Tuesday, March 25, 2014

ಬೆಂಗಳೂರ್ಯಾಕೆ ಬಿಸಿ ಬಿಸಿ ?



ಉಷ್ಣಾಂಶ ಮೂವತ್ತೈದು ದಾಟಿ ಬೆಂದಕಾಳೂರಿನ ಜನರೆಲ್ಲಾ ಸೆಖೆ ಸೆಖೆಯೆಂದು ಬೊಬ್ಬೆ ಹಾಕುವಂತಾಗಿದೆ. ಮಾರ್ಚ್ ಮೂರನೇ ವಾರದಲ್ಲೇ ತಾಳಲಾರನೀ ಸೆಖೆ ಯಾವಾಗ ಬರುತ್ತೋ ಮಳೆಗಾಲ ಎನ್ನುವಂತಾಗಿದೆ. ಬೆಂಗಳೂರಂದ್ರೆ ಉದ್ಯಾನನಗರಿ ಇಲ್ಲಿ ಯಾವತ್ತೂ ಮೂವತ್ತು ದಾಟಿದ್ದೇ ಇಲ್ಲ ತಾಪ. ಈಗ ಕಾಲ ಕೆಟ್ಟೋಯ್ತಪ ಅಂತ ಹಿರಿಯರೆಲ್ಲಾ ಶಾಪ ಹಾಕುವಂತಾಗಿದೆ. ಬೇಸಿಗೆಯೆಂದ್ರೆ ಸೆಖೆ ಸಹಜವಪ್ಪಾ. ಆದ್ರೆ ಈ ಸಲ ಸ್ವಲ್ಪ ಜಾಸ್ತಿನೇ ಸೆಖೆ ಅನಿಸ್ತಿದೆ ಅಲ್ವಾ ಅನ್ನೋ ಅಭಿಪ್ರಾಯದ ಜೊತೆ ಬೆಂಗಳೂರಿನ ಸೆಖೆ ಹೀಗೆ ಇದ್ದಕ್ಕಿದ್ದಂಗೆ ಏರಿದ್ದೆಂಗೆ ಅನ್ನೋ ಪ್ರಶ್ನೆಯೂ ಕೆಲವರಲ್ಲಿ. ಈ ಪ್ರಶ್ನೆಗಳಿಗೊಂದು ಉತ್ತರ ಹುಡುಕೋ ಪ್ರಯತ್ನವೇ ಈ ಲೇಖನ.

ಬೆಂಗಳೂರಿನ ಸೆಖೆ ಜಾಸ್ತಿಯಾಗಿದ್ದಕ್ಕೆ ಹಲವು ಕಾರಣ ಕೊಡ್ತಾರೆ. ಅದರಲ್ಲಿ ಮೊದಲನೆಯದು ಹೀಟ್ ಐಲ್ಯಾಂಡ್ ಎಫೆಕ್ಟ್ ಅಥವಾ ಉಷ್ಣ ದ್ವೀಪ ಪ್ರಭಾವ.

ಉಷ್ಣದ್ವೀಪ ಪ್ರಭಾವ:
ನಗರವೊಂದರ ತಾಪ ಅದರ ಸುತ್ತಮುತ್ತಲಿರೋ ಹಳ್ಳಿಗಳಿಗಿಂತ ಜಾಸ್ತಿಯಿರೋದನ್ನ ಉಷ್ಣದ್ವೀಪ ಪ್ರಭಾವ ಅನ್ನುತ್ತಾರೆ. ಈ ಪದವನ್ನು  ೧೮೧೦ರಲ್ಲಿ ಮೊದಲು ಬಳಸಿದ್ದು ಲೂಕ್ ಹಾವರ್ಡ್ ಎಂಬ ಹವಾಮಾನ ತಜ್ಞ. ಹೌದು. ನಗರದಲ್ಲೇ ಉಷ್ಣಾಂಶ ಜಾಸ್ತಿಯಾಕಿರ್ಬೇಕು ಅಂದ್ರೆ ಅದಕ್ಕೆ ಮತ್ತೊಂದಿಷ್ಟು ಕಾರಣಗಳಿವೆ. ಮೊದಲನೆಯದು ಇಲ್ಲಿನ ಕಾಂಕ್ರೀಟೀಕರಣ. ಆ ಬಿಲ್ಡಿಂಗು, ಈ ಬಿಲ್ಡಿಂಗು, ರಸ್ತೆ, ಪುಟಪಾತು ಮತ್ತೆ ಬಿಲ್ಡಿಂಗು ಅಂತ ನಗರದ ಇಂಚಿಚೂ ಬಿಡದೇ ಮಣ್ಣೇ ಕಾಣದಂತೆ ಕಾಂಕ್ರೀಟಿನಿಂದ ಮುಚ್ಚಲಾಗ್ತಾ ಇದೆ. ನಗರೀಕರಣದ ಹೆಸರಲ್ಲಿ ಇರೋಬರೋ ಮರಗಳನ್ನೆಲ್ಲಾ ಕಡಿದು ಬೆಂಗ್ಳೂರನ್ನೇ ಒಂಥರಾ ಕಾಂಕ್ರೀಟ್ ಕಾಡಾಗಿಸ್ತಾ ಇದ್ದೀವಿ. ಇದರಿಂದಾಗ್ತಿರೋ ಅನಾಹುತಗಳು ಒಂದೆರಡಲ್ಲ. ಸಣ್ಣ ತರಂಗಾಂತರದ (short wave) ಶಾಖವನ್ನು ಬೆಳಗಿಂದ ಸಂಜೆಯವರೆಗೆ ಹೀರಿಕೊಳ್ಳೋ ಈ ಕಾಂಕ್ರೀಟ್ ಮೇಲ್ಮೈ, ಕಟ್ಟಡಗಳು ರಾತ್ರೆ ಹೊತ್ತು ನಿಧಾನವಾಗಿ ಈ ಶಾಖವನ್ನು ದೊಡ್ಡ ತರಂಗಾಂತರದ( long wave) ಶಾಖ ಶಕ್ತಿಯಾಗಿ ಹೊರಬಿಡುತ್ತವೆ. ಹಾಗಾಗಿ ರಾತ್ರಿ ತಣ್ಣಗಾಗಲು ಸಿಕ್ಕಾಪಟ್ಟೆ ಹೊತ್ತು ಬೇಕಾಗುತ್ತೆ.  ಮತ್ತೆ ಈ ಎತ್ತೆತ್ತರದ ಕಟ್ಟಡಗಳಿವೆಯೆಲ್ಲಾ ಅವುಗಳಿಂದ ಸೂರ್ಯನ ಕಿರಣಗಳು ಹಲವಾರು ಹಂತದಲ್ಲಿ ಪ್ರತಿಫಲನಗೊಳ್ಳಲು ಸಹಾಯವಾಗತ್ತೆ. ಈ ರೀತಿಯ ನಿರಂತರ ಪ್ರತಿಫಲನದಿಂದ ಶಾಖ ಬೇಗ ಜಾಸ್ತಿಯಾಗತ್ತೆ . ದೊಡ್ಡ ಕಟ್ಟಡಗಳ ಶಾಖ ಹೊರಬರೋಕೆ ಬೇಕಾದ ದೊಡ್ಡ ಸಮಯದಿಂದ ಸೂರ್ಯ ಮುಳುಗಿ ಸುಮಾರು ಹೊತ್ತಿನ ಮೇಲೂ ವಾತಾವರಣದ ಸೆಖೆ ಹಾಗೇ ಇರತ್ತೆ. ಇದನ್ನೇ ಅರ್ಬನ್ ಕಾನ್ಯಾನ್ ಎಫೆಕ್ಟ್ (urban canyon effect) ಎಂದೂ ಹೇಳುತ್ತಾರೆ. ಇನ್ನು ಈ ದೊಡ್ಡ ದೊಡ್ಡ ಕಟ್ಟಡಗಳು ಗಾಳಿಯ ಸಹಜ ಸಂಚಾರಕ್ಕೆ ಅಡ್ಡವಾಗಿ ನಗರದ ಉಷ್ಣ ಉಳಿದ ಪ್ರದೇಶದ ತಂಗಾಳಿಯೊಂದಿಗೆ ಮಿಶ್ರವಾಗಿ ನಗರವೂ ತಣ್ಣಗಾಗೋದನ್ನ ನಿಧಾನಿಸುತ್ತೆ. ಕಟ್ಟಡಗಳೇ ಬಿಸಿಯಾಗಿಸ್ತಿರೋದು ಒಂದು ಕತೆ. ಜೊತೆಗೆ ಈ ಕಟ್ಟಡಗಳೊಳಗಿರೋ ಜನರನ್ನು  ತಣ್ಣಗಿರೋಸೋಕೆ ಬೇಕಾದ ಏಸಿಗಳದ್ದು ಇನ್ನೊಂದು ಕತೆ ! ಈ ಏಸಿಗಳಲ್ಲಿರೋ ಕ್ಲೋರೋಪ್ಲೋರೋ ಕಾರ್ಬನ್(ಸಿ.ಎಫ್.ಸಿ) ಮತ್ತು ಹೈಡ್ರೋಫ್ಲೋರೋಕಾರ್ಬನ್ಗಳೆಂಬ ಅನಿಲಗಳು ನಮ್ಮ ಭೂಮಿಯನ್ನ ಸೂರ್ಯನ ನೇರಳಾತೀತ ಕಿರಣಗಳಿಂದ ತಡಿತಾ ಇರೋ ಓಜೋನ್ ಪದರಕ್ಕೆ ತೂತು ಕೊರೆಯೋದಲ್ದೇ ಉಷ್ಣಾಂಶ ಹೆಚ್ಚೋದಕ್ಕೂ ಕಾರಣವಾಗತ್ತೆ.

ಕಮ್ಮಿಯಾಗುತ್ತಿರೋ ಹಸಿರ ಹೊದಿಕೆ:
ಇನ್ನು ಈ ಕಾಂಕ್ರೀಟೀಕರಣದಿಂದ ನಾಶವಾದ ಪರಿಸರದ ಬಗ್ಗೆ. ಮರಗಳಿದ್ದರೆ ಅವುಗಳಿಂದ ಆವಿಯಾಗೋ ನೀರು ಒಂದು ತಣ್ಣನೆಯ ವಾತಾವರಣವನ್ನು ನಿರ್ಮಿಸುತ್ತೆ. ಜೊತೆಗೆ ಅವುಗಳ ದ್ಯುತಿಸಂಶ್ಲೇಷಣೆ(photo synthesis) ಸಮಯದಲ್ಲಿ ಹೀರಿಕೊಳ್ಳೋ ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿನ ಇಂಗಾಲದ ಅಂಶವನ್ನು ಕಡಿಮೆ ಮಾಡುತ್ತದೆ. ಈ ಇಂಗಾಲವೂ ಹಸಿರು ಮನೆ ಪರಿಣಾಮ ಉಂಟುಮಾಡಿ ಭೂತಾಪ ಹೆಚ್ಚುಮಾಡೋ ಅನಿಲ. ಅಂದರೆ ಭೂಮಿಗೆ ಬಿದ್ದ ಸೂರ್ಯನ ಕಿರಣಗಳು ಪ್ರತಿಫಲಿತವಾಗಿ ವಾಪಾಸ್ ಹೋಗೋದನ್ನು ಈ ಇಂಗಾಲದಿಂದಾದ ತಡೆಗೋಡೆ ತಡೆಯುತ್ತೆ. ಹಾಗಾಗಿ ಆ ಶಾಖ ಭೂಮಿಯಲ್ಲೇ ಉಳಿದು ಭೂಮಿಯನ್ನು ಇನ್ನೂ ಬಿಸಿಯಾಗುತ್ತೆ. ಈ ಹಸಿರುಮನೆ ಪರಿಣಾಮದಿಂದಾಗೇ ಭೂತಾಪ ಜಗದೆಲ್ಲೆಡೆ ಹೆಚ್ಚಾಗ್ತಿದೆ, ಹಿಮನದಿಗಳು ಕರಗ್ತಿವೆ, ಹವಾಮಾನ ವೈಪರೀತ್ಯಗಳಾಗ್ತಿವೆ ಅನ್ನೋದು ಬೇರೆ ಮಾತು.

ಹೆಚ್ಚಾಗ್ತಿರೋ ಇಂಗಾಲ:
ಮನೇಲಿ ಮೂರು ಜನ ಇದ್ರೆ ಎರಡು ಕಾರು, ಒಂದೋ ಎರಡೋ ಬೈಕಿರೋದು ಕಾಮನ್ನು ಅನ್ನೋ ಜಮಾನಕ್ಕೆ ಜನ ಬಂದ್ಬಿಟ್ಟಿದಾರೆ.ಮತ್ತೆ ಅಕ್ಕಪಕ್ಕದ ಮನೇಲಿದ್ದು , ಒಂದೇ ಆಫೀಸಿಗೆ ಹೋಗೋದಾದ್ರೂ ತಮ್ಮ ಪ್ರತ್ಯೇಕ ಕಾರುಗಳಲ್ಲಿ ಹೋದ್ರೇನೆ ಖುಷಿ ಈ ಬೆಂಗಳೂರಿಗರಿಗೆ ! ಒಂದು ದಿನ ಅವರ ಕಾರಲ್ಲಿ ಇವರು, ಇವರ ಕಾರಲ್ಲಿ ಅವರು ಒಟ್ಟಿಗೆ ಹೋಗೋ ಕಾರ್ ಪೂಲಿಂಗ್ ಮಾಡ್ಬೋದಲ್ವಾ ಅನ್ನೋದು ಎಲ್ಲರಿಗೂ ಗೊತ್ತಿದ್ದಿದ್ದೇ. ಆದ್ರೂ ಮಾಡೊಲ್ಲ. ಟ್ರಾಫಿಕ್ ಜಾಂ ಬಗ್ಗೆ ಎಲ್ಲರನ್ನು ದೂಷಿಸುತ್ತಾ ಹೊಗೆಯೆಬ್ಬಿಸಿ ಆ ಹೊಗೆ ಕುಡಿತಾ ಕೂರೋದ್ರಲ್ಲೇ ತೃಪ್ತಿ ಕೆಲೋ ಜನಕ್ಕೆ. ಈ ರೀತಿ ಹೆಚ್ತಾ ಇರೋ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಾಗ್ತಿರೋದಲ್ದೇ ಈ ಮಾಲಿನ್ಯದಿಂದ ಹೆಚ್ಚಾಗ್ತಿರೋ ಇಂಗಾಲದಿಂದ ಭೂತಾಪವೂ ಹೆಚ್ತಾ ಇದೆ.

ಇನ್ನು ಹೆಚ್ಚುತ್ತಿರೋ ತಾಪದ ಬಗ್ಗೆ ಒಂದೆರಡು ಅಂಕೆ ಸಂಖ್ಯೆ.ಬೆಂಗಳೂರಲ್ಲಿ ಇಲ್ಲಿವರೆಗೆ ದಾಖಲಾಗಿರೋ ಅತೀ ಹೆಚ್ಚಿನ ತಾಪಮಾನ ೩೮.೩ ಡಿಗ್ರಿಯಂತೆ. ಅದು ದಾಖಲಾಗಿದ್ದು ಈ ವರ್ಷ ಅಥವಾ ಹಿಂದಿನ ವರ್ಷದಲ್ಲಲ್ಲ.ಅದು ೧೯೩೧ರಲ್ಲಂತೆ ! ಹಿಂದಿನ ವರ್ಷ ಏಪ್ರಿಲ್ ೧೩
ರಂದು ೩೭.೧ ಡಿಗ್ರಿ ಮುಟ್ಟಿದ್ದ ತಾಪ ಈಗಾಗಲೇ ೩೬ ಮುಟ್ಟಿ ಹಿಂದೆನೆಲ್ಲಾ ದಾಖಲೆಗಳನ್ನು ಮುರಿಯುವತ್ತ ದಾಪುಗಾಲಿಡುತ್ತಿದೆ ! ಇನ್ನಾದ್ರೂ ನಾವು ಎಚ್ಚೆತ್ತು ಅಳಿದುಳಿರೋ ಹಸಿರ ಹೊದಿಕೆಯನ್ನುಳಿಸಿಕೊಂಡು, ಪ್ರಕೃತಿಸ್ನೇಹಿಯಾದ ಜೀವನ ಶೈಲಿಯನ್ನ ಅಳವಡಿಸಿಕೊಳ್ಳದಿದ್ರೆ ಇದೇ ಬಿಸಿಲಬೆಂಕಿಯಲ್ಲಿ ಸುಟ್ಟು ಕರಕಲಾಗೋದು, ಬೆಂದು ಸಾಯೋದು ಶತಸಿದ್ದ.ಮುಂದೊಂದು ದಿನ ಉತ್ತರಭಾರತದಲ್ಲಿ ಈಗಾಗಲೇ ಆಗುತ್ತಿರುವಂತೆ ಇವತ್ತು ಸೆಖೆಗೆ ಇಷ್ಟು ಜನ ಸತ್ತರು ಅನ್ನೋ ಸುದ್ದಿಯನ್ನು ಬೆಂಗಳೂರಲ್ಲೂ ಕೇಳುವ ದುರಂತ ಬರಬಹುದೇನೋ :-(  

Tuesday, March 11, 2014

ಒಂದು ಸ್ನೇಹದ ಸುತ್ತ

ತೊಳೆಯಬೇಕೆಂದು ನೆನೆಸಿದರೂ ತೊಳೆಯಲಾಗದ ಸೋಮಾರಿತನಕ್ಕೆ ಬಕೆಟ್ಟಲ್ಲೇ ಕೊಳೆಯುತ್ತಿರುವ ಬಟ್ಟೆ, ಉತ್ತರ ದಕ್ಷಿಣಕ್ಕೆ ಮುಖಮಾಡಿರೋ ತನ್ನ ಮೂಲ ಬಣ್ಣ ಬಿಳಿಯೋ, ಹಳದಿಯೋ,  ಸಿಮೆಂಟೋ ಎಂದು ತನಗೇ ಮರೆತು ಹೋದಂತಾಗಿರೋ ಬೂದು ಶೂಗಳಿಂದ ಹೊರಬಿದ್ದು ತನ್ನ ಅಸ್ತಿತ್ವ ಸಾರುತ್ತಿರೋ ಸಾಕ್ಸುಗಳು, ನಾಯಿ ನಾಲಗೆಯಾದಂತಾಗಿ ಕೆಲವೆಡೆ ತಳ ಕಂಡರೂ ಇನ್ನೂ ಮುಕ್ತಿ ಕಾಣದ ಚಪ್ಪಲಿ, ಹೊರಗೆ ಒಣಗಿಸಿ ವಾರವಾದರೂ ತೆಗೆಯದಿದ್ದ ನನ್ನ ಬಟ್ಟೆಗಳಿಂದ ತನ್ನ ಬಟ್ಟೆಗೆ ಜಾಗವಿಲ್ಲವೆಂದು ಸಿಟ್ಟಿಗೆದ್ದ ಗೆಳೆಯ ತಂದು ಒಗೆದಿರೋ ಗುಪ್ಪೆ ಗುಪ್ಪೆ ಬಟ್ಟೆಗಳು, ತರಿಸಿದರೂ ಓದುವುದಿರಲಿ ಮಡಚಿಡಲೂ ಸೋಮಾರಿತನವಾಗಿ ಅಲ್ಲಲ್ಲೇ ಬಿದ್ದಿರೋ ನ್ಯೂಸ್ ಪೇಪರ್ಗಳು, ಓದಬೇಕೆಂದು ತಂದಿದ್ದ ಬುಕ್ಕುಗಳ ಬೈಂಡಿಗೇ ಕಾಣದಷ್ಟು ದಟ್ಟವಾಗಿ ಕೂತಿರೋ ಧೂಳು… ಹೀಗೆ ರೂಮಲ್ಲಿ ಕಣ್ಣ ಹಾಯಿಸಿದತ್ತೆಲ್ಲಾ ಅಸ್ತವ್ಯಸ್ಥ. ಕಸಗುಡಿಸೋ ಆಂಟಿ ಮೂರು ದಿನಕ್ಕೊಮ್ಮೆ ಆಸ್ಥೆಯಿಂದ ಗುಡಿಸಿ, ಒರೆಸದಿದ್ದರೆ ಎದುರಿಗೆ ಕಂಡದ್ದಷ್ಟು ಬಲೆ ಹೊಡೆಯದಿದ್ದರೆ ಆ ರೂಮಿಗೆ ಭೂತ ಬಂಗಲೆಯ ಕಳೆಯೇ. 


ಮುಂಚೆ ಹೀಗಿದ್ದವನಲ್ಲ ಪಾಪು. ಪಾಪುವೆಂದರೆ ಹಾಲು ಕುಡಿಯೋ ಪಾಪುವಲ್ಲ. ವಯಸ್ಸು ಬಾಲ್ಯ, ಕೌಮಾರ್ಯ ದಾಟಿ ಯೌವನಕ್ಕೆ ಕಾಲಿಟ್ಟಾಗಿತ್ತು, ಪ್ರಮಿಳಾತನಯ ಅನ್ನೋ ಇವನ ಹೆಸರು ಬರೆಯಲು, ಕರೆಯಲು ಕಷ್ಟವಾಗಿ ಎಲ್ಲರ ಬಾಯಲ್ಲಿ ಪಾಪುವಾಗಿಬಿಟ್ಟಿದ್ದ. ಸ್ವಭಾವದಲ್ಲೂ ಹಾಗೆಯೇ ಅವ. ಭೋಲೇನಾಥನಂತೆ. ಹೇಳಿದ್ದೆಲ್ಲಕ್ಕೂ ಹೌದೌದು ಅಂದುಬಿಡುವವ. ಕಂಡದ್ದೆಲ್ಲಾ ಸತ್ಯವೆಂದು, ಸಿಕ್ಕವರೆಲ್ಲಾ ಸಜ್ಜನರೆಂದು ನಂಬಿ ಬಿಡುವವ. ಇಂತಹ ಪಾಪುಗೆ ಸಿಟಿಯ ಕಾಲೇಜಿಗೆ ಕಾಲಿಟ್ಟು ಹಲ ತಿಂಗಳಾದರೂ ಅಲ್ಲಿನ ಫ್ಯಾಷನ್ ಹುಡುಗಿಯರೊಂದಿಗೆ ಮಾತನಾಡಲು ಭಯ. ಆ ಜೀನ್ಸಿಣಿ,ಸ್ಕರ್ಟಿಣಿಗಳ ಮಧ್ಯೆ ಕಣ್ಣಿಗೆ ಬಿದ್ದು ಹೇಗೋ ಪರಿಚಯವಾದ ಚೂಡಿದಾರ ಖುಷಿ. ಸುಮ್ಮನೇ ಕ್ಲಾಸ ಡೌಟು, ಲೆಕ್ಚರ ನೋಟ್ಸು ವಿನಿಮಯದಲ್ಲಿ ಶುರುವಾದ ಸ್ನೇಹ ಇವನ ಪುಸ್ತಕದ ಮೂಲೆಯ ಗೀಚುಗಳ ಫೇಸ್ಬುಕ್ಕಿಗೆ ದಾಟಿಸಿ ಲೈಕು, ಉದ್ದುದ್ದ ಕಾಮೆಂಟ್ ಕೊಡೋವರೆಗೆ , ಅವಳ ಫೇಸ್ಬುಕ್ ಪೋಟೋಗಳಿಗೆ ಎಲ್ಲರೆದರು ಲೈಕಿಸಲು ಭಯವಾಗಿ ಮೆಸೇಜ್ ಮಾಡಿ ಮೆಚ್ಚುಗೆ ಕೊಡೋವರೆಗೆ ಮುಂದುವರೆದಿತ್ತು.
ಅಂತೂ ಮೊದಲ ವರ್ಷದ ಎರಡು ಸೆಮಿಸ್ಟರುಗಳೂ ಮುಗಿದು ರಜಾ ಶುರುವಾಗಿತ್ತು. ರಜಾದಲ್ಲೇನೋ ಬಣ್ಣಬಣ್ಣದ ಕನಸುಗಳು. ರಜಾ ಮುಗಿದು ಯಾವಾಗ ಕಾಲೇಜು ಶುರುವಾಗುತ್ತೋ ಎಂಬ ಕಾತರ. ಒಮ್ಮೆ ಫೋನ್ ಮಾಡಿಬಿಡಲಾ ಅಂತ ಅದೆಷ್ಟೋ ರಾತ್ರಿ ಯೋಚಿಸಿದ್ದ. ಆದ್ರೆ ಅವಳ ಬದ್ಲು ಇನ್ಯಾರಾದ್ರೂ ಎತ್ತಿದ್ರೆ ಏನು ಕೇಳೋದು ? ಅದು ಹೋಗ್ಲಿ ನಮ್ಮ ಮನೇಲೇ ಯಾರಾದ್ರೂ ಕೇಳಿದ್ರೆ ಏನು ಹೇಳೋದು ? ಯಪ್ಪಾ. ಬೇಡವೇ ಬೇಡ ಅನಿಸಿಬಿಟ್ಟಿತ್ತು. ಥೋ, ಅಷ್ಟೆಲ್ಲಾ ಯಾಕೆ ಯೋಚನೆ ಮಾಡೋದು , ರಿಸಲ್ಟ್ ಬಂತಾ ಅಂತನೋ, ಸೆಮ್ ಯಾವಾಗ್ಲಿಂದ ಶುರು ಅಂತನೋ ಕೇಳಿದ್ರಾಯ್ತು ಅಂತ ಅನೇಕ ಸಲ ಅಂದ್ಕೊಂಡಿದ್ರೂ ಧೈರ್ಯ ಸಾಕಾಗಿರ್ಲಿಲ್ಲ. ಕೊನೆಗೂ ಒಮ್ಮೆ ಧೈರ್ಯ ಮಾಡಿ ಕಾಲು ಮಾಡಿದ್ದ . ಆದ್ರೆ ಆ ಕಡೆ ಫುಲ್ ರಿಂಗಾಗಿದ್ದೇ ಬಂತು. ಯಾರೂ ಎತ್ತಿರಲಿಲ್ಲ. ಒಮ್ಮೆ ಬೇಜಾರಾದರೂ ಆಮೇಲೆ ಫೋನಲ್ಲಿ ಬ್ಯಾಟ್ರಿ ಇತ್ತೋ ಇಲ್ವೋ, ಫೋನಿಟ್ಟು ಬೇರೆ ಎಲ್ಲಾದ್ರೂ ಹೋಗಿದ್ಲೋ ಏನೋ ಅಥವಾ ಇನ್ನೇನೋ ಆಗಿರಬಹುದೇನೋ ಹೇಗಿದ್ರೂ ಆಮೇಲೆ ಮಿಸ್ಕಾಲ್ ನೋಡಿ ಕಾಲ್ ಮಾಡ್ತಾಳೆ ಬಿಡು ಅಂತ ಸಮಾಧಾನ ಮಾಡ್ಕೊಂಡ. ಒಂದು ಘಂಟೆಯಾಯ್ತು. ಎರಡಾಯ್ತು. ಊಹೂಂ. ನಿರೀಕ್ಷೆಯಲ್ಲೇ ಒಂದು ದಿನ ಕಳೆಯಿತು. ಊಹೂಂ. ಹಿಂಗೇ ಎರಡು ದಿನ ಕಳೆದ ಮೇಲೆ ಆಕೆಯ ಫೋನೇ ಕಳೆದುಹೋಗಿರ್ಬೋದು. ಹೇಗಿದ್ರೂ ಇನ್ನು ಕಾಲೇಜು ಶುರು ಆಗೋಕೆ ಕೆಲವೇ ದಿನ ಉಳಿದಿದೆ. ಸಿಕ್ಕಾಗ ಕೇಳಿದ್ರಾಯ್ತು ಅಂತ ಸಮಾಧಾನ ಮಾಡ್ಕೊಂಡ.


ಅಂತೂ ಕಾಲೇಜು ಶುರುವಾಯ್ತು. ಮೊದಲ ಪೀರಿಯಡ್ಡಿಗಿಂತ ಕಾಲು ಘಂಟೆ ಮುಂಚೆಯೇ ಬಂದು ಅವಳ ನಿರೀಕ್ಷೆಯಲ್ಲಿದ್ದ. ಲೆಕ್ಚರ್ ಕ್ಲಾಸಿಗೆ ಕಾಲಿಟ್ಟರೂ ಅವಳ ಸುಳಿವಿಲ್ಲ. ಎರಡನೆಯ ಕ್ಲಾಸಿಗಾದರೂ ಬರುತ್ತಾಳೇನೋ ಎಂಬ ನಿರೀಕ್ಷೆ. ಊಹೂಂ. ಎರಡನೇ ಕ್ಲಾಸಿನ ಲೆಕ್ಚರ್ರು ಪಾಟ ಪ್ರಾರಂಭಿಸೋ ಮೊದ್ಲೇ ಎಲ್ಲಾ ಸಾರ್… ಅಂತ ಕೂಗಕ್ಕೆ ಶುರು ಮಾಡಿದ್ರು. ಲೆಕ್ಚರಿಗೂ ಹುಡುಗರ ಮನಸ್ಥಿತಿ ಅರ್ಥವಾಗಿತ್ತು. ಹೆ.ಹೆ. ಜಾಸ್ತಿ ಗಲಾಟೆ ಮಾಡ್ಬೇಡಿ. ಇನ್ನು ಅರ್ಧ ಘಂಟೆ ಆದ್ರೂ ಕ್ಲಾಸಲ್ಲೇ ಇರಿ ಅಂತೇಳಿ ಹೊರನಡೆದ್ರು. ಮೊದ್ಲ ಪೀರಿಯಡಲ್ಲೂ ಇದೇ ಆಗಿತ್ತನ್ನೋದು ವಿಷ್ಯ ಬೇರೆ! ಕ್ಲಾಸಿಗೆ ಹೆಚ್ಗೆ ಯಾರೂ ಬಂದಿಲ್ಲ. ಸೋ. ಇವತ್ತು ಮನೆಗೆ ಹೋಗ್ತಿವಿ ಬಿಡಿ ಮಿಸ್ ಅಂತ ಮೂರನೇ ಪೀರಿಯಡ್ ಮಿಸ್ಸಿಗೆ ಬೆಣ್ಣೆ ಹಚ್ಚಿ ಒಪ್ಪಿಸಿಬಂದ ಕ್ಲಾಸ್ ರೆಪ್ರಸೆಂಟೇಟಿವ್. ಎಲ್ಲಾ ಎದ್ದು ಮನೆಗೆ ಹೊರಡಲು ರೆಡಿಯಾದ್ರೂ ಪಾಪುಗೆ ಖುಷಿಯನ್ನು ಕಾಣದೇ ಖುಷಿಯಿಲ್ಲ. ಏನೋ ಒಂತರ. 


ಮಾರನೇ ದಿನವೂ ಇದೇ ಕತೆ. ಹೀಗೆ ಮೂರು ದಿನ ಕಾದು ಬೇಸತ್ತು ಕೊನೆಗೆ ಹುಡುಗಿ ಕ್ಲಾಸ್ ರೆಪ್ರಸೆಂಟೇಟಿವ್ ಹತ್ರ ಹೋಗಿ ಕೇಳಿದ್ದ. ಖುಷಿ ಎಲ್ಲಿ ಅಂತ. ಅವಳಿಗೆ ಇವನ ಕಾಡೋ ಮನಸ್ಸಿದ್ದರೂ ಮೂರು ದಿನದಿಂದ ಇವನ ಬಾಡಿದ ಮುಖ ನೋಡಿ ಇನ್ನಷ್ಟು ಕಾಡೋ ಮನಸ್ಸಾಗದೇ ಹೇಳೇಬಿಟ್ಲು. ಅವಳ ಮ್ಯೂಚ್ಯುಯಲ್ ಟ್ರಾನ್ಸಫರ್ ತಗೊಂಡು ಬೇರೆ ಕಾಲೇಜಿಗೆ ಹೋದ್ಲಲ್ಲ. ನಿನಗೆ ಹೇಳಿರ್ಲಿಲ್ವಾ ಅಂತ ಕೊಂಚ ಆಶ್ಚರ್ಯದಿಂದ್ಲೇ ಪ್ರಶ್ನಿಸ್ತಿದ್ರೆ ಇವ್ನ ಮನಸ್ಸಲ್ಲಿ ನೂರು ಕುದುರೆಗಳು ಓಡಿದಂತೆ. ಒಂದು ಮಾತಾದ್ರೂ ಹೇಳಬಹುದಿತ್ತಲ್ಲ. ಯಾಕೆ ಹಿಂಗೆ ಮಾಡಿದ್ಲು. ಅವ್ರ ಮನೇಲೇನಾದ್ರೂ ಪ್ರಾಬ್ಲಂ ಆಗಿರಬಹುದಾ ? ನಾನವತ್ತು ಫೋನ್ ಮಾಡಿದ್ರಿಂದೇನಾದ್ರೂ ? ಛೇ ಛೇ ಹಾಗೆಲ್ಲಾ ಆಗಿರಲಾದ್ರು. ಯಾಕಾಗಿರಬಾದ್ರು ? ನನ್ನ ಫೋನಿಂದ್ಲೇ ಏನಾದ್ರೂ ಮಾತುಕತೆ ಬೆಳೆದು.. ಹೀಗೆ ಅವಳ ಕಾಲೇಜು ಬದಲಾವಣೆಗೆ ತಾನೇ ಕಾರಣ ಅನ್ನೋ ಅಪರಾಧಿ ಪ್ರಜ್ಞೆ ಬೆಳೆಯೋಕೆ ಶುರು ಆಯ್ತು.


ಹಿಂಗೇ ಒಂದೆರಡು ವಾರ ಕಳೆಯೋ ಹೊತ್ತಿಗೆ ಫುಲ್ ದೇವದಾಸ್ ಗೆಟಪ್ಪಿಗೆ ಬಂದು ಬಿಟ್ಟಿದ್ದ ಪಾಪು. ಕ್ಲಾಸಲ್ಲೆಲ್ಲಾ ಅರೆಮಗ್ನನಾಗಿ ಏನೋ ಆಲೋಚನೆ ಮಾಡುತ್ತಿರುವಂತೆ ಕೂತು ಬಿಡುತ್ತಿದ್ದ. ಅವಳಿಲ್ಲದ ಜೀವನವೇ ನಶ್ವರ ಎಂದೂ ಹಲಬಾರಿ ಅನಿಸಿದ್ದುಂಟು. ಸರ್ಪ್ರೈಸು ಟೆಸ್ಟಿನಲ್ಲಿ ಸೊನ್ನೆ ಸುತ್ತಿದ್ದ ಇವನನ್ನು ನೋಡಿ ಲೆಕ್ಚರರುಗಳಿಗೆಲ್ಲಾ ಶಾಕು. ಹಿಂದಿನ ಸೆಮ್ಮಿನಲ್ಲಿ ಟಾಪ್ ಐದರಲ್ಲಿರುತ್ತಿದ್ದ ಪಾಪು ಇವನೇನಾ ಅಂತ. ಆದರೆ ಪಾಪು-ಖುಷಿಯ ಬಗ್ಗೆ ಗೊತ್ತಿದ್ದ ಒಂದಿಷ್ಟು ಖಾಸ್ ಗೆಳೆಯರು ಮಾತ್ರ ಅಯ್ಯೋ ಪಾಪು ಅಂತಿದ್ರು. ಇನ್ನೊಂದು ವಾರದಲ್ಲಿ ಮೊದಲ ಇಂಟರ್ನಲ್ಲು. ಹೀಗಾದ್ರೆ ಹೇಗಪ್ಪಾ ಅಂತ ಪಾಪುವಿಗಿಂತ ಅವನ ಗೆಳೆಯರಿಗೇ ಚಿಂತೆ ಶುರುವಾಗಿತ್ತು. ಶನಿವಾರ ತಡ ರಾತ್ರೆ ಲ್ಯಾಪ್ ಟಾಪಿನಲ್ಲಿ ಯಾವುದೋ ಸಿನಿಮಾ ನೋಡುತ್ತಿದ್ದ ಪಾಪುಗೆ ಯಾವಾಗ ಕಣ್ಣು ಹತ್ತಿತೋ ಗೊತ್ತಿಲ್ಲ.

 ಕಣ್ಣು ಬಿಡುತ್ತಾನೆ. ತಾನು ಯಾವುದೋ ಪ್ರಪಾತದ ಅಂಚಲ್ಲಿ ನಿಂತಂತೆ. ಅಲ್ಲೇ ಐದು ಅಡಿ ದೂರದಲ್ಲಿ ನಿಂತಿರೋ ಯಮನ ಭಟರು ತಮ್ಮ ಪಾಶದೊಂದಿಗೆ ಕಾಯ್ತಾ ಇದಾರೆ. ಹಾರಿಬಿಡು ನೀನು ಕೆಳಕ್ಕೆ. ನಿನ್ನನ್ನು ಸೀದಾ ಕುಂಭಿಪಾಕ ನರಕಕ್ಕೆ ಕರೆದೊಯ್ಯುತ್ತೇವೆ. ವೈತರಣಿ ನದಿಯನ್ನು ಬಿಟ್ಟು ಎಂಭತ್ತಾರು ಸಾವಿರ ಯೋಜನ ಹಾದಿಯನ್ನು ನಡೆಸಿ ನಿನ್ನ ಯಮನ ಪಟ್ಟಣಕ್ಕೆ ತಲುಪಿಸುತ್ತೇವೆ. ಸೌಮ್ಯ, ಸೌರಿಪುರ, ನಾಗೇಂದ್ರಭವನ, ಗಂಧವ್ರ, ಶೈಲಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ.. ಗಳೆಂಬ  ಗರುಡಪುರಾಣದಲ್ಲಿರೋ ಹದಿನಾರು ಪಟ್ಟಣಗಳನ್ನು ದಾಟಿಸಿ ತರತರದ ನರಕಗಳ ಶಿಕ್ಷೆಯನ್ನನುಭವಿಸೋಕೆ ಸಿದ್ದನಾಗು ಅಂತ ಅವರು ಗಹಗಹಿಸಿದಂತೆ. ಯಾರಿಗಾದ್ರೂ ವಿದ್ಯಾದಾನ ಮಾಡಿದ್ಯಾ ? ಇಲ್ಲ. ಹಸಿದ ಗೆಳೆಯರಿಗೆ, ಒಂದು ಯಕಶ್ಚಿತ್ ನಾಯಿಗಾದರೂ ಒಂದು ತುತ್ತು ಅನ್ನ ಕೊಟ್ಟಿದ್ಯಾ ಯಾವತ್ತಾದ್ರೂ ? ಜೀವನದಲ್ಲಿರೋ ನೂರು ಜವಾಬ್ದಾರಿಗಳಿಗೆ ಅಭಿಮುಖನಾಗಿ ಯಾರೋ ಸಿಗಲಿಲ್ಲವೆಂಬ ಕ್ಷುಲಕ ಕಾರಣಕ್ಕೆ ದುರ್ಲಭ ಮಾನವ ಜನ್ಮವನ್ನು ತ್ಯಜಿಸಹೊರಟಿರೋ ನಿನಗೆ ಘೋರಾತಿಘೋರ ನರಕ ಕಾದಿದೆ ಮಗನೆ. ಬಾ. ಹಾರು ಇಲ್ಲಿಂದ. ಬೇಗ ಹಾರು ಎಂದು ಅವರು ಗಹಗಹಿಸಿದಂತೆ. ಇಲ್ಲ. ಇಲ್ಲ. ಇದೇ ಜೀವನವಲ್ಲ. ಬಿಟ್ಟು ಬಿಡಿ ನನ್ನ. ಬದಲಾಗುತ್ತೇನೆ ನಾನು. ಮುಂಚಿನ ಪಾಪುವಾಗಿ. ಬಿಟ್ಟು ಬಿಡಿ ನನ್ನ ಅಂತ ಕೂಗೋದ್ರಲ್ಲಿ ಕಣ್ಣು ಬಿಟ್ಟಿತ್ತು. ನೋಡಿದ್ರೆ ಅವನು ಅವನ ರೂಮಿನಲ್ಲೇ ಇದ್ದ. ಕಣ್ಣುಜ್ಜುತ್ತಾ ಎದ್ದರೆ ಹಾಸಿಗೆಯ ಕೊಳೆ ಕೊಳೆ ಬೆಡ್ ಶೀಟುಗಳು, ಇನ್ನೊಂದೇ ದಿನಕ್ಕೆ ಬರುವಂತಿರೋ ಪೇಸ್ಟು, ನೋಡೋ ಕನ್ನಡಿಗೇ ಅಸಹ್ಯವಾಗುವಂತೆ ಬೆಳೆದಿರೋ ಪೊದೆ ಗಡ್ಡ, ಕಂಡಲ್ಲಿ ಕಣ್ಣಿಗೆ ಬೀಳೋ ಧೂಳು ಅಣಕಿಸಿದಂತಾಯ್ತು. 


ಛೇ. ಎಷ್ಟು ದಿನ ಆಯ್ತು ಇದನ್ನೆಲ್ಲಾ ಗಮನಿಸಿಯೇ ಇಲ್ಲವಲ್ಲ. ಇವುಗಳ ನಡುವೆಯೇ ನನ್ನ ಗೆಳೆಯರು ನನ್ನ ಹೇಗೆ ಸಹಿಸಿಕೊಂಡರೋ ಎಂದು ನಾಚಿಕೆಯಾಯ್ತು. ಹಿಂದಿನ ದಿನವೇ ನೆನೆಸಿಟ್ಟ ಬಕೆಟ್ ಬಟ್ಟೆಯನ್ನ ತೊಳೆಯೋದ್ರೊಳಗೆ ಏದುಸಿರು ಬಂದತಾಯ್ತು. ಕೆಲಸ ಮಾಡೋ ಅಭ್ಯಾಸವೇ ಬಿಟ್ಟು ಹೋಗಿತ್ತಲ್ಲ. ಅದೊಂದೇ ಅಲ್ಲ. ಮುಂಚಿನ ಯೋಗ ಪ್ರಾಣಾಯಾಮಗಳನ್ನೆಲ್ಲಾ ಆಲಸ್ಯ ನುಂಗಿ ಹಾಕಿದ್ದೂ ಇನ್ನೊಂದು ಕಾರಣವಾಗಿರಬಹುದು. ಘಂಟೆ ಹನ್ನೊಂದಾಯ್ತೆಂದು ಹಸಿಯುತ್ತಿರೋ ಹೊಟ್ಟೆ ನೆನಪಿಸಿತ್ತು. ದಿನಾ ಗಬ್ಬೆಂದು ಬಯ್ಯುತ್ತಿದ್ದ ಎದುರಿನ ಭಟ್ಟರ ಕ್ಯಾಂಟೀನಿನ ತಣ್ಣನೆಯ ಇಡ್ಲಿ ಸಾಂಬಾರಿಗೆ ಇವತ್ತೇಕೋ ಅಮೃತ ಸಮಾನ ರುಚಿ ! ಆ ಸಕ್ಕರೆ ಕಮ್ಮಿ ಕಾಫಿಗೂ ಹಿಂದಿನ ಯಾವ ಪೆಪ್ಸಿ ಮಿರಿಂಡಾಗಳಿಗಿಲ್ಲದ ಸವಿ. ರುಚಿಯಿದ್ದದ್ದು ಅಲ್ಲಲ್ಲವೋ ಮೂಢ ಬದಗಾಗುತ್ತಿರೋ ನಿನ್ನ ಮನಸ್ಸಲ್ಲಿ ಅಂತ ಯಾರೋ ನಗುತ್ತಿದ್ದಂತೆ ಅನಿಸುತ್ತಿತ್ತು. ಕೊಳೆ ಕೂತು ಹಳದಿಯಾಗಿದ್ದ ಉಗುರುಗಳಿಗೆಲ್ಲಾ ಮುಕ್ತಿ ಸಿಕ್ಕಿತ್ತು.  ತಿಂಗಳ ನಂತರ ನಾಪಿತನ ನೆನಪಾಗಿತ್ತು. ಕೊಳೆ ಬೆಡಶೀಟ್ಗಳು ವಾಷಿಂಗ್ ಮೆಷೀನು ಹೊಕ್ಕು ಬಿಸಿಲಲ್ಲಿ ಒಣಗುತ್ತಿದ್ದರೆ , ಹಾಸಿಗೆ ಹೊಕ್ಕಿದ್ದ ತಿಗಣೆಗಳೆಲ್ಲಾ ಬಿಸಿಲ ಬಾಣಲೆಯಲ್ಲಿ ಒಣಗಿಸಿದ್ದ ಹಾಸಿಗೆಯಲ್ಲಿ ಫ್ರೈ ಆಗುತ್ತಿದ್ದವು.  ಶೂವಲ್ಲಿದ್ದ ಮಣ ಮಣ್ಣು ಅರ್ಧ ಬಕೆಟ್ ಸೋಪ್ ನೀರಲ್ಲಿ ಕರಗಿ ಅದಕ್ಕೊಂದು ಹಬ್ಬದ ಕಳೆ ಬಂದಿತ್ತು. ಭಾನುವಾರ ಸಂಜೆಯ ಹೊತ್ತಿಗೆ ಹೊರಗೆ ಹೋಗಿದ್ದ ಪಾಪುವಿನ ರೂಂ ಮೇಟ್ಸು ರೂಮಿಗೆ ಬಂದ್ರೆ ಆ ರೂಮು ಗುರ್ತೇ ಸಿಗದಂತೆ ಬದಲಾಗಿ ಹೋಗಿತ್ತು. ಶೂಗಳೆಲ್ಲಾ ನೀಟಾಗಿ ಜೋಡಿಸಿಟ್ಟಿರೋದಲ್ದೇ  ರೂಮೆಲ್ಲಾ ಕ್ಲೀನೋ ಕ್ಲೀನು. ದೇವದಾಸನಂತಾಗಿದ್ದ ಪಾಪುನ ಏನೋ ಇದು ಸ್ಪೆಷಲ್ಲು ಅಂತ ಕೇಳೋಣ ಅಂದ್ರೆ ಆ ದೇವದಾಸ ಮಾಯವಾಗಿದ್ದ. ಮುಂಚಿನ ಪಾಪು ಪುಸ್ತಕಗಳ ಲೋಕದಲ್ಲಿ ಮುಳುಗಿಹೋಗಿದ್ದ.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ :-)

Monday, March 3, 2014

ಸಾಗರದ ಮಾರಿಕಾಂಬ ಜಾತ್ರೆ

ಸಾಗರದ ಹಬ್ಬಗಳು ಅಂದ್ರೆ ಮೊದಲು ನೆನಪಾಗೋದು ಮೂರು ವರ್ಷಕ್ಕೊಮ್ಮೆ ಬರೋ ಮಾರಿ ಜಾತ್ರೆ. ಸಾಗರದ ಮಧ್ಯಭಾಗದಲ್ಲಿರುವ ಶ್ರೀ ಮಾರಿಕಾಂಬೆ ದೇವಿಯ ಒಂಭತ್ತು ದಿನಗಳ ಜಾತ್ರೆಯೆಂದರೆ ಸಾಗರಿಗರ ಪಾಲಿಗೆ ಅಂದೊಂದು ದೊಡ್ಡ ಹಬ್ಬವೇ. ಮೊದಲನೇ ದಿನ ಅದೇ ಬೀದಿಯಲ್ಲಿರುವ ತನ್ನ ತವರು ಮನೆಯಲ್ಲಿರುತ್ತಾಳಂತೆ ತಾಯಿ. ಅವತ್ತು ಮಾಂಸ ಮಧ್ಯಗಳಿಲ್ಲದ ಸಸ್ಯಾಹಾರಿ ಪೂಜೆ. ಆಮೇಲಿನ ದಿನಗಳಲ್ಲಿ ಕುರಿ, ಕೋಳಿಗಳ ಕಡಿತವೆಂದು ಮಾಂಸಾಹಾರಿಗಳ ಹಬ್ಬ. ಆ ಬೀದಿಯ ಮಾಂಸದಂಗಡಿಯಲ್ಲಿ ಮೊದಲ ದಿನವೇ ಮೂವತ್ತೊಂದು ಕುರಿ ಕಡಿದರಂತೆ  ಆ ಮನೆಯಲ್ಲಿ ಬಂದ ನೆಂಟರ ಊಟದ ಕುರಿ, ಕೋಳಿಗಳಿಗೆಂದು ಇಪ್ಪತ್ತು ಸಾವಿರ ಖರ್ಚಾಯಿತಂತೆ ಅಂತ ಕುರಿ ಕೋಳಿಗಳ ಲೆಕ್ಕದಲ್ಲೇ ಹಬ್ಬ ಎಷ್ಟು ಗ್ರಾಂಡಂತ ಅಳೆಯುವವರುಂಟು ! ಸಾಲ ಸೋಲ ಮಾಡಿಯಾದರೂ ಮನೆಗೆ ಬರೋ ನೆಂಟರೆದುರು ದಾಂಧೂಂ ಅಂತ ಹಬ್ಬ ಮಾಡಬೇಕೆನ್ನುವವರ ನಡುವೆ ಮೂರುವರ್ಷಕ್ಕಾದರೂ ಈ ಖರ್ಚಿನ ಹಬ್ಬ ಯಾಕಾದ್ರೂ ಬರುತ್ತೋ ಅನ್ನುವವರೂ ಉಂಟು. ಊಟ, ಬಟ್ಟೆಗಳದ್ದೊಂದು ಕತೆ ಹೇಳ್ತಾ ಹೋದ್ರೆ ಮುಖ್ಯ ಆಕರ್ಷಣೆ ಜಾತ್ರೆಯ ವಿಷ್ಯನೇ ಮತ್ರೋಗಿ ಬಿಡಬಹುದು. ಜಾತ್ರೆಯೆಂದ್ರೆ ಬರೀ ಬೆಂಡು ಬತ್ತಾಸು, ಹೂವಿನ ತೇರುಗಳಲ್ಲ, ಒಂದೆರಡು ಗಿರಗಿಟ್ಲೆ , ಪುಗ್ಗಿ, ಐಸುಕ್ರೀಂಗಳಲ್ಲ. ನಾಟಕದಿಂದ ಭಜನೆಯವರೆಗೆ , ಸರ್ಕಸ್ಸಿನಿಂದ , ಗ್ರೀನ್ ಡ್ರೈವ್ ಸ್ಟೇಜ್ ಶೋವರೆಗೆ, ಕೋಲಂಬಸ್, ಸೋಲಂಬಸ್, ಅಕ್ಟೋಪಸ್, ಗ್ಲಿಪ್ಫಿ ಹೀಗೆ ಹೆಸರು ಹೇಳಬರದ ಸಣ್ಣಪುಟ್ಟ ಆಟಗಳಿಂದ ಬಾವಿಯೊಳಗಿನ ಮೋಟಾರ್ ಬೈಕಿನ ಕೊರ್ರೆಂಬ ಸದ್ದು, ಟೊರಟೊರಾ, ಎರಡು ಮಿನಿ ವೀಲು, ನಾಲ್ಕು ಜಾಯಿಂಟುವೀಲು, ಪ್ರತಿವರ್ಷ ತೇಲಿಬಿಡೋ ಮುಗಿಲೆತ್ತರ ಹಾರ್ತಿರೋ ಹಳದಿ ಜಾತ್ರಾ ಬಲೂನಲ್ಲದೇ ಹಲಬಣ್ಣದ ಮಿನಿ ಬಲೂನು, ಕೀಲಿ ಕೊಟ್ಟರೆ ತಿರುಗೋ ಬೊಂಬೆ ಕೋಳಿಗಳು, ಹಾರಾಡೋ ಹೆಲಿಕ್ಯಾಪ್ಟರ್ , ಹಾರಿ ಇಳಿದುಬರೋ ಪ್ಯಾರಾಚೂಟ್ಗಳು.. ಹೀಗೆ ಬರೆಯಹೋದರೆ ಮುಗಿವ ಪರಿಯಲ್ಲವೀ ಜಾತ್ರೆ. ಒಂದು ದಿನದಲ್ಲಿ ಹತ್ತಿ ಪೂರೈಸಲಾಗದ . ಮೊಗೆದು ಪೂರೈಸಲಾಗದ ಝರಿಯೀ ಜಾತ್ರೆ. 


ಸಾಗರದ ಪೋಸ್ಟಾಪೀಸು ಸರ್ಕಲ್ಲಿನಿಂದ ಬಲಕ್ಕೆ ತಿರುಗಿದರೆ ಬಸ್ಟಾಂಡು ಎಡಕ್ಕೆ ತಿರುಗಿದರೆ ಮಾರಿಕಾಂಬ ದೇವಸ್ಥಾನದ ಕಡೆಗೆ ಅಂತ ಹೇಳ್ತಾ ಹೊರಟ್ರೆ ಸಾಗರಿಗರೆಲ್ಲಾ ಬಿದ್ದು ಬಿದ್ದು ನಕ್ಕಾರು. ಇವನಿಗೇನಾಗಿದೆ ಅಂತ. ಇಲ್ಲಿ ಹೇಳಹೊರಟಿದ್ದು ಅದಲ್ಲ. ಗುರುವಾರ ಸಂಜೆ ಎಂಟೂವರೆ ಹೊತ್ತಿಗೆ ಆ ಸರ್ಕಲ್ಲಿನಲ್ಲಿ ನಿಂತಿದ್ದಷ್ಟೆ. ಹಿಂದಿನಿಂದ ತಳ್ಳೊರಷ್ಟು ಜನ. ಮುಂದಿಂದ ತಡೆಯೋರಷ್ಟು ಜನ. ನೀವು ಯಾವ ಕಡೆ ಮುಖ ಮಾಡಿ ನಿಂತಿದ್ದೀರೋ ಆ ಕಡೆ ಅಪ್ರಯತ್ನವಾಗೇ ಕಾಲು ಸಾಗಿಬಿಡುತ್ತೆ. ಬಾಲ್ಯದ ಗೆಳೆಯ ನಿಖಿಲ್, ಸುಕ್ಕು, ಜಿಂಗಾಡೆ ಹೀಗೆ ಒಂದು ಹೆಜ್ಜೆ ಮುಂದಿಡುವಷ್ಟರಲ್ಲೇ ಮೂರು ಜನ ಸಿಕ್ಕಬೇಕೇ ? ಅವರನ್ನು ಮಾತಾಡಿಸಿ ಮುಂದೆ ಬರುವಷ್ಟರಲ್ಲಿ ಮತ್ತೊಂದಿಷ್ಟು ಜನ ಗೆಳೆಯರು. ಪ್ರೈಮರಿ, ಮಿಡ್ಲಸ್ಕೂಲು, ಹೈಸ್ಕೂಲು, ಕಾಲೇಜು, ಪದವಿ ಹೀಗೆ ಜೊತೆಗೋದಿದ ಗೆಳೆಯರು, ಜೂನಿಯರ್, ಸೀನಿಯರ್ಗಳು, ಅವರ ಅಕ್ಕ-ತಂಗಿ ಅಣ್ಣತಮ್ಮಂದಿರು, ಅಪ್ಪ ಅಮ್ಮಂದಿರು ಹೀಗೆ ಎಲ್ಲಾ ಸಿಕ್ಕೋದು ಈ ಜಾತ್ರೇಲಿ ಮಾತ್ರವಾ ಅನಿಸಿಬಿಡುತ್ತೆ ಕೆಲೋ ಸಲ. ಅನಿರೀಕ್ಷಿತವಾಗಿ ಎಡತಾಕೋ ನೆಂಟರು, ಅಪ್ಪ ಅಮ್ಮಂದಿರ ಫ್ರೆಂಡುಗಳು, ಗುರುಗಳು.. ಹೀಗೆ ಹಲವು ಅನಿರೀಕ್ಷಿತಗಳ ಭೇಟಿಯನ್ನು ನಿರೀಕ್ಷಿಸೇ ಜಾತ್ರೆಯಲ್ಲಿ ಒಂದೆರಡು ಘಂಟೆ ಸುತ್ತಿದರೂ ತಪ್ಪಿಲ್ಲವೇನೋ. ಅದೇ ದಾರಿಯಲ್ಲಿ ಎರಡು ಸಲ ಹೋಗಿ ಬಂದರೆ ಹಿಂದಿನ ಸಲ ಕಾಣದ ಮಿನಿಮಂ ಹತ್ತು ಹೊಸ ನೆಂಟರೋ ಫ್ರೆಂಡ್ಸೋ ಸಿಗುತ್ತಾರೆ ಅನ್ನೋದು ನನ್ನ ಹಿಂದಿನ ಜಾತ್ರೆಯ ಅನುಭವ !


ಬಾಂಬೆ ಮಿಠಾಯಿ ಅಥವಾ ಪಟ್ಟಣಿಗರ ಬಾಯಿಯ ಕಾಟನ್ ಕ್ಯಾಂಡಿ, ಮೆಣಸಿನ ಜೋಳ ಮತ್ತು ಪೆಪ್ಪರ್ ಕಾರ್ನು!, ತರತರದ ಐಸ್ ಕ್ರೀಂ, ಕಬ್ಬಿನ ಹಾಲು, ಕಲ್ಲಂಗಡಿ, ಪೊಪ್ಪಾಳೆ, ಕರಬೂಜಗಳು. ಮಸಾಲೆ ಮಂಡಕ್ಕಿ, ಮಸಾಲೆಪುರಿ, ಗೋಬಿ, ಗಿರಮಿಟ್, ನಾಲ್ಕು ಕೈ ಸೇರಿಸಿ ಹಿಡಿಯಬೇಕಾದ ಸೈಜಿನ ಹಪ್ಪಳ, ತರ ತರದ ಬೋಂಡಾ, ಭವಿಷ್ಯವಾಣಿ ಹೇಳೋ ರೋಭೋ, ಶಾಸ್ತ್ರದ ಗಿಣಿ, ನಗಿಸೋ ಕನ್ನಡಿಗಳು, ಮಾತಾಡೋ ಕತ್ತೆ ಪನ್ನಾಲಾಲ್ , ಜಾದೂ ಶೋಗಳು ಎಲ್ಲೆಡೆಯಂತೆ ಇಲ್ಲೂ ಇದ್ದರೂ ಅವಕ್ಕೇ  ತರತರದ ಹೆಸರುಗಳು. ಹಿಂದಿನ ಜಾತ್ರೆಯಲ್ಲಿ ಅಮೃತವರ್ಷಿಣಿ ಬಳೆ, ಕಲವು ದಾರಿ ಬ್ಯಾಗು, ಮನೆಯೊಂದು ಮೂರು ಬಾಗಿಲು ಬ್ಲೌಸು ಅನುತ್ತಿದ್ದ ಬಳೆಯಂಗಡಿ  ,ಬಟ್ಟೆಯಂಗಡಿಯವರು ಈಗ ಹೆಸರೆಲ್ಲಾ ಎಲ್ಲಾ ಅನ್ನುವಂತೆ ಈಗಿನ ಧಾರಾವಾಹಿಗಳ ಹೆಸರೊಂದಿಗೆ ಅಪ್ಡೇಟ್ ಆಗಿದ್ದಾರೆ. ಹೃದಯದಿಂದಾ ಮಸಾಲೆಮಂಡಕ್ಕಿ( ಖಾರ ಜಾಸ್ತಿಯಾದ್ರೆ ನೆತ್ತಿಗೆ ಹತ್ತೋದು ಗೊತ್ತು. ಇದ್ಯಾವ ತರ ಹೃದಯದಿಂದವಪ್ಪಾ ಅಂತ ಯೋಚಿಸುತ್ತಲೇ ಒಂದ್ನಾಲ್ಕು ಪ್ಯಾಕೇಟ್ ಜಾಸ್ತಿ ಮಂಡಕ್ಕಿ ಖಾಲಿಯಾಗಿರುತ್ತೆ!), ಪ್ಯಾರೆಲಾಲ್ ಪಾಪ್ ಕಾರ್ನ್, ಶಂಭೋ ಫಲೂದಗಳ ಬದಲು ಅದೇ ಹೆಸರು, ಸವಿಗೆ ಒಂದಿಷ್ಟು ಮಾಡರ್ನ ಹೆಸರುಗಳ, ದೀಪಗಳ ಚಮಕ್ ಕೊಡೋ ಪ್ರಯತ್ನಗಳು ಪರವಾಗಿಲ್ವೇ ಅನಿಸುತ್ತೆ. ಕೇರಳ ಹಲ್ವಾ, ಬೆಳಗಾವಿ ಸ್ಪೆಷಲ್ ಖಾರಾ , ಧಾವಣಗೆರೆ ಸ್ಪೆಷಲ್ ಬೆಣ್ಣೆ ದೋಸೆ, ದೆಲ್ಲಿಯ ಜಾಯಿಂಟ್ ವೀಲು ಹೀಗೆ ಹೇಳೋಕೆ  ಯಾವುದೂ ಲೋಕಲ್ಲಲ್ಲಪ್ಪ. ಎಲ್ಲವೂ ಇಂಪೋರ್ಟೆಡ್ಡು !! ಮುಖ್ಯ ಸಾಲು ಬಿಟ್ಟು ಕೆಳಗೆ ಕಾಲಿಟ್ಟರೆ ಅಲ್ಲಿ ಹವ್ಯಕ ಸಂಘದ ರೊಟ್ಟಿ, ದೋಸೆ ಸ್ಟಾಲು, ಮಹಿಳಾ ಸಂಘದವರ ಮಂಡಕ್ಕಿ, ಮತ್ತೊಂದು ಸ್ವಸಹಾಯ ಸಂಘದವರ ನೆಲ್ಲಿಕಾಯಿ ಸೆಟ್ಟು, ಉಪ್ಪಿನಕಾಯಿ, ಹೀಗೆ ಹಲವು ಉತ್ಪನ್ನಗಳು ಕಾಣೋತ್ತೆ. ಕಾಣೋ ಕಾಮನ್ನು ಸಂಗತಿಗಳ ಬಗ್ಗೇನೇ ಬರದ್ರೆ  ಸಲದ ವಿಶೇಷಗಳ ಬಗ್ಗೆ ಬರೆಯೋದೇಗೆ? ಪ್ರತೀ ಸಲ ಜಾತ್ರೆಗೆ ಹೋದಾಗ್ಲೂ ಎಲ್ಲವೂ ಸ್ಪೆಷಲ್ಲಾಗಿ ಕಂಡ್ರೂ ಈ ಸಲದ ಸ್ಪೆಷಲ್ಲುಗಳು ಅಂತ್ಲೇ ಒಂದಿಷ್ಟಿವಿ. ಪುಟ ತುಂಬಿಬಿಡೋದ್ರೊಳಗೆ , ಓದುಗ ಮಹಾಪ್ರಭು ಬೇಸರಿಸಿ ನಿದ್ರಿಸೋದ್ರೊಳಗೆ ಅದರ ಬಗ್ಗೆ ಬರೆದೇ ಬಿಡುವೆ. 


ಬಸ್ಟಾಂಡ್ ಸರ್ಕಲ್ಲಿನಿಂದ ಜಾತ್ರೆ ಶುರು ಮಾಡುವಾಗ ಮೊದಲು ಕಣ್ಣಿಗೆ ಬಿದ್ದಿದ್ದು ಉಲ್ಲನ್ನಿನ್ನ ತೋರಣಗಳು. ಹಸಿರು-ಬಿಳಿ, ಹಳದಿ-ಹಸಿರು, ಬಿಳಿ-ಪಿಂಕು, ನೇರಳೆ.. ಹೀಗೆ ಹಲವು ಬಣ್ಣಗಳಲ್ಲಿ ಮಿಂಚುತ್ತಿದ್ವು. ಹಿಂದಿನ ಮಾರಿ ಜಾತ್ರೆಯಲ್ಲಿ ಕಾಣದಿದ್ದ ಹೊಸ ಟ್ರೆಂಡಿದು. . ಮೊದಲು ಸ್ವಲ್ಪ ದೊಡ್ಡದ್ದಕ್ಕೆ ನೂರು ರೂ ಕೊಟ್ಟು ತಗಂಡಾಯ್ತು. ಮತ್ತೆ ಸ್ವಲ್ಪ ಮುಂದೆ ಬಂದಾಗ ಮತ್ತೆ ಕಣ್ಣು ಸೆಳೆದಿದ್ದು ಮತ್ತಿದೇ ತೋರಣ. ಮೊದಲಿನದಕ್ಕಿಂತ ಸ್ವಲ್ಪ ಸಣ್ಣದಂತೆ ಕಂಡರೂ ಬೇರೆ ಬೇರೆ ಆಕರ್ಷಕ ಡಿಸೈನು. ಮನಸ್ಸು ತಡೆಯಲಾರದೇ ಎಷ್ಟಂತ ಕೇಳೇಬಿಟ್ರು ಅಮ್ಮ. ನೂರೆಂದ್ಲು ಮಾರುತ್ತಾ ಕೂತಿದ್ದವಳು.. ಎಪ್ಪತ್ತಕ್ಕೆ ಕೇಳೋಣ್ವಾ ಅಂದೆ ಅಮ್ಮಂಗೆ. ತಡಿ ಒಂದ್ನಿಮ್ಷ ಅಂತ ಐವತ್ತಕ್ಕೆ ಕೊಡ್ತೀಯಾ ಅಂದ್ರು ಅಮ್ಮ. ಅವ್ಳು ಹೇಗಿದ್ರೂ ಇಲ್ಲ ಅಂತಾಳೆ , ಮುಂದೆ ಹೋಗಬಹುದು ಅಂತ ಅಮ್ಮ ಹೀಗಂತಿದಾರೆ ಅಂತ ನನ್ನ ಆಲೋಚನೆ. ಆಕೆ ಅದನ್ನ ಕೊಟ್ಟೇ ಬಿಡೋದೆ ಐವತ್ತಕ್ಕೆ ?  ಅರೇ ಇದೇ ತರದ್ದಕ್ಕೆ ನೂರು ಕೊಟ್ವಲ್ಲಾ ಅಂತ ಬೇಜಾರಾದ್ರೂ ಹೋಗ್ಲಿ ಬಿಡು ಕಷ್ಟಪಟ್ಟು ದುಡೀತಿದಾರೆ ಬದುಕಿಕೊಳ್ಲಿ , ಆಗ ತಗಂಡಿದ್ದು ಸ್ವಲ್ಪ ದೊಡ್ಡದಿತ್ತು. ಹಾಗಾಗಿ ಅದಕ್ಕೆ ಎಂಭತ್ತು ಕೊಡಬಹುದಿತ್ತೇನೋ. ನೂರು ತೀರಾ ಜಾಸ್ತಿಯಾಗಲಿಲ್ವೇನೋ ಅಂತನೇಕ ಸಮಾಧಾನಗಳು ಹೊಕ್ಕು ಹೊರಟವು.ಇಲ್ಲೊಂದೇ ಅಲ್ಲದೇ ಜಾತ್ರೆಯ ತುಂಬೆಲ್ಲಾ ಇವನ್ನೇ ಹೊತ್ತು ಮಾರುತ್ತಿದ್ದ ಬಯಲು ಸೀಮೆಯ ಹಲವು ಮಂದಿ ಆಮೇಲೆ ಕಂಡದ್ದು ಚಿತ್ತಾಕರ್ಷಕ ದೊಡ್ಡ ದೊಡ್ಡ ಡಿಸೈನುಗಳಿಗೆ ಇನ್ನೂರವೈತ್ತರವರೆಗೆ ರೇಟು ಹೇಳುತ್ತಿದ್ದುದು ಬೇರೆ ಮಾತು.


ಹಂಗೇ ಕನ್ನಡಕದ, ಗೊಂಬೆಗಳ, ಹಚ್ಚೆ ಹಾಕಿಸುವವರ, ಜಟ್ ಫಟ್ ಮೆಹಂದಿಯವರ, ಖುರ್ಚಿ ಕೊಟ್ಟು ದೋಸೆ ತಿನ್ನಿಸುವವರ, ಕೋವಿ ಕೊಟ್ಟು ಬಲೂನಿಗೆ ಗುಂಡಿಡಿಸುವವರ, ಮೂವತ್ರೂಪಾಯಿ ಪಾತ್ರೆ, ನೂರಿಪ್ಪತ್ತರ ಚಪ್ಪಲಿ, ಯಾವದು ತಗೊಂಡ್ರೂ ಇನ್ನೂರೈವತ್ತು ಗ್ರಾಂಗೆ ಎಪ್ಪತ್ತು ಅನ್ನೋ ಕೇರಳದ ಸ್ವೀಟ್ಗಳ, ಎಳನೀರು, ಕಲ್ಲಂಗಡಿ, ಚೈನಲ್ಲಿ, ರಿಸ್ಟ್ ಬ್ಯಾಂಡಲ್ಲಿ, ಮಣಿಗಳಲ್ಲಿ ಹೆಸರು ಪೋಣಿಸಿ ಕೊಡುವವರ, ಐ ಲವ್ ಯೂ ಇಂದ ಐ ಮಿಸ್ ಯೂವರೆಗೆ ಹಲ ಬರಹದ ಬಲೂನ್ ಮಾರುವವರ, ಬೆಂಡು ಬತ್ತಾಸು ಜಿಲೇಬಿ ಖಾರಾ ಸೇವುಗಳ ಸಿಹಿಯಂಗಡಿಗಳ ದಾಟಿ ಸೀದಾ ಮುಂದೆ ಹೋದ್ರೆ ಮಾರಿಕಾಂಬೆಯ ದೇಗುಲದ ಲೈಟುಗಳು ಕಾಣುತ್ವೆ. ಅಲ್ಲೇ ಎಡದಲ್ಲಿ ಅನ್ನಸಂತರ್ಪಣೆಯ ಜಾಗ. ಸೀದಾ ಮುಂದೆ ಹೋದ್ರೆ ದೇಗುಲದ ಗೋಪುರಗಳನ್ನೂ ಬಿಡದಂತೆ ಲೈಟಿನ ಸರಗಳದ್ದೇ ಪೆಂಡಾಲು. ಆ ಪೆಂಡಾಲಿನ ಒಂದು ಬದಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ತಬಲಾ, ಭಜನೆ ಹೀಗೆ ಪ್ರತಿದಿನವೂ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ದೇಗುಲದ ಮುಖ್ಯ ದ್ವಾರದಲ್ಲಿ ದೇವಿ ಮಾರಿಕಾಂಬೆ. ಬೆಳಿಗ್ಗೆ ಏಳರಿಂದ ರಾತ್ರೆ ಹತ್ತರವರೆಗೆ ಭಕ್ತರ ದರ್ಶನಕ್ಕೆ ತೆರೆದಿರೋ ಆಕೆಯ ಕೆಂಪಗಿನ ಮೂರ್ತಿಯ ದರ್ಶನಕ್ಕೆ ಪ್ರತೀ ಬಾರಿಯೂ ನೂಕು ನುಗ್ಗಲಿದ್ದರೂ ನಿಯಂತ್ರಣಕ್ಕೆ ಸಾಕಷ್ಟು ಪೋಲಿಸರು, ಕ್ಯೂ ಪದ್ದತಿ ಇರೋದ್ರಿಂದ ಸಾವಕಾಶವಾಗಿ ದೇವಿಯ ದರ್ಶನ ಪಡೆಯೋಕೆ ತೊಂದರೆಯಿಲ್ಲ. 


ಸೋಪಿನ ನೊರೆಯಿಂದ ಗುಳ್ಳೆ ಮಾಡೋದು ಹಳೆದಾಯಿತು. ಈಗ ಪ್ಲಾಸ್ಟೀಕ್ ಅಂಟುಗುಳ್ಳೆಗಳ ಕಾಲ ! ಪ್ಲಾಸ್ಟೀಕಿನ ಅಂಟನ್ನ ಉಬಿಸಿ ಅದನ್ನ ಅದೇ ಸೋಪಿನ ಗುಳ್ಳೆ ಊದಲಿದ್ದದ್ದೇ ತರದ ತೆಳ್ಳನೇ ಊದುಕೊಳೊವೆಯಿಂದ ಊದಿ ಗುಳ್ಳೆ ಮಾಡೋದು ಈ ಜಾತ್ರೆಯ ಮತ್ತೊಂದು ಆಕರ್ಷಣೆ. ಆ ಗುಳ್ಳೆಗಳು ಒಂದಕ್ಕೊಂದು ಅಂಟೋದು ಮತ್ತೊಂದು ಆಕರ್ಷಣೆ. ಒಂದು ಪ್ಯಾಕಿನಲ್ಲಿ ಇಪ್ಪತ್ತು ಗುಳ್ಳೆಯಾಗುತ್ತೆ , ಇಷ್ಟೇ ರೂಪಾಯಿ  ಅಂತ ಮಾರ್ತಿದ್ರೆ ತಳೊಳ್ಲೇಬೇಕು ಅನಿಸುವಂತೆ ನಯ ಅವರ ಮಾತು. ಪೀಂ ಪೀವ್ ಅಂತ ಸಂಗೀತ ನುಡಿಸುತ್ತಾ ಸಾಗುತ್ತಿದ್ದ ಒಂದು ತಂತಿಯ ತಂಬೂರಿಗಳು, ಕಹೋನಾ ಪ್ಯಾರ್ ಹೈ ಕೊಳಲಿಗರು, ಢಂ ಢಂ ಡಿಗಾಡಿಗಾ ಜಾತ್ರೆ ತಬಲಿಗರು.. ಹೀಗೆ ಮಕ್ಕಳನ್ನು ಸೆಳೆಯೋ ಹಲವು ವಾದ್ಯದವರು ಜೊತೆಜೊತೆಗೇ ಸಾಗ್ತಿರುವಾಗ ಗೆಳೆಯರ ದಂಡು ಆಗಾಗ ಎಡತಾಕ್ತಿದ್ದರು. ಸುಮುಖ, ವಿನಯ, ತಿಮ್ಮಪ್ಪ, ಶ್ರೀವತ್ಸ, ಶ್ರೀಶ, ಕಾರ್ತೀಕ, ಹರೀಶ, ಯಾಲಕ್ಕಿ, ವಿಕ್ರಮಣ್ಣ, ಸಮರ್ಥ, ಗೌತಮ ಹೀಗೆ ಸಿಕ್ಕವರು ಹಲವರು. ಕೆಲವು ಹಿರಿಯರು ಸಿಗದೇ ವರ್ಷಗಳೇ ಆಗಿ ಆರಾಮ ಆರಾಮು ಎಂಬ ಮಾತುಕತೆಗಳೇ ಮತ್ತೆ ಪರಿಚಯ ನೆನಪಿಸಿಕೊಟ್ಟಿದ್ದೂ ಆಯ್ತು ಈ ಜಾತ್ರೆಯಲ್ಲಿ. ಎಲ್ಲೂ ಸಿಗದ ಜನ ಈ ಜಾತ್ರೆಯಲ್ಲಾದ್ರೂ ಸಿಕ್ಕಿ ಮತ್ತೆ ಸಂಬಂಧದ ಕೊಂಡಿಗಳು, ನೆಂಟಸ್ತಿಕೆಯ ನಂಟುಗಳು ಮತ್ತೆ ಗಟ್ಟಿಯಾಗುತ್ತೆ ಅಂದ್ರೆ ಈ ತರದ ಜಾತ್ರೆಗಳು ಆಗಾಗ ಬರ್ತಿರಬೇಕು ಅನಿಸ್ತು.


ಈ ಸಲ ಜಾತ್ರೆಯ ಮತ್ತೊಂದು ವಿಶೇಷತೆ ಕುಮಾರೇಶ್ವರ ನಾಟಕ ಮಂಡಳಿಯ ನಾಟಕ. ಮುಂಚಿನ ಜಾತ್ರೆಗಳಲ್ಲೂ ನಾಟಕ ಬರ್ತಿತ್ತೋ ಆದ್ರೆ ನಾವು ಹೋಗ್ತಿರಲಿಲ್ಲ ಅಷ್ಟೇ ಮಗಾ ಅಂತ ಅಮ್ಮ ಅಂದ್ರೂ ನಂಗ್ಯಾಕೋ ಆ ಕಡೆ ತಲೆಹಾಕೂ ನೆನಪಿರಲಿಲ್ಲ. ಈ ಸಲದ ನಾಟಕಗಳು ಸಖತ್ ಚೆನ್ನಾಗಿವೆ . ಒಂದ್ಸಲ ನೋಡ್ಲೇಬೇಕು ಅನ್ನೋ ನೋಡಿದವರ ಮಾತಿನ ಮೇಲೆ ನಾಟಕ ನೋಡ್ಲೇಬೇಕು ಅನ್ನೋ ಮೂಡು ಬಂದುಬಿಟ್ಟಿತ್ತು. ಆರು ಘಂಟೆಗೆ ನಾಟಕ ಅಂತ ಬಂದವರಿಗೆ ಆರೂವರೆಗೆ ಅದು ಅಂತ ಗೊತ್ತಾಯ್ತು. ಅಲ್ಲಿಯವರೆಗೆ ಅಲ್ಲೇ ಪಕ್ಕದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನೋಡಿದ್ದಾಯ್ತು. ನಾವು ನೋಡಹೋದಾಗ ನವೀನ್ ಪವಾರ್ ಹಾರ್ನಹಳ್ಳಿ ಮತ್ತು ರಾಜು ಕೊಲ್ಲಾಪುರ ಅನ್ನುವವರ ನಡುವೆ ಕುಸ್ತಿ ನಡೆಯುತ್ತಿತ್ತು. ಸುಮಾರು ಹತ್ತು ಹನ್ನೆರಡು ನಿಮಿಷ ನಡೆದ ಪಂದ್ಯದಲ್ಲಿ ಕೊನೆಗೆ ಹಾರ್ನಳ್ಳಿ ನವೀನ್ ವಿಜಯಿಗಳಾದ್ರು. ಎಸ್ ಎಲ್ ಭೈರಪ್ಪನವರ ಒಂದು ಕಾದಂಬರಿಯೇ ಈ ಕುಸ್ತಿ ಪಂದ್ಯಗಳ ಬಗ್ಗೆ ಇದೆ ಅಂತ ಓದಿದ್ದಾದ್ರೂ ಈ ಕುಸ್ತಿಯನ್ನು ಹೈಸ್ಕೂಲಿನಲ್ಲಿದ್ದಾಗ ಶಿವಮೊಗ್ಗ ರಸ್ತೆಯ ಗಾಂಧಿ ಮೈದಾನದಲ್ಲಿ, ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ದಸರಾ ಕುಸ್ತಿಯನ್ನು ನೋಡಿದ್ದೇ ಕೊನೆಯಾಗಿತ್ತು. ಆಮೇಲೇನಿದ್ರೂ ಕುಸ್ತಿಯೆಂದರೆ ಟೀವಿ ಮತ್ತು ಪೇಪರಿನಲ್ಲಷ್ಟೇ. ಈ ಮಣ್ಣಿನಾಟದ ಝಲಕ್ ಮತ್ತೆ ಕಂಡಿದ್ದು ಜಾತ್ರೆಯಲ್ಲಿ. ಅಂದಾಗೆ ನಾಟಕದ ಬಗ್ಗೆ ಬರೋದಾದ್ರೆ ನಾವು ಹೋದ ದಿನ( ೨೨ ಫೆಬ್ರವರಿ) ನಡೆದಿದ್ದು ಮುದುಕನ ಮದುವೆ ಅನ್ನೋ ಹಾಸ್ಯ ನಾಟಕ.

 ರಾಜ್ಯ ಪ್ರಶಸ್ತಿ ಪಡೆದ ಕುಮಾರ ಸ್ವಾಮಿ ಅನ್ನುವವರು ಮುದುಕನಾಗಿ ಪ್ರಧಾನ ಆಕರ್ಷಣೆ ಅಂತ ಇದ್ರೂ ನಾಟಕದ ಉಳಿದ ಪಾತ್ರಧಾರಿಗಳು, ಒಟ್ಟಾರೆ ಕತೆ, ಮಧ್ಯ ಮಧ್ಯ ಬರೋ ಹಾಡುಗಳು, ಜನಾರ್ಧನ ರೆಡ್ಡಿಯನ್ನೂ ಬಿಡದ ಶನಿಮಹಾತ್ಮ, ಈ ಮುಖ ನೋಡು ಇದು ಬೆಂಗಳೂರು, ಇದು ನೋಡು ಕೆಂಪೇಗೌಡ, ಇದು ಕಬ್ಬನ್ ಪಾರ್ಕು ಅನ್ನುತ್ತಾ ಬದಲಾಗುತ್ತಿರೋ ಸನ್ನಿವೇಶದಲ್ಲಿ ಬದಲಾಗಲೇ ಬೇಕಾದ ಅನಿವಾರ್ಯತೆಯನ್ನ ಸಹಜವಾಗೇ ಮೆಟ್ಟಿನಿಂತಿದೆಯಾ ನಾಟಕ ಅನ್ನಿಸಿ , ಅದು ಅಳಿಯದೇ ಉಳಿಯುತ್ತಿರೋ ಪರಿಯ ಬಗ್ಗೆ ಹೆಮ್ಮೆಯನ್ನಿಸ್ತಿತ್ತು. , ಹೊಟ್ಟೆ ನೋಡಿದ್ರೆ ಭಾರತ ಅಂದವನಿಗೆ ಕೆಳಗೆ ನೋಡಿದ್ರೆ ಶ್ರೀಲಂಕಾ ಅನ್ನೋ ಡಬಲ್ ಮೀನಿಂಗ್ ಡೈಲಾಗುಗಳು, ನಿನ್ನಿಂದಲೇ ನಿನ್ನಿಂದಲೇ ಅಂತ ಮಧ್ಯ ಮಧ್ಯ ಬರೋ ಮಾಡರ್ನ್ ಸಿನಿಮಾ ಹಾಡುಗಳು, ಸಾಮಾಜಿಕ ನಾಟಕದ ನಡುವೆ ಬರುವ ಮಹಿಷಾಸುರುನ ಪ್ರಸಂಗದ ಹಳೇ ತಲೆಮಾರಿನ ಶೈಲಿಯ, ಅಚ್ಚಗನ್ನಡದ ಒಂದೇ ಉಸಿರಿನ , ಮಾರುದ್ದ ಡೈಲಾಗುಗಳು , ಹಳೇ ಸೆಟ್ಟುಗಳ ನಡುವೆ ಅದೇ ರಿದಂ ಪ್ಯಾಡನ್ನು ಮ್ಯೂಸಿಕ್ಕಿಗೂ , ತಬಲವಾಗಿಯೂ , ಕೋಗಿಲೆಯಾಗಿಯೂ, ನಾಯಿಯ ಬೌ ಬೌ ಆಗಿಯೂ ಫ್ರೀಕ್ವೆನ್ಸಿ ಬದಲಾಯಿಸಿ ಬಳಸೋ ತಂತ್ರಜ್ಞಾನ .. ಹೀಗೆ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಅಂತನಿಸುತ್ತಿತ್ತು. ಹೊರಬರುವಾಗ ನಾಟಕದ ಆರಂಭಗೀತೆ ಕನ್ನಡ ನಾಟ್ಯಕಲೆಯು ಬೆಳೆಯಲಿ, ಕುಮಾರೇಶ್ವರ ನಾಟ್ಯಕುಸುಮ ಅರಳಲಿ ಅಂತ ನೆನಪಾಗಿ ೧೯೭೧ರಿಂದ ಇಲ್ಲಿಯವೆರೆಗೆ ಕಲಾಸೇವೆಗಯ್ಯುತ್ತಾ ಬಂದಿರುವ ನಾಟಕ ಕಂಪೆನಿಯನ್ನು ಬೇಷೆನ್ನದೇ ಇರಲು ಮನಸ್ಸಾಗಲಿಲ್ಲ. ಕಾರ್ತವೀರ್ಯಾರ್ಜುನ ಹೀಗೆ ಹಲವು ಪ್ರಸಂಗಗಳ ಯಕ್ಷಗಾನಗಳೂ ಜಾತ್ರೆಯ ಸಮಯದಲ್ಲಿ ನಡೆಯುತ್ತಿದೆ ಅಂತ ಕೇಳಿದೆನಾದ್ರೂ ಅವತ್ತೇ ಹೋಗೋ ಸಮಯವಾಗಲಿಲ್ಲ. ೬:೩೦ ಮತ್ತು ೧೦:೦೦ ರ ಶೋಗಳಲ್ಲಿ ಆರೂವರೆಯ ಶೋಗೆ ಹೋಗಿದ್ದರಿಂದ ಅದು ಮುಗಿಯೋದೆ ಹೊತ್ತಾಗಿ ಮನೆ ಸೇರೋ ಹೊತ್ತಾಗಿತ್ತು.


ಇನ್ನು ಹೆಂಡತಿಯನ್ನು ಹೆಚ್ಚು ಪ್ರೀತಿಸಿರೋರು ಯಾರು ಹೇಳೋ ಪನ್ನಾಲಾಲ್ ಅಂದ್ರೆ ಒಬ್ಬರ ಬಳಿ , ಇವರಲ್ಲಿ ಜಾಸ್ತಿ ಸುಳ್ಳು ಹೇಳೋರು ಯಾರು ಹೇಳೋ ಅಂತ ತರ ತರದ ಪ್ರಶ್ನೆಗಳಿಗೆ ಒಬ್ಬೊಬ್ಬರ ಬಳಿ ಬಂದು ನಿಲ್ಲೋ ಕತ್ತೆ ಪನ್ನಾಲಾಲ್, ರಿಂಗ್ ಓಡಿಸೋ ನಾಯಿ, ಗಿಳಿಗಳದ್ದೊಂದು ಶೋ ಆದ್ರೆ ದೂರದ ಗಣಪತಿ ಕೆರೆ ಬಯಲಲ್ಲಿ ಪ್ರಭಾತ್ ಸರ್ಕಸ್ಸು. ಒಂದೇ ದಿನ ಎಲ್ಲಾ ನೊಡೋದೆಲ್ಲಿ ಸಾಧ್ಯ. ಸರ್ಕಸ್ಸಿನ ಬಗ್ಗೆ ಕೇಳಿದ್ದಾಯಿತು. ಇನ್ನೊಂದು ದಿನ ಹೋಗಬೇಕಷ್ಟೇ ಆಲ್ಲಿಗೆ. ಬಾವಿಯೊಳಗೆ ಜೀವ ಪಣಕ್ಕಿಟ್ಟು ಓಡಿಸುತ್ತಿದ್ದಾರೇನೋ ಎನಿಸುವಂತೆ ಕೈ ಬಿಟ್ಟು, ಕಾಲು ಬಿಟ್ಟು ಬೈಕು ಕಾರು ಓಡಿಸುವವರು, ಮೇಲೊರಿಗೂ ಬಂದು ದುಡ್ಡು ಇಸಿದುಕೊಂಡು ಓಡಿಸುವವರು ಹೀಗೆ ಬಾವಿಯೊಳಗಿನ ಬೈಕಿನದು ಮೈ ನವಿರೇಳಿಸೋ ಸಾಹಸ. ಮುಂಚೆಯೆಲ್ಲಾ ಒಂದು ಜಾಯಿಂಟ್ ವೀಲು, ಒಂದೆರಡು ಸಣ್ಣ ತೊಟ್ಟಿಲುಗಳು, ಕೊಲಂಬಸ್ ಇತ್ಯಾದಿಗಳು ಬರುತ್ತಿದ್ದವು. ಈ ಸಲ ಜಾಯಿಂಟ್ ವೀಲೇ ನಾಲ್ಕು. ಕೋಲಂಬಸ್ನ ಜೊತೆಗೆ ಅವನ ತಮ್ಮ ಸೋಲಂಬಸ್, ಅಕ್ಟೋಪಸ್, ಗ್ಲಿಫಿ, ಚಾಂದಾ ಶೋ ಅಂತ ಹೆಸರೇ ಕೇಳದ ಹಿಂದೆಲ್ಲೂ ಕಂಡಿರದ ಒಂದಿಷ್ಟು ಆಟಗಳು. ವರ್ಷ ಹೋದಂಗೂ ಜನರನ್ನು ಸೆಳೆಯೋಕೆ ಹೊಸ ಹೊಸ ತರದ್ದು ಎಲ್ಲಿಂದ ಕಂಡು ಹಿಡಿತಾರಪ್ಪಾ ಇವ್ರು ಅನಿಸ್ತು ಒಮ್ಮೆ. ಮಕ್ಕಳಾಟದ್ದೂ ಕಮ್ಮಿಯಿಲ್ಲ. ಕಾರು, ಕುದುರೆ, ರೈಲು, ಮಿಕ್ಕಿ ಮೌಸ್ ಜಾರು ಬಂಡಿ, ಹೀಗೆ ಬರೆದಷ್ಟೂ ಇವೆ. ಯಾವ್ಯಾವ ತರದ ಅಂಗಡಿಗಳು ಸಾಗರ ಜಾತ್ರೆ ಮೈದಾನದ ಯಾವ್ಯಾವ ಮೂಲೆಯಲ್ಲಿದ್ವು, ಯಾರ್ಯಾರು ಸಿಕ್ಕಿ ಏನೇನು ಮಾತಾಡಿದ್ರು ಅಂತ ಬರದ್ರೆ ಅದೇ ಒಂದೊಡ್ಡ ಪ್ರಸಂಗವಾಗಿಬಿಡಬಹುದೇನೋ.. ಅದೇ ಹೇಳ್ತಾರಲ್ಲ ಜನ ಮರುಳೋ, ಜಾತ್ರೆ ಮರುಳೋ ಅಂತ.. ಸದ್ಯಕ್ಕೆ ಸುಸ್ತಾಗಿದೆ. ಇನ್ನೊಮ್ಮೆ ಯಾವುದಾದ್ರೂ ಜಾತ್ರೇಲಿ ಸಿಕ್ಕಾಗ್ಲೇ ಮಾತಾಡೋಣಂತೆ ಇದ್ರ ಬಗ್ಗೆ. ಅಲ್ಲೀವರ್ಗೆ ವಿರಾಮ.

ಚಿಕ್ಕಮಗಳೂರ ಟ್ರಿಪ್ಪು

ಮುಳ್ಳಯ್ಯನ ಗಿರಿಗೆ ಹೋಗ್ಬೇಕನ್ನೋದು ಬಹುದಿನದ ಕನಸು. ಆದ್ರೆ ಬೆಂಗ್ಳೂರಿಂದ ೨೫೦ ಚಿಲ್ರೆ ಕಿಲೋಮೀಟ್ರು ಅನ್ನೋ ಕಾರಣಕ್ಕೆ ಮತ್ತೆ ಒಂದಿನ ಅದೊಂದಕ್ಕೇ ಹೋಗ್ಬರೋಕಾಗಲ್ಲ. ಎರಡು ದಿನಕ್ಕೆ ಬೆಂಗ್ಳೂರಿಂದ ಗಾಡಿ ಮಾಡಿಸ್ಕೊಂಡೋದ್ರೆ ಬರೀ ಹೋಗ್ಬರೋ ಚಾರ್ಜೇ ಜಾಸ್ತಿ ಆಗತ್ತೆ, ಎರಡು ದಿನಕ್ಕೆ ಯಾರು ಬರ್ತಾರೋ, ಯಾರು ಬರೋಲ್ವೋ ಅನ್ನೋ ಹಲವು ಸಂದೇಹಗಳಲ್ಲೇ ಕನಸು ಮುರಿದುಬೀಳ್ತಿತ್ತು. ಕೊನೆಗೂ ಹರಿ ಹರಿ ಅಂತ ಸಡನ್ನಾಗಿ ಶುಕ್ರವಾರ ಸಂಜೆ ಪ್ಲಾನು ಪಕ್ಕಾ ಆಗಿ ಶುಕ್ರವಾರ ರಾತ್ರೆ ಒಂದೂಮುಕ್ಕಾಲಿಗೆ ಮುಳ್ಳಯ್ಯನಗಿರಿಗೆ ಹೊರಟೇಬಿಟ್ವಿ. ಚಿಕ್ಕಮಗಳೂರು ಅಂದ್ರೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ, ಮಾಣಿಕ್ಯ ಧಾರಾ ಫಾಲ್ಸು, ಹೆಬ್ಬೆ ಫಾಲ್ಸು, ಕೆಮ್ಮಣ್ಣಗುಂಡಿ, z ಪಾಯಿಂಟು, ಕಲ್ಲತ್ತಗಿರಿ, ದೇವಿರಮ್ಮನ ಬೆಟ್ಟ, ಸಮೀರ್ ಅಹ್ಮದ್ ಫಾಲ್ಸು, ಹಿಂಗೆ ಸುಮಾರಷ್ಟು ಜಾಗಗಳಿವೆ .  ಸೀತಾಳಯ್ಯನಗಿರಿಯಿಂದ ಶುರು ಮಾಡಿ ಮತ್ತೆ ನೀಟಾಗಿ ಪ್ಲಾನ್ ಮಾಡಿ ಅಂತ ಚಿಕ್ಕಮಗಳೂರಿನ ಚಿಕ್ಕ ಗೆಳತಿ ಹೇಳಿದ್ಲು ಮುಂಚೇನೆ. ಹಂಗಾಗಿ ನಿದ್ರೆಗಣ್ಣಲ್ಲಿದ್ದ ಡ್ರೈವರಿಗೆ ಮಧ್ಯ ಮಧ್ಯ ಅರ್ಧ ಘಂಟೆ ಮಲಗೋಕಂತ ಬ್ರೇಕ್ ಕೊಡುತ್ತಾ, ಸೂರ್ಯೋದಯ, ಮಂಜಿನ ಫೋಟೋ ಶೂಟ್ ಮಾಡುತ್ತಾ ಮುಳ್ಳಯ್ಯನಗಿರಿಗೆ ಹಾಗೇ ಯಾಕೆ ಹೆಸರು ಅಂತ ತಿಳಿಯೋ ಕುತೂಹಲದಿಂದ ಏಳೂವರೆ, ಎಂಟರ ಹೊತ್ತಿಗೆ ಚಿಕ್ಕಮಗಳೂರಿಗೆ ತಲುಪಿದ್ವಿ.


ಇವೆಲ್ಲಾ ಸ್ಥಳಗಳು ದೂರದ ಲೆಕ್ಕದಲ್ಲಿ ಹೇಳೋದಾದ್ರೆ ಹತ್ರದಲ್ಲೇ ಇದೆ. ಆದ್ರೆ ಒಂದ್ಕಡೆಯಿಂದ ಮತ್ತೊಂದು ಕಡೆಗೆ ಟ್ರೆಕ್ಕಿಂಗ್ ಹೋಗ್ತೀವಿ ಅಂದ್ರೆ ಸ್ವಲ್ಪ ಸಮಯ ಬೇಕಷ್ಟೇ. ಕಾರಲ್ಲೇ ಎಲ್ಲಾ ತಿರುಗ್ತೀವಿ ಅಂದ್ರೆ ಒಂದೇ ದಿನಗಲ್ಲಿ ಐದಾರು ಸ್ಥಳಗಳ ಮುಗ್ಸಿಬಿಡಬಹುದಷ್ಟು ಹತ್ರ ಇವು !. ಆದ್ರೆ ಈ ಮಲೆನಾಡ ಬೆಟ್ಟಗಳ ಚಾರಣವೇ ಒಂದು ಸುಖ. ಮೊದಲು ಚಿಕ್ಕಮಗಳೂರಿನ ಸೌಂದರ್ಯ ರೆಸಿಡೆನ್ಸಿಯೆಂಬೋ ಉಪಹಾರ ಗೃಹದಲ್ಲಿ ತಿಂಡಿ ತಿಂದು ಸೀತಾಳಯ್ಯನಗಿರಿಯತ್ತ ಹೊರಟೆವು. ಚಿಕ್ಕಮಗಳೂರಿಂದ ಬರ್ತಾ ಒಂದು ಕಡೆ ಬಲಕ್ಕೆ ತಿರುಗಿದರೆ ಕಲ್ಲತ್ತಗಿರಿ ಹತ್ತು ಕಿ.ಮೀ ಎಡಕ್ಕೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಅನ್ನೋ ಬೋರ್ಡ್ ಸಿಗತ್ತೆ. ಆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಹತ್ತು ರೂಗಳ ಟೋಲ್ ಕಟ್ಟಿ ಒಂದು ಕಾಲು ಘಂಟೆ ಹೋಗೋದ್ರಲ್ಲಿ ಮತ್ತೊಂದು ಕವಲು ದಾರಿ. ಅದರಲ್ಲಿ ಬಲಕ್ಕೆ ಹೋದ್ರೆ ಸೀತಾಳಯ್ಯನಗಿರಿ.  ಬಲಗಡೆ ಸೀದಾ ರಸ್ತೆಯಲ್ಲಿ ಹೋಗೋ ಬದ್ಲು ಸ್ವಲ್ಪ ಮುಂದೆ ಹೋದ್ರೆ ಮೇಲೆ ಸಾಗೋ ಮೆಟ್ಟಿಲುಗಳು ಸಿಗುತ್ತೆ. ಅದರಲ್ಲಿ ಹೋದ್ರೆ ಸೀದಾ ಒಂದು ಕಿ.ಮೀ ಮೇಲಿರೋ ಸೀತಾಳಯ್ಯನಗಿರಿಯ ದೇಗುಲದ ಬಾಗಿಲಿಗೆ ಹೋಗಬಹುದು. ಇಲ್ಲಾಂದ್ರೆ ರಸ್ತೆಯಲ್ಲಿ ಸಾಗೂ ಸೀತಾಳಯ್ಯನಗಿರಿಯ ದೇವಸ್ತಾನಕ್ಕೆ ತೆರಳಬಹುದು. ಅಲ್ಲೊಂದು ಮಲ್ಲಿಕಾರ್ಜುನ ದೇವಸ್ಥಾನ. ಅಲ್ಲೊಮ್ಮೆ ಅಡ್ಡಬಿದ್ದ ನಾವು ಪ್ರಯಾಣ ಶುಭಾಕರವಾಗಲೆಂದು ಬೇಡಿ ಮುಂದೆ ಹತ್ತೋಕೆ ಶುರು ಮಾಡಿದ್ವಿ. ಅಲ್ಲಿಂದ ಮುಳ್ಳಯ್ಯನಗಿರಿಗೆ ಎರಡು ಕಿ.ಮೀ. ಅನ್ನೋ ಬೋರ್ಡು. ಅಲ್ಲೇ ಎದುರಿನ ಬೆಟ್ಟ ಏರಿ ಮುಳ್ಳಯ್ಯನ ಗಿರಿಗೆ ಹೋಗ್ಬಹುದು. ಇಲ್ಲಾ ಗಾಡಿಯಲ್ಲಿ . ಕಾಲುದಾರಿ ಚೆನ್ನಾಗೇ ಇರೋದ್ರಿಂದ, ನಮ್ಮ ಜೊತೆ ಜೊತೆ ಇನ್ನೊಂದು ಕಾಲೇಜಿನ ದೊಡ್ಡ ಗುಂಪೂ ಬಂದಿದ್ರಿಂದ ಅಲ್ಲಿಂದ್ಲೇ ಚಾರಣಕ್ಕೆ ಶುರು ಹಚ್ಚಿದ್ವಿ.


ನಾನು, ರೋಭ, ಇಬ್ರು ಹರಿ, ವಿನಾಯಕ, ಗುಂಡ, ಆದಿತ್ಯಣ್ಣ. ಹೀಗೆ ಏಳು ಜನರ ಗುಂಪು ಮಾತಾಡ್ತಾ, ಕಾಲೆಳಿತಾ ಹತ್ತೋಕೆ ಶುರು ಮಾಡಿದಾಗ ಮೊದಲ ಬೆಟ್ಟದ ತುದಿ ಬಂತು. ಮೊದ ಮೊದಲು ಉಮೇದಿನಿಂದ ಹತ್ತುತ್ತಿದ್ದ ಕಾಲೇಜು ಹುಡುಗ್ರು ಯಾಕೋ ಮುಂದೆ ಬರೋ ತರ ಕಾಣ್ತಿರಲಿಲ್ಲ. ನಿಧಾನಕ್ಕೆ ಬರಲಿ ಅವ್ರು ಅಂತ ನಾವು ಆ ಬೆಟ್ಟ ಇಳ್ಯಕ್ಕೆ ಮುಂದಾದ್ವಿ. ಅದನ್ನು ಇಳೀತಿದ್ದಂಗೆ ಮತ್ತೊಂದು ಬೆಟ್ಟ. ಎದುರಿಗೆಲ್ಲಾ ಬೆಟ್ಟಗಳ ಸಾಲು. ಕಾಲುದಾರಿಯ ನೋಡಿ, ಅಲ್ಲಲ್ಲಿ ಬಿದ್ದಿದ್ದ ಗುಟ್ಕಾ ಪ್ಯಾಕೇಟ್, ಕೆಲವೆಡೆ ಇದ್ದ ಹೆಜ್ಜೆ ಗುರುತು, ನಾವು ಹೋಗಬೇಕಾದ ದಿಕ್ಕಿನ ಗುರುತಿನ ಮೇಲೆ ಮುಂದೆ ಮುಳ್ಳಯ್ಯನಗಿರಿಯತ್ತ ಸಾಗಿದ್ವಿ. ಹೀಗೆ ಎರಡು ಬೆಟ್ಟ ಹತ್ತಿಳಿದ ಮೇಲೆ ಮತ್ತೆ ಸೀತಾಳಯ್ಯನಗಿರಿಯಿಂದ ಹೊರಟಿದ್ದ ಟಾರು ರೋಡು ಸಿಕ್ಕಿತು. ಹಿಂದೆ ತಿರುಗಿ ನೋಡಿದ್ರೆ ಬೆಟ್ಟ ಹತ್ತಿ ಬರೋರ್ಗಿಂತ ಕಾರಲ್ಲಿ, ರೋಡಲ್ಲಿ ಬರೋರೇ ಜಾಸ್ತಿ ಇರೋ ತರ ಕಾಣ್ತಿತ್ತು! ಲೋಕೇ ಭಿನ್ನರುಚಿಃ ಬಿಡಿ!. ಟಾರ್ ರಸ್ತೆಯೂ ಒಂದೆಡೆ ಕೊನೆಯಾಗುತ್ತೆ. ಮುಳ್ಳಯ್ಯನಗಿರಿಯ ತಪ್ಪಲಲ್ಲಿ ಒಂದಿಷ್ಟು ಮೆಟ್ಟಿಲುಗಳು ಶುರುವಾಗತ್ತೆ. ಅದನ್ನ ಏರೇ ಸಾಗ್ಬೇಕು. ಆ ಮೆಟ್ಟಿಲುಗಳ ಪ್ರಾರಂಭಕ್ಕೊಂದು ಸ್ವಾಗತ ಕಮಾನು. ಅಲ್ಲಿಂದ "ಸರ್ಪದಾರಿ" ಅಂತ ಕರೀತಾರಂತೆ. ದೂರದಿಂದ ನೋಡಿದವರಿಗೆ ಮೂರು ತಿರುವುಗಳಾಗಿ ಹಾವು ಅಡ್ಡಡ್ಡ ಬಿದ್ದಂತೆ ಕಾಣೋದ್ರಿಂದ ಅದಕ್ಕೆ ಆ ಹೆಸರಿರಬಹುದು. ಆ ಮೆಟ್ಟಿಲುಗಳ ಹತ್ತಿದ್ರೆ ಶ್ರೀಗುರು ಮುಳ್ಳಪ್ಪಸ್ವಾಮಿಗಳ ಗದ್ದುಗೆ ಸಿಗುತ್ತೆ. ಅವರಿಂದಲೇ ಕರ್ನಾಟಕದ ಅತೀ ಎತ್ತರದ ಬೆಟ್ಟಕ್ಕೆ ಆ ಹೆಸರು. ಆ ದೇಗುಲದ ಪ್ರಶಾಂತ ವಾತಾವರಣದಲ್ಲಿ, ತಣ್ಣನೆಯ ಜಗುಲಿಯಲ್ಲಿ ಕೂತರೆ ಅಬ್ಭಾ.. ನಡೆದ ನೋವೆಲ್ಲಾ ಮಾಯ. ಅಲ್ಲೇ ಒಂದರ್ಧ ಘಂಟೆ ಕೂತುಬಿಡೋಣ್ವೇ, ಏಳೊದೇ ಬೇಡ್ವೆ ಅನಿಸಿಬಿಡುವಷ್ಟು ಮುದಕೊಡೋ ವಾತಾವರಣ ಅದು.


ಅಲ್ಲಿಂದ ಹೊರಬಂದು ಮತ್ತೊಂದಿಷ್ಟು ಫೋಟೋ ಶೂಟು. ಅಲ್ಲಿಂದ ಮಾಣಿಕ್ಯಧಾರಾ ಫಾಲ್ಸಿಗೆ ನಡೆದುಹೋಗಬಹುದಂತೆ. ಗದ್ದುಗೆಯಿಂದ ಸೀದಾ ಎದುರಿಗೆ ಕಾಣೋ ಟೀವಿ ಟವರೇ ದಿಕ್ಕು. ಗದ್ದುಗೆಯ ಹಿಂಬದಿಯಿಂದ ಶುರುವಾಗೋ ಕಾಲುಹಾದಿಯೇ ದಾರಿ. ಇಲ್ಲಿ ಮಾತ್ರ ದಾರಿ ತಪ್ಪದಂತೆ  ಸ್ವಸ್ವಲ್ಪ ದೂರಕ್ಕೆ ಪೇಂಟಿನ ಸರಿ ಗುರುತುಗಳನ್ನು , ಹಾದಿ  ಕವಲೊಡೆಯುವ ಕಡೆ ಸರಿಯಾದ ಕಡೆ ಸರಿ ಗುರುತನ್ನ, ತಪ್ಪು ದಾರಿಗೆ ಇಂಟು ಗುರುತನ್ನು ಹಾಕಿದ್ದಾರೆ. ಹಾಕಾಗಿ ದಾರಿ ತಪ್ಪೋ ಅಪಾಯ ಕಮ್ಮಿಯೇ. ಇಲ್ಲಿಯ ಬೆಟ್ಟಗುಡ್ಡಗಳನ್ನು ಹತ್ತಿಳಿಯುತ್ತಾ ಪ್ರಕೃತಿಯ , ಮೋಡಗಳ ಬಗೆ ಬಗೆಯ ಚಿತ್ತಾರ ಕಾಣುತ್ತಾ , ಅಪರೂಪದ ಹೂಗಳ ಚಿತ್ರ ತೆಗೆಯುತ್ತಾ ಸಾಗೋದೇ ಒಂದು ಆನಂದ. ಹೀಗೇ ನಡೆ ನಡೆದು ಕವಿಕಲ್ ಗುಂಡಿ ಎಂಬೋ ಸ್ಥಳದ ಅರಣ್ಯ ಇಲಾಖಾ ಚೆಕ್ ಪೋಸ್ಟಿನವರೆಗೆ ಸಾಗಬಹುದು. ಕವಿಕಲ್ಗುಂಡಿಯ ಮೇಲೊಂದು ವಿವೇಕಾನಂದರ ಆಳೇತ್ತರದ ಚಿತ್ರ ಇದೆ. ಸಂಜೆಯ ಹೊತ್ತಿಗಾದರೆ ಅದೊಂದು ಸೂರ್ಯಾಸ್ತದ ಸ್ಪಾಟು. ಅಲ್ಲೇ ಕೆಳಗಿಳಿದ್ರೆ ಚೆಕ್ ಪೋಸ್ಟು ಮತ್ತೊಂದು ಚಿಕ್ಕ ಆಂಜನೇಯನ ಗುಡಿ. ಮುಳ್ಳಯ್ಯನಗಿರಿಯಿಂದ ಸುಮಾರು ಆರೇಳು ಕಿಲೋಮೀಟರ್ ಆಗ್ಬಹುದು ಕವಿಕಲ್ ಗುಂಡಿ. ಅಲ್ಲಿಂದ ಕಾಲ್ನಡಿಗೆಯಲ್ಲೇ ಒಳದಾರಿಯಲ್ಲಿ ಸಾಗಿದ್ರೆ ಮಾಣಿಕ್ಯಧಾರಾ ಫಾಲ್ಸಿಗೆ ಮೂರೇ ಕಿಲೋಮೀಟರ್. ಆದ್ರೆ ಮುಳ್ಳಯ್ಯನಗಿರಿಯ ಬಿಸಿನಲ್ಲಿ, ಚಾರಣದ ಸುಸ್ತಲ್ಲಿ ಮುಂದೆ ನಡೆಯೋ ಮನಸ್ಸು ಕಮ್ಮಿಯಾಗತೊಡಗಿತ್ತು. ಕವಿಕಲ್ ಗುಂಡಿಯ ಚೆಕ್ ಪೋಸ್ಟ್ ಹತ್ತಿರ ಮತ್ತೆ ಮುಳ್ಳಯ್ಯನಗಿರಿಯಿಂದ ಬಂದ ದಾರಿಯೇ ಸೇರುತ್ತೆ. ಅಲ್ಲಿಂದ ಬಂದು ಕಾಯುತ್ತಿದ್ದ ನಮ್ಮದೇ ಟವೇರಾದಲ್ಲಿ ಮಾಣಿಕ್ಯಧಾರಾ ಕಡೆಗೆ ಸಾಗಿದೆವು. ಗಾಡಿಯಲ್ಲಾದ್ರೆ ಸುತ್ತೀ ಬಳಸಿ ಸಾಗೋ ಆ ದಾರಿಗೆ ೧೨ ಕಿ.ಮೀ !.


ಮಾಣಿಕ್ಯಧಾರಾಕ್ಕೆ ಸಾಗೋ ಹೊತ್ತಿಗೇ ಮಧ್ಯಾಹ್ನವಾಗಿತ್ತು. ಮಧ್ಯ ಅದೆಂತದೋ  ಗುಂಡಿ  ಅನ್ನೋ ಊರು. ಅಲ್ಲೊಂದು ರಸ್ತೆ ಬದಿಯಲ್ಲೇ ಧುಮಿಕುತ್ತಿದ್ದ ನೀರ ಧಾರೆ. ಅದನ್ನೇ ಫಾಲ್ಸು ಅನ್ನೋ ತರ ಭಾವಿಸಿ ಧುಮುಕೋ ಜನಗಳು !. ಬಹುಷಃ ಅವರಿನ್ನೂ ಕಲ್ಲತ್ತಗಿರಿ, ಶಾಂತಿ ಫಾಲ್ಸನ್ನು ಹೊಕ್ಕಿರಲಿಲ್ಲ ಅನ್ಸುತ್ತೆ. ಆದ್ರೂ ಬೆಳಗಿಂದ ನಡೆದ ಬಿಸಿಲಿಗೆ(ಬಿಸಿಲದಿನಗಳಲ್ಲಿ ಚಾರಣ ಮಾಡೋರಿಗೆ) ಇದೊಂತರ ರಿಲೀಫೇ. ಆ ಗುಂಡಿ ಊರಲ್ಲೊಂದು ವೆಜ್ ಕ್ಯಾಂಟೀನ ಹುಡುಕಿ ಹೊಟ್ಟೆ ತುಂಬಿಸಿ ಮಾಣಿಕ್ಯಧಾರಾಕ್ಕೆ ಹೊರಟೆವು. ಮಾಣಿಕ್ಯಧಾರಾ ತಲುಪೋ ಹೊತ್ತಿಗೆ ಮೂರು ಮೂರೂವರೆ. ಅಲ್ಲಿನ ಎಂಟ್ರಿ ಫೀ ಒಂದು ರೂ !!! . ಒಂದು ರೂಗೂ ಬೆಲೆ ಇದೆ ಪರ್ವಾಗಿಲ್ಲ ಅಂತ ಖುಷಿ ಪಟ್ಟು ಕೆಳಗಿಳಿದವರಿಗೆ ನಿರಾಸೆ . ಫಾಲ್ಸೆಂದರೆ ಭೋರ್ಗರೆಯೋ ಒಳ್ಳೆಯ ನೀರಿರಬಹುದೆಂಬ ನಿರೀಕ್ಷೆಯಲ್ಲಿದ್ದೋರಿಗೆ ದೂರದಿಂದ ಸಣ್ಣಗೆ ಬೀಳ್ತಿದ್ದ ನೀರ ಕಂಡು ನಿರಾಸೆ. ಸಿಕ್ಕಾಪಟ್ಟೆ ಜನ ಬೇರೆ. ಮುಂಚೆ ಅಲ್ಲಿ ಸ್ನಾನ ಮಾಡಿದ ಬಟ್ಟೆಗಳನ್ನು ಕಂಡಲ್ಲಿ ಬಿಸಾಡೋ ಮೂಡನಂಬಿಕೆಗಳಿದ್ದವಂತೆ. ಅದೇ ಕಾರಣಕ್ಕೆ ಮೂಡನಂಬಿಕೆಗಳ ಪ್ರೋತ್ಸಾಹಿಸಬೇಡಿ, ಕೆಳಗಿರೋ ಬೆಂಕಿಗೇ ಬಟ್ಟೆ ಬಿಸಾಕಿ ಅಂತ ಬೋರ್ಡು ಹಾಕುವಂತಾಗಿದೆ ಅಲ್ಲಿ. ಅಂತೂ ಜನ ಸ್ವಲ್ಪ ಖಾಲಿಯಾದರೂ ನೀರಿಗಿಳಿಯೋ ಮೂಡಿರಲಿಲ್ಲ. ಚಿಕ್ಕಮಗಳೂರ ಚಳಿ ಶುರುವಾಗಿತ್ತು. ಬೆಳಗ್ಗೆ ಸೀತಾಳಯ್ಯನಗಿರಿ ಹತ್ರ ಮೈ ನಡುಗಿಸಿದ ಚಳಿ ಬಿಟ್ರೆ ಆಮೇಲೇ ಬರೀ ಗಾಳಿಯೇ ಹೊರತು ಚಳಿ ಕಂಡಿರಲಿಲ್ಲ. ಅಂತೂ ಧೈರ್ಯ ಮಾಡಿ ನೀರಿಗೆ ಕಾಲಿಟ್ಟರೆ .. ಯಪ್ಪಾ ಐಸ ಮೇಲೆ ಕಾಲಿಟ್ಟಂತೆ ! ಮುನ್ನಾರ ಚಳಿಯಲ್ಲಿ ಮೈಕೊರೆಯೋ ಚಳಿಯಲ್ಲಿ ನೀರಿಗಿಳಿದಿದ್ದು ಬಿಟ್ರೆ ಈ ಪಾಟೀ ಐಸ್ ಕೋಲ್ಡ್ ನೀರ ಕಂಡಿದ್ದು ಇಲ್ಲೇ. ಕಾಲೆಲ್ಲಾ ನಡುಗುತ್ತಿದ್ರೆ ತಡೆಯೋಕಾಗ್ಲಿಲ್ಲ. ಸೀದಾ ನೀರಿಗೆ ತಲೆಯೊಡ್ಡಿದ್ದೇ. ದಪ ದಪ ಮೈಮೇಲೇ ನೀರು ಬೀಳೋಕೆ ಶುರುಆದಾಗ ಸಣ್ಣ ಹನಿಗಳಂತೆ ಕಾಣ್ತಿದ್ದ ನೀರ ಧಾರೆಯಲ್ಲಿ ಎಷ್ಟೊಂದು ರಭಸ ಇದೆ ಅನ್ನೋದು ಗೊತ್ತಾಗೋದು. ನೀರೆಂದ್ರೆ ತಲೆ, ಮೈಯೊಡ್ಡಬಹುದಷ್ಟೇ ಇಲ್ಲಿ .ಉಳಿದ ಫಾಲ್ಸಗಳಲ್ಲಿದ್ದಂತೆ ಆಡೋಕಾಗದಿದ್ದರೂ ಅತಿಶೀತ ನೀರಿನದೇ ಒಂತರಾ ಮಜ. ಬೆಳಗ್ಗಿನಿಂದ ನಡೆದ ಕಾಲು ನೋವೆಲ್ಲಾ ಮಾಯ.


ನೀರ ಮೇಲೆ ಬಂದ್ರೆ ಅಲ್ಲೊಂದಿಷ್ಟು ಊಟ ತಿಂಡಿಗಳ, ಗಿಡಮೂಲಿಕೆಗಳ ಅಂಗಡಿಗಳು. ಪ್ಯೂರ್ ವೆಜ್ಜನ್ನುವವರಿಗೆ ಇಲ್ಲೇನೂ ದಕ್ಕೋದು ಕಷ್ಟವೇ. ಸೂರ್ಯಾಸ್ತ ವೀಕ್ಷಣೆಗೂ ಇದೊಂದು ಪ್ರಶಸ್ತ ಸ್ಥಳ. ಅಲ್ಲಿಂದ ಕೆಳಗಿಳಿದು ಹಿಂದೆ ಸಾಗಿದ್ರೆ ಮತ್ತೊಂದಿಷ್ಟು ಸೂರ್ಯಾಸ್ತ ವೀಕ್ಷಣೆ ಸ್ಥಳಗಳು, ವಾಸದ ಕಾಟೇಜುಗಳು. ಹಾಗೇ ಕೆಳಗಿಳಿದು ಸಾಗಿದ್ರೆ ದತ್ತಪೀಠ, ಬಾಬಾಬುಡನ್ಗಿರಿ ಗುಹೆ ಸಿಗುತ್ತೆ. ಸಿಕ್ಕಾಪಟ್ಟೆ ಬಂದೋಬಸ್ತಿರೋ ಈ ಗುಹೆಯೊಳಗೆ ಫೋಟೋಗ್ರಫಿ, ವೀಡಿಯೋಗ್ರಫಿಗೆ ನಿಷೇಧ. ದತ್ತಪೀಠ, ಸಮಾಧಿಗಳು ಹೇಗಿವೆ, ಒಳಗೇನಿದೆ ಅಂತ ಬರೆಯೋಕಿಂತ ಅಲ್ಲಿ ಹೋಗಿ ನೋಡಿ ಬರುವುದೇ ಒಳ್ಳೇದು ಅನಿಸತ್ತೆ. 
ಕೆಮ್ಮಣ್ಣಗುಂಡಿಯಲ್ಲಿದ್ದ ವಸತಿಗೃಹಗಳ ನವೀಕರಣ ನಡೆಯುತ್ತಿದ್ದು ಕರೆಂಟೂ ಇಲ್ಲವೆಂಬ ಮಾಹಿತಿ ಇತ್ತು. ಇಲ್ಲವೆಂದರೆ ಒಂದು ರಾತ್ರೆ ಉಳಿಯೋಕೆ ಅದರಂತ ಪ್ರಶಸ್ಥ ಸ್ಥಳ ಚಿಕ್ಕಮಗಳೂರಲ್ಲಿ ಸಿಗಲಾರದೇನೋ. ಕೆಮ್ಮಣ್ಣಗುಂಡಿಯ ಆಯ್ಕೆ ಇಲ್ಲವಾದ್ದರಿಂದ ಚಿಕ್ಕಮಗಳೂರ ಸೌಂದರ್ಯ ರೆಸಿಡೆನ್ಸಿಯಲ್ಲೇ ರಾತ್ರೆ ಕಳೆಯೋ ಭಾಗ್ಯ. ಸ್ವಲ್ಪ ಪೇಟೆ ಸುತ್ತಿದ್ರೂ ಯಾಕೋ ನಿದ್ರೆ ಕಣ್ಣೆಳೆಯುತ್ತಿದ್ದರಿಂದ ಬೇಗ ಹಾಸಿಗೆಗೆ ಮರಳಿದ್ವಿ. ಬೆಂಗಳೂರಿನಿಂದ ಬಂದ ನಮಗೆ ಇಲ್ಲಿ ಒಂಭತ್ತು ಒಂಭತ್ತೂವರೆ ಮೇಲೆ ಊಟ ಸಿಗೋಲ್ಲ. ಬೆಂಗಳೂರಂತೆ ಮಧ್ಯರಾತ್ರಿವರೆಗೆ ಅಂಗಡಿಗಳು ತೆಗೆದಿರಲ್ಲ. ಹುಷಾರು ಎಂಬ ಎಚ್ಚರಿಕೆಯೂ ಸಿಕ್ಕಿತ್ತು !! ಆದ್ರೆ ಏಳು ಘಂಟೆ ಹೊತ್ತಿಗೇ ಅಂಗಡಿಗಳು ಬಾಗಿಲು ಹಾಕೋ ಕೊಡಗು, ಏಳೂವರೆ, ಎಂಟಕ್ಕೆ ರಾತ್ರಿ ಊಟ ಮುಗಿಸಿ ಮಲಗಬೇಕಾದ ಅನಿವಾರ್ಯತೆಯ ನಮ್ಮುರ ಬದಿಯ ಕರೆಂಟಿಲ್ಲದ ಹಳ್ಳಿಗಳ ನೊಡಿದವರಿಗೆ ಈ ಒಂಭತ್ತೂವರೆ ಅನೋದು ತೀರಾ ವಿಶೇಷವೆನಿಸಲಿಲ್ಲ.


ಮಾರನೇ ದಿನ ಹೊರಟಿದ್ದು ಕೆಮ್ಮಣ್ಣಗುಂಡಿಗೆ. ಕೆಮ್ಮಣ್ಣಗುಂಡಿಗೆ ಹೋಗೋಕೆ ಮತ್ತೆ ಎರಡು ದಾರಿ. ಹಿಂದಿನ ದಿನ ಬಂದ ದಾರಿಯಲ್ಲೇ ಸಾಗಿ "ಘಾಟಿ ರಸ್ತೆ" ಅನ್ನೋ ರಸ್ತೆಯಲ್ಲಿ ಸಾಗಿದ್ರೆ ೧೩ ಕಿ.ಮೀ. ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ರೂ ಈ ಘಾಟಿ ರಸ್ತೆಯಲ್ಲಿ ದಕ್ಕೋ ಪ್ರಕೃತಿ ಸೌಂದರ್ಯಕ್ಕೆ ಅದೇ ಸಾಟಿ. ಕೈ ಮರ ಅಂತ ಇರೋ ಮತ್ತೊಂದು ಚೆನ್ನಾಗಿರೋ ರಸ್ತೆಯಲ್ಲೂ ಬರಬಹುದಂತೆ. ಅದು ಮತ್ತೆ ೧೨ ಕಿ.ಮೀ ಜಾಸ್ತಿ ಅನ್ನೋದು ಒಂದು ಕಾರಣ ಆದ್ರೆ ಬರೀ ರಸ್ತೆಯಲ್ಲಿ ಸಾಗೋದೂ ಅಷ್ಟು ಮಜಾ ಕೊಡಲ್ಲ. ಈ ಘಾಟಿ ರಸ್ತೆಯಲ್ಲಿ ಔಷಧಿವನ, ಹೆಬ್ಬೆ ಫಾಲ್ಸ್ ಸಿಗೋದು. ಹೆಬ್ಬೆ ಫಾಲ್ಸಿಗೆ ದಾರಿ ಅನ್ನೋ ಬೋರ್ಡುಗಲ್ಲನ್ನೇ ತಿರುಚಿ ಹಾಕಲಾಗಿದೆ ಇಲ್ಲಿ ! ಹತ್ತಿರ ಬಂದು ನೊಡೋ ತನಕ, ಇಲ್ಲಾ ಇಲ್ಲಿಗೆ ಮುಂಚೆ ಬಂದಿರೋ ತನಕ ಇಲ್ಲೊಂದು ಫಾಲ್ಸಿಗೆ ದಾರಿಯಿತ್ತು ಅನ್ನೋದೇ ಗೊತ್ತಾಗಲ್ಲ. ನಮ್ಮ ಗಾಡಿಯ ಹಿಂಬಾಗಿಲು ತೆಗೆದು ಬ್ಯಾಗುಗಳೆಲ್ಲಾ ಬಿದ್ದು ಅದನ್ನು ಹೆಕ್ಕಲೆಂದು ಕೆಳಗಿಳಿದದ್ದಕ್ಕೆ ರಸ್ತೆಯ ಎಡಬದಿಯ ದೊಡ್ಡ ರಸ್ತೆ, ಅದಕ್ಕೆ ಹಾಕಿರೋ ಬೇಲಿ, ಅದಕ್ಕೆ ಎದುರಾಗಿ ಇದ್ದ ತಿರುಚಿದ ಬೋರ್ಡು.. ಕಂಡಿದ್ದು. ಹುಲಿ ಅಭಯಾರಣ್ಯ ಅಂತ ಮಾಡಿ, ಹೈ ಕೋರ್ಟು ತಡೆಯಾಜ್ನೆ ಕೊಟ್ಟು ಇಲ್ಲಿನ ಚಾರಣ ನಿಷೇಧಿಸಿದೆಯಂತೆ. ಆದರೂ ಹೋಗ್ಬೇಕು ಅಂದ್ರೆ ಹತ್ತಿರದ ಫಾರೆಸ್ಟ್ ಚೆಕ್ ಪೋಸ್ಟಿನಲ್ಲಿ ತಲಾ ೨೦೦ ಶುಲ್ಕ ಮತ್ತು ಗೈಡಿಗೆ ೫೦೦ ಕೊಟ್ಟು ೬ ಕಿ.ಮೀ ನಡೆಯಬೇಕು. ಗಾಡಿಯಾದ್ರೆ ನಮ್ಮ ಗಾಡಿ ಹೋಗೋಲ್ಲ. ಫಾರೆಸ್ಟಿನ ಜೀಪಿನಲ್ಲಿ ಹೋಗೋದಾದ್ರೆ ತಲಾ ೩೦೦ ಮತ್ತೆ !!.

ಒಟ್ಟು ಒಂದು ಫಾಲ್ಸಿಗೆ ೫೦೦ ಕೊಡೋದು ದುಬಾರಿ ಅನ್ಸಿದ್ದು ಮತ್ತು ಅಲ್ಲೇ ಒಂದು ದಿನ ಕಳೆದುಹೋಗೋದು ಯಾಕೋ ಇಷ್ಟವಾಗಲಿಲ್ಲ. ಹಾಗೇ ಮುಂದೆ ಹೊರಟು ಕೆಮ್ಮಣ್ಣಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮ ತಲುಪಿದ್ವಿ. ಇಲ್ಲಿನ ಉದ್ಯಾನ, ಮೇಲಿನ ಗೋಪುರ, ಹತ್ತಿರದ ಗುಡ್ಡಗಳು ಮತ್ತೆ ಸೂರ್ಯಾಸ್ತ ಸೂರ್ಯೋದಯದ ತಾಣಗಳೇ. ಅದರ ನಂತರ ಹಾಗೇ ಕೆಳಗಿಳಿದ್ರೆ ಎಡಗಡೆಗೆ ಶಿಲೋದ್ಯಾನ ಅನ್ನೋ ಬೋರ್ಡ್ ಕಾಣುತ್ತೆ. ಆ ಬೋರ್ಡಿನಿಂದ ಸುಮಾರು ಒಂದು ಕಿಲೋಮೀಟರ್ ಸಾಗಿದ್ರೆ ಶಿಲೋದ್ಯಾನ ಸಿಗುತ್ತೆ. ಅಲ್ಲಿರೋ ಶಿವಲಿಂಗ, ಋಷಿ, ರಾಮಾಯಣದ ಮೂರ್ತಿಗಳ ಸುತ್ತ ಹುಲ್ಲು ಬೆಳೆಯುತ್ತಾ ಯಾಕೋ ನಿರ್ವಹಣೆಯ ಕೊರತೆಯಾಯಿತಾ ಅನಿಸುವಂತೆ ಮಾಡಿದ್ರೂ ಒಮ್ಮೆ ನೋಡಲಡ್ಡಿಲ್ಲ. ಶಿಲೋದ್ಯಾನದಿಂದ ಹಾಗೇ ಮುಂದೆ ಸಾಗಿದ್ರೆ ಸಿಗೋ ಸ್ತಳಗಳೇ ಶಾಂತಿ ಫಾಲ್ಸ್ ಮತ್ತು z ಪಾಯಿಂಟ್. ಶಿಲೋದ್ಯಾನದಿಂದ ಶಾಂತಿ ಫಾಲ್ಸ್ ಹತ್ತಿರದವರೆಗೂ ಗಾಡಿಗಳು(ಜೀಪು, ಬೈಕು) ಹೋಗತ್ತೆ. ಶಿಲೋದ್ಯಾನದ ಬಳಿ ಗಾಡಿ ನಿಲ್ಲಿಸಿ ನಡೆದ್ರೂ ಆ ಮರಗಳ ನೆರಳಲ್ಲಿ ನಡೆಯೋ ಸುಸ್ತು ಗೊತ್ತಾಗಲ್ಲ. ಹಾಗೇ ಒಂದು ಒಂದೂವರೆ ಕಿಲೋಮೀಟರ್ ನಡೆದ್ರೆ ಶಾಂತಿ ಫಾಲ್ಸ್. ಫಾಲ್ಸಂದ್ರೆ ಬೆಟ್ಟದ ತಪ್ಪಲಲ್ಲಿ ಬೀಳೋ ಜಲಧಾರೆ. ತೀರಾ ಎತ್ತರದಲ್ಲಿಲ್ಲದಿದ್ದರೂ ಬೆಟ್ಟದ ಬುಡದ ನೀರಧಾರೆ ಸುಸ್ತು ಪರಿಹರಿಸಲು, ಮುದನೀಡಲು ಒಳ್ಳೇ ಆಯ್ಕೆ.

ಶಾಂತಿ ಫಾಲ್ಸಿಗೆ ಇಳಿದ್ರೆ  z ಪಾಯಿಂಟಿಗೆ ಹೋಗೋ ಮನಸ್ಸಾಗಲಿಕ್ಕಿಲ್ಲ ಅಂತ ಅಲ್ಲಿ ಬರೀ ಕಾಲು ನೆನೆಸಿ z ಪಾಯಿಂಟಿನ ಕಡೆಗೆ ಹತ್ತೋಕೆ ಶುರು ಮಾಡಿದ್ವಿ. ಬೆಟ್ಟದ ತಪ್ಪಲಿನ ಕಡಿದಾದ ಹಾದಿಯಿದು. ಬೆಟ್ಟಗಳ ಹತ್ತುವುದಕ್ಕಿಂತ ಆ ಮೇಲಿಂದ ಕಾಣೋ ದೃಶ್ಯವನ್ನು ಕಂಡವರಿಗೆ , ಪನೋರಮವನ್ನು ಕಂಡವರಿಗೆ, ಮೋಡಗಳ ಮುತ್ತಿಕ್ಕುವಿಕೆಯ ಕಂಡವರಿಗೆ ಅಲ್ಲಿ ಹತ್ತದಿದ್ದರೆ ಎಷ್ಟೊಳ್ಳೆ ದೃಶ್ಯಗಳು ಮಿಸ್ಸಾಗುತ್ತಿತ್ತು ಅನ್ನೋ ಅನುಭವ ಸಿಗೋದು. ಅದ ಪದಗಳಲ್ಲಿ ಬರೆಯೋದು ಕಷ್ಟ. ಮಜಾದ ವಿಷಯ ಅಂದ್ರೆ ಅಲ್ಲಿಗೆ ಕಷ್ಟಪಟ್ಟು ಹೋದ ಮೇಲೂ ಅದಕ್ಕೆ z ಪಾಯಿಂಟ್ ಅಂತ ಯಾಕೆ ಕರೆಯುತ್ತಾರೆ ಅಂತ ಗೊತ್ತಾಗಲ್ಲ. ಆ ಜೆಡ್ ಆಕಾರ ಕಾಣಬೇಕು ಅಂದ್ರೆ ನಾವು ಮತ್ತೆ ಆ ಬೆಟ್ಟ ಕೆಳಗಿಳಿದು ಎದುರಿಗಿನ ಕೆಮ್ಮಣ್ಣಗುಂಡಿಯ ಉಪಹಾರದರ್ಶಿನಿಯ  ಬಳಿ ಬರಬೇಕು.

Z ಪಾಯಿಂಟಿನಿಂದ ಕೆಳಗಿಳಿದ ಮತ್ತೆ ಶಾಂತಿ ಫಾಲ್ಸ ಕಂಡವರಿಗೆ ನೀರಿಗಿಳಿಯದೇ ಇರೋಕೆ ಆಗಲಿಲ್ಲ. ಅಲ್ಲಿ ಆಡಿ ಮತ್ತೆ ಶಿಲೋದ್ಯಾನದವರೆಗೆ ನಡೆಯೋ ಹೊತ್ತಿಗೆ ಮಧ್ಯಾಹ್ನ. ಕೆಮ್ಮಣ್ಣಗುಂಡಿಯಲ್ಲಿ ಮತ್ತೆ ಮಾಂಸಾಹಾರದ ಮಧ್ಯೆ ತಿನ್ನೋ ಮನಸ್ಸಾಗದೇ ಕಲ್ಲತ್ತಗಿರಿಗೆ ಸಾಗಿದೆವು. ಅಲ್ಲಿ ಮತ್ತೆ ಸಸ್ಯಾಹಾರಿ ಊಟ ಕಂಡು ಮೂರೂವರೆ ಘಂಟೆ ಆದ್ರೂ ಅದೇನೋ ಖುಷಿ. ಊಟದ ನಂತ್ರ ಮತ್ತೆ ಕಲ್ಲತ್ತಗಿರಿಯ ನೀರಿಗಿಳಿದೆವು. ಅಲ್ಲಿ ಬರೀ ಸಣ್ಣ ನೀರು ಅಂದುಕೊಂಡಿದ್ದವರು ಮೇಲೋನೋ ನೀರಿದೆ ಅಂತ ಕಂಡು ಮೇಲೆ ಹತ್ತಿದ್ವಿ. ಅಲ್ಲಿ ಮತ್ತೊಂದು ಫಾಲ್ಸು. ಅಲ್ಲೊಂದಿಷ್ಟು ನೀರಲ್ಲಾಟ. ಕೊನೆಗೆ ಇನ್ನೂ ಮೇಲೆ ಹತ್ತುತ್ತಿದ , ಇಳಿಯುತ್ತಿದ್ದವ್ರು ಕಂಡ್ರು ! ನೀರಾಟದ ನಂತರ ಮೇಲೆ ಹತ್ತಿದಷ್ಟೂ ಮಿನಿ ಮಿನಿ ಫಾಲ್ಸುಗಳೇ.  ಸುಮಾರು ಐದು ಫಾಲ್ಸು ಹತ್ತಾಯ್ತು. ಇನ್ನೂ ಹತ್ತಿದ್ರೆ ಇನ್ನೆಷ್ಟು ಮೇಲ್ಮೇಲೆ ಕಲ್ಲತ್ಗಿರಿ  ಫಾಲ್ಸುಗಳಿದ್ವೋ ಗೊತ್ತಿಲ್ಲ. ಐದನೇಯದರಲ್ಲಿ ಮತ್ತೆ ಆಡಿ ದೇಗುಲಕ್ಕೆ ಮರಳಿದ್ವಿ. ಅವತ್ತಿಡೀ ಒಂತರಾ ನೀರೇ ನೀರ ಆಟ. ದೇವರ ದರ್ಶನ ಪಡೆದು ಮತ್ತೆ ಕಲ್ಲತ್ತಗಿರಿ ಪೇಟೆ ಸೇರಿದಾಗ ಊರಿಗೆ ಮರಳೋ ಸಮಯ. ಸುಂದರ ಹೂಗಳಿಗೆ, ಮಧುರ ಪಯಣಕ್ಕೆ ಮುಕ್ತಾಯ ಹಾಡೋ ಸಮಯ. ಆದ್ರೆ ಟ್ರಿಪ್ಪ ಖುಷಿ ಅನ್ನೋದು ದಾರಿಯ ಕಾಮತ್ ಉಪಚಾರಿನಲ್ಲೂ, ಅರೆಗಣ್ಣ ನಿದ್ರೆಯಲ್ಲೂ, ಬಿಸಿಲಿಗೆ ಸುಟ್ಟ ಮುಖ ಸಿಪ್ಪೆ ಬಿಟ್ಟು ಸರಿಯಾಗಲು ಬೇಕಾದ ನಾಲ್ಕೈದು ದಿನಗಳಲ್ಲೂ ಮುಂದುವರೆದಿತ್ತು. ಈ ಸುಂದರ ಪಯಣದಲ್ಲಿ ಜತೆಯಾದ ಸ್ನೇಹಿತರಿಗೆಲ್ಲಾ ಧನ್ಯವಾದ ಹೇಳುತ್ತಾ ಪಯಣದ ನೆನಪಿಗೊಂದು ವಿರಾಮ.  ಮುಂದೊಮ್ಮೆ ಹೆಬ್ಬೆ ಫಾಲ್ಸು, ದೇವಿರಮ್ಮನ ಬೆಟ್ಟ, ಕುದುರೆಮುಖಗಳನ್ನು ನೋಡಲೆಂದೇ ಚಿಕ್ಕಮಗಳೂರಿಗೆ ಬರೋ ಮೂಡಿದೆ. ಪ್ರತಿಯೊಂದೂ ಒಂದೊಂದು ದಿನದ ಪಯಣಗಳಂತೆ. ನೋಡಬೇಕು. ಎಂದು ಯೋಗಾಯೋಗಗಳು ಕೂಡುತ್ತೆ ಅಂತ.