Tuesday, December 31, 2013

ಅನಿರೀಕ್ಷಿತ

ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನೋದು ಮುಂಚಿನ ಮಾತಾದರೆ ಬರೆದರೆ ವಾವ್ ವಾ ಅಂತಿರಬೇಕು ಅನ್ನೋದು ನಮ್ಮ ಇಂದಿನ ಸಾಹಿತಿ ಸಾಕಣ್ಣನ ತತ್ವ. ಈ ಸಾಕಣ್ಣ ಯಾರು ಅಂದ್ರಾ ? ಯಾರೋ ಕೊಡಿಸುತ್ತಾರೆ ಅಂದ್ರೆ ಬೇಕರೀಲಿ ಕಂಡಿದ್ದೆಲ್ಲಾ ಬೇಕೆನ್ನೋ ಬೇಕಣ್ಣನ ತಮ್ಮನಾ ? ಅಲ್ಲ. ಫೇಸ್ಬುಕ್ಕಲ್ಲಿ ಹಾಯೆಂದವರೆಲ್ಲಾ ಬಂದುಗಳೆನ್ನೋ ಪಾಪಣ್ಣನ ತಮ್ಮನಾ ? ಅಲ್ಲ. ಜೀವನವೇ ಒಂದು ನಶ್ವರ. ಗುಳ್ಳೇಯಂತಿರೋ ಈ ಬದುಕಲಿ ನನಗ್ಯಾರೂ ಇಲ್ಲ. ಬೇಕಾದವರಿಗೆಲ್ಲಾ ನಾ ಬೇಕು. ನಾನೆಷ್ಟು ಅತ್ತರೂ ಬಳಿ ಬರುವವರೇ ಇಲ್ಲವೆಂದು ಕಣ್ಣೀರಿಡೋ ನಾರಾಣಿಯ ನೆಂಟನಾ ? ಅಲ್ಲ. ಸ್ವಾತಂತ್ರ್ಯವಿದೆಯೆಂದು ಆಸೇತು ಹಿಮಾಚಲದವೆರೆಗೆ, ತಮ್ಮೆದುರು ಸಿಕ್ಕ, ಮಾತಾಡಿದ, ಕದ್ದು ಕೇಳಿದ ಗೆಳೆಯ ಗೆಳತಿಯರ ಮಾತನ್ನೆಲ್ಲಾ ಕತೆಯಾಗಿಸಿ ಓದುಗರ ಕೈಯಲ್ಲಿ ವಾವೆನ್ನಿಸಿಕೊಂಡು ಬರೆಸಿಕೊಂಡವರ ಮಾನ ಮೂರಾಬಟ್ಟೆಯಾಗಿಸುವ ಕಥೆಗಾರ ಕಪ್ಪಣ್ಣನಿಗೂ ಇವನಿಗೂ.. ಊಹೂಂ ಲಿಂಕೇ ಇಲ್ಲ. ಯಾವ ದೋಸ್ತಿ ರಾಜಕಾರಣಕ್ಕೂ, ಟೋಪಿ ಸಮಾರಂಭಗಳಲ್ಲಿ ಮೈಕು, ಸನ್ಮಾನ ಬಯಸೋ ಕನಿಷ್ಟ ಆಸೆಯೂ ಇಲ್ಲದ ಈ ಯುಗದ ವಿಚಿತ್ರ ಸಾಹಿತಿಯೇ ನಮ್ಮೀ ಸಾಕಣ್ಣ. ಸಾಕಣ್ಣ ಹೊಸ ವರ್ಷಕ್ಕೊಂದು ಲೇಖನ ಬರೆಯೋ ಉಮೇದಿನಲ್ಲಿದ್ದ.

ಬರೆಯಬೇಕು ಸರಿ. ಆದರೆ ಏನು ಬರೆಯೋದು ? ಕತೆಯಾ, ಲೇಖನವಾ, ಲಲಿತ ಪ್ರಬಂಧವಾ, ವಿಡಂಬನೆಯಾ, ಹಾಸ್ಯವಾ.. ಗೊತ್ತಿದ್ದು ನಾಲ್ಕೈದೇ ಪ್ರಕಾರಗಳಾದ್ರೂ ಅದರಲ್ಲೇ ಏನು ಬರೆಯೋದು ? ಕವಿತೆ ಬರೆಯದೇ ಸುಮಾರು ದಿನವಾಗಿದೆಯಲ್ಲಾ ಅದೇ ಸುಲಭವೆಂದು ಬರೆಯಲು ಕೂತ.ಹೊಸ ವರ್ಷ ಅಂತಂದ್ರೆ ಕುಡಿತ, ಪಾರ್ಟಿ, ಮಸ್ತಿ ಅನ್ನೋ ಹಲವು ಕಲ್ಪನೆಗಳು ಬಂದವು. ಆದರೆ ಒಂದು ದಿನದ ದುಂದು ಸರಿಯಲ್ಲ. ಅದರಿಂದ ಸಮಾಜಕ್ಕೇನಾದ್ರೂ ಒಳ್ಳೇದಾಗಬೇಕೆನ್ನೋ ಸಂದೇಶವನ್ನೂ ಕವಿತೆಯಲ್ಲೇ ನೀಡಬೇಕೆಂದುಕೊಂಡ. ಧುಮ್ಮಿಕ್ಕೋ ಜಲಪಾತದಂತೆ ಕಲ್ಪನೆಗಳು , ಭಾವಗಳು ಭೋರ್ಗತೆಯುತ್ತಿದ್ದರೂ ಪದಗಳ ತೆಕ್ಕೆಗೆ ಅವು ದಕ್ಕುತ್ತಿರಲಿಲ್ಲ. ಅಗೋ ನೋಡು ಬಾರು, ಬಂದಿತೊಂದು ಕಾರು.. ಬೆರೆಸುತ್ತಿದ್ದ ಬಾರಿನಲ್ಲಿ ಪೆಗ್ಗಿನಲ್ಲಿ ನೀರು.. ಅಂತೋನೂ ಗೀಚಿದ್ದು ಶುರುವಿನಲ್ಲಿ ವಾವೆನಿಸಿದ್ರೂ ಕಡೆಗೆ ಅವನಿಗೇ ನಾಚಿಕೆ ತರಿಸಿತು. ನೀ, ಮೆಚ್ಚಿದರೆ ಕಾವ್ಯ. ಮೆಚ್ಚದಿದ್ದರೆ, ಅದೇ ರಮ್ಯ ಅಂತ ಪ್ರತೀ ಪದವನ್ನು ಒಂದೊಂದು ಸಾಲಲ್ಲಿ ಬರೆಯುತ್ತಿದ್ದ ತನ್ನ ಶುರುವಿನ ಕಾವ್ಯ ರಚನೆ ನೆನಪಿಗೆ ಬಂದು ಆ ತರಹ ಮತ್ತೆ ಪ್ರಯತ್ನಿಸಲೇ ಎನಿಸಿತು. ಆದರೆ ನಂತರದ ತನ್ನ ಓದುವಿಕೆಯ ಸಮಯದಲ್ಲಿ ತನ್ನ ಮೊದಲ ಕವನಗಳು ಮೂಡಿಸಿದ್ದ ನಾಚಿಕೆ ಮತ್ತು ಅದರಿಂದ ಕವನ ರಚನೆಯನ್ನೇ ನಿಲ್ಲಿಸಿಬಿಡೋಕೆ ಮುಂದಾಗಿದ್ದ ದುಸ್ವಪ್ನಗಳು ನೆನಪಾದವು.ಸರಿ , ಇದಲ್ಲದಿದ್ದರೆ ಯಾವುದು ಎಂದು ಪ್ರಶ್ನಿಸಿದ ಮನಸ್ಸಿಗೆ. ಕತೆ, ಲೇಖನ, ಪ್ರಬಂಧಗಳು ನಾಮುಂದು , ತಾಮುಂದು ಎಂದು ಜಗಳಕ್ಕೆ ನಿಂತು ಅರ್ಧ ಘಂಟೆಯಾದರೂ ಬಗೆಹರಿಯಲಿಲ್ಲ. ಆದರ್ಶ ಸಾಹಿತ್ಯದ ರಚನೆ, ಹುಮ್ಮಸ್ಸಿದ್ದರೂ ಚುರುಗುಟ್ಟುತ್ತಿದ್ದ ಹೊಟ್ಟೆಯನ್ನು ತಡೆಯೋ ಸಾಮರ್ಥ್ಯ ಅವಕ್ಕಿರಲಿಲ್ಲ. ಚೆನ್ನಾಗಿ ಉಂಡು ಬಂದವನಿಗೆ ನಿದ್ದೆ ಎಳೆಯಹತ್ತಿತು. ಕಣ್ಣು ರೆಪ್ಪೆಗಳನ್ನು ಹಗ್ಗ ಹಾಕಿ ಎಳೆದಂತಾಗಲು ಶುರುವಾಗಿ ತೂಕಡಿಸಿ ತೂಕಡಿಸಿ ಎದುರಿಗಿದ್ದ ಪೆನ್ನಿನ ಮೇಲೇ ಬೀಳೋ ಬದಲು ಎಲ್ಲಾದರೂ ಮಲಗೋದು ವಾಸಿ ಎನ್ನಿಸತೊಡಗಿತು.

 ಎಷ್ಟೋ ಹೊತ್ತಿನ ನಂತರ ಎದ್ದು ಕಣ್ಣುಬಿಡುತ್ತಾನೆ. ಸುತ್ತೆಲ್ಲಾ ಕತ್ತಲು. ಎಷ್ಟೊತ್ತು ಮಲಗಿದ್ದೆನೋ ಏನೋ ? ಇಷ್ಟು ಬೇಗ ಕತ್ತಲಾಗಿ ಹೋಯ್ತಾ ಅನಿಸಿತು. ಅರೆ, ಕತ್ತಲನ್ನೋದ್ರಲ್ಲಿ ಗಮನಿಸೇ ಇರಲಿಲ್ಲ. ಬಲಗೈ ಚಾಚಿದ್ರೆ ತಡರುತ್ತಿದ್ದ ಗೋಡೆ, ದಪ್ಪ ಜಾಸ್ತಿಯಾಗಿ ಕುತ್ತಿಗೆ ಒತ್ತುತ್ತಿದ್ದ ಹಾಸಿಗೆಯ ದಿಂಬುಗಳಿಲ್ಲ. ಕೈಚಾಚಿದ್ರೆ ಕೈ ಮುಂದೆ ಮುಂದೇ ಹೋಗುತ್ತಿದೆ. ದಿಂಬಿರಲಿ ದಿನಾ ಮಲಗುತ್ತಿದ್ದ ಹಾಸಿಗೆಯಂತಿರದೇ ಎಲ್ಲೋ ತರಗೆಲೆಗಳ ಮೇಲೆ ಮಲಗಿದಂತಿದೆ.. ಫ್ಯಾನ್ ಹಾಕ್ಬೇಡ ಅಂತ ಹೇಳಿದ್ರೂ ರೂಂ ಮೇಟ್ ಫ್ಯಾನ್ ಹಾಕಿಟ್ಟು ಹೊರಗೆಲ್ಲೋ ಹೋಗಿ ಬಿಟ್ಟಿದ್ದಾನಾ ? ಅರೆ ಫ್ಯಾನ ಸೌಂಡೂ ಇಲ್ಲ. ಆದ್ರೂ ತಣ್ಣನೆಯ ಗಾಳಿ.. ಎಲ್ಲಾ ವಿಚಿತ್ರವಾಗಿದೆಯಲ್ಲಾ ಅನಿಸತೊಡಗಿತು. ಜೊತೆ ಜೊತೆಗೇ ನಾನು ಎಲ್ಲಿದ್ದೇನೆ ಅನ್ನೋ ಆಶ್ಚರ್ಯ, ಅಳುಕು ಕಾಡತೊಡಗಿತು.

ಕಣ್ಣು ಕತ್ತಲೆಗೆ ಒಗ್ಗತೊಡಗಿದಂತೆ ಮಲಗಿದ್ದ ವಿಶಾಲಮರದ ಬುಡ, ಮರದ ಆಕಾರಕ್ಕೆ ಹೆದರಿ ಬಳಿ ಬರಲೇ ಹೆದರಿದಂತೆ ಅನತಿ ದೂರದಲ್ಲೇ ಹರಿದುಹೋಗಿದ್ದ ರಸ್ತೆ, ಕಪ್ಪು ರಸ್ತೆಯಾಚೆಗೆ ಹಬ್ಬಿಕೊಂಡಿದ್ದ ದಿಗಂತ, ದಿಗಂತದಲ್ಲಿ ಮುಳುಗಿದ ಸೂರ್ಯನ ಕೆಂಪನ್ನು ತೊಳೆಯಲು ತಮ್ಮ ನೀಲಿ, ಕಪ್ಪು ಬಕೆಟ್ ನೀರಿನೊಂದಿಗೆ ತಯಾರಾದಂತಿರೋ ನಕ್ಷತ್ರಗಳು ತಮ್ಮ ಕೆಲಸದ ಮಧ್ಯೆಯೂ ಇವನನ್ನೇ ನೋಡಿ ಕಣ್ಣು ಹೊಡೆದಂತೆ!.., ತಮ್ಮ ಕೆಲಸದಲ್ಲಿ ತೊಡಗಿ ಇಲ್ಲಿ ಮರೆಯಾಗಿ ಇನ್ನೆಲ್ಲೋ ಕಂಡಂತೆ ಮಿನುಗುತ್ತಿದ್ದ ನಕ್ಷತ್ರಗಳು ಚುರುಕಾಗೇ ಕೆಲಸ ಮಾಡುತ್ತಿರಬೇಕು. ನೋಡ ನೋಡುತ್ತಿದ್ದಂತೇ ಆಗಸದ ಕಡುಗೆಂಪು ನೀಲಿಯಾಗಿ, ಕಪ್ಪಾಗತೊಡಗಿತು. ಹಾಗೇ ಎದ್ದು ಕುಳಿತ. ಪೇಟೆಯಲ್ಲಿ ದಿನಾ ಕಣ್ಣು ಕೋರೈಸುತ್ತಿದ್ದ ಜಗಮಗವಿಲ್ಲ. ಬದಲು ದಿನಾ ಅರಸುತ್ತಿದ್ದ ಶಾಂತಿ, ನಿಶ್ಯಬ್ದತೆ ಇವನನ್ನೇ ಅರಸಿ ಬಂದಂತೆ. ನಿಶ್ಯಬ್ದತೆಯೆಲ್ಲಾ ತನ್ನದೇ ಎಂದು ಹಕ್ಕು ಚಲಾಯಿಸಿ ಕೂಗುತ್ತಿದ್ದ ಕೀಟಗಳ ವಿಚಿತ್ರ ಸದ್ದು ಮೊದಲು ಕಿರಿಕಿರಿಯೆನಿಸಿದರೂ ಅದೇ ಒಂದು ತರಹ ಖುಷಿ ಕೊಡತೊಡಗಿದವು. ಇನ್ನೊಂದು ಸ್ವಲ್ಪ ಹೊತ್ತು ಹೀಗೇ ಮಲಗಿರೋಣ ಎಂಬ ಎಂದಿನ ಆಲಸ್ಯ ಕಾಡಿದರೂ, ಮಲಗಿ ಬೇಸರವೆನಿಸಿ ಎದ್ದು ಕುಳಿತ.

ಕಾಣದ ದೀಪಗಳ ಬೆಳಕು, ಗಿಜಿಗುಟ್ಟೊ ಹಾರ್ನು , ಮೈಕುಗಳಿಲ್ಲದ ಪರಿಸರ ತಾನು ಪೇಟೆಯಲ್ಲೆಂತೂ ಇಲ್ಲ. ಯಾವುದೋ ಹಳ್ಳಿಯ ಮೂಲೆಯಲ್ಲೋ ಕಾಡ ಮಧ್ಯೆದಲ್ಲೋ ಇದ್ದೇನೆಂಬ ಭಾವವನ್ನು ಗಟ್ಟಿಗೊಳಿಸತೊಡಗಿದವು. ಜೇಬ ತಡಕಿದರೆ ಮೊಬೈಲಿಲ್ಲ. ನಿಧಾನಕ್ಕೆ ಹೊಟ್ಟೆ ತಾಳ ಹಾಕತೊಡಗಿದ್ದಾಗ ಎಂದೂ ಜೊತೆಗಿರುತ್ತಿದ್ದ ಬ್ಯಾಗು ನೆನಪಾಯ್ತು. ಸುತ್ತೆಲ್ಲಾ ತಡಕಿದರೂ ಅದು ಸಿಗದಿದ್ದಾಗ ಎಲ್ಲಿ ಕಳೆದುಹೋಗಿದೀನಪ್ಪಾ ನಾನು , ಹೇಗೆ ಇಲ್ಲಿಂದ ಹೊರಬರೋದು ಅಂತ ಅನಿಸೋಕೆ ಶುರು ಆಯ್ತು. ಹತ್ತಿರದಲ್ಲೇ ಯಾವುದಾದರೂ ಒಂದು ಹಳ್ಳಿ ಕಾಣಬಹುದೇನೋ ಅಂತ ಎದ್ದು ಕತ್ತು ನಿರುಕಿಸಿದ. ಊಹೂಂ. ಏನೂ ಇಲ್ಲ. ಎದುರು ಕಂಡ ರಸ್ತೆಯನ್ನೇ ಹಿಡಿದು ಹೊರಟರೆ ಯಾವುದಾದ್ರೂ ಹಳ್ಳಿಯೋ ಪೇಟೆಯೋ ಸಿಕ್ಕೇ ಸಿಗುತ್ತೆ. ಆದ್ರೆ ಯಾವ ಕಡೆ ಹೋಗೋದು ? ಎಡಕ್ಕೋ, ಬಲಕ್ಕೋ? ಜೀವನದಲ್ಲಿ ಪ್ರತೀ ಹೆಜ್ಜೆಯನ್ನೂ , ದಾರಿಯನ್ನೂ ದೊಡ್ಡವರು ಮಾರ್ಗದರ್ಶಿಸುತ್ತಲೇ ಬಂದಿದ್ರಿಂದ ಈ ತರಹದ ಹೊಸ, ವಿಚಿತ್ರ ಆಯ್ಕೆ ಎದುರಾಗಬಹುದಾದ ಕುರಿತು ಯೋಚನೆಯೇ ಬಂದಿರಲಿಲ್ಲ. ಏನಾದರಾಗಲಿ ಎಂದು ಮನಸ್ಸು ಗಟ್ಟಿ ಮಾಡಿ ರಸ್ತೆಯಲ್ಲಿ ಎಡಕ್ಕೆ ಹೊರಟ.. ಸ್ಚಲ್ಪ ದೂರ ನಡೆಯುವಷ್ಟರಲ್ಲೇ ಬಾಯಾರಿಕೆಯಾಗತೊಡಗಿತು.

ಆದರೆ ಆ ಗೊತ್ತಿಲ್ಲದ ರಸ್ತೆಯಲ್ಲಿ ಇವನಿಗೆ ನಿತ್ಯದ ಬಿಸ್ಲೇರಿ ಬಾಟಲಿಯನ್ಯಾರು ಮಾರಬೇಕು ? ಸ್ವಲ್ಪ ಮುಂಚೆ ಕಂಡ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಆಕಾಶಕ್ಕೊಂದು ಕನ್ನಡಿಯಿಟ್ಟಂತೆ ಆಗಸದ ತಾರೆಗಳನ್ನು, ಸುತ್ತಲಿನ ಮರಗಳನ್ನೂ ಪ್ರತಿಬಿಂಬಿಸುತ್ತಿದ್ದ ಕೆರೆಯ ನೆನಪಾಯ್ತು.ಅಲ್ಲಿಗೇ ಮರಳಿ ಸ್ವಲ್ಪ ನೀರು ಕುಡಿದುಬಿಡಲಾ ಎನಿಸಿಬಿಟ್ಟಿತು. ಆದರೆ ಹಾಗೆಲ್ಲಾ ಕೆರೆ, ಬಾವಿಗಳ ನೀರು ಕುಡಿಯಬಾರದಂತೆ! ಮೊನ್ನೆಯಷ್ಟೇ ಹೋಟೇಲಿನ ನೀರು ಕುಡಿದು ಜಾಂಡೀಸ್ ಬಂದ ಫ್ರೆಂಡು, ಮತ್ತೆಲ್ಲೋ ಹಾದಿಬದಿಯ ನೀರು ಕುಡಿದು ವೈರಲ್ ಫೀವರ್ ಬಂದ ಮತ್ತೊಬ್ಬ ನೆನಪಾದರು. ನೀರಿಲ್ಲದೇ ಗಂಟಲೊಣಗಿ ಸಾಯೋದಕ್ಕಿಂತ ಕೆರೆ ನೀರು ಕುಡಿದು ಕಾಯಿಲೆ ಬೀಳೋದು ವಾಸಿ ಅನಿಸಿತು. ಅಷ್ಟಕ್ಕೂ ಕೆರೆ ನೀರು ಕುಡಿದ ತಕ್ಷಣ ಕಾಯಿಲೆ ಬರುತ್ತಾ ? ಏನೋ ತಿಂದು ಏನೋ ಕಾಯಿಲೆ ತಂದುಕೊಂಡು ಹೋಟೇಲಿನ ಕಾಯದ ನೀರು ಅಂತ ಕಾರಣ ಹೇಳಿರಬಹುದೇ ಅಂತಲೂ ಪ್ರಶ್ನಿಸಿತು ವಿವೇಕ ಒಮ್ಮೆ. ಕೆರೆಯಲ್ಲಿ ನೀರನ್ನು ಬೊಗಸೆ ತುಂಬಿ ಕುಡಿಯಲು ಮುಂದಾದಾಗ ಕೆರೆಯಲ್ಲಿ ಸಾವಿರಾರು ಬಿಸ್ಲೇರಿ ಬಾಟಲಿಗಳು ತೇಲಿದಂತೆ ಕಂಡು, ಅವುಗಳಲ್ಲೊಂದು ಪ್ಲಾಸ್ಟಿಕ್ ತುಂಡು ಕೈಗೆ ಬಂದಂತಾಗಿ ನೀರನ್ನು ಚೆಲ್ಲಿ ಬಿಟ್ಟ. ಮತ್ತೆ ನೋಡಿದರೆ ಎಲ್ಲಾ ಭ್ರಮೆ. ಅಲ್ಲಿದ್ದಿದ್ದು ಸ್ವಚ್ಛ ನೀರಷ್ಟೇ. ತನ್ನ ಭ್ರಮೆಗೆ ಬೆಚ್ಚಿ ಎರಡನೇ ಬಾರಿ ಬೊಗಸೆಯಲ್ಲಿ ನೀರು ಬಗೆದಾಗ ಹಳೆಯ ನೆನಪುಗಳು ಮರುಕಳಿಸಿದವು. ಹೋದಲ್ಲೆಲ್ಲಾ ನನಗೆ ಬಿಸ್ಲೇರಿಯೇ ಬೇಕು ಎಂದು ಹಟ ಬೀಳುತ್ತಿದ್ದ ತನಗೆ ಬಿಸ್ಲೇರಿ ಬಾಟಲಿ ತಂದುಕೊಡಲು ಅವರು ಎಷ್ಟು ಕಷ್ಟಪಟ್ಟಿರಬಹುದು ? ಹುಚ್ಚು ಹಟ ತಂದಿರಬಹುದಾದ ನೂರು ನೋವು ನಾಚಿಕೆ ಹುಟ್ಟಿಸಿತು. ನಾನು ಸೇಫಾಗಿ ಪಟ್ಟಣ ಸೇರಿದರೆ ಸಿಕ್ಕೋ ಸ್ವಚ್ಚ ನೀರನ್ನೇ ಕುಡಿತೇನೆ. ಕಾದ ನೀರು , ಬಿಸ್ಲೇರಿ, ಮಿನರಲ್ ವಾಟರ್ರೇ ಬೇಕೆನ್ನೋ ಹುಚ್ಚುತನ ಬಿಡುತ್ತೇನೆ ಅಂದುಕೊಂಡ.

ಕೆರೆಯ ನೀರು ಕುಡಿದು ಹಾಗೇ ರಸ್ತೆಗೆ ಮರಳುತ್ತಿದ್ದವನಿಗೆ ಕೆರೆಯ ದಂಡೆಯಲ್ಲಿದ್ದ ಪೇರಲೆ ಮರವೊಂದು ಕಾಣಿಸಿತು. ನೆಲಕ್ಕೆ ಬಿದ್ದಿದ್ದ ಹಕ್ಕಿ ಕಚ್ಚಿದ್ದ ಪೇರಲೇ ಹಣ್ಣುಗಳೂ ಇವನಿಗೆ ಪೇಟೆಯ ಫಿಜ್ಜಾ ಬರ್ಗರಿನಂತೆ ಕಂಡವು. ಬರ್ಗರ್ ಕಂಡು ಖುಷಿಯಾಗಿ ಕೈ ಹಾಕಿದವನಿಗೆ ಸಿಕ್ಕಿದ್ದು ಅರೆ ತಿಂದ ಪೇರಲೇ ಕಾಯಿ! ಛೇ, ನೆಲಕ್ಕೆ ಬಿದ್ದಿದ್ದು ಮಣ್ಣು, ಹಕ್ಕಿ ತಿಂದಿದ್ದು. ಇದನ್ನೆಲ್ಲಾ ತಿಂದರೆ ಏನಾಗುತ್ತೋ, ಕೊಳಕು ಅಂದಿತು ಮನಸ್ಸು. ಏನೂ ಆಗಲ್ಲ. ಹಸಿವಿಂದ ಆಯೋ ಬದ್ಲು ಇದನ್ನ ತಿಂದು ಕಾಯಿಲೆ ಬರಿಸ್ಕೊಂಡ್ರೂ ಪರವಾಗಿಲ್ಲ. ಪಕ್ಕದಲ್ಲೇ ಕೆರೆಯ ಸ್ವಚ್ಛ ನೀರಿದೆ. ಬೇಕಾದ್ರೆ ತೊಳೆದುಕೋ ಎಂದಿತು ವಿವೇಕ. ಮೊದಲ ಪೇರಲೇ ಹಣ್ಣನ್ನ ಮತ್ತೆ ಕೆರೆಯ ನೀರಿನಲ್ಲಿ ತೊಳೆದುಕೊಂಡು ಗಬಗಬನೆ ತಿಂದ. ಎರಡನೆಯದನ್ನು ತೊಳೆಯುವಷ್ಟೂ ವ್ಯವಧಾನವಿರಲಿಲ್ಲ. ನೋಡಿದ, ಧೂಳೇನೂ ಕಾಣಲಿಲ್ಲ. ಧೂಳು ಕಾಣುವಷ್ಟು ಬೆಳಕಿರದ ಕತ್ತಲೆಯಾಗಿತ್ತು , ಚಂದ್ರನ ಬೆಳಕೂ ಅಷ್ಟು ಪ್ರಕರವಾಗಿರಲಿಲ್ಲ. ಕಂಡಿದ್ದರೂ ಪೇರಲೇ ಹಣ್ಣು ದೂರಕ್ಕೆಸೆಯುವಷ್ಟು ಹೊಟ್ಟೆ ತುಂಬಿದಂತ ಸ್ಥಿತಿ ಅವನದಾಗಿರಲಿಲ್ಲ. ಏನು ಸಿಕ್ಕಿದರೂ ತಿನ್ನುವಂತಾಗಿದ್ದ ಅವ.. ಎರಡು ಪೇರಲೇ ಹಣ್ಣು ತಿನ್ನುವಷ್ಟರ ಹೊತ್ತಿಗೆ ಕತ್ತಲು ಬರುವಂತಾಗಿದ್ದ ಕಣ್ಣು, ಹಸಿದಸಿದು ತಿರುಗುವಂತಾಗಿದ್ದ ತಲೆ ಸ್ವಲ್ಪ ಸ್ಥಿಮಿತಕ್ಕೆ ಬಂತು. ಸುತ್ತ ಬಿದ್ದಿದ್ದ ಅನೇಕ ಪೇರಲೇ ಹಣ್ಣುಗಳು ಕಂಡವು. ತಾನು ತರಿಸಿ ತಿನ್ನದೇ ಅರ್ಧ ಎಸೆಯುತ್ತಿದ್ದ ಬರ್ಗರು, ಫಿಜ್ಜಾಗಳೂ , ದಿನಾ ಊಟದಲ್ಲಿ ಬಡಿಸಿಕೊಂಡು ತಿನ್ನದೇ ಚೆಲ್ಲುತ್ತಿದ್ದ ಅನ್ನ, ಪಲ್ಯಗಳು ನೆನಾಪಾದವು. ಹೊತ್ತು ತುತ್ತಿಗಾಗಿ ದೇವಸ್ಥಾನದವರು ಕೊಡುತ್ತಿದ್ದ ಬೊಗಸೆ ಮೊಸರನ್ನಕ್ಕೆ ಜಗಳವಾಡುತ್ತಿದ್ದ ಭಿಕ್ಷುಕರ ಮಕ್ಕಳು, ತಾನು ಬೇಕರಿಯಲ್ಲಿ ಕೇಕು , ಬನ್ನುಗಳನ್ನು ತಗೊಂಡು ತಿನ್ನುವಾಗ ನನಗೂ ಒಂಚೂರು ಕೊಡಿ ಅಣ್ಣಾ .ಊಟವಿಲ್ಲದೇ ಮೂರು ದಿನವಾಯಿತು ಅಂತ ಬೇಡುತ್ತಿದ್ದ ಮಕ್ಕಳನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದುದು ನೆನಪಾಯಿತು. ಹಸಿವಿನ ಬೆಲೆ ಅರಿತಿದ್ದರಿಂದ ಸುರಕ್ಷಿತವಾಗಿ ಊರು ಸೇರಿದ್ರೆ ಮಾಡಬೇಕೆನ್ನೋ ಹೊಸವರ್ಷದ ಎರಡನೇ ಪ್ರತಿಜ್ನೆ ರೆಡಿಯಾಯ್ತು. ಅಗತ್ಯವಿದ್ದಷ್ಟು ಮಾತ್ರ ಬಡಿಸಿಕೊಂಡು ಒಂದಗುಳು ಅನ್ನವನ್ನೂ ಚೆಲ್ಲೊಲ್ಲ. ಹೊಟ್ಟೆಗಿಲ್ಲದಿರೋ ಜನರನ್ನ ಕಂಡಾಗ ಕೈಲಾದಷ್ಟು ಸಹಾಯ ಮಾಡ್ತೇನೆ. ಅನ್ನೋ ಪರಬ್ರಹ್ಮ ಅಂತ ತೀರ್ಮಾನಕ್ಕೆ ಬಂದ. ರಸ್ತೆಗೆ ಮರಳಿ ಸುಮಾರು ಹೊತ್ತು ಹಾಗೇ ನಡೆದ, ಊರು ಹುಡುಕಿ.

ಊರಿನ ಯಾವ ಬೆಳಕು ಕಾಣದಿದ್ದರೂ ಯಾರೋ ಕೆಮ್ಮುತ್ತಿದ್ದಂತೆ ಸದ್ದು ಕೇಳಿತು. ಕೊನೆಗೂ ಯಾವುದೋ ಮನುಷ್ಯ ದನಿ ಕೇಳಿತಲ್ಲಾ ಅಂತ ಸದ್ದು ಬಂದ ಕಡೆಗೆ ಲಗುಬಗೆಯಿಂದ ಹೆಜ್ಜೆ ಹಾಕಿದ. ನೋಡಿದರೆ ಒಬ್ಬ ಮುದುಕ ಮರದ ಬುಡದಲ್ಲಿ ಸಣ್ಣಗೆ ಬೆಂಕಿ ಹಾಕಿ ಅದರಲ್ಲೇ ಚಳಿ ಕಾಯಿಸುತ್ತಾ, ಬೀಡಿ ಹಿಡಿದು ಕೆಮ್ಮುತ್ತಾ ಕೂತಿದ್ದಾನೆ. ಕೆಮ್ಮಿ ಕೆಮ್ಮಿ ಹೈರಾಣಾಗಿ ಹೋದಂತಿದ್ದರೂ ಆತ ಬೀಡಿ ಬಿಡಲೊಲ್ಲ. ಅತನನ್ನು ನೋಡಿ ಏನೋ ಕೇಳಬೇಕೆನಿಸಿದವನಿಗೆ ಸಿಗರೇಟು ಬಿಡಲೊಲ್ಲದೇ ಒದ್ದಾಡಬೇಕಾದ ತನ್ನ ವೃದ್ದಾಪ್ಯ ಕಣ್ಣ ಮುಂದೆ ಬಂದತಾಗಿ ಬೆಚ್ಚಿ ಬಿದ್ದ. ಬೀಸಲಾರಂಬಿಸಿದ ತಣ್ಣನೆಯ ಗಾಳಿಗೋ, ತನ್ನ ವೃದ್ದಾಪ್ಯದ ನರಳಾಟದ ಕಲ್ಪನೆಗೋ ಮೈಯೆಲ್ಲಾ ನಡುಗಲಾರಂಭಿಸಿತು. ಚಳಿಗೆ ಶಿಕಾಪಟೆ ನಡುಗ್ತಿದಿ. ತಗಾ, ಈ ಕಂಬ್ಳಿ ಹೊದ್ಕ. ಆಮೇಲೆ ಮಾತಾಡೋವಂತಿ ಅಂತ ಆ ಮುದುಕ ಒಂದು ಕಂಬಳಿ ತನ್ನ ಮೈಮೇಲೆ ಹೊಚ್ಚಿದಾಗಲೇ ಇವ ವಾಸ್ತವಕ್ಕೆ ಬಂದಿದ್ದು.

ಯಾರಪ್ಪಾ ನೀ, ಎಲ್ಲಿಂದ ಬಂದಿ ಅಂದ ಆ ಮುದುಕ. ಹೌದು .ಯಾರು ನಾನು ? ಬಂದಿದ್ದಾದ್ರೂ ಎಲ್ಲಿಂದ ? ಹೋಗ್ತಿರೋದು ಎಲ್ಲಿಗೆ ಅಂತ ಇವನಿಗೇ ಗೊಂದಲವಾಯ್ತು. ಒಂದು ಮರದ ಬುಡದಲ್ಲಿ ಮಲಗಿದ್ದೆ . ಕಣ್ಣು ತೆರೆದು ನೋಡುವಷ್ಟರಲ್ಲಿ ಕತ್ತಲಾಗಿತ್ತು. ನನ್ನದು ಯಾವ ಊರೋ, ಯಾವ ಕೇರಿಯೋ ನೆನಪಾಗ್ತಾ ಇಲ್ಲ. ನನ್ನವರ ಹುಡುಕಿಕೊಂಡು ಮುಂದೆ ಸಿಗೋ ಹಳ್ಳಿಗೆ ಹೊರಟಿದ್ದೇನೆ ಅಂದ ಇವ. ಆ ಮುದುಕ ಒಮ್ಮೆ ನಸುನಕ್ಕ. ಯಾಕೆ ನಗ್ತಿದಿ ಅಜ್ಜಾ ಅಂದ ಇವ. ತಾಯೆಂಬೋ ಹೆಮ್ಮರದ ನೆರಳಲ್ಲಿ ಹುಟ್ಟಿ ಬೆಳೆದು , ಆಕಿ ಕೊಟ್ಟ ಹಣ್ಣೇ ಹೊಟ್ಟಿ ತುಂಬಿಸಿದ್ರೂ ಸಮಾಧಾನಿಲ್ಲ. ಅವಳನ್ನೇ ಅಡ್ಡಡ್ಡ ಸಿಗಿದು ಮಾರಿ ದುಡ್ಡು ಮಾಡೋಕೆ ಹೊಂಟಿ ನೀ. ಇನ್ನು ಆ ಮರ ಯಾವುದು ಅಂತ ನಿಂಗೆ ತಿಳಿಯೋದ್ ಹೆಂಗೆ ? ರ್ಆಕಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ, ಅಮ್ಮಾ ಅಂತ ಒಂದ್ ಮಾತು ಕರೆದಿದ್ರೆ ಗೊತ್ತಾಗಿಹೋಗ್ತಿತ್ತು ಅಂತ ಅಜ್ಜ ಹೇಳ್ತಿದ್ದರೆ ಒಂದು ಕ್ಷಣವೂ ಬೇರೆಯವರ .. ಹೋಗಲಿ ಹೆತ್ತಮ್ಮನ ಬಗ್ಗೆಯೇ ಯೋಚಿಸಲು ಸಮಯವಿಲ್ಲದಂತಾಗಿರೋ ಅಥವಾ ಹಾಗೆ ನಟಿಸ್ತಾ ಇರೋ ತನ್ನ ಬಗ್ಗೆನೇ ಜಿಗುಪ್ಸೆ ಹುಟ್ಟೋಕೆ ಶುರು ಆಯ್ತು. ಹೊಸ ವರ್ಷದಲ್ಲಿ ತಾನು ಮಾಡಬೇಕಾದ ಮೂರನೇ ಮತ್ತು ನಾಲ್ಕನೇ ಕೆಲಸಗಳೂ ನೆನಪಾಗಿದ್ವು.

ಮತ್ತೆ ಅಜ್ಜ, ಆ ಕೆರೆ, ಪೇರಲೇ ಹಣ್ಣು ಅಂದ. ಆ ಕೆರೆ ಹೆಸ್ರು ದಯಾಸಾಗರ. ದೇಹಿ ಅಂತ ಬಂದವ್ರಿಗೆ ಎಂದೂ ನಾಸ್ತಿ ಅಂದೋರಲ್ಲ ನಿನ್ನಪ್ಪ. ನೀ ಈಗ ಹೊದ್ದಿದೀಯಲ್ಲ ಕಂಬಳಿ. ಅದನ್ನು ಈ ಹದಿಮೂರಜ್ಜಂಗೆ ಕೊಟ್ಟೋರೂ ನಿನ್ನಪ್ಪನೇ. ಎಲ್ಲರ ಕಷ್ಟಕ್ಕೆ ನೆರವಾಗ್ತಿದ್ದ ಅವರ ಪುಣ್ಯವೇ ಒಂದು ಬೊಗಸೆ ನೀರಾಗಿ ನಿನ್ನ ಜೀವ ಉಳಿಸಿದ್ದು ಅಂತ ಜಾರಿದ್ದ ಕಂಬಳಿಯನ್ನ ಹಿಂಬಂದಿಗೆ ಬಂದು ತಲೆಯ ತನಕ ಹೊದಿಸಿದ ಅಜ್ಜ. ನನ್ನ ತಾಯಿ ಮಾಡಿದ ಅನ್ನ ಸಂತರ್ಪಣೆನೇ ಪೇರಳೆ ಹಣ್ಣಾಗಿ ನನ್ನ ಹಸಿವಿಂಗಿಸಿದ್ದ ಹಾಂಗಾರೆ ? ಹೌ ರಿಡಿಕ್ಯುಲಸ್ ಅಂತ ಕಂಬಳಿ ಹೊದೆಸಿದ್ದ ಅಜ್ಜನಿಗಾಗಿ ಹಿಂದೆ ತಿರುಗಿ ನೋಡಿದ. ಅಲ್ಲಿ ಅಜ್ಜನಿಲ್ಲ! ದಾನ, ಧರ್ಮ, ಪಾಪ, ಪುಣ್ಯ ಎಲ್ಲಾ ಮೂಢನಂಬಿಕೆ . ಈ ವೈಜ್ನಾನಿಕ ಯುಗದಲ್ಲೂ ಅದನ್ನೆಲ್ಲಾ ನಂಬೋದೇ ಅಂತಿತ್ತು ವಿವೇಕ. ಹೌದು. ಆದ್ರೆ ಹೊಟ್ಟೆ ತುಂಬಿದ್ದೆಂತೂ ಹೌದು. ಬಾಯಾರಿದ್ದೂ ಹೌದು. ದಾನ ಧರ್ಮಗಳೆಲ್ಲಾ ಸುಳ್ಳೋ ಸತ್ಯವೋ ಅನ್ನೋ ವಾದ ಇತ್ತಟ್ಟಿಗಿಟ್ಟರೂ ನಾನು ಮಾಡಿದ್ದ ನಾಲ್ಕು ಪ್ರತಿಜ್ನೆ ಮಾತ್ರ ನಿಜ ಅಂತು ಮನಸ್ಸು. ಅಂದ ಹಾಗೆ ಈ ಹದಿಮೂರಜ್ಜ ಯಾರು ಅನ್ನೋ ಪ್ರಶ್ನೆ ಹಲವು ಸಲ ಕಾಡಿದ್ರೂ ಇಲ್ಲೇ ಎಲ್ಲೋ ಹೋಗಿರಬಹುದಾದ ಅವನು ಬಂದಾಗ ಕೇಳೇ ಮುಂದೆ ಹೋಗ್ಬೇಕು ಅಂತ ಬೆಂಕಿ ಕಾಯಿಸುತ್ತಾ ಅಲ್ಲೇ ಕೂತ. ಹಾಗೇ ಯಾವಾಗ ಕಣ್ಣಿಗೆ ನಿದ್ದೆ ಹತ್ತಿತೋ ಗೊತ್ತಿಲ್ಲ.. ಮೊಬೈಲಿನ ಧೂಮ್ ಮಚಾಲೇ ಹಾಡು ಯಾರದೋ ಕರೆ ಬರ್ತಿದೆ. ಬೇಗ ಬಂದು ಎತ್ತೋ ಅಂತ ಬೈದು ಬೈದು ಎಬ್ಬಿಸಿದ್ದು, ಕಣ್ಣು ಬಿಟ್ಟರೆ ಎಂದಿನ ಹಾಸಿಗೆಯಲ್ಲೇ ಮತ್ತೆ ಪವಡಿಸಿರೋದು ಮಾತ್ರ ಅರಿವಿಗೆ ಬಂದಿತ್ತು.. ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

Tuesday, December 24, 2013

ಅರ್ಧ

ಅರೆಬೆಂದ ತರಕಾರಿ, ಅಡ್ಡಗೋಡೆಯ ಮೇಲಿಟ್ಟಂತೆ ಅರ್ಧ ಪೂರ್ತಿ ಮಾಡಿದ ಮಾತು, ಒಂದೇ ಹೃದಯವೆನ್ನುವಂತಿದ್ದಾಗ ದೂರಾದ ಎರಡು ಅರ್ಧಗಳು, ಅರ್ಧಾಂಗಿ ದೂರಾಗಿ ವಿರಹವೇದನೆಯಿಂದ ಬಳಲುತ್ತಿರೋ ಉಳಿದರ್ಧ.. ಹೀಗೆ ಅರ್ಧವೆನ್ನೋದು ಕೊಡೋ ವೇದನೆ ಅಷ್ಟಿಷ್ಟಲ್ಲ. ಅರೆಬರೆದ ಕವನವೋ, ಕತೆಯೋ ಮುಗಿಸಲಾಗದಿದ್ದರೆ ನನ್ನನ್ನು ಶುರುವಾದರೂ ಯಾಕೆ ಮಾಡಿದೆಯೋ ಎನ್ನುವಾಗ ಆಗೋ ನರಳಾಟವೂ ಕಮ್ಮಿಯಲ್ಲ , ಅರೆಕ್ಷಣದಲ್ಲಿ ಒಲಿಂಪಿಕ್ ಪದಕ ತಪ್ಪಿದಾಕೆ, ಅರೆಕ್ಷಣ ಮೈಮರೆತಿದ್ದೆ ಜೀವನವೇ ಹಾಳಾಯ್ತು ಅನ್ನೋ ವ್ಯಕ್ತಿ, ಅರೆಕ್ಷಣ ನಿದ್ರೆ ತೂಕಡಿಸಿತ್ತಷ್ಟೇ.. ಎಚ್ಚೆತ್ತುಕೊಳ್ಳೋದ್ರಲ್ಲಿ ಅನಾಹುತ ಘಟಿಸಿಹೋಗಿತ್ತು ಅನ್ನೋ ಡ್ರೈವರುಗಳು ಆ ಅರೆಕ್ಷಣಕ್ಕೆ ಜೀವನವಿಡೀ ಪರಿತಪಿಸೋ ಪರಿ ಯಾರಿಗೂ ಬೇಡ. ಹಲ್ಲಿ, ಹಾವು, ನೊಣ, ಸೊಳ್ಳೆಯಂತ ಜೀವಿಗಳ ಕೊಲ್ಲಹೋಗಿ ಅವು ಸಾಯದೇ, ಅರ್ಧ ಜೀವವಾಗಿದ್ದಾಗಿನ ನರಳಾಟ ನೋಡಲಾಗದು. ಜೀವಚ್ಚವವಾಗಿ ಅರ್ಧ ಬದುಕಿ ಅರ್ಧ ಸತ್ತಂತಿರೋ ಜೀವಗಳಿಗೆ “ದಯಾಮರಣ” ಕೊಡಬೇಕೆನ್ನೋ ವಾದ-ವಿವಾದಗಳು ಅತ್ತ ನಿರಾಕರಣೆಯನ್ನು ಕಾಣದೆ ಇತ್ತ ಸಮ್ಮತಿಯನ್ನೂ ಪಡೆಯದೇ ಅತ್ತ ಹೋಗದೇ, ಇತ್ತಲೂ ಮರಳದ ಅರ್ಧದಾರಿಯಲ್ಲಿರುವುದು ಬೇರೆ ಮಾತಾದರೂ ಈ ಅರ್ಧವೆನ್ನೋದರ ನೋವು ಅರ್ಥವಾಗದವರ ಕಣ್ಣಲ್ಲೂ ನೀರಿಳಿಸುತ್ತದೆ. ಆದರೆ ಈ ಅರ್ಧವೆನ್ನೋದು ನೋವನ್ನೇ ತರುತ್ತೆ ಅನ್ನೋದೂ ಅರ್ಧ ಸತ್ಯವಷ್ಟೇ.ಅರ್ಧ ರಾತ್ರಿಗೇ ನಮ್ಮ ದೇಶಕ್ಕೆ ಸಿಕ್ಕ ಸ್ವಾಂತಂತ್ರ್ಯ, ಮಧ್ಯ ರಾತ್ರಿಯಾದ ಮೇಲೆಯೇ ಪುಸ್ತಕ ತೆಗೆಯೋ ನೈಟೌಟುಗಳು.. ಅರ್ಧ ಮಸಾಲೆಪುರಿ, ಬೈಟು ಕಾಫಿಗಳು ಹೀಗೆ ಅರ್ಧವೆನ್ನೋದು ವಿದ್ಯಾರ್ಥಿ ಜೀವನದಲ್ಲಿ ಕೊಟ್ಟ ಖುಷಿ ಮರೆಯೋದೇಗೆ ? ಅರ್ಧ ರೂಪಾಯಿಯ ಐಸ್ ಕ್ಯಾಂಡಿ, ಸೈಕಲ್ ರೈಡುಗಳು ಕೊಟ್ಟ ಮಜಾ.. ವಾಹ್. ಅದೆಲ್ಲಾ ಹೌದು. ಇದ್ದಕ್ಕಿದ್ದಂತೆ ಈ ಅರ್ಧದ ಬಗೆಗಿನ ಮಾತೇಕೆ ಅಂದಿರಾ ? ಇದಕ್ಕೆ ನಿನ್ನೆಯ ಬೆಳಗ್ಗೆ ಹನ್ನೆರಡರ ಸುಮಾರಿಗೆ, ಹನ್ನೆರಡನ್ನುವುದು ಬೆಳಗ್ಗೆಯೋ ಮಧ್ಯಾಹ್ನವೋ ಅನ್ನೋ ಮಾತು ಸದ್ಯಕ್ಕೆ ಆಚೆಗಿಟ್ಟು ಅರ್ಧದಿನ ಕಳೆದಾಗ ಅಂದಿಟ್ಟುಕೊಳ್ಳಬಹುದಾಗ ನಡೆದ ಘಟನೆಯೇ ಸ್ಪೂರ್ತಿ. ಬೆಂಗಳೂರಲ್ಲಿ ಅರ್ಧಕ್ಕರ್ದ ದಾರಿ ತಪ್ಪಿಸೋರೇ ಇರ್ತಾರೆ ಅಂತ ಇಲ್ಲಿಗೆ ಬಂದ ಎರಡು ವರ್ಷಗಳಲ್ಲಿ ಮೂಡಿದ ಭಾವವಾಗಿತ್ತು. ಗೌತಮ ಬುದ್ದ ಕಾಲೇಜು, ಅಂಬೇಡ್ಕರು ಇಂಜಿನಿಯರಿಂಗ್ ಕಾಲೇಜಿನ ಹತ್ರ ಹೋಗೋಕೆ ಯಾವ ಬಸ್ಸು ಅಂದವನಿಗೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಬಸ್ಸು ಹತ್ತಿಸಿದ ಮಂದಿ.. ತದ್ವಿರುದ್ದ ದಿಕ್ಕಿನಲ್ಲಿರೋ ಅಲ್ಲಿ ಹೋಗಿ ಇಳಿದಾಗ ಬೆಂಗಳೂರಲ್ಲಿ ಎಪ್ಪತ್ತು ಕಾಲೇಜಿದೆ. ಅಡ್ರೆಸ್ ತಿಳಿಯದೇ ಎಲ್ಲೆಲ್ಲಿಗೋ ಹೋಗೋದು ನಿನ್ನ ಕರ್ಮವೆಂದು ಬಯ್ಸಿಕೊಳ್ಳಬೇಕಾದ ಪರಿಸ್ಥಿತಿ. ದೊಮ್ಮಲೂರಿನ ಪಕ್ಕದ ಕಮಾಂಡ್ ಆಸ್ಪತ್ರೆಗೆ ಹೋದಾಗ ಮೆಜೆಸ್ಟಿಕ್ಕಿಗೆ ವಾಪಾಸ್ ಹೋಗೋಕೆ ಬಸ್ಟಾಂಡೆಲ್ಲಿ ಅಂದವನಿಗೆ ಅಲ್ಲೇ ಎಡಪಕ್ಕದಲ್ಲಿದ್ದ ಬಸ್ಟಾಂಡ್ ತೋರಿಸದೇ ಒಂದೂವರೆ ಕಿಲೋಮೀಟರ್ ದೂರದಲ್ಲಿ ಬಲಬದಿಗಿದ್ದ ಬಸ್ಟಾಂಡಿಗೆ ದಾರಿ ತೋರಿದವರು! , ಹೆ.ಎಸ್. ಆರ್ ಲೇಔಟಿಂದ ಮೆಜೆಸ್ಟಿಕ್ಕಿಗೆ ಹೋಗಬೇಕಾದವನಿಗೆ ಸಿಲ್ಕ್ ಬೋರ್ಡಿಗೆ ಬಸ್ಸಿನ ದಾರಿ ತೋರೋ ಬದಲು ಎರಡೂವರೆ ಕಿಲೋಮೀಟರ್ ಇನ್ಯಾವುದೋ ಒಳದಾರಿಯಲ್ಲಿ ನಡೆಸಿದ ಪುಣ್ಯಾತ್ಮರು,,, ಹೀಗೆ ಇಲ್ಲಿ ಪ್ರತೀ ಬಾರಿ ಬಸ್ಸುಹತ್ತೋ ಮೊದ್ಲು ಗೂಗಲ್ಲಲ್ಲಿ ಅಡ್ರೆಸ್ ಹುಡ್ಕಿ ಹೋಗಬೇಕಾಗುವುದನ್ನು ನೆನಪಿಸೋರು ಹಲವು ಮಂದಿ. ಹಲವು ಆಸೆಗಳ ಹೊತ್ತು ಬೆಳಗ್ಗೆಯ ತಿಂಡಿ ತಿಂದು ಮನೆ ಬಿಟ್ಟವನು ಮಧ್ಯಾಹ್ನದ ಊಟಕ್ಕೂ ಗತಿಯಿಲ್ಲದೇ ಎಲ್ಲೆಲ್ಲೋ ಅಲೆದಲೆದು ಸಂಜೆಯ ಹೊತ್ತಿಗೆ ಹೇಗೋ ಅಡ್ರೆಸ್ ಹುಡುಕಿ ಮೆಜೆಸ್ಟಿಕ್ಕಿಗೆ ಬಂದ ದಿನಗಳು, ಕನಸುಗಳೂ ಬೇಡ, ಇಲ್ಲಿನ ಅಲೆಮಾರಿತನವೂ ಬೇಡ, ಮರಳಿಬಿಡೋಣ ಎನಿಸಿದ್ದ ದಿನಗಳೆಷ್ಟೋ. ದಾರಿಯಲ್ಲಿ ಹೋಗ್ತಿದ್ದವರನ್ನ ಕೇಳಿದರೆ ಗೊತ್ತಿಲ್ಲ ಅನ್ನೋ ಉತ್ತರವೇ ಖಾಯಂಮ್ಮಾಗಿ ಇಲ್ಲಿ ಪೋಲಿಸರನ್ನ, ಆಟೋದವ್ರನ್ನ ಮಾತ್ರ ಅಡ್ರೆಸ್ ಕೇಳ್ಬೇಕು. ಇನ್ಯಾರನ್ನೂ ಅಡ್ರೆಸ್ಸೇ ಕೇಳಬಾರದೆನಿಸಿಬಿಟ್ಟಿತ್ತು. ಆದರೆ ಇದೇ ವಾಸ್ತವವನ್ನೋ ಭ್ರಮೆ ಹರಿದಿದ್ದು ನಿನ್ನೆಯ ಹನ್ನೆರಡರ ಹೊತ್ತಿಗೆ.. ಬೆಂಗಳೂರಲ್ಲಿ ಮಲ್ಲೇಶ್ವರಂ ಅಂತ ಗೂಗಲ್ಲಲ್ಲಿ ಕೊಟ್ರೆ ತಮಿಳರ ಅಡ್ಡ ಅನ್ನೋ ಹಲ ಕೊಂಡಿಗಳು ತೆರೆದುಕೊಳ್ಳುತ್ತೆ. ಆದ್ರೆ ಈ ಮಲ್ಲೇಶ್ವರಂ ಅಥವಾ ಮಲ್ಲೇಶ್ವರಕ್ಕೆ ಆ ಹೆಸ್ರು ಬಂದಿದ್ದು ಅಲ್ಲಿರೋ ೧೭ನೇ ಶತಮಾನದ ಕಾಡುಮಲ್ಲಿಕಾರ್ಜುನ ಅಥವಾ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಅಂತ ಅನೇಕರಿಗೆ ತಿಳಿದಿರಲಾರದು. ಅಲ್ಲಿನ ಸಾಯಿ ಭವನ, ನಂದಿ ತೀರ್ಥ, ಗಂಗಮ್ಮ, ವೆಂಕಟೇಶ, ಈಶ್ವರ ಹೀಗೆ ಹಲವು ದೇಗುಲಗಳಿರೋ ದೇಗುಲ ಬೀದಿಯ ದರ್ಶನ ಮುಗಿಸಿ ಮಲ್ಲೇಶ್ವರಂನ ಫ್ಲೈ ಓವರ್ ಬಳಿ ನಿಂತಿದ್ದೆವು.ಮುಂದೆ ಮಂತ್ರಿ ಮಾಲೆಂಬೋ ಗಮ್ಯ ಮನದಲ್ಲಿತ್ತು. ಆದ್ರೆ ಹೇಗೆ ಸಾಗಬೇಕೆಂಬೋ ದಾರಿ ಗೊತ್ತಿರಲಿಲ್ಲ. ಫ್ಲೈ ಓವರಿನ ಎಡಕ್ಕೆ ಹೋದರೆ ಬಸ್ಟಾಂಡೋ, ಬಲಕ್ಕೆ ಹೋದರೆ ಬಸ್ಟಾಂಡೋ ಎಂಬ ಮಾತಲ್ಲಿದ್ದೆವು. ಸೀದಾ ನಡೆದರೆ ಮಂತ್ರಿ ಮಾಲೇ. ಆದರೆ ಅದು ಎಷ್ಟೂ ದೂರವೋ ಗೊತ್ತಿಲ್ಲ. ಅದಲ್ಲದೇ ಒನ್ ವೇ ಬೇರೆ. ಸೀದಾ ಬಸ್ಸುಗಳೂ ಹೋಗಲ್ಲ. ಸರಿ ಅಲ್ಲಿದ್ದ ಆಟೋದವ್ರ ಬಳಿ ಕೇಳಬೇಕು ಅಂತ ಮಾತಾಡ್ತಿದ್ವಿ. ಮಂತ್ರಿ ಮಾಲ್ ಇಲ್ಲೇ ಹತ್ರ ಅಪ್ಪ. ಒಂದು ನಾನೂರು ಮೀಟರ್ ನಡೆದ್ರೆ ಸಿಗುತ್ತೆ ಅನ್ನೋ ಮಾತು ಕೇಳಿಬಂತು ಹಿಂದಿಂದ. ಬೆಂಗಳೂರಲ್ಲಿ ಕನ್ನಡ ! ಅದೂ ಅನಪೇಕ್ಷಿತವಾಗಿ.. ಕನ್ನಡಿಗರೊಂದಿಗೂ ಮೊದಲ ಬಾರಿ ಇಂಗ್ಲೀಷಿನಲ್ಲಿ ಶುರು ಮಾಡಿ ಆಮೇಲೆ ಕನ್ನಡದವರು ಅಂತ ಅರಿತು ಕನ್ನಡಕ್ಕೆ ಎಳೆಯಬೇಕಾದ ಪರಿಸ್ಥಿತಿ ಬಂದಿರೂ ಸಂದರ್ಭದಲ್ಲಿ ಕೇಳಿದ ಕನ್ನಡ ಖುಷಿಯನ್ನೂ, ಅಚ್ಚರಿಯನ್ನೂ ತಂದಿತು. ಕನ್ನಡಾಂಬೆಯೇ ನಮ್ಮ ಮೇಲೆ ಕರುಣೆ ತೋರಿ ಮೂರ್ತಿವೆತ್ತು ಬಂದಿದ್ದಾಳೋ, ಅಥವಾ ಆಶರೀರವಾಣಿಯೋ ಎಂದೂ ಒಮ್ಮೆ ಅನುಮಾನ ಮೂಡಿತು. ಹಿಂದೆ ತಿರುಗಿ ನೋಡಿದರೆ ಅದು ಆಶರೀರವಾಣಿಯಲ್ಲ ಮಹಿಳಾ ವಾಣಿ. ಇಬ್ಬರು ನೀಳವೇಣಿ ತಾಯಂದಿರು ನಮ್ಮ ಹಿಂದೇ ಬರುತ್ತಿದ್ದರು. ಆಟೋದವ್ರಿಗೆ ಕೇಳ್ಬೇಡಿ ಅಪ್ಪಾ. ಅವ್ರು ಎಲ್ಲೆಲ್ಲೋ ಸುತ್ತಿಸಿ ಸುತ್ತಿಸಿ ಹೋಗ್ತಾರೆ. ಸೀದಾ ನಡ್ಕೊಂಡು ಹೋಗಿಬಿಡಿ. ಮಂತ್ರಿ ಮಾಲ್ ಸಿಗುತ್ತೆ ಅಂದ್ರು. ಹೂಂ ಸರಿ ಅಕ್ಕಾ, ತುಂಬಾ ಥ್ಯಾಂಕ್ಸ್ ಅಂದೆ. ಬಾಯ್ತುಂಬಾ ಧನ್ಯವಾದಗಳು ಅನ್ನದೇ ದರಿದ್ರ ಅಭ್ಯಾಸ ಬಲದಿಂದ ಥ್ಯಾಂಕ್ಸೆಂದ ನಾಲಿಗೆಗೆ ಮನಸ್ಸು ಶಪಿಸ್ತಾ ಇದ್ರೂ ಧನ್ಯವಾದಗಳು ಅಂದ್ರೆ ಇವ್ನು ಯಾವ ಲೋಕದ ಜೀವಿ ಅಂತ ನೋಡ್ತಾರೇನೋ ಅನ್ನೋ ಅಳುಕು ಕುಟುಕ್ತಾ ಇತ್ತು! ಅವರು ಹೇಳಿದಂತೆ ಹತ್ತೇ ನಿಮಿಷದಲ್ಲಿ ಮಂತ್ರಿ ಮಾಲ್ ಹತ್ರ ಇದ್ವಿ ಆಮೇಲೆ.. ಇದರೊಂದಿಗೆ ಇಲ್ಲಿ ಸಹಾಯ ಕೇಳಿದ್ರೂ ಸಹಾಯ ಮಾಡಲ್ಲ. ಸಹಾಯ ಮಾಡೋದು ಹೋಗ್ಲಿ ತಮ್ಮ ಪಕ್ಕದ ಅಪಾರ್ಟಮೆಂಟಲ್ಲಿರೋರ ಹೆರ್ಸೂ ಗೊತ್ತಿರೋಲ್ಲ ಅಂತ ಕಂಡ ಕೆಲ ಸಂಗತಿಗಳನ್ನೇ ವಾಸ್ತವವೆಂದು ಭಾವಿಸಿದ್ದ ಭ್ರಮೆ ಕರಗಿಹೋಯ್ತು. ಮಾರತ್ತಳ್ಳಿಯ ಮೂಲೆಯಲ್ಲಿ ಕನ್ನಡಕ್ಕಾಗಿ ಕಾತರಿಸುತ್ತಿರೋ ಕಿವಿ ಮಲ್ಲೇಶ್ವರದ ಕನ್ನಡ ವಾತಾವರಣದಿಂದ ಖುಷಿಯಾಗಿತ್ತು. ಮತ್ತೆ ಮಂತ್ರಿ ಮಾಲಿಗೆ ಕಾಲಿಟ್ರೆ ಅಲ್ಲೊಂದು ನೃತ್ಯ ಕಾರ್ಯಕ್ರಮಕ್ಕೆ ಆಯ್ಕೆ(ಅದೇ ರೀ ಆಡಿಷನ್!!) ನಡೀತಾ ಇತ್ತು. ಅದು ಕನ್ನಡ ಕಾರ್ಯಕ್ರಮ ಅನ್ನೋದು ಅಲ್ಲಿದ್ದ ಫಲಕಗಳಿಂದ ಮಾತ್ರ ಗೊತ್ತಾಗಬೇಕಿತ್ತಷ್ಟೇ. ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್, ಮತ್ತೊಂದು , ಇನ್ನೊಂದು .. ಹೀಗೆ ಕನ್ನಡ ಬಿಟ್ಟು ತಮಿಳು, ತೆಲುಗು, ಹಿಂದಿ ಹೀಗೆ ಬೇರೆಲ್ಲಾ ಭಾಷೆಗಳ ಹಾಡುಗಳು, ಅದಕ್ಕೆ ಡ್ಯಾನ್ಸು!! ಅದಕ್ಕೊಬ್ಬ ನಿರೂಪಕನ ಬದಲು ಆಂಕರ್ರು. ಹೌ ಆರ್ ಯೂ ಫೀಲಿಂಗ್ ಅಂತ ಇವನಂದ್ರೆ ಕುಣಿದು ಕುಣಿದು ಸುಸ್ತಾಗಿದ್ದವ ಒಂದೂವರೆ ನಿಮಿಷ ಇಂಗ್ಲೀಷಲ್ಲಿ ಮಾತಾಡಿದ !! ಇಂಗ್ಲೀಷ್ ಅರ್ಥವಾಗೋಲ್ಲ ಅಂತಲ್ಲ. ಈ ತರದ ಶೋನ ಡಿಸ್ಕವರಿ ಚಾನಲ್ಲವ್ರೋ, ಹಿಂದಿಯ ಜೀ ಟೀವರ್ರೋ ನಡೆಸಿದ್ರೆ ಬೇಜಾರಾಗ್ತಿರ್ಲಿಲ್ಲ. ಆದ್ರೆ ಪಕ್ಕಾ ಕನ್ನಡದ ಚಾನೆಲ್ಲೊಂದು.. ಬಿಡಿ ಆ ವಿಷಯ.ಅಲ್ಲಿ ನಿಲ್ಲೋಕಾಗದೆ ಮುಂದೆ ನಡೆದ್ವಿ. ಮತ್ತೆ ಅಂದು ಸಿಕ್ಕ ಮಹಿಳಾ ಮಣಿಗಳ ವಿಷಯಕ್ಕೆ ವಾಪಾಸ್ ಬರ್ತೀನಿ. ಯಾವೂರಪ್ಪ ಅಂದ್ರು. ಅವ್ರಿಗೂ ಆಶ್ಚರ್ಯ ಆಗಿರ್ಬೇಕು ನಮ್ಮ ನೊಡಿ. ಈ ಬೆಂಗ್ಳೂರಲ್ಲಿ ಹುಡುಗರಿಬ್ರು ನಡ್ಕೊಂಡು ಹೊರಟಿದಾರೆ ಅಂದ್ರೆ, ಅದೂ ಶೂ, ಸ್ಪೈಕು, ಕಿವಿಗೊಂದು ಇಯರ್ ಫೋನ್ ಹಾಕ್ಕೊಳದೇ ಹೊರಗೆ ಕಾಲಿಟ್ಟಿದಾರೆ ಅಂತಂದ್ರೆ ಖಂಡಿತಾ ಇವ್ರು ಇಲ್ಲಿನೋರಲ್ಲ ಅನಿಸಿಬಿಟ್ಟಿರ್ಬೇಕು ಅವ್ರಿಗೆ. ಯಾವೂರಪ್ಪ ನಿಮ್ಮದು ಅಂದ್ರು. ಬೆಂಗಳೂರು ಅನ್ನೋಕೆ ಬಾಯಿ ಬರಲಿಲ್ಲ. ಮೂಲ ಜಿಲ್ಲೆಯ ಹೆಸರೇ ಹೇಳಿದ್ವಿ. ಸದ್ಯ ನಮ್ಮೂರು ಬೆಂಗಳೂರೇ ಆಗಿದ್ರೂ ನಮ್ಮ ಮೂಲ ಊರಿನ ಹೆಸ್ರು ಹೇಳಿದ್ದು ಪೂರ್ಣ ಸುಳ್ಳೇನೂ ಆಗಿರ್ಲಿಲ್ಲ. ಪೂರ್ಣ ಸತ್ಯವೂ ಅಲ್ಲ. ಅರ್ಧ ಸತ್ಯ ಅಷ್ಟೇ. ಅರ್ಧ ಸತ್ಯ ಅಂದಾಕ್ಷಣ ನೆನಪಿಗೆ ಬಂತು. ನಾವು ಸಣ್ಣವರಿದ್ದಾಗ ಆ ಹೆಸರಿನ ಧಾರಾವಾಹಿಯೊಂದು ಬರುತ್ತಿತ್ತು. ಧಾರಾವಾಹಿಗಳೆಂದರೆ ಮೂರು ವರ್ಷ, ಏಳೂವರೆ ವರ್ಷಗಳೆಲ್ಲಾ ಚಿಂಗಮ್ಮಿನಂತೆ ಎಳೆಯೋ ಸಂಪ್ರದಾಯವಿರದ ಆ ಕಾಲದಲ್ಲಿ ಅದು ನೂರು, ಇನ್ನೂರು ಕಂತುಗಳನ್ನ ಪೂರೈಸೋದೇ ಒಂದು ದೊಡ್ಡ ಸಂಭ್ರಮವಾಗಿತ್ತು. ಈಗ ಬರ್ತಿರೋ ಎಳೆವಾಹಿಗಳು(ವಿಪರೀತ ಎಳೆಯೋದಕ್ಕೆ ಈ ರೀತಿ ಕರೆಯೋದು ಸೂಕ್ತ ಅಂದುಕೊಂಡಿದ್ದೇನೆ) ಒಟ್ಟೊಟ್ಟಿಗೆ ಎರಡು ಮೂರನ್ನು ನೋಡಿದರೂ ಎಲ್ಲದರ ಕತೆಯನ್ನೂ ಅರ್ಥ ಮಾಡ್ಕೊಂಡು ಜೀರ್ಣಿಸಿಕೊಳ್ಳೋ ಸೂಪರ್ ಶಕ್ತಿವಂತೆಯರನ್ನಾಗಿ ನಮ್ಮ ತಾಯಿ, ತಂಗಿಯಂದಿರನ್ನು ರೂಪಿಸಿಬಿಟ್ಟಿದೆ !. ಅರ್ಧ ಗಮನ ಹೋಂ ವರ್ಕಿನ ಮೇಲೆ, ಅರ್ಧ ಕಾರ್ಟೂನಿನ ಮೇಲಿಡೋದೇ ಅಭ್ಯಾಸವಾಗಿ ಆಗಿ ಕಾರ್ಟೂನಿಲ್ಲದೇ ಹೋಂವರ್ಕೇ ಮಾಡದ ಹುಡುಗರನ್ನ ನಿರ್ಮಿಸಿ ಬಿಟ್ಟಿದೆ ! ನನಗೆ ಅಂಡರ್ಸ್ಟಾಂಡ್ ಆಗ್ತಿಲ್ಲ, ಕಂಡೆಕ್ಟರೇ ಚೇಂಚ್ ಕೊಡಿ, ಐ ಆಮ್ ಗೋಯಿಂಗ್ ಟು ಮಾಲು, ಯೂ ಕಮಿಂಗು ಅನ್ನೋ ಕನ್ನಡಿಗರ ಧಿಮಾಕುಗಳೆಲ್ಲಾ ಕನ್ನಡನ ಕೊಲ್ತಿವೆ. ಕನ್ನಡ-ಇಂಗ್ಲೀಷುಗಳ ಕಲಬೆರಕೆ ಮಾಡಿ ಕಂಗ್ಲೀಷ್ ಮಾಡ್ತಿವೆ, ಮೂಲ ಕನ್ನಡ ಸಾಯ್ತಿದೆ ಅನ್ನೋ ಮಾತು ಸತ್ಯ. ಆದರೆ ನೂರಕ್ಕೆ ನೂರರಷ್ಟಲ್ಲ. ನಿಂತ ನೀರಾಗಿರದೇ ಬಂದ ಒಳ್ಳೆಯ ಅಂಶಗಳೆಲ್ಲಾ ಬರಲಿ ಎಂದು ಎಲ್ಲವನ್ನೂ ಸೇರಿಸ್ಕೊಂಡು ಬೆಳೆದ್ರೆ ಭಾಷೆಯೂ ಬೆಳಿತಾ ಹೋಗತ್ತೆ ಅನ್ನಿಸುತ್ತೆ. ಅಂದ ಹಾಗೆ ಇದು ಈ ಅರೆಕ್ಷಣದ ಅಭಿಪ್ರಾಯವಷ್ಟೇ.. ಜ್ನಾನ ಬೆಳೆದಂತೆ, ಸತ್ಯದ ಹಲಮುಖಗಳ ತಿಳಿಯುತ್ತಾ ಹೋದಂತೆ ಇದೂ ಬದಲಾಗುತ್ತಾ ಸಾಗುತ್ತೆ. ಅಂದ ಹಾಗೆ ಎಂದಿನಂತೆ ಮೂಡೋ ಪ್ರಶ್ನೆ. ಸಂಪೂರ್ಣ ಎಂದು ಯಾವುದನ್ನೇ ನಾವು ಅಂದುಕೊಂಡರೂ ಅದೇ ಪೂರ್ಣವೇ ? ಅದನ್ನು ಬಿಟ್ಟು ಬೇರೆ ಇಲ್ಲವೇ ಎಂದು. ಪೂರ್ಣಚಂದ್ರನೆನಿಸಿರೋ ಶಶಿಯೇ ಪರಶಿವನ ತಲೆಯ ಮೇಲೆ ಅರ್ಧವಾಗಿದ್ದಾನೆ. ಹುಣ್ಣಿಮೆಯಲ್ಲಿ ಪೂರ್ಣನೆನಿಸಿದವನು ಹದಿನೈದು ದಿನಗಳಲ್ಲೇ ಕ್ಷೀಣಿಸುತ್ತಾ ಸಾಗಿ ಮಾಯವಾಗುತ್ತಾನೆ. ಮತ್ತೆ ಹದಿನೈದು ದಿನಗಳ ಕಾಲಚಕ್ರದಲ್ಲಿ ಮತ್ತೆ ಮೂಡುತ್ತಾನೆ. ನಾವು ಒಮ್ಮೆ ಮಾತ್ರ ಅವನನ್ನು ನೋಡಿ ಅದೇ ಸತ್ಯವೆನ್ನೋದಾದ್ರೆ ನಮ್ಮ ಸತ್ಯ ಯಾವ ಕಾಲಘಟ್ಟದಲ್ಲಿ ಅವನನ್ನು ನೋಡಿರುತ್ತೇವೆ ಅನ್ನೋದ್ರ ಮೇಲೆ ನಿರ್ಧರಿಸಿರುತ್ತೆ.ಅದೇ ತರಹ ಸಾರ್ವಕಾಲಿಕ ಸತ್ಯವೆನ್ನೋದು ಇದ್ಯೇ ? ಒಂದು ಕಾಲಕ್ಕೆ, ಸಮೂಹಕ್ಕೆ ಸತ್ಯವೆನಿಸಿದ್ದು ಮತ್ತೊಂದು ಕಾಲಘಟ್ಟಕ್ಕೆ ಸತ್ಯವಲ್ಲವೆನಿಸಬಹುದು. ಒಬ್ಬರಿಗೆ ಶತಸತ್ಯವೆನ್ನಿಸಿದ್ದು ಮತ್ತೊಬ್ಬರಿಗೆ ಶುದ್ದಸುಳ್ಳೆನಿಸಬಹುದು. ಬೇಸಿಗೆ ಕಾಲ ವರ್ಷಕ್ಕೆ ನಾಲ್ಕು ತಿಂಗಳು ಮಾತ್ರ ಅನ್ನೋ ಭಾರತೀಯನ ಸಾರ್ವಕಾಲಿಕ ಸತ್ಯ ಆರು ತಿಂಗಳು ಬೇಸಿಗೆ ಕಾಣೋ ನಾರ್ವೆ ವಾಸಿಗೆ ಸುಳ್ಳೆನಿಸಬಹುದು. ಅದೇ ತರ ಇಲ್ಲೂ.. ನಮ್ಮ ಅರಿವಿನ ಪರಿಧಿ ವಿಸ್ತರಿಸುತ್ತಾ ಸಾಗದಿದ್ದರೆ ನಮಗೆ ಕಂಡಿದ್ದೇ ಸತ್ಯವೆಂದುಕೊಳ್ಳುತ್ತಾ ಅರೆಸತ್ಯದ ಭ್ರಮೆಯಲ್ಲೇ ಬದುಕಿ ಅರ್ಧ ಕತ್ತಲೆಯನ್ನೇ ಬೆಳಕೆಂದುಕೊಂಡು ಬೆಳಕಿನ ಅಭಾವದಲ್ಲಿ ಬದುಕುತ್ತಿರುತ್ತೇನೆ.. ಅಂದ ಹಾಗೆ ಪಂಜುವಿಗೆ ಇನ್ನೇನು ಐವತ್ತರ ಸಂಭ್ರಮ. ಐವತ್ತು ಅನ್ನೋದಕ್ಕಿಂತ ಅರ್ಧಶತಕ ಅನ್ನೋದು ಸೂಕ್ತ ಅಂದ್ಕೋತೀನಿ. ತೆಂಡೂಲ್ಕರಿನ ಕಟ್ಟಾ ಅಭಿಮಾನಿಗಳಿಗೆ ಇದು ಇಷ್ಟವಾಗಬಹುದು, ಎಲ್ಲೆಲ್ಲೂ ಕ್ರಿಕೆಟ್ಟಿನ ಹೇರುವಿಕೆ ನಡೀತಿದೆ ಅನ್ನೋ ಕ್ರಿಕೆಟ್ ದ್ವೇಷಿಗಳಿಗೆ ಇದರ ಜೀರ್ಣಿಸುವಿಕೆ ಕಷ್ಟವೂ ಆಗಬಹುದು. ಏನೇ ಅಂದುಕೊಂಡರೂ ಉದ್ದೇಶ ಅದಲ್ಲ. ಈ ಐವತ್ತ್ತು ನೂರು ಇನ್ನೂರು ಸಾವಿರಗಳಾಗಿ ಬೆಳೆಯಲೆಂಬುದೇ ಹಾರೈಕೆ.. ಮುಗಿಸೋ ಮೊದಲು ಮೂಡಿರಬಹುದಾದ ಸಂದೇಹವನ್ನು ನಿವಾರಿಸೋ ಅರ್ಧ ಪ್ರಯತ್ನವನ್ನೂ ಮಾಡಿಬಿಡುತ್ತೇನೆ. ಏನಾಗಿದೆ ನಿನಗೆ ? ಶುರು ಮಾಡಿದ ಯಾವುದನ್ನೂ ಪೂರ್ತಿಮಾಡದೇ ಅರ್ಧಂಬರ್ಧ ಮಾಡ್ತಾ ಇದೀಯಲ್ಲ ಅಂದ್ರಾ ? ಏನ್ಮಾಡೋಣ ಹೆಸರಿಟ್ಟ ಮೇಲೆ ಅದ್ರ ದುಷ್ಪರಿಣಾಮ ಲೇಖನದ ಮೇಲೂ ಅಗ್ಬಿಟ್ಟಿದೆ. ಅಂದ ಹಾಗೆ ನಿಮ್ಮ ಓರೆ ನೋಟ, ಅರೆಗಣ್ಣು, ಅರೆ ನಗುವಾದರೂ ಇದಕ್ಕೆ ಸಿಗಲೆಂಬ ನಿರೀಕ್ಷೆಯೊಂದಿಗೆ ವಿರಮಿಸುತ್ತಿದ್ದೇನೆ.

Monday, December 23, 2013

Temple Street, Malleshwaram


When i was searching for places to roam around in bangalore, did not find any good places within 70 kms. Places like
  •  Lal bagh
  • Vidhanasoudha, High Court
  •  Bangalore Palace
  •  HAL Heritage Musuem
  • Vishweshwarayya Musuem
  • Nehru Planetorium
  •  Bannerghatta National Park
were already covered.Then, suddenly somewhere in the middle, saw the name of a 17th century temple from which malleshwaram got its name. Yes it is Kaadu Malleswara Temple in malleshwaram. Then decided to go there only.

By any chance, if you wanna go to this place by BMTC bus, then you can go to platform#22 and get ticket to Stop 15.Name seems strange . But it is. It is in 15th cross of Malleshwaram

View of Kaadu malleshwara temple from Temple street
Kaadu malleshwara or Kaadu mallikarjuna temple was built in 17th Century. Apart from Kaadu mallikarjuna god, it also has chandikeshwara(Shiva who should be prayed with Claps), Kaala bhirava, hanuma, shakti ganapati, arunachaleshwara(Shiva , the god of region Arunachala), Parvati, Kashi vishwanatha(Shiva, the protector of Kashi), Prasanna maha ganapati, Bramarambha and Mahavishnu.

Normally shiva temples will be having Shiva and his family like Ganesha, Parvati, and parivar like Nandi, Kaala bhirava etc. But its rare to see Vishnu in the same temple. But it is here. But compared to Bhramarambha, and Ganesha which are in two sides of Kaadu malleshwara, Vishnu at the corner seems very simple...



You can also See many small wooden chariots which will be used during car festival(Ratha Yatra) near the temple. There are some Big chariots also outside(coming next). When you descend the steps near wooden chariots you will get a park and Nagara bana

Small chariots near Kaadu malleshwara temple
Small chariots near kaadu malleshwara temple
Varaaha carrying Brahma




Nagara bana in Kaadu malleshwara temple


After visiting Kaadumalleshwara temple, you can see Sai bhavana at the left of it.
Sai bhavana

Or you can go in the 15th cross road down or come in the stpes near Nagarabana to the other temples in Templestreet.

There are many temples like
  • Sri Lakshmi Narasimha temple
  • Nandi Teertha
  • Gangamma temple
  • Sri Raghavendra Sannidhi
  • Venugopala swamy temple( A bit away. Is in 11th cross. Not in 15th cross where rest all are)
  • Ishwara temple(Easy to find. It is near flower market before 15th cross)

Lakshmi Narasimha temple
VenuGopala Swamy



Sri Raghavendra Sanniddi

You can also find Siddashrama, many ayurvedic centres and lots of hospitals on the way.
So, it can also be called as health street of bangaluru  as well as Temple street of bangaluru

Timings : During Dhanur Maasa(Current month) most of the temples will be open from 5AM to 10 PM. otherwise wil be open till 11:30.So, its better to go early..

Places Nearby:
  • Mantri Square

Sunday, December 15, 2013

ಹೊಗೆ ಸುರುಳಿಗಳ ನಡುವೆ



ಒತ್ತೊತ್ತರಿಸಿ ಬರುತ್ತಿದ್ದ ಕೆಮ್ಮು. ಕೆಮ್ಮಿದಾಗೆಲ್ಲಾ ಒತ್ತರಿಸಿ ಬರೋ ಕಫ. ಕೆಮ್ಮಿ ಕೆಮ್ಮಿ ತತ್ತರಿಸಿ ಹೋಗಿರೋ ಗಂಟಲಿಂದ ಪ್ರತೀ ಉಗುಳಿಗೂ ರಕ್ತಲೇಪ. ಸುಮ್ಮನೇ ಒಮ್ಮೆ ತನ್ನ ಕೋಣೆಯತ್ತ ದೃಷ್ಠಿ ಬೀರಿದ. ಚದುರಿ ಬಿದ್ದಿರೋ ಬುಕ್ಕುಗಳು, ಮಡಚದೇ ಒಗೆದಿರೋ ಬಟ್ಟೆ, ತುಂಬಿ ಹೋಗಿರೋ ಧೂಳು, ದೇವರೆಂದು ಇಟ್ಟುಕೊಂಡಿದ್ದ ಪಟದ ಮೇಲೇ ಕಟ್ಟಿದ್ದ ಜೇಡರ ಬಲೆ, ಎಮ್. ಆರ್. ಎಪ್ಫಿನ ತೆಂಡೂಲ್ಕರಿನ ಅರ್ಧ ಕಿತ್ತು ದಿನಾ ಅಂಟಿಸಬೇಕು ಇಲ್ಲಾ ಕಿತ್ತೊಗೆಯಬೇಕು ಅಂತಿರೋ ಪೋಸ್ಟರು.. ಹೀಗೆ ಅಧ್ವಾನವಾಗಿರೋ ವಸ್ತುಗಳೆಲ್ಲಾ ಭವ್ಯ ಭೂತವನ್ನು, ಗೊತ್ತುಗುರಿಯಿಲ್ಲದೇ ಸಾಗುತ್ತಿರುವ ವಾಸ್ತವವನ್ನು ಬಿಂಬಿಸುವಂತಿದ್ದವು. ಬೆಳಿಗ್ಗೆ ಎದ್ದೊಡನೆಯೇ ರೆಡಿಯಾಗಿ ಆಫೀಸಿಗೆ ದೌಡಾಯಿಸಿದರೆ ಬರುತ್ತಿದ್ದುದು ರಾತ್ರಿಯೇ. ಬಂದ ಮೇಲೂ ಮತ್ತೇನೋ ಕೆಲಸವೆಂದು ಕಂಪ್ಯೂಟರ್ ತೆಗೆದರೆ ರಾತ್ರಿ ಕಣ್ಣು ಮುಷ್ಕರ ಹೂಡೋ ತನಕ ಆ ಡಬ್ಬಿ ಬಂದಾಗುತ್ತಿರಲಿಲ್ಲ. ಅಷ್ಟೇ ಆಗಿದ್ದರೆ ಈ ಗತಿ ಬರುತ್ತಿರಲಿಲ್ಲವೇನೋ. ಟೆನ್ಷನ್ನಿಗೆಂದು ಶುರುವಿಟ್ಟುಕೊಂಡ ಹೊಗೆಯ ಸಂಗವೇ ಇಂದು ಬಿಡಲಾರದ ಅಂಟಾಗಿ ಜೀವ ತಿನ್ನುತ್ತಿದೆ. ಎಂದಿನಂತೆ ಟಾರಸಿಯ ಮೇಲೆ ಹತ್ತಿ ಸುರುಳಿ ಸುರುಳಿ ಹೊಗೆ ಬಿಡಲು ಪ್ರಾರಂಭಿಸಿದವನಿಗೆ ಭೂತದ ನೆನಪುಗಳು ಮರುಕಳಿಸತೊಡಗಿದವು.

ಕಾಲೇಜು ದಿನಗಳವು. ಕಾಲೇಜು ಜೀವನ ಬಂಗಾರದ ಜೀವನ ಮಗಾ. ಇಲ್ಲಿ ಎಂಜಾಯ್ ಮಾಡ್ದೇ ಯಾವಾಗ ಮಾಡ್ತೀಯ ಅಂತಿದ್ದ ಸ್ನೇಹಿತರು, ನಮ್ಮ ಬ್ರಾಂಚಿನಲ್ಲಿದ್ದು ಈ ತರ ಹವ್ಯಾಸಗಳಿಲ್ದೇ ಇದ್ದರೇ ಬ್ರಾಂಚಿಗೇ ಅವಮಾನ ಅಂತಿದ್ದೋರು, ಒಮ್ಮೆ ದಮ್ಮು ಹೊಡ್ದು ನೋಡೋ ಏನೂ ಆಗಲ್ಲ ಅಂತಿದ್ದೋರು ಎಲ್ಲಾ ಇದ್ದರೂ ನಿರ್ಲಿಪ್ತನಾಗಿ ಉಳಿದಿದ್ದ ಈತ. ಸಿಗರೇಟಿಗೆ ದಾಸನಾಗಿದ್ದ ಅಣ್ಣ ಅದಕ್ಕೆ ದುಡ್ಡು ಹೊಂದಿಸಲಾಗದೇ ಅದನ್ನು ಬಿಡಲೂ ಆಗದೇ ಒದ್ದಾಡುತ್ತಿದ್ದದನು ಕಣ್ಣಾರೆ ಕಂಡಿದ್ದ ಇವ ತನ್ನ ಜೀವಮಾನದಲ್ಲಿ ಅದಕ್ಕೆ ಕೈ ಹಚ್ಚಬಾರದೆಂಬ ನಿರ್ಣಯ ಮಾಡಿದ್ದ. ಸಿಗರೇಟು ಬಿಡಬೇಕೆಂದು ಇವನಣ್ಣ ಮಾಡಿದ್ದ ಪ್ರಯತ್ನಗಳು ಒಂದಲ್ಲಾ ಎರಡಲ್ಲ. ಎಲೆಕ್ಟ್ರಾನಿಕ್ ಸಿಗರೇಟು, ಸಿಗರೇಟ್ ಬಿಡಿಸುವಂತಹ ಚೂಯಿಂಗ್ ಗಮ್ಮು, ಮಾತ್ರೆ ಹೀಗೆ ಹಲವೆಲ್ಲಾ ಪ್ರಯತ್ನ ಪಟ್ಟೂ ಅದರಿಂದ ಸಾಧ್ಯವಾಗದೇ ಕೈ ಬಿಟ್ಟಿದ್ದ. ಆ ಚೂಯಿಂಗ್ ಗಮ್ಮು ಹೇಗಿರುತ್ತೆ ಅಂತ ಒಮ್ಮೆ ಬಾಯಿಗೆ ಹಾಕಿಕೊಂಡವನಿಗೆ ಗಂಟಲೆಲ್ಲಾ ತುರಿಕೆ ಶುರುವಾಗಿ ಅಸಾಧ್ಯ ವೇದನೆ ಶುರುವಾಗಿ ಇದಕ್ಕಿಂತ ಸಿಗರೇಟಿನಿಂದ ಆರೋಗ್ಯದ ಮೇಲಾಗೋ ದುಷ್ಪರಿಣಾಮಗಳೇ ಮೇಲೇನೋ ಅನಿಸುತ್ತಿತ್ತು. ಈ ವೇದನೆಗಳ ಹೊರತಾಗಿಯೂ ಸಿಗರೇಟು ಬಿಡಲು ನಡೆಸುತ್ತಿದ್ದ ಅಣ್ಣನ ಪ್ರಾಮಾಣಿಕ ಪ್ರಯತ್ನದ ಮೇಲೆ ಹೆಮ್ಮೆಯೂ ಮೂಡುತ್ತಿತ್ತು. ಬಸ್ಸಿನಲ್ಲಿ ಕಂಡ "ಒಂದು ತಿಂಗಳಲ್ಲಿ ಸಿಗರೇಟು ಬಿಡಿಸಿ" ಎಂಬ ಜಾಹಿರಾತಿನಿಂದ , ಹಾದಿಯ ಹಕೀಮರ ಜೌಷಧಿಯವರೆಗೆ, ನೆಟ್ಟಿನಲ್ಲಿ "ಸಿಗರೇಟು ಬಿಡೋದು ಹೇಗೆ" ಎಂಬ ಮಾಹಿತಿಗಳಿಂದ ಬಿಟ್ಟವರ ಬ್ಲಾಗುಗಳವರೆಗೆ ಎಲ್ಲಾ ತಡಕಿದರೂ ಪರಿಣಾಮ ಮಾತ್ರ ನಗಣ್ಯವಾಗಿತ್ತು. ಚಿತ್ರಗಳ ಆರಂಭದಲ್ಲಿ ತೋರಿಸೋ ಒಬ್ಬ ಯುವಕನ ಚಿತ್ರ ನೋಡಿ ತನ್ನಣ್ಣನಿಗೆ ಇಂತಹ ಗತಿ ಬರಬಹುದಾ ಒಂದು ದಿನ ಎಂದು ಎಷ್ಟೋ ದಿನ ಹೆದರಿ ರಾತ್ರಿಯೆಲ್ಲಾ ನಿದ್ರೆಗೆಟ್ಟಿದ್ದನಿವನು.ವಿಧಿಯ ಹಾಸ್ಯ ನೋಡಿ. ಅಂದು ಸ್ನೇಹಿತರ ಅಷ್ಟೆಲ್ಲಾ ಆಮಿಷಗಳ ನಡುವೆಯೂ ಕೆಡದಿದ್ದ ಈತನ ಧೃಡಚಿತ್ತ ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಕದಡಿಹೋಗಿತ್ತು !.

ಆಫೀಸಿಗೆ ಕಾಲಿಟ್ಟ ಮೊದಲ ದಿನಗಳವು. ಮೊದಲ ದಿನ ಆಫೀಸಿನ ಬಗ್ಗೆ ಪರಿಚಯಿಸುತ್ತಿದ್ದ ಸಹೋದ್ಯೋಗಿ ಆಫೀಸಲ್ಲಿ ಲೈಬ್ರರಿ ಇಲ್ಲಿದೆ,ಕ್ಯಾಂಟೀನ್ ಆ ಮೂಲೆಯಲ್ಲಿ, ಸ್ಮೋಕಿಂಗ್ ಜೋನ್ ಟೆರೇಸಿನ ಮೇಲೆ.. ಎಂದ ಓಹ್, ಸ್ಮೋಕಿಂಗ್ ಜೋನ್ ಅಂತ ಬೇರೆ ಇರತ್ತಾ ? ಅಂತ ಆಶ್ಚರ್ಯಗೊಂಡಿದ್ದ ಆತ ಕೆಲ ದಿನಗಳ ನಂತರ ಯಾವುದೋ ಕೆಲಸದ ಮೇಲೆ ಕೊನೆಯ ಪ್ಲೋರಿನಲ್ಲಿದ್ದವ ಅಲ್ಲಿ  ಮೊಬೈಲ್ ನೆಟ್ವರ್ಕು ಸಿಗದಿದ್ದ ಕಾರಣ ನೆಟ್ವರ್ಕು ಅರಸಿ ಟೆರೇಸಿಗೆ ಬಂದಿದ್ದ. ನೋಡಿದರೆ ಯುವಕರಷ್ಟೇ ಅಲ್ಲ ಯುವತಿಯರೂ, ಅಂಕಲ್ ಆಂಟಿಯರು ಸಾರಿ ಬಾಸ್ಗಳು ! ಪೈಪೋಟಿಯ ಮೇಲೋ ಎಂಬಂತೆ ಹೊಗೆ ಬಿಡುವುದರಲ್ಲಿ ಮಗ್ನರಾಗಿದ್ದರು. ಒಬ್ಬೊಬ್ಬರ ಮೊಗದ ಮೇಲೂ ಪ್ರಪಂಚದ ಎಲ್ಲಾ ಚಿಂತೆಗಳು ಇವರ ಮೈಮೇಲೆ ಬಿದ್ದಂತಾ ಲುಕ್ಕು ! ಅಣ್ಣನ ಒದ್ದಾಟ ನೆನಪಾಗಿ  ಆ ಧೂಮ್ರವ್ಯೂಹದ ಮಧ್ಯೆ ನಿಲ್ಲಲಾಗದೇ ಕೆಳಗೆ ಬಂದುಬಿಟ್ಟಿದ್ದ ಈತ.  ಸಿಗರೇಟೆಂದರೆ ಬರೀ ಹುಡುಗರು, ಪೋಲಿಗಳೆಂಬ ಈತನ ಭ್ರಮೆ ತನ್ನ ಆಫೀಸಿನ ಸುಂದರಿಯರು ಅಂದುಕೊಂಡಿದ್ದವರ ಕೈಯಲ್ಲೆಲ್ಲಾ ಕಂಡ ಸಿಗರೇಟುಗಳಿಂದ ಸುಟ್ಟು ಬೂದಿಯಾಗಿತ್ತು. ತಾವು ಹುಡುಗರಿಗಿಂತ ಯಾವ ರೀತಿಯಲ್ಲೂ ಕಮ್ಮಿಯಿಲ್ಲವೆಂಬ ಭಾವದಿಂದ ಅವರು ಹೀಗೆ ಮಾಡುತ್ತಿರಬೇಕೆಂದು ಒಮ್ಮೆ ಅನಿಸಿದರೆ ಈ ನಿಕೋಟಿನ್ನಿನ ಅಂಟೇ ಹೀಗೆ. ಒಮ್ಮೆ ಅಂಟಿಕೊಂಡರೆ ಮತ್ತೆ ಬಿಡಿಸಲಾಗದೆಂದು ಮತ್ತೊಮ್ಮೆ ಅನಿಸುತ್ತಿತ್ತು.

ಸಖತ್ ವರ್ಕ್ ಮಾಡ್ತಾನೆ ಹುಡುಗ ಅಂತ ಎಲ್ಲರ ಮೆಚ್ಚುಗೆ ಗಳಿಸಿದ ಮೊದಲೆರೆಡು ತಿಂಗಳುಗಳಲ್ಲಿ. ದಿನ ಕಳೆಯುತ್ತಿದ್ದಂತೆ ಮಹತ್ವದ ಜವಾಬ್ದಾರಿಗಳು ಹೆಗಲ ಮೇಲೆ ಬೀಳತೊಡಗಿದವು. ಸಂಜೆ ಐದಕ್ಕೆ ಮನೆಗೆ ಬರುತ್ತಿದ್ದವನು ಏಳು, ಎಂಟು ಒಂಬತ್ತಾಗುತ್ತಾಗುತ್ತಿತ್ತು. ಶನಿವಾರ, ಭಾನುವಾರಗಳು ಆಫೀಸಿಗೆ ಹೋಗಬೇಕಾಯಿತು. ಬೆಳಗ್ಗೆ ಮಾಡುತ್ತಿದ್ದ ಯೋಗ, ಧ್ಯಾನ, ಓಟ, ಸಂಜೆಯ ಬ್ಯಾಡ್ಮಿಂಟನ್ನುಗಳೆಲ್ಲಾ ಟೈಂ ವೇಸ್ಟು. ಆ ಸಮಯವನ್ನು ಆಫೀಸಿಗೆ ಉಪಯೋಗಿಸಿದರೆ ತನ್ನ ವೃತ್ತಿ ಜೀವನದಲ್ಲಿ ಎಷ್ಟು ಮುಂದೆಬರಬಹುದು ಅಂತ ಯೋಚಿಸತೊಡಗಿದ. ಸ್ನೇಹಿತರಿಗೆ ಮೆಸೇಜಿಸುವುದು, ಫೇಸ್ಬುಕ್ಕು, ವಾಟ್ಸಾಪುಗಳೆಲ್ಲಾ ಕಾಲಹರಣಗಳಂತೆ ಕಾಣತೊಡಗಿದವು. ಸ್ನೇಹಿತರು ಹೋಗಲಿ ಮನೆಯವರು ಕಾಲ್ ಮಾಡಿದರೂ ಮಾತನಾಡದಷ್ಟು ಬಿಸಿಯಾಗಿಬಿಟ್ಟ ಹುಡುಗ. ಈ ಒಂಟಿ ಬಾಳು ನಾಲ್ಕೈದು ತಿಂಗಳು ಚೆನ್ನಾಗೇ ನಡೆಯಿತು. ಇದ್ದ ಬದ್ದ ಪ್ರಶಸ್ತಿಗಳೆಲ್ಲಾ ಈತನನ್ನರಸಿ ಬರತೊಡಗಿದವು. ಆದರೆ ಅದರೊಂದಿಗೆ ತಾನು ಸದಾ ಮುಂದೇ ಇರಬೇಕೆಂಬ ಗೀಳು ಈತನನ್ನಾವರಿಸಿಕೊಂಡಿತು. ಸಣ್ಣ ಸೋಲನ್ನು, ಮಾತನ್ನೂ ಸಹಿಸಲಾಗುತ್ತಿರಲಿಲ್ಲ. ಈಗಾಗಲೇ ಎಲ್ಲರಿಂದ ದೂರಾಗಿ ಒಂಟಿಯಾಗಿದ್ದರಿಂದ ಈತನ ಸಿಟ್ಟು, ನೋವುಗಳನ್ನು ತೋಡಿಕೊಳ್ಳಲೂ ಯಾರೂ ಸಿಗದೇ ಅದು ಈತನನ್ನೇ ಸುಡತೊಡಗಿತು. ಆಗ ಕಂಡ ಸಾಥಿಯೇ ಸಿಗರೇಟು. ಸಿಗರೇಟು ಹೊಗೆಯನ್ನು ಉಫ್ ಎಂದು ಬಿಡುತ್ತಿದ್ದರೆ ಮನದ ಸಿಟ್ಟು, ನೋವುಗಳನ್ನೆಲ್ಲಾ ತೋಡಿ ತೋಡಿ ಹೊರಕ್ಕೆಸೆದಂತಾಗಿ ಕ್ಷಣಿಕ ಸಮಾಧಾನವಾದರೂ ಸಿಗುತ್ತಿತ್ತು. ಮುಂಚೆ ತನಗೆ ಸಿಗುತ್ತಿದ್ದ ಯೋಗ, ಪ್ರಾಣಾಯಾಮಗಳಲ್ಲಿನ ಸಮಾಧಾನಕ್ಕೆ ಹೋಲಿಸಿದರೆ ಇದು ಏನೂ ಅಲ್ಲವೆಂದು ಕೆಲವೊಮ್ಮೆ ಅನಿಸಿದರೂ ಕೊನೆಗೆ ಇದರಲ್ಲೇ ತೃಪ್ತನಾಗಿಬಿಡುತ್ತಿದ್ದ. ದಿನ ಕಳೆದಂತೆ ಚಿಂತೆಗಳು ಹೆಚ್ಚಾಯ್ತು. ಅದರಂತೆ ಸಿಗರೇಟುಗಳ ಸಂಖ್ಯೆಯೂ. ಆಫೀಸಿನ ಚೈನ್ ಸ್ಮೋಕರ್ಗಳಲ್ಲಿ, ಸ್ಮೋಕಿಂಗ್ ಜೋನಿನ ಕಾಯಂ ಸದಸ್ಯರಲ್ಲಿ ಒಬ್ಬನಾಗಿಬಿಟ್ಟ.

ಹೀಗಿರುವಾಗ ಒಮ್ಮೆ ಇದ್ದಕ್ಕಿದ್ದಂತೆ ಸೀತ, ಕೆಮ್ಮು ಕಾಡತೊಡಗಿತು ಇವನಿಗೆ. ಒಂದು ದಿನ ಆಫೀಸಿಗೇ ಹೋಗಲಾಗದಂತೆ ಮಲಗಿ ಬಿಟ್ಟ. ಹುಷಾರಿಲ್ಲ ಎಂದು ಶಾಲಾದಿನಗಳಿಂದ ಹಿಡಿದು ಯಾವತ್ತೂ ರಜೆ ಹಾಕದವನಿಗೆ ತನ್ನ ಮೇಲೇ ಬೇಸರವಾಗತೊಡಗಿತ್ತು. ದಿನಾ ಆರಕ್ಕೆ ಏಳುತ್ತಿದ್ದವನು ಇಂದು ಹತ್ತಕ್ಕೆ ಎದ್ದಿದ್ದ. ತನ್ನ ಎಲ್ಲ ಮಿಸ್ ಮಾಡ್ಕೊತ್ತಿರಬಹುದು ಎಂದು , ಒಂದು ಹದಿನೈದಾದರೂ ಕಾಲುಗಳ ನಿರೀಕ್ಷೆಯಲ್ಲಿದ್ದವನಿಗೆ ನಿರಾಸೆ. ಆಫೀಸಿನಿಂದ ಒಂದೂ ಕಾಲಿಲ್ಲ. ತನ್ನಿಂದ ಕೆಲಸ ಆಗಬೇಕೆಂದಾಗೆಲ್ಲಾ ಮಧ್ಯರಾತ್ರಿಗೂ ಫೋನ್ ಮಾಡುತ್ತಿದ್ದವರು ಇಂದು ಹುಷಾರಿಲ್ಲದೇ ಮಲಗಿದರೂ ವಿಚಾರಿಸಲು ಫೋನ್ ಮಾಡಿಲ್ಲವಲ್ಲ ಎಂಬ ಬೇಸರ ಕಾಡುತ್ತಿತ್ತು. ಬಂದಿದ್ದು ಮೂರು ಕಾಲು. ಮೂರೂ ಅಮ್ಮನದು. ಇತ್ತೀಚೆಗೆ ಅವಳು ಫೋನ್ ಮಾಡಿದಾಗೆಲ್ಲಾ ತಾನು ಉತ್ತರಿಸುತ್ತಿದ್ದ ರೀತಿ , ಉಡಾಫೆ ನೆನೆದು ಬೇಸರವಾಯ್ತು. ಅವಳಿಗೆ ತಾನಲ್ಲದೆ ಇನ್ನು ಯಾರಿದ್ದಾರೆ.. ತಾನು ಹೀಗೆ ವರ್ತಿಸಬಾರದಿತ್ತು ಎಂದು ನೆನೆದು ಕಣ್ಣಂಚಲ್ಲಿ ನೀರು ಜಿನುಗತೊಡಗಿತು. ಹಾಗೇ ಫೋನ್ ಮಾಡಿದ ಅಮ್ಮನಿಗೆ ಮಲಗಿದ್ದಲ್ಲಿಂದಲೇ.. ಬುಸಿಯಿದ್ದಿಯೇನೋ ಅಲ್ವೇನೋ, ಆಫೀಸಲ್ಲಿದ್ದೀಯ ಅಂದ್ಲು ಅಮ್ಮ. ಇಲ್ಲಮ್ಮಾ ಹೇಳು ಅಂದ ಈತ. ಹುಟ್ಟಿದ ಹಬ್ಬದ ಶುಭಾಶಯಗಳು ಕಣೋ ಮಗನೇ. ಆ ದೇವರು ನನ್ನ ಆರೋಗ್ಯ, ಐಶ್ವರ್ಯವನ್ನೂ ನಿನಗೇ ಕೊಡಲಿ ಅಂದರು ಅಮ್ಮ. ತನ್ನ ಹುಟ್ಟಿದ ದಿನವನ್ನು ಉಳಿದವರು ಹೋಗಲಿ ತಾನೇ ಮರೆತ ಸಂದರ್ಭದಲ್ಲಿ  ತನ್ನ ಹೆತ್ತಾಕೆ ನೆನಪಿಟ್ಟು ಫೋನ್ ಮಾಡಿದ ಪರಿ ಕಂಡು ಮತ್ತೆ ಕಣ್ಣಲ್ಲಿ ನೀರು ಜಿನುಗತೊಡಗಿತು. ಸಾರಿ ಕಣೋ, ನಿನ್ನ ಡಿಸ್ಟರ್ಬ್ ಮಾಡಿದ್ದಕ್ಕೆ , ಇಡಲಾ ಅಂದ್ಲು ಅಮ್ಮ. . ತಕ್ಷಣಕ್ಕೆ ಏನೋ ಕಂಡವರಂತೆ, ಏ ಏನೋ, ಏನಾಯ್ತೋ. ಯಾಕೋ ಅಳ್ತಿದೀಯ ಅಂದ್ರು. ಈ ಕಡೆಯಿಂದ ಏನೂ ಉತ್ತರವಿಲ್ಲ. ತನ್ನ ಅಮ್ಮನ ಹುಟ್ಟಿದಬ್ಬಕ್ಕೆ, ದೀಪಾವಳಿಗೆ, ಚೌತಿಗೆ ಮನೆಗೆ ಹೋಗಿ ಅವಳ ಜೊತೆಗಿರೋದು ಹೋಗಲಿ,ಒಂದು ಸೀರೆ ಕೊಡೆಸೋದು ಹೋಗಲಿ, ಒಂದು ವಿಷ್ ಕೂಡ ಮಾಡಲು ಸಮಯವಿಲ್ಲದಷ್ಟು ಸ್ವಾರ್ಥಿಯಾಗಿಬಿಟ್ಟೆನಲ್ಲಾ ತಾನು ಎಂದು ತನ್ನನ್ನೇ ಕರುಬುತ್ತಿದ್ದ ಈತ. ಕೆಮ್ಮು ಒತ್ತರಿಸಿ ಬರತೊಡಗಿತು. ಹೇ, ಏನಾಯ್ತೋ ? ಯಾಕೆ ಅಳ್ತಿದೀಯ. ಮೊನ್ನೆಯಿಂದ ಕೆಮ್ತಿದೀಯ. ಏನಾಯ್ತೋ ? ಆರೋಗ್ಯ ಸರಿ ಇದೆ ತಾನೇ ? ಆಫೀಸಿಗೆ ಹೋಗಿದೀಯ ಇಲ್ಲ ಮನೇಲೇ ಇದೀಯ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಶುರು ಮಾಡಿದರು ಅಮ್ಮ.

ಸಿಗರೇಟಿಗೆ ದಾಸನಾದ ಮೇಲೆ ಮನೆಗೆ ಹೋಗಿರಲಿಲ್ಲ. ಸಮಯವಿಲ್ಲದಿರೋದು ಒಂದು ಕಾರಣವಾದರೆ, ಅಣ್ಣ ಒದ್ದಾಟಪಟ್ಟಿದ್ದನ್ನು ನೋಡಿ ನೋಡಿ ಸಿಗರೇಟಿಗರನ್ನೆಲ್ಲಾ ದ್ವೇಷಿಸುತ್ತಿದ್ದ, ಕೊನೆಯ ಪಕ್ಷ ತನ್ನ ಸಣ್ಣ ಮಗನಾದರೂ ಅದರ ದಾಸನಾಗಿಲ್ಲವಲ್ಲ ಎಂದು ಹೆಮ್ಮೆ ಪಡುತ್ತಿದ್ದ ಅಮ್ಮನ ಎದುರಿಸಲು ನೈತಿಕ ಧೈರ್ಯ ಸಾಕಾಗುತ್ತಿರಲಿಲ್ಲ. ಅಂತದ್ರಲ್ಲಿ ತಾನೇ ಈಗ ಅದರ ದಾಸನಾಗಿ ಒದ್ದಾಡುತ್ತಿದ್ದೇನೆ ಎಂದು ಹೇಗೆ ಹೇಳಲಿ ಎಂಬ ಸಂದಿಗ್ದ ಆತನನ್ನು ಕಾಡತೊಡಗಿತು. ಇಲ್ಲಮ್ಮ. ಇಲ್ಲಿ ಹವಾ ಬದಲಾವಣೆಯಿಂದ ನನಗೆ ಸೀತ ಶುರುವಾಗಿದೆ ಅಷ್ಟೆ. ಇವತ್ತು ಅದಕ್ಕೇ ರಜ ಹಾಕಿದ್ದೀನಿ. ಸೀತದಿಂದ ನನ್ನ ಧ್ವನಿ ಎಲ್ಲಾ ಕೂತು ಹೋಗಿ ನಿನಗೆ ಅತ್ತಂತೆ ಕೇಳ್ತಾ ಇದೆ ಅಷ್ಟೆ ಅಂದಿದ್ದ. ಅಮ್ಮನಿಗೆ ಅದು ಪೂರ್ಣ ನಿಜವಲ್ಲ ಎಂದು ಗೊತ್ತಾದರೂ ಮಗ ನನ್ನಿಂದ ಏನೋ ಮುಚ್ಚಿಡುತ್ತಿದ್ದಾನೆ ಎಂದರೆ ಸದ್ಯ ಹೇಳಲಾರದ ಸಂದಿಗ್ದದಲ್ಲಿದ್ದಾನೆ. ಸಮಯ ಬಂದಾಗ ಹೇಳೇ ಹೇಳುತ್ತಾನೆ , ತಪ್ಪು ದಾರಿಯಲ್ಲೆಂತೂ ಹೋಗಲಾರ ಆತ ಎಂದು ಧೈರ್ಯ ತಂದುಕೊಂಡರು. ಸರಿ ಮಗ. ನಿನ್ನ ಆರೋಗ್ಯದ ಕಡೆ ಕಾಳಜಿ ತಗೊ. ಒಳ್ಳೆದಾಗ್ಲಿ ನಿಂಗೆ. ಸಂಜೆ ಫೋನ್ ಮಾಡ್ತೀನಿ ಅಂತ ಫೋನಿಟ್ಟರು. ಒರೆಸುತ್ತಿದ್ದ ಕಣ್ಣೀರಿನ ಜೊತೆ ಪ್ರಪಂಚದಲ್ಲಿ ನಾನು ಒಂಟಿಯಲ್ಲ. ಅಮ್ಮನಿಗಾದರೂ ನಾನು ಹುಷಾರಾಗಬೇಕು. ಈ ಕೆಟ್ಟ ಸಿಗರೇಟಿಂದ ನಾನು ಅಕಾಲಿಕವಾಗಿ ಸಾಯೋದು ತಪ್ಪಬೇಕು ಎನ್ನೋ ಧೃಢ ನಿಶ್ಚಯ ಈತನಲ್ಲಿ ಮೂಡತೊಡಗಿತು.

ಗಂಟಲು ಕಿತ್ತು ಬರುವಂತೆ ಕೆಮ್ಮುತ್ತಿದ್ದರೂ ಇನ್ನು ಇಲ್ಲಿ ಮಲಗಿ ಉಪಯೋಗವಿಲ್ಲ, ಎದ್ದು ಆಫೀಸಿಗಾದರೂ ಹೊರಡೋಣವೆಂದು ರೆಡಿಯಾದ. ಹನ್ನೊಂದರ ಹೊತ್ತಿಗೆ ಆಫೀಸಿಗೆ ತಲುಪಿದ್ದ. ಇವನ ಮುಖ ನೋಡಿಯೇ ಈತನಿಗೆ ಹುಷಾರಿಲ್ಲವೆಂದು ಗೊತ್ತಾದ ಯಾರೂ ಈತನನ್ನು ಯಾಕೆ ಲೇಟೆಂದು ವಿಚಾರಿಸಲಿಲ್ಲ. ವಿಚಾರಿಸೋದು ಹೋಗಲಿ, ತನ್ನ ಹುಟ್ಟಿದಬ್ಬಕ್ಕೆ ವಿಷ್ ಮಾಡಬಹುದೆಂದು ನಿರೀಕ್ಷಿಸಿದ್ದ ಆ ನಿರಾಸೆ ಬತ್ತಿಹೋದರೂ ಈತನಿಗೆ ಬೇಸರವಾಗಲಿಲ್ಲ. ಎಲ್ಲರಿಗಾಗಿ ತಾನು. ತನಗಾಗಿ ಎಲ್ಲರೂ ಅಲ್ಲ.ಗಟ್ಟಿಯಿದ್ದರೆ ಮಾತ್ರ ಇಲ್ಲಿ ಬದುಕೋಕೆ ಸಾಧ್ಯ. ದಿನಾ ಸಾಯೋರ್ನ ಇಲ್ಲಿ ಯಾರೂ ವಿಚಾರಿಸೋಲ್ಲ ಅನ್ನೋ ಪ್ರಾಕ್ಟಿಕಲ್ ಸ್ವಭಾವ ಅವನದಾಗುತ್ತಾ ಬಂದಿತು ಬೆಳಗಿನ ಘಟನೆಗಳಿಂದ. ಏಳೆಂಟು ಸಲ ಸಿಗರೇಟು ಹೊಡೆಯೂ ಮನಸ್ಸಾದರೂ ಹೇಗೂ ಕಷ್ಟಪಟ್ಟು ತಡಕೊಂಡ. ಸಿಗರೇಟಿನ ನೆನಪಾದಾಗಲೆಲ್ಲಾ ನೀರು ಕುಡಿಯೋದೋ, ಯಾರಿಗಾದ್ರೂ ಪಿಂಗ್ ಮಾಡಿ ಮಾತಾನಾಡೋದೋ, ತಿಂಗಳುಗಳಿಂದ ತೆಗೆಯದ ಫೇಸ್ಬುಕ್ಕು ವಾಟ್ಸಾಪು ತೆಗೆದು ಯಾರಿಗಾದ್ರೂ ಮೆಸೇಜ್ ಮಾಡೋದೋ ಮಾಡತೊಡಗಿದ.ಸ್ಮೋಕಿಂಗ್ ಜೋನಿನ ಗೆಳೆಯರು ಕರೆದಾಗಲೂ ಕಷ್ಟಪಟ್ಟು ಏನೋನೋ ನೆವ ಹೇಳಿ ತಪ್ಪಿಸಿಕೊಂಡ. ಒಂದೇ ಒಂದು ಎಂದಂದ ಸಿಗರೇಟು ಮತ್ತೆ ಚೈನಿಗೆಳೆಯುತ್ತೆ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅಂತೂ ಸಂಜೆಯವರೆಗೆ ಕಷ್ಟಪಟ್ಟು ಆಫೀಸಲ್ಲಿ ಕಳೆದ ಅವನಿಗೆ ಸಿಗರೇಟಿಲ್ಲದ ದಿನ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ಎದೆಯಲ್ಲಿ ಉರಿಯುತ್ತಿದ್ದಂತೆ. ಬೇಕು ಬೇಕು ಅನಿಸಿದಂತೆ. ಅದನ್ನ ತಡೆಯೋದ್ರಲ್ಲಿ ಸಾಕು ಬೇಕಾಗಿ ಹೋಗುತ್ತಿತ್ತು. ಹೀಗೇ ಒಂದು ವಾರ ಕಳೆಯಿತು. ಅಷ್ಟರಲ್ಲಿ ಕಾಡುತ್ತಿದ್ದ ಸಿಗರೇಟನ್ನು ಬಿಡೋಕೆ ಆತ ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ.ದಿನಾ  ಒಂದು ಹಾಳೆಯ ಮಧ್ಯ ಗೆರೆಯೆಳೆದು ಸಿಗರೇಟನ್ನು ಬಿಡಲು ಕಾರಣಗಳು, ಬಿಡಲಾಗದ ಕಾರಣಗಳನ್ನು ಬರೆಯಲಾರಂಬಿಸಿದ. ಮೊದಲ ದಿನ ಬಿಡಲಾಗದ ಕಾರಣಗಳೇ ಜಾಸ್ತಿಯಿದ್ದವು. ಅವುಗಳಲ್ಲಕ್ಕೆ ಸಿಗರೇಟೊಂದೇ ಪರಿಹಾರವಲ್ಲವೆಂದು ಅವುಗಳ ಮೂಲವನ್ನು ಹುಡುಕುಡುಕಿ ದಿನೇ ದಿನೇ  ಬಿಡಲಾಗದ ಕಾರಣಗಳು ಕಡಿಮೆಯಾಗಲಾರಂಬಿಸಿದವು.ಮನೆಯಲ್ಲಿದ್ದ ಜಾಗಿಂಗ್ ಶೂಗಳು, ಧೂಳು ಹೊಡೆದ ಯೋಗ ಮ್ಯಾಟುಗಳೆಲ್ಲಾ ಹೊರಬಂದಿದ್ದವು.ಮರೆತೇ ಹೋಗುವಂತಿದ್ದ ಪ್ರಾಣಾಯಾಮದ ಅನುಲೋಮ, ವಿಲೋಮ, ಸೂರ್ಯ , ಚಂದ್ರ ಪ್ರಾಣಾಯಾಮಗಳು, ಮುದ್ರೆಗಳು, ಯೋಗದ ಕುಕ್ಕುಟಾಸನ, ಪದ್ಮಾಸನ , ಬಕಾಸನ, ವೃಕ್ಷಾಸನಗಳೂ ನೆನಪಾಗಿದ್ದವು. ಸೂರ್ಯೋದಯ, ಸೂರ್ಯಾಸ್ತಗಳ ಸೌಂದರ್ಯವನ್ನು, ರಾತ್ರಿಯ ನಕ್ಷತ್ರಗಳ ಕಾಂತಿಯನ್ನು ಮತ್ತೆ ಅನುಭವಿಸಲು ಶುರುಮಾಡಿದ್ದ. . ಈತನ ಮನದಲ್ಲಿ ಮರೆಯಾಗಿದ್ದ ನಗು ಮತ್ತೆ ಮಾಡತೊಡಗಿ ಹಣೆಯಲ್ಲಿ ಮೂಡುತ್ತಿದ್ದ ಗೆರೆಗಳು, ರಾತ್ರೆ ಬರದೇ ಕಾಡುತ್ತಿದ್ದ ನಿದ್ರೆ, ಕಣ್ಣ ಕೆಳಗೆ ಮೂಡುತ್ತಿದ್ದ ಕಪ್ಪು ಚಂದ್ರ ನಿಧಾನವಾಗಿ ಗುಣವಾಗತೊಡಗಿದವು. ಎಲ್ಲಾ ಸಮಸ್ಯೆಗಳಿಗೂ ಸಿಗರೇಟೊಂದೇ ಪರಿಹಾರವಲ್ಲ. ಎಲ್ಲಕ್ಕೂ ಅವವೇ ಉತ್ತರಗಳಿರುತ್ತೆ. ಹುಡುಕಬೇಕಷ್ಟೆ. ನಮ್ಮ ಪ್ರಯತ್ನವನ್ನು ಉತ್ತರದ ಹುಡುಕಾಟದಲ್ಲಿ ಹಾಕೋಣ.ಚಿಂತೆಯಲ್ಲಿ ನಮ್ಮನ್ನೇ ಸುಟ್ಟುಕೊಳ್ಳೋದ್ರ ಮೇಲಲ್ಲ ಅನ್ನೋ ಭಾವ ಗಟ್ಟಿಯಾಯಿತು. ಹುಟ್ಟಿದ ದಿನದಂದು ಮೂಡಿದ ಭಾವ ಸಾವಿನತ್ತ ಸಾಗೋವಂತಿದ್ದ ಈತನನ್ನು ತಡೆದಿತ್ತು. ಏನಾದ್ರಾಗಲಿ ಸಿಗರೇಟು ಬಿಟ್ಟೇ ಸಿದ್ದ ಎನ್ನುವ ಇವನ ನಿರ್ಣಯ ಇವನ ಕೈಹಿಡಿದಿತ್ತು.

Tuesday, December 10, 2013

ನಗು

ಮೆಚ್ಚುನಗು, ಪೆಚ್ಚುನಗು, ಕೆಚ್ಚು ನಗು, ಹುಚ್ಚು ನಗು,ಮನ ಬಿಚ್ಚಿ ನಗು.. ಅಬ್ಬಬ್ಬಾ ಅದೆಷ್ಟೊಂದು ಪರಿ ನಗು ? ಆನಂದ, ಅತ್ಯಾನಂದ, ಮಹದಾನಂದ, ಅದ್ಭುತಾನಂದ ಹೀಗೆ ಹಲ ಪರಿಯ ಖುಷಿಯಾದಾಗಲೆಲ್ಲಾ ತುಂಟಿಯಂಚಿನಲ್ಲಿ ಮೂಡಿ, ಕಣ್ಣಂಚಲ್ಲಿ ಮಿನುಗುತ್ತಲ್ಲ.. ಅದೇ ನಗು. ಏನಪ್ಪಾ ಇದು ಈ ಪರಿ ಪೀಠಿಕೆ ಅಂದ್ರಾ ? ಹೆ.ಹೆ ಇವತ್ತು ಬರೆಯೋಕೆ ಹೊರಟಿರೋ ಲೇಖನ ಅದೇ ಕಣ್ರಿ. ನಗು. ಅಂದಂಗೆ ಇಲ್ಲಿರೋ ಪಾತ್ರ, ವ್ಯಕ್ತಿ, ಸನ್ನಿವೇಷಗಳನ್ನೆಲ್ಲಾ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ತಗೋಬೇಡಿ. ಸುಮ್ನೇ ಓದಿ, ನಕ್ಕು ಬಿಡಿ.

ನಗು ಬಾರದ ಕಾಮಿಡಿಗಳಿಗೆಲ್ಲಾ ಬಿದ್ದು ಬಿದ್ದು ನಗಬೇಕಾದ ಅನಿವಾರ್ಯತೆಯ ನಟ ಭಯಂಕರರನ್ನೂ, ನಟಿಮಣಿಯರನ್ನೂ ನೋಡಿಯೇ ನಗು ಬತ್ತಿ ಹೋಗುತ್ತಿರೋ ಸಂದರ್ಭದಲ್ಲಿ, ಕಾಮಿಡಿ ಟೈಂ ಅಂತ ಮಾಡಿ ನಗಿಸೋಕೆ ಪ್ರಯತ್ನ ಪಟ್ಟೂ ಪಟ್ಟೂ ಸುಸ್ತಾಗಿ ಕೊನೆಗೆ ಹಳೆಯ ಚಿತ್ರದ ತುಣುಕುಗಳ್ನೇ ನಗೆಯ ಸರಕುಗಳಾಗಿ ಉಪಯೋಗಿಸಬೇಕಾದ ಅನಿವಾರ್ಯತೆಯಲ್ಲಿ, ಎದುರಿಗೆ ನಗೆಯ ಮುಖವಾಡ ತೊಟ್ಟಿದ್ರೂ ಒಳಗಡೆ ಏನು ಬತ್ತಿ ಇಡ್ತಿದಾನೋ ಅಂತ ಇವ್ನೂ, ಎಷ್ಟು ಬೇಗ ನನಗಿಂತ ಚೆನ್ನಾಗಿ ಬೆಳೆದು ಬಿಟ್ನಲ್ಲ, ಇವ್ನ ಹೆಂಗೆ ಹಣಿಯೋದು ಅನ್ನೋ ಆಲೋಚನೆಯ ಮಧ್ಯೆಯೂ ಹಿ.ಹಿ.ಹಿ ಅಂತ ಹಲ್ಕಿರಿಯೋ ಅವನು..ಹೀಗೆ ನೂರೆಂಟು ಮುಖವಾಡಗಳ ನೋಡಿ ನೋಡಿ ಮಗುವಿನ ಮುಗ್ದ ನಗುವಿನಂತ ಶುದ್ದ ನಗು ಇನ್ನೂ ಉಳಿದಿದ್ಯಾ ಎಲ್ಲಾದ್ರೂ ಅನಿಸಿಬಿಡತ್ತೆ. ಪರರ ಹಾಸ್ಯ, ಅಪಹಾಸ್ಯ, ಕುಚೇಷ್ಟೆ ಮಾಡೋದ್ರಲ್ಲೇ ಕೆಲವರು ಅಪರಿಮಿತ ನಗುವನ್ನು ಕಂಡರೆ, ತಮ್ಮ ರೂಪ, ಆಕಾರ, ಮರೆವುಗಳನ್ನೇ ಹಾಸ್ಯದ ಅಕ್ಷಯ ಪಾತ್ರೆಯಾಗಿಸೋದು ಇನ್ನು ಕೆಲವರ ದೊಡ್ಡಗುಣ.

ನಗುನಗುತಾ ನಲಿ, ನಲಿ ಏನೇ ಆಗಲಿ ಅಂತ ಅಣ್ಣಾವ್ರು ಹಾಡಿದ್ರೆ , ನಮ್ಮ ಗಣೇಶ ನಗೂ ನಗು ನಗೂ ನಗು ನಗೂ ನಗೂ ನಗು.. ಅಂತ್ಲೇ ಅರಮನೆಯಲ್ಲಿ ಜೋಕರಾಗಿ ನಗಿಸೋಕೆ ಬರ್ತಾರೆ.
ನಗುವ ಗುಲಾಬಿ ಹೂವೆ ಅಂತ ಅಂಬರೀಷ್ ನಗುನಗುತ್ತಲೇ ವಿಷಾದದ ಭಾವಕ್ಕೆ ತಳ್ಳಿದ್ರೆ, ವಿಷ್ಣು ಭಾಯ್ ಆಪ್ತರಕ್ಷಕನ ರಾಜನ ನಗು, ಗೆಳೆಯನ ಹಾಸ್ಯದಲ್ಲಿ ಮಿಂಚುತ್ತಾರೆ.
ಉಮೇಶ್, ಜಹಾಂಗೀರ್, ಸಿಹಿಕಹಿ ತಮ್ಮನ್ನೇ ಹಾಸ್ಯ ಮಾಡ್ಕೊಂಡ್ರೆ, ಬೀಚಿ, ಪ್ರಾಣೇಶ್, ರಮೇಶ್ರಂತರ್ವು ಚುಚ್ಚದ್ರಲ್ಲೇ ನಗು ತರಿಸ್ತಾರೆ. ತುಟಿ ಬಿಚ್ಚದಿದ್ದರೂ, ಮಾತೊಡೆಯದಿದ್ದರೂ ಕಣ್ಣುಗಳಲ್ಲೇ ನಗು ಬೀರೋದು ಒಂದು ಪರಿಯಾದ್ರೆ ನಾಚೊ ನಗು, ಆತ್ಮವಿಶ್ವಾಸದ ನಗು, ಜಗದಲ್ಲಿ ನನ್ನ ಬಿಟ್ಟರಿಲ್ಲವೆಂಬ ಹಮ್ಮಿನ ನಗು, ಅಸಹನೆಯ ನಗು.. ಹೀಗೆ ಹನುಮನ ಬಾಲದಂತಹ ಪಟ್ಟಿ ನಗುವಿನ ಪರಿಯದು.

ನಗೋದ್ರಿಂದ ಏನೇನು ಪ್ರಯೋಜನ ಅಂತೊಂದು ಲೇಖನ ಓದ್ತಾ ಇದ್ದೆ. ಅದನ್ನ ಓದಿದ್ರೆ ನಿಮಗೂ ನಗು ಬರ್ಬೋದು ಅನಿಸ್ತು. ಅದರಲ್ಲಿದ್ದ ಅಂಶಗಳ್ನ ಹಾಕ್ತಿದೀನಿ ನೋಡಿ.
೧)ನಗೋದ್ರಿಂದ ದೇಹಕ್ಕೆ ಭಾರೀ ಅನುಕೂಲ: ಹೌದಂತೆ. ಸಿಟ್ಟು ಮಾಡ್ಕೊಂಡಾಗ ೪೩ ಸ್ನಾಯುಗಳ್ನ ಉಪಯೋಗಿಸಿದ್ರೆ ನಕ್ಕಾಗ ಬರೀ ೧೭ ಸ್ನಾಯುಗಳ್ನ ಮಾತ್ರ ಉಪಯೋಗಿಸ್ತೀವಿ. ಈ ತರ ದೇಹಕ್ಕೆ ಕಮ್ಮಿ ಶ್ರಮ ಕೊಟ್ರೂ ಮನಸ್ಸಿಗೆ ಖುಷಿಯಾಗುತ್ತೆ. ಪಕ್ಕದ ಪರಿಸರದಲ್ಲಿರೋರಿಗೂ ಒಳ್ಳೇದು. ಹೌದಪ್ಪಾ ಹೌದು. ಬೇಜಾರಾಯ್ತು ಅಂತ ಪಕ್ಕದಲ್ಲಿರೋರ ಮೇಲೆಲ್ಲಾ ಹರಿಹಾಯ್ತಾ, ಬೈಯ್ತಾ ಹೋದ್ರೆ ನಮ್ಮ ಬೇಜಾರು, ಸಿಟ್ಟು ಪರಿಹಾರ ಆಗ್ಬೋದು(??) ತಕ್ಷಣಕ್ಕಾದ್ರೂ . ಆದ್ರೆ ಪಕ್ಕದ ಪರಿಸರ ಕೆಟ್ಟು ಅವರೂ ತಿರುಗಾ ನಮ್ಮ ಮೇಲೆ ಹರಿಹಾಯ್ತಾರೆ. ಬಯ್ಯೋದು, ಹೊಡೆಯೋದು.. ಎಲ್ಲಾ ದೇಹಕ್ಕೆ ಅಷ್ಟು ಒಳ್ಳೇದಲ್ಲ ಅಲ್ವಾ ? (ಕಿಸೆಗೂ). ಮತ್ತೆ ಈ ಸಿಟ್ಟು ಮಾಡ್ಕೊಳ್ಳೋದ್ರಲ್ಲಿ ಬಳಕೆ ಆಗೋ ಸ್ನಾಯುಗಳು ಯಾವ ತರಹದ ಸಿಟ್ಟು ಅಂತೆಲ್ಲ ಅಲ್ಲಿ ಹಾಕಿಲ್ಲ ಮತ್ತೆ. ಸಿಟ್ಟು ಮಾಡ್ಕೊಂಡು ಅಟ್ಟಿಸ್ಕೊಂಡು ಹೋಗೋದು, ಹೊಟ್ಟೆ ಹಿಡಿದುಕೊಂಡು ಉರುಳಾಡಿಕೊಂಡು ನಗೋದು ಎಲ್ಲಾ ಎಷ್ಟು ಸ್ನಾಯುಗಳ್ನ ಬಳಸತ್ತೆ ಅಂತಲೂ ಹೇಳಿಲ್ಲ ಮತ್ತೆ. ಹೆ ಹೆ.

೨)ನಗೋದು ಮನುಷ್ಯನಿಗೆ ಮಾತ್ರ ಸಾಧ್ಯವಾಗೋವಂತ ಒಂದು ವರ(?): ಯಾಕೋ ಇದ್ನ ಓದೇ ನಗು ಬಂತು ನನಗೆ. ಅಲ್ಲಾ ಸ್ವಾಮಿ ಹಲ್ಲು ಕಿರೀಯೋ ಕೋತಿಗಳ್ನ, ಚಿಂಪಾಂಜಿಗಳ್ನ ನೋಡೇ ಇಲ್ವಾ ? ಮನುಷ್ಯನಂತೆ ನಗಬಲ್ಲ ಮತ್ತೊಂದು ಪ್ರಾಣಿ "ಹೈನಾ" ಅಂತ ಜೀವಶಾಸ್ತ್ರದಲ್ಲಿ ಓದಿದ್ದು ಮರ್ತೇ ಹೋಯ್ತ ಇವನಿಗೆ ಅನುಸ್ತು . ಅವಗಳ ಭಾವ ಅರ್ಥ ಆಗಲ್ಲ ಅಂದ ಮಾತ್ರಕ್ಕೆ ಅವು ಸುಮ್ನೆ ಹಲ್ಲು ಕಿರಿಯತ್ತೆ, ನಾವು ಮಾತ್ರ ಸಾಚಾ ನಗು ಬೀರೋದು ಅನ್ನಬೋದಾ ? ಹೆ ಹೆ. ಒಳ್ಳೆ ಕತೆ ಆಯ್ತು ಇದು.

೩)ಮಹಿಳೆಯರು ಜಾಸ್ತಿ ನಗುತ್ತಾರೆ : ಹಿ ಹಿ. ಇದು ನಿಜ ಇಅರಬಹುದೇನೋ. ಮಾತಾಡೋದೂ ಅವ್ರೇ ಜಾಸ್ತಿ. ಆಪಾದನೆ ಅಂತಲ್ಲ ಮೇಡಂಗಳೇ, ನೋಡಿದ್ದು, ಕೇಳಿದ್ದು ಅಷ್ಟೇ. ಕಂಪ್ಲೇಂಟಲ್ಲ, ಕಾಂಪ್ಲಿಮೆಂಟು ಅಂತ್ಲೇ ಇಟ್ಕೊಳಿ.  ಮಾತಿನ ಮಧ್ಯೆ ಮನೆಯ, ಆಫೀಸಿನ, ಮಕ್ಕಳ ಸುದ್ದಿ, ತರಲೆ ನೆನಪಿಸಿಕೊಂಡು ನಗೋದು ಕಾಮನ್ನೇ. ಇದ್ರ ಬಗ್ಗೆನೂ ಸಂಶೋಧನೆ ಮಾಡಿದ ಯೇಲ್ ಅನ್ನೋ ವಿಶ್ವವಿದ್ಯಾಲಯದವರು(ಅದು ಎಲ್ ಬಂತು ಅಂದ್ರಾ ? ನಂಗೂ ಗೊತ್ತಿಲ್ಲ ಬಾಸ್ . ಹಿ.ಹಿ.) ಮಹಿಳೆಯರು ದಿನಕ್ಕೆ ೬೨ ಬಾರಿ ನಗ್ತಾರೆ. ಗಂಡಸರು ಬರೀ ೮ ಬಾರಿ ನಗ್ತಾರೆ ಅಂತಂದಿದಾರೆ. ಗಂಡಸರ ನಗು, ಅಳು ಎಲ್ಲಾ , ಬಾರಿನಲ್ಲೆ. ಅಲ್ಲಿಗೆ ಈ ಸಂಶೋಧಕರು ಹೋಗಿರಲಿಕ್ಕಿಲ್ಲ ಅದಕ್ಕೇ ಹೀಗೆ ಅಂತ ಈ ಸಂಶೋಧನೆ ಸುದ್ದಿ ಕೇಳಿದ ನಮ್ಮ ಪೋಲಿಬಾರಿನ ಕುಮಾರ್ ಕುಹಕ ನಗು ಬೀರ್ತಾ ಇದ್ರು. ಮಗುವಿನ ಮುಗ್ದ ನಗು ಅಂದ ತಕ್ಷಣ ನೆನಪಾಯ್ತು. ಮಗು ಹುಟ್ಟಿದ ತಕ್ಷಣ ಅಳೋದಕ್ಕೆ ಶುರು ಮಾಡುತ್ತೆ ಅನ್ನೋದು ಎಲ್ರಿಗೂ ಗೊತ್ತಿದ್ರೂ ಮಗು ಹುಟ್ಟಿದ ಎರಡು ಘಂಟೆಗಳಲ್ಲೇ ಮೊದಲ ನಗು ಬೀರುತ್ತೆ ಅನ್ನೋದು ಗಮನಕ್ಕೆ ಬರದೆ ಹೋಗುತ್ತೆ.

೪)ಬೇರೆ ಬೇರೆ ತರದ ನಗುಗಳಿವೆ. ಇದು ಮಾತ್ರ ೧೦೦% ಹೌದ್ರಿ ಸರ. ಹೆಹೆ, ಹಹ, ಹಾಹಾಹಾ ಅಂತ ತರಹೇವಾರಿ ನಗೋರನ್ನು, ಸೂರೇ ಕಿತ್ತು ಹೋಗೋ ಪರಿ ನಗೋರನ್ನು, ಹಕ್ ಹಕ್ ಅಂತ ಬಿಕ್ಕಳಿಕೆ ಬಂದ ಹಾಗೆ ನಗೋರನ್ನ. ನಕ್ರೆ ಮಾನಗೇಡು ಅಂತ್ಲೋ , ನಗುವುದು ಸಭ್ಯತೆ ಅಲ್ಲ ಅಂತ್ಲೋ ನಗುವನ್ನು ತಗೆಹಿಡಿಯಕ್ಕೆ ಪ್ರಯತ್ನ ಪಟ್ರೂ ಅದು ನಿಯಂತ್ರಣಕ್ಕೆ ಸಿಗದೇ ನಗೋರನ್ನೂ, ಏನೋ ಕಿತಾಪತಿ ಮಾಡಿದ ಖುಷಿಯಲ್ಲಿ ಮೀಸೆಯಂಚಲ್ಲಿ, ಹುಳ್ಳ ಹುಳ್ಳಗೆ, ಮುಖಕ್ಕೆ ಕೈಯೋ, ಕರ್ಚೀಪೋ ಅಡ್ಡ ಇಟ್ಟುಕೊಂಡು ನಗೋದನ್ನೂ ನೋಡಿರ್ತೀವಿ. ನಗುವಲ್ಲಿ ಎಷ್ಟು ತರ ಇದೆ ಅಂತ ಸುಮ್ನೆ ಗೂಗಲ್ಲಲ್ಲಿ ಕೊಟ್ಟೆ. ಒಂದು ಸೈಟು ೨೩ ಅಂದ್ರೆ ಮತ್ತೊಂದು ೧೯ ಅಂತು. ಮತ್ತೊಂದ್ರ ಪ್ರಕಾರ ಬರೀ ಎಂಟಂತೆ. ಮತ್ತೊಂದು ಹೇಗೆ ನಗೋದು ಅಂತ ಹೇಳ್ಕೊಡ್ತೀನಿ ಬಾ ಅಂತಿತ್ತು.. ಯಪ್ಪಾ ಶಿವನೆ , ಎಂತಾ ಕಾಲ ಬಂತು ಅಂತ ನಗು ಬಂತು. ನಗು ಕ್ಲಬ್ಬು ಅಂತ ಮಾಡ್ಕೊಂಡು ಬೆಳಬೆಳಗ್ಗೆ ಎಲ್ಲಾ ಸೇರಿ ಬಿದ್ದು ಬಿದ್ದು ನಗೋದು ಈ ಪೇಟೆಗಳಲ್ಲಿ ಹೊಸ ಆರೋಗ್ಯವರ್ಧಕ ವಿಧಾನ. ಮನೆಯವರ ಜೊತೆ ನಗುನಗುತ್ತಾ ನಾಲ್ಕು ಒಳ್ಳೆ ಮಾತಾಡಿದ್ರೆ ಆಗಲ್ವಾ ಗುರು ? ಫೇಸ್ಬುಕ್ಕಲ್ಲಿ, ಅಲ್ಲಿ ಇಲ್ಲಿ ಹೀಗೆ ಬೀದಿಯವ್ರಿಗೆ ಮಾತ್ರ ಇವ್ರ ಈ ನಗು. ಮನೆಗೆ ಹೋದ ತಕ್ಷಣ ಉಗ್ರನಾರಾಯಣರು ಅಂತ ಕೆಲವರ ಹಿಂದೆ ಬಿಟ್ಟು ನಗ್ತಿದ್ದ ಗುಂಡ.  ನಿನ್ನಿಂದ ಆಗಲ್ಲ ಬಿಡು, ಹಿ ಹಿ. ನೀನು ಹೀಗೆ  ಬಂದೇ ಬರ್ತೀಯ  ಅಂತ ಗೊತ್ತಿತ್ತು. ಬಂದ್ಯಾ, ಬಾ ಬಾ ಅನ್ನೋ ಆತ್ಮವಿಜೃಂಭಣೆಯ ನಗು.. ಓಹೋ, ಉಗ್ರ ಪ್ರತಾಪಿ ಎಂಬ ಅಣ್ಣಾವರ ಬಭ್ರುವಾಹನನ ಹೀಯಾಳಿಕೆ ನಗು, ನಗುವೆಂದರೆ ನರಸಿಂಹರಾಜ್ ಅನ್ನುವಂತಿದ್ದ ಹೊಟ್ಟೆ ಹುಣ್ಣಾಗಿಸುವಂತಹ ನಗು, ಧೀರೇಂದ್ರ ಗೋಪಾಲ್, ಹೊನ್ನವಳ್ಳಿ ಕೃಷ್ಣರಿಂದ ಶುರುವಾಗಿ ಕಾಶೀನಾಥ್,ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಜಗ್ಗೇಶ್,ಕೋಮಲ್, ಬುಲೆಟ್ ಪ್ರಕಾಶ್, ಚರಣ್ , ಮಾಸ್ಟರ್ ಆನಂದ್, ಪಾಪ ಪಾಂಡು ವರೆಗೆ ಮುಂದುವರೆದು ಬಂದಿರೋ ಚಿತ್ರ ವಿಚಿತ್ರ ಪರಿಯ ನಗು. ಕನ್ನಡವೊಂದೇ ಅಲ್ಲದೇ ಹಿಂದಿಯ ಜಾನಿ ಲಿವರ್, ತೆಲುಗಿನ ಬ್ರಹ್ಮಾನಂದಂ ತನಕ ಚಿತ್ರವೆಂದರೆ ನಗು,ನಗಿಸೋರು ಇದ್ದೇ ಇರಬೇಕೆಂಬ ಅಘೋಷಿತ ನಿಯಮ ಬಂದಿದೆ ಅಂದ್ರೆ ಲೆಕ್ಕ ಹಾಕಿ . ನಗುವೊಂದು ಹಿಟ್ ಮಂತ್ರವೇ ಆಗಿ ಹೀರೋವೂ ರೊಚ್ಚಿಗೆ ಬಿದ್ದವನಂತೆ ನಗಿಸಲು ಅವಸ್ಥೆ ಪಡೋದ್ನ ನೋಡಿದ್ರೆ ನಗ್ಬೇಕೋ ಅಳ್ಬೇಕೋ ಗೊತ್ತಾಗಲ್ಲ.

೫)ನಗುವೇ ಸೌಂದರ್ಯ: ನಿಜವಾಗ್ಲೂ ಕಣ್ರಿ. ಐಶ್ವರ್ಯ ರೈ ನೋಡಿ. ಸೌಂದರ್ಯ ಅವರನ್ನೇ ನೋಡಿ. ನಕ್ಕಾಗ ಅವ್ರು ಏನ್ ಚಂದ. ದೇವಾನುದೇವತೆಗಳ ಫೋಟೋನೇ ನೋದ್ರಿ, ಅಭಯ ಹಸ್ತ ಇದೆ ಅಂದ್ರೆ ಅವ್ರು ನಗ್ತಿರ್ತಾರೆ. ಅಂದಂಗೆ ಫೋಟೋ ಹೊಡೆಯುವಾಗ್ಲೂ ಇಸ್ಮಾಯಿಲ್ ಅಂತ್ಲೇ ಹೇಳೋದು. ನಗ್ತಿದ್ದಾಗ್ಲೇ ಯಾಕೆ ಫೋಟೋ ತೆಗಿಬೇಕು ಅಂತ್ಲೂ ಕೆಲವರು ಅಂದ್ಕೊಂಡಿರಬಹುದು. ಈ ನಗು ಅನ್ನೋದು ಒಂತರಾ ಸಾಂಕ್ರಾಮಿಕ ಕಣ್ರಿ. ಯಾರಾದ್ರೂ ನಗೋದ್ನ ನೋಡಿದ್ರೆ ನಾವು ಪರರ ನಗುವಿನ ಕಾರಣ ತಿಳಿದಿದ್ರೂ ನಗೋಕೆ ಶುರು ಮಾಡ್ತೀವಿ. ಪಕ್ಕದಲ್ಲಿದ್ದವ ಬಿದ್ದು ಬಿದ್ದು ನಗ್ತಾ ಇದ್ರೆ, ನಮ್ಮ ತುಟಿಯಂಚಲ್ಲಾದ್ರೂ ನಗು ಮೂಡೇ ಮೂಡತ್ತೆ. ಈ ನಗೂನೆ ಮುಂದಿನ ಕಾಲಕ್ಕೆ ಸೆರೆಹಿಡಿದು ಭದ್ರಪಡಿಸೋಕೆ, ಫೋಟೋ ನೋಡಿದಾಗಲೆಲ್ಲಾ ಈ ನಗುವಿನ ಸವಿ ಮತ್ತೆ ಮತ್ತೆ ಮೂಡ್ತಾ ಇರ್ಲಿ ಅಂತ್ಲೇ ನಗಿರಪ್ಪಾ ಸ್ವಲ್ಪಾಂತ ಹೇಳ್ಬೋದೇನೋ.

೬) ನಗುವಿನಿಂದ ಆರೋಗ್ಯ ವರ್ಧಿಸುತ್ತೆ: ಇದು ಇಲಿನಾಯ್ಸ್ ವಿಶ್ವವಿದ್ಯಾಲಯದ (ಇಲ್ಲಿ noice ಅಲ್ಲ ಮತ್ತೆ. ಹೆ ಹೆ) ಸಂಶೋಧನೆ.  ನಗ್ತಾ ನಗ್ತಾ ಇದ್ರೆ, ಆ ನಗುವಲ್ಲೇ ನೋವುಗಳು ಕರಗಿ ಹೋಗಿ, ಚಿಂತೆಗಳು , ದುಗುಡಗಳು ಕರಗಿಹೋಗಿ ಮನಸ್ಸು ಶಾಂತವಾಗುತ್ತೆ. ಜಾಸ್ತಿ ನಗ್ತಾ ಇರೋರ ನಗು ಹಿಂದೆ ಎಷ್ಟೋ ಆಳದ ನೋವುಗಳಿರುತ್ತೆ . ಆದ್ರೆ ಅದ್ನ ತೋರಿಸಿಕೊಳ್ದೇ ಅವ್ರು ಎಲ್ಲರಂತೆಯೇ ಇರ್ತಾರೆ ಅಂತಾನೊಬ್ಬ ವೇದಾಂತಿ. ಈ ವೇದಾಂತವೇ ಅತಿಯಾಗಿ  ವಾಂತಿಯಾಗೋ ಮೊದ್ಲು ಮುಂದಿನದ್ರ ಬಗ್ಗೆ ನೋಡೋಣ.

೭)ಸುಖೀ ಕುಟುಂಬಗಳೆಲ್ಲಾ ನಗುವಿನ ಮೇಲೇ ನಿಂತಿದೆ: ನಂಗೆ ಮದ್ವೆ ಆಗದೇ ಕುಟುಂಬದ ಬಗ್ಗೆ ಮಾತಾಡೋ ಹಾಗಿಲ್ಲದಿದ್ರೂ (ಹಿ ಹಿ) ಅಪ್ಪ, ಅಮ್ಮ , ಅಣ್ಣ, ತಂಗಿ, ನೆಂಟರು .. ಅಂತೆಲ್ಲಾ ಲೆಕ್ಕಕ್ಕೆ ತಗೊಂಡು ಕುಟುಂಬ ಅನ್ನೋ ದೊಡ್ಡ ಲೆಕ್ಕದಲ್ಲಿ ಈ ಬಗ್ಗೆ ಹೇಳ್ಬೋದೇನೋ. ಮನೆಗೆ ಬಂದ ಅಪ್ಪ, ಅಮ್ಮ ದಿನಾ ಮುಖ ಗಂಟು ಹಾಕಿಕೊಂಡ್ರೆ ಬಯ್ತಾ ಇದ್ರೆ ಮಕ್ಕಳಲ್ಲಿ ಅಪ್ಪ ಬಯ್ತಾ, ಅಪ್ಪ ಭೂತ ಅನ್ನೋ ಭಯಾನಕ ಭಾವಗಳು ಮೂಡಬಹುದು !! ನಗುನಗುತ್ತಾ ಗೆಳೆಯರಂತಿರೋ ಅಪ್ಪ ಅಮ್ಮ ಯಾರಿಗೆ ತಾನೇ ಇಷ್ಟ ಆಗಲ್ಲ. ನಗು ತುಂಬಿ ತುಳುಕ್ತಿರೋ ಮನೆ ಸಹಜವಾಗೇ ಸುಖಿಯಾಗಿರತ್ತೆ.

೮)ನಗುವಿನಿಂದ ಸೀತ ದೂರ ಓಡುತ್ತೆ !!. ಇದೊಂತರ ಭಯಂಕರ ನಗು ತರುಸ್ತಾ ಇದೆ. ನಗ್ತಾ ನಗ್ತಾ ಇದ್ರೆ, ಮೂಗಿಗೆ ಸೋರೋದು ಮರ್ತು ಹೋಗಿ ಶೀತ ವಾಸಿಯಾಗುತ್ತೆ ಅಂದ್ರಾ ? ಹೆ ಹೆ. ಹಂಗಲ್ಲ. ನಗೋದೇನು ಬೇಡಂತೆ. ಸುಮ್ನೆ ಮುಖ ಮೇಲೆತ್ತಿ ಹಲ್ಲು ಎಷ್ಟು ಬೆಳ್ಳಗಿದೆ ಅಂತ ತೋರಿದ್ರೆ ಸಾಕಂತೆ ಎಂಡೋಫ್ರಿನ್ ಎಂಬ ಹಾರ್ಮೋನ್ಗಳು ಬಿಡುಗಡೆ ಆಗತ್ತಂತೆ. ಎಂಡೋರ್ಫಿನ್ ಅಂದ್ರೆ ಅದು ಸಂತೋಷದ ಅನುಭವ ಕೊಡೋ ಹಾರ್ಮೋನು. ಅದೇ ತರಹ ಟೆನ್ಸನ್ನು ಕಡಿಮೆ ಮಾಡೊ ಸೆರೋಟಿನಿನ್ ಅನ್ನೋ ಹಾರ್ಮೋನ್ ಕೂಡ ಬಿಡುಗಡೆ ಆಗತ್ತಂತೆ !ನಗ್ತಾ ನಗ್ತಾ ಇದ್ರೆ ಚಿಂತೆ ಕಮ್ಮಿ ಆಗತ್ತೆ ಅನ್ನೋದು ಸುಮ್ನೆ ಅಲ್ಲ ಸ್ವಾಮಿ. ಇನ್ನು ಶೀತದ ವಿಷ್ಯ. ಪ್ರತಿ ಸಲ ಹಲ್ಲು ಕಿರಿಯೋದ್ರಿಂದ ಬಿಳಿ ರಕ್ತಕಣಗಳು ಉತ್ಪಾದನೆ ಆಗತ್ತಂತೆ ಇದರಿಂದ ಶೀತ ದೂರ ಓಡತ್ತಂತೆ !. ಇದು ಎಷ್ಟರ ಮಟ್ಟಿಗೆ ಕಾಗೆ ಅಂತ ಆ ಸಂಶೋಧಕರಾಣೆ ಗೊತ್ತಿಲ್ಲ ಗುರು. ಹಿ ಹಿ.  ಬಿಳಿ ಹಲ್ಲು ತೋರಿಸಿದ ತಕ್ಷಣ ಬಿಳಿ ರಕ್ತಕಣಗಳು ಉತ್ಪಾದನೆ ಆಗದಿದ್ರೆ ದ್ವಾರಪಾಲಕರು ರಕ್ತ ಕಣದ ಫ್ಯಾಕ್ಟರೀನೇ ಇಡ್ಬೋದಲ್ವಾ ಅನ್ನೋ ಖತರ್ ನಾಕ್ ಐಡಿಯಾ ಮಾಡಿದ್ರಾ ? ಟ್ರೈ ಮಾಡೋದ್ರಲ್ಲಿ ತಪ್ಪೇನಿಲ್ಲ ಅನಿಸುತ್ತೆ. ಹೆ ಹೆ. ಅಂತೂ ನಗುವಿನ ಅಷ್ಟಲಾಭಗಳನ್ನ ಓದೋ ಹೊತ್ತಿಗೆ ಆಕಳಿಸಿ ನಿದ್ರೆ ತೆಗೆದಿರಬಹುದಾದ, ಬೈಕಂಡಿರಬಹುದಾಗ, ಓದೋ ಕರ್ಮ ಬೇಡವೆಂದು ಅಲ್ಲಲ್ಲಿ ಹಾರಿಸಿ ಕೊನೆಯ ಪ್ಯಾರಾಕ್ಕೆ ಬಂದಿರಬಹುದಾದ ಎಲ್ಲರಿಗೂ ಒಮ್ಮೆ ಧ.ವಾ. ಓದ್ತಾ ಓದ್ತಾ ಕೆಲವಾದ್ರೂ ನಿಮಗೆ ನಿಮ್ಮ ಬಾಲ್ಯದ, ಮೋಜಿನ ಪ್ರಸಂಗಗಳ, ನಗುವಿನ ನೆನಪು ತಂದು ನಕ್ಕು ನಗಿಸಿರಬಹುದು. ಕಲ್ಪನೆಗಳ ಏಣಿ ಏರಿಸಿರಬಹುದು. ಹಾಗಾಗಿದ್ದರೆ ನನ್ನ ಶ್ರಮ ಧನ್ಯ. ಮತ್ತೊಮ್ಮೆ ಸಿಗೋಣ..

Monday, December 2, 2013

ಟೆಲಿಪತಿ:

ಪೀಠಿಕೆ:
ನಂಬಿಕೆ-ಮೂಡನಂಬಿಕೆಗಳ ನಡುವಿನ ವಾದ ಪ್ರತಿವಾದಗಳೇನೇ ಇರ್ಲಿ. ವಿಜ್ಞಾನದ ಸೂಕ್ಷ್ಮದರ್ಶಕಗಳ , ಪರೀಕ್ಷಾ ವಿಧಾನಗಳ ಕಣ್ಣಿಗೆ ಕಂಡಿದ್ದು ಮಾತ್ರ ಸತ್ಯ ಅನ್ನೋ ವೈಜ್ಞಾನಿಕರು, ನಮ್ಮಲ್ಲಿನ ವಸ್ತು, ವಿದ್ಯೆ, ಜ್ಞಾನಗಳನ್ನೆಲ್ಲಾ ಅವಲಕ್ಷಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳೋ ಪ್ರಾಚೀನರಿಗೂ ಇಂದಿನ ಮಹಾನ್ ಜ್ಞಾನಿ ಬುದ್ದಿಜೀವಿಗಳಿಗೂ ನಡುವೆ ನಡೀತಿರೋ ಸಂಘರ್ಷಗಳೇನೇ ಇದ್ರೂ ಕೆಲವೊಮ್ಮೆ ಈ ಮನಸ್ಸು ಅನ್ನೋದು ಯಾರ ಊಹೆಗೂ ನಿಲುಕದಂತೆ ವರ್ತಿಸುತ್ತಿರುತ್ತೆ. ನಾವು ಫೋನ್ ಮಾಡ್ಬೇಕು ಅಂತಿದ್ದಾಗಲೇ ಆತ್ಮೀಯರೊಬ್ಬರು ಫೋನ್ ಮಾಡೋದು, ಗೆಳತಿಯ ಹತ್ರ ನಾವೇನೋ ಮಾತಾಡಬೇಕು ಅಂತಿರುವಾಗ ಅವಳೇ ಅದ್ರ ಬಗ್ಗೆ ಮಾತಾಡಿಬಿಡೋದು..ಹೀಗೆ ನಮ್ಮ ಮನಸ್ಸಿನ ಭಾವನೆಗಳು ಬೇರೆಯವರಿಗೆ ದಾಟೋದು, ಅವರ ಭಾವಗಳು ನಮಗೆ ಬಂದು ತಲುಪೋದು ಆಗ್ತಿರುತ್ತೆ ಅಂತ ಅನೇಕರ ಅಭಿಪ್ರಾಯ. ಇವೆಲ್ಲಾ ಕಾಕತಾಳೀಯ ಅಂತ ಎಷ್ಟೇ ನಿರಾಕರಿಸಿದ್ರೂ ಪದೇ ಪದೇ ನಡೆಯೋಕೆ ಶುರು ಆದಾಗ ಅದರ ಬಗ್ಗೆ ಆಲೋಚಿಸೋ ಹಾಗೆ ಮಾಡುತ್ತೆ. ವಿಜ್ಞಾನಿಗಳ ಪ್ರಕಾರ ಅದೊಂದು ಭ್ರಮೆ ಅಥವಾ ಮನಸ್ಸಿನ ಅವಸ್ತೆ ಅಷ್ಟೇ. ಉಳಿದವರ ಮಾತಿನಲ್ಲಿ ಹೇಳೋದಾದ್ರೆ ಅದೇ ಟೆಲಿಪತಿ.

ಮುಂಚೆ ಲ್ಯಾಂಡ್ ಲೈನಿದ್ದಾಗ್ಲೇ ಚೆನ್ನಾಗಿತ್ತಪ್ಪ. ಚಿಕ್ಕಪ್ಪನ ಮನೆಗೋ, ದೊಡ್ಡಪ್ಪನ ಮನೆಗೋ ಫೋನ್ ಮಾಡಿದ್ರೆ ಅಲ್ಲಿದ್ದ ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ ಎಲ್ರತ್ರನೂ ಮಾತಾಡತಿದ್ವಿ. ಅವ್ರೂ ಹಾಗೆ, ನಮ್ಮನೆಯಲ್ಲಿರೋ ಎಲ್ರತ್ರನೂ ಮಾತಾಡೋವರ್ಗೂ ಸಮಾಧಾನ ಆಗ್ತಿರಲಿಲ್ಲ. ಫೋನ್ ಬಿಲ್ಲು ಸಿಕ್ಕಾಪಟ್ಟೆ ಬರತ್ತೆ ಬೇಗ ಮಾತಾಡ್ರೋ ಅಂತ ಅಮ್ಮ ಅಂದ್ರೆ, ಹೇ ಹಾಗೇನಿಲ್ಲ. ಮಾತಾಡ್ಲಿ ಬಿಡು. ನಾವು ಅಲ್ಲಿಗೆ ಹೋಗಿ ಬಂದಷ್ಟೇನು ಖರ್ಚಾಗಲ್ಲ. ಈ ಫೋನಲ್ಲಿ ಮಾತಾಡ್ತಾ ಇದ್ರೆ, ಅಲ್ಲಿಗೆ ಹೋಗಿ ಬಂದಂಗೇ ಆಗತ್ತೆ ಅಂತ ಸಮಾಧಾನ ಮಾಡ್ತಿದ್ರು ಅಪ್ಪ. ಈಗ ಎಲ್ರ ಕೈಗೊಂದು ಮೊಬೈಲು ಬಂದ್ರೂ ಯಾರೂ ಮಾತಿಗೆ ಸಿಗಲ್ಲ. ಎಲ್ಲಿಗಾದ್ರೂ ಫೋನ್ ಮಾಡಿದ್ರೂ ಅವ್ರ ಮಕ್ಕಳೋ, ಮನೆಯವ್ರೋ ಸಿಗಲ್ಲ. ಹೇ ಹೊರಗಿದೀನಿ ಕಣೋ ಅಂತನೋ, ಅವ್ರು ಇನ್ನೇನೋ ಬಿಸಿ ಇದಾರೆ ಕಣೋ ಅಂತಾನೋ ಉತ್ರ ಬರತ್ತೆ. ಮುಂಚೆಯಾದ್ರೂ ಫ್ರೀಯಾದ ಮೆಸ್ಸೇಜುಗಳಾದ್ರೂ ಇರ್ತಿತ್ತು. ಈಗ ಅದಕ್ಕೂ ಕತ್ರಿ ಹಾಕಿದ ಮೇಲೆ ಗೆಳೆಯ ಗೆಳೆಯರ ನಡುವಿನ ಬಂಧನೇ ದೂರಾಗ್ತಿರೋ ಹಾಗೆ ಅನಿಸುತ್ತಿದೆ. ಈ ಫೇಸ್ಬುಕ್ಕು, ವಾಟ್ಸಾಪುಗಳಿದ್ರೂ ಎಲ್ಲಕ್ಕೂ ನೆಟ್ಟು ಬೇಕು.. ಆಗೆಲ್ಲಾ ಅನಿಸೋದು ಒಂದೇ. ನಾವು ಮತ್ತೊಬ್ರ ಮನಸ್ಸಿನ ಜೊತೆ ಸೀದಾ ಮಾತಾಡೋ ಹಾಗಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತಾ... ಹೂಂ. ಈ ತರ ಅನ್ಕೊಂಡಿದ್ದು ನಾವು ನೀವುಗಳಷ್ಟೇ ಅಲ್ಲ. ನಮ್ಮ  X-Men ಸೀರೀಸ್ ಅಲ್ಲಿ ಬರೋ ಪ್ರೊಫೆಸರ್ ಎಕ್ಸ್(ಮಾರ್ವೆಲ್), ಗೀತಾ ಮತ್ತು ಶಕ್ತಿಮಾನ್, ಮಹಾ ಗುರುಗಳ ಮಧ್ಯೆಯ ಟೆಲಿಪತಿಕ್ ಸಂಭಾಷಣೆ, Shiva Tilogyಯ Secret of Nagas ಅಲ್ಲಿ ಎದುರಿಗಿರುವವರ ಮನಸ್ಸಿನಲ್ಲಿರೋದನ್ನ ಅರಿತಿದ್ದ ಭೃಗು ಮಹರ್ಷಿ, ದ್ರೌಪದಿ ಸಭೆಯೊಳಗಿಂದ ಕೃಷ್ಣಾ ಅಂದಿದ್ದನ್ನು ಎಲ್ಲೋ ಇದ್ದ ತನ್ನ ಅಂತಃಪುರದಿಂದ ಕೇಳಿಸಿಕೊಂಡ ಮುರಾರಿ.. ಹೀಗೆ ನಮ್ಮ ಕಥಾ ಹಂದರಗಳಲ್ಲಿ, ಶತ ಶತಮಾನಗಳ ಹಿಂದಿನಿಂದಲೇ ಈ ತರದ ಪ್ರಯತ್ನಗಳೂ, ಇತ್ತೀಚೆಗೆ ಅವುಗಳ ಸತ್ಯಾಸತ್ಯತೆಯನ್ನು ಪ್ರಮಾಣಿಸಲು ಅನೇಕ ಪ್ರಯೋಗಗಳೂ ನಡೆದೇ ಇದೆ.ಬನ್ನಿ ಈ ಮನೋಲೋಕದಲ್ಲೊಂದು ಸುತ್ತು ಹಾಕಿ ಬರೋಣ.

ಈಗಿನ ಹಲವರಿಗೆ ವಿಜ್ಞಾನ ಅಂದರೆ ಪಾಶ್ಚಾತ್ಯ ಜಗತ್ತಿನದು ಮಾತ್ರ. ಉಳಿದದ್ದೆಲ್ಲಾ ಮೂಢನಂಬಿಕೆ. ಹಾಗಾಗಿ ಈ ಟೆಲಿಪತಿಯ ಬಗ್ಗೆ ಅಲ್ಲಿಂದಲೇ ಶುರು ಮಾಡೋಣ. ಟೆಲಿಪತಿ ಅನ್ನೋದು ಟೆಲಿ(ದೂರ), ಪ್ಯಾಥಿಯೋಸ್(ಸಂವೇದನೆ, ಭಾವನೆ, ಅನುಭವ) ಅನ್ನೋ ಎರಡು ಗ್ರೀಕ್ ಪದಗಳ ಸಂಯೋಗದಿಂದ ಉದ್ಭವಿಸಿದ್ದು. ಅಂದಾಗೆ ಈ ಪದವನ್ನು ೧೮೮೨ ರಲ್ಲಿ ಫೆಡರಿಕ್ ಮೈರಿಸ್ ಅನ್ನೋ ಲೇಖಕ ಬಳಸಿದನಂತೆ. ಅದಕ್ಕಿಂತ ಮುಂಚೆ ಇದು ಇರಲಿಲ್ಲವೇ ಅನ್ನೋದು ಮತ್ತೊಂದು ವಾದ. ಅದಕ್ಕೆ ಆಮೇಲೆ ಬರೋಣ. ಇದನ್ನು ಪ್ರಮಾಣಿಕರಿಸಲು ನಡೆದ ವೈಜ್ಞಾನಿಕ(?) ಪ್ರಯೋಗಗಳಲ್ಲಿ ಮೊದಲನೆಯದು  ಅಮೇರಿಕನ್ ಲೇಖಕ ಉಂಪ್ಟನ್ ಸಿಂಕ್ಲೇರ್(umpton sinclair) ನ ಮೆಂಟನ್ ರೇಡಿಯೋ ಎಂಬ ಪುಸ್ತಕದಲ್ಲಿನ ಪ್ರಯೋಗ. ಅದರಲ್ಲಿ ಆತ ತನ್ನ ಎರಡನೇ ಹೆಂಡತಿ  ಮೇರಿಗೆ ತಾನು ಬರೆದಿದ್ದ, ಆದರೆ ಆಕೆಗೆ ತೋರಿಸದಿದ್ದ ೨೨೫ ಚಿತ್ರಗಳನ್ನು ಈ ಟೆಲಿಪತಿಯ ಮೂಲಕ ಪುನಃ ಬಿಡಿಸಲು ಕೊಡುತ್ತಾನೆ. ಅದರಲ್ಲಿ ಆಕೆ ೬೫ನ್ನು ಯಥಾವತ್ ಬಿಡಿಸುತ್ತಾಳೆ. ೧೫೫ ಭಾಗಷಃ ಸರಿ, ೭೦ ರಲ್ಲಿ ಫೇಲ್ ಆಗ್ತಾಳೆ ಅಂತ ಬರೆದುಕೊಳ್ತಾನೆ ಲೇಖಕ. ಆದರೆ ಇದನ್ನು ಯಾವುದೇ ವೈಜ್ಞಾನಿಕ ವಿಧಾನದಲ್ಲಿ ಮಾಡಲಾಗದೇ ಇದ್ದಿದ್ರಿಂದ ಇದನ್ನು ಒಪ್ಪಲಾಗದು ಅಂತ ವಿಜ್ಞಾನಿಗಳು ತಳ್ಳಿ ಹಾಕಿ ಬಿಡ್ತಾರೆ. ನಂತರ ನಡೆದ ಪ್ರಯೋಗ ಅಕ್ಟೋಬರ್ ೧೯೩೭ರಲ್ಲಿ ನಡೆದ ಲೇಖಕ ಹೆರಾಲ್ಡ್ ಶೆರ್ಮಾನ್ ಮತ್ತು ಹ್ಯೂಬರ್ಟ್ ವಿಲ್ಕಿನ್ಸನ ನಡುವಿನದು. ಶೆರ್ಮಾನ್ ನ್ಯೂಯಾರ್ಕಿನಲ್ಲಿದ್ದರೆ, ವಿಲ್ಕಿನ್ಸ್ ಆರ್ಕಟಿಕ್ ಧೃವ ಪ್ರದೇಶದಲ್ಲಿ ಸಂಶೋಧನೆಯಲ್ಲಿ ತೊಡಗಿರುತ್ತಾನೆ. ಪ್ರತಿ ನಿತ್ಯ ಅವರು ತಮಗನಿಸಿದ ಭಾವಗಳನ್ನ ಒಂದು ಡೈರಿಯಲ್ಲಿ ದಾಖಲಿಸುತ್ತಾ, ಅದರ ಒಂದು ಪ್ರತಿಯನ್ನು ಕೊಲಂಬಿಯಾ ಯೂನಿವರ್ಸಿಟಿಯ ಒಬ್ಬ ಸೈಕಾಲಜಿ ಪ್ರೊಫೆಸರ್ ಗಾರ್ಡನರ್ ಮರ್ಫಿಗೆ ಕಳುಹಿಸುತ್ತಾ ಇರುತ್ತಾರೆ. ಐದೂವರೆ ತಿಂಗಳ ನಂತರ ಅವರು ಸಿಕ್ಕಾಗ ನೋಡಿದರೆ ೭೫% ಭಾವಗಳು ಒಂದೇ ಇರುತ್ತದೆ. ಅದರಲ್ಲಿರೋ ಕೆಲವೊಂದು ಒಂದು ದಿನದ  ಟೆಲಿಪತಿಗಳು ಅಥವಾ ಇನ್ನೊಂದು ಗುಂಪಿನವರ ಪ್ರಕಾರ ಕಾಕತಾಳೀಯತೆಗಳು ಹೀಗಿವೆ ನೋಡಿ. ಒಂದೇ ದಿನ ಇಬ್ಬರಿಗೂ ಕೆಟ್ಟ ಹವಾಮಾನದ ಕಾರಣದಿಂದ ಕೆಲಸ ಕೆಟ್ಟಿರುತ್ತೆ, ಯಾರದೋ ಕೈ ಚರ್ಮ ಉಗುರಿನ ಬಳಿ ಕಿತ್ತು ಬಂದಿರೋದು ನೋಡಿರ್ತಾರೆ, ಚೆನ್ನಾಗಿ ಕುಡಿದಿರ್ತಾರೆ, ಸಿಗಾರ್ ಪೆಟ್ಟಿಗೆ ಇವರು ಬರೋ ದಾರಿಯಲ್ಲಿ ಎದುರಾಗಿರುತ್ತೆ.ಮತ್ತೊಂದು ಪ್ರಸಂಗ ನೋಡಿ.  ಆರ್ಕಟಿಕ್ ನಲ್ಲಿದ್ದ ವಿಲ್ಕಿನ್ಸ್ ಅಮೇರಿಕನ್ ಸೇನಾಧಿಕಾರಿಗಳ ಜೊತೆಗೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿರತ್ತೆ. ಆದ್ರೆ ಕೆಟ್ಟ ಹವೆಯ ಕಾರಣದಿಂದ ಆತನ ವಿಮಾನವನ್ನ ಮಧ್ಯೆಯೇ ಒಂದು ಕಡೆ ನಿಲ್ಲಿಸಬೇಕಾಗಿರತ್ತೆ. ಅಂದು ಕಾರ್ಯಕ್ರಮಕ್ಕೆ ಒಳ್ಳೆಯ ಕೋಟನ್ನೂ ಹಾಕಿಲ್ಲವಲ್ಲಪ್ಪ. ನನ್ನ ಸಂಜೆಯ ಕೋಟು ಗಿಡ್ಡವಾಗುತ್ತಿದೆ ಎಂಬ ವೇದನೆಯಲ್ಲಿರುತ್ತಾನೆ ವಿಲ್ಕಿನ್ಸ್. ಇತ್ತ ಕೂತಿರೋ ಶರ್ಮನ್ ಕವಿ ಮಹಾಶಯ ಬರೆದಿರುತ್ತಾನೆ. ನೀನು ಮಿಲಿಟರಿ ಡ್ರೆಸ್ಸಿನಲ್ಲಿರೋ ಜನರೊಂದಿಗೆ ಇದ್ದೀಯ. ಸಖತ್ತಾದ ಮಾತುಕತೆಗಳು ನಡಿತಾ ಇದೆ. ನೀನಿನ್ನು ಸಂಜೆಯ ಡ್ರೆಸ್ಸಿನಲ್ಲೇ ಇದೀಯ... ಅಂತ !!  ಯಪ್ಪಾ.. ಕೆಲವೊಂದು ಕಾಕತಾಳೀಯಗಳು ಇದ್ದರೂ ಇಷ್ಟೆಲ್ಲಾ ಸಮಾನತೆಗಳಿರಲು ಸಾಧ್ಯವೇ ಇಲ್ಲ. ಐದೂವರೆ ತಿಂಗಳುಗಳ ನಂತರ ಇವರ ಡೈರಿಗಳನ್ನ, ಇವರು ತಮಗೆ ಕಳುಹಿಸಿದ ದಾಖಲೆಗಳನ್ನ ಪರಾಮರ್ಶಿಸಿದ ಕೊಲಂಬಿಯಾ ಯೂನಿವರ್ಸಿಟಿಯ ಪ್ರೊಫೆಸರ್ ದಂಗಾಗುತ್ತಾರೆ. ಇಲ್ಲಿಯವರಿಗೆ ಪ್ರಮಾಣೀಕರಿಸದ "ಏನೋ"  ಸತ್ಯ  ಇದೆ ಎಂದು ಆ ಯೂನಿವರ್ಸಿಟಿ ಪ್ರೊಫೆಸರ್ ಅಭಿಪ್ರಾಯ ಪಡುತ್ತಾರೆ.

ಈ ತರದ ಅಸಂಖ್ಯ ಪ್ರಯೋಗಗಳು ನಡೆದಿರಬಹುದು. ಈ "ಟೆಲಿಪತಿ"ಯನ್ನು ವೈಜ್ಞಾನಿಕವಾಗಿ ವಿವರಿಸಲೂ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ವಿಲಿಯಮ್ ಕ್ರೂಕನ ಮನೋಅಲೆ(ಬ್ರೈನ್ ವೇವ್) ಸಿದ್ದಾಂತ. ಮೆದುಳಿನಲ್ಲಿನ ಈಥರ್ನ ವೈಬ್ರೇಶನ್ಗಳಿಂದ ಉಂಟಾಗೋ ಅಲೆಗಳೇ ಈ ಟೆಲಿಪತಿಗೆ ಕಾರಣ ಇರಬಹುದೆಂದು ಆತ ಪ್ರತಿಪಾದಿಸಿದ್ದ.  ಇಪ್ಪತ್ತನೆಯ ಶತಮಾನದ ಹೊತ್ತಿಗೆ ಇನ್ನೊಂದಿಷ್ಟು ಸಿದ್ದಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ದೈವಿಕ ಸಿದ್ದಾಂತ(spiritual theory). ಇದರ ಪ್ರಕಾರ ಹೊರಗ್ರಹದಿಂದ ಬಂದ ಜೀವಿಗಳು, ಮಾನವಾತೀತ ಶಕ್ತಿಗಳು, ದೈವೀಕ ಶಕ್ತಿಗಳು ನಮ್ಮ ಯೋಚನೆಗಳನ್ನು ನಿಯಂತ್ರಿಸುತ್ತವೆ! ನಂತರ ವಿಜ್ಞಾನಿಗಳು ಇದನ್ನು ಅಲ್ಲಗಳೆದು ಈ ತರ ಅಂದುಕೊಳ್ಳೋ ಮನಸ್ಥಿತಿಯನ್ನೇ ಒಂದು ಖಾಯಿಲೆ ಅಂತ ಹೆಸರಿಟ್ಟಿದ್ದು ಇತಿಹಾಸ !! ಸ್ಕ್ರೀಜೋಫೀನಿಯಾ ಎಂಬ ಮಾನಸಿಕ ಅವಸ್ಥೆ(ಖಾಯಿಲೆ ಅನ್ನೋದು ತಪ್ಪಾಗಬಹುದೇನೋ)ಯ ಜನರಿಗೆ ನಮ್ಮ ಆಲೋಚನೆಗಳು ನಮ್ಮದಲ್ಲ. ಇದು ಯಾವುದೋ ದೆವ್ವ, ಪ್ರೇತ, ದಯ್ಯ, ಅಪ್ಸರೆ, ಅಥವಾ ಇನ್ಯಾವುದೋ ಮಾನವಾತೀತ ಶಕ್ತಿಯದು. ಇದನ್ನ ಯಾರೋ ತಮ್ಮ ಮನಸ್ಸಿನೊಳಗೆ ತುರುಕುತ್ತಿದ್ದಾರೆ ಅನ್ನಿಸುತ್ತಂತೆ. ಇನ್ನು ಕೆಲವರಿಗೆ ತಮ್ಮ ಭಾವನೆ, ಕಲ್ಪನೆಗಳನ್ನ ಯಾರೋ ತಮ್ಮ ಮನಸ್ಸಿನಿಂದ ಕಿತ್ತು ಹೊರಗೆ ಹಾಕುತ್ತಿದ್ದಾರೆ ಅಂತಲೂ ಅನಿಸುತ್ತಂತೆ. ಈ ತರಹದ ಭಾವಗಳ ಬಗ್ಗೆ ಮೆಲನಿ ಕ್ಲೈನ್ ಅನ್ನೋ ಮನೋವಿಜ್ಞಾನಿ ಬರೀತಾ ಹೋಗ್ತಾಳೆ. ತಾಯಿಯ ಹೊಟ್ಟೆಯೊಳಗಿರೋ ಮಗುವಿಗೆ ಅದರ ಮನಸ್ಸಿನಲ್ಲಿ ನಡಿತಿರೋ ಭಾವಗಳಿಗೂ ಅದನ್ನು ಹೊತ್ತಿರೋ ತಾಯಿಯ ಮನಸ್ಸಿನ ಭಾವಗಳಿಗೂ ನಡುವಿನ ವ್ಯತ್ಯಾಸ ತಿಳಿಯಲು ಆಗೋದಿಲ್ಲ. ಆದರೆ ಬೆಳಿತಾ ಬೆಳಿತಾ ಮಗು ತನ್ನದೇ ಆದ ಭಾವಗಳನ್ನ ಹೊಂದುತ್ತಾ ಹೋಗುತ್ತೆ. ಇದು ಸಾಧ್ಯವಾಗದಂತಹ ವ್ಯಕ್ತಿಗಳು ಈ ಸ್ಕ್ರೀಜೋಫೀನಿಯಾ ಅಂತ ಆ ಮಾನಸಿಕ ಅವಸ್ಥೆಯನ್ನು ವರ್ಣಿಸಲು ಪ್ರಯತ್ನಿಸ್ತಾ ಹೋಗ್ತಾಳೆ.


Zener Cards
ನಂತರ ಬಂದ ವಿಜ್ಞಾನಿಗಳು ಈ ಮನೋ ಅಲೆಗಳೆಂಬುದು ಇದ್ರೂ ಅವು ತುಂಬಾ ಕ್ಷೀಣವಾಗಿದ್ದು ಇದರಿಂದ ಯಾವುದೇ ತರಹದ ಮಾಹಿತಿ ವಿನಿಮಯ ಸಾಧ್ಯವಿಲ್ಲವೆಂದು ತಳ್ಳಿ ಹಾಕಿದ್ರು.  ಆದ್ರೂ ಈ ಟೆಲಿಪತಿಯನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸೋ/ಅಲ್ಲಗಳೆಯೋ ಯಾವ ಪ್ರಯೋಗಗಳೂ ಇದ್ದಿರಲಿಲ್ಲ. ಆಗ ಬಂದಿದ್ದು ಎರಡು ಪ್ರಸಿದ್ದ ಪ್ರಯೋಗಗಳು. ಮೊದಲನೆಯದು "ಜೀನರ್ ಕಾರ್ಡ್ ಪ್ರಯೋಗ". ಒಬ್ಬನಿಗೆ ಸಂದೇಶ ಕಳುಹಿಸುವವನು ಎಂದು ಅವನಿಗೆ ಐದು ಜೀನರ್ ಕಾರ್ಡುಗಳಲ್ಲಿ ಯಾವದಾದರೂ ಒಂದನ್ನು ತನ್ನ ಮನಸ್ಸಿನಲ್ಲೇ ಕಲ್ಪಿಸಿಕೊಂಡು ಅದನ್ನು ಮತ್ತೊಬ್ಬನಿಗೆ ಈ "ಟೆಲಿಪತಿ"ಯ ಮೂಲಕ ತಿಳಿಸಬೇಕು. ಅದನ್ನು ಅರಿತ ಆತ ಮೊದಲನೆಯವನು ಯಾವ ಕಾರ್ಡನ್ನು ಆರಿಸಿದ್ದಾನೆ ಎಂದು ತಿಳಿಸಬೇಕು. ಸುಮ್ಮನೇ ಊಹಿಸಿದರೂ ೨೦% ಸತ್ಯ ಹೇಳೋ ಸಾಧ್ಯತೆಯಿರೋದ್ರಿಂದ ೨೦% ಗಿಂತ ಜಾಸ್ತಿ ಸರಿಯಾದರೆ ಮಾತ್ರ ಇದು "ಟೆಲಿಪತಿ" ಎಂಬುದು ಇರುವುದರ ಸಾಧ್ಯತೆಯನ್ನು ಸಾರುತ್ತದೆ ಎಂದು ಇದರ ಹೇಳಿಕೆ.  ಆದರೆ ಮೊದಲನೆಯವ ಗ್ಲಾಸ್ ಹಾಕಿಕೊಂಡಿದ್ರೆ ಅವನ ಗ್ಲಾಸುಗಳನ್ನ ನೀಟಾಗಿ ಗಮನಿಸ್ತಾ ಇದ್ರೆ ಅವನು ನೋಡುತ್ತಿರೋ ಕಾರ್ಡುಗಳು ಯಾವುದು ಎಂದು ಗಮನಿಸಬಹುದು ! ಈ ತರಹದ್ದೇ ಹಲವು ಮೋಸಗಳಾಗೋ ಸಾಧ್ಯತೆಯಿದ್ದಿದ್ರಿಂದ ಬಂದ ಮತ್ತೊಂದು ಪ್ರಯೋಗ ಗ್ಯಾಂಗ್ ಫೆಲ್ಡ್ ಪ್ರಯೋಗ. ಇದರಲ್ಲಿ ಇಬ್ಬರನ್ನು ಯಾವ ತರದಲ್ಲೂ ಸಂಪರ್ಕಿಸಲು ಸಾಧ್ಯವೇ ಆಗದಂತಹ ಎರಡು ಪ್ರತ್ಯೇಕ ಕೋಣೆಗಳಲ್ಲಿ ಕುಳ್ಳಿರಿಸಿ ಮೊದಲನೆಯ ಪ್ರಯೋಗವನ್ನು ನಡೆಸುತ್ತಾರೆ.

ತದನಂತರ ಇನ್ನೂ ಹಲವು ಸಿದ್ದಾಂತಗಳು ಬಂದವು. ಕೆಲವರು ಇದನ್ನೂ ಒಂದು ಪ್ರಕಾರದ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳು( ನಿರ್ವಾತ(vacuum) ಮೂಲಕವೂ ಹಾದು ಹೋಗಬಹುದಾದ ಬೆಳಕು, xray , gamma ರೇ ನಂತಹವು ) ಎಂದರೆ ಗೆರಾಲ್ಡ್ ಫಿನ ಬರ್ಗ್ ಅನ್ನೋನು ಇದು ಇನ್ನೂ ಕಂಡು ಹಿಡಿಯಲಾಗದ "ಸೈಕಾನ್" ಅಥವಾ "ಮೈಂಡಾನ್" ಅನ್ನೋ ಕಣಗಳಿಂದ ಆಗುತ್ತವೆ ಅಂತ ಪ್ರತಿಪಾದಿಸಿದ. ಇತ್ತೀಚಿನ ವಿಜ್ಞಾನಿಗಳಾದ ಚಾರ್ಲ್ಸ್ ಟಾರ್ಟ್ ಅಂತಹ ಕೆಲವರು ಈ "ಟೆಲಿಪತಿ" ಅನ್ನೋದು ಒಂದು ಇದೆ ಅಂತ ಒಪ್ಪಿಕೊಂಡರೂ ಅದು ಭೌತಿಕವಾಗಿಲ್ಲ. ಆದರೆ ಮಾನಸಿಕವಾದ ಸಿದ್ದಾಂತಗಳಿಂದ ಅದನ್ನು ಪ್ರಮಾಣಿಸಬಹುದೇನೋ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ತರಹದ ನಂಬಿಕೆಗಳು ಬೆಳೆಯುತ್ತಾ ಮನೋಸಾರಿಗೆ (ಟೆಲಿ ಟ್ರಾನ್ಸಪೋರ್ಟ್) ಅನ್ನೋ ಕಲ್ಪನೆ ಕೂಡ ಬರ್ತಾ ಇದೆ. ಅಂದ್ರೆ ವಸ್ತುಗಳನ್ನೇ ಅಣು ಅಣುಗಳಾಗಿ ವಿಭಜಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಗಳ ಮೂಲಕ ಸಾಗಿಸಿ ಅಲ್ಲಿ ಮತ್ತೆ ಜೋಡಿಸೋದು !. ಕಲ್ಪನೆಗೆ ಬರ್ತಿಲ್ವಾ ?
ಸುಮ್ನೇ ಹಿಂಗೆ ಊಹಿಸಿ. ನೀವು ನಿಮ್ಮ ಸ್ನೇಹಿತನ ಜೊತೆಗೆ ಒಂದು ಫೋನಿನಲ್ಲಿ ಮಾತಾಡ್ತಿರೀರಿ. ಸದ್ಯಕ್ಕೆ ಲ್ಯಾಂಡ ಲೈನೇ ಅಂತಿಟ್ಕೊಳ್ಳಿ. ಆ ಲ್ಯಾಂಡ್ ಲೈನಿನ ಮೂಲಕವೇ ನೀವು ತೂರಿ ಹೋಗಿ, ಆ ಕಡೆಯ ಫೋನಿನಿಂದ ಆಚೆ ಬಂದ್ರೆ ಹೇಗಿರುತ್ತೆ ? ಅದೂ ಕ್ಷಣ ಮಾತ್ರದಲ್ಲಿ .. ಸೂಪರ್ ಅಲ್ವಾ ? :-) ಈ ಬಸ್ಸು, ಆಟೋ, ರೈಲುಗಳಿಗೆ ಕಾಯೋ ಜಂಜಾಟ, ಟ್ರಾಫಿಕ್ ತಲೆನೋವುಗಳೇ ಇಲ್ಲ ! ಲ್ಯಾಂಡ್ ಲೈನ್ ಓಕೆ. ಮೊಬೈಲಾದ್ರೆ .. ? ಆಗ ತರಂಗಾಂತರಗಳಲ್ಲಿ ಒಂದಾಗಿ ಆಕಾಶ ಮಾರ್ಗದಲ್ಲಿ ಹಾದು ಮತ್ತೆ ಆಚೆ ಕಡೆ ಪಂಚಭೂತಗಳಲ್ಲಿ ಒಂದಾದ ದೇಹದಲ್ಲಿ ಬದಲಾಗೋದು.. ಹೇಳೋಕೆ ಕೇಳೋಕೆ ಚೆನ್ನಾಗೇ ಇದೆ. ಆದ್ರೆ ಫುಲ್ಲು ಕಾಗೆ ಅಂದ್ರಾ ? ಇಲ್ಲಪ್ಪ. ಆ ತರಹದ ಪ್ರಯೋಗಗಳು ನಡೀತಾ ಇದೆ. ನಿಜವಾಗ್ಲೂ. ಈಗಾಗ್ಲೇ ನಮ್ಮ ಪುರಾಣಗಳಲ್ಲಿ ಬಂದ ಕ್ಷಣಮಾತ್ರದಲ್ಲಿ ಎಲ್ಲಿಗೆ ಬೇಕಾದ್ರೂ ಸಂಚರಿಸೋ ಪರಶುರಾಮ, ನಾರದರಂತ ಎಷ್ಟೋ ಉದಾಹರಣೆಗಳಿವೆ ಅಂದ್ರಾ ? ಹೂಂ ಸರ್.. ಸ್ಟಾರ್ ಟ್ರೆಕ್ಕುಗಳಂತ ಕತೆಗಳಲ್ಲಿ ಇದು ಆಗ್ಲೇ ಬಂದೋಗಿದೆ ಅಂದ್ರಾ.. ಅದೂ ಹೌದು ಸಾರ್.. ಆದ್ರೆ ವೈಜ್ನಾನಿಕವಾಗಿ, ಪ್ರಾಕ್ಟಿಕಲ್ಲಾಗಿ ಇದನ್ನು ಸಾಧ್ಯವಾಗಿಸೋ ಪ್ರಯತ್ನಗಳು ಇನ್ನೂ ನಡೀತಾ ಇದೆ ಅಂದೆ ಅಷ್ಟೇ,, 


ಮುಗಿಸೋ ಮೊದಲು:
ನನ್ನ ಗೆಳೆಯರೊಬ್ರು ಕೇಳ್ತಾ ಇದ್ರು . ಈ  ಭೂತ ಕೋಲ, ದೇವರು ಅನ್ನದೆಲ್ಲಾ ನೀನು ನಂಬ್ತೀಯ ಅಂತ. ಅಲ್ಲ ಕಣೋ ಈ ರೇಖಿ, ಪ್ರಾಣಿಕ್ ಹೀಲಿಂಗ್, ಸಿದ್ದಿ ಸಮಾಧಿ, ಸುದರ್ಶನ ಕ್ರಿಯೆ ಎಲ್ಲಾ ಸತ್ಯ ಅಂತಾದ್ರೆ ಟೆಲಿಪತಿ, ಭೂತ ಕೋಲ, ದೇವರೂ ಯಾಕಿರ್ಬಾದ್ರು ? ವರ್ಣಿಸಲಾಗದ, ಅನುಭವಕ್ಕೆ ಬರದ ಶಕ್ತಿಯೊಂದು ಇದೆ. ಅದು ಒಳ್ಳೆಯದೇ ಮಾಡುತ್ತೆ ಅನ್ನೋ ನಂಬಿಕೆಯಿಂದ ಅದನ್ನ  ಕರೆಯೋ ಹೆಸರುಗಳು ಬೇರೆ ಇರ್ಬೋದು. ಆದರೆ ನನ್ನೊಬ್ಬನ್ನ ಕಣ್ಣಿಗೆ ಕಂಡಿಲ್ಲ ಅಂದ ಮಾತ್ರಕ್ಕೆ ಅದು ಇಲ್ಲ ಅಂತಲೇ ಯಾಕೆ ಅಂದುಕೊಳ್ಳಬೇಕು ? ನಮಗೆ ತಿಳಿದದ್ದೊಂದೇ ಸತ್ಯ ಆಗಿರಬೇಕು. ನಮ್ಮ ಗ್ರಹಿಕೆಗೆ ಬರದ ಪ್ರಪಂಚದ ಉಳಿದೆಲ್ಲಾ ಸಂಗತಿಗಳು ಶುದ್ದ ಸುಳ್ಳೆನ್ನುವುದು ಎಷ್ಟರ ಮಟ್ಟಿಗೆ ಸರಿ ಅಂತ ಕೇಳಿದೆ.. ಅಲ್ವಾ ? ಇದೇ ಸತ್ಯ ಅಂತಲ್ಲ. ಆಗಿರಬಾರದೇಕೆ ಅನ್ನೋ ಅಭಿಪ್ರಾಯವಷ್ಟೇ.

ಮಾಹಿತಿ ಮೂಲಗಳು:
http://en.wikipedia.org/wiki/Telepathy
http://learn-telekinesis-training.com/learn-telepathy.php
http://powerlisting.wikia.com/wiki/Telepathy
http://powerlisting.wikia.com/wiki/Aether_Manipulation
http://content.time.com/time/health/article/0,8599,1874760,00.html
http://science.howstuffworks.com/science-vs-myth/everyday-myths/teleportation.htm