Wednesday, January 29, 2014

ಗಣತಂತ್ರ ದಿನ

ನೂರು ಚೂರನು ಹೊಲಿದು ಒಂದು ಭಾರತವೆಂದೆ
ರಾಜ್ಯ, ಭಾಷೆಯ, ಮತದ ಜಗಳಕೆಂದೆ ?
ಅವ ಮೆಂದ, ಇವ ತಿಂದ, ಮತ್ತೊಬ್ಬ ಮಾಡದಿಹ
ಸತ್ಕಾರ್ಯ ಬೇಡುವುದೆ ಉಳಿದ ಮಂತ್ರ ?

ಸುತ್ತಲಿಹ ಜೀವಗಳ ಶತ್ರುಗಳ ಪರಿ ನೀನು
ದೂರತಳ್ಳುವ ,ಬಡಿವ ಪರಿಯು ಸರಿಯೆ ?
ನಿನ್ನ ನಾಡಿಯ ಮಿಡಿತ, ನೆರಳೇ ನೆರಹೊರೆಯವರು
ನೀರ ಹೊರಗಣ ಮೀನು ಅವರು ತೊರೆಯೆ

ಅನುಕ್ಷಣವೂ ಜನ್ಮದಾತೆಯ ಕರುಳ ಹಿಂಡುತಿಹ
ಕಾಡುವಿಕೆ, ಕಲಹಗಳ ಕ್ರೂರ ಶಿಶುವೆ
ಗಣತಂತ್ರ ರಜೆಯಲ್ಲ ಹೊದ್ದ ನಿದ್ದೆಯನೊದೆಯೊ
ದೇಶ ಕಾದಿದೆ ನಿನಗೆ ಮೂಢ ಮನವೇ

ನಮ್ಮೊಳಗೆ ನಾರುತಿಹ ನೂರು ಹಳೆ ದೂರುಗಳು
ನಲ್ಮೆ ಮಾತುಗಳರುಹೆ ಬೇಕೆ ಕೇಸು ?
ಹಣವೆಂದು, ಗಣಿಯೆಂದು ಹಗೆಯ ಕಾದಿಹ ಜನರು
ತಾಯ ನಗುವನೆ ಸುಟ್ಟು ತಿಂದರೆಂದೋ

ಬೇಕಿಲ್ಲ ಭಾರತಿಗೆ ಮಣ ಹೊನ್ನು, ಮಕರಂದ
ಮಕ್ಕಳೆಲ್ಲರು ಕೂಡೆ ಅದುವೆ ಚೆಂದ
ಶಿಶುವಾಗು ತಪ್ಪುಗಳ ಶಿಶುಪಾಲನಾಗದಿರು
ಕ್ಷಮಿಸುವವಳೇ ತಾಯಿ ನಿನ್ನ ಕಂದ
ಮುಡುಪೆನ್ನು ಒಂದು ಕ್ಷಣ ದಿನದಲ್ಲಿ ದೇಶಕ್ಕೆ
ಇಲ್ಲಿರುವ ಜನರೆಲ್ಲ ಬಂಧುವೆನ್ನು
ಈ ನಾಡೇ ಸಕಲ ಸುಖ ಸಿಂಧುವೆನ್ನು


ಗೆಳೆಯನೊಬ್ಬನ ಕೋರಿಕೆಯ ಮೇರೆಗೆ ಕವನದ ಭಾವಾರ್ಥ( ನಾ ಬರೆಯುವಾಗ ಅಂದುಕೊಂಡಂತೆ)
೧)ರಾಜರ ಸಂಸ್ಥಾನಗಳು ಅಂತ ಹರಿದು ಹಂಚಿ ಹೋಗಿದ್ದನ್ನ ಸರ್ದಾರರು ಅಖಂಡ ಭಾರತ ಅಂತ ಒಂದು ಮಾಡಿದ್ರು. ಆದ್ರೆ ನಾವು ಆ ರಾಜ್ಯ, ಈ ರಾಜ್ಯ ಅಂತ ೬೫ ವರ್ಷಗಳಿಂದಲೂ ಒಡಿತಾನೇ ಇದೀವಿ..ಜೊತೆಗೆ ಆ ಭಾಷೆಯವನು, ಈ ಮತದವನು, ಅವನು ನಮ್ಮವನಲ್ಲವೆಂಬ ಭಿನ್ನಮತಗಳು ಬೇರೆ. ಬರೀ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಬೈದಿದ್ದೇ ಆಯ್ತು. ರಾಜಕಾರಣಿಗಳು ಮಾಡದ ಕೆಲಸಗಳ ಬಯಸಿದ್ದೇ ಆಯ್ತು. ಈ ಬಯಸುವಿಕೆ, ಬೇಡುವಿಕೆಗಳೇ ನಮಗೆ ಉಳಿದಿರುವ ಕೊನೆಯ ಉಪಾಯವೇ ?


2)ನಿನ್ನ ಸುತ್ತಮುತ್ತಲಿರುವವರು ನಿನ್ನ ಮಿತ್ರರೇ ಕಣೋ. ಶತ್ರುಗಳಲ್ಲ. ಅವರನ್ಯಾಕೆ ಆ ಪರಿ ದ್ವೇಷಿಸುತ್ತೀ ? ದೂರ ತಳ್ಳುತ್ತೀ ? ನಿನ್ನಂತರಂಗಕ್ಕೊಂದು ಕನ್ನಡಿಯಷ್ಟೇ ಅವರು. ನೀನು ಒಳ್ಳೆಯವನಾದರೆ ನಿನ್ನ ನೆರೆಯವರೂ ಒಳ್ಳೆಯವರು. ನಿನ್ನಷ್ಟೇ ರಕ್ಕಸರವರು.ನಿನ್ನ ನೆರಳಂತೇ ಕಷ್ಟದು:ಖಗಳಲ್ಲಿ ಜೊತೆಗಿರೋ ಸಾಥಿಗಳವರು. ಅವರಿಲ್ಲದೇ ನೀನುಂಟೇ ? ಅವರಿಲ್ಲದ ನೀನು ನೀರಿನಿಂದ ಬೇರ್ಪಟ್ಟ ಮೀನಿನಂತೆ..

3)ತಾಯಿ ಭಾರತಿಯ ಮಕ್ಕಳೇ ಆದ ನಮ್ಮ ನಮ್ಮೊಳಗೆ ನೂರೆಂಟು ವ್ಯಾಜ್ಯ. ನೀರು, ಗಡಿ, ಗಣಿಯೆಂದು ಹಲ ಹೆಸರಷ್ಟೇ ಅದಕ್ಕೆ. ನಮ್ಮಂತರಾಳದ ಮುನಿಸುಗಳನ್ನು, ಕೊಳೆತು ನಾರುತ್ತಿರುವ ಸಂಬಂಧಗಳನ್ನ ನಾವೇ ಸರಿಪಡಿಸಿಕೊಳ್ಳುವ ಬದಲು ಅದನ್ನು ಜಗಕೇ ಸಾರು ನೂರು ಕೇಸುಗಳು ಬೇಕೇ ? ಹೆತ್ತ ಕುಡಿಗಳು ಈ ರೀತಿ ಕಚ್ಚಾಡುತ್ತಿರುವ ವ್ಯಥೆಗೆ ಹೆತ್ತ ತಾಯ ನಗು ಎಂದೋ ಸುಟ್ಟು ಕರಕಲೆದ್ದು ಹೋಗಿದೆ  

4)ತಾಯಿ ಭಾರತಿಗೆ ಮಕ್ಕಳಿಂದ ಹೆಚ್ಚಿನ ನಿರೀಕ್ಷೆಯಿಲ್ಲ. ಹೊರೆ ಬಂಗಾರವೋ, ಜೇನಿನ ಹೊಳೆಯೋ ಬೇಕಿಲ್ಲ ಆಕೆಗೆ.ಬೇಕಿರುವುದು ಮಕ್ಕಳ ಕೂಡು ಬಾಳ್ವೆಯಷ್ಟೇ. ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ತಪ್ಪು ಮಾಡುತಲಿರುವುದೇ ಜೀವನವೆಂಬಂತೆ ಕ್ಷಮೆ, ಸಹನೆಯನ್ನು ಅಶಕ್ತತೆಯೆಂದು ತಪ್ಪು ತಿಳಿದು ಜೀವ ಕಳೆದುಕೊಳ್ಳುವ ಶಿಶುಪಾಲನಾಗದೇ ತಪ್ಪುಗಳಲೆಡವಿದಾಗ ಪಾಠ ಕಲಿತು ಮುಂದಿನ ಹೆಜ್ಜೆಯ ಸರಿಯಾಗಿ ಇಡುವ ಮಗುವಾಗು ಮನವೇ.ಕ್ಷಮೆಯೇ ತಾಯಲ್ಲವೇ ? ನಾಳೆಯ ನಿನ್ನ ಒಳ್ಳೆಯ ಹೆಜ್ಜೆಗಳ ಮುಂದೆ ನಿನ್ನೆಯ ಕೆಡುಕುಗಳ ಮುನಿಸ ಮರೆತುಬಿಡುತ್ತಾಳೆ ಭಾರತೀ. ಇನ್ನಾದರೂ ಬದಲಾಗೋ ಮನವೇ.ಇಷ್ಟು ದಿನ ಕಚ್ಚಾಡಿದ್ದು ಆಯಿತು. ಇಂದಾದರೂ ನಾವೆಲ್ಲಾ ಒಂದೇ ಎಂದು, ದಿನದಲ್ಲಿ ಕೊಂಚ ವೇಳೆಯನಾದರೂ ದೇಶಕ್ಕಾಗಿ ಆಲೋಚಿಸುವ, ನಾಡ ಏಳಿಗೆಗೆಂದು ಬದುಕಬಯಸುವಂತವನಾಗು ಮನವೇ. . 

Wednesday, January 22, 2014

ಬಿಡುವುದಿನಾ ಆಫೀಸಿಂದ ಲೇಟಾಗಿ ಮನೆಗೆ ಬರುವವನಿಗೆ ಒಂದು ದಿನ ಬೇಗ ಮನೆಗೆ ಬಂದು ಬಿಟ್ರೆ ಎಲ್ಲಿಲ್ಲದ ಚಡಪಡಿಕೆ. ಮನೆಯಲ್ಲಿರುವರ ಮಾತಾಡಿಸುವಿಕೆಗಿಂತ ಆಫೀಸಿನದೇ ಚಿಂತೆ. ಅಲ್ಲಿ ಕೆಲಸವಿದ್ದುದ್ದನ್ನು ಬಿಟ್ಟು ಬಂದುದಕಲ್ಲ, ಏನೂ ಕೆಲಸವಿಲ್ಲದಿದ್ದರೂ ಇದೇ ತರ. ಸಮಸ್ಯೆ ಕೆಲಸದ್ದಲ್ಲ. ಅದಿಲ್ಲದಿದ್ದಾಗ ಇರೋ ಬಿಡುವಿನದು. ದಿನಾ ಶಾಲೆ. ಟ್ಯೂಷನ್ನು, ಹೋಂವರ್ಕು ಅಂತ ಓದಿನಲ್ಲೇ ಮುಳುಗಿ ಹೋಗಿ ಮನೆಗೆ ಬಂದವರನ್ನು ಮಾತಾಡಿಸಲೂ ಬಿಡುವಿಲ್ಲದ ಮಗನಿಗೆ ಓದಿನ ಒಂದು ಹಂತ ದಾಟಿದ ನಂತರ ತೀರಾ ಕಸಿವಿಸಿ. ಮುಂದಿನ ಹಂತ ಏನೆಂದು ನಿರ್ಧರಿತವಾಗಿದ್ದರೂ ಅಲ್ಲಿಯವರೆಗೆ ಕಾಯಲಾಗದ ತಳಮಳ. ಕೆಲ ದಿನಗಳ ರಜೆಯಾದರೂ ಏಕೆ ಬರುತ್ತೋ ಎಂಬ ಶಾಪ. ಸಮಸ್ಯೆ ಶಾಲೆ,ಓದು, ಹೋಂವರ್ಕಿನದಲ್ಲ. ಸಮಸ್ಯೆ ಬಿಡುವಿಗೆ ಒಗ್ಗದ ಮನಸಿನದು. ಗಂಡ ಹೆಸರಾಂತ ಆಟಗಾರ. ಇತ್ತೀಚೆಗಷ್ಟೇ ನಿವೃತ್ತನಾಗಿ ಮನೆ ಸೇರಿದ್ದಾನೆ. ಆ ಧಾರಾವಾಹಿ ಯಾಕೆ ನೋಡುತ್ತೀಯ, ಕಿಟಕಿಗೆ ಈ ಬಣ್ಣದ ಕರ್ಟನ್ ಯಾಕೆ ಅಂತ ಇಷ್ಟು ವರ್ಷಗಳಿಲ್ಲದ ಪ್ರಶ್ನೆ. ದಿನಾ ಸಂಜೆ ಎಲ್ಲಾದರೂ ಹೊರಗಡೆ ಹೋಗೋಣ ಬಾ ಅಂತ ನಿತ್ಯದ ಧಾರಾವಾಹಿ ನೋಡಲೂ ಬಿಡಲ್ಲ ಅನ್ನೋದು ಹೆಂಡತಿಯ ಅಳಲು. ಇಲ್ಲಿ ಮತ್ತೆ ಸಮಸ್ಯೆ  ಬಿಡುವಿನದೇ.ಗಂಡನ ಬಿಡುವು,ಹೆಂಡತಿಯ ಬಿಡುವಿನೊಂದಿಗೆ ಹೊಂದಾಣಿಕೆಯಾಗದುದು.
ಯಾವಾಗಲೂ ಏನಾದರೂ ಕೆಲಸ ಮಾಡ್ತನೇ ಇದ್ದವರಿಗೆ ಒಂದರೆಕ್ಷಣ ಸುಮ್ಮನೆ ಕೂರುವುದೂ ಕಷ್ಟವೇ. ಆದರೆ ತೀರಾ ಕಷ್ಟಪಡುವಾಗ ಅಂದುಕೊಳ್ಳುತ್ತಿದ್ದ ಒಂದು ದಿನ ತಾನೂ ಆರಾಮಾಗಿರಬೇಕೆಂಬ ಆಸೆ ಇದ್ದಕ್ಕಿದ್ದಂತೆ ನೆರವೇರಿ ತಾನೂ ಆರಾಮವಾಗಿರಬಹುದಾದ ದಿನ ಬಂದಾಗ ಆ ಆರಾಮದ ಪರಿಕಲ್ಪನೆಯೇ ಬದಲಾಗಿರುತ್ತದೆ. ವಿರಾಮವೇ ಬೇಸರ ತರಿಸುತ್ತಿರುತ್ತದೆ.

ಬಿ. ಚಂದ್ರಪ್ಪ ಅಂತ ಒಬ್ಬ. ಬಿ. ಅಂದ್ರೆ ಬೊರೆಗೌಡನೋ, ಬೊಮ್ಮನಳ್ಳಿಯೋ, ಬೆಂಗಳೂರೋ ಯಾರಿಗೂ ಗೊತ್ತಿರಲಿಲ್ಲ. ಗೊತ್ತಿಲ್ಲವೆಂದರೆ ಹೇಗೆ ? ಕೇಳಿದರೆ ಹೇಳೋಲ್ಲವೇ ? ಅಯ್ಯೋ, ಯಾರಾದರೂ ಮಾತಾಡಿಸಿದರೆ ಉತ್ತರಿಸುವೆಷ್ಟು ಪುರುಸುತ್ತೆಲ್ಲಿದೆ ಆ ಮನುಷ್ಯನಿಗೆ . ಏನಾದ್ರೂ ಕೇಳಿದ್ರೆ . ಇದು ಅರ್ಜೆಂಟಾ ? ಆಮೇಲೆ ಮಾತಾಡೋಣವಾ ? ನಾ ಸ್ವಲ್ಪ ಬ್ಯುಸಿ ಇದ್ದೀನಿ ಅನ್ನೋ ಉತ್ತರವೇ ಹೆಚ್ಚಿನ ಬಾರಿ ಸಿಗುತ್ತಿತ್ತು. ಮನೆಯಿಂದ ಹೆಂಡತಿ ಬೇಗ ಬನ್ನಿ ಅಂತ ಫೋನ್ ಮಾಡಲಿ, ಮಗ ಅಪ್ಪ ನನ್ನ ಯೂನಿಯನ್ ಡೇ ಇದೆ. ನೆನಪಿದೆ ತಾನೇ ಅಂತ ನೆನಪಿಸಲಿ, ನಾನು ಬ್ಯುಸಿಯಿದ್ದೀನಿ ಕಣೋ.. ಸಾರಿ ಎಂಬ ಉತ್ತರವೇ ಸಿಕ್ಕಿ ಸಿಕ್ಕಿ ಮನೆಯವರಿಂದ ಹಿಡಿದು ಎಲ್ಲರ ಬಾಯಲ್ಲೂ ಇವ ಬಿಸಿ ಚಂದ್ರಪ್ನೋರು ಆಗಿದ್ದ. ಕ್ಷಮಿಸಿ ಆಗಿಬಿಟ್ಟಿದ್ರು !. ಸದಾ ಒಂದಿಲ್ಲೊಂದು ಚಿಂತೆಯ ಚಿತೆಯಲ್ಲಿ ತಮ್ಮನ್ನು ಸುಟ್ಟುಕೊಳ್ಳುತ್ತಾ ಗರಂ ಆಗೇ ಇದ್ದು  ಬಿಸಿ ಚಂದ್ರಪ್ಪನೆನ್ನೋ ಹೆಸರಿಗೆ ಸೂಕ್ತವಾಗೇ ಇದ್ರು ಅವರು.ಈ ಬ್ಯುಸಿ ಚಂದ್ರಪ್ನೋರು ನಿಜವಾಗ್ಲೂ ಏನು ಮಾಡ್ತಿದ್ರು ಅನ್ನೋದ್ನ ಸದ್ಯಕ್ಕೆ ಸ್ವಲ್ಪ ಬದಿಗಿಟ್ಟು ಒಂದು ದಿನ ಏನಾಯ್ತಪ ಅಂತ ನೋಡೋಣವಂತೆ.

ಚಂದ್ರಪ್ಪನವರು ಈಗಿದ್ದ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಮುಗಿಯುತ್ತಾ ಬಂದಿತ್ತು. ಈಗಿರೋ ಪ್ರಾಜೆಕ್ಟಿನ ಮುಗಿಯೋ ದಿನಾಂಕ ಇನ್ನೂ ತಡವಿದ್ದುದರಿಂದ ಹೊಸ ಪ್ರಾಜೆಕ್ಟು ಯಾವಾಗ ಶುರು ಅನ್ನೋದೇ ಗೊತ್ತಿಲ್ಲದ ಅನಿಶ್ಚಿತತೆ ಇದ್ದಿದ್ದರಿಂದ ಇವರ ಸಹೋದ್ಯೋಗಿಗಳೆಲ್ಲಾ ಒಂದೊಂದು ದಿನ ಚಕ್ಕರ್ ಹಾಕ್ತಾ ಇದ್ದರು ಇಲ್ಲಾ ಬೇಗ ಮನೆಗೆ ಹೋಗುತ್ತಿದ್ದರು. ಬಿಸಿ ಚಂದ್ರಪ್ಪನವರು ಕೇಳಿದಾಗ ಶನಿವಾರ, ಭಾನುವಾರ, ಹಗಲು ರಾತ್ರೆಗಳೆನ್ನದೇ ಕೆಲಸ ಮಾಡಿದೀವಲ್ರೀ , ಈಗ ಸ್ವಲ್ಪ ದಿನ ಕುಟುಂಬದ ಜೊತೆ ಕಳೆಯೋಣ ಅಂತಿದೀವಿ. ನೀವೂ ಸ್ವಲ್ಪ ರೆಸ್ಟ್ ತಗೋಳ್ರಿ. ಎಷ್ಟು ಅಂತ ಕೆಲ್ಸ ಮಾಡ್ತೀರಾ ಅಂತ ಬಂದ್ರೆ ಬಿಟ್ಟಿ ಅಡ್ವೈಸ್ ಕೊಡೋಕೆ ಬಂದ್ರು , ಮೈಗಳ್ಳರು ಅಂತ ಅವ್ರ ಮಾತೇ ಕೇಳ್ತಿರಲಿಲ್ಲ ಬಿಸಿ ಚಂದ್ರಪ್ಪ. ಶುಕ್ರವಾರದ ದಿನ. ಕೆಲಸವೂ ಇಲ್ಲದ್ದರಿಂದ ಮೂರು ಘಂಟೆಗೇ ಆಫೀಸು ಫುಲ್ ಖಾಲಿ. ಬಿಸಿ ಚಂದ್ರಪ್ಪನಿಗೆ ಹುಡುಕಿಕೊಂಡು ಮಾಡಲೂ ಏನೂ ಕೆಲಸವಿರಲಿಲ್ಲ. ಮಾತಾಡಲೂ ಯಾರೂ ಜನರಿಲ್ಲ. ಪಕ್ಕನೇ ಯಾರಿಗಾದರೂ ಫೋನ್ ಮಾಡೋಣವಾ ಅನಿಸಿತು. ತನ್ನ ಗೆಳೆಯರೆಲ್ಲಾ ಅರ್ಧರ್ಧ ಘಂಟೆ ಫೋನಲ್ಲಿ ಮಾತಾಡುತ್ತಲೇ ಕಾಲ ಕಳೆಯೋದನ್ನ ಗಮನಿಸಿದ್ದ ಚಂದ್ರಪ್ಪ ತನ್ನ ಮೊಬೈಲು ತಡಕಿದ. ಆಫೀಸು, ಮನೆ, ಕೆಲ ಸಹೋದ್ಯೋಗಿಗಳದ್ದು ಬಿಟ್ಟರೆ ಬೇರೆ ನಂಬರುಗಳೇ ಇರಲಿಲ್ಲ. ಒಂದಿಷ್ಟು ಗೆಳೆಯರ ನಂಬರಿದ್ದರೂ ಹೇಗೆ ಮಾಡೋದೆಂಬ ಸಂಕೋಚ. ಅವರು ಟ್ರಿಪ್ಪು, ಗೆಟ್ ಟುಗೆದರ್, ಮದುವೆ ಹೀಗೆ ಯಾವುದಕ್ಕೆ ಕರೆದರೂ ಹೋಗದೇ ಬಿಸಿಯಾಗಿದ್ದ ತಾನು ಈಗ ಅವರಿಗೆ  ಹೇಗೆ ಫೋನ್ ಮಾಡೋದೆಂಬ ಅಳುಕು. ಬೆಳಿಗ್ಗೆ ಓದಿದ ಅದೇ ಪೇಪರ್ ಮತ್ತೆ ಓದಲು ಬೇಜಾರಾಗಿ ಮನೆಗೆ ಹೊರಟ. ಶುಕ್ರವಾರದ ಟ್ರಾಫಿಕ್ಕು ಒಂದಿಂಚೂ ಚಲಿಸದಂತೆ ನಿಂತು ಬಿಟ್ಟಿತ್ತು. ಕಿಟಕಿ ಬಳಿಯ ಸೀಟು ಸಿಕ್ಕಿದ್ದು  ಯಾವ ಜನ್ಮದ ಪುಣ್ಯವೋ ಎಂದು ಖುಷಿಗೊಂಡಿದ್ದ ಚಂದ್ರಪ್ಪ ಕೆಲವೇ ನಿಮಿಷಗಳಲ್ಲಿ ಕೂತಲ್ಲೇ ನಿದ್ರೆ ಹೋಗಿದ್ದ.


ಅಂತೂ ಮನೆ ಬಂತು. ಕಾಲಿಂಗ್ ಬೆಲ್ ಒತ್ತೇ ಒತ್ತಿದ. ಒಂದು ನಿಮಿಷವಾದರೂ ಯಾರೂ ಬಾಗಿಲು ತೆಗೆಯುತ್ತಿಲ್ಲ. ಒಳಗೇನೋ ಮಾಡ್ತಿದಾರೇನೋ , ಫೋನ್ ಮಾಡಿ ಕರೆಯೋಣ ಅಂತ ಹೆಂಡತಿಯ ಮೊಬೈಲಿಗೆ ಕರೆ ಮಾಡಿದ. ಕೆಲ ರಿಂಗಾಗೋಷ್ಟರಲ್ಲಿ ಆ ಕಡೆಯಿಂದ ಹೆಂಡತಿ ಫೋನ್ ಎತ್ತಿದಳು. ಎಂತದೋ ಭಜನೆಯ ದನಿ. ಅವಳು ಏನು ಮಾತಾಡ್ತಿದಾಳೆ ಅನ್ನೋದೇ ಸ್ಪಷ್ಟವಾಗಿ ಕೇಳ್ತಿರಲಿಲ್ಲ. ಭಜನೆ ಕ್ಲಾಸಲ್ಲಿದೀನಿ ಕಣ್ರಿ. ನೀವು ಬರೋದು ಹೇಗಿದ್ರೂ ಎಂಟು ಘಂಟೆಗಲ್ವಾ, ಅಷ್ಟರೊಳಗೆ ಬರ್ತೀನಿ ಅಂತ ಏನೋ ಅಂದಂತೆ ಅಸ್ಪಷ್ಟವಾಗಿ ಕೇಳಿತು.  ಅಪರೂಪಕ್ಕೆ ಬೇಗ ಮನೆಗೆ ಬಂದ ಗಂಡನನ್ನು ಮಾತಾಡಿಸೋದು ಬಿಟ್ಟು ಎಲ್ಲೋ ಹೋಗಿದಾಳೆ ಅಂತ ಬಿಸಿಯಾದ್ರು ಚಂದ್ರಪ್ಪನೋರು. ಸಿಟ್ಟು ತಣ್ಣಗಾದ ಮೇಲೆ ವಿವೇಕ ಹೇಳಿತು ಚಂದ್ರಪ್ಪಂಗೆ. ನೀನೊಬ್ನೇ ಬ್ಯುಸಿಯಾಗಿರ್ತೀನಿ ಅಂದ್ಕೊಂಡಿದೀಯ . ನನ್ನ ಹೆಂಡತಿಯೂ ಬ್ಯುಸಿಯಾಗಿದಾಳೆ ಅದ್ರಲ್ಲಿ ತಪ್ಪೇನಿದೆ ? ಒಂದಿನವೂ ಸಮಯಕ್ಕೆ ಸರಿಯಾಗಿ ಮನೆಗೆ ಬರದ, ಬರೋ ದಿನವೂ ಫೋನ್ ಮಾಡಿ ಹೇಳದ್ದು ನಿಂದೇ ತಪ್ಪು. ನಿನ್ನ ಇರುವಿಕೆಯ ಬಯಸಿ ಬಯಸಿ ಬೇಸರವಾದ ಅವಳು ಇನ್ನೇನೋ ಮಾರ್ಗ ಕಂಡುಹಿಡ್ಕೊಂಡಿದಾಳೆ ಬೇಸರ ಕಳೆಯೋಕೆ.ಅದ್ರಲ್ಲಿ ತಪ್ಪೇನಿದೆ ಅಂತು. ಹೌದಲ್ವಾ ಅನಿಸಿತು ಚಂದ್ರಪ್ಪಂಗೆ. ಮಗನಾದ್ರೂ ಮನೆಯಲ್ಲಿರಬೇಕೆಂದು ನಿರೀಕ್ಷಿಸಿ  ಫೋನ್ ಮಾಡಿದ. ನಾನು ಫ್ರೆಂಡ್ಸ್ ಜೊತೆ ಪ್ರಾಜೆಕ್ಟಿನ ಅಸೈನುಮೆಂಟಿನಲ್ಲಿ ಬ್ಯುಸಿ ಇದೀನಿ ಡ್ಯಾಡ್. ಆಮೇಲೆ ಮಾಡ್ತೀನಿ ಅಂತ ಚಂದ್ರಪ್ಪ ಮಾತಾಡೋದ್ರೊಳಗೇ ಫೋನ್ ಕಟ್! ಹೋಗಲಿ ಎಂದು ಮಗಳಿಗೆ ಫೋನ್ ಮಾಡಿದ. ಫೋನ್ ಫುಲ್ ರಿಂಗಾದರೂ ಎತ್ತಲಿಲ್ಲ ಅವಳು. ಮೊದಲು ಇವರ ಬಗ್ಗೆ ಸಿಟ್ಟು ಬಂದರೂ ಆಮೇಲೆ ಮೊದಲಿನಂತೆಯೇ ವಿವೇಕ ಉದಯಿಸಿದ ಮೇಲೆ ಸಮಾಧಾನವಾಯ್ತು. ಎಲಾ ಶಿವನೇ ನಾನೊಬ್ನೇ ಎಲ್ಲರಿಗಿಂತ ಬಿಸಿ ಅಂದ್ಕೊಂಡ್ರೆ ಎಲ್ಲಾ ನನಗಿಂತ ಬ್ಯುಸಿ ಆಗಿದ್ದಾರಲ್ಲಾ. ಏನು ಮಾಡೋದು ಅಂತ ತಲೆ ಮೇಲೆ ಕೈಹೊತ್ತು ಕುಳಿತ. ಭಕ್ತಾ ಕರೆದೆಯಾ ಅಂತ ಎಲ್ಲಿಂದಲೋ ದನಿ ಕೇಳಿಸಿತು. ನೋಡಿದರೆ ಯಾರೂ ಕಾಣುತ್ತಿಲ್ಲ. ಆದರೂ ಎಲ್ಲಿಂದಲೋ ದನಿ. ಯಾರು ನೀನು ಅಂದ್ರೆ. ನಾನು ಶಿವ.ಈಗಷ್ಟೆ ಕರೆದೆಯಲ್ಲಾ. ಅದಕ್ಕೇ ನಿನ್ನೆದುರು ಬಂದಿದೀನಿ ಅನ್ನೋ ಉತ್ತರ ಬಂತು. ಎರಡು ಮೂರು ಕೆಲಸಗಳಲ್ಲಿ ಮುಳುಗಿದರೇ ಬ್ಯುಸಿ ಬ್ಯುಸಿಯೆಂದು ಎಲ್ಲರ ಮೇಲೂ ಹರಿಹಾಯೋ ನಾನೆಲ್ಲಿ, ಕೊಟಿ ಕೋಟಿ ಭಕ್ತರ ಮೊರೆ, ಲೋಕದ ಲಯದಂತಹ ಹೊರೆ ಹೊತ್ತಿದ್ರೂ ತಕ್ಷಣ ಸ್ಪಂದಿಸಿದ ಶಿವ ಎಲ್ಲಿ ಅನಿಸಿತು. ಬ್ಯುಸಿ ಬ್ಯುಸಿಯೆಂದು ತಾನು ಇತ್ತೀಚೆಗೆ ಕಳೆದುಕೊಂಡ ಮಗನ ಯೂನಿಯನ್ ಡೇ, ಆಪ್ತ ಗೆಳೆಯನ ಮದುವೆ, ಅಣ್ಣನ ಮಗನ ನಾಮಕರಣ, ತನ್ನದೇ ಮದುವೆಯ ಆನಿವರ್ಸರಿ,ಹೀಗೆ.. ಅನೇಕ ಕ್ಷಣಗಳೆಲ್ಲಾ ನೆನಪಾಗಿ ದು:ಖ ಉಮ್ಮಳಿಸಿ ಬರತೊಡಗಿತು.


ಯಾಕೋ ಭಕ್ತ, ನನ್ನ ಕರೆದು ಅರ್ಧ ಘಂಟೆ ಆಗ್ತಾ ಬಂತು. ಏನೂ ಮಾತಿಲ್ಲದೆ ಅಳುತ್ತಾ ಕೂತಿದ್ದೀಯಲ್ಲೋ ಅನ್ನೋ ದನಿ ಕೇಳಿತು. ಅರ್ಧ ಘಂಟೆಯೇ ? ನಿನ್ನ ಅಮೂಲ್ಯ ಸಮಯ ಹಾಳು ಮಾಡಿದೆನೆಲ್ಲೋ ಶಿವನೇ. ಎಷ್ಟು ಬ್ಯುಸಿಯಿದ್ದೆಯೇನೋ ನೀನು ಅಂದ ಚಂದ್ರಪ್ಪ. ಬ್ಯುಸಿಯಾ ? ಅದೇನದು ಅಂದ ಶಿವ. ಬ್ಯುಸಿ ಅಂದರೆ ಬಿಡುವಿಲ್ಲದೇ ಇರುವುದು ಅಂದ ಚಂದ್ರಪ್ಪ. ಓ ಅದಾ? ಅದು ನಂಗೆ ಗೊತ್ತಿಲ್ಲಪ್ಪ ಅಂದ ಶಿವ. ಓ, ಹೌದಾ ? ಇಷ್ಟು ಫ್ರೀ ಹೇಗೆ ಮಾಡ್ಕೋತೀಯ ನೀನು ಅಂದ ಚಂದ್ರಪ್ಪ. ಈ ಬ್ಯುಸಿ, ಫ್ರೀ ಮಾಡ್ಕೋಳ್ಳೋದು ಇದೆಲ್ಲಾ ನಂಗೆ ಗೊತ್ತಿಲ್ಲಪ್ಪ. ಇದನ್ನೇನಿದ್ದರೂ ಮಹಾವಿಷ್ಣುವಿಗೆ ಕೇಳು ಅಂದ, ವಿಷ್ಣುವಿಗೆ ದುಷ್ಟರಕ್ಷಣೆ, ಶಿಷ್ಟ ರಕ್ಷಣೆಯೇ ಕೆಲಸ. ಸಮಸ್ತ ಲೋಕ ಕಲ್ಯಾಣದಲ್ಲಿ ನಿರತನಾಗಿರೋ ಆತ ತನ್ನ ಮೊರೆಗೆಲ್ಲಿ ಪ್ರತ್ಯಕ್ಷನಾಗುತ್ತಾನೋ ಎಂದುಕೊಳ್ಳುವಷ್ಟರಲ್ಲೇ ಭಕ್ತಾ ನೆನೆದೆಯಾ ನನ್ನ ಅನ್ನೋ ಮತ್ತೊಂದು ದನಿ ಕೇಳಿಸಿತು. ನಿನ್ನೆಲ್ಲಾ ಕೆಲಸಗಳ ಮಧ್ಯೆಯೂ ನನ್ನ ಮೊರೆ ಕೇಳಿ ಕ್ಷಣದಲ್ಲೇ ಓಡಿಬಂದೆಯಾ ಹರಿಯೇ ? ನೀನು ಇಷ್ಟು ಫ್ರೀ ಹೇಗೆ, ಅಷ್ಟು ಕೆಲಸವಿದ್ದರೂ ಫ್ರೀ ಮಾಡ್ಕೋಳ್ಲೋದು ಹೇಗೆ ? ಇರೋ ಒಂದು ಕೆಲಸದಲ್ಲೇ ಮುಳುಗಿಹೋಗೋ ನಾನು ಮಡದಿ ಮಕ್ಕಳನ್ನೇ ಮಾತಾಡಿಸಲಾಗೋದಿಲ್ಲ ಅಂದ ಚಂದ್ರಪ್ಪ. ಬ್ರಹ್ಮ ಪ್ರಜಾಪಿತನಷ್ಟು ಕೆಲಸ ನನಗಿಲ್ಲ ಭಕ್ತಾ. ನಿನ್ನ ಪ್ರಶ್ನೆಗೆ ಅವನೇ ಉತ್ತರಿಸಿಯಾನು ಅವನನ್ನೇ ಕರೆ ಅಂತು ಎರಡನೇ ದನಿ. ಜಗದ ಪ್ರತಿಯೊಬ್ಬರ ಹಣೆಬರಹ ಬರೆಯೋದರಲ್ಲಿ ಅರೆಕ್ಷಣವೂ ವಿಶ್ರಮಿಸದ ಬ್ರಹ್ಮ ನನ್ನ ಕರೆಗೆ ಓಗೋಡೋದು ಅಸಾಧ್ಯದ ಮಾತೇ ಸರಿ ಅಂತ ಚಂದ್ರಪ್ಪ ಅಂದುಕೊಳ್ತಿರಬೇಕಾದ್ರೇ ಕರೆದೆಯಾ ಭಕ್ತಾ ಅನ್ನೋ ಮೂರನೇ ದನಿ ಕೇಳಿತು. ನೀನು ಬ್ಯುಸಿಯಿಲ್ಲವೇ ಬ್ರಹ್ಮ ಎಂದು ಬಿಟ್ಟ ಬಾಯಿ ಬಿಟ್ಟಂತೆ ತೆರೆದ ಕಣ್ಣುಗಳನ್ನು ಇನ್ನೂ ಅಗಲಗೊಳಿಸುತ್ತಾ ದಿರ್ಭಮೆಯಿಂದ ಕೇಳಿದ ಚಂದ್ರಪ್ಪ. ಬ್ರಹ್ಮ ನಸುನಗುತ್ತಾ ಹೇಳಿದ. ಭಕ್ತಾ. ಜಗದಲ್ಲಿ ಬಿಡುವಿಲ್ಲದವರು ಯಾರಪ್ಪಾ ಇದ್ದಾರೆ ? ತನ್ನ ರಥವೇರಿ ಜಗಕ್ಕೇ ಶಕ್ತಿಯುಣಿಸುತ್ತಾ ಸಾಗೋ ಸೂರ್ಯನಿಗೂ ಒಂದು ದಿನದ ಅವಿರತ ಪಯಣದ ನಂತರ ಒಂದು ರಾತ್ರಿಯ ವಿಶ್ರಾಂತಿ. ಅಸಂಖ್ಯ ತಾರೆಗಳ ತೋಟದ ಮಾಲಿ ಚಂದ್ರನಿಗೂ ರಾತ್ರಿ ಪಾಳಿಯ ನಂತರ ಹಗಲೆಲ್ಲಾ ವಿಶ್ರಾಂತಿ. ಕೊಚ್ಚಿ ಹರಿವ ಹೊಳೆಗೂ ಚಳಿಗಾಲದಲ್ಲಿ ಮರಗಟ್ಟಿ ವಿಶ್ರಾಂತಿ. ಪ್ರಾಣಿ, ಪಕ್ಷಿ, ಜಲಚರ, ಸಸ್ಯ, ಮನುಜರಿಗೂ ಬಿಡುವೆಂಬುದು ಇದ್ದೇ ಇದೆ ನನ್ನ ಸೃಷ್ಟಿಯಲ್ಲಿ. ಬಿಡುವಿನಿಂದಲೇ ಸೃಷ್ಟಿಸಿದ್ದೇನೆ ನಿನ್ನನ್ನ. ನಿನಗೊಪ್ಪುವ ಸುಖದ ಸಂಸಾರವನ್ನ ಅಂತ ವಿರಮಿಸಿತು ಆ ದನಿ. ವಾಗ್ಝರಿಯ ನಡುವೆ ಒಂದು ಬಿಡುವು ತೆಗೆದುಕೊಳ್ಳುತ್ತಾ.

ಹೌದಲ್ಲಾ ಅನಿಸಿತು ಚಂದ್ರಪ್ಪನಿಗೆ. ಎಲ್ಲಕ್ಕೂ ಅದರದ್ದೇ ಆದ ಸಮಯವಿದೆ. ಆಫೀಸಷ್ಟೇ ತನ್ನ ಬದುಕಲ್ಲ. ಅದಾದ ನಂತರ ತನ್ನದೇ ಆದ ಸಂಸಾರವಿದೆ. ಎಲ್ಲರೊಳಗೊಂದಾಗಿ ಇರೋ ಬದಲು ತಾನೇ ಎಲ್ಲಾ ಮಾಡಬೇಕೆಂಬ ಹಮ್ಮು ಯಾಕೆ ? ಬಿಡುವು ಎಂಬುದು ಎಲ್ಲಿಂದಲೋ ಬರುವುದಲ್ಲ. ನಾವು ಇರುವುದಕ್ಕೆ ಕೊಡೋ ಪ್ರಾಮುಖ್ಯತೆಗಳೇ ಬಿಡುವನ್ನು ಸೃಷ್ಠಿಸುತ್ತದೆ ಅಂತ ಎಲ್ಲೋ ಓದಿದ ನೆನಪಾಯ್ತು. ಇನ್ನಾದರೂ ಬ್ಯುಸಿ ಅನ್ನೋದನ್ನ ತನ್ನ ಕಡತದಿಂದ ಹೊರಹಾಕಿ ಎಲ್ಲರಿಗಾಗಿ , ಎಲ್ಲರೊಂದಿಗೆ ಬಾಳಬೇಕು ಎಂದು ನಿರ್ಧರಿಸಿದ..ತಥಾಸ್ತು ಅಂದತಾಯಿತು ಮೂರು ದನಿಗಳು. ಒಮ್ಮೆಲೇ ಭೂಕಂಪವಾದಂತೆ ಆಗಿ ಆಯ ತಪ್ಪಿ ಮುಂದಕ್ಕೆ ವಾಲಿದ. ಹಣೆ ಎದುರಿಗಿದ್ದ ಸೀಟಿಗೆ ಹೊಡೆದಿತ್ತು. ಕಣ್ಣು ಬಿಟ್ಟಿತ್ತು. ನೋಡಿದರೆ ತಾನು ಇಳಿಯಬೇಕಾದ ಸ್ಟಾಪು ಬಂದು ಬಿಟ್ಟಿದೆ. ಗಡಬಡಿಸಿ ಎದ್ದು ಮನೆಗೆ ಸಾಗಿದ. ಇಷ್ಟು ಹೊತ್ತು ನಡೆದಿದ್ದು ಕನಸೋ ನನಸೋ ಎನ್ನೋ ಆಲೋಚನೆಯಲ್ಲಿದ್ದಾಗಲೇ ಮನೆ ತಲುಪಿಬಿಟ್ಟಿದ್ದ. ಎಲ್ಲೋ ಸೈಕಲ್ ಹತ್ತಿ ಹೊರಟಿದ್ದ ಮಗ ಹಾಯ್ ಡ್ಯಾಡ್ ಅಂತ ಇವನನ್ನು ನೋಡಿ ಖುಷಿಯಿಂದ ಮನೆಗೆ ವಾಪಾಸಾಗಿದ್ದ. ಅಪ್ಪ ಬಂದ್ರು  ,ಮಮ್ಮಿ ಪಪ್ಪ ಬಂದ್ರು ಅಂತ ಮಹಡಿಯ ಮೇಲಿಂದ ಅಪ್ಪ, ತಮ್ಮ ಬರೋದ್ನ ನೋಡಿದ್ದ ಮಗಳೂ ಕೆಳಗೆ ಓಡಿಬಂದಿದ್ಲು. ಮಗಳ ಗಲಾಟೆ ಕೇಳಿ ಹೌದೋ ಅಲ್ವೋ ಅನ್ನೋ ಆಶ್ಚರ್ಯದಲ್ಲೇ ಬಾಗಿಲು ತೆಗೆಯೋಕೆ ಬಂದ್ಲು. ಚಂದ್ರಪ್ಪ ಕಾಲಿಂಗ್ ಬೆಲ್ ಒತ್ತೋದಕ್ಕೂ ಅವನ ಮಡದಿ ಬಾಗಿಲು ತೆಗೆಯೋದಕ್ಕೂ ಸರಿ ಹೋಯ್ತು. ಬೇಗ ಮನೆಗೆ ಬಂದಿದ್ದು ಒಂದು ಅಚ್ಚರಿಯಾದರೆ ದಿಢೀರನೆ ಬದಲಾದ ವರ್ತನೆ ಇನ್ನೊಂದು ಬಗೆಯ ಅಚ್ಚರಿ. ಅಂತೂ ಎಲ್ಲೋ  ಕಳೆದುಹೋದ ಅಪ್ಪ, ಗಂಡ ಮರಳಿ ಸಿಕ್ಕಿದ್ದಕ್ಕೆ ಎಲ್ಲಾ ಖುಷಿಯಾಗಿದ್ದರು..ಈ ಸಡನ್ ಬದಲಾವಣೆಗೆ ಕಾರಣ ಏನು ಅಂತ ಯಾರೂ ಬಿಸಿ ಚಂದ್ರಪ್ಪನ್ನ ಆಮೇಲೂ ಕೇಳಲೇ ಇಲ್ಲ. ಏಕೆಂದರೆ ಬಿಸಿ ಚಂದ್ರಪ್ಪ ಕರಗಿಹೋಗಿದ್ದ. ಅವನ ಬದಲಾವಣೆಗೆ ಕಾರಣವಾಗಿದ್ದ ಮೂರು ದನಿಗಳು ನಗ್ತಾ ಇದ್ದವು. ನಮ್ಮ ನಿಮ್ಮೊಳಗೂ ಇರಬಹುದಾದ ಈ ತರದ ಇನ್ನೊಂದು ಬಿಸಿ ಚಂದ್ರಪ್ಪನ ಹುಡುಕಿ ಅವನನ್ನು ಸರಿ ದಾರಿಗೆ ತರೋ ಯೋಚನೆಯಲ್ಲಿದ್ದವು.

Wednesday, January 15, 2014

ಸಂಕ್ರಾಂತಿ

ಸಂಕ್ರಾಂತಿ ಬಂತು ಅಂದ್ರೆ ಮಕ್ಕಳಿಗೆಲ್ಲಾ ಖುಷಿಯೋ ಖುಷಿ.ಶಾಲೆಗೆ ರಜಾ ಅನ್ನೋದಕ್ಕಿಂತಲೂ ಹೊಸ ಬಟ್ಟೆ ತೊಟ್ಟು ಎಳ್ಳು-ಬೆಲ್ಲ, ಕಬ್ಬು-ಸಕ್ಕರೆ ಅಚ್ಚು ತಗೊಂಡು ಮನೆ ಮನೆಗೆ ಎಳ್ಳು ಬೀರೋಕೆ ಹೋಗೋದೇ ಹೆಚ್ಚು ಖುಷಿ.ಹೊಸ ಲಂಗ ಧಾವಣಿ ತೊಟ್ಟ ಹುಡುಗಿಯರೇ ಈ ಎಳ್ಳು ಬೀರೋದ್ರಲ್ಲಿ ಹೆಚ್ಚಿದ್ರೂ ಅಕ್ಕನ ಜೊತೆ ಹೊರಟ ತಮ್ಮ, ಮನೆಯಲ್ಲಿ ಮಗ-ಮಗಳು ಎಲ್ಲಾ ತಾನೇ ಆಗಿರೋ ಮಾಣಿ.. ಹೀಗೆ ಹುಡುಗರೂ ಖುಷಿ ಖುಷಿಯಾಗಿ ಕಾಣ್ತಿರುತ್ತಾರೆ. ಭಾರತೀಯ ಹಬ್ಬಗಳೆಲ್ಲಾ ಚಾಂದ್ರಮಾನವಾದರೂ ಪ್ರತಿವರ್ಷ ಜನವರಿ ಹದಿನಾಲ್ಕಕ್ಕೇ ಸಂಕ್ರಾಂತಿ ಯಾಕೆ ಬರುತ್ತೆ ಅನ್ನೋದು ಸಣ್ಣವರಿದ್ದಾಗ ನಮಗೆಲ್ಲಾ ಬರುತ್ತಿದ್ದ ಸಂದೇಹ! ಎಳ್ಳು ಬೆಲ್ಲ ಹಂಚೋಕೆ ಹೋದಾಗ ಆ ಮನೆಯವರು ಕೊಟ್ಟ  ಸಕ್ಕರೆ ಅಚ್ಚಿನ ತರ ತರದ ಆಕಾರಗಳು ಬಾಯಲ್ಲಿ ನೀರೂರಿಸಿ ಹಬ್ಬ ಮುಗಿದ ಒಂದು ವಾರದವರೆಗೂ ಸಂಭ್ರಮ ಮುಂದುವರೆಸುತ್ತಿದ್ದವು.


ಹುಗ್ಗಿ ಅಥವಾ ಖಾರ ಪೊಂಗಲ್, ಸಿಹಿ ಪೊಂಗಲ್  ಮಾಡಿ, ಮನೆ ಎದುರು ದೊಡ್ಡ ದೊಡ್ಡ ರಂಗೋಲಿ ಹಾಕಿ ಕೆಲವರು ಸಂಭ್ರಮಿಸಿದ್ರೆ ಗಾಳಿಪಟ ಹಾರಿಸೋದು ಕೆಲ ಕಡೆಯ ಸಂಭ್ರಮ. ಗುಜರಾತ್, ಹೈದರಾಬಾದಿನ ಬೀದಿ, ಮೈದಾನಗಳಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ಗಾಳಿಪಟಗಳು. ಬಣ್ಣದ ಕಾಗದ, ಗಾಳಿಪಟ, ಹಗ್ಗ ಮಾರುವವರು ಅಂದು ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ತಮಿಳ್ನಾಡಲ್ಲಿ ಪೊಂಗಲ್ಲಾದರೆ ಗುಜರಾತು ರಾಜಸ್ಥಾನಗಳಲ್ಲಿ ಉತ್ತರಾಯಣಂ. ಹಯ್ರಾಣದಲ್ಲಿ ಮಾಘಿಯಾದರೆ ಪಂಜಾಬಲ್ಲಿ ಲೊಹ್ರಿ. ಜಮ್ಮು ಕಾಶ್ಮೀರದಲ್ಲಿ ಶಿಶುರ್ ಸೇಂಕ್ರಾಂತಾದರೆ ಉತ್ತರ ಪ್ರದೇಶದಲ್ಲಿ ಖಿಚಡಿ ಅಂತ ಕರೀತಾರಂತೆ ಈ ಹಬ್ಬಕ್ಕೆ ! ಖಿಚಡಿ ಅಂದಾಕ್ಷಣ  ಅಕ್ಕಿ, ಬೇಳೆ, ತಿಂಡಿ ನೆನ್ಪಾಯ್ತಾ ? ಹೂಂ.ಈ ಸಂಕ್ರಾಂತಿಗೂ ನಮ್ಮ ಹೊಟ್ಟೆ ತುಂಬಿಸೋ ಹೊಲಗಳಿಗೂ  ಹತ್ತಿರದ ಸಂಬಂಧವೇ. ಫಸಲಿನ ಕಟಾವು ಮಾಡೋ "ಸುಗ್ಗಿ ಹಬ್ಬ" ಬರೋದು ಇದೇ ಸಂದರ್ಭದಲ್ಲಿ. ಉಳುಮೆಗೆ ಸಹಾಯ ಮಾಡಿ ನಮ್ಮ ಸಂಸಾರ ನೊಗ ಹೊರ್ತಾ ಇರೋ ಎತ್ತುಗಳನ್ನು ಪೂಜಿಸಿ ಕೆಂಡಗಳ ಮೇಲೆ ಓಡಿಸೋ "ಕಿಚ್ಚು ಹಾಯಿಸೋದು" ನಡೆಯೋದೂ ಇದೇ ಸಂದರ್ಭ. ನೆರೆಯ ನೇಪಾಳದಲ್ಲಿ ಮಾಘೆ, ಶ್ರೀಲಂಕಾದಲ್ಲಿ ಉಳಾವರ್ ತಿರುನಾಳ್ ಅಂತ ಕರೆಸಿಕೊಳ್ಳೋ ಸಂಕ್ರಾಂತಿಯ ಆಚರಣೆ ಅಷ್ಟಕ್ಕೇ ಸೀಮಿತಗೊಳ್ಳದೇ ಏಶಿಯಾದ ಇತರ ಹಲವು ರಾಷ್ಟ್ರಗಳಿಗೂ ಹಬ್ಬಿದೆಯಂತೆ. ಥಾಯಲ್ಯಾಂಡಲ್ಲಿ ಸೊಂಗ್ ಕ್ರಾನ್, ಕಂಬೋಡಿಯಾದಲ್ಲಿ ಮೊಹಾ ಸಂಗ್ರಾಮ್, ಸ್ಲಾವೋಸಲ್ಲಿ ಪಿ ಮಾ ಲಾವೋ, ಮಯನ್ಮಾರಲ್ಲಿ ತಿಂಗ್ಯಾನ್ ಅನ್ನೋ ನಾನಾ ನಾಮಗಳು, ಬಗೆ ಬಗೆಯ ಸಂಭ್ರಮ ಇದಕ್ಕೆ.


ಸಂಕ್ರಾಂತಿ ಅಂದರೆ ಹನ್ನೆರಡು ರಾಶಿಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಸೂರ್ಯನ ಚಲನೆ ಎಂಬ ಅರ್ಥವಿದೆ. ಅಂದರೆ ಹನ್ನೆರಡು ಸಂಕ್ರಾಂತಿಗಳಾಯಿತಲ್ಲವೇ ? ಹೌದು. ಸೌರಮಾನ ಪಂಚಾಂಗದ ಪ್ರಕಾರ ಸಂಕ್ರಾಂತಿಯೆಂಬುದು ಪ್ರತೀ ಮಾಸದ ಮೊದಲ ದಿನ. ಅದೇ ರೀತಿ ಸೂರ್ಯ ಮಕರ ರಾಶಿಗೆ ಕಾಲಿಡೋ ದಿನವೇ ಮಕರ ಸಂಕ್ರಾಂತಿ. ಮಕರ ರಾಶಿಯ ಅಧಿಪತಿ ಶನಿ.ಜಗದ ಎಲ್ಲಾ ಶಕ್ತಿಮೂಲ ಸೂರ್ಯ ತನ್ನ ಮಗನಾದ ಶನಿಯ ಮನೆಗೆ ವರ್ಷಕ್ಕೊಮ್ಮೆ ಮಾತ್ರ ಹೋಗುತ್ತಾನಂತೆ. ಆ ದಿನವೇ ಮಕರ ಸಂಕ್ರಾಂತಿ ಎಂದೂ ಪ್ರತೀತಿಯಿದೆ. ಮಕರ ಸಂಕ್ರಾಂತಿಯಿರುವಂತೆಯೇ ಹಿಂದೂ ಸೌರಮಾನ ಕ್ಯಾಲೆಂಡರಿನ ಮೊದಲ ದಿನವೆಂದು ಆಚರಿಸಿಕೊಳ್ಳುವ ಮಹಾ ವಿಷ್ಣು ಸಂಕ್ರಾಂತಿ (ಏಪ್ರಿಲ್ ೧೪), ಧನು ಸಂಕ್ರಾಂತಿ(ಚಾಂದ್ರಮಾನದ ಪುಷ್ಯ ಮಾಸದ ಮೊದಲ ದಿನ) ಅನ್ನೋ ಆಚರಣೆಗಳು ಭಾರತದ ಕೆಲವು ಭಾಗಗಳಲ್ಲಿ ಇದ್ದರೂ ನಮಗೆಲ್ಲಾ ಸಂಕ್ರಾಂತಿಯೆಂದರೆ ಜನವರಿ ೧೪ರ ಸಂಕ್ರಾಂತಿಯೇ ನೆನಪಾಗೋದು. ಈ ಸಂಕ್ರಾಂತಿಯಿಂದ ಉತ್ತರಾಯಣ ಪುಣ್ಯ ಕಾಲ ಪ್ರಾರಂಭ.ಮಕರ ಸಂಕ್ರಾತಿಯಿಂದ ಜೂನ್ ೨೧ಕ್ಕೆ ಬರೋ ಕರ್ಕ ಸಂಕ್ರಾಂತಿಯವರೆಗಿನ ಆರು ತಿಂಗಳ ಕಾಲವೇ ಉತ್ತರಾಯಣ. ಅಯಣ ಎಂದರೆ ಚಲನೆ ಎಂದರ್ಥ. ಉತ್ತರಾಯಣ ಎಂದರೆ ಸೂರ್ಯನ ಉತ್ತರ ದಿಕ್ಕಿನ ಚಲನೆ ಎನ್ನಬಹುದು. ಈ ಉತ್ತರಾಯಣ ಎನ್ನೋದು ದೇವರ ಒಂದು ದಿನ, ಕರ್ಕ ಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗೆ ಬರೋ ದಕ್ಷಿಣಾಯಣ ದೇವರ ಒಂದು ರಾತ್ರಿ ಎಂಬ ನಂಬಿಕೆಯೂ ಇದೆ. ಉತ್ತರಾಯಣ ಅಂದಾಗ ನೆನಪಾಗೋದು ಮಹಾಭಾರತದ ಭೀಷ್ಮ ಪಿತಾಮಹ. ಶರಶಯ್ಯೆಯಲ್ಲೇ ಮಲಗಿದ್ದರೂ ಉತ್ತರಾಯಣದಲ್ಲೇ ಮರಣಹೊಂದಬೇಕೆಂದು ಭೀಷ್ಮ ಪಿತಾಮಹ ಕಾದಿದ್ದನಂತೆ. ಉತ್ತರಾಯಣದಲ್ಲಿ ಮರಣ ಹೊಂದಿದರೆ ಸದ್ಗತಿಯ ಪ್ರಾಪ್ತಿಯೆಂಬುದು ಅನೇಕರ ನಂಬಿಕೆ.

ಈ ಸಂದರ್ಭದಲ್ಲಿ ಸಂಕ್ರಾಂತಿಯ ಬಗ್ಗೆ ಅಮ್ಮ ಹೇಳ್ತಿದ್ದ ಮಾತು ನೆನಪಾಗುತ್ತೆ. ಸಂಕ್ರಾಂತಿ ಬರೋದು ಚಳಿಗಾಲದಲ್ಲಿ..ಚರ್ಮ ಚಳಿಗೆ ಒಣಗುತ್ತಿರೋ ಸಮಯದಲ್ಲಿ ದೇಹಕ್ಕೆ ಎಣ್ಣೆಯ ಅಂಶದ ಅವಶ್ಯಕತೆ ಇರತ್ತೆ. ಎಳ್ಳಿಗಿಂತ ಹೆಚ್ಚು ಎಣ್ಣೆಯಿರೋ ವಸ್ತು ಬೇಕೇ ? ಅದೇ ರೀತಿ ಕಬ್ಬಿಣದ ಅಂಶ ಹೆಚ್ಚಿರೋ ಬೆಲ್ಲ, ಅದರ ಹೆತ್ತವ್ವ ಕಬ್ಬು, ಮತ್ತೆ ಎಣ್ಣೆಯೊದಗಿಸುವ ಕಡಲೆ .. ಹೀಗೆ ನಮ್ಮ ಸಂಕ್ರಾಂತಿ ಆಚರಣೆ ಹಿಂದೆ ನಮ್ಮ ಹಿರಿಯರ ಎಷ್ಟೆಲ್ಲಾ ಮುಂದಾಲೋಚನೆಗಳು ಅಡಗಿದೆ ಅಂತ.


ನಮ್ಮಲ್ಲಿನ ಹಬ್ಬದ ಪರಿಪಾಟ ಹೇಗೂ ನಮಗೆ ಗೊತ್ತೇ ಇರತ್ತೆ.. ಆದರೆ ಈ ಸಲ ಭಾರತದ ಬೇರೆ ಬೇರೆ ಭಾಗದ ಸ್ನೇಹಿತರು ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಅನ್ನೋ ಮಾಹಿತಿ ಕಲೆ ಹಾಕೋ ಯೋಚನೆ ಮೂಡಿತು. ಅದರಲ್ಲಿ ಕೆಲವರಿಗೆ ಕಳಿಸಿದ ಸಂದೇಶಗಳಿಗೆ ಸಿಕ್ಕ ಉತ್ತರಗಳು.. ನಿಮ್ಮ ಮುಂದೆ. ಇಷ್ಟವಾಗಬಹುದೆಂಬ ನಿರೀಕ್ಷೆಯಲ್ಲಿ. ದೆಲ್ಲಿಯ ಗೆಳೆಯನ ಪಾಲಿಗೆ ಸಂಕ್ರಮಣವೆಂದರೆ ಲಾಡು ಹಬ್ಬವಂತೆ ! ಲಾಡು ತಿನ್ನೋದ್ರ ಜೊತೆಗೆ ಗಾಳಿಪಟ ಹಾರಿಸೋದು ಇನ್ನೊಂದು ಖುಷಿಯಂತೆ ಅಲ್ಲಿ. ಮತ್ತೊಬ್ಬ ಉತ್ತರಪ್ರದೇಶದ ಗೆಳೆಯನ ಪ್ರಕಾರ ಅಲ್ಲಿ ಈ ಸಂದರ್ಭದಂತೆಯೇ ನವರಾತ್ರಿಯ ಪಂಚಮಿಯಂದೂ ಗಾಳಿಪಟ ಹಾರಿಸುತ್ತಾರಂತೆ. ಬೆಂಗಾಲಿ ಗೆಳೆಯನಿಗೆ ಹಾಲು, ಅಕ್ಕಿ, ಬೆಲ್ಲ ಹಾಕಿ ತಯಾರಿಸಿದ ಪೀಥಾ ಅನ್ನೋ ಸ್ವೀಟೇ ಸಂಕ್ರಾಂತಿ ಸಂಭ್ರಮಬೆಂಗಳೂರಿನ ಗವಿಪುರದಲ್ಲಿನ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳೋ ವರ್ಷದ ಏಕಮಾತ್ರ ದಿನವೂ ಸಂಕ್ರಾಂತಿಯೇ. ಆಗಿನವರ ವೈಜ್ನಾನಿಕ ಪ್ರಜ್ನೆ ಹೆಮ್ಮೆ ತರುತ್ತದೆ.

ನಮ್ಮಲ್ಲಿ ಒಂದು ದಿನದ ಆಚರಣೆಯ ಈ ಹಬ್ಬದ ಆಚರಣೆ ನೆರೆಯ ಆಂಧ್ರದಲ್ಲಿ ನಾಲ್ಕು ದಿನ ನಡೆಯುತ್ತದೆಯಂತೆ.ಮೊದಲ ದಿನ ಮನೆ, ಮನದಲ್ಲಿರೋ ಹಳೆಯ , ನಿರುಪಯೋಗಿ ವಸ್ತುಗಳನ್ನ ಹೊರಹಾಕೋ "ಭೋಗಿ" ಹಬ್ಬ. ಸಂಜೆಯ ಹೊತ್ತಿಗೆ ಊರ ಹೊರಗೆ ಒಂದು ಕಡೆ ಬೆಂಕಿ ಹಾಕಿ ಮನೆಯಲ್ಲಿರೋ ನಿರುಪಯುಕ್ತ ಮರದ ವಸ್ತುಗಳನ್ನ ಸುಡೋ ಪದ್ದತಿಯೂ ಇದೆಯಂತೆ ಕೆಲಕಡೆ. ಮನೆ ಮನಗಳಲ್ಲಿರೋ ರಾಕ್ಷಸತ್ವವನ್ನು ಸುಟ್ಟು, ಸದ್ಭಾವನೆಗಳಿಗೆ, ಮನುಷ್ಯತ್ವಕ್ಕೆ ಜಾಗ ಮಾಡಿ ಕೊಡೋ ಸದುದ್ದೇಶ ಅಡಗಿರಬಹುದು ಅದರ ಹಿಂದೆ. ಎರಡನೇ ದಿನ ಮಕರ ಸಂಕ್ರಾಂತಿ. ಮಕರ ಸಂಕ್ರಾಂತಿ ಅಂದ್ರೆ ಕೇರಳದ ಶಬರಿಮಲೆಯ ಮಕರ ಸಂಕ್ರಮಣದ ಆಚರಣೆ ಮತ್ತು ಸಂಜೆಯ ಮಕರ ಜ್ಯೋತಿಯ ನೆನಪೂ ಆಗುತ್ತದೆ. ಮತ್ತೆ ಆಂಧ್ರದ ಸಂಕ್ರಾತಿಯ ಕತೆಗೆ ಹೊರಳಿದರೆ ಎರಡನೇ ದಿನದ ಸಂಕ್ರಾಂತಿಯನ್ನು ಪೆದ್ದ ಪಂಡುಗ(ದೊಡ್ಡ ಹಬ್ಬ) ಅಂತ ಕರೆಯುತ್ತಾರಂತೆ ಅಲ್ಲಿ. ಗತಿಸಿದ ಪೂರ್ವಜರಿಗೆಲ್ಲಾ ನಮಿಸೋ ಪುಣ್ಯ ದಿನ ಅಂದು. ಮೂರನೇ ದಿನವನ್ನು "ಕನುಮ" ಎಂದು ಹೊಸ ಬಟ್ಟೆ ತೊಟ್ಟ ಹೆಣ್ಣು ಮಕ್ಕಳು ಗೋಪೂಜೆ, ಹಕ್ಕಿ ಪಕ್ಷಿ, ಪ್ರಾಣಿ, ಮೀನುಗಳಿಗೆ ಅನ್ನವಿಕ್ಕೋದ್ರಲ್ಲಿ ತೊಡಗುತ್ತಾರಂತೆ. ನಾಲ್ಕನೇ ದಿನ "ಮುಕ್ಕನುಮ" ಮಾಂಸಾಹಾರಿಗಳ ಸುಗ್ಗಿ.ಮೊದಲ ಮೂರು ದಿನ ಮಾಂಸ ತಿನ್ನದ ಅವರಿಗೆ ನಾಲ್ಕನೆಯ ದಿನ ಹಬ್ಬವೋ ಹಬ್ಬ.

ಭಾರತದಲ್ಲಿ ರಾಜ್ಯ, ಭಾಷೆಗಳ ವೈವಿಧ್ಯತೆ ಎಷ್ಟಿದೆಯೋ ಅದೇ ತರ ಸಂಕ್ರಾಂತಿ ಆಚರಣೆಯಲ್ಲೂ ಇದೆ. ಗುಜರಾತಲ್ಲಿ ಮೊದಲ ದಿನ ಉತ್ತರಾಯಣ, ಎರಡನೆಯ ದಿನ ವಸಿ ಉತ್ತರಾಯಣ ಅಂತ ಆಚರಿಸಿದರೆ ಅಸ್ಸಾಮಿನ ಬಿಹುವಿನದು ಒಂದು ವಾರದ ಆಚರಣೆ ! ಗೂಳಿ ಕಾಳಗ, ಕೋಳಿ ಕುಸ್ತಿ, ಹಲ ತರ ವಾದ್ಯಗಳ ನುಡಿಸೋದು.. ಹೀಗೆ ಆಚರಣೆಯ ಪರಿಯೇ ಬೇರೆ. ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ.. ಹೀಗೆ ಹಲವು ಪ್ರದೇಶಗಳ ಸ್ನೇಹಿತರನ್ನು ಕೇಳುತ್ತಾ, ಅಲ್ಲಿನ ಸಂಕ್ರಾಂತಿ ಆಚರಣೆಯ ಪರಿ ದಾಖಲಿಸುತ್ತಾ ಹೋದರೆ ಒಂದು ಪುಟ ಖಂಡಿತಾ ಸಾಕಾಗೊಲ್ಲ..ಮನೆ ಮನಗಳನ್ನು ಒಂದುಗೂಡಿಸೋ ಈ ಹಬ್ಬ ಹದಿನೈದಕ್ಕೇ ಬರುತ್ತೆ ಅನ್ನೋದು ಸಾಮಾನ್ಯ ನಂಬಿಕೆಯಾದರೂ ಅದನ್ನ ತಳ್ಳಿ ಹಾಕುತ್ತಾರೆ ಖಗೋಳ ಶಾಸ್ತ್ರಜ್ಞರು. ಭೂಮಿಯ ಕಕ್ಷೆಯಲ್ಲಿ ನಿಧಾನಗತಿಯ ಬದಲಾವಣೆ ಆಗ್ತಿರೋ ಹಾಗೆಯೇ ಸೂರ್ಯ ಮಕರ ರಾಶಿಗೆ ಪ್ರವೇಶಿಸೋ ದಿನದ  ಈ ಹಬ್ಬವೂ ಮುಂದಕ್ಕೆ ಸರಿಯುತ್ತಂತೆ..ಸಾವಿರ ವರ್ಷಗಳ ಹಿಂದೆ ೩೧ ಡಿಸೆಂಬರಲ್ಲಿದ್ದ ಈ ಹಬ್ಬ ಈಗ ಈ ದಿನಕ್ಕೆ ಬಂದಿದೆಯಂತೆ. ೨೦೫೦ರಲ್ಲಿ ಇದು ಜನವರಿ ಹದಿನೈದರಂದು ಬರುತ್ತೆ ಅನ್ನುತ್ತೆ ಮತ್ತೊಂದು ಲೆಕ್ಕಾಚಾರ. ಏನೇ ಆಗ್ಲಿ, ಎಂದೇ ಬರ್ಲಿ, ಏನೆಂದೇ ಕರೆಸಿಕೊಳ್ಲಿ ಸಂಕ್ರಾಂತಿ ಸಂಕ್ರಾಂತಿಯೇ.  ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ ಅಲ್ವಾ ಎಂಬ ಸದುದ್ದೇಶವನ್ನು ಪ್ರತೀ ಸಲದಂತೆ ಈ ಸಲವೂ ತರಲೆಂಬ ಹಾರೈಕೆಯೊಂದಿಗೆ..

Wednesday, January 8, 2014

ಹೊಟ್ಟೆ

"ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ.." ಅನ್ನೋ ಪುರಂದರದಾಸರ ಕೀರ್ತನೆ ನೆನಪಾಗುತ್ತಿತ್ತು. ಇದಕ್ಕೆ ಕಾರಣ ನಿನ್ನೆ ರಾತ್ರೆ ಗೆಳೆಯನ ಮನೆಗೆ ಹೋಗಿ ಅವನ ಅನಿರೀಕ್ಷಿತ ಒತ್ತಾಯಕ್ಕೆ ಮಣಿದು ಹತ್ತಿದ ನಳಪಾಕಕ್ಕೂ ಬಯ್ಯಲಾರದೇ ಹೋದ ಅರ್ಧ ತುಂಬಿದ ಹೊಟ್ಟೆಯೋ ಇಂದು ಬೆಳಗ್ಗೆಯ ಗಡಿಬಿಡಿಯ ತಿಂಡಿಯೋ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ದಕ್ಕಿದ ಅರೆಹೊಟ್ಟೆ ಮೊಸರನ್ನವೋ ಗೊತ್ತಿಲ್ಲ. ಮಧ್ಯಾಹ್ನ ಹನ್ನೆರಡಾಗೋವಷ್ಟರಲ್ಲೇ ತನ್ನ ಇರುವ ಸಾರುತ್ತಿದ್ದ ಹೊಟ್ಟೆ ಟ್ರಿಪ್ಪು ಟ್ರಿಪ್ಪೆಂದು ಹುಚ್ಚನಂತೆ ಅಲೆಯುತ್ತಿದ್ದಾಗ ಅಲೆಮಾರಿಯ ಸಾಥಿ ಮರಿಯಲೆಮಾರಿಯಾಗಿ ಮೂರೂವರೆಯಾದರೂ ತನ್ನ ಇರುವಿಕೆಯನ್ನೇ ಮರೆತುಬಿಡುತ್ತಿತ್ತು.ನಮ್ಮ ಕಡೆಯೊಂದು ಮಾತಿದೆ. ಹಡಗು ತುಂಬೋಕೆ ಹೋದವನು ಬಂದನಂತೆ.ಹೊಟ್ಟೆ ತುಂಬೋಕೆ ಬರಲಿಲ್ಲವಂತೆ. ಹೊಟ್ಟೆಯೆಂದಾಕ್ಷಣ ಪ್ರತೀ ದಿನ ಒಂದು ಬಂಡಿ ಅನ್ನ ಮತ್ತು ಒಬ್ಬ ಮನುಷ್ಯನನ್ನು ತಿಂದು ತೇಗುತ್ತಿದ್ದ ಬಕಾಸುರ, ಅವನ ಇಡೀ ಬಂಡಿ ಅನ್ನವನ್ನು ತಿಂದು ಅವನನ್ನೂ ಕೊಂದ ಭೀಮಸೇನ, ಆರು ತಿಂಗಳು ಮಲಗಿ ಎದ್ದ ನಂತರ ಬಂಡಿಗಟ್ಟಲೇ ಅನ್ನ ತಿನ್ನುತ್ತಿದ್ದ ಕುಂಭಕರ್ಣ.. ಹೀಗೆ ಹಲವು ಪ್ರಸಂಗಗಳು ನೆನಪಾಗುತ್ತೆ. ಅಷ್ಟೆಲ್ಲಾ ಹಿಂದೆ ಹೋಗೋದೇಕೆ ಜನರ ಅನ್ನವನ್ನು ತಿಂದು ಹೊಟ್ಟೆ ತುಂಬದೇ ದನಗಳ ಕೋಟಿ ಕೋಟಿ ರೂ ಮೇವನ್ನೂ ತಿಂದು ನೀರು ಕುಡಿದ ಪುಣ್ಯಾತ್ಮರು, ಬಡವರು ರಕ್ತ ಹೀರಿ ಸಂಪಾದಿಸಿದ ದುಡ್ಡನ್ನು ಕಸಿಯೋ, ಸಾಮಾನ್ಯರ ತಲೆಯ ಮೇಲೆ ಹೊರೆಗಟ್ಟಲೇ ತೆರಿಗೆ ಹೊದಿಸಿದ ದುಡ್ಡನ್ನು ನುಂಗೋದಲ್ಲದೇ ರಸ್ತೆ, ಲೈಟು, ನೀರಂತಹ ಸೌಲಭ್ಯಗಳಿಗೆ ಮಂಜೂರು ಮಾಡಿರೋ ದುಡ್ಡನ್ನೂ ಗುಳುಂಮೆನಿಸೋ ಮಹಾಮಹಿಮರ ಬೆಲ್ಲಿ ಡ್ಯಾನ್ಸ್ ನೆನಪಾಗುತ್ತದೆ !

ಹೊತ್ತು ತುತ್ತಿಗೂ ಗತಿಯಿಲ್ಲದೇ ರಟ್ಟೆ ಸುರಿಸಿ ಕೂಲಿ ಕೆಲಸ ತಾವು ಮಾಡ್ತಿರೋದು ಹೊಟ್ಟೆಗಾಗೇ ಎನ್ನೋದು ಸರಿ. ಆದರೆ ಈ ಮಹಾಮಹಿಮರೂ  ಅಂದರೆ! ಕೂತು ತಿಂದರೂ ಏಳು ತಲೆಮಾರಿನ ಊಟಕ್ಕೆ ತೊಂದರೆಯಿಲ್ಲವೆಂದು ಹೊಟ್ಟೆಗೆ ಹೋಲಿಸಿಯೇ ಹೇಳುವಾಗ ಮಹಾಮಹಿಮರ ಮಾತು ಯಾವ ರೀತಿಯಲ್ಲಿ ಸತ್ಯವೆಂಬುದು ಅರ್ಥವಾಗುತ್ತದೆ!  ಬಡವರು ಬರದಲ್ಲಿ , ಚಳಿಯಲ್ಲಿ ಹೊಟ್ಟೆಗಿಲ್ಲದೇ ಸಾಯುತ್ತಿದ್ದರೂ ಫೈವ್ ಸ್ಟಾರ್ ಪಾರ್ಟಿ ಮಾಡೋ, ಭೋಜನಕೂಟ ಮಾಡೋ ಮಹಿಮರನ್ನು, ಅಪೌಷ್ಟಿಕತೆಯಿಂದ ಹೊಟ್ಟೆ ಬೆನ್ನಿಗಂಟಿರುವಂತೆ ಕಾಣುವ ಬಡ ಮಕ್ಕಳು ಒಂದೆಡೆಯಾದರೆ ದಿನಾ ತಟ್ಟೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅನ್ನ ಚೆಲ್ಲಿ , ಹೊಟ್ಟೆ ಬಂತೆಂದು ಜಿಮ್ಮಿಗೆ ಹೋಗೋ ಪುಣ್ಯಾತ್ಮರನ್ನು.. ಹೀಗೆ ವಿವಿಧ ರೀತಿಯ ಹೊಟ್ಟೆಯ ವೈರುಧ್ಯಗಳನ್ನು ತೆಗಳುತ್ತಾ ಹೋದರೆ ಬೇಕಾದಷ್ಟಾಗುತ್ತದೆ. ಪುಟಗಟ್ಟಲೆ ಬರೆದ ಸಾಲುಗಳೂ, ಭಾವಗಳೂ ರಾವಣನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತೆ ಗೌಣವಾಗುತ್ತದೆ. ದೊಡ್ಡಣ್ಣನಂತೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸೋದು ಸಾಧ್ಯವಾಗದಿದ್ದರೂ ಜ್ವಲಂತ ಸಮಸ್ಯೆಗಳ ಬಗ್ಗೆ ಬರೆದು, ಇನ್ಯಾವುದೋ ದೇಶದ ಒಳ್ಳೆಯತನವನ್ನು , ನಮ್ಮಲ್ಲಿನ ದಾರಿದ್ರ್ಯವನ್ನು ತೆಗಳಿ ಹೊಟ್ಟೆ ಉರಿಸದೇ ಇರುವುದು ಮೇಲನಿಸುತ್ತೆಂಬ ಧೃಢ ನಂಬಿಕೆಯೇ ಒಂದಿಷ್ಟು ಮಾತು, ಹರಟೆಗೆ ದನಿಯಾಗಿದೆ ಇಂದು.

ಹಿಂದೂ ಪುರಾಣದಲ್ಲಿ ಹೊಟ್ಟೆಯೆಂದರೆ ನೆನಪಾಗೋದು ಗಣೇಶ. ಗಣಪನ ಹೊಟ್ಟೆ ಒಮ್ಮೆ  ಒಡೆದುಹೋಯಿತಂತೆ. ಅದಕ್ಕೇ ಅವ ಹೊಟ್ಟೆಗೆ ಹಾವು ಬಿಗಿದುಕೊಂಡನಂತೆ ಅನ್ನುವುದರಿಂದ ಅವನಿಗೆ ಕಡುಬು, ಮೋದಕ, ಕರ್ಜೀಕಾಯಿ, ಪಂಚಕಜ್ಜಾಯ .. ಹೀಗೆ ತರತರದ ಸಿಹಿ ಸಮರ್ಪಿಸುವವರೆಗೆ ಹಲವು ಕತೆಗಳು. ಅವನ ಎಂದಿನ ವಾಹನ ಇಲಿಯನ್ನು ಬಿಟ್ಟು ಸಿಂಹಾಸನದ ಮೇಲೆ ಕುಳ್ಳಿರಿಸಿ, ನಿಲ್ಲಿಸಿ , ಕೈಗೆ ನೇಗಿಲು, ರೈಫಲ್ಲು, ಮಚ್ಚು ಹೀಗೆ ಮನಸ್ಸಿಗೆ ಬಂದ ಆಯುಧ ಕೊಟ್ಟು ಚಿತ್ರಿಸಿ, ಅವಾಂತರ ಮಾಡಿದರೂ ಗಣಪನ ಹೊಟ್ಟೆಯ ಮೇಲೆ ಮಾತ್ರ ಯಾರ ಕಣ್ಣೂ ಬಿದ್ದಿಲ್ಲ. ಹಿಂದೂ ದೇವತೆಗಳಲ್ಲಿ ದೊಡ್ಡ ಹೊಟ್ಟೆ ಹೊತ್ತ ದೇವರು ಗಣೇಶನೊಬ್ಬನೇ ಅಲ್ಲವೇ ? ಹಾಗಾಗಿ ಇವರ ಅವಾಂತರದ ವೇಷಗಳ ನಡುವೆವೂ ಹೊಟ್ಟೆಯ ಬಲದ ಮೇಲೆ ಜನ ಅದು ಗಣೇಶನೆಂದು ಗುರ್ತಿಸಿಯೇ ಗುರ್ತಿಸುತ್ತಾರೆಂಬ ಧೃಢ ನಂಬಿಕೆ ಅವರದ್ದು !  ಹೊಟ್ಟೆಯೆಂದಾಕ್ಷಣ ಪುರಾಣದಲ್ಲಿ ಅಗಸ್ತ್ಯ ಮತ್ತು ವಾತಾಪಿ, ಇಲ್ವಲರ ಪ್ರಸಂಗ ನೆನಪಾಗುತ್ತದೆ. ಆಗೆಲ್ಲಾ ಮಾಸಾಂಹಾರ ಕೆಲವರ್ಗಗಳಿಗೆ ನಿಶಿದ್ದವೆಂಬೋ ಪರಿಕಲ್ಪನೆಯಿರಲಿಲ್ಲವೆಂಬೋ ಅಡಿಟಿಪ್ಪಣಿಯೊಂದಿಗೆ ಆ ಪ್ರಸಂಗ..ವಾತಾಪಿ ಕುರಿಯ ವೇಷ ಧರಿಸಿ, ಇಲ್ವಲ ಅವನ ಅಣ್ಣನಾಗಿ ಬ್ರಾಹ್ಮಣರನ್ನ ಊಟಕ್ಕೆ ಕರೆದು ಮೋಸಗೊಳಿಸುತ್ತಿದ್ದರಂತೆ.  ಭ್ರಾಹ್ಮಣರನ್ನು ಊಟಕ್ಕೆ ಕರೆಯುತ್ತಿದ್ದ ಅಣ್ಣ ಕುರಿಯ ವೇಷದಲ್ಲಿರುತ್ತಿದ್ದ ತನ್ನ ತಮ್ಮನನ್ನು ಕಡಿದು ಅವರಿಗೆ ಉಣಬಡಿಸುತ್ತಿದ್ದನಂತೆ. ಉಂಡ ನಂತರ ವಾತಾಪಿ ಹೊರಗೆ ಬಾ ಅನ್ನುತ್ತಿದ್ದನಂತೆ ಅಣ್ಣ. ಆ ವಾತಾಪಿ ಉಂಡವರ ಹೊಟ್ಟೆ ಬಗೆದು ಹೊರಬರುತ್ತಿದ್ದನಂತೆ. ಅಗಸ್ತ್ಯರ ಸಂದರ್ಭದಲ್ಲೂ ಹೀಗೇ ಆಯಿತು. ಆದರೆ ಅವರಿಗೆ ವಾತಾಪಿ ಕುರಿಯಾಗಿದ್ದ ಸಂಗತಿ ತಿಳಿದುಹೋಯಿತು. ಊಟವಾದ ನಂತರ ಅವರು ತಮ್ಮ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ವಾತಾಪಿ ಜೀರ್ಣವಾಗು ಅಂದರಂತೆ. ಅವರ ತಪ:ಶ್ಯಕ್ತಿಗೆ ವಾತಾಪಿಅ ಅಲ್ಲೇ ಇಲ್ಲವಾದ. ಅವರು ಹೊಟ್ಟೆಯಲ್ಲಿದ್ದ ರಕ್ಕಸನನ್ನೇ ಕರಗಿಸಿದರೆ ಈಗಿನವರಿಗೆ ಹೊಟ್ಟೆ ಕರಗಿಸುವುದೇ ದೊಡ್ಡ ಚಿಂತೆ.  ಸ್ವಲ್ಪ ಹೊಟ್ಟೆ ಬಂತೆಂದರೆ ವಿಪರೀತ ತಲೆ ಕೆಡಿಸಿಕೊಳ್ಳುವ,ಡುಮ್ಮಣ್ಣ, ಡುಮ್ಸಿ, ಫುಟಬಾಲ್, ಡ್ರಮ್ಮು ಹೀಗೆ ಸ್ವಲ್ಪ ಹೊಟ್ಟೆ ಬಂದವರೆಲ್ಲಾ ಅಪಹಾಸ್ಯಕ್ಕೆ ಈಡಾದರೂ  ಈ ಹೊಟ್ಟೆಯಿಲ್ಲದಿದ್ದರೆ ಕನ್ನಡ ಹಾಸ್ಯಲೋಕ ಸೊರಗಿ ಹೋಗುತ್ತಿತ್ತೇನೋ ಅನಿಸಿಬಿಡುತ್ತೆ ಕೆಲವೊಮ್ಮೆ.  ತಮ್ಮ ಹೊಟ್ಟೆಯ ವಿಲಕ್ಷಣತೆಯೇ ಸೌಂದರ್ಯವೆಂಬಂತೆ ಪ್ರಖ್ಯಾತರಾದ ದೊಡ್ಡಣ್ಣ, ಬುಲೆಟ್ ಪ್ರಕಾಶ್, ರಂಗಾಯಣ ರಘು ವರನ್ನು ಮರೆಯೋದಾದರೂ ಹೇಗೆ ? ಇಂಗ್ಲೀಷಿನ ಶಾಯಲಿನ್ ಸಾಕರ್ ಎಂಬ ಚಿತ್ರದಲ್ಲಿ ಬರೋ ಡುಮ್ಮ, ಸುಮೋ ಕುಸ್ತಿಪಟುಗಳು ಹೀಗೆ ಹೊಟ್ಟೆಯೆಂಬುದೇ ಒಂದು ಲುಕ್ ಕೊಟ್ಟಿದ್ದೂ ಇದೆ.

ಹೊಟ್ಟೆಯೆಂದ ಮೇಲೆ ಅದರ ಜೈವಿಕ ಕ್ರಿಯೆಯನ್ನು ನಮ್ಮ ದೇಹರಚನಾ ವ್ಯವಸ್ಥೆಯಲ್ಲಿ ಅದರ ಮಹತ್ವವನ್ನು ಹೇಳದಿದ್ದರೆ ತಪ್ಪಾಗುತ್ತೆ. ನಾವು ನುಂಗಿದ ಆಹಾರವೆಲ್ಲವೂ ಸೀದಾ ಹೊಟ್ಟೆಗೆ ಹೋಗುತ್ತದೆ. ಅಲ್ಲಿಯೇ ಅದು ಜೀರ್ಣವಾಗುತ್ತದೆ ಎಂದುಕೊಂಡಿರುತ್ತಾರೆ ಅನೇಕರು. ಜೀವಶಾಸ್ತ್ರವನ್ನು ನೆನಪಿಸಿಕೊಂಡು ಹೇಳೋದಾದ್ರೆ ಜೀರ್ಣಕ್ರಿಯೆ ಪೂರ್ಣವಾಗಿ ಆಗೋದು ಹೊಟ್ಟೆಯಲ್ಲೇ ಅಲ್ಲ. ಆದರೆ ಹೊಟ್ಟೆ ಜೀರ್ಣಕ್ರಿಯೆಯ ಮುಖ್ಯ ಭಾಗ ಅಷ್ಟೆ. ನಾವು ಆಹಾರವನ್ನು ಜಗಿಯುವಾಗ ನಮ್ಮ ಬಾಯಲ್ಲಿನ ಎಂಜಲಿನೊಂದಿಗೆ ಆ ಆಹಾರ ಸೇರುತ್ತದೆ. ಎಂಜಲಿನೊಂದಿಗೆ ಆಹಾರ ಸೇರಿತೆಂದರೆ ಜೀರ್ಣಕ್ರಿಯೆ ಪ್ರಾರಂಭವಾಯಿತೆಂದೇ ಅರ್ಥ !! ಎಂಜಲಿನಲ್ಲಿರೋ ಸಲೈವರೀ ಅಮೈಲೇಜ಼್ ಎಂಬ ಎಂಜೈಮು ಆಹಾರದಲ್ಲಿರೋ ಗಂಜಿಯ ಅಂಶ(starch) ನ ಜೀರ್ಣಕ್ರಿಯೆಯನ್ನು ಪ್ರಾರಂಭಿಸುತ್ತದೆ. ಆಮೇಲೆ ನಾವು ನುಂಗಿದ ಆಹಾರ ಅನ್ನನಾಳದ ಮುಖಾಂತರ ಹೊಟ್ಟೆಗೆ ತಲುಪುತ್ತದೆ.ಹೊಟ್ಟೆಯಲ್ಲಿರೋ ಈ ಆಹಾರವನ್ನು ಬೋಲಸ್ ಅನ್ನುತ್ತಾರೆ.ಅನ್ನನಾಳದಿಂದ ಹೊಟ್ಟೆಗೆ ತಲುಪುವ ಈ ಆಹಾರದ ಚಲನೆಯನ್ನು ಪೆರಿಸ್ಟಾಟಿಸ್ ಚಲನೆ ಎನ್ನುತ್ತಾರೆ. ಹೊಟ್ಟೆಯಲ್ಲಿ ಸ್ರ್ವವಿಸುವ ಗ್ಯಾಸ್ಟ್ರಿಕ್ ಆಮ್ಲವು ಪ್ರೋಟೀನ್ ಜೀರ್ಣಕ್ರಿಯೆಗೆ ಕಾರಣವಾಗುತ್ತದೆಯಂತೆ. ಗ್ಯಾಸ್ಟ್ರಿಕ್ ಆಮ್ಲ ಅಂದರೆ ? ಅದು ಹೈಡ್ರೋ ಕ್ಲೋರಿಕ್ ಆಮ್ಲ ಮತ್ತು ಪೆಪ್ಸಿನ್ ಎಂಬ ಎಂಜೈಮಿನ ಸಂಗಮ. ಹೊಟ್ಟೆಯಲ್ಲಿ ಈ ತರ ದ್ರವದ ಸ್ರವಿಕೆಯೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವೇ ಎಂಬ ಡೌಟು, ಈ ಹೈಡ್ರೋಕ್ಲೋರಿಕ್ ಆಮ್ಲ ಅನ್ನೋದು ಪ್ರಬಲ ಆಮ್ಲವಲ್ಲವೇ ? ಅದರಿಂದ ಹೊಟ್ಟೆಯ ಕೋಶಗಳೇ ಸುಟ್ಟು ಹೋಗಲ್ಲವೇ ಅಂತಲೂ ಕೆಲವರಿಗೆ ಬಂದಿರಬಹುದು. ಈ ಆಮ್ಲಗಳಿಂದ ಹೊಟ್ಟೆಯ ಕೋಶ ಕರಗಿಹೋಗದಿರಲೆಂದೇ ಹೊಟ್ಟೆಯಲ್ಲಿ ಮೂಕಸ್ ಅನ್ನೋ ಪ್ರತ್ಯಾಮ್ಲದ ಸ್ರವಿಕೆಯಾಗುತ್ತದೆ. ಇದು ಹೊಟ್ಟೆಯ ಸುತ್ತ ಒಂದು ತೆಳು ಪದರವನ್ನು ರೂಪಿಸಿ ಆಹಾರ ಕರಗಿಸುವ ಹೊಟ್ಟೆಯೇ ಕರಗಿಹೋಗದಂತೆ ಕಾಯುತ್ತದೆ. ಯಕೃತ್ತು , ಮೇದೋಜೀರಕ ಗ್ರಂಥಿಗಳೂ ತಮ್ಮದೇ ಸಾಥ್ ಕೊಡೋ ಈ ಜೀರ್ಣಾಂಗವ್ಯೂಹದಲ್ಲಿ ಹೊಟ್ಟೆಯ ನಂತರ ಕರುಳಿಗೆ ಮುಂಚಿನದೇ ಪೆರಿಸ್ಟಾಟಿಕ್ ಚಲನೆಯಿಂದ ಚಲಿಸುತ್ತದೆ. ನಮ್ಮ ಆಹಾರದಲ್ಲಿನ ೯೫% ಪೋಷಕಾಂಶಗಳ ಹೀರುವಿಕೆ ಸಣ್ಣಕರುಳಿನಲ್ಲೂ , ಉಳಿದ ಜೀವಾಂಶಗಳ ಮತ್ತು ನೀರಿನ ಹೀರುವಿಕೆಯು ದೊಡ್ಡ ಕರುಳಿನಲ್ಲೂ ಆಗುತ್ತದೆ. ಹೊರಗಿನಿಂದ ನೋಡೋಕೆ ದೊಡ್ಡ ಹೊಟ್ಟೆ, ಸಣ್ಣ ಹೊಟ್ಟೆ, ಚಟ್ಟಿ ಹೋದ ಹೊಟ್ಟೆಯಂತೆ ಕಾಣೋ ಬಾಹ್ಯ ಹೊಟ್ಟೆಯೊಳಗೆ ಇಷ್ಟೆಲ್ಲಾ ಅಡಗಿದೆಯಾ ಅಂತ ಉಗುಳು ನುಂಗಿದರಾ ? ಹೂಂ. ನುಂಗಿ ನುಂಗಿ.. ಹೊಟ್ಟೆಯೊಳಗೆ ಏನೇನೋ ಇದೆಯಂತೆ. ಇದೇನು ಮಹಾ.. ?

ದೊಡ್ಡ ಹೊಟ್ಟೆಯ ಪರಿಕಲ್ಪನೆ ಹಿಂದೂ ಪುರಾಣಗಳದ್ದೊಂದೇ ಅಲ್ಲ. ಜೈನರ ಪಾರ್ಶ್ವ ಯಕ್ಷ, ಜಪಾನೀಯರ ಫ್ಯೂಜಿನ್-ರೈಜಿನ್-ಜೂ(ಸಿಡಿಲಿನ ದೇವತೆ).. ಮುಂತಾದ ಪಾತ್ರಗಳೂ  ಇದನ್ನು ಹಂಗಿಸದೇ ಒಂದು ದೈವೀ ಸ್ಥಾನವನ್ನೇ ಕೊಟ್ಟಿದೆ. ಈ ಹೊಟ್ಟೆಯನ್ನು ಹಂಗಿಸುವುದು , ಮೈ ಬೊಜ್ಜನ್ನು ಖಾಯಿಲೆಯೆಂದು ಪರಿಗಣಿಸುವ ಕಲ್ಪನೆ ಬಂದಿದ್ದು ಯಾವಾಗ, ಯಾರಿಂದ ಅನ್ನೋ ದಿನ ಗೊತ್ತಿರದಿದ್ದರೂ ಇತ್ತೀಚೆಗೆ ಅನ್ನಬಹುದೇನೋ. ನಮ್ಮ ಅಪ್ಪ, ಅಜ್ಜ, ಮುತ್ತಜ್ಜ, ಮರಿಯಜ್ಜನ ಕಾಲದಲ್ಲೆಲ್ಲೋ ದೊಡ್ಡ ದೊಡ್ಡ ಹೊಟ್ಟೆಯನ್ನು ಒಂದು ಸಮಸ್ಯೆಯೆಂದು ಭಾವಿಸಿದ್ದಾಗಲಿ, ಅದನ್ನು ಕರಗಿಸಲೆಂದೇ ಬೆಳಬೆಳಗ್ಗೆ ಓಡೋದಾಗಲಿ, ಜಿಮ್ಮು, ಫಿಟ್ನೆಸ್ ಸೆಂಟರುಗಳೆಂದು ಹೋಗಿದ್ದಾಗಲೀ ಕೇಳಿಲ್ಲ. ವಿದೇಶಿಯರನ್ನೆಲ್ಲಾ ಅವರ ಜೀವನದ ರೀತಿ ನೀತಿಗಳನ್ನೆಲ್ಲಾ ಕಣ್ಣು ಮುಚ್ಚಿಕೊಂಡು ಅನುಕರಿಸುತ್ತಿರುವ ನಮಗೆ ಆರೋಗ್ಯದ ಬಗೆಗಿನ ಕಾಳಜಿ ಅನ್ನೋದೇ ಒಂದು ಹುಚ್ಚಾಗಿ ಕಾಡ್ತಾ ಇದೆಯಾ ? ಗೊತ್ತಿಲ್ಲ. ಬೆಳಗ್ಗೆ ತಿಂಡಿ ತಿನ್ನೋ ಎಂದ್ರೆ ಬೇಡ. ಒಂದು ಬ್ರೆಡ್ಡು, ಅದಕ್ಕೊಂದು ಸೌತೇಕಾಯಿ ಪೀಸೇ ಬೆಳಗ್ಗಿನ ಬೇಕ್ ಫಾಸ್ಟು ! ಮಧ್ಯಾಹ್ನದ ಊಟಕ್ಕೆ ರಿಫೈನ್ಡ ಆಯಿಲ್ ಹಾಕಿದ ಅಥವಾ ಆಯಿಲ್ ಲೆಸ್ ಆಹಾರ. ರೈಸ್ ತಿಂದ್ರೆ ಹೊಟ್ಟೆ ಬರುತ್ತೇರಿ .ಚಪಾತಿ ತಿರ್ನಿ ಅಂತ ಒಬ್ಬ ಇಪ್ಪತ್ತೈದು ವಯಸ್ಸಿನವ ಮತ್ತೊಬ್ಬನಿಗೆ ಹೇಳ್ತಾ ಇದ್ರೆ ಏನನ್ಬೇಕೋ ? ಇವರ ಹೊಟ್ಟೆ ಏನು ಪಾಪ ಮಾಡಿತ್ತೋ ಅನಿಸುತ್ತೆ. ರಾತ್ರೆಗೆ ಮತ್ತೆ ಊಟ ಇಲ್ಲ ! ಫ್ರೂಟ್ ಜ್ಯೂಸ್ ಮತ್ತು ವೆಜಿಟಬೆಲ್ ಅಂತೆ .  ಮುಂಚೆಯೆಲ್ಲಾ ಹೆಣ್ಣ ಕೈ ಹಿಡಿಯುವಾಗ ಗಂಡು ಹೇಳ್ತಿದ್ನಂತೆ. ನಂಗೆ ಎಷ್ಟೇ ಕಷ್ಟ ಬಂದ್ರೂ ನಿನ್ನ ಹೊಟ್ಟೆಗೆ, ಬಟ್ಟೆಗೆ ಕಮ್ಮಿ ಮಾಡಲ್ಲ ಕಣೇ ಅಂತ. ನಮ್ಮಪ್ಪ ಕೊನೆಯವರೆಗೂ ಒಂದು ಮಾತು ಹೇಳ್ತಿದ್ರು. ನಿಂಗೆ ಎಷ್ಟು ಕಷ್ಟ ಬಂದ್ರೂ ಹೊಟ್ಟೆಗೆ ಮಾತ್ರ ಕಮ್ಮಿ ಮಾಡ್ಕೊಳ್ಳಬೇಡ ಮಗಾ. ಸಾಲ ಮಾಡಾದ್ರೂ ತುಪ್ಪ ತಿನ್ನು ಅಂತ.ಒಂದರ್ಥದಲ್ಲಿ ಅವರ ಮಾತು ಎಷ್ಟು ಸತ್ಯ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗಬೇಕೆಂದರೆ ಹೊತ್ತಿಗೆ ಸರಿಯಾಗಿ ಸರಿಯಾದ ಆಹಾರವನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು. ಚೆನ್ನಾಗಿ ಹೊಟ್ಟೆಗೆ ಬಿದ್ದರೇನೇ ನಮಗೆ ಚೆನ್ನಾಗಿ ಶಕ್ತಿ, ಆರೋಗ್ಯಗಳಿದ್ದು ದೇಹ ಉಲ್ಲಸಿತವಾಗಿರಲು ಸಾಧ್ಯ. ಹಂಗಂತಾ ಸಿಕ್ಕಿದ್ದೆಲ್ಲಾ ತಿನ್ನಬೇಕೆಂದಲ್ಲಾ. ಚಪಲಕ್ಕಾಗಲ್ಲ, ಅಗತ್ಯವಾದಾಗ ತಿನ್ನಬೇಕಷ್ಟೇ. ಹೊಟ್ಟೆಗಾಗೇ ಬದುಕಬೇಕೆಂದಲ್ಲ. ಆದರೆ ಬದುಕಲು ಹೊಟ್ಟೆ ಬೇಕು. ಒಂದು ದಿನ ಫಿಜ್ಜಾ, ಬರ್ಗರು , ಟಾಕೋ ಬೆಲ್ಲು , ರೋಲು, ಸ್ಯಾಂಡ್ ವಿಚ್ಚು ಅಂತ ಒಂದು ವಾರವಾದರೂ ಜೀರ್ಣವಾಗದಂತಹ ಆಹಾರಗಳನ್ನ ತಿಂದು ಮತ್ತೆರಡು ದಿನ ಹೊಟ್ಟೆ ಕಟ್ಟಿದರೆ ಅದು ಯಾವ ಸಾಧನೆಯೋ ಗೊತ್ತಿಲ್ಲ. ಇವರ ಜಿಹ್ವಾ ಚಾಪಲ್ಯಕ್ಕೆ ಹೊಟ್ಟೆಯ ಬಲಿ ಅಷ್ಟೇ. ಚೆನ್ನಾಗಿ ಕುಡಿಯುವ ಬೀರುಗಳಿಂದ, ಜಂಕ್ ಪುಡ್ಡುಗಳಿಂದ ಹೊಟ್ಟೆ ಬರುತ್ತೇ ಹೊರತು ಹೊಟ್ಟೆಗೆ ಅದಕ್ಕೆ ಬೇಕಾದ ಊಟ ಹಾಕೋದ್ರಿಂದ ಅಲ್ಲ ಅನ್ನೋ ಮಾತು ಎಲ್ಲೋ ಮೂಲೆ ಸೇರುತ್ತಿದೆ.


ಬೆಂಗಳೂರಿಗೊಬ್ಬ ಬಾಬಾ ಬಂದಿದ್ದರು ಹಿಂದಿನ ಸಲ. ಬಾಬಾ ಅಂದರೆ ಹೈಟೆಕ್ ಬಾಬಾ. ರೋಗಿಯ ಹೊಟ್ಟೆಯ ಒಳಗೆ ಕೈಹಾಕಿ ಏನೇನೋ ಗಡ್ಡೆ, ವಸ್ತುಗಳನ್ನು ತೆಗೆಯೋ ಪುಣ್ಯಾತ್ಮ ಅವ. ಡಾಕ್ಟರುಗಳು ಹೊಟ್ಟೆ ಕೊಯ್ದು, ಆಪರೇಷನ್ ಮಾಡಿ ಗುಣಪಣಿಸಲಾಗದ್ದನ್ನು ಈತ ಕ್ಷಣಾರ್ಧದಲ್ಲಿ ಗುಣಪಡಿಸುತ್ತಾನೆಂಬುದನ್ನೋ ನಂಬೋ ಲಕ್ಷಾಂತರ ಮಂದಿಯಲ್ಲಿ ಅದೆಷ್ಟು ಜನರ ಹೊಟ್ಟೆಯಿಂದ ನಿಜವಾಗಲೂ ರೋಗಗಳು ಹೊರಬಂದವೋ ಗೊತ್ತಿಲ್ಲ. ಆತನ ಹೊಟ್ಟೆಯಂತೂ ತುಂಬಿತು!. ಹೊಟ್ಟೆಯೊಂಬುದೇ ಅದೆಷ್ಟೋ ಕತೆಗಳ ಗಣಿಯಾಗಿದೆ. ತಾಯ ಹೊಟ್ಟೆಯಲ್ಲೇ ಚಕ್ರವ್ಯೂಹವನ್ನು ಕೇಳಿಸಿಕೊಂಡ ಅಭಿಮನ್ಯು, ತನ್ನ ಮಗು ಒದೆಯೋದರ ಮಧುರ ಅನುಭವ ಪಡೆಯೋ ತಾಯಿ ತಾನೇ ಮತ್ತೊಂದು ಜೀವವಾಗಿ ರೂಪಗೊಳ್ಳುತ್ತಿರುವ ಆನಂದವನ್ನು ಅವಳ ಬಾಯಲ್ಲೇ ಕೇಳಬೇಕು. ಹೊಟ್ಟೆ -ಬಟ್ಟೆ ಕಟ್ಟಿ ನಿನ್ನ ಬೆಳೆಸಿದೆ ಮಗನೇ, ಈಗ ಹೊಟ್ಟೆಗೆ ಒಂದು ಹೊತ್ತು ಊಟವನ್ನೂ ಹಾಕಲಾರದೇ ಹೋದೆಯಾ ಎಂದು ವೃದ್ಧ ತಾಯಿ ಕಣ್ಣೀರಿಡುತ್ತಿದ್ದರೆ ಯಾರ ಹೊಟ್ಟೆಯಾದರೂ ಚುರುಕ್ಕನ್ನದೇ ಇರದು. ನಿನ್ನ ಮಾತು ಕೇಳೇ ಹಾಲು ಕುಡಿದಷ್ಟು ಖುಷಿಯಾಯ್ತು. ಹೊಟ್ಟೆ ತಂಪಾಯ್ತು ಅನ್ನೋ ನಾಣ್ಣುಡಿಗಳು, ಅವುಗಳ ಅವತರಿಣಿಕೆಗಳನ್ನೆಷ್ಟೋ ಕಾಣಬಹುದು. ಶಿವಪ್ಪಾ, ಕಾಯೋ ತಂದೆ. ಮೂರು ಲೋಕ ಸ್ವಾಮಿ ದೇವ. ಹಸಿವೆಯನ್ನು ತಾಳಲಾರೆ, ಕಾಪಾಡೆಯಾ ಎಂಬ ದೇವ ಪ್ರಾರ್ಥನೆಯಲ್ಲೂ ಹೊಟ್ಟೆಯ ನೆನಪಿದೆ ಎಂದರೆ ಹೊಟ್ಟೆಯ ಬಗ್ಗೆ ಇನ್ನೇನು ಹೇಳುವುದುಳಿದೆದೆ. ಹೊಟ್ಟೆ ಪಾಡಿಗಾಗೇ ಒಂದು ನೌಕರಿಯರೆಸಿ ಬೆಂದಕಾಳೂರಿಗೆ ಬಂದ ಹೊಸತರಲ್ಲಿ ಪಟ್ಟ ಪಾಡುಗಳು, ಕಷ್ಟ, ಅವಮಾನಗಳು ತುಂಬಿದ ಹೊಟ್ಟೆಗೆ ಅರ್ಥವಾಗೋದು ಕಷ್ಟವೇ. ಎರಡು ಇಡ್ಲಿ ಸಾಕಾಗುತ್ತಿಲ್ಲ , ಮೂರನೇ ಇಡ್ಲಿ ಕೊಡು ಎಂದು ಕೇಳಲೂ ಆಗದೇ, ಹೊಟ್ಟೆ ಹಸಿವೆಯನ್ನೂ ತಡೆಯಲಾಗದೇ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡ ದೈನೇಸಿ ದಿನಗಳಿವೆಯಲ್ಲಾ ? ಮೂರನೇ ರೊಟ್ಟಿ ಕೇಳುತ್ತಿದ್ದೆಯಲ್ಲಾ, ಅಮ್ಮನಿಗೆ ರೊಟ್ಟಿಯಿದೆಯಾ ಇಲ್ಲವಾ ಎಂದು ಎಂದಾದರೂ ಕೇಳಿದ್ದೀಯ ಹೊಟ್ಟೆಬಾಕನೇ ಎಂದು ಅಣ್ಣನಿಂದ ಬಯ್ಯಿಸಿಕೊಂಡ ಕಲಾಮರ ಜೀವನದ ಆ ಪ್ರಸಂಗವಿದೆಯಲ್ಲಾ ... ಎಂತೆಂತಾ ಧೃಡ ನಿರ್ಧಾರಗಳಿಗೆ ಕಾರಣವಾಗಿಬಿಟ್ಟಿತು. ಕೆಡಿಸಿದ್ದು, ಉಳಿಸಿದ್ದು ಎಲ್ಲಾ ಹೊಟ್ಟೆಯೇ ? ಅಂದು ಆ ಹಸಿವಿಲ್ಲದಿದ್ದರೆ ಇಂದು ನಾವಿದ್ದಲ್ಲಿ ಇರದೇ ಇನ್ನೆಲ್ಲಿರುತ್ತಿದ್ದೆವೋ ನಿಜಕ್ಕೂ ತಿಳಿಯದು. ಬರೆಯುತ್ತಾ ಹೋದರೆ ಇನ್ನೂ ದಕ್ಕಬಹುದು. ಆದರೆ ಈಗಷ್ಟೇ ಊಟ-ತಿಂಡಿ ಆದ ಓದುಗರಿಗೆ ಮತ್ತೊಮ್ಮೆ ಬೇಸರವಾಗೋ, ಹಸಿವಾಗೋ  ಹೊಟ್ಟೆಯ ನೆನಪಾಗೋ ಮೊದಲು ವಿರಮಿಸುವುದು ಉತ್ತಮ.ಹಸಿದ ಹೊಟ್ಟೆ ತಂದ ನೆನಪುಗಳು ಹೊಸದೇನೋ ಬರೆಸಿದ  ಪ್ರಯತ್ನವನ್ನು  ಓದಿದ ಗೆಳೆಯರು ಪ್ರಯತ್ನದಲ್ಲಿ ಮೂಡಿರೋತಪ್ಪು-ಒಪ್ಪುಗಳನ್ನೆಲ್ಲಾ  ಹೊಟ್ಟೆಗೆ ಹಾಕಿಕೊಳ್ಳುತ್ತೀರೆಂಬ ನಂಬಿಕೆಯಲ್ಲಿ.

Saturday, January 4, 2014

ದೇವನಹಳ್ಳಿ ಕೋಟೆ ಟ್ರಿಪ್ಪು

ದೇವನಹಳ್ಳಿಯ ಕೋಟೆ ಅಥವಾ ಟಿಪ್ಪು ಕೋಟೆ ಬೆಂಗಳೂರಿನಿಂದ ೩೫ ಕಿ.ಮೀ ದೂರದಲ್ಲಿದೆ. ವೈಟ್ ಫೀಲ್ಡ್/ಕೆ.ಆರ್ ಪುರಂ ಕಡೆಯಿಂದ ಬರುವವರು ಸೀದಾ ದೇವನಳ್ಳಿಗೆ ಬಂದರೆ ಅಲ್ಲಿಂದ ಕೋಟೆಗೆ ಹೋಗಬಹುದು. ಮೆಜೆಸ್ಟಿಕ್ ಕಡೆಯಿಂದ ಬರುವವರು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಹಾಗೇ ಮುಂದೆ ಬಂದರೆ ಈ ಕೋಟೆಯನ್ನು ಕಾಣಬಹುದು. ಯಲಹಂಕ/ಹೆಬ್ಬಾಳದಿಂದ ಬಸ್ಸಿಗೂ ಬರಬಹುದು. ಬಸ್ ನಂಬರ್ 298M. ಕೋಟೆಯೆಂದರೆ ತೀರಾ ದೊಡ್ಡದಲ್ಲದಿದ್ದರೂ ಒಮ್ಮೆ ನೋಡಲಡ್ಡಿಲ್ಲ. ಇಲ್ಲಿ ಟಿಪ್ಪು ಕೋಟೆಯಲ್ಲದೇ, ಕೋಟೆ ನೀರಾಂಜನೇಯ, ವೇಣುಗೋಪಾಲ ಸ್ವಾಮಿ, ಸಿದ್ದೇಶ್ವರ ಸ್ವಾಮಿ, ಮಾರಮ್ಮ ದೇವಸ್ಥಾನಗಳಿವೆ. ಹಾಗೇ ಸ್ವಲ್ಪ ಮುಂದೆ ಬಂದರೆ ಟಿಪ್ಪು ಸ್ಮಾರಕ , ಅಲ್ಲಿಂದ ಹಾಗೇ ಸ್ವಲ್ಪ ಮುಂದಕ್ಕೆ ಐವತ್ತಡಿಯ ಕಛೇರಿ ಆಂಜನೇಯ ದೇವಸ್ಥಾನ ಸಿಗುತ್ತದೆ. ಹಾಗೇ ಮುಂದೆ ಬಂದರೆ ಬಲಗಡೆ ನಕೋಡ ಅವಂತಿ ಜೈನ ದೇವಾಲಯ ಮತ್ತು ಎಡಕ್ಕೆ ಬೆಟ್ಟದ ಮೇಲೆ ಸಿದ್ದಾಚಲ ಸ್ಥೂಲಭದ್ರ ಜೈನ ದೇವಾಲಯ ಸಿಗುತ್ತದೆ. ಸ್ಥೂಲಭದ್ರ ಜೈನ ದೇವಾಲಯಕ್ಕೆ ಹತ್ತೋ ಮೆಟ್ಟಿಲಗಳ ಬುಡದಲ್ಲಿಯೇ ಪ್ರಾಚೀನ ಆಂಜನೇಯ ದೇವಸ್ಥಾನವೂ ಸಿಗುತ್ತದೆ. ಹಾಗೇ ಸ್ವಲ್ಪ ಮುಂದೆ ನಂದಿ ಬೆಟ್ಟ ಕಾಣುತ್ತಿರುತ್ತದೆ. ನಂದಿ ಬೆಟ್ಟಕ್ಕೆ ಹೋಗೋ ದಾರಿಯಲ್ಲಿಯೇ ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಅವರ ಮನೆ, ಅಲ್ಲೇ ಸ್ವಲ್ಪ ಈ ಕಡೆ ಇರುವ ಭೋಗ ನರಸಿಂಹ ದೇವಸ್ಥಾನವನ್ನೂ ನೋಡಬಹುದು.

ವೇಣುಗೋಪಾಲ ಸ್ವಾಮಿ ದೇವಸ್ಥಾನ:
ದೇವಸ್ಥಾನವನ್ನು ಕಾಲಿಡುತ್ತಿದ್ದಂತೆಯೇ ಸ್ವಾಗತಿಸುವುದು ಲೋಹದ ಧ್ವಜಸ್ಥಂಬ. ಆ ದ್ವಜ ಸ್ಥಂಭವನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಮೂಲದೇವರಾದ ಕೃಷ್ಣ ರುಕ್ಮಿಣಿಯಲ್ಲದೇ ಎಡದಲ್ಲಿ ಲಕ್ಷ್ಮಿದೇವಿ, ಬಲದಲ್ಲಿ ಬೆಣ್ಣೆ ಕೃಷ್ಣ, ಪಕ್ಕದಲ್ಲಿ ಒಂದು ಕೃಷ್ಣನ ಶಯನಗೃಹವಿದೆ. ಶಯನಗೃಹದ ಎಲ್ಲಾ ಮೂಲೆಯಲ್ಲೂ ಕನ್ನಡಿಗಳಿದ್ದು ಎಲ್ಲಾ ದಿಕ್ಕಿನಲ್ಲೂ ದೇವರ ವಿಗ್ರಹ ಕಾಣಬೇಕೆಂಬ ಐತಿಹ್ಯವಂತೆ.  ಹಾಗೆಯೇ ಉತ್ಸವ ಮೂರ್ತಿಯೂ ಇದೆ
Venugopalaswamy temple , Devanahalli

Venu GopalaSwamy Temple Entrance

Taataki Samhara prasanga
Vishwamitrana Yagna samrakshane
ಹಾಗೇ ಹೊರಗೆ ಬಂದಾಗ ದೇವಾಲಯದ ಸುತ್ತಲೂ ಪೌರಾಣಿಕ ಪ್ರಸಂಗಗಳ ಕೆತ್ತನೆಗಳಿವೆ. ತಾಟಕೀ ಸಂಹಾರ, ಯಜ್ನಕ್ಕೆ ಮೋಡಗಳ ಮೇಲಿಂದ ಮಾಂಸ ತಂದು ಸುರಿಯುವ ಮಾರೀಚ ಸುಬಾಹು ಮತ್ತು ಅವರನ್ನು ಕೊಲ್ಲುವ ರಾಮ ಲಕ್ಷ್ಮಣರ ವಿಶ್ವಾಮಿತ್ರನ ಯಜ್ಞರಕ್ಷಣೆಯಂತಹ ರಾಮಾಯಣ ಪ್ರಸಂಗಳಲ್ಲದೇ ಬಾಲ ಕೃಷ್ಣ, ಉಗ್ರ ನರಸಿಂಹ, ವಿಷ್ಣುವನ್ನು ಹೊತ್ತ ಗರುಡ,  ಬೆಣ್ಣೆ ಕಡೆಯುವ ಅಮ್ಮನ ಹತ್ತಿರ ಬೆಣ್ಣೆ ಕೇಳುತ್ತಿರುವ ಕೃಷ್ಣ, ಗೋವರ್ಧನ ಗಿರಿಧಾರಿ ಕೃಷ್ಣ , ಕಾಳಿಂಗ ಮರ್ಧನ, ಪೂತನೀ ಸಂಹಾರದಂತಹ ಭಾಗವತದ ಪ್ರಸಂಗಗಳ ಜೊತೆಗೆ ಬಲಿಯ ಪ್ರಸಂಗವೂ ಇದೆ. ಮೂರು ಹೆಜ್ಜೆ ದಾನ ಕೇಳಿದ ವಾಮನ ಎರಡು ಹೆಜ್ಜೆಗಳಲ್ಲಿ ಭೂಮಿ ಆಕಾಶಗಳನ್ನಳೆದು ಮೂರನೆಯದು ಎಲ್ಲಿಡಲಿ ಎಂದಾಗ ತನ್ನ ತಲೆ ತೋರಿಸಿದ ಬಲಿ ಮಹರಾಜ. ಆಗ ವಾಮನ ಅವನ ತಲೆಯ ಮೇಲೆ ಕಾಲೊಟ್ಟು ಅವನನ್ನು ತುಳಿಯುತ್ತಿರುವ ಪ್ರಸಂಗ ಚೆನ್ನಾಗಿ ಮೂಡಿಬಂದಿವೆ. ಇವಲ್ಲದೆ ಇನ್ನೂ ಅನೇಕ ಪ್ರಸಂಗಗಳ ಚಿತ್ರಣವಿದ್ದರೂ ಅವು ಮಸುಕಾಗಿ ಗುರುತಿಸುವುದು ಕಷ್ಟವಾಗಿವೆ :-(

ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ:
Neeru Baaglilu Anjaneya Swami
ಕೋಟೆಗೆ ಹತ್ತೋ ಮೆಟ್ಟಿಲುಗಳು ಶುರುವಾಗುವುದೇ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರದಿಂದ. ಕೋಟೆಗೆ ನೀರು ತೆಗೆದುಕೊಂಡು ಹೋಗುವವರು ಇದೇ ದೇವಸ್ಥಾನದ ಮೂಲಕ ನೀರು ತಗೊಂಡು ಹೋಗುತ್ತಿದ್ದರಿಂದ ಇದಕ್ಕೆ ಈ ಹೆಸರಂತೆ.

ಹಾಗೆಯೇ ಮೇಲೆ ಹತ್ತುತ್ತಿದ್ದಂತೆಯೇ ಪ್ರತಿಧ್ವನಿಯ ಬುರುಜೊಂದು ಸಿಗುತ್ತದೆ. ಇದರ ಮಧ್ಯೆದಿಂದ ಸ್ವಲ್ಪ ಮುಂದೆ ಬುರುಜಿಗೆ ಎದುರಾಗಿ  ನಿಂತು ಚಪ್ಪಾಳೆ ತಟ್ಟಿದರೆ ಅಥವಾ ಮಾತನಾಡಿದರೆ ಅದು ಬುರುಜಿಗೆ ಬೆನ್ನು ಹಾಕಿ ಮಧ್ಯದ ಹತ್ತಿರ ನಿಂತಿರುವವರಿಗೆ ಮೈಕಿನಲ್ಲಿನ ಮಾತಿನಂತೆ ಕೇಳಿಸುತ್ತದೆ.  ಕೋಟೆಯಲ್ಲಿ ಸುಮಾರು ಇಂತಹ ಬುರುಜುಗಳಿದ್ದರೂ ಎಲ್ಲೂ ಈ ತರಹದ ಪ್ರತಿಧ್ವನಿ ಆಮೇಲೆ ಕಾಣದಿದ್ದುದು ಆಶ್ವರ್ಯವೆನಿಸುತ್ತದೆ. 

ಟಿಪ್ಪು ಕೋಟೆ:ಈ ಕೋಟೆಯ ಬಗ್ಗೆಯೂ ಒಂದು ವೈಶಿಷ್ಟ್ಯವಿದೆ. ಈ ಕೋಟೆಯನ್ನು ಕಟ್ಟಲು ಬಳಸಿದ್ದು ಇಟ್ಟಿಗೆಯ ಪುಡಿ ಮತ್ತು ಸುಣ್ಣದಿಂದ ಮಾಡಿದ ಸುರ್ಕಿ. ಕೋಟೆಯ ಉದ್ದಕ್ಕೂ ಇರುವ ಸಣ್ಣ ಸಣ್ಣ ಕಾಲುವೆಗಳು ನೀರು ಬೇಗ ಇಂಗುವಂತೆ ಮಾಡಿ ಮಳೆಯಿಂದ ಕೋಟೆಗೆ ರಕ್ಷಣೆ ಒದಗಿಸುತ್ತದೆಯಂತೆ . ಕೋಟೆಯಲ್ಲಿನ ದಪ್ಪವಾದ ಜಲ್ಲಿ ಹಾಗೂ ಕಲ್ಲಿನ ಕೆಲಸದ ಗೋಡೆಯನ್ನು ಫಿರಂಗಿಯ ಬೆಂಕಿಯನ್ನು ತಡೆಯಲೆಂದೇ ನಿರ್ಮಿಸಲಾಗಿದೆಯಂತೆ.  ಶತ್ರುದಾಳಿಯ ಸಮಯದಲ್ಲಿ ಶತ್ರುಗಳನ್ನು ಕೋಟೆಯಿಂದ ಹೊರಗಿಡುವ ಸಲುವಾಗಿ ಕಟ್ಟಿದ ಕಂದಕ ಮತ್ತು ಆ ಕಂದಕ ದಾಟಲು ಇರುವ ಒಂದೇ ಒಂದು ಸೇತುವೆಯನ್ನು ತೆಗೆದುಬಿಡಲಾಗುತ್ತಿತ್ತಂತೆ. ಕೋಟೆಯಲ್ಲಿ ಅಲ್ಲಲ್ಲಿ ಇರುವ ಬಂದೂಕಿನ ಕಿಟಕಿಗಳೂ ವಿಶಿಷ್ಟವಾಗಿವೆ. ಮೂರು ದಿಕ್ಕಿನಲ್ಲಿ ಎಲ್ಲಿ ಶತ್ರು ಸೈನ್ಯವಿದ್ದರೂ ಅತ್ತ ಗುಂಡು ಹಾರಿಸಲನುವಾಗುವಂತೆ ಒಂದೇ ಕಿಟಕಿಯಲ್ಲಿ ಮೂರು ದಿಕ್ಕುಗಳಿರುವುದು ವಿಚಿತ್ರವೂ ವಿಶಿಷ್ಟವೂ ಅನಿಸುತ್ತದೆ. ಆದರೆ ವಿಪರ್ಯಾಸವೆಂದರೆ ೧೭೯೧ರಲ್ಲಿ ಬ್ರಿಟಿಷರು ಬೆಂಗಳೂರಿನಲ್ಲಿ ಟಿಪ್ಪು ಕೋಟೆಯನ್ನು ವಶಪಡಿಸಿಕೊಂಡಾಗ ದೇವನಹಳ್ಳಿಯ ಸೈನಿಕರು ಹೆದರಿಯೇ ಕೋಟೆಯನ್ನು ಬಿಟ್ಟು ಓಡಿ ಹೋದರಂತೆ. ಒಂದು ವಾರದ ನಂತರ ಯಾವುದೇ ಯುದ್ದವಿಲ್ಲದೇ ಕೋಟೆ ಬ್ರಿಟಿಷರ ವಶವಾಯಿತಂತೆ.

ಟಿಪ್ಪು ಸ್ಮಾರಕ:
Tippu Statue

ದೇವನಹಳ್ಳಿಯ ಕೋಟೆಯ ಮತ್ತೊಂದು ಬದಿಯಿಂದ ಹೊರಗೆ ಬಂದರೆ ಸಿಗೋ ರಸ್ತೆಯಲ್ಲಿ ಎಡಕ್ಕೆ ಸುಮಾರು ೩೦೦ ಮೀಟರ್ ಸಾಗುವಷ್ಟರಲ್ಲಿ ಟಿಪ್ಪುವಿನ ಜನ್ಮ ಸ್ಥಳವೆನ್ನಲಾದ ಸ್ಮಾರಕ ಇದೆ.ಸ್ಮಾರಕವೆಂದರೆ ದೊಡ್ಡ ಕಟ್ಟಡವೇನಲ್ಲ. ಜಗುಲಿಯ ಮೇಲಿರುವ ನಾಲ್ಕು ಕಂಬಗಳ ಕಮಾನಿನ ಕಟ್ಟಡವೊಂದೇ ಈಗ ಉಳಿದಿರುವ ಅವಶೇಷ.

ಕಛೇರಿ ಆಂಜನೇಯ ದೇವಸ್ಥಾನ.
Kacheri Anjaneya Temple
ಸ್ಮಾರಕ ನೋಡಿ ಹಾಗೇ ಮುಂದೆ ಬರುತ್ತಿದ್ದಂತೆ ಒಂದು ಪಾರ್ಕ್ ಸಿಗುತ್ತದೆ. ಅದರಲ್ಲಿ ಸಿಗೋ ರಸ್ತೆಯಲ್ಲಿ ಎಡಕ್ಕೆ ಸ್ವಲ್ಪ ಚಲಿಸುವಷ್ಟರಲ್ಲಿ ಸುಮಾರು ಐವತ್ತಡಿಯೆತ್ತರದ ಆಂಜನೇಯನ ವಿಗ್ರಹ ಕಾಣುತ್ತದೆ. ಅದರ ಹೆಸರೇ ಕಛೇರಿ ಆಂಜನೇಯ ಸ್ವಾಮಿ ದೇವಸ್ಥಾನ.

Puratana Anjaneya temple, Devanahalli


ಜೈನ ದೇವಾಲಯಗಳು:
Stulabhadra Jain temple


Nakoda Avanti Jain Temple


ಹಾಗೆಯೇ ಮುಂದೆ ಬಂದರೆ ಎಡಗಡೆ ನಕೋಡ ಅವಂತಿ ದೇವಾಲಯ ಸಿಗುತ್ತದೆ. ನೂರಾ ಎಂಟು ಸಣ್ಣ ಸಣ್ಣ ಗುಡಿಗಳಿರುವ ನಕೋಡಾ ಅವಂತಿ ಜೈನದೇಗುಲದ ಪ್ರಧಾನ ದೇಗುಲ ಅವಂತಿ ದೇಗುಲದ ಕೆತ್ತನೆಗಳು ನೋಡುಗರ ಮನಸೆಳೆಯುತ್ತದೆ.
ಅದೇ ತರಹ ಬೆಟ್ಟದ ಮೇಲಿರುವ ಸಿದ್ದಾಚಲ ಸ್ಥೂಲಭದ್ರ ಧಾಮ ಕಣ್ಣು ಸೆಳೆಯುತ್ತದೆ. ಅದನ್ನು ಹತ್ತೋ ದಾರಿಯಲ್ಲಿ ಕಾಣುವ ಪ್ರಾಚೀನ ಆಂಜನೇಯ ದೇವಸ್ಥಾನ ಮತ್ತು ಸ್ಥೂಲಭದ್ರ ಧಾಮದ ಮೂರು ದೇಗುಲಗಳಲ್ಲಿರುವ ಕೆತ್ತನೆಯೂ ಚೆನ್ನಾಗಿವೆ.  ಇಲ್ಲಿಂದ ಬಲಬದಿಯಲ್ಲಿ ಕಾಣುವ ನಂದಿಬೆಟ್ಟದ ದೃಶ್ಯ, ಬಲಭಾಗದಲ್ಲಿ ಕಾಣೋ ದೇವನಳ್ಳಿ ಅಂತರಾಷ್ಟೀಯ ವಿಮಾನ ನಿಲ್ದಾಣದ ದೃಶ್ಯ, ದೇಗುಲವನ್ನು ಮುತ್ತಿಕ್ಕುತ್ತಿರುವ ನೀಲಿ ಮೋಡಗಳ ಚೆಲುವೂ ಪ್ರವಾಸಿಗರನ್ನು ದೇವನಹಳ್ಳಿಯತ್ತ ಕೈ ಬೀಸಿ ಕರೆಯುತ್ತವೆ.