Thursday, September 15, 2016

ವಿಭೂತಿ ಫಾಲ್ಸು, ಮಂಜುಗುಣಿ,ಬೆಣ್ಣೆಹೊಳೆ, ಉಂಚಳ್ಳಿ ಜಲಪಾತ

Vibhuti falls near Yaana
ವಿಭೂತಿ ಫಾಲ್ಸು:
ಯಾಣದ ಸಮೀಪವಿರೋ ವಿಭೂತಿ ಫಾಲ್ಸಿನ ಬಗ್ಗೆ ಹಲವಾರು ತಪ್ಪು ಮಾಹಿತಿಗಳು ಹರಿದಾಡುತ್ತಿರುತ್ತೆ. ಅದ್ರಲ್ಲೊಂದು ಯಾಣದಿಂದ ವಿಭೂತಿ ಫಾಲ್ಸಿಗೆ ೭ ಕಿ.ಮೀ ಅನ್ನೋದು. ಆದ್ರೆ ಯಾಣದ ಭೈರವೇಶ್ವರ ಶಿಖರದಿಂದ ತಗೊಂಡ್ರೆ ವಿಭೂತಿ ಫಾಲ್ಸಿಗೆ ಹನ್ನೊಂದು ಹನ್ನೊಂದೂವರೆ ಕಿ.ಮೀ ಆಗುತ್ತೆ. ಅದೆಂಗೆ ಅಂದ್ರೆ ಮೊದಲು ಯಾಣದ ಭೈರವೇಶ್ವರ ಶಿಖರದಿಂದ ಪ್ರವೇಶದ್ವಾರದವರೆಗೆ ಸುಮಾರು  ೫೦೦ ಮೀಟರ್ ನಡೆದು ಅಲ್ಲಿಂದ ಗಾಡಿ ಹತ್ತಿ ಮುಖ್ಯ ರಸ್ತೆಗೆ ಬರೋ ಹೊತ್ತಿಗೆ ೩ ಕಿ.ಮೀ ಆಗಿರುತ್ತೆ. ಅಲ್ಲಿಂದ ಮತ್ತೆ ಆರು ಆರೂವರೆ ಕಿ.ಮೀ ಎಡಕ್ಕೆ ಕುಮಟಾ ರಸ್ತೆಯಲ್ಲಿ ಹೋದರೆ ಅಲ್ಲಿನ ಅಚವೆ ಅನ್ನೋ ಊರಲ್ಲೊಂದು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಿಗುತ್ತೆ.  ಈ ಐದಾರು ಕಿ.ಮೀ ರಸ್ತೆಯಲ್ಲಿ ಒಂದೇ ಒಂದು ಕಡೆಯೂ ವಿಭೂತಿ ಫಾಲ್ಸಿಗೆ ದಾರಿ ಅನ್ನೋ ಬೋರ್ಡು ಕಾಣೋಲ್ಲ !  ಆದ್ರೆ ಅಲ್ಲಿಗೆ ಬಂದು ಮುಟ್ಟಿದಾಗ ಆಗೋ ಖುಷಿಯೇ ಬೇರೆ. ಯಾಕೆ ಅಂದ್ರಾ ?  ಯಾಣ ದಾಟಿದ ನಂತರ ಸಿಗೋ ಘಾಟಿಯಲ್ಲಿ ಎಲ್ಲಿ ಎಡಕ್ಕೆ ದಾರಿಯೊಂದು ಕಂಡ್ರೂ ಇದೇ ವಿಭೂತಿ ಫಾಲ್ಸಿಗೆ ದಾರಿಯೇನೋ ಅಂತನಿಸೋ ಭಾವ ! ಏಳು ಕಿ.ಮೀ ಆಗ್ಲೇ ಆಯ್ತು. ಇನ್ನೂ ಫಾಲ್ಸು ಸಿಕ್ಕಿಲ್ಲ ಅಂತ !
Last few Steps for vibhuti falls from entrance
 ಈ ಚೆಕ್ ಪೋಸ್ಟಲ್ಲಿ ನಮ್ಮ ಹೆಸರು, ಎಲ್ಲಿಂದ ಬಂದಿದ್ದೇವೆ, ಮೊಬೈಲು ನಂಬರು, ಗಾಡಿ ನಂಬರು, ಬಂದ ಸಮಯ ಎಲ್ಲಾ ಬರೆದು ಅಲ್ಲಿಂದ ೨ ಕಿ.ಮೀ ಮುಂದಿರೋ ವಿಭೂತಿ ಫಾಲ್ಸಿಗೆ ತೆರಳಬೇಕು. ಹಂಗಾಗಿ ಯಾಣದಿಂದ ಇಲ್ಲಿಗೆ ಸುಮಾರು ೧೧ ಕಿ.ಮೀ ಆಗುತ್ತೆ ಅನ್ನೋದು ಸರಿಯಾದ ಮಾಹಿತಿ. ೭ ಕಿ.ಮೀ ಅನ್ನೋದಾದ್ರೆ ಯಾಣ ಕುಮಟಾ ರಸ್ತೆಯಲ್ಲಿನ ಯಾಣ ಕ್ರಾಸಿಂದ ಅಂತ ಹೇಳ್ಬೇಕು!
Vibhuti falls

ಅಲ್ಲಿಂದ ಮುಂದೆ ಸಾಗಿ ಬಂದ್ರೆ ಫಾಲ್ಸಿನ ಸ್ವಾಗತ ದ್ವಾರ, ಪಾರ್ಕು ಮಾಡಿರೋ ಗಾಡಿಗಳು ಸಿಗುತ್ತೆ. ಅಲ್ಲಿಂದ ಮುಂದೆ ಸಾಗೋ ಹಾದಿಯ ಅಕ್ಕಪಕ್ಕದಲ್ಲಿ  ಕೂರೋ ಜಾಗಗಳು, ಫಾಲ್ಸಿಗೆ ಹೋಗೋ ದಾರಿ ಎಲ್ಲಾ ಸಿಗುತ್ತೆ. ಇನ್ನೇನು ರಸ್ತೆಯ ಕೊನೆ ಅನ್ನೋ ಜಾಗದಲ್ಲೊಂದು ವೀಕ್ಷಣಾ ಗೋಪುರದಂತದ್ದೊಂದು ಸಿಗುತ್ತೆ. ಅಲ್ಲಿಂದ ಕೆಳಗೊಂದು , ಮೇಲೊಂದು ರಸ್ತೆ. ಯಾವ ಕಡೆ ಫಾಲ್ಸು ಅನ್ನೋ ಬೋರ್ಡಿಲ್ಲ. ಯಥಾ ಪ್ರಕಾರ ! ಮೇಲಿರದೇ ಫಾಲ್ಸಿರಬೇಕು ಅಂತ ಭಂಡ ಧೈರ್ಯ ಮಾಡಿ ಮೇಲಿರೋ ಹಾದಿಯಲ್ಲಿ ಹೋದರೆ ಮತ್ತೊಂದು ಸ್ವಲ್ಪ ಹಾದಿಯಲ್ಲಿ ಇದೇ ಫಾಲ್ಸಿಗೆ ಹೋಗೋ ಹಾದಿಯೆಂಬ ಭರವಸೆ ಬರತ್ತೆ ! ಗೊತ್ತಿರೋರಿಗೆ ಆಯ್ತು. ಗೊತ್ತಿಲ್ಲದೋರ ನೆರವಿಗಾದ್ರೂ ಒಂದು ಬೋರ್ಡು ಯಾಕೆ ಹಾಕೋಲ್ಲ ನಮ್ಮ ಪ್ರವಾಸೋದ್ಯಮ ಇಲಾಖೆ ಅನ್ನೋದು ಅರ್ಥ ಆಗೋಲ್ಲ. ಲಾಲ್ಗುಳಿ ಹುಡುಕ್ಕೊಂಡು ನಾವು ಒದ್ದಾಡಿದ ಕಥೆ ಹಿಂದಿನ ಲೇಖನದಲ್ಲಿ ಓದಿದ್ರಿ. ಅಷ್ಟೆಲ್ಲಾ ಒದ್ದಾಡ್ಕೊಂಡು ಹೋದ್ರೆ ಆ ಫಾಲ್ಸು ನಿಜಕ್ಕೂ ಚೆನ್ನಾಗಿದೆ. ಮೂರು ಹಂತದಲ್ಲಿ ಧುಮುಕೋ ಫಾಲ್ಸಿನ ಬಳಿ ಬೇಸಿಗೆಯಲ್ಲಿ ಆಟವಾಡಬಹುದಂತೆ.ಮಳೆಗಾಲವಾದ್ರೂ ಸ್ವಲ್ಪ ದೂರದಲ್ಲಿ ಆಟವಾಡಬಹುದು. ಅದು ಧುಮುಕಿದ ನಂತರ ಮತ್ತೊಂದು ಮಿನಿ ಫಾಲ್ಸಾಗತ್ತೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಮರಗಳ ಸಹಾಯದಿಂದ ಕೆಳಗಿಳಿದು ಅದರ ಸೌಂದರ್ಯವನ್ನೂ ಸವಿಯಬಹುದು. 


Manjuguni
ಮಂಜುಗುಣಿ:
ವಿಭೂತಿ ಫಾಲ್ಸಿನಿಂದ ನಾವು ಸೀದಾ ಬಂದಿದ್ದು ಅಲ್ಲಿಂದ ಸುಮಾರು ಮೂವತ್ತೈದು ಕಿ.ಮೀ ದೂರ ಇರುವ ಮಂಜುಗುಣಿಯ ವೆಂಕಟೇಶ್ವರ ದೇವಸ್ಥಾನಕ್ಕೆ. ತಿರುಮಲಯೋಗಿಗಳು ಎನ್ನುವವರು ೯ನೇ ಶತಮಾನದಲ್ಲಿ ಪ್ರತಿಷ್ಟಾಪನೆ ಮಾಡಿಸಿದ್ದೆನ್ನಲಾದ ಈ ದೇವಸ್ಥಾನಕ್ಕೆ ಶ್ರೀ ವಾದಿರಾಜರು ಕೊಟ್ಟ ಘಂಟೆ ಮಂಟಪ, ಭೂತ ರಾಜಗಳಿವೆ. ಈ ಊರಲ್ಲಿ ಬೆಳಗ್ಗಿನ ಹೊತ್ತು ತುಂಬಾ ಮಂಜಿರುತ್ತೆ, ದೇವಾಲಯದಲ್ಲೂ ಮಂಜನ್ನು ಕಾಣಬಹುದು ಅನ್ನೋ ಕಾರಣಕ್ಕೆ ಇದಕ್ಕೆ ಮಂಜುಗುಣಿಯೆಂಬ ಹೆಸರೆಂದು ಇಲ್ಲಿನ ಸ್ಥಳೀಯರು ತಿಳಿಸುತ್ತಾರೆ.

Manjuguni Venkateshwara temple
ಯಾಣ/ಕುಮಟಾ ರಸ್ತೆಯ ಕಡೆಯಿಂದ ಬಂದರೆ ದೇವನಹಳ್ಳಿಯ ನಂತರ ಬಲಕ್ಕೆ ತಿರುಗಿ ಮುಂದೆ ಬಂದರೆ ಮಂಜುಗುಣಿ.ಮೊದಲು ಮಂಜುಗುಣಿಯ ಗೋಶಾಲೆ ಸಿಗುತ್ತೆ. ಅಲ್ಲಿಂದ ಹಾಗೇ ಮುಂದೆ ಬಂದರೆ ಸಿಗುವುದೇ ದೇವಸ್ಥಾನ. ಇದಕ್ಕೂ ಸರಿಯಾದ ಬೋರ್ಡುಗಳಿಲ್ಲದೇ ಸ್ಥಳೀಯರ ಮಾರ್ಗದರ್ಶನವೇ ಸಖತ್ ನೆರವಾಗಿತ್ತು.
Direct buses from Sirsi to Manjuguni which operate every hour
ಬೆಳಗ್ಗೆ ಆರರಿಂದ ಮಧ್ಯಾಹ್ನ ಎರಡವರೆಗೆ ತೆಗೆದಿರುವ ಈ ದೇವಸ್ಥಾನ ಮಧ್ಯಾಹ್ನ ೨ರಿಂದ ೪ರವರೆಗೆ ಮುಚ್ಚಿರುತ್ತದೆ. ನಂತರ ೪ಕ್ಕೆ ತೆಗೆಯೋ ದೇಗುಲ ೮ರವರೆಗೆ ತೆಗೆದಿರುತ್ತದೆ. ಈ ದೇಗುಲದಲ್ಲಿ ಮಧ್ಯಾಹ್ನ ಹನ್ನೆರಡೂವರೆಯಿಂದ ಎರಡರವರೆಗೆ ನಿತ್ಯ ಭೋಜನದ ವ್ಯವಸ್ಥೆಯಿರುತ್ತದೆ. ನಾವು ಇಲ್ಲಿಗೆ ಬರೋ ಹೊತ್ತಿಗೆ ಒಂದೂಹದಿನೈದರ ಹೊತ್ತಾಗುತ್ತಾ ಬಂದು ಗಡಿಬಿಡಿಯಲ್ಲಿ ಬಾಗಿಲು ಹಾಕುವ ಸಂದರ್ಭದಲ್ಲಿ ದೇವರ ದರ್ಶನವಾಗಿ, ಊಟವೂ ಮುಗಿಯುತ್ತಾ ಬಂದಿದ್ದರೂ ಅಲ್ಲಿದ್ದ ತಾಯೊಬ್ಬರ ಕರುಣೆಯಿಂದ ಊಟ ಸಿಕ್ಕಿತ್ತು. ಬಾಗಿಲು ಹಾಕಿದ ಭೋಜನಶಾಲೆಯಲ್ಲಿ ಇಬ್ಬರೇ ಕುಳಿತು ಕೊನೆಯ ಪಂಕ್ತಿಯ ಅನ್ನ, ಸಾಂಬಾರ್, ತಂಬುಳಿ, ಪಾಯಸ, ಮಜ್ಜಿಗೆ ಊಟ ಮಾಡ್ತಾ ಇದ್ದರೆ ನಮಗೆ ಅಮೃತವೇ ಸಿಕ್ಕಂತೆ. ದೇಗುಲವೊಂದರಲ್ಲಿ ಅನ್ನಪೂರ್ಣೆಯೇ ಎದುರಾದಂಗೆ. ಶುಕ್ರವಾರ ರಾತ್ರೆ ಯಡಿಯೂರು, ಶನಿವಾರ ರಾತ್ರೆ ಸೋಂದಾ, ಭಾನುವಾರ ಮಧ್ಯಾಹ್ನ ಮಂಜುಗುಣಿ.. ಹೀಗೆ ಬ್ರೇಕಿಲ್ಲದೇ ತಿರುಗುತ್ತಿದ್ದ ನಮ್ಮ ಹೊಟ್ಟೆಗೆ ಹೊತ್ತಲ್ಲದ ಹೊತ್ತಲ್ಲಿ ಹಿಟ್ಟೊದಗಿಸಿದ್ದು ಅನಿರೀಕ್ಷಿತವಾಗಿ ಎದುರಾದ ದೈವತಾಣಗಳೇ ಅಂದ್ರೆ ತಪ್ಪೇನಿಲ್ಲ. ಶನಿವಾರ ಬೆಳಗ್ಗೆ ಅಮೃತಾಪುರದಲ್ಲಿ ಬೆಳಗ್ಗಿನ ತಿಂಡಿಗೆ ತುಂಬಾ ಒತ್ತಾಯವಿದ್ದರೂ ಅದನ್ನು ನಯವಾಗೇ ನಿರಾಕರಿಸಿದ್ದ ನಾವು ಅಂದು ಮಧ್ಯಾಹ್ನದ ಊಟವಿಲ್ಲದೇ ರಾತ್ರಿಯವರೆಗೂ ಒದ್ದಾಡಿದ್ದರ ಬಗ್ಗೆ ಹಿಂದಿನ ಭಾಗದಲ್ಲಿ ಬರೆದಿದ್ದೆ. ಇವೆಲ್ಲಾ ಫ್ಲಾಷ್ ಬ್ಯಾಕುಗಳ ಜೊತೆಗೆ ಅಲ್ಲಿನ ದೇಗುಲದ ಮತ್ತೊಂದು ಪ್ರದಕ್ಷಿಣೆ ಹಾಕಿ, ಅಲ್ಲಿನ ಶಿಲ್ಪಕಲೆಯ ಸೌಂದರ್ಯವನ್ನು ಸವಿಯುತ್ತಾ ಹೊರಬಂದ್ವಿ. ಅಂದ ಹಾಗೆ, ಶಿರಸಿಯಿಂದ ಮಂಜುಗುಣಿಗೆ ನೇರ ಬಸ್ಸುಗಳಿವೆ


 ಬೆಣ್ಣೆಹೊಳೆ ಫಾಲ್ಸು:
ಮಂಜುಗುಣಿಯಿಂದ ಹತ್ತೊಂಭತ್ತು ಕಿ.ಮೀ ದೂರದಲ್ಲೇ ಬೆಣ್ಣೆಹೊಳೆ ಜಲಪಾತ ಇದೆ ಅಂತ ಇಲ್ಲಿಗೆ ಬರೋ ಮೊದಲು ಓದಿದ, ಗುರ್ತು ಮಾಡಿಕೊಂಡಿದ್ದ ನೆನಪಿತ್ತು. ಹಂಗೇ ಇಲ್ಲಿ ಕೇಳಿದ್ರೆ ನೀವು ಬಂದ ದಾರಿಯಲ್ಲೇ ವಾಪಾಸ್ ಹೋದ್ರೆ ಮಂಜುಗುಣಿ ಕ್ರಾಸ್ ಸಿಗತ್ತೆ. ಅಲ್ಲಿಂದ ಬಲಕ್ಕೆ ತಿರುಗಿ ಹೋದ್ರೆ ಬೆಣ್ಣೆಹೊಳೆ ಫಾಲ್ಸಿಗೆ ಹೋಗಬಹುದು ಅಂದ್ರು. ಸರಿ ಅಂತ ಅಲ್ಲಿಂದ ೪.೫ ಕಿ.ಮೀ ಹೋಗಿ ಕರಸೆ ಬಳಿ ಮಂಜುಗುಣಿ ಕ್ರಾಸಲ್ಲಿ ಬಲಕ್ಕೆ ತಿರುಗಿ ಉಡುಪಿ ಹೆಬ್ರೆ ರಸ್ತೆಯನ್ನ ಹಿಡಿದು ಅಲ್ಲಿಂದ ಸುಮಾರು ಎಂಟು ಕಿ.ಮೀ ಮುಂದೆ ಬಂದು ಅಲ್ಲಿದ್ದ ಬಂಡಲ ಅನ್ನೋ ಊರಲ್ಲಿನ ಪೈ ಹೋಟೇಲಲ್ಲಿ ಬೆಣ್ಣೆ ಹೊಳೆಗೆ ದಾರಿ ಕೇಳಿದ್ವಿ. ಅವ ಇಲ್ಲಿಂದು ಸುಮಾರು ಎರಡು ಕಿ.ಮೀ ಮುಂದಕ್ಕೆ ಹೋಗಿ ಅಲ್ಲಿ ಸಿಗೋ ಅಲ್ಲಿ ಸಿಗೋ ಕಸಗೆ ಅನ್ನೋ ಊರಿನ ನಂತರ ಎಡಕ್ಕೆ ಸಿಗೋ ಮಣ್ಣಿನ ರಸ್ತೆಯಲ್ಲಿ  ತಿರುಗಿ ಐದು ಕಿ.ಮೀ ಹೋದರೆ ಬೆಣ್ಣೆಹೊಳೆ ಪಾಲ್ಸ್ ಸಿಗುತ್ತೆ ಅಂದ್ರು. ಅವ್ರು ಹೇಳಿದ ಹಂಗೆ ಮುಂದೆ ಹೋದ್ರೆ ಕರೆಕ್ಟಾಗಿ ಅವ್ರು ಹೇಳಿದಷ್ಟೇ ದೂರಕ್ಕೆ ಎಡಕ್ಕೆ ಹೋಗೋ ಮಣ್ಣು ರಸ್ತೆಯೊಂದಿತ್ತು. ಆದ್ರೆ ಅದ್ರಲ್ಲೂ ಬೆಣ್ಣೆಹೊಳೆಗೆ ದಾರಿ ಅನ್ನೋ ಬೋರ್ಡಿಲ್ಲ. ಇದ್ದ ಹಳದಿ ಬೋರ್ಡಲ್ಲಿ ಮಸುಕಾದ ಅಕ್ಷರಗಳಲ್ಲಿ ೨೦೧೧ರಲ್ಲಿ  ನಡೆದ ಬೆಣ್ಣೆಹೊಳೆ ರಸ್ತೆ ಕಾಮಗಾರಿ ಅನ್ನೋದನ್ನ ಕಷ್ಟಪಟ್ಟು ಓದಬಹುದಿತ್ತು !

From here take left for benne hole falls in sirsi hebre road
ರಸ್ತೆ ಬೇರೆ ಯಾವ್ದೋ ಹಳ್ಳಿಗೆ ಹೋಗೋ ರಸ್ತೆಯಂಗಿದೆ. ಇದು ಹೌದೋ ಅಲ್ವೋ ಅಂತ ಹಿಂದೆ ಸಿಕ್ಕ ಮನೆಯೊಂದರಲ್ಲಿ ಕೇಳ್ಕೊಂಡು ಬರ್ತೀನಂತ ಗಿರಿ ವಾಪಾಸ್ ಹೋದ್ರು. ಗಾಡಿಯಲ್ಲಿ ಕೂತು ಕೂತು ಹಿಂಬದಿಯೆಲ್ಲಾ ನೋವಾಗಿದ್ದ ನಾನು ಅಲ್ಲೇ ಉಳಿದಿದ್ದೆ. ಆ ಮನೆಯವನೋ , ಪುಣ್ಯಾತ್ಮ. ಬೆಣ್ಣೆ ಹೊಳೆ ಯಾವುದಂತ್ಲೇ ಗೊತ್ತಿಲ್ಲ. ನಾನೆಂತೂ ಹೋಗಿಲ್ಲ ಅನ್ನಬೇಕೆ ?


 ಗಂಟೆ ಮೂರಾಗ್ತಾ ಬಂದಿತ್ತು. ಇದಾದ ಮೇಲೆ ಅವತ್ತಿನ ಪಾಲಿಗೆ ನೋಡೋಕಿದ್ದಿದ್ದು ಉಂಚಳ್ಳಿ ಫಾಲ್ಸೊಂದೆ. ಹಂಗಾಗಿ ಏನಾದ್ರಾಗ್ಲಿ ನೋಡೇ ಬಿಡೋಣ ಅಂತ ಆ ರಸ್ತೇಲಿ ಹೊರಟ್ವಿ. ಮುಂದೆ ಬರೋರಿಗೆ ಅನುಕೂಲವಾಗಲಿ ಅಂತ ಆ ರಸ್ತೆಯ ಸ್ವರೂಪ ಮತ್ತು ಮೂರು ಕಿ.ಮೀ ಆದ ಮೇಲೆ ಸಿಗೋ ಏಕೈಕ ಬೋರ್‍ಡನ್ನ ಮುಂದೆ ಬರುವವರ ಅನುಕೂಲಕ್ಕಾಗಿ ಹಾಕ್ತಿದ್ದೀನಿ.
Roads of Bennehole

only landmark in 5 km road. Need to take right from here
ಬೆಣ್ಣೆಹೊಳೆಯ ಮಣ್ಣು ರಸ್ತೇಲಿ ಮೂರು ಕಿ.ಮೀ ಬಂದ ಮೇಲೆ ಈ ಬೋರ್ಡ್ ಸಿಕ್ತು ಅಂದ್ರೆ ನೀವು ಸರಿಯಾದ ರಸ್ತೇಲಿದ್ದೀರಿ ಅಂತ. ಅಲ್ಲಿಂದ ಬಲಕ್ಕೆ ತಿರುಗಬೇಕು. ಈ ರಸ್ತೆಯಲ್ಲಿ ಜೀಪಲ್ಲಿ ಬರೋರಿಗೆ ಅಷ್ಟು ತ್ರಾಸಾಗದೇ ಇರಬಹುದು. ಆದರೆ ಬೈಕಿಗರ ತಾಳ್ಮೆಯ ಮತ್ತು ಸತ್ವಪರೀಕ್ಷೆಯ ದಾರಿಯಿದು. ಗಿರಿಯ ೩೫೦ ಸಿ.ಸಿಯ ಬೈಕು ಮತ್ತವರ ಓಡಿಸೋ ಶ್ರದ್ದೆಗೂ ಪರೀಕ್ಷೆಯಾಗಿದ್ದ ಈ ರಸ್ತೆಯಲ್ಲಿ ಯಾವುದೇ ಕ್ಷಣದಲ್ಲಾದ್ರೂ ಬೈಕು ಬೀಳೋಕೆ ರೆಡಿಯಾದ್ರೆ ಕಾಲು ಕೊಡೋಕೆ ರೆಡಿಯಿರು ಅಂದಿದ್ರು ಗಿರಿ. ಆದ್ರೆ ಅಂತಾದ್ದೇನೂ ಆಗಲಿಲ್ಲ.


Last point on the way to Bennehole falls from where road ends and we need walk for almost 800 meters

Video of Bennehole falls


Way back from Bennehole
 ಉಂಚಳ್ಳಿ ಜಲಪಾತ:
ಬೆಣ್ಣೆಹೊಳೆಯಿಂದ ಉಂಚಳ್ಳಿಗೆ ಸುಮಾರು ೨೩ ಕಿ.ಮೀ. ಉಂಚಳ್ಳಿಗೆ ಹೋಗೋಕೆ ಇಲ್ಲಿಂದಲೇ ಯಾವುದಾದ್ರೂ ದಾರಿಯಿದ್ಯಾ ಅಂತ ಕೇಳಿದ ನಮಗೆ ಮತ್ತೆ ಗೈಡಾದ ಅವರು ಶಿರಸಿಯವರೆಗೆ ವಾಪಾಸ್ ಹೋಗೋದು ಬೇಡ. ಬಂಡಲದಿಂದ ಬಲಕ್ಕೆ ತಗೊಂಡು ೯ ಕಿ.ಮೀ ಹೋದ್ರೆ ಕಂಚೀಕೈ ಅಂತ ಸಿಗುತ್ತೆ. ಅಲ್ಲಿಂದ ಮತ್ತೆ ಬಲಕ್ಕೆ ತಗೊಂಡು ೧೦ ಕಿ.ಮೀ ಹೋದ್ರೆ ಹೆಗ್ಗರಣೆ ಸಿಗುತ್ತೆ. ಹೆಗ್ಗರಡೆಯಿಂದ ನಾಲ್ಕು ಕಿ.ಮೀ ಅಂದರೆ ಇಲ್ಲಿಂದ ೨೪ ಕಿ.ಮೀಗೆ ಉಂಚಳ್ಳಿ ಸಿಗುತ್ತೆ ಅಂದ್ರು. ಉಂಚಳ್ಳಿಗೆ ಶಿರಸಿಯಿಂದ ೪೧ ಕಿ.ಮೀ ಬಂಡಲದಿಂದ ಶಿರಸಿಗೆ ೨೩ ಕಿ.ಮೀ. ಅಂದ್ರೆ ನಮ್ಗೆ ರಘು ಅಣ್ಣ ಉಳ್ಸಿದ ದೂರ ಮತ್ತೆ ಸಮಯ ಲೆಕ್ಕ ಹಾಕಿ !!

ರಘು ಅಣ್ಣ ಒಬ್ರೆ ಅಂತಲ್ಲ. ಇಲ್ಲಿ ದಾರಿ ಹೇಳಿದ ಪ್ರತಿಯೊಬ್ಬರೂ ಕರಾರುವಾಕ್ ದಾರಿ ಹೇಳಿದವರೆ. ಮೂರು ಕಿ.ಮೀ ಅಂದ್ರೆ ಅದು ಮೂರೇ !. ಇಲ್ಲಿನ ಬೋರ್ಡುಗಲ್ಲುಗಳೇ ದಾರಿ ತಪ್ಪಿಸುವಂತೆ, ದಾರಿಯೇ ತೋರಿಸದಂತಿರೋ ಬೇಸರವನ್ನು ಇವರು ಕಳೆದಿದ್ದರಲ್ಲಿ ೧% ಸಂಶಯವೂ ಇಲ್ಲ. ಅವರು ಹೇಳಿದಂತೆ ಬಂಡಲ-->ಕಂಚೀಕಲ್-->ನೀಲ್ಕುಂದ(ದಿಂದ ಎಡಕ್ಕೆ ೫ ಕಿ.ಮೀ)--> ಹೆಗ್ಗರಣೆ ತಲುಪಿದ್ವಿ.ಕಂಚಿಕೈ ಕ್ರಾಸಲ್ಲಿ ಒಂದು ಬೋರ್ಡು ಬಿದ್ದಿತ್ತು. ಅಲ್ಲಿಂದ ಬಲಕ್ಕೋ ಎಡಕ್ಕೋ ಗೊತ್ತಾಗ್ಲಿಲ್ಲ. ಆ ಬಿದ್ದಿದ್ದ ಬೋರ್ಡ್ ನೋಡಿದ್ರೆ ಅದ್ರಲ್ಲಿ ಬಂಡಲಕ್ಕೆ ೯.೫ ಕಿ.ಮೀ ಅಂತ ಬರೆದಿತ್ತು. ಇಲ್ಲಿಂದ ಬಲಕ್ಕೆ ಅಂತ ಅವ್ರು ಹೇಳಿದ್ದಕ್ಕೂ ನಾವು ಇಲ್ಲಿಗೇ ಬಂದು ತಲುಪಿದ್ದಕ್ಕೂ ಸರಿಯಾಗಿತ್ತೆಂದರೆ ಅವ್ರ ಮಾರ್ಗದರ್ಶನಕ್ಕೆ ಎಷ್ಟು ಧನ್ಯವಾದ ಹೇಳ್ಬೇಕು ಲೆಕ್ಕ ಹಾಕಿ. ಹಂಗೇ ಬಲಕ್ಕೆ ತಗೊಂಡು ಮುಂದೆ ಹೋದ ನಾವು ದಾರಿಯಲ್ಲಿ ಸಿಕ್ಕ ಮತ್ತೊಬ್ಬರ ಹತ್ತಿರ ದಾರಿ ಕೇಳ್ಕೊಂಡು ಅದನ್ನ ಖಚಿತಪಡಿಸಿಕೊಂಡಿವಿ ಅನ್ನೋದು ಬೇರೆ ಮಾತು ಬಿಡಿ.
Kanchikai Cross, Observe the board which is fallen which mentions 9.5 km to Bandala
 ಸರ್ಕಾರಿ ಬಸ್ಸುಗಳು ಹೆಗ್ಗರಣೆ ಊರಿನವರೆಗೆ ಬರುತ್ತೆ. ಅಲ್ಲಿಂದ ೨ ಕಿ.ಮೀ ಮುಂದೆ ಬಂದ್ರೆ ಅರಣ್ಯ ಇಲಾಖೆಯ ಚೆಕ್ ಪೋಸ್ಟು. ಅಲ್ಲಿ ಸಂಜೆ ಆರರವೊಳಗೆ ವಾಪಾಸ್ ಬರ್ಬೇಕು ಅಂತ ಹೇಳಿ ನಮ್ಮ ಹೆಸರು, ಮೊಬೈಲು, ಬಂದ ಊರು, ಗಾಡಿ ನಂಬರ್ ಎಲ್ಲಾ ತಗೊಂಡು ಒಳಗೆ ಬಿಡ್ತಾರೆ. ಕರ್ನಾಟಕದ ತಾಣಗಳಲ್ಲೂ ಈ ಕೇರಳದ ಶಿಸ್ತಿನ ಸಂಸ್ಕೃತಿ ಬರ್ತಾ ಇರೋದು ಆ ತಾಣಗಳ ಸಂರಕ್ಷಣೆಯ ದೃಷ್ಠಿಯಿಂದ ತುಂಬಾ ಒಳ್ಳೇದು. ಆ ನಿಟ್ಟಲ್ಲಿ ನಮ್ಮ ಪ್ರವಾಸೋದ್ಯಮದ ಬಗ್ಗೆ ಖುಷಿಯಾಯ್ತು.
 ಅಲ್ಲಿಂದ ಉಂಚಳ್ಳಿ ಜಲಪಾತಕ್ಕೆ ೨ ಕಿ.ಮೀ. ಕೆಪ್ಪ ಜೋಗ ಅಂತ ಸ್ಥಳೀಯರ ಬಾಯಲ್ಲಿದ್ದ ಈ ಜಲಪಾತವನ್ನ ಬ್ರಿಟಿಷ್ ಅಧಿಕಾರಿ ಲುಂಸಿಂಗ್ಟನ್ ಅನ್ನುವವನು ಕಾಡ ಮಧ್ಯೆ ಕಂಡುಹಿಡಿದದ್ದಕ್ಕಾಗಿ ಅವನ ಹೆಸರೇ ಇಡೋ ಪ್ರಯತ್ನವೂ ನಡೆದಿತ್ತು. ಆದ್ರೆ ಶಿವರಾಜ್ ಕುಮಾರರ "ನಮ್ಮೂರ ಮಂದಾರ ಹೂವೇ" ಚಿತ್ರದಲ್ಲಿ ಉಂಚಳ್ಳಿ ಫಾಲ್ಸ್ ಅಂತ ಬಂದಾದ ಮೇಲೆ ಹಾಗೇ ಪ್ರಸಿದ್ದವಾಗಿಬಿಟ್ಟಿದೆ ಇದು.ಶಿರಸಿಗೆ ಹೋಗೋರೆಲ್ಲಾ ಉಂಚಳ್ಳಿ ಉಂಚಳ್ಳಿ ಅನ್ನೋ ಮಟ್ಟಿಗೆ ಪ್ರಸಿದ್ದವಾಗಿಬಿಟ್ಟಿದೆಯಿದು. ಇದು ಅದ್ಯಾಕೆ ಅಷ್ಟು ಪ್ರಸಿದ್ದ ಅಂತ ಅದ್ರ ಬುಡಕ್ಕೆ ಹೋದಾಗ್ಲೇ ಗೊತ್ತಾಗಿದ್ದು.

Unchalli Falls

Unchalli falls in motion
Me, Giri infront of Unchalli falls
  
ಉಂಚಳ್ಳಿಯಿಂದ ಸಿದ್ದಾಪುರಕ್ಕೆ:
ಉಂಚಳ್ಳಿಯ ಫಾಲ್ಸು ಅಷ್ಟು ಅದ್ಭುತವಾಗಿದ್ರೂ ಆ ತಾಣವನ್ನು ನಿರ್ವಹಿಸುತ್ತಿರೋ ಬಗ್ಗೆ ಬೇಸರವಾಗುತ್ತೆ. ಅಲ್ಲಿರೋ ಒಂದೇ ಒಂದು ಶೌಚಗೃಹವೂ ನಿರ್ವಹಣೆಯಿಲ್ಲದೇ ಪಾಳು ಬಿದ್ದಿದೆ :-( ಘಂಟೆ ಐದೂಮುಕ್ಕಾಲಾಗ್ತಾ ಬಂದಿದ್ರಿಂದ , ರಾತ್ರೆಯಾಗೋದ್ರೊಳಗೆ ಸಾಗರ ಸೇರ್ಕೊಳ್ಳಬೇಕಾಗೂ ಇದ್ದಿದ್ರಿಂದ ಇಲ್ಲಿಂದ ಸಿದ್ದಾಪುರಕ್ಕೆ ಹೋಗೋ ನೇರವಾದ ದಾರಿಯೇನಾದ್ರೂ ಇದೆಯಾ ಅಂತ ಅಲ್ಲಿದ್ದವರಿಗೆ ಕೇಳಿದ್ವಿ. ಅವ್ರು ಹೇಳಿದ ದಾರಿಯ ಪ್ರಕಾರ ಬಂದಿದ್ದಕ್ಕೆ ಶಿರಸಿಗೆ ೪೧ ಕಿ.ಮೀ ಹೋಗಿ ಅಲ್ಲಿಂದ ಸಿದ್ದಾಪುರಕ್ಕೆ ಮತ್ತೆ ೨೫ ಕಿ.ಮೀ ಹೋಗೋದು ಉಳೀತು. ಉಂಚಳ್ಳಿಯಿಂದ ಬರೋ ರಸ್ತೆಯಲ್ಲಿದ್ದ ಬ್ರಿಡ್ಜೊಂದು ಬಿದ್ದು ಹೋಗಿ ೩೦ ಕಿ.ಮೀಯ ದಾರಿ ಮಿಸ್ಸಾಗಿ ಹೆರೂರ ಮೇಲೆ ಬರೋ ಹಾಗಾಯ್ತು.

ಈ ಚಿತ್ರದಲ್ಲಿರೋ ಗೋಳಿಮಕ್ಕಿಯ ಬಳಿಯಿರೋ ಆಂಜನೇಯನ ಪಕ್ಕದಲ್ಲಿ ಸೀದಾ ಹೋದ್ರೆ ಸಿಗೋದು ಗೋಳಿಮಕ್ಕಿ ಊರು.ಎಡಕ್ಕೆ ಹೋದ್ರೆ ಹೆರೂರು. ನಮಗೆ ಉಂಚಳ್ಳಿಯವರೊಬ್ಬರು ಗೋಳಿಮಕ್ಕಿ, ಕಾನುಸೂರ ಮೇಲೆ ಸಿದ್ದಾಪುರ ಹೋಗಬಹುದು ಅಂದಿದ್ರು. ಗೋಳಿಮಕ್ಕಿ ಎಲ್ಲಿ ಅಂತ ಗೊತ್ತಿಲ್ಲದ ನಾವು ಈ ಬೋರ್ಡಿಗೆ ಮುಂಚೆ ಕೇಳಿದಾಗ ದಾರಿ ತೋರಿಸಿದವರೊಬ್ಬರು ಸೀದಾ ಹೋಗೋಕೆ ಹೇಳಿದ್ರು.

ಇಲ್ಲಿ ಸಿದ್ದಾಪುರದ ಬೋರ್ಡು ನೋಡಿ ನಾವು ಬಲಕ್ಕೆ ತಿರುಗಿ ಗೋಳಿಮಕ್ಕಿಗೆ ಹೋಗಿದ್ವಿ.  ಅಲ್ಲಿಂದ ನಮಗೆ ಮತ್ತೆ ಎಡಕ್ಕೆ ತಿರುಗೋಕೆ ಹೇಳಿದ್ರು.ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಮತ್ತೆ ಉಂಚಳ್ಳಿ ೧೧ ಕಿ.ಮೀ ಅನ್ನೋ ಬೋರ್ಡು.
We came from Unchalli falls via golimakki. There is one more way at our right which shows direction to Unchalli again !
ನಮಗೆ ದಾರಿ ಹೇಳಿದವರು ಮತ್ತೊಂದು ರಸ್ತೆಯಿಂದ ಆ ಕತ್ರಿಗೆ ಬಂದು ಸೇರಿದ್ರು. ಯಾವ ರಸ್ತೆಯಿಂದ ಬಂದ್ರಿ ಅಂತ ನಮ್ಮನ್ನ ನೋಡಿ ನಗುತ್ತಿದ್ದ ಅವರು ಕಾನಸೂರಿನ ರಸ್ತೆ ತೋರಿಸುತ್ತಾ ಮುಂದೆ ಸಾಗಿದ್ರು. ಉಂಚಳ್ಳಿಯಲ್ಲಿ ಹೇಳಿದವ್ರು, ಗೋಳಿಮಕ್ಕಿಯ ಊರೊಳಗೆ ಹೋಗೋದ ತಪ್ಪಿಸಿ ಶಾರ್ಟುಕಟ್ಟು ಹೇಳಿದವರು, ಗೋಳಿಮಕ್ಕಿಯ ಊರವರು ಹೇಳಿದ ದಾರಿ ಎಲ್ಲವೂ ಸರಿಯೇ ಆಗಿತ್ತು !! ಆದ್ರೆ ಬ್ರಿಡ್ಜ್ ಮುರಿದೋಗಿದ್ದು ಗೊತ್ತಿಲ್ಲದೇ ಅಲ್ಲಲ್ಲಿ ಸಿಗುತ್ತಿದ್ದ ಬೋರ್ಡುಗಳ ನೋಡಿ ನಾವೇ ಗೊಂದಲಕ್ಕೆ ಬಿದ್ದಿದ್ವಿ. ಬ್ರಿಡ್ಜ್ ಬಿದ್ದು ಆ  ರಸ್ತೆಯಿಲ್ಲ ಅಂದ್ರೆ ಆ ಬೋರ್ಡನ್ನು ಯಾಕೆ ತೆಗೆಯೋಲ್ಲ ಅಥವಾ ಬಿದ್ದು ಒಂದೂವರೆ ವರ್ಷವಾದ್ರೂ ಯಾಕೆ ಸರಿ ಮಾಡಲ್ಲ ಅನ್ನೋದು ಅರ್ಥವಾಗ್ಲಿಲ್ಲ. ಕಾನುಸೂರಿಗೆ ತಲುಪಿದ ನಾವು ಅಲ್ಲಿಂದ ಸಿದ್ದಾಪುರ ತಲುಪೋ ಹೊತ್ತಿಗೆ ಗಿರಿಗೆ ಹೊಟ್ಟೆಗೇನಾದ್ರೂ ಹಾಕ್ಲೇ ಬೇಕು ಅಂತ. ಕಾನಸೂರಿನ ಅಯ್ಯಂಗಾರ್  ಬೇಕರಿಯಲ್ಲೂ ಗಿರಿಗೆ ವೆಜ್ ಪಫ ಸಿಕ್ಕಿರಲಿಲ್ಲ. ಆ ಬೇಕರಿಯಲ್ಲಿ ಸಿಗದ ಟೀಗೋಸ್ಕರ ಇನ್ನೊಂದು ಹೋಟೇಲಿಗೆ ಹೋಗೋದ್ಯಾಕೆ, ಸಿದ್ದಾಪುರದಲ್ಲಿ ಸಿಗುತ್ತೆ ಬನ್ನಿ ಅಂತ ಮುಂದೆ ಕರ್ಕೊಂಡು ಬಂದಿದ್ದೆ. ಅಂತೂ ಸಿದ್ದಾಪುರದಲ್ಲೊಂದು ಸಾಗರ, ಶಿರಸಿ, ಸಿದ್ದಾಪುರ ಶೈಲಿಯ ಮಸಾಲೆಪೂರಿ ಹಾಕ್ಕೊಂಡು ಸಾಗರದ ನಮ್ಮನೆ ತಲುಪಿದ್ವಿ ಅನ್ನುವಲ್ಲಿಗೆ ನಮ್ಮ ಮೂರು ದಿನಗಳ ಬೈಕ್ ಪಯಣಕ್ಕೊಂದು ಬ್ರೇಕ್ ಬಿದ್ದಿತ್ತು. ಮಾರನೇ ದಿನದ ಗಣಪತಿ ಹಬ್ಬ,ಹಬ್ಬದ ತಿಂಡಿಗಳು, ವರದಹಳ್ಳಿಯ ಶ್ರೀಧರಾಶ್ರಮ, ಧರ್ಮಧ್ವಜ, ಅಮ್ಮನವರ ದೇವಸ್ಥಾನ, ಬೃಂದಾವನಗಳು ನಮ್ಮ ಹಾದಿ ಕಾಯುತ್ತಿತ್ತು.

ಯಾಣ ಚಾರಣ

Welcome to Yaana
ಶಿರಸಿಯಿಂದ ಸುಮಾರು ನಲ್ವತ್ತು ಕಿ.ಮೀ ದೂರವಿರುವ ಯಾಣಕ್ಕೆ ಹೋಗಲು ಉತ್ತಮವಾದ ರಸ್ತೆಯ ಸೌಲಭ್ಯವಿದೆ. ಹೊನ್ನಾವರ ಅರಣ್ಯ ವಿಭಾಗ, ಕುಮಟಾ ಉಪ ವಿಭಾಗ, ಕತಗಾಲ ವಲಯದ ವ್ಯಾಪ್ತಿಗೆ ಬರೋ ಯಾಣಕ್ಕೆ ಹೋಗೋದು ಅಂದ್ರೆ ಅದೊಂದು ಸಾಹಸ ಅನ್ನುವಂತಿತ್ತು ಒಂದು ಕಾಲದಲ್ಲಿ. ಆರು ಕಿ.ಮೀ ನಡೀಬೇಕು. ಉಂಬಳಗಳಿರುತ್ತೆ ಅನ್ನುವೆಲ್ಲಾ ಮಾತುಗಳನ್ನೆಲ್ಲಾ ಕೇಳಿದ್ದ ನಮಗೆ ಇತ್ತೀಚೆಗೆ ಮೂರು ಕಿ.ಮೀ ವರೆಗೂ ರಸ್ತೆ ಮಾಡಿದ್ದಾರೆ ಅಲ್ಲಿಂದ ಮುಂದೆ ಮೂರು ಕಿ.ಮೀ ನಡೀಬೇಕು ಅಂದ್ರು. ಆದ್ರೆ ನಾವು ಹೋದಾಗ ನೋಡಿದ್ರೆ ಅದ್ರ ಬುಡದವರೆಗೂ ವಾಹನಗಳು ಹೋಗುತ್ತೆ !
Final 3 km of road to Yaana















ಅರಣ್ಯ ಇಲಾಖೆಯವರು ಮಾಡಿರುವ ಸ್ವಾಗತದ್ವಾರದ ಬುಡದವರೆಗೂ ಕಾರು, ಜೀಪು, ಬೈಕುಗಳು ಹೋಗೋದ್ರಿಂದ ಯಾಣ ಚಾರಣವೆನ್ನೋದು ನಿಜವಾದ ಚಾರಣವಾಗುಳಿದಿಲ್ಲ. ಕೊನೆಯ ಅರ್ಧ ಕಿ.ಮೀ ನಡೆಯುವಷ್ಟರಲ್ಲಿ ಕಾಣೋ ಚಂಡಿಕಾ ಶಿಖರ ಮತ್ತು ಅದನ್ನು ದಾಟಿ ಮುಂದೆ ಹೋದರೆ ಸಿಗುವ ಭೈರವೇಶ್ವರ ಶಿಖರಗಳನ್ನಲ್ಲದೇ ಅಲ್ಲಿನ ಈಶ್ವರ ದೇವಸ್ಥಾನ, ಭೈರವೇಶ್ವರ ಶಿಖರದ ಸುತ್ತಲೂ ಪ್ರದಕ್ಷಿಣೆ ಹಾಕಲು,ಎಡಕಲ್ಲು ಗುಡ್ಡದ ಮಾದರಿಯಲ್ಲಿ ಮಾಡಿರೋ ಕಬ್ಬಿಣದ ಸರಳು, ಮೆಟ್ಟಿಲುಗಳ ಪ್ರದಕ್ಷಿಣಾ ಪಥ, ಮಳೆಗಾಲದಲ್ಲಿ ಅಲ್ಲಲ್ಲಿ ಧುಮ್ಮಿಕ್ಕೋ ಜಲಧಾರೆಗಳು ಇಲ್ಲಿನ ಪ್ರಧಾನ ಆಕರ್ಷಣೆ. ನವರಾತ್ರಿಯ ಸಮಯದಲ್ಲಿ ನಡೆಯುವ ಚಂಡಿಕಾ ಶಿಖರದ ಪೂಜೆಯನ್ನೂ ಆ ಸಮಯದಲ್ಲಿ ಆನಂದಿಸಬಹುದು.


Chandka shikaRa ಚಂಡಿಕಾ ಶಿಖರ
ಯಾಣದಲ್ಲೇನಿದೆ ?
ಯಾಣವೆಂದರೆ ವಿಚಿತ್ರವಾದ ಬಂಡೆಗಳ ಸಾಲೆಂಬುದು ಅಲ್ಲಿನ ಚಿತ್ರಗಳ ಕಂಡವರೆಲ್ಲರ ಕಲ್ಪನೆ. ಅದು ತಕ್ಕಮಟ್ಟಿಗೆ ಸರಿಯೂ ಹೌದು. ಇಲ್ಲಿನ ಗಣಪತಿ ಅರಣ್ಯ ಸಮಿತಿಯ ಪ್ರವೇಶದ್ವಾರದಲ್ಲಿ ಪ್ರವೇಶ ಶುಲ್ಕ(ದ್ವಿಚಕ್ರ=೫, ಮೂರು/ನಾಲ್ಕು ಚಕ್ರ=೧೦, ಬಸ್ಸು=೧೫) ಕೊಟ್ಟು ಒಳನಡೆದರೆ ಯಾಣದ ಯಾತ್ರೆ ಶುರುವಾಗುತ್ತದೆ. ಇಲ್ಲಿ ಪ್ರಕೃತಿ ನಿರ್ಮಿತ ೬೧ ಕಲ್ಲಿನ ಶಿಖರಗಳಿವೆ. ಅದರಲ್ಲಿ ಎಲ್ಲವಕ್ಕೂ ಜನರಿಂದ ಪೂಜೆಯಿದ್ದರೂ ಸಣ್ಣವಿರುವ ೫೯ ಶಿಖರಗಳು ಕಾಲಕ್ರಮೇಣ ತಮ್ಮ ಪೂಜೆಯನ್ನು ಕಳೆದುಕೊಂಡು ಈಗ ಕಾಡಿನ ಮಧ್ಯ ಮರೆಯಾಗಿವೆ ಎನ್ನಲಾಗುತ್ತಿದೆ. ಇಲ್ಲಿಗೆ ಬಂದವರೆಲ್ಲರ ಕಣ್ಣಿಗೆ ಮೊದಲು ಬೀಳೋದೆಂದರೆ ಚಂಡಿಕಾ ಶಿಖರ. ಬೇಸಿಗೆಯ ಸಮಯದಲ್ಲಿ ಅದರ ಸುತ್ತಲೂ ಬರಬಹುದಾದರೂ ಮಳೆ ಹೆಚ್ಚಿದ್ದ ಸಮಯದಲ್ಲಿ ಅದು ಕಷ್ಟದ ಕೆಲಸ. ಅದನ್ನು ದಾಟಿ ಮುಂದೆ ಬಂದಾಗ ಸಿಗೋದೇ ಭೈರವೇಶ್ವರ ಶಿಖರ.
bhairaveshWara shikhara
ಭೈರವೇಶ್ವರ ದೇವಸ್ಥಾನ:
bhairaveshwara temple at Yaana












ಈ ಶಿಖರದ ಬುಡದಲ್ಲೇ ಭೈರವೇಶ್ವರ ದೇವಸ್ಥಾನವಿದೆ. ೨೦೦೫ರಲ್ಲಿ ಶ್ರೀ ರಾಘವೇಶ್ವರ ಶ್ರೀಗಳಿಂದ ಜೀರ್ಣೋದ್ದಾರಗೊಂಡ ಇಲ್ಲಿನ ದೇವಸ್ಥಾನ ಬೆಳಗ್ಗಿನ ೮ ರಿಂದ ಸಂಜೆ ೬ರವರೆಗೆ ತೆಗೆದಿರುತ್ತದೆ. ಇಲ್ಲಿನ ಧ್ವಜಸ್ಥಂಭದ ಬಳಿ ನಿಂತು ತಲೆಯೆತ್ತಿ ನೋಡಿದರೆ ಕಾಣೋ ಭೈರವೇಶ್ವರ ಶಿಖರದ ದೃಶ್ಯವೇ ಅದ್ಭುತ. ಸುತ್ತಲಿನ ಹಸಿರು ಪರಿಸರದಲ್ಲಿ ಆಕಾಶದೆತ್ತರಕ್ಕೆ ತಲೆಯೆತ್ತಿರೋ ಕಪ್ಪು ಹಾವಿನ ಹೆಡೆಯಡಿ ನಾವು ನಿಂತಂತೊಮ್ಮೆ ಅನಿಸಿದರೆ ಆಶ್ಚರ್ಯವಿಲ್ಲ. ಇಲ್ಲಿನ ಗುಡಿಯಲ್ಲಿ ಉದ್ಭವಲಿಂಗವೆಂದು ನಂಬಲಾಗುವ ಗುಹೆಯಲ್ಲಿರುವ ಚುಕ್ಕೆಯಂತಹ ರಚನೆಯನ್ನು, ಅದರ ಸುತ್ತಮುತ್ತ ಕೆತ್ತಿದ್ದನ್ನು ಭೈರವೇಶ್ವರನೆನ್ನುಲಾಗುತ್ತದೆ. ಇದರ ಪಕ್ಕದಲ್ಲೇ ಗಣಪತಿ ವಿಗ್ರಹವನ್ನಿಡಲಾಗಿದೆ. ಇಲ್ಲಿನ ಗುಹೆಯಲ್ಲಿರುವ ಭೈರವೇಶ್ವರನಿಗೆ ಮತ್ತು ಗಣಪನಿಗೆ ನೀರಿನ ಅಭಿಷೇಕ ಮಾಡುವ ಮೂಲಕ ಇಲ್ಲಿ ಪೂಜಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಭಕ್ತಾದಿಗಳೇ ನೇರವಾಗಿ ಆ ಮೂರ್ತಿಗಳಿಗೆ ಅಭಿಷೇಕ ಮಾಡಬಹುದಂತೆ. ಆ ದೇವಸ್ಥಾನದ ಇತಿಹಾಸದ ಬಗ್ಗೆ ಅಲ್ಲಿನ ಅರ್ಚಕರು ಹೇಳುವ ಮಾತುಗಳನ್ನು ಇಲ್ಲಿ ಕೇಳಬಹುದು


ಭೈರವೇಶ್ವರ ಶಿಖರ: 
ದೇವರ ದರ್ಶನಕ್ಕೆ ಹೋದಾಗ ಅಲ್ಲಿನ ಭಟ್ಟರು ಎಲ್ಲೋ ಹೋಗಿದ್ದರಿಂದ ಭೈರವೇಶ್ವರ ಶಿಖರವನ್ನು ಸುತ್ತಿ ಬರಲು ಹೊರಟೆವು. ಅಲ್ಲಿನ ಪರಿಪರಿಯ ಕಲ್ಲುಗಳ ನಡುವೆ ಆದ ಕೊರಕಲಲ್ಲಿ ನಡೆಯುವುದೇ ಒಂದು ಮಜ. ಎಲ್ಲೆಲ್ಲಿಂದಲೋ ತೂರಿಬರುವ ಬೆಳಕ ಕಿರಣಗಳು, ಕಲ್ಲನ್ನು ವಿಚಿತ್ರವಾಗಿ ಕೊರೆದಿರುವ ಮಳೆ,ಬಿಸಿಲುಗಳು, ಅಲ್ಲಲ್ಲಿ ಸೃಷ್ಠಿಯಾಗೋ ಪ್ರತಿಧ್ವನಿ ಇವೆಲ್ಲವುಗಳ ನಡುವಿನ ಸುಮಾರು ಕಾಲು ಘಂಟೆಯ ನಡುಗೆಯೊಂದು ಖುಷಿ ಕೊಡುತ್ತೆ.

Views at Yaana
ತಲೆಬಾಚಿದಂತಿರೋ ಕಲ್ಲುಗಳು, ಮಧ್ಯ ಮಧ್ಯ ಬರೋ ಮಳೆಯಿಂದ ಕಲ್ಲುಗಳಾಚೆ ಕಂಡಂತಾಗೋ ಕಾಮನಬಿಲ್ಲುಗಳು, ಹಸಿರ ಸಿರಿಯ ನಡುವಿನ ನಾನಾ ಆಕಾರಗಳು ಗಮನಿಸಿದವರಿಗಷ್ಟೇ ಸಿಗೋ ಬೋನಸ್ಸುಗಳು.
Other view of Bhairaveshwara shikhara during pradakshina

View of bhairaveshwara temple and shikhara from distance
Rain in yaana as seen from inside the caves
ಭೈರವೇಶ್ವರ ಶಿಖರ ಹತ್ತಿ, ಚಂಡಿಕಾ ಶಿಖರದ ಬುಡದವರೆಗೂ ಹೋಗಿ ಬಂದ ನಾವು ಅಲ್ಲಿಂದ ವಾಪಾಸ್ ಬಂದು ಅಲ್ಲಿಂದ ೧೧ ಕಿ.ಮೀ ದೂರದಲ್ಲಿರುವ ವಿಭೂತಿ ಫಾಲ್ಸಿನತ್ತ ಹೊರಟೆವು.


ಯಾಣದ ಸುತ್ತಮುತ್ತಲಿನ ಸ್ಥಳಗಳು: ಶಿರಸಿಯಿಂದ ಯಾಣಕ್ಕೆ ೪೦ ಕಿ.ಮೀ. ಅದೇ ಕುಮಟಾದಿಂದ ೨೨ಕಿ.ಮೀ. ಶಿರಸಿಯಿಂದ ಯಾಣಕ್ಕೆ ಹೋಗೋ ದಾರಿಯಲ್ಲಿ ಶಿರಸಿಯಿಂದ ೧೭ಗೆ ಪಂಚಲಿಂಗ ಕ್ಷೇತ್ರ ಅಂತ ಸಿಗುತ್ತದೆ. ಯಾಣದಿಂದ ೧೧ ಕಿ.ಮೀಗೆ ವಿಭೂತಿ ಫಾಲ್ಸ್ ಇದೆ. ಇಲ್ಲಿಗೆ ಬಂದವರು ೧೧ನೇ ಶತಮಾನದಲ್ಲಿ ತಿರುಮಲಾರ್ಯರಿಂದ ನಿರ್ಮಿತವಾದ ಮಂಜುಗುಣಿ ದೇಗುಲವನ್ನೂ ಸಂದರ್ಶಿಸಬಹುದು


ಮುಂದಿನ ಭಾಗದಲ್ಲಿ: ವಿಭೂತಿ ಫಾಲ್ಸು ಮತ್ತು ಮಂಜುಗುಣಿ

Saturday, September 10, 2016

ನಾ ನೋಡಿದ ಸಿನಿಮಾ ಮುಂಗಾರು ಮಳೆ-೨

ಜೀವನದ ಪ್ರತೀ ಕ್ಷಣನೂ ಎಕ್ಸೈಟಿಂಗ್ ಆಗಿರ್ಬೇಕು ಅನ್ನೋ ಹುಡುಗನ ಜತೆ ದೇಶ ಸುತ್ತೋ ಕತೆಯಲ್ಲಿ ಯುರೋಪು,ರಾಜಸ್ಥಾನ ನೋಡೋ ಕಣ್ಣುಗಳು, ಸ್ವಿಟ್ಜರ್ ಲ್ಯಾಂಡ್, ಕಾಶ್ಮೀರದಂತ ಮಂಜನ್ನು ಕಂಡು ವಾವೆಂದ್ರೂ ಕೊನೆಗೆ ಬಂದು ಸೆಟಲ್ ಆಗೋದು ನಮ್ಮ ಮಲೆನಾಡಲ್ಲೇ. ಮುಂಗಾರು ಮಳೆಯಂದ್ರೆ ಮಲೆನಾಡು, ಮಡಿಕೇರಿ,ಸಕಲೇಶಪುರ ಇಲ್ದಿದ್ರೆ ಹೆಂಗೆ ? ರಾಜಸ್ಥಾನದ ಮರಳುಗಾಡು, ಒಂಟೆ ಹಾಲು ಕರೆಯೋ ಉತ್ಸವ, ಕೋಟೆಗಳನ್ನ ನೋಡಿ ವಾವೆನ್ನೋ ಹೊತ್ತಿಗೇ ಕತೆ ಮಲೆನಾಡಿಗೆ ಬರತ್ತೆ. ಜೋಗ ಫಾಲ್ಸಲ್ಲಿ ಕುಣಿದು ಕುಣಿದು ಬಾರೆ ಅನ್ನೋ ಹಾಡು ನೋಡಿದ್ದ ನಮಗೆ ಆ ಫಾಲ್ಸಿನ ಮೇಲೇ ಒಂದು ಫೈಟೂ ನೋಡೋ ಶಾಕು ! ಅದೆಷ್ಟೇ ಕೇರ್ ತಗೊಂಡು ಮಾಡ್ತಾರೆ ಅಂದ್ರೂ ಒಂದು ಕ್ಷಣಕ್ಕೆ ಭಯ ಹುಟ್ಟಿಸೋ ಸನ್ನಿವೇಶಗಳ ಜೊತೆಗೆ ಅಲ್ಲೇ ಸುತ್ತಲ ಭೀಮೇಶ್ವರ ದೇವಸ್ಥಾನದ ಬಳಿಯ ಫಾಲ್ಸು, ಸಕಲೇಶಪುರದ ಬಿಸಿಲೇ ಘಾಟು, ಜೋಗದ ಜಲಪಾತದ ಹಿಂಬದಿಯ ಬ್ರಿಟಿಷ್ ಬಂಗಲೋ, ಮಡಿಕೇರಿಯ ಪ್ರಕೃತಿ ಎಲ್ಲಾನು ಒಂದಾದ್ರ ಮೇಲೊಂದರಂತೆ ಮಿಕ್ಸ್ ಮಾಡಿ ತೋರಿಸ್ತಿದ್ರೆ ಆಹಾ ಅದೇ ಅದ್ಭುತ ಅನಿಸಿಬಿಡುತ್ತೆ.

ಮಿಸ್ಸಾಗೋ ರೈಲನ್ನು ಓಡಿ ಬಂದು ಹತ್ತೋ ಹಿಂದಿಯ ಶಾರುಖಿನ ಅನೇಕ ಫಿಲ್ಮುಗಳಲ್ಲಿ ಬರೋ ದೃಶ್ಯವನ್ನೇ ಇಲ್ಲೂ ಬಳಸಿದ್ದಾರಾ ಅಂತ ಅನುಮಾನ ಬರೋ ಹೊತ್ತಿಗೆ ಅಲ್ಲೊಂಚೂರು ಚೇಂಜು, ಗೋಲ್ಡಲ್ ಸ್ಟಾರ್ ಗಣೇಶರ ತಂದೆಯಾಗಿ ಅವರೆಲ್ಲಾ ಎಕ್ಸೈಟ್ಮೆಂಟುಗಳನ್ನೂ ನನಸಗಿಸಬೇಕೆನ್ನೋ ಕ್ರೇಜಿ ತಂದೆಯಾಗಿ ರವಿಚಂದ್ರನ್, ಮಡಿಕೇರಿಯ ಹುಡುಗಿ ಸ್ನೇಹಾ ಶೆಟ್ಟಿಯ ತಂದೆ ಪೊನ್ನಪ್ಪನಾಗಿ ರವಿಶಂಕರ್, ಒಂದು ಮಜಾ ಸನ್ನಿವೇಶದಲ್ಲಿ ಎಂಟ್ರಿ ಕೊಡೋ ಐಂದ್ರಿತಾ, ರೈಲಿಂದ ಹಿಡಿದು ಮಾನಸಿಕ ತಜ್ಞೆಯವರೆಗೆ ಅನೇಕ ರೂಪದಲ್ಲಿ ಎಂಟ್ರಿ ಕೊಡೋ ಒಂದಿಷ್ಟು ಚೆಲುವೆಯರು ..ಆಹಾ. ಚೆಲುವೋ ಚೆಲುವೋ ;-) ಇನ್ನು ಮುಂಗಾರು ಮಳೆ ಅಂದ್ರೆ ಅದರ ಚಿತ್ರದ ಬಗ್ಗೆ ಅದ್ರ ಹಾಡುಗಳ ಬಗ್ಗೆನೂ ವಿಪರೀತ ನಿರೀಕ್ಷೆ ಜನಕ್ಕೆ. ಕೊಡವ ನುಡಿಗಳಿಂದ ಶುರುವಾಗೋ ಒಂದು ಹಾಡು, ರಣಧೀರ ಚಿತ್ರದ ಸಿಗ್ನೇಚರ್ ಟ್ಯೂನನ್ನು ತಗೊಳ್ಳೋ ಅಪ್ಪ ಮಗನ ಬಗ್ಗೆಯ ಒಂದು ಕನ್ನಡ ಪಾಪು, ಮನಸ್ಸಲ್ಲುಳಿಯೋ ಮುಂಗಾರು ಮಳೆಯ ಟ್ಯೂನಿನ ಫಾಸ್ಟ್ ಬೀಟಿನ ಮತ್ತೊಂದು ಹಾಡು.. ಹಿಂಗೆ ಚಿತ್ರದ ಹಾಡುಗಳೂ ಮನಸ್ಸಲುಳಿಯುತ್ತೆ. ಆದ್ರೆ ಕೊಡವ ಹಾಡೊಂದ್ರಲ್ಲಿ ಗಣೇಶಂಗಿಂತ ಸಾಧುಕೋಕಿಲನೇ ಒಳ್ಳೆ ಸ್ಟೆಪ್ ಹಾಕ್ತಾನಲ್ಲೋ, ಗಣೇಶಂಗಿಂತ ಅವ್ರ ಹಿಂದಿರೋರೇ ಚೆನ್ನಾಗಿ ಕುಣೀತಿದ್ದಾರಲ್ಲೋ ಅಂತನ್ನೋ ಕಿಂಡಲ್ಲುಗಳು ಚಿತ್ರದಲ್ಲಿ ಅವಾಗವಾಗ ಕೇಳಿದ್ದು ಸುಳ್ಳಲ್ಲ. ದುಬಾರಿ ಬೈಕುಗಳು, ಕಾರುಗಳು, ಯುರೋಪಿನ ಲೊಕೇಶನ್ಗಳು,, ಹಿಂಗೆ ಕನ್ನಡ ಚಿತ್ರವೊಂದನ್ನು ಶ್ರೀಮಂತವಾಗಿ ತೆಗೆಯೋಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದಾರೆ. ಎರಡು ಹಾಡುಗಳಲ್ಲಿ ವಾವೆನಿಸುವಂತೆ ಗ್ರಾಫಿಕ್ಸುಗಳನ್ನ ಬಳಸಿದ್ದು ಬಿಟ್ರೆ ಉಳಿದಿದ್ದೆಲ್ಲಾ ಓಕೆ. ಮುಂಗಾರು ಮಳೆ-೨ ಅಂದಾಕ್ಷಣ ಅದ್ರದ್ದೇ ಮುಂದುವರಿದ ಕತೆಯಂದ್ಕಂಡು ಹೋದವರಿಗೆ ಒಂದೆರಡು ಕಡೆ ಬಿಟ್ಟು ಬೇರೆಲ್ಲಾ ಕಡೆ ಬೇರೆ ಭಾವವೇ. ಅದೇನು ಅಂತ ನೋಡೋಕಾದ್ರೂ ಸಿನಿಮಾ ನೋಡ್ಬೇಕಾದದ್ದೇ. ಸಿನಿಮಾ ಹೆಂಗಿದ್ಯಪ್ಪಾ ಅನ್ನೋರಿಗೆ ಅದ್ಭುತ ಅಂತನಿಸದಿದ್ರೂ ಒಂದ್ಸಲ ಆರಾಮಾಗಿ ನೊಡ್ಬೋದು ಗುರು ಅಂತೆಂತೂ ಆರಾಮಾಗಿ ಹೇಳೋ ಹಂಗಿದೆ ಈ ಚಿತ್ರ

Thursday, September 8, 2016

ಸೋಂದಾ ಕೋಟೆ

Crossing the bridge in Sonda to reach sonda fort
A Frog/Monkey at the door of Fort
ಸೋಂದಾ ಅರಸರು:
ವಿಜಯನಗರದ ಸಾಮಂತರಸರಾಗಿದ್ದ ಸೋಂದಾ ಅರಸರು ಈ ಪ್ರಾಂತ್ಯವನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡು ೧೫೯೦ರಿಂದ ೧೭೬೨ರ ವರೆಗೆ ಆಳಿದರು ಎನ್ನುತ್ತದೆ ಇತಿಹಾಸ. ಇವರ ಮೊದಲ ಅರಸನೇ ಅರಸಪ್ಪ ನಾಯಕ(೧೫೫೫-೧೫೯೮). ಈತನ ಕಾಲದಲ್ಲೇ ಇಲ್ಲಿನ ಒಂದು ಈಶ್ವರ ದೇಗುಲವನ್ನು ಕಟ್ಟಿಸಲಾಯಿತೆಂದು ಹೇಳಲಾಗುತ್ತದೆ. ಇವನ ವಂಶಸ್ಥರಾದ ಸದಾಶಿವನಾಯಕನ ಉಲ್ಲೇಖ ಸಹಸ್ರಲಿಂಗದಲ್ಲಿ ಸಿಗುವ ಶಿವಲಿಂಗಗಳಲ್ಲಿ ಬರುತ್ತದೆ.

ಸೋಂದಾ ಮಠದ ಆವರಣದಲ್ಲಿ ಪ್ರಾತಕರ್ಮಗಳನ್ನು ಪೂರೈಸಿದ ನಾವು ಸೋಂದಾ ಕೋಟೆಯನ್ನು ನೋಡಲು ಹೊರಟೆವು. ಸೋಂದಾ ಮಟಕ್ಕೆ ತೆರಳುವಲ್ಲಿ ಸಿಗುವ ಅತಿಥಿಗೃಹದ ಎದುರಲ್ಲೇ ಶಾಲ್ಮಲೆಯನ್ನು ದಾಟಿ ಕೋಟೆಗೆ ಸಾಗುವ ದಾರಿಯೊಂದು ಸಿಗುತ್ತದೆ. ನೀರು ಹೆಚ್ಚಿದ್ದ ಪಕ್ಷದಲ್ಲಿ ಪಕ್ಕದಲ್ಲಿರೋ ಸೇತುವೆಯಲ್ಲಿ ನದಿಯನ್ನು ದಾಟಿ ಮತ್ತೊಂದು ಬದಿಗೂ ತೆರಳಬಹುದು. ಅಲ್ಲಿಂದ ಎಡಕ್ಕೆ ಸಾಗೋ ದಾರಿಯಲ್ಲಿ ಸಾಗಿದರೆ ತೋಟವೊಂದು ಸಿಗುತ್ತದೆ. ಅದರ ಪಕ್ಕದಲ್ಲೇ ಸಾಗುವ ದಾರಿಯಲ್ಲಿ ಒಂದೆರಡು ನಿಮಿಷ ಸಾಗುವಷ್ಟರಲ್ಲಿ ಕೋಟೆಯ ಪ್ರಾಂಗಣ ಸಿಗುತ್ತದೆ.

way to reach the Sonda fort
ದ್ವಾರಪಾಲಕ ಮಂಡೂಕರಾಯ:
ಈ ಕೋಟೆಯ ದ್ವಾರದಲ್ಲೇ ಒಂದು ಕಪ್ಪೆ ಸಿಗುತ್ತದೆ. ಕೋಟೆಯ ಸ್ವಾಗತ ಕೋರೋ ಆನೆಗಳೋ, ಭಟರೋ ಸಿಗುವುದು ಸಾಮಾನ್ಯ. ಆದರೆ ಆದರೆ ಕಪ್ಪೆಯೋ ಮಂಗವೋ ಕೋಟೆಗೆ ಸ್ವಾಗತ ಕೋರುವಂತಿರುವುದನ್ನು ನೋಡಿದ್ದು ಇದೇ ಮೊದಲು. ಇದರ ಬಗ್ಗೆ ಹೆಚ್ಚಿನ ಹಿನ್ನೆಲೆಯನ್ನು ಸ್ಥಳೀಕರು ತಿಳಿಸಬಹುದೇನೋ

ಆದಿವಾಸಿ ಹನುಮ:
ಹಾಗೇ ಮುಂದೆ ಹೋದರೆ ಒಂದು ಗುಡಿ ಸಿಗುತ್ತದೆ. ಅದರಲ್ಲೊಂದು ಹನುಮನಿದ್ದಾನೆ. ಇಲ್ಲಿನ ಹನುಮನನ್ನು ಸೂಕ್ಷ್ಮವಾಗಿ ಗಮನಿಸಿದರೆ ಆತನ ಶಿಲ್ಪದಲ್ಲಿನ ವಿಶೇಷತೆಯನ್ನು ಗಮನಿಸಬಹುದು. ಆದಿವಾಸಿಯಂತಿರುವ ಆತನ ಶಿಲ್ಪ ಗಮನ ಸೆಳೆಯುತ್ತದೆ
Hanuman statue at Sonda Fort. See the Architecture

ಶೈವ ದೇಗುಲ:
ಕೋಟೆಗೆ ಹೋಗುತ್ತಿದ್ದ ಹಾಗೆ ಎಡಕ್ಕೆ ಕಾಣುವುದೇ ಶಿವನ ದೇಗುಲ. ಎದುರಿಗೆ ನಂದಿಯಿರುವ ಉತ್ತರ ದಿಕ್ಕಿಗೆ ಮುಖ ಮಾಡಿರುವ ಈ ದೇಗುಲದ ಪ್ರವೇಶದಲ್ಲಿ ನಂದಿಕೇಶ್ವರ, ಚಂಡಿಕೇಶ್ವರರಿದ್ದಾರೆ. ದೇಗುಲದ ಸುತ್ತಲ ಗೋಡೆಗಳಲ್ಲಿ ಯಾವ ಕೆತ್ತನೆಗಳಿಲ್ಲದಿದ್ದರೂ ಅದರ ಕೆಳಭಾಗದ ಪಟ್ಟಿಗಳಲ್ಲಿ ಆನೆಗಳು, ನವಿಲು, ಹೂಗಳು ಮುಂತಾದ ಕೆತ್ತನೆಗಳಿವೆ.  ಅದರ ಎದುರಲ್ಲೇ ರಾಜನ ಪೀಠವಿದೆ
Carvings at the Shiva temple of Sonda
Shivalinga and dwara palakas at Sonda shiva temple
King's tomb at sonda fort
ರಾಜನ ಪೀಠ:
ಒಂದೇ ಕಲ್ಲಿನಿಂದ ಮಾಡಿರುವ ಪೀಠದ ನಾಲ್ಕು ಕಾಲುಗಳಲ್ಲಿ ಕಾಳಿಂಗಮರ್ಧನ ಕೃಷ್ಣ, ಹಾಲುಣಿಸುತ್ತಿರುವ ಕಾಮಧೇನು ಮುಂತಾದ ಕೆತ್ತನೆಗಳಿವೆ. ಇತ್ತೀಚೆಗೆ ಆ ಸ್ಮಾರಕದ ಸಂರಕ್ಷಣೆಗೆ ಪ್ರಯತ್ನ ಮಾಡುವಾಗ ಅದರ ಮಧ್ಯದಲ್ಲೊಂದು ಕಲ್ಲನ್ನು ಕೊಡಲಾಗಿದೆ ಎನ್ನುತ್ತಾರೆ ಸ್ಥಳೀಯರು. ಇದರ ಪಕ್ಕದಲ್ಲೊಂದಿಷ್ಟು ಪಿರಂಗಿಗಳನ್ನು ಕೂರಿಸಲಾಗಿದೆ. ಇದರ  ಪಕ್ಕದಲ್ಲಿ ಆ ಕಾಲದ ಮೂತ್ರಾಲಯ ಮತ್ತು ಬಾವಿಯೂ ಇದೆಯೆಂದು ಹೇಳುತ್ತಾರಾದರೂ ಗಮನ ಕೊಡದಿದ್ದರೆ ಅದು ಮಿಸ್ಸಾಗೋ ಸಾಧ್ಯತೆಯೇ ಹೆಚ್ಚು.

ಮಿಸ್ಸಾದ ಇನ್ನೊಂದಿಷ್ಟು:
೧೬೮೨ರಲ್ಲಿ(ಛತ್ರಪತಿ ಶಿವಾಜಿ) ಮತ್ತು ೧೭೪೫(ಬಾಲಾಜಿ ಬಾಜಿ ರಾವ್ ಪೇಶ್ವೆ) ರಿಂದ  ೧೭೬೨(ಮಾಧವರಾವ್ ಪೇಶ್ವೆ)ರವರೆಗೆ ಮರಾಠರಿಂದ ಈ ಕೋಟೆ ನಿರಂತರವಾಗಿ ದಾಳಿಗೊಳಗಾಯಿತೆಂದು ನಂತರ ೧೭೬೪ರಲ್ಲಿ ಹೈದರಾಲಿಯ ದಾಳಿಗೆ ಸಿಕ್ಕು ಇಡೀ ಕೋಟೆಯೇ ನಾಶವಾಯಿತೆನ್ನುತ್ತದೆ ಸಿಕ್ಕ ಅಲ್ಪಸ್ವಲ್ಪ ಇತಿಹಾಸ. ಆದರೆ ೧೬೭೧ರಿಂದ ೧೬೯೬ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ್ದ, ಔರಂಗಜೇಬನನ್ನು ಎದುರಿಸಿ ಮರಾಠರಸ ರಾಜಾರಾಮನಿಗೆ ರಕ್ಷಣೆ ಕೊಟ್ಟಿದ್ದ, ಕುಮಟಾ ಬಳಿಯ ಮಿರ್ಜಾಂನಲ್ಲಿ ಕೋಟೆಯನ್ನೂ ಕಟ್ಟಿದ್ದ ಕೆಳದಿ ಚೆನ್ನಮ್ಮನಿಗೂ ಈ ಸೋಂದೆಯರಸರಿಗೂ ನಡುವೆ ಇದ್ದ ಸೌಹಾರ್ದ ಸಂಬಂಧಗಳ ಬಗ್ಗೆಯಾಗಲೀ, ವೈರತ್ವದ ಬಗ್ಗೆಯಾಗಲೀ ದಾಖಲೆಗಳೇ ಸಿಗುವುದಿಲ್ಲ. ಕೆಳದಿಯರಸರೂ ವಿಜಯನಗರದ ಸಾಮಂತರಸರಾಗಿದ್ದವರೇ. ಅಕ್ಕಪಕ್ಕದಲ್ಲಿದ್ದವರ ಪ್ರಸ್ಥಾಪ ಬಿಡಿ, ತಮ್ಮ ಪಾಡಿಗೆ ತಾವಿದ್ದ ಸೋಂದಾ ಅರಸರ ಮೇಲೆ ಹಿಂದೂ ಅರಸರೇ ಆಗಿದ್ದ ಮರಾಠರು ಯಾಕೆ ದಾಳಿ ಮಾಡಿದರು ? ಅದು ಯಾವ್ಯಾವ ಯುದ್ದಗಳು ಅನ್ನೋ ಯಾವ ಮಾಹಿತಿಗಳೂ ಸಿಕ್ಕೋಲ್ಲ. ಅದರ ಬಗೆಗಿರೋ ಮಾಹಿತಿ ಮೂಲವೆಂದ್ರೆ ಡಿಜಿಟಲ್ ಸೌತ್ ಏಶಿಯಾ ಲೈಬ್ರರಿಯ Imperial Gazetteer of India, v. 23, p. 82 ಅಷ್ಟೇ. ಅಂತರ್ಜಾಲದ ಕೊಂಡಿ
http://dsal.uchicago.edu/reference/gazetteer/pager.html?objectid=DS405.1.I34_V23_088.gif . ಬ್ರಿಟಿಷರ ಬಹುಪರಾಕ್ ಇತಿಹಾಸಕಾರರಿಂದ ಅವರು ಬರೆದಿದ್ದೇ ವೇದ್ಯವಾಯಿತೇ ಹೊರತು ಉಳಿದ ದಾಖಲೆಗಳು ತಲೆಮಾರುಗಳ ಅಂತರದಲ್ಲಿ ಮಾಯವಾದವು. ಹಾಗಾಗಿ ಸೋಂದಾದೆದುರಿಗಿರುವ ಕಪ್ಪೆಯ ಬಗ್ಗೆಯೋ, ದ್ವಾರದ ಹನುಮನ ಬಗ್ಗೆಯೋ, ಕೋಟೆಯೊಳಗೆ ಅಡಗಿರಬಹುದಾದ ಇನ್ನೆಷ್ಟೋ ಸ್ಮಾರಕಗಳ ಬಗ್ಗೆಯೋ ನಮಗೊಂಚೂರೂ ತಿಳಿದಿಲ್ಲ. ಆ ಕಡೆಯ ಹಿರಿಯರೇನಾದ್ರೂ ಮಾತಿಗೆ ಸಿಕ್ಕರೆ ತಲೆತಲೆಮಾರುಗಳ ನಂತರವೂ ದಂತಕತೆಗಳಾಗೋ, ಅಚ್ಚರಿಯಾಗೋ ಬದುಕುಳಿದ ಕೆಲ ಮಾಹಿತಿಗಳನ್ನು ದಾಟಿಸಬಹುದಷ್ಟೆ.  ಉದಾಹರಣೆಗೆ: ರಾಜಾರಾಮನನ್ನ ಚೆನ್ನಮ್ಮ ರಕ್ಷಿಸಿದ್ದು ಇದೇ ಕೋಟೆಯಲ್ಲಿ ಅಂತಿದ್ದರು ಒಬ್ಬರು ಹಿರಿಯರು. ಆದರೆ ಇದರ ಪ್ರಮಾಣಕ್ಕೋ, ನಿರಾಕರಣೆಗೋ ಯಾವ ದಾಖಲೆಗಳೂ ಸಿಕ್ಕುತ್ತಿಲ್ಲ. ಚೆನ್ನಮ್ಮನಿಗೂ, ಸೋಂದಾ ಅರಸರ ನಡುವಿನ ಸಂಬಂಧಕ್ಕೇ ಪುರಾವೆಯಿರದಿದ್ದ ಮೇಲೆ ಇದಕ್ಕೆಲ್ಲಿ ಸಿಕ್ಕೀತು ? ಟಿಪ್ಪುವೇ ಮೊದಲ ಬಾರಿಗೆ ಬ್ರಿಟಿಷರ ವಿರುದ್ದ ಪಿರಂಗಿಗಳನ್ನು ಬಳಸಿದವನು ಅನ್ನುತ್ತಾರೆ ಕೆಲವರು. ಆದ್ರೆ ಇಲ್ಲಿನ ಕೋಟೆಯಲ್ಲಿ ಅದಕ್ಕಿಂತ ಮುಂಚೆಯೇ ಬಳಕೆಯಲ್ಲಿದ್ದ ಪಿರಂಗಿಗಳನ್ನು ತದನಂತರ ಸಿಕ್ಕಿದ್ದನ್ನು ಕಾಣಬಹುದು ! ಇಲ್ಲಿಗೆ ಬಂದಾಗ ಎಲ್ಲಾ ಅಯೋಮಯವೆನಿಸಿದ್ರೂ ಅನಿಸೋ ಭಾವವೊಂದೇ. ನಮಗೆ ಗೊತ್ತಿರೋ ಇತಿಹಾಸಕ್ಕಿಂತ ಗೊತ್ತಿಲ್ಲದಿದ್ದು ಎಷ್ಟೋ ಇದೆ ಅಂತ.
Missiles at Sonda Fort



ಸೋಂದಾದಿಂದ ಶಿರಸಿಗೆ :
ಸೋಂದಾದಿಂದ ಉಳಿಕೊಪ್ಪ ಮೂಲಕ ಬಂದರೆ ಸಿಗೋದು ಯಲ್ಲಾಪುರ ಕ್ರಾಸ್ ಅಥವಾ ಸೋಂದಾ ಕ್ರಾಸ್. ಅಲ್ಲಿಂದ ಯಲ್ಲಾಪುರ ೨೪ ಕಿ.ಮೀ. ಅಲ್ಲಿ ಕೆಳಕ್ಕಿಳಿಯದೇ ಸೀದಾ ಮುಂದೆ ಬಂದರೆ ಗುಂಡಿಗದ್ದೆ,ಹಕ್ಕಿಮನೆ, ಪೇರಳಕುಂಬ್ರಿ,ಸಹಸ್ರಲಿಂಗ,ಭೈರುಂಬೆ ಸಿಗುತ್ತೆ. ಸಹಸ್ರಲಿಂಗದಿಂದ ಸೇತುವೆ ದಾಟಿ ಶಿವಗಂಗಾ, ಗಣೇಶಫಾಲ್ ನೋಡಿದ್ದರ ಬಗ್ಗೆ ಹಿಂದಿನ ಲೇಖನದಲ್ಲಿ ಓದಿದ್ದೆವು. ಅಲ್ಲಿಂದ ಮತ್ತೊಂದು ಬದಿಯಿಂದ ನಾವು ಸೋಂದಾಕ್ಕೆ ಬಂದಿದ್ದೆವು. ಈಗ ಮತ್ತೆ ಸಹಸ್ರಲಿಂಗಕ್ಕೇ ಬಂದು ಸೇರೋದ್ರೊಂದಿಗೆ ಸಹಸ್ರಲಿಂಗದ ಮತ್ತು ನದಿ ಶಾಲ್ಮಲೆಯ ಪ್ರದಕ್ಷಿಣೆಯೊಂದನ್ನು ಹಾಕಿದಂಗಾಗಿತ್ತು.ಭೈರುಂಬೆಯಿಂದ ಶಿರಸಿಗೆ ೧೩ ಕಿ.ಮೀ. ಆ ಹಾದಿಯಲ್ಲಿ ಸಿಗೋ ಮುಖ್ಯ ಊರುಗಳಂದ್ರೆ ಆಶೀಸರ, ತಾರಗೋಡು,ದಾಸನಗದ್ದೆ. ಇನ್ನೊಂದಿಷ್ಟು ಸಿಕ್ಕಿದ್ರೂ ನೆನಪಲ್ಲುಳಿದಿದ್ದಿಷ್ಟೆ :-)

ಮುಂದಿನ ಭಾಗದಲ್ಲಿ: ಯಾಣದತ್ತ ನಮ್ಮ ಪಯಣ