Monday, November 12, 2012

ದೀಪಾವಳಿಯ ಹಾರ್ದಿಕ ಶುಭಾಶಯಗಳು
ಹೆಚ್ಚೊ ಹರುಷದ ದ್ಯೋತಕವು
ಹಚ್ಚೊ ಹಲದೀಪ
ಬತ್ತಿಯಲಿ ಸುಡಲಿ
ದ್ವೇಷ, ಕೋಪ
ಸುಖ,ಶಾಂತಿ ಪಸರಿಸಲಿ
ಹೂ ಕುಂಡ, ಚಕ್ರಗಳು
ಪಟಾಕಿಗಳು ಮರೆಸಿ
ನೋವು, ಮರುಕ


ಕಟ್ಟ ಬನ್ನಿರಣ್ಣ,
ಆಗಸ ಹೂವ ಬುಟ್ಟಿಯನ್ನ
ಹಬ್ಬ ಬಂದಿಹುದು, ಸದ್ದೆ ಇಲ್ಲದೆ
ಎದ್ದು ಬನ್ನಿರಣ್ಣ,
ದೀಪವ ಹಚ್ಚ ಬನ್ನಿರಣ್ಣ
ತೋರಣ ಕಟ್ಟ ಬನ್ನಿರಣ್ಣ |೧|

ಗೋಗಳು ಕಾದಿವೆ ಪೂಜೆಯ ದಿನಕೆ
ಬಲೀಂದ್ರ ಬರಲೇ ಎಂದಿಹನು
ನರಕಾಸುರನನು ರಾಮ ಕೊಂದಿಹ

ಹಬ್ಬ ಬಂದಿಹುದು ಬಾಗಿಲಿಗೆ
ಎದ್ದು ಬನ್ನಿರಣ್ಣ, ತೋರಣ ಕಟ್ಟ ಬನ್ನಿರಣ್ಣ|೨|

ಏರಿದರೆಷ್ಟು ರೇಟು ಪಟಾಕಿ
ಕೊಂಡೇ ಕೊಳ್ಳುವ ಬಿಡದೆ ಗಿರಾಕಿ
ವಿಷ್ಣು ಚಕ್ರವೋ, ಹನುಮ ಬಾಲವೋ
ಸುರುಸುರು ಬತ್ತಿಯ ಸರಮಾಲೆ,
ಹೊಸ ಬಟ್ಟೆಯ ಗರಿ ಆರುವ ಮೊದಲೇ
ಆನಂದಿಸು ಬೆಳಕಿನ ಲೀಲೆ
ಆಗಸದಲ್ಲೇ ರಂಗವಲ್ಲಿಯ
ಬಿಡಿಸೋ ರಾಕೆಟ್ ಸುಡು ಮೊದಲೇ |೩ಹಚ್ಚೋ ಪ್ರತೀದೀಪವೂ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ, ಹರ್ಷೋಲ್ಲಾಸ, ಆಯುಷ್ಯ, ಆರೋಗ್ಯವನ್ನು ತರಲಿ.
ಈ ದೀಪಾವಳಿಯು ಎಲ್ಲರ ನೋವು, ದುಃಖಗಳನ್ನು ಮರೆಸಿ ಹೊಸ ಜೀವನೋಲ್ಲಾಸವನ್ನು ತರಲೆಂಬ ಹಾರೈಕೆ

Wednesday, November 7, 2012

ನೂರ್ನಳ್ಳೀಲಿ ಅವ-೩

ಹಿಂದಿನ ಭಾಗ: ನೂರ್ನಳ್ಳೀಲಿ ಅವ-೨
(ಇಲ್ಲಿಯವರೆಗೆ.. ನೂರ್ನಳ್ಳಿಗೆ ಸಂಜೆ ಬಸ್ಸಿಗೆ ಒಬ್ಬ ಹೊಸಬ(ಅವ) ಬಂದಿದಾನೆ. ಅವ ಬಂದ ಅಂಗಡಿಯಲ್ಲಿ ಕೂತು ಮಾತನಾಡಿದ ರಾತ್ರಿಯಿಂದ ಅಂಗಡಿ ಜಾಫರ್ ಸಾಬರು ನಾಪತ್ತೆಯಾಗಿದ್ದಾರೆ. ಸಂಜೆಯಾದರೂ ಅವ ಊರಲ್ಲೆಲ್ಲೂ ಪತ್ತೆ ಇಲ್ಲ.. ಹಾಗಾಗಿ ಬಂದ ಅವ ಯಾರು ಅನ್ನೋ ವಿಷಯದ ಸುತ್ತ ಹಲವಾರು ಗಾಳಿ ಸುದ್ದಿಗಳು ರೆಕ್ಕೆ ಪುಕ್ಕಗಳೊಂದಿಗೆ ಹಬ್ತಾ ಇದೆ.. ಹೀಗಿರುವಾಗ ಮತ್ತೆ ಸಂಜೆ ಆಗ್ತಾ ಇದೆ. )

ಮೂಡಣದಲ್ಲಿ ಮುಖ ತೋರಿದ ಸೂರ್ಯ ಪಡವಣದ ನೂರ್ನಳ್ಳಿ ಬೆಟ್ಟದ ಮರೆಗೆ ಸಾಗ್ತಾ ಇದ್ದಾನೆ. ಹಗಲಿಡೀ ದುಡಿದು ತಮ್ಮ ಎತ್ತುಗಳೊಂದಿಗೆ ವಾಪಾಸಾಗ್ತಾ ಇರೋ ರೈತರ ನೆರಳುಗಳು ಮುಳುಗುತ್ತಿರುವ ಸೂರ್ಯನೊಂದಿಗೆ ದೊಡ್ಡದಾಗುತ್ತಾ ಅವರ ಹೆಚ್ಚುತ್ತಿರೋ ಸಾಲ, ಕಷ್ಟಗಳಂತೆ ಹಿಂಬಾಲಿಸ್ತಾ ಇವೆ . ಬೆಟ್ಟದಲ್ಲಿ ಕೌಳಿಕಾಯಿ, ಪರಂಗಿ ಹಣ್ಣು,ಈಚಲು ಹಣ್ಣು ತಿನ್ನಲೋ,  ಸಗಣಿ ಆರಿಸಲೋ, ಎಮ್ಮೆ ಹುಡುಕಲೋ ಹೋಗಿದ್ದ ಹುಡುಗರು ಕೆಳಗಿಳಿತಾ ಇದ್ದಾರೆ. ಕೆಲವರು ತೋಟದಲ್ಲಿ ಕೊಯ್ದ ಹಸಿ ಹುಲ್ಲನ್ನ ಸೈಕಲ್ಲಿಗೆ ಒತ್ತಿ ಕಟ್ಟಿ, ಭಾರ ತಾಳಲಾರದೆ ಬಳುಕುತ್ತಾ ಇರೋ ಅದನ್ನೇರಿ ಮನೆ ಕಡೆ ಸಾಗ್ತಾ ಇದ್ದಾರೆ. ನೀರ್ನಳ್ಳಿ , ನೂರ್ನಳ್ಳಿ ಮಧ್ಯೆ ಹರಿಯೋ ಬಾವಿಹೊಳೆ ಪ್ರಶಾಂತವಾಗಿ ಹರಿತಾ ಇದೆ.. ಅದ್ರಲ್ಲೇ ಗಾಳ ಹಾಕಿದ ಕೆಲವರು ಸಿಕ್ಕಿದ ಮೀನುಗಳನ್ನೆಲ್ಲಾ ಚೀಲಕ್ಕೆ ತುಂಬಿ ಮನೆ ಕಡೆ ಹೊರಡಕ್ಕೆ ತಯಾರಾಗ್ತಾ ಇದಾರೆ. ಅಂತದ್ರಲ್ಲಿ ಎಲ್ಲೋ ಜೋರಾಗಿ ಪ್ರಾಣಿಯೊಂದು ಕೂಗಿದಂತೆ, ಏನೋ ಆಸ್ಪೋಟಿಸಿದಂತೆ ಮಿಶ್ರ ಸದ್ದು! ಅದು ಏನು ಅಂತ ತಿಳಿಯದ ಹುಡುಗರೂ ಎದ್ನೋ ಬಿದ್ನೋ ಅಂತ ಮನೆ ಕಡೆ ಓಡತೊಡಗಿದರು. ಅದೇನು ಅಂತ ಸ್ವಲ್ಪ ಸುಳಿವು ಸಿಕ್ಕಿದ ತೋಟದಲ್ಲಿದ್ದ  ಹಿರಿಯರು, ಎತ್ತುಗಳೊಂದಿಗೆ ವಾಪಾಸಾಗ್ತಿದ್ದ ರೈತರೂ ಮನೆಯತ್ತ ಓಡತೊಡಗಿದರು. ಸೈಕಲ್ ಸವಾರರು ಸಾಧ್ಯವಾದಷ್ಟೂ ಜೋರಾಗಿ ಪೆಡಲ್ ತುಳಿದರು. ಆಮೇಲೆ ಸ್ವಲ್ಪ ಸಮಯದಲ್ಲಿ ಬಂದೂಕಿನಿಂದ ಮೂರ್ನಾಲ್ಕು ಬಾರಿ ಗುಂಡು ಸಿಡಿಸಿದ ಶಬ್ದ. ಆಮೇಲೆ ನಿಶ್ಯಬ್ದ..

***

ನೂರ್ನಳ್ಳಿ ಗುಡ್ಡದಲ್ಲಿ ಕಬ್ಬಿಣದ ಅಂಶ ಜಾಸ್ತಿ ಇದ್ಯಂತೆ. ಹಾಗಾಗಿ ಆ ಗುಡ್ಡ ಕಡಿದು ಗಣಿಗಾರಿಕೆ ಮಾಡ್ತಾರಂತೆ,ಅನ್ನೋ ಸುದ್ದಿ ಸುಮಾರಷ್ಟು ದಿನದಿಂದ ಊರಲ್ಲೆಲ್ಲಾ ಹರಡ್ತಾ ಇತ್ತು. ಅದಕ್ಕೆ ಸರಿಯಾಗಿ ನೀರ್ನಳ್ಳಿ ಕಡೆ ಇಂದ ಬಂದ ಬೆಳಿಗ್ಗೆ ಬಂದ ಎರಡು ಜೆ.ಸಿಬಿಗಳು ನೂರ್ನಳ್ಳಿ ದಾಟಿ ಆ ಗುಡ್ಡದ ಮತ್ತೊಂದು ತಪ್ಪಲಲ್ಲಿ ಟಿಕಾಣಿ ಹೂಡಿದ್ವು. ರೈತರು ಬೆಳೆದ ಭತ್ತ ಒಕ್ಕಲು ಮಾಡೋ ದಿನವೇ ಹೊಂಚಿ ಮಳೆ ಸುರಿಸೋ ವರುಣನಂತೆ, ಊರವರೆಲ್ಲಾ ಜಾತ್ರೆಗೆ ಹೋಗಲಿ ಅಂತ ದರೋಡೆ ಮಾಡೋಕೆ ಹೊಂಚು ಹಾಕ್ತಾ ಇರೋ ಕಳ್ಳರಂತೆ ಆ ಜೇ.ಸಿ.ಬಿ ಗಳು ಹೊಂಚು ಹಾಕಿ ನೂರ್ನಳ್ಳಿ ಗುಡ್ಡದ ಒಡಲು ಬಗೆಯಲು ಹೊಂಚು ಹಾಕ್ತಾ ಕೂತಿದ್ವು.  ಗುಡ್ಡ ಅಗೆಯೋರು ಅದೆಂತದೋ ಡೈನಮೇಟ್ ಅಂತ ಬಾಂಬ್ ಹಾಕಿ ಗುಡ್ಡ ಗುಡ್ಡನೇ ಉರುಳಿಸ್ತಾರಂತೆ, ಆಮೇಲೆ ಜೇಸೀಬಿ ಹಾಕಿ ಮಣ್ಣನ್ನೆಲ್ಲಾ ಬಗೆದು ತೆಗಿತಾರಂತೆ. ಕೆಲವೇ ತಿಂಗಳಲ್ಲಿ ಅಲ್ಲೊಂದು ಗುಡ್ಡ ಇತ್ತು ಅಂತನೂ ಗೊತ್ತಾಗದ ರೀತಿ ಮಾಡಿ ಹಾಕ್ತಾರಂತೆ ಅನ್ನೋ ಸುದ್ದಿಗಳು ಊರಲ್ಲೆಲ್ಲಾ ಹರಡೋಕೆ ಶುರು ಆಗಿದ್ದವು. ಹಾಗಾಗಿ ಇವತ್ತು ಸಂಜೆ ಕೇಳಿದ ಮೊದಲ ಶಬ್ದ ಡೈನಮೇಟ್ ಸಿಡಿತದ್ದಾ ಅಂತ ಕೆಲವರಿಗೆ ಅನಿಸ್ತು. ಡೈನಮೇಟ್ ಏನಾದ್ರೂ ಸಿಡಿದರೆ ಬಂಡೆಗಳೆಲ್ಲಾ ಉರುಳಿ ಗುಡ್ಡದ ಕೆಳಗಿದ್ದವರ ಮೇಲೆ ಬೀಳತ್ತೆ. ಹಾಗಾಗಿ ಯಾವ ಬಂಡೆ ತಲೆ ಮೇಲೆ ಬೀಳತ್ತಪ್ಪ್ಪ ಅನ್ನೋ ಭಯದಲ್ಲಿ ಕೆಲವರು ಓಡಿದ್ದರು. ಡೈನಮೇಟ್ ಅನ್ನೋ ಹೆಸರನ್ನೇ ಕೇಳದ ಸ್ವಲ್ಪ ಹಿರಿತಲೆಗಳಿಗೆ  ಆ ಎರಡನೇ ಶಬ್ದ.. ಅದು ಅವರ ಜೀವನದಲ್ಲಿ ಮರೆಯಲಾಗದ ಶಬ್ದ!!. ಹಾಗಾಗಿ ಅವರೂ ಭಯಬಿದ್ದು ಮನೆ ಸೇರಿದ್ದರು. .

ಅವತ್ತು ಸಂಜೆ ಏಳೂವರೆ ಆದ್ರೂ ಊರ ಗಣೇಶನ ಗುಡಿ ಕಡೆ ಜನ ಸುಳೀತಿರ್ಲಿಲ್ಲ . ಅದ್ರ ಎದುರಿಗಿನ ಅರಳಿಮರದ ಕಟ್ಟೆಯೂ ದೈನಂದಿನ ಹರಟೆ ಕೇಳದೆ ಬೋರೋ ಬೋರು ಎನ್ನುತ್ತಿತ್ತು.ಎಲ್ಲಾ ಸಂಜೆಯ ಘಟನೆಯ ಪರಿಣಾಮ. ಎಲ್ಲೋ ಅಲ್ಲೋ ಇಲ್ಲೋ ನಾಯಿ ಬೊಗಳುತ್ತಿದ್ದ ಶಬ್ದ, ಸಂಜೆ ಬಸ್ಸಿಗೆ ಬಂದವರು ಮನೆಗೆ ತೆರಳುತ್ತಿದ್ದ ದೃಶ್ಯ ಬಿಟ್ಟರೆ, ಬೀದಿಯೆಲ್ಲಾ ಬಿಕೋ ಎನ್ನುತ್ತಿತ್ತು. ಸದಾ ಲವಲವಿಕೆಯಿಂದಿರುತ್ತಿದ್ದ ನೂರ್ನಳ್ಳಿಲಿ ಈಗ ಪ್ರೇತ ಕಳೆ. ಏಳೂ ಮುಕ್ಕಾಲಾದರೂ ಯಾರೂ ಜನ ಬರದೇ ಇದ್ದಿದ್ದನ್ನ ನೋಡಿದ ಗಣೇಶ ದೇವಸ್ಥಾನದ ವೃದ್ದ ಅರ್ಚಕರು ಪ್ರತಿದಿನದ ಎಂಟೂಕಾಲಿನ ಬದಲು ಎಂಟುಘಂಟೆಗೇ ಮಂಗಳಾರತಿ ಮಾಡಿ ಅಲ್ಲೇ ಹತ್ತಿರದಲ್ಲಿರೊ ತಮ್ಮ ಮನೆಗೆ ಹೋಗಲು ನಿರ್ಧರಿಸಿದರು. ಹೇ ಸಂಕಟಮೋಚನ, ಈ ಊರೊಳಗೆ ಯಾರೋ ಹೊಸ್ಬ ಬಂದಿದಾನಂತೆ, ಅವನು ಬಂದಾಗಿನಿಂದ ಏನೇನೋ ಅನಿರೀಕ್ಷಿತ ಘಟನೆಗಳು ನಡಿತಾ ಇದೆ. ಏನೂ ಅಪಶಕುನಗಳು ಕಾಣಿಸ್ದೇ ಇದ್ರೂ ಮನಸಲ್ಲಿ ಯಾಕೋ ಒಂತರ ಹಿಂಸೆ. ಈ ನೂರ್ನಳ್ಳೀನ ನೀನೆ ಕಾಪಾಡಪ್ಪ ಅಂತ ಮನಸಲ್ಲೇ ಬೇಡಿದರು. ಅವರ ಕೋರಿಕೆಗೆ ದೇವರು ತಥಾಸ್ತು ಅಂದನೋ ಎಂಬಂತೆ ದೇವಸ್ತಾನದ ಘಂಟೆ ಮೊಳಗಿತು. ಅರ್ಚಕರು ನಿಧಾನವಾಗಿ ಆ ಕಡೆ ತಿರುಗಿ ನೋಡಿದರೆ ಯಾರೋ ಹೊಸಬರು ನಿತ್ತಿದ್ದರು. ಭಟ್ಟರೇ, ಅರ್ಚನೆ ಮಾಡ್ಬೇಕಿತ್ತು ಅಂದ. ಸರಿ ಅಂದ ಭಟ್ಟರು ಹೆಸ್ರು, ಗೋತ್ರ, ನಕ್ಷತ್ರ ಕೇಳಿದರು. ಆ ಹೊಸಬ ಒಂದು ಹೆಂಗಸಿನ ಮತ್ತೊಂದು ಗಂಡಸಿನ ಹೆಸರಲ್ಲಿ ಅರ್ಚನೆ ಮಾಡಲು ತಿಳಿಸಿ ಗೋತ್ರ, ನಕ್ಷತ್ರಗಳನ್ನ ತಿಳಿಸಿದ. ಆ ವೃದ್ಧ ಅರ್ಚಕರಿಗೆ ಆ ವಯಸ್ಸಿನಲ್ಲೂ ಈ ಹೆಸರುಗಳನ್ನು ಎಲ್ಲೋ ಕೇಳಿದ್ದೇನೆ ಅಂತ ಅನ್ನಿಸೋಕೆ ಶುರು ಆಯ್ತು. ಅರ್ಚನೆ ಆದ್ಮೇಲೆ ಯಾರಪ್ಪಾ ನೀನು, ನೂರ್ನಳ್ಳಿಗೆ ಯಾವಾಗ ಬಂದೆ , ಹೊಸಬನ ತರ ಕಾಣ್ತೀಯ, ಯಾರ ಮನೇಲಿ ಇದೀಯ ಅಂತ ಕೇಳಿದರು. ಮೊನ್ನೆ ಸಂಜೆ ಬಂದೆ ಭಟ್ರೆ, ಈಗ ಅರ್ಚನೆ ಮಾಡ್ಸಿದ್ದು ಯಾರ ಹೆಸ್ರು ಅಂತ ಗೊತ್ತಾಗಿಲ್ವಾ ಅಂತ ಮುಗುಳ್ನಕ್ಕ ಹೊಸಬ. ಈ ಹೊಸಬ ಮೊನ್ನೆ ರಾತ್ರಿ ಊರಿಗೆ ಬಂದ ಹೊಸಬನೇ ಅಂತ ತಿಳಿದು ಭಟ್ರಿಗೂ ಕುತೂಹಲ, ಭಯಗಳು ಒಟ್ಟಿಗೇ ಮೂಡಿದವು. ಆದ್ರೂ ಪ್ರಶ್ನೆ ಕೇಳಿದ ಶೈಲಿ, ಮುಖಚರ್ಯೆ ಎಲ್ಲೋ ನೋಡಿದೀನಿ ಅನ್ಸಿ, ಇಲ್ಲಪ್ಪ, ಹೇಳು ಅಂದ್ರು. ಅದು ನನ್ನ ಅಪ್ಪ-ಅಮ್ಮ ಅಂದ ಅವ..

*****

ಮಾರ್ನೇ ದಿನ ಬೆಳಗಾಯ್ತು. ಎಂದಿನಂತೆ ಶಾಲೆಗೆ ಹೋಗೋ ಹುಡುಗರು ಗಣೇಶನ ಗುಡಿಗೆ ಹೋಗಿ ನಮಸ್ಕಾರ ಮಾಡಿ ಹೋಗಲು ಹೋದರು. ಆದರೆ ಅವತ್ತು ಎಂಟೂವರೆ ಆದರೂ ದೇವಸ್ಥಾನಕ್ಕೆ ಬೀಗ!!. ಬೇಗನೇ ಪೂಜೆ ಮಾಡಿ ಎಲ್ಲಾದರೂ ಹೋದರೆ ಅಂತ ಅನ್ನೋಣವಂದರೆ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಹಳೇ ಹೂಗಳು ಹಾಗೇ ಬಿದ್ದಿದ್ದವು. ಭಟ್ಟರಿಗೆ ಹುಷಾರಿಲ್ಲವೇನೋ, ಪಾಪ ನೋಡಿಕೊಳ್ಳಲೂ ಯಾರೂ ಇಲ್ಲ. ಏನೇ ಆಗ್ಲಿ ಅವರ ಮನೆಗೆ ಹೋಗಿ ನೋಡೇ ಬಿಡೋಣ. ಪಾಪ, ಹುಷಾರಿಲ್ದಿದ್ರೆ ಒಮ್ಮೆ ಮಾತಾಡ್ಸಿ ಶಾಲೆಗೆ ಹೋಗೋಣ ಅಂತ ಅಲ್ಲೇ ಪಕ್ಕದಲ್ಲಿದ್ದ ಅವರ ಮನೆ ಕಡೆ ಹೋದರು ಶಾಲೆ ಹುಡುಗರು. ಸಣ್ಣ ಮಕ್ಕಳೆಂದರೆ ಭಟ್ಟರಿಗೆ ಪ್ರೀತಿ. ಯಾರಾದರೂ ಅವರ ಮನೆಗೆ ಹೋದರೆ ಕಲ್ಲು ಸಕ್ಕರೇನೋ, ನೈವೇದ್ಯಕ್ಕೆ ಅಂತ ತಂದಿದ್ದ ಬಾಳೆ ಹಣ್ಣನ್ನೋ, ಉತ್ತುತ್ತೆಯನ್ನೋ ಕೊಟ್ಟು, ಎದುರಿನ ಪೇರಲೆ ಗಿಡದಿಂದ ಬೇಕಾದಷ್ಟು ಹಣ್ಣು ಕೊಯ್ಕಂಡು ತಿನ್ನಿ ಅಂತ ಹೇಳಿ ಕಳುಹಿಸ್ತಿದ್ರು. ಅದೂ ಈ ಮಕ್ಕಳು ಅವ್ರ ಮನೆಗೆ ಹೋಗಲು ಒಂದು ಕಾರಣ ಆಗಿರ್ಬೋದು!
ಈ ಹುಡುಗರು ಹೋಗಿ ನೋಡಿದರೆ ಭಟ್ಟರೆ ಮನೆಗೆ ಬೀಗ!!

ಭಟ್ಟರು ಇದ್ದಕ್ಕಿದ್ದಂಗೆ ಬೀಗ ಹಾಕಿ ಎಲ್ಲಿ  ಹೋದರು ಅಂತ ಆ ಮಕ್ಕಳಿಗೆ ತಿಳಿಲಿಲ್ಲ. ಅವತ್ತು ಶಾಲೆಯಲ್ಲೆಲ್ಲಾ ಅದೇ ಸುದ್ದಿ. ಅವತ್ತು ಸಂಜೆಯ ಹೊತ್ತಿಗೆ ಊರಲ್ಲೆಲ್ಲಾ ಭಟ್ಟರ ಮನೆ ಬೀಗದ ಸುದ್ದಿಯೇ ಹರಿತಿತ್ತು. ಇವತ್ತು ಗಣೇಶನ ಗುಡಿ ಬಾಗಿಲು ತೆಗಿಯದೇ ಇದ್ದರೂ ಎದುರಿನ ಅರಳಿಮರದ ಕಟ್ಟೇಲಿ ಕೆಲ ಜನ ಸೇರಿದ್ರು. ಊರಿಗೆ ಬಂದ ಹೊಸಬನ ಬಗ್ಗೆ, ಕಾಣೆಯಾದ, ಆಗ್ತಾ ಇರೋ ಜನರ ಬಗ್ಗೆ, ಊರಲ್ಲಿ ನಡೀತಿರೋ ಅನಿರೀಕ್ಷಿತ ಘಟನೆಗಳ ಬಗ್ಗೆನೇ ಚರ್ಚೆ. ನೀರ್ನಳ್ಳಿ ಗುಡ್ಡನ ನಿರ್ನಾಮ ಮಾಡಕ್ಕೆ ಪೇಟೆ ಸಾಹುಕಾರ ಒಬ್ಬ ಕಾಂಟ್ರಾಕ್ಟ ತಗೊಂಡಿದಾನಂತೆ. ಅವ್ನಿಗೆ ಗುಡ್ಡ ಒಡ್ಯೋಕೆ ತಡೆಯಾಗಿರೋ ನೂರ್ನಳ್ಳಿ ಜನರ ಮೇಲೆ ಭಾರೀ ಸಿಟ್ಟಂತೆ. ಹಂಗಾಗಿ ಅವ್ನೇ ಯಾರನ್ನೋ ಕಳ್ಸಿದಾನಂತೆ ಅಂದ್ರು ಒಬ್ರು.ಆ ಅವ್ನು ನೀರ್ನಳ್ಳಿಗೆ ಬಂದ ಹೊಸ್ಬನೇ ಇರ್ಬೇಕು. ಅವ್ನು ಬಂದಾಗಿಂದ ದಿನಾ ಊರಿನ ಪ್ರಭಾವಿ ಜನ್ರನ್ನ ಒಬ್ಬೊಬ್ರಾಗಿ ಬಲಿ ತಗೋತಿದಾನೆ ಅಂದ ಮತ್ತೊಬ್ಬ.ಬೆಂಗಳೂರಲ್ಲಿ ಬಾಂಬಿಟ್ಟು ತಲೆಮೆರಿಸಿಕೊಂಡಿರೋ ಭಯೋತ್ಪಾದಕ ಇವ್ನೇ ಇರ್ಬೇಕು ಅಂದ್ರು ಮತ್ತೊಬ್ರು. ಏ ನೂರ್ನಳ್ಳಿಗೆ ಬಂದ ಹೊಸ್ಬ ಒಳ್ಳೆಯವ್ನ ತರ ಕಾಣ್ತಿದ್ದ. ಅವ್ನು ನೂರ್ನಳ್ಳಿ ಜನ್ರನ್ನ ಕೊಲ್ಲೋ ತರ ಇದ್ದಿದ್ರೆ ಅವತ್ತು ಬಸ್ಸಲ್ಲೇ ಬಾಂಬ್ ಹಾಕಿಡ್ತಿದ್ದ. ಅವ್ನ ಕೆಲ್ಸ ಅಲ್ಲ ಇದು ಅನ್ಸತ್ತೆ ಅಂದ್ರು ಮತ್ತೊಬ್ರು. ಎಲ್ಲಾ ಕೆಟ್ಟೋರು ಒಳ್ಳೆಯವ್ರ ತರನೇ ಇರ್ತಾರೆ , ಗೋಮುಖ ವ್ಯಾಘ್ರರು ಅಂದ್ರು ಮತ್ತೊಬ್ಬ ಹಿರಿಯರು.  ಏ ಅಲ್ಲಲ್ಲ,  ಅವ್ನು ಅವಧೂತ. ಅವ್ನಿಗೆ ಭೂತ, ವರ್ತಮಾನ, ಭವಿಷ್ಯಗಳೆಲ್ಲಾ ಗೊತ್ತು. ಅವ್ನು ಇಂತ ಕೆಲ್ಸ ಮಾಡ್ತಿರ ಸಾಧ್ಯತೇನೇ ಇಲ್ಲ ಅಂದ್ರು ಒಬ್ರು.  ಹೀಗೇ ಊಹಾಪೋಹಾಗಳಿಗೆ ರೆಕ್ಕೆ ಪುಕ್ಕಗಳು ಸೇರಿ ಅವನ ಬಗ್ಗೆ ಹಿಂದಿನ ದಿನಕ್ಕಿಂತಲೂ ಹೆಚ್ಚಿನ ಗಾಳಿ ಸುದ್ದಿಗಳು ಹಬ್ಬಿದವು .. ಏನಾದರಾಗಲಿ ಆ ಹೊಸಬನನ್ನು ಆದಷ್ಟು ಬೇಗ ಮತ್ತೆ ಭೇಟಿ ಮಾಡಬೇಕು, ಅವ್ನು ಯಾರು , ಎಲ್ಲಿಂದ ಬಂದ, ನಮ್ಮೂರಲ್ಲಾಗ್ತಿರೋ ಘಟನೆಗಳಿಗೂ ಅವ್ನಿಗೂ ಏನಾದ್ರೂ ಸಂಬಂಧ ಇದ್ಯಾ ಅತ್ವಾ ಎರಡೂ ಕಾಕತಾಳೀಯನಾ, ಊರಲ್ಲಿರೋ ಜನರೆಲ್ಲಾ ಯಾಕೆ ಕಾಣೆ ಆಗ್ತಿದಾರೆ ಅಂತ ಕೇಳ್ಲೇಬೇಕು ಅಂತ ಮನಸ್ಸಲ್ಲೇ ಅಂದ್ಕೊಂಡ್ರು ಮೇಷ್ಟ್ರು. .
(ಮುಂದುವರಿಯುತ್ತದೆ..)

Saturday, November 3, 2012

ನೀರ ಮಾರಿ ನೀಲಮ

ಸಾವಿರಾರು ಜನರ ನಿದ್ರೆ/ಬದುಕು ನುಂಗಿದ ನೀಲಮನ ಕುರಿತೊಂದು ಪದ್ಯ..
ನೀರಲೇ ಜೀವನ, ನೀರಲೇ ಸಾವಿದು
ಬೀಸಿ ಬಂದ ಮೃತ್ಯು ನೀನು ನೀಲಮ
ಕಾಲನ ಕರೆಯಿದು, ಉಳಿಯದು ಜೀವವು
ಏರಿ ಬಂದ ಸಾವು ನೀನು ನೀಲಮ |೧

ರಚ್ಚೆ ಹಿಡಿದ ಮಗುವಿನಳುವೆ
ಬಿಡದೆ ಸುರಿವ ಮಳೆಯು
ತಂದು ರಸ್ತೆ ಮೇಲೆಲ್ಲಾ
ಮೋರಿ ಗಬ್ಬು ಕೊಳೆಯು |೨

ಕೆರೆಯಲ್ಲಿಹ ಬಡಾವಣೆ, ಹಾಹಾಕಾರ
ನುಂಗಿ ನಕ್ಕವರಿಂದಳು ಧಾರಾಕಾರ
ಫಸಲು ಭೂಮಿ ಸೈಟು ಎಂದ ನೀರಿಂಗುವ ಜಾಗವ
ಆಪೋಶನಕ್ಕೆಂದೆ ನೀಲಮನ ಅವತಾರ |೩

ಕಾಡೆಲ್ಲವ ಕಡಿದ ಮನೆಗೆ
ಮರಮುಟ್ಟುವ ಸುಟ್ಟು ಮಾರು
ಜಗವೆಲ್ಲವು ನಿಂದೆ ಎಂದು
ಬಿಡುವಿಲ್ಲದೆ ಸೊಕ್ಕಿ ಹಾರು
ತಿರುಗುತಿರುವ ಕಾಲ ಚಕ್ರ
ಬಂದಿಹಳು ನೀಲಮ,
ಬುದ್ದಿ ಕಲಿಸೆ ಮಾನವ |೪

ಧರೆಯ ಶೋಕ ನೋಡಲಾರ ,ಬೆಂಕಿಯುಗುಳಿ ಗಗನ
ಸಿಡಿಲು, ಗುಡುಗು ಸಾಲದೆಂದು ಇವಳ ತಂದ ಪವನ
ಇನ್ನಾದರು ಬುದ್ದಿ ಕಲಿ, ಇಲ್ಲ ಪ್ರಾಣ ಹರಣ
ಕಾಯುತಿಹಳು ಕೊಲ್ಲಲೆಂದು ನೀರ ಮಾರಿ ನೀಲಮ |೫