Saturday, September 28, 2013

ಲೂಸಿಯಾ

ಫಿಲ್ಮಿಗೆ ಹೋಗಿ ಕೂತಿದ್ವಿ. ನಿನ್ನೊಳೆಗೆ ಮಾಯೆಯೋ, ಮಾಯೆಯೊಳಗೆ ನೀನೋ ಅಂತ ಶುರುವಾಯ್ತು..ಹೆಸರು ತೋರಿಸುವವ ಹೊತ್ತಿಗೆ ಹೂವೊಳಗೆ ಸುಗಂಧವೋ, ಸುಗಂಧದೊಳಗೆ ಹೂವೋ, ಜಿಘ್ರಾಣಿಸುವುದರೊಳಗೆ ಇವೆರಡೋ.. ಅಂತ ಮುಂದುವರಿಯೋ ವಚನ. ಅದು ಕನಕದಾಸರ ವಚನ ಅಂತ ಆಮೇಲೆ ತೋರಿಸುವವರಿಗೂ ಕೆಲವರಿಗೆ ಪಕ್ಕಾ ಕನ್ಫ್ಯೂಷನ್ನು. ಸರಿ, ನಿರ್ದೇಶಕ ಪವನ, ನಿರ್ಮಾಪಕರು .. ? ಏನಿದು, ಹತ್ತಾರು ಹೆಸರುಗಳು, ಸಹ ನಿರ್ಮಾಪಕರು, ನೂರಾರು ಹೆಸರುಗಳು.. ಯಪ್ಪಾ.. ಒಟ್ಟು ನೂರಾ ಏಳು ಜನ ನಿರ್ಮಾಪಕರು ಸೇರಿ ನಿರ್ಮಿಸಿದ ಚಿತ್ರ.ಅಂದರೆ ಜನರ ಚಿತ್ರ..ನಾನು ಯಾವ ಚಿತ್ರದ ಬಗ್ಗೆ ಹೇಳ್ತಾ ಇದ್ದೀನಿ ಗೊತ್ತಾಗಿರ್ಬೇಕಲ್ವಾ ? ಹೂಂ. ಅದೇ ರೀ. ಲೂಸಿಯಾ.

ಚಿತ್ರವೊಂದನ್ನು ಹೊಗಳಬೇಕಂತ ಹೇಳೋ ಮಾತುಗಳಲ್ಲ. ಆದ್ರೂ ಚಿತ್ರವನ್ನು ನೋಡಿ ಹೊರಬಂದು ಅರ್ಧ ಘಂಟೆ ಆದ್ರೂ ಅದರ ಗುಂಗು ಇಳಿದಿಲ್ಲ ಅಂದ್ರೆ ಏನೋ ಇದೆ ಅಂತನೇ ಅರ್ಥ. ಎದುರು ಬಂದ ಮಹಿಳೆಯ ವ್ಯಾನಿಟಿ ಬ್ಯಾಗು ಕೈಗೆ ಹೊಡೆದ ಮೇಲೆ ಅಲ್ಲೊಬ್ಳು ಮಹಿಳೆ ಬಂದಳು ಅಂತ ಗೊತ್ತಾಗೋದು, ರಸ್ತೆ ದಾಟುವಾಗ ಯಾವುದೋ ತಲೆಯಲ್ಲಿದ್ದು ಕಾರೊಂದರ ಹಾರ್ನಿನಿಂದ ಎಚ್ಚರ ಆಗೋದು ಎಲ್ಲಾ ಆಗ್ತಿದೆ ಅಂದ್ರೆ ಒಂದೋ ಚಿತ್ರ ಸಖತ್ ಚೆನ್ನಾಗಿದೆ ಅಂತ ಅರ್ಥ ಅತ್ವಾ ತೀರಾ ಖರಾಬಾಗಿದ್ದು ಯಾಕಾದ್ರೂ ಇದಕ್ಕೆ ಬಂದನೋ ಎಂದು ಆತ್ಮದೂಷಣೆಯಲ್ಲಿ ತೊಡಗಬೇಕಾಗಿದೆ ಅಂತ ಅರ್ಥ. ಹೊಸಬರದ್ದೇ ಚಿತ್ರಗಳಾದ ಸಿಂಪಲ್ಲಾಗೊಂದು ಲವ್ ಸ್ಟೋರಿಯಂತ ಹಿಟ್ ಚಿತ್ರಗಳು ಬಂದರೂ ಜನರೇ ಚಿತ್ರ ಮಾಡೋ ಪರಿಕಲ್ಪನೆ ಕನ್ನಡದ ಮಟ್ಟಿಗೆ ಸ್ವಲ್ಪ ಹೊಸದೇ ಅನ್ನಿಸುತ್ತೆ. ಬೊಂಬೆಗಳ ಲವ್ ಅಂತ ನಲ್ವತ್ತು ಜನ ಕೈಹಾಕಿ ಚಿತ್ರ ನಿರ್ಮಿಸಿದ್ದೂ ಅದು  ಸ್ವಲ್ಪ ಮಟ್ಟಿಗೆ ಸುದ್ದಿಯಾಗಿದ್ದೂ ಆಯ್ತು. ಆದ್ರೆ ಅದಕ್ಕೆ ಹೋಲಿಸಿದರೆ ಇದು ಪಕ್ಕಾ ವಿಭಿನ್ನ ಚಿತ್ರ. ಬರಿ ಅದೇ ಮಚ್ಚು, ಲಾಂಗು, ಕಣ್ಣೀರು ಕತೆಗಳಿಂದ ಬೇಸತ್ತಿದ್ದ ಕನ್ನಡ ಪ್ರೇಕ್ಷಕನಿಗೆ ಏನು ಬೇಕು ಎಂದರಿತ ಪ್ರೇಕ್ಷಕನೇ ಮೇಲೆದ್ದು ನಿರ್ದೇಶನಕ್ಕೆ ಇಳಿದಂತೆ ಅನಿಸುತ್ತಿದೆ ಇತ್ತೀಚಿನ ಚಿತ್ರಗಳನ್ನು ನೋಡಿದಾಗ. ಮಠ, ಎದ್ದೇಳು ಮಂಜುನಾಥದಂತ ಪಕ್ಕಾ ವಿಡಂಬನೆಯ ಚಿತ್ರಗಳೂ, ಮನಸಾರೆ, ಆರಕ್ಷಕದಂತಹ ಸ್ವಲ್ಪ ವಿಚಿತ್ರ ರೀತಿಯ ಚಿತ್ರಗಳೂ, ಪರಮಾತ್ಮನಂತ ಚಿತ್ರಗಳೂ ಬಂದು ಹೋದವು. ಈ ಹೊಸ ಸಾಲಿನ ನಿರ್ದೇಶಕರ ಸಾಲಿಗೆ ಹೊಸ ಸೇರ್ಪಡೆ ಪವನ್. ಪವನ್ ಅನ್ನೋದಕ್ಕಿಂತ ಮನಸಾರೆಯಲ್ಲಿ ಬರೋ ಕ್ಯಾನ್ಸರ್ ಪೇಷಂಟ್ ಹುಡುಗ ಅಂದ್ರೆ ಕೆಲವರಿಗೆ ಪಕ್ಕನೆ ಫ್ಲಾಷಾಗುತ್ತೆ. ಸಿನಿಮಾವೊಂದು ಹೇಗಿರಬೇಕು, ಹೇಗಿರಬೇಕೆಂಬ ಎಲ್ಲಾ ಪೂರ್ವಾಗ್ರಹಗಳನ್ನು ಬದಿಗೊತ್ತಿ ಸಿನಿಮಾವೊಂದನ್ನು ಮಾಡಿದರೆ ಹೇಗಿರಬಹುದು ? ಹೇಗಾದ್ರೂ ಇರಬಹುದು ? ಆದ್ರೆ ಸಿಕ್ಕಿರೋ ಆ ಸ್ವಾತಂತ್ರ್ಯವೇ ಸಿನಿಮಾವನ್ನು ಅದ್ವಾನವೆಬ್ಬಿಸೋ ಅಪಾಯವೂ ಇರುತ್ತೆ. ಹಾಗೇನೂ ಆಗದೇ ಗಟ್ಟಿಯಾದ ನಿರೂಪಣೆ ಇರೋದ್ರಿಂದನೇ ಬುಡದಿಂದ ಕೊನೆವರೆಗೂ ಕುತೂಹಲ ಕೆರಳಿಸುತ್ತಾ ಸಾಗುತ್ತೆ ಲೂಸಿಯಾ.

 ಕ್ಲೈಮಾಕ್ಸನ್ನು ನಿರೀಕ್ಷಿಸದ ರೀತಿಯಲ್ಲಿ ಮಾಡಬೇಕೆನ್ನೋ ತುಡಿತದಲ್ಲಿ ಸಿನಿಮಾವನ್ನೇ ದುರಂತಾಂತ್ಯವನ್ನಾಗಿಸೋದು , ಇಲ್ಲಾ ಇನ್ನೂ ಅರ್ಧ ಘಂಟೆ ಸಿನಿಮಾ ಇದೆ ಅನ್ನೋ ನಿರೀಕ್ಷೆಯಲ್ಲಿ ಇದ್ದಕ್ಕಿದ್ದಂಗೆ ಕೊನೆ.. ಇಂತ ಅವಾಂತರಗಳನ್ನು ಮಾಡಿ ಅದನ್ನೇ ಕ್ರಿಯೇಟಿಯಿಟಿ ಅಂತ ಕರೆದಿದ್ದೂ ಇದೆ.ಆದರೆ ಆ ತರದ ಅವಾಂತರಗಳ ಆವೇಶಕ್ಕೊಳಗಾಗದೆಯೂ ನಿರೀಕ್ಷಿಸದ ರೀತಿಯಲ್ಲೇ ಕೊನೆಗೊಳ್ಳೋ ಒಂದು ಹೊಸ ತರದ ಸಿನಿಮಾ ಲೂಸಿಯೂ. ಒಂದು ಚಿತ್ರವೊಂದನ್ನು ಹೊಗಳಬೇಕಾದ್ರೆ ಬೇರೆಯದನ್ನು ತೆಗಳಬೇಕಂತ ಇಲ್ಲ. ಇದೇ ಸರ್ವಶ್ರೇಷ್ಟ ಅಂತನೂ ಇಲ್ಲ. ನನಗೆ ಸೂಪರ್ ಅನಿಸಿದ್ದು ಕೆಲವರಿಗೆ ಅಟ್ಟರ್ ಫ್ಲಾಪು ಅನಿಸಬಹುದು. ಹಾಗಾಗಿ ತೀರಾ ಪೀಠಿಕೆ ಹಾಕದೇ ಚಿತ್ರ ನೋಡಿ ಹೊರಬಂದ ಮಾತುಗಳು.. ಸೀದಾ ನಿಮ್ಮೆದುರು.ತಮಿಳು, ತೆಲುಗು, ಹಿಂದಿ ಹೀಗೆ ಪರಭಾಷಾ ಚಿತ್ರಗಳನ್ನು ಮನೆಯಲ್ಲೇ ನೋಡಿದ್ರೂ ಕನ್ನಡ ಸಿನಿಮಾಗಳನ್ನು ಥಿಯೇಟ್ರುಗಳನ್ನ ಹುಡುಕಿಕೊಂಡು ಹೋಗಿ ನೋಡೋದು ನಮ್ಮ ಗೆಳೆಯರ ಪರಿಪಾಟ. ಮನೆ ಹತ್ರವೇ ಮೂರು ಥಿಯೇಟ್ರುಗಳಿದ್ರೂ ಎಲ್ಲೂ ಕನ್ನಡ ಚಿತ್ರಗಳಿಲ್ಲದ ದುರಂತ ಪರಿಸ್ಥಿತಿಯಲ್ಲಿ ಥಿಯೇಟ್ರೊಂದನ್ನು ಹುಡುಕಿಕೊಂಡು ಹೋದ ಶ್ರಮವೂ ಸಾರ್ಥಕವಾದ ಅನುಭವ ಕೊಟ್ಟಿದ್ದಕ್ಕೆ ಚಿತ್ರವೊಂದರ ಬಗ್ಗೆ ಕೆಲ ಮಾತುಗಳು..

ದಯಾ ಮರಣ, ಲೂಸಿಡ್ ಡ್ರೀಮಿಂಗ್ .. ಹೀಗೆ ಹಲವು ಕಾನ್ಸೆಪ್ಟುಗಳಿವೆ. ಹೀರೋಗೊಂದು ಮಚ್ಚು ಕೊಟ್ಟು, ಫೈಟನ್ನೂ ಮಾಡಿಸಿ ಬರಿ ಇವೆರಡೇ ಇದ್ದರೆ ಫಿಲ್ಮೊಂದು ಆಗಲ್ಲ. ಇವು ಫಿಲ್ಮಿನ ಭಾಗವಷ್ಟೇ ಎಂದು ಪರೋಕ್ಷವಾಗಿ ಟಾಂಟ್ ಕೊಟ್ಟ ಹಾಗೂ ಇದೆ. ಕನ್ನಡ ಫಿಲ್ಮಿನ ರಿಲೀಸ್ ಪತ್ರಿಕಾ ಗೋಷ್ಟಿಯಲ್ಲಿ ನಿರ್ದೇಶಕ ತಮಿಳಲ್ಲೂ, ನಿರ್ಮಾಪಕ ತೆಲುಗಲ್ಲೂ, ನಾಯಕಿ ಇಂಗ್ಲೀಷಲ್ಲೂ ಮಾತಾಡ್ತಾಳೆ!! ಕನ್ನಡದಲ್ಲಿ ಮಾತಾಡೋದು ಹೀರೋ ಒಬ್ನೇ.. ! ಕರ್ನಾಟಕದಲ್ಲೇ ಕನ್ನಡ ಮೂವಿಗಳಿಗೆ ಜನರಿಲ್ಲದೇ ತೆಲುಗು, ತಮಿಳುಗಳಿಗೆ ಹೌಸ್ ಫುಲ್ಲಾಗೋ ವಿಪರ್ಯಾಸ .. ಹೀಗೆ ಅನೇಕ ದೃಶ್ಯಗಳು  ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ಪಕ್ಕಾ ವಿಡಂಬನೆಯಂತೆ ಕಾಣುತ್ತೆ. ಚಿತ್ರದಲ್ಲಿ ವಿಲನ್ನು ಯುವನಟ. ಮಾಡೆಲ್ಲು. ಅವನ್ನ ಕಂಡ್ರೆ ಹೀರೋಗೆ ಯಾಕೋ ಒಂತರಾ. ಕುರ್ಚಿ ತರಸ್ತಾನೆ. ತನಗೆ ಕೊಡ್ತಾನೇನೋ ಅಂದ್ಕೊಳೋ ಹೊತ್ತಲ್ಲಿ ಅದರ ಮೇಲೆ ಕಾಲಿಡುತ್ತಾನೆ ಹೀರೋ.. ಎಂತಾ ದರ್ಪ.. ಇಂತದ್ದೇ ಹಲವಾರು ದೃಶ್ಯಗಳು ನಿಜಜೀವನದ ಯಾವ್ಯಾವೋ ಪಾತ್ರಗಳಿಗೆ ಅಣಕಿಸುವಂತೆ ಕಾಣುತ್ತದೆ. ಆದ್ರೆ ಎಲ್ಲಾ ಆಗೋ ಬಯಕೆಯಲ್ಲಿ, ಕಾನ್ಸೆಪ್ಟಿನ ಬಗ್ಗೆ ಸಿನಿಮಾ ಮಾಡೋ ತುಡಿತದಲ್ಲಿ ಸಿನಿಮಾವೇ ಒಂದು ಸಾಕ್ಷ್ಯಚಿತ್ರ,(Documentary) ಆಗುವ ಅಪಾಯವೂ ಇದೆ. ಅಂತದ್ದೇನೂ ಆಗಿಲ್ಲ ಅನಿಸುತ್ತೆ ಈ ಚಿತ್ರವನ್ನು ನೋಡುವಾಗ. 

ನಿಕ್ಕಿ ಒಬ್ಬ ಥಿಯೇಟರಲ್ಲಿ ಬ್ಯಾಟ್ರಿ ಬಿಡೋ ಹುಡುಗ, ಇನ್ನೊಬ್ಬ ಹೀರೋ. ಮತ್ತೊಬ್ಬಳು ಶ್ವೇತ. ಸಪೋರ್ಟಿಗೊಬ್ಬ ಶಂಕ್ರಣ್ಣ. ಅಲ್ಲಲ್ಲಿ ಬರೋ ಫಾರಿನರ್ಸು, ಮಾಡೆಲ್ಲು, ಪೋಲೀಸು, ಡಿಟೆಕ್ಟಿವು.  ಹೀಗೆ ಹಲವು ಪಾತ್ರ. ಹೀರೋನೆ ಎಲ್ಲಾ ಅಲ್ಲ ಆಗದ ಇದರಲ್ಲಿ ಯಾವುದೇ ಒಂದು ಪಾತ್ರವನ್ನು ತೆಗೆದು ಬದಿಗಿಟ್ಟರೂ ಉಳಿದ ಪಾತ್ರಗಳು ಅಪೂರ್ಣ ಎನಿಸುವಷ್ಟು ಹೊಂದಿಕೊಂಡಿವೆ ಪಾತ್ರಗಳು ಒಂದರೊಳಗೊಂದು. ಒಂದಕ್ಕೊಂದು ಪೂರಕ, ಪ್ರೇರಕ. ಪೂರ್ಣಚಂದ್ರ ತೇಜಸ್ವಿ ಅಂದ್ರೆ ಸಾಹಿತ್ಯದ ನೆನಪಾಗೋ ಜನರಿಗೆ ಈ ಚಿತ್ರದ ಮೂಲಕ ಒಬ್ಬ ಅದೇ ಹೆಸರಿನ ಸಂಗೀತ ನಿರ್ದೇಶಕನ ಪರಿಚಯವೂ ಆಗಿದೆ.   ಬ್ಯಾಟ್ರಿಗೂ ಹೀರೋಗೂ ಏನು ಸಂಬಂಧ, ಪಾಪಾ ಜೋನ್ ಪಿಜಾಗೂ ರಾಗಿ ಮುದ್ದೆಗೂ ಯಾವ ತರದ ಲವ್ವು, ತಿನ್ಬೇಡ ಕಮ್ಮಿ ನೀ ತಿನ್ಬೇಡ  ಕಮ್ಮಿ, ನೀ ತಿನ್ಬೇಡ  ಕಮ್ಮಿ ನೆಲಗಳ್ಳೆಯ ಅಂತ ಫಾರಿನರ್ರುಗಳು ಯಾಕೆ ಬರ್ತಾರೆ ಅಂತ ಚಿತ್ರದ ಟ್ರೈಲರ್ಗಳನ್ನ ನೋಡಿದವರಿಗೆಲ್ಲಾ ಕುತೂಹಲ ಹುಟ್ಟಿರಬಹುದು. ಅದಕ್ಕೆ ಇನ್ನೊಂದು ಕುತೂಹಲದ ಅಂಶ ಸೇರಿಸಿಬಿಡ್ತೇನೆ. ಇಲ್ಲಿ ಬರೋ ಪಾತ್ರಗಳದ್ದೆಲ್ಲಾ ದ್ವಿಪಾತ್ರ ! ಒಂದು ಕನಸು ಮತ್ತೊಂದು ವಾಸ್ತವ. ಆದರೆ ಕನಸು ವಾಸ್ತವಗಳ ನಡುವಿನ ವ್ಯತ್ಯಾಸವೇ ತಿಳಿಯದಂತ ಪರಿಸ್ಥಿತಿ. ಕೊನೆಗೆ ನೋಡುಗ ಪ್ರಭುವಿಗೆ ಫಿಲ್ಮಿನ ನಿಜವಾದ ಕತೆ ಏನೆಂಬುದನ್ನು ಅರ್ಥಮಾಡಿಸಲು ಉದಾಹರಣೆ ಕೊಟ್ಟು ಪ್ರಯತ್ನಿಸಿದ್ದು ಇದ್ರೂ  ಅದರಲ್ಲಿ  ಕನಸ್ಯಾವುದು , ವಾಸ್ತವ ಯಾವುದು ಎಂದು ನಾನೇ ಈಗ ಹೇಳಿದ್ರೆ ಸಿನಿಮಾ  ಥಿಯೇಟ್ರಿಗೆ ಹೋಗೋ ನಿಮ್ಮ ಉತ್ಸಾಹ ತಣಿದುಹೋಗಬಹುದು. ಪವನ್ನರ ಪ್ರಾಮಾಣಿಕ ಪ್ರಯತ್ನಕ್ಕೆ ಮೋಸ ಮಾಡಿದಂತೆಯೂ ಆಗಬಹುದು.  ಅಂದ ಹಾಗೆ ಸಿನಿಮಾ ಮುಗೀತು ಅಂತ ಮುಗಿದ ಮೇಲೂ ಗೊತ್ತಾಗದ ಸುಮಾರು ಜನ ಕೂತುಕೊಂಡಿದ್ರು. ಶುಭಂ ಅಂತ ತೋರಿಸಿದ್ರೂ ಏಳದ ಅವರಿಗೆ ಥಿಯೇಟ್ರಿನ ಬ್ಯಾಟ್ರಿ ಹುಡ್ಗ ಬಾಗಿಲು ತೆಗೆದು ಮುಖದ ಮೇಲೆ ಬೆಳಕು ಬಿದ್ದಾಗ್ಲೇ ಗೊತ್ತಾಗಿದ್ದು.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ.

Sunday, September 22, 2013

ಚಿಲ್ರೆ ಎಲ್ರಿ ..

ಕಾಲೇಜ್ ಗ್ರೌಂಡಲ್ಲಿ ಎಂದಿನಂತೆ ಇಳಾ ಮಂಗಳೂರು ಮಂಜ ಮತ್ತು ಸರಿತಾ ಮಾತಾಡ್ತಾ ಕೂತಿದ್ದಾಗ ಏನ್ ಚಿಲ್ರೆ ಸಮಸ್ಯೆ ಗುರೂ, ಥೂ ಅಂತ ಗುಂಡಣ್ಣ ಮತ್ತು ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ ಎಂಟ್ರಿ ಕೊಟ್ರು.. ತಿಪ್ಪ ಅವ್ರು ಬೆಳಬೆಳಗ್ಗೆ ಯಾರ್ಗೋ ಬಯ್ತಾ ಇರೋ ಹಾಗೆ ಉಂಟಲ್ಲಾ ಮಾರ್ರೆ ಅಂದ ಮಂಜ. ಹೂಂ ಕಣೋ ಮಂಜ. ಈ ಬಸ್ಸೋರು ಒಂದ್ರೂಪಾಯಿ, ಎರಡ್ರೂಪಾಯಿ ಚಿಲ್ರೆ ಇದ್ರೆ ಕೊಡಂಗೇ ಇಲ್ಲ. ಟಿಕೇಟ್ ಹಿಂದ್ಗಡೆ ಬರ್ದೇನೋ ಕೊಡ್ತಾರೆ. ಆದ್ರೆ ಇಳಿಯೋ ಹೊತ್ಗೆ ರಷ್ಷಾಗಿದ್ದಾಗ್ಲೇ ಕಂಡೆಕ್ಟರ್ ಚಿಲ್ರೆ ಕೊಡೋದ್ ಬಿಟ್ಟು ಇನ್ನೆಲ್ಲೋ ರಷ್ಷೊಳಗೆ ಹೋಗ್ಬಿಟ್ತಾನೆ. ಇಳಿಯೋ ಗಡಿಬಿಡೀಲಿ ದಿನಾ ಚಿಲ್ರೆ ಖೋತ. ಥೋ ಅಂದ. ಹೂಂ. ಇನ್ನು ಡ್ರೈವರೇ ಕಂಡೆಕ್ಟರೂ ಆಗಿರೋ ಪುಷ್ಪಕ್ ಬಸ್ಸುಗಳಲ್ಲೂ ಅದೇ ಕತೆ. ಸ್ಟಾಪ್ ಬಂದಾಗ ಮುಂದೇ ಬಂದು ಇಳೀಬೇಕಿದ್ರೂ ಒಂದ್ರೂಪಾಯಿ , ಎರಡ್ರುಪಾಯಿ ಚಿಲ್ರೆ ಇಸ್ಕೊಂಡು ಇಳ್ಯೋಕೆ ಒಂಥರಾ ಆಗುತ್ತೆ. ಚಿಲ್ರೆ ಕೊಡ್ರಿ ಅಂದಾಗ ಎಷ್ಟು ಅಂತಾನೆ, ಇಷ್ಟೊಳ್ಳೆ ಬಟ್ಟೆ ಹಾಕಿ ದೊಡ್ಡೋನ ತರ ಕಾಣ್ತೀಯ, ಒಂದ್ರೂಪಾಯಿ ಚಿಲ್ರೆ ಕೇಳೋಕೆ ನಾಚ್ಕೆ ಆಗೋಲ್ವ ಅನ್ನೋ ತರ ನೋಡ್ತಾನೆ. ದಿನಾ ಒಂದೊಂದ್ರೂಪಾಯಿ ಕೊಚ್ಕೊಂಡೋಗ್ತಿದೆ ಅನ್ಸಿದ್ರೂ ಒಂದ್ರೂಪಾಯ್ ಚಿಲ್ರೆ ಅಂತ ಹೆಂಗೆ ಹೇಳೋದು ಅಂತ ಒಂತರಾ ಮುಖ ಮಾಡಿದ ಗುಂಡ. ಹೂಂ ಅರ್ಥ ಆಗುತ್ತೆ ಮಿಸ್ಟರ್ ರೌಂಡ್. ಹಿಂದ್ಗಡೆ ಎಲ್ಲಾ ಹುಡ್ಗೀರ್ ನಿಂತಿರ್ಬೇಕಾದ್ರೆ ಡ್ರೈವರ್ ಹತ್ರ  ಒಂದ್ರುಪಾಯಿ ಚಿಲ್ರೆ ಕೇಳೋಕೆ ನಾಚ್ಕೆ ಆಗೆ ಆಗುತ್ತೆ ಬಿಡಿ ಅಂದ್ಲು ಇಳಾ. ಎಲ್ಲಾ ಗೊಳ್ ಅಂದ್ರು ಒಂದ್ಸಲ.

ಬರೀ ಬಸ್ಸಲ್ಲಿ ಅಲ್ಲ. ಅಂಗ್ಡೀಲೂ ಚಿಲ್ರೆ ಕೊಡಲ್ಲ. ಒಂದು,ಎರಡು ರೂಪಾಯಿಗೆಲ್ಲಾ ಚಾಕಲೇಟ್ ಕೊಡೂದ್ ಹಳೇ ಕತೆ. ಈಗ ಐದ್ರೂಪಾಯಿ ಚಿಲ್ರೆ ಇಲ್ಲ,ಚಾಕ್ಲೇಟ್ ಕೊಡ್ಲಾ ಅಂತ್ರು ಕಾಣಿ ಅಂದ್ಲು ಸರಿ ಅಲಿಯಾಸ್ ಸರಿತಾ. ಸರಿ ಹೇಳೋದ್ ಸರೀ.. ಅಂತ ಎಲ್ಲಾ ರಾಗ ಎಳೆದ್ರು. ಮತ್ತೊಮ್ಮೆ ಗೊಳ್. ನಗುವಿನ ಅಲೆ ಸ್ವಲ್ಪ ತಣ್ಣಗಾದ ಇಳಾ ಮಾತು ಮುಂದುವರಿಸಿದ್ಲು. ಈ ಸಮಸ್ಯೆಗೆ ಏನೂ ಪರಿಹಾರನೇ ಇಲ್ವಾ , ಏನ್ಮಾಡ್ಬೋದು ಮಿಸ್ಟರ್ ರೌಂಡ್ ಅಂತ ಗುಂಡನ್ನ ಮಾತಿಗೆ ಎಳೆದ್ಲು. ಮೊದಲೇ ಶೇಪ್ ಔಟಾದಂತಾಗಿ ತಣ್ಣಗೆ ಕೂತಿದ್ದ ಗುಂಡನ ಮುಖ ಈಗ ಮತ್ತೆ ಅರಳಿದಂತಾಗಿ ಮಾತಿಗೆ ಶುರುವಿಟ್ಟ.. ಇಲ್ಲ ಅಂತೇನಿಲ್ಲ. ಹುಬ್ಳಿ, ಧಾರವಾಡ ಕಡೆ  ಅಂಗಡಿಯವರು ಚಿಲ್ರೆ ಬದ್ಲು ಟೋಕನ್ ವ್ಯವಸ್ಥೆ ಮಾಡಿದಾರೆ ಅಂತ ಓದಿದ ನೆನ್ಪು ಅಂದ . ಓ. ಏನದು ಅಂದ್ರು ಎಲ್ಲ. ಅಂಗಡಿಯವ್ರ ಸಂಘದವ್ರು ತಮ್ಮದೇ ಒಂದಿಷ್ಟು ಪ್ಲಾಸ್ಟಿಕ್ ಟೋಕನ್ಗಳ್ನ ಮಾಡ್ಕೊಂಡಿದಾರೆ. ಒಂದ್ರೂಪಾಯಿ, ಎರಡ್ರೂಪಾಯಿ, ಐದ್ರೂಪಾಯಿ ಹೀಗೆ. ಚಿಲ್ರೆ ಬದ್ಲು ಅದನ್ನೇ ಕೊಡೋದು ಅವ್ರು. ಆ ಸುತ್ತಮುತ್ತಲ ಏರಿಯಾಗಳ ಅಂಗಡಿಗಳವ್ರಿಗೆಲ್ಲಾ ಆ ಟೋಕನ್ಗಳ ಪರಿಚಯ ಇರತ್ತೆ. ಹಂಗಾಗಿ ಮುಂದಿನ ಸಲ ಸಾಮಾನು ತಗೋವಾಗ ಈ ಟೋಕನ್ಗಳು ಬದಲಾಗುತ್ವೆ ಅಂದ. ಓ, ಸೂಪರಲಾ,  ಪ್ರತೀ ಸಲ ಚಿಲ್ರೆ ಇಲ್ದಿದ್ದಾಗ್ಲೂ ಚಾಕ್ಲೇಟ್ ತಗೋಳೋದು ತಪ್ಪತ್ತಲ್ಲ ಮಾರ್ರೆ ಅಂದ ಮಂಜ. ಹೂಂ ಅಂದ್ರು ಎಲ್ಲಾ.ಆದ್ರೆ ಈ ಐಡಿಯಾ ಸರಿಗಿಲ್ಲ ಕಣ್ಲಾ, ನಮ್ಕಡೆನೂ ಅಂಗಡಿಯವ ಚಿಲ್ರೆ ಇಲ್ದಿದ್ದಾಗ ಎರಡು ರೂಪಾಯಿ ಮುಂದಿನ ಸಲ ನೀವೆ ಕೊಡಿ ಅಂತನೋ ಅಥವಾ ಮೂರು ರೂಪಾಯಿ ಮುಂದಿನ ಸಲ ಸಾಮಾನು ತಗೋವಾಗ ಇಸ್ಕೋಳಿ ಅಂತಲೋ ಚುಕ್ತಾ ಮಾಡ್ತಾನೆ. ಇವೆಲ್ಲಾ ಅದೇ ಏರಿಯಾದಲ್ಲಿರೋರಿಗೆ ಓಕೆ. ಆದ್ರೆ ಬೇರೆ ಏರಿಯಾದೋರ ಗತಿ ಏನು. ಇಲ್ಲಿ ಯಾರ ಮನೆಗೋ ಬಂದಾಗ ಈ ಟೋಕನ್ ತಗೊಂಡ ತಪ್ಪಿಗೆ ಪ್ರತೀ ಸಲ ಅಲ್ಲಿಗೆ ಬರ್ಬೇಕಾ ? ಏನ್ ಸೂಪರ್ ಐಡಿಯಾನಪ್ಪ ಇದು ಅಂತ ಕೊಕ್ಕೆ ತೆಗ್ದ ತರ್ಲೆ ತಿಪ್ಪ. ಯಾರಿಗೂ ಏನು ಹೇಳ್ಬೇಕು ಅಂತ ಗೊತ್ತಾಗ್ದೆ ತೆಪ್ಪಗಾದ್ರು.

ನಮ್ಮ ಸರ್ಕಾರದವ್ರೇ ಯಾಕೆ ಚಿಲ್ರೆ ನಾಣ್ಯಗಳ್ನ ಹೆಚ್ಚೆಚ್ಚು ಟಂಕಿಸಿ ಈ ಚಿಲ್ರೆ ಕೊರತೆ ನೀಗಿಸಬಾರ್ದು ? ಅಂದ್ಲು ಇಳಾ. ಸರ್ಕಾರದವ್ರು ಮಾಡುತ್ರು.  ಬಸವಣ್ಣ, ಅಂಬೆಡ್ಕರ್, ಶಿವಾಜಿ ಹೀಗೆ ಸರ್ಕಾರ ಪದೇ ಪದೇ ಟಂಕಿಸೋ ರೂಪಾಯಿ ನಾಣ್ಯಗಳು ಎಲ್ ಹೋತ್ತು ಕಂಡಿದ್ರಾ ಯಾರಾರು ಅಂದ್ಲು ಸರಿತಾ ? ಅಚಾನಕ್ಕಾಗಿ ಮೂಡಿದ ಈ ಪ್ರಶ್ನೆಗೆ ಯಾರಿಗೂ ಉತ್ರ ಹೊಳೀಲಿಲ್ಲ. ಹೇಳೋಕೆ ಅವ್ಳಿಗೂ ಉತ್ರ ಗೊತ್ತಿರ್ಲಿಲ್ಲ. ಸಿಕ್ತೂ ಅಂತನೇ ಇಟ್ಕಳಿ. ಹತ್ತು ಹದಿನೈದು ರೂಪಾಯಿಗೆ ಚಿಲ್ರೆನಾ ಯಾವಾಗ್ಲೂ ಹೊತ್ಕೊಂಡ್ ತಿರ್ಗೂದೂ ಅಸಾಧ್ಯ ಬಿಡಿ, ಮಾರ್ರೆ ಅಂದ ಮಂಜ. ಹೌದೌದು ಅನ್ನೋ ತರ ತಲೆ ಹಾಕಿದ್ರು ಎಲ್ಲರೂ. ಕಾಯಿನ್ನಿನ ಬದ್ಲು ಒಂದ್ರೂಪಾಯಿ, ಎರಡ್ರೂಪಾಯಿ, ಐದ್ರೂಪಾಯಿ ನೋಟುಗಳ್ನ ಹೆಚ್ಚೆಚ್ಚು ಮುದ್ರಿಸಬಹುದು. ಆದ್ರೆ ಪೇಪರಿಗೆ ಮರಗಳ ನಾಶ, ಕಾಯಿನ್ ಬಾಳಿಕೆ ಬಂದಷ್ಟು ದಿನ ಬರದೇ, ಬೇಗ ಹರ್ದೋಗೋ ನೋಟುಗಳು.. ಇವೆಲ್ಲಾ ಯೋಚ್ನೆ ಮಾಡಿದ್ರೆ ಇದೂ ಒಳ್ಳೆಯ ಯೋಚ್ನೆ ಅಲ್ಲ ಅನಿಸುತ್ತೆ ಅಂದ ಗುಂಡ. ಹೌದೆನ್ನುವಂತೆ ತಲೆ ಆಡಿಸಿದ್ರೂ ಅದಕ್ಕೆ ಪರ್ಯಾಯ ಐಡಿಯಾ ಏನು ಕೊಡೋದು ಅಂತ ಹೊಳಿದೇ ಎಲ್ಲಾ ಸ್ವಲ್ಪ ಮೌನವಾಗಿ ಕೂತ್ರು.

ಮೌನ ಮುರಿಯೋ ತರ ಸರಿತಾ ಮತ್ತೆ ಮಾತಿಗಿಳಿದ್ಳು. ನನ್ನತ್ರ ಒಂದು ಮಸ್ತ್ ಐಡಿಯಾ ಇತ್ತು ಕೇಣಿ ಅಂದ್ಲು. ಎಲ್ಲಾ ಹೇಳು ಅನ್ನೋ ಹಾಗೆ ಅವ್ಳ ಮುಖನೇ ನೋಡಿದ್ರು.   ಅಂಗ್ದೀಲಿ, ಬಸ್ಸಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ಸ್ವೈಪಿಂಗ್ ಮೆಷಿನ್ ಇಟ್ರೆ ಹೆಂಗಿರುತ್ತು ಅಂದ್ಲು. ನೂರಾ ಐವತ್ತಮೂರು, ಮುನ್ನೂರ ತೊಂಭತ್ತ ಏಳು.. ಹೀಗೆ ಎಷ್ಟು ರೂಪಾಯಿಯಾದ್ರೂ ಅದರಲ್ಲಿ ಸ್ವೈಪ್ ಮಾಡೂಕಾತ್ತು. ಈಗೆಂತೂ ಹೆಚ್ಚಿನ ಬ್ಯಾಂಕುಗಳಲ್ಲಿ ಕ್ರೆಡಿಟ್ ಕಾರ್ಡು ಸ್ವೈಪ್ ಮಾಡೋದ್ರ ಮೇಲಿದ್ದ ಚಾರ್ಜು ತೆಗ್ದಿರೋದ್ರಿಂದ ದುಡ್ಕೊಡೋಕೂ ಇದ್ಕೂ ಏನೂ ವ್ಯತ್ಯಾಸ ಕಾಂಬೂದಿಲ್ಲ.ಬಸ್ ಕಂಡಕ್ಟ್ರಿಗೂ ಇದೇ ತರದ್ ಒಂದು ಮೆಷೀನ್ ಕೊಡೂದು. ಈಗಿರೋ ಟಿಕೆಟ್ ಮೆಷೀನ್ ತರ. ಟಿಕೆಟ್ಗೆ ದುಡ್ಡು ಎಷ್ಟಾತ್ತೋ ಅಷ್ಟಕ್ಕೆ ಸ್ವಾಪ್ ಮಾಡೂಕಾತ್ತು. ಬಸ್ ಕಂಡಕ್ಟರ್ ಚಿಲ್ರೆ ಚಿಲ್ರೆ ಅಂತ ಮಾರಿ ಕೆಂಪ್ ಮಾಡೂದೂ ತಪ್ಪುತ್ತು. ಹೆಂಗೆ ಅಂದ್ಳು. ಎಲ್ಲರ ಕಣ್ಣುಗಳು ಒಮ್ಮೆ ಮಿಂಚಿದ್ವು. ಸರಿ ಹೇಳಿದ್ ಮೇಲೆ ಸರಿನೇ ಅಂದ್ಲು ಇಳಾ. ಹೌದು ಸರಿ, ಸರಿ.. ಅಂತ ಎಲ್ಲಾ ರಾಗ ಎಳೆದು ನಕ್ರು.

ಐಡಿಯಾ ಏನೋ ಸರಿ. ಆದ್ರೆ ಅದೆಲ್ಲಾ ಆಗಿ ಹೋಗೋದಾ ? ಸ್ವೈಪ್ ಮೆಷೀನು ಅಂದ್ರೆ ಅದ್ಕೆ ನೆಟ್ವಕ್ರೂ, ಇಂಟರ್ನೆಟ್ಟು.. ಮಣ್ಣು ಮಸಿ ಬೇಡ್ವಾ ? ನಮ್ಮಲ್ಲಿ ಕರೆಂಟೇ ನೆಟ್ಟಗಿರುಲ್ಲ. ಅಂತದ್ರಲ್ಲಿ ನೆಟ್ವರ್ಕು, ಮತ್ತೆ ಇದು ಬೇರೆ.. ಹೆಂಗೆ ವರ್ಕೌಟ್ ಆಗುತ್ತೋ ಅಂತ ಕೊಂಕು ತೆಗೆದ ತಿಪ್ಪ. ತಿಪ್ಪನ ಬದ್ಲು ಬೇರೆ ಯಾರಾದ್ರೂ ಈ ಮಾತು ಹೆಳಿದ್ರೆ ಸರಿತಾಗೆ ಸಿಟ್ಟೆಲ್ಲಾ ನೆತ್ತಿಗೇರಿ ಎರಡು ತಪರಾಕಿ ತಟ್ಟೇ ಬಿಡುತಿದ್ಲೋ ಏನೋ.  ಆದ್ರೆ ತಿಪ್ಪನ ಸ್ವಭಾವ ಗೊತ್ತಿದ್ರಿಂದ ಸುಮ್ಮನಾದ್ಲು. ಆದ್ರೂ ಎಲ್ರಿಗೂ ತಿಪ್ಪನ ಮೇಲೆ ಸಿಟ್ಟು ಬಂದಿತ್ತು. ಕೆಲಸ ಆಗ್ಬೇಕು ಅಂದ್ರೆ ಏನಾರೂ ಒಂದು ರೀತಿಗಳಿದ್ದೇ ಇರುತ್ತೆ ಕಣ್ರೀ ತಿಪ್ಪ ಅವ್ರೆ. ಹಿಂದಿನ ಸಲ ಬೆಂಗಳೂರಿಂದ ಬೀರೂರು ತನಕ ನಿಮ್ಮ ಗರ್ಲ್ ಫ್ರೆಂಡ್ ಜೊತೆ ಮಾತಾಡ್ತಾ ಹೋಗಿದ್ರಿ ಅಂತ ಹೇಳ್ತಾ ಇದ್ರಿ ತಾನೆ ? ಫ್ರೆಂಡಿಗೆ ಮಾತಾಡೋಕೆ ನೆಟ್ವರ್ಕು ಇರತ್ತೆ ಅಂದ್ರೆ ಕಂಡಕ್ಟರಿಗೆ ಕಾರ್ಡು ಸ್ವೈಪ್ ಮಾಡೋಕೆ ನೆಟ್ವರ್ಕು ಸಿಗೋಲ್ವಾ ಆ ರೂಟಲ್ಲಿ ಅಂದ್ಲು..ತಿಪ್ಪಂಗೇ ಅನಿರೀಕ್ಷಿತ ಟಾಂಗ್ ಬಿದ್ದಿದ್ದು ನೋಡಿ ಉಳಿದವ್ರಿಗೆಲ್ಲಾ ಆಶ್ಚರ್ಯ ಆಯ್ತು. ತಿಪ್ಪನ ಮುಖ ಇಂಗು ತಿಂದ ಮಂಗನ ಹಂಗಾಯ್ತು.

ಹೌದು. ಮಧ್ಯ ಮಧ್ಯ ನೆಟ್ವರ್ಕು ಇಲ್ದೇ ಹೋದ್ರೂ ನೆಟ್ವರ್ಕು ಸಿಕ್ಕೋ ಕಡೆ ಎಂತೂ ಬಸ್ಸಲ್ಲಿ ಇದನ್ನ ಬಳಸ್ಬೋದು. ಸಿಟಿ ಒಳಗೆ ಓಡಾಡೋ ಐದ್ರೂಪಾಯಿ, ಹರ್ತೂಪಾಯಿ ಚಾರ್ಜಿನ ಬಸ್ಸುಗಳಲ್ಲಿ ಈಗಿರೋ ಕಾರ್ಡ್ ಸ್ವೈಪ್ ತರ ಮಾಡೋದು ಅಷ್ಟು ಪ್ರಾಕ್ಟಿಕಲ್ ಅನಿಸದೇ ಇದ್ರೂ ದೂರ ಪ್ರಯಾಣದ ಬಸ್ಸುಗಳಲ್ಲಿ ಆರಾಮಾಗಿ ಮಾಡ್ಬೋದು ಅಂದ ಗುಂಡ. ಹೂಂ ಹೌದು ಮಾರ್ರೆ, ಈಗ ನಾವು ಚಿಮಣೆಣ್ಣೆ ದೀಪದ ಕಾಲ್ದಲ್ಲೋ ಕಲ್ಲು ಗೀರಿ ಚೆಂಕಿ ಹಚ್ಚೋ ಆದಿವಾಸಿಗಳ ಕಾಲ್ದಲ್ಲೋ ಇಲ್ಲ. ಕರೆಂಟಿಲ್ದಿದ್ರೆ ಬೇಟರಿ ಅಂದ ಮಂಜ. ಬಾಟ ಗೊತ್ತು, ಬೇಟ,ಬೇಟಿ, ಬೇಟೆ ಗೊತ್ತು. ಇದ್ಯಾವ್ದುರಿ ಕರೆಂಟಿಲ್ಲದಿದ್ದಾಗಿನ ಬೇಟೆ ರೀ ಅಂದ್ಲು ಇಳಾ ? ಅದ್ದು ಬೇಟೆ ರೀ ಅಲ್ಲ ಇಳಾ ಅವ್ರೆ ಬ್ಯಾಟರಿ, ಬ್ಯಾಟ್ರಿ,  ರೀಚಾರ್ಚಬಲ್ ಬ್ಯಾಟ್ರಿ ಅಂದ ಗುಂಡ ಮಂಜನ ಸಪೋರ್ಟಿಗೆ ಬರುತ್ತ. ಸರಿಯಪ್ಪ ಪೇಟೇಲೇನೋ ಕರೆಂಟು, ನೆಟ್ಟು, ಬ್ಯಾಟ್ರಿ. ಅಲ್ಲಿ ಸಾವಿರಗಟ್ಲೆ ವ್ಯವಹಾರನೂ ಆಗತ್ತೆ ಅಂತಿಟ್ಕೊಳ್ಳೋಣ. ಹಂಗಾಗಿ ಅವ್ರಿಗೆ ಈ ಸ್ವ್ಯಾಪು ಲಾಭನೂ ತರ್ಬೋದು. ಆದ್ರೆ ಹಳ್ಳಿ ಕಡೆ, ಕರೆಂಟು.. ನೆಟ್ಟು ಅಂತ ಮತ್ತೆ ಕೇಳ್ಲೋ ಬೇಡ್ವೋ ಅನ್ನೋ ತರ ರಾಗ ತೆಗೆದ ತಿಪ್ಪ. ಹಳ್ಳಿ ಕಡೆ ನಮ್ಮ ಕಡ ಸಿಸ್ಟಮ್ಮು ಇದ್ದೇ ಇತ್ತಲ್ಲ ತಿಪ್ಪಣ್ಣ ಅಂದ್ಲು ಸರಿ.  ಹಳ್ಳಿ ಕಡೆ ಕಡವೆ ಅನ್ನೋ ಪ್ರಾಣಿ ಇರುತ್ತೆ. ಅದ್ನ ಬೇಟೆ ಆಡ್ತಾರೆ ಅಂತ ಕೇಳಿದ್ದ್ರೆ. ಈ ಬೇಟೆಗೂ, ಚಿಲ್ರೆ ಸಮಸ್ಯೆಗೂ ಏನು ಸಂಬಂಧ ಅಂದ್ಲು ಏನೂ ಅರ್ಥವಾಗದ ಇಳಾ. ಮುಗುಳ್ನಕ್ಕ ಮಂಜನೇ ಉತ್ತರಿಸಿದ. ಕಡ ಅಂದ್ರೆ ಸಾಲ ಅಂತ ಇಳಾ ಅವ್ರೆ. ಎರಡ್ರೂಪಾಯಿ ಮುಂದಿನ ಸಲ ಕೊಡಿ, ಮೂರು ರೂಪಾಯಿ ಮುಂದಿನ್ಸಲ ಇಸ್ಕೋಳಿ.. ಅದೇ ಆವಾಗ ತಿಪ್ಪೂ ಭಾಯಿ ಹೇಳ್ತಾ ಇದ್ರಲ್ಲ ಅದು ಅಂದ ಧ್ವನಿಗೂಡಿಸಿದ ಗುಂಡ.  ಮಕ್ಳಾ ಕೊನೆಗೂ ನನ್ನ ಬುಡಕ್ಕೆ ಬಂದು ಬಿಟ್ರಿ. ನಡೀರಿ ನಡೀರಿ ಕ್ಲಾಸಿಗೆ ಟೈಮಾಗ್ತಾ ಬಂತು. ಒಂದಿನನಾದ್ರೂ ಸರಿಯಾದ ಟೈಮಿಗೆ ಕ್ಲಾಸಿಗೆ ಹೋಗಣ ಅಂದ.. ಎಲ್ಲಾ ಮತ್ತೆ ನಗ್ತಾ ಮೇಲೆದ್ದು ಕ್ಲಾಸಿನ ಕಡೆ ಹೆಜ್ಜೆ ಹಾಕಿದ್ರು.

Sunday, September 8, 2013

ನಾನೋದಿದ ಪುಸ್ತಕ "ಭಿತ್ತಿ" - ಎಸ್.ಎಲ್ ಭೈರಪ್ಪ

ಒಂದು ಪುಸ್ತಕ ಇಷ್ಟ ಆಗ್ಬೇಕು ಅಂದ್ರೆ ಆ ಲೇಖಕನ ಪಕ್ಕಾ ಅಭಿಮಾನಿ ಆಗಿರ್ಬೇಕು ಅಂತೇನಿಲ್ಲ. ಲೇಖಕನ ಒಂದು ಪುಸ್ತಕ ಇಷ್ಟ ಆಯ್ತು ಅಂದ್ರೆ ಅವನ ಎಲ್ಲಾ ಪುಸ್ತಕಗಳು ಇಷ್ಟ ಆಗ್ಬೇಕು ಅಂತನೂ ಇಲ್ಲ. ಆ ಲೇಖಕ ಹಾಗೆ ಹೀಗೆ, ಆ ಪಂಥ, ಈ ಪಂಥ ಅಂತೆಲ್ಲಾ ಪೂರ್ವಾಗ್ರಹಗಳನ್ನ ಇಟ್ಕೊಳ್ದೇ ಪುಸ್ತಕವನ್ನು ಎಲ್ಲದರ ತರಹದ ಸುಮ್ನೆ ಒಂದು ಪುಸ್ತಕ ಅನ್ನೋ  ಓದೋ ಪ್ರಯತ್ನ ಮಾಡಿದ್ರೆ ಪುಸ್ತಕ ಓದೋ ಸವಿ ಸವಿಯಬಹುದೇನೋ ಅಂತೊಂದು ಅಭಿಪ್ರಾಯ. ಈ ಪೀಠಿಕೆಗಳನ್ನೆಲ್ಲಾ ಬದಿಗಿಟ್ಟು ಹೇಳೋದಾದ್ರೆ , ಇವತ್ತು ಹೇಳೊಕೆ ಹೊರಟಿರೋ ಬುಕ್ಕು ಇತ್ತೀಚೆಗೆ ಎತ್ಕೊಂಡ ಪುಸ್ತಕ ಭೈರಪ್ಪನವರ ಆತ್ಮಕಥನ ಭಿತ್ತಿ.

ಸಂತೇಶಿವರ ಅನ್ನೋ ಊರಲ್ಲಿ ಹುಟ್ಟೋ ಭೈರಪ್ಪನವರಿಗೆ ಹುಟ್ಟಾ ಕಷ್ಟಗಳು.ಶ್ಯಾನುಭೋಗಿಕೆಯ ಮನೆತನ. ಆದರೆ ಅಪ್ಪ ಪಕ್ಕಾ ಆಲಸಿ, ಜವಾಬ್ದಾರಿಯಿಲ್ಲದವ. ಅಮ್ಮ ಊರೆಲ್ಲಾ ಸುತ್ತಿ ಕಷ್ಟಪಟ್ಟು ಲೆಕ್ಕ ಬರೆಯೋದು. ಊರವರು ವರ್ಷಾಂತ್ಯದಲಿ ತಂದು ಕೊಟ್ಟ ರಾಗಿಯನ್ನ ಮಾರಿ ಅದರ ದುಡ್ಡು ಖರ್ಚಾಗೋವರೆಗೂ ಅರಸೀಕೆರೆಯಲ್ಲಿದ್ದು ಹೋಟೆಲಿನಲ್ಲಿ ತಿನ್ನೋಕೆ ಅಲ್ಲಿ, ಇಲ್ಲಿ ಅಂತ ದುಂದು ಮಾಡಿ ಬರುವಂತಹ ಅಪ್ಪ. ಬುಡದಿಂದ ಪುಸ್ತಕದ ಮಧ್ಯಭಾಗದಲ್ಲಿ ಅಪ್ಪನ ದೇಹಾಂತ್ಯವಾಗೋ ತನಕವೂ ಅಪ್ಪನ ಗೋಳು ಹೀಗೆ ಮುಂದುವರೆಯುತ್ತದೆ. ಅವನ ಗೋಳು ಒಂದಲ್ಲಾ ಎರಡಲ್ಲ. ಪ್ರೈಮರಿಯಿಂದ ಮಾಧ್ಯಮಿಕಕ್ಕೆ ಅಂತ ಬೇರೆ ಕಡೆ ಶಾಲೆಗೆ ಹೋಗಬೇಕಾಗಿರತ್ತೆ. ಖರ್ಚಿಗೆ ಅಂತ ಸಂತೆಗೆ ಹೋಗಿ ಶರಬತ್ತು ಮಾರಿ ೨೫ ರೂಪಾಯಿ ಕೂಡಿಸಿರುತ್ತಾನೆ ಮಗ. ಮಗ ಎಲ್ಲೋ ಹೋದ ಸಂದರ್ಭದಲ್ಲಿ ಆ ಇಪ್ಪತ್ತೈದು ರೂಪಾಯಿ ಲಪಟಾಯಿಸಿ ಅದಕ್ಕೆ ಏನೇನೋ ತರ್ಕದ ಸಮರ್ಥನೆ ಕೊಡ್ತಿರ್ತಾನೆ ಅಪ್ಪ. ಮುಂದೆ ಬೇರೆ ಊರಲ್ಲಿ ಭಿಕ್ಷಾನ್ನ ಮಾಡಿ ಶಾಲೆಗೆ ಹೋಗ್ತಿರುತ್ತಾನೆ ಮಗ.ಅಲ್ಲಿಗೂ ಬಂದ ಅಪ್ಪ ದುಡ್ಡು ಕೇಳುತ್ತಾನೆ. ಇದ್ದರೆ ತಾನೆ ಕೊಡುವುದು ? ಮಗ ಭಿಕ್ಷಾನ್ನಕ್ಕೆ ಹೋಗುತ್ತಿದ್ದ ಬೀದಿ ಬೀದಿಗೆ ಹೋಗಿ ಮಗನಿಗೆ ಇನ್ನೂ ಉಪನಯನವಾಗಿಲ್ಲ, ಯಾರೂ ಭಿಕ್ಷೆ ಕೊಡಬೇಡಿ ಅಂತ ಸಾರಿ, ಇಲ್ಲಸಲ್ಲದ್ದನ್ನೆಲ್ಲಾ ಅಪಪ್ರಚಾರ ಮಾಡಿ ಸಿಗೋ ಹೊತ್ತಿನ ಊಟವನ್ನೂ ದಕ್ಕದಂತೆ ಮಾಡುತ್ತಾನೆ. ಮುಂದೆ ಭೈರಪ್ಪನ ತಾಯಿ ಸತ್ತಾಗ ಅದರ ಕರ್ಮ ಮಾಡೋ ಜವಾಬ್ದಾರಿಯನ್ನೂ ವಹಿಸಿಕೊಳ್ಳದೇ ಎಲ್ಲೋ ತಲೆಮೆರೆಸಿಕೊಳ್ಳುತ್ತಾನೆ ಅಪ್ಪ. ಮಗನೇ ಎಲ್ಲೋ ಸಾಲ ಸೋಲ ಮಾಡಿ , ಊರೂರು ಅಲೆದು ಮನೆಗೆ ನಾಲ್ಕು ಕಾಯಿಯಂತೆ ಪಡೆದು, ಅದನ್ನು ಮಾರಿ ದುಡ್ಡು ಕೂಡಿಸಿ ತಾಯಿಯ ಶ್ರಾದ್ದ ಮಾಡುತ್ತಾನೆ. ಎಲ್ಲೂ ಇಲ್ಲದ ಅಪ್ಪ, ಊಟಕ್ಕೆ ಸರಿಯಾಗಿ ಬಂದು ಊಟಕ್ಕೆ ಕೂತುಬಿಡುತ್ತಾನೆ.ಮುಂದೆಯೂ ಅಲ್ಲಿ ದುಡ್ಡು ಕೊಡು, ಇಲ್ಲಿ ಕೊಡು ಅಂತ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವುದೇ ಆ ಪಾತ್ರದ ಕೆಲಸ.

ಅಪ್ಪನಿಗೆ ಸರಿಯಾಗಿ ಒಬ್ಬ ಅಜ್ಜಿ. ಆಕೆಗೆ ಮಗ ಮಾಡೋದೆಲ್ಲವೂ ಸರಿ. ಭೈರಪ್ಪನದ್ದೆಲ್ಲವೂ ತಪ್ಪು. ಭೈರಪ್ಪನಿಗೆ ಆತನ ತಂಗಿ ಲಲಿತೆಗೆ ಅವಳು ಅನ್ನದೇ ಇದ್ದ ದಿನಗಳಿಲ್ಲ. ಹುಟ್ಟಿಸಿದ ಅಪ್ಪನನ್ನು ಸಾಕುವುದು ನಿನ್ನ ಕರ್ತವ್ಯವಲ್ಲವೇ ಎಂದು ಶಾಲೆ ಓದೋ ಹುಡುಗನಿಗೆ ನ್ಯಾಯ ಹೇಳೋ ಅಂತ ಮನಸ್ಸು ಅವಳದ್ದು!!

ಕತೆಯಲ್ಲಿ ಬರೋ ಇನ್ನೊಬ್ಬ ವಿಲನ್ ಮಾವ. ಭೈರಪ್ಪನಿಗೆ ನೀರಲ್ಲಿ ಈಜೋ ಹುಚ್ಚು. ಭೈರಪ್ಪನ ಅಣ್ಣ ರಾಮಣ್ಣ ಕಾಲರಾ ಬಂದು ಸತ್ತು ಹೋಗಿರುತ್ತಾನೆ. ಒಟ್ಟಿಗೇ ಮಕ್ಕಳನ್ನು ಕಳೆದುಕೊಂಡ ಭೈರಪ್ಪನ ತಾಯಿಗೆ ಈತನೂ ಎಲ್ಲಿ ಸತ್ತು ಹೋಗುತ್ತಾನೋ ಎಂಬ ಭಯದಲ್ಲಿ ಮಾವನ ಮನೆಗೆ ಓದೋಕೆ ಕಳಿಸುತ್ತಾಳೆ. ಅಲ್ಲಿಯೋ ಭೈರಪ್ಪನಿಗೆ ನಿತ್ಯ ಚಿತ್ರಹಿಂಸೆ. ಮನೆ ಕೆಲಸ ಎಲ್ಲಾ ಮಾಡಿಸಿ, ಹೊಟ್ಟೆಗೂ ಸರಿಯಾಗೆ ಹಾಕದೇ ಸತಾಯಿಸೋ ಅತ್ತೆ. ಎಲ್ಲದಕ್ಕೂ ದೊಣ್ಣೆ ಹಿಡಿದೇ ಮಾತನಾಡಿಸೋ ಮಾವ. ಸಾಲದೆಂಬಂತೆ ಮಾವನಿಗೆ ದುಡ್ಡು ತಿನ್ನೋ ಚಟ. ಭೈರಪ್ಪನಿಗೆ ಪರೀಕ್ಷೆಗೆ ಕಟ್ಟೋಕೆ ಅಂತ ಅವರಮ್ಮ ಕೊಟ್ಟಿರೋ ದುಡ್ಡನ್ನೂ ಬಿಡದೇ ತಿನ್ನುತ್ತಾನೆ ಮಾವ ! ನಂತರ ಭೈರಪ್ಪನ ಹೆಸರೇಳಿ ಅವನ ತಂಗಿ ಮದುವೆ ಸಮಯದಲ್ಲೂ ಬಿಡದೇ ದುಡ್ಡು ನುಂಗುವಂತಹ ನೀಚ ಮನಸ್ಥಿತಿ ಮಾವನದು. ದನದ ಕೊಟ್ಟಿಗೆಯಿಂದ ದೇವಸ್ಥಾನದ ಪಡಿಚಾರಿಕೆಯವರೆಗೆ ಎಲ್ಲಾ ಕೆಲಸ ಮಾಡಲೂ ಭೈರಪ್ಪ ಬೇಕು ಮಾವನಿಗೆ. ತಿಳಿಯದ ಜನರಿಗೆ ಆ ಶಾಂತಿ ಈ ಶಾಂತಿ ಅನ್ನುವುದು. ಬೆಳಬೆಳಗ್ಗೆಯೇ ಅವರ ಮನೆಗೆ ಹೋಗೋದು. ಅವರನ್ನೆಲ್ಲಾ ಅದು ತನ್ನಿ ಇದು ತನ್ನಿ ಅಂತ ಮನೆಯಿಂದ ಹೊರಗೆ ಅಟ್ಟೋದು. ಮನೆಯಲ್ಲಿದ್ದ ಬೆಲ್ಲ, ದುಡ್ಡು ಹೀಗೆ ಕದಿಯೋದು ಮಾವನ ಕೆಲಸ. ರಾತ್ರೆಯಾದಾಗ ಎಲ್ಲಿಯದೋ ಎಳನೀರು ಇಳಿಸೋದು, ಇನ್ನೆಲ್ಲೋ ಕದಿಯೋದು.. ಹೀಗೆ ಮಾವ ಮಾಡದ ಕೆಲಸವಿಲ್ಲ. ಇಷ್ಟೆಲ್ಲಾ ಕಳ್ಳ ಕೆಲಸಗಳಿಗೂ ಭೈರಪ್ಪನ ನೆರವು ಬೇಕು.. ಒಟ್ಟಿನಲ್ಲಿ ಭೈರಪ್ಪ ಆ ಸಮಯದಲ್ಲಿ ರಕ್ತಹೀನತೆಯಿಂದಲೋ, ನಿದ್ರಾಹೀನತೆಯಿಂದಲೋ ಸಾಯದೇ ಇದ್ದಿದ್ದೇ ಹೆಚ್ಚು. ಬೇರೆಯವರ ಮನೆಯಲ್ಲಿದ್ದು ಓದೋದು ಎಷ್ಟು ಕಷ್ಟ ಅನ್ನೋದನ್ನ ಮನ ಮಿಡಿಯುವಂತೆ ವರ್ಣಿಸಿದ್ದಾರೆ. ಮುಂದೆ ತನ್ನ ತಂಗಿಗೆ ಸಂಬಂಧ ನೋಡುವ ಸಂದರ್ಭ ಬರುತ್ತದೆ. ಎಲ್ಲಾ ಸೆಟ್ಟಾಯಿತು ಎಂದು ಭೈರಪ್ಪ ಸಂತಸಪಡುವ ಹೊತ್ತಿನಲ್ಲೇ ಸಂಬಂಧದ ಸುದ್ದಿಯೇ ನಿಂತು ಹೋಗುತ್ತೆ. ಎಲ್ಲೋ ಜಾತ್ರೆಗೆ ಮಾವ , ಅತ್ತೆ ಬಂದಿದ್ದಾರೆ ಎಂದು ಸುದ್ದಿ ತಿಳಿದು ಅಲ್ಲಿಗೆ ಬರೋ ಭೈರಪ್ಪನಿಗೆ ಅವರು ತನ್ನ ತಂಗಿಯನ್ನು ಜವಾಬ್ದಾರಿಯಿಲ್ಲದೇ ಅಲ್ಲೇ ಬಿಟ್ಟು ಹೋದ ಕತೆ ತಿಳಿಯುತ್ತೆ ! ಮಾವ ಅಂದರೆ ಹೀಗಿರಬೇಕು !!

ಇದ್ದಿದ್ದರಲ್ಲಿ ಕಲ್ಲೇಗೌಡರದು ಸಚ್ಚಾರಿತ್ರ್ಯ. ಭೈರಪ್ಪನಿಗೆ ಕಷ್ಟವಾದಾಗಲೆಲ್ಲಾ ನೆರವಿಗೆ ಧಾವಿಸೋರು ಅವರೇ. ಭೈರಪ್ಪನ ತಾಯಿಯ ಸಂಸ್ಕಾರದ ಸಮಯದಲ್ಲಿ, ಆಮೇಲೆ ಅವನು ಹೈಸ್ಕೂಲಿಗೆ ಸೇರೋ ಸಮಯದಲ್ಲಿ ದುಡ್ಡಿಲ್ಲದೆ ಬಂದಾಗ ಮನೆ ಮನೆಗೆ ದಮ್ಮಡಿ ಹೊಡೆಸಿ ಪ್ರತಿ ಮನೆಯಿಂದ ನಾಲ್ಕು ಕಾಯಿ, ಐವತ್ತು ಪೈಸೆ ಹೀಗೆ ದುಡ್ಡು ಹೊಂದಿಸಿಕೊಡುವವರು ಅವರು. ಅವರ ನೆರೆವೂ ಇಲ್ಲದಿದ್ದರೆ ಚಿಂತಾಜನಕ ಪರಿಸ್ಥಿತಿ.
 
ಆಮೇಲೆ ಬರೋದು ದೇವರಯ್ಯನವರು. ಅವರ ಮಗನನ್ನು ಭೈರಪ್ಪನ ಅಮ್ಮನೇ ಎದೆಹಾಲುಣಿಸಿ ಸಾಕಿರುತ್ತಾರೆ. ಅಷ್ಟಿದ್ದರೂ ಆ ದೇವರಯ್ಯನವರ ಹೆಂಡತಿಗೆ ತನ್ನ ಗಂಡ ಭೈರಪ್ಪನಿಗೆ ಸಹಾಯ ಮಾಡೋದು ಇಷ್ಟವಿಲ್ಲ. ಒಂದೆರಡು ಬೊಗಸೆ ರಾಗಿ ಕೊಡಲು ಹೋಗಿದ್ದಕ್ಕೆ ಗಂಡ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದಾನೆ ಎಂದು ದೊಡ್ಡ ಗಲಾಟೆಯೆಬ್ಬಿಸಿದ ಪುಣ್ಯಾತ್ಮೆ ಅವಳು.
ಮುಂದೆ ಬರೋ ಮತ್ತೊಂದು ಪಾತ್ರ ಸತ್ಯನಾರಾಯಣ. ಭೈರಪ್ಪನೇ ಓಡಾಡಿ ಸತ್ಯನಾರಾಯಣನಿಗೆ ಶ್ಯಾನುಭೋಗಿಕೆ ಕೊಡಿಸಿರುತ್ತಾನೆ. ಅವನ ಮನೆಯಲ್ಲೇ ಭೈರಪ್ಪನ ತಂಗಿ ಅಡಿಗೆ ಮಾಡಿಕೊಂಡು ಒಂದು ಮೂಲೆಯಲ್ಲಿ ಇರುತ್ತಾಳೆ. ಮುಂದೆ ಆಕೆಗೆ ಸಂಬಂಧ ನೋಡುವ ಸಂದರ್ಭದಲ್ಲಿ ಭೈರಪ್ಪ ತಾನು ಹೇಗೇಗೋ ಕೂಡಿಟ್ಟ ದುಡ್ಡನ್ನೆಲ್ಲಾ ತಂದು ಕೊಡುತ್ತಾನೆ. ಸತ್ಯನಾರಾಯಣ ಆ ದುಡ್ಡನ್ನೆಲ್ಲಾ ನುಂಗಿ ಹಾಕಿ ಬಂದ ಸಂಬಂಧಗಳನ್ನು ಸುಳ್ಳು ಹೇಳಿ ಮುರಿಯುತ್ತಾ ಕಾಲ ಹರಣ ಮಾಡತೊಡಗುತ್ತಾನೆ.

ಮುಂದೆ ಭೈರಪ್ಪನೇ ಎಮ್ ಎ ಓದೋ ಹೊತ್ತಿನಲ್ಲಿ ತಂಗಿ ಲಲಿತೆಯ ಮದುವೆ ಮಾಡುತ್ತಾನೆ. ಆದ್ರೆ ಭಾವ ಇಸ್ಪೀಟ್ ಲಂಪಟ. ಅವನಿಂದಾಗೋ ಗೋಳುಗಳು.ಅವನಿಗೆ ಅಂದ ಭೈರಪ್ಪ ಜಮೀನು ಕೊಡಿಸಿದರೂ ಆತ ಇಸ್ಪೀಟಿಗೆ ಮತ್ತೆ ದಾಸನಾಗೋದು.. ಹೀಗೆ ಅವನದ್ದೂ ಒಂದು ಗೋಳಿನ ಕತೆ.


ಇದರ ಮಧ್ಯೆ ಬರೋದು ಭೈರಪ್ಪನ ಸ್ವಾಮಿ ಮೇಷ್ಟ್ರು, ಅಯ್ಯಂಗಾರ್ ಮಾಷ್ಟ್ರು ಹೀಗೆ ಹಲವಾರು ಮಾಸ್ತರುಗಳು. ಸ್ವಾಮಿ ಮಾಸ್ತರ ಸಿಗರೇಟು ಕತೆ, ಪೇಪರ್ ಲೀಕ್ ಮಾಡೋ ಕತೆ, ಇನ್ನೊಂದು ಮಾಸ್ತರ ಜೊತೆ ನುಗ್ಗೇಹಳ್ಳಿಯ ಅವರ ತೋಟದ ಬಾವಿಯಲ್ಲಿ ಈಜು ಕಲಿತ ಕತೆ ಹೀಗೆ ನುರೆಂಟು ಕತೆಗಳು ಮಧ್ಯ ಮಧ್ಯ. ಅಯ್ಯಪ್ಪಾ ಅದೆಷ್ಟೆಂದು ಮಾಸ್ತರುಗಳು. ಆ ಮಾಸ್ತರು ಹೀಗೆ ಪೇಟ ಧರಿಸ್ತಿದ್ರು, ಕುಂಕುಮ ಇಡ್ತಿದ್ರು, ಕರಿ ಆಯ್ಯಂಗಾರಿ.. ಹೀಗೆ ಪುಟಕ್ಕೆರೆಡು ಪಾತ್ರಗಳು !! ಅವರು ಮೊದಲನೆ ತರಗತಿಯಿಂದ ಪಿ ಎಚ್ಡಿ ಓದೋ ತನಕ ಸಿಕ್ಕ ಮಾಸ್ತರಗಳ ಬಗ್ಗೆ ಒಬ್ಬರನ್ನೂ ಬಿಡದೇ ವರ್ಣಿಸಿದ್ದಾರೆ. ಅವರಲ್ಲಿ ಶಾಂತಮ್ಮನವರು, ತಿರುಮಲಾಚಾರ್ಯರದ್ದು ಸ್ವಲ್ಪ ತೂಕದ ಪಾತ್ರ.

ಬಾಲ್ಯದಲ್ಲಿ ಒಂದು ಅಂಗಿ ಚಡ್ಡಿಯಲ್ಲೇ ಕಳೆದು, ಬಳಪ, ಪೆನ್ಸಿಲ್ಲಿಗೆ ಗತಿಯಿಲ್ಲದಂತ ಸ್ಥಿತಿ, ಅವರಿಗಿದ್ದ ನಾಟಕದ ಪದಗಳ ಹುಚ್ಚು, ನಾಟಕದ ಕತೆ ಹೇಳಿ ಒಂದು ರಜಾದಲ್ಲಿ ೨೫ ರೂಪಾಯಿ ಸಂಪಾದಿಸಿದ ಕತೆ, ಊದುಬತ್ತಿ ಮಾರಿದ ಕತೆ  ಹೀಗೆ ಅಲೆಮಾರಿಯಂತೆ ಊರೂರು ಸುತ್ತಿದ ಹಲವು ಕತೆಗಳು ಬರುತ್ತದೆ.ಆಮೇಲೆ ಪೈಲ್ವಾನರ ಕುಸ್ತಿ ನೋಡುತ್ತಾ ನೋಡುತ್ತಾ ಅದರಲ್ಲೇ ಅವರ ಕಾದಂಬರಿ ಭೀಮಕಾಯ ತಯಾರಾದ ಪರಿಯನ್ನೂ ವರ್ಣಿಸಿದ್ದಾರೆ.ಹೀಗೆ ಒಮ್ಮೆ ಒಬ್ಬ ಸಂತೇಶಿವರದವ ಇವರು ಓದುತ್ತಿದ್ದ ಊರಿಗೆ ಬರುತ್ತಾನೆ. ಬೆಂಗಳೂರಿಗೆ ಹೋಗ್ತೀನಿ ಮಿಲಿಟರಿಗೆ ಸೇರ್ಬೇಕು ಅಂತ ಅವನಾಸೆ. ಅವನ ಜೊತೆಗೆ ಹೊರಟ ಇವರ ದುಡ್ಡನ್ನು ಒಬ್ಬ ಲಪಟಾಯಿಸುತ್ತಾನೆ. ಅತ್ತ ಆರ್ಮಿಯ ಕೆಲಸವೂ ಸಿಗೋಲ್ಲ. ವಾಪಾಸ್ ಬರೋಕೂ ದುಡ್ಡಿರೋಲ್ಲ.ಈ ತರ ಮೋಸ ಹೋದ ಘಟನೆಗಳು ಒಂದೆರಡಲ್ಲ. ಆಮೇಲೆ ಹೋಟೇಲ್ ಸೇರ್ಬೇಕು ಅಂತ ಧಾರವಾಡಕ್ಕೆ ಹೋಗಿ, ಅಲ್ಲಿ ಹೋಟೇಲುಗಳೆಲ್ಲಾ ಬಾಗಿಲು ಹಾಕಿದ್ದರಿಂದ ರಾಣೆಬೆನ್ನೂರಿಗೆ ಹೋಗಿ.. ಅಲ್ಲಿಂದ ಮುಂಬೈಗೆ ಹೋಗಿ .. ಅಲ್ಲಿ ಕೂಲಿಯವರ ಜೊತೆ ಬದುಕಿ,ಅಲ್ಲೇ ಟಾಂಗಾ ಗಾಡಿ ಲೈಸನ್ಸು ಪಡೆಯೋ ಮಟ್ಟಕ್ಕೆ ಬರುತ್ತಾರೆ. ಅಷ್ಟರಲ್ಲಿ ಒಂದು ವರ್ಷವೇ ಕಳೆದುಹೋಗಿರುತ್ತೆ. ಆದರೆ ಅಷ್ಟರಲ್ಲಿ ತಮ್ಮ ಗುರಿ ಓದೋದು, ಟಾಂಗಾ ಗಾಡಿಯಲ್ಲ ಅಂತ ಮತ್ತೆ ಮೈಸೂರಿಗೆ ಮರಳುತ್ತಾರೆ.

ಮೈಸೂರಿನ ಓದು, ಅಲ್ಲಿನ ರಾಜಕೀಯ, ಅನಂತರದ ಓದು ಅಲ್ಲಿ ಮತ್ತೆ ರಾಜಕೀಯ, ಭಾಷಣ ಸ್ಪರ್ಧೆಗಳಲ್ಲಿ ಇವರಿಗೆ ಬರುತ್ತಿದ್ದ ಬಹುಮಾನಗಳು, ಅಲ್ಲಿ ಮತ್ತೆ ರಾಜಕೀಯ ಹೀಗೆ ತರ ತರದ ರಾಜಕೀಯಗಳು. ಕೊನೆಗೆ ಕೀರ್ತಿನಾಥ ಕುರ್ತಕೋಟಿಯವರ ಮುನ್ನುಡಿ ಮತ್ತು ಪ್ರಕಾಶನಗಳ ರಾಜಕೀಯ,ಯಪ್ಪಾ.. ಹೀಗೂ ಉಂಟೆ ಅನಿಸುತ್ತೆ. ಆಮೇಲೆ ಗುಜರಾತ್, ದೆಲ್ಲಿಗೆ ಹೋಗಿ ಅಲ್ಲಿ ಸೇವೆ ಸಲ್ಲಿಸೋ ಇವರು ಕರ್ನಾಟಕಕ್ಕೆ ಬಂದಾಗ ಇಲ್ಲಿನ ನವ್ಯ, ನವೋದಯ, ಬಂಡಾಯ, ದಲಿತ, ಮಹಿಳಾ ಸಾಹಿತ್ಯಗಳೆಂಬ ಹೊಡೆದಾಟಗಳು. ಒಬ್ಬರು ಇನ್ನೊಬ್ಬರನ್ನು ಮೂಲೆಗುಂಪು ಮಾಡೋ ಪ್ರಯತ್ನಗಳು.. ಅಬ್ಬಬ್ಬಾ.. ಸಾಹಿತಿ ಅಂದ್ರೆ ಸುಮ್ನೇ ತನ್ನ ಪಾಡಿಗೆ ಸೃಜನಶೀಲರಾಗಿದ್ದರೆ, ಮತ್ತೊಬ್ಬ ಸೃಜನಶೀಲನನ್ನು ಪ್ರೋತ್ಸಾಹಿಸುತ್ತಾ ಇದ್ದರೆ ಸಾಲದೇ .. ತಮ್ಮದೇ ಸರಿಯೆನ್ನೋ ರಾಜಕೀಯ, ಗುಂಪುಗಾರಿಕೆ ಮಾಡಬೇಕೇ ಎನ್ನೋ ಪ್ರಶ್ನೆ ಎಷ್ಟೋ ಸಾರಿ ಕಾಡುತ್ತದೆ. ಕ್ಲಾಸಲ್ಲಿ ಫೇಲಾಗೋ ಹಂತದಿಂದ ಯೂನಿವರ್ಸಿಟಿ ಗೋಲ್ಡ್ ಮೆಡಲ್ ಹೊಡೆಯೋ ತನಕ ಅವರು ಬೆಳೆದು ಬಂದ ಪರಿ, ಎದುರಿಸಿದ ಕಷ್ಟಗಳು.. ಹೀಗೆ ಎಷ್ಟೋ ಕತೆಗಳು.. ಬರೆದರೆ ಮುಗಿಯದಷ್ಟು.. ಆ ಪುಸ್ತಕವನ್ನು ಓದಿಯೇ ಅದನ್ನು ಆನಂದಿಸಬೇಕು.