Tuesday, December 18, 2018

ಬರಸೆಳೆವ ಭೀಮೇಶ್ವರ

ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಬರೋ ಜನರಿಗೆ ಅದರ ಬಳಿ ಇರೋ ಇತರೇ ಸ್ಥಳಗಳಾದ ನಿಪ್ಲಿ ಜಲಪಾತ, ಶರಾವತಿ ಪ್ರಕೃತಿ ಶಿಬಿರ, ಮುಪ್ಪಾನೆ ಪ್ರಕೃತಿ ಶಿಬಿರ, ಕಾನೂರು ಕೋಟೆ, ದಬ್ಬೆ ಜಲಪಾತ, ಭೀಮೇಶ್ವರ ಜಲಪಾತ-ದೇವಸ್ಥಾನ ಮುಂತಾದ ಸ್ಥಳಗಳ ಬಗ್ಗೆ ಗೊತ್ತಿರೋದಿಲ್ಲ. ಉದಾಹರಣೆಗೆ ನೀವು ಗಣೇಶ್ ಅಭಿನಯದ ಮುಂಗಾರು ಮಳೆ-೨ ಚಿತ್ರ ನೋಡಿದೀರಾ ? ನೋಡಿದ್ರೆ  ಅದರ "ಕನಸಲೂ ನೂರು ಬಾರಿ.." ಅಂತ ಶುರುವಾಗೋ ಹಾಡನ್ನೂ ನೋಡಿರ್ತೀರ. https://www.youtube.com/watch?v=S6DTN6u6ysc. ಅದರಲ್ಲಿ ಬರೋ ಅದ್ಭುತ ಜಲಪಾತ ಮತ್ತು ಲೊಕೇಶನ್ ಯಾವುದು ಅಂತ ಅಂದ್ಕೋತಾ ಇದ್ರಾ ? ಅದೇ ಭೀಮೇಶ್ವರ !  
Bheemeshwara
ಜೋಗದವರೆಗೂ ಹೋಗಿ ಅದಕ್ಕೆ ಹತ್ತಿರದಲ್ಲೇ ಇರೋ ಈ ತರದ  ಯಾವುದನ್ನೂ ನೋಡದೇ ಬರೋದಂದ್ರೆ ಮದುವೆ ಮನೆ ಊಟಕ್ಕೆ ಹೋಗಿ ಸ್ವೀಟ್ ತಿನ್ನದೇ ಬಂದಂಗೇ ಸರಿ ! ಈ ಸಲದ ಭಾರೀ ಮಳೆಗೆ ಉಕ್ಕಿ ಹರಿದ ಶರಾವತಿಯನ್ನು ಕಣ್ತುಂಬಿಕೊಳ್ಳೋಕೆ ನಿಮ್ಮಲ್ಲಿ ಅನೇಕ ಜನ ಜೋಗಕ್ಕೆ ಬಂದಿರ್ತೀರ ಅಥವಾ ಸದ್ಯದಲ್ಲೇ ಬರೋ ಪ್ಲಾನಲ್ಲಿರ್ತೀರ. ಹಾಗೆ ಬರೋರಿಗೆ ಅನುಕೂಲವಾಗಲಿ ಅಂತಲೇ ಈ ಲೇಖನ.   
Tiny water streams in Bheemeshwara

ಹೋಗೋದು ಹೇಗೆ ? 
ಬೆಂಗಳೂರು/ಮೈಸೂರು/ಶಿವಮೊಗ್ಗಗಳಿಂದ ಸಾಗರಕ್ಕೆ ನೇರ ರೈಲು ಮತ್ತು ಬಸ್ಸುಗಳಿವೆ. ಅಲ್ಲಿಂದ ಭೀಮೇಶ್ವರಕ್ಕೆ ಹೋಗೋಕೆ ಜೋಗ, ಕೋಗಾರು ಮೇಲೆ ಭಟ್ಕಳಕ್ಕೆ ಹೋಗೋ ಬಸ್ ಹಿಡಿಯಬೇಕು. ಸಾಗರದಿಂದ ಇಲ್ಲಿಗೆ ೬೧ ಕಿ.ಮೀ. ನೀವು ಜೋಗಕ್ಕೆ ಬಂದರೆ ಸಾಗರದಿಂದ ಸುಮಾರು ೩೦ ಕಿ.ಮೀ ಬಂದಾಗ ಸಿಗೋ ಕಾರ್ಗಲ್ ಎಂಬಲ್ಲಿ ಭಟ್ಕಳದತ್ತ ತಿರುಗೋ ರಸ್ತೆಯಲ್ಲಿ ಭೀಮೇಶ್ವರಕ್ಕೆ ೩೮ ಕಿ.ಮೀ ದೂರ ಎಂಬ ಬೋರ್ಡ್ ಕಾಣುತ್ತೆ. ಅದೇ ರಸ್ತೆಯಲ್ಲಿ ನೇರವಾಗಿ ಸಾಗಿದರೆ ಅರಲಗೋಡು-ಹೊಸಗದ್ದೆ-ಕೊಂಜಳ್ಳಿ-ಕೋಗಾರು ಮಾರ್ಗವಾಗಿ ಸಾಗಿದಾಗ ರಸ್ತೆಯ ಬಲಬದಿಗೆ ಭೀಮೇಶ್ವರ ಎಂಬ ಬೋರ್ಡ್ ಕಾಣುತ್ತದೆ. ಅದರ ಪಕ್ಕದಲ್ಲಿ ಸಾಗೋ ಸಿಮಂಟ್ ರಸ್ತೆಯಲ್ಲಿ ೨ ಕಿ.ಮೀ ಕೆಳಗೆ ಸಾಗಿದರೆ ಸಿಗೋ ಗುಡಿಹಿತ್ಲು ಎಂಬ ಊರಲ್ಲಿ ಭೀಮೇಶ್ವರ ಜಲಪಾತ ಮತ್ತು ದೇವಸ್ಥಾನಗಳಿವೆ.   


Bheemeshwara waterfalls


ಬೈಕಿನ ಬ್ರೇಕ್ಟೆಸ್ಟು:
ಊರಂದರೆ ದೊಡ್ಡ ಊರಲ್ಲವಿದು. ದಾರಿ ಮಧ್ಯೆ ಒಂದಿಷ್ಟು ಜನ ಓಡಾಡೋರು ಮತ್ತೆ ಅತ್ತಿತ್ತ ಒಂದಿಷ್ಟು ಗದ್ದೆಗಳು ಕಾಣೋದು ಬಿಟ್ಟರೆ ರಸ್ತೆಯ ಇಕ್ಕೆಲಗಳಲ್ಲೂ ಮನೆ ಸಿಗೋ ದೊಡ್ಡ ಊರಲ್ಲ ಇದು ! ಹೆದ್ದಾರಿಯ ಬುಡದಿಂದ ಕೆಳಗಿಳಿಯೋ ಟಾರ್ ರಸ್ತೆಯನ್ನ ನೋಡಿ ಕೊನೆಯವರೆಗೂ ರಸ್ತೆ ಇದೇ ತರ ಅಂದ್ಕೊಂಡು ಹೋದ್ರೆ ನಿಮ್ಮ ಕತೆ ಅಷ್ಟೆ! ನೂರು ಮೀಟರ್ಗಳಲ್ಲೇ ಕೊನೆಯಾಗೋ ಸಿಮೆಂಟ್ ರಸ್ತೆ ಕಲ್ಲು ಮಣ್ಣಿನ ರಸ್ತೆಯಾಗಿ  ಬದಲಾಗತ್ತೆ. ಕಡಿದಾದ ಇಳಿಜಾರು , ಮಧ್ಯೆ ಮಧ್ಯೆ ಸಿಗೋ ಏರುಗಳ ಜೀಪಿಗೆ ಅಂತಲೇ ಮಾಡಿರೋ ಈ ರಸ್ತೆಯಲ್ಲಿ ಕಾರ್ ಬಿಡಿ ಬೈಕಲ್ಲಿ ಹೋಗೋದೇ ದೊಡ್ಡ ಸಾಹಸ. ನಡೆದುಕೊಂಡು ಹೋಗೋಕೆ ೨ ಕಿ.ಮೀ ಆಗೋ ಈ ರಸ್ತೆಯಲ್ಲಿ ಸುಮಾರು ೩೫-೪೦ ನಿಮಿಷಕ್ಕೆ ಕೆಳಗಿಳಿಯಬಹುದಾದ ಈ ರಸ್ತೆಯಲ್ಲಿ ಬೈಕ್ ತಗೊಂಡು ಹೋಗ್ತೀರ ಅಂದ್ರೆ ಅದಕ್ಕೆ ಸಾಕಷ್ಟು  ತಾಳ್ಮೆ ಮತ್ತು ಕೌಶಲ್ಯ ಬೇಕು. ನ್ಯೂಟ್ರಲ್ಲು ಮತ್ತು ಬ್ರೇಕುಗಳ ಸಹಾಯದಿಂದಲೇ ಕೆಳಗಿಳಿಸಬೇಕಾದ ಈ ರಸ್ತೆಯಲ್ಲಿ ಮೇಲೆ ಹತ್ತಿಸೋಕೆ ಒಂದೆಡೆ ಜಾಗ ಬಿಟ್ರೆ ಬೇರೆಲ್ಲ ಕಡೆಯೂ ಮೊದಲ ಗೇರೇ ಗತಿ ! ಎರಡು ವರ್ಷದ ಹಿಂದೆ ಬೈಕ್ ತಗೊಂಡ ಹೊಸದ್ರಲ್ಲಿ ಇಲ್ಲಿಗೆ ಅಮ್ಮನ್ನ ಕರ್ಕೊಂಡು ಹೋಗಿದ್ದೆ. ಅಲ್ಲಿನ ಕೆಸರು, ಮಣ್ಣುಗಳಲ್ಲಿ ಗರ ಗರ ತಿರುಗ್ತಿದ್ದ ಚಕ್ರ, ಏನು ಮಾಡಿದರೂ ಮೇಲೆ ಹತ್ತದ ಬೈಕನ್ನ ಹೇಗೋ ಮೇಲೆ ಹತ್ತಿಸಿ ಅಮ್ಮನ್ನ ನಡ್ಕೊಂಡು ಬರೋಕೆ ಹೇಳಿದ್ದು ಬೇಡ ಬೇಡವೆಂದ್ರೂ ನೆನಪಾಗುತ್ತೆ ! ಮಡದಿಗೆ ಈ ಜಾಗ ತೋರಿಸ್ಬೇಕಂತ ಮತ್ತೆ ಕರ್ಕೊಂಡು ಬಂದಾಗ ಎಲ್ಲೂ ತೊಂದರೆಯಾಗದೆ ದೇಗುಲದ ಬುಡದವರೆಗೂ ಗಾಡಿಯಲ್ಲಿ ಹೋಗಿದ್ದು, ಮತ್ತೆ ವಾಪಾಸ್ ಬಂದಿದ್ದು ಬೇರೆ ವಿಷಯ ಬಿಡಿ. ಆದರೆ ಇಲ್ಲಿನ ಮಹಾನ್ ಇಳಿಜಾರು ಮತ್ತು ಏರುಗಳ ಸವಾಲಿನಲ್ಲಿ ತಲೆ ಕೆಡಿಸಿಕೊಳ್ಳದೇ ಡಬಲ್ ಹತ್ತಿಸಿದ ಬೈಕಿಗನಿಗೆ ಬೇರೆ ಯಾವ ರಸ್ತೆಯಲ್ಲಾದರೂ ಓಡಿಸಬಲ್ಲೆನೆಂಬ ಧೈರ್ಯ ಬಂದರೆ ತಪ್ಪೇನೂ ಇಲ್ಲ ಅನಿಸುತ್ತೆ !  
Yaagashale-The final point till where you can reach by Bike

ಭೀಮಗಾತ್ರದ ಬಂಡೆಗಳು, ಬಿಳಿಯ ಜಲಧಾರೆ: 
Bheemeshwara temple
ಇಲ್ಲಿರೋ ಯಾಗಶಾಲೆ ಮತ್ತು ಹಾಲಿನ ಬಳಿ ಗಾಡಿ ನಿಲ್ಲಿಸಿ ಮುಂದೆ ಸಾಗೋ ನಿಮಗೆ ಬೃಹದಾಕಾರದ ಬಂಡೆಗಳು ಸ್ವಾಗತಿಸುತ್ತವೆ. ಜಲಪಾತವಾಗಿ ಧುಮ್ಮಿಕ್ಕೋ ಸರಳಹೊಳೆ ಝುಳು ಝುಳು ಅನ್ನುತ್ತಾ ನಿಮ್ಮ ಕಾಲಬುಡದಲ್ಲೇ ಸೇತುವೆಯಡಿಗೆ ಹರಿದು ಹೋಗುತ್ತಾಳೆ.

On the way to Bheemeshwara temple from Yagashale
ಇವುಗಳಿಂದಲೇ ಈ ಜಾಗಕ್ಕೆ ಭೀಮೇಶ್ವರ ಎಂಬ ಹೆಸರು ಬಂತೇ ಅಂದ್ಕೊಂಡ್ರಾ ? ಇಲ್ಲ. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ದ್ವಾಪರಯುಗದಲ್ಲಿ ಪಾಂಡವರ ವನವಾಸದ ಸಮಯದಲ್ಲಿ ಅವರಿಲ್ಲಿಗೆ ಬರುತ್ತಾರಂತೆ. ಅವರಲ್ಲಿ ಭೀಮ ಕಾಶಿಯಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲು ಅನುಜ ಧರ್ಮರಾಯನಿಗೆ ನೀಡುತ್ತಾನಂತೆ. ಧರ್ಮರಾಯನಿಂದ ಸ್ಥಾಪಿಸಲ್ಪಟ್ಟ ಇಲ್ಲಿನ ಲಿಂಗದ ಅಭಿಷೇಕಕ್ಕೆ ಬೇಕಾದ ನೀರಿಗಾಗಿ ಅರ್ಜುನ ತನ್ನ ಬಾಣವನ್ನು ಹೂಡುತ್ತಾನಂತೆ. ಆಗ ಆತನ ಬಾಣದಿಂದ ಚಿಮ್ಮಿದ ನೀರಝರಿಯೇ ಇಲ್ಲಿನ ಸರಳ ಹೊಳೆ. ಅಂದು ಅವರು ಪ್ರತಿಷ್ಟಾಪಿಸಿದ ದೇಗುಲವೇ ಭೀಮೇಶ್ವರ ದೇವಸ್ಥಾನ ಅನ್ನುತ್ತಾರೆ. 

Steps to reach Bheemeshwara temple
ಅಂದು ಅವರಿಂದ ಶಿವಲಿಂಗ ಪ್ರತಿಷ್ಠಾಪಿಸಲ್ಪಟ್ಟಿರಬಹುದು , ತದನಂತರ ಇಲ್ಲಿನ ಪ್ರಾಂತ್ಯವನ್ನಾಳಿದ ಪಾಳೆಯಗಾರರಿಂದಲೋ, ಸಮೀಪದಲ್ಲಿ ಸಿಗೋ ಕಾನೂರು ಕೋಟೆಯನ್ನಾಳಿದ ಮೆಣಸಿನ ರಾಣಿಯಿಂದಲೋ  ಇದರ ಎದುರಿಗಿರುವ ದೇವಾಲಯದ ನಿರ್ಮಾಣವೋ , ಜೀರ್ಣೋದ್ದಾರವೋ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇಲ್ಲಿನ ಕಂಬಗಳ ಮೇಲಿನ ಕಲ್ಲ ಶಿಲ್ಪಗಳನ್ನು ನೋಡಿದ ನಿಮಗೆ ಹೊಯ್ಸಳರ ಕಾಲದ ಬೇಲೂರು ಹಳೆಬೀಡೋ, ತದನಂತರ ಬಂದ ಕೆಳದಿಯ ನಾಯಕರ ಕೆಳದಿ, ಇಕ್ಕೇರಿಗಳೋ ನೆನಪಾದರೆ ಅಚ್ಚರಿಯಿಲ್ಲ. 
Sculptures at Bheemeshwara

ಮುಂಗಾರು ಮಳೆಯಲ್ಲಿನ ಮೊಹಬ್ಬತ್: 
ಮುಂಗಾರು ಮಳೆ-೨ ಚಿತ್ರದಲ್ಲಿನ ಹಸಿರ ಸಿರಿಯ ನೋಡಿ ದಂಗಾಗಿರ್ತೀರ ನೀವು. ಇಲ್ಲಿಗೆ ಬೈಕಲ್ಲಿ ಹೋಗೋ ಥ್ರಿಲ್ಲು ಮತ್ತು ಇಲ್ಲಿನ ಪೌರಾಣಿಕ ಇತಿಹಾಸದ ಬಗ್ಗೆ ಓದಿ ಕುತೂಹಲಗೊಂಡಿರ್ತೀರ. ಇಲ್ಲಿಗೆ ಯಾವ ಸಮಯದಲ್ಲಿ ಹೋದರೂ ಇಲ್ಲಿಯ ಪರಿಸರವನ್ನು ಆಸ್ವಾದಿಸಬಹುದಾದರೂ ಇಲ್ಲಿಗೆ ಹೋಗೋಕೆ ಪ್ರಶಸ್ತ ಸಮಯ ಮಳೆಗಾಲ. ಕಣ್ಣು ಹಾಯಿಸಿದತ್ತೆಲ್ಲಾ ಹಸಿರು, ನೀರ ರಾಶಿ ಕಾಣೋ ಇಲ್ಲಿಗೆ ಮಳೆಗಾಲದಲ್ಲಿ ಬರೋ ಮಜವೇ ಬೇರೆ. ಆಗಾಗ ಹತ್ತಿಕೊಳ್ಳೋ ಉಂಬಳ(ಲೀಚ್) ಗಳನ್ನು ತೆಗೆದುಕೊಳ್ಳುತ್ತಾ , ಜಾರಬಹುದಾದ ಬಂಡೆಗಳ ನಡುವಿನ ಮೆಟ್ಟಿಲುಗಳ ಹತ್ತುತ್ತಾ, ಪಕ್ಕದಲ್ಲೇ ಹರಿಯೋ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಾ ಕಲ್ಲುಗಳ ನಡುವಿರೋ ಭೀಮೇಶ್ವರನ ಗುಡಿಯನ್ನು ನೋಡೋದೇ ಒಂದು ಚೆಂದ. ಮುಂಗಾರು ಮಳೆ-೧ ರಲ್ಲಿ ತೋರಿಸಿದ ಹಾಗೆ ಜೋಗ ಜಲಪಾತವನ್ನು ನೋಡೋಕೆ ಹೋಗಿ ಜೀವ ಕಳೆದುಕೊಳ್ಳುವಂತೆಯೇ ಇಲ್ಲಿನ ಜಲಧಾರೆಯ ಕೆಳಗೆ ಗಣೇಶ್ ನಿಂತಂತೆ ನಿಂತು ಕುಣಿಯಲು ಹೋದರೆ ಅಪಾಯವೂ ತಪ್ಪಿದ್ದಲ್ಲ ! 
water from bheemeshwara waterfalls  flowing f towards temple 

ಶಿವರಾತ್ರಿಯ ಶಂಕರ: 
ಪ್ರತೀವರ್ಷವೂ ಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತೆ. ಮೈಕೊರೆವ ಚಳಿಯ ನಡುವೆ, ಶರಾವತಿ ಅಭಯಾರಣ್ಯದ ದಟ್ಟ ಕಾನನದ ಮಡಿಲಲ್ಲಿ, ಹಕ್ಕಿಗಳ ಚಿಲಿಪಿಲಿ, ಜಲಪಾತದ ಝುಳುಝುಳುಗಳ ನಡುವೆ ಈ ದೇಗುಲದಲ್ಲಿ ನಡೆವ ರುದ್ರ, ಚಮಕಗಳ ಕೇಳೋದು, ರುದ್ರಾಭಿಷೇಕವನ್ನು  ನೋಡೋದೇ ಒಂದು ದಿವ್ಯ ಅನುಭವ.ಆ ಸಮಯವಲ್ಲದೇ ಪ್ರತೀ ಹುಣ್ಣಿಮೆ, ಅಮವಾಸ್ಯೆ, ಸಂಕ್ರಾತಿಗಳ ಸಮಯದಲ್ಲಿ ಇಲ್ಲಿ ಹೆಚ್ಚಿನ ಭಕ್ತರು ಸೇರುತ್ತಾರೆ. ಇವುಗಳಲ್ಲದೆಬೇರೆ ಸಮಯದಲ್ಲಿ ಇಲ್ಲಿ ಸೇರೋ ಭಕ್ತರ ಅನುಕೂಲಕ್ಕಾಗಿ ಮಜ್ಜಿಗೆ, ಊಟಗಳ ವ್ಯವಸ್ಥೆ ಮಾಡಲಾಗುತ್ತೆ. ಆದರೆ ಆ ಸಂಬಂಧ ಇಲ್ಲಿನ ಅರ್ಚಕರ ನಂಬರ್ಗಳಾದ 8762150181, 9483642908 ಗೆ ಸಂಪರ್ಕಿಸಿ ವಿಷಯ ತಿಳಿಸಿರಬೇಕಷ್ಟೆ. 
Nandi at the center of Bheemeshwara

ಪಕ್ಷಿ, ಚಿಟ್ಟೆಗಳ ಸಾಮ್ರಾಜ್ಯ: 
ನೀವಿಲ್ಲಿ ನಡೆದುಕೊಂಡು ಬರ್ತೀರ ಅಂದ್ರೆ ನಿಮ್ಮನ್ನು ಸ್ವಾಗತಿಸೋಕೆ ಕರಿಮೂತಿಯ ಸಿಂಗಳೀಕ, ಹಲವು ಪ್ರಬೇಧದ ಚಿಟ್ಟೆಗಳು, ಹಕ್ಕಿಗಳು ಸದಾ ಸಿದ್ಧವಿರ್ತವೆ. ಪ್ರವಾಸಿ ಸ್ಥಳಗಳಲ್ಲಿರುವಂತೆ ಇಲ್ಲಿನ ಕಾಡ ಮಂಗಗಳು ನಿಮ್ಮ ಬ್ಯಾಗಿಗೆ ಕೈಹಾಕೋಕೆ ಬರದಿದ್ದರೂ ಅಲ್ಲಿಲ್ಲಿ ಎದುರಾಗಿ ಹಾಯೆನ್ನುತ್ತಿರುತ್ತೆ. ಹಲವು ತರದ ಹೂಗಳು ಮತ್ತು ವಿಚಿತ್ರ ಚಿಟ್ಟೆ, ಜೇಡಗಳೂ ಇಲ್ಲಿ ಕಾಣಸಿಗುತ್ತೆ. 

ಮುಗಿಸೋ ಮುನ್ನ
ಅಭಯಾರಣ್ಯದ ನಡುವೆ ಇದ್ದರೂ ಇಲ್ಲಿಗೆ ಬರೋಕೆ ಯಾವ ಅನುಮತಿಯೂ ಬೇಕಿಲ್ಲ. ಹಾಗಂತ ಇದು ಸುಮ್ಮನೇ ಅಲ್ಲ. ಇಲ್ಲಿಗೆ ಬರೋದರ ಜೊತೆಗೆ ನಮಗೆ ಹೊಸ ಜವಾಬ್ದಾರಿಯೂ ಶುರುವಾಗುತ್ತೆ. ಇಲ್ಲಿ  ಕಾಣೋ ಪ್ರಾಣಿ ಪಕ್ಷಿಗಳಿಗೆ ತಿಂಡಿ ಹಾಕೋದೋ, ಇಲ್ಲಿನ ರಸ್ತೆಗಳಲ್ಲಿ ಕಸ ಎಸೆಯೋದೋ ಮಾಡದೇ ಇಲ್ಲಿನ ಸ್ವಚ್ಛ, ಪ್ರಶಾಂತ ಪರಿಸರವನ್ನು ಹಾಗೇ ಇಟ್ಟುಕೊಳ್ಳಬೇಕಾದ್ದು ಇಲ್ಲಿಗೆ ಬರೋ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಅದನ್ನು ನಿಭಾಯಿಸುವಲ್ಲಿ ನಾವೆಲ್ಲಾ ಯಶಸ್ವಿಯಾಗುತ್ತೇವೆಂಬ ನಂಬಿಕೆಯೊಂದಿಗೆ ಸದ್ಯಕ್ಕೊಂದು ವಿರಾಮ.  

No comments:

Post a Comment