Sunday, March 31, 2013

ವಂಡರ್ ನಸೀಮನ ಜೊತೆಗೊಂದಿನ

ಇವತ್ಯಾಕೋ ಒಂತರಾ ಅವಳಿ ಭಾವ. ಫೇಸ್ಬುಕ್ ಜೊತೆಜೊತೆಗೇ ಪರಿಚಯವಾಗಿ ಇಲ್ಲಿ, ಬ್ಲಾಗು ಅಂತ ಶುರು ಮಾಡಿ ಬರೆಯೋದಕ್ಕೆ ಕಾರಣರಾದವರಲ್ಲಿ ಕನ್ನಡ ಬ್ಲಾಗಿನ ರವಿ ಮೂರ್ನಾಡರೂ ಒಬ್ಬರು. ನಿನ್ನೆ ಸಂಜೆ ಅವರು ನಮ್ಮನ್ನಗಲಿದ ಸುದ್ದಿ ತಿಳಿದಕ್ಕಾಗಿ ಬೇಸರ ಒಂದೆಡೆಯಾದರೆ ,ನಟರಾಜು ಸೀಗೆಕೋಟೆ ಮರಿಯಪ್ಪ(ನಸೀಮ) ಅವರ ಎರಡು ಪುಸ್ತಕಗಳ ಬಿಡುಗಡೆಯ ಸಂತೋಷ ಇನ್ನೊಂದೆಡೆ. ಯಾವಾಗ್ಲೂ ಪ್ರ್ಹೀಯಾಗಿದ್ರೂ ಈ  ಪುಸ್ತಕ ಬಿಡುಗಡೆ ಸಮಾರಂಭಗಳ ಸಮಯದಲ್ಲೇ ಏನಾದ್ರೂ ಕೆಲಸಗಳು!! ಈ ಸಲ ನನ್ನ ನಸೀಬು ಚೆನ್ನಾಗಿತ್ತು. ನಸೀಮರ ಕಾರ್ಯಕ್ರಮ ಕಾಯ್ತಾ ಇತ್ತು :-)

ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ೧೦;೩೦ ಕ್ಕೆ ಕಾರ್ಯಕ್ರಮ ಅಂತ ಕರೆದಿದ್ರು. ನಮ್ಮ ಮಾರತ್ತಳ್ಳಿ ಮೂಲೆಯಿಂದ ಬನಶಂಕರಿಗೆ ಅದೂ ಭಾನುವಾರ ಒಂದೂವರೆ ಘಂಟೆಯಾದರೂ ಬೇಕು, ಅಲ್ಲಿಂದ ಸೊಸೈಟಿ ಹುಡುಕಬೇಕೆಂಬ ಲೆಕ್ಕಾಚಾರದಲ್ಲಿದ್ದವ ನಾನು. ಬನಶಂಕರಿಯಿಂದ ಮತ್ತೆ ಸೊಸೈಟಿಗೆ ಸೀದಾ ಬಸ್ಸು ಸಿಕ್ಕಿ ಬಿಡಬೇಕೇ ? ಸೊಸೈಟಿಯಲ್ಲಿಳಿದಾಗ ಬರೀ ೯:೪೦. ಆಗಲೇ ಹರ್ಷವರ್ಧನ್(ಹರ್ಷ) ನಸೀಮ ಅಲ್ಲಿದ್ದರು. ಬ್ಯಾನರ್ ಕಟ್ಟೋ ಹೊತ್ತಿಗೆ ನಮ್ಮ ಪಂಜು ಪ್ರಸನ್ನ ಬಂದರು. ನಂತರ ಸಿ.ಎಸ್ ಮಠಪತಿ ಅಲಿಯಾಸ್ ಚಿನ್ಮಯ , ವಿ ಜಯಪ್ರಕಾಶ್, ವಿ.ಆರ್ ಕಾರ್ಪೆಂಟರ್ ಹೀಗೆ ಒಬ್ಬೊಬರೇ ಆಗಮಿಸತೊಡಗಿದರು. ಹತ್ತೂವರೆ ಆಗೋ ಹೊತ್ತಿಗೆ ಬ್ಲಾಗ್ ಲೋಕದ , ಫೇಸ್ಬುಕ್ಕಿನ ಅನೇಕ ಹಿರಿ-ಕಿರಿ ತಲೆಗಳು ಅಲ್ಲಿ ಬಂದಿದ್ದರು,

ಅಲ್ಲೇ ಬಾಗಿಲಿನ ಪಕ್ಕ ಸುಷ್ಮಾ ಮೂಡಬಿದ್ರೆ ಕಂಡರು. ಅವರನ್ನು ಮಾತಾಡಿಸೋ ಹೊತ್ತಿಗೆ ಪರಿಚಯವಾದವರು ಶಮಿ ಸಂಜಯ್, ನಂದೀಶ್ ತೀರ್ಥಹಳ್ಳಿ, ಮನಸು ಮನಸುಗಳ ಲೋಕದ ಬೆಳೆಯೂರ್ ಗೆಳೆಯ , ರಘು ತೆಕ್ಕಾರ್ . ಹಾಗೇ ಹೊರಗಡೆ ಬಂದು ನೋಡಿದ್ರೆ ಅತ್ರಾಡಿ ಹೆಗ್ದೇರು, ಪ್ರಕಾಶ್ ಹೆಗ್ಡೇರು, ಬದ್ರಿನಾಥ್ ಪಲವಳ್ಳಿ ಹೀಗೆ ಹಲವಾರು ಹಿರಿ ತಲೆಗಳು ನಿಂತಿದ್ದರು. ಎಲ್ಲರ ಮಾತಲ್ಲೂ ಮೂರ್ನಾಡರಿಗೆ ದುಃಖತರ್ಪಣ. ಹಾಗೆಯೇ ಸುಮತಿ ದೀಪಾ ಹೆಗ್ಡೆ ಅವರು, ನಸೀಮರ ಪುಸ್ತಕಗಳನ್ನು ತಿದ್ದಿಕೊಟ್ಟ ಶ್ರೀಮತಿ ಮಾಲತಿ ಶೆಣೈ ಅವರು ಜೊತೆಗೇ ನಿಂತಿದ್ರು. ಸುನೀತಾ ಮಂಜುನಾಥ್ ಅವ್ರು ಎಲ್ರನ್ನೂ ಒಳಗೆ ಸ್ವಾಗತಿಸ್ತಾ ಇದ್ರು.  ಗುರುತಿರದ ಮುಖಗಳ ನಡುವೆ ಕೆಲವರನ್ನಾದ್ರೂ ಪರಿಚಯ ಮಾಡ್ಕೊಟ್ಟಿದ್ದು ಪ್ರಸನ್ನ ಅವರೇ ;-)

ನಮಸ್ಕಾರ ಅಣ್ಣಾ, ಅಡ್ಡ ಬಿದ್ದ್ರೆ ಅನ್ನೋ ನಮಸ್ಕಾರದ ಪೋಸಲ್ಲಿ ಎಂಟ್ರಿ ಕೊಟ್ರು ಪರೇಶ್ ಭಾಯ್. ಹಾಗೇ ಪ್ರಸಾದ್ರೂ ಕಂಡ್ರು.
ಸಮಯ ಹತ್ತೂಮುಕ್ಕಾಲು. ಕಾರ್ಯಕ್ರಮ ಹನ್ನೊಂದಕ್ಕೆ ಅಂತ ನೋಡಿದ ಹಂಗಿತ್ತು ಕಣ್ರಿ ಅಂತ ನಿಧಾನವಾಗಿ ಬಾಯಿ ಬಿಟ್ರು ಪ್ರಸನ್ನ ! ಸರಿ ಇನ್ನೇನ್ ಮಾಡೋದು. ನಮಗೆ ಅಂತ ಉಪ್ಪಿಟ್ಟು, ಟೀ ಕಾಯ್ತಾ ಇತ್ತು. ಅಷ್ಟರಲ್ಲಿ ನಾಗಮಂಡಲ ಚಿತ್ರದ "ಹಸಿರಿ ಸಿರಿಯಲಿ" ಅಂತ ಖ್ಯಾತ ಹಾಡುಗಳನ್ನು ಕೊಟ್ಟ ಗೋಪಾಲ ವಾಜಪೇಯಿಯವರು ಕಂಡ್ರು. ಬರ್ತೀನಿ ಬರ್ತೀನಿ ಅಂತನೇ ಲೇಟಾದ ಫಾಸ್ಟ್ ಕವಿ ಓಶೋನ ತಮ್ಮ ಈಶೋ ಈಶ್ವರ್ ಕಿರಣ್ ಭಟ್ಟರು, ಪ್ರವರ ಕೊಟ್ಟೂರ್ ಕಂಡ್ರು. ಹಾಗೇ ಚೇತನಾ ತೀರ್ಥಹಳ್ಳಿ ಅವರು, ಮನು ಬಳಿಗಾರ್ ಅವ್ರೂ ಆಗಮಿಸಿದ್ರು.

ಮೂರ್ನಾಡರಿಗೆ ಶೋಕ ತರ್ಪಣದೊಂದಿಗೆ ಕಾರ್ಯಕ್ರಮ ಶುರು ಆಯ್ತು.ನಿರೂಪಕ ವಿನಯ್ ಕುಮಾರ್ ಅವರ ಮಾತಲ್ಲೇ ಹೇಳೋದಾದ್ರೆ ಈ ಮ್ಯಾಚಲ್ಲಿ ನಾಲ್ಕನೇ ಅಂಪಾಯರ್ ಇಲ್ಲ. ಡೈರೆಕ್ಟ್ ಬ್ಯಾಟಿಂಗ್. ಸೀದಾ ಪುಸ್ತಕ ಬಿಡುಗಡೆ. ನಂತರ ಪತ್ರಕರ್ತರಾದ ಚೇತನಾ ತೀರ್ಥಹಳ್ಳಿಯವರಿಂದ ಪುಸ್ತಕ ಪರಿಚಯ. ವಂಡರ್ ಲ್ಯಾಂಡ್ ಪುಸ್ತಕದ ಬಗ್ಗೆ ಪರಿಚಯಿಸಿ, ಓದೋ ಆಸಕ್ತಿ ಕೆರಳಿಸಿದ ಅವರ ಮಾತುಗಳು ಎಲೆಮರೆಯ ಕಾಯಿಯ ಹೊತ್ತಿಗೆ ಬ್ಲಾಗ್ ಲೋಕದತ್ತ ಹೊರಳಿತು. ೨೦೦೭ರಲ್ಲೇ ಬ್ಲಾಗ್ ಲೋಕಕ್ಕೆ ಕಾಲಿಟ್ಟ ಅವರು ಅಂದಿನಿಂದ ಇಂದಿನವರೆಗೆ ಬ್ಲಾಗ್ ಲೋಕದಲ್ಲಿ ಕಾಣುತ್ತಿರುವ, ಜೊಳ್ಳು ಎಂದು ಕೆಲವರಿಂದ ಅಸಡ್ಡೆಗೊಂಡರೂ ಲೆಕ್ಕಿಸದೇ ಮೂಡುತ್ತಿರುವ ಗಟ್ಟಿಕಾಳುಗಳ ಬಗ್ಗೆ ಗಮನ ಸೆಳೆದರು. ಸ್ವಲ್ಪ ಸಮಯ ಆದ ಕೂಡಲೇ ಬ್ಲಾಗುಗಳನ್ನ ಬಿಡಬೇಡಿರೆಂದು ಯುವ ಬ್ಲಾಗರ್ ಗಳಿಗೆ ಕಿವಿಮಾತನ್ನೂ ಹೇಳಿದರು. ನಂತರ   ಜನಪದ ಕಲಾ ಪರಿಷತ್ತಿನ ಅಧ್ಯಕ್ಷರಾದ ಕೆಂಪಯ್ಯನವರಿಂದ ಬಿದಿರಿನ ಬಗೆಗಿನ ಒಂದು ಜನಪದ ಗೀತೆ. ನಂತರ ಪಂಜು ಅಂತರ್ಜಾಲ ತಾಣದ ಮೊಬೈಲ್ ಮೂಲಕ ಲೋಕಾರ್ಪಣ. ಮೊಬೈಲಲ್ಲಿ ಬಿಡುಗಡೆ ಅಂತ ಮಾಡ್ಸಿದ್ರಲ್ಲಪ್ಪಾ, ಅದು ನಿಮಗೆಲ್ಲಾ ಸಿಕ್ತೇರ್ನಪ್ಪ, ಅದನ್ನ ಹೇಗೆ ಓದ್ತಿರಪ್ಪ ಅಂತ ಮುಗ್ದವಾಗೇ ಕೇಳಿದ ಕೆಂಪಯ್ಯ ಅವರ ಮಾತುಗಳಲ್ಲಿ ಬ್ಲಾಗು, ಇಂಟರ್ನೆಟ್ಟು, ಫೇಸ್ಬುಕ್ಕು ಅಂದರೇನೆಂದರೆ ತಿಳಿಯದ, ಸಾಹಿತ್ಯ ಅಂದರೆ ಪುಟ್ಟಪ್ಪ, ಬೇಂದ್ರೆ ಅವರ ಪುಸ್ತಕಗಳಷ್ಟೇ ಎಂಬೋ ಹಳ್ಳಿಯ ಮತ್ತು ಬ್ಲಾಗು ಸಾಹಿತ್ಯಕ್ಕೆ ಮನ್ನಣೆಯೇ ಇಲ್ಲವೆಂದು ಬೇಸರಿಸುತ್ತಿರೋ ಪೀಳಿಗೆಯ ನಡುವಿನ ಗೊಂದಲ ಕಂಡಂತಾಯಿತು.    

ನಂತರ ಗೋಪಾಲ ವಾಜಪೇಯಿಯವರ ಸರಳತೆಯ ಪರಿಚಯವಾಯಿತು. ಹಿರಿಯ ಸಾಹಿತಿಯೆಂಬ ಯಾವ ಹಮ್ಮು ಬಿಮ್ಮಿಲ್ಲದ ಅವರು ತಮಗೆ ಕಬೀರನ ದೋಹಾಗಳು ಇಷ್ಟವಾಗುತ್ತಿರೋ ಪರಿ ಬಗ್ಗೆ ಅದನ್ನು ತಾವು ಅನುವಾದಿಸಿರುವುದರ ಬಗ್ಗೆ ತಿಳಿಸಿದರು.
ತೇಜೋಮಯನದೋ ತೇಜವೋ ತೇಜ
..ಸ್ಪರ್ಷದಿಂದ ನಾನು ತೇಜವಾಗಿದ್ದು ಸಹಜ
ನಿಂದಕರಿರಲಿ ನಿನಗೆ, ಅವರಾಗಿರಲಿ ನಿನ್ನ ನೆರಳು
ಮನದ ಕೊಳೆಗೆ ಅವರೇ ಸೋಪು, ನೀರು, ಬೆರಳು
ಮುಂತಾದ ಅನುವಾದಗಳು ಅನುವಾದ ಅಂದ್ರೆ ಹಿಂಗಿರ್ಬೇಕು ಅಂತೊಮ್ಮೆ ಅಂದ್ಕೊಳೋ ಹಾಗೆ ಮಾಡಿದ್ವು. ನಾನು ನನಗೆ ತಿಳಿದಂತೆ ಅನುವಾದಿಸಿದ್ದೇನೆ. ತಾವು ಕೇಳುವಿರೆಂದು ಭಾವಿಸಿದ್ದೇನೆಂದೇ ಮಾತು ಶುರು ಮಾಡಿದ ವಾಜಪೇಯಿಯವರ ವಿನಯ ಬಹಳ ಇಷ್ಟ ಆಯ್ತು.

ನಂತರದ ಸರದಿ ಚುಟುಕು ಸ್ಪರ್ಧೆಯ ಬಹುಮಾನ ವಿತರಣೆಗೆಂದು ಬಂದ ಖ್ಯಾತ ಕವಿ ಜರಗನಹಳ್ಳಿ ಶಿವಶಂಕರ್ ಅವರದ್ದು. ಅವರು ತಮ್ಮ ತಾಯಿ , ಮಣ್ಣು, ಅರಸ ಕವಿತೆಗಳ ಮೂಲಕ ಮನಸೆಳೆದರು.
ಆಮೇಲೆ ಕಾರ್ಯಕ್ರಮದ ಹೀರೋ ನಟರಾಜರ ಮಾತುಕತೆ. ತಮ್ಮ ಪುಸ್ತಕ ಮೂಡಿಬಂದ ಬಗೆಯ ಜೊತೆಗೆ ಬ್ಲಾಗರ್ಗಳಿಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಮನ್ನಣೆ ದೊರಕಿಸಿ ಎಂದು ಮನು ಬಳಿಗಾರ್ ಬಳಿ  ವಿನಂತಿಯೂ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ನಂತರ ಮನು ಬಳಿಗಾರರ ಮಾತುಗಳು ಸಮಯದ ಪರಿಪಾಲನೆ, ಫೇಸ್ಬುಕ್ ಮೂಲಕ ಬೆಳೆಯುತ್ತಿರೋ ಬಂಧುತ್ವ, ಮುಂಚೆ ಇದ್ದ ಪತ್ರಸಂಸ್ಕೃತಿ.. ಹೀಗೆ ಹಲವಾರು ಇಂದು-ನಿನ್ನೆಯ ವಿಷಯಗಳಲ್ಲಿ ಹೊರಳಿತು. ಕೊನೆಗೆ ಅದು ಬಂದು ನಿಂತದ್ದು ಮನ್ನಣೆ ಕೇಳೋ ಬ್ಲಾಗರ್ಗಳಿಗಿರೋ ಹೊಣೆಗಾರಿಕೆಗಳ ಬಗ್ಗೆ. ೨೦೦೭ರಲ್ಲೇ ರಚನೆಯಾದ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸೂಚನೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿರೆಂದು ಅಂದು ಎಲ್ಲಾ ಪತ್ರಿಕೆಗಳಲ್ಲೂ, ಟೀವಿಗಳಲ್ಲೂ ಹೇಳಲಾಗಿತ್ತು. ನಿಮ್ಮಲ್ಲಿ ಒಬ್ಬರಾದರೂ  ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಿದ್ದೀರಾ ಎಂದು ಗಂಭೀರ ಸವಾಲನ್ನೇ ಹಾಕಿದರು. ಇತ್ತೀಚಿಗಷ್ಟೇ ಫೇಸ್ಬುಕ್ಕಿಗೆ ಬಂದ, ಬ್ಲಾಗೆಂದು ಒಂದನ್ನು ಶುರು ಮಾಡಿ ಅದರಲ್ಲಿ ಕನ್ನಡದ ಹಲ ತಂತ್ರಾಂಶ ಉಪಯೋಗಿಸುತ್ತಿರೋ , ಯಾವ ಪುರಸ್ಕಾರ ತಿರಸ್ಕಾರಗಳನ್ನೂ ಬಯಸದೇ ತಮ್ಮ ಪಾಲಿಗೆ ಬರೆದುಕೊಂಡಿರೋ ಯುವ ಬರಹಗಾರರು ಇದಕ್ಕೆ ಏನೆಂದು ಉತ್ತರಿಸಿಯಾರು ?
ಫೇಸ್ಬುಕ್ಕಿನ ಕನ್ನಡ ಅವತರಣಿಕೆ , ಗೂಗಲ್ ಕನ್ನಡ, ಕನ್ನಡ ಸ್ಲೇಟ್, ವಿಕಿ ಕನ್ನಡ, ಲಿನಕ್ಸಲ್ಲಿ ಕನ್ನಡ, ನವಿಲು, ಗುಬ್ಬಿಯಂತ ಇತ್ತೀಚೆಗೆ ಬಂದ ೨ ಕನ್ನಡ ಫಾಂಟ್ಗಳು ಹೀಗೆ ಹಲವೆಡೆ ಕನ್ನಡ ತಂತ್ರಾಂಶಗಳ ಬಗೆಗಿನ ಸಂಶೋಧನೆಗಳು, ಪ್ರಯತ್ನಗಳು ನಡೆಯುತ್ತಿದೆಯಾದರೂ  ಬಳಿಗಾರರ ಪ್ರಶ್ನೆಗೆ ಸ್ವಲ್ಪ ಹೊತ್ತು ಎಲ್ಲೆಡೆ ಮೌನ.

ತಮ್ಮ ಮಾತು ಮುಂದುವರಿಸಿದ ಬಳಿಗಾರರು ಸಭೆಯ ಪರವಾಗಿ ವಿನಂತಿಸಿದ ನಟರಾಜರಿಗೇ ಪ್ರಶ್ನೆಯನ್ನು ಕೊಟ್ಟು ವಿಶ್ರಮಿಸಿದರು. ಇತ್ತೀಚೆಗಷ್ಟೇ ಮೊಬೈಲು, ಕಂಪ್ಯೂಟರ್ ಗಳಲ್ಲಿ ಕನ್ನಡ ಬಳಸುತ್ತಿರುವ ಬಗ್ಗೆ ತಿಳಿಸಿ , ಕನ್ನಡ ಬ್ಲಾಗಲ್ಲಿ ಕನ್ನಡ ತಂತ್ರಾಂಶಗಳ ಬಗೆಗಿನ ಮಾಹಿತಿಯ ಬಗ್ಗೆ , ಕನ್ನಡದ ಬಗ್ಗೆ ನಿಧಾನವಾಗಾದರೂ ಜನರಲ್ಲಿ ಮೂಡುತ್ತಿರುವ ಕಾಳಜಿಯ ಬಗ್ಗೆ, ಹತ್ತು ಸಾವಿರ ಸದಸ್ಯರನ್ನು ಹೊಂದಿದ ಕನ್ನಡ ಬ್ಲಾಗಿನ ಬಗ್ಗೆ ತಿಳಿಸಿ ಕನ್ನಡದ ಬಗೆಗಿನ ಕಾಳಜಿಯಲ್ಲಿ ಬ್ಲಾಗಿಗರು , ಫೇಸ್ಬುಕಿಗರು ಯಾವ ನಿಟ್ಟಿನಲ್ಲೂ ಕಮ್ಮಿ ಇಲ್ಲ ಎಂದು ಸಮರ್ಥಿಸಿಕೊಂಡರು. ಅವರ ಮಾತುಗಳು ಮುಗಿಯೋ ಹೊತ್ತಿಗೆ ಈಗಷ್ಟೇ ಇತ್ತ ಕಾಲಿಡುತ್ತಿರೋ ಯುವ ಪೀಳಿಗೆಯೆಯಿಂದ ಇನ್ನೂ ಹೆಚ್ಚಿನ ಕಾಣಿಕೆ ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದೆಂಬ ಸಮಾಧಾನ ಬಳಿಗಾರರ ಮುಖದಲ್ಲಿನ ನಗುವಲ್ಲಿ ಕಂಡತಾಯ್ತು. ನಂತರ ಪುಸ್ತಕಕ್ಕೆ ಬೆನ್ನುಡಿ ಬರೆದು ಕೊಟ್ಟಂತ ಉಷಾ ಕಟ್ಟೀಮನಿ ಅವರನ್ನೂ ಅಭಿನಂದಿಸಲಾಯಿತು.

ಕಾರ್ಯಕ್ರಮದ ನಂತರ ಈಶಾನ್ಯ ರಾಜ್ಯಗಳ ನೃತ್ಯಗಳ ಪರಿಚಯದ ಒಂದು ವೀಡಿಯೋ. ಹಾಗೇ ಹೊರಬರುವಾಗ ಕಂಡದ್ದು ದೂರ ತೀರದ ಲೊಕದ ಗೆಳೆಯ ಸತೀಶ್ ನಾಯಕ್. ಪುಸ್ತಕ ತಗೊಳ್ಳುವಾಗ ಕಂಡದ್ದು ಮತ್ತೊಬ್ಬ ಬ್ಲಾಗಿಗ ಗೆಳೆಯ ಸುಬ್ರಮಣ್ಯ ಹೆಗಡೆ. ಬ್ಲಾಗಲ್ಲಿರೋ ಅವರ ಯಾವದೋ ಕಾಲದ ಫೋಟೋಗಳಿಗೂ, ಹೆಸರು ಮಾತ್ರ ತಿಳಿದ ಫೋಟೋಗಳೇ ಇಲ್ಲದ ಅಗೋಚರ ಮಿತ್ರರನ್ನೂ  ಒಮ್ಮೆ ಎದುರಿಗೆ ಕಂಡರೆ ಒಂತರಾ ಖುಷಿ. ಆದರೆ ಪರಸ್ಪರ ಪರಿಚಯಿಸಿಕೊಳ್ಳುವವರೆಗೂ ಇವರು ಇಂತವರೇ ಅಂತ ಗೊತ್ತಾಗೋ ಚಾನ್ಸೇ ಇಲ್ಲ. ನನ್ನ ಪಕ್ಕನೇ ಕೂತಿದ್ರೂ ನಾನು ಅನೇಕರ ಹೆಸರನ್ನು ಇಲ್ಲಿ ಬರೀದೆ ಇರ್ಬೋದು !! ಆದ್ರೆ ಇಲ್ಲಿ ಬರೆದಷ್ಟು ಹೆಸರನ್ನಾದರೂ ನಾನು ನೆನಪಿಟ್ಟಿದ್ದೀನಿ ಅಂದರೆ ಅದಕ್ಕೆ ಫೇಸ್ಬುಕ್ಕು ಮತ್ತು ಅದರಲ್ಲೇ ಮೊದಲು ಪರಿಚಯವಾದ ಪ್ರಸನ್ನ ಅಡುವಳ್ಳಿ ಅವರೇ ಕಾರಣ:-) ಬರೀ ಫೋಟೋದಲ್ಲಿ ಮಾತ್ರ ಕಂಡಿದ್ದ ಸುಮಾರಷ್ಟು ಜನರನ್ನ ಮುಃಖತಃ ಕಂಡು ಮಾತನಾಡಿಸಿದ್ದು , ಒಂದೊಳ್ಳೆ ಕಾರ್ಯಕ್ರಮ ಸವಿದಿದ್ದು ನನ್ನ ನಸೀಬೇ ಸರಿ. ಅದಕ್ಕೆಲ್ಲಾ ಕಾರಣರಾದ ನಸೀಮರಿಗೆ ಒಂದು ಜೈ ಹೋ :-)

Saturday, March 30, 2013

ಅಪ್ಪ

ಜಾತ್ರೆ ಮಧ್ಯೆ ಒಂಟಿ ಭಾವ
ನಿನ್ನ ನೆನದೇ ಕಾಡತಾವ
ಭಾರವಾಗಿ ನೀರ ಕಣ್ಣು
ನಡೆದು ಹಿಂದಿಂದೆ

ತೆನೆದೂಗೋ ಹೊಲದಲ್ಲಿ
ನಳನಳಿಸೋ ಸಸಿ ನಾನು
ಅಳಿಸಿಹೆಯಾ ಮರೆಯಾಗಿ
ಹೊಲವ ತಂದೆ

ಮಾತ ಕಾದೇ ಮೂಕನಾದೆ
ನೀನು ಲೋಕ ದಾಟಿ ಹೋಗೆ
ಬಯ್ಯಲಿದ್ದ ಎಲ್ಲಾ ಒಬ್ಬ
ವಿಧಿಗೆ ಬಲಿಯಾಗೆ

ಏನ ಅರ್ಪಿಸಲೋ ತಂದೆ
ಬಹಳ ಕಾಡುತಿವೆ, ನೆನಪು
ಅನು ದಿನ ನಿಂದೆ..,ಪ್ರತಿ
ಕಂಪನಾ ನಿಂದೆ

Sunday, March 10, 2013

ಕೆಳದಿ

ಹಿಂಗೇ ಕಾರ್ಯಕ್ರಮದಲ್ಲಿ, ಎಫ್ಬಿ ಹರಟೆ ಕಾರ್ಯಕ್ರಮದಲ್ಲಿ ಸಿಕ್ಕೋರು, ಮಾತಾಡ್ತಾ ಆಡ್ತಾ ಪರಿಚಯ ಆದೋರು ಮಾತಾಡ್ತಾ ಆಡ್ತಾ ಊರಿನ ಸುದ್ದಿ ಬಂದೇ ಬರುತ್ತದೆ
ಪ್ರ:ನಿಮ್ಮೂರು ಯಾವದು ?
ಉ:ಸಾಗರದತ್ರ ಒಂದಳ್ಳಿ
ಪ್ರ:ಓ ಸಾಗರದತ್ರ ಎಲ್ಲಾ ?
ಉ: ಸಾಗರದತ್ರ ಕೆಳದಿ ಹೇಳಿ
ಪ್ರ:ಓಹೋ, ಕೆಳದಿ ಯಾರ್ಮನೆಯಾ ಮಾಣಿ ?
ಉ: ಕೆಳದಿ ಅಲ್ಲ. ಅದರತ್ರ ಇರೋ ಅಕ್ಕಿಮನೆ..

ಹಿಂಗೆ ನಮ್ಮೂರು ಕೇಳೋರಿಗೆಲ್ಲಾ ನನ್ನ ಪರಿಚಯ ಮಾಡ್ಕೊಳೋದು ಹೀಗೇನೆ :-)
ಅಂದಂಗೆ ಕೆಳದಿಗೆ ಬರದಿದ್ದರೂ ಕೆಳದಿ ಚೆನ್ನಮ್ಮ, ಶಿವಪ್ಪ ನಾಯಕನ ಹೆಸರು ಹೇಳಿ ಆ ಕೆಳದಿ ಅಂದ್ರೆ ಸುಮಾರು ಜನಕ್ಕೆ ಗೊತ್ತಾಗತ್ತೆ. ಗೊತ್ತಾಗದಿದ್ದವರಿಗೆ ಹೇಗೆ ಹೇಳದಪ್ಪಾ ? ಅದಕ್ಕೇ ಈ ಲೇಖನ

ಕೆಳದಿ ಅನ್ನೋದು ಶಿವಮೊಗ್ಗ ಜಿಲ್ಲೆಯ,ಸಾಗರ ತಾಲೂಕಿನ ಒಂದೂರು. ಸಾಗರದಿಂದ ೮ ಕಿ.ಮೀ ದೂರ.
ಸಾಗರದಿಂದ ಕೆಳದಿಗೆ ಹೋಗೋರು ನಮ್ಮೂರು ಅಕ್ಕಿಮನೆಯ ಮೇಲೇ ಹೋಗ್ಬೇಕು. ಅಲ್ಲಿಂದ ಮೂರು ಕಿ.ಮೀ ಮಾತ್ರ ಆಗ್ತಿದ್ದರಿಂದ ನಮ್ಮನೆಗೆ ಬಂದ ಕೆಳದಿ ನೋಡಬೇಕು ಅಂದ ಎಲ್ಲಾ ನೆಂಟರಿಗೆಲ್ಲಾ ನಾನೇ ಮರಿ ಗೈಡ್ ! ಯಾವ ನೆಂಟರೂ ಬರದಿದ್ದರೂ ೩-೪ ತಿಂಗಳಿಗೊಮ್ಮೆ ಆದ್ರೂ ಸೈಕಲ್ ಹತ್ತಿ ಕೆಳದಿಗೆ ಹೋಗ್ತಿದ್ದೆ. ಅಲ್ಲಿನ ದೇವಸ್ಥಾನದಲ್ಲಿ ಕೂತರೆ, ಆ ತಣ್ಣಗಿನ, ಪ್ರಶಾಂತ ವಾತಾವರಣದಲ್ಲಿ ಏನೋ ಸಮಾಧಾನ. ಅಲ್ಲಿನ ದೇವಸ್ಥಾನದಲ್ಲಿ ಓದಿದ, ನೋಡಿದ, ಕೇಳಿದ ಕಥೆಗಳೇ ಈ ಲೇಖನಕ್ಕೆ ಸ್ಪೂರ್ತಿ.

ಇತಿಹಾಸ:
ಕೆಳದಿಗೆ ಹೋಗ್ತಾ ನಮ್ಮೂರು ದಾಟಿದ ಮೇಲೆ ಸಿಗೋ ಊರು ಹಳ್ಳಿಬೈಲು. ಕೆಳದಿಯಲ್ಲಿ ಈಗಿರೋ ರಾಮೇಶ್ವರ, ವೀರಭದ್ರ ದೇವಸ್ಥಾನಗಳ ಕಾಲಕ್ಕೆ ಹೋಗೋಣ.. ಹಳ್ಳಿಬೈಲಲ್ಲಿದ್ದ ಚೌಡಗೌಡ, ಭದ್ರಗೌಡ ಎಂಬ ಅಣ್ಣತಮ್ಮಂದಿರಿಗೆ ಯಾದವ, ಮುರಾರಿ ಎಂಬ ಸೇವಕರು. ಒಮ್ಮೆ ಚೌಡಗೌಡನಿಗೆ ಹೊಲ ಉಳುವ ಸಮಯದಲ್ಲಿ ನೇಗಿಲಿಗೆ ನಿಧಿಯ ಕೊಪ್ಪರಿಗೆಯ ಬಾಯಿ ಸಿಗುತ್ತದೆ. ಅದನ್ನು ತೆಗೆಯಲು ಹೆದರಿ ಹಾಗೇ ಬಿಟ್ಟ ಆತನಿಗೆ ರಾತ್ರಿ ನರಬಲಿ ಕೊಟ್ಟರೆ ಆ ನಿಧಿಯನ್ನು ಪಡೆಯಬಹುದೆಂಬ ಕನಸು ಬೀಳುತ್ತದೆ. ಒಡೆಯನಿಗಾಗಿ ಯಾದವ, ಮುರಾರಿ ತಮ್ಮ ನಾಗಮುರಿ(೨) ಕತ್ತಿಯಲ್ಲೇ ಬಲಿಯಾಗುತ್ತಾರೆ. ನಂತರ ಪಡೆದ ಸಂಪತ್ತಿನಿಂದ ಚೌಡಗೌಡ ಪುಟ್ಟ ಪಾಳೇಗಾರನಾಗಿ ಸುತ್ತಮುತ್ತಲ ಊರುಗಳನ್ನು ಆಳಲಾರಂಭಿಸುತ್ತಾನೆ. ಸುದ್ದಿ ತಿಳಿದ ವಿಜಯನಗರ ಅರಸರು ಈತನನ್ನು ಬಂಧಿಸುತ್ತಾರೆ.ಅದೇ ಸಮಯದಲ್ಲಿ ಬೈಲಹೊಲದ ಪಾಳೇಗಾರ ವಿಜಯನಗರದ ವಿರುದ್ದ ದಂಗೆ ಎದ್ದಿರುತ್ತಾನೆ. ಅವನನ್ನು ಸದೆ ಬಡಿದ ಚೌಡಗೌಡನ ಮತ್ತೆ ವಿಜಯನಗರದ ಕೃಪೆಗೆ ಪಾತ್ರನಾಗಿ ಮುದ್ರೆಯೊಂದನ್ನು ಪಡೆಯುತ್ತಾನೆ. ಹುಟ್ಟೂರಿಗೆ ಮರಳಿ ರಾಮೇಶ್ವರ ದೇವಸ್ಥಾನವನ್ನು ಕಟ್ಟಿಸುತ್ತಾನೆ. ನಂತರ ಕೆಳದಿ ವೀರಭೂಮಿ(೩) ಎಂದರಿತು ಅಲ್ಲೇ ವಿಜಯನಗರಕ್ಕೆ ಅಧೀನನಾಗಿ ತನ್ನ ಸಾರ್ಮಾಜ್ಯ ಸ್ಥಾಪಿಸುತ್ತಾನೆ. ನಂತರ ವಿಜಯನಗರದ ಸದಾಶಿವರಾಯನ ಕೃಪೆಗೆ ಪಾತ್ರ ಎಂದು ಈತನ ಮಗ ಸದಾಶಿವನಾಯಕನೆಂದು ರಾಜ್ಯವಾಳಲು ಪ್ರಾರಂಭಿಸುತ್ತಾನೆ..

Murari -Vijaya

ಕೆಳದಿಗೆ ಹೋಗುತ್ತಿದ್ದಂತೆಯೇ ಎದುರಿಗೆ ರಾಮೇಶ್ವರ ದೇವಸ್ಥಾನ. ರಾಮೇಶ್ವರನ ಎಡಭಾಗದಲ್ಲಿ ಪಾರ್ವತಿ, ಬಲಭಾಗದಲ್ಲಿ ವೀರಭದ್ರನ ಗುಡಿಗಳಿವೆ. ಹೊಯ್ಸಳ ದ್ರಾವಿಡ ಶೈಲಿಯಲ್ಲಿರೋ ದೇವಸ್ಥಾನಗಳು. ಮೊದಲು ರಾಮೇಶ್ವರನ ಸನ್ನಿಧಿಗೆ ಹೋಗೋಣ.

ಇಲ್ಲಿ ಇಕ್ಕೇರಿ, ಬನವಾಸಿಗಳಲ್ಲಿದ್ದಂತೆ ಆಳೇತ್ತರದ ನಂದಿಯಿರದೇ, ಶಿವನೆದುರು ಪುಟ್ಟ ನಂದಿಯಿದ್ದಾನೆ. ಬೆಳಗ್ಗಿನ ಸಮಯದಲ್ಲಿ ಅಥವಾ ಸಂಜೆ ೫ ರ ಮೇಲೆ ಹೋದರೆ ದೇವರ ದರ್ಶನ ಪಡೆಯಬಹುದು. ಇಲ್ಲದಿದ್ದರೆ ಸರಳ ಹಿಂದಿನಿಂದ ದರ್ಶನ ಭಾಗ್ಯ. ಇಲ್ಲಿನ ನೆಲದಲ್ಲಿ, ಕೆಲವು ಶಿಲ್ಪಗಳ ಕೆಳಗೆ ಹಳೆಗನ್ನಡದ ಬರಹಗಳಿವೆ. ಅವುಗಳನ್ನೆಲ್ಲಾ ಓದುವ ಆಸಕ್ತಿಯಿದ್ದರೆ ಓದಬಹುದು. ಹಳಗನ್ನಡದ ಕೆಲವು ಅಕ್ಷರಗಳು ಅರ್ಥವಾಗದೇ ಹ್ಯಾಪು ಮೊರೆ ಹಾಕೋ ಮೊದಲು ಪಕ್ಕದಲ್ಲಿನ ಪಾರ್ವತಿ ಗುಡಿಗೆ ಹೋಗೋಣ. ಇಲ್ಲಿನ ಛಾವಣಿಯೇ ಇಲ್ಲಿನ ಆಕರ್ಷಣೆ.  ಇಲ್ಲಿರೋ ೪೦-೫೦ ಬಗೆಯ ಹೂವಿನ ಕೆತ್ತನೆಗಳಲ್ಲಿ ಪ್ರತಿಯೊಂದೂ ಭಿನ್ನವಾಗಿರೋದು ಆ ಶಿಲ್ಪಿಗಳ ಕರಕುಶಲತೆಗೆ, ಸೃಜನ ಶೀಲತೆಗೆ ಸಾಕ್ಷಿ. ಕತ್ತೆತ್ತಿ ನೋಡಿ ಕತ್ತು ನೋವು ಬಂದರೂ ಒಂದು ಹೂವು ಇನ್ನೊಂದರ ತರ ಇರುವುದು ಹುಡುಕುವುದು ಕಷ್ಟ. ಅತಿಶಯೋಕ್ತಿ ಎನಿಸಿದರೆ ಮುಂದಿನ ಬಾರಿ ಹೋದಾಗ ಒಂದೇ ತರ ಇರೋ ಯಾವುದಾದರೂ ಎರಡು ಹೂಗಳಿವೆಯೋ ಎಂದು ಕೂಲಂಕುಷವಾಗಿ ಪರೀಕ್ಷಿಸಬಹುದು !

ಇಲ್ಲಿನ ಮೇಲ್ಚಾವಣಿಯ ಮೂಲೆ ಮೂಲೆಗಳಲ್ಲಿ  ದೇವಾನು ದೇವತೆಗಳಿದ್ದಾರೆ. ಈ ಭಾಗದಲ್ಲಿ ಮೇಲ್ಚಾವಣಿಯಲ್ಲಿ ಈ ರೀತಿಯ ಕೆತ್ತನೆಯನ್ನು ನೋಡಿದ್ದು ಇಲ್ಲೇ ಮೊದಲು. ಇಲ್ಲಿ ೩೨ ಕೈಗಳ ಗಣಪತಿಯ ವಿಗ್ರಹವೊಂದಿದೆ. ಇಕ್ಕೇರಿಯ ಅಘೋರೇಶ್ವರ ದೇಗುಲದ ೩೨ ಕೈಗಳ ಗಣಪನನ್ನು ಮಾಡುವ ಮೊದಲು ಸಣ್ಣ ಪ್ರಮಾಣದಲ್ಲಿ (ಮಾಡೆಲ್ ಅನ್ನುವಂತೆ) ಇದನ್ನು ಕೆತ್ತಿದ್ದರಂತೆ.
ಅದನ್ನು ನೋಡಿ ದೇವಿಗೆ ಕೈ ಮುಗಿದು ಹಾಗೇ ತಾಗಿಕೊಂಡಂತಿರೋ ರಾಮೇಶ್ವರನ ಗುಡಿಗೆ ಬಂದು ಅದರ ಪಕ್ಕದಲ್ಲಿರೋ ವೀರಭದ್ರನ ಗುಡಿಗೆ ಹೋಗೋಣ. ಪಾರ್ವತಿ- ರಾಮೇಶ್ವರ ದೇಗುಲಗಳ ಮಧ್ಯೆ ಇರೋ ಪ್ರದಕ್ಷಿಣಾ ಪಥದ ಇಕ್ಕೆಲಗಳ ಗೋಡೆಗಳಲ್ಲಿ ಅನೇಕ ದೇವಾನುದೇವತೆಗಳ, ಅಪ್ಸರೆಯರ, ರಾಮಾಯಣ ಮಾಹಾಭಾರತಗಳ ಚಿಕ್ಕ ಚಿಕ್ಕ ವಿಗ್ರಹಗಳನ್ನು ನೋಡಬಹುದು.
ganda berunda- outside temple



ವೀರಭದ್ರನ ಗುಡಿಯಲ್ಲಿ ಹಾಗೇ ತಲೆಯೆತ್ತಿ ನೋಡಿದರೆ ಕೆಳದಿ ಸಾಮ್ರಾಜ್ಯದ ಲಾಂಛನ ಗಂಢಭೇರುಂಡ ಕಾಣುತ್ತದೆ. ಆಗ ಕೆಲವು ಸಾರ್ಮಾಜ್ಯಗಳದ್ದು ಆನೆ ಲಾಂಛನವಾಗಿತ್ತಂತೆ, ಕೆಲವದ್ದು ಸಿಂಹ. ಈ ಆನೆ, ಸಿಂಹಗಳೆರಡನ್ನು ತನ್ನ ಕಾಲುಗಳಲ್ಲಿ ಬಂಧಿಸಿದ ಎರಡು ತಲೆಯ ಗಂಢಭೇರುಂಡವನ್ನು ಲಾಂಛನವನ್ನಾಗಿಸಿದ ಕೆಳದಿಯ ಅರಸರು ತಮ್ಮ ಸಾರ್ಮಾಜ್ಯ ಎಲ್ಲರಿಗಿಂತಲೂ ಶಕ್ತಿಶಾಲಿಯಾಗಿ ಬೆಳೆಯಲೆಂಬ ಆಸೆ ಪಟ್ಟಿದ್ದರು ಎನ್ನುತ್ತಾರೆ ಕೆಲವರು.

ವೀರಭದ್ರನ ಗುಡಿಗೆ ಕೈ ಮುಗಿದು ಅಲ್ಲೇ ಆ ಗರ್ಭಗೃಹದ ಬಾಗಿಲನ್ನು ನೋಡಿದರೆ ಮೇಲ್ಗಡೆ ಕೃಷ್ಣನ ಪುಟ್ಟ ವಿಗ್ರಹ ಕಾಣುತ್ತದೆ. ವಿಜಯನಗರದ ಸಾರ್ಮಾಜ್ಯದ ಶ್ರೀ ಕೃಷ್ಣದೇವರಾಯನಿಗೆ ಸಾಮಂತರಾದ ಕೆಳದಿ ಅರಸರ ಗೌರವವನ್ನು ಇದು ಬಿಂಬಿಸುತ್ತದಂತೆ.  ವೀರಭದ್ರ ದೇವಸ್ಥಾನದಿಂದ ಗಂಡಭೇರುಂಡ ಇರುವ ದಿಕ್ಕಿನ ಬಾಗಿಲಲ್ಲಿ ಹೊರಬಂದರೆ ಒಂದು ಧ್ವಜ ಸ್ಥಂಬ ಸಿಗುತ್ತದೆ. ಸಪ್ತ ಮಾತೃಕೆಯರು, ಗಣಪತಿ ಇದರ ವಿಶೇಷತೆ. ಇದೇ ಕಂಬದ ಮೇಲೆ ದೇಗುಲ ಸ್ಥಾಪನೆಯ ಬಗ್ಗೆ ಹಳಗನ್ನಡದಲ್ಲಿ ಬರೆಯಲಾಗಿದೆ. ಹಾಗೇ ದೇಗುಲವನ್ನೊಮ್ಮೆ ಪ್ರದಕ್ಷಿಣೆ ಹಾಕೋಣ.



ದೇಗುಲದ ಗೋಡೆಗಳ ಮೇಲೆ ದಶಾವತಾರದ ಕೆತ್ತನೆಗಳಿವೆ. ಅಲ್ಲೇ ಒಂದೆಡೆ ನಾಗರಬನವಿದೆ.  ಪ್ರತಿಯೊಂದಕ್ಕೂ ಪ್ರತ್ಯೇಕ ನಮಸ್ಕಾರ ಹಾಕಲು ಹೋದರೆ ಅಲ್ಲೇ ಐದತ್ತು ನಿಮಿಷವಾದರೂ ಕಳೆದುಹೋಗುತ್ತದೆ! ಅಲ್ಲಿರೋ ಎಲ್ಲಾ ನಾಗರಗಳಿಗೂ ಒಮ್ಮೆ ಮನಸ್ಸಲ್ಲೇ ವಂದಿಸಿ ಬರುವಾಗ ಆಗಿನ ಕಾಲದ ಪಣತವನ್ನು ಕಾಣಬಹುದು. ಅಲ್ಲಿಂದ ಹೊರಳಿ ಮತ್ತೆ ದೇಗುಲದ ಗೋಡೆಗಳತ್ತ ಬಂದರೆ ವಾಸ್ತುಪುರುಷ, ಶುಕಮುನಿ ಮತ್ತು ಗಿಳಿ, ನರಸಿಂಹ ಹೀಗೆ ಹಲವಾರು ಕೆತ್ತನೆಗಳನ್ನು ನೋಡಬಹುದು. ಇಲ್ಲಿಗೆ ಬಂದವರು ವಾಸ್ತುಪುರುಷನ ಪಕ್ಕದಲ್ಲಿರೋ ಆಗಿನಕಾಲದ ಅಳತೆಪಟ್ಟಿಯನ್ನು ನೋಡಲು ಮರೆಯದಿರಿ.


ವಾಸ್ತುಪುರುಷನ ಪಕ್ಕದಲ್ಲಿ ತಾಗಿಕೊಂಡಿರೋ ವೀರಭದ್ರ ರಾಮೇಶ್ವರ ದೇಗುಲದ ಮಧ್ಯೆ ಒಂದು ಕಳ್ಳದಾರಿ. ವೀರಭದ್ರ ದೇಗುಲದ ಪ್ರಧಾನ ಬಾಗಿಲ ಬಳಿ ತೆರೆಯೋ ಈ ಕಳ್ಳದಾರಿಯಿಂದ ದೇಗುಲದ ಎಲ್ಲಾ ದಿಕ್ಕಿನ ಬಾಗಿಲು ಹಾಕಿದರೂ ಒಳ-ಹೊರಗೆ ಹೋಗಬಹುದು ! ಅದು ಹೇಗಿದೆ ಅಂತ ಹೇಳುವುದಕ್ಕಿಂತ ಅಲ್ಲಿ ಹೋಗಿ ನೋಡಿದರೇ ಚೆನ್ನಾಗಿ ಕಾಣಬಹುದು. ಈ ಕಳ್ಳದಾರಿಯ ಅಕ್ಕಪಕ್ಕದಲ್ಲೂ ಕೆತ್ತನೆಗಳಿವೆ. ಇಲ್ಲಿ ದೇಗುಲ ಅಂದರೆ, ಅದರ ಒಳಗೆ-ಹೊರಗೆ ಎಲ್ಲೆಲ್ಲಾ ಕೆತ್ತನೆಗಳು..

ಹಾಗೇ ಹೊರಗೆ ಬರುವಾಗ ಬಲಿಯಾದ ಮುರಾರಿ-ವಿಜಯ ತಮ್ಮ ಪತ್ನಿಯೊಂದಿಗಿರುವ ಗೊಂಬೆಗಳನ್ನು ನೋಡಬಹುದು. ಕೆಳದಿಯ ತೇರಿನ ಸಮಯದಲ್ಲಿ ಇವನ್ನು ಹೊರ ತೆಗೆಯಲಾಗುತ್ತದೆ.
ಹಾಗೇ ಹೊರ ಬರುತ್ತಿದ್ದಂತೆ ಒಂದು ವಿಶಾಲವಾದ ಪಡಸಾಲೆ. ಅಲ್ಲೆಲ್ಲಾ ಕಲ್ಲಲ್ಲಿ ಕೆತ್ತಿದ ಪಗಡೆಯ ಮಣೆಗಳು ಕಾಣಸಿಗುತ್ತದೆ. ಅಂದ ಹಾಗೇ ಇಲ್ಲಿನ ದೇಗುಲದ ಒಳಗೂ ಅಲ್ಲಲ್ಲಿ ಪಗಡೆ, ಮತ್ತೆ ಹುಲಿ ಹಸು ಎಂಬೋ ಒಂದು ಆಟದ ಮಣೆಗಳು ಕಾಣುತ್ತದೆ. (ಹುಲಿ ಹಸು ಮಣೆ ಹೇಗಿರುತ್ತೆ ಅಂದಿರಾ ? ಅದರ ಚಿತ್ರವೊಂದನ್ನು ಹಿಂದೊಮ್ಮೆ ತೆಗೆದ ನೆನಪು. ಸಿಕ್ಕಿದರೆ ಖಂಡಿತಾ ಹಾಕುತ್ತೇನೆ.)

ಹಾಗೇ ಹೊರಬಂದಾಗ ಎದುರಿಗೆ , ಎಡಭಾಗದಲ್ಲಿ ಕೆಳದಿ ಮ್ಯೂಜಿಯಂ ಕಾಣುತ್ತದೆ. ಇದು ಸಂಜೆ ಐದರವರೆಗೆ ತೆಗೆದಿರುತ್ತದೆ. ಇದರಲ್ಲಿ ಕೆಳದಿಯ ಬಗ್ಗೆ ಏನಿದೆ ಅನ್ನೋದಕ್ಕಿಂತ ಏನಿಲ್ಲ ಅಂತ ಕೇಳೋದೇ ಉತ್ತಮ ಅನಿಸುತ್ತದೆ. ನಾಣ್ಯ, ಹಲತರದ ಶಾಸನ, ತಾಳೇಗರಿ ಹೀಗೆ ಇತಿಹಾಸದ ಪುಟಗಳೇ ಬಂದಿಯಾಗಿ ಇಲ್ಲಿ ಕುಳಿತಂತೆ, ನೋಡುಗರನ್ನು ತನ್ನ ಕಾಲಕ್ಕೆ ಕೊಂಡೊಯ್ಯುತ್ತಿರುವಂತೆ ಭಾಸವಾಗುತ್ತದೆ. ಈಗ ಅಲ್ಲೇ ಸ್ವಲ್ಪ ಮುಂದೆ (ಸಾಗರಕ್ಕೆ ಮರಳುವ ಹಾದಿಯಲ್ಲಿ)ಹೊಸ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಕೆಳದಿಗೆ ಬಂದವರು ಇದನ್ನು ನೋಡದೇ ಹೋದರೆ ಅನೇಕ ಅಪೂರ್ವ ಕ್ಷಣಗಳನ್ನು ಕಳೆದುಕೊಂಡಂತೆಯೇ.
 
ಹಾಗೇ ವಾಪಾಸ್ ಮರಳುವಾಗ ಗೋಪಾಲಕೃಷ್ಣನ ಗುಡಿಯನ್ನು, ಅದರ ಪಕ್ಕದಲ್ಲಿ ಮನೆಯನ್ನೇ ಮೀರಿ ಬೆಳೆಯಹತ್ತಿರುವ ಬೃಹತ್ ಹುತ್ತವನ್ನು ನೋಡಬಹುದು. ಹಾಗೇ ಮುಂದೆ ಬಂದಾಗ ರಾಮೇಶ್ವರ ಕ್ರೀಡಾಂಗಣ. ಅದನ್ನು ದಾಟಿ ಮುಂದೆ ಬಂದಾಗ ಹಳ್ಳಿಬೈಲಿನ ತಿರುವು. ಆ ತಿರುವಿನಲ್ಲಿ ಇಳಿಯುವಾಗ ಹಳ್ಳಿಬೈಲು ಎಂಬ ಬೋರ್ಡು ಕಾಣುತ್ತದೆ. ಇದೇ ಚೌಡಪ್ಪನಾಯಕನ ಹಳ್ಳಿಬೈಲು. ಅಲ್ಲೇ ಎದುರಿಗೆ ಪಾಳುಬಿದ್ದ ಕೆರೆ ಕಾಣುತ್ತದೆ. ಇದು ಬಲಿಯಾದ ವಿಜಯ-ಮುರಾರಿಯ ನೆನಪಿಗೆ ಕಟ್ಟಿಸಿದ ಕೆರೆಯಂತೆ. ಎರಡು ಕೆರೆಗಳನ್ನು ಕಟ್ಟಿಸಿದ್ದರಂತೆ. ಇನ್ನೊಂದು ಎಲ್ಲಿದೆಯೋ ಗೊತ್ತಿಲ್ಲ.

ಅಂದ ಹಾಗೆ ಇಂದು ಕೆಳದಿಯಲ್ಲಿ ಅಲ್ಲಿನ ಖ್ಯಾತ ಸಂಶೋಧಕರಾದ ವೆಂಕಟೇಶ್ ಜೋಯಿಸ್ ಅವರ "ಕೆಳದಿಯ ಇತಿಹಾಸ" ಎಂಬ ಸೀಡಿ ಬಿಡುಗಡೆಯಾಗುತ್ತಿದೆಯಂತೆ. ನಾನು ಈ ಲೇಖನ ಬರೆಯೋ ಹೊತ್ತಿಗೆ ಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ನಾಡಿದ್ದು ಕೆಳದಿಯಲ್ಲಿ ವರ್ಷದ ತೇರು ಮತ್ತು ಜಾತ್ರೆ. ಈ ವರ್ಷ ಅದಕ್ಕೆ ಹೋಗಲಾಗದ ಬೇಸರದೊಂದಿಗೆ, ಸಾಗರದ ಜಾತ್ರೆಗಾದರೂ ಹೋಗಬಹುದೇನೋ ಎಂಬ ಆಸೆಯೊಂದಿಗೆ ವಿರಮಿಸುತ್ತಿದ್ದೇನೆ. ಕೆಳದಿಯ ಬಗ್ಗೆ ನಾನು ಹೇಳಿದ್ದಕ್ಕಿಂತ ಹೇಳಲಾಗಿದ್ದೇ ಹೆಚ್ಚಿರಬಹುದು. ಅಂತಹ ಅಂಶಗಳು ಕಂಡರೆ ತಾವೆಲ್ಲಾ ಈ ಕಿರಿಯನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಹಂಚಿಕೊಳ್ಳಬಹುದು.

ಹೋಗುವ ಮಾರ್ಗ:
ಶಿವಮೊಗ್ಗೆಯಿಂದ ೮೦ ಕಿ.ಮೀ
ಸಾಗರದಿಂದ ೮ ಕಿ.ಮೀ
ಸಾಗರದಿಂದ ಕನಿಷ್ಟ ಪ್ರತೀ ಅರ್ಧಗಂಟೆಗಾದರೂ ಒಂದರಂತೆ ಕೆಳದಿಗೆ ಬಸ್ಸುಗಳಿವೆ

ಕೆಳದಿಯ ಬಗೆಗಿನ ದಂತಕತೆಗಳು
೧) ಶಿವಲಿಂಗ ಸಿಕ್ಕ ಕತೆ:
 ಹೀಗೇ ಒಂದು ದಿನ ಹೊಲವೊಂದರ ಹುತ್ತದ ಮೇಲೆ ಹಸು ಹಾಲು ಸುರಿಸುತ್ತಿರುವ ಆಶ್ಚರ್ಯದ ದೃಶ್ಯವನ್ನು ಚೌಡಗೌಡ ನೋಡುತ್ತಾನೆ. ಆ ಹುತ್ತವನ್ನು ಅಗೆದು ನೋಡಿದಾಗ ಅಲ್ಲೊಂದು ಶಿವಲಿಂಗ ಸಿಗುತ್ತದೆ.ಅದಕ್ಕೆ ಪುಟ್ಟಗುಡಿಯನ್ನು ಕಟ್ಟಿಸುತ್ತಾನೆ.
ನಂತರ ವಿಜಯನಗರ ಸಾಮ್ರಾಜ್ಯದ ಮೊಹರನ್ನು ಪಡೆದು, ಅವರ ಅಧೀನರೆಂದು ಸಾಮ್ರಾಜ್ಯ ಕಟ್ಟೋ ಸಂಭ್ರಮದಲ್ಲಿ ರಾಮೇಶ್ವರ ದೇಗುಲವನ್ನು ಕಟ್ಟಿಸುತ್ತಾನೆ

೨)ನಾಗರಮುರಿ:
ಯಾದವ, ಮುರಾರಿ ಸಹೋದರರು ಒಮ್ಮೆ ಹೊಲವೂಳುತ್ತಿದ್ದಾಗ ಖಡ್ಗವೊಂದು ಅವರ ನೇಗಿಲಿಗೆ ಸಿಗುತ್ತದೆ. ಅದರ ಮಹತ್ವವೇನೆಂದು ಅರಿಯದಿದ್ದರೂ ಅದನ್ನು ತಂದು ಮನೆಯ ಸೂರಿನ ಮೇಲೆ ಇಡುತ್ತಾರೆ. ಕೆಲದಿನಗಳಲ್ಲೇ ಮನೆಯ ಸೂರಿನ ಮೇಲೆ ಬಂದು ಕೂರುವ ಯಾವುದೇ ಹಕ್ಕಿಯನ್ನು ಈ ಕತ್ತಿ ಹಾವಿನ ರೂಪ ತಾಳಿ ಕೊಲ್ಲುವ ಸೋಜಿಗವನ್ನು ಈ ಅಣ್ಣತಮ್ಮಂದಿರು ನೋಡುತ್ತಾರೆ. ಅಂದೇ ಅದನ್ನು ನಾಗರಮುರಿ ಅಂತ ಹೆಸರಿಟ್ಟು, ಚೆನ್ನಾಗಿ ತೊಳೆದು ಮನೆಯ ಒಳಗೆ ತಂದು ಇಡುತ್ತಾರೆ.  

೩)ಕೆಳದಿಯೆಂಬೋ ವೀರನೆಲ:
ಕೆಳದಿ ಚೌಡಪ್ಪಗೌಡ/ಚೌಡಪ್ಪನಾಯಕ ವಿಜಯನಗರದಿಂದ ತನ್ನೂರಿಗೆ ಮರಳುತ್ತಿರುವಾಗ ಒಂದೆಡೆ ಚಿಗರೆಯೊಂದು ಚಿರತೆಯನ್ನು ಬೆನ್ನಟ್ಟೋ ದೃಶ್ಯವನ್ನು ನೋಡುತ್ತಾನೆ. ಈ ಅಪೂರ್ವ ದೃಶ್ಯದಿಂದ ಬೆರಗಾದ ಆತ ಈ ನೆಲ ಸಾಮಾನ್ಯದ್ದಲ್ಲ. ಇದು ವೀರಭೂಮಿ ಎಂದು ತನ್ನ ಸಾಮ್ರಾಜ್ಯವನ್ನು ಅಲ್ಲೇ ಪ್ರಾರಂಭಿಸುತ್ತಾನೆ.

ಕೆಳದಿಯ ಸುತ್ತಮುತ್ತಲು ಈಗಲೂ ಅಲ್ಲಲ್ಲಿ ಯುದ್ದದಲ್ಲಿ ಮಡಿದ ವೀರರ ವೀರಗಲ್ಲುಗಳು, ಸತಿಯಾದವರ ಸತಿ ಕಲ್ಲುಗಳು ಸಿಕ್ಕುತ್ತವೆ. ನಮ್ಮೂರು ಅಕ್ಕಿಮನೆಯ ಪಕ್ಕದ ಹಾದಿಯಲ್ಲಿ, ಸಾಗರಕ್ಕೆ ಹೋಗೋ ಹಾದಿಯ ಪಕ್ಕದಲ್ಲೊಂದು ವೀರಕಲ್ಲುಗಳನ್ನು ಚಿಕ್ಕಂದಿನಲ್ಲೂ ನೋಡುತ್ತಲೇ , ಅವುಗಳಲ್ಲಿನ ಭಿನ್ನತೆಯ ಹಿಂದಿರೋ ಹಲವು ಅರ್ಥಗಳನ್ನು ನಿಧಾನವಾಗಿ ತಿಳಿಯುತ್ತಾ ನಾವೆಲ್ಲಾ ದೊಡ್ಡವರಾಗಿದ್ದು.ಈಗಲೂ ಊರಿಗೆ ಹೋದರೆ ಹಸುಗಳ ಕೋಡು ತಿಕ್ಕಲೋ, ಇನ್ಯಾವುದಕ್ಕೋ ಸಹಾಯಕವಾಗಿ ಗಾಳಿ ಮಳೆಗೆ ಮೈಯೊಡ್ಡಿರುವ ಆ ಕಲ್ಲುಗಳು ಕಾಣುತ್ತವೆ. ತಮ್ಮ ದುಸ್ಥಿತಿಗೆ ಯಾರಿಗೆ ಶಾಪ ಹಾಕಬೇಕೆಂಬುದು ತಿಳಿಯದ ಇತರ ಅಸಂಖ್ಯ ಶಿಲ್ಪಗಳಂತೆ ಇವೂ ಕಾಲನಲ್ಲಿ ತಮ್ಮ ದನಿಯನ್ನು ಬೆಸೆದು ಮೂಕವಾಗಿವೆ.

ಚಿತ್ರಕೃಪೆ:
ಸನಾತನ ಸಮರ್ಥ, ಜಿಗಳೇಮನೆ

Friday, March 8, 2013

ಕನಸುಗಳ ಲೋಕದಲ್ಲಿ-೧

ಕನಸುಗಳ ಲೋಕದಲ್ಲಿ-೧

ಬಣ್ಣ ಬಣ್ಣದ ಬಟ್ಟೆಗಳನ್ನ ನೇತುಹಾಕಿರೋ ನೇಲೆ ಅಥವಾ ಹಗ್ಗದ ತುದಿಯೊಂದು ಸುರುಳಿ ಸುತ್ತಿರೋ ಓಣಿಯೊಂದರೆಡೆ ನುಗ್ಗುತ್ತಿದೆ. ನೂರಾರು ಜನ ಜನ ಚಲಿಸುತ್ತಿರೋ ಆ ಹಗ್ಗದ ದಿಕ್ಕಿನತ್ತಲೇ ಓಡುತ್ತಿದ್ದಾರೆ.ಎಷ್ಟಾಯಿತೋ ಅಷ್ಟೆಂದು ನೇಲೆಗಳಿಂದ ಬಾಚಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬರು ೩ ಜೊತೆ, ೫ ಜೊತೆ ಹೀಗೆಲ್ಲಾ ಬಾಚಿಕೊಂಡು ಕೈಯಲ್ಲಿರೋ ಬಟ್ಟೆಗಳ ವಜೆ ಓಡಲು ಬಿಡದಿದ್ದದೂ ಮುಂದೆ ಸಾಗುತ್ತಿರೋ ಬಟ್ಟೆಗಳನ್ನ ಹಿಡಿಯಲೆಂದು ಎದ್ದು ಬಿದ್ದು ಓಡುತ್ತಿದ್ದಾರೆ.ಓಡುತ್ತಿರೋ  ಆ ಜನರ ವಿರುದ್ದ ದಿಕ್ಕಿನಿಂದ, ನೂರಾರು ಸುಂದರ ಪ್ಯಾಂಟು, ಶರ್ಟುಗಳುಳ್ಳ ಬಟ್ಟೆಯ ಸಾಲಿನ ಮಧ್ಯೆ ಜಾಗ ಮಾಡಿಕೊಂಡು ಒಬ್ಬ ಹೊರಬರುತ್ತಿದ್ದಾನೆ. ಪಕ್ಕದಲ್ಲೇ ಬಟ್ಟೆಯ ಸಾಲು, ಅದಕ್ಕೆಂದೇ ಮುಗಿಬೀಳುತ್ತಿರೋ ಜನರ ಮಧ್ಯೆ ನಗುಮುಖದ ಆತ ಒಂದು ಕೈಯಲ್ಲಿ ಅಡ್ಡಸಾಗೋ ಬಟ್ಟೆಗಳನ್ನು ಸರಿಸುತ್ತಾ ಬಲಗೈ ತೋರುಬೆರಳನ್ನ ಎಡಕ್ಕೂ ಬಲಕ್ಕೂ ಬೇಡವೆಂಬಂತೆ ಆಡಿಸುತ್ತಾ ಓಣಿಯ ಹೊರಗೆ ಬರುತ್ತಿದ್ದಾನೆ.

ಹೀಗೇ ಒಳನುಗ್ಗುತ್ತಿದ್ದ ಬಟ್ಟೆಗಳ ಸಾಲಿನ ಕೊನೆಯ ಪ್ಯಾಂಟು ಓಣಿಯಲ್ಲಿ ಮರೆಯಾಗೋ ಸಮಯದಲ್ಲಿ ದಾರಿಯಲ್ಲಿ ಸಾಗುತ್ತಿದ್ದವನೊಬ್ಬ  ಬಟ್ಟೆಗಳ ಸಾಲಿನತ್ತ ಆಸೆ ಪಟ್ಟು ಅತ್ತ ನುಗ್ಗುತ್ತಾನೆ. ಸ್ವಲ್ಪ ಓಣಿಯೊಳಗೆ ನುಗ್ಗುವಷ್ಟರಲ್ಲಿ ಹೊರಬರುತ್ತಿದ್ದ ವ್ಯಕ್ತಿ ಸಿಗುತ್ತಾನೆ. ನಿರಾಕರಿಸುವಂತಿದ್ದ ಅವನ ಕೈ ತೋರುಬೆರಳ ಎಚ್ಚರಿಕೆ ನಿರಾಕರಿಸಿ ಈತ ಮುಂದೆ ಓಡುತ್ತಾನೆ."ನ್ಯಾಯ ಎಲ್ಲಿದೆ.. " ಅನ್ನೋ ಹಾಡು ಗುನುಗುತ್ತಾ ಆತ ಮರೆಯಾಗುತ್ತಾನೆ. ಸಿಕ್ಕೊಂದು ಪ್ಯಾಂಟೊಂದನ್ನು ಬಾಚಿ ಮುಂದೆ ಓಡುತ್ತಿದ್ದ ಈತನಿಗೆ ಯಾಕೋ ,ಏನೋ ಸರಿಯಿಲವೆಂಬ ಯೋಚನೆ ಮನಕ್ಕೆ ನುಗ್ಗಿತು.ಎಲ್ಲೋ ಆರನೆಯ ಇಂದ್ರಿಯ ಅಪಾಯದ ಘಂಟೆ ಬಾರಿಸಿದಂತೆ. ಮೊದಲೇ ಮುಂದೆ ಸಾಗಿದವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರೆ, ಅವನ ಕೈ ಬೆರಳನ್ನು ಗಮನಿಸಿದ್ದರೆ ಮುಂದೆ ಜರುಗೋ ಘಟನೆಗಳು ಜರುಗುತ್ತಿರಲಿಲ್ಲ. ಈ ಕತೆ ಇರುತ್ತಿರಲಿಲ್ಲ.

ಓಟಕ್ಕೆ ಬ್ರೇಕ್ ಹಾಕಿದ ಬಟ್ಟೆಗಳ ವಿರುದ್ದ ದಿಕ್ಕಿನತ್ತ ಓಡತೊಡಗಿದ. ಬಟ್ಟೆಗಳತ್ತ ಓಡುತ್ತಿದ್ದ ಜನರು, ಬಟ್ಟೆಗಳ ಸಾಲಿನ ಕೊನೆಯ ಬಟ್ಟೆಯೂ ಆ ಓಣಿಯೊಳಗೆ ಮರೆಯಾಯಿತು.ಓಣಿಯಿಂದ ಹೊರಬರುತ್ತಿದ್ದಂತೆಯೇ ಸಮವಸ್ತ್ರ ಧರಿಸಿದ ಸೇವಕಿಯರು ಓಣಿಯತ್ತ ಸಾಗುತ್ತಿದ್ದಂತೆ ಕಂಡರು. ಹೊಸ ಪ್ಯಾಂಟಿನ ಜೀಬಿನಲ್ಲಿದ್ದ ವಜೆಯೆನಿಸೋ ದಾರದ ಉಂಡೆಯನ್ನ, ಅಲ್ಲೇ ನೆಲದ ಮೇಲೆ ಬಿದ್ದಿದ್ದ ಮತ್ತೊಂದು ಶರ್ಟನ್ನ ಅವರ ಕೈಗೆ ಇತ್ತು ಈತ ಹೊರಕ್ಕೆ ಓಡಿದ. ಅಲ್ಲಿ ನೋಡಿದರೆ ದಾರಿಯೊಂದು ಎಡ-ಬಲಕ್ಕೆ ಹೋಗುತ್ತಿತ್ತು. ಎತ್ತ ಸಾಗಬೇಕೆಂದು ತಿಳಿಯದೇ ಎರಡೂ ದಿಕ್ಕಿನತ್ತ ನೋಡಿದ. ಎಡಗಡೆ ನೋಡಿದರೆ ಅತ್ತ ಮುಂದೆ ಸ್ವಲ್ಪ ಜನ ಸಾಗುತ್ತಿದ್ದಂತೆ ಕಂಡಿತು. ಓಣಿಯಲ್ಲಿ ಸಿಕ್ಕ ಬಟ್ಟೆ ಹಾಕಿಕೊಂಡ ಜನರಿರಬೇಕು. ಅತ್ತಲೇ ಓಡತೊಡಗಿದ.

ದಾರಿಯಲ್ಲಿ ಒಬ್ಬ ಟೊಣಪ ಸಿಕ್ಕಿದ. ನೀಲಿ ಪ್ಯಾಂಟು, ಸೂಟು ತೊಟ್ಟಿದ್ದ ಆತನ ಕೈಯಲೇನೂ ಹೊಸ ಬಟ್ಟೆ ಇರಲಿಲ್ಲ. ಅವನನ್ನು ಹಿಂದೆ ಹಾಕಿ ಹಾಗೇ ಮುಂದೆ ಸಾಗಿದಾಗ ಮತ್ತೆ ನಾಲ್ವರು ಸಿಕ್ಕಿದರು. ಅವರದ್ದೂ ಹೊಸ ಹೊಸ ಬಟ್ಟೆಗಳು. ಯಾರ ಕೈಯಲ್ಲೂ ಬಟ್ಟೆಗಳಿರಲಿಲ್ಲ. ಬಹುಷಃ ಇವರೆಲ್ಲಾ ಆ ಓಣಿಯ ಬಟ್ಟೆಗಳನ್ನು ಹಾಕಿ ತಮ್ಮ ಹಳೆ ಬಟ್ಟೆಗಳನ್ನು ಎಲ್ಲೋ ಬಿಟ್ಟಿರಬೇಕು. ಈತ ಅವರನ್ನು ನೋಡಿದಾಗ ನಾಲ್ವರ ಮುಖದಲ್ಲೂ ಮಂದಹಾಸ. ಕೈಯಲ್ಲಿ ಪ್ಯಾಂಟೊಂದನ್ನು ಹಿಡಿದು ಕಕ್ಕಾಬಿಕ್ಕಿಯಾಗಿದ್ದ ಈತ ಅವರಿಗೆ ಕೇಳಿದ ಪ್ರಶ್ನೆಯೊಂದೇ. "ಇಲ್ಲಿಂದ ಹೊರಹೋಗೋದು ಹೇಗೆ ? " ಎಲ್ಲಾ ಮುಂದಕ್ಕೆ ಕೈ ಮಾಡಿದರು. ಹಾಗೇ ಮುಂದಕ್ಕೆ ಓಡಿದ. ಸ್ವಲ್ಪ ತಾಳ್ಮೆಯಿಂದ ಅವರ ಕೈ ನೋಡಿದ್ದರೆ ಅವರು ಮುಂದೆ ತೋರಿಸಿ ಬಲಕ್ಕೆ ತಿರುಗುವಂತೆ ಹೇಳಿದ್ದರೋ ಎಡಕ್ಕೆ ತಿರುಗುವಂತೆ ಹೇಳುತ್ತಿದ್ದರೋ ಗೊತ್ತಾಗುತ್ತಿತ್ತು.

ಹಾಗೇ ಓಡಿದ ಆತ ದಾರಿಯ ಕೊನೆ ತಲುಪಿದ. ಅಲ್ಲಿ ದಾರಿಗೆ ಅಡ್ಡ ಗೋಡೆ. ಎಡ ಬಲಕ್ಕೆ ಒಂದೊಂದು ಬಾಗಿಲು. ಮುಚ್ಚಿದ ಎರಡರಲ್ಲಿ ಯಾವುದರಲ್ಲಿ ಸಾಗಬೇಕೆಂದು ತಿಳಿಯಲಿಲ್ಲ. ಎಡಗಡೆ ಬಾಗಿಲನ್ನು ತೆರೆದು ಒಬ್ಬ ಅತ್ತಿತ್ತ ತಡಕುತ್ತಾ ಬಲಗಡೆ ಬಾಗಿಲತ್ತ ಸಾಗುತ್ತಿದ್ದ. ಆತ ತಡಕುವುದನ್ನು ನೋಡಿದರೆ ಕುರುಡನೇನೋ ಅನಿಸುತ್ತಿತ್ತು. ಇವನ ಹಿಂದಿನಿಂದ ಓಡಿಬಂದ ಒಬ್ಬ ಆ ಕುರುಡನ ಹಿಂದೆ ಬಲಭಾಗದ ಬಾಗಿಲಲ್ಲಿ ಒಳನುಗ್ಗಿದ. ಒಳಗೆ ಇಣುಕಿದ ಈತನಿಗೆ ಕನ್ನಡಿಯೊಂದು ಕಂಡಿತು. ಆ ಕನ್ನಡಿಯತ್ತ ಮುಖ ಮಾಡಿದ್ದ ಕುರುಡ ! ಬಲಬಾಗಿಲು ನಿಧಾನವಾಗಿ ತಾನಾಗೇ ಮುಚ್ಚುತ್ತಲಿತ್ತು. ಅಷ್ಟರಲ್ಲಿ ಹೊರಹೋಗೋ ದಾರಿ ಎಡಬಾಗಿಲಿನಲ್ಲಿ ಎಂಬ ದನಿ ಕೇಳಿಸಿತು. ಎಡಬಾಗಿಲೂ ತೆರೆಯಿತು. ಹಾಗೆಯೇ ಎಡಬಾಗಿಲಿನಲ್ಲಿ ಸಾಗಿದ.

ಅದರಲ್ಲಿ ನೋಡಿದರೆ ಕೊಟ್ಟಿಗೆ. ಅತ್ತಿತ್ತ ಕಟ್ಟಿದ್ದ ದನಗಳು. ಅಷ್ಟೆಲ್ಲಾ ದನಗಳಿದ್ದರೂ ಅದನ್ನು ನೋಡಿಕೊಳ್ಳೋ ಸೇವಕರ್ಯಾರೂ ಕಾಣಲಿಲ್ಲ. ಕೊಟ್ಟಿಗೆಯ ಮಧ್ಯವೇ ಸಾಗಿದಾಗ ಎದುರೆರಡು ಬಾಗಿಲು ಕಂಡವು. ಇವನ ಎದುರಿಗೆ ಇದ್ದ ಬಾಗಿಲು ತೆರೆದಿತ್ತು.ಅದರ ಸ್ವಲ್ಪ ಪಕ್ಕ ಇದ್ದ ಬಾಗಿಲು ಮುಚ್ಚಿತ್ತು. ಅತ್ತಲೇ ಓಡಿದ. ಈತ ಬರುವುದಕ್ಕೂ ಆ ಬಾಗಿಲು ಹಾಕಿ ಮುಖಕ್ಕೆ ಹೊಡೆಯುವುದಕ್ಕೂ ಸರಿ ಆಯಿತು. ಇದರಲ್ಲಿ ಹೊರಗೆ ಹೋಗೋ ಬಾಗಿಲು ಯಾವುದಪ್ಪಾ ಅಂತ ಕೇಳಿದ. ಆಶ್ಚರ್ಯ ಎನ್ನುವಂತೆ ಈತನ ಎದುರಿಗಿದ್ದ ಬಾಗಿಲು ತೆರೆಯಿತು. ಅದರೊಳಗೇ ಸಾಗಿದ. ಹೊರಹೋದರೆ ಸಾಕೆನ್ನೋ ಗಡಿಬಿಡಿಯಲ್ಲಿದ್ದ ಈತ ಪಕ್ಕದಲ್ಲಿ ಅಷ್ಟರಲ್ಲಾಗಲೇ ಅರ್ಧ ತೆರೆದಿದ್ದ ಬಾಗಿಲು ಮುಚ್ಚುತ್ತಿರೋದನ್ನು ಗಮನಿಸಲಿಲ್ಲ.

ಆ ಬಾಗಿಲಿನಿಂದ ಹೊರಬಂದಾಗ ಒಂದು ಸ್ನಾನ ಗೃಹವನ್ನು ಹೊಕ್ಕ. ಅದರಲ್ಲಿ ಮುಲ್ತಾನಿ ಮಿಟ್ಟಿಯಂತೆ ಮೈಗೆಲ್ಲಾ ಮಣ್ಣು ಬಳಿದುಕೊಂಡು ಒಂದಷ್ಟು ಜನ ಮಲಗಿದ್ದರು. ಅದರಲ್ಲಿ ಒಬ್ಬನಿಗೆ ಮಣ್ಣಿನ ಲೇಪ ಬಳಿಯುತ್ತಿದ್ದ ಸೇವಕ ಕಂಡ. ಅವನಲ್ಲಿ ಕೇಳಿದ ಒಂದೇ ಪ್ರಶ್ನೆ " ಹೊರಗೆ ಹೋಗೋದು ಹೇಗೆ ? " ಈ ಪ್ರಶ್ನೆ ಕೇಳುತ್ತಿದ್ದಂತೆ ಎದುರಿಗಿದ್ದ ಹಂಡೆಯ ಪಕ್ಕದಲ್ಲಿದ್ದ ಬಾಗಿಲೊಂದು ತೆರೆಯಿತು. ಆದರೆ ಹಂಡೆ ನೆಲದ ಎತ್ತರದಲ್ಲಿರದಲ್ಲಿರಲಿಲ್ಲ. ಮೂರು ಮೆಟ್ಟಿಲು ಹತ್ತಿದರೆ ಸಿಗುವಂತ ಮತ್ತೊಂದು ಕೋಣೆಯಂತ ಜಾಗ. ಹಂಡೆಯ ಪಕ್ಕದಲ್ಲೇ ಹೊರಗಡೆ ಈಗ ತಾನೇ ತೆಗೆದಂತಿದ್ದ ಬಿಸಿ ಬೂದಿಯ ರಾಶಿ. ಈ ಬೂದಿಯ ಪಕ್ಕದಲ್ಲೇ ಸಾಗಬೇಕಲ್ವೇ ಹೊರಹೋಗಲು ಅಂತ ಈತ ಕೇಳಿದರೆ ಆತ ಅತ್ತಿತ್ತ ತಲೆಯಾಡಿಸುತ್ತಾ ಆ ಬಾಗಿಲಿನ ದಿಕ್ಕಿನತ್ತ ತೋರು ಬೆರಳನ್ನು ತೋರಿಸಿದ. ಈತ ಆ ಮೂರು ಮೆಟ್ಟಿಲು ಹತ್ತಿ ಆ ಬಾಗಿಲು ಮುಚ್ಚೋದರೊಳಗೆ ಒಳಸೇರಿದ. ಆ ಬಾಗಿಲು ಮುಚ್ಚುತ್ತಿದ್ದಂತೆಯೇ ಪಕ್ಕದಲ್ಲಿದ್ದ ಇನ್ನೊಂದು ಬಾಗಿಲು ತೆರೆಯಿತು.

ಆ ಬಾಗಿಲಿನಿಂದ ಹೊರ ಹೊಕ್ಕಾಗ ಸುತ್ತೆಲ್ಲಾ ಬಯಲು. ಹಾಗೇ ಮುಂದೆ ಸಾಗಿದಾಗ ಆ ಬಯಲಿಗೂ ಒಂದು ಬೇಲಿಯಿರೋದು ಕಂಡಿತು. ಆ ಬೇಲಿಗೆ ಮತ್ತೆ ಯಥಾಪ್ರಕಾರ ದೂರದಲ್ಲಿ ಎರಡು ಗೇಟು. ಮುಂದಿದ್ದ ಗೇಟು ತೆರೆದಿತ್ತು. ಈತ ಹೆಜ್ಜೆ ಹಾಕಿದಂತೆಲ್ಲಾ ಆ ಗೇಟು ಮುಚ್ಚುತ್ತಾ ಬರುತ್ತಿತ್ತು.ಬೇಗ ಓಡಿದಷ್ಟೂ ಆ ಗೇಟು ಬೇಗ ಬಂದಾಗುತ್ತಿತ್ತು. ಮನದಲ್ಲಿ ಮತ್ಯಾಕೋ ಅನುಮಾನ. ಒಮ್ಮೆ ಹೆಜ್ಜೆ ಮುಂದಿಡೋ ಬದಲು ಹಿಂದಿಟ್ಟ. ಗೇಟು ಬಂದಾಗುವುದು ನಿಂತಿತು. ಮತ್ತೆರಡು ಹೆಜ್ಜೆ ಹಿಂದಿಟ್ಟ. ಆಶ್ಚರ್ಯ ! ಗೇಟು ಮತ್ತೆ ತೆರೆಯತೊಡಗಿತು..

ಈ ಗೇಟು ತೆರೆದಂತೆ ಮುಚ್ಚುತ್ತಿದ್ದ ಪಕ್ಕದ ಗೇಟನ್ನೂ ಕಂಡನು. ಈ ಗೇಟಿನ ಬಳಿ ಬಂದಾಗ ಅದರ ಮೇಲೆ ಬರದಿದ್ದ ಹೊರಗೆ ಎಂಬ ಬೋರ್ಡೂ ಮತ್ತೊಂದರ ಮೇಲೆ ಬರೆದಿದ್ದ ಒಳಗೆ ಎಂಬ ಬೋರ್ಡೂ ಕಂಡಿತು. ಹೊರ ಹೋಗೋಕೆ ಇದೇ ಗೇಟಲ್ವಾ ಎಂದು ಮನದಲ್ಲಿ ಅಂದುಕೊಳ್ಳುತ್ತಿರುವಾಗಲೇ ಎದುರಿಗಿದ್ದ ಗೇಟು ತೆರೆಯಿತು. ಅದರಲ್ಲಿ ಸಾಗುತ್ತಿದ್ದಂತೆಯೇ ಕೆಳಗಿಳಿಯುತ್ತಿದ್ದ ಮೆಟ್ಟಿಲುಗಳು ಸಿಕ್ಕಿದವು. ಅದರಲ್ಲಿ ಇಳಿಯುತ್ತಿದ್ದಂತೆಯೇ ಬೆನ್ನ ಮೇಲೆ ನೀರು ಬಿದ್ದಂತಹ ಅನುಭವ. ಬಲಗಡೆ ನೋಡಿದರೆ ಒಂದು ನಲ್ಲಿ ಒಡೆದು ಸೋರುತ್ತಿತ್ತು. ಅದನ್ನು ನಿಲ್ಲಿಸಲು ಹೋದಾಗ ಮೈಯೆಲ್ಲಾ ಒದ್ದೆಯಾಯಿತು.

ಯಾಕೋ ಚಳಿ ಆದಂತಾಯ್ತು. ತನ್ನೇ ನೋಡಿಕೊಂಡಾಗ ಒಮ್ಮೆ ಗಾಭರಿ ಆಯ್ತು. ನೋಡಿದರೆ ಇವನ ಕೈಲಿದ್ದ ಹೊಸ ಪ್ಯಾಂಟು, ಇವನು ಹಾಕಿದ್ದ ಹಳೆ ಶರ್ಟು ಎರಡೂ ಮಾಯ ! ಪಕ್ಕನೆ ಯಾರೋ ಹಿಂದಿನಿಂದ ಬಂದು ತಮ್ಮ ಕಬಂದ ಬಾಹುಗಳಲ್ಲಿ ಈತನನ್ನು ಬಂದಿಸಿದ ಅನುಭವ. ನಿನ್ನ ಮೈ ಒದ್ದೆ ಆಯ್ತು. ನಿಯಮ ಮೀರಿ ಓಡಿ ಹೋಗ್ತೀಯಾ ಹಹಹ್ಹಾ ಅಂತ ಇವನನ್ನು ಮತ್ತದೇ ಗೇಟಿನ ಕಡೆ ಹೊತ್ತೊಯ್ಯತೊಡಗಿದ ಇವನನ್ನು ಹಿಡಿದಿದ್ದ ಒಂದು ದೈತ್ಯ ದೇಹಿ. ತಪ್ಪಿಸಿಕೊಳ್ಳಲು ನಡೆಸುತ್ತಿದ್ದ ಇವನ ಕೊಸರಾಟಗಳ್ಯಾವುದೂ ಆ ದೈತ್ಯ ಬಲದೆದುರು ಸಾಗುತ್ತಿರಲಿಲ್ಲ. ಹಾಗೇ ಗೇಟು ದಾಟಿ ಮುಂದೆ ಸಾಗಿ ಎದುರಿಗಿದ್ದ ಸರಳುಗಳೆದುರು ಬಂದು ನಿಂತರು. "ಅತಿ ಆಸೆ ಗತಿ ಕೇಡು" ಎನ್ನೋ ಮಾತು ಪದೇ ಪದೇ ಇವನ ಮನದಲ್ಲಿ ಕಾಡಿ ಕಿವಿಯಲ್ಲೆಲ್ಲಾ "ನೀ ಸೋತೆ, ನಿಯಮ ಮೀರಿ ಓಡೋಗ್ತೀಯ" ಅನ್ನೋ ಅಪಹಾಸ್ಯದ ನಗುವೇ ತುಂಬಿಹೋಯ್ತು..


ಮಹಿಳೆಯರ ದಿನ

ಮಹಿಳೆಯರ ದಿನ..

ಎಪ್ಬಿಯ ಸ್ಟೇಟಸ್ಗಳಲ್ಲಿ ನಮನ, ಗೌರವ ಅಲ್ಲಲ್ಲಿ ಕಾಣುತ್ತಿದೆ. ಶ್ರೀಕಾಂತ್ ಮಂಜುನಾಥ್ ಅವರು ಹೇಳುವಂತೆ ಹದಿನೈದನೇ ಲೋಕ ಬ್ಲಾಗ್ ಲೋಕದಲ್ಲಂತೂ ಇವತ್ತು ಅದರದ್ದೇ ಕಲರವ.

ಸುಮತಿ ದೀಪಾ ಅವರ "ಹೀಗೇ ಸುಮ್ನೆ", ಭಾಗ್ಯ ಭಟ್ಟರ "ಪೆನಾಲ್ಟಿ", ಭದ್ರಿ ಭಾಯಿಯ "ಪರದೆಯ ಹಿಂದೆ" , ಆಜಾದ್ ಭಾಯಿಯ "ನಿನ್ನಿಂದಲೇ",ಅಘನಾಶಿನಿ-ಸಮನ್ವಯ ಭಟ್ಟರ "ಅಪ್ಪ",ಕೊಳಲು- ಡಿ.ಕೆ.ಎಸ್ ಮೂರ್ತಿಗಳ "ಮಹಿಳೆ", ವೆಂಕಣ್ಣನ "ನನ್ನೊಳಗಿನ ಕನಸು",ಅಲೆದಾಡುವ ಕಾಲ ವಿನಾಯಕ ಭಟ್ರ "ಸೂರ್ಯ ಡಿಮ್ಮಾದ"... ಹೀಗೆ ಇವತ್ತು ಓದಿದ ಲೇಖನಗಳಲ್ಲೆಲ್ಲಾ ಹೆಣ್ಣಿನ ಕುರಿತಾದ್ದೇ.. ಒಂದಾದ ಮೇಲೆ ಒಂದು ಓದಿಸಿಕೊಂಡು ಹೋದವು.

ಹೆತ್ತು ಹೊತ್ತು, ತುತ್ತಿತ್ತ ತಾಯಿಗೆ, ಮುತ್ತಂತ ಮಾತುಗಳನ್ನು ಕಲಿಸಿದ ,ಎಲ್ಲರ ತಪ್ಪು ಹೊಟ್ಟೆಗೆ ಹಾಕಿಕೊಂಡು ಸದಾ ಒಳ್ಳೆಯದನ್ನೇ ಬಯಸಿದ ಸ್ತ್ರೀ ದೇವತೆಗಳಿಗೆ ಈ ಮೂಲಕ ಇನ್ನೊಂದು ನಮನ. ಹಳ್ಳಿಯ ರಂಗಮ್ಮ, ಗಂಗಮ್ಮ, ನನ್ನ ಅಜ್ಜಮ್ಮನಿಗೂ ಈ ತರದ ಒಂದು ದಿನವಿದೆ ಅಂತ ತಿಳಿದಿಲ್ಲ.ಒಂದು ದಿನ ಗೌರವಿಸಿ ಉಳಿದ ದಿನಗಳೆಲ್ಲಾ ಕಾಡಿಸೋ ಬದಲು ಒದ್ದಾಡುತ್ತಿರೋ ಆ ಜೀವಗಳಿಗೆ ಪ್ರತಿದಿನವೂ ಇದೇ ತರದ ಗೌರವ ಸಿಗಲಿ.. ಪೇಟೆಯ ಈ ಒಂದು ದಿನದ ಗುಲಾಬಿ ಸಲ್ಲಿಕೆ, ಗಿಪ್ಟ್ ಕೊಟ್ಟು ಹಾಡಿ ಹೊಗಳೋ ಆಚರಣೆ ಹಳ್ಳಿಗೆ ಮುಟ್ಟದಿದ್ದರೂ ಅವರು ಮಾಡಿದ್ದ, ಮಾಡುವ, ಮಾಡೋ ಅಸಂಖ್ಯ ಕೆಲಸಗಳಿಗೆ ಕೃತಜ್ನತಾ ಭಾವವಾದರೂ ಸಿಗಲಿ..

ಸ್ನೇಹಿತೆಯರು, ಅಕ್ಕ-ತಂಗಿಯರು, ಆಂಟಿ, ಅಜ್ಜಿಯಂದಿರಿಗೂ ಎಲ್ಲಾ ಮಹಿಳಾ ದಿನದ ಶುಭಾಶಯಗಳು :-)

Thursday, March 7, 2013

ವರದಹಳ್ಳಿ ಅಂದರೆ..

ನಮ್ಮೂರ ಅಂದರೆ ಸಾಗರದ ಸುತ್ತಮುತ್ತಲಿರೋ ಗೆಳೆಯರಿಗೆಲ್ಲಾ ವರದಳ್ಳಿ/ವದ್ದಳ್ಳಿ/ವರದಹಳ್ಳಿ ಅಂದರೆ ಗೊತ್ತೇ ಇರುತ್ತೆ. ಸಾಗರಕ್ಕೆ ಬಂದವರೆಲ್ಲಾ ಇಲ್ಲಿಗೆ ಬಂದೇ ಬಂದಿರುತ್ತಾರೆ. ಇಲ್ಲಿಗೇ ಅಂತಲೇ ಮಹಾರಾಷ್ಟ್ರದ ಭಕ್ತರೂ ಬರುತ್ತಾರೆ. ಅಂತಹದರಲ್ಲಿ ಇಂತಹ ಕ್ಷೇತ್ರದ ಬಗ್ಗೆ ಬರೆಯುವುದಕ್ಕೆ ಏನು ಉಳಿದಿದೆ ಅಂತ ಸುಮಾರು ಬಾರಿ ಅನಿಸಿತ್ತು. ಆದರೆ ಇಲ್ಲಿಗೆ ಬರದ ಹಲವು ಗೆಳೆಯರು ಇದರ ಬಗ್ಗೆ ಕೇಳುತ್ತಿದ್ದರು.ಅವರಿಗಾಗಿ..

ವರದಹಳ್ಳಿಗೆ ಸಾಗರದಿಂದ ೭ ಕಿ.ಮೀ ದೂರ. ಈಗ ತುಂಬಾ ಬಸ್ಸುಗಳಾಗಿವೆ. ಗಂಟೆಗೊಂದರಂತಾದರೂ ಬಸ್ಸುಗಳು ಸಿಕ್ಕೇ ಸಿಗುತ್ತವೆ. ಸ್ವಂತ ವಾಹನ, ಆಟೋ,ಮಾರುತಿಗಳಲ್ಲೂ ಹೋಗಬಹುದು. ವರದಹಳ್ಳಿಯಲ್ಲಿ ಮುಖ್ಯವಾಗಿ ಇರುವುದು ದೇವಿ ದೇವಸ್ಥಾನ ಮತ್ತು ಶ್ರೀ ಶ್ರೀಧರ ಆಶ್ರಮ.ಸಾಗರದಿಂದ ಹೋಗುವಾಗ ಮೊದಲು ಸಿಗುವುದು ಶ್ರೀಧರ ಆಶ್ರಮ. ಹಾಗಾಗಿ ಅಲ್ಲಿಗೇ ಹೋಗೋಣ.

ನಾನು ಶ್ರೀಧರ ಸ್ವಾಮಿಗಳನ್ನು ನೋಡಿಲ್ಲದಿದ್ದರೂ ನನ್ನ ತಂದೆಯವರಿಂದ, ಅನೇಕ ಹಿರಿಯರಿಂದ ಅವರ ಬಗ್ಗೆ ಕೇಳಿದ್ದೇನೆ. ೬೦ ರ ದಶಕದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಶ್ರೀಧರರು ವರದಳ್ಳಿಯಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿ ತಮ್ಮ ತಪಸ್ಸನ್ನು ಆಚರಿಸುತ್ತಿದ್ದರಂತೆ. ಸರಳ ಜೀವಿಗಳಾದ ಅವರ ಜೀವನಕ್ರಮದಿಂದ, ಉಪದೇಶಗಳಿಂದ ಈ ಭಾಗದ ಜನ ತುಂಬಾ ಪ್ರಭಾವಿತರಾಗಿದ್ದರಂತೆ. ಎಪ್ಪತ್ತರ ದಶಕದಲ್ಲಿ ಅವರ ದೇಹಾಂತ್ಯವಾದ ನಂತರ ಹಂತ ಹಂತವಾಗಿ ಈಗಿರೋ ಆಶ್ರಮ ನಿರ್ಮಾಣವಾಗಿದೆ. ಅಲ್ಲಿನ ಪರಿಸರ ಹೇಗಿದೆ ಅಂತ ಹೇಳೋದಕ್ಕಿಂತ ಕೆಲ ಚಿತ್ರಗಳ ಮೂಲಕವೇ ನಿಮ್ಮನ್ನು ಅಲ್ಲಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ.
Gomukha teertha
ವರದಹಳ್ಳಿಗೆ ಬಂದಾಗ ಮೊದಲು ಸಿಗೋದೇ ಒಂದು ಕೊಳ. ಅದರ ಪಕ್ಕದಲ್ಲಿ ಇರೋ ಗೋಮುಖ ತೀರ್ಥ. ವರ್ಷವಿಡೀ ಬೀಳೋತ್ತಿರೋ ಈ ತೀರ್ಥದಲ್ಲಿ ಅನೇಕ ಔಷಧೀಯ ಗುಣಗಳಿವೆ ಎಂದು ಭಕ್ತರು ನಂಬುತ್ತಾರೆ. ಆಧ್ಯಾತ್ಮದ, ನಂಬಿಕೆಯ ಪ್ರಶ್ನೆ ಏನೇ ಇದ್ದರೂ ಮಲೆನಾಡ ವನಮೂಲಿಕೆಗಳ ನಡುವೆ ಹರಿದು ಬರೋ ಈ ತೀರ್ಥ ಬಿಸಿಲಲ್ಲಿ ದಣಿದು ಬಂದವರ ಕೈ ಕಾಲು/ತಲೆಯ ಮೇಲೆ ಬಿದ್ದಾಗ ಬಂದ ಸುಸ್ತು ಮರೆಸಿ ಮತ್ತೆ ನವೋಲ್ಲಾಸಮೂಡಿಸುವುದಂತೂ  ನಿಜ.

ಹಾಗೇ ತೀರ್ಥದ ಪಕ್ಕದಲ್ಲಿನ ಮೆಟ್ಟಿಲುಗಳಲ್ಲಿ ಮೇಲಕ್ಕೆ ಹತ್ತಿ ಬಂದರೆ ಶ್ರೀಧರ ಸ್ವಾಮಿಗಳು ಕೂತು ತಪಸ್ಸು ಮಾಡುತ್ತಿದ್ದರು ಎನ್ನೋ ಸ್ಥಳ ಸಿಗುತ್ತದೆ.  
Place where shridhara swamiji used to meditate





ಅಲ್ಲಿ ಶ್ರೀಧರ ತೀರ್ಥ ಬೆಟ್ಟದ ತಪ್ಪಲಿಂದ, ಬಂಡೆಯ ಸಂದಿಯಿಂದ ಬಂದು ಬೀಳುವುದು ಕಾಣುತ್ತದೆ.
ಹಾಗೇ ಬಲಕ್ಕೆ ತಿರುಗಿದರೆ ಗುರುಕುಲ ಕಾಣಿಸುತ್ತದೆ. ಗುರುಕುಲದ ಎದುರಿಗಿರೋ ಮೆಟ್ಟಿಲುಗಳಲ್ಲಿ ಮೇಲಕ್ಕೆ ಸಾಗೋಣ



ಹಾಗೆಯೇ ಸುಮಾರು ನೂರು ಮೆಟ್ಟಿಲು ಹತ್ತಿದಾಗ ಬಲಗಡೆ ಸಾಮವೇದ ಗುರುಕುಲ , ಎದುರಿಗೆ ಶ್ರೀಧರರ ಸಮಾಧಿಯಿರೋ ಗುಡಿಯೂ ಸಿಗುತ್ತದೆ. ಅಲ್ಲಿ ಎಷ್ಟು ಹೊತ್ತಾದರೂ ಕೂತು ಮೌನವಾಗಿ ಧ್ಯಾನ ಮಾಡಬಹುದು. ಮಧ್ಯಾಹ್ನ ೧೨:೩೦ ರ ಸುಮಾರಿಗೆ ಅಲ್ಲಿ ಮಹಾಮಂಗಳಾರತಿ ಆಗುತ್ತದೆ. ಆ ಸಮಯದಲ್ಲೇ ಅಲ್ಲಿಗೆ ತಲುಪಿದರೆ ದರ್ಶನ ಭಾಗ್ಯದ ಜೊತೆ, ತೀರ್ಥ ಪ್ರಸಾದವನ್ನೂ ಪಡೆಯಬಹುದು. ಮಧ್ಯಾಹ್ನ ಊಟದ ಸಮಯ ಮತ್ತು ರಾತ್ರೆ ಸಮಯ ಬಿಟ್ಟರೆ ಮತ್ತೆ ಮಧ್ಯಾಹ್ನ ಮೂರು ಘಂಟೆಯಿಂದ ಗರ್ಭಗೃಹದ ಬಾಗಿಲು ತೆಗೆದೇ ಇರುವುದರಿಂದ ಬೆಳಿಗ್ಗೆ ಬಂದವರು ಮತ್ತು ಸಂಜೆ ಹೊತ್ತಿಗೆ ತಲುಪಿದವರೂ ದರ್ಶನ ಪಡೆಯಬಹುದು.  

ಹಾಗೇ ದೇಗುಲದ ಪ್ರದಕ್ಷಿಣೆ ಹಾಕುವಾಗ ಶ್ರೀಧರರ ಸಮಾಧಿ ಕಾಣುತ್ತದೆ.ನೋಡಲನುವಾಗುವಂತೆ ಅದಕ್ಕೊಂದು ಕಿಟಕಿಯಿಟ್ಟಿದ್ದಾರೆ. ಅಲ್ಲಿಗೆ ಬಂದ ಭಕ್ತರು ಆ ಕಿಟಕಿಯಲ್ಲಿ ನಾಣ್ಯಗಳನ್ನು ಹಾಕುವುದು ಒಂದು ಪದ್ದತಿ. ಸಣ್ಣವನಿದ್ದಾಗಿನಿಂದಲೂ ವರದಳ್ಳಿಗೆ ಆಗಾಗ ಹೋಗೋ ನನಗೆ ಆ ದೃಶ್ಯ ಬಾಲ್ಯದ ನೆನಪುಗಳನ್ನು ಮರುಕಳಿಸುತ್ತದೆ. ಅಪ್ಪನಿಂದ ರೂಪಾಯಿ ನಾಣ್ಯವನ್ನು ಪಡೆದು ಅದನ್ನು ಆ ಕಿಟಕಿಯಲ್ಲಿ ಹಾಕುತ್ತಿದ್ದೆವು. ಆ ಕಿಟಕಿಂದ  ಸ್ವಾಮಿಯ ಪಾದದವರೆಗೂ ಇಳಿಜಾರಿನಲ್ಲಿ ಆ ನಾಣ್ಯ ಹೋಗಿ ಬೀಳುವುದನ್ನು ನೋಡುವುದೇ ಒಂದು ಖುಷಿಯಾಗಿತ್ತು. ಅಲ್ಲೇ ಪಕ್ಕದಲ್ಲಿ ಶ್ರೀಧರರ ಜೀವನವನ್ನು ಬಿಂಬಿಸುವ ಅಪರೂಪದ ಕಪ್ಪು ಬಿಳುಪು ಛಾಯಾಚಿತ್ರಗಳ ಸಂಗ್ರಹವಿದೆ.

Samaveda gurukula varadalli


ಅಲ್ಲೊಮ್ಮೆ ನಮಸ್ಕಾರ ಹಾಕಿದ ನಂತರ ಹಾಗೇ ಹೊರಬಂದಾಗ ಕಾಣುವುದು ಸಾಮವೇದ ಗುರುಕುಲ. ನವರಾತ್ರಿಯ ಸಮಯದಲ್ಲಿ ಬಂದರೆ ಇಲ್ಲಿ ಶಾರದಾದೇವಿಯ ಮೂರ್ತಿಯನ್ನಿಟ್ಟು ಅಲಂಕರಿಸಿರುತ್ತಾರೆ. (ಗಣಪತಿ ಹಬ್ಬದಲ್ಲಿ ಗಣಪತಿಯನ್ನು ಇಟ್ಟಂತೆ). 


ಅಲ್ಲೇ ಮರವೊಂದರಲ್ಲಿ ಧರ್ಮ ಧ್ವಜಕ್ಕೆ ದಾರಿ ಎಂಬ ಬೋರ್ಡು ಕಾಣುತ್ತದೆ. ವರದಳ್ಳಿಗೆ ಬಂದವರು, ಕೈ ಕಾಲು ಗಟ್ಟಿ ಇದ್ದವರು ಸಾಮಾನ್ಯವಾಗಿ ಧರ್ಮಧ್ವಜ ನೋಡೇ  ಇರುತ್ತಾರೆ. ಹಾಗೇ ಅತ್ತ ಸಾಗೋಣ.
ಧರ್ಮಧ್ವಜ್ಜಕ್ಕೆ ಸಾಗೋ ದಾರಿಯಿಂದ ಕೆಳಗಿನ ಗುಡಿಯ , ಸುತ್ತಣ ಪರಿಸರದ ವಿಹಂಗಮ ನೋಟವನ್ನು ಸವಿಯಬಹುದು. 

 
Varadalli during one of the celebrations

ಅಂದಹಾಗೆ ಆಶ್ರಮಕ್ಕೆ ಬರೋ ಮೆಟ್ಟಿಲುಗಳ ಬಳಿಯೇ ಚಪ್ಪಲಿಗಳನ್ನು ಬಿಟ್ಟು ಬಂದಿರುತ್ತೇವೆ. ಹಾಗಾಗಿ ಪೇಟೆಯವರಿಗೆ ಧರ್ಮಧ್ವಜದವರೆಗೆ ನಡೆಯುವುದು ಹರಸಾಹಸವೇ ಅನಿಸಬಹುದು ! ಬರಿಗಾಲಲ್ಲಿ ನಡೆಯೋದು ಅಪರೂಪವಾದಾಗ ಸಣ್ಣ ಸಣ್ಣ ಕಲ್ಲುಗಳೂ ಅಕ್ಯುಪಂಕ್ಚರ್ ಚಿಕಿತ್ಸೆಯಂತೆಯೇ ಅನಿಸಬಹುದು! ಹಾಗೆಯೇ ಸುಮಾರು ಒಂದೂವರೆ ಕಿ.ಮೀ ನಡೆಯುತ್ತಿದ್ದಂತೆಯೇ ಅಗೋ ನೋಡಿ ಧರ್ಮಧ್ವಜ ಬಂದೇ ಬಿಟ್ಟಿತು

 ಅಲ್ಲೇ ಪಕ್ಕದಲ್ಲಿ ಶ್ರೀಧರರು ತಪಸ್ಸಿಗೆ ಕೂರುತ್ತಿದ್ದ ಜಾಗ, ಅವರ ಮೂಲ ಆಶ್ರಮಗಳನ್ನೂ ಕಾಣಬಹುದು.
ಇಲ್ಲಿಂದ ಶರಾವತಿ ಹಿನ್ನೀರಿನ, ಮುಳುಗಡೆಯ ದೃಶ್ಯಗಳನ್ನೂ ನೋಡಬಹುದು. ನೀವು "ಅಮೃತ ಘಳಿಗೆ" ಚಿತ್ರದ ಹಾಡುಗಳನ್ನು ನೋಡಿದ್ದರೆ ಈ ಧರ್ಮಧ್ವಜ ನೆನಪಾಗುತ್ತದೆ. ಆ ಚಿತ್ರವನ್ನು ಇಲ್ಲೇ ವರದಳ್ಳಿ ಸುತ್ತಮುತ್ತ ತೆಗೆಯಲಾಗಿದೆ. ಆ ಚಿತ್ರದ ಒಂದು ಪಾತ್ರವಾದ ಆದಿತ್ಯ ಅವರ ಬ್ಲಾಗಿನಲ್ಲಿ ಈಗಾಗಲೇ ತಮ್ಮ ಆ ಮಧುರ ನೆನಪುಗಳ ಬಗ್ಗೆ ಬರೆದಿದ್ದಾರೆ.
Dharma dhwaja


Shridhara Moola ashrama
ಅಲ್ಲಿಂದ ಹಾಗೇ ವರದಳ್ಳಿಯ ಮತ್ತೊಂದು ಆಕರ್ಷಣೆ ದೇವಿ ದೇವಸ್ಥಾನಕ್ಕೆ ಇಳಿದು ಹೋಗಬಹುದು.ಆದರೆ ಈಗ ಅಲ್ಲಲ್ಲಿ ಬೇಲಿ ಹಾಕಿದ್ದಾರಂತೆ. ಹಾಗಾಗಿ ಸ್ಥಳೀಯರ್ಯಾರೂ ಜೊತೆಗಿರದಿದ್ದರೆ ವಾಪಾಸು ಕೆಳಗಿಳಿದು ಬಂದು ರಸ್ತೆಯಲ್ಲಿ ಹೋಗುವುದೇ ಕ್ಷೇಮ.

ದೇವಿಯು ಮೂಕಾಸುರನನ್ನು ಒದ್ದಾಗ ಅವನು ಇಲ್ಲಿ ಬಂದು ಬಿದ್ದನಂತೆ. ಹಾಗಾಗಿ ದೇವಿ ಒದೆದ ಹಳ್ಳಿ "ವದ್ದಳ್ಳಿ" ಅಂತ ನಾಮಕರಣವಾಯಿತೆಂದು ಜನರು ಹೇಳುತ್ತಾರೆ. ಇಲ್ಲಿನ ದರ್ಶನದ ಸಮಯ ಮೂರು ಘಂಟೆ. ಹಾಗಾಗಿ ಇಲ್ಲಿಗೆ ಬರುವವರೆಲ್ಲಾ ಮೊದಲು ಶ್ರೀಧರ ಆಶ್ರಮದ ದರ್ಶನ ಮುಗಿಸಿ ಇಲ್ಲಿಗೆ ಬರುತ್ತಾರೆ. ಇಲ್ಲೇ ಪಕ್ಕದಲ್ಲಿ ರಾಮನ, ಹನುಮನ ಸಣ್ಣ ಗುಡಿಗಳೂ ಇವೆ. ಪಕ್ಕದಲ್ಲಿ ಶ್ರೀಧರ ಸ್ವಾಮಿಗಳ ಬೃಂದಾವನವನ್ನೂ ನೋಡಬಹುದು. ಇದನ್ನು ಗಮನಿಸಿ ನೋಡದಿದ್ದರೆ ದಾರಿಯಲ್ಲಿ ಮರೆತೇ ಹೋಗುತ್ತದೆ ! ಇಲ್ಲಿ ಸಮಾಧಿಗಳು, ಮತ್ತು ಪ್ರತಿಯೊಂದರ ಬಳಿಯೂ ಶಿವಲಿಂಗಗಳಿವೆ.


 
Shridhara swami brundavana

ಅಂದ ಹಾಗೇ ಇಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯಿರುತ್ತದೆ. ನವರಾತ್ರಿ, ದತ್ತ ಜಯಂತಿಗಳು ತುಂಬಾ ವಿಜೃಂಭಣೆಯಿಂದ ಜರುಗುತ್ತವೆ. ನವರಾತ್ರಿ ಸಮಯದ ಶ್ರೀಧರ ಪಾದುಕೆಯ ಪಲ್ಲಕ್ಕಿ, ದತ್ತ ಜಯಂತಿ ಆಚರಣೆಯ ವೇದಿಕೆ ಚಿತ್ರಗಳನ್ನು ಕೆಳಗೆ ಹಾಕಿದ್ದೇನೆ


Sri Shridhara Paduka pallakki

 ಎಷ್ಟೆಲ್ಲಾ ಬರೆದರೂ ಕೆಲವಾದರೂ ಮರೆತೇ , ಬಿಟ್ಟೇ ಹೋಗುತ್ತವೆ. ವಿದ್ಯೆಯನ್ನೇ ಇತ್ತ ಗುರುವಿನ ಬಗ್ಗೆ ಸಮಗ್ರವಾಗಿ ಕೆಲ ಪದಗಳಲ್ಲಿ ಬರೆಯುವುದು, ಚಿತ್ರಗಳಲ್ಲಿ ಸೆರೆ ಹಿಡಿಯುವುದೂ ಸಾಧ್ಯವಿಲ್ಲ. ಅವುಗಳನ್ನೆಲ್ಲಾ ನೀವು ಮುಂದಿನ ಬಾರಿ ಹೋದಾಗ ಸ್ವತಃ ಆನಂದಿಸಿ..

ಮತ್ತೊಮ್ಮೆ ಗುರುವಿನ ಚರಣಗಳಲ್ಲಿ ನಮಸ್ಕರಿಸುತ್ತಾ ವಿರಮಿಸುತ್ತೇನೆ. 


Monday, March 4, 2013

ಸಂಜಯಂತಿಯಲ್ಲೊಂದು ಸುತ್ತು


ಸಂಜಯಂತಿಯಲ್ಲೊಂದು ಸುತ್ತು



ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨ ಕಿ.ಮೀ ಅಂತ. ಅರೆ, ಬನವಾಸಿ ಇಷ್ಟು ಹತ್ರವಾ.. ಹಾಗಾದ್ರೆ ಇವತ್ತು ಅಲ್ಲಿಗೆ ಹೋಗೇ ಊರಿಗೆ ಮರಳ್ಬೇಕು ಅಂದ್ಕೊಂಡೆ. ಆದ್ರೆ  ಮದುವೆ ಊಟ ಮುಗಿಸಿದ ಮೇಲೆ ಸೀದಾ ಸಾಗರದ ಬಸ್ಸು ಹತ್ತಿದ್ದಾಯ್ತು, ಬನವಾಸಿ ಮಿಸ್ಸಾಯ್ತು. ಆದರೆ ಸಿಗಬೇಕೆಂದಿದ್ದದ್ದು ಸಿಕ್ಕೇ ಸಿಗುತ್ತೆ ಅಂತಾರೆ ಹಲವರು. ಅವತ್ತು ಸಂಜೆ ನಾಳೆ ಸಿರಸಿ-ಸಿದ್ದಾಪುರದ ಹತ್ರವಿರೋ ನಾಣಿಕಟ್ಟಕ್ಕೆ ಬಾರೋ ಅಂತ ಅಣ್ಣನ ಬುಲಾವ್ ಬಂತು. ಸರಿ ಅಂತ ಶನಿವಾರ ಹೊರಟ ನನಗೆ ನಾಣೀಕಟ್ಟದಲ್ಲಿ ಇಳೀತಿದ್ದಾಗೆ ಕಂಡ ಬೋರ್ಡು ಬನವಾಸಿ-೨೧ ಕಿ.ಮೀ !! ಯಾಕೋ ಈ ಸಂಜಯಂತಿ ಅತ್ವಾ ಬನವಾಸಿ ತನ್ನ ಬಳಿ ಬಾ ಅಂತ ನನ್ನೇ ಈ ರೀತಿ ಕರೀತಿದ್ಯಾ ಅನುಸ್ತು. ಅಂತೂ ಅವತ್ತು ಮಧ್ಯಾಹ್ನದೊತ್ತಿಗೆ ಬನವಾಸಿಗೆ ಹೋದ್ವಿ, ನಾನು ನನ್ನಣ್ಣ.
ಹನ್ನೊಂದೂವರೆಗೆ ದೇವಸ್ಥಾನ ಬಾಗಿಲು ಅಂದರೊಬ್ರು. ಗರ್ಭಗೃಹ ಬಾಗ್ಲು ಹಾಕಿದ್ರೂ ಹೊರಗಡೆ ಇಂದನಾದ್ರೂ ನೋಡಿ ಬರೋಣ,ಇಷ್ಟು ಹತ್ರ ಬಂದೂ ಬನವಾಸಿ ನೋಡದೇ ಇದ್ರೆ ಸರಿ ಇರಲ್ಲ ಅಂತ ದೇವಸ್ಥಾನದ ಕಡೆ ಹೊರಟ್ವಿ.

ಇತಿಹಾಸ:
ಈಗಿನ ಬನವಾಸಿಯ ಮುಂಚಿನ ಹೆಸರೇ ಸಂಜಯಂತಿ. ಹನ್ನೆರಡನೇ ಶತಮಾನದಲ್ಲಿ ಈಗಿರೋ ಮಧುಕೇಶ್ವರ ದೇವಸ್ಥಾನವನ್ನು ಮೂಲತ: ಮಾಧವನಿಗೆ ಚಾಲುಕ್ಯ ರಾಜ ಕಟ್ಟಿಸಿದನಂತೆ.
ಚಾಲುಕ್ಯರಿಂದ ಸೋಂದಾ ಅರಸರ ತನಕ ಈ ದೇವಸ್ಥಾನ ಮಾರ್ಪಾಟುಗೊಳ್ಳುತ್ತಾ ಬಂದು ಈಗಿನ ಸ್ಥಿತಿಯಲ್ಲಿ ನಿಂತಿದೆಯಂತೆ. ಈ ದೇವಾಲಯದ ಬಗೆಗಿನ ಹೆಚ್ಚಿನ ಇತಿಹಾಸ ಇದೇ ದೇವಸ್ಥಾನದ ಸುತ್ತಮುತ್ತ ಸಿಕ್ಕಿರೋ ೧೨ ಶಾಸನಗಳಿಂದ ಪಡೆಯಬಹುದಂತೆ. ಆರನೇ ಶತಮಾನದಲ್ಲೇ ಬನವಾಸಿಗೆ ಭೇಟಿ ನೀಡಿದ್ದ ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ (630-644) ಬನವಾಸಿಯನ್ನು ಕೊಂಕನಪುಲೋ ಎಂದು ಕರೆದು ಬನವಾಸಿಗೆ ಕೊಂಕಣಪುರ ಎಂದೂ ಹೆಸರು ಬಂದಿತ್ತಂತೆ.
banavasi aane

ದೇವಸ್ಥಾನದ ಪ್ರವೇಶಿಸುತ್ತಿದ್ದ ನಮಗೆ ಮೆಟ್ಟಿಲುಗಳ ಇಕ್ಕೆಲಗಳಲ್ಲಿದ್ದ ಆನೆಗಳು ಸ್ವಾಗತಿಸಿದವು. ಆನೆಗಳ ಸೊಂಡಿಲಗಳು ಸಾಮಾನ್ಯವಾಗಿರದೇ ಅಪ್ಸರೆಯರಿಂದ ಸುತ್ತುವರಿದು ಮತ್ತೊಮ್ಮೆ ಆ ಆನೆಗಳತ್ತಲೇ ನಮ್ಮ ದೃಷ್ಟಿಯನ್ನು ಸೆಳೆದವು. ಅಲ್ಲಿಂದ ಒಳಬರುತ್ತಲೇ ಪೂರ್ವಾಭಿಮುಖವಾಗಿರುವ ದೇಗುಲಕ್ಕೆ ಅಡ್ಡ ನಿಂತ ಧ್ವಜ ಸ್ಥಂಬ ಎದುರಾಯಿತು. ಧ್ವಜ ಸ್ಥಂಭದ ಮೇಲೆ ಎಲ್ಲೆಡೆ ಇರುವಂತೆ ಕೂತಿರೋ ನಂದಿಗೊಮ್ಮೆ ಮನಸ್ಸಲ್ಲೇ ವಂದಿಸಿ ಮುಂದೆ ಬರುವಾಗ ದೇಗುಲಕ್ಕೆ ಅಭಿಮುಖನಾಗಿರೋ ಸ್ವರ್ಗಾಧಿಪತಿ ಇಂದ್ರನೂ ಕಂಡನು.  ಧ್ವಜಸ್ಥಂಭದ ಎಲ್ಲೆಡೆ ಸಾಮಾನ್ಯ. ಆದರೆ ಅದರ ಮುಂದೆ ಕೆಳದಿ,ಇಕ್ಕೇರಿ ಇತ್ಯಾದಿ ದೇವಸ್ಥಾನಗಳಲ್ಲಿ ಇಲ್ಲದ ಇಂದ್ರ ಇಲ್ಲಿ ಇರುವುದರಲ್ಲಿ ಏನೋ ವೈಶಿಷ್ಟ್ಯವಿದೆ ಅನಿಸಿದರೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ.

Indra infront of banavasi temple





ಹಾಗೇ ಮುಂದೆ ಬಂದ ನಾವು ಮೊದಲು ಪ್ರವೇಶಿಸಿದ್ದು ಮಧುಕೇಶ್ವರನ ಸನ್ನಿಧಿಗೆ.ದೇಗುಲ ಪ್ರವೇಶಿಸುವವರನ್ನು ನಮಗಿಂತಲೂ ಎತ್ತರದ ನಂದಿ ಬಾಗಿಲಲ್ಲೇ ಸ್ವಾಗತಿಸುತ್ತಾನೆ. ಹಾಗೇ ಅಕ್ಕಪಕ್ಕದಲ್ಲಿ ಹಲವಾರು ಕುಸುರಿ ಕೆತ್ತನೆಯ ಕಂಬಗಳು. ಪ್ರತೀ ಕಂಬದಲ್ಲಿ , ಸುತ್ತಮುತ್ತಲ ನೆಲದಲ್ಲಿ ಅಲ್ಲಲ್ಲಿ ಬ್ರಾಹ್ಮಿ ಲಿಪಿಯ ಬರಹಗಳನ್ನು ಕಾಣಬಹುದು. ಕೂಲಂಕುಷವಾಗಿ ಪರಿಶೀಲಿಸಿದರೆ ಇಲ್ಲಿರೋ ಹಲವಾರು ಬರಹಗಳು ಬ್ರಾಹ್ಮೀ ಬಲ್ಲವರಿಗೆ, ಇತಿಹಾಸ ಪ್ರಿಯರಿಗೆ  ಕುತೂಹಲಕಾರಿ ಮಾಹಿತಿಗಳನ್ನೊದಗಿಸಬಹುದೇನೋ.



















ಆಶ್ಚರ್ಯವೋ , ನಮ್ಮ ಭಾಗ್ಯವೋ ಎನ್ನುವಂತೆ ಅಂದು (೧೬-೨-೨೦೧೩) ಅಲ್ಲಿ ಶತರುದ್ರ ಸೇವೆ ನಡೆಯುತ್ತಿತ್ತು. ಅದು ಮುಗಿಯೋ ಹೊತ್ತಿಗೆ ನಾವು ದೇವಸ್ಥಾನ ತಲುಪಿದ್ವಿ ! ಚೌಕಾಕಾರದ ಗರ್ಭಗೃಹದಲ್ಲಿ ಬೆಳ್ಳಿಯ ಮುಖವಾಡದಿಂದ ಅಲಂಕೃತನಾದ ಮಧುಕೇಶ್ವರನಿಗೆ ನಮಸ್ಕರಿಸಿದೆವು. ಅಡ್ಡಬಿದ್ದ ನಾವು ಹಾಗೇ ತಲೆಯೆತ್ತಿದಾಗ ಕಂಡಿದ್ದು ಮಧುಕೇಶ್ವರನ ಎದುರಿಗೆ, ಬಲಭಾಗದಲ್ಲಿ(ನಮ್ಮ ಎಡಭಾಗದಲ್ಲಿದ್ದ) ಆಳೇತ್ತರದ ಮಂಟಪ. ಅದಕ್ಕೆ ತ್ರಿಲೋಕ ಮಂಟಪ ಎಂದೂ ಹೆಸರಿದೆಯಂತೆ.  ಇದನ್ನು ೧೬೧೮ ರಲ್ಲಿ ಸ್ಥಾಪಿಸಲಾಯಿತಂತೆ. ಕೆಳಗಡೆ ಮಹಾವಿಷ್ಣುವಿನ ಆಸನ ಆದಿಶೇಷ ಮಂಟಪವನ್ನೂ ಹೊತ್ತಂತೆ ಚಿತ್ರಿಸಲಾಗಿದೆ. ಕೆಳಗಿರುವ ಮತ್ಸ್ಯ, ಅದರ ಮೇಲ್ಗಣ ಆದಿಶೇಷ ಪಾತಾಳಲೋಕವನ್ನು ಪ್ರತಿನಿಧಿಸುತ್ತದೆಯಂತೆ. ಕೆಳಗಡೆ ಎಂಟು ದಿಕ್ಕುಗಳಿಗೆ ಒಂದೆಂಬಂತೆ ಅಷ್ಟಗಜಗಳಿವೆ.ಮಧ್ಯದ್ದು ಭೂಲೋಕ. ಇದರಲ್ಲಿ ಅನೇಕ ರಾಜರ ಚಿತ್ರಗಳು ಭೂಲೋಕವನ್ನು ಪ್ರತಿನಿಧಿಸುತ್ತವೆ.  ಅದರ ಮೇಲಿನದು ಸ್ವರ್ಗಲೋಕ. ಸಪತ್ನೀಕನಾದ ದೇವರಾಜ ಇಂದ್ರ ಇದನ್ನು ಧ್ವನಿಸುತ್ತಾನೆ. ಮಂಟಪದ ಮೇಲ್ಭಾಗದಲ್ಲಿ ಅಷ್ಟದಿಕ್ಪಾಲಕರಾದ ಇಂದ್ರ(ಪೂರ್ವ), ವರುಣ(ಪಶ್ಚಿಮ), ಕುಬೇರ, ಯಮ, ಅಗ್ನಿ(ಆಗ್ನೇಯ),ನಿರುತಿ, ಈಶಾನ, ವಾಯು ಗಳೂ ವಿರಾಜಮಾನರಾಗಿದ್ದಾರೆ. ಈ ಮಂಟಪಕ್ಕೆ ಪ್ರತೀ ಹುಣ್ಣಿಮೆಯ ದಿನ ಪೂಜೆಯಂತೆ.

ಆ ಮಂಟಪದ ವೈಶಿಷ್ಟ್ಯತೆಯನ್ನು ಕೇಳುತ್ತಿದ್ದಂತೆಯೇ ಅಲ್ಲಿನ ಅರ್ಚಕರು ನಮ್ಮನ್ನು ಇಲ್ಲಿನ ವಿಶೇಷತೆಗಳ ಬಗ್ಗೆ ಹೇಳುತ್ತೇನೆ ಬನ್ನಿ ಎಂದು ಮಧುಕೇಶ್ವರನ ಎಡಭಾಗದಲ್ಲಿದ್ದ ಪಾರ್ವತಿ ದೇವಿಯ ಗುಡಿಗೆ ಕರೆದುಕೊಂಡು ಹೋದರು. ತಾಯಿ ಪಾರ್ವತಿಗೆ ನಮಸ್ಕರಿಸುತ್ತಿದ್ದಂತೆಯೇ ಅಲ್ಲಿಂದ ನಂದಿಯನ್ನು ನೋಡಿ ಎಂದರು. ಮಧುಕೇಶ್ವರನ ಎದುರಿಗಿರುವ ನಂದಿಯ ಒಂದು ಕಣ್ಣು ಪಾರ್ವತಿ ದೇವಿಯ ಎದುರಿಗೆ ನಿಂತರೆ ಕಾಣುತ್ತದೆ ! ಹಾಗಾಗಿ ನಂದಿಯ ಒಂದು ಕಣ್ಣಿನಿಂದ ದೇವಿಯನ್ನೂ ಕಾಯುತ್ತಿರುತ್ತಾನೆ ಎಂಬ ಪ್ರತೀತಿಯಂತೆ !. ಕೈಮುಗಿದು ಮಧುಕೇಶ್ವರನ ದೇಗುಲದತ್ತ ಹೆಜ್ಜೆ ಹಾಕುವಾಗ ಒಂದು ಶಿವಲಿಂಗ ಸಿಗುತ್ತದೆ. ಇದಕ್ಕೆ ಚಂಡಿಕೇಶ್ವರ ಎಂದು ಹೆಸರು. ಚಂಡಿಕೇಶ್ವರನಿಗೆ ಹಾಗೇ ನಮಸ್ಕರಿಸಿದರೆ ಮುಟ್ಟುವುದಿಲ್ಲವಂತೆ!. ಆ ದೇವನಿಗೆ ಚಪ್ಪಾಳೆ ಹೊಡೆದು ನಮಸ್ಕರಿಸಬೇಕು. ಚಪ್ಪಾಳೆ ಹೊಡೆದು ಚಂಡಿಕೇಶ್ವರನಿಗೆ ನಮಸ್ಕರಿಸಿ ಹಾಗೇ ಮಧುಕೇಶ್ವರನ ಗುಡಿಯ ಎಡಭಾಗದಲ್ಲಿನ ಗುಡಿಯತ್ತ ಬಂದೆವು.

ಹಾಗೇ ಬರುವಾಗ ಅಲ್ಲಿನ ಗೋಡೆಯ ಮೇಲೆ ಗಂಧವನ್ನು ಲೇಪಿಸಿದ್ದ ಕಡಲೆಯನ್ನು ತಿನ್ನುತ್ತಿರೋ ಕಡಲೆಮಾರುತಿ ಮತ್ತು ಕಬ್ಬು ತಿನ್ನೋ ಮಾರುತಿಯನ್ನು ತೋರಿಸಿದರು. ಅವು ಎಷ್ಟು ಸಣ್ಣ ಇದೆಯೆಂದರೆ ಉಳಿದಿರೋ ದೊಡ್ಡ ವಿಗ್ರಹಗಳ ಮಧ್ಯ ಅವು ಗೊತ್ತಾಗುವುದೇ ಇಲ್ಲ. ಭಟ್ಟರು ತೋರಿಸದಿದ್ದರೆ ಹಾಗೆರಡು ಮಾರುತಿಗಳು ಬನವಾಸಿಯಲ್ಲಿ ಇವೆ ಎಂಬುದೇ ನಮಗೆ ತಿಳಿಯುತ್ತಿರಲಿಲ್ಲ. ಹಾಗೆಯೇ ಮುಂದೆ ಬಂದಾಗ ಪಾಳುಬಿದ್ದ ವೀರಭದ್ರನ ಗುಡಿಯನ್ನು ಹೊಕ್ಕೆವು. ಅಲ್ಲಿ ಒಂದು ಶಿವಲಿಂಗವಿದೆಯಷ್ಟೆ.

ಅಲ್ಲೇ ೧೬೦೮ರಲ್ಲಿ ತಯಾರಾದ ರಥದ ಬಗ್ಗೆ ಮತ್ತು ಅದನ್ನು ಎಳೆಯುವ ಹಗ್ಗದ ಬಗ್ಗೆ ತಿಳಿದೆವು. ಆ ರಥ ಸುಮಾರಷ್ಟು ದೊಡ್ಡದೇ ಇದೆ. ಬನವಾಸಿಯ ಸುತ್ತಮುತ್ತಲ ಊರುಗಳಲ್ಲಿ ಕಷ್ಟದ ಕೆಲಸ ಅನ್ನುವುದಕ್ಕೆ ಬನವಾಸಿ ರಥ ಎಳೆದಂಗೆ ಅನ್ನೋ ಮಾತೇ ಇದೆಯಂತೆ ! ಆದರೆ ಆ ದಪ್ಪನೇ ರಥದ ಹಗ್ಗ ೪೦೦೦ ಜನ ಎಳೆಯುವಷ್ಟು ದಪ್ಪಗಿದೆ ಎಂಬುದು ಸ್ವಲ್ಪ ಅತಿರಂಜಿತ ಎನಿಸಿದರೂ ಅದರ ದಪ್ಪ ೪೦೦೦ ಅಲ್ಲದಿದ್ದರೂ ೪೦೦ ಜನ ಎಳೆದರೂ ತುಂಡಾಗದಂತೆ ಕಂಡಿದ್ದು ನಿಜ. ಪ್ರಪಂಚದಲ್ಲಿ ಎಲ್ಲೂ ಇಲ್ಲದ ಒಂದು ಕಲ್ಲಿನ ಕಲ್ಲು ಮಂಟಪ ಇಲ್ಲೇ ಹತ್ತಿರದಲ್ಲಿ ಇದೆ ಅಂದರು ಭಟ್ಟರು.ಅದೆಲ್ಲಿದೆ ಎಂದು ಕೇಳುವಷ್ಟರಲ್ಲಿ ಅದು ಇಲ್ಲಿಂದ ಒಂದು ಕಿಲೋಮೀಟರ್ ದೂರ ಎಂದಷ್ಟೇ ಹೇಳಿ ಹೊರಟುಹೋದರು. ಅದೆಲ್ಲಿದೆ ಎಂದು ತಿಳಿಯುವ ಆಸೆಗೆ ಸ್ಥಳೀಯರನ್ನು ಕೇಳಬೇಕಷ್ಟೆ.

ಅಲ್ಲಿಂದ ಹೊರಬರುತ್ತಿದ್ದಂತೆ ಇಡೀ ದೇಶದಲ್ಲಿನ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿಕ್ಕಾಗದಿದ್ದವರು ಬನವಾಸಿಗೆ ಬಂದರೆ ಸಾಕೆಂಬ ಪ್ರತೀತಿ ಇದೆ. ಇಲ್ಲೇ ಸುತ್ತ ಒಂದು ಪ್ರದಕ್ಷಿಣೆ ಹಾಕಿ, ದೇಶದೆಲ್ಲೆಡೆಯ ಈಶ್ವರರು, ದೇವರು ಸಿಗುತ್ತಾರೆ ಅಂದರು ಭಟ್ಟರು. ಹಾಗೇ ಪ್ರದಕ್ಷಿಣೆ ಹಾಕಿದೆವು. ಅಲ್ಲೆಲ್ಲಾ ಮೂರ್ತಿಗಳು, ಅವುಗಳಿಗೊಂದು ಗೂಡಂತ ಮಂಟಪ, ಕೆಲವು ಚಿಕ್ಕ ಗುಡಿಗಳೂ ಕಂಡವು. ಮೊದಲು ಕಂಡದ್ದು
ಅಮೃತೇಶ್ವರ.ಆಮೇಲೆ ಯಮ, ಕೇದಾರೇಶ್ವರ, ಚಿಂತಾಮಣಿ ಗಣಪತಿ, ನಿರರುತಿ ಮುನಿ(ಇದರ ಬಗ್ಗೆ ವಿವರಣೆ ಗೊತ್ತಿಲ್ಲ), ಲಕ್ಷ್ಮಿ ನರಸಿಂಹ(ಉಗ್ರ ನರಸಿಂಹನ ಶಾಂತರೂಪ), ದುಂಡಿರಾಜ ಗಣಪತಿ, ರಾಮೇಶ್ವರ, ವರುಣ, ವೆಂಕಟರಮಣ, ಈ ಭಾಗಕ್ಕೆ ಅಪರೂಪವೆನಿಸೋ ಅಮೃತಶಿಲೆಯ ಶ್ರೀರಾಮ,ಉಮಾಮಹೇಶ್ವರ, ಬಸವಲಿಂಗೇಶ್ವರ,ವಾಯು, ಸೂರ್ಯನಾರಾಯಣ, ಅರ್ಧಗಣಪತಿಗೆ ನಮಸ್ಕರಿಸಿದೆವು. ಅರ್ಧಗಣಪತಿ ಇಲ್ಲಿನ ಮತ್ತೊಂದು ವಿಶೇಷತೆ. ಹೆಸರೇ ಹೇಳುವಂತೆ ಗಣಪತಿಯನ್ನು ಸೀದಾ ಮಧ್ಯಕ್ಕೆ ಸೀಳಿದಂತೆ ಬಲಭಾಗ ಮಾತ್ರ ಇಲ್ಲಿದೆ ! ಎಡಭಾಗ ಗೋಕರ್ಣದಲ್ಲಿದೆಯಂತೆ.

ಅದಾದ ನಂತರ ಪರಶುರಾಮ, ಆದಿಶೇಷ, ಕೇಶವ, ಕುಬೇರರನ್ನೂ ಕಂಡೆವು. ಕುಬೇರನ ದಿಕ್ಕಾದ ಉತ್ತರಕ್ಕಿರುವ ಪ್ರವೇಶದ್ವಾರವನ್ನು ಈಗ ಮುಚ್ಚಲಾಗಿದೆ. ದೇಗುಲದ ಒಂದು ಸುತ್ತಿನ ಪ್ರದಕ್ಷಿಣೆಯ ನಂತರ ಅದರ ಹೊರಭಾಗದ ವಾಸ್ತುಶಿಲ್ಪದ ಬಗ್ಗೆ ಕಣ್ಣಾಡಿಸಿದೆವು. ಈ ಮಧುಕೇಶ್ವರನ ದೇಗುಲಕ್ಕೆ ಒಂದು ನವರಂಗವಿದೆ. ಅದಕ್ಕೆ ಮೂರು ಪ್ರವೇಶದ್ವಾರಗಳು. ಎದುರಿನ ದ್ವಾರದಲ್ಲಿ ನಂದಿ ಸಿಕ್ಕರೆ ಪಕ್ಕದ ದ್ವಾರಗಳು ಮಹಿಷಮರ್ಧಿನಿ,ಗಣೇಶ, ವೀರಭದ್ರರ ಗುಡಿಗಳಿಂದ ಬರುವಂತವು. ಇಲ್ಲಿನ ಶಿಲ್ಪಗಳು ಕಲ್ಯಾಣರ ಚಾಲುಕ್ಯ್ರರ ಶೈಲಿಯಲ್ಲಿದೆಯಂತೆ. ನವರಂಗದ ಮುಂಭಾಗದ ಪ್ರವೇಶದ್ವಾರದಲ್ಲಿ ಆದಿಮಾಧವ ಮತ್ತು ಕಾರ್ತೀಕೇಯರೂ ಇದ್ದಾರೆ. ಈದೇಗುಲದ ಶಿಖರ ವಿಜಯನಗರ-ಸೋಂದಾ ಶೈಲಿಯದು.ಸುಖನಾಸಿ ಕದಂಬ-ನಾಗರ ಶೈಲಿಯಲ್ಲಿದ್ದು ಪಿರಮಿಡ್ ತರ ಮೇಲಕ್ಕೇಳುತ್ತದೆ. ಇಲ್ಲೆಲ್ಲಾ ನಂದಿ, ದಶಾವತಾರ, ದ್ವಾದಶಾದಿತ್ಯರು, ದಿಕ್ಪಾಲಕರು, ನಾಗಬಂಧಗಳನ್ನು ಕಾಣಬಹುದು.

ದೇವಾಲಯದಿಂದ ಹೊರಬಂದ ಮೇಲೆ ಹತ್ತಿರದಲ್ಲೇ ಆದಿ ಮಧುಕೇಶ್ವರ, ಆದಿ ಕದಂಬೇಶ್ವರ, ಅಲ್ಲಮ ಪ್ರಭು ದೇವಾಲಯಗಳಿವೆ ಅಂತ ತಿಳಿದೆವು. ಸರಿ, ಇಲ್ಲಿಯವರೆಗೆ ಬಂದ ಮೇಲೆ ಅದನ್ನೂ ನೋಡಿದರಾಯ್ತೆಂದು ಹೊರಟೆವು. ಹತ್ತಿರದಲ್ಲೇ ಪಂಪವನ ಎಂಬುದಿದೆ. ದೇವಸ್ಥಾನದ ಹಿಂದಿನಿಂದ ಹೋಗೋ ರಸ್ತೆಯಲ್ಲಿ ಹೋಗಿ ಮೊದಲ ತಿರುವಿನಲ್ಲಿ ಕೆಳಕ್ಕಿಳಿದು ಸಾಗಿದರೆ ಸಿಗುವುದೇ ಆದಿಕವಿ ಪಂಪ ಉದ್ಯಾನವನ. ಇಲ್ಲಿ ನವಗ್ರಹ ಸಸ್ಯಗಳನ್ನು, ಅನೇಕ ಔಷಧೀಯ ಮರಗಳನ್ನೂ ಬೆಳೆಸಲಾಗಿದೆ. ಅಲ್ಲಿರೋ ಸಿಮೆಂಟ್ ದಾರಿಯಲ್ಲಿ ಸಾಗಿದರೆ ಮೊದಲು ಸಿಗುವುದು ಆದಿ ಮಧುಕೇಶ್ವರ. ಅದಕ್ಕೆ ಸುತ್ತ ಬೇಲಿ ಹಾಕಿ ಸುಭದ್ರ ವ್ಯವಸ್ಥೆ ಮಾಡಿದ್ದರೂ ಕಲ್ಲಿನ ದೇಗುಲಕ್ಕೆ ಸುಣ್ಣ ಬಳಿದ ಪರಿ ಯಾಕೋ ಇಷ್ಟವಾಗಲಿಲ್ಲ. ಪಕ್ಕದಲ್ಲೇ ದುರ್ಗಾದೇವಿಯ ಗುಡಿಯಿದೆ. ಪಾಳುಬಿದ್ದಂತಿರೋ  ಪಂಪವನ, ಪಾಚಿಗಟ್ಟಿದ ಕೆರೆ ಅನಾಥ ಭಾವ ಸಾರುವಂತಿತ್ತು. ಅಲ್ಲಿ ಕುರಿ ಮೇಯಿಸುತ್ತಿದ್ದ ಅಜ್ಜಿ, ಪೇರಲೆ ಹಣ್ಣು ಕೊಯ್ಯಲು ಬಂದಿದ್ದ ಹುಡುಗನನ್ನು ಬಿಟ್ಟರೆ ನಾನು ಮತ್ತು ನನ್ನಣ್ಣ ಇಬ್ಬರೆ. ಈ ಉದ್ಯಾನ ಪಾಳು ಬಿದ್ದಿರುವುದರಿಂದ ಜನ ಬರುತ್ತಿಲ್ಲವೋ ಅಥವಾ ಜನ ಬರುತ್ತಿಲ್ಲವೆಂದು ಇದು ಪಾಳುಬಿದ್ದಿದೆಯೋ ತಿಳಿಯಲಿಲ್ಲ :-(

Unknown plant in pampavana

ಪಂಪವನದಿಂದ ಹೊರಬಂದಾಗ ಅದರ ಎಡಭಾಗದಲ್ಲಿ  ಪಂಪವನದ ಬಲಭಾಗದಲ್ಲಿ ಪೇಟೆ ಕಡೆ ಹೋಗೋ ರಸ್ತೆ ಕಂಡಿತು.ಅದರಲ್ಲಿ ಹೋದಾಗ ವಸ್ತು ಸಂಗ್ರಹಾಲಯ ಎಂಬೋ ಬೋರ್ಡು ಕಂಡಿತು. ಆದರೆ ಹತ್ತಿರ ಹೋದಾಗ ಅದರ ಗೇಟಿಗೇ ಬಾಗಿಲು.  ಅಲ್ಲೇ ಪಕ್ಕದಲ್ಲಿ ಜೀರ್ಣೋದ್ದಾರಕ್ಕೆ ರೆಡಿಯಾದಂತೆ ಪ್ಲಾಸ್ಟಿಕ್ ಕೊಟ್ಟೆಗಳನ್ನು ಹೊದ್ದ ದೇಗುಲವೊಂದಿತ್ತು. ಅದು ಆದಿ ಕದಂಬೇಶ್ವರನೋ, ಅಲ್ಲಮ ಪ್ರಭುವೋ ಅಥವಾ ಈಗಷ್ಟೇ ತಲೆ ಎತ್ತುತ್ತಿರೋ ಹೊಸ ದೇವರೋ ಎಂಬ ವಿಷಯ ಅದನ್ನು ಮುಚ್ಚಿದ್ದ ಪ್ಲಾಸ್ಟಿಕ್ ಕವರುಗಳ ಒಳಗೇ ಮುಚ್ಚಿಹೋಗಿತ್ತು. ನೀವು ಮುಂದಿನ ಬಾರಿ ಹೋದಾಗ ಇವುಗಳನ್ನೂ ನೋಡಲು ಪ್ರಯತ್ನಿಸಬಹುದು.

ಬನವಾಸಿಯ ಬಗ್ಗೆ:
ದೇಗುಲದ ಎದುರಿಗೆ ೧೫ ರೂ ಪಾರ್ಕಿಂಗ್ ಚಾರ್ಜು, ಇಲ್ಲಿ ೨ ಪೆಟ್ರೋಲ್ ಪಂಪುಗಳು, ವಸತಿಗೃಹಗಳು ಇವೆ. ಹಾಗಾಗಿ ವಾಹನ್ದಲ್ಲಿ ಹೋಗೋರಿಗೆ ಸಮಸ್ಯೆಯಾಗದು. ಸಿರಸಿಯಿಂದ ಬೇಕಷ್ಟು ಬಸ್ಸುಗಳೂ ಇವೆ.



ತಲುಪುವ ಬಗೆ:
ಸಿರಸಿಯಿಂದ : ೨೩ ಕಿ.ಮೀ. ಅರ್ಧಘಂಟೆಯ ಪಯಣ
ಸಾಗರದಿಂದ: ಸಿರಸಿ-ಬನವಾಸಿ.ಒಂದೂಮುಕ್ಕಾಲು ಘಂಟೆ ಪಯಣ.
  ಸಿರಸಿಯ ಮಾರ್ಗದಲ್ಲೇ ಸಿಗುವ ನಾಣಿಕಟ್ಟಾದಲ್ಲೆ ಬಲಕ್ಕೆ ತಿರುಗಿದರೆ ಹರೀಶಿಯವರೆಗೆ ಹೋಗುವುದು.(ನಾಣಿಕಟ್ಟಾ-ಹರೀಶಿ ೮ ಕಿ.ಮೀ). ಅಲ್ಲಿಂದ ಬಲಕ್ಕೆ ಹೋದರೆ ಗುಡ್ನಾಪುರ, ಚಿಕ್ಕ ದ್ಯಾವಸಿ, ದ್ಯಾವಸಿ, ಬನವಾಸಿ. ಆದರೆ ಈ ಮಾರ್ಗದಲ್ಲಿ ಒಂದೋ ಎರಡೋ ಬಸ್ಸುಗಳಿವೆ. ವಾಹನದಲ್ಲಿ ಹೋಗೋರಾದರೆ ಹೋಗಬಹುದು. ಈ ಮಾರ್ಗದಲ್ಲಿ ಹೋದರೆ ಇಲ್ಲಿನ ಪ್ರಸಿದ್ದ ಗುಡ್ನಾಪುರದ ಈಶ್ವರ ದೇಗುಲವನ್ನೂ ನೋಡಬಹುದು.
ಸಾಗರದಿಂದ ಸೊರಬದ ಮೂಲಕವೂ ಬನವಾಸಿಗೆ ಹೋಗಬಹುದು.