Tuesday, October 27, 2015

ಖಾಲಿ

ಕನಸ ಕಲ್ಪನೆಗಳೆಲ್ಲಾ ಕರಗಿಹೋಗಿ, ಮನದ ಭಾವಗಳೆಲ್ಲಾ ಬತ್ತಿಹೋಗಿ ಖಾಲಿತನ ಕಾಡುತ್ತಿತ್ತು. ಬರೆಯೋಣವೆಂದರೆ ಬರೆಯಲೇನನ್ನ, ಹಾಡೋಣವೆಂದರೆ ಹಾಡಲೇನನ್ನ ಅನ್ನೋ ದ್ವಂದ್ವ. ಸಖತ್ ಚೆನ್ನಾಗಿ ಬರೆದು ಅದಕ್ಕೇನಾದ್ರೂ ಪುರಸ್ಕಾರಗಳ ಸುರಿಮಳೆಯಾಗಿ ಕೊನೆಗೊಂದು ದಿನ ಅದನ್ನು ವಾಪಾಸ್ ಮಾಡಬೇಕಾಗಬಹುದೆನ್ನೋ ಭಯ ಬರೆಯಲೇ ಬಿಡುತ್ತಿರಲಿಲ್ಲ! ಹೊಸದೇನನ್ನಾದ್ರೂ ಬರೆಯೋ ಬದಲು ಬರೆದುದರ ಬಗ್ಗೆಯೇ ಮತ್ತಿನ್ನೇನ್ನಾದ್ರೂ ಬರೆಯೋಣವಾ ಅನ್ನಿಸಿತು. ವಿಶ್ವವಿದ್ಯಾಲಯಗಳಲ್ಲಿರುವ ಕೃತಿಚೌರ್ಯ ತಂತ್ರಜ್ಜಾನ ಎಲ್ಲಾ ಲೇಖಕರ, ಓದುಗರ ಬಳಿಯೂ ಸದ್ಯಕ್ಕಿಲ್ಲದೇ ನಾ ಕದ್ದಿದ್ದು ಗೊತ್ತಾಗದಿಲ್ಲದಿದ್ದರೂ ಮುಂದೊಂದು ದಿನ ಜನರ ಬಾಯಲ್ಲಿ ಛೀ, ಥೂ ಅನ್ನಿಸಿಕೊಳ್ಳೋ ಬದಲು ಅಂತಹಾ ಪ್ರಯತ್ನ ಮಾಡದೇ ಇರುವುದೇ ಒಳ್ಳೆಯದೆನಿಸಿತು. ಯಾರಿಗಾದರೂ ಒಂದಿಷ್ಟು ಬಯ್ದು  ಬಿಡಲಾ ಅನ್ನಿಸಿತೊಮ್ಮೆ. ಸಖತ್ ಸುಲಭದ ಕೆಲಸ ಅದು. ಅವರು ಆ ಅಧ್ಯಯನ ಮಾಡಿಲ್ಲ,  ಈ ಅಧ್ಯಯನ ಮಾಡಿಲ್ಲ. ಮಾಡಿಲ್ಲದೇ ಈ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಅವರು ಮಾತನಾಡಿದ ವಿಷಯದ ಬಗ್ಗೆ ಬಿಟ್ಟು ಅವರ ಬಗ್ಗೆಯೇ ಒಂದು ಘಂಟೆ ಮಾತಾಡಿಬಿಡಬಹುದು.  ಪುಟಗಟ್ಟಲೇ ಬರೆದೂ ಬಿಡಬಹುದು. ಅವರು ಅಧ್ಯಯನ ಮಾಡಿದ್ದಾರಾ ? ಇಲ್ಲವಾ ಅನ್ನೋದನ್ನೂ ಅಧ್ಯಯನ ಮಾಡದೇ. ಅವರ ಮಾತಲ್ಲಿನ, ಬರಹದಲ್ಲಿನ ಯಾವುದೋ ಕೆಲವು ತಪ್ಪುಗಳ ಹಿಡಿದು. ಆದರೆ ಓದೋಕೆ ಬೇಕಷ್ಟಿರುವಾಗ, ನೋಡೋಕೆ ಸಾಕಷ್ಟಿರುವಾಗ, ಕಲಿಯೋಕೆ ಆಯಸ್ಸೇ ಸಾಲದಿಷ್ಟಿರುವಾಗ ನನ್ನ, ನನ್ನೋದುವ, ನೂರಕ್ಕೆ ಒಂದು ಪ್ರತಿಶತವಷ್ಟಾದರೂ ಗೌರವವಿಟ್ಟಿರುವ, ಸ್ನೇಹ, ಸಲಿಗೆಯಿಟ್ಟಿರುವ ಜನರ ಸಮಯ ಹಾಳುಮಾಡಬೇಕೇ ಅನಿಸಿ ಆ ಪ್ರಯತ್ನವನ್ನೂ ಕೈಬಿಟ್ಟೆ. ಮೂಲೆಯಲ್ಲಿ ಗುಡ್ಡೆಬಿದ್ದಿದ್ದ ಕಾಲುಚೀಲಗಳು ನನ್ನೇ ನೋಡುತ್ತಾ ನಗುತ್ತಿದ್ದಂತನಿಸಿತು !

ಸುತ್ತಲೊಮ್ಮೆ ಕಣ್ಣಾಡಿಸಿದೆ. ತೊಳೆಯದೇ ಬಿದ್ದಿದ್ದ ಕಾಲುಚೀಲಗಳು, ಬಟ್ಟೆಗಳು ತಮ್ಮ ಅಸಹಾಯಕತೆಯನ್ನು ನೇತು ಬಿದ್ದಿದ್ದ ಮೊಳೆಯ ಮೇಲೆಯೂ, ಧೂಳು ತುಂಬಿದ್ದ ನೆಲದ ಮೇಲೆಯೋ ತೋರಿಸುವಂತಿದ್ದವು. ಅವುಗಳ ಕಡೆಗೆ ಗಮನ ಹರಿಸಿ ಅದೆಷ್ಟು ದಿನಗಳಾದವು. ಭಗವದ್ಗೀತೆ ಸುಡುವವರ, ಪುರಸ್ಕಾರಗಳ ವಾಪಾಸ್ ಮಾಡುವವರಂತಹ ಸುದ್ದಿಗಳೇ ದೇಶದ ಅತೀ ದೊಡ್ಡ ಸುದ್ಧಿಯೆಂಬಂತೆ ಅದರಲ್ಲೇ ಮೈಮರೆತು ದಿನಗಳಾಗಿ ಹೋಗಿ ಸುತ್ತಣ ವಾಸ್ತವವನ್ನು ಮರೆತ ಮೂರ್ಖತನವನ್ನು ನೆನಪಿಸುತ್ತಿತ್ತವು ! ಅಮ್ಮಾ ಅಮ್ಮಾ, ನಂಗೆ ಶಾಲಾ ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲ ಅಂತ ಅಳುತ್ತಾ ಬಂದ ಮಗುವಿಗೆ ಸ್ಪರ್ಧಾ ಮನೋಭಾವವನ್ನು ತುಂಬಬೇಕಾದ ತಾಯಿ ಆ ಮಗುವನ್ನು ಹೊತ್ತು ಯಾವುದಾದರೂ ಪುರಸ್ಕಾರ ಕೊಡೋ ಮಂಡಳಿಗೆ ಕರೆದುಕೊಂಡು ಹೋಗೋ ದಿನಗಳು ಬಂದರೆ ಅಚ್ಚರಿಯಿಲ್ಲವೇನೋ ಅನಿಸಿತು ! ಹೇಗಿದ್ದರೂ ವಾಪಾಸ್ ಮಾಡಿದ ಪುರಸ್ಕಾರಗಳಿರುತ್ತದೆಯಲ್ಲ. ಆ ಪುರಸ್ಕಾರಗಳಲ್ಲಿ ಒಂದನ್ನು ಪಡೆದ ಮಗುವಿನ ಅಳುವಾದರೂ ನಿಂತೀತೇನೋ ! 

ತೀರಾ ಅಸಂಬದ್ದವೆನಿಸುತ್ತಿದೆಯಾ ಕಲ್ಪನೆ ? ನಿಮಗಿತ್ತ ಗೌರವಗಳು, ಪುರಸ್ಕಾರ ಯಾವುದೋ ಒಂದು ಮಂಡಳಿ, ಸಂಸ್ಥೆ ಕೊಟ್ಟದ್ದೇ ಇರಬಹುದು. ಆದರೆ ಅದರ ಹಿಂದಿನ ಪ್ರೀತಿ, ಸಂತೋಷಗಳು ಆ ಸಂಸ್ಥೆಯ ಸ್ವತ್ತಲ್ಲ. ಇಡೀ ನಾಡಿನದು, ದೇಶದ್ದು. ಕಂಬಾರರಿಗೆ ಜ್ಞಾನಪೀಠ ಬಂತು ಅಂದಾಗ, ಭೈರಪ್ಪನವರಿಗೆ ಸರಸ್ವತಿ ಸನ್ಮಾನ್ ಸಿಕ್ಕಿತು ಅಂದಾಗ ರಾಜ್ಯಕ್ಕೆ ರಾಜ್ಯವೇ ಖುಷಿ ಪಟ್ಟಿದ್ದಿದೆ. ವಿಚಾರಧಾರೆಗಳಲ್ಲಿ ಎಡಬಲಗಳೆಂಬ ಬೇಧವಿರಬಹುದು, ನವ್ಯ, ನವೀನ, ಬಂಡಾಯಗಳೆಂಬ ಭಿನ್ನ ಪಂಥಗಳೇ ಇರಬಹುದು. ಅದೇನೇ ಇದ್ದರೂ ಭೈರಪ್ಪನವರ ಮಂದ್ರ ಓದಿದವರು ಯು.ಆರ್. ಅನಂತಮೂರ್ತಿಯವರ ಭವ, ಸಂಸ್ಕಾರಗಳನ್ನು ಓದಬಾರದೆಂದೇನಿಲ್ಲ! ಲೇಖಕನ ಸಾರ್ವಜನಿಕ ಜೀವನದ ನಿಲುವುಗಳು ಇಷ್ಟವಾಗದ ಕಾರಣಕ್ಕೆ ಅವನ ಸಾಹಿತ್ಯವನ್ನೇ ದ್ವೇಷಿಸಬೇಕಂತಲೂ, ಅವನ ಸಾಹಿತ್ಯದಲ್ಲಿನ ಅಂಶಗಳು ಇಷ್ಟವಾಗದಿದ್ದ ಮಾತ್ರಕ್ಕೆ ಅವ ನಿಜಜೀವನದಲ್ಲೂ ಖಳನಾಗಬೇಕಂತಿಲ್ಲ. ಲೇಖಕನ ನಿಲುವುಗಳ, ಪೂರ್ವಾಪರಗಳ ಯೋಚಿಸದೇ ಬರೀ ಅವರ ಸಾಹಿತ್ಯವನ್ನೇ ಪ್ರೀತಿಸೋ ಅದೆಷ್ಟೋ ಜನರ ಪ್ರೀತಿಯ ಮೂರ್ತರೂಪ ಆಯಾ ಸಾಹಿತಿಗೆ ಸಿಕ್ಕ ಪುರಸ್ಕಾರಗಳು ! ಅಂತಹ ಪುರಸ್ಕಾರವನ್ನು ವಾಪಾಸ್ ಮಾಡುತ್ತಾರೆಂದರೆ ಅದು ನಾಡಿನ ಜನ ಅವರ ಮೇಲಿಟ್ಟ ಪ್ರೀತಿಯನ್ನು ಧಿಕ್ಕರಿಸಿದಂತಲ್ಲವೇ ? 

ಪ್ರತಿಭಟನೆ ಅವರವರ ಹಕ್ಕು. ಪ್ರತಿಭಟಿಸೋ ಸಲುವಾಗಿ ತೋಚಿದ್ದ ಗೀಚಬಹುದು.ಬಾಯಿಗೆ ಬಂದ ಹೇಳಿಕೆಯನ್ನೂ ಕೊಡಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಯುಗವಲ್ಲವೇ ಇದು ! ಯಾಕೆ ವಾಪಾಸ್ ಅಂದರೆ ನಿರ್ಲಿಪ್ತ ಸರ್ಕಾರದ ವಿರುದ್ದ. ಕಲುಷಿತ ಸಮಾಜದ ವಿರುದ್ದ, ಲೇಟಾಗುತ್ತಿರುವ ಪೋಲೀಸ್ ಕಾರ್ಯವಿಧಾನದ ವಿರುದ್ದ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ವಿರುದ್ದ.ಹೀಗೆ ಹಲವಾರು ಕಾರಣಗಳು. ಯಾವ ಕಾರಣ ?ರಾಜಕಾರಣ ?  ಯಾವ ಸರ್ಕಾರ ? ರಾಜ್ಯ ಸರ್ಕಾರವಾ ? ಕೇಂದ್ರವಾ ? ಇಲ್ಲಾ ಹೋಲ್ ಸೇಲ್ ಎಲ್ಲಾ ಸರ್ಕಾರಗಳಾ ? ಭಿನ್ನ ಭಿನ್ನ ಉತ್ತರಗಳಿಲ್ಲಿ. ಟಿಪ್ಪು ಸುಲ್ತಾನನ ಕೃತಿಯ ಬಗ್ಗೆ, ತುಘಲಕ್ಕಿನ ಬಗ್ಗೆ ಪತ್ರಿಕೆಗಳಲ್ಲಿ ಚರ್ಚೆಯಾದಾಗ ಶುರುವಾದ ಉದ್ದೇಶವನ್ನೇ ಮರೆತು ವ್ಯಕ್ತಿಯ ವೈಯುಕ್ತಿಕ ವಿಚಾರಗಳ ಮಟ್ಟದವರೆಗೂ ಎದ್ದೂ ಬಿದ್ದು ಚರ್ಚೆಯಾಯಿತು. ಅದೇ ಪರಿ, ಈ ಬಾರಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಖಂಡಿಸಿ ಪತ್ರಿಕೆಗಳಲ್ಲಿ ಚರ್ಚೆ, ಟಿವಿಗಳಲ್ಲಿ ಚರ್ಚೆ, ಸ್ವಾತಂತ್ರ್ಯ ಉದ್ಯಾನದಲ್ಲಿ ಒಂದು ಪ್ರತಿಭಟನೆ, ಒಂದು ರ್ಯಾಲಿ ? ಸಾಹಿತಿಗಳು, ಹಂಗೆಲ್ಲಾ ಬೀದಿಗಳಿದು ಪ್ರತಿಭಟಿಸೋಲ್ಲವಪ್ಪ. ನಮ್ಮದೇನಿದ್ದರೂ ಮೂಖ ಪ್ರತಿಭಟನೆ , ಪ್ರಚಾರಪ್ರಿಯರಲ್ಲ ನಾವು ಅನ್ನುವಂತಹ ಧೋರಣೆ. ಸರಿ, ಪುರಸ್ಕಾರ ವಾಪಾಸ್ ಮಾಡೋದು ವೈಯುಕ್ತಿಕ ತೀರ್ಮಾನ ಪ್ರತಿಭಟನೆ ಅಂದುಕೊಂಡರೂ ಅದರ ಬಗ್ಗೆ ಪತ್ರಿಕೆಗಳಲ್ಲಿ ಬರೋ ಫೋಟೋಗಳನ್ನೂ, ಸುದ್ದಿಗಳನ್ನೂ ಹಾಕಬೇಡಿ ಅಂತ ವಿನಂತಿಸಿಕೊಳ್ಳಬಹುದಲ್ಲಾ ! ಪ್ರಚಾರ ಬೇಡ ಬೇಡ ಎಂದೇ ಪ್ರಚಾರ ಗಿಟ್ಟಿಸೋ ಪರಿಯೇ ಇದು ಎಂದೂ ಒಮ್ಮೊಮ್ಮೆ ಅನುಮಾನ ಹುಟ್ಟುತ್ತೆ ಈ ನಡುವಳಿಕೆಗಳಿಂದ. ನನಗೆ ದಕ್ಕಿದ ಪುರಸ್ಕಾರ ಸಮಸ್ತ ಕನ್ನಡಿಗರಿಗೆ ಸಿಕ್ಕ ಸನ್ಮಾನ ಅಂತ ಹೇಳಿಕೊಳ್ಳೋ ಸಾಹಿತಿ ಅದರ ವಾಪಾಸ್ ಮಾಡೋದರಿಂದ ಆ ಸಮಸ್ತ ಕನ್ನಡಿಗರಿರೂ ತನಗಾದಷ್ಟೇ ನೋವುಂಟಾಗುತ್ತೆ ಅಂತ ಅರಿಯೋಲ್ಲವೇಕೆ ? ಪ್ರಪಂಚದಲ್ಲಿರೋ ಬುದ್ದಿಯೆಲ್ಲಾ ತಮ್ಮಲ್ಲೇ ಇದೆ ಎಂದುಕೊಳ್ಳೋ ಬು.ಜೀಗಳಿಗೆ ಬುದ್ದಿ ಹೇಳುವಷ್ಟು ಬುದ್ದಿ ಯಾರಲ್ಲೂ ಇಲ್ಲ ಬಿಡಿ!

 ಕಾವೇರಿ ನೀರಲ್ಲಿ ರಾಜ್ಯಕ್ಕೆ ಅನ್ಯಾಯವಾಯಿತೆಂದಾಗ, ರೈತರು ಫಸಲಿಲ್ಲದೇ, ಬೆಳೆದಿದ್ದಕ್ಕೆ ಬೆಲೆ ಸಿಗದೇ ಸಾಲು ಸಾಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸಿ ವಾಪಾಸ್ ಚಳುವಳಿ ನಡೆಯಿತೇ ? ಧಕ್ಷ ಅಧಿಕಾರಿಗಳ ಹಠಾತ್ ವರ್ಗಾವರ್ಗಿ ನಡೆದಾಗ, ಹತ್ಯೆಯೇ ನಡೆದಾಗ ? ಅದರ ವಿರುದ್ದ ಜನಸಾಮಾನ್ಯರೇ ಧಂಗೆಯೆದ್ದಿದ್ದರೂ ಸಾಹಿತಿಗಳು ?. ಸಾಹಿತಿಯೊಬ್ಬ ತನ್ನ ಪಾಡಿಗೆ ತಾನು ಬರೆಯುತ್ತಾ ಇರುತ್ತಾನಪ್ಪಾ. ಸಮಾಜದ ಆಗುಹೋಗುಗಳಿಗೂ ಅವನಿಗೂ ಸಂಬಂಧ ಇರಲೇಬೇಕಂತಿಲ್ಲ !  ಪ್ರವಾಹ ಪರಿಹಾರ ನಿಧಿಗಳಿಗೆ ಸಂಗ್ರಹ ನಡೆಯುತ್ತಿದ್ದಾಗ , ರಕ್ತದಾನ ಶಿಬಿರಗಳು ನಡೆದಾಗ ಅದನ್ನ ಬೆಂಬಲಿಸಿ ? ಊಹೂಂ. ಸಾಹಿತಿಗಳು ತೆರೆ ಮರೆಯಲ್ಲಿರುತ್ತಾರಪ್ಪಾ. ಪತ್ರಿಕೆಗಳ ಮುಖಪಟದಲ್ಲಿ ಫೋಟೋ ಬಂದರೆ ಮಾತ್ರ ನಿಮಗೆ ಗೊತ್ತಾಗುತ್ತೆ. ಬಾರದಿದ್ದ ಮಾತ್ರಕ್ಕೆ ಸಾಹಿತಿಗಳು ಏನೂ ಮಾಡುತ್ತಿಲ್ಲವೆಂದೇ ? ಅವೆಲ್ಲಾ ಹೋಗಲಿ. ಸಾಹಿತ್ಯ ಕ್ಷೇತ್ರಕ್ಕೇ ಸಂಬಂಧವಿಲ್ಲದ ಘಟನೆಗಳು ಅಂದುಕೊಳ್ಳೋಣ.  ಹಿಂದೆ ಖ್ಯಾತ ಸಾಹಿತಿಯೋರ್ವರ ಮನೆಯ ಮೇಲೆ ಕಲ್ಲುಗಳು ಬೀಳುತ್ತಿದ್ದರೆ, ಅವರ ಮೇಲೆ ಧಾಳಿಗಳು ನಡೆಯುತ್ತಿದ್ದರೆ ಅದನ್ನು ವಿರೋಧಿಸಿ ಈ ಪರಿಯ ವಾಪಾಸ್ ಚಳುವಳಿಗಳು ನಡೆದಿದ್ದವಾ ? ಬಾಂಗ್ಲಾ ಮೂಲದ ಬ್ಲಾಗರ್ಗಳನ್ನ ಮತಾಂಧ ಐಸಿಸ್ ಉಗ್ರರು ಕೊಲ್ಲುತ್ತಿದ್ದರೆ ಅದನ್ನು ವಿರೋಧಿಸಿ ಈ ವಾಪಾಸ್ ಚಳುವಳಿ ನಡೆಯಿತೆ ? ಈ ವರ್ಷವೇ ಮೂರ್ನಾಲ್ಕು ಲೇಖಕರನ್ನು ಕೊಂದದ್ದು ಒಂದಿಷ್ಟು ಪತ್ರಿಕೆಗಳಲ್ಲಿ ಮೂಲೆಯೊಂದರ ಸುದ್ದಿಯಾಯಿತಷ್ಟೆ. ಅಷ್ಟಕ್ಕೂ ಪ್ರಪಂಚದಲ್ಲಿ ಎಲ್ಲೋ ನಡೆದ ಘಟನಾವಳಿಗಳಿಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಬಿಡಿ !

ತುಂಬಿದ ಕೊಡ ತುಳುಕುವುದಿಲ್ಲ ಅನ್ನೋ ಗಾದೆಯೇ ಇದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಖಾಲಿಯಾಗದ ಮನಸ್ಸು ಬೆಳೆಯೋದಿಲ್ಲ ಅಂತಲೂ ಗಾದೆ ಸೃಷ್ಠಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇಂಗ್ಲೀಷಿನಲ್ಲಿ ವಿಶ್ವದಾದ್ಯಂತ ಬರೀತಾರೆ, ಹಿಂದಿಯಲ್ಲಿ ಭಾರತದಾದ್ಯಂತ ಬರೀತಾರೆ. ಅಲ್ಲೆಲ್ಲೂ ಇಲ್ಲದಷ್ಟು ಗುದ್ದಾಟಗಳು ಕನ್ನಡದಲ್ಯಾಕೆ ಅಂತ ಗೆಳೆಯರು ಪ್ರಶ್ನಿಸಿದಾಗ ನಿರುತ್ತರ ನಾನು. ವಿಶ್ವದಲ್ಲೆಲ್ಲಿಯೂ ಇಲ್ಲದ ವಾಪಾಸ್ ಚಳುವಳಿ ಭಾರತದಲ್ಲಿ ಮಾತ್ರ ಯಾಕೆ ನಡೀತಿದೆ ? ಇಲ್ಲಿನ ಸರ್ಕಾರ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೋಂಬೇರಿ, ನಿದ್ದೆ ಮಾಡೋ ಸರ್ಕಾರವೇ ಅಂತ ಯಾರಾದರೂ ಪ್ರಶ್ನಿಸಿದರೆ ತಲೆತಗ್ಗಿಸಬೇಕಾಗುತ್ತದೆ. ಏನೋ, ಬರೀತೀಯಂತೆ ನೀನು, ಹಂಗಾದ್ರೆ ನೀನೂ ಒಬ್ಬ ಸಾಹಿತಿ ಅಂತಾಯ್ತು ಅಂತ ಪರಭಾಷಾ ಗೆಳೆಯರು ಹೇಳಿದ್ರೆ ಹೇ, ಖಂಡಿತಾ ಇಲ್ಲಪ್ಪ. ಸುಮ್ನೆ ಎಲ್ಲಾದ್ರೂ ಒಂದಿಷ್ಟು ಗೀಚುತ್ತಿರುತ್ತೇನೆ ಅಂತ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿದೆ. ಅಷ್ಟಕ್ಕೂ ವಾಪಾಸ್ ಚಳುವಳಿಯ ಮುಂದಾಳತ್ವ ವಹಿಸಿರುವ ಬು.ಜೀಗಳ ಬಗ್ಗೆ ವಿಮರ್ಷೆ ಮಾಡುವಷ್ಟು ಅಧ್ಯಯನ, ಅರ್ಹತೆ ಖಂಡಿತಾ ನನ್ನಲ್ಲಿಲ್ಲ ಬಿಡಿ !

ಪರಸ್ಪರರೆಡೆಗಿನ ಅಸೂಹೆ, ಅಸಹಿಷ್ಣುತೆಯೇ ನಮ್ಮಲ್ಲಿನ ಅದೆಷ್ಟೋ ಕಚ್ಚಾಟಗಳಿಗೆ ಕಾರಣವಲ್ಲವಾ ಎಂದನಿಸುತ್ತೆ ಎಷ್ಟೋ ಸಲ. ನಾ ಸರಿ ಅನ್ನೋದು ಸರಿ. ಆದ್ರೆ ಅವನೂ ಸರಿಯಾಗಿರಬಹುದಲ್ವಾ ಅಂತ್ಯಾಕೆ ಯೋಚಿಸೋದಿಲ್ಲ ನಾವು. ನಾವು ಸದಾ ನಮ್ಮ ಆಲೋಚನಾ ಸಮುದ್ರದಲ್ಲೇ ಮುಳುಗಿ ಹೋಗಿರುತ್ತೇವೆ. ಹೊರಗಿನದಕ್ಕೆ ಜಾಗವಿಲ್ಲವಿಲ್ಲಿ. ಒಂಥರಾ ಸದಾ ತುಂಬಿದ ಹೊಟ್ಟೆಯ ಜೀವನ. ಕಣ್ಣು ಕಟ್ಟಿದ ಕುದುರೆಯಂತೆ ತನ್ನ ಕಣ್ಣೆದುರಿಗಿದ್ದದ್ದು ಮಾತ್ರವೇ ಸತ್ಯವೆಂಬ ಭ್ರಮೆಯಲ್ಲಿ ಅತ್ತಲೇ ನಮ್ಮ ನಾಗಾಲೋಟ. ಆದರೆ ಒಂದಂತೂ ಸತ್ಯ. ಅದೊಂದೇ ಸತ್ಯ ಅಂತಲ್ಲ ! ಹೊಟ್ಟೆ ಖಾಲಿಯಾಗದೇ ಹಸಿವಾಗೋದಿಲ್ಲ, ಹಸಿವಾಗದೇ ನಾವು ಹೊಟ್ಟೆಗಾಗಿನ ಒದ್ದಾಟ, ದುಡಿಮೆ ನಡೆಸೋದಿಲ್ಲ. ಒಂದಲ್ಲ ಒಂದು ರೀತಿಯ ದುಡಿಮೆಯಿಲ್ಲದ ಖಾಲಿ ಜೀವನವನ್ನು ಕಲ್ಪಿಸಿಕೊಳ್ಳೋದಕ್ಕೂ ಆಗೋದಿಲ್ಲ..ಇತ್ಯಾದಿ, ಇತ್ಯಾದಿ.ಅದೇ ತರಹ ಪೂರ್ವಾಗ್ರಹಗಳಿಂದ ಪೀಡಿತ ಮನ. ನಾನು ಇವರದ್ದನ್ನು ಮಾತ್ರವೇ ಓದುತ್ತೇನೆ , ಉಳಿದವರದ್ದೆಲ್ಲಾ ಠೀಕಿಸುತ್ತೇನೆ ಅಂತ ಮುಂಚೆಯೇ ನಿರ್ಧರಿಸಿಕೊಳ್ಳೋ ಮನಕ್ಕೆ ಹೊಸತನಕ್ಕೆ ತುಡಿಯೋಕೆ ಯಾವತ್ತೂ ಸಾಧ್ಯವಾಗೋದಿಲ್ಲ. ಕಾಲ ಕ್ರಮೇಣ ಅದೇ ಏಕತಾನತೆ ಕಾಡೋಕೆ ಶುರುವಾಗುತ್ತೆ. ಕನಸುಗಳೆಲ್ಲಾ ಖಾಲಿಯಾದ ಹಾಗೆ, ಭಾವನೆಗಳೆಲ್ಲಾ ಬತ್ತಿ ಹೋದ ಹಾಗೆ !

ಮಣ್ಣಾದ ಸಾಕ್ಸಿಗೆ, ಬಟ್ಟೆಗಳಿಗೆ ಸೋಪು ನೀರು ಹೇಗೆ ಒಂದು ಹೊಸ ಜೀವ ಕೊಡತ್ತೋ ಹಾಗೇ ನಮ್ಮ ಮನದ ಭಾವಗಳೂ ಸಹ. ಒಂದಿಷ್ಟು ಹಳೆಯ ಕೊಳೆಗಳನ್ನು, ದ್ವೇಷ, ಸಿಟ್ಟು ಅಸೂಹೆಗಳನ್ನ ನಮ್ಮಲ್ಲಿಂದ ಹೊರದಬ್ಬೋ ತನಕ ಹೊಸತನಕ್ಕೆ ಜಾಗವಿಲ್ಲವಿಲ್ಲಿ.  ಹಿಮಾಲಯದಲ್ಲೇನಿದೆ ಬೋರು ? ಬರೀ ಬಿಳೀ ಮುದ್ದೆಗಳು, ಬರೀ ಮರುಭೂಮಿ , ಎಲ್ಲೋ ಒಂದಿಷ್ಟು ಹಸಿರಷ್ಟೇ ಅಂತ ಬೇಸರಿಸೋ ಮನಕ್ಕೇ ಹೊಸತನದ ತುಡಿತ ಹತ್ತಿದಾಗ  ಬೆಳಗ್ಗೆ ಪೇಪರ್ ಟೌನ್ ಅನ್ನೋ ಇಂಗ್ಲೀಷು, ಮಧ್ಯಾಹ್ನ ತೆಲುಗಿನ ರುದ್ರಮಾ ದೇವಿ, ಸಂಜೆ ಹಿಂದಿಯ ಜಜ್ಬಾ ಚಿತ್ರ ನೋಡಿದೆ ಅಂತ ತನ್ನ ಪಾಡಿಗೆ ಒಂದು ಸ್ಟೇಟಸ್ ಹಾಕಿಕೊಳ್ಳೋ ಹುಡುಗನೊಬ್ಬನ ಸ್ಟೇಟಸ್ಸೂ ಆಕರ್ಷಕವೆನಿಸುತ್ತೆ. ಅಲ್ಲೊಂದು ಸಾಧ್ಯತೆಗಳ ಸೌಧವಿರಬಹುದಾ ಅನಿಸುತ್ತೆ. ಹರುಕು ಕಾಲುಚೀಲವೂ ಒಂದು ಹೊಸ ಕತೆ ಹೇಳತೊಡಗುತ್ತೆ. ಅದಿಲ್ಲದಿದ್ದರೆ ಕತ್ತೆತ್ತಿದತ್ತೆಲ್ಲ ಖಾಲಿಯೋ ಖಾಲಿ. 

Saturday, October 10, 2015

ಹಂಪಿ ಪ್ರವಾಸ ಕಥಾನಕ -೨: ವಿರೂಪಾಕ್ಷನ ಸನ್ನಿಧಿಯಲ್ಲಿ

ವಿರೂಪಾಕ್ಷನ ಸನ್ನಿಧಿಯಲ್ಲಿ:

ಹೋಗೋದು ಹೇಗೆ?
ಹಂಪಿಗೆ ಹೋಗಬೇಕೆನ್ನೋ ಭಾವ ಬಹುದಿನಗಳಿಂದ ಕಾಡುತ್ತಿತ್ತು. ಅವರು ಬರೋಲ್ಲ, ಇವರು ಬರೋಲ್ಲ ಅಂತ ಅದೆಷ್ಟೋ ಸಲ ಕ್ಯಾನ್ಸಲ್ ಆದ ಪ್ಲಾನಿಗೆ ಬೇಸತ್ತು ಈ ಸಲ ಯಾರೂ ಬರದಿದ್ದರೆ ನಾನೊಬ್ಬನಾನರೂ ಹೋಗೇ ಬರುತ್ತೇನೆಂಬ ಭಂಡ ಧೈರ್ಯ ಮಾಡಿದವನಿಗೆ ಜೊತೆಯಾದವರು ಇನ್ನಿಬ್ರು, ಹಂಪೆ ಎಕ್ಸ್ ಪ್ರೆಸ್ ರೈಲಲ್ಲಿ ಹೋಗ್ಬೋದು, ನೇರ ಬಸ್ಸಲ್ಲಿ ಹೋಗ್ಬೋದು ಎಂಬೆಲ್ಲಾ ಪ್ಲಾನುಗಳು ಸರಿ.ಆದರೆ ಅವೆಲ್ಲಾ ತಿಂಗಳ ಮುಂಚೆ ಹೊರಡೋ ಪ್ಲಾನಿರೋರಿಗೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೊರಡಬೇಕೆನ್ನುವವರಿಗೂ ಬರುತ್ತೇನೆ, ಬರೋಲ್ಲವೆನ್ನುತ್ತಾ ಪ್ಲಾನನ್ನು ಸಂದಿಗ್ದದಲ್ಲಿಟ್ಟಿದ್ದ ಅನೇಕ ಗೆಳೆಯರಿದ್ದ ನಮ್ಮ ಪ್ಲಾನಿಗೆ ಸಾಥಿಯಾಗಿದ್ದು ಹೊಸಪೇಟೆ ಬಸ್ಸುಗಳೇ. ಹಂಪಿಯಿಂದ ಹೊಸಪೇಟೆಗೆ ಅರ್ಧ ಘಂಟೆಯ ಪಯಣ, ಹೊಸಪೇಟೆಗೆ ಬೆಂಗಳೂರಿಂದ ಸಖತ್ ಬಸ್ಸುಗಳಿವೆ ಎಂಬ ಮಾಹಿತಿ ಪಡೆದಿದ್ದ ನಮ್ಮ ಗ್ಯಾಂಗ್ ಹೊರಟಿದ್ದು ಹೊಸಪೇಟೆಗೆ.

9 Storied entrance of the Virupaksha temple, Hampi

ಉಳಿಯೋದೆಲ್ಲಿ?
ಬೆಂಗಳೂರಿಂದ ರಾತ್ರೆ ಹನ್ನೊಂದೂಕಾಲರ VRL ಬಸ್ಸಿಗೆ ಹೊರಟ ನಾವು ಹೊಸಪೇಟೆ ತಲುಪೋ ಹೊತ್ತಿಗೆ ಬೆಳಗ್ಗಿನ ಆರೂಕಾಲು. ಹೊಸಪೇಟೆಯ ಕೊನೆಯ ನಿಲ್ದಾಣ ಬಸ್ಟಾಂಡ್ ಬಳಿ ಇಳಿಯುತ್ತಿದ್ದಂತೇ ಹರಿಪ್ರಿಯಾ ಲಾಡ್ಜ್, ಸ್ವಾತಿ ಲಾಡ್ಜ್, ಶ್ಯಾನ್ ಭಾಗ್ ಲಾಡ್ಜ್, ಪೈ ಇಂಟರ್ ನ್ಯಾಷನಲ್ ಮುಂತಾದ ಲಾಡ್ಜಗಳು ಸಿಗುತ್ತೆ. ಅದರಲ್ಲಿ ಹರಿಪ್ರಿಯಾ ಚೀಪ್ ಅಂಡ್ ಬೆಸ್ಟ್ ಅಂತ ಬಸ್ಸಿನಲ್ಲಿ ಸಿಕ್ಕವರೊಬ್ಬರು ಹೇಳಿದ್ರು. ಹಾಗೇ  ಬೆಳಗ್ಗೆ ಹರಿಪ್ರಿಯಾಕ್ಕೆ ತೆರಳಿದ ನಾವು ಅಲ್ಲಿನ ಪ್ರಸಿದ್ಧ ಶ್ಯಾನ್ ಭಾಗ್ ಹೋಟೆಲಿನಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಹಂಪೆ ದರ್ಶನಕ್ಕೆ ತೆರಳಿದೆವು. ಇಲ್ಲಿನವರ ಪ್ರಕಾರ ಬೆಳಗ್ಗಿನ ಉಪಾಹಾರ ಅಂದ್ರೆ ಶ್ಯಾನ್ ಭಾಗ್. ಮಧ್ಯಾಹ್ನದ/ರಾತ್ರೆಯ ಊಟ ಅಂದರೆ ಸ್ವಾತಿ ಡೆಲಿಕಸಿ, ಉತ್ತರ್ ಭಾರತೀಯ ತಿನಿಸುಗಳ ಐಸ್ ಲ್ಯಾಂಡ್ ಅಥವಾ ಪೈ ಇಂಟರನ್ಯಾಷನಲ್. ಉತ್ತರ ಕರ್ನಾಟಕದ ಊಟ ಇಷ್ಟ ಪಡೋರಾದ್ರೆ ಐಸ್ ಲ್ಯಾಂಡ್ ಪಕ್ಕದಲ್ಲೇ ಇರೋ ಶ್ರೀ ಭುವನೇಶ್ವರಿ ಖಾನಾವಳಿಗೆ ತೆರಳಬಹುದು. ಪೇಟೆಯಿಡೀ ತಿರುಗುಬೇಕೆನ್ನುವವರಿಗೆ ಇನ್ನಷ್ಟು ಆಯ್ಕೆಗಳು ಸಿಕ್ಕಬಹುದು :-)
Goravankas of Hampi

ಹೊಸಪೇಟೆಯಿಂದ ಹಂಪೆಗೆ ಹೋಗೋದು ಹೇಗೆ ?
ಹೊಸಪೇಟೆಯಿಂದ ಹಂಪೆಗೆ ಪ್ರತೀ ಹದಿನೈದು ನಿಮಿಷಕ್ಕೆ ಬಸ್ಸುಗಳಿವೆ(ಬೆಳಗ್ಗಿನಿಂದ ಸಂಜೆ ಏಳೂವರೆವರೆಗೆ). ೧೨ ಕಿ.ಮೀ ಗಳ ಈ ದಾರಿಗೆ ತಲಾ ೧೩ ರ ಚಾರ್ಚು. ಹೊಸಪೇಟೆಯಿಂದ ಹೊಸಪೇಟೆಗೆ ಹೋಗೋಕೆ ಎರಡು ದಾರಿಗಳಿವೆ. ಒಂದು ಕಡ್ಡಿ ರಾಂಪುರ ಮಾರ್ಗ. ಮತ್ತೊಂದು ಕಮಲಾಪುರ ಮಾರ್ಗ. ಹಂಪಿಗೆ ಬೇಗ ತಲುಪಬೇಕೆನ್ನುವವರು ಕಡ್ಡಿ ರಾಂಪುರ ಮಾರ್ಗದಲ್ಲಿ ಪಯಣಿಸಬಹುದು. ಅದರಲ್ಲಿ ೧೩ರೂ ಚಾರ್ಚ್ ಕೊಟ್ಟು ಪಯಣಿಸುವವರಿಗೆ ಎದುರಾಗೋ ಹಂಪಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಕಡ್ಡಿ ರಾಂ ಪುರ ಸ್ಟಾಪಿನ ಪಕ್ಕದಲ್ಲೇ ಇರುವ ಮಹಮದೇನ್ ಗೋರಿಗಳು. ಸ್ವಂತ ಗಾಡಿಯಲ್ಲಿ ಅಥವಾ ಹೊಸಪೇಟೆಯಿಂದಲೇ ಗಾಡಿ ತಗೊಂಡು ಬರುವವರು ಇಲ್ಲೊಂದು ಮಿನಿ ಸ್ಟಾಪ್ ಕೊಟ್ಟು ಗೋರಿ ಮತ್ತಿತರ ರಚನೆಗಳನ್ನು ನೋಡಿ ಮುಂದೆ ಸಾಗಬಹುದು. ಅಲ್ಲಿಂದ ಮತ್ತೆ ಬಸ್ಸು ಹತ್ತಿ ಮುಂದೆ ಸಾಗುವವರಿಗೆ ನಂತರ ಸಿಗೋ ನೋಡಲರ್ಹ ಸ್ಥಳ ಸಾಸಿವೆ ಕಾಳು ಗಣೇಶ ಸ್ಟಾಪು. ಅಲ್ಲಿನ ಸಾಸಿವೆ ಕಾಳು ಗಣೇಶ, ಕಡಲೇ ಕಾಳು ಗಣೇಶ ಮತ್ತು ಹೇಮಕೂಟ ಪರ್ವತದಲ್ಲಿನ ಮೂವತ್ಮೂರು ಇತರ ದೇವಸ್ಥಾನಗಳನ್ನು ನೋಡೋ ಹೊತ್ತಿಗೆ ಕೆಳಗಿನ ವಿರೂಪಾಕ್ಷ ದೇಗುಲದ ಎತ್ತರದ ಪ್ರವೇಶದ್ವಾರಗಳು ಕಾಣುತ್ತವೆ. ಅಲ್ಲಿಂದ ಇಳಿದರೆ ಸಿಗುವುದೇ ಹಂಪಿಯ ವಿರೂಪಾಕ್ಷ. ಹೊಸಪೇಟೆಯಿಂದ ಹಂಪೆಗೆ ಟೆಂಪೋಗಳು ಹೋಗುತ್ತವಾದರೂ ಹಂಪಿ ಬಸ್ ನಿಲ್ದಾಣದಿಂದ ಹೊರಡೋ ವಿಜಯ ರಥ ಬಸ್ಸುಗಳೇ ಹೆಚ್ಚು ಚೀಪು ಮತ್ತು ಆರಾಮಕರ.

ಕಮಲಾಪುರ ಮಾರ್ಗದಲ್ಲಿ ಬರುವವರಿಗೆ ಹಂಪೆಗೆ ೧೪ ರೂ ಚಾರ್ಚ್. ಇದು ಸ್ವಲ್ಪ ದೂರದ ಮಾರ್ಗ ಸಹಾ. ಮಧ್ಯಾಹ್ನದ ಹೊತ್ತಿಗೆ ಈ ಮಾರ್ಗದಲ್ಲಿ  ಬಂದರೆ  ದಾರೂಜಿ ಕರಡಿಧಾಮಕ್ಕೆ ಹೋಗಬಹುದು. ಅಲ್ಲಿನ ವೀಕ್ಷಣಾ ಸಮಯ ಮಧ್ಯಾಹ್ನ ೨ ರಿಂದ ಸಂಜೆ ಆರರವರೆಗೆ ಮಾತ್ರ. ಅತ್ತ ಹೋಗದೇ ಸೀದಾ ಹಂಪೆಯತ್ತ ಬರುವವರಿಗೆ ಮೊದಲು ಸ್ವಾಗತಿಸೋದು ಸರಸ್ವತೀ ಮಂದಿರ, ಚಂದ್ರಶೇಖರ ದೇವಸ್ಥಾನ ಮತ್ತು ಅಷ್ಟಭುಜ ಸ್ನಾನದ ಕೊಳ. ಅದನ್ನು ನೋಡಿ ಮತ್ತೆ ರಸ್ತೆಗೆ ಬಂದು ಮುಂದೆ ಸಾಗಿದರೆ ರಸ್ತೆಯ ಪಕ್ಕದಲ್ಲೇ ಅಷ್ಟಭುಜ ನೀರಿನ ಸಂಗ್ರಹಾಗಾರ(octagonal water pavillion) ಸಿಗುತ್ತದೆ.ಮುಂದೆ ಸಾಗಿದರೆ ಸಿಗುವುದೇ ರಾಣಿಯರ ಸ್ನಾನದ ಕೊಳಗಳು ಮತ್ತು ಮಹಾನವಮಿ ದಿಬ್ಬ. ರಸ್ತೆಯಲ್ಲಿ ಸಾಗಲಿಚ್ಚಿಸದವರು ಸರಸ್ವತೀ ಮಂದಿರದ ಪಕ್ಕದಲ್ಲಿರುವ  ಕಾಲು ಹಾದಿಯ ಹಿಡಿದೂ ಸ್ನಾನದ ಕೊಳದತ್ತ ಅಥವಾ ಮಹಾನವಮಿ ದಿಬ್ಬದತ್ತ ಸಾಗಬಹುದು. ಅದನ್ನು ನೋಡಿ ಮುಂದೆ ಬರುವವರಿಗೆ ಸಿಗುವುದು ಭೂಮ್ಯಂತರ್ಗತ ಪ್ರಸನ್ನ ವಿರೂಪಾಕ್ಷ ದೇವಸ್ಥಾನ(underground temple). ಅದನ್ನು ನೋಡಿ ಮುಂದೆ ಸಾಗುವಾಗ ಸಿಗೋ ಒಂದು ಏರಿನಲ್ಲಿ ಎಡಕ್ಕೆ ನೋಡಿದರೆ ಕಾಣುವುದೇ ಅಕ್ಕತಂಗಿ ಗುಂಡುಗಳು. ಅಲ್ಲಿಂದ ಮುಂದೆ ಸಾಗಿದರೆ ಉದ್ಧಾನವೀರಭದ್ರ ಸ್ವಾಮಿ ದೇವಸ್ಥಾನ ಮತ್ತು ಪಕ್ಕದಲ್ಲೇ ಇರುವ ಚಂಡಿಕೇಶ್ವರ ದೇವಸ್ಥಾನ.  ಮೇಲೆ ಹೇಳಿದ ನೀರಿನ ಸಂಗ್ರಹಾಲಯ, ಅಕ್ಕ-ತಂಗಿ ಗುಂಡು ಬಿಟ್ಟು ಬೇರೆಲ್ಲಾ ಸ್ಥಳಗಳಲ್ಲೂ ಹೊಸಪೇಟೆಯಿಂದ ಕಮಲಾಪುರದ ಮೇಲೆ ಬರೋ ವಿಜಯರಥ ಬಸ್ಸುಗಳು ನಿಲ್ಲಿಸುತ್ತವೆ. ಚಂಡಿಕೇಶ್ವರನ ದೇಗುಲದಿಂದ ಮುಂದೆ ಕೆಲವೇ ನಿಮಿಷಗಳ ನಡೆಯೋ ಹಾದಿಯಲ್ಲಿ ಸಿಗುವುದು ಹಂಪಿಯ ಜಗದ್ವಿಖ್ಯಾತ ಲಕ್ಷ್ಮೀ ನರಸಿಂಹ . ಅದರ ಪಕ್ಕದಲ್ಲೇ ಬಡವೀ ಲಿಂಗ, ಅರಮನೆಯ ಪ್ರಾಕಾರಗಳ ಅವಶೇಷಗಳನ್ನು ಕಾಣಬಹುದು. ಅಲ್ಲಿಂದ ಮುಂದೆ ಸಾಗಿದರೆ ಸಿಕ್ಕುವುದೇ ಶ್ರೀ ಕೃಷ್ಣ ದೇವಾಲಯ. ಅದರೆದುರಿನ ಶ್ರೀ ಕೃಷ್ಣಬಜಾರ್ ಮತ್ತು ಲೋಕಪಾವನಿ ಕೊಳ/ಪುಷ್ಕರಿಣಿ. ನಂತರ ಈ ರಸ್ತೆ ಸಾಸಿವೆ ಕಾಳು ಗಣೇಶ ನಿಲ್ದಾಣದಲ್ಲಿ ಕಡ್ಡಿ ರಾಂಪುರದಿಂದ ಬರುವ ರಸ್ತೆಗೆ ಸೇರುತ್ತದೆ. ಪ್ರತೀ ದೇಗುಲಗಳ ವಿವರಗಳನ್ನ,ಹಂಪಿಯ ಉಳಿದ ದೇವಸ್ಥಾನಗಳ ಮಾಹಿತಿಯನ್ನ ನಂತರ ನೋಡೋಣ. ಮೊದಲು ಹಂಪಿಯ ವಿರೂಪಾಕ್ಷನ ಸನ್ನಿಧಿಗೆ ಭೇಟಿ ಕೊಡೋಣ.
Entrance to Virupaksha temple

ಹಂಪಿ ತಿರುಗೋದೇಗೆ ?
ಹಂಪಿಗೆ ಬರೋರೆಲ್ಲಾ ಮೊದಲು ವಿರೂಪಾಕ್ಷನ ದರ್ಶನ ಪಡೆದೇ ನಂತರ ಉಳಿದ ಜಾಗಗಳಿಗೆ ತೆರಳೋದು ಸಾಮಾನ್ಯ. ಹಂಪಿ ಬಸ್ ನಿಲ್ದಾಣದಲ್ಲಿ ಇಳಿಯೋರಿಗೆ ಎದುರಲ್ಲೇ ವಿರೂಪಾಕ್ಷನ ಗೋಪುರಗಳು ಕಾಣಸಿಗುತ್ತೆ. ವಿರೂಪಾಕ್ಷನ ದರ್ಶನ ಪಡೆದೇ ಮುಂದಿನ ಪ್ಲಾನ್ ಮಾಡೋಣವೆಂಬ ಇರಾದೆಯಿದ್ದರೂ ಅಲ್ಲಿನ ಆಟೋಗಳು ಅಲ್ಲಿಗೆ ಸುತ್ತಿಸುತ್ತೇವೆ, ಇಲ್ಲಿಗೆ ಕರೆದುಕೊಂಡು ಹೋಗುತ್ತೇವೆ, ನಡೆದುಕೊಂಡು ಹೋಗೋದು ಅಸಾಧ್ಯ. ಇಲ್ಲಿ ನೋಡೋ ಸ್ಥಳಗಳನ್ನೆಲ್ಲಾ ನೋಡೋಕೆ ೨೫ ಕಿ.ಮೀ ಗಿಂತಲೂ ಹೆಚ್ಚಾಗುತ್ತೆ, ನಮ್ಮ ಆಟೋದಲ್ಲಿ ಬರೀ ಒಂಭೈನೂರು ಮಾತ್ರ ಅಂತ ನಂಬಿಸೋಕೆ ಬರುತ್ತಾರೆ. ಎರಡು ದಿನ ಅಲ್ಲೇ ಇದ್ದು ಸುತ್ತಿ ನೋಡಿದ ನಮ್ಮ ಅನುಭವದ ಪ್ರಕಾರ ಇವೆಲ್ಲಾ ಶುದ್ಧ ಸುಳ್ಳು ಮತ್ತು ವ್ಯಾಪಾರೀ ತಂತ್ರಗಳಷ್ಟೇ. ಹಂಪೆಯ ಎಲ್ಲಾ ಸ್ಥಳಗಳನ್ನು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ಲಿನಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ನೋಡಿ ಮುಗಿಸಬಹುದು. ಆದ್ದರಿಂದ ಪ್ರಕೃತಿಯನ್ನು ಸಹಜವಾಗಿ ಸವಿಯೋ ಇರಾದೆಯಿದ್ದರೆ, ನಿಮ್ಮದೇ ಆರಾಮದಲ್ಲಿ  ಹಂಪೆಯನ್ನು ನೋಡೋ ಇರಾದೆಯಿದ್ದರೆ ಯಾವ ಆಟೋದವರ ಸಹವಾಸಕ್ಕೂ ಹೋಗದೇ ವಿರೂಪಾಕ್ಷನ ದೇಗುಲದತ್ತೆ ನಡೆಯಿರಿ. ಆದರೆ ಅಲ್ಲಿ ಸಿಗೋ ಹಂಪಿ ಎಂಬೋ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿರುವ ಹಂಪಿಯ ಮ್ಯಾಪ್ ಇರೋ ಪುಸ್ತಕವನ್ನು ತೆಗೆದುಕೊಳ್ಳಿ. ಸ್ಥಳಗಳ ಬಗ್ಗೆ ಮಾಹಿತಿಯನ್ನೂ ಹೊಂದಿರೋ ಆ ಮಿನಿ ಗೈಡ್ ಪ್ರವಾಸದುದ್ದಕ್ಕೂ ನೆರವಾಗುತ್ತದೆ.ವಿರೂಪಾಕ್ಷನ ದೇಗುಲಕ್ಕೆ ಸಾಗೋ ದಾರಿಯಲ್ಲಿ ಬಲಭಾಗದಲ್ಲಿ ಸಾರ್ವಜನಿಕ ಶೌಚಾಲಯ ಅನ್ನೋ ಬೋರ್ಡ್ ಕಾಣುತ್ತೆ. ಅದರ ಪಕ್ಕದಲ್ಲಿ ಬಾಡಿಗೆ ಸೈಕಲ್ಲುಗಳು ಸಿಗುತ್ತೆ. ಒಂದರ ದಿನದ ಬಾಡಿಗೆ ನೂರು ರೂ. ಸಂಜೆ ಆರು ಆರೂವರೆಯವರೆಗೂ ಈ ಸೈಕಲ್ಲುಗಳಲ್ಲಿ ಸುತ್ತಬಹುದು. ಎಲ್ಲಾದ್ರೂ ಪಂಕ್ಚರ್ರಾದರೆ ಫೋನ್ ಮಾಡಿ ಬಂದು ಸರಿ ಮಾಡಿ ಕೊಡುತ್ತೇವೆ ಎನ್ನೋ ಇವರ ಫೋನ್ ನಂಬರ್ ಇಸ್ಕೊಂಡಿರಿ ! ನಮ್ಮ ಪಯಣದಲ್ಲಿ ಎಲ್ಲೂ ಪಂಕ್ಚರ್ರಾಗದಿದ್ರೂ , ಹೆಚ್ಚಿನ ಸ್ಥಳಗಳಿಗೆಲ್ಲಾ ನಡೆದೇ ಹೋಗಬಹುದಾದಂತಹ ಶಾರ್ಟ್ ಕಟ್ಗಳಿದ್ರೂ ನಿಮ್ಮ ಪಯಣದಲ್ಲಿ ಬೇಕಾಗಬಹುದು. ನೀವು ಸೈಕಲ್ ತಗೊಂಡು ಪರಾರಿಯಾಗೋಲ್ಲ ಎನ್ನುವ ದಾಖಲೆಗೆ ಇವರು ಯಾವುದಾದ್ರೂ ದಾಖಲೆಯ ಜೆರಾಕ್ಸ್ ಅಥವಾ ಒರಿಜಿನಲ್ ಕೇಳುತ್ತಾರೆ. ನಮ್ಮ ಮೂರು ಜನರ ದಾಖಲೆಗಾಗಿ ನನ್ನ ಬಳಿಯಿದ್ದ ವೋಟರ್ ಕಾರ್ಡನ್ನೇ ಕೊಟ್ಟು ಮುಂದೆ ಸಾಗಿದ್ವಿ. ವಿರೂಪಾಕ್ಷನ ದೇಗುಲ ದಾಟಿ ಪಕ್ಕದ ತುಂಗಭದ್ರೆಯನ್ನು ಹತ್ತು ರೂ ನೀಡಿದರೆ ದಾಟಿಸೋ ಬೋಟಿನಲ್ಲಿ ದಾಟಿದರೆ ಆಚೆ ದಡದಲ್ಲಿರೋ ಆಂಜನಾದ್ರಿ, ಲಕ್ಷ್ಮೀ ದೇಗುಲ, ಪಂಪಾ ಸರೋವರ, ದುರ್ಗಾ ಮಂದಿರ, ಆನೇಗುಂದಿ, ಚಿಂತಾಮಣಿಗಳನ್ನ ನೋಡಬಹುದು. ಆಚೆ ದಡದಲ್ಲಿ ಇವುಗಳನ್ನೆಲ್ಲಾ ತೋರಿಸೋಕೆ ಆಟೋದವರು ಆರು ನೂರು ಕೇಳುತ್ತಾರೆ. ಬೈಕಲ್ಲಿ ಹೋಗೋದಾದರೆ ಬೈಕಿಗೆ ಇನ್ನೂರೈವತ್ತು. ಪೆಟ್ರೋಲ್ ನೀವೇ ಹಾಕಿಸಿಕೊಳ್ಳಬೇಕು.ಈಚೆ ದಡದಲ್ಲಿ ಪಡೆದ ಸೈಕಲ್ಲುಗಳಿದ್ದರೆ ಅದರಲ್ಲೇ ಇವನ್ನು ದರ್ಶಿಸಬಹುದು. ಹಂಪೆಗೆ ಹೋಗೋದೇಗೆ ಅನ್ನೋ ಪೂರ್ವ ಕತೆಗಳ, ಉಳಿದ ಸ್ಥಳಗಳ ಬಗೆಗಿನ ಮಾಹಿತಿಗೆ ಮುಂಚೆ ನೇರವಾಗಿ ಎದುರಿಗೇ ಸಾಗೋ ವಿರೋಪಾಕ್ಷನ ಸನ್ನಿಧಿಗೆ ಸಾಗೋಣ

ದೇಗುಲದ ಪ್ರವೇಶದ್ವಾರದ ಬಳಿಯಿರುವ ಕಲ್ಲಿನ ಮಂಟಪ
ಈ ಬೋರ್ಡ್ ನೆನಪಿಟ್ಟುಕೊಂಡರೆ ಕಲ್ಲಿನ ಮಂಟಪವನ್ನು ಹುಡುಕೋದು ಸುಲಭ

ಹಂಪಿ ವಿರೂಪಾಕ್ಷ:
ಏಳನೇ ಶತಮಾನದಿಂದ ಪೂಜಿಸಲ್ಪಡುತ್ತಿರುವ ಈ ದೇಗುಲಕ್ಕೆ ಚಾಲುಕ್ಯ, ಹೊಯ್ಸಳ, ವಿಜಯನಗರದ ಕಾಲದಲ್ಲಿ ಅಷ್ಟಿಷ್ಟು ಬದಲಾವಣೆಗಳಾಗಿವೆ ಎನ್ನುತ್ತದೆ ಇತಿಹಾಸ. ಒಂಭತ್ತು ಅಂತಸ್ತುಗಳ ಬೃಹತ್ ಪ್ರವೇಶದ್ವಾರವನ್ನು ದಾಟಿ ಮುನ್ನಡೆದರೆ ವಿರೂಪಾಕ್ಷ ದೇಗುಲದ ಅಂಗಳಕ್ಕೆ ಸಾಗುತ್ತೇವೆ. ಅಲ್ಲಿನ ಎಡಭಾಗದಲ್ಲಿ ಅಡಿಗೆ ಮನೆಗೆ ಸಾಗುವ ದಾರಿ ಎನ್ನುವ ಬೋರ್ಡಿರೋ ಕಂಬದ ಮಂಟಪ ಸಿಗುತ್ತದೆ. ಕಂಬದ ಮಂಟಪದಲ್ಲಿರೋ ರಚನೆಗಳನ್ನು ನೋಡುತ್ತಾ ಮುಂದೆ ಸಾಗಿದರೆ ಹಿಂದೆ ಅಡಿಗೆ ಮನೆಗೆ, ಆನೆಗಳ ಲಾಯಕ್ಕೆ ಸಾಗಬಹುದಿತ್ತಂತೆ. ಈಗ ಬೀಗ ಹಾಕಿರೋ ಆ ದ್ವಾರದ ಬದಲು ಆನೆಗಳ ಲಾಯಕ್ಕೆ ಮತ್ತೊಂದು ದಾರಿಯಿಂದ ಸಾಗಬಹುದು. ಕಂಬಗಳ ಮಂಟಪಗಳ ರಚನೆಯನ್ನು ಆನಂದಿಸಿ ಮತ್ತೆ ವಾಪಾಸ್ ಬಂದರೆ ಪ್ರವಾಸಿ ಮಾಹಿತಿ ಕೇಂದ್ರ ಸಿಗುತ್ತದೆ. ಅದರ ಪಕ್ಕದಲ್ಲೇ ಇದೆ ದೇಗುಲದ ಪ್ರವೇಶ ದ್ವಾರ. ಅಲ್ಲಿನ ಪ್ರವೇಶ ಶುಲ್ಕ ತಲಾ ಎರಡು ರೂ. ಸ್ಥಿರ ಚಿತ್ರಗಳನ್ನು ತೆಗೆಯೋ ಕ್ಯಾಮೆರಾಕ್ಕೆ ೫೦ ಮತ್ತು ವಿಡೀಯೋ ಕ್ಯಾಮೆರಾಕ್ಕೆ ೫೦೦ ರೂ ಪ್ರವೇಶ ಶುಲ್ಕ. ಪಕ್ಕದಲ್ಲೇ ಇರೋ ಚಪ್ಪಲಿ ಸ್ಟಾಂಡಲ್ಲಿ ಚಪ್ಪಲಿಯಿಟ್ಟು ಒಳನಡೆದರೆ ದೇಗುಲದ ಪ್ರಾಂಗಣ ಎದುರಾಗುತ್ತೆ.
 
ಅಲ್ಲಿನ ಬಸವಣ್ಣನ ಮಂಟಪವನ್ನು ದಾಟಿ ಮುನ್ನಡೆದರೆ ಮತ್ತೊಂದು ಮಂಟಪ ಸಿಗುತ್ತದೆ. ಅದರಲ್ಲಿರುವ ರಚನೆಗಳ ಜೊತೆಗೆ ಅದರ ಮೇಲ್ಛಾವಣಿಯಲ್ಲಿರುವ ಪೈಂಟಿಗುಗಳನ್ನ ನೋಡಲು ಮರೆಯದಿರಿ.ನವಗ್ರಹಗಳ ಮತ್ತು ರಾಜಸಭೆಯ ಮನಮೋಹಕ ಪೈಂಟಿಗುಗಳನ್ನು ತಲೆಯೆತ್ತಿ ನೋಡದ ಅದೆಷ್ಟೋ ಜನ ಮಿಸ್ ಮಾಡಿಕೊಳ್ಳುತ್ತಾರೆ ! ಅಲ್ಲಿಂದ ಮುಂದೆ ಸಾಗಿದರೆ ವಿರೂಪಾಕ್ಷನ ಸನ್ನಿಧಿ. ಅಕ್ಕಪಕ್ಕದಲ್ಲಿ ಇನ್ನೂ ಅನೇಕ ದೇಗುಲಗಳನ್ನು ಕಾಣಬಹುದು. ಎಡಭಾಗದಲ್ಲಿನ ಮೆಟ್ಟಿಲುಗಳ ಹತ್ತಿ ಸಾಗಿದರೆ ಆನೆಲಾಯ ಮತ್ತು ಅಂದಿನ ಅಡಿಗೆ ಮನೆಗೆ ಭೇಟಿಯಿಡಬಹುದು.
Navagraha painting
Rajasabha painting

ವಿರೂಪಾಕ್ಷ ದೇಗುಲದ ಸುತ್ತಣ ಪ್ರಾಂಗಣದಲ್ಲಿ ರಾಮಾಯಣ,ಮಹಾಭಾರತ ಮತ್ತಿತರ ಪೌರಾಣಿಕ ಕೆತ್ತನೆಗಳಿವೆ. ವಿರೂಪಾಕ್ಷ ದೇಗುಲವನ್ನು ದರ್ಶಿಸಿದವರು ಅದೇ ಆವರಣದಲ್ಲಿರುವ ಶ್ರೀ ಲಕ್ಷ್ಮೀದೇವಿ, ಶಾರದಾ ದೇವಿ, ಮಹಿಷಾಸುರ ಮರ್ಧಿನಿ, ವಿದ್ಯಾರಣ್ಯ ಸ್ವಾಮಿ, ಪಂಪಾ ದೇವಿ, ಚಂಡಿಕೇಶ್ವರ, ಪಂಪಾದೇವಿ, ಭುವನೇಶ್ವರಿ ದೇವಿ, ಚಂಡಿಕೇಶ್ವರ ದೇವರ ದರ್ಶನವನ್ನು ಪಡೆಯಬಹುದು. ಅಲ್ಲೇ ಮೇಲೆ ಸಾಗಿದರೆ ದೇಗುಲ ಗೋಪುರದ ಉಲ್ಟಾ ಛಾಯೆಯನ್ನು ನೋಡಬಹುದು ! pin hole camera technology ಅನ್ನು ಅಂದೇ ಅಳವಡಿಸಿದ ನಮ್ಮ ಹಿರಿಯರ ಕೌಶಲ್ಯವನ್ನು ಮೆಚ್ಚಬೇಕಾದ್ದೆ. ನೋಡುವ ಕಣ್ಣುಗಳಲ್ಲಿ ಉಲ್ಟಾ ಛಾಯೆಯನ್ನು ಕಾಣಬಹುದಾದರೂ ಕತ್ತಲ ಆವರಣದಲ್ಲಿರುವ ಅದರ ಛಾಯಾಚಿತ್ರವನ್ನು ತೆಗೆಯೋದು ಕಷ್ಟಕರ. ಕ್ಯಾಮರಾದಲ್ಲಿ ಫ್ಲಾಷ್ ಹಾಕಿದ್ರೆ ಆ ಜಾಗವೇನೋ ಕಾಣುತ್ತೆ. ಆದ್ರೆ ಛಾಯೆಯ ಅನುಭವ ಸಿಗೋಲ್ಲ! ಆದರೂ ಆ ಜಾಗದ ಅನುಭವವನ್ನು ಚಿತ್ರದಲ್ಲಿ ಕಟ್ಟಿಕೊಡೋಕೆ ಪ್ರಯತ್ನಿಸಿದ್ದೀನಿ. ಅಲ್ಲಿಗೆ ಹೋದವರು ಆ ಜಾಗವನ್ನು ನೋಡೋಕೆ ಖಂಡಿತಾ ಮರೆಯದಿರಿ ಎನ್ನೋ ವಿನಂತಿಯೊಂದಿಗೆ :-)
ದೇಗುಲದ ಸುತ್ತಲ ಪ್ರದಕ್ಷಿಣಾ ಪಥ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳೀತು
One of the guide explaining children about inverted image of big gopuram

Scluptures which withstood the attacks of attacker and  the test of time since centuries !

ಹಾಗೇ ಮೇಲೆ ಸಾಗಿದರೆ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಗುರುಗಳಾದ ವಿದ್ಯಾರಣ್ಯರು ತಪಸ್ಸಿಗೆ ಕುಳಿತ ಜಾಗ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಮಠ ಸಿಗುತ್ತದೆ. ಅಲ್ಲಿಂದ ಕೆಳಬಂದರೆ ಪಕ್ಕದಲ್ಲಿರೋ ಕೆರೆಗೆ ಸಾಗೋ ಹಾದಿಯಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ, ಶ್ರೀ ಶಂಕರೇಶ್ವರ, ಶ್ರೀ ಚಾಮುಂಡೇಶ್ವರಿ, ರತ್ನ ಗರ್ಭ ಗಣಪತಿ ದೇಗುಲಗಳು ಕಾಣಸಿಗುತ್ತದೆ.
Lake next to Virupaksha temple. Both entrance to the temple are visible at the edges
ಇಲ್ಲಿನ ಪ್ರತೀ ಶಿಲ್ಪಕ್ಕೂ ಗೈಡುಗಳು ಒಂದೊಂದು ಕಥೆ ಹೇಳುತ್ತಾರೆ. ಉದಾಹರಣೆಗೆ ಇಲ್ಲಿನ ದ್ವಾರದಲ್ಲಿ ಸಿಗೋ ಮೂರು ತಲೆಯ ಅಪರೂಪದ ನಂದಿ ಭೂತ, ವರ್ತಮಾನ, ಭವಿಷ್ಯಗಳ ಸಂಕೇತವಂತೆ. ದಾಳಿಗೆ ತುತ್ತಾಗಿ ಅಸ್ಪಷ್ಟವಾಗಿರೋ ಅದರ ಮೂರನೇ ಮುಖ ನಮ್ಮ ಅಸ್ಪಷ್ಟ ಭವಿಷ್ಯದ ಸಂಕೇತವಂತೆ ! ಹೇಳುತ್ತಾ ಹೊರಟರೆ ಅದೇ ಒಂದು ಕಾದಂಬರಿಯಾದೀತು !

3 headed Nandi at the entrance
to temple from the side of Lake


Ganesha, Karthikeya, Airavata at the same wall
Single headed nandi and other scriptures at the other door

ಸದ್ಯ ಜೀರ್ಣೋದ್ದಾರ ನಡೆಯುತ್ತಿರುವ ಕೆರೆಯನ್ನು ದಾಟಿ ಮುನ್ನಡೆದರೆ ತುಂಗಭದ್ರಾ ತಟ ಸಿಗುತ್ತದೆ. ಇಲ್ಲಿನ ನೀರಿನಲ್ಲಿ ಅದೆಷ್ಟೋ ಶಿವಲಿಂಗಗಳನ್ನು, ಬಸವನ ಕೆತ್ತನೆಗಳನ್ನು ಕಾಣಬಹುದು. ಪುಣ್ಯಸ್ನಾನಕ್ಕೆ ಬಂದಿರೋ ಯಾತ್ರಾರ್ಥಿಗಳು ಒಂದೆಡೆಯಾದರೆ ನದಿಯಾಚೆಯ ಬಂಡೆಗಳ, ಅವುಗಳ ಮಧ್ಯದ ದೇಗುಲಗಳ ಸವಿಯನ್ನು ಸವಿಯೋಕೆ ಬಂದಿರೋ ಪ್ರವಾಸಿಗಳ ಗುಂಪು ಮತ್ತೊಂದೆಡೆ. 
One of the Nandi @the river Tungabhadra
View of the Mantapa and one of the river crossings
 ಮುಂದಿನ ಕತೆಯನ್ನು ಮುಂದಿನ ಭಾಗದಲ್ಲಿ ನೋಡೋಣ  ..
ಮುಂದಿನ ಭಾಗದಲ್ಲಿ :ವಿಠಲನ ನಾಡಿನಲ್ಲೊಂದಿಷ್ಟು ಅಲೆದಾಟ

Wednesday, October 7, 2015

ಹಂಪಿ ಪ್ರವಾಸ ಕಥಾನಕ -೧: ನಾಡ ಭಾಷೆ, ಇತಿಹಾಸವೂ ನಮ್ಮ ಅಭಿಮಾನಶೂನ್ಯತೆಯು

ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.ಅಪಾರ ಕೀರ್ತಿಯೇ.. ಮಯೂರ ಚಿತ್ರದ ಈ ಹಾಡು, ಅದಕೆ ಹಿಮ್ಮೇಳವೆಂಬಂತೆ ನಾಗೋ ಕುದುರೆಯ ಪುಟಿತದ ಟಕ್, ಟಕ್, ಟಕ್ ಎಂಬ ಸದ್ದೂ ನಿಮ್ಮೆಲ್ಲರ ಮನಸ್ಸಲ್ಲೊಂದು ಭದ್ರ ಸ್ಥಾನ ಪಡೆದಿರಬಹುದು. ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಸಾಮ್ರಾಜ್ಯ ಹೀಗೆ ಇಲ್ಲಿನ ನೆಲವಾಳಿದ ರಾಜರೆಲ್ಲಾ ಕಲೆ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಕೊಟ್ಟ ಪ್ರೋತ್ಸಾಹದ ಪರಿಯನ್ನು ನಮ್ಮ ಸುತ್ತೆಲ್ಲಾ ಈಗಲೂ ಕಾಣಬಹುದು, ಹೆಮ್ಮೆಪಡಬಹುದು. ಭಾಷೆ, ಜಾತಿ, ಧರ್ಮವೆಂಬ ಯಾದ ಬೇಧವೂ ಇಲ್ಲದೇ ಬಂದವರಿಗೆಲ್ಲಾ ಆಶ್ರಯವೀಯೋ ತಾಯಿ ಭಾರತಿಯ ಗುಣವನ್ನು ಚಾಚೂ ತಪ್ಪದೆ ಪಾಲಿಸಿದ ಕನ್ನಡಾಂಬೆಯ ನಾಡ ಕಲೆ, ಸಂಸ್ಕೃತಿಯಲ್ಲಿ ಹೊರನಾಡಿನ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯೂ ಅನೇಕ. ಆದರೆ ಕಲೆ, ಭಾಷೆಗಳ ಬೆಳವಣಿಗೆಯ ರಾಜರಾಳ್ವಿಕೆಯ ದಿನಗಳನ್ನೂ, ಈ ದಿನಗಳನ್ನೂ ಹೋಲಿಸಿ ನೋಡಿದಾಗ ಅನೇಕ ಕಡೆಗಳಲ್ಲಿ ಬೇಸರವಾಗುತ್ತದೆ. ನಮ್ಮ ನಾಡ ನುಡಿ, ಇತಿಹಾಸದ ಬಗ್ಗೆ ಇಷ್ಟೊಂದು ಅಭಿಮಾನಶೂನ್ಯರಾದೆವಾ ನಾವು ಅನಿಸಿಬಿಡುತ್ತದೆ.

ಪ್ರಸಂಗ ೧:
ಹಂಪೆಗೆ ಹೋದವರೆಲ್ಲಾ ಅಂಜನಾದ್ರಿಪರ್ವತ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ರಾಮಾಯಣದ ಕಿಷ್ಕಿಂದೆ ಇದುವೇ ಎಂದು ಹೇಳೋ, ಪುರಾಣಪುರುಷ ಭಜರಂಗಬಲಿ ಇಲ್ಲೇ ಜನಿಸಿದ್ದಾನೆಂದು ಹೇಳೋ ಈ ಅಂಜನಾದ್ರಿಗೆ ಹಂಪೆಗೆ ಹೋದ ಬಹುತೇಕರು ಹೋಗಿಯೇ ಇರುತ್ತಾರೆ. ತುಂಗಭದ್ರೆಯ ಆಚೆ ದಡದಲ್ಲಿರೋ ಅಂಜನಾದ್ರಿ ಪರ್ವತಕ್ಕೆ ಭೇಟಿ ಕೊಡೋ ಸಲುವಾಗಿಯೇ ಹತ್ತು ರೂ ನೀಡಿದರೆ ದಾಟಿಸೋ ಬೋಟಿನಲ್ಲಿ ತುಂಗಭದ್ರೆಯ ದಾಟಿ, ಅಲ್ಲಿಂದ ಇನ್ನೂರೈವತ್ತಕ್ಕೆ ಒಂದರಂತೆ ಬೈಕನ್ನೋ, ನಾನ್ನೂರರಿಂದ ಆರ್ನೂರವರೆಗೆ ಕೊಟ್ಟು ಆಟೋವನ್ನೋ, ನೂರಕ್ಕೊಂದರಂತೆ ಸಿಗೋ ಸೈಕಲ್ಲನ್ನೋ ಪಡೆದು ಅಂಜನಾದ್ರಿ, ಪಂಪಾಸರೋವರ, ಲಕ್ಷ್ಮೀ ದೇಗುಲ, ಆನೆಗುಂದಿ, ಚಿಂತಾಮಣಿ ಮೊದಲಾದ ಸ್ಥಳಗಳನ್ನು ದರ್ಶಿಸೋದು ರೂಢಿ.
Entrance of Anjanadri temple having information about the place

 ಅಂಜನಾದ್ರಿ:
ಹುಲಿಗಿ ಕ್ಷೇತ್ರ ಮುಂತಾದವನ್ನು ದರ್ಶಿಸೋ ಅಭಿಲಾಶೆಯುಳ್ಳವರೂ ಗಂಗಾವತಿಗೆ ಸಾಗೋ ಈ ರಸ್ತೆಯಲ್ಲಿ ಬಂದು ಅಂಜನಾದ್ರಿಯನ್ನು ಗಮನಿಸಿರುತ್ತಾರೆ. ಹನುಮಂತನ ತಾಯಿ ಅಂಜನಾದೇವಿಯ ಹೆಸರಿನಲ್ಲಿರುವ ಈ ಪರ್ವತದ ಆರು ನೂರು ಚಿಲ್ಲರೆ ಮೆಟ್ಟಿಲು ಹತ್ತಿ ಕೇಸರಿವರ್ಣದ ಆಂಜನೇಯನ , ಪಕ್ಕದಲ್ಲೇ ಇರುವ ಅಂಜನಾದೇವಿಯ ಗುಡಿಯ ದರ್ಶನವನ್ನು ಪಡೆಯುವುದು, ಬೆಟ್ಟದ ಮೇಲಿಂದ ಸುತ್ತಣ ಹಂಪಿಯ ವಿಹಂಗಮ ನೋಟವನ್ನು ಸವಿಯೋದೇ ಒಂದು ಖುಷಿಯ ಅನುಭವ. ಹಂಪೆ ಕರ್ನಾಟಕದಲ್ಲಿರುವುದರಿಂದ ಹನುಮಂತ ಕನ್ನಡದವನೇ ಎಂದು ನಾವೆಲ್ಲಾ ಖುಷಿಯಿಂದ ಬೀಗಬಹುದಾದ ಜಾಗಕ್ಕೆ ಭೇಟಿ ಕೊಡುವ ಅವಕಾಶವನ್ನು ಯಾರು ತಾನೇ ತಪ್ಪಿಸಿಕೊಳ್ಳುತ್ತಾರೆ ? ಉರಿಬಿಸಿಲಿನಲ್ಲಿ ಬೆಟ್ಟ ಹತ್ತಿ ಬಂದ ಭಕ್ತರ ಸಲುವಾಗಿಯೇ ಇಲ್ಲಿನ ದೇಗುಲದವರು ನಡೆಸುತ್ತಿರುವ ಅನ್ನದಾನದ ಬಗ್ಗೆ ಒಳ್ಳೆಯ ಮಾತನಾಡದೇ ಇರಲು ಮನಸ್ಸಾಗೋದಿಲ್ಲ. ಅನ್ನ, ದಾಲನ್ನು ಪ್ರಸಾದ ಅಂತ ವಿತರಿಸೋ ಇಲ್ಲಿಯ ಪರಂಪರೆಯ ಬಗ್ಗೆ ಸ್ಥಳೀಕರೊಬ್ಬರ ಮಾತಲ್ಲೇ ಹೇಳೋದಾದ್ರೆ ಇದು ಪ್ರಸಾದ ರೀ, ಊಟ ಅಲ್ಲ. 
Anjanadri temple
View from the top of Anjanaadri

 ಆದರೆ ಇಲ್ಲಿನ ಅರ್ಚಕರು ಮಾತಾಡೋದು, ಪೂಜೆ ಮಾಡೋದು, ಇಲ್ಲಿನ ಭೋಜನಶಾಲೆಯಲ್ಲಿ ಆಂಜನೇಯನ ಪರಾಕ್ರಮಗಳ ಸಾರೋ ಸಾಲು ಚಿತ್ರಗಳ ಬರಹವಿರೋದು ಕನ್ನಡದಲ್ಲಲ್ಲ !

Painting giving the date of birth of Lord Hanuman


Bhojanashale of Anjanadri temple decorated with paintings related to hanuman chalisa
 ಗುಜರಾತಿ, ಬಿಹಾರಿ, ಮರಾಠಿ.. ಹೀಗೆ ಉತ್ತರದ ಬೇರೆ ಬೇರೆ ಭಾಗಗಳಿಂದ ಬಂದ ಅರ್ಚಕರು ಪೂಜೆಗೆ ಓದೋದು ಅವಧಿ ಭಾಷೆಯಲ್ಲಿರುವ ತುಲಸೀದಾಸ ವಿರಚಿತ ಹನುಮಾನ್ ಚಾಲೀಸವನ್ನ. ಇಲ್ಲಿಗೆ ಬರೋ ಭಕ್ತರಲ್ಲಿ ಉತ್ತರಭಾರತದವರ ಸಂಖ್ಯೆಯೂ ಗಮನಾರ್ಹವಾಗಿಯೇ ಇದೆ ಎನ್ನಬಹುದಾದರೂ ನಮ್ಮ ನಾಡಲ್ಲಿ ನಮ್ಮದಲ್ಲದ ಭಾಷೆಯಲ್ಲಿನ ಆಚರಣೆಗಳು ನನ್ನ  ಕೊಂಚ ವಿಚಲಿತನಾಗಿಸಿದ್ದು ಸುಳ್ಳಲ್ಲ. ನಾಡ ಹಲವು ಭಾಗಗಳಲ್ಲಿ ಸಂಸ್ಕೃತದ ಮಂತ್ರಗಳಲ್ಲಿ ಅರ್ಚನೆ ನಡೆಸುವುದು ತಪ್ಪಾಗದಿದ್ದರೆ ಇಲ್ಲಿನ ಕನ್ನಡೇತರ ಭಾಷೆ ಹೇಗೆ ತಪ್ಪಾಗುತ್ತೆ ಎಂಬ ಸಂದೇಹವಿರೋ ಅನೇಕ ಮಿತ್ರರಿಗಾಗಿ ಒಂದು ಮಾಹಿತಿ. ಅರ್ಚನೆ ಸಂಸ್ಕೃತದಲ್ಲಾದರೂ ಅರ್ಚಕರು ಸಂಬೋಧಿಸೋದು ಕನ್ನಡದಲ್ಲೇ. ಮಂದಿರದ ಬೋರ್ಡುಗಳಿಂದ, ಸೇವಾ ವಿವರಗಳವರೆಗೆ ಎಲ್ಲಾ ಮಾಹಿತಿಯ ಪ್ರಧಾನ ಭಾಷೆ ಕನ್ನಡ ! ನಿಮ್ಮಲ್ಲಿ ಕೆಲವರು ಕೋಲಾರದ ಅನೇಕ ದೇಗುಲಗಳಲ್ಲಿ, ಅಷ್ಟೇಕೆ ಬೆಂಗಳೂರ ಹಲವು ದೇಗುಲಗಳಲ್ಲೇ ತೆಲುಗಿನಲ್ಲಿ ಅರ್ಚನೆ ನಡೆಸುತ್ತಾರೆ ಭಟ್ಟರು, ಅದರಲ್ಲಿ ಇದೇನು ಮಹಾ ಎನ್ನಬಹುದು . ಮಹಾನ್ ಏನೂ ಇಲ್ಲ ಬಿಡಿ. ಎಲ್ಲರನ್ನೂ ಬರಮಾಡಿಕೊಳ್ಳೋ ಭರದಲ್ಲಿ ನಮ್ಮತನವ ಮರೆಯೋದೂ ಒಂದು ದೊಡ್ಡ ಗುಣವೇ ಬಿಡಿ ! ಅಂಜನಾದ್ರಿಯ ಅರ್ಚಕರಿಂದ ಸಿಬ್ಬಂದಿಯವರೆಗೆ ಎಲ್ಲರಿಗೂ ಕನ್ನಡ ಬರುವುದೂ, ಇಲ್ಲಿನ ಹಲ ಬೋರ್ಡುಗಳು ಕನ್ನಡದಲ್ಲೇ ಇರುವ ಬಗ್ಗೆ ಸದ್ಯಕ್ಕಂತೂ ಹೆಮ್ಮೆ ಪಟ್ಟುಕೊಳ್ಳಬಹುದು ನಾವು ! 
Information board at the entrance of Anjanadri indicating the entry to the temple is absolutely free

Sideview of Anjanadri temple


ಪ್ರಸಂಗ ೨:
ಅಂಜನಾದ್ರಿಯ ದರ್ಶನದ ನಂತರ ನಾವು ಭೇಟಿ ಕೊಟ್ಟಿದ್ದು ಪಂಪಾ ಸರೋವರ ಮತ್ತು ಲಕ್ಷ್ಮೀ ಮಂದಿರಕ್ಕೆ. ಈ ಕ್ಷೇತ್ರಕ್ಕೆ ಹೆಸರು ಬಂದ ಕಾರಣವೇನೆಂದು ಸ್ವಲ್ಪ ಕೆದಕಿದಾಗ ಸಿಕ್ಕ ಮಾಹಿತಿಯ ಪ್ರಕಾರ ಈ ಸ್ಥಳಕ್ಕೆ ಹೆಸರಿಟ್ಟ ಹಿರಿಮೆ  ಸ್ಕಂದಪುರಾಣದಲ್ಲಿ ಬರುವ ಪಂಪಾಮಹಾತ್ಮೆಗೆ ಸಲ್ಲುತ್ತದೆ. ಅದರ ಪ್ರಕಾರ ಬ್ರಹ್ಮನ ಮಗಳಾದ ಪಂಪಾದೇವಿಯು ಹೇಮಕೂಟದಿಂದ ಅರ್ಧಕ್ರೋಶದಷ್ಟು ಉತ್ತರಕ್ಕಿರುವ ವಿಪ್ರಕೂಟ ಎಂಬ ಪರ್ವತದ ಬಳಿಯ ಪಂಪಾಸರೋವರದ ಬಳಿ ಉಗ್ರ ತಪಸ್ಸನ್ನಾಚರಿಸುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗುತ್ತಾನೆ. ಅವಳ ಇಚ್ಚೆಯ ಮೇರೆಗೆ ಅವಳನ್ನು ವಿವಾಹವಾಗಿ ಹಂಪಿಯಲ್ಲಿ ವಿರೂಪಾಕ್ಷನಾಗಿದ್ದವನು ಇಲ್ಲಿ ಪಂಪಾಪತಿ ಎನಿಸಿಕೊಳ್ಳುತ್ತಾನೆ. ಒಂದು ಕ್ರೋಶ ಅಂದರೆ ಸುಮಾರು ನಾಲ್ಕು ಕಿ.ಮೀ. ಅರ್ಧಕ್ರೋಶ ಅಂದರೆ ಸುಮಾರು ೨.ಕಿ.ಮೀ. 
Hampi to Pampa sarovara distance as seen in google map

ಆ ಮಾಹಿತಿಯನ್ನು ಈಗಿನ ಗೂಗಲ್ ದೂರದೊಂದಿಗೆ ತಾಳೆ ಹಾಕೋದಾದರೆ ವಿರೂಪಾಪುರಗಡ್ಡಿಯ ಮೂಲಕ ತುಂಗಭದ್ರೆಯನ್ನು ದಾಟಿ ಮುನ್ನಡೆಯುವವರಿಗೆ ಪಂಪಾ ಸರೋವರಕ್ಕಿರುವ ದೂರ ಸರಿ ಸುಮಾರು ಅಷ್ಟೇ ! ಈಗಿನ ದಾರಿ ಸ್ವಲ್ಪ ಸುತ್ತಿ ಬಳಸಿ ಸಾಗುತ್ತದಾದರೂ ಹಿಂದೆ ಸರಿ ಸುಮಾರು ೨.ಕಿ.ಮೀ ದೂರದೊಂದು ಶಾರ್ಟ್ ಕಟ್ ಇದ್ದಿರಬಹುದಾದ ಸಾಧ್ಯತೆ ಇಲ್ಲದಿಲ್ಲ.  ನಂತರ ಬರೋ ರಾಮಾಯಣ ಪ್ರಸಂಗದಲ್ಲೂ ಈ ಸ್ಥಳ ತಳುಕು ಹಾಕಿಕೊಳ್ಳುತ್ತದೆ. ಶಬರಿ ರಾಮನಿಗಾಗಿ ಕಾಯುತ್ತಿದ್ದ ಜಾಗವೆಂದು ಪ್ರಸಿದ್ದಿ ಪಡೆದ ಶಬರಿ ಗುಹೆಯೂ ಇಲ್ಲಿದೆ.
Shabari Ashrama

 ಅಂದು ಶಬರಿ ಶ್ರೀರಾಮನಿಗೆ ಒಳ್ಳೆಯ ಹಣ್ಣುಗಳನ್ನೇ ಕೊಡಬೇಕು ಅಂತ ಕಚ್ಚಿ ನೋಡಿ ಕೊಟ್ಟ ಬೋರೆ ಹಣ್ಣುಗಳು ಶ್ರೀರಾಮ, ಲಕ್ಷ್ಮಣರ ಹಸಿವೆಯನ್ನು ನೀಗಿಸಿದಂತೆಯೂ ಇಂದಿಗೂ ಇಲ್ಲಿ ನಡೆಯೂ ಮಧ್ಯಾಹ್ನದ ಅನ್ನ ಸಂತರ್ಪಣೆ ಭಕ್ತರ ಹಸಿವೆಯನ್ನು ನೀಗಿಸುತ್ತಿರುವುದು ಸುಳ್ಳಲ್ಲ.  ಶ್ರೀ ರಾಮನ ಪಾದುಕೆಯಿರೋ ಸಣ್ಣ, ಶಬರಿಯ ಪಾದುಕೆಗಳಿರೋ ಗುಹೆಯೆಂದು ಸ್ಥಳೀಯರು ನಂಬೋ ಈ ಸ್ಥಳ ಅನೇಕರ ಪಾಲಿನ ಪುಣ್ಯ ಸ್ಥಳ, ಯಾತ್ರಾ ಸ್ಥಳ. ಇಲ್ಲಿ ಮತ್ತೆ ಹಿಂದಿಯ ರಾಜ್ಯಭಾರ. ಬಂದ ಭಕ್ತರಿಗೆ ಆಪ್ ಕಹಾ ಸೇ ಹೋ ? ರಾಜಸ್ಥಾನ್. ರಾಜಸ್ಥಾನ್ ಮೇ ಕಹಾಂ ಎಂದೇ ಸಂಬೋಧಿಸೋ ಭಟ್ಟರ ನುಡಿ ಮತ್ತೆ ಕಸಿವಿಸಿಯನ್ನುಂಟು ಮಾಡಿದ್ದು ಸುಳ್ಳಲ್ಲ. ಹಿಂದಿನಂತೆಯೇ ಇಲ್ಲಿನ ಲಿಪಿ ದೇವನಾಗರಿನಲ್ಲಿ, ಬರುವವರ ಸಂಭಾಷಣೆ ಕನ್ನಡೇತರ ಭಾಷೆಗಳಲ್ಲಿ ! ಇದು ಸಂರಕ್ಷಿತ ಸ್ಮಾರಕ ಅನ್ನೋ ಪುರಾತತ್ವ ಇಲಾಖೆಯ ಬೋರ್ಡು ಪ್ರವೇಶಕ್ಕೆ ಮುಂಚೆ ಸಿಗುತ್ತೆ ಅನ್ನೋದನ್ನ ಬಿಟ್ಟರೆ ಇಲ್ಲಿನ ಸ್ಥಳ ಮಹಿಮೆಯನ್ನು ಸಾರೋ ಒಂದು ಬೋರ್ಡೂ ಇಲ್ಲವಿಲ್ಲಿ. ಪೂರ್ಣ ಹಸಿರುಗಟ್ಟಿ, ಕೊಳೆಯಿಂದ ರಾರಾಜಿಸುತ್ತಿರೋ ಪಂಪಾ ಸರೋವರದ ಸ್ಥಿತಿಯ ಬಗ್ಗೆಯೂ ಬೇಸರವಾಗದೇ ಇರಲಿಲ್ಲ. ನಮಾಮಿ ಗಂಗೆ ಎಂಬ ಹೆಸರಿನಲ್ಲಿ ಗಂಗೆಯ ಶುದ್ದೀಕರಣಕ್ಕೆ ನಡೆಯುತ್ತಿರೋ ಪ್ರಯತ್ನಗಳ ಬಗ್ಗೆ, ಯಮುನೆಯ ಶುಚಿತ್ವಕ್ಕೆ ಅಲ್ಲಿನ ಸರ್ಕಾರ ಕೈಗೊಳ್ಳುತ್ತಿರೋ ಕ್ರಮದ ಬಗ್ಗೆ ಓದೋ ನಾವು ನಮ್ಮಲ್ಲೇ ಇರೋ ಪಂಪಾಸರೋವರದಂತಹ ಸ್ಥಳಗಳ ಬಗ್ಗೆ ಗಮನಹರಿಸೋಲ್ಲವೇಕೆ ? ಹಂಪೆಯಲ್ಲಿನ ವಿರೂಪಾಕ್ಷ ದೇಗುಲದ ಪುಷ್ಕರಿಣಿಯ ಜೀರ್ಣೋದ್ದಾರದ ಕೆಲಸ ನಡೆಯುತ್ತಿರೋ ಪರಿಯಲ್ಲೇ ಹಂಪಿಯಲ್ಲಿನ ಅದೆಷ್ಟೋ ಹಸಿರುಗಟ್ಟಿದ ಪುಷ್ಕರಿಣಿಗಳ ಸ್ವಚ್ಛತೆಯ, ಸಂರಕ್ಷಣೆಯ ಕೆಲಸವೂ ಶೀರ್ಘವಾಗಿ ನಡೆಯಬೇಕಾದ ಅನಿವಾರ್ಯತೆಯಿದೆ.

Sri Rama Paduke

ಪ್ರಸಂಗ ೩:
ಪಂಪಾಕ್ಷೇತ್ರದ ನಂತರ ನಾವು ಸಾಗಿದ್ದು ದುರ್ಗಾದೇವಿ ಮಂದಿರಕ್ಕೆ. ರಾಮಯಣದ ಕಿಷ್ಕಿಂದಾಕಾಂಡದಲ್ಲಿ ಬರೋ ವಾಲಿಯ ಗುಹೆಯೂ ಇಲ್ಲಿರೋದಿಂದ ಈ ಬೆಟ್ಟಕ್ಕೆ ವಾಲಿ ಪರ್ವತವೆಂದೂ, ಕಿಷ್ಕಿಂದ ಕ್ಷೇತ್ರವೆಂದೂ ಕರೆಯಲಾಗುತ್ತದೆ. ಇಲ್ಲೂ ಕೆಲವು ಬೋರ್ಡುಗಳು, ಕನ್ನಡವಿಲ್ಲದ ತೆಲುಗು ಹಿಂದಿಗಳಲ್ಲಿದ್ದರೂ ಇಲ್ಲಿನ ಪರಿಸ್ಥಿತಿ ಹಿಂದಿನೆರಡು ಸ್ಥಳಗಳಿಗಿಂತ ಪರವಾಗಿಲ್ಲ. ಶರನ್ನವರಾತ್ರಿಯ ಉತ್ಸವಕ್ಕೆ ಸಜ್ಜಾಗುತ್ತಿದ್ದ ಇಲ್ಲಿನ ಶ್ರೀ ದುರ್ಗಾಮಾತಾ ಭೋಜನಶಾಲೆ ದುರ್ಗಾದೇವಿಯ ಮಂದಿರದ ಬಲಭಾಗಕ್ಕೆ(ನಮ್ಮ ಎಡಭಾಗಕ್ಕೆ) ಗಣಪತಿ ದೇಗುಲದತ್ತ ಸಾಗುತ್ತಿದ್ದ ನಮ್ಮನ್ನು ಸ್ವಾಗತಿಸಿತು. ಪುಣ್ಯ ಕ್ಷೇತ್ರಗಳೆಂದರೆ ವ್ಯಾಪಾರವೆನ್ನೋ ಪರಿಸ್ಥಿತಿಯಿರೋ ಅನೇಕ ಸ್ಥಳಗಳಿಗೆ ಹೋಲಿಸಿದರೆ ಬಂದ ಭಕ್ತಾದಿಗಳ ದಾನದಿಂದಲೇ ನಡೆಯುತ್ತಿರೋ ಈ ದೇಗುಲಗಳ ಅನ್ನದಾನ ಸೇವೆ ಈ ನಾಡ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದು ಸುಳ್ಳಲ್ಲ.


ಹಾಗೇ ಮುಂದೆ ಸಾಗಿದರೆ ಒಂದು ಊರಿನ, ಕೋಟೆಯ ಪ್ರವೇಶದ್ವಾರವಾಗಿದ್ದಿರಬಹುದಾದಂತ ರಚನೆ. ಭಾಗಶಃ ಬಿದ್ದುಹೋಗಿರೋ ಅದನ್ನು ದಾಟಿ ಮುಂದೆ ಹೋದವರಿಗೆ ಬಲಭಾಗದಲ್ಲಿ ಎತ್ತರೆತ್ತರದ ಬಂಡೆಗಳು, ಎಡಭಾಗದಲ್ಲೊಂದು ಬೃಂದಾವನ ಕಾಣಸಿಗುತ್ತೆ. 
Entrace towards vali guhe

ಅದನ್ನು ದಾಟಿ ಮುಂದೆ ಸಾಗಿದವರಿಗೆ ಬಲಭಾಗದಲ್ಲಿ ವಾಲಿಗುಹೆ, ಗಣಪತಿ ದೇವಸ್ಥಾನ, ಶಿವಾಲಯ ಎಂಬ ಬೋರ್ಡು ಕಾಣುತ್ತದೆ. ರಾಮಾಯಣವನ್ನೋದಿದವರಿಗೆ ವಾಲಿ, ಸುಗ್ರೀವ, ದುಂದುಭಿ ಮತ್ತು ಮಾತಂಗಮುನಿಯ ಶಾಪದ ಬಗ್ಗೆ ತಿಳಿದಿರುತ್ತದೆ. ಕಿಷ್ಕಿಂಧಾ ಕಾಂಡದಲ್ಲಿ ಬರೋ ವಿವರಣೆಯ ಪ್ರಕಾರ ದುಂಧುಬಿ ಎಂಬ ರಕ್ಕಸನನ್ನು ಕೊಂದ ವಾಲಿ ಆ ಶವವನ್ನು ಎತ್ತಿ ಎಸೆದಿರುತ್ತಾನೆ. ಆ ಶವ ದೂರದಲ್ಲಿ ಯಜ್ಞಗಯ್ಯುತ್ತಿರೋ ಮತಂಗ ಮುನಿಯ ಯಜ್ಞಕುಂಡದಲ್ಲಿ ಹೋಗಿ ಬಿದ್ದಿರುತ್ತದೆ. ಆಗ ಮತಂಗಮುನಿ ಈ ಕೆಲಸವನ್ನು ಮಾಡಿದವನು ಯಾವನೇ ಆಗಿರಲಿ, ಅವನು ಈ ಪ್ರದೇಶಕ್ಕೆ ಕಾಲಿಟ್ಟರೆ ಅವನ ತಲೆ ಹೋಳಾಗಲಿ ಎಂದು ಶಾಪವೀಯುತ್ತಾನೆ. ನಂತರದಲ್ಲಿ ಮಾಯಾವಿ ಎಂಬ ರಕ್ಕಸ ವಾಲಿಯನ್ನು ಕೆಣಕಿ ಒಂದು ಗುಹೆಯನ್ನು ಹೊಕ್ಕಿರುತ್ತಾನೆ. ಅವನನ್ನು ಕೊಲ್ಲಲು ಹೋದ ವಾಲಿ ತಿಂಗಳಾನುಗಟ್ಟಲೆ ಆದರೂ ಬಾರದೇ, ಆ ಗುಹೆಯಿಂದ ರಕ್ತ ಹೊರಗೆ ಬರಲು ವಾಲಿ ಸತ್ತಿರಬಹುದೆಂಬ ಭೀತಿಯಿಂದ , ವಾಲಿಯನ್ನು ಕೊಂದ ರಕ್ಕಸ ಹೊರಗೆ ಬಾರದಿರಲೆಂದು ಆ ಗುಹೆಗೆ ದೊಡ್ಡ ಬಂಡೆಯನ್ನು ಮುಚ್ಚಿದ ಸುಗ್ರೀವನು ರಾಜ್ಯಕ್ಕೆ ಮರಳುತ್ತಾನೆ. ತಿಂಗಳಾನುಗಟ್ಟಲೆ ಕಳೆದರೂ ಬಾರದ ಅಣ್ಣನ ಪರವಾಗಿ ರಾಜ್ಯವಾಳಲು ಪ್ರಾರಂಭಿಸುತ್ತಾನೆ. ನಂತರ ಆ ಬಂಡೆಯನ್ನೊಡೆದು ಹೊರಬರೋ ವಾಲಿ, ತಮ್ಮನ ಬಗ್ಗೆ ತಪ್ಪಾಗಿ ತಿಳಿದು ಅವನನ್ನು ರಾಜ್ಯದಿಂದ ಹೊರಹಾಕುತ್ತಾನೆ. ಅಣ್ಣನಿಂದ ಜೀವವುಳಿಸಿಕೊಳ್ಳಲು ಸುಗ್ರೀವನು ಇದೇ ಮಾತಂಗಪರ್ವತದ ತಪ್ಪಲಿನಲ್ಲಿ ಬಂದು ನೆಲೆಸುತ್ತಾನೆ. 


at Vali Guhe
ಹಂಪಿಯ ಪಕ್ಕದಲ್ಲಿರೋ ಏಕಶಿಲಾ ನಂದಿಯ ಪಕ್ಕದಿಂದ ಶುರುವಾಗೋ ಮಾತಂಗಪರ್ವತಕ್ಕೂ , ಕಿಷ್ಕಿಂದೆಯ ಈ ಗುಹೆಗೂ ಹೆಚ್ಚಿನ ದೂರವೇನಿಲ್ಲ ! ಆದರೆ ಈ ಗುಹೆ ವಾಲಿ ದುಂದುಭಿಯ ಸಹೋದರ ಮಾಯಾವಿಯನ್ನು ಕೊಂದ ಗುಹೆಯೋ ಅಥವಾ ವಾಲಿ ವಾಸವಿದ್ದ ಗುಹೆಯೋ ಎಂಬುದರ ಬಗ್ಗೆ ಸ್ಥಳೀಕರಲ್ಲಿ ಮಾಹಿತಿ ಸಿಕ್ಕಲಿಲ್ಲ. ನಮ್ಮ ಇತಿಹಾಸದ ಬಗ್ಗೆ ನಮಗೇ ಇಲ್ಲದಿರುವ ಪ್ರಜ್ಞೆ, ಅಭಿಮಾನಶೂನ್ಯತೆ ಬೇಸರ ತರಿಸದೇ ಇದ್ದೀತೆ ?
ಪ್ರಸಂಗ ೪:
ಹಂಪಿಯ ಸಾಸಿವೆಕಾಳು ಗಣೇಶನ ದೇಗುಲದಿಂದ ಕೆಳಗೆ ಸಾಗೋ, ಉಗ್ರ ನರಸಿಂಹನ ದೇಗುಲದತ್ತ ಕರೆದೊಯ್ಯೋ ರಸ್ತೆಯಲ್ಲಿ ಮೊದಲಿಗೆ ಸಿಕ್ಕಿದ್ದು ಶ್ರೀಕೃಷ್ಣ ದೇಗುಲ, ಕೆಳಗೆ ಕಾಣಿಸೋ ಕೃಷ್ಣ ಬಜಾರು ಮತ್ತು ಲೋಕಪಾವನಿ ಕೊಳ ಅಥವಾ ಪುಷ್ಕರಿಣಿ.  ಶ್ರೀ ಕೃಷ್ಣದೇವರಾಯನ ಸರಿಸುಮಾರಿನಲ್ಲಿ ಬಹುಪಾಲು ಆಂಧ್ರ, ತೆಲಂಗಾಣ ಮತ್ತು ಪೂರಾ ಒಡಿಸ್ಸಾ, ಇಂದಿನ ಪಶ್ಚಿಮ ಬಂಗಾಳ, ಜಾರಖಂಡ, ಛತ್ತೀಸ್ಗಡವನ್ನು ಆಳುತ್ತಿದ್ದುದು ಕಳಿಂಗದ ರಾಜ ಗಜಪತಿ ಪ್ರತಾಪ ರುದ್ರ ದೇವ.  ವಿಜಯನಗರ ಸೇನೆ ೧೫೧೨ರಲ್ಲಿ ಕಳಿಂಗ ರಾಜ್ಯಕ್ಕೆ ಸೇರಿದ್ದ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕುತ್ತದೆ. ಅಲ್ಲಿ ವರ್ಷದ ತನಕದ ಯುದ್ದದಲ್ಲಿ ಹಸಿವೆಯಿಂದ ಕಳಿಂಗ ಸೇನೆ ಕಾಲ್ಕೀಳುತ್ತದೆ. ನಂತರ ಕೊಂಡವೀಡುರಾಜುವಿನಲ್ಲಿ ವಿಜಯನಗರ ಸೇನೆಯನ್ನು ಮುಖಾಮುಖಿಯಾಗೋ ಕಳಿಂಗ ಸೇನೆಯ ಮೇಲೆ ದಾಳಿಗಯ್ದ ವಿಜಯನಗರದ ತಿಮ್ಮರಸು ರಾಜಕುವರ ವೀರಭದ್ರನನ್ನು ಸೆರೆಹಿಡಿಯುತ್ತಾನೆ. ನಂತರ ತನ್ನ ಪುತ್ರಿ ರಾಜಕುಮಾರಿ ಅನ್ನಪೂರ್ಣ ದೇವಿಯನ್ನು, ಶ್ರೀಕೃಷ್ಣದೇವರಾಯನಿಗೆ ಮದುವೆ ಮಾಡಿಕೊಟ್ಟು ಶಾಂತಿ ಒಪ್ಪಂದವನ್ನು ಸಹಿಹಾಕೋ ವಿಜಯನಗರ, ಕಳಿಂಗಗಳೆಂಬ ರಾಜ್ಯಗಳಿಗೆ ಕೃಷ್ಣೆ ಗಡಿಯಾಗುತ್ತಾಳೆ.  ಶ್ರೀಕೃಷ್ಣ ದೇವರಾಯನು ಕಳಿಂಗದ ಗಜಪತಿಯ ಮೇಲಿನ ವಿಜಯದ ಸವಿನೆನಪಿಗೆ ೧೫೧೩ರಲ್ಲಿ ಉದಯಗಿರಿಯಿಂದ ತಂದ ಬಾಲಕೃಷ್ಣನ ವಿಗ್ರಹಕ್ಕೆ ಪ್ರಸಕ್ತ ಕೃಷ್ಣದೇಗುಲವನ್ನು ನಿರ್ಮಿಸುತ್ತಾನೆ ಎನ್ನುತ್ತದೆ ಇತಿಹಾಸ. ದ್ವಾರದಲ್ಲೇ ಶ್ರೀಕೃಷ್ಣದೇವರಾಯನ ಬರಹ ಎಂದು ಇಲ್ಲಿನ ಗೈಡುಗಳು ಪರಿಚಯಿಸೋ ಹಳೆಗನ್ನಡ ಲಿಪಿಯಿದೆ.ಒಳಗಿನ ದೇಗುಲದಲ್ಲಿ ದಶಾವತಾರ, ಭಾಗವತದ ಕೆತ್ತನೆಗಳಿವೆ. ಈ ಲಿಪಿಯನ್ನು ನೋಡಿ This is a mix of kannada, telugu ಅಂತ ಪರಿಚಯಿಸುತ್ತಿದ್ದರು ಒಬ್ಬರು ಅಲ್ಲಿ ಬಂದ ಹೊಸಬರಿಗೆ. It is halekannada, old form of kannada ಅಂದೆ. ಹಾಂ. ಸರಿ ಸರಿ ಅಂತ ಪೆಚ್ಚುಮೋರೆಯ ನಗುವನ್ನಿತ್ತ ಅವರು ಮುಂದೆ ಹೋದರು. ಅಷ್ಟರಲ್ಲೇ ಎದುರಾದ ಹಳೆಗನ್ನಡ ಲಿಪಿಯಲ್ಲಿ ಏನಿದೆ ?ಓದ್ತಿರಾ ಅಂತ ಸ್ಥಳೀಯ ಗೈಡೊಬ್ಬರಿಗೆ ವಿದೇಶಿಯರೊಬ್ಬರು ಕುತೂಹಲದಿಂದ ಪ್ರಶ್ನಿಸಿದರು. ಇಲ್ಲಿನ ಅಕ್ಷರಗಳು ಕೂಡಿಕೊಂಡಿದೆ , ನಾವು ಬರೆಯುವ ಹಾಗಿಲ್ಲ ಹಾಗಾಗಿ ಅದನ್ನು ಓದಲಾಗೋಲ್ಲ ಅಂತ ಪಿಳ್ಳೆ ನೆವ ಕೊಟ್ಟ ಆ ಪುಣ್ಯಾತ್ಮ ಅವರನ್ನು ಮುಂದೆ ಸಾಗಹಾಕಿದ. ನಮ್ಮ ಇತಿಹಾಸದ ಭಾಗವೇ ಆಗಿರೋ ಹಳೆಗನ್ನಡ ಲಿಪಿಯನ್ನು ಓದಲು ಬರೋಲ್ಲ ಅನ್ನೋದು ನಮಗೆಲ್ಲಾ ಅವಮಾನವಾಗಬೇಕಾದ ಸಂಗತಿಯಲ್ಲದೇ ಇನ್ನೇನು ?  ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಿಲ್ಲದ, ಐತಿಹಾಸಿಕ ಸ್ಥಳಗಳಲ್ಲಿರೋ ಬರಹಗಳಲ್ಲಿ ಶಾಲಿವಾಹನ ಶಕೆ, ಶ್ರೀ, ರ, ಮ, ಯ ಮುಂತಾದ ಅಕ್ಷರಗಳನ್ನಾದರೂ ಓದಲು ಪ್ರಯತ್ನಿಸದ ನಮಗೆ ಆ ಸ್ಥಳಗಳಿಗೆ ಬರೋ ವಿದೇಶೀಯರ ಅರೆಬರೆ ಬಟ್ಟೆಗಳೊಂದೇ ಕಾಣುವಂತಾಗಿರೋದು ವಿಪರ್ಯಾಸ.

Remains of Garbhagruha @ Saraswati temple, hampi

ಇನ್ನಿತರ ಅದೆಷ್ಟೋ ಪ್ರಸಂಗಗಳು :
ಹಂಪಿಗೆ ಹೊಸಪೇಟೆಯಿಂದ ಬರುವವರು ಕಮಲಾಪುರದ ಮೇಲೆ ಅಥವಾ ಕಡ್ಡಿರಾಂಪುರದ ಮೇಲೆ ತೆರಳಬಹುದು ಅನ್ನೋದು ಅಲ್ಲಿಗೆ ಅಲ್ಲಿನ ಸಾಮಾನ್ಯ ಸಾರಿಗೆ ವಿಜಯರಥರಲ್ಲಿ ೧೩ ರೂ ಕೊಟ್ಟು ಸಾಗಿದವರಿಗೆ ತಿಳಿದಿದ್ದೇ. ಕಮಲಾಪುರ ಮಾರ್ಗದಲ್ಲಿ ಸಾಗುವಾಗ ಮೊದಲು ಸಿಗೋದು ಸರಸ್ವತಿ ಮಂದಿರ, ಚಂದ್ರಶೇಖರ ಮಂದಿರ ಮತ್ತು ಅಷ್ಟಭುಜ ಸ್ನಾನದ ಕೊಳಗಳೆಂಬ ಅಮೋಘ ರಚನೆಗಳು. ಅಲ್ಲಿನ ಚಂದ್ರಶೇಖರ ದೇಗುಲದ ಎದುರು ಮಾಹಿತಿಫಲಕವಿದ್ದ ಕುರುಹಿನ ಬೋರ್ಡಿದೆಯಾದರೂ ಅದರಲ್ಲಿ ಮಾಹಿತಿಯಿಲ್ಲ. ಏನಣ್ಣ ಇದು ಎಂದು ಅಲ್ಲಿಗೆ ನಮ್ಮನ್ನ ಕರೆದೊಯ್ದಿದ್ದ ಆಟೋ ಚಾಲಕನಿಗೆ ಕೇಳಿದರೆ ಇಲ್ಲಿನ ಜನ ಹಂಗೇ ಸಾರ್. ಅಲ್ಯುಮಿನಿಯಂದು ಅಂತ ಇಲ್ಲಿನ ಫಲಕವನ್ನೂ ಬಿಟ್ಟಿಲ್ಲ ಅಂತಾ ಇದ್ದರೆ ನನಗೆ ಎದೆ ಧಸಕ್ಕಂತಾ ಇತ್ತು. ಇಲ್ಲೊಂದೇ ಅಲ್ಲ, ಹಂಪಿಯ ವಿರೂಪಾಕ್ಷ ದೇಗುಲವನ್ನು ಹೊರತುಪಡಿಸಿ ಗುಡ್ಡ ಬೆಟ್ಟಗಳಲ್ಲಿ ಕಣ್ಣು ಹಾಯಿಸಿದತ್ತೆಲ್ಲಾ ಕಾಣೋ ಅಸಂಖ್ಯಾತ ದೇಗುಲಗಳ ಗರ್ಭಗೃಹದಲ್ಲಿ ಕಾಣಸಿಕ್ಕಿದ್ದು  ಖಾಲಿ ಪಾಣಿ ಪೀಠವಷ್ಟೆ. ಅಲ್ಲಲ್ಲಿ ಬಿದ್ದುಹೋಗಿರೋ ಆ ದೇಗುಲಗಳಲ್ಲಿದ್ದ ಪೂಜಾ ವಿಗ್ರಹಗಳೆಲ್ಲಾ ಎಲ್ಲಿ ಹೋದವು ?  ಅಲ್ಲಿನ ಮೂಲೆ ಮೂಲೆಗಳೆಲ್ಲಾ ಖಾಲಿ ಖಾಲಿಯಾಗಿ ಬಾವಲಿಗಳ ಹಿಕ್ಕೆಗಳಿಗೆ, ಜೇಡರ ಬಲೆಗಳಿಗೆ, ಬ್ಯಾಟರಿಯಿಲ್ಲದೆ ಒಳಗೆ ಹೆಜ್ಜೆಯಿಕ್ಕಲೂ ಹೆದರಿಕೆ ಹುಟ್ಟಿಸೋ ಸ್ಥಿತಿಯಲ್ಲಿರೋದು ಏಕೆ ಅನ್ನೋ ಪ್ರಶ್ನೆಗಳು ಇಲ್ಲಿಗೆ ಭೇಟಿ ಕೊಡೋ ಯಾರಿಗಾದರೂ ಕಾಡದೇ ಇರೋಲ್ಲ. ಹಂಪಿಯಲ್ಲೇ ಎಲ್ಲೇ ಹಾದಿ ತಪ್ಪಿ ನಡೆದರೂ ಒಂದು ಕಿ.ಮೀ ಸಾಗೋ ಹೊತ್ತಿಗೆ ಯಾವುದಾದರೂ ಪಾಳು ಬಿದ್ದ ಗುಡಿಯೋ, ಗೋಪುರವೋ, ಕಂಬದ ಸಾಲೋ, ಪುಷ್ಕರಿಣಿಯೋ ಸಿಗೋದ್ರಲ್ಲಿ ಸಂಶಯವಿಲ್ಲ ! ಅದೆಷ್ಟೋ ಗುಡಿಗಳೆದುರು ಸಂರಕ್ಷಿತ ಸ್ಮಾರಕ ಎನ್ನುವ ಬೋರ್ಡಿದೆಯಾದರೂ ಅದ್ಯಾವ ಗುಡಿ, ಅದರ ಇತಿಹಾಸವೇನೆಂಬ ಕನಿಷ್ಟ ಮಾಹಿತಿಯೂ ಇಲ್ಲವೆನ್ನೋದು ಬೇಸರದ ಸಂಗತಿ. ಎದುರಿಗೋರೋ ಮುರಿದು ಬಿದ್ದ ನಂದಿಧ್ವಜವೋ, ಗರುಡಗಂಬದ ಮೇಲೆ , ಒಳಗಿನ ಒಂದಿಷ್ಟು ಮೂರ್ತಿಗಳ ಆಧಾರದ ಮೇಲೆ ಇದು ಶೈವ, ವೈಷ್ಣವ ದೇಗುಲವೆಂದು ವಿಂಗಡಿಸಬಹುದೇ ಹೊರತು ಅದರ ಬಗೆಗಿನ ಹೆಚ್ಚಿನ ಮಾಹಿತಿಯರಿಯೋದು ಜನ ಸಾಮಾನ್ಯನ ಪಾಲಿಗೆ ಪ್ರಯಾಸದಾಯಕವೇ. ಸಾಲದ್ದಕ್ಕೆ ಮುಖ್ಯ ದೇಗುಲಗಳತ್ತಲೇ ರೌಂಡ್ ಹೊಡೆಸೋ ಗೈಡುಗಳು ಸ್ಮಶಾನ ಭೈರವಿ ಎಂಬ ಹೊಯ್ಸಳ ಶೈಲಿಯ ದೇಗುಲಗಳಲ್ಲಿ ಅತೀ ಸಾಮಾನ್ಯವಾದ ಶಿಲ್ಪವನ್ನು ಇದು ಪಾತಾಳ ಭೈರವ ಎಂಬ ಪುರುಷ ಶಿಲ್ಪ ಎಂಬ ತಪ್ಪು ಮಾಹಿತಿ ಕೊಡ್ತಾ ಇದ್ದರೆ ಅದು ಯಾರ ತಪ್ಪು ? ಇತಿಹಾಸದ ಬಗೆಗಿನ ಅವಜ್ಞೆಯಿರೋ ಗೈಡುಗಳದೇ ಅಥವಾ ಇತಿಹಾಸವನ್ನು ಹಂತ ಹಂತವಾಗಿ ನಿರ್ಲಕ್ಷಿಸುತ್ತಾ ಬಂದಿರೋ ನಮ್ಮೆಲ್ಲರದೇ ? ಹಂಪಿಯ ಪುರಂದರ ಮಂಟಪದಲ್ಲೋ, ಏಕಶಿಲಾ ನಂದಿಯತ್ತ ಸಾಗೋ ದಾರಿಯಲ್ಲಿ ಎಡತಿರುವು ಪಡೆದು ನದಿಯತ್ತ ಸಾಗೋ ಕೆಂಪಭೂಪ ಮಾರ್ಗದಲ್ಲೋ ಸಾಗಿ ತುಂಗಭದ್ರೆಯ ಆಚೆಯ ದಡದತ್ತ ಕಣ್ಣು ಹಾಯಿಸಿದರೆ ಅಸಂಖ್ಯ ಕಲ್ಲ ಕಂಬಗಳು, ದೇಗುಲಗಳ ಪಳೆಯುಳಿಕೆಗಳು ಕಾಣಸಿಗುತ್ತೆ. ಅದೆಷ್ಟೋ ದೇಗುಲಗಳ ಗರ್ಭಗೃಹದಲ್ಲಿರೋ ಮೂರ್ತಿಗಳನ್ನ ಬಿಡಿ, ಆ ಗರ್ಭಗೃಹಕ್ಕಿದ್ದ ಕಳಸಗಳೂ ಇಲ್ಲದೇ ಅವೆಲ್ಲಾ ಬೆಳಕಿಂಡಿಗಳಾಗಿದೆ. ಶ್ರೀ ಮಂಜುನಾಥ ಸಿನಿಮಾದಲ್ಲಿ ಸೌಂದರ್ಯ ಶಿವನ ಮೇಲೆ ಪುಷ್ಪಾರ್ಚನೆಗಯ್ದ ಶೂಟಿಂಗ್ ನಡೆದ ಜಾಗವೆಂಬೋ ಕಾರಣಕ್ಕೋ ಮತ್ಯಾವ ಕಾರಣಕ್ಕೋ ಬಡವಿ ಲಿಂಗ ಮತ್ತದರ ಪಕ್ಕದಲ್ಲಿದ ಜಗದ್ವಿಖ್ಯಾತ ಲಕ್ಷ್ಮೀ ನರಸಿಂಹನ ಪ್ರಾಗಂಣ ಸ್ವಲ್ಪ ಶುಚಿಯಾಗಿದೆಯಾದರೂ ಉಳಿದ ದೇಗುಲಗಳ ಬಗ್ಗೆ ಈ ಮಾತು ಹೇಳುವಂತಿಲ್ಲ. ಉದ್ದಾನ ರಾಮಸ್ವಾಮಿ ದೇಗುಲದ ಪಕ್ಕದಲ್ಲಿರೋ ಚಂಡಿಕೇಶ್ವರನಿಗೆ ಹಗಲು, ರಾತ್ರಿಗಳೆನ್ನದೇ ಎಲ್ಲಾ ಸಮಯದಲ್ಲೂ ಬೀಗಯೋಗವಾದರೆ , ಅದಕ್ಕಿಂತ ಮುಂಚೆ ಸಿಗೋ ಭೂಗತ ಶಿವಾಲಯದಲ್ಲಿ ಗರ್ಭಗೃಹದವರೆಗೂ ನಿಂತ ಸುಮಾರು ಒಂದೂವರೆ ಅಡಿ ಮಳೆ ನೀರು !  ಆ ಮಳೆ ನೀರಲ್ಲಿ ಮೀನುಗಳು, ಕಪ್ಪೆಗಳು ಸಂಸಾರ ಹೂಡಿ ಈಜುತ್ತಾ ಇದ್ದರೆ ಪ್ರಯಾಸಪಟ್ಟು ಗರ್ಭಗೃಹದವರೆಗೆ ಆ ನೀರಲ್ಲೇ ಹೋಗಿಬಂದ ನಮಗೆ ಇತಿಹಾಸದ ಪುಟಗಳ ಕಣ್ಣೀರೇ ಈ ರೀತಿ ನಿಂತ ನೀರಾಗಿರಬಹುದೇ ಎಂಬ ಅನುಮಾನ ಒಮ್ಮೆ ಕಾಡಿದ್ದರೆ ಅದರಲ್ಲಿ ಅಚ್ಚರಿಯೇನಿರಲಿಲ್ಲ !  
underground shiva temple@Hampi


ಪ್ರಶಸ್ತಿ
೪-ಅಕ್ಟೋಬರ್, ೨೦೧೫
ಬೆಂಗಳೂರು

ಮುಂದಿನ ಭಾಗ:ವಿರೂಪಾಕ್ಷನ ಸನ್ನಿಧಿಯಲ್ಲಿ 

Sunday, October 4, 2015

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು:

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು:

ಇಂದು ಆಗಸ್ಟ್ ಹದಿನೈದು. ಭಾರತಕ್ಕೆ ಸ್ವಾತಂತ್ರ್ಯ ಬಂದು ೬೮ ವರ್ಷ ತುಂಬಿದ ಅಥವಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ೬೯ ನೇ ದಿನ. ರಜೆಯೆಂದು ಹೊದ್ದು ಮಲಗೋ ಬದಲು ಬೆಳಗಾಗೆದ್ದು ಟಿ.ವಿಯ ಮುಂದೆ ಪ್ರತ್ಯಕ್ಷನಾಗಿ ಕೆಂಪುಕೋಟೆಯ ಮೇಲೆ ನಮ್ಮ ಹೆಮ್ಮೆಯ  ತ್ರಿವರ್ಣ ಧ್ವಜ ರಾರಾಜಿಸುವ ಗಳಿಗೆಗಾಗಿ ಕಾಯೋದು ಈ ದೇಶದ ಅದೆಷ್ಟೋ ಕೋಟಿ ಜನರಲ್ಲೊಬ್ಬ ನಾನು. ಬಿಳಿಬಿಳಿಯ ಸಮವಸ್ತ್ರ ತೊಟ್ಟು ಕೈಗೊಂದು ತ್ರಿವರ್ಣದ ಬ್ಯಾಂಡೋ ಜೇಬಿಗೊಂದು ತ್ರಿವರ್ಣದ ಪಿನ್ನೋ ಚುಚ್ಚಿಕೊಂಡು ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾ ಶಾಲಾ ಮಾರ್ಚ್ ಫಾಸ್ಟ್ ಮಾಡುತ್ತಿದ್ದ ದಿನಗಳ ನೆನಪು ಮತ್ತೆ ಕಾಡಿ ಆ ಕಾಲಕ್ಕೆ ಮರಳೋ ಸಾಧ್ಯತೆಯಿದ್ದರೆ ಎಷ್ಟು ಚೆನ್ನಾಗಿರ್ತಿತ್ತಲ್ವಾ ಎಂದು ಎಷ್ಟೋ ಸಲ ಅನಿಸುವಂತೆ ಮಾಡೋದು ಆ ದಿನಗಳಲ್ಲೂ ಶಾಲೆಗೆ ಓಡೋ ಮುಂಚೆ ಹಣುಕುತ್ತಿದ್ದ ಕೆಂಪು ಕೋಟೆಯ ದೃಶ್ಯಗಳೇ.  ಆ ದಿನಗಳಲ್ಲೇ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಮಾಡೋ ರಾಷ್ಟ್ರಪತಿಗಳ ಭಾಷಣವನ್ನು ತದೇಕಚಿತ್ತದಿಂದ ಕೇಳೋ ಅಭ್ಯಾಸ ಮೂಡಿಸಿದ್ದರು ಮನೆಯಲ್ಲಿ. ಆಗ ರಾಷ್ಟ್ರಪತಿಗಳಾಗಿದ್ದ ಕೆ.ಆರ್ ನಾರಾಯಣನ್, ಡಾ| ಎ.ಪಿ,ಜೆ ಅಬ್ದುಲ್ ಕಲಾಂ ಅವರ ಭಾಷಣವನ್ನು ಕೇಳೋದಂದ್ರೆ ಎಲ್ಲಿಲ್ಲದ ಖುಷಿ. ದೇಶ ಕಾಯೋ ಯೋಧನಿಂದ ಜೀವಕೆ ಆಧಾರವಾಗೋ ರೈತನವರೆಗೆ ಎಲ್ಲರನ್ನೂ ಮಾನ್ಯ ರಾಷ್ಟ್ರಪತಿಗಳು ಸಂಬೋಧಿಸುತ್ತಿದ್ದರೆ ವಾವ್ ! ಎಂತಾ ಭಾಷಣ. ಎಷ್ಟು ಚೆನ್ನಾಗಿ ಹೇಳಿದ್ದಾರೆ ಅಂತ ಖುಷಿ ಪಡುತ್ತಿದ್ದೆವು. ಮಾರನೇ ದಿನ ಶಾಲೆಗೆ ಬೆಳಬೆಳಗ್ಗೆಯೇ ಹೋದರೂ ಅಲ್ಲಿಂದ ಬಂದು ಪ್ರಧಾನಿಗಳು ಏನೆಂದರು ಅಂತ ಆಮೇಲೆ ವಾಹಿನಿಗಳಲ್ಲಿ ಬರುತ್ತಿದ್ದ ವರದಿಗಳನ್ನು ನೋಡುತ್ತಿದ್ದೆವು. ಅದೆಷ್ಟು ಅರ್ಥವಾಯಿತೋ, ಬುದ್ದಿ ಬೆಳೆಯಿತೋ ಅನ್ನುವುದಕ್ಕಿಂತ ದೇಶದ ಮಹೋನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ನಮ್ಮನ್ನುದ್ದೇಶಿಸಿ ಮಾತನಾಡಿದ್ದ ಕೇಳೋದೇ ಏನೋ ಒಂತರ ಖುಷಿ ಕೊಡುತ್ತಿತ್ತು.

ಏಳೂವರೆಗೆ ಧ್ವಜಾರೋಹಣ ನೆರವೇರಿಸಿ ಒಂದೂವರೆ ಘಂಟೆಗಳಷ್ಟು ದೀರ್ಘಕಾಲ ಮಾತನಾಡಿದ ಪ್ರಧಾನಮಂತ್ರಿ ಮೋದೀಜಿಯವರ ಇಂದಿನ ಭಾಷಣದಲ್ಲಿ ಕಂಡ ಕನಸುಗಳೆಷ್ಟೋ. ಒಂದೂವರೆ ವರ್ಷದ ಸಾಧನೆಗೆ ನೆರವಾದ ೧೨೫ ಕೋಟಿ ಜನರನ್ನು "ಟೀಂ ಇಂಡಿಯಾ" ಎಂದೇ ಸಂಬೋಧಿಸಿದಾಗ ಸಿಕ್ಕ ಕರತಾಡನಗಳೆಷ್ಟೋ. ಪ್ರಧಾನಮಂತ್ರಿಗಳ ಭಾಷಣವನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೇ ನೋಡಿದ ಒಬ್ಬ ಜನ ಸಾಮಾನ್ಯನ ಅಭಿಪ್ರಯಗಳನ್ನು ಕ್ರೋಢೀಕರಿಸಲು ಮಾಡಿದ ಪ್ರಯತ್ನವೇ ಈ ಲೇಖನ.

ಧರ್ಮ, ಜಾತಿಗಳೆಂಬ ವಿಷವನ್ನು ಪ್ರಗತಿಯೆಂಬ ಅಮೃತದಿಂದ ತೊಡೆದುಹಾಕೋಣವೆಂಬ ಕರೆಯೊಂದಿಗೆ ಸ್ವಾತಂತ್ರ್ಯದಿನದ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿಗಳ ಈ ವರ್ಷದ ಭಾಷಣದ ಮುಖ್ಯಾಂಶಗಳೆಂದರೆ
೧)ಪ್ರಧಾನಮಂತ್ರಿ ಜನ ಧನ ಯೋಜನೆ:
ಪ್ರಜಾಪ್ರಭುತ್ವ ಅಂದ್ರೆ ಭ್ರಷ್ಟರ ಕೂಟ. ಶ್ರೀಮಂತನಾಗಿದ್ದವ ಇನ್ನೂ ಶ್ರೀಮಂತನಾಗುತ್ತಲೇ ಹೋಗುತ್ತಾನೆ ಬಡವನಾದವ ಕಡು ಬಡತನದೆಡೆಗೆ ತಳ್ಳಲ್ಪಡುತ್ತಾನೆ ಎಂಬುದು ಹಲವರ ಅಂಬೋಣ. ಸರಕಾರ ಏನೇ ತಿಪ್ಪರಲಾಗ ಹಾಕಿದರೂ ಅವರು ಮಾಡೋ ಯೋಜನೆಗಳು ದೇಶದ ೧೨೫ ಕೋಟಿ ಜನಸಂಖ್ಯೆಗೆ ಯಾವ ಲೆಕ್ಕಕ್ಕೂ ಸಾಕಾಗದೇ ಹೋಗುತ್ತೆ ಅನ್ನೋದು ಇಲ್ಲಿಯವರೆತೆ ಕಂಡ ದುರಂತ. ಸರ್ಕಾರದ ಯೋಜನೆಗಳ ಫಲ ಜನಸಾಮಾನ್ಯನ ಕೈಗೆ ತಲುಪೋದ್ರೊಳಗೆ ನೂರಾರು ಮಧ್ಯವರ್ತಿಗಳ ಹೊಟ್ಟೆ ತುಂಬೋದೇ ಇದಕ್ಕೆ ಕಾರಣವಾಗಿತ್ತು. ದೇಶದ ಪ್ರತೀ ಪ್ರಜೆಯ ಹೆಸರಲ್ಲೊಂದು ಖಾತೆ ಇದ್ದರೆ ? ಅವರ ಖಾತೆಗೆ ಸರ್ಕಾರದ ಯೋಜನೆಗಳ ಹಣ ನೇರವಾಗಿ ತಲುಪುವಂತಿದ್ರೆ ? ಅದಕ್ಕೆ ಅಂತಲೇ ಪ್ರಧಾನಮಂತ್ರಿಗಳು ಕರೆಕೊಟ್ಟದ್ದು ಪ್ರಧಾನಮಂತ್ರಿ ಜನಧನ ಯೋಜನೆಯ ಸಾಕಾರಕ್ಕೆ. ದೇಶದ ದಟ್ಟದರಿದ್ರನೂ ಖಾತೆ ಹೊಂದಬೇಕೆಂಬ ಆಸೆ ಸರಿ . ಆದ್ರೆ ಈಗಿರುವಂತೆ ಇನ್ನೂರೈವತ್ತೋ ಐನೂರೋ ಠೇವಣಿ ಇಡೋದು ಅವರಿಗೆ ಸಾಧ್ಯವಿಲ್ಲದ ಮಾತು. ಯಾವುದೇ ಠೇವಣಿಯಿಲ್ಲದ ಖಾತೆ ತೆರೆಯೋ ಅವಕಾಶ ಕೊಟ್ಟರೆ ? ಬ್ಯಾಂಕುಗಳಿಗೆ ಕಾಗದ ವೆಚ್ಚವಾದರೆ ಆಗಲಿ ಆದ್ರೆ ಎಲ್ಲರ ಬಳಿಯಲ್ಲೂ ಖಾತೆಯಿರಲೆಂಬ ಕಾಳಜಿಯಿಂದ ಶುರುವಾದ ಯೋಜನೆಯಿಂದ ಈಗಾಗಲೇ ೨೦೦೦೦ ಕೋಟಿ ಸಂಗ್ರಹವಾಗಿದೆಯಂತೆ. ಪ್ರಧಾನಮಂತ್ರಿಗಳ ಮಾತಲ್ಲೇ ಹೇಳೋದಾದ್ರೆ ದೇಶದ ಬಡವರ ಈ ಶ್ರೀಮಂತಿಕೆಗೆ ಶತ ಶತ ಪ್ರಣಾಮಗಳು. ಅಷ್ಟು ಜನ ಖಾತೆ ತೆರೆಯಲು ನೆರವಾದ ಬ್ಯಾಕುಗಳ ಸಿಬ್ಬಂದಿಗಳಿಗೂ ಹೃದಯಪೂರ್ವಕ ನಮನಗಳು.

೨)ಜೀವವುಳಿಸೋ ವಿಮೆ ಮತ್ತು ಮಾನವುಳಿಸೋ ಸ್ವಚ್ಛ ಭಾರತ:
ತಿಂಗಳಿಗೆ ೧ ರೂನಂತೆ ವರ್ಷಕ್ಕೆ ೧೨ ರೂ ಕಟ್ಟೋ ಸುರಕ್ಷಾ ವಿಮೆ ಯೋಜನೆಯಿಂದ ಅಪಘಾತಗಳಲ್ಲಿ ೨ ಲಕ್ಷದವರೆಗೆ ಪರಿಹಾರ ಸಿಕ್ಕರೆ , ದಿನಕ್ಕೆ ತೊಂಭತ್ತು ಪೈಸೆ ಅಥವಾ ವರ್ಷಕ್ಕೆ ೩೩೦ ರೂಗಳ ಪ್ರೀಮಿಯಂ ಕಟ್ಟಬೇಕಾದ ಜೀವನ ಜ್ಯೋತಿ ವಿಮೆ ಯೋಜನೆಗಳ ಪ್ರಯೋಜನ ದೇಶದ ಕಡುಬಡವನಿಗೂ ವಿಮೆಯ ಸುರಕ್ಷೆ ಒದಗಿಸೋ ಮಹತ್ವಾಕಾಂಕ್ಷೆಯದ್ದು. ಗಲ್ಲಿಗಲ್ಲಿಗಳು, ಹಳ್ಳಿಹಳ್ಳಿಗಳು ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತೆಂಬ ಪರಿಕಲ್ಪನೆಗೆ ಸಾಥಿಯಾದ, ಜನ ಜಾಗೃತಿ ಮೂಡಿಸಿದ ಎಲ್ಲಾ ರಾಜಕಾರಣಿಗಳು, ಸೆಲೆಬ್ರಿಟಿಗಳು, ಶ್ರೀಸಾಮಾನ್ಯರಿಗೆ, ಮಾಧ್ಯಮಗಳಿಗೆ  ಪ್ರಧಾನಿಗಳ 
ಮಾತಲ್ಲೇ ಹೇಳುವುದಾದರೆ ಹೃತ್ಪೂರ್ವಕ ಧನ್ಯವಾದಗಳು. ನಂತರ ಮತ್ತೊಮ್ಮೆ ಸ್ವಚ್ಚತೆಯ ಬಗ್ಗೆ ಪ್ರಸ್ತಾಪಿಸೋ ಪ್ರಧಾನಿಗಳ ಕನಸಿನಂತೆ ಪ್ರತೀ ಶಾಲೆಗೂ , ಪ್ರತೀ ಮನೆಗೂ ಶೌಚಾಲಯ ಸಿಕ್ಕರೆ ಮುಂದೆ ಬರುತ್ತಿರುವ ಮಹಾತ್ಮಾ ಗಾಂಧೀಜಿಯವರ ನೂರೈವತ್ತನೇ ಹುಟ್ಟುಹಬ್ಬಕ್ಕೆ ಅದಕ್ಕಿಂದ ಉತ್ತಮ ಕೊಡುಗೆ ಬೇರೊಂದಿರಲಾರದೇನೋ. 

೩)ಕಾರ್ಮಿಕರ ಪೆಹಚಾನ್ ಪತ್ರ: ಒಬ್ಬ ಕಾರ್ಮಿಕ ಒಂದು ಕಂಪೆನಿಯಿಂದ ಇನ್ನೊಂದಕ್ಕೆ, ಒಂದು ಜಾಗದಿಂದ ಮತ್ತೊಂದಕ್ಕೆ ಹೋದಾಗ ಅವನ ಸಂಬಳದಿಂದ ಕಟ್ಟಾಗಿದ್ದ ಪಿ,ಎಫ್ಗಳಲ್ಲಿನ ಎಷ್ಟೋ ಭಾಗ ಅವರಿಗೆ ಸಿಕ್ಕದೇ ಸರ್ಕಾರದ ಖಜಾನೆಗಳಲ್ಲಿ ಕೊಳೆಯುತ್ತಿತ್ತು. ಪ್ರತಿಯೊಬ್ಬನಿಗೂ ಒಂದು ಪೆಹಚಾನ್ ಪತ್ರ ಕೊಟ್ಟರೆ ಅವ ಎಲ್ಲೇ ಹೋದರೂ ಅವನ ಹೆಸರಲ್ಲಿರೋ ಹಣ ಅವನಿಗೇ ದಕ್ಕುವ ಯೋಜನೆಯಿಂದ ಸರ್ಕಾರದ ಖಜಾನೆಗಳಲ್ಲಿ ಹಣ ಕೊಳೆಯೋ ಪ್ರಮೇಯ ಬರೋಲ್ಲ, ಜನಸಾಮಾನ್ಯನ ಬೆವರ ಹಣವೂ ವ್ಯರ್ಥವಾಗೋಲ್ಲ ಎಂಬ ಪರಿಕಲ್ಪನೆ ಸಾಕಾರವಾಗ್ತಿರೋದ ನೋಡೋದೇ ಒಂದು ಖುಷಿ


೪)ಕನ್ಫ್ಯೂಸಿಂಗ್ ಕಾನೂನುಗಳಿಗೆ ಕಂಟಕ:
ವಿಷಯಕ್ಕೊಂದು ಕಾನೂನು. ಅದಕ್ಕೆ ವ್ಯತಿರಿಕ್ತವಾದ ಮತ್ತೊಂದು ಪರಿಚ್ಛೇದ. ಈ ನ್ಯಾಯವ್ಯವಸ್ಥೆಯ ದುರುಪಯೋಗ ಪಡಿಸಿಕೊಳ್ಳುತ್ತಲೇ ನ್ಯಾಯಾ ವ್ಯವಸ್ಥೆಯ ಸಮಯ ಹಾಳು ಮಾಡಲಾಗುತ್ತಿದೆ. ಈ ತರದ ನಲವತ್ತು ಕಾನೂನುಗಳ ಹೊಡೆದು ಹಾಕಿ ೩ ಅಂಶಗಳ ಸರಳ ನಿಯಮವನ್ನು ತಂದ ಉದಾಹರಣೆಯನ್ನು ಕೊಟ್ಟ ಪ್ರಧಾನಿಗಳ ನಡೆಯಂತಹ ಕ್ರಮಗಳು ಇನ್ನಷ್ಟು ನಡೆಯಬೇಕಿದೆ.

೫)ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪಹಲ್:
ಅನಿಲದ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಜನರ ಖಾತೆಗೇ ತಲುಪಿಸುವ ಯೋಜನೆ ಪಹಲ್. ಇದರಿಂದ ಮಧ್ಯ ಇರುತ್ತಿದ್ದ ಅದೆಷ್ಟೋ ಮಧ್ಯವರ್ತಿಗಳ ಕಾಟ, ಭ್ರಷ್ಟಾಚಾರಕ್ಕೊಂದು ವಿರಾಮವಿಟ್ಟಂತಾಗಿದೆ. ಭ್ರಷ್ಟಾಚಾರ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರಧಾನಿಗಳ ಮಾತಲ್ಲೇ ಹೇಳೋದಾದ್ರೆ ಭ್ರಷ್ಟಾಚಾರವೆನ್ನೋದು ಮನೆಯನ್ನೇ ಆವರಿಸಿಕೊಂಡಿರುವ ಕೀಟಗಳ ಸಮೂಹದಂತೆ. ಅದನ್ನು ಕೊಲ್ಲಲು ಎಲ್ಲೋ ಒಂದೆಡೆ ಔಷಧಿ ಹೊಡೆದರೆ ಸಾಲದು. ಪ್ರತೀ ಇಂಚಿಂಚಿಗೂ ಇಂಜೆಕ್ಷನ್ನಿನಂತೆ ಔಷಧಿ ಕೊಡಬೇಕು. ಕೋಟಿ ಕೋಟಿ ಜನರ ಪ್ರಯತ್ನದಿಂದಲೇ ಈ ೧೨೫ ಕೋಟಿ ಜನರ ಕಾಡುತ್ತಿರುವ ಭ್ರಷ್ಟಾಚಾರ ತೊಲಗೋಕೆ ಸಾಧ್ಯ !  ಸೂಜಿಯನ್ನು ಕಳೆದುಕೊಂಡಲ್ಲೇ ಹುಡುಕು ಎಂಬಂತಹಾ ಸತ್ಯವಾದ ಮಾತಿದು ! ಮತ್ತೊಂದು ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗಳೇ ಪ್ರಸ್ಥಾಪಿಸುವಂತೆ ಹಿಂದಿನ ವರ್ಷ ಸಿ.ಬಿ.ಐ ಬಳಿ ಇದ್ದ ಪ್ರಕರಣಗಳ ಸಂಖ್ಯೆ ೮೦೦. ಈ ವರ್ಷ ಅದು ೧೬೦೦. ಭ್ರಷ್ಟರು ಯಾರೇ ಇದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂಬ ಅವರ ಮಾತುಗಳು ಜನ ಸಾಮಾನ್ಯನಲ್ಲಿ ನ್ಯಾಯದ ಬಗೆಗೆ ಅಳಿಸುತ್ತಿರುವ ಭರವಸೆಯನ್ನು ಉಳಿಸಬೇಕಿದೆ. ಅವರೇ ಹೇಳುವಂತೆ ಭ್ರಷ್ಟಾಚಾರ ನಿರ್ವಹಣೆಯ ಕ್ರಮಗಳು ಒಂದಿಷ್ಟು ಕಹಿ ಪರಿಣಾಮ ಉಂಟು ಮಾಡಬಹುದು. ಆದ್ರೆ ಖಾಯಿಲೆಯನ್ನೋದು ಭಯಂಕಾರವಾಗಿದ್ದಾಗ ಅದರ ಇಂಜೆಕ್ಷನ್ನಿನಲ್ಲಿ ಅಡ್ಡಪರಿಣಾಮಗಳಿದ್ದರೂ ಅದನ್ನು ಮರೆತು ಅದರಿಂದಾಗೋ ಲಾಭಗಳ ಬಗ್ಗೆಯೇ ಯೋಚಿಸಬೇಕಾಗುತ್ತೆ. ದೇಶದಲ್ಲಿ ಅದೆಷ್ಟೋ ಸ್ಥಿತಿವಂತರಿದ್ದಾರೆ. ಎಲ್ಲೋ ಹೊರಗಡೆ ಹೋದಾಗ ತಿಂಡಿಗೆಂದೇ ಐನೂರೂ ಏಳ್ನೂರೂ ಖರ್ಚು ಮಾಡೋ ಇವರಿಗೆ ಅಷ್ಟೇ ಮೊತ್ತದ ಅನಿಲದ ಸಬ್ಸಿಡಿ ಕೈ ಬಿಡಲು ಸಾಧ್ಯವಿಲ್ಲವೇ ಎಂಬ ಪ್ರಧಾನಿಗಳ ಪ್ರಶೆಯಲ್ಲಿ ಸತ್ಯವಿಲ್ಲದಿಲ್ಲ. ರಾಜಕಾರಣಿಗಳು ಅಧಿವೇಶನ ನಡೆಯದಿದ್ದರೂ ಪಡೆಯೋ ತಮ್ಮ ಸಂಬಳ, ಭತ್ಯೆಗಳನ್ನು ಬಿಡುತ್ತಾರೆಯೇ ಎಂಬ ವಿರೋಧಿಗಳ ಕುಹಕದ ಬಗ್ಗೆ ಆಮೇಲೆ ಮಾತಾಡೋಕೆ ಎಂದೂ ಸಮಯವಿದ್ದೇ ಇರುವುದರಿಂದ ಸದ್ಯಕ್ಕೆ ಈ ರಾಜಕೀಯವಾದಗಳನ್ನು, ಪೂರ್ವಾಗ್ರಹಗಳನ್ನು ಬದಿಗಿಟ್ಟು ನೋಡಿದರೆ ಇಲ್ಲಿಯವರೆಗೆ ಈ ತರಹ ಸಬ್ಸಿಡಿಯನ್ನು ಮರಳಿಸಿದ ೨೦ ಲಕ್ಷ ಜನರ ಬಗ್ಗೆ ಹೆಮ್ಮೆಯಾಗದೇ ಇರದು. ಈ ತರಹ ಸಬ್ಸಿಡಿಯನ್ನು ಮರಳಿಸಿದರೆ ಏನಾಗುತ್ತೆ ಅನ್ನೋದು ಮುಂದಿನ ಪ್ರಶ್ನೆ. ಆ ದುಡ್ಡಲ್ಲಿ ಹಳ್ಳಿಗಳ ಮೂಲೆಗಳಲ್ಲಿ ಹೊಗೆಯ ಗೂಡುಗಳಲ್ಲಿ, ಕಮರುತ್ತಿರುವ ಕನಸುಗಳ ಮಧ್ಯೆ ಅಡುಗೆ ಮಾಡುತ್ತಿರೋ ಬಡವರಿಗೆ ಗ್ಯಾಸ್ ಸಿಲಿಂಡರುಗಳನ್ನ  ತಲುಪಿಸಬೇಕೆಂಬುದು ಸದ್ಯದ ಕನಸು. ಅದು ಎಷ್ಟರಮಟ್ಟಿಗೆ ನನಸಾಗುತ್ತೆಂಬೋ ಪ್ರಶ್ನೆ ಕಾಡುತ್ತಿದ್ದರೂ ಪರಿಕಲ್ಪನೆಯೆಂತೂ ಚಂದದ್ದೇ.

೬)ಕಲ್ಲಿದ್ದಲಿನಿಂದ ಹೋದ ಮಾನ ಎಫ್.ಎಂ ಹರಾಜಿಂದ ಮರಳೀತೆ ? 
ಕಲ್ಲಿದ್ದಲು, ೨ಜಿ ಗಳ ಹರಾಜಿನಲ್ಲಿ ಕೋಟ್ಯಾಂತರ ರೂಗಳ ಅವ್ಯವಹಾರ ನಡೆದ ಕಹಿ ನೆನಪು ಇನ್ನೂ ಮಾಸದ ಹೊತ್ತಲ್ಲೇ ಈ ತರಹದ ಪ್ರಸಂಗಗಳು ಮರಳಿಸದೇ ಇರುವಂತೆ ನೋಡಿಕೊಳ್ಳಬೇಕಾದ, ಪಾರದರ್ಶಕತೆಯನ್ನು ತರಬೇಕಾದ ಅನಿವಾರ್ಯತೆಯನ್ನು ನೆನಪಿಸುತ್ತಲೇ ಸದ್ಯ ನಡೆಯುತ್ತಿರುವ ಎಫ್.ಎಂ ತರಗಾಂತರಗಳ ಹರಾಜಿನಲ್ಲಿ ಹರಿದುಬರುತ್ತಿರುವ ಕೋಟ್ಯಾಂತರ ರೂಗಳನ್ನು ಸ್ಮರಿಸಿದರು.

೭)ಕಾರ್ಖಾನೆಗಳಿಗೆ ಅವುಗಳ ಹತ್ತಿರವಿರುವ ಸೌಕರ್ಯಗಳ ಸಂಪರ್ಕ:
ಕಡಲತಡಿಯಲ್ಲಿರುವ ಕಾರ್ಖಾನೆಗಳಿಗೆ ದೇಶದ ಮತ್ತೆಲ್ಲಿಂದಲೋ ಇಂಧನ. ಇನ್ನೆಲ್ಲೋ ಇರುವ ಕಾರ್ಖಾನೆಗೆ ಕಡಲತಡಿಯಿಂದ ಇಂಧನ. ಪಕ್ಕದಲ್ಲೇ ಇದ್ದರೂ ಬಳಸಿಕೊಳ್ಳಲಾಗದ ಅನಿವಾರ್ಯತೆ ಸೃಷ್ಠಿಸಿದ ಮಧ್ಯವರ್ತಿಗಳಿಂದ ಸರ್ಕಾರಕ್ಕೆ ವರ್ಷಕ್ಕೆ ಆಗುತ್ತಿದ್ದ ನಷ್ಟ ೧೧೦೦೦ ಕೋಟಿ. ಕೇಳಿದ ಯಾರಿಗಾದರೂ ಸಿಟ್ಟೆಬ್ಬಿಸೋ ಈ ಕ್ರಮವನ್ನು ಕಿತ್ತುಹಾಕಲು, ಸ್ಥಳೀಯ ಇಂಧನಗಳ ಬಳಸಿಕೊಳ್ಳಲು ಅವಕಾಶ ಕೊಡಲು ಮುಂದಾಗಿರೋ ಸರಕಾರದ ಕ್ರಮ ಅಭಿನಂದನಾರ್ಹವೇ.

೮)ರೈತರ ಬಳಿಗೆ ರಸಗೊಬ್ಬರ:
ರೈತರಿಗೆ ಬೇಕಾದ ಯೂರಿಯಾವನ್ನು ಅವರಿಗೆ ತಲುಪಿಸೋಕೆ ಅದೆಷ್ಟೋ ಮಧ್ಯವರ್ತಿಗಳು. ಸುಲಿಗೆ ಮಾಡೋ ಕಾರ್ಖಾನೆಗಳು. ಇದನ್ನು ತಡೆಯೋಕೆ ಮುಂದಾಗಿರೋ ಸರ್ಕಾರದ ಕ್ರಮ, ಕೃಷಿ ಕಲ್ಯಾಣ ಇಲಾಖೆಯೆಂದು ಬದಲಾಗುತ್ತಿರುವ ಕೃಷಿ ಇಲಾಖೆಯಂತಹ ಕ್ರಮಗಳು ರೈತನ ಮೊಗದಲ್ಲಿ ಮಂದಹಾಸ ಮೂಡಿಸಲಿದೆಯೇ ಎಂಬುದು ಕಾದು ನೋಡಬೇಕಾದ ವಿಚಾರವೇ ಆದರೂ ಒಂದಿಷ್ಟು ನಿರೀಕ್ಷೆಗಳ ಹುಟ್ಟಿಸಿದ್ದೆಂತೂ ಹೌದು.

೯)ಹಳ್ಳಿಹಳ್ಳಿಗೂ ಹರಿಯಲಿದೆ ಕರೆಂಟ್:
ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳ ಸಂಖ್ಯೆ ಅಂದಾಜು ೧೮,೫೦೦. ಅವಕ್ಕೆಲ್ಲಾ ಮುಂದಿನ ಸಾವಿರ ದಿನಗಳ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆನ್ನೋ ಕನಸಿಗೆ ರಾಜ್ಯ ಸರ್ಕಾರಗಳ ಸಹಕಾರ ಕೋರಿರುವ ಪ್ರಧಾನಿಗಳ ಮಾತು ಕಾರ್ಯರೂಪಕ್ಕೆ ಬರುವ ನಿರೀಕ್ಷೆಗಳು ಗರಿಗೆದರತೊಡಗಿದೆ.

೧೦)ಆದಿವಾಸಿಗಳಿಗೆ ಆರು ಸಾವಿರ ಕೋಟಿಯ ಸಹಾಯ:
ದೇಶದ ಬಾಕ್ಸೈಟು, ಕಲ್ಲಿದ್ದಲು ಮುಂತಾದ ಅದಿರುಗಳು ಬರುತ್ತಿರೋದು ಎಲ್ಲಿಂದ ? ನೈರುತ್ಯ ರಾಜ್ಯಗಳಿಂದ. ಆದಿವಾಸಿಗಳ ನಾಡಿಂದ. ಆದರೆ ಅವರಿಗೆ ಸಿಗುತ್ತಿರುವ ಪ್ರಯೋಜನಗಳು ? ಸದ್ಯಕ್ಕೆಂತೂ ನಿರಾಸೆ ಮೂಡಿಸೋ ಈ ಪರಿಸ್ಥಿತಿಯ ಸುಧಾರಣೆಗೆಂತಲೇ ೬೦೦೦ ಕೋಟಿ ರೂಗಳ ಕೊಡುಗೆ ನೀಡುವ ಭರವಸೆ ಈ ಸ್ವಾತಂತ್ರ್ಯ ದಿನದಂದು.

೧೧)ಸ್ಟಾರ್ಟಪ್ ಇಂಡಿಯಾ, ಸ್ಟಾಂಡಪ್ ಇಂಡಿಯಾ :
ದೇಶದಲ್ಲಿ ಒಂದೂಕಾಲು ಲಕ್ಷ ಬ್ಯಾಂಕುಗಳಿವೆ. ಆ ಬ್ಯಾಂಕುಗಳಲ್ಲಿ ಕನಿಷ್ಟ ಒಬ್ಬೊಬ್ಬ ದಲಿತನಿಗೋ, ಆದಿವಾಸಿಗೋ ತನ್ನದೇ ಒಂದು ಸ್ವಂತ ಉದ್ಯಮ ಸ್ಥಾಪಿಸೋಕೆ ಸಾಲ ಕೊಟ್ಟರೆ ? ಅವರಿಂದ ಮೂರ್ನಾಲ್ಕು ಜನಕ್ಕೆ, ಅವರಿಂದ ಇನ್ನಷ್ಟು ಜನಕ್ಕೆ ಅಂತ ಕೆಲಸ ಸಿಕ್ಕಿ ನಿರುದ್ಯೋಗದ ಸಮಸ್ಯೆಗಳು.. ದೂರದ ದಿನವೆನಿಸಿದರೂ ಕಲ್ಪನೆಯೆಂತೂ ಕ್ರಾಂತಿಕಾರಕವೇ !. ಅದೇ ತರ ಪ್ರತೀ ಬ್ಯಾಂಕುಗಳಿಂದ ಕನಿಷ್ಟ ಒಬ್ಬ ಮಹಿಳೆಗೆ ಇದೇ ತರಹದ ಸ್ವಂತ ಉದ್ಯಮಕ್ಕೆ ಸಾಲ ಕೊಡಿಸೋ ಪರಿಕಲ್ಪನೆ !

೧೨)ಇಂಟರ್ ವ್ಯೂಗಳ ಎತ್ತಾಕಿ !:
ಒಂದು ಕೆಲಸದ ಇಂಟರ್ವ್ಯುಗೆ ಅಂತ ಮಿಜೋರಂನಿಂದ ಮುಂಬಯಿಗೆ ದಿನಗಟ್ಟಲೇ ಪಯಣಿಸುವ, ಯಾರ್ಯಾರದೋ ಶಿಪಾರಸ್ಸಿಗೆ ಅಲೆಯೋ ಪರಿಸ್ಥಿತಿ ಬಂದೊದಗಿದೆ ಪ್ರತಿಭಾವಂತ ಯುವಕರದ್ದು. ಪ್ರತಿಭೆಯ ಮೇಲೆಯೇ ಕೆಲಸ ಕೊಡುವ, ಅಂತರ್ಜಾಲದ ಮೂಲಕ ಪರೀಕ್ಷೆಗಳನ್ನು ನಡೆಸೋ ಮೂಲಕ ಈ ಅಲೆದಾಟಕ್ಕೊಂದು, ಶಿಫಾರಸ್ಸುಗಳ, ಪಕ್ಷಪಾತಗಳಿಗೊಂದು ಕೊನೆಕಾಣಿಸೋ ಕನಸು ನನಸಾದರೆ ಅದಕ್ಕಿಂತ ಖುಷಿಯ ದಿನ ಇರಲಿಕ್ಕಿಲ್ಲ

೧೩)ಸಮಾನ ಶ್ರೇಣಿ, ಸಮಾನ ವೇತನ ಬೇಡಿಕೆಗೆ ತಾತ್ವಿಕ ಒಪ್ಪಿಗೆ:
ದೇಶದ ಗಡಿಕಾದ ನಿವೃತ್ತ ಯೋಧರ ಬಹುದಿನಗಳ ಬೇಡಿಕೆಯಾಗಿದ್ದ ಸಮಾನ ಶ್ರೇಣಿ, ಸಮಾನ ವೇತನಕ್ಕೆ ಕೊನೆಗೂ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಇಷ್ಟು ದಿನಗಳ ತನಕ ಈ ಬಗ್ಗೆ ಮೌನ ವಹಿಸಿದ್ದ ಸರ್ಕಾರ ಈ ಬಗೆಗಿನ ಮಾತುಕತೆಗಳು ಮುಂದಿನ ಹಂತಕ್ಕೆ ತೆರಳಿರುವುದರ ಬಗ್ಗೆ ತಿಳಿಸುತ್ತಿದ್ದರೆ ಅಲ್ಲೇ ಕೂತಿದ್ದ ಯೋಧರ ಮುಖದಲ್ಲೊಮ್ಮೆ ಹಾದುಹೋದ ಮಂದಹಾಸ.

೧೪)೭೫ನೇ ಸ್ವಾತಂತ್ರ್ಯೋತ್ಸವಕ್ಕೊಂದು ಪ್ರತಿಜ್ಞೆ:
ಪ್ರತೀ ಹಳ್ಳಿಯೂ ೭೫ನೇ ಸ್ವಾತಂತ್ರ್ಯೋತ್ಸವದೊಳಗಾಗಿ ತನ್ನ ಅಭಿವೃದ್ಧಿಗಾಗಿ, ತನ್ಮೂಲಕ ದೇಶದ ಅಭಿವೃದ್ಧಿಗಾಗಿ ಏನಾದ್ರೂ ಕಾಣಿಕೆ ನೀಡೋ ಬಗ್ಗೆ, ಪ್ರತೀ ನಾಗರೀಕನೂ ದೇಶಕ್ಕಾಗಿ ಏನಾದ್ರೂ ಕ್ರಮ ಕೈಗೊಳ್ಳೋ ಬಗ್ಗೆ ಸಂಕಲ್ಪ ಕೈಗೊಳ್ಳಲು ಪ್ರಧಾನಿ ಕರೆ ಕೊಟ್ಟರು. ಮಾಡುತ್ತೇವೆ, ನೋಡೋಣ, ಆಗುತ್ತೆ ಎಂಬ ಭರವಸೆಗಳನ್ನು ಕೊಡುತ್ತಲೇ ಕಾಲ ತಳ್ಳೋದಲ್ಲ. ಮಾಡಬೇಕಾದ ಕಾಲವಿದು ಎಂಬ ಮಾತುಗಳಲ್ಲಿ, ಕಲ್ಲಿದ್ದಲು ಎಂದರೇ ವಿರೋಧಿಗಳು ರಾಜಕೀಯದ ಮಾತಾಡುತ್ತಾರೆ ಎಂದರೂ ಆ ಮಾತುಗಳಲ್ಲಿ, ತಾವೇ ಕಾಯಿಲೆಯಿಂದಿದ್ದರೂ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಕಾಯಿಲೆಯ ಔಷಧದ ಬಗ್ಗೆ ಮಾತಾಡುತ್ತಾರೆ ಎಂಬ ಮಾತುಗಳಲ್ಲೂ ವಿರೋಧಿಗಳಿಗೆ ರಾಜಕೀಯದ ವಾಸನೆ ಕಂಡರೆ ಅಚ್ಚರಿಯಿಲ್ಲ. ವಿರೋಧಿಗಳಿರೋದೇ ವಿರೋಧಿಸಲಿಕ್ಕೆ ಎಂಬುದು ಧ್ವಂಸವಾದ ಹದಿನೇಳು ದಿನದ ಸಂಸತ್ ಕಲಾಪದಲ್ಲಿ, ಅದಕ್ಕಾಗಿ ನಷ್ಟವಾದ ೧೪೪ ಕೋಟಿ ರೂಗಳಲ್ಲಿ, ಅದರ ಬಗ್ಗೆ ತೀರ್ವ ಬೇಸರ ವ್ಯಕ್ತ ಪಡಿಸಿದ ಮಾನ್ಯ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರ ಮಾತಿನಿಂದಲೂ ಕಂಡುಬರುತ್ತೆ. ಮಾನ್ಯ ವಾಜಪೇಯಿಯವರಿಂದ ಮನಮೋಹನರವರೆಗೆ, ಅವರಿಂದ ಮೋದಿಯವರವರೆಗೆ ಭಾರತ ಸಾಗಿಬಂದ ಅಭಿವೃದ್ಧಿಯ ಹಾದಿಯನ್ನು, ಪ್ರಧಾನಮಂತ್ರಿಗಳ ಭಾಷಣವನ್ನು ಪಕ್ಷಗಳ ಕೊಳಕು ರಾಜಕೀಯಕ್ಕಿಂತಲೂ ಎಷ್ಟೋ ಮೇಲಿಟ್ಟು , ಪೂರ್ವಾಗ್ರಹವಿಲ್ಲದೇ ನೋಡುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಮಾತ್ರ ಕೆಂಪುಕೋಟೆಯ ಮೇಲೆ, ತಿರಂಗಾದ ಕೆಳಗೆ ಕಂಡ ಕನಸುಗಳು ನಮ್ಮ ಮನದಲ್ಲೂ ಮೂಡೀತು. ಮೊದಲ ಬಾರಿಗೆ ಮೈನಸ್ಸಿನಲ್ಲಿ ಸಾಗುತ್ತಿರುವ ಬೆಯೆಯೇರಿಕೆಯ ಬಗ್ಗೆ, ಸೃಷ್ಟಿಯಾಗುತ್ತಿರುವ ಉದ್ಯೋಗಗಳ ಬಗ್ಗೆ,ಒಟ್ಟಿನಲ್ಲಿ ನಮ್ಮ ದೇಶದ ಬಗ್ಗೆಯೇ ಹೆಮ್ಮೆಯೂ,  ಇಲ್ಲಿಗೇನಾದರೂ ಮಾಡಬೇಕೆನ್ನುವ ತುಡಿತವೂ ಹುಟ್ಟೀತು.
ಸಮಸ್ತ ಓದುಗ ಮಿತ್ರರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುತ್ತಾ

ನಿಮ್ಮೊಲವಿನ ಪ್ರಶಸ್ತಿ
೧೫-೮-೨೦೧೫

ಬಂದ್

ನಾ ಸಣ್ಣಕ್ಕಿದ್ದಾಗ ಕೇಳಿದೊಂದು ಹಾಡು ನೆನಪಾಗುತ್ತಿದೆ ಯಾಕೋ. ಗಾಂಧಿ ಹೇಳಿಕೊಟ್ಟ ಪಾಠ,ಗುರುವಿಗೆ ತಿರುಮಂತ್ರ ಮಾಟ.ಸತ್ಯಾಗ್ರಹ,ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್. ಪೆಟ್ರೋಲ್ ದರ ಹೆಚ್ಚಳವನ್ನು ವಿರೋಧಿಸಿ ಬಂಧ್, ರಸ್ತೆ ಸುರಕ್ಷಾ ಮಸೂಧೆಯನ್ನು ವಿರೋಧಿಸಿ ಬಂದ್. ಕಾವೇರಿ ನೀರು ಬಿಟ್ಟರೆಂದು ಬಂದ್, ಮಹದಾಯಿಗಾಗಿ ಬಂದ್.. ಉಫ್ ! ಹೀಗೆ ತಿಂಗಳಿಗೆರೆಡು ದಿನ ಬಂದ್ ಆಚರಿಸುತ್ತಿರೋದನ್ನ ನೋಡಿ ಕರ್ನಾಟಕವೂ ಕಮ್ಯುನಿಸ್ಟರ ನಾಡಾದ ಕೇರಳದ ಹಾದಿ ಹಿಡಿತಾ ಇದಿಯಾ ಅಂತ ಒಮ್ಮೆಮ್ಮೆ  ದಿಗಿಲಾಗುತ್ತೆ. ದಿನವೊಂದರ ಬಂದಿನಿಂದ ಕೋಟ್ಯಾಂತರ ರೂ ನಷ್ಟವಾಗುತ್ತೆ. ಬಂದ್ಗಳು ಅಸಾಂವಿಧಾನಿಕ, ಬಂದ್ಗಳ ಸಂಬಂಧ ಉಂಟಾಗೋ ನಷ್ಟಗಳನ್ನ ಬಂದ್ಗಳಿಗೆ ಕರೆ ಕೊಟ್ಟೋರೆ ತುಂಬಿಕೊಡಬೇಕು ಅಂತ ಸರ್ವೋಚ್ಚ ನ್ಯಾಯಾಲಯವೇ ತೀರ್ಪಿತ್ತರೂ ಬಂದ್ಗಳಿಂದ ಜನಸಾಮಾನ್ಯ ಪಡೋ ಪರಿಪಾಟಲು ತಪ್ಪಿಲ್ಲ. ವಾರದ ಮಧ್ಯದಲ್ಲಿ ಆಗೋ ಬಂದ್ಗಳಲ್ಲಿ ಬೆಳಗ್ಗೆ ಆರಕ್ಕೇ ಆಫೀಸಿಗೆ ಬಂದು ಸಂಜೆ ಆರರವರೆಗೆ ಆಫೀಸಲ್ಲೇ ಕೊಳೆಯಬೇಕಾದ ಪರಿಸ್ಥಿತಿಯಲ್ಲಿರುವ ಐ.ಟಿಗರು, ಯಾವುದೋ ಕೆಲಸದ ನಿಮಿತ್ತ ಪರವೂರಿಗೆ ತೆರಳಬೇಕಾಗಿ ಬಂದು ಅತ್ತಲೂ ತಲುಪದೇ, ವಾಪಾಸ್ ಮರಳಲೂ ಆಗದೇ ಬಸ್ಟಾಂಡಲ್ಲೇ ಕೊಳೆಯುತ್ತಾ, ಇಲ್ಲದ ಬಸ್ಸುಗಳಿಗಾಗಿ ಶಪಿಸೋ ಸಾಮಾನ್ಯ ವ್ಯವಹಾರಸ್ಥರು, ರಜೆ ಮೇರೆಗೆ ಊರಿಗೆ ತೆರಳೋಕೆ ಪ್ರಯತ್ನಿಸಿ ಅರ್ಧದಾರಿಯವರೆಗೆ ತಲುಪಿ ಮುಂದಿನ ಬಸ್ಸ್ ಸಿಗದೇ ಒದ್ದಾಡೋ ವಿದ್ಯಾರ್ಥಿಗಳು ಮತ್ತಿತ್ತರರು.ಅನಿವಾರ್ಯ ಪ್ರಯಾಣದ ನಿಮಿತ್ತ ಹಿಂದಿನ ದಿನವೇ ಪೆಟ್ರೋಲ್ ಹಾಕಿಸಿಕೊಂಡಿದ್ದರೂ ಮಧ್ಯದಾರಿಯಲ್ಲೇ ಅದು ಖಾಲಿಯಾಗಿ ಎಲ್ಲೂ ಸಿಗದ ಪೆಟ್ರೋಲ್. ಡೀಸೆಲ್ಗಳಿಗಾಗಿ ಸಿಕ್ಕಿಹಾಕಿಕೊಂಡಲ್ಲೇ ಒಂದು ದಿನ ದೂಡಬೇಕಾದ ಪರಿಸ್ಥಿತಿಯವರು..ಸಿಕ್ಕಿದ್ದೇ ಚಾನ್ಸಂತ ವಿಪರೀತ ದುಡ್ಡಿಗೆ ಪೆಟ್ರೋಲು, ಡೀಸೆಲ್ ಮಾರೋ ಕಾಳಸಂತೆಕೋರರು, ಡಬ್ಬಲ್ಲು, ತ್ರಿಬ್ಬಲ್ಲು ಕೇಳೋ ಆಟೋದವರು..ಉಫ್.. ಬಂದ್ ಒಂದೇ ಆದರೂ ಆ ಸಮಯದಲ್ಲಿ ಜನಸಾಮಾನ್ಯನಿಗಾಗೋ ಗೋಳು ಒಂದೆರಡಲ್ಲ. ಈ ತರದ ಬಂದೊಂದರಲ್ಲಿ ಸಿಕ್ಕವನದ್ದೊಂದು ಕತೆ ನಿಮ್ಮ ಮುಂದೆ.

ಬರ್ಕೀದಿನ ಆರ್.ಎಚ್ ರಜಾ ತಗೊಂಡ್ ಬಿಡ್ಬೇಕಿತ್ತು. ಒಂದಿನ ಮುಂಚೆನಾದ್ರೂ ಊರಿಗೆ ಹೋಗ್ಬೋದಿತ್ತು, ಮತ್ತೆ ಈ ತರ ಬಸ್ಸಿದೆಯೋ ಇಲ್ವೋ ಅಂತ ತಲೆಬಿಸಿ ಮಾಡ್ಕೊಳ್ಳೋದೂ ತಪ್ತಾ ಇತ್ತು..ಶುಕ್ರವಾರ ರಾತ್ರೆ ಹನ್ನೊಂದೂಕಾಲಿಗೆ ಖಾಲಿ ಬಸ್ಟಾಂಡಲ್ಲಿ ಕೂತು ಮೆಜೆಸ್ಟಿಕ್ಕಿಗೆ ತೆರಳೋ ಬಸ್ಸಿಗಾಗಿ ಕಾಯ್ತಿದ್ದ ಗುಂಡಣ್ಣನ ತಲೆಯಲ್ಲಿ ಮೇಲಿನ ಆಲೋಚನಾ ಲಹರಿ ಹರೀತಾ ಇತ್ತು. ಬರ್ಕೀದಾದ್ದರಿಂದ ಹೆಚ್ಚಿನ ಟ್ರಾಫಿಕ್ಕಿರಲ್ಲ, ಕೆಲಸವೂ ಇರಲ್ಲ, ಬೇಗ ಬರ್ಬೋದು ಅಂತ ಹಾಕಿದ್ದ ಲೆಕ್ಕಾಚಾರದ ಮೊದಲಾರ್ಧ ಮಾತ್ರ ಸತ್ಯವಾಗಿತ್ತು ! ಬೆಳಗ್ಗೆ ಹತ್ತಕ್ಕೆ ಆಫೀಸಿಗೆ ಹೋಗಿದ್ರೂ ಬರೋ ಹೊತ್ತಿಗೆ ರಾತ್ರಿ ಹತ್ತೂವರೆ. ಎಂದೂ ಇಲ್ಲದ ಕೆಲಸಗಳು ತಾ ಊರಿಗೆ ಹೊರಡೋ ದಿನವೇ ಯಾಕೆ ಒಕ್ಕರಿಸಿಕೊಳ್ಳುತ್ವೆ ಅನ್ನೋದು ಗುಂಡಣ್ಣನಿಗೆ ಎಂದೂ ಬಗೆಹರಿಯದ ಗೊಂದಲ ! ತಗೋ, ಆಗಿದ್ದಾಗ್ಲಿ ಅಂತ ಗಡಿಬಿಡಿಯಲ್ಲೇ ಊಟದ ಶಾಸ್ತ್ರ ಮುಗಿಸಿ ಊರಿಗೆ ತೆರಳೋ ಆಸೆಯಿಂದ ಕುಂದಲಹಳ್ಳಿಯ ಬಸ್ಟಾಂಡಿಗೆ ಬಂದು ನಿಂತರೆ ಒಂದೂ ಬಸ್ ಬರಬಾರದೇ ? ದಿನಾ ಹನ್ನೊಂದೂವರೆ, ಹನ್ನೆರಡರವರೆಗೆ ಇರೋ ವೋಲ್ವೋಗಳಲ್ಲಿ ಒಂದೂ ಇತ್ತ ಸುಳೀತಿಲ್ಲ ಇವತ್ತು. ನಾಳೆಯಿಂದ ಬಂದ್ ಅಂತ ಇವತ್ತೇ ಗಾಡಿಗಳನ್ನೂ ಬಂದ್ ಮಾಡಿಬಿಟ್ರಾ ಅನ್ನೋ ಟೆನ್ಷನ್ನು ಶುರುವಾಗೋದ್ರೊಳಗೆ ಒಂದು ಆಫೀಸಿನ ಟಿಟಿ ಬಂದು ನಿಂತಿತು. ಇಡೀ ಟಿ.ಟಿ ಖಾಲಿ ಖಾಲಿ. ಟ್ರೈವರನ್ನ ಬಿಟ್ಟರೆ ಮತ್ತೊಬ್ಬನಿದ್ದ ಅಷ್ಟೇ.  ಟಿ.ಟಿಯೊಂದರಲ್ಲಿ ಐಟಿ ಉದ್ಯೋಗಿಯ ದರೋಡೆ ಅಂತ ಹಿಂದೊಮ್ಮೆ ಓದಿದ್ದ ಗುಂಡನಿಗೆ ಈ ಗಾಡಿ ಹತ್ತಲೋ ಬೇಡವೋ ಎಂಬ ಭಯ. ಮೆಜೆಸ್ಟಿಕ್ ಹೋಗುತ್ತಾ ಅಂತ ಮತ್ತೊಮ್ಮೆ ಕೇಳಿದ. ಹೂಂ ಅಂದ ಟಿ.ಟಿಯವ. ಟಿ.ಟಿಯ ಬೋರ್ಡ್ ನೋಡಿದ ಒಮ್ಮೆ. ಓ, ತನ್ನ ಆಫೀಸಿಗೆ ಜನರನ್ನ ಡ್ರಾಪ್ ಮಾಡೋ ಕಂಪೆನಿಯವರದ್ದು, ಪರವಾಗಿಲ್ಲ ಅಂದುಕೊಂಡ. ಮತ್ತೊಮ್ಮೆ ಒಳಗೆ ಕೂತಿದ್ದವನನ್ನು ನೋಡಿದ. ಅವನ ಕೊರಳಲ್ಲಿ ನೇತಾಡುತ್ತಿದ್ದ ಐಡಿಯ ಆಕಾರ ಕಂಡಿತು. ಪರವಾಗಿಲ್ಲ ತಗೋ ಅಂತ ಗಾಡಿ ಹತ್ತಿ ಕೂತ ಗುಂಡಣ್ಣ.

ಕುಂದಲಹಳ್ಳಿ ಗೇಟು ಬರುತ್ತಲೇ ಗಾಡಿಯಲ್ಲಿದ್ದ ಒಬ್ಬನೂ ಬಸ್ಸಿಳಿದ ಕೂಡಲೇ ಒಂಟಿ ಟಿಟಿಯಲ್ಲಿ ಮೆಜೆಸ್ಟಿಕ್ ತನಕ ಹೋಗೋದು ಸೇಫಾ ಅಲ್ಲವಾ ಅಂತೊಂದು ಆಲೋಚನಾ ಧಾರೆ ಬರೋಕೆ ಶುರುವಾಯ್ತು ಗುಂಡಣ್ಣಂಗೆ. ಆ ಆಲೋಚನೆಯಲ್ಲಿದ್ದಾಗಲೇ ಮುಂದಿನ ಸ್ಪೈಸ್ ಗಾರ್ಡನ್ ಸ್ಟಾಪ್ ಬಂತು. ಅಲ್ಲೊಂದಿಷ್ಟು ಜನ ಕಾಯ್ತಾ ನಿಂತಿದ್ರು . ಸುಮಾರು ಹೊತ್ತಿನಿಂದ ಬಸ್ಸಿಗಾಗಿ ಕಾಯ್ತಿದ್ದರು ಅಂತ ಕಾಣಿಸುತ್ತೆ ಅವರೆಲ್ಲಾ. ಮೆಜೆಸ್ಟಿಕ್ ಅಂತ ಕೂಗಿದ ಡ್ರೈವರನ ಕೂಗಿಗೆ ಅದರಲ್ಲಿಬ್ಬರು ಅನುಮಾನಿಸುತ್ತಲೇ ಟಿ.ಟಿ ಹತ್ತಿದರು .ಅವರೂ ಗುಂಡಣ್ಣನ ಮುಖ ನೋಡಿ ಅವರ ಮನದಲ್ಲೂ ಗುಂಡಣ್ಣನ ತರಹದ್ದೇ ಆಲೋಚನಾ ಲಹರಿ ಮೂಡಿರಬಹುದು. ನಂತರದ ಮಾರತ್ತಳ್ಳಿ ನಿಲ್ದಾಣದಲ್ಲಿ ಬ್ಯಾಂಡ್ ಸೆಟ್ಟಿನ ಆರು ಜನ ಗಾಡಿ ಹತ್ತೋದ್ರೊಂದಿಗೆ ಗಾಡಿಯೊಂದು ರೀತಿಗೆ ತುಂಬಿಕೊಂಡ್ತು. ಮೆಜೆಸ್ಟಿಕ್ಕಿನ ಪಯಣ ಇನ್ನು ಸೇಫು ಬಿಡಪ್ಪಾ ಅನ್ನೋ ಭಾವ ಗುಂಡಣ್ಣನಲ್ಲೂ ಮೂಡಿತು. ಆಮೇಲೆ, ಮುನ್ನೇಕೊಳ್ಳಾಲದಲ್ಲಿ ಇಳಿಯೋರು, ರಾಜೇಶ್ವರಿಯ ಹತ್ತಿರ ಇಳಿಯೋರು, ಎಚ್.ಎ.ಎಲ್ ಹತ್ರ ಇಳಿಯೋರು ಅಂತ ಗಾಡಿ ಫುಲ್ ಜನರಾದ್ರೂ ಧೈರ್ಯ ತರಿಸಿದ್ದು ಮೊದಲ ಹೇಳಿದ ಜನರೇ ಅಂತ ಮತ್ತೆ ಹೇಳೋಬೇಕಿಲ್ಲಾ ಅನಿಸುತ್ತೆ. ಅಲ್ವಾ ? ಖಾಲಿ ರಸ್ತೆಗೆ ದೃಷ್ಟಿಯಾಗಬಾರದು ಅಂತ ಬೊಟ್ಟಿಟ್ಟಂತೆ ಅಲ್ಲೊಂದು ಇಲ್ಲೊಂದು ವಾಹನಗಳು ಕಾಣಿಸಿಕೊಳ್ಳುತ್ತಿದ್ದ ಆ ರಾತ್ರೆಯ ರಸ್ತೆಯಲ್ಲಿ ವಿಜಯನಗರದ ಆ ಚಾಲಕ ಹನ್ನೊಂದೂ ಐವತ್ತಕ್ಕೇ ಮೆಜೆಸ್ಟಿಕ್ ತಲುಪಿಸಿದ್ದ. ಮಾರನೇ ದಿನ ಬಂದ್. ಅದೂ ಶನಿವಾರವಾದ್ದರಿಂದ ತನಗೆ ರಜಾ. ಇಂದಾದ್ರೂ ಬೆಳಗ್ಗೆ ಐದಕ್ಕೇ ಎದ್ದು ಪಿಕಪ್ಗೆ ಹೋಗೋ ತಲೆನೋವಿಲ್ಲ. ಒಂದಿನವಾದ್ರೂ ಆರಾಮಾಗಿ ಮಲಗಬಹುದೆಂಬ ಖುಷಿಯಲ್ಲಿ ಬೇಗ ಮನೆ ತಲುಪೋ ಅವಸರದಲ್ಲಿದ್ದ ಅವ. ಆಗಾಗ ಬಂದ್ ಆಗ್ತಾ ಇದ್ರೆ ನಿಮಗೊಂದಿಷ್ಟು ರಜಾ ಸಿಗುತ್ತಲ್ವಾ ? ಹಂಗಾಗಿ ಒಂದಿಷ್ಟು ಬಂದ್ ಬರ್ತಾ ಇರ್ಲಿ ಅಂತ ಅಂದ್ಕೊಳ್ತಾ ಇರ್ತೀರ ಅಲ್ವಾ ಅಣ್ಣಾ ಎಂಬ ಗುಂಡಣ್ಣನ ಮಾತಿಗೆ ಡ್ರೈವರನ ಮುಗುಳ್ನಗೆಯೇ ಉತ್ತರವಾಗಿತ್ತು.

ಅದರ ಹಿಂದಿರಬಹುದಾದ ಅರ್ಥಗಳ ಗ್ರಹಿಸೋ ಗೋಜಿಗೆ ಹೋಗದೇ ಬಸ್ಟಾಂಡಿನತ್ತ ಹೆಜ್ಜೆ ಹಾಕಿದ ಗುಂಡಣ್ಣನಿಗೆ ಹೊರಬರುತ್ತಿದ್ದ ಶಿವಮೊಗ್ಗ ಬಸ್ಸೇ ಎದುರಾಯ್ತು. ಸಖತ್ ಬಾಯಾರಿದ್ದವನಿಗೆ ಯಾರೋ ಬಿಸ್ಲೇರಿ ಬಾಟಲಿ ದಾನ ಮಾಡಿದಾಗ ಅವನಿಗಾಗುವಷ್ಟೇ ಖುಷಿಯೀಗ ಗುಂಡಣ್ಣನಿಗೆ ! ಶಿವಮೊಗ್ಗದಿಂದ ಮುಂದೆ ತನ್ನೂರಿಗೆ ಬಸ್ ಸಿಗುತ್ತೋ ಇಲ್ಲವೋ ಅನ್ನೋದು ನಂತರದ ಮಾತು. ಮೊದಲು ಶಿವಮೊಗ್ಗದವರೆಗೂ ತಲುಪುವೆನಲ್ಲ ಅನ್ನೋ ಖುಷಿಯಲ್ಲಿ ಮಲಗಿದವನಿಗೆ ಆಫೀಸಿಂದೇ ಕನಸುಗಳು. ಥೋ. ಎರಡು ದಿನ ಆರಾಮವಾಗಿ ಇರೋಣ ಅಂತ ಹೊರಟರೂ ಬಿಡದೇ ಹಿಂಬಾಲಿಸ್ತಿದೆಯಲ್ಲಾ ಆಫೀಸ್ ಆಲೋಚನೆಗಳು ! ಬಿಟ್ಟರೂ ಬಿಡದೀ ಮಾಯೆ ಅನ್ನುವಂತೆ ಅಂದುಕೊಂಡ. ಶಿವಮೊಗ್ಗ ತಲುಪೋ ಹೊತ್ತಿಗೆ ಬೆಳಗ್ಗಿನ ಜಾವ ಆರು ದಾಟಿತ್ತು. ಇಡೀ ಕೆ.ಎಸ್.ಆರ್ಟಿಸಿ ಬಸ್ಟಾಂಡ್ ಖಾಲಿ ಖಾಲಿ.ಬೆಂಗಳೂರಿಂದ ಬಂದ ಬಸ್ಸುಗಳನ್ನ ಬಿಟ್ಟರೆ ಬೇರ್ಯಾವ ಬಸ್ಸುಗಳೂ ಇಲ್ಲ !

ಆದ್ರೆ ಪಕ್ಕದ ಖಾಸಗಿ ನಿಲ್ದಾಣದಿಂದ ಹೊರಬಂದ ತೀರ್ಥಹಳ್ಳಿಯ ಬಸ್ಸೊಂದು ತನ್ನೂರಿಗೂ ಬಸ್ಸು ಸಿಗಬಹುದೆಂಬ ಆಸೆ ಕೆರಳಿಸಿ ಖಾಸಗಿ ನಿಲ್ದಾಣದತ್ತ ದಾಪುಗಾಲಿಕ್ಕಿದ ಗುಂಡಣ್ಣ. ತನ್ನೂರು ಸಾಗರ ಅಂತ ಬರೆದುಕೊಂಡಿದ್ದ ಬಸ್ಸೊಂದು ನಿಂತಿತ್ತು ನಿಲ್ದಾಣದ ಮೂಲೆಯಲ್ಲಿ. ಆದ್ರೆ ಬಸ್ಸೊಳಗೆ ಯಾರೂ ಇಲ್ಲ. ಎಷ್ಟೊತ್ತಿಗೆ ಹೊರಡುತ್ತೆ ಅಂದ್ರೆ ಆರೂವರೆಗೆ ಹೊರಡುತ್ತೆ , ಜನ ತುಂಬುತ್ತಿದ್ದಂಗೆ ಹೊರಡೋದೇ ಅಂದ ಡ್ರೈವರ. ಬಸ್ಸೊಳಗೆ ಹತ್ತಿ ಕೂತ ಗುಂಡಣ್ಣಂಗೆ ಜನ ತುಂಬೋವರೆಗೂ ಹೊರಡೋಲ್ಲ ಅಂತ ಹೇಳೋಕೆ ಹೊರಟನಾ ಅಂತನಿಸೋಕೆ ಶುರು ಆಯ್ತು. ಸಮಯ ಆರೂಕಾಲು.

ಬಸ್ಸಲ್ಲಿ ಸೀಟು ಬೇಕು ಅಂತ ಇತ್ತು.ಆದ್ರೆ ಬಸ್ಸಲ್ಲಿರೋ ಸೀಟೆಲ್ಲಾ ತಂಗೇ ಬೇಕಂತಿರಲಿಲ್ಲ! ಹೆಂಗಾದ್ರೂ ಮನೆ ತಲುಪಿದ್ರೆ ಸಾಕಂತಾ ಬಂದ ತನಗೆ ವಿಘ್ನನಿವಾರಕನ ಹೆಸರಿನ ಗಜಾನನ ಬಸ್ಸೇ ಸಿಕ್ಕಿದೆ.ಆದ್ರೆ ಅದರಲ್ಲಾದ್ರೂ ಒಂದಿಷ್ಟು ಜನ ತುಂಬದೆ ಮುಂದೆ ಹೋಗೋದೇಗೆ ? ಆಗಷ್ಟೇ ಬಸ್ಸು ಹತ್ತಿದ ಡ್ರೈವರ್ ಬೇರೆ ಜನರೇ ಇಲ್ಲ, ಇನ್ನೇನು ಹೋಗೋದು ಅಂತ ಗೊಣಗುತ್ತಾ ಕೆಳಗಿಳಿದಿದ್ದ. ಜನರ ಬರವಿಕೆಗೆ ಕಾಯೋ ತನಕ ಮನೆಗಾದ್ರೂ ಫೋನ್ ಮಾಡಿ ಊರಿನ ಬಸ್ಸು ಸಿಕ್ಕಿದೆ ಅಂತ ಹೇಳೋಣ ಅಂತ ಪ್ರಯತ್ನ ಪಟ್ರೆ ಮೊದಲ ರಿಂಗಾಗೋ ಮೊದಲೇ ಫೋನ್ ಕಟ್ಟಾಯ್ತು. ಏನಾಯ್ತಪ ಇದು ಅಂತ ಅಂದ್ಕೊಳೋ ಹೊತ್ತಿಗೆ ಬಿ.ಎಸ್.ಎನ್.ಎಲ್ನಿಂದ ಮೆಸೇಜು. ನಿಮ್ಮ ಬ್ಯಾಲೆನ್ಸ್ ೦.೦೮ ಪೈಸೆಗಳಿದೆ. ಕರೆ ಮಾಡ್ಬೇಕು ಅಂದ್ರೆ ರೀಚಾರ್ಚ್ ಮಾಡಿಸಿ ಅಂತ ! ಇಷ್ಟು ಖಾಲಿ ಆಗೋವರೆಗೆ ಏನು ಮಾಡ್ತಿದ್ರಪ್ಪ ಕಂಪೆನಿಯವ್ರು ಅಂತ ಬಯ್ಕೊಳ್ತನೇ ಡುಯಲ್ ಸಿಮ್ಮಾದ ಮೊಬೈಲಿನಲ್ಲಿ ಮತ್ತೊಂದು ಸಿಮ್ಮಾದ ಡೊಕೋಮೋವನ್ನ ಬಳಸಿ ಫೋನ್ ಮಾಡೋಕೆ ಹೋದ್ರೆ ನಿಮ್ಮ ಬ್ಯಾಲೆನ್ಸು ಐದು ರೂಪಾಯಿ ಇಂತಿಷ್ಟು ಪೈಸೆ ಅಂತ ಹುಡುಗಿಯೊಬ್ಬಳು ಉಲೀತಾ ಇದ್ದಾಳೆ ಬಿಟ್ರೆ ಅತ್ತಲಿಂದ ಯಾರೂ ಫೋನ್ ಎತ್ತತಾ ಇಲ್ಲ. ಫೋನನ್ನಲ್ಲೇ ಕುಕ್ಕರುಬಡಿದು ಜನರಾದ್ರೂ ಬಂದ್ರೆ ತನ್ನ ಬಸ್ಸಾದ್ರೂ ಹೊರಡುತ್ತೆ.ಇಲ್ಲಾಂದ್ರೆ ಅದೂ ಇಲ್ಲವಲ್ಲಪ್ಪ ಅಂತ ಗುಂಡಣ್ಣ ಜನರ ಬರ ಕಾಯತೊಡಗಿದ.

೬:೨೦: ಎರಡನೇ ಪಯಣಿಗ ಬಸ್ಸೊಳಗೆ ಅಡಿಯಿಟ್ಟ.ಅವನ ಮನದಲ್ಲೂ ಗುಂಡನ ಮನದಲ್ಲಿರುವಂತದ್ದೇ ಆಲೋಚನಾ ಲಹರಿಗಳಿರಬಹುದು.
೬:೨೪:ಮೂರನೇ ಪ್ರಯಾಣಿಕನ ಆಗಮನದೊಂದಿದೇ ಸೀಟಿಗೆ ಮೂವತ್ತು ಕೊಡಿ ಸಾಕು ಅಂತ ಕೆಳಗಿನಿಂದ ಕೇಳಿದ ಮಾತುಗಳ ಕೇಳಿ ಗುಂಡಣ್ಣ ಕೆಳಕ್ಕೆ ತಲೆಹಾಕಿದ. ಹೆಂಗಾದ್ರೂ ಬಸ್ಸು ತುಂಬಿಸಬೇಕು ಅಂತ ಮೂವತ್ತು ರೂಪಾಯಿಗೇನಾದ್ರೂ ಟಿಕೇಟ್ ಹೇಳ್ತಾ ಇದ್ದಾರಾ ಬಸ್ಸೋರು ಅಂತ ಅಂದುಕೊಂಡ. ಹಿಂದೊಮ್ಮೆ ಹತ್ತು ರೂಪಾಯಿ ಶಿವಮೊಗ್ಗ ಅಂತೆಲ್ಲಾ ಬಸ್ಸೋರು ದರಸಮರ ಸಾರಿದ್ದು ನೆನಪಾಗಿ ಆಗೋದೆಲ್ಲಾ ಒಳ್ಳೇದಕ್ಕೇ ಅಂತ ಖುಷಿಪಡೋ ಹೊತ್ತಿಗೆ ಮೂವತ್ತು ರೂಪಾಯಿ ಕೊಡ್ರಿ ಸಾಕು. ಈಗ ಬೇರೆ ಯಾವ ಗಾಡಿಯೂ ಸಿಕ್ಕೋಲ್ಲ ಅನ್ನೋ ಮಾತುಗಳು ಕೇಳಿದ್ವು. ಒಳ್ಳೇ ವ್ಯವಹಾರ ಪ್ರಜ್ಞೆ ಇದೆ ಬಿಡಪ್ಪಾ ಇವರಿಗೆ, ಅಷ್ಟಕ್ಕೂ ಯಾರಿದು ಅಂತ ನೋಡಿದ್ರೆ ಬಸ್ಸು ಬಿಟ್ಟರೆ ಯಾರಿಗೂ ಪ್ರವೇಶವಿಲ್ಲ ಅನ್ನೋ ಬೋರ್ಡನ್ನು ಉಲ್ಲಂಘಿಸಿ ನಿಲ್ದಾಣದೊಳಕ್ಕೆ ನುಗ್ಗಿದ್ದ ಆಟೋವಾಲ !

ಟೈಂಪಾಸ್ ಪೇಪರ್, ಟೈಂಪಾಸ್ ಪೇಪರ್, ಅಣ್ಣಾ ಪೇಪರ್ ತಗೋಳ್ಳಿ, ಬೋಣಿ ಮಾಡಿ ಅಂತ ಮೂರು ಜನರ ಬಸ್ಸಿಗೂ ನುಗ್ಗಿದ ಒಬ್ಬ ಪೇಪರ್ ಬಾಲ. ಟೈಂಪಾಸ್ ಕಡ್ಲೆ ಕಾಯಿ ಗೊತ್ತು. ಇದ್ಯಾವುದಿದು ಟೈಂಪಾಸ್ ಪೇಪರ್ರು ಅಂದ್ಕೊಳ್ಳೋ ಹೊತ್ತಿಗೆ ಗುಂಡಣ್ಣನತ್ರನೇ ಬಂದ ಅವ. ನಮ್ಮನೇಲೇ ಪೇಪರ್ ತರಿಸ್ತೀವಿ ಕಣಪ್ಪಾ ಅಂದ್ರೆ , ಬೇರೆ ಪೇಪರ್ ತಗೋಳ್ಳಿ ಅನ್ನಬೇಕೇ ಆ ಪೇಪರಿನವ್ನು ! ಹೆ ಹೆ, ಬೇಡಪ್ಪಾ ಅಂತಿದ್ದ ಹಾಗೇ ಮುಂದೆ ಹೋದ. ಬಂದಿನಿಂದ ಆಟೋ, ಬಸ್ಸಿನವರ ತರಹ ಆತನ ಪೇಪರ್ ವ್ಯಾಪಾರವೂ ಥಂಡಾ ಹೊಡೆಯುತ್ತಿತ್ತು.ತಿಂಗಳಿಗೆ ಹಿಂಗೆ ಎರಡು ಮೂರು ಬಂದು ಮಾಡಿದ್ರೆ ದಿನಗೂಲಿಯವ್ರ, ಮಂಡಿ ಹಮಾಲಿಗಳ, ಗಾಡಿ ತಳ್ಳುವಂತಹ ಕೆಲಸ ಮಾಡುವ, ಅವತ್ತು ದುಡಿದರೆ ಮಾತ್ರ ಅವತ್ತು ಉಣ್ಣೋಕೆ ಸಾಧ್ಯವಾಗುವಂತಹ ಜನರ ಹೊಟ್ಟೆಪಾಡಿನ ಗತಿಯೇನು ? ಅವತ್ತಿಡೀ ಯಾವುದೇ ಕೆಲಸವಿಲ್ಲದೇ ಉಪವಾಸ ಮಲಗೋ ಆತನ ಕುಟುಂಬದ ಕಣ್ಣೀರ ನೋವು, ಹಸಿದ ಹೊಟ್ಟೆಯ ಯಾತನೆ ಈ ಬಂದ್ ಮಾಡೋರಿಗೆ, ಅದ್ರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳೋ ಹೊಟ್ಟೆ ತುಂಬಿದ ಜನಕ್ಕೆ ಅರ್ಥವಾಗೋದು ಯಾವಾಗ ಅನ್ನೋ ವಿಚಾರಧಾರೆ ಹಾದುಹೋಯ್ತೊಮ್ಮೆ.
೬:೨೮:ಪಕ್ಕದಲ್ಲೇ ಇನ್ನೊಂದು ಸಾಗರದ ಬಸ್ ಬಂದು ನಿಂತಾಗ ಈ ಬಸ್ಸು ಅವನಿಗೆ ಕಾಂಪಿಟೇಷನ್ ಕೊಡೋಕೆ ಅಂತಾದ್ರೂ ಹೊರಡ್ತಾನೆ ಅನ್ನೋ ಧೈರ್ಯ ಬಂತು ಗುಂಡಣ್ಣಂಗೆ. ಅದಕ್ಕೆ ಸರಿಯಾಗಿ ನಾಲ್ಕನೇ ಪಯಣಿಗ ಬಂದು ಆಸೀನನಾಗೋದಕ್ಕೂ ಡ್ರೈವರ್ರು ರಣೋತ್ಸಾಹದಿಂದ ಗಾಡಿ ಸ್ಟಾರ್ಟ್ ಮಾಡೋದಕ್ಕೂ ಸರಿಯಾಯ್ತು. ಗಾಡಿ ಶುರುವಾಗುತ್ತಿದ್ದಂತೆಯೇ ಎಲ್ಲೋ ಇದ್ದಂತಿದ್ದ ೫,೬,೭ನೇ ಪಯಣಿಗರು ಬಂದು ಗಾಡಿ ಹತ್ತಿದರು. ಗೆದ್ದೆತ್ತಿನ ಬಾಲ ಹಿಡಿಯೋರು ಅನ್ನುವಂತಹ ಇವರು ಗಾಡಿ ಶುರುವಾದ ಮೇಲೆ ಆ ಶುರುವಾದ ಆ  ಗಾಡಿಗೆ ಬಂದು ಹತ್ತುತ್ತಾ ಇದ್ದಾರೆ. ಮುಂಚೆಯೇ ಹತ್ತಿದ್ರೆ ಗಾಡಿ ಮುಂಚೆಯೇ ಹೊರಡುತ್ತಿರಲಿಲ್ಲವೇ ಅಂದುಕೊಂಡ ಗುಂಡಣ್ಣ ! ಗಾಡಿಯಲ್ಲಿ ಹತ್ತುತ್ತಿದ್ದ ಜನರೊಂದಿಗೆ ಗುಂಡಣ್ಣನಿಗೆ ಮನೆ ಸೇರೋ ಭರವಸೆಯೂ ಹೆಚ್ಚಾಗುತ್ತಿತ್ತು

೬:೩೦: ಇನ್ನಿಬ್ಬರ ಜಮಾವಣೆಯಾಯ್ತು ಬಸ್ಸಿಗೆ
೬:೩೧:ಹಿಂದಿನ ಮತ್ತು ಮುಂದಿನ ಬಾಗಿಲುಗಳಿಂದ ತಲಾ ಇಬ್ಬರೆಂಬಂತೆ ಒಟ್ಟು ನಾಲ್ಕು ಜನ ಬಸ್ಸು ಮುಂದೆ ಸಾಗಿತು. ಬೇರೆ ಸಮಯದಲ್ಲಾಗಿದ್ರೆ ಒಂದು ನಿಮಿಷ ಲೇಟಾಗಿದೆ ಅಂತ ಬಸ್ಸು ಬಡಿಯೋದೇನು, ಗಲಾಟೆ ಮಾಡೋದೇನು, ಡ್ರೈವರಿಗೆ ಬಯ್ಯೋದೇನೋ, ಇಂತದ್ದೆಲ್ಲಾ ಅವಾಂತರ ಮಾಡುತ್ತಾ ಬಸ್ಸಲ್ಲಿದ್ದವರಿಗೆಲ್ಲಾ ಕಿರಿಕಿರಿ ಹುಟ್ಟಿಸಿಬಿಡುತ್ತಿದ್ದ ಹಿಂದಿನ ಬಸ್ಸಿನ ಏಜೆಂಟು. ಆದ್ರೆ ಬಂದಿನ ಕಾರಣ ಇವೆಲ್ಲಾ ಜಗಳಗಳೂ ಬಂದಾಗಿತ್ತು. ಬಸ್ಟಾಂಡಲ್ಲಿದ್ದೋರದ್ದೆಲ್ಲಾ ಅದೆಷ್ಟು ಅನ್ಯೋನ್ಯ ಭಾವ !
ಆಟೋ ಸ್ಟಾಂಡ್ ಹತ್ರ ಹೋಗೋವಷ್ಟರಲ್ಲಿ ಹುಂಚದ ಬಸ್ಸು ಹತ್ತೋ ಬದ್ಲು ನಮ್ಮ ಬಸ್ ಹತ್ತಿದ್ದ ಒಬ್ಬ ಇಳಿಯೋದಕ್ಕೂ ಮತ್ತೊಬ್ಬ ಹೊಸಬ ಹತ್ತೋದಕ್ಕೂ ಸರಿಯಾಯ್ತು.ಹದಿಮೂರು ಜನರ ಪಯಣ ಅಂತ ಹೊರಟಿದ್ದ ನಮ್ಮ ಸಕಲೇಶಪುರದ ಪ್ರವಾಸ ಪ್ರಯಾಸವಾದ್ದು ನೆನಪಾಗಿ ಸೇಫಾಗಿ ಮನೆಸೇರಲಪ್ಪಾ ಅನ್ನೋ ಬೇಡಿಕೆ ಆ ಗಣೇಶನಲ್ಲಿ. ಹದಿನೈದು ಜನರಾದ್ರೂ ಇದ್ದಿದ್ರೆ ಬಸ್ ಓಡಿಸಿದ ಖರ್ಚಾದ್ರೂ ಹುಟ್ಟುತ್ತಿತ್ತು ಅಂದ ಏಜೆಂಟರ ಮಾತಿಗೆ ಕಂಡೆಕ್ಟರು, ಡ್ರೈವರನ್ನೂ ಸೇರಿಸಿ ಟಿಕೇಟ್ ಮಾಡಿ. ಹದಿನೈದಾಗತ್ತೆ ಅಂದ್ರು ಒಬ್ರು ! ಆಟೋರಿಕ್ಷಾದಂತೆ ಸಾಗುತ್ತಿದ್ದ ಬಸ್ಸಿಗೆ ಸರ್ಕಿಟ್ ಹೌಸಿನಲ್ಲಿ ಇಬ್ಬರು ಹತ್ತುತ್ತಿದ್ದಂಗೆ ಕೊನೆಗೂ ಹದಿನೈದಾದ ಖುಷಿಯಲ್ಲಿ ಬಸ್ಸಿನ ವೇಗ ಹೆಚ್ಚಿತು.

ಸಮಯ ೬:೩೮
ಹೆಚ್ಚುತ್ತಿದ್ದ ಗಾಡಿಯ ವೇಗದೊಂದಿಗೆ ಬೀಸುತ್ತಿದ್ದ ತಂಗಾಳಿಯಲ್ಲಿ ನಿದ್ದೆಗೆ ಜಾರುತ್ತಿದ್ದ ಗುಂಡಣ್ಣನಿಗೆ ಹಾಲ್ಕೊಳ ಅಂತ ಬಸ್ಸು ನಿಲ್ಲಿಸಿದಂತೆ , ಅಲ್ಲೊಬ್ಬ ಬಸ್ಸು ಹತ್ತಿದಂತೆ ಅನಿಸಿತು. ಅವಾಗಿಂದ ಜನರ ಬಗ್ಗೆಯೇ ಯೋಚಿಸ್ತಿರೋ ತನಗೆ ಕನಸಲ್ಲೂ ಅವರೇ ಬರ್ತಾ ಇದ್ದಾರಾ ಅಂತ ಗುಂಡಣ್ಣ ಕಣ್ಣುಜ್ಜಿ ಏಳೋ ಹೊತ್ತಿಗೆ ಬಸ್ಸು ಮುಂದೆ ಹೊರಟಾಗಿತ್ತು. ಸುತ್ತಲಿನ ಹಸಿರು ಗದ್ದೆಗಳ ಮೇಲೆ ಹಾರ್ತಿರೋ ಹಕ್ಕಿಗಳು, ಕರೆಂಟ್ ಲೈನಿನ ಮೇಲೆ ಕೂತು ಅತ್ತಿತ್ತ ಸರ್ಕಸ್ ಮಾಡ್ತಿದ್ದ ಬಾನಾಡಿಗಳು ಇದು ಕನಸಲ್ಲ ವಾಸ್ತವ ಎಂದು ಹಾಡುತ್ತಿದ್ದಂಗೆ ಅನಿಸಿತು. ಅವುಗಳದೇ ದಾಟಿಯಲ್ಲಿ..ಕೊನೆಗೂ ಕಾಂಕ್ರೀಟ್ ಕಾಡಿನ ಉಸಿರುಗಟ್ಟಿಸೋ ಧೂಳಿನಿಂದ, ತಲೆಬಿಸಿಯಿಂದ ಹೊರಬಂದಿದ್ದ ಗುಂಡಣ್ಣ ಸಾಗುತ್ತಿದ್ದ, ತನ್ನ ನೆಚ್ಚಿನ ಹುಟ್ಟೂರಿನತ್ತ, ಮಲೆನಾಡ ಮಡಿಲಿನತ್ತ.
-ಪ್ರಶಸ್ತಿ.ಪಿ,
೨೬/೯/೨೦೧೫
ಸಾಗರ

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ