Tuesday, August 15, 2017

ಸ್ವತಂತ್ರ ಭಾರತ

ನಲವತ್ತೇಳರ ನಡುರಾತ್ರಿಯಲ್ಲಿ, ನೋವು ನಲಿವುಗಳ ಸಾಂಗತ್ಯದಲ್ಲಿ
ದೊರಕಿತ್ತೆಮಗೆ ಸ್ವಾತಂತ್ರ್ಯ, ಕೊನೆಗು ದೂರಾಯ್ತು ಪರತಂತ್ರ
ದೇಶ ಹೋಳಾದ ನೋವಿನಲ್ಲಿಯೂ, ಆಂಗ್ಲ ದಾಸ್ಯ ಕೊನೆಗೊಳ್ಳುವಂತಿರೆ
ಖುಷಿಯನಿತ್ತಿತ್ತು ಸ್ವಾತಂತ್ರ್ಯ. ನೂರು ನಿರೀಕ್ಷೆಯ ಗಣತಂತ್ರ|೧

ಎಪ್ಪತ್ತಾದರೂ ಸ್ವಾತಂತ್ರ್ಯಕ್ಕೆ ಅಂದಿನಾಸೆಗಳು ನಿಜವಾಯ್ತೆ ?
ನೀರ ಮೇಲಿನ ಗುಳ್ಳೆಗಳಂತೆ ಕನಸ ಮೂಟೆಗಳು ಒಡೆದೋಯ್ತೆ ?
ದಿನ ಬೆಳಗಾದರೆ ಹೊಸ ಹೊಸ ಗುರಿಗಳು ಸೇರ್ಪಡೆಯಾಗಿವೆ ಭಾರತಿಗೆ
ಸುನಾಮಿಯೆದ್ದರು ಶುಚಿಯಾಗದಷ್ಟು ಕಳಂಕವಂಟಿದೆ ಭಾರತಿಗೆ ! |೨

ಜಾತಿ, ಮತ, ಪಂಥ, ಭಾಷೆಗಳೆಂದು ದಿನವು ಗೋಳಿಡೋ ನಾಡು ಇದು
ನೀರು, ನೆಲಕೆಂದು ಪಕ್ಕದವನಿಗೇ ಬೆಂಕಿಯುಗುಳುವಾ ಬೀಡು ಇದು|
ನಲವತ್ತೇಳರ ನಡುರಾತ್ರಿಯಲ್ಲಿ ದಕ್ಕಿತ್ತೇನೋ ಸ್ವಾತಂತ್ರ್ಯ ?
ನಮ್ಮ ಸಂಕುಚಿತ ಭಾವಗಳಿಂದಲೆ ಇದ್ದೂ ಸತ್ತಿತೆ ಸ್ವಾತಂತ್ರ್ಯ ? |೩

ಜನರ ಜಗಳದಲಿ ವೋಟ ನೋಡುವ ರಾಜಕೀಯದ ತಂತ್ರಗಳು
ಹೊಡೆಬಡಿಯೆಂಬ ಮಾತುಗಳಿಂದಲೆ ಮನೆಯ ಕಟ್ಟುವ ಮನಸುಗಳು |
ಬೇರೆ ದೇಶದ ವಸ್ತು, ತಿಂಡಿಗೆ ದಾಸರಾಗಿರೋ ದೇಹಗಳು
ದಿನವೂ ಕುಸಿಯೋ ರುಪಾಯಿ ಕೇಳಿದೆ ದೊರಕೀತೆಂದಿಗೆ ಸ್ವಾತಂತ್ರ್ಯ }೪

ಗಂಜಿಯುಂಡುರೂ ಸಾಲ ಬೇಡೆನೆಂಬೋ ಸ್ವಾಭಿಮಾನವು ಎನಗೆ
ದೇಹಿಯೆಂದವಗೆ ನಾಸ್ತಿಯೆನ್ನದಿಹ ಸಂಪ್ರದಾಯಗಳ ನಡೆಸಿಹಗೆ
ಯಾರೇ ಬಂದರೂ ಆಶ್ರಯವೀಯೋ ತಾಕತ್ತಿತ್ತಿದೆ ಸ್ವಾತಂತ್ರ್ಯ
ದೇಶರಕ್ಷಣೆಯ ಮಾತು ಬಂದರೆ ನಮ್ಮ ಒಗ್ಗಟ್ಟೆ ಸ್ವಾತಂತ್ರ್ಯ |೫

ದುಡಿದ ಹತ್ತರಲಿ ದೇಶಕ್ಕೆಷ್ಟಾದರೂ ಕೊಟ್ಟೆನೆಂಬೋ ಬಯಕೆ
ಅವ್ಯವಸ್ಥೆಗಳ ಇಂದಿನಲ್ಲಿಯೂ, ಭವ್ಯ ನಾಳೆಗಳ ಕನವರಿಕೆ
ಮುನಿದ ಮನಸುಗಳ ಮತ್ತೆ ಬೆಸೆಯುವ ಒಂದು ದೇಶವೆಂಬೋ ಮನಕೆ
ಮುತ್ತನಿತ್ತಿದೆ ದಿವ್ಯ ಭಾರತಿಯ ಮನೋ ವೈಶಾಲ್ಯ ಸ್ವಾತಂತ್ರ್ಯ |೬

ಅಂಧಾನುಕರಣೆ ಕೊನೆಯಾಗೋ ದಿನವೆ ನಮಗೆ ದಕ್ಕಲಿದೆ ಸ್ವಾತಂತ್ರ್ಯ
ಅನ್ಯದೇಶೀಯ ವಸ್ತುಗಳ ದಾಸ್ಯ ಮುಗಿವ ದಿನವದೇ ಸ್ವಾತಂತ್ರ್ಯ|
ನೆರೆಹೊರಯವಗೆ ಬೆಂಕಿಯ ಬದಲು ಬದುಕನೀಯುವುದು ಸ್ವಾತಂತ್ರ್ಯ
ದ್ವೇಷ ತಣಿಸುವ, ದೇಶ ಕಟ್ಟುವ ಕೆಲಸ ನಡೆಸುವುದೆ ಸ್ವಾತಂತ್ಯ|೭

ಬರುವ ನಾಳೆಯಲಿ ತಾಯಿ ಭಾರತಿಯ ಋಣವ ತೀರಿಸೋ ಕನಸುಗಳು
ಸ್ವಂತ ಮನದಂತೆ ಸುತ್ತ ಪರಿಸರ, ದೇಶ ಶುಚಿಗೊಳಿಸೊ ಬಯಕೆಗಳು|
ಬುದ್ಧಿಮತ್ತೆಗೆ ಸಾಟಿಯಿಲ್ಲದ , ಸವಾಲಿಗಂಜದ ಮನಸುಗಳು
ತಮ್ಮ ಕ್ಷೇತ್ರದಲೆ ತೊಡಕಿಲ್ಲದಂತೆ ತೊಡಗಿಕೊಳ್ಳುವುದೆ ಸ್ವಾತಂತ್ರ್ಯ |೮

ಚಂದ್ರನಾಯಿತು, ಮಂಗಳನಾಯ್ತು, ಲಕ್ಷ ರೂಪಾಯಿಗೆ ಕಾರಾಯ್ತು
ಭಾರತೀಯರಿಗೆ ಅಸಾಧ್ಯವೆನ್ನೋ ಮಾತೇ ಎಂದೋ ದೂರಾಯ್ತು|
ಕುಂಟುತ್ತಾದರು ಮುಂದೆ ಸಾಗಿತು ತೊಂಭತ್ತರಲ್ಲಿ ಆರ್ಥಿಕತೆ,
ಧೃಡ ನಿರ್ಧಾರದ ಸ್ವಾತಂತ್ರ್ಯಕ್ಕೆ ದಿವಾಳಿಯಂಚಲಿ ಪಾರಾಯ್ತು |೯

ಆಪಾಯವಿರುವುದು ಪಾಕಿಗಳಿಂದ, ಕುತಂತ್ರಿ ಚೀನಾದಿಂದಲ್ಲ
ನಮ್ಮೊಳಗಿರುವ ಶಕುನಿಗಳಿಂದ, ಲೂಟಿಕೋರರ ಮನಸಿಂದ.
ಉದ್ದಾರವಾಗೋ ಮನಸಿದ್ದವಗೆ ಹಲವು ದಾರಿಗಳು ಉಂಟಿಲ್ಲಿ
ಸ್ವಾತಂತ್ರ್ಯವೆಂಬೋ ಶಬ್ದವೆ ಸಾಕು , ಅದರ ಲಾಭಗಳು ಹಲವಿಲ್ಲಿ |೧೦

ತಮ್ಮೆಲ್ಲವನ್ನು ನಮ್ಮಿಂದಿಗೆಂದು ತ್ಯಾಗವಿತ್ತವರ ನೆನೆಯೋಣ
ಸಿಕ್ಕ ಸ್ವಾತಂತ್ರ್ಯ ಹಾಳು ಮಾಡದೇ ದೇಶದುನ್ನತಿಗೆ ಶ್ರಮಿಸೋಣ|
ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರು ಸಮಾನರೆನ್ನೋಣ
ಬಡತನ, ಮೌಢ್ಯಗಳೆಂಬೋ ಸಮಸ್ಯೆ ಹುಡುಕುತ ಅದ ಬಗೆಹರಿಸೋಣ|೧೧


ಅನುದಿನವುದಯಿಸೊ ಸೂರ್ಯನು ನಮಗೆ ನಮ್ಮ ಗುರಿಗಳ ನೆನಪಿಸಲಿ
ತಾಯಿ ಭಾರತಿಯ ಮುಖದಲಿ ಎಂದೂ ಸ್ವಾತಂತ್ರ್ಯದ ನಗು, ಕಳೆಯಿರಲಿ |
ನಾವು ನಮ್ಮತನ ಉಳಿಸಿಕೊಳ್ಳುವುದೆ ನಮಗೆ ದಕ್ಕಿದ ಸ್ವಾತಂತ್ರ್ಯ
ಭಾರತವಾಸಿಯ ಮೊಗದಲಿ ಮಿನುಗೋ ನಗುವೇ ನಮ್ಮಯ ಸ್ವಾತಂತ್ರ್ಯ|೧೨