Monday, November 25, 2013

ಒಂಟಿಬುಡುಕ

ಪೀಠಿಕೆ:
ನಮ್ಕಡೆ  ಒಂದು ಪದ ಇದೆ "ಒಂಟಿಬುಡುಕ" ಅಂತ. ಪದ ಅನ್ನೋದಕ್ಕಿಂತ ಅದನ್ನೊಂದು ಸ್ವಭಾವ ಅನ್ನಬಹುದು. ಏನನ್ನೂ, ಯಾರಿಗೂ ಹಂಚದೇ ತಿನ್ನುವ, ಅನುಭವಿಸೋ ಸ್ವಭಾವದವನು/ದವಳಿಗೆ ಒಂಟಿಬುಡುಕ ಆಗ್ಬೇಡ. ಒಳ್ಳೇದಲ್ಲ ಅದು ಅಂತ ಅಪ್ಪ-ಅಮ್ಮ, ಹಿರಿಯರು ಕಿವಿ ಮಾತು ಹೇಳ್ತಿರುತ್ತಾರೆ. ಆ ಸ್ವಭಾವವಿದ್ದವರಿಗೆ ಏನೂ ಅನಿಸದಿದ್ದರೂ, ಹೊರಗಿನವರ ದೃಷ್ಟಿಯಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತಿರುತ್ತೆ. ಇಂದು ಅದೇ ಸ್ವಭಾವದ ಬಗ್ಗೆ ಒಂದಿಷ್ಟು ಮಾತುಗಳು..ಯಾರದೋ ವ್ಯಕ್ತಿಗತ ನಿಂದೆ ಅಂತಲ್ಲ. ನಮ್ಮ ನಿಮ್ಮೊಳಗೂ ಅರಿಯದೇ ಅವಿತಿರುವ ಈ ಮರಿ ರಾಕ್ಷಸನ ಗುರುತಿಸಿ ಹೊರಗಾಕಲನುವಾಗಲೊಂದು ಪ್ರಯತ್ನ ಅಷ್ಟೇ.

ಹೀಗೆ ಒಂದು ಸಂಜೆ. ಕಾಲೇಜಿಗೆ ಹೋದ ಗೆಳೆಯರೆಲ್ಲಾ ಒಬ್ಬೊಬ್ಬರಾಗಿ ರೂಮು ಸೇರಿದ್ದಾರೆ. ರೂಮು ಸೇರಿದವರಲ್ಲಿ ಒಬ್ಬನ ಕೈಯಲ್ಲೊಂದು ಚೀಲ. ಬಿಳಿ ಪ್ಲಾಸ್ಟಿಕ್ ಕವರಾಗಿದ್ರಿಂದ ಒಳಗಿದ್ದಿದ್ದು ಕಿತ್ತಳೆ ಹಣ್ಣೋ, ಮೋಸಂಬಿಯೋ ಇರಬೇಕು ಅಂತ ಅನಿಸ್ತಾ ಇತ್ತು. ಅದರಿಂದ ಒಂದು ಕಿತ್ತಳೆ ಹಣ್ಣು ಹೊರತೆಗೆದ ಒಬ್ಬ. ಕಂಪ್ಯೂಟರ್ ಕಡೆ ಮುಖ ಹಾಕಿ ಅದರಲ್ಲಿ ಏನೋ ಹುಡುಕುತ್ತಿದ ಇವನ ರೂಂಮೇಟಿಗೆ ಇವನು ಕಿತ್ತಳೆ ಹಣ್ಣು ತಿನ್ನುತ್ತಿರೋದು ಗೊತ್ತಾದ್ರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ.. ಆಗದಿದ್ದರೂ ಆದಂತೆ ನಟಿಸುತ್ತಿದ್ದ. ಮುಸುಕಿ ಹಾಕಿ ಮಲಗಿದ್ದ ಮತ್ತೊಬ್ಬ ಗೆಳೆಯನಿಗೂ ಪರಿಮಳದಿಂದಲೇ ರೂಮಲ್ಲಿ ಯಾರೋ ಕಿತ್ತಲೆ ಹಣ್ಣು ತಿನ್ನುತ್ತಿದ್ದಾರೆ ಅಂತ ಅನ್ನಿಸಿ ತನಗೂ ಕೊಡಬಹುದೇನೋ ಎಂಬ ಆಸೆಯಿಂದ ಮುಸುಕು ಸರಿಸಿದ. ನೋಡಿದರೆ ಇವನು ಒಬ್ಬನೇ ತಿನ್ನುತ್ತಿದ್ದಾನೆ. ಅವರಿಬ್ಬರೂ ಜೀವನದಲ್ಲಿ ಕಿತ್ತಳೇ ಹಣ್ಣು ತಿಂದೇ ಇಲ್ಲ ಅಂತ ಅಲ್ಲ. ಏನೇ ತಂದರೂ ಹಂಚಿ ತಿನ್ನೋ ತಮ್ಮಿಬ್ಬರನ್ನು ಬಿಟ್ಟು ಒಬ್ಬನೇ ತಿಂತಿದ್ದಾನಲ್ಲ ಈ ಭೂಪ ಅನ್ನೋದಕ್ಕಿಂತ ರೂಮಲ್ಲೇ ಕೂತು ತೋರಿಸಿ ತೋರಿಸಿ ಒಬ್ಬನೇ ತಿಂತಿದ್ದಾನಲ್ಲ, ಒಂದೊಂದು ಸೊಳೆ ಕೊಟ್ಟು ತಿಂತೀರೇನೋ ಅಂತ ಔಪಚಾರಿಕತೆಗಾದ್ರೂ ಕೇಳಿದ್ರೆ ಅವ್ನ ಗಂಟೇನಾದ್ರೂ ಹೋಗ್ತಿತ್ತಾ ? ಅವ್ನು ಕೊಟ್ಟಿದ್ರೂ ನಾವು ಬೇಡ ಅಂತನೇ ಹೇಳ್ತಿದ್ವಿ ಅನ್ನೋದು ಬೇರೆ ಮಾತು. ಆದ್ರೆ ಹಂಚಿ ತಿನ್ನೋ ಸ್ವಭಾವವೇ ಇಲ್ಲದ ಒಂಟಿಬುಡುಕ ಇವನು .ಹೀಗೆ ಮಾಡ್ತಾ ಇದ್ರೆ ಒಂದು ದಿನ ಸರಿಯಾಗಿ ಬುದ್ದಿ ಕಲಿಸಬೇಕು ಇವನಿಗೆ ಅಂತ ಅವನ ಬಗ್ಗೆ ಸಿಟ್ಟು ಬರುತ್ತಿತ್ತು ಇಬ್ಬರಿಗೂ.
**
ಮತ್ತೊಂದು ಹಾಸ್ಟೆಲ್ ರೂಮು. ಗಣಪತಿ ಹಬ್ಬ ಆಗಿದೆ. ಎಲ್ಲ ತಮ್ಮೂರಿಂದ ಏನೇನೋ ತಂದು ತಮ್ಮ ರೂಮವರೊಂದಿಗೆ, ಪಕ್ಕದವರೊಂದಿಗೆ ಹಂಚಿ ನಲಿಯುತ್ತಾ, ತಿನ್ನುತ್ತಿದ್ದಾರೆ. ಒಬ್ಬಳು ಮಾತ್ರ ತಾನು ಊರಿಂದ ಏನೂ ತಂದೇ ಇಲ್ಲವೆಂಬಂತೆ ಇದ್ದಾಳೆ. ನೀನು ಏನೂ ತಂದೇ ಇಲ್ಲವೇನೇ ಅಂದವರಿಗೆಲ್ಲಾ, ಸ್ವಲ್ಪನೇ ಮಾಡಿದ್ರು ಕಣೆ, ಈ ಸಲ. ಹಾಗಾಗಿ ಹೆಚ್ಚು ತರೋಕಾಗ್ಲಿಲ್ಲ. ಮುಂದಿನ ಸರ್ತಿ ತರ್ತೀನಿ ಅಂತಿದ್ದಾಳೆ. ಹೌದಿರಬೌದು ಅಂದುಕೊಂಡ್ರು ಉಳಿದ ಗೆಳತಿಯರೆಲ್ಲಾ. ಬ್ಯಾಗಿಂದ ಯಾವುದೋ ಡಬ್ಬ ತೆಗೀತಿರೋದನ್ನ ನೋಡಿದ್ದ ಅವಳ ರೂಂಮೇಟ್ ಕೂಡ ಗೆಳತಿ ಈ ರೀತಿ ಡೌ ಹೊಡಿತಿರೋದನ್ನ ನೋಡಿ ಸುಮ್ಮನಿದ್ಲು. ರೂಮಲ್ಲಿ ಆಮೇಲೆ ಕೇಳಿದ್ರಾಯ್ತು ಅಂತ. ಹಿಂಗೇ ಅವತ್ತಿನ ರಾತ್ರಿಯಾಯ್ತು. ರೂಂಮೇಟ್ಸೆಲ್ಲಾ ಮಲಗಿದರೂ ಇವಳಿಗೆ ನಿದ್ರೆಯಿಲ್ಲ. ಮನೆಯಿಂದ ತಂದಿದ್ದು ಏನಾಯ್ತು ಏನೋ ಅಂತ. ಬೆಳಗ್ಗಿನಿಂದ ಮನೆಯಿಂದ ತಂದಿದ್ದ ಚಕ್ಕುಲಿ-ಕೋಡುಬಳೆ ತಿನ್ನಬೇಕೆಂಬ ಆಸೆಯನ್ನು ಅದುಮಿಟ್ಟಿದ್ಲು. ಆದ್ರೆ ರಾತ್ರಿಯಾದರೂ ಆ ಆಸೆ ಈಡೇರದೆ ನಿದ್ರೆನೇ ಬರ್ತಾ ಇಲ್ಲ. ಯಾವಾಗ ನೋಡಿದ್ರೂ ರೂಮಲ್ಲಿ ಜನ ತುಂಬಿ ಬಿಟ್ಟಿರ್ತಾರಪ್ಪ. ಆರಾಮಾಗಿ ತಂದಿದ್ದು ತಿನ್ನೋಕೂ ಆಗಲ್ಲ. ನಾನು ಕಷ್ಟಪಟ್ಟು ಹೊತ್ತು ತಂದಿದ್ದು ನಾನೊಬ್ಳೇ ತಿನ್ನೋಕೆ ಅಂತ. ಅದನ್ನ ಇವರಿಗೆಲ್ಲಾ ಯಾಕೆ ಕೊಟ್ಟು ಖಾಲಿ ಮಾಡ್ಬೇಕು ಅನ್ನೋದು ಅವಳ ಭಾವ. ನಿಧಾನವಾಗಿ ಸದ್ದಾಗದಂತೆ ಕಳ್ಳ ಹೆಜ್ಜೆ ಹಾಕಿ ಡಬ್ಬ ತೆಗೆಯೋಕೆ ಹೋದ್ರೂ ಅಲ್ಲೇ ಪಕ್ಕದಲ್ಲಿದ್ದ ನೀರಿನ ಲೋಟ ಬಿದ್ದೋಯ್ತು. ಆ ಸದ್ದಿಂದ ರೂಂಮೇಟ್ಸಿಗೆಲ್ಲಾ ಎಚ್ಚರ ಆಗಿ ಬಿಡ್ಬೇಕೆ ? ಏನೇ ಸೌಂಡು ಅಂದ್ರೆ ನೀರು ಕುಡಿಯೋಣ ಅಂತ ಲೋಟ ತೆಗೆಯೋಕೆ ಹೋದ್ರೆ ಅದು ಬಿದ್ದೋಯ್ತು ಕಣ್ರೆ ಅಂತ ಮತ್ತೆ ಸುಳ್ಳು ಬಿಟ್ಲು. ಲೈಟು ಹಾಕ್ಕೊಳಕಾಗಲ್ವಾ ಸೋಂಬೇರಿ ಅಂದು ಮಲ್ಕೊಂಡ್ರು ಉಳಿದಿಬ್ಬ ರೂಂ ಮೇಟ್ಸು. ಸರಿ, ಡಬ್ಬ ತೆಗೆದ್ಲು. ಒಂದೊಂದೇ ಚಕ್ಕುಲಿ ತೆಗ್ದು ತಿನ್ನೋಕೆ ಶುರು ಮಾಡಿದ್ಲು. ಏನೂ ತಂದಿಲ್ಲವಂತ ಬೇರೆ ಅವ್ರಿಗೆಲ್ಲಾ ಹೇಳಿದವಳು ಈಗ ಒಬ್ಬಳೇ ರಾತ್ರಿ ಕೂತು ಚಕ್ಕುಲಿ ತಿಂತಾ ಇದ್ದಾಳೆ. ಎಷ್ಟು ಸಲ ಮನೆಯಿಂದ ಸ್ವೀಟು, ಹಣ್ಣು ತಂದಾಗ ಇವಳಿಗೆ ಕೊಟ್ಟಿಲ್ಲ. ಆದ್ರೂ ಸೊಕ್ಕು ನೋಡು ಇವ್ಳಿಗೆ ಒಂಟುಬುಡುಕಿ. ಹೊರಗಿನವ್ರು ಹೋಗ್ಲಿ ರೂಂಮೇಟ್ಸಿಗಾದ್ರೂ ತಗೊಳ್ರೆ ಅಂತ ಒಂದು ಚಕ್ಕುಲಿ ಕೊಟ್ಟಿದ್ರೆ ಏನಾಗ್ತಿತ್ತಪ್ಪ ಇವಳಿಗೆ ಅಂತ ಮನಸ್ಸಲ್ಲೇ ಬಯ್ಕೊಳ್ಳಕ್ಕೆ ಶುರು ಮಾಡಿದ್ರು. ಬಾಯ್ಬಿಟ್ಟು ಒಂದು ಮಾತಾಡದಿದ್ರೂ ಈ ಚಕ್ಕುಲಿ ಶಬ್ದದಿಂದ ಇರಿಟೇಟ್ ಆಗಿ ಕಿವಿ ಮೇಲೆ ಶಬ್ದ ಕಮ್ಮಿಯಾಗೋ ತರ ಬೆಡಶೀಟ್ ಬಲವಾಗಿ ಎಳೆದು ಮಲಗಿ ಬಿಟ್ರು.

ಇದು ತೀರಾ ಬಾಲಿಷ ಆಗ್ತಿದೆ ಅಂತ ನಿಮ್ಮಲ್ಲಿ ಕೆಲವರಿಗೆ ಅನಿಸಬಹುದು. ಆದ್ರೆ ಇದು ನಿಜ. ನೀವು ಇಂತಹವರನ್ನು ಇಲ್ಲಿಯವರೆಗೂ ನೋಡಿರಲಿಕ್ಕಿಲ್ಲ. ಅದಕ್ಕೇ ಹಾಗನಿಸುತ್ತಿದೆ. ಮಧ್ಯರಾತ್ರಿಗೆ ಎದ್ದು ಒಬ್ಬರೇ ಕಿತ್ತಳೆ ಹಣ್ಣು ತಿನ್ನೋರು, ಒಂದೇ ಮನೆಯಲ್ಲಿದ್ದರೂ ಅತ್ತೆ ಮಾವನಿಗೆ ಕೊಡದೇ ತಾನೊಬ್ಳೇ ಹಣ್ಣು ತಂದು ತಿನ್ನೋ ಸೊಸೆ, ತನ್ನ ಪಕ್ಕದಲ್ಲೇ ಇನ್ನೊಂದು ಪುಟಾಣಿಯಿದ್ದು ಅದು ತನ್ನನ್ನೇ ನೋಡ್ತಾ ಇದ್ರೂ  ತನಗೆ ಯಾರೋ ಕೊಟ್ಟ ಚಾಕ್ಲೇಟನ್ನು ತಾನೊಬ್ಳೇ ತಿನ್ನೋ ಮಗು.. ಇವೆಲ್ಲಾ ಕಟು ವಾಸ್ತವಗಳೇ. ಒಮ್ಮೆ ತಣ್ಣಗೆ ಕೂತು ಅವಲೋಕಿಸಿದ್ರೆ, ಆತ್ಮಾವಲೋಕನಕ್ಕೆ ಮುಂದಾದ್ರೆ ನಾವೂ ಹೀಗೆ ಒಂಟಿಬುಡುಕರಾದ ಸಣ್ಣತನದ ಪ್ರಸಂಗಗಳು ನೆನಪಾಗ್ಬೋದು. ಮುಂದಾದ್ರೂ ಹಾಗಾಗದಂತೆ ನಮ್ಮ ಸ್ವಭಾವವನ್ನು ತಿದ್ದಿಕೊಳ್ಳೋಕೆ ಮುಂದಾಗ್ಬೋದು. ನನಗನಿಸಿದಂತೆ ಈ ಒಂಟಿಬುಡುಕತನ ಶುರುವಾಗೋದು ಎಲ್ಲಾ ಒಳ್ಳೆಯ, ಕೆಟ್ಟ ಸ್ವಭಾವಗಳ ಬೇರಾದ ಬಾಲ್ಯದಲ್ಲೇ. ಆಗಲೇ ಇದನ್ನ ತಿದ್ದದಿದ್ದರೆ ಆಮೇಲೆ ತಿದ್ದಿಕೊಳ್ಳೋದು ತುಂಬಾನೇ ಕಷ್ಟ. ಬೇರೆಯವರ ಹೇಳೋವರೆಗೂ ನಮಗೆ ಇದರ ಬಗ್ಗೆ ಗೊತ್ತೇ ಆಗಿರೊಲ್ಲ. ಬೇಜಾರಾಗೋತ್ತೆ ಹೇಳಿದ್ರೆ, ನಮಗ್ಯಾಕೆ ಇಲ್ಲದರ ಉಸಾಬರಿ ಅಂತ ನಮ್ಮ ಬಗ್ಗೆ ಕಾಳಜಿಯಿದ್ದೋರೂ ಕೆಲ ಸಲ ನಮಗೆ ಇಂತದ್ರ ಬಗ್ಗೆ ಹೇಳಿರಲ್ಲ. ಹೇಳಿದ್ರೂ ಬದಲಾಗೋ ಮನಸ್ಸಿರೋಲ್ಲ ಕೆಲವರಿಗೆ. ಈ ಒಂಟಿಬುಡುಕ ಸ್ವಭಾವವನ್ನ ಬಾಲ್ಯದಲ್ಲೇ ಚಿವುಟೋಕೆ ನಮ್ಮ ಕಡೆಯೆಲ್ಲಾ ಹೇಗೇಗೆ ಪ್ರಯತ್ನಿಸ್ತಿದ್ರು ಅನ್ನೋ ಕೆಲ ಮಾತುಗಳೊಂದಿಗೆ ಇವತ್ತಿನ ಲೇಖನದಿಂದ ವಿರಮಿಸ್ತೀನಿ.

ನಮ್ಮ ಕಡೆಯೆಲ್ಲಾ ಯಾರದಾದ್ರೂ ಮನೆಗೆ ಹೋಗಬೇಕಾದ್ರೆ ಬರಿಗೈಯಲ್ಲಿ ಹೋಗ್ತಿರಲಿಲ್ಲ. ಮನೆಯಲ್ಲಿ ಮಕ್ಕಳಿದ್ದಾರೆ ಅಂದ್ರೆ ಚಾಕಲೇಟೋ, ಬಿಸ್ಕೇಟು ಪಟ್ಟಣವೋ, ವಯಸ್ಸಾದವರಿದ್ದಾರೆ ಅಂದ್ರೆ ಹಣ್ಣೋ ತಗೊಂಡು ಹೋಗೋದು ಗ್ಯಾರಂಟಿ. ಸಂಜೆ ಬರೋರು ಪಾನಿಪುರಿ, ಮಸಾಲೆ ಪುರಿ ತರೋ ಟ್ರೆಂಡೂ ಇತ್ತೀಚಿಗೆ ಶುರುವಾಗಿದೆಯಾದ್ರೂ ಒಟ್ನಲ್ಲಿ ಖಾಲಿ ಕೈಯಲ್ಲಿ ಬರೋದು ತುಂಬಾ ಕಡ್ಮೆ.ಯಾರಾದ್ರೂ ನೆಂಟ್ರು ಬಂದು ತಗೋಳೋ ಚಾಕ್ಲೇಟು ಅಂತ ಕೊಟ್ರೆ ಆ ಮಗೂಗೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಆ ಮಗುವಿನ ಮುಖ ಅರಳೋದನ್ನ ಅಲ್ಲೇ ನೋಡ್ಬೇಕು. ತಕ್ಷಣ ಅದನ್ನ ತಿನ್ನಬಾರದೆಂಬ ನಿಷಿದ್ದ ಇಲ್ಲದಿದ್ರೂ ಮಕ್ಕಳು ಅದನ್ನ ಅಮ್ಮನ ಕೈಲೋ, ಅಪ್ಪನ ಕೈಲೋ ತಗೊಂಡು ಹೋಗಿ ಕೊಟ್ತಿದ್ರು.. ಬಿಡಿಸಿಕೊಡು ಅಂತ. ಬಿಡಿಸಿಕೊಳ್ಳೋಕೆ ಬಂದ್ರೂ ಬಿಡಿಸಿಕೊಳ್ಳೋ ಪ್ರಯತ್ನದಲ್ಲಿದ್ದಾಗ ಅಪ್ಪನೋ, ಅಮ್ಮನೋ ಏ ಒಬ್ಬನೇ ತಿಂತ್ಯನೋ. ಒಂಟಿಬುಡುಕ ಆಗೋಗ್ತೆ. ತಮ್ಮಂಗೆ ಚೂರು ಕೊಟ್ಯಾ ಅಂತಿದ್ರು. ಒಂದೆರಡು ಸಲ ಹೀಗೆ ಹೇಳೋದ್ರೊಳಗೆ ಮುಂದಿನ ಸಲ ಯಾರು ಏನೂ ಹೇಳದಿದ್ರೂ ಕೈ ಚಾಕ್ಲೇಟನ್ನ ಅರ್ಧ ಮಾಡಿ ತಮ್ಮಂಗೆ ಕೊಟ್ಟಿರ್ತಿತ್ತು.

 ಅವಿಭಕ್ತ ಕುಟುಂಬಗಳಲ್ಲಿ ಬೆಳೆಸುತ್ತಿದ್ದ ಈ ಹಂಚಿ ತಿನ್ನೋ ಸ್ವಭಾವ ಆ ನಂತರದ ವಿಭಕ್ತ ಕುಟುಂಬಗಳಲ್ಲೂ ಮುಂದುವರೀತು.  ಒಬ್ನೇ ಮಗ, ಮಗಳಿದ್ರೂ ಮಗಾ, ಒಂಟಿಬುಡುಕ ಆಗ್ಲಾಗ ನೋಡು. ಎಂತೇ ಇದ್ರೂ ಹಂಚಿ ತಿನ್ನಕ್ಕು ಅಂತ ಅಮ್ಮನೋ, ಅಪ್ಪನೋ ಆಗಾಗ ತಿಳಿಹೇಳ್ತಿದ್ರು. ಹಂಗಾಗಿ ಶಾಲೇಲೆ ಊಟದ ಜೊತೆಗೆ ತಗೊಂಡು ಹೋದ ಸ್ವೀಟನ್ನು ತಾನು ಸ್ವಲ್ಪವೇ ತಿಂದ್ರೂ ಆದಷ್ಟು ಗೆಳೆಯರಿಗೆ ಹಂಚೋ ಅಭ್ಯಾಸ ಶುರು ಆಯ್ತು.  ಬಾಲ್ಯದಲ್ಲೇ ಬೆಳೆದ ಆ ಅಭ್ಯಾಸ ಎಷ್ಟು ಬಲವಾಗಿ ಬೆಳೆಯುತ್ತೆ ಅಂದ್ರೆ ಹೊರಗಡೆ ಇಂದ ರೂಮಿಗೆ ಜೋಳ ತಗೊಂಡು ತಿಂತಾ ಹೋಗೋನು. ರೂಮಲ್ಲಿ ತನ್ನ ಗೆಳೆಯರೂ ಇದ್ದಾರೆ ಅಂತ ನೆನಪಿಸಿಕೊಂಡು ಅವರಿಗಾಗೇ ಇನ್ನೊಂದು ಜೋಳ ತಗೋತಾನೆ. ಇಲ್ಲ, ರೂಮಿಗೆ ಹೋದ ಮೇಲೆ ತನ್ನ ಜೋಳದಲ್ಲೇ ಅರ್ಧ ಮಾಡಿ ತಿಂತೀರೇನೋ ಅಂತಾನೆ.. ಅವರು ತಿಂತಾರೋ ಬಿಡ್ತಾರೋ ಅದು ಬೇರೆ ಮಾತು. ಆದ್ರೆ ಈ ಮಧ್ಯರಾತ್ರೀಲಿ ಕಿತ್ತಳೆ ಹಣ್ಣೋ ತಿನ್ನುವಾಗ ಆಗುವಂತಹ ಕಿರಿಕಿರಿ ಅವರಿಗೆ ಆಗೋಲ್ಲ. ಎಲ್ಲರನ್ನೂ ಬಿಟ್ಟು ಒಬ್ಬನೇ ತಿನ್ನಬೇಕಲ್ಲ, ಅವರೆಲ್ಲಾ ಏನೇನು ಕಣ್ಣು ಹಾಕ್ತಿದ್ದಾರೋ ಅನ್ನೋ ಅಳುಕೂ ಇವನಿಗೆ ಇರೋಲ್ಲ. ಈ ಅಭ್ಯಾಸ ಎಲ್ಲಿ ಹೋದ್ರೂ, ಎಷ್ಟೇ ದೊಡ್ಡವರಾದ್ರೂ ಅವರಿಗೆ ಬಿಡೋಲ್ಲ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.


ಊರಿಂದ ಅಮ್ಮ ಬಂದಿದ್ದಾರೆ. ಅವರಿಗೆ ಪೇಟೆ ತೋರಿಸೋಕೆ ಅಂತ ಕರೆದುಕೊಂಡ ಮಗ ಮೆಕ್ ಡೊನಾಲ್ಡಿಗೆ ಕರೆದುಕೊಂಡು ಹೋಗಿದ್ದಾನೆ. ಅಮ್ಮ ನೋಡು ಇದು ಬರ್ಗರ್ ಅಂತ ತಿನ್ನು ಇದ್ನ. ನಮ್ಮ ಹಳ್ಳಿ ಕಡೆ ಎಲ್ಲಾ ಸಿಗಲ್ಲ ಇದು ಅಂದಿದ್ದಾನೆ. ನೀನು ತಿನ್ನೊಲ್ವೇನು ಅಂದಿದ್ದಕ್ಕೆ , ಏ ಬೇಡಮ್ಮಾ ನಂಗೆ ಇದ್ನ ತಿಂದು ತಿಂದು ಬೇಜಾರಾಗಿ ಹೋಗಿದೆ. ನೀ ತಿನ್ನು ಪರವಾಗಿಲ್ಲ. ನಾ ಇಲ್ಲೇ ಕೂತಿರ್ತೀನಿ ಅಂತ ತನ್ನ ಮೊಬೈಲಲ್ಲಿ ಏನೋ ಮಾಡ್ತಾ ಅಮ್ಮನ ಎದುರಲ್ಲೇ ಕೂತಿದ್ದಾನೆ. ಸುಮ್ಮನೇ ಕೂತ್ರೆ ಅಮ್ಮನಿಗೆ ಒಬ್ಳೇ ತಿನ್ನೋಕೆ ಕಸಿವಿಸಿ ಆಗ್ಬೋದು ಅಂತ. ಒಂದು ನಿಮಿಷ ಆಯ್ತು. ಏನು ನೋಡ್ತಾ ಇದಿಯಾ ಅಮ್ಮ. ತಿನ್ನು ಅಂತ ಮತ್ತೆ ತನ್ನ ಮೊಬೈಲತ್ತ ಕಣ್ಣು ಹಾಯಿಸಿದ. ಒಂದೆರಡು ಕ್ಷಣ. ತಗೋಳೋ ಅಂದ್ರು ಅಮ್ಮ. ಏನು ಅಂತ ನೋಡಿದ್ರೆ ಅಮ್ಮ ಬರ್ಗರನ್ನು ಮದ್ಯಕ್ಕೆ ಎರಡು ಪೀಸು ಮಾಡೋಕೆ ಪ್ರಯತ್ನ ಪಡ್ತಾ ಇದ್ದಾರೆ ! ಏನೇ ಇದ್ರೂ ಹಂಚಿ ತಿನ್ಬೇಕು ಒಬ್ಬರೇ ತಿನ್ನೋದು ಪಾಪ ಅನ್ನೋದು ಅವರ ಧೃಢ ನಂಬಿಕೆ !! ಮನೆಗೆ ಏನೇನೋ ಸಹಾಯ ಮಾಡಬಹುದಾಗಿದ್ದರೂ ತನ್ನ ಸ್ವಾರ್ಥವನ್ನೇ ನೆನೆದು ಕೂತಿದ್ದ ಮಗನಿಗೆ ಈ ಪ್ರಸಂಗ ನೋಡಿ ಕಣ್ಣಂಚಲ್ಲಿ ನೀರು .. ಸ್ವಲ್ಪ ಓವರಾಯ್ತು ಅಂದ್ಕೊಂಡ್ರಾ ? ಮೊದಲೇ ಹೇಳಿದಂತೆ ಇದೂ ಸತ್ಯಘಟನೆಯೇ ! ಈ ತರವೂ ಇರಬೇಕು ಅಂತಲ್ಲ. ಆದ್ರೆ ಯಾವಾಗ್ಲೂ ನಾನು , ನಾನು ಅಂತಲೇ ಇರದೇ ಒಮ್ಮೆಯಾದರೂ ನಾವು ಅನ್ನೋಣ ಅಂತ ಅಷ್ಟೇ. ನಾವು ಪ್ರಾಣಿಗಳಿಂದ್ಲೂ ಕಲಿಯೋದಿರುತ್ತೆ ಅಂತಾರೆ.  ಕಾಗೆನೇ ನೋಡಿ. ಒಂದು ಅಗುಳು ಬಿದ್ದಿದ್ರೂ ತನ್ನ ಕುಟುಂಬದವರನ್ನೆಲ್ಲಾ ಕೂಗಿ ಕರೆಯುತ್ತೆ. ಅಂತದ್ರಲ್ಲಿ ನಮ್ಮದು ಮನುಷ್ಯ ಜನ್ಮ. ಸಂಘಜೀವಿ, ಸಮಾಜ ಜೀವಿ ಅಂತ ಅಷ್ಟೆಲ್ಲ್ ಕೊಚ್ಚಿಕೊಳ್ಳೋ ನಾವು, ಸಮಾಜಕ್ಕೆ ನಾನು ಬೇಕು, ನನಗೆ ಸಮಾಜ ಬೇಡ ಅಂದರೆ ಹೇಗೆ ?  ಒಮ್ಮೆ ತಣ್ಣಗೆ ಕೂತು ಆಲೋಚಿಸೋಣ. ನಮ್ಮ ನಿಮ್ಮೊಳಗೂ ಈ ಒಂಟಿಬುಡುಕ ರಾಕ್ಷಸ ಅವಿತು ಕೂತಿರಬಹುದು. ಅವನನ್ನು ಹೊರಹಾಕೋದು ಹೇಗೆ ಅಂತ ಆಲೋಚಿಸೋಣ. ಎಲ್ಲರೊಳಗೊಂದಾಗಿ ಬದುಕೋದ ಕಲಿಯೋಣ.. ಏನಂತೀರಿ ಗೆಳೆಯರೇ ?

Tuesday, November 19, 2013

ರಿಟೈರಾದ ದೇವರು

"ದೇವರು ರಿಟೈರಾಗುತ್ತಿದ್ದಾನೆ"!!. ಕೆಲವರಿಗೆ ಈ ಶೀರ್ಷಿಕೆಯೇ ವಿಚಿತ್ರವೆನಿಸಿದರೆ ಉಳಿದವರಿಗೆ ನಾನಿಂದು ಯಾರ ಬಗ್ಗೆ ಹೇಳಹೊರಟಿರುವೆನೆಂದು ಹೊಳೆದಿರಬಹುದು. ಹಾಂ, ಹೌದು . ಹೇಳಹೊರಟಿರುವುದು ಇಂದಷ್ಟೇ ತನ್ನ ಕ್ರಿಕೆಟ್ ಜಗತ್ತಿನ ಎಲ್ಲಾ ಪ್ರಕಾರಗಳಿಂದ ಕ್ರಿಕೆಟ್ ಲೋಕದ ದಿಗ್ಗಜನ ಬಗ್ಗೆ. ದಾಖಲೆಗಳ ಮೇಲೆ ದಾಖಲೆಗಳ ಬರೆಯುತ್ತಾ ಹೋದ ಅವನೆಲ್ಲಾ ದಾಖಲೆಗಳು ಕ್ರಿಕೆಟ್ ಪ್ರಿಯರಿಗೆ ಎರಡರ ಮಗ್ಗಿಯಂತೆ ನೆನಪಲ್ಲಿದ್ದರೂ ದಾಖಲಾಗದ ಹಲವು ಸವಿನೆನಪುಗಳು ಅವನ ಆಟದ ಸುತ್ತ. ಕ್ರಿಕೆಟ್ ಜಗತ್ತಿನ ಬಂಗಾರದ ಮನುಷ್ಯ, ಹೆಸರಲ್ಲೇ ಚಿನ್ನ ಇಟ್ಟುಕೊಂಡಿರೋ ಸಚಿನ್ ಎಂದು ಯಾರಾದರೂ ಅಂದರೂ ಅದು ತೀರಾ ಉತ್ಪ್ರೇಕ್ಷೆಯಾಗಲಾರದೇನೋ. ಯಾಕೆಂದರೆ ಆಟದಲ್ಲಿ ಆತನ ತನ್ಮಯತೆ, ಆಟವೇ ತನ್ನ ಸರ್ವಸ್ವವೆಂದು ತನ್ನ ಕೊನೆಯ ಕ್ರಿಕೆಟ್ ದಿನಗಳವರೆಗೂ ತೊಡಗಿಸಿಕೊಂಡ ಆತನ ಪ್ರೀತಿ ಆತನ ವಿರೋಧಿಗಳನ್ನೂ ಸುಮ್ಮನಾಗಿಸುವಂತದ್ದು. ಯುವಪೀಳಿಗೆಗೆ ಮಾದರಿಯಾಗುವಂತದ್ದು. ಕ್ರಿಕೆಟ್ಟೆಂದರೆ ಸಚಿನ್ ಒಬ್ಬನೇ ಅಲ್ಲ , ಅವನಿಗಿಂತ ಪ್ರತಿಭಾವಂತರು ಹಲವರು ಬಂದು ಹೋಗಿದ್ದಾರೆ, ಆದರೆ ಯಾರಿಗೂ ಸಿಕ್ಕದ ಪ್ರಚಾರ ಸಿಕ್ಕಿದ್ದು ಸಚಿನ್ನಿಗೆ ಎಂದು ಸಚಿನ್ ದ್ವೇಷಿಗಳು ಇಂದಿಗೂ ಕುಹಕವಾಡುತ್ತಿರಬಹುದು.. ಹೌದು.  A ಇಂದ Z ತನಕ ಎಲ್ಲಾ ಅಕ್ಷರಗಳ ಆಟಗಾರರು ಬಂದು ಹೋಗಿರಬಹುದು. ಬ್ರಾಡ್ಮನ್, ಬುಚರ್, ಲಾರಾ,ಲಿಲಿ,  ಸೋಬರ್ಸ್, ರಿಚರ್ಡ್ಸ್, ಹೇಡನ್ನಿನಂತ ಹಲವು ದೈತ್ಯ ಪ್ರತಿಭೆಗಳು ಬಂದಿರಬಹುದು. ಭಾರತೀಯ ಕ್ರಿಕೆಟ್ಟಿನಲ್ಲೂ ಅಮರನಾಥ್, ಕಪಿಲ್ ದೇವ್, ಗವಾಸ್ಕರರಂತ ಪ್ರತಿಭಾ ಪರ್ವತಗಳಿರಬಹುದು. ನಮ್ಮ ಪೀಳಿಗೆಯವರೂ ಹಲವು ಪ್ರತಿಭಾವಂತ ಕ್ರಿಕೆಟಿಗರು ಇರಬಹುದು. ಇಲ್ಲವೆಂದಲ್ಲ. ಅವರ್ಯಾರ ಪ್ರತಿಭೆಗಳ ಬಗ್ಗೆ ದೂಸರಾ ಮಾತಿಲ್ಲ. ಆದರೆ ಇಂದಿನ ಗೌರವ ಪಡೆದಿದ್ದು ಸಚಿನ್ ಎಂದಷ್ಟೇ ನಾನು ಹೇಳಹೊರಟಿರೋದು..

ರಿಟೈರಾದ ಸಮಯದಲ್ಲಿ ಅವನ ಕೈಗೆ ರವಿ ಶಾಸ್ತ್ರಿ ಮೈಕ್ ಕೊಟ್ಟು.. Time is yours ಅಂದಾಗ ಸಚಿನ್ ಯಾರ ಬಗ್ಗೆ ಮಾತನಾಡಬಹುದೆಂಬ ಕುತೂಹಲ ಎಲ್ಲರಂತೆ ನನಗೂ ಇತ್ತು. ತಮ್ಮ ಬಾಲ್ಯದ ಗೆಳೆಯ ೬೦೦ ಚಿಲ್ರೆ ರನ್ನಿನ ದಾಖಲೆ ಬರೆದ ಕಾಂಬ್ಳಿಯ ಬಗ್ಗೆಯೋ, ದಾಖಲೆಗಳ ಜೊತೆಯಾಟವಾಡಿದ ಗಂಗೂಲಿಯ ಬಗ್ಗೆಯೋ ಹೇಳಬಹುದೇನೋ ಎಂದುಕೊಂಡಿದ್ದೆ. ಆದರೆ ಸಚಿನ್ ಮಾತು ಶುರುಮಾಡಿದ್ದು ಅಪ್ಪನ ಬಗ್ಗೆ. ಕನಸನ್ನ ಹಿಂಬಾಲಿಸು ಎಂದು ನನ್ನ ಹನ್ನೊಂದನೇ ವರ್ಷದಲ್ಲೇ ನನಗೆ ಪೂರ್ಣ ಸ್ವಾತಂತ್ರ ಕೊಟ್ಟ ಅಪ್ಪ ಎಂದು ಅಪ್ಪನ ಬಗ್ಗೆ ಹೇಳುತ್ತಿದ್ದರೆ ನಾನೊಮ್ಮೆ ಮೂಕನಾಗಿದ್ದೆ. ಅಪ್ಪ, ಅಮ್ಮ, ಬಾಲ್ಯದ ಗೆಳೆಯರು.. ಹೀಗೆ ತಮ್ಮ ದಾಖಲೆಗಳ ಬಗ್ಗೆ ಒಮ್ಮೆಯೂ ನೆನೆಯದ, ಆ ಬಗ್ಗೆ ತುಟಿ ಪಿಟಕ್ಕೆನ್ನದ ಸಚಿನ್ ನೆನೆಸಿಕೊಂಡಿದ್ದು ತಮ್ಮ ಬಾಲ್ಯದ ಕೋಚ್, ಮುಂಬೈ ಅಸೋಸಿಯೇಷನ್, ಬಿಸಿಸಿಐ, ತಮ್ಮೊಂದಿಗೆ ಪ್ರತೀ ಸಲವೂ ಕ್ರಿಕೆಟ್ಟಿನ ಬಗ್ಗೆಯೇ ಮಾತನಾಡೋ ಅಣ್ಣ, ತಮಗೆ ಮೊದಲ ಬ್ಯಾಟನ್ನು ಗಿಫ್ಟ್ ಕೊಟ್ಟ ಅಕ್ಕ, ಪತ್ನಿ, ಮಕ್ಕಳ ಬಗ್ಗೆ. ಹದಿನಾರು ವರ್ಷ ನಿಮ್ಮ ಶಾಲಾ ದಿನ, ಕ್ರೀಡಾ ದಿನ, ಹುಟ್ಟಿದ ದಿನ .. ಹೀಗೆ ನಿಮ್ಮೊಂದಿಗೆ ನಿಮ್ಮ ಮೆಚ್ಚಿನ ದಿನಗಳನ್ನು ಕಳೆಯಲಾಗಿಲ್ಲ. ಇನ್ನು ಮುಂದಿನ ದಿನಗಳನ್ನು ನಿಮ್ಮೊಂದಿಗೇ ಕಳೆಯುವೆನೆಂದು ಭಾಷೆಯಿತ್ತ ಆ ವಾಮನಮೂರ್ತಿ ನಿಜವಾಗೂ ದೊಡ್ಡವನಾಗಿ ಕಾಣುತ್ತಾನೆ. ತಂಡದ ಫಿಸಿಯೋ, ಡಾಕ್ಟರ್, ಮ್ಯಾನೇಜರ್ಗಳಿಂದ ಹಿಡಿದು , ಗ್ರೌಂಡ್ಸಮೆನ್ಗಳವರೆಗೆ, ಮೀಡಿಯಾದವರನ್ನೂ ಬಿಡದೇ ವಂದಿಸಿದ , ಯಾರೂ ಮರೆತು ಹೋಗಬಾರದೆಂದು ಒಂದು ದೊಡ್ಡ ಹಾಳೆಯನ್ನೇ ಹೊತ್ತು ತಂದ ಅವರ ಸೌಮ್ಯ ಸ್ವಭಾವ ಇಷ್ಟವಾಗುತ್ತೆ. ತಮ್ಮ ಕೊನೆಯ ಟೆಸ್ಟ್ ಮ್ಯಾಚಿನಲ್ಲಿ ಗೌರವಪೂರ್ಣ ವಿಧಾಯ  ಹೇಳಿ ವರ್ತಮಾನದ ಭಾಗವೇ ಆದರೂ ಇತಿಹಾಸದ ಪುಟ ಸೇರಿಹೋದ ಸಚಿನ್ನಿನ್ನ ಮಾತುಗಳು ನನ್ನ ನೆನಪುಗಳನ್ನ ಮತ್ತೆ ಮತ್ತೆ ಕೆದಕತೊಡಗಿದವು.


ಮುಂಚೆಯೆಲ್ಲಾ ಟೆಸ್ಟ್ ಮ್ಯಾಚುಗಳೆಂದರೆ ಐದು ದಿನಗಳು ಪೂರ್ತಿ ನಡೆಯೋ ಸಂಭ್ರಮ!. ಇಡೀ ದಿನ ಆಡಿ ಇನ್ನೂರು ರನ್ ಹೊಡೆದರೂ ಅದೊಂದು ಭಯಂಕರ ಬ್ಯಾಟಿಂಗ್. ತಮ್ಮ ಬೌಲಿಂಗ್ ಸಾಮರ್ಥ್ಯವನ್ನೇ ಧಾರೆಯೆರೆಯುತ್ತಿದ್ದ ಬೌಲರ್ಗಳ ನಾನಾ ಎಸೆತಗಳನ್ನ ಎದುರಿಸುವುದು ಬ್ಯಾಟ್ಸಮನ್ನಿನ ನಿಜವಾದ ಸತ್ವಪರೀಕ್ಷೆಯೆ. ಯಾವ ತರಹದ ಎಸೆತಗಳಿಗೂ ಜಗ್ಗದೇ, ಇತ್ತ ರನ್ನನ್ನೂ ಹೊಡೆಯದೇ ಬ್ಯಾಟ್ಸಮನ್ ನೆಲಕಚ್ಚಿ ನಿಂತರೆಂದರೆ ಆಗ ಬೌಲರ್ಗಳ ಸತ್ವ ಪರೀಕ್ಷೆ ಶುರು ವಾಗುತ್ತಿತ್ತು. ಹೇಗಪ್ಪಾ ಈತನನ್ನು ಔಟ್ ಮಾಡೋದು ಎಂದು ಬೆವರಿಳಿಯುತ್ತಿತ್ತು. ಟೆಸ್ಟ್, ಒಂದು ದಿನ ಅನ್ನದೇ ಎಲ್ಲ ಪ್ರಕಾರಗಳಲ್ಲೂ ಒಂದೇ ಸಮನಾಗಿ ರುದ್ರಪ್ರತಾಪ ತೋರೋ ಆಟಗಾರರು ಒಂದಿಷ್ಟು ಜನ ಇರುತ್ತಿದ್ದರು. ಅವರು ಆಟಕ್ಕಿಳಿದರೆಂದರೆ ಎಲ್ಲೆಡೆ ಪುಕುಪುಕು. ತಮ್ಮ ಭಯಾನಕ ವೇಗದಿಂದ, ಪ್ರಚಂಡ ಸ್ಪಿನ್ ಗಾರುಡಿಯಿಂದ ಬ್ಯಾಟ್ಸಮೆನ್ನುಗಳ ಕಂಗೆಡಿಸಿ ವಿಕೆಟ್ ಉರುಳಿಸುತ್ತಿದ್ದ ಬೌಲರ್ಗಳೂ ಇರುತ್ತಿದ್ದರು. ಹಾಗಾಗಿ ಐದು ದಿನದ ಆಟವೆನ್ನೋದು ನಿಜವಾಗಲೂ ದೈಹಿಕ, ಮಾನಸಿಕ ಯುದ್ದದಂತೆ. ಈ ಸತ್ವಪರೀಕ್ಷೆ ಕೊನೆಗೆ ನೀರಸ ಡ್ರಾನಲ್ಲಿ ಅಂತ್ಯವಾದರೂ ಕೆಲವರ ಸೆಂಚುರಿ, ಕೆಲವರ ಐದು , ಹತ್ತು ವಿಕೆಟ್ಗಳ ಸಾಧನೆಗಳು ಇತಿಹಾಸದ ಪುಟಗಳಲ್ಲಿ ಸೇರುತ್ತಿದ್ದವು. ಹೀನಾಯ ಸೋಲಿನ ಹಂತದಲ್ಲಿದ್ದ ಪಂದ್ಯವನ್ನು ಮೇಲೆತ್ತಿ ಗೆಲ್ಲಿಸಿಕೊಟ್ಟ, ತಮ್ಮ ಆಟದ ಬಲದಿಂದ ತಂಡವನ್ನು ಗೆಲುವಿನಂಚಿಗೆ ತಂದಿತ್ತ, ತಂಡ ಗೆಲ್ಲಲಿ, ಸೋಲಲಿ .. ಸೋಲಿನ ಸಂದರ್ಭದಲ್ಲೂ ವೀರೋಚಿತವಾಗಿ ಆಡಿ ಅಭಿಮಾನಿಗಳ ಮನ ಗೆದ್ದೋರು ನಮ್ಮ ತಲೆಮಾರಿನ ಐದಾರು ಆಟಗಾರರು. ಅವರೆಲ್ಲಾ ಇವತ್ತು ಸಚಿನ್ನಿನ ವಿದಾಯದ ಸಂದರ್ಭದಲ್ಲಿ ಮತ್ತೆ ಒಟ್ಟಿಗೆ ಸಿಕ್ಕಿದ್ದು ಕ್ರಿಕೆಟ್ ವೀಕ್ಷಕರ ಅದೃಷ್ಟವೆಂದೇ ಹೇಳಬಹುದೇನೋ..

ಮುಂಚೆಯೇ ಅಂದಂತೆ ಕ್ರಿಕೆಟ್ಟೆಂದರೆ ಸಚಿನ್ನೊಬ್ಬನೇ ಅಲ್ಲ. "ಗೋಡೆ", "ವೆರಿ ವೆರಿ ಸ್ಪೆಷಲ್", "ಬಂಗಾಳದ ಹುಲಿ" ಎಂದು ಖ್ಯಾತಿ ಪಡೆದ ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಕಮ್ಮಿಯೇನಲ್ಲ. ಇಂದು ಸಚಿನ್ನಿಗೆ ಸಿಕ್ಕಂತ ವಿದಾಯವೇ ಅವರಿಗೂ ಸಿಗಬೇಕಿತ್ತೆನುವ ಮಾತುಗಳನ್ನು ತಳ್ಳಿಹಾಕಲಾಗದಿದ್ದರೂ ಒಂದು ಸುಸಂದರ್ಭವನ್ನು ಹಾಳು ಮಾಡುವಂತಹ ದುಃಖತರುವ ಮಾತುಗಳು ಇಲ್ಯಾಕೋ ಬೇಡವೆನಿಸುತ್ತದೆ. ಇಂದು ಬಂದಿದ್ದ ಈ ಮೂವರನ್ನು ಮತ್ತು ಅಂಗಳದಲ್ಲಿ ಸಚಿನ್ನನ್ನೂ ಕಂಡಂತ ನನಗೆ ಬಾಲ್ಯದ ದಿನಗಳು ನೆನಪಾದವು. ನಾನು, ನಮ್ಮಪ್ಪ, ಅಮ್ಮನ ಕತೆ ಹೋಗಲಿ, ನಮ್ಮಜ್ಜ, ಅಜ್ಜಿಗೂ ಕ್ರಿಕೆಟ್ಟೆಂದರೆ ಪ್ರಾಣವಾಗಿತ್ತಂತೆ. ಶಿವಮೊಗ್ಗದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದರೆ ಬೆಳಬೆಳಗ್ಗೆಯೇ ಮನೆಯಿಂದ ನೀರಿನ ಬಾಟಲ್ ಹಿಡಿದು ತನ್ನ ಮಕ್ಕಳನ್ನು ಕಟ್ಟಿಕೊಂಡು ಸಂಜೆಯವರೆಗೂ ಉರಿಬಿಸಿಲಲ್ಲಿ ನಮ್ಮಜ್ಜಿ ಕ್ರಿಕೆಟ್ ನೋಡುತ್ತಿದ್ದರಂತೆ. ನಮ್ಮಜ್ಜನಿಗೆ ಈಗಲೂ ಕ್ರಿಕೆಟ್ಟೆಂದರೆ ಅಚ್ಚುಮೆಚ್ಚು. ಅದೆಷ್ಟು ಹಳೆಯ ಕ್ರಿಕೆಟ್ ಮ್ಯಾಚ್ ಹಾಕಿದರೂ ನೋಡುತ್ತಾ ಕೂತು ಬಿಡುತ್ತೀರ ಅಂತ ನಮ್ಮಜ್ಜಿ ಎಷ್ಟೋ ಸಲ ಬೈದರೂ ಊಹೂಂ.. ಅವರ ಪ್ರೇಮ ಹಾಗೆಯೇ ಮುಂದುವರೆದಿದೆ. ಕ್ರಿಕೆಟ್ ಸ್ಕೋರ್ ನೋಡ್ತೀನಿ ಅಂತ ಖುರ್ಚಿಯಿಂದೆದ್ದು ಟೀವಿಯ ಸಮೀಪ ಹೋದ ಅವರು ಅಲ್ಲಿಯೇ ಮೈಮರೆತು ನಿಂತುಬಿಡೋದೂ ಉಂಟು. ನಾವೇ , ಅಜ್ಜಾ ಟೀವಿ ಕಾಣೊಲ್ಲ , ಈ ಕಡೆ ಬನ್ನಿ ಅಂತ ನಗಾಡೋಕೆ ಶುರು ಮಾಡಿದ ಮೇಲೆ ಅವರು ಈ ದುನಿಯಾಕ್ಕೆ ವಾಪಸ್ ಬರೋದು . ಇನ್ನು ನನ್ನ ಬಾಲ್ಯದ ಪುಟಗಳನ್ನು ತಿರುವುತ್ತಾ ಹಿಂದೆ ಹಿಂದೆ ಹೋದಂತೆಲ್ಲಾ ನೆನಪಾಗೋದು ಇವರೇ. ಆಗ ಶಾಲಾ ದಿನಗಳಲ್ಲಿ ಈಗಿನಂತೆ ಹೋಂ ವರ್ಕುಗಳು ಟೆನ್ಸನ್ನು, ಟೀವಿಗಳಲ್ಲಿ ಧಾರಾವಾಹಿಗಳ ಪೈಪೋಟಿಗಳು ಇರದಿದ್ದರೂ ಮನೆಮಂದಿಯೆಲ್ಲಾ ಒಟ್ಟಿಗೆ ಕೂತು ಟೀವಿ ನೋಡುತ್ತಿದ್ದುದು ಕಡಿಮೆಯೇ. ಆದ್ರೆ ಕ್ರಿಕೆಟ್ ಮ್ಯಾಚ್ ಬಂತಂದ್ರೆ ಮುಗ್ದೇ ಹೋಯ್ತು.. ರಾತ್ರೆ ಕ್ರಿಕೆಟ್ ಇದೆ ಅಂದ್ರೆ ನಂಗೆಂತೂ ಸಖತ್ ಖುಷಿ.  ಆಗ ಸಿಗುತ್ತಿದ್ದ "ಅಶ್ವಿನಿ" ಎಂಬ ಕೋಲ್ಡ್ ಡ್ರಿಂಕ್ಸ್ ತಂದು ಅದು ತಣ್ಣಗಿರಲೆಂದು ಟ್ಯಾಂಕಿಯೊಳಗಿಡೋದ್ರಿಂದ ಹಿಡಿದು ಮ್ಯಾಚ್ ನೋಡ್ತಾ ಬೇಕಾಗುತ್ತೆ ಅಂತ ಕಲ್ಲಂಗಡಿ ಹಣ್ಣೋ, ಮಂಡಕ್ಕಿನೋ ತರೋದ್ರಿಂದ ನಾವು ಮ್ಯಾಚಿಗೆ ತಯಾರಾಗುತ್ತಿದೆವು!. ಅಂತಾ ಹುಟ್ಟಾ ಶ್ರೀಮಂತಿಕೆಯ ದಿನಗಳಲ್ಲದಿದ್ದರೂ, ಸಾಲವೆಂಬುದು ತಲೆಯ ಮೇಲೆ ಕತ್ತಿಯಂತೆ ನೇತಾಡುತ್ತಿದ್ದರೂ ನಮ್ಮಪ್ಪ ಎಂದೂ ಬಡತನದ ಬಿಸಿ ನಮಗೆ ತಾಗದಿರಲೆಂದೇ ಅಪ್ಪ ಬಯಸುತ್ತಿದ್ದರು. ಎಷ್ಟೇ ಕಷ್ಟದ ದಿನಗಳಿದ್ದರೂ ನನ್ನ, ಅಮ್ಮನ ಜೊತೆ ಕೂತು ನನಗೇ ನಾಚಿಕೆಯಾಗುವಂತೆ ಪ್ರತೀ ಫೋರು, ಸಿಕ್ಸರಿಗೆ ಕೂಗಿ, ಸೀಟಿ ಹೊಡೆಯುತ್ತಿದ್ದ ಅಪ್ಪನ ಕ್ರಿಕೆಟ್ ಸಂಭ್ರಮದ ಪರಿ ನೆನೆಸ್ಕಂಡ್ರೆ ಇಂದಿಗೂ ಖುಷಿಯಾಗುತ್ತೆ.ಆದರೆ ನಮ್ಮ ಖುಷಿಗಾಗಿ ತಮ್ಮ ಜೀವವನ್ನೇ ತೇದ ಅವರ ನೆನಪಾಗಿ ಕಣ್ಣಂಚು ತೇವವಾಗುತ್ತೆ.

ಟೀವಿ ಹಚ್ಚಿ ಕ್ರಿಕೆಟ್ ನೋಡ್ತಾ ಕೂತು ಬಿಟ್ರೆ ನಾನು ಪ್ರತೀ ಮ್ಯಾಚೂ ಭಾರತವೇ ಗೆಲ್ಲಬೇಕೆಂದು, ಅವರ ಸೋಲು ಸಹಿಸಲಸದಳವಾಗಿ ಭಾವೋನ್ಮುಖನಾಗಿ ಬಿಟ್ತಿದ್ದೆ. ಸಚಿನ್ ಔಟಾದ ಅಂದ ತಕ್ಷಣ ಬಯ್ಯೋದು, ಭಾರತದ ಬೌಲರ್ಗಳಿಗೆ ಪ್ರತೀ ಫೋರು , ಸಿಕ್ಸರ್ ಬಿದ್ದಾಗ ಛೇ, ಛೇ ಎನ್ನುತ್ತಿದ್ದೆ. ಭಾರತದ ಬ್ಯಾಟ್ಸುಮನ್ನುಗಳು ಏನು ರನ್ನೇ ಹೊಡೀತಿಲ್ಲ ಅಂತ ಗೊಣಗೋಕೆ ಶುರು ಮಾಡಿದಾಗ ಅಪ್ಪ, ಅಮ್ಮ ಹೇ, ನೀನು ಇಷ್ಟೆಲ್ಲಾ ಬೇಜಾರಾಗೋದಾದ್ರೆ ಮ್ಯಾಚ್ ನೋಡ್ಬೇಡ. ನಲವತ್ತು  ಓವರಿಗೆ ಎಬ್ಬಿಸ್ತೀನಿ ಮಲ್ಕೋ ಹೋಗು ಅಂತಲೋ. ಭಾರತ ಸೋಲೋ ಸ್ಥಿತೀಲಿದೆ , ಗೆದ್ರೆ ಗ್ಯಾರಂಟಿ ಕರೀತಿನಿ ಅಂತಲೋ ಸಮಾಧಾನ ಮಾಡುತ್ತಿದ್ದರು. ಮೂಢನಂಬಿಕೆ ಅಂದ್ರೆ ಯಾವ ಪರಿ ಇರುತ್ತಿತ್ತು ಅಂದ್ರೆ ಬಾಗಿಲ ಮೂಲೆಯಿಂದ ನೋಡಿದ್ರೆ ಬೇರೆ ಟೀಮಿನವ್ರು ಔಟಾಗ್ತಾರೆ, ಟೀವಿಯೆದ್ರು ಕೂತ್ರೆ ಭಾರತದ ವಿಕೆಟ್ ಬೀಳತ್ತೆ, ರನ್  ಬರಲ್ಲ.. ಹೀಗೆ ತರಾವರಿ ಆಲೋಚನೆಗಳು ನನ್ನ ಎಳೆಮನದಲ್ಲಿ ! ನಾನು ನೋಡಿದರೆ ಔಟಾಗ್ತಾರೆ ಅನಿಸಿದ ದಿನಗಳಲ್ಲೆಲ್ಲಾ ಸೀಟಿಯೋ, ಕೂಗೋ ಕೇಳಿದಾಗ ಓ ಸಿಕ್ಸರ್ ಬಿತ್ತು, ವಿಕೆಟ್ ಬಿತ್ತು ಅಂತ ಪಕ್ಕದ ಯಾವುದೋ ಕೋಣೆಯಿಂದ ಸಂಭ್ರಮಿಸುತ್ತಿದ್ದೆ !! ದೇವರಿಗೆ ಬೇಡುತ್ತಿದ್ದುದ್ದು ಏನು ಗೊತ್ತಾ ? ದೇವ್ರೆ ದೇವ್ರೆ, ಇವತ್ತಿನ ಮ್ಯಾಚಿನಲ್ಲಿ ಭಾರತ ಗೆಲ್ಲಲಪ್ಪಾ ಅಂತ. ನಂಗೆ ಒಳ್ಳೆ ಬುದ್ದಿ ಕೊಡಪ್ಪಾ, ದುಡ್ಡು ಕೊಡಪ್ಪಾ, ಅದು ಕೊಡಪ್ಪಾ, ಇದು ಕೊಡಪ್ಪಾ ಎಂದು ಬೇಡಿದ ನೆನಪೇ ಇಲ್ಲ.

ಮಧ್ಯ ಮಧ್ಯ ಕರೆಂಟ್ ಹೋಗ್ಬಿಡುತ್ತಿತ್ತು. ಆಗ ಚಾಲ್ತಿಗೆ ಬರ್ತಿದ್ದದೇ ರೇಡಿಯೋ.. ಅಲ್ಲಿನ ಮೈ ರೋಮಾಂಚನಗೊಳ್ಳುವಂತ ಕಾಮೆಂಟ್ರಿ ಕೇಳೋದೇ ಒಂದು ಸುಖ. ಕೆಲವೊಮ್ಮೆ ಟೀವಿಯ ವಾಲ್ಯೂಮ್ ಮ್ಯೂಟ್ ಮಾಡಿ ರೇಡಿಯೋ ಹಚ್ಚಿ ಕೂರುತ್ತಿದ್ದುದೂ ಉಂಟು.ಸಚಿನ್ನಿನ ಸೆಂಚುರಿಗಳು, ಗಂಗೂಲಿಯ ಸಿಕ್ಸರ್ಗಳು, ರಾಬಿನ್ ಸಿಂಗಿನ ಮಿಂಚಿನ ಫೀಲ್ಡಿಂಗ್.. ಹೀಗೆ ಪ್ರತೀ ಮ್ಯಾಚೂ ಒಂದು ವಿಸ್ಮಯ ನನಗೆ. ಸಚಿನ್ ಲೆಗ್ ಸ್ಪಿನ್, ಆಫ್ ಸ್ಪಿನ್ ಎಲ್ಲಾ ಮಾಡುತ್ತಾನೆ ಅಂತ ನಾನೂ ಎರಡೂ ಕಲಿಬೇಕೆನ್ನೋ ಹಂಬಲ ಹುಟ್ಟಿದ್ರಿಂದ , ಎಂಆರ್ ಎಫ್ ಬ್ಯಾಟು ನೋಡಿದ್ರೆ ಇದು ಸಚಿನ್ ಬ್ಯಾಟು, ಬ್ರಿಟಾನಿಯಾ ನೋಡಿದಾಗೆಲ್ಲಾ ಇದು ದ್ರಾವಿಡ್ಡಿನದು ಎನ್ನೋದ್ರವರೆಗೆ, ಮ್ಯಾಚಿನ ಮಾರ್ನೇ ದಿನ ಪೇಪರಿನ ಒಂದಕ್ಷರವೂ ಬಿಡದಂತೆ ಒಂದು ಒಂದೂವರೆ ಗಂಟೆಗಳ ಕಾಲ ಓದೋದ್ರವರೆಗೆ, ಪೇಪರ್ನಲ್ಲಿ ಬರುತ್ತಿದ್ದ ಕ್ರಿಕೆಟ್ಟಿಗರ ಬಗ್ಗೆಯ ಮಾಹಿತಿ, ಫೋಟೋ ಕಟ್ ಮಾಡಿ ಇಡುವವರೆಗೆ ಅದೇನೋ ಹುಚ್ಚು ಸೆಳೆತ ಅದರ ಬಗ್ಗೆ.  ಒಮ್ಮೆ ಕ್ರಿಕೆಟ್ ಆಟವಾಡ್ತಾ ಇದ್ದಾಗ ಹೀಗೆ ಏನೋ ಮಾತು ಬಂದು  ಛೇಢಿಸುತ್ತಿದ್ದ ಅಜ್ಜಿಗೆ ಬ್ಯಾಟೆತ್ತಿ ಹೊಡಿತೀನಿ ಎಂದೂ ಹೋಗಿದ್ದೆನೆಂದು ಇಂದಿಗೂ ಕಿಚಾಯಿಸುತ್ತಾರೆ!. ದವಡೆಯ ಮೂಳೆ ಮುರಿದುಕೊಂಡಿದ್ರೂ ಬೌಲಿಂಗ್ ಮಾಡೋಕೆ ಬಂದ ಕೆಚ್ಚೆದೆಯ ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್, ಗಂಗೂಲಿಯಂತ ದಿಗ್ಗಜರೆಲ್ಲಾ, ಒಂದೊಂದರ್ಥದಲ್ಲಿ ದೇವರ ಸ್ಥಾನವನ್ನೇ ಪಡೆದಿದ್ದಾರೆ. ಆ ಪರಂಪರೆಯ, ಹಿರಿಯ ಪೀಳಿಗೆಯ ಕೊನೆಯ ಕೊಂಡಿ ಸಚಿನ್.. ಈ ಮೂರ್ನಾಲ್ಕು ವರ್ಷಗಳ ಅಂತರದಲ್ಲೇ ಅವರೆಲ್ಲಾ ರಿಟೈರಾಗಿರೋದು ಸ್ವಲ್ಪ ಬೇಸರದ ಸಂಗತಿಯೇ ಆದರೂ ಅದರ ಬಗ್ಗೆ ಏನೂ ಮಾಡಲಾಗುತ್ತಿಲ್ಲ. ಸಿಡಿಲಬ್ಬರದ ಸೆಹ್ವಾಗ್, ಹೆಲಿಕ್ಯಾಪ್ಟರ್ ಧೋನಿ, ಟರ್ಬನೇಟರ್ ಹರ್ಬಜನ್ರಂತ ಆಟಗಾರರು ಬಂದರೂ, ರೋಹಿತ್, ಕೊಹ್ಲಿ, ಶಿಖರ್ರಂತ ಯುವ ಪೀಳಿಗೆ ತಯಾರಾಗಿದ್ದರೂ ಮೇಲೆ ಹೇಳಿದಂತ ಮೇರು ದಿಗ್ಗಜರ ವಿಧಾಯದ ನೋವು ಉಳಿದೇ ಇದೆ. ದೇವರು ರಿಟೈರಾದ್ನಲ್ಲ ಅನ್ನೋ ಬೇಜಾರು ಕಾಡ್ತಾನೆ ಇದೆ.. ಈ ನೋವನ್ನ ಕಾಲವೇ ಮರೆಸಬೇಕಷ್ಟೆ..

Tuesday, November 12, 2013

ದೀಪಾವಳಿ

ಪೀಠಿಕೆ:
ಮುಂಚೆಯೆಲ್ಲಾ ದೀಪಾವಳಿ,ದಸರಾಗಳೆಂದರೆ ಮನೆ ತುಂಬಾ ಜನ. ಎಲ್ಲೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಹಬ್ಬದ ಸಂದರ್ಭ ಮಕ್ಕಳೆಲ್ಲಾ ತಮ್ಮ ಮೂಲಮನೆಗೆ ಹೋಗೋದು ಪದ್ದತಿ. ಎಲ್ಲಾ ಸೇರಿ ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದ ಖುಷಿಯೇ ಬೇರೆ. ಅವಿಭಕ್ತ ಕುಟುಂಬಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ, ಜನರಲ್ಲಿ ಸ್ವಾರ್ಥ, ಅಸೂಯೆಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆಯೇ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಮುಂದುವರೆದಂತೆಯೇ ಈ ಖುಷಿ, ನಗು ಕಮ್ಮಿಯಾಗುತ್ತಾ ಬರುತ್ತಿದೆ. ಎಂದೂ ಮುಗಿಯದ ಮಕ್ಕಳ ಎಕ್ಸಾಮಿನ ಟೆನ್ಷನ್ನು, ಅವರು ಏನೂ ಮಾಡಿರದಿದ್ದರೂ ಅವರನ್ನು ಯಾಕೆ ಕರೆಯಬೇಕೆಂಬ ಹಳ್ಳಿಯವರ ಬೇಸರವೂ, ನಮಗೆ ಸರಿಯಾದ ಆತಿಥ್ಯ ಮಾಡಿಲ್ಲವೆಂಬ ದೊಡ್ಡ ಪಟ್ಟಣದವರ ಸಣ್ಣತನವೂ ಮೇಳೈಸಿ ಸಂಬಂಧಗಳು ಸಾಯುತ್ತಿವೆ. ಹಬ್ಬಗಳ ಸೊಬಗು ಸಣ್ಣದಾಗುತ್ತಿದೆ. ಅದರ ಬಗ್ಗೆಯೇ ಒಂದು ಕತೆ.. ದೀಪಾವಳಿ.

ಕತೆಗೆ ಬರೋದಾದ್ರೆ..:
ಊರ ಸಾಹುಕಾರನ ಮನೆ. ಈಗಿರೋ ಸಾಹುಕಾರ ಹೆಸರಲ್ಲಿ ಸಾಹುಕಾರನಾದ್ರೂ ಮಕ್ಕಳು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟುವಷ್ಟು ಸಾಹುಕಾರನೇನಾಗಿರಲಿಲ್ಲ. ಭೂಸುಧಾರಣೆಯ ಹೊತ್ತಲ್ಲಿ ಈಗಿರೋ ಸಾಹುಕಾರ ಅಮಿತನ ತಂದೆ ಅನಂತಪತಿಯವರು ತಮ್ಮೂರಲ್ಲಿದ್ದ  ಜಮೀನನ್ನೆಲ್ಲಾ ಹಂಚಿ  ಈ ಊರಿನಲ್ಲಿದ್ದ ಸಣ್ಣ ಜಮೀನಲ್ಲಿ ಬಂದು ನೆಲೆಸಿದ್ದರಂತೆ. ಯಾರು ಏನು ಕಷ್ಟವೆಂದರೂ ನೆರವಾಗುತ್ತಿದ್ದ, ದೇಹಿ ಎಂದು ಬಂದವರಿಗೆ ಎಂದೂ ನಾಸ್ತಿಯೆನ್ನದ ಜನರು ಎಂಬ ಗುಣ ಶ್ರೀಮಂತರೆಂಬ ಕಾರಣಕ್ಕೆ ಇಂದೂ ಸಾಹುಕಾರ್ರು ಎಂಬ ಹೆಸರು ಆ ಮನೆತನಕ್ಕೆ ಮುಂದುವರೆದಿತ್ತು. ಅಮಿತನಂತೆಯೇ ಆತನ ಪತ್ನಿ ವಿಶಾಲೆಯದೂ ಹೆಸರಿಗೆ ತಕ್ಕಂತ ವಿಶಾಲ ಮನೋಭಾವ. ಮನೆಗೆ ಮಧ್ಯರಾತ್ರಿ ಬಂದು ನೆಂಟರು ಬಾಗಿಲು ತಟ್ಟಿದರೂ ಬೇಸರಿಸದೆ ಅವರಿಗೆ ಏನಾದರೂ ತಯಾರಿಸಿ ಉಣಬಡಿಸೋ  ಅನ್ನಪೂರ್ಣೇಶ್ವರಿಯವಳು.ಇವರಿಗೆ  ಒಬ್ಬ ಮಗ ಗುಣ ಮತ್ತು ಮಗಳು ಸುಗುಣ. . ಅಗರ್ಭ ಶ್ರೀಮಂತಿಕೆಯಿಲ್ಲದಿದ್ದರೂ ಇದ್ದುದರಲ್ಲೇ ಸಂತೃಪ್ತ ಸುಖಸಂಸಾರ. ದೊಡ್ಡ ಸಾಹುಕಾರನ ದೊಡ್ಡ ಮಕ್ಕಳೆಲ್ಲರೂ ಊರಲ್ಲಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಕಾರಣವೊಡ್ಡಿ ಪಟ್ಟಣ ಸೇರಿದ್ದರು. ಅಲ್ಲಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದರೂ ಊರಿಗೆ ಬಂದು ಪ್ರತೀ ಬಾರಿಯೂ ತಂದೆಯ ಹತ್ತಿರವಿದ್ದ ಅಳಿದುಳಿದ ಹಣಕ್ಕೆ ಪೀಡಿಸುತ್ತಲೂ, ಜಮೀನಲ್ಲಿ ಬಂದ ಪಸಲಲ್ಲಿ ತಮಗೆ ಸರಿಯಾದ ಪಾಲಿತ್ತಿಲ್ಲವೆಂಬ ಕಾರಣಕ್ಕೆ ಜಗಳವನ್ನೂ ಆಡುತ್ತಿದ್ದರು. ತಮ್ಮ ಮಕ್ಕಳ ಈ ದುರ್ಬುದ್ದಿಗೆ ಆ ತಂದೆ ಕೊರಗುತ್ತಾ ತನ್ನ ಕೊನೆಯ ದಿನಗಳನ್ನು ದೂಡುತ್ತಿರುವಾಗಲೇ ವರ್ಷದ ದೀಪಾವಳಿ ಹಬ್ಬ ಬಂದಿತ್ತು.


ದೀಪಾವಳಿಯೆಂದರೆ ದೊಡ್ಡ ಹಬ್ಬವೆಂದೇ ಪ್ರತೀತಿಯಲ್ಲಿ. ಸಾಹುಕಾರನ ಪಟ್ಟಣದಲ್ಲಿರೋ ಮಕ್ಕಳು , ತಮ್ಮ ಹೆಂಡತಿ ಮಕ್ಕಳೊಂದಿಗೆ,ಹೆಣ್ಣು ಮಕ್ಕಳು ಅಳಿಯಂದಿರೊಂದಿಗೆ  ಊರಿಗೆ ದಾಂಗುಡಿಯಿಡುತ್ತಿದ್ದ ಸಂದರ್ಭ. ಮನೆಯೆಲ್ಲಾ ಗಿಜಿ ಗಿಜಿ. ಪಟ್ಟಣದ ಮಕ್ಕಳು ಹೊಸ ಬಟ್ಟೆ ತೊಟ್ಟು ಜಗುಲಿಯಲ್ಲಿ ಇಸ್ಪೀಟಿಗೆ ಕೂತುಬಿಟ್ಟರೆ ಮುಗಿದೋಯ್ತು. ಹೊರಜಗತ್ತಿನ ಅರಿವೇ ಇರುತ್ತಿರಲಿಲ್ಲ. ಹಬ್ಬದ ತಯಾರಿಯಿಂದ , ದನ ಕರುಗಳನ್ನು ತಯಾರು ಮಾಡೋವರೆಗೆ, ಆಯುಧಗಳನ್ನು ತೊಳೆಯೋದರಿಂದ ಮನೆ ಕೆಲಸಕ್ಕೆ ಬಂದ ಕೆಲಸದವರ ಊಟ, ತಿಂಡಿ, ಕಾಪಿಗಳು ಸರಿಯಾಗಿ ಆಯ್ತೇ ಎಂದು ವಿಚಾರಿಸುವುದರವರೆಗೆ ಎಲ್ಲಾ ಕೆಲಸಗಳೂ ಅಮಿತನ ಮೇಲೆಯೇ ಬೀಳುತ್ತಿದ್ದವು. ಅತ್ತಿಗೆಯಂದಿರೂ ಒಂದು ಕಾಸಿನ ಕಡ್ಡಿ ಕೆಲಸ ಮಾಡದೇ, ಕುಡಿದ ಕಾಪಿ ಲೋಟ ತೊಳೆಯದೇ ಊರು ಸುತ್ತೋಕೆ ಹೊರಡುತ್ತಿದ್ದರೂ ಬೇಸರಿಸದ ವಿಶಾಲೆಗೆ ಹರಿದ ತನ್ನ ಹಳೆಯ ಸೀರೆಗಿಂತಲೂ ಹಬ್ಬದ ಸಂದರ್ಭದಲ್ಲೂ ಹಳೆಯ ಬಟ್ಟೆ ಹಾಕಬೇಕಾದಂತಹ ತನ್ನ ಗಂಡನ ಮಗ್ಗೆ, ಹಬ್ಬಕ್ಕೆ ಹಾಕಲೂ ಹೊಸ ಬಟ್ಟೆ ಸಿಗದ ತನ್ನ ಮಕ್ಕಳನ್ನು ನೆನೆದು ಮರುಕವಾಗುತ್ತಿತ್ತು.  ಅಡಿಕೆಗೆ ಕೊಳೆ ರೋಗ ಬಂದು ಸಿಕ್ಕ ಅಲ್ಪ ಪಸಲಿನಲ್ಲಿ ತಮ್ಮ ವರ್ಷವಿಡೀ ಹೇಗೆ ಜೀವನ ನಡೆಸಬೇಕು ಎಂಬ ಅಲ್ಪ ಅರಿವೂ ಇಲ್ಲದೇ ಆ ದುಡ್ಡಲ್ಲೂ ಪಾಲು ಕೇಳಲು ಬಂದಿರೋ, ದೀಪಾವಳಿಯನ್ನು ನಿಲ್ಲಿಸಬಾರದೆಂದು ತಮ್ಮಅದಕ್ಕಾಗೇ ಎಷ್ಟು ಸಾಲ ಮಾಡಿರಬಹುದು ಎಂದು ಒಂದಿನಿತೂ ಯೋಚಿಸದೇ ಇಲ್ಲಿ ಬಂದು ಆರಾಮಗಿರೋವಂತಹ ಭಾವಂದಿರಿಗಿಂತಲೂ ತಂದೆಯ ಕೊನೆಗಾಲ ಸಮೀಪಿಸುತ್ತಿರುವುದನ್ನು ಅರಿಯದೇ ಅವರನ್ನು ಕಾಡುತ್ತಿರೋ ಪರಿಯ ಬಗ್ಗೆ ಸಿಟ್ಟೂ , ಮಾವನವರ ಬಗ್ಗೆ ಅನುಕಂಪವೂ ಮೂಡುತ್ತಿತ್ತು. 


ನೀರು ತುಂಬೋ ಭೂರಿ ಹುಣ್ಣಿಮೆ ಬಂತು. ಹಂಡೆ, ಭಾವಿಯನ್ನೆಲ್ಲಾ ರಂಗೋಲಿಯೆಳೆದು , ಕಾಡಲ್ಲಿ ಸಿಗುತ್ತಿದ್ದ ಅಂಡೆಕಾಯಿ ಬಳ್ಳಿಯಿಂದ ಸುತ್ತುವರೆದು ಸಿಂಗರಿಸಿದ ಬಳಿಕ ಮನೆಯವರಿಗೆಲ್ಲಾ ಎಣ್ಣೆ ಸ್ನಾನ.
ಭರ್ಜರಿ ಸ್ನಾನವಾಗಿ ಭೂರಿ ಭೋಜನವೂ ಆಗಿ ಎಲೆಯಡಿಕೆ ಮೆಲ್ಲುತ್ತಾ  ಕುಳಿತಿದ್ದ ಅನಂತ ಪತಿಯ ದೊಡ್ಡ ಮಗ  ತಂದೆಯನ್ನು ಮಾತಿಗೆಳೆದ. ಅಪ್ಪಾ, ಇನ್ನೆಷ್ಟು ವರ್ಷ ಅಂತ ನಾವು ಇಲ್ಲಿ ಬಂದು ಜಮೀನಿನ ಫಸಲಿನ ಪಾಲು ಕೇಳೋದು. ಪ್ರತೀ ಸಲ ಕೇಳೋಕೆ ನಮಗೂ ಒಂತರ ಬೇಜಾರಾಗುತ್ತೆ. ನಮ್ಮ ನಮ್ಮ ಪಾಲು ಎಷ್ಟೂಂತ ಹಿಸೆ ಮಾಡಿ ಕೊಡು. ಅದನ್ನ ಮಾರಿ, ಬಂದ ಹಣ ತಗೊಂಡು ಹೋಗಿ ಬಿಡ್ತೇವೆ. ಪ್ರತೀ ಸಲ ಕೇಳೋದು ಇರಲ್ಲ ಅಂದ. ಅಲ್ರೋ, ನಿಮ್ಮನ್ನೆಲ್ಲಾ ದೊಡ್ಡ ದೊಡ್ಡ ಓದಿಗೆ , ಬಿಸಿನೆಸ್ಸಿಗೆ ಅಂತ ಅಷ್ಟೆಲ್ಲಾ ಖರ್ಚು ಮಾಡಿದೀನಿ. ಕಿರಿಯ ಮಗನಿಗೆ ಅಂತ ಏನೂ ಕೊಟ್ಟಿಲ್ಲ. ಇರೋ ಒಂದೂವರೆ ಎಕರೆ ತೋಟಕ್ಕೂ ಪ್ರತೀ ವರ್ಷ ಕೊಳೆ ಬರ್ತಾ ಇದೆ. ಆದ್ರೂ ಅದರಲ್ಲಿ ಪಾಲು ಕೇಳೋ ಪಾಪಿಗಳಿಗೆ ಒಂದು ಮಾತೂ ಆಡದ ಆ ಪುಣ್ಯಾತ್ಮ ಬಂದಿದ್ದರಲ್ಲೇ ಪಾಲು ಕೊಡ್ತಾ ಇದ್ದಾನೆ. ಅವನ ಹರುಕು ಬಟ್ಟೆ, ಸ್ಥಿತಿ ನೋಡಿದ ಮೇಲೆ ಸಹಾಯ ಮಾಡೋಕೆ ಬರೋ ಬದ್ಲು ತೋಟದಲ್ಲಿ ಹಿಸೆ ಕೇಳ್ತಾ ಇದ್ದೀರಲ್ಲೋ, ಏನೋ ಕಮ್ಮಿಯಾಗಿದೆ ನಿಮ್ಗೆ ಅಂದ ಅನಂತ ಪತಿ. ಅಪ್ಪಾ, ಅವನ ಕರ್ಮ ನಮಗೆ ಗೊತ್ತಿಲ್ಲ. ನೀನು ಪಾಲು ಕೊಡ್ಲೇ ಬೇಕು. ಕೊಡ್ತೀಯೋ ಇಲ್ವೋ ? ಇಲ್ಲ ಅಂದ್ರೆ ಹೇಳ್ಬಿಡು. ಅದು ಹೇಗೆ ತಗೋಬೇಕು ಅಂತ ಗೊತ್ತಿದೆ ನಮ್ಗೆ ಅಂದಿದ್ದ ಮಧ್ಯದ ಮಗ.ಹಬ್ಬ ಕಳೀಲಿ ನೋಡೋಣ ಅಂದಿದ್ದ ಅಪ್ಪ.  


ದೊಡ್ಡಬ್ಬ ಬಂದೇ ಬಿಡ್ತು. ಗೋಪೂಜೆ, ಲಕ್ಷ್ಮಿಪೂಜೆ, ಆಯುಧ ಪೂಜೆ ಅಂತ ಇಬ್ರು ಅಣ್ಣಂದಿರೂ ಮಡಿಯುಟ್ಟುಕುಂಡು ಕೂತೇ ಬಿಟ್ರು. ದನಕರುಗಳಿಗೆ ಬಣ್ಣ ಹಚ್ಚೋದ್ರಿಂದ, ಆಯುಧ ತೊಳೆದು ಜೇಡಿ ಕೆಮ್ಮಣ್ಣು ಹಚ್ಚೋದು, ಹೊರಗೆ ಅಣ್ಣಂದಿರು ಒಡೆಯಲು ಬೇಕಾದ ಕಾಯಿ ಸುಲಿದುಕೊಡೋದು ಹೀಗೆ ಹೊರಗಿನ ಕೆಲಸಗಳೆಲ್ಲಾ ತಮ್ಮನ ಮೇಲೇ ಬಿತ್ತು. ಅದೆಲ್ಲಾ ಮುಗಿಸಿ ಆತನ ಸ್ನಾನ ಆಗೋದ್ರೊಳಗೆ ಪೂಜೆ ಮುಗಿಯುತ್ತಾ ಬಂದಿತ್ತು. ಹಬ್ಬದ ದಿನವೂ ಮಧ್ಯಾಹ್ನ ಸ್ನಾನ ಮಾಡ್ತೀಯಲ್ಲೋ ಕೊಳೆಯ ಅಂತ ಬೈಸ್ಕೊಳ್ಳಬೇಕಾಗೂ ಬಂತು ಪ್ರತೀ ವರ್ಷದಂತೆಯೇ ! ನನಗೆ ಮಂತ್ರ , ತಂತ್ರಗಳೇನೂ ಗೊತ್ತಿಲ್ಲ ದೇವರೇ. ನನ್ನ ಅಣ್ಣಂದಿರು ಚೆನ್ನಾಗೇ ಪೂಜೆ ಸಲ್ಲಿಸಿದ್ದಾರೆ ಅಂದುಕೊಳ್ಳುತ್ತೀನಿ. ಕಾಯಕವೇ ಕೈಲಾಸ ಎಂದು ತೋಟ, ಗದ್ದೆ ಕೆಲಸಗಳಲ್ಲೇ ಮುಳುಗಿ  ನಿನ್ನ ಪೂಜಿಸೋ ವಿಧಿಯನ್ನರಿಯದೇ ನಾನೆಸಗಿದ ತಪ್ಪುಗಳನ್ನೆಲ್ಲಾ ಮನ್ನಿಸಿ ನಮ್ಮ ಪೂಜೆಯನ್ನು ಸ್ವೀಕರಿಸಿ ನಮ್ಮನ್ನು ಎಂದಿನಂತೇ ಕಾಪಾಡೋ ಪ್ರಭುವೆ ಎಂದು ಬೇಡಿಕೊಂಡ. ಹಬ್ಬದ ಊಟವಾಗುತ್ತಿದ್ದಂತೆಯೇ ಒಬ್ಬೊಬ್ಬರೇ ಖಾಲಿಯಾದರು. ರಾತ್ರಿ ತನಕ ಉಳಿದರೆ ತಮ್ಮ ಮಕ್ಕಳು ಪಟಾಕಿ ಪಟಾಕಿ ಅನ್ನುತ್ತಾರೆ. ಅವರಿಗೆ ಅಂತ ಮಾತ್ರವೇ ತರೋಕ್ಕಾಗದೇ ಎಲ್ಲರಿಗೂ ಪಟಾಕಿ ತರಬೇಕಾದ ಖರ್ಚು ಎಂಬ ದೂರಾಲೋಚನೆ !!


ಮುಂದಿನ ಬಾರಿ ದೀಪಾವಳಿ ಬಂದಿತ್ತು. ಇತ್ತೀಚೆಗೆ ಹಲವು ವರ್ಷಗಳಿಂದ ಕೊಳೆ ಬರುತ್ತಿದ್ದ ಮರಗಳಿಗೆ ಈ ವರ್ಷ ಕೊಳೆ ಬಾರದ್ದರ ಜೊತೆಗೆ ಹೊಸದಾಗಿ ಶುರು ಮಾಡಿದ್ದ ಎರೆಗೊಬ್ಬರದಿಂದಲೂ ಅಲ್ಪ ಲಾಭ ಬರೋಕೆ ಶುರುವಾಗಿದ್ದರಿಂದ ಸಹಜವಾಗೇ ಖುಷಿಯಲ್ಲಿದ್ದ ಅಮಿತ. ಹಿಂದಿನ ವರ್ಷದ ಹಬ್ಬವಾದ ಮೇಲೆ ಅಪ್ಪನ ಆರೋಗ್ಯ ಹದಗೆಡುತ್ತಿದ್ದರೂ ತಿಂಗಳಿಗೊಮ್ಮೆಯೂ ಫೋನ್ ಮಾಡದ ಅಣ್ಣಂದಿರೆಗೆಲ್ಲಾ ಮತ್ತೆ ಮತ್ತೆ ಫೋನ್ ಮಾಡಿ ಹಬ್ಬ ಹತ್ತಿರ ಬರೋದನ್ನ ನೆನಪಿಸಿ ಕರೆಯುತ್ತಿದ್ದರೂ ಅವರು ಬರ್ತೀನಿ ಅಂತಲೂ ಅನ್ನದೇ, ಬರೋಲ್ಲ ಅಂತಲೂ ಅನ್ನದೆ, ಮುಂಚಿನಂತೆ ಚೆನ್ನಾಗಿ ಮಾತನ್ನೂ ಆಡದೇ ಫೋನಿಡುತ್ತಿದ್ದರು. ನಾನೇ ಹೋಗಿ ಅವರನ್ನು ಹಬ್ಬಕ್ಕೆ ಕರೆದುಬರುತ್ತೇನೆ. ಅಕ್ಕಂದಿರನ್ನು ದೀಪಾವಳಿಗೆ ಕರೆಯದಿರೋದು ಚೆನ್ನಾಗಿರೋಲ್ಲ ಅಂತ ಅಮಿತ. ಬೇಡ ಕಣೋ ಮಗನೇ,ಸುಮ್ಮನೇ ಅಲ್ಲಿಗೆ ಹೋಗಿ ಯಾಕೆ ಅವಮಾನ ಅನುಭವಿಸ್ತೀಯ ಅಂದ ಅನಂತಪತಿ. ಹೌದು ಕಣ್ರಿ, ನಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡ್ತಿಲ್ಲ ಅಂತಲ್ಲ. ನಮ್ಮ ಬಡತನದ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಕೊಂಕು ಮಾತಾಡ್ತಾರೆ ಅಂತಲೂ ಅಲ್ಲ  ಆದರೆ ನಿಮ್ಮ ಬಗ್ಗೆ, ಮಾವನವರ ಬಗ್ಗೆಯೂ ಅವರು ಚುಚ್ಚೋದು ನಂಗೆ ಇಷ್ಟ ಆಗೋಲ್ಲ ಕಣ್ರಿ.  ಅವರಿಗೆ ಇಷ್ಟ ಇಲ್ಲ ಅಂದ್ರೆ ನೀವ್ಯಾಕೆ ಒತ್ತಾಯ ಮಾಡ್ತೀರಿ . ಬೇಡ ಬಿಡಿ ಅಂದ್ಲು ವಿಶಾಲು. ಅಮಿತ ಅರೆಕ್ಷಣ ಮೌನವಾಗಿದ್ದ. ಆತ ಏನು ಹೇಳಬಹುದೆಂಬ ಕುತೂಹಲ ಎಲ್ಲರಿಗೂ ಇತ್ತು. ನೀ ಹೇಳೋ ಮಾತು ನನಗೂ ಅರ್ಥವಾಗುತ್ತೆ ವಿಶಾಲು. ನೀ ಹೇಳೋದು ಸರಿನೇ ಆದ್ರೂನು ಮೂಲ ಮನೆಯಲ್ಲಿರೋ ತಮ್ಮನಾಗಿ ಬೇರೆ ಕಡೆ ಇರೋ ಅಣ್ಣ-ಅಕ್ಕಂದಿರನ್ನು ಹಬ್ಬಕ್ಕೆ ಕರೀದೆ ಇರೋದು ಸರಿ ಇರಲ್ಲ. ಕರೆದು ಬರ್ತೀನಿ ಅಂತ ಅವರ ಉತ್ತರಕ್ಕೂ ಕಾಯದೇ ಪಟ್ಟಣದ ಬಸ್ಸು ಹತ್ತಿದ ಅಮಿತ.


ಹಬ್ಬಕ್ಕೆ ಕರೆಯೋಕೆ ಬಂದ ಇವನಿಗೆ ಅಲ್ಲಿ ಸಿಕ್ಕ ಸತ್ಕಾರಗಳನ್ನು ಮರೆಯುವಂತೆಯೇ ಇಲ್ಲ!  ನಿಮ್ಮ ತಮ್ಮ ಇವತ್ತೇನಾದ್ರೂ ಇಲ್ಲೇ ಝಾಂಡಾ ಹೂಡಿದ್ರೆ ಏನು ಕತೆ ? ನೋಡಿದ್ರೆ ಹಾಗೇ ಅನ್ಸುತ್ತೆ. ಈಗ್ಲೇ ಹೇಳಿ ಬಿಡ್ತೇನೆ. ನಾನೆಂತೂ ಅಡಿಗೆ ಬೇಯಿಸಿ ಹಾಕೋದಿಲ್ಲ , ಮನೆಗೆ ಬಂದ ಅಬ್ಬೆಪಾರಿಗಳಿಗೆಲ್ಲಾ ಅಡಿಗೆ ಬೇಯಿಸಿ ಹಾಕೋಕೆ ಇದೇನು ಛತ್ರವೇ ಎಂದು ಗಂಡನನ್ನು ಅಡಿಗೆ ಮನೆಗೆ ಕರೆದೊಯ್ದು ಜಗಳಕ್ಕಿಳಿದಿದ್ದ ಮೊದಲ ಅತ್ತಿಗೆಯ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಬೇರೇನೂ ತುರ್ತು ಕೆಲಸವಿದೆಯೆಂದು ಅವರ ಮನೆಯಲ್ಲಿ ನೀರೂ ಕುಡಿಯದಂತೆ ಹೊರಟುಬಿಟ್ಟಿದ್ದ.   ನಂತರ ಹೋಗಿದ್ದು ಹಿರಿಯ ಅಕ್ಕನ ಮನೆಗೆ. ಎದುರಿಗೆ ಬಂದು ಸ್ವಾಗತಿಸಿದ ಭಾವ ನಸುನಕ್ಕು ಸ್ವಾಗತಿಸಿದರೂ ಅವರು ಒಳಗೆ ಅಕ್ಕನನ್ನು ಕರೆಯಲು ಹೋದಾಗ ಒಳಮನೆಯಲ್ಲಿ ಅವಳು ಭಾವನೊಂದಿಗೆ ಆಡುತ್ತಿದ್ದ ಮಾತುಗಳು ಕೇಳಿ ಅಮಿತನಿಗೆ ಬೇಸರವಾಯ್ತು. ಸುಮ್ಮನೇ ಅಲ್ಲಿಯವರೆಗೆ ಯಾಕೆ ಹೋಗಬೇಕುರಿ ? ಸುಮ್ಮನೇ ದುಡ್ಡು ದಂಡ. ಹಿರಿಯ ಮಗಳಿಗೆ ಕಾಲು ಭಾಗ ಆಸ್ತಿಯನ್ನೂ ಬರೆದುಕೊಡದ ಆ ತಂದೆಯ ಮುಖ ನೋಡಲೂ ಇಷ್ಟವಿಲ್ಲ. ಇನ್ನು ಆ ಅಮಿತನ ಸಂಸಾರವೋ.. ಭಿಕ್ಷುಕರ ಬಿಡಾರದಂತಿದೆ. ನನ್ನ ಮಕ್ಕಳ ಒಳ್ಳೆ ಬಟ್ಟೆಗಳನ್ನು, ನನ್ನ ರೇಷ್ಮೆ ಸೀರೆಯನ್ನು  ಆ ವಿಶಾಲೆ ಮತ್ತವಳ ಮಕ್ಕಳು ಜೊಲ್ಲು ಸುರಿಸುತ್ತಾ ನೋಡೋದನ್ನ ನೆನೆಸಿಕೊಂಡ್ರೆ ನಂಗೆ ಅಸಹ್ಯವಾಗುತ್ತೆ. ನಾನಂತೂ ಬರೋಲ್ಲ ಅನ್ನುತ್ತಿದ್ದಳು ಅಕ್ಕ. ಅಬ್ಬಾ, ಇವಳು ನನ್ನ ಸ್ವಂತ ಅಕ್ಕನೇ ಅನಿಸಿಬಿಟ್ಟಿತ್ತು ಅಮಿತನಿಗೆ. ಅಲ್ಲೇ, ನಿನ್ನ ಮದುವೆಯ ಹೊತ್ತಿಗೆ, ತಮ್ಮ ಯಾವುದೋ ಮನೆ ಮಾರಿ ನಾನೊಂದು ಬಿಸಿನೆಸ್ ತೆಗೆಯೋಕೆ ಸಹಾಯ ಮಾಡಿದ್ದ, ನಾನು ಲಾಸಿನಲ್ಲಿದ್ದಾಗ ಎಷ್ಟೋ ಸಲ ಸಹಾಯ ಮಾಡಿದ್ದ ನಿಮ್ಮ ಅಪ್ಪ, ತಮ್ಮನ ಬಗ್ಗೆ ಹೀಗೆಲ್ಲಾ ಮಾತನಾಡ್ತೀಯಲ್ಲ ನೀನು, ಈಗೋನೋ ಮೂರ್ನಾಲ್ಕು ವರ್ಷದಿಂದ ಅಡಿಕೆಗೆ ಕೊಳೆಬಂದು ಅನ್ನುತ್ತಿದ್ದ ಭಾವನ ಮಾತನ್ನ ಅರ್ಧಕ್ಕೇ ತಡೆದ ಅಕ್ಕ, ಹೂಂ ಕಣ್ರೀ, ನಾನಿರೋದೇ ಹೀಗೆ. ನಿಮಗೆ ಸಹಾಯ ಮಾಡೋದು  ಅವರ ಕರ್ತವ್ಯವಾಗಿತ್ತು ಮಾಡಿದಾರೆ. ಅದರಲ್ಲೇನಿದೆ ? ನನಗೆ ಆಸ್ತಿ ಕೊಡೋವರೆಗೋ ನಾನು ಆ ಕಡೆ ತಲೆನೂ ಹಾಕಲ್ಲ, ನೀವೂ ಆ ಕಡೆ ಹೋಗೋ ಹಾಗಿಲ್ಲ ಅಂದಿದ್ದಳು.
ಅಲ್ಲಿಂದಲೂ ಅನಿವಾರ್ಯ ಕಾರಣ ಹೇಳಿ ಎರಡನೇ ಅಣ್ಣನ ಮನೆಗೆ ಹೋಗಿದ್ದ ಅಮಿತನಿಗೆ ಬಾಗಿಲ ಬೀಗ ಸ್ವಾಗತ ಮಾಡಿತ್ತು. ಪಕ್ಕದಲ್ಲೇ ಇದ್ದ ಅಂಗಡಿಯಿಂದ ಫೋನ್ ಮಾಡಿದರೆ ಅಯ್ಯೋ, ನೀನು ಫೋನ್ ಮಾಡಿ ಬರೋದಲ್ಲವೇನೋ, ನನಗೆ ಆಫೀಸಲ್ಲಿ ಅರ್ಜೆಂಟ್ ಕೆಲಸವಿದೆ. ಬರೋದು ರಾತ್ರಿಯಾಗುತ್ತೆ ಅಂದ ಅಣ್ಣ. ಸರಿ, ಅತ್ತಿಗೆ, ಮಕ್ಕಳು ? ಅವರು ಇಲ್ಲೇ ಮಾರ್ಕೇಟಿಗೆ ಹೋಗಿರ್ಬೇಕು. ಸರಿ ಬಿಡು ಅಣ್ಣ. ಅವರು ಬರೋವರಿಗೆ ಇಲ್ಲೇ ಕಾಯ್ತೀನಿ.. ಅಯ್ಯಯ್ಯೋ ಬೇಡಪ್ಪ, ಅವಳು ಅವಳಪ್ಪನ ಮನೆಗೆ ಹೋಗಬೇಕುಂತಿದಾಳೆ ಮಾರ್ಕೆಟ್ಟಿಂದ ಬಂದ ಅವಳಿಗೆ ನಿನ್ನ ಜೊತೆ ಮಾತಾಡ್ತಾ ಕೂತ್ರೆ ಅಪ್ಪನ ಮನೆಗೆ ಹೋಗೋಕೆ ಲೇಟಾಗುತ್ತೇಂತ ಬೈಕೋತಾಳೆ. ಇನ್ನೊಂದ್ಸಲ ಬರೋದಾದ್ರೆ ಫೋನ್ ಮಾಡ್ಕೊಂಡು ಬಾರೋ.. ಹಲೋ ಹಲೋ..ಕೇಳ್ತಾ ಇದಿಯಾ.. ಹಲೋ. ಹಲೋ.. ಎಂದು ಫೋನ್ ಕುಕ್ಕಿದ್ದ. ಅನಪೇಕ್ಷಿತ ಅತಿಥಿಯಾಗಿರಲು ಇಷ್ಟವಿಲ್ಲದೇ ಎರಡನೇ ಅಕ್ಕನಿಗೆ ಅಲ್ಲಿಂದಲೇ ಫೋನ್ ಮಾಡಿದ್ದ. ಪಟ್ಟಣಕ್ಕೆ ಬಂದಿದ್ದೇನೆಂದು ಹೇಳಿದರೂ ಅವಳು ಮನೆಗೆ ಕರೆದಿರಲಿಲ್ಲ. ಬರುತ್ತೇನೆ ಎಂದು ಇವನೂ ಹೇಳಲಿಲ್ಲ. ಎರಡು ದಿನ ಇದ್ದು ಎಲ್ಲರನ್ನೂ ಕರೆದುಬರುತ್ತೇನೆ ಎಂದಿದ್ದವನಿಗೆ ಮಧ್ಯಾಹ್ನದ ಒಳಗೇ ಎಲ್ಲರನ್ನೂ ಕರೆದು ಮುಗಿದಿದ್ದರಿಂದ ತಕ್ಷಣವೇ ಊರು ಬಸ್ಸು ಹತ್ತಿ ರಾತ್ರಿಗೆ ಮನೆಗೆ ಮುಟ್ಟಿದ್ದ.

ಭೂರಿ ಹುಣ್ಣಿಮೆ ಬಂದೇ ಬಿಟ್ಟಿತು. ಹದಿನೈದು ಜನರ ಬದಲು ಐದು ಜನರೇ ಇದ್ದರೂ ಈ ಸಲದ ದೀಪಾವಳಿಯಲ್ಲಿ ಏನೂ ಖುಷಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಹಿಂದಿನ ಹಬ್ಬಗಳಲ್ಲಿರುತ್ತಿದ್ದ, ಗಲಾಟೆ, ನಗುಗಳ ಕಳೆ ಇಲ್ಲದಿದ್ದರೂ ಮನೆ ತುಂಬಾ ಓಡಾಡುತ್ತಿದ್ದ ಗುಣ, ಸುಗುಣರ ಓಟ, ಆಟಗಳೇ ಒಂದು ಚಲುವನ್ನು ಮೂಡಿಸಿದ್ದವು. ಸುಗುಣನಿಗೇ ಒಂದು ಅಡ್ಡಮಡಿಯುಡಿಸಿ ಕೂರಿಸಿದ್ದ ದೀಪಾವಳಿಯ ದಿನವಂತೂ ಆ ಭಗವಂತನೇ ಹುಡುಗನ ರೂಪದಲ್ಲಿ ಮನೆಗೆ ಬಂದಿದ್ದಾನೇನೋ ಅನಿಸುತ್ತಿತ್ತು. ಲಂಗಧಾವಣಿಯುಟ್ಟು , ಆರತಿ ದೀಪಗಳ ಬಟ್ಟಲು ಹಿಡಿದು ಗುಣನ ಜೊತೆಗೇ ತಿರುಗುತ್ತಿದ್ದ ಸುಗುಣಳನ್ನು ನೋಡೋದೇ ಒಂದು ಸೊಬಗಾಗಿತ್ತು. ಪಟಾಕಿಗಳ ಆರ್ಭಟವಿಲ್ಲದಿದ್ದರೂ ಮನೆಯ ಸುತ್ತಲಿಟ್ಟ ದೀಪಗಳ ಚೆಲುವು, ಗಂಟೆ, ಜಾಗಟೆಗಳ ನಾದದಲ್ಲಿ ಈ ಬಾರಿಯ ಹಬ್ಬದ ರಾತ್ರಿ ಎಲ್ಲಿಗೋ ಕರೆದೊಯ್ದಿತ್ತು. ರಾತ್ರೆ ಬಂದ ಹಬ್ಬ ಆಡೋರು(ಅಂಟಿಗೆ-ಪಿಂಟಿಗೆ) ಯವರಲ್ಲೂ ಏನೋ ಚೆಲುವು ಕಾಣುತ್ತಿತ್ತು. ಕೊಳೆಯಿರದ ಮರ, ಕೈ ಹಿಡಿಯುತ್ತಿರುವ ಗೊಬ್ಬರ, ಸರಿಯಾಗುತ್ತಿರುವ ಅಪ್ಪನ ಆರೋಗ್ಯ.. ಹೀಗೆ ಎಲ್ಲವೂ ಅಮಿತನ ಶುದ್ದ ಮನಸ್ಸಿನ ಪ್ರಾರ್ಥನೆಗೆ ಒಲಿದಂತಿತ್ತು.

Wednesday, November 6, 2013

 ಕ್ಯಾಮೆರಾ ಖರೀದಿ ಕತೆ

ಹಬ್ಬಕ್ಕೊಂದು ಹೊಸ ಕ್ಯಾಮೆರಾ ಖರೀದಿಸಬೇಕೆಂಬ ಹಂಬಲ ಸ್ವಲ್ವ ಜಾಸ್ತಿಯೇ ಅನ್ನುವಷ್ಟು ಮೂಡತೊಡಗಿತ್ತು.ಹೊಸ ಕ್ಯಾಮೆರಾ ಅಂದ ತಕ್ಷಣ ಈಗೊಂದು ಕ್ಯಾಮೆರಾ ಇತ್ತೆಂದಲ್ಲ. ಮುಖಹೊತ್ತಿಗೆಯಲ್ಲಿ. ಟ್ರಿಪ್ಪು, ಗ್ರೂಪುಗಳಲ್ಲಿ ಎಲ್ಲರ ಕೈಯಲ್ಲೂ ತರಾವರಿ ಥಳಥಳಿಸೋ ಕ್ಯಾಮೆರಾ ಕಂಡು ಕರುಬುವ ಮನಕ್ಕೆ ಸ್ವಂತದ್ದೊಂದು ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕೆಂಬ ಆಸೆ ನಿಧಾನಕ್ಕೆ ಮೂಡಿತ್ತು. ಪದವಿಯ ಕೊನೆಯ ವರ್ಷದಿಂದಲೂ ಪದವಿಯಾಗಿ ಎರಡು ವರ್ಷವಾಗೋವರೆಗೂ ಇದ್ದ ನೋಕಿಯಾ ೨೭೦೦ ಕ್ಲಾಸಿಕ್ ಮೊಬೈಲಿನ ೨ ಮೆಗಾಪಿಕ್ಸಲ್ ಕ್ಯಾಮೆರಾದಲ್ಲೇ ಸಂತೃಪ್ತವಾಗಿದ್ದ  ಮನಸ್ಸು ಇದ್ದಕ್ಕಿದ್ದಂತೆ ಡಿಜಿಟಲ್ ಕ್ಯಾಮೆರಾದತ್ತ ಹೊರಳಿದ್ದೇಕೆ ? ಅದರ ಹಿಂದೊಂದು ಫ್ಲಾಷ್ ಬ್ಯಾಕ್..

ಮಾಧ್ಯಮಿಕ ಶಾಲಾ ಹಂತದ ಕೊನೆಯ ದಿನಗಳು. ಅಲ್ಲಿಯವರೆಗೆ ಕ್ಯಾಮೆರಾ ಅಂದರೆ ದೂರದಿಂದ ನೋಡಿ ಮಾತ್ರ ಗೊತ್ತಿದ್ದ ನನಗೆ ಅದನ್ನ ಮುಟ್ಟೋ ಭಾಗ್ಯ ಸಿಕ್ಕ ದಿನಗಳವು. ಅಬ್ಬಾ, ಕ್ಯಾಮೆರಾ ಅಂದ್ರೆ ಸ್ಟುಡಿಯೋದಲ್ಲಿ ಇಸ್ಮಾಯಿಲ್ ಅಂತ ಹಲ್ಲು ಕಿರಿಯೋದು, ಶಾಲೆಯೆದುರು ವರ್ಷದ ಕೊನೆ ಗೆ ಬರ್ತಾ ಇದ್ದ ಗ್ರೂಫ್ ಫೋಟೋಕ್ಕೆ ಪೋಸು, ಯೂನಿಯನ್ ಡೇಗಳಲ್ಲಿ ನಮ್ಮ ಡ್ಯಾನ್ಸಿನ ಮಧ್ಯೆ ಎಲ್ಲಿಂದಲೋ ಬರಬಹುದಾದ ಕ್ಯಾಮೆರಾ ಫ್ಲಾಷಿಗೆ ಅಂತಲೇ ಓರೆಗಣ್ಣಿಂದ ಹುಡುಕುತ್ತಾ ಡ್ಯಾನ್ಸ್ ಮಾಡುತ್ತಿದ್ದ ಮುಗ್ದ ಮನಗಳು, ಮದುವೆ ಮನೆಯಲ್ಲಿ ಬರುತ್ತಿದ್ದ ದೊಡ್ಡ, ಭಾರದ ಕ್ಯಾಮೆರಾದ ಫೋಟೋ ಅಂಕಲ್ಲು, ಫೋಟೋದಲ್ಲಿ ನಾವೂ ಬರಬೇಕೆಂದು ಫೋಟೋಗ್ರಾಫರ್ ಹೋದಲ್ಲೆಲ್ಲಾ ಹೋಗಿ ಮುಖ ತೂರಿಸುತ್ತಿದ್ದ ಆ ದಿನಗಳ ನೆನಪು.. ಹೆ.ಹೆ ನೆನೆಸ್ಕೊಂಡ್ರೆ ಎಷ್ಟು ಮಜಾ ಅನ್ಸುತ್ತೆ. ಜೋಗ ಜಲಪಾತದೆದುರು, ಮೈಸೂರು ಅರಮನೆಯೆದುರು ಹೀಗೆ ಪ್ರಸಿದ್ದ ಸ್ಥಳಗಳಲ್ಲಿ ಕ್ಷಣದಲ್ಲೇ ಪ್ರಿಂಟ್ ಹಾಕಿ ಕೊಡೋ ಕ್ಯಾಮೆರಾಗಳೂ ಬಂದಿದ್ದರೂ ಅವಷ್ಟು ಕಾಡಿರಲಿಲ್ಲ. ಆದರೆ ಯಾವಾಗ ನೆಂಟರ ಕೈಯಲ್ಲಿ ಕ್ಯಾಮೆರಾಗಳು ಓಡಾಡತೊಡಗಿದವೋ ನೋಡಿ. ಅವನ್ನು ನೋಡಿ ನೋಡೇ ಕ್ಯಾಮೆರಾ ಜ್ವರ ಗೊತ್ತಿಲ್ಲದಂತೆ ಹತ್ತಿ ಬಿಟ್ಟಿತು. ನಮ್ಮನೆಗ ಬಂದ ನೆಂಟರಿಗೆ ನಮ್ಮೂರ ಸುತ್ತಲ ಕೆಳದಿ, ಇಕ್ಕೇರಿ, ವರದಳ್ಳಿ, ಜೋಗ ಮೊದಲಾದ ಸ್ಥಳ ತೋರಿಸೋಕೆ ನಾನೇ ಮರಿಗೈಡು. ಪೇಟೆಯಿಂದ ಬಂದ ಅವರ ಕೈಯಲ್ಲೆಲ್ಲಾ ತರಾವರಿ ಕ್ಯಾಮೆರಾಗಳು. ಆಗಿನ್ನೂ ಡಿಜಿಟಲ್ ಕ್ಯಾಮೆರಾಗಳ ಹವಾ ಈಗಿನಷ್ಟು ಏರಿರಲಿಲ್ಲ. ಎಲ್ಲೆಡೆ ಕೊಡ್ಯಾಕ್ ಹಾವಳಿ. ಐನೂರಕ್ಕೆ ಒಂದು ಕ್ಯಾಮೆರಾ, ೬೯೯ ಕ್ಕೆ ಒಂದು ಕ್ಯಾಮೆರಾ ಎರಡು ರೀಲು ಹೀಗೆ ಹಲವು ಆಫರುಗಳು ಬಂದಿದ್ದವು. ಒಂದು ರೀಲಿಗೆ ೫೦ ರೂ, ಅದರಲ್ಲಿನ ಫೋಟೋ ತೊಳೆಯೋಕೆ ನೂರರ ಹತ್ತಿರ ಇತ್ತೆಂದು ನೆನಪು. ಅವರಿಗೆಲ್ಲಾ ತೋರಿಸ್ತಾ ತೊರಿಸ್ತಾ ಒಮ್ಮೆ ನನ್ನ ಕುತೂಹಲ ಅತಿಯಾಗಿ ಇದರಲ್ಲಿ ಫೋಟೋ ತೆಗೆಯೋದು ಹೇಗೆ, ನಾನೊಂದ್ಸಲ ನೋಡ್ಲಾ  ಅಂತ ನಮ್ಮ ಮಾಮನ್ನ ಕೇಳಿಬಿಟ್ಟಿದ್ದೆ. ಅವರು ನಗುತ್ತಾ ಆ ಕ್ಯಾಮೆರಾ ನನ್ನ ಕೈಗೆ ಕೊಟ್ಟಿದ್ರು.  ಅದು ಬೀಳದಂತೆ ಇರೋ ರಕ್ಷಣಾ ದಾರ(protective strip)ದೊಳಗೆ ನನ್ನ ಪುಟ್ಟ ಕೈ ತೂರಿಸಿ ಅದ್ರಲ್ಲಿದ್ದ ಖಾಲಿ ಜಾಗ ,ಅದೇ  ವೀವ್ ಪಾಯಿಂಟಿನಲ್ಲಿ ಸುತ್ತಲಿನ ಪ್ರಕೃತಿಯನ್ನೇ ನೋಡ್ತಾ ಕೂತಿದ್ದೆ. ದಿನಾ ನೋಡೋದಕ್ಕೂ ಆ ಕ್ಯಾಮೆರಾದ ಪ್ಲಸ್ಸು, ಚೌಕಗಳ ಬೌಂಡರಿಯಲ್ಲಿ ನೋಡೋದಕ್ಕೂ ಎಷ್ಟು ವ್ಯತ್ಯಾಸ. ಹಾಗೇ ಸುತ್ತ ತಿರುಗಿಸಿ ನೋಡ್ತಾ ನಿಂತು ಬಿಟ್ಟಿದ್ದೆ. ಹೇ, ಇದಿದ್ಯಲ್ಲ. ಇದು ಫ್ಲಾಷು ಅಂತ, ಎಲ್ಲಿ ಅದರ ಎದುರಿಂದ ಕೈ ತೆಗಿ, ನೀ ತೆಗಿಬೇಕಿದ್ದ ಜಾಗ ಇಲ್ಲಿ ಕಾಣ್ತಿದೆಯಲ್ಲಾ, ಆ ಚೌಕಟ್ಟಿನೊಳಗೆ ಬರ್ಬೇಕು ನೋಡು ಅನ್ನೋ ತರ ತೋರ್ಸಿದ್ರು ಮಾವ. ಪ್ಲಸ್ಸು, ಅದರ ಹೊರಗಿದ್ದ ಚೌಕದ ಒಳಗೆ ನನಗೆ ತೆಗಿಯಬೇಕಿದ್ದ ಚಿತ್ರವನ್ನು ಕೂರಿಸೋದ್ರೊಳಗೆ ಸುಮಾರು ತ್ರಾಸಾಗಿತ್ತು. ಮೊದಲ ಚಿತ್ರವಲ್ಲವೇ. ಹೇಗೋ ಧೈರ್ಯ ಮಾಡಿ ತೆಗೆದ ಆ ಚಿತ್ರ ತೊಳೆಸೋವರೆಗೂ ಏನೋ ಕುತೂಹಲ.. ಪರೀಕ್ಷೆ ಮುಗಿದು ರಿಸಲ್ಟಿಗೆ ಕಾಯೋ ತರ, ಇದ್ದ ಬದ್ದ ಫ್ರೀ ಮೆಸೇಜುಗಳೆಲ್ಲಾ ಖಾಲಿಯಾಗಿ ಮಾರನೇ ದಿನದ ಫ್ರೀ ಮೆಸೇಜು ಎಷ್ಟೊತ್ತಿಗೆ ಸಿಗುತ್ತೋ ಅಂತ ಹನ್ನೆರಡು ಗಂಟೆಯಾಗೋದ್ನೇ ಕಾಯೋ ತರ.. ಭಯಂಕರ ನಿರೀಕ್ಷೆ. ಅದ್ರೆ ಒಂದು ರೀಲಿನಲ್ಲಿ ೩೬ ಫೋಟೋ ತೆಗಿಬಹುದಿತ್ತು. ಆ ಎಲ್ಲಾ ೩೬ ಫೊಟೋ ಖಾಲಿಯಾಗಿ ರೀಲು ತೊಳೆಸೋವರೆಗೂ ಫೋಟೋ ಹೆಂಗೆ ಬಂದಿದೆಯಂದು ಗೊತ್ತಾಗೋ ಹಾಗಿಲ್ಲ. ಯಪ್ಪಾ, ಕೊನೆಗೂ ಆ ಫೋಟೋ ತೊಳೆಸಿದಾಗ ಖುಷಿಯೋ ಖುಷಿ.. ಎಷ್ಟಂದ್ರೂ ಮೊದಲ ಫೋಟೋವಲ್ಲವೇ ..

ಹೈಸ್ಕೂಲಿಗೆ ಕಾಲಿಟ್ಟ ಮೇಲೆ ನೆಂಟರ ಜೊತೆ ಅಲ್ಲಿಲ್ಲಿ ಹೋದಾಗ ನಾನು ಒಳ್ಳೇ ಫೋಟೋಗ್ರಾಫರ್ ಅಂತ ಪೋಸು ಕೊಡದಿದ್ದರೂ ನಾನು ತೆಗೀತೇನೆ ನೀವು ನಿತ್ಕೋಳಿ ಅಂತ ಅವರನ್ನೆಲ್ಲಾ ನಿಲ್ಲಿಸೋದು, ಯಾವ ಕಡೆ ನಿಲ್ಲಿಸಿದ್ರೆ ಸೂರ್ಯನ ಬೆಳಕು ಚೆನ್ನಾಗಿ ಬೀಳದೇ ಫೋಟೋ ಕಪ್ಪುಕಪ್ಪಾಗತ್ತೆ, ಎಷ್ಟು ದೂರದಿಂದ ತೆಗೆದ್ರೆ ಚೆನ್ನಾಗಿ ಬರುತ್ತೆ ಅಂತ ಹತ್ತಿರ, ದೂರ ಹೋಗೋದು ಇಂತ ಹಲವಾರು ಸರ್ಕಸ್ ಮಾಡ್ತಾ ಇದ್ದೆ. ಆಗ ಕೆಲ ಕಮ್ಮಿ ರೇಟಿನ ಕ್ಯಾಮೆರಾಗಳಲ್ಲಿ ಮಧ್ಯದಲ್ಲಿ ಪ್ಲಸ್ಸು, ಕೊನೆಗೆ ಬೌಂಡರಿ ಇಲ್ಲದೆ ಫೋಟೋ ತೆಗೆಯೋದೇ ಒಂದು ದೊಡ್ಡ ಸಾಹಸವಾಗಿತ್ತು. ತೆಗೆದ ಎಷ್ಟೋ ಫೋಟೋಗಳಲ್ಲಿ ತಲೆಯೇ ಹಾರಿಹೋಗೋದು. ಬರುತ್ತೆ ಅಂದುಕೊಂಡಿದ್ದ ಜಾಗದ ಹೊರಗಡೆಯೆಲ್ಲಾ ಬಂದು, ಬರಬೇಕಿದ್ದ ದೃಶ್ಯಗಳೇ ಮಿಸ್ ಆಗೋದು ಇಂತ ಕಾಮಿಡಿಗಳೆಲ್ಲಾ ಆಗ್ತಿದ್ವು. ಉದಾಹರಣೆಗೆ ಬೇಲೂರು ಹಳೇಬೀಡಿಗೆ ಹೋಗಿ ಅಲ್ಲಿನ ದೇವಸ್ಥಾನದೆದುರು ತೆಗೆದ ದೃಶ್ಯದಲ್ಲಿ ಅಮ್ಮನ ಮುಖ, ಹಿಂಬದಿಯಲ್ಲಿದ್ದ ದೇವಸ್ಥಾನ ಬರುವ ಬದಲು ಎದುರಿಗಿದ್ದ ಕಟ್ಟಿಗೆ ರಾಶಿ, ಅದರ ಎದುರಿಗಿದ್ದ ಅಮ್ಮನ ಕಾಲುಗಳು ಬಂದಿದ್ದು, ಜೋಗ ಜಲಪಾತ ಬರುವ ಬದಲು ಅದರ ಎದುರಿಗೆ ನಿಂತಿದ್ದ ಗೆಳೆಯನ ತಲೆ ಬಿಟ್ಟು ಅದರ ಕೆಳಗಿನ ದೇಹ, ಕೆಳಗಿದ್ದ ಬಂಡೆ.. ಹೀಗೆ ಹಲತರದ ಅವಾಂತರಗಳಾಗಿದ್ದವೆನ್ನೋದು ತೊಳೆಸಿದ ಮೇಲೇ ಗೊತ್ತಾಗಿದ್ದು. ಇದನ್ನೆಲ್ಲಾ ತಪ್ಪಿಸೋಕೆ ಅಂತಲೇ ತೆಗಿಯಬೇಕಿದ್ದ ದೃಶ್ಯನ ಆದಷ್ಟೂ ಕ್ಯಾಮೆರಾ ಮಧ್ಯದಲ್ಲಿ ಕೂರಿಸೋಕೆ ಪ್ರಯತ್ನ ಪಡಬೇಕಿತ್ತು. ಅಂತೂ ಇಂತೂ ಹೀಗೆ ಪರರ ಕ್ಯಾಮೆರಾದಲ್ಲೇ ತೆಗೀತಾ ತೆಗೀತಾ ಶುರುವಾದ ಹವ್ಯಾಸ ಯಾರ ತಲೆಗಳೂ ಹಾರಿಸದಷ್ಟು ಚೆನ್ನಾಗಿ ತೆಗೆಯೋ ನೈಪುಣ್ಯತೆ ಕೊಡಿಸಿ  ಹಾಗೇ ಬೆಳಿತಾ ಬಂತು.

ಹೈಸ್ಕೂಲ ಕೊನೆ ವರ್ಷದಲ್ಲಿ ಮೈಸೂರ ಟ್ರಿಪ್ಪಿಗೆ ಹೋಗಿದ್ವಿ. ಅಲ್ಲಿ ಅನೇಕ ಗೆಳೆಯರು ಕ್ಯಾಮೆರಾ ತಂದಿದ್ರು. ಅದರಲ್ಲೆಲ್ಲಾ ನಂದೊಂದು ನಂದೊಂದೆಂದು ಫೋಟೋ ತೆಗೆದಿದ್ದೇ ತೆಗೆದಿದ್ದು. ನಾಣು ಫೋಟೋದಲ್ಲಿ ಬರಬೇಕೆಂಬ ಕ್ರೇಜ್ ಬೇರೆ, ಫೋಟೊ ತೆಗೆಯಬೇಕೆಂಬ ಕ್ರೇಜ್ ಬೇರೆ. ಮೊದಲ ಕ್ರೇಜ್ ಅಷ್ಟಿರದಿದ್ರೂ ಎರಡನೆಯದು ಸ್ವಲ್ಪ ಮಟ್ಟಿಗೆ ಹುಟ್ಟಿ ಬಿಟ್ಟಿತ್ತಲ್ಲ. ಹಾಗಾಗಿ ಹಲವರ ಕ್ಯಾಮೆರಾಕ್ಕೆ ನಾಣು ಕಣ್ಣಾಗಿದ್ದೆ ಆ ಟ್ರಿಪ್ಪಲ್ಲಿ.  ಆಮೇಲೆ ಪೀಯು ಹೊತ್ತಿಗೆ ಮಾವ ಅದೆಂತದೋ ಡಿಜಿಟಲ್ ಅನ್ನೋ ಕ್ಯಾಮೆರಾ ಖರೀದಿಸಿದ್ದಕ್ಕೆ ಊರಿಗೆ ಬಂದಾಗ ಅವನ ಹಳೆ ಕೊಡ್ಯಾಕ್ ಕ್ಯಾಮೆರಾ ನಂಗೆ ಕೊಟ್ಟು ಹೋಗಿದ್ದ. ತಗಳ್ಳಪ್ಪ. ಮೊದಲ ರೀಲು ಖಾಲಿಯಾಗೋವರೆಗೋ ಆ ಕ್ಯಾಮೆರಾ ಹಿಡಿದು ಸುತ್ತಿದ್ದೇ ಸುತ್ತಿದ್ದು. ವರದಳ್ಳಿ, ಅಲ್ಲಿ ಇಲ್ಲಿ ಅಂತ ಸುಮಾರು ಕಡೆ ತೆಗೆಯೋ ಮನಸ್ಸಾದ್ರೂ ಕೆಲವೇ ಕೆಲವು ಅತ್ಯುತ್ತಮ ಅನಿಸೋ ದೃಶ್ಯಗಳನ್ನು ಮಾತ್ರ ತೆಗಿದಿದ್ದು. ರೀಲಿಗೆ ಮೂವತ್ತಾರೇ ಫೋಟೋವಲ್ಲವೇ.. ಮತ್ತೆ ಅದಕ್ಕೆ ಬ್ಯಾಟರಿ, ರೀಲು ತೊಳೆಸೋ ಖರ್ಚು.. ಹೀಗೆ ಇದೊಂದು ದುಬಾರಿ ಹವ್ಯಾಸ ಅನಿಸಿ ಅದರ ಹೊಟ್ಟೆ ತುಂಬಿಸುವಷ್ಟು ಅನುಕೂಲ ಮನೆಯಲ್ಲಿರದ ಕಾರಣ ಕ್ಯಾಮೆರಾ ಮೂಲೆಗೆ ಬಿದ್ದಿತ್ತು.

ಹಾಗೇ ಡಿಗ್ರಿಗೆ ಕಾಲಿಟ್ಟಿದ್ದೆ. ಮೊಬೈಲು ತಗೊಳೋ ಅಂತ ಮನೇಲಿ.ನನಗೆ ಅಷ್ಟೇನೂ ಮನಸ್ಸಿಲ್ಲ. ಇರೋದು ಅಜ್ಜಿ ಮನೇಲಿ, ಯಾವದಾದ್ರೇನೂ, ಅಷ್ಟಕ್ಕೂ ಅಲ್ಲೊಂದು ಫೋನಿದೆಯಲ್ಲ ಅನ್ನೋ ಭಾವ. ಕೊನೆಗೆ ನಮ್ಮಜ್ಜಿ ನಂಗೊಂದು ಫೋನು ಬೇಕು, ನೀನೇ ತಗೊಂಡು ಬರ್ಬೇಕು ಅಂತ ನಮ್ಮಮ್ಮನ ಹತ್ತಿರ ಹೇಳಿದ್ರಂತೆ. ಸರಿ ಆರಿಸೋಕೆ ಹೋಗಿದ್ದು ನಾನೇ ಅಮ್ಮನ ಜೊತೆ. ಅಜ್ಜಿಗೆ ತಾನೇ, ಸಾಧಾರಣದ್ದು ಸಾಕು ಅಂತ ನೋಕಿಯಾ ೧೬೦೦ ಆರಿಸಿದ್ದಾಯ್ತು.  ಶಿವಮೊಗ್ಗಕ್ಕೆ ತಗೊಂಡು ಹೋಗಿ ಅಜ್ಜಿಗೆ ಕೊಟ್ರೆ ಒಳ್ಳೇದು ತಗೊಳ್ಳೋದಲ್ವೇನೋ ಮೊಮ್ಮಗನೇ, ಅದೇನೋ ಕ್ಯಾಮೆರಾ ಎಲ್ಲಾ ಬರುತ್ತಲ್ಲ ಅಂತದ್ದು. ಇದೇನು ಇದು ಅಂದ್ರು. ನಂಗೆ ಅರ್ಥ ಆಗ್ಲಿಲ್ಲ. ನಿಂಗೇ ಅಂತನೇ ತರೋಕೆ ಹೇಳಿದ್ದು ಕಣೋ. ನೀನಂತು  ತಗೋಳಲ್ಲ ಅಂತ ನಾನೇ ತೆಗೆದುಕೊಟ್ತಿರೋದು ಅಂದಾಗ ನನ್ನ ಕಣ್ಣಂಚಲ್ಲಿ ನೀರು. ಆ ಮೊಬೈಲು ಇನ್ನೂ ನನ್ನ ಫೇವರೆಟ್ಟಾಗೇ ಇದೆ ಅನ್ನೋದು ಬೇರೆ ಮಾತು ಬಿಡಿ. ಪದವಿಯ ನಾಲ್ಕು ವರ್ಷದ ಟ್ರ‍ಿಪ್ಪುಗಳಲ್ಲೇ ತರಾವರಿ ಡಿಜಿಟಲ್ ಕ್ಯಾಮೆರಾಗಳ ಪರಿಚಯವಾಗಿದ್ದು. ಫೋಟೋ ತೆಗೆಯೋದು ಎಷ್ಟು ಸುಲಭವಲ್ವಾ ಅನಿಸಿಬಿಟ್ಟಿತ್ತು ಡಿಜಿಟಲ್ ಕ್ಯಾಮೆರಾಗಳ್ನ ನೋಡಿ. ಆದ್ರೆ ಅವುಗಳ ದುಬಾರಿ ಬೆಲೆ ಕೇಳಿ ಒಮ್ಮೆಯೂ ತಗೋಬೇಕು ಅನ್ನೋ ಆಸೆಯಂತೂ ಮೂಡಿರ್ಲಿಲ್ಲ.

ಪದವಿಯ ಕೊನೆ ವರ್ಷ. ಪ್ರಾಜೆಕ್ಟಿಗೆ ಇಂಟರ್ನೆಟ್ಟು ಬೇಕು ಅಂದ್ರು ಗೆಳೆಯರು. ಆದ್ರೆ ಬ್ರಾಡ್ ಬ್ಯಾಂಡ್ ಹಾಕಿಸೋದು ದುಬಾರಿ. ಇನ್ನೇನ್ ಮಾಡೋದು ? ಮೊಬೈಲಲ್ಲಿ ಕನೆಕ್ಟ್ ಮಾಡಿದ್ರೆ ? !! ಸೂಪರ್ ಐಡಿಯಾ. ಆದರೆ ಅದಕ್ಕೆ ಮೊಬೈಲ್ ಬೇಕಲ್ಲಾ .. ಇದ್ದಿದ್ರಲ್ಲಿ ಚೀಪ್ ರೇಟಿಂದು ಯಾವುದಪ್ಪಾ ? ಆಗಲೇ ಕಾರ್ಬನ್ನು, ಮೈಕ್ರೋಮ್ಯಾಕ್ಸ್ ಬಂದಿದ್ರೂ ಅದಕ್ಕೆ ಹೋಗೋ ಮನಸ್ಸಾಗ್ಲಿಲ್ಲ .ಹಿಡಿಸಿದ್ದು ನೋಕಿಯ ೨೭೦೦ ಕ್ಲಾಸಿಕ್ಕು.  ಅದರಲ್ಲಿ ಇಂಟರ್ನೆಟ್ಟು ಬಳಸಿದ್ದಕ್ಕಿಂತ ಅದರಿಂದ ನನ್ನ ಫೋಟೋಗ್ರಫಿ ಹವ್ಯಾಸಕ್ಕೆ ನೀರೆರೆದಿದ್ದೇ ಹೆಚ್ಚು ಎಂದೆನ್ನಬಹುದೇನೋ. ಎಲ್ಲೋ ಬತ್ತಿ ಹೋಗಿದ್ದ ಆಸೆ ಆ ಕ್ಯಾಮೆರಾದಿಂದ ಮತ್ತೆ ಚಿಗುರಿ ಇಲ್ಲಿಯವರೆಗೆ ಏಳೆಂಟು ನೂರು ಫೋಟೋ ತೆಗೆಸಿರಬಹುದು ಅದರಿಂದ..

ಅದರಲ್ಲೇ ತೆಗಿತಾ ತೆಗಿತಾ ಸಂತೃಪ್ತನಾಗಿದ್ದ ಮನಕ್ಕೆ ಬೆಂದಕಾಳೂರಿಗೆ ಬಂದು ಒಂದು ವರ್ಷವಾಗೋವಷ್ಟರಲ್ಲಿ ಇಲ್ಲಿನ ತಳುಕು ಬಳುಕಿನ, ಬಣ್ಣದ ಜಗಕ್ಕೆ ಹೊಂದಿಕೊಳ್ಳೋದು, ಸಂತೃಪ್ತವಾಗಿರೋದು ಸಾಧ್ಯವೇ ಆಗ್ತಿರಲಿಲ್ಲ. ಅದೆಷ್ಟು ಅದುಮಿಟ್ರೂ ಕ್ಯಾಮೆರಾ ತಗೋಬೇಕೆಂಬ ಆಸೆ ಭುಗಿಲೇಳ್ತನೇ ಇತ್ತು. ಕ್ಯಾಮೆರಾ ಬದ್ಲು ಆಂಡ್ರಾಯ್ಡ್ ಮೊಬೈಲ್ ತಗೊಂಡ್ರೆ ಹೇಗೆ ಅನ್ನೋ ಪ್ರಶ್ನೆ ಮೂಡಿದ್ರೂ ಅದ್ಯಾಕೋ ಇಷ್ಟವಾಗ್ತಿರಲಿಲ್ಲ. ಸಂನ್ಯಾಸಿ ಇಲಿಯ ಕಾಯೋ ಆಸೆಗೆ ಬೆಕ್ಕನ್ನು ಸಾಕಿ, ಅದರ ಹಾಲಿಗೆಂತ ದನ ಸಾಕಿ.. ಕೊನೆಗೆ ಸಂಸಾರಿಯಾದ ಕತೆ ನೆನಪಾಗ್ತಿತ್ತು. ಕ್ಯಾಮೆರಾ ತಗೋಬೇಕು ಸರಿ, ಆದ್ರೆ ಯಾವುದು ? ಡಿಎಸ್ ಎಲ್ ಆರ್, ಎಸ್ ಎಲ್ ಆರ್ ಎಲ್ಲಾ ಕಾಸ್ಟ್ಲಿ, ಒಂದು ಐದು ಸಾವಿರದ ಒಳಗಿನದ್ದಾದ್ರೆ ತಗೋಬಹುದು ಅನ್ನಿಸ್ತು. ಸರಿ, ಅಂತ ಒಂದು ಶುಭದಿನ ನೆಟ್ಟಲ್ಲಿ ಹುಡುಕೋಕೆ ಶುರು ಮಾಡಿದೆ. ಆದರೆ ಕ್ಯಾಮೆರಾಗಳನ್ನು ಹೋಲಿಸೋಕೆ ಬಳಸ್ತಿದ್ದ ಪದಗಳ್ಯಾವುವು ಅರ್ಥ ಆಗ್ತಿರಲಿಲ್ಲ. ಅದರಲ್ಲಿದ್ದ ಫೋಕಲ್ ಲೆಂತ್, ಎಕ್ಸ್ ಪೋಷರ್, ಪನೋರಮ, ವೀಡಿಯೋ ಮೋಡ್, ಶಟ್ಟರ್ ಸ್ಪೀಡ್.. ಹೀಗೆ ಹಲವು ಪದಗಳ ಅರ್ಥವನ್ನ ಗೆಳೆಯರ ಹತ್ತಿರ ಕೇಳೋದು, ಗೂಗಲ್ ಮಾಡೋದು.. ಹೀಗೆ ನಿಧಾನಕ್ಕೆ ತಿಳೀತಾ ನನಗೆ ಹೊಂದೋ ಕ್ಯಾಮೆರಾ ಯಾವುದೆಂದು ಹುಡುಕೋಕೆ ಶುರು ಮಾಡಿದೆ.

ಸರಿ,ಒಂದು ಶನಿವಾರ ಹತ್ತಿರದಲ್ಲಿದ್ದ ಕಾಸ್ಮೋಸ್ ಮಾಲಿಗೆ ಹೋದ್ವಿ. ಅಲ್ಲೊಂದು ಕ್ಯಾಮೆರಾ ಜೋನ್ ಇದ್ದ ನೆನಪು. ಆದರೆ ನಮ್ಮ ಗ್ರಹಚಾರವೇ. ಮಾಲು ಲಾಸಲ್ಲಿರೋ ಲಕ್ಷಣವೆಂಬಂತೆ ಆ ಜೋನನ್ನೇ ಮುಚ್ಚಿ ಬಿಟ್ಟಿದ್ರು. ಹ್ಯಾಪು ಮೋರೆಯಿಂದ ವಾಪಾಸ್ಸಾದ್ವಿ. ಹೀಗೆ ಹುಡುಕುತ್ತಾ ಹುಡುಕುತ್ತಾ ನಿಕಾನ್ lx 28 ,ಕೆನಾನ್ a2400, ಕೆನಾನ್ a3200 ಸಖತ್ ಇಷ್ಟ ಆದ್ವು. ಅವುಗಳಲ್ಲಿದ್ದ ಫೀಚರ್ಗಳು ನನ್ನ ಐದು ಸಾವಿರದ ಬೌಂಡರಿಯೊಳಗೆ ಬರುತ್ತಿದ್ವು ಅಂತ ಬೇರೆ ಹೇಳೋದು ಬೇಕಿಲ್ಲ ತಾನೆ.. ೧೬ ಮೆಗಾ ಪಿಕ್ಸೆಲ್ , 5x zoom ಅಂದ್ರೆ ಒಳ್ಳೆ ಆಯ್ಕೆಯೇ ಅಂದ್ದು ಗೆಳೆಯರು.. ಇನ್ನೂ ಹೆಚ್ಚು ಬೇಕೆಂದ್ರೆ ಹೆಚ್ಚು ಕೊಡಬೇಕೆನ್ನೋದ್ರ ಜೊತೆಗೆ ಮೊದಲ ಕ್ಯಾಮೆರಾಕ್ಕೆ ಹೆಚ್ಚು ದುಡ್ಡು ಸುರಿಯೋಕೆ ಮನಸ್ಸು ಬರಲಿಲ್ಲ. ಫ್ಲಿಪ್ ಕಾರ್ಟಲ್ಲಿ ಆರ್ಡರ್ ಮಾಡೇ ಬಿಡ್ಬೇಕು ಅಂತ ಎರಡು ದಿನ ಪ್ರಯತ್ನ ಪಟ್ರೂ ನೆಟ್ಟು ಕೈಕೊಟ್ಟಿತ್ತು. ಮೂರನೇ ದಿನದ ಹೊತ್ತಿಗೆ ಎಲ್ಲಾ ಸ್ಟಾಕ್ ಖಾಲಿ. ಎಂದಿನಂತೆ ಮಲಗೋ ಹಂತದಲ್ಲಿದ್ದ ಕ್ಯಾಮೆರಾ ಖರೀದಿ ಆಸೆ ಮತ್ತೆ ಚಿಗುರಿದ್ದು ನಮ್ಮ ಊರಿಗೆ ಬಂದಾಗ. ಊರಲ್ಲಿ ಬಿಟ್ಟಿದ್ದ ಬಣ್ಣ ಬಣ್ಣದ ಹೂವುಗಳು.. ಚೆಂಡು, ಸೇವಂತಿಗೆ, ತುಂಬೆ.. ಇವೆಲ್ಲಾ ನನ್ನ ೨ಮೆಗಾ ಪಿಕ್ಸೆಲ್ ಕ್ಯಾಮೆರಾದಲ್ಲಿ ಅಂದುಕೊಂಡಷ್ಟು ಚೆನ್ನಾಗಿ ಬರದೇ ಮುಂದಿನ ಸಲ ಊರಿಗೆ ಬರುವಾಗ ಒಂದು ಡಿಜಿಟಲ್ ಕ್ಯಾಮೆರಾ ತಗೊಳ್ಳಲೇ ಬೇಕೆಂಬ ಬಲವಾದ ಆಸೆ ಹುಟ್ಟಿಸಿದವು.

ನೋಡ್ತಾ ನೊಡ್ತಾ ಒಂದು ತಿಂಗಳಾಗಿ ಹೋಯ್ತು. ದೀಪಾವಳಿ ಬಂದೆ ಬಿಟ್ತು. ಹೇ ಈ ದೀಪಾವಳಿಗಾದ್ರೂ ಕ್ಯಾಮೆರಾ ತಗೊಳ್ಲೇ ಬೇಕು ಅಂದ್ಕೊಂಡೆ. ಸರಿ ಒಂದು ದಿನ ಅಲ್ಲೇ ಹತ್ತಿರದಲ್ಲಿದ್ದ ಹೈಪರ್ ಸಿಟಿ ಮಾಲಿಗೆ ಹೋದಿ ನೋಡಿದೆ. ಅಲ್ಲಿ ೨೦ ಮೆಗಾ ಪಿಕ್ಸಲ್ಲಿನ ನಿಕಾನ್ lx 28 ಕ್ಕಿಂತ ಸಖತ್ತಾದ ಕ್ಲೋಸ್ ಅಪ್ ಬರೋ ಕೆನಾನ್ ೩೨೦೦ ಮೇಲೇ ಮನಸ್ಸು ಹತ್ತಿತು. ಆದ್ರೆ ಕೆನಾನಿಂದು ೧೬ ಮೆಗಾ ಪಿಕ್ಸೆಲ್ಲು. ಅದೇ ದ್ವಂದ್ವದಲ್ಲಿ ಮನೆಗೆ ಬಂದು ನನ್ನ ಫೋಟೋಗ್ರಾಫರ್, ಕವಿ ಮಿತ್ರ ಆದಿಗೆ ದುಂಬಾಲು ಬಿದ್ದೆ. ಒಂದಿನ ಹೋಗೋಣ ನಡಿ. ಅವನಿಗೆ ಫ್ರೀಯಾಗೋ ಹೊತ್ತಿಗೆ ಹಬ್ಬದ ಹಿಂದಿನ ಗುರುವಾರ ಬಂದುಬಿಟ್ಟಿತ್ತು. ಅಂದರೆ ಸೆಪ್ಟೆಂಬರ್ ೩೦. ಮಾರತ್ತಳ್ಳಿ ಪೇಟೇಲಿ ಸಂಜೆ ಆರರಿಂದ ಒಂಭತ್ತೂವರೆವರ್ಗೆ ಸುತ್ತಿದ್ದೇ ಸುತ್ತಿದ್ದು. ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳು ಬೇಜಾನ್ ಸಿಕ್ಕಿದ್ವೇ ಹೊರ್ತು ಒಂದು ಕ್ಯಾಮೆರಾ ಅಂಗಡಿ ಬಿಟ್ರೆ ಬೇರೇನೂ ಸಿಗಲಿಲ್ಲ. ಅದರಲ್ಲಿ ನಮಗೆ ಬೇಕಾಗಿದ್ದ ಕೆನಾನ್ ಇರದಿದ್ರೂ ನಿಕಾನ್ s2700 ಅನ್ನೋದು ಸಿಕ್ಕಾಪಟ್ಟೆ ಇಷ್ಟ ಆಗೋಯ್ತು. ಸರಿ ಅಂತ ಮುಂದೆ ಬೇರೆ ಅಂಗಡಿ ಹುಡುಕಿ ನಡೆದ ನಮಗೆ ಬೇರೆ ಯಾವ್ದೂ ಸಿಗಲಿಲ್ಲ. ನಡೆದಿದ್ದೇ ನಡೆದಿದ್ದು. ಕಾಲೆಲ್ಲಾ ಬತ್ತಿ ಬರೋ ಹೊತ್ತಿಗೆ ವಾಪಾಸ್ ಬಂದು ಮನೆಯ ಹತ್ತಿರವಿದ್ದ ಹೈಪರ್ ಸಿಟಿಗೆ ಹೊಕ್ವಿ. ಅಲ್ಲಿ ಕೊನೆಗೆ ಕೆನಾನ್ 3200 ತಗೋಳ್ಳೊದು ಅಂತಂತ್ಕೊಂಡ್ವಿ. ಆದ್ರೆ ಟ್ರಯಲ್ ಮಾಡೋಕೆ ಅದ್ರ ಬ್ಯಾಟ್ರಿ ಖಾಲಿ ಆಗಿತ್ತು. ಮಾರ್ನೆ ದಿನ ಅಂದ್ರೆ ಶುಕ್ರವಾರ. ಅಂದ್ರೆ ನವೆಂಬರ್ ೧. ಊರಿಗೆ ಹೊರಡೋ ದಿನ.ಮಾರ್ನೇ ದಿನದೊಳಗೆ ಕ್ಯಾಮೆರಾ ತಗೊಳ್ಲೇ ಬೇಕು.ಸರಿಯಪ್ಪ, ಕೆನಾನಿಂದೇ ಒಳಗಡೆ ಪೀಸಿದ್ರೆ ಅದ್ನೇ ಕೊಡು. ತಗೊಂಡು ಬಿಡ್ತೇನೆ ಅಂದೆ. ಇದ್ರ ಪೀಸಿಲ್ಲ ಸಾರ್. ಬರೀ ಡಿಸ್ ಪ್ಲೇ ಮಾತ್ರ ಅನ್ಬೇಕಾ !! ಇದ್ದ ಸಿಟ್ಟೆಲ್ಲಾ ನೆತ್ತಿಗೇರಿತ್ತು. ಮುಂಚೆ ಹೇಳೋದಲ್ವಾ . ಪೀಸಿಲ್ಲ ಅಂದ್ರೆ ಶೋಕೆ ಯಾಕಿಡ್ತಾರಪ್ಪಾ ಅಂತ ಬೈಕೊಳ್ತಾನೆ ಒಳಗೆ ಬಂದ್ವಿ. ಮುಂಚೆ ಇಷ್ಟ ಆದ ಅಂಗಡಿಗೆ ವಾಪಾಸ್ ಹೋಗೋಣ್ವೇಣೋ ಅಂದೆ. ಕಾಲೆಲ್ಲಾ ವಿಪರೀತ ನೋಯ್ತಾ ಇದ್ರೂ ಅವ್ನೂ ಸರಿ ಅಂದ. ಒಂಭತ್ತೂಕಾಲು. ನಾವು ಆ ಅಂಗಡಿಗೆ ಹೋಗಿ ಮುಟ್ಟೋಕೂ ಅವ್ರ್ ಬಾಗ್ಲು ಹಾಕೋಕೂ ಸರಿ ಹೋಯ್ತು. ಎಷ್ಟು ರಿಕ್ವೆಸ್ಟ್ ಮಾಡಿದ್ರೂ ಊಹೂ. .ನಾಳೆ ಬೆಳಗ್ಗೆ ಒಂಭತ್ತೂವರೆಗೆ ಓಪನ್ ಆಗತ್ತೆ ಸಾರ್. ಬೆಳಗ್ಗೇನೆ ಬಂದು ಬಿಡಿ ಅಂದ.. ಅವತ್ತಿನ ಮೂರೂವರೆ ಘಂಟೆ ನಡೆದ ಶ್ರಮವೆಲ್ಲಾ ನೀರ ಮೇಲಿನ ಹೋಮ ಮಾಡಿದಂತಾಗಿದ್ದ ಬೇಜಾರು, ನೋಯುತ್ತಿದ್ದ ಕಾಲುಗಳೂ ವಿಪರೀತ ಬೇಜಾರ್ ಉಂಟು ಮಾಡಿದ್ವು. ಆದ್ರೂ ಏನೂ ಮಾಡೋ ಹಾಗಿಲ್ಲ. ಯಾರ ಮೇಲೂ ತಪ್ಪು ಹೊರಿಸೋಹಾಗಿಲ್ಲ. ಇವತ್ತು ಕ್ಯಾಮೆರಾ ತಗೊಳ್ಳೋ ಯೋಗವಿಲ್ಲ ಬಿಡು ಅಂತ ಮತ್ತೆ ಪೀಜಿಗೆ ವಾಪಾಸ್ಸಾದ್ವಿ. ಮಾರನೇ ದಿನ ಮನೆಗೆ ಹೋಗೋ ಹೊತ್ತಿಗೆ ಇಲ್ಲೇ ಮಾರತ್ತಳ್ಳಿಲಿ ಇಳಿದು ಕ್ಯಾಮೆರಾ ತಗೊಂಡೇ ಮನೆಗೆ ಹೋಗಬೇಕೆಂಬ ನಿಶ್ಚಯ ಹಸಿಯುತ್ತಿದ್ದ ಹೊಟ್ಟೆ, ನೋಯುತ್ತಿದ್ದ ಕಾಲುಗಳ ಮಧ್ಯೆಯೂ ಧೃಢವಾಗಿ ಮೂಡಿತ್ತು..