Monday, November 25, 2013

ಒಂಟಿಬುಡುಕ

ಪೀಠಿಕೆ:
ನಮ್ಕಡೆ  ಒಂದು ಪದ ಇದೆ "ಒಂಟಿಬುಡುಕ" ಅಂತ. ಪದ ಅನ್ನೋದಕ್ಕಿಂತ ಅದನ್ನೊಂದು ಸ್ವಭಾವ ಅನ್ನಬಹುದು. ಏನನ್ನೂ, ಯಾರಿಗೂ ಹಂಚದೇ ತಿನ್ನುವ, ಅನುಭವಿಸೋ ಸ್ವಭಾವದವನು/ದವಳಿಗೆ ಒಂಟಿಬುಡುಕ ಆಗ್ಬೇಡ. ಒಳ್ಳೇದಲ್ಲ ಅದು ಅಂತ ಅಪ್ಪ-ಅಮ್ಮ, ಹಿರಿಯರು ಕಿವಿ ಮಾತು ಹೇಳ್ತಿರುತ್ತಾರೆ. ಆ ಸ್ವಭಾವವಿದ್ದವರಿಗೆ ಏನೂ ಅನಿಸದಿದ್ದರೂ, ಹೊರಗಿನವರ ದೃಷ್ಟಿಯಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತಿರುತ್ತೆ. ಇಂದು ಅದೇ ಸ್ವಭಾವದ ಬಗ್ಗೆ ಒಂದಿಷ್ಟು ಮಾತುಗಳು..ಯಾರದೋ ವ್ಯಕ್ತಿಗತ ನಿಂದೆ ಅಂತಲ್ಲ. ನಮ್ಮ ನಿಮ್ಮೊಳಗೂ ಅರಿಯದೇ ಅವಿತಿರುವ ಈ ಮರಿ ರಾಕ್ಷಸನ ಗುರುತಿಸಿ ಹೊರಗಾಕಲನುವಾಗಲೊಂದು ಪ್ರಯತ್ನ ಅಷ್ಟೇ.

ಹೀಗೆ ಒಂದು ಸಂಜೆ. ಕಾಲೇಜಿಗೆ ಹೋದ ಗೆಳೆಯರೆಲ್ಲಾ ಒಬ್ಬೊಬ್ಬರಾಗಿ ರೂಮು ಸೇರಿದ್ದಾರೆ. ರೂಮು ಸೇರಿದವರಲ್ಲಿ ಒಬ್ಬನ ಕೈಯಲ್ಲೊಂದು ಚೀಲ. ಬಿಳಿ ಪ್ಲಾಸ್ಟಿಕ್ ಕವರಾಗಿದ್ರಿಂದ ಒಳಗಿದ್ದಿದ್ದು ಕಿತ್ತಳೆ ಹಣ್ಣೋ, ಮೋಸಂಬಿಯೋ ಇರಬೇಕು ಅಂತ ಅನಿಸ್ತಾ ಇತ್ತು. ಅದರಿಂದ ಒಂದು ಕಿತ್ತಳೆ ಹಣ್ಣು ಹೊರತೆಗೆದ ಒಬ್ಬ. ಕಂಪ್ಯೂಟರ್ ಕಡೆ ಮುಖ ಹಾಕಿ ಅದರಲ್ಲಿ ಏನೋ ಹುಡುಕುತ್ತಿದ ಇವನ ರೂಂಮೇಟಿಗೆ ಇವನು ಕಿತ್ತಳೆ ಹಣ್ಣು ತಿನ್ನುತ್ತಿರೋದು ಗೊತ್ತಾದ್ರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ.. ಆಗದಿದ್ದರೂ ಆದಂತೆ ನಟಿಸುತ್ತಿದ್ದ. ಮುಸುಕಿ ಹಾಕಿ ಮಲಗಿದ್ದ ಮತ್ತೊಬ್ಬ ಗೆಳೆಯನಿಗೂ ಪರಿಮಳದಿಂದಲೇ ರೂಮಲ್ಲಿ ಯಾರೋ ಕಿತ್ತಲೆ ಹಣ್ಣು ತಿನ್ನುತ್ತಿದ್ದಾರೆ ಅಂತ ಅನ್ನಿಸಿ ತನಗೂ ಕೊಡಬಹುದೇನೋ ಎಂಬ ಆಸೆಯಿಂದ ಮುಸುಕು ಸರಿಸಿದ. ನೋಡಿದರೆ ಇವನು ಒಬ್ಬನೇ ತಿನ್ನುತ್ತಿದ್ದಾನೆ. ಅವರಿಬ್ಬರೂ ಜೀವನದಲ್ಲಿ ಕಿತ್ತಳೇ ಹಣ್ಣು ತಿಂದೇ ಇಲ್ಲ ಅಂತ ಅಲ್ಲ. ಏನೇ ತಂದರೂ ಹಂಚಿ ತಿನ್ನೋ ತಮ್ಮಿಬ್ಬರನ್ನು ಬಿಟ್ಟು ಒಬ್ಬನೇ ತಿಂತಿದ್ದಾನಲ್ಲ ಈ ಭೂಪ ಅನ್ನೋದಕ್ಕಿಂತ ರೂಮಲ್ಲೇ ಕೂತು ತೋರಿಸಿ ತೋರಿಸಿ ಒಬ್ಬನೇ ತಿಂತಿದ್ದಾನಲ್ಲ, ಒಂದೊಂದು ಸೊಳೆ ಕೊಟ್ಟು ತಿಂತೀರೇನೋ ಅಂತ ಔಪಚಾರಿಕತೆಗಾದ್ರೂ ಕೇಳಿದ್ರೆ ಅವ್ನ ಗಂಟೇನಾದ್ರೂ ಹೋಗ್ತಿತ್ತಾ ? ಅವ್ನು ಕೊಟ್ಟಿದ್ರೂ ನಾವು ಬೇಡ ಅಂತನೇ ಹೇಳ್ತಿದ್ವಿ ಅನ್ನೋದು ಬೇರೆ ಮಾತು. ಆದ್ರೆ ಹಂಚಿ ತಿನ್ನೋ ಸ್ವಭಾವವೇ ಇಲ್ಲದ ಒಂಟಿಬುಡುಕ ಇವನು .ಹೀಗೆ ಮಾಡ್ತಾ ಇದ್ರೆ ಒಂದು ದಿನ ಸರಿಯಾಗಿ ಬುದ್ದಿ ಕಲಿಸಬೇಕು ಇವನಿಗೆ ಅಂತ ಅವನ ಬಗ್ಗೆ ಸಿಟ್ಟು ಬರುತ್ತಿತ್ತು ಇಬ್ಬರಿಗೂ.
**
ಮತ್ತೊಂದು ಹಾಸ್ಟೆಲ್ ರೂಮು. ಗಣಪತಿ ಹಬ್ಬ ಆಗಿದೆ. ಎಲ್ಲ ತಮ್ಮೂರಿಂದ ಏನೇನೋ ತಂದು ತಮ್ಮ ರೂಮವರೊಂದಿಗೆ, ಪಕ್ಕದವರೊಂದಿಗೆ ಹಂಚಿ ನಲಿಯುತ್ತಾ, ತಿನ್ನುತ್ತಿದ್ದಾರೆ. ಒಬ್ಬಳು ಮಾತ್ರ ತಾನು ಊರಿಂದ ಏನೂ ತಂದೇ ಇಲ್ಲವೆಂಬಂತೆ ಇದ್ದಾಳೆ. ನೀನು ಏನೂ ತಂದೇ ಇಲ್ಲವೇನೇ ಅಂದವರಿಗೆಲ್ಲಾ, ಸ್ವಲ್ಪನೇ ಮಾಡಿದ್ರು ಕಣೆ, ಈ ಸಲ. ಹಾಗಾಗಿ ಹೆಚ್ಚು ತರೋಕಾಗ್ಲಿಲ್ಲ. ಮುಂದಿನ ಸರ್ತಿ ತರ್ತೀನಿ ಅಂತಿದ್ದಾಳೆ. ಹೌದಿರಬೌದು ಅಂದುಕೊಂಡ್ರು ಉಳಿದ ಗೆಳತಿಯರೆಲ್ಲಾ. ಬ್ಯಾಗಿಂದ ಯಾವುದೋ ಡಬ್ಬ ತೆಗೀತಿರೋದನ್ನ ನೋಡಿದ್ದ ಅವಳ ರೂಂಮೇಟ್ ಕೂಡ ಗೆಳತಿ ಈ ರೀತಿ ಡೌ ಹೊಡಿತಿರೋದನ್ನ ನೋಡಿ ಸುಮ್ಮನಿದ್ಲು. ರೂಮಲ್ಲಿ ಆಮೇಲೆ ಕೇಳಿದ್ರಾಯ್ತು ಅಂತ. ಹಿಂಗೇ ಅವತ್ತಿನ ರಾತ್ರಿಯಾಯ್ತು. ರೂಂಮೇಟ್ಸೆಲ್ಲಾ ಮಲಗಿದರೂ ಇವಳಿಗೆ ನಿದ್ರೆಯಿಲ್ಲ. ಮನೆಯಿಂದ ತಂದಿದ್ದು ಏನಾಯ್ತು ಏನೋ ಅಂತ. ಬೆಳಗ್ಗಿನಿಂದ ಮನೆಯಿಂದ ತಂದಿದ್ದ ಚಕ್ಕುಲಿ-ಕೋಡುಬಳೆ ತಿನ್ನಬೇಕೆಂಬ ಆಸೆಯನ್ನು ಅದುಮಿಟ್ಟಿದ್ಲು. ಆದ್ರೆ ರಾತ್ರಿಯಾದರೂ ಆ ಆಸೆ ಈಡೇರದೆ ನಿದ್ರೆನೇ ಬರ್ತಾ ಇಲ್ಲ. ಯಾವಾಗ ನೋಡಿದ್ರೂ ರೂಮಲ್ಲಿ ಜನ ತುಂಬಿ ಬಿಟ್ಟಿರ್ತಾರಪ್ಪ. ಆರಾಮಾಗಿ ತಂದಿದ್ದು ತಿನ್ನೋಕೂ ಆಗಲ್ಲ. ನಾನು ಕಷ್ಟಪಟ್ಟು ಹೊತ್ತು ತಂದಿದ್ದು ನಾನೊಬ್ಳೇ ತಿನ್ನೋಕೆ ಅಂತ. ಅದನ್ನ ಇವರಿಗೆಲ್ಲಾ ಯಾಕೆ ಕೊಟ್ಟು ಖಾಲಿ ಮಾಡ್ಬೇಕು ಅನ್ನೋದು ಅವಳ ಭಾವ. ನಿಧಾನವಾಗಿ ಸದ್ದಾಗದಂತೆ ಕಳ್ಳ ಹೆಜ್ಜೆ ಹಾಕಿ ಡಬ್ಬ ತೆಗೆಯೋಕೆ ಹೋದ್ರೂ ಅಲ್ಲೇ ಪಕ್ಕದಲ್ಲಿದ್ದ ನೀರಿನ ಲೋಟ ಬಿದ್ದೋಯ್ತು. ಆ ಸದ್ದಿಂದ ರೂಂಮೇಟ್ಸಿಗೆಲ್ಲಾ ಎಚ್ಚರ ಆಗಿ ಬಿಡ್ಬೇಕೆ ? ಏನೇ ಸೌಂಡು ಅಂದ್ರೆ ನೀರು ಕುಡಿಯೋಣ ಅಂತ ಲೋಟ ತೆಗೆಯೋಕೆ ಹೋದ್ರೆ ಅದು ಬಿದ್ದೋಯ್ತು ಕಣ್ರೆ ಅಂತ ಮತ್ತೆ ಸುಳ್ಳು ಬಿಟ್ಲು. ಲೈಟು ಹಾಕ್ಕೊಳಕಾಗಲ್ವಾ ಸೋಂಬೇರಿ ಅಂದು ಮಲ್ಕೊಂಡ್ರು ಉಳಿದಿಬ್ಬ ರೂಂ ಮೇಟ್ಸು. ಸರಿ, ಡಬ್ಬ ತೆಗೆದ್ಲು. ಒಂದೊಂದೇ ಚಕ್ಕುಲಿ ತೆಗ್ದು ತಿನ್ನೋಕೆ ಶುರು ಮಾಡಿದ್ಲು. ಏನೂ ತಂದಿಲ್ಲವಂತ ಬೇರೆ ಅವ್ರಿಗೆಲ್ಲಾ ಹೇಳಿದವಳು ಈಗ ಒಬ್ಬಳೇ ರಾತ್ರಿ ಕೂತು ಚಕ್ಕುಲಿ ತಿಂತಾ ಇದ್ದಾಳೆ. ಎಷ್ಟು ಸಲ ಮನೆಯಿಂದ ಸ್ವೀಟು, ಹಣ್ಣು ತಂದಾಗ ಇವಳಿಗೆ ಕೊಟ್ಟಿಲ್ಲ. ಆದ್ರೂ ಸೊಕ್ಕು ನೋಡು ಇವ್ಳಿಗೆ ಒಂಟುಬುಡುಕಿ. ಹೊರಗಿನವ್ರು ಹೋಗ್ಲಿ ರೂಂಮೇಟ್ಸಿಗಾದ್ರೂ ತಗೊಳ್ರೆ ಅಂತ ಒಂದು ಚಕ್ಕುಲಿ ಕೊಟ್ಟಿದ್ರೆ ಏನಾಗ್ತಿತ್ತಪ್ಪ ಇವಳಿಗೆ ಅಂತ ಮನಸ್ಸಲ್ಲೇ ಬಯ್ಕೊಳ್ಳಕ್ಕೆ ಶುರು ಮಾಡಿದ್ರು. ಬಾಯ್ಬಿಟ್ಟು ಒಂದು ಮಾತಾಡದಿದ್ರೂ ಈ ಚಕ್ಕುಲಿ ಶಬ್ದದಿಂದ ಇರಿಟೇಟ್ ಆಗಿ ಕಿವಿ ಮೇಲೆ ಶಬ್ದ ಕಮ್ಮಿಯಾಗೋ ತರ ಬೆಡಶೀಟ್ ಬಲವಾಗಿ ಎಳೆದು ಮಲಗಿ ಬಿಟ್ರು.

ಇದು ತೀರಾ ಬಾಲಿಷ ಆಗ್ತಿದೆ ಅಂತ ನಿಮ್ಮಲ್ಲಿ ಕೆಲವರಿಗೆ ಅನಿಸಬಹುದು. ಆದ್ರೆ ಇದು ನಿಜ. ನೀವು ಇಂತಹವರನ್ನು ಇಲ್ಲಿಯವರೆಗೂ ನೋಡಿರಲಿಕ್ಕಿಲ್ಲ. ಅದಕ್ಕೇ ಹಾಗನಿಸುತ್ತಿದೆ. ಮಧ್ಯರಾತ್ರಿಗೆ ಎದ್ದು ಒಬ್ಬರೇ ಕಿತ್ತಳೆ ಹಣ್ಣು ತಿನ್ನೋರು, ಒಂದೇ ಮನೆಯಲ್ಲಿದ್ದರೂ ಅತ್ತೆ ಮಾವನಿಗೆ ಕೊಡದೇ ತಾನೊಬ್ಳೇ ಹಣ್ಣು ತಂದು ತಿನ್ನೋ ಸೊಸೆ, ತನ್ನ ಪಕ್ಕದಲ್ಲೇ ಇನ್ನೊಂದು ಪುಟಾಣಿಯಿದ್ದು ಅದು ತನ್ನನ್ನೇ ನೋಡ್ತಾ ಇದ್ರೂ  ತನಗೆ ಯಾರೋ ಕೊಟ್ಟ ಚಾಕ್ಲೇಟನ್ನು ತಾನೊಬ್ಳೇ ತಿನ್ನೋ ಮಗು.. ಇವೆಲ್ಲಾ ಕಟು ವಾಸ್ತವಗಳೇ. ಒಮ್ಮೆ ತಣ್ಣಗೆ ಕೂತು ಅವಲೋಕಿಸಿದ್ರೆ, ಆತ್ಮಾವಲೋಕನಕ್ಕೆ ಮುಂದಾದ್ರೆ ನಾವೂ ಹೀಗೆ ಒಂಟಿಬುಡುಕರಾದ ಸಣ್ಣತನದ ಪ್ರಸಂಗಗಳು ನೆನಪಾಗ್ಬೋದು. ಮುಂದಾದ್ರೂ ಹಾಗಾಗದಂತೆ ನಮ್ಮ ಸ್ವಭಾವವನ್ನು ತಿದ್ದಿಕೊಳ್ಳೋಕೆ ಮುಂದಾಗ್ಬೋದು. ನನಗನಿಸಿದಂತೆ ಈ ಒಂಟಿಬುಡುಕತನ ಶುರುವಾಗೋದು ಎಲ್ಲಾ ಒಳ್ಳೆಯ, ಕೆಟ್ಟ ಸ್ವಭಾವಗಳ ಬೇರಾದ ಬಾಲ್ಯದಲ್ಲೇ. ಆಗಲೇ ಇದನ್ನ ತಿದ್ದದಿದ್ದರೆ ಆಮೇಲೆ ತಿದ್ದಿಕೊಳ್ಳೋದು ತುಂಬಾನೇ ಕಷ್ಟ. ಬೇರೆಯವರ ಹೇಳೋವರೆಗೂ ನಮಗೆ ಇದರ ಬಗ್ಗೆ ಗೊತ್ತೇ ಆಗಿರೊಲ್ಲ. ಬೇಜಾರಾಗೋತ್ತೆ ಹೇಳಿದ್ರೆ, ನಮಗ್ಯಾಕೆ ಇಲ್ಲದರ ಉಸಾಬರಿ ಅಂತ ನಮ್ಮ ಬಗ್ಗೆ ಕಾಳಜಿಯಿದ್ದೋರೂ ಕೆಲ ಸಲ ನಮಗೆ ಇಂತದ್ರ ಬಗ್ಗೆ ಹೇಳಿರಲ್ಲ. ಹೇಳಿದ್ರೂ ಬದಲಾಗೋ ಮನಸ್ಸಿರೋಲ್ಲ ಕೆಲವರಿಗೆ. ಈ ಒಂಟಿಬುಡುಕ ಸ್ವಭಾವವನ್ನ ಬಾಲ್ಯದಲ್ಲೇ ಚಿವುಟೋಕೆ ನಮ್ಮ ಕಡೆಯೆಲ್ಲಾ ಹೇಗೇಗೆ ಪ್ರಯತ್ನಿಸ್ತಿದ್ರು ಅನ್ನೋ ಕೆಲ ಮಾತುಗಳೊಂದಿಗೆ ಇವತ್ತಿನ ಲೇಖನದಿಂದ ವಿರಮಿಸ್ತೀನಿ.

ನಮ್ಮ ಕಡೆಯೆಲ್ಲಾ ಯಾರದಾದ್ರೂ ಮನೆಗೆ ಹೋಗಬೇಕಾದ್ರೆ ಬರಿಗೈಯಲ್ಲಿ ಹೋಗ್ತಿರಲಿಲ್ಲ. ಮನೆಯಲ್ಲಿ ಮಕ್ಕಳಿದ್ದಾರೆ ಅಂದ್ರೆ ಚಾಕಲೇಟೋ, ಬಿಸ್ಕೇಟು ಪಟ್ಟಣವೋ, ವಯಸ್ಸಾದವರಿದ್ದಾರೆ ಅಂದ್ರೆ ಹಣ್ಣೋ ತಗೊಂಡು ಹೋಗೋದು ಗ್ಯಾರಂಟಿ. ಸಂಜೆ ಬರೋರು ಪಾನಿಪುರಿ, ಮಸಾಲೆ ಪುರಿ ತರೋ ಟ್ರೆಂಡೂ ಇತ್ತೀಚಿಗೆ ಶುರುವಾಗಿದೆಯಾದ್ರೂ ಒಟ್ನಲ್ಲಿ ಖಾಲಿ ಕೈಯಲ್ಲಿ ಬರೋದು ತುಂಬಾ ಕಡ್ಮೆ.ಯಾರಾದ್ರೂ ನೆಂಟ್ರು ಬಂದು ತಗೋಳೋ ಚಾಕ್ಲೇಟು ಅಂತ ಕೊಟ್ರೆ ಆ ಮಗೂಗೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಆ ಮಗುವಿನ ಮುಖ ಅರಳೋದನ್ನ ಅಲ್ಲೇ ನೋಡ್ಬೇಕು. ತಕ್ಷಣ ಅದನ್ನ ತಿನ್ನಬಾರದೆಂಬ ನಿಷಿದ್ದ ಇಲ್ಲದಿದ್ರೂ ಮಕ್ಕಳು ಅದನ್ನ ಅಮ್ಮನ ಕೈಲೋ, ಅಪ್ಪನ ಕೈಲೋ ತಗೊಂಡು ಹೋಗಿ ಕೊಟ್ತಿದ್ರು.. ಬಿಡಿಸಿಕೊಡು ಅಂತ. ಬಿಡಿಸಿಕೊಳ್ಳೋಕೆ ಬಂದ್ರೂ ಬಿಡಿಸಿಕೊಳ್ಳೋ ಪ್ರಯತ್ನದಲ್ಲಿದ್ದಾಗ ಅಪ್ಪನೋ, ಅಮ್ಮನೋ ಏ ಒಬ್ಬನೇ ತಿಂತ್ಯನೋ. ಒಂಟಿಬುಡುಕ ಆಗೋಗ್ತೆ. ತಮ್ಮಂಗೆ ಚೂರು ಕೊಟ್ಯಾ ಅಂತಿದ್ರು. ಒಂದೆರಡು ಸಲ ಹೀಗೆ ಹೇಳೋದ್ರೊಳಗೆ ಮುಂದಿನ ಸಲ ಯಾರು ಏನೂ ಹೇಳದಿದ್ರೂ ಕೈ ಚಾಕ್ಲೇಟನ್ನ ಅರ್ಧ ಮಾಡಿ ತಮ್ಮಂಗೆ ಕೊಟ್ಟಿರ್ತಿತ್ತು.

 ಅವಿಭಕ್ತ ಕುಟುಂಬಗಳಲ್ಲಿ ಬೆಳೆಸುತ್ತಿದ್ದ ಈ ಹಂಚಿ ತಿನ್ನೋ ಸ್ವಭಾವ ಆ ನಂತರದ ವಿಭಕ್ತ ಕುಟುಂಬಗಳಲ್ಲೂ ಮುಂದುವರೀತು.  ಒಬ್ನೇ ಮಗ, ಮಗಳಿದ್ರೂ ಮಗಾ, ಒಂಟಿಬುಡುಕ ಆಗ್ಲಾಗ ನೋಡು. ಎಂತೇ ಇದ್ರೂ ಹಂಚಿ ತಿನ್ನಕ್ಕು ಅಂತ ಅಮ್ಮನೋ, ಅಪ್ಪನೋ ಆಗಾಗ ತಿಳಿಹೇಳ್ತಿದ್ರು. ಹಂಗಾಗಿ ಶಾಲೇಲೆ ಊಟದ ಜೊತೆಗೆ ತಗೊಂಡು ಹೋದ ಸ್ವೀಟನ್ನು ತಾನು ಸ್ವಲ್ಪವೇ ತಿಂದ್ರೂ ಆದಷ್ಟು ಗೆಳೆಯರಿಗೆ ಹಂಚೋ ಅಭ್ಯಾಸ ಶುರು ಆಯ್ತು.  ಬಾಲ್ಯದಲ್ಲೇ ಬೆಳೆದ ಆ ಅಭ್ಯಾಸ ಎಷ್ಟು ಬಲವಾಗಿ ಬೆಳೆಯುತ್ತೆ ಅಂದ್ರೆ ಹೊರಗಡೆ ಇಂದ ರೂಮಿಗೆ ಜೋಳ ತಗೊಂಡು ತಿಂತಾ ಹೋಗೋನು. ರೂಮಲ್ಲಿ ತನ್ನ ಗೆಳೆಯರೂ ಇದ್ದಾರೆ ಅಂತ ನೆನಪಿಸಿಕೊಂಡು ಅವರಿಗಾಗೇ ಇನ್ನೊಂದು ಜೋಳ ತಗೋತಾನೆ. ಇಲ್ಲ, ರೂಮಿಗೆ ಹೋದ ಮೇಲೆ ತನ್ನ ಜೋಳದಲ್ಲೇ ಅರ್ಧ ಮಾಡಿ ತಿಂತೀರೇನೋ ಅಂತಾನೆ.. ಅವರು ತಿಂತಾರೋ ಬಿಡ್ತಾರೋ ಅದು ಬೇರೆ ಮಾತು. ಆದ್ರೆ ಈ ಮಧ್ಯರಾತ್ರೀಲಿ ಕಿತ್ತಳೆ ಹಣ್ಣೋ ತಿನ್ನುವಾಗ ಆಗುವಂತಹ ಕಿರಿಕಿರಿ ಅವರಿಗೆ ಆಗೋಲ್ಲ. ಎಲ್ಲರನ್ನೂ ಬಿಟ್ಟು ಒಬ್ಬನೇ ತಿನ್ನಬೇಕಲ್ಲ, ಅವರೆಲ್ಲಾ ಏನೇನು ಕಣ್ಣು ಹಾಕ್ತಿದ್ದಾರೋ ಅನ್ನೋ ಅಳುಕೂ ಇವನಿಗೆ ಇರೋಲ್ಲ. ಈ ಅಭ್ಯಾಸ ಎಲ್ಲಿ ಹೋದ್ರೂ, ಎಷ್ಟೇ ದೊಡ್ಡವರಾದ್ರೂ ಅವರಿಗೆ ಬಿಡೋಲ್ಲ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.


ಊರಿಂದ ಅಮ್ಮ ಬಂದಿದ್ದಾರೆ. ಅವರಿಗೆ ಪೇಟೆ ತೋರಿಸೋಕೆ ಅಂತ ಕರೆದುಕೊಂಡ ಮಗ ಮೆಕ್ ಡೊನಾಲ್ಡಿಗೆ ಕರೆದುಕೊಂಡು ಹೋಗಿದ್ದಾನೆ. ಅಮ್ಮ ನೋಡು ಇದು ಬರ್ಗರ್ ಅಂತ ತಿನ್ನು ಇದ್ನ. ನಮ್ಮ ಹಳ್ಳಿ ಕಡೆ ಎಲ್ಲಾ ಸಿಗಲ್ಲ ಇದು ಅಂದಿದ್ದಾನೆ. ನೀನು ತಿನ್ನೊಲ್ವೇನು ಅಂದಿದ್ದಕ್ಕೆ , ಏ ಬೇಡಮ್ಮಾ ನಂಗೆ ಇದ್ನ ತಿಂದು ತಿಂದು ಬೇಜಾರಾಗಿ ಹೋಗಿದೆ. ನೀ ತಿನ್ನು ಪರವಾಗಿಲ್ಲ. ನಾ ಇಲ್ಲೇ ಕೂತಿರ್ತೀನಿ ಅಂತ ತನ್ನ ಮೊಬೈಲಲ್ಲಿ ಏನೋ ಮಾಡ್ತಾ ಅಮ್ಮನ ಎದುರಲ್ಲೇ ಕೂತಿದ್ದಾನೆ. ಸುಮ್ಮನೇ ಕೂತ್ರೆ ಅಮ್ಮನಿಗೆ ಒಬ್ಳೇ ತಿನ್ನೋಕೆ ಕಸಿವಿಸಿ ಆಗ್ಬೋದು ಅಂತ. ಒಂದು ನಿಮಿಷ ಆಯ್ತು. ಏನು ನೋಡ್ತಾ ಇದಿಯಾ ಅಮ್ಮ. ತಿನ್ನು ಅಂತ ಮತ್ತೆ ತನ್ನ ಮೊಬೈಲತ್ತ ಕಣ್ಣು ಹಾಯಿಸಿದ. ಒಂದೆರಡು ಕ್ಷಣ. ತಗೋಳೋ ಅಂದ್ರು ಅಮ್ಮ. ಏನು ಅಂತ ನೋಡಿದ್ರೆ ಅಮ್ಮ ಬರ್ಗರನ್ನು ಮದ್ಯಕ್ಕೆ ಎರಡು ಪೀಸು ಮಾಡೋಕೆ ಪ್ರಯತ್ನ ಪಡ್ತಾ ಇದ್ದಾರೆ ! ಏನೇ ಇದ್ರೂ ಹಂಚಿ ತಿನ್ಬೇಕು ಒಬ್ಬರೇ ತಿನ್ನೋದು ಪಾಪ ಅನ್ನೋದು ಅವರ ಧೃಢ ನಂಬಿಕೆ !! ಮನೆಗೆ ಏನೇನೋ ಸಹಾಯ ಮಾಡಬಹುದಾಗಿದ್ದರೂ ತನ್ನ ಸ್ವಾರ್ಥವನ್ನೇ ನೆನೆದು ಕೂತಿದ್ದ ಮಗನಿಗೆ ಈ ಪ್ರಸಂಗ ನೋಡಿ ಕಣ್ಣಂಚಲ್ಲಿ ನೀರು .. ಸ್ವಲ್ಪ ಓವರಾಯ್ತು ಅಂದ್ಕೊಂಡ್ರಾ ? ಮೊದಲೇ ಹೇಳಿದಂತೆ ಇದೂ ಸತ್ಯಘಟನೆಯೇ ! ಈ ತರವೂ ಇರಬೇಕು ಅಂತಲ್ಲ. ಆದ್ರೆ ಯಾವಾಗ್ಲೂ ನಾನು , ನಾನು ಅಂತಲೇ ಇರದೇ ಒಮ್ಮೆಯಾದರೂ ನಾವು ಅನ್ನೋಣ ಅಂತ ಅಷ್ಟೇ. ನಾವು ಪ್ರಾಣಿಗಳಿಂದ್ಲೂ ಕಲಿಯೋದಿರುತ್ತೆ ಅಂತಾರೆ.  ಕಾಗೆನೇ ನೋಡಿ. ಒಂದು ಅಗುಳು ಬಿದ್ದಿದ್ರೂ ತನ್ನ ಕುಟುಂಬದವರನ್ನೆಲ್ಲಾ ಕೂಗಿ ಕರೆಯುತ್ತೆ. ಅಂತದ್ರಲ್ಲಿ ನಮ್ಮದು ಮನುಷ್ಯ ಜನ್ಮ. ಸಂಘಜೀವಿ, ಸಮಾಜ ಜೀವಿ ಅಂತ ಅಷ್ಟೆಲ್ಲ್ ಕೊಚ್ಚಿಕೊಳ್ಳೋ ನಾವು, ಸಮಾಜಕ್ಕೆ ನಾನು ಬೇಕು, ನನಗೆ ಸಮಾಜ ಬೇಡ ಅಂದರೆ ಹೇಗೆ ?  ಒಮ್ಮೆ ತಣ್ಣಗೆ ಕೂತು ಆಲೋಚಿಸೋಣ. ನಮ್ಮ ನಿಮ್ಮೊಳಗೂ ಈ ಒಂಟಿಬುಡುಕ ರಾಕ್ಷಸ ಅವಿತು ಕೂತಿರಬಹುದು. ಅವನನ್ನು ಹೊರಹಾಕೋದು ಹೇಗೆ ಅಂತ ಆಲೋಚಿಸೋಣ. ಎಲ್ಲರೊಳಗೊಂದಾಗಿ ಬದುಕೋದ ಕಲಿಯೋಣ.. ಏನಂತೀರಿ ಗೆಳೆಯರೇ ?

3 comments:

  1. ಹಂಚುವುದರಲ್ಲಿನ ಸುಖವೇ ಬೇರೆ.....

    ಹೀಗಾಗುವುದೂ ಹೌದು..... ಐದು ಬೆರಳೂ ಒಂದೇ ಸಮ ಇರುವುದಿಲ್ಲ....
    ನನಗೆ ಬಸ್ ನಲ್ಲೋ ಟ್ರೈನ್ನಲ್ಲೋ ಕೂಡಾ ಏನಾದರೊಂದು ಸಣ್ಣ ತುಂಡು ತಿಂಡಿ
    ಒಬ್ನೇ ತಿನ್ನಬೇಕಂದ್ರೆ ತ್ರಾಸಾಗುತ್ತೆ.....
    ಒಳ್ಳೆ ಬರಹ,............

    ReplyDelete
    Replies
    1. ಹಾ ಹೌದು ರಾಘವಣ್ಣ... ಏನ್ಮಾಡನ.. ಬೆಳದುಬಂದ ಪರಿಸರ ಹಂಗೆ ಬೆಳೆಸಿ ಬಿಟಿದು. ಬದಲಾಗದು ಆಗದ ಕೆಲಸ :-)

      Delete