Thursday, August 29, 2013

ರೂಪಾಯಿ , ಪೆಟ್ರೋಲು ಮತ್ತು ಸ್ವದೇಶಿ..

ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? !!


 ರಫ್ತೆಂದರೆ ಚೀನಾದಂತೆ ಬೇಕಾಬಿಟ್ಟಿ ವ್ಯವಹಾರವಲ್ಲ, ಅಗ್ಗದ ದರದಲ್ಲಿ ಚೀನಾದವ್ರೂ ಎಲ್ಲಾ ಕಡೆ ಕಸದಂತೆ ತಂದು ಎಲ್ಲಾ ದೇಶಗಳಲ್ಲಿ, ಭಾರತಕ್ಕೂ ತಂದು ಸುರಿತಿರುವಾಗ, ಕೂಲಿಯಿಂದ ಹಿಡಿದು ಕಚ್ಚಾವಸ್ತುಗಳವರೆಗೆ ಎಲ್ಲದರ ಬೆಲೆ ಏರಿದ್ರೂ ಗುಣಮಟ್ಟ ಕಾದುಕೊಳ್ಳೋ ಅನಿವಾರ್ಯತೆಯಿರೋ ಭಾರತೀಯ ರಫ್ತು ಉದ್ಯಮಕ್ಕೂ ಹೊಡೆತ ಬೀಳುತ್ತಿದೆ ಅದ್ರ ಮದ್ಯ ಕೊಕ್ಕೆ ತೆಗೆಯೋ ಹೊರದೇಶಗಳ ನೂರಾರು ಕಾನೂನುಗಳು ಬೇರೆ...ಅದೆಲ್ಲಾ ದೊಡ್ಡ ತಲೆ ನೋವು ಅಂದ್ರಾ ? ಸರಿ,ಹೋಗ್ಲಿ ಬಿಡಿ.ಅದಿರ್ಲಿ,   ಪೆಟ್ರೋಲ್ ಬೆಲೆ ಏರ್ತಾ ಇದ್ರೂ ರೂಪಾಯಿ ಬೆಲೆ ಇಳಿತಾ ಇದ್ರೂ ಘನ ಸರ್ಕಾರ ಏನು ಮಾಡ್ತಾ ಇದೆ ಅಂತ ಬೊಬ್ಬೆ ಹಾಕೋ ಬದ್ಲು ಆ ಸಮಯದಲ್ಲಿ ನಮ್ಮಿಂದ ಏನಾದ್ರೂ ಮಾಡ್ಬಹುದಾ ಅಂತ್ಯಾಕೆ ಯೋಚ್ನೆ ಮಾಡ್ಬಾರ್ದು ?


ಪೆಟ್ರೋಲ್ ಬೆಲೆ ಏರಿಕೆ ಮುಂಚೆ ಇಂದಲೂ ಇದ್ದಿದ್ದೆ. ನಮಗೆ ಬೇಕಾದ ಬೇಕಾಬಿಟ್ಟಿ ಪೆಟ್ರೋಲ್ಗೆ ಅರಬ್ ದೇಶಗಳ ಹತ್ರ ಮಾನ ಮೂರಾಬಟ್ಟೆ ಮಾಡ್ಕೊಂಡು ಬೇಡೋದೂ ಗೊತ್ತಿದ್ದೆ. LPG(Liberalisation Privatisation Globalisation) ಗೆ ಸಹಿ ಹಾಕೋ ಮೊದ್ಲು ದೇಶ ದಿವಾಳಿಯಾಗೋ ಪರಿಸ್ಥಿತಿ ಬಂದು ಲೋಡುಗಟ್ಟಲೆ ಬಂಗಾರ ತೆತ್ತು ವಿಶ್ವಬ್ಯಾಂಕಿಂದ ಸಾಲ ಪಡೆದಿದ್ದ ಮರೆಯೋದು ಹ್ಯಾಗೆ ? ೨೦೦೨-೦೩ ರಲ್ಲಿ ಪ್ರತೀ ಭಾರತೀಯನ ತಲೆ ಮೇಲಿದ್ದ ಸಾಲ ೪೮೬೪. ಈಗ ಅದು ಮೂವತ್ಮೂರು ಸಾವಿರ!  ಸಿರಿಯಾದಲ್ಲಿ ದಂಗೆಯ ಭಯದಲ್ಲಿ ಪೆಟ್ರೋಲ್ ದರ ಏರುತ್ತಿದೆ. ಅದರ ಫಲವಾಗಿ ರೂಪಾಯಿ ದರ ಏರುತ್ತಿದೆ, ಡಾಲರ್ ಎದುರು ಯೂರೂವಿನಿಂದ ಹಿಡಿದು ಎಲ್ಲಾ ಕರೆನ್ಸಿಗಳೂ ಕಂಗಾಲಾಗಿವೆ ಅನ್ನೋ ನೂರು ಕಾರಣಗಳಿರಬಹುದು..ಆದ್ರೆ ಅವೆಲ್ಲಕ್ಕಿಂತ ಹೆಚ್ಚಾಗಿರೋದು ನಮ್ಮ ಪಾತ್ರ. ನಾನೇನು ಆರ್ಥಿಕ ತಜ್ನನಲ್ಲ. ಆದ್ರೆ ಟೀವಿಯಲ್ಲಿ ಪ್ರತಿದಿನ ತಜ್ನರು ಹೇಳೋವಂತ ಒಂದು ವಾರ ದೇಶದ ಐಶಾರಾಮಿ ಕಾರು, ಬೈಕುಗಳ ಬಳಕೆ ನಿಲ್ಲಿಸಿ ಅದರ ಬದಲು ಸಾಮಜಿಕ ಸಾರಿಗೆ ಬಳಸಿದರೆ ಡಾಲರ್ ದರ ಅರವತ್ತಲ್ಲ ಮೂವತ್ತರ ಮಟ್ಟಕ್ಕೆ ಇಳಿಯುತ್ತೆ ಅನ್ನೋ ಮಾತುಗಳಲ್ಲಿ ಸ್ವಲ್ಪವೂ ಹುರುಳಿಲ್ಲದೇ ಇಲ್ಲ ಅನಿಸುತೆ. ರಪ್ತು ಕಮ್ಮಿ ಆಗಿ ಆಮದು ಹೆಚ್ಚಾಗಿರೋದ್ರಿಂದಲೇ  ರೂಪಾಯಿ ಮೌಲ್ಯ ಕಡ್ಮೆಯಾಗಿರೋದು ಅನ್ನೋ ಒಂದು ಸರಳ ಸತ್ಯವೆಂತೂ ಎಲ್ಲರಿಗೂ ತಿಳಿಯುತ್ತೆ ಅಂದುಕೊಳ್ತೀನಿ. ನಮ್ಮ ದೇಶದ ದುಡ್ಡು ಹರಿದುಹೋಗ್ತಿರೋದು ಬರೀ ಆಮದಿನಿಂದಲ್ಲ, ಭ್ರಷ್ಟರ ಸ್ವಿಸ್ ಅಕೌಂಟಿನಲ್ಲಲ್ಲ ನಮ್ಮದೇ ದಿನನಿತ್ಯದ ಸೋಪು, ಬ್ರಷ್ಷು ಮಾರಿ ದಿನಾ ದಿನಾ ದುಡ್ಡನ್ನು ತಮ್ಮ ದೇಶಕ್ಕೆ ಸಾಗಿಸ್ತಿರೋ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳಿಂದ!!


ಎಂಭತ್ತು ಪೈಸೆ ಖರ್ಚಾಗೋ ಪೆಪ್ಸೀನ ೧೨ ರೂಪಾಯಿಗೆ ತಂದು ಮಾರ್ತಾನೊಬ್ಬ. ಅದ್ರಲ್ಲಿ ಅಂಗಡಿಯವನ ಲಾಭ ೧-೨ ರೂ ಮತ್ತೆ ಮಧ್ಯವರ್ತಿ ಅವನ ಬಾಸು ಹೀಗೆ ಎಲ್ಲಾ ಸೇರಿದ್ರೂ ಭಾರತೀಯರಿಗೆ ೩ರಿಂದ ನಾಲ್ಕು ರೂಪಾಯಿ ದಕ್ಕಿದ್ರೆ ಹೆಚ್ಚು. ಎಳಿದ ೮ ರೂಪಾಯಿ ?? ಹೋಯ್ತಲ್ಲ ಕೋಕಾ ಜೇಬಿಗೆ, ಅದ್ರ ಬದ್ಲು ಯಾವ್ದಾದ್ರೂ ಹಣ್ಣಿನ ಜ್ಯೂಸೋ , ನಿಂಬೂ ಪಾನಿಯೋ,ಎಳನೀರೋ ಕುಡಿದ್ರೆ ? ! ಊಹೂಂ. ಆಗಲ್ಲ ಸ್ವಾಮಿ. ಬಡ ಭಾರತೀಯ ರೈತನ್ನ ಯಾಕೆ ಬದುಕಿಸ್ಬೇಕು ನಾವು ? ಆ ಬಡ ರೈತ ಬೆಳೆದ ಎಳನೀರನ್ನ ೭ ರೂಗೆ ತಂದು ಹದಿನೈದಕ್ಕೆ ಮಾರೋ ಎಳನೀರು ಅಂಗಡಿಯವನಿಗೆ ಯಾಕೆ ದುಡ್ಡು ತೆತ್ತಬೇಕು ? ಭಾರತೀಯನೊಬ್ಬನಿಗೆ ಐದಾರು ರೂ ಲಾಭ ಆದ್ರೆ.. ಊಹೂಂ. ಸಹಿಸೋಕ್ಕಾಗಲ್ಲ ನಮ್ಗೆ. ಅಲ್ಲಾ ಸ್ವಾಮಿ. ರೈತನೋ, ಅಂಗಡಿಯವನೋ,,ಅವ್ನೋ, ನಾವೋ.. ಒಟ್ಟು ನಾವು ದುಡಿದ ದುಡ್ಡು ನಮ್ಮ ದೇಶದಲ್ಲೇ ಉಳಿಯತ್ತೆ ತಾನೆ.  ಹೈ ಫೈ ಆಗಿರ್ಬೇಕು ಅನ್ನೋ ಕಾರಣಕ್ಕೆ ಕೋಕೆ ಬೇಕೆ ? ಮೂರು ರೂ ನಿಂಬೆಹಣ್ಣು ತಂದು ಹತ್ತು ರೂ ನಿಂಬೂ ಪಾನಿ ಕೊಡೋ ಅಂಗಡಿಯವನದು ಮಹಾ ಮೋಸದಂತೆ, ಕಣ್ಣೆದುರೇ ಹಣ್ಣಿನ ಜ್ಯೂಸ್ ಮಾಡಿ ಕೊಡೋ ಅಂಗಡಿಯವನದು ವ್ಯವಹಾರಕೋರತನವಾಗಿ ಕಾಣೋ ನಿಮಗೆ ವಿದೇಶಿ ಕಂಪೆನಿಗಳ ಮಾಜಾ, ಮಿರಿಂಡಾಗಳದ್ದೆಲ್ಲಾ ತಾಜಾ ಹಣ್ಣಿನ ರಸ!! ಅದಕ್ಕೆ ಎಷ್ಟು ಕೊಟ್ಟರೂ ತೊಂದ್ರೆ ಇಲ್ಲ. ಪೈಸಾ ಪೈಸಾ ದೋಚ್ತಾ ಇರುವಾಗ ತೆಪ್ಪಗಿರೋ ನಮಗೆ , ಹೈ ಫೈ ಭೂತ ಹಿಡಿದು ಹೆತ್ತ ತಾಯಿನಾಡ ದೋಚ್ತಾ ಇರೋದೂ ಅರಿವಾಗದ ಮೂರ್ಖರಿಗೆ ಇದೆಲ್ಲಾ ಹೇಗೆ ಅರ್ಥವಾದೀತು ? 



ಸ್ವದೇಶೀ ಆಂದೋಲನದ ಆಜಾದ್ ದೀಕ್ಷಿತರ ನೆನಪಾಗ್ತಿದೆ. ನಾನು ಸಣ್ಣವನಿದ್ದಾಗ ನಮ್ಮ ಊರು ಕಡೆ ಮನೆ ಮನೆಗೆ ಬಂದು ವಿದೇಶೀ ಯಾವ್ದು, ಸ್ವದೇಶೀ ಯಾವ್ದು ಅಂತ ಕರಪತ್ರ ಹಂಚಿದ್ದು , ಆ ಸ್ವದೇಶೀ ವಿದೇಶಿಗಳ ಲಿಸ್ಟು ಇತ್ತೀಚಿನವರೆಗೂ ನಮ್ಮ ಮನೆಯ ಮೂಲೆಯಲ್ಲಿ ಭದ್ರವಾಗಿ ಕೂತ ನೆನಪು. ೯೦-೯೫ರಲ್ಲಿದ್ದ ಸ್ವದೇಶೀ ಕಂಪೆನಿಗಳೂ, ಅವುಗಳ ಉತ್ಪನ್ನಗಳಲ್ಲಿ ಅದೆಷ್ಟೋ ಮುಚ್ಚಿಯೇ ಹೋಗಿರಬಹುದು. ಆದರೂ ಇನ್ನೂ ಹಲವಿವೆ. ಹಲ್ಲುಜ್ಜೋಕೆ ಇದ್ದಿಲು ಪುಡೀನೋ, ಕಲ್ಲುಪ್ಪೋ ಬಳಸಿ ಅಂತ ಹೇಳ್ತಿಲ್ಲ. ವಿದೇಶೀ ಡೆಂಟು ಗೇಟುಗಳ ಬದ್ಲು ನೀಮ್, ಅಜಂತಾ, ಡಾಬರ್, ಹಿಮಾಲಯ.. ಹೀಗೆ ಯಾವ್ದಾದ್ರೂ ಭಾರತೀಯ ಕಂಪನೀದು ಬಳಸಿ ಅಂತ ಅಷ್ಟೆ. ಭಾರತೀಯ ಬ್ರಾಂಡುಗಳ್ಯಾವ್ದು ಅಂತ ಹುಡುಕೋದು ಇಂಟರ್ನೆಟ್ಟಿನ ಈ ಜಮಾನಾದಲ್ಲಿ ತೀರಾ ಕಷ್ಟವೇನಲ್ಲ. ಆದರೂ ಇಷ್ಟವಿರೋರಿಗಾಗಿ ಈ ಲೇಖನದ ಕೊನೆಗೊಂದು ಪಟ್ಟಿ ಕೊಟ್ಟಿದ್ದೇನೆ. ಅದನ್ನ ನೋಡ್ತಾ ಹೋದ್ರೆ  ದಂಗಾಗುತ್ತೆ. ಉದಾಹರಣೆಗೆ ಭಾರತೀಯ ಹೆಸರಾದ ಅನ್ನಪೂರ್ಣ ಉಪ್ಪು ಭಾರತೀಯ ಕಂಪೆನಿದಲ್ಲ. ಇನ್ನು ಹೆಸರಲ್ಲೇ ಗೊತ್ತಾಗುವಂತಿರೋ ಸಿಬಾಕಾ, ಆಮ್ ವೇ, ಓರಲ್ ಬಿ, ಡೆಂಟು, ಗೇಟುಗಳು ಮೊದಲೇ ಇಲ್ಲಿನವಲ್ಲ. ಸುಮ್ನೇ ಒಂದ್ಸಲ ಆ ಪಟ್ತೀನ ಕಣ್ಣಾಡಿಸಿ ..ಗೊತ್ತಾಗುತ್ತೆ.. ಯಾರಿಗೂ ಒತ್ತಾಯ ಮಾಡೋಕಾಗಲ್ಲ. ಭವ್ಯ ಭಾರತದ ದಿವ್ಯ ಪ್ರಜೆಗಳು ನಾವು.. ಎಲ್ಲಿ ಏನಾದರೂ ಏಳದ ದಿವ್ಯ ನಿರ್ಲಕ್ಷ್ಯದ ನಿದ್ದೆ ನಮ್ಮದು. ಎಲ್ಲಾ ಕೆಲಸಗಳನ್ನೂ ಬಿಟ್ಟು ದೇಶಕ್ಕಾಗಿ ಹೋರಾಟ ಮಾಡಬೇಕಂತಲ್ಲ. ಕನಿಷ್ಟ ಪಕ್ಷ ನಾವು ಕಷ್ಟಪಟ್ಟು ದುಡಿದ ದುಡ್ಡು ನಮ್ಮ ಭವ್ಯ ಭಾರತದಲ್ಲೇ ಉಳಿಯೋ ಹಾಗೆ ನಡೆದುಕೊಳ್ಳೋದು, ತೀರಾ ಅಗತ್ಯವಿಲ್ಲದ ಪಕ್ಷದಲ್ಲಿ ಸ್ವಂತ ವಾಹನಗಳ ಬದಲು ಸಾಮೂಹಿಕ ವಾಹನಗಳನ್ನು  ಬಳಸೋದು .. ಹೀಗೆ ಕನಿಷ್ಟ ಸಾಮಾಜಿಕ ಪ್ರಜ್ನೆ, ಈ ಸಂದಿಗ್ದದ ಪರಿಸ್ಥಿತಿಯಲ್ಲಿ ದೇಶದ ಪ್ರತೀ ನಾಗರೀಕನ ಕರ್ತವ್ಯವನ್ನಾದ್ರೂ ಮಾಡಬಹುದಲ್ಲವೇ ? ಹೆಚ್ಚಿನ ಮಾತೇಕೆ ? ಸುಂದರ ಭಾರತದ ಕಟ್ಟಾಳುಗಳು ನಾವು. ಅದರ ನಾಳೆಯ ದಿನಗಳು ಚಿನ್ನದಂತಿರಬೇಕೋ ಅಥವಾ ಚಿನ್ನ ಮಾರೋ ದಿವಾಳಿಯ ಅಂಚಿಗೆ ಸಾಗಬೇಕು ಅನ್ನೋ ನಿರ್ಧಾರ ನಮಗೇ ಮತ್ತು ನಾವು ಆ ನಿಟ್ಟಿನಲ್ಲಿ ಕೈಗೊಳ್ಳೋ ನಿರ್ಧಾರಗಳಿಗೆ ಬಿಟ್ಟಿದ್ದು. 

ವಿಷಯ ಸೂಚಿ:
ಮಾಹಿತಿಗಳು ಪೂರ್ಣ ನನ್ನದಲ್ಲ. ಕೆಲವೊಂದು ನೆಟ್ಟಿಂದ ಪಡೆದಿದ್ದು. ಆದರೆ ಅದರ ಸತ್ಯಾಸತ್ಯತೆಗಳ ಬಗ್ಗೆ ಬೇರೆ ಬೇರೆ ತಾಣಗಳಲ್ಲಿ ಹುಡುಕಿ ಧೃಢಪಡಿಸಿಕೊಂಡಿದ್ದೇನೆ. ಮಾಹಿತಿ ಮೂಲಗಳನ್ನೂ ಕೊಟ್ಟಿದ್ದೇನೆ. ಈ ಬಗ್ಗೆ ಅನುಮಾನಗಳಿದ್ದೋರು ನೆಟ್ಟಲ್ಲೇ ನೋಡಿ ಖಚಿತಪಡಿಸಿಕೊಳ್ಳಬಹುದು.

ಮಾಹಿತಿ ಮೂಲಗಳು:
http://www.tititudorancea.com/z/usd_to_inr_exchange_rates_american_indian_rupee.htm

http://articles.economictimes.indiatimes.com/2013-05-24/news/39502312_1_rupee-us-dollar-eur-usd

http://finmin.nic.in/the_ministry/dept_eco_affairs/economic_div/exdbtrep2003.pdf

http://prajaasatta.org/news.php?newsID=0000000005

http://timesofindia.indiatimes.com/business/india-business/At-Rs-33000-per-capita-debt-in-India-increases-by-23/articleshow/13277789.cms

http://www.coca-colacompany.com/brands/the-coca-cola-company/



Products
SWADESHI*
VIDESHI*
Cool Drinks Rose Drink (Sherbat), Badam Drink, Milk, Lassie, Curd, Yoghurt, Chaach, Juice, Lemonade (Lemon Water), Coconut Water, Shakes, Jaljeera, Thandai, Roohafza, Rasna, Frooti, Godrej Jumpin, etc Coca Cola (Coke, Fanta, Thumps up, Limca, Gold spot), Pepsi (Lehar, 7up, Mirinda, Slice), Maaza
Tea & Coffee Tata, Brahmaputra, Assam, Grinaar, Indian Café, M.R., Chakra Gold, Gemini, Lotus, Neelagiri, Society, Cofeeday, etc Lipton(Tiger, Green Label, Yellow Label, Cheers),  BrookBond(Red Label, Taj Mahal), Godfrey, Philips, Poisan, Goodrick, Sunrise, Nestle, Nescafe
Child Food and Milk Products Honey, Boiled Rice, Fruit Juice, Amul, Sagar, Tapan, Milk care, Mother Diary, Jersy, Indiana, Vijaya, Priya, Nutrian Nestle(Lactogen, Cerelac, Nestam, L.P.F, MilkMaid, Everyday, Galtco), GlaksoSmithCline(Farex), Boost, Maltova, Bournvita, Horlicks, Complain
Ice Cream Homemade ice cream / coolfi, Amul, Vadilal, Milk Food, scoops, Gokul, Jersy, Vijaya, Heritage Walls, Quality, Cadbury, Dolps, Baskin & Robins
Salt Ankur, Saindha namak, Low Sodium & Iron-45 Ankur, Tata, Surya, Taja, Tara Annapurna, Captain Cook, Kisan(BrookBond), Pilsbury
Potato Chips & Snacks Bikano Namkeen, Haldiram, Homemade chips, Bikaji, AOne, etc Uncle, Pepsi (Ruffle, Hastes), FunMunch, etc
Tomato Ketchup & Fruit Jam Patanjali (Fruit Jam, Apple Jam, Mix Jam), Homemade sauce, Ketchap, Indana, Priya, Rasana Nestle, BrookBond (Kisaan), Brown, Paison
Biscuits & chocolates Patanjali (Amla Candy, Bel Candy, Aarogya Biscuit), Parle, Ashoka Indana, Amul, Ravalgaon, Bakemens, Creamica, Shagrila Cadbury(Bournvita, 5Star), Lipton, Horlicks, Complain, Spurt,Proteinex
Water Home-Boiled pure Water, Ganga, Himalaya, Rail neer, Bisleri, Bailley Aquafina, Kinley, Pure life, Ivian
Health Tonics Badam Pack, Chyawanprash, Amrit Rasayan, Nutramul Boost, Poison, Bournvita, Horlicks, Complan, Spurt, Proteinex
Ghee & edible oil Pram Ghee, Amul, Andmade cow Ghee, Sarso ka tel Nestle,
Toothpaste or powder Dant Kanti, Dant Manjan, Vico Bajradanti, MDH, Baidyanath, Gurukul Pharmacy, Choice, Neem, Abchor, Meshwak, Babool, Promise, Dabur, Himalaya, Laldantmanjam Most toothpastes are made from animal bone powder. Colgate, Closeup, Cibaca, Aquafresh, Amway, Wuantum, Oral-B, Forhans, pepsodent
Tooth brush Ajay, Promise, Ajanta, Royal, Classic, Dr. Strock, Monate, Bajaj Colgate, Closeup, Pepsodent, Oral-B, Aquafresh, Cibaca
Bathing Soap Kayakanti, Kayakanti Alovera, Nirma, Medimix, Neem, Nima, Jasmine, Mysore Sandal, Kutir, Sahara, Himani Glyscerene, Godrej(Cinthol, Fairglo, Shikakayi, Ganga), Wipro, Santoor, Sant Asaramji products, Sant Ramdevbaba products Lux, Liril, Lifebuoy, Denim, Dove, Revion, Pears, Rexona, Bridge, Hamam, Okay, Ponds, Detol, Clearsil, Palmolive, Amway, Johnson Baby
Shampoo Kesh Kanti, Wipro, Park avenue, Swatik, Ayur Herbal, Kesh Nihar, Hair & care, Arnica, Dabur Vatika, Bajaj, Nyle, Lavender, Godrej, Chik, Meera Colgate, Palmolive, Lux, Clinic, Sunsilk, Revion, Lakme, P&G products, Ponds, Old Spice, Shower to Shower, Head and Shoulders, Johnson Baby
Washing Soap, Powder, Neel Tata Shudh, Nima, Care, Sahara, Swastik, Vimal, Hipolin, Fena, Sasa, TSeries, Dr.Det, Ghadi, Genteel, Ujala, Ranipal, Nirma, Chamko, Dip, XXX, Ghar Surf, rin, sunlight, wheel, okay, Vim, Arial, Check, Henko, Quantum, Amway, Rivil, Woolwash, Robin Blue, Tinapal, Skylark
Shaving Cream Park Avenue, Premium , Emami, Balsara, Godrej, Nivea Old Spice, Palmolive, ponds, Gillete, Denim
Shaving Blade Topaz, Gallant, Supermax, Laser, esquire, Silver Prince, Premium, Ashoka Gilete, & O clock, Wilman, Wiltage
Cream, Powder, Cosmetic Products Kaya Kanti, \nem, Borosil, Ayur Emami, Vico, Boroplus, Boroline, Himani Gold,  Nyle, Lavender, Hair and care, Heavens, Cinthol, Glory, Ashoka Fair &Lovely, Lakme, Liril, Denim, Revelon, Proctar & Gamble (Clearsil, Cleartone), Ponds, Old Spice, Detol, Charli, Johnson Baby
Readymade Garments Park Avenue, Bombay Dyeing, Ruf & Tuf, Tigger Jeans Rangler, Nike, Duke, Adidas, NewPort, Puma, Reebok
Watches / Clocks Titan, HMT, Maxima, Perstige, Ajanta Baume & Mercier, Bvigari, Chopard, Dior, FranckMuller, Gizard-Perregaux, Hublot, JaquetDroz, LeonHatot, Liadro, Longiness, MontBlanc, Mocado, Piaget, Rado, Raymond Well, Swarovski, TagHeuer, Ulysse Nardin, Vertu, Swatch, Rolex, Swissco, Seeko
Stationery Camel, Kingson, Sharp, Cello, Natraj, Ambassador, Linc, Montex, Steek, Sangita, Luxor, Paras, Rotemax, Renolds Parker, Nickleson, Rotomac, Swissair, Add Gel, Ryder, Mitunsishi, Flair, Uniball, Pilot, Rolgold
Electrical & Electronics Voltas, Videocon, BPL, Onida, Orpat, Oscar, Salora, ET&T, T-Series, Nelco, Weston, Uptron, Keltron, Cosmic, TCS, Godrej, Brown, Bajaj, Usha, Polar, Anchor, Surya, Oriont, Cinni, Tullu, Crompton, Loyds, Blue Star, Voltas, Cool home, Khaitan, Everyready, Geep, Novino, Nirlep, Elite, Jayco, Titan, Ajanta, HMT, Maxima, Alwin Watch, Ghair, Bengal, Maysoor, Hawkins, Prestige pressure cooker and products of small scale and cottage industries Samsung, LG, Sony, Hitachi, Haier, Westorn, Okai, Philips
Computers Amar PC, Chirag, HCL HP, Compaq, Dell, Microsoft, Samsung, LG

Tuesday, August 27, 2013

ಒಂದು ಹಳ್ಳಿಯ ಕತೆ


ಈತನದು ಮುಂಬಯಿಯ ನವಿ ಮುಂಬಯಿಯಲ್ಲೊಂದು ದುಖಾನು. ದುಖಾನೆಂದರೆ ಸಣ್ಣ ಕಿರಾಣಿ ಅಂಗಡಿಯೇನಲ್ಲ.ಈತ ತನ್ನೂರಿನವರಿಗೆ ಹೇಳಿದ್ದ ಹೆಸರಷ್ಟೆ. ಅದು ದೊಡ್ಡದೇ. ದುಡ್ಡಿರೋರಿಗೆ ಸಣ್ಣ ಸಣ್ಣ ಮನೆಗಳನ್ನೂ ದೊಡ್ಡ ಬೆಲೆಗೆ ಮಾರೋ ಅದೇನೋ ಅಂತಾರಲ್ಲಾ, ಹಾ ರಿಯಲ್ ಎಸ್ಟೇಟು.. ಆ ತರದ್ದು. ನವಿ ಮುಂಬಯಿಯಲ್ಲಿ ಒಂದು ಶಯನ ಗೃಹ, ಒಂದು ಅಡುಗೆ ಮನೆಯಿರೋ ಮನೆಗೇ ೩೦ ಸಾವಿರ ದಾಟಿಸಿದ್ದರಲ್ಲಿ ಈತನ ತರದ ಅದೆಷ್ಟೋ ದುಖಾನುಗಳ ಸಾಥ್ ಇತ್ತು. ಮುಂಬಯಿ ಬೋರ್ ಬಂತಾ ಅಥವಾ ನಿನ್ನ ನೋಡ್ದೇ ವರ್ಷಗಟ್ಲೇ ಆಗೋಯ್ತು, ಯಾವಾಗ ಮನೆಗೆ ಬರ್ತೀಯೋ ಅಂತ ಗೋಗರೆಯುತ್ತಿದ್ದ ತಂದೆ ತಾಯಿಗಳ ಮಾತು ಕರಳು ಕರಗಿಸ್ತೋ ಅಥವಾ ಅದರಲ್ಲೂ ಇನ್ನೇನೋ ವ್ಯವಹಾರ ಹೊಳೆಯಿತೋ ಗೊತ್ತಿಲ್ಲ. ಹೆತ್ತೂರಿಗೆ ಇನ್ನೂ ವಿಮಾನ ಬಿಟ್ಟಿಲ್ಲ. ಇವೆಲ್ಲಾ ಯಾವಾಗ ಉದ್ದಾರ ಆಗ್ತವೋ ಗೊತ್ತಿಲ್ಲ ಎಂಬ ಗೊಣಗಾಟದಲ್ಲೇ ಬೆಂಗಳೂರಿನ ತನಕ ವಿಮಾನದಲ್ಲಿ ಬಂದು ಅಲ್ಲಿಂದ ಹೆತ್ತೂರಿಗೆ ರೈಲು ಹತ್ತಿದ. ರೈಲು ಹತ್ತಿ ಮಲಗಿದಾಗ ಅಲ್ಲಿ ತಾನಿದ್ದಾಗಿದ್ದ ಸೊಂಪಾದ ಹೊಲಗದ್ದೆಗಳು, ಅದರಲ್ಲಿ ಬರ್ತಿದ್ದ ಮೂರು ಕಾಸಿಗೆ ವರ್ಷವಿಡೀ ಕಷ್ಟಪಟ್ಟು ಕೆಲಸ ಮಾಡ್ತಿದ್ದ ಮೂರ್ಖ(?) ರೈತರೂ ನೆನಪಾದರು. ಅವರನ್ನು ಹೇಗಾರೂ ಬಖರಾ ಮಾಡಿ ಆ ಜಾಗವನ್ನೇನಾದ್ರೂ ಕೊಂಡು ಕೊಂಡು ಅಲ್ಲೂ ರಿಯಲ್ ಎಸ್ಟೇಟ್ ಶುರು ಮಾಡಿದ್ರೆ ಎಷ್ಟೆಷ್ಟು ಲಾಭ ಬರಬಹುದೆಂಬ ಲೆಕ್ಕಾಚಾರದಲ್ಲೇ ನಿದ್ದೆ ಹತ್ತಿತು.


ಮಲೆನಾಡ ಒಂದು ಹಳ್ಳಿ ಅವನ ಹುಟ್ಟೂರು.ವರ್ಷದ ನಾಲ್ಕು ತಿಂಗಳೂ ಇರುತ್ತಿದ್ದ ಮಳೆಗಾಲ ಈಗ ಮೂರಕ್ಕೆ ಇಳಿದಿದ್ದರೂ ಮಳೆಗೆ, ನೀರಿಗೆ ಏನೂ ಕೊರತೆಯಿರಲಿಲ್ಲ. ಮಳೆಗೆ ಉಗಿಯೆಲ್ಲಾ ಕೊಚ್ಚಿಹೋದರೂ ಮಳೆಗಾಗಿ ಕೆಲವೊಮ್ಮೆ ಕಾದು ಬಿತ್ತನೆ ತಡವಾದರೂ ರೈತರು ತೀರಾ ಕಂಗಾಲಾಗುತ್ತಿರಲಿಲ್ಲ. ನಮ್ಮ ನಸೀಬಿದ್ದಿದ್ದೇ ಇಷ್ಟು ಈ ವರ್ಷಕ್ಕೆ. ದೇವರು ಕೊಟ್ಟಿದ್ದು ನಮಗೆ, ನಮ್ಮ ಮಕ್ಕಳಿಗೆ ಬೇಕಾದಷ್ಟಿದೆ, ಆತ ಎಂದೂ ಕೈಬಿಡಲಾರನೆಂಬ ನಂಬಿಕೆಯಲ್ಲೇ ಬಾಳು ಸಾಗಿಸುತ್ತಿದ್ದವರು. ಗದ್ದೆಯಲ್ಲದೇ ಅಡಿಕೆ, ತೆಂಗಿನ ತೋಟವಿದ್ದವಿದ್ದರೂ ಅವರೇನೂ ತೀರಾ ಶ್ರೀಮಂತರಾಗಿರಲಿಲ್ಲ. ತೆಂಗಿನ ನುಸಿರೋಗ, ಅಡಿಕೆಯ ಕೊಳೆ, ಕಾಂಡ ಕೊರಕ, ಹಳದಿಹುಳ.. ಹೀಗೆ ತರ ತರದ ರೋಗಗಳು ಬಾಧಿಸಿ ಅವರ ಫಸಲುಗಳೂ ಪೂರಾ ಕೈಸಿಕ್ಕದೇ  ಕಂಗೆಡತ್ತಿದ್ದರು. ಆದರೂ ಮೊದಲಿನವರಂತೆ ಇವರೂ ಅಲ್ಪತೃಪ್ತರು. ಇಲ್ಲದಿದ್ದದುಕ್ಕೆ ತೀರಾ ಆಸೆಪಡದೇ ಇದ್ದಿದ್ದುರಲ್ಲೇ ಜೀವನ ಸಾಗಿಸುವುದು ಇವರ ರೀತಿ.  ನೀರುಳ್ಳಿಗೆ ೭೫ ರೂಪಾಯಂತೆ ಕಣೋ, ಟೊಮಾಟೋಗೆ ೫೦ ಅಂತೆ ಕಣೋ ಎಂಬಂತ ಸುದ್ದಿಗಳೆಲ್ಲಾ ಇವರಿಗೆ ಟೀವಿಯಲ್ಲಿ ನೋಡಿದ, ರೇಡಿಯೋಲಿ ಕೇಳಿದ ಅಂತೆಕಂತೆಗಳಷ್ಟೆ. ತಿನ್ನಲು ಬೇಕಿದ್ದ ತರಕಾರಿ,ಸೊಪ್ಪುಗಳನ್ನೆಲ್ಲಾ ಮನೆಹಿತ್ತಲಲ್ಲೇ ಬೆಳೆಯುತ್ತಿದ್ದ ಇವರಿಗೆ ವಾರಕ್ಕೊಮ್ಮೆಯ ಊರಸಂತೆಗೆ ಹೋಗೋ ಜರೂರತ್ತೂ ಇರಲಿಲ್ಲ. ಹೋದರೂ ೨೫-೩೦ರೂಗಳಲ್ಲಿ ಸಂತೆ ಖರೀದಿ ಮುಗಿದು ಹೋಗುತ್ತಿತ್ತು. ಐದಾರು ರೂಪಾಯಿಗೆ ಕೇಜಿ ತರಕಾರಿಗಳು ಸಿಗುತ್ತಿದ್ದವು. ೨೫ ರೂ ಅಂದರೆ ಬೇರೆ ಬೇರೆ ತರದ ತರಕಾರಿಗಳೇ ಬೇಜಾರಾಗುವಷ್ಟು ಬಂದು ಬರುತ್ತಿತ್ತು. ಹೊರಗಡೆಯಿಂದ ಬರಬೇಕಿದ್ದ ಕ್ಯಾರೇಟಿನಂತ ತರಕಾರಿಗಳು ಮಾತ್ರ ತುಸು ದುಬಾರಿ. ಉಳಿದಿದ್ದೆಲ್ಲಾ ಸೋವಿಯೇ. ಅಕ್ಕಿ ಮನೆಯಲ್ಲಿ ಬೆಳೆಯದವರಾಗಿದ್ದರೆ ಒಂದೂವರೆ ಎರಡು ತಿಂಗಳಿಗೊಮ್ಮೆ ಅಕ್ಕಿ ಕೊಳ್ಳುತ್ತಿದ್ದರು. ಅದಿಲ್ಲದಿದ್ದರೆ ಬೇಳೆ ಮಾತ್ರ ಕೊಳ್ಳುತ್ತಿದ್ದುದು. ಒಟ್ನಲ್ಲಿ ತಿಂಗಳಿಗೆ ನಾಲ್ಕಂಕಿ ಸಂಪಾದನೆಯಿದ್ದರೆ ಅದು ಸಿಕ್ಕಾಪಟ್ಟೆ ಶ್ರೀಮಂತಿಕೆಯ ಜೀವನ.


ಊರು ಬಿಟ್ಟು ಕೆಲಸ ಹುಡುಕಿ ಮುಂಬಯಿ ಸೇರಿದವನಿಗೆ ಅಲ್ಲಿ ನೆಲೆ ಸಿಕ್ಕ ನೆಂಟನದು ಮನೆ ಮಾರೋ ಬಿಸಿನೆಸ್ಸು. ಅಲ್ಲೇ ಉಳಿದ ಈತ ಆತನ ವ್ಯವಹಾರಗಳನ್ನು ಕಲಿಯುತ್ತಾ ತನ್ನದೇ ಒಂದು ಬಿಸಿನೆಸ್ಸು ತೆರೆಯೋವಷ್ಟು ಬೆಳೆದ. ಅಲ್ಲೇ ಸುತ್ತಮುತ್ತಲ ಹಳ್ಳಿಗಳಿಗೆ ಹೋಗೋದು. ಅಲ್ಲಿನ ರೈತರಿಗೆಲ್ಲಾ ಕರೆಯೋದು. ನೀವು ವರ್ಷಪೂರ್ತಿ ದುಡಿದರೂ ಒಂದು ಲಕ್ಷ ಸಂಪಾದನೆ ಮಾಡಲಾರಿರಿ.  ಅಂತದ್ದರಲ್ಲಿ ನಿಮಗೆ ಒಂದೇ ಸಲಕ್ಕೆ ನಾಲ್ಕು ಲಕ್ಷ ಕೊಡ್ತೀನಿ. ಆರಾಮ್ಗಿದ್ಬಿಡಿ ಅನ್ನೋದು.  ಆ ರೈತರಿಗೂ ಪಾಪ ಕಷ್ಟ. ಮದುವೆಯಾಗಬೇಕಿರೋ ಮಗಳೋ, ರೋಗಿ ಪತ್ನಿಯೋ ಇರೋರು. ಈ ಊರು ಬಿಟ್ಟು ಪಟ್ಟಣದಲ್ಲಿ ಚಂದದ ಬದುಕು ಕಟ್ಟೋ ಕನಸುಗಳು ಮೂಡುತ್ತಿದ್ದವು . ಅಪ್ಪಂದಿರಿಗೆ ಇಷ್ಟವಿಲ್ದಿದ್ರೂ ಅವರ ಗಂಡುಮಕ್ಕಳಿಗೆ ಪೇಟೆ ಸೇರೋ ಆಸೆ ತೋರಿಸಿ ಜಮೀನು ಮಾರಿಸುವಂತೆ ಮಾಡಿ ಬಿಡ್ತಿದ್ದ ಈತ.  ಜಮೀನನ್ನು ವ್ಯವಸಾಯ ಉದ್ದೇಶಕ್ಕೆ ಕೊಳ್ಳೋ ಯಾರೂ ಕೂಡ ಎರಡೂವರೆಯಿಂದ ಮೂರು ಲಕ್ಷಕ್ಕಿಂತ ಜಾಸ್ತಿ ಕೊಡೋಲ್ಲ. ಅಬ್ಬಬ್ಬಾ ಅಂದರೆ ಮೂರೂವರೆ ಕೊಡಬಹುದು. ಅಂತದ್ದರಲ್ಲಿ ಐದು ಲಕ್ಷ ಅಂದ್ರೆ ಸಾಮಾನ್ಯನಾ ? ತಗೊಂಡು ಏನಾದ್ರೂ ಮಾಡ್ಕೊಳ್ಳಲಿ ನಮಗೇನು ಅನ್ನೋದು ಕೆಲವರ ಯೋಚನೆಯಾಗಿತ್ತು. ಅಂತೂ ಊರಿಗೆ ಊರೇ ಖಾಲಿ ಮಾಡಿದ ಮೇಲೆ ಎಲ್ಲೆಲ್ಲೋ ಪೆಟ್ಟಿಗೆ ಕಳಿಸಿ ಡಿನೋಟಿಫಿಕೇಶನ್ ಮಾಡಿಸೋದು. ಆಮೇಲೆ ಅಲ್ಲೊಂದು ಅಪಾರ್ಟುಮೆಂಟು !!! ಸೊಂಪು ಹಸಿರು ಗದ್ದೆಗಳಿದ್ದ ಜಾಗದಲ್ಲೀಗ ಖಾಲಿ ಬರಡು ಭೂಮಿ. ಅದರ ತುಂಬೆಲ್ಲಾ ಬೌಂಡರಿಗಳು.. ಅಲ್ಲಲ್ಲ ಭಾವೀ ಮನೆಗಳಿಗಾಗಿನ ಸೈಟುಗಳು.


ಒಂದೊಂದು ಸೈಟುಗಳೂ ಅದೆಷ್ಟೋ ಲಕ್ಷಕ್ಕೆ ಮಾರಾಟವಾಗುತ್ತಿದ್ದವು. ಕೋಟಿ ಕೋಟಿಯ ಬಿಸಿನೆಸ್ಸು. ಕೆಲವೆಡೆ ಈತನೇ ಇನ್ಯಾವುದೋ ಬಿಲ್ಡರುಗಳ ಸಹಭಾಗಿತ್ವದಲ್ಲಿ ಅಪಾರ್ಟುಮೆಂಟು ಕಟ್ಟಿಸಲು ಶುರುಮಾಡುತ್ತಿದ್ದ. ಅಲ್ಲಿ ಬಿಲ್ಡಿಂಗು ಮುಗಿಯೋ ಮೊದಲೇ ಪ್ರತೀ ಫ್ಲಾಟು ನಮಗೆ ಬೇಕೆಂದು ಬುಕ್ಕಿಂಗು ! ಮತ್ತೆ ಕೋಟಿಗಳ ವ್ಯವಹಾರ. ಜಮೀನುಗಳು ಸಾಲದೆಂದು ಊರಿನ ಕೆರೆಗಳಿದ್ದ , ದನಗಾವಲಿನ ಜಾಗಗಳನ್ನೂ ಅಕ್ರಮವಾಗಿ ಆಕ್ರಮಿಸಿ ಫ್ಲಾಟ್ ಕಟ್ಟೋಕೆ ಮುಗಿಬಿದ್ದಿದ್ದರು ಜನ. ಸಮೃದ್ಧ ಭತ್ತ, ಗೋಧಿ ಬೆಳೆಯುತ್ತಿದ್ದ ಜಾಗದಲ್ಲಿ ಈಗ ಬರಡು ಬಯಲು. ಅತ್ತ ಜಮೀನು ಮಾರಿ ಪೇಟೆ ಸೇರಿದ್ದ ಜನ ಬೀದಿಪಾಲಾಗಿದ್ದರು. ಕೈಗೆ ಸಿಕ್ಕ ಲಕ್ಷ ಕೆಲವೇ ದಿನಗಳಲ್ಲಿ ಖಾಲಿಯಾಗಿತ್ತು. ನಮಗೊಂದಿಷ್ಟು ನಮಗೊಂದಿಷ್ಟು ಎಂದು ಕೇಳಿ ಪಡೆದಿದ್ದ ನೆಂಟರು ನಾಪತ್ತೆಯಾಗಿದ್ದರು. ತಮ್ಮ ಪಾಲಲ್ಲಿ ಏನೋ ಬಿಸಿನೆಸ್ಸು ಮಾಡ್ತೀವಿ ಅಂತ ತಗೊಂಡಿದ್ದ ಮಕ್ಕಳು ಪೇಟೆಯಲ್ಲಿ ಮೂರ್ಖರಾಗಿ ಕೈಖಾಲಿ ಮಾಡ್ಕೊಂಡಿದ್ದರು, ಕೆಲವರು ಜೂಜಲ್ಲಿ ಕಳೆದು ಮರಳಿದ್ದರು. ಕೆಲವರು ಪೇಟೆಯ ಶ್ರೀಮಂತಿಕೆಯ ಜೀವನಕ್ಕೆ ಹೊಂದೋಕೆ ಅಂತ ಖರ್ಚು ಮಾಡಿದ್ದರು. ಒಟ್ನಲ್ಲಿ ಅತ್ತಲೂ ಇಲ್ಲ. ಇತ್ತಲೂ ಇಲ್ಲದ ತ್ರಿಶಂಕು ಸ್ವರ್ಗದ ಸ್ಥಿತಿ. ಊರಲ್ಲಾದರೆ ಮೂರು ಹೊತ್ತು ಊಟಕ್ಕೆ ಏನೂ ತೊಂದರೆಯಿರಲಿಲ್ಲ. ಸಾವಿರದ ನೋಟನ್ನು ವರ್ಷಕ್ಕೊಮ್ಮೆಯೂ ನೋಡಿರದೇ ಇದ್ದಿರಬಹುದು. ಆದರೆ ನೂರರ ನೋಟಿದ್ದರೆ ವಾರಪೂರ್ತಿಯ ದಿನಸಿ ತರಬಹುದಿತ್ತು. ಅಕ್ಕಿ ಬೆಳೆಯದವರಿದ್ದರೂ ಇನ್ನೂರೋ ಮುನ್ನೂರೋ ಇದ್ದರೆ ಎರಡು ತಿಂಗಳು ಮನೆಗೆ ಬೇಕಾಗುವಷ್ಟು ಅಕ್ಕಿ ಸಿಗುತ್ತಿತ್ತು.  ಆದರೆ ಈಗ, ಐನೂರರ ನೋಟು ತಗೊಂಡು ಹೋದರೂ ಒಂದು ತಿಂಗಳಿಗಾಗುವಷ್ಟು ಅಕ್ಕಿ ತರಬಹುದಷ್ಟೇ. ನೂರರಲ್ಲಿ ಎರಡು ಕೇಜಿ ತರಕಾರಿ ಸಿಕ್ಕರೆ ಹೆಚ್ಚು. ಬೆಳೆಯುವಂತೆಯೂ ಇಲ್ಲ, ಕೊಳ್ಳುವಂತೆ ಮೊದಲೇ ಇಲ್ಲ !!! ಇನ್ನು ಉಳಿಯಲು ಮನೆ ? ತಿಂಗಳಿಗೆ ವಿಪರೀತ ಬಾಡಿಗೆ ೨೫-೩೦ ಸಾವಿರ ತಿಂಗಳಿನ ಬಾಡಿಗೆ !!! ಇಷ್ಟೆಲ್ಲಾ ಆಗಲು ಕಾರಣ ಯಾರೆಂದು ಯೋಚಿಸಿದ ಅವರು ತಮಗೇ ಶಾಪ ಹಾಕಿಕೊಳ್ಳುತ್ತಿದ್ದರು. ತೀರಾ ಸುಖದಲ್ಲಿ ಇಲ್ಲದಿದ್ದರೂ ಯಾವತ್ತೂ ಉಪವಾಸವಿರದ ತಾವು ಅಂದು ಅತಿಯಾಸೆ ಪಟ್ಟಿದ್ದಕ್ಕೆ ಇವತ್ತು ಅನುಭವಿಸಲೇ ಬೇಕೆಂದು ಶಾಪ ಹಾಕಿಕೊಳ್ಳುತ್ತಿದ್ದರು. ಅಂದು ಅವಸರಿಸಿದ ಮಕ್ಕಳಿಗೂ ಇಂದು ಪಾಪ ಪ್ರಜ್ನೆ ಕಾಡುತ್ತಿತ್ತು.


ಬೆಳಕಾಯಿತೆಂದು ರೈಲಲ್ಲಿ ಬರುತ್ತಿದ್ದ ಚಾಯ್ ವಾಲಾಗಳ ಚಾಯ್ ಚಾಯ್ ಎಂಬ ದನಿ ಸಾರುತ್ತಿತ್ತು. ಹೌ ಮಚ್ ಎಂದ. ರೈಲಿನ ಚಾಯ್ ವಾಲಾ ಉತ್ತರಿಸೋ ಮೊದಲೇ ಈತನಿಗೆ ಮುಂಬೈ ಸೇರಿ ಏಸಿ ಕಾರು, ವಿಮಾನಗಳಲ್ಲೇ ಸುತ್ತಾಡಿ ಡಾಲರ್, ಯೂರೋಗಳ ಲೆಕ್ಕದಲ್ಲಿದ್ದವ ಈಗ ರೂಪಾಯಿ ಲೆಕ್ಕಕ್ಕೆ ಬಂದಿದ್ದು ನೆನಪಾಗಿ ನಗು ಬಂದು ಎಷ್ಟಪ್ಪಾ ಎಂದ.ಐದು ರೂಪಾಯಿ ಸಾರ್ ಎಂದ. ಮುಂಬೈಯಲ್ಲಿ ಐವತ್ತು ರೂ ಇದ್ರೂ ಒಂದು ಕಾಫಿ ಸಿಗಲ್ಲ ಅಂತದ್ದರಲ್ಲಿ ಬರೀ ಐದಾ ? ಈ ಜನ ಉದ್ದಾರವಾಗಲ್ಲ ಅಂತ ಬೈದುಕೊಳ್ತಲೇ ಜೋಬಿಗೆ ಕೈ ಹಾಕಿದ. ಅರೇ ಪರ್ಸೇ ಇಲ್ಲ. ರಾತ್ರೆ ಎಲ್ಲೋ ಸಿಗರೇಟು ಸೇದೋಕೆ ಅಂತ ಇಳಿದಾಗ ಆ ಸ್ಟೇಷನ್ನಲ್ಲಿ ರಶ್ಸಿತ್ತು. ಚೇ, ಪರ್ಸು ಹೊಡೆದುಬಿಟ್ಟರಾ ಅಂದುಕೊಂಡ. ಎಲ್ಲಾದರೂ ಪರ್ಸು ಹೊಡೆದರೆ ಬೇಕಾದೀತು ಅಂತ ಬ್ಯಾಗಿನಲ್ಲಿಟ್ಟಿದ್ದ ಮತ್ತೊಂದು ಏಟಿ ಎಮ್ ಕಾರ್ಡೂ, ಅದರ ಪಕ್ಕದಲ್ಲಿ ಐನೂರರ ನೋಟೊಂದು ಇಟ್ಟಿದ್ದ ಹಾಗೆ ನೆನಪಾಯ್ತು. ಅದನ್ನೇ ತೆಗೆದುಕೊಡೋಕೆ ಅಂತ  ಚೇಂಚ್ ಇದ್ಯೇನಪ್ಪಾ ಐನೂರಕ್ಕೆ   ಅಂದ.. ಸಾರ್ ತಮಾಷೆ ಮಾಡ್ತಾ ಇದೀರಾ ? ಐದರ ಚೇಂಚ್ ಇದ್ದರೆ ಕೊಡಿ, ಇಲ್ದೇ ಇದ್ದರೆ ಈ ತರದ ನಾಟಕ ಎಲ್ಲಾ ಬೇಡ. ನೋಡೋಕೆ ಏನೋ ದೊಡ್ಡೋರ ತರ ಇದೀರ ಅಂದ್ಬುಟ್ಟ ಆ ಚಾಯ್ ವಾಲಾ.  ಈತ ಬ್ಯಾಗಿನ ಹುಡುಕಾಟದಲ್ಲಿದ್ದಾಗ ಈತನ ಶರ್ಟಿನ ಜೇಬಿನಿಂದ ಇಪ್ಪತ್ತರ ನೋಟೋಂದು ಕೆಳಗೆ ಬಿದ್ದಿತು. ಚೇಂಜ್ ಇಟ್ಕೊಂಡೂ ಸುಳ್ಳು ಹೇಳ್ತಿರಲಾ ಸಾರ್ ಅಂತ ಆ ಚಾಯ್ ವಾಲಾನೇ ಆ ಇಪತ್ತರ ನೋಟು ತಗೊಂಡು ಹದಿನೈದು ವಾಪಾಸ್ ಕೊಟ್ಟು ಮುಂದಕ್ಕೆ ನಡೆದ. ಬ್ಯಾಗೆಲ್ಲಾ ಹುಡುಕಿದರೂ ಈತನ ಏಟಿ ಎಮ್ಮೂ ಸಿಗಲಿಲ್ಲ. ಐನೂರೂ ಸಿಗಲಿಲ್ಲ.    ಈತನೇ ಇಡಲು ಮರೆತಿದ್ದನೋ ಅಥವಾ ಸೈಡಿನ ಜೇಬಲ್ಲಿಟ್ಟಿದ್ದ ಅದನ್ನೂ ಯಾರೋ ಹೊಡೆದಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಈತನ ಬಳಿಯಿದ್ದ ಹದಿನೈದು ರೂಪಾಯಿಗಳು ಏನನ್ನೋ ನೆನೆಸಿ ನಗುತ್ತಾ ಈತನ ಜೇಬಿನಲ್ಲಿ ಭದ್ರವಾಗಿ ಕೂತಿದ್ದವು.


ಬೆಳಗಾಗಿತ್ತು. ಊರಿಗೆ ಬಂದಿಳಿದ. ಸರಿ, ಮನೆಗೆ ಹೋಗುವುದು ಹೇಗೆ. ಆಟೋದಲ್ಲಿ ಹೋಗಬಹುದಿತ್ತು. ಆದರೆ ಅಷ್ಟು ದುಡ್ಡಿಲ್ಲ. ನಡೆದು ಹೋಗೋಣವೆಂದರೆ ನಡೆಯೋ ಅಭ್ಯಾಸವೇ ತಪ್ಪಿ ಹೋಗಿದೆ. ಸರಿ ಬಸ್ಸಿಗೆ ಹೋಗೋಣವೆಂದು ಬಸ್ಸು ಹತ್ತಿದ. ಬಸ್ಸು ಹೊರಡೋದು ಲೇಟಿತ್ತು ಅನಿಸುತ್ತೆ. ಖಾಲಿ ಇತ್ತು. ಈತ ಹತ್ತಿ  ಕೂರೋ ಹೊತ್ತಿಗೆ ಅಲ್ಲಿ ಎದುರು ಬಂದ ಕಂಡೆಕ್ಟರನ್ನ ನೋಡಿ ಅರೇ ಸೋಮಣ್ಣ ನೀನಿಲ್ಲಿ ಅಂದ. ಆತನಿಗೂ ಈತನ್ಯಾರೆಂದು ನೆನಪಾಗಲಿಲ್ಲ.ಅರೇ, ನಾನ್ಯಾರಂತ ಗೊತ್ತಾಗಲಿಲ್ಲವಾ ? ಸೋಮವಾರಳ್ಳಿ ಪೇಟೆ ಪಕ್ಕದಲ್ಲೇ ಇದ್ದ ಹಳ್ಳಿ ಇಂದ ಬರ್ತಿದ್ದ ಪಟೇಲರ ಮಗ ಸೋಮಣ್ಣ ಅಲ್ವಾ ನೀನು? ಅಂದ ಈತನೇ. ಹೂಂ ಅಂದ ಆತ ಆಶ್ಚರ್ಯದಿಂದ. ಏ ನಾನು ಕಣೋ.  ಈ ಹಳ್ಳೀಲಿ ಹೈಸ್ಕೂಲಿಲ್ಲ ಅಂತ ಸೋಮವಾರಳ್ಳಿ ಪೇಟೆ ಪಕ್ಕದ ಅಜ್ಜಿ ಮನೆಯಿಂದ ಹೈಸ್ಕೂಲಿಗೆ ಬರ್ತಿದ್ದೆ ನಾನು. ನಿನ್ನ ಚಡ್ಡಿ ದೋಸ್ತು ಕಣೋ.. ಆಕಾಶ ಆಕಾಶ ಮೂರು, ಆಕಾಶ ಆಕಾಶ ನಾಲ್ಕು .. ನೆನ್ಪಾಯ್ತಾ ಅಂದ.. ಓ, ಅವ್ನೇನೋ ನೀನು… ಅಂತ ಅವ್ನಿಗೂ ಇವನ್ಯಾರು ಅಂತ ನೆನಪಾಯ್ತು. ಸರಿ ಹೀಗೇ ಮಾತಾಡ್ತಾ ಮಾತಾಡ್ತಾ ಇವ ಅವನಿಗೆ ಕೇಳಿದ  ಆ ಪೇಟೆಯ ಪಕ್ಕದಲ್ಲೇ ಐದಾರು ಎಕರೆ ಹೊಲ ಗದ್ದೆ ಎಲ್ಲಾ ಇತ್ತಲ್ಲ ನಿಮ್ಮದು , ಈಗ ಏನೋ  ಕತೆ ಅಂದ. ಓ ಅದಾ, ಬಿಟ್ಟು ಬಿಡೋ ಕೇಳ್ಬೇಡ ಅಂದ ಆತ. ಈತ ಬಿಡಿಸಿ ಕೇಳಿದ ಮೇಲೆ ಆತ ಹೇಳೋಕೆ ಶುರು ಮಾಡಿದ. ತಮ್ಮೂರಿಗೆ ಅದ್ಯಾರೋ ಬೆಂಗಳೂರಿನ ಕಡೆಯ ಹುಡುಗರು ಬಂದ ಕತೆ. ಲಕ್ಷ ಲಕ್ಷದ ಆಸೆ ತೋರಿಸಿ ಜಮೀನು ಕೊಂಡ ಕತೆ, ಆ ಜಮೀನುಗಳೆಲ್ಲಾ ಈಗ ಸೈಟುಗಳಾಗಿ, ಊರ ತುಂಬಾ ಜನರಿಗೆ ದುಡ್ಡಿನ ಹುಚ್ಚು ಹಿಡಿದಿರೋ ಕತೆ, ಜಮೀನು ಮಾರೋರು, ಕೊಳ್ಳೋರೂ, ಮಧ್ಯವರ್ತಿಗಳು, ಕಪ್ಪುಹಣಾನಾ ಜಮೀನಿನ ಮೂಲಕ ಬಿಳುಪಾಗಿ ಪರಿವರ್ತಿಸೋಕೆ ಅಂತ ಈ ಊರಲ್ಲಿದ್ದ ಜನರ ಮೂಲಕ ಹಣ ತೊಡಗಿಸೋರು..


ಹೀಗೆ ಒಟ್ನಲ್ಲಿ  ಒಂದು ವರ್ಗದ ಜನರಲ್ಲಿ ಹಣ ವಿಪರೀತ ಓಡಾಡತೊಡಗಿ  ಊರಲ್ಲಿನ ಸಾಮಗ್ರಿಗಳ ಬೆಲೆಯೆಲ್ಲಾ ಏಕ ಧಂ ಏರಿದ ಕತೆ ಹೀಗೆ ಸಂಕ್ಷಿಪ್ತವಾಗಿ ಹೇಳತೊಡಗಿದ. ಅದೆಲ್ಲಾ ಸರಿ, ನೀನೇಕೆ ಹೀಗಾದೆ ಅಂದ ಈತ. ನಾನೂ ಜಮೀನು ಮಾರಿದ ಒಬ್ಬ ದುರ್ದೈವಿ ಕಣೋ. ಅಪ್ಪನವರು ಬೇಡ ಬೇಡವೆಂದರೂ ಜಮೀನು ಮಾರಿಸಿದೆ. ಅದೇ ದುಃಖದಲ್ಲಿ ಅವರು ಹಾಸಿಗೆ ಹಿಡಿದರು. ಅವರು ಹಾಸಿಗೆ ಹಿಡಿದಿರೋದನ್ನ ನೋಡಿ ಅಮ್ಮ ದಿನವೂ ಕಣ್ಣೀರಿಡುತ್ತಾಳೆ. ಅಂದು ಸಿಕ್ಕ ದುಡ್ಡು ಕೆಲವೇ ಅರ್ಧ ಮೊದಲ ತಿಂಗಳಲ್ಲೇ ಖರ್ಚಾಗಿಹೋಯ್ತು. ಉಳಿದದ್ದನ್ನ ಬಡ್ಡಿಗೆ ಅಂತ ಇಟ್ಟರೂ ಇಲ್ಲಿನ ಜೀವನಕ್ಕೆ ಸಾಕಾಗ್ತಾ ಇಲ್ಲ. ಹೊಟ್ಟೆಗೇನಾದ್ರೂ ಮಾಡ್ಲೇ ಬೇಕಲ್ಲಾ. ಅದಕ್ಕೆ  ಈ ಕತೆ ಅಂದ, ನಿನ್ನ ಇಬ್ಬರು ತಮ್ಮಂದಿರಿದ್ದರಲ್ಲಾ ಅವರು ಎಂದ ಈತ. ಪೇಟೆಯ ಕತೆ ನೋಡಿ ನನ್ನ ತಮ್ಮಂದಿರು ಹಳ್ಳಿಗೇ ವಾಪಾಸ್ ಹೋದರು. ಈಗ  ನಾವೇ ಕೊಟ್ಟ ಜಮೀನಲ್ಲಿ ತಲೆ ಎತ್ತುತ್ತಿರೋ ಅಪಾರ್ಟುಮೆಂಟಿನ ಕೆಲಸಕ್ಕೆ ಕೂಲಿ ಆಳಾಗಿ ದುಡಿತಿದಾರೆ ಅಂತ ನಿಟ್ಟುಸಿರುಬಿಟ್ಟ ಆತ.  ಈತನಿಗೆ ಹಳ್ಳಿಯಲ್ಲಿದ್ದ ತನ್ನ ಕುಟುಂಬದ ನೆನಪಾಗಿ ಯಾಕೋ ಕರುಳು ಚುರುಕ್ಕಂತು.  ತನಗೇ ಜಮೀನು ಮಾರಿದ ಮನೆ ಮಕ್ಕಳು ಹೊಟ್ಟೆಗೆ ಹಿಟ್ಟಿಲ್ಲದೇ ತಾನು ಕಟ್ಟಿಸುತ್ತಿರೋ ಕಟ್ಟಡದಲ್ಲಿ ಕೂಲಿಯಾಳಾಗಿ ದುಡಿಯುತ್ತಿದ್ದರೂ ಈತನಿಗೆ ಏನೂ ಅನಿಸುತ್ತಿರಲಿಲ್ಲ. ಅವರವರ ನಸೀಬು ಬಿಡು ಎಂದುಕೊಳ್ಳುತ್ತಿದ್ದ. ಆದರೆ ತನ್ನ ಪ್ರೀತಿ ಪಾತ್ರರಿಗೆ ಆ ಸ್ಥಿತಿಯಾದಾಗ ಆತನಿಗೆ ಪರಿಸ್ಥಿತಿಯ ನಿಜ ಸ್ಥಿತಿಯ ಅರಿವಾಗತೊಡಗಿತು.. ಖಾಲಿ ಜೇಬು ಮತ್ತು ಹಸಿದ ಹೊಟ್ಟೆಗಳು ನೂರು ಪಾಠ ಕಲಿಸುತ್ತವೆ ಅನ್ನೋದು ಇದಕ್ಕೇ ಇರಬೇಕು..


ಆತ ಈತನ ಬಗ್ಗೆ ಕೇಳೋಕೆ ಕರ್ತವ್ಯ ಪ್ರಜ್ನೆ ಅಡ್ಡ ಬಂದಿತ್ತು. ಕಂಡಕ್ಟರು ಬಸ್ಸೊಳಗೆ ಕೂತು ಕತೆ ಹೊಡಿತಾ ಇದ್ರೆ ಬಸ್ಸಿಗೆ ಜನ ಹತ್ತುತ್ತಾರೆಯೇ ? ಹೊರಗೆ ಹೋಗಿ ಕೂಗಲೇಬೇಕು.. ಆತ ಹೊರಗೆ ಕೂಗುತ್ತಿದ್ದಂತೆ ಜನ ಒಳಗೆ ಬಂದು ಹತ್ತುತ್ತಿದ್ದರು.  ಕೊನೆಗೆ ಬಸ್ಸು ಹೊರಡೋ ಹೊತ್ತಾಯಿತು. ಈತನೂರಿಗೆ ಟಿಕೆಟ್ ತಗೊಂಡ ಈತನಿಗೆ ಮತ್ತೆ ಆಶ್ಚರ್ಯ . ಟಿಕೆಟಿಗೆ ಐದು ರೂಪಾಯಿ. ಊರು ತೀರಾ ದೂರವೇನಾಗಿರ್ಲಿಲ್ಲ. ಐದಾರು ಮೈಲಿಯ ದೂರವಷ್ಟೇ. ಆದರೆ ಮುಂಬೈಗೆ ಹೋಲಿಸಿದ್ರೆ, ಮುಂಬೈ ಬಿಡಿ ಈತ ಹಿಂದಿನ ದಿನ ನೋಡಿದ್ದ ಬೆಂಗಳೂರಿಗೆ ಹೋಲಿಸಿದ್ರೂ ಇದೂ ಸಿಕ್ಕಾಪಟ್ಟೆ ಚೀಪೇ. ಆದ್ರೆ ಈತನ ಉದ್ದಾರವಾಗಲ್ಲ ಅನ್ನೋ ಬದ್ಲು ಇನ್ನೂ ಈ ಊರು ಹಾಳು ರಿಯಲ್ ಎಸ್ಟೇಟ್ ಮಾಯೆಗೆ ಸಿಕ್ಕಿಲ್ಲ ಅನಿಸುತ್ತೆ ಪುಣ್ಯ ಎಂಬ ಭಾವನೆ ಇವನಿಗೇ ಆಶ್ಚರ್ಯವಾಗುವಂತೆ ಮೂಡಿತು. ಒಂದೆರಡು ನಿಮಿಷ ಕಳೆಯುತ್ತಿದ್ದಂತೇ ಹೊಲಗದ್ದೆಗಳ ಮೇಲೆ ಹಾಯುತ್ತಿದ್ದ ಮುಂಜಾನೆಯ ಮಧುರ ಗಾಳಿ ಬೀಸತೊಡಗಿತು. ಮುಂಜಾನೆಯ ಮಧುರ ಸೂರ್ಯ ಇವನ ಮುಖದ ಮೇಲೆ ಬೀಳುತ್ತಿದ್ದಂತೆಯೇ ಸೂರ್ಯನಿಂದ ಕಳೆಯೋ ಕತ್ತಲೆಯಂತೆ, ಕರಗೋ ಮಂಜಿನಂತೆ ಈತನಲ್ಲಿ ಹಿಂದಿನ ದಿನ ಮೂಡಿದ್ದ ಭಾವಗಳು ಕರಗುತ್ತಿದ್ದವು. ತಾನು ಊರು ತಲುಪಿದ ನಂತರ ಏನು ಮಾಡಬೇಕೆಂಬ ಧೃಢ ನಿರ್ಧಾರ ಮೂಡುತ್ತಿತ್ತು. ಈತನ ಜೇಬಿನಲ್ಲಿ ಹಾಗೇ ಉಳಿದಿದ್ದ ಹತ್ತು ರೂಪಾಯಿಗಳು ಏನೋ ನೆನಪಿಸಿಕೊಂಡು ಸಿಕ್ಕಾಪಟ್ಟೆ ನಗುತ್ತಿದ್ದವು.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ 

Wednesday, August 21, 2013

ಹೀಗೊಂದು ರಾತ್ರಿ

ಹೀಗೇ ಒಂದು ರಾತ್ರಿ. ಬೆಂಕಿಪಟ್ಟಣದಂತಹ ಬಾಡಿಗೆ ರೂಮಿನಲ್ಲೂ ಸುಖನಿದ್ರೆಯಲ್ಲಿದ್ದ ಬ್ಯಾಚುಲರ್ ಗುಂಡನಿಗೆ ಯಾರೋ ಬಾಗಿಲು ಕೆರೆದಂತಾಗಿ ದಡಕ್ಕನೆ ಎಚ್ಚರವಾಯಿತು. ಪಕ್ಕನೆ ಪಕ್ಕಕ್ಕಿದ್ದ ಲೈಟು ಹಾಕಿದರೂ ಅದು ಹತ್ತಲಿಲ್ಲ.  ಎಷ್ಟೆಷ್ಟೊತ್ತಿಗೋ ಕರೆಂಟು ತೆಗಿಯೋ ಕೆಯಿಬಿಯವರಿಗೆ ಬಯ್ಯುತ್ತಾ ಯಾರು ಅಂದ. ಶಬ್ದವಿಲ್ಲ. ಯಾರಿರಬಹುದು ಈ ನಡು ರಾತ್ರಿಯಲ್ಲಿ ಅಂದುಕೊಂಡ. ನಡುರಾತ್ರಿಯೇ ? ಗೊತ್ತಿಲ್ಲ. ಕಾಲೇಜಿಂದ ಸಂಜೆ ಸುಸ್ತಾಗಿ ಬಂದವನಿಗೆ ಹಾಗೇ ಜೊಂಪು ಹತ್ತಿತ್ತು. ಮೈಮರೆತು ಹಾಗೆಯೇ ಎಷ್ಟೊತ್ತು ಮಲಗಿದ್ದನೋ ಗೊತ್ತಿಲ್ಲ. ಈ ಬಾಗಿಲು ಕೆರೆಯೋ ಶಬ್ದದಿಂದಲೇ ದಡಕ್ಕನೆ ಎಚ್ಚರವಾಗಿ ಒಮ್ಮೆ ಗಾಬರಿಯೂ ಆಯಿತು…


ನಡುರಾತ್ರಿಯಾಗಿರದಿದ್ದರೂ ಮುಸ್ಸಂಜೆಯಲ್ಲವೆಂದು ಕಿಟಕಿಯಿಂದ ಕಾಣುತ್ತಿದ್ದ ಕಗ್ಗತ್ತಲೆಯೇ ಹೇಳುತ್ತಿತ್ತು. ಎಲ್ಲಿ ನೋಡಿದರೂ ಕಪ್ಪು. ಅಲ್ಲಲ್ಲಿ ಒಂದೊಂದು ನಕ್ಷತ್ರಗಳಂತೆ ದೀಪಗಳು. ಜೋರಾಗಿ ಬೀಳುತ್ತಿದ್ದ ಮಳೆಗೆ ಬೀದಿಯಲ್ಲೆಲ್ಲಾ ಕರೆಂಟು ಹೋಗಿರಬೇಕು. ಕಿಟಕಿಯಿಂದ ದೂರವಿದ್ದ ಮಂಚದಲ್ಲಿ ಮಲಗಿದವನಿಗೆ ಕಿಟಕಿಯಿಂದ ಮಳೆ ನೀರು ಒಳನುಗ್ಗಿ ನೆಲದ ಮೇಲೆಲ್ಲಾ ನಿಂತಿರುವುದೂ ಗೊತ್ತಾಗಿರಲಿಲ್ಲ. ಕಿಟಕಿ ಮುಚ್ಚಲು ಹೋದಾಗಲೇ ಎಲ್ಲಿಂದಲೂ ಒಮ್ಮೆ ಹೊಳೆದ ಮಿಂಚು… ತನಗೇ ಮಿಂಚು ಹೊಡೆಯಿತೇನೋ ಎಂಬ ಗಾಬರಿಯಿಂದ ಸಟ್ಟನೆ ಕೈ ಹಿಂತೆಗೆದ. ಹಾಕಲೆಂದು ಎಳೆಯುತ್ತಿದ್ದ ಕಿಟಕಿ ಇವನ ಕೈ ಹಿಂತೆಗೆಯೋ ರಭಸಕ್ಕೆ ಪಟಾರೆಂದು ಹೊಡೆದುಕೊಂಡಿತು. ಈತನದೋ, ಈತನಿಗೆ ಬಾಡಿಗೆ ಕೊಟ್ಟವರ ಪುಣ್ಯವೋ ಗೊತ್ತಿಲ್ಲ, ಒಟ್ಟಿನಲ್ಲಿ ಕಿಟಕಿಯಂತೂ ಒಡೆಯಲಿಲ್ಲ. ಅದರ ಹಿಂದೆಯೇ ತುಪಾಕಿಯ ಸದ್ದಿನಂತೆ ಗುಡುಗು. ಇವನ ಕಣ್ಣು, ಕಿವಿಗಳು ಚೇತರಿಸಿಕೊಳ್ಳುವ ವೇಳೆಗೆ ಮತ್ತೆ ಬಾಗಿಲು ಕೆರೆಯುವ ಸದ್ದು. ಬಾಗಿಲು ತೆಗೆಯಲು ಹೋದಾಗಲೇ ಧಡಕ್ಕನೆ ಕಣ್ಣು ಕೋರೈಸುವಂತಹ ಮಿಂಚು ಕಿಟಕಿಗಳಿಂದ ಇವನತ್ತಲೇ ನುಗ್ಗುತ್ತಿದೆಯೇನೋ ಎಂಬಂತೆ ಕಂಡಿತು. ಬೆನ್ನಲ್ಲೇ ಕಿವಿ ಕೆಪ್ಪಾಗಿಸುವಂತಹ ಗುಡುಗು. ಬಾಗಿಲು ತೆಗೆಯಲು ಹೋದವ ಹಾಗೇ ಒಂದು ಕ್ಷಣ ಬೆಪ್ಪಾಗಿ ನಿಂತುಕೊಂಡ.


ಏನೋ ಕಂಡ  ನಾಯಿಯೊಂದು ಊಳಿಡಹತ್ತಿತ್ತು. ಅದರ ಬೆನ್ನಲ್ಲೇ ಉಳಿದ ನಾಯಿಗಳ ಸಾಥ್ ಶುರುವಾಯ್ತು. ಗಾನಕ್ಕೆ ತಾಳ, ತಾಳಕ್ಕೆ ಮೇಳದಂತೆ ಮಧ್ಯ ಮಧ್ಯ ಬೌ ಬೌ, ಊಂಗಳು ಸಾಗಿದವು. ಅದರಲ್ಲಿ ಮುಖ್ಯಗಾಯಕ/ಗಾಯಕಿ ಯಾರೆಂಬ ಕುತೂಹಲ ಗುಂಡನಿಗೆ ಬಹಳವೇ ಮೂಡಿದರೂ ಬಾಗಿಲು ತೆರೆದು ಮಳೆಯಲ್ಲಿ ಹೊರಗೆ ಕಾಲಿಡೋ ಮನಸ್ಸು ಬರಲಿಲ್ಲ. ನಾಯಿ ಊಳಿಟ್ಟರೆ ಅದು ಯಾರನ್ನೋ ಕಂಡು ಊಳಿಡತ್ತೆ ಅಂತ ಗೆಳೆಯ ಹೇಳಿದ ಮಾತು ನೆನಪಾಯ್ತು. ಈ ಮಳೆ ರಾತ್ರೇಲಿ ಮನುಷ್ಯರು ಯಾರಪ್ಪಾ ಓಡಾಡ್ತಾರೆ ? ಅದರಲ್ಲೂ ಮನುಷ್ಯರನ್ನ ಕಂಡು ನಾಯಿ ಯಾಕೆ ಊಳಿಡುತ್ತೆ ಅನ್ನೋ ಪ್ರಶ್ನೆಗಳು ಮೂಡಿದವು.. ಅಂದರೆ ? ಊಹಿಸಿಯೇ ಭಯವಾಯ್ತು ಗುಂಡನಿಗೆ. ಕೇಳಿದ ಮೋಹಿನಿ, ಯಕ್ಷಿಣಿ, ಜಕ್ಕಿಣಿಗಳ ಕತೆಗಳೆಲ್ಲಾ ನೆನಪಾದವು. ಎಲ್ಲಾ ನಾಯಿಗಳು ಸೇರಿ ಕೂಗ್ತಿರೋದನ್ನ ನೋಡಿದ್ರೆ ಈ ಮಹಿಳಾ ಸಂಘ, ಮಕ್ಕಳ ಕ್ಲಬ್ಬುಗಳು ಇದ್ದಂಗೆ  ಯುಕ್ಷಿಣಿಗಳ ಸಂಘವೇ ಇದ್ದು ಆ ಸಂಘಕ್ಕೆ ಸಂಘವೇ ನಮ್ಮನೆಗೆ ಬಂದಿದೆಯೇನೋ ಎನಿಸಿತು .


ಅಷ್ಟಕ್ಕೂ ನಾನೇನು ಮಾಡಿದೆ ಅವಕ್ಕೆ ? ಹಿಂದಿನ ವಾರ ರಸ್ತೆ ಬದಿ ಕೂತಿದ್ದ ಜ್ಯೋತಿಷಿಯಿಂದ ಭವಿಷ್ಯ ಕೇಳಿ ದುಡ್ಡು ಕೊಡದೇ ಎಸ್ಕೇಪಾಗುವಾಗ ಆತ ಇನ್ನೊಂದು ವಾರದಲ್ಲಿ ನಿನ್ನ ಗ್ರಹಚಾರ ಹಾಳಾಗೋಗ್ಲಿ, ಭೂತ ಮೆತ್ಕಳ್ಲಿ ಎಂದಿದ್ದು ನೆನಪಾಯ್ತು. ಬೇಡ ಬೇಡವೆಂದರೂ ಮಧ್ಯರಾತ್ರಿ ಭೂತದ ಸಿನಿಮಾಕ್ಕೆ ಹೋಗಿ ಅಲ್ಲಿ ಭೂತಗಳೆಲ್ಲಾ ಕಾಮಿಡಿ ಅಂತ ಸಹ ಪ್ರೇಕ್ಷಕರು ಬಯ್ಯುವಷ್ಟು ಕಾಮಿಡಿ ಮಾಡಿ ನಕ್ಕಿದ್ದು ನೆನಪಾಯ್ತು.  ಆ ಭೂತಗಳೆಲ್ಲಾ ತಮಗಾದ ಅವಮಾನದ ಸೇಡು ತೀರಿಸಿಕೊಳ್ಳಲೇ ಬಂದಿದೆಯೇನೋ ಎನಿಸತೊಡಗಿತು.. ಬೆಳಕಿಗಾಗಿ ಮೊಬೈಲು ಹುಡುಕಿದರೆ ಮೊಬೈಲೂ ಸಿಕ್ಕಲಿಲ್ಲ. ಸಂಜೆ ಬಂದವನು ಎಲ್ಲಿ ಒಗೆದಿದ್ದನೋ ಗೊತ್ತಿಲ್ಲ… ಮೊದಲೇ ಕತ್ತಲು, ಮಳೆ ಬೇರೆ. ಏನಾದರಾಗಲಿ ಬಾಗಿಲು ತೆರೆಯಲೇ ಬಾರದು ಎಂದು ಮತ್ತೆ ಬಂದು ಹಾಸಿಗೆಗೆ ಒರಗಿದ. ಬಾಗಿಲು ಕೆರೆಯೋದು ಕಮ್ಮಿಯಾಗೋ ತರಾನೆ ಕಾಣ್ತಿರಲಿಲ್ಲ. ಇದ್ದಕ್ಕಿದ್ದಂಗೆ ಆ ಸದ್ದೂ ನಿಂತು ಹೋಯ್ತು. ಆದರೆ ಗೋಡೆಯಲ್ಲಿ ಎಲ್ಲೋ ಇದ್ದ ಹಲ್ಲಿ ಲೊಚಗುಟ್ಟತೊಡಗಿತು. ತಗಾ, ಆ ಸಂಘದವರೆಲ್ಲಾ ಹಲ್ಲಿಯಾಗಿ ಒಳನುಗ್ಗೇಬಿಟ್ಟರು ಎಂದುಕೊಂಡ. ಆ ಸಂಘದಿಂದ ಮುಂದೆ ತನಗಾಗಬಹುದಾದ ಘೋರಾತಿಘೋರ ಶಿಕ್ಷೆಗಳ ನೆನೆಯುತ್ತಲೇ ಎಷ್ಟೋ ಹೊತ್ತು ನಿದ್ದೆಬಾರದೇ ಎದ್ದು ಕುಳಿತಿದ್ದ. ಹೀಗೆ ಎಷ್ಟೋ ಸಮಯವಾಯಿತು. ಕಣ್ಣುಗಳನ್ನು ಯಾರೋ ಹಗ್ಗ ಹಾಕಿ ಎಳೆದಂತಾಗತೊಡಗಿತು… ಹಾಗೇ ಆ ಕಣ್ಣುಗಳು ಮುಚ್ಚಿಕೊಂಡವು.
****
ಮತ್ಯಾರೋ ಬಾಗಿಲು ಬಡಿದ ಶಬ್ದ. ಕಣ್ಣು ಹೊರಳಿಸಿ ನೋಡಿದರೆ ಬೆಳಗಾಗಿ ಹೋಗಿದೆ. ಬೆಳಗಾಯ್ತು ಅಂದರೆ ಬಾಗಿಲು ಬಡಿಯುತ್ತಿರೋದು ಮೋಹಿನಿ ಸಂಘಟನೆಯಂತೂ ಅಲ್ಲವೇ ಅಲ್ಲ ಎಂಬ ಧೈರ್ಯ ಬಂದರೂ ಯಾಕೋ ಅಳುಕು. ಅಷ್ಟರಲ್ಲಿ ಏ ಗುಂಡು…ಬಾಗಿಲು ತೆರೀರಿ. ನಾನು ಪಕ್ಕದ ಮನೆ ಸುಬ್ಬಮ್ಮ. ನಿನ್ನೆ ತಲೆನೋವು ಅಂತ ನಮ್ಮನೆಯಿಂದ ತಂದ ಝಂಡೂಬಾಂಬ್ ವಾಪಸ್ ಕೊಡೋ ಆಲೋಚನೆ ಇದ್ಯೋ ಇಲ್ವೋ ಅಂತ ಬಯ್ತಿದ್ದ ಹೆಣ್ಣಿನ ಧ್ವನಿ ಕೇಳಿದಾಗ ಹೋದ ಜೀವ ಬಂದ ಹಾಗಾಯ್ತು. ನಡುಗುವ ಕೈಯಿಂದಲೇ ಬಾಗಿಲು ತೆರೆದ. ಅದು ಅದು, ರಾತ್ರಿ … ಬಾಗಿಲು ಎಂದು ತೊದಲತೊಡಗಿದ. ಬಾಗಿಲತ್ತ, ಸುತ್ತಮುತ್ತ ನೋಡಿದ ಸುಬ್ಬಮ್ಮನವರು ಒಮ್ಮೆ ಬೇಜಾರಿನಿಂದ ತಲೆ ಅಲ್ಲಾಡಿಸಿದರು. ತೋ, ನಿನ್ನೆ ನಮ್ಮ ನಾಯಿ ಪಾಂಡು ಇಲ್ಲಿಗೆ ಬಂದಿದ್ದನಾ ? ಮಳೆಗೆ ಚಳಿಯಾಗಿ ಒಳಬರೋಕೆ ಅಂತ ಬಾಗಿಲು ಕೆರೆದಿದ್ದಲ್ಲದೇ ಹೊರಗೆ ಹೊಲಸೂ ಮಾಡಿ ಹೋಗಿದ್ದಾನಾ? ಕರ್ಮ , ಕ್ಲೀನು ಮಾಡ್ತೀನಿ ತಡಿ ಅಂತ ನೀರು ತರೋಕೆ ಇವನ ರೂಮೊಳಗೆ ನುಗ್ಗಿದ್ರು. ಬಾಗಿಲಲ್ಲೇ ಹಿಂದಿನ ರಾತ್ರೆ ನಡೆದಿರಬಹುದಾದ್ದನ್ನೂ, ತಾನು ಊಹಿಸಿದ್ದನ್ನೂ ನೆನೆಸಿ ನಾಚುತ್ತಾ ನಿಂತ ಗುಂಡ ಬಾಗಿಲಿಗೊರಗಿ ಹಾಗೇ ನಿಂತಿದ್ದ…
ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ :-) 

Tuesday, August 20, 2013

ತಾರೆಯ ಪ್ರೀತಿ..

ಸ್ತ್ರೀ ಅಂದರೆ ಅಷ್ಟೇ ಸಾಕೆ .. ಹಾಡಿನ ಧಾಟಿಯಲ್ಲಿ ಹೊಳೆದ ಕೆಲವು ಸಾಲುಗಳು

ತಾರೆಯ ಪ್ರೀತಿ..
**********************
ಭಾವನೆಗಳ ಭೂಮಿಯಲ್ಲಿ,
ತಾನೇ ತಾನೆಂಬ ರೀತಿಯಲ್ಲಿ
ಮೂಡಿರುವ ಮೊಗ್ಗಿಗೆ ಹೆಸರು ಬೇಕೆ ?
ಪ್ರೀತಿ ಎಂದರೆ ಅಷ್ಟೆ ಸಾಕೆ ?

ಬಾಳಂತ ಕಾರಿರುಳ ಕಪ್ಪಿನಲ್ಲಿ
ಮಿನುಗೋ ತಾರೆಯ ಬೆಳಕೇ ನಿಶೆಗಾಭರಣ
ಹೊತ್ತು ಮುಳುಗೋ ಹೊತ್ತು ಬೆಳಗೋ ಮುತ್ತು
ಮಿನುಗಿದ ಬೆಳಕ ಸವಿಯು ನಂದೇ ಸ್ವತ್ತು !

ತಾರೆಗಳ ತೋಟದ ಕೂಲಿ ನಾನು
ನಿನ್ನೊಂದು ಕಣ್ಣೋಟಕೆ ಸೋತೆ
ನಿನ್ನ ನಸುನಗುವಲಿ ನನ್ನೇ ಮರೆತೆ
ಮಿಂಚೋ ಕಲೆಯನ್ನ ಅರಿಯೆ ನಾನು
ಒಳಸಂಚು,ದ್ವೇಷಗಳ ಅರಿಯದವನು
ನನ್ನ ಮನ ಕದ್ದಿರುವ ಚೆಲುವೆ
ಮಿನುಮಿನುಗಿ ಕನಸಲ್ಲೂ ಬರುವೆ

ಹಾಲ ಬಿಳುಪಿನ ನಡುವೆ ಕಪ್ಪ ಹುಡುಕಿ
ಹೊಳೆವ ಶಶಿಯ ಮೊಗದಿ ಮಸಿಯ ಕೆದಕಿ
ಪ್ರೀತಿ ಹಣಿಯಲೆಂದೇ ಹುಡುಕಬೇಕೆ ?
ನೀನ್ಯಾರೋ ತಿಳಿದಿಲ್ಲ ಎನ್ನೇ ಕೂಸೇ
ಭಿಕ್ಷೆಯೆಂದೇ ನೀಡಿದನ,ಕೊನೆಯ ಆಸೆ
ಪ್ರೀತಿಗೆ ಸಿರಿತನದ ಹೊನಲೇ ಬೇಕೇ?
ಬಡತನದ ಕೋಪ ನಮ್ಮ ಪ್ರೀತಿಗೇಕೆ ?

Saturday, August 17, 2013

ನೂರು ಕನಸುಗಳ ನಡುವೆ

ಯಾಕೋ ಬೇಸರ. ಯಾಕೆ ? ಗೊತ್ತಿಲ್ಲ.
ಗೆಳೆಯರೆಲ್ಲಾ ಊರು ಸೇರಿ ನಾನೊಬ್ಬ ಇಲ್ಲುಳಿದಿದ್ದಕ್ಕಾ ? ಗೊತ್ತಿಲ್ಲ
ಗೊತ್ತು ಗುರಿಯಿಲ್ಲದ ಕುರಿಮಂದೆಯಂತಹ ಬಾಳಿಗಾ? ಗೊತ್ತಿಲ್ಲ
ಏನೋ ಸಾಧಿಸಬೇಕೆಂಬ ಹಟ. ಏನು ? ಗೊತ್ತಿಲ್ಲ
ಏನಾದರೂ ದೊಡ್ಡದು, ಯಾರೂ ಮಾಡಿರದಂತದು
ಆದರೆ ಮಾನವ ಮಾಡಬಹುದಾದದ್ದೆಲ್ಲವನ್ನೂ ಮಾಡಾಗಿದೆಯಲ್ಲಾ
ಏನಿಹುದು ಹೊಸದು, ಯಾರೂ ಮಾಡದಂತಹುದು ?

ನೂರಾರು ಕನಸುಗಳ ಮಧ್ಯೆ ನಿತ್ಯ ತಾಕಲಾಟ
ಅದೋ ಇದೋ, ಮತ್ಯಾವುದೋ ಎಂಬ ಹುಡುಕಾಟ
ನಾನಲ್ಲದು ನಾನಾಗಲು ಪ್ರಯತ್ನಿಸೋ ಬದಲು ನಾನೇ ನಾನಾಗಲು ಕಾದಾಟ
ನಾನ್ಯಾರು ? ನಾನೆಂಬುದು ಇಹುದೇ ?
ನಾನೆಂಬುದು ನನ್ನ ಅಪ್ಪ-ಅಮ್ಮಂದಿರ ಪಡಿಯಚ್ಚೇ ಅಲ್ಲವೇ ?
ಹುಟ್ಟಿನಿಂದ ಇಂದಿನವರೆಗೆ ಛಾಯೆಯಲ್ಲೇ ಬೆಳೆದಿದ್ದು
ಯಾವುದೋ ಮಿನುಗು ತಾರೆಯಿಂದ ಚಿಮ್ಮಿದ ಬೆಳಕೇ ನಮ್ಮ ಬಿಳುಪು
ಸ್ವಂತದ್ದೇನಿದೆ ಇಲ್ಲಿ ? ಬೀಗಲು ನಾನೆಂಬ ಹಮ್ಮು?

ಯಾಕೋ ಗೊತ್ತಿಲ್ಲ. ಕಂಡ ನೂರಾರು ಕನಸುಗಳು ಹೊತ್ತಿ ಉರಿದಂತೆ ಧಗೆ
ಜೀವನ ಪಯಣದಲ್ಲಿ ಕಳೆದ ನೂರಾರು ಗೆಳೆತನಗಳ ಬೇಗೆ
ಎಲ್ಲಾ ನಮ್ಮ ಜೊತೆಯೇ ಇರಲೆಂಬ ಬಯಕೆ ಸರಿಯೇ ? ಗೊತ್ತಿಲ್ಲ
ದೂರಾದರೂ ನೆನಪಾದರೂ ಉಳಿಯಲೆಂಬ ಭಾವವೂ ತಪ್ಪೇ ? ಗೊತ್ತಿಲ್ಲ
ನಾನು ನೆನಪಿಡುವ ಎಲ್ಲರಿಗೂ ನಾ ನೆನಪಿರಲೆಂಬ ಭಾವವೇ ಎಲ್ಲಕ್ಕೂ ಮೂಲವೇ ? ಗೊತ್ತಿಲ್ಲ
ಯಾಕೋ ಕಾಣೆ. ಮತ್ತೆ ಬೇಸರ
ಎಲ್ಲಾ ಊರು ಸೇರಲು ನಾನೊಬ್ಬ ಇಲ್ಲುಳಿಯಲೋ, ಗೊತ್ತಿಲ್ಲ

ಅಲ್ಪ ಓದಿನ ನಂತರ ಪರ ಊರ ಹುಡುಕಿ ಹೊಟ್ಟೆಪಾಡು
ಯಾಕೋ ಎಲ್ಲಾ ಇದ್ದೂ ಅನಾಥನಾದ ಭಾವ
ನಮ್ಮದಲ್ಲದ ನಾಡಿನಲ್ಲಿ ಮನಸ್ಸಿಲ್ಲದಿದ್ದರೂ ಬಿಡದ ಹೊಟ್ಟೆ
ಊರಲ್ಲಿ ನಮ್ಮನ್ನೇ ನಂಬಿರೋ ಜೀವಗಳು.
ಯಾರಾದರೂ ನಮ್ಮನ್ನೇ ನಂಬಿ ಇದ್ದಾರಾ ? ಗೊತ್ತಿಲ್ಲ
ಇಷ್ಟು ವರ್ಷ ಹೊರೆದ ಜನ್ಮದಾತರು ಈಗ ಇದ್ದಕ್ಕಿದ್ದಂತೆ ನಿತ್ರಾಣರಾದರಾ ?
ಎಂದೂ ಇಲ್ಲದ ಜವಾಬ್ದಾರಿಯ ಹೊರೆ ಈಗ ಇದ್ದಕ್ಕಿದ್ದಂತೆ ಹೆಗಲ ಮೇಲೆ ಕೂತದ್ದಾದರೂ ಹೇಗೆ ?
ಮಾಡಲಾಗದ ಕೆಲಸಗಳಿಗೆ, ನನಸಾಗದ ಕನಸುಗಳಿಗೆ ಈ ಹೊರೆಯ ನೆನಪ ನೆಪವೇ ? ಗೊತ್ತಿಲ್ಲ

ಹಾರೋ ಚಿಟ್ಟೆಯಾಗಿದ್ದ ಭಾವಗಳ ಕಟ್ಟಿಹಾಕಿದ್ದು ಯಾರು ? ಗೊತ್ತಿಲ್ಲ
ಮರೆಯಾದ ಗೆಳೆಯರೇ, ಬೆನ್ನುಬಿದ್ದ(?) ಜವಾಬ್ದಾರಿಗಳೇ, ಅಥವಾ ನಾವೇ ?
ಏನಿಲ್ಲವೆಂದುಕೊಂಡರೆ ಏನೂ ಇಲ್ಲದ ಸುಖೀ ಬಾಳು
ನೂರಾರು ಆಸೆಗಳ ಆಶಾಗೋಪುರ ಕಟ್ಟಿದರೆ ನಿತ್ಯ ಗೋಳು
ಪ್ರತಿದಿನವೂ ಕುಸಿಯೋ ಗೋಪುರದ ಕಲ್ಲುಗಳಿಗೆ ಕಾರಣ ?
ಸತ್ಯದ ಬುನಾದಿಯ ಬದಲು ಅತಿ ಬಲದ ಹಮ್ಮಿನ ಮೇಲೆ ಕಟ್ಟಿದ್ದೇ ? ಗೊತ್ತಿಲ್ಲ

ಕಾಣದ ನೂರು ಪ್ರಶ್ನೆಗಳಿಗೆ ಉತ್ತರ ಹುಡುಕೋ ಬದಲು
ಕಂಡ ಇಂದಿನ ಸತ್ಯಕ್ಕೆ ತಲೆಬಾಗುವುದೇ ಜೀವನವೇ ?
ಇಂದೊಂದೇ ಸತ್ಯವಾದರೇ ನಾಳೆಯ ಕನಸುಗಳ ಗತಿ ?
ಕನಸುಗಳೇ ಇಲ್ಲದ ಜೀವನವೊಂದು ಜೀವನವೇ ?
ಕನಸುಗಳು, ಭಾವಗಳು , ನಿರೀಕ್ಷೆಗಳು ತಪ್ಪಲ್ಲ
ಅವುಗಳಿಗಾಗಿ ಪಟ್ಟ ಶ್ರಮವೂ ತಪ್ಪಲ್ಲ
ಆದರವು ಈಡೇರದ ನೋವಿಗೆ ನಿತ್ಯ ಕೊರಗಾಟ ತಪ್ಪು
ನಾನೆಂಬ ಅಸ್ಮಿತೆಯ ಹುಡುಕಾಟದಲ್ಲಿ,
ನಾಳೆಯೆಂಬ ನಿರೀಕ್ಷೆಯಲ್ಲಿ ಇಂದೆಂಬ ವಾಸ್ತವದ ನಿರಾಕರಣೆ ತಪ್ಪು
ಉತ್ತರದ ಹುಡುಕಾಟವೇ ತಪ್ಪೇ? ಗೊತ್ತಿಲ್ಲ. ಸದ್ಯಕ್ಕಂತೂ ಶಾಂತಿ..


Friday, August 9, 2013

ಇಂಜಿನಿಯರಿಂಗ್ ಜೀವನದ ಮೊದಲ ದಿನ..


ವಿದ್ಯಾರ್ಥಿಜೀವನದಲ್ಲಿ ಪಿಯುಸಿ ಒಂದು ಮಹತ್ವದ ಘಟ್ಟ. ವಿಜ್ನಾನ ವಿಭಾಗದವರು ಮೂಲವಿಜ್ನಾನಕ್ಕೋ ಅಥವಾ ಡಾಕ್ಟರೋ ಇಂಜಿನಿಯರೋ ಎಂಬ ಆಯ್ಕೆಯ ಕವಲು ದಾರಿಯಲ್ಲಿ ಬಂದು ನಿಂತ ದಿನಗಳು. ಕೆಲವರದು ಇದೇ ಆಗಬೇಕೆಂಬ ದೃಢ ನಿರ್ಧಾರವಿದ್ದರೆ, ಬಹುತೇಕರಿಗೆ ಎತ್ತ ಹೋಗಲೆಂಬ ಗೊಂದಲ. ಮನೆಯವರು, ನೆರೆಯವರ ನೂರೆಂಟು ಮಾತುಗಳ ಮಧ್ಯೆ ಯಾತಕ್ಕೂ ಇರಲಿ ಎಂದು ಸಿಇಟಿಯನ್ನು ಬರೆವವರೂ ಹಲವು ಮಂದಿ. ಪಿಯುಸಿ ಪರೀಕ್ಷೆಯ ಮತ್ತು ಸಿಇಟಿಯ ಫಲಿತಾಂಶ ಬರೋವರಿಗೆ ಯಾಕೋ ಸಿಕ್ಕಾಪಟ್ಟೆ ಟೆನ್ಶನ್ನು. ಬಂದ ಮೇಲೂ ತಮ್ಮ ರ್ಯಾಂಕಿಗೆ ಯಾವ ಕಾಲೇಜು ಸಿಗಬಹುದೆಂಬ, ಯಾವ ಕಾಲೇಜಿನ ಯಾವ ಬ್ರಾಂಚ್ ಚೆನ್ನಾಗಿದೆ ಎಂಬ ಹುಡುಕಾಟ. ಸಿಇಟಿ ಕೌನ್ಸಿಲಿಂಗಿನ ಸೀಟು ಪಡೆಯೋ ಕ್ಷಣದವರೆಗೂ ಈ ಹುಡುಕಾಟ, ಚಿಂತೆಗಳು ಇದ್ದಿದ್ದೇ. ತಮಗೆ ಒಳ್ಳೆ ಕಾಲೇಜು ಸಿಗತ್ತೆ ಬಿಡು ಎಂಬ ಭರವಸೆಯಿದ್ದರೂ ಸಿಗೋವರೆಗೆ ಏನೋ ಅಳುಕು. ಯಾವುದೋ ಒಂದು ಕಾಲೇಜು ಪಡೆದ ಮೇಲೆ ಸ್ವಲ್ಪ ನಿರಾಳ. ಇಷ್ಟಪಟ್ಟದ್ದು ಸಿಗದವರಿಗೆ ಕ್ಯಾಷುವಲ್ ವೆಕೆನ್ಸಿ ಸುತ್ತಿಗಾಗಿ ಕಾದು ಅಲ್ಲಿ ಮತ್ತೆ ಪ್ರಯತ್ನಿಸೋ ಆಸೆ. ಇವೆರಡರಲ್ಲೂ ತಮಗೆ ಬೇಕಾದ ಕಾಲೇಜಿನ ಬೇಕಾದ ಬ್ರಾಂಚ್ ಸಿಗದೆಂಬ ಲೆಕ್ಕಾಚಾರದ ಸ್ವಲ್ಪ ಸ್ಥಿತಿವಂತರ ಮಕ್ಕಳಾದರೆ ಕಾಮೆಡ್ ಕೆ ಅಥವಾ ಮ್ಯಾನೇಜ್ ಮೆಂಟ್ ಕೋಟಾದಿಂದ ಪ್ರವೇಶ. ಅಂತೂ ಹೇಗೂ ಕಾಲೇಜು ಪ್ರವೇಶ ಗಿಟ್ಟಿಸೋ ಹೊತ್ತಿಗೆ ಹಳ್ಳಿ ಕಡೆ ಹುಡುಗ/ಹುಡುಗಿರಿಗಲ್ಲದೇ ಅವರ ಪೋಷಕರಿಗೂ ಬೆಂಗಳೂರು ಯಾತ್ರೆ ಉಸ್ಸಪ್ಪಾ ಎನಿಸಿಬಿಡುತ್ತದೆ. ಸರಿ ಹೇಗೋ ಕಾಲೇಜಿಗೆ ಪ್ರವೇಶ ಗಿಟ್ಟಿಸಾಯ್ತು. ಮುಂದೆ ? ಅದೇ ನಮ್ಮ ಇಂದಿನ ಲೇಖನದ ವಿಷಯ.

ಕೌನ್ಸಿಲಿಂಗ್ ಮುಗಿದು ಕಾಲೇಜು ಶುರುವಾಗೋ ನಡುವೆ ಸುಮಾರು ಎರಡು ತಿಂಗಳ ಅಂತರ. ಸೀಟು ಸಿಕ್ಕಾಗ ಇದ್ದ ಟೆನ್ನನ್ನುಗಳೆಲ್ಲಾ ಮಾಯವಾಗಿ ಅದೇನೋ ಆನಂದ. ನೆಂಟರ ಮನೆಗಳಿಗೆ ಹೋಗೋದೋ, ಚೆನ್ನಾಗಿ ತಿಂದುಂಡು ಆಟ ಆಡೋದೋ, ಟ್ರಿಪ್ ಹೋಗೋದೋ.. ಹೀಗೆ ಸ್ವಲ್ಪ ಆರಾಮಾಗಿರಲು ಬಯಸುತ್ತಾರೆ ಸುಮಾರು ಜನ. ಪಿಯುಸಿಯಲ್ಲಿ ಓದಿನಲ್ಲೇ ಮುಳುಗಿದವರಿಗೆ ಇಂಜಿನಿಯರಿಂಗ್ ಶುರುವಾಗ್ತಿದ್ದಂಗೆ ಓದೋದು ಇದ್ದಿದ್ದೇ . ಹಾಗಾಗಿ ಈಗ ಆರಾಮಿದ್ದಷ್ಟು ಇದ್ದುಬಿಡೋಣ ಎಂಬೋದು ಅವರ ನಿಲುವು. ಒಂದು ಲೆಕ್ಕದಲ್ಲಿ ಅದು ಸರಿಯೂ ಹೌದು. ಇನ್ನು ಕೆಲವರಿಗೆ ಮೊದಲು ಒಂದೆರಡು ದಿನ ಏನೂ ಅನಿಸದಿದ್ದರೂ ಇಂಜಿನಿಯರಿಂಗ ಕ್ಲಾಸುಗಳು ಶುರುವಾಗೋ ನಡುವಿನ ಈ  ಅಂತರದಲ್ಲಿ ಏನು ಮಾಡಬೇಕು , ಮಾಡಬಾರದೆಂಬ ಯೋಚನೆ ನಿಧಾನವಾಗಿ ಕಾಡೋಕೆ ಶುರು ಆಗತ್ತೆ. ಇಂಜಿನಿಯರಿಂಗಿನಲ್ಲಿ ಯಾವ ಬ್ರಾಂಚ್ ತಗೊಂಡರೂ ಮೊದಲೆರಡು ಸೆಮಿಸ್ಟರ್ ಎಲ್ಲರಿಗೂ ಒಂದೇ. ಫಿಸಿಕ್ಸ್ ಸೈಕಲ್, ಕೆಮಿಸ್ಟ್ರಿ ಸೈಕಲ್ ಎಂದು ಎರಡು ಭಾಗ. ಕೆಲವರಿಗೆ ಮೊದಲ ಸೆಮ್ಮಿನಲ್ಲಿ ಫಿಸಿಕ್ಸ್ ಸೈಕಲ್ ಶುರುವಾದ್ರೆ ಕೆಲವರಿಗೆ ಕೆಮೆಸ್ಟ್ರಿ ಸೈಕಲ್. ಮೊದಲ ಸೆಮ್ಮಾದ ನಂತರ ಮುಂಚೆ ಓದದ ಮತ್ತೊಂದು ಸೈಕಲ್ಲಿನ್ನೊಂದಿಗೆ ಬದಲಾವಣೆ. ಮತ್ತೆ ಮೊದಲ ನಾಲ್ಕು ಸೆಮಿಸ್ಟರ್ರಿನ್ನಲ್ಲೂ ಗಣಿತವೂ ಎಲ್ಲಾ ಬ್ರಾಂಚುಗಳಿಗೂ ಕಾಮನ್ನಾಗಿರೋ ವಿಷಯ. ಈಗ ಕೆಲವು ಕಾಲೆಜುಗಳಲ್ಲಿ ಫಸ್ಟು ಶಿಪ್ಟು, ಸೆಕೆಂಡ್ ಶಿಫ್ಟ ಅಂತ ತರಗತಿಗಳು ನಡೆಯುತ್ತಂತೆ.... ಹೀಗೆ ಕೆಲವಷ್ಟು ವಿಷಯಗಳನ್ನು ತಮ್ಮ ಸೀನಿಯರ್ಗಳಿಂದಲೋ , ನೆಂಟರಿಂದಲೋ ಕಲೆ ಹಾಕಿದ ಈ ಹುಡುಗರು ಆಗಲೇ ಅದರ ಕನಸು ಕಾಣತೊಡಗುತ್ತಾರೆ. ಪಿಯುಸಿ ವಿಜ್ನಾನ ವಿಭಾಗದಲ್ಲಿ ಕಂಪ್ಯೂಟರ್ ಬದಲು ಜೀವಶಾಸ್ತ್ರ, ಅರ್ಥಶಾಸ್ತ್ರವನ್ನು ಓದಿದ ವಿದ್ಯಾರ್ಥಿಗಳಿಗೆ "ಏ, ಇಂಜಿನಿಯರಿಂಗಲ್ಲಿ ಕಂಪ್ಯೂಟರ್ ಸಬ್ಜೆಕ್ಟುಗಳಿರುತ್ತೆ ಕಣೋ. ಹಾಗಾಗಿ ಪಿಯುಸಿಯಲ್ಲೆಂತೂ ಅದನ್ನೋದದ ನಿನಗೆ ಅದು ಕಷ್ಟವಾಗಿಬಿಡಬಹುದು " ಅಂತ ಹೆದರಿಸೋರೂ ಸಿಕ್ಕಬಹುದು. ಈ ಕಷ್ಟ ತಪ್ಪಿಸಿಕೊಳ್ಳೋ ಮುಂಜಾಗ್ರತೆ ಕ್ರಮವಾಗಿ ಬೇಸಿಕ್, ಸಿ ಪ್ರೋಗ್ರಾಮಿಂಗ್ ಹೀಗೆ ಕಂಪ್ಯೂಟರ್ ಕ್ಲಾಸಿಗೆ ಸೇರಿ ರಜೆಯ ಸದುಪಯೋಗ ಮಾಡ್ಕೊಳ್ಳೋಣ ಎನ್ನೋ ವಿದ್ಯಾರ್ಥಿಗಳಿದ್ದಂತೆಯೇ ಇಂಗ್ಲೀಷೆಂದರೆ ಸ್ವಲ್ಪ ಅಳುಕಿನ ಹಳ್ಳಿ ಭಾಗದ ವಿದ್ಯಾರ್ಥಿಗಳು ಸ್ಪೋಕನ್ ಇಂಗ್ಲೀಷ್ ಕ್ಲಾಸಿಗೆ ಸೇರೋದೂ ಉಂಟು.ಈ ಎಲ್ಲಾ ಕ್ಲಾಸುಗಳು ಇಂಜಿನರಿಂಗಿಗೆ ಎಷ್ಟರಮಟ್ಟಿಗೆ ಸಹಕಾರಿ ಎಂಬುದು ಬೇರೆ ಮಾತು ಬಿಡಿ.

ಸರಿ, ಅಂತೂ ರಜೆಯ ನಂತರ ಕಾಲೇಜಿನ ಆರಂಭ. ಇಂಜಿನಿಯರಿಂಗ್ ಜೀವನದ ಮೊದಲ ದಿನ.ಕಾಲೇಜಲ್ಲೊಂದು ಸಮಾರಂಭ. ಪೋಷಕರನ್ನೂ, ವಿದ್ಯಾರ್ಥಿಗಳನ್ನೂ ಒಂದು ಕಡೆ ಕುಳ್ಳಿರಿಸಿ ಕಾಲೇಜಿನ ಪ್ರಾಂಶುಪಾಲರಿಂದ , ಕಾಲೇಜುಸಮಿತಿಯವರ ತನಕ ಎಲ್ಲರ ಭಾಷಣ. ತಮ್ಮ ಕಾಲೇಜಲ್ಲಿ ಓದಿದವರಿಗೆ ಇಂತಿಂತ ವರ್ಷ ಇಂತಿಷ್ಟು ಕೆಲಸ(ಕ್ಯಾಂಪಸ್ ಇಂಟರ್ವ್ಯೂ) ಆಯಿತು, ತಮ್ಮ ಕಾಲೇಜವರು ಇಂತಿಂತ ರಾಜ್ಯ, ರಾಷ್ಟ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.. ಹಾಗೆ ಹೀಗೆ ಎಂಬ ವಿವರಣೆ. ಅಲ್ಲೇ ಪಕ್ಕದಲ್ಲಿ ಶಿಕ್ಷಣ ಸಾಲ ಕೊಡಲು ಬಂದು ಸ್ಟಾಲು ಹಾಕಿರೋ ಬ್ಯಾಂಕುಗಳು, ಝಗಮಗಿಸೋ ಬಸ್ಸುಗಳು , ಸುಸಜ್ಜಿತ ಲೈಬ್ರರಿ.. ಹೀಗೆ ಎಲ್ಲಾ ಫಳಫಳ. ಕೊನೆಗೆ ಆಯಾ ಬ್ರಾಂಚಿಗೆ ಸೇರಿದವರನ್ನು ಬ್ರಾಂಚನ್ನು ತೋರಿಸಲು, ಕಾಲೇಜಿನ ಸುತ್ತೊಂದು ರೌಂಡು ಎಂದು ಕರೆದೊಯ್ಯಲಾಗುತ್ತದೆ. ಇಂಜಿನಿಯರಿಂಗ್ ಕಾಲೇಜಿನ ದೊಡ್ಡ ದೊಡ್ಡ ಬಿಲ್ಡಿಂಗುಗಳನ್ನು, ಲ್ಯಾಬುಗಳನ್ನೂ, ಗ್ರಂಥಾಲಯ, ಕ್ಲಾಸ್ ರೂಂ, ಜಿಮ್, ಮೈದಾನಗಳನ್ನು ಮೊದಲ ಸಲ ನೊಡಿದಾಗ.. ವಾ,, ಕಾಲೇಜೆಂದರೆ ಹೀಗಿರಬೇಕು ಅನಿಸಿಬಿಡತ್ತೆ. ಮಕ್ಕಳೊಂದಿಗೆ ಕಾಲೇಜಿಗೆ ಬಂದ ಪೋಷಕರಲ್ಲನೇಕರಿಗೆ ಕಣ್ಣಂಚಿನಲ್ಲಿ ನೀರು. ತಮ್ಮ ಮಗ/ಮಗಳು ಜೀವನದಲ್ಲಿ ಒಂದು ದಾರಿಗೆ ಬರುತ್ತಾರೆಂಬ ಭರವಸೆ ಕೆಲವರಿಗಾದರೆ ತಮಗಾಗದ್ದನ್ನು ,ಕೆಲವರಿಗೆ ತಮ್ಮಿಂದಾಗದ ತಮ್ಮ ಕನಸನ್ನು ತಮ್ಮ ಮಕ್ಕಳಾದರೂ ಈಡೇರಿಸೋ ಹಂತಕ್ಕೆ ಬಂದರೆಂಬ ಆನಂದ ಭಾಷ್ಪ. 




ಮೊದಲ ದಿನದಲ್ಲಿ ಕಾಲೇಜು ದರ್ಶನ ಆಯ್ತು. ಯಾವ ಬ್ರಾಂಚಿಗೆ, ಯಾವ ಕ್ಲಾಸು ರೂಮೆಂದು ತಿಳಿದೂ ಆಯ್ತು. ಸರಿ, ಮಾರನೇ ದಿನದಿಂದ ಕಾಲೇಜು ಶುರು. ಕಾಲೇಜು ಅಥವಾ ಅಲ್ಲೇ ಸಮೀಪದ ಇನ್ಯಾವದೋ ಹಾಸ್ಟೆಲ್ಲಿಗೆ ಸೇರಿದವರಾದರೆ ಅಲ್ಲಿ ಲಗೇಜು ಬಿಚ್ಚೋದ್ರಲ್ಲಿ ನೆಂಟರ ಮನೆಯಲ್ಲಿ ಇದ್ದು ಓದೋ ಪ್ಲಾನಿರೋರಿಗೆ ಅಲ್ಲಿನ ಕುಶಲ ಸಮಾಲೋಚನೆಯಲ್ಲಿ ದಿನ ಕಳೆದೇ ಹೋಗುತ್ತೆ. ಸರಿ. ಮಾರನೇ ದಿನ ಬೆಳಗಾಯ್ತು. ಕಾಲೇಜಿಗೆ ಹೋಗೋದು ಹೇಗೆ ? ಸುಮಾರಷ್ಟು ಕಾಲೇಜುಗಳಲ್ಲಿ ಕಾಲೇಜು ಬಸ್ಸಿನ ಫೀಜನ್ನೂ ಸೇರಿಸಿ ಫೀಜು ಕಟ್ಟಿಸಿಕೊಳ್ಳುತ್ತಾರೆ. ಹಾಗಾಗಿ ಯಾವ್ಯಾವ ಏರಿಯಾಗಳಿಗೆ ಯಾವ ಹೆಸರಿನ /ನಂಬರಿನ   ಬಸ್ಸು ಎಷ್ಟೆಟ್ಟು ಹೊತ್ತಿಗೆ ಬರುತ್ತೆ? ಎಲ್ಲೆಲ್ಲಿ ಸ್ಟಾಪು ಎಂಬ ಮಾಹಿತಿಯನ್ನೂ ಮೊದಲ ದಿನವೇ ಕೊಟ್ಟಿರುತ್ತಾರೆ. ಅದರ ಪ್ರಕಾರ ಬಸ್ಸು ಹತ್ತಿ ಕಾಲೇಜಿನಲ್ಲಿ ತಮ್ಮ ಕ್ಲಾಸು ರೂಂ ಹುಡುಕಿ ಅಲ್ಲೊಂದು ಬೆಂಚು ಹಿಡಿಯೋದ್ರಲ್ಲೇ ಕೆಲವರು ಪರಿಚಯವಾಗಿರ್ತಾರೆ. ನಿಧಾನವಾಗಿ ಪರಿಚಯ ಸ್ನೇಹವಾಗಿ ಬದಲಾಗುತ್ತೆ.

ಎರಡನೇ ದಿನವೇ ಎಲ್ಲ ತರಗತಿಗಳು ಇಲ್ಲದಿದ್ದರೂ ನಿಧಾನವಾಗಿ ಎಲ್ಲಾ ಕ್ಲಾಸುಗಳು, ಲ್ಯಾಬುಗಳು ಶುರುವಾಗುತ್ತೆ. ಕೆಮೆಸ್ಟಿ/ ಫಿಸಿಕ್ಸ್ ಲ್ಯಾಬುಗಳಿಗೆ ಮೆಕಾನಿಕಲ್ ವರ್ಕ ಶಾಫಿಗೆ ಪ್ರತ್ಯೇಕ ಯೂನಿಫಾರಂ. ಆ ಲ್ಯಾಬುಗಳಲ್ಲಿ ಏನಾದ್ರೂ ಕೆಮಿಕಲ್ ಚೆಲ್ಲಿಕೊಂಡರೆ , ಲೈಟಾಗಿ ಶಾಕ್ ಹೊಡೆಸಿಕೊಂಡರೂ ಏನೂ ಆಗದಂತೆ ಕಾಲಿಗೆ ಶೂಗಳು. ಕಾಲೇಜಿನ ಬ್ಯಾಗು, ಐಡಿ, ಈ ಬಟ್ಟೆಗಳನ್ನು ಪಡೆದು ಅದನ್ನು ಹೊಲೆಸೋದೇ ಒಂದು ಸಂಭ್ರಮ. ಬೇರೆ ದಿನ ಎಲ್ಲಾ ಹೇಗೇ ಬಂದರೂ ಲ್ಯಾಬುಗಳಿದ್ದ ದಿನ ಮಾತ್ರ ಕ್ಲಾಸಲ್ಲಿ ಏನೂ ಒಂದು ಸಮಾನತೆಯ ಭಾವ. ಎಲ್ಲೆಲ್ಲೂ ಒಂದೇ ಬಣ್ಣ. ಕಾಲೇಜು ಕ್ಯಾಂಟೀನು, ಲೈಬ್ರರಿಯಲ್ಲಿ ಪುಸ್ತಕ ಪಡೆಯೋದು.. ಯಾವ ಮೂಲೆಯಲ್ಲಿ ಏನಿದೆ ಅಂತ ತಿಳಿಯೋದ್ರಲ್ಲಿ ತಮ್ಮೂರಿನ ಗೆಳೆಯರು ಯಾರಾದ್ರೂ ಇದಾರಾ ಈ ಕಾಲೇಜಲ್ಲಿ ಅಂತ ತಿಳಿಯೋದ್ರಲ್ಲಿ.. ತಮ್ಮ ಜೊತೆಯೇ ಬಸ್ಸಿಗೆ ಬರೋ ಬೇರೆ ಬೇರೆ ಬ್ರಾಂಚಿನ ಹುಡುಗ/ಹುಡುಗಿಯರ ಹೆಸರು ತಿಳಿಯೋದ್ರಲ್ಲಿ.. ಹಾಸ್ಟೆಲ್ಲಲ್ಲಿರೋರಿಗೆ ತಮ್ಮ ಸುತ್ತಮುತ್ತಲ ರೂಂಗಳವರ ಪರಿಚಯವಾಗೋದ್ರಲ್ಲೇ ಒಂದು ವಾರ ಕಳೆದುಹೋಗತ್ತೆ. ಹಾಸ್ಟೆಲ್ಲಲ್ಲಿದ್ದೋರಿಗೆ ಕಾಲೇಜ್ ಹಾಸ್ಟೆಲ್ ಹೇಗಿರುತ್ತೋ, ಇಂಜಿನಿಯರ್ ಸೀನಿಯರ್ಸ್ ಹೇಗೇಗೆ ರ್ಯಾಗ್ ಮಾಡ್ತಾರೋ ಎಂಬ ಸಣ್ಣ ಭಯವೂ ಇರ್ಬೋದು ಶುರುವಿನಲ್ಲಿ. ಆದರೆ ಸುಮಾರಷ್ಟು ಕಾಲೇಜುಗಳಲ್ಲಿ ಮೊದಲ ವರ್ಷದವರಿಗೇ ಬೇರೆ ಹಾಸ್ಟೆಲ್ ಕೊಡೋದು, ಆಂಟಿ ರ್ಯಾಗಿಂಗ್ ದಳ ರಚಿಸೋದು.. ಇನ್ನಿತರ ಕ್ರಮ ಕೈಗೊಂಡಿರೋದ್ರಿಂದ ರ್ಯಾಗಿಂಗ್ ಭಯ ಕಮ್ಮಿ ಆಗಿದೆ. ಆದರೂ ತಮ್ಮ ಮನಸ್ಥಿತಿಯಿಂದ ಹೊರಬಂದು ಸೀನಿಯರ್ಗಳು ವೈರಿಗಳಲ್ಲ, ತಮ್ಮ ಸ್ನೇಹಿತರೇ ಎಂಬಷ್ಟು ಪರಿಚಯವಾಗೋದ್ರಲ್ಲಿ ವಾರಗಳು ಕಳೆಯುತ್ತೆ.

ಹಿಂಗೇ ನಿಧಾನವಾಗಿ ಕ್ಲಾಸುಗಳು ಶುರುವಾಗ್ತಿದ್ದಂಗೆ.. ಅಸೈನುಮೆಂಟುಗಳು, ಲ್ಯಾಬ್ ರೆಕಾರ್ಡುಗಳೂ ಶುರುವಾಗತ್ತೆ. ಓದಿ ಓದಿ ಬೇಜಾರಾಗಿದ್ದಕ್ಕೋ ಏನೋ ಕೆಲವರಿಗೆ ನಿಧಾನವಾಗಿ ಆಲಸ್ಯ ಶುರುವಾಗತ್ತೆ. ಏ, ಆ ಬ್ರಾಂಚಾ, ಆರಾಮಾಗಿ ಆಟ ಆಡಿಕೊಂಡು ಪಾಸು ಮಾಡ್ಬೋದು ಬಿಡು ಎಂಬ ನೆಂಟರ, ಇನ್ಯಾರದೋ ಮಾತುಗಳು ಇವರ ತಲೆ ಹೊಕ್ಕೋಕೆ ಶುರು ಆಗತ್ತೆ. ಇಂಜಿನಿಯರಿಂಗಿನ ಮೊದಲ ವಾರದ ಆರಾಮಿನಂತೆಯೇ ಇಡೀ ಇಂಜಿನಿಯರಿಂಗ್ ಇರುತ್ತೆ ಅನ್ನೋ ಭ್ರಮೆ ಆವರಿಸಿಬಿಡುತ್ತೆ. ಹೀಗೇ ಆರಾಮದಲ್ಲಿ ದಿನ ಕಳೆಯುತ್ತಿರುವಾಗಲೇ ಅಸೈನ್ಮೆಂಟು ಸಬ್ಮಿಟ್ ಮಾಡೋಕೆ ಕೊನೆ ದಿನ ಬಂದು ಬಿಟ್ಟಿರುತ್ತೆ. ಆ ರಾತ್ರೆ , ಮಾರನೇ ದಿನ ಬೆಳಗ್ಗೆಯೂ ಎದ್ದೂ ಬಿದ್ದು, ಯಾರು ಅಸೈನ್ ಮೆಂಟು ಮಾಡಿದ್ದಾರೆ ಎಂದು ಪತ್ತೆ ಮಾಡಿ ಅವರದ್ದನ್ನು ಕಾಪಿ ಮಾಡಿ ಸಬ್ಮಿಟ್ಟು ಮಾಡಿ ಉಸ್ಸಪ್ಪಾ ಅನ್ನೋ ಹೊತ್ತಿಗೆ ಮತ್ಯಾವುದೋ ಸಬ್ಜೆಕ್ಟಿನ ಅಸೈನ್ಮೆಂಟು ! ಕೆಲವರು ವಿಧೇಯ ವಿದ್ಯಾರ್ಥಿಗಳಂತೆ ಎಲ್ಲವನ್ನೂ ಅಂದಂದೇ ಮಾಡಿ ಮುಗಿಸಿದರೆ ಕೆಲವರು ಡೆಡ್ ಲೈನ್ ವೀರರಾಗೋಕೆ ಶುರು ಮಾಡ್ತಾರೆ. ಎದ್ದೂ ಬಿದ್ದೂ ಅಂತೂ ಅಸೈನ್ ಮೆಂಟ್ ಸಬ್ಮಿಟ್ ಮಾಡೋದೆ ಇವರ ಕೆಲಸ. ಈ ಅಸೈನ್ಮೆಂಟುಗಳನ್ನ ಒದ್ದಾಡಿ ಮಾಡೋದಕ್ಕೂ ಒಂದು ಕಾರಣ ಇದೆ. ನೀಟಾಗಿ ಅಸೈನ್ ಮೆಂಟ್ ಮಾಡಿದ್ರೆ ಮುಂದೆ ಬರೋ ಕಿರುಪರೀಕ್ಷೆ(ಇಂಟರ್ನಲ್ಲುಗಳಲ್ಲಿ) ಒಳ್ಳೇ ಅಂಕ ಸಿಗಬಹುದು. ಸಿಗದಿದ್ದರೂ ಚೂರೋ ಪಾರೋ  ಅಂಕಕ್ಕಾಗಿ ಲೆಕ್ಚರತ್ರ ಕೇಳೋ ಮುಖ ಉಳಿದಿರುತ್ತೆ ಅನ್ನೋದು ತೀರಾ ಓಪನ್ ಸೀಕ್ರೆಟ್. ಮತ್ತೆ ಮೊದಲ ಸೆಮ್ಮಿನಲ್ಲೇ ಲೆಕ್ಚರ್ಗಳನ್ನ ಎದುರು ಹಾಕಿಕೊಳ್ಳೋದು ಯಾಕೆ, ಎಲ್ಲರ ದೃಷ್ಟೀಲೂ ಸ್ವಲ್ಪ ಒಳ್ಳೆಯವರಾಗಿರೋಣ ಅನ್ನೋ ಭಾವವೂ ಇರುತ್ತೆ.

ಹಿಂಗೇ ಒಂದೂವರೆ ತಿಂಗ್ಳಾಗ್ತಿದ್ದಂಗೆ ಮೊದಲ ಇಂಟರ್ನಲ್ಲು. ಮೊದಲ ಇಂಟರ್ನಲ್ಲಿಗೆ ತಯಾರಿಯೋ ತಯಾರಿ. ಒಂದು ವಾರದ ಮುಂಚೆಯೇ ಇಂತಿಂಥ ಯೂನಿಟ್ಗಳು ಇಂಟರ್ನಲ್ಲಿಗೆ ಇವೆ ಎಂದು ಹೇಳೋ ಲೆಕ್ಚರರ್ರು ಕೆಲವರಾದರೆ ಕೆಲವರು ಕೊನೆಯ ದಿನದ ತನಕ ಹೇಳೊಲ್ಲ ! ತಮ್ಮ ಕೊನೆಯ ತರಗತಿಯ ತನಕ ಏನು ಮಾಡ್ತೀನೋ ಅದನ್ನೆಲ್ಲಾ ಕೊಡ್ತೀನಿ ಅಂತ ಅವರು. ಯಾರು ಏನಂದ್ರೂ ಬದಲಾಗೋಲ್ಲ ಅವರು. ವಿದ್ಯಾರ್ಥಿಗಳು ಇಂಟರ್ನಲ್ಲಿಗೆ ಈ ಯೂನಿಟ್ಗಳು ಅಂತ ಗೊತ್ತಾದ್ರೆ ಇಂಟರ್ನಲ್ಲಿಗೆ ಮೂರ್ನಾಲ್ಕು ದಿನ ಮುಂಚಿಂದಲೇ ಓದೋಕೆ ಅಂತ ಬಂಕ್ ಹಾಕ್ತಾರೆ. ಸರಿಯಾಗಿ ಕಾಲೇಜಿಗೆ ಬರೋಲ್ಲ. ಹೇಗಿದ್ರೂ ಕೊನೆಗೆ ಬಂಕ್ ಹಾಕಿ ಓದ್ಬೋದು ಅಂತ ಕಾಲೇಜಿಗೆ ಬಂದಾಗ್ಲೂ ನೆಟ್ಟಗೆ ಪಾಟ ಕೇಳೋಲ್ಲ ಅಂತ ಅವರ ನಿಲುವು. ಕೆಲವೊಂದು ಸಲ ಇದು ಸ್ವಲ್ಪ ಅತಿ ಅನ್ಸಿದ್ರೂ ಅವರವರ ದೃಷ್ಟಿಯಲ್ಲಿ ಅವರು ಸರಿಯೆ. ಕೆಲವೊಂದು ಕಾಲೇಜುಗಳಲ್ಲಿ ಇಂಟರ್ನಲ್ಲಿಗೆ ಬದಲು ಸರ್ ಪ್ರೈಸ್ ಟೆಸ್ಟುಗಳು! ಕ್ಲಾಸಿಗೆ ಇದ್ದಕ್ಕಿದ್ದಂಗೆ ಬಂದು ಇವತ್ತು ಈ ವಿಷಯದ ಟೆಸ್ಟು. ಬರೀರಿ ಅಂತ ಪ್ರಶ್ನೆಗಳ್ನ ಕೊಟ್ಟುಬಿಡೋದು!! ಯಾವತ್ತು ಯಾವ ವಿಷಯದ ಟೆಸ್ಟು ಕೊಡ್ತಾರೋ ಯಾರಿಗೂ ಗೊತ್ತಾಗಲ್ಲ. ವಿದ್ಯಾರ್ಥಿಗಳು ಅಂದಂದಿನ ಪಾಠ ಅಂದೇ ಓದ್ಲಿ ಅನ್ನೋ ಆಸೆಯಂತೆ ಅದು !! ವಿ.ಟಿ.ಯು ವಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇದು ಅಷ್ಟಾಗಿ ಇಲ್ಲದಿದ್ದರೂ ಅಟಾನಮಸ್ ಕಾಲೇಜುಗಳಲ್ಲಿ ಕೆಲವೆಡೆ ಇದೆ.

ಇನ್ನು ಇಂಟರ್ನಲ್ ಬಂತಂದ್ರೆ ಆ ಸಮಯದಲ್ಲಿ ನೊಡ್ಬೇಕು. ಗಡ್ಡ ಮಾಡ್ಕೊಳೋಕೂ ಸಮಯವಿಲ್ಲದಷ್ಟು ಓದಿನಲ್ಲಿ ತಲ್ಲೀನರಾದ ಎಲ್ಲೆಲ್ಲೂ  ಕಾಣಬರೋ ದೇವದಾಸರು, ರಾತ್ರಿಯೆಲ್ಲಾ ನೈಟ್ ಔಟ್ ಮಾಡಿದ್ದಾನೆ ಅನ್ನೋದ್ನ ಯಾರಿಂದಲೂ ಮುಚ್ಚಿಡದ ಕಣ್ಣುಗಳು, ಬಸ್ಸಲ್ಲಾದರೂ ಓಕೆ, ನಿಂತಲ್ಲಾದರೂ ಓಕೆ ಅಂತ ಓದುತ್ತಾ  ಕ್ಯಾಂಟೀನಿಗೆ ಹೋಗುತ್ತಲೂ ಪುಸ್ತಕ ಹಿಡಿದುಕೊಂಡು ಓದುತ್ತಾ ಹೋಗೋರು, ಅಲ್ಲಿ ತಿನ್ನುತ್ತಲೂ ಪುಸ್ತಕ ಹಿಡಿದೇ ತಿನ್ನೋರು.. ಹೀಗೆ ಭಯಂಕರ ದೃಶ್ಯಾವಳಿಗಳು ಕಾಣುತ್ತೆ..ಇಂಟರ್ನಲ್ಲಿನ ಬೆಲ್ಲು ಹೊಡಿಯೋವರೆಗೋ ಓದಿದ್ದೇ ಓದಿದ್ದು.  ಈ ಪರಿ ಓದ್ತಾರಾ ಹುಡುಗ್ರು ಅಂತನಿಸಿಬಿಡ್ಬೇಕು ಮೊದಲ ಸಲ ನೋಡೋರಿಗೆ !! ಸ್ವಲ್ಪ ತಾಳಿ. ಇವೆಲ್ಲಾ ಬರಿ ಇಂಟರ್ನಲ್ಲು ಎಕ್ಸಾಮುಗಳಲ್ಲಿ ಮಾತ್ರ. ಬೇರೆ ಟೈಮಲ್ಲಿ ಅದೇ ಬೈಕಲ್ಲಿ ಸುತ್ತೋರು, ಕಾಲೇಜು ಲಾನಲ್ಲಿ , ಕ್ಲಾಸಲ್ಲಿ , ಬಸ್ ಷೆಲ್ಟರಲ್ಲಿ ಹರಟೋರು, ಕ್ಯಾಂಟೀನು, ಬ್ರೌಸಿಂಗ್ ಸೆಂಟರಿನ ಕಾಯಂ  ಅತಿಥಿಗಳು, ಹಾಸ್ಟೆಲ್ ಬೆಡ್ಡಿರೋದೇ ಹಗಲು ಮಲಗೋಕೆ ಅಂತಾ ದಿನಾ ಲೇಟಾಗೆದ್ದು ಬರೋ  ಲೇಟ್ ಲತೀಫರು.. ಹೀಗೆ ಮತ್ತೆ ಹಳೆ ದೃಶ್ಯಗಳೇ ವಾಪಾಸ್...



ಮೊದಲ ಇಂಟರ್ನಲ್ಲ್ ಮುಗಿಯೋ ಹೊತ್ತಿಗೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಧಾನವಾಗಿ ಶುರುವಾಗತ್ತೆ. ಸಾಂಸ್ಕೃತಿಕ ಸಂಘ, ಮ್ಯೂಸಿಕ್ ಕ್ಲಬ್, ಎನ್ ಎಸ್ಸೆಸ್ಸು, ಇಂಜಿನಿಯರ್ಗಳ ಸಂಘ, ಬ್ರಾಂಚಿನ ಫಂಕ್ಷನ್ಗಳು ಹೀಗೆ ಕಾರ್ಯಕ್ರಮಗಳು ನಡೀತಿರುತ್ತೆ. ನಿಧಾನವಾಗಿ ಅಂತರ ಕಾಲೇಜು ಕಾರ್ಯಕ್ರಮಗಳೂ ಶುರುವಾಗುತ್ತೆ. ಅಲ್ಲಿ, ಇಲ್ಲಿ ಅಂತ ಬ್ಯಾಲೆನ್ಸ್ ಮಾಡೋದೇ ಇಂಜಿನಿಯರಿಂಗಿನ ಮಜ. ವಿ.ಟಿ.ಯು.ವಿನ ಪರೀಕ್ಷೆಗಳ ಬಗ್ಗೆ ಬರೀತಾ ಹೋದ್ರೆ ಅದೇ ಒಂದು ದೊಡ್ಡ ಕತೆಯಾಗುತ್ತೆ. ಆ ಕತೆ ಸದ್ಯಕ್ಕೆ ಬೇಡ ಬಿಡಿ.. ಇಂಜಿನಿಯರಿಂಗಿನ ಮೋಜು, ಮಸ್ತಿಗಳು, ಖುಷಿ ಇರೋದೆ ಆ ನಾಲ್ಕು ವರ್ಷಗಳ ಸ್ನೇಹದಲ್ಲಿ. ಹೈಸ್ಕೂಲು, ಪಿಯುಸಿ .. ಹೀಗೆ ಎಲ್ಲೂ ನಾಲ್ಕು ವರ್ಷಕಾಲ ಒಟ್ಟಿಗಿರಲ್ಲ. ಹಾಗಾಗಿ ನಾಲ್ಕು ವರ್ಷ  ನೈಟೌಟೂ, ಕ್ಲಾಸ್ ಟ್ರಿಪ್ಪು, ಬ್ರಾಂಚ್ ಫಂಕ್ಷನ್ನು, ಕಂಬೈನ್ಡ್ ಸ್ಟಡಿ, ಇನ್ಯಾವುದೋ ಫಂಕ್ಷನ್ನು, ಚಾಟಿಂಗು... ಹೀಗೆ ಹುಟ್ಟಿ, ಗಟ್ಟಿಗೊಳ್ಳೋ ಆ ಸ್ನೇಹದ ಬಂಧ ಇದ್ಯಲ್ಲ.. ಅದರ ನೆನಪುಗಳೇ ಮಧುರ. ಒಳ್ಳೆಯ ಗೆಳೆಯರ ಗುಂಪು ಕಟ್ಟಿಕೋಬೇಕು ಅಷ್ಟೇ..ಸಹವಾಸದೋಷದಿಂದ ಇಂಜಿನಿಯರಿಂಗ್ ಮುಗಿಸೋ ಹೊತ್ತಿಗೆ ಇಲ್ಲದ ಎಲ್ಲಾ ಹವ್ಯಾಸಗಳನ್ನು ಹಚ್ಚಿಕೊಂಡು ಇಂಜಿನಿಯರಿಂಗ್ ಓದೋ ಹುಡುಗ್ರು ಅಂದ್ರೆ ಸಮಾಜದಲ್ಲಿ ಅಸಹ್ಯದ ಭಾವನೆ ಮೂಡಿಸುವಂತಾಗಬಾರದು. ಸಮಾಜಕ್ಕೆ ಏನಾದ್ರೂ ಕೊಡುಗೆ ನೀಡೋ ಮಟ್ಟಿಗೆ ನಾಲ್ಕು ವರ್ಷದಲ್ಲಿ ತಯಾರಾಗೋ ವಿದ್ಯಾರ್ಥಿಗಳಿದ್ದಂತೆಯೇ ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ ಅಂತ ತೀರಾ ನಿರ್ಲಕ್ಷ್ಯ ಮಾಡಿ ವಿ,ಟಿಯು ಪರೀಕ್ಷೆಗಳಲ್ಲಿ ದಯನೀಯವಾಗಿ ವೈಫಲ್ಯ ಕಾಣುವವರೂ ಇದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸಿಗೋ ಅವಕಾಶಗಳನ್ನು ಬಾಚಿಕೊಳ್ಳತ್ತಾ ಎಲ್ಲ ಕ್ಷೇತ್ರಗಳಲ್ಲೂ ಮಿಂಚುವಂತಹ ಆತ್ಮವಿಶ್ವಾಸದ ಆಲ್ ರೌಂಡರೂ ಆಗಬಹುದು, ಎಲ್ಲೂ ಸಲ್ಲದ ಬೆಪ್ಪನೂ ಆಗಬಹುದು. ಏನಾಗಬೇಕೆಂಬ ವಿದ್ಯಾರ್ಥಿಯ ನಿರ್ಧಾರ, ಪ್ರಯತ್ನಗಳ ಮೇಲೆ , ಅವನ ಗೆಳೆಯರ ಬಳಗದ ಮೇಲೆ ಇಂಜಿನಿಯರಿಂಗ್ ಎಂಬ ಜೀವನದ ಘಟ್ಟದ ಕೊನೆ ನಿರ್ಧರಿತವಾಗುತ್ತದಷ್ಟೆ.

Monday, August 5, 2013

ಸ್ನೇಹ



ಜೀವನದಿ ಎಲ್ಲೋ ಇದ್ದ
ನಾನು, ನೀನೆಂಬ ಬಿಂದು
ಸಂಧಿಸಿದ ರೇಖೆ ಹೆಸರು ಚೆಲುವ ಈ ಸ್ನೇಹ
ನಾನು ನೀನೆಂಬ ನಿನ್ನೆ
ನಾವೆಂಬ ಇಂದಿನಲ್ಲಿ
ಬೆಸೆದಂತ ಗೋಂದು, ಒಲವು ಮಧುರ ಈ ಸ್ನೇಹ


 

ಜಾತಿ, ಲಿಂಗ ಭಾಷೆಗಳೆಂಬ
ಬೇಲಿಯಿಲ್ಲ , ಮಾತೇ ಎಲ್ಲ
ನೋವಿನಲೂ ನಲಿವಿನಲ್ಲೂ
ಸಾಥಿ ಈ ಸ್ನೇಹ
ಸೋಲಿನಲೂ ಸೊರಗದಂತ
ಪ್ರೀತಿ ಈ ಸ್ನೇಹ


 

ಮೌನದಲೂ ಕಾಡೋ ನೀನು
ಸಕಲ ಸುಖದ ಕಾಮಧೇನು
ಎಲ್ಲವನೂ ದೂರ ತಳ್ಳೋ
ಬೇಸರ ಬಂತೇನು
ಅಹಮಿಕೆಯ ಕಿಡಿ ಬೆನ್ನಲ್ಲೇ
ಅಗಲಿಕೆ ಇತ್ತೇನು ?

ಬಾಳೆ ಒಂದು ಭಾವಗೀತೆ
ನಾನೆ ರಾಮ ನೀನೆ ಸೀತೆ
ನೀನು ಸಿಗಲು ಮಾಯ ಚಿಂತೆ
ಬೇರೆ ನಾನರಿಯೆ
ಹಕ್ಕಿ ಹಾರಿ ಹಾಗೇ ಉಳಿದ
ಮರದ ಒಣ ಪೊದರೆ