Thursday, December 27, 2018

ಸಾವನದುರ್ಗದ ಚಾರಣ

ಬೆಂಗಳೂರಿಗೆ ಬಂದ ಹೊಸತರಲ್ಲಿ ಸಾವನದುರ್ಗದ ಚಾರಣ ಮಾಡಿದವನು ನಂತರ ನಂದಿದುರ್ಗ(ನಂದಿ ಬೆಟ್ಟ), ಮಾಕಳಿದುರ್ಗ, ಕಬ್ಬಾಳ ದುರ್ಗ, ದೇವರಾಯನ ದುರ್ಗಗಳ ಚಾರಣ ಮಾಡಿದ್ದೆ. ಆದರೆ ಬೆಂಗಳೂರಿನ ಸುತ್ತಲಿರೋ "ನವದುರ್ಗ"ಗಳಲ್ಲಿ ಇವು ಒಂದೊಂದು ಅಂತ ತಿಳಿದಿದ್ದು ಇತ್ತೀಚೆಗೆ. ಈ ನವದುರ್ಗಗಳ ಸಾಲಿಗೆ ತುಮಕೂರಿನಲ್ಲಿರೋ ಹುತ್ರಿದುರ್ಗ, ಹುಲಿಯೂರು ದುರ್ಗ, ಚನ್ನರಾಯನ ದುರ್ಗ ಮತ್ತು ರಾಮನಗರದ ಭೈರವದುರ್ಗಗಳೂ ಸೇರಿವೆ ಅಂತ ಓದಿ ಅವಕ್ಕೂ ಹೋಗಬೇಕೆಂಬ ಮನಸ್ಸಾಗ್ತಿದೆ. ಹಿಂದಿನ ಬಾರಿ ಸಾವನದುರ್ಗಕ್ಕೆ ಹೋದಾಗ ಅದರ ಬಗ್ಗೆ ಬರೆಯಲಾಗದ ಸೋಂಬೇರಿತನದಿಂದ ಈ ಸಲವಾದರೂ ಹೊರಬರಬೇಕೆಂಬ ಮನಸ್ಸಿನಿಂದ ಮತ್ತು ಸಾವನದುರ್ಗಕ್ಕೆ ಹೋಗೋದು ಹೇಗೆಂದು ಕೇಳ್ತಿದ್ದ ಗೆಳೆಯರ ಪ್ರಶ್ನೆಗಳಿಗೆ ಉತ್ತರವಾಗಲೆಂದು ಈ ಲೇಖನ
We at the top of Savanadurga 

ಸಾವನದುರ್ಗಕ್ಕೆ ಹೋಗೋದು ಹೇಗೆ?

ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ ದೂರವಿರುವ ಸಾವನದುರ್ಗಕ್ಕೆ ಬೈಕಲ್ಲಿ ಹೋಗೋದಾದರೆ ಮೈಸೂರು ರಸ್ತೆಯಲ್ಲಿ ಕೆಂಗೇರಿ,ಕುಂಬಳಗೋಡುವಿನ ನಂತರ ಹೆಜ್ಜಾಲಕ್ಕೆ ದಾರಿ ಎಂಬಲ್ಲಿ ಬಲಕ್ಕೆ ತಿರುಗಿದರೆ ಮಂಚನಬೆಲೆ ಜಲಾಶಯದ ಬಳಿಯಿಂದ ನಾಯಕನಹಳ್ಳಿ ಎಂಬಲ್ಲಿಗೆ ತೆರಳಬೇಕು. ಅಲ್ಲಿಂದ ೩.೬೫ ಕಿ.ಮೀ ಸಾವನದುರ್ಗ ಸಂರಕ್ಷಿತಾರಣ್ಯದ ಒಳಗೆ ಸಾಗಿದರೆ ಸಾವನದುರ್ಗ ಬೆಟ್ಟದ ಚಾರಣಕ್ಕೆ ತೆರಳಬಹುದು.
ಬಸ್ಸಿನಲ್ಲಿ ಬರೋದಾದರೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್ಟಿನಿಂದ ಸಾವನದುರ್ಗಕ್ಕೆ ನೇರ ಬಸ್ಸುಗಳಿವೆ.
Direct Bus from Bangalore to Savanadurga Via Tavarekere 

ಮೆಜೆಸ್ಟಿಕ್ಕಿನಿಂದ ಬರೋದಾದರೆ ೨೪೨ ಬಸ್ಸಲ್ಲಿ ತಾವರೆಕೆರೆಗೆ ಬಂದರೆ ಅಲ್ಲಿಂದ ಮಾಗಡಿಗೆ ತೆರಳಿ ಮಾಗಡಿಯಿಂದ ರಾಮನಗರಕ್ಕೆ ತೆರಳೋ ಬಸ್ಸಲ್ಲಿ ನಾಯಕನಹಳ್ಳಿಯವರೆಗೆ ತೆರಳಬಹುದು. ಅಲ್ಲಿಂದ ಸಾವನದುರ್ಗಕ್ಕೆ ಆಟೋಗಳು ಸಿಗುತ್ತೆ.

ಸಾವನದುರ್ಗದಲ್ಲಿ ನೋಡೋಕೇನಿದೆ? 
ಸಾವನದುರ್ಗಕ್ಕೆ ಹೋಗೋರಲ್ಲಿ ಬಹುಪಾಲು ಜನ ಹೋಗೋದು ಸಾವನದುರ್ಗದ ಬೆಟ್ಟದ ಚಾರಣ ಮಾಡೋಕೆ. ನೆಲಮಟ್ಟದಿಂದ ೧೨೪೫ ಮೀಟರ್ ಎತ್ತರದಲ್ಲಿರುವ ಇಲ್ಲಿನ ಶಿಖರವನ್ನು ತಲುಪೋಕೆ ೧.೮೬ ಕಿ.ಮೀ ಹತ್ತಬೇಕು . ಕೆಂಪೇಗೌಡರ ಕಾಲದಲ್ಲಿ ಕಟ್ಟಿದ ಈ ಕೋಟೆಯ ತುದಿ ತಲುಪೋಕೆ ಸುಮಾರು ೨ ಘಂಟೆ ಬೇಕಾದರೆ ಇಳಿಯೋಕೆ ಸುಮಾರು ಒಂದೂಕಾಲು ಘಂಟೆ ಬೇಕು. ಬಿಟ್ಟರೆ ೧೦೫೬ ರಲ್ಲಿ ಕಟ್ಟಿದ ದೇಗುಲ ಮತ್ತು ಇತ್ತೀಚೆಗೆ ಕಟ್ಟಿದ ಇನ್ನೆರಡು ದೇಗುಲಗಳೂ ಇವೆ.

Markings in the Trek to Savanadurga

ಹೇಗಿತ್ತು ಸಾವನದುರ್ಗದ ಚಾರಣ ಅಂದ್ರಾ ? 
ಮೊದಲ ಬಾರಿ ಹೋದಾಗ ತಾವರೆಕೆರೆಯ ಮೇಲೆ ಬಸ್ಸಲ್ಲೇ ಹೋಗಿದ್ವಿ. ಇಪ್ಪತ್ತೇಳು ಜನರನ್ನು ಕರ್ಕೊಂಡು ಇಲ್ಲಿಗೆ ಟ್ರಿಪ್ ಆಯೋಜನೆ ಮಾಡಿ ಹೋಗಿದ್ದೆ. ಅದು ಇಲ್ಲಿಯವರೆಗೆ ಅತೀ ಹೆಚ್ಚು ಜನರನ್ನು ಕರ್ಕೊಂಡು ಹೋಗಿದ್ದ ಟ್ರಿಪ್ಪು ಅಂತ ಅಕ್ಷತಾಗೆ ಹೇಳ್ತಿದ್ರೆ ೨೭ ಜನಾನೂ ಮೇಲೆ ಹತ್ತಿದ್ರಾ ಅಂತ ಅವಳಿಗೆ ಕುತೂಹಲ. ೨೭ರಲ್ಲಿ ಹತ್ತಿದ್ದು ಹನ್ನೊಂದೇ ಜನ ಅಂದಾಗ ತಂಗೂ ಹತ್ತೋಕಾಗುತ್ತಾ ಅನ್ನೋ ಕುತೂಹಲ. ಮನೆಯಿಂದ ಬೆಳಗ್ಗೆ ಏಳಕ್ಕೇ ಹೊರಟಿದ್ರೂ ಮಂಚನ ಬೆಲೆ ಜಲಾಶಯ ನೋಡಿ, ನಾಯಕನ ಹಳ್ಳಿಯಲ್ಲಿ ತಿಂಡಿ ತಿಂದು ಸಾವನದುರ್ಗ ತಲುಪೋ ಹೊತ್ತಿಗೆ ಬಿಸಿಲೇರತೊಡಗಿತ್ತು. ಎರಡು ಘಂಟೆ ಟ್ರೆಕ್ಕಿಂಗ್ ಮಾಡಬೇಕು ಅಂತ ಮೂರು ಲೀಟರ್ ನೀರು, ಗ್ಲೂಕೋಸು, ವೋಲಿನಿ, ಮಧ್ಯ ಹಸುವಾದ್ರೆ ಅಂತ ತಿನ್ನೋಕೆ ಅವಲಕ್ಕಿಗಳನ್ನು ತಗೊಂಡು ಬೆಟ್ಟ ಹತ್ತೋಕೆ ಶುರು ಮಾಡೋ ಹೊತ್ತಿಗೆ ಘಂಟೆ ಹನ್ನೊಂದಾಗಿತ್ತು.

ಟ್ರೆಕ್ಕಿಂಗಿನ ಶುರುವಾತು ಮತ್ತು ಹಳೆಯ ನೆನಪುಗಳ ಒಂದಿಷ್ಟು ಮಾತು:
ಸಾವನ ದುರ್ಗದಲ್ಲಿರೋ ನರಸಿಂಹ ಮತ್ತು ಭದ್ರಕಾಳಿ ಗುಡಿಗಳ ಎದುರಿಗೆ ಸಾವನದುರ್ಗ ಮೂಲಿಕೆ ಮತ್ತು ಔಷಧಿ ವನ ಎಂಬ ಬೋರ್ಡಿದೆ. ಅದರ ಪಕ್ಕದಲ್ಲಿರೋ ಒಂದಿಷ್ಟು ಮನೆಗಳು ಮತ್ತು ಎಳನೀರಂಗಡಿಯ ಪಕ್ಕದಲ್ಲಿ ಒಂದು ದಾರಿ ಸಾಗುತ್ತೆ. ಅದರಲ್ಲಿ ಸಾಗಿದರೆ ಒಂದು ಹಾದಿ ಕಾಡೊಳಗೆ ಸಾಗಿದಂತೆ ಕಾಣುತ್ತೆ. ಸ್ವಲ್ಪ ಪೊದೆಗಳ ನಡುವೆ ಸಾಗೋ ಆ ಹಾದಿ ಸಾವನದುರ್ಗದ ಬೆಟ್ಟದತ್ತ ತೆರೆದುಕೊಳ್ಳುತ್ತದೆ. ಎಲ್ಲಿಯೂ ಕಳೆದುಹೋಗದಂತೆ ಇಲ್ಲಿ ನಿರ್ದೇಶನಗಳನ್ನೂ ಹಾಕಲಾಗಿದೆ. ಆ ಮಾರ್ಕುಗಳನ್ನು ನೋಡಿದಾಗ ನಾವಿಲ್ಲಿಗೆ ೨೦೧೨ರಲ್ಲಿ ಬಂದಿದ್ದ ನೆನಪಾಯ್ತು. ಕೆಳಗಿದ್ದ ಮಾರ್ಕುಗಳ ನಂತರ ಮಧ್ಯ ಎಲ್ಲೂ ಮಾರ್ಕಿಲ್ಲ ಅಂತ ಅಂದ್ಕೊಂಡು ಸೀದಾ ಮೇಲೆ ಹತ್ತಿದ್ವಿ. ಹತ್ತೋದೇನೋ ಹತ್ತಿದ್ವಿ. ಆಮೇಲೆ ಎಲ್ಲಿ ನೋಡಿದ್ರೂ ಮಾರ್ಕಿಲ್ಲ. ಮುಂದೆ ಹತ್ತೋಕೇ ಆಗದಷ್ಟು ಚೂಪಾಗಿದೆ ಬಂಡೆ. ಹಂಗೇ ಕೆಳಗೆ ನೋಡಿದ್ರೆ ನಾವು ಮೇಲಕ್ಕೆ ಹತ್ತಿದ ಜಾಗದ ಬುಡದಲ್ಲಿ ಮೇಲಕ್ಕೆ ಹತ್ತದೆ ಬಲಕ್ಕೆ ಸಾಗ್ತಿದ್ದ ಜನ ಕಾಣ್ತಿದ್ರು ! ಅಲ್ಲೇ ಸ್ವಲ್ಪ ಗಮನಹರಿಸಿದ್ರೆ ಬಲಕ್ಕೆ ಸಾಗೋ ಮಾರ್ಕುಗಳು ಕಾಣ್ತಿದ್ದೇನೋ. ಆದ್ರೆ ನಾವು ಅವಸರ ಅವಸರದಿಂದ ಹತ್ತೋಕೆ ಹೋಗಿ ಮಧ್ಯ ಸಿಕ್ಕಾಕಿಕೊಂಡಿದ್ವಿ. ಅಲ್ಲಿಂದ ಕೆಳಗಿಳಿಯೋಕೂ ಆಗದೆ ಮೇಲಕ್ಕೆ ಹತ್ತೋಕೂ ಆಗದೆ ಅಲ್ಲೇ ಕೂರೂಕೋ ಆಗದೆ ಐದಾರು ಜನ ಸಿಕ್ಕಾಕಿಕೊಂಡಿದ್ವಿ. ಕೊನೆಗೆ ಅಡ್ಡಡ್ಡ ಕಾಲು ಹಾಕುತ್ತ ಬಂಡೆಯನ್ನು ಅಡ್ಡವಾಗಿ ದಾಟಿ ಮುಖ್ಯ ಹಾದಿಗೆ ಬಂದ ಮೇಲೇ ಜೀವಕ್ಕೆ ಜೀವ ಬಂದಿತ್ತು. ಅದಾದ ಮೇಲೆ ಎಷ್ಟೋ ಚಾರಣಗಳಾಗಿವೆಯಾದರೂ ಆ ತರಹದ ಅಪಾಯಕ್ಕೆ ಕೈಹಾಕಿಲ್ಲ. ಒಂದಷ್ಟು ಹೆಜ್ಜೆ ಹಾಕೋ ಹೊತ್ತಿಗೆ ಆ ದಾರಿ ಸರಿಯಾದ್ದಾ ಅಲ್ಲವಾ ಅನ್ನೋ ಪ್ರಶ್ನೆ ಮನಕ್ಕೆ ಬರುತ್ತೆ. ದಾರಿ ಸರಿಯಾದ್ದೇ ಅನ್ನೋ ಧೈರ್ಯ ಬಂದ ಮೇಲೇ ಹೆಜ್ಜೆ ಮುಂದುವರಿಯುತ್ತೆ. ಈ ನೆನಪುಗಳ ಸಪ್ತಪದಿ ತುಳಿದವಳ ಜೊತೆ ಹಂಚಿಕೊಳ್ಳುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದೆ.

ಮೊದಲ ಸುತ್ತಿನ ಕೋಟೆ: 
ಸ್ವಲ್ಪ ದೂರ ಸಾಗೋ ಹೊತ್ತಿಗೆ ಒಂದು ಸುತ್ತಿನ ಕೋಟೆ, ಬುರುಜುಗಳ ಕುರುಹುಗಳು ಸಿಗುತ್ತೆ. ಅದನ್ನು ನೋಡಿದ ಹೆಚ್ಚಿನ ಜನರು ಇದೇ ಸಾವನದುರ್ಗದ ತುದಿ ಅಂದುಕೊಳ್ಳುತ್ತಾರೆ. ನಾವು ಮೊದಲ ಸಲ ಬಂದಾಗಲೂ ಹೀಗೇ ಆಗಿತ್ತು. ಇಂದು ಜೊತೆ ಬಂದಿದ್ದ ಮನದನ್ನೆಗೂ ಹಾಗೇ ಅನಿಸಿತ್ತು. ಆದರೆ ತುದಿ ಇದಲ್ಲ. ಇಲ್ಲಿಯವರೆಗೆ ಸುಮಾರು ೪೫೦ ಮೀಟರ್ ಹತ್ತುವ ನಮಗೆ ಇನ್ನೂ ೧೪೫೦ ಮೀಟರ್ ಹತ್ತೋದಿರುತ್ತೆ. ಆದರೆ ಉರಿಬಿಸಿಲಲ್ಲಿ ಬೆಟ್ಟ ಹತ್ತೋಕೆ ಶುರು ಮಾಡೋ ಜನ ಇಲ್ಲಿಯವರೆಗೆ ಬರುವಷ್ಟರಲ್ಲೇ ಬಸವಳಿದು ಇಲ್ಲಿ ಬೀಸೋ ತಂಗಾಳಿಗೆ ಮನಸೋತು ಇದೇ ತುದಿ ಎಂದುಕೊಂಡರೆ ಅಚ್ಚರಿಯಿಲ್ಲ. ತೀರಾ ಸುಸ್ತಾಗದಿದ್ದರೂ ಇಲ್ಲಿಯ ಬುರುಜುಗಳು, ಕಲ್ಲ ಮಂಟಪದ ಬಳಿಯಿಂದ ಸುತ್ತಣ ಪರಿಸರದ , ಬೆಟ್ಟಗುಡ್ಡಗಳ ಹಸಿರನ್ನು ಕಣ್ತುಂಬಿಕೊಂಡು ಸ್ವಲ್ಪ ದಣಿವಾರಿಸಿಕೊಂಡು ಮುಂದಡಿಯಿಡುವುದರಲ್ಲಿ ತಪ್ಪೇನಿಲ್ಲ. ಅಂದು ಬಂದಾಗ ಬೆಟ್ಟದ ಮೇಲೆ ನಂದಿಯಿದೆ ಅಂತಿದೆ, ಇದಲ್ಲ ತುದಿ ಅಂತ ಗೆಳೆಯರನ್ನು ಮೇಲಕ್ಕೆಳೆದಿದ್ದ ನಾನು ತುದಿ ಇನ್ನೂ ಮುಂದಿದೆ ಬಾ ಎಂದಷ್ಟೇ ಹೇಳಿ ಬಾಳರಸಿಯನ್ನು ಮುಂದಕ್ಕೆ ಕರ್ಕೊಂಡು ಹೋಗಿದ್ದೆ.
Akshata at the entrance of First level of fort 

ಹಸಿರ ಹಾದಿ ಮತ್ತು ಒಂದಿಷ್ಟು ಬುರುಜುಗಳು: 
ಮೊದಲ ಸುತ್ತನ್ನು ದಾಟಿ ಸ್ವಲ್ಪ ಮುಂದೆ ಸಾಗೋ ಹೊತ್ತಿಗೆ ಹಸಿರ ಹಾದಿ ನಮ್ಮನ್ನು ಸ್ವಾಗತಿಸುತ್ತೆ. ಕಲ್ಲಲ್ಲಿ ಸಾಗಿ ದಣಿದ ಮನಗಳಿಗೆ ಒಂದಿಷ್ಟು ರಿಲೀಫೂ ಸಿಕ್ಕಬಹುದು. ಇಲ್ಲಿರೋ ಮರಗಳಂತೆಯೇ ಒಂದಿಷ್ಟು ನೀರ ಹೊಂಡಗಳೂ ಇವೆ. ಇದರಲ್ಲಿ ಒಂದರಲ್ಲಿ ಎರಡು ಕಣ್ಣುಗಳನ್ನು ಕಂಡಂತೆ ಆಗುತ್ತೆ ನೋಡು ಅಂತ ಹೇಳ್ತಿದ್ದೆ ನಾನು. ಈ ತರಹದ ಹೊಂಡಗಳು ಅನೇಕ ಜಾತಿಯ ಅಪರೂಪದ ಕಪ್ಪೆಗಳಿಗೆ ಆಶ್ರಯತಾಣವಾಗಿದೆಯಂತೆ !
In one of the Green patches during the trek 

One of the water spots and breeding place for many rare  species of frogs
ಎರಡನೇ ಸುತ್ತಿನ ಕೋಟೆ:
ಮೊದಲ ಸುತ್ತಿನ ಕೋಟೆಯನ್ನು ದಾಟಿ ಮುಂದೆ ಸಾಗುವ ಹಾದಿ ಮತ್ತೆ ಕಠಿಣವಾಗುತ್ತೆ.
Walking on the remains of the Fort walls


ಒಂದೆಡೆ ಸಿಗೋ ಕೋಟೆಯ ಗೋಡೆಯ ಮೇಲೆ ಸಾಗಿದ ನಂತರ ನೇರವಾಗಿರೋ ಬಂಡೆಗಳನ್ನು ಏರಲು ಬಂಡೆಗಳ ಮೇಲೆ ಕಾಲು, ಕೈಗಳನ್ನು ಇಟ್ಟು ಹತ್ತಲು ಅನುವಾಗುವಂತೆ ಹೊಂಡಗಳನ್ನು ಕೊರೆಯಲಾಗಿದೆ. ಅದರ ಸಹಾಯದಿಂದ ಮೇಲೆ ಹತ್ತಿ ಎರಡನೇ ಸುತ್ತಿನ ಕೋಟೆಯ ಬುರುಜುಗಳ ಬಳಿ ಸ್ವಲ್ಪ ದಣಿವಾರಿಸಿಕೊಳ್ಳಬಹುದು.
You can see the markings to climb the fort in the pic 

ಕೋಟೆಯ ಮೇಲಣ ಮಂಟಪ ಮತ್ತು ಗವಿಯ ಹಾದಿ: 
ಎರಡನೇ ಸುತ್ತಿನ ಕೋಟೆಯನ್ನು ದಾಟಿ ಮುಂದೆ ಸಾಗುತ್ತಿದ್ದಂತೆ ಮಂಟಪವೊಂದು ಸಿಗುತ್ತ್ತೆ. ಇಲ್ಲಿಗೆ ಬರೋ ಜನ ಇದೇ ತುದಿ ಎಂದುಕೊಳ್ಳುತ್ತಾರೆ. ಅದರ ಪಕ್ಕದಲ್ಲೊಂದು ಕೆರೆಯೂ ಇದೆ. ಈ ಮಂಟಪದಲ್ಲಿ ಜನ ಅಡಿಗೆಯನ್ನೂ ಮಾಡಿಕೊಳ್ಳುತ್ತಾರೆ ಎನ್ನೋದನ್ನು ಇಲ್ಲಿರೋ ಕಟ್ಟಿಗೆಯ ರಾಶಿ ಮತ್ತು ಮಸಿಹಿಡಿದ ಗೋಡೆಗಳೇ ಹೇಳುತ್ತೆ. ನಮಗೆ ಅಂತಾ ಯೋಚನೆಗಳೇನೂ ಇಲ್ಲದ್ದರಿಂದ ಅಲ್ಲಿಂದ ಮುಂದೆ ಸಾಗಿ ಎದುರಿಗೆ ಕಾಣುತ್ತಿದ್ದ ಮತ್ತೊಂದು ಮಂಟಪವನ್ನು ತಲುಪಿದೆವು.
Second Mantapa from where the view of final destination in Savanadurga is available

ಆ ಮಂಟಪವನ್ನು ತಲುಪೋ ಹೊತ್ತಿಗೆ ಎದುರಿನ ಮತ್ತೊಂದು ಬೆಟ್ಟದಲ್ಲಿರೋ ಮಂಟಪ ಮತ್ತು ಹಾರಾಡುತ್ತಿರುವ ಧ್ವಜ ಕಾಣುತ್ತೆ
View of the Final destination
! ಇನ್ನೇನು ಹತ್ತೇ ನಿಮಿಷದಲ್ಲಿ ಅಲ್ಲಿಗೆ ತಲುಪಬಹುದು ಎಂದೂ ಅನಿಸುತ್ತೆ. ಆದರೆ ಅದಕ್ಕೆ ಸಾಗೋ ಹಾದಿಗೆ ಮತ್ತೆ ಬಂಡೆಗಳ ನಡುವೆ ನುಸುಳುತ್ತಾ ಒಂದು ಗುಹೆಯನ್ನು ಹಾಯಬೇಕು. ಅಲ್ಲಿಂದ ಮತ್ತೆ ಬಂಡೆಗಳ ನಡುವಿರುವ ಗುರುತುಗಳಲ್ಲಿ ಕಾಲಿಡುತ್ತಾ ಸಾಗಿದರೆ ಸಾವನದುರ್ಗದ ತುದಿಯನ್ನು ತಲುಪಬಹುದು.
Bit tough path to reach the top

ಬೀಸೋ ಗಾಳಿ ಮತ್ತು ಭರ್ಜರಿ ಧ್ವಜ: 
ಸಾವನದುರ್ಗದ ತುತ್ತ ತುದಿಯೇರೋ ಹೊತ್ತಿಗೆ ಇಲ್ಲಿನ ಸುಡುಬಿಸಿಲಿಗೆ ಎಷ್ಟು ನೀರು ತಂದಿದ್ರೂ ಸುಸ್ತೆದ್ದಿರುತ್ತೆ. ಹಿಂದಿನ ಬಾರಿ ಬಂದಾಗ ನೀರು ತಾರದ ಗೆಳೆಯರ ಅವಸ್ಥೆ ನೋಡಿ ಈ ಸಲ ಸ್ವಲ್ಪ ಹೆಚ್ಚೇ ನೀರು ತಂದಿದ್ವಿ ನಾವು. ಆದ್ರೆ ಅದ್ರಲ್ಲಿ ಅರ್ಧ ನೀರಷ್ಟೇ ನಾವು ಕುಡಿದಿದ್ದು. ಸುಮ್ಮನೇ ಉಳಿದ ನೀರು ಯಾಕೆ ಹೊತ್ಕೊಂಡು ಬಂದ್ರಿ ಅಂದ್ರಾ ? ಆ ನೀರು , ಹೊತ್ತಿದ್ದ ಶ್ರಮ ವ್ಯರ್ಥವೇನೂ ಆಗ್ಲಿಲ್ಲ. ದಾರಿಯಲ್ಲಿ ನೀರಿದ್ಯಾ ಅಂತ ಫ್ರೂಟಿ ಮಾರೋ ಜನರ ಬಳಿ ಕೇಳಿ, ಅವರು ಇಲ್ಲ ಅನ್ನೋದನ್ನು ನೋಡಿ ಒಂದಿಷ್ಟು ಜನ ಒದ್ದಾಡ್ತಿದ್ರು. ಅವರಲ್ಲಿ ಕೆಲವರಿಗೆ ನಮ್ಮ ಹೆಚ್ಚಿನ ನೀರು ಸಹಾಯವಾಯ್ತು :-)   ಈ ಬೆಟ್ಟದ ತುತ್ತತುದಿಗೆ ಒಂದು ನಂದಿ ಮಂಟಪವಿದೆ. ಪಕ್ಕವಿರೋ ಧ್ವಜಸ್ಥಂಭಕ್ಕೆ ಈಗ ಕನ್ನಡ ಧ್ವಜವೊಂದನ್ನು ಕಟ್ಟಿದ್ದಾರೆ. ಆ ಜಾಗಗಳಲ್ಲಿ ಭಯಂಕರ ಗಾಳಿ ಬೀಸುತ್ತೆ. ಬೆಂದಕಾಳೂರಲ್ಲಿ ಕಳೆದೇ ಹೋಗಿರೋ ಕನ್ನಡ ಆ ಬೇಯೋ ಬೆಟ್ಟದ ಮೇಲೆ ಭರ್ಜರಿಯಾಗಿ ರಾರಾಜಿಸೋದು ನೋಡಿ ಖುಷಿಯಾಯ್ತು. 
Kannada Dhwaja at the top
ಹಿಂದಿನ ಬಾರಿ ನಾವು ಬಂದಾಗ ಇಲ್ಲಿ ಯಾರನ್ನೂ ನಿಲ್ಲಲು ಬಿಡದಷ್ಟು ಜೋರಾಗಿ ಗಾಳಿ ನಮ್ಮನ್ನು ತಳ್ಳುತ್ತಿತ್ತು.ನನ್ನಣ್ಣ ಹಿಂದಿನ ಬಾರಿ ಬಂದಾಗ ಅವನು ಸ್ಟೈಲಾಗಿ ಫೋಟೋಕ್ಕೆ ಅಂತ ತೋಳ ಒಂದು ಬದಿಗೆ ಹಾಕಿದ್ದ ಕೋಟನ್ನು ಹಾರ್ಸಿಕೊಂಡು ಹೋಗಿತ್ತಂತೆ ಗಾಳಿ. ಈ ಬಾರಿ ಅಷ್ಟು ಗಾಳಿಯಿಲ್ಲದಿದ್ದರೂ ತಂದ ಅವಲಕ್ಕಿಯನ್ನು ತಿನ್ನಬೇಕು ಅಂತ ಕೂತಿದ್ದ ನಮ್ಮ ಅವಲಕ್ಕಿಯನ್ನು ತೆರೆದು ಬಾಯಿಗಿಡುವ ಹೊತ್ತಿಗೇ ಮತ್ತೆ ಶುರುವಾಗಿ ನಮ್ಮ ಬಟ್ಟೆಗಳ ಮೇಲೆ, ಪಕ್ಕದಲ್ಲಿದ್ದ ಕಲ್ಲುಗಳ ಮೇಲೆ ಚೆಲ್ಲಿತ್ತು ! ಸಿಕ್ಕ ಅವಲಕ್ಕಿಯಷ್ಟೇ ನಮ್ಮ ಭಾಗ್ಯದ್ದು ಅಂದುಕೊಳ್ಳುತ್ತಾ ಸುತ್ತಣ ಭವ್ಯ ಪರಿಸರವನ್ನು ಆಸ್ವಾದಿಸುತ್ತಾ ನಂದಿಯ ಬಳಿ ಒಂದಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ ವಾಪಾಸ್ಸಾದ್ವಿ.

ಭವ್ಯ ಪರಿಸರದ ನಡುವಿನ ಬೇಸರ:
ಹಿಂದಿನ ಸಲ ಬಂದಾಗ ಇರದಿದ್ದು ಮತ್ತು ಈ ಸಲ ಬಂದಾಗ ಇದ್ದಿದ್ದು ಅಂದರೆ ಇಲ್ಲಿನ ಫ್ರೂಟಿ ಮಾಡೋರ ಹಿಂಡು ಮತ್ತು ಅವರ ಮನಸ್ಥಿತಿ ! ಮುಂದೆ ಏನೂ ಸಿಗೋಲ್ಲ ಸಾರ್ ಅಂತ ಬೆಟ್ಟದ ಬುಡದಿಂದಲೇ ಫ್ರೂಟಿ ಮಾರೋಕೆ ಶುರು ಮಾಡೋ ಇವರು ಫ್ರೂಟಿ ಕುಡಿದು ಜನರು ಕೊಟ್ಟ ಖಾಲಿ ಕೊಟ್ಟೆಗಳನ್ನು ಅಲ್ಲೇ ಬಿಸಾಡಿ ಬರುತ್ತಾರೆ. ಇಲ್ಲಿನ ಎರಡನೆಯ ಕೋಟೆ ಮತ್ತು ನಂದಿ ಧ್ವಜದ ಬಳಿ ಈ ತರಹ ಎಸೆದ ಕೊಟ್ಟೆಗಳು, ಪ್ಲಾಸ್ಟಿಕ್ ಬಾಟಲುಗಳ ದೊಡ್ಡ ರಾಶಿಯೇ ಇದೆ. ದಿನಾ ತಮ್ಮ ವ್ಯವಹಾರ ಮುಗಿದ ಮೇಲೆ ಖಾಲಿ ಚೀಲ ಇಳಿದು ಕೆಳಗಿಳಿವ ಇವರು ಆ ಕವರುಗಳನ್ನಾದ್ರೂ ತಂದ್ರೆ ಇಲ್ಲಿನ ಪರಿಸರ ಸ್ವಲ್ಪವಾದರೂ ಸ್ವಚ್ಛವಾಗುತ್ತಿತ್ತೇನೋ. ಲಾಭಕ್ಕೆ ಮಾತ್ರ ಇಲ್ಲಿನ ಪರಿಸರ ಬೇಕು ಆದ್ರೆ ಅದ್ರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ ಎಂಬಂತಿರೋ ಇವರನ್ನು ನೋಡಿ ಬೇಸರವಾಯ್ತು. ಸಾವನದುರ್ಗ ರಕ್ಷಿತ ಅರಣ್ಯ ಎಂದು ಬೋರ್ಡ್ ಹಾಕಿರೋ ಅರಣ್ಯ ಇಲಾಖೆ ಇಲ್ಲಿ ಕಂಡ ಕಂಡಲ್ಲಿ ಕಸ ಎಸೆಯೋಕೆ ಹೇಗೆ ಬಿಡ್ತಿದೆ ಎಂದೂ ಅಚ್ಚರಿಯಾಯ್ತು !

ಇಳಿವ ಹಾದಿ ಮತ್ತು ದೇಗುಲ ದರ್ಶನ: 
ಹತ್ತುವಾಗ ಅಲ್ಲಲ್ಲಿ ಕೂತು ದಣಿವಾರಿಸಿಕೊಳ್ಳುವ ಮೂಡಲ್ಲಿದ್ದ ಅಕ್ಷತಾ ಇಳಿಯುವಾಗ ಫುಲ್ ಜೋಷಲ್ಲಿದ್ದಂತಿತ್ತು. ಒಂದೂ ಕಾಲಿನ ಸುಮಾರಿಗೆ ಮೇಲಿಂದ ಕೆಳಗಿಳಿಯೋಕೆ ಶುರು ಮಾಡಿದ ನಾವು ಸುಮಾರು ಎರಡು ಕಾಲಿನ ಹೊತ್ತಿಗೆ ಕೆಳ ತಲುಪಿದ್ವಿ. ಒಂದೆರಡು ಕಡೆಗಳನ್ನು ಬಿಟ್ಟರೆ ಬೇರೆಲ್ಲ ಕಡೆಗಳಲ್ಲಿ ಇರೋ ಗುರುತುಗಳನ್ನು ಅನುಸರಿಸಿ ಆರಾಮಾಗಿ ಕೆಳತಲುಪಬಹುದು. ಕೆಲ ಕಡೆಗಳಲ್ಲಿ ನೀರು ಹರಿವ ಜಾಗಗಳನ್ನು ಅನುಸರಿಸಬೇಕಷ್ಟೆ. ಕೆಳಗಿಳಿದ ನಾವು ೧೯೫೬ರಲ್ಲಿ ಕಟ್ಟಿದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಅದರ ಪಕ್ಕದಲ್ಲಿರುವ ಅಮ್ಮನವರ ಗುಡಿ ಮತ್ತು ೧೦೫೬ರಲ್ಲಿ ಮೂರನೇ ಬಲ್ಲಾಳನು ಕಟ್ಟಿದ ಸಾವಂದಿ ವೀರಭದ್ರಸ್ವಾಮಿ ದೇವರ ದರ್ಶನ ಪಡೆದವು.

ಇತಿಹಾಸ ಪ್ರಸಿದ್ಧ ಸಾವಂದಿ ವೀರಭದ್ರಸ್ವಾಮಿ: 
Status at the Largest Dhwaja Stamba of Asia
ಸಾವನದುರ್ಗ ಊರಿಗೆ ಮುಂಚೆ ಸಾವಂದಿ ಎಂಬ ಹೆಸರಿತ್ತು ಎಂದನಿಸುತ್ತೆ. ಇಲ್ಲಿನ ಲಕ್ಷ್ಮೀ ನರಸಿಂಹ ದೇಗುಲಕ್ಕೂ ಸಾವಂದಿ ಲಕ್ಷ್ಮೀ ನರಸಿಂಹ ಎಂಬ ಹೆಸರಿದೆ. ೧೯೮೩ರಲ್ಲಿ ಜೀರ್ಣೋದ್ದಾರ ಕಂಡ ಇಲ್ಲಿನ ವೀರಭದ್ರಸ್ವಾಮಿ ದೇಗುಲದ ಎದುರಿಗಿರುವ ತುಲಾಭಾರ ಮಂಟಪ, ಪಕ್ಕದಲ್ಲಿ ಇನ್ನೂ ಗಟ್ಟಿಯಿರೋ ಮಂಟಪ ಮತ್ತ್ತು ಒಳಗಡೆಯಿರೋ ಕೆಲ ಶಿಲ್ಪಗಳು ಇಲ್ಲಿನ ಇತಿಹಾಸವನ್ನು ಸಾರುತ್ತವೆ. ಬೆಂಗಳೂರಿನ ಬಳಿಯಿರೋ ದೊಮ್ಮಲೂರಿನ  ಚೊಕ್ಕನಾಥೇಶ್ವರ, ಬೇಗೂರು ಪಂಚಲಿಂಗೇಶ್ವರ ದೇಗುಲ ಮತ್ತು ಅಲಸೂರಿನ ಸೋಮೇಶ್ವರ ದೇಗುಲಗಳ ಬಗ್ಗೆ ಅಚ್ಚರಿಗೊಂಡಿದ್ದ ನಾನು ಈಗ ಅದೇ ಸಾಲಿನ, ಹನ್ನೊಂದನೆಯ ಶತಮಾನಕ್ಕೆ ಸೇರಿದ ದೇಗುಲವನ್ನು ಸಾವನದುರ್ಗದಲ್ಲಿ ಕಂಡು ಇನ್ನೂ ಅಚ್ಚರಿಗೊಂಡೆ.
Ruins of Mantapa near the Veerabhadra temple
ಆದರೆ ಈ ದೇಗುಲದ ಎದುರಿಗಿರುವ ಮಾಹಿತಿಯಲ್ಲಿನ ಮೂರನೆಯ ಬಲ್ಲಾಳ ಯಾರು ಎಂಬ ಬಗ್ಗೆ ಸಂದೇಹವಿದೆ. ಈತ ಹೊಯ್ಸಳರ ಪ್ರಸಿದ್ಧ ಅರಸನಾದ ಮೂರನೆಯ ವೀರಬಲ್ಲಾಳನಾಗಿರಲು ಸಾಧ್ಯವಿಲ್ಲ. ಯಾಕೆಂದರೆ ಆತನ ಕಾಲ ಕ್ರಿ.ಶ ೧೨೯೨ರಿಂದ ೧೩೪೨. ಮತ್ತು ಇದು ಆತನ ಕಾಲದಲ್ಲಿ ಕಟ್ಟಿಸಿದ್ದಾದರೆ ಇಲ್ಲೂ ಹೊಯ್ಸಳ ದೇಗುಲಗಳಲ್ಲಿರುವಂತೆ ಹೊಯ್ಸಳ ಲಾಂಛನವಿರಬೇಕಿತ್ತು. ಹೊಯ್ಸಳ ಶೈಲಿಯ ಶಿಲ್ಪಗಳೂ ಇರಬೇಕಿತ್ತು. ಆದರೆ ಇಲ್ಲಿನ ಶಿಲ್ಪಗಳಲ್ಲಿ ಆ ಹೋಲಿಕೆಯಿಲ್ಲ. ಮತ್ತೆ ಇದು ಕ್ರಿ.ಶ ೧೦೫೬ ಅಂದರೆ ಹೊಯ್ಸಳರ ಕಾಲಕ್ಕೂ ಮುಂಚೆ ಕಟ್ಟಿಸಿದ್ದಾದರೆ ಈ ಮೂರನೆಯ ಬಲ್ಲಾಳ ಯಾವ ಸಾಮ್ರಾಜ್ಯಕ್ಕೆ ಸೇರಿದವ ಎಂಬ ಪ್ರಶ್ನೆ ಇತಿಹಾಸಜ್ಞರಿಗೇ ಮೀಸಲಾದ ಪ್ರಶ್ನೆಯಾಗಿ ಉಳಿದುಬಿಡುತ್ತೆ. ಅದಕ್ಕೆ ತಲೆ ಕೆಡಿಸಿಕೊಳ್ಳದೇ ಇಲ್ಲಿನ ಸೌಂದರ್ಯ ಸವಿಯೋ ಆಸಕ್ತಿಯಿರೋರಿಗೆ ಇದರೆದುರಿಗೆ ಇರೋ ಧ್ವಜ ಸ್ಥಂಭ ಗಮನಸೆಳೆಯುತ್ತೆ. ಈ ಧ್ವಜಸ್ತಂಭ ಏಷ್ಯಾದಲ್ಲೇ ಅತೀ ಎತ್ತರವಾದ ಏಕಶಿಲಾ ಕಂಬ ಎನ್ನೋದು ಇನ್ನೊಂದು ಹೆಗ್ಗಳಿಕೆ ! ಉಜರಾಯಿ ಇಲಾಖೆ ಅಡಿಗೆ ಬರೋ ಇಲ್ಲಿನ ದೇವಸ್ಥಾನದಲ್ಲಿ ಪ್ರತೀ ದಿನ ೧೨:೩೦ರಿಂದ ೨:೩೦ರ ವರೆಗೆ ದಾಸೋಹ ವ್ಯವಸ್ಥೆಯೂ ಇದೆ. ೨:೩೫ರ ಸುಮಾರಿಗೆ ಅಲ್ಲಿಗೆ ಬಂದ ನಮಗೆ ಅಲ್ಲಿನವರು ದಾಸೋಹದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಿದರೂ ದೊಡ್ಡಪ್ಪನ ಮನೆಗೆ ಊಟಕ್ಕೆ ಹೋಗಬೇಕಾಗಿದ್ದ ನಾವು ಅಲ್ಲಿಂದ ಮುಂದೆ ಸಾಗಿದೆವು.



Monday, December 24, 2018

Apps Don't work after upgrading to IOS 12.1.2

If you are having an iphone , then you might have received an update 4 days back to update your IOS version to 12.1.2 with an information that it has some bug fixes for Iphone X and others. So, even if you are not having Iphone X, you might have updated the version (just like me) to avoid the inconvenience of seeing the popup every time you see the phone ! But the real issue starts after that you don't realize that it is because of the incompatibility between your IOS version and network carrier version ! Internet would be working i.e you would be able to see facebook, google , youtube etc. But most of the apps don't work. i.e paytm, phonepe, amazon, flipcart etc.
Amazon apps not working 
A server with specified host name could not be found error in paytm


 Amazingly Googlepay works and that was the only one working till i found a fix for this today after multiple attempts to reach out to customer care of network provider (For me it was Jio). 
So, the inconvenience which started with one app not working in mobile data extended to multiple apps and finally got resolved as i write below

how to Fix: 
1. Switch off the Mobile Data and connect to a wifi
> In case you don't have a wifi, you can ask your friend /colleague to switch on mobile hotspot for a minute and connect to that as the below fix consumes just few KB/or an MB
2. Go to Settings > General > 


See the version of  carrier. 

Compatible version of Network version is 35.1 for IOS version 12.1.2. 
In case it is showing 35.0 or less, then that is the root cause of the issue. 






























3. Just click on Carrier version and you get a popup that carrier setting has been updated automatically !

After this, if you open your apps , they would work as they used to work before . 

In case they are not working still, follow next steps

4. Reset Network Statistics of your phone by 
Settings > General > Reset > (Scroll all the way down in General till you find the shutdown option . You would see Reset option above it) > Reset Network Settings. 

It would reset all your network settings and restart the phone. 

Resetting the network settings does not cause any harm or does not delete any of the personal data in the phone anyway. So, you can do this safely.

Ending Note:
Not sure on why the IOS or the Network provider(JIO) don't take care to update the network carrier version automatically when the IOS is updated and want us to manually click on that version to update it !


Anyhow, hopefully above fix might help you. 
Thanks for reading and have a nice day :-) 

Saturday, December 22, 2018

ನಾ ನೋಡಿದ ಸಿನೆಮಾ ಕೆ.ಜಿ.ಎಫ್

ಇಲ್ಲಿಯವರೆಗೆ ಬಂದ ಯಾವ ಚಿತ್ರವನ್ನೂ ನಾನು ಮೊದಲ ದಿನವೇ ನೋಡಿರಲಿಲ್ಲ. ಆ ದಾಖಲೆ ಮುರಿಯಬೇಕು ಅಂತ ಈ ಸಲ ಚಿತ್ರವೊಂದನ್ನು ಸುಮಾರು ದಿನ ಮುಂಚೆಯೇ ಅಂತರ್ಜಾಲದಲ್ಲಿ ಬುಕ್ ಮಾಡಿದ್ದೆ. ಆದರೆ ಚಿತ್ರದ ದಿನ ಹತ್ತಿರ ಬಂದಂತೆ ಅದರ ಪ್ರದರ್ಶನಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆಯಂತೆ ಅನ್ನೋ ಸುದ್ದಿಯಿಂದ ಸ್ವಲ್ಪ ಬೇಸರವಾಗಿತ್ತು. ನಿನ್ನೆ ಬೆಳಗ್ಗೆ ಆ ಚಿತ್ರಕ್ಕೆ ಹೋದ ಗೆಳೆಯರು ಅದರ ಬಗ್ಗೆ ಬರೆದಾಗಲೇ ಸ್ವಲ್ಪ ಸಮಾಧಾನವಾಗಿತ್ತು.ಆದರೂ ಆಮೇಲೇನಾದ್ರೂ ಆದ್ರೆ ಅನ್ನೋ ಪುಕುಪುಕು. ಏನಾದ್ರೂ ಆಗಲಿ ಅಂತ ಮೊದಲ ದಿನ ನೋಡದ ದಾಖಲೆ ಮುರಿಯೋಕೆ ಚಿತ್ರಮಂದಿರಕ್ಕೆ ಹೋಗಿದ್ದೆ. ನೋಡಿದ ಚಿತ್ರವೂ ಸುಮಾರು ದಾಖಲೆಗಳ ಮುರಿಯೋ ನಿರೀಕ್ಷೆ ಹುಟ್ಟಿಸಿದ್ದು ಸುಳ್ಳಲ್ಲ.


ಕಳೆದ ಕೆಲವು ವರ್ಷಗಳ ಹಿಂದೆ ಮೊಬೈಲುಗಳಲ್ಲಿ ಬಂದ ಸ್ಲೋ ಮೋಷನ್ ಫೋಟೋ ಅನ್ನೋ ಮೋಡ್ ಸಖತ್ ಖುಷಿ ಕೊಟ್ಟಿತ್ತು. ಜಲಪಾತವೊಂದರ ಕೆಳಗೆ ನಿಂತು ತೆಗೆದಾಗ ಅದರ ಪ್ರತಿ ಹನಿಯೂ ನಿಧಾನವಾಗಿ ಬೀಳುವಂತೆ ತೆಗೆಯೋದು, ನೀರಿಗೆ ಕಲ್ಲೆಸೆದಾಗ ಅದರಲ್ಲಿ ಮೂಡೋ ತರಂಗಗಳ ತೆಗೆಯೋದು, ಮರಳ ಮೇಲೆ ಬೈಕ ಚಕ್ರಗಳನ್ನು ಸಡನ್ನಾಗಿ ತಿರುಗಿಸಿದಾಗ ಹಾರೋ ಮರಳ ಪ್ರತೀ ಕಣಗಳ ಚಲನೆಯನ್ನು ತೆಗೆಯೋದು ಅದ್ಭುತ ಅನಿಸುತ್ತಿತ್ತು. ಆದರೆ ಈ ತರಹದ್ದೇ ಅದ್ಭುತ ಅನುಭವಗಳ ಚಲನಚಿತ್ರವೊಂದು ಕಟ್ಟಿಕೊಟ್ಟರೆ ? ಇಂಗ್ಲೀಷಿನ ಫ್ಲ್ಯಾಷ್ ಅನ್ನೋ ಧಾರಾವಾಹಿಯನ್ನೋ ಅಥವಾ ಜಸ್ಟೀಸ್ ಲೀಗ್ ಅನ್ನೋ ಚಲನಚಿತ್ರವನ್ನೋ ನೋಡಿದ್ದಿದ್ರೆ ಅದರಲ್ಲಿ ಸಖತ್ ವೇಗವಾಗಿ ಓಡೋದನ್ನ ಸ್ಲೋ ಮೋಷನ್ನಲ್ಲಿ ತೋರಿಸಿದ್ರೆ ಹೇಗಿರುತ್ತೆ ಅನ್ನೋದನ್ನ ಕಟ್ಟಿ ಕೊಡೋ ಪ್ರಯತ್ನವಿದೆ. ಬಾಹುಬಲಿಯಂತ ಚಿತ್ರಗಳಲ್ಲಿ ಕೂಡ ಈ ತರದ ಪ್ರಯತ್ನಗಳ ಮಾಡಿದ್ದರೂ ಕೂಡ ಅದು  ವಿಎಫೆಕ್ಸ್ ಎಫೆಕ್ಟುಗಳು ಅಂತ ಆರಾಮಾಗಿ ಗೊತ್ತಾಗಿಬಿಡುತ್ತೆ. ಅತ್ಯಂತ ಸಹಜವಾಗಿ ಕಾಣುವಂತಹ ನಾಯಕ ನೆಲಕ್ಕೆ ತುಳಿದಾಗ ಏಳೋ ಧೂಳ ಕಣಗಳು, ನೀರಿನಿಂದ ಎದ್ದಾಗ ಚಿಮ್ಮೋ ನೀರ ರಾಶಿ, ರಾಕಿ ಗರುಡನನ್ನು ಕೊಲ್ಲೋಕೆ ಅಂತ ನೀರಿನಿಂದ ತೆಗೆಯೋ ಆಯುಧದ ಸಂಚಾರ ... ಉಫ್ ಹೇಳಹೋದ್ರೆ ಚಿತ್ರದ ತುಂಬೆಲ್ಲಾ ರಾರಾಜಿಸೋ ಸ್ಲೋ ಮೋಷನ್ ದೃಶ್ಯಗಳೇ ನೋಡಿಸಿಕೊಂಡು ಹೋಗುತ್ತೆ ನಿನ್ನೆ ತೆರೆಕಂಡ ಕೆ.ಜಿ.ಎಫ್ ಸಿನೆಮಾವನ್ನು.

೧೯೫೫, ೭೦ರ ದಶಕ, ೮೧ರ ದೃಶ್ಯಗಳನ್ನ ತೆಗೆಯುವಾಗ ತುಂಬಾ ಜಾಗರೂಕತೆಯಿಂದ ತೆಗೆದಿದ್ದಾರೆ ಅಂತ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಓದಿದ್ದೆ. ದೃಶ್ಯವೊಂದರಲ್ಲಿ ಬರೋ ಬೆಂಕಿಪೊಟ್ಟಣ ಕೂಡ ಆ ಕಾಲದ್ದೇ ಬೇಕು ಅಂತ ಗಮನವಹಿಸಿದ್ರು ಅಂತಲೂ ಓದಿದ್ದೆ. ಆಗಿನ ಕಾಲದಲ್ಲಿರುತ್ತಿದ್ದಂತಹ ಪ್ಯಾಂಟುಗಳು, ನಾಯಕಿ ಹಣೆಗೆ ಹಾಕಿಕೊಳ್ಳೋ ಪಟ್ಟಿ, ಆಗಿನ ಕಾಲದಲ್ಲಿರುವಂತಹ ಕ್ಯಾಬರೆಗಳು ಚಿತ್ರ ನಿರ್ಮಾಣದಲ್ಲಿನ ಶ್ರದ್ಧೆಯನ್ನು ತೋರಿಸುತ್ತೆ. ಆದರೆ ಇಷ್ಟೆಲ್ಲಾ ಗಮನವಹಿಸಿದ್ರೂ ಇಷ್ಟು ಸಣ್ಣ
ವಿಷಯ ಹೆಂಗೆ ಮಿಸ್ಸಾಯ್ತು ಅಂತಲೂ ಕೆಲವು ಕಡೆ ಅನಿಸುತ್ತೆ. ಉದಾಹರಣೆಗೆ: ಕೋಲಾರದ ಒಂದು ಗಣಿ. ಅಲ್ಲಿರೋ ಜನರ ಮೈಯೆಲ್ಲಾ ಧೂಳೇ ಧೂಳಾಗಿದೆ. ಎಲ್ಲಿ ನೋಡಿದ್ರೂ ಧೂಳು ಹಾರ್ತಾ ಇದೆ. ಅವರನ್ನು ಕಾಯೋಕೆ ಅಂತ ಕ್ರೂರವಾಗಿ ಕಾಣಿಸೋ ಕಾವಲುಗಾರರಿದ್ದಾರೆ. ಅವರಲ್ಲಿ ಕೆಲವರು ಧೂಳ ಮಧ್ಯೆ ಅಂಗಿ ಬಿಚ್ಚಿಕೊಂಡೂ ಇದ್ದಾರೆ.ಆದರೆ ಈ ಕಾವಲುಗಾರರ ಮೈಮೇಲೆ ಒಂಚೂರೂ ಧೂಳಿಲ್ಲ !

ಕಲಾತ್ಮಕ ಸಿನಿಮಾಟೋಗ್ರಾಫರ್ ಒಬ್ಬರಿಗೆ ಆಕ್ಟನ್ ಚಿತ್ರವನ್ನು ಚಿತ್ರಿಸೋಕೆ ಕೊಟ್ಟರೆ ಹೇಗಿರುತ್ತೋ ಹಾಗಿದೆ ಕೆ.ಜಿ.ಎಫ್. ನಾಯಕ ಗರುಡನ ಜನರೊಂದಿಗೆ ಹೋರಾಡುತ್ತಿರ್ತಾನೆ. ಆಗ ಹಿಮ್ಮೇಳದಲ್ಲಿ ಸೂರ್ಯಾಸ್ತದ ದೃಶ್ಯ ! ಕತ್ತಲ ಗುಹೆಗಳಲ್ಲಿ  ಪಂಜು, ಕಾದ ರಾಡುಗಳಿಂದ ನಡೆಯುವ ಹೊಡೆದಾಟದಲ್ಲಿ ನಂದಿಹೋಗೋ ಬೆಳಕುಗಳ ನಡುವಿನ ಸ್ಲೋಮೋಷನ್ ಚಿತ್ರಣ, ಗಣಿಗಳಲ್ಲಿನ ಬೈಕ್ ರೇಸು , ಮಾರಿಕಾಂಬಾ ಜಾತ್ರೆಯಲ್ಲಿನ ದೀಪಗಳ ಚಿತ್ರಣ, ದೀಪ, ಪಂಜು ಹೊತ್ತು ನಡೆಯುತ್ತಿರೋ ಜನರನ್ನು ಮೇಲಿಂದ ತೆಗೆವ ಬಂಗಾರದ ಎಳೆಯಂತಹ ಚಿತ್ರಣ ಇವೆಲ್ಲಾ ನೋಡಿಸಿಕೊಂಡು ಹೋಗುತ್ತೆ. ಚಿತ್ರದ ಕ್ಲೈಮಾಕ್ಸಿನಲ್ಲಿ ಬರೋ ಮಾರಿ ಜಾತ್ರೆಯ ಚಿತ್ರಣ ಅನೇಕ ರೀತಿಯಲ್ಲಿ ಮುಖ್ಯವೆನಿಸೋದ್ರಿಂದ ಅದನ್ನು ಸಾಕಷ್ಟು ಅದ್ಧೂರಿಯಾಗೇ ತೋರಿಸಲಾಗಿದೆ.

ಯಾರೋ ಹತ್ತು ಜನನ್ನು ಹೊಡೆದು ಡಾನ್ ಆನ್ನಿಸ್ಕೊಂಡಂಗಲ್ಲ ಅನ್ನೋ ಟಾಂಟಿಗೆ, ನಾನು ಯಾರೋ ಹತ್ತು ಜನನ್ನ ಹೊಡೆದಿದ್ದಲ್ಲ ಕಣೋ, ಹೊಡೆದ ಹತ್ತು ಜನಾನೂ ಡಾನ್ಗಳೇ ಅನ್ನೋ ಉತ್ತರ; ನಿನ್ನ ಹಿಂದೆ ಸಾವಿರ ಜನ ಇದ್ದಾರೆ ಅಂತ ನಿನಗೆ ಧೈರ್ಯ ಇದ್ದರೆ ಒಂದು ಯುದ್ಢ ಗೆಲ್ಲಬಹುದು. ಆದರೆ ನೀ ಮುಂದೆ ಇದೀಯ ಅಂತ ಸಾವಿರ ಜನಕ್ಕೆ ನಿನ್ನ ಹಿಂದೆ ನಿಲ್ಲೋಕೆ ಧೈರ್ಯ ಬಂದರೆ ಪ್ರಪಂಚಾನೇ ಗೆಲ್ಲಬಹುದು ಎನ್ನೋ ಡೈಲಾಗುಗಳು, ಅಲ್ಲಲ್ಲಿ ಒಳಸುಳಿವ ಭಾವನೆಗಳು, ಆಗಾಗ ಬರೋ ಹಾಡ ಎಳೆಗಳೂ ಭರ್ಜರಿಯಾಗೇ ಇದೆ. ಕಾಫಿ ತರೋನ ಕಾಮಿಡಿ ಮಧ್ಯ ಮಧ್ಯ ಸ್ವಲ್ಪ ಬಿಡುವು ಕೊಟ್ರೂ ಚಿತ್ರದ ರೌದ್ರ ರಸಾನುಭವಕ್ಕೆ ಎಲ್ಲೂ ಅಡ್ಡಿಯಾಗೋಲ್ಲ.

ಇವೆಲ್ಲಾ ಬೇಡಪ್ಪ, ಸುಮ್ಮನೇ ಟೈಂಪಾಸಿಗೆ ಹೋಗ್ತೀನಿ ಚಿತ್ರ ನೋಡೋಕೆ. ಹೋಗ್ಬೋದಾ ಅಂದ್ರೆ ಧಾರಾಳವಾಗಿ ! ಫೈಟಿಂಗ್ ಅಂದ ಮಾತ್ರಕ್ಕೆ ವಿಕೃತ ಹಿಂಸೆಯನ್ನೋ, ಲಾಜಿಕ್ಕಿಲ್ಲದ ತೆಲುಗು ಚಿತ್ರಗಳಲ್ಲಿರುವಂತಹ ನಾಯಕ ಒದ್ದರೆ ಜೀಪು ತಿರುಗಿ ನಿಲ್ಲುವಂತಹ  ಅಸಂಬದ್ಧಗಳನ್ನೋ ತೋರಿಸಬೇಕು ಅನ್ನೋ ಅನೇಕ ಕನ್ನಡ ನಿರ್ದೇಶಕರ ಭ್ರಮೆಗೆ ಇವರು ಒಳಗಾಗದೇ ಇರೋದು ಕನ್ನಡಿಗರ ಪುಣ್ಯ ಎಂದುಕೊಳ್ಳಬೇಕೇನೋ. ಉದಾಹರಣೆಗೆ ಸುತ್ತಿಗೆ ತೆಗೆದು ಹೊಡೆಯೋ ದೃಶ್ಯವೊಂದು ಬರುತ್ತೆ. ಆದರೆ ಆ ಸುತ್ತಿಗೆ ಎತ್ತಿದ್ದು ಬರುತ್ತೆಯೇ ಹೊರತು ಅದು ತಲೆಗೆ ಬಿದ್ದ ದೃಶ್ಯ ಬರೋಲ್ಲ ! ಹಾಗಾಗಿ ಕುಟುಂಬದವರೊಂದಿಗೂ ಆರಾಮಾಗಿ ನೋಡಬಹುದಾದ ಚಿತ್ರ ಇದು ಅನ್ನಬಹುದೇನೋ. ಯಶ್, ತಮನ್ನಾ, ಶ್ರೀನಿಧಿ ಶೆಟ್ಟಿ, ಅನಂತನಾಗ್, ಮಾಳವಿಕಾ ಅವಿನಾಶ್ ಮುಂತಾದ ತಾರಾಗಣವಿರುವ ಇದರಲ್ಲಿ ನಾಯಕನ ಹೀರೋಯಿಸಂ ತೋರಿಸೋಕೆ ಅಂತ ಅನೇಕ ಕಡೆಗಳಲ್ಲಿ ಎಲ್ಲಾ ಚಿತ್ರಗಳಲ್ಲಿ ಇರುವಂತಹ ಪ್ರಯತ್ನಗಳಿದ್ದರೂ ಚಿತ್ರಕಥೆಯ ಓಘದಿಂದ ಮತ್ತು ಛಾಯಾಗ್ರಾಹಣದ ವೈಭವದಿಂದ ಚಿತ್ರ ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತೆ.

Tuesday, December 18, 2018

ಬರಸೆಳೆವ ಭೀಮೇಶ್ವರ

ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಬರೋ ಜನರಿಗೆ ಅದರ ಬಳಿ ಇರೋ ಇತರೇ ಸ್ಥಳಗಳಾದ ನಿಪ್ಲಿ ಜಲಪಾತ, ಶರಾವತಿ ಪ್ರಕೃತಿ ಶಿಬಿರ, ಮುಪ್ಪಾನೆ ಪ್ರಕೃತಿ ಶಿಬಿರ, ಕಾನೂರು ಕೋಟೆ, ದಬ್ಬೆ ಜಲಪಾತ, ಭೀಮೇಶ್ವರ ಜಲಪಾತ-ದೇವಸ್ಥಾನ ಮುಂತಾದ ಸ್ಥಳಗಳ ಬಗ್ಗೆ ಗೊತ್ತಿರೋದಿಲ್ಲ. ಉದಾಹರಣೆಗೆ ನೀವು ಗಣೇಶ್ ಅಭಿನಯದ ಮುಂಗಾರು ಮಳೆ-೨ ಚಿತ್ರ ನೋಡಿದೀರಾ ? ನೋಡಿದ್ರೆ  ಅದರ "ಕನಸಲೂ ನೂರು ಬಾರಿ.." ಅಂತ ಶುರುವಾಗೋ ಹಾಡನ್ನೂ ನೋಡಿರ್ತೀರ. https://www.youtube.com/watch?v=S6DTN6u6ysc. ಅದರಲ್ಲಿ ಬರೋ ಅದ್ಭುತ ಜಲಪಾತ ಮತ್ತು ಲೊಕೇಶನ್ ಯಾವುದು ಅಂತ ಅಂದ್ಕೋತಾ ಇದ್ರಾ ? ಅದೇ ಭೀಮೇಶ್ವರ !  
Bheemeshwara
ಜೋಗದವರೆಗೂ ಹೋಗಿ ಅದಕ್ಕೆ ಹತ್ತಿರದಲ್ಲೇ ಇರೋ ಈ ತರದ  ಯಾವುದನ್ನೂ ನೋಡದೇ ಬರೋದಂದ್ರೆ ಮದುವೆ ಮನೆ ಊಟಕ್ಕೆ ಹೋಗಿ ಸ್ವೀಟ್ ತಿನ್ನದೇ ಬಂದಂಗೇ ಸರಿ ! ಈ ಸಲದ ಭಾರೀ ಮಳೆಗೆ ಉಕ್ಕಿ ಹರಿದ ಶರಾವತಿಯನ್ನು ಕಣ್ತುಂಬಿಕೊಳ್ಳೋಕೆ ನಿಮ್ಮಲ್ಲಿ ಅನೇಕ ಜನ ಜೋಗಕ್ಕೆ ಬಂದಿರ್ತೀರ ಅಥವಾ ಸದ್ಯದಲ್ಲೇ ಬರೋ ಪ್ಲಾನಲ್ಲಿರ್ತೀರ. ಹಾಗೆ ಬರೋರಿಗೆ ಅನುಕೂಲವಾಗಲಿ ಅಂತಲೇ ಈ ಲೇಖನ.   
Tiny water streams in Bheemeshwara

ಹೋಗೋದು ಹೇಗೆ ? 
ಬೆಂಗಳೂರು/ಮೈಸೂರು/ಶಿವಮೊಗ್ಗಗಳಿಂದ ಸಾಗರಕ್ಕೆ ನೇರ ರೈಲು ಮತ್ತು ಬಸ್ಸುಗಳಿವೆ. ಅಲ್ಲಿಂದ ಭೀಮೇಶ್ವರಕ್ಕೆ ಹೋಗೋಕೆ ಜೋಗ, ಕೋಗಾರು ಮೇಲೆ ಭಟ್ಕಳಕ್ಕೆ ಹೋಗೋ ಬಸ್ ಹಿಡಿಯಬೇಕು. ಸಾಗರದಿಂದ ಇಲ್ಲಿಗೆ ೬೧ ಕಿ.ಮೀ. ನೀವು ಜೋಗಕ್ಕೆ ಬಂದರೆ ಸಾಗರದಿಂದ ಸುಮಾರು ೩೦ ಕಿ.ಮೀ ಬಂದಾಗ ಸಿಗೋ ಕಾರ್ಗಲ್ ಎಂಬಲ್ಲಿ ಭಟ್ಕಳದತ್ತ ತಿರುಗೋ ರಸ್ತೆಯಲ್ಲಿ ಭೀಮೇಶ್ವರಕ್ಕೆ ೩೮ ಕಿ.ಮೀ ದೂರ ಎಂಬ ಬೋರ್ಡ್ ಕಾಣುತ್ತೆ. ಅದೇ ರಸ್ತೆಯಲ್ಲಿ ನೇರವಾಗಿ ಸಾಗಿದರೆ ಅರಲಗೋಡು-ಹೊಸಗದ್ದೆ-ಕೊಂಜಳ್ಳಿ-ಕೋಗಾರು ಮಾರ್ಗವಾಗಿ ಸಾಗಿದಾಗ ರಸ್ತೆಯ ಬಲಬದಿಗೆ ಭೀಮೇಶ್ವರ ಎಂಬ ಬೋರ್ಡ್ ಕಾಣುತ್ತದೆ. ಅದರ ಪಕ್ಕದಲ್ಲಿ ಸಾಗೋ ಸಿಮಂಟ್ ರಸ್ತೆಯಲ್ಲಿ ೨ ಕಿ.ಮೀ ಕೆಳಗೆ ಸಾಗಿದರೆ ಸಿಗೋ ಗುಡಿಹಿತ್ಲು ಎಂಬ ಊರಲ್ಲಿ ಭೀಮೇಶ್ವರ ಜಲಪಾತ ಮತ್ತು ದೇವಸ್ಥಾನಗಳಿವೆ.   


Bheemeshwara waterfalls


ಬೈಕಿನ ಬ್ರೇಕ್ಟೆಸ್ಟು:
ಊರಂದರೆ ದೊಡ್ಡ ಊರಲ್ಲವಿದು. ದಾರಿ ಮಧ್ಯೆ ಒಂದಿಷ್ಟು ಜನ ಓಡಾಡೋರು ಮತ್ತೆ ಅತ್ತಿತ್ತ ಒಂದಿಷ್ಟು ಗದ್ದೆಗಳು ಕಾಣೋದು ಬಿಟ್ಟರೆ ರಸ್ತೆಯ ಇಕ್ಕೆಲಗಳಲ್ಲೂ ಮನೆ ಸಿಗೋ ದೊಡ್ಡ ಊರಲ್ಲ ಇದು ! ಹೆದ್ದಾರಿಯ ಬುಡದಿಂದ ಕೆಳಗಿಳಿಯೋ ಟಾರ್ ರಸ್ತೆಯನ್ನ ನೋಡಿ ಕೊನೆಯವರೆಗೂ ರಸ್ತೆ ಇದೇ ತರ ಅಂದ್ಕೊಂಡು ಹೋದ್ರೆ ನಿಮ್ಮ ಕತೆ ಅಷ್ಟೆ! ನೂರು ಮೀಟರ್ಗಳಲ್ಲೇ ಕೊನೆಯಾಗೋ ಸಿಮೆಂಟ್ ರಸ್ತೆ ಕಲ್ಲು ಮಣ್ಣಿನ ರಸ್ತೆಯಾಗಿ  ಬದಲಾಗತ್ತೆ. ಕಡಿದಾದ ಇಳಿಜಾರು , ಮಧ್ಯೆ ಮಧ್ಯೆ ಸಿಗೋ ಏರುಗಳ ಜೀಪಿಗೆ ಅಂತಲೇ ಮಾಡಿರೋ ಈ ರಸ್ತೆಯಲ್ಲಿ ಕಾರ್ ಬಿಡಿ ಬೈಕಲ್ಲಿ ಹೋಗೋದೇ ದೊಡ್ಡ ಸಾಹಸ. ನಡೆದುಕೊಂಡು ಹೋಗೋಕೆ ೨ ಕಿ.ಮೀ ಆಗೋ ಈ ರಸ್ತೆಯಲ್ಲಿ ಸುಮಾರು ೩೫-೪೦ ನಿಮಿಷಕ್ಕೆ ಕೆಳಗಿಳಿಯಬಹುದಾದ ಈ ರಸ್ತೆಯಲ್ಲಿ ಬೈಕ್ ತಗೊಂಡು ಹೋಗ್ತೀರ ಅಂದ್ರೆ ಅದಕ್ಕೆ ಸಾಕಷ್ಟು  ತಾಳ್ಮೆ ಮತ್ತು ಕೌಶಲ್ಯ ಬೇಕು. ನ್ಯೂಟ್ರಲ್ಲು ಮತ್ತು ಬ್ರೇಕುಗಳ ಸಹಾಯದಿಂದಲೇ ಕೆಳಗಿಳಿಸಬೇಕಾದ ಈ ರಸ್ತೆಯಲ್ಲಿ ಮೇಲೆ ಹತ್ತಿಸೋಕೆ ಒಂದೆಡೆ ಜಾಗ ಬಿಟ್ರೆ ಬೇರೆಲ್ಲ ಕಡೆಯೂ ಮೊದಲ ಗೇರೇ ಗತಿ ! ಎರಡು ವರ್ಷದ ಹಿಂದೆ ಬೈಕ್ ತಗೊಂಡ ಹೊಸದ್ರಲ್ಲಿ ಇಲ್ಲಿಗೆ ಅಮ್ಮನ್ನ ಕರ್ಕೊಂಡು ಹೋಗಿದ್ದೆ. ಅಲ್ಲಿನ ಕೆಸರು, ಮಣ್ಣುಗಳಲ್ಲಿ ಗರ ಗರ ತಿರುಗ್ತಿದ್ದ ಚಕ್ರ, ಏನು ಮಾಡಿದರೂ ಮೇಲೆ ಹತ್ತದ ಬೈಕನ್ನ ಹೇಗೋ ಮೇಲೆ ಹತ್ತಿಸಿ ಅಮ್ಮನ್ನ ನಡ್ಕೊಂಡು ಬರೋಕೆ ಹೇಳಿದ್ದು ಬೇಡ ಬೇಡವೆಂದ್ರೂ ನೆನಪಾಗುತ್ತೆ ! ಮಡದಿಗೆ ಈ ಜಾಗ ತೋರಿಸ್ಬೇಕಂತ ಮತ್ತೆ ಕರ್ಕೊಂಡು ಬಂದಾಗ ಎಲ್ಲೂ ತೊಂದರೆಯಾಗದೆ ದೇಗುಲದ ಬುಡದವರೆಗೂ ಗಾಡಿಯಲ್ಲಿ ಹೋಗಿದ್ದು, ಮತ್ತೆ ವಾಪಾಸ್ ಬಂದಿದ್ದು ಬೇರೆ ವಿಷಯ ಬಿಡಿ. ಆದರೆ ಇಲ್ಲಿನ ಮಹಾನ್ ಇಳಿಜಾರು ಮತ್ತು ಏರುಗಳ ಸವಾಲಿನಲ್ಲಿ ತಲೆ ಕೆಡಿಸಿಕೊಳ್ಳದೇ ಡಬಲ್ ಹತ್ತಿಸಿದ ಬೈಕಿಗನಿಗೆ ಬೇರೆ ಯಾವ ರಸ್ತೆಯಲ್ಲಾದರೂ ಓಡಿಸಬಲ್ಲೆನೆಂಬ ಧೈರ್ಯ ಬಂದರೆ ತಪ್ಪೇನೂ ಇಲ್ಲ ಅನಿಸುತ್ತೆ !  
Yaagashale-The final point till where you can reach by Bike

ಭೀಮಗಾತ್ರದ ಬಂಡೆಗಳು, ಬಿಳಿಯ ಜಲಧಾರೆ: 
Bheemeshwara temple
ಇಲ್ಲಿರೋ ಯಾಗಶಾಲೆ ಮತ್ತು ಹಾಲಿನ ಬಳಿ ಗಾಡಿ ನಿಲ್ಲಿಸಿ ಮುಂದೆ ಸಾಗೋ ನಿಮಗೆ ಬೃಹದಾಕಾರದ ಬಂಡೆಗಳು ಸ್ವಾಗತಿಸುತ್ತವೆ. ಜಲಪಾತವಾಗಿ ಧುಮ್ಮಿಕ್ಕೋ ಸರಳಹೊಳೆ ಝುಳು ಝುಳು ಅನ್ನುತ್ತಾ ನಿಮ್ಮ ಕಾಲಬುಡದಲ್ಲೇ ಸೇತುವೆಯಡಿಗೆ ಹರಿದು ಹೋಗುತ್ತಾಳೆ.

On the way to Bheemeshwara temple from Yagashale
ಇವುಗಳಿಂದಲೇ ಈ ಜಾಗಕ್ಕೆ ಭೀಮೇಶ್ವರ ಎಂಬ ಹೆಸರು ಬಂತೇ ಅಂದ್ಕೊಂಡ್ರಾ ? ಇಲ್ಲ. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ದ್ವಾಪರಯುಗದಲ್ಲಿ ಪಾಂಡವರ ವನವಾಸದ ಸಮಯದಲ್ಲಿ ಅವರಿಲ್ಲಿಗೆ ಬರುತ್ತಾರಂತೆ. ಅವರಲ್ಲಿ ಭೀಮ ಕಾಶಿಯಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲು ಅನುಜ ಧರ್ಮರಾಯನಿಗೆ ನೀಡುತ್ತಾನಂತೆ. ಧರ್ಮರಾಯನಿಂದ ಸ್ಥಾಪಿಸಲ್ಪಟ್ಟ ಇಲ್ಲಿನ ಲಿಂಗದ ಅಭಿಷೇಕಕ್ಕೆ ಬೇಕಾದ ನೀರಿಗಾಗಿ ಅರ್ಜುನ ತನ್ನ ಬಾಣವನ್ನು ಹೂಡುತ್ತಾನಂತೆ. ಆಗ ಆತನ ಬಾಣದಿಂದ ಚಿಮ್ಮಿದ ನೀರಝರಿಯೇ ಇಲ್ಲಿನ ಸರಳ ಹೊಳೆ. ಅಂದು ಅವರು ಪ್ರತಿಷ್ಟಾಪಿಸಿದ ದೇಗುಲವೇ ಭೀಮೇಶ್ವರ ದೇವಸ್ಥಾನ ಅನ್ನುತ್ತಾರೆ. 

Steps to reach Bheemeshwara temple
ಅಂದು ಅವರಿಂದ ಶಿವಲಿಂಗ ಪ್ರತಿಷ್ಠಾಪಿಸಲ್ಪಟ್ಟಿರಬಹುದು , ತದನಂತರ ಇಲ್ಲಿನ ಪ್ರಾಂತ್ಯವನ್ನಾಳಿದ ಪಾಳೆಯಗಾರರಿಂದಲೋ, ಸಮೀಪದಲ್ಲಿ ಸಿಗೋ ಕಾನೂರು ಕೋಟೆಯನ್ನಾಳಿದ ಮೆಣಸಿನ ರಾಣಿಯಿಂದಲೋ  ಇದರ ಎದುರಿಗಿರುವ ದೇವಾಲಯದ ನಿರ್ಮಾಣವೋ , ಜೀರ್ಣೋದ್ದಾರವೋ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇಲ್ಲಿನ ಕಂಬಗಳ ಮೇಲಿನ ಕಲ್ಲ ಶಿಲ್ಪಗಳನ್ನು ನೋಡಿದ ನಿಮಗೆ ಹೊಯ್ಸಳರ ಕಾಲದ ಬೇಲೂರು ಹಳೆಬೀಡೋ, ತದನಂತರ ಬಂದ ಕೆಳದಿಯ ನಾಯಕರ ಕೆಳದಿ, ಇಕ್ಕೇರಿಗಳೋ ನೆನಪಾದರೆ ಅಚ್ಚರಿಯಿಲ್ಲ. 
Sculptures at Bheemeshwara

ಮುಂಗಾರು ಮಳೆಯಲ್ಲಿನ ಮೊಹಬ್ಬತ್: 
ಮುಂಗಾರು ಮಳೆ-೨ ಚಿತ್ರದಲ್ಲಿನ ಹಸಿರ ಸಿರಿಯ ನೋಡಿ ದಂಗಾಗಿರ್ತೀರ ನೀವು. ಇಲ್ಲಿಗೆ ಬೈಕಲ್ಲಿ ಹೋಗೋ ಥ್ರಿಲ್ಲು ಮತ್ತು ಇಲ್ಲಿನ ಪೌರಾಣಿಕ ಇತಿಹಾಸದ ಬಗ್ಗೆ ಓದಿ ಕುತೂಹಲಗೊಂಡಿರ್ತೀರ. ಇಲ್ಲಿಗೆ ಯಾವ ಸಮಯದಲ್ಲಿ ಹೋದರೂ ಇಲ್ಲಿಯ ಪರಿಸರವನ್ನು ಆಸ್ವಾದಿಸಬಹುದಾದರೂ ಇಲ್ಲಿಗೆ ಹೋಗೋಕೆ ಪ್ರಶಸ್ತ ಸಮಯ ಮಳೆಗಾಲ. ಕಣ್ಣು ಹಾಯಿಸಿದತ್ತೆಲ್ಲಾ ಹಸಿರು, ನೀರ ರಾಶಿ ಕಾಣೋ ಇಲ್ಲಿಗೆ ಮಳೆಗಾಲದಲ್ಲಿ ಬರೋ ಮಜವೇ ಬೇರೆ. ಆಗಾಗ ಹತ್ತಿಕೊಳ್ಳೋ ಉಂಬಳ(ಲೀಚ್) ಗಳನ್ನು ತೆಗೆದುಕೊಳ್ಳುತ್ತಾ , ಜಾರಬಹುದಾದ ಬಂಡೆಗಳ ನಡುವಿನ ಮೆಟ್ಟಿಲುಗಳ ಹತ್ತುತ್ತಾ, ಪಕ್ಕದಲ್ಲೇ ಹರಿಯೋ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಾ ಕಲ್ಲುಗಳ ನಡುವಿರೋ ಭೀಮೇಶ್ವರನ ಗುಡಿಯನ್ನು ನೋಡೋದೇ ಒಂದು ಚೆಂದ. ಮುಂಗಾರು ಮಳೆ-೧ ರಲ್ಲಿ ತೋರಿಸಿದ ಹಾಗೆ ಜೋಗ ಜಲಪಾತವನ್ನು ನೋಡೋಕೆ ಹೋಗಿ ಜೀವ ಕಳೆದುಕೊಳ್ಳುವಂತೆಯೇ ಇಲ್ಲಿನ ಜಲಧಾರೆಯ ಕೆಳಗೆ ಗಣೇಶ್ ನಿಂತಂತೆ ನಿಂತು ಕುಣಿಯಲು ಹೋದರೆ ಅಪಾಯವೂ ತಪ್ಪಿದ್ದಲ್ಲ ! 
water from bheemeshwara waterfalls  flowing f towards temple 

ಶಿವರಾತ್ರಿಯ ಶಂಕರ: 
ಪ್ರತೀವರ್ಷವೂ ಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತೆ. ಮೈಕೊರೆವ ಚಳಿಯ ನಡುವೆ, ಶರಾವತಿ ಅಭಯಾರಣ್ಯದ ದಟ್ಟ ಕಾನನದ ಮಡಿಲಲ್ಲಿ, ಹಕ್ಕಿಗಳ ಚಿಲಿಪಿಲಿ, ಜಲಪಾತದ ಝುಳುಝುಳುಗಳ ನಡುವೆ ಈ ದೇಗುಲದಲ್ಲಿ ನಡೆವ ರುದ್ರ, ಚಮಕಗಳ ಕೇಳೋದು, ರುದ್ರಾಭಿಷೇಕವನ್ನು  ನೋಡೋದೇ ಒಂದು ದಿವ್ಯ ಅನುಭವ.ಆ ಸಮಯವಲ್ಲದೇ ಪ್ರತೀ ಹುಣ್ಣಿಮೆ, ಅಮವಾಸ್ಯೆ, ಸಂಕ್ರಾತಿಗಳ ಸಮಯದಲ್ಲಿ ಇಲ್ಲಿ ಹೆಚ್ಚಿನ ಭಕ್ತರು ಸೇರುತ್ತಾರೆ. ಇವುಗಳಲ್ಲದೆಬೇರೆ ಸಮಯದಲ್ಲಿ ಇಲ್ಲಿ ಸೇರೋ ಭಕ್ತರ ಅನುಕೂಲಕ್ಕಾಗಿ ಮಜ್ಜಿಗೆ, ಊಟಗಳ ವ್ಯವಸ್ಥೆ ಮಾಡಲಾಗುತ್ತೆ. ಆದರೆ ಆ ಸಂಬಂಧ ಇಲ್ಲಿನ ಅರ್ಚಕರ ನಂಬರ್ಗಳಾದ 8762150181, 9483642908 ಗೆ ಸಂಪರ್ಕಿಸಿ ವಿಷಯ ತಿಳಿಸಿರಬೇಕಷ್ಟೆ. 
Nandi at the center of Bheemeshwara

ಪಕ್ಷಿ, ಚಿಟ್ಟೆಗಳ ಸಾಮ್ರಾಜ್ಯ: 
ನೀವಿಲ್ಲಿ ನಡೆದುಕೊಂಡು ಬರ್ತೀರ ಅಂದ್ರೆ ನಿಮ್ಮನ್ನು ಸ್ವಾಗತಿಸೋಕೆ ಕರಿಮೂತಿಯ ಸಿಂಗಳೀಕ, ಹಲವು ಪ್ರಬೇಧದ ಚಿಟ್ಟೆಗಳು, ಹಕ್ಕಿಗಳು ಸದಾ ಸಿದ್ಧವಿರ್ತವೆ. ಪ್ರವಾಸಿ ಸ್ಥಳಗಳಲ್ಲಿರುವಂತೆ ಇಲ್ಲಿನ ಕಾಡ ಮಂಗಗಳು ನಿಮ್ಮ ಬ್ಯಾಗಿಗೆ ಕೈಹಾಕೋಕೆ ಬರದಿದ್ದರೂ ಅಲ್ಲಿಲ್ಲಿ ಎದುರಾಗಿ ಹಾಯೆನ್ನುತ್ತಿರುತ್ತೆ. ಹಲವು ತರದ ಹೂಗಳು ಮತ್ತು ವಿಚಿತ್ರ ಚಿಟ್ಟೆ, ಜೇಡಗಳೂ ಇಲ್ಲಿ ಕಾಣಸಿಗುತ್ತೆ. 

ಮುಗಿಸೋ ಮುನ್ನ
ಅಭಯಾರಣ್ಯದ ನಡುವೆ ಇದ್ದರೂ ಇಲ್ಲಿಗೆ ಬರೋಕೆ ಯಾವ ಅನುಮತಿಯೂ ಬೇಕಿಲ್ಲ. ಹಾಗಂತ ಇದು ಸುಮ್ಮನೇ ಅಲ್ಲ. ಇಲ್ಲಿಗೆ ಬರೋದರ ಜೊತೆಗೆ ನಮಗೆ ಹೊಸ ಜವಾಬ್ದಾರಿಯೂ ಶುರುವಾಗುತ್ತೆ. ಇಲ್ಲಿ  ಕಾಣೋ ಪ್ರಾಣಿ ಪಕ್ಷಿಗಳಿಗೆ ತಿಂಡಿ ಹಾಕೋದೋ, ಇಲ್ಲಿನ ರಸ್ತೆಗಳಲ್ಲಿ ಕಸ ಎಸೆಯೋದೋ ಮಾಡದೇ ಇಲ್ಲಿನ ಸ್ವಚ್ಛ, ಪ್ರಶಾಂತ ಪರಿಸರವನ್ನು ಹಾಗೇ ಇಟ್ಟುಕೊಳ್ಳಬೇಕಾದ್ದು ಇಲ್ಲಿಗೆ ಬರೋ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಅದನ್ನು ನಿಭಾಯಿಸುವಲ್ಲಿ ನಾವೆಲ್ಲಾ ಯಶಸ್ವಿಯಾಗುತ್ತೇವೆಂಬ ನಂಬಿಕೆಯೊಂದಿಗೆ ಸದ್ಯಕ್ಕೊಂದು ವಿರಾಮ.