Wednesday, May 29, 2013

ಲೇಪಾಕ್ಷಿ ನಂದಿಯೆಡೆಗೆ ನಾವು..
ಈ ರವಿವಾರ ಲೇಪಾಕ್ಷಿ ನಂದಿ ನೋಡೋಕೆ ಹೋಗೋಣ ಅಂತ ಪ್ಲಾನ್ ಮಾಡಿದ್ವಿ. ಕ್ಯಾನ್ಸಲ್ ಆಗೋ ಹಂತಕ್ಕೆ ಬಂದ್ರೂ ಕೊನೆಗೂ ಹೊರಟು ನಿಂತ ಗೆಳೆಯರು ಹಿಂದೂಪುರ ತಲುಪಿ, ಅಲ್ಲಿಂದ ಲೇಪಾಕ್ಷಿ ತಲುಪೋ ಹೊತ್ತಿಗೆ ಘಂಟೆ ಹನ್ನೊಂದೂ ಮುಕ್ಕಾಲು..ಎಂಟೂವರೆಗೆ ಹೊರಟ್ರೂ ಅಷ್ಟೊತ್ತಾಗಿದ್ದು ಆಂದ್ರದ ಬಸ್ ಮಹಿಮೆ ಅಂತ ಬೇರೆ ಹೇಳ್ಬೇಕಿಲ್ಲ ಜ್ಯೂಸ್ ಬಾಟಲ್ ನಂತೆ ರಸ್ತೆ ಪಕ್ಕ ಮಾರಾಟಕ್ಕಿಟ್ಟಿದ್ದ ಪೆಟ್ರೋಲ್ ಬಾಟ್ಲಿಗಳನ್ನ ಕಂಡ ನಮಗೆ ವಿಸ್ಮಯದ ನಗರಿ ಲೇಪಾಕ್ಷಿ ಸ್ವಾಗತ ಕೋರ್ತಾ ಇತ್ತು ..


ಲೇಪಾಕ್ಷಿಯ ಬಗ್ಗೆ ಕೆಲವು ವಿಷಯ ಓದಿದ್ದ ನಾವು ಪ್ರತೀ ಮೂಲೆಯನ್ನೂ ಬಿಡದೇ ನೋಡಬೇಕು ಅನ್ನೋ ತರ ನಿಧಾನವಾಗಿ ಒಳಗೆ ನಡೆದ್ವಿ. ಮೊದಲು ಸಿಕ್ಕಿದ್ದು ನಾಟ್ಯ ಮಂಟಪ. ಅಲ್ಲಿ ಕಂಬಗಳು ಎಲ್ಲಾ ದೇವಸ್ಥಾನಗಳಲ್ಲಿ ಇತೋ ತರ ಇರ್ಲಿಲ್ಲ. ಏನೋ ಇದು.. ಕಂಬಗಳ್ನ ಎದ್ವಾ ತದ್ವಾ ತಂದಿಟ್ಟಿದಾರೆ ಅಂದ ಗೆಳೆಯ.. ಸಿಕ್ಕಾಪಟ್ಟೆ ಕಂಬಗಳ್ನ ನೋಡಿ ಮೊದ್ಲು ಹಾಗೇ ಅನ್ಸಿದ್ರೂ ಆಮೇಲೆ ಅದ್ರ ಅರ್ಥ ಗೊತ್ತಾಯ್ತು !
Natya Mantapa

ನಾಟ್ಯ ಮಂಟಪದ ಮೇಲ್ಗಡೆ ಶತದಳ ಪುಷ್ಪ. ಸುತ್ತು ಸುತ್ತುಗಳಾಗಿ ಒಳಗೆ ತೆರೆದುಕೊಳ್ಳೋ ಛಾವಣಿಯ ಹೂವ ರಚನೆಯಲ್ಲಿ ನೂರು ಎಸಳುಗಳಿವೆಯಂತೆ. ಅದರ ರಂಭೆಯ ನೃತ್ಯ ಮತ್ತು ಅದಕ್ಕೆ ವಾದ್ಯಗಳ ಸಾಥ್ ನೀಡುತ್ತಿರೋ ಹನ್ನೊಂದು ದೇವತೆಗಳು. ಪ್ರತೀ ಕಂಬವೂ ಒಬ್ಬೊಬ್ಬ ದೇವನಿಗೆ. ಎಡಮೂಲೆಯಲ್ಲಿ ನರ್ತಿಸುತ್ತಿರುವ ರಂಭೆ, ಪಕ್ಕ ದತ್ತಾತ್ರೇಯ, ಅವನ ಪಕ್ಕ ಸೂರ್ಯ, ನಂತರ ತುಂಬುರ, ಈಶ್ವರ,  ರಂಭೆಯ ಮತ್ತೊಂದು ಪಕ್ಕದಲ್ಲಿ ಚಂದ್ರ, ಹೀಗೆ ದೇವತೆಗಳಿದ್ದಾರೆ ಒಂದೊಂದು ಕಂಬದಲ್ಲೂ. ರಂಭೆಯ ಎದುರಿಗೆ ತೆರೆಗೆ ಮರೆಯಾದಂತೆ ನಿಂತಿರೋದು ಭೃಂಗಿ ಮುನಿ, ಭೃಂಗಿ ಮುನಿಗೆ ಮೂರು ಕಾಲುಗಳು!.
Bhrungi muni--3legged saint

ಆತ ರಂಭೆಯ ಗುರುವಂತೆ. ಗುರು ನರ್ತಿಸೋದನ್ನ ನೋಡಿ ರಂಭೆ ನರ್ತಿಸೋದಂತೆ. ಇಪ್ಪತ್ನಾಲ್ಕು ತಾಲು ನರ್ತಿಸುತ್ತಲೇ ಇರುವ ಭೃಂಗಿ ಮುನಿಗೆ ಒಂದು ಕಾಲು ದಣಿದರೆ ಮತ್ತೊಂದು ಕಾಲು ಎಂದು ನಟರಾಜ ಶಿವನಿಂದ ಮೂರು ಕಾಲುಗಳ ವರವಂತೆ. ಯಾವುದೂ ಸುಮ್ಮನೇ ಅಲ್ಲ ಶಿವ ಅಂದುಕೊಂಡು ಒಳ ನಡೆದೆವು :-)

ಒಳಗೆ ವೀರಭದ್ರೇಶ್ವರ, ಪಾಪನಾಥೇಶ್ವರ, ದುರ್ಗೆ, ವಿಷ್ಣುವಿನ ಗುಡಿಗಳಿವೆ. ಮುಖ್ಯ ದೇವರು ವೀರ ಭದ್ರೇಶ್ವರ. ದೇವರಿಗೆ ಹಾಗೇ ಅಡ್ಡ ಬಿದ್ದೆವು. ಮಂಗಳಾರತಿಯ ನಂತರ ಹಾಗೇ ತಲೆ ಎತ್ತಿ ನೋಡಿದರೆ ಮೇಲಿನ ಚಾವಣಿಯ ತುಂಬೆಲ್ಲಾ ಚಿತ್ರಗಳು! ಏನೋ ಕತೆ ಅನ್ನಿಸಿದರೂ ಚಿತ್ರದ ಪೂರ್ಣ ಕಲ್ಪನೆ ಸಿಗಬೇಕಾದರೆ ದೇಗುಲದ ಮಧ್ಯ ಭಾಗಕ್ಕೆ ಬಂದು ಮತ್ತೆ ತಲೆಯೆತ್ತಿ ನೋಡಬೇಕಾಯಿತು. ಕತ್ತಿ ಹಿಡಿದಿರೋ ಬೃಹತ್ತಾದ ವೀರಭದ್ರ, ಸುತ್ತಲಿರೋ ದೇವಾನು ದೇವತೆಗಳನ್ನು ಚಿತ್ರಿಸಿರೋ ಪರಿ ನೋಡಬೇಕಾದರೆ ಅಲ್ಲಿಗೇ ಹೋಗಬೇಕು. ಹಾಗೆಯೇ ಗರ್ಭಗೃಹದ ಸುತ್ತ ಪ್ರದಕ್ಷಿಣೆ ಹಾಕೋಣ ಅಂತ ಹೋದ  ನಮಗೆ ಮತ್ತೆ ಅಚ್ಚರಿ. ಪ್ರದಕ್ಷಿಣಾ ಪಥದಲ್ಲೂ ಮಧ್ಯೆ ಕಂಬಗಳು!
Pradakshina patha..
Pradakshina pathadallina kambada rachane


ಪ್ರದಕ್ಷಿಣಾ ಪಥದಲ್ಲೂ ಚಾವಣಿಯಲ್ಲಿ ಚಿತ್ರಗಳು. ದೇಗುಲಗಳಲ್ಲಿ ಕೆತ್ತನೆಗಳಿರುವುದನ್ನು ಕೇಳಿದ್ದೆ. ಆದ್ರೆ ಚಿತ್ರಗಳಿರೋದನ್ನು, ಅದೂ ಎಲ್ಲೆಡೆ.. ಇದೇ ಮೊದಲ ಸಲ ನೋಡಿದ್ದೆ.. ಅಜಂತಾ, ಎಲ್ಲೋರಗಳ ಗುಹೆಗಳಲ್ಲಿ ಚಿತ್ರಗಳಿವೆಯೆಂದು ಕೇಳಿದ್ದೆ. ಆದ್ರೆ ವಿಜಯನಗರ ಕಾಲದ ದೇಗುಲವೊಂದರಲ್ಲಿ ಚಿತ್ರಗಳಿರೋದನ್ನ ನೋಡಿದ್ದು ಇದೇ ಮೊದಲು.ಪ್ರದಕ್ಷಿಣಾ ಪಥದಲ್ಲಿ ಸಾಗಿದಾಗ ಮತ್ತೊಂದು ಓಣಿ ಸಿಕ್ಕಿತು. ಅದರಲ್ಲಿ ಸಾಗಿದರೆ ಗುಹೆಯಂತ ಕೋಣೆಯೊಂದರಲ್ಲಿ ಕೊನೆಯಾಗುತ್ತದೆ. ಆ ಕೋಣೆಯಲ್ಲೂ ಕೆತ್ತನೆಗಳು.. ಬಂಡೆಯೊಂದರ ಕೆಳಗೆ ದೇಗುಲ ಕಟ್ಟಿದ ಪರಿ ಆ ಕೋಣೆಯಲ್ಲಿ ಚೆನ್ನಾಗಿ ಅರಿವಾಗುತ್ತದೆ. ಒಂದು ಮೂಲೆಯಲ್ಲಿ ಚಾಚಿರುವ ಬಂಡೆ, ಇನ್ನೊಂದು ಕಡೆ ಕಟ್ಟಿರೋ ಇಟ್ಟಿಗೆಗಳು, ಮತ್ತೆ ಛಾವಣಿಯಲ್ಲಿ ಯಥಾಪ್ರಕಾರ ಚಿತ್ತಾರ.. ಮೂಲೆ ಮೂಲೆಯನ್ನೂ ಬಿಡದೆ ಕಲೆಯನ್ನು ಸಾರಿದ ಅಂದಿನವರ ಕಲಾ ಪ್ರೇಮ ನೋಡಿ ಖುಷಿಯಾಗುತ್ತದೆ.

ಇಲ್ಲಿಯ ದುರ್ಗೆಯಲ್ಲಿಯೂ ವಿಶೇಷವಿದೆ.  ನಾವು ಯಾವುದೇ ದೇಗುಲಕ್ಕೆ ಹೋದರೂ ಮೊದಲು ದೇವರ ಮುಖವನ್ನು ನೊಡುತ್ತೀವಲ್ಲವೇ ? ಇಲ್ಲಿ ಹಾಗಲ್ಲ. ನಾವು ವೀರಭದ್ರನ ಗುಡಿಗೆ ಕಾಲಿಡುತ್ತಿರುವಾಗ ಬಲಭಾಗದಲ್ಲಿ ನಮ್ಮ ದಿಕ್ಕಿಗೆ ಅಡ್ಡವಾಗಿ ದುರ್ಗಿಯಿದ್ದಾಳೆ. ದುರ್ಗಿಯ ಎದುರಿಗಿರೋ ಕನ್ನಡಿಯಿಂದ ದುರ್ಗಿಗೆ ಮೊದಲು ನಮಸ್ಕರಿಸಬೇಕು ! ಆಮೇಲೆ ಆ ಕಡೆ ಹೋದಾಗ ಅಭಿಮುಖವಾಗಿರೋ ದುರ್ಗಿಯ ದರ್ಶನ ಪಡೆಯಬಹುದು. ಇದರ ಬಗ್ಗೆಯೂ ಒಂದು ಕಥೆಯಿದೆ. ಸಾಮಾನ್ಯವಾಗಿ ದುರ್ಗಿಯನ್ನು ವಾಯುವ್ಯಕ್ಕೆ ಪ್ರತಿಷ್ಟಾಪಿಸುತ್ತಾರಂತೆ. ಆದರೆ ಈ ದೇಗುಲ ಕಟ್ಟಿಸುವಾಗ ಶಿಲ್ಪಿಯೊಬ್ಬನ ಮೇಲೆ ಆವಾಹಿತಳಾದ ದುರ್ಗಿ ನಾನು ಈ ಕಂಬದಲ್ಲೇ ನೆಲೆಸುತ್ತೇನೆ. ನನ್ನನ್ನು ಇಲ್ಲೇ ಪೂಜಿಸಿ ಎಂದು ಕೂತಳಂತೆ. ಅಂದಿನಿಂದ ಆ ಕಂಬಕ್ಕೆ ಮುಖವಾಡವನ್ನು ನಿರ್ಮಿಸಿ ದುರ್ಗಾಮಾತೆಯನ್ನು ಪೂಜಿಸಲಾಗುತ್ತಿದೆಯಂತೆ.

ದೇವರ ದರ್ಶನ ಪಡೆದು, ಮೇಲ್ಛಾವಣಿಯಲ್ಲಿದ್ದ ರಾಮಾಯಣ, ಮಹಾಭಾರತದ ಚಿತ್ರಗಳನ್ನು ನೋಡಿ ಮತ್ತೆ ನಾಟ್ಯ ಮಂಟಪಕ್ಕೆ ಬಂದೆವು. ಆಗ ಅಲ್ಲೂ ತಲೆಯೆತ್ತಿ ನೋಡಿದಾಗ ಛಾವಣಿಯಲ್ಲಿದ್ದ ಚಿತ್ರಗಳು ಕಂಡವು.

ಶತದಳ ಪುಷ್ಪವನ್ನಷ್ಟೇ ನೋಡಿದ್ದ ನಾವು ಅದರ ಪಕ್ಕದ ಸಾಲಿನಲ್ಲಿದ್ದ ಕಂಬಗಳನ್ನು, ಅದರ ಮೇಲ್ಗಣ ಛಾವಣಿಯ ಚಿತ್ರಗಳನ್ನು ಗಮನಿಸಿರಲಿಲ್ಲ !  ಭೃಂಗಿಯ ಪಕ್ಕದಲ್ಲಿರೋ ಶಿವ ನೊಡಿದ್ದ ನಾವು ಅದರ ಮತ್ತೊಂದು ಮೂಲೆಯಲ್ಲಿದ್ದ ಅನ್ನಪೂರ್ಣೇಶ್ವರಿಯನ್ನು ಗಮನಿಸಿರಲಿಲ್ಲ ! ಕಂಬದ ಮೂಲೆ ಮೂಲೆಯನ್ನೂ ಬಿಡದೇ ಕೆತ್ತಿರೋ , ಛಾವಣಿಯ ಮೂಲೆಯನ್ನೂ ಬಿಡದೇ ಚಿತ್ರಿಸಿರೋ ಆ ಶಿಲ್ಪಿಗಳ ಸೃಜನಶೀಲತೆಗೊಂದು ಸಲಾಂ. 


ದಕ್ಷಯಜ್ನದಲ್ಲಿ ಪ್ರಾಣ ತ್ಯಜಿಸಿದ ಗೌರಿ ದೇವಿ ಪಾರ್ವತಿಯಾಗಿ ಜನಿಸುತ್ತಾಳೆ. ಪಾರ್ವತಿ ಅರ್ಥಾತ್ ಮಾತೆ ಅನ್ನಪೂರ್ಣೆಯನ್ನು ಪರೀಕ್ಷಿಸುವ ಸಲುವಾಗಿ  ಭಿಕ್ಷುಕನ ವೇಷದಲ್ಲಿ ಶಿವ ಬರುತ್ತಾನೆ. ಬಡಿಸುತ್ತಿರುವಾಗ ಆಕೆಯನ್ನು ಪರೀಕ್ಷಿಸಲೋಸುಗ ಸೀರೆಯ ಸೆರಗು ಜಾರುವಂತೆ ಮಾಡುತ್ತಾನೆ. ಬಡಿಸುವುದರಲ್ಲಿ ತಲ್ಲೀನಳಾದ ಪಾರ್ವತಿಗೆ ಇದ್ಯಾವುದರ ಪರಿವೆಯೇ ಇರುವುದಿಲ್ಲ. ಪ್ರಸನ್ನನಾದ ಶಿವ ತನ್ನ ನಿಜರೂಪ ತೋರುತ್ತಾನಂತೆ.. ಇವೆಲ್ಲಾ ದೃಶ್ಯಾವಳಿಯನ್ನು ಅದೊಂದೇ ಕಂಬದಲ್ಲಿ ಕೆತ್ತಿದ್ದಾರೆ.  ಇಂತದ್ದದೆಷ್ಟೋ ಕತೆಗಳು ಲೇಪಾಕ್ಷಿಯ ಕಂಬಗಳಲ್ಲಿ ಅಡಗಿ ಕೂತಿದೆಯೋ ಗೊತ್ತಿಲ್ಲ ! ನೀಟಾಗಿ ನೋಡದಿದ್ದರೆ ಒಂದೂ ದಕ್ಕೋದು ಡೌಟ್ ! :-)

ನಾಟ್ಯಮಂಟಪವನ್ನೊಳಗೊಂಡ ಕಂಬಗಳ ಆ ಮಂಟಪದ ವಿಶೇಷತೆ ಕಂಬಗಳೇ ! :-) ಎಪ್ಪತ್ತು ಕಂಬಗಳಿರೋ ಆ ಮಂಟಪದಲ್ಲಿ ನೆಲದ ಮೇಲಿರೋದು ಅರವತ್ತೊಂಬತ್ತೇ ಕಂಬ. ಇನ್ನೊಂದು ಕಂಬ ತೇಲುಗಂಬ(hanging piller) !. ನೆಲಕ್ಕೆ ಒಂಚೂರೂ ತಾಗದೇ ನಿಂತಿರೋ ಆ ಕಂಬ ಕೆಳಗಿರೋ ಜಾಗ ಬಗ್ಗಿ ನೋಡಿದರೆ ಕಾಣುತ್ತದೆ. ಅದರ ಕೆಳಗೆ ಟವೆಲ್ ಹಾಕಿ, ತೆಗೆದು  ನೋಡೂ ಆಯಿತು !
Hanging piller at Lepakshi

ಒಂದು ಬೇಸರದ ಸಂಗತಿ ಅಂದರೆ ಆ ಕಂಬವನ್ನೂ ಕಿಡಿಗೇಡಿಗಳು ಬಿಟ್ಟಿಲ್ಲ. ಒಂದು ಮೂಲೆಯಲ್ಲಿ ವಾಲಿ ಹೋಗಿರೋ ಆ ಕಂಬಕ್ಕೆ ಒಂದು ಕಡೆ ಪೇಪರ್ ತುರುಕಿ ಬಿಟ್ಟಿದ್ದಾರೆ :-( ನೆಲದ ಮೇಲೆ ಒಂದು ಸೂಜಿಯಷ್ಟೂ ತಾಗದೇ ನಿಂತ ಕಂಬವೆಂಬ ವಿಸ್ಮಯಕ್ಕೆ ಸಾಕ್ಷಿಯಾಗಬಹುದಾದ ಕಂಬದ ಹಿರಿಮೆಯನ್ನು ಹಾಳು ಮಾಡಿಟ್ಟಿದ್ದಾರೆ. ಕಂಬ ವಾಲಿದ್ದಕ್ಕೆ ಕಾರಣರಾದ ಬ್ರಿಟಿಷರ ಕುಕೃತ್ಯದ ಬಗ್ಗೆ ಕೇಳಿಯೂ ಸಿಕ್ಕಾಪಟ್ಟೆ ಸಿಟ್ಟು, ಬೇಜಾರುಗಳಾಯ್ತು :-( ವಿಜಯನಗರದ ಕಾಲದ ಈ ತೇಲುಗಂಬದ ವೈಶಿಷ್ಟ್ಯತೆ ಕೇಳಿದ ಬ್ರಿಟಿಷರು ೧೯೦೨ ರಲ್ಲಿ ಇಲ್ಲಿಗೆ ಬಂದರಂತೆ. ಕಂಬ ನೋಡಿ ಪರಮ ಆಶ್ಚರ್ಯಕ್ಕೊಳಗಾದ ಬ್ರಿಟಿಷ್ ಶಿಲ್ಪಿಗಳಿಗೆ ಮನದ ಮೂಲೆಯಲ್ಲೊಂದು ಸಂಶಯ! ತಮ್ಮನ್ನು ಬಿಟ್ಟರೆ ಬೇರಾರೂ ಇಲ್ಲ, ಪ್ರಪಂಚದಲ್ಲಿ ತಮಗೆ ತಿಳಿದದ್ದು ಮಾತ್ರ ವಿದ್ಯೆಯೆಂಬ ಭ್ರಮೆ ಬೇರೆ ಇತ್ತಲ್ಲಾ..! ಕಬ್ಬಿಣದ ರಾಡುಗಳಿಂದ ಆ ಕಂಬವನ್ನು ಒಂದು ಮೂಲೆಗೆ ತಳ್ಳಿದರಂತೆ. ಆ ಕಂಬ ಸರಿಸುತ್ತಿದ್ದಂತೆಯೇ ದೇಗುಲದ ಎಲ್ಲಾ ಕಂಬಗಳೂ ಜರುಗಲಾರಂಭಿಸಿದವಂತೆ ! ಆಗ ಇದೇ ದೇಗುಲದ ಮೂಲಗಂಭ. ಇದಕ್ಕೇನಾದರೂ ಆದರೆ ದೇಗುಲ ಉರುಳುತ್ತದೆ ಎಂದರಿತು ತಮ್ಮ ಮೂರ್ಖಪ್ರಯತ್ನವನ್ನು ಅಲ್ಲಿಗೇ ನಿಲ್ಲಿಸಿದರಂತೆ. ನಮ್ಮ ದೇಶವೇ ಗ್ರೇಟ್ ಅನ್ನೋ ಯಾವ ಅಭಿಮಾನಮಾನದಿಂದಲೂ ಈ ಕಪೋಲಕಲ್ಪಿತ ಕತೆಯನ್ನು ಹೇಳುತ್ತಿಲ್ಲ. ಲೇಪಾಕ್ಷಿಗೆ ತೆರಳಿ ಅಲ್ಲಿನ ತೇಲುಗಂಬವನ್ನೂ , ಅದರ ಪಕ್ಕದಲ್ಲಿರುವ ಕಂಬಗಳ ಮೇಲ್ಬದಿಯ ಜೋಡಣೆ(joint) ಅನ್ನೂ ನೋಡಿದರೆ ತಮಗೇ ಅರಿವಾಗುತ್ತದೆ. ಆ ಕಂಬಗಳು ತಮ್ಮ ಸ್ಥಾನದಿಂದ ಹೊರಳಿರೋದ್ದು ಸ್ಪಷ್ಟವಾಗಿ ಅರಿವಾಗುತ್ತದೆ :-( ಇನ್ನೂ ಈ ಮಾತುಗಳಲ್ಲಿ ನಂಬಿಕೆಯಿರದವರು ಇತಿಹಾಸದ ಪುಟಗಳನ್ನು ತಡಕಬಹುದು . ಸ್ಥಳೀಯರಲ್ಲಿ ಮನೆಮಾತಾಗಿರೋ ಈ ವಿಷಯ ಬ್ರಿಟಿಷ್ ಬಾಲಂಗೋಚಿ ಇತಿಹಾಸಜ್ನರ ಸುಳ್ಳುಗಳಲ್ಲೇ ತುಂಬಿ ಹೋಗಿರೋ ಪುಸ್ತಕಗಳಲ್ಲಿ ದಾಖಲಾಗಿರೋದು ಅನುಮಾನವೇ :-(

70 kambagal naduve :-)


ತೇಲುಗಂಬದ ಮೇಲಿರೋ ಛಾವಣಿಯಲ್ಲಿರೋ ದೇವಿ ಪಾರ್ವತಿ , ಮತ್ತವಳ ಅಲಂಕಾರಕ್ಕೆ ಬಂದಿರೋ ಆರು ಸಖಿಯರು, ವಿರೂಪಣ್ಣ ಮತ್ತವನ ಶಿಲ್ಪಿಗಳು..ಮುಂತಾದ ಚಿತ್ರಗಳು ಚೆನ್ನಾಗಿವೆ. ಮತ್ತೊಂದು ಮೂಲೆಯಲ್ಲಿನ( ಭ್ರೃಂಗಿ ಮುನಿಯ ಪಕ್ಕದ ಮೇಲ್ಛಾವಣಿ) ಚಿತ್ರಗಳೂ ಚೆನ್ನಾಗಿವೆ. ಅಲ್ಲೇ ಕೆಳಗೆ ಹಳಗನ್ನಡದ ಲಿಪಿಗಳು ಮತ್ತವುಗಳ ಸಂರಕ್ಷಣೆಗಾಗಿ ಮಾಡಿರೋ ಕಬ್ಬಿಣದ ಕಂಬಗಳು ಇತಿಹಾಸವನ್ನು ಉಳಿಸಲೋಸುಗ ನಮ್ಮ ಜನರಲ್ಲಿ ಈಗಲಾದರೂ ಮೂಡಿರೋ ಪ್ರಜ್ನೆಯ ಬಗ್ಗೆ ಸಮಾಧಾನ ಮೂಡಿಸಿತು..

Nagalingeshwara

ತೇಲುಗಂಬದ ಪಕ್ಕ ಕೆಳಗಿಳಿದು  ಅಲ್ಲಿಂದ ಹಾಗೇ ಮುಂದೆ ಬಂದಾಗ ದೇಗುಲದ ಪಕ್ಕಾ ಹಿಂಭಾಗದಲ್ಲಿ ನಾಗಲಿಂಗೇಶ್ವರವನ್ನು ನೋಡಬಹುದು. ಶಿವಲಿಂಗದ ಮೇಲೆ ಹೆಡೆಯೆತ್ತಿರೋ ನಾಗನ ಬೃಹತ್ತಾದ ಕೆತ್ತನೆ ಮನೋಹರವಾಗಿದೆ. ತಮ್ಮ ತಾಯಿ ಊಟ ತರುವುದರೊಳಗೆ ಈ ನಾಗಲಿಂಗೇಶ್ವರನನ್ನು ಇಲ್ಲಿನ ಶಿಲ್ಪಿಗಳು ಏಕಶಿಲೆಯೊಳಗೆ ಕೆತ್ತಿ ಮುಗಿಸಿದರು ಎಂದೊಂದು ದಂತಕತೆಯಿದೆ.
 
Eka Kavata Ganapati
ಅದರ ಪಕ್ಕದಲ್ಲೇ ಏಕಕವಾಟ ಗಣಪತಿ. ಪಕ್ಕದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಆನೆ, ನಂದಿಯನ್ನು ನೋಡಬಹುದು. ಅದರ ಮತ್ತೊಂದು ಬದಿಗೆ ಚಂದ್ರಶಾಲೆ. ಆಗ ದೇಗುಲಕ್ಕೆ ಬಂದ ಪರಿವಾರಗಳು ಉಳಿದುಕೊಳ್ಳಲೆಂದೇ ಕಟ್ಟಿದ್ದೆನ್ನಲಾದ ಆ ಸಾಲು ಪಡಸಾಲೆಯ ಕಂಬಗಳಲ್ಲೂ ಅನೇಕ ಕೆತ್ತನೆಗಳನ್ನು ನೋಡಬಹುದು.

Open Air Kalyana mantapaಏಕಕವಾಟ ಗಣಪತಿಯ ಎಡಭಾಗದಲ್ಲಿರೋದು ತೆರೆದ ಕಲ್ಯಾಣಮಂಟಪ. ಎಲ್ಲೋ ಇರಬೇಕಾದ ಕಂಬಗಳನ್ನು ತಂದು ಇಲ್ಲಿ ಜೋಡಿಸಿದಂತೆ ಮೊದಲಿಗೆ ಅನ್ನಿಸಿದರೂ ಆ ಕಂಬಗಳ ಮೂಲೆ ಮೂಲೆಗಳಲ್ಲಿರೋ ಕೆತ್ತನೆಗಳು ಅಚ್ಚರಿ ಮೂಡಿಸುತ್ತವೆ. ಈ ಕಲ್ಯಾಣಮಂಟಪಕ್ಕೆ ಸೂರಿಲ್ಲದೇ ಅರ್ಧಕ್ಕೇ ನಿಂತುಹೋಗಿದ್ದಕ್ಕೂ ಒಂದು ಐತಿಹಾಸಿಕ ಹಿನ್ನೆಯೆಯಿದೆ. ವಿಜಯನಗರದ ಅರಸ ಅಚ್ಯುತರಾಯ. ಅವನ ಖಜಾಂಚಿ ವಿರೂಪಣ್ಣ. ಆತ ದೇವ ಪ್ರೇರಣೆಯಿಂದ ಕೂರ್ಮ ಪರ್ವತವೆಂಬ ಈ ಬೆಟ್ಟದ ಮೇಲೆ ದೇಗುಲ ನಿರ್ಮಾಣ ಪ್ರಾರಂಭಿಸುತ್ತೇನೆ. ಅಚ್ಯುತರಾಯನಿಗೆ ಗಂಡು ಮಕ್ಕಳಿಲ್ಲದ ಕಾರಣ ಆತನ ನಂತರ ಆತನ ಅಳಿಯ ರಾಮರಾಯ ಅಧಿಕಾರಕ್ಕೆ ಬರುತ್ತಾನೆ. ವಿರೂಪಣ್ಣನನ್ನು ಕಂಡರಾಗದ ಜನರು ವಿರೂಪಣ್ಣ ಖಜಾನೆಯಲ್ಲಿರೋ ದುಡ್ಡಿನಿಂದ ಯಾವುದೋ ಬೆಟ್ಟದ ಮೇಲೆ ದೇಗುಲ ನಿರ್ಮಿಸುತ್ತಿದ್ದಾನೆ, ಖಜಾನೆಯನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾನೆ ಎಂದು ಕಿವಿಯೂದುತ್ತಾರೆ. ಮೊದಲೇ ಹಿತ್ತಾಳೆ ಕಿವಿಯಾದ ರಾಜ ವಿರೂಪಣ್ಣನನ್ನು ಕರೆಸಿ ಆತನ ಎರಡೂ ಕಣ್ಣುಗಳನ್ನು ಕೀಳಲು ಆದೇಶಿಸುತ್ತಾನೆ. ರಾಜಸಭೆಗೆ ಹೋಗಿ ಕಣ್ಣು ಕೀಳಿಸಿಕೊಂಡು ಅಪಹಾಸ್ಯಕ್ಕೆ ಗುರಿಯಾಗುವುದಕ್ಕಿಂತ ತನ್ನ ಕಣ್ಣುಗಳನ್ನು ತಾನು ಕಟ್ಟಿಸಿದ ದೇಗುಲದಲ್ಲೇ ಕಳೆದುಕೊಳ್ಳುವುದು ಮೇಲೆಂದು ತನ್ನ ಕಣ್ಣುಗಳನ್ನು ತಾನೇ ಕಿತ್ತುಕೊಂಡ ವಿರೂಪಣ್ಣ ಕಲ್ಯಾಣ ಮಂಟಪದ ಪಕ್ಕದಲ್ಲಿರೋ ಗೋಡೆಗೆ ಎಸೆಯುತ್ತಾನೆ. ಅಲ್ಲಿರೋ ಎರಡು ಕಣ್ಣಿನ ಗುರುತುಗಳು, ಅದರಿಂದ ಒಸರಿದ ರಕ್ತ ವಿರೂಪಣ್ಣನ ಕಣ್ಣುಗಳೇ ಎಂಬುದು ಇಲ್ಲಿನ ದಂತಕತೆ.. ಐನೂರು ವರ್ಷಗಳಾಗಿ ಗಾಳಿ ಮಳೆಗೆ ಸಿಕ್ಕರೂ ಈ ಕಲೆಗಳು ಅಳಿಸದಿರುವುದು ಅಂದಿನ ನೋವಿನ ಕತೆಯನ್ನು ಇಲ್ಲಿ ಬಂದವರಿಗೆಲ್ಲಾ ಹೇಳುತ್ತಿರುವಂತಿದೆ.

Eyes of Virupanna


ಅಲ್ಲಿನ ಕುಂಕುಮ ಇಡುತ್ತಿರೋ ಸುಂದರಿ ಆಗ ಕುಂಕುಮ ಇಟುಕೊಳ್ಳುತ್ತಿದ್ದ ಭಿನ್ನ ಪರಿಯನ್ನು ಪರಿಚಯಿಸುತ್ತಾಳೆ. ಇಲ್ಲಿನ ಪರಶಿವ, ಇತ್ಯಾದಿ ಕೆತ್ತನೆಗಳು ನೋಡಲೋಗ್ಯವಾಗಿದೆ. ಹಾಗೇ ಕೆಳಗಿಳಿಯುತ್ತಿದ್ದಂತೆ ಕಂಡಿದ್ದು ಆಂಜನೇಯ ಮತ್ತವನಿಗೆ ಕಟ್ಟಿದ ಬೃಹದಾಕಾರದ ಮಂಟಪ. ಪಕ್ಕದಲ್ಲೇ ಗಮನಿಸದಿದ್ದರೆ ಮಿಸ್ಸಾಗೋ ದುರ್ಗಾಪಾದ ಮತ್ತು ಬಟ್ಟಲಿನಂತಹ ರಚನೆಗಳು. ಸ್ವಲ್ಪ ಮುಂದೆ ಬಂದರೆ ಮತ್ತದೇ ಬಟ್ಟಲಿನಂತಹ ರಚನೆಗಳು ಕಂಡವು. ಆದರೆ ಮೇಲೆ ಮೀನಿನ ಕೆತ್ತನೆ ಕಂಡಿತು . ಆಂಜನೇಯನ ಪಕ್ಕ ಇರೋ ಬಟ್ಟಲು ವೆಜ್ ಮೀಲ್ಸ್ ಮತ್ತು ಇದು ಫಿಶ್ ಮೀಲ್ಸ್ ಅಂದ ಗೆಳೆಯ :-)
Durga Paada

ಆ ಸುಡು ಬಿಸಿಲಲ್ಲೂ, ದೇವಸ್ಥಾನದ ಪರಿಸರದಲ್ಲೂ ಆತನ ಹಾಸ್ಯ ಪ್ರಜ್ನೆ ಎಲ್ಲರಲ್ಲೂ ನಗು ಮೂಡಿಸಿತು. ಆ ನಗುವಿನೊಂದಿಗೇ ನಮ್ಮ ಲೇಪಾಕ್ಷಿ ವೀರಭದ್ರೇಶ್ವರ ದೇಗುಲ  ಪ್ರದಕ್ಷಿಣೆ ಮುಗಿಯಿತು.
Madhavana full meals


ಕೂರ್ಮಪರ್ವತವಿಳಿದ ನಾವು ನಂತರ ಅಲ್ಲೇ ಹತ್ತು ನಿಮಿಷ ದೂರವಿರೋ ನಂದಿಯ ದರ್ಶನ ಪಡೆದೆವು. ಭಾರತದ ದೊಡ್ಡ ನಂದಿ, ಚಾಮುಂಡಿ ಬೆಟ್ಟದ ನಂದಿಗಿಂತ ದೊಡ್ಡ ನಂದಿಯೆಂದು ಖ್ಯಾತಿ ಪಡೆದ ನಂದಿಯನ್ನು ಕಂಡೆವು.  ಹದಿನೈದು ಅಡಿಯಿರುವ ಈ ನಂದಿಯನ್ನು ನೋಡಿದಾಗ ಹಾಗೇನೂ ಅನ್ನಿಸಲಿಲ್ಲ.


ಮಧ್ಯಾಹ್ನದ ಆಂಧ್ರದ ಸುಡುಬಿಸಿಲಿನ ಪ್ರಭಾವವೂ ಇದ್ದಿರಬಹುದು.. ಅಂತೂ ಲೇಪಾಕ್ಷಿಯ ಸುಂದರ ನೆನಪುಗಳಿಗಾಗಿ ವಂದಿಸಿ ಸ್ವಸ್ಥಾನಕ್ಕೆ ಮರಳಲು ಹಿಂದೂಪುರದೆಡೆಗೆ ಹೊರಟೆವು..ದೇಗುಲದ ಬಗ್ಗೆ ನಾವಂದು ಕೇಳಿದ ಕತೆಗಳಿಗಿಂತ, ನೊಡಿದ್ದಕ್ಕಿಂತ ನೋಡದ, ಕೇಳದ ಸಂಗತಿಗಳು ಎಷ್ಟೋ ಇರಬಹುದು.. ಬಿಡುವಾದಾಗೊಮ್ಮೆ ಹೋಗಿ ಬನ್ನಿ.. ಹೋದವರಿದ್ದರೆ, ನಾನು ಬರೆಯೋದರಲ್ಲಿ ಬಿಟ್ಟ ಅಂಶಗಳೇನಾದ್ರೂ ಇದ್ದರೆ ಸೇರಿಸಿ.. ಅಂದ ಹಾಗೆ ಇಲ್ಲಿ ಸುಮಾರು ಮಂಗಗಳಿವೆ. ಮೂರ್ತಿಗಳನ್ನು ಹಾಳು ಮಾಡಿದ, ಕಂಬ ವಾಲಿಸಿದ ಮಂಗಗಳಲ್ಲ.. ಬಾಳೆ ಹಣ್ಣು , ಕಾಯಿಗಳನ್ನಷ್ಟೇ ಎದುರು ನೋಡೋ ಬಾಲವಿರೋ ವಾನರರು. ಹಾಗಾಗಿ ಸೌಂದರ್ಯ ವೀಕ್ಷಣೆಯಲ್ಲಿ ನಿಮ್ಮ ಬ್ಯಾಗುಗಳನ್ನೆಲ್ಲೋ ಇಟ್ಟು ಮರೆಯಬೇಡಿ :-)
Natya mantapadalli Subramanya hegde avru :-)

Saturday, May 25, 2013

ಬ್ಲಾಗಿಗೆ ಇನ್ನೂರು ಪೋಸ್ಟು ತುಂಬಿದ ಸಂಭ್ರಮ :-)

ಏನೋ ತೀರಾ ದೊಡ್ಡ ಸಾಧನೆ ಅಂತಲ್ಲ.. ಆದರೆ ಏನೋ ಒಂದು ಖುಷಿ.
ಎಲ್ಲೋ ಕಳೆದು ಹೋಗುತ್ತಿದ್ದ, ಮರೆಯಾಗುತ್ತಿದ್ದ ಭಾವಗಳನ್ನು, ಕ್ಷಣಗಳನ್ನು ದಾಖಲಿಸಿದ ಒಂದು ಖುಷಿ.. ತೀರಾ ಸುತ್ತಿ ಬಳಸಿ ಹೇಳೋ ಬದ್ಲು ನೇರ ವಿಷಯಕ್ಕೆ ಬರೋದಾದ್ರೆ ಇಂದು ಬ್ಲಾಗಿಗೆ ೨೦೦ ಪೋಸ್ಟುಗಳು ತುಂಬಿದ ಸಂತಸ. ಏಕಾಂಗಿತನದಲ್ಲಿ ಶಾಂತಿಯಿದ್ದರೂ ಸಂಭ್ರಮವಿಲ್ಲ :-) ಹಾಗಾಗಿ ನನ್ನ ಬರಹಗಳನ್ನು ಓದುತ್ತಾ, ಪ್ರೋತ್ಸಾಹಿಸುತ್ತಾ ಬಂದಿರುವ ಗೆಳೆಯರಿಗೆಲ್ಲಾ ಒಂದು ಆತ್ಮೀಯ ಆಹ್ವಾನ. ಇಂದೋ, ನಾಳೆಯೋ, ಈ ವಾರವೋ ನಿಮಗೆ ಬಿಡುವಾದಾಗ ನನ್ನ ಬ್ಲಾಗಿಗೆ ಬನ್ನಿ. ಇನ್ನೂರರ ಸಂಭ್ರಮದಲ್ಲಿ ಜೊತೆಯಾಗಿ :-) ಫೇಸ್ಬುಕ್ಕು, ನಿಲುಮೆ, ಬ್ಲಾಗು, ಸಂಪದ.. ಹೀಗೆ ನನ್ನ ಬರಹಗಳಲ್ಲಿ ಬೆನ್ನುಲುಬಾಗಿ ನಿಂತ ಹಿರಿಯರು ಅನೇಕರಿದ್ದೀರಿ. ಬರಹ ಕ್ರಮೇಣ ಬೋರು ಹೊಡೆಸದೇ, ಗಟ್ಟಿಗೊಳ್ಳುತ್ತಿದೆ ಅಥವಾ ಅಂತಹ ಲಕ್ಷಣಗಳೇನಾದರೂ ಗೋಚರಿಸುತ್ತಿದೆ ಅನ್ನಿಸಿದರೆ ಅದಕ್ಕೆ ಕಾರಣಿಗರು ನೀವೆ.. ನಿಮಗೆಲ್ಲಾ ಮತ್ತೊಮ್ಮೆ ಆಹ್ವಾನ .. :-)

ನಿಮ್ಮ ಖುಷಿ, ಕಂಪ್ಲೇಟುಗಳೇನೇ ಇದ್ದರೂ ದಾಖಲಿಸಿ.. ನಿಮ್ಮ ಜೊತೆ ಜೊತೆಯೇ ಬರೆಯುತ್ತಾ ಬರೆಯೋ ಬೆರಗಿನ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಈ ಎಳೆಯನಿಗೆ ನಿಮ್ಮ ಪ್ರೋತ್ಸಾಹಗಳೇ ಶ್ರೀರಕ್ಷೆ. ಹೇಗೆ ಬರೆಯಬಹುದಿತ್ತು, ಎಲ್ಲಿ ತಪ್ಪಾಗಿದೆ, ಇನ್ನೂ ಯಾವ್ಯಾವ ಕ್ಷೇತ್ರಗಳಲ್ಲಿ ಗಮನಿಸಬೇಕು ಎಂಬ ತಿದ್ದುವಿಕೆ, ಬರೆಯೋದೆ ಜೀವನವಲ್ಲ, ಇದನ್ನು ಬಿಟ್ಟು ಉದ್ದಾರ ಆಗು ಎಂಬಂತಹ (!) ಮಾತುಗಳಿದ್ದರೂ ತಿಳಿಸಿ.. ಅವೇ ಮುಂದಿನ ಹಾದಿಯಲ್ಲಿ ಎಚ್ಚರಿಕೆ. ಈ ಪೋಸ್ಟು ನನ್ನದಲ್ಲ. ನಿಮ್ಮದೇ.. ನಿಮ್ಮ ಪ್ರತಿಕ್ರಿಯೆಗಳಿಗೆ ಕಾದಿರುವ..
ನಿಮ್ಮೊಲವಿನ.. :-)

ಪ್ರಶಸ್ತಿ

Wednesday, May 22, 2013

ಹಿಂಗೇ ಸುಮ್ನೆ.. Fb request ಗಳ ಸುತ್ತ

Fb ಎಂಬ ಸಮುದ್ರದಲ್ಲಿ ಯಾರ್ನ ಬೇಕಾದ್ರೂ ಹುಡುಕ್ಬೋದು, ಅದೊಂದು ಸ್ನೇಹ ಸಾಗರ ಅಂತಾರೆ. ೧೦೦% ನಿಜ. ಆದ್ರೆ ಸಮುದ್ರಮಂಥನದಲ್ಲಿ ಅಮೃತದ ಜೊತೆ ವಿಷನೂ ಸಿಗತ್ತಲ್ವಾ.. ಸ್ನೇಹಸೇತುವೇ ಬೇಸರದ ಋತುವಿಗೆ ಕಾರಣವಾದ್ರೆ..
ಅದ್ರ ಬಗ್ಗೆ ಒಂದು ಕಿರು ಬರಹ..ಬರಹ ಅನ್ನೋಕ್ಕಿಂತ ತಟ್ಟನೆ ಅನಿಸಿದ ಮಾತುಗಳು ಪಟ್ಟನೆ ನಿಮ್ಮ ಮುಂದೆ..


ಹಿಂಗೇ ಒಂದು ಫ್ರೆಂಡ್ ರಿಕ್ವೆಸ್ಟ್:
ನೂರರಲ್ಲಿ ನೂರಾ ಒಂದಾಗೋ ಬದ್ಲು ಇರ್ಲಿ ಅಂತ ಸ್ವಲ್ಪ ಮಾತುಕತೆಯ ಪ್ರಯತ್ನ..
ಅ: ಹಾಯ್.. ನಾವಿಬ್ರೂ ಸಿಕ್ಕಿದೀವಾ ಎಲ್ಲಾದ್ರೂ ? ಹೆಸ್ರು ಎಲ್ಲೋ ಕೇಳ್ದಂಗಿದೆ.. ಆದ್ರೆ ಎಲ್ಲಿ ಅಂತ ಗೊತ್ತಾಗ್ತಾ ಇಲ್ಲ
೧)ಬ: ಹಾಯ್.. ನಂಗೂ ಗೊತ್ತಿಲ್ಲ ! ಹಿಂಗೇ ಫ್ರೆಂಡ್ ಸಜ್ಜೆಷನ್ ಬಂತು. ಕಳ್ಸಿದೆ. ಭಾರತದ ತುಂಬಾ ಪ್ರೆಂಡ್ ಮಾಡ್ಕೋಬೇಕು ಅನ್ನೋ ಬಯಕೆ ನನ್ನದು. ನೀವೂ ನನ್ನ ಫ್ರೆಂಡ್ ಆಗ್ತೀರಾ ? (!!!)

೨)ಬ: ಹಾಯ್.. ನೀವ್ಯಾರು ಅಂತಾನೆ ನಂಗೆ ಗೊತ್ತಿಲ್ಲ. ಯಾರೋ ಚಂದದ ಹುಡ್ಗಿ ಸಿಕ್ಕಿದ್ಲು ಅಂತ ಬರೀ ಇದೇ ಮಾಡ್ರಿ. ಬೇರೆ ಕೆಲ್ಸ ಇಲ್ವಾ ನಿಂಗೆ ? *** (!!)

೩)ಬ: ಲೋ. ನೀನ್ಯಾರು ಅಂತ ನಂಗೇನೋ ಗೊತ್ತು ? ಏನೋ ಕಾಮನ್ ಫ್ರೆಂಡ್ಸು ಇದಾರೆ ಸುಮಾರ್ ಜನ ಅಂತ ರಿಕ್ವೆಸ್ಟ್ ಕಳ್ಸಿದ್ರೆ ಇದೇ ಪ್ರತಿಷ್ಟೇ ಮಾಡ್ತೀಯ *** (!) :-(

೪)ಬ: no reply at all for any questions :-( :-(

ಇದು ಕೆಲ ನಮೂನೆಗಳು.. ಇನ್ನೊಂದು ಗ್ರೂಪು. ಅದಕ್ಕೆ ಒಂದ್ನಾಕು ಹೊಸ ರಿಕ್ವೆಸ್ಟ್ಗಳು ಬಂದಿದೆ.. ಯಾರನ್ನೋ ಸೇರ್ಸ ಬದ್ಲು ಪೂರ್ವಾಪರ ವಿಚಾರ್ಸೋದು ಅಡ್ಮಿನ್ನಿನ ಕರ್ತವ್ಯ..ಹಂಗೇ ಸ್ವಲ್ಪ ಮಾತುಕತೆ..
ಅ: ಹಾಯ್ ನಂ ಗ್ರೂಪಿಗೆ ಸೇರ್ಕಳ್ಳೋ ರಿಕ್ವೆಸ್ಟ್ ಬಂದಿದೆ ನಿಮ್ಮಿಂದ. ಇದು ನಮ್ಮ ಕಾಲೇಜು ಹುಡುಗ್ರ ಗುಂಪು.. ನಿಮ್ಮ ಪ್ರೊಫೈಲಲ್ಲಿ ನಮ್ಮ ಕಾಲೇಜಲ್ಲಿ ಓದಿದ್ದ ಬಗ್ಗೆ ಏನೂ ಕಾಣ್ಲಿಲ್ಲ.. ನಿಮ್ಮ ಬ್ಯಾಚ್ಯಾವ್ದು ಅಂತೇನಾದ್ರೂ ಪರಿಚಯ ಮಾಡ್ಕೋತೀರಾ ಪ್ಲೀಸ್.. ಗುಂಪಿನ ಇತರ ಸದಸ್ಯರ ಕೋರಿಕೆ ಕೂಡ..

೧)ಬ: who the hell are you ? (!!) i don't know you and who joined me to the group. get lost.. (after that admin is blocked from that user!!)

೨)ಬ: no reply for any questions..

ಇಷ್ಟೆಲ್ಲಾ ಸಾಲ್ದು ಅಂತ ಹಿಂದೆ ಬಿಟ್ಟು ಮಾತುಗಳು
೧)ಲೇ, ಅಹಂಕಾರದ ಮುದ್ದೆ ಕಣೋ.. ಯಾರತ್ರ ಹೆಂಗೆ ಮಾತಾಡ್ಬೇಕು ಗೊತ್ತಿಲ್ಲ (!) ತಾನೇ ದೊಡ್ಡೋನು ಅಂತ ಮಾತಾಡ್ತಾನೆ. ..
೨)ಲೋ, ಇಪ್ಪತ್ನಾಲ್ಕು ಘಂಟೆ ಫೇಸ್ಬುಕ್ಕಲ್ಲಿ ಏನ್ ಮಾಡ್ತೀಯ.. ಬೇರೆ ಕೆಲ್ಸ ಇಲ್ವಾ ? ..
೩) you accepted fried request. But no reply for any message , post, wish anything.. ಎಲ್ಲರಿಗೂ ನಿನ್ನಂಗೆ ಫೇಸ್ಬುಕ್ಕಲ್ಲಿ ಅಡ್ಡಾಡೋಕೆ ಟೈಮ್ ಇರಲ್ಲಪ.. --> ಹೌದಪ್ಪ ನಮಗ್ಮಾತ್ರಾ ಪ್ರಪಂಚದಲ್ಲಿ ಯಾವ ಕೆಲಸಗಳೂ ಇಲ್ದೇ ಇದೊಂದೇ ಕೆಲ್ಸವಾ ? ..

ನೂರಾರು ಗೆಳೆಯರಿರ್ತಾರೆ. ಹೇಳ್ಬೇಕಾಗಿದ್ದ, ಹೇಳ್ಬಹುದಾಗಿದ್ದ ಮಾತೊಂದು ವರ್ಷಗಟ್ಲೆ ಹಾಗೇ ಉಳ್ದೋಗತ್ತೆ :-(
ಆದ್ರೂ ಈ ಫಾಸ್ಟ್ ದುನಿಯಾದಲ್ಲಿ, ಸ್ವಂತಕ್ಕೇ ಟೈಮಿಲ್ಲದ ಓಟದಲ್ಲಿ ಹಿಂಗೂ ಆಗತ್ತೆ.. ಸಾಕಪ್ಪಾ ಸಾಕು.. ಡೊಡ್ನಮಸ್ಕಾರ.. ನನ್ನ ಗೆಳೆಯರು ಹೇಳ್ತಾನೆ ಇರ್ತಾರೆ.. ಯಾಕೆ ತಲೆ ಕೆಡಸ್ಕೋತೀಯ.. ಜಸ್ಟ್ ಇಗೋರ್..ಈಂತ ಬೇಸರ ಪದೇ ಪದೇ ಆಗೋ ಬದ್ಲು ಒಂದೇ ದಾರಿ.. ಮುಖ ಪರಿಚಯ ಇಲ್ದಿರೋ ಯಾರ ರಿಕ್ವೆಸ್ಟ್ ಬಂದ್ರೂನೂ ಜಸ್ಟ್ ಇಗೋರ್.. ಆದ್ರೂ ಕೆಲ ಸಲ ಹಿಂಗೆಲ್ಲಾ ಅನಿಸ್ತಿರುತ್ತೆ.. ಬರಸ್ತಿರುತ್ತೆ .. :-)


Sunday, May 19, 2013

ಪತ್ರಿಕಾ ಸಾಹಿತ್ಯ ಮತ್ತು ನಾವು

ಹಿಂಗೇ ಸುಮ್ನೆ ಬರ್ಯೋ ಹವ್ಯಾಸದ ಒಬ್ಬ. ಬರಹಗಾರ, ಸಾಹಿತಿ ಅಂತ ಖ್ಯಾತಿ ಪಡೋದೊದ್ರೂ ಚನಾಗ್ ಬರಿತೀಯ ಕಣಲೇ ಅಂತ ತನ್ನ ಗೆಳೆಯರತ್ರ ಅನೇಕ ಸಲ ಶಬಾಷ್ಗಿರಿ ಪಡೆದವ. ಪೇಪರಲ್ಲಿ ಬರೋ ಬಣ್ಣಬಣ್ಣದ ಲೇಖನಗಳ್ನ ದಿನಾ ಓದೋ ಆ ಹುಡುಗನಿಗೆ  ತಾನೂ ಯಾಕೆ ಒಮ್ಮೆ ಪತ್ರಿಕೆಗೆ ಕಳಿಸ್ಬಾರ್ದು ಅನ್ನೋ ಭಾವ. ಪಕ್ಕದ್ಮನೆ ಹುಡ್ಗ ಯಾವಾಗ್ಲೂ ಹೊಡ್ಯೋ ಸೈಕಲ್ ನೋಡಿ ತಾನೂ ಒಮ್ಮೆ ಸೈಕಲ್ ಹೊಡಿಬೇಕು ಅಂತ ಮೂಡೋ ಭಾವದ ತರ.  ಸರಿ, ಲೇಖನದ ಕೆಳಗೆ ನಿಮ್ಮ ಲೇಖನಗಳನ್ನು ಈ ವಿಳಾಸಕ್ಕೆ ಕಳಿಸಿ ಅನ್ನೋ ಮಿಂಚೆ ವಿಳಾಸ ಇರತ್ತೆ(email id).  ಈತ ಇಷ್ಟಪಟ್ಟು, ಕಷ್ಟಪಟ್ಟು ಪತ್ರಿಕೆಗೆ ಅಂತನೇ ತನ್ನೆಲ್ಲಾ ಭಾವ ಸುರಿದು ಲೇಖನ ಕಳಿಸ್ತಾನೆ.. ಮುಂದೆ ? !! ಅದೇ ಒಂದು ದೊಡ್ಡ ಕತೆ !!!
“ಲಾಂದ್ರದ ಬೆಳಕು” ಅಂತ ಒಂದು ಪುಸ್ತಕ ಓದ್ತಾ ಇದ್ದೆ. ಅದ್ರ ಮುನ್ನುಡಿ ಓದಿ ಒಮ್ಮೆ ಮನಸ್ಸು ಒದ್ದಾಡ್ತು. ಎಷ್ಟೋ ಪೇಪರಿಗೆ ಕಳಿಸಿದ ಕತೆ ಅವ್ರ ಕಸದ ಬುಟ್ಟಿ ಸೇರುತ್ತೆ. ಹೀಗೆ ಹಲವಾರು ಪತ್ರಿಕೆಗಳಿಗೆ ಕಳಿಸಿ ಕಳಿಸಿ ಒಂದೂವರೆ ವರ್ಷ ಕಾದರೂ ಯಾವುದೇ ಪ್ರತಿಕ್ರಿಯೆ ಬರಲ್ಲ ! ಕೇಳಿದ್ರೆ, ನಿಮ್ಮ ಲೇಖನ ಬಂದೇ ಇಲ್ಲ ರೀ, ಇನ್ನೊಮ್ಮೆ ಕಳಿಸಿ, ನೋಡೋಣ ಅನ್ನೋ ಹಾರಿಕೆಯ ಉತ್ತರ. ಸರಿ, ಮತ್ತೊಮ್ಮೆ ಕಳಿಸೋದು. ಮತ್ತೆ ಅದೇ ಕತೆ. ಮತ್ತೆ ಕೇಳಿದರೆ ದಿನಾ ಸಾವಿರಾರು ಜನ ಬರೀತಾರೆ, ಯಾರ್ದು ಅಂತ ಪ್ರಕಟಿಸೋಣ ಅಂತಾರೆ.. ಹೀಗೆ ಒಂದೂವರೆ ವರ್ಷಗಳಿಂದ ಕಸದ ಬುಟ್ಟಿ ಸೇರಿದ ಕತೆಯೇ ಈ ಕಾದಂಬರಿ.. ಅಂತ ಮುಂದುವರಿದಿತ್ತು ಮುನ್ನುಡಿ. ಲಾಂದ್ರದ ಬೆಳಕಿಗೆ ಸಿಕ್ಕ ಪ್ರಕಟಣಾ ಭಾಗ್ಯ ಎಲ್ಲಾ ಲೇಖನಗಳಿಗೂ ದಕ್ಕೊಲ್ಲ. ಬೆಳಕೇ ಕಾಣದೆ ಕತ್ತಲಲ್ಲೇ ಕಮರಿ ಹೋದ ಲೇಖನ ಮತ್ತವುಗಳ ಕತೃಗಳೆಷ್ಟೊ.. ತಾಯಿಗೆ ತನ್ನ ಮಗು ಹೇಗೋ ಹಾಗೆಯೇ ಲೇಖಕನಿಗೆ ಆತನ ಲೇಖನ. ಎಲ್ಲೋ ಮನಸ್ಸಲ್ಲಿ ಮಿಂಚಿ ಮರೆಯಾದ ಎಳೆಯನ್ನೋ, ಕಳಕಳಿಯನ್ನೋ, ಕಂಡ ಹಾಸ್ಯವನ್ನೋ ಬೆಳೆಸಿ, ಅದಕ್ಕೊಂದು ಚಂದದ ರೂಪ ಕೊಟ್ಟು, ಅಂಗಿ ಚಡ್ಡಿ ತೊಡಿಸಿ , ಸಮಯದ ಪರಿವೆಯಿಲ್ಲದೇ ಒಂದು ಲೇಖನ ಅಂತ ಬರೆದಿರ್ತಾನೆ. ಈ ಅರ್ಜೆಂಟ್ ಜಮಾನಾದಲ್ಲೂ ಹೀಗೆ ಸಮಯ ಅಂತ ಮಾಡ್ಕೊಂಡಿದ್ದಲ್ಲದೇ ಬರೆದ ಲೇಖನವನ್ನು ಕೆಲವು ಪತ್ರಿಕೆಗಳ ಅವರೇ ಕೊಟ್ಟ ಮಿಂಚೆ ವಿಳಾಸಕ್ಕೆ ಕಳಿಸ್ತಾನೆ. ಆದ್ರೆ ಅದಕ್ಕೆ ಪ್ರತಿಕ್ರಿಯೆ? !!!  ಅದೂ ಒಂದು ದೊಡ್ಕತೆ :-(
ಇಂಟರ್ನೆಟ್ಟಲ್ಲಿ, ಬ್ಲಾಗ್ ಲೋಕದಲ್ಲಿ ಮಿಂಚುತ್ತಿರೋ,ಮೂಡುತ್ತಿರೋ ನೂರೆಂಟು ಬರಹಗಾರರು, ಬರಹಗಾರ, ಸಾಹಿತಿ ಅನ್ನೋ ಪಟ್ಟವಿಲ್ಲದೆ, ಇವ್ಯಾವುದರ ಹಂಗಿಲ್ಲದೆ ತಮ್ಮ ಬುಕ್ನ ಕೊನೆಯ ಪೇಜಲ್ಲೋ, ತಮ್ಮ  ಫೇಸ್ಬುಕ್ ಸ್ಟೇಟಸ್ಸಲ್ಲೋ ಅವಾಗವಾಗ ಬರ್ಯೋ ಹಲವು ಎಲೆಮರೆ ಕಾಯಿಗಳು. ಪ್ರತೀ ಹಾಲಿವುಡ್ ನಟನಿಗೂ ಆಸ್ಕರ್ ಗೆಲ್ಲಬೇಕೆಂಬ ಆಸೆಯಿರುವಂತೆ ಇವರಲ್ಲನೇಕರಿಗೆ ಒಂದ್ಸಲವಾದರೂ ಪೇಪರಲ್ಲಿ ತಮ್ಮ ಲೇಖನ ಬರಬೇಕೆಂಬ ಆಸೆ. ಆದ್ರೆ ಆಸ್ಕರ್ ಬರ್ಬೇಕಂದ್ರೆ ಆಕ್ಟಿಂಗ್ ಚನ್ನಾಗಿರ್ಬೇಕು ಅಂತನ್ನೋದು ಬಿಟ್ಟು ನಿನಗೆ ಇಂತಾ ಡಿಗ್ರಿ ಇರ್ಬೇಕು, ಈಗಾಗ್ಲೇ ಒಂದು ಆಸ್ಕರ್ ಬಂದಿರ್ಬೇಕು ! , ಸದಾ ಸುದ್ದೀಲಿರ್ಬೇಕು !, ಬೇರೆ ಯಾವ್ದೋ ಒಂದು ಅವಾರ್ಡ್ ಬಂದಿರ್ಬೇಕು, ಈಗಾಗ್ಲೇ ಆಸ್ಕರ್ ಬಂದಿರೋನ ಶಿಫಾರಸ್ಸಿರ್ಬೇಕು ಅಂತೆಲ್ಲಾ ಮಾಡಿದ್ರೆ !!! ಪೇಪರಿಗೆ ಲೇಖನ ಕಳ್ಸೋ ಬಹುತೇಕರಿಗೆ ಇಂತಾ ಅಘೋಷಿತ ವಿಚಿತ್ರ ನಿಯಮಗಳ ಕಹಿ ಅನುಭವ ಆಗೇ ಆಗಿರುತ್ತೆ :-( ಸಮಯವೇ ಇಲ್ಲದ ಈ ಜಮಾನಾದಲ್ಲಿ ಶ್ರಮ ಹಾಕಿ ಬರೆದ ಲೇಖನವೊಂದಕ್ಕೆ “ನಿಮ್ಮ ಲೇಖನ ಪ್ರಕಟವಾಗೋದಿಲ್ಲ ಕ್ಷಮಿಸಿ” ಅಂತ ಕನಿಷ್ಟ ಪ್ರತಿಕ್ರಿಯೆಯನ್ನೂ ಹಾಕೋಕೆ ಆಗದ ಪತ್ರಿಕಾ ಪ್ರಭುಗಳಿಗೆ ಏನನ್ನಬೇಕು ?
ಪ್ರತೀ ದಿನ ಸಾವಿರಾರು ಜನ ಬರೀತಾರೆ, ಯಾರ್ಯಾರಿಗೆ ಅಂತ ಪ್ರತಿಕ್ರಿಯೆ ನೀಡೋಣ ಅಂತೀರಾ ? ಬರೋ ಒಂದಿಷ್ಟು ಖಾಸ್, ಖಾಯಂ ಅಂಕಣಗಳ, ಲೇಖಕರ ಪತ್ರಗಳನ್ನ ಬಿಟ್ಟು  ಉಳಿದ ಪತ್ರಗಳನ್ನ ಓದಾದ್ರೂ ಓದ್ತಾರಾ , ಅತ್ವಾ ಹಾಗೇ ಕಸದ ಬುಟ್ಟಿಗೆ ಬಿಸಾಕ್ತಾರಾ ಅಂತ ಅನೇಕ ಸಲ ಅನ್ಸಿದೆ ನನಗೆ.   ಪ್ರಕಟವಾಗೋ ಭಾಗ್ಯ ಕಾಣದ ನಿರುಪಯೋಗಿ, ನತದೃಷ್ಟ, ಸತ್ವಹೀನ(??) ಬರಹಗಾರರ ಕತೆ ಬಿಡಿ ಸಾರ್. ನಿಮ್ಮ ಆ ಸಾವಿರ ಹತ್ತು ಸಾವಿರ ಕಸಗಳ ಮಧ್ಯೆ ಪ್ರಕಟವಾಗೋ ಭಾಗ್ಯ ಕಂಡ ಮುತ್ತೊಂದಕ್ಕೆ, ಅದರೊಡೆಯನಿಗೆ ನಿಮ್ಮ ಲೇಖನ ಇಂತಿಂತಾ ದಿನ ಪ್ರಕಟವಾಗ್ತಿದೆ ಅಥವಾ ನಿಮ್ಮ ಲೇಖನ ಪ್ರಕಟಣೆಗೆ ಆಯ್ಕೆಯಾಗಿದೆ ಅಂತಾದ್ರೂ ಹೇಳ್ಬಾರ್ದಾ ? ಅದೇ ಜೀವಮಾನದ ಸಾಧನೆಯೆಂಬಂತೆ ಆ ಲೇಖಕ ಪತ್ರಿಕೆಯ ಹೆಸ್ರನ್ನ ಎಷ್ಟೋ ಕಾಲ ಹೇಳ್ತಾ ತಿರುಗ್ತಿರ್ತಾನೆ. ಅದೆಲ್ಲಾ ಕನಸಿನ ಮಾತೇ ಸರಿ. ಪತ್ರಿಕೆಯಲ್ಲಿ ತನ್ನ ಲೇಖನ ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾಗಿದೆ ಅಂತ ಅದರ ಮುಂದಿನ ವರ್ಷ ಸೆಪ್ಟೆಂಬರ್ ಅಲ್ಲಿ ನನ್ನ ಗೆಳೆಯರೊಬ್ಬರಿಗೆ ತಿಳಿದಿದ್ದಂತೆ !! ಖ್ಯಾತ ದೈನಿಕ ಪತ್ರಿಕೆಯಲ್ಲಿ ತಾನು ತೆಗೆದ ಫೋಟೋ ಒಂದು ಪ್ರಕಟವಾಗಿದೆ ಅಂತ ವಾರದ ನಂತರ ಮತ್ತೊಬ್ಬ ಗೆಳೆಯನಿಗೆ ಗೊತ್ತಾದ್ದು !! ಫೇಸ್ಬುಕ್, ಬ್ಲಾಗ್ಗಳಿರೋ ಈ  ಕಾಲದಲ್ಲಿ , ಓದಿದ ಯಾರೋ ತಿಳಿಸಿದ್ದಕ್ಕಾಗಿ ಇವೆಲ್ಲಾ ಬರೆದ ಲೇಖಕನಿಗೆ ತಿಳಿದಿದ್ದಷ್ಟೇ. ಇಲ್ಲಾ ಅಂದರೆ ಲೇಖನ , ಫೋಟೋ ಪ್ರಕಟಣೆ ಭಾಗ್ಯ ಕಂಡ ಸುದ್ದಿ ಗ್ಯಾರಂಟಿ ಲೇಖಕನಿಗೆ ತಿಳೀತಿರ್ಲಿಲ್ಲ :-(
ಬರೀ ಬರ್ದು ಬಿಟ್ರೆ ಆಯ್ತಾ ? ನಮ್ಮ ಪತ್ರಿಕೆ ದಿನಾ ಓದಿ, ಬೇರೆ ಅವ್ರ ಬರಹಗಳನ್ನ ಪ್ರೋತ್ಸಾಹಿಸಿ ಆಗ ನಿಮ್ಮ ಲೇಖನ ಪ್ರಕಟವಾಯ್ತೋ ಇಲ್ವೋ ಅಂತ ಗೊತ್ತಾಗತ್ತೆ ಅಂತಾರೆ ಕೆಲೋರು !! ಅಲ್ಲಾ ಸ್ವಾಮಿ, ಮನೇಲಿ ಕೂತ್ಕಂಡು ಕ್ರಿಕೆಟ್ ನೋಡೋದ್ ಬೇರೆ. ತಾನೇ ಆಡ್ಬೇಕು, ಟೀಮಲ್ಲಿ ಸ್ಥಾನ ಪಡೀಬೇಕು ಅನ್ನೋದು ಬೇರೆ. ನ್ಯಾಷನಲ್ ಟೀಂ ಸೆಲೆಕ್ಟನ್ನಿಗೆ ಅಂತ ನಡೀತಿರೋ ರಣಜಿ ಮ್ಯಾಚಲ್ಲಿ ಸಖತ್ತಾಗಿ ಆಡಿದ ಹುಡುಗನಿಗೆ ಆತ ಸೆಲೆಕ್ಟ್ ಆದನೋ ಇಲ್ಲವೋ, ಅಥವಾ ಈ ಸಲ ಯಾರು ಸೆಲೆಕ್ಟ್ ಆಗಿದಾರೆ ಅಂತ ತಿಳಿಸೋದು ಬಿಟ್ಟು ನ್ಯಾಷನಲ್ ಮ್ಯಾಚ್ ದಿನ ಬಂದು ಬಿಡು, ಸೆಲೆಕ್ಟ್ ಆಗಿದ್ರೆ ಆಡುವಿಯಂತೆ, ಇಲ್ಲಾಂದ್ರೆ ಅವ್ರಿಗೆ ನೀರು ಕೊಡೋಕೆ ಬೇಕಾಗತ್ತೆ, ಇಲ್ಲಾಂದ್ರೆ ಫೀಲ್ಡ್ ಬಾಯ್ ಆಗಿ ಹೊರಗೆ ಬಂದ ಬಾಲ್ಗಳ್ನ ಹೆಕ್ಕಿ ಕೊಡ್ಬೋದಂತೆ, ಸ್ಟೇಡಿಯಂ ಒಳ್ಗೂ ಬಿಡ್ದಿದ್ರೆ ಟಿಕೆಟ್ ತಗೊಂಡ್ ಒಳಗ್ ಬಂದ್ ಮ್ಯಾಚು ನೋಡುವಿಯಂತೆ, ಆ ಟಿಕೆಟ್ಟೂ ಸಿಗ್ಲಿಲ್ಲ ಅಂದ್ರೆ ಅಲ್ಲೇ ಪಕ್ಕದ ಥಿಯೇಟ್ರಲ್ಲಿ ಬರ್ತಿರೋ ಮೂವಿ ನೋಡ್ಕಂಡ್ ಮನೆಗೆ ಹೋಗುವಿಯಂತೆ .. ಒಳ್ಳೇ ಟ್ರಿಪ್ಪ್ ಆಗತ್ತೆ ಅಂದ್ರೆ !! ಪಕ್ಕಾ ಬಖ್ವಾಸ್ ಅನುಸ್ತಾ ಇಲ್ವಾ ? ಸ್ವಲ್ಪ ಸಮಾಧಾನ ತಗೋಳ್ರೀ… ಪತ್ರಿಕೆಗಳ ಧೋರಣೆಯೂ ಬರಹಗಾರರಿಗೆ ಹಿಂಗೆ ಅನುಸ್ತಾ ಇರುತ್ತೆ. ಪತ್ರಿಕೆಗೆ ಬರಿ, ಅದು ಬಂತಾ ಬಂತಾ ಅಂತ ದಿನಾ ಪತ್ರಿಕೆಗಾಗಿ ಕಾಯ್ತಾ ಕೂರು, ಒಂದು ಪತ್ರಿಕೆಯಲ್ಲಿ ಬರ್ಲಿಲ್ಲ ಅಂದ್ರೆ ಮತ್ತೊಂದಕ್ಕೆ ಬರಿ.. ಅಲ್ಲೂ ಕಾಯಿ.. ಅದ್ರ ಬದ್ಲು ಮ್ಯಾಚಿನ ನಂತ್ರ ನೀನು ಆಯ್ಕೆಯಾಗಿಲ್ಲಪ್ಪ ಅಂದ್ರೆ ಬೇಜಾರಾದ್ರೂ ಸ್ವವಿಮರ್ಷೆಯಲ್ಲಿ ತೊಡಗಿ ಆಟ ಇನ್ನೂ ಉತ್ತಮಪಡಿಸುಕೊಳ್ತಾನೆ ಆ ಆಟಗಾರ. ಅಲ್ಲಿ ಕ್ರಿಕೆಟ್ಟು, ಇಲ್ಲಿ ಬರಹ ಅಷ್ಟೇ ವ್ಯತ್ಯಾಸ !
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಬಾಯಿಗೆಟುಕಿಲ್ಲ ದ್ರಾಕ್ಷಿ ಅಂತ ಎಲ್ಲಾ ಹುಳಿ ಅಂತಿದಾನೆ.. ತನ್ನ ಲೇಖನ ಪ್ರಕಟವಾಗಿಲ್ಲ ಅಂತ ಪತ್ರಿಕೆಗಳ್ನ ದೂರೋದು ಎಷ್ಟು ಸರಿ ಅಂತ ಓದ್ತಿರೋ ನೀವೆಲ್ಲಾ ಅಂತ್ಕೊಳ್ತಿರ್ಬೋದು. ಸರಿ ಸ್ವಾಮಿ, ಪ್ರಕಟವಾಗಿಲ್ಲ. ಸಾಹಿತ್ಯದಲ್ಲಿ ಸತ್ವವಿಲ್ಲ , ಬರಹಗಳಲ್ಲಿ ನಾನಿನ್ನೂ ಪ್ರಬುದ್ದತೆ ಪಡಿಬೇಕಿದೆ, ಒಪ್ಕೊಳ್ಳೋಣ. ಆದ್ರೆ, ಹೇಳಿದ್ರೆ ತಾನೆ ಗೊತ್ತಾಗ್ಬೇಕು !!
ರಾಜಕೀಯದ ಸುದ್ದಿ ಮುಖಪುಟದಲ್ಲಿ ಪ್ರಕಟಿಸಿ, ಶೌರ್ಯ ಚಕ್ರ, ಮರಣೋತ್ತರ ಪ್ರಶಸ್ತಿ ಪಡೆದ, ದೇಶಕ್ಕಾಗೇ ಜೀವ ತೆತ್ತ ಯೋಧರ ಸುದ್ದಿ ಕೊನೆಯ ಪುಟದಲ್ಲಿ ಪ್ರಕಟಿಸೋ ೨೦ ಪೇಜಿನ ಪತ್ರಿಕೆಗಳಲ್ಲಿ ಜನಸಾಮಾನ್ಯರಿಗೆ ಅಂತ ಕಾಲುಪೇಜಾದ್ರೂ ಜಾಗ ಸಿಗೋದು ಓದುಗರ ಪ್ರತಿಕ್ರಿಯೆ ಅನ್ನೋ ಅಂಕಣಗಳಲ್ಲಿ ಮಾತ್ರ ! ಬೇರೆ ಲೇಖನಗಳೆಲ್ಲಾ ಕಾಯಂ ಬರಹಗಾರರದ್ದೇ ! ಅಲ್ಲೊಂದು ಇಲ್ಲೊಂದು ಅಂಕಣ ಅಂತಿದ್ರೂ ಅದು ಈಗಾಗಲೇ ಪ್ರಸಿದ್ದರಾದ ಬರಹಗಾರರಿಗೆ ಮೀಸಲು .. ಹೊಸಬರಿಗೆ ಜಾಗ ಕೊಡದ ಹೊರತು ಅವ್ರು ಬರ್ಯೋದಾದ್ರೂ ಹೆಂಗೆ. ಬರ್ಯದೇ ಮುಖ್ಯವಾಹಿನಿಗೆ ಬರಲ್ಲ, ಮುಖ್ಯವಾಹಿನಿಯಲ್ದಿದ್ರೆ ಬರ್ಯಕ್ಕೆ ಕೊಡಲ್ಲ ಅನ್ನೋ ಈ ಪರಿ ಮದ್ವೆ ಆಗ್ದೇ ಹುಚ್ಚು ಬಿಡಲ್ಲ, ಹುಚ್ಚು ಬಿಡ್ದೇ ಮದ್ವೆ ಆಗಲ್ಲ ಅನ್ನೋ ಹಾಗಾಯ್ತು.. :-(
ಬರದಿದ್ರೂ ಬೇಜಾರಿಲ್ಲ ಅಂತ ಇನ್ನೂ ನಾಲ್ಕು ಪತ್ರಿಕೆಗಳಿಗೆ ಅದೇ ಲೇಖನವನ್ನು ಮತ್ತಷ್ಟು ತಿದ್ದಿ ಕಳಿಸುತ್ತಾನೆ. ಅಲ್ಲೂ ಅದೇ ಕತೆ :-(
ಪತ್ರಿಕೆಗಳಲ್ಲಿ ಬರ್ಯೋದು ಹೇಗೆ ಅಂತ ಅನೇಕ ಪ್ರಸಿದ್ದ, ಬ್ಯುಸಿ ಬರಹಗಾರರನ್ನು ಕೇಳಾಯ್ತು. ಮಿಂಚೆ ಬದಲಾಗಿದೆಯಾ, ಯಾವ ಮಿಂಚೆಗೆ ಕಳಿಸಬೇಕೆನ್ನೋ ಉತ್ತರ ಇರಲಿ, ಬರಹಗಳಿಗೆ ಬೆನ್ನುತಟ್ಟುವಿಕೆಯೋ , ತಿದ್ದುವಿಕೆಯೋ ಹೋಗಲಿ.. ಪ್ರತಿಕ್ರಿಯೆಯ ನಿರೀಕ್ಷೆಯೇ ದೊಡ್ದ ಪಾಪ ! ಬ್ಯುಸಿ ದುನಿಯಾ ಗುರು.. ಯಾರಿಗೂ ಬೇರೊಬ್ಬರಿಗೆ ಸಮಯವಿಲ್ಲ :-(
ಎಲ್ಲರೂ ಹೀಗಂತಲ್ಲ. ಪ್ರತೀ ಪತ್ರಕ್ಕೂ ನಿಮ್ಮ ಲೇಖನ ಪ್ರಕಟವಾಗಿಲ್ಲ ಕ್ಷಮಿಸಿ ಅಂತ ಪ್ರತಿಕ್ರಿಯೆ ಕಳಿಸೋ ವಾರಪತ್ರಿಕೆಯೂ ಒಂದಿದೆ ಮರಳುಗಾಡಿನ ನಡುವಿನ ಓಯಸ್ಸಿಸ್ಸಿನಂತೆ. ಅವರ ಈ ಪ್ರತಿಕ್ರಿಯೆಯೇ ಕೆಲವೊಮ್ಮೆ ನನಗೆ ಲೇಖನ ಪ್ರಕಟವಾದದ್ದಕ್ಕಿಂತ ಖುಷಿ ಕೊಡುತ್ತೆ ! ಬರ್ಯೋದಕ್ಕಿಂತ ಬಯ್ಯೋದು ಸುಲಭ.. ಸುಮ್ನೆ ಹೊರ್ಗೆ ನಿಂತು ಬಯ್ಯೋದಕ್ಕಿಂತ ಪತ್ರಿಕೆಯ ಒಳಗೆ ಬಂದು ನಡೆಸೋದ್ರಲ್ಲಿ ಗೊತ್ತಾಗತ್ತೆ ಅನ್ಬೋದು ಕೆಲೋರು..ನಿಮ್ಮ ಲೇಖನ ಪತ್ರಿಕೇಲಿ ಬರ್ಲಿಲ್ಲ ಅಂತ ಪತ್ರಿಕೆಯವ್ರನ್ನೇಕೆ ದೂರ್ತಿರಾ, ಪುಸ್ತಕ ಮಾಡಿ ಪ್ರಕಟ ಮಾಡಿ ಅನ್ಬೋದು.. ಅದೆಲ್ಲಾ ಒಪ್ದೆ ಸಾರ್. ಎಲ್ರಿಗೂ ತಮ್ಮ ಬರಹಗಳ್ನ ಪುಸ್ತಕವಾಗಿ ಪ್ರಕಟಿಸೋ ಚೈತನ್ಯ ಇರೊದಿಲ್ಲ. ಬರೀದೇ ಇದ್ದೋರಿಗೆ ಈ ತರದ ನಿರ್ಲಕ್ಷ್ಯದ ನೋವು ತಿಳಿಯೋಲ್ಲ.. ಹೀಗೆ ನೂರಿನ್ನೂರು ಬರಹ ಕಸದ ಬುಟ್ಟಿಗೆ ಸೇರಿದ.. ತದನಂತರವೂ ಇನ್ನೂ ಬರೆಯೋದನ್ನ ಬಿಡದೇ ನಿರಂತರವಾಗಿ ಬರೆಯುತ್ತಾ ಸಾಗಿದ  ಒಬ್ಬ ತಿರಸ್ಕೃತ, ನತದೃಷ್ಟ ಲೇಖಕನಾಗಿ ನಿಮ್ಮನ್ನು ಕಲ್ಪಿಸಿಕೊಂಡು.. ಈ ಲೇಖನವನ್ನು ಎಡಗಣ್ಣಂಚಿನಿಂದ ಒಮ್ಮೆ ನೋಡಿ.. ನಾ ಹೇಳಿದ್ದರಲ್ಲಿ ೧% ಆದ್ರೂ ಸತ್ಯವಿದೆ ಅನ್ಸಿದ್ರೆ ಅದೇ ಸಾರ್ಥಕ..ಇಲ್ಲಾ ಅಂದ್ರೂ ಬೇಜಾರಿಲ್ಲ ಬಿಡಿ. ಕಸದ ಬುಟ್ಟಿ ಸೇರೋದ್ರ ಬಗ್ಗೇನೆ ಬರ್ದ ಲೇಖನ ಕಸದ ಬುಟ್ಟಿ ಸೇರಿದ್ದರ ಬಗ್ಗೆ ಎಳೆಯಷ್ಟೂ ಬೇಜಾರಿಲ್ಲ :-(
–ಇಂತಿ ನಿಮ್ಮ ಪ್ರೀತಿಯ
ಒಬ್ಬ ಬರಹಪ್ರೀತಿಯ ಹವ್ಯಾಸಿ..


 ಈ ಲೇಖನ "ಪಂಜು"ವಿನಲ್ಲಿ ಪ್ರಕಟಗೊಂಡಿದೆ
http://www.panjumagazine.com/?p=2212

Friday, May 17, 2013

ಸಾಹಸ-ಸಾವುಗಳ ನಡುವಣ ಚಾರಣ..

ನೀರಿದ್ದಲ್ಲೆಲ್ಲಾ ಹೋಗದಾದ್ರೆ ಹೋಗ್ಲೇಬೇಡ ಅನ್ನೋ ಅಮ್ಮ, ಹುಡುಗ್ರು.. ಏನೋ ಆಸೆ ಪಟ್ತಿದಾರೆ ಸೇಫಾಗಿ ಹೋಗ್ಬರ್ಲಿ ಬಿಡು ಅನ್ನೋ ಅಪ್ಪ, ಹುಚ್ಚುಕೋಡಿ ಮನಸು.. ಇದು ಹದಿನಾರರ ವಯಸು ಎಂಬೋ ಕವಿವಾಣಿಯ ತರಹದ ಹುಚ್ಚು ಮನಸಿನ ಸ್ವಲ್ಪ ಹೆಚ್ಚೇ ಧೈರ್ಯದ , ರೋಚಕ ಕನಸುಗಳ ಹುಡುಗರು… ಯಾವುದೇ ಚಾರಣ ಅಂದಾಗ ಈ ಮೂರು ಚಿತ್ರಗಳು ಮನಸ್ಸಿಗೆ ಬಂದೇ ಬರುತ್ತೆ. ಚಾರಣದಲ್ಲಿ ಸಾಹಸ ಮತ್ತು ಸಾವುಗಳ ನಡುವೆ ಕೂದಲೆಳೆಯ, ಕೆಲವಕ್ಷರಗಳ ವ್ಯತ್ಯಾಸವಷ್ಟೇ. ಕುಮಾರಪರ್ವತದಿಂದ ಕೊಡಚಾದ್ರಿಯವರೆಗಿನ ಚಾರಣಗಳಲ್ಲಿ, ಜಲಪಾತದ ಜಾರುಗಳಲ್ಲಿ, ನೀರ ಮಡುಗಳಲ್ಲಿ ಹೀಗೇ ಆಗುತ್ತೆ ಅಂತ ಹೇಳುವಷ್ಟು ದೊಡ್ಡ ಚಾರಣಿಗ ನಾನಲ್ಲದಿದ್ದರೂ ಚಾರಣದ ಮೈ ಜುಮ್ಮೆನ್ನಿಸಿದ ಕ್ಷಣಗಳ, ತಲ್ಲಣಗಳನ್ನು ಅನುಭವಿಸಿ, ಕೇಳುತ್ತಲೇ ಬೆಳೆಯುತ್ತಿರೋ ನೂರಾರರಲ್ಲೊಬ್ಬ. ಚಾರಣದ ಅಸಂಖ್ಯ ಸಾಧ್ಯತೆಗಳ ಮಧ್ಯೆ ಸಾವಿಗೆರವಾಗೋ ಕೆಲವು ಕಾಮನ್ ಸಂಗತಿಗಳ ಬಗ್ಗೆ ಹೀಗೊಂದು ಲೇಖನ.
ಎಡಕುಮೇರಿ: 
ಟ್ರಿಕ್ಕಿಂಗ್ ಅಂತ ಸುಮಾರ್ ಗೊತ್ತು. ಆದ್ರೆ ರೈಲ್ವೆ ಟ್ರೆಕ್ಕಿಂಗ ಅಂದ್ರೆ.. ಅದು ಎಡಕುಮೇರಿನೇ ಸರಿ. ಜೀವಮಾನದ ಅಧ್ಬುತ ಅನುಭವ ಅಂತ ಎಡಕುಮೇರಿ ಚಾರಣ ಮುಗಿಸಿದ ಗೆಳೆಯರೊಬ್ಬರು ಹೇಳ್ತಿದ್ದರು. ರೈಲೇ ಮುಚ್ಚಿ ಹೋಗುವಷ್ಟು ಉದ್ದುದ್ದದ ಸುರಂಗಗಳು, ಅದರಾಚೆಯ ಹಸಿರ ಸ್ವರ್ಗದ ಚಿತ್ರಣವನ್ನು ಅಲ್ಲಿ ಹೋಗೇ ಅನುಭವಿಸಬೇಕು ಎಂಬುದು ಅವರ ಅಂಬೋಣ. ಮುಗಿಯದ ಕತ್ತಲ ಕೂಪದಂತಹ ಸುರಂಗಗಳು, ಉದ್ದುದ್ದದ, ಕೆಳಗೆ ನೋಡಿದರೆ ತಲೆತಿರುಗುವಷ್ಟೆತ್ತರದ ಬ್ರಿಡ್ಜ್ ಗಳ ನಡುವೆ ನಿಂತು ಪ್ರಕೃತಿಯ ಸೌಂದರ್ಯ ಸವಿಯುವುದೇನೋ ಚಂದ. ಆದರೆ ಈ ಬ್ರಿಜ್ಗಳಲ್ಲೋ, ಸುರಂಗದಲ್ಲೋ ಇದ್ದಾಗ ಟ್ರೈನ್ ಬಂದರೆ ? !!! ನಮ್ಮ ಗೆಳೆಯರದ್ದೂ ಅದೇ ಕತೆ ಆಗಿತ್ತು. ಸುರಂಗದ ಮಧ್ಯ ಇದ್ದಾಗ ರೈಲ್ ಪ್ರವೇಶ. ಟ್ರಾಕಿನ ಅಕ್ಕ ಪಕ್ಕ ಇರೋ ಸ್ವಲ್ಪವೇ ಜಾಗದಲ್ಲಿ ಗೋಡೆಗೆ ಒರಗಿ ಸಾಧ್ಯವಾದಷ್ಟೂ ಮುದುರಿ ನಿಂತಿದ್ದರಂತೆ. ಕೈಕಾಲು ಆಚೀಚೆ ಅಲ್ಲಾಡಿಸಲಾಗದಂತ ಪರಿಸ್ಥಿತಿ! ಏನಾದರೂ ಅಲ್ಲಾಡಿದರೆ ಆ ಅಂಗ ಕತ್ತರಿಸಿ ಹೋಗುವ ಇಲ್ಲಾ ಜೀವವೇ ಹೋಗುವ ಅಪಾಯ ! ಹೋದ ಆರು ಜನರಲ್ಲಿ ಒಬ್ಬ ಎತ್ತ ಹೋದ ಎಂದೇ ಗೊತ್ತಾಗಿರಲಿಲ್ಲವಂತೆ. ರೈಲ್ ಹೋಗಿ ನಾಲ್ಕೈದು ನಿಮಿಷದ ನಂತರ ಅವನ ಧ್ವನಿ ಕೇಳಿದ ಮೇಲೆಯೇ ಎಲ್ಲರಿಗೂ ಹೋದ ಜೀವ ಬಂದಂತಹ ಅನುಭವ. ಸಾಹಸ ಮಾಡಕ್ಕೆ ಹೋಗಿ ಒಬ್ಬ ಸತ್ತೇ ಹೋದ ಅಂತಾಗೋ ಸಂದರ್ಭದಿಂದ ಕೂದಲೆಳೆಯಲ್ಲಿ ಪಾರಾದ ಖುಷಿ :-) ಇನ್ನೂ ಆ ಎತ್ತರೆತ್ತರದ ಬ್ರಿಜ್ಗಳಲ್ಲಿದ್ದಾಗ ರೈಲೇನಾದ್ರೂ ಬಂದಿದ್ರೆ !! ದೇವ್ರೆ ಗತಿ. ಎಡಕುಮೇರಿಗೆ ಹೋಗ್ಬೇಬೇಡಿ ಅಂತ ಹೇಳೋಕೆ ಹೊರಟಿದೀನಿ  ಅಂತ್ಕಂಡ್ರೆ ಖಂಡಿತಾ ತಪ್ಪು :-) ಹೋಗ್ಬನ್ನಿ, ಆದ್ರೆ ರೈಲ್ವೇ ವೇಳಾಪಟ್ಟಿ ವಿಚಾರಿಸಿಕೊಳ್ದೇ ಇಂತ ಹುಚ್ಚಾಟಕ್ಕೆ ಸಿಕ್ಕಾಕೋಬೇಡಿ ಅಂತಷ್ಟೇ. ನೀಟಾಗಿ ಪ್ಲಾನ್ ಮಾಡಿ ಎಡಕುಮೇರಿಯಲ್ಲಿ ಎಳೆಯಷ್ಟೂ ತೊಂದರೆಯಿಲ್ದೇ ಸಖತ್ ಎಂಜಾಯ್ ಮಾಡಿದ ಅದೆಷ್ಟೋ ಗೆಳೆಯರು ಎದುರೇ ಇದ್ದಾರೆ, ಆಗಾಗ ಸಿಗ್ತಿರ್ತಾರೆ :-)

ಮಲ್ಲಳ್ಳಿ ಜಲಪಾತ: 
ಕುಮಾರ ಪರ್ವತಕ್ಕೆ ಸೋಮವಾರಪೇಟೆಯ ಕಡೆಯಿಂದ ಹೋಗುವಾಗ ಸಿಗೋ ಒಂದು ಸುಂದರ ಜಲಪಾತ. ತೀರಾ ಸುಂದರ ಅಂತ ಹೇಳೋ ಹಾಗಿಲ್ದೇ ಇದ್ರೂ ಮಲ್ಲಳ್ಳಿಯಿಂದ್ಲೇ ಕುಮಾರಪರ್ವತದೆಡೆಗಿನ ಚಾರಣ ಶುರು ಮಾಡುವವರಿಗೆ ಇದು ಸಖತ್ ಸ್ಪಾಟ್. ತೀರಾ ಎತ್ತರದಿಂದ ನೀರು ಬೀಳದಿದ್ದರೂ ನೀರಿನ ರಭಸಕ್ಕೆ ಅನೇಕ ಕುಳಿಗಳೆದ್ದಿದೆ. ಜಲಪಾತದ ಬುಡಕ್ಕೆ ಸೀದಾ ಹೋಗೋದು ಸಾಧ್ಯವಿಲ್ಲದ ಮಾತು. ಹಲವಾರು ಕಡೆ ನೀರು, ಬಂಡೆಗಳನ್ನ ದಾಟಿ ಸಾಹಸದಿಂದ ಜಲಪಾತದ ಬುಡಕ್ಕೆ ಸಾಗಬೇಕು. ಜಾರೋ ಪಾಚಿಗಟ್ಟಿದ ಕಲ್ಲುಗಳಲ್ಲಿ , ನೀರಿನ ರಭಸಕ್ಕೆ ಸ್ವಲ್ಪ ಕಾಲು ಜಾರಿದರೂ ಸಾಕು. ಸೊಂಟಕ್ಕಿಂತ ಸ್ವಲ್ಪ ಎತ್ತರದ ನೀರಾದರೂ ಆಧಾರ ಸಿಗದೇ ಅಪಾಯ ಕಟ್ಟಿಟ್ಟ ಬುತ್ತಿ. ನಾವಲ್ಲಿಗೆ ಹೋದಾಗ ಅಲ್ಲಿನ ಗೈಡ್ ಸಿರಸಿಯ ಅಶ್ವಥ್ ಹೆಗ್ಡೆ ಅನುವವರ ಕತೆ ಮತ್ತು ಹುಣಸೂರಿನ ಪೋಲೀಸೊಬ್ರ ಜತೆ ಹೇಳ್ತಿದ್ರು. ಇಬ್ರೂ ನೀರು ಅಂತ ಕಂಡ ಕೂಡ್ಲೇ ಧುಮುಕಿದ್ರಂತೆ. ದಾರೀಲೇ ಬಂಡೆಯೊಂದು ತಲೆಗೆ ಹೊಡ್ದು ಪ್ರಜ್ನೆ ತಪ್ಪಿ ನೀರ ತಳ ಸೇರಿದ್ರಂತೆ. ನೀರೊಳಗೆ ತಪ್ಪಿದ ಪ್ರಜ್ನೆ, ಬಂಡೆಯ ಆಘಾತದಿಂದಾದ ರಕ್ತಸ್ರಾವದಿಂದ ಎರಡೂ ಯುವ ಜೀವಗಳ ದುರಂತ ಅಂತ್ಯ :-( ಜಲಪಾತದಲ್ಲಿ ನೀರಿಗಿಳಿಯಲೇ ಬಾರದೆಂಬ ಪುಕ್ಕಲುತನದ ಮಾತುಗಳಲ್ಲ. ಎಷ್ಟೋ ಜಲಪಾತಗಳ ಕೆಳಗಿಳಿದಿದ್ದೇವೆ. ನೀರಲ್ಲಿ ಸಾಕಷ್ಟು ಆಟವಾಡಿದ್ದೇವೆ. ಆದರೆ ನೀರು ಕಂಡ ತಕ್ಷಣ ಹಿಂದುಮುಂದಿಲ್ಲದೇ ಧುಮುಕುವ ಹುಚ್ಚುತನ, ಹೇಗಿದ್ರೂ ಈಜು ಬರುತ್ತೆಂಬ ಹುಂಬತನ ಇರಬಾರದಷ್ಟೇ..

ಸಾವನದುರ್ಗ: 
ಬೆಂಗಳೂರಿಗೆ ತೀರಾ ಹತ್ತಿರದಲ್ಲಿರೋದ್ರಲ್ಲಿ ಸಖತ್ತಾಗಿರೋ ಚಾರಣದ ನೆನಪುಳಿಸುವಂತ ತಾಣ ಸಾವನದುರ್ಗ. ಹತ್ತಿದಷ್ಟೂ ಮುಗಿಯದಂತ, ಇದೇ ತುದಿಯೆಂದಾಗ ಇನ್ನೂ ಮೇಲೆ ದಾರಿ ಕಾಣುವಂತ ಬೆಟ್ಟ ಇದು. ಬೆಟ್ಟದ ಆಕಾರ ನೋಡಿ ಹತ್ತುವುದೇ ಅಸಾಧ್ಯ ಅನಿಸಿದರೂ ಸ್ವಲ್ಪಎಚ್ಚರದಿಂದ ಹೆಜ್ಜೆಯ ಮೇಲೆಯೇ ಗಮನವಿಟ್ಟು ಹತ್ತುತ್ತಾ ಸಾಗಿದಂತೆ ನಮಗೇ ಆಶ್ಚರ್ಯವಾಗುವಂತೆ ಮೇಲೆ ಸಾಗುತ್ತಾ ಸಾಗುತ್ತೇವೆ. ಇಲ್ಲಿರೋ ಹತ್ತುವ ಮಾರ್ಕುಗಳ, ಕರೆಂಟ್ ಲೈನುಗಳ ಹಾದಿಯಲ್ಲೇ ಸಾಗಿ ಅಂತ ಅನೇಕ ಬ್ಲಾಗುಗಳಲ್ಲಿ, ಹೋಗಿ ಬಂದವರ ಅಂಬೋಣ. ಸಖತ್ ಸುಲಭ ಅಂತಲ್ಲ ಇದು. ಆದ್ರೆ ಇರೋ ಮಾರ್ಗಗಳಲ್ಲಿ ಸ್ವಲ್ಪ ಸೇಫು ಅಂತ ಅಷ್ಟೇ. ಆದ್ರೆ ಕೆಲವರಿಗೆ ಎಲ್ಲಾ ಹೋದಂಗೆ ನಾವು ಹೋದ್ರೆ ಏನು ಥ್ರಿಲ್ಲಿದೆ ಅಂತ ! ಹಂಗೇ ಹತ್ತಿದ್ದ ನಮ್ಮ ಗುಂಪಿನ ಗೆಳೆಯರು ದಾರಿ ತಪ್ಪಿ ಹಂಗೇ ಮುಂದೆ ಹೋಗಿಬಿಟ್ಟಿದ್ರು. ಬೆಟ್ಟದ ಮೇಲೆ ಅಡ್ಡ ನಡೆಯುತ್ತಾ ಸಾಗಿದ ಅವ್ರಿಗೆ ಮುಂದೆ ಒಂದ್ಕಡೆ ಮುಂದೆ ಹೋಗೋಕೆ ಸಾಧ್ಯನೇ ಇಲ್ಲ ಅಂತ ಅನಿಸೋಕೆ ಶುರು ಆಯ್ತು. ಕಾಲೆಲ್ಲಾ ಬೆವರೋಕೆ ಶುರು ಆಯ್ತು !! ಕೂರೋ ಹಾಗೂ ಇಲ್ಲ. ನಡೆದು ಬಂದ ದಾರಿಯಲ್ಲಿ ವಾಪಾಸ್ ಸಾಗೋಕೂ ಕಾಲು ನಡುಗ್ತಾ ಇದೆ, ಕೆಳಗೆ ನೋಡಿದ್ರೆ ಮತ್ತೂ ಭಯ ! ಚೂರು ಕಾಲು ಜಾರಿದ್ರೂ ಏನೂ ಆಧಾರವಿಲ್ಲ. ಬಂಡೆಗಳೇ ಅಧಾರ! ಸಾವನಗುರ್ಗ, ತಮ್ಮ ಸಾವಿನ ದುರ್ಗವಾಗುವುದೋ ಎಂಬ ಭಯದಿಂದ ಅವರು ಕಿರುಚಕ್ಕಿಡುದ್ರು. ಅದನ್ನ ನೋಡಿದ ನಮಗೂ ಭಯ ! ಕೊನೆಗೆ ಕರೆಂಟ್ ಕಂಬದ ದಾರಿಯಿಂದ ಮುಂದೆ ಬಂದಿದ್ದ ನಾವು ಮತ್ತೆ ಹಿಂದೆ ನಾಗಿ ಹೇಗೋ ತ್ರಿಶಂಕು ಸ್ವರ್ಗದಲ್ಲಿದ್ದ ಅವರ ಬಳಿ ಸಾಗಿ ಸಮಾಧಾನ ಪಡಿಸುತ್ತಾ ನಿಧಾನವಾಗಿ ಕೆಳಗಿಳಿಸಿದೆವು. ಸ್ವಲ್ಪ ಹೊತ್ತು ಕೆಳಗೇ ಕುಳಿತು ಭಯ, ಕಾಲು ನಡುಗುವಿಕೆ ಕಮ್ಮಿ ಆದ ನಂತರ ಮತ್ತೆ ಕರೆಂಟ್ ಕಂಬದ ದಾರಿಯಲ್ಲಿ ಚಾರಣ ಮುಂದುವರಿಸಿದೆವು. ಬೆಟ್ಟ ಹತ್ತೋದೇ ತಪ್ಪು, ಸುಮ್ನೇ ಕೆಳಗೆ ಕೂತು ನೋಡ್ಬೇಕು ಅಂತಲ್ಲ. ಬೆಟ್ಟ ಹತ್ತೋಕೆ ಅಂತ ಹೋಗಿದ್ದೇ ಹೊರ್ತು ರಾಕ್ ಕ್ಲೈಂಬಿಂಗ್ ನಂತಹ ಸಾಹಸ ಮಾಡೋಕೆ ಹೋಗಿದ್ದಾಗಿರ್ಲಿಲ್ಲ ನಾವು.  ರಾಕ್ ಕ್ಲೈಂಬಿಂಗ್ ಗೆ ಬೇಕಾದ ಶೂ, ಕೊಡಲಿ, ಹಗ್ಗಗಳಂತ ಯಾವುದೇ ಪರಿಕರಗಳಿಲ್ಲದೇ ತಮ್ಮನ್ನ ತಾವು ಕೋತಿ ರಾಮ ಅಂತ್ಕೊಂಡು ಸಿಕ್ಕ ಸಿಕ್ಕ ಬಂಡೆ ಏರಿ ಸಾಹಸ ತೋರ್ಸೋಕೆ ಹೋದ್ರೆ..ಸಾವನ ದುರ್ಗ ಅಂತಲ್ಲ ಯಾವ ಬೆಟ್ಟವಾದ್ರೂ ಸಾವೆಂಬ ಮೋಹಿನಿ ಮುತ್ತಿಕ್ಕೋಕೆ ಕಾಯ್ತಾ ಇರ್ತಾಳೆ.
ಬನ್ನೇರು ಘಟ್ಟ: 
ಸಫಾರಿ, ಮೃಗಾಲಯ, ಚಿಟ್ಟೆ ಪಾರ್ಕ್.. ಹೀಗೆ ಬನ್ನೇರುಘಟ್ಟ ಒಂದು ದಿನದ ಪಿಕ್ನಿಕ್ಕಿಗೆ ಒಳ್ಳೇ ಜಾಗ. ಆದರೆ ಇದೇ ಬನ್ನೇರುಘಟ್ಟ ಕೆಲ ಸಮಯದ ಹಿಂದೆ ಟ್ರೆಕ್ಕಿಂಗಿಗೆ ಹೋದ ಟೆಕ್ಕಿಗಳ ಸಾವು ಎಂದು ಕುಖ್ಯಾತವಾಗಿತ್ತು.ಯಾರ ಮಾತೂ ಕೇಳದೆ ಟ್ರೆಕ್ಕಿಂಗು ಅಂತ ನಿಷೇಧಿತ ಕಾಡಿನಲ್ಲಿ ಹೊರಟಿದ್ದ ಟೆಕ್ಕಿಗಳು ಆನೆಯ ಕಾಲಿಗೆ ಬಲಿಯಾಗಿದ್ದರು.ಸಾಹಸ ಬೇಕು ಸರಿ, ಆದರೆ ನಿಷೇಧ ಅನ್ನೋ ಪದಕ್ಕೂ ಅದರದ್ದೇ ಆದ ಅರ್ಥವಿರುತ್ತೆ ಅಲ್ವೇ ?
ಜೋಗ: 
ಭೂಮಿ ಮೇಲೆ ಹುಟ್ಟಿದ ಮೇಲೆ ಏನೇನ್ ಕಂಡಿ..ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ ಅನ್ನೋ ಕವಿವಾಣಿಯೇ ಇದೆ. ಉಕ್ಕಿ ಹರಿಯೋ ವೇಳೆ ಜೋಗ ಜಲಪಾತದ ಸಿರಿ ನೋಡಿಯೇ ಸವಿಯಬೇಕು. ಮುಂಗಾರು ಮಳೆಯಲ್ಲಿ ಜೋಗವನ್ನು ಹಲವು ಕೋನಗಳಲ್ಲಿ ತೋರಿಸಿದ ಮೇಲಂತೂ ಜೋಗಕ್ಕೆ ಭೇಟಿ ನೀಡೋ ಪ್ರವಾಸಿಗರ, ಚಿತ್ರ ವಿಚಿತ್ರ ಫೋಟೋ ಹುಚ್ಚಿನ ಸಾಹಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಲಪಾತವಾಗಿ ಶರಾವತಿ ಧುಮುಕುವ ಜಾಗಕ್ಕಿಂತ ಸ್ವಲ್ಪ ಹಿಂದಿರೋದು ಬ್ರಿಟಿಷ್ ಬಂಗಲೋ. ಅಲ್ಲಿಂದ ಜಲಪಾತದ ತಲೆಯವರೆಗೂ ಬರಬಹುದು. ಜಲಪಾತದ ಕೆಳಗೆ ನಿಂತು, ಎದುರಿನಿಂದ ನೋಡಿದರೆ ಸಾಕಾಗದ ಗಂಡೆದೆಯ(?) ಯುವಕರ ತಂಡವೊಂದು ಮುಂಗಾರು ಮಳೆಯ ಶೂಟಿಂಗಿನಂತೆ ಜಲಪಾತದ ತಲೆಯ ಮೇಲಿಂದ ಪೋಸ್ ಕೊಡೋಕೆ ಹೊರಟಿತ್ತು ! ಸಿನಿಮಾ ಅಂದರೆ ಕ್ರೇನ್ಗಳನ್ನು ಬಳಸಿಯೋ, ಜೂಮಿಂಗ್ ಕ್ಯಾಮರಾಗಳಿಂದಲೋ ಜಲಪಾತಕ್ಕೆ ತೀರಾ ಹತ್ತಿರದಲ್ಲಿದ್ದಂತೆ ಜೀವ ಹಾನಿಯಿಲ್ಲದಂತೆ ಚಿತ್ರ ತೆಗೆಯಬಹುದು..ಆದರೆ ನಿಜ ಜೀವನದಲ್ಲಿ ?  ನದಿ ಅಂದ ಮೇಲೆ ಜಾರಿಕೆ ಇದ್ದೇ ಇರುತ್ತೆ. ಹಾಗೆಯೇ ಜಲಪಾತದ ತುದಿಗೆ ಹೋಗೋ ಹುಚ್ಚಿನಲ್ಲಿದ್ದವನೊಬ್ಬ ನೀರಿಗೆ ಜಾರಿದ. ನೀರಿನ ರಭಸಕ್ಕೆ ಹತೋಟಿಯೇ ಸಿಗದೆ ಜೀವ ಗೆಳೆಯರ ಕಣ್ಣೆದುರೇ ಜೀವಕ್ಕೆರವಾದ ! ೯೦೦ ಅಡಿ ಎತ್ತರದಿಂದ ಧುಮುಕೋ ಜಲಪಾತದ ರಭಸಕ್ಕೆ ಮಧ್ಯ ಮಧ್ಯ ಅನೇಕ ನೀರ ಕುಳಿಗಳಾಗಿದ್ದವಂತೆ. ಅಂತದ್ದೇ ಒಂದು ಕುಳಿಯನ್ನು ಹೊಕ್ಕಿದ್ದ ಆತನ ದೇಹ ಜಲಪಾತದ ತಳವನ್ನೂ ಸೇರದೆ, ಹುಡುಕ ಬಂದ ಕ್ರೇನ್ಗಳಿಗೂ ಸಿಕ್ಕದೇ  ಅನೇಕ ದಿನಗಳ ಕಾಲ ಅತಂತ್ರವಾಗಿತ್ತು :-(
ಮಳೆಗಾಲ ಕಳೆಯುತ್ತಾ ಬಂದಂತೆ ಜೋಗ ಜಲಪಾತದ ರಭಸ ಕಮ್ಮಿಯಾಗುತ್ತಾ ಬರುತ್ತೆ. ಆಗ ಜಲಪಾತದ ಕೆಳಗಿನವರೆಗೂ ಇಳಿಯಬಹುದು. ಧುಮುಕೋ ಜಲಪಾತದ ಹನಿಗಳು ಮತ್ತೆ ಚಿಮ್ಮಿ ಒಂತರಾ ತುಂತುರು ಮುತ್ತುಗಳ ಸಿಂಚನ. ಜಲಪಾತದ ಕೆಳಗೆ ಒಂದು ದೊಡ್ಡ ಬಂಡೆ, ಅದರ ಮುಂದೆ ನೀರ ಕುಳಿ. ಅದರ ಆಳ ಎಷ್ಟಿದೆಯೆಂದು ನಿಖರವಾಗಿ ತಿಳಿಯದಿದ್ದರೂ ಎಂಭತ್ತು ಅಡಿ ಇರಬಹುದೆಂದು ಅಲ್ಲಿನವರು ಹೇಳುತ್ತಾರೆ. ಬಂಡೆಯ ಹತ್ತಿರ ಹೋಗುವಷ್ಟರಲ್ಲೇ ಪೂರ್ತಿ ಸ್ನಾನವಾಗುವಷ್ಟು ನೀರಿದ್ದರೂ ನಮ್ಮ ಜೊತೆ ಬಂದ ಕೆಲವರಿಗೆ ನೀರ ಕುಳಿಗೆ ಧುಮುಕುವ ಹುಚ್ಚು. ಅಲ್ಲಿನ ಸುಳಿಗಳ ಬಗ್ಗೆ ಗುಂಪಲ್ಲಿ ಮುಂಚೆ ಬಂದಿದ್ದವರು ಎಚ್ಚರಿಸದೇ ಹೋಗಿದ್ದರೆ ಇನ್ನೆಷ್ಟು ಜೀವಗಳು ಮೃತ್ಯುಮೋಹಿನಿಯ ಆಲಿಂಗನಕ್ಕೆ ಸಿಕ್ಕುತ್ತಿದ್ದವೋ.. ಮೇಲೇ ನಿಂತು ನೋಡಬೇಕು ಅಂತಲ್ಲ. ಬದಲು ಮಳೆ ಕಡಿಮೆಯಾದಾಗ ಜಲಪಾತದ ಬುಡದ ತನಕ ಇಳಿಯುವುದು ಕಮ್ಮಿ ಸಾಹಸವೇನಲ್ಲ(ಮುಂಚೆ ಮೆಟ್ಟಿಲುಗಳಿರಲಿಲ್ಲ. ಈಗ ಸಿಮೆಂಟ್ ಮೆಟ್ಟಿಲುಗಳನ್ನು ಮಾಡಿ ಅಪಾಯ ಬಹಳವೇ ಕಮ್ಮಿ ಆಗಿದೆ). ಜಲಪಾತದ ಬುಡಕ್ಕೆ ಬಂದು ಅಲ್ಲಿನ ನೀರಲ್ಲಿ ಆಟವಾಡಿದರೂ ಸಾಲದು ಎಂದು ಕಂಡ ಕುಳಿಗಳಲ್ಲಿ ಧುಮುಕಿ ತಮ್ಮ ಈಜು ಪ್ರಾವಿಣ್ಯತೆ ಪ್ರದರ್ಶನ ಬೇಕೇ ಎಂಬ ಪ್ರಶ್ನೆ ಅಷ್ಟೆ.
ಕುಮಾರಪರ್ವತ : 
ಎರಡು ದಿನದ ಈ ಟ್ರೆಕ್ಕಿಂಗ್ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇಲ್ಲಿ ಅಪಾಯ ಅಂತೇನಾದ್ರೂ ಇದ್ರೆ ಅದು ರಾತ್ರಿ ವೇಳೆ ಟ್ರೆಕ್ಕಿಂಗ್ ಸಾಹಸ ಅಂತ ಹೊರಡೋ ಗುಂಪುಗಳಿಗೆ. ಅರಣ್ಯ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ಬಿಡದಿದ್ದರೂ ಹೇಗೋ ಕಣ್ಣುತಪ್ಪಿಸಿಯೋ, ಅಲ್ಲಿಂದ ಬೇಗ ಹೊರಟರೂ ಮಧ್ಯೆ ಕಾಲಹರಣ ಮಾಡಿ ಸಂಜೆಯೊಳಗೆ ಬೆಟ್ಟದ ತುದಿ ತಲುಪಲಾಗದೇ ಮಧ್ಯವೇ ಸಿಕ್ಕಿಹಾಕಿಕೊಳ್ಳೋ ಗುಂಪುಗಳಿಗೆ ಅಪಾಯ ತಲೆಮೇಲೆ ತೂಗುತ್ತಿರೋ ಕತ್ತಿಯಂತೆಯೇ. ಬೆಟ್ಟದ ಬುಡದಲ್ಲಿ, ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಅಥವಾ ಬೆಟ್ಟದ ತುದಿಯ ಬಯಲಲ್ಲಿ ಟೆಂಟ್ ಹಾಕಬಹುದು. ಅದರೆ ಕಾಡ ಮಧ್ಯದಲ್ಲಿ ? !! ಕಷ್ಟಪಟ್ಟು ಟೆಂಟ್ ಹಾಕಿದರೂ ಯಾವ ಕಾಡು ಪ್ರಾಣಿ ಯಾವಾಗ ಧಾಳಿ ಮಾಡಬಹುದು ಅಂತ ಆ ದೇವನೇ ಬಲ್ಲ ! ಇದಾದರೂ ಬೇಕು. ಇನ್ನೂ ಹೆಚ್ಚಿನ ಅಪಾಯ ತರೋದು,ಅಸಹ್ಯ ಹುಟ್ಟಿಸೋದು ಬೀರ್ ಬಾಟಲ್ ಟ್ರೆಕ್ಕಿಗರು(? )!. ಕೈಯಲ್ಲೊಂದು ಬೀರ್ ಬಾಟ್ಲು(ಬ್ಯಾಗಲ್ಲೆಷ್ಟೋ ) ಹಿಡಿದೇ ಸಾಗೋ , ಹೋದಲ್ಲೆಲ್ಲಾ ಹಲತರದ ಸಾಹಸ(?) ಪ್ರದರ್ಶಿಸೋ ಇವರು ಟ್ರೆಕ್ಕಿಂಗಿಗೆ ಅಂತಲೇ ಯಾಕೆ ಬರ್ತಾರೋ ಗೊತ್ತಾಗಲ್ಲ. ಕಂಡಲ್ಲೆಲ್ಲಾ ಒಡೆದ ಗ್ಲಾಸು, ಬಾಟಲು, ಪ್ಲಾಸ್ಟಿಕ್ ಕವರು ಬಿಸಾಕೋ, ಸುತ್ತಮುತ್ತಲ ಪರಿಸರವನ್ನೆಲ್ಲಾ ಗಬ್ಬೆಬ್ಬಿಸಿ, ಗಲಾಟೆಯೆಬ್ಬಿಸಿಯೇ ಮುಂದೆ ಸಾಗುವ ಇಂತಹವರಿಂದ ಸ್ಥಳೀಯರು ಟ್ರೆಕ್ಕಿಗರು ಅಂದರೆ ಅಸಹ್ಯಿಸುವಂತಾಗಿದೆ. ನಾನು ಒಬ್ಬ ಟ್ರೆಕ್ಕರ್ ಅಂತ ಹೇಳಲೇ ಅಸಹ್ಯಪಡುವಂತೆ ಮಾಡಿರೋ ಇಂತ ಟ್ರೆಕ್ಕಿಗರಿಗೆ (? ) ಎಲ್ಲಿ ಹೋದಾರೂ ಅಪಾಯ ಗ್ಯಾರಂಟಿಯೇ.
ಬರೀತಾ ಬರೀತ ತುಂಬಾನೇ ಆಯ್ತು ಅನ್ಸತ್ತೆ. ಕೊಡಚಾದ್ರಿಯಿಂದ, ಮುಳ್ಳಯ್ಯನಗಿರಿವರೆಗೆ, ಸ್ಕಂಧಗಿರಿಯಿಂದ ಮಧುಗಿರಿಯವರೆಗೆ ಹೀಗೆ ಬರೆಯುತ್ತಾ ಹೋದರೆ ತುಂಬಾ ಇದೆ. ಆದರೆ ಅವೆಲ್ಲಾ ಕಡೆ ಸಾಹಸಗಳು ಸಾವಲ್ಲಿ ಕೊನೆಯಾಗ್ತಿರೋ ಸಂದರ್ಭಗಳಲ್ಲಿನ ಸಾಮಾನ್ಯ ಅಂಶ ಒಂದೇ. ನಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಬೇಕು ನಿಜ, ಆದ್ರೆ ಅದೇ ಅತಿಯಾಗಿ ನಾನು ಏನು ಬೇಕಾದ್ರೂ ಮಾಡಬಲ್ಲೆ, ಸೂಪರ್ ಹೀರೊ ಅಂದ್ಕೋಬಾರ್ದಷ್ಟೆ. ಇಲ್ಲಿ ನನ್ನ ಖುಷಿಗೆ ನಾನು ಏನು ಮಾಡಿದ್ರೂ ನಡ್ಯತ್ತೆ. ಯಾರೂ ಕೇಳೊಲ್ಲ, ಏನೂ ಆಗಲ್ಲ ಅನ್ನೋ ಭ್ರಮೆ ದೂರಾಗ್ಬೇಕಷ್ಟೆ. ಇವಿದ್ರೆ ಸಾಹಸವೆಂಬ ಭಾವ ಎಂದೂ ಮಾಸದ ಸೂಪರ್ ಅನುಭವಗಳನ್ನ, ಮಧುರ ನೆನಪುಗಳನ್ನು ನೀಡೊತ್ಯೆ ಹೊರತು ಸಾವು ನೋವುಗಳನ್ನಲ್ಲಾ ಎಂಬ ಭಾವದೊಂದಿಗೆ ವಿರಾಮ.