಟ್ ತಿನ್ನದೇ ಬಂದಂಗೇ ಸರಿ ! ಈ ಸಲದ ಭಾರೀ ಮಳೆಗೆ ಉಕ್ಕಿ ಹರಿದ ಶರಾವತಿಯನ್ನು ಕಣ್ತುಂಬಿಕೊಳ್ಳೋಕೆ ನಿಮ್ಮಲ್ಲಿ ಅನೇಕ ಜನ ಜೋಗಕ್ಕೆ ಬಂದಿರ್ತೀರ ಅಥವಾ ಸದ್ಯದಲ್ಲೇ ಬರೋ ಪ್ಲಾನಲ್ಲಿರ್ತೀರ. ಹಾಗೆ ಬರೋರಿಗೆ ಅನುಕೂಲವಾಗಲಿ ಅಂತಲೇ ಈ ಲೇಖನ.   
Tiny water streams in Bheemeshwara

ಹೋಗೋದು ಹೇಗೆ ? 
ಬೆಂಗಳೂರು/ಮೈಸೂರು/ಶಿವಮೊಗ್ಗಗಳಿಂದ ಸಾಗರಕ್ಕೆ ನೇರ ರೈಲು ಮತ್ತು ಬಸ್ಸುಗಳಿವೆ. ಅಲ್ಲಿಂದ ಭೀಮೇಶ್ವರಕ್ಕೆ ಹೋಗೋಕೆ ಜೋಗ, ಕೋಗಾರು ಮೇಲೆ ಭಟ್ಕಳಕ್ಕೆ ಹೋಗೋ ಬಸ್ ಹಿಡಿಯಬೇಕು. ಸಾಗರದಿಂದ ಇಲ್ಲಿಗೆ ೬೧ ಕಿ.ಮೀ. ನೀವು ಜೋಗಕ್ಕೆ ಬಂದರೆ ಸಾಗರದಿಂದ ಸುಮಾರು ೩೦ ಕಿ.ಮೀ ಬಂದಾಗ ಸಿಗೋ ಕಾರ್ಗಲ್ ಎಂಬಲ್ಲಿ ಭಟ್ಕಳದತ್ತ ತಿರುಗೋ ರಸ್ತೆಯಲ್ಲಿ ಭೀಮೇಶ್ವರಕ್ಕೆ ೩೮ ಕಿ.ಮೀ ದೂರ ಎಂಬ ಬೋರ್ಡ್ ಕಾಣುತ್ತೆ. ಅದೇ ರಸ್ತೆಯಲ್ಲಿ ನೇರವಾಗಿ ಸಾಗಿದರೆ ಅರಲಗೋಡು-ಹೊಸಗದ್ದೆ-ಕೊಂಜಳ್ಳಿ-ಕೋಗಾರು ಮಾರ್ಗವಾಗಿ ಸಾಗಿದಾಗ ರಸ್ತೆಯ ಬಲಬದಿಗೆ ಭೀಮೇಶ್ವರ ಎಂಬ ಬೋರ್ಡ್ ಕಾಣುತ್ತದೆ. ಅದರ ಪಕ್ಕದಲ್ಲಿ ಸಾಗೋ ಸಿಮಂಟ್ ರಸ್ತೆಯಲ್ಲಿ ೨ ಕಿ.ಮೀ ಕೆಳಗೆ ಸಾಗಿದರೆ ಸಿಗೋ ಗುಡಿಹಿತ್ಲು ಎಂಬ ಊರಲ್ಲಿ ಭೀಮೇಶ್ವರ ಜಲಪಾತ ಮತ್ತು ದೇವಸ್ಥಾನಗಳಿವೆ.   


Bheemeshwara waterfalls


ಬೈಕಿನ ಬ್ರೇಕ್ಟೆಸ್ಟು:
ಊರಂದರೆ ದೊಡ್ಡ ಊರಲ್ಲವಿದು. ದಾರಿ ಮಧ್ಯೆ ಒಂದಿಷ್ಟು ಜನ ಓಡಾಡೋರು ಮತ್ತೆ ಅತ್ತಿತ್ತ ಒಂದಿಷ್ಟು ಗದ್ದೆಗಳು ಕಾಣೋದು ಬಿಟ್ಟರೆ ರಸ್ತೆಯ ಇಕ್ಕೆಲಗಳಲ್ಲೂ ಮನೆ ಸಿಗೋ ದೊಡ್ಡ ಊರಲ್ಲ ಇದು ! ಹೆದ್ದಾರಿಯ ಬುಡದಿಂದ ಕೆಳಗಿಳಿಯೋ ಟಾರ್ ರಸ್ತೆಯನ್ನ ನೋಡಿ ಕೊನೆಯವರೆಗೂ ರಸ್ತೆ ಇದೇ ತರ ಅಂದ್ಕೊಂಡು ಹೋದ್ರೆ ನಿಮ್ಮ ಕತೆ ಅಷ್ಟೆ! ನೂರು ಮೀಟರ್ಗಳಲ್ಲೇ ಕೊನೆಯಾಗೋ ಸಿಮೆಂಟ್ ರಸ್ತೆ ಕಲ್ಲು ಮಣ್ಣಿನ ರಸ್ತೆಯಾಗಿ  ಬದಲಾಗತ್ತೆ. ಕಡಿದಾದ ಇಳಿಜಾರು , ಮಧ್ಯೆ ಮಧ್ಯೆ ಸಿಗೋ ಏರುಗಳ ಜೀಪಿಗೆ ಅಂತಲೇ ಮಾಡಿರೋ ಈ ರಸ್ತೆಯಲ್ಲಿ ಕಾರ್ ಬಿಡಿ ಬೈಕಲ್ಲಿ ಹೋಗೋದೇ ದೊಡ್ಡ ಸಾಹಸ. ನಡೆದುಕೊಂಡು ಹೋಗೋಕೆ ೨ ಕಿ.ಮೀ ಆಗೋ ಈ ರಸ್ತೆಯಲ್ಲಿ ಸುಮಾರು ೩೫-೪೦ ನಿಮಿಷಕ್ಕೆ ಕೆಳಗಿಳಿಯಬಹುದಾದ ಈ ರಸ್ತೆಯಲ್ಲಿ ಬೈಕ್ ತಗೊಂಡು ಹೋಗ್ತೀರ ಅಂದ್ರೆ ಅದಕ್ಕೆ ಸಾಕಷ್ಟು  ತಾಳ್ಮೆ ಮತ್ತು ಕೌಶಲ್ಯ ಬೇಕು. ನ್ಯೂಟ್ರಲ್ಲು ಮತ್ತು ಬ್ರೇಕುಗಳ ಸಹಾಯದಿಂದಲೇ ಕೆಳಗಿಳಿಸಬೇಕಾದ ಈ ರಸ್ತೆಯಲ್ಲಿ ಮೇಲೆ ಹತ್ತಿಸೋಕೆ ಒಂದೆಡೆ ಜಾಗ ಬಿಟ್ರೆ ಬೇರೆಲ್ಲ ಕಡೆಯೂ ಮೊದಲ ಗೇರೇ ಗತಿ ! ಎರಡು ವರ್ಷದ ಹಿಂದೆ ಬೈಕ್ ತಗೊಂಡ ಹೊಸದ್ರಲ್ಲಿ ಇಲ್ಲಿಗೆ ಅಮ್ಮನ್ನ ಕರ್ಕೊಂಡು ಹೋಗಿದ್ದೆ. ಅಲ್ಲಿನ ಕೆಸರು, ಮಣ್ಣುಗಳಲ್ಲಿ ಗರ ಗರ ತಿರುಗ್ತಿದ್ದ ಚಕ್ರ, ಏನು ಮಾಡಿದರೂ ಮೇಲೆ ಹತ್ತದ ಬೈಕನ್ನ ಹೇಗೋ ಮೇಲೆ ಹತ್ತಿಸಿ ಅಮ್ಮನ್ನ ನಡ್ಕೊಂಡು ಬರೋಕೆ ಹೇಳಿದ್ದು ಬೇಡ ಬೇಡವೆಂದ್ರೂ ನೆನಪಾಗುತ್ತೆ ! ಮಡದಿಗೆ ಈ ಜಾಗ ತೋರಿಸ್ಬೇಕಂತ ಮತ್ತೆ ಕರ್ಕೊಂಡು ಬಂದಾಗ ಎಲ್ಲೂ ತೊಂದರೆಯಾಗದೆ ದೇಗುಲದ ಬುಡದವರೆಗೂ ಗಾಡಿಯಲ್ಲಿ ಹೋಗಿದ್ದು, ಮತ್ತೆ ವಾಪಾಸ್ ಬಂದಿದ್ದು ಬೇರೆ ವಿಷಯ ಬಿಡಿ. ಆದರೆ ಇಲ್ಲಿನ ಮಹಾನ್ ಇಳಿಜಾರು ಮತ್ತು ಏರುಗಳ ಸವಾಲಿನಲ್ಲಿ ತಲೆ ಕೆಡಿಸಿಕೊಳ್ಳದೇ ಡಬಲ್ ಹತ್ತಿಸಿದ ಬೈಕಿಗನಿಗೆ ಬೇರೆ ಯಾವ ರಸ್ತೆಯಲ್ಲಾದರೂ ಓಡಿಸಬಲ್ಲೆನೆಂಬ ಧೈರ್ಯ ಬಂದರೆ ತಪ್ಪೇನೂ ಇಲ್ಲ ಅನಿಸುತ್ತೆ !  
Yaagashale-The final point till where you can reach by Bike

ಭೀಮಗಾತ್ರದ ಬಂಡೆಗಳು, ಬಿಳಿಯ ಜಲಧಾರೆ: 
Bheemeshwara temple
ಇಲ್ಲಿರೋ ಯಾಗಶಾಲೆ ಮತ್ತು ಹಾಲಿನ ಬಳಿ ಗಾಡಿ ನಿಲ್ಲಿಸಿ ಮುಂದೆ ಸಾಗೋ ನಿಮಗೆ ಬೃಹದಾಕಾರದ ಬಂಡೆಗಳು ಸ್ವಾಗತಿಸುತ್ತವೆ. ಜಲಪಾತವಾಗಿ ಧುಮ್ಮಿಕ್ಕೋ ಸರಳಹೊಳೆ ಝುಳು ಝುಳು ಅನ್ನುತ್ತಾ ನಿಮ್ಮ ಕಾಲಬುಡದಲ್ಲೇ ಸೇತುವೆಯಡಿಗೆ ಹರಿದು ಹೋಗುತ್ತಾಳೆ.

On the way to Bheemeshwara temple from Yagashale
ಇವುಗಳಿಂದಲೇ ಈ ಜಾಗಕ್ಕೆ ಭೀಮೇಶ್ವರ ಎಂಬ ಹೆಸರು ಬಂತೇ ಅಂದ್ಕೊಂಡ್ರಾ ? ಇಲ್ಲ. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ದ್ವಾಪರಯುಗದಲ್ಲಿ ಪಾಂಡವರ ವನವಾಸದ ಸಮಯದಲ್ಲಿ ಅವರಿಲ್ಲಿಗೆ ಬರುತ್ತಾರಂತೆ. ಅವರಲ್ಲಿ ಭೀಮ ಕಾಶಿಯಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲು ಅನುಜ ಧರ್ಮರಾಯನಿಗೆ ನೀಡುತ್ತಾನಂತೆ. ಧರ್ಮರಾಯನಿಂದ ಸ್ಥಾಪಿಸಲ್ಪಟ್ಟ ಇಲ್ಲಿನ ಲಿಂಗದ ಅಭಿಷೇಕಕ್ಕೆ ಬೇಕಾದ ನೀರಿಗಾಗಿ ಅರ್ಜುನ ತನ್ನ ಬಾಣವನ್ನು ಹೂಡುತ್ತಾನಂತೆ. ಆಗ ಆತನ ಬಾಣದಿಂದ ಚಿಮ್ಮಿದ ನೀರಝರಿಯೇ ಇಲ್ಲಿನ ಸರಳ ಹೊಳೆ. ಅಂದು ಅವರು ಪ್ರತಿಷ್ಟಾಪಿಸಿದ ದೇಗುಲವೇ ಭೀಮೇಶ್ವರ ದೇವಸ್ಥಾನ ಅನ್ನುತ್ತಾರೆ. 

Steps to reach Bheemeshwara temple
ಅಂದು ಅವರಿಂದ ಶಿವಲಿಂಗ ಪ್ರತಿಷ್ಠಾಪಿಸಲ್ಪಟ್ಟಿರಬಹುದು , ತದನಂತರ ಇಲ್ಲಿನ ಪ್ರಾಂತ್ಯವನ್ನಾಳಿದ ಪಾಳೆಯಗಾರರಿಂದಲೋ, ಸಮೀಪದಲ್ಲಿ ಸಿಗೋ ಕಾನೂರು ಕೋಟೆಯನ್ನಾಳಿದ ಮೆಣಸಿನ ರಾಣಿಯಿಂದಲೋ  ಇದರ ಎದುರಿಗಿರುವ ದೇವಾಲಯದ ನಿರ್ಮಾಣವೋ , ಜೀರ್ಣೋದ್ದಾರವೋ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇಲ್ಲಿನ ಕಂಬಗಳ ಮೇಲಿನ ಕಲ್ಲ ಶಿಲ್ಪಗಳನ್ನು ನೋಡಿದ ನಿಮಗೆ ಹೊಯ್ಸಳರ ಕಾಲದ ಬೇಲೂರು ಹಳೆಬೀಡೋ, ತದನಂತರ ಬಂದ ಕೆಳದಿಯ ನಾಯಕರ ಕೆಳದಿ, ಇಕ್ಕೇರಿಗಳೋ ನೆನಪಾದರೆ ಅಚ್ಚರಿಯಿಲ್ಲ. 
Sculptures at Bheemeshwara

ಮುಂಗಾರು ಮಳೆಯಲ್ಲಿನ ಮೊಹಬ್ಬತ್: 
ಮುಂಗಾರು ಮಳೆ-೨ ಚಿತ್ರದಲ್ಲಿನ ಹಸಿರ ಸಿರಿಯ ನೋಡಿ ದಂಗಾಗಿರ್ತೀರ ನೀವು. ಇಲ್ಲಿಗೆ ಬೈಕಲ್ಲಿ ಹೋಗೋ ಥ್ರಿಲ್ಲು ಮತ್ತು ಇಲ್ಲಿನ ಪೌರಾಣಿಕ ಇತಿಹಾಸದ ಬಗ್ಗೆ ಓದಿ ಕುತೂಹಲಗೊಂಡಿರ್ತೀರ. ಇಲ್ಲಿಗೆ ಯಾವ ಸಮಯದಲ್ಲಿ ಹೋದರೂ ಇಲ್ಲಿಯ ಪರಿಸರವನ್ನು ಆಸ್ವಾದಿಸಬಹುದಾದರೂ ಇಲ್ಲಿಗೆ ಹೋಗೋಕೆ ಪ್ರಶಸ್ತ ಸಮಯ ಮಳೆಗಾಲ. ಕಣ್ಣು ಹಾಯಿಸಿದತ್ತೆಲ್ಲಾ ಹಸಿರು, ನೀರ ರಾಶಿ ಕಾಣೋ ಇಲ್ಲಿಗೆ ಮಳೆಗಾಲದಲ್ಲಿ ಬರೋ ಮಜವೇ ಬೇರೆ. ಆಗಾಗ ಹತ್ತಿಕೊಳ್ಳೋ ಉಂಬಳ(ಲೀಚ್) ಗಳನ್ನು ತೆಗೆದುಕೊಳ್ಳುತ್ತಾ , ಜಾರಬಹುದಾದ ಬಂಡೆಗಳ ನಡುವಿನ ಮೆಟ್ಟಿಲುಗಳ ಹತ್ತುತ್ತಾ, ಪಕ್ಕದಲ್ಲೇ ಹರಿಯೋ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಾ ಕಲ್ಲುಗಳ ನಡುವಿರೋ ಭೀಮೇಶ್ವರನ ಗುಡಿಯನ್ನು ನೋಡೋದೇ ಒಂದು ಚೆಂದ. ಮುಂಗಾರು ಮಳೆ-೧ ರಲ್ಲಿ ತೋರಿಸಿದ ಹಾಗೆ ಜೋಗ ಜಲಪಾತವನ್ನು ನೋಡೋಕೆ ಹೋಗಿ ಜೀವ ಕಳೆದುಕೊಳ್ಳುವಂತೆಯೇ ಇಲ್ಲಿನ ಜಲಧಾರೆಯ ಕೆಳಗೆ ಗಣೇಶ್ ನಿಂತಂತೆ ನಿಂತು ಕುಣಿಯಲು ಹೋದರೆ ಅಪಾಯವೂ ತಪ್ಪಿದ್ದಲ್ಲ ! 
water from bheemeshwara waterfalls  flowing f towards temple 

ಶಿವರಾತ್ರಿಯ ಶಂಕರ: 
ಪ್ರತೀವರ್ಷವೂ ಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತೆ. ಮೈಕೊರೆವ ಚಳಿಯ ನಡುವೆ, ಶರಾವತಿ ಅಭಯಾರಣ್ಯದ ದಟ್ಟ ಕಾನನದ ಮಡಿಲಲ್ಲಿ, ಹಕ್ಕಿಗಳ ಚಿಲಿಪಿಲಿ, ಜಲಪಾತದ ಝುಳುಝುಳುಗಳ ನಡುವೆ ಈ ದೇಗುಲದಲ್ಲಿ ನಡೆವ ರುದ್ರ, ಚಮಕಗಳ ಕೇಳೋದು, ರುದ್ರಾಭಿಷೇಕವನ್ನು  ನೋಡೋದೇ ಒಂದು ದಿವ್ಯ ಅನುಭವ.ಆ ಸಮಯವಲ್ಲದೇ ಪ್ರತೀ ಹುಣ್ಣಿಮೆ, ಅಮವಾಸ್ಯೆ, ಸಂಕ್ರಾತಿಗಳ ಸಮಯದಲ್ಲಿ ಇಲ್ಲಿ ಹೆಚ್ಚಿನ ಭಕ್ತರು ಸೇರುತ್ತಾರೆ. ಇವುಗಳಲ್ಲದೆಬೇರೆ ಸಮಯದಲ್ಲಿ ಇಲ್ಲಿ ಸೇರೋ ಭಕ್ತರ ಅನುಕೂಲಕ್ಕಾಗಿ ಮಜ್ಜಿಗೆ, ಊಟಗಳ ವ್ಯವಸ್ಥೆ ಮಾಡಲಾಗುತ್ತೆ. ಆದರೆ ಆ ಸಂಬಂಧ ಇಲ್ಲಿನ ಅರ್ಚಕರ ನಂಬರ್ಗಳಾದ 8762150181, 9483642908 ಗೆ ಸಂಪರ್ಕಿಸಿ ವಿಷಯ ತಿಳಿಸಿರಬೇಕಷ್ಟೆ. 
Nandi at the center of Bheemeshwara

ಪಕ್ಷಿ, ಚಿಟ್ಟೆಗಳ ಸಾಮ್ರಾಜ್ಯ: 
ನೀವಿಲ್ಲಿ ನಡೆದುಕೊಂಡು ಬರ್ತೀರ ಅಂದ್ರೆ ನಿಮ್ಮನ್ನು ಸ್ವಾಗತಿಸೋಕೆ ಕರಿಮೂತಿಯ ಸಿಂಗಳೀಕ, ಹಲವು ಪ್ರಬೇಧದ ಚಿಟ್ಟೆಗಳು, ಹಕ್ಕಿಗಳು ಸದಾ ಸಿದ್ಧವಿರ್ತವೆ. ಪ್ರವಾಸಿ ಸ್ಥಳಗಳಲ್ಲಿರುವಂತೆ ಇಲ್ಲಿನ ಕಾಡ ಮಂಗಗಳು ನಿಮ್ಮ ಬ್ಯಾಗಿಗೆ ಕೈಹಾಕೋಕೆ ಬರದಿದ್ದರೂ ಅಲ್ಲಿಲ್ಲಿ ಎದುರಾಗಿ ಹಾಯೆನ್ನುತ್ತಿರುತ್ತೆ. ಹಲವು ತರದ ಹೂಗಳು ಮತ್ತು ವಿಚಿತ್ರ ಚಿಟ್ಟೆ, ಜೇಡಗಳೂ ಇಲ್ಲಿ ಕಾಣಸಿಗುತ್ತೆ. 

ಮುಗಿಸೋ ಮುನ್ನ
ಅಭಯಾರಣ್ಯದ ನಡುವೆ ಇದ್ದರೂ ಇಲ್ಲಿಗೆ ಬರೋಕೆ ಯಾವ ಅನುಮತಿಯೂ ಬೇಕಿಲ್ಲ. ಹಾಗಂತ ಇದು ಸುಮ್ಮನೇ ಅಲ್ಲ. ಇಲ್ಲಿಗೆ ಬರೋದರ ಜೊತೆಗೆ ನಮಗೆ ಹೊಸ ಜವಾಬ್ದಾರಿಯೂ ಶುರುವಾಗುತ್ತೆ. ಇಲ್ಲಿ  ಕಾಣೋ ಪ್ರಾಣಿ ಪಕ್ಷಿಗಳಿಗೆ ತಿಂಡಿ ಹಾಕೋದೋ, ಇಲ್ಲಿನ ರಸ್ತೆಗಳಲ್ಲಿ ಕಸ ಎಸೆಯೋದೋ ಮಾಡದೇ ಇಲ್ಲಿನ ಸ್ವಚ್ಛ, ಪ್ರಶಾಂತ ಪರಿಸರವನ್ನು ಹಾಗೇ ಇಟ್ಟುಕೊಳ್ಳಬೇಕಾದ್ದು ಇಲ್ಲಿಗೆ ಬರೋ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಅದನ್ನು ನಿಭಾಯಿಸುವಲ್ಲಿ ನಾವೆಲ್ಲಾ ಯಶಸ್ವಿಯಾಗುತ್ತೇವೆಂಬ ನಂಬಿಕೆಯೊಂದಿಗೆ ಸದ್ಯಕ್ಕೊಂದು ವಿರಾಮ.  

Friday, August 3, 2018

ಜೋಗ ಜಲಪಾತ

ಬೆಂಗಳೂರಲ್ಲಿರೋ ಸುಮಾರಷ್ಟು ಗೆಳೆಯರು ಜೋಗ ಜಲಪಾತಕ್ಕೆ ಹೋಗೋದು ಹೇಗೆ ಅಂತ ಕೇಳ್ತಿದ್ರು. ಜೋಗಕ್ಕೆ ಹೋಗೋ ಹಾದಿಯ ಜೊತೆ ಜೋಗದ ಸುತ್ತಮುತ್ತಲಿರೋ ಕಲ್ಸಂಕ, ನಿಪ್ಲಿ ಜಲಪಾತ, ದಬ್ಬೆ ಜಲಪಾತ, ಭೀಮೇಶ್ವರಗಳ ಬಗ್ಗೆಯೂ ಹೇಳುತ್ತಿದ್ದೆ. ಮುಂದಿನ ಸಲ ಜೋಗಕ್ಕೆ ಹೋಗುವವರಿಗೆ ಸಹಾಯಕವಾಗಬಹುದಾದ ಈ ತರದ ಹಲವು ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸುವ ಪ್ರಯತ್ನವೇ ಈ ಲೇಖನ

ಜೋಗದಲ್ಲಿರೋ ಜಲಪಾತಗಳೆಷ್ಟು? 
ಜೋಗಕ್ಕೆ ಹೋಗೋ ಹೆಚ್ಚಿನ ಜನರಿಗೆ ಅದರಲ್ಲಿ ನಾಲ್ಕು ಜಲಪಾತಗಳಿವೆಯೆಂದು ತಿಳಿದಿದ್ದರೂ ಅದರ ಹೆಸರು ತಿಳಿದಿರೋಲ್ಲ. ಹೆಸರು ತಿಳಿದಿದ್ದರೂ ಅದರಲ್ಲಿ ಯಾವ್ಯಾವುದರ ಹೆಸರು ಯಾವ್ಯಾವುದೆಂದು ತಿಳಿದಿರೋಲ್ಲ.
4 Falls located in Joga
ಮೇಲಿನ ಚಿತ್ರದಲ್ಲಿರುವಂತೆ ಎಡದಿಂದ ಮೊದಲನೆಯ ಜಲಪಾತದ ಹೆಸರು ರಾಜ. ರಾಜಾರೋಷವಾಗಿ ೮೬೦ ಅಡಿಯ ಮೇಲಿಂದ ಬೀಳುವ ಕಾರಣಕ್ಕೆ ಅದರ ಹೆಸರು ಹಾಗಿರಬಹುದು. ನಂತರ ಸಿಗೋದು "ರೋರರ್". ಮಧ್ಯದಿಂದ ಬೀಳುತ್ತ ರಾಜನನ್ನು ಸೇರುತ್ತೆ ಇದು. ರಭಸವಾದ ಧಾರೆಯಾಗಿ ಬೀಳೋ ಮೂರನೆಯ ಜಲಪಾತ "ರಾಕೆಟ್". ಅದು ಬೀಳೋ ವೇಗ ನೋಡಿ ಹಾಗೆ ಹೆಸರಿಟ್ಟಿರಬಹುದೇನೋ. ಬೆಟ್ಟದ ಮೇಲಿಂದ ನಿಧಾನವಾಗಿ ಬೀಳುವ ಕೊನೆಯ ಜಲಪಾತದ ಹೆಸರು "ರಾಣಿ" . ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ೨೫೩ ಮೀಟರ್ ಮೇಲಿಂದ ಬೀಳೋ ಈ ಜಲಪಾತಕ್ಕೆ ಮೂರನೆಯ ಸ್ಥಾನ ಅನ್ನುತ್ತೆ ಹಲವು ಮೂಲಗಳು.

ಜೋಗ ಜಲಪಾತದ ವೀಕ್ಷಣಾ ಸ್ಥಳಗಳು: 
೧. ಜಲಪಾತದೆದುರು:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯವರು ಜೋಗ ಜಲಪಾತದೆದುರೇ ಕೆಲವು ಶೆಡ್ಗಳನ್ನು, ವೀಕ್ಷಣಾ ತಾಣಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಎಂತಹ ಜೋರು ಮಳೆ ಸುರಿಯುತ್ತಿದ್ದರೂ ಅಲ್ಲಿ ನಿಂತು ಜೋಗದ ಭೋರ್ಗರೆತವನ್ನು ಆನಂದಿಸಬಹುದು. ಮಳೆಗಾಲದಲ್ಲಿ ಮಳೆ ಉಧೋ ಎಂದು ಸುರಿಯುತ್ತಿದ್ದರೆ ನಿಮಿಷಗಟ್ಟಲೇ ಜಲಪಾತದೆದುರು ಮಂಜ ಪರದೆ ಕವಿದಿರುತ್ತೆ. ಜೋರಾಗಿ ಗಾಳಿ ಬೀಸಿದಾಗ ಅಥವಾ ಮಳೆ ಹೆಚ್ಚು, ಕಮ್ಮಿಯಾದಾಗ ಮಂಜ ಪರದೆ ಸರಿಯುತ್ತೆ. ಆಗ ಸಿಗುವ ದೃಶ್ಯವೇ ಅದ್ಭುತ

೨. ಜಲಪಾತದ ಕೆಳಗಿಂದ:
ಮುಂಚೆಯೆಲ್ಲಾ ಜಲಪಾತದ ಬುಡಕ್ಕೆ ಹೋಗಬೇಕೆಂದರೆ ಬೇಸಿಗೆಯಲ್ಲಿ ಜಲಪಾತದ ನೀರು ಬತ್ತುವವರೆಗೂ ಕಾಯಬೇಕಿತ್ತು. ಅದೂ ಸರಿಯಾದ ದಾರಿಯಿಲ್ಲದೇ ಕಲ್ಲ ಮೆಟ್ಟಿಲುಗಳ, ಬಂಡೆಗಳನ್ನಿಳಿದು ತಲುಪಬೇಕಿತ್ತು.ಈಗ ಪ್ರವಾಸೋದ್ಯಮ ಇಲಾಖೆಯವರು ಕೆಳಗಿನವರೆಗೂ ಮೆಟ್ಟಿಲುಗಳ ನಿರ್ಮಿಸಿದ್ದಾರೆ. ಸುಮಾರು ಸಾವಿರದನೈರು ಮೆಟ್ಟಿಲುಗಳ ಇಳಿಯಲು ಇಪ್ಪತ್ತು ನಿಮಿಷ ಸಾಕಾದರೆ ಹತ್ತೋಕೆ ಅರ್ಧಗಂಟೆ ಬೇಕಾಗುತ್ತೆ ಅಂದುಕೊಳ್ಳಿ. ನಿಧಾನವಾಗಿ, ಅಲ್ಲಲ್ಲಿ ಸುಧಾರಿಸಿಕೊಂಡು, ಫೋಟೋ ತೆಗೆದುಕೊಂಡು ಹತ್ತಿ ಇಳಿದ್ರೂ ಸುಮಾರು ಒಂದು ಘಂಟೆ ಇಳಿಯೋಕೆ ಮತ್ತೆ ಒಂದು ಘಂಟೆ ಹತ್ತೋಕೆ ಬೇಕಾಗಬಹುದು. ಬೆಳಿಗ್ಗೆ ಒಂಭತ್ತರಿಂದ ಸಂಜೆ ನಾಲ್ಕರವರೆಗೆ ಕೆಳಗಿಳಿಯೋ ಗೇಟು ತೆಗೆದಿರುತ್ತೆ. ಜನ ಹೆಚ್ಚಿದ್ದರೆ ನಾಲ್ಕೂವರೆಯವರೆಗೂ ಬಿಡುತ್ತಾರೆ ಕೆಲ ಸಲ. ಆದರೆ ಮಳೆಗಾಲದಲ್ಲಿ ಸಂಜೆ ಬೇಗ ಕತ್ತಲಾಗೋದ್ರಿಂದ ನಾಲ್ಕರವಳಗೇ ಗೇಟಿಂದ ಕೆಳಗಿಳಿಯೋದು ಉತ್ತಮ. ಕೆಳಗಡೆಯೂ ಇಬ್ಬರು ಗಾರ್ಡುಗಳು ಇದ್ದು ಮುಂದಿರೋ ದೊಡ್ಡ ಬೇಲಿಯನ್ನೂ ದಾಟಿ ಜಲಪಾತದ ಬುಡಕ್ಕೆ ಹೋಗದಂತೆ ತಡೆಯುತ್ತಾರೆ.ಜೋಗ ಜಲಪಾತದ ಬುಡದಿಂದ ಬ್ರಿಟಿಷ್ ಬಂಗಲೋವರೆಗೆ ಹೋದ ನಮ್ಮ ಪಯಣ ಹೇಗಿತ್ತು ಅನ್ನೋದನ್ನ ಈ ವೀಡಿಯೋದಲ್ಲಿ ನೋಡಬಹುದು

೩. ಹೋಟೆಲ್ ಯಾತ್ರಿ ನಿವಾಸ್:
ಜಲಪಾತದ ಬುಡದಿಂದ ನೋಡುವವರಿಗೆ ಮೇಲ್ಗಡೆ ಬಲಕ್ಕೊಂದು ಹೋಟೆಲ್ ಕಾಣುತ್ತೆ. ಸುಮಾರು ಜನ ಅದೇ ಬ್ರಿಟಿಷ್ ಬಂಗಲೋ ಅಂದುಕೊಂಡಿರುತ್ತಾರೆ. ಆದರೆ ಬ್ರಿಟಿಷ್ ಬಂಗಲೋ ಅದಲ್ಲ್. ಎಡಕ್ಕೆ ಕಾಣೋ ಮತ್ತೊಂದು ಜಾಗ ಬ್ರಿಟಿಷ್ ಬಂಗಲೋ. ಜಲಪಾತದಿಂದ ಹೊರಬಂದು ಎಡಕ್ಕೆ ಸಿಗೋ ರಸ್ತೆಯಲ್ಲಿ ಬ್ರಿಟಿಷ್ ಬಂಗಲೋ ಕಡೆಗೆ ಹೊರಟಾಗ ಸಿಗೋ ಮೊದಲ ತಾಣ ಹೋಟೆಲ್ ಯಾತ್ರಿ ನಿವಾಸ್. ಅಲ್ಲಿ ನಿಂತಾಗ ಜಲಪಾತದ ತಲೆಯ ಮೇಲಿಂದ ಅದು ಹೇಗೆ ಬೀಳುತ್ತೆ ಅಂತ ಕಾಣಬಹುದು


೪. ಬ್ರಿಟಿಷ್ ಬಂಗಲೋ
ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಸಿಗೋ ಸೇತುವೆಯನ್ನು ದಾಟಿ ಮುಂದೆ ಬಂದರೆ ಭಟ್ಕಳ ರಸ್ತೆ ಸಿಗುತ್ತೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಮತ್ತೆ ಎಡಕ್ಕೆ ಮೇಲೆ ಹತ್ತೋ ಸಿಮೆಂಟ್ ರಸ್ತೆ ಸಿಗುತ್ತೆ.ಅದರಲ್ಲಿ ಸುಮಾರು ಇನ್ನೂರು ಮೀಟರ್ ಸಾಗುವಷ್ಟರಲ್ಲಿ ಸಿಗೋದೇ ಬ್ರಿಟಿಷ್ ಬಂಗಲೋ. ಇದರ ಮೇಲಿಂದ ಜೋಗ ಜಲಪಾತವನ್ನು ಮತ್ತೊಂದು ಬದಿಯಿಂದ ನೋಡಬಹುದು. ಇಲ್ಲಿಂದ ನೋಡಿದರೆ ರಾಜ ಮತ್ತು ರೋರರ್ ಜಲಪಾತ ಮಾತ್ರ ಕಾಣುತ್ತದೆ. ರಾಕೆಟ್, ರಾಣಿ ಕಾಣದಿದ್ದರೂ ಆ ಜಾಗದಿಂದ ಕಾಣದೇ ಇದ್ದ ಮತ್ತೊಂದು ಹೊಸ ಧಾರೆ ಇಲ್ಲಿಂದ ಕಾಣುತ್ತದೆ.

ಮಳೆಗಾಲದ ಹೊಸ ಜಲಪಾತಗಳು:
ಜೋಗದಲ್ಲಿ ಮೇಲೆ ಹೇಳಿದ ನಾಲ್ಕಲ್ಲದೇ ಮಳೆಗಾಲದಲ್ಲಿ ಇನ್ನೂ ಹಲವು ಧಾರೆಗಳು ಕಾಣಸಿಗುತ್ತೆ. ಈ ಸಲ ಕಂಡ ಹಲವು ಧಾರೆಗಳ ಫೋಟೋಗಳು ಕೆಳಗಿವೆ. 

ಜೋಗದತ್ರ ಇನ್ನೇನಿದೆ: 
ಕಲ್ಸಂಕ-೮ ಕಿ.ಮೀ
ನಿಪ್ಲಿ ಜಲಪಾತ-೧೨ ಕಿ.ಮೀ
ಭೀಮೇಶ್ವರ ದೇವಸ್ಥಾನ ಮತ್ತು ಜಲಪಾತ-೩೦ ಕಿ.ಮೀ(ಸಾಗರ-ಭಟ್ಕಳ ಹೈವೇ). ಮುಖ್ಯ ರಸ್ತೆಯಿಂದ ೨.೫ ಕಿ.ಮೀ ಒಳಗೆ.
ದಬ್ಬೆ ಜಲಪಾತ-೧೮ ಕಿ.ಮೀ. ಮುಖ್ಯ ರಸ್ತೆಯಿಂದ ೪.೫ ಕಿ.ಮೀ ಒಳಗೆ/ಚಾರಣ
ಹೊನ್ನೆಮರಡು-೨೦ ಕಿ.ಮೀ
ಮುಪ್ಪಾನೆ ಪ್ರಕೃತಿ ಶಿಬಿರ-೧೨ ಕಿ.ಮೀ
ಕಾನೂರು ಕೋಟೆ-೩೫ ಕಿ.ಮೀ . ಮುಖ್ಯ ರಸ್ತೆಯಿಂದ ೧೪ ಕಿ.ಮೀ ಮತ್ತು ೭ ಕಿ.ಮೀ ಚಾರಣ. ಅರಣ್ಯ ಇಲಾಖೆಯ ಪರ್ಮಿಷನ್ ಬೇಕು.

ಇದರಲ್ಲಿ ಹೊನ್ನೆಮರಡು ಅಥವಾ ಮುಪ್ಪಾನೆಯಲ್ಲಿ ಉಳಿಯೋ ಪ್ಲಾನಿದ್ದರೆ ಅಲ್ಲಿನವರಿಗೆ ಫೋನ್ ಮಾಡಿ ಬುಕ್ ಮಾಡಿಕೊಳ್ಳೋದು ಉತ್ತಮ ಅನಿಸುತ್ತೆ. ರಸ್ತೆಯಿಂದ ಹೊನ್ನೆಮರಡುವಿಗೆ ೭ ಕಿ.ಮೀ ಒಳಗೆ ಮತ್ತು ಮುಪ್ಪಾನೆಗೆ ಮೂರು ಕಿ.ಮೀ ಒಳಗೆ ಹೋಗಬೇಕು. ಇದರಲ್ಲಿ ಮುಪ್ಪಾನೆ, ಕಾನೂರು, ದಬ್ಬೆ, ಭೀಮೇಶ್ವರಗಳಿಗೆ ಹೋಗಿ ಬಂದಿದ್ದರೂ ಅಲ್ಲಿ ತೆಗೆದಿದ್ದ ಹಿಂದಿನ ರೀಲ್ ಕ್ಯಾಮೆರಾದಲ್ಲಿದ್ದ ಚಿತ್ರಗಳು ಹಾಳಾಗಿ ಬ್ಲಾಗಿಗೆ ದಕ್ಕದೇ ಹೋಗಿದ್ದು ಬೇಸರದ ಸಂಗತಿ. ಮತ್ತೊಮ್ಮೆ ಅಲ್ಲಿ ಹೋಗಿ ಬಂದು ಬ್ಲಾಗಿಸೋ ಉಮ್ಮೇದಿನೊಂದಿಗೆ ಸದ್ಯಕ್ಕೊಂದು ವಿರಾಮ

Wednesday, August 1, 2018

ಕಲ್ಸಂಕ

Kalsanka. Photo credits: Wikipedia

ಜೋಗ ಜಲಪಾತಕ್ಕೆ ಹೋದಾಗ ಸುತ್ತಮುತ್ತ ನೋಡಬಹುದಾದ ಜಾಗಗಳಲ್ಲೊಂದು ಕಲ್ಸಂಕ. ಎರಡು ವರ್ಷಗಳ ಹಿಂದೆ ವಿಕಿಪೀಡಿಯಾದಿಂದ ಸಾಗರದಲ್ಲಿ ಕಾರ್ಯಾಗಾರ ಏರ್ಪಡಿಸಿದ್ದಾಗ ಸಾಗರ ಫೋಟೋವಾಕ್ ಮಾಡುವ ಸಲಹೆ ಬಂದಿತ್ತು. ಅದರಂತೆ ಸಾಗರದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಅವುಗಳ ಚಿತ್ರ ತೆಗೆದು ಅವುಗಳ ಬಗೆಗಿನ ಲೇಖನಗಳನ್ನು ಉತ್ತಮಪಡಿಸಲು ಪ್ರಯತ್ನಿಸಿದ್ದೆವು. ಹಾಗೇ ಭೇಟಿ ಕೊಟ್ಟ ಸ್ಥಳಗಳಲ್ಲೊಂದು ಕಲ್ಸಂಕ. ಅದರ ವಿಕಿಲೇಖನ ಇಲ್ಲಿದೆ

ಎಲ್ಲಿದೆ ಈ ಕಲ್ಸಂಕ? : 
ಸಾಗರದಿಂದ ತಾಳಗುಪ್ಪ ಮಾರ್ಗವಾಗಿ ಹೋಗಿ ಚೂರಿಕಟ್ಟೆಯಲ್ಲಿ ಎಡಕ್ಕೆ ತಿರುಗದೇ ಸೀದಾ ಮುಂದಕ್ಕೆ ಹೋದರೆ ಸುಮಾರು ಐದು ಕಿ.ಮೀ ಹೋಗುವಷ್ಟರಲ್ಲಿ ಜೋಗ ಎಂಟು ಕಿ.ಮೀ ಎಂಬ ಬೋರ್ಡ್ ಕಾಣುತ್ತದೆ. ಅದರ ಪಕ್ಕದಲ್ಲೇ ಸಣ್ಣದೊಂದು ಬೋರ್ಡಿದೆ. ಅದುವೇ ಗ್ರಾಮ ಪಂಚಾಯತಿಯವರು ನಿಲ್ಲಿಸಿರುವ "ಕಲ್ಸಂಕ" ಎಂಬ ಬೋರ್ಡು !

ಇದರ ವೈಶಿಷ್ಟ್ಯವೇನು ? 
ನೆಲಕ್ಕಿಂತ ಸುಮಾರು ಹತ್ತು ಅಡಿ ಎತ್ತರಕ್ಕಿರುವ ಈ ಕಲ್ಲಿನ ಸೇತುವೆ ನಲವತ್ತೈದು ಅಡಿಗಿಂತಲೂ ಉದ್ದವೂ, ಸುಮಾರು ನಾಲ್ಕರಿಂದ ಆರಡಿ ಅಡಿ ಅಗಲವೂ, ಎರಡು ಅಡಿಯಷ್ಟು ದಪ್ಪವೂ ಆದ ನೈಸರ್ಗಿಕ ರಚನೆ. ಜಂಬಿಟ್ಟಿಗೆಯಿಂದ ಆಗಿರೋ ಈ ಕಲ್ಲಿನ ಸೇತುವೆಯಡೆ ಕಲಗಾರಿನಲ್ಲಿ ಹುಟ್ಟಿ ವರದೆಯನ್ನು ಸೇರುವ ಸಣ್ಣ ಝರಿಯೊಂದು ಹರಿಯುತ್ತದೆ. ಆ ಝರಿಯಿಂದಲೇ ಕ್ರಮೇಣ ಕಲ್ಲು ಕೊರೆದು ಈ ಸೇತುವೆ ನಿರ್ಮಾಣವಾಗಿರಬಹುದೆಂದು ನಂಬಲಾಗಿದೆ. ಅಮೇರಿಕಾದ ಉಟಾ ಎಂಬಲ್ಲಿ ಕಂಡುಬಂದ ಇಂತದ್ದೇ ರಚನೆಯನ್ನು ರಾಷ್ಟ್ರೀಯ ಸ್ಮಾರಕವೆಂದು ಸಂರಕ್ಷಿಸಲಾಗಿದೆ. ಹಲವು ಮೂಲಗಳ ಪ್ರಕಾರ ವಿಶ್ವದ ಅತೀ ಉದ್ದನೆಯ ನೈಸರ್ಗಿಕ ಶಿಲಾಸೇತುವೆಗಳಲ್ಲಿ ಕಲ್ಸಂಕ ಎರಡನೆಯದು ಎಂದೂ ಹೇಳಲಾಗುತ್ತದೆ !


ಸಂರಕ್ಷಣೆಯ ಅಗತ್ಯ: 
ಅಮೇರಿಕಾದಲ್ಲಿ ರಾಷ್ಟ್ರೀಯ ಸ್ಮಾರಕ ಅಂತ ಗುರುತಿಸಲ್ಪಡುವ ರಚನೆಯಂತದ್ದೇ ಇಲ್ಲಿದ್ದರೂ ಸರ್ಕಾರದ ರಕ್ಷಣೆಯಿರಲಿ ಒಂದು ಮಾಹಿತಿಫಲಕವೂ ಇದರ ಬಗ್ಗೆಯಿಲ್ಲ :-( ಆ ಕಡೆಯ ಗದ್ದೆಗಳಿಗೆ ಏನಾದರೂ ಸಾಗಿಸಲು, ಜನ ಓಡಾಡಲು ಇದನ್ನೇ ಬಳಸುತ್ತಿದ್ದರಂತೆ. ನಾವು ಹಿಂದಿನ ಸಲ ಹೋದಾಗ ಈ ಸೇತುವೆಯ ಒಂದು ಬದಿ ಜಂಬಿಟ್ಟಿಗೆ ಕಲ್ಲು ಕಡಿಯಲಾಗುತ್ತಿತ್ತು ! ಕೆಳಗೆ ಒಂದು ಚೌಡಿಯಿದೆ ಅಂತ ಜನ ನಂಬುತ್ತಿದ್ದರಿಂದ ಇದರ ಕಲ್ಲುಗಳನ್ನು ಚಪ್ಪಡಿಯಂತೆ ಒಡೆದು ಮನೆಗೆ ಸಾಗಿಸದೇ ಹೋದದ್ದು ಪುಣ್ಯ ಎನ್ನಬೇಕೇನೋ. ಮತ್ತೊಂದು ಬಾರಿ ಹೋದಾಗ ಚೌಡಿಯ ಗುಡಿಯನ್ನು ಸ್ವಲ್ಪ ಪಕ್ಕದಲ್ಲಿ ಮಾಡಿ, ದೂರದಲ್ಲೊಂದು ಸೇತುವೆ ಮಾಡಿದ್ದರಿಂದ ಈ ನೈಸರ್ಗಿಕ  ಸೇತುವೆಯ ಸುದ್ದಿಗೆ ಯಾರೂ ಬಂದಿಲ್ಲದ್ದು ಪುಣ್ಯ. ಅದೇ ಇದರ ಸಂರಕ್ಷಣೆ ಅಂತ ಖುಷಿಪಡಬೇಕೇನೋ :-(

ನಿಪ್ಲಿ ಜಲಪಾತ

ನಿಪ್ಲಿ ಜಲಪಾತ: 
Nipli falls
 ಕಳೆದ ವರ್ಷ ನಾ ಮೆಕ್ಸಿಕೋದಲ್ಲಿದ್ದಾಗ ಅಮ್ಮ "ನಿಪ್ಲಿ ಫಾಲ್ಸ್" ಗೆ ಹೋಗಿ ಬಂದ್ವಿ ಕಣೋ ಇವತ್ತು ಅಂದ್ರು ಒಂದಿನ. ಇಲ್ಲಿಯವರೆಗೆ ಹೆಸರೇ ಕೇಳಿರ್ಲಿಲ್ವಲ್ಲಾ. ಎಲ್ಲಿ ಬಂತಪಾ ಈ ಫಾಲ್ಸ್ ಅಂತ ಅಂದ್ಕೊಳ್ತಿದ್ದಾಗ ತಾಳಗುಪ್ಪದಿಂದ ಹದಿನೈದು ಕಿ.ಮೀ ಒಳಗೆ ಅಂತಲೂ ಅಂದ್ರು. ಅದಾದ ಮೇಲೆ ಫೇಸ್ಬುಕ್ಕಲ್ಲಿ ಯಾರ ಗೋಡೆ ಮೇಲೆ ನೋಡಿದ್ರೂ ನಿಪ್ಲಿ ಫಾಲ್ಸಿಂದೇ ಫೋಟೋ. ವಾಪಾಸ್ ಬಂದ್ಮೇಲೆ ಹೋಗ್ಲೇ ಬೇಕು ಅಂತಂದುಕೊಂಡಿದ್ದ ಮೊದಲ ಜಾಗ. ಅಂತೂ ಬಂದ ವಾರವೇ ಹೋಗಿ ಬಂದ್ವಿ ಅಲ್ಲಿಗೆ. ನಾ ಹಾಕಿದ ಫೋಟೋ ನೋಡಿ ಅಲ್ಲಿಗೆ ಹೋಗೋದೇಗೆ ಅಂತ ಕೇಳ್ತಿದ್ದ ಗೆಳೆಯರಿಗಾಗಿ ಈ ಲೇಖನ

ಹೋಗೋದು ಹೇಗೆ? 
ಸಾಗರದಿಂದ ೩೦ ಕಿ.ಮೀ ದೂರವಿರೋ ಈ ಜಲಪಾತ ಆಡುಕಟ್ಟೆ, ಹಾಲಗೇರಿ ರಸ್ತೆಯಲ್ಲಿ ಬರುತ್ತದೆ. ಸಾಗರದಿಂದ ಜೋಗಕ್ಕೆ ಹೋಗೋ ರಸ್ತೆಯಲ್ಲಿ ತಾಳಗುಪ್ಪ ದಾಟಿ ಮುಂದೆ ಹೋದರೆ ಸಿಗೋ ಚೂರಿಕಟ್ಟೆಯ ಸರ್ಕಲ್ಲಿನಲ್ಲಿ ಎಡಕ್ಕೆ ಹೋಗದೇ ಸೀದಾ ಹೋಗಬೇಕು. ಸುಮಾರು ಐದು ಕಿ.ಮೀ ಹೋಗುವಷ್ಟರಲ್ಲಿ ಜೋಗ ಏಳು ಕಿ.ಮೀ ಅಂತ ಬೋರ್ಡ್ ಕಾಣುತ್ತೆ. ಆ ಬೋರ್ಡಿನ ಪಕ್ಕದಲ್ಲೇ ಎಡಕ್ಕೆ ಹೋದರೆ ಕಲ್ಸಂಕ ಅತ ಪ್ರಪಂಚದಲ್ಲೇ ಅತ್ಯಂತ ಉದ್ದದ ಏಕಶಿಲಾ ಸೇತುವೆಗಳಲ್ಲಿ ಒಂದಾದ ಶಿಲಾ ಸೇತುವೆಯೊಂದು ಸಿಗುತ್ತೆ. (ಅದರ ಬಗ್ಗೆ ನನ್ನ ಹಿಂದಿನ ಬ್ಲಾಗ್ ಬರಹದಲ್ಲಿದೆ). ಅದನ್ನು ದಾಟಿ ಒಂದೆರಡು ಕಿ.ಮೀ ಹೋಗುವಷ್ಟರಲ್ಲಿ ಸಿದ್ದಾಪುರಕ್ಕೆ ಹೋಗಲು ಬಲಗಡೆ ಒಂದು ತಿರುವು ಸಿಗುತ್ತೆ. ಆ ತಿರುವಲ್ಲೂ ತಿರುಗದೇ ಹಾಗೇ ಸ್ವಲ್ಪ ಮುಂದೆ ಹೋದರೆ ಆಡುಕಟ್ಟೆ ಸಿಗುತ್ತೆ. ಅಲ್ಲಿ ಬಲಕ್ಕೆ ತಿರುಗಿ ಏಳು ಕಿ.ಮೀ ಹೋಗೋ ಹೊತ್ತಿಗೆ "ನಿಪ್ಲಿ" ಅಂತ ಊರು ಸಿಗುತ್ತೆ. ಆ ಊರೊಳಗೆ ಹೋಗೋ ಬದಲು ಹಾಗೇ ಅದೇ ಟಾರ್ ರಸ್ತೆಯಲ್ಲಿ ಒಂದಿನ್ನೂರು ಮೀಟರ್ ಮುಂದೆ ಹೋಗೋ ಹೊತ್ತಿಗೆ ರಸ್ತೆಯ ಎಡಭಾಗದಲ್ಲಿ ಕಾಣ ಸಿಗೋದೇ ನಿಪ್ಲಿ ಜಲಪಾತ.
Nipli or Husur dam falls

ಈ ಜಲಪಾತ ಆಗಿದ್ದು ಹೇಗೆ? 
ಆಡುಕಟ್ಟೆಯಿಂದ ಸಿದ್ದಾಪುರದ ಹಲಗೇರಿಗೆ ಹೋಗಬಹುದಾದ ರಸ್ತೆಯೊಂದಿದೆ. ಆ ರಸ್ತೆಯಲ್ಲಿ ಹಲಗೇರಿಗಿಂತ ಎರಡು ಕಿ.ಮೀ ಮುಂಚೆ ಹುಸೂರು ಅಂತೊಂದು ಊರು ಸಿಗುತ್ತೆ. ಅಲ್ಲೊಂದು ಸಸ್ಯಪಾಲನಾ ಕ್ಷೇತ್ರವಿದೆ.
Forest Nursery at Husur
ಅದರ ಬಲಗಡೆಗೇ ಒಂದು ಡ್ಯಾಂ ಇದೆ. ಮಳೆಗಾಲದಲ್ಲಿ ಅದನ್ನು ತುಂಬುವ ಶರಾವತಿ "ನಿಪ್ಲಿ" ಜಲಪಾತವಾಗಿ ಧುಮುಕುತ್ತಾಳೆ. ಹಾಗಾಗಿ ಇದಕ್ಕೆ "ಹುಸೂರು ಡ್ಯಾಂ ಜಲಪಾತ" ಎಂದೂ ಕೆಲವರು ಕರೆಯುತ್ತಾರೆ. ಅಂದ ಹಾಗೆ ಈ ಜಲಪಾತ ಮಳೆಗಾಲ ಮುಗಿಯೋವರೆಗೆ ಮಾತ್ರವಿರುತ್ತೆ.
Husur Reservoir
Steps to Get down to Husur Reservoir

ಈ ಜಲಪಾತ ನೋಡೋಕೆ ಹೋಗೋದು ಎಷ್ಟು ಸುರಕ್ಷಿತ? : 
ಮಳೆ ಜೋರಿದ್ದಾಗ ನೀರಿನ ರಭಸ ಸ್ವಲ್ಪ ಜಾಸ್ತಿ ಇದ್ದರೂ ಜಲಪಾತದ ತಲೆಯವರೆಗೂ ನಡೆದುಕೊಂಡು ಬರಬಹುದು. ನೀರು ಕಮ್ಮಿಯಿದ್ದಾಗ ಹಿನ್ನೀರಿನಲ್ಲೂ ಸ್ವಲ್ಪ ದೂರ ಓಡಾಡಬಹುದು. ಜಲಪಾತದ ತಲೆಯ ಮೇಲೆ ಸರ್ಕಸ್ ಮಾಡೋಕೆ ಅಥವಾ ಜಲಪಾತ ಧುಮ್ಮುಕ್ಕುವಲ್ಲಿ ಹೆಚ್ಚು ನೀರಿದ್ದಾಗ ಈಜಲು ಹೋಗದೇ ಹೋದರೆ ಹೆಚ್ಚಿನ ಎತ್ತರದಿಂದ ಬೀಳದ ಈ ಜಲಪಾತ ಪ್ರವಾಸಿಗರ ಮಟ್ಟಿಗೆ ಸುರಕ್ಷಿತವೇ.
on the top of Nipli falls
ಸುತ್ತಲಿರೋ ಸೌಲಭ್ಯಗಳು: 
ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಕಾಣಸಿಗೋದ್ರಿಂದ ಇದರ ಸುತ್ತ  ಒಂದು ಮಂಡಕ್ಕಿ, ಎಳನೀರು ಮುಂತಾದವು ಸಿಗೋ ಸಣ್ಣ ಅಂಗಡಿ ಬಿಟ್ಟರೆ ಹೆಚ್ಚೇನೂ ಸೌಲಭ್ಯಗಳಿಲ್ಲ. ಪಕ್ಕದಲ್ಲೇ ದೊಡ್ಡ ಬಯಲಿರೋದ್ರಿಂದ ವಾಹನಗಳ ನಿಲುಗಡೆಗೆ ತೊಂದರೆಯೇನಿಲ್ಲ. ಪೇಪರ್ರು, ಕವರ್ರುಗಳನ್ನು ಅಲ್ಲಲ್ಲಿ ಎಸೆಯೋ ಜನರ ದುರ್ಬುದ್ದಿ ನೋಡಿ ಬೇಜಾರಾಗುತ್ತೆ ಬಿಟ್ಟರೆ ಹಿರಿಯರು, ಮಕ್ಕಳಿರೋ ಕುಟುಂಬದೊಂದಿಗೆ, ಗೆಳೆಯರೊಂದಿಗೆ ಬಂದು ಒಂದಿಷ್ಟು ಹೊತ್ತು ಕಳೆಯಲು ಪ್ರಶಸ್ತವಾದ ಜಾಗವಿದು. ಜೋಗ ಜಲಪಾತ ಇಲ್ಲಿಂದ ಸುಮಾರು ಹನ್ನೆರಡು ಕಿ.ಮೀ ಅಷ್ಟೇ ಆಗಿರೋದ್ರಿಂದ ಜೋಗ ಜಲಪಾತಕ್ಕೆ ಬಂದವರು ಆರಾಮವಾಗಿ ಬಂದು ಹೋಗಬಹುದಾದ ಮತ್ತೊಂದು ಜಲಪಾತ ಇದು.

Wednesday, August 31, 2016

ಯಲ್ಲಾಪುರದ ಜಲಪಾತಗಳು




Kuli Magod Falls Yellapura
ಯಲ್ಲಾಪುರದಲ್ಲಿ ಸುಮಾರ್ ಜಲಪಾತಗಳಿದ್ದು. ಅದ್ರಲ್ಲೊಂದಿಷ್ಟಾದ್ರೂ ನೋಡಕ್ಕು ಹೇಳಿ ಸುಮಾರು ದಿನದಿಂದ ಅನಸ್ತಿತ್ತು. ಕಾಲೇಜಿನ ದಿನಗಳಿಂದ್ಲೂ ಈ ಸಾತೊಡ್ಡಿ, ಮಾಗೋಡಿನ ಸುದ್ದಿ ಸುಮಾರು ಸಲ ಕೇಳಾಗಿತ್ತು. ಫ್ರೆಂಡ್ಸೆಲ್ಲ ಅಲ್ಲಿಗೆ ಹೋಗ್ಬಂದ ಸುದ್ದಿ ಹೇಳಿದಾಗ ಅಲ್ಲಿಗೊಂದ್ಸಲ ಹೋಗಕ್ಕು ಅನ್ಕಂಡಂಡ್ಕಂಡು ಪ್ರತೀ ಸಲನೂ ಏನಾದ್ರೂ ಆಗಿ ಆ ಪ್ಲಾನ್ ಕ್ಯಾನ್ಸಲ್ ಆಗೋಗ್ತಿತ್ತು. ಅಂತದ್ರಲ್ಲಿ ಈಗ ಮತ್ತೆ ಯಲ್ಲಾಪುರದ ಮತ್ತೆ ಸಿರ್ಸಿಯ ಫಾಲ್ಸುಗಳನ್ನ ನೋಡನ ಹೇಳಿ ಪ್ಲಾನು ಹಾಕ್ತಿರಕಾದ್ರೆ ಯಲ್ಲಾಪುರಕ್ಕೆ ಹೋದ್ರೆ ಅದ್ರ ಸುತ್ಲಿರೋ ಜಾಗಗಳನ್ನೇ ಸರಿಯಾಗಿ ನೋಡಿದ್ರಾತು ಅನ್ನೋ ಐಡಿಯಾ ಬಂದಿತ್ತು ಹರೀಶಣ್ಣಂದು. ಸರಿ ಅಂದ್ಕಂಡು ಹೊರಟಿದ್ದು ನಂಗ ನಾಲ್ಕು ಜನ. ಶ್ರೀಕೃಷ್ಣ,ರಾಘು, ಮತ್ತೊಬ್ಬ ಹರೀಶಣ್ಣ ಮತ್ತು ನಾನು.ನಂಗಕ್ಕೆ ತುಂಬೆಲ್ಲಾ ಸಿಕ್ಕಿದ್ದು ಹವ್ಯಕ ಭಾಷೆನೇ ಆಗಿದ್ರಿಂದ ಆ ಅನುಭವಗಳನ್ನ ಅದ್ರಲ್ಲೇ ಬರೀದಿದ್ರೆ ಹೆಂಗೆ ಹೇಳಿ ಅದ್ರಲ್ಲೇ ಬರೀತಿದ್ದಿ.

ಹೋಗಿದ್ದೆಂಗೆ ? :
ಈ ಬೆಂಗಳೂರಿಂದ ಯಲ್ಲಾಪುರಕ್ಕೆ ಹೋಗಕ್ಕೆ ಮೂರು ಮಾರ್ಗಗಳಿದ್ದು
೧. ಬೆಂಗಳೂರು-ಶಿವಮೊಗ್ಗ-ಸಾಗರ-ಶಿರಸಿ-ಯಲ್ಲಾಪುರ=೫೧೧ ಕಿ.ಮೀ
೨. ಬೆಂಗಳೂರು-ದಾವಣಗೆರೆ-ಹಾವೇರಿ-ಯಲ್ಲಾಪುರ=೪೨೪ ಕಿ.ಮೀ
೩. ಬೆಂಗಳೂರು-ಹುಬ್ಬಳ್ಳಿ-ಯಲ್ಲಾಪುರ=೪೮೪ ಕಿ.ಮೀ

ಮೊದ್ಲು ಸಾಗರದ ಮೇಲೆ ಹೋಗನ ಅಂದ್ಕಡಿದ್ದ ನಂಗ ಆಮೇಲೆ ಹಾವೇರಿ ಮಾರ್ಗದಲ್ಲಿ ಸಖತ್ ಬೇಗ ಹೋಗ್ಲಕ್ಕು ಮತ್ತೆ ಸಮಯನೂ ಕಮ್ಮಿ ಅಂತ ಗೊತ್ತಾಗಿ ಆ ಮಾರ್ಗದಲ್ಲೇ ಹೊಂಟ್ಯ. ಗೋವಾ-ಪಣಜಿ ಹೋಗ ಗಾಡಿಗಳೆಲ್ಲಾ ಈ ಮಾರ್ಗದಲ್ಲೇ ಹೋಗದ್ರಿಂದ ಮತ್ತೆ ಬರೀ ಎಂಟೂವರೆ ಘಂಟೇಲಿ ಹೋಗದ್ರಿಂದ ಈ ಮಾರ್ಗನೇ ಸರಿಯೆನಿಸಿ ರಾತ್ರಿ ಸೀಬರ್ಡ್ ಬುಕ್ ಮಾಡಿದ್ಯ. ಹತ್ತೂಮುಕ್ಕಾಲಿಗೆ ಹೊಂಡಕ್ಕಾಗಿದ್ದ ನಮ್ಮ ಬಸ್ಸಿಗೆ ಒಂಭತ್ತು ಘಂಟೆಗೇ ಕರ್ಸಿ, ಹನ್ನೊಂದೂವರೆಗೆ ಹೊರಟಿದ್ರ ಬರ್ಯಕ್ಕೆ ಹೋದ್ರೆ ಅದೇ ಒಂದು ದೊಡ್ಡ ಕತೆಯಾಗದ್ರಿಂದ ಅದನ್ನಿಲ್ಲಿಗೇ ಬಿಟ್ಟಿಕ್ಕಿ ಸೀದಾ ಯಲ್ಲಾಪುರಕ್ಕೆ ಹೋಗ್ತಿದ್ದಿ



ಯಲ್ಲಾಪುರದಲ್ಲೆದ್ಕಂಡು:
 ಹಿಂದಿನ ದಿನದಂಗೇಯ ಅರ್ಧಘಂಟೆ ಮೊದ್ಲೇ ಯಾರ್ರೀ ಯಲ್ಲಾಪುರ ಹೇಳಕ್ಕಿಡಿದಿದ್ದ ಕಂಡಕ್ಟರ. ನಂಗ ಎದ್ಕಂಡು ಅದು ಈಗ ಬತ್ತು, ಆಗ ಬತ್ತು ಹೇಳಿದ್ದೇ ಬಂತು. ಕೊನಿಗೂ ಆರೂಮುಕ್ಕಾಲು ಸುಮಾರಿಗೆ ಆ ಸೀಬರ್ಡಿನವ ಅವರ ಪಿಕಪ್ ಪಾಯಿಂಟಿಗಿಂತ ಮುಂದೆಲ್ಲೋ ಒಂದ್ಬದಿಗೆ ತಂದು ಇದೇ ಯಲ್ಲಾಪುರ ಹೇಳಿ ನಿಲ್ಸಿಕ್ಕೋದ. ಬಸ್ಟಾಂಡಿನ ಪಕ್ಕ ಸಾತೊಡ್ಡಿ, ಮಾಗೋಡಿಗೋಗ ಓಮಿನಿ, ಕಾರುಗಳಿರ್ತು ಹೇಳಿ ಕೇಳಿದ್ರಿಂದ ಅಲ್ಲೇ ಎಲ್ಲಾದ್ರೂ ಲಾಡ್ಜ್ ಮಾಡನ ಹೇಳಿ ನೋಡಿದ್ಯ. ಇಲ್ಲಿ ಸರ್ಕಾರಿ ಬಸ್ಟಾಂಡೆಲ್ಲಿ ಅಂದ್ರೆ ಕೆಳಗೆ ಹೋಗಿ ಎಡಕ್ಕೋಗಿ ಅಂದ. ಟೈಮಿನ್ನೂ ಆರೂಮುಕ್ಕಾಲಾಗಿತ್ತು. ಯಲ್ಲಾಪುರಕ್ಕಿನ್ನೂ ಬೆಳಗಾಗಿರ್ಲೆ. ಅಂಗ್ಡಿಗಳಿರ್ಲಿ, ರಸ್ತೇಲೋಡಾಡೋ ಜನರೂ ಇಲ್ದೇ ನಂಗನೇ ಸಖತ್ ಬೇಗ ಬಂದವ್ರನ ಹೇಳಂದ್ಕತ್ತ ಅವ ತೋರ್ಸಿದ ದಾರೀಲಿ ಕೆಳಗೆ ಹೋಗಿ ಸಂತೆಮೈದಾನದ ರಸ್ತೇಲಿ ಬರಹೊತ್ತಿಗೆ ಯಲ್ಲಾಪುರ ೪೦ ಕಿ.ಮೀ ಹೇಳ ಬೋರ್ಡ್ ಕಾಣ್ತು ! ಇದೆಲ್ಲಿ ಇಳಿಸಿಕ್ಕೋದ್ನಪ ಇವ ಅಂತಂದ್ಕಂಡು ಹತ್ರ ಹೋಗಿ ನೋಡಿದ್ರೆ ಯಾರೋ ಪುಣ್ಯಾತ್ಮರು ಅದನ್ನ ಅಳಸಕ್ಕೆ ಹೇಳಿ ಒಂದೆರಡು ಶಣ್ಷಣ್ಣ ಗೆರೆ ಎಳ್ದಿದ್ದು ಕಾಣುಸ್ತು. ಹಂಗೇ ಒಂದ್ಬದಿಯ ಅಂಗ್ಡೀಲಿ ಯಲ್ಲಾಪುರದ ಬೋರ್ಡೂ ಕಾಣ್ತು. ಇದೇ ಯಲ್ಲಾಪುರ ಅಂದ್ಕಂಡು ಮುಂದೆ ಹೋಗ ಹೊತ್ತಿಗೆ ಮಾಗೋಡು ಹೇಳ ಬಸ್ಸೊಂದು ಎದುರಿಗೇ ಹೋಗಕ್ಕ ! ಓ, ಮಾಗೋಡಿಗೂ ಬಸ್ಸಿದ್ದು ಹೇಳಾತು. ಲಾಡ್ಜಿಗೋಗಿ ಬೆಳಗಿಂಜಾವದ ಕೆಲ್ಸಗಳನ್ನೆಲ್ಲಾ ಮುಗ್ಸಿದ್ಮೇಲೆ ಇಲ್ಲಿಗೇ ಬಂದ್ರಾತು ಅಂದ್ಕಂಡು ಲಾಡ್ಜೆಲ್ಲಿದ್ದಪ  ಹೇಳಿ ಹುಡ್ಕಂಡು ಹೊಂಟ್ಯ. ಬರಕ್ಕಿದ್ರೆ ಕೆನರಾ ಬ್ಯಾಂಕಿನ ಪಕ್ಕದಲ್ಲೊಂದು ಲಾಡ್ಜ್ ನೋಡಿದ್ದು ನೆನಪಾತು. ಹಂಗೇ ಅದನ್ನ ಹುಡಕ್ಕೊಂಡು ಹೊರಟವ ಅಲ್ಲೇ ಸಿಕ್ಕಿದೊಬ್ಬಂಗೆ ಕೇಳಿದ್ಯ.ಇಲ್ಲಿ ಲಾಡ್ಜೆಲ್ಲಿದೆ ಹೇಳಿ. ನೀವು ಶೀದಾ ಹೋದ್ರೆ ಸಂಭ್ರಮ ಹೇಳೊಂದು ಲಾಡ್ಜುಂಟು. ಅದ ಬಿಟ್ಟು ಎಡಬದೀಗೆ ಹೋದ್ರೆ ಸಂಕಲ್ಪ ಅಂತೊಂದುಂಟು ಅಂದ ಅವ ಪಕ್ಕಾ ಕಾರವಾರ ಭಾಷೇಲಿ. ಸಾಗರ, ಸಿದ್ದಾಪುರ, ಶಿರಸಿ ಹತ್ತತ್ರಕ್ಕಿದ್ರೂ ಅದ್ರ  ಹವ್ಯಕ ಭಾಷೇಲಿ ಅದೆಷ್ಟು ವ್ಯತ್ಯಾಸಿದ್ದು ಹೇಳಿ ಗೆಳೆಯರತ್ರ  ಮಾತಾಡ್ತಿದ್ದ ನಂಗೆ ಅದ್ರ ಲಿಸ್ಟಿಗೆ ಯಲ್ಲಾಪುರನೂ ಸೇರ್ಸಕ್ಕಾತು ಅನುಸ್ತು!

ಸಂಭ್ರಮ ಲಾಡ್ಜು ಮತ್ತಲ್ಲಿನ ತಿಂಡಿ:
 ಹಂಗೇ ಸಂಭ್ರಮ ಲಾಡ್ಜ್ ಹುಡುಕಿದ್ಯ ಹೇಳಾತು. ಇಲ್ಲಿ ತಲೆಗೆ ೨೫೦ ಒಂದು ದಿನಕ್ಕೆ ಅಂದ. ಸಾಧಾರಣ ರೂಂಗಳು. ಬೆಳಗ್ಗೆ ಬಿಸ್ಲಿದ್ರೆ, ಸೋಲಾರು ಆನಾದಾಗ ಹಿಡ್ಕಂಡ್ರೆ ಬಿಸ್ನೀರು. ಇಲ್ಲಾಂದ್ರೆ ಇಲ್ಲೆ. ಒಳಗಿನ ಸೌಲಭ್ಯಗಳ ಬಗ್ಗೆ ಇದಕ್ಕೆ ೨.೫/೫ ರೇಟಿಂಗ್ ಕೊಡ್ಲಕ್ಕು. ಇಲ್ಲೇ ರೆಡಿಯಾದ ನಂಗ ತಿಂಡಿಗಿನ್ನೆಲ್ಲಿ ಹುಡ್ಕದು ಹೇಳಿ ಅಲ್ಲೇ ಬಂದ್ಯ. ಬೆಳಗೆ ನಂಗ ಬರಕ್ಕಾದ್ರೆ ಒಂದಿಷ್ಟು ಜನನಾದ್ರೂ ಇದ್ದಿದ್ದ. ಆದ್ರೆ ನಂಗ ತಿನ್ನಕ್ಕಾದ್ರೆ ಅಲ್ಲಿ ಯಾವ ಪುಣ್ಯಾತ್ಮನೂ ಇರಲಾಗ್ದ. ಸಿರ್ಸಿ ಶೈಲಿಯ ಚಂದದ್ದೊಂದು ಚಾ ಸಿಗ್ತು ಬಿಟ್ರೆ ಇಲ್ಲಿನ ಇಡ್ಲಿ, ಬನ್ನುಗಳಿಗೆ ೨/೫ ರೇಟಿಂಗ್ ಕೊಡ್ಲಕ್ಕು. ಅಲ್ಲಿಂದ ಸೀದಾ ಬಸ್ಟಾಂಡತ್ರ ಬಂದ ನಂಗಕ್ಕೆ ಸಾತೊಡ್ಡಿ ಮಾಗೋಡುಗಳಿಗೆ ಬಸ್ಸಿದ್ರೂ ಅದು ಸಖತ್ ಕಮ್ಮಿ. ಅಲ್ಲಿಗೆ ಹೋಗಕ್ಕಾದ್ರೆ  ಗಾಡಿ ಮಾಡಸ್ಕಂಡೋಗದೆ ಒಳ್ಳೇದು ಅಂದ ಅಲ್ಲಿದ್ದ ಜನ. ಸರಿ ಅಂತ ಗಾಡಿ ಕೇಳಾತು. ಅಲ್ಲಿಯವ ದಿನದ ಬಾಡಿಗೆಗೇ ಬರದು ಅಥವಾ ಕಿ.ಮೀಗೆ ೩೫ ರೂ ಹೇಳಕ್ಕಾ ? ಎಲ್ಲಾ ಏರು-ಇಳುಕ್ಲ ಹಾಳಾದ ರೋಡು. ಅಷ್ಟೇ ಆಗದ ಅಂತಂದವ್ರತ್ರ ೨೫೦೦ ರಿಂದ ೨೦೦೦ ಕ್ಕೆ ಚೌಕಾಸಿ ಮಾಡಿ ಗಾಡಿ ತಗಂಡಾತು. ನಮ್ಜತೆ ಬಂದವ ಯಲ್ಲಾಪುರ ಟ್ಯಾಕ್ಸಿ,ಓಮಿನಿ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಗಜ :-) ನಂಟ್ರಿಪ್ಪು ಅಂದ್ರೆ ಸಾಮಾನ್ಯನ ಮತೆ :-)

ಶಿರ್ಲೆ ಜಲಪಾತ/ಅರಬೈಲು ಜಲಪಾತ:
ಯಲ್ಲಾಪುರದಿಂದ ಶಿರ್ಲೆ ಜಲಪಾತಕ್ಕೆ ೧೪ ಕಿ.ಮೀ. ಅದರಲ್ಲಿ ೧೨ ಕಿ.ಮೀ ಸಾಮಾನ್ಯ ದಾರಿ. ಕೊನೆಯ ೨ ಕಿ.ಮೀ ನಡ್ಕಂಡೋಗಕ್ಕು. ಬೈಕಲ್ಲಿ ಹೋದ್ರೆ ಇನ್ನೊಂದು ಕಿ.ಮೀ ಮುಂದೆ ಹೋಗ್ಲಕ್ಕು. ಮುಂಚೆಯೆಲ್ಲಾ ಜೀಪು, ಓಮಿನಿಗಳೂ ಫಾಲ್ಸಿನ ಮೇಲಿರೋ ಹೆಗಡೇರ ಮನೆ ತಂಕ ಹೋಗ್ತಿತ್ತಡ. ಆದ್ರೆ ಈಗ ಅದಕ್ಕೆ ಇಲ್ಲಿನ ಗ್ರಾಮ ಪಂಚಾಯಿತಿಯವ್ರು ನಿಷೇಧ ಹಾಕಿರ ಬೋರ್ಡನ್ನ ಶಿರ್ಲೆ ಬಸ್ಟಾಂಡತ್ರನೇ ನೊಡ್ಲಕ್ಕು. 



ಶಿರ್ಲೆಯ ಹಾದಿಯಲ್ಲಿರೋ ಅಣಬೆಗಳು

ಇದ್ರಲ್ಲಿ ಮೊದಲು ಸಿಗೋ ಕವಲಲ್ಲಿ ಎಡಕ್ಕೆ ಹೋಗಕ್ಕು. ಮುಂದೆ ಸಿಗೋ ಭಟ್ರ ಮನೆ ಅಲ್ಲ. ಅದನ್ನ ಹಂಗೇ ದಾಟ್ಕಂಡು ಮುಂದೆ ಹೋದ್ರೆ ಸಿಗೋ ಭಟ್ರ ಮನೆಯೇ ಇಲ್ಲಿನ ಗುರ್ತು. ಅವ್ರ ಮನೆ ತೋಟದ ಪಕ್ಕದಲ್ಲಿ ಇಳಿದು ಸ್ವಲ್ಪ ಎಡಕ್ಕೆ ನಡದ್ರೆ ಶಿರ್ಲೆ ಜಲಪಾತ ಸಿಗ್ತು. ಬೇಸ್ಗೆಲೆಲ್ಲಾ ಫಾಲ್ಸಿನ ಕೆಳತಂಕ ಹೋಗ್ಲಕ್ಕಡ. ಆದ್ರೆ ಮಳೆಗಾಲ ಆಗಿದ್ರಿಂದ ಅದ್ರ ಹತ್ತತ್ರದವರೆಗೆ ಹೋಗಕ್ಕಾಗ್ತಷ್ಟೆ. ಯಲ್ಲಾಪುರ ಅಂತಂದ ಕೂಡ್ಲೇ ಜಲಪಾತಗಳ ತಾಣ, ತಣ್ಣಗಿರ್ತು ಅಂತಂದ್ಕಂಡಿರ್ತ ಎಲ್ಲಾ. ಆದ್ರೆ ಕೆಲವು ಕಡೆ ಕರಾವಳಿಯ ಹವೆ ಇಲ್ಲಿ. ಶಿರ್ಲೆ ಇಳಿಯ ತಂಕ ಮತ್ತು ನೋಡಿ ವಾಪಾಸ್ ಹತ್ತ ಹೊತ್ತಿಗೆ ಬೆವರಿಳಿದು ಹೋಗಿತ್ತು ಇಲ್ಲಿನ ಹವೆಗೆ.
First turn where we need to turn left for Shirley
ಈ ಭಟ್ಟರ ಮನೆಯಿಂದ ನಾವು ಶಿರ್ಲೆಯ ಜಲಪಾತಕ್ಕೆ ಕೆಳಗಿಳಿಯಬೇಕು
ಶಿರ್ಲೆ ಜಲಪಾತದ ಸೊಬಗು

Me infront of Shirley falls

Our group returning from Shirley falls

ಅರಬೈಲು ಘಾಟಿ 
 ಶಿರ್ಲೆಯಿಂದ ಹೊಂಡಕ್ಕಾದ್ರೆ ಘಂಟೆ ಹನ್ನೆರಡಾಗಿತ್ತು. ಸುಮಾರಷ್ಟು ಬ್ಲಾಗುಗಳಲ್ಲಿ, ನೆಟ್ಟಲ್ಲಿ ಅರಬೈಲು ಜಲಪಾತ ಹೇಳೂ ಕೊಟ್ಟಿದ್ವಲ ಅದೆಲ್ಲಿ ಹೇಳಿ ಕೇಳಿದ್ಯ ನಂಗ ಅಧ್ಯಕ್ಷರತ್ರ. ಆದ್ರೆ ಅಂತದ್ದೆಂತೂ ಇಲ್ಲೆ ಹೇಳಂದ ನಮ್ಮ ಅಧ್ಯಕ್ಷ. ಶಿರ್ಲೆ ಫಾಲ್ಸು ಅರಬೈಲು ಘಾಟೀಲಿ ಬರ ಶಿರ್ಲೆ ಹೇಳ ಊರಲ್ಲಿರದ್ರಿಂದ ಅದಕ್ಕೇ ಅರಬೈಲು ಫಾಲ್ಸು ಹೇಳೂ ಹೇಳ್ತ ಅಂದ ಅವ. ಅರಬೈಲು ಘಾಟೀಲಿ ಬರ್ತಾ ಅಲ್ಲಿನ ವೀವ್ ಪಾಯಿಂಟನ್ನೂ ನೋಡಾತು. ಈ ಅರಬೈಲು ಘಾಟಿ ಬಗ್ಗೆ ಇನ್ನೊಂದು ವಿಷ್ಯ ಹೇಳಲೇ ಬೇಕು. ಇದಕ್ಕೆ ಬರ ತಂಕ ಸಾಮಾನ್ಯವಾಗಿರೋ ಹವೆ ಇಲ್ಲಿಗೆ ಬರ್ತಿದ್ದಂಗೇ ಬದಲಾಗೋಗ್ತು. ಬೆಳಗ್ಗೆ ಹತ್ತಾಗ್ತಾ ಬಂದಿದ್ರೂ ಎಲ್ಲಿ ನೋಡಿದ್ರೂ ಮಂಜು, ಬೆಳಬೆಳಗ್ಗೆನೂ ಲೈಟಾಕ್ಕೊಂಡು ಗಾಡಿ ಓಡ್ಸ ತರ. ಅದನ್ನು ದಾಟಿ ಮುಂದೆ ಬರ್ತಿದ್ದಂಗೆ ಮತ್ತೆ ಮುಂಚಿದ್ದೇ ಹವೆ.


Our group at the Arabail Viewpoint
ಕವಡೀ ಕೆರೆ 
ಅಲ್ಲಿಂದ ವಾಪಾಸ್ ಬಂದ ನಂಗ ನಂದೋಳಿ ಗ್ರಾಮ ಪಂಚಾಯತಿ ಕ್ರಾಸಲ್ಲಿ ಮಾಗೋಡಿನ ರಸ್ತೆಗೆ ಬಂದ್ಯ. ಅದೇ ರಸ್ತೇಲಿ ಬರಕ್ಕಿದ್ರೆ ಮಾಗೋಡಿಗೆ ೧೧ ಕಿ.ಮೀ ಇರಕ್ಕಿದ್ರೆ ಕವಡೀಕೆರೆ ಬೋರ್ಡ್ ಸಿಗ್ತು. ಅಲ್ಲಿಂದ ೧ ಕಿ.ಮೀ ಎಡಕ್ಕೆ ಹೋದ್ರೆ ಸಿಗದು ಕವಡೀಕೆರೆ. ಅದ್ರಲ್ಲಿ ಹೋಗಕ್ಕಿದ್ರೆ ಎರಡು ಟಾರ್ ರೋಡ್ ಸಿಗ್ತು. ಅದ್ರಲ್ಲಿ ಬಲಕ್ಕೆ ಹೋಗಕ್ಕು. ಇಲ್ಲಿರದು ಕೆರೆಯ ಮೇಲ್ಗಡೆಯಿರೋ ಕವಡಮ್ಮ ಯಾನೇ ದುರ್ಗಾದೇವಿಯ ದೇವಸ್ಥಾನ.ಇಲ್ಲಿಗೆ ಬರ ಹೊತ್ತಿಗೆ ೧೨:೨೦ ಆಗಿತ್ತು. ಇಲ್ಲಿ ಕ್ಷೇತ್ರಪಾಲನ ಗುಡಿ ಅಲ್ದೇ ಕಾಶೀ ವಿಶ್ವನಾಥನ ದೇವಸ್ಥಾನನೂ ಇದ್ದು.


Kavadikere Temple, Yellapura
ಶಿರ್ಲೇಲಿ ಶುರುವಾಗಿದ್ದ ಯಲ್ಲಾಪುರ ಹವ್ಯಕದ ಕಂಪು ಇಲ್ಲೂ ಮುಂದುವರ್ದಿತ್ತು. ೧೨:೩೫ ಕ್ಕೆ ಮಹಾಮಂಗಳಾರತಿ ಆಗೋ ಇಲ್ಲಿನ ದೇವಸ್ಥಾನಕ್ಕಿಂತ ಇಲ್ಲಿನ ಕೆರೆ ಪರಿಸರ ಮತ್ತು ಅದ್ರಲ್ಲಿನ ಪ್ರತಿಬಿಂಬಗಳನ್ನ ನೋಡದೇ ಒಂದು ಖುಷಿ. ೨೬-೦೨-೧೯೯೬ರಲ್ಲಿ ದೇವಿಯ ವಿಗ್ರಹ ಪ್ರತಿಷ್ಟಾಪನೆಯಾದ ಇಲ್ಲಿನ ದೇವಸ್ಥಾನದ ಹತ್ರದಲ್ಲೇ ಬರೋ ಪ್ರವಾಸಿಗರ ಅನುಕೂಲಕ್ಕಾಗಿ ಟಾಯ್ಲೆಟ್ಟಿನ ವ್ಯವಸ್ಥೆ ಮಾಡಿದ್ರೂ ಅದೀಗ ಬೀಗ ಬಡ್ಕಂಡು ನನ್ನ ಕೇಳೋರ್ಯಾರಪ್ಪ ಹೇಳಂಗಿದ್ದು. ದೊಡ್ದೊಡ್ಡ ಹಬ್ಬಗಳ ಸಮಯದಲ್ಲಿ ಅದನ್ನ ಸರಿ ಮಾಡ್ಕ್ಯತ್ತ ಕಾಣ್ತು.
Reflections at the Kavadikere Temple, Yellapura


ಕವಡೀಕೆರೆಯ ಕನ್ನಡಿಯಲ್ಲಿ ಪ್ರತಿಫಲನಗೊಂಡು ಪ್ರಕೃತಿಯ ಸೊಬಗು

ಕವಡೀಕೆರೆಯಿಂದ ಘಂಟೆ ಗಣೇಶನತ್ರ ಹೊರಟ ನಮ್ಮ ತಂಡ
ಘಂಟೆ ಗಣೇಶ
Nandaguli Siddivinayana or GanteGanesha temple
ಕವಡೀಕೆರೆ ನೋಡಾದ ಮೇಲೆ ನಂಗ ಅಲ್ಲಿಂದ ೯ ಕಿ.ಮೀ ದೂರದಲ್ಲಿರೋ ಘಂಟೆ ಗಣೇಶ ದೇವಸ್ಥಾನ ನೋಡಕ್ಕೆ ಹೊಂಟ್ಯ. ಚಂದಗುಳಿಯಲ್ಲಿರುವ ಈ ಸಿದ್ದಿವಿನಾಯಕ ದೇವಸ್ಥಾನಕ್ಕೆ ಘಂಟೆ ಗಣೇಶ ಹೇಳಿ ಹೆಸ್ರು ಬಂದಿದ್ದೆಂತಕ್ಕೆ ಅಂತ ಕೇಳಿದ ನಮಗೊಂದು ಸ್ವಾರಸ್ಯದ ವಿಷ್ಯ ಗೊತ್ತಾತು.  ದೇವಸ್ಥಾನಗಳಲ್ಲಿ ತಲೆಗೂದ್ಲನ್ನೋ, ಕುಂಕುಮನೋ,ದುಡ್ಡನ್ನೋ ಹರಕೆ ಹೊರ ತರ ಇಲ್ಲಿ ಘಂಟೆನ ಹರಕೆ ಹೊತ್ಕತ್ವಡ. ತಮ್ಮ ಕೆಲ್ಸ ಆದ್ರೆ ದೇವಸ್ಥಾನಕ್ಕೆ ಘಂಟೆ ಕೊಡ್ತಿ ಹೇಳಿ ಹರ್ಕೆ ಹೊತ್ಕತ್ವಡ ಜನ. ಆತರ ಹರಕೆ ಹೊತ್ಕಂಡ ಜನ ಕೊಟ್ಟಿದ್ದ ಘಂಟೆಗಳನ್ನೇ ಎರಡು ರೂಮುಗಳಲ್ಲಿ ತುಂಬಿಟ್ಟಿದ ಈಗ. ಮುಂಚೆ ದೇವಸ್ಥಾನದ ತುಂಬೆಲ್ಲಾ ಈ ಘಂಟೆಗಳೇ ತುಂಬೋಗಿತ್ತಡ. ಆದ್ರೆ ಈಗ ದೇವಸ್ಥಾನದ ಜೀರ್ಣೋದ್ದಾರ ನಡೀತಿರದ್ರಿಂದ ಅದನ್ನ ತೆಗೆದು ಪಕ್ಕದ ಎರಡು ಕೋಣೆಗಳಲ್ಲಿ ತುಂಬಿಟಿದ್ವಡ. ಕೇರಳ ಮಾದರಿಯಲ್ಲಿ ಪುನರ್ನಿರ್ಮಾಣವಾಗ್ತಿರೋ ಈ ದೇವಸ್ಥಾನದ ಕಾರ್ಯ ಇನ್ನೊಂದಿಷ್ಟು ತಿಂಗ್ಳಲ್ಲಿ ಮುಗೀಗು. ಆದ್ರೆ ದೇವಸ್ಥಾನದ ಪೂಜೆ ಈಗಿರೋ ಜಾಗದಲ್ಲೇ ಮತ್ತೆ ಹೋಮಹವನಗಳು ಪಕ್ಕದ ಯಜ್ಞಶಾಲೆಯಲ್ಲಿ ಮುಂಚಿನಂಗೇ ನಡೀತಿದ್ದು. ದೇವರ ದರ್ಶನ ಎಂತೋ ಆತು. ಆದ್ರೆ ಹೊಟ್ಟೆಪಾಡಿಗೆಂತಾರೂ ಬೇಕಲ. ಇನೂ ಕುಳಿಮಾಗೋಡು, ಮಾಗೋಡಿಗೆ ಹೋಗಕ್ಕು ಅಂದ್ರೂ ಅಲ್ಲಿ ತಿನ್ನಕ್ಕೆಂತೂ ಸಿಗ್ತಲ್ಲೆ. ಊಟ ಹೇಳದು ಸಂಜಿಗೇ ಅಂದ್ರೆ ಎಂತಾರೂ ಬೇಕಾತಲ ಹೇಳಿ ನೊಡ್ತಿರಕಾದ್ರೆ ಇಲ್ಲೊಂದು ಅಂಗಡಿ ಕಾಣ್ತು. ಇಲ್ಲಿರೋ ಪುಟ್ಟಬಾಳೆ,ಕರಿಬಾಳೆಗಳಿಗೆ ನಂಗನೇ ಗಿರಾಕಿ ಆಗಿ ಮಾಗೋಡಿನ ಕಡೆಗೆ ಹೊಂಟ್ಯ


ಮಾಗೋಡು ಜಲಪಾತ
ಇಲ್ಲಿನ ಊರುಗಳ ಹೆಸ್ರು ಒಂಥರಾ ಮಜ ಇದ್ದು. ಕಿರಕುಂಭತ್ತಿ, ಕರಕುಂಕಿ ಹೇಳ ಊರುಗಳು ಸಿಗ್ತು ಮಾಗೋಡಿಗೆ ಹೋಗಕ್ಕಿದ್ರೆ. ಹಂಗೇ ಮುಂದೆ ಬಂದ್ರೆ ಮೊಟ್ಟೆಗದ್ದೆ ಹೇಳ ಬಸ್ಟಾಪು ಸಿಗ್ತು .ಅಲ್ಲಿಂದ ಮಾಗೋಡಿಗೆ ೨.ಕಿ.ಮೀ ನಡ್ಯಕ್ಕು. ಯಲ್ಲಾಪುರದಿಂದ ಬಸ್ಸಿರದು ಅಲ್ಲಿ ತಂಕ ಮಾತ್ರ. ಗಾಡೀಲಿ ಬಂದ್ರೆ ಮಾಗೋಡಿನ ಅರಣ್ಯ ಇಲಾಖೆಯ ಪ್ರವೇಶದ್ವಾರದ ತಂಕ ಬರ್ಲಕ್ಕು.

ಮಾಗೋಡಿಗೆ ಬರದೇನೋ ಬಂದ್ಯ. ಆದ್ರೆ ಅಲ್ಲಿಗೆ ಬರ ಹೊತ್ತಿಗೆ ಫುಲ್ಲು ಮಂಜು. ಹಂಗಾಗಿ ಫಾಲ್ಸು ಕಾಣ್ತೋ ಇಲ್ಯೋ ಹೇಳ ಅನುಮಾನ ಕಾಡಕ್ಕಿಡುತ್ತು. ಎಂತಾರೂ ಆಗ್ಲಿ ಹೇಳಿ ಅಲ್ಲಿನ ತಲಾ ಹತ್ತು ರೂನ ಪ್ರವೇಶಶುಲ್ಕ ಕೊಟ್ಟಿಕ್ಕಿ ಒಳಗೆ ಬಂದ್ಯ. ಅಂದಂಗೆ ಇಲ್ಲಿ ಚಹಾ , ಕಾಫಿ, ತಿಂಡಿ ಸಿಗ್ತು. ಒಂದು ಘಂಟೆ ಕಾಯದಾದ್ರೆ ಊಟನೂ ಸಿಗ್ತು. ಇಲ್ಲೇ ಊಟ ಮಾಡದಾದ್ರೆ ಕೆಳಗಿರೋ ನಂಬರಿಗೆ ಮುಂಚೆನೇ ಫೋನ್ ಮಾಡಿ ಹೇಳ್ಲಕ್ಕು. ಅಥವಾ ಫಾಲ್ಸ್ ನೋಡಕ್ಕೆ ಹೋಗ ಮುಂಚೆ ಹೇಳಿದ್ರೆ ಬರ ತಂಕ ಸುಮಾರಿಗೆ ಊಟ ರೆಡಿ ಆಗಿರ್ತು. ಹೆಂಗಿದ್ರೂ ಮಂಜು ಅಂದ್ರೆ ಇಲ್ಲಿ ಹೆಚ್ಚಿಂದೆಂತೂ ಆಗ್ತಲ್ಲೆ. ಹಂಗಾಗಿ ಒಂದ್ಘಟೆ ಕಾಯದೆಂತ ಹೇಳಿ ನಂಗ ಊಟಕೆ ಹೇಳ್ಲೆ. ಸೀದಾ ಜಲಪಾತ ನೊಡಕ್ಕೆ ಹೊಂಟ್ಯ.


Our Group infront of the Magod falls in the afternoon
ಇಲ್ಲಿ ಒಂದೇ ವೀವ್ ಪಾಯಿಂಟ್ ಇರದಲ್ಲ. ಮೊದ್ಲ ವೀವ್ ಪಾಯಿಂಟಿನ ಬಲಗಡೆಯಿಂದ ಒಂದು ದಾರಿ ಕೆಳಗೆ ಹೋಗ್ತು. ಅದ್ರಲ್ಲಿ ಹೋದ್ರೆ ಇನ್ನೂ ಸುಮಾರಷ್ಟು ವೀವ್ ಪಾಯಿಂಟುಗಳಿದ್ದು. ಹಂಗೇ ಕೆಳಗೆ ಹೋದ್ರೆ ಈ ಜಲಪಾತದ ಮತ್ತೊಂದು ಬದಿಗಿಂದ ಧುಮುಕೋ ಇನ್ನೆರಡು ಜಲಪಾತಗಳೂ ಕಾಣ್ತು
Our Group descending to one more view point
Travelling to one more view point
Finally we could see Magod falls from one of the view points
ಸಖತ್ ಮಂಜಿದ್ರೂ ಸ್ವಲ್ಪ ಹೊತ್ತು ಕಾದ ಮೇಲೆ ಮಂಜಿನ ಪರೆ ಸರಿಯಕ್ಕಿಡಿತು. ಮೂರ್ನಾಲ್ಕು ನಿಮಿಷ ಕಾದ್ರೆ ಬೀಸೋ ಗಾಳಿ ಜೊತೆಗೇ ಚೂರ್ಚೂರೇ ಮಂಜು ಸರೀತು. ಕಣ್ಣಿಗೇನೋ ಫಾಲ್ಸ್ ಕಾಣ್ತಿರ್ತು. ಆದ್ರೆ ಕ್ಯಾಮೆರಾ ಮೋಡ್ ಸರಿ ಮಾಡ್ಕಂಡು ಫೋಟೋ ತೆಗ್ಯಹೊತ್ತಿಗೆ ಮತ್ತೆ ಮಂಜು ಮುಚ್ಕಂಡಿರ್ತು. ಮತ್ತೆ ಮಂಜು ಸರ್ಯಕ್ಕು ಅಂದ್ರೆ ಮತ್ತೆ ಮೂರ್ನಾಲ್ಕು ನಿಮಿಷ ಕಾಯಕ್ಕು. ಈ ಕಣ್ಣಾಮುಚ್ಚಾಲೆನೇ ಒಂತರ ಖುಷಿ ಕೊಟ್ಚು
ಕೊನೆಗೂ ನಂಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಾತೊಡ್ಡಿ ಜಲಪಾತ
ಈ ಮಾಗೋಡು ಜಲಪಾತಕ್ಕೆ ಬೇಸಗೆ ಸಮಯದಲ್ಲಿ ಬಂದ್ರೂ ಇದು ಬರೀ ನೋಡ ಜಲಪಾತ ಅಷ್ಟೆಯಡ. ಇಲ್ಲಿ ಜಲಪಾತದ ನೀರಿನ ತಂಕ ಇಳಿಯಕ್ಕಾಗ್ತಲ್ಲೆ. ಆದ್ರೆ ಬಿಸಿಲಿದ್ದ ದಿನ ಅಥವಾ ಬೇಸಿಗೇಲಿ ಈ ಜಲಧಾರೆ ಸ್ವಚ್ಛವಾಗಿ , ಕಷ್ಟಿಲ್ಲದೆ ಕಾಣ್ಗು ಅಷ್ಟೆ. ಹಂಗೇ ಮೇಲ್ಬಂದ ನಂಗ ಇಲ್ಲಿನ ಅರಣ್ಯ ಇಲಾಖೆಯ ಕ್ಯಾಂಟೀನಲ್ಲಿ ಮಂಡಕ್ಕಿ, ಬಿಸಿ ಬಿಸಿ ಚಾ ಹೀರ್ಕಂಡು ಮುಂದೆ ಹೊಂಟ್ಯ. ಅಂದಂಗೆ ಈ ಜಲಪಾತದ ಪ್ರವೇಶ ಸಮಯ ಬೆಳಗ್ಗೆ ಎಂಟರಿಂದ ಸಂಜೆ ಆರು.
 

 ಕುಳಿ ಮಾಗೋಡು
ಈ ಮಾಗೋಡಾದ್ಮೇಲೆ ನಂಗ ಕೊಂಟಿದ್ದು ಕುಳಿಮಾಗೋಡು ಫಾಲ್ಸಿನ ಕಡಿಗೆ. ಈ ಫಾಲ್ಸಿನ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲೆ. ಮತ್ತೆ ಇಲ್ಲಿನ ಬಸ್ಟಾಪಿಂದ ಕೆಳಗೋಗ ದಾರಿಲೂ ಸುಮಾರಷ್ಟು ಕಡೆ ಕಲವುಗಳು ಸಿಕ್ಕು ಎತ್ಲಗೆ ಹೋಯಕ್ಕು ಹೇಳ ಡೌಟ್ ಬತ್ತು. ಆದ್ರೆ ಸಿಕ್ಕ ಎಲ್ಲ ಹಾದೀಲೂ ಎಡಕ್ಕೆ ಬಲಕ್ಕೆ ಹೋಗದೇ ಸೀದಾ ಹೋಯಕ್ಕು ಇಲ್ಲಿ, ಕೊನೆಗೊಂದ್ಕಡೆ ಎಡಕ್ಕೆ ತಿರುಗಿ ಅಲ್ಲಿ ಸಿಗೋ ಭಟ್ಟರ ಮನೆ ಹತ್ರ ಬಲಕ್ಕೆ ತಿರಗಕ್ಕು ಹೇಳಿ ಇಲ್ಲಿ ಸಿಕ್ಕವೊಬ್ಬವ ಹೇಳ್ದ. ನಂಗ ಸಾಗಿದ ಹಾದಿಯ ಚಿತ್ರ ಹಾಕಿದ್ದಿ. ಮುಂದಿನ ಸಲ ಹೋಗವ್ರ ಅನುಕೂಲಕ್ಕೆ ಹೇಳಿ

on the way to Kulimagod
Village Roads where only Bikes can go or Jeeps can go with difficulty. But not Maruti Ominis

First Diversion where you need to go straight
See the path where our guys are going in that.

one more left turn which takes to one of the houses. But need to go straight again


Go straight again

Don't take right. Follow the straight path which has the tire marks.
ಇಲ್ಲಿ ಕೆಲವೊಂದು ಕಡೆ ನೇರ ಹಾದಿ ಇಲ್ದೇ ಎಡಕ್ಕೋ ಬಲಕ್ಕೋ ಹೇಳಿ ಡೌಟ್ ಬಂದಾಗ ಇಲ್ಲಿರೋ ಬೈಕು, ಜೀಪಿನ ಚಕ್ರಗಳ ಗುರುತು ಹಿಡಿದು ಹೋಗ್ಲಕ್ಕು.ಇಲ್ಲಿಗೆ ಬರ ಜನ ಕಮ್ಮಿಯಾದ್ರೂ ಆಗಾಗ ಬರದಕ್ಕಾಗಿ ಈ ಚಕ್ರಗಳ ಗುರ್ತು ಇದ್ದೇ ಇರ್ತು
ಹಂಗೇ ಮುಂದೆ ಬಂದ್ರೆ ಒಂದ್ಕಡೆ ರಸ್ತೆ ಕೆಳಗಿಳಿಯಕ್ಕೆ ಶುರು ಆಗ್ತು. ಅಲ್ಲೇ ಒಂದು ಬೇಲಿನೂ ಕಾಣ್ತು. ಅದ್ನ ದಾಟಿ ಮುಂದೆ ಬಂದ್ರೆ ಒಂದು ಭಟ್ರ ಮನೆ ಸಿಗ್ತು. ಇಲ್ಲಿ ನಿಂಗ ಎಲ್ಲಾದ್ರೂ ದಾರಿ ತಪ್ಪಿದ್ರೂ ಅಲ್ಲೆಲ್ಲಾದ್ರೂ ಸಿಗ ಮನೆಗಳ್ನ ಕೇಳ್ಕಂಡು ಮತ್ತೆ ಜಲಪಾತದ ಕಡಿಗೆ ಬರ್ಲಕ್ಕು
ಭಟ್ರ ಮನೆ ಕಂಡ್ ತಕ್ಷಣ ಮುಂದಿನ ದಾರಿ ಕೇಳಕ್ಕೆ ಹೇಳಿ ಕೃಷ್ಣ ಹೋದ ಹೇಳಾತು. ಅವ್ರ ಹತ್ರ ಕೇಳಿದ್ರೆ ಇಲ್ಲೇ ಮುಂದೆ ಹೋದ್ರೆ ಒಂದು ಮನೆ ಸಿಗ್ತು. ಅದ್ರ ಪಕ್ಕದಲ್ಲೇ ಒಂದು ಕೊಡ್ಲು ಸಿಕ್ತು. ಅದ್ರ ಜೊತಿಗೇ ಹೋದ್ರೆ ಒಂದು ಹತ್ತು ನಿಮಿಷಕ್ಕೆ ನಿಂಗಕ್ಕೆ ಫಾಲ್ಸು ಸಿಗ್ತು ಅಂದ ಅಲ್ಲಿ ಅವು. ಅವಂದಂಗೇ ಮುಂದೊಂದು ಮನೆ ಸಿಗ್ತು. ಅದ್ರ ಪಕ್ಕದಲ್ಲಿರೋ ತ್ವಾಟನೂ ಕಾಣ್ತು. ಆದ್ರೆ ಅಲ್ಲಿಂದ ಮುಂದೆ ಹೆಂಗೆ ಹೇಳಿ ಗೊತ್ತಾಗ್ಲೆ. ಹಂಗೇ ಇದ್ದ ಕಾಲು ದಾರೀಲಿ ಹೋದ್ರೂ ಬಾಳೇ ತೋಟದ ಬದಿಗೆ ಹೋಗಿ ಕೊನೆಯಾಗ ತರ ಕಾಣ್ತಿತ್ತು ಅದು. ಬಾಳೆ ತೋಟದಿಂದ ಮುಂದೂ ಒಂದು ದಾರಿ ಕೆಳಗಿಳಿಯ ತರ ಕಂಡು, ಅದ್ರ ಪಕ್ಕದಲ್ಲೇ ಹರಿಯೋ ನೀರೊಂದ ಕಂಡ್ರೂ ಆ ದಾರಿ ಸಕ್ಕತ್ತು ಶಣ್ಣಕ್ಕಿದ್ದು ಇದು ಜಲಪಾತದ ದಾರಿ ಅಲ್ದೇನ ಅನುಸ್ತು. ಅಷ್ಟರಲ್ಲೇ ಕೃಷ್ಣನ ಕಾಲಿಗೆ ಒಂದು ಹತ್ತು ಉಂಬ್ಳ ಹತ್ಕಂಡು ಇದಲ್ಲ ಕಾಣ್ತು ದಾರಿ ಅನಿಸಕ್ಕಿಡುತ್ತು. ಸರಿ, ಎಂತಕ್ಕೂ ದಾರಿ ಎಂತ ಹೇಳಿ ಮತ್ತೆ ಕೇಳ್ಕಂಡು ಬರನ ಹೇಳಿ ನಾನು , ರಾಘು ವಾಪಾಸ್ ಹೊಂಟ್ಯ. ಮತ್ತದೇ ಮನೆಗೆ ವಾಪಾಸ್ ಹೋಗಿ ಕೇಳಿದ್ರೆ ಅವ್ರು ನಿಂಗ ತೋಟಕ್ಕೆ ಹೋಗಿ ಅಲ್ಲಿನ ಕೊಡ್ಲು ಜೊತೆಗೇ ಹೋಗಿ, ಹತ್ತು ನಿಮಿಷದಲ್ಲಿ ಫಾಲ್ಸ್ ಸಿಗ್ತು ಆದ್ರೆ ಉಂಬ್ಳ ಇರ್ಗು ಹುಷಾರು ಅಂದ. ಅವ ಹೇಳ್ತಿದ್ದಿದ್ದು ಆ ನೀರಿನ ಅವಳೆ ಬಗ್ಗೆನೆಯ ಹೇಳಿ ಗೊತ್ತಾದ್ಮೇಲೆ ನಂಗ ವಾಪಾಸ್ ಬಂದ್ಯ. ಹರೀಶಣ್ಣಂಗೆ ಹುಷಾರಿಲ್ಲದಂಗೆ ಆಗ್ತಾ ಇದ್ದು. ಕೃಷ್ಣಂಗೆ ಉಂಬಳದ ಭಯ ಕಾಡ್ತಿತ್ತು. ಹಂಗಾಗಿ ಹೋಗದಿದ್ರೆ ನಿಂಗ ಹೋಗ್ಬನ್ನಿ.ನಂಗ ಬರದಿಲ್ಲೆ ಅಂದ. ಸರಿ, ನಂಗ ನಿಧಾನ ಹೋಗ್ಬತ್ಯ ಹೇಳಿ ನಾನು, ರಾಘು ಧೈರ್ಯ ಮಾಡಿ ಆ ಅವಳೆ ಕೂಡ್ಕಂಡು ಮುಂದೆ ಹೊಂಟ್ಯ,
on the way to KuliMagod Falls
Way towards Kulimagod falls
ಮೊದ್ಲು ಇಲ್ಲಿ ದಾರಿಯೇ ಇಲ್ಯನ ಅಂತ ಅನಿಸಿದ್ರೂ ಮುಂದೆ ಹೋದಂಗೆ ಆ ಹೊಳೆ ಬಡ್ಡಿಗೇ ಒಳ್ಳೆ ದಾರಿ ಕಾಣುಸ್ತು. ಮಧ್ಯ ಮಧ್ಯ ಇದ್ದ ಜೇಡರ ಬಲೆಗಳನ್ನೆಲ್ಲಾ ಹೊಡ್ಕತ್ತ ನಂಗ ಕೆಳಗೆ ನಡದ್ಯ. ಐದು ನಿಮಿಷ ನಡದಿದ್ದಷ್ಟೆ. ಫಾಲ್ಸಿನ ಶಬ್ದ ಕೇಳಕ್ಕಿಡುತ್ತು. ನಮ್ಮ ಬಲಬದಿಗೇ ಫಾಲ್ಸಿತ್ತು. ಹೆಚ್ಚಿನ ಆಳ, ಡೇಂಜರು ಇಲ್ಲದ ಈ ಫಾಲ್ಸಲ್ಲಿ ಚೆನ್ನಾಗಿ ಆಟ ಆಡ್ಲಕ್ಕು. ಸುಮಾರು ಎರಡು ಮೂರು ಕಿಮೀ ನಡ್ಕಂಡು, ಹುಡಕ್ಕಂಡು ಬರಕಾಗಿರದಕ್ಕೆ ಇಲ್ಲಿಗೆ ಹೆಚ್ಚಿನ ಜನ ಬತ್ವಲ್ಲೆ ಕಾಣ್ತು. ಹಂಗಾಗಿ ಈ ಫಾಲ್ಸಿನ ಸುತ್ತಮುತ್ತ ಚೆನ್ನಾಗಿದ್ದು. ಆದ್ರೂ ಇಲ್ಲೊಂದು ಖಾಲಿ ಬಾಟ್ಲಿ  ಕಂಡು ಬೇಜಾರಾತು.
View of Kulimagodu falls, Yellapura
ಈ ಫಾಲ್ಸಲ್ಲಿ ಸುಮಾರು ಕಾಲ್ಘಂಟೆ ಆಟ ಆಡಿ ಮತ್ತೆ ಮೇಲ್ಬಂದ್ಯ.

Way to  Kuli Magod falls, way back
ಕೃಷ್ಣ, ಹರೀಶಣ್ಣಂಗೆ ನಿಂಗ ಹೋಗ್ಬರದಿದ್ರೆ ಹೋಗ್ಬನ್ನಿ. ನಿಂಗಳ ಜೊತೆಗೆ ನಂಗ ಮತ್ತೆ ಬತ್ಯ ಅಂದ್ರೂ ಅವ್ಕೆ ಇಲ್ಲೇ ಲೇಟಾಗಿ ಬಿಟ್ರೆ ಮತ್ತೆ ಜೇನ್ಕಲ್ಲು ಗುಡ್ಡ ನೋಡಕ್ಕಾಗ್ಯಲ್ಯೇನೋ ಅನ್ಸಕ್ಕಿಡುತ್ತು. ಹಂಗೆ ಮೇಲೆ ಹೊಂಟ್ಯ. ಇಲ್ಲಿನ ಬಡ್ಡೆ ಹತ್ಕಂಡು ನಮ್ಮ ಓಮಿನಿ ಹತ್ರ ಬರಕ್ಕಿದ್ರೆ ಐದೂಹತ್ತಾಗ್ತಾ ಬಂದಿತ್ತು.

ಜೇನುಕಲ್ಲು ಗುಡ್ಡ
ಹಂಗೇ ವಾಪಾಸ್ ಬಂದು ಜೇನುಕಲ್ಲುಗುಡ್ಡದ ಹಾದಿ ಹಿಡ್ಯಕ್ಕು. ಮಾಗೋಡಿಂದ ಜೇನುಕಲ್ಲುಗುಡ್ಡಕ್ಕೆ ೪ ಕಿ.ಮೀ ಇಲ್ಲಿನ ಹೆಬ್ಬಾರಮನೆ ಬಸ್ಟಾಪಿನವರಿಗೆ ಮಾತ್ರ ಬಸ್ಬತ್ತು. ಅಲ್ಲಿಂದ ಮತ್ತೆ ೨ ಕಿ.ಮೀ ನಡ್ಯಕ್ಕು. ಮದ್ಯ ಮರ ಬಿದ್ದು ಮೂರು ಕಿ.ಮೀ ನಡ್ಯಕ್ಕಾಗ್ತೇನ ಹೇಳ್ತಿದ್ದ ನಮ್ಮ ಡ್ರೈವರು. ಮಧ್ಯಾಹ್ನದ ಊಟಿಲ್ದೇ ಹೋದ್ರೂ ನೀರು, ಬಾಳೆಹಣ್ಣು, ಮಧ್ಯಾಹ್ನದ ಮಂಡಕ್ಕಿಯಿಂದ ಒಂಚೂರೂ ಸುಸ್ತಾಗದೇ ಮತ್ತೆ ನಡ್ಯಕ್ಕೆ ರೆಡಿಯಿದ್ದ ನಂಗ ಜೈ ಹೇಳಿ ಹೊರಟಿದ್ಯ. ಆದ್ರೆ ಬಿದ್ದ ಮರ ತೆಗದಿದ್ರೂ ಇಲ್ಲಿನ ಹಾಳಾದ ರಸ್ತೆಗಳಲ್ಲಿ ಬರಕೆ ಸುಮಾರು ಟೈಂ ಹಿಡುತ್ತು. ಇಲ್ಲಿಗೆ ಬರ ತಂಕನೇ ಕತ್ಲಾಗಕ್ಕಿಡುದು ಈಗಾಗ್ಲೇ ಸೂರ್ಯ ಪಾಕಿಸ್ತಾನಕ್ಕೆ ಹೋಗಾಗಿರ್ತೇನ ಹೇಳಿ ತಮಾಷೆ ಮಾಡ್ತಿದ್ದ ನಮ್ಮ ಅಧ್ಯಕ್ಷರು. ಹೋಗಿದ್ರೆ ಹೋಗ್ಲಿ, ಅಲ್ಲಿ ತಂಕ ಹೋಗಿ ನೋಡ್ಕಂಡು ಬರದೇ ಸೈ ಹೇಳಿ ನಂಗ ಮುಂದೆ ಹೊಂಟ್ಯ ಹೇಳಾತು. ಅಲ್ಲಿ ನಮಗಿಂತ ಮುಂಚೆ ಬಂದಿದ್ದ ಕಾರೊಂದು ಕಾಯ್ತಿದ್ರಿಂದ ಅವ್ಕೆಂತಾಗ್ತೋ ಅದೇ ನಮ್ಗೂ ಆಗ್ತು ಹೇಳ ಭರವಸೆ ಬೇರೆ

Moving Towards Jenukallu Gudda View point
ಇಲ್ಲಿ ಮೊದ್ಲು ಮೋಡ ಇದ್ರೂ ಕೊನಿಗೆ ಬಿಸ್ಲು ಬರಕಿಡುದು ಸುತ್ಲಿದ್ದ ಹಸಿರು ಕಾಣಕ್ಕಿಡುತ್ತು. ಸೂಪರಂದ್ರೆ ಸಖತ್ ಸೂಪರ್ರಾಗಿದ್ದ ಈ ಜಾಗಕ್ಕೆ ಬರ್ದಿದ್ರೆ ನಂಗಕ್ಕೆ ಸಖತ್ ಲಾಸಾಗ್ತಿತ್ತು ಹೇಳಿ ಮಾತಾಡ್ಕತ್ತಾ ಸೂರ್ಯಾಸ್ತ ಆಗದನ್ನೇ ಕಾಯಕ್ಕಿಡದ್ಯ ನಂಗ. ಅಲ್ಲೇ ಬೆಂಗಳೂರಿನ ಸದ್ಯಕ್ಕೆ ಶಿವಮೊಗ್ಗದಲ್ಲಿರೋ ಶಿವಸುಬ್ರಹ್ಮಣ್ಯ ಮತ್ತೆ ಅವರ ಫೇಸ್ಬುಕ್ ಫ್ರೆಂಡ್ ಶ್ರೀ ಸಾಯಿ ಚರಿತ್ ಅವ್ರ ಪರ್ಚಯ ಆತು. ಅವು ಅವ್ರು ನೋಡಿದ ಜಾಗಗಳ ಕತೆ, ಮುಂದೆ ನೋಡಕ್ಕು ಅಂತಂತ್ಕಂಡಿದ್ದು ಎಲ್ಲಾ ಹೇಳ್ತಿದ್ರೆ ನಮ್ಮಂಗೇ ಸುತ್ತವ ಇನ್ನೊಬ್ಬ ಸಿಕ್ಕಿದ್ದು ನಂಗಕ್ಕೂ ಖುಷಿ ಆಗಿತ್ತು.
ಜೇನುಕಲ್ಲು ಗುಡ್ಡದಿಂದ ಸುತ್ತಲಿನ ಪ್ರಕೃತಿಯ ನೋಟ
View from Jenukallu Gudda

One of the Panoramas at Jenukallu Gudda


Our Group pic at Jenukallu Gudda(Harish, Me, Raghu, Krishna )


View of Path towards Jenukallu Gudda
ರುಚಿ ಹೋಟಲ್ಲಲ್ಲಿ ರಾತ್ರಿಯೂಟ:ರಾತ್ರೆ ರೂಮಿಗೆ ಬಂದು ಫ್ರೆಶ್ಯಾಗಿ ತಕ್ಷಣ ಊಟಕ್ಕೆ ಹೊಂಟ್ಯ. ಇಲ್ಲಿನ ಗೀತಾಭವನದಲ್ಲಿ ಚೆನ್ನಾಗಿ ಊಟ ಸಿಗ್ತು ಹೇಳಿ ಕೇಳಿದ್ಯ. ಆದ್ರೆ ಅಲ್ಲಿಗೆ ಹೋಗ ತಂಕ ಅದು ಬಾಗ್ಲು. ಇದೆಂತ ಕತ್ಯಪ್ಪ.ಎಂಟು ಘಂಟೆಗೇ ಬಾಗ್ಲು ಹಾಕ್ವಾ ಇಲ್ಲಿ ಅಂದ್ಕತ್ತಿರಕಿದ್ರೆ ಅದ್ರ ಪಕ್ಕದಲ್ಲಿರೋ ರುಚಿ ಹೋಟ್ಲು ಕಾಣ್ತು.ಅದ್ರ ಬಗ್ಗೆ ಕೇಳಿದ್ದ ನಂಗ ಅಲ್ಲಿಗೇ ನುಗ್ಗಿದ್ಯ. ಜೋಳದ ರೊಟ್ಟಿ ಊಟ ಅಂದ್ರೂ ನಂಗಕ್ಕೆ ಸಾಕಾಗಷ್ಟು ಜೋಳದ ರೊಟ್ಟಿ ಇರ್ಲೆ ಅವರತ್ರ. ನಾಲ್ಕನೇ ಶನಿವಾರ ಸರ್ಕಾರಿ ಆಫೀಸುಗಳಿಗೆ ರಜಾ ಆಗಿದ್ರಿಂದ ಅವ್ರ ಕಾಯಂ ಗಿರಾಕಿಗಳು ಬತ್ವಲ್ಲೆ ಹೇಳಿ ಮೊದ್ಲೇ ಕಮ್ಮಿ ಮಾಡಿದ್ದ ಕಾಣ್ತು. ಒಂದೊಂದು ರೊಟ್ಟಿ, ಒಂದೊಂದು ಚಪಾತಿ ಕೊಡ್ತಿ ಅಂದ. ಸರಿ ಅಂದ್ಕಂಡು ೪ ಊಟ ತಗಂಡ್ಯ. ಇಲ್ಲಿನ ಕೋಸು ಪಲ್ಯ, ಕಡ್ಲೆಕಾಳು ಸಬ್ಜಿಗಳು ಹಶುವಾದ ನಂಗಕ್ಕೆ ರುಚಿಯೇ ಅನ್ಸಿದ್ರೂ ಸಾಂಬಾರು ಇಷ್ಟ ಆಗ್ಲೆ. ಆದ್ರೂ ಇದು ಬಿಟ್ರೆ ಬೇರೆಂತೂ ಇಲ್ಲೆ ಹೇಳಿ ಪಕ್ಕಾ ಆಗಿದ್ರಿಂದ ಅದ್ನೇ ಪಂಚಾಮೃತ ಅಂದ್ಕಂಡು ಊಟ ಮಾಡಿ ತಲಾ ೬೦ರ ಬಿಲ್ಕೊಟ್ಟಿಗೆ ಹೋಟ್ಲಿಗೆ ಬಂದ್ಯ. ಇಲ್ಲಿನ ಊಟಕ್ಕೆ ೩/೫ ರೇಟಿಂಗ್ ಕೊಡ್ಲಕ್ಕು.

ಸಂಭ್ರಮ ಹೋಟೇಲಿನ ಬೆಳಗ್ಗೆ ತಿಂಡಿ:
ಮಾರನೇ ದಿನ ನಂಗ ಸಾತೊಡ್ಡಿ ನೋಡಕ್ಕಿತ್ತು. ಅಲ್ಲಿಗೆ ಹೋಗ ಬಸ್ಸಿನ ಬಗ್ಗೆ ಹಿಂದಿನ ದಿನ ಸರ್ಕಾರಿ ಬಸ್ಟಾಂಡಲ್ಲಿ ಕೇಳಿದ್ರೆ ಮೊದಲನೇ ಬಸ್ಸು ಹನ್ನೊಂದುಕಾಲಿಗೆ ಅಂದಿದ್ದ ಅವ. ಸರಿ ಹೇಳಿ ನಮ್ಮ ಅಧ್ಯಕ್ಷರ ಹತ್ರನೇ ಮಾತಾಡಿದ್ರಾತು ಹೇಳಿ ಓಮಿನಿ ಸ್ಟಾಂಡಿಗೆ ಹೋದ್ರೆ ಅವ ಅಲ್ಲೇ ಇದ್ದ. ಅವ್ನೇ ಬಂದು ನಾಳೆಗೆ ೨ ಏನೂ ಕೊಡದು ಬ್ಯಾಡ. ಸ್ವಲ್ಪ ನೋಡಿ ಕೊಡಿ. ಹದಿನೈದು ನೂರು ಮಾಡ್ಕಳನ ಬೇಕಾದ್ರೆ ಹೇಳ್ದ ಅವ. ಸರಿ ಅಂತೇಳಿ, ಅವಂಗೆ ಏಳೂವರೆಗೆ ಹೋಟ್ಲಿಗೆ ಬಾ. ಬೆಳಗ್ಗೆ ಬೇಗ ಬಂದ್ರೆ ಎಲ್ಲಾ ಜಾಗಗಳ್ನೂ ನೋಡ್ಲಕ್ಕು ಹೇಳಿಕ್ಕಿ ಬಂದ್ಯ. ಮತ್ತೆ ಅವಂಗೆ ಕಾಲ್ ಮಾಡಕ್ಕೆ ಅವನ ನಂಬರ್ ತಗಂಡಾಗಿತ್ತು. ಅವತ್ತು ರಾತ್ರೆ ನಂಗ ಸಂಭ್ರಮ ಲಾಡ್ಜಲ್ಲೇ ಉಳಿದು ಬೆಳಗ್ಗೆ ತಿಂಡಿಗೆ ಸಂಕಲ್ಪ ಹೋಟೇಲ್ ಮತ್ತು ರೆಸ್ಟೋರೆಂಟಿಗೆ ಹೋದ್ಯ ಅಧ್ಯಕ್ಷರ ಓಮಿನಿಯಲ್ಲೇ ಹೋದ್ಯ.  ಸಂಭ್ರಮಕ್ಕೆ ಹೋಲ್ಸಿದ್ರೆ
ಇಲ್ಲಿನ ತಿಂಡಿ ಎಷ್ಟೋ ಉತ್ತಮ ಅನುಸ್ತು. ಚಟ್ನಿ, ಸಾಂಬಾರುಗಳ ಟೇಸ್ಟು ಓಕೆ ಓಕೆಯಾದ್ರೂ ಪೂರಿಯನ್ನ ಬನ್ಸ್ ಮಾಡಿದಂಗೆ ಮಾಡಿದ್ದ. ಬನ್ಸ್ ಮುಂಚೆನೇ ಆರ್ಡರ್ ಮಾಡಿರೂ ಕಾಲು ಘಂಟೆ ಆದ್ಮೇಲೆ ಬನ್ಸಿಗೆ ಲೇಟಾಗುತ್ತೆ, ಬೇರೇನಾದ್ರೂ ಕೊಡದ ಅಂದ ! ಇಲ್ಲಿನ ತಿಂಡಿಗೆ ೩.೧/೫ ರೇಟಿಂಗ್ ಕೊಡಕ್ಕಡಿಲ್ಲೆ. ರಾತ್ರೆ/ಮಧ್ಯಾಹ್ನದ ಊಟಕ್ಕೆ ಇಲ್ಲಿಗೆ ಬರ ಬದ್ಲು ಮುಂದೆ ಬರ್ಯೋ ಗೀತಾಭವನ ಅಥವಾ ಕೃಷ್ಣಭವನಕ್ಕೆ ಹೋಗ್ಲಕ್ಕು   

ಶಿವಪುರ ತೂಗುಸೇತುವೆ:
View of Shivapura Hanging Bridge , Yellapura
ಗೀತಾ ಭವನ, ರುಚಿ ಹೋಟೆಲ್ ಬಸ್ಟಾಂಡಿನ ಪಕ್ಕದಲ್ಲೇ ಇದ್ದು. ಕೃಷ್ಣ ಭವನ ಮತ್ತು ಸಂಭ್ರಮ ಹೋಟೆಲ್ ಅಥವಾ ಶಾನ್ ಭಾಗ್ ಹೋಟೇಲಿಗೆ ಇನ್ನೊಂಚೂರು ಮುಂದೆ ಬರಕ್ಕು. ಶಾನ್ಭಾಗ್ ಹೋಟೆಲ್ ಬಸ್ಟಾಂಡಿಂದ ೨ ಕಿ.ಮೀ ದೂರದಲ್ಲಿದ್ದು. ಸಂಭ್ರದಲ್ಲಿ ತಿಂಡಿ ತಿಂದ ನಂಗ ಸಾತೊಡ್ಡಿಯ ಕಡೆ ಹೊರಟ್ಯ.ಇದು ಯಲ್ಲಾಪುರದಿಂದ ೨೮ ಕಿ.ಮೀ. ಕಾರವಾರ ರಸ್ತೇಲಿ ಬಂದ್ರೆ ಸಿಗೋ ದೇಹಳ್ಳಿ ಗ್ರಾಮಪಂಚಾಯತಿ ಕ್ರಾಸಿಂದ ಸಾತೊಡ್ಡಿಗೆ ೨೫ ಕಿ.ಮೀ. ಸಾತೊಡ್ಡಿಗೆ ೬ ಕಿ.ಮೀ ಇರಹೊತ್ತಿಗೆ ಶಿವಪುರ ತೂಗುಸೇತುವೆ ಸಿಗ್ತು. ೨೦೧೫ರಲ್ಲಿ ನಿರ್ಮಾಣವಾದ ಈ ತೂಗುಸೇತುವೆ ಸುತ್ತಲಿನ ದೃಶ್ಯಗಳನ್ನ ಅಲ್ಲಿಗೆ ಹೋಗೇ ಅನುಭವಿಸಕ್ಕು. ಶಿವಪುರ ಬೋರ್ಡಿಂದ ಈ ತೂಗುಸೇತುವೆ ತಂಕ ಸುಮಾರು ಒಂದು ಕಿ.ಮೀ ಆಗ್ತು. ಬೈಕೆಲ್ಲಾ ಇದೇ ದಾರೀಲಿ ಓಡಾಡಿದ್ರೂ ಮಳೆ ಬಂದು ಕೆಸರಾದಾಗ ಓಮಿನಿ, ಕಾರುಗಳು ಬರದು ಕಷ್ಟ.



 ಕಾಳೀನದಿಗೆ ಅಡ್ಡಲಾಗಿ ಕಟ್ಟಿರೋ ಈ ತೂಗುಸೇತುವೆ ಕಟ್ಟಕ್ಕಿಂತ ಮುಂಚೆ ಆಕಡೆ ಈ ಕಡೆ ಊರಿನ ಜನ ತೆಪ್ಪದ ಮೇಲೆ ಹೋಗಕ್ಕಿತ್ತಡ. ಈಗ ಬೈಕುಗಳೂ ಹೋಗಹಂಗೆ ಮಾಡಿರೋ ಈ ಸೇತುವೆಯಿಂದ ಆಚೀಚೆ ಊರುಗಳ ಜನಕ್ಕೆ ಸಖತ್ ಅನುಕೂಲ ಆಗ್ತಿದ್ದು ಹೇಳ್ತಿದ್ದ ಅಧ್ಯಕ್ಷರು.

 ಸಾತೊಡ್ಡಿ ಜಲಪಾತ
ಸಾತೊಡ್ಡಿ ಜಲಪಾತದ ಬಗ್ಗೆ ಸುಮಾರು ಜನ ಈಗಾಗ್ಲೇ ಬರದಿರ್ತ. ಹಂಗಾಗಿ ಅದ್ರ ಬಗ್ಗೆ ಹೊಸ್ದಾಗಿ ಬರ್ಯದು ಎಂತೂ ಇಲ್ಲೆ ಅಂದ್ಕತ್ತಿ. ಆದ್ರೂ ಇಲ್ಲಿನ ಬಗ್ಗೆ ಒಂದ್ಮಾತು ಹೇಳಲೇ ಬೇಕು. ಇಲ್ಲಿನ ಕೊನೆಯ ಎರಡು ಕಿ.ಮೀ ರಸ್ತೆನ ಸಿಮೆಂಟ್ ರಸ್ತೆ ಮಾಡಿದ್ದ. ಫಾಲ್ಸಿನವರೆಗೆ ನಡೆಯೋ ಸುಮಾರು ಒಂದು ಕಿ.ಮೀ ಮಾರ್ಗನೂ ಸಿಮೆಂಟ್ ರಸ್ತೆ ಮಾಡಿ, ಜನರ ರಕ್ಷಣೆಗೆ ಹೇಳಿ ಕಬ್ಬಿಣದ ಕಂಬಿಗಳನ್ನ ಕೊಟ್ಟು ಸಖತ್ತಾಗಿ ಮಾಡಿದ್ದ. ಬೇಸಿಗೇಲಿ ಫಾಲ್ಸಿನ ಕೆಳಗ್ವರಿಗೂ ಹೋಗ್ಲಕ್ಕಡ. ಆದ್ರೆ ಮಳೆಗಾಲದಲ್ಲಿ ಅಂತ ಸೀನೇ ಇಲ್ಲೆ. ಇಲ್ಲೇ ಮೇಲಿದ್ದ ವೀಕ್ಷಣಾಗೋಪುರವೊಂದು ಈಗ ಮುರಿದುಬಿದ್ದಿದ್ರೂ ಜಲಪಾತ ನೋಡ ಸುಮಾರಷ್ಟು ಜಾಗಗಳಿದ್ದು ಇಲ್ಲಿ. ಅದ್ರ ಬಗ್ಗೆ ಬರ್ಯಕ್ಕಿಂತ ಹೆಚ್ಚು ಜಲಪಾತದ ಚಿತ್ರಗಳೇ ಹೇಳ್ತು ಅಂತಂದ್ಕತ್ತಿ
View of Sathoddi Falls, Yellapura
 ಈ ಜಲಪಾತಕ್ಕೆ ದಬ್ಬೇಸಾಲು ಫಾಲ್ಸು ಹೇಳೂ ಹೆಸ್ರಿದ್ದು.

ಕುಂಬ್ರಾಳು ಜಲಪಾತ
ಇದಕ್ಕೆ ಹೋಗಕ್ಕಿಂತ ನಾಲ್ಕು ಕಿ.ಮೀ ಮುಂಚೆ ಕುಂಬ್ರಾಳು ಹೇಳೊಂದು ಊರು ಸಿಗ್ತು. ಅಲ್ಲಿವರೆಗೆ ಮಾತ್ರ ಬಸ್ಸುಗಳು ಬರದು. ಹಂಗಾಗಿ ಬಸ್ಸಿಗೆ ಬಂದ್ರೆ ಅಲ್ಲಿಂದ ನಡ್ಯಕ್ಕು ಫಾಲ್ಸಿಗೆ. ಈ ಕುಂಬ್ರಾಳಲ್ಲೂ ಕುಂಬ್ರಾಳು ಫಾಲ್ಸ್ ಹೇಳೊಂದು ಫಾಲ್ಸಿದ್ದಡ. ಆದ್ರೆ ಕಾಡ ಮಧ್ಯ ನಡ್ಕಂಡು ಹೋಗ ಆ ಫಾಲ್ಸಿಗೆ ಮಳೆಗಾಲದಲ್ಲಿ ಹೋಗದು ಡೇಂಜರು ಹೇಳಿ ಅಧ್ಯಕ್ಷರು ನಾಲ್ಕೈದು ಸಲ ಹೇಳಿದ್ದಕ್ಕೆ ನಂಗ ಅದಕ್ಕೆ ಹೋಗ್ಲೆ.ಅಂದಂಗೆ ಇಲ್ಲಿ ಕಾಣೋದೂ ಕಾಳಿನದಿಯ ಮತ್ತೊಂದು ಜಲಪಾತವೇ

ಸಾತೊಡ್ಡಿ ಜಲಪಾತ
 ಇಲ್ಲಿನ ಬೋರ್ಡುಗಳದ್ದು ಇನ್ನೊಂದು ಮಜ. ಸಾತೊಡ್ಡಿಯಿಂದ ಸುಮಾರು ಒಂದು ಕಿ.ಮೀ ವಾಪಾಸ್ ಬರೋ ಹೊತ್ತಿಗೆ ಯಲ್ಲಾಪುರಕ್ಕೆ ೨೫ ಕಿ.ಮೀ ಹೇಳಿ ತೋರುಸ್ತು ! ಅಲ್ಲಿಂದ ಸ್ವಲ್ಪ ಮುಂದೆ ಬಂದು ಸಿಗೋ ಮಣ್ಣ ರಸ್ತೇಲಿ ೩-೪ ಕಿ.ಮೀ ಸಾಗೋ ಹೊತ್ತಿಗೆ ಮತ್ತೆ ಯಲ್ಲಾಪುರ ೨೪ ಕಿ.ಮೀ ಹೇಳ ಬೋರ್ಡ್ ಕಾಣ್ತು ! ಅಂದಂಗೆ ಈ ಕುಂಬ್ರಾಳ ಹೇಳದು ಶಿವಪುರ ಬಸ್ಟಾಪಿಂದ ಸುಮಾರು ೨೦೦ ಮಿಟರ್ ಮುಂದಿದ್ದು ಅಷ್ಟೆ.  ಅಲ್ಲಿಂದ ಮುಂದೆ ಬರ್ತಿದ್ದಂಗೆ ರಸ್ತೆ ಚೆನಾಗಾಗ್ತಾ ಹೋಗ್ತು. ಅಲ್ಲಿಂದ ಮುಂದೆ ಗಣೇಶಗುಡಿಯಿಂದ ಯಲ್ಲಾಪುರದವರೆಗಿನ ರಸ್ತೆ ಚೆನ್ನಾಗಿದ್ದು.

ಅಂಬಿಕಾನಗರದ ವೀವ್ ಪಾಯಿಂಟು ಮತ್ತು ಕಾನೂರು ಜಲಪಾತ:
ಇಲ್ಲಿಂದ ಯಲ್ಲಾಪುರಕ್ಕೆ ವಾಪಾಸ್ ಬಂದು ಅಲ್ಲಿಂದ ಅಂಬಿಕಾನಗರದ ರಸ್ತೆ ಹಿಡದ್ರೆ ಅಲ್ಲಿ ಕಾಳೀನದಿಯ ವೀವ್ ಸಿಗ್ತಡ. ಹಂಗೇ ಕಾನೂರು ಜಲಪಾತವೂ ಸಿಗ್ತು. ಆದ್ರೆ ಮಳೆಗಾಲದಲ್ಲಿ ಅಲ್ಲಿಗೆ ಕಾಡಲ್ಲಿ ನದಿ ಮಧ್ಯೆ ನಡ್ಕಂಡೋಗದು ಡೇಂಜರ್ ಅಂತಂದಿದ್ದಕ್ಕೆ ಅಲ್ಲಿಗೆ ಹೋಗ್ಲೆ. ಬೇಸಿಗೆ ಸಮಯದಲ್ಲಿ ಬಂದ್ರೆ ಇವೆರಡನ್ನೂ ನೋಡ್ಲಕ್ಕು



ಲಾಲ್ ಗುಳಿ ಮಾರುತಿ
ಯಲ್ಲಾಪುರಕ್ಕೆ ವಾಪಾಸ್ ಬರಕ್ಕಿದ್ರೆ ಸಿಗೋ ಆನಗೋಡು ಹೇಳ ಊರಿಂದ ಮುಂದೆ ಸಿಗೋ ಎಡಗಡೆ ಕಪ್ಪಗದ್ದೆ ಹೇಳಿ ಸಿಗೋ ಬೋರ್‍ಡಿನ ಬಳಿ ತಿರುಗಿ ಹೋದ್ರೆ ಮೂರು ಕಿ.ಮೀ ಹೋಗ ಹೊತ್ತಿಗೆ ಯಲ್ಲಾಪುರದಿಂದ ಬರೋ ಕಣ್ಣಿಗೇರಿ ರಸ್ತೆ ಸಿಗ್ತು. ಅಲ್ಲಿಂದ ೫ ಕಿ.ಮೀ ಹೋದ್ರೆ ಕಣ್ಣಿಗೇರಿ.ಅಲ್ಲಿಂದ ಭಗವತಿ ಸೇರೋ ಆ ರಸ್ತೆ ಚೆನ್ನಾಗಿದ್ದು.ಅದೇ ರಸ್ತೆಯಲ್ಲಿ ಎಡಕ್ಕೆ ಹೋಯಕ್ಕು. ಇಲ್ಲೆಲ್ಲಾ ಆಸೆ, ಕರಡಿ ಕಾಟ ಜಾಸ್ತಿ. ಅದ್ರ ಕಾಟಕ್ಕೊಳಗಾಗಿ ಸರ್ಕಾರದ ಪರಿಹಾರ ಪಡ್ಕಂಡೋರು ಸುಮಾರು ಜನ ಇದ್ದ ಹೇಳ್ತಿದ್ದ ಗಜ. ನಂಗಕ್ಕೆ ಆನೆ, ಕರಡಿ ಕಾಣದಿದ್ರೂ ಒಂದ್ಕಡೆ ನವಿಲು ಕಾಣ್ತು. ಆದ್ರೂ ಈ ರಸ್ತೇಲಿ ಬರಕ್ಕಿದ್ರೆ ಅದ್ರ ಬಗ್ಗೆ ಎಚ್ಚರ ಇರದು ಒಳ್ಳೇದು ಅನುಸ್ತು. ಹಂಗೇ ಮುಂದೆ ಹೋದ್ರೆ ಕನ್ನಡಗಲ್ ಹೇಳೊಂದು ಮಜವಾದ ಹೆಸ್ರಿರ ಊರು ಸಿಗ್ತು. ಅದನ್ನ ದಾಟಿ ಮುಂದೆ ಬರ್ತಿದ್ದಂಗೆ ಸಿಗದೇ ಲಾಲ್ಗುಳಿ ಕ್ರಾಸ್. ಅಲ್ಲಿ ಮುಂದೆ ಹೋಗ ಬದ್ಲು ಎಡಕ್ಕೆ ಹೋದ್ರೆ ಸಿದ್ದಿ ಜನಾಂಗದವ್ರು ಜಾಸ್ತಿ ಇರೋ ಕೊಡಸೆ, ಕೊಳಸೆ ಹೇಳ ಊರುಗಳು ಸಿಗ್ತಡ. ಹಂಗೇ ಮುಂದೆ ಹೋದ್ರೆ ಸೆಳಬೈಲು--> ಹಳಬೈಲು ಸಿಗ್ತು. ಹಳಬೈಲಿನ ನಂತ್ರದ ರಸ್ತೆಗಳು ಸಖತ್ ಹಾಳಾಯ್ದು. ನಂತರ ಲಾಲ್ಗುಳಿ ತಂಗುದಾಣ ಹೇಳ ಬೋರ್ಡ್ ಸಿಗ್ತು. ಅಲ್ಲಿಂದ ಹಂಗೇ ಮುಂದೆ ಹೋದ್ರೆ ಲಾಲ್ಗುಳಿ ಊರು ಸಿಗ್ತು. ಆದ್ರೆ ಅಲ್ಲೆಲ್ಲೂ ಫಾಲ್ಸಿನ ಶಬ್ದವೂ ಕೇಳ್ತಿರ್ಲೆ. ಹೋಗಕ್ಕೆ ದಾರಿಯೂ ಇರ್ಲೆ. ಅಲ್ಲೊಬ್ಬ ಕ್ರಿಶ್ಚಿಯನ್ ಕೊಂಕಣಿ ಅಜ್ಜಿ ಸಿಕ್ಕಿದ. ಅವ್ಳು ಕೊಂಕಣಿಯಲ್ಲಿ ಮಾತಾಡಿದ್ದು ನಂಗಕ್ಕೆ ತಲೆ ಬುಡ ಅರ್ಥ ಆಗ್ಲೆ. ಪುಣ್ಯಕ್ಕೆ ನಮ್ಮ ಡ್ರೈವರಂಗೆ ಕೊಂಕಣಿ ಬಂದಿದ್ದು ಒಳ್ಳೇದಾತು. ಅವ್ಳು ಮಾತಾಡಿದ್ನ ಕೊನೆಗೆ ರೆಕಾರ್ಡ್ ಮಾಡಿ ಇಲ್ಲಿ ಹಾಕಿದ್ದಿ !

Unknown flower at LalGuli
ಇಲ್ಯಾವ ಫಾಲ್ಸೂ ಇಲ್ಲೆ. ಬೇಕಾದ್ರೆ ಇಲ್ಲಿರೋ ಭಟ್ಮಾಮ(ದೇವಸ್ಥಾನದ ಪೂಜೆ ಭಟ್ರು)ನ್ನ ಕೇಳಿ ಅಂತದ ಹೇಳ ಸಾರಾಂಶ ಗೊತ್ತಾತು ಕೊನೆಗೆ ! ಸರಿ ಹೇಳಿ ಹಂಗೇ ಸ್ವಲ್ಪ ಹಿಂದೆ ಬಂದು ಅಲ್ಲಿದ್ದ ಭಟ್ರ ಮನೆ ಹತ್ರ ಹೋದ್ಯ. ಇಲ್ಲಿ ದಾರಿ ಕೇಳಕ್ಕೆ ಹವ್ಯಕನೇ ಸರಿ ಹೇಳಿ ಅದ್ರಲ್ಲೇ ಮಾತಾಡ್ಸಿದ್ರೆ ಅವ್ರು ನಂಗ್ಳನ್ನ ಆಸ್ರಿಗೆ ಕುಡ್ಕಂಡು ಹೋಗ್ಲಕ್ಕು ಬನ್ನಿ ಹೇಳಿ ಒತ್ತಾಯ ಮಾಡಕ್ಕಿಡದ. ಇಲ್ಲೆ.ಲೇಟಾಯ್ದು ಹೇಳಿ ಫಾಲ್ಸಿಗೆ ಹೋಗ ದಾರಿ ಕೇಳಿದ್ಮೇಲೆ ಅವು ಹೇಳಿದ್ದಿಷ್ಟು. ಲಾಲ್ಗುಳಿ ಫಾಲ್ಸಿರದು ಲಾಲ್ಗುಳಿ ಗ್ರಾಮದಲ್ಲೇ ಆದ್ರೂ ಅದಕ್ಕೆ ಹೋಗ ದಾರಿ ಇಲ್ಲಿಂದ ಅಲ್ಲ.ಇಲ್ಲಿಂದ ತಟ್ವಾಳ ಹೇಳ ಜಾಗಕ್ಕೆ ಹೋಗಿ ಅಲ್ಲಿನ ಫಾರೆಸ್ಟ್ ಚೆಕ್ ಪೋಸ್ಟಿನ ಬಡ್ಡಿಗೆ ಕಾಡಲ್ಲಿ ೨ಕಿ.ಮೀ ನಡ್ಕಂಡು ಹೋಗಕ್ಕು. ಆದ್ರೆ ಮಳೆಗಾಲದಲ್ಲಿ ಅಲ್ಲಿಗೆ ಹೋಗಕ್ಕೆ ಸರಿಯಾದ ದಾರಿಯಿಲ್ಲೆ. ಕಾಡೊಳಗೆ ಹುಡ್ಕಂಡು ಹೋಗಕ್ಕೆ ಗೊತ್ತಿದ್ದೋರು ಯಾರಾದ್ರೂ ಇದ್ರೆ ಅಡ್ಡಿಲ್ಲೆ. ಇಲ್ದ್ರಿದ್ರೆ ಕಷ್ಟ ಅಂದ. ನಂಗ ನೆಟ್ಟಲ್ಲಿ ಇಲ್ಲೇ ಇದ್ದು ಹೇಳಿ ಕೊಟ್ಟಿದ್ವಲ ಅಂದಿದ್ದಕ್ಕೆ. ಹೂಂ. ನೆಟ್ಟಲ್ಲಿ ತಪ್ಪು ಕೊಟ್ಟಿದ್ದನ್ನ ನೋಡ್ಕಂಡು ಸುಮಾರು ಜನ ಇಲ್ಲೀವರೆಗೆ ಬಂದು ವಾಪಾಸ್ ಹೋಗ್ತ. ಅದ್ಕೇ ನಂಗ ಹಳಬೈಲತ್ರ ಇದ್ದ ಫಾಲ್ಸಿನ ಬೋರ್ಡನ್ನೂ ತೆಗ್ಸಿ ಹಾಕಿದ್ಯ. ಅಲ್ಲಿಗೆ ಹೋದ್ರೂ ಅಲ್ಲಿ ನೀರಿತ್ರ ಇಲ್ಯ ಗೊತ್ತಿಲ್ಲ. ಮಳೆ ಚೆನ್ನಾಗಿದ್ರೆ ಮಾತ್ರ ನೀರು ಅಲ್ಲಿ. ಈಗ ಅದ್ರತ್ರ ಡ್ಯಾಮು ಮಾಡಿದ ಮೇಲೆ ನೀರು ಸುಮಾರಷ್ಟು ಕಮ್ಮಿ ಆಯ್ದು ಅಂದ !! ಅಯ್ಯ ಕತೆಯೆ.ಇಂತಲ್ಲಿ ಫಾಲ್ಸಿದ್ದು ಹೇಳಿ ಬೋರ್ಡ ಹಾಕ ಹಂಗೆಯಾ ಇಂತಲ್ಲಿ ಫಾಲ್ಸಿಲ್ಲೆ ಹೇಳೂ ಹಾಕಕ್ಕಾತು ಇನ್ಮುಂದೆ ಅಂದ್ಕಂಡ್ಯ. ಅಲ್ಲೇ ಸಿಕ್ಕ ಒಂದು ವಿಚಿತ್ರ ಗೊಂಡೆ ಹೂವಿನ ಫೋಟೋ ತೆಕ್ಕಂಡು ಮುಂದೆ ಹೋದ್ಯ. ಇಲ್ಲಿನ ಮಾರುತಿಮಂದಿರ ತೀರಾ ಹಳೇದೇನೂ ಆಗಿಲ್ದಿದ್ದಕ್ಕೆ, ಈಗಾಗ್ಲೇ ಬಾಗ್ಲು ಹಾಕಿದ್ದಕ್ಕೆ ಅತ್ಲಗೆ ಹೋಗ್ಲೆ. ಅಂದಂಗೆ ತಟ್ವಾಳ ಚೆಕ್ ಪೋಸ್ಟಿಗೆ ಕಣ್ಣಿಗೇರಿಗೆ ಹೋಗಿ ಹೋಗಕ್ಕು. ಕಣ್ಣಿಗೇರಿಯಿಂದ ಸುಮಾರು ೧೫ ಕಿ.ಮೀ ಅಲ್ಲಿಗೆ. ಮುಂದಿನ ಸಲ ಏನಾದ್ರೂ ಲಾಲ್ಗುಳಿ ಫಾಲ್ಸಿಗೆ ಪ್ಲಾನ್ ಮಾಡಿದ್ರೆ ಅಲ್ಲಿಗೆ ಹೋಗ್ಬಂದವ್ರನ್ನ ಜೊತೆಗೆ ಕರ್ಕಂಡೇ ಹೋಗಿ 




ಅಜ್ಜೀಗುಂಡಿ ಜಲಪಾತ 
ಇಲ್ಲಿರೋ ಜಲಪಾತದ ಬಡ್ಡಿಗೆ ಅಜ್ಜೀಗುಂಡಿ.ಕಾಂ ಹೇಳೊಂದು ನಾಟ್ಕ ಮಾಡಿದ ಮೇಲೆ ಇದು ಸಖತ್ ಪ್ರಸಿದ್ದಿಯಾಗಿದ್ದು ಹೇಳ್ತಿದ್ದ ಗಜ. ಯಲ್ಲಾಪುರದಿಂದ ಕಾರವಾರ ರಸ್ತೇಲಿ ಸಖತ್ ಆರಾಮಾಗೇ ಇಲ್ಲಿಗೆ ಹೋಗ್ಲಕ್ಕು. ಹಿಂದಿನ ದಿನದ, ಬೆಳಗಿನ ರಸ್ತೆಗಳಿಗೆ ಹೋಲಿಸಿದ್ರೆ ಈ ಇಪ್ಪತ್ತು ಕಿ.ಮೀ ಹೋಗಿದ್ದೇ ಗೊತ್ತಾಗ್ತಲ್ಲೆ. ಅಲ್ಲಿನ ಬಸ್ಟಾಪಿಂದ ಫಾಲ್ಸಿಗೆ ಕೆಳಗೆ ಒಂದು ಕಿ.ಮೀ ನಡ್ಯಕ್ಕು.

Way Towards Ajji Gundi falls
ಅಲ್ಲಿ ಸ್ವಲ್ಪ ದೂರ ಹೋಗ್ತಿದ್ದಂಗೆ ಒಂದು ಕವ್ಲು ಸಿಗ್ತು.ಅದ್ರಲ್ಲಿ ಬಲಗಡೆ ಹೋಗಕ್ಕು.  ಅಲ್ಲಿ ಹೋಗ್ತಿದ್ದಂಗೇ ಮತ್ತೊಂದು ಊರು ಸಿಗ್ತು. ಅದ್ರ ಎಡದಲ್ಲಿರೋ ಶಾಂತಿವನ ಹೇಳ ಬೋರ್ಡಿನ ಪಕ್ಕ ಹೋಗಿ, ತೋಟ ಇಳಿದ್ರೆ ಸಿಗದೇ ಅಜ್ಜೀಗುಂಡಿ ಫಾಲ್ಸು. ಇಲ್ಲಿರೋ ಸುಮಾರು ಮನೆಗಳಲ್ಲಿ ಯಾರಿಗೆ ಕೇಳಿದ್ರೂ ದಾರಿ ಹೇಳ್ತ.  ತೋಟದ ಪಕ್ಕದಲ್ಲೇ ಹರಿಯೋ ಅವಳೆಯೊಂದು ಫಾಲ್ಸಾಗಿರೋದ್ರಿಂದ ಇದು ಹೆಚ್ಚೇನು ಎತ್ರದಿಂದ ಹಾರದಿಲ್ಲೆ. ವರ್ಷವಿಡೀ ನೀರಿದ್ರೂವ ಇಲ್ಲಿನ ನೀರು ಡೇಂಜರಿಲ್ಲೆ. ಹಂಗಾಗಿ ಇಲ್ಲಿನ ನೀರಲ್ಲಿ ಆರಾಮಾಗಿ ಆಟ ಆಡ್ಲಕ್ಕು. ಹಿಂದಿನ ದಿನ ಕುಳಿ ಮಾಗೋಡಲ್ಲಿ ಆಡಿದ್ದಕ್ಕೆ ಇಲ್ಲಿನ ನೀರಿಗೆ ತಲೆ ಕೊಡಕ್ಕೆ ಹೋಗ್ಲೆ.
ಇಲ್ಲೊಂದಿಷ್ಟು ಹೊತ್ತು ಜಲಧಾರೆಯ ಕಣ್ತುಂಬಿಕೊಂಡು ವಾಪಾಸ್ ಬಂದ್ಯ. 


Journey towards Ajjigundi falls
on the way to Ajjigundi falls


ಅಜ್ಜೀಗುಂಡಿ ಫಾಲ್ಸಿನ ಮನಮೋಹಕ ನೋಟ
View of Ajji Gundi Falls
ಶ್ಯಾನುಭಾಗ್ ಹೋಟೆಲ್ಲು:
ಇಲ್ಲಿರೋ ಹೋಟ್ಲುಗಳಲ್ಲಿ ಶ್ಯಾನು ಭಾಗ್ ಹೋಟ್ಲು ಚೆನ್ನಾಗಿದ್ದು ಹೇಳ್ತಿದ್ದ. ಹಂಗಾಗಿ ಬರ್ತಾ ಅದಕ್ಕೊಂದು ವಿಸಿಟ್ ಕೊಟ್ಟು ಟೀ, ಕಾಫಿ ಹೀರ್ಕಂಡು ಮುಂದೆ ಬಂದ್ಯ. ಪೇಟೆಯಿಂದ ಸ್ವಲ್ಪ ಹೊರಗಿರದಲ್ದೇ ಇದು ಸ್ವಲ್ಪ ದುಬಾರಿನೂ ಅನುಸ್ತು. ಇದಕ್ಕೆ ೩.೭/೫ ರೇಟಿಂಗ್ ಕೊಡ್ಲಕ್ಕು.

ಯಲ್ಲಾಪುರದ ಭಾನುವಾರ ಸಂತೆಯ ಸಂಜೆ:
ಬಸ್ಟಾಂಡಿಗೆ ಬರ ಹೊತ್ತಿಗೆ ಆರು ಘಂಟೆ ಆಗ್ತಾ ಬಂದಿತ್ತು. ಕೃಷ್ಣ ಸಾಗರಕ್ಕೆ ಹೋಗ ಪ್ಲಾನಲ್ಲೂ, ನಂಗ ಸೀದಾ ಬೆಂಗಳೂರಿಗೆ ವಾಪಾಸ್ಸಾಗ ಪ್ಲಾನಲ್ಲೂ ಇದ್ದಿದ್ಯ. ಹಿಂದಿನ ದಿನ ರಾತ್ರಿ ಸರ್ಕಾರಿ ಬಸ್ಟಾಂಡಲ್ಲಿ , ಮತ್ತೆರಡು ಬುಕಿಂಗ್ ಕೌಂಟರುಗಳಲ್ಲಿ ಸರ್ವರ್ ಡೌನಾಗಿ ವಾಪಾಸ್ ಬರ ಟಿಕೇಟ್ ಬುಕ್ ಮಾಡಕ್ಕಾಗಿರ್ಲೆ. ಕೊನೆಗೆ ಬೆಂಗ್ಳೂರಲ್ಲೇ ಇದ್ದು ನಮ್ಮ ಜೊತಿಗೆ ಬರ್ದೇ ಸೊಕ್ಮಾಡಿದ್ದ ಪಂಪಂಗೆ ಫೋನ್ ಮಾಡಿ ಟಿಕೇಟ್ ಬುಕ್ ಮಾಡಕ್ ಹೇಳಾಗಿತ್ತು. ಕೃಷ್ಣಂಗೆ ಇಲ್ಲಿನ ಭಾನುವಾರದ ಸಂತೆಪೇಟೆಯ ಪೋಟೋ ತೆಕ್ಕಂಡು ಇಲ್ಲಿನ ಕೊನೇ ಬಸ್ಸು ಏಳೂಮುಕ್ಕಾಲಿಗೆ ಹೋಗಕ್ಕು ಹೇಳಿತ್ತು. ಆದ್ರೆ ಆ ಬಸ್ಸೆಲ್ಲಾದ್ರೂ ಕರ ಹಾಕ್ಕಂಡ್ರೆ ಎಂತ ಮಾಡ್ತೆ, ಈಗ್ಲೇ ಇದ್ರೆ ಕೇಳು. ಕೊನೇಪಕ್ಷ ಆರೂವರೆಗಾದ್ರೂ ಬಸ್ಸು ಸಿಗ್ತು ನಿಂಗೆ . ಶಿರ್ಸಿವರೆಗೂ ಸಿಕ್ಕಿದ್ರೆ ಅಲ್ಲಿಂದ ಬೇರ್ಬೇರೆ ಬಸ್ಸುಗಳೂ ಇರ್ತು ಹೇಳಾತು. ಸರಿ ಅಂತ ಬಸ್ಟಾಂಡಿಗೆ ಹೋದವಂಗೆ ಬಸ್ಸು ಸಿಗ್ತು. ಅಲ್ಲಿಂದ ಬ್ಯಾಗೊತ್ಕಂಡು ಪೇಟೆ ತಿರ್ಗದು ಹೆಂಗೆ ? ನಂಗಕ್ಕೆ ಪಂಪ ಹಿಂದಿನ ಮಧ್ಯರಾತ್ರಿ ಬುಕ್ಮಾಡಿದ್ದ ಸೀಬರ್ಡಿನ ಕೌಂಟರಲ್ಲೇ ಬ್ಯಾಗಿಟ್ರಾತು ಅಂತಾತು. ಅಧ್ಯಕ್ಶರ ಜೊತೆಗೆ ಅಲ್ಲಿಗೇ ಹೋಗಾತು. ಅದು ನೋಡಿದ್ರೆ ನಮ್ಮ ಸಂಭ್ರಮ ಲಾಡ್ಜಿನ ಪಕ್ಕದಲ್ಲೇ ಇತ್ತು ! ಆದ್ರೆ ಬಸ್ಸನ್ನ ತಗಂಡೋಗಿ ಇನ್ನೆಲ್ಲೋ ನಿಲ್ಸಿದ್ದ ಆ ಪುಣ್ಯಾತ್ಮ ಹಿಂದಿನ ದಿನ. ಸೀಬರ್ಡ್ ಹತ್ರನೇ ಗಜ ಅವ್ರ ಅಕೌಂಟನ್ನ ೧೫೦೦ ಕ್ಕೆ ಸೆಟ್ಲು ಮಾಡಿ ಅವ್ರನ್ನ ವಾಪಾಸ್ ಕಳ್ಸಿದ್ಯ. ಮೊದಲ್ನೇ ದಿನ ಸ್ವಲ್ಪ ದುಬಾರಿ ಆತು ಅನ್ಸಿದ್ರೂ ಎಲ್ಲೂ ಗಡಿಬಿಡಿ ಮಾಡದೇ ಆರಾಮಾಗಿ ನಂಗ್ಳನ್ನ ಎಲ್ಲಾ ಜಾಗ ಸುತ್ತಾಡ್ಸಿದ ಗಜ ಅವ್ರ ನಂಬರ್ ೯೪೪೮೩೭೦೪೫೬. ಮುಂದಿನ್ಸಲ ಯಲ್ಲಾಪುರದಲ್ಲಿ ಗಾಡಿ ಬೇಕಂತಿದ್ದೋರು ಇವ್ಕೊಂದು ಕಾಲ್ ಮಾಡ್ಲಕ್ಕು ಅನುಸ್ತು. ಇವ್ರೇ ಸಂಘದ ಅಧ್ಯಕ್ಷರಾಗಿದ್ದಕ್ಕಾಗಿ ಇವ್ರಲ್ಲ ಅಂದ್ರೆ ಇನ್ಯಾರನ್ನಾದ್ರೂ ವ್ಯವಸ್ಥೆ ಮಾಡ್ಗು :-)


ಸೀಬರ್ಡ್ ಪಾಯಿಂಟಲ್ಲಿ ಬ್ಯಾಗಿಟ್ಟು ಸಂತೆಪೇಟೆಗೆ ಬಂದ್ಯ. ಇಲ್ಲಿ ಮಹಾರಾಷ್ಟ್ರದ ಪ್ರಭಾವನೂ ಸ್ವಸ್ವಲ್ಪ ಇದ್ದು ಹೇಳಿ ಇಲ್ಲಿನ ಪಾನಿಪೂರಿ ಅಂಗಡಿಯ ರಬ್ಡೀ ಪುರಿ. ಪಾಣೀಪೂರಿ, ಸ್ಕೇವ್ ಪೂರಿ ಹೇಳ ಹಿಂದಿ ಬೋರ್‍ದುಗಳನ್ನ ನೋಡಿ ಗೊತ್ತಾತು. ಕೆಲವೊಂದ್ಕಡೆ ಅಂಗಡಿಗಳಲ್ಲಿ ಯಲ್ಲಾಪೂರ ಹೇಳೂ ಬೋರ್ಡ್ ಹಾಕಿದ್ದ ಇಲ್ಲಿ ! ಎರಡು ಕಡೆ ರಬ್ಡೀ ಪುರಿ ಬೋರ್ಡು ಕಂಡು ಅದೆಂತ ಹೇಳಿ ತಿಂದೇ ಬಿಡನ ಅಂದ್ಕಂಡ್ರೂ ಆ ಅಂಗ್ಡಿಗಳಲ್ಲಿ ಅದಿಲ್ದೇ ವಾಪಾಸ್ ಬರಕ್ಕಾತು. ಇಲ್ಲಿನ ಸಿದ್ದಿಗಳು, ಹವ್ಯಕರು,ಕೊಂಕಣಿಗಳು, ಅಲ್ಲೊಂದಿಲ್ಲೊಂದು ಬುರ್ಖಾ ಸಾಬಿಗಳು,ಗಣಪತಿ ಹಬ್ಬ ಬಂತು ಹೇಳಿ ಅಡಕೆ,ತ್ವಾರಣೆ ತ್ವಾರಣೆ ಹೇಳಿ ಪ್ಲಾಸ್ಟಿಕ್ ತೋರಣ ಮಾರೋರು, ಒಂದು ಲಕ್ಷದ ಬಜಾಜ್ ಅವೆಂಜರ್ ಬೈಕ್ ಹೊಡ್ಕಂಡು ಸಂತೆಯ ಇಕ್ಕಟ್ಟಲ್ಲೇ ರೌಂಡ್ ಹೊಡ್ಯೋರು, ಜಿಲೇಬಿ, ಬೋಂಡಾ, ಗಿರ್ಮಿಟ್ ಮಾರೋರು.. ಹಿಂಗೆ ಯಲ್ಲಾಪುರದ ಬೇರ್ಬೇರೆ ಸಂಸ್ಕೃತಿಗಳ ಪಕ್ಕಾ ಮಿಶ್ರಣವೊಂದು ಕಂಡಂಗಾತು ಸಂತೇಲಿ.

ಕೃಷ್ಣ ಭವನದ ರಾತ್ರಿಯೂಟ:
ಸಂತೆ ಪೇಟೆಲಿ ಸುತ್ತಿ ಹೊರಬಂದ್ರೂ ಘಂಟೆ ಆರೂಮುಕ್ಕಾಲಾಗಿರ್ಲೆ. ನಂಗ್ಳ ಬಸ್ಸು ಗೋವಾದಿಂದ ಬರದಾಗಿದ್ದಕ್ಕೆ ಇಲ್ಲಿಗೆ ಬರ ಟೈಮು ಹತ್ತೂಮುಕ್ಕಾಲಾಗಿತ್ತು. ಎಂಟ್ಗಂಟೆಗೆ ಊಟ ಮಾಡಿದ್ರೆ ಮತ್ತೆ ಹಸ್ವಾಗ್ತು ಹೇಳಿ ಒಂಭತ್ತು ಘಂಟೆ ಹೊತ್ತಿಗೆ ಊಟ ಮಾಡನ ಹೇಳಂದ್ಕತ್ತ ಇದ್ಯ. ಆದ್ರೆ ಎಂಟು ಘಂಟೆಗೆ ಊಟಕ್ಕೆ ಹೋಗಕ್ಕು ಅಂದ್ರೂ ಅಷ್ಟೊತ್ತಂಕ ಮಾಡದೆಂತು ? ಬಸ್ಟಾಂಡಿಗೆ ಹೋಗಿ ಕೂರದು ಹೇಳಾತು. ಸರಿ, ಅಲ್ಲಿ ಹೋಗಿ ಕೂತ್ಯ ಅಂತಾತು. ಅಲ್ಲಿ ಬರ್ತಿದ್ದ ಜನರ ಮಾತುಕತೆಗಳ ಎಂಜಾಯ್ ಮಾಡ್ತ. ಕೊನೆಗೂ ಎಂಟುಘಂಟೆ ಹೊತ್ತಿಗೆ ಇನ್ನು ಕೂರಕ್ಕಾಗ್ತಲ್ಲೆ ಆನ್ಸಿದಾಗ ಕೃಷ್ಣಭವನದ ಹಾದಿ ಹಿಡ್ದು ಅತ್ಲಗೆ ಹೊಂಟ್ಯ. ಅಷ್ಟೊತ್ತಿಗೆ ಕೃಷ್ಣಂಗೆ ಫೋನ್ ಮಾಡಿದ್ರೆ ಅವ್ನ ನಂಬರ್ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಹೇಳಿ ಬರ್ತಿದ್ರಿಂದ ಅವ ದಾರಿಲೆಲ್ಲೋ ಇದ್ದ ಅಂದ್ಕಂಡಿದ್ಯ. ಬಸ್ಟಾಂಡಿಂದ ಹಂಗೇ ಸ್ವಲ್ಪ ಮುಂದೆ ಬಂದು ಯಲ್ಲಾಪುರ ಪೇಟೇಲಿ ನಡ್ಕಂಡು ಕೃಷ್ಣಭವನಕ್ಕೆ ಬಂದ್ಯ. ಅವ್ನೂ ಹಿಂದಿನ ದಿನ ರಾತ್ರಿ ಬಾಗ್ಲು ಹಾಕ್ಕಂಡಿತ್ತು. ಇವತ್ತೂ ಅದು ಬಾಗ್ಲು ಹಾಕಿದ್ರೆ ಸಂಕಲ್ಪಕ್ಕೆ ವಾಪಾಸ್ ಬರನ ಅಂತಂದ್ಕಂಡಿದ್ದ ನಮ್ಮ ಅದೃಷ್ಟಕ್ಕೆ ಇದು ಇವತ್ತು ತೆಕ್ಕಂಡಿತ್ತು. ಮುಂಚೆ ಸೂಪರ್ರಾಗಿದ್ದ ಹೋಟ್ಲು ಈಗಷ್ಟು ಚೆನ್ನಾಗಿಲ್ಲೆ ಅಂತ ಹಿಂದಿನ ದಿನ ಸಿಕ್ಕವನೊಬ್ಬ ಹೇಳಿದ್ರೂ ನಂಗಕ್ಕದು ಚೆನ್ನಾಗೇ ಅನುಸ್ತು. ಮಿಸಳ್ ಬಾಜಿ, ಮೊಸರವಲಕ್ಕಿ, ಶ್ರೀಖಂಡ ಪೂರಿ ಹಿಂಗೆ ಉತ್ತರ ಕರ್ನಾಟಕದ ಕಡೆಯ ಬೆಳಗ್ಗಿನ ತಿಂಡಿ ಐಟಮ್ಮುಗಳೂ ಇದ್ದು ಇಲ್ಲಿ. ಹಂಗಾಗಿ ಬೆಳಗ್ಗೆ ತಿಂಡಿಗೆ, ಮಧ್ಯಾಹ್ನಕ್ಕೆ ಇಲ್ಲಿಗೆ ಬರದಾದ್ರೆ ಒಂದ್ಸಲ ಟ್ರೈ ಮಾಡ್ಲಕ್ಕು. ಇಲ್ಲಿ ಚಪಾತಿ, ರೊಟ್ಟಿಯೂಟಗಳ ಜೊತೆಗೆ ಹೋಳಿಗೆ ಊಟನೂ ಇತ್ತು. ಹಂಪೆಗೆ ಹೋಗಕ್ಕಿದ್ರೆ ಹೊಸಪೇಟೇಲಿ ಹೋಳಿಗೆ ಊಟ ಮೊದ್ಲು ಮಾಡಿದ್ದ ನಂಗೆ ಇಲ್ಲಿನ ಹೋಳಿಗೆ ಊಟನೂ ಇಷ್ಟ ಆತು. ಚಪಾತಿ ಸ್ವಲ್ಪ ಗಟ್ಟಿ ಇದ್ರೂ ಓಕೆ. ಸಾಂಬಾರು, ಪಲ್ಯಗಳೂ ಓಕೆ ಓಕೆ. ಇಲ್ಲಿನ ಊಟಕ್ಕೆ ತಲಾ ೬೦ ಕೊಟ್ಟಿಕ್ಕೆ ಸೀಬರ್ಡಿನ ಪಾಯಿಂಟಿನ ಕಡೆ ಹೆಜ್ಜೆ ಹಾಕಿದ್ಯ. ಇಲ್ಲಿನ ಊಟಕ್ಕೆ ೪.೧/೫ ರೇಟಿಂಗ್ ಕೊಡ್ಲಕ್ಕು.

ಆ ಬೋರ್ಡಿಂಗ್ ಪಾಯಿಂಟಲ್ಲಿ ಯಾರೂ ಇಲ್ಲದ ಖಾಲಿ ಅಂಗಡೀಲಿ ಮೊದ್ಲು ಮುಕ್ಕಾಲು ಘಂಟೆ ಕಾದು ಕೊನೆಗೆ ಬಂದ ಅಂಗಡಿಯವನ ಜೊತೆ ಸುವರ್ಣದ ಹತ್ತು ವರ್ಷದ ಸಂಭ್ರಮ, ಡ್ಯಾನ್ಸ್ ರಿಯಾಲಿಟಿ ಶೋಗಳನ್ನ ನೋಡ್ತಾ ನೋಡ್ತಾ ಸಮಯ ಹೋಗಿದ್ದೇ ಗೊತ್ತಾಗ್ಲೇ. ಹತ್ತೂಮುಕ್ಕಾಲಿಗೆ ಬರಬಸ್ಸು ಹತ್ತೂಕಾಲಿಗೇ ಬಂದಿದ್ದು ನಮ್ಮ ಅದೃಷ್ಟ :-) ಅಲ್ಲಿಂದ ಬೆಂಗಳೂರಿನ ಗೊರಗುಂಟೆ ಪಾಳ್ಯಕ್ಕೆ ಆರೂಮುಕ್ಕಾಲಿಗೆ ತಲುಪಿದ ಗಾಡೀಲಿ ಆನಂದರಾವ್ ಸರ್ಕಲ್ಲಿಗೆ ಹೋಗಿ, ಅಲ್ಲಿಂದ ಬಸ್ಟಾಂಡಿಗೆ ಬಂದು , ಕಾಸ್ಮೋಸಿನ ಬಸ್ಸಿಡಿದು ಮನೆಗೆ ಬರೋ ಹೊತ್ತಿಗೆ ಘಂಟೆ ಒಂಭತ್ತಾಗ್ತಾ ಬಂದಿತ್ತು. ಒಂದು ಸುಂದರವಾದ ಪ್ರವಾಸವೊಂದು ಸೇಫಾಗಿ, ಖುಷಿ ಖುಷಿಯಾಗಿ ಮುಗ್ತಿತ್ತು

ಇವತ್ತಿನ ಬರಹ ಮುಗ್ಸೋ ಮೊದ್ಲು ಯಲ್ಲಾಪುರದಲ್ಲಿನ ಊಟ ತಿಂಡಿಗೆ ಎಂತ ಮಾಡದು ಹೇಳೊಂದು ಕೊನೇ ಹನಿ:
ಇಲ್ಲಿ ನಾನ್ವೆಜ್ಜವ್ರಿಗೆ ಸುಮಾರಷ್ಟು ಹೋಟ್ಲುಗಳಿದ್ರೂ ವೆಜ್ಜವ್ರಿಗೆ ಚೆನ್ನಾಗಿರದು,ರೇಟೂ ಓಕೆ ಇರದು ಅಂದ್ರೆ ಮೂರೇ. ಅದ್ರಲ್ಲಿ ಬೆಳಗ್ಗಿನ ತಿಂಡಿಗಾದ್ರೆ ಸಂಕಲ್ಪ/ಕೃಷ್ಣ ಭವನ ಮತ್ತೆ ಮಧ್ಯಾಹ್ನ ಅಥವಾ ರಾತ್ರೆ ಊಟಕ್ಕಾದ್ರೆ ಗೀತಾ ಭವನ/ಕೃಷ್ಣಭವನಕ್ಕೆ ಹೋಗ್ಲಕ್ಕು. ಮಧ್ಯ ಎಲ್ಲಾದ್ರೂ ತಿಂಡಿಗೆ ಹೋಗದಾದ್ರೆ ಶ್ಯಾನ್ಭಾಗಿಗೆ ಹೋಗ್ಲಕ್ಕು. ಸಂಭ್ರಮದ ಲಾಡ್ಜು ಅಥವಾ ಹೋಟೆಲ್ಲಿಗೆ ಕುಟುಂಬದವರ ಜೊತೆಗೆ ಹೋಗದಾದ್ರೆ ಬ್ಯಾಡ ಅನುಸ್ತು.