Saturday, September 10, 2016

ನಾ ನೋಡಿದ ಸಿನಿಮಾ ಮುಂಗಾರು ಮಳೆ-೨

ಜೀವನದ ಪ್ರತೀ ಕ್ಷಣನೂ ಎಕ್ಸೈಟಿಂಗ್ ಆಗಿರ್ಬೇಕು ಅನ್ನೋ ಹುಡುಗನ ಜತೆ ದೇಶ ಸುತ್ತೋ ಕತೆಯಲ್ಲಿ ಯುರೋಪು,ರಾಜಸ್ಥಾನ ನೋಡೋ ಕಣ್ಣುಗಳು, ಸ್ವಿಟ್ಜರ್ ಲ್ಯಾಂಡ್, ಕಾಶ್ಮೀರದಂತ ಮಂಜನ್ನು ಕಂಡು ವಾವೆಂದ್ರೂ ಕೊನೆಗೆ ಬಂದು ಸೆಟಲ್ ಆಗೋದು ನಮ್ಮ ಮಲೆನಾಡಲ್ಲೇ. ಮುಂಗಾರು ಮಳೆಯಂದ್ರೆ ಮಲೆನಾಡು, ಮಡಿಕೇರಿ,ಸಕಲೇಶಪುರ ಇಲ್ದಿದ್ರೆ ಹೆಂಗೆ ? ರಾಜಸ್ಥಾನದ ಮರಳುಗಾಡು, ಒಂಟೆ ಹಾಲು ಕರೆಯೋ ಉತ್ಸವ, ಕೋಟೆಗಳನ್ನ ನೋಡಿ ವಾವೆನ್ನೋ ಹೊತ್ತಿಗೇ ಕತೆ ಮಲೆನಾಡಿಗೆ ಬರತ್ತೆ. ಜೋಗ ಫಾಲ್ಸಲ್ಲಿ ಕುಣಿದು ಕುಣಿದು ಬಾರೆ ಅನ್ನೋ ಹಾಡು ನೋಡಿದ್ದ ನಮಗೆ ಆ ಫಾಲ್ಸಿನ ಮೇಲೇ ಒಂದು ಫೈಟೂ ನೋಡೋ ಶಾಕು ! ಅದೆಷ್ಟೇ ಕೇರ್ ತಗೊಂಡು ಮಾಡ್ತಾರೆ ಅಂದ್ರೂ ಒಂದು ಕ್ಷಣಕ್ಕೆ ಭಯ ಹುಟ್ಟಿಸೋ ಸನ್ನಿವೇಶಗಳ ಜೊತೆಗೆ ಅಲ್ಲೇ ಸುತ್ತಲ ಭೀಮೇಶ್ವರ ದೇವಸ್ಥಾನದ ಬಳಿಯ ಫಾಲ್ಸು, ಸಕಲೇಶಪುರದ ಬಿಸಿಲೇ ಘಾಟು, ಜೋಗದ ಜಲಪಾತದ ಹಿಂಬದಿಯ ಬ್ರಿಟಿಷ್ ಬಂಗಲೋ, ಮಡಿಕೇರಿಯ ಪ್ರಕೃತಿ ಎಲ್ಲಾನು ಒಂದಾದ್ರ ಮೇಲೊಂದರಂತೆ ಮಿಕ್ಸ್ ಮಾಡಿ ತೋರಿಸ್ತಿದ್ರೆ ಆಹಾ ಅದೇ ಅದ್ಭುತ ಅನಿಸಿಬಿಡುತ್ತೆ.

ಮಿಸ್ಸಾಗೋ ರೈಲನ್ನು ಓಡಿ ಬಂದು ಹತ್ತೋ ಹಿಂದಿಯ ಶಾರುಖಿನ ಅನೇಕ ಫಿಲ್ಮುಗಳಲ್ಲಿ ಬರೋ ದೃಶ್ಯವನ್ನೇ ಇಲ್ಲೂ ಬಳಸಿದ್ದಾರಾ ಅಂತ ಅನುಮಾನ ಬರೋ ಹೊತ್ತಿಗೆ ಅಲ್ಲೊಂಚೂರು ಚೇಂಜು, ಗೋಲ್ಡಲ್ ಸ್ಟಾರ್ ಗಣೇಶರ ತಂದೆಯಾಗಿ ಅವರೆಲ್ಲಾ ಎಕ್ಸೈಟ್ಮೆಂಟುಗಳನ್ನೂ ನನಸಗಿಸಬೇಕೆನ್ನೋ ಕ್ರೇಜಿ ತಂದೆಯಾಗಿ ರವಿಚಂದ್ರನ್, ಮಡಿಕೇರಿಯ ಹುಡುಗಿ ಸ್ನೇಹಾ ಶೆಟ್ಟಿಯ ತಂದೆ ಪೊನ್ನಪ್ಪನಾಗಿ ರವಿಶಂಕರ್, ಒಂದು ಮಜಾ ಸನ್ನಿವೇಶದಲ್ಲಿ ಎಂಟ್ರಿ ಕೊಡೋ ಐಂದ್ರಿತಾ, ರೈಲಿಂದ ಹಿಡಿದು ಮಾನಸಿಕ ತಜ್ಞೆಯವರೆಗೆ ಅನೇಕ ರೂಪದಲ್ಲಿ ಎಂಟ್ರಿ ಕೊಡೋ ಒಂದಿಷ್ಟು ಚೆಲುವೆಯರು ..ಆಹಾ. ಚೆಲುವೋ ಚೆಲುವೋ ;-) ಇನ್ನು ಮುಂಗಾರು ಮಳೆ ಅಂದ್ರೆ ಅದರ ಚಿತ್ರದ ಬಗ್ಗೆ ಅದ್ರ ಹಾಡುಗಳ ಬಗ್ಗೆನೂ ವಿಪರೀತ ನಿರೀಕ್ಷೆ ಜನಕ್ಕೆ. ಕೊಡವ ನುಡಿಗಳಿಂದ ಶುರುವಾಗೋ ಒಂದು ಹಾಡು, ರಣಧೀರ ಚಿತ್ರದ ಸಿಗ್ನೇಚರ್ ಟ್ಯೂನನ್ನು ತಗೊಳ್ಳೋ ಅಪ್ಪ ಮಗನ ಬಗ್ಗೆಯ ಒಂದು ಕನ್ನಡ ಪಾಪು, ಮನಸ್ಸಲ್ಲುಳಿಯೋ ಮುಂಗಾರು ಮಳೆಯ ಟ್ಯೂನಿನ ಫಾಸ್ಟ್ ಬೀಟಿನ ಮತ್ತೊಂದು ಹಾಡು.. ಹಿಂಗೆ ಚಿತ್ರದ ಹಾಡುಗಳೂ ಮನಸ್ಸಲುಳಿಯುತ್ತೆ. ಆದ್ರೆ ಕೊಡವ ಹಾಡೊಂದ್ರಲ್ಲಿ ಗಣೇಶಂಗಿಂತ ಸಾಧುಕೋಕಿಲನೇ ಒಳ್ಳೆ ಸ್ಟೆಪ್ ಹಾಕ್ತಾನಲ್ಲೋ, ಗಣೇಶಂಗಿಂತ ಅವ್ರ ಹಿಂದಿರೋರೇ ಚೆನ್ನಾಗಿ ಕುಣೀತಿದ್ದಾರಲ್ಲೋ ಅಂತನ್ನೋ ಕಿಂಡಲ್ಲುಗಳು ಚಿತ್ರದಲ್ಲಿ ಅವಾಗವಾಗ ಕೇಳಿದ್ದು ಸುಳ್ಳಲ್ಲ. ದುಬಾರಿ ಬೈಕುಗಳು, ಕಾರುಗಳು, ಯುರೋಪಿನ ಲೊಕೇಶನ್ಗಳು,, ಹಿಂಗೆ ಕನ್ನಡ ಚಿತ್ರವೊಂದನ್ನು ಶ್ರೀಮಂತವಾಗಿ ತೆಗೆಯೋಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದಾರೆ. ಎರಡು ಹಾಡುಗಳಲ್ಲಿ ವಾವೆನಿಸುವಂತೆ ಗ್ರಾಫಿಕ್ಸುಗಳನ್ನ ಬಳಸಿದ್ದು ಬಿಟ್ರೆ ಉಳಿದಿದ್ದೆಲ್ಲಾ ಓಕೆ. ಮುಂಗಾರು ಮಳೆ-೨ ಅಂದಾಕ್ಷಣ ಅದ್ರದ್ದೇ ಮುಂದುವರಿದ ಕತೆಯಂದ್ಕಂಡು ಹೋದವರಿಗೆ ಒಂದೆರಡು ಕಡೆ ಬಿಟ್ಟು ಬೇರೆಲ್ಲಾ ಕಡೆ ಬೇರೆ ಭಾವವೇ. ಅದೇನು ಅಂತ ನೋಡೋಕಾದ್ರೂ ಸಿನಿಮಾ ನೋಡ್ಬೇಕಾದದ್ದೇ. ಸಿನಿಮಾ ಹೆಂಗಿದ್ಯಪ್ಪಾ ಅನ್ನೋರಿಗೆ ಅದ್ಭುತ ಅಂತನಿಸದಿದ್ರೂ ಒಂದ್ಸಲ ಆರಾಮಾಗಿ ನೊಡ್ಬೋದು ಗುರು ಅಂತೆಂತೂ ಆರಾಮಾಗಿ ಹೇಳೋ ಹಂಗಿದೆ ಈ ಚಿತ್ರ

No comments:

Post a Comment