Saturday, January 30, 2016

ವರದಾಮೂಲ

ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳ ಮಾಹಿತಿ ಕಲೆಹಾಕಿ ಅದನ್ನು ವಿಕಿಪೀಡಿಯಾದಲ್ಲಿ ಎಲ್ಲರಿಗೂ ತಲುಪುವಂತೆ ದಾಖಲಿಸೋ ಒಂದು ಕಾರ್ಯಕ್ರಮ ವಿಕಿಪೀಡಿಯಾ ಫೋಟೋವಾಕ್.ಸಾಗರದಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕೆಂದುಕೊಂಡಾಗ ನಾವು ಅದನ್ನು ಶುರುಮಾಡಿದ್ದು ವರದಾಮೂಲದಿಂದ. ವರದಾಮೂಲವೆನ್ನೋ ಸ್ಥಳದ ಬಗ್ಗೆ ಸಾಗರದ ಸುತ್ತಮುತ್ತಲಿನವರಿಗೆ ಹೊಸದಾಗಿ ಹೇಳೋ ಅವಶ್ಯಕತೆಯಿಲ್ಲದಿದ್ದರೂ ಈ ಭಾರಿಯ ಭೇಟಿಯಲ್ಲಿ ಸಿಕ್ಕ ಒಂದಿಷ್ಟು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಳ್ಳಲೇಬೇಕೆಂಬ ಹಂಬಲ ಹುಟ್ಟಿದ್ದು ಸಹಜ. ಅದರ ಫಲವೇ ಈ ಲೇಖನ.

ಹೋಗೋದು ಹೇಗೆ ?
ವರದಾಮೂಲಕ್ಕೆ ಸಾಗರದಿಂದ ೬ ಕಿ.ಮೀ. ಸಾಗರದಿಂದ ಇಕ್ಕೇರಿ/ಸಿಗಂದೂರು ಮಾರ್ಗದಲ್ಲಿ ೩ಕಿ.ಮೀ ಸಾಗಿದರೆ ಇಕ್ಕೇರಿ ಸರ್ಕಲ್ ಅಥವಾ ಅಘೋರೇಶ್ವರ ಸರ್ಕಲ್ ಅಂತ ಸಿಗುತ್ತದೆ. ಅದರಲ್ಲಿ ಎಡಕ್ಕೆ ಸಾಗಿದರೆ ೩.ಕಿ.ಮೀ ಕ್ರಮಿಸುವಷ್ಟರಲ್ಲಿ ವರದಾಮೂಲ ಸಿಗುತ್ತದೆ.  ಬಲಕ್ಕೆ ಸಾಗಿದರೆ ಒಂದು ಕಿ.ಮೀನಲ್ಲಿ ಇಕ್ಕೇರಿ. ಹಾಗಾಗಿ ಮತ್ತೊಂದು ಪ್ರೇಕ್ಷಣೀಯ ಸ್ಥಳ ಇಕ್ಕೇರಿಯಿಂದ ವರದಾಮೂಲಕ್ಕೆ ೪ ಕಿ.ಮೀ ಅಷ್ಟೆ.

ನೋಡಲೇನಿದೆಯಿಲ್ಲಿ?
ವರದಾಮೂಲ ಎನ್ನೋದು ಹೆಸರೇ ಹೇಳುವಂತೆ ವರದಾನದಿಯ ಉಗಮಸ್ಥಾನ. ಇಲ್ಲಿ ವರದಾನದಿಯು ಲಕ್ಷ್ಮೀದೇವಿಯ ಪಾದದಡಿಯಿಂದ ಉದ್ಭವಿಸಿ ಲಕ್ಷ್ಮೀತೀರ್ಥವೆಂದು ಕರೆಯಲ್ಪಡುವ ಮೊದಲ ಕಲ್ಯಾಣಿಯನ್ನು ಸೇರುತ್ತಾಳೆಂಬ ಪ್ರತೀತಿಯಿದೆ. ವರ್ಷವಿಡೀ ತುಂಬಿರೋ ಈ ಕಲ್ಯಾಣಿಯಿಂದ ಸರ್ವತೀರ್ಥ ಎಂದು ಕರೆಯಲ್ಪಡುವ ಹೊರಗಿನ ದೊಡ್ಡ ಕಲ್ಯಾಣಿಗೆ ವರದೆ ಹರಿಯುತ್ತಾಳೆ. ಹೊರಗಿನ ಕೊಳದಲ್ಲಿ ಪ್ರತೀ ಎರಡು ಮೂರು ಅಡಿಗಳಿಗೊಂದರಂತೆ ಒಟ್ಟು ೨೪ ತೀರ್ಥಗಳು ಉಗಮಿಸುತ್ತವೆಂದೂ ಅದಕ್ಕೇ ಅದಕ್ಕೆ ಸರ್ವತೀರ್ಥವೆಂದು ಕರೆಯುತ್ತಾರೆಂದು ಸ್ಥಳೀಯರು ತಿಳಿಸುತ್ತಾರೆ.
ವರದಾ ಮೂಲಕ್ಕೆ ಬಂದವರಿಗೆ ಮೊದಲು ಎದುರಾಗೋದೇ ಸರ್ವತೀರ್ಥ. ಅದಕ್ಕೆ ಇಳಿಯೋ ಜಾಗದಲ್ಲಿ ಬಲಬದಿಯಲ್ಲಿ ಕಾಲಭೈರವನ ವಿಗ್ರಹವಿದೆ. ಹೊಯ್ಸಳರ ದೇಗುಲಗಳಲ್ಲಿ ಅತೀ ಸಾಮಾನ್ಯವೆನಿಸೋ ಸ್ಮಶಾನಭೈರವಿಯ ಶಿಲ್ಪವನ್ನು ಈ ಶಿಲ್ಪ ನೆನಪಿಸಿದರೆ ಅಚ್ಚರಿಯಿಲ್ಲ. ದೇವಿಯ ಕೈಯಲ್ಲಿರೋ ರುಂಡಕ್ಕೆ ಬಾಯಿ ಹಾಕುತ್ತಿರೋ ನಾಯಿಯವರೆಗಿನ ಚಿತ್ರಣ ಇಲ್ಲೂ ಇದ್ದರೂ ಸ್ಮಶಾನ ಭೈರವಿಯ ಶಿಲ್ಪದಲ್ಲಿರೋ ಪ್ರೇತಗಣಗಳು, ಅದರಲ್ಲೊಂದರ ಕೈಯಲ್ಲಿರೋ ಮಗು ಮುಂತಾದ ಕೆತ್ತನೆಗಳು ಇಲ್ಲಿಲ್ಲ. ಅದರಿಂದ ಹಾಗೇ ಮುಂದೆ ಬಂದರೆ ತ್ರಿಲೋಚನ ಎಂದು ಕರೆಯಲ್ಪಡುವ ಶಿವಲಿಂಗ ಮತ್ತು ಪ್ರಸನ್ನಗಣಪತಿಯ ದೇಗುಲಗಳಿವೆ.

ಸರ್ವತೀರ್ಥದಿಂದ ಮೇಲ್ಗಡೆ ಹತ್ತಲಿರೋ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬಂದರೆ ಎದುರಾಗೋದು ಲಕ್ಷ್ಮೀ ತೀರ್ಥ ಮತ್ತು ಅದಕ್ಕಿಳಿಯಲಿರೋ ಮೆಟ್ಟಿಲುಗಳು. ಅದರೆದುರಿಗಿರುವುದೇ ಸದಾಶಿವದೇಗುಲ. ಕೆಳದಿಯರಸ ಶಿವಪ್ಪನಾಯಕನ ಚಿಕ್ಕಪ್ಪ ಸದಾಶಿವನಾಯಕ ಈ ದೇಗುಲಕ್ಕೆ ಉಂಬುಳಿ ಕೊಟ್ಟಿದ್ದ ಕಾರಣ ಈ ದೇಗುಲಕ್ಕೆ ಸದಾಶಿವದೇಗುಲವೆಂದು ಹೆಸರಾಯಿತೆಂದು ಕೆಲವರ ಅಭಿಪ್ರಾಯ. ಈ ದೇಗುಲದ ದ್ವಾರದಲ್ಲಿರೋ ಗಜಲಕ್ಷ್ಮಿ ಸಾಮಾನ್ಯವಾಗಿ ವಿಷ್ಣುವಿನ ದೇಗುಲಗಳಲ್ಲಿ ಕಂಡುಬರುವ ರಚನೆ. ಹಾಗಾಗಿ ಮೂಲದಲ್ಲಿ ಇದು ವಿಷ್ಣು ದೇಗುಲವಾಗಿದ್ದು ತದನಂತರದಲ್ಲಿ ಶೈವ ದೇಗುಲವಾಗಿ ಬದಲಾಗಿರಬಹುದೆಂಬ ಊಹಾಪೋಹಗಳಿದ್ದರೂ ಅದಕ್ಕೆ ತಕ್ಕ ಆಧಾರಗಳಿಲ್ಲ. ಇದರೆದುರು ಇರುವ ಧ್ವಜಸ್ಥಂಭದೆದುರು ಹಿಂದಿನ ಕಾಲದಲ್ಲಿ ಹೋಮಕ್ಕೆ ತುಪ್ಪ ಹಾಕಲು ಬಳಸುತ್ತಿದ್ದ ಸೃಕ್ ಸೃವ ಎಂಬ ಭಾರೀ ಗಾತ್ರದ ಹುಟ್ಟನ್ನು ನೋಡಬಹುದು. ಕಲ್ಲುವೀಣೆ ಎಂದೂ ಕೆಲವರು ಕರೆಯೋ ಇದು ತನ್ನ ಗಾತ್ರ ಮತ್ತು ರಚನೆಯಿಂದ ಇಲ್ಲಿಗೆ ಬರುವವರ ಗಮನ ಸೆಳೆಯುತ್ತೆ. ಈ ದೇಗುಲದ ಬಾಗಿಲಲ್ಲಿ "ಜೋಯಿಸರ ತಿಂಮಣನ ನಮಸ್ಕಾರ" ಎಂಬ ಕೆತ್ತನೆಯಿರುವುದನ್ನು ಕಾಣಬಹುದು. ಇಕ್ಕೇರಿಯಲ್ಲಿರೋ ಹನುಮದೇವಸ್ಥಾನದಲ್ಲೂ ಇದೇ ಬರಹವಿರುವ ಕಾರಣದಿಂದ ಎರಡೂ ದೇವಸ್ಥಾನಗಳು ಸರಿಸುಮಾರು ಒಂದೇ ಸಮಯದಲ್ಲಿ ನಿರ್ಮಾಣವನ್ನೋ ಜೀರ್ಣೋದ್ದಾರವನ್ನೋ ಕಂಡಿರಬಹುದೆಂದು ಊಹಿಸಬಹುದು.

ಕೂಗಲೇಶ್ವರ:
ಸದಾಶಿವದೇಗುಲದ ಪಕ್ಕದಲ್ಲಿರೋ ಒಂದು ಸಣ್ಣ ಗೇಟನ್ನು ದಾಟಿದರೆ ಸಪ್ತಮಾತೃಕೆಯರ ಕಲ್ಲೊಂದು ಕಾಣುತ್ತದೆ. ಇಲ್ಲಿ ಸಪ್ತ ಮಾತೃಕೆಯರ ಜೊತೆಗೆ ಎಡಬಲಗಳಲ್ಲಿ ಇನ್ನೆರೆಡು ಮೂರ್ತಿಗಳಿರೋದು ವಿಶೇಷ.
"ಬ್ರಾಹ್ಮೀ ಮಾಹೇಶ್ವರಿ ಚೈವ ಕೌಮಾರಿ ವೈಷ್ಣವೀ ತಥಾ
ವಾರಾಹೀ ನಾರಸಿಂಹೀ ಚ ಭೈಮಾಭೈರವಿ ನಂದಿನಿ" ಎಂಬ ಶ್ಲೋಕ ಅಥವಾ
ಬ್ರಾಹ್ಮೀ ಮಾಹೇಶ್ವರಿ ಚ ಇಂದ್ರಿ ಕೌಮಾರಿ ವೈಷ್ಣವೀ ತಥಾ
ಚಾಮುಂಡ ಚೈವ ವಾರಾಹಿ  ಲಕ್ಷ್ಮೀಶ್ಚ ಪುರುಶಾಕೃತಿಃ ಎಂಬ ದುರ್ಗಾ ಅಷ್ಟೋತ್ತರ ಸ್ತೋತ್ರದ ಎಂಟನೇ ಚರಣ(೧)
ಅಥವಾ
ಬ್ರಾಹ್ಮೀ ಮಾಹೇಶ್ವರಿ ಚೈವ ಕೌಮಾರೀ ವೈಷ್ಣವೀ ಯದಾ
ವಾರಾಹಿ ಚ ತದೇಂದ್ರಾಣಿ ಚಾಮುಂಡ ಸಪ್ತ ಮಾತಾರಃ ಎಂಬ ಮತ್ತೊಂದು ನಿತ್ಯ ಶ್ಲೋಕ(೨)ದ ಮೂಲಕ ಇಲ್ಲಿರುವ ಸಪ್ತಮಾತೃಕೆಯರನ್ನು ಅವರ ವಾಹನಗಳದೊಂದಿಗೆ ಗುರುತಿಸಬಹುದು.
ಅವರನ್ನು ಅವರ ವಾಹನಗಳೊಂದಿಗೆ ಗುರುತಿಸುವುದಾದರೆ
ಬ್ರಾಹ್ಮೀ(ವಾಹನ:ಕೋಣ), ಮಾಹೇಶ್ವರಿ(ವಾಹನ=ಮೊಸಳೆ/ಮಕರ), ಕೌಮಾರಿ(ಹಂಸ), ವೈಷ್ಣವಿ(ಮಾನವ), ವಾರಾಹಿ ನಾರಸಿಂಹಿ(ವಾಹನ=ವೃಷಭ/ಎತ್ತು), ಇಂದ್ರಾಣಿ(ವಾಹನ=ಆನೆ), ಚಾಮುಂಡಿ(ವಾಹನ=ವರಾಹ/ಹಂದಿ). ಇವರ ಬಲಭಾಗದಲ್ಲಿ ಗಣಪತಿಯಿದ್ದರೆ ಎಡಭಾಗದಲ್ಲಿ ರುದ್ರವೀಣೆಯನ್ನು ಹಿಡಿದ ನಂದಿವಾಹನನಾದ ಶಿವನಿದ್ದಾನೆ. ಇವನಿಗೆ ಕೂಗಲೇಶ್ವರ ಎಂಬ ಹೆಸರಂತೆ. ಇದಕ್ಕೆ ಕೂಗಲೇಶ್ವರ ಎಂದು ಹೆಸರು ಬಂದುದರ ಹಿಂದೂ ಒಂದು ಕಥೆಯಿದೆ.
ಹಿಂದೆಲ್ಲಾ ಈ ಭಾಗದಲ್ಲಿ ಮಕ್ಕಳು ತುಂಬಾ ಅಳುತ್ತಿದ್ದರೆ , ನಾಲ್ಕೈದು ವರ್ಷಗಳಾದರೂ ಮಾತು ಬರದಿದ್ದರೆ ಅದರ ಶಮನಕ್ಕೆಂದು ಈ ದೇವನಿಗೆ ಹರಕೆ ಹೊರುತ್ತಿದ್ದರಂತೆ. ಆ ಆಚರಣೆ ಈಗ ಕಡಿಮೆಯಾಗಿದೆಯಾದರೂ ದೇವನ ಹೆಸರಂತೂ ಹಾಗೇ ಉಳಿದಿದೆ

ಅದರ ಪಕ್ಕದಲ್ಲಿರುವ ಗುಡಿಗಳೆಲ್ಲಾ ಕಾಲಾನಂತರದಲ್ಲಿ ಈ ಕ್ಷೇತ್ರಕ್ಕೆ ಬಂದು ಹರಕೆ ಹೊತ್ತವರು ಕಟ್ಟಿಸಿಕೊಟ್ಟ ದೇಗುಲಗಳಂತೆ. ಉದಾಹರಣೆಗೆ ಸದಾಶಿವ ದೇಗುಲದ ಪಕ್ಕದಲ್ಲಿ ದ್ವಾರದಲ್ಲಿ ಕಡಲೇಕಾಳು ಗಣೇಶ ಮತ್ತು ಅನ್ನಪೂರ್ಣೇಶ್ವರಿ ವಿಗ್ರಹಗಳಿರುವ ಶಂಭುಲಿಂಗೇಶ್ವರ ದೇಗುಲವಿದೆ. ಅದರ ಪಕ್ಕದಲ್ಲಿ ಮಣಿಕರ್ಣಿಕೇಶ್ವರ ಮತ್ತು ರಾಮೇಶ್ವರ ದೇಗುಲಗಳಿವೆ. ಇವುಗಳ ಬಗ್ಗೆಯೂ ಒಂದೊಂದು ಕತೆಗಳಿವೆ. ಕೆಲ ಸ್ಥಳಗಳಲ್ಲಿರೋ ಕಲ್ಲನ್ನು ಎತ್ತಿದರೆ ತಮ್ಮ ಕೆಲಸವಾಗುತ್ತದೆ ಎಂಬ ನಂಬಿಕೆಯಿರುವಂತೆಯೇ ಮಣಿಕರ್ಣಿಕೇಶ್ವರನ ಎದುರಿಗಿರೋ ನಂದಿಯನ್ನು ಎತ್ತಿದರೆ ಕೆಲಸವಾಗುತ್ತದೆ ಎಂಬ ನಂಬಿಕೆಯಿತ್ತಂತೆ ! ಅದೆಲ್ಲಾ ಮೂಡನಂಬಿಕೆ ಎಂದು ನಂದಿಯನ್ನು ಅಷ್ಟಬಂಧ ಮಾಡಿ ಕೂರಿಸಲಾಗಿದೆಯೀಗ. ವರದಾಮೂಲವೆಂಬುದು ವಿಂಧ್ಯಪರ್ವತದ ಮೂಲ. ಹಾಗಾಗಿ ರಾಮ ಇಲ್ಲಿಂದಲೇ ವನವಾಸವನ್ನು ಪ್ರಾರಂಭಿಸಿದ ಎನ್ನೋ ಪ್ರತೀತಿ ರಾಮೇಶ್ವರ ದೇಗುಲದ ಬಗೆಗಿದೆ. ಆ ದೇಗುಲದ ಎಡಬಲಗಳಲ್ಲಿ ಗಣೇಶ, ಸುಬ್ರಹ್ಮಣ್ಯರ ವಿಗ್ರಹಗಳಿವೆ.

ಇವನ್ನೆಲ್ಲಾ ದಾಟಿ ಒಳಗೆ ಸಾಗಿದರೆ ೭ ಕುದುರೆಗಳಿಂದ ಕೂಡಿದ ರಥವೇರಿದ ಸೂರ್ಯನಾರಾಯಣನ ವಿಗ್ರಹವಿದೆ. ರಥದ ಚಕ್ರಗಳು ಈ ಮುರಿದು ಹೋಗಿದ್ದು ಅದರ ಬಲಭಾಗದಲ್ಲಿ ವರದಾದೇವಿಯ ಗರ್ಭಗೃಹವಿದೆ. ಇದರ ಪುರಾಣವನ್ನು ಕೇಳುವುದಾದರೆ ತನ್ನಿಂದಲೇ ಸೃಷ್ಠಿಯಾದ ಶತರೂಪೆಯನ್ನು ಮೋಹಿಸುತ್ತಿದ್ದ ಬ್ರಹ್ಮನ ಐದನೇ ತಲೆಯನ್ನು ಶಿವ ಕಡಿದು ಕಪಾಲವನ್ನಾಗಿ ಬಳಸುತ್ತಾನೆ. ಆದರೆ ಇದರ ಪಾಪ ಶಿವನನ್ನ ಕಾಡತೊಡಗಿ ಆತ ಚತುಶೃಂಗಗಳ ಮಧ್ಯೆ ತಪಸ್ಸಿಗೆ ಕೂರುತ್ತಾನೆ. ಶಿವನ ಪಾಪ ಪರಿಹಾರಕ್ಕಾಗಿ ವಿಷ್ಣುವು ತನ್ನ ಶಂಖದಿಂದ ಗಂಗೆಯಲ್ಲಿ ಶಿವನಿಗೆ ಅಭಿಷೇಕ ಮಾಡುತ್ತಾನೆ. ಆ ನಂತರದಲ್ಲಿ ಉಳಿದ ನೀರೇ ವರದಾತೀರ್ಥವಾಯಿತೆಂದು ಪ್ರತೀತಿಯಿದೆ. ಮೇಲಿನ ಪ್ರತೀತಿಗಳಿಗನುಗುಣವಾಗಿ ವರದಾಮೂಲದ ಸುತ್ತಲೇ ಕವಲಗೋಡು, ಓತುಗೋಡು,ಕುಂಟುಗೋಡು,ತೆಂಕೋಡು ಎಂಬ ನಾಲ್ಕು ಊರುಗಳಿರುವುದು ವಿಶೇಷ.

ದೇವಿಯ ಬಗ್ಗೆ:
ಗಾಯಿತಿ,ಸಾವಿತ್ರಿ, ಸರಸ್ವತಿ ದೇವಿಯರ ಸಂಗಮರೂಪವೆಂದು ನಂಬಲಾಗುವ ವರದೆಯು ಎಡಗೈಯಲ್ಲಿ ವರದಹಸ್ತೆ. ಎರಡೂ ಕಡೆ ವರ ಕೊಡೋದ್ರಿಂದ ವರದಾಂಬಿಕೆಯೆಂಬ ನಂಬಿಕೆಯಿದೆಯೆಂದೂ ಪ್ರತೀತಿಯೆದೆ. ಈ ಕ್ಷೇತ್ರಕ್ಕೆ ಮುಂಚೆ ತೀರ್ಥರಾಜಪುರ ಎಂಬ ಹೆಸರೂ ಇತ್ತಂತೆ. ಅದರ ಬಗೆಗಿನ ಉಲ್ಲೇಖಗಳ ನೋಡೋದಾದರೆ ಮಹಾರಾಜ ಸಗರನು ನೀರಿಗಾಗಿ ಯಜ್ಞವೊಂದನ್ನು ಕೈಗೊಳ್ಳಲು ತಾಯಿ ವರದೆ ಪ್ರತ್ಯಕ್ಷಳಾಗಿ ನೀನು ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಬರುತ್ತೇನೆಂದೂ ಆದರೆ ಹಿಂದಿರುಗಿ ನೋಡಬೇಡವೆಂದೂ ಹೇಳುತ್ತಾಳಂತೆ. ಆತ ಸಾಗರವೆಂಬ ಪ್ರದೇಶದಲ್ಲಿ ಹಿಂತಿರುಗಿ ನೋಡುತ್ತಾನಂತೆ. ಅಲ್ಲಿಗೆ ನದಿಯ ಹರಿಯುವಿಕೆ ನಿಂತು ಆಕೆ ಬೃಹದಾಕಾರವಾಗಿ ಶೇಖರಗೊಳ್ಳುತ್ತಾಳಂತೆ. ಅದೇ ಈಗಿನ ಸಾಗರವೆಂಬ ಊರೆಂದು ಪ್ರತೀತಿ ! ಈ ಕಥೆ ಭಗೀರಥನು ಭೂಮಿಗೆ ಗಂಗೆಯನ್ನು ತಂದ ಪ್ರಸಂಗವನ್ನು ಹೋಲುತ್ತದಾದರೂ ಸಾಗರವೆಂದು ಬರೋ ಉಲ್ಲೇಖ ನಿಜವಾದ ಸಮುದ್ರದ ಪರಿಕಲ್ಪನೆಯೂ ಆಗಿರಬಹುದು ! ಈ ನದಿ ಉತ್ತರಕ್ಕೆ ಹರಿಯುತ್ತದೆ. ಬಂಕಸಾಣ ಎಂಬ ಊರಿನಲ್ಲಿ ದಂಡಾವತಿಯನ್ನು ಸೇರುತ್ತದೆ.

ಈ ದೇಗುಲದ ಪಕ್ಕದಲ್ಲೇ ಗೋಪಾಲ ಮೊದಲಾದ ದೇಗುಲಗಳಿವೆ. ಇಲ್ಲೊಂದು ಸಣ್ಣ ಕೊಳವಿದ್ದು ಅದಕ್ಕೆ ಅಗ್ನಿತೀರ್ಥವೆಂದು ಹೆಸರು. ಪಕ್ಕದಲ್ಲೇ ಇದ್ದರೂ ಲವಣಗಳಿಂದ ತುಂಬಿರೋ ಈ ನೀರಿನ ರುಚಿ ಸರ್ವತೀರ್ಥದ ನೀರ ರುಚಿಗಿಂತ ಭಿನ್ನವಾಗಿರುವುದು ವಿಶೇಷ.

ಸ್ಥಳಪುರಾಣಗಳ ಮಾಹಿತಿ: ಶ್ರೀ ಗುರುದತ್ತ ಶರ್ಮ, ವರದಾಮೂಲ
ನಿರೂಪಣೆ: ಪ್ರಶಸ್ತಿ,ಸಾಗರ 

ಇನ್ನೂ ಹೆಚ್ಚಿನ ಮಾಹಿತಿಗಾಗಿ :
೧. https://sloka.wordpress.com/2009/03/27/sri-durga-ashthothara-shatanama-sthothram/
೨.http://rare-news-collection.blogspot.in/2009/03/nithya-slokas.html
೩.http://hindumythologybynarin.blogspot.in/2011/07/brahma-kapalam-story-of-lord-brahmas.html

Sunday, January 3, 2016

ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ಕ್ಷೇತ್ರ:

ಇದರ ಬಗ್ಗೆ ಬರೆಯಹೊರಟಿದ್ಯಾಕೆ ?
ಸಿದ್ದಾಪುರದಿಂದ ಆರು ಕಿ.ಮೀ ಮತ್ತು ಕುಂದಾಪುರದಿಂದ ೩೫ ಕಿ.ಮೀ ದೂರವಿರುವ ಕಮಲಶಿಲೆಯ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೂ ಮತ್ತು ನನ್ನ ಚಿಕ್ಕಪ್ಪನ ಮನೆಗೂ ಬಹಳ ನಂಟು. ನಮ್ಮ ಅಜ್ಜಿ(ಚಿಕ್ಕಪ್ಪನ ಅತ್ತೆ) ಇರಗಿ ಲಕ್ಷ್ಮಮ್ಮನವರು, ನಾರಾಯಣ ಛಾತ್ರರು ಈ ದೇಗುಲಕ್ಕೆ ಬಹಳ ನಡೆದುಕೊಳ್ಳುತ್ತಿದ್ದರೆಂಬುದು ಚಿಕ್ಕಂದಿನಲ್ಲೇ ಕೇಳಿದ ಮಾತು. ಅಲ್ಲಿಯ ಗಣಪತಿ,ಹೊಸಮ್ಮ ದೇವರ ದೇಗುಲದೆದುರು ಅವರ ಹೆಸರು ಕಂಡಾಗಲೆಲ್ಲಾ ಅಜ್ಜಿಯ ಮುಖವೇ ನೆನಪಾಗುತ್ತೆ.ಸಣ್ಣವರಿದ್ದಾಗ ಚಿಕ್ಕಪ್ಪನ ಮನೆಯ ಯಾವ ಪ್ರಮುಖ ಕಾರ್ಯಕ್ರಮಗಳಿಗೆ ಬಂದರೂ ಇಲ್ಲಿಗೆ ಬಂದೇ ಹೋಗುತ್ತಿದ್ದ ಕಾರಣ ಇಲಿಗೆ ಬಂದಾಗೆಲ್ಲಾ ನಮ್ಮೂರ ದೇವಸ್ಥಾನಕ್ಕೇ ಬಂದಷ್ಟು ಆಪ್ತ ಭಾವ.ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ಜಾತ್ರೆ, ಬೆಳ್ಳಿ ತೇರನೆಳೆಯೋ ಸಂದರ್ಭದಲ್ಲಿ ಚಿಕ್ಕಂದಿನಲ್ಲಿ ಚಿಕ್ಕಪ್ಪನ ಮನೆಯವರೊಂದಿಗೆ ನಾವೂ  ಭಾಗಿಯಾಗುತ್ತಿದ್ದ ನೆನಪುಗಳು ಇನ್ನೊಂದು ತರ. ಪ್ರತೀ ಸಲ ಅಲ್ಲಿಗೆ ಹೋದಾಗಲೂ ಹಳೆಯ ನೆನಪುಗಳು ಮತ್ತೆ ಹಸಿರಾಗೋದ್ರ ಜೊತೆಗೆ ಒಂದಿಷ್ಟು ಹೊಸ ಸಂಗತಿಗಳು ಎದುರಾಗುತ್ತೆ. ಈ ಬಾರಿ ಅಲ್ಲಿಗೆ ಹೋದ ನೆನಪುಗಳ ಮೂಟೆಯೇ ಈ ಲೇಖನ

ಕ್ಷೇತ್ರಕ್ಕೆ ಕಮಲಶಿಲೆ ಎಂದು ಏಕೆ ಹೆಸರು ಬಂತು ?
ಇದರ ಬಗ್ಗೆ ಹಲವು ಕಥೆಗಳಿವೆ.
೧. ಸ್ಕಂಧ ಪುರಾಣದ ಸಹ್ಯಾದ್ರಿ ಕಾಂಡದ ಪ್ರಕಾರ ಕೈಲಾಸ ಪರ್ವತದಲ್ಲಿ ಪಿಂಗಳ ಎಂಬ ಸುಂದರ ನೃತ್ಯಗಾರ್ತಿಯಿದ್ದಳಂತೆ. ಒಮ್ಮೆ ಅವಳು ತನ್ನ ಅಹಂಕಾರದಿಂದ ತಾನು ನರ್ತಿಸಲೊಲ್ಲೆ ಎಂದಾಗ ಪಾರ್ವತಿ ಭೂಲೋಕದಲ್ಲಿ ಕುರೂಪಿಯಾದ ಹೆಣ್ಣಾಗಿ ಹುಟ್ಟು ಎಂದು ಶಪಿಸುತ್ತಾಳಂತೆ. ತನ್ನ ತಪ್ಪಿನ ಅರಿವಾದ ಪಿಂಗಳೆಯು ಕ್ಷಮೆಯಾಚಿಸಲು ಕರಟಾಸುರನ ದುಷ್ಕೃತ್ಯಗಳಿಂದ ಪರಿತಪಿಸುತ್ತಿರೋ ಭೂಲೋಕವಾಸಿಗಳ ಉದ್ದಾರಕ್ಕೆ ತಾನೇ ಅವತರಿಸುತ್ತೇನೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಋಕ್ಷ್ವಮುನಿಯ ಆಶ್ರಮದ ಬಳಿಯಲ್ಲಿ ಕಮಲಶಿಲೆಯ ರೂಪದ ಲಿಂಗದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಳಂತೆ. ಪಿಂಗಳೆ ಭೂಮಿಗೆ ಅವತರಿಸಿದ್ದು ಕುಬ್ಜೆಯೆಂಬ ಕುರೂಪಿಯಾಗಿ. ಕುಬ್ಜೆ ತನ್ನ ಈ ಜನ್ಮದ ಮೋಕ್ಷಕ್ಕಾಗಿ ಈ ಕ್ಷೇತ್ರದಲ್ಲಿರೋ  ಸುಪಾರ್ಶ್ವ ಗುಹೆಯಲ್ಲಿ ತಪಸ್ಸು ಮಾಡತೊಡಗುತ್ತಾಳೆ. ಈ ತಪಸ್ಸಿನಿಂದ ಪ್ರಸನ್ನಳಾಗೋ ಪಾರ್ವತಿ ಸುಪಾರ್ಶ್ವಗುಹೆಯಲ್ಲಿ ಹುಟ್ಟೋ ನಾಗತೀರ್ಥ ಮತ್ತು ಈಗಿನ ಕುಬ್ಜಾನದಿಯ ಸಂಗಮಸ್ಥಳದಲ್ಲಿ ಕಮಲಶಿಲೆಯ ಲಿಂಗವಾಗಿ (ಈಗಿನ ದುರ್ಗಾಪರಮೇಶ್ವರಿ ದೇವಸ್ಥಾನವಿರುವ ಕಡೆ) ಪ್ರತ್ಯಕ್ಷಳಾಗುತ್ತಾಳೆ. ದೇವಿಯು ಶ್ರೀಕೃಷ್ಣನ ಸ್ಪರ್ಷದಿಂದ ನಿನ್ನ ಪಾಪಪರಿಹಾರವಾಗುವುದೆಂಬ ವಿಧಿಲಿಖಿತವಿರೋದ್ರಿಂದ ನೀನು ಮಥುರೆಗೆ ತೆರಳು ಎಂದು ಕುಬ್ಜೆಗೆ ತಿಳಿಸುತ್ತಾಳೆ. ಸಹ್ಯಾದ್ರಿಯ ತಪ್ಪಲಲ್ಲಿ ಹುಟ್ಟಿ ಪಶ್ಚಿಮದ ಕಡಲೆಡೆಗೆ ಸಾಗೋ ನದಿ ಕುಬ್ಜೆಯ ನೆನಪಲ್ಲಿ ಕುಬ್ಜಾ ನದಿಯೆಂದೇ ಹೆಸರು ಪಡೆಯುತ್ತದೆ ಎಂದು ತಿಳಿಸುತ್ತಾಳೆ. ಶ್ರೀಕೃಷ್ಣನ ಸ್ಪರ್ಷದಿಂದ ಗೂನುಬೆನ್ನಿನ ಅಜ್ಜಿಯೊಬ್ಬಳು ಶಾಪಪರಿಹಾರಗೊಂಡು ತನ್ನ ಮೊದಲ ರೂಪ ಪಡೆಯೋ ಕಥೆಯನ್ನು ಭಾಗವತದಲ್ಲಿ ಓದಿರಬಹುದು. ಎಲ್ಲಿಯ ಭಾಗವತ , ಎಲ್ಲಿಯ ಸ್ಕಂಧಪುರಾಣ..ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅನಿಸಿದರೂ ಅವುಗಳೊಳಗಿನ ಇಂಥಾ ಸಂಬಂಧಗಳು ಅದೆಷ್ಟೋ ಸಲದಂತೆ ಮತ್ತೆ ಮತ್ತೆ ಅಚ್ಚರಿಹುಟ್ಟಿಸುತ್ತಲೇ ಸಾಗುತ್ತದೆ
೨. ಕಮಲ ಶಿಲೆಯ ಲಿಂಗ ಪ್ರಪಂಚದ ಸೃಷ್ಟಿಯ ಸಂದರ್ಭದಲ್ಲೇ ಉತ್ಪತ್ತಿಯಾಯಿತೆಂದೂ , ಇದು ಆದಿ ಬ್ರಹ್ಮನ ಸ್ವರೂಪವೆಂದೂ ಬ್ರಹ್ಮ ಲಿಂಗೇಶ್ವರನೆಂದೂ ಜನ ಪೂಜಿಸುತ್ತಿದ್ದಂತೆ. ನಂತರದಲ್ಲಿ ಇದು ಶ್ರೀ ದುರ್ಗಾಪರಮೇಶ್ವರಿಯೆಂದು ಬದಲಾಯಿತೆಂದೂ ಜನ ತಿಳಿಸುತ್ತಾರೆ.


ಕ್ಷೇತ್ರದಲ್ಲಿ ನೋಡಲು ಏನೇನಿದೆ ?
ಕುಬ್ಜಾ ನದಿಯ ದಂಡೆಯಲ್ಲಿರುವ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಪ್ರಧಾನ ದೇವತೆ ದುರ್ಗಾಪರಮೇಶ್ವರಿಯಲ್ಲದೇ ಅದೇ ಪ್ರಾಂಗಣದಲ್ಲಿ ಗಣಪತಿ, ಹೊಸಮ್ಮ ದೇವಿ, ವೀರಭದ್ರ, ಈಶ್ವರ, ಮುಂದಂತಾಯ ದೇವತೆ, ನಾಗದೇವತೆ, ನವಗ್ರಹಗಳು, ವಿಷ್ಣು ಮುಂತಾದ ದೇವತೆಗಳಿವೆ. ಇವುಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಒಂದೊಂದು ಕತೆಗಳಿವೆ. ಚುಟುಕಾಗಿ ನೋಡೋದಾದರೆ
  • ವೀರಭದ್ರ: ಈತ ಈ ಕ್ಷೇತ್ರದ ಕ್ಷೇತ್ರಪಾಲ. ಗರ್ಭಗೃಹದ ದುರ್ಗಾಪರಮೇಶ್ವರಿಗೆ ಎಷ್ಟು ಬಾರಿ ಪೂಜೆ, ನೈವೇದ್ಯಗಳಾಗುತ್ತವೆಯೋ ಆಗೆಲ್ಲಾ ವೀರಭದ್ರ ಸ್ವಾಮಿಗೂ ಪೂಜಾ ನೈವೇದ್ಯಗಳಾಗುತ್ತವೆಯಂತೆ  

  • ಗಣಪತಿ: ವೀರಭದ್ರ ಅಂದರೆ ಶಿವನ ಜಟೆಯಿಂದ ಹುಟ್ಟಿದವನು. ದಕ್ಷಯಜ್ಞದ ಸಮಯದಲ್ಲಿ ಪತಿಯ ಬಗೆಗಿನ ಅಪಮಾನವನ್ನು ತಾಳಲಾರದೇ ಬೆಂಕಿಗೆ ಹಾರಿ ಸತಿ ಆತ್ಮಾಹುತಿ ಮಾಡಿಕೊಳ್ಳುತ್ತಾನೆ. ಆಗ ಕೋಪದಿಂದ ಕುದಿಯೋ ಶಿವ ತನ್ನ ಜಟೆಯಿಂದ ಕೂದಲನ್ನು ಕಿತ್ತು ಎಸೆಯುತ್ತಾನೆ. ಅದರಿಂದ ಹುಟ್ಟಿದ ವೀರಭದ್ರ ಬೃಹದಾಕಾರ ತಾಳಿ ದಕ್ಷನನ್ನು ಸಂಹರಿಸುತ್ತಾನೆ ಎಂದು ಕತೆ ಮುಂದುವರಿಯುತ್ತದೆ. ಶಿವನೆಂದ್ರೇ ಕೋಪ, ಯಾವಾಗ ಅವನ ಮೂರನೇ ಕಣ್ಣನ್ನು ತೆಗೆದು ಜಗವನ್ನೆಲ್ಲಾ ಭಸ್ಮ ಮಾಡುತ್ತಾನೋ ಎಂದು ದೇವತೆಗಳು ಹೆದರೋ ಸಂದರ್ಭದಲ್ಲಿ ಅವನ ಕೋಪದ ಪ್ರತಿರೂಪವಾದ ವೀರಭದ್ರನೆಂದರೆ ಸುಮ್ಮನೆಯೇ ? ಅವನ ಕೋಪದ ಕಿರಣಗಳಿಂದ, ಕೆಟ್ಟ ದೃಷ್ಟಿಯಿಂದ ಕ್ಷೇತ್ರಕ್ಕೇನೂ ಆಗದಿರಲೆಂದು ವೀರಭದ್ರನ ಎದುರಿಗೆ ವಿಘ್ನನಿವಾರಕನಾದ, ಸೌಮ್ಯಮೂರ್ತಿಯಾದ ಗಣನಾಥನನ್ನು ಪ್ರತಿಷ್ಟಾಪಿಸಲಾಗಿದೆಯಂತೆ
  • ಹೊಸಮ್ಮ ದೇವಿ: ಹಿಂದೆ ಆರ್ಭಟಿ, ಧಾರ್ಭಟಿ ಮತ್ತು ಶಾಸ್ತಾರರೆಂಬ ದೇವಿಯರು ಶಿವನ ವಾಹನವಾದ ನಂದಿಕೇಶ್ವರನೊಂದಿಗೆ ಇಲ್ಲಿಗೆ ಬಂದರಂತೆ. ಇಲ್ಲಿಯೇ ನೆಲೆಸಲು ಅನುಮತಿ ಕೇಳಿದ ಅವರು ಪ್ರತೀ ವರ್ಷ ಬರೋ ಹೊಸ ಫಸಲಲ್ಲಿ ಮಾತ್ರ ತಮಗೆ ನೈವೇದ್ಯ ಮಾಡಬೇಕೆಂದು ಕೇಳಿದರಂತೆ. ಹಾಗಾಗಿ ಇವರಿಗೆ ಹೊಸಮ್ಮ ದೇವಿಯೆಂದು ಹೆಸರು!
  •  ಮುಂದಂತಾಯ ದೇವತೆ: ಹೆಸರು ದೇವತೆ ಅಂತಿದ್ದರು ಮುಂದಂತಾಯ ಅನ್ನೋದು ದೇವರಲ್ಲ. ಮುಂದಂತಾಯ ಅನ್ನೋನು ಕೇರಳದಿಂದ ಇಲ್ಲಿಗೆ ಬಂದ ಮಾಂತ್ರಿಕನಂತೆ. ಆತ ದೇವಿಯ ಶಕ್ತಿಯನ್ನು ಸೆರೆಹಿಡಿಯಲು ಇಲ್ಲಿಗೆ ಬಂದರೂ ತನ್ನ ಕಾರ್ಯದಲ್ಲಿ ಯಶಸ್ವಿಯಾಗದೇ ಕೊನೆಗೆ ದೇವಿಗೆ ಶರಣಾಗಿ ಇಲ್ಲೇ ನೆಲಸುತ್ತಾನಂತೆ. ಆತ ಈ ಕ್ಷೇತ್ರವನ್ನು ಕಾಯಲಿ ಎಂಬ ಕಾರಣದಿಂದ ಆತನಿಗೆ ಕಲ್ಪಿಸಿದ ನೆಲೆಯೇ ಈ ಮುಂದಂತಾಯ ಮೂರ್ತಿಯಂತೆ !
  • ಪಂಚಮುಖಿ ನಾಗರಾಜ:ಇಲ್ಲಿರುವ ನಾಗರಾಜ ಪಂಚಮುಖಿ ನಾಗರಾಜ ಅಥವಾ ಐದು ಹೆಡೆಗಳಿರೋ ನಾಗರಾಜ. ಇದರ ಹಿಂದಿರೋ ಹುತ್ತ ಪ್ರತಿವರ್ಷವೂ ಬೆಳೆಯುತ್ತಾ ಸಾಗಿ ಈಗ ಸುಮಾರು ಹತ್ತು ಅಡಿಗಳಷ್ಟು ಬೆಳೆದು ನಿಂತಿದೆ
  • ಸಲಾಂ ಪೂಜೆ: ಈ ದೇಗುಲದಲ್ಲಿ ಪ್ರತೀ ಸಂಜೆ ನಡೆಯೋ "ಸಲಾಂ ಪೂಜೆ" ಎನ್ನೋ ಆಕರ್ಷಣೆಯೊಂದಿದೆ. ಮುಸ್ಲಿಂ ರಾಜರಾಗಿದ್ದ ಹೈದರಾಲಿ ಮತ್ತವನ ಮಗ ಟಿಪ್ಪುವಿನ ನೆನಪಿಗೋಸ್ಕರ ಇದನ್ನು ಇನ್ನೂ ನಡೆಸಿಕೊಂಡು ಬರಲಾಗುತ್ತಿದೆಯಂತೆ. ಇಲ್ಲಿಂದ ಸುಮಾರು ಇಪ್ಪತ್ತು ಕಿ.ಮೀ ದೂರದಲ್ಲಿರೋ ಶಂಕರನಾರಾಯಣ ದೇವಸ್ಥಾನದಲ್ಲಿ ಟಿಪ್ಪು ದೇವಸ್ಥಾನಕ್ಕೆ ನೀಡಿದ್ದೆನ್ನಲ್ಲಾದ ದೊಡ್ಡ ಘಂಟೆಯೊಂದಿದೆ. ಈ ದೇವಸ್ಥಾನಕ್ಕೆ ಟಿಪ್ಪುವಾಗಲಿ, ಹೈದರಾಲಿಯಾಗಲಿ ನೀಡಿದಂತಹ ಕಾಣಿಕೆ ಎದುರಿಗೆ ಕಾಣದಿದ್ದರೂ ಅಂತದ್ದೇನಾದರೂ ಇರಲೇ ಬೇಕು ಎಂದನಿಸಿದ್ದು ಸುಳ್ಳಲ್ಲ.

ಆದಿ ಸ್ಥಳ ಗುಹಾಲಯ, ಕಮಲಶಿಲೆ:
ಕಮಲಶಿಲೆಗೆ ಬಂದು ಅಲ್ಲಿಂದ ಸುಮಾರು ೨.ಕಿ.ಮೀ ದೂರದಲ್ಲಿರೋ ಗುಹಾಲಯವನ್ನು ನೋಡಲಿಲ್ಲವೆಂದರೆ ನಿಮ್ಮ ಕಮಲಶಿಲೆಯ ಭೇಟಿ ಅಪೂರ್ಣವೆಂದೇ ಅರ್ಥ. ಅಲ್ಲೇನಿದೆ ಅಂದಿರಾ .ಆ ಆದಿಸ್ಥಳ ಗುಹಾಲಯದ ಬಗ್ಗೆಯೇ ಹೇಳಹೊರಟಿದ್ದು ಈಗ.  
ಹುಲಿಗಳು ಭೇಟಿ ನೀಡೋ ಸ್ಥಳ
ಕಮಲಶಿಲೆಯಿಂದ ಕುಂದಾಪುರ/ಹಳ್ಳಿಹೊಳೆ ಕಡೆ ಸಾಗೋ ರಸ್ತೆಯಲ್ಲಿ ಎಡಕ್ಕೆ ಆದಿಸ್ಥಳ ಗುಹಾಲಯ ಎಂಬ ಬೋರ್ಡು ಕಾಣುತ್ತೆ. ಅದರಲ್ಲಿ ಎಡಕ್ಕೆ ತಿರುಗಿ ಒಂದು ನೂರು ಮೀಟರ್ ದೂರಲ್ಲಿ ಒಂದು ಬಸ್ಟಾಂಡ್ ಕಂಡ ಹಾಗೆ ಕಾಣುತ್ತೆ. ಅದರ ಬಳಿ ಸಾಗಿದ್ರೆ ನಾವು ಸಾಗಿದ ದಿಕ್ಕಿನ ವಿರುದ್ದ ದಿಕ್ಕಿನಲ್ಲಿ, ನಮ್ಮ ಕಾಲ ಕೆಳಗೇ ಗುಹೆಯೊಂದು ಇದ್ದಿದ್ದು ಪಟ್ಟನೆ ಗೋಚರಿಸುತ್ತೆ. ವಾಸ್ತವದಲ್ಲಿ ದೂರದಿಂದ ಬಸ್ಟಾಂಡಂತೆ ಕಂಡದ್ದು ಬಸ್ಟಾಂಡಲ್ಲ. ಅದೊಂದು ಯಜ್ಞಕುಂಡ. ಇಲ್ಲಿಗೆ ಆಗಾಗ ರಾತ್ರಿ ವೇಳೆ ಹುಲಿಗಳು ಭೇಟಿ ನೀಡುತ್ತವೆಯೆಂದೂ ರಥೋತ್ಸವದ ಸಂದರ್ಭದಲ್ಲಿ ಹುಲಿಗಳು ಭೇಟಿ ನೀಡಿ ಘರ್ಜಿಸುತ್ತವೆಯೆಂದೂ ಪ್ರತೀತಿಯಿದೆ.

ಸುಪಾರ್ಶ್ವ ಗುಹೆ:
Entrance to Suparshwa Guhe, Kamalashile

ಅದರ ಎದುರಿಗೆ ಗುಹೆಯ ಬಾಯಿ, ಕೆಳಕ್ಕಿಳಿಯಲು ಮೆಟ್ಟಿಲುಗಳು ಕಾಣಿಸುತ್ತೆ. ಈ ಗುಹೆಗೆ ಸುಪಾರ್ಶ್ವ ಗುಹೆ ಎಂದು ಹೆಸರು ಬರೋ ಹಿಂದೆಯೂ ಒಂದು ಕಥೆಯಿದೆ. ಕೃತಯುಗದಲ್ಲಿ ಸುಪಾರ್ಶ್ವ ಅನ್ನೋ ರಾಜ ತಪಸ್ಸನ್ನಾಚರಿಸಲು ಸೂಕ್ತ ಸ್ಥಳವನ್ನರಸಿ ಈ ಜಾಗಕ್ಕೆ ಬರುತ್ತಾನಂತೆ. ಇಲ್ಲಿನ ಪ್ರಶಾಂತತೆಯಿಂದ ಇಲ್ಲೇ ನೆಲಸೋ ಆತ ತನ್ನ ತಪಸ್ಸು ನಿರ್ವಿಘ್ನವಾಗಿ ನೆರವೇರುವಂತೆ ಆಶೀರ್ವದಿಸು ಎಂದು ಪರಶಿವನನ್ನು ಬೇಡುತ್ತಾನಂತೆ. ಆ ಕಾರಣಕ್ಕಾಗಿ ಸುಪಾರ್ಶ್ವ ಗುಹೆ ಎಂದು ಹೆಸರು ಪಡೆಯುತ್ತದೆಯಂತೆ. ಆತನ ಕೋರಿಕೆಯನ್ನು ಮನ್ನಿಸೋ ಶಿವ ಈ ಗುಹೆಯಲ್ಲಿ ನೆಲಸಿ ರಾಜನ ತಪಸ್ಸಿನ್ನು ಕಾಯುವಂತೆ ತನ್ನ ಗಣಗಳಲ್ಲೊಬ್ಬನಾದ ಭೈರವನಿಗೆ ಆದೇಶಿಸುತ್ತಾನಂತೆ.  ಸುಪಾರ್ಶ್ವ ರಾಜ ,ಸುಪಾರ್ಶ್ವ ಮುನಿಯಾಗಿ ಆರಾಧಿಸಿದ ಶಿವಲಿಂಗವನ್ನು, ಅವನ ಎದುರಿಗಿನ ನಂದಿಕೇಶ್ವರನನ್ನು ಗುಹೆಯ ಪ್ರವೇಶದ್ವಾರದಲ್ಲಿ ಕಾಣಬಹುದು.
Shivalinga, Nandikeshwara infront of it

ಮಹಾಕಾಳಿ ಮಹಾಲಕ್ಷ್ಮಿ, ಮಹಾಸರಸ್ವತಿ ಉದ್ಭವಲಿಂಗಗಳು
ಅಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ನಮ್ಮ ಎಡಭಾಗದಲ್ಲಿ ಮಹಾಕಾಳಿ,ಮಹಾಲಕ್ಷ್ಮಿ, ಮಹಾಸರಸ್ವತಿಯ ಉದ್ಭವಲಿಂಗಗಳು ಮತ್ತು ಭೈರವೇಶ್ವರ ರೂಪವಾದ ಲಿಂಗವನ್ನು ಕಾಣಬಹುದು. ಈ ಗುಹೆಗೆ ಭೈರವ ಬಂದ ಕಥೆಯನ್ನು ಮೇಲೆ ಓದಿರುತ್ತೇವೆ.

Mahakaali, Mahalakshmi, Mahasaraswati, Veerabhadra


ನಾಗತೀರ್ಥ:
ಅಲ್ಲಿಂದ ಹಾಗೇ ಮೆಟ್ಟಿಲುಗಳಲ್ಲಿ ಇಳಿಯುತ್ತಾ ಮುಂದೆ ಸಾಗಿದಂತೆ ಕೆಳಗೆ ಬಲದಲ್ಲಿ ನಾಗತೀರ್ಥ ಸಿಗುತ್ತದೆ. ಈ ನೀರು ಹಾಗೇ ಸಾಗಿ ಕುಬ್ಜಾ ನದಿಯನ್ನು ಸೇರುವ ಬಗ್ಗೆ ಓದಿದ್ದೆವು. ಮಳೆಗಾಲದಲ್ಲಿ ತುಂಬಿಹರಿಯೋ ಕುಬ್ಜಾ ನದಿ ದೇವಿಯ ಪಾದಗಳವರೆಗೂ ಬಂದು ಲಿಂಗವನ್ನು ತೊಳೆಯುತ್ತದೆ ಎಂಬ ಪ್ರತೀತಿಯಿದೆ.
Naagateertha @Kamalashileಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ ಜಾಗ:

ಅಲ್ಲಿಂದ ಮುಂದೆ ಸಾಗುತ್ತಿದ್ದ ಹಾಗೆ ಬಲಭಾಗದಲ್ಲಿ ಸಣ್ಣ ಪೊಟರೆಯಂತಹ ಜಾಗ ಕಾಣುತ್ತದೆ. ಅರ್ಧ ಶಂಕುವಿನಾಕಾರಾದ ಸುರುಳಿಗಳಿರೋ ಆ ಜಾಗದಲ್ಲಿ ವರದಹಳ್ಳಿಯ ಶ್ರೀಧರ ಸ್ವಾಮಿಗಳು ಬಂದು ತಪಸ್ಸು ಮಾಡಿದ್ದರಂತೆ. ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲದಲ್ಲೂ ೧೯೫೨ರಲ್ಲಿ ಶ್ರೀಧರ ಸ್ವಾಮಿಗಳು ಬಂದ ಬಗ್ಗೆ ಉಲ್ಲೇಖಗಳಿವೆ
Place where Shridhara Swamiji sat for penance.
Place of Nagas

ನಾಗದೇವತೆಗಳ ಸ್ಥಳ:
ಅಲ್ಲಿಂದಲೂ ಮುಂದೆ ಸಾಗಿದರೆ ಸ್ವಲ್ಪ ದೂರದಲ್ಲಿ ನಾಗದೇವತೆಗಳ ಸ್ಥಳ ಸಿಗುತ್ತದೆ. ಮಳೆಗಾಲದಲ್ಲಿ ಇಲ್ಲೆಲ್ಲಾ ಕೆಸರಾಗಿ ಇಲ್ಲಿಯವರೆಗೆ ಬರೋದು ತುಂಬಾ ಕಷ್ಟವಂತೆ. ನಾವು ಹೋದಾಗಲೂ ಜಾಗವೆಲ್ಲಾ ಕೆಸರಾಗಿದ್ದರೂ ಮೂಲೆಯ ಕಲ್ಲುಗಳ ಬಳಿಯಿಂದ ನಾಗದೇವತೆಗಳ ಬಳಿ ಸಾಗಿ ನಮಸ್ಕರಿಸೋಕೆ ಸಾಧ್ಯವಾಗಿತ್ತು.ಅಲ್ಲಿಂದ ಮುಂದೆ ಸಾಗೋ ಕಿರಿದಾದ ಹಾದಿ ಕಾಶಿಗೆ ಹೋಗುತ್ತೆ ಎಂಬ ಪ್ರತೀತಿಯಿದೆ. ನಾಗದೇವತೆಗಳ ಮೇಲಿನ ಗುಹೆಯಲ್ಲಿ ಸಾವಿರಾರು ಬಾವಲಿಗಳು ನೇತಾಡುತ್ತಿರುತ್ತವೆ. ಅಷ್ಟೆಲ್ಲಾ ಬಾವಲಿಗಳಿದ್ದರೂ ಅವು ನಮ್ಮ ಮಾತಿಗಾಗಲಿ, ಬ್ಯಾಟರಿ ಬೆಳಕಿಗಾಗಲಿ ಗಾಬರಿಗೊಂಡಿದ್ದು, ಹಾರಾಡಿ ನಮಗೂ ಗಾಬರಿಪಡಿಸಿದಂತಹ ಪ್ರಸಂಗಗಳಾಗಲಿಲ್ಲ. ನಮಗೆ ಗೈಡಾಗಿ ಬಂದಿದ್ದ ದೀಕ್ಷಿತ್ ಅನ್ನುವವರ ಪ್ರಕಾರ ಇವುಗಳಿಗೆ ಇದೇ ಅಭ್ಯಾಸವಾಗಿಬಿಟ್ಟಿದೆಯಂತೆ. ಇಲ್ಲಿ ಒಂದು ನಿಮಿಷ ಬ್ಯಾಟರಿ, ಮೊಬೈಲು ಎಲ್ಲಾ ಆಫ್ ಮಾಡಿ ಮಾತಿಲ್ಲದೇ ನಿಂತುಕೊಳ್ಳಿ ಎಂದರು ದೀಕ್ಷಿತ್. ಒಂದು ಬೆಳಕಿನ ಕಿರಣವೂ ಇಲ್ಲದ ಆ ಭಾವ ಮೊದಲು ಖುಷಿ ಕೊಟ್ಟರೂ ಕೆಲ ಕ್ಷಣಗಳಲ್ಲಿ ಜೀವನವೇ ಹೀಗಿದ್ದರೆ ಹೇಗೆಂಬ ಕಲ್ಪನೆ ದಿಗಿಲು ಹುಟ್ಟಿಸಿತ್ತು. ಒಂದು ನಿಮಿಷಕ್ಕೇ ಇಂಥಾ ಭಾವ ಹುಟ್ಟುತ್ತಿದೆಯಲ್ಲಾ ನಮಗೆ, ಇನ್ನು ಕಣ್ಣಿಲ್ಲದವರು ಜೀವಮಾನವಿಡೀ ಹೇಗೆ ಬದುಕಬಹುದು ? ಅವರ ಬಾಳೆಲ್ಲಾ ಕತ್ತಲೆ. ಹಾಗಾಗೇ ಕಣ್ಣು ದಾನ ಮಾಡಿ ಅಂತ ಹೇಳೋದು ಎಂದರು. ಎಂತಾ ಸತ್ಯದ ಮಾತು. ಹೇಳಿದ್ದು ಕೆಲವೇ ವಾಕ್ಯವಾದರೂ ಕತ್ತಲ ಗುಹೆಯ ದೀಕ್ಷಿತ್ ಆ ಕ್ಷಣದಲ್ಲೊಬ್ಬ ಸಂತನಂತೆ ಕಂಡದ್ದು ಸುಳ್ಳಲ್ಲ !  ಗುಹೆಯಾದರೂ ಒಳಗೆಷ್ಟು ಸೆಖೆಯಪ್ಪಾ ಅನಿಸಿದ್ದು ಮೇಲೆ ಹತ್ತಿ ಬರುತ್ತಿದ್ದಂತೆ ಬೀಸಿದ ತಂಗಾಳಿಗೆ ಹೋದ ಜೀವ ಬಂದತಾಗಿದ್ದೂ ದೇಹದಲ್ಲಿ ಸುರಿಯುತ್ತಿದ್ದ ಬೆವರಿಗೆ ಅರಿವಾಗುತ್ತಿದ್ದರೂ ಮನದ ಮೂಲೆಯಲ್ಲೆಲ್ಲಾ ಕಮಲಶಿಲೆಯ ದೇಗುಲದ್ದು, ಗುಹೆಯದೇ ನೆನಪು.
Bats hanging all around

ಮುಗಿಸೋ ಮುನ್ನ:
ಆದಿ ಗುಹಾಲಯಕ್ಕೆ ನಿತ್ಯ ಬಂದು ಪೂಜೆ ಮಾಡುವವರು ಬಳೆಗಾರರು. ಗುಹೆಯ ಒಳಗೆ ಪೂರ್ಣ ಕತ್ತಲಿರೋದ್ರಿಂದ ಕಮಲಶಿಲೆ ದೇವಸ್ಥಾನದಲ್ಲಿಯೇ ಈ ಗುಹೆಗೆ ಹೋಗಬೇಕು ಎಂದು ತಿಳಿಸಿದರೆ ಬ್ಯಾಟರಿಗಳ ಸಮೇತ ಈ ಗುಹೆಯ ಬಗ್ಗೆ ತಿಳಿದಿರುವವರ್ಯಾರನ್ನಾದರೂ ಅವರು ಕಳುಹಿಸಿ ಕೊಡುತ್ತಾರೆ. ತೀರಾ ಅಪಾಯಕರ ಸ್ಥಳಗಳೇನೂ ಇಲ್ಲದಿದ್ದರೂ ಮೊದಲ ಬಾರಿ ಬರುವವರು ಇಲ್ಲಿಯ ಪರಿಸರ ಗೊತ್ತಿಲ್ಲದೇ ಒಳಗೆ ಜಾರಿ ಪೆಟ್ಟು ಮಾಡಿಕೊಳ್ಳೋ ಸಾಧ್ಯತೆಗಳು ಜಾಸ್ತಿಯಿರುವುದರಿಂದ ಒಬ್ಬೊಬ್ಬರೇ ಬಾರದಿರುವುದು ಕ್ಷೇಮ. ದೇಗುಲದ ಬಗೆಗಿನ ಹೆಚ್ಚಿನ ಮಾಹಿತಿಗೆ, ಅಲ್ಲಿನ ಅರ್ಚನೆ, ಉಳಿದುಕೊಳ್ಳೋದ್ರ ಬಗ್ಗೆ ,ಇನ್ನಿತರ ಮಾಹಿತಿಗಳಿಗೆ ದೇಗುಲದ ಜಾಲತಾಣವನ್ನು ಸಂಪರ್ಕಿಸಬಹುದು.
Journey into the cave is not easy without batteries ! this photo is taken with batteries+camera flash on