Monday, October 24, 2011

ಯಂಗಳ ಚಿತ್ರದುರ್ಗ ಟ್ರಿಪ್: ಭಾಗ -೨

ಚಿತ್ರದುರ್ಗದಲ್ಲಿ single step ಗುಡ್ಡ ಒಂದಿದ್ದು. ಅಂದ್ರೆ ಒಂದು ಸಲಕ್ಕೆ ಒಂದು ಪಾದ ಇಡಕೆ ಮಾತ್ರ ಜಾಗ..ಹಂಗೇ ಇಟ್ಕಂಡು ಹತ್ಕಂಡೋಗಕ್ಕು ಹೇಳಿದ್ದಿದ್ದ ಶಿಶಿರನಪ್ಪ. ಆದಿ, ಗೌತು ಫ್ರೆಂಡು "ಬಂಡೆಕವಿ" ನೂ ಕೋಟೇಲಿ ಭಾರಿ ನೋಡದಿದೆ ಹೇಳಿದ್ದ." ಸರಿ ಹೇಳಿ ಚಂದವಳ್ಳಿಯ ಚೆಂದ ನೋಡಾದ ಮೇಲೆ ನಂಗ ಹೊಂಟಿದ್ದು "ಚಿತ್ರದುರ್ಗದ ಕಲ್ಲಿನ ಕೋಟೆ, ಸಿಡಿಲಿಗೂ ಜಗ್ಗದ ಉಕ್ಕಿನ ಕೋಟೆ.." ಹೇಳೋ ಅದ್ಭುತ ಹಾಡಿನ ಸ್ಪಿರಿಟ್, ನಾಗರಹಾವು ರಾಮಚಾರಿ, ಚಾಮಯ್ಯ ಮೇಷ್ಟ್ರು.. ಹಿಂಗೆ ಸುಮಾರು ಎಫೆಕ್ಟುಗಳನ್ನ ಹೊತ್ಕಂಡಿದ್ದ ಏಳು ಸುತ್ತಿನ ದುರ್ಗದ ಕೋಟೆಗೆ.


ಅದನ್ನೀಗ ಪ್ರವಾಸೋದ್ಯಮ ಇಲಾಖೆಯವ್ವು ವಹಿಸ್ಕಂಡು ಸುತ್ತ ಬೇಲಿ, ಒಳಗೆಲ್ಲ ಲೈಟಿಂಗು, ಸುಮಾರಷ್ಟು ಜೀರ‍್ಣೋದ್ದಾರ, ಮಾಹಿತಿ ಫಲಕ , ಮಧ್ಯೆ ಎಲ್ಲಾದ್ರೂ ಸಿಕ್ಕಾಕ್ಕಂಡವರ್ನ ತಡೆಯೋ ತರ ಅಲ್ಲಲ್ಲಿ ಕಾವಲಿನವ್ರು ಹಿಂಗೆ ಸುಮಾರಷ್ಟು ಒಳ್ಳೇ ಕೆಲ್ಸ ಮಾಡಿದ್ದ, ಮಾಡ್ತಾ ಇದ್ದ. ಆದ್ರೂ ಬೇರೆ ಕಡೆಗೆಲ್ಲಾ ಹೋಲಿಸಿದ್ರೆ ಟಿಕೇಟ್ ದರ ಸುಲಿಗೆ ಅನಿಸ್ಲೆ.. ನಮ್ಮವ್ವು ಅಪರೂಪಕ್ಕಾದ್ರೂ ಎಂತಾರೂ ಒಳ್ಳೆ ಕೆಲ್ಸ ಮಾಡಿದ್ರೆ ಭೇಷ್ ಹೇಳ್ದೆ ಇರಕ್ಕೆ ಮನ್ಸು ಬತ್ತಲೆ ಅಲ್ದಾ? ಅದಕ್ಕೆ ಇದ್ನೆಲ್ಲ ಸ್ವಲ್ಪ ಕೊರ್ಯಕ್ಕಾತು.. ನಿಂಗಕ್ಕೆ ದುರ್ಗದ ದುರ್ಗಮ ಕೋಟಿಗೆ ಸ್ವಾಗತ, ಚೀವ್ ಚೀವ್ ಅಂದಂಗಾತು. ನೋಡಿದ್ರೆ ಅಳಿಲು. ಗೋಡೆ ಒಳಗಿಂದ ಇನ್ನೊಂದು ತಲೆ ಹೊರಗಾಕ್ತು, ನಾಗರಹಾವ್ನ ಮೇಲೆ.. ಅಲ್ಲಲ್ಲ ಅದ್ರ ವಿಗ್ರಹದ ಮೇಲೊಂದು ಕುತ್ಕಂಡಿತ್ತು.. ಕೊನಿಗೆ ಎಲ್ಲ ಕಡಿಗೂ ನಾ ಇದ್ದಿ ಹೇಳಿ ತಲೆ ಹಾಕಕ್ಕೆ ಹಿಡ್ದ. ವೈಲ್ಡ ಲೈಫು ಫೋಟೋ ಮಸ್ತ್ ತೆಗ್ಯೋ ಶಿಶಿರಂಗೆ ಒಳ್ಳೇ ಹಬ್ಬ :-) ಸರಿ, ಹೇಳಿ ಒಳಗ್ಬಂದ್ಯ. ಅಲ್ಲಿ ಎಂತೆತ ಇದ್ದು ದುರ್ಗದಲ್ಲಿ ಹೇಳಿ ಒಂದು ಬೋರ್ಡು.. ಒಟ್ಟು ಇಪ್ಪತ್ತಾರು ಜಾಗ ನೋಡ ಅಂತದ್ದು !!! ಅದಕ್ಕೆ ಹೋಗ ದಾರಿ ಹೇಳಿ ದಾರೀನೂ ಕೊಟ್ಟಿದ್ದ.. ಅಲ್ಲಿಂದ ಮೂರು ದಾರಿ, ಯಡಕ್ಕೆ, ಬಲಕ್ಕೆ, ಮೇಲಕ್ಕೆ !! :-)



ನಂಗ ಎಡಗಡೆ ದಾರೀಲಿ ಹೊಂಟ್ಯ. ಅಲ್ಲಿ ಮೊದ್ಲು ಸಿಕ್ಕಿದು ಒಂದು viewpoint. ಒಂದಲ್ಲ, ಅಲ್ಲಿರದೆಲ್ಲಾ viewpoint ಗಳೇ :-). ಕೋಟೆಯಿಂದ ಕೆಳಗಿರೋ ಕಂದಕ, ಸುತ್ತಿ ಸುತ್ತಿ ಬರೋ ಕೋಟೆ, ಆ ಕಡೆ ಗುಡ್ಡದಲ್ಲಿ "ಗಾಳಿ ತಡೆಯವ್ನೆ ಇದ್ದಿ ನಾ ತೆಪ್ಪಗಿದ್ದಿ ಇಲ್ಲಿ, ಚಿಲ್ರೆ ಗುಡ್ಡ ಹತ್ತಿ ಕೊಚ್ಕತ್ಯಲ್ಲ ಮಾಣಿ.." ಹೇಳಂಗಿದ್ದ ಗಾಳಿಯಂತ್ರಗಳು .. ಹಿಂಗೆ ಅಲ್ಲಿನ ದೃಶ್ಯ ಎಷ್ಟು ಚೆನ್ನಾಗಿ ಕಾಣ್ತು ಹೇಳದನ್ನು ಅಲ್ಲಿ ಹೋಗೇ ನೋಡಕ್ಕು.. ಅಷ್ಟು ಸೂಪರ್.. , ಆಷ್ಟು ತುದಿಗೆ ನಡ್ಯಡ ಮಾರಾಯ. ಇತ್ಲಗೆ ಬಾ. ನೀ ಏನಾರೂ ಜಾರಿ ಮೇಲೋದ್ರೆ ನಂಗ ಎಲ್ಲ ಒಳಗೋಗದಾಕ್ತು ಹೇಳಿ ಕೂಗದೆ ಆಗ್ತಿತ್ತು ಒಬ್ರಿಗೊಬ್ರು..

ಆಮೇಲೆ ಸಿಕ್ಕಿದ್ದು ಬನಶಂಕರಿ ದೇವಸ್ಥಾನ. ಕಲ್ಬಂಡೆ ಕೆಳಗಡೆ ಕಲ್ಮೂತ್ರಿಗಳು. ಚೆನಾಗಿದ್ದು. ದುರ್ಗ ಹತ್ತಕ್ಕೊಂಟಿದ್ಯ. ಒಳ್ಳೇದಾಗ್ಲಿ ಯಂಗಕ್ಕೆಲ್ಲ ಹೇಳ ತರ ಒಂದು ನಮಸ್ಕಾರ ಹೊಡ್ದು ಮುಂದೆ ಹೊಂಟ್ಯ. ಅಲ್ಲಿ ಸಿಕ್ಕಿದ್ದು ಗಾರೆ ಅರೆಯೋ ಕಲ್ಲು. ಯಂತರನೇ ಅದನ್ನ ನೋಡ್ದೇ ಇದ್ದವ್ರಿಗೆ ಹೇಳಿ ಅದ್ರ ಚಿತ್ರ ಹಾಕಿದ್ದಿ ನೋಡಿ. ಆಮೇಲೆ ಸಿಕ್ಕಿದ್ದು ಮದ್ದು ಅರೆಯೋ ಕಲ್ಲು. ಕೋವಿ(ಬಂದೂಕು), ಪಿರಂಗಿಗಳಿಗೆಲ್ಲಾ ಮದ್ದು ಪುಡಿ ಬೇಕಾಗ್ತಿಗ್ತಲ, ಅದ್ನ ಅರೆಯಕ್ಕೆ ಹೇಳಿ ಇದ್ದಿದ್ದಡ ಅದು. ನಾಲ್ಕು ಮೂಲೇಲಿ ನಾಲ್ಕು ಭರ್ಜರಿ ತಿರುಗ್ಸೋ ಕಲ್ಲು. ಅದ್ರ ಮಧ್ಯ ಪುಡಿ ಮಾಡದನ್ನ ಹಾಕಿ ಆ ಕಲ್ಲು ತಿರುಗ್ಸಿದ್ರೆ ಕೆಳಗಡೆ ಪುಡಿ ಬೀಳ್ತಿತ್ತಡ. ಅದ್ನ ಪ್ರಾಣಿಗಳ ಕೈಲಿ ಅತ್ವಾ ಮನುಷ್ಯರ ಕೈಲಿ ಎಳಸ್ತಿದ್ವಡ. ಇಷ್ಟೆಲ್ಲಾ ಯಂಗೆಂಗೆ ಗೊತ್ತಾತು ಅಂದ್ರಾ? ಅಲ್ಲೇ ಫಲಕ ಹಾಕಿದ್ದ ಮಾರ್ರೆ :-) :-)ಅಲ್ಲಿ ಇದ್ದಿದ್ದು ಅಷ್ಟೆ. ಬೆಟ್ಟದ ಮೇಲೆ ಒಂದು ಸಣ್ಣ ದಾರಿ ಕಾಣ್ತಿತ್ತು. ಆದ್ರೆ ಅದೆಲ್ಲಿಗೆ ಕರ್ಕಂಡೋಕ್ತು ಹೇಳಿ ಮ್ಯಾಪಲ್ಲಿರ್ಲೆ. ಹಂಗಾಗಿ ಬಂದ ದಾರೀಲಿ ವಾಪಾಸ್ ಬಂದ್ಯ.

ಮುಂಚೆ ಮೂರು ದಾರಿ, ಮೇಲ್ಗಡೆ ಇನ್ನೊಂದಾರಿ ಹೋಗ್ತು ಹೇಳಿದ್ನಲ.ಅದ್ರಲ್ಲಿ ಮೇಲಕ್ಕತ್ತಕೆ ಶುರು ಮಾಡಿದ್ಯ. ಅಲ್ಲಿ ಮತ್ತೆ ಸಿಕ್ಕಿದ್ದು ಭರ್ಜರಿ ಬಾಗ್ಲು. ಈ ಕೋಟೆಗೆ ಏಳು ಸುತ್ತಿನ ಕೋಟೆ ಹೇಳೆ ಹೆಸ್ರು. ಒಂದೊಂದು ಪ್ರವೇಶ ಸ್ವಾರ ಸಿಕ್ಕಿದಾಗ್ಲೂ ಒಂದೊಂದು ಸುತ್ತು ಮುಗುತ್ತು ಹೇಳಿ ಲೆಕ್ಕಾಚಾರ. ಅಷ್ಟೊತ್ಗೆ ಅಲ್ಲೊಂದು ಎಣ್ಣೆ ಹೊಂಡ ಹೇಳಿ ಸಿಕ್ಕಿತ್ತು. ಅದ್ರಲ್ಲಿರದು ನೀರೇಯ. ಮುಂಚೆ ಎಂತಾರೂ ಶೇಖರಣೆ ಮಾಡ್ತಿದ್ವೇನ. ಈಗ ಮಳೆ ನೀರು ತುಂಬ್ಕಂಡಿದ್ದಿಕ್ಕು.ಅದ್ರ ಪಕ್ಕದಲ್ಲೇ ಇನ್ನೊಂದು ಗುಹೆ ತರ. 


ಅದ್ರಲ್ಲೊಂದು ಸಣ್ಣ ದಾರಿ.. ಎಂಥೋ ಕಂಡು ಹಿಡಿದಂಗಾತು ಹೇಳ್ಕಂಡು ಮುಂದೆ ಹೋದ್ರೆ, ಅದು ಶಣ್ಣ ಆಗಿ, ಆಗಿ ಮುಚ್ಚೇ ಹೋಗಿತ್ತು..ಒಂದಾನೊಂದು ಕಾಲದಲ್ಲಿ ಅಲ್ಲಿಂದ ಎಲ್ಲಿಗಾರೂ ಹೋಗ್ತಿತ್ತೇನೋ.. ಆದ್ರೆ ಅಲ್ಲಿ ಕತೆ ಹೇಳಕ್ಕೆ ಯಾರೂ ಇರ್ಲೆ.
ನಂಬದಿಗೂ ಮುಚ್ಚಿರೋ ಗುಹೆ ತೋರ್ಸಿ ಇದು ಕಾಶಿಗೆ ಹೋಗ್ತಿತ್ತಡ ಅಂತ ಕಥೆ ಹೇಳದಿಲ್ಯ ಹಂಗೆ.


 ಅಲ್ಲೇ ಮುಂದೆ ಬರಕಿದ್ರೆ ರೇಖಾಚಿತ್ರಗಳು ಅಂತ ಒಂದು ಫಲಕ ಇತ್ತು. ಆದ್ರೆ ಅಲ್ಲಿ ಬಂಡೆ ಮೇಲೆ ಎಂತ ರೇಖೆನೂ ಸರಿ ಕಾಣ್ತಿರ್ಲೆ.. ಎಲ್ಲ ಅಳ್ಸಳ್ಸಿ ಹೋದಂಗಾಗಿತ್ತು.. ರೇಖನೂ ಇಲ್ಲ, ಚಿತ್ರನೂ ಇಲ್ಲೆ. ಮುಂದೋಗನ ಬರ್ರ ಅಂದ ಫ್ರೆಂಡು.. ಸುಮಾರೊತ್ತು ಹುಡ್ಕಿದ ಮೇಲೆ ಎದ್ರಿನ ಬಂಡೆ ಮೇಲೆ ಭಾರತ, ಆಮೆ ಹಿಂಗೆ ಸುಮಾರು ಆಕಾರ ಕಾಣಕ್ಕಿಡುತ್ತು. ಮೇಲಿರೋ ಬಂಡೆ ಮಲ್ಕಂಡಿರೋ ಮನುಷ್ಯನ ತರ, ಮೊಸಳೆ ತರ ಕಾಣಕ್ಕಿಡುತ್ತು.. ಇಲ್ಲಿರೋ ಎಲ್ಲ ಬಂಡೇನೂ ಒಂದೊಂದು ಆಕಾರ ಕಾಣಕ್ಕಿಡಿತು, ಇಡೀ ದಿನ ಆದ್ರೂ ನೋಡಿ ಮುಗಿತಲ್ಲೆ ಕೊನಿಗೆ ಹೇಳಿ ಮುಂದೆ ಹೊಂಟ್ಯ.


ಅಲ್ಲಿ ದ್ವಾರ ಅಂದ್ರೆ ಸುಮ್ನೆ ಬಾಗ್ಲಲ್ಲ.. ಸುಮಾರು ಏಳೆಂಟು ಅಡಿ ಉದ್ದದ ಚಾವಣಿ. ಅದ್ನ ದಾಟ್ಕಂಡು ಮುಂದೆ ಹೋಯಕ್ಕು. ಅಲ್ಲಿ ಹುಲಿ ಹಸು ಆಟಕ್ಕೆ ಹೇಳಿ ಕೆತ್ತಿದ ಮಣೆ ಕಾಣುಸ್ತು. ಹುಲಿ ಹಸು ಆಟದ ಮಣೆ ನಮ್ಮ ಕೆಳದಿ ಕೋಟೇಲಿ ನೊಡಿದ್ದಿ ನಾನು.ಆ ಕಾಲ್ದ ಸುಮಾರು ಎಲ್ಲ ಕೋಟೇಲೂ ಈ ಆಟ, ಜೊತೆಗೆ ಇನ್ಯಾವುದಾದ್ರೂ ಮಣೆ ಕಾಣ್ತು..ಶಿಲ್ಪಿಗಳು, ಕೆಲಸದ್ವ್ರು ರಾತ್ರೆ ಬೇಜಾರು ಕಳೆಯಕ್ಕೆ ಆಡ್ತಿದ್ವಡ ಅದ್ನ. ಸುಮಾರು ದೇವ್ರ ವಿಗ್ರಹ, ಆಂಜನೇಯ, ಹುಲಿ, ನವಿಲು, ಆನೆ ಹಿಂಗೆ ಸುಮಾರು ಪ್ರಾಣಿ ಪಕ್ಷಿ ಆಕಾರ ಎಲ್ಲ ಕೆತ್ತಿದ್ದ. ಅಲ್ಲಿಂದ ಮುಂದೆ ಒಂದು ವಿನಾಯಕ ಸ್ವಾಮಿ ದೇವಸ್ಥಾನ. ಅಲ್ಲಿ ಪಕ್ಕದಲ್ಲಿ ಇನ್ನೊಂದು ದಾರಿ ಇತ್ತು. ದೇವಸ್ಥಾನ ಪ್ರದಕ್ಷಿಣೆ ಹಾಕ ತರ. ಅಲ್ಲಿ ಎಂತಿದ್ದು ಹೇಳಿ ನೋಡಕ್ಕೆ ಹೋದ್ಯ ನಾನು, ಆದರ್ಶ.. ಅಂತ ತಪ್ಪು ನಿಂಗ ಮಾಡಡಿ ಮತ್ತೆ. ಅದು ಜೋಡಿಗಳ hotspot. ದುರ್ಗದಲ್ಲಿ ಹಿಂಗೆ ಮರೆಯಾಗಿರೋ, ಹೋಗಕ್ಕೆ ಕಷ್ಟ ಆಗಿರೋ ಜಾಗ್ದಲ್ಲೆಲ್ಲಾ ಸುಮಾರು ಕಾಣ್ತಿರೋ ಇಂಥ ದೃಶ್ಯಗಳು.. suicide spot ಗಳಿರೋ ತರ lovers spot ಇದ್ರೆ ತಪ್ಪೆಂತಾ ಅಂತ ಅವ್ರು ಕೇಳದ್ರೊಳಗೆ ನಂಗ ಜಾಗ ಖಾಲಿ ಮಾಡಿದ್ಯ. ಅಲ್ಲಿ cuuting edge technologies ಅಂತ ಒಂದು ಫಲಕ !!! ನೀವು ಅಂದ್ಕಂಡಗೆ ಅಲ್ಲ ಮತ್ತೆ :-) ಆ ರೀತಿಯ ಬೃಹತ್ ಕಲ್ಲುಗಳ ಮೇಲೆ ಹೆಂಗೆಲ್ಲಾ ಚಿತ್ತಾರ ಮೂಡಿಸಿದ ಹೇಳದನ್ನ ವಿವರಿಸೋ ಫಲಕ ಅದು :-)

 ಹಂಗೆ ನೇರ ಹೋಗ್ತಿದ್ದಂಗೆ ಅಲ್ಲಿ ಮತ್ತೆ ಮೂರು ದಾರಿ. ಎಡಕ್ಕೆ , ಬಲ್ಲಕ್ಕೆ, ಮೇಲಕ್ಕೆ. ಬಲಗಡೇದ್ರಲ್ಲಿ ಹೋದ್ಯ. ಅಲ್ಲಿ ಏಕನಾಥೇಶ್ವರಿ ದೇವಸ್ಥಾನ. ಚೆನ್ನಾಗಿದ್ದು. ಅದ್ರ ಮೇಲಕ್ಕೆ ಹತ್ತೋ ಮೆಟ್ಲು ಸಿಕ್ತು. ಅಲ್ಲಿ ಹತ್ತಿ ಹೋದ್ರೆ ಯಂಗ ಹತ್ತಿ ಬಂದ ದಾರಿ, ಆಚಿಗಿನ ಬೆಟ್ಟ , ಹಿಂಗೆ ಚೆನ್ನಾಗಿ ಕಾಣ್ತು. ಅದ್ರ ಪಕ್ಕ ಮತ್ತೊಂದು ಗಣಪತಿ ದೇವಸ್ಥಾನ. ಅದ್ರ ಮೇಲ್ಗಡೆ ಹೋಗ ದಾರಿ ಕಂಡಂಗೆ ಕಾಣ್ತು. ಅದನ್ನೂ ಮುಚ್ಚಿದ್ದ ಈಗ.




ಅಲ್ಲಿಂದ ಸ್ವಲ್ಪ ಹಿಂದೆ ಬಂದ್ರೆ ಮತ್ತೆ ಧ್ವಜ ಸ್ಥಂಬ. ಪಕ್ಕದಲ್ಲೇ ಒಂದು ಅಗಸೇ ಬಾಗ್ಲು. ಕಳ್ಳರನ್ನ, ದ್ರೋಹಿಗಳ್ನ ಸಿಗ್ದು ಅಗಸೇ ಬಾಗ್ಲಿಗೆ ನೇತಾಕ್ತಿದ್ದ ಹೇಳಿ ಕೇಳ್ಲ್ಯಾ? ಆ ತರದ್ದು.. ಮೊದ್ಲು ನೋಡ್ದಾಗ ನಾನು ಇದು ತುಲಾಭಾರಕ್ಕೆ ಹೇಳಿ ಮಾಡ್ಸಿದ್ದನೋ ಅಂತ ಅಂದ್ಕಡಿದ್ದಿ.. ಜೋಕಾಲಿಗೆ ಅಂತನೂ ಕೆಲವರು ಅಂದ್ಕಂಡಿಕ್ಕು.. ನಂಗ ಹತ್ತೂವರೆ ಹೊತ್ಗೆ ಹತ್ತಕ್ಕೆ ಶುರು ಮಾಡಿದ್ಯ. ಆದ್ರೂ ಬಿಸ್ಲು, ಜೊತೆಗೆ ದುರ್ಗದ ಶೆಖೆ ಬೇರೆ, ಜೊತಿಗೆ ಬೆಟ್ಟ ಹತ್ತದು.. ಬೆವರು ಅಂದ್ರೆ ನೀರು ಹರ್ದಂಗೆ ಹರ್ಯಕ್ಕೆ ಶುರು ಆಗಿರ್ತು ಅಷ್ಟು ಹೊತ್ತಿಗೆ. ಏಕನಾಥೇಶ್ವರಿ ದೇವಸ್ಥಾನದೈಂದ ವಾಪಸ್ ಬರೋ ಹೊತ್ಗೆ ಅಲ್ಲೊಂದು ಪುಷ್ಕರಿಣಿ. ಅಷ್ಟು ಮೇಲೆ ಹತ್ಕಂಬಂದವ್ಕೆ ಬೇಕಾದ್ರೆ ಹೇಳಾಗಿಕ್ಕು ಪಕ್ಕದಲ್ಲೊಂದು ಕ್ಯಾಂಟೀನು !!!. ಮೇಲ್ಗಡೆ ನೋಡ್ಕಂಡು ಬರಕಿದ್ರೆ ಕ್ಯಾಂಟೀನಿನ ಎಡ್ಗಡೆ ಹೋಪನ ಹೇಳಿ ಮತ್ತೆ ಹತ್ತಕ್ಕೆ ಶುರು ಮಾಡಿದ್ಯ.

 ಅಲ್ಲಿ ಸಿಕ್ಕಿದ್ದು ಟಂಕಸಾಲೆ ಅಂದ್ರ ನಾಣ್ಯ ಮುದ್ರಣ ಮಾಡ ಜಾಗ ಮತ್ತೆ ಪಾಳೇಗಾರರ ಕೊಠಡಿಗಳು. ಅವಾಗಿನ ಕಾಲದ್ದು. ಅದ್ಕೆ ಚಾವಣಿ ಹೇಳದೆಂತೂ ಇಲ್ಲೆ ಈಗ. ಹಂಗಾಗಿ ಬಿಸ್ಲು ಮಳೆಗೆ ಹಾಳಾಗ್ತ ಬಿದ್ಗಂಡಿದ್ದು ಅದು. ಆಗಿನ ಕಾಲದ ಗೋಡೆ ನೋಡಕ್ಕೆ ಸಿಗ್ತು ಅಲ್ಲಿ ಹೋದ್ರೆ. ಅಲ್ಲೊಂದು ಮಿನಿ ಪುಷ್ಕರಿಣಿನೂ ಇದ್ದು.. ದುರ್ಗದಲ್ಲಿ ಆಶ್ಚರ್ಯ ಆಗದು ಅಂದ್ರೆ ಅಷ್ಟು ಎತ್ರದಲ್ಲೂ ಪುಷ್ಕರಣಿಗಳು,ಹೊಂಡಗಳು ಇದ್ದ. ಅದ್ರಲ್ಲಿ ನೀರೂ ಇದ್ದು !!!



 ಹಂಗೇ ಮುಂದೆ ಬಂದ್ಯ. ಅಲ್ಲಿ ಅಕ್ಕತಂಗಿಯರ ಹೊಂಡ ಹೇಳಿ ಸಿಗ್ತು. ಅಲ್ಲಿಂದ ಮತ್ತೆ ೩ ದಾರಿ. ಅದ್ರಲ್ಲಿ ಬಲ್ಗಡೆ ಮೇಲಕ್ಕೆ ಹೋದ್ಯ. ಅಲ್ಲಿ ಆಗಿನ ಕಾಲದ ಸಭಾಮಂಟಪ ಸಿಗ್ತು. ಮಂಟಪ ಅಂದ್ರೆ, ಚಪ್ರ ಹಾಕಿರದು ಅಲ್ಲ. ಭರ್ಜರಿ ಕಲ್ಲುಗಳ ಮಧ್ಯೆ ಇರ ಜಾಗ. ಆದ್ರೂ ಒಂದು ಮಿನಿ ವೇದಿಕೆ ಮಾಡ ಅಷ್ಟು ಜಾಗ ಇದ್ದು ಅಲ್ಲಿ. ಯಂಗಳ ಪೈಮರಿ ಶಾಲೆ ವಾರ್ಷಿಕೋತ್ಸವದ ವೇದಿಕೆ ಇರ್ತಲ. ಸುಮಾರು ಅಷ್ಟು ದೊಡ್ಡದು!!




ಅದ್ನ ನೋಡಿಕ್ಯಂಡು ಕೆಳಗಿಳಿಯಕ್ಕಿದ್ರೆ ಒಂದು ಪಾಳು ಬಿದ್ದ ದೇವಸ್ಥಾನ. ಅದ್ರಲ್ಲಿ ಒಡ್ಕಂಬಿದ್ದಿದ್ದ ನಂದಿ, ಮುರ್ದಿದ್ದ ಮೂರ್ತಿ ಇತ್ತು. ಬೇರೆ ಎಂತೂ ಕಾಣ್ತಿರ್ಲೆ. ನಂದಿ ಇದ್ದಿದ್ದಕ್ಕೆ ಈಶ್ವರ ದೇವಸ್ಥಾನ ಆಗಿಕ್ಕು ಅಂದ್ಕಂಡಿ. ಅಲ್ಲಿಂದ ಕೆಳಗಿಳಿದು ಮತ್ತೆ ಅಕ್ಕತಂಗಿಯರ ಕೊಳದ ದಡಕ್ಕೆ ಬಂದ್ಯ. ಅಲ್ಲಿ ಕೆಳಗಡೆ ಕಾಶಿ ವಿಶ್ವನಾಥ ದೇವಸ್ಥಾನ, ಹನುಮಂತ ದೇವಸ್ಥಾನ ಇದ್ದು.








ಹಂಗೇ ಕೆಳಗಿಳಿಗ್ಯಕ್ಕಿದ್ರೆ ತಣ್ಣೀರು ದೋಣಿ ಹೇಳಿ ಸಿಗ್ತು. ಕೂಲ್ ಕ್ಯಾಪ್ಟನ್ ದೋಣಿ ನೆನಸ್ಕಂಡ್ರಾ ಮತ್ತೆ? :-) ಇಲ್ಲಿ ಬಂಡೆ ಕೆಳಗಿಮ್ದ ನೀರು ಹರ್ದು ಬತ್ತು. ಅಲ್ಲಿ ಹೆಸರಿಗೆ ತಕ್ಕಂಗೆ ಭಾರೀ ತಣ್ಣಗಿತ್ತು ನೀರು.. ಅಲ್ಲೇ ಕೈಕಾಲು ತೊಕ್ಕಂಡ್ಮೇಲೆ ಮತ್ತೆ ಶಕ್ತಿ ಬಂತು.. ಇಲ್ಲೀವರ್ಗೆ ಹತ್ತಿದ ಸುಸ್ತು ಸ್ವಲ್ಪ ಸಮಾಧಾನ ಆತು. ಅಲ್ಲಿ ಏನನ್ನಾದರೂ ಮರೆತಿರುವಿರಾ ಅಂತ ಒಂದು ಬೋರ್ಡು.. ಎಂತೂ ಮರ್ತಂಗೆ ಇಲ್ಯಲ ಅಂತ ಅಂದ್ಕಳ ಹೊತ್ಗೆ ಅಲ್ಲಿ "ನನ್ನನ್ನು ಬಳಸಿರಿ" ಕಾಣುಸ್ತು..ಹಾ ಹೇಳಕ್ಕೆ ಮರ್ತೋಗಿತ್ತು. ಮಧ್ಯ ಸಿಗೋ ದ್ವಾರಗಳಲೆಲ್ಲಾ ಜ್ಯೂಸು, ಕೂಲ್ಡಿಂಕ್ಸ ಮಾರೋರು ಕೂತಿರ್ತ. ಜೊತೆಗೆ, ಇಲ್ಲಿಗೆ ಬರೋರು ಎಂಥಾರು ತಂದಿರ್ತ. ಅವ್ವು ಅದ್ನ ಎಲ್ಲೆಲ್ಲೂ ಬಿಸಾಕಿ ಗಲೀಜು ಮಾಡ್ಲಾಗ ಹೇಳಿ ಇಂಥ ವ್ಯವಸ್ಥೆ.. ಆಮೇಲೆ ಸುಮಾರು ಕಡೆ ಕಾಣ್ತು ಇದು ಅಂತಿಟ್ಕಳಿ.


ಆಮೇಲೆ ಇಳ್ಯಕ್ಕಿದ್ರೆ ಮತ್ತೊಂದು ಹನುಮಂತನ ಗುಡಿ ಶಣ್ದು. ಓಬವ್ವ ಇದಕ್ಕೆ ಪೂಜೆ ಮಾಡಿ ಶತ್ರುಗಳ್ನ ಹೊಡ್ದಾಕಿದ್ದ ಅಂತ ಅನುಸ್ತು..ಅಲ್ಲೇ ಮೇಲೆ ಹತ್ತಿದ್ರೆ ಮತ್ತೆ ಕಂದಕ ಕಾಣ್ತು. ಆಮೇಲೆ ಓಬವ್ವನ ಕಿಂಡಿ. ಈ ಕಡೆ ಸ್ವಲ್ಪ ಪಕ್ಕದಲ್ಲಿ ಬಂಡೆ ಬಿದ್ದು ಓಬವ್ವನ ಕಿಂಡಿ ಹಿಂದ್ಗಡೆ ಆರಾಮಾಗಿ ಹೋಗ ಅಷ್ಟು ಜಾಗ ಆಯ್ದು.ಆದ್ರೂ ಓಬವ್ವನ ಕಿಂಡಿ ಒಳಗಿಂದ ಹೊರಗೆ ಬರಕ್ಕೆ ಆಗ್ತಾ ಇಲ್ಯ ಹೇಳಿ ಗೊತ್ತಿರ್ಲೆ. ಒಬ್ರು ಇಳ್ದು , ಬತ್ತು ಅಂದ್ರೆ ಉಳ್ದವ್ರು ಹೋಗದು ಅಮ್ತಾತು. ಸರಿ, ಅದ್ರಲ್ಲೆಂತ ಅಪಾಯನೂ ಇಲ್ಲೆ ಹೇಳಿ ನಾನೇ ಇಳ್ದಿ. ಹೈದರಾಲಿ ಸೈನಿಕರು ಬಂದಿದ್ದ ಜಾಗ ನೋಡ್ಕ್ಯಂಡು.. ಓಬವ್ವನ ಕಿಂಡೀಲೆ ಮೇಲೆ ಹತ್ಕಂಡು ಬಂದಿ :-) ಆಮೇಲೆ ಉಳದವ್ಕೂ ಉತ್ಸಾಹ ಬಂತು.

 ಅಲ್ಲಿಂದ ಬಂದ್ಮೇಲೆ ಮತ್ತೆ ತಣ್ಣೀರು ದೋಣಿ. ಆಮೇಲೆ ಉಲ್ಟಾ ಬಂದು ಎಡ್ಗಡೆ ಇದ್ದ ದಾರೀಲಿ ಹೊಂಟ್ಯ. ಅದು ಗೋಪಾಲಸ್ವಾಮಿ ದೇವಸ್ಥಾನಕ್ಕೆ ಹೋಗಕ್ಕೆ ದಾರಿ ಆಗಿತ್ತು. ಅಲ್ಲೂ ಸುಮಾರು ದ್ವಾರಗಳು ಸಿಗ್ತು. ಅಲ್ಲಿ ಮೇಲೆ ಹತ್ತಿದ್ಮೇಲೆ ಒಂದು ಕೆರೆ. ಅದ್ರ ಪಕ್ಕದಲ್ಲಿ ಇನ್ನೊಂದು ಭರ್ಜರಿ ಬೆಟ್ಟ ಇಳ್ಕಂಡು ಬತ್ತಿರೋರು ಕಾಣ್ತಿತ್ತು. ಅಲ್ಲಿಂದ ಮತ್ತೆ ಮೇಲೆ ಹತ್ತಿದ್ಮೇಲೆ ಸಿಕ್ಕಿದ್ದು ಗೋಪಾಲಸ್ವಾಮಿ ದೇವಸ್ಥಾನ. ಅಲ್ಲಿಂದ ಮತ್ತೆ ಮೇಲೆ ಹತ್ತಿದ್ಯ. ಅಲ್ಲಿ ಸೈನಿಕರು ತುಪಾಕಿಗಳ್ನ ಇಟ್ಕೊಂಡು ಹಾರಿಸ್ತಿದ್ದ ಜಾಗ ಸಿಗ್ತು.. ಅಲ್ಲಿಗೆ ಅದು end point. ಅಲ್ಲಿಂದ ನೋಡಿದ್ರೆ ದುರ್ಗದ ಕೋಟೆ ಚೈನಾ ಗೋಡೆ ಕಂಡಂಗೆಗ ಕಾಣ್ತಿತ್ತು. ಅಲ್ಲಿಂದ ಇಳ್ದು ದೊಡ್ಡ ಬೆಟ್ಟ ಹತ್ತಕು ಅಂತ ಅನುಸ್ತು ಮೊದ್ಲು.


ಆದ್ರೆ ಅಲ್ಲಿಂದ ದಾರಿ ಇರ್ಲೆ. ಸ್ವಲ್ಪ ಇಳಿದ ಮೇಲೆ ಬಲ್ಗಡೆ ಇನ್ನೊಂದು ದಾರಿ ಇತ್ತು. ಅದು ದೂರದ ಪಾಳು ಮಂಟಪಕ್ಕೆ ಕರ್ಕಂಡೋಗ್ತಿತ್ತು. ಅದೂ ಒಂದು viewpoint. ನೀವು ದುರ್ಗ ಪೂರ್ತಿ ನೋಡಕ್ಕೆ ಒಂದು ವಾರ ಬೇಕಣ್ಣ ಅಂದ ಅಲ್ಲೆ ಕುತ್ಕಂಡಿದ್ದವ ಒಬ್ಬ. ಹೌದು ಅನುಸ್ತು. ಅಲ್ಲಿಂದ ಇಳ್ದ್ಯ. ಕೊನಿಗೆ ಮತ್ತೆ ಹಿಂದೆ ಬಂದ ದಾರೀಲಿ ವಾಪಾಸ್ ಬಂದ್ಯ. ಅಕ್ಕ ತಂಗೀರ ಹೊಂಡ ಎಲ್ಲ ಸಿಕ್ತು ಮತ್ತೆ. ಅವಾಗ ಬಿಟ್ಟಿದ್ದು ಕಡೆ ಹೋಗನ ಅಂತ ಮತ್ತೆ ಎಡಗಡೆ ಹೋದ್ಯ..



ಬೆಟ್ಟದ ಮೇಲೆ ಹತ್ತಕ್ಕೆ ಆ ಕಡೆ ಇಂದ ದಾರಿ ಹೇಳಿ ಹೇಳಿದ್ದ ಒಬ್ರು ಅದಕ್ಕೆಅಲ್ಲಿ ಹಿಡಿಂಬೇಶ್ವರ ದೇವಸ್ಥಾನ. ಅದಕ್ಕೆ ಹತ್ತೋ ಮೆಟ್ಲು.ಮೆಟ್ಲು ಅಂದ್ರೆ ಆಗಿನ ಕಾಲದ್ದು.. ಸವ್ದು ಹೋಯ್ದು. ಅದಕ್ಕೆ ಹೇಳಿ ಆ ಕದೆ ಈ ಕಡೆ ಕಂಬ ಮಾಡಿದ್ದ ಹತ್ತವ್ಕೆ.. ಅದೂ ಭಾರಿ ಚೆನ್ನಾಗಿದ್ದು.







ಅದ್ನ ನೋಡ್ಕಂಡು ಇಳ್ದು ಮುಂದೆ ಹೋದ್ರೆ ಅಲ್ಲೊಂದು ಗಾಳಿಗೋಪುರ.ಆಮೇಲೆ ಮುರುಗ ರಾಜೆಂದ್ರ ಮಠ, ರಾಜರ ಅರಮನೆ ಆವರಣ, ಸಂಪಿಗೆ ಸಿದ್ದೇಶ್ವರ ದೇವಸ್ಥಾನ ನೋಡಿದ್ಯ.ಅಲ್ಲಿಂದ ಮೇಲಕ್ಕೆ ತುಪ್ಪದ ಹೊಂಡ . ಅಲ್ಲಿಂದ ಬಲ್ಗಡೆ ಗುಡ್ಡಕ್ಕೆ ಹತ್ತೋ ದಾರಿ ಹೇಳಿ ಹೇಳ್ದ ಮಠದವ. ಅಲ್ಲಿ ಹೋಗಿ ನೋಡ್ತ್ಯ.. ದಾರಿ ಎಲ್ಲಿದ್ದು ಮಣ್ಣು.. ನೇರ ಬೆಟ್ಟ.. ಸುಮಾರು ೭೫ಡಿಗ್ರಿ.. ಅದ್ರಲ್ಲಿ ಮಧ್ಯ ಮಧ್ಯ ಒಂದು ೩ ಸೆಂಟೀ ಮೀಟರ್ ಅಷ್ಟು ಆಳದ ಗುಂಡಿ ಕೊರದ್ದ ೨-೩ ಅಡಿ ಬಿಟ್ಬಿಟ್ಟು..


 ಅದೂ ಒಂದು ಎಡಕ್ಕೆ ಮತ್ತೊಂದು ಬಲಕ್ಕೆ.ಅದ್ರೊಳಗೆ ಕಾಲು ಇಟ್ಕಂಡಿಟ್ಕಂಡು ಮೇಲೆ ಹತ್ತಕ್ಕು!!!.. ಅದೂ ಎರಡೂ ಕಾಲು ಇಟ್ಕಲಕೆ ಜಾಗ ಇಲ್ಲೆ.ಪಕ್ಕದಲ್ಲಿ ಹಿಡ್ಕಳಕೂ ಎಂತೂ ಇಲ್ಲೆ. ಅದಕ್ಕೆ ಸಿಂಹಪಾದ ಹೇಳಿ ಹೆಸ್ರಡ. mountain climbing ಅಂತ ಕೇಳಿದ್ದು ನೆನ್ಪಾತು.೨ಘಂಟೆ ಹತ್ತತ್ರ ಬೇರೆ ಆಗಿತ್ತು. ಸುಮಾರು ಮುನ್ನೂರು ೨೦೦-೩೦೦ ಮೀಟ್ರಿಗಿಂತಲೂ ಮೇಲೆ ಹತ್ತಕ್ಕಿತ್ತು ಹಂಗೇನೆ. ನೋಡೇನೆ ಇಬ್ರು ನಾವು ಬರದಿಲ್ಲೆ ಅಂದ್ಬಿಟ ಮೊದ್ಲೆ.ಮೂರು ಜನಕ್ಕೆ ಸ್ವಲ್ಪ ಧೈರ್ಯ ಇತ್ತು. ಸ್ವಲ್ಪ ಮೇಲೆ ಹತ್ತಿದ ಮೇಲೆ ಹತ್ತದೇನೋ ಹತ್ತುತ್ಯ. ಇಳ್ಯದೆಂಗಲೇ ಇಲ್ಲಿ? . ಅಂದ ಗೌತು. ಅದೂ ಹೌದು ಅನುಸ್ತು.. ಅದೂ ಅಲ್ದೆ ಅಲ್ಲಿ ಅವಾಗ ನಮ್ಮನ್ನ ಬಿಟ್ರೆ ಬೇರೆ ಯಾರೂ ಇರ್ಲೆ.. ಗ್ರಹಚಾರ ಕೆಟ್ಟು wrong spot ಗೆ ಬಂದಿದ್ದಾಗಿದ್ರೆ? ಚಾನ್ಸ್ ತಗಳ್ಳದು ಬ್ಯಾಡ ಅಂತ ಆಮೇಲೆ ಹತ್ತಕ್ಕೆ ಹೋಗ್ಲೆ. ಇಳ್ದು ಸುಮಾರು ದೂರ ಬಂದ್ಮೇಲೆ ಗೈಡೊಬ್ಬ ಇಳೀತಿರದು ಕಾಣ್ತು..ಆದ್ರೆ ಅವನ ಹಿಂದೆ ಬಂದವ್ರೆಲ್ಲ , ತೆವಳ್ಕಂಡು, ಮಲಕ್ಯಂಡು ಭಾರಿ ಒದ್ದಾಡ್ತಾ ಇಳ್ಯಕ್ಕೆ try ಮಾಡ್ತ ಇದ್ದಿದ್ದ.. ಎಲ್ಲಾರು ಒಂದು ಕಡೆ ಕಾಲು slip ಆದ್ರೆ ಅನ್ಸಿ ಮೈ ಜುಂ ಅನುಸ್ತು. ಸುಮ್ನೆ view ನೋಡಕ್ಕೆ ಹೇಳಿ ಹೋಗಿ ಮತ್ತೆ ಮನೇವ್ರೆಲ್ಲಾ ನಮ್ಮ photo ನೋಡ ಪರಿಸ್ಥಿತಿ ತಂದ್ಕಳಗೆ try ಮಾಡ್ದೇ ಇದ್ದಿದ್ದೇ ಒಳ್ಳೇದಾತು ಅನುಸ್ತು.


 ವಾಪಸ್ ಹಂಗೇ ಬಂದ್ಯ. ಮಾರಿಕಣಿವೆಗೆ ಹೋಗಕ್ಕು ಇದಾದ ಮೇಲೆ ಹೇಳಿದ್ದ ಗೌತು.. ಹಂಗಾದ್ರೆ ಬೇಗ ಇಳ್ಯನ ಹಂಗಾದ್ರೆ ಅಂತ ಚುರ್ಕು ಮಾಡಿದ್ಯ. ಕ್ಯಾಂಟೀನಲ್ಲಿ ಸ್ವಲ್ಪ ಕುಡ್ಕಂಡು ಹೊಟ್ಟೆ ತಣ್ಣಗೆ ಮಾಡ್ಕ್ಯಂಡ್ಯ. ನೀರಿನ ಬಾಟ್ಲಿ ಎಲ್ಲರು ತಗಂಡ್ಬಂದಿದ್ದು ಎಷ್ಟೋ ಒಳ್ಳೆದಾಗಿತ್ತು. ಟಂಕಸಾಲೆ ಎಲ್ಲ ಮತ್ತೆ ಸಿಗ್ತು. ಹತ್ತೇ ನಿಮಿಷದಲ್ಲಿ ಬುಡಕ್ಕೆ ಬಂದಿದ್ಯ.ಚಂದವಳ್ಳೀಲಿ ನಮಗೆ ಸಿಕ್ಕಿದ ಶಿವಮೊಗ್ಗದವ್ರು ಇಲ್ಲೂ ಸಿಕ್ಕಿದ. ಫುಲ್ಲು ನೋಡಿದ್ರನಪಾ ಕೋಟೆ ಅಂದ.. ಎಂತ ಹೇಲದು? ಆದ್ರೆ ಅವ್ರಿಗಿಂತ ಜಾಸ್ತಿ ನೋಡಿದಿದ್ಯ, ನಂಗ :-) ಅಲ್ಲಿಂದ ಮುಂಚೆ ಬಿಟ್ಟಿದ್ದ ಬಲಗಡೆ ಹೋದ್ಯ.

 ಅಲ್ಲಿ ಒಂಟಿಕಲ್ಲು ಬಸವಣ್ಣ ಕಾಣ್ತು.. ಅಲ್ಲಿಂದ ಮತ್ತೆ ಸುಮಾರು ದೂರ ಹೋದ್ಮೇಲೆ ಆಗಿನ ಕಾಲದ ಜೈಲು ಸಿಗ್ತು. ಅಲ್ಲಿಂದ ಮತ್ತೆ ಎಡಗಡೆ ದಾರಿ ಇತ್ತು. ಆದ್ರೆ ನಂಗ ನೋಡಿದಂಗೆ ಮ್ಯಾಪಲ್ಲಿ ಜೈಲ ಪಕ್ಕ ಎಂತೂ ಇರ್ಲೆ..ಟೈಂ ಬೇರೆ ೨;೧೦. ಅದಕ್ಕೆ ಹಂಗೇ ಇಳ್ದ್ಯ..ಒಳ್ಳೆ ನೆನ್ಪಿನ ರೂಪದಲ್ಲಿ ಸುಮಾರಷ್ಟು ತುಂಬ್ಕಂಡಿದ್ವಲ.. ಆ ನೆನ್ಪುಗಳಿಗೆ ಈಗ ಜಾಗ ಸಾಕಾಗ್ದೆ ಬೆವರ ರೂಪದಲ್ಲಿ ನೀರು ಹರಿದಂಗೆ ಹರಿತಾ ಇತ್ತು..

(ಮುಂದೆ: ಭಾಗ-: ವಾಣಿವಿಲಾಸ ಸಾಗರ)

No comments:

Post a Comment