Friday, October 28, 2011

ಯಾರಿವನು -೨


ಮಂದಹಾಸದ ಮೊಗದಿ ಒಲ್ಲೆನೆಂದನು ಬಾಲ
ಮುಂದೆ ಬರುವಾಘಾತ ನೋಡೆನೆಂದುಸುರಿ ಶಶಿ
ಮೋಡದಲಿ ಮರೆಯಾದ ಆ ಊರ ಜನರಂತೆ
ಮನೆಸೇರಿ ದನಕರು, ನಿರ್ಜನವು ರಸ್ತೆ
ಬೇಡಿದವು ಹೆಂಗರುಳು ಆ ದೇವಿಯತ್ತೆ|೪|

ಯಾರು ಬೇಡಿದರೇನು, ಹರಿವ ಕಣ್ಣೀರೇನು?
ಅದಕಿಹುದೆ ಭಾವನೆ? ಅರಿಯುವುದೆ ವೇದನೆ?
ಯಮನ ಗಾಂಭೀರ್ಯದಲಿ ಬಂದಿಹನು ವ್ಯಾಘ್ರ
ಎದುರು ಕುಳಿತಿಹ ನರನ ಬಲಿಗಯ್ಯೆ ಛಿದ್ರ|೫|

ಮತ್ತೊಮ್ಮೆ ಮುಗುಳುನಗೆ ಬೀರಿ ಆ ಎಳೆಯೋಗಿ
ಏನು ಮಗು ಬಂದೆಯಾ? ಕೂರಿಲ್ಲಿ ಅಂದಿಹನು
ಇಂದೇನು ಅಪವಾದ, ಕೂತಿತದು ಮಗುವಂತೆ
ತಾಯ ಮಡಿಲಲಿ ಮಲುಗೊ ಹಸುಗೂಸಿನಂತೆ
ನಿದ್ರಿಸಿತು ಅವನ ಜೊತೆ ಗೆಳೆಕಾರನಂತೆ|೬|

ಬೆಳಗಾಗಲೆದ್ದಿಹರು ಬಾಗಿಲನು ತೆರೆದಿಹರು
ಅಚ್ಚರಿಯ ನೋಡತಲೆ ಅಡ್ಡಡ್ಡ ಬಿದ್ದಿಹರು
ಒಕ್ಕೊರಲ ಕೋರಿಕೆ ಇಲ್ಲೆ ಇರು ಸ್ವಾಮಿ
ಇರಲಾರೆ ನಾನಿಲ್ಲಿ ಹೊರಟಿಹೆನು ಉತ್ತರಕೆ
ಎಂದು ನಡೆದನು ಚಿತ್ತ ನೆಟ್ಟಮರನಾಥಕ್ಕೆ|೭|


(ದೆಹಲಿಯ ಅಕ್ಷರಧಾಮ ದೇವಾಲಯದಲ್ಲಿ ಕಂಡ ಸ್ವಾಮಿ ಅಗ್ನಿ ನಾರಾಯಣರ ಬಗೆಗಿನ "ನೀಲಕಂಠ ಯಾತ್ರಾ" ಎಂಬ ಚಿತ್ರವೇ ಇದಕ್ಕೆ ಸ್ಪೂರ್ತಿ..
 ಬರೆಯುವುದಾದರೆ ಬಹಳುಂಟು
ಮಹಿಮರ ಚರಿತೆ, ಹಾಡದ ಕವಿತೆ
ಭವ್ಯಭಾರತದೇನಿದೆ ಕೊರತೆ..)

ಯಾರಿವನು ಸುಂದರ

ಯಾರಿವನು ಸುಂದರ
ಊರ ಹೊರಗಿನ ಕಟ್ಟೆಯ ಮೇಲೆ ವಾಸ
ಮುಳುಗುತಿಹ ರವಿ ಜೊತೆಗೆ ಶಾಲೆಯಿಂ ಮಗು ಮನೆಗೆ
ಮರಳುತಿರೆ ಧ್ಯಾನಿಸಿಹ ನೋಡಿವನು ವಿಧಿಯರಿಯೆ||
, ನೋಡೋಕೆ ಚಂದಿರಆ ರಾತ್ರಿ ಬರುವನಲ್ಲಿಗೆ ಒಂದು ವ್ಯಾಘ್ರ
ಎಂಟೆದೆ ಭಂಟರೂ ಮನೆ ಹೊರಗೆ ಹೊರಡರು
ಇದುನರಿಯದೂರಿಗೆ ದೂರಿಂದ ಬಂದಿಹೆಯ
ಕಟ್ಟೆ ನೀ ತ್ಯಜಿಸದಿರೆ ಪರಿಣಾಮ ಉಗ್ರ||
ಚಂದಿರನು ಅಲ್ಲಲ್ಲ
ಮರುಳಾಗಿ ಬಂದರು ನೆರೆಮಠದ ಪಾಲಕರು
ಎಂಥ ಕಾಂತಿಯೋ ಯೋಗಿ
ನಮ್ಮ ಮಠದಾತಿಥ್ಯ
(ಇನ್ನೂ ಇದೆ )
,ಇವನ ಮುಖದಲೆ ಇಹನು, ಸ್ವೀಕರಿಸು ಮಹಸ್ವಾಮಿ, ಈ ಸ್ಥಳವು ತರವಲ್ಲ||

Monday, October 24, 2011

ಕರೆಂಟಿಲ್ಲದೇ

ಕರೆಂಟಿಲ್ಲದೇ ತಳಮಳಗೊಂಡಿದೆ ಅರಿಯದಂತೆ ಮನವು
ಗೀತೆಯೆನ್ನಲೋ ಭೀತಿಯನ್ನಲೋ ಅಥವಾ ಭಾವ ಸೆಳವೋ||
ಹಾಲುಕ್ಕಿದೆಯಾ ನೋಡುವಾಗಲೇ ಆರಿದೆಯಾ ದೀಪ
ಮತ್ತೊಂದನ್ನು ಹಚ್ಚುವವರೆಗೆ ತಡೆಯುವೆಯಾ ತಾಪ
ಚೆಲ್ಲಿದ ಹಾಲಿನ ಕಲೆಯೊರೆಸುವುದು ಅಮ್ಮನಿಗೆ ಕೋಪ
ಇಷ್ಟು ಗೋಳ ನಾ ಹೇಳಿದ ಮೇಲೂ ನಿನಗನಿಸದೆ ಪಾಪ
ಅಯ್ಯೋ ಕರ್ಮವೆ ,ಉಕ್ಕಿದೆಯಲ್ಲೋ ನಿನಗೆ ಮತ್ತೆ ಶಾಪ||1||

ಅಪರೂಪಕ್ಕೆ ಅಮ್ಮಿಟ್ಟಿದ್ಲು ಮಿಕ್ಸೀಲಿಡ್ಲಿಗೆ ರುಬ್ಬೋಕೆ
ಕೈಕೊಟ್ಯಲ್ಲೋ,ಹಾಳಾಯ್ತಲ್ಲೊ, ನಾಳೆ ಮತ್ತೆ ಚಿತ್ರಾನ್ನ
ಇಡ್ಲೀ ತಿನ್ನೋ ಆಸೆ ಅಂದ್ರೆ ರುಬ್ಬೋ ಕಲ್ಲು ಕೊಡ್ತಾರೆ
ಅದ್ರಲ್ಲರ್ದ ಮುಗ್ಸೋದ್ರೊಳಗೆ ಕಾಣ್ತಾವೆ ಎಲ್ಲಾ ತಾರೆ
ತಿನ್ಮೋಕ್ಮಾತ್ರ ಕೆಲ್ಸಕ್ಕಿಲ್ಲ ಅಂತ ಬೇರೆ ಅವಮಾನ
ಅಪ್ರೂಪದ ತಿಂಡೀನೂ ಇಲ್ಲ ಈಗ್ಲಾದ್ರೂ ಸಂತೋಷಾನ?||2|

ಯಂಗಳ ಚಿತ್ರದುರ್ಗ ಟ್ರಿಪ್: ಭಾಗ -೨

ಚಿತ್ರದುರ್ಗದಲ್ಲಿ single step ಗುಡ್ಡ ಒಂದಿದ್ದು. ಅಂದ್ರೆ ಒಂದು ಸಲಕ್ಕೆ ಒಂದು ಪಾದ ಇಡಕೆ ಮಾತ್ರ ಜಾಗ..ಹಂಗೇ ಇಟ್ಕಂಡು ಹತ್ಕಂಡೋಗಕ್ಕು ಹೇಳಿದ್ದಿದ್ದ ಶಿಶಿರನಪ್ಪ. ಆದಿ, ಗೌತು ಫ್ರೆಂಡು "ಬಂಡೆಕವಿ" ನೂ ಕೋಟೇಲಿ ಭಾರಿ ನೋಡದಿದೆ ಹೇಳಿದ್ದ." ಸರಿ ಹೇಳಿ ಚಂದವಳ್ಳಿಯ ಚೆಂದ ನೋಡಾದ ಮೇಲೆ ನಂಗ ಹೊಂಟಿದ್ದು "ಚಿತ್ರದುರ್ಗದ ಕಲ್ಲಿನ ಕೋಟೆ, ಸಿಡಿಲಿಗೂ ಜಗ್ಗದ ಉಕ್ಕಿನ ಕೋಟೆ.." ಹೇಳೋ ಅದ್ಭುತ ಹಾಡಿನ ಸ್ಪಿರಿಟ್, ನಾಗರಹಾವು ರಾಮಚಾರಿ, ಚಾಮಯ್ಯ ಮೇಷ್ಟ್ರು.. ಹಿಂಗೆ ಸುಮಾರು ಎಫೆಕ್ಟುಗಳನ್ನ ಹೊತ್ಕಂಡಿದ್ದ ಏಳು ಸುತ್ತಿನ ದುರ್ಗದ ಕೋಟೆಗೆ.


ಅದನ್ನೀಗ ಪ್ರವಾಸೋದ್ಯಮ ಇಲಾಖೆಯವ್ವು ವಹಿಸ್ಕಂಡು ಸುತ್ತ ಬೇಲಿ, ಒಳಗೆಲ್ಲ ಲೈಟಿಂಗು, ಸುಮಾರಷ್ಟು ಜೀರ‍್ಣೋದ್ದಾರ, ಮಾಹಿತಿ ಫಲಕ , ಮಧ್ಯೆ ಎಲ್ಲಾದ್ರೂ ಸಿಕ್ಕಾಕ್ಕಂಡವರ್ನ ತಡೆಯೋ ತರ ಅಲ್ಲಲ್ಲಿ ಕಾವಲಿನವ್ರು ಹಿಂಗೆ ಸುಮಾರಷ್ಟು ಒಳ್ಳೇ ಕೆಲ್ಸ ಮಾಡಿದ್ದ, ಮಾಡ್ತಾ ಇದ್ದ. ಆದ್ರೂ ಬೇರೆ ಕಡೆಗೆಲ್ಲಾ ಹೋಲಿಸಿದ್ರೆ ಟಿಕೇಟ್ ದರ ಸುಲಿಗೆ ಅನಿಸ್ಲೆ.. ನಮ್ಮವ್ವು ಅಪರೂಪಕ್ಕಾದ್ರೂ ಎಂತಾರೂ ಒಳ್ಳೆ ಕೆಲ್ಸ ಮಾಡಿದ್ರೆ ಭೇಷ್ ಹೇಳ್ದೆ ಇರಕ್ಕೆ ಮನ್ಸು ಬತ್ತಲೆ ಅಲ್ದಾ? ಅದಕ್ಕೆ ಇದ್ನೆಲ್ಲ ಸ್ವಲ್ಪ ಕೊರ್ಯಕ್ಕಾತು.. ನಿಂಗಕ್ಕೆ ದುರ್ಗದ ದುರ್ಗಮ ಕೋಟಿಗೆ ಸ್ವಾಗತ, ಚೀವ್ ಚೀವ್ ಅಂದಂಗಾತು. ನೋಡಿದ್ರೆ ಅಳಿಲು. ಗೋಡೆ ಒಳಗಿಂದ ಇನ್ನೊಂದು ತಲೆ ಹೊರಗಾಕ್ತು, ನಾಗರಹಾವ್ನ ಮೇಲೆ.. ಅಲ್ಲಲ್ಲ ಅದ್ರ ವಿಗ್ರಹದ ಮೇಲೊಂದು ಕುತ್ಕಂಡಿತ್ತು.. ಕೊನಿಗೆ ಎಲ್ಲ ಕಡಿಗೂ ನಾ ಇದ್ದಿ ಹೇಳಿ ತಲೆ ಹಾಕಕ್ಕೆ ಹಿಡ್ದ. ವೈಲ್ಡ ಲೈಫು ಫೋಟೋ ಮಸ್ತ್ ತೆಗ್ಯೋ ಶಿಶಿರಂಗೆ ಒಳ್ಳೇ ಹಬ್ಬ :-) ಸರಿ, ಹೇಳಿ ಒಳಗ್ಬಂದ್ಯ. ಅಲ್ಲಿ ಎಂತೆತ ಇದ್ದು ದುರ್ಗದಲ್ಲಿ ಹೇಳಿ ಒಂದು ಬೋರ್ಡು.. ಒಟ್ಟು ಇಪ್ಪತ್ತಾರು ಜಾಗ ನೋಡ ಅಂತದ್ದು !!! ಅದಕ್ಕೆ ಹೋಗ ದಾರಿ ಹೇಳಿ ದಾರೀನೂ ಕೊಟ್ಟಿದ್ದ.. ಅಲ್ಲಿಂದ ಮೂರು ದಾರಿ, ಯಡಕ್ಕೆ, ಬಲಕ್ಕೆ, ಮೇಲಕ್ಕೆ !! :-)ನಂಗ ಎಡಗಡೆ ದಾರೀಲಿ ಹೊಂಟ್ಯ. ಅಲ್ಲಿ ಮೊದ್ಲು ಸಿಕ್ಕಿದು ಒಂದು viewpoint. ಒಂದಲ್ಲ, ಅಲ್ಲಿರದೆಲ್ಲಾ viewpoint ಗಳೇ :-). ಕೋಟೆಯಿಂದ ಕೆಳಗಿರೋ ಕಂದಕ, ಸುತ್ತಿ ಸುತ್ತಿ ಬರೋ ಕೋಟೆ, ಆ ಕಡೆ ಗುಡ್ಡದಲ್ಲಿ "ಗಾಳಿ ತಡೆಯವ್ನೆ ಇದ್ದಿ ನಾ ತೆಪ್ಪಗಿದ್ದಿ ಇಲ್ಲಿ, ಚಿಲ್ರೆ ಗುಡ್ಡ ಹತ್ತಿ ಕೊಚ್ಕತ್ಯಲ್ಲ ಮಾಣಿ.." ಹೇಳಂಗಿದ್ದ ಗಾಳಿಯಂತ್ರಗಳು .. ಹಿಂಗೆ ಅಲ್ಲಿನ ದೃಶ್ಯ ಎಷ್ಟು ಚೆನ್ನಾಗಿ ಕಾಣ್ತು ಹೇಳದನ್ನು ಅಲ್ಲಿ ಹೋಗೇ ನೋಡಕ್ಕು.. ಅಷ್ಟು ಸೂಪರ್.. , ಆಷ್ಟು ತುದಿಗೆ ನಡ್ಯಡ ಮಾರಾಯ. ಇತ್ಲಗೆ ಬಾ. ನೀ ಏನಾರೂ ಜಾರಿ ಮೇಲೋದ್ರೆ ನಂಗ ಎಲ್ಲ ಒಳಗೋಗದಾಕ್ತು ಹೇಳಿ ಕೂಗದೆ ಆಗ್ತಿತ್ತು ಒಬ್ರಿಗೊಬ್ರು..

ಆಮೇಲೆ ಸಿಕ್ಕಿದ್ದು ಬನಶಂಕರಿ ದೇವಸ್ಥಾನ. ಕಲ್ಬಂಡೆ ಕೆಳಗಡೆ ಕಲ್ಮೂತ್ರಿಗಳು. ಚೆನಾಗಿದ್ದು. ದುರ್ಗ ಹತ್ತಕ್ಕೊಂಟಿದ್ಯ. ಒಳ್ಳೇದಾಗ್ಲಿ ಯಂಗಕ್ಕೆಲ್ಲ ಹೇಳ ತರ ಒಂದು ನಮಸ್ಕಾರ ಹೊಡ್ದು ಮುಂದೆ ಹೊಂಟ್ಯ. ಅಲ್ಲಿ ಸಿಕ್ಕಿದ್ದು ಗಾರೆ ಅರೆಯೋ ಕಲ್ಲು. ಯಂತರನೇ ಅದನ್ನ ನೋಡ್ದೇ ಇದ್ದವ್ರಿಗೆ ಹೇಳಿ ಅದ್ರ ಚಿತ್ರ ಹಾಕಿದ್ದಿ ನೋಡಿ. ಆಮೇಲೆ ಸಿಕ್ಕಿದ್ದು ಮದ್ದು ಅರೆಯೋ ಕಲ್ಲು. ಕೋವಿ(ಬಂದೂಕು), ಪಿರಂಗಿಗಳಿಗೆಲ್ಲಾ ಮದ್ದು ಪುಡಿ ಬೇಕಾಗ್ತಿಗ್ತಲ, ಅದ್ನ ಅರೆಯಕ್ಕೆ ಹೇಳಿ ಇದ್ದಿದ್ದಡ ಅದು. ನಾಲ್ಕು ಮೂಲೇಲಿ ನಾಲ್ಕು ಭರ್ಜರಿ ತಿರುಗ್ಸೋ ಕಲ್ಲು. ಅದ್ರ ಮಧ್ಯ ಪುಡಿ ಮಾಡದನ್ನ ಹಾಕಿ ಆ ಕಲ್ಲು ತಿರುಗ್ಸಿದ್ರೆ ಕೆಳಗಡೆ ಪುಡಿ ಬೀಳ್ತಿತ್ತಡ. ಅದ್ನ ಪ್ರಾಣಿಗಳ ಕೈಲಿ ಅತ್ವಾ ಮನುಷ್ಯರ ಕೈಲಿ ಎಳಸ್ತಿದ್ವಡ. ಇಷ್ಟೆಲ್ಲಾ ಯಂಗೆಂಗೆ ಗೊತ್ತಾತು ಅಂದ್ರಾ? ಅಲ್ಲೇ ಫಲಕ ಹಾಕಿದ್ದ ಮಾರ್ರೆ :-) :-)ಅಲ್ಲಿ ಇದ್ದಿದ್ದು ಅಷ್ಟೆ. ಬೆಟ್ಟದ ಮೇಲೆ ಒಂದು ಸಣ್ಣ ದಾರಿ ಕಾಣ್ತಿತ್ತು. ಆದ್ರೆ ಅದೆಲ್ಲಿಗೆ ಕರ್ಕಂಡೋಕ್ತು ಹೇಳಿ ಮ್ಯಾಪಲ್ಲಿರ್ಲೆ. ಹಂಗಾಗಿ ಬಂದ ದಾರೀಲಿ ವಾಪಾಸ್ ಬಂದ್ಯ.

ಮುಂಚೆ ಮೂರು ದಾರಿ, ಮೇಲ್ಗಡೆ ಇನ್ನೊಂದಾರಿ ಹೋಗ್ತು ಹೇಳಿದ್ನಲ.ಅದ್ರಲ್ಲಿ ಮೇಲಕ್ಕತ್ತಕೆ ಶುರು ಮಾಡಿದ್ಯ. ಅಲ್ಲಿ ಮತ್ತೆ ಸಿಕ್ಕಿದ್ದು ಭರ್ಜರಿ ಬಾಗ್ಲು. ಈ ಕೋಟೆಗೆ ಏಳು ಸುತ್ತಿನ ಕೋಟೆ ಹೇಳೆ ಹೆಸ್ರು. ಒಂದೊಂದು ಪ್ರವೇಶ ಸ್ವಾರ ಸಿಕ್ಕಿದಾಗ್ಲೂ ಒಂದೊಂದು ಸುತ್ತು ಮುಗುತ್ತು ಹೇಳಿ ಲೆಕ್ಕಾಚಾರ. ಅಷ್ಟೊತ್ಗೆ ಅಲ್ಲೊಂದು ಎಣ್ಣೆ ಹೊಂಡ ಹೇಳಿ ಸಿಕ್ಕಿತ್ತು. ಅದ್ರಲ್ಲಿರದು ನೀರೇಯ. ಮುಂಚೆ ಎಂತಾರೂ ಶೇಖರಣೆ ಮಾಡ್ತಿದ್ವೇನ. ಈಗ ಮಳೆ ನೀರು ತುಂಬ್ಕಂಡಿದ್ದಿಕ್ಕು.ಅದ್ರ ಪಕ್ಕದಲ್ಲೇ ಇನ್ನೊಂದು ಗುಹೆ ತರ. 


ಅದ್ರಲ್ಲೊಂದು ಸಣ್ಣ ದಾರಿ.. ಎಂಥೋ ಕಂಡು ಹಿಡಿದಂಗಾತು ಹೇಳ್ಕಂಡು ಮುಂದೆ ಹೋದ್ರೆ, ಅದು ಶಣ್ಣ ಆಗಿ, ಆಗಿ ಮುಚ್ಚೇ ಹೋಗಿತ್ತು..ಒಂದಾನೊಂದು ಕಾಲದಲ್ಲಿ ಅಲ್ಲಿಂದ ಎಲ್ಲಿಗಾರೂ ಹೋಗ್ತಿತ್ತೇನೋ.. ಆದ್ರೆ ಅಲ್ಲಿ ಕತೆ ಹೇಳಕ್ಕೆ ಯಾರೂ ಇರ್ಲೆ.
ನಂಬದಿಗೂ ಮುಚ್ಚಿರೋ ಗುಹೆ ತೋರ್ಸಿ ಇದು ಕಾಶಿಗೆ ಹೋಗ್ತಿತ್ತಡ ಅಂತ ಕಥೆ ಹೇಳದಿಲ್ಯ ಹಂಗೆ.


 ಅಲ್ಲೇ ಮುಂದೆ ಬರಕಿದ್ರೆ ರೇಖಾಚಿತ್ರಗಳು ಅಂತ ಒಂದು ಫಲಕ ಇತ್ತು. ಆದ್ರೆ ಅಲ್ಲಿ ಬಂಡೆ ಮೇಲೆ ಎಂತ ರೇಖೆನೂ ಸರಿ ಕಾಣ್ತಿರ್ಲೆ.. ಎಲ್ಲ ಅಳ್ಸಳ್ಸಿ ಹೋದಂಗಾಗಿತ್ತು.. ರೇಖನೂ ಇಲ್ಲ, ಚಿತ್ರನೂ ಇಲ್ಲೆ. ಮುಂದೋಗನ ಬರ್ರ ಅಂದ ಫ್ರೆಂಡು.. ಸುಮಾರೊತ್ತು ಹುಡ್ಕಿದ ಮೇಲೆ ಎದ್ರಿನ ಬಂಡೆ ಮೇಲೆ ಭಾರತ, ಆಮೆ ಹಿಂಗೆ ಸುಮಾರು ಆಕಾರ ಕಾಣಕ್ಕಿಡುತ್ತು. ಮೇಲಿರೋ ಬಂಡೆ ಮಲ್ಕಂಡಿರೋ ಮನುಷ್ಯನ ತರ, ಮೊಸಳೆ ತರ ಕಾಣಕ್ಕಿಡುತ್ತು.. ಇಲ್ಲಿರೋ ಎಲ್ಲ ಬಂಡೇನೂ ಒಂದೊಂದು ಆಕಾರ ಕಾಣಕ್ಕಿಡಿತು, ಇಡೀ ದಿನ ಆದ್ರೂ ನೋಡಿ ಮುಗಿತಲ್ಲೆ ಕೊನಿಗೆ ಹೇಳಿ ಮುಂದೆ ಹೊಂಟ್ಯ.


ಅಲ್ಲಿ ದ್ವಾರ ಅಂದ್ರೆ ಸುಮ್ನೆ ಬಾಗ್ಲಲ್ಲ.. ಸುಮಾರು ಏಳೆಂಟು ಅಡಿ ಉದ್ದದ ಚಾವಣಿ. ಅದ್ನ ದಾಟ್ಕಂಡು ಮುಂದೆ ಹೋಯಕ್ಕು. ಅಲ್ಲಿ ಹುಲಿ ಹಸು ಆಟಕ್ಕೆ ಹೇಳಿ ಕೆತ್ತಿದ ಮಣೆ ಕಾಣುಸ್ತು. ಹುಲಿ ಹಸು ಆಟದ ಮಣೆ ನಮ್ಮ ಕೆಳದಿ ಕೋಟೇಲಿ ನೊಡಿದ್ದಿ ನಾನು.ಆ ಕಾಲ್ದ ಸುಮಾರು ಎಲ್ಲ ಕೋಟೇಲೂ ಈ ಆಟ, ಜೊತೆಗೆ ಇನ್ಯಾವುದಾದ್ರೂ ಮಣೆ ಕಾಣ್ತು..ಶಿಲ್ಪಿಗಳು, ಕೆಲಸದ್ವ್ರು ರಾತ್ರೆ ಬೇಜಾರು ಕಳೆಯಕ್ಕೆ ಆಡ್ತಿದ್ವಡ ಅದ್ನ. ಸುಮಾರು ದೇವ್ರ ವಿಗ್ರಹ, ಆಂಜನೇಯ, ಹುಲಿ, ನವಿಲು, ಆನೆ ಹಿಂಗೆ ಸುಮಾರು ಪ್ರಾಣಿ ಪಕ್ಷಿ ಆಕಾರ ಎಲ್ಲ ಕೆತ್ತಿದ್ದ. ಅಲ್ಲಿಂದ ಮುಂದೆ ಒಂದು ವಿನಾಯಕ ಸ್ವಾಮಿ ದೇವಸ್ಥಾನ. ಅಲ್ಲಿ ಪಕ್ಕದಲ್ಲಿ ಇನ್ನೊಂದು ದಾರಿ ಇತ್ತು. ದೇವಸ್ಥಾನ ಪ್ರದಕ್ಷಿಣೆ ಹಾಕ ತರ. ಅಲ್ಲಿ ಎಂತಿದ್ದು ಹೇಳಿ ನೋಡಕ್ಕೆ ಹೋದ್ಯ ನಾನು, ಆದರ್ಶ.. ಅಂತ ತಪ್ಪು ನಿಂಗ ಮಾಡಡಿ ಮತ್ತೆ. ಅದು ಜೋಡಿಗಳ hotspot. ದುರ್ಗದಲ್ಲಿ ಹಿಂಗೆ ಮರೆಯಾಗಿರೋ, ಹೋಗಕ್ಕೆ ಕಷ್ಟ ಆಗಿರೋ ಜಾಗ್ದಲ್ಲೆಲ್ಲಾ ಸುಮಾರು ಕಾಣ್ತಿರೋ ಇಂಥ ದೃಶ್ಯಗಳು.. suicide spot ಗಳಿರೋ ತರ lovers spot ಇದ್ರೆ ತಪ್ಪೆಂತಾ ಅಂತ ಅವ್ರು ಕೇಳದ್ರೊಳಗೆ ನಂಗ ಜಾಗ ಖಾಲಿ ಮಾಡಿದ್ಯ. ಅಲ್ಲಿ cuuting edge technologies ಅಂತ ಒಂದು ಫಲಕ !!! ನೀವು ಅಂದ್ಕಂಡಗೆ ಅಲ್ಲ ಮತ್ತೆ :-) ಆ ರೀತಿಯ ಬೃಹತ್ ಕಲ್ಲುಗಳ ಮೇಲೆ ಹೆಂಗೆಲ್ಲಾ ಚಿತ್ತಾರ ಮೂಡಿಸಿದ ಹೇಳದನ್ನ ವಿವರಿಸೋ ಫಲಕ ಅದು :-)

 ಹಂಗೆ ನೇರ ಹೋಗ್ತಿದ್ದಂಗೆ ಅಲ್ಲಿ ಮತ್ತೆ ಮೂರು ದಾರಿ. ಎಡಕ್ಕೆ , ಬಲ್ಲಕ್ಕೆ, ಮೇಲಕ್ಕೆ. ಬಲಗಡೇದ್ರಲ್ಲಿ ಹೋದ್ಯ. ಅಲ್ಲಿ ಏಕನಾಥೇಶ್ವರಿ ದೇವಸ್ಥಾನ. ಚೆನ್ನಾಗಿದ್ದು. ಅದ್ರ ಮೇಲಕ್ಕೆ ಹತ್ತೋ ಮೆಟ್ಲು ಸಿಕ್ತು. ಅಲ್ಲಿ ಹತ್ತಿ ಹೋದ್ರೆ ಯಂಗ ಹತ್ತಿ ಬಂದ ದಾರಿ, ಆಚಿಗಿನ ಬೆಟ್ಟ , ಹಿಂಗೆ ಚೆನ್ನಾಗಿ ಕಾಣ್ತು. ಅದ್ರ ಪಕ್ಕ ಮತ್ತೊಂದು ಗಣಪತಿ ದೇವಸ್ಥಾನ. ಅದ್ರ ಮೇಲ್ಗಡೆ ಹೋಗ ದಾರಿ ಕಂಡಂಗೆ ಕಾಣ್ತು. ಅದನ್ನೂ ಮುಚ್ಚಿದ್ದ ಈಗ.
ಅಲ್ಲಿಂದ ಸ್ವಲ್ಪ ಹಿಂದೆ ಬಂದ್ರೆ ಮತ್ತೆ ಧ್ವಜ ಸ್ಥಂಬ. ಪಕ್ಕದಲ್ಲೇ ಒಂದು ಅಗಸೇ ಬಾಗ್ಲು. ಕಳ್ಳರನ್ನ, ದ್ರೋಹಿಗಳ್ನ ಸಿಗ್ದು ಅಗಸೇ ಬಾಗ್ಲಿಗೆ ನೇತಾಕ್ತಿದ್ದ ಹೇಳಿ ಕೇಳ್ಲ್ಯಾ? ಆ ತರದ್ದು.. ಮೊದ್ಲು ನೋಡ್ದಾಗ ನಾನು ಇದು ತುಲಾಭಾರಕ್ಕೆ ಹೇಳಿ ಮಾಡ್ಸಿದ್ದನೋ ಅಂತ ಅಂದ್ಕಡಿದ್ದಿ.. ಜೋಕಾಲಿಗೆ ಅಂತನೂ ಕೆಲವರು ಅಂದ್ಕಂಡಿಕ್ಕು.. ನಂಗ ಹತ್ತೂವರೆ ಹೊತ್ಗೆ ಹತ್ತಕ್ಕೆ ಶುರು ಮಾಡಿದ್ಯ. ಆದ್ರೂ ಬಿಸ್ಲು, ಜೊತೆಗೆ ದುರ್ಗದ ಶೆಖೆ ಬೇರೆ, ಜೊತಿಗೆ ಬೆಟ್ಟ ಹತ್ತದು.. ಬೆವರು ಅಂದ್ರೆ ನೀರು ಹರ್ದಂಗೆ ಹರ್ಯಕ್ಕೆ ಶುರು ಆಗಿರ್ತು ಅಷ್ಟು ಹೊತ್ತಿಗೆ. ಏಕನಾಥೇಶ್ವರಿ ದೇವಸ್ಥಾನದೈಂದ ವಾಪಸ್ ಬರೋ ಹೊತ್ಗೆ ಅಲ್ಲೊಂದು ಪುಷ್ಕರಿಣಿ. ಅಷ್ಟು ಮೇಲೆ ಹತ್ಕಂಬಂದವ್ಕೆ ಬೇಕಾದ್ರೆ ಹೇಳಾಗಿಕ್ಕು ಪಕ್ಕದಲ್ಲೊಂದು ಕ್ಯಾಂಟೀನು !!!. ಮೇಲ್ಗಡೆ ನೋಡ್ಕಂಡು ಬರಕಿದ್ರೆ ಕ್ಯಾಂಟೀನಿನ ಎಡ್ಗಡೆ ಹೋಪನ ಹೇಳಿ ಮತ್ತೆ ಹತ್ತಕ್ಕೆ ಶುರು ಮಾಡಿದ್ಯ.

 ಅಲ್ಲಿ ಸಿಕ್ಕಿದ್ದು ಟಂಕಸಾಲೆ ಅಂದ್ರ ನಾಣ್ಯ ಮುದ್ರಣ ಮಾಡ ಜಾಗ ಮತ್ತೆ ಪಾಳೇಗಾರರ ಕೊಠಡಿಗಳು. ಅವಾಗಿನ ಕಾಲದ್ದು. ಅದ್ಕೆ ಚಾವಣಿ ಹೇಳದೆಂತೂ ಇಲ್ಲೆ ಈಗ. ಹಂಗಾಗಿ ಬಿಸ್ಲು ಮಳೆಗೆ ಹಾಳಾಗ್ತ ಬಿದ್ಗಂಡಿದ್ದು ಅದು. ಆಗಿನ ಕಾಲದ ಗೋಡೆ ನೋಡಕ್ಕೆ ಸಿಗ್ತು ಅಲ್ಲಿ ಹೋದ್ರೆ. ಅಲ್ಲೊಂದು ಮಿನಿ ಪುಷ್ಕರಿಣಿನೂ ಇದ್ದು.. ದುರ್ಗದಲ್ಲಿ ಆಶ್ಚರ್ಯ ಆಗದು ಅಂದ್ರೆ ಅಷ್ಟು ಎತ್ರದಲ್ಲೂ ಪುಷ್ಕರಣಿಗಳು,ಹೊಂಡಗಳು ಇದ್ದ. ಅದ್ರಲ್ಲಿ ನೀರೂ ಇದ್ದು !!! ಹಂಗೇ ಮುಂದೆ ಬಂದ್ಯ. ಅಲ್ಲಿ ಅಕ್ಕತಂಗಿಯರ ಹೊಂಡ ಹೇಳಿ ಸಿಗ್ತು. ಅಲ್ಲಿಂದ ಮತ್ತೆ ೩ ದಾರಿ. ಅದ್ರಲ್ಲಿ ಬಲ್ಗಡೆ ಮೇಲಕ್ಕೆ ಹೋದ್ಯ. ಅಲ್ಲಿ ಆಗಿನ ಕಾಲದ ಸಭಾಮಂಟಪ ಸಿಗ್ತು. ಮಂಟಪ ಅಂದ್ರೆ, ಚಪ್ರ ಹಾಕಿರದು ಅಲ್ಲ. ಭರ್ಜರಿ ಕಲ್ಲುಗಳ ಮಧ್ಯೆ ಇರ ಜಾಗ. ಆದ್ರೂ ಒಂದು ಮಿನಿ ವೇದಿಕೆ ಮಾಡ ಅಷ್ಟು ಜಾಗ ಇದ್ದು ಅಲ್ಲಿ. ಯಂಗಳ ಪೈಮರಿ ಶಾಲೆ ವಾರ್ಷಿಕೋತ್ಸವದ ವೇದಿಕೆ ಇರ್ತಲ. ಸುಮಾರು ಅಷ್ಟು ದೊಡ್ಡದು!!
ಅದ್ನ ನೋಡಿಕ್ಯಂಡು ಕೆಳಗಿಳಿಯಕ್ಕಿದ್ರೆ ಒಂದು ಪಾಳು ಬಿದ್ದ ದೇವಸ್ಥಾನ. ಅದ್ರಲ್ಲಿ ಒಡ್ಕಂಬಿದ್ದಿದ್ದ ನಂದಿ, ಮುರ್ದಿದ್ದ ಮೂರ್ತಿ ಇತ್ತು. ಬೇರೆ ಎಂತೂ ಕಾಣ್ತಿರ್ಲೆ. ನಂದಿ ಇದ್ದಿದ್ದಕ್ಕೆ ಈಶ್ವರ ದೇವಸ್ಥಾನ ಆಗಿಕ್ಕು ಅಂದ್ಕಂಡಿ. ಅಲ್ಲಿಂದ ಕೆಳಗಿಳಿದು ಮತ್ತೆ ಅಕ್ಕತಂಗಿಯರ ಕೊಳದ ದಡಕ್ಕೆ ಬಂದ್ಯ. ಅಲ್ಲಿ ಕೆಳಗಡೆ ಕಾಶಿ ವಿಶ್ವನಾಥ ದೇವಸ್ಥಾನ, ಹನುಮಂತ ದೇವಸ್ಥಾನ ಇದ್ದು.
ಹಂಗೇ ಕೆಳಗಿಳಿಗ್ಯಕ್ಕಿದ್ರೆ ತಣ್ಣೀರು ದೋಣಿ ಹೇಳಿ ಸಿಗ್ತು. ಕೂಲ್ ಕ್ಯಾಪ್ಟನ್ ದೋಣಿ ನೆನಸ್ಕಂಡ್ರಾ ಮತ್ತೆ? :-) ಇಲ್ಲಿ ಬಂಡೆ ಕೆಳಗಿಮ್ದ ನೀರು ಹರ್ದು ಬತ್ತು. ಅಲ್ಲಿ ಹೆಸರಿಗೆ ತಕ್ಕಂಗೆ ಭಾರೀ ತಣ್ಣಗಿತ್ತು ನೀರು.. ಅಲ್ಲೇ ಕೈಕಾಲು ತೊಕ್ಕಂಡ್ಮೇಲೆ ಮತ್ತೆ ಶಕ್ತಿ ಬಂತು.. ಇಲ್ಲೀವರ್ಗೆ ಹತ್ತಿದ ಸುಸ್ತು ಸ್ವಲ್ಪ ಸಮಾಧಾನ ಆತು. ಅಲ್ಲಿ ಏನನ್ನಾದರೂ ಮರೆತಿರುವಿರಾ ಅಂತ ಒಂದು ಬೋರ್ಡು.. ಎಂತೂ ಮರ್ತಂಗೆ ಇಲ್ಯಲ ಅಂತ ಅಂದ್ಕಳ ಹೊತ್ಗೆ ಅಲ್ಲಿ "ನನ್ನನ್ನು ಬಳಸಿರಿ" ಕಾಣುಸ್ತು..ಹಾ ಹೇಳಕ್ಕೆ ಮರ್ತೋಗಿತ್ತು. ಮಧ್ಯ ಸಿಗೋ ದ್ವಾರಗಳಲೆಲ್ಲಾ ಜ್ಯೂಸು, ಕೂಲ್ಡಿಂಕ್ಸ ಮಾರೋರು ಕೂತಿರ್ತ. ಜೊತೆಗೆ, ಇಲ್ಲಿಗೆ ಬರೋರು ಎಂಥಾರು ತಂದಿರ್ತ. ಅವ್ವು ಅದ್ನ ಎಲ್ಲೆಲ್ಲೂ ಬಿಸಾಕಿ ಗಲೀಜು ಮಾಡ್ಲಾಗ ಹೇಳಿ ಇಂಥ ವ್ಯವಸ್ಥೆ.. ಆಮೇಲೆ ಸುಮಾರು ಕಡೆ ಕಾಣ್ತು ಇದು ಅಂತಿಟ್ಕಳಿ.


ಆಮೇಲೆ ಇಳ್ಯಕ್ಕಿದ್ರೆ ಮತ್ತೊಂದು ಹನುಮಂತನ ಗುಡಿ ಶಣ್ದು. ಓಬವ್ವ ಇದಕ್ಕೆ ಪೂಜೆ ಮಾಡಿ ಶತ್ರುಗಳ್ನ ಹೊಡ್ದಾಕಿದ್ದ ಅಂತ ಅನುಸ್ತು..ಅಲ್ಲೇ ಮೇಲೆ ಹತ್ತಿದ್ರೆ ಮತ್ತೆ ಕಂದಕ ಕಾಣ್ತು. ಆಮೇಲೆ ಓಬವ್ವನ ಕಿಂಡಿ. ಈ ಕಡೆ ಸ್ವಲ್ಪ ಪಕ್ಕದಲ್ಲಿ ಬಂಡೆ ಬಿದ್ದು ಓಬವ್ವನ ಕಿಂಡಿ ಹಿಂದ್ಗಡೆ ಆರಾಮಾಗಿ ಹೋಗ ಅಷ್ಟು ಜಾಗ ಆಯ್ದು.ಆದ್ರೂ ಓಬವ್ವನ ಕಿಂಡಿ ಒಳಗಿಂದ ಹೊರಗೆ ಬರಕ್ಕೆ ಆಗ್ತಾ ಇಲ್ಯ ಹೇಳಿ ಗೊತ್ತಿರ್ಲೆ. ಒಬ್ರು ಇಳ್ದು , ಬತ್ತು ಅಂದ್ರೆ ಉಳ್ದವ್ರು ಹೋಗದು ಅಮ್ತಾತು. ಸರಿ, ಅದ್ರಲ್ಲೆಂತ ಅಪಾಯನೂ ಇಲ್ಲೆ ಹೇಳಿ ನಾನೇ ಇಳ್ದಿ. ಹೈದರಾಲಿ ಸೈನಿಕರು ಬಂದಿದ್ದ ಜಾಗ ನೋಡ್ಕ್ಯಂಡು.. ಓಬವ್ವನ ಕಿಂಡೀಲೆ ಮೇಲೆ ಹತ್ಕಂಡು ಬಂದಿ :-) ಆಮೇಲೆ ಉಳದವ್ಕೂ ಉತ್ಸಾಹ ಬಂತು.

 ಅಲ್ಲಿಂದ ಬಂದ್ಮೇಲೆ ಮತ್ತೆ ತಣ್ಣೀರು ದೋಣಿ. ಆಮೇಲೆ ಉಲ್ಟಾ ಬಂದು ಎಡ್ಗಡೆ ಇದ್ದ ದಾರೀಲಿ ಹೊಂಟ್ಯ. ಅದು ಗೋಪಾಲಸ್ವಾಮಿ ದೇವಸ್ಥಾನಕ್ಕೆ ಹೋಗಕ್ಕೆ ದಾರಿ ಆಗಿತ್ತು. ಅಲ್ಲೂ ಸುಮಾರು ದ್ವಾರಗಳು ಸಿಗ್ತು. ಅಲ್ಲಿ ಮೇಲೆ ಹತ್ತಿದ್ಮೇಲೆ ಒಂದು ಕೆರೆ. ಅದ್ರ ಪಕ್ಕದಲ್ಲಿ ಇನ್ನೊಂದು ಭರ್ಜರಿ ಬೆಟ್ಟ ಇಳ್ಕಂಡು ಬತ್ತಿರೋರು ಕಾಣ್ತಿತ್ತು. ಅಲ್ಲಿಂದ ಮತ್ತೆ ಮೇಲೆ ಹತ್ತಿದ್ಮೇಲೆ ಸಿಕ್ಕಿದ್ದು ಗೋಪಾಲಸ್ವಾಮಿ ದೇವಸ್ಥಾನ. ಅಲ್ಲಿಂದ ಮತ್ತೆ ಮೇಲೆ ಹತ್ತಿದ್ಯ. ಅಲ್ಲಿ ಸೈನಿಕರು ತುಪಾಕಿಗಳ್ನ ಇಟ್ಕೊಂಡು ಹಾರಿಸ್ತಿದ್ದ ಜಾಗ ಸಿಗ್ತು.. ಅಲ್ಲಿಗೆ ಅದು end point. ಅಲ್ಲಿಂದ ನೋಡಿದ್ರೆ ದುರ್ಗದ ಕೋಟೆ ಚೈನಾ ಗೋಡೆ ಕಂಡಂಗೆಗ ಕಾಣ್ತಿತ್ತು. ಅಲ್ಲಿಂದ ಇಳ್ದು ದೊಡ್ಡ ಬೆಟ್ಟ ಹತ್ತಕು ಅಂತ ಅನುಸ್ತು ಮೊದ್ಲು.


ಆದ್ರೆ ಅಲ್ಲಿಂದ ದಾರಿ ಇರ್ಲೆ. ಸ್ವಲ್ಪ ಇಳಿದ ಮೇಲೆ ಬಲ್ಗಡೆ ಇನ್ನೊಂದು ದಾರಿ ಇತ್ತು. ಅದು ದೂರದ ಪಾಳು ಮಂಟಪಕ್ಕೆ ಕರ್ಕಂಡೋಗ್ತಿತ್ತು. ಅದೂ ಒಂದು viewpoint. ನೀವು ದುರ್ಗ ಪೂರ್ತಿ ನೋಡಕ್ಕೆ ಒಂದು ವಾರ ಬೇಕಣ್ಣ ಅಂದ ಅಲ್ಲೆ ಕುತ್ಕಂಡಿದ್ದವ ಒಬ್ಬ. ಹೌದು ಅನುಸ್ತು. ಅಲ್ಲಿಂದ ಇಳ್ದ್ಯ. ಕೊನಿಗೆ ಮತ್ತೆ ಹಿಂದೆ ಬಂದ ದಾರೀಲಿ ವಾಪಾಸ್ ಬಂದ್ಯ. ಅಕ್ಕ ತಂಗೀರ ಹೊಂಡ ಎಲ್ಲ ಸಿಕ್ತು ಮತ್ತೆ. ಅವಾಗ ಬಿಟ್ಟಿದ್ದು ಕಡೆ ಹೋಗನ ಅಂತ ಮತ್ತೆ ಎಡಗಡೆ ಹೋದ್ಯ..ಬೆಟ್ಟದ ಮೇಲೆ ಹತ್ತಕ್ಕೆ ಆ ಕಡೆ ಇಂದ ದಾರಿ ಹೇಳಿ ಹೇಳಿದ್ದ ಒಬ್ರು ಅದಕ್ಕೆಅಲ್ಲಿ ಹಿಡಿಂಬೇಶ್ವರ ದೇವಸ್ಥಾನ. ಅದಕ್ಕೆ ಹತ್ತೋ ಮೆಟ್ಲು.ಮೆಟ್ಲು ಅಂದ್ರೆ ಆಗಿನ ಕಾಲದ್ದು.. ಸವ್ದು ಹೋಯ್ದು. ಅದಕ್ಕೆ ಹೇಳಿ ಆ ಕದೆ ಈ ಕಡೆ ಕಂಬ ಮಾಡಿದ್ದ ಹತ್ತವ್ಕೆ.. ಅದೂ ಭಾರಿ ಚೆನ್ನಾಗಿದ್ದು.ಅದ್ನ ನೋಡ್ಕಂಡು ಇಳ್ದು ಮುಂದೆ ಹೋದ್ರೆ ಅಲ್ಲೊಂದು ಗಾಳಿಗೋಪುರ.ಆಮೇಲೆ ಮುರುಗ ರಾಜೆಂದ್ರ ಮಠ, ರಾಜರ ಅರಮನೆ ಆವರಣ, ಸಂಪಿಗೆ ಸಿದ್ದೇಶ್ವರ ದೇವಸ್ಥಾನ ನೋಡಿದ್ಯ.ಅಲ್ಲಿಂದ ಮೇಲಕ್ಕೆ ತುಪ್ಪದ ಹೊಂಡ . ಅಲ್ಲಿಂದ ಬಲ್ಗಡೆ ಗುಡ್ಡಕ್ಕೆ ಹತ್ತೋ ದಾರಿ ಹೇಳಿ ಹೇಳ್ದ ಮಠದವ. ಅಲ್ಲಿ ಹೋಗಿ ನೋಡ್ತ್ಯ.. ದಾರಿ ಎಲ್ಲಿದ್ದು ಮಣ್ಣು.. ನೇರ ಬೆಟ್ಟ.. ಸುಮಾರು ೭೫ಡಿಗ್ರಿ.. ಅದ್ರಲ್ಲಿ ಮಧ್ಯ ಮಧ್ಯ ಒಂದು ೩ ಸೆಂಟೀ ಮೀಟರ್ ಅಷ್ಟು ಆಳದ ಗುಂಡಿ ಕೊರದ್ದ ೨-೩ ಅಡಿ ಬಿಟ್ಬಿಟ್ಟು..


 ಅದೂ ಒಂದು ಎಡಕ್ಕೆ ಮತ್ತೊಂದು ಬಲಕ್ಕೆ.ಅದ್ರೊಳಗೆ ಕಾಲು ಇಟ್ಕಂಡಿಟ್ಕಂಡು ಮೇಲೆ ಹತ್ತಕ್ಕು!!!.. ಅದೂ ಎರಡೂ ಕಾಲು ಇಟ್ಕಲಕೆ ಜಾಗ ಇಲ್ಲೆ.ಪಕ್ಕದಲ್ಲಿ ಹಿಡ್ಕಳಕೂ ಎಂತೂ ಇಲ್ಲೆ. ಅದಕ್ಕೆ ಸಿಂಹಪಾದ ಹೇಳಿ ಹೆಸ್ರಡ. mountain climbing ಅಂತ ಕೇಳಿದ್ದು ನೆನ್ಪಾತು.೨ಘಂಟೆ ಹತ್ತತ್ರ ಬೇರೆ ಆಗಿತ್ತು. ಸುಮಾರು ಮುನ್ನೂರು ೨೦೦-೩೦೦ ಮೀಟ್ರಿಗಿಂತಲೂ ಮೇಲೆ ಹತ್ತಕ್ಕಿತ್ತು ಹಂಗೇನೆ. ನೋಡೇನೆ ಇಬ್ರು ನಾವು ಬರದಿಲ್ಲೆ ಅಂದ್ಬಿಟ ಮೊದ್ಲೆ.ಮೂರು ಜನಕ್ಕೆ ಸ್ವಲ್ಪ ಧೈರ್ಯ ಇತ್ತು. ಸ್ವಲ್ಪ ಮೇಲೆ ಹತ್ತಿದ ಮೇಲೆ ಹತ್ತದೇನೋ ಹತ್ತುತ್ಯ. ಇಳ್ಯದೆಂಗಲೇ ಇಲ್ಲಿ? . ಅಂದ ಗೌತು. ಅದೂ ಹೌದು ಅನುಸ್ತು.. ಅದೂ ಅಲ್ದೆ ಅಲ್ಲಿ ಅವಾಗ ನಮ್ಮನ್ನ ಬಿಟ್ರೆ ಬೇರೆ ಯಾರೂ ಇರ್ಲೆ.. ಗ್ರಹಚಾರ ಕೆಟ್ಟು wrong spot ಗೆ ಬಂದಿದ್ದಾಗಿದ್ರೆ? ಚಾನ್ಸ್ ತಗಳ್ಳದು ಬ್ಯಾಡ ಅಂತ ಆಮೇಲೆ ಹತ್ತಕ್ಕೆ ಹೋಗ್ಲೆ. ಇಳ್ದು ಸುಮಾರು ದೂರ ಬಂದ್ಮೇಲೆ ಗೈಡೊಬ್ಬ ಇಳೀತಿರದು ಕಾಣ್ತು..ಆದ್ರೆ ಅವನ ಹಿಂದೆ ಬಂದವ್ರೆಲ್ಲ , ತೆವಳ್ಕಂಡು, ಮಲಕ್ಯಂಡು ಭಾರಿ ಒದ್ದಾಡ್ತಾ ಇಳ್ಯಕ್ಕೆ try ಮಾಡ್ತ ಇದ್ದಿದ್ದ.. ಎಲ್ಲಾರು ಒಂದು ಕಡೆ ಕಾಲು slip ಆದ್ರೆ ಅನ್ಸಿ ಮೈ ಜುಂ ಅನುಸ್ತು. ಸುಮ್ನೆ view ನೋಡಕ್ಕೆ ಹೇಳಿ ಹೋಗಿ ಮತ್ತೆ ಮನೇವ್ರೆಲ್ಲಾ ನಮ್ಮ photo ನೋಡ ಪರಿಸ್ಥಿತಿ ತಂದ್ಕಳಗೆ try ಮಾಡ್ದೇ ಇದ್ದಿದ್ದೇ ಒಳ್ಳೇದಾತು ಅನುಸ್ತು.


 ವಾಪಸ್ ಹಂಗೇ ಬಂದ್ಯ. ಮಾರಿಕಣಿವೆಗೆ ಹೋಗಕ್ಕು ಇದಾದ ಮೇಲೆ ಹೇಳಿದ್ದ ಗೌತು.. ಹಂಗಾದ್ರೆ ಬೇಗ ಇಳ್ಯನ ಹಂಗಾದ್ರೆ ಅಂತ ಚುರ್ಕು ಮಾಡಿದ್ಯ. ಕ್ಯಾಂಟೀನಲ್ಲಿ ಸ್ವಲ್ಪ ಕುಡ್ಕಂಡು ಹೊಟ್ಟೆ ತಣ್ಣಗೆ ಮಾಡ್ಕ್ಯಂಡ್ಯ. ನೀರಿನ ಬಾಟ್ಲಿ ಎಲ್ಲರು ತಗಂಡ್ಬಂದಿದ್ದು ಎಷ್ಟೋ ಒಳ್ಳೆದಾಗಿತ್ತು. ಟಂಕಸಾಲೆ ಎಲ್ಲ ಮತ್ತೆ ಸಿಗ್ತು. ಹತ್ತೇ ನಿಮಿಷದಲ್ಲಿ ಬುಡಕ್ಕೆ ಬಂದಿದ್ಯ.ಚಂದವಳ್ಳೀಲಿ ನಮಗೆ ಸಿಕ್ಕಿದ ಶಿವಮೊಗ್ಗದವ್ರು ಇಲ್ಲೂ ಸಿಕ್ಕಿದ. ಫುಲ್ಲು ನೋಡಿದ್ರನಪಾ ಕೋಟೆ ಅಂದ.. ಎಂತ ಹೇಲದು? ಆದ್ರೆ ಅವ್ರಿಗಿಂತ ಜಾಸ್ತಿ ನೋಡಿದಿದ್ಯ, ನಂಗ :-) ಅಲ್ಲಿಂದ ಮುಂಚೆ ಬಿಟ್ಟಿದ್ದ ಬಲಗಡೆ ಹೋದ್ಯ.

 ಅಲ್ಲಿ ಒಂಟಿಕಲ್ಲು ಬಸವಣ್ಣ ಕಾಣ್ತು.. ಅಲ್ಲಿಂದ ಮತ್ತೆ ಸುಮಾರು ದೂರ ಹೋದ್ಮೇಲೆ ಆಗಿನ ಕಾಲದ ಜೈಲು ಸಿಗ್ತು. ಅಲ್ಲಿಂದ ಮತ್ತೆ ಎಡಗಡೆ ದಾರಿ ಇತ್ತು. ಆದ್ರೆ ನಂಗ ನೋಡಿದಂಗೆ ಮ್ಯಾಪಲ್ಲಿ ಜೈಲ ಪಕ್ಕ ಎಂತೂ ಇರ್ಲೆ..ಟೈಂ ಬೇರೆ ೨;೧೦. ಅದಕ್ಕೆ ಹಂಗೇ ಇಳ್ದ್ಯ..ಒಳ್ಳೆ ನೆನ್ಪಿನ ರೂಪದಲ್ಲಿ ಸುಮಾರಷ್ಟು ತುಂಬ್ಕಂಡಿದ್ವಲ.. ಆ ನೆನ್ಪುಗಳಿಗೆ ಈಗ ಜಾಗ ಸಾಕಾಗ್ದೆ ಬೆವರ ರೂಪದಲ್ಲಿ ನೀರು ಹರಿದಂಗೆ ಹರಿತಾ ಇತ್ತು..

(ಮುಂದೆ: ಭಾಗ-: ವಾಣಿವಿಲಾಸ ಸಾಗರ)

Saturday, October 22, 2011

ಯಂಗಳ ಚಿತ್ರದುರ್ಗ ಟ್ರಿಪ್: ಭಾಗ -೧

ಯಂಗಳ ಚಿತ್ರದುರ್ಗ ಟ್ರಿಪ್: ಭಾಗ -೧
ಕ್ಯಾಂಪಸ್ ಸೆಲೆಕ್ಷನ್ ಆದ್ರೂ ಜಾಯ್ನ ಆಗದು ಸ್ವಲ್ಪ ಲೇಟಿತ್ತು. ಮನೇಲೆ ಕೂತು ಕೂತು ಬೋರು ಹೊಡೀತಿದ್ದ ಟೈಮಲ್ಲಿ ಗೆಳೆಯ ಆದರ್ಶನ ಮೆಸೇಜು ಬಂತು ಒಂದಿನ. ದಿನಾ ಮೆಸೇಜು ಬತ್ತು, ಅರ್ದಲ್ಲೆಂತೂ ವಿಶೇಷ ಇರ್ತು ಹೇಳ್ತ್ರಾ? ಅವತ್ತಿಂದ ಸ್ವಲ್ಪ ಪೆಸೆಲ್ಲೇ ಇತ್ತು :-) ಯಂಗ ಟಿ.ಸಿ.ಎಸ್ಸೋರು ಎತ್ಲಾಗಾರೂ ಟ್ರಿಪ್ ಹೋಗನನಾ ಅಂದ ಅವ..ನಂಗ ಬೇಕಾಗಿದ್ದು ಪಾಯಸ ಅವ ಬಡ್ಸಿದ್ದೂ ಪಾಯ್ಸ ಅಂದಗಾತು. ಹೋ ಜೈ ಅಂದಿ.ಬೇರೆ ಅವ್ಕೆಲ್ಲಾ ಕೇಳು, ಯಾವತ್ತು ಎಲ್ಲಿಗೆ ಹೇಳಿ ಆಮೇಲೆ ಹೇಳು ಅಂದಿ.ಫಸ್ಟಿಗೆ ಸೈ ಅಂದವ್ವೆಲ್ಲಾ ಕೈ ಕೊಟ್ಟು ಕೊನಿಗೆ ಜೈ ಅಂದವ್ವು ೪ ಜನ ಉಳ್ಕಂಡ್ಯ. ನನ್ನ ಫ್ರೆಂಡೊಬ್ಬಂಗೆ ಕೇಳ್ದಾಗ ಅವ್ನೂ ಬತ್ತಿ ಅಂದ.ಸರಿ ಹೇಳಿ ಹೊಂಟ್ಯಾ ಹೇಳಾತು..ಕಲ್ಲಿನಕೋಟೆ ದುರ್ಗಕ್ಕೆ..

ಬೆಳಿಗ್ಗೆ ಐದೂವರೆಗೆ ಬಸ್ಟ್ಯಾಂಡಲ್ಲಿರಿ ೫:೪೫ ಕ್ಕೆ ಬಸ್ಸು ಹೇಳಿ ಮೆಸೇಜಾಕಿತ್ತು. ಎಲ್ಲ ಸ್ವಲ್ಪ ಹೆಚ್ಚು ಕಮ್ಮಿ ಅಷ್ಟೊತ್ಗೆ ರೆಡಿ. ಬಸ್ಸಲ್ಲೆಲ್ಲಾ ಫುಲ್ಲು ಕಾಮಿಡಿ ಮಾಡ್ಕ್ಯಂಡು, ಕಿಟಕೀಲಿ ಕಾಣೋ ಸೂರ್ಯೋದಯ ಎಲ್ಲ ಕ್ಯಾಮರಾದಲ್ಲಿ ತೆಕ್ಕತಾ ಹೊಂಟ್ಯ. ಹಂಗೆ ಹೋಗಿ, ಹಿಂಗೆ ಹೋಗಿ ಹೇಳಿ ಬಸ್ಸಲ್ಲಿದ್ದ ಮೂರು ಜನರು ಪ್ರತ್ಯೇಕ ಉಪದೇಶ ಮಾಡ್ದ. ಮಧ್ಯೆ ದಾರೀಲಿ ಸಿಕ್ಕಿದ್ದ ದುರ್ಗದ ಡಿಪ್ಲೋಮ ಕಾಲೇಜು ಹುಡುಗ್ರೂ ಪ್ರೆಂಡ್ಸಾಗಿ ಒಳ್ಳೆ ಟೈಂಪಾಸಾತು.ಬಸ್ಸಲ್ಲಿ ಸಿಕ್ಕ ಚಿಳ್ಳೆ ಪಿಳ್ಳೆಗಳೆಲ್ಲಾ ಅಂಕಲ್ ಹೇಳದು ಕೇಳಿ ಕೇಳಿ ಬೇಜಾರಾಗಿ ಹೋಗಿತ್ತು . ಅವತ್ತು ಅವ್ರ ಬಾಯಲ್ಲಿ ಅಣ್ಣಾ ಹೇಳಿಸ್ಕ್ಯಂಡಿದ್ದೂ ಭರ್ಜರಿ ಖುಷಿ ಆತು.:-) ಚಿತ್ರದುರ್ಗದತ್ರ ಚೆಂದವಳ್ಳಿಯ ತೋಟ ಹೇಳಿದ್ದು. ಪೇಟೆಯಿಂದ ೨-೩ ಕಿ.ಮೀ ಆಗ್ತು. ಅಲ್ಲಿಂದಲೂ ದುರ್ಗದ ಕೋಟೆಗೆ ಹತ್ತಕ್ಕೆ ದಾರಿ ಇದ್ದಡ.ನಾವು ಕೋಟೆಲಿ ಭಯಂಕರ ನೋಡದಿತ್ರಲಾ ಹಂಗಾಗಿ ಅಲ್ಗೇ ಮೊದ್ಲು ಹೋಗ್ಬಂದು ಬಿಡನ ಅಂತ ಅಲ್ಲಿಗೆ ಆಟೋದಲ್ಲಿ ಹೊಂಟ್ಯ. ಆದ್ರೆ ಕೋಟೆಗೆ ಹೋದ್ಮೇಲೆ ಕಾಲೆಲ್ಲಾ ಭಯಂಕರ ನೋಯ್ತಿರತ್ತೆ, ಆಮೇಲೆಲ್ಲಿಗೂ ಹೋಗಕ್ಕಾಗಲ್ಲ ಮೊದ್ಲು ತೋಟಕ್ಕೆ ಹೋಗ್ಬನ್ನಿ ಸಾಮಿ ಅಂದ ಆಟೋದ ಸ್ವಾಮಿ. ಮಾಲೆ ಹಾಕಿದ ಅಯ್ಯಪ್ಪ ಸ್ವಾಮಿ ಸುಳ್ಳೇಳ್ತಲ್ಲೆ ಹೇಳಿ ಅಲ್ಲಿಗೆ ತಿರುಗ್ಸಿ ಸ್ವಾಮಿ ಅಂತ ಅಲ್ಲಿಗೆ ಹೋದ್ಯ. ಚೆಂದವಳ್ಳಿ ತೋಟದ ಮುಖ್ಯ ಆಕರ್ಷಣೆ ಗುಹೆ. ಅದು ನೆಲದಿಂದ ೮೫ ಅಡಿ ಕೆಳಕ್ಕೆ ಹೋಗತ್ತೆ. ಅದ್ನ ನೋಡಕ್ಕೆ ಮರಿಬೇಡಿ ಹೇಳಿ ಬಸ್ಸಲ್ಲಿ ಹೇಳಿದ್ದ. ಅದಲ್ದೇ ಅಲ್ಲಿ ಒಂದು ಕೆರೆ ಇದ್ದು. ಸಸ್ಯವನ ಇದ್ದು. ಒಂದು ದೇವಸ್ಥಾನ,ದುರ್ಗ ಅಂದ್ಮೇಲೆ ಕೇಳಕ್ಕಾ, ಭಯಂಕರ ಬೆಟ್ಟ, ಭರ್ಜರಿ ಬೇರೆ ಬೇರೆ ಆಕಾರದ ಕಲ್ಲು, ಒಂದು ಪಾರ್ಕು ಇತ್ಯಾದಿ ಇತ್ಯಾದಿ.ಅಲ್ಲಿ ಪ್ರವೇಶದ ಹತ್ರನೇ ಮೇಲಿರೋ ಅಮ್ಮ ಮಗೂನ ಎತ್ಕಂಡಂಗಿರೋ ಕಲ್ಲು ಇಷ್ಟ ಆತು. ಆದಿ ಕಾಣ್ತು, ಮದರ್ ತೆರೇಸಾ ಇದ್ದಂಗೆ ಇದ್ದು ಅದು ಹೇಳ್ತಿದ್ದ :-)ಸರಿ ಗುಹೆ ನೋಡನಾ ಹೇಳಿ ಹೊಂಟ್ಯ. ಅಲ್ಲಿ ಭಯಂಕರ ಕತ್ಲು. ಎಂತೆಂತೂ ಕಾಣದಿಲ್ಲೆ. ಬ್ಯಾಟ್ರಿ ಬೇಕೇ ಬೇಕು ಒಳಗೆ ಹೋಗಕ್ಕೆ ಅಂತ ಬಸ್ಸಲ್ಲಿ ಹೇಳಿದ್ದ. ಹಿಂದಿನ ದಿನ ಬ್ಯಾಟ್ರಿ ತಗಂಬರ್ರಾ ಹೇಳಿ ಮೆಸೇಜು ಹಾಕಿದ್ರೆ ಯಾರೂ ಬ್ಯಾಟ್ರಿನೇ ತರ್ಲಾಗ್ದಾ? ಹಾಕಿದ ತಪ್ಪಿಗೆ ಆ ಒಬ್ನೆ ತಂದಿದ್ದಾಗಿತ್ತು:-) ಗುಹೆಗೆ ಹೋಗ ದಾರೀಲಿ ಇಬ್ರು ಸ್ವಲ್ಪ ವಯಸ್ಸಾದವ್ವು ಇದ್ದಿದ್ದ ಬ್ಯಾಟ್ರಿ ಹಿಡ್ಕಂಡು.ಹೆ ಹೆ.. ಬ್ಯಾಟ್ರಿ ಮಾರವ್ರಲ್ಲ ಅವ್ವು. ಗುಹೆ ತೋರ್ಸವ್ವು.ಅಲ್ಲಿ ಒಂದೇ ತರದ ಸುಮಾರು ಬಾಗ್ಲಿದೆ. ನಾವು ಬರ್ದೇ ಹೋದ್ರೆ ನೀವು ಒಳಗೇ ಕಳ್ದು ಹೋಗ್ತೀರಿ. ನಾವು ಬಂದು ತೋರ್ಸಕ್ಕೆ ತಲೆಗಿಪ್ಪತ್ತು ಕೊಡ್ಬೇಕು ಅಂದ. ಅಂತೂ ಚೌಕಾಸಿ ವ್ಯವಹಾರ ಮಾಡಿ ಮಂಡಿಗದ್ನೈದು ರುಪಾಯ್ಗೆ ಒಪ್ಸಿದ್ಯ.ಅಲ್ಲಿ ಇನ್ನೂ ಒಂದು ಮೂರ್ನಾಲ್ಕು ಕುಟುಂಬದ್ವ್ವು ಬಂದಿದ್ದ. ಮಕ್ಳು ಮರಿ ಕಟ್ಕಂಡು. ಅವ್ವು ಶಿಮೋಗದವ್ವೇ.. ಆದ್ರೆ ನಂಗಕ್ಕೆ ಅಲ್ಲಿ ಹೋದ್ಮೇಲೆ ಗೊತ್ತಾತು. ಚೇ.. ಸರಿ , ಅಲ್ಲೇ ಇದ್ದ ಈಶ್ವರ ದೇವಸ್ಥಾನಕ್ಕೋಗಿ ನಮಸ್ಕಾರ ಮಾಡಿ ಗುಹೆ ಒಳಗೆ ಇಳ್ಯಕ್ಕೆ ಹೊಂಟ್ಯ.


ತಾವಿಲ್ದೇ ಯಾರೂ ಒಳಗೆ ಹೋಗ್ಲಾಗ ಹೇಳಿ ಬಾಗ್ಲಿಗೆ ಬೀಗ ಹಾಕಿಟ್ಟಿದ ಪುಣ್ಯಾತ್ಮ :-) ಗುಹೆ ಸುರಕ್ಷತೆ ದೃಷ್ಟಿಂದ್ಲೂ ಅದು ಒಳ್ಳೇದೆಯ ಬಿಡಿ. ನಂದೂ ಒಂದು ಬ್ಯಾಟ್ರಿ ಇದ್ದಿದ್ದಿದು ಭಾರಿ ಒಳ್ಳೇದಾತು.ಅಲ್ಲಿ ಫುಲ್ಲು ಕತ್ಲೆ. ಒಂದೇ ಒಂದು ಬೆಳಕಿನ ಕಿರಣ ಬತಲೆ.


ಮೊದಲು ಸಿಕ್ಕಿದ್ದು ಬಸವನ ಬಾಗಿಲು ಅಥವಾ ನಂದಿ ದ್ವಾರ.ಅದಕ್ಕೆ ಏಳು ಮೆಟ್ಲು.ಅದು ಇಳೀತಿದ್ದಂಗೆ ವಿಶ್ರಾಂತಿ ಪೀಠ ಹೇಳಿ ಸಿಕ್ತು. ಅಂದ್ರೆ, ಇಲ್ಲಿ ಆಗಿನ ಕಾಲದ ಗುರುಗಳು, ಅವರ ಪಾಠಶಾಲೆ ಎಲ್ಲ ಇತ್ತಡ. ಗುರುಗಳ್ನ ನೋಡಕ್ಕೆ ಯಾರಾದ್ರೂ ಬಂದ ಅಂದ್ರೆ ಅವ್ರು ನೇರ ಒಳಗೆ ನುಗ್ತಿರ್ಲೆ. ವಿಶ್ರಾಂತಿ ಪೀಠದಲ್ಲಿ ಕೂತು ಗುರುಗಳಿಂದ ಬನ್ನಿ ಹೇಳಿ ಅಪ್ಪಣೆ ಸಿಕ್ಕಿದ ಮೇಲೆ ಒಳಗೆ ಹೋಗ್ತಿದ್ವಡ.


ಆಮೇಲೆ ಸಿಕ್ಕಿದ್ದು ಸಿಂಹ ದ್ವಾರ. ಅದಕ್ಕೆ ೯ ಮೆಟ್ಲು.ಅದರತ್ರನೇ ಆಗಿನ ಕಾಲದ ಜೈನರು, ಕದಂಬರು, ಚೋಳರು ಅಲ್ಲಿಗೆ ಬಂದಿದ್ದ ಹೇಳದಕ್ಕೆ ಅವ್ರು ಕೆತ್ತಿದ ರಚನೇನ ತೋರ್ಸಿದ ಗೈಡು.ಗುರುಗಳ ಪೂಜಾಪೀಠ, ಅವ್ರ ಧ್ಯಾನ ಪೀಠ ಎಲ್ಲಾ ತೋರ್ಸಿದ.
ಅಲ್ಲೇ ಆಗಿನ ಕಾಲದ ಸ್ನಾನದ ತೊಟ್ಟಿ ತೋರ್ಸಿದ.ಆಶ್ಚರ್ಯ ಅಂದ್ರೆ ಆಗಿನ ಕಾಲದಲ್ಲೇ ಮಳೆಕೊಯ್ಲಿನ ಕಲ್ಪನೆ ಇತ್ತು ಅವಕ್ಕೆ ಹೇಳದು. ಬೆಟ್ಟದ ಮೇಲೆ ಸುರಿದ ಮಳೆ ನೀಟಾಗಿ ತೊಟ್ಟಿಗೆ ಗುಹೆ ಗೋಡೆ ಒಳಗಿಂದ ಇಳಿದು ಬರೋ ವ್ಯವಸ್ಥೆಮಾಡಿದ್ದ. ಹೆಮ್ಮೆ ಆತು ಯಂಗಳ ಪೂರ್ವಜ್ರ ಬಗ್ಗೆ ಇನ್ನೊಂದ್ಸಲ.


ಅಲ್ಲಿ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಕ್ಕೆ ಕೂತ್ರಿದ್ದ ಜಾಗ ಎಲ್ಲ ತೋರ್ಸಿದ. ಫುಲ್ಲು ಕತ್ಲೆ ಅಲ. ಹಂಗಾಗಿ ಎಲ್ಲಿ ನೋಡಿದ್ರೂ ದೀಪ ಇಡೋ ಜಾಗಗಳು. ಅದ್ನ ಗೈಡು ಹೇಳಿ ತೋರ್ಸೋವರ್ಗೆ ಯಂಗಕ್ಕೆ ಅಂದಾಜೇ ಆಗಿರ್ಲೆ. ಎಲ್ಲಿ ತಲೀಗೆ ಗುಹೆ ಹೊಡೀತೋ , ಎಲ್ಲಿ ಕಾಲಿಡದೋ ಹೇಳಿ ಮೇಲೆ, ಕೆಳಗೆ ಬ್ಯಾಟ್ರಿ ಹೊಡೀತಾ ಹೋಗದೇ ಆಗಿತ್ತು ಹಂಗಾಗಿ.ಆವಾಗೇನೋ ಕರೆಂಟು ಇರ್ಲಿಲ್ಲ ದೀಪ ಇಟ್ಟಿದ್ರು, ಈಗ ಇಲ್ಲೆಲ್ಲಾ ಕರೆಂಟು ದೀಪ ಹಾಕ್ಬೋದಲ್ಲ ಅಂದ ಒಬ್ಬ ಪುಣ್ಯಾತ್ಮ. ಸಾರ್ ಹಂಗೆಲ್ಲಾ ಹಾಕಿದ್ರೆ ಇಲ್ಲಿನ ಪಾವಿತ್ರತೆ ಹೋಗಲ್ವಾ, ಅವಾಗ ಹೆಂಗೆ ಬದುಕ್ತಿದ್ರು ಅಂತ ನಿಮಗೆಲ್ಲಾ ಗೊತ್ತಾಗೋದು ಬೇಡ್ವಾ? ಅಂದ ಗೈಡು..ಹಿಂಗೂ ಇರುತ್ವಾ ಜನ ಅನುಸ್ತು.
       ಅಲ್ಲೆ ಒಂದ್ಕಡೆ ಗುಹೆಯೊಳಗೆ ಆಮ್ಲಜನಕ ಹೋಗೋಕೆ ಮಾಡಿರೋ ದಾರಿ ತೋರ್ಸಿದ ಗೈಡು. ಅಲ್ಲೆಲ್ಲ ಮತ್ತೆ ಕತ್ಲೆ. ಬಾವಲಿಗಳ ಸಾರ್ಮಾಜ್ಯ.ಆಮೇಲೆ ಸಿಕ್ಕಿದ್ದು ಗಜ ದ್ವಾರ. ಅದಕ್ಕೆ ೫ ಮೆಟ್ಲು. ಕೊನಿಗೆ ಗುಹೆಯ ಅತೀ ಆಳದ ಜಾಗಕ್ಕೆ ಕರ್ಕಂಡೋದ.


ಅದು ಸಭಾಮಂಟಪ ಅಡ.ಸ್ವಲ್ಪ ದೊಡ್ಡಕ್ಕಿದ್ದು.. ಕೆಲ್ವು ಕಡೆ ಎಲ್ಲ, ಕುತ್ಕಂಡು, ಬಗ್ಯಂಡು ಹೋಗಿದ್ಯ ಹೋಗಕ್ಕಿದ್ರೆ, ಹಂಗಾಗಿ ಇದು ಸುಮಾರು ದೊಡ್ಡ ಜಾಗನೇ. ಅಲ್ಲಿ ಶಸ್ತ್ರಾಸ್ತ್ರ ಇಡೋಕೆ ಜಾಗ, ಮತ್ತೆ ದೀಪದ ಜಾಗ ಹಿಂಗೆಲ್ಲಾ ಇತ್ತು.ಇಲ್ಲಿ ಎಷ್ಟು ಕತ್ಲು ಅಂತ ತಿಳೀಬೇಕಿದ್ರೆ ನಿಮ್ಮ ಬ್ಯಾಟ್ರಿ, ಮೊಬೈಲು ಬ್ಯಾಟ್ರಿ ಎಲ್ಲಾ ಆರ್ಸಿ ಅಂದ ಅವ. ಅಯ್ಯಪ್ಪಾ.. ಅಮವಾಸೆ ದಿನ ರಾತ್ರಿ ಕತ್ಲಲಲ್ಲಾದ್ರೂ ಎದ್ರಿಗೆ ನಿಂತೋರ ಮುಖ ಕಾಣ್ತಿಕ್ಕು. ಆದ್ರೆ ಅಲ್ಲಿ ಎಂತೂ ಇಲ್ಲೆ. ಭೂಮಿ ಇಂದ ೮೫ ಅಡಿ ಕೆಳಗೆ ಅಂದ್ರೆ ಸಾಮಾನ್ಯನಾ? ಆಮೇಲೆ ಸ್ವಲ್ಪ ಇತ್ಲಗೆ ಬಂದ್ಯ.ಇಷ್ಟೆಲ್ಲಾ ಬಾಗುಗಳ ಮಧ್ಯ ತಮ್ಗೆ ಬೇಕಾದ ಬಾಗ್ಲು ಇದೇಯ ಹೇಳಿ ಹೆಂಗೆ ಕಂಡು ಹಿಡೀತಿದ್ದ ಅವು, ಅತ್ವಾ ಈ ಗೈಡು ಹೇಳಿ ಯಂಗೆ ಡೌಟು ಬಂದಿತ್ತು. ಅಷ್ಟರಲ್ಲೇ ಆ ಗೈಡು ತೋರ್ಸಿದ. ಇಲ್ಲಿ ನೋಡಿ, ಈ ಬಾಗ್ಲಿಗೆ ನಕ್ಷತ್ರದ ಗುರ್ತು. ಇದಕ್ಕೆ ಬಾಣ.. ಹಿಂಗೆ ಪ್ರತಿಯೊಂದು ಬಾಗ್ಲಿಗೂ ಒಂದೊಂದು ಗುರ್ತು ಹೇಳಿ.

ಅಲ್ಲಿ ಇನ್ನೊಂದು ವಿಶೇಷ. ಅಲ್ಲಿ ಒಂದು ಕಿಂಡಿ ಇದ್ದು. ಅದ್ರಿಂದ ನೋಡಿದ್ರೆ ಮೇಲಿನ ಮೂರೂ ದ್ವಾರದ ಮೆಟ್ಲಿಂದ ಯಾರು ಬತ್ತ ಇದ್ದ ಹೇಳದು ಕಾಣ್ತು. ಆದ್ರೆ ಇಳೀತಿದ್ದವ್ಕೆ ಆ ಕಡಿಯಿಂದ ಯಾರಿದ್ದ ಹೇಳದು ಗೊತ್ತಾಗ್ತಿರ್ಲೆ. ಅವ್ರು ಯಾವ ದ್ವಾರದಲ್ಲಿ ಹೋಗದಪ ಹೇಳಿ ತಲೆ ಕೆಡಸ್ಕಳದ್ರೊಳಗೆ ಗುರುಗಳು ಅಲ್ಲೇ ಪಕ್ಕದಲ್ಲಿರೋ ರಹಸ್ಯ ದ್ವಾರದಿಂದ ತಪ್ಪಿಸ್ಕತ್ತಿದ್ವಡ.
 ಅಲ್ಲೇ ಪಕ್ಕದಲ್ಲಿ ನರಸಿಂಹ ಮೂರ್ತಿ ಹೇಳಿ ತೋರ್ಸಿದ ಗೈಡು. ಅದ್ರೆ ಪಾಪಿಗಳು ಅದ್ನ ಕೈಕಾಲೆಲ್ಲಾ ಮುರ್ದು ಹಾಳ್ಮಾಡ್ಬಿಟಿದ. ಗೈಡು ಹೇಳಿದ್ಮೇಲೆ ನಾವು ಆಕಾರ ಹುಡ್ಕೋ ಪರಿಸ್ಥಿತಿ..ವಿಗ್ರಹದ ಹಿಂದೆ ಚಿನ್ನ, ಬೆಳ್ಳಿ ಇಟ್ಟಿರ್ತ ಹೇಳಿ ಹಂಗೆ ಮಾಡಿದ್ವಡ..ಅದ್ರ ಪಕ್ಕದ ಕೋಣೇಲೆ ಆಗಿನ ಕಾಲದ ಚಿತ್ರಕಲೆ ಎಲ್ಲ ನೋಡಿ ನಮ್ಮ ಇತಿಹಾಸದ ಬುಕ್ಕಲ್ಲಿ ಅಜಂತಾ ಎಲ್ಲೋರ ಗುಹೇಲಿ ಹಂಗಿತ್ತು, ಹಿಂಗಿತ್ತು ಹೇಳೋ ಚಿತ್ರ ನೋಡಿದ್ದು ನೆನ್ಪಾತು
ಅದಾದ್ಮೇಲೆ ಅವ್ರು ಮಲ್ಗುತಿದ್ದ ಕಲ್ಲಿನ ಕಟ್ಟೆ ತೋರ್ಸಿದ. ಅಲ್ಲೇ ಬಲಗಡೆ ಇನ್ನೊಂದು ಬಾಗ್ಲು, ನೇರಕ್ಕೊಂದು, ಎಡಕ್ಕೊಂದು. ಎಡಗಡೇದು ಸ್ವಲ್ಪ ಸಣ್ಣಕ್ಕಿದ್ದು, ಅದ್ರಲ್ಲಿ ಹೋದ್ರೆ ಎಲ್ಲಿಗೂ ಹೋಗ್ತಲ್ಲೆ, ಸ್ವಲ್ಪ ದೂರ ಹೋದ್ಮೇಲೆ ದಾರಿ ಕಾಣ್ತಲ್ಲೆ. ಮುಂದೆ ಕಾಲಿಟ್ರೆ ಗುಂಡಿ. ಅದು ಗೊತ್ತಿಲ್ದೇ ಹೋದ್ರೆ ಅಲ್ಲೇ ಟ್ರಾಪ್..

 ಈ ತರದ್ದು ಸುಮಾರು ಇದ್ದಡ. ಬಲಕ್ಕೆ ಇನ್ನೊಂದು ಅಂದ್ನಲ, ಅಲ್ಲಿ ರಾಜಭಟರೆಲ್ಲಾ ಇರ್ತಿದ್ವಡ.. ಅವ್ರು ಓಡಾಡಕ್ಕೆ ಆ ದಾರಿ, ಗುರುಗಳದ್ದು ಈ ದಾರಿ.
ಹಂಗೆ ನೇರ ಹೋದ್ಯ. ಈಗ ಮತ್ತೆ ಮೇಲೆ ಹತ್ತದು ಶುರು ಆತು. ಅಲ್ಲಿ ಒಂದು ದೇವಸ್ಥಾನದ ತರ. ಅದರ ಚೋಳರ ಚೇಳಿನ ಚಿತ್ರ, ಕದಂಬರ ನವಿಲಿನ ಚಿತ್ರ ಎರಡೂ ಇತ್ತು . ಆದ್ರೆ ಒಳಗೆ ಎಂತೂ ಇರ್ಲೆ.. ಅದನ್ನೂ ಹಾಳು ಮಾಡಿಕ್ಕು ಪಾಪಿಗಳು. ಅಲ್ಲಿ ಮೇಲೆಲ್ಲಾ ಬಾವಲಿ.ಬಾವಲಿ ಹಿಕ್ಕೆ ವಾಸ್ನೆಗೋ , ಅತ್ವಾ ಭೂಮಿಯಿಂದ ಅಷ್ಟು ಕೆಳಗೆ ಇಳ್ದಿದ್ದಕ್ಕೊ ಎಂತೋ ಗಂಟ್ಲೆಲ್ಲಾ ತುರ್ಸಿದಂಗೆ, ಉಸ್ರು ಕಟ್ದಂಗೆ ಆಗ್ತಿತ್ತು. ಒಬ್ಬಂಗೆ ಅದ್ರ ಫೋಟೋ ತಗ್ಯಕ್ಕು ಹೇಳಿ.


ಇನ್ನೊಬ್ಬ ಪ್ರೆಂಡು ಬ್ಯಾಟ್ರಿ ಅದಕ್ಕೆ ಮಾತ್ರ ಹೊಡ್ಯಡ ಮಾರಾಯ. ಎದ್ದು ಬತ್ತ ಹೇಳಿ ಹೆದ್ರತಿದ್ದ. ಅವ ಮಧ್ಯ ನಡ್ಯಕ್ಕಿದ್ರು ಸುಮಾರು ಸಲ "ಅಮ್ಮಾ, ಬಾವಲಿ!!" ಹೇಳೀ ಹೆದ್ರಕಂಡಿದ್ದ.. ಬೆಳಕಿಗೆ ಬಾವಲಿ ಬರೋಲ್ಲ ಹೆದ್ರಬೇಡಿ ಹೇಳಿ ಸಮಾಧಾನ ಮಾಡ್ದ ಗೈಡು. ಕೊನಿಗೆ ಹಂಗೇ ಮೇಲೆ ಹತ್ತಿದ್ಯ. ಅಲ್ಲಿ ಲಕ್ಷ್ಮಿ ವಿಗ್ರಹದ ಕಿಂಡಿ ಹಿಂಗೆ ಸುಮಾರು ದೇವನು ದೇವತೆಗಳು ಹತ್ತ ದಾರೀಲಿ ಬಲಗಡೆ ಗೋಡೆ ಮೇಲೆ ಇದ್ದಿದ್ದ. ಎಲ್ಲಾ ನೋಡ್ಕ್ಯಂಡು ಮೇಲೆ ಹತ್ತಿದ್ಯ. ಮೇಲೆ ಹತ್ತಕ್ಕಿದ್ರೆ ನಂದಿ ದ್ವಾರದತ್ರ ಬಂದಾಗ ಅವ ತೋರ್ಸಿದ. ನೋಡಿ, ಇದು , ನಾವು ಇಳಿದ ದಾರಿ, ಇದು ಹತ್ತಿದ್ದು ಹೇಳಿ. ಒಂದು ಪ್ರದಕ್ಷಿಣೆ ಹಾಕ್ದಂಗೆ ಆಗಿತ್ತು ನಂಗ..ಕೊನಿಗೆ ಅಂತೂ ಇಳ್ದ ಬಾಗ್ಲಿಗೆ ಬಂದ್ಯ.. ಬೆಳಕು ಕಾಣಕ್ಕಿಡಿತ್ತು. ತಾಜಾ ಗಾಳಿ.. ಅಬ್ಬಾ.. ಉಸ್ರು ಬಂದಂಗಾತು. ಗಾಳಿ ಮಹತ್ವ ಗೊತಾಗಿದ್ದು ಇವತ್ತೇಲೆ ಅಂದ ಫ್ರೆಂಡು. ಹೌದು ಅನುಸ್ತು.ಅಲ್ಲಿ ಸಸ್ಯವನ,ಕೆರೆ ಎಲ್ಲ ನೋಡ್ಕಂಡು , ಮತ್ತೆ ವಾಪಾಸ್ ಬಂದ್ಯ. ಅಲ್ಲೇ ಮೇಲ್ಗಡೆ ನೂರಾ ಎಂಟು ಶಿವಲಿಂಗ ಇದ್ದಡ. ಅಲ್ಲಿ ಗೈಡು ಹೇಳ್ಲೆ. ನಂಗಕ್ಕೂ ವಾಪಾಸ್ ಬತ್ತಿರಕಿದ್ರೆ ಗೊತ್ತಾತು. ನಿಂಗ ಏನಾದ್ರೂ ಹೋದ್ರೆ ಹೋಗ್ಬನ್ನಿ..
(ಮುಂದೆ: ಭಾಗ-೨ : ಚಿತ್ರದುರ್ಗದ ಕಲ್ಲಿನ ಕೋಟೆ.. )

Thursday, October 20, 2011

ಸೋಲು


ಸಾಮಾನ್ಯವಾಗಿ ಯಾರೂ ಸೋಲೋಕಿಷ್ಟಪಡಲ್ಲ. ಬೇಕಂತನೇ ಸೋಲೋರು ಇರಬಹುದು. ಆದ್ರೆ ಆ ಸೋಲಲ್ಲಿ,ಸೋಲೋ ಪ್ರಯತ್ನದಲ್ಲಿ ಆತ ಗೆದ್ದಿರ್ತಾನೆ ಅಲ್ವಾ? ಜೀವನ ಅಂದ್ಮೇಲೆ ಬೇವು ಬೆಲ್ಲ ಎಲ್ಲ ಇರತ್ತಪ್ಪ, ಅದನ್ನ ಸಮಾನವಾಗಿ ಸ್ವೀಕರಿಸಬೇಕು ಅನ್ನೋ ವೇದಾಂತದ ಮಾತುಗಳನ್ನ, ಸೋತವ ಸತ್ತ ಅನ್ನೋ ತರದ ನಕಾರಾತ್ಮಕ ಮಾತುಗಳನ್ನ ಸ್ವಲ್ಪ ಬದಿಗಿಟ್ಟು ನೋಡಿದ್ರೆ ನಾವಿಡೋ ಪ್ರತೀ ಹೆಜ್ಜೇಲೂ ಗೆಲುವಿನ ತುಡಿತ ಅಥವಾ ಸೋಲಿನ ಭಯ ಎದ್ದು ಕಾಣುತ್ತೆ.ಒಲಿಂಪಿಕ್ಕಲ್ಲಿ ಬಂಗಾರ ಗೆದ್ದವನದು ಮಾತ್ರ ಗೆಲುವು, ೨ನೇ , ೩ನೇ ಸ್ಥಾನ ಪಡೆದವರದ್ದು ಸೋಲು ಅಂತಲ್ಲ.ತಮ್ಮ ದೇಶದ ಉಳಿದ ಲಕ್ಷಾಂತರ ಜನರ ಮಧ್ಯದಿಂದ ಆ ಹಂತದ ವರೆಗೆ ಬಂದವರೆಲ್ಲಾ ಅಟ್ಟರ್ ಫ್ಲಾಪುಗಳು ಅಂತ ಅಲ್ಲ. ಒಂದು ಮ್ಯಾಚಿನಲ್ಲಿ ಸೋತ ಮಾತ್ರಕ್ಕೆ ಇಡೀ ತಂಡ ಅಯೋಗ್ಯ ಅಂತ ಅಲ್ಲ.ಕೊನೆ ಫಲಿತಾಂಶ ಏನೇ ಆದ್ರೂ ಅದರ ಹಿಂದೆ ಎರಡೂ ತಂಡಗಳ ಹಲವು ಅದ್ಭುತ ಕ್ಯಾಚುಗಳು,ಹೊಡೆತ, ರಕ್ಷಣೆಗಳು, ಮುಖ್ಯವಾಗಿ ಸ್ವಲ್ಪವಾದ್ರೂ ಒಳ್ಳೆಯ ಆಟ ಇರುತ್ತೆ. ಒಂದು ಗೋಲು ಬಿಟ್ಟ ಕಾರಣಕ್ಕೆ ಫೈನಲಲ್ಲಿ ತಂಡ ಮ್ಯಾಚು ಸೋಲ್ತು ಅಂದ್ರೆ ಅದು ಆ ರಕ್ಷಕನ ಜೀವನದ ಘೋರ ಸೋಲು ಅಂತ ಅಲ್ಲ..ಬಿಟ್ಟ ಗೋಲಿಗೆ ಸುರಿದ ಟೀಕಾಸ್ತ್ರದ ಸುರಿಮಳೆಯ ಹಿಂದೆ ಹೋಗಿ ಹುಡುಕಿದರೆ ಇಡೀ ಪಂದ್ಯದಲ್ಲಿ ಆತ ತಡೆದ ಗೋಲುಗಳ ಪರಿಶ್ರಮದ ಯಶಸ್ಸು ಸಮಾಧಿಯಾಗಾದ್ರೂ ಸಿಗುತ್ತೆ.

ಒಬ್ಬೊಬ್ಬರ ದೃಷ್ಟೀಲಿ ಒಂದೊಂದು ಸೋಲಾಗಿರಬಹುದು. ನಮ್ಮ ದೃಷ್ಟಿಗೆ ಸೋಲು ಅಂತ ಕಂಡದ್ದು ಆತ/ಆಕೆಯ ದೃಷ್ಟೀಲಿ ಸೋಲಾಗಿರ್ದೇ ಇರಬಹುದು.ಎಲ್ಲರ ಪಾಲಿಗೂ , ಎಲ್ಲ ಕಾಲಕ್ಕೂ ಹೌದೆನ್ನಬಹುದಾದಂತ ಸಾರ್ವಕಾಲಿಕ ಸತ್ಯ ಅಂತೇನೂ ಇಲ್ಲವಲ್ಲ.. ಹಾಗೆಯೇ ಸೋಲು ಕೂಡ. ಸದಾ ಸೋಲ್ತಿರ್ತಾನೆ, ಅದನ್ನೇ ಬಯಸ್ತಾನೆ, ಅದಕ್ಕೆ ಒಗ್ಗಿಹೋಗಿದಾನೆ ಅಂತ ಕಾಣಿಸ್ತಿರೋ ಜೀವವೂ ಒಂದಲ್ಲ ಒಂದು ರೀತಿ ಗೆಲುವಿಗೆ ಹಂಬಲಿಸ್ತಾ ಇರತ್ತೆ.ಅಪಾರ ಸಾಲ ಮಾಡಿ ತೀರಿಸಕ್ಕಾಗ್ದೇ ಯಾವುದೋ ದುರ್ವಸನಕ್ಕೆ ತುತ್ತಾಗಿ ದರಿದ್ರ ಜೀವನ ನಡೆಸ್ತಿರೋ ವ್ಯಕ್ತಿ ಲೋಕದ ಕಣ್ಣಿಗೆ ಸೋತಂತೆ ಕಾಣಬಹುದು. ಆದರೆ ಆತನ ಕಣ್ಣಲ್ಲಿ ಅವನೇ ಹೀರೋ. ಕುಡಿತದ ನಶೆಯಲ್ಲೋ, ಹೆಂಡತಿಗೆ ಹೊಡೆಯೋದ್ರಲ್ಲೊ, ಮಕ್ಕಳಿಗೆ ಜಪ್ಪೋದ್ರಲ್ಲೋ , ಇನ್ಯಾರ್ದೋ ದುರ್ಗುಣಗಳನ್ನ ಪಟ್ಟಿ ಮಾಡೋದ್ರಲ್ಲೋ ಅವನು ಜಯ ಕಾಣ್ತಾ ಇರ್ತಾನೆ.ಓದೋದ್ರಲ್ಲಿ ನಯಾಪೈಸಾ ಉಪಯೋಗ ಇಲ್ಲ ಅಂತ ಬಯಿಸಿಕೊಳ್ತಾ ಇರೋ ಹುಡ್ಗ ಯಾವುದೋ ಕಂಪ್ಯೂಟರ್ ಗೇಮಲ್ಲೋ, ಹೊರಾಂಗಣ ಆಟದಲ್ಲೋ ಭಾರಿ ಚತುರನಾಗಿರ್ತಾನೆ. ಸಂಗೀತ, ನಾಟಕ, ತಬಲ, ಟ್ರೆಕಿಂಗ್, ಚಿತ್ರಕಲೆ ಹೀಗೆ ಅವನ ಆಸಕ್ತಿ ಬೇರೆ ಏನೋ ಇರುತ್ತೆ. ಯಾರದ್ದೋ ಒತ್ತಾಯಕ್ಕೆ ಗಂಟುಬಿದ್ದು ಇಲ್ಲಿ ಬಂದು ಬಿದ್ದಿರೋ ಅವನಿಗೆ ಇದು ಉಸಿರುಗಟ್ಟಿಸ್ತಾ ಇರುತ್ತೆ. ಪರಿಕ್ಷೆಯಲ್ಲಿ ಫೇಲಾಗೋದೇ ಅಭ್ಯಾಸವಾಗಿದೆ ಅನ್ನೋ ಹುಡುಗನಿಗೆ ಆ ಪರೀಕ್ಷೆ ಪರೀಕ್ಷೆಯೇ ಅಲ್ಲ ಅನ್ನಿಸೋಕೆ ಶುರು ಆಗಿರ್ಬೋದು. ಒತ್ತಾಯಕ್ಕೆ ಅಲ್ಲಿ ಬಂದು ಸೇರಿದ ಅವ ಆ ಮೂಲಕ ಸೇಡು ತೀರಿಸಿಕೊಳ್ಳೋದ್ರಲ್ಲಿ ಜಯ ಕಾಣ್ತಿರಬಹುದು. ಯಾವುದೇ ಟೀಕೆ ಟಿಪ್ಪಣಿಗಳಿಗೆ. ಮುಲಾಜಿಗೆ ಒಳಗಾಗದಂತಹ ನಾನಿರೋದೆ ಹಿಂಗೆ, ನನಗೆ ಬೇಕಾದಂಗೆ. ನೀನು ಏನು ಬೇಕಾರು ಮಾಡಿಕೋ ಎನ್ನೋ ತರದ ದಿವ್ಯ ನಿರ್ಲಕ್ಷ್ಯ ಹೊಂದೋದ್ರಲ್ಲಿ ಮಾನಸಿಕ ಜಯ ಅರಸ್ತಿರಬಹುದು ಆತ.ಬದುಕಿನ ಮೇಲೆಯೇ ಹಲವಾರು ಕಾರಣಗಳಿಂದ ಜಿಗುಪ್ಸೆ ಬರ್ಬೋದು ಕೆಲವರಿಗೆ. ಜೀವನಾನ ಎದುರಿಸಕ್ಕಾಗ್ದೇ ಆತ್ಮಹತ್ಯೆಗೆ ಶರಣಾದ ಆತ ಮಹಾ ಹೇಡಿಯಂತೆ ಕಾಣಿಸಬಹುದು ಹಲವರಿಗೆ. ಆದರೆ ಬದುಕಿದ್ದಂತೂ ಏನೂ ಸಾಧಿಸಲಿಕ್ಕೆ ಆಗಲಿಲ್ಲ. ಎಷ್ಟೂಂತ ಸೋಲೋದು,ಎಷ್ಟೂಂತ ತಲೆ ತಗ್ಸೋದು ಈ ಸೋಲೂ ಸಾಕು, ಬದುಕೂ ಸಾಕು, ಸತ್ತು ಬಿಡೋಣ ಅನ್ನೋ ಅಪಾಯಕಾರಿ ಮನೋಭಾವ ಅವರಲ್ಲಿ ಬೆಳೆದಿರಲಿಕ್ಕೂ ಸಾಕು. ಅವರ ದೃಷ್ಟಿಯಲ್ಲಿ ಈ ಸೋಲ ಬಿಡಿಸಲಾಗದ ಚಕ್ರದಿಂದ ಬಿಡಿಸುವಂತಹ ಏಕೈಕ ಗೆಲುವು ಸಾವು. ಸಮಾಜದ ಮೇಲೆ ಜಿಗುಪ್ಸೆ ತಾಳಿರೋ ಒಬ್ಬ ಯಾರನ್ನೋ ದೋಚೋದ್ರಲ್ಲೋ , ಕೊಲ್ಲೋದ್ರಲ್ಲೊ, ಇನ್ಯಾರದೋ ಮಾಹಿತಿ, ದುಡ್ಡು ಕದಿಯೋದ್ರಲ್ಲೋ ಜಯ ಕಾಣ್ತಿರಬಹುದು. ತನಗೆ ಒಳ್ಳೆಯ ದಾರಿಯಲ್ಲಿ ಸಿಗದ ಗೆಲುವ ಅಲ್ಲಿ ಹುಡುಕ್ತಾ ಇರಬಹುದು. ಅವನೂ ಜೀವನದಲ್ಲಿ ಗೆದ್ದವನೇ. ಆದರೆ ಲೋಕಕಂಕ ಅಷ್ಟೆ


ಕ್ಲಾಸಿಗೆ ಫಸ್ಟು ಬರುತ್ತಿದ್ದ ಬಡ ವಿದ್ಯಾರ್ಥಿ ಸರ್ಕಾರದ ವಿದ್ಯಾರ್ಥಿವೇತನ ಪಡೆಯುತ್ತಲೇ ಓದಿ ಬೆಳೆದು ದೊಡ್ಡವನಾಗಿ ಅಮೇರಿಕಕ್ಕೆ ಹಾರುತ್ತಾನೆ. ಅಲ್ಲಿ ಹೋಗಿ ಅಲ್ಲೇ ಮದುವೆಯಾಗಿ ಸಂಸಾರವನ್ನೂ ಹೂಡುತ್ತಾನೆ.ಅದೇ ನಪಾಸಾಗಿ ಹಳ್ಳಿಯಲ್ಲೇ ಉಳಿದ ರಂಗ ಈಗ ಅಂಗಡಿ ಇಟ್ಕೊಂಡು ಹೆಂಡತಿ ಮಕ್ಕಳನ್ನು ಸಾಕ್ತಾ ಇದಾನೆ. ಮೊದಲು ಬರುತ್ತಿದ್ದ ಹುಡುಗನ ದೃಷ್ಟೀಲಿ ಹಳ್ಳಿರಂಗನ ತರದವರೆಲ್ಲಾ ಜೀವನದಲ್ಲಿ ಏನನ್ನೂ ಗೆಲ್ಲಲಾಗದವರು.ಎಕ್ಸಾಮಲ್ಲಿ ಕಾಫಿ ಹೊಡ್ದೂ ಡುಮುಕಿ ಹೊಡೀತಿದ್ದ ಅವ ತನ್ನ ಮಕ್ಕಳಿಗೆ ಏನಂತ ಹೇಳ್ಕೊಡ್ತಾನೆ. ತಾ ಹುಟ್ಟಿದ್ದಂತೂ ಹಳ್ಳೀಲಿ, ಮಕ್ಕಳನ್ನೂ ಅಲ್ಲೇ ಓದೋ ಹಾಗೆ ಮಾಡಿದಾನಲಾ ದುಡಿಯೋಕ್ಕಾಗದ ಸೋಮಾರಿ ಅಂತ. ಆದರೆ ಹಳ್ಳಿರಂಗನ ದೃಷ್ಟೀಲಿ ತನ್ನ ಕಾಲು ಮೇಲೆ ನಿಂತ ತಾನೇ ಹೀರೋ. ಸಾಯೋ ಕಾಲಕ್ಕೆ ಸ್ವಂತ ಅಮ್ಮನ ಜೊತೆಗಿರಕಾಗದ ಮೇಲೆ ಎಷ್ಟಿದ್ರೇನು? ಇಲ್ಲಿ ಬಡತನ ಅಂತೆ. ಅವಕಾಶ ಇಲ್ಲಂತೆ, ಯಾರ್ದೋ ಕಾಲ್ಕೆಳಗೆ ಕೆಲ್ಸ ಮಾಡೋದೇ ಸ್ವರ್ಗ ಅಂತ ಪರಿಸ್ಥಿತಿ ಎದುರಿಸಕ್ಕಾಗ್ದೇ ಇರೋನು ಹೇಡಿ ಅಂತ.ಯಾರು ಸರಿ, ಯಾರು ತಪ್ಪು ಅಂತಲ್ಲ ಇಲ್ಲಿ. ಯಾವುದು ಮೇಲು ಯಾವುದು ಕೀಳು ಅಂತಲ್ಲ. ಒಬ್ಬನ ಕಣ್ಣಿಗೆ ಕಾಣಿಸ್ತಿರೋ ಸೋಲು ಮತ್ತೊಬ್ಬನ ಪಾಲಿಗೆ ಸೋಲಲ್ದೇ ಇರಬಹುದು ಅಂತ. ಖಾಲಿ ಕೂತರೇ ಮನೆಯಲ್ಲಿ ಅಕ್ಕಿ ಕಾಳು ಬೇಯಲ್ಲ ಅಂತ ಗೊತ್ತಿರೋ ಹುಡುಗ ಸಿಕ್ಕಿದ ಯಾವುದೋ ಜವಾನನ ಕೆಲಸಕ್ಕೆ ಸೇರಿರಬಹುದು. ಯಾರೇ ಯಾರನ್ನಾದರೂ ೨೪ ಘಂಟೆ, ೩೬೫ ದಿನವೂ ವೀಕ್ಷಿಸುತ್ತಾ ಇರಲು ಸಾಧ್ಯವೇ? ಬೆಳಿಗ್ಗೆ ದುಡಿಯುವ ಆತ ರಾತ್ರೆ ತನ್ನ ಕನಸಾದ ಐ.ಎ.ಸ್ ಗೆ ಓದಿ ಅದನ್ನು ಪಾಸೂ ಮಾಡಬಹುದು.ಬಡತನಕ್ಕೆ ಸೋತಿತು ಅವನ ಪ್ರತಿಭೆ ಅಂತ ಮುಂಚೆ ಆಡಿ ನಕ್ಕವರ ಕಥೆ ಈಗ ? .

ಸೋಲೇ ಗೆಲುವಿನ ಸೋಪಾನ ಅಂತ ಅಂದ್ರೂನೂ , ಸೋಲು ಗೆಲುವಿಗಿಂತ ಹೆಚ್ಚಿಗೆ ಕಲಿಸುತ್ತೆ ಅಂದ್ರೂನು ಯಾರೂ ಈ ಮಾತನ್ನ ನಂಬ್ಕೊಂಡು ತೆಪ್ಪಗೆ ಕೂರೊಲ್ಲ ಸೋತಾದ ಮೇಲೆ. ಮತ್ತೆ ಮಾಡ್ತಾ ಇರೋ ಪ್ರಯತ್ನದ ಹಿಂದೆ ಸೋಲಬಾರದೆಂಬ ಛಲ ಇರ್ಬೋದು, ಈ ಸಲವೂ ಸೋತ್ರೆ ಏನಪ್ಪಾ ಗತಿ ಅಂತ ಭಯ ಇರ್ಬೋದು, ಸೋತ್ರೆ ಏನಾಗತ್ತೆ ಮಹಾ? ಮಾಡ್ಬೇಕು ಮಾಡ್ತೀನಿ ಅನ್ನೋ ವಿಚಿತ್ರ ನಿರ್ಲಕ್ಷನೂ ಇರ್ಬೋದು. ಹಾಗೇನಾದ್ರೂ ಇದ್ರೆ ಅವನನ್ನು ಸೋಲಿಸೋ ಸೋಲಿಗೇ ಸೋಲೂಂತ ಅರ್ಥ ಅಷ್ಟೆ. ಒಂದು ವಿಷಯದ ಸೋಲು ಇನ್ನೊಂದಕ್ಕೆ ಲಾಭದಾಯಕವಾಗಿ ಬದಲಾಗುತ್ತೆ. ಅದರ ದೃಷ್ಟೀಲಿ ಅದು ಗೆಲುವಾಗಿ ಕಾಣ್ತಿರುತ್ತೆ. ಕವನ ಬರ್ದು ಬರ್ದು ಅದರಲ್ಲಿ ನಿರೀಕ್ಷಿತ ಫಲ ಸಿಗದೇ ಕಥೆ ಬರ್ಯಕ್ಕೆ ಶುರು ಮಾಡಿದ ಹುಡುಗ ಮುಂದೆ ದೊಡ್ಡ ಬರಹಗಾರ ಆದರೆ ಅವನ ಕವನದಲ್ಲಿನ ಸೋಲು ಕಥೆಗಾಗಿನ ಗೆಲುವಲ್ಲವೇ. ತಾನಂದ್ಕಡಿದ್ದನ್ನ ಸಾಧಿಸಬೇಕು ಅಂತ msc ಲೀ ಬೇಕಂತಲೇ ಫೇಲಾಗೋ ಪರಮಾತ್ಮ ಹೀರೋನ ಪರೀಕ್ಷೆ ಫೇಲು, ಪಾಸಾ ಫೇಲಾ? ಸಿನಿಮಾ ಬೇರೆ, ಜೀವನ ಬೇರೆ, ಒಪ್ಕೊಳ್ಳೋಣ. ಅಂತ ಪರಮಾತ್ಮರು ಎಷ್ಟು ಜನರಿದ್ದಾರೆ ನಮ್ಮ ಮಧ್ಯೆ ಗೊತ್ತಾ? ಪಿಯುಸಿಯಲ್ಲಿ ಮೂರನೇ ಸ್ಥಾನ ಪಡೆದ ಮಗ ಓಡಿ ಹೋಗಿರ್ತಾನೆ ಮನೆ ಬಿಟ್ಟು. ಮನೆಯಲ್ಲಿ ಮುಂದೆ ಓದಿಸೋ ಶಕ್ತಿ ಇಲ್ಲ ಅಂತ. ಅವನೀಗ ಕರ್ನಲ್ಲು ಆರ್ಮೀಲಿ. ಜೊತೆಗೇ ಓದಿ ಓಡಿ ಹೋದ ಅಂತ ಹಿಂದೆ ಬಿಟ್ಟು ಆಡಿಕೊಳ್ತಿದ್ದೋರು ಯಾವುದೋ ಆಫೀಸುಗಳಲ್ಲಿ ಕ್ಲರ್ಕುಗಳು, ಕೆಲವು ಮ್ಯಾನೇಜರುಗಳು.. ಯಾರದು ಸೋಲು, ಯಾರದು ಗೆಲುವು? ಹೇಳೋಕ್ಕಾಗಲ್ಲ ಅಲ್ವಾ ? ಸೋಲು ಸೋಲಲ್ಲ ಸ್ವಾಮಿ , ಸೋಲಿಗೆ ಶರಣಾಗಿ ಸೋತೋಗೊವರೆಗೂ, ಸೋತರದು ಸೋಲಲ್ಲ ,ಇಂದು ಸೋಲಿಸದ ಸೋಲೇ ನಾಳೆ ಸೋಲಬಹುದು. ನಿಮ್ಮ ದೃಷ್ಟಿಯಲ್ಲಿ ಸೋತರೆ ಮಾತ್ರ ಅದು ಸೋಲು. ಅದೂ ಸೋಲಲ್ಲ , ಹಾಗೆಂದು ಸುಮ್ಮನೆ ಕೂತರದು ಸೋಲು. ಹಿಂತಿರುಗಿ ನೋಡಿ. ಆ ಒಂದು ಸೋಲ ಹಿಂದೆ ನಿಮ್ಮಿಂದ ಸ್ವಲ್ಪವಾದ್ರೂ ನಿರೀಕ್ಷಿಸುತ್ತಿರೋ ಎರಡು ಕಣ್ಣುಗಳಾದ್ರೂ ಕಾಣತ್ತೆ. ಇನ್ನೂ ಕಾಣಲಿಲ್ಲಾಂದ್ರೆ ಕನ್ನಡೀಲಿ ನೋಡಿ. ಗ್ಯಾರಂಟಿ ಕಾಣುತ್ತೆ

Wednesday, October 19, 2011

ಕಳುವಾಯ್ತು ಮನೆಯಲ್ಲಿ

ಕಳುವಾಯ್ತು ಮನೆಯಲ್ಲಿ ಇನ್ನಿಲ್ಲ ಬಂಗಾರ
ಹುಡುಕಿ ಸುಸ್ತಾಗೋದ್ರು ಸಿಗಲಿಲ್ಲ ಆ ಚೋರ
ಮನೆ ಕಾಯಲ್ಯಾರುಂಟು ನನಗೆಲ್ಲಿ ಸಂಸಾರ
ಹಾಕಿದ್ದ ಬೀಗದ ಮೇಲೆ ವಿಶ್ವಾಸವಪಾರ
ಅದಕ್ಕೆ ಸುಲಭವಾಯ್ತೆ ಒಡೆದವನ ವ್ಯವಹಾರ |1|

ಏನ ತಂದೆಯೋ ಬೀಗವೊಡೆಯಲು
ಸದ್ದಾಗದಂತೆ ಒಳಗೆ ನುಗ್ಗಲು
ಬೀರುವೊಳಗಿನ ಅಜ್ಜಿ ಬಳೆಗಳ
ಚಿನ್ನವೆ ನೋಡಲು ಜಗ್ಗಿ ಮುರಿಯಲು|2|

ಇಡೀ ಕಪಾಟನೇ ಖಾಲಿ ಮಾಡಿದೆ
ರೇಡಿಯೋ ಜೊತೆಗಿನ ಕ್ಯಾಸೆಟ್ ಬಿಡದೆ
ಸಿ.ಡಿಯೆನ್ನದೆ, ಪೆನ್ ಡ್ರೈವ್ ಮರೆಯದೆ
ನೇತಾಡುತಿದ್ದ ಪ್ಯಾಂಟನು ಬಿಡದೇ
ಅದ ಕೊಂಡೊಯ್ಯಲು ನನ್ನ ಬ್ಯಾಗನೇ
ಕದ್ದೆಯ ನೀಚ, ಭಲೇ ಕಳ್ಳನೇ |3|

 

ಮಾರನೇ ದಿನ ನೋಡೊಡೆದಿದೆ ಬೀಗ
ರೂಮ ತುಂಬೆಲ್ಲಾ ಹರಡಿದ ಗಾಜು
ಬೆಳಬೆಳಗ್ಗೆಯೇ ಬಂತು ಬುಲಾವು
ಹೋಗಿದೆ ಕಂಪ್ಯೂಟರ್ಜೊತೆ ಹಲವು
ಬಸ್ಸಲ್ಲಿ ಬರುವುದರೊಳಗೆ ಪೋಲಿಸು
ಬಂದರಲ್ಲಿಗೆ ಹುಡುಕುತ ಕಳ್ಳಗೆ
ದಾರಿಲಿ ರಿಂಗಿಸಿ ಜಂಗಮ ವಾಣಿ
ಕಂಪ್ಯೂಟರೊಂದೆ ಉಳಿದಿದೆ ಮಾಣಿ
ಇಂದಲ್ಲ ನಾಳೆ ಸಿಗುವವ ಕಳ್ಳ
ಅಲ್ಲಿಯವರೆಗೆ ಕಾಯು ನೀ ಮಳ್ಳ|4|

Thursday, October 13, 2011

ಅರೆನಿದ್ದೆ ನೇತ್ರದಲಿ

ಅರೆನಿದ್ದೆ ನೇತ್ರದಲಿ ಕನಸುಗಳು ರಾತ್ರೆ
ಮುಚ್ಚಿದ ಕಣ್ಣೊಳಗೆ ಬಣ್ಣಗಳ ಜಾತ್ರೆ
ನನಸಾಗದಾಸೆಗಳು ಮಸುಕಾದ ನೆನಪುಗಳು
ಮುಸುಕೊಳಗೆ ಸುಳಿದವು ನಸುಕಾಗೊ ಮುಂಚೆ |1|

ರಾಜ ನಾ ರಾಜ್ಯಕೆ, ಹೋರಾಟ ರಂಗದಲಿ
ಟೀವಿಯಲಿ ಕೃಷ್ಣನ ನೋಡಿದಾ ರಾತ್ರೆ
ಫುಟ್ಬಾಲ್ ಪಂದ್ಯವನು ನೋಡಿದಿರುಳು ಪಕ್ಕಕ್ಕೆ
ಮಲಗಿದವ ಬಯ್ಯುತಿಹ ನಾ ಕೊಟ್ಟ ಗೋಲಿಗೆ |2|

ನೆನಪಿನಲಿ ಕೆಲವೊಂದು ಮರೆಯಾಗುವುದು ಹಲ
-ವರಿಯದ ಪ್ರಶ್ನೆಗಳಿಗುತ್ತರವು ಒಮ್ಮೊಮ್ಮೆ
ಎಷ್ಟೊಂದು ಕಲ್ಪನೆ, ಜಯದ ಸವಿ ನೆನಪುಗಳು
ಸೋಲ ಬಿಡಬಹುದಲ್ಲ ಇದು ಬರೀ ಕನಸೆಂದು
|3|

ಕರೆಂಟಿಲ್ಲದೆ

ಕರೆಂಟಿಲ್ಲದೆ ಕಿರಿಕಿರಿಯೆಲ್ಲ
ಪಟ್ಟಿ ಮಾಡಲು ಒಂದೆರಡಲ್ಲ
ರಾತ್ರಿ ಮೆಸೇಜಿಗೆ ಉತ್ತರವಿಲ್ಲ
ಮುನಿದ ಗೆಳತಿಗೆ ತಿಳಿಸಲಿ ಹೇಗೆ
ತಂಟೆಯ ತಮ್ಮನ ತಣಿಸವುದೇಗೆ? |1|

ಏನ ಕೇಳಲಿ ಬ್ಯಾಟರಿಯಿಲ್ಲ
ಪೇಟೆಗೆ ಗಂಟೆ, ಹಳ್ಳಿಗೆ ತಂಟೆ
ತೆಗೆಯುವ ನೀವು ಯಾಕೀಗೆಂದು
ಅರಿಯೆವು ನಾವು ವಟವಟವೆಂದು
ಏಳುವ ಅಜ್ಜಿಗೆ ಮಧ್ಯರಾತ್ರಿಗೆ
ಓದೋ ತಂಗಿಗೆ ಬರುವೆಕ್ಸಾಮಿಗೆ
ಹುಡುಕುತಾ ದೀಪವ ಕೂರೋ ಶಾಪ|2|

ಅಂಗಡಿಯಿಟ್ಟೆ ಹಾಲು ಮೊಸರಿಗೆ
ಪ್ರಿಜ್ಜಲೂ ಕೊಳತದಿ ನಿಮ್ಮ ಚೇಷ್ಟೆಗೆ
ರಾತ್ರಿಯೂ ಉಳಿಸುವ ಖಾತರಿಯಿಲ್ಲ
ಏನ ಹುಡಕಲಿ ಬರಡು ಬದುಕಿಗೆ |3|

ಭೂಮಿಯ ನಂಬಿ ಬೆಳೆಯ ಬಿತ್ತಿದೆ
ಜಲವನ್ನು ನಂಬಿ ಮೊಟಾರಿಕ್ಕಿದೆ
ಜವರಾಯನಂತೆ ಬಂದೆಯ ಸ್ವಾಮಿ
ಕರೆಂಟೆ ಇಲ್ಲ ತ್ರೀಫೇಸೆಲ್ಲಿ?
ಒಣಗಿ ಸಾಯುತಿಹೆ ಮಕ್ಕಳು ಇಲ್ಲಿ

Wednesday, October 12, 2011

ಉಸಿರಾಟದಿಂದ ವಿದ್ಯುತ್

ಉಫ್, ಉಫ್ ಅಂತ ಗುಂಡ ಊದುತಾ ಇದ್ದ.. ಏನೋ ಬರ್ತಡೇ ಬತ್ತಿ ಊದಕ್ಕೆ ಅಂತ ಈ ಮಕ್ಳಾಟದ ಕೊಳವೇಲಿ ಪ್ರಾಕ್ಟೀಸ್ ಮಾಡ್ತಿದೀಯ ಅಂತ ಅಲ್ಲಿಗೆ ಬಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಹೇ, ಊರಲ್ಲಿ ಅಮ್ಮ ಒಲೆಗೆ ಕೊಳವೇಲೆ ಊದೋದು ನೆನಪಾಯ್ತಾ ಮಾರ್ರೆ.. ಎಷ್ಟು ಪ್ರೀತಿ ಅಮ್ಮನ ಮೇಲೆ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಇಳಾ ಬಂದು ನೋಡ್ತಾಳೆ, ಗುಂಡನ ಬಾಯಲ್ಲಿ ಒಂದು ಪ್ಲಾಸ್ಟಿಕ್ ಕೊಳವೆ, ಸ್ಟ್ರಾ ಅರ್ಧಕ್ಕೆ ಕತ್ತರಿಸಿದಂಗೆ, ಅದರ ತುದಿಗೆ ಸಣ್ಣ ಪ್ಲಾಸ್ಟಿಕ್ ಬುಟ್ಟಿ. ಅದರ ಮೇಲೆ ಅಲ್ಲಲ್ಲ ಗಾಳೀಲಿ ಪ್ಲಾಸ್ಟಿಕ್ ಚೆಂಡು..ವಾ! ಬರ್ನೋಲಿ ನಿಯಮ ಅಂತ ಕೂಗಿದ್ಲು.. ಹಾಂ.. ಎಲ್ಲಿ ಗರ್ನಲ್?..ಅಂತ ತಿಪ್ಪ ಒಂದ್ರೌಂಡು ಕೂತಲ್ಲಿಂದ ಹಾರಿದ.. ಎಲ್ಲ ನಕ್ರು..ಓಯ್ ಗರ್ನಲ್ಲಲ್ಲ ಮಾರ್ರೆ.. ಅವ್ಳು ಹೇಳಿದ್ದು ಗಾಳೀಲಿ ತೇಲಾಡೋ ಬಗೆಗಿನ ಬರ್ನೋಲಿ ನಿಯಮದ ಬಗ್ಗೆ ಅಂದ ಮಂಜ..

 ಹೌದು.. ಉಸಿರಾಟದಿಂದ ವಿದ್ಯುತ್ತು ತಯಾರು ಮಾಡ್ಬೋದಂತೆ. ಅದ್ನ ಓದಿದ ಮ್ಯಾಲಿಂದ ನಂಗೆ ಇದ್ರ ಮ್ಯಾಲೆ ಸ್ಯಾನೆ ಪಿರುತಿ ಹುಟ್ಟೈತೆ ಅಂದ ಗುಂಡ.. ತನ್ನ ಪ್ಲಾಷ್ ಬ್ಯಾಕ್ ಆಟಿಕೆ ತೋರಿಸುತ್ತಾ..ಹೌದೆನ್ಲಾ? ಕೆಲವರ ಬಾಯಿಂದ ವಿಚಿತ್ರ ವಾಸ್ನೆ ಬರ್ತಾ ಇರ್ತೈತೆ. ಹತ್ರಕ್ಕೆ ಹೋದವ್ರು ದೂರ ಓಡೋಗಂಗೆ.. ನಾನೂ ಕಂಡಿವ್ನಿ ಅಂದ ತಿಪ್ಪ.. ಮಂಜಂಗೆ ಮೀನು ಸಂತೆ ದಿನ ಬೆಳಿಗ್ಗೆ ಬಸ್ಸಿಗೆ ಹೋಗಿದ್ದು ನೆನ್ಪಾತು. ಇಳಾಗೆ ಪಕ್ಕದ್ಮನೆ ಆಂಟಿಯ ಬೆಳ್ಳುಳ್ಳಿ ಎಫೆಕ್ಟು ನೆನ್ಪಾತು. ಆದ್ರೆ ಅದ್ರಿಂದ ಕರೆಂಟು ತಯಾರು ಮಾಡದು ಹೆಂಗೆ ಅಂತ ಮಾತ್ರ ಅವ್ರಿಗೆ ಹೊಳಿಲೇ ಇಲ್ಲ. ಕೊನೆಗೆ ಗುಂಡಂಗೇ ಕೇಳಿದ್ರು ಅದು ಹೆಂಗೆ ಅಂತ. ಇದು ನೋಡ್ರಾ ಅಮೇರಿಕದ ವಿನಕಂನ್ಸಿನ್ ವಿಶ್ವವಿದ್ಯಾಲಯದವ್ರು ಕಂಡು ಹಿಡ್ದಿದ್ದು ಅಂತ ತನ್ನತ್ರ ಇದ್ದ ಚಿತ್ರ ತೆಗ್ದು ತೋರ್ಸಿದ.

ಈ ಚಿತ್ರದಾಗೆ lung simulator ಅಂತ ಐತಲಾ.. ಅದು ನಮ್ಮ ಶ್ವಾಸಕೋಶದಂಗೆ ಕೆಲ್ಸ ಮಾಡ್ತೈತೆ. ನಾವು ಉಸ್ರು ತಗಂಡಾಗ, ಬಿಟ್ಟಾಗ ಇದ್ರ ತುದೀಗೈತಲ.. ಆ ಹಳ್ದೀದು.. ಅದು ಅಲುಗಾಡತ್ತೆ ಅನ್ನೋದ್ರಲ್ಲಿ.. ಶೇಖ್ ಅ ಬಾಬ ಬಬ ಶೇಖ್ ಅ ಬಾಬ ಬಬ ಸಯ್ಯಾ ಸಯ್ಯಾ.. ಅಂತ ತಿಪ್ಪ ಹಾಡಕ್ಕೆ ಶುರು ಹಚ್ಕಂಡ.. ಓಯ್ ಸೆಖೆ ಬಾಬ ಸುಮ್ನಿರ್ರಿ ಪ್ಲೀಸ್.. ಮುಂದೇಳಿ ಮಿ. ರೌಂಡ್ ಅಂದ್ಲು ಇಳಾ. ಅದನ್ನು polivinylidene flouride(pvdf) ಅನ್ನೋ ವಸ್ತು ಇಂದ ಮಾಡಿರ್ತಾರೆ ಅಂದ ಗುಂಡ. ಈಗ ನಮ್ಮ ಉಸಿರಾಟದ ವೇಗ ಎಷ್ಟು ಮಾರ್ರೆ? ಹತ್ತತ್ರ ಸೆಕೆಂಡಿಗೆ ೨ ಮೀಟರ್. ಆದರೆ ಅಷ್ಟರಿಂದ ವಿದ್ಯುತ್ ತಯಾರಿಸದು ಹೆಂಗೆ ಅಂದ ಮಂಜ.ಒಳ್ಳೆ ಪ್ರಶ್ನೆ ಮಂಜು. ಮುಂಚೆ ಇದೇ ದೊಡ್ಡ ಸಮಸ್ಯೆ ಆಗಿದ್ದು. ಆದರೆ ಇದು ಪ್ಲಾಸ್ಟೀಕ್ ತರದ್ದು .. ಮಿಲಿ ಮೀಟರನಷ್ಟು ಸೂಕ್ಷ್ಮದ್ದು.ಇದರಿಂದಾಗೇ ಕಂಪನಗಳನ್ನ ವಿದ್ಯುತ್ತಿಗೆ ಪರಿವರ್ತಿಸಿ ಕನಿಷ್ಟ ಮಿಲಿ ವ್ಯಾಟಿನಷ್ಟು ವಿದ್ಯುತ್, ಜಾಸ್ತಿ ವೇಗದ ಉಸಿರಾಟವಿದ್ದಾಗ ೬ ವ್ಯಾಟಿನವರೆಗೂ ವಿದ್ಯುತ್ ಉತ್ಪಾದನೆ ಆಗ್ತಾ ಇದೆ ಈಗ. ಅದನ್ನ ಇನ್ನೂ ಉತ್ತಮ ಪಡಿಸೋ ಪ್ರಯತ್ನ ನಡೀತಾ ಇದೆ . ಕೊಳವೆ ಗಾಳೀಲಿ ಚೆಂಡು ಹಾರ್ತಿದ್ದಿದ್ದು ನೋಡ್ಲಿಲ್ವಾ ಸ್ವಲ್ಪ ಮುಂಚೆ? ಅಂದ ಗುಂಡ.

ಆದ್ರೆ ಇದ್ನ ಮೂಗಿಗೆ ಕಟ್ಕೊಂಡು ನಡ್ಯೋದು ಅಸಹ್ಯ ಅನಿಸತ್ತಪ ನಂಗೆ ಅಂದ ತಿಪ್ಪ. ಕಿವಿ ಇಂದ ವೈರು ಇಳಿದು ಬರೋದು ಫ್ಯಾಷನ್ ಆಗತ್ತೆ ಅಂತ ಈಗ ೧೫ ವರ್ಶದ ಹಿಂದೆ ಯಾರಾದ್ರೂ ಕನ್ಸು ಕಂಡಿದ್ರಾ ತಿಪ್ಪಾ ಅಂದ್ಳು ಇಳಾ.ತಿಪ್ಪನ ಡೌಟೇನೋ ಸ್ವಲ್ಪ ಸರೀನೆ ಉಂಟು..ಎಲ್ಲಿ ಬಳಸ್ಬೋದು ಇದನ್ನ ಈಗ ಅಂದ ಮಂಜ. ಈಗ ವಿದೇಶದಲ್ಲೆಲ್ಲಾ ರೋಗಿಗಳ ದೇಹಸ್ತಿತಿ ಅಳೀತಾ ಇರ್ಲಿ, ಏನಾದ್ರೂ ಏರು ಪೇರು ಆದ್ರೆ ತಕ್ಷಣ ತಿಳಿಸ್ಲಿ ಅಂತ ವೈರ್ಲೆಸ್ ಮೂಲಕ ಸಂವಹಿಸೋ ಉಪಕರಣಗಳನ್ನ ಅಳವಡಿಸಿರ್ತಾರೆ ಗೊತ್ತಾ? ಹಾ ಓದಿದ್ದೆ. use of wireless technology for health moitoring ಅಂತ ಅಂತ ನೆನಪಿಸಿಕೊಂಡ್ಲು ಇಳಾ.. ಹಾ. ಅವುಗಳ ಶಕ್ತಿ ಹೇಗೆ ಬರುತ್ತೆ ಅಂದ..ಬೇರೆ ಕಡೆ ಹಾಕೋ ಅಂತ ಲೀಥಿಯಮ್ ಐಯಾನ್ ಬ್ಯಾಟ್ರಿ ಅಂತೂ ದೇಹದೊಳಗೆ/ಚರ್ಮದೊಳಗೆ ಇಟ್ಟಿರೋ ಈ ತರದ ಉಪಕರಣಗಳಿಗೆ ಹಾಕಕ್ಕಾಗಲ್ಲ ಅನ್ಸತ್ತೆ..ಪದೇ ಪದೇ ಅದು ಖಾಲಿ ಆದ್ರೆ ತೆಗ್ಯದು,ಹಾಕದು ದೊಡ್ಡ ರಗ್ಳೆ ಅಲ್ವಾ ಅಂದ ತಿಪ್ಪ.. ಕರೆಕ್ಟು ತಿಪ್ಪ. ಈಗ ಬಂದೆ ನೀ ಟ್ರ್ಯಾಕಿಗೆ. ತಾನಾಗೆ ಮರುಪೂರಣ ಆಗೋ ಅಂತದ್ದು ಹಾಕ್ಬೇಕು ಅಂದ್ರೆ ರಕ್ತದಲ್ಲಿನ ಸಕ್ಕರೆ ಅಂಶದಿಂದ ಶಕ್ತಿ ಪಡೆಯೋ ಜೈವಿಕ ಕೋಶಗಳನ್ನ ಬ್ಯಾಟರಿ ಆಗಿ ಉಪಯೋಗಿಸಬಹುದು ಅಂದ ಮಂಜ.ಅವಯವಗಳ ಚಲನೆಯಿಂದ ಶಕ್ತಿ ಪಡೆಯೋ piezoelectric ಕೋಶಗಳನ್ನು ಬಳಸಬಹುದು, ವೈರ್ಲೆಸ್ ಮೂಲ್ಕ ಶಕ್ತಿ ಕಳಿಸಬಹುದು ಅವಕ್ಕೆ ಅಂದ್ಲು ಇಳಾ.ಅಲ್ಲೇ ಇರದು ಸಮಸ್ಯೆ. ಇದೂ ಕೂಡ ಹಾಳಾಗೇ ಹಾಳಾಗತ್ತೆ.. ಅವಾಗ ಮತ್ತೆ ಮತ್ತೆ ತೆಗ್ಯದು ಹಾಕದು ಸಮಸ್ಯೆ ಅಲ್ವಾ ಅಂದ ತಿಪ್ಪ. ಈ ಕೋಶಗಳನ್ನು ದೇಹದ ಒಳಗಿಡೋ ಬದ್ಲು ಹೊರಗಡೆ ತಾನಾಗೆ ಮರುಪೂರಣ ಆಗೋ ತರ ಇಟ್ರೆ ಅಂದ ಗುಂಡ.. ಆಗ ಎಲ್ರಿಗೂ ಗುಂಡ ಏನು ಹೇಳಕ್ಕೆ ಹೊರಟಿದ್ದಾನೆ ಅಂತ ಪ್ಲಾಶ್ ಆಯ್ತು.. ಅದೇ.. ಇದು ಅಂದ್ರು ಎಲ್ಲಾ ಒಟ್ಟಿಗೆ
ಮೂಲ:
 Energy and environment science journal:http://pubs.rsc.org/en/Content/ArticleLanding/2011/EE/C1EE02241E

Thursday, October 6, 2011

ಅಗಲಿದ ಚೇತನಗಳಿಗೆ ನಮನ


ಬೆಳಗ್ಗೆ ಎಂದಿನಂತೆ fb ಗೆ ಬರ್ತಿದ್ದಂತೆಯೇ ಕಂಡ ಮೊದಲ ಪೋಸ್ಟು.. "ಮತ್ತೂರು ಕೃಷ್ಣಮೂರ್ತಿಗಳು,ಸ್ಟೀಪ್ ಜಾಬ್ಸ್ ಆತ್ಮಕ್ಕೆ ಶಾಂತಿ ಸಿಗಲಿ.." ವಿಜಯದಶಮಿಯ ದಿನವೆಂದರೆ ಕೆಟ್ಟದ್ದರ ಒಳ್ಳೆಯದರ ವಿಜಯದ ಸಂಕೇತವೆಂಸು ಪ್ರತೀತಿ.ಆದರೆ ಅಂದೇ ಇಬ್ಬರು ಅಪ್ರತಿಮ ಸಾಧಕರ ಸಾವಿನ ಸುದ್ದಿ ಕೇಳುವಂತಾಯಿತಲ್ಲ ವಿಧಿಯೇ ಅನಿಸ್ತು.. ಸುದ್ದಿ ಸುಳ್ಳಾಗಿರಬಹುದೇ ಅನ್ನೋ ಮನದ ಮೂಲೆಯ ಆಸೆಯಿಂದ ಒಮ್ಮೇ ನೆಟ್ಟಲ್ಲಿ ಹುಡುಕಿದೆ.. ಅದರ ತುಂಬೆಲ್ಲಾ ಸ್ಟೀವ್ ಜಾಬ್ಸನದೇ ಸುದ್ದಿ.. ಮತ್ತೂರು ಕೃಷ್ಣಮೂರ್ತಿಗಳ ಸುದ್ದಿ ತಿಳಿಯಲು ಮತ್ತೂರು ಗೆಳೆಯನಿಗೆ ಸಂದೇಶ ಕಳಿಸಾಯಿತು..ಎಲ್ಲೆಲ್ಲೂ ಬರೀ ಬೇಸರದ ಪೋಸ್ಟುಗಳು.. ಯಾಹೂ, ibn, times news ಹೀಗೆ ಎಲ್ಲೆಲ್ಲೂ ಸ್ಟೀವ್ ಜಾಬ್ಸ್ ಮರಣದ ವಾರ್ತೆ, fb, google + ಹೀಗೆ ಸಾಮಾಜಿಕ ತಾಣಗಳಲ್ಲೂ ಅವರಿಗೆ ನೆನಪಿನ ಕಂಬನಿ, ಫೋಟೋಗಳು, ವೀಡಿಯೋಗಳು,ಕೊಂಡಿಗಳು, ಅವರ ppt ಗಳು, ನುಡಿಮುತ್ತುಗಳು.. ಹೀಗೆ ಏನುಂಟು.. ಏನಿಲ್ಲ.. ಆ ಎರಡೂ ಮಹಾಚೇತನಗಳಿಗೆ ನನ್ನದೂ ಒಂದು ಈ ಮೂಲಕ ಪದಾಂಜಲಿ

ನೆನಪುಗಳು ಹಿಂದೆ ಜೀಕ್ತಾ ಜೀಕ್ತಾ ಸುಮಾರು ಎರಡೂವರೆ ವರ್ಷದಷ್ಟು ಹಿಂದಕ್ಕೆ ಹೋಗಿವೆ. ವರ್ಷ ppt ಮಾಡೋದು ಹೇಗೆ ಅಂತ ಸ್ಟೀವ್ ಜಾಬ್ಸನ ನೋಡಿ ಕಲೀರಿ ಅಂತ ನಮ್ಮ ಕಾಲೇಜಿನ ಪ್ರೊಫೆಸರ್ ಹೇಳಿದ್ರು . ದೊಡ್ಡ ಪರದೆ, ಅದರ ಮುಂದೆ ಕಿರಿದಾದ ಮನುಷ್ಯ. ಪರದೆಗೆ ಹೊಂದೋ ಕಪ್ಪು ಬಣ್ಣದ ಬಟ್ಟೆ.. ಪರದೆಯ ಮೇಲೆ ಜಾಬ್ಸ್ ಹೇಳುತ್ತಿದ್ದಂತೆಯೇ ಮೂಡುತ್ತಿದ್ದ ದೃಶ್ಯಗಳು.. ವಾಕ್ಯಗಳು.. ಅದೂ ತೀರಾ ಬೇಕಾಗುವಂತದ್ದು ಮಾತ್ರ.. ಆಪಲ್ ಅಂತ ಜಾಬ್ಸ್ ಪರದೆಯ ಮುಂದೆ ಕೈನೀಡಿದರೆ ಅವನ ಕೈಮೇಲೆ ನಿಖರವಾಗಿ ಬಂದು ಕೂರುತ್ತಿದ್ದ ಸೇಬಿನ ಚಿತ್ರ.. ಎಂತಾ ನಿಖರತೆ, ಪ್ರತೀ ಸಲವೂ ಎಷ್ಟೊಂದು ಪೂರ್ವತಯಾರಿ.. ಎಲ್ಲವೂ ಮೇಳೈಸಿ ಅವನ ಪ್ರಸ್ತುತಿಯನ್ನು ನೋಡೋದು ಒಂದು ರಸಕಾವ್ಯದಂತೆ ಭಾಸವಾಗುತ್ತಿತ್ತು.. ಹಾಗೆ ನೋಡನೋಡುತ್ತಲೆ ನನ್ನ ಪಾಲಿಗೊಬ್ಬ ನಾಯಕನಾಗಿದ್ದ ಸ್ಟೀವ್ ಜಾಬ್ಸ್. 
೧೯೫೫ ರಲ್ಲಿ ಜನಿಸಿದ ಸ್ಟೀವ್ ಜಾಬ್ಸ್ ಪ್ರಖ್ಯಾತರಾಗಿದ್ದು ಅವರ ವಿಶಿಷ್ಟ ಪ್ರಸ್ತುತಪಡಿಸುವ ಶೈಲಿಗೆ, ಅವರು ಸ್ಥಾಪಿಸಿದ ಆಪಲ್ ಗೆ. ಐಪೋಡ್, ಐಪ್ಯಾಡ್,, ಐಟ್ಯೂನ್, ಆಪಲ್ ಆಪರೇಟಿಂಗ್ ಸಿಸ್ಟಮ್, ಆಪಲ್ ಮಾಕ್ ಕಂಪ್ಯೂಟರಗಳು, ನೋಟ್ ಬುಕ್.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಉಳ್ಳವರ ಆಸ್ತಿ, ಸಂಶೋಧಕರ ಸಹಾಯಕ ಅಷ್ಟೇ ಆಗಿದ್ದ ಕಂಪ್ಯೂಟರ್ ತಂತ್ರಜ್ನಾನವನ್ನು ಜನಸಾಮಾನ್ಯರ ಬಳಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಪಲ್ ಹೆಸರು ಕೇಳಿರದ (ಯುವ)ಕಂಪ್ಯೂಟರ್ ಬಳಕೆದಾರರೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದೇನೊ ಅನ್ನುವಷ್ಟರ ಮಟ್ಟಿಗೆ ನಮಗೆಲ್ಲಾ ಆಪಲ್ ಹವಾ ಹಬ್ಬಿಸಿದ ಮಹಾಶಯ ಈ ಸ್ಟೀವ್ ಜಾಬ್ಸ್. ಇನ್ನು ಈತನ ಪ್ರಸ್ತುತಪಡಿಸುವ ಶೈಲಿ(presentation style) ಗೆ ನಾನಂತೂ ಮರುಳಾಗಿ ಹೋಗಿದ್ದೆ.ಅವನ ಬಗ್ಗೆ ಹಲವಾರು ದಂತಕಥೆಗಳಿವೆ.ಜೀವನದ ರೀತಿಯೂ ಸ್ಪೂರ್ತಿದಾಯಕ. ಪ್ರಸ್ತುತಿ ಅಂದ ಹಾಗೆ ಅವರ ೧೯೭೪ರ ಆಪಲನ್ನು ಗ್ರಾಹಕರಿಗೆ ಪರಿಚಯಿಸಿದ ರೀತಿಯ ಬಗ್ಗೆ ಓದಿದ್ದು ನೆನಪಾಗುತ್ತಿದೆ.. ಜನವರಿ ೨೪, ೧೯೭೪.. ದೊಡ್ಡ ವೇದಿಕೆ. ಮಧ್ಯೆ ನಿಂತ ಸ್ಟೀವ್ ಜಾಬ್ಸ್. ತನ್ನ ಆಪಲ್ ಕಂಪ್ಯೂಟರ್ ಇಂಕ್ ಅನ್ನು ಅವರಿಗೆ ಪರಿಚಯಿಸೋದು ಅವನ ಉದ್ದೇಶ. ಅವನು ತಂದಿದ್ದು ಒಂದು ಸಣ್ಣ ಚೀಲ.. ನೀವು ನೋಡಿದ್ದನ್ನು ನಂಬಲೇಬೇಕು ಇಂದು ಎಂದ ಜಾಬ್ಸ್..ಅಲ್ಲದೇ ಇದರ(ಕಂಪ್ಯೂಟರ್ ನ) ಶಕ್ತಿಯೆಲ್ಲವೂ ಈಗಿನ ibm ಕಂಪ್ಯೂಟರ್ ಡಬ್ಬಿಯ ೧/೩ ರಷ್ಟು ಸಣ್ಣ ಸ್ಥಳದಲ್ಲಿ. ಹೇಳಿದ್ದು ಸಾಕು ನೀವೆ ನೋಡುವಿರಂತೆ.. ಮುಂದೆ ಪರದೆಯ ಮೇಲೆ ಮೂಡೋ ಚಿತ್ರಗಳೆಲ್ಲಾ ಚೀಲದೊಳಗೆ ಇರೋದ್ರಿಂದ ಆಗುತ್ತೆ ಅಂದ..ಸರಿ, ಅಲ್ಲೇ ಪಕ್ಕದಲ್ಲಿಟ್ಟಿದ್ದ ಚೀಲದಿಂದ ತಾನು ಪ್ರಸ್ತುತ ಪಡಿಸಬೇಕಾಗಿದ್ದ ಪೆಟ್ಟಿಗೆ ತೆರೀತಾನೆ. ಅದಕ್ಕೊಂದು ಡಿಸ್ಕ್ ಹಾಕಿ(ಆಗೆಲ್ಲಾ ಈಗಿನಂತೆ ಪೆನ್ ಡ್ರೈವು, ಪ್ಲಾಷ್ ಡ್ರೈವುಗಳು ಇರಲಿಲ್ಲವಲ್ಲ..)ಅದನ್ನು ಚಾಲು ಮಾಡಿದ. "chariots of fire" ಚಿತ್ರದ ದೃಶ್ಯಗಳು ಮೂಡಲಾರಂಭಿಸಿತು.. spread sheet ನಲ್ಲಿ ಕಟ್ಟಡಗಳ ದೃಶ್ಯಗಳು, ಚೆದುರಂಗದ ಆಟ, ಮಾಕ್ ಬಗ್ಗೆ ಕನಸು ಕಾಣ್ತಿರೋ ಸ್ಟೀವ್ ಜಾಬ್ಸನದೇ ಚಿತ್ರಗಳು ಮೂಡಲಾರಂಭಿಸಿತು.. ಆ ಕಾಲಕ್ಕೆ ಆ ಸಣ್ಣ ಯಂತ್ರದ ಅಷ್ಟೆಲ್ಲಾ ಕೆಲಸಗಳು ಪವಾಡದಂತೆಯೇ ಕಂಡಿರಲು ಸಾಕು.. ಅದು ಇಲ್ಲಿಗೇ ಮುಗಿಯಲಿಲ್ಲ. ಆ ಕಂಪ್ಯೂಟರ್ ಮಾತನಾಡಲಾರಂಭಿಸಿತು.. "ಹಲೋ, ನಾನು ಮಾಸಿಂಟೋಶ್.. (ಮ್ಯಾಕ್). ಆ ಚೀಲದಿಂದ ಹೊರಬರೋಕೆ ಖುಶಿ ಆಗ್ತಾ ಇದೆ. ನನ್ನ ತಂದೆಗೆ ಸಮಾನನಾದ ಈ ವ್ಯಕ್ತಿ, ಸ್ಟೀವ್ ಜಾಬ್ಸ್ ನನ್ನ ನಿಮಗೆ ಪರಿಚಯಿಸಲು ಹೆಮ್ಮೆ ಆಗ್ತಾ ಇದೆ..".. ಪ್ರಚಂಡ ಕರತಾಡನ.. ಹಲ್ಲುಬಿಟ್ಟು ನಗದೇ ಇರಲು ಅವನು ಎಷ್ಟು ಪ್ರಯತ್ನ ಪಟ್ಟರೂ ವಿಜಯದ ಆ ಮಂದಹಾಸ ತುಟಿ ದಾಟಿಯೇ ಬಿಟ್ಟಿತು.. ಭವಿಷ್ಯಕ್ಕೆ ಹೊಸ ರೂಪ ಕೊಡೋ ನಾಯಕನ ಆಗಮನದ ಸಂತಸದಲ್ಲಿ..  ಕಂಪೆನಿಯಂದರೆ ಅದು ಒಬ್ಬ ಸೂಪರಮ್ಯಾನ್ ಕಟ್ಟಿ ಬೆಳೆಸಿ, ಎಲ್ಲ ಕೆಲಸ ಪೂರೈಸೋ ಮ್ಯಾಜಿಕ್ ಅಲ್ಲ. ಅಲ್ಲಿ ಸಾವಿರಾರು ಜನರ ಶ್ರಮ ಇದೆ. ಆದರೆ ibm, microsoft ಗಳ ಮಧ್ಯೆ ತನ್ನದೇ ಒಂದು ಕಂಪೆನಿ ಕಟ್ಟಿ. ಬೆಳೆಸಿ ಮೊದಲ ಸ್ಥಾನಕ್ಕೆ ಏರಿಸುವುದು ಹುಡುಗಾಟವಲ್ಲ. ನಮಗೇನು ಬೇಕೆಂಬುದನ್ನು ನಮಗಿಂತ ಮೊದಲೇ ಅರಿತ ಮಹಾನುಭಾವ ಜಾಬ್ಸ್.. ಕಿವಿಯಿಂದ ವೈರು ಹರಿದುಬರೋದು ಒಂದು ಫ್ಯಾಷನ್ ಆಗತ್ತೆ ಅಂತ ಈಗ ೨೦ ವರ್ಷದ ಹಿಂದೆ ಊಹಿಸೊಕ್ಕೆ ಸಾಧ್ಯನಾ? ಒಮ್ಮೆ ಆಪಲನಿಂದ ಹೊರಬಂದಿದ್ದ ಜಾಬ್ಸ ಬರುವಾಗ ಹೊಸ ಕನಸು ತಂದರು. ಕೇವಲ ತಂತ್ರಜ್ನಾನಕ್ಕೆ ಸೀಮಿತವಾಗಿದ್ದ ಅದನ್ನು media ಕ್ಕೂ ವಿಸ್ತರಿಸಿದರು. ಮೊದಲು ಕಂಪೆನಿ , ಆಮೇಲೆ ನಾನು ಅನ್ನೋ ಅವರ ಮನೋಭಾವ ಆದರ್ಶಪ್ರಾಯ. ಅದಕ್ಕೇ ಅವರ ppt ದೊಡ್ಡದಾಗಿ ಪರದೆಯ ಮುಂದೆ ಇರುತ್ತೆ, ಮುಂದಿರೋ ಜಾಬ್ಸ್ ವಾಮನಮೂರ್ತಿಯಂತೆ.. ಕಿತ್ತು ತಿನ್ನೋ ಕ್ಯಾನ್ಸರ್ ಜಾಬ್ಸನ ಜೀವನವನ್ನು ಕೆಲ ವರ್ಷಗಳ ಹಿಂದೆಯೇ ಕಿತ್ತು ತಿನ್ನೋದರಲ್ಲಿತ್ತು.. ಅದರ ವಿರುದ್ದ ಹೋರಾಡಿ ಇಷ್ಟು ವರ್ಷ ಜಯಿಸಿದ ಹೋರಾಟಗಾರ ಆತ. . ಕೊನೆಗೂ ವಿಧಿ ಬರಹವನ್ನು ಮೀರಲಾಗಲಿಲ್ಲ.. ಅದೇ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು.. ಭಾರತದ ಮೂಲೆಯಲ್ಲಿರುವ ನಮ್ಮಂತಹ ಯುವಕರ ಬಗೆಗೆ ನಿಮಗೆ ಗೊತ್ತಿರದೇ ಇರಬಹುದು ಜಾಬ್ಸ್.. ಆದರೆ ನಿಮ್ಮ ಬಗ್ಗೆ ನಮಗೆ ಬಹಳ ಗೊತ್ತು.. ಹಲವು ಸ್ಪೂರ್ತಿ ನೀಡಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಬೇಡುತ್ತೇನೆ.. ಸ್ಟೀವ್ ಜಾಬ್ಸ್ ಬಗ್ಗೆ ಶ್ರದ್ದಾಂಜಲಿ ಕಳಿಸುವವರು rememberingsteavejobs@apple.com ಗೆ ಕಳಿಸಬಹುದು ಅಂತ ಆಪಲ್ ತನ್ನ ವೆಬ್ ಸೈಟಲ್ಲಿ ಹೇಳಿದೆ..
ಮತ್ತೂರು ಕೃಷ್ಣಮೂರ್ತಿಗಳು ಜ್ನಾನವೃದ್ದರು. ವಯೋವೃದ್ದರು. ಅವರ ಬಗ್ಗೆ ಮೊದಲೇ ಬರೆದರೆ ಮುಂದಿನದು ಸ್ವಾರಸ್ಯ ಕಳೆದುಕೊಳ್ಳಬಹುದು ಅಂತ ಆಮೇಲೆ ಬರೆದಿದ್ದೇನೆ.. ತಪ್ಪಾಗಿದ್ದರೆ ಕ್ಷಮಿಸಿ. ಇವರು ಪ್ರಖ್ಯಾತ ಗಮಕ ಗಾಯನ ವಿದ್ವಾಂಸರು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಮುಖ್ಯಸ್ಥರಾಗಿದ್ದವರು.ಪದ್ಮಶ್ರೀಯಂತಹ ಪ್ರಶಸ್ತಿ ಪುರಸ್ಕೃತರು.. ಇನ್ನು ಇನ್ನಿತರೆ ಬಿರುದು ಸನ್ಮಾನಗಳಿಗೆ ಲೆಕ್ಕವೇ ಇಲ್ಲ.. .ಅವರ ಕರ್ನಾಟಕ ಭಾಗವತ ಕಂಸವಧೆಯನ್ನು ಕೆಳಗಿನ ಕೊಂಡಿಯಲ್ಲಿ ತಾವು ವೀಕ್ಷಿಸಬಹುದು. www.youtube.com/watch?v=L-BqA9yp_kU.. ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ ಇವರ ನಿಧನದಿಂದ ಗಮಕ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಬಗ್ಗೆಯೂ ಎಷ್ಟು ಬರೆದರೂ ಕಡಿಮೆಯೇ.. ನಿಮ್ಮ ಅಪ್ರತಿಮ ಸಾಧನೆಗೆ ಮತ್ತೊಮ್ಮೆ ನಮನಗಳು ಗುರುವರ್ಯ..