Thursday, May 24, 2012

ಪೆಟ್ರೋಲ್ ದರ ಹೆಚ್ಚಳ ಮತ್ತು ನಾವು

ಇದೇ ಏಪ್ರಿಲ್ ಒಂದರಲ್ಲಿ ೭೩.೫ ಇದ್ದ ಪೆಟ್ರೋಲು ಈಗ ೮೧.೭ ಮುಟ್ಟಿದೆ.ಒಂದೇ ತಿಂಗಳಲ್ಲಿ ಅಂದಾಜು ೭ ರೂ ಹೆಚ್ಚಳ! ಪ್ರತೀ ಬಾರಿ ಹೆಚ್ಚಾದಾಗ್ಲೂ ಕೇಂದ್ರ ಸರ್ಕಾರ ಏನ್ಮಾಡ್ತಾ ಇದೆ? ರಾಜ್ಯ ಸರ್ಕಾರ ಏಕೆ ಸುಮ್ನಿದೆ ಅಂತ ಬೊಬ್ಬೆ ಹಾಕೋದು, ಸೈಕಲ್ ಸವಾರಿ ಮಾಡ್ಬೇಕು ಇನ್ಮುಂದೆ, ನಟರಾಜ ಸರ್ವೀಸು ಮಾಡೋಣ ಅಂತ ಸುಮ್ನೆ ಉಡಾಫೆ ಮಾಡೋದೆ ಆಯ್ತು. ಯಾರೆಷ್ಟೇ ಪ್ರತಿಭಟನೆ ಮಾಡಿದ್ರೂ ಇವ್ರು ಬಗ್ಗೊಲ್ಲ ಅಂತ ಅವ್ರಿಗೆ ಹಿಡಿಶಾಪ ಹಾಕಿದ್ರೆ ಪರಿಸ್ಥಿತಿ ಸರಿ ಆಗತ್ಯೆ? ನಮ್ಮ ಭೂಮಿಯಲ್ಲಿರೋ ನವೀಕರಿಸಲಾಗದ (ಪೆಟ್ರೋಲು, ಡೀಸೆಲು ಮುಂತಾದ)ಇಂಧನ ಮೂಲಗಳನ್ನ ಹೀಗೆ ಉಪಯೋಗಿಸ್ತಾ ಹೋದ್ರೆ ಇನ್ನು ಅಂದಾಜು ಮೂವತ್ತು ವರ್ಷಗಳಲ್ಲಿ ಅವುಗಳೆಲ್ಲಾ ಖಾಲಿ ಆಗುತ್ತೆ ಅಂತ ಹೈಸ್ಕೂಲಿನಲ್ಲೇ ಓದಿದ ನೆನಪು .

ಆದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ ಏಕೆ? ಸುಧಾರಣೆ ಆಗಲಿ, ಆದರೆ ಅದು ನಮ್ಮಿಂದ ಅಲ್ಲ, ಶಂಕರಾಚಾರ್ಯರು ಹುಟ್ಟಲಿ, ಆದರೆ ಪಕ್ಕದ ಮನೆಯಲ್ಲಿ ಎಂಬಂತ ಧೋರಣೆ ಏಕೆ?

ಕೆಲವೇ ವರ್ಷಗಳ ಹಿಂದೆ ಜತ್ರೋಪಾದಂತಹ ಗಿಡಗಳಿಂದ ಜೈವಿಕ ಇಂಧನ ತಯಾರಿಸೋ ಬಗ್ಗೆ ಚರ್ಚೆ ನಡೆದಿತ್ತು. ಅವುಗಳನ್ನು ಮರುಭೂಮಿಯಂತಹ ನೀರಿಲ್ಲದ ಕಡೆಯೂ ಬೆಳೆಸಬಹುದು ಎಂಬ ವದಂತಿಯೂ/ಸುದ್ದಿಯೂ ಹಬ್ಬಿತ್ತು. ನಮ್ಮ ಕಡೆಯೂ ಅದನ್ನ ಬೇಲಿ ಬದಿಯಲ್ಲಿ ಅದನ್ನು ಹಾಕಿದ್ದೆವು. ಆಮೇಲೆ ಅದರ ಬೀಜವನ್ನು ಖರೀದಿಸುವ ಬಗ್ಗೆಯಾಗಲಿ, ಎಣ್ಣೆ ಮಾಡುವ ಸುದ್ದಿಯಾಗಲಿ ಬರಲೇ ಇಲ್ಲ. ಇಂಥಹ ಪ್ರಯತ್ನಗಳೆಲ್ಲಾ ನಿರಂತರವಾಗಿರಬಾರದೇ? ಪೆಟ್ರೋಲ್ ದರ ಜಾಸ್ತಿ ಆದಾಗ ಮಾತ್ರ ಎಲ್ಲಿ ಜತ್ರೋಪಾದವರು ಎಂದು ಗುಟುರು ಹಾಕಬೇಕೇ ?

ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಐಟಿಪಿಲ್ ಕಡೆ ಎಷ್ಟೊಂದು ಬಸ್ಸುಗಳು ಸಂಚರಿಸುತ್ತದೆ, ಅದರಲ್ಲಿ ಎಷ್ಟೊಂದು ಓಲ್ವೋಗಳು ಬೇರೆ. ಆದರೂ ಯಾವುದೇ ಸಿಗ್ನಲ್ಲಲ್ಲಿ ನೋಡಿದರೂ ಸರಾಸರಿ ಒಂದು ಬಸ್ಸಿಗೆ ೧೫-೨೦  ಬೈಕು, ೭-೮ ಕಾರುಗಳು ನಿಂತಿರುತ್ತದೆ. ಅದೂ ಒಂದು ಕಾರಿನಲ್ಲಿ ನಾಲ್ಕು ಜನರು ಬರುವ "ಕಾರ್ ಪೂಲ್" ಪದ್ದತಿಯನ್ನಾದರೂ ಅನುಸರಿಸುತ್ತಿದ್ದೇವಾ ? ಅದೂ ಇಲ್ಲ. ಎಲ್ಲ ಕಾರಿನಲ್ಲೂ ಒಬ್ಬೊಬ್ಬರೇ!! ದಯವಿಟ್ಟು ಅನ್ಯಥಾ ಭಾವಿಸದಿರಿ. ಯಾರನ್ನೂ ದೂಷಿಸುತ್ತಿಲ್ಲ.ಈ ಮಾರ್ಗ ಒಂದೇ ಅಲ್ಲ. ಬಹಳಷ್ಟು ಕಡೆ ಇದೇ ಕಥೆ. ಸರಕಾರವನ್ನು ಅಥವಾ ಇನ್ಯಾರನ್ನೋ ಎಲ್ಲದಕ್ಕೂ ದೂಷಿಸುವ ನಾವು ಇರೋ ಪೆಟ್ರೋಲನ್ನು ಉಳಿಸುವತ್ತ ನಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಿದ್ದೇವಾ ಎಂದರೆ ಇಂತಹ ನಿರಾಶಾದಾಯಕ ಉತ್ತರಗಳೇ ದುತ್ತೆಂದು ಎದುರಾಗುತ್ತವೆ. ಸೌರಶಕ್ತಿಯ ಬಳಕೆ ಇರಬಹುದು, ಕಾರ್ಪೂಲಿಂಗ್ ಇರಬಹುದು. ನವೀಕರಿಸಲಾಗದ ಶಕ್ತಿ ಮೂಲಗಳನ್ನು ಉಳಿಸಲು, ಸಮರ್ಪಕವಾಗಿ ಬಳಸಲು ತಂತ್ರಜ್ನಾನಗಳು ನೂರೆಂಟು ಇವೆ. ಅದರಲ್ಲಿ ನ್ಯೂನತೆಗಳೂ ಇರಬಹುದು. ಆದರೆ ಮನಸ್ಸಿದ್ದಲ್ಲಿ ಮಾರ್ಗ.ಅದನ್ನು ಬಿಟ್ಟು ಇನ್ಯಾರನ್ನೋ ಗೂಬೆ ಕೂರಿಸುತ್ತಾ ಕೂತರೆ ಪೆಟ್ರೋಲ್ ರೇಟು ತೊಂಬತ್ತಲ್ಲ , ಸದ್ಯದಲ್ಲೇ ನೂರೂ ದಾಟಬಹುದು. ಇನ್ನೂರೂ ದಾಟಬಹುದು

Image Source: allaboutindia.org

ರಾತ್ರಿ ರಾಣಿ

ಮೊನೆಯ ಸೂಜಿಯೇ ಕತ್ತಲಲ್ಲಿ
ನಿನ್ನ ಮುತ್ತು ಚೆಲುವೆ
ಆ ಸ್ಪರ್ಶಕೆ ಉರಿದ ಕೆಂಪು ತನು
ವಿಷವೆ ತುಟಿಗೆ ಚೆಲುವೆ?

ಹೀರೋ ರಕ್ತದಿ ಜೀವದಂಕುರ
ನಿಂತ ನೀರು ತವರು
ಮೂರು ದಿನದ ಈ ಕ್ಷಣಿಕ ಬಾಳಲಿ
ತರಲು ನೂರು ನಗುವು


ಬತ್ತಿ, ಪಾಷಾಣ ಭಯವ ಒಡ್ಡದು
ಸೊರಗಿ, ಕರೆವ ಹೊಟ್ಟೆ
ಸಮಯದಂಚಲೇ ಕೊಂಬನಿಟ್ಟು ನೀ
ಸತ್ವ ಹೀರಿ ಬಿಟ್ಟೆ

ಓ ಸೊಳ್ಳೆ, ಮತ್ತೆ ಕಚ್ಚಿ ಬಿಟ್ಟೆ !

Saturday, May 12, 2012

ಅವೆಂಜರ್ಸ್

ನಮ್ಮ ಗುಂಡಣ್ಣ ಮತ್ತು ಗ್ಯಾಂಗು ಅವೆಂಜರ್ಸ್ ನೋಡ್ಕೊಂಬಂದಿದ್ರು. ಅವತ್ತು ರಾತ್ರಿ ಎಲ್ಲಾ ಅವ್ರಿಗೆ ಅದೇ ಧ್ಯಾನ. ನಾನೇ ಕನ್ವರ್ ಲಾಲ್ ಅನ್ನೋ ಸ್ಟೈಲಲ್ಲಿ ನಾನೇ ಐರನ್ ಮ್ಯಾನ್ ಅಂತ ಹಾಡೂ ಕ(ಕು)ಟ್ಟಿದ್ದ ಗುಂಡ. ಅಸೈನುಮೆಂಟು ಮಾಡದ ತಪ್ಪಿಗೆ ಉಗಿಸ್ಕೊಳ್ಳೋದು ಯಾರು ಅಂತ ಕೊನೇ  ಕ್ಲಾಸಿಗೆ ಬಂಕಾಗಿ ಮಾಮು ಕ್ಯಾಂಟೀನ್ ಕಡೇ ಓಡ್ತಿರೋವಾಗ್ಲೇ ಅವ್ನ ಸಹಚರರು(?) ತಡ್ಯೋ ಗುಂಡ ಎಲ್ಲಿಗೆ ಓಡ್ತೀಯ ಅಂತ ಕೂಗಿ ನಿಲ್ಸಿದ್ರು. ಕೊನೆಗೆ ಯಥಾಪ್ರಕಾರ ಗುಂಡ ಮತ್ತು ಪಾಟ್ರಿ ಪ್ರಯಾಣ ಲಾನ್ ಕಡೆ ಸಾಗ್ತು. ಮುಂದೆನಾಯ್ತು ಅಂತೀರಾ ? ಓವರ್ ಟು ಕಾ...ಲೇಜ್ ಲಾನು..

ನಿನ್ನೆ ಫಿಲಿಮ್ಮು ಭಯಂಕರ ಇತ್ತು ಮಾರ್ರೆ. ಆ ನಾಯ್ಕ ಸುತ್ತಿಗೆ ತಿರುಗ್ಸಿ ಗಾಳಿ ಬರ್ಸೋದೇನು, ಅದ್ರಿಂದಲೇ ಮಿಂಚು ಬರೋದೇನು ಅಂತ ನಮ್ಮ ಮಂಗ್ಳೂರು ಮಂಜ ಹೇಳ್ತಿರೋವಾಗ್ಲೇ .. ಅದೇನು ಚೆನಾಗಿತ್ತಾ.. ನಂಗೆಂತು ಐರನ್ ಮ್ಯಾನೇ ಇಷ್ಟ ಅಪಿ. ಅದೇನು ಗ್ಯಾಜೆಟ್ಸು, ಎಷ್ಟು ಬುದ್ದಿ, ಎಷ್ಟು ಚುರುಕು.. ಕೆಂಪು ಕೆಂಪಾಗಿ ನೋಡೋಕು ಎಷ್ಟು ಚೆನಾಗಿದ್ದ.. ವಾ ಅಂದ್ಲು ಪ್ರಿಯಾ. ಅಲ ಲಲಲಾ.. ಅವ್ನ ಜೊತೆ ಇರ್ತಿದ್ದ ಹುಡ್ಗಿ ನೋಡಿ ಹೊಟ್ಟೇನೂ ಉರ್ದಿರ್ಬೇಕು ಅಕ್ಕೋರ್ಗೆ ಅಂತ ಕಾಲೆಳ್ದ ತರ್ಲೆ ತಿಪ್ಪ ಅಲಿಯಾಸ್ ತಿಪ್ಪೇಶ. ಎಲ್ಲಾ ಗೊಳ್ ಅಂದ್ರು.  ನೋಡಿ ಮಿ.ರೌಂಡ್.. ನಿಮ್ಮ ಫ್ರೆಂಡು ಹೆಂಗೆ ಕಾಲೆಳಿತಾನೆ ನಂಗೆ ಅಂತ  ಮುಖ ಊದುಸ್ಕೊಂಡ್ಲು ಪ್ರಿಯಾ. ಹೋಗ್ಲಿ ಬಿಡೆ,  ಈ ತಿಪ್ಪಂಗೆ ಹಳೇ ಹಳ್ಸಿದ ಪೀಸುಗಳೇ ಇಷ್ಟ ಆಗೋದು. ಅದ್ರಲ್ಲಿ ಒಬ್ಬ ಬಾಣ ಬಿಡ್ತಾ ಇದ್ದ ನೋಡು.. ಅವ್ನು ಇಷ್ಟ ಆಗಿರ್ಬೋಕು ಅಲ್ವಾ ಅಂತ ತಿಪ್ಪಂದೇ ಕಾಲೆಳೆದ್ಲು ಸಾರಿಕಾ ಅಲಿಯಾಸ್ ಸಾರಿ. ಈಗ ಬೆಪ್ಪಾಗೋ ಸರದಿ ತಿಪ್ಪಂದು, ತಿಪ್ಪಂಗೆ ಹಳ್ಸಿದ ಪೀಸು ಅಂತ ಹೇಳಿದ್ದು ಕೇಳಿ ನಗೋ ಸರದಿ ಬೇರೆ ಅವ್ರುದ್ದು.

ಕೊನೆಗೆ ಸಾರಿ ತಿಪ್ಪಾ. ಬೇಜಾರಾಯ್ತ ಅಂತ ಉಲುದ್ರು ಎಲ್ಲಾರು ಸಾರಿ ದಾಟೀಲೆ. ಅವ್ನುಂದು ಬರೀ ಬಾಣ ಅರ್ಲಲೇ ಅದು ಬಾಂಬ್ ಬಾಣ.. ಹೆಂಗೆ ಬೆಂಕಿ ಬರೋದು ಅದ್ರಿಂದ ನೋಡಿದ್ರಾ ಅಂದ ತಿಪ್ಪ. ಇಲ್ಲ ಅಂದ್ರೆ ಫಿಲ್ಮ ನೋಡೇ ಇಲ್ಲ ಅಂತ ಮರ್ಯಾದೆ ಹೋಗುತ್ತೆ ಅಂತಾನಾದ್ರೂ ಎಲ್ರೂ ಹೂಂ ಅಂದ್ರು. ಅಲ್ಲಾ, ಈ ಬಾಣ ಬಿಡೋ ಐಡಿಯಾನ ನಮ್ಮ ರಾಮಾಯಣ, ಮಹಾಭಾರತ ನೋಡಿ ಕದ್ನಾ ಈ ಫಾರಿನ್ ಡೈರೆಕ್ಟು ಅಂತ ನನಗೆ ಡೌಟು ಉಂಟು ಮಾರ್ರೆ ಅಂದ ಮಂಜ. ಎಲಾ ಮಂಜ, ಹೌದಲಲೇ, ನಮ್ಗ್ಯಾರಿಗೂ ಈ ಐಡಿಯಾ ಹೊಳಿಲೇ ಇಲ್ಲ ನೋಡ. ಭೇಷ್ ಮೆಗಾಮೈಂಡ್ ಅಂದ ಗುಂಡ.. ಎಲ್ಲಾ ಮೆಗಾಮೈಂಡ್ ಮಂಜಂಗೆ ಜೈ ಅಂದ್ರು..

ಈ ಫಿಲುಮ್ಮು ಬಂದಾಂಗಿಂದ ಎಲ್ಲಾ ಕಡೆ ಇದ್ರುದ್ದೆ ಹಾವ್ಳಿ. ಫೇಸ್ಬುಕ್ಕಲ್ಲೆಂತು ಕೇಳಂಗೆ ಇಲ್ಲ ಅಂದ್ಳು ಸಾರಿ. ಹೌದಮ್ಮಿ. ನಮ್ಮ ಶಕ್ತಿಮಾನ್, ಆರ್ಯಮಾನ್, ಕ್ರಿಷ್, ಜೀ ಮ್ಯಾನ್ .. ಹಿಂಗೆ ಭಾರತೀಯ ಸೂಪರ್ ಹೀರೋಗಳ್ನೆಲ್ಲಾ ಹಾಕಿ ಇದೇ ತರ ಒಬ್ಬ ಮಾಡಿದ್ದ. ಅದ್ನ ನೋಡಿ ಶಾನೆ ಖುಶಿ ಆತು. ನಮ್ಮಿಂಡಿಯಾನೇ ಗ್ರೇಟ್ ಅಂದ ತಿಪ್ಪ.. ಹೌದ್ಲ ತಿಪ್ಪ. ಆದ್ರೆ ತ್ರಿಮೂರ್ತಿಗಳು , ಹನುಮಂತ , ರಾಮ ಹಿಂಗೆ ದೇವಾನುದೇವತೆಗಳುದ್ದೂ ಇದೇ ತರ ಮಾಡವ್ರಲ್ಲೋ .. ಹಿಂಗೇ ಬಿಟ್ರೆ ಮುಂದೆ ಸಿಂಗಪ್ಪ, ಮೇಡಮ್ಮು, ಅರ್ಜಿ ಎಲ್ಲಾ ಸೇರ್ಸಿ ಮಾಡ್ತಾರೇನಪ ಅಂದ ಗುಂಡ. ಹೂಂ ಕಣ್ರ್ರೊ. ಇಂತ ರೀಲ್ ಲೈಫುಗಳ್ನೆಲ್ಲಾ ಸೇರ್ಸಿ ಮಾಡೋ ಬದ್ಲು ರಿಯಲ್ಲಾಗಿರೋರನ್ನೇ ಮಾಡಿದ್ರೆ ಹೆಂಗೆ ಅಂದ್ಲು ಪ್ರಿಯಾ.. ಹೂಂ ಅದೂ ಸರೀನೆ, ನಾವೊಂದು ಮಾಡಿ ಫೇಸ್ಭುಕ್ಕಿಗೆ ಎತ್ತಾಕನ(ಅಪ್ಲೋಡಿಗೆ ಇವ್ರ ಕೋಡು!! ) ಅಂದ್ಳು ಸಾರಿ.

ಹೂಂ ಕಣ್ಲಾ ಮಜಾ ಇರ್ತೈತೆ. ನಮ್ಮ ಹಫೀಸ್ ಹಜಾಮ, ಸೈಕಲ್ ಶಾಪ್ ಸಂತು, ಪಾನೀಪೂರಿ ಪ್ರವೀಣ ಇವ್ರುನ್ನೆಲ್ಲಾ ಸೇರ್ಸಿದ್ರೆ ಹೆಂಗ್ರೋ ಅಂದ ತಿಪ್ಪ. ಇದು ಕಾಮಿಡಿ, ಇದಕ್ಕೆ ನಾವು ನಗ್ಬೇಕಾ ? ಹೆ ಹೆ ಅಂದ್ಲು ಪ್ರಿಯಾ. ಅಲ್ಲ ಪ್ರಿಯಾ. ಅವ್ನುಂದೂ ಒಂದು ಪಾಯಿಂಟ್ ಉಂಟು(? !) . ಹಫೀಸಿಂದು ಕತ್ರೀನೆ ಆಯುಧ. ಏನೇ ಅಡ್ಡ ಬಂದ್ರು ಅದನ್ನ ಕಟ್ ಮಾಡುತ್ತೆ ಅದು . ಅದೇ ಕತ್ರಿನ ಭಯಂಕರ ತಿರುಗ್ಸಿದ್ರೆ ಬೀಸೋ ಗಾಳೀಲಿ ಅವ್ನು ಹೆಲಿಕಾಪ್ಟರ್ ತರಾ ಮೇಲಕ್ಕೆ ಹೋಗ್ತಾನೆ  !! ಅಂದ ಮಂಜ. ಭಲೇ ಮೆಗಾಮೈಂಡ್.. ಸೈಕಲ್ ಶಾಪ್ ಸಂತೋಷಣ್ಣಂದು ಟೈರುಗಳೇ ವೆಪನ್ನು. ಅದನ್ನ ಯಾರ ಕುತ್ಗೆಗಾದ್ರೂ ಬಿಗಿ. ಗಾಳಿ ತುಂಬುಸ್ತಾ ಹೋದಂಗೆ ಆಕಾಶದಲ್ಲಿ ಹಾರ್ಬೋದು, ಅದ್ರ ಒಳಗೆ ಕುತ್ಕೊಂಡ್ರೆ ಯಮ ವೇಗದಲ್ಲಿ ಉರುಳ್ಕೊಂಡು ಹೋಗ್ಬೋದು ಅಂದ ಗುಂಡ. ಹೂಂ ಶಭಾಷ್ ಅಂದ್ರು ಎಲ್ರೂ. . ಪ್ರವೀಣ್ ಅವ್ರುದ್ದು ಏನು ಕತೆ ಅಂದ್ಲು ಸಾರಿ. ಅವ್ನುದ್ದು ಯಾವ್ದೇ ವಸ್ತುನಾದ್ರೂ ಸಣ್ಣ ಮಾಡಿ ಪೂರಿ ಒಳಗೆ ತುಂಬ್ಸೋ ಪವರ್ರು ಅಂದ ತಿಪ್ಪ.. ಎದಿಗಿರೋದು ಕೆರೇನೆ ಆದ್ರೂ , ಟೊಮೆಟೋ ಲಾರಿನೇ ಆದ್ರೂ ಅವ್ನು ಒಂದು ಸಲ "ಜೈ ಪಾನಿ" ಅಂತ ಮಂತ್ರ ಹಾಕಿದ್ರೆ ಸಾಕು ಪೂರಿ ಒಳ್ಗೆ ಬಂದು ಕೂರ್ತೈತಿ ಅಂದ ತಿಪ್ಪ.. ಭಲೇ ಭಲೇ ಅಂದ್ರು ಎಲ್ಲಾ.

ಹೂಂ ಕಣ್ರೋ. ಆದ್ರೆ ಅದ್ರಲ್ಲಿ ಒಬ್ಬ ಸುತ್ಗೆ ಅವ್ನು ಇದ್ನಲ್ಲ ಅದಕ್ಕೆ ಯಾರನ್ನ ಹಾಕೋದು ಅಂದ್ಲು. ಮೋಚಿ ಮಾದೇಶನ್ನ ಹಾಕಣನ. ಅವ್ನು ಕುಟ್ಟೋ ಏಟಿಗೆ ಹದ ಮಾಡೋ ಚರ್ಮ ಏನು, ಅಂಗಡೀನೇ ನಡುಗ್ತೈತೆ. ಅವ್ನಿಗೆ ಬೇರೇದನ್ನೂ ನಡುಗ್ಸೋ ಪವರ್ ಕೊಡೋನ ಅಂದ ಗುಂಡ. ಬಿಳೀ ಶರಟವ್ರನ್ನೂ ನಡುಗ್ಸೋ ಪವರ್ರಾ ಅಂದ ತಿಪ್ಪ.. ವಿಷಯಾಂತರ ಮಾಡ್ತಿರೋದಕ್ಕೆ ಎಲ್ಲಾ ಗುರಾಯ್ಸಿದ್ರು ಅವ್ನಿಗೆ. ಹೂಂ. ಅದ್ರಲ್ಲಿರೋ ಡುಮ್ಮನ ಬದ್ಲು ನಮ್ಮ ಗುಂಡನ್ನೇ ಇಟ್ರೆ ಹೆಂಗೆ ಮಾರ್ರೆ ಅಂದ ಮಂಜ. ಹೂಂ, ಇವ್ನಿಗೆ ಏನು ತಿಂದ್ರೂ ಜೀರ‍್ಣ ಆಗ್ತೈತೆ. ಕೆಲೋ ಸಲ ಸಾನೆ ರೈಸಾಗ್ತಾನೆ. ಹಂಗೇ ರೈಸಾಗೋ(ಬೆಳ್ಯೋ) ಪವರ್ರೂ ಕೊಡನ ಅಂತ ಅಲ್ಲೇ ಕಾಲೆಳ್ದ ತಿಪ್ಪ. ಓಯ್ ನನ್ ಕಾಲೇ ಎಳಿತೀಯ ತಡಿ ಅಂತ, ಹಂಗಾರೆ ಅದ್ರಲ್ಲಿರೋ ಮತ್ತೊಬ್ಬ ನಕ್ಷತ್ರದವ್ನ ಬದ್ಲು ನಿನ್ನ ಇಡನ. ನಕ್ಷತ್ರಿಕ ಅಂತಲೇ ಹೆಸ್ರೂ ಇಡ್ಬೋದು . ಒಳ್ಳೇ ಮ್ಯಾಚಿಂಗು ಅಂದ ಗುಂಡ. ವಾವ್.. ಸೂಪರ್ ಅಂದ್ರು ಎಲ್ಲಾ.

ಹಿಂಗೇ ಅವೆಂಜರ್ಸ್ ನ ಲೋಕಲ್ ಅವತಾರಕ್ಕೆ ತಯಾರಿ ನಡಿತಿರೋ ಹೊತ್ಗೆ ಪೀರಿಯಡ್ ಬೆಲ್ಲಾಗಿದ್ದು ಕೇಳ್ತು. ಅಂತೂ ಗೆದ್ದೆ ಅಂದ ಗುಂಡ. ಅದ್ಕೆ ಕಣ್ಲಾ ನಿನ್ನ ಪೆದ್ಗುಂಡ ಅನ್ನೋದು. ಇವತ್ತು ಕೊನೇ ಪೀರಿಯಡ್ ಇರ್ಲೇ ಇಲ್ಲ. ಸುಮಾ ಮಿಸ್ಸು ಚಕ್ಕರ್ರು ಅಂದ ತಿಪ್ಪ.. ಹೂಂ ಕಣ್ರಿ ಮಿಸ್ಟರ್ ರೌಂಡ್.. ಅದ್ನ ಹೇಳಕ್ಕೆ ಅಂತಲೇ ನಿಮ್ಮನ್ನ ಕರೀತಿದ್ರೆ ನೀವು ಓಡಿ ಹೋಗೋದ ಅಂದ್ಲು ಪ್ರಿಯಾ.. ಮಾರ್ರೆ, ನಮ್ಮೀ ಲೋಕಲ್ ಕತೇನ ಕೋತಿ ರೇಟ್ ಮಾಡ್ಸಿದ್ರೆ ಹೆಂಗೆ ಅಂದ ಮಂಜ. ಅದೆಂತ ಕೋತಿ ರೇಟು ಅಂತ ಯಾರಿಗೂ ಅರ್ಥ ಆಗ್ಲಿಲ್ಲ.. ಅದು ಕೋತಿ ರೇಟಲ್ಲೋ, ಕಾಪಿ ರೈಟ್.. ಭಾರತದಲ್ಲಿದಿಯಾ.. ಇಲ್ಲಿ ತರ ಇಂಗ್ಲೀಷ್ ಕಲಿ ಮೊದ್ಲು, ಆಮೇಲೆ ಫಾರಿನ್ನಿಗೆ ಹಾರುವಂತ ಅಂತ ಕಾಲೆಳ್ದ ತಿಪ್ಪ. ಮಂಜನ ಮುಖ ಹುಳ್ಳಗಾಯ್ತು. ಹೂಂ ಕಣೋ, ಹೆವಿ ಕಥೆ ತಯಾರ್ ಮಾಡಿದೀವಿ. ಇದನ್ನ ತಗಂಡೋದ್ರೆ ರೈಟಲ್ಲ ಲಾತ ಕೊಟ್ಟು ಕಳುಸ್ತಾರೆ ಅಷ್ಟೆ..ನಡಿ ನಡಿ ಅಂದ ಗುಂಡ.. ಎಲ್ಲಾ ನಗೊಂದ್ರೊಂದಿಗೆ ಅವ್ರ ನಗೆಪಯಣ ಬಸ್ಟಾಂಡತ್ತ ಸಾಗಿತು..    

Tuesday, May 1, 2012

ಯಾಚನೆ

ಕೆಲಸಕ್ಕೆ,ನೆಲಸಕ್ಕೆ ಎಲ್ಲಕ್ಕೂ ಬೇಡೋದೆ ?
ಯಾಚನೆಯೆ ಅಂಟಿಹುದೆ ಜನ್ಮದಿಂದ !
ಮುರುಟಿ ಸಾಯದ ದೇಹ
ಅಂಗಲಾಚುವ ಪರಿಗೆ
ಸ್ವಾಭಿಮಾನವ ಕೊಲ್ಲೊ ಹಂಗು ನುಡಿಗೆ |೧|

ಕಣ್ಣೀರುಗರೆಯದೇ ತೊಟ್ಟು ಹಾಲುಕ್ಕದು
ಕಂಡ ತಿಂಡಿಯ ಆಸೆ, ತಂದೆ ಕೇಳು
ಒಳ್ಳೆ ವಸ್ತ್ರವ ಕಂಡೆ, ಅದಕೆ ಅಣ್ಣನ ಕಣ್ಣು!
ಬೇಡದೆಯೆ ಸಿಗದೆನಗೆ ಹಳೆಯ ಚೆಂಡೂ ! |೨|

ಹನಿನೀರಿಗಾಗಿಯೂ
ದೊರೆಯ ಮೊರೆ ಅನಿವಾರ್ಯ
ಅನ್ನ, ಪ್ರಾಣವ ನೀಡು ಅನ್ನಪೂರ್ಣೆ
ಹಂಗಿಲ್ಲದಿದ್ದರೂ ಮೈಮುಚ್ಚ ಬೇಕಲ್ಲ
ಅದಕೆ ಮತ್ತದೆ ದೇವಿ ಬೇಡು ಮತ್ತೆ |೩|

ಬೇಡಿದುದು ಮುಗಿದಿಲ್ಲ
ಹಿಂಜುತಿದೆ ಸಾಲ ಋಣ
ಹಿಪ್ಪೆಯಾಗುವ ಮನವು ಬೇಡೆ ಮತ್ತೆ
ಹೀಗಳಿಕೆ ಜೀವನವೆ ಬೇಕೆ ಮತ್ತೆ ? |೪|

ನೊರೆ ಹಾಲ ಕೊಡೊ ಹಸುವು
ಕರೆ ಎಂದು ಬೇಡುವುದು !
ಮಳೆ ನೀರ ಮೇಲೆತ್ತೆ ಬಿಸಿಲೆ ಬೇಕು!
ನ್ಯಗ್ರೋಧ ಪಸರಿಸಲು
ಬೇಕೊಂದು ಮರಿ ಹಕ್ಕಿ
ನೀರ ಕಾಣಲು ಬಟ್ಟೆ, ಕೊಳೆಯೆ ಬೇಕು! |೫|

ಬೇಡಿದರು ಹನಿ ರಕ್ತ
ಸ್ವಾತಂತ್ರ ಕೊಡಲೆಂದು
ಮನೆ ಮರೆತು ಹೋರಾಡಿದಂತ ತ್ಯಾಗಿ
ಶ್ರೀಹರಿಯೆ ಬೇಡಿರಲು
ಮೂರು ಹೆಜ್ಜೆಯ ಭೂಮಿ
ಬೇಡುವಿಕೆ ಕೀಳಲ್ಲ ಅರಿಯೊ ಸಾಕು 
ಜೀವಕ್ಕೆ ಬೇಡು ನೀ, ಕ್ಷಣಿಕ ವಿಷಯಕ್ಕಲ್ಲ
ಕೊರಗಿಲ್ಲದೇ ಬದುಕ ನಲಿಯಬೇಕು |೬|