Sunday, November 22, 2015

ಹಬ್ಬಾಡೋದು, ಹಬ್ಬ ಹಾಡೋದು, ಅಂಟಿಗೆಪಿಂಟಿಗೆ ಆಚರಣೆ ಕುರಿತೊಂದಿಷ್ಟು:

ದೀಪಾವಳಿ ಅಂದ್ರೆ ಮಲೆನಾಡು ಹೆಚ್ಚಾಗಿ ನೆನಪಾಗೋದಕ್ಕೆ,ಕಾಡೋದಕ್ಕೊಂದು ಕಾರಣ ಅಲ್ಲಿನ ಅಂಟಿಗೆ ಪಿಂಟಿಗೆ,ಹಬ್ಬಾಡೋದು,ಹಬ್ಬ ಆಡೋದು ಅಂತ ಹಲವು ಹೆಸರುಗಳಿಂದ ಕರೆಯಲ್ಪಡೋ ಆಚರಣೆ. ಈ ಆಚರಣೆಯ ಬಗ್ಗೆ ನನ್ನ ಬಾಲ್ಯದಿಂದಲೂ ನಮ್ಮ ತಂದೆಯವರಿಂದ, ಅಜ್ಜ-ಅಜ್ಜಿಯ ಬಾಯಿಂದ ಕೇಳಿ ಕೇಳಿ, ಪಠ್ಯದಲ್ಲೂ ಓದಿದ್ದ ನನಗೆ ಅದನ್ನ ನೋಡ್ಲೇಬೇಕೆಂಬ ಬಯಕೆ ಕಾಡ್ತಾ ಇತ್ತು. ಆದ್ರೆ ಏನು ಮಾಡೋದು ? ನಮ್ಮೂರಲ್ಲಿ ಆ ಆಚರಣೆ ಇರಲಿಲ್ಲ. ಇದ್ದ ಹಳ್ಳಿಗಳಲ್ಲೂ ಅದು ಮರೆಯಾಗುತ್ತಾ ಬರುತ್ತಿರೋದ್ರಿಂದ ಇದನ್ನ ನೊಡೋದಂದ್ರೆ ಬರೀ ವೀಡೀಯೋಗಳಲ್ಲಿ, ರಂಗದ ಮೇಲೆ ಮಾತ್ರಾ ನೋಡೋಕಾಗೋದಾ ಅನ್ನೋ ಭಯವೂ ಕಾಡುತ್ತಿತ್ತು.ಅದಕ್ಕೇ ಹಬ್ಬಕ್ಕೆ ಒಂದಿಷ್ಟು ದಿನ ಮುಂಚೆ ಮುಖಹೊತ್ತಿಗೆಯ ಗೋಡೆಯ ಮೇಲೆ "ನಿಮ್ಮೂರಲ್ಲಿ ಅಂಟಿಗೆ-ಪಿಂಟಿಗೆ ಇದೆಯಾ " ಅಂತ ಸ್ಟೇಟಸ್ ಹಾಕಿದ್ದೆ. ಒಂದಿಷ್ಟು ಗೆಳೆಯರಿಗೆ ಮೆಸೇಜು ಮಾಡಿದ್ದೆ. ಅದರಲ್ಲಿ ಗೆಳೆಯರಾದ ವಿಶ್ವೇಶ್ವರ, ಕಾರ್ತೀಕ್, ನೀಚಡಿ ವಸಂತಣ್ಣ, ಸುಶ್ರುತ್ ಅವ್ರು, ಅರವಿಂದ ಉತ್ತರವನ್ನೂ ಇತ್ತಿದ್ರು.ಅದ್ರಲ್ಲೂ ವಸಂತಣ್ಣ,ವಿಶ್ವೇಶ್ವರ ನಮ್ಮೂರಲ್ಲಿ ಇಂಥಾ ದಿನ ಇದೆ. ನೀನು ಬರ್ಲೇ ಬೇಕು ಅಂತ ಒತ್ತಾಯವನ್ನೂ ಮಾಡಿದ್ರು. ಸರಿ ಅಂತ ಹೊರಟಿದ್ದು ವಸಂತಣ್ಣನ ಊರಾದ ಚಿಕ್ಕಬಿಲಗುಂಜಿಗೆ. ಚಿಕ್ಕಬಿಲಗುಂಜಿ ಮತ್ತು ನೀಚಡಿಯಲ್ಲಿನ ಹಬ್ಬಾಡೋರ ತಂಡಕ್ಕೆ ಕಿವಿಯಾಗೊದ್ದು, ನಾನೂ ಆ ತಂಡದೊಂದಿಗೆ ಭಾಗಿಯಾಗಿದ್ದೊಂದು ಸಖತ್ ನೆನಪು. ಆ ನೆನಪುಗಳನ್ನು ತಮ್ಮೊಟ್ಟಿಗಿಡೋ ಪ್ರಯತ್ನದಲ್ಲಿದ್ದೇನೆ. ನಾ ಕೇಳಿದ ಹಬ್ಬಾಡೋ ಹಾಡುಗಳನ್ನೆಲ್ಲಾ ರೆಕಾರ್ಡ್ ಮಾಡಿ ಗೂಗಲ್ ಡ್ರೈವಿಗೆ ಹಾಕಿಟ್ಟಾಗಿದೆ.. ಫೋಟೋಗಳೂ ಅಪ್ಲೋಡಾಗೋ ಹಾದಿಯಲ್ಲಿ..ಜೊತೆಯಾದ ನೆನಪ ಬುತ್ತಿಯೀಗ ನಿಮ್ಮ ಮುಂದೆ...
ವಸಂತಣ್ಣನ ಹಬ್ಬ ಕಳಿಸೋ ತಯಾರಿ

ಮಲೆನಾಡಿಗರಿಗೆಲ್ಲಾ ದೀಪಾವಳಿ ಅಂದ್ರೆ ಭಾರೀ ಖುಷಿ. ದೊಡ್ಡಬ್ಬ ಅಂತ್ಲೇ ಕರೆಯೋ ಇದರ ಆಚರಣೆ ಶುರುವಾಗೋದು ಭೂರಿನೀರು ತುಂಬೋ ರಾತ್ರಿಯಿಂದ. ರಾತ್ರಿಯೇ ಮನೆಯ ಹಂಡೆ,ಬಾವಿ,ಒಲೆಗಳಿಗೆಲ್ಲಾ ರಂಗೋಲಿ ಬರೆದು, ಅಳ್ಳಂಡೆಕಾಯಿಯದೋ ಮತ್ಯಾವುದೋ ಕಾಯಿಯದೋ ಎಲೆ,ಬಳ್ಳಿ ತಂದು ಕಟ್ಟಿ ಪೂಜಿಸೋದ್ರಿಂದ ಹಬ್ಬದ ಖುಷಿ ಕಳೆಗಟ್ಟಲಾರಂಭಿಸುತ್ತೆ. ಮಾರನೇ ದಿನ ಬೆಳಗ್ಗೆಯೇ ಮನೆಯ ಎಳೆಯರಿಗೆಲ್ಲಾ ಎಬ್ಬಿಸಿ ಎಣ್ಣೆ ಹಚ್ಚಿ ಕೂರಿಸೋದು ಅಂದ್ರೆ ಅಮ್ಮಂದಿರಿಗೆಲ್ಲಾ ಯುದ್ದಕ್ಕೆ ಹೊರಟ ಭಾವ. ಏ ಎಣ್ಣೆ, ಜಿಡ್ಡು, ರಾಡಿ ಅಂತ ನೂರೆಂಟು ವಸವಂತ ಮಾಡೋ ಕಿಲಾಡಿ ಮಕ್ಕಳನ್ನು ಒಂದ್ಕಡೆ ಕೂರಿಸಿ ಅವರ ತಲೆಗೆ ಎಣ್ಣೆ ತಟ್ಟಿ, ಮುಖ, ಕೈ ಕಾಲಿಗೆಲ್ಲಾ ಎಣ್ಣೆ ಬಳಿಯೋ ಹೊತ್ತಿಗೆ ಅವರ ಅಮ್ಮಂದಿರಿಗೆ ಉಸ್ಸಪ್ಪಾ ಅನಿಸದಿರಲ್ಲ. ಶರ್ಟು ಬಿಚ್ಚಿ ಕೂರಿಸಿದ ಹುಡುಗ್ರೆಲ್ಲಾ ಚಳಿ ಚಳಿ ಅಂತಾರೆ ಅಂತ ಅವರನ್ನ ಬಿಸಿಲಲ್ಲಿ ಕೂರಿಸೇ ಎಣ್ಣೆ ಹಚ್ಚೋದು. ಏ ವರ್ಷಕ್ಕೊಂದು ಸಲ ಎಣ್ಣೆ ಹಚ್ಚಿಸ್ಕೊಳ್ಬೇಕು ಕಣೋ. ಸೂರ್ಯನ ಬಿಸಿಲಲ್ಲಿ ಇದ್ರೆ ವಿಟಮಿನ್ ಡಿ ಸಿಗುತ್ತೆ ಅಂತ ಓದಿಲ್ವಾ ನೀನು ಅಂತ ಪುಸಲಾಯಿಸೋ ಈಗಿನ ಅಮ್ಮಂದಿರು ಮಕ್ಕಳಷ್ಟೇ ಅಪಡೇಟ್ ಆಗಿದ್ದಾರೆ ! ಆಚರಣೆ ಅಂತ್ಲೋ, ಇಷ್ಟಪಟ್ಟೋ ಎಣ್ಣೆ ಬಳಿಸಿಕೊಂಡದ್ದಾಯ್ತು. ಆ ಜಿಡ್ಡಿನ್ನು ತೊಳೆಯೋದೇಗಪ್ಪಾ ಅನ್ನೋದು  ಮಕ್ಕಳ ತಲೆನೋವು. ಅದಕ್ಕೇಂತ್ಲೇ ಒಲೇಲೆ ಬಿಸಿನೀರು, ಸೀಗೇಪುಡಿ ಕಾಯ್ತಾ ಇರುತ್ತಲ್ಲ. ಎಣ್ಣೆ ಹಚ್ಚಿಸಿಕೊಂಡು ಬಿಸಿಲಲ್ಲಿ ಕೂತರೂ ಬಚ್ಚಲ ಬಿಸಿನೀರು, ಸೀಗೆಕಾಯಿಯ ಸ್ಪರ್ಷ ಅನ್ನೋದು ಅದೆಷ್ಟು ಖುಷಿ ಕೊಡುತ್ತೆ ಅಂತೀರಿ.. ಏ ಅರ್ಧ ಘಂಟೆ ಆಯ್ತಲ್ಲೋ ಸ್ನಾನಕ್ಕಿಳಿದು, ಹಂಡೆಯ ನೀರೆಲ್ಲಾ ಖಾಲಿ ಮಾಡಿದ್ಯಾ ಎಂತ ಕತೆ ಅಂತ ಅಮ್ಮ ಗದರೋವರೆಗೂ ಹೊರಲೋಕದ ಪ್ರಜ್ಞೆಯೇ ಇಲ್ಲದಂತಾ ಭಾವ ಅಲ್ಲಿ !
ಸುರುಸುರು ಬತ್ತಿಯೊಂದಿಗೆ ಶಿಶಿರಣ್ಣ
ಭೂರಿನೀರು ತುಂಬೋ ರಾತ್ರಿಯ ಅಲಂಕಾರ
ಭೂರಿನೀರು ತುಂಬೋ ದಿನದ ರಾತ್ರಿ ಭೂರಿಕಳವು, ಭೂರಿಗಳವು ಅನ್ನೋದು ಕೆಲವು ಹಳ್ಳಿಗಳಲ್ಲಿರೋ ಆಚರಣೆ. ಅವತ್ತು ರಾತ್ರೆ ಏನು ಕಳುವು ಮಾಡಿದರೂ ಯಾರೂ ಏನೂ ಅನ್ನಬಾರದು ಅನ್ನೋದು ಹಳ್ಳಿಗಳಲ್ಲಿನ ವಾಡಿಕೆ. ಮುಂದಿನ ವಾರ ಇಳಿಸಿ ಮಾರಬೇಕು ಅಂತಿರೋ ಎಳನೀರೋ, ನಾಡಿದ್ದು ಹಬ್ಬಕ್ಕಾಗುತ್ತೆ ಅಂತ ಮರದಲ್ಲೇ ಬಿಟ್ಟ ಬಾಳೆಗೊನೆ, ಒಡೆಯೋಕೆ ಆಗುತ್ತೆ ಅಂತ ಹಿತ್ತಲಲ್ಲಿ ಬಿಟ್ಟ ಕುಂಬಳಕಾಯಿ ಹೀಗೆ ಹಲವಷ್ಟು ವಸ್ತುಗಳು ಬೆಳಗಾಗುವಷ್ಟರಲ್ಲಿ ಮಾಯವಾಗಿರುತ್ತೆ ಆ ದಿನ ! ಹಂಗತಾ ಮನೆ ದರೋಡೆ ಮಾಡುವಷ್ಟರ ಮಟ್ಟಿಗೆ ದರೋಡೆ ಮಾಡ್ತಾರೆ ಅಂತಲ್ಲ. ತಮಗೆಲ್ಲಾ ಬಯ್ತಿರೋ,ಹೀಯಾಳಿಸ್ತಿರೋ ಜನರ ಮನೆಯಿಂದ ಏನಾದ್ರೂ ಕದ್ದು ಅವರಿಗೊಂದು ಪಾಠ ಕಲಿಸೋ ಚೇಷ್ಟೆಯಷ್ಟೇ ಒಂದಿಷ್ಟು ಹುಡುಗರದ್ದು. ರಾತ್ರಿಯೆಲ್ಲಾ ಕದ್ದದ್ದನ್ನು ಎಲ್ಲಾ ಒಂದೆಡೆ ಸೇರಿ ತಿಂದು ಮುಗಿಸಿ ಮನೆಗೆ ಹೋಗಿ ಮಲಕ್ಕೋತಾರೆ ಅಷ್ಟೆ. ಸಾಮಾನ್ಯವಾಗಿ ಕಳುವಾಗೋದು ತಿನ್ನೋ ವಸ್ತುಗಳೇ ಆದ್ದರಿಂದ ಹುಡುಗ್ರ ಹುಡುಗುಬುದ್ದಿಗೆ ಕಳುವಾದ ಮನೆಯವ್ರೂ ಹೆಚ್ಚು ತಲೆಕೆಡಿಸಿಕೊಳ್ಳದೇ ಒಂದು ಹಿಡಿಶಾಪ ಹಾಕಿ, ನಸುನಕ್ಕು ಸುಮ್ಮನಾಗಿ ಬಿಡ್ತಾರೆ. ಯಾಕಂದ್ರೆ ಅವ್ರೂ ತಮ್ಮ ಯೌವನದಲ್ಲಿ ಇದನ್ನೆಲ್ಲಾ ಮಾಡಿದವ್ರೇ ಅಲ್ಲವೇ !

ಅದಾದ ಮೇಲೆ ನರಕಚತುರ್ದಶಿ. ಉಪರಿ ಬಂತು ಅಂತ ಕೆಲವು ಸಲ ಅವತ್ತೇ ಅಮವಾಸ್ಯೆಯ ತಿಥಿಯೂ ಬಂದುಕೊಂಡಿರುತ್ತೆ! ಮಲೆನಾಡ ಕೆಲವು ಸೀಮೆಗಳಲ್ಲಿ ಅಮವಾಸ್ಯೆಯಂದು ಗೋಪೂಜೆ,ಲಕ್ಷ್ಮೀಪೂಜೆ, ಆಯುಧಪೂಜೆಗಳಾದ್ರೆ ಕೆಲವು ಕಡೆ ಅದು ಬಲಿಪಾಡ್ಯಮಿಗೆ. ಬಲಿಪಾಡ್ಯಮಿ ಅನ್ನೋದು ವರ್ಷಕ್ಕೊಂದು ಸಲ ಬಲೀಂದ್ರ ರಾಜನು ಭೂಮಿಗಿಳಿದು ಬರುವ ದಿನ ಅಂತ ಬಲೀಂದ್ರಪೂಜೆಯನ್ನೂ ನಡೆಸುತ್ತಾರೆ. ಅಂದ ಹಾಗೆ ಈ ಎಲ್ಲಾ ಪೂಜೆಗಳನ್ನ ನವರಾತ್ರಿಯಲ್ಲಿ ಮಾಡ್ತಾರಲ್ವಾ ಅನ್ನುವವರ ಸಂದೇಹ ಪರಿಹಾರಕ್ಕೆ ಈ ಮಾಹಿತಿ. ಈ ಎಲ್ಲಾ ಪೂಜೆಗಳನ್ನ ಪೇಟೆಯಲ್ಲಿರುವಂತೆ ನವರಾತ್ರಿಗೆ ಮಾಡೋಲ್ಲವಿಲ್ಲಿ. ಅವೆಲ್ಲಾ ಆಗೋದು ದೀಪಾವಳಿಗೆ.  ನವರಾತ್ರೆಯ ಎಂಟನೇದಿನದಿಂದ ಪುಸ್ತಕಗಳನ್ನಿಟ್ಟು ಶಾರದಾಪೂಜೆ ಅಂತ ಮಾಡೋದು ಬಿಟ್ಟರೆ, ಆ ಒಂಭತ್ತು, ಹತ್ತನೇದಿನದ ಪೂಜೆಗಳೆಲ್ಲಾ ಇಲ್ಲಿ ಆಗೋದು ದೀಪಾವಳಿಗೆ. ಅದಕ್ಕೇ ದೀಪಾವಳಿಯೆನ್ನೋದು ದೊಡ್ಡಬ್ಬ.ದೀಪಾವಳಿಯಲ್ಲಿ ಗೋವುಗಳನ್ನು/ಹೋರಿಗಳನ್ನು ಬೆದರಿಸೋದು, ಅವತ್ತಿನ ರಾತ್ರಿ ಪಂಜಿನಿಂದ ಹಬ್ಬ ಕಳಿಸೋದು ಹೀಗೆ ಹತ್ತು ಹಲವು ಆಚರಣೆಗಳ ಖುಷಿಯ ಬಗ್ಗೆ ಬರೆಯುತ್ತಾ ಹೋದ್ರೆ ಒಂದೊಂದೂ ಒಂದೊಂದು ಸಂಚಿಕೆಯಾದಾವು.

ಅವುಗಳೆಲ್ಲವನ್ನೂ ಸದ್ಯಕ್ಕಲ್ಲೇ  ಬಿಟ್ಟು  ಅಂಟಿಗೆಪಿಂಟಿಗೆ ರಾತ್ರಿಯ ಕಥೆಗೆ ಬರೋಣ. ನೀಚಡಿ ಅಂದ್ರೆ ಎಲ್ಲಪ್ಪ ಅನ್ನೋರಿಗೆ ಅದು ಸಾಗರದಿಂದ ಶಿವಮೊಗ್ಗ ರಸ್ತೆಯಲ್ಲಿ ೨೨ ಕಿ.ಮೀ ದೂರದಲ್ಲಿದೆ ಅಂತನ್ನಬಹುದು. ಶಿವಮೊಗ್ಗ ರಸ್ತೆಯಲ್ಲಿ ಸಿಗೋ ಕಾಸ್ಪಾಡಿಯಿಂದ ತ್ಯಾಗರ್ತಿ ರಸ್ತೆಯಲ್ಲಿ ೭ ಕಿ.ಮೀ ಹೋದರೆ ಸಿಗೋದೆ ಚಿಕ್ಕಬಿಲಗುಂಜಿ. ಅಲ್ಲಿಂದ ಒಂದು ಕಿಮೀ ಮೇಲೆ ಹೋದರೆ ಸಿಗೋದು ನೀಚಡಿ.ಚಿಕ್ಕಬಿಲಗುಂಜಿಯ ವಸಂತಣ್ಣನ ಮನೆಯ ಹಿಂದಿನ ಹಲಸಿನ ಮರಕ್ಕೆ ನಮಸ್ಕಾರ ಮಾಡೇ ಅಂಟಿಗೆ ಪಿಂಟಿಗೆಯ ಯಾತ್ರೆ ಶುರುವಾಗೋದ್ರಿಂದ ಸರಿಯಾದ ಸಮಯಕ್ಕೆ, ಸರಿಯಾದ ಮನೆಗೆ ಹೋಗಿದ್ದು ನನ್ನ ಅದೃಷ್ಟವೇ ಸರಿ ಎಂದನಿಸಿದ್ದು ಸುಳ್ಳಲ್ಲ.
ಹಲಸಿನ ಮರದ ಬುಡದಿಂದ ಜ್ಯೋತಿಯನ್ನು ತೆಗೆದುಕೊಳ್ಳುತ್ತಿರೋ ಚಿಕ್ಕಬಿಲಗುಂಜಿಯ ಹಬ್ಬಾಡೋ ತಂಡ

ಅಂಟಿಗೆ-ಪಿಂಟಿಗೆ ಅಥವಾ ಹಬ್ಬಾಡೋ ಆಚರಣೆ ಎಲ್ಲೆಡೆ ನಶಿಸುತ್ತಾ ಬಂದಿದ್ರೂ ಇಲ್ಲಿ ಉಳಿದುಕೊಂಡಿರೋಕೆ ಮುಖ್ಯ ಕಾರಣ ಆ ಊರವರು ನಡೆಸಿಕೊಂಡು ಬಂದಿರೋ ಕಟ್ಟುಪಾಡುಗಳು ಅನಿಸುತ್ತೆ. ಅಲ್ಲಿ ಸುಮಾರು ನಲವತ್ತು ಮನೆಗಳಿವೆಯಂತೆ. ಎಲ್ಲಾ ಮನೆಗಳಿಂದಲೂ ಹಬ್ಬಾಡೋಕೆ ಕನಿಷ್ಟ ಒಬ್ಬರಾದರೂ ಬರಲೇಬೇಕಂತೆ. ಬರಲಿಲ್ಲ ಅಂದ್ರೆ ಒಂದು ಸಾವಿರ ರೂ ದಂಡ ! ದಂಡ ಅನ್ನೋದಕ್ಕಿಂತಲೂ ಹೆಚ್ಚಾಗಿ ನಮ್ಮೂರ ಆಚರಣೆ ಅನ್ನೋ ಕಾರಣಕ್ಕೆ ಊರವರೆಲ್ಲಾ ಒಟ್ಟು ಸೇರಿ ನಡೆಸಿಕೊಂಡು ಬಂದಿರೋ ಆಚರಣೆಯನ್ನ ನೋಡೋಕೆ ಖುಷಿಯಾಗುತ್ತೆ. ಊರ ಒಂದು ಹಲಸಿನ ಮರದ  ಬುಡದಲ್ಲಿ ನಂದಾದೀಪದಂತೆ ಒಂದು ದೀಪ ಹಚ್ಚಿ ಅದನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿರುತ್ತಾರೆ ಹಬ್ಬದ ಹಿಂದಿನ ದಿನ. ಹಬ್ಬದ ದಿನ ರಾತ್ರಿ ಅದೇ ಮರದ ಬುಡಕ್ಕೆ ಮತ್ತೆ ಬಂದು ಅಲ್ಲಿಂದ ತಮ್ಮ ದೀವಟಿಗೆಗಳಿಗೆ ಬೆಂಕಿ ಹಚ್ಚಿಕೊಂಡು ಹಬ್ಬದ ಹಾಡುಗಳ ಹಾಡುತ್ತಾ ಊರ ದೇವಸ್ಥಾನಕ್ಕೆ ಹೋಗುತ್ತಾರೆ.
ಊರದೇಗುಲದಲ್ಲಿ ಶ್ರೀಕೃಷ್ಣಪಾರಿಜಾತದ ಮೊದಲ ಹಾಡು
ಆಚರಣೆಯಲ್ಲಿ ಹಿರಿಯರಷ್ಟೇ ಜೋಶ್ನಿಂದ ಕಿರಿಯರೂ ಬರ್ತಿದ್ದಾರೆ ಅನ್ನೋದ್ನ ನೋಡೋಕೆ ಸಖತ್ ಖುಷಿಯಾಗುತ್ತೆ !

ಚಿಕ್ಕಬಿಲಗುಂಜಿ ಹಬ್ಬಾಡೋ ತಂಡ
 ಅಲ್ಲಿ ಹಬ್ಬದ ಹಾಡುಗಳನ್ನ ಹಾಡಿದ ನಂತರ ಊರ ಪ್ರತಿಯೊಬ್ಬರ ಮನೆಗೂ ಹಬ್ಬದ ಹಾಡುಗಳನ್ನ ಹಾಡುತ್ತಾ ಬರುತ್ತಾರೆ. ದೀಪೋಳಿಯೋ.. ದೀಪೋ ಎಂದು ಕೂಗುತ್ತಾ
ಊರಗಮದೊಡೆಯಗೆ ನನ್ನ ಪೂಜೋ ಅಂತ ಶುರುವಾಗೋ ಬಲೀಂದ್ರನ ಪೂಜೆಯ ಹಾಡಿನ ನಂತರ ಮೊದಲ ಮನೆಯುದುರು ಶುರುವಾಗೋ ಹಾಡೋ ಹೀಗೆ ಸಾಗುತ್ತೆ..(ನಾ ಕೇಳಿ ಬರೆದದ್ರಲ್ಲಿರಬಹುದಾದ ದೋಷಗಳ ಕ್ಷಮಿಸಿರೆಂಬ ಕೋರಿಕೆಯೊಂದಿಗೆ)
ಬಾಗಿಲು ಬಾಗಿಲು ಚೆಂದ, ಈ ಮನೆ ಬಾಗಿಲು ಚೆಂದ
ಬಾಗಿಲ ಮೇಲೇನೋ ಬರೆದೈತೋ ..ಶಿವ ಶಿವ
ಬಾಗಿಲ ಮೇಲೇನೋ ಬರೆದೈತೋ ಗಿಳಿರಾಮ
ಓದೇಳೋ ನಿಮ್ಮ ಹಿರಿಯರಿಗೋ ..ಶಿವ ಶಿವ
ಓದೇಳೋ ನಿಮ್ಮ ಹಿರಿಯರಿಗೇನಾದಾರೆ
ಕಾಮಾನ ದೀಪೇ ನಡೆ ಮುಂದೆ ..ಶಿವ ಶಿವ
ಕಾಮಾನ ದೀಪೇ ನಡೆ ಮುಂದೆ ಜಗುಲಿಗೆ
ಜ್ಯೋತಿಗೊಂದೆಣ್ಯ ಎರೆಬನ್ಯೋ.. ಶಿವ ಶಿವ.
ಎಣ್ಣೆ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಗಾಲ ಸುಖಬಾಳೋ ..ಶಿವ ಶಿವ

ಕರಿಸೀರೆಯನುಟ್ಟು ಸೆರಗ ಮುತ್ತಕಟ್ಟಿ
ಚಿಕ್ಕ ಮಾಳಿಗೆಲಿ ಸುಳಿಬಾರೋ ..ಶಿವ ಶಿವ
ಚಿಕ್ಕ ಮಾಳಿಗೆಲಿ ಸುಳಿವರೊ ಕಾಯೋ ನಿಮ್ಮ
ಕಪ್ಪಿನ ಬೆಳಕಲಿ ಮಗಳೆದ್ದೋ ..ಶಿವ ಶಿವ
ಕಪ್ಪಿನ ಬೆಳಕೆಲೆ ಮಗಳೆದ್ದು ಜೋಗುಳ ಪಾಡಿ..
ಜ್ಯೋತಿಗೊಂದೆಣ್ಣಿಯ ಎರಿಬಾರೋ ..ಶಿವ ಶಿವ
ಎಣ್ಣೆಯ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಗಾಲ ಸುಖಬಾಳೋ ..ಶಿವ ಶಿವ

ಕರಿಸೀರೆಯನುಟ್ಟು ಸೆರಗ ಮುತ್ತಕಟ್ಟಿ
ಮುಮ್ಮಾಳಿಗೆಯೊಳಗೆ ಸುಳಿಬಾರೋ ..ಶಿವ ಶಿವ
ಮುಮ್ಮಾಳಿಗೆಯೊಳಗೆ ಸುಳಿವರೊ ಕಾಯೋ ನಿಮ್ಮ
ಓಲೆಬೆಳಕೇಲಿ ಮಗಳೆದ್ದೋ ..ಶಿವ ಶಿವ
ಓಲೆಬೆಳಕೇಲೆ ಮಗಳೆದ್ದು ಜೋಗುಳ ಪಾಡಿ..
ಜ್ಯೋತಿಗೊಂದೆಣ್ಣೆ ಎರಿಬಾರೋ ..ಶಿವ ಶಿವ
ಎಣ್ಣೆಯ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಕಾಲ ಸುಖಬಾಳೋ ..ಶಿವ ಶಿವ
ಇಲ್ಲಿಗ್ಹರಹರ ಇಲ್ಲಿಗೆ ಶಿವ ಶಿವ
ಇಲ್ಲಿಗೀ ಸಂಜೆ ಪದಮುಂದೋ ಶಿವ ಶಿವ

ಹೀಗೆ ಮುನ್ನಡೆಯೋ ಹಾಡನ್ನ ನಾ ಬರಿತಾ ಹೋದ್ರೆ ಅದರ ಮಜಾ ಸಿಕ್ಕಲಿಕ್ಕಿಲ್ಲ. ಲಿಂಕಲ್ಲಿದೆ ಕೇಳ್ನೋಡಿ. ಆನಂದಿಸಿ..

ಇದೇ ರೀತಿಯ ತುಂಬಾ ಹಾಡುಗಳಿವೆ. ಎಲ್ಲಾ ಬರೆಯುತ್ತಾ ಹೋದ್ರೆ ಬೆಳಗಾದೀತು !
 
 ಚಿಕ್ಕಬಿಲಗುಂಜಿಯ ಹಾಡುಗಳನ್ನ ಕೇಳಿದ ನಂತರ ನೀಚಡಿಗೆ ಹೋದೆವು. ಅಲ್ಲಿ ಹತ್ತುವರ್ಷಗಳ ಹಿಂದೆ ಬಿಟ್ಟುಹೋದ ಪದ್ದತಿಯನ್ನು ಮತ್ತೆ ಶುರುಮಾಡೋಕೆ ಅಲ್ಲಿನ ಗ್ರಾಮಸ್ಥರು ಟೊಂಕ ಕಟ್ಟಿ ನಿಂತಿದ್ರು.ಮೊದಲ ದಿನವೇ ಆಭಾಸವಾಗಬಾರದು ಅಂತ ದಿನಾ ಅಲ್ಲಿನ ದೇವಸ್ಥಾನದಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದ ಹುಡುಗರ, ದೊಡ್ಡವರ ಜೊತೆಗೆ ನಾವೂ ಸೇರಿಕೊಂಡೆವು ! ಅಂತೂ ರಾತ್ರಿ ಹತ್ತೂಮುಕ್ಕಾಲಿಗೆ ಒಂದು ಹಂತದ ಭರವಸೆ ಬಂದ ನಂತರ ಊರಿಗೆ ಹಬ್ಬಾಡೋಕೆ ಹೊರಟು ನಿಂತಿತು ತಂಡ. ಅವರ ಜೊತೆಗೆ ನಾವೂ. ನಾ ಮೊದಲು ಹೊರಟಿದ್ದು ಆದಷ್ಟೂ ಹಾಡುಗಳ ರೆಕಾರ್ಡ್ ಮಾಡ್ಬೇಕು ಅಂತ. ಆದರೆ ಕೆಲಮನೆಗಳ ನಂತರ ನಾನೂ ನನಗರಿಯದಂತೆ ಅವರೊಳಗೊಂದು ದನಿಯಾಗಿದ್ದೆ !! ಹಬ್ಬಾಡೋದು ಅಂದ್ರೆ ಏನೇನಿರುತ್ತೆ ಅನ್ನೋರ ಕುತೂಹಲ ತಣಿಸೋಕೊಂದಿಷ್ಟು ಮಾಹಿತಿಗಳು. ಮನೆಯ ಬಾಗಿಲು ಹಾಕಿದ್ರೆ ಅದ್ರ ಬಾಗಿಲು ತೆಗಿಸೋಕೆ ಬೇರೆ ಹಾಡು, ಮನೆಯಲ್ಲೇನಾದ್ರೂ ಬಸಿರಿಯರೋ, ಬಾಣಂತಿಯರೋ ಇದ್ರೆ ಅವರನ್ನು ಹರಸೋ ಹಾಡುಗಳು, ಶ್ರೀ ಕೃಷ್ಣ ಪಾರಿಜಾತದ ಹಾಡು, ಊರ ಗೌಡನ ಮಗನ ಬಗೆಗಿನ ಹಾಡು, ರೈಲ ಹಾಡು, ಗಣಪತಿಯ ಹಾಡು ಹೀಗೆ ಹತ್ತು ಹಲವು ಹಾಡುಗಳಿವೆ. ಅದರಲ್ಲಿ ಕೆಲವೊಂದು  ಪೌರಾಣಿಕವಾದರೆ ಕೆಲವೊಂದು ಸಾಮಾಜಿಕ.

ಹೊರಡಲಣಿಯಾದ ನೀಚಡಿಯ ದೇವಸ್ಥಾನದಲ್ಲಿನ ಜ್ಯೋತಿ
ನೀಚಡಿ ದೇವಸ್ಥಾನದಿಂದ ಹೊರಡುತ್ತಿರುವ ಜ್ಯೋತಿ
ಹಬ್ಬದ ಹಾಡು ಹೇಳುತ್ತಿರುವ ನೀಚಡಿಯ ತಂಡ
ಮನೆಯಿಂದ ಮನೆಗೆ ಸಾಗಿದೆ ಹಬ್ಬಾಡುವ ತಂಡದ ಪಯಣ
ಹಬ್ಬಾಡುವವರ ದೀಪಕ್ಕೆ ಎಣ್ಣೆಯೆರೆದು, ಆ ದೀಪದಿಂದ ತಮ್ಮ ಮನೆಯ ದೀಪವನ್ನು ಹಚ್ಚಿಕೊಳ್ಳುತ್ತಿರುವ ಮನೆಯೊಡತಿ
ಮುಂದುವರೆದಿರುವ ಹಾಡು..
ಮನೆಯ ಬಾಗಿಲು ತೆಗೆಸಿದ ನಂತರ ಮನೆಯೊಡತಿ ಅಥವಾ ಮನೆಯ ಯಾವುದಾದ್ರೂ ಹೆಣ್ಣುಮಗಳು ತಮ್ಮ ಮನೆಯಿಂದ ಎಣ್ಣೆಯನ್ನು ತಂದು ದೀಪಹಿಡಿದವರ ದೀವಟಿಗೆಗೆ ಸುರಿಯುತ್ತಾರೆ. ದೀವಟಿಗೆಯ ಬೆಳಕಿಂದ ತಮ್ಮ ಮನೆಯ ದೀಪವೊಂದನ್ನು ಹಚ್ಚಿಕೊಳ್ಳುತ್ತಾರೆ. ಹಬ್ಬಾಡೋರು ಬಂದು ನಮ್ಮ ಮನೆಯ ಜ್ಯೋತಿಯನ್ನು ಬೆಳಗಿಸಿದ್ರು ಅಂದ್ರೆ ವರ್ಷವಿಡೀ ಒಳ್ಳೇದಾಗುತ್ತೆ ಅನ್ನೋ ನಂಬಿಕೆ ಮನೆಯವರದ್ದು. ಮನೆಯಲ್ಲಿ ಎರಡು ಅಥವಾ ಮೂರು ಹಾಡುಗಳನ್ನು ಹೇಳೋ ತಂಡದವರಿಗೆ ಮನೆಯವರು ಕಂಬಳಿ, ಚಾಪೆ ಹಾಸಿ ಕೂರಿಸಿ ಅವರು ಹಾಡು ಹೇಳೋ ತನಕ ಕೇಳಿ ನಂತರ ಒಂದಿಷ್ಟು ಅಕ್ಕಿ, ಸ್ವಲ್ಪ ದುಡ್ಡು, ಜೊತೆಗೆ ಕಡುಬನ್ನೋ, ಹೋಳಿಗೆಯನ್ನೋ, ಬಾಳೆ ಹಣ್ಣನ್ನೋ ಕೊಟ್ಟು ಕಳುಹಿಸುತ್ತಾರೆ. ಕೆಲವು ಮನೆಯಲ್ಲಿ ಅವಲಕ್ಕಿ, ಚಾ ಕೊಡೋದೂ ಉಂಟು ! ಆ ತರ ಕೊಟ್ಟ ಅಕ್ಕಿಯನ್ನೆಲ್ಲಾ ಒಂದು ಚೀಲಕ್ಕೆ ತುಂಬಿಸಿಕೊಂಡು ಬರೋ ಹಬ್ಬಾಡೋ ತಂಡದವರು ಕೊನೆಗೆ ಊರ ದೇವಸ್ಥಾನದ ಯಾವುದಾದರೂ ಕಾರ್ಯಕ್ಕೆ ಬಳಸುತ್ತಾರೆ. ದುಡ್ಡನ್ನೂ ಹಾಗೆಯೇ. ನಾವು ಹೋದಲ್ಲೆಲ್ಲಾ ಪೇಪರಿನಲ್ಲಿ ಸುತ್ತಿ ಕೊಟ್ಟ ಹೋಳಿಗೆಯೇ ಒಂದು ರಾಶಿಯಾಗಿ ರಾತ್ರೆ ಎರಡರ ಸುಮಾರಿಗೆ ಹೋದ ಒಂದು ಮನೆಯಲ್ಲಿ ಕೂತು ಎಲ್ಲಾ ಹಂಚಿ ತಿಂದದ್ದಾಯ್ತು. ಆ ಮನೆಯಲ್ಲೇ ನಮಗೆ ಅವಲಕ್ಕಿ, ಚಾ ಕೂಡ. ನಾ ಹಬ್ಬಾಡೋಕೆ ಬಂದವನಲ್ಲ, ನೋಡೋಕೆ ಬಂದವ ಅಂತ ಎಷ್ಟು ಹೇಳಿದ್ರೂ ಕೇಳದೆ,ತಮ್ಮಲ್ಲೇ ಒಬ್ಬನಾಗಿ ಕಂಡ ನೀಚಡಿ ಹಬ್ಬಾಡೋ ತಂಡದವರಿಗೆ ಆಭಾರಿ ನಾನು..

ಮಧ್ಯರಾತ್ರಿ ಎರಡಕ್ಕೆ ಟೀ,ಅವಲಕ್ಕಿ,ಹೋಳಿಗೆಯ ಸೌಭಾಗ್ಯ.. ಯಾರಿಗುಂಟು ಯಾರಿಗಿಲ್ಲ !
ಸಮಯ:ಬೆಳಗ್ಗೆ ೬:೨೦. ಬೆಳಕು ಹರಿದರೂ ಹಬ್ಬಾಡುವ ಜ್ಯೋತಿ ಕಂದಿಲ್ಲ. ಅವರ ಉತ್ಸಾಹವೂ ಕುಂದಿಲ್ಲ. ಇನ್ನು ಒಂದೋ ಎರಡೋ ಮನೆ ಮುಗಿಸಿ, ದೀಪವನ್ನು ಮರದ ಬಳಿಯಿಟ್ಟು ರಾತ್ರಿಯವರೆಗೆ ವಿಶ್ರಾಂತಿ ಪಡೆಯೋ ಇರಾದೆಯಲ್ಲಿರುವಂತೆ ಮುನ್ನಡೆಯುತ್ತಿರೋ ಚಿಕ್ಕಬಿಲಗುಂಜಿ ತಂಡ.

ಕೆಲವೆಡೆ ಹಬ್ಬದ ದಿನ ನಡೆದರೆ, ಕೆಲವೆಡೆ ಹಬ್ಬ ಆಗಿ ಎರಡು ಮೂರು ದಿನಗಳವರೆಗೂ ನಡೆಯುತ್ತಲೇ ಇರುತ್ತಂತೆ ! ದೊಡ್ಡ ದೊಡ್ಡ ಊರುಗಳಾದ್ರೆ ಎಲ್ಲಾ ಮನೆಗಳನ್ನೂ ಒಂದು ರಾತ್ರೆಯಲ್ಲಿ ಮುಗಿಸೋಕಾಗ್ಬೇಕಲ್ಲ ! ಚಿಕ್ಕಬಿಲಗುಂಜಿಯಲ್ಲಿದ್ದಂತೆ ಕಲವೆಡೆ ಎರಡು ಮೂರು ತಂಡಗಳನ್ನಾಗಿ ವಿಭಾಗಿಸಿಕೊಳ್ತಾರಂತೆ. ಒಂದು ಗುಂಪು ಊರ ದೇವಸ್ಥಾನದಿಂದ ಒಂದು ದಿಕ್ಕಿನಲ್ಲಿ ಹೊರಟರೆ ಮತ್ತೊಂದು ಮತ್ತೊಂದು ದಿಕ್ಕಿನಲ್ಲಿ ಹೊರಡುತ್ತೆ. ಹೊರಟ ದೀಪಗಳು ಮತ್ತೆ ಮುಖಾಮುಖಿಯಾಗುವಂತಿಲ್ಲ ಅನ್ನೋದು ಪದ್ದತಿ.ಹಾಗಾಗಿ ಯಾವುದಾದ್ರೂ ಮನೇಲಿ ಒಂದು ಗುಂಪು ಇದೆ. ಅದೇ ಹಾದಿಯಲ್ಲಿ ಮತ್ತೊಂದು ಗುಂಪು ಬರ್ತಿದೆ ಅಂತಾದ್ರೆ ಮತ್ತೊಂದು ಗುಂಪು ಮನೆಯಿಂದ ಹೊರಡೋವರೆಗೂ ಮೊದಲ ಗುಂಪು ಹೊಕ್ಕ ಮನೆಯಿಂದ ಹೊರಬರೋಲ್ಲ. ರಾತ್ರೆ ಹೊರಟ ಗುಂಪು ಬೆಳಗಾಗೋವರೆಗೂ ಹಾಡುತ್ತಲೇ ಇರುತ್ತೆ. ಬೆಳಕಾದ ತಕ್ಷಣ ಮನೆಸೇರಿ ಮಲಗಿದರೆಂದರೆ ಆ ರಾತ್ರಿ ಬಿಟ್ಟ ಮನೆಯಿಂದ ಮುಂದುವರಿಕೆ ಹಬ್ಬಾಡೋದು.. ಊರಿನೆಲ್ಲಾ ಮನೆಗಳ ಮುಗಿಸೋ ತನಕ.. ಕೆಲವೆಡೆ ಈ ತರಹ ಕೋಲಾಟದ ತಂಡಗಳೂ ಇವೆಯಂತೆ. ಇವರ ಬಾಯಿಮಾತಲ್ಲೇ ರೂಡಿಯಾಗಿರೋ ಹಾಡುಗಳನ್ನ ಸಂಗ್ರಹಿಸೋ ಪ್ರಯತ್ನ ಅಲ್ಲಲ್ಲಿ ನಡೆದಿದೆಯಾದರೂ ದಾಖಲಾಗಿದ್ದಕ್ಕಿಂತ ದಾಖಲಾಗದ್ದೇ ಹೆಚ್ಚು ಅನಿಸುತ್ತೆ ! ನಗರೀಕರಣದ ಭರಾಟೆಯಲ್ಲೂ ಇಂತಹ ಆಚರಣೆಗಳು ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆಯಲ್ಲಾ ಎಂದು ಖುಷಿಯಾಗುತ್ತೆ.
ಒಂದೊಳ್ಳೇ ಆಚರಣೆಗೆ ಕರೆದ ವಸಂತಣ್ಣ,ಮಹಾಲಕ್ಷ್ಮಮ್ಮ,ಶಿಶಿರಣ್ಣ ಬೆಳಬೆಳಗ್ಗೆಯೇ ಮನೆಗೆ ಹೊರಡಬೇಕೆಂದ ನನ್ನ ಗಡಿಬಿಡಿಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ..

Sunday, November 1, 2015

ಹಂಪಿ ಪ್ರವಾಸ ಕಥಾನಕ -೩: ವಿಠಲನ ನಾಡಿನಲ್ಲಿ

ಹಂಪಿ ಬಜಾರ್:
ಹಂಪಿ ವಿರೂಪಾಕ್ಷನ ದರ್ಶನ ಪಡೆದ ನಾವು ಪಕ್ಕದಲ್ಲಿದ್ದ ತುಂಗಭದ್ರೆಗೊಂದು ನಮನವೆನ್ನುತ್ತಾ ಹಂಪೆ ಬಜಾರುಗಳನ್ನಾಸಿ ವಿಠಲ ದೇಗುಲದತ್ತ ಸಾಗಿದೆವು. ಹಂಪೆ ಬಜಾರೆಂದರೆ ಜನರಿಗೆ ಅದರಲ್ಲೇನಿದೆ ? ಎಲ್ಲಾ ಊರಿನಂತೆ, ಹಂಪಿಯಲ್ಲೊಂದು ಮಾರುಕಟ್ಟೆ, ವಿಶೇಷವೇನಪ್ಪ ಅನಿಸಬಹುದು. ಶ್ರೀ ಕೃಷ್ಣ ದೇವರಾಯನ ಕಾಲದ ಮಾರುಕಟ್ಟೆ, ಮುತ್ತು ರತ್ನಗಳನ್ನಳೆದು ತೂಗುತ್ತಿದ್ದ ಬೀದಿ ಅಂದರೆ ಆಗ ಓಹ್ ಅನ್ನಬಹುದು. ಹಂಪಿಯಲ್ಲಿ  ಶ್ರೀ ಕೃಷ್ಣ ದೇಗುಲದ ಎದುರಿಗಿನ ಕೃಷ್ಣ ಬಜಾರ್, ಮಹಾನವಮಿ ದಿಬ್ಬದಿಂದ ಬ್ಯಾಂಡ್ ಟವರಿನತ್ತ ಸಾಗುವಾಗ ಸಿಗುವ ಪಾನ್ ಸುಪಾರಿ ಬಜಾರ್,ಅಚ್ಯುತರಾಯ ದೇಗುಲದ ಎದುರಿನ ಅಚ್ಯುತಪೇಟೆ ಅನ್ನೋ ಬಜಾರುಗಳಿದ್ದರೂ ಎರಡು ಅಂತಸ್ತಿನ ಸಾಲು ಸಾಲು ಕಂಬಗಳ ಹಂಪಿ ಬಜಾರಿನ ಗತ್ತೇ ಬೇರೆ. ಸದ್ಯಕ್ಕೆ ಜೀರ್ಣೋದ್ದಾರ ಕೆಲಸ ನಡೆಯುತ್ತಿದ್ದು ಅದರೊಳಗೆ ಯಾರನ್ನೂ ಬಿಡದಿದ್ದರೂ ಯಾವ ಲಿಫ್ಟು, ಕ್ರೇನುಗಳಿಲ್ಲದ ಆ ಕಾಲದಲ್ಲಿ ಎರಡಂಸ್ತಿನ ಚಪ್ಪಡಿಗಲ್ಲಿನ ಕಟ್ಟಡಗಳನ್ನು ಕಟ್ಟಿದ್ದಾದರೂ ಹೇಗೆಂಬ ವಿಸ್ಮಯ ಅದರ ಬಳಿಯಲ್ಲಿ ಸಾಗುವ ಯಾರಿಗಾದರೂ ಕಾಡೇ ಕಾಡುತ್ತೆ.

ಕ್ರಾಫ್ಟ್ ಬಜಾರ್:
ಹಂಪಿ ಬಜಾರಿನ ಇಕ್ಕೆಲಗಳ ಎರಡಂತಸ್ತಿನ ಕಟ್ಟಡಗಳ ಮಧ್ಯದ ಟಾರ ರಸ್ತೆಯಲ್ಲಿ ನೇರ ಮುಂದೆ ಸಾಗಿದರೆ ವಿಠಲ ದೇವಸ್ಥಾನಕ್ಕೆ ದಾರಿಯೆಂಬ ಬೋರ್ಡು ಕಾಣುತ್ತದೆ. ಅದರಿಂದ ನೇರ ಹೋದರೆ ಅಲ್ಲೊಂದು ಬಯಲು. ಎಡಕ್ಕೆ ಹೋದರೆ ತುಂಗಭದ್ರಾ ತಟದಲ್ಲಿ ಸಾಗಬಹುದಾದ ಕಲ್ಲ ರಸ್ತೆ. ಬಲಗಡೆಯ ಬಯಲಲ್ಲಿ ಛಾಯಾಚಿತ್ರ ಪ್ರದರ್ಶನವೆಂಬ ವೇದಿಕೆ,ಅದಕ್ಕೆ ಹಿಮ್ಮೇಳವೆನ್ನುವಂತೆ ಹಂಪೆಯ ಹಾಳುಬಿದ್ದ ಮತ್ತೊಂದು ರಚನೆ. ಕೆಲ ವರ್ಷಗಳ ಹಿಂದೆ ಪ್ರತಿದಿನವೂ, ಹಂಪಿ ಉತ್ಸವದ ಸಮಯದಲ್ಲಿನ ಸಂಜೆಗಳಲ್ಲಿ ಇಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿತ್ತಂತೆ. ಆದರೀಗ ನಿಂತು ಹೋಗಿ ಅಲ್ಲಿ ಹಾಳು ಸುರಿಯುತ್ತಿದೆ. ಅಲ್ಲಿದ್ದ ಫೋಕಸ್ ಲೈಟುಗಳ ಮೇಲಿದ್ದ ಧೂಳು, ಕೆತ್ತಿಟ್ಟ ಜಾಗದಲ್ಲೆಲ್ಲಾ ನಿಂತಿದ್ದ ಹಿಂದಿನ ದಿನಗಳ ಮಳೆ ನೀರು ಗತವೈಭವ ಸಾರುವಂತಿತ್ತು. ಆ ಬಯಲ ಎಡಭಾಗದಲ್ಲಿ ಹಂಪೆ ಪೋಲೀಸ್ ನಿಲ್ದಾಣ. ಅದರ ಪಕ್ಕದಲ್ಲೇ ಹಂಪೆಯ ಕಲೆಯ ಪರಿ ತೆರೆದಿಡುವಂತಹ ಕ್ರಾಫ್ಟ್ ಬಜಾರ್.
Photo exibition hall/ಛಾಯಾಚಿತ್ರ ಪ್ರದರ್ಶನ ಮಂಟಪ

ಕೆಂಪಭೂಪ ಮಾರ್ಗ:

ವಿಠಲನ ದೇಗುಲಕ್ಕೆ ದಾರಿ ಎಂಬಲ್ಲಿಂದ ಮುಂದೆ ಬಂದು ಎಡಕ್ಕೆ ಬಂದರೆ ಸಿಗುವ ಕಲ್ಲಿನ ದಾರಿಯ ಹೆಸರು ಕೆಂಪಭೂಪ ಮಾರ್ಗ. ಅದರಲ್ಲಿ ಸಾಗಿದರೆ ಮುಂದೆ ತುಂಗಭದ್ರೆಗೆ ಹತ್ತಿರ ಹತ್ತಿರವಾಗುತ್ತಾ ಮುಂದೆ ದಾರಿಯೇ ಇಲ್ಲವೇನೋ ಎಂಬತಹ ತಿರುವು ಕಾಣುತ್ತೆ. ಆ ದಡದಲ್ಲಿ ಅದೆಷ್ಟೋ ದೇವಸ್ಥಾನಗಳು.ಬಂಡೆಗಳ ಕೊರೆದು ಮಾಡಿದಂತೆ, ಬೆಂಕಿ ಕಡ್ಡಿಗಳ ಜೋಡಿಸಿದಂತೆ.. ಅದೆಷ್ಟೋ ಕಂಬಗಳ ಸಾಲು. ಅದರತ್ತ ಸಾಗುವ ಒಂದೊಂದೇ ತೆಪ್ಪಗಳಲ್ಲಿನ ಜನರನ್ನ ನೋಡ ನೋಡುತ್ತಾ ನಾವೇ ಅವರಾದಂತಹ ಭಾವ. ನಾವು ಮೊದಲ ಸಲ ಆ ತಿರುವಿನವರೆಗೆ ಹೋಗಿ ವಾಪಾಸ್ ಬಂದಿದ್ದೆವು. ಆದರೆ ಅಲ್ಲಿಂದ ಮುಂದೆ ಹೋದರೆ ಬಂಡೆಗಳ ನಡುವಿಂದ ನುಸುಳಿ ಕೋದಂಡರಾಮನ ದೇವಸ್ಥಾನದ ಪಕ್ಕ ಸಾಗುವ ದಾರಿ ಸಿಗುತ್ತದೆ ! ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಸುಗ್ರೀವರಿರುವ ಅಪರೂಪದ ವಿಗ್ರಹವಿರೋ ಈ ದೇಗುಲದ ಮೇಲ್ಗಡೆಯೇ ಯಂತ್ರೋದ್ದಾರಕ ಆಂಜನೇಯನ ಗುಡಿಯಿದೆ. ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಪುರಂದರ ಮಂಟಪ, ವಿಠಲ ದೇವಸ್ಥಾನ ಸಿಗುತ್ತದೆ.



ಕಲ್ಲ ನಾಡಲ್ಲಿ ಸಿಕ್ಕ ಕ್ರಿಸ್ಟಿ:
Ranajan, Goutham along with Christy. Lighting arrangement for photo exibition @the backstage

ಕೆಂಪಭೂಪ ಮಾರ್ಗದಲ್ಲಿ ಒಂದು ಬೃಹತ್ ಬಂಡೆ ಸಿಗುತ್ತದೆ. ಅದರ ಬಳಿ ಮನೆ ಕಟ್ಟಲಾಗದವರೆಲ್ಲಾ ಒಂದಿಷ್ಟು ಕಲ್ಲುಗಳನ್ನು ಒಂದರ ಮೇಲೆ ಒಂದರಂತಿಟ್ಟು ಮನೆ ಕಟ್ಟೋ ಭಾಗ್ಯ ಸಿಗಲಿ ಅಂತ ಹರಕೆ ಕಟ್ಟುತ್ತಾರೆ. ಅಲ್ಲಿಂದ ಮುಂದೆ ಹೋಗುವವರು ಅಲ್ಲೇ ತಮ್ಮ ಸೈಕಲ್ಲು, ಬೈಕುಗಳನ್ನು ಇಟ್ಟು ಹೋಗುತ್ತಾರೆ. ಅಲ್ಲೊಂದು ಎಳನೀರು, ಜ್ಯೂಸು, ಮಜ್ಜಿಗೆಗಳನ್ನು ಮಾರೋ ಗೂಡಂಗಡಿಯೂ ಇದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಮುಂದೆ ಹೋಗಲು ಸಾಧ್ಯವೇ ಇಲ್ಲವೆಂಬ ಭ್ರಮೆ ಹುಟ್ಟಿಸೋ ತಿರುವು ಸಿಗುತ್ತೆ. ಅಲ್ಲಿಂದ ಮುಂದಿನ ಪ್ರಕೃತಿಯನ್ನು ವೀಕ್ಷಿಸಿದ ನಾವು ವಾಪಾಸ್ ಬಂಡು ಕ್ರಾಫ್ಟ್ ಬಜಾರ್ ಪಕ್ಕದ ಪೋಲೀಸ್ ಸ್ಟೇಷನ್ನಿನ ಬಳಿ ಬಂದೆವು. ಚಿತ್ರಕಲಾ ಪ್ರದರ್ಶನ ಅಂತ ಬೋರ್ಡಿದ್ದ ಜಾಗದಲ್ಲಿ ಒಬ್ಬ ಕುಳಿತಿದ್ದ ಕ್ಯಾಮೆರಾ ಹಿಡಿದು. ಚರ್ಮದ ಜಾಕೆಟ್ಟು, ಜೀನ್ಸ್ ಪ್ಯಾಂಟು, ತಲೆಗೊಂದು ಕರ್ಚೀಫು ಕಟ್ಟಿ ಕುಳಿತಿದ್ದ ಅವನನ್ನು ನೋಡಿ ಅವರ್ಯಾರೋ ಫೋಟೋಗ್ರಾಫರ್ರು, ಚಿತ್ರಕಲಾ ಪ್ರದರ್ಶನದ ಬಗ್ಗೆ  ಗೊತ್ತಿರಬಹುದು ಅಂತ ಯಾವಾಗ ನಡೆಯುತ್ತೆ ಇಲ್ಲಿನ ಪ್ರದರ್ಶನ ಅಂದೆ. ಉತ್ತರವಿಲ್ಲ. ಕಬ್ ಹೋಗಾ ಯಹಾಂ ಕಾ ಶೋ ಅಂದೆ . ಅದಕ್ಕೂ ಉತ್ತರವಿಲ್ಲ. Will there be phorographic show in the evening ಅಂದೆ. ಆವಾಗ ಉತ್ತರ ಬಂತು ನೋಡಿ ನಂಗೆ ಗೊತ್ತಿಲ್ಲ ಅಂತ. ಆಗ ನಮ್ಮ ದೃಷ್ಟಿ  ಎದುರಿಗೆ ನಿಂತಿದ್ದ ಅವನ ಬೈಕಿನ ಮೇಲೆ ಹರಿಯಿತು. ಕೊಚ್ಚಿ ಇಂದ ಲೇಹ್ ಲಡಾಕ್ ವರೆಗೆ ಹಸಿರು ಮಾರ್ಗದ ಬೈಕ್ ಯಾನ ಅಂತ ಬರೆದುಕೊಂಡಿತ್ತು. ಲೇಹ್ ಲಡಾಕ್ ಗೆ ಅಂತಲೇ ಹೋದ ನನ್ನ ಸ್ನೇಹಿತರು ಚಂಡೀಗಢದ ವರೆಗೆ ಬೈಕನ್ನು ಲಾರಿಗಳಲ್ಲಿ ತರಿಸಿಕೊಂಡು ಅಲ್ಲಿಂದ ಬೈಕಲ್ಲಿ ಹೋಗೋದನ್ನ ಕೇಳಿದ್ದೆ. ಆದರೆ ಈ ಪುಣ್ಯಾತ್ಮ ಅಖಂಡಭಾರತಯಾತ್ರೆ ಅನ್ನುವ ಪರಿಯಲ್ಲಿ ಬೈಕ್ ಯಾನ ಮಾಡೋದು ಕೇಳಿ ಅಬ್ಬಾ ಅನಿಸಿತು. ಅವರ ಹೆಸರು ಕ್ರಿಸ್ಟಿಯನ್ ಅಂತೆ. ಕೊಚ್ಚಿಯವರು. ಚೆಗುವರನ ಫುಲ್ ಫ್ಯಾನು. ಈ ಲೇಖನ ಬರೆಯೋ ಹೊತ್ತಿಗೆ ನೀವೆಲ್ಲೇ ಇರಿ ಕ್ರಿಸ್ಟಿಯನ್, ನಿಮ್ಮ ಪಯಣಕ್ಕೆ ಶುಭವಾಗಲೆಂದು ಹಾರೈಸುತ್ತಿರುತ್ತೇನೆ.

ಅಖಂಡಶಿಲೆ ಬಸವಣ್ಣ/ಏಕಶಿಲಾ ನಂದಿ:
Ekashila Nandi of Hampi

Akhandashila basavanna of hampi

ಛಾಯಾಚಿತ್ರ ಪ್ರದರ್ಶನಮಂಟಪದಿಂದ ಮುಂದೆ ಸಾಗುತ್ತಿದ್ದಂತೆ ಸಿಗೋದೇ ಏಕಶಿಲಾ ನಂದಿ. ಚಾಮುಂಡಿ ಬೆಟ್ಟ, ಬೇಲೂರು ಹಳೇಬೀಡು, ಇಕ್ಕೇರಿ, ಲೇಪಾಕ್ಷಿಗಳ ನಂದಿಯನ್ನು ನೋಡಿದವರಿಗೆ ಇಲ್ಲಿನ ನಂದಿ ವಿಶೇಷವೆನಿಸದಿದ್ದರೂ ಇಲ್ಲಿಂದಲೇ ಮುಂದಿನ ಮತಂಗಪರ್ವತದ ಮೆಟ್ಟಿಲುಗಳು ಶುರುವಾಗುವುದರಿಂದ ಇದೊಂದು ರೀತಿ ದಾರಿದೀಪ ಎಂದರೆ ತಪ್ಪಲ್ಲ. ಎಲ್ಲಿ ದಾರಿ ಕಳೆದುಹೋದರೂ ಏಕಶಿಲ ನಂದಿಯ ಹತ್ತಿರದಿಂದ ಬಂದಿದ್ದೆವು. ಅಲ್ಲಿಗೆ ಹೋಗೋದು ಹೇಗೆ ಅಂದರೆ ದಾರಿಯಲ್ಲಿ ಸಿಕ್ಕವರು ಸರಿಯಾದ ದಾರಿಯನ್ನೇ ತೋರಿಸುತ್ತಾರೆ ಅಂದರೆ ಇದರ ಕೀರ್ತಿಯ ಬಗ್ಗೆ ಯೋಚಿಸಿ ! ಒಂದು ಘಂಟೆಗಳ ಹಾರವನ್ನು ಬಿಟ್ಟರೆ ಬೇರ್ಯಾವ ಅಲಂಕಾರವನ್ನೂ ಹೊಂದಿರದ ನಂದಿಗೆ ಬಿಸಿಲು ಮಳೆಗಳಿಂದ ರಕ್ಷಿಸೋ ಕಲ್ಲ ಚಪ್ಪರವಿರುವುದೇ ಅದರ ಆಕಾರ ಶತಮಾನಗಳ ಕಾಲ ಉಳಿದುಬಂದಿರುವುದಕ್ಕೆ ಕಾರಣ ಅನಿಸುತ್ತೆ. ನಂದಿಯ ಪಕ್ಕದಲ್ಲೇ ಮೇಲೆ ಕಾಣುವ ಬೆಟ್ಟಗಳ ಸಾಲೇ ಮಾತಂಗಪರ್ವತ. ಅದರಲ್ಲೇ ಸಿಕ್ಕುವುದು ಅಚ್ಯುತರಾಯ ದೇವಸ್ಥಾನ. ಅದನ್ನು ದಾಟಿ ಹಾಗೇ ಮುಂದೆ ನಡೆದರೆ ಸಿಕ್ಕುವುದೇ ವಿಠಲ ದೇವಸ್ಥಾನ.ಮಾತಂಗಪರ್ವತದ ಬಗ್ಗೆ ಹಿಂದಿನ ಭಾಗದಲ್ಲಿ ಓದಿದ್ದೆವು. ಘಂಟೆಯ ಸದ್ದನ್ನರಸಿ ಅಚ್ಯುತರಾಯ ದೇವಸ್ಥಾನ, ವರಾಹ ದೇವಸ್ಥಾನ, ಅನಂತಶಯನನ ಕೆತ್ತನೆ, ಮಾತಂಗಪರ್ವತದ ಆಂಜನೇಯ ಮುಂತಾದ್ದನ್ನ ದರ್ಶಿಸಿದ್ದನ್ನ ಮುಂದಿನ ಭಾಗದಲ್ಲಿ ನೋಡೋಣ.