Wednesday, January 15, 2014

ಸಂಕ್ರಾಂತಿ

ಸಂಕ್ರಾಂತಿ ಬಂತು ಅಂದ್ರೆ ಮಕ್ಕಳಿಗೆಲ್ಲಾ ಖುಷಿಯೋ ಖುಷಿ.ಶಾಲೆಗೆ ರಜಾ ಅನ್ನೋದಕ್ಕಿಂತಲೂ ಹೊಸ ಬಟ್ಟೆ ತೊಟ್ಟು ಎಳ್ಳು-ಬೆಲ್ಲ, ಕಬ್ಬು-ಸಕ್ಕರೆ ಅಚ್ಚು ತಗೊಂಡು ಮನೆ ಮನೆಗೆ ಎಳ್ಳು ಬೀರೋಕೆ ಹೋಗೋದೇ ಹೆಚ್ಚು ಖುಷಿ.ಹೊಸ ಲಂಗ ಧಾವಣಿ ತೊಟ್ಟ ಹುಡುಗಿಯರೇ ಈ ಎಳ್ಳು ಬೀರೋದ್ರಲ್ಲಿ ಹೆಚ್ಚಿದ್ರೂ ಅಕ್ಕನ ಜೊತೆ ಹೊರಟ ತಮ್ಮ, ಮನೆಯಲ್ಲಿ ಮಗ-ಮಗಳು ಎಲ್ಲಾ ತಾನೇ ಆಗಿರೋ ಮಾಣಿ.. ಹೀಗೆ ಹುಡುಗರೂ ಖುಷಿ ಖುಷಿಯಾಗಿ ಕಾಣ್ತಿರುತ್ತಾರೆ. ಭಾರತೀಯ ಹಬ್ಬಗಳೆಲ್ಲಾ ಚಾಂದ್ರಮಾನವಾದರೂ ಪ್ರತಿವರ್ಷ ಜನವರಿ ಹದಿನಾಲ್ಕಕ್ಕೇ ಸಂಕ್ರಾಂತಿ ಯಾಕೆ ಬರುತ್ತೆ ಅನ್ನೋದು ಸಣ್ಣವರಿದ್ದಾಗ ನಮಗೆಲ್ಲಾ ಬರುತ್ತಿದ್ದ ಸಂದೇಹ! ಎಳ್ಳು ಬೆಲ್ಲ ಹಂಚೋಕೆ ಹೋದಾಗ ಆ ಮನೆಯವರು ಕೊಟ್ಟ  ಸಕ್ಕರೆ ಅಚ್ಚಿನ ತರ ತರದ ಆಕಾರಗಳು ಬಾಯಲ್ಲಿ ನೀರೂರಿಸಿ ಹಬ್ಬ ಮುಗಿದ ಒಂದು ವಾರದವರೆಗೂ ಸಂಭ್ರಮ ಮುಂದುವರೆಸುತ್ತಿದ್ದವು.


ಹುಗ್ಗಿ ಅಥವಾ ಖಾರ ಪೊಂಗಲ್, ಸಿಹಿ ಪೊಂಗಲ್  ಮಾಡಿ, ಮನೆ ಎದುರು ದೊಡ್ಡ ದೊಡ್ಡ ರಂಗೋಲಿ ಹಾಕಿ ಕೆಲವರು ಸಂಭ್ರಮಿಸಿದ್ರೆ ಗಾಳಿಪಟ ಹಾರಿಸೋದು ಕೆಲ ಕಡೆಯ ಸಂಭ್ರಮ. ಗುಜರಾತ್, ಹೈದರಾಬಾದಿನ ಬೀದಿ, ಮೈದಾನಗಳಲ್ಲಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ಗಾಳಿಪಟಗಳು. ಬಣ್ಣದ ಕಾಗದ, ಗಾಳಿಪಟ, ಹಗ್ಗ ಮಾರುವವರು ಅಂದು ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ತಮಿಳ್ನಾಡಲ್ಲಿ ಪೊಂಗಲ್ಲಾದರೆ ಗುಜರಾತು ರಾಜಸ್ಥಾನಗಳಲ್ಲಿ ಉತ್ತರಾಯಣಂ. ಹಯ್ರಾಣದಲ್ಲಿ ಮಾಘಿಯಾದರೆ ಪಂಜಾಬಲ್ಲಿ ಲೊಹ್ರಿ. ಜಮ್ಮು ಕಾಶ್ಮೀರದಲ್ಲಿ ಶಿಶುರ್ ಸೇಂಕ್ರಾಂತಾದರೆ ಉತ್ತರ ಪ್ರದೇಶದಲ್ಲಿ ಖಿಚಡಿ ಅಂತ ಕರೀತಾರಂತೆ ಈ ಹಬ್ಬಕ್ಕೆ ! ಖಿಚಡಿ ಅಂದಾಕ್ಷಣ  ಅಕ್ಕಿ, ಬೇಳೆ, ತಿಂಡಿ ನೆನ್ಪಾಯ್ತಾ ? ಹೂಂ.ಈ ಸಂಕ್ರಾಂತಿಗೂ ನಮ್ಮ ಹೊಟ್ಟೆ ತುಂಬಿಸೋ ಹೊಲಗಳಿಗೂ  ಹತ್ತಿರದ ಸಂಬಂಧವೇ. ಫಸಲಿನ ಕಟಾವು ಮಾಡೋ "ಸುಗ್ಗಿ ಹಬ್ಬ" ಬರೋದು ಇದೇ ಸಂದರ್ಭದಲ್ಲಿ. ಉಳುಮೆಗೆ ಸಹಾಯ ಮಾಡಿ ನಮ್ಮ ಸಂಸಾರ ನೊಗ ಹೊರ್ತಾ ಇರೋ ಎತ್ತುಗಳನ್ನು ಪೂಜಿಸಿ ಕೆಂಡಗಳ ಮೇಲೆ ಓಡಿಸೋ "ಕಿಚ್ಚು ಹಾಯಿಸೋದು" ನಡೆಯೋದೂ ಇದೇ ಸಂದರ್ಭ. ನೆರೆಯ ನೇಪಾಳದಲ್ಲಿ ಮಾಘೆ, ಶ್ರೀಲಂಕಾದಲ್ಲಿ ಉಳಾವರ್ ತಿರುನಾಳ್ ಅಂತ ಕರೆಸಿಕೊಳ್ಳೋ ಸಂಕ್ರಾಂತಿಯ ಆಚರಣೆ ಅಷ್ಟಕ್ಕೇ ಸೀಮಿತಗೊಳ್ಳದೇ ಏಶಿಯಾದ ಇತರ ಹಲವು ರಾಷ್ಟ್ರಗಳಿಗೂ ಹಬ್ಬಿದೆಯಂತೆ. ಥಾಯಲ್ಯಾಂಡಲ್ಲಿ ಸೊಂಗ್ ಕ್ರಾನ್, ಕಂಬೋಡಿಯಾದಲ್ಲಿ ಮೊಹಾ ಸಂಗ್ರಾಮ್, ಸ್ಲಾವೋಸಲ್ಲಿ ಪಿ ಮಾ ಲಾವೋ, ಮಯನ್ಮಾರಲ್ಲಿ ತಿಂಗ್ಯಾನ್ ಅನ್ನೋ ನಾನಾ ನಾಮಗಳು, ಬಗೆ ಬಗೆಯ ಸಂಭ್ರಮ ಇದಕ್ಕೆ.


ಸಂಕ್ರಾಂತಿ ಅಂದರೆ ಹನ್ನೆರಡು ರಾಶಿಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಸೂರ್ಯನ ಚಲನೆ ಎಂಬ ಅರ್ಥವಿದೆ. ಅಂದರೆ ಹನ್ನೆರಡು ಸಂಕ್ರಾಂತಿಗಳಾಯಿತಲ್ಲವೇ ? ಹೌದು. ಸೌರಮಾನ ಪಂಚಾಂಗದ ಪ್ರಕಾರ ಸಂಕ್ರಾಂತಿಯೆಂಬುದು ಪ್ರತೀ ಮಾಸದ ಮೊದಲ ದಿನ. ಅದೇ ರೀತಿ ಸೂರ್ಯ ಮಕರ ರಾಶಿಗೆ ಕಾಲಿಡೋ ದಿನವೇ ಮಕರ ಸಂಕ್ರಾಂತಿ. ಮಕರ ರಾಶಿಯ ಅಧಿಪತಿ ಶನಿ.ಜಗದ ಎಲ್ಲಾ ಶಕ್ತಿಮೂಲ ಸೂರ್ಯ ತನ್ನ ಮಗನಾದ ಶನಿಯ ಮನೆಗೆ ವರ್ಷಕ್ಕೊಮ್ಮೆ ಮಾತ್ರ ಹೋಗುತ್ತಾನಂತೆ. ಆ ದಿನವೇ ಮಕರ ಸಂಕ್ರಾಂತಿ ಎಂದೂ ಪ್ರತೀತಿಯಿದೆ. ಮಕರ ಸಂಕ್ರಾಂತಿಯಿರುವಂತೆಯೇ ಹಿಂದೂ ಸೌರಮಾನ ಕ್ಯಾಲೆಂಡರಿನ ಮೊದಲ ದಿನವೆಂದು ಆಚರಿಸಿಕೊಳ್ಳುವ ಮಹಾ ವಿಷ್ಣು ಸಂಕ್ರಾಂತಿ (ಏಪ್ರಿಲ್ ೧೪), ಧನು ಸಂಕ್ರಾಂತಿ(ಚಾಂದ್ರಮಾನದ ಪುಷ್ಯ ಮಾಸದ ಮೊದಲ ದಿನ) ಅನ್ನೋ ಆಚರಣೆಗಳು ಭಾರತದ ಕೆಲವು ಭಾಗಗಳಲ್ಲಿ ಇದ್ದರೂ ನಮಗೆಲ್ಲಾ ಸಂಕ್ರಾಂತಿಯೆಂದರೆ ಜನವರಿ ೧೪ರ ಸಂಕ್ರಾಂತಿಯೇ ನೆನಪಾಗೋದು. ಈ ಸಂಕ್ರಾಂತಿಯಿಂದ ಉತ್ತರಾಯಣ ಪುಣ್ಯ ಕಾಲ ಪ್ರಾರಂಭ.ಮಕರ ಸಂಕ್ರಾತಿಯಿಂದ ಜೂನ್ ೨೧ಕ್ಕೆ ಬರೋ ಕರ್ಕ ಸಂಕ್ರಾಂತಿಯವರೆಗಿನ ಆರು ತಿಂಗಳ ಕಾಲವೇ ಉತ್ತರಾಯಣ. ಅಯಣ ಎಂದರೆ ಚಲನೆ ಎಂದರ್ಥ. ಉತ್ತರಾಯಣ ಎಂದರೆ ಸೂರ್ಯನ ಉತ್ತರ ದಿಕ್ಕಿನ ಚಲನೆ ಎನ್ನಬಹುದು. ಈ ಉತ್ತರಾಯಣ ಎನ್ನೋದು ದೇವರ ಒಂದು ದಿನ, ಕರ್ಕ ಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗೆ ಬರೋ ದಕ್ಷಿಣಾಯಣ ದೇವರ ಒಂದು ರಾತ್ರಿ ಎಂಬ ನಂಬಿಕೆಯೂ ಇದೆ. ಉತ್ತರಾಯಣ ಅಂದಾಗ ನೆನಪಾಗೋದು ಮಹಾಭಾರತದ ಭೀಷ್ಮ ಪಿತಾಮಹ. ಶರಶಯ್ಯೆಯಲ್ಲೇ ಮಲಗಿದ್ದರೂ ಉತ್ತರಾಯಣದಲ್ಲೇ ಮರಣಹೊಂದಬೇಕೆಂದು ಭೀಷ್ಮ ಪಿತಾಮಹ ಕಾದಿದ್ದನಂತೆ. ಉತ್ತರಾಯಣದಲ್ಲಿ ಮರಣ ಹೊಂದಿದರೆ ಸದ್ಗತಿಯ ಪ್ರಾಪ್ತಿಯೆಂಬುದು ಅನೇಕರ ನಂಬಿಕೆ.

ಈ ಸಂದರ್ಭದಲ್ಲಿ ಸಂಕ್ರಾಂತಿಯ ಬಗ್ಗೆ ಅಮ್ಮ ಹೇಳ್ತಿದ್ದ ಮಾತು ನೆನಪಾಗುತ್ತೆ. ಸಂಕ್ರಾಂತಿ ಬರೋದು ಚಳಿಗಾಲದಲ್ಲಿ..ಚರ್ಮ ಚಳಿಗೆ ಒಣಗುತ್ತಿರೋ ಸಮಯದಲ್ಲಿ ದೇಹಕ್ಕೆ ಎಣ್ಣೆಯ ಅಂಶದ ಅವಶ್ಯಕತೆ ಇರತ್ತೆ. ಎಳ್ಳಿಗಿಂತ ಹೆಚ್ಚು ಎಣ್ಣೆಯಿರೋ ವಸ್ತು ಬೇಕೇ ? ಅದೇ ರೀತಿ ಕಬ್ಬಿಣದ ಅಂಶ ಹೆಚ್ಚಿರೋ ಬೆಲ್ಲ, ಅದರ ಹೆತ್ತವ್ವ ಕಬ್ಬು, ಮತ್ತೆ ಎಣ್ಣೆಯೊದಗಿಸುವ ಕಡಲೆ .. ಹೀಗೆ ನಮ್ಮ ಸಂಕ್ರಾಂತಿ ಆಚರಣೆ ಹಿಂದೆ ನಮ್ಮ ಹಿರಿಯರ ಎಷ್ಟೆಲ್ಲಾ ಮುಂದಾಲೋಚನೆಗಳು ಅಡಗಿದೆ ಅಂತ.


ನಮ್ಮಲ್ಲಿನ ಹಬ್ಬದ ಪರಿಪಾಟ ಹೇಗೂ ನಮಗೆ ಗೊತ್ತೇ ಇರತ್ತೆ.. ಆದರೆ ಈ ಸಲ ಭಾರತದ ಬೇರೆ ಬೇರೆ ಭಾಗದ ಸ್ನೇಹಿತರು ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಅನ್ನೋ ಮಾಹಿತಿ ಕಲೆ ಹಾಕೋ ಯೋಚನೆ ಮೂಡಿತು. ಅದರಲ್ಲಿ ಕೆಲವರಿಗೆ ಕಳಿಸಿದ ಸಂದೇಶಗಳಿಗೆ ಸಿಕ್ಕ ಉತ್ತರಗಳು.. ನಿಮ್ಮ ಮುಂದೆ. ಇಷ್ಟವಾಗಬಹುದೆಂಬ ನಿರೀಕ್ಷೆಯಲ್ಲಿ. ದೆಲ್ಲಿಯ ಗೆಳೆಯನ ಪಾಲಿಗೆ ಸಂಕ್ರಮಣವೆಂದರೆ ಲಾಡು ಹಬ್ಬವಂತೆ ! ಲಾಡು ತಿನ್ನೋದ್ರ ಜೊತೆಗೆ ಗಾಳಿಪಟ ಹಾರಿಸೋದು ಇನ್ನೊಂದು ಖುಷಿಯಂತೆ ಅಲ್ಲಿ. ಮತ್ತೊಬ್ಬ ಉತ್ತರಪ್ರದೇಶದ ಗೆಳೆಯನ ಪ್ರಕಾರ ಅಲ್ಲಿ ಈ ಸಂದರ್ಭದಂತೆಯೇ ನವರಾತ್ರಿಯ ಪಂಚಮಿಯಂದೂ ಗಾಳಿಪಟ ಹಾರಿಸುತ್ತಾರಂತೆ. ಬೆಂಗಾಲಿ ಗೆಳೆಯನಿಗೆ ಹಾಲು, ಅಕ್ಕಿ, ಬೆಲ್ಲ ಹಾಕಿ ತಯಾರಿಸಿದ ಪೀಥಾ ಅನ್ನೋ ಸ್ವೀಟೇ ಸಂಕ್ರಾಂತಿ ಸಂಭ್ರಮಬೆಂಗಳೂರಿನ ಗವಿಪುರದಲ್ಲಿನ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳೋ ವರ್ಷದ ಏಕಮಾತ್ರ ದಿನವೂ ಸಂಕ್ರಾಂತಿಯೇ. ಆಗಿನವರ ವೈಜ್ನಾನಿಕ ಪ್ರಜ್ನೆ ಹೆಮ್ಮೆ ತರುತ್ತದೆ.

ನಮ್ಮಲ್ಲಿ ಒಂದು ದಿನದ ಆಚರಣೆಯ ಈ ಹಬ್ಬದ ಆಚರಣೆ ನೆರೆಯ ಆಂಧ್ರದಲ್ಲಿ ನಾಲ್ಕು ದಿನ ನಡೆಯುತ್ತದೆಯಂತೆ.ಮೊದಲ ದಿನ ಮನೆ, ಮನದಲ್ಲಿರೋ ಹಳೆಯ , ನಿರುಪಯೋಗಿ ವಸ್ತುಗಳನ್ನ ಹೊರಹಾಕೋ "ಭೋಗಿ" ಹಬ್ಬ. ಸಂಜೆಯ ಹೊತ್ತಿಗೆ ಊರ ಹೊರಗೆ ಒಂದು ಕಡೆ ಬೆಂಕಿ ಹಾಕಿ ಮನೆಯಲ್ಲಿರೋ ನಿರುಪಯುಕ್ತ ಮರದ ವಸ್ತುಗಳನ್ನ ಸುಡೋ ಪದ್ದತಿಯೂ ಇದೆಯಂತೆ ಕೆಲಕಡೆ. ಮನೆ ಮನಗಳಲ್ಲಿರೋ ರಾಕ್ಷಸತ್ವವನ್ನು ಸುಟ್ಟು, ಸದ್ಭಾವನೆಗಳಿಗೆ, ಮನುಷ್ಯತ್ವಕ್ಕೆ ಜಾಗ ಮಾಡಿ ಕೊಡೋ ಸದುದ್ದೇಶ ಅಡಗಿರಬಹುದು ಅದರ ಹಿಂದೆ. ಎರಡನೇ ದಿನ ಮಕರ ಸಂಕ್ರಾಂತಿ. ಮಕರ ಸಂಕ್ರಾಂತಿ ಅಂದ್ರೆ ಕೇರಳದ ಶಬರಿಮಲೆಯ ಮಕರ ಸಂಕ್ರಮಣದ ಆಚರಣೆ ಮತ್ತು ಸಂಜೆಯ ಮಕರ ಜ್ಯೋತಿಯ ನೆನಪೂ ಆಗುತ್ತದೆ. ಮತ್ತೆ ಆಂಧ್ರದ ಸಂಕ್ರಾತಿಯ ಕತೆಗೆ ಹೊರಳಿದರೆ ಎರಡನೇ ದಿನದ ಸಂಕ್ರಾಂತಿಯನ್ನು ಪೆದ್ದ ಪಂಡುಗ(ದೊಡ್ಡ ಹಬ್ಬ) ಅಂತ ಕರೆಯುತ್ತಾರಂತೆ ಅಲ್ಲಿ. ಗತಿಸಿದ ಪೂರ್ವಜರಿಗೆಲ್ಲಾ ನಮಿಸೋ ಪುಣ್ಯ ದಿನ ಅಂದು. ಮೂರನೇ ದಿನವನ್ನು "ಕನುಮ" ಎಂದು ಹೊಸ ಬಟ್ಟೆ ತೊಟ್ಟ ಹೆಣ್ಣು ಮಕ್ಕಳು ಗೋಪೂಜೆ, ಹಕ್ಕಿ ಪಕ್ಷಿ, ಪ್ರಾಣಿ, ಮೀನುಗಳಿಗೆ ಅನ್ನವಿಕ್ಕೋದ್ರಲ್ಲಿ ತೊಡಗುತ್ತಾರಂತೆ. ನಾಲ್ಕನೇ ದಿನ "ಮುಕ್ಕನುಮ" ಮಾಂಸಾಹಾರಿಗಳ ಸುಗ್ಗಿ.ಮೊದಲ ಮೂರು ದಿನ ಮಾಂಸ ತಿನ್ನದ ಅವರಿಗೆ ನಾಲ್ಕನೆಯ ದಿನ ಹಬ್ಬವೋ ಹಬ್ಬ.

ಭಾರತದಲ್ಲಿ ರಾಜ್ಯ, ಭಾಷೆಗಳ ವೈವಿಧ್ಯತೆ ಎಷ್ಟಿದೆಯೋ ಅದೇ ತರ ಸಂಕ್ರಾಂತಿ ಆಚರಣೆಯಲ್ಲೂ ಇದೆ. ಗುಜರಾತಲ್ಲಿ ಮೊದಲ ದಿನ ಉತ್ತರಾಯಣ, ಎರಡನೆಯ ದಿನ ವಸಿ ಉತ್ತರಾಯಣ ಅಂತ ಆಚರಿಸಿದರೆ ಅಸ್ಸಾಮಿನ ಬಿಹುವಿನದು ಒಂದು ವಾರದ ಆಚರಣೆ ! ಗೂಳಿ ಕಾಳಗ, ಕೋಳಿ ಕುಸ್ತಿ, ಹಲ ತರ ವಾದ್ಯಗಳ ನುಡಿಸೋದು.. ಹೀಗೆ ಆಚರಣೆಯ ಪರಿಯೇ ಬೇರೆ. ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ.. ಹೀಗೆ ಹಲವು ಪ್ರದೇಶಗಳ ಸ್ನೇಹಿತರನ್ನು ಕೇಳುತ್ತಾ, ಅಲ್ಲಿನ ಸಂಕ್ರಾಂತಿ ಆಚರಣೆಯ ಪರಿ ದಾಖಲಿಸುತ್ತಾ ಹೋದರೆ ಒಂದು ಪುಟ ಖಂಡಿತಾ ಸಾಕಾಗೊಲ್ಲ..ಮನೆ ಮನಗಳನ್ನು ಒಂದುಗೂಡಿಸೋ ಈ ಹಬ್ಬ ಹದಿನೈದಕ್ಕೇ ಬರುತ್ತೆ ಅನ್ನೋದು ಸಾಮಾನ್ಯ ನಂಬಿಕೆಯಾದರೂ ಅದನ್ನ ತಳ್ಳಿ ಹಾಕುತ್ತಾರೆ ಖಗೋಳ ಶಾಸ್ತ್ರಜ್ಞರು. ಭೂಮಿಯ ಕಕ್ಷೆಯಲ್ಲಿ ನಿಧಾನಗತಿಯ ಬದಲಾವಣೆ ಆಗ್ತಿರೋ ಹಾಗೆಯೇ ಸೂರ್ಯ ಮಕರ ರಾಶಿಗೆ ಪ್ರವೇಶಿಸೋ ದಿನದ  ಈ ಹಬ್ಬವೂ ಮುಂದಕ್ಕೆ ಸರಿಯುತ್ತಂತೆ..ಸಾವಿರ ವರ್ಷಗಳ ಹಿಂದೆ ೩೧ ಡಿಸೆಂಬರಲ್ಲಿದ್ದ ಈ ಹಬ್ಬ ಈಗ ಈ ದಿನಕ್ಕೆ ಬಂದಿದೆಯಂತೆ. ೨೦೫೦ರಲ್ಲಿ ಇದು ಜನವರಿ ಹದಿನೈದರಂದು ಬರುತ್ತೆ ಅನ್ನುತ್ತೆ ಮತ್ತೊಂದು ಲೆಕ್ಕಾಚಾರ. ಏನೇ ಆಗ್ಲಿ, ಎಂದೇ ಬರ್ಲಿ, ಏನೆಂದೇ ಕರೆಸಿಕೊಳ್ಲಿ ಸಂಕ್ರಾಂತಿ ಸಂಕ್ರಾಂತಿಯೇ.  ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ ಅಲ್ವಾ ಎಂಬ ಸದುದ್ದೇಶವನ್ನು ಪ್ರತೀ ಸಲದಂತೆ ಈ ಸಲವೂ ತರಲೆಂಬ ಹಾರೈಕೆಯೊಂದಿಗೆ..

4 comments:

  1. ಅಬ್ಬಾ.. ಬಹಳ ವಿಷಯಗಳಿವೆ ನಾ ತಿಳಿದುಕೊಳ್ಳಲು... :)
    ತಡವಾಯಿತು... ಆದರೂ ಸಂಕ್ರಾಂತಿಯ ಶುಭಾಶಯಗಳು.. ಮತ್ತು ಮಾಹಿತಿಯುಕ್ತ ಬರಹಕ್ಕಾಗಿ ಧನ್ಯವಾದಗಳು..

    ReplyDelete
    Replies
    1. ಹೆ ಹೆ.. ಅಡ್ಡಿಲ್ಲೆ ಬಿಡು ಸುಷ್ಮಾ.. ನಿಂಗೂ ಸಂಕ್ರಾಂತಿ ಶುಭಾಶಯಗಳು :-)

      Delete
  2. ಉತ್ತಮ ಲೇಖನ , ಅಭಿನ೦ದನೆಗಳು.

    ReplyDelete
    Replies
    1. ಧನ್ಯವಾದಗಳು ಪ್ರಭಾಕ್ಕ

      Delete