Friday, December 28, 2012

ನಿರೀಕ್ಷೆ-ನಿರಾಸೆಗಳ ನಡುವೆ

ಜೀವನವೆಂಬ ಆಗಸದಲ್ಲಿ ಆಶಾಕಿರಣ ವರ್ತಮಾನದ ಸೂರ್ಯನೂ , ಭವಿಷ್ಯದ ಚಂದ್ರನಿಂದಲೂ ಮೂಡದೇ ಕಗ್ಗತಲು ಮೂಡಿದಾಗ ನಿರೀಕ್ಷೆಗಳೆಂಬ ನಕ್ಷತ್ರಗಳೇ ಮಿನುಮಿನುಗಿ ಮನಸ್ಸು ಸೋಲೊಪ್ಪದಂತೆ ಹುರಿದುಂಬಿಸುತ್ತಾ ಇರುತ್ತವೆ. ಆದರೆ ಆ ನಿರೀಕ್ಷೆಗಳೂ ನುಚ್ಚುನೂರಾದಾಗ ಮತ್ತದೇ ಮಾತು ತೋಚದ , ನೋವಲ್ಲಿ ಮುಳುಗಿದ ಮೌನ. ಸೂಪರ್ ಸ್ಟಾರ್ ರಜನಿಯ ಅತಿ ನಿರೀಕ್ಷಿತ ಚಿತ್ರ ಬಾಬಾ ನೆಲಕಚ್ಚುತ್ತದೆ. ಹಿಂದಿನೆರಡು ಮ್ಯಾಚಲ್ಲಿ ಮೂರು ಮೂರು ವಿಕೆಟ್ ಕಿತ್ತ ಬೌಲರ್ ಈ ಮ್ಯಾಚಲ್ಲಿ ಪೂರ್ಣ ವಿಫಲನಾಗುತ್ತಾನೆ. ಆಫೀಸಲ್ಲಿ ಕೆಲಸ ಮಾಡಿದ್ದು ಸಾಕಾಗಿಲ್ಲ ಅಂತ ಮನೆಯಲ್ಲೂ ಆಫೀಸ್ ಕೆಲಸ ಮಾಡ್ತಿದ್ದ ಯುವಕನಿಗೆ ಸಿಗದ ಭಡ್ತಿ ಕೆಲಸವೇ ಮಾಡದ(?) ಇನ್ಯಾರಿಗೋ ಸಿಗುತ್ತೆ. ಸೋನು ನಿಗಮ್ ತರ ಹಾಡು ಕಲಿಬೇಕು ಅಂತ ಹೋದ ಹುಡುಗನಿಗೆ ನಿನ್ನ ಧ್ವನಿಯೇ ಸರಿ ಇಲ್ಲ ಹೋಗಾಚೆ ಎಂಬ ನಿರಾಕರಣೆ ಗುರುವಿಂದ ಸಿಗುತ್ತೆ. ಕವನ ಸಂಕಲನ ಮಾಡ್ಬೇಕು ಅಂತ ಆಸೆ ಇದ್ದ ಹುಡುಗಿಗೆ ವಿಮರ್ಶಕರ ವಿಮರ್ಶೆ ಇಂದ ಕವನ ಬರ್ಯೋದನ್ನೇ ಬಿಡ್ಬೇಕು ಅನ್ನೋ ಅಶ್ಟು ನಿರಾಸೆ ಮೂಡುತ್ತೆ.. ಹೀಗೆ ನಮ್ಮ ನಿಜಜೀವನದಲ್ಲಿ ನಮ್ಮ ವೃತ್ತಿ, ಪ್ರವೃತ್ತಿಗಳಲ್ಲಿನ ನಿರೀಕ್ಷೆಗಳು ಈಡೇರದೆ ಇದ್ದಾಗ ನಮಗಾಗೋ ನಿರಾಸೆ ಇದ್ಯಲ್ಲ.. ಅದನ್ನೆಲ್ಲಾ ಹಾಗೇ ಕಟ್ಟಿಡ್ತಾ ಹೋದ್ರೆ ಅದೇ ಒಂದು ದೊಡ್ಡ ಹೊರೆಯಾಗಿ ಜೀವನದಲ್ಲಿ ಒಂದು ಹೆಜ್ಜೆಯೂ ಮುಂದೆ ಹೋಗೋಕಾಗಲ್ಲ್ಲ. ನಿರೀಕ್ಷೆಗಳು ಈಡೇರದೇ ನಿರಾಸೆ ಮೂಡಿದರೆ ಅದು ಜೀವನದ ಸೋಲಲ್ಲ. ಆದರೆ ಈ ನಿರೀಕ್ಷೆ- ನಿರಾಸೆಗಳ ಮಧ್ಯೆ ನಾವೇ ಕಳೆದುಹೋಗುತ್ತಿದೀವಲ್ಲ, ಅದೇ ವಿಪರ್ಯಾಸ.

ಜೀವನದಲ್ಲಿ ಆಸೆಗಳಿರೋದು ತಪ್ಪಲ್ಲ. ಜೀವನ ಅಂದ ಮೇಲೆ ಗುರಿಯಿರಲೇ ಬೇಕು. ಆದರೆ ದೂರದ ಗುರಿಯೊಂದಕ್ಕೆ ವರ್ತಮಾನದ ಖುಷಿಯನ್ನು, ಜವಾಬ್ದಾರಿಗಳನ್ನು ಬಲಿಕೊಡಬೇಕಾ ? ಯಾವತ್ತೂ ಗೆಲುವಾಗಿರೋನಿಗೆ ಒಂದು ದಿನದ ಸೋಲು ದೊಡ್ಡದೆನಿಸಲ್ಲ.ಆದರೆ ದಾರಿಯಲ್ಲಿ ಸಿಗೋ ಸಣ್ಣಪುಟ್ಟ ಗೆಲುವುಗಳನ್ನೆಲ್ಲಾ ಕಡೆಗಣಿಸುತ್ತಾ ದೂರದ, ಕಾಣದ ಗುರಿಯೇ ಗೆಲುವು ಅಂತ ಅತ್ತ ಸಾಗೋನಿಗೆ, ಆ ಗುರಿ ತಾನಂದುಕೊಂಡಷ್ಟು ಸುಂದರವಾಗಿಲ್ಲ ಅಂತ ಅರಿವಾದೊಡನೆಯೇ ನಿರಾಸೆ ಮೂಡುತ್ತೆ. ಆಫೀಸಲ್ಲಿ ಕೆಲಸ ಇದೆ, ಸರಿ. ಅದನ್ನು ಮನೆಗೆ ಬಂದೂ ಮಾಡ್ತೀರ. ಅದು ಆಫೀಸಿನ ಬಗ್ಗೆ ನಿಮ್ಮ ಜವಾಬ್ದಾರಿಯಿರಬಹುದು. ಆದರೆ ಮನೆಯಲ್ಲಿ ನಿಮ್ಮ ಸಮಯ ಕಾಯ್ತಾ ಇರೋ ಮಕ್ಕಳು. ಪತ್ನಿ, ವೃದ್ದ ತಂದೆ /ತಾಯಿ .. ಇವರೂ ಜವಾಬ್ದಾರಿಯೇ ಅಲ್ಲವೇ? ಒಂದು ವರ್ಷ ಇವರನ್ನೆಲ್ಲಾ ಕಡೆಗಣಿಸಿ ದುಡಿದೂ ಬಡ್ತಿ ಸಿಕ್ಕಿಲ್ಲವೆಂದು ನಿರಾಸೆ ಅನುಭವಿಸೋ ಬದಲು , ಕೆಲಸದ ಜೊತೆಗೆ ಪ್ರತಿದಿನವೂ ಇವರಿಗೆ ಸಮಯ ಕೊಟ್ಟಿದ್ದರೆ ಅವರ ಪಾಲಿನ ಆಸೆಗಳಾದರೂ ನೆರವೇರ್ತಿದ್ದವಲ್ಲವೇ?

ಒಂಟಿತನದಲ್ಲಿ ನಿರಾಸೆಯ ನೋವು ಹೆಚ್ಚಾಗೇ ಕಾಡುತ್ತೆ. ನಮ್ಮ ಗುರಿ ಒಂದೇ ದೊಡ್ಡದು ಅಂತ ಯಾರಿಗೂ ಸಹಾಯ ಮಾಡದೇ, ಯಾರೊಂದಿಗೂ ಬೆರೆಯದೇ ಮುಗುಮ್ಮಾಗಿ ಇದ್ದರೆ ಒಂದಲ್ಲ ಒಂದು ದಿನ ಒಂಟಿತನ ಕಾಡೋದು ಗ್ಯಾರಂಟಿ. ಕಷ್ಟಗಳು, ನೋವು ಹಂಚಿದರೆ ಕಮ್ಮಿ ಆಗುತ್ತಂತೆ. ಹಂಚಿಕೊಳ್ಳೋಕೆ ಸ್ನೇಹಿತರು ಇಲ್ದಿದ್ರೆ ಎಂತಾ ಗೆಲುವೂ ಅಷ್ಟು ಖುಷಿ ಕೊಡೊಲ್ಲ. ನೂರು ಬಾರಿ ಕಳಿಸಿದ ಮೇಲೆ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟ ಆಗಿರುತ್ತೆ. ತೊಂಬತ್ತೊಂಬತ್ತು ಬಾರಿ ವಿಫಲ ಆದ ನೋವು ಮರೆಸಿ, ಮತ್ತೆ ಹೊಸ ಸ್ಪೂರ್ತಿ ತರೋಕೆ ಈ ಒಂದು ಗೆಲುವು ಸಾಕು. ಆದರೆ ಇದನ್ನು ಹಂಚಿಕೊಳ್ಳೋಕೆ ಗೆಳೆಯರಿಲ್ದೇ ಇದ್ರೆ, ಗೆಲುವಲ್ಲೂ ಜೊತೆಯಿಲ್ಲದ ಭಾವ ನೂರನೇ ಸೋಲಂತೆಯೇ ಕಾಡುತ್ತೆ. ಇದಕ್ಕೆ ತದ್ವಿರುದ್ದ ಅನ್ನೋ ತರ ಜೊತೆಗೆ ಒಂದಿಷ್ಟು ಜನ ಗೆಳೆಯರು ಅಂತ ಇದ್ದಾಗ ಎಂತಾ ನೋವೂ ಅವರ ಸಾಂಗತ್ಯದಲ್ಲಿ ಮರೆತು ಹೋಗುತ್ತೆ. ಭಾರತ ತಂಡ ಮುಖ್ಯ ಮ್ಯಾಚೊಂದ್ರಲ್ಲಿ ಸೋತರೂ, ಗೆಳೆಯರ ಜೊತೆಗೆ ನೋಡ್ತಿರೋವಾಗ ಆ ಸೋಲಿನ ನಿರಾಸೆ, ಅವರಿವರ ಬೈಗುಳ ಕಾಮೆಂಟುಗಳ ಮಧ್ಯೆ ಮರೆತು ಹೋಗತ್ತೆ. ಇಷ್ಟಪಟ್ಟು ಹೋದ ಚಲನಚಿತ್ರ ತೀರಾ ಕೆಟ್ಟದಾಗಿದ್ದರೂ ಗೆಳೆಯರ ಸಾಮಿಪ್ಯ ಇದ್ದಾಗ ಅದು ನಿರಾಸೆಯಾಗಿ ಬದಲಾಗದೇ ಪೂರಾ ಸಿನಿಮಾ ಮತ್ತೊಂದು ಹಾಸ್ಯದ ಸಮಯ ಆಗುತ್ತೆ. ಹಾಗಾಗಿ ಎಷ್ಟೇ ಬಿಸಿಯಾಗಿದ್ದರೂ ನಮ್ಮದೇ ಅಂತ ಒಂದು ಗೆಳೆಯರ ಬಳಗ ಅಂತ ಇಟ್ಟುಕೊಂಡು ಅದಕ್ಕೇ ಅಂತ ಸ್ವಲ್ಪ ಸಮಯ ವಿನಿಯೋಗಿಸದೇ ಇದ್ದರೇ, ಈ ನಿರಾಸೆಗಳ ಮಳೆಕಾಲಕ್ಕೆ, ಸೋಲುಗಳ ನರಳಿಸುವ ಚಳಿಗಾಲಕ್ಕೆ ಯಾವ ಔಷಧಿಯೂ ಇಲ್ಲ.

ಎಷ್ಟೋ ಸಲ ನಾವು ನಮ್ಮ ಅತಿಯಾದ ಆತ್ಮವಿಶ್ವಾಸದಿಂದ ಸಾಧ್ಯವಾಗದ ನಿರೀಕ್ಷೆಗಳನ್ನು ಇಟ್ಟುಕೊಂಡು ಕೊನೆಯಲ್ಲಿ ನಿರಾಸೆ ಅನುಭವಿಸುತ್ತೇವೆ. ಒಂದು ಲೇಖನ ಬರೆದು ಅದಕ್ಕೆ ಯಾರಾದರೂ ಒಬ್ಬರು ಶಹಭಾಷ್ ಎಂದಾಕ್ಷಣ ಯುವಕನೊಬ್ಬ ತನ್ನ ಮುಂದಿನ ಲೇಖನಗಳೆಲ್ಲಾ ಪತ್ರಿಕೆಯಲ್ಲಿ ಪ್ರಕಟ ಆಗೋಕೆ ಯೋಗ್ಯ ಅಂದುಕೊಳ್ಳೋಕೆ ಶುರು ಮಾಡ್ತಾನೆ. ಆ ನಿಟ್ಟಿನಲ್ಲಿ ಅವನು ದಿನೇ ದಿನೇ ಬೆಳೆದರೆ ಅದು ತಪ್ಪಲ್ಲ. ಆದರೆ ಅಂತಾ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಆಗ್ಲಿಲ್ಲ ಅಂತ ಬರೆಯೋದನ್ನೇ ನಿಲ್ಲಿಸ್ತೀನಿ ಅಂದುಕೊಂಡರೆ ಅದು ಖಂಡಿತಾ ತಪ್ಪು. ಇದೇ ತರ ಗುರು ಒಬ್ಬ ಸಂಗೀತ ಕಲಿಸೋಕೆ ನಿರಾಕರಿಸಿದ ಅಂತ ಬೇರೆ ಗುರುವಿನ ಬಳಿ ಕೇಳೋ ಬದಲು ನಾನು ಸಂಗೀತ ಹಾಡೋದೇ ಇಲ್ಲ ಅಂತ ಜೀವಮಾನದ ನಿರ್ಧಾರ ತಗೊಳ್ಳೋದು ಖಂಡಿತಾ ತಪ್ಪು. ಯಾವುದೇ ನಿರೀಕ್ಷೆಗಳು ತಪ್ಪಲ್ಲ, ಆದರೆ ಅದರ ಬಗ್ಗೆ ಪ್ರಯತ್ನ ಮಾಡದೇ ನಿರಾಸೆಗಳೇ ನನ್ನ ಜೀವನದ ಸರ್ವಸ್ವ ಅಂತ ನಿರ್ಧರಿಸೋದು ತಪ್ಪು.

ಆಗೋದೆಲ್ಲಾ ಒಳ್ಳೇದಕ್ಕೆ. ಕಲಿಯೋ ಮನಸ್ಥಿತಿ ಇದ್ದರೆ ಪ್ರತೀ ಸೋಲಲ್ಲೂ ಒಂದೊಂದು ಪಾಠ ಇರುತ್ತೆ. ನಿರೀಕ್ಷೆ-ನಿರಾಸೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿರಾಸೆ ಯಾಕಾಯ್ತು ಅಂತ ಅದರಿಂದ ಪಾಠ ಕಲಿಯೋವರೆಗೂ ಅದರ ಇನ್ನೊಂದು ಮುಖವಾದ ಗೆಲುವನ್ನು ಕಾಣೋಕೆ ಸಾಧ್ಯನೇ ಇಲ್ಲ. ೧೦೦೦ ಸಲ ವಿಫಲನಾದ ನಿರಾಸೆಯಿದ್ದರೂ ಗುರಿ ಮರೆಯದೇ ಪ್ರಯತ್ನಿಸಿದ್ದರಿಂದಲೇ ಥಾಮಸ್ ಅಲ್ವಾ ಎಡಿಸನ್ ರಿಂದ ಬಲ್ಬ್ ಕಂಡುಹಿಡಿಯೋಕೆ ಆಗಿದ್ದು. ಮುಗಿಲೆತ್ತರದ ನಿರೀಕ್ಷೆಗಳಿರಲಿ. ಅದಕ್ಕೆ ತಕ್ಕ ಪ್ರಯತ್ನಗಳೂ ಇರಲಿ. ಆದರೆ ವರ್ತಮಾನದ ಮನೆಮಂದಿಯನ್ನು, ಕೈಹಿಡಿಯೋ ಗೆಳೆಯರನ್ನು ಮರೆಯದೇ ನಡೆದರೆ ಪ್ರತಿದಿನವೂ ನೋವು, ನಿರಾಸೆಗಳಿಲ್ಲದ ಗೆಲುವೇ. ಯಶವೆಂಬುದು ದಡದಲ್ಲಲ್ಲ, ದಾರಿಯಲ್ಲಿ ಎಂಬ ಮಾತೇ ಇದೆಯಲ್ಲವೇ ?

Monday, December 3, 2012

ಕುಮಾರಪರ್ವತ ಚಾರಣ -೧


ಮಸ್ತ್ ಮಲ್ಲಳ್ಳಿ ಜಲಪಾತ, ನೆನಪಿಡಬೇಕಾದಂತ ನಡೆತ, ಮಂಜು ಮುಚ್ಚಿದ ಬೆಟ್ಟದ ಸಂಜೆಯ ಆರೋಹಣ, ಮೈಕೊರೆಯೋ ಚಳಿಯಲ್ಲಿ ಸ್ವೆಟರಿಲ್ಲದ ರಾತ್ರಿ, ಬೆಂಕಿ- ಟೆಂಟು- ಸ್ಲೀಪಿಂಗ್ ಬ್ಯಾಗುಗಳ ಬೆಚ್ಚನೆಯ ಅಪ್ಪುಗೆ, ದಿನಾ ನೋಡುತ್ತಿದ್ದರೂ ವಿಶೇಷ ಅನಿಸಿದ ಸೂರ್ಯ,  ಮುಂಜಾನೆಯೇ ಮುಖ ಸುಡೋ ಬಿಸಿಲಲ್ಲಿ ಮತ್ತೆ ಸಂಜೆಯವರೆಗೆ ಅವರೋಹಣ, ಮಧ್ಯ ಮಧ್ಯೆ ಸಾರ್ಥಕತೆ ನೀಡಿದ ಪರಿಸರ ಪ್ರೇಮ.. ಕುಮಾರಪರ್ವತ.. ನಿನ್ನ ಸಖತ್ ಮಸ್ತ್ ನೆನಪುಗಳಿಗೊಂದು ಸಲಾಂ..

ಕುಮಾರಪರ್ವತಕ್ಕೆ ದಕ್ಷಿಣ ಕನ್ನಡದ ಕುಕ್ಕೆ ಕಡೆಯಿಂದ ಅಥವಾ ಕೊಡಗಿನ ಸೋಮವಾರಪೇಟೆಯ ಕಡೆಯಿಂದ ಹತ್ತಬಹುದು .ನಾವು ಈ ಸಲ ಹತ್ತಿದ್ದು ಸೋಮವಾರಪೇಟೆಯ ಕಡೆಯಿಂದ.

ಬೆಂಗಳೂರಿಂದ ಸೋಮವಾರಪೇಟೆಗೆ ೬ ಘಂಟೆ ಪಯಣ. ರಾತ್ರೆ ೧೧ ಘಂಟೆಗೆ ಬೆಂಗಳೂರಿಂದ ಕೆ.ಎಸ್ಸಾರ್‍ಟಿಸಿ ಬಸ್ ಹತ್ತಿದ ನಾವು ಸೋಮವಾರಪೇಟೆ ತಲುಪಿದ್ದು ಮಾರನೇ ದಿನ ಬೆಳಗ್ಗೆ ೪:೩೦ ಹೊತ್ತಿಗೆ.ಚುಮು ಚುಮು ಚಳಿ. ಬೆಚ್ಚಗಿರೋ ಬೆಂಗಳೂರಿಗರ ಪಾಲಿಗೆ ಅದು ಭಯಂಕರ ಚಳಿಯೇ. ನನ್ನ ಗೆಳೆಯರು ಸ್ವೆಟರು, ಜರ್ಕೀನು, ಟೋಪಿ ಅಂತ ಫುಲ್ ಪ್ಯಾಕ್ ಆಗಿದ್ರು. ಸ್ವೆಟರ್ ತರದೇ ಚಳಿ ನಾಡು ಕೊಡಗಿಗೆ ಬಂದ ನಾನು ಒಂತರಾ ವಿಚಿತ್ರ ಪ್ರಾಣಿ ಅವರ ಪಾಲಿಗೆ !. ಆದರೆ ನಮ್ಮೂರು ಸಾಗರದ ಚಳಿಗಾಲದ ಚಳಿಗೆ ಹೊಂದಿಕೊಂಡಿದ್ದ ನನಗೆ ಅದು ಅಂತಾ ಭಯಂಕರ ಚಳಿ ಅನಿಸಿರಲಿಲ್ಲ.
೨ ವಾರದ ಹಿಂದೆ ನಾನು ಕೊಡಗಿಗೆ ಬಂದಾಗಲೂ ಹೆಚ್ಚಿನ ಚಳಿ ಇರಲಿಲ್ಲ. ೨ ದಿನದ ಟ್ರೆಕಿಂಗ್ ಆದ ಕಾರಣ ಹೊರೋ ಸ್ಲೀಪಿಂಗ್ ಬ್ಯಾಗು,ಬಟ್ಟೆ, ಟೆಂಟು, ಆಹಾರದ ಜೊತೆಗೆ ಜರ್ಕೀನು ಸುಮ್ಮನೇ ಭಾರ ಅಂತ ನನ್ನ ಲೆಕ್ಕಾಚಾರ !!ಬೆಳಿಗ್ಗೆ ಆಗ್ತಿದ್ದ ಹಾಗೆ ನೈಸರ್ಗಿಕ ಕರೆಗಳ ನೆನಪಾಗೋದು ಸಹಜ! ಹಾಗಾಗಿ ಅಲ್ಲೇ ಬಸ್ಟಾಂಡಲ್ಲಿದ್ದ ಸುಲಭ್ ಹುಡುಕಾಯ್ತು :-) ಹಾಗೇ ಎಲ್ಲ ರೆಡಿ ಆಗಿ ಅಲ್ಲೇ ಇದ್ದ ಕ್ಯಾಂಟೀನೊಂದ್ರಲ್ಲಿ ತಿಂಡಿ ಮುಗಿಸೋ ಹೊತ್ತಿಗೆ ಬೆಳಿಗ್ಗೆ ೬:೪೫. ಸೋಮವಾರಪೇಟೆಯಿಂದ ಬೀದಳ್ಳಿ ಎಂಬಲ್ಲಿಗೆ ಹೋಗಬೇಕು. ಅಲ್ಲಿಂದ ಟ್ರೆಕ್ಕಿಂಗ್ ಪ್ರಾರಂಭ. ಅಲ್ಲಿಗೆ ಹೋಗೋ ಮೊದಲ ಬಸ್ ಇದ್ದಿದ್ದು ಬೆಳಿಗ್ಗೆ ೭:೧೫ ಕ್ಕೆ. ಅದನ್ನ ಬಿಟ್ರೆ ಮುಂದಿನ ಬಸ್ಸ್ ಇರೋದು ಸಂಜೆಯೇ ಅಂತೆ !. ನಾವು ಬ್ಯಾಗು, ಸ್ಲೀಪಿಂಗ್ ಬ್ಯಾಗನ್ನೇನೋ ತಗಂಡಿದ್ವಿ. ಆದ್ರೆ ಅವೆರಡನ್ನೂ ಸೇರಿಸಿ ಒಂದೇ ಕಡೆ ಬಿಗಿದು ಹೊರಲು ಸುಲಭ ಆಗೋ ತರ ಕಟ್ಟಕ್ಕೆ ಸೊಣಬಿ ದಾರ(ಸೆಣಬಿನ ದಾರ/ಗೋಣಿ ದಾರ) ತಗೊಂಡಿರಲಿಲ್ಲ. ಅದನ್ನೂ ಸೋಮವಾರಪೇಟೆಯಲ್ಲೇ ತಗಂಡು ಬಸ್ಸಿಗೆ ಹತ್ತಿದ್ವಿ.

ಸೋಮವಾರಪೇಟೆಯಿಂದ ಬೀದಳ್ಳಿಗೆ ೨೫-ಕಿಮೀ. ಬಸ್ಚಾರ್ಜು ೨೫ ರೂ. ಮುದ್ದಾದ ಪ್ರಕೃತಿಯ ನಡುವೆ ಹಾವಂತೆ ಸಾಗೋ ದಾರಿಯಲ್ಲಿ, ವಾಹನಗಳಿಲ್ಲದ ರಸ್ತೆಯಲ್ಲಿ, ಮುಂಜಾನೆ ಮಂಜಲ್ಲಿ , ಮನಮೋಹಕ ದೃಶ್ಯಗಳನ್ನ ಕಟ್ಟಿಕೊಡ್ತಾ ಸಾಗ್ತಾ ಇದ್ದ ಬಸ್ಸಿನ ೧ ಘಂಟೆಯ ಪಯಣ ಒಂದು ಮನೋಹರ ಅನುಭವ.ಬೀದಳ್ಳಿಗಿಂತ ೩ ಕಿಮೀ ಮೊದಲು(ಅಂದರೆ ಬೀದಳ್ಳಿಯ ಹಿಂದಿನ ಸ್ಟಾಪ್) ಸಿಗೋದು ಮಲ್ಲಳ್ಳಿ ಜಲಪಾತ. ರಸ್ತೆಯಿಂದ ೩-ಕಿ.ಮೀ ಇಳಿದು ನಡೆದರೆ ಮಲ್ಲಳ್ಳಿ ಜಲಪಾತ ಸಿಗುತ್ತದೆ.

ಹೀಗೆ ಬಸ್ಟಾಪಿಂದ ಇಳಿದು ಸ್ವಲ್ಪ ಮುಂದೆ ನಡೆದರೆ ಅಲ್ಲೊಂದು  ಚೆಕ್ ಪೋಸ್ಟ್. ಪ್ರವೇಶ ಶುಲ್ಕ ತಲಾ ೫ ರೂ. ವಾಹನಗಳಿಗೆ ೧೦೦ ರೂ.  ಅಲ್ಲೇ ಮನೆಯಲ್ಲಿ ಮಾಡಿದ ಮಧು ಮತ್ತು ಮಧ್ಯ( homemade honey and wine) ಸಿಗತ್ತೆ ಅಂತ ಬೋರ್ಡೂ ಇತ್ತು! ದೇವ್ರೆ, ಜನ ಇಲ್ಲಿಗೆ ಬರೋದು ಪ್ರಕೃತಿಯನ್ನ ಸವಿಯಕ್ಕಾ ಅತ್ವಾ ಇನ್ನೊಂದಿಷ್ಟು ಹಾಳು ಮಾಡಕ್ಕಾ ಅಂತ ಡೌಟ್ ಬಂತು :-( ( ಇಲ್ಲಿ ನಕ್ಸಲೈಟ್ಸ್ ಇದಾರೆ, ಅವ್ರಿಗೆ ಪ್ರವಾಸಿಗ್ರು ಈ ತರ ಪ್ರಕೃತೀನ ಹಾಳು ಮಾಡೋದು ಸುತರಾಂ ಇಷ್ಟ ಇಲ್ಲ ಅಂತ ಆಮೇಲೆ ಒಬ್ರು ಹೇಳಿದ ಮಾತು ಇಲ್ಲೂ ಪ್ರಸ್ತುತ ಅನ್ಸುತ್ತೆ. ಸೋಮವಾರ ಪೇಟೆ ಬಸ್ಟಾಂಡಲ್ಲೇ OSRO,People Front Of India ದ ಗೋಡೆ ಪತ್ರಗಳನ್ನೂ ನೋಡಿದ್ವಿ !.. ಇದ್ರ ಬಗ್ಗೇನೆ ಊಹಾಪೋಹದ, ವಾದವಿವಾದದ ಲೋಕದಲ್ಲಿ ಮುಳುಗೋ ಮೊದ್ಲು ಮತ್ತೆ ವಾಸ್ತವಕ್ಕೆ, ಚಾರಣದ ಸುಮಧುರ ನೆನಪಿನಂಗಳಕ್ಕೆ.. ) 

ಮಲ್ಲಳ್ಳಿ ಜಲಪಾತದ ಸ್ವಲ್ಪ ಹತ್ತಿರದವರೆಗೂ ವಾಹನಗಳು ಹೋಗುತ್ತದೆ. ಆದರೆ ನಮ್ಮದು ನಟರಾಜ  ಸರ್ವೀಸ್ :-). ಲೀಚಸ್(ಉಂಬುಳ/ಇಂಬಳ) ಇರುತ್ತೆ ಕಣ್ರೋ ಹಾಗಾಗಿ ಟೈಟ್ ಜೀನ್ಸ ಪ್ಯಾಂಟ್ ಹಾಕ್ಕೊಂಡು ಬನ್ನಿ ಅಂದಿದ್ದ ಪ್ರೆಂಡೊಬ್ಬ. ಹಾಗಾಗಿ ಉಂಬುಳ ಅಂದ್ರೇನು ಅಂತ ನೋಡದೇ ಹೋದ್ರೂ ಕಾಲಿಗೆ ಏನೋ ಕಚ್ಚಿದಂಗೆ ಆಗ್ತಿದೆ ತಡೀರೋ ಅಂತ ಮಧ್ಯೆ ಮಧ್ಯೆ ನಿಂತು ನೋಡ್ತಿದ್ರು ಕೆಲೋ ಗೆಳೆಯರು. ಕೊನೆಗೆ ಉಂಬುಳ ನೀರಿದ್ದಲ್ಲಿ ಇಲ್ಲಾ ಒದ್ದೆ ಮಣ್ಣಲ್ಲಿ, ಮಳೆಗಾಲದಲ್ಲಿ ಮಾತ್ರ ಇರುತ್ತೆ. ಇಂತಾ ಒಣ ದಾರೀಲಿ, ಚಳಿಗಾಲದಲ್ಲಿ ಇರೋಲ್ಲ ಅಂತ ಸಮಾಧಾನ ಮಾಡ್ಬೇಕಾಯ್ತು. ಬರೀ ಟಾರು ರಸ್ತೆಯನ್ನೇ ನೋಡಿದ್ದ ಕೆಲವರಿಗೆ ಊರಿನ ಮಣ್ಣು ರಸ್ತೆ ಇಳೀಬೇಕಾದ್ರೆ ಎಲ್ಲಿ ಜಾರುತ್ತೋ ಅನ್ನೋ ಭಯ. ಹೊಸದಾಗಿ ಸೀರೆ ಉಟ್ಟವ್ರು ಎಲ್ಲಿ ಕಾಲಿಗೆ ಸಿಗುತ್ತೋ ಅಂತ ನಡ್ಯೋ ಹಾಗೆ ಮೆಲ್ಲಗೆ ಹೆಜ್ಜೆ ಹಾಕ್ತಿದ್ರು. ಅವ್ರಿಗೂ ಏನೂ ಆಗಲ್ಲ ಅಂತ ಧೈರ್ಯ ತುಂಬ್ತಾ ಇಳಿತಾ ಬಂದ್ವಿ ಆ ದಾರೀಲಿ. ವಾಹನಗಳು ಹೋಗೋ ಜಾಗದಿಂದ ಸ್ವಲ್ಪ ಮುಂದೆ ಬಂದರೆ ಜಲಪಾತಕ್ಕೆ ಇಳಿಯೋ ಮೆಟ್ಟಿಲುಗಳು ಸಿಗುತ್ತೆ. ಜಲಪಾತಕ್ಕೆ ಇಳಿಯೋ ಅರ್ಧ ದಾರಿಯ ತನಕ ಈಗ ಮೆಟ್ಟಿಲುಗಳು ಆಗಿವೆ. ಹಾಗಾಗಿ ಸ್ವಲ್ಪ ಮಳೆ ಇದ್ರೂ ಇಲ್ಲಿ ಬರಲು ತೊಂದ್ರೆ ಇಲ್ಲ. ಮೆಟ್ಟಿಲು ಮುಗ್ದಾದ ಮೇಲೆ ಮರಗಳ ಮಧ್ಯದ, ಹುಲ್ಲುಗಾವಲ ಮಧ್ಯದ ಕಾಡದಾರಿ.ದೂರದಲ್ಲಿ ಕಾಣೋ ಜಲಪಾತದ ದೃಶ್ಯ ಬೇಗ ಇಳಿಯುವಂತೆ ಪ್ರೇರೇಪಿಸಿದ್ರೆ ಕಾಲು ಜಾರಿದ್ರೆ ಗೋವಿಂದ ಅನ್ನೋ ಭಾವ ನಿಧಾನಿಸತ್ತೆ.
Mallalli Falls

ಇಲ್ಲಿರೋ ಜಲಪಾತದಲ್ಲಿ ಮೊಸಳೆಗಳಿವೆ, ಇಳಿದು ಈಜಕ್ಕೆ ಹೋಗಿ ಹಿಂದಿನ ತಿಂಗಳಷ್ಟೇ ಹುಣಸೂರಿನ ಪೋಲೀಸ್ ಒಬ್ರು, ಹಿಂದಿನ ವರ್ಷ ಸಾಗರ ಕಡೆಯ ಅಶ್ವಥ್ ಹೆಗಡೆ ಅನ್ನುವವರೊಬ್ರು  ಟೆಕ್ಕಿ ಸತ್ತಿದ್ದಾರೆ ಅಂತ ಚೆಕ್ ಪೋಸ್ಟಲ್ಲಿ ಎಚ್ಚರಿಸಿದ್ರು. ಸುಮ್ನೆ ನೋಡ್ಕಂಡು ಬರ್ತೀವಿ ಅಂತ ಹುಷಾರಾಗೇ ಕೆಳಗಿಳಿದ್ವಿ. ಜಲಪಾತದ ನೀರ ಹನಿಗಳು ಅದರಿಂದ ಸುಮಾರು ೧೦೦ ಅಡಿ ದೂರದವರೆಗೂ ಸಿಡಿತಾ ಇತ್ತು. ಹಾಗಾಗಿ ಹತ್ತತ್ರ ಹೋಗ್ತಿದ್ದ ಹಾಗೇ ಅಲ್ಲಿ ಮಂಜಲ್ಲಿ ನಿಂತಂತ ಅನುಭವ.  ಜಲಪಾತದಲ್ಲಿ ಒಳ್ಳೇ ನೀರಿತ್ತು. ಹಂತ ಹಂತವಾಗಿ ಧುಮುಕೋ ಜಲಪಾತದಲ್ಲಿ ಕೆಲೋ ಕಡೆ ನೀರು ಬಿದ್ದ ರಭಸಕ್ಕೆ  ಆಳದ ಗುಂಡಿಗಳಾಗಿರೋದು ಸುಳ್ಳೇನಲ್ಲ. ಮೊದ್ಲೇ ಎಚ್ಚರಿಕೆ ಸಿಕ್ಕಿದ್ರಿಂದ ನಾವು ಜಲಪಾತದ ಕೆಳಗೇ ಹೋಗಿ ತಲೆ ಕೊಡ್ತೀವಿ , ಎಷ್ಟು ಆಳ ಇದ್ರೂ ಈಜೇ ಬಿಡ್ತೀವಿ ಅಂತ ಸಾಹಸ ಮಾಡಕ್ಕೆ ಹೋಗ್ಲಿಲ್ಲ. ಅಲ್ಲೇ ಶುರುವಿನಲ್ಲಿ ನೀರು ಕಡಿಮೆ ಇದ್ದ, ನೆಲ ಕಾಣ್ತಾ ಇದ್ದ ಕಡೆ ಇಳಿದು ಸ್ವಲ್ಪ ಹೊತ್ತು ಆಡಿ, ಸ್ನಾನ ಮಾಡಿದ್ವಿ. ಅಲ್ಲೊಂದಿಷ್ಟು ಫೋಟೋ ಸೆಷನ್ನು ಜೊತೆಗೆ ಎರಡ್ನೇ ಇನ್ನಿಂಗ್ಸು ತಿಂಡಿ. 


ನಾವು ಹೋದಲ್ಲಿ ಯಾವದೇ ಪ್ಲಾಸ್ಟಿಕ್ ಕವರ್ ಬಿಸಾಕ್ಬಾದ್ರು ಅಂತ ಮುಂಚೇನೆ ಮಾತಾಡಿದ್ವಿ. ಅದನ್ನೇ ಅಲ್ಲಿ ಮತ್ತೊಂದ್ಸಲ ನೆನಪಿಸಿ ಅಲ್ಲಿ ಯಾವುದೇ ಕವರ್ ಎಸಿಯದೇ ಮತ್ತೊಂದು ಬ್ಯಾಗಲ್ಲೇ ತುಂಬ್ಕೊಂಡು ಮೇಲೆ ಹತ್ತೋಕೆ ಶುರು ಮಾಡಿದ್ವಿ. ಎಂಟೂವರೆಗೆ ಮಲ್ಲಳ್ಳಿಗೆ ಮುಟ್ಟಿದ ನಾವು ಜಲಪಾತಕ್ಕೆ ಇಳ್ಯೋ ಹೊತ್ತಿಗೆ ೯:೩೦. ವಾಪಾಸ್ ಹತ್ತೋ ಹೊತ್ತಿಗೆ ಸುಮಾರು ೧೧:೩೦. 


ವೈನ್ ಬಾಟ್ಲು ಹಿಡ್ದು ಹೀರ್ತಾ ಪ್ರಕೃತಿಯನ್ನು ಆನಂದಿಸಲು ಹೊರಟಿದ್ದ(?) ಟ್ರೆಕರ್ಸ್ ಸಿಕ್ಕಿದ್ರು! ಜಲಪಾತದ ನೀರು ಸಿಡಿಯೋ ಜಾಗದಿಂದ ಸ್ವಲ್ಪ ದೂರ ಬರ್ತಿದ್ದ ಹಾಗೆಯೇ . ಹೆಂಗಿದೆ ಜಲಪಾತ ಅಂದ್ರು.
ಸಖತ್ತಾಗಿದೆ ಆದ್ರೆ ಸ್ವಲ್ಪ ಅಪಾಯ ಇದೆ. ಹೀಗೀಗೆ ಜನ ಸತ್ತಿದ್ದಾರೆ. ಸಾಹಸ ಮಾಡಕ್ಕೆ ಹೋಗ್ಬೇಡಿ ಅಂತ ಹೇಳಿ ಮುಂದೆ ಬಂದ್ವಿ. ದಾರೀಲಿ ಆ ಜಾಗನಾ ಕಾಯ್ತೀನಿ ಅಂತ ಅಲ್ಲಿ ಸತ್ತ ಜನರ ಕತೆ ಹೇಳಿದ ವೇಣು ಅನ್ನೋರೊಬ್ರು ಸಿಕ್ಕಿದ್ರು.ಅಶ್ವಥ್ ಹೆಗ್ಡೆ ಅವ್ರ ಕತೆ ಹೇಳಿದ್ದೂ ಇವ್ರೆ. ಅವ್ರು ಹೇಳಿದ ಕತೆ ಪ್ರಕಾರ ಸಂಪೆ ಷಷ್ಟಿ ದಿನ ೩೦-೪೦ ಸಿಸ್ರಿ ಬದಿಯ ಹವ್ಯಕರು ಅಲ್ಲಿಗೆ ಟ್ರೆಕ್ಕಿಂಗ್ ಬಂದಿದ್ರಂತೆ. ಪ್ರತೀ ವರ್ಷ ಅವರು ಹೀಗೇ ಅಲ್ಲಿಗೆ ಬರ್ತಾರಂತೆ. ಈ ಜಲಪಾತಕ್ಕೆ ಸುಮಾರಷ್ಟು ಜನ ದಿನಾ ಬರೋದು ಹೌದಾದ್ರೂ ಷಷ್ಟಿ ಹಬ್ಬಕ್ಕೂ ಮಲ್ಲಳ್ಳಿ ಜಲಪಾತಕ್ಕೂ ಯಾವ ಸೀಮೆ ಸಂಬಂಧ ಅಂತ ನಂಗೆಂತೂ ಅರ್ಥ ಆಗ್ಲಿಲ್ಲ. ಅವ್ರು ಯಾರೂ ಅಂತ ಆ ವೇಣಣ್ಣನೇ ಹೇಳೋವರ್ಗೂ, ಸಿರ್ಸೀಲಿರೋ ಸಾವಿರಾರು ಜನ್ರಲ್ಲಿ ಅಲ್ಲಿಗೆ ಬಂದವರ್ಯಾರಾದ್ರೂ ಇದನ್ನ ಓದೋವರ್ಗೂ ಇದೊಂದು ನಿಗೂಢ ರಹಸ್ಯವೇ ಸರಿ !!

*********
ಇವತ್ತು ಬೆಳಿಗ್ಗೆ ಅಷ್ಟೆ ಅಲ್ಲಿಂದ ಬಂದಿದ್ದು. ಆಮೇಲೆ ಆಫೀಸಿಗೂ ಹೋಗಿದ್ರಿಂದ ಈಗ ಮಾತಾಡ್ತಿರೋ ಕಾಲುಗಳ ಜೊತೆ, ಎಳೀತಿರೋ ಕಣ್ಣುಗಳು.. ಹಾಗಾಗಿ ಮುಂದೆ ಬರ್ಯೋಕೆ ಇನ್ನೊಮ್ಮೆ ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೆ ಶುಭದಿನ :-)
Way to Kumara Parvata Trecking

***********************************************


ಈ ಲೇಖನ "ಈ ಕನಸು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ :-)
http://www.ekanasu.com/2013/01/blog-post_21.html