Saturday, March 19, 2016

ಕರ್ನಾಟಕದ ಹೊಯ್ಸಳ ದೇವಾಲಯಗಳು - ೧೫ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ

Kedareshwara Temple, Balligavi

ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಹುಡುಕುತ್ತಾ ಹೊರಟ ನಾನು ನಂತರ ಭೇಟಿ ನೀಡಿದ್ದು ಬಳ್ಳಿಗಾವಿಗೆ. ಅಲ್ಲಮಪ್ರಭು ಮತ್ತು ನಾಟ್ಯರಾಣಿ ಶಾಂತಲೆಯ ಹುಟ್ಟೂರಾದ ಬಳ್ಳಿಗಾವಿಯಲ್ಲಿ ಅನೇಕ ಹೊಯ್ಸಳ ದೇವಸ್ಥಾನಗಳಿವೆ. ಅವುಗಳಲ್ಲಿ ಕೇದಾರೇಶ್ವರ, ತ್ರಿಪುರಾಂತಕೇಶ್ವರ,ಸೋಮೇಶ್ವರ, ನೀಲಕಂಠೇಶ್ವರ, ಅಲ್ಲಮಪ್ರಭು ದೇವಾಲಯ,ಪಂಚಲಿಂಗೇಶ್ವರ, ಭೇರುಂಡೇಶ್ವರ ದೇವಾಲಯಗಳು ಪ್ರಮುಖವಾದವು
Infront of Nandi Mantapa of Kedareshwara temple, Balligave
 ಹೋಗುವುದು ಹೇಗೆ ?
ಸಾಗರ ಮತ್ತು ಶಿವಮೊಗ್ಗದಿಂದ  ಶಿರಾಳಕೊಪ್ಪಕ್ಕೆ ನೇರೆ ಬಸ್ಸುಗಳಿವೆ. ಅಲ್ಲಿಂದ ಬಳ್ಳಿಗಾವಿಗೆ ೨.೩ಕಿ.ಮೀ. ಅಲ್ಲಿಂದ ಆನವಟ್ಟಿಗೆ ಹೋಗುವ ಬಸ್ಸುಗಳೆಲ್ಲ ಬಳ್ಳಿಗಾವಿಯ ಮುಖಾಂತರ ಹೋಗುತ್ತವೆ.
ಸಾಗರದಿಂದ ಬಳ್ಳಿಗಾವಿಗೆ ಹೋಗುವ ನೇರ ಬಸ್ಸಿದೆ. ಹಾವೇರಿಗೆ ಹೋಗುವ ಈ ಬಸ್ಸು ಬೆಳಗ್ಗೆ ೮:೦೫ ಕ್ಕೆ ಸಾಗರದಿಂದ ಹೊರಡುತ್ತದೆ. ತಲಾ ೫೦ ರೂ ಚಾರ್ಚ್. ೯:೧೫ ಕ್ಕೆ ಶಿಕಾರಿಪುರ ತಲುಪುವ ಇದು ೯:೩೫ ಕ್ಕೆ ಶಿಕಾರಿಪುರ ಬಿಟ್ಟು ೯:೪೫ ರ ಹೊತ್ತಿಗೆ ಬಳ್ಳಿಗಾವಿ ತಲುಪುತ್ತದೆ. ಪುರಾತತ್ವ ಇಲಾಖೆಗೆ ಸೇರಿರುವ ಕೇದಾರೇಶ್ವರ ದೇಗುಲ ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ತೆರೆದಿದ್ದು ಇದರ ಪಕ್ಕದಲ್ಲಿರುವ ಪುರಾತತ್ವ ಇಲಾಖೆಯ ಮ್ಯೂಸಿಯಂ ಅನ್ನೂ ಸಂದರ್ಶಿಸಬಹುದು.

ಕೇದಾರೇಶ್ವರ ದೇಗುಲದಲ್ಲಿರುವ ಅಲಂಕೃತ ನಂದಿ

 ಅಲ್ಲಮಪ್ರಭು ಮತ್ತು ನಾಟ್ಯರಾಣಿ ಶಾಂತಲೆಯ ಹುಟ್ಟೂರಾದ ಬಳ್ಳಿಗಾವಿಯಲ್ಲಿ ಅನೇಕ ಹೊಯ್ಸಳ ದೇವಸ್ಥಾನಗಳಿವೆ. ಅವುಗಳಲ್ಲಿ ತ್ರಿಪುರಾಂತಕೇಶ್ವರ, ಗಂಡಭೇರುಂಡ,ಸೋಮೇಶ್ವರ, ಪಂಚಲಿಂಗೇಶ್ವರ ದೇವಾಲಯಗಳು ಪ್ರಮುಖವಾದದು.


ಬಳ್ಳಿಗಾವಿಯ ಇತಿಹಾಸ
ವಿಷ್ಣುವಿನ ಐದನೇ ಅವತಾರವಾದ ವಾಮನಾವತಾರದಲ್ಲಿ ತ್ರಿವಿಕ್ರಮನಾಗಿ ಬೆಳೆಯುವ ವಾಮನನಿಂದ ಪಾತಾಳಕ್ಕೆ ದೂಡಲ್ಪಟ್ಟ ಬಲಿಚಕ್ರವತ್ರಿಯ ರಾಜಧಾನಿಯಾಗಿದ್ದ ಜಾಗವಿದು ಎಂದು ಹೇಳುತ್ತಾರೆ.  ಆದಕಾರಣ ಇದನ್ನು ಬಲಿಪುರವೆಂದು,ಅನಾಧಿರಾಜಧಾನಿಯೆಂದೂ, ಮಾತೃನಗರವೆಂದೂ ಕರೆಯಲಾಗುತ್ತಿತ್ತಂತೆ. ದಕ್ಷಿಣ ಕೇದಾರವೆಂದೂ ಪ್ರಸಿದ್ಧವಾಗಿದ್ದ ಬಳ್ಳಿಗಾವೆ ಕಾಲಾಂತರದಲ್ಲಿ ಬಳ್ಳಿಗಾವೆ, ಬೆಳಗಾಮಿ, ಬಳ್ಳಿಗಾಮೆ, ಬಳ್ಳಿಗ್ರಾಮವೆಂದೂ ಕರೆಯಲ್ಪಡುತ್ತಿತ್ತು ಎಂಬ ಉಲ್ಲೇಖಗಳಿವೆ. ಆರಂಭದಲ್ಲಿ ಚುಟು-ಶಾತವಾಹನರ ಆಳ್ವಿಕೆಗೂ, ನಂತರ ಬನವಾಸಿ ಕದಂಬರ ಆಳ್ವಿಕೆಗೂ, ನಂತರದಲ್ಲಿ ಬಾದಾಮಿ ಚಾಲುಕ್ಯರ, ಮಾಳಖೇಡದ ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ, ಕಲಚೂರ್ಯರ, ದೇವರಿಗಿ ಯಾದವರ, ದೋರಸಮುದ್ರದ ಹೊಯ್ಸಳರ ಮತ್ತು ಕೊನೆಯಲ್ಲಿ ವಿಜಯನಗರದ ಆಳ್ವಿಕೆಗೂ ಒಳಪಟ್ಟಿತ್ತು ಎಂದು ತಿಳಿದುಬರುತ್ತದೆ.
Vishnu Statue @Kedareshwara temple, Balligavi

ಕೇದಾರೇಶ್ವರ ದೇವಸ್ಥಾನ:
ಹೊಯ್ಸಳ-ಚಾಲುಕ್ಯ ಶಿಲ್ಪಕಲೆಗಳ ಸಂಗಮದಲ್ಲಿರುವ ಈ ದೇಗುಲ ಈ ಮಾದರಿಯಲ್ಲಿ ಅತೀ ಪ್ರಾಚೀನವಾದದ್ದು ಎಂದರೂ ಖಚಿತವಾಗಿ ಎಂದು ನಿರ್ಮಿತವಾಗಿದ್ದು ಎಂಬ ದಾಖಲೆಗಳಿಲ್ಲ. ಹನ್ನೆರಡನೆಯ ಶತಮಾನದ ವಿಷ್ಣುವರ್ಧನ ಮಹಾರಾಜನ ಕಾಲಕ್ಕಿಂತಲೂ ಹಳೆಯದೇ ಎಂದು ಹೇಳಲು ಈ ದೇಗುಲದಲ್ಲಿರುವ ಹೊಯ್ಸಳ ಶಿಲ್ಪವನ್ನು ಹೊಯ್ಸಳರ ರಾಜ ವಿನಯಾದಿತ್ಯ(೧೦೪೭-೧೦೯೮) ಶಾಲಿವಾಹನ ಶಕೆ ೧೦೬೮ರಲ್ಲಿ ಸೇರಿಸಿದನೆಂದು ತಿಳಿಸುವ ಉಲ್ಲೇಖಗಳು ನೆರವಾಗುತ್ತವೆ. ಹೊಯ್ಸಳರ ಪ್ರಸಿದ್ದ ರಾಜ ವಿಷ್ಣುವರ್ಧನನ ಆಳ್ವಿಕೆ ಶುರುವಾದದ್ದು ೧೧೦೮ರಲ್ಲಿ. ಮಧ್ಯ ಬಂದವರೆಂದರೆ ಎರೆಯಂಗ(೧೦೯೮-೧೧೦೨), ವೀರಬಲ್ಲಾಳ ೧(೧೧೦೨-೧೧೦೮).

Nagas at the Kedareshwara temple

ಹೊಯ್ಸಳರಿಂದ ನಿರ್ಮಿತವಾದ ಕೇದಾರೇಶ್ವರ ದೇವಾಲಯ ತ್ರಿಕೂಟಾಚಲ ಮಾದರಿಯಲ್ಲಿದೆ.  ಪೂರ್ವ-ಪಶ್ಚಿಮವಾಗಿ ನಿರ್ಮಿತವಾಗಿರುವ ದೇಗುಲದಲ್ಲಿ ಪಶ್ಚಿಮದ ಗರ್ಭಗೃಹಕ್ಕೆ ಒಂದು ಸುಖನಾಸಿ ಇದೆ. ಇನ್ನೆರಡು ಗರ್ಭಗೃಹಗಳಿಗೂ ಅರ್ಧಮಂಟಪಗಳಿದ್ದು ಅವೆರಡೂ ಮಧ್ಯದಲ್ಲಿರುವ ಆರು ಕಂಬಗಳ ಮಹಾಮಂಟಪವನ್ನು ಸೇರುತ್ತವೆ. ಪಶ್ಚಿಮ ಮತ್ತು ದಕ್ಷಿಣ ಗರ್ಭಗೃಹಗಳಲ್ಲಿ ಶಿವಲಿಂಗಗಳಿದ್ದು ಉತ್ತರದಲ್ಲಿ ವಿಷ್ಣುವಿನ ಮೂರ್ತಿಯಿದೆ.  ದಕ್ಷಿಣದ ಲಿಂಗವನ್ನು ಬ್ರಹ್ಮನೆಂದೂ ಕರೆಯುವುದರಿಂದ ಇದನ್ನು ತ್ರಿಮೂರ್ತಿಗಳ ಸಂಗಮಕ್ಷೇತ್ರವೆಂದೂ ನಂಬುತ್ತಾರೆ.


Navagrahas at the ceiling of Balligavi Kedareshwara temple

Hoysala Emblem @Kedareshwara temple, Balligavi
 ಈ ದೇಗುಲದ ಹೊರಭಾಗದಲ್ಲಿ ಆಕರ್ಷಕ ವಿಮಾನಗೋಪುರವಿದೆ. ಇಲ್ಲಿರುವ ಕೆತ್ತನೆಗಳಲ್ಲಿ ತಾಂಡವೇಶ್ವರ, ನರಸಿಂಹ, ಭೈರವ, ವರಾಹ, ಲಕ್ಷ್ಮಿ ಮುಂತಾದ ಕೆತ್ತನೆಗಳಿವೆ. ಈ ದೇಗುಲದ ಒಳಚಾವಣಿಗಳಲ್ಲಿರುವ ನವಗ್ರಹಗಳ ಕೆತ್ತನೆ, ನಂದಿಮಂಟಪದಲ್ಲಿರುವ ಅಲಂಕೃತ ನಂದಿ, ತಕ್ಷಕ ಮುಂತಾದ ನಾಗಗಳ ಕೆತ್ತನೆಗಳು, ದೀಪಗಳನ್ನು ಇಡಲೆಂದೇ ಮಾಡಿರುವ ಬೇರೆ ಹೊಯ್ಸಳ ದೇಗುಲಗಳಲ್ಲಿ ಕಾಣದ ರಚನೆಗಳು ಆಕರ್ಷಕವಾಗಿವೆ.ಈ ದೇಗುಲದ ಬಲಭಾಗದಲ್ಲಿ ನಕರೇಶ್ವರ ದೇಗುಲದ ಅವಶೇಷಗಳಿವೆ. ಅದೇ ಈ ದೇಗುಲದ ಮಾದರಿಯಾಗಿತ್ತೆಂದೂ ಅದನ್ನು ಪ್ರಭುದೇವರ ಮಂಟಪವೆಂದೂ ಕರೆಯಲಾಗುತ್ತಿತ್ತಂತೆ

VimanaGopura

View of Balligavi Kedareshwara temple

 ಈ ದೇಗುಲದ ಒಳಚಾವಣಿಗಳಲ್ಲಿರುವ ನವಗ್ರಹಗಳ ಕೆತ್ತನೆ, ನಂದಿಮಂಟಪದಲ್ಲಿರುವ ಅಲಂಕೃತ ನಂದಿ, ತಕ್ಷಕ ಮುಂತಾದ ನಾಗಗಳ ಕೆತ್ತನೆಗಳು ದೀಪಗಳನ್ನು ಇಡಲೆಂದೇ ಮಾಡಿರುವ ಬೇರೆ ಹೊಯ್ಸಳ ದೇಗುಲಗಳಲ್ಲಿ ಕಾಣದ ರಚನೆಗಳು ಆಕರ್ಷಕವಾಗಿವೆ
one more close view of Vimanagopura


Place holders for lamps , ದೀಪಗಳನ್ನು ಇಡಲು ಮಾಡಿದ ಜಾಗದ ಕರಕುಶಲತೆ ನೋಡಿ!



Kaala bhairava

  ಬಿಟ್ಟಿದೇವ ವಿಷ್ಣುವರ್ಧನನಾದ ಕಥೆ:
ಹೊಯ್ಸಳರಸ ಬಿಟ್ಟಿದೇವ ಬೇಲೂರಿಗೆ ಹಿಂದಿರುಗುತ್ತಿದ್ದಾಗ ಬಳ್ಳಿಗಾವಿಯಲ್ಲಿ ತಂಗಿದ್ದನಂತೆ. ಅಲ್ಲಿನ ಮುಂಜಾನೆ ತ್ರಿಪುರಾಂತಕೇಶ್ವರ ದೇವಾಲಯದಿಂದ ಕೇಳಿಬರುತ್ತಿದ್ದ ರಾಗ,ತಾಳಗಳ ಸದ್ದನ್ನು ಕೇಳಿ ಅಲ್ಲಿಗೆ ಬಂದವನು ಅಲ್ಲಿಯೇ ಶಾಂತಲೆಯನ್ನು ಕಂಡನಂತೆ. ಅವಳನ್ನು ವರಿಸಲೋಸುಗವೇ ಆತ ಜೈನ ಧರ್ಮಕ್ಕೆ ಮತಾಂತರನಾಗಿ ವಿಷ್ಣುವರ್ಧನನಾದ ಎಂಬ ಐತಿಹ್ಯವಿದೆ!
Vishnu @Kedareshara

Remains of Nakareshwara temple
Prabhudevara mantapa
ಮ್ಯೂಸಿಯಂ:
ದೇಗುಲದ ಪಕ್ಕದಲ್ಲೇ ಇರುವ ಮ್ಯೂಸಿಯಂನಲ್ಲಿ ಅನೇಕ ಪುರಾತನ ಶಿಲ್ಪಗಳನ್ನು ಸಂರಕ್ಷಿಸಿ ಇಡಲಾಗಿದೆ. ಅವುಗಳಲ್ಲಿ ಪ್ರಮುಖ ಶಿಲ್ಪಗಳೆಂದರೆ ವಿಷ್ಣು, ನಾಗ, ವೀರಭದ್ರ, ಮಹಿಷಾಸುರ ಮರ್ಧಿನಿ, ಸಪ್ತ ಮಾತೃಕೆಯರು, ಸರಸ್ವತಿ, ಕಾರ್ತಿಕೇಯ, ತ್ರಿಮೂರ್ತಿ, ಗಣೇಶ, ಉಮಾ ಮಹೇಶ್ವರ ಮುಂತಾದವುಗಳು. ಇಲ್ಲಿ ಇದುವರೆಗಿನ ಹೊಯ್ಸಳ ಶಿಲ್ಪಗಳಲ್ಲಿ ಕಾಣದಿದ್ದ ವಿಶೇಷವಾದ ಚತುರ್ಮುಖ ಶಿವಲಿಂಗವಿದೆ. ಜೈನ ತೀರ್ಥಂಕರರ ಸಮಾಧಿಯ ಮೇಲೆ ಇರುವ ನಿಷಿಧಿ ಎಂಬ ಕಲ್ಲುಗಳು, ವರುಣ, ಬೌದ್ಧ ಶಿಲ್ಪಗಳು, ಜಾಲಂಧ್ರ , ನಂದಿ, ಮಾಸ್ತಿಗಲ್ಲು, ಸತಿಗಲ್ಲು, ವೀರಗಲ್ಲುಗಳೇ ಮೊದಲಾದ ಶಿಲ್ಪಗಳನ್ನೂ ಇಲ್ಲಿ ಕಾಣಬಹುದು. ಮ್ಯೂಸಿಯಂನ ಹೊರಭಾಗದಲ್ಲೂ ಬಳ್ಳಿಗಾವೆ ಎಂಬ ಹೆಸರಿರುವ ಅನೇಕ ಶಾಸನಗಳನ್ನು ಕಾಣಬಹುದು.

One of the inscriptions having the name Balligavi, ಬಳ್ಳಿಗಾಮೆ ಎಂಬ ಹೆಸರಿರುವ ಒಂದು ಶಿಲಾಶಾಸನ




Hoysala Emblem @Balligavi Musuem.ಹೊಯ್ಸಳ ಲಾಂಛನ
 ಸುತ್ತಮುತ್ತಲು ನೋಡಲು ಇರುವ ಜಾಗಗಳು:
ಶಿಕಾರಿಪುರದಿಂದ ೫ ಕಿ.ಮೀ ಬಳ್ಳಿಗಾವಿಯಿಂದ ೨.೭ ಕಿ.ಮೀ ದೂರವಿರುವ ಇಲ್ಲಿ ಪುರಾತನ ಪ್ರಣವಲಿಂಗೇಶ್ವರ ದೇವಸ್ಥಾನ ಮತ್ತು ಶಿಲಾಸ್ಥಂಭವಿದೆ. ಬೆಳಗ್ಗೆ ೧೧, ೧೨:೧೫ ಕ್ಕೆ ಬಳ್ಳಿಗಾವಿಯಿಂದ ಇಲ್ಲಿಗೆ ಬಸ್ಸುಗಳಿವೆ. ತಲಾ ೮ ರೂ ಚಾರ್ಚ್. ಬೆಳಿಗ್ಗೆ ಅಲ್ಲಿಗೆ ತೆರಳಿದ ನಾವು ೧೨:೫೨ ಕ್ಕೆ ವಿಜಯಲಕ್ಷ್ಮಿ ಬಸ್ಸಿನಲ್ಲಿ ಶಿಕಾರಿಪುರಕ್ಕೆ ವಾಪಾಸ್ಸಾದೆವು. ತಲಾ ೧೦ ಚಾರ್ಚ್.  ಅಲ್ಲಿಂದ ಶಿಕಾರಿಪುರಕ್ಕೆ ವಾಪಾಸ್ ಬಂದು ಅಕ್ಕಮಹಾದೇವಿ ಹುಟ್ಟಿದ ಸ್ಥಳ ಉಡುತಡಿ/ಉಡುಗಣಿಗೆ ಹೋಗಬಹುದು. ಶಿವಮೊಗ್ಗಕ್ಕೆ ತೆರಳುವ ಬಸ್ಸುಗಳು ಉಡುತಡಿಯ ಮೂಲಕ ಹೋಗುತ್ತವೆ. ತಲಾ ೭.೫ ಅಂತೆ ಕೊಟ್ಟು ೧:೦೫ರ ಬಸ್ಸನ್ನೇರಿದ ನಾವು ೧:೪೫ರ ಕೃಷ್ಣ ಬಸ್ಸಿನಲ್ಲಿ ಶಿಕಾರಿಪುರಕ್ಕೆ ವಾಪಾಸ್ಸಾದೆವು. ಅಲ್ಲಿಂದ ತಲಾ ೮ರ ಚಾರ್ಚು. ಶಿಕಾರಿಪುರದಿಂದ ಉಡುತಡಿಗೆ ೬ ಕಿ.ಮಿ. ಬಳ್ಳಿಗಾವಿಯಿಂದ ತಾಳಗುಂದಕ್ಕೆ ಅರ್ಧಘಂಟೆಗೊಂದರಂತೆ ಬಸ್ಸುಗಳಿವೆ.


ಮುಂದಿನ ಭಾಗದಲ್ಲಿ: ತ್ರಿಪುರಾಂತಕೇಶ್ವರ ದೇವಾಲಯ ಮತ್ತು ಭೈರುಂಡೇಶ್ವರ ದೇವಾಲಯ, ಬಳ್ಳಿಗಾವೆ

1 comment: