Thursday, June 2, 2016

ಮಕಾಡೆ ಮಲಗಿದ ಮೂಡೂ,ಬಿಟ್ಟೋಗಿರೋ ಬ್ಲಾಗೂ

ನಿಧಾನದ ನೆಟ್ಟಲ್ಲಿ , ಲೋಡಾಗದ ಫೋಟೋಗಳಲ್ಲಿ ಯಾರ್ಯಾರಿರ್ಬೋದು, ಏನಿರ್ಬೋದು ಅಂತ ಕೆಳಗಿರೋ ಕಾಮೆಂಟುಗಳಲ್ಲೇ ಅಂದಾಜಿಸ್ತಾ, ಸೂರ್ಯೋದಯಕ್ಕೆ ಕಾಯೋ ಫೋಟೋಗ್ರಾಫರಂಗೆ ಕಾಯೋದಿದ್ಯಲ್ಲ. ಆ ಸಮಯದಲ್ಲಿ ಮೊಬೈಲ್ ನೆಟ್ಟಲ್ಲಿ ಫೇಸ್ಬುಕ್ ಗ್ರೂಪ್ ಚಾಟ್ ಮಾಡ್ತಿದ್ದ ಕಾಲೇಜು ದಿನಗಳು ನೆನಪಾಗುತ್ತೆ ! ಊರಲ್ಲಿನ ಕಂಪ್ಯೂಟರಿಗೆ ಮೊಬೈಲ ೨ಜಿ ಹಾಕಿ ಪೇಜ್ ಲೋಡಾಗಕ್ಕೆ ನಿಮಿಷಗಟ್ಲೆ ಕಾಯ್ತಿದ್ದ ದಿನಗಳು ನೆನಪಾಗುತ್ತೆ ! ಬ್ಲಾಗು ಅಂತ ಮಾಡ್ಕೊಂಡಿದೀಯ. ಅದರಲ್ಲೊಂದು ಕತೆ ಅಂತ ಹಾಕ್ದೆ ಎಷ್ಟು ದಿನ ಆಯ್ತು. ಏನ್ಕತೆ ಅಂತ ಮಕಾಡೆ ಮಲಗಿರೋ ಬ್ಲಾಗೇ ಆಗಾಗೆದ್ದು ಬಯ್ಯೋಕೆ ಶುರು ಮಾಡಿದಾಗ ನೆಟ್ಟಿಲ್ಲದ ಆ ದಿನಗಳೇ ನೆಟ್ಟಗಿದ್ವಾ ಅನಿಸಿಬಿಡುತ್ತೆ. ಆಫ್ಲೈನಲ್ಲಿ ಬರೆಯುವಾಗಿರುತ್ತಿದ್ದ ಏಕಾಗ್ರತೆ, ಅದನ್ನ ಅಪ್ಲೋಡ್ ಮಾಡಿದಾಗಿನ ಧನ್ಯತೆ ಈಗಿನ ಆನ್ಲೈನಲ್ಲಿ ಯಾಕೋ ಮಿಸ್ಸಾಗ್ತಿದ್ಯಾ ಅನಿಸೋಕೆ ಶುರುವಾಗುತ್ತೆ. ಕತೆಗಂತ ಹೊಳೆದ ಎಳೆಯನ್ನ ಅದಕ್ಕೊಂದು ರೂಪ ನೀಡೋವರೆಗೂ ಸಮಾಧಾನವಿರದಿದ್ದ ಆ ದಿನಗಳಲ್ಲಿ ತಿಂಗಳಿಗೊಂದೆರಡಾದ್ರೂ ಕತೆಯಿರುತ್ತಿತ್ತು ಬ್ಲಾಗಲ್ಲಿ. ಒಂದಾದ್ರೂ ಹೊಸ ಪುಸ್ತಕ ಓದಿ ಮುಗಿದಿರುತ್ತಿತ್ತು. ಈಗ ಒಂದು ಪ್ಯಾರಾ ಬರೆಯೋದ್ರೊಳಗೆ ಅದನ್ನ ಫೇಸ್ಬುಕ್ಕಲ್ಲಿ ಹಾಕಿ ಆದಷ್ಟೂ ಲೈಕು ಗಿಟ್ಟಿಸೋ ಧಾವಂತದಲ್ಲಿ ಕಥಾನಾಯಕ ಗರ್ಭದಲ್ಲಿದ್ದಾಗ್ಲೇ ಸತ್ತಾಗಿರುತ್ತೆ !

ಹಂಗಾದ್ರೆ ಫೇಸ್ಬುಕ್ಕೇ ದುನಿಯಾನಾ ? ಎಲ್ಲಾ ಬ್ಲಾಗರ್ಗಳದ್ದೂ ಇದೇ ಕತೆನಾ ಅಂದ್ರೆ ಹಂಗೇನಿಲ್ಲ. ಶ್ರೀವತ್ಸಣ್ಣನಂತೋರ ಬ್ಲಾಗಲ್ಲಿ ವಾರಕ್ಕೊಂದರಂತಾದ್ರೂ ನಿರಂತರವಾಗಿ ಹರೀತಿರೋ ಭಾವಝರಿಯನ್ನು ನೋಡಿದ್ರೆ, ಸಚಿನಣ್ಣನ ರಿಸರ್ಚುಗಳನ್ನ ನೋಡಿದ್ರೆ, ಅಪರೂಪಕೊಮ್ಮೆ ವಿಸಿಟ್ ಕೊಡೋ ಭಾಗ್ಯಮ್ಮನ್ನ ನೋಡ್ತಾ ಇದ್ರೆ ಬ್ಲಾಗುಗಳು ಮುಂಚೆ ನೀಡ್ತಿದ್ದ ಖುಷಿ ಇನ್ನೂ ಅಲ್ಲಲ್ಲಿ ಇದೆ ಅನಿಸುತ್ತೆ. ಆದ್ರೆ ಹೆಚ್ಚಿನ ಬ್ಲಾಗುಗಳೆಲ್ಲಾ ಒಂದಿಷ್ಟು ಪೋಸ್ಟುಗಳ ದಾಟೋದ್ರಲ್ಲೇ ಸುಸ್ತಾಗಿ ಬಿಟ್ಟಿದೆ. ಶುರುವಿನ ಪೋಸ್ಟುಗಳಲ್ಲಿ ಸಿಗೋ ಫ್ರೆಂಡುಗಳ ಯದ್ವಾತದ್ವಾ ಕಾಮೆಂಟ್ಸು, ಬೆನ್ನುತಟ್ಟುವಿಕೆ ಕ್ರಮೇಣ ಕಡಿಮೆಯಾಗುತ್ತಾ ಹೋಗೋದ್ರಿಂದ ಬ್ಲಾಗಿನ ಮೇಲಿನ ಆಸಕ್ತಿನೂ ಕಡಿಮೆಯಾಗುತ್ತಾ ಹೋಗುತ್ತಾ ಅನಿಸಿಬಿಡುತ್ತೆ. ಅದ್ಭುತವೆನಿಸುವಂತೆ ಬರೆಯುತ್ತಿದ್ದ ಬ್ಲಾಗರುಗಳು ಬ್ಲಾಗುಗಳು ಹೇಳ ಹೆಸರಿಲ್ಲದಂತೆ  ಸೈಲಂಟಾಗಿರೋದನ್ನ ನೋಡಿದ್ರೆ ದಿಗಿಲಾಗುತ್ತೆ. ಹಂಗಂತಾ ಅವ್ರು ಬರ್ಯೋದನ್ನೇ ಬಿಟ್ಟು ಹಿಮಾಲಯಕ್ಕೇನಾದ್ರೂ ಹೋದ್ರಾ  ? ಹಾಗೇನಿಲ್ಲ ! ಏನಪ್ಪಾ ಅಂದ್ರೆ ಮೂಡಿಲ್ಲವೆಂಬ ಉತ್ರ. ಬರೆಯೋ ಮೂಡಿಲ್ಲವೋ ಅಥವಾ ಹೊಸ ಕತೆ, ಕವನಗಳು ಮೂಡಿಲ್ಲವೋ ಎಂಬ ಪ್ರಶ್ನೆ ಪ್ರತೀಬಾರಿಯೂ ಬಾಯಿಂದ ಹೊರಬಾರದೇ ಸುಮ್ಮನಾಗುತ್ತೆ.  ಫೇಸ್ಬುಕ್ಕಲ್ಲಿ ದಿನಕ್ಕೆ ಎಂಟತ್ತು ಪೋಸ್ಟುಗಳಂತೆ, ವಾರಕ್ಕೊಂದೆರಡರಂತಾದ್ರೂ ಬರೀತಿರ್ತಾರೆ. ಪ್ರತೀ ಪೋಸ್ಟಿಗೂ ನೂರಿನ್ನೂರು ಲೈಕುಗಳು, ಐವತ್ತರ ಮೇಲಿನ ಕಾಮೆಂಟುಗಳು. ಈ ಕಾಮೇಂಟು, ಪ್ರತಿ ಕಾಮೇಂಟುಗಳಲ್ಲೇ ಅವರಲ್ಲಿನ ಕತೆಗಾರ ಕಳೆದುಹೋಗ್ತಿದ್ದಾನಾ ಅನಿಸಿಬಿಡುತ್ತೆ. ಒಮ್ಮೆ ಬರೆದ ಪೋಸ್ಟಿಗೆ ಸಂಜೆಯವರೆಗೂ ಕಾಮೆಂಟುಗಳು, ಅದಕ್ಕೆ ಪ್ರತ್ಯುತ್ತರಗಳಂತ ನಡೀತಿದ್ರೆ ಅವ ಹೊಸದರ ಸೃಷ್ಠಿಗೆ, ಮತ್ತೂ ಹೊಸದರ ಓದಿಗೆ ತೊಡಗಿಕೊಳ್ಳೋ ಬದಲು ತನ್ನ ಸಂಭ್ರಮದಲ್ಲೇ ಮುಳುಗಿಹೋಗ್ತಾನಾ ಅನಿಸಿಬಿಡುತ್ತೆ. ಬ್ಲಾಗಲ್ಲಾದ್ರೆ ಹಾಗಲ್ಲವಲ್ಲ. ಒಮ್ಮೆ ಬರೆದು, ಒಪ್ಪ ಓರಣಗೊಳಿಸಿದ್ರೆ ಆಯ್ತು. ಅದಕ್ಕೆ ಬರೋ ಕಾಮೆಂಟುಗಳ ನಿರೀಕ್ಷೆಯಿಲ್ಲ. ನೂರಾರು ಜನರು ವಿಸಿಟ್ ಕೊಟ್ಟ ಕತೆಗೆ ಒಂದೂ ಕಾಮೆಂಟ್ ಸಿಗದೇ ಇರಬಹುದು ! ಆದರೆ ಸಿಕ್ಕ ಒಂದೊಂದೂ ಸಂಗ್ರಹಿಸಿಡೋ ಮುತ್ತಂತೆ. ಇಲ್ಲಿ ಹೊಗಳಬೇಕೆಂದು ಹೊಗಳಿದ್ದಿಲ್ಲ. ಫ್ರೆಂಡ್ಲಿಸ್ಟಿನಲ್ಲಿದ್ದಾನಲ್ಲ, ಬೇಜಾರಾಗುತ್ತಲ್ಲ ಅಂತ ಒತ್ತಿದ ಲೈಕಿಲ್ಲ. ಓದಿದ ಮೇಲೆ ಹೇಳಲೇಬೇಕೆನಿಸಿದ್ದು ಅನಿಸಿಕೆ ರೂಪದಲ್ಲಿ ದಾಖಲಾಗೋದಷ್ಟೆ. ಯಾರು ಏನು ಹೇಳಿದ್ರು ಅನ್ನೋಕಿಂತ್ಲೂ ಮೂಡಿದ ಎಳೆಗೊಂದು ರೂಪ ಕೊಟ್ಟ ಖುಷಿಯಷ್ಟೆ.ಇಲ್ಲಿ ಮೂಡಿದ ರೂಪಕ್ಕೆ ಯಾರನ್ನೋ ಮೆಚ್ಚಿಸಬೇಕೆಂಬ ಬಯಕೆಯಿಲ್ಲ. ಯಾರೂ ನೋಡಿಲ್ಲವೆಂಬ ನೋವೂ ಇಲ್ಲ.  ಇನ್ಯಾವತ್ತೋ ಬಿಡುವಾದಾಗ ನನಗೆ ಹೀಗೂ ಅನಿಸಿತ್ತಾ ಅಂತ ಆಶ್ಚರ್ಯಪಡೋಕಾದ್ರೂ ದಾಖಲಾಗಲೇಬೇಕಾದ ಕಾಲ ಘಟ್ಟವಷ್ಟೇ ಅದು. ಬಾಲ್ಯದಲ್ಲಿ ನಾ ಹೇಗಿದ್ದೆ ಅನ್ನೋದನ್ನ ನೆನಪಿಸುವ ಫೋಟೋದಂತೆ ಎರಡು ವರ್ಷಗಳ ಹಿಂದೆ ನನಗೇನನ್ನಿಸಿತ್ತು ಅನ್ನೋದನ್ನ ನೆನಪಿಸೋದು ಅಂದು ಬರೆದೊಂದು ಬರಹ. ಹಂಗಾಗಿ ಬ್ಲಾಗಲ್ಲಿ ಬರಹಗಳನ್ನು ದಾಖಲಿಸೋದು ಅಂದ್ರೆ ಕಾಲಘಟ್ಟದಲ್ಲಿ ಉಲ್ಟಾ time travel ಮಾಡೋಕೆ ಕೆಲ ಆಯ್ಕೆಗಳನ್ನ ಇಟ್ಟುಕೊಂಡಂಗೆ !

ಸಖತ್ ಫಾಸ್ಟಾಗಿ ಓಡ್ತಿರೋ ಕಾಲದಲ್ಲಿ ನಾಳೆ ಮಾಡಿದ್ರಾಯ್ತು ಅಂದ್ಕೊಳ್ಳೊ ಕೆಲಸಗಳು ಆಗೋದೇ ಇಲ್ಲ ! ಅವತ್ತವತ್ತು ಎಗರೆಗರಿ ಪಡೆದಿದ್ದಷ್ಟೇ ಜೀವಕ್ಕೆ ದಕ್ಕಿದ್ದು. ಆಯ್ತೆಂದರೆ ಎಲ್ಲಾ ಇದ್ದು, ಆಗದೆಂದರೆ ಏನೂ ಆಗದ ಜಗದಲ್ಲಿ ಯಾರೂ ನಮ್ಮನ್ನ ಹುಡುಕಿಕೊಂಡು ಬರೋಲ್ಲ ಅನ್ನೋದು ನಮ್ಮ ಬ್ಲಾಗಣ್ಣನ ಫಿಲಾಸಫಿ ! ನಾವು ಎಷ್ಟು ಸಲ ಅವ್ರ ಮನೆಗೆ ಹೋದ್ರೂ ಆ ನೆಂಟ್ರು ನಮ್ಮ ಮನೆಗೆ ಬರ್ಲಿಲ್ಲ ಅಂತ ಬೇಜಾರಾಗೋದು ಎಷ್ಟು ಸಹಜಾನೋ ಅದೇ ತರಹ ಬ್ಲಾಗಲ್ಲೂ ಆಗ್ತಿರತ್ತೆ. ಆದ್ರೆ ಕೆಲವು ನೆಂಟ್ರೇ ಹಂಗಪ್ಪ. ನಮ್ಮೆದ್ರು ಏನೂ ಹೇಳಲ್ಲ. ಆದ್ರೆ ನಮ್ಮ ಬೆನ್ನ ಹಿಂದೆ ಸಾಕಷ್ಟು ಒಳ್ಳೆ ಮಾತಾಡಿರ್ತಾರೆ ಅಂತ ಎಷ್ಟೋ ಕಾಲದ ನಂತ್ರ ಇನ್ಯಾರಿಂದ್ಲೋ ಗೊತ್ತಾಗಿರುತ್ತೆ. ಎದ್ರಿಗೆ ಯದ್ವಾತದ್ವಾ ಹೊಗಳಿ ಹಿಂಬಂದಿಗೆ ಅಪಹಾಸ್ಯ ಮಾಡೋ ನೆಂಟ್ರೂ ಇರ್ತಾರೆ. ಪಕ್ಕದ ಮನೆ ತಂಕ ಬಂದು ನಮ್ಮನೆಗೆ ಬಾರದ ನೆಂಟ್ರೂ ಇರ್ತಾರೆ ! ಆದ್ರೆ ಯಾರೋ ಕೆಲವರು ನೆಂಟ್ರು ಬರ್ಲಿಲ್ಲ ಅಂತ ಎಲ್ಲ ನೆಂಟ್ರ ಬಗ್ಗೆನೂ ಬೇಜಾರು ಮಾಡ್ಕೊಂಡ್ರೆ ಹೆಂಗೆ ? ಯಾರೂ ಬಂದು ಕಮೆಂಟ್ ಮಾಡ್ಲಿಲ್ಲ ಾಂತ ಬರೆಯೋದ್ನೇ ಬಿಟ್ಟುಬಿಡ್ತೀನಿ ಅಂದ್ರೆ ಹೆಂಗೆ ಅನ್ನೋ ನಮ್ಮ ಬ್ಲಾಗಣ್ಣನ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಕೂತಿದ್ದೀನಿ ಸದ್ಯಕ್ಕೆ. ಬ್ಲಾಗಣ್ಣನ ಮತ್ತೇನಾದ್ರೂ ಬಯ್ಯೋಕೆ ಶುರು ಮಾಡೋ ಮೊದ್ಲು ಯಾವ್ದಾದ್ರೂ ಕತೆನೋ ಕವನನೋ ಬರೆದು ಅವನನ್ನ ಸಮಾಧಾನ ಪಡಿಸ್ಬೇಕು ಅನ್ನೋ ಹುನ್ನಾರದಲ್ಲಿ !

4 comments:

 1. ಯಾರು ಏನು ಹೇಳಿದ್ರು ಅನ್ನೋಕಿಂತ್ಲೂ ಮೂಡಿದ ಎಳೆಗೊಂದು ರೂಪ ಕೊಟ್ಟ ಖುಷಿಯಷ್ಟೆ.ಇಲ್ಲಿ ಮೂಡಿದ ರೂಪಕ್ಕೆ ಯಾರನ್ನೋ ಮೆಚ್ಚಿಸಬೇಕೆಂಬ ಬಯಕೆಯಿಲ್ಲ. ಯಾರೂ ನೋಡಿಲ್ಲವೆಂಬ ನೋವೂ ಇಲ್ಲ. ಇನ್ಯಾವತ್ತೋ ಬಿಡುವಾದಾಗ ನನಗೆ ಹೀಗೂ ಅನಿಸಿತ್ತಾ ಅಂತ ಆಶ್ಚರ್ಯಪಡೋಕಾದ್ರೂ ದಾಖಲಾಗಲೇಬೇಕಾದ ಕಾಲ ಘಟ್ಟವಷ್ಟೇ ಅದು.

  Excellent Lines .

  ReplyDelete
  Replies
  1. ಧನ್ಯವಾದಗಳು ಫಣೀಶ್ . ಪ್ರಶಾಂತವನಕ್ಕೆ ಸ್ವಾಗತ :-)

   Delete
 2. ಬ್ಲಾಗೆನ್ನುವುದು ಜನ ಬರುತ್ತಿಲ್ಲವೆಂದು ಮುಚ್ಚುವ ಅತಿಥಿ ಗೃಹವಲ್ಲ. ಅದು ಸ್ವಂತ ಮನೆಯಿದ್ದಂತೆ. ಇಲ್ಲಿ ನಾವು ಉಳಿಯುತ್ತೇವೆ ಹಾಗೂ ಬೆಳೆಯುತ್ತೇವೆ.ಜೊತೆಗೆ ಬರುವವರಿಗೊಂದು ಸ್ವಾಗತ ಹಾಗೂ ಅವರ ಮಾತಿಗೊಂದು ಮನ್ನಣೆ ಸದಾ ಇದ್ದೇ ಇರುತ್ತದೆ.
  ನನ್ನ ಬ್ಲಾಗಿಗೆ ಕಮೆಂಟುಗಳಿಲ್ಲ, ಹಿಂಬಾಲಕರಿಲ್ಲ ಎಂಬೆಲ್ಲ ಚಿಂತೆಗಳನ್ನ ಕ್ಷಣದಲ್ಲಿ ದೂರ ಮಾಡಿತು ನಿಮ್ಮ ಬರಹ. ತುಂಬಾ ಚೆನ್ನಾಗಿ ಬರೆದಿದ್ದೀರ...

  ReplyDelete
  Replies
  1. ಧನ್ಯವಾದಗಳು ವಿನಾಯಕ ಭಟ್ರೆ . ಪ್ರಶಾಂತವನಕ್ಕೆ ಸ್ವಾಗತ :-)

   Delete