Saturday, July 27, 2013

ನಂ ಸಾಗ್ರದ ಮಳೆ

ಮಳೆ ಮಳೆ ಮಳೆ.. ಬೆಂದಕಾಳೂರನ್ನೇ ತೊಳೆದ ಮಳೆ ಮಲೆನಾಡ ಬಿಟ್ಟೀತೆ ? ಮಲೆನಾಡಿಗೆ, ಮಳೆಕಾಡಿಗೆ ಮಳೆ ಹೊಸದಲ್ಲದಿದ್ದರೂ ಈ ಬಾರಿ ಸ್ವಲ್ಪ ಹೆಚ್ಚೇ ಮಳೆನಾ ಅನಿಸ್ತಿತ್ತು.. ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗ್ತಾ ಹೋಗಿದ್ರಿಂದ ಮಲೆನಾಡ ಮಳೆಯ ಗತವೈಭವ ಮತ್ತೆ ಮರಳ್ತಿದ್ಯಾ ಅನ್ನೋ ಆಸೇನೂ ಚಿಗುರ್ತಿತ್ತು. ನಮ್ಮೂರು ಸಾಗರದ ವರದಾನದಿ, ಮಜ್ಜಿಗೆಹೊಳೆ, ಹುಲ್ಲತ್ತಿ ಹೊಳೆಗಳೆಲ್ಲಾ ತುಂಬಿ ಹರಿದು .. ರಸ್ತೆಗಳಲ್ಲೆಲ್ಲಾ ಮೊಣಕಾಲುದ್ದದ ನೀರು.  ಸಾಗರ ಉತ್ತರಾಖಂಡ್ ಆಯ್ತೇನೋ ಅಂತ ಗೆಳೆಯರೆಲ್ಲಾ ಕೇಳೋ ಪರಿ ಮಳೆ. ಮಳೆ ಅಂದ್ರೆ ಒಮ್ಮೆ ಬಂದು ಕಾಡಿ ಮಾಯವಾಗೋ ಪರೀಕ್ಷೆಯಂತಿರಲಿಲ್ಲ, ಬಂದರೂ ಬರದಂತಿರೋ ಪಿರಿಪಿರಿ ತುಂತುರಿನಂತಿರಲಿಲ್ಲ.. ಬಿಟ್ಟು ಬಿಟ್ಟು ಹೊಡೆಯೋ ವರ್ಷಧಾರೆ. ಶಾಲಾ ಕಾಲೇಜುಗಳಿಗೆಲ್ಲಾ ರಜಾ ಕೊಡಿಸಿದ ಹುಡುಗರ ಪ್ರೀತಿಯ ಮಳೆಮಾಮ. ಮಳೆ ಅಂದ್ಮೇಲೆ ಬರಿ ನೀರು, ಥಂಡಿಗಳಾದ್ರೆ ಸಾಕೆ ? ಸ್ವಲ್ಪ ಬೆಚ್ಚಗೂ ಬೇಕಲ್ವೇ ? ಅದಕ್ಕೆ ಅಂತಲೇ ರೆಡಿಯಾಗೋ ಮಳೆಗಾಲದ ಸ್ಪೆಷಲ್ ಒಲೆ, ಹೊಡೆಸಲು, ತಟ್ಟಿಗಳು.. ಆಂ, ಅವೇನು ಅಂದ್ರಾ ? ಅವೇ ನಮ್ಮ ಮಲೆನಾಡ ಮಳೆಗಾಲದ ವೈಶಿಷ್ಟ್ಯಗಳು ಕಣ್ರಿ.. ಏನೂಂತ ಕುತೂಹಲನಾ ? ಸರಿ, ಅದ್ನ ತಿಳ್ಯೋಕೆ ಹನಿ ಹನಿ ಮಳೇಲೇ ಒಂದು ರೌಂಡ್ ಹಾಕ್ಕೊಂಡು ಬರೋಣ ಬನ್ನಿ.. ಹಿಂಗೆ ಸುಮ್ನೆ, ನಮ್ಮ ಮಲೆನಾಡ ಮಡಿಲಲ್ಲಿ..

ಮಳೆಗಾಲ ಬಂತೂಂದ್ರೆ ಮಣ್ಣಿನ ಮಕ್ಕಳಿಗೆಲ್ಲಾ ಫುಲ್ ಖುಷಿ.  ವರ್ಷವಿಡೀ ಕಾದಿದ್ದ ಭೂತಾಯಿಯ ದಾಹ ವರುಣನ ಲೀಲೆಯಿಂದ ತಣಿಯೋ ಸಮಯ. ವರುಣ ತನ್ನ ನಿರಂತರ ನರ್ತನದಿಂದ ಕೆಲದಿನಗಳಲ್ಲೇ ಭೂಮಾತೆಯ ಮುನಿಸನ್ನು ಅಳಿಸಲೆಂಬ ಆಸೆ ಅವರದ್ದು . ಭೂಮಾತೆ ಸಂತೃಪ್ತಳಾದಳೆಂದರೆ ಎಲ್ಲೆಲ್ಲೂ ದೃಶ್ಯಕಾವ್ಯ. ಕಣ್ಣು ಹಾಯಿಸಿದತ್ತೆಲ್ಲಾ ಹಸಿರು. ತಳ ಕಂಡ ಕೆರೆ, ಬಾವಿ, ಹೊಂಡಗಳೆಲ್ಲಾ ಮೈ ತುಂಬಿ ಎಲ್ಲೆಲ್ಲೂ ನೀರ ಒರತೆ. ಬಂಡೆಗಳಿಂದಲೂ ನೀರ ಝರಿಗಳು ಒಸರಿ ಮಾರಿಗೊಂದು ಮಿನಿ ಫಾಲ್ಸುಗಳ ಸೃಷ್ಠಿ. ಸೊಂಪಾದ ಮಳೆ ಹೊಡೆದ ಮಳೆಕಾಲದಲ್ಲಿ ಮಲೆನಾಡ ಫಾಲ್ಸುಗಳಿಗೆ ಹೋಗೋದಿರಲಿ ಬೆಟ್ಟಗುಡ್ಡಗಳಲ್ಲಿ, ಹಳ್ಳಿಯ ರಸ್ತೆಗಳಲ್ಲಿ ನಡೆಯುವುದೇ ಒಂದು ಆನಂದ :-) ಸಿಕ್ಕಾಪಟ್ಟೆ ಮಳೆ ಹೊಡೆದ್ರೆ ಎಲ್ಲಿ ಪಾಚಿಗಟ್ಟಿದೆಯೋ ಗೊತ್ತಿಲ್ಲ. ರಸ್ತೆ ಎಲ್ಲಿ ಜಾರುತ್ತೋ ಗೊತ್ತಿಲ್ಲ. ಬೇಸಿಗೆಯಲ್ಲಿ ಎಷ್ಟೇ ಸಲ ಹೋಗಿದ್ರೂ, ಓಡಿದ್ರೂ ಅದೇ ರಸ್ತೇಲಿ ಬೇಸಿಗೆಯಂತೆ ಬಿರುಬಿರನೆ ಹೆಜ್ಜೆ ಹಾಕೋಕೆ ಹೋದ್ರೆ ಪಲ್ಟಿ ಹೊಡಿತೀರ ಅಂತ ೧೦೦% ಗ್ಯಾರಂಟಿ ಕೊಡ್ಬೋದು :-) ವರುಣನ ಆರ್ಭಟಕ್ಕೆ ಪಕ್ಕ ಚರಂಡಿಗಳಿದ್ದರೂ ರಸ್ತೆಯನ್ನು ಆಕ್ರಮಿಸಿರೋ ನೀರ ಧಾರೆ. ಅಡ್ಡ ಮಳೆ, ಗಾಳಿಗೆ ಎಷ್ಟೇ ಮೇಲೆತ್ತಿಕೊಂಡರೂ ನೆನೆಯೋ ಪ್ಯಾಂಟು, ಪಂಚೆ, ಸೀರೆಗಳು. ನಿಧಾನಕ್ಕೆ ಹೆಜ್ಜೆ ಹಾಕೋದ್ರ ಜೊತೆ ಕಾಲಿಗೆ ಉಂಬುಳ/ಇಂಬಳ(ಪ್ರಾಣಿಗಳ/ಮನುಷ್ಯರ ಕಾಲಿಗೆ ಹತ್ತಿ ರಕ್ತ ಹೀರೋ ಮಲೆನಾಡಲ್ಲಿ ಕಂಡು ಬರೋ ಒಂದು ಜೀವಿ . leech) ಹತ್ತಿದೆಯಾ ಅಂತ ಆಗಾಗ ಪರೀಕ್ಷಿಸಿಕೊಳ್ಳೋ ಅನಿವಾರ್ಯತೆ. ಎಲ್ಲೋ ಹತ್ತಿದ ಉಂಬುಳಗಳನ್ನು ನೋಡಿರದಿದ್ದರೆ ನಾವು ಮನೆಯವರೆಗೆ ಬರೋದ್ರಲ್ಲಿ ಅವು ಹೊಟ್ಟೆ ಪೂರ್ತಿ ರಕ್ತ ಕುಡಿದು ಉಬ್ಬಿ ಬಿದ್ದೂ ಹೋಗಿರುತ್ತವೆ. ಕಾಲಲ್ಲಿ ರಕ್ತ ಸುರಿಯೋದನ್ನ ನೋಡಿ, ಉಂಬ್ಳ ಕಚ್ಚಿಸ್ಕಂಡ್ಯನಾ ಮಾಣಿ. ತಡಿ ಅಲ್ಲೇ ಇರು. ಅಂತ ಅಲ್ಲೇ ಇದ್ದ ಸುಣ್ಣದ ಡಬ್ಬೀಲಿ ಸುಣ್ಣ ತೆಗೆದು ಹಚ್ಚಿಸ್ಕೊಬೇಕು ಮನೆ ಅವರಿಂದ. ಈ ಉಂಬುಳಗಳು ಒಂಥರಾ ಮಳೆಗಾಲದ ಕಾಯಂ ಅತಿಥಿ. ಹಾಗಾಗಿ ಹಳ್ಳಿಬದಿ ಮನೆಗಳಲ್ಲಿ ಸುಣ್ಣ, ಹೊಗೆಸೊಪ್ಪಿನ ನೀರನ್ನು ಮನೆಯ ಹೊರಬಾಗಿಲ ಬಳಿಯೇ ಇಟ್ಟಿರ್ತಾರೆ. ಮನೆಗೆ ಬಂದೋರು ಮೊದ್ಲು ತಮ್ಮ ಕಾಲುಗಳೆಲ್ಲಾ ನೋಡ್ಕೊಂಡು ಅದ್ರಲ್ಲಿ ಉಂಬುಳಗಳೇನಾದ್ರೂ ಇದ್ರೆ ಸುಣ್ಣದ ನೀರಲ್ಲಿರೋ ಕೋಲನ್ನು ತೆಗೆದು ಆ ಉಂಬುಳಕ್ಕೆ ಮುಟ್ಟಿಸ್ತಾರೆ. ಈ ಹೊಗೆಸೊಪ್ಪು,ಸುಣ್ಣ ತಾಗಿದ ಕೂಡ್ಲೇ ಉಂಬುಳಗಳು ಬಿದ್ದು ಹೋಗುತ್ತೆ. ರಕ್ತ ಸುರಿಯೋದೂ ಕ್ರಮೇಣ ನಿಲ್ಲುತ್ತೆ.

ರಸ್ತೇಲೇ ಪಾಚಿಯ ಮೇಲೆ ಕಾಲಿಟ್ಟು ಬಿದ್ದೋರು ಇನ್ನು ಮನೆ ಹತ್ರ ಬೀಳ್ದೇ ಇರ್ತಾರಾ ? ಮಳೆಗೆ, ಅದ್ರಿಂದ ಕಟ್ಟೊ ಪಾಚಿಗೆ ರಸ್ತೆ ಆದ್ರೇನು, ಮನೆಯಂಗಳ ಆದ್ರೇನು. ಅದ್ಕೇ ಅಂತ್ಲೇ ಮಳೆ ಶುರು ಆದಾಗ ಮನೆ ಅಂಗಳದ ಲುಕ್ಕೇ ಬದಲಾಗುತ್ತೆ. ಜಾರದೇ ಇರ್ಲಿ ಅಂತ ಮನೆಯಂಗಳಕ್ಕೆಲ್ಲಾ ಅಡಿಕೆ ಸಿಪ್ಪೇನೋ, ತೆಂಗಿನ ಗರೀನೋ ಹಾಸ್ತಾರೆ. ಬರಿ ನೆಲಕ್ಕಿಂತ ಅಡಿಕೆ ಸಿಪ್ಪೆ ಮೇಲೆ ಗ್ರಿಪ್ ಜಾಸ್ತಿ. ಅಡಿಕೆ ಸಿಪ್ಪೆ ಹಾಸಿದ್ರೆ ಅಂಗಳದಲ್ಲಿ ಕಳೆ ಹುಟ್ಟೋಲ್ಲ ಅನ್ನೋದೂ ಮತ್ತೊಂದು ಲಾಭ. ಅಡಿಕೆ ಸಿಪ್ಪೆ, ತೆಂಗಿನ ಗರಿಗಳು ಇರ್ಲಿ ಇಲ್ದೇ ಇರ್ಲಿ, ಮನೆ ಗೇಟಿಂದ ಮನೆ ಬಾಗಿಲವರೆಗೆ ಒಂದು ಜಾರದ ದಾರಿ ಬೇಕಲ್ವಾ ? ಅದ್ಕೇ ಅಂತ್ಲೇ ರೆಡಿಯಾಗೋದು ಅಡಿಕೆ ಮರದ ದಬ್ಬೆಯ ದಾರಿ. ಎರಡೋ ಮೂರೋ ದಬ್ಬೆ ಸೀಳಿ ಪಕ್ಕ ಪಕ್ಕ ಹಾಸಿದ್ರೆ ಅದೇ ಒಂದು ದಾರಿ. ಎಂತ ಮಳೆ ಸುರುದ್ರೂ ಅದು ಸೇಫು. ಅಲ್ಲೂ ಪಾಚಿ ಕಟ್ಟುತ್ತೆ. ಆದ್ರೆ ಜಾರಿ ಬೀಳ್ಬೇಕು ಅಂದ್ರೆ ತೀರಾ ಅಜಾಗರುಕತೆ ಇರ್ಬೇಕು ಇಲ್ಲಾ ಅಂದ್ರೆ ಪೇಟೆ ಕಡೆಯಿಂದ ಬಂದವನಾಗಿರ್ಬೇಕು :-) ಇನ್ನು ಮೂರು ತಿಂಗಳು ಹೊಡ್ಯೋ ಮಳೆ ಸಿಟ್ಟಿಗೆ ಮನೆಯ ಗೋಡೆಗಳ ಗತಿ ಏನಾಗ್ಬೇಕು ? ಅದ್ಕೇ ಅಂತ್ಲೆ "ಇಸಿಲು ತಟ್ಟಿ" ಗಳು ರೆಡಿಯಾಗುತ್ತೆ.  ಗೋಡೆಗಳಿಗೆ ಮಳೆ ನೇರವಾಗಿ ಬೇಳದಂತೆ ತೆಂಗಿನ ಗರಿಗಳಿಂದ ಮಾಡೋ ಮರೆಯೇ ಈ ಇಸಿಲು ತಟ್ಟಿ. ತೆಂಗಿನ ಗರಿಗಳನ್ನ ಗೋಡೆಗೆ ಒಂದರ ಪಕ್ಕ ಒಂದು ಒರಗಿಸಿ ಅವನ್ನೆಲ್ಲಾ ಒಂದು ಸಾಲಿನಂತೆ ಸೇರಿಸಿ ಕಟ್ಟಿದರೆ ಇಸಿಲು ತಟ್ಟಿ ರೆಡಿ. ಗೋಡೆಗಳ ಭದ್ರತೆಗೆ ಇದೇ ವಾಲ್ ಪುಟ್ಟಿ :-)

ಮಳೆಗಾಲದ ಸಮಯದಲ್ಲಿ ಊರಿಗೆ ಹೋದವ್ರಿಗೆ ವಾಪಾಸ್ ಬರೋಕೆ ಮನಸಾಗಲ್ಲ :-( ಪ್ರತಿ ದಿನವೂ ಪ್ರತಿ ಮಳೆಯಲ್ಲೂ ಬಾಲ್ಯದ ನೆನಪುಗಳ ಮೆರವಣಿಗೆ. ಮಳೆ ಅತಿಯಾಗಿ, ಸಾಗರದ ರಸ್ತೆಗಳಲ್ಲೆಲ್ಲಾ ಮೊಣಕಾಲುದ್ದದ ನೀರು ನಿಂತು ಎರಡು ದಿನ ಶಾಲೆಗೆ ರಜಾ ಕೊಟ್ಟಾಗೆಂತೂ ಕಾಲದಲ್ಲಿ ಹಿಂದೆ ಹೋಗೋ ಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತೋ ದೇವ್ರೆ ಅಂತ ಎಷ್ಟೊಂದು ಅಂದ್ಕೊಂಡಿದ್ದೆ. ಆ ಮಳೆಯ ಮಜಾ ಹೇಗಿತ್ತು ಅಂತ ಹೇಳಿದ್ರೂ ಬೆಂಗಳೂರಿಗರಿಗೆ ಅರ್ಥವಾಗೋದು ಕಷ್ಟವೇ. ಬೆಂಗಳೂರಲ್ಲಿ ಯಾವತ್ತೋ ಒಂದು ದಿನ ಮಳೆ ಬರುತ್ತೆ. ಎಲ್ಲಾ ಜಲಪ್ರಳಯವೆಬ್ಬಿಸಿ ಮತ್ತೆ ಸುಮ್ಮನಾಗುತ್ತೆ. ಆದ್ರೆ ಮಲೆನಾಡಲ್ಲಿ ಹಾಗಲ್ಲ. ಮೂರು ತಿಂಗಳೂ ಮಳೆಯ ಕಾಲವೇ. ಹಿಂದಿನ ವರ್ಷಗಳಲ್ಲಿ ಮಲೆನಾಡ ಮಳೆ ಕ್ಷೀಣಿಸುತ್ತಾ ಸಾಗಿತ್ತು. ಕಡಿದ ಕಾಡುಗಳ ಫಲವೋ, ಪ್ರಕೃತಿಯ ಮೇಲಿನ ದಬ್ಬಾಳಿಕೆಗಳಿಗೆ ಅವಳ ಪ್ರತಿರೋಧವೋ ತಿಳಿಯದು. ಆದರೆ ಈ ಬಾರಿ ಮತ್ಯಾಕೋ ಪ್ರಕೃತಿ ಸಂತೃಪ್ತಳಾದಂತಿದೆ.. ಮಲೆನಾಡಲ್ಲಿ ಮಳೆ ಬಿಟ್ಟೂಬಿಡದೇ ಸುರಿಯುತ್ತಿದೆ. ಈ ವರ್ಷವಷ್ಟೇ ಹೂಳೆತ್ತಿರೋ ಸಾಗರದ ಬಸವನಹೊಳೆ ಡ್ಯಾಂ ತುಂಬಿಸುವಂತೆ, ಗಣಪತಿ ಕೆರೆಯ ಹಳೆಯ ವೈಭವ ಮತ್ತೆ ಮರಳಿಸುವಂತೆ, ಶಿವಮೊಗ್ಗದ ತುಂಗಾ ಮಂಟಪ  ಮುಳುಗಿಸುವಂತೆ ಮಳೆ ಹೊಡೆಯುತ್ತಿದೆ.

ಮಳೆಗಾಲದ ಮಳೆಯನ್ನ ಛತ್ರಿ ತಡೆಯೋದು ಸ್ವಲ್ಪ ಕಷ್ಟವೇ. ಮಳೆಗಾಲ ಅಂದ್ರೆ ಛತ್ರಿ ವ್ಯಾಪಾರ, ರಿಪೇರಿಯವರಿಗೆ ಸುಗ್ಗಿ. ಮಳೆಯ ರಭಸಕ್ಕೆ ಹಳೆಯ ಛತ್ರಿಯ ಕೊಕ್ಕೆಗಳೆಲ್ಲಾ ಮುರಿದು, ಛತ್ರಿಯ ಬಟ್ಟೆಯೇ ತೂತಾಗಿ ಛತ್ರಿಯ ಒಳಗೂ ನೀರು ಬರುವಂತಾದಾಗ ಹೊಸ ಛತ್ರಿಯ ಸಮಯ ಅಂತ ಲೆಕ್ಕ . ಬಸ್ಸಲ್ಲಿ, ಮದುವೆ ಮನೇಲಿ , ಪೇಟೇಲಿ.. ಹೀಗೆ ಛತ್ರಿ ಕಳೆದುಕೊಳ್ಳೋರಿಗೂ ಏನು ಕಮ್ಮಿಯಿಲ್ಲ. ಹಾಗಾಗಿ ವರ್ಷಕ್ಕೊಂದು ಛತ್ರಿ ತಗೊಳ್ಳೋದು ಇಲ್ಲಿನ ಸುಮಾರು ಜನರಿಗೆ ಹೊಸತೇನಲ್ಲ :-) ಇನ್ನು ರೈತರಿಗೆ , ಹುಡುಗರಿಗೆ, ವಾಹನ ಓಡಿಸೋರಿಗೆ ಈ ಛತ್ರಿ ಎಲ್ಲಿ ಬರ್ಬೇಕು. ಟೊಪ್ಪಿ ಹಾಕಿದರೂ ಮುಖಕ್ಕೆ ಹೊಡೆಯೋ ನೀರಿನ ಮಧ್ಯೆ ಗೆಳೆಯರ ಜೊತೆ ಮಾತಾಡ್ತಾ ಆರಾಮಾಗಿ ಸೈಕಲ್ ತುಳ್ಕೊಂಡು ಸಾಗೋ ಹುಡುಗ ಹುಡುಗಿಯರ ಗುಂಪು ನೋಡೋದೆ ಒಂಥರಾ ಚಂದ. ಯಾಕಾದ್ರೂ ಮಳೆ ಬರುತ್ತಪ್ಪಾ ಅಂತ ಬೇಜಾರೇನಿಲ್ಲ ಅವರ ಮುಖಗಳಲ್ಲಿ. ಮಳೆಯೇ ಒಂದು ಖುಷಿ. ಮಳೆ ಜಾಸ್ತಿ ಆದ್ರೆ ಶಾಲೆಗೆ, ಕಾಲೇಜಿಗೆ ರಜೆ ಸಿಗುತ್ತೆ ಅಂತ ಮತ್ತೊಂದು ಖುಷಿ. ಎಲ್ಲೋ ಮಳೆಯಲ್ಲಿ ಸಿಕ್ಕಾಕಿಕೊಂಡು ಒಬ್ರೋ ಇಬ್ರೋ ಟೀಚರು ಲೇಟಾಗಿ ಬರ್ಬೋದು , ಅಲ್ಲಿವರೆಗೆ ಶಾಲೇಲಿ ಮಜಾ ಅನ್ನೋ ಖುಷಿಯೂ ಇರ್ಬೋದು !  ಆನಂದಪುರದ ಕಡೆಯಿಂದ ಸಾಗರದ ಶಾಲೆ/ಕಾಲೇಜಿಗೆ ಬರೋರಿಗೆ ಮಳೆಗಾಲದಲ್ಲಿ ಅಲ್ಲಿನ ಕುಮುಧ್ವತಿ ನದಿ ಸೇತುವೆಯದೊಂದು ವರ/ಶಾಪ. ಆ ಸೇತುವೆಗಿಂತಲೂ ಮೇಲೆ ನೀರು ಹರಿದು ಬಸ್ಸುಗಳೇ ದಾಟದಿದ್ದಾಗ ಅವರಿಗೆಲ್ಲಾ ಶಾಲೆಗೆ ರಜಾ.. ಹುಡುಗರಿಗೆ ಮಳೆ ಹೆಚ್ಚಾದ್ರೆ ರಜಾ ಅಂತ ಖುಷಿ ಆದ್ರೆ ರೈತರಿಗೆಲ್ಲಾ ಗದ್ದೆ ಎಲ್ಲಿ ಕೊಚ್ಚಿ ಹೋಗುತ್ತೋ ಅಂತ ಭಯ. ಮಳೆ ವಾರಗಟ್ಲೇ ಆದ್ರೂ ನಿಲ್ಲದೇ ಹೊಡೆಯೋಕೆ ಶುರು ಮಾಡಿದ್ರೆ ಗದ್ದೆಲಿರೋ ನೀರೇ ಇಳಿಯೋಲ್ಲ. ಗದ್ದೆ ಪೂರ್ತಿ ಮುಳುಗಿ ಹೋದ್ರೆ ಭತ್ತ ಪೂರ್ತಿ ಕೊಳೆತುಹೋಗುತ್ತೆ ಅನ್ನೋ ಭಯ.. ಮಳೆ ಇರ್ಲಿ ಆದ್ರೆ, ಭತ್ತ ಕೊಳ್ಯೋ ಅಷ್ಟು ಬರ್ದೆ ಇರ್ಲಿ ಅಂತಾನೂ ಬೇಡ್ತಿರ್ತಾರೆ ಅವ್ರು.. ಇನ್ನು ಈ ರೈನ್ಕೋಟು , ಛತ್ರಿಗಳಿಗೂ ಅವರಿಗೂ ದೂರ ದೂರ. ದನ ಮೇಯಿಸೋರಿಂದ , ನೆಟ್ಟಿ ಮಾಡೊರವರೆಗೆ ಕಂಬಳಿ ಕೊಪ್ಪೆ ಫೇವರಿಟ್ಟು.. ಕಂಬಳಿ ಕೊಪ್ಪೆ ಏರಿಸಿ ಹೊರಟರೆಂದರೆ ಒಂದು ಹನಿ ನೀರು ಒಳಗೆ ಬರೋಲ್ಲ.. ಈಗೀಗ ಪ್ಲಾಸ್ಟಿಕ್ ಕೊಪ್ಪೆಗಳು ಬರ್ತಿದೆ ಆದ್ರೂ ಆ ಕಂಬಳಿಕೊಪ್ಪೆಗಳ ವೈಭವ ಇವಕ್ಕಿಲ್ಲ. ಪ್ಲಾಸ್ಟಿಕ್ ಹಗುರ ಆದ್ರಿಂದ ಹಾರಿ ಹಾರಿ ಹೋಗತ್ತೆ..ಅದಕ್ಕೇ ಅಂತ್ಲೇ ಹಗ್ಗ ಕಟ್ಟೋ ಪರಿಪಾಟ್ಲು. ಮಳೆಗಾಲದಲ್ಲಿ ಈ ಕೊಪ್ಪೆ ತೊಟ್ಟ ಹೆಂಗಸ್ರನ್ನ, ಹೊಲದಲ್ಲಿರೋ ರೈತ್ರನ್ನ ನೋಡೋದೇ ಒಂದು ಚಂದ.

ಮಳೆ ಆಯ್ತು. ಮಳೆಯ ಉಂಬ್ಳ ಆಯ್ತು. ಶಾಲೆಗೆ ರಜೆ ಆಯ್ತು. ಕಂಬ್ಳಿ ಕೊಪ್ಪೆ ಆಯ್ತು. ಮನೆಗೊಂದು ತಟ್ಟಿ , ಜಾರದಂತೆ ದಬ್ಬೆ ದಾರೀನೂ ಆಯ್ತು.. ಹೊರಗೆಲ್ಲಾ ನೋಡ್ತಾ ನೋಡ್ತಾ ಹಸಿವಾಯ್ತು ಅಂದ್ರಾ ?ಸರಿ, ಮನೆ ಒಳಗೆ ಹೋಗೋಣ ಬನ್ನಿ. ಪ್ರತೀ ಮಳೆಗಾಲದಂತೆಯೇ ಈ ಸಲವೂ ಮನೆ ಒಳಗೆ ನೆಲ ಒಸರುತ್ತಿದೆ. ನೀರು ಒಸರೋದು(ಜಿನುಗೋದು) ಗೊತ್ತು. ಇದೆಂತಾ ನೆಲ ಒಸರೋದು ಅಂದ್ರಾ ? ಮಳೆಗಾಲದಲ್ಲಿ ಸಿಮೆಂಟ್ ನೆಲಗಳಲ್ಲಿ ಈ ಒಸರೋದು ಸಾಮಾನ್ಯ. ಎಲ್ಲಾದ್ರೂ ಸ್ವಲ್ಪ ಬಾಗಿಲು ತೆಗೆದಿಟ್ರೆ ಸಾಕು. ನೆಲದ ಮೇಲೆಲ್ಲಾ ಮಂಜಿನ ಹನಿಗಳಂತೆ ತೇವ ತೇವ. ಸ್ವಲ್ಪ ತಗ್ಗಲ್ಲಿರೋ ಕೋಣೆಗಳಲ್ಲಿ ಈ ಒಸರೋದು ಅತಿಯಾಗಿ ಈಗಷ್ಟೇ ನೆಲದ ಮೇಲೆಲ್ಲಾ ಯಾರೋ ನೀರು ಚೆಲ್ಲಿದಾರೇನೋ ಅನ್ಸುತ್ತೆ. ಪೂರ್ತಿ ಒಣ ಬಟ್ತೇಲಿ ಒರೆಸಿದ್ರೂ ಸ್ವಲ್ಪ ಹೊತ್ತಲ್ಲಿ ಅದೇ ಗತಿ. ಸುತ್ತೆಲ್ಲಾ ಮಳೆ ಹೊಡಿತಿರುವಾಗ ಭೂಮಿಲಿರೋ ನೀರು ಹೀಗೆ ಮೇಲೆ ಬರುತ್ತೆ ಅಷ್ಟೆ. ಕಿಟಕಿ ತೆಗೆದಿಟ್ರಿ ಥಂಡಿ ಗಾಳಿ ಒಳನುಗ್ಗಿ ಇದು ಇನ್ನೂ ಜಾಸ್ತಿಯಾಗುತ್ತೆ ಅಂತ ಬಾಗ್ಲು ಹಾಕೇ ಇಡ್ತಾರೆ. ಹೆಂಗೇ ಇಟ್ರೂ ಮಳೆಗಾಲದಲ್ಲಿ ಇದು ಕಾಮನ್ನು.  ಹೊರಗಡೆ ಇಂದ ಬಂದೋರಿಗೆ ಬಚ್ಚಲಲ್ಲಿ ಬಿಸಿ ಬಿಸಿ ನೀರು ಕಾಯ್ತಾ ಇರುತ್ತೆ.. ಬಿಸಿ ನೀರಲ್ಲಿ ಕೈ ಕಾಲು ತೊಳ್ಕೊಂಡ್ರೆ ಅಬ್ಬಾ.. ಹೊರಗಡೆ ಎಷ್ಟು ಮಳೇಲಿ ತೋದು ಬಂದಿದ್ರೂ ಅದೆಲ್ಲಾ ಮರ್ತೇ ಹೋಗುತ್ತೆ.. ಇನ್ನು ಬಚ್ಚಲ ಒಲೆಯ ಬಳಿ ಬಂದು ಕೂತು ಬಿಟ್ರೆ.. ಆಹಾ. ಅದೇ ಸುಖ. ಬೆಚ್ಚಚೆಚ್ಚಗೆ ಮೇಲೇಳೋಕೆ ಮನಸ್ಸಾಗೋಲ್ಲ. ಆ ಸುಖದ ಮುಂದೆ ಯಾವ ಸೋಪಾ, ಸುಪ್ಪತ್ತಿಗೆಗಳೂ ಇಲ್ಲ. ಮಲೆನಾಡಿನ ಇನ್ನೊಂದು ಸ್ಪೆಷಲ್ಲು ಹೊಡೆಸಲು. ಸಣ್ಣ ಚಪ್ಪರದ ತರ ಮಾಡಿ ಅದರ ಕೆಳಗೆ ಬೆಂಕಿ ಹಾಕಿ ಮೇಲೆ ಏನಾದ್ರೂ ಏಲಕ್ಕಿಯೋ, ಮಳೇಲಿ ಬಿದ್ದ ಮುಗ್ಗುಲು ಬಂದು ಹಾಳಾಗೋ ಅಡಿಕೆಯೆಯೋ, ಇನ್ನೇನೋ  ಒಣಗೋಕೆ ಹಾಕಿರ್ತಾರೆ . ಮಳೇಲಿ ಒದ್ದೆಯಾದ ಕಂಬಳಿ, ಗೋಣಿಗಳ ಒಣಗಿಸೋದು ಇಲ್ಲೇ. ಇಡೀ ದಿನ ಕೆಂಡ ಇದ್ದೇ ಇರೋದ್ರಿಂದ ಅದು ಚಳಿ ಕಾಯ್ಸೋಕೆ ನಮ್ಮ ಫೇವರಿಟ್ ಪಾಯಿಂಟು.. ಬಿಸಿ ಬಿಸಿ ಚಹಾವೋ, ಕುರುಂ ಕುರುಂ ಹಲಸಿನ ಕಾಯಿ ಚಿಪ್ಸೋ ಇದ್ದು ಬಿಟ್ರೆ .. ಮುಗ್ದೇ ಹೋಯ್ತು.. ಸ್ವರ್ಗಕ್ಕೆ ಮೂರೇ ಗೇಣು... ಯಾರಾದ್ರೂ ನೆಂಟ್ರು ಬಂದ್ರೆ, ಅಪರೂಪಕ್ಕೆ ಮನೆಗೆ ಬಂದ ಅಳಿಯ, ಮಗ, ಮಾವ .. ಹೀಗೆ ಎಲ್ಲರಿಗೂ ಅದೇ ಹರಟೆ ಕಟ್ಟೆ. ಮಕ್ಕಳಿಗೆ ಕಡ್ಡಿ ಆಟದ ಜಾಗ. ಅಜ್ಜಿಯಂದ್ರಿದ್ರೆ ಮೊಮ್ಮಕ್ಕಳೊಟ್ಟಿಗೆ ಪಗಡೆಗೆ ಕೂರೋಕೆ ಅದು ಒಳ್ಳೆ ಪ್ಲೇಸು..

ಮಳೆಗಾಲದ ಸಮಯದಲ್ಲಿ ಬರೋ ವೈದಿಕ್ಕ(ಹಿರಿಯರ ಕಾರ್ಯ)ಗಳದ್ದೊಂದು ಸಂಭ್ರಮ. ಹೊರಗೆ ಉಧೋ ಎಂದು ಸುರಿಯುತ್ತಿರೋ ಮಳೆ. ಆ ಮಳೇಲಿ ಪೇಟೆ ಕಡೆಯಿಂದ ಬರೋ ನೆಂಟರು. ಮಳೆಗಾಲದ ಸಮಯದಲ್ಲೇ ಕೈಕೊಡೋ ಕರೆಂಟಿನಂತೆ ಈ ಬಸ್ಸುಗಳೂ ಕೈಕೊಡೋದೂ ಲೇಟಾಗೋದೂ ಇದ್ದಿದ್ದೇ. ಆ ನೆಂಟ್ರನ್ನ ಕರ್ಕೊಬರೋಕೆ ಅಂತಾನೆ ಬಸ್ಟಾಂಡಿನವರೆಗೆ ಹೋಗೋ ಹುಡುಗರ ಸಂಭ್ರಮ ಹಸಿರ ಸಿರಿಯ ಮಡಿಲಲ್ಲಿ ಒಂದೆರಡು ದಿನ ಇರುವ ಆ ನೆಂಟರ ಖುಷಿ ಎಲ್ಲಕ್ಕೂ ಸಾಥಿಯಾಗೋದು ಈ ಕಾರ್ಯಕ್ರಮಗಳು.  ಮಳೆಗಾಲದಲ್ಲಿ ಚಿಗುರೋ ಕಳಲೆ(ಬಿದಿರು)ಪಲ್ಯ , ಕಹಿಯ ಕಂಚೀಕಾಯಿ ಉಪ್ಪಿನಕಾಯಿ ಇರ್ಲೇಬೇಕು ಇಲ್ಲಿ. ತೋಟಕ್ಕಿಳಿದು ಉಂಬುಳ ಕಚ್ಚಿದರೂ ಸಿಹಿಕಂಚಿ, ಪೇರಲೆ ಹುಡುಕುವುದೇನು, ಮಳೇಲಿ ನೆನಿಬೇಡ್ರೋ ಎಂದರೂ ಅಮ್ಮಂದಿರ ಕಣ್ಣು ತಪ್ಪಿಸಿ ಅಲ್ಲಲ್ಲಿ ಛತ್ರಿ ಹಿಡಿದು ಹೊರಡುವುದೇನು.. ಪಟ್ಟಣದಿಂದ ಅಜ್ಜಿ ಮನೆಗೆ ಬರೋ ಮೊಮ್ಮಕ್ಕಳದ್ದು ಸಂಭ್ರಮವೋ ಸಂಭ್ರಮ. ಅವರಿಗೆ ಹಳ್ಳಿ ಹುಡುಗರ ಸಾಥ್ ಸಿಕ್ಕರೆ ಇವರನ್ನ ಹಿಡಿಯೋರೇ ಇಲ್ಲ :-) 

ಸಿಕ್ಕಾಪಟ್ಟೆ ಮಳೆ ಅಂತೆ ಕಣೋ ಸಾಗರದಲ್ಲಿ ಅಂದ್ರು ಕೆಲೋರು. ಆದ್ರೆ ಅಲ್ಲೇ ಹುಟ್ಟಿ ಬೆಳೆದ ನಮಗೆ ಇದು ಮಾಮಾಲು. ಒಂದು ವರ್ಷ ಕಮ್ಮಿ , ಮತ್ತೊಮ್ಮೆ ಜಾಸ್ತಿ ಇದ್ದಿದ್ದೇ ಅನ್ನೋದು ಹಿರಿಯರ ಅಂಬೋಣ. ಜಾಸ್ತಿ ಮಳೆ ಹೊಡಿತಾ ಇದೆ. ಅಡಿಕೆ ಎಲ್ಲಾ ಕೊಳೆ ಬಂದು ಹಾಳಾಗಿ ಹೋಗತ್ತೇನೋ ಅನ್ನೋ ಚಿಂತೆ ತೋಟದ ರಾಂಭಟ್ರಿಗೆ. ಬಿಡು ಇಲ್ದೆ ಮಳೆ ಹೊಡದ್ರೆ ಕೊಳೆ ಬರೂದಿಲ್ಲ. ಬಿಟ್ ಬಿಟ್ ಹೊಡದ್ರೆ ಮಾತ್ರ ಕೊಳೆ ಬರೂದು ತಗಳಿ ಭಟ್ರೆ ಅನ್ನೋ ಶೇರೆಗಾರ. ಮಳೆ ಸೂಪರ್ರಾಗಿದೆ ಮಗ. ಟ್ರೆಕ್ಕಿಂಗೆಗೆ ಸಖತ್ ಟೈಮು ಅಂತ ಕೊಡಚಾದ್ರಿ, ಉಂಚಳ್ಳಿ, ಯಾಣ, ಮಾಗೋಡು ಫಾಲ್ಸು, ಜೋಗಗಳ ಕಡೆ ಹೊರಟಿರೋ ಟೆಕ್ಕಿಗಳು.. ಹೀಗೆ ಹಲತರದ ಕಲರವ ಪೇಟೆಯಲ್ಲಿ. ಸುಮಾರು ದಿನದಿಂದ ಹೊಡಿತೀರೋ ಮಳೆ ನಿತ್ತಿದೆ. ಸದ್ಯಕ್ಕಂತೂ.. ಮುಚ್ಚಿಹೋಗಿರೋ ಇಂಗುಗುಂಡಿ,ಇಂಗುಕೊಳ, ಬದುಗಳ್ನ ಸರಿ ಮಾಡ್ಬೇಕು, ಅವಕ್ಕೆ ಕಟ್ಟಿಹೋಗಿರೋ ದಾರೀನ ಸವರಿ, ಸರಿ ಮಾಡ್ಬೇಕು. ಎಷ್ಟಕ್ಕೂ ಮಳೆಕೊಯ್ಲೇ ನಾಳಿನ ಭವಿಷ್ಯ ಅಲ್ಲವೇ ? ... ಮತ್ತೆ ಮಳೆ ಯಾವಾಗ ಶುರು ಆಗುತ್ತೋ ಗೊತ್ತಿಲ್ಲ. ಹಳುವು (ಮಳೆಯ ಬಿಡುವು ) ಕೊಟ್ಟಾಗ್ಲೇ ಹೊರಗಿನ ಕೆಲ್ಸ ಮುಗಿಸ್ಬೇಕು. ಹಂಗಾಗಿ ಭರ್ಜರಿ ಬಿಸಿ(!) ನಾನು.. ಇನ್ನೊಮ್ಮೆ ಸಿಗೋಣವಾ ? :-)

Monday, July 22, 2013

ಬದುಕು


ಮಳೆಯೆಂದ್ರೆ ಘೋರ ಮಳೆ. ಮಾರಿಕೊಪ್ಪೆಗೆ ತನ್ನ ಮೋರೆ ತೋರಿಸಲೂ ಬೇಸರಿಸಿದ ರವಿ ಮನೆಯೊಳಗೆ ಬೆಚ್ಚಗೆ ಮಲಗಿದ್ದಾನಾ ಎಂಬ ಭ್ರಮೆ ಮೂಡಿಸುವಂತಹ ವಾತಾವರಣ. ಊರ ಮುಂದೊಂದು ಮಾರಿಗುಡಿಯಿಂದ ಹಳ್ಳಿಗೆ ಮಾರಿಕೊಪ್ಪ ಎಂಬ ಹೆಸರು ಬಂತೇ ಅಥವಾ ಮುಳುಗಡೆಯ ವೇಳೆ ಆ ಊರ ಜನರೆಲ್ಲಾ ತಮ್ಮ ಪಿರ್ತಾರ್ಜಿತ ಜಮೀನನ್ನು ಮಾರಿ ಇಲ್ಲಿಗೆ ಗುಳೆ ಬಂದಿದ್ದರಿಂದ ಇಂತಾ ಹೆಸರೇ ಎಂದು ಅಲ್ಲಿನ ಈಗಿನ ತಲೆಮಾರಿನವರಿಗೆ ತಿಳಿದಿಲ್ಲ. ಅದೇ ಮಾರಿಗುಡಿಯ ಮುಂದೆ ಒಂದೈದು ಅಡಿ ದೂರದಲ್ಲೊಬ್ಬ ಬೋರಲು ಬಿದ್ದಿದ್ದಾನೆ. ಮಾರಿಗುಡಿಯ ಎದುರಿಗೆ ಹುಗಿದಿದ್ದ ಕಲ್ಲು ಕಿತ್ತೆದ್ದು ಮಾರು ದೂರ ಹೋಗಿ ಬಿದ್ದಿದೆ. ಮತ್ತೊಂದು ಮೂಲೆಯಲ್ಲಿ ಬಿದ್ದಿರೋ ಕಪ್ಪು ಬೈಕು. ಆತ ಎಷ್ಟು ಹೊತ್ತಿಂದ ಬಿದ್ದಿದ್ದಾನೆ ಎಂಬುದು ಆತನಿಗೂ, ಆತನ ಜರ್ಕೀನು, ಪ್ಯಾಂಟುಗಳ ಒಳಗೆ ಮಲಗಿರೋ ದೇಹಕ್ಕೂ, ಆತನ ಇಂದಿನ ಸ್ಥಿತಿಗೆ ಕಾರಣವಾದ ನಿನ್ನೆಗೂ ತಿಳಿದಿರಲಿಕ್ಕಿಲ್ಲ. ಉತ್ತರ ಹೇಳಬಹುದಾದ ಮಳೆರಾಯ ಯಾವುದೋ ನಿರ್ಧಾರಕ್ಕೆ ಬಂದವನಂತೆ ಅಲ್ಲಿ ಸುರಿಯುತ್ತಿದ್ದಾನೆ. ಕುಡಿದವನನ್ನು ಎಬ್ಬಿಸಲು ಆತನ ಮೈಮೇಲೆ ಮನೆಯವರು ಸುರಿಯೋ ಕೊಡದ ನೀರಿನಂತೆ ಇಲ್ಲಿ ಕುಂಭದ್ರೋಣ ಮಳೆಯ ರೇಚನವಾಗುತ್ತಿದೆ.

ಹುಡುಗನಿಗೆ ದೇಶ ಸುತ್ತೋ ಹುಚ್ಚು. ಬೈಕ್ ಹತ್ತಿ ಹೊರಟನೆಂದರೆ ದೂರ, ಕಾಲಗಳ ಪರಿವೆಯಿಲ್ಲ. ಮನೆಯಲ್ಲೂ ಅನುಕೂಲವಿದ್ದರಿಂದ ದುಡ್ಡಿನ ಪರಿವೆ ಮೊದಲೇ ಇಲ್ಲ. ವಾರಾಂತ್ಯ ಬಂತೆಂದರೆ ಬೆಳಗ್ಗೆಯೇ ಎದ್ದು ಬೈಕಲ್ಲಿ ಎಲ್ಲೆಲ್ಲಿಗೋ ಹೊರಟುಬಿಡುತ್ತಿದ್ದ. ಬೆಚ್ಚನೆ ಹೊದ್ದು ಮಲಗಿರೋ ಸೂರ್ಯನ ಹೊದಿಕೆಯನ್ನು ಆತನ ತಾಯಿ ನಿಧಾನಕ್ಕೆ ಎತ್ತುತ್ತಾ ಸಾಗಿದಂತೆ ಅರುಣೋದಯದಿಂದ ಸೂರ್ಯೋದಯವಾಗೋ ಸಮಯ. ಕತ್ತಲ ಹೊದಿಕೆಯ ಮೂಲೆಯಿಂದ ಇಣುಕೋ ಸೂರ್ಯ ಸೋಮಾರಿಯಾಗಿ ಕಣ್ಣು ಬಿಡಲೋ ಬೇಡವೋ ಎಂದು ಮೈಮುರಿಯುತ್ತಾ ಏಳುತ್ತಿದ್ದರೆ ನಿಧಾನವಾಗಿ ಆತನ ಕಿರಣಗಳು ಹೊದಿಕೆಯನ್ನು ಈಚೆ ಸರಿಸುತ್ತಾ ಹೊರಬರುತ್ತವೆ. ಆತನಿಗೆ ಶುಭೋದಯ ಹೇಳೋಕೆ ಅಂತಲೇ ಹಾರಿಹೋಗುತ್ತಿರುವ ಹಕ್ಕಿಗಳು, ಆತನ ದರ್ಶನಕ್ಕೆ ಅಂತ ಕಾಯುತ್ತಿರೋ ಮರಗಿಡಗಿಳನ್ನು ನೋಡಿ ನಕ್ಕ ರಾತ್ರೆ ಬಿದ್ದ ಮಂಜ ಹನಿಗಳು ಭೂಮಿಯನ್ನೂ ಸೇರದೆ ಮರದ ಎಲೆಯ ತುದಿಯ ಮೇಲೆ ನಿಂತು ಹಣುಕುತ್ತಾ ಚೆಲುವನ ಮುಖದರ್ಶನವನ್ನು ಎದುರು ನೋಡುತ್ತಿವೆ.

ಸಹಸ್ರ ತಾರೆಗಳ ನಿಶೆಯ ಒಡೆಯ ಚಂದ್ರ ತನ್ನ ರಾತ್ರಿ ಪಾಳಿಯನ್ನು ಮುಗಿಸಿ ಮಲಗಲು ಹವಣಿಸುತ್ತಾ ಪಾಳಿ ಹಸ್ತಾಂತರಕ್ಕೆ ಸೂರ್ಯನ ಏಳುವಿಕೆಯನ್ನೇ ಕಾಯುತ್ತಿದ್ದಾನೆ. ಪ್ರತಿ ನಿದ್ದೆಯ ನಂತರ ಎದ್ದಾಗಲೂ ಅದೇನೋ ಖುಷಿ, ಉತ್ಸಾಹ. ತನ್ನ ಅದಮ್ಯ ಚೈತನ್ಯವನ್ನು ಜಗಕ್ಕೆಲ್ಲಾ ಹಂಚುವವನಂತೆ ಬಾಲಭಾಸ್ಕರ ಬೆಟ್ಟಗಳ ನಡುವಿಂದ ಎದ್ದು ಬರುವುದನ್ನು ನೋಡುವುದೇ ಒಂದು ಚೆಂದ. ಮೈಕೊರೆಯುವ ಚಳಿಯಿದ್ದರೂ ಆ ಸೂರ್ಯನ ದರ್ಶನವಾಗುತ್ತಿದ್ದಂತೆ, ಒಂದೆರಡು ಕಿರಣಗಳು ಮೈ ಸೋಕುತ್ತಿದ್ದಂತೇ ಅದೇನೋ ಖುಷಿ. ಚಳಿಯೆಲ್ಲಾ ದಿಗಿಲೆದ್ದು ಮಾರು ದೂರ ಓಡಿದ ರೀತಿ..
ಪೇಟೆಯ ಅದೇ ಕಲುಷಿತ ಗಾಳಿ, ಉರಿಬಿಸಿಲ ಸೂರ್ಯನನ್ನೇ ನೋಡಿ ಬೇಸತ್ತಿದ್ದ ಈತನಿಗೆ ಹೀಗೆ ಪರಿಸರದ ಮಡಿಲಲ್ಲಿ ಬಾಲ ಸೂರ್ಯನನ್ನು ನೋಡೋದಂದರೆ ಭಾರೀ ಖುಷಿ. ಸೂರ್ಯೋದಯವನ್ನು ನೋಡಲೆಂದೇ ಎಷ್ಟೋ ದೂರ ಬರುತ್ತಿದ್ದ ಈತ ಸೂರ್ಯೋದಯ ನೋಡು ನೋಡುತ್ತಾ ತನ್ನ ಬಾಲ್ಯದ ನೆನಪುಗಳಲ್ಲಿ, ಕಲ್ಪನಾ ಲೋಕದಲ್ಲಿ ಕಳೆದುಹೋಗುತ್ತಿದ್ದ.

*****
ನಾಳೆಯೇ ಸಾವು ಎಂದು ತಿಳಿದು ಇಂದಿನ ಜೀವನವನ್ನು ಎಂಜಾಯ್ ಮಾಡಬೇಕು ಅಂತ ಒಂದು ಹುಡುಗರ ಗ್ಯಾಂಗಿನ ಪಾಲಿಸಿ. ಗುಂಡು ಒಳಗೆ ಸೇರಿದರೆ ಅವರ ಅವಾಂತರಗಳಿಗೆ ಅಂತ್ಯವಿಲ್ಲ. ಬಿಸಿ ರಕ್ತದವರಿಗೆ ಯಾರದಾದರೂ ಮಾತು ತಿಳಿಯುತ್ತೇ ? ಗುಂಡೇರಿಸಿ ಎಲ್ಲೆಲ್ಲೋ ಯದ್ವಾ ತದ್ವಾ ಬೈಕೋಡಿಸಿ ಗುದ್ದಿಕೊಂಡಾಗಲೇ ಅವರ ಮತ್ತು ಇಳಿಯುತ್ತಿದ್ದುದು. ಮನೆಯಲ್ಲಿ ದುಡ್ಡಿಗೇನು ಕೊರತೆಯಿಲ್ಲ. ಮಕ್ಕಳು ತಮ್ಮ ತಲೆ ತಿನ್ನದಿದ್ದರೆ ಸಾಕೆಂದು ಕೇಳಿದಷ್ಟು ದುಡ್ಡು ಕೊಟ್ಟೇ ದೊಡ್ಡ ಮಾಡಿದ ತಂದೆ ತಾಯಿ.ಈಗಲೋ ಸ್ವತಃ ದುಡಿಯುತ್ತಿರೋ ಗರ್ವ ಬೇರೆ. ಮಧ್ಯರಾತ್ರಿ ಹೇಗೋ ಮನೆ ಸೇರೋವರೆಗೂ ಒಳಸೇರಿದ ಪರಮಾತ್ಮನಾಟ ಮುಂದುವರೆಯುತ್ತಿತ್ತು . ಈ ನಶಾಚರರಿಗೆ ನಿಶಾಚರರಾಗಿ ಬೈಕ್ ಓಡಿಸೋದಂದು ಶೋಕಿ. ಮಧ್ಯರಾತ್ರಿಗೆ ಎದ್ದು ಬೈಕ್ ತಗೊಂಡು ಹೊರಟುಬಿಡೋರು. ಆ ಮಧ್ಯರಾತ್ರಿಯ ಚಳಿಯಲ್ಲೂ ಜರ್ಕೀನ್ , ಕ್ಯಾಪು, ಗ್ಲೌಸ್ ತೊಟ್ಟು ಬೈಕೇರಿ ಎಲ್ಲಾದರೂ ಹೊರಟುಬಿಡೋರು. ಮುಖಕ್ಕೆ ಆ ಐಸಿನಂತಹ ತಣ್ಣನೆಯ ಗಾಳಿ ರಾಚುತ್ತಿದ್ದರೆ ಅದರಲ್ಲಿ ಗಾಡಿ ಓಡಿಸೋದೇ ಒಂದು ಥ್ರಿಲ್ಲು ಅವರಿಗೆ. ಕೈಯೆಲ್ಲಾ ಮರಗಟ್ಟಿತೆಂದೆನಿಸಿದಾಗ ಗಾಡಿ ಓಡಿಸುವ ಸರದಿ ಹಿಂದೆ ಕೂತಿದ್ದವನಿಗೆ ಬರುತ್ತಿತ್ತು.. ಅಲ್ಲಿಯವರೆಗೂ ಅವನು ಆರಾಮು. ಹೀಗೇ ಗಾಡಿ ಓಡಿಸಿ ಯಾವುದೇ ಬೆಟ್ಟಕ್ಕೆ ಸೂರ್ಯೋದಯದ ಸಮಯಕ್ಕೆ ಬಂದಿದ್ದರು ಅವರು. ಅವರು ಸೂರ್ಯನ ಮುಖ ನೋಡುತ್ತಿದ್ದುದ್ದೇ ಇಂತಹ ವಾರಾಂತ್ಯದ ಟ್ರಿಪ್ಪುಗಳಲ್ಲಿ. ಯಾಕೋ ಆ ಬೆಟ್ಟದ ಸೂರ್ಯ ಇಂದು ಇವರನ್ನೇ ನೋಡಿ ನಕ್ಕಂತೆ ಕಾಣುತ್ತಿತ್ತು.. ಸೂರ್ಯೋದಯವಾಗುತ್ತಿದ್ದಂತೆ ಇವರೆಲ್ಲರಿಗೂ ಅದೆಷ್ಟೋ ದಿನಗಳಿಂದ ಕಾದು ಕುಳಿತಂತಿದ್ದ ನಿದ್ರೆ ಆವರಿಸಿತು. ಅಲ್ಲೇ ಬಯಲಲ್ಲಿ ಕೂತುಕೂತಲ್ಲೇ ಎಲ್ಲಾ ನಿದ್ರೆ ಹೋದರು.

******
ಹುಡುಗನ ನೆನಪುಗಳು ಕಾಲ ಚಕ್ರದಲ್ಲಿ ಹಿಂದೆಂದೆ ಸುತ್ತಾತ್ತಾ ಸಾಗುತ್ತಿದ್ದಾಗ ಒಂದು ಟೈರಾಟದ ಚಿತ್ರ ಕಣ್ಮುಂದೆ ಬಂದು ಅಲ್ಲೇ ನಿಂತು ಹೋಯಿತು. ಒಂದು ಹಳ್ಳಿ. ಹಳ್ಳಿಯಲ್ಲಿ ಟೈರಾಟವಾಡುತ್ತಿರೋ ಹುಡುಗರು. ಸೈಕಲ್ ಟೈರನ್ನೇ ತಮ್ಮ ಬಸ್ಸು, ಕಾರು, ಬೈಕು ಮಾಡಿಕೊಂಡು ಉರುಳಿಸುತ್ತಾ ಇವರ ಆಟ. ಹೀಗೇ ಪೇಂ ಪೇಂ ಅಂತ ಶಬ್ದ ಮಾಡುತ್ತಾ ಆಟ ಆಡ್ತಾ ಇದ್ದಾಗ ದೂರದಿಂದ ಚೀಲ ಹೊತ್ತು ಯಾರೋ ಬರ್ತಾ ಇದ್ದಿದ್ದು ಕಾಣಿಸ್ತು. ನೋಡಿದರೆ ಯಾರೋ ಪೂಜಾರಿಗಳ ತರ ಪಕ್ಕದಲ್ಲಿ ಒಬ್ಬ ಹುಡುಗಿ. ಯಾರಿರಬಹುದು ಅನ್ನೋ ಕುತೂಹಲ ಎಲ್ಲರಿಗೂ. ದೊಡ್ಡವರನ್ನು ಮಾತನಾಡಿಸೋ ಧೈರ್ಯ ಯಾರಿಗೂ ಇಲ್ಲದಿದ್ದರೂ ಯಾರಿರಬಹುದು, ಯಾರ ಮನೆಗೆ ಬಂದಿರಬಹುದೆಂಬ ಕುತೂಹಲ ಎಲ್ಲರಿಗೂ. ಹುಡುಗರ ಓರೆನೋಟದಿಂದ ಆ ಪೂಜಾರಿ ಊರ ಸಾಹುಕಾರರ ಮನೆ ಕಡೆಗೆ ಹೋಗಿದ್ದು ಗೊತ್ತಾಯ್ತು. ಸಾಹುಕಾರರ ಮಗ ಆಟ ಮುಗಿಸಿ ಮನೆಗೆ ಬಂದು ನೋಡುತ್ತಾನೆ. ಮನೆಯಲ್ಲಿ ಹೊಸಬರ ಸುಳಿವಿಲ್ಲ. ನಿಧಾನಕ್ಕೆ ಅಮ್ಮನ ಹತ್ತಿರ ಕೇಳಿದ."ಯಾರೋ ಹೊಸಬ್ರು ನಮ್ಮನೆ ಕಡೆ ಬಂದ ಹಾಗಿತ್ತು. ಯಾರಮ್ಮ" ಅಂತ ಸಣ್ಣಕ್ಕೆ. ಮಗನ ಕುತೂಹಲಕ್ಕೆ ನಕ್ಕ ಅವನಮ್ಮ ಅವರು ಊರ ದೇವಸ್ಥಾನಕ್ಕೆ ಹೊಸದಾಗಿ ಬಂದಿರೋ ಪೂಜಾರಿಗಳು ಕಣಪ್ಪ ಆಂದ್ರು. ಆ ಹುಡುಗಿ ಅಂದ ಹಾಗೇ ಸಣ್ಣಕ್ಕೆ.ಓ ಅವಳ್ನೂ ನೋಡಿಬಿಟ್ಟೆಯಾ ? ಕಳ್ಳ, ಅವಳು ಅಂಬಿಕಾ ಅಂತ ಕಣೋ. ಪೂಜಾರಿಗಳ ಮಗಳು ಅಂದರು ಅಮ್ಮ. ಈ ಹೊಸ ಪೇಟೆ ಹುಡುಗಿ ಅಂಬಿಕಾಳನ್ನ ಮಾತನಾಡಿಸಬೇಕು. ತಮ್ಮೊಟ್ಟಿಗೆ ಆಟಕ್ಕೆ ಸೇರಿಸಿಕೊಳ್ಳಬೇಕು ಅನ್ನೋ ಆಸೆಯಲ್ಲೇ ರಾತ್ರಿಯಾಯಿತು. ರಾತ್ರಿ ಊಟ ಮಾಡಿ ಮಲಗಿದವನಿಗೆ ಈತ ಅಂಬಿಕಾಳನ್ನು ಟೈರಾಟಕ್ಕೆ ಕರೆದಂತೆ , ಅವಳು ಬರದೇ ಹುಡುಗಿಯರ ಜೊತೆಗೆ ಕುಂಟಾಪಿಲ್ಲೆ ಆಡೋಕೆ ಹೋದಂತೆ , ಆತ ಈತನ ಶಾಲೆಗೇ ಸೇರಿ ಈತನಿಗಿಂತ ಹೆಚ್ಚು ಅಂಕ ತೆಗೆದು ಈತನ ಗೆಳೆಯರೆಲ್ಲಾ ಈತನನ್ನು ಗೇಲಿ ಮಾಡಿದಂತೆ , . ಹೀಗೆ ತರ ತರದ ಕನಸುಗಳು ಬಿದ್ದು ಅಂಬಿಕಾಳ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಹುಟ್ಟಿತು ! ಅವಳನ್ನು ಮಾತನಾಡಿಸಬೇಕು ಎಂದುಕೊಂಡರೂ ಊರ ಮಾರಿಯ ಜಾತ್ರೆಯ ಸಮಯವಾದ್ದರಿಂದ ಸಮಯವೇ ಆಗಲಿಲ್ಲ. ಮೂರು ದಿನ ಆ ಪೂಜೆ ಈ ಪೂಜೆ ಅಂತ ಪೂಜಾರಿಗಳು ಸಿಕ್ಕಾಪಟ್ಟೆ ಕೆಲಸದಲ್ಲಿದ್ದರು. ಅವರಿಗೆ ಅದು ಇದು ಸಹಕರಿಸೋಕೆ ಅಂತ ಅವರ ಜೊತೆಗೇ ಪಾದರಸದಂತೆ ಓಡಾಡುತ್ತಿದ್ದ ಜರಿ ಲಂಗ ತೊಟ್ಟು ಲಕ್ಷಣವಾಗೂ ಕಾಣುತ್ತಿದ್ದ ಅಂಬಿಕಾ ಊರ ಹೆಂಗಸರಿಗೆ ಮನೆಮಗಳಂತೆ ಆಚ್ಚುಮೆಚ್ಚಿನವಳಾಗಿಬಿಟ್ಟಳು. ತನ್ನ ಅಮ್ಮನ ಕಣ್ಣಲ್ಲಿ ತನ್ನ ಬದಲು ಅಂಬಿಕಾಳ ಕಡೆಗಿದ್ದ ಮೆಚ್ಚುಗೆಯ ನೋಟ ಕಂಡು ಈತನಿಗೆಂತೂ ಸಹಿಸಲೇ ಆಗುತ್ತಿರಲಿಲ್ಲ.ಮೂರು ದಿನ ಕಳೆಯಲಿ ಎಂದೇ ಕಾಯುತ್ತಿದ್ದ.ಅಂತೂ ವಿಜ್ರಂಭಣೆಯ ಜಾತ್ರೆ ಮುಗಿಯಿತು. ಜಾತ್ರೆಯ ಮಾರನೇ ದಿನ ಎಂದಿನಂತೆ ದೇಗುಲದ ಬಳಿ ಟೈರು ಓಡಿಸುತ್ತಾ ಹೋದ. ಬೆಳಗ್ಗೆ ಪೂಜೆಗೆ ಅಂತ ಅವಳು ಬರಬಹುದು. ಅವಳನ್ನು ಮಾತನಾಡಿಸಬಹುದು ಎಂಬ ಒಂದಾಸೆ ಮನದಲ್ಲಿ. ಆದರೂ ಏನೋ ಭಯ ಮನಸಲ್ಲಿ ಇಂದು. ನೇರವಾಗಿ ದೇಗುಲಕ್ಕೆ ಹೋಗದೇ ಅಲ್ಲೇ ಮರೆಗೆ ಹೋಗಿ ಒಂದೆರಡು ನಿಮಿಷ ನೋಡಿದ. ಪೂಜಾರಿಗಳ ಮಂತ್ರ, ಘಂಟೆಗಳ ಸದ್ದಿಲ್ಲ. ದೇಗುಲದ ಹತ್ತಿರ ಬಂದು ನೋಡಿದರೆ ದೇಗುಲದ ಬಾಗಿಲು ಹಾರೊಡೆದಿದೆ! ಒಳಗೆ ಹೋಗಿ ನೋಡಿದ. ಗರ್ಭಗೃಹವನ್ನು ನೋಡಿದವನಿಗೊಮ್ಮೆ ಗಾಬರಿಯಾಯ್ತು.. ಅಲ್ಲಿರಬೇಕಾದ ಮೂರ್ತಿ ? !! ತಕ್ಷಣ ಬೆಚ್ಚಿಬಿದ್ದು ಮನೆಗೆ ಓಡಿದ.
ಮಧ್ಯಾಹ್ನದ ವೇಳೆಗೆ ಊರ ತುಂಬೆಲ್ಲಾ ಗುಸುಗುಸು. ಪೂಜಾರಿಗಳು ವಿಗ್ರಹ ಕದ್ದು ಪರಾರಿಯಾದರೆಂದೂ, ಆತನ ಚುರುಕಾಗಿ ಓಡಾಡುತ್ತಿದ್ದ ಮಗಳ ಕಣ್ಣುಗಳು ತಮ್ಮ ಹೆಂಗಸರ ಒಡವೆಗಳ ಮೇಲೇ ಇದ್ದವೆಂದೂ, ಎಷ್ಟು ಒಡವೆಗಳು ಕಾಣೆಯಾಗಿವೆಯೋ ನಿಧಾನಕ್ಕೆ ತಿಳಿಯುತ್ತವೆ ಎಂದೂ.. ನೂರೆಂಟು ಗುಸುಗುಸು. ಅಂಬಿಕಾಳ ಕಂಡರೆ ಈತನಿಗೆ ಅಷ್ಟಕ್ಕಷ್ಟೇ ಆದರೂ ಯಾಕೋ ಆಕೆ ತಾಯಿಯ ವಿಗ್ರಹ ಕದಿಯುವಷ್ಟು ಕಳ್ಳಿಯಾಗಿರಲಾರಳು ಎಂದು ಈತನ ಒಳಮನಸ್ಸು ತುಡಿಯುತ್ತಿತ್ತು.ಅಪ್ಪನ ಬಳಿ ಹೇಳಿದರೆ ಅಪ್ಪ ಚೆನ್ನಾಗಿ ಬೈದ ಈತನಿಗೆ. ಮಾರನೇ ದಿನವೇ ಈತನನ್ನು ದೂರದ ಪೇಟೆಗೆ ಓದಲಿಕ್ಕೆ ಕಳಿಸೋ ಮಾತಾಡಿದ. ಅಮ್ಮ-ಮಗ ಎಷ್ಟು ಅತ್ತು ಕರೆದರೂ ಕರಗದ ಸಾಹುಕಾರನ ಹೃದಯ ನೆನಪಾಗಿ ಬೇಸರವಾಗಿ ಅಳುತ್ತಿದ್ದ ತನ್ನ ತಾಯಿಯನ್ನು ನೆನೆದು ಈತನಿಗೂ ಅಳುಬಂತು.. ಕಣ್ಣೀರು ಅಳುಗಳ ಮರೆಸೋ ಏಕೈಕ ಔಷಧಿಯಾದ ಕಾಲನಂತೆ, ಸಮಯಕ್ಕೆ ಸರಿಯಾಗಿ ಬಂದ ಸಂಜೆಯ ಕೊನೆಯ ಮಾರುತಿ ಬಸ್ಸಿಗೆ ಈತ ಪೇಟೆಯ ಕಡೆ ಮುಖ ಮಾಡಿದ.

ಎಲ್ಲೋ ಕಾಡುಕೋಳಿಯೊಂದು ಕೂಗಿದಂತಾಗಿ ಕಲ್ಪನಾ ಲಹರಿಯಲ್ಲಿ ಮುಳುಗಿದ್ದ ಈತನಿಗೆ ಎಚ್ಚರವಾಯಿತು. ನೋಡಿದರೆ ಬೆಳಗಾಗಿದೆ. ತಿಂಡಿಯಿಲ್ಲದೇ ಹೊಟ್ಟೆ ಹಸಿಯುತ್ತಿದೆ. ಎಷ್ಟು ಹೊತ್ತು ಮಲಗಿಬಿಟ್ಟೆನಲ್ಲಾ ಎಂದು ನಗುತ್ತಾ ತಾನು ತಂದ ನೀರಲ್ಲೇ ಮುಖ ತೊಳೆದು ತಿಂಡಿಗಾಗಿ ಅಲ್ಲೇ ಹತ್ತಿರದ ಹಳ್ಳಿಯ ಕ್ಯಾಂಟೀನನ್ನು ಹುಡುಕಿ ಬೈಕ್ ಹತ್ತಿದ. ಬೆಳ ಬೆಳಗ್ಗೆ ಎತ್ತುಗಳ ಜೊತೆ ಹೊಲಕ್ಕೆ ಹೊರಟ ರೈತರು, ಎಲ್ಲೋ ಹೊರಟಿದ್ದ ಟ್ಯಾಕ್ಟರ್ ಮಾಮ, ಸೀರೆಯ ಮೇಲೊಂದು ಶರಟು ತೊಟ್ಟು ಹೊಲಗೆಲಸಕ್ಕೆ ಹೊರಟ ಹೆಂಗಸರು , ಬ್ಯಾಗೇರಿಸಿ ಶಾಲೆಗೆ ಹೊರಟ ಹುಡುಗರು ಕಂಡರು. ಟಾಟಾ ಮಾಡಿದ ಹುಡುಗರಿಗೆ ಟಾಟಾ ಮಾಡಿ ನಗ್ತಿದ್ದಾಗ ಈತನಿಗೆ ಮತ್ತೆ ತನ್ನ ಬಾಲ್ಯದ ನೆನಪುಗಳು ಮರುಕಳಿಸಿತು.. ಪೇಟೆಗೆ ಹೋದ ಕೆಲದಿನಗಳಲ್ಲೇ ತನ್ನೂರಿಗೆ ಪೋಲಿಸಿನವರು ಬಂದು ಹೋದ ಕತೆಯೆಲ್ಲಾ ತಿಳಿಯಿತು. ಆ ದಿನ ಪೇಟೆಯಲ್ಲಿ ಕೇಳ್ತಿದ್ದ ಗುಸು ಗುಸು ನೆನಪಾಯಿತು. ಲೇ ಊರಿನ ಸಾಹುಕಾರನೇ ದೇವಿಯ ವಿಗ್ರಹ ಕದಿಸಿದ್ದಾನಂತೆ. ಆದನ್ನು ಪ್ರತಿಭಟಿಸಿದ ಪೂಜಾರಿಯನ್ನ ಅವನೇ ಏನೋ ಕಣ್ಮರೆ ಮಾಡಿಸಿದ್ದಾನಂತೆ. ದೇವಿ ನಿಮ್ಮನ್ನೆಲ್ಲಾ ಸುಮ್ನೆ ಬಿಡಲ್ಲಾ ಕಣ್ರೋ, ನಿನ್ನ, ನಿಮ್ಮ ಮಗನ್ನ ಹೇಗೆ ನೋಡ್ಕೋತಾಳೆ ನೋಡ್ತಿರು ಅಂತ ಶಾಪ ಹಾಕ್ತಿದ್ರಂತೆ ಪೂಜಾರಿಗಳು ಅಂತೆಲ್ಲಾ ಮಾತಾಡ್ತಿದ್ರು. ಆದ್ರೆ ಅವ್ರು ಯಾವ ಊರಿನ ಬಗ್ಗೆ ಮಾತಾಡ್ತಿದ್ರು ಅಂತ ಅವನಿಗೆ ತಿಳಿದಿರಲಿಲ್ಲ ಅಂದು. !! ತನ್ನ ಊರಿಗೆ ಬರ್ಬೇಡ ಅಂತ ಅಪ್ಪ ಯಾಕೆ ತಡೀತಾನೆ ಅಂತ ಇವತ್ಯಾಕೋ ಒಂದು ಕ್ಷಣ ಯೋಚಿಸಿ ಗಾಬರಿ ಆಯ್ತು. ಸತ್ಯಾಸತ್ಯತೆ ಏನೂಂತ ತಿಳೀಲೆಬೇಕು ಈಗ್ಲಾದ್ರೂ. ಪಾಪದ ಅಂಬಿಕಾ ಏನಾದ್ಲೋ ಏನೋ.. ಅವಳೆಲ್ಲಿದಾಳೆ ಅಂತ ಹುಡುಕಿ ಕೈಲಾದ ಸಹಾಯ ಮಾಡ್ಲೇ ಬೇಕು ನಾನು ಅಂತ ಪಾಪ ಪ್ರಜ್ನೆ ಕಾಡತೊಡಗಿ ತಿಂಡಿ ತಿಂದವನೇ ತನ್ನೂರ ಕಡೆ ಹೋಗೋಕೆ ನಿರ್ಧಾರ ಮಾಡಿದ . ಆದರೆ ಅದು ಇದ್ದಿದ್ದೇ ಬೇರೆ ದಿಕ್ಕಿನಲ್ಲಿ.ಛೇ .ತನ್ನೂರ ದಿಕ್ಕಿನಲ್ಲೇ ಸೂರ್ಯೋದಯ ನೋಡಲು ಹೋಗಬಾರದಿತ್ತೇ ಇಂದು ಎಂದೆನಿಸಿತವನಿಗೆ.. ಪೇಟೆಗೆ ಬಂದವನೇ ತನ್ನ ಊರ ದಿಕ್ಕಿಗೆ ಗಾಡಿ ತಿರುಗಿಸಿದ. ಬಾನಲ್ಲಿ ಕಾರ್ಮುಗಿಲುಗಳು ಕಟ್ಟುತ್ತಿರುವುದನ್ನೂ, ಪೇಟೆಯಿಂದ ಹೊರ ಬರುತ್ತಿದ್ದಂತೆಯೇ ಬೆಳಕು ಕಮ್ಮಿಯಾಗ್ತಾ ಇರೋದನ್ನು ಗಮನಿಸೋ ವ್ಯವಧಾನವೂ ಇರದಂತೆ ಪಯಣ ಸಾಗಿತು ಹತ್ತು ವರ್ಷಗಳಿಂದ ಒಮ್ಮೆಯೂ ಕಾಲಿಡದಿದ್ದ ತನ್ನ ಹೆತ್ತೂರಿಗೆ.
****
ಬೆಟ್ಟಕ್ಕೆ ಹೋಗಿದ್ದ ಗ್ಯಾಂಗಿಗೆ ಸೂರ್ಯ ನೆತ್ತಿಯ ಮೇಲೆ ಬಂದಾಗ ನಿದ್ರೆ ಹರಿಯಿತು. ಲೋ.. ಇಲ್ಲಿರೋ ಪರಿಸರ ನೋಡೋ. ಗ್ರೀನರಿ,ಕೂಲ್ ವೆದರ್ , ಎಲ್ಲಿ ನೋಡಿದ್ರೂ ಆ ಬಿಳಿ ಬಿಳಿ ಮೋಡಗಳು. ಸೂಪರ್ ಮಚ್ಚಾ. ನಾನು ಇಲ್ಲೇ ಮಲ್ಗಿ ಇದ್ದು ಬಿಡ್ತೀನಿ. ಜೀವಮಾನ ಪೂರ್ತಿ ಇಲ್ಲೇ ಇರಂಗಿದ್ರೂ ಇದ್ದು ಬಿಡ್ತೀನಿ. ಇದ್ರ ಮುಂದೆ ಯಾವ ಬೀರ್ ಬಾಟ್ಲೀನೂ ಇಲ್ರೋ ಅಂದ. ಎಲ್ಲಾ ಇವನ್ನೇ ತಿರುಗಿ ನೋಡಿದ್ರು. ಎಲ್ಲಾ ವೀಕೆಂಡಲ್ಲೂ ಹ್ಯಾಂಗೋವರ್ನಲ್ಲೇ ಇರ್ತಿದ್ದ ಈತನ ಬಾಯಿಂದ ಇಂತ ಮಾತೇ ಅಂತ ಒಂದ್ಸಲ ಆಶ್ಚರ್ಯ ಆಯ್ತು. ಲೋ ಸಿಸ್ಯ. ನಿನ್ನೆ ಸ್ವಲ್ಪ ಜಾಸ್ತೀನೆ ಏರ್ಸಿದೀಯ ಅನ್ಸತ್ತೆ ಅಂದ ಮತ್ತೊಬ್ಬ. ಇಲ್ಲ ಕಣೋ ಪ್ರಾಮಿಸ್. ನಾವು ರಾತ್ರೆ ಬೈಕ್ ಟ್ರಿಪ್ ಹೊರಟಾಗ ಯಾವತ್ತೂ ಕುಡಿಯಲ್ಲ,ಮರ್ತು ಬಿಟ್ಯಾ ಅಂದ ಅವ. ಲೋ ಹೌದು ಕಣೋ. ಕುಡಿಯೋದು ಇದ್ದಿದ್ದೆ. ಎಷ್ಟೋ ಸಲ ಕುಡಿದು ಎಲ್ಲೆಲ್ಲೋ ಆಕ್ಸಿಡೆಂಟಾಗಿದೆ.ಆದ್ರೆ ನಾವ್ಯಾರೂ ಸಾಯ್ದೇ ಇರೋದು ಪುಣ್ಯ. ಆದ್ರೆ ಮುಂದಿನ ಸಲ ಏನಾದ್ರೂ ಆದ್ರೆ ಏನ್ರೋ ಮಾಡೋದು. ಇಂತ ಜಾಗ ಇನ್ನೆಷ್ಟೋ ಇರ್ಬೋದು ನೋಡೋಕೆ. ಅದನ್ನೆಲ್ಲಾ ಬೈಕಲ್ಲಿ ಸುತ್ತಿ ಮಾಡೋ ಬದ್ಲು ಬಿದಿರು ಮೋಟಾರ್ ಹತ್ತೋ ಪರಿಸ್ಥಿತಿ ಬರ್ಬೋದು ಕಣೋ ಅಂದ ಮತ್ತೊಬ್ಬ.. ಸರಿ ಬಿಡ್ರೋ ನಿಮ್ಮ ಮಾತುಗಳ್ನೆಲ್ಲಾ ಒಪ್ತೀನಿ. ಆದ್ರೆ ಈಗ ಟ್ರಿಪ್ಪಿಗೆ ಅಂತ ತಂದಿರೋ ಬೀರ್ ಬಾಟ್ಲಿಗಳನ್ನೆಲ್ಲಾ ಏನ್ ಮಾಡೋಣ ಅಂತೀರಿ. ಇದೇ ಲಾಸ್ಟ್ ಬೀರ್ ಟ್ರಿಪ್ಪು ಅಂತ ಕುಡ್ದು ಬಿಡೋಣ.ಇನ್ಮೇಲೆ ಇದಕ್ಕೆ ಕೈ ಹಾಕ್ದೇ ಹೋದ್ರೆ ಆಯ್ತು. ಚೀರ್ಸ್ ಅಂದ.. ಬೀರ್ ಬುರುಡೆ ತೆಗೀತಿದ್ದಂಗೆ ಎಲ್ಲರ ಮನಸ್ಸುಗಳು ಮತ್ತೆ ಪರಮಾತ್ಮನ ದಾಸನಾದವು. ಹುಟ್ಟು ಗುಣ ಎಷ್ಟಂದ್ರೂ…
*****
ಸಂಜೆ ಕಳಿತಾ ಬಂತು ಅಂತ ಸಾಗಿದ ಕೊನೆಯ ಮಾರುತಿ ಬಸ್ಸು ಹೇಳ್ತಿತ್ತು. ಭೋರ್ಗರೆಯುತ್ತಿರೋ ಮಳೆಯಲ್ಲಿ ಒಂದು ಕಡೆಯಿಂದ ತನ್ನೂರತ್ರ ಸಾಗಿರೋ ಹುಡುಗ. ಮತ್ತೊಂದು ಕಡೆಯಿಂದ ಪೇಟೆಗೆ ವಾಪಸ್ಸಾಗ್ತಿರೋ ಗ್ಯಾಂಗು. ಸುಂದರ ಪ್ರಕೃತಿಯನ್ನು ನೋಡಿದವರು ಬೇಗ ವಾಪಾಸಾಗೋದು ಬಿಟ್ಟು ಮತ್ತೆ ಹಳೆ ಚಾಳಿಯಂತೆ ಕುಡಿಯುತ್ತಾ ಕೂತಿದ್ದು ಎಲ್ಲರಿಗೂ ನಾಚಿಕೆ ತರಿಸಿತ್ತು. ಅಪರಾಧಿ ಪ್ರಜ್ನೆಯಿಂದಲೋ ಅಥವಾ ಸುರಿಯುತ್ತಿರೋ ಮಳೆಯಲ್ಲಿ ಗಾಡಿ ಸ್ಕಿಡ್ಡಾಗೋ ಭಯದಿಂದಲೋ ಅವರ ಗಾಡಿಗಳಲ್ಲಿ ಹಿಂದಿನ ಯಮವೇಗವಿಲ್ಲ. ಆದರೂ ಜೋರಾಗೋ ಸಾಗುತ್ತಿದ್ದರು. ಕುಡಿದ ಕೈಗಳಲ್ಲಿ ಗಾಡಿಯ ಮೇಲೆ ನಿಯಂತ್ರಣವಿರದಿದ್ದರೂ ಪೇಟೆಯಲ್ಲಿ ಎಷ್ಟೋ ವರ್ಷಗಳಿಂದ ರ್ಯಾಷ್ ಆಗಿ ಓಡಿಸಿದ ಭರವಸೆ ಮೇಲೆ (?) ಗಾಡಿ ಓಡುತ್ತಿತ್ತು. ರಾತ್ರಿಯಾಗದಿದ್ದರೂ ಮೋಡಗಳ ಕತ್ತಲಾವರಿಸಿದ್ದರಿಂದ ಹಗಲಲ್ಲೇ ಹೆಡ್ ಲೈಟ್ ಹಾಕಿ ಗಾಡಿ ಓಡಿಸಿದ್ದರಿವರು. ಒಂದು ಮೊನಚಾದ ತಿರುವು. ಆ ತಿರುವಿನಲ್ಲಿ ಚಕ್ಕನೆ ಎದುರಿಗೆ ಯಾರೋ ಹೆಂಗಸು ಬಂದಂತೆ ಕಂಡಿತು ಒಬ್ಬನಿಗೆ. ಲೇ ಯಾರೋ ಹೆಂಗಸು ಕಣೋ ಅಂದ ಒಬ್ಬ. ಲೋ ಯಾವುದೋ ಗಾಡಿ ಕಣ್ರೋ ಅಂದ ಒಬ್ಬ. ಎಷ್ಟೇ ಬ್ರೇಕ್ ಹಾಕಿದ್ರೂ ಎರಡು ಗಾಡಿಗಳು ನಿಲ್ಲದೇ ಮುಂದೆ ಹೋದವು. ಮಳೆಗಾಲಕ್ಕೆ ಸ್ಕಿಡ್ ಆಗಿದ್ದು ಬೇರೆ. ಒಂದು ಗಾಡಿ ಸ್ಕಿಡ್ ಆಗಿ ರಸ್ತೆಯ ಪಕ್ಕದ ಮೋರಿಗೆ ಬಿದ್ದಿತ್ತು. ಇನ್ನೊಂದು ಮತ್ತೊಂದು ಮೂಲೆಯ ಮರಕ್ಕೆ ಗುದ್ದಿತ್ತು. ಅದರಲ್ಲಿದ್ದವರೆಲ್ಲಾ ಗಾಡಿ ಸ್ಲೋ ಆದಾಗ ಹಾರ್ಕಂಡಿದ್ದರು ಅಷ್ಟೇ. ಇನ್ನೊಬ್ಬನ ಗಾಡಿ ಯಾವುದಕ್ಕೋ ಲೈಟಾಗಿ ಕುಟ್ಟಿದ ಅನುಭವ. ಎಣ್ಣೆಯ ಮಬ್ಬಲ್ಲಿ, ಕತ್ತಲಲ್ಲಿ ಆತನಿಗೆ ಏನೆಂದು ಸರಿಯಾಗಿ ತಿಳಿಯಲಿಲ್ಲ. ಕಾಲಿಗೆ ಬೇರೆ ಬೈಕಿನ ಏನೋ ತಾಗಿದಂತಾಗಿ ಅಮ್ಮಾ ಎಂದು ಕೂಗಿಕೊಂಡ .ಆದರೂ ಹೇಗೋ ಗಾಡಿ ಮುಂದೆ ತಂದ. ಮೂರನೇ ಗಾಡಿ ಇವರ ಗಾಡಿಗಳ ಬಳಿ ಬರುತ್ತಿದ್ದಂತೆಯೇ ಆತ ನೋವು ತಡೆಯಲಾರದೇ ಚೀರಿ ಗಾಡಿಯೊಡನೆ ಬಿದ್ದುಬಿಟ್ಟ. ಆ ಗಾಡಿಯ ಹಿಂದೆ ಕೂತವ ಕಾಲುಕೊಡತಿದ್ದರೆ ಇಬ್ಬರೂ ಚೆನ್ನಾಗಿ ಬೀಳುತ್ತಿದ್ದರು. ಹಿಂದೆ ಕೂತವ ಪೆಟ್ಟಾದವನನ್ನ ಗಾಡಿಯ ಹಿಂದೆ ಹಾಕಿಕೊಂಡು ಗಾಡಿ ಓಡಿಸಲು ರೆಡಿಯಾದ. ಕುಡಿಯೋದು ಬೇಡ ಅಂದ್ರೆ ಕೇಳಿದ್ರಾ ? ನೋಡ್ರಿ ಈಗ ಯಾರಿಗೋ ಗುದ್ದಿದ್ದೀರಿ. ಇಲ್ನೋಡಿದ್ರೆ ಇವ್ನ ಕಾಲು ಮುರೀತೋ ಏನೋ ಗೊತ್ತಿಲ್ಲ. ಊರವ್ರೆಲ್ಲಾ ಸೇರೋ ಮೊದ್ಲು ಎಸ್ಕೇಪಾಗೋಣ ಏಳ್ರಿ ಅಂತ ಎಬ್ಸಿದ ಎಲ್ರನ್ನೂ ಸರಿಯಾಗಿದ್ದ ಅವ. ಈ ಗ್ಯಾಂಗಿನವರು ಇದ್ದ ಅವಸ್ಥೆಯಲ್ಲೇ ಗಾಡಿಗಳನ್ನು ಹೇಗೋ ಸ್ಟಾರ್ಟ್ ಮಾಡಿ ಅದನ್ನ ಹತ್ತಿ ಹೊರಟುಹೋದರು.. ಇವರನ್ನು ತಪ್ಪಿಸೋಕೆ ಅಂತ ಮೂಲೆಗೆ ಹೋಗಿ ಬಿದ್ದಿದ್ದ ಒಂದು ಜೀವ ಪ್ರಜ್ನೆಯಿಲ್ಲದೆ ಹಾಗೇ ಬಿದ್ದುಕೊಂಡಿತ್ತು..

Tuesday, July 16, 2013

ಪಯಣ

ರೈಲು ಸುರಂಗದಲ್ಲಿ ಸಾಗ್ತಾ ಇತ್ತು. ಕತ್ತಲೆಯ ತೀರ್ವತೆ ತಿಳಿಯಲೆಂದೇ ಎಲ್ಲಾ ಲೈಟುಗಳನ್ನೂ ಆಫ್ ಮಾಡಿದ್ದರು. ರೈಲು ಸುರಂಗದಲ್ಲಿ ಸಾಗ್ತಿರೋ ಸದ್ದು ಬಿಟ್ಟರೆ ಬೇರೇನೂ ಇಲ್ಲ. ಎಷ್ಟುದ್ದದ ಸುರಂಗವೋ ತಿಳಿಯದು. ಜೀವನವೇ ಮರಳದ ಕತ್ತಲೆಯ ಕೂಪಕ್ಕೆ ಧುಮುಕಿದಂತೆ ಎಲ್ಲೆಡೆ ಗಾಢಾಂಧಕಾರ. ಕಣ್ಣು ತೆರೆದರೂ , ಮುಚ್ಚಿದರೂ ಒಂದೇ ಎನಿಸುವಂತಹ ಕತ್ತಲು. ಕೆಲ ಕ್ಷಣಗಳ ಮೌನದ ನಂತರ ಎಲ್ಲಾ ಕಿರಿಚತೊಡಗಿದರು. ಕತ್ತಲೆಯನ್ನು ಎಂದೂ ಕಾಣದಂತೆ ಕಂಡ ಖುಷಿಗೋ ಅಥವಾ ಪಕ್ಕದವರು ಕಿರಿಚುತ್ತಿದ್ದಾರೆಂದೋ ತಿಳಿಯದು. ಎಲ್ಲೆಡೆ ಹೋ  ಎಂಬ ಕೂಗು. ಈ ಕೂಗಿಗರ ನಡುವೆ ಒಬ್ಬ ಮೌನವಾಗಿ ತನ್ನ ಸೀಟಿನಲ್ಲೇ ಕೂತಿದ್ದ. ಜಗದೆಲ್ಲ ಆಗು ಹೋಗುಗಳ ಬಗ್ಗೆ ದಿವ್ಯ ನಿರ್ಲಿಪ್ತತೆಯನ್ನು ತಾಳಿದ ಬೈರಾಗಿಯಂತೆ, ಕಳೆದ ಪ್ರೇಯಸಿಯ ವಿರಹ ವೇದನೆಯಿಂದ ಸುಟ್ಟು ಕರಕಲಾದ ಭಗ್ನ ಪ್ರೇಮಿಯಂತೆ ಈತ ಯಾವುದೇ ಕೂಗುಗಳಿಲ್ಲದೇ ಕುಳಿತಿದ್ದ. ಆ ಕತ್ತಲೆಯಲ್ಲಿ ಈತ ಕೂತಿದ್ದನೋ ನಿಂತಿದ್ದನೋ ಆತನನ್ನುಳಿದು ಯಾರಿಗೂ ತಿಳಿಯುವಂತಿರದಿದ್ದರೂ ಆತ ರೈಲು ಸುರಂಗದ ಹೊರಗೆ ಇದ್ದಾಗ ಹೇಗಿದ್ದನೋ ಸುರಂಗ ಹೊಕ್ಕಾಗಲೂ ಆ ಜಾಗದಿಂದ ಮಿಸುಕದೇ ಹಾಗೇ ಇದ್ದ.


ರೈಲು ಕತ್ತಲೆಯ ಸುರಂಗದಲ್ಲಿ ಇದ್ದಕ್ಕಿದ್ದಂಗೆ  ನಿಂತೇ ಬಿಟ್ಟಾಗ ಎಲ್ಲರ ಕೂಗು, ಕೇಕೆಗಳು ಎಲ್ಲೆ ಮೀರಿತು.. ಈ ಯುವಕರ ಕೂಗಿನಲ್ಲಿ ಯಾವುದೇ ಕೇಳಿದ ಕಿಲಕಿಲ ಕೇಳಿದಂತೆನಿಸಿ ಧಗ್ಗನೆ ಎದ್ದು ನಿಂತ ಆತ. ಹೌದು ಅದೇ ನಗು. ಸಂದೇಹವೇ ಇಲ್ಲ. ವರ್ಷಗಟ್ಟಲೇ ಹಿಂದೆ ಕಾಡಿದ ಅದೇ ಮಂದಹಾಸ ಇಂದು ಮರಳಿ ಕೇಳಿದಂತೆ. ಲಗಾಮು ಕಿತ್ತ ಕುದುರೆಗಳಂತೆ, ಶಾಲೆ ಬಿಟ್ಟ ಮಕ್ಕಳಂತೆ ಮನದ ಭಾವ, ನೆನಪುಗಳು ಓಡತೊಡಗಿದವು, ಕಾಲಗರ್ಭದಲ್ಲಿ ಹಿಂದೆ ಹಿಂದೆ. ಇಲ್ಲಿಯವರೆಗೂ ಬೇಡವಾಗಿದ್ದ ರೈಲಿನ ಲೈಟುಗಳು, ಶಾಂತಿ ನೀಡುವಂತಿದ್ದ ಕತ್ತಲೆ, ಖಾಲಿಯಾದ ಮೊಬೈಲ್ ಬ್ಯಾಟರಿ ಈಗ ಅಸಹನೀಯವೆನಿಸತೊಡಗಿದವು. ಒಂದು ಬೆಂಕಿಪೊಟ್ಟಣವಾದರೂ ಸಿಕ್ಕಿದ್ದರೆ ಆ ಬೆಂಕಿಕಡ್ಡಿಗಳ ಬೆಳಕಿನಲ್ಲಿ ಆಕೆಯನ್ನು ಹುಡುಕಿಯೇನು ಎಂದೆನಿಸತೊಡಗಿತವನಿಗೆ. ದೇಹದ ಪರಿವೆಯಿಲ್ಲದಂತೆ ದೇಶ ಸುತ್ತುತ್ತಿದ್ದವನಿಗೆ ನಿನ್ನೆ ಮಳೆಯಲ್ಲಿ ಇಡೀ ದಿನ ತೊಯ್ದದ್ದೂ ನೆನಪಿರಲಿಲ್ಲ. ಅದೇ ಅರೆ ಒಣಗಿದ ಪ್ಯಾಂಟಿನ ಜೇಬಿಗೆ ಕೈ ಹಾಕಿದ. ಎಂದೂ ಇರುತ್ತಿದ್ದ ಬೆಂಕಿಪೆಟ್ಟಿಗೆಗೆ. ಜೀವವನ್ನೇ ಸುಟ್ಟ ಸಿಗರೇಟುಗಳಿಗೆ ನಿತ್ಯ ಸಾಥಿಯಾಗುತ್ತಿದ್ದ ಬೆಂಕಿಪೆಟ್ಟಿಗೆ  ಇಂದೇ ಕೈಕೊಡಬೇಕೇ. ಆಸೆಯೆಂಬ ಮಾಯೆ ಕೇಳಬೇಕಲ್ಲ. ಕತ್ತಲೆಯಲ್ಲೂ ಕಷ್ಟಪಟ್ಟು, ಅಭ್ಯಾಸಬಲದಿಂದ ಒಂದು ಕಡ್ಡಿ ಗೀರಿದ.. ಒದ್ದೆ ಪೆಟ್ಟಿಗೆಯಲ್ಲಿ ಬೆಂಕಿಯೆಲ್ಲಿ ಮೂಡಬೇಕು? ಈತನ ಅಸಹಾಯಕತೆಗೆ ಸಾಕ್ಷಿಯಾಗುವಂತೆ ಕಡ್ಡಿಯೇ ಮುರಿದು ಹೋಯಿತು. ಬೇಸರವೇ ಜೀವನವಾಗಿಸಿಕೊಂಡವನಿಗೂ ಇಂದು ವಿಧಿಯ ಮೇಲೆ ತೀರಲಾರದ ಕೋಪ.ಎಲ್ಲೆಲ್ಲೂ ಸಿಗದವಳು ಇಂದು ಮತ್ತೆ ಸಿಕ್ಕಿದಂತೆ ಮಾಡಿಯೂ ಇನ್ನೂ ಸಿಗದಿರುವ ಘಳಿಗೆಗಳ ಬಗ್ಗೆ ಕೋಪ, ನಿರಾಸೆ. ಕೆಲ ಕ್ಷಣಗಳ ಮಾತಷ್ಟೇ. ರೈಲು ಸುರಂಗ ದಾಟಿದರೆ ಮೂಡೋ ದಿನದ ಬೆಳಕಲ್ಲಿ ಆಕೆಯನ್ನು ಮತ್ತೆ ಹುಡುಕಬಹುದಲ್ಲಾ ಅನ್ನೋ ಭರವಸೆಯಲ್ಲಿ ಆತ ಮತ್ತೆ ಕುಳಿತ. ಇಷ್ಟು ಕಾಲ ಕಾದವನಿಗೆ ಇನ್ನು ಕೆಲ ಕಾಲ ಕಾಯುವುದು ಹೆಚ್ಚೇ ಎಂದು ಎಷ್ಟೇ ಪ್ರಯತ್ನಪಟ್ಟರೂ ಮನಸ್ಸು ಮಾತುಕೇಳದೇ ಹಿಂದಿಂದೆ ಓಡುತ್ತಿತ್ತು..  ಮನಸ್ಸೇಕೋ ವಾಸ್ತವಕ್ಕೆ ಬಂದಿತೆಂದು ಅನಿಸಿದಾಗ ರೈಲಿನಲ್ಲಿ   ಎಲ್ಲಿಂದ ಆ ದನಿ ಕೇಳಿ ಬರುತ್ತಿದೆ ಎಂದು ಕತ್ತು ಹೊರಳಿಸಿದ. ಅಷ್ಟರಲ್ಲಿ ರೈಲು ಮತ್ತೆ ಮುಂದೆ ಹೊರಟಿತು ಸುರಂಗದಿಂದ. ಜನರ ಕೂಗುಗಳು ಮತ್ತೆ ಮುಗಿಲು ಮುಟ್ಟಿತು. ಈ ಕೂಗುಗಳಲ್ಲಿ ಮೋಹನ ಮುರಳಿಯಂತೆ ಸೆಳೆದ ಆ ನಗು ಕರಗಿಹೋಯಿತು.

ರೈಲು ಸುರಂಗದಿಂದ ಹೊರಬಂತು ಕೊನೆಗೂ.. ಕತ್ತಲೆಯ ಕೂಪದಿಂದ ತನ್ನ ಬಾಳು ಕೊನೆಗೂ ಹೊರಬಂತೇನೋ ಎನಿಸಿತವನಿಗೆ. ದಿಗ್ಗನೆ ಎದ್ದ ಆತ ಬೋಗಿಯ ಎಡಬದಿಗೆ ಹೊರಟ. ಎಲ್ಲಾದರೂ ಸೀಟಿನಲ್ಲಿ ಮರೆಯಲಾರದಂತಹ ಆ ಮುಖ ಕಾಣಬಹುದೇ ಎಂದು. ನಿರಾಸೆ. ಬೋಗಿಯ ತುದಿಯವರೆಗೂ ಹೋದವ ಮತ್ತೆ ಮರಳಿ ಮತ್ತೊಂದು ದಿಕ್ಕಿನತ್ತ ಸಾಗಿದ. ಅತ್ತಲೂ ನಿರಾಸೆ. ಕೆಲವೊಬ್ಬರು ಇವನನ್ನೇ ನೋಡಿದರು. ರೈಲಿನಲ್ಲಿ ಬೆಳಗಿಂದ ಒಂದೇ ಸೀಟಿನಲ್ಲಿ ಕೂತವ ಈಗ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿತ್ತ ಓಡಾಡೋದನ್ನ ನೊಡಿ ಆಶ್ಚರ್ಯ ಆಗಿರ್ಬೇಕು ಅವರಿಗೆ . ಈ ತಳಮಳ ಕಂಡು ಒಮ್ಮೆ ಅವನಿಗೇ ನಗು ಬಂತು. ಇದು ತಾನೇನಾ ಅಂತ. ವರ್ಷಗಳ ಜಡತ್ವವನ್ನ ಒಂದು ನಗು ಅಳಿಸುವುದೆಂದರೆ.. ಎರಡು ಭೋಗಿಗಳನ್ನು ದಾಟಿದರೂ ಆಕೆ ಕಾಣಲಿಲ್ಲ. ಯಾರದೋ ನಗು ಆಕೆಯದಂತೆ ಕೇಳಿತೋ ಅಥವಾ ಆಕೆಯೇ ತನ್ನ ಕಾಡಬೇಕೆಂದು ಎಲ್ಲಾದರೂ ಮರೆಯಾದಳೋ ತಿಳಿಯದಾಯಿತು.. ನಿರಾಸೆಯ ಮೋಡಗಳು ಆಸೆಯ ಸೂರ್ಯನನ್ನು ಮುತ್ತಿದಂತೆ, ಭರವಸೆಯ ಕಿರಣಗಳು ಕಾಲದ ಮೇಘಗಳ ಹಿಂದೆ ಕಾಣೆಯಾದಂತೆ. ನಾಲ್ಕೈದು ಭೋಗಿಗಳಾಚೆ ದಾಟಿದರೂ ಆಕೆ ಸಿಗದಿದ್ದಾಗ ಮನಸ್ಸಿಗೆ ಮತ್ತದೇ ನಿರಾಸೆ ಕವಿಯಿತು. ಕಮಲದಂತೆ ಅರಳಿದ ಮುಖ ಕಾಲ ಸೂರ್ಯನ ಪ್ರಕೋಪಕ್ಕೆ ಸಿಕ್ಕಂತೆ ಬಾಡಿಹೋಯಿತು..

ಎರಡು ವರ್ಷಗಳ ಹಿಂದಿರಬೇಕು. ಇದೇ ರೀತಿ ಒಂದು ರೈಲಿನ ಪಯಣ. ದೇಶ ಸುತ್ತೋ ಹುಚ್ಚಿನ ಯುವಕರು. ರೈಲೊಂದರಲ್ಲಿ ಮೋಜು ಮಸ್ತಿಯ ಪಯಣ. ಹೀಗೆ ಹಾಡು ಹರಟೆಗಳಲ್ಲಿದ್ದಾಗ ಒಂದು ಸುಂದರ ಹೆಣ್ಣು ದನಿ ಕೇಳಿದಂತಾಯಿತು. ಎಲ್ಲಾ ಅತ್ತ ತಿರುಗಿದರೆ ಒಬ್ಬ ಹಲಸಿನ ಹಣ್ಣು ಮಾರೋ ಹುಡುಗಿ. ಹುಡುಗಿ ಅನ್ನೋದಕ್ಕಿಂತ ಯುವತಿ ಅಂತಲೇ ಅನ್ನಬಹುದಿತ್ತೇನೋ. ಲಂಗದಾವಣಿ ಬದಲು ಜೀನ್ಸ್ ಪ್ಯಾಂಟೇನಾದ್ರೂ ಹಾಕಿದ್ರೆ ಇವ್ರ ಗ್ಯಾಂಗಿನಲ್ಲೇ ಒಬ್ಬಳಂತೆ ಕಾಣುತ್ತಿದ್ದಳೇಣೋ. ಆದರೆ ಹಳ್ಳಿ ಹುಡುಗಿ. ಕಿತ್ತು ತಿನ್ನೋ ಬಡತನ ತೇಪೆ ಹಾಕಿದ ಬಟ್ಟೆಯಲ್ಲಿ ಕಾಣುತ್ತಿತ್ತು. ಬಡವರೆಂದಾಕ್ಷಣ ಭಿಕ್ಷುಕರೆಂದುಕೊಂಡಿದ್ದ ಪೇಟೆ ಹುಡುಗರಿಗೆ ಅವಳನ್ನು ನೋಡಿ ಯಾಕೋ ಮಾತೇ ನಿಂತುಹೋಗಿತ್ತು. ಹರಿದ ಬಟ್ಟೆಯಲ್ಲೇ ಲಕ್ಷಣವಾಗಿದ್ದ ಆಕೆಯನ್ನು ಕಂಡು ಪೇಟೆ ಮಂಗಗಳಿಗೆ ಯಾಕೋ ತಡೆಯದಾಯಿತು. ಏನ್ ಹೆಣ್ಣೇ ಎಷ್ಟು ಹಲಸಿನಹೆಣ್ಣಿಗೆ ಅಂತ ಆಕೆಯ ಬಳಿ ಹೋದ ಒಬ್ಬ. ಸಾಬ್ , ಅಲ್ಲೇ ನಿಲ್ಲಿ. ನಾವು ಹಣ್ಣು ಮಾತ್ರ ಮಾರೋದು. ದುಡ್ಡಿಲ್ದೇ ಇರ್ಬೋದು ನಮ್ಮತ್ರ ಆದ್ರೆ ಸ್ವಾಭಿಮಾನ ಅನ್ನೋದು ಇದ್ದೇ ಇದೆ ಅಂದ್ಲು ಆಕೆ. ಹೋದವನ ಮುಖ ಪಿಚ್ಚಾಯಿತು. ಎಲ್ಲರ ಗಮನ ಆಕೆಯ ಕಡೆ ತಿರುಗಿತು. ಅಲ್ಲಿದ್ದ ಹುಡುಗರಲ್ಲಿ ಯಾರೊಬ್ಬರು ಮಾತನಾಡಿದ್ರೂ ರೈಲಲ್ಲಿದ್ದ ಎಲ್ಲರಿಂದಲೂ ಒಂದೊಂದು ಧರ್ಮದೇಟುಗಳು ಗ್ಯಾರಂಟಿ ಅನ್ನೋ ತರ ರೈಲಿನ ಜನರೆಲ್ಲಾ ಈ ಹುಡುಗರ ಗ್ಯಾಂಗನ್ನು ದುರುಗುಟ್ಟತೊಡಗಿದರು.

ಪರಿಸ್ಥಿತಿ ಯಾಕೋ ಮಿತಿ ಮೀರ್ತಿರೋದನ್ನ ನೋಡಿದ ಈತ ಎದ್ದು ಬಂದು.. ಏ ಸಾರಿ ಕೇಳೋ ಮೇಡಂಗೆ. ಸಾರಿ ಮೇಡಂ. ಅವನು ಮಲೆಯಾಳಿ. ಆತನಿಗೆ ಕನ್ನಡ ಸರಿಯಾಗಿ ಬರಲ್ಲ. ದಯವಿಟ್ಟು ಕ್ಷಮಿಸಿ ಬಿಡಿ. ನಿಮ್ಮ ಇಡೀ ಹಲಸಿನಹಣ್ಣಿನ ಡಬ್ಬ ನಾವೇ ತಗೋತೀವಿ ಬೇಕಾದ್ರೆ. ಕ್ಷಮಿಸಿ ಬಿಡಿ ಮೇಡಂ ಅಂದ.. ಏನಯ್ಯಾ, ದುಡ್ಡಿದೆ ಅಂತ ಧಿಮಾಕಾ ನಿಮಗೆ ? ಆ ಹೆಣ್ಣು ಮಗೂನ ಅವಮಾನ ಮಾಡೋನು ಒಬ್ಬ. ಸಾಲದು ಅಂತ ಎಲ್ಲಾ ಹಲಸಿನ ಹಣ್ಣು ತಗೋತೀವಿ ಅಂತ ಧಿಮಾಕು ಮಾಡೋನು ಒಬ್ಬ. ಹೇಗಿದೆ ಮೈಗೆ ಅಂದ್ರು ಒಬ್ಬ ವಯಸ್ಕರು.. ಹಾಗಲ್ಲ ಸಾರ್ ಅದು. ಸಾರಿ ಕೇಳ್ತಿದ್ದೇನಲ್ಲ ನಾನು .. ಅಬೆ, ಸಾರಿ ಪೂಚೋ ಕರ್ಕೆ ಬೋಲಾ ತಾನ ತುಜೆ, ಸಾರಿ ಪೂಚೋ ಬೇ ಅಂತ ಮೊದಲಿನವನ ತಲೆಗೊಂದು ಮೊಟಕಿದ ಇವನು.  ಅವನು ಸಾರಿ ಮೇಡಂ, ಸಾರಿ ಸಾರಿ ಅಂದ.. ಅವನ ಸಾರಿಯಿಂದ ಆಕೆಗೆ ಸಮಾಧಾನವಾಯ್ತೋ ಅಥವಾ ಈ ಸಾರಿ ಪ್ರಹಸನದಿಂದ ತನ್ನ ಇಡೀ ದಿನದ ಬಿಸಿನೆಸ್ ಹಾಳಾಗುವುದೆಂಬ ಭಯವೋ ಆ ಹುಡುಗಿಯಲ್ಲಿದ್ದ ವ್ಯವಹಾರಸ್ಥೆಯನ್ನ ವಾಸ್ತವಕ್ಕೆ ತಂದಿತು.. ರೀ ಅವ್ನು ಸಾರಿ ಕೇಳಿದ್ನಲ್ಲ. ನಾನು ಒಪ್ಕೊಂಡ್ನಲ್ಲ. ಈ ಚಾಪ್ಟರ್ ಕ್ಲೋಸ್ ಇಲ್ಲಿಗೆ. ನಿಮ್ಮೆಲ್ಲರ ಸಪೋರ್ಟಿಗೆ ಥ್ಯಾಂಕ್ಸ್, ನಡಿರಿ ನಡಿರಿ ಅಂದ್ಲು . ಅಲ್ಲಿದ್ದ ಜನಕ್ಕೆ ಒಮ್ಮೆ ಏನು ಹೇಳ್ಬೇಕು ಅಂತನೇ ಗೊತ್ತಾಗ್ಲಿಲ್ಲ. ಅವ್ರು ಅಲ್ಲೇ ಇರೋದನ್ನ ನೋಡಿ ಏನ್ರೀ.. ಎಲ್ಲಾ ನಾಟ್ಕ ನೋಡೋಕೆ ಬಂದಿದೀರಾ ? ನಡೀರಿ ಸಾಕು ಅಂದಾಗ ಎಲ್ಲಾ ಅಬ್ಬಾರೆ ಅಂದ್ಕೊಂಡು ತಮ್ಮ ತಮ್ಮ ಜಾಗಕ್ಕೆ ಹೋಗಿ ಕೂತ್ರು..
ಆ ಹುಡುಗಿ ಹಲಸಿನಹಣ್ಣು ಮಾರುತ್ತಾ ಮುಂದಿನ ಬೋಗಿಗೆ ಹೋದ್ರೂ ಆಕೆಯ ಮಾತುಗಳು ಮಾತ್ರ ಈತನ ಕಿವಿಯಲ್ಲಿ ಇನ್ನೂ ಗುಯ್ಗುಟ್ಟುತ್ತಿದ್ದವು. ಆಕೆಯ ಸ್ವಾಭಿಮಾನ, ಸಮಯ ಪ್ರಜ್ನೆ ಬಹಳ ಇಷ್ಟವಾಗೋಯ್ತು. ಆಕೆಯ ಕೊನೆಯ ಮಾತುಗಳು ಒಂದೆರಡು ನಿಮಿಷ ತಡ ಆಗಿದ್ರೆ ಇವ್ನ ಗ್ಯಾಂಗಿನವ್ರಿಗೆಲ್ಲಾ ಸರಿಯಾಗಿ ಧರ್ಮದೇಟುಗಳು ಬಿದ್ದಿರೋದು. ರೈಲಿನಿಂದಾನೇ ಹೊರದಬ್ಬಿರ್ತಿದ್ರೇನೋ.

ಅದೇ ನೆನಪುಗಳಲ್ಲಿ ಕೂತಿದ್ದಾಗ ಇವರು ಇಳಿಯೋ ಜಾಗ ಬಂದೇ ಹೋಯ್ತು. ಗೆಳೆಯರೆಲ್ಲಾ ತಮ್ಮ ನಗುವಿನಲ್ಲಿ ರೈಲಿನ ಘಟನೆಯನ್ನು ಮರೆತೇಹೋಗಿದ್ದರೂ ಈತನ ನೆನಪಿನಲ್ಲಿ ಅದು ಅಳಿಸಲಾರದಂತೆ ಅಚ್ಚಾಗಿಹೋಗಿತ್ತು. ಟ್ರಿಪ್ಪಿಂದ ವಾಪಾಸು ಬಂದರೂ ಆಕೆಯ ಮಾತುಗಳು, ಮುಖ ಕಿವಿಯಲ್ಲಿ ಈಗ ತಾನೇ ಕಂಡು ಕೇಳಿದಂತೆ ಅನುರಣಿಸುತ್ತಿದ್ದವು.
ಈ ಘಟನೆಯ ನಂತರ ಬಡವರು, ಅವರ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಅನ್ನೋ ಭಾವಗಳು ತೀವ್ರವಾಗಿ ಒಂದು ಎನ್ ಜೀವೋ ಸೇರಿಕೊಂಡ ಆ ಹುಡುಗ.ಹಿಂಗೇ ಒಂದು ತಿಂಗಳು ಕಳೆಯಿತು. ಸಕಲೇಶಪುರದತ್ರ ಯಾವುದೋ ಒಂದು ಹಳ್ಳಿಯ ಶಾಲೆಗೆ ಧನಸಹಾಯ ಮಾಡೋ ಪ್ಲಾನು ಹಾಕಿದ್ರು ಇವನ ಎನ್ಜೀವೋ ಅವರು. ಪೇಟೆಯ ಜೀವನದಿಂದ ಬೋರು ಹೊಡೆದಿದ್ದ ಆತ ಎನ್ಜೀವೋದವರ ಜೊತೆ ತಾನೂ ಬರ್ತೀನಿ ಅಂತ ಕೂತ. ಹೊಸ ಹುಡುಗನ ಉತ್ಸಾಹ ಕಂಡು ಖುಷಿಯಾಗಿ ಅವನನ್ನೂ ಕರೆದುಕೊಂಡು ಹೋದರು ಅವರು ಸಕಲೇಶಪುರದತ್ತರದ ಹಳ್ಳಿಗೆ. ಸಕಲೇಶಪುರ ಅಂದ್ರೆ ಕೇಳಬೇಕಾ ? ಮೊದಲೇ ಸಖತ್ತಾದ ಜಾಗ. ಅಲ್ಲಿನ ಹಸಿರ ಸಿರಿಯಲ್ಲಿ ಆತ ಕಳೆದೇ ಹೋದ. ಪ್ರತೀ ಮರ, ಹಕ್ಕಿಯನ್ನೂ ಎಂಜಾಯ್ ಮಾಡ್ಬೇಕು ಅಂತ ತನ್ನ ಕ್ಯಾಮೆರಾದಲ್ಲಿ ಸೆರೆಹಿಡೀತಾ ಇದ್ದ ಈತನನ್ನು ಮುಂದೆ ಮುಂದೆ ನಡೆಸೋದೇ ಒಂದು ಸಾಹಸವಾಗಿ ಆ ಎನ್ಜೀವೋದ ಹಿರಿಯರೆಲ್ಲಾ ಇವ್ನ ಬಗ್ಗೆ ಗೊಣಗತೊಡಗಿದರು :-) ಅಂತೂ ಬಂದು ಮುಟ್ಟಿದ್ರು ಆ ಹಳ್ಳಿಗೆ. ಹಳ್ಳಿ ಅಂದ್ರೆ ಘೋರ ಹಳ್ಳಿ.
ಯಾವ ಮೂಲಭೂತ ಸೌಕರ್ಯಗಳೂ ಇಲ್ಲದ ಹಳ್ಳಿ. ವಾಹನ ಅಂದ್ರೆ ದ್ವಿಚಕ್ರವಾಹನ ಇಲ್ಲಾ ಜೀಪನ್ನು ಕಷ್ಟಪಟ್ಟು ಓಡಿಸಬಹುದಷ್ಟೇ ಆ ಹಳ್ಳಿಯ ಕೊರಕಲು ರೋಡಲ್ಲಿ. ಮಳೆಗಾಲ ಶುರುವಾಯ್ತಂದ್ರೆ ಅದು ಕನಸಿನ ಮಾತೇ ಸರಿ.  ಆ ಮಕ್ಕಳಿಗೆ ಕೊಡಬೇಕೆಂದಿದ್ದ ಪೆನ್ನು, ಪುಸ್ತಕಗಳ ಚೀಲಗಳನ್ನು ತಮ್ಮ ಗಾಡಿಯಿಂದ ಒಂದು ಎತ್ತಿನ ಗಾಡಿಗೆ ವರ್ಗಾಯಿಸಿ ಹಳ್ಳಿಗೆ ಸಾಗಿದ್ದರು ಇವರೆಲ್ಲಾ. ಅಂದು ರಾತ್ರೆ ಅಲ್ಲೇ ಬೆಳದಿಂಗಳ ಊಟವನ್ನು ಸವಿದು ಮಲಗಿದವರಿಗೆ ಮಾರನೇ ದಿನ ಸೂರ್ಯ ಮುಖಕ್ಕೆ ಹೊಡೆದಾಗಲೇ ಎಚ್ಚರವಾಗಿದ್ದು. ಹತ್ತುಘಂಟೆ ಅಂದರೆ ಇವರ ವಿತರಣಾ ಸಮಾರಂಭ. ಅದರ ತಯಾರಿಯಲ್ಲಿ ಇವರು ಹೇಗೆ ನಿತ್ಯಕರ್ಮಗಳನ್ನು ಮುಗಿಸಿ ತಯಾರಾದರೋ, ಆ ಸಮಯ ಹೇಗೆ ಬಂದಿತೋ ತಿಳಿಯಲೇ ಇಲ್ಲ.

ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಅದರಲ್ಲಿ ಹಳ್ಳಿ ಮಕ್ಕಳ ನೃತ್ಯದಲ್ಲಿ ಇವನನ್ನೂ ಎಳೆದು ಸೇರಿಸಿಕೊಂಡರು. ಇವನು ಬರೋಲ್ಲ ಅಂದರೂ ಅವರು ಬಿಡಲಿಲ್ಲ. ಇವನ ವಕ್ರ ಪಕ್ರ ನೃತ್ಯಕ್ಕೆ ಅಲ್ಲಿನ ಹಳ್ಳಿಯವರೆಲ್ಲಾ ಬಿದ್ದು ಬಿದ್ದು ನಗತೊಡಗಿದರು. ಆ ನಗುವಿನ ಅಲೆಯಲ್ಲಿ ಒಂದು ಅಚ್ಚರಿ. ರೈಲಿನಲ್ಲಿ ಹಲಸಿನ ಹಣ್ಣು ಮಾರುತ್ತಿದ್ದ ಹುಡುಗಿಯೂ ಇದ್ದಾಳೆ !! ಇವನ ಮುಖ ಮತ್ಯಾಕೋ ಅರಳಿ ಹೋಯಿತು ಇದ್ದಕ್ಕಿದ್ದಂತೆ. ಅವಳು ನಗಲೆಂದೇ ಇನ್ನಷ್ಟು ಮಂಗ ಮಂಗನಾಗಿ ನೃತ್ಯ ಮಾಡುತ್ತಿದ್ದ. ಆಕೆಯೂ ನಗುತ್ತಿದ್ದಳು. ಈ ಮಂಗಾಟದಲ್ಲೇ ನೃತ್ಯ ಕಾರ್ಯಕ್ರಮ ಮುಗಿಯಿತು. ಮುಗಿದ ಮೇಲೆ ಆಕೆ ನಿತ್ತ ಕಡೆ ನೋಡುತ್ತಾನೆ. ಆಕೆ ಅಲ್ಲಿಲ್ಲ.. ಛೇ. ಎಲ್ಲಿ ಹೋದಳು ಅವಳು ? ಅಲ್ಲೊಂದು ಹುಡುಗಿ ನಿಂತಿದ್ದಳು ಅವಳನ್ನು ನೋಡಿದಿರಾ ಎಂದು ಕೇಳೋಣ ಅಂದರೆ ಯಾವ ಹುಡುಗಿ ಅನ್ನುತ್ತಾರೆ ಎಲ್ಲ. ಅವಳ ಮುಖ ಕಂಡ ಖುಷಿಯಲ್ಲಿ ಆಕೆಯ ಬಟ್ಟೆಯ ಬಣ್ಣವನ್ನೂ ನೋಡಿರಲಿಲ್ಲ. ಹೆಸರಂತೂ ಮೊದಲೇ ಗೊತ್ತಿಲ್ಲ. ಥೋ , ಎಂತಾ ಕತೆಯಾಯಿತು ಇದು ಎಂದು ಪೇಚಿಡುವಷ್ಟರಲ್ಲೇ ಎಲ್ಲೋ ರೈಲಿನ ಕೂ ಎಂಬ ಸದ್ದಾಗತೊಡಗಿತು.. ಅರೆರೆ ಇಲ್ಲೇ ಒಂದು ರೈಲಿನ ರೂಟು.. ಅಂದರೆ ಇಲ್ಲೇ ಒಂದು ರೈಲ್ವೇ ನಿಲ್ದಾಣವೂ ಇರಬಹುದು. ರೈಲಲ್ಲಿ ಹಲಸಿನ ಹಣ್ಣು ಮಾರೋ ಹುಡುಗಿ ಅಂದ್ರೆ ಗೊತ್ತಾಗಬಹುದಾ  ಅಂದುಕೊಳ್ಳುತ್ತಿರುವಾಗ ದಾರಿಯಲ್ಲಿ ಕಂಡ ದೊಡ್ಡ ದೊಡ್ಡ ಹಲಸಿನ ಮರಗಳೂ, ಅದರ ಕೆಳಗಡೆ ಅಲ್ಲಲ್ಲಿ ಹಲಸಿನ ಹಣ್ಣು ರಾಶಿ ಹಾಕಿ ಮಾರುತ್ತಿದ್ದ ಹುಡುಗರ ದೃಶ್ಯಗಳೂ ನೆನಪಾದವು. ಛೇ, ಇವರಲ್ಲಿ ಯಾರಾದ್ರೂ ಆಗಿರಬಹುದು. ಅವಳನ್ನು ಹೇಗೆ ಕಂಡುಹಿಡೀಲಿ ಅಂದ್ಕೋತಿರುವಾಗಲೇ ರೈಲಿನ ಕೂ ಎಂಬ ಸದ್ದು ಜೋರಾಗಿ ಈತನ ಮನದ ಮಾತುಗಳನ್ನೆಲ್ಲಾ ತನ್ನಲ್ಲೇ ಕರಗಿಸಿಕೊಳ್ಳುವಷ್ಟು ಜೋರಾಯಿತು.. ಎಲ್ಲೆಲ್ಲೂ ರೈಲಿನ ಚುಕುಬುಕು , ಕೂ ಎಂಬ ಸದ್ದುಗಳೇ ತುಂಬಿಹೋಯಿತು.

ಚಿತ್ರಕೃಪೆ: ಅಂತರ್ಜಾಲ.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ  http://www.panjumagazine.com/?p=3225