Wednesday, January 29, 2014

ಗಣತಂತ್ರ ದಿನ

ನೂರು ಚೂರನು ಹೊಲಿದು ಒಂದು ಭಾರತವೆಂದೆ
ರಾಜ್ಯ, ಭಾಷೆಯ, ಮತದ ಜಗಳಕೆಂದೆ ?
ಅವ ಮೆಂದ, ಇವ ತಿಂದ, ಮತ್ತೊಬ್ಬ ಮಾಡದಿಹ
ಸತ್ಕಾರ್ಯ ಬೇಡುವುದೆ ಉಳಿದ ಮಂತ್ರ ?

ಸುತ್ತಲಿಹ ಜೀವಗಳ ಶತ್ರುಗಳ ಪರಿ ನೀನು
ದೂರತಳ್ಳುವ ,ಬಡಿವ ಪರಿಯು ಸರಿಯೆ ?
ನಿನ್ನ ನಾಡಿಯ ಮಿಡಿತ, ನೆರಳೇ ನೆರಹೊರೆಯವರು
ನೀರ ಹೊರಗಣ ಮೀನು ಅವರು ತೊರೆಯೆ

ಅನುಕ್ಷಣವೂ ಜನ್ಮದಾತೆಯ ಕರುಳ ಹಿಂಡುತಿಹ
ಕಾಡುವಿಕೆ, ಕಲಹಗಳ ಕ್ರೂರ ಶಿಶುವೆ
ಗಣತಂತ್ರ ರಜೆಯಲ್ಲ ಹೊದ್ದ ನಿದ್ದೆಯನೊದೆಯೊ
ದೇಶ ಕಾದಿದೆ ನಿನಗೆ ಮೂಢ ಮನವೇ

ನಮ್ಮೊಳಗೆ ನಾರುತಿಹ ನೂರು ಹಳೆ ದೂರುಗಳು
ನಲ್ಮೆ ಮಾತುಗಳರುಹೆ ಬೇಕೆ ಕೇಸು ?
ಹಣವೆಂದು, ಗಣಿಯೆಂದು ಹಗೆಯ ಕಾದಿಹ ಜನರು
ತಾಯ ನಗುವನೆ ಸುಟ್ಟು ತಿಂದರೆಂದೋ

ಬೇಕಿಲ್ಲ ಭಾರತಿಗೆ ಮಣ ಹೊನ್ನು, ಮಕರಂದ
ಮಕ್ಕಳೆಲ್ಲರು ಕೂಡೆ ಅದುವೆ ಚೆಂದ
ಶಿಶುವಾಗು ತಪ್ಪುಗಳ ಶಿಶುಪಾಲನಾಗದಿರು
ಕ್ಷಮಿಸುವವಳೇ ತಾಯಿ ನಿನ್ನ ಕಂದ
ಮುಡುಪೆನ್ನು ಒಂದು ಕ್ಷಣ ದಿನದಲ್ಲಿ ದೇಶಕ್ಕೆ
ಇಲ್ಲಿರುವ ಜನರೆಲ್ಲ ಬಂಧುವೆನ್ನು
ಈ ನಾಡೇ ಸಕಲ ಸುಖ ಸಿಂಧುವೆನ್ನು


ಗೆಳೆಯನೊಬ್ಬನ ಕೋರಿಕೆಯ ಮೇರೆಗೆ ಕವನದ ಭಾವಾರ್ಥ( ನಾ ಬರೆಯುವಾಗ ಅಂದುಕೊಂಡಂತೆ)
೧)ರಾಜರ ಸಂಸ್ಥಾನಗಳು ಅಂತ ಹರಿದು ಹಂಚಿ ಹೋಗಿದ್ದನ್ನ ಸರ್ದಾರರು ಅಖಂಡ ಭಾರತ ಅಂತ ಒಂದು ಮಾಡಿದ್ರು. ಆದ್ರೆ ನಾವು ಆ ರಾಜ್ಯ, ಈ ರಾಜ್ಯ ಅಂತ ೬೫ ವರ್ಷಗಳಿಂದಲೂ ಒಡಿತಾನೇ ಇದೀವಿ..ಜೊತೆಗೆ ಆ ಭಾಷೆಯವನು, ಈ ಮತದವನು, ಅವನು ನಮ್ಮವನಲ್ಲವೆಂಬ ಭಿನ್ನಮತಗಳು ಬೇರೆ. ಬರೀ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಬೈದಿದ್ದೇ ಆಯ್ತು. ರಾಜಕಾರಣಿಗಳು ಮಾಡದ ಕೆಲಸಗಳ ಬಯಸಿದ್ದೇ ಆಯ್ತು. ಈ ಬಯಸುವಿಕೆ, ಬೇಡುವಿಕೆಗಳೇ ನಮಗೆ ಉಳಿದಿರುವ ಕೊನೆಯ ಉಪಾಯವೇ ?


2)ನಿನ್ನ ಸುತ್ತಮುತ್ತಲಿರುವವರು ನಿನ್ನ ಮಿತ್ರರೇ ಕಣೋ. ಶತ್ರುಗಳಲ್ಲ. ಅವರನ್ಯಾಕೆ ಆ ಪರಿ ದ್ವೇಷಿಸುತ್ತೀ ? ದೂರ ತಳ್ಳುತ್ತೀ ? ನಿನ್ನಂತರಂಗಕ್ಕೊಂದು ಕನ್ನಡಿಯಷ್ಟೇ ಅವರು. ನೀನು ಒಳ್ಳೆಯವನಾದರೆ ನಿನ್ನ ನೆರೆಯವರೂ ಒಳ್ಳೆಯವರು. ನಿನ್ನಷ್ಟೇ ರಕ್ಕಸರವರು.ನಿನ್ನ ನೆರಳಂತೇ ಕಷ್ಟದು:ಖಗಳಲ್ಲಿ ಜೊತೆಗಿರೋ ಸಾಥಿಗಳವರು. ಅವರಿಲ್ಲದೇ ನೀನುಂಟೇ ? ಅವರಿಲ್ಲದ ನೀನು ನೀರಿನಿಂದ ಬೇರ್ಪಟ್ಟ ಮೀನಿನಂತೆ..

3)ತಾಯಿ ಭಾರತಿಯ ಮಕ್ಕಳೇ ಆದ ನಮ್ಮ ನಮ್ಮೊಳಗೆ ನೂರೆಂಟು ವ್ಯಾಜ್ಯ. ನೀರು, ಗಡಿ, ಗಣಿಯೆಂದು ಹಲ ಹೆಸರಷ್ಟೇ ಅದಕ್ಕೆ. ನಮ್ಮಂತರಾಳದ ಮುನಿಸುಗಳನ್ನು, ಕೊಳೆತು ನಾರುತ್ತಿರುವ ಸಂಬಂಧಗಳನ್ನ ನಾವೇ ಸರಿಪಡಿಸಿಕೊಳ್ಳುವ ಬದಲು ಅದನ್ನು ಜಗಕೇ ಸಾರು ನೂರು ಕೇಸುಗಳು ಬೇಕೇ ? ಹೆತ್ತ ಕುಡಿಗಳು ಈ ರೀತಿ ಕಚ್ಚಾಡುತ್ತಿರುವ ವ್ಯಥೆಗೆ ಹೆತ್ತ ತಾಯ ನಗು ಎಂದೋ ಸುಟ್ಟು ಕರಕಲೆದ್ದು ಹೋಗಿದೆ  

4)ತಾಯಿ ಭಾರತಿಗೆ ಮಕ್ಕಳಿಂದ ಹೆಚ್ಚಿನ ನಿರೀಕ್ಷೆಯಿಲ್ಲ. ಹೊರೆ ಬಂಗಾರವೋ, ಜೇನಿನ ಹೊಳೆಯೋ ಬೇಕಿಲ್ಲ ಆಕೆಗೆ.ಬೇಕಿರುವುದು ಮಕ್ಕಳ ಕೂಡು ಬಾಳ್ವೆಯಷ್ಟೇ. ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ತಪ್ಪು ಮಾಡುತಲಿರುವುದೇ ಜೀವನವೆಂಬಂತೆ ಕ್ಷಮೆ, ಸಹನೆಯನ್ನು ಅಶಕ್ತತೆಯೆಂದು ತಪ್ಪು ತಿಳಿದು ಜೀವ ಕಳೆದುಕೊಳ್ಳುವ ಶಿಶುಪಾಲನಾಗದೇ ತಪ್ಪುಗಳಲೆಡವಿದಾಗ ಪಾಠ ಕಲಿತು ಮುಂದಿನ ಹೆಜ್ಜೆಯ ಸರಿಯಾಗಿ ಇಡುವ ಮಗುವಾಗು ಮನವೇ.ಕ್ಷಮೆಯೇ ತಾಯಲ್ಲವೇ ? ನಾಳೆಯ ನಿನ್ನ ಒಳ್ಳೆಯ ಹೆಜ್ಜೆಗಳ ಮುಂದೆ ನಿನ್ನೆಯ ಕೆಡುಕುಗಳ ಮುನಿಸ ಮರೆತುಬಿಡುತ್ತಾಳೆ ಭಾರತೀ. ಇನ್ನಾದರೂ ಬದಲಾಗೋ ಮನವೇ.ಇಷ್ಟು ದಿನ ಕಚ್ಚಾಡಿದ್ದು ಆಯಿತು. ಇಂದಾದರೂ ನಾವೆಲ್ಲಾ ಒಂದೇ ಎಂದು, ದಿನದಲ್ಲಿ ಕೊಂಚ ವೇಳೆಯನಾದರೂ ದೇಶಕ್ಕಾಗಿ ಆಲೋಚಿಸುವ, ನಾಡ ಏಳಿಗೆಗೆಂದು ಬದುಕಬಯಸುವಂತವನಾಗು ಮನವೇ. . 

1 comment:

 1. ಮೂಲ ಮತ್ತು ಭಾವಾರ್ಥಗಳ ಮೂಲಕ ನಮ್ಮ ಮನಸ್ಸು ಗೆದ್ದ ಕವನ.
  ನೀವು ಕಥನದಲ್ಲೂ ಮತ್ತು ಕವನದಲ್ಲೂ first ಕ್ಲಾಸ್.
  best :
  "ಗಣತಂತ್ರ ರಜೆಯಲ್ಲ ಹೊದ್ದ ನಿದ್ದೆಯನೊದೆಯೊ
  ದೇಶ ಕಾದಿದೆ ನಿನಗೆ ಮೂಢ ಮನವೇ"

  ReplyDelete