Wednesday, August 1, 2018

ಕಲ್ಸಂಕ

Kalsanka. Photo credits: Wikipedia

ಜೋಗ ಜಲಪಾತಕ್ಕೆ ಹೋದಾಗ ಸುತ್ತಮುತ್ತ ನೋಡಬಹುದಾದ ಜಾಗಗಳಲ್ಲೊಂದು ಕಲ್ಸಂಕ. ಎರಡು ವರ್ಷಗಳ ಹಿಂದೆ ವಿಕಿಪೀಡಿಯಾದಿಂದ ಸಾಗರದಲ್ಲಿ ಕಾರ್ಯಾಗಾರ ಏರ್ಪಡಿಸಿದ್ದಾಗ ಸಾಗರ ಫೋಟೋವಾಕ್ ಮಾಡುವ ಸಲಹೆ ಬಂದಿತ್ತು. ಅದರಂತೆ ಸಾಗರದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಅವುಗಳ ಚಿತ್ರ ತೆಗೆದು ಅವುಗಳ ಬಗೆಗಿನ ಲೇಖನಗಳನ್ನು ಉತ್ತಮಪಡಿಸಲು ಪ್ರಯತ್ನಿಸಿದ್ದೆವು. ಹಾಗೇ ಭೇಟಿ ಕೊಟ್ಟ ಸ್ಥಳಗಳಲ್ಲೊಂದು ಕಲ್ಸಂಕ. ಅದರ ವಿಕಿಲೇಖನ ಇಲ್ಲಿದೆ

ಎಲ್ಲಿದೆ ಈ ಕಲ್ಸಂಕ? : 
ಸಾಗರದಿಂದ ತಾಳಗುಪ್ಪ ಮಾರ್ಗವಾಗಿ ಹೋಗಿ ಚೂರಿಕಟ್ಟೆಯಲ್ಲಿ ಎಡಕ್ಕೆ ತಿರುಗದೇ ಸೀದಾ ಮುಂದಕ್ಕೆ ಹೋದರೆ ಸುಮಾರು ಐದು ಕಿ.ಮೀ ಹೋಗುವಷ್ಟರಲ್ಲಿ ಜೋಗ ಎಂಟು ಕಿ.ಮೀ ಎಂಬ ಬೋರ್ಡ್ ಕಾಣುತ್ತದೆ. ಅದರ ಪಕ್ಕದಲ್ಲೇ ಸಣ್ಣದೊಂದು ಬೋರ್ಡಿದೆ. ಅದುವೇ ಗ್ರಾಮ ಪಂಚಾಯತಿಯವರು ನಿಲ್ಲಿಸಿರುವ "ಕಲ್ಸಂಕ" ಎಂಬ ಬೋರ್ಡು !

ಇದರ ವೈಶಿಷ್ಟ್ಯವೇನು ? 
ನೆಲಕ್ಕಿಂತ ಸುಮಾರು ಹತ್ತು ಅಡಿ ಎತ್ತರಕ್ಕಿರುವ ಈ ಕಲ್ಲಿನ ಸೇತುವೆ ನಲವತ್ತೈದು ಅಡಿಗಿಂತಲೂ ಉದ್ದವೂ, ಸುಮಾರು ನಾಲ್ಕರಿಂದ ಆರಡಿ ಅಡಿ ಅಗಲವೂ, ಎರಡು ಅಡಿಯಷ್ಟು ದಪ್ಪವೂ ಆದ ನೈಸರ್ಗಿಕ ರಚನೆ. ಜಂಬಿಟ್ಟಿಗೆಯಿಂದ ಆಗಿರೋ ಈ ಕಲ್ಲಿನ ಸೇತುವೆಯಡೆ ಕಲಗಾರಿನಲ್ಲಿ ಹುಟ್ಟಿ ವರದೆಯನ್ನು ಸೇರುವ ಸಣ್ಣ ಝರಿಯೊಂದು ಹರಿಯುತ್ತದೆ. ಆ ಝರಿಯಿಂದಲೇ ಕ್ರಮೇಣ ಕಲ್ಲು ಕೊರೆದು ಈ ಸೇತುವೆ ನಿರ್ಮಾಣವಾಗಿರಬಹುದೆಂದು ನಂಬಲಾಗಿದೆ. ಅಮೇರಿಕಾದ ಉಟಾ ಎಂಬಲ್ಲಿ ಕಂಡುಬಂದ ಇಂತದ್ದೇ ರಚನೆಯನ್ನು ರಾಷ್ಟ್ರೀಯ ಸ್ಮಾರಕವೆಂದು ಸಂರಕ್ಷಿಸಲಾಗಿದೆ. ಹಲವು ಮೂಲಗಳ ಪ್ರಕಾರ ವಿಶ್ವದ ಅತೀ ಉದ್ದನೆಯ ನೈಸರ್ಗಿಕ ಶಿಲಾಸೇತುವೆಗಳಲ್ಲಿ ಕಲ್ಸಂಕ ಎರಡನೆಯದು ಎಂದೂ ಹೇಳಲಾಗುತ್ತದೆ !


ಸಂರಕ್ಷಣೆಯ ಅಗತ್ಯ: 
ಅಮೇರಿಕಾದಲ್ಲಿ ರಾಷ್ಟ್ರೀಯ ಸ್ಮಾರಕ ಅಂತ ಗುರುತಿಸಲ್ಪಡುವ ರಚನೆಯಂತದ್ದೇ ಇಲ್ಲಿದ್ದರೂ ಸರ್ಕಾರದ ರಕ್ಷಣೆಯಿರಲಿ ಒಂದು ಮಾಹಿತಿಫಲಕವೂ ಇದರ ಬಗ್ಗೆಯಿಲ್ಲ :-( ಆ ಕಡೆಯ ಗದ್ದೆಗಳಿಗೆ ಏನಾದರೂ ಸಾಗಿಸಲು, ಜನ ಓಡಾಡಲು ಇದನ್ನೇ ಬಳಸುತ್ತಿದ್ದರಂತೆ. ನಾವು ಹಿಂದಿನ ಸಲ ಹೋದಾಗ ಈ ಸೇತುವೆಯ ಒಂದು ಬದಿ ಜಂಬಿಟ್ಟಿಗೆ ಕಲ್ಲು ಕಡಿಯಲಾಗುತ್ತಿತ್ತು ! ಕೆಳಗೆ ಒಂದು ಚೌಡಿಯಿದೆ ಅಂತ ಜನ ನಂಬುತ್ತಿದ್ದರಿಂದ ಇದರ ಕಲ್ಲುಗಳನ್ನು ಚಪ್ಪಡಿಯಂತೆ ಒಡೆದು ಮನೆಗೆ ಸಾಗಿಸದೇ ಹೋದದ್ದು ಪುಣ್ಯ ಎನ್ನಬೇಕೇನೋ. ಮತ್ತೊಂದು ಬಾರಿ ಹೋದಾಗ ಚೌಡಿಯ ಗುಡಿಯನ್ನು ಸ್ವಲ್ಪ ಪಕ್ಕದಲ್ಲಿ ಮಾಡಿ, ದೂರದಲ್ಲೊಂದು ಸೇತುವೆ ಮಾಡಿದ್ದರಿಂದ ಈ ನೈಸರ್ಗಿಕ  ಸೇತುವೆಯ ಸುದ್ದಿಗೆ ಯಾರೂ ಬಂದಿಲ್ಲದ್ದು ಪುಣ್ಯ. ಅದೇ ಇದರ ಸಂರಕ್ಷಣೆ ಅಂತ ಖುಷಿಪಡಬೇಕೇನೋ :-(

2 comments:

  1. ಸುಮಾರು ವರ್ಷಗಳ ಹಿಂದೆ ಇದರ ಬಗ್ಗೆ ಓದಿದ್ದೆ.. ಅದಾದ ಮೇಲೆ ಹಲವಾರು ಬಾರಿ ಜೋಗಕ್ಕೆ, ಸಾಗರಕ್ಕೆ ಭೇಟಿ ನೀಡಿದರೂ ಇದನ್ನು ನೋಡಲಾಗಿಲ್ಲ.. ಮುಂದಿನ ಬಾರಿ ಖಂಡಿತ ಭೇಟಿ ಮಾಡುವೆ..

    ಸುಂದರ ಮಾಹಿತಿ.. ನಿಸರ್ಗದಲ್ಲಿ ಇಂತಹ ಜಾದೂಗಳು ನೆಡೆಯುತ್ತಲೇ ಇರುತ್ತವೆ.. ಮಾನವನ ದುರಾಕ್ರಮಣದಿಂದ ನಶಿಸುವ ಹೋಗುವ ಮೊದಲು ಇದನ್ನು ಕಾಪಾಡಿಕೊಳ್ಳಬೇಕು ಎನ್ನುವ ನಿಮ್ಮ ಸಂದೇಶ ಸಮಪರ್ಕವಾಗಿದೆ.. ಇಂತದ್ದು ಹಾಳು ಮಾಡುವುದು ಸುಲಭ ಮತ್ತೆ ಪುನರ್ನಿರ್ಮಾಣಕ್ಕೆ ಪ್ರಕೃತಿಯೇ ಮುಂದಡಿಇಡಬೇಕು ..

    ಸೊಗಸಾದ ಮಾಹಿತಿ.. ಪ್ರತಿಯೊಂದು ಅಂಶವನ್ನು ಚುಟುಕಾಗಿ ಸುಂದರವಾಗಿ ಪೋಣಿಸಿರುವ ರೀತಿ ಸೊಗಸಾಗಿದೆ..

    ReplyDelete
    Replies
    1. ಬ್ಲಾಗ್ ಭೇಟಿಗೆ ಮತ್ತು ಮೆಚ್ಚುಗೆಗೆ ವಂದನೆಗಳು ಶ್ರೀಕಾಂತಣ್ಣ. ಮುಂದಿನ ಸಲ ಬಂದಾಗ ಹೋಗಿ ಬರಬಹುದು ಬಿಡಿ :-)

      Delete