Thursday, February 25, 2016

ಕನ್ನಡಿ ಕೆರೆಯ ಕರೆ

ಕನ್ನಡಿಯ ಕೆರೆಯಲ್ಲಿ ತನ್ನ ಕಾಣುವ ಬಯಕೆ
ಚಂದಿರನ ಪ್ರತಿರಾತ್ರಿ ಸೆಳೆಯತಿತ್ತು
ತಾನೆ ಸುಂದರನೆಂಬ ಶಶಿಯ ಹಮ್ಮನುದಿನವು
ಹೆಚ್ಚಿಸೋ ಪ್ರತಿಫಲಕ ಹೊಳೆಯುತಿತ್ತು|೧

ಕೆರೆಯ ಬಿಂಬದಿ ತನ್ನ ತಲೆಯ ಬಾಚುವ ಸೂರ್ಯ
ಮನೆಯ ಕರೆಗೋಗೊಡುವ ಕೆರೆಯ ದಡದಿ
ಹಕ್ಕಿಗಳಿಗಾಹಾರವಾಗೋ ಮೀನಿನ ತವರು
ಇಲ್ಲಿ ಒಸರೋ ನೀರೆ ಊರಿನುಸಿರು|೨

ಕಾಲ ಕಳೆದಂತಿಂದು ಶಶಿಯು ಬೇಸತ್ತಿಹನು
ಒರೆಸೊರೆಸಿ ಕೊಳೆಯಾದ ತನ್ನ ಮೊಗವ
ಕೊಳೆಯಾದ್ದು ಕೆರೆಯೆಂದು ತಿಳಿದೀತು ಹೇಗವಗೆ
ಹಗಲೆಲ್ಲ ವಿಷವುಣಿಸೊ ಜನರ ಬಗೆಗೆ|೩

ಬರಿಯ ನೊರೆಯಿಹುದಿಲ್ಲಿ, ಉಪಯೋಗವಿಲ್ಲ ಕೆರೆ
ಎಂದು ಜರಿಯೋ ಜನರೇ ಸುತ್ತಲೆಲ್ಲ
ಬುರುಗ ಹಿಂದಿನ ವಿಷವ ಸರಿಮಾಡಲೊಂದು ದಿನ
ತೆಗೆದಿಡಲು ಇವರ್ಯಾರು ಸಿದ್ದರಿಲ್ಲ|೪

ಜೀವಸೆಲೆಯಾದ ಕೆರೆಯಲ್ಲಿಂದು ತೇಲುತಿವೆ
ಪೇಪರ್ರು, ಪ್ಲಾಸ್ಟಿಕ್ಕು, ಸತ್ತ ಮೀನು
ನೀರಿಂದ ಮೇಲೆಳೋ ಪ್ರತಿ ಹಕ್ಕಿಯೂ ಕಪ್ಪು
ಕಾಗೆ, ಕೊಕ್ಕರೆ ಒಂದೆ ಬಣ್ಣವೇನು ? |೫

ನೀರಿಲ್ಲವಿಂದಲ್ಲಿ ಇಹುದೊಂದು ಕಂದು ದ್ರವ
ನಮ್ಮೆಲ್ಲ ಸ್ವಾರ್ಥಕ್ಕೆ ಸಾಕ್ಷಿಯಾಗಿ
ರವಿಶಶಿಯ ಹೊರತಾಗಿ ಯಾರಿಲ್ಲ ಕೇಳುಗರು
ಕೆರೆಯ ಕರೆಗೋಗುಡುವ ಶ್ರೋತೃವಾಗಿ|೬

ಕೆರೆಯ ಕೊನೆಯಲ್ಲವಿದು ಸಾಯುತಿದೆ ನಮ್ಮಾತ್ಮ
ಕೊಳೆಯಾಗೊ ಕೆರೆಯ ಪ್ರತಿ ಹನಿಯ ಜೊತೆಗೆ
ಒಟ್ಟುಗೂಡಲಿ ಮನಸು, ಮೀಸಲಾಗಲಿ ಸಮಯ
ಕೆರೆಯುಳಿಸೊ ಒಂದಿಷ್ಟು ಜನರ ಜೊತೆಗೆ
ಜೀವಜಲವಿಲ್ಲದೆಯೆ ಜೀವ ಉಳಿದೀತೇಗೆ
ಕಾಲಮಿಂಚುವ ಮುನ್ನ ಏಳಿರಣ್ಣ
ಮುಚ್ಚಿಹಾಕದಿರೆನ್ನ ಮಣ್ಣ ಗೋರಿಯ ಕೆಳಗೆ
ಎಂಬ ಕುಂದ್ಲಳ್ಳಿ ಕೆರೆ ಉಳಿಸಿರಣ್ಣ !|೭

Sunday, February 21, 2016

ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಎರಿಕ್ ಮೆಥಾಯಿಸ್ ಸಭಾಂಗಣದಲ್ಲಿ ನಡೆದ ವಿಕಿಪೀಡಿಯ ೧೩ನೇ ವರ್ಷಾಚರಣೆಯ ಬಗ್ಗೆ ಒಂದು ವರದಿ

ಲಾಸ್ಯ ಶೆಟ್ಟಿಯವರ ನಿರೂಪಣೆಯ ವರ್ಷಾಚರಣಾ ಕಾರ್ಯಕ್ರಮ ಶುರುವಾದದ್ದು "ಹೊಸ ಹಾದಿಯನು ಹಿಡಿದು ನಡೆಯಣ್ಣ ಮುಂದೆ.." ಎಂಬ ರೋಹಿತ್ , ಗೋಪಾಲಕೃಷ್ಣ ಮತ್ತು ತಂಡದವರಿಂದ. ಮುಂದುವರಿಯುವುದಕ್ಕೆ ಮುಂಚೆ ವೇದಿಕೆಯನ್ನು ಅಲಂಕರಿಸಿದ ಗಣ್ಯರ ಬಗ್ಗೆ ಒಂದೆರಡು ನುಡಿಗಳನ್ನಾದರೂ ಹೇಳಲೇಬೇಕಾಗುತ್ತೆ.ಕನ್ನಡ ವಿಕಿ ಬಳಸುವವರಿಗೆಲ್ಲಾ ಅದರಲ್ಲಿನ ಕೆ.ಪಿ.ರಾವ್ ಕೀಲಿಮಣೆಯ ಪರಿಚಯವಿದ್ದೇ ಇರುತ್ತೆ. ಕನ್ನಡವೊಂದೇ ಅಲ್ಲದೇ ಅನೇಕ ಭಾರತೀಯ ಭಾಷೆಗಳ ಭಾರತೀಯ ಭಾಷೆಗಳ ಲಿಪಿಗಳನ್ನು ಗಣಕಕ್ಕೆ ಅಳವಡಿಸಿದ ಗಣಕ ವಿಜ್ಞಾನಿ ನಾಡೋಜ ಕೆ.ಪಿ ರಾವ್ ಅವರು ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ.ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿ ಶ್ರೀ ವಸಂತಕುಮಾರ ಪೆರ್ಲ. ಇವರು ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕರು ಮತ್ತು ಕನ್ನಡ ಪದಗಳ ಸೃಷ್ಠಿಗಾಗಿ ಪದಾರ್ಥಚಿಂತಾಮಣಿಯಂತಹ ಮುಖಹೊತ್ತಿಗೆಯ ಗುಂಪುಗಳಲ್ಲಿ ತೊಡಗಿಸಿಕೊಂಡವರು. ಕಾರ್ಯಕ್ರಮದ ಮೂರನೇ ಮುಖ್ಯ ಅತಿಥಿ  ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಹಣಾಧಿಕಾರಿ ,ಮಂಗಳೂರಿನ ಹಿಂದಿನ ಪ್ರಭಾರಿ ಜಿಲ್ಲಾಧಿಕಾರಿಗಳಾಗಿದ್ದ S.A ಪ್ರಭಾಕರ ಶರ್ಮ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ಸ್ವೀಬರ್ಟ್ ಡಿ’ಸಿಲ್ವ ಅವರು. ಇದಲ್ಲದೇ ವೇದಿಕೆಯನ್ನಲಕಂರಿಸಿದ ಗಣ್ಯರೆಂದರೆ ಸಂತ ಅಲೋಷಿಯಸ್ ಕಾಲೇಜಿನ ಬಿ.ಸಿ.ಎ ವಿಭಾಗದ ಮುಖ್ಯಸ್ಥರಾದ ಡಾ| ರವೀಂದ್ರಸ್ವಾಮಿ ಅವರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಸರಸ್ವತಿ ಅವರು ಮತ್ತು ಕಾರ್ಯಕ್ರಮ ವ್ಯವಸ್ಥಾಪಕರಾದ ಡಾ| ಯು.ಬಿ.ಪವನಜ ಮತ್ತು ಹದಿಮೂರನೆಯ ವರ್ಷಾಚರಣೆಯ ಸಂಚಾಲಕರಾದ ಡಾ| ವಿಶ್ವನಾಥ ಬದಿಕಾನ ಅವರು.

ಶ್ರೀ ವಿಶ್ವನಾಥ ಬದಿಕಾನ ಅವರ ಸ್ವಾಗತ ಮತ್ತು ಪ್ರಾಸ್ತಾವಿಕ ನಂತರ ಕಾರ್ಯಕ್ರಮದ ಉದ್ಘಾಟನೆಯಾಗಿದ್ದು ನಾಡೋಜ ಕೆ.ಪಿ.ರಾವ್ ಅವರಿಂದ.  ನಂತರ ಕೆ.ಪಿ.ರಾವ್ ಅವರಿಗೆ ಸನ್ಮಾನ ಕಾರ್ಯಕ್ರಮ. ಸನ್ಮಾನ ಕಾರ್ಯಕ್ರಮದ ನಂತರ ಮಾತನಾಡಿದ ರೆವರೆಂಡ್ ಫಾದರ್ ಡಿಸಿಲ್ವ ಅವರು ಕಾಲೇಜಿನ ಇತಿಹಾಸದ ಬಗ್ಗೆ, ಕನ್ನಡ ಸಾಹಿತ್ಯಕ್ಕೆ ಕಾಲೇಜಿನ ಕೊಡುಗೆಗಳ ನಡೆ, ಕನ್ನಡಕ್ಕಾಗಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಮತ್ತು ಕನ್ನಡ ವಿಕಿಪೀಡಿಯ ಬಗ್ಗೆಯೂ ತಮ್ಮ ಮೆಚ್ಚುಗೆಯ ನುಡಿಗಳನ್ನು ವ್ಯಕ್ತಪಡಿಸಿದರು.

ನಂತರ ಕೆ.ಪಿ.ರಾವ್ ಅವರು ಎರಡು ಪ್ರಶ್ನೆಗಳಿಗೆ ಉತ್ತರ ಹುಡುಕುವಂತಹ ಹಾದಿಯಲ್ಲಿನ ಶುಭನುಡಿಗಳು ನೆರೆದವರ ಗಮನ ಸೆಳೆಯುವಂತಿದ್ದವು.
ಕನ್ನಡ ವಿಕಿಪೀಡಿಯ ಏಕೆ ಬೇಕು ? ಅನ್ನುವ ಪ್ರಶ್ನೆಗೆ ಮೂರು ಉತ್ತರ ಹುಡುಕುವ ಹಾದಿಯಲ್ಲಿ ಸಾಗಿದ ಅವರ ಅಭಿಪ್ರಾಯದಲ್ಲಿ
೧.ಕನ್ನಡ ಲಿಪಿ ಮಾತ್ರ ಬಲ್ಲವರಿಗೆ ಜಗದ ಜ್ಞಾನ ತಿಳಿಸಿಕೊಡಬಲ್ಲ ಸುಲಭದ ಮಾಧ್ಯಮ ವಿಕಿಪೀಡಿಯ
೨. ಕನ್ನಡಕ್ಕೆ ಮಾತ್ರ ಸಂಬಂಧಿಸಿದ ವಿಷಯಗಳು ,ಸಂಸ್ಕೃತಿ,ಭಾಷಾ ಸೊಗಡು ಬೇರೆ ಭಾಷೆಯ ವಿಕಿಯಲ್ಲಿ ಅಷ್ಟು ಸಮಂಜಸವಾಗಿ/ಪೂರ್ಣವಾಗಿ ಮೂಡಿಬರಲು ಸಾಧ್ಯವಿಲ್ಲ.
೩. ಯಾರಿಗಾದರೂ ಗೌರವ ಕೊಡಲು ಬಳಸಬಹುದಾದ ರು,ರಿಗೆ(ರಾಯರು,ರಾಯರಿಗೆ) ಯಂತಹ ಭಾಷಾ ವೈಶಿಷ್ಟ್ಯವನ್ನು ಹೊಂದಿದ ಕನ್ನಡಕ್ಕೆ ತನ್ನದೇ ವಿಕಿಪೀಡಿಯವಿರಬೇಕಾದ ಅಗತ್ಯವಿದೆ.
ಮುಂದುವರಿಸಿದ ಅವರು ಕನ್ನಡಕ್ಕೆ ಭಾಷಾಂತರದ ಬದಲು ರೂಪಾಂತರ ಮಾಡುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದರು.ವಿಕಿಪೀಡಿಯ ಮೂಲಕವಾದರು ಕನ್ನಡ ಪದಬಳಕೆಯಲ್ಲೊಂದು ಸಮಾನತೆ ಬರಲೆಂಬ ಆಶಯವನ್ನೂ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮುಖ್ಯ ಅತಿಥಿಗಳಾದ ವಸಂತಕುಮಾರ್ ಪೆರ್ಲ ಅವರು ಶಿಲಾಲೇಖ--> ತಾಮ್ರ ಪಟ-->ತಾಳೆಗರಿ-->ಪುಸ್ತಕದ ರೂಪದಲ್ಲಿದ್ದ ಸಾಹಿತ್ಯ ಈಗ Digitial ಅವತರಣಿಕೆಯಾಗಿ ಬೆಳೆದು ಬಂದ ಪರಿಯ ಬಗ್ಗೆ ತಿಳಿಸಿದರು. ಕರಾವಳಿಯಲ್ಲಿರುವ ಹವ್ಯಕ, ಬ್ಯಾರಿ,ತುಳು,ಕೊಂಕಣಿ, ಮಲೆಯಾಳಂ,ಮರಾಠ,ಕರಾಡ, ಬೆಸ್ತರ ಹಲವು ಉಪಭಾಷೆಗಳ ರೂಪದಲ್ಲಿರುವ ಭಾಷಾ ಸೊಗಡನ್ನು, ನಮ್ಮ ರೀತಿ ರಿವಾಜುಗಳನ್ನು ದಾಖಲಿಸಿಡುವ,ವಿಕಿ ಮೂಲಕ ಸಂರಕ್ಷಿಸುವ ಅಗತ್ಯದ ಬಗ್ಗೆ ತಿಳಿಸಿದರು.

ನಂತರದ ಶುಭನುಡಿಗಳು ಪಿಲಿಕುಳದ ಶಿವರಾಮಕಾರಂತ ನಿಸರ್ಗಧಾಮದ ಕಾರ್ಯನಿರ್ವಹಣಾಧಿಕಾರಿಗಳಾದ S.Aಪ್ರಭಾಕರ ಶರ್ಮ ಅವರಿಂದ. ತದನಂತರ ಡಾ| ಯು.ಬಿ ಪವನಜ ತಮ್ಮ ತೈವಾನ್ ಪ್ರವಾಸದ ಸಂದರ್ಭದಲ್ಲಿ ಪೂರ್ಣ ಚೈನೀಸಿನ windows ನೋಡಿ ಕನ್ನಡದಲ್ಲೂ ಈ ರೀತಿ ಮಾಡಬಾರದೇಕೆ ಎಂದು ಆಲೋಚಿಸಿದ ಬಗ್ಗೆ, ವಿಕಿಪಿಡಿಯದ ಬಗ್ಗೆ ತಿಳಿಸಿದ್ದರು. ೧೯೫೨ರಲ್ಲಿ ೧೬೦೨ರಷ್ಟಿದ್ದ ಭಾಷೆಗಳಲ್ಲಿ ಈಗ ಉಳಿದಿರುವುದು ೭೦೫ ಮಾತ್ರ ! ಭಾಷೆಗಳ ಪರಿಸ್ಥಿತಿ ಇಷ್ಟು ಚಿಂತಾಜನಕವಾಗಿರೋ ಸಂದರ್ಭದಲ್ಲಿ "ಮಾಹಿತಿಯ ಆಗರ" ಎಂಬಂತಾಗಿರೋ ಕನ್ನಡಕ್ಕೆ ವಿಕಿ ಏಕೆ ಮತ್ತು ಹೇಗೆ ನೆರವಾಗಬಹುದು,ಅದರ ಸದ್ಯದ ಸ್ಥಿತಿಗತಿಗಳೇನು ಎಂಬುದರ ಬಗ್ಗೆ ತಿಳಿಸಿದರು.

ವಿಕಿಯ ಬಗ್ಗೆ:
ಜನವರಿ ೧೫ ರಂದು ಶುರುವಾದ ವಿಕಿ ಈಗ ೩೦೦ ಭಾಷೆಗಳಲ್ಲಿ ಲಭ್ಯವಿದೆ. ೨೦೦೩ ಜೂನ್ ಮೂರರಂದು ಕನ್ನಡ ವಿಕಿಯ ಪ್ರಾರಂಭ. ಇಲ್ಲಿಯವರೆಗೆ ಬೆಂಗಳೂರು, ಮೈಸೂರು, ಮಂಗಳೂರು, ಸಾಗರದಲ್ಲಿ ಆದ ಸಂಪಾದನೋತ್ಸವಗಳ ಬಗ್ಗೆ, ಅದರಲ್ಲಿ ರಚನೆಯಾದ ಪುಟಗಳ ಬಗ್ಗೆ, ಜನರ ಭಾಗವಹಿಸುವಿಕೆಯ ಬಗ್ಗೆ ತಿಳಿಸಿದರು. ಮಾತನಾಡುವವರ ಲೆಕ್ಕದಲ್ಲಿ ೩೫ ನೇ ಸ್ಥಾನದಲ್ಲಿರೋ ಕನ್ನಡದ ವಿಕಿಗೆ ಪ್ರತೀ ಘಂಟೆಗೆ ೮೯೨ ಭೇಟಿಗಳು ಸಿಗುತ್ತಿವೆ. ೧೫ ವರ್ಷಗಳಲ್ಲಿ ಇಂಗ್ಲಿಷ್ ವಿಕಿಯಲ್ಲಿ ಸೃಷ್ಠಿಯಾಗಿರೋ ಲೇಖನಗಳ ಸಂಖ್ಯೆ ೫೦ ಲಕ್ಷ ದಾಟಿದ್ದರೆ ೧೩ ವರ್ಷದ ಕನ್ನಡ ವಿಕಿ ಲೇಖನಗಳ ಸಂಖ್ಯೆ ೧೯,೬೦೦. ಎಲ್ಲಾ ಭಾಷೆಗಳ ಪಟ್ಟಿಯಲ್ಲಿ ೧೦೭ನೇ ಸ್ಥಾನದಲ್ಲಿರೋ ಕನ್ನಡ ವಿಕಿ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ ಎಂಬ ವಿಕಿಯ ಬಗೆಗಿನ ಅಂಕಿಅಂಶಗಳು ಕಾರ್ಯಕ್ರಮದಲ್ಲಿ ನೆರೆದವರಿಗೆ ತಿಳಿಯಲ್ಪಟ್ಟವು. ಕಾರ್ಯಕ್ರಮಕ್ಕೆ ನೆರೆದಿದ್ದವರಿಗೆಲ್ಲಾ ಧನ್ಯವಾದಗಳನ್ನು ಸಮರ್ಪಿಸಿದ್ದು ಡಾ| ಸರಸ್ವತಿ ಅವರು.

೧೧:೪೦ ಕ್ಕೆ ಪ್ರಾತ್ಯಕ್ಷಿಕೆಗಳ ಎರಡನೇ session ಆರಂಭವಾಯಿತು. ಇದರಲ್ಲಿ ವಿಕಿಪೀಡಿಯ ಲೇಖನಗಳ ಬಗ್ಗೆ, ಅದರ ಸಂಪಾದನೆಯ ಬಗ್ಗೆ, ಖಾತೆ ತೆರೆಯುವುದೇ ಮೊದಲಾದ ಮಾಹಿತಿಗಳ ಬಗ್ಗೆ, ಯೋಜನೆಗಳ ಬಗ್ಗೆ ಪವನಜ ಅವರು ನೆರೆದವರಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು

೧೨:೪೦ ಕ್ಕೆ Creative common, license ಗಳ ಬಗ್ಗೆ ವಿಕಿಪೀಡಿಯ ಸಂಪಾದಕರಲ್ಲೊಬ್ಬರಾದ ರೆಹಮಾನುದ್ದೀನ್ ಶೇಖ್ ಅವರಿಂದ ಪ್ರಾತ್ಯಕ್ಷಿಕೆ ಇತ್ತು.
ಕ್ರಿಯೇಟಿವ್ ಕಾಮನ್ಸ್ ನ Attribution, no derivative, non commercia, sharealike ಎಂಬ ಅಂಶಗಳ ಬಗ್ಗೆ ತಿಳಿಸಿದ ರೆಹಮಾನುದ್ದೀನ್ ಅವರು ೬ ತರದ ಲೈಸನ್ಸುಗಳ ಬಗ್ಗೆ ತಿಳಿಸಿದರು. ಅವುಗಳೆಂದರೆ
೧) cc by A --> attribute
2) cc by S --> share alike
3)cc by ND --> no derivative
4)cc by NC --> non commercial
5)non commerical, share alike(CC by SA)
6)non commercial, no derivative
ವಿಕಿಪೀಡಿಯದಲ್ಲಿ ಫೋಟೊಗಳನ್ನು ಬಳಸಬೇಕಾದರೆ ಉಪಯೋಗಿಸಬೇಕಾದ creativecommonsತಾಣದ ಬಗ್ಗೆ ತಿಳಿಸಿದ ಅವರು ವಿಕಿಪಿಡಿಯಕ್ಕೆ ಯಾವ ತರಹದ ಫೋಟೋಗಳನ್ನು ಬಳಸಬಹುದು, ಯಾವುದನ್ನು ಬಳಸಬಾರದು ಎಂಬ ನಿಯಮಗಳನ್ನು ತಿಳಿಸಿದರು. ವಿಕಿಪೀಡಿಯದಲ್ಲಿರೋ ಫೋಟೋಗಳನ್ನು ಬಳಸಿಕೊಳ್ಳುವಾಗ ಫೋಟೋ ಬಳಸಿಕೊಳ್ಳಬಹುದು, ಆದರೆ ವಿಕಿಯಿಂದ ತೆಗೆದುಕೊಂಡದ್ದು, ಇಂಥವರ ಫೋಟೋ ಎಂದು ಹೇಳಬೇಕು ಎಂಬುದೇ ಮೊದಲಾದ ಲೈಸನ್ಸ್ ಗೆ ಸಂಬಂಧಪಟ್ಟ ನಿಯಮಗಳನ್ನು ತಿಳಿಸಿದರು.

ಬೆಳಗಿನ ಕಾರ್ಯಕ್ರಮದ ಕೊನೆಯ ಅಂಕದಲ್ಲಿ ವಿಕಿಪೀಡಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಧಾತನಯ, ವಸಂತಕುಮಾರ್,ಬಿ.ಎಸ್.ಚಂದ್ರಶೇಖರ್, ಓಂ ಶಿವಪ್ರಕಾಶ್,ಹರೀಶ್ , ತೇಜಸ್ ಮುಂತಾದ ಸಂಪಾದಕರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು. ಹೊರ ಊರಿನಿಂದ ಬಂದ ಸಂಪಾದಕರಾದ ಅನಂತ್ ಸುಬ್ರಾಯ್ ,ಚಿರಾಗ್ ಸಾರ್ಥಿ ಮತ್ತಿತರರಿಗೆ ಪ್ರೇಮಿಗಳ ದಿನದ ಸಂಕೇತವಾದ ಗುಲಾಬಿಯನ್ನಿತ್ತು ಅಭಿನಂದಿಸಲಾಯಿತು :-)
 ನಂತರದ ಭಾಗ ವಿಕಿಪೀಡಿಯನ್ನರ ನುಡಿಗಳು. ಇದರ ಅಂಗವಾಗಿ ಕೆಳಕಂಡ ವಿಕಿಪೀಡಿಯನ್ನರು ವಿಕಿಪೀಡಿಯದ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು
೧)ಕ್ರೈಸ್ಟ್ ಕಾಲೇಜಿನ ಕನ್ನಡ ವಿಕಿಪೀಡಿಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಡಾ| ಶಿವಪ್ರಸಾದ್
೨)ಮೈಸೂರು ವಿಶ್ವವಿದ್ಯಾಲಯದ, ಮೈಸೂರು ಸಂಪಾದನೋತ್ಸವದ ಸಂಚಾಲಕರಾಗಿದ್ದ ಡಾ| ಸೌಭಾಗ್ಯವತಿ
೩)ಸಾಗರದ ಸಂಜಯ ಗಾಂಧಿ ಕಾಲೇಜಿನ, ಸಾಗರ ಸಂಪಾದನೋತ್ಸವದ ಸಂಚಾಲಕರಾಗಿದ್ದ ವಿದ್ಯಾಧರ ಚಿಪ್ಳಿ
೪)ಸಂತ ಆಗ್ನೆಸ್ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಕವಿತಾ
೫)ಭಾರತೀಯ ಗೋತಳಿಗಳ ವಿಕಿ ಯೋಜನೆಯಲ್ಲಿ, ಸಾಗರ ಸಂಪಾದನೋತ್ಸವದ ಸಹಸಂಚಾಲಕರಾಗಿದ್ದ ವಿಕಾಸ್ ಹೆಗಡೆ
೬)ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿನಿ ತ್ರಿವೇಣಿ
೭)ಸಂತ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿನಿ ಮಮತಾ ಅವರು
೮)ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ
೯)ಉಜಿರಿಯ SDM ಕಾಲೇಜಿನ ವಿದ್ಯಾರ್ಥಿಗಳಾದ ಆಂಜನೇಯ ಮತ್ತು ಮಂಜುನಾಥ
೧೦)ಮಂಗಳೂರಿನ ರಾಮಕೃಷ್ಣ ಪಿ.ಯು ಕಾಲೇಜಿನ ಉಪನ್ಯಾಸಕ ನಟೇಶ್ ಆಳ್ವ
೧೧)ಮುಕ್ತ ತಂತ್ರಾಶಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, it for change,openstreetmap NGO ಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಯೋಗೀಶ್
೧೨)openstreetmapನಲ್ಲಿ ತೊಡಗಿಸಿಕೊಂಡಿರುವ ಶ್ರೀವಿದ್ಯಾ ಅವರು
೧೩)ಕೊನೆಯದಾಗಿ ನನಗೂ ಒಂದಿಷ್ಟು ಮಾತನಾಡೋ ಅವಕಾಶ !

ಮಧ್ಯಾಹ್ನ ಭೋಜನಾನಂತರ ಸಂತ ಅಲೋಶಿಯಸ್ ಕಾಲೇಜಿನ ಐಟಿ ಲ್ಯಾಬಿನಲ್ಲಿ ಸಂಪಾದನೋತ್ಸವ ನಡೆಯಬೇಕಿತ್ತು. ಆದರೆ ಅಂತರ್ಜಾಲ ಸಂಪರ್ಕ ವ್ಯತ್ಯಯದ ಕಾರಣದಿಂದ ಅದರ ಬದಲಿ ಕಾರ್ಯಕ್ರಮ ಸಭಾಂಗಣಕ್ಕೆ ಸ್ಥಳಾಂತರಗೊಂಡಿತು. ರೆಹಮಾನುದ್ದೀನ್ ಅವರಿಂದ ಉತ್ತಮ ವಿಕಿ ಲೇಖನ ಹೇಗಿರಬೇಕು, ಇರುವ ಲೇಖನವನ್ನು ಬಾಹ್ಯ ಕೊಂಡಿ, info document ,ಚಿತ್ರಗಳನ್ನು ಹಾಕುವ ಮೂಲಕ ಹೇಗೆ ಉತ್ತಮಪಡಿಸುವುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ನೆರೆದಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಪಿಲಿಕುಳದಲ್ಲಿ ತೆಗೆದಿದ್ದ ಚಿತ್ರಗಳನ್ನು ಪಿಲಿಕುಳ ಎಂಬ ವರ್ಗಕ್ಕೆ ಸೇರಿಸಿ ಲೇಖನಗಳನ್ನು ಹೇಗೆ ತಯಾರಿಸಬಹುದು ಎಂಬುದರ ಬಗ್ಗೆಯೂ ವೇದಿಕೆಯಲ್ಲೇ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲಾ ಭಾಗವಹಿಸುವಿಕೆಯ ಪ್ರಮಾಣಪತ್ರ , ಕಾಲೇಜುಗಳಿಗೆ ವಿಕಿಪೀಡಿಯದ ಪೆನ್ ಡ್ರೈವ್ ನೀಡಲಾಯಿತು. ಸಂಜೆ ನಾಲ್ಕರ ಸುಮಾರಿಗೆ ಕಾರ್ಯಕ್ರಮ ಮುಗಿಸಿ ಹೊರಬಂದರೂ ಇನ್ನೂ ಆ ವೇದಿಕೆಯ ನೆನಪು ಮನದಲ್ಲಿ ಸುಳಿಯುತ್ತಲೇ ಇದೆ. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ವಿಕಿಪೀಡಿಯನ್ನರ ನುಡಿಗಳು ಕಿವಿಯಲ್ಲಿ ಅನುರಣಿಸುತ್ತಲೇ ಇದೆ.

Sunday, February 7, 2016

ದೀಪಾವಳಿ

ಪೀಠಿಕೆ:
ಮುಂಚೆಯೆಲ್ಲಾ ದೀಪಾವಳಿ,ದಸರಾಗಳೆಂದರೆ ಮನೆ ತುಂಬಾ ಜನ. ಎಲ್ಲೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಹಬ್ಬದ ಸಂದರ್ಭ ಮಕ್ಕಳೆಲ್ಲಾ ತಮ್ಮ ಮೂಲಮನೆಗೆ ಹೋಗೋದು ಪದ್ದತಿ. ಎಲ್ಲಾ ಸೇರಿ ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದ ಖುಷಿಯೇ ಬೇರೆ. ಅವಿಭಕ್ತ ಕುಟುಂಬಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ, ಜನರಲ್ಲಿ ಸ್ವಾರ್ಥ, ಅಸೂಯೆಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆಯೇ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಮುಂದುವರೆದಂತೆಯೇ ಈ ಖುಷಿ, ನಗು ಕಮ್ಮಿಯಾಗುತ್ತಾ ಬರುತ್ತಿದೆ. ಎಂದೂ ಮುಗಿಯದ ಮಕ್ಕಳ ಎಕ್ಸಾಮಿನ ಟೆನ್ಷನ್ನು, ಅವರು ಏನೂ ಮಾಡಿರದಿದ್ದರೂ ಅವರನ್ನು ಯಾಕೆ ಕರೆಯಬೇಕೆಂಬ ಹಳ್ಳಿಯವರ ಬೇಸರವೂ, ನಮಗೆ ಸರಿಯಾದ ಆತಿಥ್ಯ ಮಾಡಿಲ್ಲವೆಂಬ ದೊಡ್ಡ ಪಟ್ಟಣದವರ ಸಣ್ಣತನವೂ ಮೇಳೈಸಿ ಸಂಬಂಧಗಳು ಸಾಯುತ್ತಿವೆ. ಹಬ್ಬಗಳ ಸೊಬಗು ಸಣ್ಣದಾಗುತ್ತಿದೆ. ಅದರ ಬಗ್ಗೆಯೇ ಒಂದು ಕತೆ.. ದೀಪಾವಳಿ.

ಕತೆಗೆ ಬರೋದಾದ್ರೆ..:
ಊರ ಸಾಹುಕಾರನ ಮನೆ. ಈಗಿರೋ ಸಾಹುಕಾರ ಹೆಸರಲ್ಲಿ ಸಾಹುಕಾರನಾದ್ರೂ ಮಕ್ಕಳು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟುವಷ್ಟು ಸಾಹುಕಾರನೇನಾಗಿರಲಿಲ್ಲ. ಭೂಸುಧಾರಣೆಯ ಹೊತ್ತಲ್ಲಿ ಈಗಿರೋ ಸಾಹುಕಾರ ಅಮಿತನ ತಂದೆ ಅನಂತಪತಿಯವರು ತಮ್ಮೂರಲ್ಲಿದ್ದ  ಜಮೀನನ್ನೆಲ್ಲಾ ಹಂಚಿ  ಈ ಊರಿನಲ್ಲಿದ್ದ ಸಣ್ಣ ಜಮೀನಲ್ಲಿ ಬಂದು ನೆಲೆಸಿದ್ದರಂತೆ. ಯಾರು ಏನು ಕಷ್ಟವೆಂದರೂ ನೆರವಾಗುತ್ತಿದ್ದ, ದೇಹಿ ಎಂದು ಬಂದವರಿಗೆ ಎಂದೂ ನಾಸ್ತಿಯೆನ್ನದ ಜನರು ಎಂಬ ಗುಣ ಶ್ರೀಮಂತರೆಂಬ ಕಾರಣಕ್ಕೆ ಇಂದೂ ಸಾಹುಕಾರ್ರು ಎಂಬ ಹೆಸರು ಆ ಮನೆತನಕ್ಕೆ ಮುಂದುವರೆದಿತ್ತು. ಅಮಿತನಂತೆಯೇ ಆತನ ಪತ್ನಿ ವಿಶಾಲೆಯದೂ ಹೆಸರಿಗೆ ತಕ್ಕಂತ ವಿಶಾಲ ಮನೋಭಾವ. ಮನೆಗೆ ಮಧ್ಯರಾತ್ರಿ ಬಂದು ನೆಂಟರು ಬಾಗಿಲು ತಟ್ಟಿದರೂ ಬೇಸರಿಸದೆ ಅವರಿಗೆ ಏನಾದರೂ ತಯಾರಿಸಿ ಉಣಬಡಿಸೋ  ಅನ್ನಪೂರ್ಣೇಶ್ವರಿಯವಳು.ಇವರಿಗೆ  ಒಬ್ಬ ಮಗ ಗುಣ ಮತ್ತು ಮಗಳು ಸುಗುಣ. . ಅಗರ್ಭ ಶ್ರೀಮಂತಿಕೆಯಿಲ್ಲದಿದ್ದರೂ ಇದ್ದುದರಲ್ಲೇ ಸಂತೃಪ್ತ ಸುಖಸಂಸಾರ. ದೊಡ್ಡ ಸಾಹುಕಾರನ ದೊಡ್ಡ ಮಕ್ಕಳೆಲ್ಲರೂ ಊರಲ್ಲಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಕಾರಣವೊಡ್ಡಿ ಪಟ್ಟಣ ಸೇರಿದ್ದರು. ಅಲ್ಲಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದರೂ ಊರಿಗೆ ಬಂದು ಪ್ರತೀ ಬಾರಿಯೂ ತಂದೆಯ ಹತ್ತಿರವಿದ್ದ ಅಳಿದುಳಿದ ಹಣಕ್ಕೆ ಪೀಡಿಸುತ್ತಲೂ, ಜಮೀನಲ್ಲಿ ಬಂದ ಪಸಲಲ್ಲಿ ತಮಗೆ ಸರಿಯಾದ ಪಾಲಿತ್ತಿಲ್ಲವೆಂಬ ಕಾರಣಕ್ಕೆ ಜಗಳವನ್ನೂ ಆಡುತ್ತಿದ್ದರು. ತಮ್ಮ ಮಕ್ಕಳ ಈ ದುರ್ಬುದ್ದಿಗೆ ಆ ತಂದೆ ಕೊರಗುತ್ತಾ ತನ್ನ ಕೊನೆಯ ದಿನಗಳನ್ನು ದೂಡುತ್ತಿರುವಾಗಲೇ ವರ್ಷದ ದೀಪಾವಳಿ ಹಬ್ಬ ಬಂದಿತ್ತು.

ದೀಪಾವಳಿಯೆಂದರೆ ದೊಡ್ಡ ಹಬ್ಬವೆಂದೇ ಪ್ರತೀತಿಯಲ್ಲಿ. ಸಾಹುಕಾರನ ಪಟ್ಟಣದಲ್ಲಿರೋ ಮಕ್ಕಳು , ತಮ್ಮ ಹೆಂಡತಿ ಮಕ್ಕಳೊಂದಿಗೆ,ಹೆಣ್ಣು ಮಕ್ಕಳು ಅಳಿಯಂದಿರೊಂದಿಗೆ  ಊರಿಗೆ ದಾಂಗುಡಿಯಿಡುತ್ತಿದ್ದ ಸಂದರ್ಭ. ಮನೆಯೆಲ್ಲಾ ಗಿಜಿ ಗಿಜಿ. ಪಟ್ಟಣದ ಮಕ್ಕಳು ಹೊಸ ಬಟ್ಟೆ ತೊಟ್ಟು ಜಗುಲಿಯಲ್ಲಿ ಇಸ್ಪೀಟಿಗೆ ಕೂತುಬಿಟ್ಟರೆ ಮುಗಿದೋಯ್ತು. ಹೊರಜಗತ್ತಿನ ಅರಿವೇ ಇರುತ್ತಿರಲಿಲ್ಲ. ಹಬ್ಬದ ತಯಾರಿಯಿಂದ , ದನ ಕರುಗಳನ್ನು ತಯಾರು ಮಾಡೋವರೆಗೆ, ಆಯುಧಗಳನ್ನು ತೊಳೆಯೋದರಿಂದ ಮನೆ ಕೆಲಸಕ್ಕೆ ಬಂದ ಕೆಲಸದವರ ಊಟ, ತಿಂಡಿ, ಕಾಪಿಗಳು ಸರಿಯಾಗಿ ಆಯ್ತೇ ಎಂದು ವಿಚಾರಿಸುವುದರವರೆಗೆ ಎಲ್ಲಾ ಕೆಲಸಗಳೂ ಅಮಿತನ ಮೇಲೆಯೇ ಬೀಳುತ್ತಿದ್ದವು. ಅತ್ತಿಗೆಯಂದಿರೂ ಒಂದು ಕಾಸಿನ ಕಡ್ಡಿ ಕೆಲಸ ಮಾಡದೇ, ಕುಡಿದ ಕಾಪಿ ಲೋಟ ತೊಳೆಯದೇ ಊರು ಸುತ್ತೋಕೆ ಹೊರಡುತ್ತಿದ್ದರೂ ಬೇಸರಿಸದ ವಿಶಾಲೆಗೆ ಹರಿದ ತನ್ನ ಹಳೆಯ ಸೀರೆಗಿಂತಲೂ ಹಬ್ಬದ ಸಂದರ್ಭದಲ್ಲೂ ಹಳೆಯ ಬಟ್ಟೆ ಹಾಕಬೇಕಾದಂತಹ ತನ್ನ ಗಂಡನ ಮಗ್ಗೆ, ಹಬ್ಬಕ್ಕೆ ಹಾಕಲೂ ಹೊಸ ಬಟ್ಟೆ ಸಿಗದ ತನ್ನ ಮಕ್ಕಳನ್ನು ನೆನೆದು ಮರುಕವಾಗುತ್ತಿತ್ತು.  ಅಡಿಕೆಗೆ ಕೊಳೆ ರೋಗ ಬಂದು ಸಿಕ್ಕ ಅಲ್ಪ ಪಸಲಿನಲ್ಲಿ ತಮ್ಮ ವರ್ಷವಿಡೀ ಹೇಗೆ ಜೀವನ ನಡೆಸಬೇಕು ಎಂಬ ಅಲ್ಪ ಅರಿವೂ ಇಲ್ಲದೇ ಆ ದುಡ್ಡಲ್ಲೂ ಪಾಲು ಕೇಳಲು ಬಂದಿರೋ, ದೀಪಾವಳಿಯನ್ನು ನಿಲ್ಲಿಸಬಾರದೆಂದು ತಮ್ಮಅದಕ್ಕಾಗೇ ಎಷ್ಟು ಸಾಲ ಮಾಡಿರಬಹುದು ಎಂದು ಒಂದಿನಿತೂ ಯೋಚಿಸದೇ ಇಲ್ಲಿ ಬಂದು ಆರಾಮಗಿರೋವಂತಹ ಭಾವಂದಿರಿಗಿಂತಲೂ ತಂದೆಯ ಕೊನೆಗಾಲ ಸಮೀಪಿಸುತ್ತಿರುವುದನ್ನು ಅರಿಯದೇ ಅವರನ್ನು ಕಾಡುತ್ತಿರೋ ಪರಿಯ ಬಗ್ಗೆ ಸಿಟ್ಟೂ , ಮಾವನವರ ಬಗ್ಗೆ ಅನುಕಂಪವೂ ಮೂಡುತ್ತಿತ್ತು. 

ನೀರು ತುಂಬೋ ಭೂರಿ ಹುಣ್ಣಿಮೆ ಬಂತು. ಹಂಡೆ, ಭಾವಿಯನ್ನೆಲ್ಲಾ ರಂಗೋಲಿಯೆಳೆದು , ಕಾಡಲ್ಲಿ ಸಿಗುತ್ತಿದ್ದ ಅಂಡೆಕಾಯಿ ಬಳ್ಳಿಯಿಂದ ಸುತ್ತುವರೆದು ಸಿಂಗರಿಸಿದ ಬಳಿಕ ಮನೆಯವರಿಗೆಲ್ಲಾ ಎಣ್ಣೆ ಸ್ನಾನ.
ಭರ್ಜರಿ ಸ್ನಾನವಾಗಿ ಭೂರಿ ಭೋಜನವೂ ಆಗಿ ಎಲೆಯಡಿಕೆ ಮೆಲ್ಲುತ್ತಾ  ಕುಳಿತಿದ್ದ ಅನಂತ ಪತಿಯ ದೊಡ್ಡ ಮಗ  ತಂದೆಯನ್ನು ಮಾತಿಗೆಳೆದ. ಅಪ್ಪಾ, ಇನ್ನೆಷ್ಟು ವರ್ಷ ಅಂತ ನಾವು ಇಲ್ಲಿ ಬಂದು ಜಮೀನಿನ ಫಸಲಿನ ಪಾಲು ಕೇಳೋದು. ಪ್ರತೀ ಸಲ ಕೇಳೋಕೆ ನಮಗೂ ಒಂತರ ಬೇಜಾರಾಗುತ್ತೆ. ನಮ್ಮ ನಮ್ಮ ಪಾಲು ಎಷ್ಟೂಂತ ಹಿಸೆ ಮಾಡಿ ಕೊಡು. ಅದನ್ನ ಮಾರಿ, ಬಂದ ಹಣ ತಗೊಂಡು ಹೋಗಿ ಬಿಡ್ತೇವೆ. ಪ್ರತೀ ಸಲ ಕೇಳೋದು ಇರಲ್ಲ ಅಂದ. ಅಲ್ರೋ, ನಿಮ್ಮನ್ನೆಲ್ಲಾ ದೊಡ್ಡ ದೊಡ್ಡ ಓದಿಗೆ , ಬಿಸಿನೆಸ್ಸಿಗೆ ಅಂತ ಅಷ್ಟೆಲ್ಲಾ ಖರ್ಚು ಮಾಡಿದೀನಿ. ಕಿರಿಯ ಮಗನಿಗೆ ಅಂತ ಏನೂ ಕೊಟ್ಟಿಲ್ಲ. ಇರೋ ಒಂದೂವರೆ ಎಕರೆ ತೋಟಕ್ಕೂ ಪ್ರತೀ ವರ್ಷ ಕೊಳೆ ಬರ್ತಾ ಇದೆ. ಆದ್ರೂ ಅದರಲ್ಲಿ ಪಾಲು ಕೇಳೋ ಪಾಪಿಗಳಿಗೆ ಒಂದು ಮಾತೂ ಆಡದ ಆ ಪುಣ್ಯಾತ್ಮ ಬಂದಿದ್ದರಲ್ಲೇ ಪಾಲು ಕೊಡ್ತಾ ಇದ್ದಾನೆ. ಅವನ ಹರುಕು ಬಟ್ಟೆ, ಸ್ಥಿತಿ ನೋಡಿದ ಮೇಲೆ ಸಹಾಯ ಮಾಡೋಕೆ ಬರೋ ಬದ್ಲು ತೋಟದಲ್ಲಿ ಹಿಸೆ ಕೇಳ್ತಾ ಇದ್ದೀರಲ್ಲೋ, ಏನೋ ಕಮ್ಮಿಯಾಗಿದೆ ನಿಮ್ಗೆ ಅಂದ ಅನಂತ ಪತಿ. ಅಪ್ಪಾ, ಅವನ ಕರ್ಮ ನಮಗೆ ಗೊತ್ತಿಲ್ಲ. ನೀನು ಪಾಲು ಕೊಡ್ಲೇ ಬೇಕು. ಕೊಡ್ತೀಯೋ ಇಲ್ವೋ ? ಇಲ್ಲ ಅಂದ್ರೆ ಹೇಳ್ಬಿಡು. ಅದು ಹೇಗೆ ತಗೋಬೇಕು ಅಂತ ಗೊತ್ತಿದೆ ನಮ್ಗೆ ಅಂದಿದ್ದ ಮಧ್ಯದ ಮಗ.
ಹಬ್ಬ ಕಳೀಲಿ ನೋಡೋಣ ಅಂದಿದ್ದ ಅಪ್ಪ. 

ದೊಡ್ಡಬ್ಬ ಬಂದೇ ಬಿಡ್ತು. ಗೋಪೂಜೆ, ಲಕ್ಷ್ಮಿಪೂಜೆ, ಆಯುಧ ಪೂಜೆ ಅಂತ ಇಬ್ರು ಅಣ್ಣಂದಿರೂ ಮಡಿಯುಟ್ಟುಕುಂಡು ಕೂತೇ ಬಿಟ್ರು. ದನಕರುಗಳಿಗೆ ಬಣ್ಣ ಹಚ್ಚೋದ್ರಿಂದ, ಆಯುಧ ತೊಳೆದು ಜೇಡಿ ಕೆಮ್ಮಣ್ಣು ಹಚ್ಚೋದು, ಹೊರಗೆ ಅಣ್ಣಂದಿರು ಒಡೆಯಲು ಬೇಕಾದ ಕಾಯಿ ಸುಲಿದುಕೊಡೋದು ಹೀಗೆ ಹೊರಗಿನ ಕೆಲಸಗಳೆಲ್ಲಾ ತಮ್ಮನ ಮೇಲೇ ಬಿತ್ತು. ಅದೆಲ್ಲಾ ಮುಗಿಸಿ ಆತನ ಸ್ನಾನ ಆಗೋದ್ರೊಳಗೆ ಪೂಜೆ ಮುಗಿಯುತ್ತಾ ಬಂದಿತ್ತು. ಹಬ್ಬದ ದಿನವೂ ಮಧ್ಯಾಹ್ನ ಸ್ನಾನ ಮಾಡ್ತೀಯಲ್ಲೋ ಕೊಳೆಯ ಅಂತ ಬೈಸ್ಕೊಳ್ಳಬೇಕಾಗೂ ಬಂತು ಪ್ರತೀ ವರ್ಷದಂತೆಯೇ ! ನನಗೆ ಮಂತ್ರ , ತಂತ್ರಗಳೇನೂ ಗೊತ್ತಿಲ್ಲ ದೇವರೇ. ನನ್ನ ಅಣ್ಣಂದಿರು ಚೆನ್ನಾಗೇ ಪೂಜೆ ಸಲ್ಲಿಸಿದ್ದಾರೆ ಅಂದುಕೊಳ್ಳುತ್ತೀನಿ. ಕಾಯಕವೇ ಕೈಲಾಸ ಎಂದು ತೋಟ, ಗದ್ದೆ ಕೆಲಸಗಳಲ್ಲೇ ಮುಳುಗಿ  ನಿನ್ನ ಪೂಜಿಸೋ ವಿಧಿಯನ್ನರಿಯದೇ ನಾನೆಸಗಿದ ತಪ್ಪುಗಳನ್ನೆಲ್ಲಾ ಮನ್ನಿಸಿ ನಮ್ಮ ಪೂಜೆಯನ್ನು ಸ್ವೀಕರಿಸಿ ನಮ್ಮನ್ನು ಎಂದಿನಂತೇ ಕಾಪಾಡೋ ಪ್ರಭುವೆ ಎಂದು ಬೇಡಿಕೊಂಡ. ಹಬ್ಬದ ಊಟವಾಗುತ್ತಿದ್ದಂತೆಯೇ ಒಬ್ಬೊಬ್ಬರೇ ಖಾಲಿಯಾದರು. ರಾತ್ರಿ ತನಕ ಉಳಿದರೆ ತಮ್ಮ ಮಕ್ಕಳು ಪಟಾಕಿ ಪಟಾಕಿ ಅನ್ನುತ್ತಾರೆ. ಅವರಿಗೆ ಅಂತ ಮಾತ್ರವೇ ತರೋಕ್ಕಾಗದೇ ಎಲ್ಲರಿಗೂ ಪಟಾಕಿ ತರಬೇಕಾದ ಖರ್ಚು ಎಂಬ ದೂರಾಲೋಚನೆ !!

ಮುಂದಿನ ಬಾರಿ ದೀಪಾವಳಿ ಬಂದಿತ್ತು. ಇತ್ತೀಚೆಗೆ ಹಲವು ವರ್ಷಗಳಿಂದ ಕೊಳೆ ಬರುತ್ತಿದ್ದ ಮರಗಳಿಗೆ ಈ ವರ್ಷ ಕೊಳೆ ಬಾರದ್ದರ ಜೊತೆಗೆ ಹೊಸದಾಗಿ ಶುರು ಮಾಡಿದ್ದ ಎರೆಗೊಬ್ಬರದಿಂದಲೂ ಅಲ್ಪ ಲಾಭ ಬರೋಕೆ ಶುರುವಾಗಿದ್ದರಿಂದ ಸಹಜವಾಗೇ ಖುಷಿಯಲ್ಲಿದ್ದ ಅಮಿತ. ಹಿಂದಿನ ವರ್ಷದ ಹಬ್ಬವಾದ ಮೇಲೆ ಅಪ್ಪನ ಆರೋಗ್ಯ ಹದಗೆಡುತ್ತಿದ್ದರೂ ತಿಂಗಳಿಗೊಮ್ಮೆಯೂ ಫೋನ್ ಮಾಡದ ಅಣ್ಣಂದಿರೆಗೆಲ್ಲಾ ಮತ್ತೆ ಮತ್ತೆ ಫೋನ್ ಮಾಡಿ ಹಬ್ಬ ಹತ್ತಿರ ಬರೋದನ್ನ ನೆನಪಿಸಿ ಕರೆಯುತ್ತಿದ್ದರೂ ಅವರು ಬರ್ತೀನಿ ಅಂತಲೂ ಅನ್ನದೇ, ಬರೋಲ್ಲ ಅಂತಲೂ ಅನ್ನದೆ, ಮುಂಚಿನಂತೆ ಚೆನ್ನಾಗಿ ಮಾತನ್ನೂ ಆಡದೇ ಫೋನಿಡುತ್ತಿದ್ದರು. ನಾನೇ ಹೋಗಿ ಅವರನ್ನು ಹಬ್ಬಕ್ಕೆ ಕರೆದುಬರುತ್ತೇನೆ. ಅಕ್ಕಂದಿರನ್ನು ದೀಪಾವಳಿಗೆ ಕರೆಯದಿರೋದು ಚೆನ್ನಾಗಿರೋಲ್ಲ ಅಂತ ಅಮಿತ. ಬೇಡ ಕಣೋ ಮಗನೇ,ಸುಮ್ಮನೇ ಅಲ್ಲಿಗೆ ಹೋಗಿ ಯಾಕೆ ಅವಮಾನ ಅನುಭವಿಸ್ತೀಯ ಅಂದ ಅನಂತಪತಿ. ಹೌದು ಕಣ್ರಿ, ನಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡ್ತಿಲ್ಲ ಅಂತಲ್ಲ. ನಮ್ಮ ಬಡತನದ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಕೊಂಕು ಮಾತಾಡ್ತಾರೆ ಅಂತಲೂ ಅಲ್ಲ  ಆದರೆ ನಿಮ್ಮ ಬಗ್ಗೆ, ಮಾವನವರ ಬಗ್ಗೆಯೂ ಅವರು ಚುಚ್ಚೋದು ನಂಗೆ ಇಷ್ಟ ಆಗೋಲ್ಲ ಕಣ್ರಿ.  ಅವರಿಗೆ ಇಷ್ಟ ಇಲ್ಲ ಅಂದ್ರೆ ನೀವ್ಯಾಕೆ ಒತ್ತಾಯ ಮಾಡ್ತೀರಿ . ಬೇಡ ಬಿಡಿ ಅಂದ್ಲು ವಿಶಾಲು. ಅಮಿತ ಅರೆಕ್ಷಣ ಮೌನವಾಗಿದ್ದ. ಆತ ಏನು ಹೇಳಬಹುದೆಂಬ ಕುತೂಹಲ ಎಲ್ಲರಿಗೂ ಇತ್ತು. ನೀ ಹೇಳೋ ಮಾತು ನನಗೂ ಅರ್ಥವಾಗುತ್ತೆ ವಿಶಾಲು. ನೀ ಹೇಳೋದು ಸರಿನೇ ಆದ್ರೂನು ಮೂಲ ಮನೆಯಲ್ಲಿರೋ ತಮ್ಮನಾಗಿ ಬೇರೆ ಕಡೆ ಇರೋ ಅಣ್ಣ-ಅಕ್ಕಂದಿರನ್ನು ಹಬ್ಬಕ್ಕೆ ಕರೀದೆ ಇರೋದು ಸರಿ ಇರಲ್ಲ. ಕರೆದು ಬರ್ತೀನಿ ಅಂತ ಅವರ ಉತ್ತರಕ್ಕೂ ಕಾಯದೇ ಪಟ್ಟಣದ ಬಸ್ಸು ಹತ್ತಿದ ಅಮಿತ.


ಹಬ್ಬಕ್ಕೆ ಕರೆಯೋಕೆ ಬಂದ ಇವನಿಗೆ ಅಲ್ಲಿ ಸಿಕ್ಕ ಸತ್ಕಾರಗಳನ್ನು ಮರೆಯುವಂತೆಯೇ ಇಲ್ಲ!  ನಿಮ್ಮ ತಮ್ಮ ಇವತ್ತೇನಾದ್ರೂ ಇಲ್ಲೇ ಝಾಂಡಾ ಹೂಡಿದ್ರೆ ಏನು ಕತೆ ? ನೋಡಿದ್ರೆ ಹಾಗೇ ಅನ್ಸುತ್ತೆ. ಈಗ್ಲೇ ಹೇಳಿ ಬಿಡ್ತೇನೆ. ನಾನೆಂತೂ ಅಡಿಗೆ ಬೇಯಿಸಿ ಹಾಕೋದಿಲ್ಲ , ಮನೆಗೆ ಬಂದ ಅಬ್ಬೆಪಾರಿಗಳಿಗೆಲ್ಲಾ ಅಡಿಗೆ ಬೇಯಿಸಿ ಹಾಕೋಕೆ ಇದೇನು ಛತ್ರವೇ ಎಂದು ಗಂಡನನ್ನು ಅಡಿಗೆ ಮನೆಗೆ ಕರೆದೊಯ್ದು ಜಗಳಕ್ಕಿಳಿದಿದ್ದ ಮೊದಲ ಅತ್ತಿಗೆಯ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಬೇರೇನೂ ತುರ್ತು ಕೆಲಸವಿದೆಯೆಂದು ಅವರ ಮನೆಯಲ್ಲಿ ನೀರೂ ಕುಡಿಯದಂತೆ ಹೊರಟುಬಿಟ್ಟಿದ್ದ.   ನಂತರ ಹೋಗಿದ್ದು ಹಿರಿಯ ಅಕ್ಕನ ಮನೆಗೆ. ಎದುರಿಗೆ ಬಂದು ಸ್ವಾಗತಿಸಿದ ಭಾವ ನಸುನಕ್ಕು ಸ್ವಾಗತಿಸಿದರೂ ಅವರು ಒಳಗೆ ಅಕ್ಕನನ್ನು ಕರೆಯಲು ಹೋದಾಗ ಒಳಮನೆಯಲ್ಲಿ ಅವಳು ಭಾವನೊಂದಿಗೆ ಆಡುತ್ತಿದ್ದ ಮಾತುಗಳು ಕೇಳಿ ಅಮಿತನಿಗೆ ಬೇಸರವಾಯ್ತು. ಸುಮ್ಮನೇ ಅಲ್ಲಿಯವರೆಗೆ ಯಾಕೆ ಹೋಗಬೇಕುರಿ ? ಸುಮ್ಮನೇ ದುಡ್ಡು ದಂಡ. ಹಿರಿಯ ಮಗಳಿಗೆ ಕಾಲು ಭಾಗ ಆಸ್ತಿಯನ್ನೂ ಬರೆದುಕೊಡದ ಆ ತಂದೆಯ ಮುಖ ನೋಡಲೂ ಇಷ್ಟವಿಲ್ಲ. ಇನ್ನು ಆ ಅಮಿತನ ಸಂಸಾರವೋ.. ಭಿಕ್ಷುಕರ ಬಿಡಾರದಂತಿದೆ. ನನ್ನ ಮಕ್ಕಳ ಒಳ್ಳೆ ಬಟ್ಟೆಗಳನ್ನು, ನನ್ನ ರೇಷ್ಮೆ ಸೀರೆಯನ್ನು  ಆ ವಿಶಾಲೆ ಮತ್ತವಳ ಮಕ್ಕಳು ಜೊಲ್ಲು ಸುರಿಸುತ್ತಾ ನೋಡೋದನ್ನ ನೆನೆಸಿಕೊಂಡ್ರೆ ನಂಗೆ ಅಸಹ್ಯವಾಗುತ್ತೆ. ನಾನಂತೂ ಬರೋಲ್ಲ ಅನ್ನುತ್ತಿದ್ದಳು ಅಕ್ಕ. ಅಬ್ಬಾ, ಇವಳು ನನ್ನ ಸ್ವಂತ ಅಕ್ಕನೇ ಅನಿಸಿಬಿಟ್ಟಿತ್ತು ಅಮಿತನಿಗೆ. ಅಲ್ಲೇ, ನಿನ್ನ ಮದುವೆಯ ಹೊತ್ತಿಗೆ, ತಮ್ಮ ಯಾವುದೋ ಮನೆ ಮಾರಿ ನಾನೊಂದು ಬಿಸಿನೆಸ್ ತೆಗೆಯೋಕೆ ಸಹಾಯ ಮಾಡಿದ್ದ, ನಾನು ಲಾಸಿನಲ್ಲಿದ್ದಾಗ ಎಷ್ಟೋ ಸಲ ಸಹಾಯ ಮಾಡಿದ್ದ ನಿಮ್ಮ ಅಪ್ಪ, ತಮ್ಮನ ಬಗ್ಗೆ ಹೀಗೆಲ್ಲಾ ಮಾತನಾಡ್ತೀಯಲ್ಲ ನೀನು, ಈಗೋನೋ ಮೂರ್ನಾಲ್ಕು ವರ್ಷದಿಂದ ಅಡಿಕೆಗೆ ಕೊಳೆಬಂದು ಅನ್ನುತ್ತಿದ್ದ ಭಾವನ ಮಾತನ್ನ ಅರ್ಧಕ್ಕೇ ತಡೆದ ಅಕ್ಕ, ಹೂಂ ಕಣ್ರೀ, ನಾನಿರೋದೇ ಹೀಗೆ. ನಿಮಗೆ ಸಹಾಯ ಮಾಡೋದು  ಅವರ ಕರ್ತವ್ಯವಾಗಿತ್ತು ಮಾಡಿದಾರೆ. ಅದರಲ್ಲೇನಿದೆ ? ನನಗೆ ಆಸ್ತಿ ಕೊಡೋವರೆಗೋ ನಾನು ಆ ಕಡೆ ತಲೆನೂ ಹಾಕಲ್ಲ, ನೀವೂ ಆ ಕಡೆ ಹೋಗೋ ಹಾಗಿಲ್ಲ ಅಂದಿದ್ದಳು.

ಅಲ್ಲಿಂದಲೂ ಅನಿವಾರ್ಯ ಕಾರಣ ಹೇಳಿ ಎರಡನೇ ಅಣ್ಣನ ಮನೆಗೆ ಹೋಗಿದ್ದ ಅಮಿತನಿಗೆ ಬಾಗಿಲ ಬೀಗ ಸ್ವಾಗತ ಮಾಡಿತ್ತು. ಪಕ್ಕದಲ್ಲೇ ಇದ್ದ ಅಂಗಡಿಯಿಂದ ಫೋನ್ ಮಾಡಿದರೆ ಅಯ್ಯೋ, ನೀನು ಫೋನ್ ಮಾಡಿ ಬರೋದಲ್ಲವೇನೋ, ನನಗೆ ಆಫೀಸಲ್ಲಿ ಅರ್ಜೆಂಟ್ ಕೆಲಸವಿದೆ. ಬರೋದು ರಾತ್ರಿಯಾಗುತ್ತೆ ಅಂದ ಅಣ್ಣ. ಸರಿ, ಅತ್ತಿಗೆ, ಮಕ್ಕಳು ? ಅವರು ಇಲ್ಲೇ ಮಾರ್ಕೇಟಿಗೆ ಹೋಗಿರ್ಬೇಕು. ಸರಿ ಬಿಡು ಅಣ್ಣ. ಅವರು ಬರೋವರಿಗೆ ಇಲ್ಲೇ ಕಾಯ್ತೀನಿ.. ಅಯ್ಯಯ್ಯೋ ಬೇಡಪ್ಪ, ಅವಳು ಅವಳಪ್ಪನ ಮನೆಗೆ ಹೋಗಬೇಕುಂತಿದಾಳೆ ಮಾರ್ಕೆಟ್ಟಿಂದ ಬಂದ ಅವಳಿಗೆ ನಿನ್ನ ಜೊತೆ ಮಾತಾಡ್ತಾ ಕೂತ್ರೆ ಅಪ್ಪನ ಮನೆಗೆ ಹೋಗೋಕೆ ಲೇಟಾಗುತ್ತೇಂತ ಬೈಕೋತಾಳೆ. ಇನ್ನೊಂದ್ಸಲ ಬರೋದಾದ್ರೆ ಫೋನ್ ಮಾಡ್ಕೊಂಡು ಬಾರೋ.. ಹಲೋ ಹಲೋ..ಕೇಳ್ತಾ ಇದಿಯಾ.. ಹಲೋ. ಹಲೋ.. ಎಂದು ಫೋನ್ ಕುಕ್ಕಿದ್ದ. ಅನಪೇಕ್ಷಿತ ಅತಿಥಿಯಾಗಿರಲು ಇಷ್ಟವಿಲ್ಲದೇ ಎರಡನೇ ಅಕ್ಕನಿಗೆ ಅಲ್ಲಿಂದಲೇ ಫೋನ್ ಮಾಡಿದ್ದ. ಪಟ್ಟಣಕ್ಕೆ ಬಂದಿದ್ದೇನೆಂದು ಹೇಳಿದರೂ ಅವಳು ಮನೆಗೆ ಕರೆದಿರಲಿಲ್ಲ. ಬರುತ್ತೇನೆ ಎಂದು ಇವನೂ ಹೇಳಲಿಲ್ಲ. ಎರಡು ದಿನ ಇದ್ದು ಎಲ್ಲರನ್ನೂ ಕರೆದುಬರುತ್ತೇನೆ ಎಂದಿದ್ದವನಿಗೆ ಮಧ್ಯಾಹ್ನದ ಒಳಗೇ ಎಲ್ಲರನ್ನೂ ಕರೆದು ಮುಗಿದಿದ್ದರಿಂದ ತಕ್ಷಣವೇ ಊರು ಬಸ್ಸು ಹತ್ತಿ ರಾತ್ರಿಗೆ ಮನೆಗೆ ಮುಟ್ಟಿದ್ದ.

ಭೂರಿ ಹುಣ್ಣಿಮೆ ಬಂದೇ ಬಿಟ್ಟಿತು. ಹದಿನೈದು ಜನರ ಬದಲು ಐದು ಜನರೇ ಇದ್ದರೂ ಈ ಸಲದ ದೀಪಾವಳಿಯಲ್ಲಿ ಏನೂ ಖುಷಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಹಿಂದಿನ ಹಬ್ಬಗಳಲ್ಲಿರುತ್ತಿದ್ದ, ಗಲಾಟೆ, ನಗುಗಳ ಕಳೆ ಇಲ್ಲದಿದ್ದರೂ ಮನೆ ತುಂಬಾ ಓಡಾಡುತ್ತಿದ್ದ ಗುಣ, ಸುಗುಣರ ಓಟ, ಆಟಗಳೇ ಒಂದು ಚಲುವನ್ನು ಮೂಡಿಸಿದ್ದವು. ಸುಗುಣನಿಗೇ ಒಂದು ಅಡ್ಡಮಡಿಯುಡಿಸಿ ಕೂರಿಸಿದ್ದ ದೀಪಾವಳಿಯ ದಿನವಂತೂ ಆ ಭಗವಂತನೇ ಹುಡುಗನ ರೂಪದಲ್ಲಿ ಮನೆಗೆ ಬಂದಿದ್ದಾನೇನೋ ಅನಿಸುತ್ತಿತ್ತು. ಲಂಗಧಾವಣಿಯುಟ್ಟು , ಆರತಿ ದೀಪಗಳ ಬಟ್ಟಲು ಹಿಡಿದು ಗುಣನ ಜೊತೆಗೇ ತಿರುಗುತ್ತಿದ್ದ ಸುಗುಣಳನ್ನು ನೋಡೋದೇ ಒಂದು ಸೊಬಗಾಗಿತ್ತು. ಪಟಾಕಿಗಳ ಆರ್ಭಟವಿಲ್ಲದಿದ್ದರೂ ಮನೆಯ ಸುತ್ತಲಿಟ್ಟ ದೀಪಗಳ ಚೆಲುವು, ಗಂಟೆ, ಜಾಗಟೆಗಳ ನಾದದಲ್ಲಿ ಈ ಬಾರಿಯ ಹಬ್ಬದ ರಾತ್ರಿ ಎಲ್ಲಿಗೋ ಕರೆದೊಯ್ದಿತ್ತು. ರಾತ್ರೆ ಬಂದ ಹಬ್ಬ ಆಡೋರು(ಅಂಟಿಗೆ-ಪಿಂಟಿಗೆ) ಯವರಲ್ಲೂ ಏನೋ ಚೆಲುವು ಕಾಣುತ್ತಿತ್ತು. ಕೊಳೆಯಿರದ ಮರ, ಕೈ ಹಿಡಿಯುತ್ತಿರುವ ಗೊಬ್ಬರ, ಸರಿಯಾಗುತ್ತಿರುವ ಅಪ್ಪನ ಆರೋಗ್ಯ.. ಹೀಗೆ ಎಲ್ಲವೂ ಅಮಿತನ ಶುದ್ದ ಮನಸ್ಸಿನ ಪ್ರಾರ್ಥನೆಗೆ ಒಲಿದಂತಿತ್ತು..

೧೦/೧೧/೨೦೧೩ ರಲ್ಲಿ ಬರೆದ ಈ ಕಥೆ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ

ನಮ್ಮೂರ ದಸರಾ

ಹಬ್ಬಗಳೆಂದ್ರೆ ಅದೇನೋ ಖುಷಿ.ಅದು ನಮ್ಮನ್ನೆಲ್ಲಾ ಸ್ವಂತಂತ್ರ್ಯರನ್ನಾಗಿಸಿದ ಆಗಸ್ಟ್ ಹಬ್ಬವಾಗಿರಬಹುದು. ಗಣತಂತ್ರರನ್ನಾಗಿಸಿದ ಜನವರಿ ಹಬ್ಬವೂ ಆಗಿರಬಹುದು. ನಾಡಹಬ್ಬ ದಸರಾವಾಗಿರಬಹುದು, ಬೆಳಕಹಬ್ಬ ದೀಪಾವಳಿಯಾಗಿರಬಹುದು. ಯಾವಾಗ ಬರುತ್ತಪ್ಪಾ ರಜಾ ಎಂದನಿಸೋ ಬಕ್ರೀದು, ರಂಜಾನ್, ಕ್ರಿಸ್ಮಸ್ಸುಗಳಾದ್ರೂ ಸರಿಯೇ.ಹಬ್ಬವೆಂದ್ರೆ, ಆ ರಜೆಗಳೆಂದ್ರೆ ಅದೆಂತದೋ ಖುಷಿ ಬಾಲ್ಯದಿಂದಲೂ. ಕೆಲವೆಡೆಯೆಲ್ಲಾ ಶಾರದಾಪೂಜೆ, ಲಕ್ಷ್ಮೀ ಪೂಜೆ, ಆಯುಧಪೂಜೆ, ಗೂಪೂಜೆ ಅಂತ ಹಲವಾರು ಪೂಜೆಯಿರೋ ದಸರಾ ದೊಡ್ಡ ಹಬ್ಬವಾದರೆ ನಮ್ಮೆಡೆ ಅದರ ಹೆಚ್ಚಿನವೆಲ್ಲಾ ಬರೋ ದೀಪಾವಳಿಯೇ ದೊಡ್ಡಬ್ಬ. ದಸರಾವೆಂದರೆ  ದೊಡ್ಡವರಿಗೆ ಶಮೀ ಪತ್ರೆ ಕೊಟ್ಟು, ಬನ್ನಿ ಕಡಿಯೋದು , ಬಾಳೆಮರ ಕಡಿಯೋದು ಮುಂತಾದ ಆಚರಣೆಗಳಿರೋ ಶಿವಮೊಗ್ಗಕ್ಕೂ ಅದಕ್ಕಿಂತ ಬರೀ ಎಪತ್ತ್ಮೂರು ಕಿ.ಮೀ ದೂರವಿರೋ ಸಾಗರಕ್ಕೂ ಅದೆಷ್ಟು ಭಿನ್ನತೆ ಅಂತಂದುಕೊಂಡಿದ್ದಿದೆ ಎಷ್ಟೋ ಸಲ. ಅದೇ ದೀಪಾವಳಿಯ ಮೂರು ದಿನಗಳಲ್ಲೂ ಅಂಟಿಗೆಪಿಂಟಿಗೆ ಅಥವಾ ಹಬ್ಬ ಹಾಡೋದು, ದೀಪಾವಳಿಯ ಹಿಂದಿನ ದಿನ ಅಂದರೆ ಭೂರಿ ನೀರು ತುಂಬುವ ದಿನದ ರಾತ್ರಿ ಭೂರಿ ಕಳುವು ಅಂತ ಆಚರಿಸೋ ಸಾಗರದ ಕೆಲ ಹಳ್ಳಿಗಳಿಗೂ , ಅದೆಂದರೆ ಏನೆಂದೇ ತಿಳಿಯದ ಹತ್ತೋ ಹದಿನೈದು ಕಿ.ಮೀ ದೂರದಲ್ಲೇ ಇರೋ ಸಾಗರ ಪೇಟೆಯ ಜನರೇ ಇರ್ಬೇಕಾದ್ರೆ ಅದರಲ್ಲೇನೂ ವಿಶೇಷವಿಲ್ಲ ಅನಿಸುತ್ತೆ. ಹೇಳಹೊರಟರೆ ಒಂದೊಂದು ಹೊಸ ಕಾದಂಬರಿಯಾದೀತೇನೋ ಹೇಳಹೊರಟವನ ಹಬ್ಬದಾಚರಣೆಗಳು.

ದಸರಾ ಅಂದ್ರೆ ಬಾಲ್ಯದಿಂದ ಈಗಿನವರೆಗೂ ಕುತೂಹಲ ಮೂಡಿಸೋದು ಅಂದ್ರೆ ನಮ್ಮಲ್ಲಿನ ಬಸ್ಸುಗಳ ಅಲಂಕಾರಗಳು. ಡ್ರೈವರ್ರಿನ ಮುಖ ಮಾತ್ರ ಕಾಣೋವಷ್ಟು ಬಿಟ್ಟು ಬೇರೆಲ್ಲಾ ಭಾಗಗಳ ಚೆಂಡುಹೂವಿನ ಹಾರಗಳಿಂದ ಅಲಂಕರಿಸುವುದ್ರಲ್ಲಿ ಬಸ್ಸುಬಸ್ಸುಗಳ ನಡುವೆ ಪೈಪೋಟಿ.ಆ ಬಸ್ಸೋರು ಅಷ್ಟು ಅಲಂಕರಿಸಿದ್ದಾರೆ, ನಾವೇನು ಕಮ್ಮಿ ಅನ್ನೋ ಭಾವ ಪ್ರತಿಯೊಬ್ಬರಲ್ಲೂ ವಿಜಯದಶಮಿ ಸಂದರ್ಭದಲ್ಲಿ. ಆಯುಧಪೂಜೆ ದಿನ ಫುಲ್ ನಾಮಗಳ ಬಳಿದ , ಹೂಗಳ ನಡುವೆ ಅದ್ಯಾವ ಕಂಪೆನಿ ಬಸ್ಸು ಅಂತ ಹುಡುಕೋದೇ ದೊಡ್ಡ ಸಾಹಸ ಅನ್ನೋ ತರದ ಅಲಂಕಾರವಿರುತ್ತಿತ್ತು ನಮ್ಮ ಬಾಲ್ಯದಲ್ಲಿ ಕಾಣುತ್ತಿದ್ದ ಬಸ್ಸುಗಳಲ್ಲಿ.ಪದವಿ, ಕೆಲಸ ಅಂತ ಸರಿಯಾಗಿ ರಜೆಯೇ ಸಿಗದೇ ದಸರಾ ಸಂಭ್ರಮಗಳೆಲ್ಲಾ ಮರೆತುಹೋಗುವ ಅಪಾಯವಿದ್ದ ಸಂದರ್ಭದಲ್ಲಿ ನಾಲ್ಕು ದಿನ ರಜಾ ಅಂದಾಗ ಸ್ವರ್ಗವೇ ಧರೆಗಿಳಿದಷ್ಟು ಖುಷಿಪಟ್ಟಿದ್ದೆ ನಾನು.  ಊರಿಗೆ ಹೋಗೋಕೆ ಬಸ್ಸು ಸಿಗುತ್ತೋ ಇಲ್ಲವೋ ಅನ್ನೋ ಭಯಕ್ಕಿಂತ ಆಗ ಕಾಡುತ್ತಿದ್ದಿದ್ದು ದಸರಾದ ಬಸ್ಸುಗಳ ಅಲಂಕಾರ ನೋಡ್ಬೋಕು ಅನ್ನೋ ತವಕವಷ್ಟೆ !

ದಶಮಿ ದಿನ ಅಂದ್ರೆ ನಮಗೆ ಖುಷಿ ಕೊಡೋ ಇನ್ನೊಂದು ಸಂಗತಿ ಅಂದ್ರೆ ನಮ್ಮೂರಿಗೆ ತೀರಾ ಹತ್ತಿರವಿದ್ದ ತೆರವಿನಕೊಪ್ಪ ಅಥವಾ ತ್ಯಾರಣಕೊಪ್ಪದ ಅಕ್ಕನಾಗಮ್ಮ ದೇವಿಯ ಜಾತ್ರೆ. ಸಾಗರದ ಸುತ್ತಮುತ್ತಲ ಜನರಷ್ಟೇ ಅಲ್ಲದೇ ದೂರದ ಊರುಗಳಿಂದಲೂ ನಾಗದೇವತೆಯ ಮೇಲಿನ ನಂಬಿಕೆಯುಳ್ಳವರು, ಕಷ್ಟಗಳ ಪರಿಹಾರ ಅರಸೋರು ಬರುತ್ತಾರೆ ಇಲ್ಲಿಗೆ. ಜಾತ್ರೆ ಅಂದ್ರೆ ಜಾಯಿಂಟ್ ವೀಲು, ದೋಣಿ, ಗಿರಗಿಟ್ಲೆ ಅಷ್ಟೆ ಅದ್ರಲ್ಲೇನಿದೆ ಅಂತ ಪೇಟೆ ಮಕ್ಕಳು ಕೇಳುವಂತಹ ಜಾತ್ರೆಯಲ್ಲ ಅದು. ಸಾವಿರಾರು ಜನ ಸೇರಿದ್ರೂ ಹಳ್ಳಿಯ ಸೊಗಡು ಮರೆಯದ ಅಲ್ಲಿ ಜಾತ್ರೆ ಅಂದ್ರೆ ಕಾಣೋದು ಹಣ್ಣು ಕಾಯಿ ವ್ಯಾಪಾರದವರು, ಬೋಂಡಾ ಬಜ್ಜಿ ಕರಿಯೋರು, ಜಿಲೇಬಿ ಜಹಾಂಗೀರ್ ಬಿಡೋರು,ಐಸ್ ಕ್ಯಾಂಡಿ,ಮಂಡಕ್ಕಿ, ಬೆಂಡು ಬತ್ತಾಸು ಮಾರೋರು ಇತ್ಯಾದಿ ಇತ್ಯಾದಿ. ಚಾಕಪೀಸಿದು ತಿನ್ನೋದಲ್ಲ ಅಂತ ಹೇಳ್ತಿದ್ದ ಅಜ್ಜ ಚಾಕಪೀಸಿನ ತುಂಡನ್ನ ಮುರಿದು ಬಾಯಿಗಿಟ್ಟುಕೊಂಡರೆ ಏನಾಗಬೇಡ . ಹೆ ಹೆ, ಇದು ಚಾಕಪೀಸಲ್ವೋ , ಬತ್ತಾಸು ಅಂತ ಅವರು ನಗುತ್ತಿದ್ರೆ, ಮೊದಲ ಬಾರಿಗೆ ಕುರಿಯಾದ ಭಾವ ಎಳೆಯರಾದ ನಮ್ಮದು !. ಅಂದಿಂದ ಇಂದಿನವರೆಗೂ ಜಾತ್ರೆ ಅಂದ್ರೆ ಒಂದು ಕಾಲು ಕೇಜಿಯಾದ್ರೂ ಬೆಂಡು ಬತ್ತಾಸು ತಗೊಳ್ಳದೇ ಬರೋಲ್ಲ. ಜಾತ್ರೆಗಳಲ್ಲಿ ಮಾತ್ರ ಇದು ಸಿಗೋದು ಅನ್ನೋ ಭಾವವೋ, ಈ ಮೂಲಕವಾದ್ರೂ ಅದನ್ನು ಮಾಡುವವರ ಪ್ರೋತ್ಸಾಹಿಸೋಣ ಅನ್ನೋ ಸದುದ್ದೇಶವೋ ಇದರ ಹಿಂದಿದ್ದಿದ್ದಲ್ಲ. ನಮ್ಮನ್ನು ಸೆಳೆಯುತ್ತಿದ್ದಿದ್ದು ಅದರ ಸವಿಯಷ್ಟೆ. ಬತ್ತಾಸು ಅಂದ್ರೆ ಏನಂತಾ ಗೊತ್ತಿಲ್ಲದೋರಿಗೆ ಅದ್ರ ಫೋಟೋ ತೆಗೆದು ಹಾಕಬೇಕಾದ ಪರಿಸ್ಥಿತಿ ಬರಬಹುದೇನೋ ಅನ್ನೋ ಭಯ ಬತ್ತಾಸಿನೊಳಗಣ ಕಡಲೆಯಂತೆ ತಣ್ಣಗೆ ಅಡಗಿ ಕುಳಿತಿತ್ತು.

ದಸರಾಕ್ಕೆ ಒಂದಿಷ್ಟು ಅಂಗಡಿಗಳಲ್ಲಿ ಅಂಗಡಿಪೂಜೆಯ ಸಂಭ್ರಮ. ಅಂಗಡಿಗಳನ್ನೆಲ್ಲಾ ಬಣ್ಣದ ಪೇಪರುಗಳಿಂದ, ವಿದ್ಯುತ್ ಸರಗಳಿಂದ ಅಲಂಕರಿಸೋದ ನೋಡೋಕೆ ಅಂತ್ಲೇ ಸಂಜೆಯಾಗೋದನ್ನ ಕಾಯುತ್ತಿದ್ದ ದಿನಗಳಿದ್ದವು. ಪೇಟೆಯಲ್ಲಿ ಅದೆಷ್ಟು ಪಳಪಳ ಬೆಳಕನ್ನು,ಎಲ್.ಇ.ಡಿ ಸರಗಳನ್ನ ನೋಡಿದ್ರೂ ದಿನದ ಅದೆಷ್ಟೋ ಗಂಟೆಗಳ ಪವರ್ ಕಟ್ಟಿನ ನಡುವೆಯೂ ಲಕ್ಷ್ಮೀ ಪೂಜೆಗೋ, ಅಂಗಡಿಪೂಜೆಗೋ ಹಾಕಿದ ಸರ ಮಿಣಿ ಮಿಣಿ ಮಿಣುಕೋ ದೀಪದ ಸಾಲನ್ನು ನೋಡೋದೇ ಖುಷಿ.ಅಂಗಡಿಪೂಜೇಲಿ ಏನೋ ಕೊಡ್ತಾರೆ ಅಂತಲ್ಲ ಆ ಸಂದರ್ಭದಲ್ಲಾದ್ರೂ ಜೊತೆಯಾಗ್ತಾರಲ್ಲ ಸ್ನೇಹಿತರು ಅನ್ನೋ ಸಂಭ್ರಮ. ಪೇಟೆ ಸುತ್ತೋ ಸಂದರ್ಭಗಳಲ್ಲಿ ಅದೆಷ್ಟೋ ವರ್ಷಗಳಿಂದ ಕಾಣದಿದ್ದ ಅದೆಷ್ಟೋ ಗೆಳೆಯರು ಸಿಕ್ಕಿದ್ದುಂಟು ಈ ವರ್ಷದಂತೆಯೇ ! ಸಾಗರದ ಮಾರಿಕಾಂಬೆ ದೇವಸ್ಥಾನದ ಅಮ್ಮನ ಮನೆಗೂ, ಗಂಡನ ಮನೆಗೂ ನೂರು ಮಾರಿನ ದೂರವಾದ್ರೂ ಅಲ್ಲಿನ ಅಲಂಕಾರಗಳ ನೋಡುತ್ತಾ, ಪಕ್ಕದಲ್ಲೇ ಇರೋ ಸಾಂಸ್ಕೃತಿಕ ಕಾರ್ಯಕ್ರಮಗಳ ನೋಡುತ್ತಾ ಅವೆರಡನ್ನೂ ನೋಡೋಕೆ ಹೋದವರು ಅರ್ಧಘಂಟೆ ಕಳೆದುದ್ದು ಗೊತ್ತಾಗದಿದ್ದಿದು, ಅಲ್ಲೇ ಪಕ್ಕದ ಸಾಗರ್ ಹೋಟಲ್ ಸರ್ಕಲ್ಲಲ್ಲಿ ಈಗ ಸಾಗರ ಹೋಟೆಲ್ ಇಲ್ಲದಿದ್ರೂ ಆ ಹೆಸರು ಮಾತ್ರ ಖಾಯಂ ಆಗಿ ಉಳ್ಕಂಡಿರೋದು.. ಹೀಗೆ ಅದೆಷ್ಟೋ ನೆನಪುಗಳು ದಸರಾ ಅಂದೊಡೆ ಎದುರಾಗುತ್ವೆ.  ಬಾಲ್ಯದ ಮಧುರ ಭಾವಗಳ ಹಸಿರಾಗಿಸುತ್ವೆ. ಶಿವಮೊಗ್ಗೆಯಲ್ಲಿ ಓದಿದ ವರ್ಷಗಳಲ್ಲಿ ಕಂಡ ಅಲ್ಲಿ ನೆಹರೂ ಮೈದಾನದಲ್ಲಿ ಊರ ಎಲ್ಲಾ ದೇವರುಗಳೂ ಬಂದು ಸೇರೋ ದಸರಾ ಆಚರಣೆ, ಬೆಂಗಳೂರಲ್ಲಿ ಬೆಂಗಾಳಿಗಳ ದುರ್ಗಾ ಪೂಜೆ,ಆಫೀಸ ಆಚರಣೆಗಳು.. ಹೀಗೆ ಹತ್ತು ಹಲವು ನೆನಪುಗಳು ಜೊತೆ ಸೇರುತ್ತೆ. ಮತ್ತೊಂದಿಷ್ಟು ನೆನಪುಗಳ ಜೊತೆ ಭೇಟಿಯಾಗೋಣ.. ಮುಂದಿನ ವಾರದಲ್ಲಿ

ಹಂಪಿ ಪ್ರವಾಸ ಕಥಾನಕ -೬ :ಕಡ್ಲೆಕಾಳು ಗಣೇಶನಿಗೆ ಜೈ ಎನ್ನುತ್ತಾ

ಏಕಶಿಲಾ ನಂದಿಯ ಬಳಿಯಿದ್ದ ಸೈಕಲ್ ಪಡೆದ ನಾವು ಹಂಪಿಬಜಾರಿನ ಮೂಲಕ ಹಂಪಿ ಬಸ್ಟಾಂಡವರೆಗೆ ಬಂದೆವು. ಇಲ್ಲೇ ಹತ್ತಿರದಲ್ಲಿರೋದ್ರಿಂದ ಕಡ್ಲೆಕಾಳು ಗಣೇಶ ಮತ್ತು ಹೇಮಕೂಟದಲ್ಲಿರೋ ದೇಗುಲಗಳನ್ನು ನೋಡೋಣ ಅಂತ ಸೈಕಲ್ ಅತ್ತ ತಿರುಗಿಸಿದೆವು. ಘಂಟೆ ನಾಲ್ಕಾಗುತ್ತಾ ಬಂದಿದ್ದರೂ ಮಧ್ಯಾಹ್ನದ ಊಟ ಮಾಡಿಲ್ಲವೆಂಬ ಚಿಂತೆ ಕಾಡುತ್ತಿರಲಿಲ್ಲ. ಬಾಡಿಗೆ ಸೈಕಲ್ ತಗೊಂಡಿದ್ರೂ ನಡೆದಾಟದಲ್ಲೇ ಅರ್ಧದಿನ ಕಳೆದಾಗಿದೆ. ಮುಂದಿನ ಸ್ಥಳಗಳನ್ನಾದರೂ ಸೈಕಲ್ಲಲ್ಲಿ ನೋಡಬೇಕೆಂಬ ಬಯಕೆ ಆಲೋಚನೆ ಮೂಡುತ್ತಿತ್ತು. ಆ ಆಲೋಚನೆಯಲ್ಲೇ ಕಡ್ಲೆಕಾಳು ಗಣೇಶ ದೇವಸ್ಥಾನಕ್ಕೆ ಸಾರೋ ಏರುಹಾದಿಯಲ್ಲಿ ಸೈಕಲ್ ಓಡಿಸಿದೆವು. ಸೈಕಲ್ಲಿನ ಬಂಪರ್ ಇಂದ ಇಳಿಯದೇ ಏರನ್ನು ಹತ್ತಿಸೋಕೆ ಸ್ವಲ್ಪ ಶಕ್ತಿ ಬೇಕು. ಸೈಕಲ್ ತುಳಿದು ಅಭ್ಯಾಸವೂ ಇರಬೇಕು. ಹೈಸ್ಕೂಲ್ ದಿನಗಳಲ್ಲಿ ನಮ್ಮೂರಿಂದ ಕೆಳದಿಗೆ ಸಾಗೋ ಹಾದಿಯಲ್ಲಿನ ಸುಮಾರು ಅರ್ಧ ಕಿ.ಮೀ ಏರನ್ನ, ಹೈಸ್ಕೂಲಿಗೆ ಸಾಗುವಾಗ ಸಿಗೋ ಎ.ಪಿ.ಎಂ.ಸಿ ಏರು, ಸೊರಬ ರಸ್ತೆಯ ಸಿದ್ದೇಶ್ವರ ಶಾಲೆಯ ಪಕ್ಕದಿಂದ ಬಂದು ಶಿವಮೊಗ್ಗ ರಸ್ತೆಗೆ ಸೇರೋ ರಸ್ತೆಯ ಕೊನೆಯಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ನ ಏರನ್ನ ಬಂಪರಿಂದ ಇಳಿಯದೇ ಹತ್ತಿಸುತ್ತಿದ್ದರೂ ವರ್ಷಗಳಿಂದ ಸೈಕಲ್ಲೇ ತುಳಿಯದೇ ಅಭ್ಯಾಸ ಬಿಟ್ಟು ಹೋದ ಕಾರಣ ಈ ಏರು ಸ್ವಲ್ಪ ತ್ರಾಸ್ ಕೊಟ್ಟಿದ್ದು ನಿಜ ! ಆ ದಿನಗಳ ನೆನಪು ಹಸಿರಾಗಿಸಿದ್ದೂ ನಿಜ.

ಹೇಮಕೂಟ: 
ವಿರೂಪಾಕ್ಷ ದೇಗುಲಕ್ಕೆ ಸಾಗೋ ಮೊದಲು ಸಿಗೋ ಬೆಟ್ಟವೇ ಹೇಮಕೂಟ. ಕಡಲೇಕಾಳು ಗಣೇಶ, ಸಾಸಿವೇಕಾಳು ಗಣೇಶ, ಪ್ರಸನ್ನ ಆಂಜನೇಯ ಮೊದಲಾದ ೩೩ ದೇಗುಲಗಳಿವೆಯಿಲ್ಲಿ. ಒಂಭತ್ತನೇ ಶತಮಾನದಿಂದ ೧೪ನೇ ಶತಮಾನದ ಆದಿಯವರೆಗೆ ನಿರ್ಮಾಣವಾದ ಇಲ್ಲಿನ ದೇಗುಲಗಳ ಮಧ್ಯೆ ಸೂರ್ಯಾಸ್ತ ವೀಕ್ಷಣಾ ಸ್ಥಾನವೂ ಇದೆ. 

ಕಡಲೇಕಾಳು ಗಣೇಶ:
ಹೇಮಕೂಟದಲ್ಲಿರೋ ಮೂವತ್ಮೂರು ದೇಗುಲಗಳಲ್ಲಿ ಮೊದಲನೆಯದು ಕಡಲೇಕಾಳು ಗಣೇಶ ದೇವಸ್ಥಾನ.ಗಣಪನ ಹೊಟ್ಟೆ ಕಡಲೇಕಾಳಿನ ಆಕಾರದಲ್ಲಿದೆ ಎಂಬ ಕಾರಣಕ್ಕೆ ಆ ಹೆಸರಂತೆ. ಹದಿನೈದನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲದ ಗರ್ಭಗೃಹದಲ್ಲಿ ಚತುರ್ಭುಜನಾದ ಗಣಪನಿದ್ದರೆ ಹೊರಾಂಗಣದಲ್ಲಿ ದೇವಾನುದೇವತೆಗಳ ಕೆತ್ತನೆಗಳಿವೆ .

ಸಾಸಿವೇಕಾಳು ಗಣೇಶ:
ಆ ದೇಗುಲವನ್ನು ನೋಡಿ ವಾಪಾಸ್ ಬಂದರೆ ಸಿಗುವುದೇ ಸಾಸಿವೇಕಾಳು ಗಣೇಶ. ಇದಕ್ಕೆ ಯಾಕೆ ಈ ಹೆಸರಂತ ನೀವು ಈಗಾಗಲೇ ಊಹಿಸಿರುತ್ತೀರಿ :-) ಈ ಗಣಪನಿಗೆ ತನ್ನದೇ ಆದ ಗುಡಿಯಿರದಿದ್ದರೂ ಅವನನ್ನು ಗಾಳಿ ಮಳೆಗಳಿಂದ ರಕ್ಷಿಸಲೋಸುಗವೇ ಒಂದು ಮಂಟಪವಿದೆ. ಗಣಪನ ಬಳಿ ಹೋಗಿ ಅದನ್ನ ಮುಟ್ಟಿ ಹಾಳು ಮಾಡದಂತೆ ಈಗ ಬೇಲಿಯೊಂದನ್ನು ಹಾಕಲಾಗಿದೆ. ಈ ಗಣಪನನ್ನು ಹಿಂಭಾಗದಿಂದ ನೋಡಿದಾಗ ದೇವಿ ಪಾರ್ವತಿಯ ರೂಪ ಕಾಣುವಂತೆ ಕೆತ್ತಿರುವುದು ಶಿಲ್ಪಿಯ ಕೈಚಳಕ. 
ಇದನ್ನು ನೋಡೋ ಹತ್ತಿಗೆ ನಾಲ್ಕೂವರೆಯಾಗುತ್ತಾ ಬಂದಿತ್ತು. ಯಾವುದಾದರೂ ದೂರದ ಸ್ಥಳವ ನೊಡಲೇಬೇಕಯ್ಯಾ ಅಂತ ಹಜಾರರಾಮ ದೇವಸ್ಥಾನದತ್ತ ಸೈಕಲ್ ತುಳಿದೆವು. ಆ ದಾರಿಯಲ್ಲಿ ಮೊದಲು ಸಿಕ್ಕಿದ್ದು ಅಂತಃಪುರ ಆವರಣ

ಅಂತಃಪುರ ಆವರಣ/zanana enclosure
ಪಂಚಕೋನಾಕೃತಿಯ ಆವರಣದಲ್ಲಿರೋ ಅಂತಃಪುರ(ದ ಅವಶೇಷಗಳು) ಕೋಟೆಯ ಉತ್ತರಭಾಗದಲ್ಲಿತ್ತು ಎನ್ನುತ್ತೆ ಇತಿಹಾಸ. ಇಲ್ಲಿಂದ ಶುರುವಾಗೋ ಕಟ್ಟಡಗಳಲ್ಲಿ ರಾಣಿ ಅರಮನೆಯ ಅಧಿಷ್ಠಾನ(basement), ಜಲಮಹಲ್ , ಎರಡಂಸ್ತಿನ ಗಗನಮಹಲ್, ರಾಣಿಯರ ಸ್ನಾನದ ಕೊಠಡಿ ಮುಂತಾದ ರಚನೆಗಳಿವೆ.ಇಲ್ಲಿಂದ ಮುಂದೆ ಸಾಗುತ್ತಿದ್ದಂತೆ ಖಜಾನೆ, ಟಂಕಸಾಲೆ ಮುಂತಾದ ಬೋರ್ಡುಗಳು ಕಾಣುತ್ತೆ. ಅಲ್ಲಲ್ಲಿ ನಿಂತು ಒಂದಿಷ್ಟು ಅಡ್ಡಾಡಿದರೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ಕಲ್ಲುಗಳು ಗತವೈಭವ ಸಾರಿದಂತೆ ಭಾಸವಾಗುತ್ತೆ. 

ರಾಣಿ ಅರಮನೆಯ ಅಧಿಷ್ಠಾನ:
ಇದ್ದಿರಬಹುದಾದ ರಾಣಿ ಅರಮನೆಯ ಕುರುಹಾಗಿ ಈಗ ಉಳಿದಿರುವುದು ಅದರ ಅಧಿಷ್ಠಾನವಷ್ಟೇ.ಇದರಲ್ಲಿ ಅಂತಹ ಕುಸುರಿ ಕೆಲಸಗಳು ಕಾಣದಿದ್ದರೂ ಒಳಗಿದ್ದ ಅರಮನೆಯ ಆಕಾರವನ್ನು ತೋರುತ್ತದೆ.

ಗಗನಮಹಲ್:
ರಾಣಿ ಅರಮನೆಯ ಅಧಿಷ್ಠಾನವನ್ನು ದಾಟಿ ಮುಂದೆ ಬಂದಾಗ ಸಿಗೋದೇ ಗಗನಮಹಲ್. ಇಂಡೋ ಇಸ್ಲಾಮಿಕ್ ಶೈಲಿಯ ಈ ಕಟ್ಟಡದ ಕಮಾನುಗಳು ಕಮಲದ ಪಕಳೆಗಳಂತೆ ಇರೋದರಿಂದ ಇದ್ರ ಹೆಸರು ಕಮಲಮಹಲ್ ಅಂತೇ ನನ್ನ ಬಾಯಿಗೆ ಬರೋದು. ಆಮೇಲೆ, ಇದು ಕಮಲವಲ್ಲ, ಗಗನಮಹಲ್ ಅಂತ ಸಾವರಿಸಿಕೊಳ್ಳೋ ಪ್ರಮೇಯ. 

ಗಜಶಾಲೆ:
ಅಲ್ಲಿಂದ ಹಾಗೇ ಮುಂದೆ ಬಂದರೆ ಸಿಗೋದೇ ಗಜಶಾಲೆ. ಹನ್ನೊಂದು ಗುಮ್ಮಟಗಳುಳ್ಳ ಇಂಡೋ ಇಸ್ಲಾಮಿಕ್ ಶೈಲಿಯ ಈ ಕಟ್ಟಡಗಳಲ್ಲಿ ಉನ್ನತವಾದ ಕಮಾನುಗಳ್ಳ್ಳ ದ್ವಾರಗಳಿವೆ. ವಿಜಯನಗರ ಸಾಮ್ರಾಜ್ಯ ಅಂದ್ರೆ ಅದರ ಸೈನ್ಯವೂ ದೊಡ್ಡದಿತ್ತೆಂದು ಓದಿರುತ್ತೇವೆ. ಅಷ್ಟು ದೊಡ್ಡ ಸೇನೆಯ ಆನೆಗಳಿವೆ ಬರೀ ಹನ್ನೊಂದು ಆನೆಗಳ ಕಟ್ಟುವಷ್ಟು ದೊಡ್ಡದ ಶಾಲೆ ಸಾಕಾ ಎನ್ನುವ ಅನುಮಾನ ಯಾರಿಗಾದರೂ ಬಾರದಿರದು. ಆದರೆ ಇಲ್ಲಿ ಅರಮನೆಯ ಪಟ್ಟದ ಆನೆಗಳನ್ನು ಮಾತ್ರ ಕಟ್ಟಲಾಗುತ್ತಿತ್ತು. ಉಳಿದವುಗಳನ್ನ ಬೇರೆಡೆ ಕಟ್ಟಲಾಗುತ್ತಿತ್ತು ಎನ್ನುವುದು ಹಲವರ ಅಭಿಪ್ರಾಯ. ಇಲ್ಲಿನ ಸುತ್ತಲಿನ ಕೆತ್ತನೆಗಳಲ್ಲಿ ಚೀನೀ/ಮಂಗೋಲಿಯನ್ ಮನುಷ್ಯರಿಬ್ಬರು ಆಯುಧಗಳೊಂದಿಗೆ ಸೆಣೆಸುತ್ತಿರುವ ಕೆತ್ತನೆಯಿದೆ. ಇಲ್ಲಿ ಯೋಧರ ಶಸ್ತ್ರಾಭ್ಯಾಸ ನಡೆಯುತ್ತಿತ್ತು, ಯೋಧರಿಗೆ ತರಬೇತಿ ನೀಡಲು ವಿದೇಶಗಳಿಂದಲೂ ಗುರುಗಳನ್ನು ಕರೆಸಲಾಗುತ್ತಿತ್ತು ಎಂದು ಈ ಶಿಲ್ಪವನ್ನು ಉಲ್ಲೇಖಿಸುವ ಜನರು ಹೇಳುತ್ತಾರೆ. ಇಲ್ಲಿ ಮೇಲೆ ಹೋಗಲಿರುವ ಮೆಟ್ಟಿಲುಗಳನ್ನು ನೋಡಿದಾಗ, ಮಧ್ಯಭಾಗದ ಗುಮ್ಮಟದಲ್ಲಿರುವ ರಚನೆಗಳನ್ನು ನೋಡಿದಾಗ ಮೇಲಂತಸ್ತಿನಲ್ಲೂ ಕೆತ್ತನೆಗಳಿರಬಹುದಾದ ಕುರುಹುಗಳು ಗೋಚರಿಸುತ್ತೆ. ಗಜಶಾಲೆಯನ್ನೇ ನೋಡುತ್ತಾ ಬಂದರೆ ಪಕ್ಕದಲ್ಲೆರುಡು ಕತ್ತರಿಸಲ್ಪಟ್ಟ ಆನೆಗಳ ಮೂರ್ತಿಗಳು, ಅದರ ಪಕ್ಕದಲ್ಲೊಂದು ದ್ವಾರವೂ ಕಾಣುತ್ತೆ. ಆ ದ್ವಾರ ವಾಸ್ತವವಾಗಿ ಒಂದು ಮುಚ್ಚಲ್ಪಟ್ಟ ಮ್ಯೂಸಿಯಂನ ಹೆಬ್ಬಾಗಿಲು ! ನಾವು ಹೋಗೋದು ಲೇಟಾಗಿದ್ದ ಕಾರಣ ಆ ಮ್ಯೂಸಿಯಂ ಬಾಗಿಲು ಹಾಕಿದಂತೇನು ಕಾಣುತ್ತಿರಲಿಲ್ಲ. ಅತ್ತ ಯಾರೂ ಸುಳಿಯದೇ ಬಾಗಿಲು ತೆಗೆಯದೇ ಯಾವ ಕಾಲವಾಯಿತೋ ಎಂದನಿಸುತ್ತಿತ್ತು. ಮುಂದಿನ ಬಾರಿ ಹಂಪಿಗೆ ಹೋದರೆ ಆ ಮ್ಯೂಸಿಯಂ ಯಾವಾಗ ತೆರೆಯುತ್ತೆ ಅಂತ ಯಾರಿಗಾದರೂ ಕೇಳೇ ಹೋಗಬೇಕೆಂದುಕೊಂಡೆವು ! ಅಲ್ಲಿನ ಮೂಲೆಯಲ್ಲಿ ಆಗಿನ ಕಾಲದ ಬೇಹುಕಾರಿಕಾ ಬುರುಜು(watch tower) ಒಂದು ಕಾಣುತ್ತೆ. ಈ ಬುರುಜು ದೂರದಿಂದಲೇ ಅಂತಃಪುರದ ಆವರಣದ ಹಾದಿಹೇಳುವಂತಿದೆ. ಈ ಬುರುಜಿನ ಹಿನ್ನೆಲೆಯಲ್ಲಿ ಸೂರ್ಯಾಸ್ತದ ಸೊಬಗನ್ನು ಸವಿಯೋದು ಅದ್ಭುತ ಅನುಭವ !
ಅಂತಃಪುರದ ಆವರಣದಿಂದ ಹೊರಬರೋಕೆ ಎರಡು ದಾರಿ. ಒಂದು ಗಗನಮಹಲ್ ಬಳಿಯಿಂದ ನಾವು ಒಳಹೊಕ್ಕ ದಾರಿ. ಮತ್ತೊಂದು ಅದರ ಹಿಂಬದಿಯಿಂದ ಬಂದು ಸೇರೋ ಹಾದಿ. ಎರಡನೆಯ ದಾರಿಯಲ್ಲಿ ಹಲವು ಪಾಳುಬಿದ್ದ ದೇಗುಲಗಳು ಸಿಗುತ್ತೆ. ಕೆಲವಕ್ಕೆ ಸಂರಕ್ಷಿತ ಸ್ಮಾರಕ ಅಂತ ಬೋರ್ಡು ಸಿಕ್ಕಿದ್ರೆ ಕೆಲವಕ್ಕೆ ಏನೂ ಇಲ್ಲ. ಒಂದೆಡೆ ಕೋಟೆಯಿಂದ ಹೊರಹೋಗೋ ಹೆಬ್ಬಾಗಿಲು ಕಾಣುತ್ತೆ. ಅಲ್ಲಿಯವರೆಗೂ ಹೋದ ನಾವು ವಾಪಾಸ್ ಬರುತ್ತಾ ರಂಗದೇವಾಲಯದ ಬಳಿ ಬಂದೆವು.

ರಂಗ/ಮಾಧವ ದೇಗುಲ, ದೇವಿಯ ದೇವಸ್ಥಾನ:
ಶಾಸನಗಳಲ್ಲಿ ಮಾಧವದೇಗುಲವೆಂದು ಕರೆಯಲ್ಪಡುವ ಈ ದೇಗುಲಕ್ಕೆ ರಂಗದೇವಾಲಯವೆಂದು ಹೆಸರುಂಟು.ಇದರ ನಿಖರಕಾಲನಿರ್ಣಯವಿರದಿದ್ದರೂ ಇಲ್ಲಿಯ ಶಾನನವೊಂದರ ಪ್ರಕಾರ ದೇವಾಲಯದಲ್ಲಿನ ನೃತ್ಯ, ಸಂಗೀತ ಕಾರ್ಯಕ್ರಮಗಳಿಗಾಗಿ ಇಲ್ಲಿನ ರಂಗಮಂಟಪವನ್ನು ಸದಾಶಿವರಾಯನ ಕಾಲದಲ್ಲಿ ಅಂದರೆ ಕ್ರಿ.ಶ ೧೫೪೫ರಲ್ಲಿ  ವಲ್ಲಭರಾಜುವಿನ ಪುತ್ರ ತಿಮ್ಮರಾಜು ಎಂಬುವವನು ಈ ದೇಗುಲವನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಈ ಸಂಕೀರ್ಣದಲ್ಲಿ ಪಶ್ಚಿಮಕ್ಕಿರುವ ಮಾಧವದೇಗುಲವಲ್ಲದೇ,ಪೂರ್ವಕ್ಕಿರುವ ದೇವಿ ದೇವಸ್ಥಾನವೂ ಇದೆ.ಗರ್ಭಗೃಹ, ಶುಕನಾಸಿ,ಹದಿನೆಂಟು ಕಂಬಗಳ ಮುಖಮಂಟಪವನ್ನು ಹೊಂದಿರೋ ದೇಗುಲಕ್ಕೆ ನಾವು ಹೋದಾಗ ಬೀಗಬಿದ್ದಿದ್ದರೂ ಮುಖಮಂಟಪದ ಉತ್ತರಗೋಡೆಗೆ ಮುಖಮಾಡಿರೋ ಸುಮಾರು ೩ ಮೀ ಎತ್ತರದ ಆಜಾನುಬಾಹು ಹನುಮನ ದರ್ಶನಭಾಗ್ಯ ಸಿಕ್ಕಿತು. ದೇವಿಯ ದೇಗುಲವನ್ನೂ ಎತ್ತರದ ಅಡಿಪಾಯದ ಮೇಲೆ ಕಟ್ಟಲಾಗಿದ್ದು ಈ ದೇಗುಲಗಳಲ್ಲಿ ದಶಾವತಾರ ಮತ್ತು ಗರುಡ,ಸೂರ್ಯ ಮೊದಲಾದ ಪೌರಾಣಿಕ ಕೆತ್ತನೆಗಳನ್ನು ಕಾಣಬಹುದು.ಅಲ್ಲಿಂದ ಹಾಗೇ ಬಂದ ನಾವು ವಾಚ್ ಟವರನ್ನು ನೋಡುತ್ತಾ ಹಿಂದೆ ಬಂದ ಮುಖ್ಯ ಹಾದಿಯನ್ನು ಹಿಡಿದು ಹಜಾರರಾಮ ದೇಗುಲದತ್ತ ಸಾಗಿದೆವು. 

ಮ್ಯೂಸಿಯಂ:
ಗನಶಾಲೆ/ಆನೆಲಾಯದಿಂದ ಹೊರಬಂದು ಮುಂದೆ ಸಾಗೋ ಹಾದಿಯಲ್ಲೇ ಒಂದು ಮ್ಯೂಸಿಯಂ ಸಿಗುತ್ತೆ. ಗಗನಮಹಲ್ಲಿಗೆ ತೆಗೆದುಕೊಂಡ ಪಾಸ್ ಇಲ್ಲಿಗೆ ಕೂಡ ನಡೆಯುತ್ತೆ. ಆದರೆ ನಾವು ಹೋದ ದಿನ ಅಕ್ಟೋಬರ್ ೨ರ ಸಾರ್ವತ್ರಿಕ ರಜಾದಿನವಾದ್ದರಿಂದ ಮ್ಯೂಸಿಯಂ ತೆಗೆದಿರದೇ ಅದನ್ನು ಹೊರಗಿನಿಂದ ಮಾತ್ರ ನೋಡಿಕೊಂಡು ಮುಂದೆ ಸಾಗಬೇಕಾಯಿತು. 

ಹಜಾರ ರಾಮಚಂದ್ರ ದೇವಾಲಯ:
ರಾಣಿ ವಾಸಸ್ಥಾನದಿಂದ ಮುಂದೆ ಬಂದರೆ ಸಿಗೋದು ರಾಜವಾಸಸ್ಥಾನ.ಅಲ್ಲಿ ನಿರ್ಮಿಸಲ್ಪಟ್ಟಿರೋ ಏಕೈಕ ದೇವಸ್ಥಾನ ಹಜಾರ ರಾಮಚಂದ್ರ ದೇವಸ್ಥಾನ.ಈ ದೇವಾಲಯ ರಾಜನ ವಾಸಸ್ಥಾನದ ಆವರಣ(ಹಜಾರ)ದಲ್ಲಿ ಬರುವುದರಿಂದ ಮತ್ತು ರಾಮಾಯಣದ ಹಲವು ದೃಷ್ಯಾವಳಿಗಳನ್ನು ಹೊಂದಿರೋ ಕಾರಣ ಇದಕ್ಕೆ ಹಜಾರ ರಾಮಚಂದ್ರ ದೇಗುಲವೆಂಬ ಹೆಸರಂತೆ. ಹದಿನೈದನೇ ಶತಮಾನಕ್ಕೆ ಸೇರಿದ ಈ ದೇಗುಲದ ವಾಸ್ತುಶಿಲ್ಪಗಳು ದ್ರಾವಿಡ ಶೈಲಿಯಲ್ಲಿವೆ ಎನ್ನುತ್ತಾರೆ.ಗರ್ಭಗೃಹ, ಅಂತರಾಳ, ಅರ್ಧಮಂಟಪ ಮತ್ತು ನರ್ತನಮಂಟಪ/ರಂಗಮಂಟಪಗಳನ್ನು ಹೊಂದಿರೋಈ ದೇಗುಲದಲ್ಲಿ ಭಾಗವತದ ಕೆಲವು ಕೆತ್ತನೆಗಳಿದ್ದರೂ ಇದರ ಹೆಸರೇ ಹೇಳುವಂತೆ ಇದು ಪ್ರಸಿದ್ದಿಯಾಗಿರುವುದು ರಾಮಾಯಣದ ಕೆತ್ತನೆಗಳಿಗೆ.ಮೂರು ಹಂತದಲ್ಲಿ ಜೋಡಿಸಿರುವ ರಾಮ ರಾವಣ ಕಾಳಗ, ರಾಮನ ಪಟ್ಟಾಭಿಷೇಕ, ಲವ-ಕುಶರ ಕೆತ್ತನೆಗಳೇ ಮೊದಲಾದ ಶಿಲ್ಪಗಳು ಕಣ್ಮನ ಸೆಳೆಯುತ್ತವೆ. ಇಲ್ಲಿನ ಒಳಗಿರುವ ಗರ್ಭಗೃಹಗಳು ಸದ್ಯಕ್ಕೆ ಖಾಲಿಯಿವೆಯಾದರೂ ಒಳಗಿನ ಕರಿಗಲ್ಲುಗಳ ಸ್ಥಂಭಗಳ ಕೆತ್ತನೆಗಳು ಮತ್ತೆ ಗಮನ ಸೆಳೆಯುತ್ತವೆ. ಹೊರಭಾಗದಲ್ಲಿ ಕಾಣಸಿಗೋ ಸ್ಮಶಾನಭೈರವಿಯ ಶಿಲ್ಪ ಹೊಯ್ಸಳ ಶೈಲಿಯ ಪ್ರಭಾವವೂ ಇದರ ಮೇಲೆ ಬಿದ್ದಿರಬಹುದಾ ಎಂಬ ಆಲೋಚನೆಯನ್ನು ಹುಟ್ಟಿಸುತ್ತದೆ

ಮಹಾನವಮಿ ದಿಬ್ಬ:
ಅಲ್ಲಿಂದ ಹಾಗೇ ಮುಂದಕ್ಕೆ ಬಂದ ನಾವು ಹೊಕ್ಕಿದ್ದು ಮಹಾನವಮಿ ದಿಬ್ಬವಿದ್ದ ಆವರಣಕ್ಕೆ. ಈ ಆವರಣದಲ್ಲೊಂದು ಸ್ನಾನದ ಕೊಳ, ಅಂತರ್ಗತ ಮಂದಿರ ಮುಂತಾದ ರಚನೆಗಳೂ ಸಿಗುತ್ತೆ. ಅದನ್ನೆಲ್ಲ ಆಮೇಲೆ ನೋಡೋಣ ಎಂದು ನಾವು ಧಾವಿಸಿದ್ದು ಎತ್ತರಕ್ಕೆ ಗೋಚರಿಸುತ್ತಿದ್ದ ಮಹಾನವಮಿ ದಿಬ್ಬಕ್ಕೆ.ರಾಜಪ್ರಾಂಗಣದಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಿಸಿರುವ ಈ ದಿಬ್ಬವು ಸುಮಾರು ೮ ಮೀಟರಿನಷ್ಟು ಎತ್ತರವಿದೆ ಎನ್ನುತ್ತಾರೆ. ಮೂರಂತಸ್ತಿನ ಈ ದಿಬ್ಬದ ಮೇಲ್ಗಡೆಯವರೆಗೂ ಹತ್ತಿಹೋಗಲು ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳ ಪಕ್ಕದ ರಚನೆಯೂ ಅಮೋಘ. ಹದಿಮೂರನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಕಟ್ಟಡವನ್ನು ಹದಿನೈದನೇ ಶತಮಾನದಲ್ಲಿ ಸುಂದರ ಫಲಕಗಳಿಂದ ಹೊದಿಸಲಾಯಿತು ಎನ್ನಲಾಗುತ್ತೆ. ಇದಕ್ಕೆ ಪೂರ್ವ,ಪಶ್ಚಿಮ, ದಕ್ಷಿಣದಿಕ್ಕಿನಿಂದ ಹತ್ತಿಬರಲು ಮೆಟ್ಟಿಲುಗಳಿದ್ದು ದಕ್ಷಿಣದ ಮೆಟ್ಟಿಲುಗಳ ಪಕ್ಕ ಆನೆ ಮುಂತಾದ ಕೆತ್ತನೆಗಳಿವೆ. ಪಶ್ಚಿಮದ ಮೆಟ್ಟಿಲುಗಳು ಕಟ್ಟಡದ ಮಧ್ಯಭಾಗದಲ್ಲಿ ಬಂದು ಸೇರಿದರೆ ಪೂರ್ವದ್ದು ಕಟ್ಟಡದೊಳಗಿರುವ ಒಂದು ಕೋಣೆಯೊಂದರಿಂದ ಹೊರಬರುತ್ತೆ. ಕೆಳಗಡೆಯಿರುವ ಸಾಮಾಜಿಕ ಶಿಲ್ಪಗಳಲ್ಲದೇ ವೇದಿಕೆಯ ಮೇಲ್ಭಾಗದಲ್ಲೂ ಸ್ಥಂಭ ಮತ್ತು ಪೀಠಗಳ ಕುರುಹುಗಳು ದೊರಕಿದ್ದು ಅಲ್ಲೊಂದು ಸುಸಜ್ಜಿತವಾದ ವೇದಿಕೆಯಿದ್ದಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ವಿಜಯದಶಮಿಯ ಮತ್ತು ಮಹಾನವಮಿಯ ದಿನ ಮಹಾರಾಜರು ಈ ವೇದಿಕೆಯ ಮೇಲಿನಿಂದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆಂದು ಆಗಿನ ಇತಿಹಾಸಕಾರರಾದ ಅಬ್ದುಲ್ ರಜಾಕ್(ಕ್ರಿ.ಶ ೧೫೨೦)ಮತ್ತು ಡೊಮಿಂಗೋ ಪಾಯೆಸ್(ಕ್ರಿ.ಶ ೧೪೪೨-೪೩) ರ ಬರಹಗಳಲ್ಲಿ ದಾಖಲಿಸಿದ್ದಾರಂತೆ. 

ಭೂಮ್ಯಾಂತಗ್ರತ ಕೊಠಡಿ:
ರಾಜರ ಕಾಲದಲ್ಲಿ ಶಸ್ತ್ರಾಗಾರವೋ, ರಹಸ್ಯ ಕೋಠಿಯೋ ಆಗಿದ್ದಿರಬಹುದಾದ ಇದಕ್ಕೆ ಕೆಳಗೆ ಇಳಿದುಹೋಗಲು ಮೆಟ್ಟಿಲುಗಳಿವೆ. ಸದ್ಯಕ್ಕೆ ಇದರ ಮೇಲ್ಛಾವಣಿ ಒಂದೆಡೆ ಬಿದ್ದುಹೋಗಿದೆಯಾದರೂ ಮೆಟ್ಟಿಲುಗಳನ್ನಿಳಿದು ಕೆಳ ಪ್ರವೇಶಿಸಿ ಒಂದು ಸುತ್ತಿ ಹಾಕಿಬರೋಣವೆಂದರೆ ಕತ್ತಲೋ ಕತ್ತಲು !ನಮ್ಮಲ್ಲಿದ್ದ ಮೊಬೈಲ್ ಬ್ಯಾಟರಿಗಳಲ್ಲೇ ಬೆಳಕು ಕಂಡುಕೊಂಡು ಒಂದು ಸುತ್ತು ಹಾಕಿ ಬಂದದ್ದು ಒಂಥರಾ ಅಡ್ವೆಂಚರ್ ಅನುಭವವನ್ನು ಕೊಟ್ಟಿದ್ದು ಸುಳ್ಳಲ್ಲ

ಚತುರ್ಭುಜ ಸ್ನಾನದ ಕೊಳ:
ಮಹಾನವಮಿ ದಿಬ್ಬದ ಪಕ್ಕದಲ್ಲೇ ಇರೋ ಈ ಸ್ನಾನದ ಕೊಳಕ್ಕಿಂತಲೂ ಅದಕ್ಕೆ ನೀರನ್ನು ತರಲು ಮಾಡಿರೋ ವ್ಯವಸ್ಥೆ ಅದ್ಭುತ ಅನಿಸುತ್ತೆ. ದೂರದಿಂದ ನೀರು ತರೋಕೆ ಚಪ್ಪಡಿಗಳ ಓಣಿ ನಿರ್ಮಿಸಿ ಅದರಲ್ಲೂ ನೀರಿನ ಓಟವನ್ನು ಕರಾರುವಕ್ಕಾಗಿ ಲೆಕ್ಕ ಹಾಕಿ ನಿರ್ಮಿಸಿದ ನೀರು ಸರಬರಾಜ್ ವ್ಯವಸ್ಥೆಯನ್ನು ನೋಡಿದವರಿಗೆ ನಮ್ಮ ಪೂರ್ವಜರ ಬಗ್ಗೆ ಹೆಮ್ಮೆಯಾಗದೇ ಇರೋಕೆ ಸಾಧ್ಯವೇ ಇಲ್ಲ. ಅಲ್ಲಲ್ಲಿ ಕಲ್ಲುಗಳು ಬಿದ್ದುಹೋಗಿವೆಯಾದರೂ ೯೦% ಕಲ್ಲುಗಳು ೫೦೦ ವರ್ಷಗಳ ನಂತರವೂ ಹಾಗೇ ನಿಂತಿರೋದು ಅಚ್ಚರಿಯೇ ಸರಿ. ಈ ಕೊಳಕ್ಕೆ ಇಳಿಯೋಕೆ ಎರಡು ಹಂತದಲ್ಲಿ ಐದೈದು ಮೆಟ್ಟಿಲುಗಳ ರಚನೆಯಿದೆ. ಇನ್ನೂ ಇರಬಹುದಾದ ರಚನೆ ಸದ್ಯಕ್ಕೆಂತೂ ಇಲ್ಲಿನ ನೀರಿಂದ ಮುಚ್ಚಿಹೋಗಿದೆ. ಇಲ್ಲಿನ ಪ್ರತೀ ಕಲ್ಲಿನ ಮೇಲೂ ಏನಾದರೊಂದು ಹಳಗನ್ನಡಲಿಪಿಯಲ್ಲಿ ಬರೆದಿರೋದು ಈ ಕೊಳಕ್ಕೊಂದು ಪೂಜ್ಯ ಸ್ಥಾನ ತಂದುಕೊಟ್ಟಿದೆ ಎಂದು ಅನೇಕರು ಅಭಿಪ್ರಾಯಪಡುತ್ತಾರೆ

ಪಾನ್ ಸುಪಾರಿ ಬಜಾರ್:
ಅಲ್ಲಿಂದ ಹಾಗೇ ಮುಂದೆ ಬಂದಾಗ ಸಿಗೋದು ಪಾನ್ ಸುಪಾರಿ ಬಜಾರ್.ಹಂಪೆಯ ಎಲ್ಲಾ ಬಜಾರುಗಳಿಗೂ ಇಕ್ಕೆಲದಲ್ಲಿ ಕಲ್ಲಿನ ಪಡಸಾಲೆಯಿದ್ದರೆ ಈ ಬಜಾರಿಗೆ ಆ ತರದ ಯಾವ ರಚನೆಯೂ ಇಲ್ಲ. ಈ ಬಜಾರು ಈಗ ಎಲ್ಲೆಡೆಯಿರೋ ಖಾಲಿ ಮೈದಾನದಂತೇ ಇದೆ. ಅದರ ಪಕ್ಕದಲ್ಲಿ ಮುಂದೆ ಹೋದರೆ ಒಂದು ಧ್ವಜ ಸ್ಥಂಭ ಮತ್ತು ಪಾಳುಬಿದ್ದ ದೇಗುಲದ ರಚನೆ ಕಾಣುತ್ತೆ. 

ಬ್ಯಾಂಡ್ ಟವರ್ ಮತ್ತು ಗೋರಿ:
ಹಾಗೇ ಮುಂದೆ ಸಾಗೋ ರಸ್ತೆಯ ಹಿಡಿದು  ಹೋದರೆ ಮಹಮದ್ದೇನ್ ಗೋರಿ ಮತ್ತು ಬ್ಯಾಂಡ್ ಟವರ್ ಕಾಣುತ್ತೆ. ಬ್ಯಾಂಡ್ ಟವರಿನಿಂದ ಹೊರಬರೋ ಹೊತ್ತಿಗೆ ಹಜಾರರಾಮಕ್ಕೆ ಹೋದ ಟಾರ್ ರಸ್ತೆಗೆ ಮತ್ತೆ ಸೇರುತ್ತೆವೆ. ಅದರ ಎದುರಿಗೆ ಒಂದು ಬಂಡೆ ಮತ್ತೆ ಅದರ ಮೇಲಕ್ಕೆ ಹತ್ತುವಂತಹ ಮೆಟ್ಟಿಲುಗಳು ಕಾಣುತ್ತೆ. ಅದೇ ಕಮಾಂಡರ್ಸ್ ಕ್ವಾಟರ್ಸ್. ಹಾಗೇ ಮುಂದೆ ಬಂದರೆ ಭೂಮ್ಯಾಂತರ್ಗತ ದೇಗುಲ, ಅಕ್ಕ-ತಂಗಿ ಬಂಡೆ, ಉದ್ದಾನವೀರಭದ್ರ ದೇಗುಲ, ಚಂಡಿಕೇಶ್ವರ ದೇಗುಲ, ಲಕ್ಷ್ಮೀನರಸಿಂಹ ದೇಗುಲ ಮುಂತಾದವು ಸಿಗುತ್ತಾ ಹೋಗುತ್ತೆ.. ಆಗಲೇ ಕತ್ತಲು ಕವಿಯುತ್ತಾ ಬಂದಿದ್ದರಿಂದ ಉಳಿದವನ್ನು ನಾಳೆ ನೋಡೋಣವೆಂಬ ಉದ್ದೇಶದಿಂದ ವಿರೂಪಾಕ್ಷ ದೇಗುಲದತ್ತ ಬಂದೆವು. ಸೈಕಲ್ ವಾಪಾಸ್ ಮಾಡಿ ಸಂಜೆಯ ಬೆಳಕಲ್ಲಿ ವಿರೂಪಾಕ್ಷನ ದೇಗುಲದ ಸವಿಯನ್ನು ಸವಿದು ಹೊಸಪೇಟೆಯ ಬಸ್ಸನ್ನು ಹತ್ತಿದೆವು. 
ಮುಂದಿನ ಭಾಗದಲ್ಲಿ:
ಭೂಗತ ಶಿವಾಲಯದ ಒಳಕ್ಕಿಳಿದು

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

ಹಂಪಿ ಪ್ರವಾಸ ಕಥಾನಕ -೫ : ಪುರಂದರ ಮಂಟಪದತ್ತಣ ಪಯಣ

ಆಚೆ ದಡದ ಸಾಲು ದೇಗುಲಗಳ ಬಗ್ಗೆ ಅಚ್ಚರಿಪಡುತ್ತಾ, ಎತ್ತ ಸಾಗಿದರೂ ಅದೇ ಸರಿಯಾದ ದಾರಿಯೇನೋ ಎಂಬತ್ತಿದ್ದ ದೇಗುಲಗಳ, ಅವುಗಳಿಗೆ ಕರೆದೊಯ್ಯುತ್ತಿದ್ದ ಕಾಲು ಹಾದಿಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಬೋರ್ಡ್ ಹಾಕಿ ಮುಗಿಯೋ ಬಾಬತ್ತಲ್ಲ ಎಂದು ಆಲೋಚಿಸುತ್ತಾ ಎದುರಿಗೆ ಕಂಡ ಧ್ವಜಸ್ಥಂಭದ ದೇಗುಲದತ್ತ ದಾಪುಗಾಲಿಟ್ಟೆವು. ಧ್ವಜಸ್ಥಂಭವಿದೆ, ಕೆಳಗಿಳಿಯೋ ಮೆಟ್ಟಿಲುಗಳೂ ಇವೆ. ಆದರೆ ಅದ್ಯಾವ ದೇಗುಲವೆಂಬ ಮಾಹಿತಿಯೇ ಇರಲಿಲ್ಲ ಅಲ್ಲೆಲ್ಲೋ. ದಾಳಿಗೆ ತುತ್ತಾಗಿ ಗರ್ಭಗೃಹದಲ್ಲಿ ಪೂಜಾ ಮೂರ್ತಿಯಿಲ್ಲದ ಆ ದೇಗುಲ ಬಿಕೋ ಅನ್ನುತ್ತಿತ್ತು. ಅಲ್ಲಿಂದ ಮುಂದೆ ಸಾಗಿದರೆ ಒಂದು ಹಾದಿ, ವಾಪಾಸ್ ಬಂದು ಎಡಕ್ಕೆ ಸಾಗಿದರೆ ಮತ್ತೊಂದು ಹಾದಿ ! ಎರಡು ಹಾದಿಯೂ ವಿಠಲದೇಗುಲಕ್ಕೇ ಕೊಂಡೊಯ್ಯುತ್ತದೆ ಅಂತ ವಾಪಾಸ್ ಬರುವಾಗ ಮತ್ತಿದೇ ದೇಗುಲ ಸಿಕ್ಕಿದಾಗ ಗೊತ್ತಾಯ್ತು !
ಕೆಳಗಿನ ಹಾದಿಯಲ್ಲಿ ಸಿಗೋ ಸಣ್ಣ ತೊರೆಯನ್ನು ದಾಟಿ ಸ್ವಲ್ಪ ಮುಂದೆ ಸಾಗುವಷ್ಟರಲ್ಲಿ ವಿಠಲದೇಗುಲಕ್ಕೆ ದಾರಿ ಎಂಬ ಬೋರ್ಡ್ ಕಾಣುತ್ತೆ.

ಹರಕೆ ಮರ: 
ಆ ಬೋರ್ಡ್ ಹಿಡಿದು ಹಾಗೇ ಮುಂದೆ ಸಾಗುತ್ತಿದ್ದಾಗ ಒಂದು ವಿಚಿತ್ರ ಮರ ಕಂಡಿತು. ಅದರ ಕೊಂಬೆಗಳಿಗೆಲ್ಲಾ ಬಟ್ಟೆಗಳನ್ನು ಜೋತುಬಿಟ್ಟಿದ್ದಾರೆ. ಕೆಳಗೆ ಒಂದರ ಮೇಲೆ ಒಂದರಂತೆ ಜೋಡಿಸಿಟ್ಟಿರೋ ಕಲ್ಲುಗಳು. ಮನೆ ಕಟ್ಟಲಾಗದಿದ್ದವರು ಇಲ್ಲಿ ಬಂದು ಸಣ್ಣ ಕಲ್ಲುಗಳ ಜೋಡಿಸುತ್ತಾರಂತೆ. ಕಲ್ಲುಗಳು ಉರುಳದೇ ನಿಂತರೆ ಅವರ ಆಸೆಗಳು ನೆರವೇರುತ್ತವಂತೆ ! . ಇದೇ ತರಹ ಕೆಂಪಭೂಪ ಮಾರ್ಗದಲ್ಲಿ ಸಿಗೋ ಕಲ್ಲಬಂಡೆಯೊಂದರ ಬಳಿಯೋ ಸಣ್ಣ ಕಲ್ಲುಗಳ ನಿಲ್ಲಿಸಿಟ್ಟಿದ್ದು ಕಾಣಿಸುತ್ತಿತ್ತು.ಅದೆಂತೆಂತಾ ಹರಕೆಗಳೋ ಶಿವನೇ ಅನ್ನಿಸ್ತು.ಹಾಗೇ ಮುಂದೆ ಸಾಗಿದಾಗ ಮೊದಲು ಕಾಣೋದೇ ಪುರಂದರ ಮಂಟಪ. ರಸ್ತೆಯಿಂದ ಕೊಂಚ ಎಡಕ್ಕೆ ಸಾಗಿದರೆ ಪುರಂದರ ಮಂಟಪ, ಸೀದಾ ಮುಂದೆ ಸಾಗಿದರೆ ವಿಠಲ ದೇವಸ್ಥಾನ.

ಪುರಂದರ ಮಂಟಪ:
ವಿಜಯವಿಠಲ ದೇಗುಲದ ಪಕ್ಕದಲ್ಲೇ ಹರಿಯುವ ತುಂಗಭದ್ರಾ ನದೀ ತಟದಲ್ಲಿ ಪುರಂದರ ಮಂಟಪವಿದೆ. ಇಲ್ಲಿನ ದೇಗುಲಗಳ ಮೇಲೆ ದಾಳಿಯಾದಾಗ ಪುರಂದರದಾಸರು ವಿಠಲನ ಮೂರ್ತಿಯನ್ನು ಇಲ್ಲೇ ತುಂಗಭದ್ರಾ ನದಿಯಲ್ಲಿ ಅಡಗಿಸಿಟ್ಟರು ಎಂಬ ಐತಿಹ್ಯವಿದೆ. ತಣ್ಣಗೆ ಹರಿಯೋ ತುಂಗಭದ್ರೆಯ ದಡದಲ್ಲಿನ ಈ ಮಂಟಪದಲ್ಲಿ ಪುರಂದರದಾಸರ ವಿಗ್ರಹವಿದೆ. ಅದರೆದುರು ಉರಿಯೋ ದೀಪಗಳನ್ನೇ ದಿಟ್ಟಿಸುತ್ತ ಇಲ್ಲಿ ಧ್ಯಾನಮಗ್ನರಾದರೆ ಹೊತ್ತು ಕಳೆದದ್ದೇ ತಿಳಿಯೋಲ್ಲ. 

ವಿಜಯವಿಠಲ ಮಂದಿರ:
ಶಿಲೆಗಳು ಸಂಗೀತವಾ ಹಾಡಿದೆ ಎಂಬ ಹಾಡನ್ನು ನೀವು ಕೇಳಿರಬಹುದು. ಹಂಪೆಯ ವಿಜಯವಿಠಲ ದೇಗುಲ ಸಂಕೀರ್ಣದಲ್ಲಿನ ದೇಗುಲಗಳಲ್ಲಿ ಗೈಡುಗಳು ತಬಲಾ, ಮೃದಂಗ ಮುಂತಾದ ವಾದ್ಯಗಳ ಸರಿಗಮಪ ನುಡಿಸಿ ತೋರಿಸೋ ಇಲ್ಲಿನ ಕಂಬಗಳನ್ನು ನೋಡಿದಾಗ, ಅವುಗಳ ದನಿ ಆಲಿಸಿದಾಗ ಕವಿವಾಣಿ ಅಕ್ಷರಶಃ ಸತ್ಯ ಅನ್ನಿಸದಿರೋಲ್ಲ ! ಇಲ್ಲಿನ ಸಂಗೀತ ಮಂದಿರದ ಜೀರ್ಣೋದ್ದಾರ ಕೆಲಸ ನಡೆಯುತ್ತಿದ್ದು ಅಲ್ಲಿ ಯಾರನ್ನೂ ಬಿಡದಿದ್ದರೂ ಬೇರೆ ಮಂದಿರಗಳನ್ನು ಆಸ್ವಾದಿಸಬಹುದು. ಇಲ್ಲಿನ ಪ್ರಧಾನ ಆಕರ್ಷಣೆ ಕಲ್ಲಿನ ರಥ. ಕಿಡಿಗೇಡಿಗಳ ಕಾರಣದಿಂದ ಒಂದು ಚಕ್ರದ ಸ್ಥಾನ ಪಲ್ಲಟವಾಗಿದೆಯಾದರೂ ಉಳಿದ ಚಕ್ರಗಳು ಯಥಾಸ್ಥಾನದಲ್ಲಿದ್ದು ನೋಡುಗರ ಗಮನಸೆಳೆಯುತ್ತವೆ. ಇಲ್ಲಿನ ಕಡಿಯಲ್ಪಟ್ಟ ಆನೆಗಳ ಬಗ್ಗೆ, ಮುರಿದು ಬಿದ್ದ ಪ್ರವೇಶದ್ವಾರದ ಬಗ್ಗೆ, ಕಿಡಿಗೇಡಿಗಳ ದಾಂದಲೆಯ ಬಗ್ಗೆ ಹೇಳಿದಷ್ಟೂ ಬೇಜಾರೇ ಆಗೋದರಿಂದ ಅದರ ಬಗ್ಗೆ ಹೇಳದಿರೋದೇ ವಾಸಿ ಅನ್ನಿಸುತ್ತೆ. ಆದರೂ ಕಾಳಿಂಗಮರ್ಧನ ಕೃಷ್ಣ,ಶುಕಮುನಿ, ಯುದ್ದಾಶ್ವಗಳೇ ಮುಂತಾದ ಕೆತ್ತನೆಗಳು ಅಲ್ಲಲ್ಲಿ ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಂಡು ಗತವೈಭವವನ್ನು ಸಾರುತ್ತಿವೆ.ಕೆಲವೊಂದು ಶಿಲ್ಪಗಳ ಇತಿಹಾಸವನ್ನು ಕೆದಕಿದರೆ ಅದೇ ಒಂದು ಕುತೂಹಲಕಾರಿ ಕತೆಯಾಗಬಹುದು. ಉದಾಹರಣೆಗೆ: ಹಲಸಿನ ಕಾಯಿಯನ್ನು ಹೋಲುವ ಒಂದು ಕಾಯಿಯನ್ನು ಹಿಡಿದುಕೊಂಡಿರೋ ಮೂರ್ತಿ ! ರಾಮಾಯಣ ಮಹಾಭಾರತಗಳ, ಭಾಗವತದ, ರಾಜರುಗಳ ಕತೆ ಹೇಳೋ ಕೆತ್ತನೆಗಳನ್ನು ಎಲ್ಲೆಲ್ಲೋ ಕಾಣಬಹುದು. ಆದರೆ ಈ ತರದ ವಿಚಿತ್ರ ಮೂರ್ತಿಗಳು ಹಂಪೆಯುದ್ದಕ್ಕೂ ನಿಮ್ಮನ್ನು ಭೇಟಿಯಾಗುತ್ತಲೇ ಇರುತ್ತವೆ. ಇದನ್ನೆಲ್ಲಾ ನೋಡಿದಾಗ ಅನಿಸೋ ಒಂದು ಮಾತೆಂದ್ರೆ ನಾವು ಇತಿಹಾಸವನ್ನು ೯೦% ಅರಿತಿದ್ದೇವೆಂಬ ಭ್ರಮೆಯಲ್ಲಿರುತ್ತೇವೆ. ಆದ್ರೆ ಅರಿತಿದ್ದು ೧% ಮಾತ್ರವೇ ಆಗಿರುತ್ತೆ. ಗೊತ್ತಿರದ, ದಾಖಲಾಗದ ಇತಿಹಾಸದ ಅದೆಷ್ಟೋ ಮಜಲುಗಳು ಆದ್ಯಾವುದೋ ಮೂಲೆಯಲ್ಲಿ ತಣ್ಣಗೆ ಮಲಗಿರುತ್ತೆ !

ವಿಜಯವಿಠಲ ಮಂದಿರದ ಬಳಿಯಲ್ಲೇ ಕೆಳಗಿಳಿಯೋ ಮೆಟ್ಟಿಲುಗಳಿವೆ. ಅದರಲ್ಲಿ ಕೆಳಗಿಳಿದ್ರೆ ಭೂಮ್ಯಾಂತರ್ಗತ ಮಂದಿರವೊಂದು ಎದುರಾಗುತ್ತೆ ! ಸದ್ಯಕ್ಕೆ ಅಲ್ಲಿ ಪೂಜೆ ನಡೆಯದಿದ್ದರೂ ಅಂತಸ್ತುಗಳ ಮೇಲೆ ಅಂತಸ್ತು ಕಟ್ಟುತ್ತಾ ಆಗಸವ ತಲುಪ ಹೊರಟ ಇಲ್ಲಿನ ಶಿಲ್ಪಿಗಳು ಭೂಮಿಗಿಳಿಯೋದನ್ನೂ ಮರೆಯಲಿಲ್ಲ ಎಂಬ ಹೆಮ್ಮೆಯಾಗುತ್ತೆ. ಇದರ ಪಕ್ಕದಲ್ಲೇ ಕಲ್ಲಿನ ಕೆತ್ತನೆಯೊಂದಿದೆ. ಅದನ್ನು ತೋರೋ ಗೈಡುಗಳು ಅದರ ಹಲವು ಭಾಗಗಳನ್ನು ಬೇರೆ ಬೇರೆ ಕೋನಗಳಲ್ಲಿ ಮುಚ್ಚಿ ಅದರಲ್ಲಿ ಚಿಂಪಾಂಜಿ, ಆಂಜನೇಯ, ಕರಡಿ, ಹಾವು, ಹಸು ಹೀಗೆ ಎಂಟತ್ತು ಆಕಾರಗಳನ್ನು ತೋರಿಸಿ ಐದತ್ತು ನಿಮಿಷದ ಕತೆ ಹೇಳುತ್ತಾರೆ ! ಇತಿಹಾಸದ ಬಗೆಗಿನ ಆಸಕ್ತಿಯಿರೋ ವಿದ್ಯಾರ್ಥಿಗೆ ಈ ದೇಗುಲವೊಂದೇ ಹಲವು ದಿನಗಳ ಅಧ್ಯಯನದ ಆಗರವಾಗಬಹುದೇನೋ. ವಿಠಲಮಂದಿರದ ಹೊರಬಂದರೆ ಸಿಗೋ ಕಲ್ಲಿನ ರಥದೆದುರ ಬೃಂದಾವನ ಒಂದು ಫೋಟೋ ಪಾಯಿಂಟ್. ಇಲ್ಲಿಗೆ ಬರೋ ತಂಡಗಳಿಗೆಲ್ಲಾ ಇಲ್ಲಿನ ಗೈಡುಗಳು ಇದರೆದುರು ನಿಲ್ಲಿಸಿ ಫೋಟೋ ತೆಗೆಸೇ ತೆಗಿಸುತ್ತಾರೆ. ಅಂದ ಹಾಗೆ ಇಡೀ ದೇಗುಲದ ಪರಿಸರವ ತೋರಿಸೋ ಆ ಜಾಗದಲ್ಲೊಂದು ಪಟ ತೆಗೆಸಿಕೊಳ್ಳಲು ಮರೆಯಬೇಡಿ ! 
ಆ ಪರಿಸರದಲ್ಲಿ ಹಾಗೇ ಮುಂದೆ ಬಂದರೆ ಇಕ್ಕೆಲಗಳಲ್ಲಿ ಕಂಬಗಳಿರೋ ಮತ್ತೊಂದು ಬಜಾರ್ ಸಿಗುತ್ತೆ ! ಆ ಬಜಾರಲ್ಲೇ ಮುಂದೆ ಸಾಗುವವರಿಗೆ ಒಂದು ಆನಾಮಧೇಯ ದೇಗುಲ ಸ್ವಾಗತಿಸುತ್ತೆ. ದಶಾನನ ರಾವಣನ ಹತ್ತು ಬಾಣಗಳನ್ನ ರಾಮ ತನ್ನ ಹತ್ತು ಬಾಣಗಳಿಂದ ಎದುರಿಸುವಂತಹ ರಾಮಾಯಣದ ಅಧ್ಭುತ ಕಲ್ಪನೆಯ ಕೆತ್ತನೆಗಳಿರೋ ಈ ದೇಗುಲ, ಅದರ ಪಕ್ಕದಲ್ಲಿರೋ ಅನಾಮಧೇಯ ಧ್ವಜಸ್ಥಂಭದ ದೇಗುಲ, ಅದರ ಪಕ್ಕದಲ್ಲಿ ಇನ್ನೊಂದು , ಮತ್ತೊಂದೆನ್ನುವಂತೆ ಎದುರಾಗೋ ದೇಗುಲಗಳು… ಉಫ್.. ಸದ್ಯಕ್ಕೆ ಒಂದಿಷ್ಟು ಹುಲ್ಲು, ಲಂಟಾನದ ಪೊದೆಗಳು ಬೆಳೆದಿದೆಯಾದರೂ ಅವುಗಳತ್ತ ಸಾಗೋ ಹಾದಿ ಸವೆದೇ ಇದ್ದು ದಿನಾ ಒಂದಿಷ್ಟು ಜನರಾದರೂ ಅದರತ್ತ ಸಾಗೇ ಸಾಗುತ್ತಾರೆ ಎಂಬ ಭಾವನೆ ಮೂಡಿಸುತ್ತೆ. ಜೊತೆಗೆ ಇವುಗಳ ಮೂಲಸ್ವರೂಪವನ್ನ ಉಳಿಸಿಕೊಳ್ಳಲಾಗಲಿಲ್ಲವಲ್ಲ, ಇದರ ಬಗ್ಗೆ ಒಂದಿಷ್ಟು ಮಾಹಿತಿಫಲಕಗಳನ್ನಾದರೂ ಹಾಕಲಿಲ್ಲವಲ್ಲ ಎಂಬ ಬೇಸರವೂ ಕಾಡುತ್ತೆ. ಮಧ್ಯಾಹ್ನದ ಸಮಯದಲ್ಲಿ ಇಲ್ಲಿನ ದೇಗುಲಗಳ ಮೇಲೆ ಮೂಡಿದ್ದ ಮೋಡ ವಿಷ್ಣುವಿನ ಮೇಲೆ ಹೆಡೆ ಚಾಚಿರೋ ಅನಂತನನ್ನು ನೆನಪಿಸಿದ್ದು ಸುಳ್ಳಲ್ಲ ! ನಾವು ನಡೆದುಬಂದ ಹಾದಿಯಲ್ಲದೇ ವಿಜಯವಿಠಲ ದೇಗುಲಕ್ಕೆ ನೇರವಾಗಿ ಬರಬಹುದಾದ ಬಸ್ಸ ಹಾದಿಯಿದೆ. ಹಂಪಿದರ್ಶನ ಬಸ್ಸಿನವರು, ಆಟೋದವರು ಹಾಗೇ ಬರುತ್ತಾರಿಲ್ಲಿಗೆ

ಶಾಸನವುಳ್ಳ ವಿಷ್ಣು ದೇವಾಲಯ:
ದೇಗುಲದ ಎಡಭಾಗದಿಂದ ಪುರಂದರಮಂಟಪವನ್ನು ಕಂಡು ಒಳಹೊಕ್ಕಿದ್ದ ನಾವು ವಾಪಾಸ್ ಬರುವಾಗ ಮತ್ತೊಂದು ಹಾದಿಯಲ್ಲಿ ಹೊರಬಂದೆವು. ಅಲ್ಲೊಂದು ಮಂಟಪ ಎದುರಾಗುತ್ತೆ. ಪಕ್ಕದಲ್ಲೇ ನಂದಿಧ್ವಜವಿರೋ ಒಂದು ಭಗ್ನ ಶಿವಾಲಯ. ಅದರ ಪಕ್ಕದಲ್ಲೇ ಶಾಸನವುಳ್ಳ ವಿಷ್ಣು ದೇವಾಲಯ ಸಿಗುತ್ತೆ.

ತುಲಾಭಾರ ಮಂಟಪ(kings balanace)
ಅಲ್ಲಿಂದ ಹಾಗೇ ಮುಂದೆ ಬಂದರೆ ಅಲ್ಲಿರೋ ಬೃಹತ್ ಬೇವಿನ ಮರದ ಪಕ್ಕದಲ್ಲಿ ಶ್ರೀ ಕೃಷ್ಣದೇವರಾಯನ ತುಲಾಭಾರ ಮಂಟಪ ಸಿಗುತ್ತೆ. ತುಲಾಭಾರ ಮಂಟಪದಿಂದ ಮುಂದೆ ಸಾಗಿದಂತೆ ಅದೆಷ್ಟೋ ಹೆಸರಿಲ್ಲದ ದೇಗುಲಗಳು ಕಾಣುತ್ತೆ. ದಾರಿ ಪಕ್ಕ ಸಿಕ್ಕ ದೇಗುಲಗಳತ್ತ ಸುಳಿದ ನೆನಪಿಗೆ ಅವುಗಳದೊಂದೊಂದು ಚಿತ್ರ ತೆಗೆದುಕೊಂಡು ಇಟ್ಟುಕೊಂಡೆವಾದರೂ ಅವೇನು, ಅವುಗಳ ಹಿನ್ನೆಲೆಯೇನು ಎಂಬುದರಿಯದ ಬೇಸರದಲ್ಲಿ ಹಾಗೇ ಮುಂದೆ ಸಾಗಿದೆವು.  ಸಾಗಿದ್ದಾದರೂ ಎಲ್ಲಿಗೆ ? ನಾವು ಮುಂದೆ ಎಡಕ್ಕೋ ಬಲಕ್ಕೋ ಎಂಬ ಆಲೋಚನೆ ಮಾಡಿದಂತಹ ಧ್ವಜಸ್ಥಂಭದ ದೇಗುಲದತ್ತ. 

ಕೋದಂಡಸ್ವಾಮಿ ದೇಗುಲ
ಹಾಗೇ ಮುಂದೆ ಸಾಗಿದಾದ ಮುಂದೆ ಹರಿಯುತ್ತಿರುವ ತುಂಗಭದ್ರೆ ಕಾಣುತ್ತಾಳೆ. ಅಲ್ಲಿಂದ ಎಡಕ್ಕೆ ಹೊರಳಿದರೆ ಮುಂಚೆ ಬಂದ ಹಾದಿ. ಬದಲಿಗೆ ಕೆಳಕ್ಕಿಳಿದರೆ ಬೆಳಗ್ಗೆ ಕಂಡಂತೆ ತುಂಗಭದ್ರೆಯಲ್ಲಿ ದೋಣಿ ದಾಟಿಸುತ್ತಿದ್ದ ಸ್ಥಳ. ಅಂದರೆ ಅಲ್ಲಿಂದ ನಾವು ಸೈಕಲ್ಲಿಟ್ಟಲ್ಲಿಗೆ ಹತ್ತಿರವಿರೋ ಕೆಂಪಭೂಪ ಮಾರ್ಗಕ್ಕೆ ಯಾವುದಾದರೂ ಶಾರ್ಟ್ ಕಟ್ ಇದೆ ಅಂತಾಯ್ತು. ಇಲ್ಲಿ ಹಾದಿ ತಪ್ಪಿದೆವು ಅಂದುಕೊಂಡಿದ್ರೆ ಅದು ತಪ್ಪು. ಸರಿಯಾದ ಹಾದಿಯಲ್ಲೇ ಸಾಗಿದ್ದೆವು ನಾವು ! ತುಂಗಭದ್ರೆಯ ಎಡಭಾಗದಲ್ಲಿ ಮಂಟಪಗಳ ಸಾಲಂತೆ ದೂರದಿಂದ ಕಾಣುವುದೇ ಕೋದಂಡಸ್ವಾಮಿ ಮಂದಿರ. ರಾಮ, ಸೀತೆ, ಲಕ್ಷ್ಮಣನ ಜೊತೆ ಹನುಮಂತನ ಬದಲು ಸುಗ್ರೀವನಿರೋ ಅಪರೂಪದ ದೇಗುಲವಿದು. ಇಲ್ಲಿನ ನಿತ್ಯಪೂಜೆಯ ಜೊತೆ ಆಗಾಗ ಪ್ರಸಾದಭೋಜನವೂ ಇರುತ್ತಂತೆ. ನಾವು ಹೋದ ದಿನ ನಮಗೆ ಪ್ರಸಾದ ಭೋಜನ  ಸಿಕ್ಕದಿದ್ದರೂ ಸಿಕ್ಕ ಪಾಯಸ ಬೆಳಗ್ಗಿಂದ ನಡೆದ ಅಷ್ಟೂ ಸುಸ್ತನ್ನು ಪರಿಹರಿಸಿ ಮತ್ತಷ್ಟು ಸುತ್ತಾಡೋ ಶಕ್ತಿ ಕೊಟ್ಟಂತ್ತನಿಸಿತ್ತ್ತು

ಯಂತ್ರೋದ್ದಾರಕ ಆಂಜನೇಯ ದೇವಸ್ಥಾನ: 
ರಾಮನಿದ್ದ ಮೇಲೆ ಹನುಮನಿರಲೇ ಬೇಕಲ್ಲವೇ ? ಕೋದಂಡರಾಮ ಮಂದಿರದ ಪಕ್ಕದಲ್ಲೇ ತುಸು ಮೇಲ್ಗಡೆ ಯಂತ್ರೋದ್ದಾರಕ ಆಂಜನೇಯನ ಗುಡಿಯಿದೆ. ಅದನ್ನು ಹತ್ತಿ ಮತ್ತೆ ಕೋದಂಡರಾಮ ಮಂದಿರದತ್ತ ಇಳಿದ್ರೆ ಅದರ ಪಕ್ಕದಲ್ಲಿರೋ ಮಂಟಪಗಳ ಸಾಲು ಕಾಣುತ್ತೆ. ಆ ಮಂಟಪಗಳನ್ನು ಬಳಸಿ ಮುಂದೆ ಸಾಗಿದ್ರೆ ದಾರಿಯೊಂದು ಬಂಡೆಗಳ ಒಳಗೆ ನುಸುಳಿ ಮರೆಯಾಗುತ್ತೆ. ಇಲ್ಲಿನ ಸ್ಥಳೀಯರ ಬಳಿ ಏಕಶಿಲಾ ನಂದಿಯ ಬಳಿ ಹೋಗೋ ದಾರಿ ಯಾವುದು ಅಂದಾಗ ಅವರು ತೋರಿಸಿದ್ದು ಅದೇ ಹಾದಿ. ಬಂಡೆಗಳ ಮಧ್ಯೆ ಎಲ್ಲಪ್ಪ ಹೋಗೋದು ? ಇದ್ಯಾವುದಾದ್ರೂ ಸುರಂಗವಾ ಅಂತ ಬಂಡೆಗಳ ನಡುವಿನ ಮೆಟ್ಟಿಲುಗಳಲ್ಲಿ ಹೆಜ್ಜೆ ಹಾಕುತ್ತಲೇ ಬೆಳಗ್ಗೆ ಇಲ್ಲಿಂದ ಮುಂದೆ ಹಾದಿಯಿಲ್ಲ ಅಂದುಕೊಂಡಿದ್ದ ತಿರುವಿಗೆ ಬಂದು ಸೇರಿದೆವು ! ಅಲ್ಲಿ ಸ್ವಲ್ಪ ಕಿರಿದಾದ ಹಾದಿ. ಕಿರಿದಾದ ತಿರುವನ್ನು ನೋಡಿ ಬೆಳಗ್ಗೆ ವಾಪಾಸ್ ಮರಳದಿದ್ರೆ ಬೆಳಗ್ಗೆಯೇ ಕೋದಂಡಸ್ವಾಮಿಯ ದರ್ಶನ ಪಡೆಯುತ್ತಿದ್ದೆವು. ಯೋಗವೆಂಬುದಿದ್ರೆ ಅದು ಸಿಕ್ಕೇ ಸಿಗುತ್ತೆ ಎಂಬುದು ಸತ್ಯ ಎಂಬುದು ಮತ್ತೊಮ್ಮೆ ಸಾಬೀತಾದ್ರೂ ಆ ಸಮಯದಲ್ಲಿ ಇನ್ನೊಂದು ಸತ್ಯದ ದರ್ಶನವಾದಂತಾಯ್ತು. ಅದೆಂದರೆ ಏನಾದ್ರೂ ಸಾಧಿಸಬೇಕು ಅಂತ ಮಾಡೋ ಪ್ರಯತ್ನವನ್ನು ಎಷ್ಟು ಕಷ್ಟ ಎದುರಾದ್ರೂ ಬಿಡಬಾರದು ಅಂತ. ನಾವು ಕೈಬಿಟ್ಟ ಪ್ರಯತ್ನದ ಹತ್ತು ಹೆಜ್ಜೆಗಳ ಆಚೆಗೇ ಗುರಿಯಿರಬಹುದು. ಯಾರಿಗೆ ಗೊತ್ತು !!
ಅಲ್ಲಿಂದ ಬೆಳಗ್ಗೆ ಸೈಕಲ್ಲು ನಿಲ್ಲಿಸಿದ್ದ ಹರಕೆಯ ಕಲ್ಲುಗಳ ಬಂಡೆಯನ್ನು ಬಳಸಿ ಏಕಶಿಲಾ ನಂದಿಯ ಹತ್ತಿರ ಬಂದು ನಿಂತಾಗ ಹಂಪಿಯ ಒಂದು ಭಾಗದ ಪ್ರದಕ್ಷಿಣೆ ಮಾಡಿದೆವಲ್ಲಾ ಎಂಬ ಖುಷಿ. ವಾಸ್ತವದಲ್ಲಿ ಅದು ಪ್ರದಕ್ಷಿಣೆಯಾಗದೇ ಅಪ್ರದಕ್ಷಿಣೆಯಾಗಿದ್ದರೂ ಅದೊಂದು ಖುಷಿ ಕೊಟ್ಟ ಸುತ್ತಾಟ ಎಂದೇ ಹೇಳಬಹುದು. ಬೆಳಗ್ಗಿಂದ ಬರಿಗಾಲಲ್ಲೇ ಸುತ್ತುತ್ತಿದ್ದೇವಲ್ಲಾ, ಇನ್ನಾದರೂ ಸೈಕಲ್ಲನ್ನು ಬಳಸೋಣ ಎಂಬ ಬಯಕೆಯಿಂದ ಮತ್ತೆ ಮುಂದೆ ಸಾಗಿದೆವು. ಹಂಪಿ ಬಜಾರನ್ನು ಬಳಸಿ ಹೇಮಕೂಟದತ್ತ ಸಾಗುತ್ತಿದ್ದ ಏರಿನಲ್ಲಿ ನಮ್ಮ ಸೈಕಲ್ಲನ್ನು ಓಡಿಸಿದೆವು. ಹೇಮಕೂಟ, ಹಜಾರರಾಮ, ಆನೆಲಾಯಗಳತ್ತಣ ನಮ್ಮ ಸುತ್ತಾಟದ ಬಗ್ಗೆ ಮುಂದಿನ ವಾರದಲ್ಲಿ ನೋಡೋಣ..

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

ಹಂಪಿ ಪ್ರವಾಸ ಕಥಾನಕ-೪ ಅಚ್ಯುತನ ಅರಸುತ್ತಾ

ಅಚ್ಯುತರಾಯ ದೇವಾಲಯ, ವಿಠಲ ದೇವಾಲಯ, ಮಾತಂಗಪರ್ವತಕ್ಕೆ ದಾರಿ ತೋರೋ ಮಾರ್ಗದರ್ಶಿ ಫಲಕ ಏಕಶಿಲಾ ನಂದಿಯ ಬುಡದಲ್ಲಿ ಕಾಣುತ್ತಿತ್ತು. ರಾಮಾಯಣದಲ್ಲಿ ಬರೋ ಮಾತಂಗಪರ್ವತ(ಹಂಪಿ ಕಥಾನಕದ ಮೊದಲಭಾಗದಲ್ಲಿ ಹೇಳಿದಂತೆ)ಇದೇ ಎಂದು ಓದಿದ್ದ ನಾವು ಅದಕ್ಕೆ ಭೇಟಿ ನೀಡಬೇಕೆಂಬ ಆಸೆಯಿಂದ ಅತ್ತ ಹೆಜ್ಜೆ ಹಾಕಿದೆವು.ಮೂರು ದಿನವಾದ್ರೂ ಇಲ್ಲಿರೋ ಜಾಗಗಳನ್ನೆಲ್ಲಾ ಸುತ್ತೇ ಹೋಗಬೇಕೆಂದು ಬಂದಿದ್ದ ನಮಗೆದುರಾಗಿದ್ದೊಂದು ಪ್ರವೇಶದ್ವಾರ.ಕ್ರೇನುಗಳಿಲ್ಲದ ಕಾಲದಲ್ಲಿ ಆ ಪಾಟಿ ಭಾರದ ಕಲ್ಲುಗಳನ್ನು ಅಷ್ಟು ಮೇಲಕ್ಕೆ ಸಾಗಿಸಿ ಎರಡಂಸ್ತಿನ ಪ್ರವೇಶದ್ವಾರಗಳನ್ನು, ಹಜಾರಗಳನ್ನು ಕರಾರುವಕ್ಕಾಗಿ ಕಟ್ಟಿದ್ದಾದರೂ ಹೇಗೆಂದು ಕುತೂಹಲ ಮೂಡಿಸೋ ಇಂಥಾ ದ್ವಾರಗಳು, ಕಮಾನುಗಳು ಸುತ್ತಾಟದುದ್ದಕ್ಕೂ ಸಿಗುತ್ತಲೇ ಹೋದವು ಎಂಬುದು ಆಮೇಲಿನ ಮಾತು ಬಿಡಿ. ತನ್ನ ತಾರಸಿಯ ಮೇಲೆಲ್ಲಾ ಹುಲ್ಲು ಬೆಳೆದುಕೊಂಡರೂ , ಶತಮಾನಗಳ ಗಾಳಿ ಮಳೆಗಳೆದುರು ಯಾವ ರಕ್ಷಣೆಯಿರದಿದ್ದರೂ ಅಚಲವಾಗಿ ನಿಂತಿದ್ದ ಆ ದ್ವಾರ ನಮ್ಮ ಅದೆಷ್ಟೋ ಸಾವಿರ ಜನಕ್ಕೆ ಕೋರಿದಂತೆ ನಮಗೂ ತನ್ನ ನಗುವಿನ ಸ್ವಾಗತ ಕೋರುತ್ತಿತ್ತಾ ಎಂದೆನಿಸಿದ್ದು ಸುಳ್ಳಲ್ಲ.
Anjaneya on the way to Matanga hill


ಆಂಜನೇಯ ಮತ್ತು ಅನಂತಶನನನ ಮಡಿಲಲ್ಲಿ:
ಮೊದಲು ಅಗಲವಾಗಿದ್ದ ಮೆಟ್ಟಿಲುಗಳ ಹಾದಿ ಕಿರಿದಾಗುತ್ತಾ ಸಾಗಿದಂತೆ ನಾವು ಬಂದ ಹಾದಿ ಸರಿಯಾದ್ದಾ ಅನ್ನೋ ಅನುಮಾನ ಕಾಡೋಕೆ ಶುರುವಾಯ್ತು. ಹತ್ತಿದಂತೆಲ್ಲಾ ಮೆಟ್ಟಿಲುಗಳು, ಕಂಡಲ್ಲೆಲ್ಲಾ ಕಲ್ಲು. ನಡೆದಲ್ಲೆಲ್ಲಾ ಸಿಗುತ್ತಿದ್ದ ಸವೆದ ಹಾದಿ ! ಸವೆದಿದ್ದರಲ್ಲೇ ಹೆಚ್ಚು ಸವೆದ ಹಾದಿಯನ್ನು ಹುಡುಕಿ ನಡೆದಾಗ ಮೊದಲು ಸಿಕ್ಕಿದ್ದೊಂದು ಆಂಜನೇಯನ ಗುಡಿ. ಪಕ್ಕದಲ್ಲೇ ಬಂಡೆಯ ಮೇಲೊಂದು ಅನಂತಶಯನನ ಕೆತ್ತನೆ. ಗುಡಿಯೆಂದರೆ ಎಲ್ಲಿಂದಲೋ ತಂದ ಮೂರ್ತಿಯನ್ನು ಸ್ಥಾಪಿಸಿದ ಸ್ಥಾನವಲ್ಲ. ಅಲ್ಲೇ ಹಿಂದಿದ್ದ ಬಂಡೆಯಲ್ಲಿ ಕೆತ್ತಿದ ಆಂಜನೇಯನ ಆಕಾರಕ್ಕೆ ಕೆಂಪು, ಪಿಂಕು ಕಪ್ಪು ಬಣ್ಣಗಳ ಲೇಪವದು.ಮಲ್ಲಿಗೆ,ನಿತ್ಯಪುಷ್ಪ, ದಾಸವಾಳಗಳ ಅಲಂಕಾರದಲ್ಲಿ ಬೆಳಗುತ್ತಿದ್ದ ಆಂಜನೇಯನನ್ನು ನೋಡಿ ಮುಂದಡಿಯಿಟ್ಟ ನಮಗೆ ಆ ಮಾರ್ಗಸೂಚಿಯಲ್ಲಿ ಆಂಜನೇಯನನ ಬಗ್ಗೆ ಬರೆದಿರಲಿಲ್ಲವಲ್ಲಾ.   ದಾರಿ ತಪ್ಪಿ ಬಂದ ದಿಕ್ಕಾ ಇದು ಅನಿಸ್ತೊಮ್ಮೆ. ಬಂಡೆಯಲ್ಲಿ ಕೊರೆದದ್ದು ಅನಂತಶಯನನೇ ಹೊರತು ವಿಠಲನಲ್ಲ. ಹಾಗಾಗಿ ಖಚಿತವಾಗಿ ವಿಠಲನ ದೇಗುಲದ ದಾರಿಯಲ್ಲವಾ ಇದು ಅನಿಸಿತು. ಅಷ್ಟರಲ್ಲಿ ಎಲ್ಲೋ ಘಂಟೆಯ ಸದ್ದು ಕೇಳಿದಂತೆ ! ಅಂದ್ರೆ ಹತ್ತಿರದಲ್ಲೇ ಯಾವುದೋ ದೇವಸ್ಥಾನ ಇದೆ ಅಂತಾಯ್ತು ! ಮಾತಂಗಪರ್ವತ ಅಂತ ಇತ್ತಲೇ ದಾರಿ ತೋರಿರೋದ್ರಿಂದ ಇದು ಖಚಿತವಾಗಿ ಮಾತಂಗಪರ್ವತವೇ.ಅದರಲ್ಲಿದ್ದ ದೇಗುಲಗಳು ಮುಂದೆ ಸಿಗಬಹುದೆಂಬ ಭರವಸೆಯಲ್ಲಿ ಮುಂದೆ ಕಾಣುತ್ತಿದ್ದ ಹಾದಿಯಲ್ಲಿ ಬೆಟ್ಟವನ್ನಿಳಿಯತೊಡಗಿದೆವು.
ಅಚ್ಯುತರಾಯ ದೇಗುಲ:
View of Achutaraya temple complex from a distance

ತುಸು ಹಾದಿ ಸವೆಸುವಷ್ಟರಲ್ಲಿ ಅನತಿ ದೂರದಲ್ಲೊಂದು ದೇಗುಲ ಸಮುಚ್ಛಯವಿದ್ದಂತೆ ತೋರಿತು. ಎರಡಂತಸ್ತಿನ ಎರಡು ಪ್ರವೇಶದ್ವಾರಗಳ ಹೊಂದಿದ್ದ ದೇಗುಲ ಪ್ರಾಂಗಣ ಕಾಣಿಸುತ್ತಿದ್ದಂತೆ ನಾವು ನಡೆದ ಹಾದಿ ತಪ್ಪಲ್ಲ, ಸರಿಯಾದ ಹಾದಿಯಲ್ಲೇ ಬರುತ್ತಿದ್ದೇವೆಂಬ ಭರವಸೆ ಮೂಡಿತು. ಅದೇ ಹಾದಿಯಲ್ಲಿ ಚುರುಕಾಗಿ ಕೆಳಗಿಳಿದ ನಮಗೆ ಇಬ್ಬರು ಮಹಿಳೆಯರು ದೇಗುಲ ಪ್ರದಕ್ಷಿಣೆ ಮಾಡಿ ಹೊರಹೋಗುತ್ತಿದ್ದಂತೆ ಕಾಣಿಸ್ತು.  ದೇವಸ್ಥಾನದ ಸುತ್ತ ಕಬ್ಬಿಣದ ಬೇಲಿ. ಈ ದಾರಿಯಲ್ಲಿ ಬಂದವರು ಸುತ್ತಿ ಬಳಸಿ ಮತ್ತೊಂದು ಪ್ರವೇಶದ್ವಾರದಿಂದ ಬರೋದನ್ನ ತಪ್ಪಿಸಲು ಅನುಕೂಲ ಮಾಡಿಕೊಡುವಂತಹ ಶಾರ್ಟಕಟ್ ಒಂದು ಕಾಣಿಸಿ ಅದರಲ್ಲೇ ಕೆಳಗಿಳಿದ ನಾವು ದೇಗುಲದತ್ತ ಧಾವಿಸಿದೆವು. ದೂರದಿಂದ ಕಂಡಂತೆ ಆ ದೇಗುಲಕ್ಕೆ ಇದ್ದಿದ್ದು ಎರಡೇ ಪ್ರವೇಶದ್ವಾರಗಳಲ್ಲ ! ಅವಕ್ಕಿದ್ದಿದ್ದು ಎರಡು ಅಂತಸ್ತೂ ಅಲ್ಲ ! ಉತ್ತರ,ಪೂರ್ವ,ಪಶ್ಚಿಮಗಳಿಂದ ಅದಕ್ಕೆ ಪ್ರವೇಶಿಸೋ ಸಾಧ್ಯತೆಗಳಿತ್ತು. ದೇಗುಲದ ಎಡಭಾಗದಲ್ಲಿದ್ದ(ಪಶ್ಚಿಮ ದ್ವಾರ) ಪ್ರವೇಶದ್ವಾರವೇ ಮೂರಂತಿಸ್ತಿನದು ! ಪೂರ್ಣ ಕಲ್ಲಿನಿಂದ ಮಾಡಿದ ಮೊದಲಂತಸ್ತು ಇನ್ನೂ ಭದ್ರವಾಗಿದೆಯಾದರೂ ಗಾರೆಯಿಂದ ಮಾಡಿದ ಎರಡನೇ ಮತ್ತು ಮೂರನೇ ಅಂತಸ್ತುಗಳು ಕಾಲನ ಧಾಳಿಗೆ ಕರಗಿಹೋಗುತ್ತಾ ರಕ್ಷಣೆಗೆ ಮೊರೆಯಿಡುತ್ತಿರುವಂತೆ ಭಾಸವಾಗುತ್ತದೆ. ಅದನ್ನು ಬಳಸಿ ಒಳಸಾಗಿದ ನಾವು ಅಚ್ಯುತನ ದೇಗುಲ ಇದೆನಾ ಅಂತ ಕೇಳಬೇಕು ಅಂದುಕೊಂಡಿದ್ದರೂ ದೂರದಿಂದ ಕಂಡ ಮಹಿಳೆಯರು ಅಲ್ಲಿ ಸಿಕ್ಕಲೇ ಇಲ್ಲ. ತಮ್ಮ ಬುತ್ತಿಗಂಟುಗಳನ್ನ ಅಲ್ಲೇ ಇಟ್ಟಿದ್ದ ಆ ಕೆಲಸದವರು ಎಲ್ಲೋ ಮಾಯವಾಗಿದ್ದರು ! ಆದರೆ ನಂತರ ಹೊರಗೆ ಸಿಕ್ಕ ಮಾಹಿತಿಫಲಕ ಇದೇ ಅಚ್ಯುತರಾಯ ದೇಗುಲವೆಂಬುದನ್ನ ಪುಷ್ಠೀಕರಿಸಿತು ಬಿಡಿ.

ಇತಿಹಾಸ:
ಮಾತಂಗ ಪರ್ವತದ ಪಶ್ಚಿಮ ತಪ್ಪಲಿನಲ್ಲಿರೋ ಈ ದೇಗುಲಕ್ಕೆ ಶಾಸನಗಳಲ್ಲಿ ತಿರುವೆಂಗಳನಾಥ ಎಂಬ ಉಲ್ಲೇಖವಿದೆಯಂತೆ. ಉತ್ತರಾಭಿವುಖವಾಗಿರೋ ಈ ದೇಗುಲವನ್ನು ವಿಜಯನಗರದ ಅರಸು ಅಚ್ಯುತರಾಯನ ಕಾಲದಲ್ಲಿದ್ದ ಮಹಾಮಂಡಳೇಶ್ವರ ಹಿರಿಯ ತಿರುಮಲರಾಜ ೧೫೩೪ರಲ್ಲಿ ಕಟ್ಟಿಸಿದನಂತೆ.ವಿಜಯನಗರದ ಅರಸರಲ್ಲಿ ಹೆಸರುಗಳ ಪುನರಾವರ್ತನೆ ತುಂಬಾ ಇದೆಯಾದ್ದರಿಂದ ಅವರ ವಂಶಾವಳಿಯ ಫಲಕ ಮತ್ತು ಇಲ್ಲಿ ಪ್ರಸ್ಥಾಪಿಸಲಾಗಿರೋ ಅಚ್ಯುತರಾಯನ ಆಳ್ವಿಕೆಯ ಅವಧಿ ಕ್ರಿ.ಶ ೧೫೨೯ ರಿಂದ ೧೫೪೨ ಎಂಬುದು ದೇಗುಲದ ಕಾಲನಿರ್ಣಯಕ್ಕೆ ಇನ್ನಷ್ಟು ಸಹಕರಿಸಬಹುದು.
ಈ ಸಂಕೀರ್ಣಕ್ಕೆ ಎರಡು ಪ್ರಾಕಾರಗಳಿದ್ದು ಒಳ ಪ್ರಾಂಗಣದ ಮಧ್ಯದಲ್ಲಿ ಅಚ್ಯುತರಾಯ ದೇಗುಲವಿದೆ. 

ವಾಸ್ತವ:
ಅಲ್ಲಿನ ಪರಿಸರವನ್ನು ಗಮನಿಸುತ್ತಿದ್ದ ನಮಗೆ ಅಚ್ಚರಿಮೂಡಿಸಿದ್ದು ದೇಗುಲದ ಮುಖ್ಯ ಪ್ರವೇಶದ್ವಾರ. ವಿಠಲನ ದೇಗುಲದ ಕಡೆಯಿಂದ(ಉತ್ತರದಿಂದ) ಅಚ್ಯುತರಾಯ ದೇಗುಲಕ್ಕೆ ಬರೋ ಪ್ರಮುಖ ಪ್ರವೇಶದ್ವಾರಗಳಿವೆ. ಅದರಲ್ಲಿ ದೇಗುಲ ಪರಿಸರದ ಒಳಾಂಗಣದಲ್ಲಿರೋ ಐದಂತಸ್ತಿನ ಪ್ರವೇಶದ್ವಾರ ಥಟ್ಟನೆ ಗಮನ ಸೆಳೆಯುತ್ತೆ. ಗಾಳಿ ಮಳೆಗಳ ಪ್ರಭಾವಕ್ಕೆ ಐದನೇ ಅಂತಸ್ತು ಅರ್ಧ ಕುಸಿದಿದ್ದರೂ ತನ್ನ ಕೆಳಗಿನ ಅಂತಸ್ತುಗಳು ಪೂರ್ಣ ಕುಸಿಯದಂತೆ ಕಾಯೋ ಛತ್ರಿಯಾಗಿದೆ ಅದು. ದೇಗುಲವೆಂದರೆ ಒಂದು ಮಹಡಿಯ ದೇಗುಲಗಳು ಎಲ್ಲೆಡೆ ಸಾಮಾನ್ಯ. ಆದರೆ ಇಲ್ಲಿ ಹಾಗಲ್ಲ. ಅಚ್ಯುತರಾಯ ದೇಗುಲದ ಎರಡನೇ ಮಹಡಿಯಲ್ಲಿದ್ದ ಗಾರೆಯ ರಚನೆಗಳು ಅಲ್ಲೋ ಇಲ್ಲೋ ಒಂದಿಷ್ಟು ಉಳಿದುಕೊಂಡು ದೇಗುಲಕ್ಕೆ ಎರಡು ಮಹಡಿಗಳಿರಬಹುದಾದ ಸಾಧ್ಯತೆಯನ್ನು ತಿಳಿಸುತ್ತಿವೆ. ಮೇಲಕ್ಕೆ ಹತ್ತಿಹೋಗೋ ಮೆಟ್ಟಿಲುಗಳು ಎಲ್ಲೂ ಕಾಣದಿದ್ದರೂ ಎರಡನೇ ಮಹಡಿಯಲ್ಲಿ ದೇಗುಲದ ಸೌಂದರ್ಯವನ್ನು ಇಮ್ಮಡಿಗೊಳಿಸುವಂತಹ ಸುಂದರ ರಚನೆಗಳ ಹೊರಾಂಗಣವಿದ್ದಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.  
One of the entrace to Achutaraya temple

ಅಚ್ಯುತರಾಯ ದೇಗುಲದ ಗರ್ಭಗೃಹ, ಅಂತರಾಳಗಳನ್ನು ಸದ್ಯ ಸರಳುಗಳಿರೋ ಬಾಗಿಲಿಂದ ಮುಚ್ಚಲಾಗಿದ್ದರೂ ಅದರ ಸುತ್ತಲಿನ ಶುಕನಾಸಿ, ರಂಗಮಂಟಪ, ಮಹಾರಂಗಮಂಟಪಗಳಲ್ಲಿನ ಕೆತ್ತನೆಗಳ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಬಹುದು. ಮುಂದೊಮ್ಮೆ ದೇಗುಲದ ಜೀರ್ಣೋದ್ದಾರವಾಗಿ ಸಾರ್ವಜನಿಕರ ದರ್ಶನಕ್ಕೆ ತೆರೆಯಲ್ಪಡಬಹುದೆಂಬ ಭರವಸೆಯಲ್ಲಿ ದೇಗುಲದ ಪ್ರದಕ್ಷಿಣೆಯಲ್ಲಿ ತೊಡಗಿದೆವು. ಸದ್ಯ ದೇಗುಲದ ಹೊರಭಾಗದಲ್ಲಿ ತ್ರಿಕೋನಾಕೃತಿಯಲ್ಲಿ ಆಧಾರಕೊಟ್ಟು ಬಿದ್ದಿರಬಹುದಾದ ದೇಗುಲವನ್ನು ಎತ್ತಿ ನಿಲ್ಲಿಸಿರಬಹುದಾದ ಕುರುಹುಗಳಿದೆಯಾದರೂ,ಅಚ್ಚುಕಟ್ಟಾಗಿ ಹುಲ್ಲು ಕತ್ತರಿಸಿ ಪ್ರದಕ್ಷಿಣಾ ಪಥವನ್ನು, ಹೊರಾಂಗಣದಾಚೆಗೆ ರಕ್ಷಣಾಬೇಲಿಯನ್ನು ನಿರ್ಮಿಸಲಾಗಿದೆಯಾದರೂ ಗರ್ಭಗೃಹವಿಲ್ಲದ ದೇಗುಲದ ಜೀರ್ಣೋದ್ದಾರ ಅಪೂರ್ಣವೆಂದೇ ಅನಿಸುತ್ತಿತ್ತು ಯಾಕೋ. ದೇಗುಲದ ಎಡಕ್ಕೆ ದೇವಿ ಮಂದಿರವಿದ್ದರೆ ಸುತ್ತಲೂ ಕಂಬಗಳ ಪಡಸಾಲೆಯಿದೆ.ಅಚ್ಯುತರಾಯನ ಪ್ರವೇಶದ್ವಾರಕ್ಕೆ ಜಯ ವಿಜಯರ ಸ್ವಾಗತವಿದ್ದರೆ ಸುತ್ತಲಿನ ಕಂಬಗಳಲ್ಲಿ ಸಿಂಹಗಳ, ಯುದ್ದಾಶ್ವಗಳ ಕೆತ್ತನೆ. ಪ್ರದಕ್ಷಿಣಾ ಪಥದಲ್ಲಿನ ಗೂಡುಗಳೆಲ್ಲಾ ಖಾಲಿಯಿದ್ದಿದ್ದು ಯಾಕೋ ಆಭಾಸವೆನಿಸಿತು. ಯಾವ ಮೂರ್ತಿಯೂ ಇಲ್ಲದೇ ಖಾಲಿ ಗೂಡನ್ನು ಯಾರೂ ಮಾಡಿರಲಾರರು !. ಅಲ್ಲಿದ್ದ ಮೂರ್ತಿಗಳು ಯಾವ ಕಳ್ಳಕಾಕರ ಮನೆ ಸೇರಿದೆಯೋ ಆ ಮೂರ್ತಿಗಳೇ ಹೇಳಬೇಕು. ಹಂಪಿಯ ಕಲ್ಲುಗಳಿಗೆ ಮಾತು ಬರುತ್ತಿದ್ದರೆ ಅವುಗಳ ಕಾಪಾಡಿ ಕಾಪಾಡಿ ಎಂಬ ಆರ್ತನಾದ ಅದೆಷ್ಟು ಶತಮಾನಗಳ ಕಾಲ ಗುಂಯ್ಗುಡುತ್ತಿತ್ತೋ ಎಂದೆನಿಸಿ ಕರುಳು ಚುರುಕ್ಕೆನಿಸಿತೊಮ್ಮೆ 


ಇಲ್ಲಿರೋ ಬಾಲಗೋಪಾಲ, ನರಸಿಂಹ ಮುಂತಾದ ಪೌರಾಣಿಕ ಶಿಲ್ಪಗಳ ಜೊತೆಗೆ ಹೆಸರೇ ಗೊತ್ತಿರದ ಇದುವರೆಗೆ ಎಲ್ಲೂ ಕಂಡಿರದ ಶಿಲ್ಪಗಳು ಅದೆಷ್ಟೋ. ಅವುಗಳ ಚಿತ್ರ ತೆಗೆದು ನಂತರ ತಿಳಿದಿರಬಹುದಾದ ಜನರ ಬಳಿ ಕೇಳೋಣವೆಂದರೆ ಎಷ್ಟು ಅಂತ ತೆಗೆಯೋದು ?! ಇದನ್ನೆಲ್ಲಾ ನೋಡಿ ಕೌತುಕಪಡಬೇಕಷ್ಟೇ. ಇತಿಹಾಸ, ಸಂಸ್ಕೃತಿಯನ್ನ ಪೂರ್ಣವಾಗಿ ಅರಿಯದ ನನ್ನ ಬಗ್ಗೆ ಅವಮಾನ ಪಡಬೇಕೋ, ಹಂಪಿಯಲ್ಲೆಲ್ಲಾ ಗಿಜಿಗಿಜಿಗುಡೋ ಒಬ್ಬೇ ಒಬ್ಬ ಗೈಡೂ ಇತ್ತ ಬಂದು ಇಲ್ಲಿನ ಶಿಲ್ಪಗಳ ಬಗ್ಗೆ ವಿವರಿಸೋಕೆ ಪ್ರಯತ್ನ ಪಡದ ಬಗ್ಗೆ ಬೇಸರ ವ್ಯಕ್ತಪಡಿಸಬೇಕೋ ಅರ್ಥವಾಗದ ದ್ವಂದ್ವದಲ್ಲಿ ದೇಗುಲದಿಂದ ಹೊರಬರುವಷ್ಟರಲ್ಲಿ ಎಲ್ಲಿಂದಲೋ ಒಂದಿಬ್ಬರನ್ನು ಕರೆತಂದ ಆಟೋವಾಲ ಸಿಕ್ಕಿದ. ಅವನತ್ರ ಇದರ ಬಗ್ಗೆ ಕೇಳಿದ್ರೆ, ಹೌದು ಸಾರ್, ಇಲ್ಲಿ ಬರೋರು ತುಂಬಾನೇ ಕಮ್ಮಿ ಅಂತ ಅವನೂ ಬೇಸರ ವ್ಯಕ್ತಪಡಿಸಿದ. ಹೀಗೇ ಮುಂದೆ ಹೋದ್ರೆ ವಿಠಲ ದೇವಸ್ಥಾನ ಸಿಗುತ್ತಲ್ವಾ ಅಂತ ಅವನತ್ರನೂ ಖಚಿತಪಡಿಸಿಕೊಂಡ ನಾವು ಮುಂದೆ ಸಾಗಿದೆವು. ಹೊರ ಪ್ರಾಂಗಣದಲ್ಲಿ ಬಲಮೂಲೆಯಲ್ಲಿದ್ದ ಬನ್ನಿ ಮಂಟಪದಂತಹ ಮಂಟಪ ಏನೆಂದು ತಿಳಿಯಲಿಲ್ಲ. ಉತ್ಸವಗಳ ಸಂದರ್ಭದಲ್ಲಿ ಮೂರ್ತಿಯನ್ನು ಇಲ್ಲಿಟ್ಟು ಪೂಜಿಸುತ್ತಿರಬಹುದು. ದ್ವಾರಪಾಲಕ, ನವಿಲು, ನರಸಿಂಹ ಮುಂತಾದ ಕೆತ್ತನೆಗಳಿರೋ ಮಂಟಪದ ಬಗ್ಗೆ ಇನ್ನಷ್ಟು ತಿಳಿಯೋ ಆಸಕ್ತಿಯಿದ್ದರೂ ಅಲ್ಲಿನ ಮಾಹಿತಿ ಫಲಕದಲ್ಲಿ ಅದರ ಬಗ್ಗೆ ಮಾಹಿತಿಯಿರಲಿಲ್ಲ. ಆ ಬಗ್ಗೆ ಮತ್ತೊಮ್ಮೆ ಮಾಹಿತಿ ಕಲೆಹಾಕಬೇಕಷ್ಟೆ. ದೇವಿ ದೇಗುಲದ ಆವರಣ, ಮಂಟಪಗಳ ರಚನೆಗಳನ್ನು ಗಮನಿಸಿ ಮೂರಂತಸ್ತಿನ ಉತ್ತರದ ಹೊರಪ್ರವೇಶ ದ್ವಾರದ ಮೂಲಕ ಹೊರಬಂದೆವು.

ಅಚ್ಯುತಪೇಟೆ:
ಸೈಕಲ್ ತಗೊಂಡಿದ್ದೇನೋ ಹೌದು. ಆದ್ರೆ ಕಾಲ್ನಡಿಗೆಯಲ್ಲೇ ಸುತ್ತುತ್ತಾ ತಗೊಂಡಿದ್ದು ವೇಸ್ಟ್ ಮಾಡ್ತಾ ಇದ್ದೀವಲ್ಲ. ಸೈಕಲ್ಲಿದ್ದಲ್ಲಿ ವಾಪಾಸ್ ಹೋಗಿ ಉಳಿದ ಸ್ಥಳಗಳನ್ನ ನೋಡೋಣ್ವಾ ಅಂದ ಗೆಳೆಯನೊಬ್ಬ. ಏ, ಬರೋದು ಬಂದಿದೀವಿ. ಇಲ್ಲಿರೋದನ್ನೆಲ್ಲಾ ನೋಡೇ ವಾಪಾಸ್ ಹೋದ್ರಾಯ್ತು ಬಿಡು. ಮತ್ತೆ ಇಲ್ಲಿವರೆಗೆ ಸೈಕಲ್ಲಲ್ಲಿ ಬರೋಕೆ ಅದೆಲ್ಲೆಲ್ಲಿ ಸುತ್ತಿ ಬರಬೇಕೋ ? ಬಂದಾಗ ನೋಡೋ ಬಿಡೋಣ ಬಿಡು ಅಂತ ಮುಂದೆ ಸಾಗಿದ್ವಿ. ಮುಂದೆ ರಾಜಬೀದಿಯಲ್ಲಿ ಸಾಗಿದಂತಹ ಅನುಭವ. ಇಕ್ಕೆಲಗಳಲ್ಲಿ ಮಂಟಪದಂತಹ ರಚನೆಗಳು. ಕಂಬಗಳ ಸಾಲಿನ ಈ ಬೀದಿಗೆ ಅಚ್ಯುತಪೇಟೆ ಎಂದು ಹೆಸರಂತೆ. ಅಚ್ಯುತಪೇಟೆಯ ಮೂಲಕವೇ ಸಾಗಿದರೆ ಒಂದು ಪುಷ್ಕರಿಣಿ ಸಿಗುತ್ತೆ. 

ಅಚ್ಯುತಪೇಟೆಯ ಪುಷ್ಕರಿಣಿ:
ಪೇಟೆಯ ಪಕ್ಕದಲ್ಲಿರೋ ಪುಷ್ಕರಿಣಿಗೆ ಎಲ್ಲಾ ದಿಕ್ಕುಗಳಿಂದಲೂ ಇಳಿಯೋ ಜಾಗಗಳಿವೆ. ಮಧ್ಯದಲ್ಲೊಂದು ಮಂಟಪವಿರೋ ಪುಷ್ಕರಿಣಿಯ ಸ್ವಚ್ಛ ತಿಳಿ ನೀರಿನಲ್ಲಿ ಸುತ್ತಣ ಬಂಡೆಗಳ, ಮಂಟಪದ ಪ್ರತಿಬಿಂಬವನ್ನು ನೋಡೋದೇ ಒಂದು ಆನಂದ. ಇಲ್ಲಿನ ಪುಷ್ಕರಿಣಿಯ ಇನ್ನೊಂದು ವೈಶಿಷ್ಟ್ಯ ಅಂದ್ರೆ ಈಗಿನ ಸ್ವಿಮ್ಮಿಂಗ್ ಪೂಲ್ಗಳಲ್ಲಿ ನೀರಿಗೆ ಡೈವ್ ಮಾಡಲು ಇರೋ ಡೈವಿಂಗ್ ಬೋರ್ಡ್ ತರಹದ ರಚನೆ !! ಪುಷ್ಕರಿಣಿಯ ಒಂದು ಮೂಲೆಯಲ್ಲಿರೋ ಈ ಬಂಡೆಯ ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳೂ ಇವೆ. ಇದು ಆ ಕಾಲದ ಡೈವಿಂಗ್ ಬೋರ್ಡ್ ಆಗಿತ್ತೋ ಇಲ್ಲವೋ ಅನ್ನೋದನ್ನ ಅವರೇ ಅಥವಾ ಇಲ್ಲಿಂದ ಹಾರಿದ ಸಾಹಸಿಗಳೇ ನಿರೂಪಿಸಬೇಕಾದರೂ ಅಂಥಹಾ ಸಾಹಸಕ್ಕೆ ಕೈ ಹಾಕಲಿಲ್ಲ. ಮೆಟ್ಟಿಲುಗಳ ಹತ್ತಿ ಅಲ್ಲಿನ ವಿಹಂಗಮ ನೋಟವನ್ನು ಆಸ್ವಾದಿಸಿ ಕೆಳಗಿಳಿದು ಬಂದೆ. ಈ ಪುಷ್ಕರಿಣಿಯ ಸುತ್ತಲಿನ ಕಂಬಗಳಲ್ಲಿ ನಾಗಮಂಡಲ, ನರಸಿಂಹ, ಸಿಂಹ, ಮೇಕೆ ಮುಂತಾದ ಪ್ರಾಣಿಗಳ ಕೆತ್ತನೆಗಳಿವೆ. 
Puskarini near Achuta Bazar


ವರಾಹ ದೇವಸ್ಥಾನ:
ಪುಷ್ಕರಿಣಿಯಿಂದ ಮುಂದೆ ಸಾಗುತ್ತಿತ್ತಂತೆ ಸುಮಾರಷ್ಟು ದೇಗುಲಗಳು ಗೋಚರಿಸತೊಡಗುತ್ವೆ. ಅದರಲ್ಲಿ ಮೊದಲನೆಯದು ವರಾಹ ದೇವಸ್ಥಾನ. ಒಂದಂತಸ್ತಿನ ವರಾಹದೇಗುಲದ ಪ್ರವೇಶದ್ವಾರ ಒಂದೆಡೆ ಪೂರ್ಣ ಸೀಳುಬಿಟ್ಟು ಆತಂಕ ಹುಟ್ಟಿಸುತ್ತಿತ್ತು ! ಅದನ್ನು ದಾಟಿ ಮುನ್ನಡೆದರೆ ವರಾಹದೇಗುಲ. ಇಲ್ಲಿ ಗರ್ಭಗೃಹವಿದ್ದು ಅದರಲ್ಲಿ ಮೂರ್ತಿಯಿದ್ದರೂ ಅಲ್ಲಿದ್ದಿದು ಶಿವಲಿಂಗ ಮತ್ತು ಎದುರಿಗಿದ್ದುದು ನಂದಿ. ಅಂದರೆ ಇದು ಶಿವದೇಗುಲ, ವಿಷ್ಣುವಿನದಲ್ಲ ! ಅದರ ಹಿಂದೆ ಕಾಣುತ್ತಿದ್ದ ಮತ್ತೊಂದು ದೇಗುಲ ವರಾಹದೇಗುಲವಾಗಿರಬಹುದೇ ? ಎರಡಕ್ಕೂ ಸೇರಿಸಿ ವರಾಹ ದೇಗುಲ ಅಂತ ಬೋರ್ಡ್ ಹಾಕಿರಬಹುದೇ ಪುಣ್ಯಾತ್ಮರು ಅನಿಸಿತೊಮ್ಮೆ. ಹಿಂದಿದ್ದ ದೇಗುಲ ಕಾಣುತ್ತಿದ್ದರೂ ಅದರತ್ತ ಹೋಗದಂತೆ ತಡೆಯುತ್ತಿದ್ದು ಈ ದೇಗುಲದ ಪ್ರಾಗಂಣವನ್ನು ದಾಟೋ ದಾರಿ ಕಾಣದೇ, ಹಿಂದಿದ್ದ ದೇಗುಲಕ್ಕೆ ಮತ್ತೆಲ್ಲಿಂದಾದರೂ ಮತ್ತೆ ದಾರಿ ಸಿಗಬಹುದೇನೋ ಎಂದೆಣಿಸಿ ಮುಂದೆ ಸಾಗಿದೆವು .
Varaha temple, hampi

ಮುಂದೆಂತೂ ಕಣ್ಣು ಹಾಯಿಸಿದತ್ತೆಲ್ಲಾ ದೇಗುಲಗಳು, ಮಂಟಪಗಳು. ಒಂದಕ್ಕೂ ಬೋರ್ಡಿಲ್ಲ, ಮಾಹಿತಿಫಲಕವಿಲ್ಲ! ಕಲ್ಲುಗಳ ಕಟ್ಟಿ ಮಿನಿ ಬೆಟ್ಟವನ್ನೇ ನಿರ್ಮಿಸಿದ್ದ ದೇಗುಲವೊಂದರ ಮೆಟ್ಟಿಲುಗಳ ಹತ್ತಿ ಅದರಲ್ಲಿರೋ ಅನಂತಶಯನನ ದರ್ಶನ ಪಡೆದೆವು. ಪಕ್ಕದಲ್ಲಿದ್ದ ಮಂಟಪದ ಖಾಲಿ ಗರ್ಭಗೃಹದಿಂದ ಅದ್ಯಾವುದೆಂದು ತಿಳಿಯಲಿಲ್ಲ. ದೇಗುಲಗಳ ಬಿಡಿ ನಡೆಯೋ ಹಾದಿಯಲ್ಲೂ ಶಿಲ್ಪಗಳು. ಅಲ್ಲಿದ್ದ ಬಂಡೆಗಳ ಮೇಲಿನ ಹಾದಿಯಲ್ಲಿ ನಡೆಯುತ್ತಿದ್ದರೆ ಕೈಮುಗಿದು ಸ್ವಾಗತ ಕೋರೋ ಅದೆಷ್ಟೋ ಕೆತ್ತನೆಗಳು ನಡೆವ ಹಾದಿಯ ಮೇಲೆ. ಹಾದಿಯಲ್ಲಿ ನಿಲ್ಲಿಸಿದ ಕೆತ್ತನೆಗಳಲ್ಲಿ ಸ್ಮಶಾನ ಭೈರವಿಯಂತಹ ಕೆಲವು ಶಿಲ್ಪಗಳು ಏನೆಂದು ಗೊತ್ತಾದರೆ ಗೊತ್ತಾಗದ ಶಿಲ್ಪಗಳು ಅದೆಷ್ಟೋ. ಎಡಭಾಗದಲ್ಲಿ ಹರಿಯುತ್ತಿರೋ ತುಂಗಭದ್ರೆ. ಅದರಾಚೆ ದಡದಲ್ಲಿ ಮತ್ತದೆಷ್ಟೋ ದೇಗುಲಗಳು ! ಬಲಭಾಗದಲ್ಲೊಂದು ದೇಗುಲದಂತಹ ರಚನೆ ಕಂಡು ಅದರ ಮಂಟಪವನ್ನು ದಾಟಿ ಮುಂದೆ ಸಾಗಿದೆ. ಮೇಲ್ಛಾವಣಿ ಕಿತ್ತು ಹೋಗಿರೋ ಅಥವಾ ಮೇಲ್ಛಾವಣಿಯೇ ಇಲ್ಲದಿದ್ದ ಆ ರಚನೆಯ ಮಧ್ಯದಲ್ಲಿ ಬುದ್ದನಂತಹ ರಚನೆ !! ವಿಜಯನಗರದಲ್ಲಿ ಬುದ್ದನೆಲ್ಲಿ ಬರಬೇಕು ಅಂದಿರಾ ? ಹಿಂದೂ ಮಹರ್ಷಿಗಳಾದರೆ ಜಟೆ, ಗಡ್ಡಗಳ ಕೆತ್ತನೆಯಿರುತ್ತಿತ್ತು. ತಪಸ್ಸಿಗೆ ಕೂತ ಭರತನೋ, ಮಹಾವೀರನೋ, ವಿಜಯನಗರ ಆಸ್ಥಾನದಲ್ಲಿದ್ದ ಯಾವುದೋ ತಪಸ್ವಿಯೋ, ಬುದ್ದನೋ, ಅಥವಾ ಇನ್ಯಾರೋ ಇದು ನಿರ್ಣಯಿಸಬೇಕಾದರೆ ಬೇಕಾಗುವಂತಹ ಆ ಮೂರ್ತಿಯ ತಲೆಯೇ ಇರಲಿಲ್ಲ ! ಇಲ್ಲಿ ದಾಳಿ ಮಾಡಿದ ಪಾಪಿಗಳು ಅದನ್ನೂ ತುಂಡರಿಸಿದ್ದರು ! ಇದೇ ಬೇಸರದಲ್ಲಿ ಮುಂದೆ ಸಾಗಿದಾಗ ಕೆಳಕ್ಕೊಂದು ಗುಹೆ ಮತ್ತೆ ಮೇಲೊಂದು ದೇಗುಲದ ಧರ್ಮಧ್ವಜ, ಎರಡಂತಸ್ತಿನ ಕಲ್ಲ ಮಂಟಪ ಕಾಣಿಸಿತು. ಕೆಳಗಿನ ಗುಹೆಯವರೆಗೆ ಹೋದರೂ ಅಲ್ಲಿನ ಕಿರಿದಾದ ಪ್ರವೇಶದ್ವಾರದ ಒಳಗೆ ಜಾಸ್ತಿ ದೂರ ಹೋಗೋಕೆ ಏನೂ ಕಾಣಲಿಲ್ಲ. ಅಲ್ಲಿನ ಡೆಡ್ ಎಂಡ್ ನೋಡಿ ವಾಪಾಸ್ ಬಂದ ನಾವು ಮೇಲೆ ಕಂಡ ಧ್ವಜಸ್ಥಂಭದ ದೇಗುಲದತ್ತ ಸಾಗಿದೆವು..

 ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

ಭಾವಗಳ ಬಂಡಿಯೇರಿ

ಭಾವಲಹರಿಯೆನ್ನೋದೇ ಹಾಗೆ. ಈ ಭಾವಗಳ ಮಡಿಲಲ್ಲಿದ್ದಾಗ ಶಬ್ದಗಳ ಹಂಗಿಲ್ಲ, ಕಾಲದ ಅರಿವಿಲ್ಲ,ಸುತ್ತಣ ಪರಿಸರದ ಪರಿವೆಯೂ ಇಲ್ಲದ ಪರಿಸ್ಥಿತಿ. ಪಕ್ಕದ ಯಾವುದೋ ಘಟನೆ ನಮ್ಮ ತಟ್ಟೆಬ್ಬಿಸೋ ತನಕ ಕಲ್ಪನಾಲೋಕದಲ್ಲಿ ನಮಗೆ ನಾವಲ್ಲದೆ ಇನ್ಯಾರೂ ಇಲ್ಲ.ಭಾವಗಳ ಬಂಡಿಯೇರಿದ ಆ ಪಯಣ ಸಾಗೋ ಪರಿಯೇ ಅದಮ್ಯ.ಆ ಕ್ಷಣಕ್ಕೆ ಮೂಡೋ ಭಾವಕ್ಕೊಂದು ಆಕಾರವಿಲ್ಲದಿದ್ದರೆ ಕಳೆದೇ ಹೋದೀತೆಂದು ಸಿಕ್ಕ ಮೊಬೈಲಲ್ಲೋ ಪೇಪರಲ್ಲೋ ಕಂಪ್ಯೂಟರಲ್ಲೋ ಗೀಚುವವರದು ಒಂದು ಲಹರಿ.ಕಡಲಲೆಗಳಲ್ಲಿ ಕಂಡ ಸುಂದರ ಅಲೆಯೊಂದು ಕಾಲದ ಗರ್ಭದಲ್ಲಿ ಕರಗಿಹೋಗೋ ಹಾಗೆ ಮುಂಬರುವ ಭಾವ ಪ್ರವಾಹದಲ್ಲಿ ಈಗಿನ ಭಾವ ಮತ್ತೆ ಮೂಡಲೇಬೇಕೆಂದಿಲ್ಲವಲ್ಲ ಅನ್ನೋದು ಅವರಾಲೋಚನೆ.ಒಮ್ಮಿನ ಭಾವದ ಬಗೆಗೇ ಪುನರಾಲೋಚಿಸುತ್ತಾ ಅದಕ್ಕೊಂದು ಮೂರ್ತ ರೂಪ ಕೊಡೋ ಪರಿ ಮತ್ತೊಂದು ರೀತಿ. ಕಲ್ಲೊಂದ ಮೂರ್ತಿಯಾಗಿ ಕೆತ್ತೋ ಶಿಲ್ಪಿಯಂತೆ. ಮನದಿ ಮೂಡಿದಾಕಾರವ ಪೇಪರ್ ಮೇಲೆ ಕೆಲ ಕ್ಷಣಗಳಲ್ಲೇ ಚಿತ್ರಿಸೋ ಕಲಾಕಾರನಂತೆ ಮೊದಲವರಾದರೆ ಅದಕ್ಕೊಂದು ಶಿಲ್ಪದ ಆಕಾರ ಕೊಡುವವರು ಎರಡನೆಯವರು. ಇವರಲ್ಲಿ ಯಾರು ಹೆಚ್ಚು ಯಾರು ಕಡಿಮೆಯೆಂಬ ವಾದಗಳಿರುವ ಹಾಗೆಯೇ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಯಣದಲ್ಲಿ ನಿತ್ಯಾನಂದವನ್ನು ಪಡೆಯುವವರು ಇಬ್ಬದಿಗೂ ಇದ್ದಾರೆ, 
ಭಾವಪ್ರವಾಹಕ್ಕೆ ಹೊತ್ತು ಗೊತ್ತಿರಬೇಕೆಂದಿಲ್ಲ. ಎಲ್ಲಿಂದಲೋ ಯಾವಾಗಲೋ ಉದ್ದೀಪನಗೊಳ್ಳಬಹುದದು. ಆಫೀಸ ಬಾಸ ಬಯ್ಗುಳದಿಂದ ಬೇಸತ್ತು ಸಂಜೆಯ ಕ್ಯಾಂಟೀನಿಗೆ ಹೊಕ್ಕವನಿಗೆ ಕಂಡ ಸೂರ್ಯಾಸ್ತವಾಗಿ ಸೆಳೆಯಬಹುದು.ಬಸ್ಸಲ್ಲಿ ಸಿಕ್ಕ ಹರಿದ ಪ್ಯಾಂಟಿನ, ಮೈಯೆಲ್ಲಾ ಸಿಮೆಂಟಾದ ಹುಡುಗನಾಗಿ ಕಾಡಬಹುದು.ವಾಟ್ಸಾಪಿನಲ್ಲಿ ನೋಡಿದ ಸಯಾಮಿ ಅವಳಿಗಳ ನೋವಾಗಿ ನಾಟಬಹುದು.ಊರಲ್ಲಿದ್ದಾಗ ಬೆಳಬೆಳಗ್ಗೆ ಎಬ್ಬಿಸುತ್ತಿದ್ದ ನಾಟಿ ಕೋಳಿಯ ಕೂಗಾಗಿ ತಟ್ಟಬಹುದು.ಕಳ್ಳನಾಟ ಸಾಗಿಸ ಹೋಗಿ ಫಾರೆಸ್ಟಿನವರ ಗುಂಡೇಟು ತಿಂದ ನಾರಾಣಿಯ ನರಳುವಿಕೆಯಾಗೂ ಗೋಚರಿಸಬಹುದು! ಪ್ರಕೃತಿಯಲ್ಲೊಂದಾಗೋ ಪ್ರತಿಯೊಬ್ಬನಲ್ಲೂ ಭಾವಪ್ರವಾಹದ ಹರಿತವಿದ್ದೇ ಇದೆ. ಗುಪ್ತಗಾಮಿನಿಯಾಗಿರಬಹುದು, ಕೊಚ್ಚಿ ಹರಿವ ಗಂಗೆಯಾಗಿರಬಹುದದು. ದೇಶಗಳ ದಾಟೋ ಸಿಂಧೂವಾಗದಿದ್ದರೂ ಬೇಸರವಿಲ್ಲ, ಬತ್ತೇ ಹೋದ ಸರಸ್ವತಿಯಾಗದಿದ್ದರೆ ಸಾಕೆಂಬ ಭಾವವಷ್ಟೇ !
ಭಾವವೆಂಬುದು ಮನದಲ್ಲಿದ್ದರೆ ಸಾಕೇ ? ಅದಕ್ಕೊಂದು ಆಕಾರ ನೀಡಬೇಕೆಂಬ ಹಂಬಲ ಸಹಜ.ಕೆಲವರ ದಿನದ ಡೈರಿಯಾಗೋ ಭಾವಗಳು ಕೆಲವರ ಫೇಸ್ಬುಕ್ ಪೋಸ್ಟಾಗಿ,ಬ್ಲಾಗರ್,ವರ್ಡಪ್ರೆಸ್ ಬ್ಲಾಗಾದ್ರೆ ಇನ್ನು ಕೆಲವರದು ಪೇಪರಿನ ಅಂಕಣಗಳಾಗಿ ಮೂಡಿಬರುತ್ತೆ.ಇನ್ನೂ ಮುಂದೆ ಸಾಗೋ ಕೆಲವು ಭಾವಗಳು ಪುಸ್ತಕಗಳಾಗಿ ಸಾರ್ಥಕ್ಯ ಪಡೆಯುತ್ತೆ. ಪೇಪರ್ರುಳಿಸಿ ಎಂದೆಷ್ಟೇ ಅಂದ್ರೂ ಅಚ್ಚಾದ ಕವನಗಳನ್ನೋ, ಕಥೆಗಳನ್ನೋ ಓದೋ ಖುಷಿ ಅವರ ಕಂಪ್ಯೂಟರಲ್ಲಿರೋ ಅದನ್ನೇ ಓದೋದ್ರಲ್ಲಿ ಸಿಗುವುದಿಲ್ಲ ಅನ್ನೋದು ಅದೆಷ್ಟೋ ಜನರ ಭಾವ. ಆದರೆ ಎಲ್ಲಾ ಭಾವಗಳಿಗೂ ಪೇಪರಲ್ಲಿ ಜಾಗವೆಲ್ಲಿ ? ವರ್ಷಕ್ಕೊಂದು ಲೇಖನ ಪ್ರಕಟವಾದರೂ ಅದಕ್ಕಿಂದ ಚೆಂದದ ಭಾವಗಳಿಗೆ ಸಿಕ್ಕದ ಅದೃಷ್ಟ ಕಾಡೋದು ಕಮ್ಮಿಯೇನಲ್ಲ. ಪುಸ್ತಕಗಳಾಗಿಸೋಣವೆಂದರೂ ಪ್ರಕಾಶಕರೆಲ್ಲಿ ? ಪುಸ್ತಕವಾಗಿಸಿದರೂ ಆ ಖುಷಿ ಅದನ್ನು ಮಾರೋ ಹೊತ್ತಿಗೆ ಕಳೆದೇ ಹೋಗಿರುತ್ತೆನ್ನೋ ಬೇಸರದ ಭಾವ ಇನ್ನು ಕೆಲವರಲ್ಲಿ. ನನ್ನ ಭಾವಗಳಿರೋದು ನನಗಷ್ಟೇ. ಅದಕ್ಕೆ ಓದುಗರೂ ಬೇಡ, ಮೇಲಿನೆರೆಡು ನೋವುಗಳೂ ಬೇಡವೆಂದು ತಮ್ಮ ಡೈರಿಗಳಲ್ಲೇ ದಾಖಲಿಸಿ ಸಂತೃಪ್ತಿ ಪಡೆಯೋ ಭಾವವೂ ಹಲವರದ್ದು.
ಎಲ್ಲೋ ಪುಸ್ತಕವಾಗ ಹೊರಟು,ಪ್ರಕಟಣೆಗೊಳ್ಳ ಹೊರಟು ತಿರಸ್ಕೃತವಾದ ಭಾವದ ನೋವು ಆ ಭಾವಕ್ಕೇ ಗೊತ್ತು.ರಿಯಾಲಿಟಿ ಶೋನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯಂತೆಯೇ, ಟಿ.ಆರ್.ಪಿ ಗಾಗಿ ಕಾರ್ಯಕ್ರಮಗಳು ತೋರಿಸೋ ಜನರ ಅಳುವಿನಂತಲ್ಲವದು. ಒಂದು ಸೆಕೆಂಡಿನಿಂದ ಮೆಡೆಲ್ ಮಿಸ್ ಮಾಡಿಕೊಂಡ ಓಟಗಾರನ ನೋವಂತೆ,ಒಂದೇ ಪಾಯಿಂಟಿನಿಂದ ಸೋತು ಹೋದ ಗುರಿಕಾರನ ಬೇಸರದಂತೆ ಮುಂದಿನ ಸ್ಪರ್ಧೆಯವರೆಗೂ ನಿತ್ಯವೆಬ್ಬಿಸೋ ಅಲಾರಾಂ ಅದು ! ತನಗಿಂತ ಉತ್ತಮವಾದದ್ದಕ್ಕೆ ಸಿಕ್ಕ ಅವಕಾಶದಿಂದ ತನಗೆ ಅವಕಾಶ ಸಿಕ್ಕಲಿಲ್ಲವೆಂಬ ಅರಿವಿದೆಯದಕ್ಕೆ, ಪ್ರತೀ ಬಾರಿಯೂ ತಾನೇ ಗೆಲ್ಲಬೇಕೆಂಬ ಹಟವಿಲ್ಲವದಕ್ಕೆ.ಎಲ್ಲಿ ಸೋತೆನೆಂದು ನಿರಂತರವರಿಯೋ ಛಲವಷ್ಟೇ.ಕಥಾ ಸ್ಪರ್ಧೆಗಳಲ್ಲಿ, ಕಥಾ ಸಂಗ್ರಹದಲ್ಲಿ ಅನೇಕ ಬಾರಿ ತಿರಸ್ಕೃತಗೊಂಡ ಕಥೆಯಲ್ಲಿನ ಭಾವವೊಂದು ಪ್ರತೀ ಬಾರಿಯೂ ಉತ್ತಮಗೊಳ್ಳುತ್ತಾ ಕೊನೆಗೊಂದು ದಿನ ಪೇಪರಲ್ಲಿ ಪ್ರಕಟವಾದಾಗಲೋ ಬೆಳೆಬೆಳೆದು ಕಾದಂಬರಿಯೇ ಆದಾಗಲೋ ಆ ಭಾವದ ಪಯಣಕ್ಕೊಂದು ವಿರಾಮ ಸಿಕ್ಕಬಹುದು. ಪ್ರತಿಬಾರಿಯ ತಿದ್ದುವಿಕೆಯಲ್ಲೂ ಭಾವಕ್ಕೇನೂ ಬೇಸರವಿಲ್ಲ. ಛಲಬಿಡದ ತ್ರಿವಿಕ್ರಮನಂತದು. ಅಷ್ಟಕ್ಕೂ ಕಥೆಯೋ, ಕವನವೋ ಅನ್ನೋದು ಭಾವಗಳಿಗೊಂದು ಅಂಗಿ ಚಡ್ಡಿಯಷ್ಟೇ.ತಾ ತೊಟ್ಟ ಅಂಗಿ ಚೆನ್ನಾಗಿಲ್ಲವೆಂದರೆ ಅದಕ್ಕೆ ತಾ ಬೇಸರಿಸೋ ಅಗತ್ಯವಿಲ್ಲವೆಂಬ ಅರಿವಿದೆ ಭಾವಕ್ಕೆ. ಒಬ್ಬನಿಗೆ ಸುಂದರವೆನಿಸದ ಅಂಗಿ ಮತ್ತೊಬ್ಬನಿಗೆ ಸುಂದರವೆನಿಸಬಹುದು.ಇನ್ಯಾವುದೋ ಕೋಟ ಹೊದಿಕೆ ಹೊದ್ದಾಗ ಮೊದಲಿನವನಿಗೇ ವಾವ್ ಎನಿಸಬಹುದು. ಈ ವಾಹ್, ಥೂಗಳೆಲ್ಲಾ ಕ್ಷಣಿಕ. ಕಾಲದೊಂದಿಗೆ ಬದಲಾದ್ದು ಅವೇ ಹೊರತು, ಮೂಲ ಭಾವವಲ್ಲ. ಭಾವಕ್ಕೆ ಕೊಟ್ಟ ಚೌಕಟ್ಟಷ್ಟೇ ಎಂಬ ಅರಿವಿರೋ ಭಾವದ ಪಯಣವೆಂದೂ ನಿರಂತರ.ಚೈತನ್ಯವಿರೋ ತನಕವಿರೋ ತನಕದ ದೇಹದ ಉಸಿರಂತೆ. ಭಾವದಿಂದಲೇ ನಾವಾ ನಮ್ಮಿಂದಲೇ ಭಾವವೋ ಎಂಬುದು ಚೈತನ್ಯದಿಂದ ಉಸಿರೋ ಉಸಿರಿಂದ ಚೈತನ್ಯವೋ ಎಂಬಂತೇ ಎಂಬುದೊಂದು ಭಾವ !

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

Saturday, February 6, 2016

ಕರ್ಚೀಫ್ ಕಹಾನಿ

ತಿಂಗಳ ಹಿಂದೆ ಕಳೆದೇಹೋಗಿದ್ದನೆಂದು ಹುಡುಕುಡುಕಿ ಬೇಸತ್ತು ಕೊನೆಗೆ ಹುಡುಕೋದನ್ನೇ ಮರೆಸಿಬಿಟ್ಟಂತ ಮಾಲೀಕನೆದುರು ಇವತ್ತು ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿದ್ದೆ ! ಒಗೆದು ಒಣಗಿಸಿ ಮಡಚದೇ ಬಿದ್ದಿದ್ದ ರಾಶಿಯಲ್ಲೊಂದು ಪ್ಯಾಂಟನ್ನು ಇಸ್ತ್ರಿ ಮಾಡಲು ತೆಗೆದ್ರೆ ಅದರೊಳಗಿಂದ ನನ್ನ ಇರುವಿಕೆಯ ಅರಿವಾಗಬೇಕೇ ? ನಾ ಯಾರು ಅಂತ ಇಷ್ಟ್ರಲ್ಲೇ ಗೊತ್ತಾಗಿರಬೇಕಲ್ಲಾ ? ಹೂಂ. ಅದೇ. ಕರವಸ್ತ್ರ ಎನ್ನಿ ಕರ್ಚೀಫು ಎನ್ನಿ, ಹ್ಯಾಂಕಿ ಎನ್ನಿ. ಏನೇ ಅಂದ್ರೂ ಥ್ಯಾಂಕ್ಸೆನ್ನುವವ ನಾನೇ ನಾನು.

ಕರ್ಚೀಫ್ ಕಹಾನಿ ಅಂದಾಕ್ಷಣ ಕರುಣಾಜನಕ ಕಥೆ ಅಂತೆಲ್ಲಾ ಅಂದ್ಕೋಬೇಡಿ. ಅಷ್ಟಕ್ಕೂ ಹಂಗ್ಯಾಕೆ ಅಂದ್ಕೋತೀರಾ ? ಕರ್ಚೀಪಿರೋದು ಕಣ್ಣೀರೊರೆಸೋಕೆ ಮಾತ್ರಾನಾ ? ನೆಗಡಿಯಾದಾಗ ಮೂಗಿಗಡ್ಡ, ಕೆಮ್ಮು ಬಂದಾಗ ಬಾಯಿಗಡ್ಡ ನಾನೇ ಬೇಕು. ಅಷ್ಟೇಕೆ, ಹೊಸದಾಗಿ ಮೀಸೆ ಬೋಳಿಸಿದವರಿಗೆ ಬೋಳಿಸಿದ ಮೀಸೆಗಡ್ಡ ಇಟ್ಟುಕೊಂಡು ಓಡಾಡಲೂ ನಾನೇ ಬೇಕು ! ಅಷ್ಟಕ್ಕೂ ಕಣ್ಣೀರಂದ್ರೆ ಕೇವಲವೇಕೆ ? ರಕ್ತನಾದ್ರೂ ಬೇರೆ ದೇಹದಿಂದ ತಂದು ಹಾಕಬಹುದು. ಆದ್ರೆ ಕಣ್ಣೀರನ್ನು ಬೇರೆ ಕಣ್ಣಿಂದ ತಂದು ನಿಮ್ಮ ಕಣ್ಣಿಗೆ ಹಾಕೋಕಾಗುತ್ತಾ ಅಂತ ನಮ್ಮ ವೆಂಕಟಣ್ಣ ಹೇಳಿಲ್ವಾ ? ! ಅಷ್ಟಿದೆ ಕಣ್ಣೀರ ಮಹತ್ವ ಮತ್ತು ಅದನ್ನೊರೆಸೋ ನನ್ನ ತಾಕತ್ತು !

ದೀರ್ಘಭೇಟಿಯ ನಂತರದ ಆನಂದಭಾಷ್ಪವೋ, ಜಗಳಗಳ ಅತಿರೇಕಕ್ಕೆ ಹೋಗಿ ನೀನು ತಾನೆಂದಾದ ನಂತರ ಯಾರಿಗೋ ಆದ ಬೇಜಾರಿನ ಫಲದಿಂದಲೋ ಕಣ್ಣುಗಳು ತಲಕಾವೇರಿಯೋ ವರದಾಮೂಲವೋ ಆದಾಗ ನಾ ನೆನಪಿಗೆ ಬರೋದಷ್ಟೇ ಅಲ್ಲ, ನನ್ನ ಹೆಸರಿನ ಬಗ್ಗೆಯೇ ಅದೆಷ್ಟೋ ಜಗಳಗಳಾಗಿವೆ ! ಕರವಸ್ತ್ರವನ್ನೋದು ಸಂಸ್ಕೃತಮೂಲದಿಂದ ಬಂದಿದೆ. ಅದರಿಂದ ಕನ್ನಡದ ಕಗ್ಗೊಲೆಯಾಗ್ತಾ ಇದೆ ಅಂತ ಹೋರಾಡುವವರು, ಕರ್ಚೀಫೆನ್ನೋದು ತೀರಾ ಚೀಪೆನ್ನಿಸುತ್ತೆ ಸ್ಟೈಲಾಗಿ ಹ್ಯಾಂಕಿ ಅನ್ನೋಣ ಅನ್ನುವ ಫ್ಯಾಷನ್ ಪ್ರಿಯರು , ಅನ್ನೋರಂದುಕೊಳ್ಳಲಿ , ನಾನೆಂತೂ ಕರ್ಚೀಪೆ ಅನ್ನೋದು ಅನ್ನೋ ಸ್ಥಿತಪ್ರಜ್ಣ್ಯರ ಮಧ್ಯ ನಾನೆಂತೂ ಆರಾಮಾಗಿದ್ದೇನೆ, ಯಾರ್ಯಾರದೋ ಇಸ್ತ್ರಿಯಾದ ಜೇಬುಗಳಲ್ಲಿ ಆರಾಮಾಗಿ.

ಕೆಲವರಿಗೆಂತೂ ನಾನೆಂದ್ರೆ ತುಂಬಾ ಲಕ್ಕಿ . ಕೆಂಪು ಕರ್ಚೀಪಿಟ್ಕೊಂಡ್ರೆ ಹೋದ ಕೆಲಸದಲ್ಲೆಲ್ಲಾ ಗ್ರೀನ್ ಸಿಗ್ನಲ್ಲೆಂಬ ನಂಬಿಕೆಯವ್ರು ಕಮ್ಮಿಯಿಲ್ಲ. ಸಂಖ್ಯಾ ಶಾಸ್ತ್ರಕ್ಕನುಗುಣವಾಗಿ ಇಂತಿಷ್ಟೇ ಗೆರೆಯಿರೋ ಕರ್ಚೀಫು ಇಟ್ಕೊಳ್ಳಬೇಕೆಂದ್ರೂ ಅಚ್ಚರಿಯಿಲ್ಲ ! ಲಕ್ಕಿಯೋ ಅವಲಕ್ಕಿಯೋ ಅನ್ನೋದು ತಲೆ ಕೆಡಿಸಿಕೊಳ್ಳದ ಕೆಲವರಿಗೆ ನಾನು ಫ್ಯಾಷನ್ ಸ್ಟೇಟ್ ಮೆಂಟು. ನೀಲಿ ಡ್ರೆಸಿದ್ರೆ ನೀಲಿ ಕರ್ಚೀಫು, ಕಪ್ಪು ಪ್ಯಾಂಟಿಗೆ ಬಿಳಿಯದು ಹಿಂಗೆ ತರತರದ ಲೆಕ್ಕಾಚಾರ. ಕೆಲವರ ಜೊತೆಗಿದ್ರೆ ನನಗೂ ವಾರಕ್ಕೆರೆಡು ಸ್ನಾನ. ಆಗಾಗ ಇಸ್ತ್ರಿ. ಕೆಲವರ ಜೊತೆಯೆಂತೂ ಹೇಳೋದೇ ಬೇಡ. ಹೂವಿನೊಡನೆ ನಾರು ಅನ್ನುವಂತೆ ಯಾವ ಪ್ಯಾಂಟಲ್ಲಿ, ಶರ್ಟಲ್ಲಿ ಇರ್ತೀನೋ ಅಲ್ಲೇ ನನ್ನ  ವಾಸ, ಅದೇ ನನ್ನ ಖಾಯಂ ವಿಳಾಸ ! ಪ್ಯಾಂಟಿಗೆ ಸ್ನಾನಭಾಗ್ಯವಿದ್ದರೆ ನನಗೂ ನೀರಭಾಗ್ಯ. ಪ್ಯಾಂಟೆಲ್ಲೋ ಬಿದ್ದಿದ್ರೆ ನನಗದೇ ಧೂಳ ಸಹವಾಸ !

ನನ್ನ ಅದೆಂಗೆಂಗೆಂಗೆ ಉಪಯೋಗಿಸ್ತಾರೋ ? ಅಬ್ಬಾ. ಅದರ ಬಗ್ಗೆ ಹೇಳೋದೇ ಬೇಡ. ಹೆಲ್ಮೆಟ್ಟಿನಡಿಯ ಬಟ್ಟೆಯಾಗಿ, ಟ್ರಿಪ್ಪಿಗೆ ಹೋಗುವಾಗ ಕಿವಿಗೆ ಗಾಳಿ ಹೋಗದಿರಲೆಂದು, ಬಾರದ ಕಣ್ಣೀರನ್ನೂ ಬಂದಿದೆಯೆಂದು ತೋರಿಸಿ ಒರೆಸಿಕೊಳ್ಳೋ ಸಾಧನವಾಗಿ , ಗಬ್ಬೆದ್ದು ಹೋಗಿರೋ ಗಾಳಿಗೋ ಕಲುಷಿತ ಟ್ರಾಫಿಕ್ಕಿಗೋ ಫಿಲ್ಟರ್ ಆಗಿ.. ಉಫ್. ಅಂದಾಗೆ ಸೆಖೆಯಾದಾಗಿ ಫ್ಯಾನಾಗಿ, ಬೆವರಿಗೊಂದು ಸಮಾಧಾನವಾಗೂ ಬಳಕೆಯಾಗೋ ನನ್ನ ಬಗ್ಗೆ ಕಿಂಚಿತ್ತೂ ಕರುಣೆಯಿಲ್ಲ ಕೆಲವರಿಗೆ. ಹೆಂಗೆ ಬೇಕಾದ್ರೂ ಹಂಗೆ ಮೂಟೆ ಕಟ್ಟಿ ಎಸೆದು ಬಿಡ್ತಾರೆ ಧುರುಳರು.ಇದ್ರ ಬಗ್ಗೆ ನಾನೊಂದು ಅತ್ಯುಗ್ರ ಪ್ರತಿಭಟನೆ ಮಾಡಬೇಕು ಅಂತ ಇದೀನಿ. ಉಗ್ರ ಪ್ರತಿಭಟನೆ ಅಂದ್ರೆ ಎದುರಿಗಿದ್ದವರ ನೀರಿಳಿಸಿ ಅವ ನಿಂತಲ್ಲೇ ಕುಸಿದುಬೀಳುವಂತೆ ಮಾಡೋದಲ್ಲ. ಇದು ಸಾತ್ವಿಕ ಪ್ರತಿಭಟನೆ. ನೋಡೋಕೆ ಐಸಂತಿದ್ರೂ ಅದೇ ಐಸ ಕೈ ಮೇಲೆ ನಿಮಿಷಗಳ ಕಾಲ ಇಟ್ಕೊಂಡಾಗ ಕೊರೆಯೋಕೆ ಶುರುವಾಗೋತ್ತಲ್ಲ ಹಾಗೆ.. ಚೆನ್ನಾಗೇ ಬಿಸಿ ಚೆನ್ನಾಗೇ ತಟ್ತಿರಬೇಕು. ಅಂತಾ ಪ್ರತಿಭಟನೆ. ದೇಶೀ ಕರ್ಚೀಫು ಹತ್ತಕ್ಕೋ ಹದಿನೈದಕ್ಕೋ ಸಿಕ್ಕರೂ ಬೇಡವೆಂದು ಅದ್ರಲ್ಲೂ ಬ್ರಾಂಡೆಡ್ ಹುಡುಕೋ ಜನರ ಬಗ್ಗೆ, ತಮ್ಮ ಗಾಡಿ ವಿಪರೀತ ಹೊಗೆಯುಗುಳತಿದ್ರೂ ಅದರ ತಪಾಸಣೆ ಮಾಡಿಸಿದೆ ತಮ್ಮ ಮೂಗಿಗೊಂದು ಕರ್ಚೀಫು ಕಟ್ಟಿಕೊಂಡು ಓಡಾಡುವವ್ರ ಬಗ್ಗೆ, ಊರೆಲ್ಲಾ ಹೊಲಸು ನಾರುತ್ತಿದ್ರೂ ತಲೆ ಕೆಡಿಸಿಕೊಳ್ಳದೇ ವರ್ಷಕ್ಕೊಮ್ಮೆ ವಿಸಿಟ್ ಕೊಟ್ಟು ಕರ್ಚೀಫು ಮೂಗಿಗಿಟ್ಕೊಂಡು ಬಂದ ಶಾಸ್ತ್ರ ಮಾಡೊ ಕಾರ್ಪೋರೇಟರ್ಗಳ ಬಗ್ಗೆ ,ಜಾತಿ ಧರ್ಮ ಭಾಷೆಗಳ ಹೆಸರಲ್ಲಿ ನಮ್ಮನ್ನ ಒಡೆದು ಆಳೋ ನೀತಿ ಅನುಸರಿಸುತ್ತಿದ್ರೂ ಎಲ್ಲಾ ಸಮಾವೇಶ, ಧರಣಿಗಳ ಕೊನೆಯಲ್ಲೂ ಬಂದು ಒಂದಿಷ್ಟು ಸುರಿಸೋ ಗ್ಲಿಸರಿನ್ ಕಣ್ಣೀರಿಗೆ ನನ್ನ ಅಡ್ಡವಿಟ್ಟುಕೊಳ್ಳೋ ಪಟ್ಟಭದ್ರರ ಬಗ್ಗೆ.. ಹೀಗೆ ಪಟ್ಟಿ ಬಹಳ ದೊಡ್ಡದಿದೆ ! ನೋಡ್ಬೇಕು ಯಾರಾದ್ರೂ ಬುದ್ದಿಜೀವಿಗಳು ಸಾಥ್ ಕೊಡ್ತಾರಾ ಅಂತ !

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ